ಇತ್ತೀಚಿಗೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರ ನೋಡಿದೆ. ಆ ಚಿತ್ರವನ್ನು ಮಾಡಿದ ಮನುಷ್ಯನ ವಿಕಾರ ಮುಖವನ್ನಷ್ಟೇ ನನಗೆ ಅದರಲ್ಲಿ ನೋಡಲು ಸಾಧ್ಯವಾಯಿತು.
ಮಹಮ್ಮದ್ ಪೈಗಂಬರ್ ನಾನು ಅತಿ ಇಷ್ಟಪಡುವ ಮನುಷ್ಯ.
೧೫೦೦ ವರ್ಷಗಳ ಹಿಂದೆ ವ್ಯಾಪಾರಿಗಳ ನಾಡಿನಲ್ಲಿ ""ಇಂದಿನಿಂದ ಬಡ್ಡಿ
ನಿಷೇಧಿಸಲಾಗಿದೆ'' ಎಂದು ಘೋಷಿಸಿ,
ಬಡವರನ್ನು ಸುತ್ತುವರಿದ ಬಡ್ಡಿಯ ಸಂಕಲೆಯನ್ನು ಕಳಚಿದ ಈತನಲ್ಲದೇ ನನ್ನ ಪ್ರವಾದಿ
ಇನ್ನೊಬ್ಬನು ಇರಲು ಸಾಧ್ಯವೇ?. ಒಂದು ವೇಳೆ ತನ್ನ ಧರ್ಮವನ್ನು ಪ್ರಚಾರ
ಮಾಡೋದೇ ಪ್ರವಾದಿಯ ಉದ್ದೇಶವಾಗಿದ್ದರೆ ವ್ಯವಸ್ಥೆಯ ವಿರುದ್ಧ ಇಂತಹ ಒಂದು ನಿರ್ಣಯ ಮಾಡಲು
ಸಾಧ್ಯವಿತ್ತೆ? ವ್ಯವಸ್ಥೆಯೊಂದಿಗೆ, ಮುಖ್ಯವಾಗಿ ದೊಡ್ಡ ವ್ಯಾಪಾರಿಗಳೊಂದಿಗೆ,
ಶ್ರಿಮಂತರೊಂದಿಗೆ ರಾಜಿ ಮಾಡಿಕೊಂಡಿದ್ದರೆ ಬಹುಶಹ ಇದಕ್ಕಿಂತಲೂ ವಿಶಾಲವಾಗಿ ಧರ್ಮವನ್ನು
ಬೆಳೆಸಬಹುದಿತ್ತೋ ಏನೋ..
ವ್ಯಭಿಚಾರವನ್ನು ಘನತೆ ಎಂದು ತಿಳಿದುಕೊಂಡ ಸಮಾಜದಲ್ಲಿ ವ್ಯಭಿಚಾರ ಮಾಡಬೇಡಿ.
ಬೇಕಾದರೆ ಆಕೆಯನ್ನು ಮದುವೆಯಾಗಿ, ಆಕೆಗೆ "ಪತ್ನಿಗೆ ಸಲ್ಲಬೇಕಾದ ಹಕ್ಕು''ಗಳನ್ನು ನೀಡಿ
ಎಂದು ಘೋಶಿಸಿದ್ದವರನ್ನು ಪ್ರೀತಿಸದೇ ;ಇರಲು ಸಾಧ್ಯವೇ.
೧೫೦೦ ವರ್ಷಗಳ ಹಿಂದೆಯೇ "ಪಾನ ನಿಷೇಧ'' ಜಾರಿಗೆ ತಂದ ಮನುಷ್ಯನ ಸಂದೇಶ ನನ್ನ ಪಾಲಿಗೆ ಅಪ್ಪಟ ದೇವರ ಸಂದೇಶವೇ ಹೌದು.
"ಇನ್ನು ಮುಂದೆ ಬಡ್ಡಿ ಮನ್ನಾ ಮಾಡಲಾಗಿದೆ. ನಿಮ್ಮ ಸಂಪತ್ತಿನ ಒಂದು ಭಾಗವನ್ನು
ಬಡವರಿಗೆ ನೀಡೋದು ಕಡ್ಡಾಯವಾಗಿದೆ'' ಈ ಸಂದೇಶಕ್ಕು ಖಡ್ಗ ಕ್ಕೂ ಯಾವುದಾದರು ಸಂಬಂಧ
ಇದೆಯೇ?
