Saturday, September 21, 2013

ಅಲೆಮಾರಿಯ ಅಂತರಂಗ

 ಹೋರಾಟಗಾರ, ಸಂಘಟಕ, ಲೇಖಕ ಕುಪ್ಪೆ ನಾಗರಾಜ ಅವರ ‘ಅಲೆಮಾರಿ ಅಂತರಂಗ’ ಕೃತಿಯನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಅಲಕ್ಷಿತ ಸಮುದಾಯದಿಂದ ಹೊರ ಬಂದಿರುವ ನಾಗರಾಜ್, ಅಲೆಮಾರಿ ಸಮುದಾಯವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ಈ ಕೃತಿಯು ಒಬ್ಬ ವ್ಯಕ್ತಿಯ ಅಂತರಂಗವೂ ಹೌದು. ಹಾಗೆಯೇ ಒಂದು ಸಮುದಾಯದ ಕಥನವೂ ಹೌದು. ಲೇಖಕರೇ ಹೇಳುವಂತೆ ‘‘ಅವರ ಕಳ್ಳುಬಳ್ಳಿಯ ಸಂಬಂಧಗಳ ಬದುಕು ಮತ್ತು ಬವಣೆಗಳ ನಿವೇದನೆ’’ ಈ ಕೃತಿ. ದೊಂಬಿದಾಸರ ಅಲೆಮಾರಿ ಬದುಕಿನ ಹಿಂದೆ ಸಾಗುವ ಲೇಖಕರು ಆ ಮೂಲಕ, ತನ್ನ ಬದುಕನ್ನೇ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಒಂದು ರೀತಿಯಲ್ಲಿ ಈ ಕೃತಿಗೆ ಆತ್ಮಕಥನದ ಗುಣ ಇದೆ. ವೈಯಕ್ತಿಕ ವೈಭವೀಕರಣವಿಲ್ಲದೆಯೇ ತನ್ಮೂಲಕ ತನ್ನ ಸಮುದಾಯದ ಕತೆಯನ್ನು ಹೇಳುತ್ತಾರೆ ಲೇಖಕರು.
ಮರಾಠಿಯಲ್ಲಿ ಬಂದ ಉಚಲ್ಯಾದಂತಹ ಆತ್ಮಕಥನಗಳಿಗೆ ಸಮೀಪದಲ್ಲಿರುವ ಈ ಕೃತಿ, ತಳಸಮುದಾಯದ ಬದುಕಿನ ವಿವರಗಳನ್ನು ತೆರೆದಿಡುತ್ತದೆ. ನಮಗೆ ತಿಳಿದಿಲ್ಲದ, ಅರಿವಿಲ್ಲದ ಜಗತ್ತನ್ನು ಪರಿಚಯಿಸುತ್ತದೆ. ದೊಂಬಿದಾಸರ ಆಚಾರ, ವಿಚಾರ, ನಂಬಿಕೆ, ಮೂಢನಂಬಿಕೆಗಳ ಸಂಕಲನವಷ್ಟೇ ಅಲ್ಲ ಇದು. ಇಲ್ಲಿ ಅವರ ನೋವು, ಅಭಿವ್ಯಕ್ತಿಗಳಿವೆ. ಕಥನ ಶೈಲಿಯ ನಿರೂಪಣೆಗಳ ಮೂಲಕ ಅವೆಲ್ಲವನ್ನು ಮಂಡಿಸುತ್ತಾರೆ. ಏಕ ಸಂಸ್ಕೃತಿಯ ಭ್ರಮೆಯಲ್ಲಿರುವ ಮಂದಿಗಳಿಗೆ, ಅರ್ಥವಾಗದ ಹಲವು ಸಂಗತಿಗಳನ್ನು ಈ ಕಥನದ ಮೂಲಕ ಅರ್ಥ ಮಾಡಿಸಲು ಕುಪ್ಪೆ ನಾಗರಾಜ ಅವರು ಪ್ರಯತ್ನಿಸುತ್ತಾರೆ. ಕನ್ನಡಕ್ಕೆ ಇದೊಂದು ವಿಶಿಷ್ಟ ಕೃತಿ. ಸುಂದರ ಮುದ್ರಣ, ಸೃಜನ್ ರೇಖಾಚಿತ್ರ ಕೃತಿಯನ್ನು ಓದುಗರಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ.
ಕೃತಿಯ ಮುಖಬೆಲೆ 125 ರೂ. ಕೃತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ-080-30578020

Wednesday, September 18, 2013

ಮೊಳಕೆ ಮತ್ತು ಇತರ ಕತೆಗಳು



ರಾಜಕೀಯ
ಅದೊಂದು ರಾಜಕಾರಣಿಗಳ ಕುಟುಂಬ.
ಒಂದು ದಿನ ಯಾರೋ ಕೇಳಿದರು ‘‘ಅಪ್ಪ ಮನೆಯಲ್ಲಿ ಇದ್ದಾರ...’’
ಮಗ ತಕ್ಷಣ ಹೇಳಿದ ‘‘ಇಲ್ಲ ಅಂತ ಹೇಳಲು ಹೇಳಿದ್ದಾರೆ. ಆದರೆ ಅವರು ಒಳಗೆ ಇದ್ದಾರೆ’’
‘‘ಅದ್ಯಾಕಪ್ಪ ಮಗನಾಗಿಯೂ ಅಪ್ಪನ ವಿರುದ್ಧ ಹೇಳುತ್ತಿದ್ದೀಯ?’’
‘‘ನಾನು ಭಿನ್ನಮತೀಯ’’


