ವಿಮರ್ಶೆ-ನೆಲ್ಲುಕುಂಟೆ ವೆಂಕಟೇಶ್
1
‘ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ …ಸೂಫಿಯ ಕಣ್ಣಲ್ಲಿ ಹನಿಗಳು’ ಎಂಬುದು ಬಿ.ಎಂ. ಬಶೀರರ ಸಣ್ಣ ಪದ್ಯಗಳ ಗುಚ್ಛ.
ಇದರಲ್ಲಿ 124 ಪದ್ಯಗಳಿವೆ. ಮಂಗಳೂರಿನ ಇರುವೆ’ಪ್ರಕಾಶನ 2015 ರಲ್ಲಿ ಈ ಸಂಕಲನವನ್ನು ಪ್ರಕಟಿಸಿದೆ. ಈ ಕೃತಿ ನನಗೆ ಆಕರ್ಷಕವೆನ್ನಿಸಿದ್ದು ಈ ಕಾರಣಕ್ಕೆ; ಇದನ್ನು ಒಬ್ಬ ಮೌಲ್ವಿಗೆ ಅರ್ಪಿಸಲಾಗಿದೆ. ಅರ್ಪಣೆ ಈ ರೀತಿ ಇದೆ, ‘ನನ್ನನ್ನು ಸಹಿಸಿಕೊಳ್ಳಲಾಗದ ಮೌಲ್ವಿ ಒಂದು ದಿನ ಬೆತ್ತ ಹಿಡಿದು ಬಲವಂತವಾಗಿ ಮದ್ರಸದಿಂದ ಹೊರದಬ್ಬಿದರು! ನನ್ನ ಆಧ್ಯಾತ್ಮದ ಕಲಿಕೆ ಅಲ್ಲಿಂದಲೇ ಆರಂಭವಾಯಿತು,. ಆ ಮೌಲ್ವಿಗೆ ಕೃತಜ್ಞ’ ಎನ್ನಲಾಗಿದೆ. ಇದು ಅರ್ಪಣೆಯ ರೂಢಿಗತ ಜಾಡು ಮುರಿದ ಹೊಸ ಮಾದರಿ.
ಧಾರ್ಮಿಕ ಸಂಸ್ಥೆಯೊಂದರಿಂದ ಹೊರದಬ್ಬಿಸಿಕೊಳ್ಳುವುದೆಂದರೆ, ಸಮುದಾಯದ ಧಾರ್ಮಿಕ ಅಸ್ಮಿತೆಯನ್ನು ನಿರಾಕರಿಸುವುದೂ ಆಗಿರುತ್ತದೆ. ಇದು ನೋವಿನ ವಿಚಾರವಾಗುವುದರ ಬದಲಿಗೆ, ಬಯಲಿಗೆ ಬಂದಾಗ ಕವಿಗೆ ನಿರಾಳ ಭಾವ ಆವರಿಸಿದಂತಾಗುತ್ತದೆ. ಹಾಗಾಗಿಯೇ ‘ಬೆತ್ತ ಹಿಡಿದು ಹೊರದಬ್ಬಿದಾತ ಕಲಿಕೆಗೆ ದಾರಿ ಕಲ್ಪಿಸಿದನೆಂಬ ಕಾರಣಕ್ಕೆ ಆಕರ್ಷಕ.
ಕಟ್ಟಡದಿಂದ ಬಯಲಿಗೆ ಬಂದ ಈ ಸೂಫಿ ಕವಿ ‘ಸ್ಥಾವರ ರೂಪದ’ ಧಾರ್ಮಿಕ ಆಚರಣೆಗಳ ವಿರುದ್ಧ ದಂಗೆ ಆರಂಭಿಸುತ್ತಾನೆ.
ಬಯಲಲ್ಲಿ, ಶೂನ್ಯದಲ್ಲಿ, ಬಡವನಲ್ಲಿ, ಹಸಿದವನ ಕಣ್ಣುಗಳಲ್ಲಿ ದೇವರನ್ನು ಹುಡುಕಲಾರಂಭಿಸುತ್ತಾನೆ. ಸೂಫಿ ಕವಿಗೆ ಉಳ್ಳವರು ಮಸೀದಿ, ಮಂದಿರಗಳ ಹೆಸರಲ್ಲಿ ಮೋಸ ಮಾಡುತ್ತಿದ್ದಾರೆಂದು ಅನ್ನಿಸಲಾರಂಭಿಸುತ್ತದೆ. ವ್ಯಂಗ್ಯ ಮತ್ತು ವ್ಯಥೆಗಳಲ್ಲಿ ಪದ್ಯಗಳು ಮೈದಳೆಯುತ್ತಾ ಹೋಗುತ್ತವೆ. ಎಲ್ಲಿಯೂ ಕೃತಕವೆನ್ನಿಸುವುದಿಲ್ಲ. ಕರುಳು ಸುಟ್ಟುಕೊಂಡಂತೆ ದೇವನೆಂಬ ಪ್ರೇಮಿಯನ್ನು ಹಂಬಲಿಸಿ ಹಾಡುವ, ಕಲ್ಪನೆಯ ಬೊಗಸೆಗೆ ಅವನನ್ನು ತುಂಬಿಸಿಕೊಳ್ಳುವ ಪ್ರಯತ್ನವನ್ನು ರೂಮಿ ಆದಿಯಾಗಿ ಅನೇಕ ಸೂಫಿಗಳು ಮಾಡುತ್ತಾರೆ.
ಬಶೀರರು ಬರೆಯುತ್ತಾರೆ.
‘ಧರ್ಮ ಪಂಡಿತರು
ಕಟ್ಟಿಕೊಟ್ಟ ಬುತ್ತಿಯನ್ನು
ಹೇಳಿಕೊಟ್ಟ ಮಾತನ್ನು
ಹೊತ್ತುಕೊಂಡು…ಹೊರಟೆ.
… …
ಅರ್ಧ ದಾರಿಯಲ್ಲೇ ಮುಗಿದು ಹೋಗಿವೆ
ನಿನ್ನ ತಲುಪಲು ದಿಕ್ಕು ತಿಳಿಯದೆ
ತೊಳಲಾಡುತ್ತಿದ್ದೇನೆ..’
ಪದ್ಯ ಮೇಲು ನೋಟಕ್ಕೆ ಹೊಸದೇನನ್ನು ಹೇಳುತ್ತಿಲ್ಲವೆಂದು ಅನ್ನಿಸಬಹುದು. ಆದರೆ ಪುರೋಹಿತಶಾಹಿಯೆಂಬ ಧಾರ್ಮಿಕ ಮಧ್ಯವರ್ತಿಯ ಮೂಲಕವೇ ದೇವನನ್ನು ತಲುಪಬೇಕಾದ ವ್ಯವಸ್ಥೆಯ ಕುರಿತು ವ್ಯಂಗ್ಯ ಮಾಡುವ ಪರಂಪರೆಗೆ ಸೇರುವುದರಿಂದ, ಸಾವಿರ ಗಟ್ಟಲೆ ವರ್ಷಗಳ ದೊಡ್ಡ ಶಾಲೆಗೆ ಸದಸ್ಯತ್ವವನ್ನು ಕಲ್ಪಿಸಿಕೊಳ್ಳುತ್ತದೆ. ಮಧ್ಯವರ್ತಿಗಳ ವಿರುದ್ಧ ಸಂತರು, ಅವಧೂತರು, ಸೂಫಿಗಳು ಬಂಡೆದ್ದಿದ್ದಾರೆ.
