Tuesday, November 29, 2016

ಚಿಂದಿ ನೋಟುಗಳು: ದೇವಲೋಕದ ಬಟ್ಟೆ

ನೋಟು ನಿಷೇಧದ ಬಳಿಕ ನನ್ನ ಎಂದಿನ ತರಕಾರಿ ಅಂಗಡಿಗೆ ಇದೇ ಮೊದಲ ಬಾರಿ ಭೇಟಿ ನೀಡಿದ್ದೆ. ತರಕಾರಿ ಅಂಗಡಿಯವ ನೊಣ ಹೊಡೆಯುತ್ತಿದ್ದ.
‘‘ಸಾರ್, ಎಂತ ವ್ಯಾಪಾರ ಇಲ್ಲವಾ?’’ ಕೇಳಿದೆ.
ಸಿಟ್ಟಿನಿಂದ ಅವನು ಉತ್ತರಿಸಿದ ‘‘ಸ್ವಇಪ್ ಮಾಡ್ಲಿಕ್ಕೆ ಕಾರ್ಡ್ ಉಂಟಾ ಕೇಳ್ತಾರೆ...ನನ್ನಲ್ಲಿ ತೂಕ ಮಾಡ್ಲಿಕ್ಕೆ ಸರಿಯಾದ ತಕ್ಕಡಿಯೇ ಇಲ್ಲ....ಎಲ್ಲರ ಬದುಕೂ ಈ ಕಾರ್ಡ್‌ನ ಹೆಸರಲ್ಲಿ ಎಕ್ಕುಟ್ಟಿ ಹೋಗುವುದು ಖಂಡಿತಾ...’’ 
‘‘ಆದರೂ ಭವಿಷ್ಯಕ್ಕೆ ಈ ಕಾರ್ಡ್ ಒಳ್ಳೆಯದೇ... ಜನ ಎಲ್ಲ ಸಂಭ್ರಮದಲ್ಲಿದ್ದಾರೆ....ಇವತ್ತಿನ ದಿನವನ್ನು ಬಿಜೆಪಿಯೋರು ಸಂಭ್ರಮದ ದಿನ ಅಂತ ಆಚರಿಸುತ್ತಾ ಇದ್ದಾರೆ...ಸಂಭ್ರಮ ಇಲ್ಲದೆ ಸುಮ್ಮಗೆ ಆಚರಿಸ್ತಾರಾ....ರಿಕ್ಷಾದ ಡ್ರೈವರಲ್ಲಿ ನಾನು ಕೇಳಿದೆ...ಅವನೂ ಸಂಭ್ರಮದಲ್ಲೇ ಇದ್ದ....’’ ಸಮಾಧಾನ ಹೇಳಿದೆ 
ತರಕಾರಿ ಅಂಗಡಿಯವ ಅದಕ್ಕೆ ಉತ್ತರಿಸದೆ ಸ್ವಲ್ಪ ಹೊತ್ತು ವೌನವಾಗಿದ್ದ. 
ಬಳಿಕ ಇದ್ದಕ್ಕಿದ್ದಂತೆಯೇ ಕೇಳಿದ ‘‘ವ್ಯಾಪಾರ ಹೇಗೂ ಇಲ್ಲ. ಒಂದು ಕತೆ ಹೇಳ್ತೇನೆ ಕೇಳ್ತೀರಾ?’’ 
ಹೇಳಿದರೆ ಹೇಳಲಿ. ಅದಕ್ಕೇನು ದುಡ್ಡು ಕೊಡಬೇಕಾ?
 ‘ಹೇಳು’ ಎಂದೆ.
ಅವನು ಕತೆ ಹೇಳಲು ಶುರು ಮಾಡಿದ
‘‘ಒಂದು ಊರಲ್ಲಿ ಒಬ್ಬ ಸರ್ವಾಧಿಕಾರಿ ರಾಜನಿದ್ದ. ಪ್ರಜೆಗಳ ಸಂಪತ್ತನ್ನೆಲ್ಲ ದೋಚಿ ಖಜಾನೆಯಲ್ಲಿಟ್ಟಿದ್ದ. ತನ್ನದೇ ವೈಭವದ ಲೋಕದಲ್ಲಿ ಕಾಲ ಕಳೆಯುತ್ತಿದ್ದ. ಜಗತ್ತಿನ ಶ್ರೇಷ್ಠವಾದುದೆಲ್ಲ ತನ್ನ ಅರಮನೆಯಲ್ಲಿ ಇರಬೇಕು, ತನ್ನ ಆಸ್ತಿಯಾಗಬೇಕು ಎನ್ನುವುದು ಅವನ ಆಸೆ. ಹೀಗಿರುವಾಗ ಅವನ ಅರಮನೆಗೆ ಅರೇಬಿಯಾದ ಶ್ರೇಷ್ಠ ಬಟ್ಟೆ ವ್ಯಾಪಾರಿಗಳು ಬಂದರು...’’
   ‘‘...ರಾಜ ಅವರನ್ನು ಕುಳ್ಳಿರಿಸಿ ‘ತನ್ನ ಶ್ರೇಷ್ಠತೆಗೆ ತಕ್ಕ ಬಟ್ಟೆ ನಿಮ್ಮಲ್ಲಿದೆಯೇ?’ ಎಂದು ಕೇಳಿದ. ‘ಹೌದು, ಮಹಾರಾಜರೇ’ ಎಂದು ಆ ಬಟ್ಟೆ ವ್ಯಾಪಾರಿಗಳು ತಮ್ಮ ಪೆಟ್ಟಿಗೆಯಲ್ಲಿದ್ದ ಬಗೆ ಬಗೆಯ ಬಟ್ಟೆಗಳನ್ನು ಬಿಚ್ಚಿ ತೋರಿಸಿದರು. ಯಾವುದೂ ರಾಜನಿಗೆ ಇಷ್ಟವಾಗಲಿಲ್ಲ. ‘ಇದು ನನ್ನ ಸೌಂದರ್ಯ, ಶ್ರೇಷ್ಠತೆಗೆ ತಕ್ಕುದಾಗಿಲ್ಲ’ ಎಂದು ಒಂದೊಂದನ್ನೇ ತಿರಸ್ಕರಿಸುತ್ತಾ ಹೋದ. ವ್ಯಾಪಾರಿಗಳು ತಮ್ಮಲ್ಲಿರುವ ಅತಿ ದುಬಾರಿ, ಶ್ರೇಷ್ಠ ನೂಲುಗಳಿಂದ ತಯಾರಿಸಿದ ಬಟ್ಟೆಯನ್ನು ತೋರಿಸಿದರು. ‘ಇಲ್ಲ, ಇದೂ ನನ್ನ ಶ್ರೇಷ್ಠತೆಗೆ ತಕ್ಕುದಾಗಿಲ್ಲ....’ ಎಂದು ರಾಜ ಅದನ್ನೂ ತಿರಸ್ಕರಿಸಿಯೇ ಬಿಟ್ಟ....’’
‘‘....ಬಟ್ಟೆ ವ್ಯಾಪಾರಿಗಳಿಗೆ ಇದರಿಂದ ತೀವ್ರ ಅವಮಾನವಾಯಿತು. ಈ ರಾಜನಿಗೆ ಒಂದು ಪಾಠ ಕಲಿಸಿಯೇ ತೀರಬೇಕು ಎಂದು ಅವರು ನಿರ್ಧರಿಸಿದರು. ಈಗ ಅವರು ಒಂದು ಸುಂದರ ಬಣ್ಣ ಪೆಟ್ಟಿಗೆಯನ್ನು ರಾಜನ ಮುಂದಿಟ್ಟರು ‘ಮಹಾರಾಜ...ಈ ಪೆಟ್ಟಿಗೆಯಲ್ಲಿರುವ ವಿಶಿಷ್ಟ ಬಟ್ಟೆಯನ್ನು ಈ ಜಗತ್ತಿನ ಸರ್ವಶ್ರೇಷ್ಠ ರಾಜನಿಗೆ ಅರ್ಪಿಸಬೇಕು ಎಂದು ನಾವು ತೆಗೆದಿಟ್ಟುಕೊಂಡಿದ್ದೆವು. ಇದೀಗ ಆ ರಾಜ ನೀವೇ ಎನ್ನುವುದು ನಮಗೆ ಮನವರಿಕೆಯಾಯಿತು. ಆದುದರಿಂದ ನಿಮಗೇ ಅರ್ಪಿಸಬೇಕು ಎಂದಿದ್ದೇವೆ...ಆದರೆ ಇದೊಂದು ವಿಶಿಷ್ಟ ದೇವಲೋಕದ ಬಟ್ಟೆ...ಇದನ್ನು ಉಡುವವನಿಗೆ ಕೆಲವು ಪ್ರಮುಖ ಅರ್ಹತೆಯಿರಬೇಕು....’ ಎಂದರು. ರಾಜನೋ ಕುತೂಹಲಗೊಂಡ ‘ಕೊಡಿ ಕೊಡಿ. ನಾನೇ ಸರ್ವ ಅರ್ಹತೆಯುಳ್ಳ ರಾಜ. ಏನಿದರ ವೈಶಿಷ್ಟ?’ ಅತ್ಯಾತುರದಿಂದ ಕೇಳಿದ. ವ್ಯಾಪಾರಿಗಳು ನುಡಿದರು ‘ಸ್ವಾಮಿ...ಇದು ದೇವಲೋಕದ ಮಾಯದ ಬಟ್ಟೆ. ಈ ಬಟ್ಟೆಯನ್ನು ಬಂಗಾರದ ನೂಲುಗಳಿಂದ ನೇಯಲಾಗಿದೆ. ವಜ್ರದ ಹರಳುಗಳಿಂದ ಅಲಂಕರಿಸಲಾಗಿದೆ. ದೇವಲೋಕದ ವರ್ಣಮಯ ಬಣ್ಣಗಳು ಇದರಲ್ಲಿ ಕಂಗೊಳಿಸುತ್ತಿವೆ...ಆದರೆ ಈ ಬಟ್ಟೆಯ ಸರ್ವ ಗುಣಗಳು ಕಾಣಬೇಕಾದರೆ ನೋಡುವವರಿಗೂ ಅರ್ಹತೆಯಿರಬೇಕಾಗುತ್ತದೆ....’ ರಾಜ ಇನ್ನಷ್ಟು ಕುತೂಹಲಗೊಂಡ ‘ಏನದು ಅರ್ಹತೆ? ಹೇಳಿರಿ...‘ ಬಟ್ಟೆ ವ್ಯಾಪಾರಿಗಳು ಒಳಗೊಳಗೆ ನಗುತ್ತಾ ಹೇಳಿದರು ‘ಈ ಬಟ್ಟೆ ಯಾರ ಕಣ್ಣಿಗಾದರೂ ಕಾಣಬೇಕಾದರೆ ಅವನು ಸತ್ಯಸಂಧನಾಗಿರಬೇಕು. ದೇಶಭಕ್ತನಾಗಿರಬೇಕು. ಯಾವತ್ತೂ ರಾಜದ್ರೋಹಿಯಾಗಿರಬಾರದು. ಸದ್ಗುಣಿಯಾಗಿರಬೇಕು. ಅಂತಹ ಎಲ್ಲರಿಗೂ ಈ ಬಟ್ಟೆ ಕಾಣುತ್ತದೆ. ತಾವಂತೂ ಈ ಎಲ್ಲ ಗುಣಗಳನ್ನು ಹೊಂದಿರುವವರು. ಆದರೆ ನಿಮ್ಮ ಆಸ್ಥಾನದಲ್ಲಿರುವವರಿಗೆ ಈ ಗುಣಗಳು ಇವೆಯೇ ಎನ್ನುವುದು ಮುಖ್ಯವಾಗುತ್ತದೆ....’ ರಾಜ ಆಸ್ಥಾನಿಗರ ಕಡೆಗೆ ನೋಡಿದ. ಅವರೆಲ್ಲರೂ ವ್ಯಾಪಾರಿಗಳಿಗೆ ಒಕ್ಕೊರಲಲ್ಲಿ ಹೇಳಿದರು ‘ಆ ಬಟ್ಟೆಯನ್ನು ತೋರಿಸಿರಿ...’
‘‘....ವ್ಯಾಪಾರಿಗಳು ಈಗ ಆ ವರ್ಣಮಯ ಪೆಟ್ಟಿಗೆಯನ್ನು ತೆರೆದರು. ತೆರೆದಾಕ್ಷಣ ಅವರು ಒಮ್ಮೆಲೆ ಕಣ್ಣು ಮುಚ್ಚಿಕೊಂಡು ಹೇಳಿದರು ‘ಕ್ಷಮಿಸಿ ದೊರೆಗಳೇ...ಇದರ ಬೆಳಕಿಗೆ ಕಣ್ಣು ಕೋರೈಸಿದಂತಾಗುತ್ತದೆ. ಜಗತ್ತಿನ ಅಪರೂಪದ ವಜ್ರಗಳ ಬೆಳಕು ಅದು....’ ಎಂದು ಮೆಲ್ಲನೆ ಪೆಟ್ಟಿಗೆಯಿಂದ ಬಟ್ಟೆಯನ್ನು ಹೊರ ತೆಗೆದಂತೆ ನಟಿಸಿದರು. ಇಬ್ಬರು ವ್ಯಾಪಾರಿಗಳು ಕೈಯಲ್ಲಿ ಬಟ್ಟೆಗಳ ಎರಡು ತುದಿಗಳನ್ನು ಹಿಡಿದಂತೆ ನಟಿಸಿದರೆ, ಉಳಿದ ವ್ಯಾಪಾರಿಗಳು ಅದರ ಅಂಚನ್ನು, ಅದರ ಬಣ್ಣವನ್ನು, ಅದರ ಗುಣಮಟ್ಟವನ್ನು ವರ್ಣಿಸತೊಡಗಿದರು....ರಾಜನಿಗೆ ಅಲ್ಲೇನೂ ಕಾಣಿಸಲಿಲ್ಲ. ಆದರೆ ಆ ಬಟ್ಟೆ ಸತ್ಯಸಂಧರಿಗೆ, ದೇಶಭಕ್ತರಿಗೆ, ಗುಣವಂತರಿಗೆ, ರಾಜಭಕ್ತರಿಗೆ ಮಾತ್ರ ಕಾಣುತ್ತದೆ ಎನ್ನುವ ಅಂಶ ಅವನಿಗೆ ನೆನಪಾಯಿತು. ತಕ್ಷಣ ಅವನು ಆಸ್ಥಾನದ ತನ್ನ ಮಂತ್ರಿಯೆಡೆಗೆ ನೋಡಿದ. ಮಂತ್ರಿಗೆ ಅಲ್ಲೇನೂ ಕಾಣುತ್ತಿರಲಿಲ್ಲ. ಕಾಣುತ್ತಿಲ್ಲ ಎಂದರೆ ರಾಜದ್ರೋಹಿ, ಅಸತ್ಯವಂತನಾಗುತ್ತಾನೆ....ತಕ್ಷಣ ಮಂತ್ರಿ ಬಟ್ಟೆಯನ್ನು ನೋಡಿದಂತೆ ನಟಿಸಿ ರೋಮಾಂಚನಗೊಂಡ ‘‘ಮಹಾರಾಜರೇ...ನಾನು ಇಂತಹ ಬಟ್ಟೆಯನ್ನು ನನ್ನ ಜೀವಮಾನದಲ್ಲಿ ನೋಡಿಲ್ಲ....ಎಂತಹ ಅತ್ಯದ್ಭುತ ಗುಣಗಳುಳ್ಳ ಬಟ್ಟೆಯಿದು...ಆಹಾ ...ಓಹೋ...ಅದರ ಬಣ್ಣವೋ...ಅದರ ಗುಣಮಟ್ಟವೋ...ಅದರ ಬಲಭಾಗದಲ್ಲಿರುವ ನೀಲ ವಜ್ರವಂತೂ ಅಪರೂಪವಾದುದು....’ ಮಂತ್ರಿ ಹೊಗಳಿ ಮುಗಿಸುವಷ್ಟರಲ್ಲಿ ಸೇನಾಪತಿ ಬಾಯಿ ತೆರೆದ ‘ಮಂತ್ರಿಗಳೇ ನೀವು ಅದರ ಅಂಚಿನಲ್ಲಿರುವ ಬಂಗಾರದ ಬಣ್ಣದ ನವಿಲಿನ ಚಿತ್ರದ ಬಗ್ಗೆ ಏನೂ ಹೇಳಲಿಲ್ಲ....ಆ ಚಿತ್ರವನ್ನು ದೇವಲೋಕದ ಕಲಾವಿದನೇ ಹೆಣೆದಿರಬೇಕು....’ ಅಷ್ಟರಲ್ಲಿ ಆಸ್ಥಾನ ಪಂಡಿತ ಬಾಯಿ ತೆರೆದ ‘ಈ ಬಟ್ಟೆಗೆ ರೇಶ್ಮೆಯನ್ನು ಬಳಸಿದ್ದಾರಾದರೂ ಇದು ಈ ಲೋಕದ ರೇಶ್ಮೆಯಂತಿಲ್ಲ...ಹಾಗೆಯೇ...ಮಧ್ಯದಲ್ಲಿರುವ ಹೂವುಗಳೂ ದೇವಲೋಕದ ಹೂವುಗಳಂತಿವೆ...’ ಈಗ ವ್ಯಾಪಾರಿಗಳೇ ಅಚ್ಚರಿ ಪಡುವಂತೆ ಆಸ್ಥಾನದಲ್ಲಿರುವ ಒಬ್ಬೊಬ್ಬರೇ ಬಟ್ಟೆಯ ಒಂದೊಂದು ಹೆಗ್ಗಳಿಕೆಯನ್ನು ರಾಜನಿಗೆ ವರ್ಣಿಸತೊಡಗಿದರು. ರಾಜನೂ ಆ ಬಟ್ಟೆಯ ಸೌಂದರ್ಯವನ್ನು ಆಸ್ವಾದಿಸತೊಡಗಿದ. ವ್ಯಾಪಾರಿಗಳು ಇದೇ ಸುಸಮಯ ಎಂದು ‘ರಾಜರೇ...ನಾವೇ ಈ ಬಟ್ಟೆಯನ್ನು ವಿಶಿಷ್ಟ ರೀತಿಯಲ್ಲಿ ನಿಮಗೆ ಉಡಿಸುತ್ತೇವೆ....’ ಎಂದರು. ಅಂತೆಯೇ ರಾಜ ಒಳಹೋಗಿ ತನ್ನ ಬಟ್ಟೆಯನ್ನೆಲ್ಲ ಕಳಚಿದ. ವ್ಯಾಪಾರಿಗಳು ಈ ಮಾಯದ ಬಟ್ಟೆಯನ್ನು ರಾಜನಿಗೆ ಉಡಿಸಿ, ಅವನನ್ನು ಆಸ್ಥಾನಕ್ಕೆ ಕರೆದುಕೊಂಡು ಬಂದರು. ಬರುವಾಗ ಅವರು ರಾಜನ ಸೌಂದರ್ಯ ಈ ಬಟ್ಟೆಯಿಂದ ಹೇಗೆ ಹೆಚ್ಚಿದೆ ಎನ್ನುವುದನ್ನು ವರ್ಣಿಸುತ್ತಾ ಬರುತ್ತಿದ್ದರು. ಆಸ್ಥಾನಿಗರೆಲ್ಲ ನೋಡುತ್ತಾರೆ....ತಮ್ಮ ಮುಂದೆ ರಾಜ ಬೆತ್ತಲೆಯಾಗಿ ನಿಂತಿದ್ದಾನೆ. ಆದರೆ ಯಾರೂ ಅದನ್ನು ಹೇಳುವಂತಿಲ್ಲ. ಒಬ್ಬೊಬ್ಬರಾಗಿ ಎಲ್ಲರೂ ರಾಜನ ಸೌಂದರ್ಯವನ್ನು ಹೊಗಳತೊಡಗಿದರು. ಬಟ್ಟೆಯ ಮಹಿಮೆಯನ್ನು ವರ್ಣಿಸತೊಡಗಿದರು. ವ್ಯಾಪಾರಿಗಳು ಅಪಾರ ಹಣವನ್ನು, ಚಿನ್ನದ ವರಹಗಳನ್ನು ಹಿಡಿದುಕೊಂಡು ತಮ್ಮ ಉಳಿದ ಅಸಲಿ ಬಟ್ಟೆಗಳೊಂದಿಗೆ ಅಲ್ಲಿಂದ ಪರಾರಿಯಾದರು....’’
‘‘...ಇದೇ ಸಂದರ್ಭದಲ್ಲಿ ಯಾರೋ ಸಲಹೆ ನೀಡಿದರು ‘ರಾಜರು ಈ ಬಟ್ಟೆಯ ಜೊತೆಗೆ ರಾಜಮಾರ್ಗದಲ್ಲಿ ಮೆರವಣಿಗೆ ಹೋಗಿ ತಮ್ಮ ಪ್ರಜೆಗಳನ್ನೂ ಧನ್ಯರಾಗಿಸಬೇಕು...’ ಎಲ್ಲರೂ ಅದೇ ಸರಿಯೆಂದರು. ತಕ್ಷಣ ರಾಜನ ಬಹತ್ ಮೆರವಣಿಗೆ ನಡೆಯಿತು. ಜನರೆಲ್ಲ ದೇವಲೋಕದ ಮಾಯದ ಬಟ್ಟೆ ಧರಿಸಿರುವ ರಾಜನ ಸ್ವಾಗತಕ್ಕೆ ಅಣಿಯಾಗಿ ನಿಂತರು. ಅವರೆಲ್ಲರಿಗೂ ಮೊದಲೇ ಹೇಳಲಾಗಿತ್ತು ‘ಬಟ್ಟೆ ಸತ್ಯಸಂಧರಿಗೆ, ಸದ್ಗುಣಿಗಳಿಗೆ, ದೇಶಭಕ್ತರಿಗೆ, ರಾಜಭಕ್ತರಿಗೆ ಮಾತ್ರ ಕಾಣುತ್ತದೆ...’. ರಾಜ ಆಗಮಿಸಿದ. ನೋಡಿದರೆ ‘ಬೆತ್ತಲೆ ರಾಜ!’ ಆದರೆ ಅವರೆಲ್ಲರೂ ‘ತಮಗೆ ಮಾತ್ರ ಬಟ್ಟೆ ಕಾಣಿಸುತ್ತಿಲ್ಲ, ಉಳಿದವರಿಗೆ ಕಾಣಿಸುತ್ತಿರಬೇಕು...’ ಎಂದು ಭಾವಿಸಿ ರಾಜನ ಬಟ್ಟೆಯನ್ನು ಒಬ್ಬೊಬ್ಬರಾಗಿ ಹೊಗಳತೊಡಗಿದರು. ಆದರೆ ಮನದೊಳಗೆ ರಾಜನನ್ನು ನೋಡಿ ನಗುತ್ತಿದ್ದರು, ಅಸಹ್ಯ ಪಡುತ್ತಿದ್ದರು. ಎಲ್ಲರೂ ರಾಜನ ಬಟ್ಟೆಗೆ ಭೋ ಪರಾಕ್ ಹೇಳುವವರೆ. ಹೀಗಿರುವಾಗ, ಆ ಜನರ ನಡುವೆ ಒಂದು ಪುಟ್ಟ ಮಗು ರಾಜನನ್ನು ನೋಡಿ ಜೋರಾಗಿ ಕೂಗಿ ಹೇಳಿತು ‘‘ಹೇ...ರಾಜ ಬಟ್ಟೆಯೇ ಹಾಕಿಲ್ಲ....’’. ತಕ್ಷಣ ಸೈನಿಕರು ಆ ‘ರಾಜದ್ರೋಹಿ, ದೇಶದ್ರೋಹಿ, ಸುಳ್ಳುಬುರುಕ’ ಮಗುವನ್ನು ಬಂಧಿಸಿ ಜೈಲಿಗೆ ತಳ್ಳಿದರು. ಉಳಿದಂತೆ ರಾಜನೀಗ ಅದೇ ಬಟ್ಟೆಯಲ್ಲಿ ತಿರುಗಾಡುತ್ತಿದ್ದಾನೆ....ಜನರು ರಾಜನನ್ನೂ ಅವನು ಧರಿಸಿದ ಬಟ್ಟೆಯನ್ನು ಹೊಗಳುತ್ತಲೇ ಇದ್ದಾರೆ....’’
ಹೀಗೆ ತನ್ನ ಕತೆ ಮುಗಿಸಿದ ತರಕಾರಿ ಅಂಗಡಿಯವ ಹೇಳಿದ ‘‘ನಿನ್ನೆ ಸಂಭ್ರಮ ಆಚರಿಸಿದ ಜನರಿಗೂ, ಆ ರಾಜನ ಪ್ರಜೆಗಳಿಗೂ ಯಾವುದಾದರೂ ವ್ಯತ್ಯಾಸವಿದೆಯೆ?....ಆದರೆ ಆತ ಬಟ್ಟೆಯನ್ನೇ ಧರಿಸಿಲ್ಲ ಎನ್ನುವುದು ಒಂದಲ್ಲ ಒಂದು ದಿನ ಗೊತ್ತಾಗದೇ ಇರುತ್ತದೆಯೆ?’’ ಎಂದು ನನ್ನನ್ನು ಪ್ರಶ್ನಿಸಿದ.
ನಾನು ಉತ್ತರಿಸಲಿಲ್ಲ. ಅರ್ಧ ಕೆಜಿ ಟೊಮೆಟೋ ಖರೀದಿಸಿ, ಅಳಿದುಳಿದ ಚಿಲ್ಲರೆಯನ್ನು ಆತನಿಗೆ ಕೊಟ್ಟು ಮನೆಯ ದಾರಿ ಹಿಡಿದೆ.

