Wednesday, June 29, 2011

ಜುಲೈಖಾ..!


ಇಬ್ಬನಿಗಳು ಚೆಲ್ಲಿದ ಮದರಸದ ಆ ಅಂಗಳದಲ್ಲಿ, ನಕ್ಷತ್ರಗಳ ಚಪ್ಪರದ ಕೆಳಗೆ ಚುಮುಚುಮು ಚಳಿಯನ್ನು ಹೊದ್ದುಕೊಂಡು ನಾನು ಕೇಳಿದ ‘ಜುಲೈಖಾ ಬೀಬಿ’ಯ ಕತೆ ಬೆಂಕಿಯ ಕೆಂಡದಂತೆ ನನ್ನ ಬಾಲ್ಯವನು ಹಾಗೂ ಕರಗಿ ಹೋಗುತ್ತಿರುವ ಈ ಯೌವನವನ್ನೂ ಬೆಚ್ಚಗಿಟ್ಟಿದೆ. ಹೆಣ್ಣಿನ ಬೆಂಕಿಯಂತಹ ವ್ಯಕ್ತಿತ್ವದ ಕಾವಿನಲ್ಲಿ ಮಾಗಿದ ನಾನು ಅವಸರವಸರವಾಗಿ ಬಾಲ್ಯದಿಂದ ಯೌವನಕ್ಕೆ ಕಾಲಿಟ್ಟನೇನೋ ಎನ್ನುವ ಅನುಮಾನ ನನ್ನನ್ನು ಆಗಾಗ ಕಾಡುವುದಿದೆ. ದೂರದ ಮಾಪಿಳ್ಳೆ ಪಟ್ಟಣದಿಂದ ಬಂದ ಮುಸ್ಲಿಯಾರರು ಆ ನಕ್ಷತ್ರಗಳ ಇರುಳಲ್ಲಿ ಹಾಡುತ್ತಿದ್ದ ಜುಲೈಖಾ ಬೀಬಿಯ ಮೋಹ, ತಲ್ಲಣ, ಮೋಸಗಳ ಕಥೆಯ ಆಕರ್ಷಣೆ ನನ್ನ ಪ್ರತಿ ಬರಹಗಳಲ್ಲೂ ಕಂಡೂ ಕಾಣಿದ ಒಂದು ನದಿಯಾಗಿ ಹರಿಯುತ್ತಿದೆ ಎಂದೇ ನಾನು ನಂಬಿದ್ದೇನೆ.


ಆ ಹಾಡಿಗೆ ‘‘ಯೂಸೂಫನ ಹಾಡು’’ ಎಂದೇ ಹೆಸರಾಗಿದ್ದರೂ ಅದು ನಿಜಕ್ಕೂ ಜುಲೈಖಾ ಬೀಬಿಯ ಹಾಡಾಗಿತ್ತು. ಯೂಸೂಫನ ಸೌಂದರ್ಯ, ಸತ್ಯ ಮತ್ತು ಅವನೊಳಗಿನ ಪ್ರವಾದಿತ್ವ ಇವೆಲ್ಲವೂ ಅರಳುಗಟ್ಟುವುದು ಜುಲೈಖಾಳ ಮುಖಾಮುಖಿಯ ಬಳಿಕ. ತನ್ನ ಸಹೋದರರಿಂದಲೇ ಬಾವಿಗೆ ತಳ್ಳಲ್ಪಡುವ ಎಳೆಯ ಯೂಸೂಫನನ್ನು ಆ ದಾರಿಯಾಗಿ ಹೋಗುತ್ತಿದ್ದ ಈಜಿಪ್ಟಿನ ವೃದ್ಧ ಅರಸನೊಬ್ಬ ರಕ್ಷಿಸಿ, ತನ್ನ ಅರಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ತನ್ನ ಪತ್ನಿ ಜುಲೈಖಾ ಬೀಬಿಗೆ ಆ ಎಳೆಯನನ್ನು ಒಪ್ಪಿಸಿ ‘‘ಇವನನ್ನು ನಾವು ನಮ್ಮ ಮಗನಾಗಿ ಸಾಕೋಣ’’ ಎಂದು ಹೇಳುತ್ತಾನೆ. ಆದರೆ ಬೆಳೆದಂತೆ ಬೆ
ಗತೊಡಗಿದ್ದ ಯೂಸೂಫನ ಯೌವನ ಜುಲೈಖಾಳ ಬದುಕಿನ ಮೇಲೆ ಬಿರುಗಾಳಿಯಂತೆ ಅಪ್ಪಳಿಸಿ, ಎಲ್ಲವನ್ನು ಅಸ್ತವ್ಯಸ್ತಗೊಳಿಸಿತು. ಮುದುಕ ರಾಜನನ್ನು ವರಿಸಿದ್ದರೂ, ತನ್ನ ಪಾತಿವ್ರತ್ಯವನ್ನು ಭದ್ರವಾಗಿಟ್ಟುಕೊಂಡಿದ್ದ ಅವಳಿಗೆ ಯೂಸೂಫ್ ಒಂದು ಪರೀಕ್ಷೆಯೇ ಆಗಿ ಬಿಟ್ಟ. ಅವಳ ಎದೆಯ ತಳದಲ್ಲಿ ಮಲಗಿ ನಿದ್ದೆ ಹೋಗಿದ್ದ ಯೌವನ ಯಾರೋ ಅರ್ಧರಾತ್ರಿಯಲ್ಲಿ ಎಬ್ಬಿಸಿದ ರಾಕ್ಷಸನಂತೆ ಏದುಸಿರು ಬಿಡತೊಡಗಿತು. ಆತನ ಮೋಹಕ್ಕೆ ಬಿದ್ದ ಆಕೆ, ತನ್ನ ಸರ್ವಸ್ವವನ್ನು ಆತನಿಗಾಗಿ ಕಳೆದುಕೊಳ್ಳಲು ಸಿದ್ಧಳಾಗುತ್ತಾಳೆ.‘‘ಕುರ್‌ಆನ್’ನಲ್ಲಿ ‘ಯೂಸುಫ್’ ಎಂಬ ಅಧ್ಯಾಯದಲ್ಲಿ ಜುಲೈಖಾಳ ಪ್ರಸ್ತಾಪ ಬರುತ್ತದೆ. ಅಲ್ಲಿ ಆಕೆ ಒಂದು ನಿಮಿತ್ತ ಮಾತ್ರ. ಯೂಸುಫರ ಸೌಂದರ್ಯ ಮತ್ತು ವ್ಯಕ್ತಿತ್ವ ಎಷ್ಟು ಉನ್ನತವಾದುದು ಎನ್ನುವುದನ್ನು ಜುಲೈಖಾಳ ಪ್ರಸಂಗದ ಮೂಲಕ ಅಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಯೂಸೂಫನ ಸೌಂದರ್ಯದ ಮುಂದೆ ಜುಲೈಖಾ ಅದೆಷ್ಟು ಅಸಹಾಯಕಳಾಗಿದ್ದಳೆಂದರೆ, ಅವನನ್ನು ಮೋಹಿಸುವುದರ ಹೊರತಾಗಿ ಆಕೆಗೆ ಬೇರೆ ದಾರಿಯೇ ಇದ್ದಿರಲಿಲ್ಲ. ಹೆಣ್ಣಿನ ಕುರುಡು ಮೋಹ ಮತ್ತು ವಂಚನೆಯತ್ತ ಕುರ್‌ಆನ್ ಬೊಟ್ಟು ಮಾಡುತ್ತಲೇ, ಎಲ್ಲೊ ಒಂದು ಕಡೆ ಜುಲೈಖಾಳ ಕುರಿತು ಮೃದುವಾಗಿ ಬಿಡುತ್ತದೆಯೇನೋ ಎಂದೆನಿಸುತ್ತದೆ. ವ್ಯಭಿಚಾರದಂತಹ ಮಾನಸಿಕ ಸ್ಥಿತಿಯನ್ನು ಹೊಂದಿದ್ದರೂ ತೀರಾ ಕಠಿಣವಾದ ಶಬ್ದಗಳನ್ನು ಅವಳ ವಿರುದ್ಧ ಎಲ್ಲೂ ಬಳಸುವುದು ಕಾಣುವುದಿಲ್ಲ. ಯೂಸೂಫನ ಮುಂದೆ ಎಂತಹ ಹೆಣ್ಣು ಮಕ್ಕಳೂ ಅಸಹಾಯಕರಾಗಿ ನಿಲ್ಲಬೇಕಾಗುತ್ತದೆಯೆನ್ನುವುದು ಅಲ್ಲಿ ಪ್ರಕಟವಾಗುತ್ತದೆ.

