Wednesday, January 12, 2011

ಮೋನು

ಇತ್ತೀಚೆಗೆ ನನ್ನ ಗೆಳೆಯನೊಬ್ಬ ಕೇಳಿದ್ದ ‘‘ನಿನ್ನ ಅಣ್ಣನ ನೆನಪಿಗಾಗಿ ಏನಾದರೂ ಮಾಡಬಹುದಲ್ಲ....’’ ಅವನಿಗೆ ನಾನು ಹೇಳಿದ್ದೆ ‘‘ಅವನನ್ನು ಮರೆಯುವುದಕ್ಕೆ ನಾನೇನಾದರೂ ಮಾಡಬೇಕಾಗಿದೆ....’’ ಈ ಉತ್ತರದಿಂದ ಆ ಗೆಳೆಯನಿಗೆ ನೋವಾಗಿರಬಹುದೋ ಏನೋ. ತುಂಬಾ...ಹಿಂದೆ ಪತ್ರಿಕೆಯೊಂದಕ್ಕೆ ಅವನ ಬಗ್ಗೆ ಪುಟ್ಟ ಲೇಖನವನ್ನು ಬರೆದಿದ್ದೆ.. ನೀವು ಓದಿರಲಿಕ್ಕಿಲ್ಲ ಎಂದು ಭಾವಿಸಿ ಇಲ್ಲಿ ಹಾಕಿದ್ದೇನೆ.



ಭೂಲ್ನೇ ವಾಲೆ ಯಾದ್ ಆಯೆ....
-ಮುಖೇಶ್ ಹಾಡೊಂದರ ಸಾಲು

ಅಚ್ಚಿಗೆ ಹೋಗುವ ಮೊದಲು ಕಟ್ಟ ಕಡೆಯದಾಗಿ ಎಂಬಂತೆ, ಮತ್ತೊಮ್ಮೆ ಆ ಬರಹಗಳತ್ತ ಕಣ್ಣಾಯಿಸಿದ್ದೆ. ಅಕ್ಷರಗಳ ರಾಶಿಯಲ್ಲಿ ಹೊಂಚಿ ಕುಳಿತಿದ್ದ ತಪ್ಪುಗಳು ಆರಿಸಿದಷ್ಟು ಮುಗಿಯುತ್ತಲೇ ಇಲ್ಲ. ನಾನೇ ಕುಳಿತು ಕೀ ಮಾಡಿದ್ದ ಅಕ್ಷರಗಳು, ಒಂದು ಅಗುಳೂ ತಪ್ಪಿರಲಿಕ್ಕಿಲ್ಲ ಎಂದು ತಿಳಿದುಕೊಂಡಿದ್ದೆ. ಆರು ಕತೆಗಳು, ಹತ್ತು ಕವಿತೆಗಳು, ನಾಲ್ಕು ಲೇಖನಗಳು, ಮೂರು ವರದಿಗಳುಳ್ಳ ತೀರಾ ಸಣ್ಣ ಪುಸ್ತಕ ಇದು. ನಾವಿಬ್ಬರೂ ಎಣಿಸಿ ಎಣಿಸಿ ಆಡಿದ ಮಾತು ಮತ್ತು ಬಿಡಿಸಿ ಓದಿಕೊಂಡ ಪರಸ್ಪರರ ಬದುಕಿನ ಪುಟಗಳಿಗೆ ಹೋಲಿಸಿದರೆ ತೀರ ದೊಡ್ಡ ಪುಸ್ತಕ. ಪುಸ್ತಕಕ್ಕೆ ಏನು ಹೆಸರು ಕೊಡಬೇಕೆಂದು ಹೊಳೆಯದೆ ಆತನದೇ ಕವಿತೆಯ ತಲೆಬರಹ ಒಂದನ್ನು ಕೊಟ್ಟಿದ್ದೇನೆ, ‘ಪರುಷಮಣಿ’. ಪ್ರಕಾಶನಕ್ಕೆ ಆತನದೇ ಹೆಸರನ್ನು ಕೊಟ್ಟಿದ್ದೇನೆ. ‘ಬಿ. ಎಂ. ರಶೀದ್ ಪ್ರಕಾಶನ’
***

