ಸಾಯಿ-ಸಾವು
ಒಳಗೆ ಸಾಯಿ ಬಾಬಾ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ.
ಹೊರಗೆ ಅವನ ಭಕ್ತರು ಸಾಯಿಬಾಬಾನ ಫೋಟೋದ ಮುಂದೆ ಕೈ ಮುಗಿದು ಸಾಯಿಬಾಬನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರು.
ಪ್ರವಚನ
ಒಬ್ಬ ಸನ್ಯಾಸಿ ಬದುಕಿನ ಕುರಿತಂತೆ ಮಾತನಾಡುತ್ತಿದ್ದರು. ಹೇಗೆ ಬದುಕಬೇಕು ಎನ್ನುವುದನ್ನು ಹೇಳುತ್ತಿದ್ದರು.
ಒಂದು ದಿನ ಸನ್ಯಾಸಿಯ ಊರಿನಲ್ಲಿ ಪ್ರವಚನ.
ಆ ಭಾಷಣವನ್ನು ಸನ್ಯಾಸಿಯ ಹಳೆಯ ಹೆಂಡತಿಯೂ ಆಲಿಸಿದಳು.
ಹತ್ತು ವರ್ಷಗಳ ಹಿಂದೆ ರಾತ್ರೋ ರಾತ್ರಿ ಗಂಡ ಪರಾರಿಯಾದ ಬಳಿಕ, ಆಕೆ ಸುಖವಾಗಿ ಬದುಕುತ್ತಿದ್ದಳು.
ಬದುಕು
ವೈದ್ಯರು ಹೇಳಿದರು ‘‘ನೀವಿನ್ನು ಆರು ತಿಂಗಳು ಬದುಕುತ್ತೀರಿ’’
ರೋಗಿ ಕೇಳಿದ ‘‘ಸಾರ್....ಆರು ತಿಂಗಳಿಗೆ ವೇರಂಟಿ, ಗ್ಯಾರಂಟಿ ಕಾರ್ಡ್ ಏನಾದ್ರೂ ಕೊಡ್ತೀರಾ?’’
ನೆನಪು
ಆ ಬೀದಿಯ ಭಿಕ್ಷುಕ ತೀರಿ ಹೋದ.
ಅನ್ನ ಹಳಸಿದಾಗೆಲ್ಲ
ಆ ಬೀದಿಯ ತಾಯಂದಿರು ಭಿಕ್ಷುಕನನ್ನು ನೆನೆಯುತ್ತಾರೆ.
ಜಾಹೀರಾತು
ಹೀಗೊಂದು ಸರಕಾರಿ ಜಾಹೀರಾತು
‘‘ದೇಶದ್ರೋಹಿಗಳು ಬೇಕಾಗಿದ್ದಾರೆ.
ಈ ದೇಶದ ಜನರನ್ನು ಒಂದು ಮಾಡಿಸುವುದಕ್ಕೋಸ್ಕರ...
ಗಲ್ಲಿಗೇರಲು!’’
ರುಚಿ
ಆ ಭಿಕ್ಷುಕ ಕುರುಡ.
ಆದರೆ ಅನ್ನದ ರುಚಿಯಿಂದ ಅವನು
ಇದು ಇಂಥವರ ಮನೆಯ ಊಟವೆಂದು ಗುರುತಿಸಬಲ್ಲ.
ತಕ್ಕಡಿ
ನ್ಯಾಯಾಲಯದ ಗೋದಾಮಿನಲ್ಲಿ ಒಂದಿಷ್ಟು ತುಕ್ಕು ಹಿಡಿದ ಗುಜರಿ ಸಾಮಾನುಗಳಿದ್ದವು.
ಗುಜರಿ ಅಂಗಡಿಯವ ಬಂದ.
ನೋಡಿದರೆ ಅಲ್ಲೊಂದು ತುಕ್ಕು ಹಿಡಿದ ಹಳೆಯ ತಕ್ಕಡಿಯಿತ್ತು.
‘‘ಸ್ವಾಮಿ, ಇದನ್ನು ನನಗೆ ಕೊಡಿ. ತೂಕ ಮಾಡುವುದಕ್ಕೆ ಬಳಸುತ್ತೇನೆ....’’ ಎಂದ.
ಗೋದಾಮು ಮೇಲ್ವಿಚಾರಕ ಉತ್ತರಿಸಿದ
‘‘ಅದು ನ್ಯಾಯಾಲಯದ ನ್ಯಾಯದ ತಕ್ಕಡಿ. ಅಳತೆಯನ್ನು ಸರಿಯಾಗಿ ತೋರಿಸುವುದಿಲ್ಲ...’’
ಎರಡೆರಡು ಮೆಟ್ಟಿಲುಗಳ ಹಾರಿ ಏರಿ
ಮನೆ ಸೇರುವ ತವಕದಲ್ಲಿದ್ದ
ಕಂದನಿಗೆ ಹೇಳಿದೆ....
ಮಗು, ಒಂದೊಂದೇ ಹೆಜ್ಜೆ ಇಡು
ಪ್ರತಿ ಮೆಟ್ಟಿಲಿಗೂ ನಿನ್ನ ಪುಟ್ಟ
ಪಾದದ ಸ್ಪರ್ಶ ಭಾಗ್ಯ ಸಿಗಲಿ...
ಮಗು, ಒಂದೊಂದೇ ಹೆಜ್ಜೆ ಇಟ್ಟು
ಮೇಲೇರು...ಪ್ರತಿ ಮೆಟ್ಟಿಲ
ಪರಿಚಯ ನಿನ್ನ
ಪುಟ್ಟ ಪಾದಕ್ಕೆ ಸಿಗಲಿ...
ಬೀಳುವ ದಿನಗಳಲ್ಲಿ
ಯಾವ ಮೆಟ್ಟಿಲೂ ನಿನಗೆ
ಮುಖ ತಿರುಗಿಸದಿರಲಿ...
ತಾಯ ಮಡಿಲಂತೆ
ನಿನ್ನ ಎತ್ತಿ ಕೊಳಲಿ
ಮನೆ ತಲುಪೂದೆಂದರೆ
ಪ್ರತಿ ಮೆಟ್ಟಿಲಲ್ಲೂ ನಿನ್ನ ಹೆಜ್ಜೆಗಳನ್ನು
ಛಾಪಿಸೂದು ಮಗುವೆ...
ನೀನು ಮನೆ ತಲುಪಿದ್ದಕ್ಕೆ
ಅವೆಲ್ಲ ಒಂದು ದಿನ
ಸಾಕ್ಷಿ ನುಡಿಯೂದು....
ಮಲಗೋದು ಎನ್ನೋ ಶಬ್ದ
ಹೆಣ್ಣಿನ ಪಾಲಿಗೆ ಅನೈತಿಕ...
ಯಾರ ಜೊತೆಗೆ ಎಂಬ
ಜೋಡಿ ಪದ
ತಕ್ಷಣ
ಪ್ರಶ್ನೆಯಾಗಿ ಎರಗುತ್ತದೆ...
ಅವಳು ಗಂಡನ ಜೊತೆ ಮಲಗಬೇಕು..
ಅಥವಾ ಮಗುವಿನ ಜೊತೆಗೆ...
ಒಬ್ಬಂಟಿ ಮಲಗುವ ಹೆಣ್ಣಿನ ಸುತ್ತ
ಸಾವಿರ ಕಣ್ಣುಗಳು....
ಅದಕ್ಕಾಗಿಯೆ ಹೆಣ್ಣು
ಗಂಡನ ಕನಸು ಕಾಣುತ್ತಾಳೆ..
ಅದು ನಿಜಕ್ಕೂ
ನೆಮ್ಮದಿಯಿಂದ ಮಲಗುವ ಕನಸು...
