ಇದು ತುಂಬಾ ವರ್ಷಗಳ ಹಿಂದೆ ನನ್ನ ತಾಯಿ ನನಗೆ ಹೇಳಿದ ಕತೆ ಇದು.
ಅಂದು ಸಂಜೆ ಶಾಲೆ ಬಿಟ್ಟು ಮನೆಗೆ ಬಂದಿದ್ದೆ. ಅಮ್ಮ ಎಂದಿನಂತೆ ನನಗಾಗಿ ಬಾಗಿಲ ಬಳಿ ಕಾದು ಕುಳಿತಿರಲಿಲ್ಲ. ಅಮ್ಮನನ್ನು ಹುಡುಕುತ್ತಾ ಒಳ ಮನೆಗೆ ಹೋದೆ. ಅಲ್ಲೂ ಇಲ್ಲ. ಅಡುಗೆ ಮನೆಯಲ್ಲೂ ಇಲ್ಲ.
ಭಯವಾಯಿತು. "ಅಮ್ಮ" ಎಂದು ಕರೆದೆ. ಉತ್ತರವೇ ಇಲ್ಲ.
ಮನೆಯ ಹಿತ್ತಲಲ್ಲಿ ನೋಡಿದರೆ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕಡೆದಿಟ್ಟ ಕಲ್ಲಿನಂತೆ ಕುಳಿತಿದ್ದಳು.
"ಅಮ್ಮ" ಎಂದು ಕರೆದೆ. ಒಮ್ಮೆಲೇ ಬೆಚ್ಚಿ ನನ್ನ ಕಡೆ ನೋಡಿದಳು.
ಅವಳ ಕಣ್ಣು ಒದ್ದೆಯಾಗಿತ್ತು. ಅಥವಾ ನನಗೆ ಹಾಗೆ ಕಂಡಿರ ಬೇಕು. ಅಂದು ರಾತ್ರಿ ಮಲಗುವಾಗ ಹೇಳಿದ ಕಥೆ ಇದು. ಒಂದು ರೀತಿಯಲ್ಲಿ ಅಪೂರ್ಣವಾದ ಕಥೆ. ಅಥವಾ ಈ ಅಪೂರ್ಣತೆಯೇ ಕಥೆಯ ಪೂರ್ಣತೆಯೂ ಆಗಿರಬಹುದು. ಕಥೆ ಹೀಗಿದೆ.
ಇಬ್ಬರು ಗಂಡ-ಹೆಂಡತಿ ಇದ್ದರಂತೆ. ಅವರಿಗೆ ಒಬ್ಬ ಪುಟಾಣಿ ಮಗು. ಮಗುವಿಗೆ ತಂದೆ ತಾಯಿಗಳ ಮೇಲೆ ಸಮಾನ ಪ್ರೀತಿ. ಗಂಡ ಇದ್ದಾನಲ್ಲ ಅವನಿಗೆ ಮೂಗಿನಲ್ಲೇ ಕೋಪ. ಸಣ್ಣ ತಪ್ಪಿಗೂ ಭಯಂಕರ ಸಿಟ್ಟು ಮಾಡಿ, ಆಕೆಗೆ ಥಳಿಸುತ್ತಿದ್ದನಂತೆ. ಒಂದು ದಿನ ಪೇಟೆಗೆ ದುಡಿಯಲೆಂದು ಹೋದ ಆತ, ಮಧ್ಯಾಹ್ನ ಆಡಿನ ಮಾಂಸ ಹಿಡಿದುಕೊಂಡು ಬಂದನಂತೆ. ಅವನಿಗೆ ಸಿಕ್ಕಾಪಟ್ಟೆ ಹಸಿವು. ಹೆಂಡತಿಯ ಕೈಗೆ ಮಾಂಸವನ್ನು ಕೊಟ್ಟು ‘‘ಬೇಗ ಅಡುಗೆ ಮಾಡಿ ಇಡು. ನಾನು ಇಲ್ಲೇ ನದಿಯಲ್ಲಿ ಸ್ನಾನ ಮಾಡಿ ಬರುವೆ. ಸಿಕ್ಕಾಪಟ್ಟೆ ಹಸಿವಾಗುತ್ತಿದೆ’’ ಎಂದನಂತೆ. ಅವಳು ಮಾಂಸವನ್ನು ತೆಗೆದುಕೊಂಡು ಅಡುಗೆಗೆ ಸಿದ್ಧ ಮಾಡತೊಡಗಿದಳು. ಗಂಡ ನದಿಗೆ ಸ್ನಾನಕ್ಕೆಂದು ಹೋದ. ಮಾಂಸವನ್ನು ಕತ್ತರಿಸಬೇಕಲ್ಲ. ಅದಕ್ಕೆಂದು ಕತ್ತಿ ತರಲೆಂದು ಅವಳು ಒಳ ಹೋದಳು. ಅಷ್ಟರಲ್ಲಿ ಒಂದು