Monday, November 28, 2016

ಚಿಂದಿ ನೋಟುಗಳು: ಅಮ್ಮನ ಕತೆ....!

ನೋಟು ನಿಷೇಧದ ಬಳಿಕ ಪ್ರತಿ ದಿನ ಈ ರಿಕ್ಷಾ ಚಾಲಕರ ಗೋಳು ಕೇಳಿ ನಿಜಕ್ಕೂ ಸುಸ್ತಾಗಿ ಹೋಗಿದ್ದೆ. ಆದುದರಿಂದ ಈ ಬಾರಿ ಸಿಟಿ ಬಸ್‌ನಲ್ಲೇ ಕಚೇರಿಗೆ ಹೋಗಲು ನಿರ್ಧರಿಸಿದೆ. ನನ್ನ ಕಚೇರಿಯ ಕಡೆ ಹೋಗುವ ಬಸ್ ಸಿಕ್ಕಿದ್ದೇ ಉಸ್ಸಪ್ಪಾ ಎಂದು ಹತ್ತಿ, ಕಿಟಕಿ ಪಕ್ಕದ ಸೀಟ್ ಹಿಡಿದೆ. ರಿಕ್ಷಾ ಬಾಡಿಗೆಯೂ ಉಳಿಯಿತು. ಈ ರಿಕ್ಷಾ ಚಾಲಕರ ಗೋಳೂ ತಪ್ಪಿತು ಎಂದು ನಿಟ್ಟುಸಿರಿಡುವಷ್ಟರಲ್ಲಿ, ನನ್ನ ಪಕ್ಕದಲ್ಲೇ ಒಬ್ಬ ಬಂದು ಕುಳಿತ. ಕುಳಿತವನು ಸುಮ್ಮನೇ ಕೂತನಾ? ಅದೂ ಇಲ್ಲ. ‘‘ಸಾರ್...ಎರಡು ಸಾವಿರ ರೂಪಾಯಿಯ ಚಿಲ್ಲರೆ ಇದೆಯಾ?’’ ಎಂದು ಕೇಳಿದ. ‘‘ಇಲ್ಲ ಕಣ್ರೀ...ನಾನೇ ಚಿಲ್ಲರೆ ಇಲ್ಲದೆ ಒದ್ದಾಡುತ್ತಿದ್ದೇನೆ....’’ ಎಂದೆ. ಅಷ್ಟೇ...ಅವನು ತನ್ನ ಗೋಳನ್ನು ಹೇಳ ತೊಡಗಿದ. ‘‘ಹೀಗಾದರೆ ನಮ್ಮಂಥವರು ಬದುಕುವುದು ಹೇಗೆ?’’ ಎಂದು ಕೇಳಿದ.
ನಾನು ಎಂದಿನಂತೆ ಮೋದಿಯ ಪರವಾಗಿ ಮಾತನಾಡ ತೊಡಗಿದೆ ‘‘ನೋಡಿ, ಒಂದು ದೊಡ್ಡ ರೋಗಕ್ಕೆ ಮದ್ದು ಕೊಡುವಾಗ ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಆಗತ್ತೆ...ಸ್ವಲ್ಪ ಸಹಿಸಬೇಕಾಗುತ್ತದೆ...’’ ಸಮಾಧಾನಿಸಿದೆ.
‘‘ನಿಮಗೆ ನನ್ನ ತಾಯಿಯ ಕತೆ ಹೇಳಲಾ?’’ ಅವನು ಒಮ್ಮೆಲೆ ನನ್ನ ಕಡೆ ತಿರುಗಿ ಕೇಳಿದ.
ಬೇಡಾ ಎಂದರೆ ಅವನಿಗೆ ಬೇಜಾರು. ‘‘ಸರಿ ಹೇಳಿ...’’ ಎಂದೆ. ಬಸ್ಸು ಸಾಗುತ್ತಿತ್ತು. ಅವನು ತನ್ನ ತಾಯಿಯ ಕತೆ ಹೇಳ ತೊಡಗಿದ.
‘‘ಅರವತ್ತು ವರ್ಷ ಕಳೆದಿರುವ ನನ್ನ ತಾಯಿ ಆಗಾಗ ಸಣ್ಣ ಪುಟ್ಟ ಬಿಪಿ, ಶುಗರ್ ಕಾಯಿಲೆಯಿಂದ ನರಳುತ್ತಿದ್ದರು. ಆದರೂ ಆರೋಗ್ಯವಾಗಿಯೇ ಇದ್ದರು. ಇದ್ದಕ್ಕಿದ್ದಂತೆಯೇ ಆಕೆಗೆ ಹೊಟ್ಟೆ ನೋವು ಆರಂಭವಾಯಿತು. ಜೊತೆಗೆ ಹಸಿವಿಲ್ಲ. ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ಗೊತ್ತಾಯಿತು, ಆಕೆಗೆ ಕ್ಯಾನ್ಸರ್ ಎನ್ನುವುದು. ಡಾಕ್ಟರ್ ನೇರವಾಗಿಯೇ ಹೇಳಿದರು ‘‘ಘಟ್ಟ ಅಪಾಯವನ್ನು ತಲುಪಿದೆ. ನಿಮ್ಮ ತಾಯಿ ಹೆಚ್ಚೆಂದರೆ ಇನ್ನು ಮೂರು-ನಾಲ್ಕು ವರ್ಷ ಬದುಕಬಹುದು’’. ನನಗೆ ತಾಯಿಯ ಜೊತೆಗೆ ಇನ್ನಷ್ಟು ವರ್ಷಗಳ ಕಾಲ ಬದುಕುವ ಆಸೆ. ತಾಯಿಯನ್ನು ಉಳಿಸಲೇಬೇಕು ಎಂದು ನಾನು ನಗರದ ಅತಿ ದೊಡ್ಡ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದೆ. ಬೃಹತ್ ಆಸ್ಪತ್ರೆ ಅದು. ಆ ಆಸ್ಪತ್ರೆಯ ಗಾತ್ರ ನೋಡಿಯೇ ನನ್ನ ತಾಯಿ ಬದುಕುತ್ತಾಳೆ ಎಂಬ ಭರವಸೆ ಮೂಡಿತು ನನಗೆ...’’