ಮನೆ
ಮನೆ ಹೇಗಿರಬೇಕು?
ಸಂತನ ಬಳಿ ಯಾರೋ ಕೇಳಿದರು.
ಸಂತ ಗಂಭೀರವಾಗಿ ಹೇಳಿದ ‘ಸೋರದಂತಿರಬೇಕು’’

ಮೊಳಕೆ
ಒಬ್ಬ ಬರಹಗಾರ ಅದೇನೋ ಬರೆದನೆಂದು ದುಷ್ಕರ್ಮಿಗಳು ಆತನ ಕೈ ಕತ್ತರಿಸಿದರು.
ಆದರೆ ಕೆಲವೇ ದಿನಗಳಲ್ಲಿ ಆ ಜಾಗದಲ್ಲಿ ನೂರು ಕೈಗಳು ಮೊಳಕೆ ಒಡೆದವು.

ಬಾಗಿಲು
‘‘ಯಾರೋ ಬಾಗಿಲು ತಟ್ಟುತ್ತಿದ್ದಾರೆ’’ ಹೆಂಡತಿ ಕೂಗಿ ಹೇಳಿದಳು.
‘‘ದುರದೃಷ್ಟವಾಗಿರಬಹುದು. ಬಾಗಿಲು ತೆಗೆಯಬೇಡ’’ ಗಂಡ ಉತ್ತರಿಸಿದ.
ಸರಿ ಮತ್ತೆ ವೌನ.
ಹೆಂಡತಿ ನಿರಾಸೆಯಿಂದ ಹೇಳಿದಳು ‘‘ಬಾಗಿಲು ತಟ್ಟಿದ್ದು ದುರದೃಷ್ಟವಲ್ಲ. ಅದೃಷ್ಟ’’
‘‘ನಿನಗೆ ಹೇಗೆ ಗೊತ್ತು?’’
‘‘ಯಾಕೆಂದರೆ ಅದೃಷ್ಟ ಮಾತ್ರ ಬಾಗಿಲು ತಟ್ಟಿ ಪ್ರವೇಶಿಸುತ್ತದೆ. ದುರದೃಷ್ಟ ಬಾಗಿಲನ್ನು ಒದ್ದು ಪ್ರವೇಶಿಸುತ್ತದೆ’’

ಸಹಾಯ
‘‘ಹುಡುಗಿ ನನಗೆ ಸಹಾಯ ಮಾಡುತ್ತೀಯ?’’
‘‘ಏನು ಸಹಾಯ...’’
‘‘ನನಗೆ ಆತ್ಮಹತ್ಯೆ ಮಾಡ್ಕೋಬೇಕಾಗಿದೆ...’’
‘‘ಆತ್ಮಹತ್ಯೆಗೆ ನನ್ನ ಸಹಾಯ..!?’’
‘‘ಹೌದು, ನಿನ್ನ ಕೆನ್ನೆಯ ಗುಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡ್ಕೋಬೇಕಾಗಿದೆ’’

ಈಜು
ಒಬ್ಬನಿಗೆ ಈಜು ಕಲಿಯುವ ಆಸೆ.
ಪುಸ್ತಕದ ಅಂಗಡಿಗೆ ತೆರಳಿ ಕೇಳಿದ ‘‘ಈಜು ಕಲಿಸುವ ಪುಸ್ತಕ ಇದೆಯ?’’
ಅಂಗಡಿಯಾತ ಕೊಟ್ಟ.
ಅದೊಂದು ನದಿಯ ಕುರಿತ ಪುಸ್ತಕ.
ಅಂಗಡಿಯಾತ ಹೇಳಿದ ‘‘ಈ ಪುಸ್ತಕದ ಓದಿನಲ್ಲಿ ಮುಳುಗು. ಈಜು ತನ್ನಷ್ಟಕ್ಕೆ ಬರುತ್ತದೆ’’

ಗೆಳೆಯರು
‘‘ಅಂತಹ ಕೆಟ್ಟ ಗೆಳೆಯನಲ್ಲಿ ಯಾಕೆ ಸ್ನೇಹ ಮಾಡಿದ್ದೀಯ?’’ ತಾಯಿ ಕೇಳಿದರು.
‘‘ಯಾಕೆಂದರೆ ಒಳ್ಳೆಯ ಗೆಳೆಯರು ನನ್ನ ಸ್ನೇಹ ಮಾಡಲು ಹಿಂಜಯುತ್ತಾರೆ, ಅದಕ್ಕೆ’’

