Friday, August 28, 2015

ಹೊಳೆದದ್ದು ಹೊಳೆದಂತೆ-9

1
ಸತ್ಯವನ್ನು ಸಾರ್ವಜನಿಕವಾಗಿ ಹೇಳೋದಕ್ಕೆ ಧೈರ್ಯ ಬೇಕು. ತಾನು ಹೇಳಿದ್ದು ಸುಳ್ಳು ಎನ್ನೋದು ಅರಿವಾದಾಗ ಸಾರ್ವಜನಿಕವಾಗಿ ಅದನ್ನು ತಿದ್ದಿಕೊಳ್ಳೋದಕ್ಕೆ ದುಪ್ಪಟ್ಟು ಧೈರ್ಯ ಬೇಕು 
2
ಬದುಕು ಎಂದರೆ ಏನು? - ಇನ್ನೇನೂ ಅಲ್ಲ, ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲ ತುಪ್ಪಕ್ಕಾಗಿ ಹುಡುಕಾಡೋದು
3
ಟೀಕೆ, ವಿಮರ್ಶೆ, ಆಕ್ರೋಶ ಬೆಂಕಿಯ ಕುಲುಮೆಯಿಂದ ಹೊರ ಬರೋದು ನಿಜ. 
ಆದರೆ ಅದು ತಾಳ್ಮೆ, ವಿವೇಕದ ತಿಳಿ ನೀರಿನಲ್ಲಿ ಮುಳುಗೆದ್ದಾಗಷ್ಟೇ ಸ್ಪಷ್ಟ ರೂಪವೊಂದನ್ನು ಪಡೆಯ ಬಲ್ಲದು.
4
ದೇವರ ಮೇಲೆ ಭರವಸೆಯಿಟ್ಟು ಸುಮ್ಮನಿರದಿರಿ 
ದೇವರು ನಮ್ಮ ಮೇಲೆ ಭರವಸೆ ಇಟ್ಟು ಈ ಭೂಮಿಯನ್ನು ಸೃಷ್ಟಿಸಿದ್ದಾನೆ !
5
ದೇವರಿದ್ದಾನೆ ಎನ್ನೋದು ನಂಬಿಕೆ ಎಂದಾದರೆ, ದೇವರಿಲ್ಲ ಎನ್ನೋದು ಒಂದು ನಂಬಿಕೆಯೇ ಆಗಿದೆ. 
6
ವಿಧವೆ ಎನ್ನೋದು ಹೆಣ್ಣಿನ ನಡುವೆ ಬ್ರಾಹ್ಮಣ ಧರ್ಮ ಸೃಷ್ಟಿಸಿದ ಇನ್ನೊಂದು ಜಾತಿ.
7
ಗೆಡ್ಡೆ ಗೆಣಸು ಅಗೆಯುವ ಕಾಲದಲ್ಲಿ ಯಾರೂ ಬಡವರಿರಲಿಲ್ಲ. 
ಯಾವಾಗ ಚಿನ್ನ ಅಗೆಯಲಾರಂಭಿಸಿದನೋ, ಮನುಷ್ಯರೊಳಗೆ ಬಡವ ಹುಟ್ಟಿದ. 
8
ದೇವರು ಶ್ರೀಮಂತವಾದ ಭೂಮಿಯನ್ನು ಸೃಷ್ಟಿಸಿದ. ಮನುಷ್ಯ ದೇವರಿಗೆ ಸವಾಲು ಹಾಕುವವನಂತೆ ಬಡವನನ್ನು ಸೃಷ್ಟಿಸಿದ 

Sunday, August 16, 2015

ನೆಹರೂ ಸರ್ವಶ್ರೇಷ್ಠ ಭಾಷಣ: ವಿಧಿಯೊಂದಿಗಿನ ವಚನ

ದೇಶದ ಮೊದಲ ಸ್ವಾತಂತ್ರದಿನದ ಮುನ್ನಾದಿನದಂದು (ಆಗಸ್ಟ್ 14, 1947) ನಿಯೋಜಿತ ಪ್ರಧಾನಿ ಜವಹರಲಾಲ್ ನೆಹರೂರವರು ಮರುದಿನ ಮಧ್ಯರಾತ್ರಿ ವೇಳೆಗೆ ಮಾಡಲಿದ್ದ ತಮ್ಮ ಭಾಷಣವನ್ನು ಬರೆಯಲು ಕೂತರು. ದಿನವಿಡೀ ನೂರಾರು ಕೆಲಸಗಳು. ರಾತ್ರಿ ಹತ್ತು ಗಂಟೆಗೆ ಭಾಷಣ ಬರೆಯಲೆಂದು ಕೂತಾಗ ಕುಟುಂಬ ಸದಸ್ಯರೆಲ್ಲ ಒಟ್ಟಾಗಿ ಒತ್ತಾಯಪೂರ್ವಕವಾಗಿ ಊಟಕ್ಕೆ ಕರೆದರು. ಊಟಕ್ಕೆ ಕೂತಾಗ ಲಾಹೋರ್‌ನಿಂದ ತುರ್ತು ದೂರವಾಣಿ ಕರೆ. ಫೋನ್‌ನಲ್ಲೇ ಅರ್ಧ ಗಂಟೆ ಕಳೆದು ಹೋಯಿತು.
ಲಾಹೋರ್‌ನಲ್ಲಿ ನಡೆದಿದ್ದ ಗಲಭೆಗಳು (ದೇಶ ವಿಭಜನೆಯ ಗಲಭೆ) ದೂರವಾಣಿ ಕರೆಯ ವಿಷಯವಾಗಿತ್ತು. ಈ ಸುದ್ದಿ ಕೇಳಿ ನೆಹರು ಬಹಳ ನೊಂದುಕೊಂಡರು. ತಳವಿಲ್ಲದ ಕೆರೆಯಲ್ಲಿ ಮುಳುಗುತ್ತಿರುವ ಸ್ಥಿತಿ ನೆಹರೂ ಅವರದಾಗಿತ್ತು. ಕೊನೆಗೆ ಅವರಿಗೆ ಭಾಷಣ ಬರೆಯುವಷ್ಟು ವ್ಯವಧಾನವಾಗಲಿ, ಶಕ್ತಿಯಾಗಲಿ, ಸಮಯವಾಗಲೀ ಲಭಿಸಲಿಲ್ಲ.
 ಆದರೆ, ಮರುದಿನ ಮಧ್ಯರಾತ್ರಿ ಹೊತ್ತಿಗೆ ನೆಹರೂ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿದ್ದರು. ಅತ್ಯಂತ ಶ್ರೇಷ್ಠವಾದ ಭಾಷಣವೊಂದನ್ನು ಅವರು ಮಾಡಿದ್ದರು. ನಾಲಿಗೆಯಿಂದ ಶಬ್ದಗಳು ಸಂದರ್ಭೋಚಿತವಾಗಿ ಹರಿದುಬಂದವು. ನುಡಿಗಟ್ಟುಗಳು ಹೃದಯಕ್ಕೆ ನಾಟುವಂತಿದ್ದವು. ಅವರ ಮಾತಿನ ಹುರುಪು ಸಂಸತ್‌ಭವನದ ಮೂಲೆಮೂಲೆಯನ್ನು ಮುಟ್ಟುವಂತಿತ್ತು.
ಭಾರತದ ಪ್ರಥಮ ಪ್ರಧಾನಿಯೊಬ್ಬರು ಅತ್ಯುತ್ತಮ ಭಾಷಣವೊಂದನ್ನು ಮಾಡುತ್ತ ಜಗತ್ತಿನಾದ್ಯಂತ ಕೋಟ್ಯಂತರ ಜನರ ಹೃದಯವನ್ನು ತಟ್ಟಿದ್ದರು ಎಂಬುದು ನಾವೆಲ್ಲ ಹೆಮ್ಮೆ ಪಡುವಂತಹ ಸಂಗತಿಯಾಗಿದೆ. ಅಂದು ನೆಹರುರವರು ಮಾಡಿದ್ದ ಭಾಷಣವು 20ನೆ ಶತಮಾನದ ಶ್ರೇಷ್ಠ ಭಾಷಣಗಳ (11ನೆ ಸ್ಥಾನ) ಸಾಲಿಗೆ ಸೇರಿದೆ.
ಕೃಪೆ-ವಾರ್ತಾ ಭಾರತಿ 