ಪುರೋಹಿತಶಾಹಿಗೆ ‘ಭಕ್ತಿಯೆಂಬುದು ತೋರುಂಬ ಲಾಭ’ವೆಂದು ವಚನಕಾರರು ನೇರ ದಾಳಿ ಮಾಡುತ್ತಾರೆ. ಅವರು ಆಕಾರಗಳನ್ನು ಒಡೆದು ಹಾಕಿ ಶೂನ್ಯವನ್ನು, ನಿರಾಕಾರಗಳನ್ನು ಕುರಿತು ಧ್ಯಾನಿಸುತ್ತಾರೆ. ದಕ್ಕಿದ ವಿವೇಚನೆಯನ್ನು ಜನರ ಕೈಗೆ ನೀಡುತ್ತಾರೆ. ಈ ವಿಚಾರದಲ್ಲಿ ಮನುಷ್ಯನಿಗೆ ಹಲವು ಮಿತಿಗಳಿವೆ. ಕಲ್ಪನೆಗಳನ್ನು ಮೂರ್ತ ರೂಪಕ್ಕಿಳಿಸಬೇಕೆಂಬ ಹಂಬಲ ಮತ್ತು ಹಠದ ಮಿತಿ ಅವು. ವೈದಿಕ ಶಾಹಿಯ ಮುಖ್ಯ ಶಕ್ತಿಯಿರುವುದೇ ಸಂಕೇತಗಳಲ್ಲಿ. ಜನರಿಗೆ ಪಟಗಳು ದೈವದಾರಿಯ ನಕಾಶೆಗಳಂತೆ ಅದು ಬಿಂಬಿಸುತ್ತದೆ. ಚೈತನ್ಯವನ್ನು ಇಲ್ಲಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸ್ಥಾವರಗೊಳಿಸಲಾಗುತ್ತದೆ. ಬುದ್ಧ ವಿಷ್ಣುವಿನ ಅವತಾರವಾಗುವುದು, ಬಸವಣ್ಣ ದೇವರಾಗಿ ಜನರ ಮಧ್ಯದಿಂದ ಪ್ರತ್ಯೇಕವಾಗುವುದು ಸಂಕೇತವಾಗುವ ಭಾಗವಾಗಿಯೆ.
ಇಂದು ರಾಜಕೀಯ,ಆರ್ಥಿಕ,ಸಾಮಾಜಿಕ,ಸಾಂಸ್ಕೃತಿಕ ಏರು-ಪೇರುಗಳ ಕಾರಣಗಳಿಂದಾಗಿ ಭೀಕರ ಕಷ್ಟಕ್ಕೆ ಸಿಲುಕಿದ ಹಳ್ಳಿಗಳು ನರಕ ಸದೃಶವಾಗುತ್ತಿದ್ದರೆ, ಊರುಗಳಲ್ಲಿನ ದೇವಸ್ಥಾನ, ಮಸೀದಿ, ಚರ್ಚುಗಳು ಅರಮನೆಗಳಂತಾಗುತ್ತಿವೆ. ಬಿದ್ದ ರೈತನ ಹೆಣದ ನಡುವೆ ಘಂಟಾನಾದ, ಆಝಾನ್ ಗಳೆಲ್ಲ ಕ್ರೂರ ವ್ಯಂಗ್ಯದಂತೆ ಕೇಳಿಸುತ್ತವೆ.
ಭಾರತದ ಪರಂಪರೆಗಳಲ್ಲಿ ಕಾವ್ಯವೆನ್ನುವುದು ಜನರ ಬದುಕಿನ ಅತಿ ಮುಖ್ಯ ಅಂಶ. ಸಂಭ್ರಮಕ್ಕೂ ಕಾವ್ಯವೇ, ಸೂತಕಕ್ಕೂ ಕಾವ್ಯವೇ! ಶತಮಾನಗಳ ಕಾಲ ವೈದಿಕ ಯಜಮಾನಿಕೆಯನ್ನು ಎದುರಿಸಿದ ಭಕ್ತಿಚಳುವಳಿಯ ಮುಖ್ಯ ಅಸ್ತ್ರ ಹಾಡು ಮತ್ತು ಕಾವ್ಯವೇ. ಇಲ್ಲಿ ನಾಸ್ತಿಕತೆ ಎಂಬುದಿಲ್ಲ. ಇಷ್ಟ ದೈವವೊಂದನ್ನು ರೂಪಿಸಿಕೊಂಡು, ಎದುರಾಳಿಯಾದ ಧಾರ್ಮಿಕ ಮಧ್ಯವರ್ತಿಯನ್ನು ಎದುರುಗೊಳ್ಳಲಾಗುತ್ತದೆ. [ಕವಿ ಬ್ರೆಕ್ಟ್ ‘ಗೆಲಿಲಿಯೋ’ನಾಟಕದಲ್ಲಿ ಪಾತ್ರವೊಂದರಿಂದ ‘ಭೂಮಿ ವಿಶ್ವದ ಕೇಂದ್ರವೆಂದು ಪಾದ್ರಿಗಳು ಯಾಕೆ ಹಠ ಮಾಡುತ್ತಾರೆ ಅಂದರೆ ; ಭೂಮಿ ಚರ್ಚುಗಳ ಸುತ್ತ ಸುತ್ತುತ್ತಿದೆ. ಚರ್ಚುಗಳು ಪಾದ್ರಿಗಳ ಸುತ್ತಾ ಸುತ್ತುತ್ತವೆ ಅದಕ್ಕೆ’ ಎಂದು ಹೇಳಿಸುತ್ತಾನೆ]..
ವಚನಕಾರರಂತಹ ಸಾಮಾಜಿಕ ಧಾರ್ಮಿಕ, ರಾಜಕೀಯ, ಆರ್ಥಿಕ ಚಳುವಳಿಗಾರರೂ ತಮ್ಮ ಅಭಿವ್ಯಕ್ತಿಗೆ ಕಾವ್ಯದ ನೆರವು ಪಡೆಯುತ್ತಾರೆ. ನಂತರದ ಭಕ್ತಿ ಚಳುವಳಿಯ ಕವಿಗಳೂ ಇದೇ ಮಾದರಿಯನ್ನು ಅಪ್ಪಿಕೊಳ್ಳುತ್ತಾರೆ. ಈ ಮಾದರಿಯಿಂದಾಗಿ ದಾಸರು, ಮೀರಾ, ಕಬೀರ, ತತ್ವಪದಕಾರರು ಜನರ ಪ್ರಜ್ಞೆಯ ಭಾಗವಾಗಿ ಉಳಿದುಕೊಂಡಿದ್ದಾರೆ. ಈ ಮಾದರಿಯ ಪ್ರಮುಖ ಸಮಸ್ಯೆಯೆಂದರೆ ಇಷ್ಟದೈವದ ಹೆಸರಲ್ಲಿ ಏಕಮಾದರಿಯ ದೈವದ ಕಲ್ಪನೆಯನ್ನು ಪ್ರತಿಪಾದಿಸಲಾಗುತ್ತದೆ ಹಾಗೂ ಬಹುತ್ವವನ್ನು ನಿರಾಕರಿಸಲಾಗುತ್ತದೆ.