‘‘....ಡಾಕ್ಟರ್ ಪರೀಕ್ಷಿಸಿದ್ದೇ ಘೋಷಿಸಿದರು ‘‘ಕೀಮೋ ಥೆರಪಿ’’ ಆಗಬೇಕು. ನಾನು ಸರಿ ಎಂದೆ. ಡಾಕ್ಟರ್ ಕೀಮೋ ಥೆರಪಿ ಆರಂಭಿಸಿದರು. ಆದರೆ ನನ್ನ ದುರದಷ್ಟ. ಒಂದೆರಡು ದಿನ ಚೆನ್ನಾಗಿಯೇ ಇದ್ದ ತಾಯಿ ನಾಲ್ಕನೆ ದಿನಕ್ಕೆ ಸಂಪೂರ್ಣ ಆರೋಗ್ಯ ಕಳೆದುಕೊಂಡರು. ಕಾಲು ಬಾತತೊಡಗಿತು. ಅರೆಪ್ರಜ್ಞಾವಸ್ಥೆ ತಲುಪಿಸಿದರು. ಪ್ರತಿ ದಿನ ನನ್ನ ತಾಯಿಯನ್ನು ನೋಡಲು ಬರುತ್ತಿದ್ದ ಡಾಕ್ಟರ್ ನಾಲ್ಕನೇ ದಿನ ಒಮ್ಮೆಲೆ ಮುಳುಗಿದರು. ನರ್ಸ್‌ನ ಬಳಿ ವಿಚಾರಿಸಿದರೂ ಡಾಕ್ಟರ್ ರೋಗಿಯನ್ನು ನೋಡಲು ಬರುತ್ತಿಲ್ಲ. ನಾನೇ ಕಿಮೋಥೆರಪಿ ಡಾಕ್ಟರನ್ನು ಹುಡುಕಿಕೊಂಡು ಹೋದೆ. ಅವರು ನನ್ನನ್ನು ಪ್ರಶ್ನಾರ್ಹವಾಗಿ ನೋಡಿದರು. ನಾನು ತಾಯಿಯ ಸ್ಥಿತಿ ವಿವರಿಸಿದೆ. ಡಾಕ್ಟರ್ ನಿರ್ಲಿಪ್ತವಾಗಿ ಹೇಳಿದರು ‘‘ನೋಡಿ, ನಿಮ್ಮ ತಾಯಿಯ ಎರಡೂ ಕಿಡ್ನಿ ಹೋಗಿದೆ. ಮೊದಲು ಅದಕ್ಕೊಂದು ವ್ಯವಸ್ಥೆ ಆಗಬೇಕು. ಈ ವಿಭಾಗದಲ್ಲಿ ಕಿಡ್ನಿ ಡಾಕ್ಟರ್ ಇದ್ದಾರೆ. ಅವರಲ್ಲಿ ಮೊದಲು ಮಾತನಾಡಿ....’’
‘‘....ನಾನು ಕಿಡ್ನಿ ಡಾಕ್ಟರ ಬಳಿಗೆ ಓಡಿದೆ. ಅವರು ಹೇಳಿದರು ‘ನೋಡಿ, ನಿಮ್ಮ ತಾಯಿಗೆ ವಯಸ್ಸಾಗಿತ್ತು. ಜೊತೆಗೆ ಬೇರೆ ಕೆಲವು ರೋಗಗಳಿದ್ದವು. ಕಿಮೋಥೆರಪಿಯನ್ನು ತಾಳಿಕೊಳ್ಳುವ ಶಕ್ತಿ ಅವಳಿಗಿರಲಿಲ್ಲ. ಆದುದರಿಂದಲೇ ಅವಳ ಎರಡೂ ಕಿಡ್ನಿ ನಾಶವಾಗಿದೆ. ಈಗ ಏನೂ ಮಾಡುವ ಹಾಗಿಲ್ಲ...ಡಯಾಲಿಸಿಸ್‌ನ್ನು ತಾಳಿಕೊಳ್ಳುವ ಶಕ್ತಿ ನಿಮ್ಮ ತಾಯಿಯ ದೇಹಕ್ಕಿಲ್ಲ.... ನೀವು ಅವಸರದಿಂದ ಕೀಮೋಥೆರಪಿಯನ್ನು ಮಾಡಿಸಬಾರದಿತ್ತು...’. ನಾನು ಮತ್ತೆ ಕಿಮೋಥೆರಪಿ ಡಾಕ್ಟರಲ್ಲಿ ಹೋಗಿ ಹೇಳಿದೆ. ಅವರು ಸೆಡವಿನಿಂದ ಹೇಳಿದರು ‘‘ನೋಡ್ರಿ...ಕ್ಯಾನ್ಸರ್ ರೋಗಕ್ಕೆ ಬೇಕಾದ ಔಷಧಿಯನ್ನು ನಾವು ಕೊಟ್ಟಿದ್ದೇವೆ. ಅವರ ಕಿಡ್ನಿ ಅದನ್ನು ತಾಳಿಕೊಳ್ಳಲಿಲ್ಲ. ಅದಕ್ಕೆ ನಾವೇನೂ ಮಾಡುವ ಹಾಗಿಲ್ಲ....’’
‘‘....ಆರನೇ ದಿನ ನನ್ನ ತಾಯಿ ಆಸ್ಪತ್ರೆಯಲ್ಲೇ ತೀರಿ ಹೋದರು. ಆಸ್ಪತ್ರೆಯ ಬಿಲ್ ಎರಡೂವರೆ ಲಕ್ಷ ರೂ. ಆಗಿತ್ತು. ನನ್ನ ಮನೆಯಿರುವ ಪುಟ್ಟ ಜಮೀನನ್ನು ಮಾರಿ, ಆಸ್ಪತ್ರೆಯ ಬಿಲ್ ಕಟ್ಟಿ ತಾಯಿಯ ಹೆಣವನ್ನು ಬಿಡಿಸಿಕೊಂಡು ಬಂದೆ....’’ ಎನ್ನುತ್ತಾ ಅವನು ಮೌನವಾದ.
ನಾನು ಅವನ ಮುಖ ನೋಡಿದರೆ ಅವನ ಕಣ್ಣಂಚಲ್ಲಿ ಹನಿಯಿತ್ತು. ಅವನ ಕೈಯನ್ನು ಹಿಸುಕಿ ಸಮಾಧಾನಿಸಿದೆ.
ಇದೀಗ ಅವನು ಬಾಯಿ ತೆರೆದ ‘‘ಮೋದಿ ಮಾಡಿರುವ ಈ ಕೀಮೋಥೆರಪಿಯಲ್ಲಿ ನನ್ನ ಈ ತಾಯಿಯ ಕಿಡ್ನಿ ನಾಶವಾಗದಿದ್ದರೆ ಅಷ್ಟು ಸಾಕಾಗಿದೆ. ಯಾಕೆಂದರೆ, ತಾಯಿಯ ಹೆಣವನ್ನು ಬಿಡಿಸಿಕೊಳ್ಳಲು ನನ್ನಲ್ಲಿ ಮಾರುವುದಕ್ಕೀಗ ಜಮೀನು ಕೂಡ ಇಲ್ಲ....’’
ಅಷ್ಟರಲ್ಲಿ ಕಂಡಕ್ಟರ್ ನಾನು ಇಳಿಯುವ ಸ್ಟಾಪ್‌ನ ಹೆಸರು ಕೂಗುತ್ತಿರುವುದು ಕೇಳಿಸಿತು. ಭಾರವಾದ ಮನಸ್ಸಿನಿಂದ ಎದ್ದು ನಿಂತೆ.