ಆದರೆ ಅವಳಿಗೆ ಬೇಗ
ಅರಿವಾಗಿ ಬಿಡೂದು
ನನ್ನ ನಿದ್ದೆ ನನ್ನದಲ್ಲ ಎನ್ನೋದು
ಅವನ ಮಲಗಿಸೋದಕ್ಕಾಗಿ
ಅವನ ಜೊತೆ ಮಲಗಬೇಕೆ
ಹೊರತು ತಾನು ಮಲಗೂದಕ್ಕಲ್ಲ...
ಪ್ರತಿ ಬಾರಿ ಗಂಡ
ಮಲಗಿದ ಬಳಿಕವಷ್ಟೇ
ಅವಳು ಮಲಗಬೇಕು...
ಆತನಿಗೆ ನಿದ್ದೆಯಿಲ್ಲ ಎಂದರೆ
ಇವಳಿಗೂ ನಿದ್ದೆ ಇಲ್ಲ....
ಪ್ರತಿ ಬಾರಿ ಯೋಚಿಸುತ್ತಾಳೆ
ನನಗಾಗಿ ಮಲಗಿದ್ದೆ ಇಲ್ಲ...
ಒಮ್ಮೆ ಕಣ್ತುಂಬಾ ನಾನು
ನನ್ನ ಜೊತೆಯೇ ಮಲಗಬೇಕು...
ನನಗಾಗಿ ಮಲಗಬೇಕು
ಇತ್ತೀಚೆಗೆ....
ಗೋರಿಯೊಳಗೆ
ಗಂಡನ ಹಂಗಿಲ್ಲದೆ
ಒಬ್ಬಂಟಿಯಾಗಿ... ಸುಖವಾಗಿ...
ನಿದ್ದೆ ಹೋದ ಹೆಣ್ಣು ಜೀವಗಳು
ಅವಳ ಕನಸಲ್ಲಿ ಆಗಾಗ
ಕಾಣಿಸಿ ಕೊಳ್ಳುತ್ತಾರೆ...!
ಅದು ವಿ.ಪಿ. ಸಿಂಗ್ ತಮ್ಮ ಚಕ್ರ ಓಡಿಸುತ್ತಿದ್ದ ಕಾಲ. ದೇಶಾದ್ಯಂತ ಜನತಾದಳ ಹೊಸ ಗಾಳಿ ಯನ್ನು ಬೀಸುತ್ತಿತ್ತು. ಇಡೀ ದೇಶ ಮತ್ತೆ ತೃತೀಯ ಶಕ್ತಿಯೊಂದರ ಉದಯದ ಆಗಮನದಲ್ಲಿತ್ತು. ನನ್ನ ತಂದೆ ಅಪ್ಪಟ ಕಾಂಗ್ರೆಸ್. ಇಂದಿರಾಗಾಂಧಿಯ ಭೂಸುಧಾರಣೆಯಲ್ಲಿ ತನ್ನ ಭೂಮಿಯನ್ನೆಲ್ಲ ಕಳೆದುಕೊಂಡವರು ಕೂಡ ನನ್ನ ಅಪ್ಪನೇ. ಆದರೆ ಕಾಂಗ್ರೆಸ್‌ನಿಂದ ಅವರು ಕದಲಿರಲಿಲ್ಲ. ಇಂದಿರಾ ಗಾಂಧಿಯ ಅಪ್ಪಟ ಅಭಿಮಾನಿ. ಆಗ ಹೊಸ ತಲೆಮಾರಿನ ನಾವು ಮೆಲ್ಲಗೆ ಚಕ್ರದ ಮೇಲೆ ಭರವಸೆ ತಾಳಿದ್ದೆವು. ಮನೆಯಲ್ಲಿ ತಾಯಿಯೊಂದಿಗೆ ಹೇಳಿದೆ “ಅಮ್ಮ ನಿನ್ನ ಓಟು ಯಾರಿಗೆ?”
ತಾಯಿ ನಕ್ಕು ಹೇಳಿದ್ದಳು “ಮತ್ಯಾರಿಗೆ? ಇಂದಿರಾಗಾಂಧಿಗೆ”
“ಇಂದಿರಾಗಾಂಧಿ ಸತ್ತು ಎಷ್ಟೋ ವರ್ಷ ಆಗಿದೆ...ನೀನು ಓಟು ಹಾಕಿದರೂ ಇಂದಿರಾ ಗಾಂಧಿ ಪ್ರಧಾನಿಯಾಗುವುದಿಲ್ಲ. ಈಗ ಇರುವುದು ಅವಳ ಮಗ”
“ತಾಯಿ ಸತ್ತಳೆಂದು ಅವಳ ಅನಾಥ ಮಗುವನ್ನು ಕೈ ಬಿಡುವುದಕ್ಕಾಗುತ್ತದ?” ಅಮ್ಮ ಕೇಳಿದಳು. ಅವಳ ಮಾತಿನ ಧ್ವನಿಯಲ್ಲಿ ಆತಂಕವಿತ್ತು. ಒಬ್ಬ ತಾಯಿ ಆಡಬಹುದಾದ ಮಾತನ್ನೇ ಅವಳು ಆಡಿದ್ದಳು.
“ಅವರೆಲ್ಲ ಕಳ್ಳರು. ಈ ಬಾರಿ ನೀನು ಕೈಗೆ ಓಟು ಹಾಕ್ಬೇಡ. ಚಕ್ರಕ್ಕೆ ಹಾಕು” ಎಂದೆ.
“ನಿನ್ನ ಅಪ್ಪ ಯಾವುದಕ್ಕೆ ಹಾಕು ಅಂತ ಹೇಳ್ತಾರ, ಅದಕ್ಕೆ ಹಾಕ್ತೇನೆ” ಎಂದಳು ಅಮ್ಮ.
“ಅಪ್ಪನಿಗೆ ಎಂತ ಗೊತ್ತುಂಟು. ಅಕ್ಕಿಯ ರೇಟು ಎಷ್ಟೂಂತ ಗೊತ್ತುಂಟಾ...ನಾಳೆ ನಾನು ಕಾಲೇಜು ಮುಗಿಸಿ ಒಳ್ಳೆಯ ಉದ್ಯೋಗಕ್ಕೆ ಸೇರಬೇಕಾದ್ರೆ ನೀನು ಚಕ್ರಕ್ಕೆ ಓಟು ಹಾಕಬೇಕು. ಕೈಗೆ ಓಟು ಹಾಕಿದರೆ, ನಿನ್ನ ಮಗ ಬೀದಿ ಯಲ್ಲಿರಬೇಕಾಗುತ್ತದೆ...” ನಾನು ಸೆಂಟಿಮೆಂಟ್ ಮಾತನಾಡಿದೆ.
ಅಂತೂ ಇಂತೂ ಇಡೀ ದಿನ ತಲೆ ತಿಂದು ಅವಳನ್ನು ಚಕ್ರಕ್ಕೆ ಮತ ಹಾಕಲು ಒಪ್ಪಿಸಿದೆ.
ಅಂದು ಓಟು ಹಾಕಿ ಬಂದ ರಾತ್ರಿ ತಾಯಿಯಲ್ಲಿ ಕೇಳಿದೆ “ಸತ್ಯ ಹೇಳು, ಯಾವುದಕ್ಕೆ ಓಟು ಹಾಕಿದ್ದು”
ಅಮ್ಮ ಮೌನವಾಗಿ ಅವಳ ಅಡುಗೆ ಕೆಲಸದಲ್ಲಿ ತಲ್ಲೀನಳಾಗಿದ್ದಳು.
“ಓಹೋ...ಕೈಗೆ ಓಟು ಹಾಕಿದ್ದು ಅಲ್ವಾ?” ಕೇಳಿದೆ.
ಅಮ್ಮ ಬಾಯಿ ಬಿಟ್ಟಳು. “ಓಟಿನ ಪೇಪರ್ ಬಿಡಿಸಿದೆ. ಅಲ್ಲಿ ನಿನ್ನ ಚಕ್ರ ನನಗೆ ಕಾಣಲೇ ಇಲ್ಲ....ತುಂಬಾ ಹುಡುಕಿದೆ. ನನಗೆ ಕೈ ಎದ್ದು ಕಂಡಿತು. ಅದಕ್ಕೇ ಒತ್ತಿದೆ. ಎಷ್ಟಿದ್ರೂ ಪಾಪ ಇಂದಿರಾಗಾಂಧಿಯ ಮಗ ಅಲ್ಲ...” ಎಂದು ಬಿಟ್ಟಳು.