ಕನಸು
ಒಬ್ಬ ಶ್ರೀಮಂತನಿಗೆ ಕನಸು ಬಿತ್ತು. ಅದರಲ್ಲಿ ಅವನು ತೀವ್ರ ನಷ್ಟ ಅನುಭವಿಸಿ, ದರಿದ್ರನಾಗುತ್ತಾನೆ.
ಅಂದಿನಿಂದ ಕನಸು ಎಂದರೆ ಭಯ.
ಕನಸಿಗೆ ಹೆದರಿ ಅವನು ನಿದ್ದೆ ಮಾಡುವುದನ್ನೇ ಬಿಟ್ಟು ಬಿಟ್ಟ.
ನಿದ್ದೆಗೆಟ್ಟವನ ಆರೋಗ್ಯ ಕೆಟ್ಟಿತು. ಆರೋಗ್ಯ ಕೆಟ್ಟ ಕಾರಣ ಅವನ ವ್ಯಾಪಾರವೂ ಕೆಟ್ಟಿತು.
ದಿನ ದಿನಕ್ಕೆ ಆರೋಗ್ಯ, ವ್ಯಾಪಾರ ಕುಸಿತ ಕಂಡಿತು.
ಒಂದು ದಿನ ಅವನು ನಿಜಕ್ಕೂ ದರಿದ್ರನಾಗಿಯೇ ಬಿಟ್ಟ.
ಈಗ ಅವನಿಗೆ ಕಣ್ತುಂಬ ನಿದ್ದೆ. ಕನಸಿನಲ್ಲಿ ದರಿದ್ರನಾಗುವ ಭಯವೇ ಇಲ್ಲ.

Monday, September 16, 2013

ಕನಕ ಚಿಂತನೆಯೆಡೆಗೆ ಕಿಂಡಿ

 
 ಕನಕ ದಾಸರ ಕುರಿತಂತೆ ಹತ್ತು ಹಲವು ಲೇಖನಗಳು ಬಂದಿರಬಹುದು. ಆದರೆ ಅವೆಲ್ಲ ಕನಕರ ಸಮಗ್ರ ಭಕ್ತಿ ಬರಹಗಳನ್ನು ತೆರೆದಿಡುವಂತಹದಲ್ಲ. ಜಾತಿ ಮತ್ತು ಕನಕನ ಬಂಡಾಯ ಸುದ್ದಿಯಾದಷ್ಟು ಅವರ ಇತರ ಬರಹಗಳು ಸುದ್ದಿಯಾಗಿಲ್ಲ. ‘ಕನಕ ಚಿಂತನ’ ಕೃತಿ ದಾಸರ ಕುರಿತ ಈ ಕೊರೆತಗಳನ್ನು ನೀಗಿಸುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ಕನಕ ಚಿತನ ಮಾಲಿಕೆಯ ಭಾಗವಾಗಿ 2011-12 ಸಾಲಿನ ಕೃತಿ ಇದು. ಸಂಪಾದಕರಾಗಿ ಡಾ. ಬಿ. ಶಿವರಾಮಶೆಟ್ಟಿ ಕೆಲಸ ಮಾಡಿದ್ದಾರೆ. ಸಹ ಸಂಪಾದಕರಾಗಿ ರಾಧಿಕಾ, ನಿತಿನ್ ಪಿ. ಎಸ್, ಮೊನಿಷಾ ಜೊತೆಗೂಡಿದ್ದಾರೆ. ಕನಕ ದಾಸರ ಕೃತಿಗಳನ್ನು ಸಮಕಾಲೀನ ಸಂವಾದದ ನೆಲೆಯಲ್ಲಿ ಮರು ಓದು ನಡೆಸುವ ಉದ್ದೇಶವನ್ನು ಮಾಲಿಕೆ ಹೊಂದಿದೆ ಎಂದು ಸಂಪಾದಕರು ಹೇಳಿದ್ದಾರೆ.      
ಕನಕದಾಸರ ನಳಚರಿತ್ರೆ, ಹರಿಭಕ್ತಿಸಾರ, ಮೊದಲಾದವುಗಳ ಕುರಿತಂತೆ ಈ ಕೃತಿ ಮಾತನಾಡುತ್ತದೆ. ಈ ಕೃತಿಗಳಲ್ಲಿ ಸಮಕಾಲೀನತೆಯನ್ನು ಹುಡುಕುವ ಪ್ರಯತ್ನವನ್ನು ಜ್ಯೋತಿ ಚೇಳ್ಯಾರು, ಡಾ. ದಾದಾಪೀರ್, ಡಾ. ಜಯಪ್ರಕಾಶ್ ಶೆಟ್ಟಿ ಮೊದಲಾದವರು ಮಾಡುತ್ತಾರೆ. ಪ್ರೊ. ತೀ.ನಂ. ಶಂಕರನಾರಾಯಣ, ಡಾ. ಜಿ. ಭಾಸ್ಕರ ಮಯ್ಯ ನಾಗವೇಣಿ ಮೊದಲಾದವರ ಪ್ರಬುದ್ಧ ಬರಹಗಳು ಗಮನ ಸೆಳೆಯುತ್ತದೆ. ಹೊಸತೊಂದು ಚರ್ಚೆಗೆ ಇದು ಪೀಠಿಕೆ ಹಾಕುತ್ತದೆ. ತಾಳ್ತಜೆ ವಸಂತಕುಮಾರ್, ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ರಾಜಾರಾಂ ತೋಳ್ಪಾಡಿ, ವಿ. ಗ. ನಾಯಕ್ ಅವರ ಅವರ ಬರಹಗಳು ಒಟ್ಟು ಕೃತಿಯ ಸಂಶೋಧನಾ ನೆಲೆಯನ್ನು ಹಿಗ್ಗಿಸುತ್ತದೆ.
ಭಕ್ತಿ ಪಂಥದ ಸಂದರ್ಭಗಳ ಕುರಿತಂತೆ ಆಸಕ್ತಿ ಇರುವವರಿಗೆ ಇದೊಂದು ಮಹತ್ವದ ಕೃತಿಯೇ ಆಗಿದೆ. ಕೃತಿಯ ಮುಖಬೆಲೆ 150 ರೂ.