Sunday, November 27, 2016

ನೋಟಿನ ಚಿಂದಿ ಕತೆಗಳು

1
ರೂಪಾಯಿ ಬರ್ತಾ ಇಲ್ಲ
ಇವತ್ತು ಎಟಿಎಂ ಕ್ಯೂನಲ್ಲಿ ಒಂದು ತಮಾಷೆಯಾಯಿತು
ಒಬ್ಬ ಎಟಿಎಂ ಒಳಗೆ ಹೋಗಿ ಹತ್ತು ನಿಮಿಷದ ಬಳಿಕ ಹೊರಬಂದು ಮುಖ ಬಾಡಿಸಿ ಹೇಳಿದ "ಇಲ್ಲಾರಿ, ಎರಡು ಸಾವಿರ ರೂಪಾಯಿ ಬರ್ತಾ ಇಲ್ಲ"
ನೋಟು ಮುಗಿಯಿತೇನೋ ಎಂದು ನಾನು ಬೆಚ್ಚಿ ಬಿದ್ದೆ. 
ಅಷ್ಟರಲ್ಲಿ ಒಬ್ಬ ಒಳ ಹೋಗಿ ಎರಡು ಸಾವಿರ ನೋಟಿನೊಂದಿಗೆ ಹೊರ ಬಂದ 
"ಅರೆ ನೋಟು ಬರ್ತಾ ಇದೆಯಲ್ಲ?" ನಾನು ಮತ್ತೆ ಆ ವ್ಯಕ್ತಿಯ ಬಳಿ ಕೇಳಿದೆ. 
"ಇಲ್ಲ, ನಾನು ಎರಡೆರಡು ಬಾರಿ ಪ್ರಯತ್ನಿಸಿದೆ" ಹಣೆ ಒರೆಸಿ ಕೊಳ್ಳುತ್ತಾ ಹೇಳಿದ. 
ನಾನು ಅನುಮಾನದಿಂದ ಕೇಳಿದೆ "ನಿಮ್ಮ ಅಕೌಂಟ್ ನಲ್ಲಿ ಹಣ ಇದೆಯೇ ?"
"ನನ್ನ ಎಕೌಂಟ್ ನಲ್ಲಿ ಹಣ ಇಲ್ಲ. ಆದರೆ ಮೋದಿ ಹೇಳಿದ್ದಾರಂತಲ್ಲ, ನವೆಂಬರ್ 10ರಿಂದ ಎಟಿಎಂ ನಲ್ಲಿ 2೦೦೦ ರೂಪಾಯಿ ಬರುತ್ತದೆ ಅಂತ. ಮೋದಿಯವರ ಘೋಷಣೆ ಕೇಳಿ ನಾನು ನನ್ನ 2೦೦೦ ರೂಪಾಯಿ ತೆಗೆದು ಕೊಳ್ಳಲು ಬಂದದ್ದು... ಆದರೆ ನನ್ನ ಎಕೌಂಟಿಗೆ ಎರಡು ಸಾವಿರ ಬೀಳಲೇ ಇಲ್ಲ ... "
ಪಾಪ ಅನ್ನಿಸಿತು. ಸಮಾಧಾನಿಸಿದೆ "ನೋಡಿ ಹಾಗೇನಿಲ್ಲ, ನೀವು ಬ್ಯಾಂಕಿಗೆ ನಾಲ್ಕು ಸಾವಿರ ಹಾಕಿದರೆ ಎರಡು ಸಾವಿರ ರೂಪಾಯಿ ತೆಗೆದು ಕೊಳ್ಳ ಬಹುದು, ಅಷ್ಟೇ ... "
ಅವನು ಅರ್ಥವಾಗದೆ ಏನೋ ಗೊಣಗುತ್ತಾ ಹೋದ. 
ಪಾಪ, ಯಾರೋ ಮೋದಿ ಭಕ್ತ ಈತನನ್ನು ಏಮಾರಿಸಿರಬೇಕು.

2
ಗಂಡನ ಹೊಸ ಬಟ್ಟೆ
ಇವತ್ತು ಕಚೇರಿಗೆ ಹೊರಟಾಗ ಇನ್ನೊಬ್ಬ ರಿಕ್ಷಾ ಚಾಲಕರೊಬ್ಬರ ಜೊತೆ ಮಾತುಕತೆ. 
ಉದ್ದಕ್ಕೂ ನೋಟು ನಿಷೇಧದಿಂದ ತನಗಾಗಿರುವ ಸಮಸ್ಯೆ ಹೇಳುತ್ತಿದ್ದರು. 
ಎಲ್ಲ ಕೇಳಿಸಿಕೊಂಡ ನಾನು ಅವರಿಗೆ ಭರವಸೆ ನೀಡಿದೆ "ತಲೆ ಬಿಸಿ ಮಾಡಬೇಡಿ. ಇನ್ನೊಂದು ಎರಡು ವರ್ಷದಲ್ಲಿ ದೇಶಕ್ಕೆ ಭಾರಿ ಒಳ್ಳೆಯದಾಗುತ್ತೆ. ಸ್ವಲ್ಪ ಸಹನೆ ತೆಗೆದು ಕೊಳ್ಳಿ "
ರಿಕ್ಷಾ ಚಾಲಕ ಮುಖಕ್ಕೆ ಹೊಡೆದಂತೆ ಹೇಳಿದರು "ಇದು, ಗಂಡ ಹೊಸ ಬಟ್ಟೆ ತರ್ತಾನೆ ಎಂದು ನಂಬಿ, ಹೆಂಡತಿ ಇರುವ ಹಳೆ ಬಟ್ಟೆಗೆ ಬೆಂಕಿ ಕೊಟ್ಟು ಬೆತ್ತಲೆಯಾಗಿ ಕಾದು ಕುಳಿತ ಕತೆಯಾಯಿತು"
ಮತ್ತೆ ಅವನ ಮುಖ ನೋಡುವ ಧೈರ್ಯ ನನಗೆ ಬರಲಿಲ್ಲ.

3
ಕೋತಿ ಮತ್ತು ಅದರ ಮುದ್ದಿನ ಮರಿ
ನಿನ್ನೆ ಆಟೋ ರಿಕ್ಷಾ ಒಂದರಲ್ಲಿ ಕಚೇರಿ ಕಡೆ ಸಾಗುತ್ತಿದ್ದಾಗ ಚಾಲಕ ನೋಟು ನಿಷೇಧದಿಂದಾದ ಸಮಸ್ಯೆಯನ್ನು ತೋಡಿ ಕೊಳ್ಳುತ್ತಿದ್ದರು. ಮಾತು ನೋಟು ನಿಷೇಧಕ್ಕಾಗಿ ಮೋದಿಯನ್ನು ಬೆಂಬಲಿಸುತ್ತಿರುವ ಭಕ್ತರ ಕಡೆ ಮಾತು ತಿರುಗಿತು. 
"ಮೋದಿಯ ಅಭಿಮಾನಿಗಳು ನೋಟು ನಿಷೇಧವನ್ನು ಉತ್ತಮ ಕೆಲಸ ಎನ್ನುತ್ತಿದ್ದಾರೆ. ಮೋದಿಯನ್ನು ತಲೆ ಮೇಲೆ ಹೊತ್ತು ತಿರುಗುತ್ತಿದ್ದಾರೆ. ಹಾಗಾದರೆ ನೋಟಿನ ಬಿಸಿ ಅವರಿಗೆ ತಾಗಿಲ್ಲವೇ ? ತಾಗಿದ್ದಿದ್ದರೆ ಈ ವರ್ಗ ಮೋದಿಯನ್ನು ಹೇಗೆ ಹೊತ್ತು ಮೆರೆಯುತ್ತದೆ ?" ರಿಕ್ಷಾ ಚಾಲಕನಲ್ಲಿ ನಾನು ಕೇಳಿದೆ. 
ಆಟೋ ಚಾಲಕ ನಗುತ್ತಾ "ಸಾರ್, ನಾನೊಂದು ಕತೆ ಹೇಳ್ತೇನೆ, ಕೇಳ್ತೀರಾ?" ಎಂದರು. 
ನಾನೂ ಕುತೂಹಲದಿಂದ "ಹೇಳಿ ಹೇಳಿ" ಎಂದೆ. ಆಟೋ ಮುಂದೆ ಸಾಗುತ್ತಿತ್ತು. 
"ಸರ್, ಒಂದು ಖಾಲಿ ಸ್ವಿಮ್ಮಿಂಗ್ ಟ್ಯಾಂಕ್ ನಲ್ಲಿ ಒಂದು ಕೋತಿ ಮತ್ತು ಅದರ ಮುದ್ದಿನ ಮರಿ ಆಡುತ್ತಿತ್ತು. ಅಷ್ಟರಲ್ಲಿ ಸ್ವಿಮ್ಮಿಂಗ್ ಟ್ಯಾಂಕ್ ಗೆ ನೀರು ತುಂಬಿಸ ತೊಡಗಿದರು. ಮೊದಲು ಕೋತಿ ತನ್ನ ಮರಿಯ ಜೊತೆ ಆ ನೀರಲ್ಲಿ ಆಡ ತೊಡಗಿತು. ನೀರಿನ ಮಟ್ಟ ಏರುತ್ತಿದ್ದ ಹಾಗೆ ಕೋತಿ ತನ್ನ ಮರಿಯನ್ನು ಎತ್ತಿ ಸೊಂಟದಲ್ಲಿ ಇಟ್ಟುಕೊಂಡಿತು. ನೀರು ಮತ್ತೆ ಏರತೊಡಗಿತು. ಈಗ ಕೋತಿ ತನ್ನ ಮರಿಯನ್ನು ಹೆಗಲ ಮೇಲೆ ಇಟ್ಟು ರಕ್ಷಿಸಿತು. ನೀರಿನ ಮಟ್ಟ ಮತ್ತೆ ಏರಿತು. ನೀರು ಎದೆಯ ಮಟ್ಟಕ್ಕೆ ಬಂತು. ಈಗ ಕೋತಿ ತನ್ನ ಮರಿಯನ್ನು ತಲೆಯ ಮೇಲೆ ಇಟ್ಟಿತು. ನೀರು ಇನ್ನೂ ಏರ ತೊಡಗಿತು. ಕುತ್ತಿಗೆಗೆ ಬಂತು. ಕೋತಿ ತುದಿಗಾಲಲ್ಲಿ ನಿಂತಿತು. ಈಗ ನೀರು ಕೋತಿಯ ಮೂಗಿನ ಮಟ್ಟಕ್ಕೆ ಬಂತು.... " ಎಂದವನೇ ಚಾಲಕ ನನ್ನ ಮುಖ ನೋಡಿದರು. 
"ಮತ್ತೇನಾಯಿತು ಹೇಳಿ?" ಕುತೂಹಲದಿಂದ ಕೇಳಿದೆ. 
"ಈಗ ಕೋತಿ ತನ್ನ ಮರಿಯನ್ನು ಕಾಲ ಕೆಳಗೆ ತಳ್ಳಿ, ಅದರ ಮೇಲೆ ನಿಂತು, ಟ್ಯಾಂಕ್ ನಿಂದ ಹೊರಗೆ ಹಾರಿತು. ಸರ್, ಸದ್ಯ ನೀರು ಸೊಂಟದವರೆಗಷ್ಟೇ ಬಂದಿದೆ. ನೀರು ಅವರ ಮೂಗಿನವರೆಗೆ ಬರುವವರೆಗೆ ಕಾಯಿರಿ."
ಅಷ್ಟರಲ್ಲಿ ನನ್ನ ಸ್ಟಾಪ್ ಬಂತು. ಇಳಿದೆ. ರಿಕ್ಷಾ ಚಾಲಕ ಹೇಳಿದ ಕತೆ ಈಗಲೂ ನನ್ನ ತಲೆಯಲ್ಲಿ ಬೇರೆ ಬೇರೆ ಆಯಾಮಗಳನ್ನು ಪಡೆದು ಕೊಳ್ಳುತ್ತಾ ಬೆಳೆಯುತ್ತಿದೆ,.