ನಾನು ಬಾಯಿ ಮುಚ್ಚಿ ತೆಪ್ಪಗಾದೆ.
***
ಈ ದೇಶದಲ್ಲಿ ಎಲ್ಲ ಜಾತಿಗಳೂ ತಮ್ಮದೇ ಆದ ಓಟ್ ಬ್ಯಾಂಕ್‌ಗಳನ್ನು ಹೊಂದಿವೆ. ಲಿಂಗಾಯತ ಲಾಬಿ, ಒಕ್ಕಲಿಗ ಲಾಬಿ, ಅಲ್ಪಸಂಖ್ಯಾತ ಲಾಬಿ, ಬ್ರಾಹ್ಮಣ ಲಾಬಿ ಹೀಗೆ ಬೇರೆ ಬೇರೆ ಲಾಬಿಗಳು ಓಟಿನ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸು ತ್ತವೆ. ಆದರೆ ಅತಿ ದೊಡ್ಡ ಓಟ್ ಬ್ಯಾಂಕ್ ಆಗಬಹುದಾದ ಮಹಿಳೆಯರು ಮಾತ್ರ ಯಾಕೆ ಇನ್ನೂ ಲಾಬಿ ನಡೆಸುವಷ್ಟು ಸಮರ್ಥವಾಗಿ ದೇಶದಲ್ಲಿ ಬೆಳೆದಿಲ್ಲ? ಅದಕ್ಕೆ ಸುಲಭವಾದ ಉತ್ತರವೆಂದರೆ, ಮಹಿಳೆಯೆನ್ನುವ ಪ್ರತ್ಯೇಕ ಲಾಬಿ ಅಗತ್ಯವಿಲ್ಲ.ಒಕ್ಕಲಿಗ, ಲಿಂಗಾಯತ, ಮುಸ್ಲಿಮ್, ಬ್ರಾಹ್ಮಣ ಲಾಬಿಗಳಲ್ಲಿ ಪರೋಕ್ಷವಾಗಿ ಮಹಿಳೆಯೂ ಸೇರ್ಪಡೆಯಾಗಿ ಬಿಡುತ್ತಾಳೆ ಎನ್ನುವುದಾಗಿದೆ. ಆದರೆ ಜಾತಿ ಲಾಬಿಗಳಲ್ಲಿ ಮಹಿಳೆ ಹೊರಗುಳಿ ಯುತ್ತಾಳೆ ಎನ್ನುವ ಸತ್ಯ ತಿಳಿಯದವರು ಯಾರೂ ಇಲ್ಲ. ಇಲ್ಲಿ ಲಿಂಗಾಯತ, ಬ್ರಾಹ್ಮಣ, ಮುಸ್ಲಿಮ್, ದಲಿತ ಎನ್ನುವುದೆಲ್ಲ ಪುರುಷರಿಗೆ ಸಂಬಂಧಿಸಿದ್ದು.ಅದು ಖಂಡಿತವಾಗಿಯೂ ಮಹಿಳೆಯನ್ನು ಪ್ರತಿನಿಧಿಸಲಾರವು. ಯಾಕೆಂದರೆ ಇಲ್ಲಿ ಹತ್ತು ಹಲವು ಜಾತಿಗಳಿರಬಹುದು, ಧರ್ಮಗಳಿರ ಬಹುದು. ಆದರೆ ಅಂತಿಮವಾಗಿ ಮಹಿಳೆಯ ಸ್ಥಿತಿ ಎಲ್ಲ ಜಾತಿಗಳಲ್ಲೂ ಒಂದೇ ಥರವಾಗಿರುತ್ತದೆ. ಬ್ರಾಹ್ಮಣ ಮಹಿಳೆ, ಒಕ್ಕಲಿಗ ಮಹಿಳೆ, ಲಿಂಗಾಯತ ಮಹಿಳೆ, ಮುಸ್ಲಿಮ್ ಮಹಿಳೆ, ದಲಿತ ಮಹಿಳೆ ಇವರೆಲ್ಲರದೂ ಸಮಾನ ಸ್ಥಾನಮಾನ.ಮನುಧರ್ಮ ವ್ಯವಸ್ಥೆಯಲ್ಲಿ ಹೆಣ್ಣು ಬ್ರಾಹ್ಮಣ ಧರ್ಮದಲ್ಲಿ ಹುಟ್ಟಿದರೂ ಆಕೆ ಶೂದ್ರಳೇ. ಭಾರತದಲ್ಲಿ ಮಹಿಳೆಯರೆಲ್ಲರೂ ದಲಿತರೇ. ಆದ್ದರಿಂದ, ಈ ಸ್ಥಿತಿಯಿಂದ ಪಾರಾಗಬೇಕಾದರೆ ಮಹಿಳೆಯರ ಓಟ್ ಬ್ಯಾಂಕ್ ಒಂದು ಭಾರತದಲ್ಲಿ ಸೃಷ್ಟಿಯಾಗಲೇ ಬೇಕು. ಅಥವಾ ಈಗ ಇರುವ ಮಹಿಳಾ ಮತಗಳನ್ನು ಗುರುತಿಸುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕು. ಮಹಿಳೆಯರಿಗೂ ಪ್ರತ್ಯೇಕ ಅಸ್ತಿತ್ವವಿದೆ. ಪುರುಷ ಒಂದು ಪಕ್ಷಕ್ಕೆ ಬೆಂಬಲ ಕೊಟ್ಟಾಕ್ಷಣ ಮಹಿಳೆ ಅದೇ ಪಕ್ಷವನ್ನು ಹಿಂಬಾಲಿಸ ಬೇಕಾಗಿಲ್ಲ. ಈ ದೇಶದ ಸಮಸ್ಯೆಗಳು, ಬೆಲೆಯೇರಿಕೆ, ವರ್ಗ, ಜಾತಿ ಸಮಸ್ಯೆ ಪುರುಷ ರಿಗಿಂತಲೂ ಹೆಚ್ಚು ಘಾಸಿಗೊಳಿಸುವುದು ಮಹಿಳೆಯನ್ನು. ಆದುದರಿಂದ ತನ್ನ ಸ್ಥಾನಮಾನ ವನ್ನು ಕಾಪಾಡಿಕೊಳ್ಳಬೇಕಾದರೆ ಈ ದೇಶದಲ್ಲಿ ಮಹಿಳಾ ಲಾಬಿ, ಮಹಿಳಾ ಓಟ್ ಬ್ಯಾಂಕ್ ಸೃಷ್ಟಿಯಾಗಲೇ ಬೇಕಾಗಿದೆ.
ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರೆಲ್ಲ ಬಹಳಷ್ಟು ಮಹಿಳೆಯರು. ಅದಕ್ಕೆ ಮುಖ್ಯ ಕಾರಣ ಇಂದಿರಾಗಾಂಧಿ. ನನ್ನ ಊರಿನಲ್ಲಿ ಒಬ್ಬ ಅಜ್ಜಿಯಿದ್ದಳು. ಆಕೆ ಇಂದಿರಾಗಾಂಧಿಯ ಅಪ್ಪಟ ಅಭಿಮಾನಿ. ಮಾತು ಮಾತಿಗೆ ಇಂದಿರಾ ಗಾಂಧಿಯ ಕುರಿತು ಮಾತನಾಡುವವರು. ಅದಕ್ಕೊಂದು ಕಾರಣವಿದೆ. ಇಂದಿರಾಗಾಂಧಿ ಕೊಕ್ಕಡ ಎನ್ನುವ ಪ್ರದೇಶಕ್ಕೆ ಬಂದಿದ್ದರಂತೆ. ಅಂದು ಇಂದಿರಾಗಾಂಧಿಗೆ ಈ ಅಜ್ಜಿ ಹಾರವನ್ನು ಹಾಕಿದ್ದರು. ಆ ಬಳಿಕ ಬಿಜೆಪಿ, ದಳ, ಜೆಡಿಎಸ್ ಯಾರೇ ಬರಲಿ ಆಕೆ ಉಗಿದು ಕಳಿಸುವವಳು. ಇಂದಿರಾಗಾಂಧಿ ಆಕೆಯ ಸರ್ವಸ್ವವಾಗಿದ್ದಳು. ಗ್ರಾಮೀಣ ಪ್ರದೇಶದಲ್ಲಿ ನೀವು ಹಳೆಯ ಮನುಷ್ಯರ ಜೊತೆ ವಾಜಪೇಯಿ, ಲಾಲ್‌ಬಹದೂರ್ ಶಾಸ್ತ್ರಿ, ಅಡ್ವಾಣಿ ಎಂದು ಮಾತನಾಡಿ. ಅವರಿಗೆ ಅದು ಅರ್ಥವಾಗುವು ದಿಲ್ಲ. ಒಮ್ಮೆ ಇಂದಿರಾಗಾಂಧಿಯ ಹೆಸರನ್ನು ಕೇಳಿ ನೋಡಿ. ಅವರ ಮುಖ ಅರಳಿ ಬಿಡುತ್ತದೆ. ಈ ದೇಶವನ್ನು ಇಂದಿಗೂ ಆಳುತ್ತಿರುವುದು ಇಂದಿರಾಗಾಂಧಿಯೇ ಎಂದು ತಿಳಿದುಕೊಂಡ ಅಜ್ಜಿಯಂದಿರು ಎಷ್ಟೋ ಇದ್ದಾರೆ.
ಒಬ್ಬ ಮಹಿಳೆ ಈ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರ ಮೇಲೆ ಬೀರಿದ ಪ್ರಭಾವವನ್ನು ನೆನೆದಾಗ ಅಚ್ಚರಿಯಾಗುತ್ತದೆ. ತಿಳಿದೋ ತಿಳಿಯದೆಯೋ ಮಹಿಳೆಯರ ಓಟ್ ಬ್ಯಾಂಕ್‌ನ್ನು ಇಂದಿರಾ ಗಾಂಧಿ ದೋಚಿದ್ದರು. ಆದರೆ ಇಂದಿರಾ ಗಾಂಧಿಯ ಬಳಿಕ ಅದು ಯಾರಿಗೂ ಸಾಧ್ಯ ವಾಗಲಿಲ್ಲ. ಆ ಬಳಿಕ ಈ ದೇಶದಲ್ಲಿ ಗಂಡ ಹೇಳಿದ ಪಕ್ಷಕ್ಕೆ ಒತ್ತಿದ್ದೇ ಹೆಚ್ಚು.ಕರಾವಳಿಯಲ್ಲಿ ಅಳಿಯ ಕಟ್ಟು ವ್ಯವಸ್ಥೆಯ ಕುಟುಂಬ ಪದ್ಧತಿಯಿದೆ. ಇಲ್ಲಿ ಆಸ್ತಿಯ ಹಕ್ಕು ಹೆಣ್ಣಿಗೆ ಮತ್ತು ಅಳಿಯನಿಗೇ ಹೋಗುತ್ತದೆ. ಬಂಟ ಸಮಾಜದಲ್ಲಿ ಹೆಣ್ಣು ಪ್ರಾಬಲ್ಯವನ್ನು ಮೆರೆದಿದ್ದಾಳೆ. ಆದರೂ ರಾಜಕೀಯ ವ್ಯವಸ್ಥೆ ಮಹಿಳೆಯನ್ನು ಓಟಾಗಿ ಗುರುತಿಸಿದ್ದು ಕಡಿಮೆ. ಅವಳನ್ನು ಪುರುಷರಿಂದ ಪ್ರತ್ಯೇಕವಾಗಿ ನೋಡಿ, ಅವರಲ್ಲಿ ಜಾಗೃತಿಯನ್ನು ಮೂಡಿಸಿ ತಮ್ಮ ಪಕ್ಷದ ಓಟ್ ಬ್ಯಾಂಕಾಗಿ ಪರಿವರ್ತಿಸುವ ಆಸಕ್ತಿ ಯಾರಲ್ಲೂ ಕಾಣುತ್ತಿಲ್ಲ.
ಬಹುಶಃ ಇಂದಿನ ರಾಜಕೀಯ ವ್ಯವಸ್ಥೆಯ ಸೋಲು ಇದು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಗೆ ಹೋರಾಟ ನಡೆಯುತ್ತಿದೆ ನಿಜ. ಆದರೆ ಅದು ಗ್ರಾಮೀಣ ಪ್ರದೇಶದಲ್ಲಿ ಎಷ್ಟು ಮಹಿಳೆಯರಿಗೆ ತಿಳಿದಿದೆ. ಅದು ತಮ್ಮ ಆವಶ್ಯಕ ಗಳಲ್ಲಿ ಒಂದು ಎಂದು ಎಷ್ಟು ಮಹಿಳೆಯರು ಭಾವಿಸಿದ್ದಾರೆ? ಇಲ್ಲವೇ ಇಲ್ಲ ಎನ್ನಬಹುದು. ಬೆಲೆಯೇರಿಕೆ, ಗುಡಿಕೈಗಾರಿಕೆಗಳ ನಾಶ, ಕೋಮುಗಲಭೆ, ಜಾತೀಯತೆ ಇವೆಲ್ಲವುಗಳ ಮೊದಲ ಸಂತ್ರಸ್ತೆ ಮಹಿಳೆ. ಯಾವ ಜಾತಿಯಲ್ಲೇ ಇರಲಿ, ಧರ್ಮದಲ್ಲೇ ಇರಲಿ. ಇಂದು ಬೀಡಿ ಇಲ್ಲವಾಗಿ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಬೀಡಿಯನ್ನು ನೆಚ್ಚಿಕೊಂಡವರಲ್ಲಿ ಬಹುತೇಕ ಮಹಿಳೆಯರೇ ಆಗಿದ್ದಾರೆ.
ಗಂಡನ ಹಂಗಿಲ್ಲದೆ ಬೀಡಿಯನ್ನು ನಂಬಿ ಬದುಕು ಕಟ್ಟಿಕೊಂಡ ನೂರಾರು ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅವರನ್ನು ಜಾಗೃತಗೊಳಿಸಿದರೆ ಇಂದು ಮಹಿಳೆ ಪ್ರಬಲ ಓಟ್ ಬ್ಯಾಂಕ್ ಆಗುತ್ತಾಳೆ ಮಾತ್ರವಲ್ಲ, ಯಾವ ಸರಕಾರ ಆರಿಸಿ ಬರಬೇಕು ಎನ್ನುವುದರಲ್ಲಿ ಮಹಿಳೆ ನಿರ್ಣಾಯಕ ಪಾತ್ರ ವಹಿಸುತ್ತಾಳೆ.
