ಸ್ಕಾರ್ಫ್ ಹೆಸರಲ್ಲಿ ಅನವಶ್ಯಕ ರಾಜಕಾರಣ ನಡೆಯುತ್ತಿದೆ. ಸ್ಕಾರ್ಫ್ ಎಂದರೆ ಶಾಲು.
ಅದನ್ನು ಸ್ವಯಂ ಶಾಲೆಯೇ ಯುನಿಫಾರ್ಮ್ ಜೊತೆ ಹುಡುಗಿಯರಿಗೆ ನೀಡಿದೆ. ಮುಸ್ಲಿಮೇತರ
ಹುಡುಗಿಯರು ಅದನ್ನು ಎದೆಮುಚ್ಚಿಕೊಳ್ಳಲು ಬಳಸುತ್ತಿದ್ದಾರೆ, ಮುಸ್ಲಿಂ ಹುಡುಗಿಯರು ತಲೆ
ಮತ್ತು ಎದೆಯನ್ನು ಮುಚ್ಚಿಕೊಳ್ಳುತ್ತಿದ್ದಾರೆ. ನೀವು ತಲೆ ಮುಚ್ಚಿಕೊಬೇಡಿ ಅದರಿಂದ
ಶಾಲೆಯ ಶಿಸ್ತಿಗೆ ತೊಂದರೆಯಾಗುತ್ತೆ ಎನ್ನೋದು ಶಾಲೆಯ ಆಡಳಿತ ಮಂಡಳಿ ತಕರಾರು. ಇದೀಗ ಈ
ವಿವಾದಕ್ಕೆ ಹೊರಗಿನ ಶಕ್ತಿಗಳು ಸೇರಿಕೊಂಡು ರಣರಂಪ ಮಾಡುತ್ತಿವೆ. ತಲೆ ಮುಚ್ಚಿ
ಕೊಳ್ಳೋದು ಧಾರ್ಮಿಕ ನಂಬಿಕೆ ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ಭಾರತೀಯ ಸಂಪ್ರದಾಯವಂತೂ
ಹೌದು. ಅದನ್ನು ನೆಪವಾಗಿಟ್ಟು ಕೊಂಡು ಹೆಣ್ಣು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ
ಮಾಡಬೇಡಿ ಎನ್ನೋದು ನನ್ನ ಅಭಿಪ್ರಾಯ.
ಇದೆ ಸಂದರ್ಭದಲ್ಲಿ ಒಂದಾನೊಂದು ಕಾಲದಲ್ಲಿ ನಾನು ಮದರಸದಲ್ಲಿ ಕಲಿಯುತ್ತಿದ್ದಾಗ ಟೋಪಿಗೆ
ಸಂಬಂಧ ಪಟ್ಟಂತೆ ನಡೆದ ಒಂದು ಸಣ್ಣ ತಮಾಷೆಯ ಪ್ರಸಂಗ ನೆನಪಿಗೆ ಬಂತು. ಇದನ್ನು ಎಂಟು
ವರ್ಷಗಳ ಹಿಂದೆ ಅಗ್ನಿ ಪತ್ರಿಕೆಗೆ ಬರೆದಿದ್ದೆ. ಅದನ್ನು ಫೈಲ್ ನಿಂದ ಹುಡುಕಿ ಗುಜರಿ
ಅಂಗಡಿಗೆ ಹಾಕಿದ್ದೇನೆ.
ನಾವು, ಮದರಸ-ಶಾಲೆಯನ್ನು ಒಟ್ಟೊಟ್ಟಿಗೇ ಕಲಿಯಬೇಕು. ಬೆಳಗ್ಗೆ ಎಂಟೂವರೆಗೆ ಮದರಸದ ಗಂಟೆ ಬಾರಿಸಿತೆಂದರೆ ನಾವು ಅಲ್ಲಿಂದ ಓಟಕ್ಕೀಳುತ್ತಿದ್ದೆವು. ಮನೆ ಮುಟ್ಟಿದ್ದೇ ತಡ ಒಂದೇ ಉಸಿರಿನಲ್ಲಿ ತಿಂಡಿ ಮುಗಿಸಿ, ಶಾಲೆ ಅಣಿಯಾಗುತ್ತಿದ್ದೆವು. ‘ಹೋಂವರ್ಕ್’ಗಳನ್ನು ಅರ್ಧಂಬರ್ಧ ಮುಗಿಸಿ ಎರಡು ಕಿ.ಮೀ. ದೂರದಲ್ಲಿರುವ ಶಾಲೆಯನ್ನು ಸೇರಬೇಕು.