ಕಾಣದ ಆ ದೇವರ ಕಾಲಿಗಷ್ಟೇ ಬೀಳಬೇಕು. ಮನುಷ್ಯರ ಕಾಲಿಗೆ ಬೀಳುದನ್ನು ನಿಷೇಧಿಸಲಾಗಿದೆ
ಎಂಬ ಅಪ್ಪಟ ಸಮಾನತೆಯ ಕನಸನ್ನು ಕಾಣಲು ಈ ಜಗತ್ತಲ್ಲಿ ಪ್ರವಾದಿ ಮಹಮ್ಮದ್ಗಷ್ಟೇ
ಸಾಧ್ಯವಾಯಿತು.
ಸಾಧಾರಣ ಎಲ್ಲ ಧಾರ್ಮಿಕ ಸುಧಾರಕರು ತಮ್ಮ ಅನುಯಾಯಿಗಳನ್ನು ಶಿಷ್ಯರು ಎಂದು
ಕರೆಯುತ್ತಾರೆ. ಆದರೆ ಪ್ರವಾದಿ ತನ್ನ ಅನುಯಾಯಿಗಳನ್ನು “ಸಂಗಾತಿ-(ಸಹಾಬಿ)'' ಎಂದು
ಕರೆದರು. ಸಂಗಾತಿ ಅಥವಾ ಕಾಮ್ರೇಡ್ ಎಂಬ ಶಬ್ದವನ್ನು ಮೊದಲು ಬಳಸಿದ್ದು ಮಹಮ್ಮದ್..
ಯಾವತ್ತು ತನ್ನ ಕಾಲಿಗೆ ಬೀಳೋದು, ತನ್ನನ್ನು ಕಂಡಾಗ ಎದ್ದು ನಿಲ್ಲೋದನ್ನು ಸಂಗಾತಿಗಳಿಗೆ ಮಹಮ್ಮದ್ ನಿಷೇಧಿಸಿದ್ದರು.
೧೫೦೦ ವರ್ಷಗಳ ಹಿಂದೆ ಹೆಣ್ಣಿಗೆ ಆಸ್ತಿಯ ಹಕ್ಕನ್ನು ಘೋಷಿಸಿದ್ದು ಮಹಮ್ಮದ್.
ಹೆಣ್ಣನ್ನು ಹೂತುಹಾಕುವ ವ್ಯವಸ್ಥೆಯಲ್ಲಿ, ಹೆಣ್ಣನ್ನು ಮದುವೆಯಾಗುವಾಗ…ಆಕೆಗೆ ಮೆಹರನ್ನು
(ವಧುದಕ್ಷಿಣೆ) ಕಡ್ಡಾಯ ಗೊಳಿಸಿದರು. ಅಂದಿನ ದಿನಗಳಲ್ಲಿ ಹೆಣ್ಣಿಗೆ ಇದೊಂದು ಭಾರೀ
ಕೊಡುಗೆಯೇ ಆಗಿತ್ತು.
ಇಸ್ಲಾಂ ಖಡ್ಗದಿಂದ ಆಗಿತ್ತೆ? ತನ್ನ ಚಿಂತನೆಯನ್ನು ಹರಡುವಾಗ ಮಹಮ್ಮದ್
ಒಬ್ಬಂಟಿಯಾಗಿದ್ದರು. ಒಬ್ಬಂಟಿಯಾಗಿ ಅವರು ತನ್ನ ಹೋರಾಟವನ್ನು ಮಾಡಿದರು. ಅವರಿಗೆ ಮೊದಲು
ಜೊತೆಯಾದುದು ಸಂಗಾತಿ ಅಬುಬಕರ್. ಅನಾಥ ಮಹಮ್ಮದ್ನನ್ನು ಸಾಕಿದ್ದು ದೊಡ್ಡಪ್ಪ ಅಬು
ತಾಲಿಬ್. ವಿಶೇಷವೆಂದರೆ ಅಬು ತಾಲಿಬ್ ತನ್ನ ಜೀವನದ ಕೊನೆಯವರೆಗೂ ಇಸ್ಲಾಂ
ಸ್ವೀಕರಿಸಲಿಲ್ಲ. ಆದರೆ ಅವರ ನಡುವೆ ಸಂಬಂಧಕ್ಕೆ ಅದರಿಂದ ಯಾವ ಧಕ್ಕೆಯಾಗಲಿಲ್ಲ.