ಉಳ್ಳಾಲದ ಗಲಭೆಯ ಸಂದರ್ಭದಲ್ಲಿ ಹಲವು ಅಮಾಯಕ ಮುಸ್ಲಿಮರನ್ನು ಮನೆಮನೆಯಿಂದ ಎತ್ತಿ ಬಳ್ಳಾರಿ ಜೈಲಿಗೆ ಹಾಕಲಾಯಿತು. ಆ ಸಂದರ್ಭದಲ್ಲಿ ಒಂದು ಮನೆಗೆ ಭೇಟಿ ಮಾಡಿದ್ದೆ. ಅಲ್ಲಿನ ಇಬ್ಬರು ಗಂಡಸರೂ ಜೈಲು ಪಾಲಾಗಿ ದ್ದರು. ಮುಸ್ಲಿಮ್ ಮಹಿಳೆ ಆಕ್ರೋಶದಿಂದ ಹೇಳಿದ್ದರು “...ಮಕ್ಕಳು ಓಟು ಕೇಳಲು ಬರುತ್ತಾರಲ್ಲ...ಆಗ ಕಲಿಸುತ್ತೇವೆ....ಹಿಡಿಸೂಡಿ ರೆಡಿ ಮಾಡಿ ಇಟ್ಟಿದ್ದೇನೆ...” ಅವಳ ಆಕ್ರೋಶದ ಹಿಂದೆಯೇ ಒಂದು ರಾಜಕೀಯ ನಿರ್ಧಾರ ಗಟ್ಟಿಗೊಳ್ಳುತ್ತಿರುವುದನ್ನು ನಾನು ಕಂಡಿದ್ದೆ. ಇಂದಿಗೂ ಮಹಿಳಾ ಪ್ರಾಬಲ್ಯವಿರುವ ಕಾಲನಿಗಳಿಗೆ ಹೋಗಲು ರಾಜಕಾರಣಿಗಳು ಹೆದರುತ್ತಾರೆ. ಯಾಕೆಂದರೆ ಅವರು ಮುಖಕ್ಕೆ ಹೊಡೆದಂತೆ ಮಾತನಾಡುತ್ತಾರೆ ಎಂಬ ಭಯ.
ಸ್ಥಳೀಯ ಚುನಾವಣೆಯಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಯಾರು ಆರಿಸಿಬರಬೇಕು ಎನ್ನುವುದನ್ನು ಬಹುತೇಕ ನಿರ್ಧರಿಸುವುದು ಮಹಿಳೆಯರೇ ಆಗಿದ್ದಾರೆ. ಬಾವಿ, ನೀರು, ರೇಶನ್ ಕಾರ್ಡ್ ವೊದಲಾದ ಸಮಸ್ಯೆಗಳಿಗೆ ಯಾವ ಸ್ಥಳೀಯ ಸ್ಪಂದಿಸುತ್ತಾನೆ ಎನ್ನುವುದು ಪುರುಷರಿಗಿಂತ ಜಾಸ್ತಿ ಮಹಿಳೆಯರಿಗೆ ಗೊತ್ತು. ದುರದೃಷ್ಟವಶಾತ್ ಇದನ್ನು ಆರೆಸ್ಸೆಸ್ ಮನಗಂಡಿದೆ. ಇಂದು ತನ್ನ ಪರಿವಾರದಲ್ಲಿ ದುರ್ಗಾವಾಹಿನಿ ಸೇರಿದಂತೆ ಮಹಿಳೆಯರ ವಿವಿಧ ಶಾಖೆಗಳನ್ನು ಕಟ್ಟಿಕೊಂಡು ಮಹಿಳೆಯರಲ್ಲಿ ಕೋಮುವಾದವನ್ನು ತುಂಬುವಲ್ಲಿ ಯಶಸ್ವಿಯಾಗುತ್ತಿದೆ. ಮಹಿಳೆಯರನ್ನು ಸತ್ಯನಾರಾಯಣ ಪೂಜೆ, ಬೇರೆ ಬೇರೆ ವ್ರತಗಳ ಹೆಸರಿನಲ್ಲಿ ದೇವಸ್ಥಾನಗಳಿಗೆ ಕರೆಸಿ, ಅಲ್ಲಿ ಅವರಲ್ಲಿ ಕೋಮುವಾದಿ ವಿಚಾರಗಳನ್ನು ತುಂಬುವಲ್ಲಿ ಸಂಘಪರಿವಾರ ಯಶಸ್ವಿಯಾಗುತ್ತಿದೆ. ಕರಾವಳಿಯಲ್ಲಿ ಬಿಜೆಪಿಯ ಗೆಲುವಿಗೆ ಇದೂ ಒಂದು ಕಾರಣ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಎಲ್ಲೆಲ್ಲ ವಿಸ್ತರಿಸಿದೆಯೋ ಅಲ್ಲೆಲ್ಲ ಬಿಜೆಪಿ ಮತ್ತು ಆರೆಸ್ಸೆಸ್ ಮಹಿಳೆಯರ ಬ್ರೈನ್ ವಾಶ್ ಮಾಡಿಸು ತ್ತಿದೆ. ಇದರಿಂದಾಗಿಯೇ, ಅದೆಷ್ಟು ಭ್ರಷ್ಟಾಚಾರ ನಡೆಯಲಿ, ಭಿನ್ನಮತ ಮೆರೆಯಲಿ ಬಿಜೆಪಿಯ ಮತಗಳು ಅಲುಗಾಡುವುದು ಕಷ್ಟಕರವಾಗುತ್ತಿದೆ.
ಎಲ್ಲ ಜಾತಿ, ಧರ್ಮದಿಂದ ಪ್ರತ್ಯೇಕಿಸಿ ಮಹಿಳೆಯನ್ನೇ ಒಂದು ಜಾತಿ ಎಂದು ಪರಿಗಣಿಸಿ ಅವರನ್ನು ಓಟ್ ಬ್ಯಾಂಕಾಗಿ ರಾಜಕೀಯ ಪಕ್ಷಗಳು ಪರಿವರ್ತಿಸಬೇಕು. ಮಹಿಳೆಯರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವಂತಾಗಬೇಕು. ಆಗ ಮಹಿಳೆಯರ ಬದುಕಿನಲ್ಲೂ ಸುಧಾರಣೆಯಾಗುತ್ತೆ. ಸಮಾಜ ದಲ್ಲೂ ಸುಧಾರಣೆಯಾಗತ್ತೆ. ಇದರ ಬಳಿಕ ನಾವು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.30 ಮೀಸಲಾತಿ ಕೊಡಬೇಕೋ ಅಥವಾ ಶೇ.೫೦ ಕೊಡಬೇಕೋ ಎನ್ನುವುದನ್ನು ನಿರ್ಣಯಿಸಬಹುದಾಗಿದೆ.