ಜುಲೈಖಾ ಬೀಬಿ ಯೂಸೂಫನ ಹಿಂದೆ ಬಿದ್ದಿರುವುದು ಅರಮನೆಯ ಅಂತಃಪುರದ ತುಂಬಾ ಸುದ್ದಿಯಾಗುತ್ತದೆ. ಅಂತಃಪುರದ ತರುಣಿಯರು ಜುಲೈಖಾಳ ಕುರಿತಂತೆ ಹಗುರವಾಗಿ ಮಾತನಾಡಲಾರಂಭಿಸುತ್ತಾರೆ. ಇದು ಜುಲೈಖಾಳ ಕಿವಿಗೆ ಬೀಳುತ್ತದೆ. ಆದರೆ ಆಕೆಗೆ ಯೂಸುಫನ ಕುರಿತ ತನ್ನ ಪ್ರೇಮ ಮತ್ತು ಮೋಹದ ಬಗ್ಗೆ ಅಸಾಧ್ಯ ಭರವಸೆಯಿತ್ತು. ಯೂಸೂಫನನ್ನು ನೋಡಿದ ಯಾವ ಹೆಣ್ಣೂ ಆತನನ್ನು ಪ್ರೀತಿಸದೇ ಇರಲಾರಳು ಎನ್ನುವುದು ಆಕೆಯ ನಿಲುವಾಗಿತ್ತು. ಆಕೆ ಅದನ್ನು ಸಾಬೀತು ಮಾಡಲು ಹೊರಡುತ್ತಾಳೆ.

ಒಂದು ದಿನ, ಅಂತಃಪುರದ ಎಲ್ಲ ಸ್ತ್ರೀಯರನ್ನು ಒಂದು ವಿಶಾಲ ಕೋಣೆಗೆ ಆಹ್ವಾನಿಸುತ್ತಾಳೆ. ಬಳಿಕ ಅವರ ಕೈಗೆ ಒಂದೊಂದು ಹಣ್ಣನ್ನು ಮತ್ತು ಚೂರಿಯನ್ನು ನೀಡಿ, ಹಣ್ಣನ್ನು ಕತ್ತರಿಸುವುದಕ್ಕೆ ಹೇಳುತ್ತಾಳೆ. ಎಲ್ಲರೂ ಹಣ್ಣನ್ನು ಇನ್ನೇನು ಕತ್ತರಿಸಬೇಕು...ಎನ್ನುವಷ್ಟರಲ್ಲಿ ಆ ಕೋಣೆಯ ಮುಖಾಂತರ ಯೂಸೂಫ್ ನಡೆದು ಹೋಗುತ್ತಾನೆ. ಮಿಂಚಿನ ಬಳ್ಳಿಯೊಂದು ತಮ್ಮ ಕಣ್ಣ ಮುಂದಿನಿಂದಲೇ ಚಲಿಸುತ್ತಿರುವುದನ್ನು ದಂಗಾಗಿ ನೋಡುತ್ತಿರುವ ಸ್ತ್ರೀಯರು ಹಣ್ಣನ್ನು ಕತ್ತರಿಸುವ ಬದಲು ತಮ್ಮ ತಮ್ಮ ಕೈ ಬೆರಳುಗಳನ್ನೇ ಕೊಯ್ದುಕೊಳ್ಳುತ್ತಾರೆ. ಜುಲೈಖಾಳಂತಹ ಹೆಣ್ಣು ಯಾಕೆ ಯೂಸೂಫರ ಮೋಹದಲ್ಲಿ ಬಿದ್ದು ಬಿಟ್ಟಳು ಎನ್ನುವುದು ಆಗ ಅಂತಃಪುರದ ಆ ತರುಣಿಯರಿಗೆ ಅರ್ಥವಾಗುತ್ತದೆ.