ವಿಧಿಯೊಂದಿಗಿನ ವಚನ(Tryst with Destiny ):
ಬಹಳಷ್ಟು ವರ್ಷಗಳಿಂದಲೇ ನಾವು ವಿಧಿಗೆ ವಚನ ನೀಡುತ್ತಾ ಬಂದಿದ್ದೆವು. ಇದೀಗ ನಮ್ಮ ವಚನವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ, ಅತ್ಯಂತ ಗಣನೀಯ ಪ್ರಮಾಣದಲ್ಲಿ ಈಡೇರಿಸುವ ಕಾಲ ಕೂಡಿಬಂದಿದೆ.
ಇಂದು ರಾತ್ರಿ 12 ಗಂಟೆಗೆ ಇಡೀ ಜಗತ್ತು ನಿದ್ರಿಸುತ್ತಿದೆ. ಆದರೆ ಭಾರತವು ಸ್ವಾತಂತ್ರ ಹಾಗೂ ಬದುಕಿನ ಹೊಸ ಮುಂಜಾವಿನೊಂದಿಗೆ ಎದ್ದೇಳಲಿದೆ.ಇಂತಹ ಸುಸಂದರ್ಭ ಇತಿಹಾಸದಲ್ಲಿ ತೀರಾ ಅಪರೂಪ. ನಾವು ಹಳೆಯದನ್ನು ತೊರೆದು ಹೊಸತಿನೆಡೆಗೆ ಸಾಗಿದಾಗ, ಯುಗವೊಂದು ಅಂತ್ಯಗೊಂಡಾಗ ಹಾಗೂ ಹಲವು ವರ್ಷಗಳಿಂದ ಶೋಷಿಸಲ್ಪಟ್ಟ ದೇಶವೊಂದರ ಆತ್ಮವು, ಈಗ ಮಾತನಾಡುತ್ತಿದೆ..
ಈ ಪವಿತ್ರ ಕ್ಷಣದಲ್ಲಿ ಭಾರತ ಹಾಗೂ ಅದರ ಜನತೆಯ ಸೇವೆಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡುವ ಸುಯೋಗ ನಮಗೆ ದೊರೆತಿದೆ ಮತ್ತು ಇದಕ್ಕಿಂತಲೂ ಮಿಗಿಲಾಗಿ, ಇಡೀ ಮಾನವಕುಲದ ಸೇವೆಗೈಯುವ ಪ್ರತಿಜ್ಞೆಯನ್ನು ಕೈಗೊಳ್ಳುತ್ತಿದ್ದೇವೆ.
ಇತಿಹಾಸದ ಆರಂಭದಿಂದಲೇ ಭಾರತವು ತನ್ನ ಅಂತ್ಯವಿಲ್ಲದ ಅನ್ವೇಷಣೆಯನ್ನು ಆರಂಭಿಸಿತ್ತು ಹಾಗೂ ಎಷ್ಟು ಶತಮಾನಗಳಿಂದ ಅದು ಸಫಲತೆಯ ಹಾಗೂ ವಿಫಲತೆಯ ಕ್ಷಣಗಳನ್ನು ಕಂಡಿದೆೆಯೆಂಬುದನ್ನು ತಿಳಿಯಲು ಸಾಧ್ಯವಿಲ್ಲ. ಸಮಯ ಒಳ್ಳೆಯದಿರಲಿ ಇಲ್ಲವೇ ಕೆಟ್ಟದಿರಲಿ, ಭಾರತ ಯಾವತ್ತೂ ತನ್ನ ಅನ್ವೇಷಣಾ ದೃಷ್ಟಿಯನ್ನು ಕಳೆದುಕೊಳ್ಳಲಿಲ್ಲ ಅಥವಾ ತನಗೆ ಶಕ್ತಿ ತುಂಬುವ ಆದರ್ಶಗಳನ್ನು ಮರೆಯಲಿಲ್ಲ. ಇಂದು ನಾವು ದೌರ್ಭಾಗ್ಯದ ಒಂದು ಯುಗವನ್ನು ಕೊನೆಗೊಳಿಸಿದ್ದೇವೆ ಹಾಗೂ ಭಾರತವು ಮತ್ತೊಮ್ಮೆ ತನ್ನನ್ನು ತಾನೇ ಶೋಧಿಸಿಕೊಳ್ಳುತ್ತಿದೆ.
ಇಂದು ನಾವು ಈ ಸಾಧನೆಯ ಉತ್ಸವವನ್ನು ಆಚರಿಸುತ್ತಿದ್ದೇವೆ. ಇದೊಂದು ಹೊಸ ಅವಕಾಶವನ್ನು ತೆರೆದಿಡುವ ಹೆಜ್ಜೆಯಾಗಿದೆ. ಇದಕ್ಕಿಂತಲೂ ಮಿಗಿಲಾದ ಗೆಲುವು ಹಾಗೂ ಸಾಧನೆಗಳು ನಮಗಾಗಿ ಕಾಯುತ್ತಿವೆ. ಈ ಅವಕಾಶವನ್ನು ಮನನಮಾಡಿಕೊಳ್ಳಲು ಹಾಗೂ ಭವಿಷ್ಯದ ಸವಾಲನ್ನು ಸ್ವೀಕರಿಸುವಷ್ಟು ದೃಢತೆ ಹಾಗೂ ಬೌದ್ಧಿಕತೆ ನಮ್ಮಲ್ಲಿದೆಯೇ?.
ಸ್ವಾತಂತ್ರ ಹಾಗೂ ಅಧಿಕಾರವು ನಮಗೆ ಹೊಣೆಗಾರಿಕೆಯನ್ನು ತಂದುಕೊಡುತ್ತದೆ. ಈ ಹೊಣೆಗಾರಿಕೆಯು ಈಗ ಭಾರತದ ಸಾರ್ವಭೌಮ ಜನತೆಯನ್ನು ಪ್ರತಿನಿಧಿಸುವ ಂತಹ ಸಾರ್ವಭೌಮ ಘಟಕವೊಂದರ ಮೇಲಿದೆ. ಸ್ವಾತಂತ್ರದ ಜನನಕ್ಕೆ ಮುನ್ನ ನಾವು ಎಲ್ಲಾ ರೀತಿಯ ನೋವನ್ನು ಅನುಭವಿಸಿದ್ದೇವೆ. ಈ ನೋವಿನ ನೆನಪಿನಿಂದಾಗಿ ನಮ್ಮ ಹೃದಯಗಳು ಭಾರವಾಗಿವೆ.ಕೆಲವೊಂದು ನೋವುಗಳು ಈಗಲೂ ಮುಂದುವರಿದಿವೆ. ಏನೇ ಇರಲಿ, ಭೂತಕಾಲವು ಮುಕ್ತಾಯಗೊಂಡಿದೆ ಹಾಗೂ ಭವಿಷ್ಯವು ನಮ್ಮನ್ನು ೆಬೀಸಿ ಕರೆಯುತ್ತಿದೆ,. ಆ ಭವಿಷ್ಯತ್ತು ನಮಗೆ ಆರಾಮವಾಗಿರಲು ಅಥವಾ ನೆಮ್ಮದಿಯಿಂದ ಕುಳಿತುಕೊಳ್ಳಲು ಇರುವುದಕ್ಕಲ್ಲ. ಬದಲಿಗೆ ನಿರಂತರವಾಗಿ ಪರಿಶ್ರಮ ಪಡುವುದಕ್ಕೆ ಇರುವಂತಹದ್ದಾಗಿದೆ.ಹಾಗಾದಲ್ಲಿ ಮಾತ್ರ ನಾವು ಪದೇ ಪದೇ ಘೋಷಿಸುತ್ತಿದ್ದ ಹಾಗೂ ಈಗಲೂ ಘೋಷಿಸುತ್ತಿರುವ ವಾಗ್ದಾನವನ್ನು ಈಡೇರಿಸಲು ಸಾಧ್ಯವಾಗಲಿದೆ. ಭಾರತದ ಸೇವೆಯೆಂದರೆ ಯಾತನೆಗಳನ್ನು ಅನುಭವಿಸುತ್ತಿರುವ ಕೋಟ್ಯಂತರ ಜನರ ಸೇವೆಯಾಗಿದೆ. ಬಡತನ ಹಾಗೂ ಅಜ್ಞಾನವನ್ನು ತೊಲಗಿಸುವುದು, ರೋಗ ಮತ್ತು ಅಸಮಾನತೆಯನ್ನು ಕೊನೆಗೊಳಿಸುವುದೆಂಬುದೇ ಇದರ ಅರ್ಥವಾಗಿದೆ.
 ಪ್ರತಿಯೊಬ್ಬನ ಕಣ್ಣೀರನ್ನೂ ಒರೆಸುವುದೇ ನಮ್ಮ ತಲೆಮಾರಿನ ಮಹಾನ್ ವ್ಯಕ್ತಿಯ ಮಹತ್ವಾಕಾಂಕ್ಷೆಯಾಗಿದೆ. ಬಹುಶಃ ಅದು ನಮಗೆ ಸಾಧ್ಯವಾಗದೇ ಇರಬಹುದು. ಆದರೆ ಎಲ್ಲಿಯ ವರೆಗೆ ಕಣ್ಣೀರು ಹಾಗೂ ಯಾತನೆ ಇರುವುದೋ ಅಲ್ಲಿಯವರೆಗೆ ನಮ್ಮ ಕೆಲಸ ಮುಗಿಯುವುದಿಲ್ಲ.
 ಇದಕ್ಕಾಗಿ ನಾವು ದುಡಿಯಬೇಕಾಗಿದೆ ಹಾಗೂ ಕಠಿಣವಾದ ಪರಿಶ್ರಮಪಡಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ಕನಸುಗಳು ಸಾಕಾರಗೊಳ್ಳಲಾರವು. ಆ ಕನಸುಗಳು ಭಾರತಕ್ಕಾಗಿ ಇರುವಂತಹದ್ದಾಗಿದೆ. ಜೊತೆಗೆ ಇಡೀ ವಿಶ್ವಕ್ಕೂ ಇರುವಂತಹದ್ದಾಗಿದೆ. ಇಂದು ಎಲ್ಲಾ ರಾಷ್ಟ್ರಗಳು ಹಾಗೂ ಜನರು ಅತ್ಯಂತ ನಿಕಟವಾಗಿ ಬೆಸೆದುಕೊಂಡಿರುವುದರಿಂದ ಯಾರೂ ಕೂಡಾ ಪ್ರತ್ಯೇಕವಾಗಿ ಬುದುಕು ಯೋಚನೆಯನ್ನು ಮಾಡಲಾರರು.
ಶಾಂತಿಯು ಅವಿಭಾಜ್ಯವೆಂದು ಹೇಳಲಾಗುತ್ತದೆ ಹಾಗೆಯೇ ಸ್ವಾತಂತ್ರ ಕೂಡಾ. ಅಂತೆಯೇ ಸಮೃದ್ಧಿ ಮತ್ತು ವಿನಾಶವೂ ಸಹ.ಈಗ ಈ ಜಗತ್ತನ್ನು ಸಣ್ಣ ಸಣ್ಣ ತುಂಡುಗಳಾಗಿ ಹರಿದುಹಂಚಲು ಸಾಧ್ಯವಿಲ್ಲ. ನಾವು ಪ್ರತಿನಿಧಿಸುತ್ತಿರುವ ಭಾರತದ ಜನತೆಗೆ ನಾವು ಮನವಿ ಮಾಡುವುದೇನೆಂದರೆ, ಈ ಮಹಾನ್ ಸಾಹಸದಲ್ಲಿ ನಂಬಿಕೆ ಹಾಗೂ ವಿಶ್ವಾಸದೊಂದಿಗೆ ನಮ್ಮ ಜೊತೆಗೂಡಿರಿ. ಕ್ಷುಲ್ಲಕವಾದ ಹಾಗೂ ವಿನಾಶಕಾರಿಯಾದ ಟೀಕೆಗಳನ್ನು ಮಾಡಲು ಈಗ ಸಮಯವಿಲ್ಲ. ಇತರರ ಬಗ್ಗೆ ಕೆಟ್ಟದಾಗಿ ಯೋಚಿಸಲು ಅಥವಾ ದೋಷಾರೋಪ ಮಾಡುವ ಸಮಯ ಇದಲ್ಲ. ಸ್ವತಂತ್ರ ಭಾರತಕ್ಕೊಂದು ಪವಿತ್ರವಾದ ಸೌಧವನ್ನು ನಿರ್ಮಿಸಬೇಕಾಗಿದ್ದು, ಅಲ್ಲಿ ಆಕೆಯ ಮಕ್ಕಳು ಮುಕ್ತವಾಗಿ ವಾಸಿಸುವಂತಿರಬೇಕು.