ಆಧುನಿಕ ಕಾವ್ಯದಲ್ಲಿ ಈ ಮಾದರಿ ತುಸು ತೆಳು ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ನವೋದಯದ ನಂತರ ನಾಸ್ತಿಕವಾದ ಹೆಚ್ಚು ಪ್ರಭಾವಶಾಲಿಯಾಗಿರುವಂತೆ ಕಾಣುತ್ತದೆ. ನವೋದಯದಲ್ಲಿ ಕುವೆಂಪುರವರು ಹೊಸ ದೈವದ ಕಲ್ಪನೆಯನ್ನು ಮಂಡಿಸುತ್ತಾರೆ; ಭಾರತಾಂಬೆ ಮತ್ತು ಕನ್ನಡಾಂಬೆ ಎಂಬ ದೈವಗಳು ಅವು. ಸೆಕ್ಯುಲರ್ ಎಂಬಂತಿದ್ದ ಈ ದೈವ ಕಲ್ಪನೆಗಳು ಆಳುವವರ ವಿಕೃತ ರಾಜಕಾರಣಕ್ಕೆ ಇಂದು ಸಾಧನಗಳಾಗಿವೆ. ಕುವೆಂಪು ಸಹ ಬಸವಣ್ಣನಂತೆ ಜನಸಾಮಾನ್ಯರ ದೈವಗಳು, ಜನರ ಶೋಷಣೆಯ ಸಾಧನಗಳು ಎಂದು ನಂಬಿದ್ದರು. ಬಸವಣ್ಣ ಕಲ್ಲುದೈವ, ಮಡಕೆ ದೈವಗಳೆಂದು ಅವುಗಳನ್ನು ನಿರಾಕರಿಸುತ್ತಾನೆ. ಕುವೆಂಪು ಮಹದೇಶ್ವರನ ಬೆಟ್ಟಕಂತೆ ಎಂದು ವ್ಯಂಗ್ಯ ಮಾಡುತ್ತಾರೆ ; ನೋಯುತ್ತಾರೆ.
ಏಕದೈವ ಆರಾಧನೆಯ ಸಗುಣ ನಿರಾಕಾರ ದೈವದ ಕಲ್ಪನೆ ಇಸ್ಲಾಂನದು. ಈ ಮಾದರಿಯ ಮೂಲಕ ದೇವರನ್ನು ತಲುಪಲು ಬೇಕಾದ ದಾರಿಯಲ್ಲಿ ಅಡ್ಡವಾಗುವ ಮಧ್ಯವರ್ತಿಯನ್ನು ನಿರಾಕರಿಸಿ ನಡೆಸುವ ಬಂಡಾಯಕ್ಕೆ ಇಲ್ಲಿ ಅವಕಾಶಗಳಿವೆ. ಸೂಫಿಸಂ ಇದಕ್ಕೆ ಅತ್ಯುತ್ತಮ ಮಾದರಿ. ಬಶೀರ್ ಈ ಮಾದರಿಯನ್ನು ವಿಸ್ತರಿಸುತ್ತಿದ್ದಾರೆನ್ನಿಸುತ್ತದೆ. ಇದು ಮಹತ್ವದ ಮಾದರಿ ಎಂಬ ಕಾರಣಕ್ಕೆ ವಿವರಿಸಬೇಕಾಗಿದೆ; ನಮ್ಮ ಆಧುನಿಕ ಕನ್ನಡ ಕವಿಗಳು ಈ ಮಾದರಿಯನ್ನು ತುಸು ಬಿಟ್ಟುಕೊಟ್ಟಂತೆ ಕಾಣುತ್ತದೆ. ನಾಸ್ತಿಕವಾದ ಆಧುನಿಕರ ನಿಲುವು. ಇದು ಜನರಿಂದ ಕಾವುವನ್ನು ದೂರ ಮಾಡಿದ ನಿಲುವೂ ಹೌದು. ಆದರೆ ವ್ಯಂಗ್ಯದ ಮೂಲಕ ದರ್ಶನವನ್ನು [ಸತ್ಯವನ್ನು] ಕಾಣಿಸುವ ಬಗೆ ಆಧುನಿಕರ ಕೈಯಲ್ಲಿ ಪರಿಣಾಮಕಾರಿ ಅಸ್ತ್ರವಾಗುತ್ತದೆ [‘ಮಾತೆ ಜ್ಯೋತಿರ್ಲಿಂಗ ಬೃಹನ್ನಳೆಗೆ-ಎನ್ನುವಾಗ] ಆದರೆ ಭಕ್ತಿ ಕವಿಗಳು ಸತ್ಯದ ಮೂಲಕ ವ್ಯಂಗ್ಯವನ್ನು ಕಾಣಿಸುತ್ತಾರೆ.
ಬಶೀರ್ ಕಾವ್ಯದಲ್ಲಿ ಈ ಎರಡೂ ಮಾದರಿಗಳು ಮಿಳಿತಗೊಂಡಿವೆ. ಇಲ್ಲಿ ದೇವರು ಎಂಬುದು ನಿರ್ವಿವಾದಿತ ವಿಚಾರ. ಅದು ಸ್ಥಾವರವೇ? ದಯಾರೂಪಿ ಪ್ರಕೃತಿಯ ಭಾಗವೇ? ಎಂಬುದು ಪ್ರಶ್ನೆ. ಈ ತತ್ವಕ್ಕೆ ಸಂಬಂಧಿಸಿದಂತೆ ಧರ್ಮ ಪಂಡಿತರ ಮತ್ತು ಸೂಫಿಗಳ ನಡುವಿನ ಸಂಘರ್ಷವಿದೆ. ಸೂಫಿ ಆಡಂಬರಗಳಿಂದ ಹೊರಬರಲು ಯತ್ನಿಸುತ್ತಾನೆ. ಸೂಫಿಯೂ ಗುರುವಿಗೆ ಸಂಪೂರ್ಣ ಶರಣಾಗುತ್ತಾನೆ. ಆದರೆ ಜನರ ನೋವಿನ ಜತೆ ನಿಲ್ಲುತ್ತಾನೆ.
ಬಶೀರ್ ಬರೆಯುತ್ತಾರೆ.
‘ಮಸೀದಿಯ ಅಮೃತಶಿಲೆಯ
ನೆಲದ ಹಾಸು ಕನ್ನಡಿಯಂತೆ
ಹೊಳೆಯುತಿತ್ತು..
ನನ್ನ ದೊರೆಯೇ,
ನಿನಗೆಂದು ಬಾಗಿದವರು
ಆ ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿ ಸುಖಿಸುತ್ತಿದ್ದಾರೆ’.[30]
‘ಮಸೀದಿಯನ್ನು
ಅಮೃತಶಿಲೆಯಲ್ಲಿ
ಬಗೆ ಬಗೆಯಾಗಿ ಅಲಂಕರಿಸಲಾಗಿದೆ
ಇವರು ನನ್ನ ದೊರೆಯ ಮರೆತು
ಮಸೀದಿಯನ್ನೇ ಆರಾಧಿಸತೊಡಗಿದ್ದಾರೆ!’[55]
‘ಅರಮನೆಯಂತಹ ಮಸೀದಿ!