ವಜ್ರದಲ್ಲಿ ಕಡೆದಿಟ್ಟ ಜುಲೈಖಾ ಹಂತಹಂತವಾಗಿ ಕರಗುತ್ತಾ ಹೋದಂತೆ, ಹೂವಿನಷ್ಟು ಕೋಮಲವಾದ ಯೂಸುಫ್ ವಜ್ರದಂತೆ ಗಟ್ಯಿಯಾಗುತ್ತಾ ಹೋಗುತ್ತಾರೆ. ಜುಲೈಖಾ ಯೂಸೂಫನನ್ನು ಕಾಡುತ್ತಾಳೆ. ಬೇಡುತ್ತಾಳೆ. ಜುಲೈಖಾಳ ಮೋಹ ಧಗಧಗಿಸಿ ಉರಿಯುತ್ತಿದ್ದಂತೆಯೇ ಆ ಉರಿಯಲ್ಲಿ ಯೂಸುಫ್ ಇನ್ನಷ್ಟು ಕಠಿಣವಾಗುತ್ತಾರೆ. ಒಮ್ಮೆ ಯೂಸುಫ್ ಕೋಣೆಯಲ್ಲಿ ಒಂಟಿಯಾಗಿರುವುದನ್ನು ನೋಡಿ ಜುಲೈಖಾ ಆತನನ್ನು ತನ್ನೆಡೆಗೆ ಒಲಿಸಿಕೊಳ್ಳುವುದಕ್ಕೆ ನೋಡುತ್ತಾಳೆ. ಯುಸುಫ್ ಜುಲೈಖಾಳ ಹಿಡಿತದಿಂದ ಪಾರಾಗಲು ಯತ್ನಿಸುತ್ತಾರೆ. ಕೋಣೆಯಿಂದ ಯೂಸುಫ್ ಪಲಾಯನ ಮಾಡುತ್ತಿದ್ದಾಗ ಜುಲೈಖಾ ಬೆಂಬತ್ತಿ ಹಿಡಿಯುವುದಕ್ಕೆ ಹವಣಿಸುತ್ತಾಳೆ. ಆ ಸಂದರ್ಭದಲ್ಲಿ ಯೂಸೂಫ್ ಅಂಗಿಯ ಹಿಂಬದಿಯನ್ನು ಜುಲೈಖಾ ಎಳೆಯುವಾಗ ಅದು ಹರಿಯುತ್ತದೆ. ಅಷ್ಟರಲ್ಲಿ ಅಲ್ಲಿಗೆ ಜುಲೈಖಾಳ ಪತಿಯ ಆಗಮನವಾಗುತ್ತದೆ. ಜುಲೈಖಾಳು ಯೂಸುಫನ ಮೇಲೆ ಕೆಂಡವಾಗುತ್ತಾಳೆ. ಯೂಸೂಫನ ತಿರಸ್ಕಾರದಿಂದ ಅವಳ ಯೌವನ ಘಾಸಿಗೊಂಡಿತ್ತು. ಪತಿಯ ಮುಂದೆ ಅಳುತ್ತಾ ‘‘ಯೂಸುಫ್ ತನ್ನನ್ನು ಅತಿಕ್ರಮಿಸಲು ಬಂದ’’ ಎಂದು ಸುಳ್ಳು ದೂರು ಹೇಳುತ್ತಾಳೆ. ಆದರೆ ಯೂಸುಫನ ಹರಿದ ಅಂಗಿ ನಿಜವೇನು ಎನ್ನುವುದನ್ನು ತಿಳಿಸುತ್ತಿತ್ತು. ತಪ್ಪು ಜುಲೈಖಾಳದ್ದೆನ್ನುವುದು ತೀರ್ಮಾನವಾಗುತ್ತದೆಯಾದರೂ, ಆಕೆಯ ಒತ್ತಡ ಯೂಸೂಫನನ್ನು ಸೆರೆಮನೆಗೆ ಸೇರಿಸುತ್ತದೆ.

ಆದರೆ ಯೂಸುಫ್ ಸಜ್ಜನ ಎನ್ನುವುದು ಸ್ವತಃ ರಾಜನಿಗೂ ಗೊತ್ತು. ಆಸ್ಥಾನಕ್ಕೂ ಗೊತ್ತು. ಸೆರೆಮನೆಯ ಕಂಬಿಗಳಿಗೂ ಗೊತ್ತು. ಆದರೆ ಜುಲೈಖಾನ ಸ್ವೇಚ್ಛೆಗಿಂತ ಜೈಲಿನ ಬಂಧನ ಯೂಸೂಫನಿಗೆ ಇಷ್ಟವಾಗುತ್ತದೆ. ಯೂಸುಫನಿಗೆ ಸ್ವಪ್ನಗಳಿಗೆ ಅರ್ಥ ಹೇಳುವ ಕಲೆ ಸಿದ್ಧಿಸಿತ್ತು. ರಾಜನಿಗೆ ಒಂದು ದಿನ ಬೀಳುವ ಮೂರು ಸ್ವಪ್ನಗಳು ಯೂಸೂಫನನ್ನು ಜೈಲಿನಿಂದ ಹೊರಕ್ಕೆ ತರುತ್ತದೆ. ಆತನ ನಿರಪರಾಧಿತ್ವ ಸಾಬೀತಾಗುತ್ತದೆ. ಸೆರೆಮನೆಯಿಂದ ಹೊರಬಂದ ಯೂಸುಫ್ ಕೊನೆಗೆ ಅದೇ ನಾಡಿನ ಸುಲ್ತಾನನಾಗಿ ಅಧಿಕಾರ ಹಿಡಿಯುತ್ತಾನೆ.

ಕುರ್‌ಆನಿನಲ್ಲಿ ಯೂಸುಫನ ವ್ಯಕ್ತಿತ್ವವನ್ನು ತನ್ನ ಉಜ್ವಲ ಮೋಹದ ನಿಕಷಕ್ಕೆ ಉಜ್ಜಿ, ಆತನನ್ನು ಬೆಳಗಿಸಿ ಜುಲೈಖಾ ಮುಗಿದು ಹೋಗುತ್ತಾಳೆ. ಆದರೆ ಜನಪದದಲ್ಲಿ ಜುಲೈಖಾಳ ಕಥೆ ಅಲ್ಲಿಗೇ ಮುಗಿಯುವುದಿಲ್ಲ. ‘‘ಯೂಸೂಫರ ಹಾಡು’ಗಳಲ್ಲಿ ಯೂಸುಫ್ ಮತ್ತು ಜುಲೈಖಾರ ಕಥೆ ಮತ್ತೆ ಮುಂದುವರಿಯುತ್ತದೆ. ಯೂಸೂಫರ ಸಾಕು ತಂದೆ ಮೃತರಾದ ಬಳಿಕ ಯೂಸುಫ್ ಅದೇ ನಾಡಿಗೆ ಅರಸರಾಗುತ್ತಾರೆ. ಬಳಿಕ ಯೂಸುಫ್ ಒಂದು ದಿನ ಜುಲೈಖಾಳ ಅಂತಃಪುರಕ್ಕೆ ಬರುತ್ತಾರೆ.