ಇಸ್ಲಾಂ ಸ್ವೀಕರಿಸುವಂತೆ ಮಹಮ್ಮದ್ ಸದಾ
ದೊಡ್ಡಪ್ಪನನ್ನು ಮನವೊಲಿಸುತ್ತಲೇ ಇದ್ದರು. ದೊಡ್ಡಪ್ಪ ಸಾಯುವ ಹಂತದಲ್ಲಿರುವಾಗ ಇಸ್ಲಾಂ
ಸ್ವೀಕರಿಸುವಂತೆ ಮಾಡಲು ಕೊನೆಯ ಪ್ರಯತ್ನ ನಡೆಸಿದರು.
"ಇಸ್ಲಾಮ್ಮ್ ಸ್ವೀಕರಿಸಿದರೆ ಸಮಾಜದಲ್ಲಿ ನನ್ನ ಘನತೆಗೆ ಕುಂದುಂಟಾಗುತ್ತದೆ'' ಎಂದು
ಅಬುತಾಲಿಬ್ ಆ ಆಹ್ವಾನವನ್ನು ನಿರಾಕರಿಸಿದರು. ದೊಡ್ಡಪ್ಪ ಸಾವಿನ ಕೊನೆಯ
ಕ್ಷಣದಲ್ಲಿದ್ದಾಗ ಮುಹಮ್ಮದ್ ಅವರ ದೇಹವನ್ನೆಲ್ಲ ತನ್ನ ಕೈಯಿಂದ ಸವರಿದರಂತೆ. "ನನ್ನ ಕೈ
ಸ್ಪರ್ಶದಿಂದ ದೊಡ್ಡಪ್ಪ ಸ್ವರ್ಗ ಸೇರಲಿ'' ಎನ್ನುವ ಆಶೆಯಿಂದ. ವಿಶೇಷವೆಂದರೆ,
ಅಬುತಾಲಿಬ್
ಇಸ್ಲಾಂ ಸ್ವೀಕರಿಸದೆ ಇದ್ದರೂ ಪ್ರವಾದಿಯನ್ನು ಶತ್ರುಗಳಿಂದ ತಮ್ಮ ಜೀವ ಇರುವವರೆಗೂ
ರಕ್ಷಿಸಿದರು. ಅಬುತಾಲಿಬ್ ಒಬ್ಬರಿಗೆ ಹೆದರಿ ಮಹಮ್ಮದರನ್ನು ಶತ್ರುಗಳು ಕೊಲ್ಲದೆ
ಉಳಿಸಿದ್ದರು. ಪರಸ್ಪರರ ಚಿಂತನೆ ಬೇರೆಯಾಗಿದ್ದರು ಪರಸ್ಪರರನ್ನು ಪ್ರೀತಿಸುತ್ತಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿ ದೊಡ್ಡ ಉಧಾಹರಣೆ ಇಲ್ಲಿದೆ.
ಇಸ್ಲಾಮಿನಲ್ಲಿ ಮೊತ್ತ ಮೊದಲ ಪ್ರಾರ್ಥನೆಯ ಕರೆ ಅಥವಾ ಅಜಾನ್ ನೀಡಿರುವುದು ಒಬ್ಬ ನಿಗ್ರೋ. ಅವರ ಹೆಸರು ಬಿಲಾಲ್. ಗುಲಾಮಿ
ವ್ಯವಸ್ಥೆಯನ್ನು ಪ್ರಶ್ನಿಸಿದ ಮಹಾ ಮನುಷ್ಯನೋಬ್ಬನನ್ನು ಯಾರಿಗಾದರು ದ್ವೇಷಿಸಲು ಸಾಧ್ಯ
ಎಂದರೆ, ಆತನ ಹೃದಯ ಕೊಳೆತಿದೆ ಎಂದೇ ಅರ್ಥ.