4
ಮಾಯದ ಬಟ್ಟೆ
ಅಂಬಾನಿ ಹೊಲಿದ ಮಾಯದ ಬಟ್ಟೆ ಧರಿಸಿ ಮೋದಿ ಸಂಭ್ರಮಿಸುತ್ತಿದ್ದಾರೆ. ಭಕ್ತರು ಇಲ್ಲದ ಬಟ್ಟೆಯ ವರ್ಣನೆ ಮಾಡುತ್ತಿದ್ದಾರೆ. ಎಳೆ ಮಗುವೊಂದು ಬೆತ್ತಲೆ ರಾಜನ ನೋಡಿ ಕಿಸಕ್ಕನೆ ನಕ್ಕಿದೆ. ಇದೀಗ ಆ ಮಗುವಿನ ಮೇಲೆ ರಾಜ ದ್ರೋಹದ ಆರೋಪ ಹೊರಿಸಲಾಗಿದೆ

5
ನೀನೆಲ್ಲಿದ್ದೀಯ ?
"ದೇಶಕ್ಕಾಗಿ ಇಷ್ಟಾದರೂ ಮಾಡೋಕ್ಕಾಗಲ್ವಾ ಜನರಿಗೆ ? "
"ಅದಿರ್ಲಿ ನೀನೆಲ್ಲಿದ್ದೀಯ ? "
"ನಾನು ಅಮೇರಿಕ ಟೂರಲ್ಲಿದ್ದೇನೆ ... ಎಲ್ಲ ಸರಿಯಾದ ಮೇಲೆ ಬರೋಣ ಅಂತ .... "

6
ನಂಬಿಕೆ 
ಹೊಸ 2000 ನೋಟಿಗೆ ಬೆಂಕಿ ಹಚ್ಚಿದ್ರೆ ಬೆಂಕಿ ಹತ್ತೋದೇ ಇಲ್ಲ ಎಂಬ ಮೋದಿ ಭಕ್ತನ ಮಾತನ್ನು ನಂಬಿ, ಪರೀಕ್ಷಿಸಲು ಹೋಗಿ ಇಲ್ಲೊಬ್ಬ ತನ್ನ ಹೊಸ 2000 ರು ನೋಟನ್ನು ಕಳೆದು ಕೊಂಡಿದ್ದಾನೆ 

7
ಸ್ವಾಗತ 
ಅಂದ ಹಾಗೆ ನಿಮಗೆ ಗೊತ್ತಾ, ನೋಟು ನಿಷೇಧವನ್ನು ಜನಾರ್ದನ ರೆಡ್ಡಿಯವರು ಸ್ವಾಗತಿಸಿದ್ದಾರೆ!!!

8
ಮೋದಿ ಫೋಟೋ 
ಮಂಗಳೂರಿನ ವೇಲೆನ್ಸಿಯಾ ಪಕ್ಕದಲ್ಲಿರುವ ಈತ ಪುಟ್ಟದೊಂದು ಹೋಟೆಲು ಇಟ್ಟಿದ್ದಾನೆ. ಮೋದಿಯ ಅಭಿಮಾನಿ. ಗೋಡೆಯ ಮೇಲೆ ಮೋದಿಯ ಫೋಟೋ ತೂಗು ಹಾಕಿದ್ದ. 
ಯಾವಾಗ ಮೋದಿಯವರು ಕಾರ್ಡ್ ಉಪಯೋಗಿಸಿ ಎಂದು ಕರೆ ಕೊಟ್ಟರೋ, ಅವನ ಗೋಡೆಯಲ್ಲಿರುವ ಮೋದಿ ಫೋಟೋ ಮಾಯವಾಗಿದೆ.

9
ಗೊತ್ತಾ ?
"ಏ .. ಎರಡು ಸಾವಿರ ನೋಟಿನ ಮೇಲೆ ಮೊಬೈಲ್ ಇಟ್ರೆ ಮೋದಿ ಭಾಷಣ ಮಾಡೋದು ಕಾಣಿಸತ್ತೆ, ಗೊತ್ತಾ?"
"ನನಗೆ ಬೇಕಾಗಿರೋದು ಭಾಷಣ ಅಲ್ಲ, ಎರಡು ಸಾವಿರ ರುಪಾಯಿಯ ಚಿಲ್ರೆ ... "

10
ಮತ್ತೆ ಅಮೃತಮತಿ 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ನಾಯಕನಿಗಾಗಿ ಹಂಬಲಿಸೋ ಮತದಾರ, ಪತಿ ಯಶೋಧರನನ್ನು ತಿರಸ್ಕರಿಸಿ ಅಷ್ತಾವಕ್ರನ ಹಿಂಸಾರತಿಗಾಗಿ ಹಂಬಲಿಸೋ ಅಮೃತ ಮತಿಯಂತೆ ಭಾಸವಾಗುತ್ತಾನೆ. ಅತ್ಯಂತ ಕ್ರೂರಿಯೂ, ವಿಕಾರಿಯೂ ಆಗಿರುವ ಅಷ್ಟಾವಕ್ರ ಚಾಟಿಯಿಂದ ಬಾರಿಸುವಾಗ, ಅಮೃತಮತಿ ಕಾಮನೆಯಿಂದ ಸುಖಿಸುತ್ತಾ "... ಇನ್ನಷ್ಟು ಹೊಡಿ, ಆದರೆ ನನ್ನನ್ನು ತಿರಸ್ಕರಿಸಬೇಡ" ಎಂದು ದೀನವಾಗಿ ಬೇಡಿಕೊಳ್ಳುವ ಮನಸ್ಥಿತಿ ಮೋದಿಗಾಗಿ ಇನ್ನೂ ಹಪಹಪಿಸುತ್ತಿರುವ ಜನರಲ್ಲಿ ಆಳವಾಗಿ ಬಚ್ಚಿಟ್ಟು ಕೊಂಡಿದೆಯೇ ? ಜನ್ನನ 'ಯಶೋಧರ ಚರಿತೆ'ಯನ್ನು ಓದುತ್ತಿರುವಾಗ ಹೀಗೊಂದು ಆಲೋಚನೆ ಬಂದು ಬಿಟ್ಟಿತು ....