ಯೂಸುಫ್ ಅಂತಃಪುರಕ್ಕೆ ಭೇಟಿ ನೀಡುವ ಸುದ್ದಿ ಜುಲೈಖಾ ಬೀಬಿಗೆ ತಲುಪುತ್ತದೆ. ಆಕೆ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾಳೆ. ಓಹ್! ಸುಕ್ಕುಗಳ ಮರೆಯಲ್ಲಿ ಅಡಗಿ ಕೂತ ಕಾಲ ಜುಲೈಖಾಳನ್ನು ಅಣಕಿಸುತ್ತಿದ್ದಾನೆ. ಒಳಗೂ, ಹೊರಗೂ ಬೆಳಗುತ್ತಿರುವ ಯೂಸೂಫರೆಲ್ಲಿ, ವೃದ್ಧಾಪ್ಯದಿಂದ ಬಾಡಿದ ತಾನೆಲ್ಲಿ? ಯೂಸುಫ್ ಬಹುಶಃ ತನ್ನನ್ನು ಅಣಕಿಸಲು ಬರುತ್ತಿರಬೇಕು. ತನ್ನನ್ನು ಶಿಕ್ಷಿಸಲು ಬರುತ್ತಿರಬೇಕು. ಯೂಸುಫನ ಮುಂದೆ ಮುಖವೊಡ್ಡಿ ನಿಲ್ಲುವುದಕ್ಕಿಂತ ದೊಡ್ಡ ಶಿಕ್ಷೆ ತನಗಿದೆಯೆ? ಆಕೆ ತನ್ನ ಸುಕ್ಕುಗಟ್ಟಿದ ಮುಖವನ್ನು ಬಟ್ಟೆಯಿಂದ ಭದ್ರವಾಗಿ ಮುಚ್ಚಿಕೊಳ್ಳುತ್ತಾಳೆ. ಅದೋ ಯೂಸುಫ್ ಅಂತಃಪುರಕ್ಕೆ ಆಗಮಿಸಿದರು. ತನ್ನ ಪ್ರೇಮಕ್ಕಾಗಿ ತನ್ನ ವಿರುದ್ಧ ಒಂದು ಯುದ್ಧವನ್ನೇ ಹೂಡಿದ ಹೆಣ್ಣು...ಇದೀಗ ಸೋತು ತನ್ನನ್ನು ಎದುರುಗೊಳ್ಳಲಾಗದೆ ಮುಖ ಮುಚ್ಚಿ ಕುಳಿತಿದ್ದಾಳೆ. ಯೂಸುಫ್ ಜುಲೈಖಾಳ ಬಳಿಗೆ ಸಾಗುತ್ತಾರೆ. ನಿಧಾನಕ್ಕೆ ಮುಖದ ಬಟ್ಟೆಯನ್ನು ಸರಿಸುತ್ತಾರೆ. ಏನಾಶ್ಚರ್ಯ! ಯೂಸುಫನ ಸ್ಪರ್ಶಕ್ಕೆ ಜುಲೈಖಾ ಹದಿಹರೆಯದ ತರುಣಿಯಾಗಿ ಬದಲಾಗಿದ್ದಾಳೆ. ಅವಳ ಹಿಂದಿನ ಮುಖಸೌಂದರ್ಯ ಆಕೆಗೆ ಮರಳಿ ಸಿಕ್ಕಿದೆ. ಮಲ್ಲಿಗೆಯ ರಾಶಿ ಚೆಲ್ಲಿದಂತೆ ತನ್ನ ಮುಂದೆ ಯೂಸುಫ್ ನಗುತ್ತಿದ್ದಾರೆ! ಮುಂದೆ ಯೂಸುಫ್ ಜುಲೈಖಾಳನ್ನು ವರಿಸುತಾನೆ. ಇದು ಜನರು ಕಟ್ಟಿದ ಯುಸೂಫ್-ಜುಲೈಖಾರ ಕಥೆ. ಹೀಗೆ ಆಗಿದ್ದರೆ ಅದೆಷ್ಟು ಚೆನ್ನಾಗಿತ್ತು ಎಂದು ನಾವೆಲ್ಲರೂ ಬಯಸುವ ಕಟ್ಟು ಕತೆ.

ಜುಲೈಖಾ ಎನ್ನುವ ಪಾತ್ರವನ್ನು ನನ್ನ ಹಲವು ಗೆಳೆಯರು ಅಮೃತಮತಿಗೆ ಹೋಲಿಸಿದ್ದಿದೆ. ಇನ್ನೊಬ್ಬ ಗೆಳೆಯ ಯಾವುದೋ ಮಾತಿನ ಭರದಲ್ಲಿ ಯೂಸುಫ್ ಮತ್ತು ಜುಲೈಖಾ ಸಂಬಂಧವನ್ನು ಮೀರಾ ಮತ್ತು ಕೃಷ್ಣರ ನಡುವಿನ ಸಂಬಂಧವಾಗಿ ಪರಿಭಾವಿಸಬೇಕು ಎಂದು ಹೇಳಿದ್ದಿದೆ. ಆದರೆ ಜುಲೈಖಾ ಬೀಬಿ ಅಮೃತ ಮತಿ ಮತ್ತು ಮೀರಾರನ್ನು ಮೀರಿ ಬೆಳೆಯುತ್ತಾಳೆ. ಆಕೆಯದು ಕುರುಡು ಪ್ರೇಮವಲ್ಲ. ತಾನು ಏನನ್ನು ಬಯಸುತ್ತಿದ್ದೇನೆ ಎನ್ನುವುದು ಆಕೆಗೆ ಸ್ಪಷ್ಟವಿದೆ. ಆ ಕುರಿತಂತೆ ಆಕೆಗೆ ಯಾವುದೇ ಪಶ್ಚಾತ್ತಾಪವಿಲ್ಲ. ಅಲ್ಲಿ ಮೀರಾಳ ಅಧ್ಯಾತ್ಮದ ಸ್ಪರ್ಶವೂ ಇಲ್ಲ. ಮೀರಾಳದ್ದು ಆರಾಧನೆ, ಆದರೆ ಜುಲೈಖಾಳದ್ದು ಈಗಷ್ಟೇ ಕುಲುಮೆಯಿಂದ ತೆಗೆದಂತೆ ಧಗಿಸುತ್ತಿರುವ ಪ್ರೇಮ. ಯೂಸುಫನನ್ನು ಗಳಿಸುವುದಕ್ಕಾಗಿ ಸುಳ್ಳು, ಮೋಸ ಎಲ್ಲದಕ್ಕೂ ಆಕೆ ತಯಾರಾಗಿ ನಿಂತಿದ್ದಳು ಮತ್ತು ತನ್ನ ಸ್ಥಾನದಲ್ಲಿದ್ದ ಯಾವ ಹೆಣ್ಣೂ ಅದನ್ನೇ ಮಾಡುತ್ತಿದ್ದಳು ಎನ್ನುವುದನ್ನು ಆಕೆ ದೃಢವಾಗಿ ನಂಬಿದ್ದಳು.