Saturday, September 14, 2013

ಲೂಸಿಯಾ: ಒಂದು ಚಿಟ್ಟೆಯ ಕನಸು!

ಸಿನಿಮಾ ಮಾಧ್ಯಮವನ್ನು ಗಂಭೀರವಾಗಿ ಸ್ವೀಕರಿಸಿ, ಚಿತ್ರ ಮಾಡಿದ ಹಲವು ನಿರ್ದೇಶಕರು, ನಿರ್ಮಾಪಕರು ಕನ್ನಡದಲ್ಲಿ ಆಗಿ ಹೋಗಿದ್ದಾರೆ. ಈಗಲೂ ಗಿರೀಶ್ ಕಾಸರವಳ್ಳಿ, ನಾಗಾಭರಣ ಮೊದಲಾದ ನಿರ್ದೇಶಕರು ಅಂದಿನ ಕಲಾತ್ಮಕ ಪರಂಪರೆಯ ಕೊನೆಯ ಕೊಂಡಿಗಳಂತೆ ನಮ್ಮ ನಡುವೆ ಚಿತ್ರ ಮಾಡುತ್ತಲೇ ಇದ್ದಾರೆ. ಪುಟ್ಟಣ್ಣ ಕಣಗಾಲ್ರಂತಹ ನಿರ್ದೇಶಕರು  ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಸದಭಿರುಚಿಯ ಪ್ರಯೋಗಗಳನ್ನು ಮಾಡಿ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಮನಸ್ಸನ್ನು ವಸ್ತುವಾಗಿಟ್ಟುಕೊಂಡು ಕಣಗಾಲ್ ಮಾಡಿದ ರಂಗನಾಯಕಿ, ಮಾನಸಸರೋವರ, ಶರಪಂಜರದಂತಹ ಚಿತ್ರಗಳು ಕಮರ್ಶಿಯಲ್ ಸಂತೆಯಲ್ಲಿ ಹೊಸ ಮಾರ್ಗವೇ ಆಗಿತ್ತು. 70 ದಶಕದಲ್ಲಿ ಕಾರ್ನಾಡ್, ಲಂಕೇಶ್, ಕಾರಂತ ಮೊದಲಾದ ದಿಗ್ಗಜರು ಕಲಾತ್ಮಕ ಪ್ರಯೋಗಗಳನ್ನು ನಡೆಸಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಸಿನಿಮಾದ ಗುರಿ ಜನರನ್ನು ಸುಲಭದಲ್ಲಿ ರಂಜಿಸಿ ಹಣ ಮಾಡುವ ದಂಧೆಯಲ್ಲ, ಅದಕ್ಕೆ ಇನ್ನಿತರ ಜವಾಬ್ದಾರಿಗಳು ಇವೆ ಎನ್ನುವುದನ್ನು ಹಲವು ನಿರ್ದೇಶಕರು ತೋರಿಸಿಕೊಟ್ಟರು. ಅವರ ಪಳೆಯುಳಿಕೆಗಳಾಗಿ ಕಾಸರವಳ್ಳಿಯಂತಹ ನಿರ್ದೇಶಕರು ನಮ್ಮ ಮುಂದಿದ್ದಾರೆ.
 