ಪ್ರಾಥಮಿಕ ಶಾಲೆಯ ಬಾಗಿಲು ತೆರೆದುಕೊಳ್ಳುವುದೆಂದರೆ, ಮಕ್ಕಳಿಗೆ ಹೊರಗಿನ ಸಮಾಜದ ಮೊದಲ ಬಾಗಿಲು ತೆರೆದುಕೊಂಡಂತೆ. ಅದೊಂದು ಅದ್ಭುತವಾದ, ಸುಂದರವಾದ, ವಿಸ್ಮಯವಾದ ಲೋಕ. ಈವರೆಗೆ ಮನೆಯೊಳಗೆ ಇಲ್ಲದ ಹೊಸ ಭಾಷೆ, ಹೊಸ ಸಂಸ್ಕೃತಿ, ವೈವಿಧ್ಯಮಯ ವಾತಾವರಣವನ್ನು ನಾವು ಮೊದಲು ಕಂಡುಕೊಳ್ಳುವುದೇ ಶಾಲೆಯ ಮೆಟ್ಟಿಲು ತುಳಿದಾಗ. ಬಹುಶಃ ಮನುಷ್ಯ ಸಮಾಜಕ್ಕೆ ತೆರೆದುಕೊಳ್ಳುವುದು ಈ ಶಾಲೆಯ ಮೂಲಕವೇ. ಆವರೆಗೆ ನನಗೆ ಗೊತ್ತಿದ್ದುದು ಮನೆಭಾಷೆ ಮಾತ್ರ. ಶಾಲೆಯೊಳಗೆ ತುಳು ಭಾಷೆ, ಹವ್ಯಕ, ಕನ್ನಡ ಹೀಗೆ....ವೈವಿಧ್ಯಮಯ ಭಾಷೆಯ ಪರಿಚಯವಾಗುತ್ತದೆ. ನಮ್ಮ ಬಡತನ, ನಮ್ಮ ಶ್ರೀಮಂತಿಕೆ ತೆರೆದುಕೊಳ್ಳುವುದೂ ಇಲ್ಲಿಯೇ. ಕುಂಕುಮವಿಟ್ಟವರು, ಟೋಪಿ ಧರಿಸಿದವರು, ತಲೆವಸ್ತ್ರ ಸುತ್ತಿಕೊಂಡವರು, ಬಳೆತೊಟ್ಟವರು...ಹೀಗೆ ವಿವಿಧ ಮಕ್ಕಳನ್ನು ನಾವು ಯಾವ ಭೇದವೂ ಇಲ್ಲದೆ, ಯಾವ ಅಡ್ಡಿ ಆತಂಕಗಳೂ ಇಲ್ಲದೆ ಸ್ವೀಕರಿಸುವುದೂ ಇಲ್ಲಿಯೆ. ಒಟ್ಟಿಗೆ ಆಡುತ್ತಾ, ಜಗಳ ಮಾಡುತ್ತಾ, ಓದುತ್ತಾ, ಪರಸ್ಪರ ನೆರವಾಗುತ್ತಾ, ಠೂ ಬಿಡುತ್ತಾ ನಾವು ನಮಗೆ ತಿಳಿಯದ ಹಾಗೆಯೇ ಎಲ್ಲರಲ್ಲೂ ಒಂದಾಗಿ ಬಿಡುತ್ತೇವೆ. ಭಾರತದ ಆದರ್ಶ ಬೇರು ಬಿಟ್ಟು ನಿಲ್ಲುವುದು ಈ ಹಂತದಲ್ಲಿಯೇ. ಯಾವುದೂ ನಮಗೆ ಅನ್ಯವಲ್ಲ. ಎಲ್ಲವನ್ನೂ ಸ್ವೀಕರಿಸುತ್ತಾ ಹೋಗುವ ಮನಸ್ಥಿತಿಯನ್ನು ಹೊಂದಿರುತ್ತೇವೆ ಈ ಹಂತದಲ್ಲಿ. ಶಾಲೆಯಲ್ಲಿ ಹೀಗೆ ಒಂದಾಗಿ ಬೆಳೆಯುತ್ತಾ ಬೆಳೆಯುತ್ತಾ ಸಮಾಜದ ನಾಗರಿಕ ಎಂದು ಕರೆಸಿಕೊಳ್ಳುವ ಹೊತ್ತಿನಲ್ಲಿ ನಮಗೆ ಅಪರಿಚಿತವಾದುದು ಯಾವುದೂ ಇರುವುದಿಲ್ಲ. ಎಲ್ಲರನ್ನೂ ನಮ್ಮವರು ಎಂದು ಸ್ವೀಕರಿಸುವ ಮನಸ್ಥಿತಿಯನ್ನು ತಲುಪಿ ಬಿಟ್ಟಿರುತ್ತೇವೆ. ನಾನು ಶಾಲೆ ಕಲಿತದ್ದು, ಬೆಳೆದದ್ದು ಇಂತಹ ವಾತಾವರಣದಲ್ಲಿ. ಇಂದು ವೈವಿಧ್ಯಮಯ ಸಂಸ್ಕೃತಿ, ಆಚರಣೆಗಳುಳ್ಳ ಈ ಸಮಾಜವನ್ನು ನನಗೆ ಮುಕ್ತವಾಗಿ, ಹಾರ್ದಿಕವಾಗಿ ಸ್ವೀಕರಿಸಲು ಸಾಧ್ಯವಾದುದೂ ಇದೇ ಕಾರಣಕ್ಕೆ.
ಮೊನ್ನೆ ನನ್ನ ಸಂಬಂಧಿ ಹುಡುಗನೊಬ್ಬನಲ್ಲಿ ಕೇಳಿದೆ ‘‘ನಿಮ್ಮ ಶಾಲೆಯಲ್ಲಿ ಒಟ್ಟು ಎಷ್ಟು ಮಕ್ಕಳಿದ್ದಾರೆ?’’. ಆತ ಹೇಳಿದ. ಮುಂದೆ ವಿಚಾರಿಸಿದಾಗ ನನಗೆ ತಿಳಿದದ್ದೇನೆಂದರೆ, ಆ ಶಾಲೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮೇತರ ವಿದ್ಯಾರ್ಥಿಯಿಲ್ಲ. ಅದೊಂದು ಮುಸ್ಲಿಮ್ ಶಾಲೆ. ಮುಸ್ಲಿಮ್ ಧಾರ್ಮಿಕ ಹಿನ್ನೆಲೆಯೂ ಅದಕ್ಕಿದೆ. ಇಂಗ್ಲಿಷ್ ಮಾಧ್ಯಮವನ್ನು ಹೊಂದಿ ರುವ ಆ ಶಾಲೆಯಲ್ಲಿ ಹುಡುಗನಿಗೆ ಎಲ್ಲವನ್ನು ಚೆನ್ನಾಗಿಯೇ ಕಲಿಸಲಾಗುತ್ತದೆ. ಎಲ್‌ಕೆಜಿ ಯಿಂದ ಅವನು ಅಲ್ಲೇ ಓದುತ್ತಿದ್ದಾನೆ. ಸುಮಾರು ಹತ್ತನೆ ತರಗತಿಯವರೆಗೂ ಅವನು ಅಲ್ಲೇ ಓದುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಶಾಲೆಯೆಂದರೆ ಒಂದು ರೀತಿಯ ದಿಗ್ಬಂಧನ. ಮನೆಯಿಂದ ನೇರವಾಗಿ ಶಾಲೆಗೆ ಹೋದರೆ, ಶಾಲೆಯಿಂದ ಮರಳಿ ಮನೆಗೆ. ಮನೆಯಲ್ಲಿ ಹೋಮ್‌ವರ್ಕ್ ಗದ್ದಲ. ಮತ್ತೆ ಮರುದಿನ ಎದ್ದು ಶಾಲೆಗೆ. ಹೊರ ಸಮಾಜದ ಯಾವ ಸಂಪರ್ಕವೂ ವಿದ್ಯಾರ್ಥಿಗಳಿಗಿಲ್ಲ. ಶಾಲೆಯೇ ಅವರ ಸಮಾಜ. ಅವರ ವಿಶ್ವ. ಆದರೆ ದುರದೃಷ್ಟವಶಾತ್ ಈ ವಿಶ್ವದಲ್ಲಿ ಆತನಿಗೆ ಬೇರೆ ಬೇರೆ ಧರ್ಮ, ಆಚರಣೆ, ಸಂಸ್ಕೃತಿ ಇರುವುದರ ಪರಿಚಯವೇ ಇಲ್ಲ. ಒಂದು ವೇಳೆ ಅವರಿಗೆ ಅದರ ಕುರಿತಂತೆ ಅರಿವಿದ್ದರೂ ಅದು ಅವರ ಪಾಲಿಗೆ ಅನ್ಯವಾದುದು. ಅನಗತ್ಯವಾದುದು. ನಾಳೆ ಈ ಶಾಲೆಯ ಜಗತ್ತಿನಿಂದ ಸಮಾಜಕ್ಕೆ ಕಾಲಿಟ್ಟಾಗ ಅವನಿಗೆ ಎಲ್ಲವೂ ಅನ್ಯವಾಗಿ ಬಿಡುವುದರಲ್ಲಿ ಸಂಶಯವಿಲ್ಲ. ಸಮಾಜಕ್ಕೆ ಕಾಲಿಟ್ಟಾಗ ಕಣ್ಣಿಗೆ ಕಟ್ಟಿದ ಪಟ್ಟಿ ಬಿಚ್ಚಿದಂತೆ, ಹುಡುಗ ಗೊಂದಲಗೊಳ್ಳುತ್ತಾನೆ. ಅಪರಿಚಿತ ಜಗತ್ತನ್ನು ನೋಡುವಂತೆ ಎಲ್ಲವನ್ನು ನೋಡುತ್ತಾನೆ. ಆದರೆ ಅವು ಅವನದಾಗಿರುವುದಿಲ್ಲ.