ಜುಲೈಖಾಳಂತಹ ಹೆಣ್ಣಿನ ಮುಂದೆ ತನ್ನ ನೈತಿಕ ಶಕ್ತಿಯನ್ನು ಕಾಪಾಡಿಕೊಂಡ ಯೂಸುಫರನ್ನು ಪರಿಚಯಿಸುವುದಷ್ಟೇ ಕುರ್‌ಆನಿಗೆ ಮುಖ್ಯವಾಗುತ್ತದೆ. ಆಕೆಯ ಪಾತ್ರ ತನ್ನ ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ಅಲ್ಲಿ ಮುಗಿದು ಹೋಗುತ್ತದೆ. ಆದರೆ ಜನಸಾಮಾನ್ಯ ಆ ಬಳಿಕ ಜುಲೈಖಾಳ ಪಾತ್ರವನ್ನು ತನ್ನದೇ ಕಲ್ಪನೆಯ ಮೂಲಕ ವಿಸ್ತರಿಸುತ್ತಾ ಹೋಗುತ್ತಾನೆ. ಜುಲೈಖಾ ಎಲ್ಲಿ ಸೇರಬೇಕಾಗಿತ್ತೋ ಅಲ್ಲಿಗೆ ಆಕೆಯನ್ನು ಸೇರಿಸುತ್ತಾನೆ.
***

ನನ್ನ ಬಾಲ್ಯದಲ್ಲಿ ಕೇಳಿದ ಆ ಹಾಡು ಈಗಲೂ ಒಮ್ಮೆಮ್ಮೆ ತಂಗಾಳಿಯಂತೆ ನನ್ನನ್ನು ಸವರಿ ಹೋಗುತ್ತದೆ. ದಫ್ ಬಾರಿಸುತ್ತಾ ಹಾಡುತ್ತಿದ್ದ ಆ ಹಾಡು ನನ್ನ ಏಕಾಂತದಲ್ಲಿ ಮೆಲ್ಲಗೆ ಕಣ್ಣು ಪಿಳುಕಿಸುತ್ತವೆ. ಜುಲೈಖಾಳ ಎದೆಬಡಿತದ ಲಯದಂತೆ ದಫ್‌ನ್ನು ಸ್ಪರ್ಶಿಸುತ್ತಿರುವ ಬೆರಳುಗಳು. ಜಗತ್ತಿನ ಸ್ವಪ್ನಗಳಿಗೆ ಅರ್ಥ ಹೇಳುತ್ತಿರುವ ಯೂಸೂಫನ ಮುಂದೆ ತನ್ನ ಸ್ವಪ್ನಗಳನ್ನು ಬೊಗಸೆಯಲ್ಲಿಟ್ಟು ಜುಲೈಖಾ ವಿನೀತವಾಗಿ ಕೇಳುತ್ತಿದ್ದಾಳೆ ...‘‘ವರ್ಷಗಳಿಂದ ನನ್ನೆದೆಯಲ್ಲಿ ಬಚ್ಚಿಟ್ಟ ಆಸೆಗಳು ನಿನಗೆ ಕಾಣುವುದಿಲ್ಲವೆ...? ನನ್ನ ಸೌಂದರ್ಯ ಕಂಡು ನಿನ್ನಲ್ಲಿ ಯಾವುದೇ ಬಯಕೆಗಳು ಮೂಡುವುದಿಲ್ಲವೆ...!?’’

Thursday, June 23, 2011

ಚಪ್ಪರ ಕಳಚುವ ಹೊತ್ತು


ನನ್ನ ‘ಪ್ರವಾದಿಯ ಕನಸು’ ಸಂಕಲನದಿಂದ ಆಯ್ದ ಇನ್ನೊಂದು ಕವಿತೆ ನಿಮ್ಮ ಮುಂದಿದೆ.


ಹಸಿದ ಹೊಟ್ಟೆ
ತೆರೆದ ಬಾಯಿ
ಕಸದ ಬುಟ್ಟಿಗೆ ಗೊತ್ತು
ಇದು
ಚಪ್ಪರ ಕಳಚುವ ಹೊತ್ತು!

ಹಳಸಿದ ಅನ್ನ
ಮಾಸಿದ ಬಣ್ಣ-ಸುಣ್ಣ
ಕಟ್ಟಿದ ತೋರಣ
ಯಾರಲ್ಲಿ....ಕಸಬರಿಕೆ ತನ್ನಿ
ಅದರ ಹೊಟ್ಟೆಗೆ ಸುರಿದು ಬನ್ನಿ!

ಬೇರು ಬಿಟ್ಟರೆ ಕಂಬಗಳು
ನೆಲದಾಳಕ್ಕೆ
ಕೊಡಲಿಯಿಟ್ಟು ಮುರಿದು ಬಿಡಿ
ಸುಕ್ಕು ಬಿದ್ದ ಜರಿ ಕಾಗದಗಳ ಕಿತ್ತು
ಬಿಸಿ ನೀರು ಕಾಯಿಸುವುದಕ್ಕೆ
ಒಳಗೆ ಕೊಡಿ!

ಬಾಡಿಗೆ ತಂದ ಪ್ಲೇಟು-ಲೋಟ
ಲೆಕ್ಕ ಮಾಡಿ
ನಿಮ್ಮ ನಿಮ್ಮ ಎದೆಗಳನ್ನು ತಡವಿ
ಇನ್ನೂ ಉರಿಯುತ್ತಿದ್ದರೆ ಬಣ್ಣದ ದೀಪ
ಆರಿಸಿ ಜಾಗೃತೆ
ಬಾಡಿಗೆಯವನದು ಪಾಪ!

ನಿದ್ದೆ ಕಳಚಿ ಎದ್ದವರ ಕಣ್ಣುಗಳಲ್ಲಿ
ಪಾಳು ಬಿದ್ದ ಮನೆ
ಆಕಾಶವ ತುಂಬಿಕೊಂಡು ನಿನ್ನೆ
ನಕ್ಷತ್ರಗಳ ಗಿಲಕಿ ಆಡಿದವರು
ಇರುಳ ಕಂಬಳಿಯಂತೆ ಹೊದ್ದು
ನೆಲ ಮುಟ್ಟಿದ ಚಪ್ಪರ-
ವನ್ನೇ ನೋಡುತ್ತಾರೆ ಕದ್ದು!

ಗೋಡೆ ತುಂಬಾ...
ಹಚ್ಚಿಟ್ಟ ಮದಿರಂಗಿಯಂತೆ
ಯಾರ್ಯಾರೋ ಊರಿದ್ದ ಗುರುತು
ಇನ್ನೊಂದು ಹಬ್ಬ-ಹರಿದಿನದ
ನಿರೀಕ್ಷೆಯಲ್ಲಿ
ನೆರಳಂತೆ ಮನೆ ತುಂಬಾ ಸುಳಿಯುವವರು
ಉಳಿಯುವವರು!