ಆದರೆ ಇಂದಿಗೂ ಕಲಾತ್ಮಕತೆ ಮತ್ತು ಹೊಸ ಪ್ರಯೋಗಗಳ ಸಂದರ್ಭ ಬಂದಾಗ 70 ದಶಕದ ಚಿತ್ರಗಳನ್ನೇ ಮಾದರಿಯಾಗಿಟ್ಟುಕೊಂಡು ನಿರ್ದೇಶಕರು ಮುಂದುವರಿಯುತ್ತಿದ್ದಾರೆ. ಕಾಲ ಬದಲಾಗಿದೆ. ಹೊಸ ತಲೆಮಾರುಗಳು ಹೊಸದಾಗಿ ಯೋಚಿಸತೊಡಗಿದ್ದಾರೆಆಧುನಿಕತೆ ಅವರಲ್ಲಿ ತಲ್ಲಣಗಳನ್ನು ಎಬ್ಬಿಸಿದೆ. ಬದುಕಿನ ವೇಗಕ್ಕೆ ಅವರು ಒಳಗೊಳಗೇ ತತ್ತರಿಸುತ್ತಿದ್ದಾರೆ. ಯುವ ತಲೆಮಾರು ಆಧುನಿಕವಾಗಿ ಯೋಚಿಸ ತೊಡಗಿವೆ. 70 ದಶಕದ ಮನಸ್ಸಿಗೂ, ಈಗಿನ ತಲೆಮಾರಿನ ಮನಸ್ಸಿಗೆ ಬಹಳಷ್ಟು ಅಂತರವಿದೆ. ಆಧುನಿಕ ದಿನಗಳ ತಲ್ಲಣಗಳನ್ನು ಕಟ್ಟಿಕೊಡಲು ಹೊಸ ರೂಪಕಗಳು ಬೇಕಾಗಿವೆ. ತಲೆಮಾರುಗಳ ನಡುವಿನ ಅಂತರ ತುಂಬುವ ಕೆಲಸ ಕನ್ನಡ ಚಿತ್ರೋದ್ಯಮದಲ್ಲಿ ನಡೆದೇ ಇಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ವಿಪರ್ಯಾಸವೆಂದರೆ, ಖಾಲಿಜಾಗವನ್ನು ತುಂಬಿದ್ದು ಉಪೇಂದ್ರ ಎಂಬ ಅಭಿರುಚಿ ಹೀನ ನಿರ್ದೇಶಕ. ‘’, ‘ಉಪೇಂದ್ರದಂತಹ ಚಿತ್ರಗಳನ್ನು ತೆರೆಯ ಮೇಲೆ ಇಳಿಸುವ ಮೂಲಕ, ತಮಗೇನೋ ಹೊಸತು ಬೇಕು ಎಂದು ಹಂಬಲಿಸುತ್ತಿದ್ದ ತಲೆಮಾರನ್ನು ಉಪೇಂದ್ರ ಅಕ್ಷರಶಃ ಹಾದಿ ತಪ್ಪಿಸಿದರು. ಅಥವಾ ದುರುಪಯೋಗಪಡಿಸಿಕೊಂಡರು. ಸಿನಿಮಾದ ಭಾಷೆಯ ಮೇಲೆ ಅವರು ಮಾಡಿದ ಆಘಾತದಿಂದ ನಮ್ಮ ಯುವಕರು ಇನ್ನೂ ಚೇತರಿಸಿಕೊಂಡಿಲ್ಲ. ‘ಕಬಡ್ಡಿ ಕಬಡ್ಡಿಎಂದು ಹೆಣ್ಣನ್ನು ಅತ್ಯಂತ ಕೆಟ್ಟ ಭಾಷೆಯಲ್ಲಿ ಚಿತ್ರಿಸಿ, ಆಕೆಯ ಮೇಲೆಕುಚು ಕುಚುಎನ್ನುತ್ತಾ ಹೊರಳಾಡಿ, ಏನೋ ಮಾಡಲು ಹೋಗಿ, ಇನ್ನೇನೋ ಮಾಡಿ ಒಟ್ಟು ಸಿನಿಮಾದ ಅಭಿರುಚಿಯನ್ನೇ ಕೆಡಿಸಿ ಬಿಟ್ಟರು. ಇದಕ್ಕೆ ಅವರನ್ನೇ ಸಂಪೂರ್ಣ ಹೊಣೆ ಮಾಡಿ ಪ್ರಯೋಜನವಿಲ್ಲ. ಸಂದರ್ಭದಲ್ಲಿ ಪ್ರತಿಭಾನ್ವಿತ ಹೊಸ ಯುವಕರು, ಹೊಸ ಮನಸ್ಸುಗಳು ಪ್ರವೇಶಿಸಿದ್ದರೆ, ಉಪೇಂದ್ರ ಹುಟ್ಟುತ್ತಲೇ ಇರಲಿಲ್ಲವೇನೋ?

ಪವನ್ ಕುಮಾರ್ ನಿರ್ದೇಶನದಲೂಸಿಯಾಚಿತ್ರ ನೋಡಿದ ಮೇಲೆ ಮೇಲಿನದ್ದನ್ನು ಬರೆಯಬೇಕಾಯಿತು. ಪವನ್ ಕುಮಾರ್ ಅವರ ಮೊದಲ ನಿರ್ದೇಶನದ ಚಿತ್ರಲೈಫ್ ಇಷ್ಟೇನೆ’. ಒಬ್ಬ ಹದಿಹರೆಯದ ಹುಡುಗನ ಗೊಂದಲ, ತಲ್ಲಣಗಳನ್ನು ಭಿನ್ನವಾಗಿ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದರು ಪವನ್. ಹಾಗೆ ನೋಡಿದರೆ ಇಲ್ಲಿ ಕತೆಯೇ ಇದ್ದಿರಲಿಲ್ಲ. ಹದಿ ಹರೆಯಕ್ಕೆ ಕಾಲಿಟ್ಟ ಹುಡುಗನ ಲೈಫ್ ಎಡರು ತೊಡರುಗಳು, ಅವನ ಗೊಂದಲ, ಹುಡುಗಾಟ, ನಿರೀಕ್ಷೆ, ಹತಾಶೆ ಇಷ್ಟನ್ನೇ ಇಟ್ಟುಕೊಂಡು ಅದನ್ನು ಭಿನ್ನವಾಗಿ ನಿರೂಪಿಸಿದ್ದರು. ಪವನ್ಕುಮಾರ್ಗೆ ಹೊಸತನ್ನು ಕೊಡುವ ಶಕ್ತಿಯಿದೆ ಎನ್ನುವ ಸೂಚನೆ ಚಿತ್ರದಲ್ಲೇ ದೊರಕಿತ್ತು. ಲೂಸಿಯಾ ಚಿತ್ರದಲ್ಲಿ ಅವರು ಅದನ್ನು ಸಾಬೀತು ಮಾಡಿದ್ದಾರೆ.