       ಇಂದು ಆ ನಿರ್ಣಾಯಕ ದಿನವು ಆಗಮಿಸಿದೆ. ವಿಧಿಯು ನಿರ್ಣಯಿಸಿದ ದಿನ ಇದಾಗಿದೆ. ದೀರ್ಘಕಾಲದ ಜಾಡ್ಯತೆ ಹಾಗೂ ಸಂಘರ್ಷದ ಬಳಿಕ ಭಾರತವು ಜಾಗೃತಿ ಹಾಗೂ ಸ್ವಾತಂತ್ರದೊಂದಿಗೆ ಎದ್ದುನಿಂತಿದೆ. ಒಂದು ಹಂತದವರೆಗೆ ಈಗಲೂ ನಮ್ಮ ಭೂತಕಾಲವು ನಮ್ಮನ್ನು ಕಚ್ಚಿಕೊಂಡು ನಿಂತಿದೆ. ನಾವು ಹಲವು ಬಾರಿ ನೀಡಿದ್ದ ವಾಗ್ದಾನವನ್ನು ಈಡೇರಿಸುವ ಮೊದಲು ಸಾಧಿಸಬೇಕಾದುದು ಬಹಳಷ್ಟಿದೆ. ನಮಗಾಗಿ ಹೊಸ ಇತಿಹಾಸವೊಂದು ಆರಂಭಗೊಂಡಿದೆ. ನಾವು ಬದುಕುವ, ಕಾರ್ಯಾಚರಿಸುವ ಹಾಗೂ ಇತರರು ಆ ಬಗ್ಗೆ ಬರೆಯುವಂತಹ ಇತಿಹಾಸ ಆದಾಗಿದೆ.
   ಭಾರತದಲ್ಲಿರುವ ನಮಗೆಲ್ಲರಿಗೂ, ಇಡೀ ಏಶ್ಯಾಗೆ ಹಾಗೂ ಜಗತ್ತಿಗೆ ಇದೊಂದು ಸೌಭಾಗ್ಯದ ಕ್ಷಣವಾಗಿದೆ. ಹೊಸ ತಾರೆಯೊಂದು ಉದಯಿಸಿದೆ. ಪೂರ್ವದಲ್ಲಿ ಸ್ವಾತಂತ್ರದ ನಕ್ಷತ್ರವು ಮೂಡಿದೆ. ಹೊಸ ಭರವಸೆಯೊಂದು ಜನಿಸಿದೆ. ದೂರದೃಷ್ಟಿಯೊಂದು ಅಸ್ತಿತ್ವಕ್ಕೆ ಬಂದಿದೆ. ಈ ನಕ್ಷತ್ರವು ಎಂದೂ ಮುಳುಗದಿರಲಿ ಹಾಗೂ ಭರವಸೆಗೆ ಎಂದೂ ದ್ರೋಹವಾಗದಿರಲಿ.
      ಕಾರ್ಮುಗಿಲುಗಳು ನಮ್ಮನ್ನು ಸುತ್ತುವರಿದಿದ್ದರೂ, ನೋವುತುಂಬಿದ ಹಾಗೂ ಕಠಿಣವಾದ ಸಮಸ್ಯೆಗಳು ನಮ್ಮನ್ನು ಆವರಿಸಿದ್ದರೂ ನಾವು ಆ ಸ್ವಾತಂತ್ರವನ್ನು ಸದಾ ಆನಂದಿಸೋಣ. ಆದರೆ ಸ್ವಾತಂತ್ರವು ನಮಗೆ ಹೊಣೆಗಾರಿಕೆಗಳನ್ನು ಹಾಗೂ ಹೊರೆಗಳನ್ನು ತರುತ್ತದೆ. ಮುಕ್ತ ಹಾಗೂ ಶಿಸ್ತುಬದ್ಧ ಪ್ರಜೆಗಳಾಗಿ ನಾವು ಅವುಗಳನ್ನು ಎದುರಿಸಬೇಕಾಗಿದೆ.
  ಈ ದಿನ ನಮ್ಮ ಮೊದಲ ಚಿಂತನೆಗಳು ಈ ಸ್ವಾತಂತ್ರದ ಶಿಲ್ಪಿಯೆಡೆಗೆ ಸಾಗುತ್ತವೆ. ಭಾರತದ ಪ್ರಾಚೀನ ಚೈತನ್ಯವನ್ನು ಅವಿರ್ಭಸಿಕೊಂಡಿರುವ ನಮ್ಮ ರಾಷ್ಟ್ರಪಿತನು ಸ್ವಾತಂತ್ರದ ಜ್ಯೋತಿಯನ್ನು ಎತ್ತಿಹಿಡಿದು, ನಮ್ಮ ಸುತ್ತಲೂ ಆವರಿಸಿದ್ದ ಕತ್ತಲನ್ನು ಬೆಳಗಿದನು.
    ನಾವು ಅನೇಕ ಸಲ ಅವರ ನಿಷ್ಪ್ರಯೋಜಕ ಅನುಯಾಯಿಗಳಾಗಿ ಬಿಟ್ಟಿದ್ದೆವು. ಅವರ ಸಂದೇಶದಿಂದ ದೂರ ಸರಿದಿದ್ದೆವು. ಆದರೆ ನಾವು ಮಾತ್ರವಲ್ಲ, ನಮ್ಮ ಮುಂದಿನ ತಲೆಮಾರು ಕೂಡಾ ಈ ಸಂದೇಶವನ್ನು ನೆನಪಿಸಿಕೊಳ್ಳಲಿದೆ ಹಾಗೂ ಅದ್ಭುತವಾದ ನಂಬಿಕೆ, ಶಕ್ತಿ, ದಿಟ್ಟತನವನ್ನು ಹೊಂದಿರುವ ಭಾರತದ ಈ ಮಹಾನ್ ಪುತ್ರನನ್ನು, ಹಾಗೂ ಆತನ ಧೀಮಂತಿಕೆಯನ್ನು ತಮ್ಮ ಹೃದಯದಲ್ಲಿ ಛಾಪಿಸಲಿದ್ದಾರೆ. ಯಾವುದೇ ಬಿರುಗಾಳಿ,ಚಂಡಮಾರುತ ಬಂದರೂ ಈ ಸ್ವಾತಂತ್ರದ ಜ್ಯೋತಿ ಆರುವುದಕ್ಕೆ ನಾವು ಎಂದೂ ಬಿಡಬಾರದು.
   ಆನಂತರ ನಾವು ಯಾವುದೇ ಪ್ರಶಂಸೆ ಹಾಗೂ ಪುರಸ್ಕಾರ ಬಯಸದೆ ಸಾವಿನ ತನಕವೂ ಭಾರತಕ್ಕಾಗಿ ಸೇವೆ ಸಲ್ಲಿಸಿದ ಸ್ವಾತಂತ್ರದ ಅಜ್ಞಾತ ಸ್ವಯಂಸೇವಕರು ಹಾಗೂ ಸೈನಿಕರನ್ನು ಸ್ಮರಿಸಬೇಕಾಗಿದೆ. ರಾಜಕೀಯ ಗಡಿಗಳಿಂದಾಗಿ ನಮ್ಮಿಂದ ದೂರವಾಗಿರುವ ಹಾಗೂ ದೊರೆತ ಸ್ವಾತಂತ್ರದ ಸಂಭ್ರಮವನ್ನು ಹಂಚಿಕೊಳ್ಳಲು ಈಗ ನಮ್ಮಾಂದಿಗಿರದ ನಮ್ಮ ಸಹೋದರರು ಹಾಗೂ ಸಹೋದರಿಯರನ್ನೂ ಕೂಡಾ ನಾವು ನೆನೆಯಬೇಕಾಗಿದೆ.ಅವರು ನಮ್ಮವರೇ ಆಗಿದ್ದಾರೆ ಹಾಗೂ ಏನೇ ಆದರೂ ಅವರು ನಮ್ಮವರೇ ಆಗಿ ಉಳಿಯಲಿದ್ದಾರೆ. ಅವರ ಒಳಿತು ಹಾಗೂ ಕೆಡುಕಿನ ಕ್ಷಣಗಳನ್ನು ನಾವು ಜೊತೆಯಾಗಿಯೇ ಹಂಚಿಕೊಳ್ಳಬೇಕಾಗಿದೆ.
     ಭವಿಷ್ಯವು ನಮ್ಮನ್ನು ಕರೆಯುತ್ತಿದೆ. ನಾವು ಎಲ್ಲಿಗೆ ಸಾಗಬೇಕು ಹಾಗೂ ಯಾವುದಕ್ಕೆ ಶ್ರಮಿಸಬೇಕಾಗಿದೆ?. ಶ್ರೀಸಾಮಾನ್ಯನಿಗೆ, ಭಾರತದ ರೈತರು ಹಾಗೂ ಕಾರ್ಮಿಕರಿಗೆ ಸ್ವಾತಂತ್ರ ಹಾಗೂ ಅವಕಾಶಗಳನ್ನು ತಂದುಕೊಡಲು, ಬಡತನ, ಅಜ್ಞಾನ ಹಾಗೂ ರೋಗರುಜಿನಗಳನ್ನು ಕೊನೆಗೊಳಿಸಲು, ಸಮೃದ್ಧಿದಾಯಕವಾದ, ಪ್ರಜಾತಾಂತ್ರಿಕ ರಾಷ್ಟ್ರ ನಿರ್ಮಿಸಲು, ಪ್ರತಿಯೊಬ್ಬ ಪುರುಷನಿಗೂ, ಮಹಿಳೆಗೂ ನ್ಯಾಯ ಹಾಗೂ ಪರಿಪೂರ್ಣತೆಯನ್ನು ಖಾತರಿಪಡಿಸುವಂತಹ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಸ್ಥೆಗಳನ್ನು ಸೃಷ್ಟಿಸಲು ನಾವು ಪರಿಶ್ರಮಪಡಬೇಕಿದೆ.
   ನಾವೆಲ್ಲರೂ ಈ ಮಹಾನ್ ರಾಷ್ಟ್ರದ ಪ್ರಜೆಗಳಾಗಿದ್ದೇವೆ. ನಾವು ತೀವ್ರ ಪ್ರಗತಿಯ ತಿರುವಿನಲ್ಲಿದ್ದೇವೆ. ನಾವು ಅದನ್ನು ಉನ್ನತ ಮಟ್ಟದೆಡೆಗೆ ಕೊಂಡೊಯ್ಯಬೇಕು. ನಾವು ಯಾವುದೇ ಧರ್ಮಕ್ಕೆ ಸೇರಿದವರಾದರೂ, ಸಮಾನ ಹಕ್ಕುಗಳನ್ನು, ಅವಕಾಶಗಳನ್ನು ಹಾಗೂ ಬಾಧ್ಯತೆಗಳನ್ನು ಹೊಂದಿರುವ ಭಾರತಾಂಬೆಯ ಮಕ್ಕಳಾಗಿದ್ದೇವೆ. ನಾವು ಕೋಮುವಾದವನ್ನು ಹಾಗೂ ಸಂಕುಚಿತ ಮನೋಭಾವವನ್ನು ಉತ್ತೇಜಿಸಕೂಡದು. ಚಿಂತನೆ ಹಾಗೂ ಕೃತಿಯಲ್ಲಿ ಸಂಕುಚಿತತೆಯನ್ನು ಪ್ರದರ್ಶಿಸುವ ಯಾವುದೇ ದೇಶವೂ ಮಹಾನ್ ಆಗಲು ಸಾಧ್ಯವಿಲ್ಲ.
ವಿಶ್ವದ ರಾಷ್ಟ್ರಗಳಿಗೆ ಹಾಗೂ ಜನತೆಗೆ ನಾನು ಶುಭಾಶಯಗಳನ್ನು ಕಳುಹಿಸೋಣ ಹಾಗೂ ಶಾಂತಿ, ಸ್ವಾತಂತ್ರ ಹಾಗೂ ಪ್ರಜಾತಂತ್ರವನ್ನು ಮುನ್ನಡೆಸಲು ಅವರೊಂದಿಗೆ ಸಹಕರಿಸುವುದಾಗಿ ನಾವಾಗಿಯೇ ಪ್ರತಿಜ್ಞೆಗೈಯೋಣ.
 ನಮ್ಮ ಪ್ರೀತಿಯ ಮಾತೃಭೂಮಿ, ಪ್ರಾಚೀನ,ಶಾಶ್ವತ ಹಾಗೂ ನಿತ್ಯನೂತನವಾದ ಭಾರತಕ್ಕೆ ಅತ್ಯಂತ ಗೌರವದೊಂದಿಗೆ ಶ್ರದ್ಧಾಂಜಲಿಯನ್ನು ಅರ್ಪಿಸೋಣ ಹಾಗೂ ನಾವೆಲ್ಲಾ ಜೊತೆಗೂಡಿ, ನವೋಲ್ಲಾಸದೊಂದಿಗೆ ಆಕೆಗೆ ಸೇವೆಯನ್ನು ಸಲ್ಲಿಸೋಣ.
ಜೈ ಹಿಂದ್
ಕೃಪೆ-ವಾರ್ತಾ ಭಾರತಿ 