ಕೆಲವಮ್ಮೆ ಈ ಮದರಸ-ಶಾಲೆಗಳ ಜಟಾಪಟಿಯಲ್ಲಿ ನಾವು ಸಿಕ್ಕಾಪಟ್ಟೆ ಹಣ್ಣಾಗುತ್ತಿದ್ದೆವು. ಒಮ್ಮೆ ನಮ್ಮ ಮದರಸಕ್ಕೆ ಹೊಸ ಮುಸ್ಲಿಯಾರರು ಬಂದರು. ಅವರ ಕೈಯಲ್ಲಿದ್ದ ಬೆತ್ತ, ಅವರು ದೂರದ ಕೇರಳದಿಂದ ಬರುವಾಗಲೇ ಹಿಡಿದುಕೊಂಡು ಬಂದಿರುವುದೆಂದು ನಾವು ನಂಬಿದ್ದೆವು. ಅವರು ಕೈಯೆತ್ತಿದರೆ ಆ ಬೆತ್ತ ಮೂರು ಸುತ್ತು ‘ಝಂಯ್ ಝುಂಯ್’ ಎಂದು ತಿರುಗುತ್ತಿತ್ತು. ಆ ಬೆತ್ತವನ್ನು ಹೇಗಾದರೂ ಅಪಹರಿಸಬೇಕೆಂದು ನಾವು ಏನೆಲ್ಲ ಕಾರ್ಯಾಚರಣೆ ನಡೆಸಿದ್ದರೂ, ಅದು ನಮ್ಮಿಂದ ಸಾಧ್ಯವಾಗಿರಲಿಲ್ಲ. ಮದರಸ ಮುಗಿದದ್ದೇ ಬೆತ್ತವನ್ನು ಜೋಪಾನವಾಗಿ ತಮ್ಮಿಂದಿಗೆ ಒಯ್ಯುತ್ತಿದ್ದರು.
ಈ ಮುಸ್ಲಿಯಾರರು ಬಂದದ್ದೇ ‘ಶಿಸ್ತು ಶಿಸ್ತು’ ಎನ್ನತೊಡಗಿದರು. ಮೊದಲು ಮದರಸದಲ್ಲಿ ಹಾಜರಿ ಪುಸ್ತಕವೆನ್ನುವುದಿರಲಿಲ್ಲ. ಇವರು ಹಾಜರಿ ಪುಸ್ತಕವನ್ನು ಜಾರಿಗೆ ತಂದರು. ಶಾಲೆಯ ಎಲ್ಲ ನಿಯಮಗಳನ್ನು ಮದರಸದಲ್ಲಿ ಜಾರಿಗೆ ತರುವ ಅತ್ಯುತ್ಸಾಹ ಅವರಲ್ಲಿದ್ದಂತಿತ್ತು. ಆದರೆ ಅವರು ಬಂದ ಒಂದು ವಾರದಲ್ಲಿ ‘ಇನ್ನು ಮುಂದೆ ಎಲ್ಲರೂ ಶಾಲೆಗೆ ಹೋಗುವಾಗಲೂ ಟೊಪ್ಪಿ ಧರಿಸಿ ಹೋಗಬೇಕು’ ಎಂದು ಘೋಷಿಸಿದಾಗ ನಾವೆಲ್ಲ ಹೈರಾಣಾಗಿ ಬಿಟ್ಟೆವು. ಆದರೇನು? ಮುಸ್ಲಿಯಾರರ ಆದೇಶ. ಇಲ್ಲವೆನ್ನಲಾಗುತ್ತದೆಯೆ? ನಮ್ಮಲ್ಲಿ ಖಾದರ್ ಎನ್ನುವ ಜೋರಿನ ಹುಡುಗನೊಬ್ಬನಿದ್ದ. ಅವನು ಯಾವ ಧೈರ್ಯದಲ್ಲೋ ಹೇಳಿಬಿಟ್ಟ ‘ಉಸ್ತಾದ್... ಟೊಪ್ಪಿ ಹಾಕಿಕೊಂಡು ಶಾಲೆಯೊಳಗೆ ಹೋದರೆ ಟೀಚರ್ ಬೈತಾರೆ’