ಅಮೃತಶಿಲೆಯಲ್ಲಿ
ದಾನಿಗಳ ಹೆಸರು ಕೆತ್ತಿದ್ದಾರೆ,
ರಾತ್ರಿ ನನಗೆ ನರಕದ ಕನಸು ಬಿತ್ತು
ನನ್ನ ದೊರೆಯೇ
ನರಕದ ಬಾಗಿಲಲ್ಲಿ ಆ ದಾನಿಗಳ ಹೆಸರೂ ಕೆತ್ತಲ್ಪಟ್ಟಿತ್ತು’.[53]
‘ಅರಮನೆಯಂತಹ ಹಂಗು
ಬೇಡವೆಂದು
ಮಸೀದಿಯೆಡೆಗೆ ನಡೆದೆ.
ಆದರೆ ಮಸೀದಿಯ ಪುರೋಹಿತನೋ
ಅರಮನೆಗೆ ಮುಖ ಮಾಡಿ
ಪ್ರಾರ್ಥನೆ ಸಲ್ಲಿಸುತ್ತಿದ್ದ!’[52]
ಈ ನಾಲ್ಕೂ ಪದ್ಯಗಳು ಬಹುಪಾಲು ಒಂದೇ ವಿಚಾರವನ್ನು ಧ್ಯಾನಿಸುತ್ತಿವೆ. ಅರಮನೆ ಮತ್ತು ಗುರುಮನೆಗಳು ದೇಶ, ಕಾಲ, ಧರ್ಮಗಳನ್ನು ಮೀರಿ ಸಮಾಜವನ್ನು ಹಿಂದು ಹಿಂದಕ್ಕೆ ಎಳೆದು ಕಟ್ಟಿಹಾಕಲು ನಿರಂತರ ಪ್ರಯತ್ನಿಸುತ್ತಲೇ ಇವೆ. ಪಟ್ಟಭದ್ರಪಡಿಸಿಕೊಳ್ಳಲು ಒಟ್ಟುಗೂಡುವ ಇವು ಯಾವುದೇ ಕಾಲದ ಅತ್ಯಂತ ದುಷ್ಟ ಮತ್ತು ಅಪಾಯಕಾರಿ ಶಕ್ತಿಗಳು. ನಾಡಿನ ಭೌತಿಕ ಅಭಿವೃದ್ಧಿಯ ವಿಷಯದಲ್ಲಿ ಮುಂದಕ್ಕೂ ಧರ್ಮ,ಸಂಸ್ಕೃತಿಗಳ ವಿಚಾರದಲ್ಲಿ ಮಧ್ಯಕಾಲೀನ ಕಟ್ಟಳೆಗಳಿಗೂ ಏಕಕಾಲದಲ್ಲಿ ಸೇತುವೆ ಕಟ್ಟ ಬಯಸುವ ಧಾವಂತ ಇವಕ್ಕೆ. ಎರಡು ತಲೆ, ಹಲವು ನಾಲಿಗೆಗಳ ಈ ಜೋಡಿಯನ್ನು ಪ್ರತಿಗಾಮಿಗಳೆಂದೋ, ಪುರೋಗಾಮಿಗಳೆಂದೋ ಒಂದು ಇಕ್ಕಳದಲ್ಲಿ ಸಿಲುಕಿಸದಂತೆ ಎಚ್ಚರವಹಿಸುತ್ತವೆ.
ಹಾಗಾಗಿಯೇ ಮಸೀದಿಯ ಧ್ವಂಸವೂ, ಅಣುಬಾಂಬು ಪ್ರಯೋಗವೂ ವೈರುಧ್ಯಗಳಿಲ್ಲದ ಕ್ರಿಯೆಗಳಾಗುತ್ತವೆ. ಗುರು ಮತ್ತು ಅರಸುಗಳ ಸಂಬಂಧ ದಿನೇ ದಿನೇ ಬಲಿಷ್ಠವಾಗುತ್ತಿರುವ ಈ ಸಂದರ್ಭದಲ್ಲಿ ಕವಿ ಪ್ರಾಮಾಣಿಕವಾಗಿ ಪ್ರತಿಭಟಿಸದೆ ದಾರಿಯಿಲ್ಲ. ಅದಕ್ಕೂ ಮೊದಲು ತನ್ನ ಮನೆಯ ಯಜಮಾನನ ವಿರುದ್ಧವೂ ಪ್ರತಿಭಟಿಸಬೇಕಾದ ದುರಂತ ಬಂದೊದಗಿರುವುದು ಬರೀ ವಿಪರ್ಯಾಸವಷ್ಟೇ ಅಲ್ಲ.
ಕಾವ್ಯವನ್ನು ಸಾಂಪ್ರದಾಯಕವಾಗಿ ಓದುವ ಪಂಡಿತರು ಮೇಲಿನ ಪದ್ಯಗಳನ್ನು ಸ್ಲೋಗನ್ನುಗಳೆಂದು ಹಾಗೂ ರೆಟರಿಕ್ಕುಗಳೆಂದು ಹೇಳಿಬಿಡಬಹುದು. ಆದರೆ ಇವು ಕಾಲದ ಅತಿರೇಕಗಳ ವಿರುದ್ಧ ನಡೆಸಿದ ಪ್ರತಿಭಟನೆ ಎನ್ನಿಸುತ್ತವೆ. ದುಡ್ಡಿರುವವನು [ಅವನು ತಲೆಹಿಡುಕ, ಕಳ್ಳ, ಕೊಲೆಗಾರ, ಭೂ ಮಾಫಿಯಾ, ಗಣಿ ಮಾಫಿಯಾದವನಾಗಿದ್ದರೂ] ಸಮುದಾಯದ ಪ್ರತಿಷ್ಠಿತ ವ್ಯಕ್ತಿಯೆನ್ನಿಸಿಕೊಳ್ಳುತ್ತಾನೆ. ಆ ಧಾರ್ಮಿಕ ಕಟ್ಟಡಕ್ಕೆ ಮುಖ್ಯಸ್ಥನಾಗುತ್ತಾನೆ. ಧರ್ಮ ಪಂಡಿತ ಕಾಬಾದೆಡೆಗೆ ತಿರುಗಿ ಪ್ರಾರ್ಥಿಸುತ್ತಿದ್ದರೂ ಬಂಡುಕೋರನಾದ ಕವಿಗೆ ಅರಮನೆಯೆಡೆಗೆ ಆತ ತಿರುಗಿರುವುದು ಕಾಣಿಸುತ್ತದೆ. ರಾಜನ ಆಸ್ಥಾನದಲ್ಲಿ ಕೂತು ಹಾಡಿದ ಕವಿಗಳು, ಸೂಫಿಗಳು ಆಳುವವರಿಗೆ ಏನನ್ನು ಬೋಧಿಸಿರಬಹುದು? ಎಂಬ ಪ್ರಶ್ನೆ ಹುಟ್ಟುತ್ತದೆ.