Friday, August 7, 2015

ನೀಲಿ ಚಿತ್ರ: ಯಾವುದು ಅಭಿವ್ಯಕ್ತಿ ಸ್ವಾತಂತ್ರ್ಯ ?

ಗೋಮಾಂಸ ನಿಷೇಧದ ಹಿನ್ನೆಲೆಯಲ್ಲಿ ಆಹಾರದ ಹಕ್ಕನ್ನು  ಚರ್ಚಿಸಿದ ರೂಪದಲ್ಲಿ ನೀಲಿ ಚಿತ್ರ ನಿಷೇಧಗಳ ಬಗ್ಗೆ ಚರ್ಚಿಸೋದಕ್ಕೆ ನನಗೆ ಆಸಕ್ತಿ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಧಕ್ಕೆ ಎನ್ನುವ ನಿಟ್ಟಿನಲ್ಲಿ ಈ ಬಗ್ಗೆ ಚರ್ಚಿಸ ಬಹುದಾದರೂ, ಆಹಾರದ ಹಕ್ಕು, ಬದುಕುವ ಹಕ್ಕು, ಶಿಕ್ಷಣದ ಹಕ್ಕು  ಅತಂತ್ರವಾಗಿರುವ ಸಮಾಜದಲ್ಲಿ , ನೀಲಿ ಚಿತ್ರ ನೋಡುವ ಹಕ್ಕುಗಳ ಬಗೆಗಿನ ಚರ್ಚೆ ಒಂದು ಅಸಂಗತ ಚರ್ಚೆ ಎಂದು ನನಗೆ ಅನ್ನಿಸುತ್ತೆ. 
ನೀಲಿ ಚಿತ್ರ ನೋಡೋದರ ಬಗ್ಗೆ ನಾನು ಮಧ್ಯಮ ನಿಲುವನ್ನು ತಾಳಲು ಇಷ್ಟ ಪಡುವೆ. ಪರವೂ ಇಲ್ಲ. ವಿರೋಧವೂ ಇಲ್ಲ. ಕಾರಣ ಇಲ್ಲಿದೆ. 
೧. ನೀಲಿ ಚಿತ್ರಗಳು ಉಳಿದ ಸಿನಿಮಾಗಳಂತೆ ಅಭಿವ್ಯಕ್ತಿಯ ಭಾಗ ಅಲ್ಲ. ಅದು ಸೃಜನ ಶೀಲ ಕಲೆಗಳ ವ್ಯಾಪ್ತಿಗೆ ಒಳ ಪಡೋದಿಲ್ಲ. 
೨. ನೀಲಿ ಚಿತ್ರಗಳು ಅಕ್ರಮವಾಗಿ ನಿರ್ಮಾಣವಾಗುತ್ತವೆ. ಈ ಚಿತ್ರಗಳ ನಿರ್ಮಾಣದ ಸಂದರ್ಭಗಳಲ್ಲಿ ಮಹಿಳೆಯರನ್ನು ತೀವ್ರವಾಗಿ ಶೋಶಿಸಲಾಗುತ್ತದೆ. ಒಂದು ರೀತಿ ಸರಕುಗಳಂತೆ. ಈ ನಿರ್ಮಾಣಗಳ ಹಿಂದೆ ಕ್ರಿಮಿನಲ್ ಗಳು ಇರುತ್ತಾರೆ. 
೩. ಆಧುನಿಕ ಜಾಲ ತಾಣಗಳಲ್ಲಿ ಅಶ್ಲೀಲ ಚಿತ್ರಗಳಿಗೆ ಉರುಳು ಹಾಕೋದು ಎಂದರೆ ಹೂಸಿಗೆ ಉರುಳು ಹಾಕಲು ಹೊರಟಂತೆ. ಒಂದು ದಾರಿ ಮುಚ್ಚಿದರೆ ಇನ್ನೊಂದು ದಾರಿ ತೆರೆಯುತ್ತದೆ. ನೀಲಿ ಚಿತ್ರಗಳನ್ನು ನೋಡುವ ಚಟ ಇರುವವರಿಗೆ ಆ ದಾರಿಯನ್ನು ಹುಡುಕೋದಕ್ಕೆ ಚೆನ್ನಾಗಿ ಗೊತ್ತು. ಆದುದರಿಂದ ಅವರಿಗೆ ಯಾವ ಸಮಸ್ಯೆಯೂ ಇದರಿಂದ ಆಗಲ್ಲ.  ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ನೀಲಿ ಚಿತ್ರಗಳಿಗೂ ತಳಕು ಹಾಕೊದರಿಂದ ನಮಗೆ ಹೆಚ್ಚು ನಷ್ಟ. ಚರ್ಚೆ ನಡೆಸುವ ಮೂಲಕ ಅದು ಗೊಂದಲ, ದ್ವಂದ್ವ ಗಳನ್ನೂ ಸೃಷ್ಟಿಸುತ್ತೆ. ತಪ್ಪು ಧ್ವನಿಗಳನ್ನೂ ನೀಡತ್ತೆ. 
೪. ಇಂಟರ್ ನೆಟ್ ನಲ್ಲಿ ಮಕ್ಕಳು ಈ ಚಿತ್ರಗಳಿಗೆ ಬಲಿಯಾಗುತ್ತಿರುವ ಬಗ್ಗೆ  ಮಾನಸಿಕ ತಜ್ಞರು ಆತಂಕ ವ್ಯಕ್ತ ಪಡಿಸುತ್ತಿದ್ದ್ದಾರೆ. ದೊಡ್ಡವರಿಗೆ ಯಾವುದು ತಪ್ಪು - ಸರಿ ಎನ್ನೋದು ಗೊತ್ತಿರತ್ತೆ. ಆದರೆ ಮಕ್ಕಳಿಗೆ ? ನೀಲಿ ಚಿತ್ರಗಳ ನೇರ ಬಲಿಪಶುಗಳು ಮಕ್ಕಳು . ಸಿಗರೇಟು, ಮದ್ಯಪಾನ, ಡ್ರಗ್ಸ್ ಇವುಗಳಿಗೆ ಕೆಲವು ನಿಯಮಗಳು ಅನ್ವಯ ಆಗತ್ತೆ ಎಂದ ಮೇಲೆ ನೀಲಿ ಚಿತ್ರಗಳಿಗೂ ಅನ್ವಯ ಆಗಬೇಕು 
೫. ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡನ್ನು ಗಂಬೀರವಾಗಿ ಸ್ವೀಕರಿಸುವ ಕಾಲ ಇದು. 
೬. ಲೈಂಗಿಕ ಶಿಕ್ಷಣ ಬೇರೆ. ನೀಲಿ ಚಿತ್ರಗಳ ಉದ್ದೇಶವೇ ಬೇರೆ. ಇದನ್ನು ನಾವು ಸ್ಪಷ್ಟವಾಗಿ ಗುರುತಿಸಿ ಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು. ಎರಡನ್ನೂ ಕಳಬೆರಕೆ ಮಾಡಿದರೆ ಅದರ ನಷ್ಟ ಸಮಾಜಕ್ಕೆ ಆಗಿದೆ.  
೭. ಖಜುರಾಹೊ ಶಿಲ್ಪಕಲೆ ಗಳನ್ನ ಕೆಲವರು ಉದಾಹರಣೆಯಾಗಿ ಕೊಟ್ಟು ನೀಲಿ ಚಿತ್ರಗಳನ್ನು ಸಮರ್ಥಿಸುತ್ತಾರೆ. ಇದು ತಪ್ಪು. ಒಬ್ಬ ಕಲಾವಿದ ಶೃಂಗಾರವನ್ನು ಕಲ್ಲಿನಲ್ಲಿ ಕೆತ್ತೊದಕ್ಕೂ, ಇಬ್ಬರು ಗಂಡು - ಹೆಣ್ಣು ಮಕ್ಕಳನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸುವಂತೆ ಮಾಡಿ ಅದನ್ನು ಚಿತ್ರೀಕರಿಸಿ ಮಾರಾಟ ಮಾಡೋದಕ್ಕೂ ವ್ಯತ್ಯಾಸ ಇದೆ. ಹುಸೇನ್ ಚಿತ್ರವನ್ನು ನೀಲಿ ಚಿತ್ರ ಎಂದು ಕರೆದರೆ ಅದು ಸರಿಯೇ? 
೮. ನನ್ನ ಪ್ರಕಾರ ನೀಲಿ ಚಿತ್ರಗಳು ವೇಶ್ಯಾವಾಟಿಕೆ ವ್ಯವಹಾರದ ಜಾಹಿರಾತುಗಳು. 
೯. ನೀಲಿ ಚಿತ್ರಗಳ ನಿಷೇಧ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎನ್ನುವ ವಾದ ಮುಂದೆ, ಡ್ರಗ್ಸ್, ಮದ್ಯ, ಸಿಗರೇಟು ಗಳ ಬಗ್ಗೆಯೂ ಮುಂದುವರಿಯಬಹುದು. 
೧೦. ನಮ್ಮ ಚರ್ಚೆಗಳು, ವಾದಗಳು ಲಘುವಾಗದಂತೆ ಎಚ್ಚರಿಕೆಯನ್ನು ನಾವು ಹೊಂದಬೇಕಾಗಿರೋದು ಅವಶ್ಯ. ಅದು ಲಘುವಾದಷ್ಟು ಅದರ ಲಾಭ ಸರಕಾರಕ್ಕೆ ಆಗಿದೇ. ಆದುದರಿಂದಲೇ ಅಭಿವ್ಯಕ್ತಿ ಸ್ವಾತಂತ್ರ್ಯ-ನೀಲಿ ಚಿತ್ರ ನೋಡುವ ಹಕ್ಕು ಒಂದೇ ಅಲ್ಲ ಎನ್ನೋದು ನನ್ನ ಬಲವಾದ ಅಭಿಪ್ರಾಯ. 