ತಾಯಿಂದ ಹಿಡಿದು ನಾವೆಲ್ಲರೂ ಆತನನ್ನು ಮೋನು(ಮಗು) ಎಂದೇ ಕರೆಯುತ್ತಿದ್ದೆವು. ‘ಅದು ಮೋನುವಿನ ಪುಸ್ತಕ, ಮುಟ್ಬೇಡ’, ‘ಅದು ಮೋನುನ ಬಟ್ಟೆ, ಅಲ್ಲೇ ಜಾಗೃತೆ ಇಟ್ಟು ಬಿಡು’, ಅದು ಮೋನುನ ಪೆನ್ನು, ಅವನು ಬರುವ ಹೊತ್ತಾಯ್ತು, ಬೇಗ ಇದ್ದಲ್ಲೇ ಇಡು’ ನಾನು ಆತನ ಪೆನ್ನನ್ನೋ, ಪುಸ್ತಕವನ್ನೋ ಅವನಿಲ್ಲದ ಹೊತ್ತಲ್ಲಿ ಎತ್ತಿಕೊಂಡೆನೆಂದರೆ ಅಮ್ಮ ಆತಂಕದಿಂದ ಒಳ ಹೊರಗೆ ಓಡಾಡುತ್ತಿದ್ದಳು.
ಅವನದಾದ ಎಲ್ಲವನ್ನು ಅವನು ಜೋಪಾನವಾಗಿ ತೆಗೆದಿಟ್ಟುಕೊಳ್ಳುತ್ತಿದ್ದ. ಬಾಲ್ಯದಲ್ಲಿ ಅವನು ಕೊಂಡ ಇಂದ್ರಜಾಲ ಕಾಮಿಕ್ಸ್‌ಗಳು, ಅಮರ ಚಿತ್ರ ಕತೆಗಳು, ಇತ್ತೀಚಿನವರೆಗೂ ಆತನ ಕಪಾಟಿನಲ್ಲಿ ಭದ್ರವಾಗಿದ್ದವು. ಯಾವುದಾದರೂ ಒಂದು ಪುಸ್ತಕ ಕೊಂಡರೆ ಅದಕ್ಕೆ ಸುಂದರವಾಗಿ ‘ಹೊದಿಕೆ’ ಹಾಕುತ್ತಿದ್ದ. ಕಲಾವಿದನೂ ಆಗಿದ್ದ ಆತ, ಅದರ ಮೇಲೆ ಅಷ್ಟೇ ಸುಂದರವಾಗಿ ಪುಸ್ತಕದ ಹೆಸರು ಬರೆದಿಡುತ್ತಿದ್ದ. ಅದೆಂದೋ ಜೋಪಾನವಾಗಿ ತೆಗೆದಿಟ್ಟಿದ್ದ ‘ಸ್ಕ್ರೂಡ್ರೈವರ್’ ಈಗಲೂ ಆತನ ಕಪಾಟಿನಲ್ಲಿ ಹಾಗೆಯೇ ಇದೆ. ಪರಿಮಳದ ರಬ್ಬರ್‌ನ ತುಂಡು, ಅರ್ಧ ಮುಗಿದ ವಾಟರ್ ಕಲರ್ ಬಾಕ್ಸ್, ತುಂಡಾದ ಬ್ರಶ್, ಒಟ್ಟಾರೆಯಾಗಿ ಗೀಚಿದ ಡ್ರಾಯಿಂಗ್ ಪುಸ್ತಕ ಇತ್ಯಾದಿ ಇತ್ಯಾದಿಗಳೆಲ್ಲ ಯಾವುದೋ ಭಗ್ನ ಸ್ವಪ್ನವೊಂದರ ಅವಶೇಷಗಳಂತೆ ಈಗಲೂ ಮನೆಯ ಕಪಾಟಿನಲ್ಲಿ ಉಳಿದು ಬಿಟ್ಟಿದೆ.
ನಾನಾಗ ನಾಲ್ಕನೆ ತರಗತಿಯೋ, ಐದನೆ ತರಗತಿಯೋ ಇದ್ದಿರಬೇಕು. ಈತ ಶಾಲೆಯಿಂದ ಬರುವಾಗ ಇಂದ್ರಜಾಲಕಾಮಿಕ್ಸ್, ಪುಟಾಣಿ, ಅಮರ ಚಿತ್ರ ಕತೆ, ಇಸೋಪನ ಕತೆ, ವಿಚಿತ್ರ ಪ್ರಪಂಚ ಇತ್ಯಾದಿಗಳನ್ನು ತರುತ್ತಿದ್ದ. ಅವನಿಗೊಂದು ಮರದ ಪೆಟ್ಟಿಗೆಯಿತ್ತು. ಅದಕ್ಕೊಂದು ಬೀಗ. ತಂದ ಪುಸ್ತಕಗಳನ್ನು ಅದರೊಳಗೆ ಜೋಪಾನವಾಗಿಡುತ್ತಿದ್ದ. ನೆರೆಯ, ಹತ್ತಿರದ ಹುಡುಗರಿಗೆ ಆ ಪುಸ್ತಕಗಳನ್ನು ಓದುವುದಕ್ಕೆ ಕೊಡುತ್ತಿದ್ದ. ಒಮ್ಮೆ ಓದಿದರೆ ಹತ್ತು ಪೈಸೆ ತೆಗೆದುಕೊಳ್ಳುತ್ತಿದ್ದ. ನನ್ನಿಂದಲೂ ಬಿಡುತ್ತಿರಲಿಲ್ಲ. ಹತ್ತು ಪೈಸೆಗಾಗಿ ಅಮ್ಮನನ್ನು ಕಾಡಿ, ಅಣ್ಣನಿಂದ ಪುಸ್ತಕಗಳನ್ನು ಇಸಿದುಕೊಳ್ಳುತ್ತಿದ್ದೆ. ಬಹಾದ್ದೂರ್, ಮಾಂಡ್ರೇಕ್, ಫ್ಯಾಂಟಮ್‌ನ ಹೊಸ ಸಾಹಸಗಳು ಬಂದಾಗ ಆತ ಅವನ್ನು ತಂದು ಮುಖಪುಟವನ್ನು ನನ್ನ ಎದುರುಗಡೆ ಹಿಡಿಯುತ್ತಿದ್ದ. ಆಮೇಲೆ ಈ ಬಾರಿಯ ವಿಶೇಷ ಏನು ಎನ್ನುವುದಷ್ಟನ್ನೇ ನಾಲ್ಕು ವಾಕ್ಯಗಳಲ್ಲಿ ಹೇಳಿ ನನ್ನ ಕುತೂಹಲವನ್ನು ಚುಚ್ಚುತ್ತಿದ್ದ. ಅನೇಕ ವೇಳೆ ನನ್ನಲ್ಲಿ ಹಣವಿಲ್ಲದೆ, ಸಾಲವಾಗಿ ಪುಸ್ತಕವನ್ನು ತೆಗೆದುಕೊಂಡು ಓದುತ್ತಿದ್ದೆ. ಅವನೋ, ಹತ್ತು ಹತ್ತು ಪೈಸೆಯನ್ನೂ ಚೀಟಿಯೊಂದರಲ್ಲಿ ಬರೆದು ಲೆಕ್ಕವಿಡುತ್ತಿದ್ದ. ಒಮ್ಮೆ ಸಾಲ ಏಳು ರೂಪಾಯಿಯನ್ನು ತಲುಪಿತು. ‘ಹಳೆ ಬಾಕಿ ತೀರುವವರೆಗೆ ಇನ್ನು ನಿನಗೆ ಪುಸ್ತಕ ಕೊಡಲಾಗುವುದಿಲ್ಲ’ ಎಂದ. ಅಮ್ಮನ ಪೆಟ್ಟಿಗೆಯಿಂದ ಹತ್ತು ರೂಪಾಯಿಯನ್ನು ಕದ್ದು ಆತನ ಸಾಲ ತೀರಿಸಿದ್ದೆ.
ನನ್ನ ಪಾಲಿಗೆ ಆತನ ಬೀಗ ಹಾಕಿದ ಮರದ ಪೆಟ್ಟಿಗೆ ಅದ್ಭುತ ಮಾಯಾ ತಿಜೋರಿಯಾಗಿತ್ತು. ಅದೆಷ್ಟೋ ಬಾರಿ ಆ ಬೀಗವನ್ನು ಅವನಿಲ್ಲದ ವೇಳೆ ಸಣ್ಣ ಸರಿಗೆ ಬಳಸಿ ತೆರೆದು, ಪುಸ್ತಕಗಳನ್ನು ಓದುತ್ತಿದ್ದೆ. ಒಂದು ದಿನ ಅವನಿಗೆ ಯಾಕೋ ನನ್ನ ಮೇಲೆ ಅನುಮಾನ ಬಂದು, ಸಂಖ್ಯೆಗಳ ಕೋಡ್ ಇರುವ ಬೀಗವನ್ನು ತಂದು ಹಾಕಿದ್ದ. ನಾನೋ...ಶಾಲೆಗೆ ಚಕ್ಕರ್ ಹಾಕಿ ಇಡೀ ದಿನ ಅಂಕಿಗಳನ್ನು ತಿರುಗಿಸಿ ತಿರುಗಿಸಿ ಆ ತಿಜೋರಿಯನ್ನು ತೆರೆಯಲು ಸಫಲನಾಗಿದ್ದೆ.

