
ಶಿವರಾಮಯ್ಯ ಕಳುಹಿಸಿದ ಅಷ್ಟು ರಾಶಿ ಪತ್ರಗಳಿಂದ ನಾನು ಒಂದು ಹತ್ತು ಹನಿಗವಿತೆಗಳನ್ನು ಹಾಗೂ ಪತ್ರದ ರೂಪದಲ್ಲಿದ್ದ ಕತೆಯಾಗುವ ಸಾಧ್ಯತೆಯುಳ್ಳ ‘ಗರ್ಭಪಾತ-2’ ಎಂಬ ಪುಟ್ಟ ಕತೆಯನ್ನೂ ಆಯ್ಕೆ ಮಾಡಿಕೊಂಡೆ. ಉಳಿದಂತೆ ಆ ಪತ್ರಗಳ ರಾಶಿಯನ್ನು ಏನು ಮಾಡುವುದೆಂದು ಹೊಳೆಯದೆ ಬೆಂಕಿ ಕೊಟ್ಟು ಸುಟ್ಟು ಹಾಕಿ ಬಿಟ್ಟೆ. ಮತ್ತು ಶಿವರಾಮಯ್ಯ ಅವರಿಗೂ ದೂರವಾಣಿಯಲ್ಲಿ ಹೇಳಿದೆ ‘‘ಅವೆಲ್ಲವನ್ನೂ ಸುಟ್ಟು ಹಾಕಿದೆ’’ ಎಂದು. ಅವರಿಗೆ ಏನನಿಸಿರಬಹುದು ಎನ್ನುವುದರ ಬಗ್ಗೆ ನನಗೆ ಕಲ್ಪನೆಯಿಲ್ಲ. ‘‘ಆ ಪತ್ರಗಳ ‘ಕೆಲವು ಸಾಲುಗಳನ್ನೆಲ್ಲ ಬಳಸಿಕೊಳ್ಳಬಹುದಿತ್ತು ‘’ಎಂದಿದ್ದರು. ನನಗ್ಯಾಕೋ ಅವನ್ನೆಲ್ಲ ಸುಟ್ಟು ಹಾಕಬೇಕು ಅನ್ನಿಸಿತ್ತು. ಹಾಗೇ ಮಾಡಿದ್ದೆ.
ಮೊನ್ನೆ, ಯಾವುದೋ ಒಂದು ಹಳೆ ಫೋಟೋವನ್ನು ಹುಡುಕುತ್ತಿದ್ದಾಗ, ಫೈಲೊಳಗೆ ಆ ಒಂದು ಪತ್ರ ಮಾತ್ರ ಅದು ಹೇಗೆ ಉಳಿದಿತ್ತೋ ನನಗೆ ಗೊತ್ತಿಲ್ಲ. ಸುಮ್ಮನೆ ನನ್ನನ್ನು ನೋಡಿ ಹಲ್ಲು ಕಿರಿಯುತ್ತಿತ್ತು. ಫೈಲುಗಳ ರಾಶಿಯ ನಡುವೆ ಸವೆದು ಹೋಗಿತ್ತು. ಕಾಗದ ಪುಡಿಪುಡಿಯಾಗುವ ಹಂತದಲ್ಲಿತ್ತು. ಬಹುಶಃ ಇದು ಲಂಕೇಶ್ ಪತ್ರಿಕೆ ಆತನ ಮೊತ್ತ ಮೊದಲ ‘ಗರ್ಭ’ ಎನ್ನುವ ಪುಟ್ಟ ಕತೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ, ಶಿವರಾಮಯ್ಯ ಅವರಿಗೆ ಬರೆದ ಪತ್ರವಿರಬೇಕು. ಆರಂಭದ ಮತ್ತು ಕೊನೆಯ ಪುಟಗಳು ಇರಲಿಲ್ಲ. ಯಾವುದೋ ಒಂದು ಜೆರಾಕ್ಸ್ ಪ್ರತಿಯ ಖಾಲಿ ಜಾಗಗಳಲ್ಲಿ ಆ ಪತ್ರವನ್ನು ಬರೆದಿದ್ದ. ಅದರ ನಕಲು ಪ್ರತಿಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಹಾಗೆಯೇ ಆ ಪತ್ರದ ಸಾಲುಗಳನ್ನು ಯಥಾವತ್ ಇಲ್ಲಿ ದಾಖಲಿಸಿದ್ದೇನೆ.