Sunday, August 2, 2015

ವಧಾ ಸ್ಥಾನದ ಮುಂದೆ ನ್ಯಾಯ

ಯಾಕೂಬ್ ಮೆಮನ್‌ಗೆ ಗಲ್ಲು ವಿಧಿಸಿದ ದಿನಗಳಿಂದ ಎರಡು ಅತಿರೇಕಗಳ ನಡುವೆ ನಾವಿದ್ದೇವೆ. ಒಂದು ಕೇಸರಿ ಶಕ್ತಿಗಳ ಅತಿರೇಕ. ಜೊತೆಗೆ ಇವರೊಂದಿಗೆ ಪೂರ್ವಗ್ರಹ ಪೀಡಿತ ಎಲ್ಲ ಬಗೆಯ ಮನಸ್ಥಿತಿಗಳೂ ಕೈ ಜೋಡಿಸಿವೆ. ಕಳೆದೆರಡು ದಿನಗಳಿಂದ ಇವರು ಒಂದು ಸಾವನ್ನು ಸಂಭ್ರಮಿಸುತ್ತಿದ್ದಾರೆ. ಮುಂಬೈ ಸ್ಫೋಟ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಯೇ ಬಿಟ್ಟಿತು, ಉಗ್ರ ಸತ್ತೇ ಹೋದ. ಇನ್ನು ಉಳಿದ ಉಗ್ರರಿಗೆ, ಅದನ್ನು ಬೆಂಬಲಿಸುವವರಿಗೆ ಸರಿಯಾದ ಪಾಠವಾಯಿತು. ಇದನ್ನು ಯಾವ ರೀತಿಯಲ್ಲೂ ಪ್ರಶ್ನಿಸಬಾರದು. ಪ್ರಶ್ನಿಸುವುದು ಉಗ್ರರಿಗೆ ಬೆಂಬಲ ನೀಡಿದಂತೆ, ಸಂತ್ರಸ್ತರಿಗೆ ಅನ್ಯಾಯ ಬಗೆದಂತೆ ಎಂದು ಇವರು ವಾದಿಸುತ್ತಿದ್ದಾರೆ.
 ಇದೇ ಸಂದರ್ಭದಲ್ಲಿ ಇನ್ನೊಂದು ಬಗೆಯ ಅತಿರೇಕವನ್ನು ನಾವು ನೋಡುತ್ತಿದ್ದೇವೆ. ಯಾಕೂಬ್ ಮೆಮನ್ ಗಲ್ಲು ಪ್ರಕರಣವನ್ನು ಮುಂದಿಟ್ಟು, ದೇಶದ ಪ್ರಜಾಸತ್ತೆ, ನ್ಯಾಯವ್ಯವಸ್ಥೆಯ ಮೇಲೆಯೇ ನಂಬಿಕೆಯೇ ಕಳೆದುಕೊಂಡಂತೆ ಬೇಜಾವಾಬ್ದಾರಿಯುತವಾಗಿ ಹೇಳಿಕೆಗಳನ್ನು ನೀಡುವವರು. ಸಂಘಪರಿವಾರ ಅತಿರೇಕಕ್ಕೆ ಪ್ರತಿಕ್ರಿಯೆಯಾಗಿ ಯಾಕೂಬ್ ಮೆಮನ್‌ನನ್ನು ಹುತಾತ್ಮ ಎಂದು ಬಿಂಬಿಸಲು ನೋಡುವವರು. ಯಾಕೂಬ್ ಮೆಮನ್‌ನನ್ನು ವೈಭವೀಕರಿಸುತ್ತಿರುವವರು. ‘ಯಾಕೂಬ್ ಮೆಮನ್‌ನನ್ನು ಒಂದು ಆದರ್ಶ’ ಎಂದು ಬಿಂಬಿಸಲು ಯತ್ನಿಸುವವರು. ಜೊತೆಗೆ, ಮುಂಬೈ ಕೋಮುಗಲಭೆಯನ್ನು ಮುಂದಿಟ್ಟುಕೊಂಡು ಮುಂಬೈ ಸ್ಫೋಟವನ್ನು ಸಮರ್ಥಿಸಲು ಮುಂದಾಗುವವರು. ದೇಶದ ಪ್ರಜಾಸತ್ತೆ, ಸಂವಿಧಾನ, ನ್ಯಾಯವ್ಯವಸ್ಥೆಯ ಕುರಿತಂತೆ ತುಚ್ಛವಾಗಿ ಹೇಳಿಕೆ ನೀಡುವ ಗುಂಪು. 
ಈ ಎರಡು ಅತಿರೇಕಗಳ ನಡುವೆಯೂ ಒಂದು ಗುಂಪಿದೆ. ಪ್ರಶಾಂತ್ ಭೂಷಣ್, ಜೇಠ್ಮಲಾನಿ, ಶ್ರೀಕೃಷ್ಣ, ಮಾರ್ಕಾಂಡೇಯ ಕಟ್ಜು ಮೊದಲಾದ ಹಿರಿಯ ನ್ಯಾಯವಾದಿಗಳು, ಮಾಜಿ ನ್ಯಾಯಾಧೀಶರನ್ನೊಳಗೊಂಡ ಗುಂಪು. ಅವರ ಆತಂಕ ಯಾಕೂಬ್ ಮೆಮನ್ ಅಲ್ಲ. ಬದಲಿಗೆ ಆತನನ್ನು ಗಲ್ಲಿಗೆ ನೀಡುವ ಸಂದರ್ಭದಲ್ಲಿ ನ್ಯಾಯವ್ಯವಸ್ಥೆಯಲ್ಲಿ ಉಂಟಾಗಿರುವ ಬಿರುಕುಗಳು, ನ್ಯಾಯ ಪ್ರಕ್ರಿಯೆಗಳ ಪೂರ್ವಾಗ್ರಹಗಳು, ದೌರ್ಬಲ್ಯಗಳನ್ನು ಮುಂದಿಟ್ಟುಕೊಂಡು ಅವರು ಯಾಕೂಬ್ ಮೆಮನ್‌ನ ಗಲ್ಲಿನ ಕುರಿತಂತೆ ಆತಂಕ ವ್ಯಕ್ತಪಡಿಸಿದರು. ಯಾಕೂಬ್ ಮೆಮನ್ ಅವರ ಗುರಿ ಆಗಿರಲೇ ಇಲ್ಲ. ಅವರ ಗುರಿ ಸದೃಢ, ಪೂರ್ವಾಗ್ರಹ ರಹಿತ ನ್ಯಾಯವ್ಯವಸ್ಥೆಯ ಬಗೆಗಿನದಾಗಿತ್ತು. ಪ್ರಜಾಸತ್ತೆಯ ಮೇಲೆ ನಂಬಿಕೆಯಿಟ್ಟ ಎಲ್ಲರೂ ಆ ಕುರಿತಂತೆ ಆತಂಕ ಪಡುವುದು ಅತ್ಯಗತ್ಯವಾಗಿದೆ. ‘ಗಲ್ಲು ಬೇಕೋ ಬೇಡವೋ’ ಎನ್ನುವುದು ಅನಂತರದ ವಿಷಯ. ಗಲ್ಲಿಗೇರಿಸುವ ಸಂದರ್ಭದಲ್ಲಿ ನ್ಯಾಯ ವ್ಯವಸ್ಥೆ ತನ್ನೆಲ್ಲ ಪ್ರಕ್ರಿಯೆಗಳನ್ನು ಸಮರ್ಥವಾಗಿ ನಿರ್ವಹಿಸಿದೆಯೇ? ಎನ್ನುವುದೇ ಮುಖ್ಯ ವಿಷಯ. ಇತ್ತೀಚಿನ ದಿನಗಳಲ್ಲಿ ನ್ಯಾಯವ್ಯವಸ್ಥೆಯಲ್ಲಿ ಸರಕಾರದ ಹಸ್ತಕ್ಷೇಪ, ಅದರೊಳಗೆ ಕೇಸರಿ ಮನಸ್ಥಿತಿಯ ವ್ಯಕ್ತಿಗಳು ನುಗ್ಗಿರುವುದು ಪದೇ ಪದೇ ಸುದ್ದಿಯಾಗುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಯೂಕೂಬ್ ಮೆಮನ್ ಅಂತಹದೊಂದು ರಾಜಕೀಯ ಸಂಚಿಗೆ ಬಲಿಯಾಗಿದ್ದಾನೆ ಎನ್ನುವ ಆರೋಪಗಳನ್ನು ಕೆಲವರು ಮಾಡಿದರೆ ಅದು ಒಂದು ಧರ್ಮದ ವ್ಯಕ್ತಿಯ ಪರವಾಗಿರುವ ಚರ್ಚೆಯೆಂದು ನಾವು ಅಮುಕಿ ಹಾಕಲು ನೋಡಿದರೆ ಅದರ ನಷ್ಟ ಪ್ರಜಾಸತ್ತೆಗೇ ಆಗಿದೆ. ಈ ದೇಶದಲ್ಲಿ ಖೈರ್ಲಾಂಜಿ, ಕಂಬಾಲಪಲ್ಲಿ ಹತ್ಯಾಕಾಂಡದ ಆರೋಪಿಗಳು ನಿರಪರಾಧಿಗಳೆಂದು ಘೋಷಣೆಯಾದಾಗಲೂ ನ್ಯಾಯ ವ್ಯವಸ್ಥೆಯನ್ನು ಅನುಮಾನಿಸಲಾಗಿದೆ. ಆ ಕುರಿತಂತೆ ಚರ್ಚೆ ನಡೆದಿದೆ. ಒಬ್ಬ ಪಾದ್ರಿ ಮತ್ತು ಆತನ ಕುಟುಂಬವನ್ನು, ಮತಾಂತರ ಮಾಡುತ್ತಿದ್ದಾರೆ ಎಂಬ ಹೆಸರಿನಲ್ಲಿ ಜೀವಂತ ದಹಿಸಿದ ದಾರಾಸಿಂಗ್ ಮರಣದಂಡನೆಯಿಂದ ತಪ್ಪಿಸಿಕೊಂಡಾಗಲೂ ಇದು ಚರ್ಚೆಗೀಡಾಗಿದೆ. ಇದೀಗ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ಸಂದರ್ಭದಲ್ಲಿ ಇದು ಚರ್ಚೆಯ ರೂಪ ಪಡೆದಾಗ ಅದಕ್ಕೆ ಧರ್ಮದ ಆರೋಪ ಹೊರಿಸಿ ಬಾಯಿ ಮುಚ್ಚಿಸಲು ಸಂಘಪರಿವಾರೇತರರಾದ ಕೆಲವು ಗೆಳೆಯರೂ ಜೊತೆಗೂಡಿರುವುದು ನಿಜಕ್ಕೂ ವಿಸ್ಮಯಕ್ಕೂ, ಆಘಾತಕ್ಕೂ ಕಾರಣವಾಗಿದೆ. ಈ ಚರ್ಚೆಯನ್ನು ತಿರುಚಿ, ಉಗ್ರರ ಪರವಾಗಿರುವ ವಾದಗಳು ಎಂಬ ಹಣೆಪಟ್ಟಿ ಹಾಕಿ, ‘ಕಲಾಂನ್ನು ಆದರ್ಶವಾಗಿಟ್ಟುಕೊಳ್ಳಿ, ಯಾಕೂಬ್‌ಮೆಮನ್ ಅಲ್ಲ’ ಎನ್ನುವ ಪುಕ್ಕಟೆ ಸಲಹೆಗಳನ್ನೂ, ‘ರೈತರ ಬಗ್ಗೆ ಎಷ್ಟು ಮಾತನಾಡಿದ್ದೀರಿ’ ಎಂಬ ಪ್ರಶ್ನೆಗಳನ್ನು ಚುಚ್ಚಿ, ವ್ಯಂಗ್ಯವಾಡಿ ತಮ್ಮ ತಮ್ಮ ಜಾತ್ಯತೀತತೆಯನ್ನು, ದೇಶಪ್ರೇಮದ ತೂಕವನ್ನು ಹೆಚ್ಚಿಸಿಕೊಂಡವರು ಹಲವರಿದ್ದಾರೆ. ಆದರೆ ಅದೇನೇ ಪ್ರಶ್ನೆ ಬಂದರೂ, ಯಾರೇ ಮೌನವಾಗಿದ್ದರೂ, ಯಾವ ಆರೋಪಗಳು ನಮ್ಮ ಮೇಲೆ ಎರಗಿದರೂ, ಈ ದೇಶದ ಸಂವಿಧಾನ, ನ್ಯಾಯವ್ಯವಸ್ಥೆಯ ಬಗ್ಗೆ ಹೆಚ್ಚು ಕಾಳಜಿ, ಆತಂಕವನ್ನು ವ್ಯಕ್ತಪಡಿಸುವ ಹೊಣೆಗಾರಿಕೆಯಿಂದ ನಾವು ಕಳಚಿಕೊಳ್ಳುವಂತೆಯೇ ಇಲ್ಲ. ಯಾಕೆಂದರೆ ಈ ದೇಶದಲ್ಲಿ ನಮಗೆಲ್ಲರಿಗೂ ಅದೊಂದೇ ಭರವಸೆ. ದುರದೃಷ್ಟವಶಾತ್ ಈ ಎರಡು ಅತಿರೇಕಗಳ ಗದ್ದಲಗಳಲ್ಲಿ, ಮಧ್ಯೆಯಿರುವ ಗುಂಪಿನ ಧ್ವನಿ ಯಾರಿಗೂ ಸ್ಪಷ್ಟವಾಗಿ ಕೇಳಿಸುತ್ತಿಲ್ಲ. ಅಥವಾ ಅತಿರೇಕಿಗಳ ಅಬ್ಬರಕ್ಕೆ ಇವರ ಹೇಳಿಕೆಗಳು ಅಸ್ಪಷ್ಟವಾಗಿ ಕೇಳಿಸುತ್ತಿದೆ. ಗೊಂದಲಕರವಾಗಿ ಕೇಳಿಸುತ್ತಿದೆ. ಅಥವಾ ಉದ್ದೇಶಪೂರ್ವಕವಾಗಿ ಇವರ ಧ್ವನಿಯನ್ನು ಅಸ್ಪಷ್ಟಗೊಳಿಸುವ, ತಿರುಚುವ ಪ್ರಯತ್ನ ನಡೆಯುತ್ತಿದೆ.