ಕರಾವಳಿಯಲ್ಲಿ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ಟರ ನೇತೃತ್ವದ ಶಾಲೆಗಳಿವೆ. ಸಾಧಾರಣವಾಗಿ ಈ ಶಾಲೆಗಳಿಗೆ ಮುಸ್ಲಿಮರು, ಕ್ರಿಶ್ಚಿಯನ್ನರು, ಬಹುತೇಕ ದಲಿತರು ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ. ಪ್ರಭಾಕರ ಭಟ್ಟರ ಶಾಲೆಯೆಂದ ಮೇಲೆ ಅಲ್ಲಿ ವರ್ಷವಿಡೀ ಏನನ್ನು ಕಲಿಸಬಹುದು ಎನ್ನುವುದನ್ನು ಸುಲಭವಾಗಿ ಊಹಿಸಬಹುದು. ವರ್ಷಕ್ಕೊಮ್ಮೆ ಈ ಶಾಲೆಗಳ ಉತ್ಸವ ನಡೆಯುತ್ತದೆ. ಆಗ ಈ ಶಾಲೆಯಲ್ಲಿ ನಡೆಯುವ ಮಲ್ಲಕಂಬ, ಕುಸ್ತಿಗಳು ಪತ್ರಿಕೆಗಳಲ್ಲಿ ಆಹಾ ಓಹೋ ಎಂದು ಸುದ್ದಿಯಾಗುತ್ತವೆ. ಆದರೆ ಈ ಶಾಲೆಯಲ್ಲಿ ತನ್ನ ಬದುಕನ್ನು ಕಳೆದ ವಿದ್ಯಾರ್ಥಿ, ಸಮಾಜಕ್ಕೆ ಕಾಲಿಡುವಾಗ ಆತ ಉಳಿದ ಸಮುದಾಯವನ್ನು ನೋಡುವ ಬಗೆ ಹೇಗಿರಬಹುದು? ಎನ್ನುವುದನ್ನು ಕಲ್ಪಿಸಿದರೆ ಮೈ ಜುಮ್ಮೆನ್ನುತ್ತದೆ. ಸಂಸ್ಕೃತಿ, ಧರ್ಮದ ಹೆಸರಿನಲ್ಲಿ ವೈದಿಕತೆಯನ್ನು, ಕೋಮುದ್ವೇಷವನ್ನು ಬಿತ್ತಿ, ಅದಕ್ಕೆ ಗೊಬ್ಬರ ಸುರಿಯುವ ಈ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಜಗತ್ತು ತೀರಾ ಸಣ್ಣದು. ಅವರನ್ನು ಹೊರ ಸಮಾಜಕ್ಕೆ ತಂದು ಕಣ್ಣು ಪಟ್ಟಿ ಬಿಚ್ಚಿದಾಗ ಎದುರಿನಲ್ಲಿರುವ ಮುಸ್ಲಿಮ್ ಹುಡುಗನ ಕುರಿತಂತೆ, ದಲಿತ ಹುಡುಗನ ಕುರಿತಂತೆ ಯಾವ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಹುದು?
ಮುಸ್ಲಿಮ್ ಸಂಘಟನೆಯೊಂದು ನಡೆಸುವ ಶಾಲೆಯಲ್ಲಿ ವಿಚಾರಿಸಿದಾಗ ‘‘ಬೇರೆ ಸಮುದಾಯದ ಮಕ್ಕಳು ನಮ್ಮ ಶಾಲೆಗೆ ಬರುತ್ತಿಲ್ಲ. ನಾವೇನು ಮಾಡುವುದು?’’ ಎಂದು ಹೇಳಿದರು. ಆ ಶಾಲೆಯ ಪಕ್ಕದಲ್ಲೇ ಇರುವ ಕುಟುಂಬದ ಒಬ್ಬ ವಿದ್ಯಾರ್ಥಿ ದೂರದ ಇನ್ನೊಂದು ಶಾಲೆಯಲ್ಲಿ ಕಲಿಯುತ್ತಿದ್ದ. ‘‘ಇಷ್ಟು ಹತ್ತಿರ ಶಾಲೆ ಇರುವಾಗ ಅಷ್ಟು ದೂರ ಯಾಕೆ ಕಳುಹಿಸುತ್ತೀರಿ?’’ ಎಂದು ಕೇಳಿದೆ. ಅವನು ಥಟ್ಟನೆ ಹೇಳಿ ಬಿಟ್ಟ ‘‘ಅದು ಮುಸ್ಲಿಮರ ಶಾಲೆಯಲ್ವ?’’ ಹಿಂದೆ ಹೀಗಿರಲಿಲ್ಲ. ನನ್ನ ಶಾಲೆಯ ಬಹುಮುಖ್ಯ ಭಾಗವನ್ನು ನಾನು ಕಲಿತದ್ದು ಕ್ರಿಶ್ಚಿಯನ್ನರ ಶಾಲೆಯಲ್ಲಿ. ಚರ್ಚ್ ಶಾಲೆ ಎಂದೇ ಅದು ಆಸುಪಾಸಿನಲ್ಲಿ ಪ್ರಸಿದ್ಧವಾಗಿತ್ತು. ಆ ಶಾಲೆಯ ಪಕ್ಕದಲ್ಲೇ ಚರ್ಚ್ ಇತ್ತು. ಹಾಗೆಯೇ ಕ್ರಿಶ್ಚಿಯನ್ ವಿದ್ಯಾರ್ಥಿಗಳ ಅನಾಥಾಶ್ರಮವಿತ್ತು. ಅವೆಲ್ಲದರ ನಡುವೆಯೇ ನಾವು ನಮ್ಮ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದೆವು. ನನಗೆ ಪ್ರಾಥಮಿಕ ಶಿಕ್ಷಣವನ್ನು ನೀಡಿದ ಹೆಚ್ಚಿನ ಶಿಕ್ಷಕಿಯರು ಕ್ರಿಶ್ಚಿಯನ್ನರಾಗಿದ್ದರು. ಮಗ್ಗಿ ಟೀಚರ್, ಲೂಸಿ ಟೀಚರ್, ಪ್ರೆಸ್ಸಿ ಟೀಚರ್, ರೂಫಿನಾ ಟೀಚರ್....ಅವರನ್ನೆಲ್ಲ ನೆನೆವಾಗ ನನ್ನ ಎದೆಯಲ್ಲಿ ಗೌರವ, ಪ್ರೀತಿ ಉಕ್ಕಿ ಬರುತ್ತದೆ. ಆದರೆ ಇಂದು ಅದೇ ಪರಿಸ್ಥಿತಿ ನಮ್ಮ ನಡುವೆ ಇಲ್ಲ. ನಗರ ಪ್ರದೇಶದಲ್ಲಿ ವಿದ್ಯಾರ್ಥಿಗಳನ್ನು ಈಗ ಕ್ರಿಶ್ಚಿಯನ್ ಶಾಲೆಗಳಿಗೆ ಕಳುಹಿಸುವಾಗ ಹಲವು ಲೆಕ್ಕಾಚಾರಗಳು ಎದುರಾಗುತ್ತವೆ. ಮುಸ್ಲಿಮರು ಮಾತ್ರವಲ್ಲ, ಬ್ರಾಹ್ಮಣರು, ಬಿಲ್ಲವರು, ಬಂಟರು ಹೀಗೆ ಎಲ್ಲರಿಗೂ ಒಂದು ರೀತಿಯ ಅನುಮಾನ ಕಾಡುತ್ತದೆ. ಮಕ್ಕಳಿಗೆ ಬೈಬಲ್ ಬೋಧಿಸುತ್ತಾರೆ, ಕ್ರಿಶ್ಚಿಯನ್ ಆಚರಣೆಗಳನ್ನು ಕಲಿಸುತ್ತಾರೆ ಎನ್ನುವುದೇ ಅವರ ಭಯ. ಆದುದರಿಂದಲೇ, ಇಂದು ಕ್ರಿಶ್ಚಿಯನ್ ಮಕ್ಕಳು ಕ್ರಿಶ್ಚಿಯನ್ ಶಾಲೆಗಳಿಗೆ, ಬ್ರಾಹ್ಮಣ ಮಕ್ಕಳು ಶಾರದಾ ವಿದ್ಯಾಲಯದಂತಹ ಶಾಲೆಗಳಿಗೆ, ಮುಸ್ಲಿಮ್ ಮಕ್ಕಳು ಮುಸ್ಲಿಮ್ ಸಂಘಟನೆ ನಡೆಸುವ ಶಾಲೆಗಳಿಗೆ ಹೋಗುವ ವಾತಾವರಣ ಸೃಷ್ಟಿಯಾಗಿದೆ.