.................ಲಂಕೇ

ಯುವರ್ಸ್,
ರಶೀದ್
ಸಾವಿನ ಕುರಿತಂತೆ ಆತ ಬರೆದ ಕವಿತೆಯೊಂದರ ಕೊನೆಯ ಸಾಲೊಂದು ಇಲ್ಲಿದೆ
........ನೀನು
ಬದುಕಿಗೆ
ರುಜುವಾಗುವ
ಹೊತ್ತಿಗೆ
ಬದುಕ ಬೊಗಸೆ
ಸದ್ದಿಲ್ಲದೇ ಸೋರಿ ಬರಿದು;
ನೀನು ಬದುಕಿಗೆ ಕೊಡುವರ್ಥ ಹಿರಿದು;
ಬದುಕಲುಂಟೆ
ಬದುಕಿಂದ ನಿನ್ನ ತೊರೆದು?
ಹಾಗಾಗಿ ನಾನು
ಮೆಚ್ಚಿಕೊಂಡಿದ್ದೇನೆ
ನಿನ್ನ ಕಣ್ಣುಗಳ
ಬೀಭತ್ಸ ಪ್ರೀತಿಗೆ
ನನ್ನೊಳಗೇ ಬೆಚ್ಚಿ ಬಿದ್ದಿದ್ದೇನೆ.......
ನನ್ನಿಂದ ತಲೆಮರೆಸಿ ಹೀಗೆ ಫೈಲಲ್ಲಿ ಕಳೆದ ಹತ್ತು ವರ್ಷಗಳಿಂದ ಜೀವ ಉಳಿಸಿಕೊಂಡಿದ್ದ ಈ ಪತ್ರದ ಚೂರನ್ನೂ ಸುಟ್ಟು ಹಾಕುವ ಮುನ್ನ ನನ್ನ ಬ್ಲಾಗಿನಲ್ಲಿ ದಾಖಲಿಸಬೇಕು ಅನ್ನಿಸಿತು. ಜೊತೆಗೆ ಆ ಪತ್ರದ ಜೆರಾಕ್ಸನ್ನೂ ಇಲ್ಲಿ ಲಗತ್ತಿಸಿದ್ದೇನೆ. ಪಿ. ಲಂಕೇಶ್, ಶಿವರಾಮಯ್ಯ ಸೇರಿದಂತೆ ಅವನ ಹತ್ತು ಹಲವು ಗೆಳೆಯರು ಅವನಿಗೆ ಬರೆದಿರುವ ಪತ್ರಗಳನ್ನು ಅವನ ಕಪಾಟಿನಲ್ಲಿ ನೋಡಿದ್ದೇನೆ. ಅದಕ್ಕೆ ಅವನು ಜೋಪಾನ ಬೀಗ ಹಾಕಿಟ್ಟಿದ್ದ. ನಾನು ಮುಂಬಯಿಯಲ್ಲಿ ಎಂ.ಎ. ಮುಗಿಸಿ ಐದು ವರ್ಷ ಅಲ್ಲೇ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ, ಮರಳಿ ಮನೆ ಸೇರಿದೆ. ಕೆಲ ವರ್ಷಗಳ ಬಳಿಕ ನನ್ನ ಅರಿವಿಗೆ ಬಂತು. ಆ ಪತ್ರಗಳ ರಾಶಿಗಳನ್ನೆಲ್ಲ ಅವನು ಎಂದೋ ಸುಟ್ಟು ಹಾಕಿದ್ದ.