ನಾನು ಆರನೆ ತರಗತಿಯಲ್ಲಿದ್ದಾಗ ನನ್ನನ್ನು ಮೊತ್ತ ಮೊದಲ ಬಾರಿಗೆ ಲೈಬ್ರರಿಗೆ ಕರೆದುಕೊಂಡು ಹೋಗಿದ್ದು ಆತನೇ. ಅವನು ಹೇಳಿದಲ್ಲಿ ಕೂತು, ಅವನು ತಂದುಕೊಟ್ಟ ಪುಸ್ತಕವನ್ನು ಓದಿದ್ದೆ. ಜೊತೆಗೆ ‘ಇಲ್ಲಿಗೆ ಬರುವುದಾದರೆ ನನ್ನೊಂದಿಗೇ ಬರಬೇಕು’ ಎಂದು ಕಟ್ಟು ನಿಟ್ಟಾಗಿ ಸೂಚನೆ ಕೊಟ್ಟಿದ್ದ. ಆದರೆ ಮರುದಿನವೇ ಆತನ ಮಾತನ್ನು ಉಲ್ಲಂಘಿಸಿ, ನಾನೊಬ್ಬನೇ ಲೈಬ್ರರಿಯ ದಾರಿ ಹುಡುಕಿ ಹೊರಟಿದ್ದೆ. ಉಪ್ಪಿನಂಗಡಿಯ ಆ ಗ್ರಂಥಾಲಯದಲ್ಲಿ ಅಂದಿದ್ದ ಅದೇ ಲೈಬ್ರೆರಿಯನ್ ಈಗಲೂ ಇದ್ದಾರೆ. ಅವನು ಬೆಳೆದಂತೆ ನಾನೂ ಬೆಳೆದೆ. ಅವನು ಮನೆಗೆ ತಂದ ಪುಸ್ತಕಗಳ ದಾರಿಯಲ್ಲಿ ನಾನೂ ನಡೆದೆ. ಆತ ಪಿಯುಸಿಯಲ್ಲಿದ್ದ ಸಮಯ. ಕಾಲೇಜಲ್ಲಿ ಆತ ‘ಸ್ಪಂದನ’ ಎನ್ನುವ ಕೈ ಬರಹದ ಪತ್ರಿಕೆಯೊಂದನ್ನು ಹೊರ ತರುತ್ತಿದ್ದ. ಮುಖಚಿತ್ರ, ಬರಹ, ಕಲೆ ಎಲ್ಲವೂ ಆತನದೇ. ನನಗೆ ‘ಓದು’ ಎಂದು ತಂದು ಕೊಡುತ್ತಿದ್ದ. ಒಂದು ಸಂಚಿಕೆಯನ್ನು ಸಂಪೂರ್ಣ ನಾಸ್ತಿಕವಾದಕ್ಕೆ ಮೀಸಲಿರಿಸಿದ್ದ. ಅದರ ಮುಖಪುಟ ಈಗಲೂ ನನಗೆ ನೆನಪಿದೆ. ಭಾರತದ ಚಿತ್ರವನ್ನು ಬಿಡಿಸಿದ್ದ. ಅದರೊಳಗೆ ಚಂದ್ರ, ಶಿಲುಬೆ ಮತ್ತು ಓಂ ಆಕಾರಗಳು ಧಗಧಗಿಸಿ ಉರಿಯುತ್ತಿವೆ. ಆ ಸಂಚಿಕೆಯನ್ನು ಕೆಲ ಹುಡುಗರು ಸೇರಿ ಕದ್ದೊಯ್ದರಂತೆ. ಆ ಪ್ರಕರಣ ಶಾಲೆಯಲ್ಲಿ ಒಂದಿಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇದೇ ಸಂದರ್ಭದಲ್ಲಿ ಆತ ಪಕ್ಕಾ ಕಮ್ಯುನಿಷ್ಟ್ ಹೇಳಿಕೆಗಳನ್ನು ನೀಡುತ್ತಾ ತಿರುಗಾಡುತ್ತಿದ್ದದ್ದು. ಸಾರಾ ಅಬೂಬಕರ್‌ಗೆ ಪತ್ರ ಬರೆದು, ಅವರಿಂದ ಉತ್ತರ ದೊರಕಿದಾಗ ಅದನ್ನು ಸಂಭ್ರಮದಿಂದ ನನಗೆ ತೋರಿಸಿ ‘ಓದು’ ಅಂದಿದ್ದ. ಸಾರಾ ಅಬೂಬಕರ್‌ನ ಕಳಪೆ ಹಸ್ತಾಕ್ಷರ ನೋಡಿ ನನಗೋ ಅಚ್ಚರಿಯ ಮೇಲೆ ಅಚ್ಚರಿ. ದೇವರುಗಳ ರಾಜ್ಯದಲ್ಲಿ, ಚಿತ್ತಾಲರ ಶಿಕಾರಿ, ಛೇದ, ಕತೆಯಾದಳು ಹುಡುಗಿ, ಇವೆಲ್ಲದರ ಜೊತೆಗೆ ಲಂಕೇಶ್ ಪತ್ರಿಕೆ...ನಮ್ಮಿಬ್ಬರ ನಡುವೆ ಬಿದ್ದದ್ದ ವೌನದ ಗೋಡೆಯನ್ನು ಸಣ್ಣಗೆ ಕದಲಿಸುತ್ತಿದ್ದವು.