 ಮುಂಬೈ ಕೋಮುಗಲಭೆ-ಸರಣಿ ಬಾಂಬ್ ಸ್ಫೋಟ:
 ಮುಂಬೈ ಕೋಮುಗಲಭೆಯ ಬಳಿಕ ಮುಂಬೈ ಸರಣಿ ಸ್ಫೋಟ ನಡೆಯಿತು. ಕೋಮುಗಲಭೆಯ ಬಗ್ಗೆ ಸುದೀರ್ಘ ವರದಿಯೊಂದನ್ನು ನೀಡಿದವರು ನ್ಯಾಯಾಧೀಶರಾಗಿದ್ದ ಬೆಲ್ಲೂರು ನಾರಾಯಣ ಸ್ವಾಮಿ ಕೃಷ್ಣ.. ಕೇರಳ ಹೈಕೋರ್ಟಿನ ಮುಖ್ಯನ್ಯಾಯಾಧೀಶರಾಗಿ, ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿಯೂ ಕೆಲಸ ಮಾಡಿರುವ ಅನುಭವಿಗಳು ಇವರು. ಮುಂಬೈ ಗಲಭೆಯ ಕುರಿತಂತೆ ಇವರು ನೀಡಿರುವ ವರದಿ ಮುಂದೆ ‘ಶ್ರೀ ಕೃಷ್ಣ ಆಯೋಗ ವರದಿ’ ಎಂದೇ ಖ್ಯಾತಿ ಪಡೆಯಿತು. ಮತ್ತು ಅವರು ಅದರಲ್ಲಿ ಯಾರನೆಲ್ಲ ರಾಜಕೀಯ ಅಪರಾಧಿಗಳೆಂದು ಗುರುತಿಸಿದ್ದರೋ ಅವರ್ಯಾರಿಗೂ ಶಿಕ್ಷೆಯಾಗಲೇ ಇಲ್ಲ.ಮುಂಬೈ ಕೋಮುಗಲಭೆಯಲ್ಲಿ ಅಧಿಕೃತ ಅಂಕಿ ಅಂಶಗಳ ಪ್ರಕಾರ 1,500 ಮಂದಿ ಮೃತಪಟ್ಟಿದ್ದಾರೆ. 1829 ಮಂದಿ ಗಾಯಗೊಂಡಿದ್ದಾರೆ. 165 ಮಂದಿ ನಾಪತ್ತೆಯಾಗಿದ್ದಾರೆ. ನಾಶ, ನಷ್ಟಗಳಿಗಂತೂ ಲೆಕ್ಕವೇ ಇಲ್ಲ. ಈ ಮುಂಬೈ ಗಲಭೆಗಳಲ್ಲಿ ಸಂತ್ರಸ್ತರಲ್ಲೊಬ್ಬನಾದ ಟೈಗರ್ ಮೆಮನ್ ಮುಂದೆ ಮುಂಬೈ ಬ್ಲಾಸ್ಟ್ ಎನ್ನುವಂತಹ ಇನ್ನೊಂದು ಬರ್ಬರ ಕೃತ್ಯಕ್ಕೆ ವೇದಿಕೆ ಸಿದ್ಧಪಡಿಸುತ್ತಾನೆ. ಇದನ್ನು ಶ್ರೀಕೃಷ್ಣ ಆಯೋಗದ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತದೆ ‘‘ಮುಂಬೈ ಕೋಮುಗಲಭೆಗಳಲ್ಲಿ ಆದ ಅನ್ಯಾಯ, ಅಕ್ರಮಗಳ ಮಂದುವರಿದ ಭಾಗವಾಗಿದೆ ಮುಂಬೈ ಸ್ಫೋಟ’’. ಈ ಸ್ಫೋಟದಲ್ಲಿ ಸುಮಾರು 300 ಮಂದಿ ಮೃತಪಟ್ಟರು. ದುರದೃಷ್ಟವಶಾತ್ ಶ್ರೀಕೃಷ್ಣ ಆಯೋಗ ವರದಿ ಕೊನೆಗೂ ಜಾರಿಗೆ ಬರದೇ ಕಸದ ಬುಟ್ಟಿ ಸೇರಿತು. ಈ ವರದಿಯನ್ನು ಸರಕಾರ ಸದನದಲ್ಲಿ ಮಂಡಿಸುವುದಕ್ಕೆ ಹಿಂದೇಟು ಹಾಕಿದಾಗ, ಸ್ವತಃ ನ್ಯಾಯಾಧೀಶರಾಗಿದ್ದ ಶ್ರೀ ಕೃಷ್ಣ ಅವರೇ ಸಾರ್ವಜನಿಕರಿಗೆ ಬಿಡುಗಡೆ ಮಾಡುತ್ತಾರೆ.
 ಮುಂಬೈ ಕೋಮುಗಲಭೆಯನ್ನು ಮುಂದಿಟ್ಟು ಯಾಕೂಬ್ ಮೆಮನ್‌ನನ್ನು ಸಮರ್ಥಿಸಲು ಮುಂದಾಗುವುದು ನಮಗೆ ನಾವೇ ತೋಡಿಕೊಳ್ಳುವ ಗೋರಿಯಾಗಿದೆ. ಒಂದೂವರೆ ಸಾವಿರ ಜನರ ಹತ್ಯಾಕಾಂಡಕ್ಕೆ ಕಾರಣವಾಗಿರುವ ಮುಂಬೈ ಕೋಮುಗಲಭೆಯಲ್ಲಿ ಸಂತ್ರಸ್ತರಿಗೆ ಸಂಪೂರ್ಣ ಅನ್ಯಾಯವೇ ಆಗಲಿ. ಮೃತಪಟ್ಟ ಒಂದೂವರೆ ಸಾವಿರ ಜನರಿಗಾಗಿ ಯಾವನೇ ಒಬ್ಬನಿಗೆ ಶಿಕ್ಷೆಯಾಗದೇ ಇರಲಿ. ಹೀಗಿದ್ದರೂ ಆ ಕಾರಣಕ್ಕಾಗಿ ನಾವು ಮುಂಬೈ ಸ್ಫೋಟವನ್ನು ಸಮರ್ಥಿಸಿಕೊಳ್ಳುವುದು ಅತಿ ದೊಡ್ಡ ಅಪರಾಧ ಕ್ರೌರ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಕೋಮುಗಲಭೆಗಳಲ್ಲಿ ಆದ ಅನ್ಯಾಯಕ್ಕಾಗಿ ನಾವು ಮೊರೆ ಹೋಗಬೇಕಾದುದು ನಮ್ಮ ಸಂವಿಧಾನ, ನ್ಯಾಯವ್ಯವಸ್ಥೆಯ ಜೊತೆಗೇ ಆಗಿರಬೇಕೇ ಹೊರತು ದಾವೂದ್ ಇಬ್ರಾಹಿಂನಂತಹ ಭೂಗತ ದೊರೆಯ ಬಳಿಯಲ್ಲಲ್ಲ. ಈ ದೇಶದ ದುರ್ಬಲ ಸಮುದಾಯಗಳನ್ನು ದೇಶದ ಪ್ರಜಾಸತ್ತೆ ಮತ್ತು ಸಂವಿಧಾನವೇ ಈವರೆಗೆ ಪೊರೆದುಕೊಂಡು ಬಂದಿದೆ. ಕೆಲವೊಮ್ಮೆ ಅದು ಎಡವಿದಾಗಲೂ ನಾವು ಅದಕ್ಕೆ ಮುಖ ತಿರುವದೆ, ಮತ್ತೆ ಅದೇ ತಾಯಿ ಬಳಿಗೆ ತೆರಳುವುದರಲ್ಲೇ ಭದ್ರತೆ ಇದೆ. ಭವಿಷ್ಯವಿದೆ.ಯಾವುದೊ ಭೂಗತ ದೊರೆ ನಡೆಸುವ ಸ್ಫೋಟ ಯಾವ ಕಾರಣಕ್ಕೂ ಮುಂಬೈ ಕೋಮುಗಲಭೆಗಳ ಸಂತ್ರಸ್ತರಿಗೆ ನ್ಯಾಯವನ್ನು ನೀಡಲಾರವು. ಅವು ನಮ್ಮ ನ್ಯಾಯವ್ಯವಸ್ಥೆಯನ್ನು, ಪ್ರಜಾಸತ್ತೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ. ಇದೀಗ ನಮ್ಮ ಮುಂದಿರುವ ಯಾಕೂಬ್ ಮೆಮನ್‌ನ ವಿಷಯದಲ್ಲೂ ಇದೇ ನಿಲುವುದನ್ನು ತಾಳುವುದು ಅತ್ಯಗತ್ಯ. ಆದುದರಿಂದ ಮೊತ್ತ ಮೊದಲು ನಾವು ಯಾವುದನ್ನು ವಿರೋಧಿಸುತ್ತಿದ್ದೇವೆ ಎನ್ನುವುದು ನಮಗೆ ಸ್ಪಷ್ಟವಾಗಿರಬೇಕು. ಮೆಮನ್‌ನ ಗಲ್ಲನ್ನು ನಾವು ಅನುಕಂಪದಿಂದ ನೋಡುವುದು, ಆತ ಹುತಾತ್ಮ ಎನ್ನುವ ನೆಲೆಯಲ್ಲಿ ಅಲ್ಲ. ನ್ಯಾಯವ್ಯವಸ್ಥೆ ಸರಿಯಾದ ದಾರಿಯಲ್ಲಿ ಸಾಗದೆ, ಆತನ್ನು ಅಡ್ಡದಾರಿಯಲ್ಲಿ ಬಲಿಕೊಟ್ಟಿದೆ ಮತ್ತು ನ್ಯಾಯವ್ಯವಸ್ಥೆಯ ಮೇಲೆ ಆತ ಯಾವ ನಂಬಿಕೆ ಇಟ್ಟಿದ್ದನೋ ಆ ನಂಬಿಕೆಯನ್ನು ನ್ಯಾಯಾಲಯ ಹುಸಿಗೊಳಿಸಿದೆ ಎನ್ನುವುದಷ್ಟೇ ನಮ್ಮ ಆತಂಕಕ್ಕೆ ಕಾರಣವಾಗಬೇಕು. ಯಾಕೂಬ್ ಮೆಮನ್ ಈ ದೇಶದ ಮುಸ್ಲಿಮರಿಗೆ ಏನೂ ಅಲ್ಲ. ಒಬ್ಬ ಸಾಮಾನ್ಯ ಅಕೌಂಟೆಂಟ್ ಅವನು. ಮುಸ್ಲಿಮ್ ಹೆಸರಿದ್ದಾಕ್ಷಣ ಅವನಿಗೋಸ್ಕರ ಮಿಡಿಯಬೇಕಾದ ಯಾವ ಅವಶ್ಯಕತೆಯೂ ಈ ದೇಶದ ಮುಸ್ಲಿಮರಿಗೆ ಇಲ್ಲ. ಆದರೆ ಆತನ ಮುಸ್ಲಿಮ್ ಹೆಸರೊಂದೇ ಅವನನ್ನು ಗಲ್ಲಿನ ಕಂಬದೆಡೆಗೆ ಒಯ್ಯಿತು ಎಂದಾಗ ಈ ದೇಶದ ನ್ಯಾಯವ್ಯವಸ್ಥೆಯ ಬಗ್ಗೆ ಮುಸ್ಲಿಮರಲ್ಲಿ ಆತಂಕ, ಅನುಮಾನ ಹುಟ್ಟುವುದು ಸಹಜವಾಗಿದೆ.
 ಯಾಕೂಬ್ ಮೆಮನ್ ಒಂದು ನೆಪ ಮಾತ್ರ. ಆತನ ಸ್ಥಾನದಲ್ಲಿ ಒಬ್ಬ ದಲಿತನಿರಬಹುದು. ಅಥವಾ ಒಬ್ಬ ಕ್ರಿಶ್ಚಿಯನ್ ಇರಬಹುದು. ಅಥವಾ ಒಬ್ಬ ಆರೆಸ್ಸೆಸ್ ನಾಯಕನೇ ಇರಬಹುದು. ಗಲ್ಲಿನಂತಹ ಶಿಕ್ಷೆಯನ್ನು ವಿಧಿಸುವಾಗ, ನ್ಯಾಯ ಪ್ರಕ್ರಿಯೆಯ ಬಗ್ಗೆ ಯಾರಲ್ಲೂ ಅನುಮಾನಗಳು ಹುಟ್ಟಬಾರದು. ಮೆಮನ್ ವಿಷಯದಲ್ಲಿ ಅದು ನಡೆದಿದೆ. ಮೆಮನ್‌ನನ್ನು ಶರಣಾಗತನಾಗಿ ಮಾಡಿರುವ ರಾ ಅಧಿಕಾರಿ ರಾಮನ್ ಅವರೇ ಇದನ್ನು ತಮ್ಮ ಲೇಖನದಲ್ಲಿ ಹೇಳಿಕೊಂಡಿದ್ದಾರೆ. ಕಟ್ಜುವಿನಂತಹ ಹಿರಿಯ ಮಾಜಿ ನ್ಯಾಯಾಧೀಶರು ಗಲ್ಲು ತೀರ್ಪಿನಲ್ಲಿರುವ ಬಿರುಕುಗಳನ್ನು ಗುರುತಿಸಿ ಅದನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಪ್ರಶಾಂತ್ ಭೂಷನ್, ರಾಮ್‌ಜೇಠ್ಮಲಾನಿಯಂತಹ ಹಿರಿಯ ನ್ಯಾಯವಾದಿಗಳೂ ಅದನ್ನು ಗುರುತಿಸಿದ್ದಾರೆ. ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿರುವ ಕುರಿಯನ್ ತನ್ನ ತೀರ್ಪಿನಲ್ಲಿ ಗಲ್ಲನ್ನು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ ಸ್ವತಃ ಯಾಕೂಬ್ ಮೆಮನ್ ಹೇಳಿಕೊಂಡಿದ್ದಾನೆ ‘‘ಈ ಗಲ್ಲು ತಾನು ಟೈಗರ್‌ಮೆಮನ್‌ನ ತಮ್ಮ ಎನ್ನುವ ಕಾರಣಕ್ಕೆ ನೀಡುವುದಾದರೆ ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಮುಂಬೈ ಸ್ಫೋಟದ ಆರೋಪಿಗೆ ನೀಡುವ ಗಲ್ಲು ಎಂದಾಗಿದ್ದರೆ ಅದನ್ನು ನಿರಾಕರಿಸುತ್ತೇನೆ’’.