ಕತ್ತಲು ಇನ್ನೂ ಹರಿದಿಲ್ಲ
ವೌನ ಮುರಿದಿಲ್ಲ
ಗಪ್ಪೆಂದರೂ ಹಕ್ಕಿ-ಪಿಕ್ಕಿಗಳ ದನಿಯಿಲ್ಲ
ಓಯ್...ಚಪ್ಪರ ಕಳಚುವುದಕ್ಕೆ
ಇನ್ನೇಕೆ ಹೊತ್ತು!?
ಮದುವೆ ಮುಗಿಯಿತು
ಮದುಮಗಳೀಗ ಮದುಮಗನ ಸೊತ್ತು!

Tuesday, June 21, 2011

ಪ್ರವಾದಿನಾನು
ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಹೊರಬಂದ ‘ಪ್ರವಾದಿಯ ಕನಸು’ ಕವನ ಸಂಕಲನದ ಒಂದು ಪುಟ್ಟ ಕವಿತೆಯನ್ನು ಇಲ್ಲಿ ನೀಡಿದ್ದೇನೆ. ಈ
ಕವಿತೆಯನ್ನು ನೀವು ಈ ಹಿಂದೆ ಓದಿರುವ ಸಾಧ್ಯತೆ ತೀರಾ ಕಡಿಮೆ.


ದೇವರ ಪಟ-

ದ ಮೇಲೆ ಗುಬ್ಬಚ್ಚಿ

ಬೆಳಕಿನ ಕಡ್ಡಿ

ಕೊಕ್ಕಲ್ಲಿ ಕಚ್ಚಿ

ನಿವೇಶ ಕೋರಿ

ಕಣ್ಣಲ್ಲಿ ಸಣ್ಣ ಅರ್ಜಿ


ಎಡವಿ ಅಮ್ಮನ
ಭಕ್ತಿ-

ಹಚ್ಚಿಟ್ಟ ಬತ್ತಿ

ದೇವರ ನೆತ್ತಿ ಮೇಲೆ ಪಾದ

ಇದಾವ ಚಾರ್ವಾಕ ವಾದ!?


ನಿಂತಲ್ಲೇ ಸೆಟೆದ

ದಿಟ್ಟ

ಪುಟ್ಟ ಸಾಮ್ರಾಟ

ಗರಿಗಳೆಡೆ ಬಚ್ಚಿಟ್ಟ

ಹತ್ಯಾರುಗಳ ಪಟಪಟ ಬಿಚ್ಚಿಟ್ಟ

ಕಟ್ಟುವುದಕ್ಕೀಗ ರೆಡಿ

ಬಹುಶಃ ಪುಟ್ಟ ಒಂದು ಗುಡಿ!


ಇರುಳು ಮುಗಿಯುವುದರಲ್ಲಿ

ಮನೆ ತುಂಬಾ

ಪ್ರೀತಿಗೆ ಭಾಷೆ

ಭಕ್ತಿಯ ಮಡಿಯುಟ್ಟು ಉಷೆ!

Thursday, June 9, 2011

ಇನ್ನಷ್ಟು ಕತೆಗಳೊಂದಿಗೆ ಸಂತ...


ರಸ್ತೆ
ಸಂತ ಆ ರಸ್ತೆಯಲ್ಲಿ ಸಾಗುತ್ತಿದ್ದ.

ಸುಂಕದವ ತಡೆದು ಕೇಳಿದ ‘‘ರಸ್ತೆಯ ಸುಂಕವನ್ನು ಕಟ್ಟಿದ್ದೀಯ?’’

‘‘ರಸ್ತೆಗೆ ಸುಂಕವನ್ನೇಕೆ ಕಟ್ಟಬೇಕು?’’ಸಂತ ಅಚ್ಚರಿಯಿಂದ ಕೇಳಿದ.

ಸುಂಕದವ ಹೇಳಿದ ‘‘ನಮ್ಮ ಅರಸರು ಕಟ್ಟಿದ ರಸ್ತೆಯಲ್ಲಿ ನಡೆಯುತ್ತಿದ್ದೀಯ. ಅದಕ್ಕೆ’’

ಅವನು ನಕ್ಕು ಹೇಳಿದ ‘‘ನಮ್ಮ ಗುರಿಯನ್ನು ನಾವು ಮುಟ್ಟಬೇಕಾದರೆ ನಮ್ಮ ರಸ್ತೆಯನ್ನು ನಾವೇ ನಿರ್ಮಾಣ ಮಾಡಿಕೊಳ್ಳಬೇಕು. ನಿಮ್ಮ ಅರಸ ಕಟ್ಟಿದ ರಸ್ತೆಯಲ್ಲಿ ನಾನು ನನ್ನ ಗುರಿಯನ್ನು ಹೇಗೆ ಮುಟ್ಟಿಯೇನು? ನಾನು ನಡೆಯುತ್ತಿರುವುದು ನಾನು ಕಟ್ಟಿದ ರಸ್ತೆಯಲ್ಲಿ’’ ಎನ್ನುತ್ತಾ ಸುಂಕದವನನ್ನು ಬದಿಗೆ ತಳ್ಳಿ ಅವನು ಮುಂದೆ ನಡೆದ.

ಸುಂಕದವ ಒಪ್ಪಲಿಲ್ಲ. ಸಂತನ ಹಿಂದೆಯೇ ಬಂದ.

ಸಂತ ಆತನಿಗೆ ಸ್ಪಷ್ಟ ಪಡಿಸಿದ ‘‘ಈ ರಸ್ತೆ ಅರಸನ ಆಸ್ಥಾನದವರೆಗೆ ಮಾತ್ರ ಹೋಗಬಲ್ಲುದು. ನಾನೋ...ಈ ಭೂಮಿಯ ಕಟ್ಟ ಕಡೆಯ ಅಂಚಿನ ಗುರಿಯನ್ನು ಹೊಂದಿದ್ದೇನೆ. ನಿನ್ನ ಅರಸ ಅಲ್ಲಿಯವರೆಗೂ ರಸ್ತೆ ಕಟ್ಟಿದ್ದಾನೆಯೇ? ಹಾಗಾದರೆ ಮಾತ್ರ ನಾನು ಸುಂಕವನ್ನು ತೆರಬಲ್ಲೆ’’

ಯಜಮಾನ!

ಅದು ಬರಗಾಲದ ಕಾಲ.

ಮಳೆಗಾಲ ಬಂದಿದ್ದರೂ ಮಳೆ ಸುರಿದಿರಲೇ ಇಲ್ಲ.
ಮಳೆಗಾಲ ಮುಗಿಯುತ್ತಾ ಬಂತು.
ಹೀಗಾದರೆ ಈ ಬಾರಿ ಅನ್ನ ಆಹಾರಗಳಿಗೆ ಹಾಹಾಕಾರ ಏಳುತ್ತದೆ ಎನ್ನುವುದು ಬೀದಿಯಲ್ಲಿದ್ದ ಸಂತನಿಗೆ ಅರ್ಥವಾಯಿತು.
ಊರಿಗೆ ಊರೇ ಬರಗಾಲದಿಂದ ತತ್ತರಿಸಿದರೆ ಏನು ಮಾಡುವುದು?