ಅಂದು ಶುಕ್ರವಾರ. ನಾನು ಶಾಲೆಯಿಂದ ಮನೆಗೆ ಬಂದಿದ್ದೆ. ನೋಡಿದರೆ ಅಮ್ಮ ಕಣ್ಣೀರಿಡುತ್ತಿದ್ದಾಳೆ. ತಂಗಿಯರೆಲ್ಲ ಅಮ್ಮನ ಸುತ್ತ ಕೂತಿದ್ದಾರೆ. ‘ಏನಾಯ್ತು?’ ಎಂದು ಕೇಳಿದೆ. ಅಣ್ಣ ಮನೆ ಬಿಟ್ಟು ಹೋಗಿದ್ದ! ಆಗ ಆತ ಪಿಯುಸಿ ಓದುತ್ತಿದ್ದ. ನಾನು ಒಂಬತ್ತನೆಯ ತರಗತಿಯಲ್ಲಿದ್ದಿರಬೇಕು. ಕಮ್ಯುನಿಷ್ಟ್ ಕುರಿತು ಅದೆಷ್ಟು ಡೈಲಾಗ್‌ಗಳನ್ನು ಹೊಡೆಯುತ್ತಿದ್ದರೂ, ಆತ ವಾರಕ್ಕೊಮ್ಮೆ ಮಸೀದಿಗೆ ಹೋಗುತ್ತಿದ್ದ. ಹಾಗೆ, ಆ ಶುಕ್ರವಾರ ಮಸೀದಿ ಬಿಟ್ಟು ಹೊರ ಬರುವಾಗ ಒಬ್ಬರೊಂದಿಗೆ ಸಣ್ಣದಾಗಿ ಮಾತಿನ ಚಕಮಕಿ ನಡೆದಿತ್ತು. ಅಲ್ಲೇ ಇದ್ದ ತಂದೆ, ಅಣ್ಣನ ಮೇಲೆ ಹಾರಿ ಬಿದ್ದಿದ್ದರು. ಈತ ಮನೆಗೆ ಬಂದವನೇ ತನ್ನ ಬಟ್ಟೆಯೊಂದಿಗೆ ಹೊರ ಬಿದ್ದಿದ್ದ. ಹಾಗೆ ಹೊರಟವನು ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಸುಮಾರು ಆರು ತಿಂಗಳ ಕಾಲ ಮನೆಗೆ ಬಂದಿರಲಿಲ್ಲ. ಒಂದು ದಿನ ರಾತ್ರಿ, ನಾನು ಎಸ್ಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ. ಬಾಗಿಲು ತಟ್ಟಿದ ಸದ್ದು. ಬಾಗಿಲು ತೆರೆದರೆ ಹೆಗಲಿಗೊಂದು ಬ್ಯಾಗು ಹಾಕಿಕೊಂಡು ಮೋನು ನಿಂತಿದ್ದ.
‘ಉಮ್ಮಾ ಮೋನು ಬಂದ’ ನನ್ನ ಹಿಂದಿನಿಂದ ತಂಗಿ ಉದ್ಗರಿಸಿದ್ದಳು.
ಬರುವಾಗ ಒಂದಿಷ್ಟು ಸ್ವೀಟ್ಸ್ ತಂದಿದ್ದ. ಅಮ್ಮನ ಕೈಯಲ್ಲಿಟ್ಟ. ಅಮ್ಮ ಅಳುತ್ತಿದ್ದಳು. ನನಗೆಂದು ಪೂರ್ಣಚಂದ್ರ ತೇಜಸ್ವಿಯ ‘ಚಿದಂಬರ ರಹಸ್ಯ’ ಪುಸ್ತಕವನ್ನು ತಂದಿದ್ದ.
ನಾನು ಉಪ್ಪಿನಂಗಡಿ ಸರಕಾರಿ ಕಾಲೇಜಿಗೆ ಬಿ. ಎ. ಸೇರಲು ಅರ್ಜಿ ಹಿಡಿದು ನಿಂತಿದ್ದಾಗ ಈತ ಅದೇ ಕಾಲೇಜಿನಲ್ಲಿ ಅಂತಿಮ ಬಿ. ಎ. ಓದುತ್ತಿದ್ದ. ಏನನ್ನಿಸಿತೋ, ‘ನಿನ್ನನ್ನು ಕಾಲೇಜಿಗೆ ನಾನೇ ಸೇರಿಸುತ್ತೇನೆ’ ಎಂದ. ನಾನು ಅವನ ಹಿಂದೆ ನಡೆದೆ. ಮೊರಬದ ಮಲ್ಲಿಕಾರ್ಜುನರು ಕಾಲೇಜಿನ ಪ್ರಿನ್ಸಿಪಾಲರು. ಅವರು ನನಗೆ ಅದಾಗಲೇ ಪರಿಚಿತರು. ವಿವಿಧ ಸಮಾರಂಭಗಳಲ್ಲಿ, ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಅವರು ನನ್ನನ್ನು ನೋಡಿದ್ದರು. ಅಣ್ಣ ಅಡ್ಮಿಶನ್‌ಗೆಂದು ನನ್ನನ್ನು ಕರೆದೊಯ್ದಿಗ ತುಂಬಾ ಪ್ರೀತಿಯಿಂದ ಸ್ವಾಗತಿಸಿದ್ದರು. ಆದರೆ ಅಷ್ಟರಲ್ಲಿ ಇನ್ನೊಬ್ಬ ಉಪನ್ಯಾಸಕರು, ‘ಏನು ಏನು...’ ಎಂದು ಕಣ್ಣು ತಿರುಗಿಸುತ್ತಾ ಬಂದರು. ‘ತಮ್ಮನ ಅಡ್ಮಿಶನ್‌ಗೆ ಬಂದಿದ್ದೇನೆ ಸಾರ್’ ಎಂದ.
‘ನೀವೇ ಈ ಶಾಲೆಯ ವಿದ್ಯಾರ್ಥಿಯಾಗಿರುವಾಗ, ತಮ್ಮನ ಅಡ್ಮಿಶನ್‌ಗೆ ನೀವು ಬರುವುದು ಹೇಗೆ ಸಾಧ್ಯ?’ ಉಪನ್ಯಾಸಕರು ಪ್ರಶ್ನಿಸಿದರು.
‘ನಾನು ಈ ಶಾಲೆಯ ವಿದ್ಯಾರ್ಥಿಯಾಗಿ ಬಂದಿಲ್ಲ. ಈತನ ಅಣ್ಣನಾಗಿ ಬಂದಿದ್ದೇನೆ’ ಎಂದು ಮೋನು ಉತ್ತರಿಸಿದ.
‘ನಿಮ್ಮ ತಮ್ಮ ಪುಂಡಾಟಿಕೆ ಮಾಡಿದ್ರೆ ನಿಮ್ಮ ಜೊತೆ ದೂರು ಹೇಳಬಹುದು. ಆದರೆ ನೀವೇ ಪುಂಡಾಟಿಕೆ ಮಾಡುತ್ತಿರುವಾಗ ನಾವು ಯಾರಲ್ಲಿ ದೂರು ಹೇಳಬೇಕು...’
ಆ ಉಪನ್ಯಾಸಕರು ಪಟ್ಟು ಹಿಡಿದು ನಿಂತಿದ್ದರು. ಮೋನು ಕೂಡ ಜಗ್ಗಲಿಲ್ಲ. ಅವರ ನಡುವೆ ಅಕ್ಷರಶಃ ಜಗಳವೇ ನಡೆಯುತ್ತಿತ್ತು. ನಾನು ಮತ್ತು ಮೊರಬದ ಮಲ್ಲಿಕಾರ್ಜುನರು ಪ್ರೇಕ್ಷಕರಾಗಿದ್ದೆವು. ಬಳಿಕ ಪ್ರಿನ್ಸಿಪಾಲರು ಮಧ್ಯ ಪ್ರವೇಶಿಸಿದರು. ನನ್ನನ್ನು ತೋರಿಸಿ ‘ಈ ಹುಡುಗ ನನಗೆ ಗೊತ್ತು’ ಎಂದರು. ಕೊನೆಯಲ್ಲಿ ಅಣ್ಣನ ಎದುರಿಗೇ ನಗುತ್ತಾ ನನಗೆ ಹೇಳಿದರು ‘ಭಾಷಣ, ಬರವಣಿಗೆ, ಸಾಂಸ್ಕೃತಿಕ ಚಟುವಟಿಕೆ ಎಲ್ಲದಕ್ಕೂ ನಿಮಗೆ ಅಣ್ಣ ಮಾದರಿಯಾಗಿರಲಿ. ಆದರೆ ಓದಿನಲ್ಲಿ ಮಾತ್ರ ಅವರು ಮಾದರಿಯಾಗುವುದು ಬೇಡ...’
ಕಾಲೇಜಲ್ಲಿ ಹೊಸ ಹುಡುಗರಿಗಾಗಿ ‘ವೆಲ್‌ಕಮ್ ಡೇ’ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ನಾನೂ ಮಾತನಾಡಿದ್ದೆ. ಉಪನ್ಯಾಸಕರ ಬಗ್ಗೆ, ಮೊರಬದ ಮಲ್ಲಿಕಾರ್ಜುನರ ಬಗ್ಗೆ, ನನ್ನ ಬದುಕಿನ ಕನಸುಗಳ ಕುರಿತಂತೆ ಮಾತನಾಡುವಾಗ ತುಸು ಭಾವುಕನಾಗಿ ಬಿಟ್ಟಿದ್ದೆ. ಅಂದು ಸಂಜೆ ಮನೆಯಲ್ಲಿ ಇದ್ದಕ್ಕಿದ್ದಂತೆ ನನ್ನೆದುರು ಬಂದ ಮೋನು ‘ನೀನು ಮೊರಬದರ ಬಗ್ಗೆ, ಕಾಲೇಜಿನ ಬಗ್ಗೆ ಮಾತನಾಡಿದ್ದು ಚೆನ್ನಾಗಿತ್ತು. ಮೊರಬದರನ್ನು ಚೆನ್ನಾಗಿಟ್ಟುಕೋ...’ ಎಂದಿದ್ದ.
***