ಗೆದ್ದವರು ಯಾರು?:
ಟೈಗರ್ ಮೆಮನ್ ಈ ದೇಶದ ನ್ಯಾಯ ವ್ಯವಸ್ಥೆಯನ್ನು ನುಚ್ಚು ನೂರು ಮಾಡಿದ. ಅದೇ ಸಂದರ್ಭದಲ್ಲಿ, ಆತನ ತಮ್ಮನಾಗಿರುವ ಯಾಕೂಬ್ ಮೆಮನ್ ಈ ದೇಶದ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟು, ಮುಂಬಯಿ ಸ್ಫೋಟಕ್ಕೆ ಸಂಬಂಧಪಟ್ಟ ದಾಖಲೆಗಳ ಸಹಿತ, ತನ್ನ ಕುಟುಂಬದ ಮಹಿಳೆಯರ ಸಹಿತ ರಾ ಅಧಿಕಾರಿಯ ನೆರವಿನಿಂದ ಶರಣಾಗತನಾದ. ಉಗ್ರ ಅಣ್ಣನ ಮಾತನ್ನು ದಿಕ್ಕರಿಸಿ ಭಾರತಕ್ಕೆ ಕಾಲಿಟ್ಟ ಯಾಕೂಬ್ ಮೆಮನ್‌ಗೆ ಈ ದೇಶದ ನ್ಯಾಯವ್ಯವಸ್ಥೆ ಗಲ್ಲನ್ನು ನೀಡುವ ಮೂಲಕ, ಪರೋಕ್ಷವಾಗಿ ಟೈಗರ್ ಮೆಮನ್‌ನನ್ನು ಗೆಲ್ಲಿಸಿತು. ಅಷ್ಟೇ ಅಲ್ಲ, ಮುಂಬಯಿ ಸ್ಫೋಟಕ್ಕೆ ಸಂಬಂಧಪಟ್ಟು ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಎಲ್ಲ ಬಾಗಿಲುಗಳನ್ನು ಮುಚ್ಚಿ ಹಾಕಿತು. ಅಷ್ಟೇ ಅಲ್ಲ, ಐಎಸ್‌ಐಯಂತಹ ಪಾಕಿಸ್ತಾನಿ ಸಂಘಟನೆಗಳಿಗೆ ಈ ತೀರ್ಪಿನ ಲಾಭವನ್ನು ಒದಗಿಸಿಕೊಟ್ಟಿತು. ಜನರ ಅನುಮಾನ, ಅಭದ್ರತೆ, ಆತಂಕ, ಆಕ್ರೋಶ ಇವುಗಳನ್ನು ಇಂತಹ ಸಂಘಟನೆಗಳು ಹೇಗೆ ಬಳಸಿಕೊಳ್ಳುತ್ತವೆ ಎನ್ನುವದಕ್ಕೆ ನಮಗೆ ‘ಮುಂಬಯಿ ಸರಣಿ ಸ್ಫೋಟ’ದಲ್ಲೇ ಪಾಠಗಳಿವೆ. 
ನಮ್ಮ ನ್ಯಾಯಾಂಗ ಕಳಂಕಗೊಂಡಿದೆ ಮತ್ತು ಸಂಘಪರಿವಾರ ಹಿತಾಸಕ್ತಿಗಳು ಅದರಲ್ಲಿ ಕೈಯಾಡಿಸುತ್ತಿದ್ದಾರೆ ಎನ್ನುವ ಹೇಳಿಕೆಗಳನ್ನು ಹಲವರು ಹಲವು ಬಾರಿ ಬಹಿರಂಗಪಡಿಸಿದ್ದಾರೆ. ಕೇಸರಿ ಉಗ್ರರನ್ನು ಬಿಡುಗಡೆಗೊಳಿಸಲು ಹೇಗೆ, ರಾಷ್ಟ್ರೀಯ ತನಿಖಾ ಸಂಸ್ಥೆಯನ್ನೇ ಬಳಸಿಕೊಂಡು ಸಂಚು ನಡೆಸಲಾಗಿತ್ತು, ತನ್ನ ಮೇಲೆ ಯಾವೆಲ್ಲ ಒತ್ತಡವನ್ನು ಹೇರಲಾಗಿತ್ತು ಎನ್ನುವುದನ್ನು ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ನ್ಯಾಯಾಧೀಶರ ನೇಮಕದಲ್ಲಿ ಕೈಯಾಡಿಸುವುದಕ್ಕೆ ಸರಕಾರ ಅತ್ಯಾತುರದಲ್ಲಿದೆ. ಇವೆಲ್ಲವುಗಳ ನಡುವೆ ಗುಜರಾತ್ ಹತ್ಯಾಕಾಂಡದ ಆರೋಪಿಗಳು ಒಬ್ಬೊಬ್ಬರಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಮಾಲೆಗಾಂವ್ ಸ್ಫೋಟ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಸ್ವತಃ ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್, ಸ್ಫೋಟಗಳಲ್ಲಿ ಭಾಗಿಯಾಗಿರುವ ಆರೋವಿದೆ. ಆತ, ‘ಯಾಕೂಬ್ ಮೆಮನ್‌ನ ಗಲ್ಲನ್ನು ಆಸ್ವಾದಿಸಿದೆ’ ಎಂಬ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡುತ್ತಾನೆ. ಈ ಎಲ್ಲ ಬೆಳವಣಿಗೆಗಳು ನ್ಯಾಯವ್ಯವಸ್ಥೆ ಎಂತಹ ವಿಪತ್ತಿನಲ್ಲಿದೆ ಎನ್ನುವುದರ ಸೂಚನೆಯಾಗಿದೆ. ಮತ್ತು ಈ ಕಾರಣಕ್ಕೆ, ಈ ಕುರಿತಂತೆ ರಾಷ್ಟ್ರಮಟ್ಟದ ಚರ್ಚೆಯೊಂದು ಹುಟ್ಟುವುದಕ್ಕೆ ಇದು ಸಕಾಲವಾಗಿದೆ. ಚರ್ಚೆ ಗಲ್ಲು ಶಿಕ್ಷೆಯ ಬಗ್ಗೆ ಅಲ್ಲ. ನ್ಯಾಯ ವ್ಯವಸ್ಥೆ ದುರ್ಬಲಗೊಳ್ಳುತ್ತಿರುವ ಬಗ್ಗೆ. 