11
ಅಂಬಿಗ ಮತ್ತು ಅವನ ಮಗ 
ಇದೂ ರಿಕ್ಷಾ ಚಾಲಕನೇ ಹೇಳಿದ ಕತೆ. ಕಚೇರಿ ಕಡೆ ರಿಕ್ಷಾದಲ್ಲಿ ಸಾಗುತ್ತಿರುವಾಗ  "ಮೋದಿಯ ನೋಟು ನಿಷೇಧದ ಅವಾಂತರಗಳ" ಬಗ್ಗೆ ಈ ಚಾಲಕ ಗೊಣಗುತ್ತಿದ್ದ. ಚಾಲಕ ವಯಸ್ಸಲ್ಲಿ ತುಂಬಾ ಹಿರಿಯ. ಜೊತೆಗೆ ತುಂಬಾ ತಿಳುವಳಿಕೆ ಉಳ್ಳವರಂತೆಯೂ ಕಾಣುತ್ತಿದ್ದರು. 
"ಸ್ವಾಮೀ, ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂತಹದೇ ಸ್ಥಿತಿ ಇತ್ತು ಗೊತ್ತಾ ? ಒಮ್ಮೊಮ್ಮೆ ಹಾಗೆ ಆಗ್ತದೆ" ನಾನು ಚಾಲಕನನ್ನು ಸಮಾಧಾನಿಸಿದೆ. 
ಚಾಲಕ ನಿಟ್ಟುಸಿರಿಟ್ಟು ಹೇಳಿದ "ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭ ನನಗೆ ಇಪ್ಪತ್ತು ವರ್ಷ. ನೀವಾಗ ಹುಟ್ಟಿರಲಿಕ್ಕೆ ಇಲ್ಲ. ಆಗ ದುಡಿಯುವ ಜನ ಹೀಗೆ ಬೀದಿಗೆ ಬಿದ್ದಿರಲಿಲ್ಲ.... ದೊಡ್ಡವರನ್ನೆಲ್ಲ ಹಿಡಿದು ಜೈಲಿಗೆ ಹಾಕಿದಳು ಆಕೆ ... ನಿಮಗೆ ದೋಣಿಯವನ ಕತೆ ಗೊತ್ತಾ? " ಎಂದು ಕೇಳಿದರು 
"ಗೊತ್ತಿಲ್ಲ ಹೇಳಿ ... " ಎಂದೆ. 
ಅವನು ಕತೆ ಹೇಳ ತೊಡಗಿದ. 
"ಒಂದು ಊರು. ನದಿ ದಾಟಿಯೇ ಆ ಊರಿಗೆ ಹೋಗಬೇಕು. ಆ ಊರಿಗೆ ಒಂದೇ ದೋಣಿ. ಒಬ್ಬನೇ ಅಂಬಿಗ. ಹೆಂಗಸರ ವಿಷಯದಲ್ಲಿ ಈ ಅಂಬಿಗನ ವರ್ತನೆ ಅಷ್ಟು ಸರಿ ಇರಲಿಲ್ಲ ... ದೋಣಿಯನ್ನು ಆತ ಪೂರ್ತಿ ದಡದ ಸಮೀಪ ನಿಲ್ಲಿಸುತ್ತಿರಲಿಲ್ಲ. ಮೊಣಕಾಲಿಗಿಂತ ಜಾಸ್ತಿ ನೀರು ಇರುವಲ್ಲಿ ದೋಣಿ ನಿಲ್ಲಿಸುತ್ತಿದ್ದ. ಇದರಿಂದ ಮಹಿಳೆಯರು ತಮ್ಮ ಸೀರೆಯನ್ನು ಮೊಣಕಾಲಿಗಿಂತ ಮೇಲೆ ಮಾಡಿ ದಡ ಸೇರಬೇಕಾಗಿತ್ತು. ಈ ಮೂಲಕ ಅಂಬಿಗನಿಗೆ ಹೆಂಗಸರ ಕಾಲು ನೋಡುವ ಚಪಲ. ಹೆಂಗಸರು ಅಂಬಿಗನಿಗೆ ಶಾಪ ಹಾಕುತ್ತ, ಸೀರೆ ಮೇಲೆತ್ತಿ ದಡ ಸೇರುತ್ತಿದ್ದರು. ಇದು ಹೀಗೆ ನಡೆಯುತ್ತಲೇ ಇತ್ತು. ಸದಾ ಹೆಂಗಸರಿಗೆ ಅಂಬಿಗನನ್ನು ಬೈಯೋದೆ ಕೆಲಸ ... "
"... ಹೀಗಿರುವಾಗ ಅಂಬಿಗನಿಗೆ ವಯಸ್ಸಾಯಿತು. ಸಾಯುವ ಸಮಯವಾಯಿತು. ಆಗ ಮಗನಿಗೆ ದೋಣಿ ಬಿಡುವ ಹೊಣೆಗಾರಿಕೆ ಕೊಟ್ಟು ಹೇಳಿದ 'ಮಗನೆ ನಿನ್ನ ತಂದೆಯ ಹೆಸರು ಉಳಿಸಬೇಕು. ಊರವರೆಲ್ಲ ನಿನ್ನಿಂದಾಗಿ ನನ್ನನ್ನು ಹೊಗಳುವಂತಾಗಬೇಕು'
ಮಗ ಮಾತು ಕೊಟ್ಟ. ಸರಿ, ತಂದೆಯ ಹೆಸರು ಉಳಿಸೋದು ಹೇಗೆ ? ಒಂದು ಉಪಾಯ ಮಾಡಿದ. 
ತಂದೆ ಮೊಣಕಾಲು ನೀರಿನಲ್ಲಿ ದೋಣಿ ನಿಲ್ಲಿಸೋದು ಅವನಿಗೆ ಗೊತ್ತಿತ್ತು. ಇದೀಗ ಮಗನೋ ಸೊಂಟದವರೆಗೆ ನೀರಿನಲ್ಲಿ ದೋಣಿ ನಿಲ್ಲಿಸ ತೊಡಗಿದ. ಮಹಿಳೆಯರಿಗೆ ಮತ್ತಷ್ಟು ಪೀಕಲಾಟ. ಈಗ ಸೀರೆಯನ್ನು ಇನ್ನಷ್ಟು ಮೇಲಕ್ಕೆತ್ತಬೇಕಾಗಿತ್ತು. 'ಇವನಿಗಿಂತ ಇವನ ತಂದೆ ಎಷ್ಟೋ ಒಳ್ಳೆಯವನು. ಇವನಿಗಿಂತ ಅವನೇ ಆಗಬಹುದು' ಎಂದು ಹಳೆಯ ಅಂಬಿಗನನ್ನು ಜನರು ಹೊಗಳ ತೊಡಗಿದರು. ಹೀಗೆ ಮಗ ತಂದೆಯ ಹೆಸರನ್ನು ಉಳಿಸಿದ......"
ಹೀಗೆ ತನ್ನ ಕತೆಯನ್ನು ಮುಗಿಸಿದ ರಿಕ್ಷಾ ಚಾಲಕ ಹೇಳಿದರು "ಮೋದಿಯಿಂದಾಗಿ ಇಂದಿರಾಗಾಂಧಿಯ ಹೆಸರು ಉಳಿಯಿತು ನೋಡಿ ... "
ಅಷ್ಟರಲ್ಲಿ ನಾನು ಇಳಿಯುವ ಸ್ಟಾಪ್ ಬಂತು.