ಒಬ್ಬ ಅಣ್ಣ ಮತ್ತು ತಮ್ಮನ ನಡುವೆ ಗೋಡೆ ತಂದು ಹಾಕುವಷ್ಟು ದೊಡ್ಡದಾಗಿರಲಿಲ್ಲ ನಮ್ಮ ಮನೆ. ಆದರೂ ಮೋನು ತನ್ನ ಸುತ್ತ ‘ಅಣ್ಣ’ನ ಅಹಂಕಾರ ಮತ್ತು ಹಕ್ಕುಗಳ ಕಾಂಪೌಂಡು ನಿಮಿರ್ನಸಿ, ಗೇಟಿಗೆ ಬೀಗ ಜಡಿದು ಬಿಟ್ಟಿದ್ದ. ಅವನ ಮರದ ಪೆಟ್ಟಿಗೆಯ ಬೀಗವನ್ನು ಒಡೆದಷ್ಟು ಸಲೀಸಾಗಿ ಆ ಗೇಟಿನ ಬೀಗವನ್ನು ಒಡೆದು ಅವನ ಬಳಿಗೆ ಸಾಗುವುದಕ್ಕೆ ನನ್ನಿಂದಾಗಲಿಲ್ಲ. ‘ಮೋನುವಿನ ಕೋಣೆ’ ‘ಮೋನುವಿನ ಕಪಾಟು’ ‘ಮೋನುವಿನ ರೇಡಿಯೋ’ ‘ಮೋನುವಿನ ಮಂಚ’ ಎಲ್ಲವೂ ಈಗ ಬರಿದಾಗಿದೆ. ಮನುಷ್ಯರು ಕಟ್ಟಿ ಕೊಳ್ಳುವ ಎಲ್ಲ ಗೋಡೆಗಳನ್ನು ಕಿತ್ತೆಸೆದು ಅವರನ್ನು ಒಂದಾಗಿಸುವ ಶಕ್ತಿ ಸಾವಿಗೆ ಮಾತ್ರ ಇದೆಯೇನೋ!