ಹಾಗೆಂದು ಆಯಾ ಸಮುದಾಯದವರ ಶಾಲೆಗಳಲ್ಲಿ ಅವರಿಗೆ ರಿಯಾಯಿತಿ ಸಿಗುತ್ತದೆಯೆನ್ನುವ ಭರವಸೆಯೇನೂ ಇಲ್ಲ. ಒಂದು ಮುಸ್ಲಿಮ್ ಸಂಘಟನೆ ನಡೆಸುವ ಎಲ್‌ಕೆಜಿ, ಯುಕೆಜಿ ಶಾಲೆಯ ಶುಲ್ಕ ನೋಡಿಯೇ ತಲೆ ಧಿಂ ಎಂದಿತು. ಅಲ್ಪಸಂಖ್ಯಾತರಿಗೆ ಶಿಕ್ಷಣ ನೀಡಲು ನಾವು ಶಾಲೆಗಳನ್ನು ತೆರೆದಿದ್ದೇವೆ ಎಂಬ ಫೋಸು ನೀಡುವ ಸಂಘಟಕರು, ಶುಲ್ಕವನ್ನು ಮಾತ್ರ ಯಾವ ರಿಯಾಯಿತಿ, ಮುಲಾಜು ಇಲ್ಲದೆ ವಸೂಲಿ ಮಾಡುತ್ತಾರೆ. ಬಡ ಮುಸ್ಲಿಮ್ ಮಕ್ಕಳಿಗೆ ಈ ಶಾಲೆಯ ಬಾಗಿಲು ತೆರೆದುಕೊಳ್ಳುವುದೇ ಇಲ್ಲ. ನಮ್ಮ ನಮ್ಮ ಸಮುದಾಯಗಳಲ್ಲಿ ಶಿಕ್ಷಣವನ್ನು ಜಾಗೃತಿಗೊಳಿಸಲು ಶಾಲೆಗಳನ್ನು ತೆರೆಯುತ್ತಿದ್ದೇವೆ ಎನ್ನುವ ಹುಸಿ ಮಾತುಗಳಲ್ಲಿ ಮರುಳುಗೊಳಿಸುವ ಶಾಲೆಗಳು, ತಮ್ಮ ಸಮುದಾಯದ ಬಡವರನ್ನು ಹುಡುಕಿ ತಮ್ಮ ಶಾಲೆಗಳಿಗೆ ಸೇರಿಸಿದ ಉದಾಹರಣೆ ತೀರಾ ಕಡಿಮೆ.
ಅದೇನೇ ಇರಲಿ. ಇಂದು ಶಾಲೆಗಳು ಎಲ್ಲ ಧರ್ಮ, ಜಾತಿ, ವರ್ಗಗಳ ವಿದ್ಯಾರ್ಥಿಗಳು ಒಟ್ಟಾಗಿ ಓದುವ, ಉಣ್ಣುವ, ಆಡುವ ತೋಟಗಳಾಗಬೇಕು. ಅದಕ್ಕಾಗಿ ಎಲ್ಲ ಧರ್ಮ, ಸಮುದಾಯದ ಶಾಲೆಗಳೂ ಪ್ರಯತ್ನಿಸಬೇಕು. ಮುಸ್ಲಿಮರು ಕಟ್ಟಿದ ಶಾಲೆಗಳು ಕೇವಲ ಮುಸ್ಲಿಮರಿಗೇ ಸೀಮಿತವಾಗಬೇಕಾಗಿಲ್ಲ. ಕ್ರಿಶ್ಚಿಯನ್ನರ ಶಾಲೆಗಳು ಕ್ರಿಶ್ಚಿಯನ್ನರಿಗಷ್ಟೇ ಸೀಮಿತವಾಗಬೇಕಾಗಿಲ್ಲ. ಹಾಗೆಯೇ ಬ್ರಾಹ್ಮ ಣರ ಶಾಲೆಗಳು ಬ್ರಾಹ್ಮಣರಿಗಷ್ಟೇ ಅಲ್ಲದೆ, ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೂ ಆದ್ಯತೆಯ ಅವಕಾಶವನ್ನು ನೀಡಬೇಕು. ಪಾಠವೆಂದರೆ ಕೇವಲ ಪುಸ್ತಕದ ಬದನೆಕಾಯಿ ಮಾತ್ರವಲ್ಲ. ಪಾಠವೆಂದರೆ ನಮ್ಮ ಸಮಾಜವನ್ನು, ನಮ್ಮ ನಡುವಿನ ಜನರನ್ನು ಅರ್ಥ ಮಾಡಿಕೊಳ್ಳು ವುದು. ಎಲ್ಲರ ಮನೆ ಭಾಷೆಗಳು ಅಲ್ಲಿ ಪರಸ್ಪರ ವಿನಿಮಯವಾಗಬೇಕು. ಧರ್ಮ, ಸಂಸ್ಕೃತಿಗಳು ಪರಸ್ಪರ ಪರಿಚಯವಾಗಬೇಕು. ಧಾರ್ಮಿಕ ಸಂಘಟನೆಗಳು ನಡೆಸುವ ಶಾಲೆಗಳು, ತಮ್ಮ ತಮ್ಮ ಧರ್ಮಗಳ ವಿದ್ಯಾರ್ಥಿಗಳಿಗೆ ಮಾತ್ರವೆಂದು ಗೋಡೆ ಕಟ್ಟಿದರೆ, ಅದು ಶಾಲೆಯಾಗುವುದಿಲ್ಲ. ಅದು ದ್ವೀಪವಾಗುತ್ತದೆ. ಅದರಿಂದ ಹೊರ ಬಂದ ಮಕ್ಕಳೇ ಮುಂದೆ, ಸಮಾಜದಲ್ಲಿ ಅನ್ಯತೆಯನ್ನು ಮೈಗೂಡಿಸಿಕೊಂಡು ಬದುಕತೊಡಗುತ್ತಾರೆ. ಕೋಮುವಾದಿ ನಾಯಕರು ಇಂತಹ ಮಕ್ಕಳನ್ನು ಬಹಳ ಸುಲಭವಾಗಿ ತಮ್ಮ ಬಲೆಗೆ ಬೀಳಿಸುತ್ತಾರೆ. ಸಮಾಜ ಒಡೆಯುವುದಕ್ಕೆ ಇದು ಕಾರಣವಾಗುತ್ತದೆ.
ಇದು ಕ್ರಿಶ್ಚಿಯನ್ನರ ಶಾಲೆ, ಇದು ಮುಸ್ಲಿಮರ ಶಾಲೆ, ಇದು ಬ್ರಾಹ್ಮಣರ ಶಾಲೆ ಎಂಬ ಭೇದ ಅಳಿಯಬೇಕಾಗಿದೆ. ಬರೇ ಶಾಲೆ ಎನ್ನುವ ಶಬ್ದವಷ್ಟೇ ಉಳಿಯಬೇಕಾಗಿದೆ. ಅಂತಹ ಶಾಲೆಯಲ್ಲಿ ಕಲಿತ ಮಕ್ಕಳು ಮಾತ್ರ ಭವಿಷ್ಯದ ನಿಜವಾದ ಭರವಸೆಯಾಗುತ್ತಾರೆ. ಆದುದರಿಂದ ಅಂತಹ ಶಾಲೆಗಳು ಹೆಚ್ಚಲಿ. ಅಂತಹ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಲಿ ಎನ್ನುವುದು ಹಾರೈಕೆ.