’ಕಾಯಾ ನಹೀ ತೇರಿ’ ಎಂದ ಕಬೀರ ಅರಮನೆಯೆಡೆಗೆ ತಿರುಗಲಿಲ್ಲ.’ಲೋಕದ ಕಾಳಜಿ ಮಾಡತೀನಂತಿ.. ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ’ ಎಂದು ಹಂಗಿಸಿದ ಶರೀಫನೂ ಅರಮನೆಯೆಡೆಗೆ ಹೋಗಲಿಲ್ಲ. ಮೊದಲಿನಿಂದಲೂ ಪುರೋಹಿತಶಾಹಿ ಮತ್ತು ಆಳುವವರ ಜುಗಲ್ಬಂದಿಗಳಲ್ಲಿ ಸಮುದಾಯಗಳು ಸಿಲುಕಿ ನಲುಗಿ ಹೋಗಿವೆ ಎಂಬುದು ಅರಿವಿಗೆ ಬರಲಾರಂಭಿಸುತ್ತಿದ್ದಂತೆ ಬಶೀರರ ಪದ್ಯಗಳು ಸ್ಲೋಗನ್ನುಗಳಲ್ಲ ಎನ್ನಿಸುತ್ತವೆ. ’ನರಕದ ಬಾಗಿಲಲ್ಲಿ [ ಮಸೀದಿಯ ಫಲಕದಲ್ಲಿನ] ದಾನಿಗಳ ಹೆಸರು ಕೆತ್ತಲ್ಪಟ್ಟಿತ್ತು ಎಂಬ ಪದಗಳು ಧನಾಡ್ಯರ ಕುರಿತು ಕವಿಯೊಬ್ಬ ಮಾಡುತ್ತಿರುವ ಆತ್ಯಂತಿಕ ವಿಮರ್ಶೆ. ಜೊತೆಗೆ ಕವಿಗೂ ನರಕದ ಕನಸು ಬೀಳುತ್ತದೆ ಎಂಬುದು ಸತ್ಯ ಮತ್ತು ವ್ಯಂಗ್ಯ.
ಬಶೀರ್ ಬದುಕುತ್ತಿರುವ ಸಮಾಜವೂ ಸೇರಿದಂತೆ ಎಲ್ಲ ಸಮಾಜಗಳೂ ಉಸಿರುಕಟ್ಟಿದ ಸ್ಥಿತಿಯಲ್ಲಿ ಒದ್ದಾಡುತ್ತಿವೆ. ಆದರೆ ಜಾತಿ ಸಮಾಜಗಳಲ್ಲಿ ಬದುಕುತ್ತಿರುವ ದಲಿತ ಮತ್ತು ದಮನಿತರಿಗೆ ಹತ್ತಿರದ ದಮನಕಾರರೆಂದರೆ ಪ್ರಬಲ ಜಾತಿಗಳೆ. ಪುರೋಹಿತಶಾಹಿಯೆಂಬುದು ಅಮೂರ್ತವಾದ ವಿಚಾರ. ಬಶೀರರಿಗೆ ಹಾಗಲ್ಲ. ಇಡೀ ಸಮಾಜವೇ ಧರ್ಮಪಂಡಿತರ ನಿರ್ದೇಶನದಂತೆ ನಡೆಯುತ್ತಿರುವ ಹಾಗೆ ಕಾಣುತ್ತಿದೆ. ಅದರ ಫಲವಾಗಿಯೇ ಐಸಿಸ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಕ್ರಿಯಾಶೀಲವಾಗುವುದು,ಮಹಿಳೆಯರು ವಿವಿಧ ರೂಪಗಳಲ್ಲಿ ಬಂಧಿಯಾಗುವುದು. ಧನಾಡ್ಯ ಶಕ್ತಿಗಳು ಮತ್ತು ಧರ್ಮಪಂಡಿತರು ಒಟ್ಟುಗೂಡಿ ಜನಸಾಮಾನ್ಯರ ಮೇಲೆ ನಡೆಸುತ್ತಿರುವ ದಾಳಿಯ ಬಲಿಪಶುಗಳ ಸಂಖ್ಯೆ ದೊಡ್ಡದು. ಆರ್ಥಿಕ ಅಸಮಾನತೆ ಮತ್ತು ಧಾರ್ಮಿಕ ಶೋಷಣೆ 21 ನೇ ಶತಮಾನದಲ್ಲಿ ಎಲ್ಲ ಸಮಾಜಗಳೂ ಎದುರಿಸುತ್ತಿರುವ ಸಮಸ್ಯೆ. ಹಾಗಾಗಿ ಬಶೀರರ ಸರಳವೆನ್ನಿಸುವ ಪ್ರಶ್ನೆಗಳು ವಿಶ್ವಸ್ಥವಾಗುತ್ತಾ ಹೋಗುತ್ತವೆ.
ಬಶೀರರ ಪದ್ಯಗಳಲ್ಲಿ ಪದೇ ಪದೇ ಬರುವ ‘ದೊರೆ’ ಕೂಡಲ ಸಂಗಮ, ಗುಹೇಶ್ವರ, ಚನ್ನಮಲ್ಲಿಕಾರ್ಜುನನಂತವನು. ಇಲ್ಲಿನ ‘ದೊರೆ’ಆಳುವವನು ಮಾತ್ರವೇ? ಆತನಿಗೆ ಪ್ರಾರ್ಥನೆ ಮತ್ತು ನಿವೇದನೆ ಮಾತ್ರ ಸಾಧ್ಯವೇ?. ವಚನಕಾರರು ‘ಒಡಲುಗೊಂಡು ನೋಡು’ ಎಂದು ಸವಾಲು ಹಾಕುತ್ತಾರೆ. ಅದು ಜನಪದರ ಸವಾಲು. ಹಾಗಾಗಿ ವಚನಗಳು ಜನಪದರ ಅಭಿವ್ಯಕ್ತಿಯೂ ಆಗಿಬಿಡುತ್ತವೆ. ಹಳ್ಳಿಯ ಹೆಂಗಸರು, ದೇವರಿಗೆ ‘ನಿನ್ ಮಕಕ್ಕೆ ಮುಳ್ಳಾಕ’ ‘ನಿನ್ ಕಣ್ಣಿಂಗಿ ಹೋಗಾ’ಎಂದು ಬೈಗುಳ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಅವರು ವಾಸ್ತವವಾದಿಗಳು ಮತ್ತು ಭೌತವಾದಿಗಳು. ಈ ರೀತಿಯ ವರ್ತನೆಗಳನ್ನು ಪಶ್ಚಿಮದ ಏಕದೇವತಾರಾಧನೆಯ ಏಕೀಕೃತ ಬುಡಕಟ್ಟುಗಳು ‘ಪೇಗನ್ ರಿಲಿಜನ್’ಎಂದು ಹಂಗಿಸುತ್ತವೆ. ಬಶೀರ್ ಹೀಗೆ ತನ್ನ ದೊರೆಯನ್ನು ಪ್ರಶ್ನಿಸಲಾಗದ, ಅವನೊಂದಿಗೆ ಸಂವಾದ ಮಾಡಲಾಗದ ಸಂಕಟದಲ್ಲಿ ಬರೆಯುತ್ತಾರೆ. ಮಧ್ಯವರ್ತಿಯೆಂಬ ಪುರೋಹಿತನನ್ನು ನಿರಾಕರಿಸದೆ, ತಾವು ನಂಬಿದ ದೇವರಿಗೂ [ಹಾಗೆ ಕರೆಯಬಹುದೇ ಎಂಬ ಅನುಮಾನದೊಂದಿಗೆ] ಸವಾಲು ಹಾಕುವ ದಿಟ್ಟತನ ವಚನಕಾರರದು.