7 comments:

  1. ಅತ್ಮಿಯ ಬಷೀರ್
    ನಿಮ್ಮ ಗುಜರಿ ಅಂಗಡಿ ಬಹಳ ಕಾಲ ಬಾಗಿಲು ಮುಚ್ಚಿತ್ತು . ಅದೆಷ್ಟೋ ಬಾರಿ ಗುಜರಿ ಅಂಗಡಿಗೆ ಬಂದು ನಿರಾಶನಾಗಿ ವಾಪಸ್ಸು ಹೋಗಿದ್ದೆ. ಅಂತೂ ಬ್ಯಾರಿ ಗುಜರಿ ಅಂಗಡಿ ಮತ್ತೆ ಶುರು ಮಾಡಿದ್ದು ಖುಷಿಯಾಯಿತು.
    ರಷೀದ್ ವಯಸ್ಸಲ್ಲಿ ನನಗಿಂತ ಚಿಕ್ಕವನು ಆದರೂ 'ಅಣ್ಣ ' ನಂತೆಯೇ ವರ್ತಿಸುತ್ತಿದ್ದ 'ನೀವು ಮಾಡಿದ್ದು ಸರಿಯಿಲ್ಲ ' ಜಯಶ್ರೀ ಹೇಳಿದ ಹಾಗೆ ಕೇಳಿ ಎಲ್ಲಾ ಸರಿಯಾಗತ್ಡದೆ , ಎಂದು ಮನೆಗೆ ಬಂದಾಗಲೆಲ್ಲ ಬುದ್ದಿ ಹೇಳುತ್ತಿದ್ದ. ಪ್ರಕೃತಿಗೆ ಎಲ್ಲಿಂದಲೋ ಹೊಸ ಕಾರ್ಡ್ ಗಳನ್ನು ತಂದು 'ಯುನೋ' ಆಟ ಕಲಿಸಿದ್ದ . ಇಗಲೂ ಪ್ರಕೃತಿ 'ಯುನೋ' ಆಡುವಾಗಲೆಲ್ಲಾ ರಶೀದ್ ನೆನಪಿಗೆ ಬರುತ್ತಾನೆ.