ಅಂದಹಾಗೆ ನಾನು ನನ್ನ ದೊಡ್ಡಪ್ಪ(ನನ್ನ ತಂದೆಯ ಅಣ್ಣ) ಕವಿ ದಿ. ಬಿ. ಎಂ. ಇದಿನಬ್ಬರ ಕುರಿತ ಸಂಸ್ಮರಣಾ ಗ್ರಂಥವೊಂದನ್ನು ತರಲು ಯೋಜನೆ ಹಾಕಿದ್ದೇನೆ. ಅವರು ತಮ್ಮ ಹರೆಯದಲ್ಲಿ ಸ್ಥಾಪಿಸಿದ ‘ಮಾನವತಾ ಸಾಹಿತ್ಯ ಮಾಲೆ’ ಎನ್ನುವ ಪ್ರಕಾಶನಕ್ಕೆ ಮರುಜೀವ ಕೊಟ್ಟು ಅದರ ಮೂಲಕವೇ ಆ ಗ್ರಂಥವನ್ನು ಹೊರತರಲು ಸಿದ್ಧತೆ ನಡೆಸುತ್ತಿದ್ದೇನೆ. ಅವರ ಆತ್ಮೀಯರಿಗೆ ಪತ್ರಗಳನ್ನು ಬರೆಯಲು ಶುರು ಹಚ್ಚಿದ್ದೇನೆ. ಕೃತಿಗೆ ‘‘ಕಡಲ ಹಕ್ಕಿಯ ಹಾಡು-ದಿ. ಬಿ. ಎಂ. ಇದಿನಬ್ಬರ ಸಂಸ್ಮರಣಾ ಗ್ರಂಥ’’ ಎಂದು ಹೆಸರಿಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೇನೆ. ಅಂದ ಹಾಗೆ ಬಿ. ಎಂ. ಇದಿನಬ್ಬರು ಕಯ್ಯಿರ ಕಿಂಞಣ್ಣ ರೈಯವರ ‘ಐಕ್ಯಗಾನ’ವನ್ನು ವಿವಿಧ ಸಮಾರಂಭಗಳಲ್ಲಿ ಸುಮಾರು 4000 ಬಾರಿ ಹಾಡಿದ್ದರಂತೆ. ಹಾಗೆಯೇ ಕುವೆಂಪು ಅವರ ‘‘ಎಲ್ಲಾದರು ಇರು...’’ ಕವಿತೆಯನ್ನು ಒಂದು ಸಾವಿರಕ್ಕೂ ಅಧಿಕ ಬಾರಿ ಹಾಡಿದ್ದರಂತೆ. ‘ಇದು ನನ್ನ ಬದುಕಿನ ದೊಡ್ಡ ಸಾಧನೆ...ನಾನು ಮಾಡಿದ ಭಾಷಣಗಳಿಗಿಂತ ನನಗೆ ಇದೇ ದೊಡ್ಡದು...’ ಸ್ವತಃ ದೊಡ್ಡಪ್ಪ ಅವರೇ ನನ್ನೊಂದಿಗೆ ಹಂಚಿಕೊಂಡದ್ದು.
ಅವರ ಹಿರಿಯ ಮಗ ಬಿ. ಎಂ. ಭಾಷಾ ತಂದೆಯನ್ನು ನೆನೆದುಕೊಳ್ಳುವಾಗ ಒಂದು ವಿಷಯವನ್ನು ಹೇಳುತ್ತಾರೆ. ವೇದಿಕೆಯೊಂದರಲ್ಲೂ ಅದನ್ನು ಹಂಚಿಕೊಂಡಿದ್ದಾರೆ, ‘‘ನನ್ನ ತಂದೆ ನಮಗೆ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವಾಗ ಮಾಜಿ ಶಾಸಕ ಇದಿನಬ್ಬರ ಮಗ ಎಂದು ಪರಿಚಯಿಸಿಕೊಳ್ಳಬೇಡಿ. ಬದಲಿಗೆ ಕವಿ ಬಿ. ಎಂ. ಇದಿನಬ್ಬರ ಮಗ ಎಂದು ಪರಿಚಯಿಸಿಕೊಳ್ಳಿ. ನಿಮಗೆ ಗೌರವ ಸಿಗುತ್ತದೆ’’
ಅವರ ಆತ್ಮಕತೆಯನ್ನು ನಾನು ಬರೆಯಬೇಕು ಎನ್ನುವುದು ಅವರ ಆಸೆಯಾಗಿತ್ತು. ಆದರೆ ಕೆಲವು ಕಾರಣಗಳಿಂದ ಅದನ್ನು ಈಡೇರಿಸುವುದಕ್ಕೆ ನನ್ನಿಂದ ಸಾಧ್ಯವಾಗಲಿಲ್ಲ. ದೊಡ್ಡಪ್ಪ ಈಗ ಇಲ್ಲ. ಅವರ ಆಸೆಯನ್ನು ಈಡೇರಿಸಲಾಗದ ಕೊರಗು ನನ್ನಲ್ಲಿ ಇನ್ನೂ ಹಾಗೆಯೇ ಉಳಿದುಕೊಂಡಿದೆ.