ಕಟ್ಟಡಗಳು ಎಷ್ಟು ಕಲುಷಿತವಾಗಿವೆಯೆಂದು ಕವಿ ಬರೆಯುತ್ತಾನೆ.
‘ಹೊರಟಾಗ ಈ ಗಾಳಿ
ಎಷ್ಟು ಶುದ್ಧವಾಗಿತ್ತು
ಮಸೀದಿ, ಮಂದಿರ, ಚರ್ಚುಗಳನ್ನು
ಹಾದು ಬಂದಿರಬೇಕು
ಉಸಿರಾಟ ಕಷ್ಟವಾಗುತ್ತಿದೆ’.[83]
ರಾಜಕೀಯಗೊಂಡ ಧರ್ಮದ ಕೊಳೆತ ವಾಸನೆಯ ಸ್ಪರ್ಶವಿದು. ಇದರಿಂದ ತಪ್ಪಿಸಿಕೊಳ್ಳಲು ಕವಿ ಮತ್ತೆ ಮತ್ತೆ ಪ್ರಕೃತಿಯೊಂದಿಗೆ ಬೆರೆತು ನಿಜಗುರುವನ್ನು ಹುಡುಕುತ್ತಾನೆ. ಸಾಂಸ್ಥೀಕೃತಗೊಂಡ ಕಟ್ಟಡಗಳ ನಿರ್ಜೀವಿತನವನ್ನು ರಾಜಕೀಯವನ್ನು ವಿಷಾದಭರಿತ ಭಾಷೆಯಲ್ಲಿ ವಿವರಿಸುತ್ತಾನೆ. ಬಡವನ ಹಸಿವನ್ನು, ಕಣ್ಣೀರನ್ನು, ಕೊನೆಗೆ ನಾಯಿಯೊಂದರ ಹಸಿವನ್ನು ನೀಗಿಸದ ಮನುಷ್ಯನ ಸಂಪತ್ತನ್ನು ವ್ಯಂಗ್ಯ ಮಾಡುತ್ತಾನೆ.
ಆಹಾರವು ಧರ್ಮದ ಮುದ್ರೆಯೊತ್ತಿಸಿಕೊಂಡು ಸಮಾಜದ ಬಿರುಕಿಗೆ, ರಕ್ತಪಾತಕ್ಕೆ ಕಾರಣವಾಗುವುದಾದರೆ ಅದನ್ನು ಸಹಿಸುವುದು ಹೇಗೆ?
‘ಹಂದಿಯಿರಲಿ,ಗೋಮಾಂಸವಿರಲಿ
ಎಸೆಯುವುದೇನೋ ಎಸೆದು ಬಿಟ್ಟಿರಿ
ಮಸೀದಿ, ದೇವಸ್ಥಾನದ ಮುಂದೆ ಯಾಕೆ ಎಸೆದಿರಿ?
ಹಸಿದವನ ಮನೆಯ ಅಂಗಳಕ್ಕೆ ಎಸೆಯಬಹುದಿತ್ತು
ಬಡವನ ‘ಮನೆ’ ಉರಿಯುವ ಬದಲು
‘ಒಲೆ’ಉರಿಸಿದ ಪುಣ್ಯ ನಿಮ್ಮದಾಗುತಿತ್ತು’. [123]
ಎನ್ನುವಾಗ ಕವಿಯದು ಮುಗ್ಧತನವಲ್ಲ. ಅದು ರಾಜಕೀಯ, ಮಾನವೀಯ, ಧಾರ್ಮಿಕ ತಿಳುವಳಿಕೆಯ ಫಲ ಎಂದು ಅರಿವಿಗೆ ಬರುತ್ತದೆ. ಪದ್ಯಗಳಿಗಿರುವ ವರ್ತಮಾನದ ತುರ್ತಿನ ರಾಜಕಾರಣದ ಕಾರಣಕ್ಕೆ ನಮ್ಮ ನಿಟ್ಟುಸಿರುಗಳೂ ಆಗುತ್ತವೆ. ನಮ್ಮವೇ ಅನ್ನುವಷ್ಟು ಆಪ್ತವಾಗುತ್ತವೆ. ಕವಿತೆ ಓದುಗನ ಎದೆಯಲ್ಲಿ ಮೊಳಕೆ ಒಡೆಯುವ ಪರಿ ಇದು. ಕವಿತೆಗಳು ಮಂಗಳೂರಿನ ಕನ್ನಡದಲ್ಲಿ ಒಡಮೂಡಿರುವುದರಿಂದ ಅವಕ್ಕೆ ಜಾನಪದ ಸ್ಪರ್ಶದ ತುಸು ಕೊರತೆಯಿದೆ ಎನ್ನಿಸುತ್ತದೆ. ಅದರ ಹೊರತಾಗಿ ಪದ್ಯಗಳು ತಾಜಾತನದಿಂದಾಗಿ ನಮ್ಮೊಳಗೆ ಉಳಿಯುತ್ತವೆ.
ಬಶೀರ್ ಬದುಕುತ್ತಿರುವ ಸಮಾಜವೂ ಸೇರಿದಂತೆ ಭಾರತದ ಬಹುತೇಕ ಸಮಾಜಗಳು ಆಂತರಿಕ ಪ್ರಜಾಪ್ರಭುತ್ವವನ್ನು ಕಳೆದುಕೊಂಡ ಸ್ಥಿತಿಗೆ ತಲುಪಿವೆ. ಇದನ್ನು ಅನಂತಮೂರ್ತಿಯವರು ‘ಮಾತು ಸೋತ ಭಾರತ’ ಎಂದು ಕರೆದರು. ಬಶೀರ್ ಬದುಕುತ್ತಿರುವ ಸಮಾಜ ಈಗ ಇನ್ನಷ್ಟು ಅಪ್ರಜಾಪ್ರಭುತ್ವದ ಗುಣಗಳನ್ನು ಬೆಳೆಸಿಕೊಳ್ಳಲಾರಂಭಿಸಿದೆ.