    ReplyDelete
  2. Really heart touching... It is unfortunate that the Kannada literary world lost such a precious soul.
    Kumar Buradikatti

    ReplyDelete
  3. very good B.M.BASHEER

    thank you

    ReplyDelete
  4. Sir,

    Entha baravanige....nange nimma baravanigeya bagge jealousy agtha ide...naanu ee rithi bareya baarade endu...Hats off to you...

    ReplyDelete
  5. basheer kaaka.....e baravanige odida nanthara rasheed matthe matthe nenapige barutthiddare...naanu thumba baavukanagiddhene...

    ReplyDelete
  6. ನಿಮ್ಮ ಬರಹಗಳನ್ನು ಓದುತ್ತ ಹೋದಂತೆ ಇಷ್ಟು ಚೆಂದಗೆ ಬರೆವ ನಿಮ್ಮ ಬಗ್ಗೆ ಹೊಟ್ಟೆ ಕಿಚ್ಚು... - shama, nandibetta

    ReplyDelete
  7. ಈ ಬರಹಗಳನ್ನು ಓದುವಾಗ ರಶೀದ್ ಕಾಕ ಮತ್ತು ಈ ಅಬ್ಬುವಿನ ನಡುವೆ ಇದ್ದ ಆ ಪ್ರಿತೀಯ ಸಾಗರ ನೆನಪಾಗುತ್ತದೆ...

    ReplyDelete