"ನಾನು ದೇವರಲ್ಲ, ನಿಮ್ಮಂತೆಯೇ ಮನುಷ್ಯ.'' ಎಂದು ಪದೇ ಪದೇ ಘೋಷಿಸಿ…ಎಲ್ಲೂ ತನ್ನ
ಭಾವಚಿತ್ರವು ಇರದಂತೆ ಜಾಗೃತೆ ವಹಿಸಿದ ಅಪ್ಪಟ ಮನುಷ್ಯ ಮಹಮ್ಮದ್. ಅವರ ಚಿತ್ರ
ಒಂದಿದ್ದರೆ ಇಂದು ಅದನ್ನೇ ದೇವರಾಗಿ ಪೂಜಿಸುತ್ತಿದ್ದರು. ಗಲ್ಲಿ ಗಲ್ಲಿಗಳಲ್ಲಿ ಅವರ
ಪ್ರತಿಮೆಗಳು
ನಿಂತಿರುತ್ತಿತ್ತು. ಇಂದಿಗೂ ಪ್ರವಾದಿ ಮಹಮ್ಮದ್ ದೇವರು ಅಲ್ಲ ಎಂದು ದೃಡವಾಗಿ
ನಂಬಿರೋದರ ಹಿಂದೆ ಅವರ ದೂರದೃಷ್ಟಿ ಕೆಲಸ ಮಾಡಿದೆ. ಹೆಚ್ಚಿನ ಧರ್ಮ ಪ್ರಚಾರಕರು ಬೋಧನೆ
ಮಾಡುತ್ತಾ ಮಾಡುತ್ತಾ ತಾವೇ ದೇವರಾದರು. ಆದರೆ ಮಹಮ್ಮದ್ ಅದನ್ನು ನಖಶಿಖಾಂತ ತಡೆದರು.
ನಾನು ಹೊಸದಾಗಿ ಧರ್ಮವನ್ನು ಸೃಷ್ಟಿಸುತ್ತಿಲ್ಲ. ಹಿಂದೆ ಆಗಿ ಹೋಗಿರುವ ಜೀಸಸ್, ಮೋಶೆ,
ಅಬ್ರಾಹಾಂ, ದಾವುದ್ ಎಲ್ಲರು ಇಸ್ಲಾಮ್ನ ಪ್ರವಾದಿಗಳೇ. ಅವರು ಹೇಳಿದ್ದನ್ನೇ ನಾನು
ಹೇಳುತ್ತಿದ್ದೇನೆ. ಹೊಸತಾಗಿ ಏನು ಹೇಳುತ್ತಿಲ್ಲ..ಎಂದು ಹೇಳಿದ್ದು ಮಾತ್ರವಲ್ಲ,
ಕ್ರಿಶ್ಚಿಯನ್, ಯಹೂದಿಗಳು ನಂಬುವ ಪ್ರವಾದಿಗಳ ಹೆಸರನ್ನು ಹೇಳುವಾಗಲು ಕಡ್ಡಾಯವಾಗಿ
ಅವರಿಗೆ ದೇವರು ಶಾಂತಿ ನೀಡಲಿ ಎಂದು ಹೇಳಿ ಗೌರವ ಸೂಚಿಸಲು ಕಳಿಸಿದ್ದು ಮಹಮ್ಮದ್. ಈ ಮನುಷ್ಯ ನನಗೆ ಇಷ್ಟವಾಗದೆ ಇರೋದಕ್ಕೆ ಕಾರಣಗಳು ಇವೆಯೇ?
ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಪ್ರತಿಭಟಿಸುವ, ಅದನ್ನು
ನಿಷೇಧಿಸಬೇಕು ಎಂದು ಒತ್ತಾಯಿಸುವ ಒಂದು ಸಮೂಹವನ್ನು ಮತ್ತೆ “ಅಭಿವ್ಯಕ್ತಿ
ಸ್ವಾತಂತ್ರ್ಯದ ಹೆಸರಲ್ಲಿ” ಅಪರಾಧಿಗಳನ್ನಾಗಿ ಕಟಕಟೆಯಲ್ಲಿ ನಿಲ್ಲಿಸುತ್ತಿರೋದು. ಆ
ಸಿನಿಮಾಕ್ಕೆ ಬಂದ ಪ್ರತಿಭಟನೆಯು ಅದೂ ಅಭಿವ್ಯಕ್ತಿಯೇ ಅಲ್ಲವೇ?