ನಾಯಿ ಅದೆಲ್ಲಿತ್ತೋ, ಅಲ್ಲಿದ್ದ ಎಲ್ಲಾ ಮಾಂಸವನ್ನೂ ತಿಂದು ಬಿಟ್ಟಿತು. ಹೆಂಡತಿ ಬಂದು ನೋಡುತ್ತಾಳೆ, ನಾಯಿ ಮಾಂಸವನ್ನೆಲ್ಲ ತಿಂದು ಬಿಟ್ಟಿದೆ. ಆಕೆಯ ಎದೆ ಒಡೆದು ಹೋಯಿತು. ಗಂಡ ಬಂದು ನನ್ನನ್ನು ಕೊಂದೇ ಬಿಡುವನು ಎಂದು ಅವಳು ಭಯಭೀತಳಾದರು. ಮಾಡುವುದೇನು? ನಾಯಿಯನ್ನು ನೋಡಿದಳು. ಸಿಟ್ಟಿನಿಂದ ಕೈಯಲ್ಲಿರುವ ಕತ್ತಿಯಿಂದ ನಾಯಿಗೆ ಒಂದೇಟು ಬಿಗಿದಳು. ನಾಯಿ ಅಲ್ಲಿಯೇ ಸತ್ತು ಹೋಯಿತು. ಅವಳಿಗೆ ಬೇರೆ ಉಪಾಯವೇ ಇರಲಿಲ್ಲ. ನಾಯಿಯನ್ನೇ ಮಾಂಸ ಮಾಡಿ, ಅಡುಗೆ ಮಾಡಿದಳು. ಉಳಿದ ಅವಶೇಷವನ್ನು ದೂರ ಎಸೆದು ಬಂದಳು. ಆದರೆ ಇದನ್ನೆಲ್ಲ ಆಕೆಯ ಮುದ್ದು ಮಗ ಕಣ್ಣು ಬಿಟ್ಟು ನೋಡುತ್ತಿದ್ದ.
ಅಪ್ಪ ಬಂದ. ‘‘ಹಸಿವಾಗುತ್ತಿದೆ. ಬೇಗ ಬಡಿಸು....’’ ಅಬ್ಬರಿಸಿದ. ಅವಳು ಒಳಗೊಳಗೆ ನಡುಗುತ್ತಾ ನಾಯಿ ಮಾಂಸದ ಸಾರನ್ನು ಮತ್ತು ಅನ್ನವನ್ನು ಬಡಿಸಿದಳು.
ಮಗ ನೋಡುತ್ತಲೇ ಇದ್ದ.
ಅಪ್ಪ ಮಾಂಸದ ತುಂಡಿನ ಜೊತೆ ತುತ್ತನ್ನು ಕಲಸಿ ಬಾಯಿಗಿಡಬೇಕು.
ಮಗ ‘‘ಅಪ್ಪಾ....’’ ಎಂದು ಕೂಗಿದ. ತಾಯಿ ಆತಂಕದಿಂದ ಮಗನ ನೋಡಿದಳು.
ಅಪ್ಪ ‘ಏನು?’’ ಎನ್ನುತ್ತಾ ಮಗನ ಕಡೆಗೆ ನೋಡಿದ. ಮಗು ಪಾಪ ಏನು ಮಾಡಬೇಕು?
ಸುಳ್ಳು ಹೇಳಿದರೆ ಅಪ್ಪ ನಾಯಿ ತಿನ್ನುತ್ತಾನೆ. ಸತ್ಯ ಹೇಳಿದರೆ ಅಮ್ಮ ಸಾಯುತ್ತಾಳೆ.....
ನನ್ನ ಅಮ್ಮ ಹೇಳಿದ ಈ ಕತೆ ನನಗೆ ಈಗಲೂ ನೆನಪಿದೆಯಾದರೂ ಆ ಕತೆಯಲ್ಲಿ ಮಗ ಸುಳ್ಳು ಹೇಳಿದನೋ, ಸತ್ಯ ಹೇಳಿದನೋ ಎನ್ನುವುದು ಮಾತ್ರ ನೆನಪಿಲ್ಲ. ಅಥವಾ ಅಮ್ಮ ಅದನ್ನು ನನಗೆ ಅವತ್ತು ಹೇಳಿರಲೇ ಇಲ್ಲ. ಅಥವಾ ಅವಳು ಕತೆ ಪೂರ್ಣ ಗೊಳಿಸುವ ಮೊದಲೇ ನಾನು ನಿದ್ದೆ ಹೋಗಿರಬೇಕು
ಒಳ್ಳೇ ಸಸ್ಪೆನ್ಸಿನಲ್ಲಿ ಬಿಟ್ಟುಬಿಟ್ರಲ್ಲ ಸರ್..
ReplyDeleteGujari Angady Saraku Suuuuuuuuper
ReplyDelete