ಆಶ್ರಮದ ಗದ್ದೆಗಳಂತೂ ಸಂಪೂರ್ಣ ಸುಟ್ಟು ಹೋಗಿದ್ದವು. ದನಕರುಗಳು ಎಲುಬು ಗೂಡಾಗಿದ್ದವು.
ಸಂತ ಕಳವಳಗೊಂಡ.
ಅಂದು ಬೀದಿಯಲ್ಲಿ ಎಲ್ಲರ ಮುಖಗಳು ಕಳಾಹೀನವಾಗಿದ್ದವು.

ಆದರೆ ಇದ್ದಕ್ಕಿದ್ದಂತೆ ಒಬ್ಬ ಕರಿಯ ಗುಲಾಮ ನಗುತ್ತಾ ತನೆಗೆದುರಾಗುತ್ತಿರುವುದನ್ನು ಸಂತ ಕಂಡ.

ಆತನ ಮುಖದಲ್ಲಿರುವ ಮಂದಸ್ಮಿತ ಅವನನ್ನು ಅಚ್ಚರಿಗೊಳಿಸಿತು.
ಸಂತ ಕೇಳಿದ ‘‘ಇಡೀ ಊರು ಬರಗಾಲದಿಂದ ಭಯಭೀತವಾಗಿದೆ. ಆದರೆ ನೀನು ಮಾತ್ರ ಆರಾಮವಾಗಿದ್ದೀಯಲ್ಲ...’’

ಗುಲಾಮ ಹೇಳಿದ ‘‘ ನನ್ನ ಯಜಮಾನ ಒಂದು ಸಾವಿರ ಎಕರೆ ಭೂಮಿಯ ಯಜಮಾನ. ಎರಡು ವರ್ಷಕ್ಕೆ ಆಗುವಷ್ಟು ಧಾನ್ಯ ಅವನಲ್ಲಿ ಸಂಗ್ರಹವಿದೆ. ನನಗೆ ಬೇಕಾದ ಆಹಾರ ಅವನು ನೀಡದೇ ಇರುತ್ತಾನೆಯೆ?’’
ಸಂತನಿಗೆ ನಾಚಿಕೆಯಾಯಿತು.
ತನ್ನ ಶಿಷ್ಯರನ್ನು ಕರೆದು ಹೇಳಿದ ‘‘ನೋಡಿ, ಇವನೇ ಇನ್ನು ಮುಂದೆ ನಮ್ಮೆಲ್ಲರ ಗುರು. ನಮ್ಮ ಯಜಮಾನನೋ ಇಡೀ ಬ್ರಹ್ಮಾಂಡಕ್ಕೆ ಒಡೆಯ. ನಮ್ಮ ಯಜಮಾನನ ಸಂಗ್ರಹವೋ ಎಂದೂ ಮುಗಿಯದೇ ಇರುವುದು. ಆದರೆ ನಾವು ಅವನ ಮೇಲೆ ಭರವಸೆಯಿಡದೆ ಸುಮ್ಮ ಸುಮ್ಮಗೆ ಹೆದರಿ ಬಿಟ್ಟೆವು. ಹೋಗೋಣ... ನಮ್ಮ ಗದ್ದೆಯಲ್ಲಿ ಕೈಲಾದ ದುಡಿಮೆ ಮಾಡೋಣ. ಅವನ ಖಜಾನೆಯ ಬಾಗಿಲನ್ನು ತಟ್ಟೋಣ... ಒಂದು ಸಾವಿರ ಎಕರೆ ಭೂಮಿಯ ಈತನ ಯಜಮಾನ ಈತನ ಕೈ ಬಿಡುವುದಿಲ್ಲವೆಂದಾದರೆ, ನಮ್ಮ ಯಜಮಾನರ ಕುರಿತಂತೆ ನಮಗೇಕೆ ನಿರಾಸೆ?’’

ಭೂಮಿ ಮತ್ತು ನೀರು
ತುಂಡು ಭೂಮಿಗಾಗಿ ಎರಡು ರಾಜರು ಯುದ್ಧಕ್ಕೆ ನಿಂತರು.

ಯಾವ ಕಾರಣಕ್ಕೂ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಇಕ್ಕೆಡೆಯ ಸೈನಿಕರು ಚೀರಿದರು.
‘‘ನಮ್ಮ ಭೂಮಿ...ನಮ್ಮ ಭೂಮಿ’’ ಎಂದು ಒಬ್ಬರ ಮೇಲೆ ಒಬ್ಬರು ಎರಗಿದರು.
ಈಟಿ ಚುಚ್ಚಿತು. ರಕ್ತ ಚಿಮ್ಮಿತು.

ಎರಡೂ ಬಲಾಢ್ಯ ಸೈನ್ಯಗಳೇ. ಉಭಯ ದಳಗಳೂ ಹಗಲು ರಾತ್ರಿ ಹೋರಾಡಿದವು.
ಸೈನಿಕರೆಲ್ಲ ಕೈ, ಕಾಲು ಕಳೆದುಕೊಂಡು ಗಾಯಗಳ ನಡುವೆ ಚೀರ ತೊಡಗಿದರು.

ಅಂದ ಹಾಗೆ, ಭೂಮಿ ಭೂಮಿ ಎಂದು ಚೀರಿ ಯುದ್ಧಕ್ಕಿಳಿದ ಅವರೆಲ್ಲ ‘ನೀರು...ನೀರು...’ ಎಂದು ಸಾವಿನ ಮನೆಯ ಅಂಚಿನಲ್ಲಿ ಕುಳಿತು ಹಳಹಳಿಸತೊಡಗಿದ್ದರು.

ಅವರಾರೂ ‘ಭೂಮಿ ಭೂಮಿ’ ಎನ್ನದಿರುವುದು ವಿಶೇಷವಾಗಿತ್ತು.

ಪಾಸು-ಫೇಲು

ಶಾಲೆಯಲ್ಲಿ ಫಲಿತಾಂಶ ಹೊರಬಿತ್ತು.

ಮೇಷ್ಟ್ರು
ಹೇಳಿದರು ‘‘ನೀನು ಪಾಸು’’
ಹುಡುಗ
ಕುಣಿಯುತ್ತಾ ಶಾಲೆಯಿಂದ ಹೊರ ಬಿದ್ದ.
ದಾರಿಯಲ್ಲಿ
ಹೀಗೆ ನಡೆಯುತ್ತಾ ಹೋಗುವಾಗ ಒಂದು ಮರ ಕೇಳಿತು... ‘‘ನನ್ನನ್ನು ನೀನು ಹತ್ತ ಬಲ್ಲೆಯಾ?’’
ಹುಡುಗ
‘‘ಇಲ್ಲ’’ ಎಂದ.
ತಲೆ
ಕುಣಿಸುತ್ತಿದ್ದ ಹೂವಿನ ಗಿಡ ಕೇಳಿತು ‘‘ಈ ಹೂವಿನ ಹೆಸರು ಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ.