“ಇನ್ನೋಸೆನ್ಸ್ ಆಫ್ ಮುಸ್ಲಿಂ…” ನಿರ್ದೇಶಕ ಸಿನಿಮಾದಂತಹ ಅದ್ಭುತ ಮಾಧ್ಯಮವನ್ನು
ದುರುಪಯೋಗ ಪಡಿಸಿಕೊಂಡಿದ್ದಾನೆ. ಯಾವುದೇ ವೈಚಾರಿಕ ಚರ್ಚೆಗಳಿಲ್ಲದ ಈ ಚಿತ್ರ ,
ಕೋಟ್ಯಂತರ ಜನ ಪ್ರೀತಿಸುವ ಮನುಷ್ಯನೊಬ್ಬನ ಮೇಲೆ ದಾಳಿ ನಡೆಸುವ ಉದ್ದೇಶಕ್ಕಾಗಿಯೇ
ಮಾಡಿರೋದಾಗಿದೆ.. ಒಂದು ಗಂಬೀರ ಚರ್ಚೆಗೆ ಸಾಧ್ಯ ಮಾಡಿಕೊಡುವ ಸಿನಿಮ ಮಾಧ್ಯಮ ಇಂಥವರ
ಕೈಯಲ್ಲಿ ದುರ್ಬಳಕೆಯಾದಾಗ, ನಾಳೆ ಅದರ ಪರಿಣಾಮವನ್ನು ಸೃಜನ ಶೀಲ ನಿರ್ದೇಶಕರು
ಎದುರಿಸಬೇಕಾಗುತ್ತದೆ. ಕ್ಯಾಮರದಲ್ಲಿ ಸಿನಿಮ ತೆಗೆದರೆ ಅಭಿವ್ಯಕ್ತಿ. ಅದೇ
ಕ್ಯಾಮರದಲ್ಲಿ ಒಬ್ಬನ ತಲೆಗೆ ಹೊಡೆದರೆ ಅದನ್ನು ಸಿನಿಮ ಎಂದು ಕರೆಯಲಾಗೋದಿಲ್ಲ. ಅದು
ಹಿಂಸೆ, ಕ್ರೌರ್ಯ…ಅದನ್ನೇ ಆ ನಿರ್ದೇಶಕ ಮಾಡಿದ್ದಾನೆ.
ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಮಾಡಿದ ನಿರ್ದೇಶಕ ಖಂಡಿತವಾಗಿಯೂ ಒಂದು
ಭಯಾನಕ ರೋಗದಿಂದ ನರಳುತ್ತಿದ್ದಾನೆ. ಆ ರೋಗ ಬೇಗ ವಾಸಿಯಾಗಿ ಆತ ಗುಣಮುಖನಾಗಲಿ ಎಂದು
ಹಾರೈಸುವ. ಅವನ ಉದ್ದೇಶವೇ ಕ್ರೌರ್ಯವನ್ನು ಉದ್ಧೀಪಿಸೋದು.. ಸಹನೆ ಮತ್ತು
ತಾತ್ಸಾರದಿನ್ದಷ್ಟೇ ಆ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ. ಅದಕ್ಕೆ
ಅವನಂತೆಯೇ ಪ್ರತಿಕ್ರಯಿಸಲು ಹೋದಲ್ಲಿ...ಅವನು ತನ್ನ ಉದ್ದೇಶವನ್ನು ಸಾಧಿಸ
ತೊಡಗುತ್ತಾನೆ. ಹಿಂಸಾ ರೀತಿಯ ಪ್ರತಿಭಟನೆಯನ್ನೇ ಮುಂದಿಟ್ಟುಕೊಂಡು ತನ್ನ ಚಿತ್ರವನ್ನು
ಸಮರ್ಥಿಸ ತೊಡಗುತ್ತಾನೆ.