ನೀ ಮಾಯೆಯೋ...ನಿನ್ನೊಳಗೆ ಮಾಯೆಯೋ..’ಎಂಬ ಕನಕದಾಸರ ಪದಗಳ ಎಳೆ ಹಿಡಿದು ಮಾಡಿದ ಚಿತ್ರಲೂಸಿಯಾ’. ಇಲ್ಲೂ ಯುವಕನೊಬ್ಬನ ತಲ್ಲಣ, ನಿರೀಕ್ಷೆ, ಹತಾಶೆಯನ್ನೇ ವಸ್ತುವಾಗಿಟ್ಟುಕೊಂಡಿದ್ದಾರೆ. ಚಿತ್ರದ ಕೇಂದ್ರ ಪಾತ್ರ ನಿಖಿಲ್ ಎಂಬ ಯುವಕ. ಸಿನಿಮಾ ಥಿಯೇಟರ್ನಲ್ಲಿ ಟಾರ್ಚು ಬಿಡುವ ನಿಖಿಲ್ ಅಥವಾ ಸಿನಿಮಾ ಸ್ಟಾರ್ ನಿಖಿಲ್. ಅಥವಾ ಇವರಿಬ್ಬರದೂ ಮುಖ್ಯ ಪಾತ್ರವೇ ಆಗಿದೆನಿದ್ದೆಯಿಲ್ಲದ ನಿಖಿಲ್(ನಿನಾಸಂ ಸತೀಶ್) ಒಂದು ಮಧ್ಯರಾತ್ರಿ ಬೀದಿಯಲ್ಲಿ ಸಾಗುತ್ತಿರುವಾಗ ಆತನಿಗೆ ಅಪರಿಚಿತರ ಭೇಟಿಯಾಗುತ್ತದೆ. ‘ನಿದ್ದೆ ಮಾತ್ರೆ ಕೊಡ್ತೀವಿ, ಬಾಎಂದು ಕರೆದೊಯ್ಯುತ್ತಾರೆ. ಅಲ್ಲಿ ನಿಖಿಲ್ಗೆ ಪರಿಚಯವಾಗುವುದು ಕನಸಿನ ಮಾತ್ರೆ. ಮಾತ್ರೆ ತೆಗೆದುಕೊಂಡು ನಿದ್ದೆ ಹೋಗುವ ನಿಖಿಲ್, ಕನಸಿನ ಜಗತ್ತಿನಲ್ಲಿ ತಾನು ಬಯಸುವ ಪಾತ್ರವನ್ನು ನಿರ್ವಹಿಸತೊಡಗುತ್ತಾನೆ.


ಯಾವುದು ನಿಜವಾದ ಬದುಕು. ಕನಸೋ ಅಥವಾ ನನಸೋ. ಜನಕರಾಜನಿಗೊಮ್ಮೆ ಕನಸು ಬೀಳುತ್ತದೆಯಂತೆ. ಅದರಲ್ಲಿ ಆತ ಭಿಕ್ಷುಕನಾಗಿ ಹಸಿವಿನಿಂದ ತತ್ತರಿಸುತ್ತಿರುತ್ತಾನೆಎಚ್ಚರವಾದಾಗಲೂ ಅದೇ ಹಸಿವಿನ ತಳಮಳ ಹೊಟ್ಟೆಯೊಳಗೆ. ಇದನ್ನು ತನ್ನ ಗುರುವಿನೊಂದಿಗೆ ಹಂಚಿಕೊಳ್ಳುತ್ತಾನೆ ರಾಜ. ‘‘ಗುರುಗಳೇ, ಒಂದು ವೇಳೆ ನಾನು ನಿಜಕ್ಕೂ ಭಿಕ್ಷುಕನಾಗಿದ್ದುರಾಜನಾಗಿರುವುದು ಒಂದು ಕನಸಾಗಿರಬಹುದೆ?’’ ಎಂದು ಆತ ಪ್ರಶ್ನಿಸುತ್ತಾನೆ.