ಅಲ್ಲೇ
ಬಿದ್ದಿದ್ದ ಸೈಕಲ್ ಕೇಳಿತು ‘‘ನನ್ನನ್ನು ನೀನು ತುಳಿಯ ಬಲ್ಲೆಯ?’’
ಹುಡುಗ ‘‘ಇಲ್ಲ’’ ಎಂದ.
ಮುಂದೆ
ನದಿಯೊಂದು ಎದುರಾಯಿತು. ಕೇಳಿತು ‘‘ನನ್ನನ್ನು ನೀನು ಈಜಬಲ್ಲೆಯಾ?’’
ಹುಡುಗ ‘‘ಇಲ್ಲ’’ ಎಂದ. ತೂಗಾಡುತ್ತಿದ್ದ ಮಾವಿನ ಗೊಂಚಲು ಕೇಳಿತು ‘‘ನನ್ನನ್ನು ನೀನು ಉದುರಿಸಬಲ್ಲೆಯ?’’
ಹುಡುಗ ‘‘ಇಲ್ಲ’’ ಎಂದ.
ಎದುರಾದ ಬೆಟ್ಟ ಕೇಳಿತು ‘‘ನನ್ನನ್ನು ನೀನು ಏರ ಬಲ್ಲೆಯ?’’
ಹುಡುಗ
‘‘ಇಲ್ಲ’’ ಎಂದ.
ಬದುಕು
ಹೇಳಿತು ‘‘ಹಾಗಾದರೆ ನೀನು ಫೇಲು’’

ಸಿದ್ಧತೆ

ಸಂತ ಆಶ್ರಮದ ಹಿತ್ತಲಲ್ಲಿ ತರಕಾರಿ ತೋಟದ ಮುಂದೆ ನಿಂತಿದ್ದ.

ನೀರಿನ
ಕೊರತೆಯಿಂದ ಗಿಡಗಳು ಕೆಂಪಾಗಿದ್ದವು.
ಸಂತನ ಬಳಿಗೆ ಶಿಷ್ಯ ಓಡೋಡಿ ಬಂದ. ‘ಗುರುಗಳೇ, ಪರ್ಷಿಯಾದ ಶ್ರೇಷ್ಠ ಸಂತನೊಬ್ಬ ನಮ್ಮ ಆಶ್ರಮದೆಡೆಗೆ ಬರುತ್ತಿದ್ದಾರೆ...’

ಶಿಷ್ಯನ ಮಾತು ಕೇಳಿ ‘‘ಹೌದೆ?’’ ಎಂದು ಕೇಳಿ ತನ್ನ ಕೆಲಸದಲ್ಲಿ ಮಗ್ನನಾದ.
‘‘ಗುರುಗಳೇ, ಆ ಶ್ರೇಷ್ಠ ಸಂತರು ನಿಮ್ಮನ್ನು ಭೇಟಿಯಾಗಲು ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಲು ನಾವು ಸಿದ್ಧರಾಗಬೇಡವೆ?’’

‘‘ಹೌದೌದು ಸಿದ್ಧರಾಗಬೇಕು. ಕೊಟ್ಟಿಗೆಯಲ್ಲಿ ಹದಿನೈದು ಗುದ್ದಲಿಗಳಿವೆ. ಅವುಗಳನ್ನು ತಕ್ಷಣ ತಾ. ಒಂದು ಶ್ರೇಷ್ಠ ಸಂತರಿಗೆ, ಉಳಿದದ್ದು ಅವರ ಶಿಷ್ಯರಿಗೆ. ಇಂದು ನಾವೆಲ್ಲ ಒಟ್ಟು ಸೇರಿ, ಅರ್ಧದಲ್ಲಿ ನಿಂತಿರುವ ಬಾವಿಯನ್ನು ತೋಡಿ ಮುಗಿಸೋಣ...’’

ಛೇ!
ಅದು ಧ್ಯಾನದ ಹೊತ್ತು.
ಸಂತ ಮತ್ತು ಶಿಷ್ಯರು ಮುಂಜಾನೆ ಎಂದಿನಂತೆ ಧ್ಯಾನಕ್ಕೆ ಅಣಿಯಾದರು.
ಸಂತನ ಪ್ರೀತಿಯ ಶಿಷ್ಯ ಮಾತ್ರ ಇನ್ನೂ ಎದ್ದಿರಲಿಲ್ಲ.
ಶಿಷ್ಯನ ನಿದ್ದೆ ಅದೆಷ್ಟು ಆಳವಾಗಿತ್ತೆಂದರೆ ಸಂತನಿಗೆ ಆ ನಿದ್ದೆಯನ್ನು ಕಲಕುವ ಮನಸ್ಸಾಗಲಿಲ್ಲ. ಆದುದರಿಂದ ತನ್ನ ಉಳಿದ ಶಿಷ್ಯರೊಂದಿಗೆ ಧ್ಯಾನವನ್ನು ಮುಗಿಸಿದ.
ಧ್ಯಾನ ಮುಗಿದ ಹೊತ್ತಿಗೆ ಶಿಷ್ಯನಿಗೆ ಎಚ್ಚರಿಕೆಯಾಯಿತು.
ನೋಡಿದರೆ ಧ್ಯಾನದ ಹೊತ್ತು ಕಳೆದಿತ್ತು.
ಆಗಾಧ ನಿರಾಶೆ, ಪಶ್ಚಾತ್ತಾಪ, ದುಃಖದಿಂದ ಶಿಷ್ಯ ‘‘ಛೇ...!’’ ಎಂದು ಉದ್ಗರಿಸಿದ.

ಅದನ್ನು ಆಲಿಸಿದ ಸಂತ ಆಸೆಯಿಂದ ಶಿಷ್ಯನ ಬಳಿ ಬಂದು ಕೇಳಿದ
‘‘ಶಿಷ್ಯ, ನನ್ನ ಜೀವಮಾನದಲ್ಲಿ ನಾನು ಮಾಡಿದ ಧ್ಯಾನದ ಪ್ರತಿಫಲವನ್ನೆಲ್ಲ ನಿನಗೆ ಕೊಡುತ್ತೇನೆ. ಬದಲಿಗೆ ನೀನೀಗ ಉದ್ಗರಿಸಿದ ‘ಛೇ...!’ ಎನ್ನುವ ಉದ್ಗಾರದ ಪ್ರತಿಫಲವನ್ನು ನನಗೆ ಕೊಡುವೆಯ?’’