ಸಾಯೋ ಆಟ:
 ಮೆಮನ್ ಗಲ್ಲು, ದ.ರಾ. ಬೇಂದ್ರೆಯವರ ಸಾಯೋ ಆಟದ ಅಸಂಗತ ದೃಶ್ಯಗಳನ್ನು ನನಗೆ ನೆನಪಿಸಿತು. ಅವನಲ್ಲದಿದ್ದರೆ ಇವನು. ಒಟ್ಟಾರೆ, ಓರ್ವ ಸಾಯುವುದು ಸದ್ಯದ ಅಗತ್ಯ. ‘ಕಳ್ಳ ಮನೆಯೊಂದಕ್ಕೆ ಕನ್ನ ಹಾಕುವಾಗ ಗೋಡೆ ಬಿದ್ದು ಸಾಯುತ್ತಾನೆ. ಕಳ್ಳನ ಹೆಂಡತಿ, ಮನೆಯೊಡೆಯನ ವಿರುದ್ಧ ದೂರು ನೀಡುತ್ತಾಳೆ. ಆತನ ದುರ್ಬಲ ಗೋಡೆಯಿಂದಾಗಿ ತನ್ನ ಪತಿ ಸತ್ತ ಎನ್ನುತ್ತಾಳೆ. ಮನೆಯೊಡೆಯನಿಗೆ ರಾಜ ಗಲ್ಲು ವಿಧಿಸುತ್ತಾನೆ. ಮನೆಯೊಡೆಯ ಹೆದರಿ, ಗೋಡೆ ಕಟ್ಟಿದ ಮೇಸ್ತ್ರಿಯ ಕಡೆಗೆ ಕೈ ತೋರಿಸುತ್ತಾನೆ. ರಾಜ ಗಲ್ಲು ಶಿಕ್ಷೆಯನ್ನು ಮೇಸ್ತ್ರಿಗೆ ವರ್ಗಾಯಿಸುತ್ತಾನೆ.....ಸಾಯುವ ಆಟ ಮುಂದುವರಿಯುತ್ತದೆ. ನ್ಯಾಯ ವ್ಯವಸ್ಥೆ ಇಂತಹ ಮೂರ್ಖರ ಕೈಯಲ್ಲಿ, ಗುಪ್ತ ಅಜೆಂಡಾಗಳನ್ನು ಹೊಂದಿರುವ ಕೋಮೂವಾದಿ, ಮೂಲಭೂತವಾದಿಗಳ ಕೈಯಲ್ಲಿದ್ದಾಗ ಸಾವಿನ ಆಟ ಮುಂದುವರಿಯಲೇ ಬೇಕು. ಇಂದು ಯಾಕೂಬ್ ಮೆಮನ್ ಆಗಿದ್ದರೆ ನಾಳೆ ಇನ್ನಾವುದೋ ಒಂದು ದುರ್ಬಲ ಸಮುದಾಯದ ವ್ಯಕ್ತಿ. ಒಟ್ಟಿನಲ್ಲಿ ಈ ಸಾಯುವ ಆಟ ನಮ್ಮ ಪಾದ ಬುಡಕ್ಕೆ ಬರುವವರೆಗೂ ಅದು ನಮಗೊಂದು ಆಟ, ಸಂಭ್ರಮ ರೂಪದಲ್ಲೇ ಇರುತ್ತದೆ.