ಒಬ್ಬ ಒಂದು ಚಿಟ್ಟೆಯಾದಂತೆ  ಕನಸು ಕಂಡನಂತೆ. ಎಚ್ಚರವಾದಾಗ ಆತನ ಮುಂದೊಂದು ಪ್ರಶ್ನೆನಾನು ಚಿಟ್ಟೆಯ ಕನಸು ಕಂಡಿದ್ದೋ ಅಥವಾ ಚಿಟ್ಟೆಯಾಗಿರುವ ನಾನು ಮನುಷ್ಯನಾಗಿರುವ ಕನಸು ಕಾಣುತ್ತಿದ್ದೇನೆಯೋ?’’ ಚಿತ್ರಕತೆಯಲ್ಲಿ ನಿರ್ದೇಶಕರು ತಂತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಚಿತ್ರದ ಆರಂಭದಲ್ಲಿ ಬಡಪಾಯಿ ನಿಖಿಲ್, ಸ್ಟಾರ್ ನಿಖಿಲ್ ಕನಸು ಕಾಣುತ್ತಿದ್ದಾನೆ ಎಂಬ ನಮ್ಮ ಕಲ್ಪನೆಯೇ ತಿರುವು ಮುರುವಾಗಿ, ಸಿನಿಮಾ ಸ್ಟಾರ್ ನಿಖಿಲ್ ಮುಗ್ಧ, ಸಾಮಾನ್ಯ ನಿಖಿಲನ ಕನಸು ಕಾಣುತ್ತಿದ್ದಾನೆಯೋ ಎನ್ನುವ ಪ್ರಶ್ನೆಯೆಡೆಗೆ ತಂದು ನಿಲ್ಲಿಸುತ್ತದೆ. ಒಂದು ರೀತಿಯಲ್ಲಿ ಸಾಮಾನ್ಯನಾದ ನಿಖಿಲ್ ಸೂಪರ್ ಸ್ಟಾರ್ ಕನಸು ಕಾಣುತ್ತಿದ್ದಾನೆ. ಹಾಗೆಯೇ ಸಿನಿಮಾ ಸ್ಟಾರ್ ನಿಖಿಲ್ ಮುಗ್ಧ, ಜನಸಾಮಾನ್ಯ ನಿಖಿಲನಾಗಿ ಬದುಕನ್ನು ಅನುಭವಿಸುವ ಕನಸು ಕಾಣುತ್ತಾನೆ. ಒಟ್ಟಿನಲ್ಲಿ ಪ್ರತಿಯೊಬ್ಬರ ಬದುಕೂ, ಮತ್ತೊಬ್ಬನ ಪಾಲಿನ ದೊಡ್ಡ ಕನಸು ಎನ್ನುವ ಸಂದೇಶವನ್ನು ಲೂಸಿಯಾ ಚಿತ್ರ ನೀಡುತ್ತದೆ. ಲೂಸಿಯಾ ಕತೆಯನ್ನು ಹಲವರು ಹಾಲಿವುಡ್ ಇನ್ಸೆಪ್ಶನ್ಗೆ ಹೋಲಿಸುವ ತಪ್ಪು ಮಾಡುವುದಿದೆ. ಇನ್ಸೆಪ್ಶನ್ ಅತ್ಯದ್ಭುತವಾದ ಅಷ್ಟೇ ಜಟಿಲವಾದ ಕತಾ ತಂತ್ರವನ್ನು ಹೊಂದಿದೆ. ಮತ್ತು ಇಡೀ ಕತೆಯ ಉದ್ದೇಶಕ್ಕೂ ಲೂಸಿಯಾ ಉದ್ದೇಶಕ್ಕೂ ಯಾವ ರೀತಿಯಲ್ಲೂ ತಾಳೆ ಸಿಗುವುದಿಲ್ಲ. ಇನ್ಸೆಪ್ಶನ್ನಲ್ಲಿ ಇನ್ನೊಬ್ಬನ ಕನಸಿನಲ್ಲಿ ಪ್ರವೇಶಿಸಿ, ಅಲ್ಲಿನ ಆಲೋಚನೆಗಳನ್ನು ಕದಿಯುವ ವಸ್ತು, ಲೂಸಿಯಾಕ್ಕಿಂತ ಭಿನ್ನವಾದುದು. ಲೂಸಿಯಾ ಕತೆ, ಗುರಿ ತೀರಾ ಸರಳವಾಗಿದೆ. ಮತ್ತು ಅತ್ಯಂತ ಜೀವಪರವಾಗಿದೆ. ಆಶಾದಾಯಕವಾಗಿದೆಪ್ರತಿ ಮನುಷ್ಯನೂ ಇನ್ನೊಬ್ಬನ ಬದುಕನ್ನು ತನ್ನ ಕನಸಾಗಿಸಿಕೊಂಡಿರುವ ವಿಚಿತ್ರವನ್ನು ಹೇಳುತ್ತಲೇ, ತಮ್ಮ ತಮ್ಮ ಬದುಕನ್ನು ಪ್ರೀತಿಸಿ ಎಂದು ಚಿತ್ರ ತಿಳಿ ಹೇಳುತ್ತದೆ


ಚಿತ್ರ ಸಾಗುವುದು ಪತ್ತೇದಾರಿ ಶೈಲಿಯಲ್ಲಿ. ಒಂದು ಆತ್ಮಹತ್ಯೆ ಯತ್ನದ ಹಿಂದಿನ ರಹಸ್ಯವನ್ನು ಬಿಡಿಸುವಲ್ಲಿಂದ ಚಿತ್ರ ಆರಂಭವಾಗುತ್ತದೆ. ನಿರೂಪಣಾ ತಂತ್ರ ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ. ಲೂಸಿಯಾ ಎನ್ನೋದು ಯಾವಳೋ ಹುಡುಗಿಯಿರಬಹುದೆಂಬ ನಿರೀಕ್ಷೆಯಲ್ಲಿ ಚಿತ್ರ ನೋಡುತ್ತಿರುವವರ ಮುಂದೆ ಹತ್ತು ನಿಮಿಷದಲ್ಲಿ ಅದೊಂದು ಮಾತ್ರೆಯ ಹೆಸರು ಎನ್ನುವ ರಹಸ್ಯ ಸ್ಫೋಟವಾಗಿ ಬಿಡುತ್ತದೆ. ಚಿತ್ರದ ಕುರಿತಂತೆ ನಮ್ಮನ್ನು ಹೊಸ ನಿರೀಕ್ಷೆಗಳಿಗೆ ಸಿದ್ಧಗೊಳಿಸುತ್ತದೆ.