‘ನನ್ನ ಗುರುವಿನ ಗೋರಿಯ ಮೇಲೆ
ಹೊದಿಸಿದ ಚಾದರಗಳನ್ನು ನೋಡುತ್ತಿರುವಾಗ
ಆತ ಸತ್ತಿರೋದು ದಿಟ ಎನ್ನಿಸುತ್ತದೆ
ಈ ಶಿಷ್ಯ ಹೀಗೆ
ದರ್ಗಾದ ಹೊರಗೆ
ಚಳಿಯಲ್ಲಿ ನಡುಗುತ್ತಿರುವಾಗ
ಆತ ಅಷ್ಟೂ ಚಾದರಗಳನ್ನು
ಒಬ್ಬನೇ ಹೊದ್ದು ಮಲಗುತ್ತಿರಲಿಲ್ಲ’.[106]
ಮದ್ರಸದಿಂದ ಹೊರಬಿದ್ದ ಕವಿಗೆ ಕೈ ಹಿಡಿದು ನಡೆಸಬೇಕಾದ ಗುರುವೂ ಸತ್ತು ಗೋರಿಯೊಳಗೆ ಮಲಗಿದ್ದಾನಲ್ಲ ಎನ್ನಿಸಿದಾಗ ಉಂಟಾಗುವ ಏಕಾಂಗಿತನ,ಅಸಹಾಯಕತೆಗಳು ಅಧೀರಗೊಳಿಸಿಬಿಡುತ್ತವೆ.ಇಲ್ಲಿ ಕವಿ ಪರೋಕ್ಷವಾಗಿ ‘ದರ್ಗಾ’ಸಂಸ್ಕೃತಿ ಸೋಲುತ್ತಿರುವುದನ್ನು ಹೇಳುತ್ತಿದ್ದಾನೆಯೇ ಎಂಬ ಗುಮಾನಿ ಹುಟ್ಟುತ್ತದೆ. ಮಸೀದಿಗಳು ವೈಭವೋಪೇತವಾಗಿ ಕಂಗೊಳಿಸುತ್ತಿರುವಾಗ, ದರ್ಗಾಗಳ ಚೈತನ್ಯವನ್ನು ಉದ್ದೇಶಪೂರ್ವಕವಾಗಿ ಕುಗ್ಗಿಸಲಾಗುತ್ತಿದೆ. ದರ್ಗಾ ಸಂಸ್ಕೃತಿಯನ್ನು ನಿರಾಕರಿಸುವುದೆಂದರೆ; ಸಮುದಾಯದ ಬಹುತ್ವವನ್ನು ನಿರಾಕರಿಸುವುದೆಂದರ್ಥ. ಏಕ ತತ್ವದ ಕೊಡೆಯ ಕೆಳಗೆ ಎಲ್ಲರನ್ನೂ ಸೇರಿಸುವ ಹಠದ ಭಾಗವೆಂಬಂತೆ ಮಸೀದಿಗಳು ಮತ್ತು ಆಚರಣೆಗಳು ಕಾಣಿಸುತ್ತವೆ. ಸಂಗೀತ, ಕಾವ್ಯ, ಕುಣಿತವನ್ನು ಸಾಧನವನ್ನಾಗಿಸಿಕೊಂಡು ಆಧ್ಯಾತ್ಮದ ಗುರಿ ತಲುಪಲೆತ್ನಿಸುವ ಆದಿಮ ಬುಡಕಟ್ಟು ಪರಂಪರೆಯಲ್ಲಿನ ಉದಾತ್ತತೆಯನ್ನು ಪ್ರಧಾನ ಇಸ್ಲಾಂ ಸಂಸ್ಕೃತಿ ಗುಮಾನಿಯಿಂದ ನೋಡುತ್ತದೆ.
ಸೂಫಿ ಮಾದರಿಯನ್ನು ಹೆಣ್ತನದ್ದು ಎಂದು ವ್ಯಾಖ್ಯಾನಿಸುತ್ತದೆ. ವೀರ್ಯವತ್ತಾದ ಸಂಸ್ಕೃತಿ ಸ್ಥಾಪನೆಯ ಕನಸಿಗೆ ಹೆಣ್ತನವೆಂಬುದು ಅವಮಾನ ಮತ್ತು ಶತ್ರು.ಬಲಪಂಥೀಯ ಸಂಸ್ಕೃತಿಗಳು ಅದನ್ನು ನಿವಾರಿಸಿಕೊಳ್ಳಲು ನಿರಂತರ ಯತ್ನಿಸುತ್ತಿವೆ. ಅದರ ಭಾಗವಾಗಿಯೇ, ಎಷ್ಟೆಲ್ಲ ಆರ್ಥಿಕ ಕಾರಣಗಳಿದ್ದರೂ ಮಧ್ಯ ಏಷ್ಯಾದಲ್ಲಿನ ಒಂದೇ ಧರ್ಮದೊಳಗಿನ ಸಾಂಸ್ಕೃತಿಕ ವೈವಿಧ್ಯತೆ ಭೀಕರ ಹತ್ಯೆಗಳು, ಅತ್ಯಾಚಾರಗಳು, ವಲಸೆಗಳು ಸಂಭವಿಸಲು ಕಾರಣ ಇರಬಹುದು ಎಂಬ ಅರಿವು ಕವಿಗಿರಬಹುದು. ಇಲ್ಲದಿದ್ದರೆ ‘ಗುರು ಸತ್ತಿರೋದು ನಿಜ’ ಕವಿ ಯಾಕೆ ಘೋಷಿಸುತ್ತಾನೆ? ಗುರುವನ್ನು, ದೊರೆಯನ್ನು, ದೇವರನ್ನು ತಲುಪಲು ‘ಶಕ್ತರು’ ಹೇಳಿದ ಮಾರ್ಗಕ್ಕೆ ವಿರುದ್ಧವಾಗಿ ನಡೆದ ಕಾರಣಕ್ಕೆ ಕೊಲೆಯಾಗುವುದಾದರೆ, ಧರ್ಮಕ್ಕೆ ದಯೆಯ ನೆರಳೆಲ್ಲಿದೆ?
ಜೀವಂತವಾದ ಕಾವ್ಯ ಕಾಲದ ಎಲ್ಲ ಅತಿರೇಕಗಳ ವಿರುದ್ಧ ಬಂಡೇಳುವ ಗುಣವನ್ನು ತನ್ನೊಳಗೆ ಉಳಿಸಿಕೊಂಡಿರುತ್ತದೆ. ಸ್ಥಾವರವನ್ನು, ಆಡಂಬರಗಳನ್ನು, ಸರ್ವಾಧಿಕಾರತ್ವವನ್ನು ಅದು ಪ್ರಶ್ನಿಸುತ್ತದೆ. ಮನುಷ್ಯನ ಮೂಲಭೂತ ಚೈತನ್ಯವನ್ನು ಹುಡುಕುತ್ತದೆ ಎಂದರೆ ಅದು ಆತ್ಮವಾದವಲ್ಲ. ವಾಸ್ತವದೊಡನೆ ವ್ಯವಹರಿಸುತ್ತದೆಯೆಂದರೆ ಅದು ಭೌತವಾದವಲ್ಲ. ಎಲ್ಲ ಅಲ್ಲಗಳ ಆಚೆಗೆ ನಿರಂತರ ಕೈಚಾಚುವ ಮಗುವಿನಂತೆ ಕಾವ್ಯ. ಸೂಫಿ ಕಾವ್ಯವೂ ಹಾಗೆಯೇ. ತಾದಾತ್ಮ್ಯವೇ ಅದರ ಆತ್ಯಂತಿಕ ಶಕ್ತಿ. ಪ್ರೇಮಿಯೊಡನೆ, ಗುರುವಿನೊಡನೆ, ನಿಸರ್ಗಸ್ಥ ದೇವರೊಡಗಿನ ತಾದಾತ್ಮ್ಯ ಅದು. ಅದು ಲಿಂಗ-ಭೇದವಿಲ್ಲದೆ ದೇಹದ ಹಂಗಿಲ್ಲದೆ ತಲ್ಲೀನವಾಗುತ್ತದೆ. ಅನೇಕ ಸೂಫಿಗಳು ವ್ಯವಸ್ಥೆಯ ಸ್ಥಾವರವನ್ನು ಪ್ರಶ್ನಿಸಿದವರು. ತತ್ವ ಪದಕಾರರೂ ಹಾಗೆಯೇ. ಆದ್ದರಿಂದಲೂ ಜನಮಾನಸದಲ್ಲಿ ಬಹುಕಾಲ ಬಾಳಿದರು.
