Wednesday, April 15, 2015

ಹಲೋ ಹಲೋ

1
ಬರೆದ ಕಾಗದಕ್ಕಿಂತ 
ಖಾಲಿ ಕಾಗದವನ್ನು ಇಷ್ಟ ಪಡುವೆ 
ಯಾಕೆಂದರೆ ಅದರೊಳಗೆ 
ನಾನು ಬರೆಯದೆ ಉಳಿದ 
ಕವಿತೆಗಳಿವೆ
2
ಹಾಸಿಗೆ ಹಿಡಿದ 
ಹೆತ್ತ ತಾಯಿಯ
ತಿರುಗಿ ನೋಡದ ಈತ 
ಗೋಮಾತೆಯ ಹೆಸರಲ್ಲಿ 
ಹೇಸಿಗೆ ಮಾಡಿಕೊಂಡು 
ಜೈಲು ಸೇರಿದ್ದಾನೆ !
3
ನನಗೆ ಚಹಾ ಅಂದರೆ 
ಒಂದಿಷ್ಟೂ ಇಷ್ಟವಿಲ್ಲ 
ಆದರೆ ಚಹಾ ಕುಡಿಯಬಾರದು 
ಎಂದು ನೀನು ನನ್ನ ಕೈಗಳನ್ನು ಕಟ್ಟಿದರೆ 
ಚಹಾ ಕುಡಿಯುವ ನನ್ನ ಹಕ್ಕಿಗಾಗಿ 
ನಾನು ಪ್ರಾಣವನ್ನೇ ಕೊಡಬಲ್ಲೆ
4
ಜಾತಿ ಸಮೀಕ್ಷೆಗೆಂದು 
ಅಂಗಳ ತುಳಿದವನ ಜಾತಿ ಕೇಳಿ 
ಬೆಚ್ಚಿ 
ಜಾತ್ಯತೀತ ದೇಶದಲ್ಲಿ 
ಜಾತಿ ಸಮೀಕ್ಷೆಯೇ? ಎಂದು 
ಉಗಿದು ಕಳುಹಿಸಿ
ಅಂಗಳವನ್ನು ಗೋ ಮೂತ್ರದಿಂದ 
ಶುಚೀಕರಿಸಿದರು
5
ರಾತ್ರಿಯಿಡೀ ದುಡಿದು 
ಬಳಲಿದ ವೇಶ್ಯೆ 
ಹಗಲಲ್ಲಿ ಒಂದಿಷ್ಟು ನಿದ್ದೆ ಮಾಡಿ 
ಉಳಿದ ಸಮಯ ಕಳೆಯೋದಕ್ಕೆ 
ಗಾಂಧಿಯ ಆತ್ಮ ಚರಿತ್ರೆ ಓದಿ 
ಹೊಟ್ಟೆ ಹುಣ್ಣಾಗುವಂತೆ ನಗುವಳು !
6
ಯಾರೋ ಎಸೆದ ಕಲ್ಲೊಂದು 
ನನ್ನ ಮನೆಯ ಕಿಟಕಿಯ ಗಾಜನ್ನು 
ಚಿಲ್ ಎಂದು ಒಡೆಯಿತು 
ಒಡೆದ ಗಾಜಿನೊಳಗಿಂದ 
ನುಗ್ಗಿ ಬಂದ ಸೂರ್ಯನ ಕಿರಣ 
ನನ್ನ ಮನೆಗೆ ಇನ್ನಷ್ಟು ಬೆಳಕನ್ನು ತಂದಿತು
7
ನನ್ನನ್ನು ಸಹಿಸಿ ಕೊಳ್ಳಲಾಗದ ಮೌಲ್ವಿ 
ಒಂದು ದಿನ
ಬೆತ್ತ ಹಿಡಿದು ಬಲವಂತದಿಂದ 
ಮದರಸದಿಂದ ಹೊರ ದಬ್ಬಿದರು!
ನನ್ನ ಅಧ್ಯಾತ್ಮದ ಕಲಿಕೆ 
ಅಲ್ಲಿಂದಲೇ ಆರಂಭವಾಯಿತು
8
ಏರ್ ಟೆಲ್  ಟವರ್ 
ಮೇಲೆ ಕುಳಿತ 
ರೆಕ್ಕೆ ಹರಿದ ಒಂಟಿ ಗುಬ್ಬಚ್ಚಿ 
ಹಲೋ ಹಲೋ  ಎಂದು ಚೀರುತ್ತಿತ್ತು   
ಅತ್ತ ಕಡೆಯಿಂದ 
ನಾಟ್ ರೀಚಬಲ್ ಸದ್ದು 
ಕೇಳಿ ಬರುತ್ತಿತ್ತು !
9
ಓ ಸೂರ್ಯೋದಯ 
ಎಂದು ಈ ತೀರದಲ್ಲಿ ಕುಳಿತು 
ನಾನು ರೋಮಾಂಚನಗೊಳ್ಳುತ್ತಿರುವಾಗ 
ಆ ತೀರದಲ್ಲಿ ಕುಳಿತ ಆಕೆ 
ಸೂರ್ಯಾಸ್ತವನ್ನು ನೋಡುತ್ತಾ 
ನಿಟ್ಟುಸಿರುಡುತ್ತಿದ್ದಾಳೆ !
10
ಮೋಡದ 
ಕೋಡು ಸೀಳಿ 
ಚೆಲ್ಲಿದೆ ಹನಿ ಹನಿ ಮಳೆ 
ಹಿಗ್ಗಿದೆ ಇಳೆ
ಬೆಂದ ಮನದ ಕನಸು 
ಮಣ್ಣ ಪರಿಮಳಕ್ಕೆ 
ಮತ್ತೆ ಕೊನರಿದೆ
11
ಚದುರಿದ ದಾಳಿಂಬೆ
ಹಣ್ಣಿನ 
ಮಣಿಗಳ ಮರು ಜೋಡಿಸಲು 
ಕುಳಿತೆ 
ಒಂದು ಹಣ್ಣನ್ನು 
ಜೋಡಿಸುವಷ್ಟರಲ್ಲಿ 
ನಾನು ಹಣ್ಣಾಗಿದ್ದೆ !
12
ಲೆಕ್ಕ ಹಿಡಿದರೆ 
ನನಗೀಗ ನಲವತ್ತೆರಡು ವರ್ಷ 
ಆದರೆ ಕೆಲವು ದಿನಗಳನ್ನು ನಾನು 
ಹತ್ತಿಪ್ಪತ್ತು ವರ್ಷ ಬದುಕಿದ್ದೇನೆ
ಆದುದರಿಂದ ನನಗಿಷ್ಟೇ ವರ್ಷ 
ಎಂದು ಹೇಳೋದು ಕಷ್ಟ