ಬಿಗಿಯಾದ ಚಿತ್ರಕತೆ ಮತ್ತು ಅದನ್ನು ಯಾವುದೇ ಗೊಂದಲಗಳಿಲ್ಲದೆ ಜೋಡಿಸಿದ ಸಂಕಲನಕಾರನೇ ಚಿತ್ರದ ಯಶಸ್ಸಿನ ಮುಖ್ಯ ಸೂತ್ರದಾರರು. ನಿಖಿಲನ ಎರಡು ವ್ಯಕ್ತಿತ್ವವನ್ನು ಬೇರೆ ಬೇರೆಯಾಗಿ ತೆರೆದಿಡುವ ಸಂದರ್ಭದಲ್ಲಿ ಯಾವುದೇ ಗೊಂದಲಗಳಿಗೆ ಸಿಕ್ಕಿಕೊಳ್ಳದೇ ಪವನ್ ಕುಮಾರ್ ತನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ. ಕಥಾನಾಯಕನಾಗಿ ನೀನಾಸಂ ಸತೀಶ್ ಮತ್ತು ಅಚ್ಯುತ್ ಕುಮಾರ್ ಅತ್ಯಂತ ಸಹಜವಾಗಿ, ಲೀಲಾಜಾಲವಾಗಿ ಪಾತ್ರಗಳನ್ನು ನಿಭಾಯಿಸುತ್ತಾರೆ. ನಾಯಕಿಯಾಗಿ ಶೃತಿ ಹರಿಹರನ್ ಕೂಡ ತುಂಬಾ ಇಷ್ಟವಾಗುತ್ತಾರೆ. ಎರಡು ಭಿನ್ನ ಪಾತ್ರಗಳನ್ನು ಅವರು ನಿಭಾಯಿಸಿದ ರೀತಿ ಚಿತ್ರಕ್ಕೆ ಇನ್ನಷ್ಟು ಲವಲವಿಕೆಯನ್ನು ತುಂಬಿಕೊಟ್ಟಿದೆ. ಚಿತ್ರದೊಳಗಿನ ವಿಕ್ಷಿಪ್ತತೆಗೆ ಪೂರಕವಾದ ತೇಜಸ್ವಿ ಸಂಗೀತ. ಹಾಗೆಯೇ ನಿಖಿಲ್ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವ ಹಾಡು ಚಿತ್ರದ ಹೆಗ್ಗಳಿಕೆ


ಚಿತ್ರ ಪರದೆಯ ಮೇಲೆ ಮುಗಿದರೂ, ನಮ್ಮಳಗೆ ಬೆಳೆಯುತ್ತಾ ಹೋಗುತ್ತದೆ. ಇದುವೇ ಲೂಸಿಯಾ ಚಿತ್ರದ ನಿಜವಾದ ಯಶಸ್ಸು. ಇದೇ ಸಂದರ್ಭದಲ್ಲಿ ಪವನ್ ಕುಮಾರ್ ತನ್ನ ಚಿತ್ರ ನಿರ್ಮಾಣದಲ್ಲಿ ಪ್ರೇಕ್ಷಕರನ್ನೇ ಬಳಸಿಕೊಂಡಿದ್ದಾರೆ. ಅವರದೇ ಹಣದಲ್ಲಿ ವಿಶಿಷ್ಟ ಪ್ರಯೋಗವೊಂದನ್ನು ಮಾಡುವ ಮೂಲಕ, ತನ್ನ ಚಿತ್ರಕ್ಕೆ ವೀಕ್ಷಕ ವರ್ಗವನ್ನು ಕಟ್ಟುವ ಪ್ರಯತ್ನವೂ ಅವರಿಂದಲೇ ನಡೆದಿದೆ. ಇದೊಂದು ರೀತಿಯಲ್ಲಿ, ಕೆಳಮಟ್ಟದ ವೀಕ್ಷಕರಿಗಾಗಿ ಕೆಳಮಟ್ಟದ ಚಿತ್ರಗಳನ್ನು ಮಾಡುವ ಬದಲು, ಅವರನ್ನು ತನ್ನ ಚಿತ್ರದ ಜೊತೆಗೇ ಮೇಲೆತ್ತುವ ಕೆಲಸವಾಗಿದೆ. ಪವನ್ ಕುಮಾರ್ ಮೂಲಕ ಒಂದು ಚಳವಳಿಯನ್ನೇ ಹುಟ್ಟು ಹಾಕಿದ್ದಾರೆ. ಅವರ ಸಾಹಸ ಹೀಗೆ ಮುಂದುವರಿಯಲಿ. ಇತರರಿಗೂ ಸ್ಫೂರ್ತಿಯಾಗಲಿ. ಕನ್ನಡ ಚಿತ್ರೋದ್ಯಮ ಬೆಳೆಯಲಿ.