2
ಬಶೀರರ ಪದ್ಯಗಳ ಕುರಿತು ಗೆಳೆಯರೊಂದಿಗೆ ಮಾತನಾಡಿದೆ. ಸಣ್ಣ ಸಣ್ಣ ಪದ್ಯಗಳು ಚೆನ್ನಾಗಿವೆ. ಪದ್ಯ ವಿಸ್ತರಿಸುವುದಕ್ಕೆ ಧ್ಯಾನ ಅಗತ್ಯ ಎಂದರು. ಮತ್ತೆ ಓದಿದೆ.ಸಂಕಲನದಲ್ಲಿರುವ ಅಷ್ಟೂ ಪದ್ಯಗಳು ಒಂದೇ ಮರದ ರೆಂಬೆ-ಕೊಂಬೆ-ಹೂವು-ಹಣ್ಣುಗಳಂತೆ ಕಾಣಿಸಲಾರಂಭಿಸಿದವು. ಮತ್ತು ಇಡೀ ಮರವೇ ಆಘಾತಕ್ಕೆ ಸಿಕ್ಕಿ ರೋಧಿಸುತ್ತಿರುವಂತೆ ಪದ್ಯಗಳು ಕೇಳಿಸತೊಡಗಿದವು. ಕಾಲದ ದುರಂತವನ್ನು ಒಡಲೊಳಗಿಟ್ಟುಕೊಂಡು ನುಡಿಯುತ್ತಿರುವ ನುಡಿಗಳಂತೆ ಅವು ಕೇಳಿಸುತ್ತವೆ. ಅಲ್ಲದೆ ಬೇಟೆಗಾರನೊಬ್ಬನ ಬಾಣ ತಾಗಿ ಜೀವವುಳಿಸಿಕೊಳ್ಳಲು ಓಡಿ ಬಂದು ಕಕ್ಕಾಬಿಕ್ಕಿಯಾಗಿ ನಿಂತ ಎಳೆ ಜಿಂಕೆಯೊಂದರ ಹೃದಯದ ತಿದಿಯಂತೆಯೂ, ಸಿಟ್ಟು, ಹತಾಶೆ, ನೋವು ಅವಮಾನ ಏಕೀಭವಿಸಿದ ಚೋಮನ ದುಡಿಯಂತೆಯೂ ಕೇಳಿಸುತ್ತವೆ.
ಯುದ್ಧ ಭೂಮಿಯಲ್ಲಿ ವೀಣೆ ನುಡಿಸಲಾಗದು. ನುಡಿಸಿದರೆ ರುದ್ರವೀಣೆ ಮಾತ್ರ ನುಡಿಸಬಹುದೆಂಬಂತೆ ಇಸ್ಮತ್ ಚುಗ್ತಾಯಿ ಕಥೆ ಬರೆಯುತ್ತಾರೆ. ಒಡಲ ದಾಗೀನಿಗೆ ಬೆಂಕಿ ಬಿದ್ದಂತೆ ಚುಟುಕು ಮಾತುಗಳ, ಸಣ್ಣ ವಾಕ್ಯಗಳ ಕಥೆಗಳು, ದೇಶ ಇಬ್ಭಾಗದ ರಕ್ತ ಸಿಕ್ತ ಘಟನೆಗಳನ್ನು ಚುಗ್ತಾಯಿಯವರ ಕಥೆಗಳು ಹೇಳುತ್ತವೆ. ಅವು ಯಾವಾಗ ಬೇಕಾದರೂ ತನ್ನ ಒಡಲು ಸೀಳಬಹುದೆಂಬ ಏದುಬ್ಬಸದಲ್ಲಿ ಭೀತಿಯಲ್ಲಿ ಹುಟ್ಟಿದ ಹಾಡುಗಳಂತೆ ಕೇಳಿಸುತ್ತವೆ. ಒಳ್ಳೆಯ ಕಾವ್ಯ ಅದು ಸೊಗಸಿನ ಕಾರಣಕ್ಕಷ್ಟೆ ಒಳ್ಳೆಯ ಕಾವ್ಯವಾಗುವುದಿಲ್ಲ. ಅದರ ಜನಪರತೆಯ ಕಾರಣಕ್ಕೂ, ಸಂಕೀರ್ಣವಾದ ಸಂಕಟಗಳ ಅಭಿವ್ಯಕ್ತಿಯ ಕಾರಣಕ್ಕೂ ಉತ್ತಮ ಕಾವ್ಯವಾಗಬಹುದು. ನಿಜವಾದ ಕಾವ್ಯ ರಿಯಾಯಿತಿಗಳಿಂದ ಹೊರತಾಗಲು ಪ್ರಯತ್ನಿಸುತ್ತಲೇ ಇರುತ್ತದೆ.
ಬಶೀರ್ ಕಾವ್ಯ ನಮ್ಮನ್ನು ಕಲಕುವುದು ಪದ್ಯಗಳ ಸೌಂದರ್ಯದ ಕಾರಣಕ್ಕಷ್ಟೇ ಅಲ್ಲ. ಅವುಗಳ ಸಾಂಸ್ಕೃತಿಕ ಮಹತ್ವ ಮತ್ತು, ಪ್ರಾಮಾಣಿಕತೆಯ ಕಾರಣಕ್ಕೂ ಕಾಡುತ್ತವೆ. ಮನುಷ್ಯನ ಘನತೆಯನ್ನು, ಸಮಾಜಗಳ ಬಹುತ್ವವನ್ನು, ಸ್ವಾತಂತ್ರ್ಯವನ್ನು ಪ್ರತಿಪಾದಿಸಬೇಕಾದ ಧರ್ಮ ಮತ್ತು ರಾಜಕೀಯಗಳೆಂಬ ಸಂಸ್ಥೆಗಳು ಕಬ್ಬಿಣದ ಕೈಗಳಾಗಿ ಕೊರಳ ಸುತ್ತ ಆವರಿಸತೊಡಗಿದಾಗ ಕವಿಯೂ ತನ್ನ ಅಸ್ತ್ರದ ಮೂಲಕ ಪ್ರತಿಭಟಿಸುತ್ತಾನಲ್ಲ ಅದೇ ತುಂಬ ಮಹತ್ವದ ವಿಚಾರ. ಕವಿ ದಯೆಯನ್ನು, ಮಾನವೀಯತೆಯನ್ನು ಒತ್ತಾಯಿಸುತ್ತಾನೆ. ಬಿ.ಎಂ.ಬಶೀರ್ ಕೂಡ ಮಾನವೀಯ ಮನಸ್ಸಿನ ಕವಿ. ಹಾಗಾಗಿ ಈ ಸಂಕಲನದಲ್ಲಿ ಅವರ ಅನೇಕ ಪದ್ಯಗಳು ಹೃದಯದಂತೆ ಮಿಡಿಯುತ್ತವೆ. ಅದರ ಮಿಡಿತ ನಮಗೂ ಕೇಳಿಸುತ್ತದೆ ಎಂಬ ಕಾರಣಕ್ಕೆ ಮುಖ್ಯ.