ಅಷ್ಟೇ... ‘ಝಂಯ್ ... ಝಂಯ್...’ ಎಂದು ಮುಸ್ಲಿಯಾರರು ಬೆತ್ತವನ್ನು ಬೀಸಿದರು. ಅವನಿಗೂ, ಮುಖದ ಹಾವಭಾವದಲ್ಲೇ ಅವನನ್ನು ಸಮರ್ಥಿಸುತ್ತಿದ್ದ ನಮಗೂ ಏಟು ಬಿತ್ತು. ‘ನಮ್ಮ ದೀನಿಗಾಗಿ ನೆಬಿಯವರು, ಅವರ ಸಹಾಬಿಗಳು ಏನೆಲ್ಲ ಮಾಡಿದರು. ನಿಮಗೆ ಟೊಪ್ಪಿ ಹಾಕುವುದಕ್ಕೆ ಕಷ್ಟವಾಗುತ್ತದೆಯೇ?’ ಎಂದವರೇ ನಮಗೆ ಬದರ್‌ಯುದ್ಧದ ಕತೆಯನ್ನು ಹೇಳಿದರು. ಕೇವಲ 313 ಮಂದಿ ಸಹಾಬಿಗಳು ಒಂದು ರಾಜಪ್ರಭುತ್ವವನ್ನೇ ಎದುರು ಹಾಕಿ, ಏನೆಲ್ಲ ಕಷ್ಟ ಅನುಭವಿಸಿದರು. ಕೊನೆಗೆ ಹೇಗೆ ಯುದ್ಧದಲ್ಲಿ ವಿಜಯ ಸಾಧಿಸಿದರು ಎನ್ನುವುದನ್ನು ವಿವರಿಸಿದರು. ನಿಮಗೆ ಯಕಶ್ಚಿತ್ ಒಬ್ಬ ಟೀಚರ್‌ನ್ನು ಎದುರಿಸಲಾಗುವುದಿಲ್ಲವೆ? ಎಂದು ಪ್ರಶ್ನಿಸಿದರು.
ಮದರಸದಿಂದ ಹೊರಟಾಗ ನಮ್ಮ ಎದೆಯಲ್ಲಿ ಸಹಾಬಿಗಳು ಕುಳಿತ ಕುದುರೆಗಳ ಖುರಪುಟ ಸದ್ದುಗಳು. ಮನೆಯಿಂದ ಶಾಲೆಗೆ ಹೊರಡುತ್ತಿದ್ದಂತೆ ಧೈರ್ಯದಿಂದ ಟೊಪ್ಪಿಯನ್ನು ತಲೆಗೇರಿಸಿದೆವು. ತರಗತಿಯೊಳಗೂ ಟೊಪ್ಪಿಯನ್ನು ಕಿರೀಟದಂತೆ ಧರಿಸಿದ್ದೆವು. ನನ್ನ ತಲೆಯಲ್ಲಿದ್ದದ್ದು ನೀರು ದೋಸೆಯಂತೆ ತೂತು ತೂತಾಗಿರುವ ಟೊಪ್ಪಿ. ಪಕ್ಕದ ಗೆಳೆಯ ‘ಬ್ಯಾರಿಯ ತಲೆಯಲ್ಲಿ ನೀರು ದೋಸೆ’ ಎಂದರೂ ಕ್ಯಾರೇ ಅನಿಸಲಿಲ್ಲ. ಆ ಕ್ಷಣದಲ್ಲಿ ನಮ್ಮ ಕಣ್ಣ ಮುಂದೆ ಇದ್ದದ್ದು, ಬದರ್‌ಯುದ್ಧದಲ್ಲಿ ಭಾಗವಹಿಸಿದ ಸಹಾಬಿಗೋ, ಮುಸ್ಲಿಯಾರರ ಕೈಯಲ್ಲಿದ್ದ ನಾಗರ ಬೆತ್ತವೋ ಇನ್ನೂ ಸ್ಪಷ್ಟವಿಲ್ಲ.
ಮೊದಲ ತರಗತಿಯೇ ರುಫೀನಾ ಟೀಚರಿದ್ದು, ತರಗತಿಯೊಳಗೆ ಬಂದವರು. ಇನ್ನೇನು ಪಾಠ ಶುರು ಮಾಡಬೇಕು ಎಂದಾಗ ಅವರ ಗಮನ ನಮ್ಮ ತಲೆಯ ಮೇಲೆ ಹೋಯಿತು. ನಿಧಾನಕ್ಕೆ ಖಾದರ್, ರಶೀದ್, ಹನೀಫ್... ಹೀಗೆ ಎಲ್ಲರ ತಲೆಯನ್ನು ಅವರ ಚೂಪಾದ ನೋಟ ಸವರುತ್ತಾ ಹೋಯಿತು. ಎಲ್ಲರ ಹೆಸರಿಡಿದು ಕರೆದು ನಿಲ್ಲಿಸಿದರು. ‘ಏನಿದು ವೇಷ... ಕ್ಲಾಸಿನೊಳಗೆ ನಿಮ್ಮ ಟೊಪ್ಪಿಯನ್ನು ತರಬಾರದು. ತೆಗೀರಿ’ ಎಂದರು.
‘ಮದರಸದ ಗುರುಗಳು ಹೇಳಿದ್ದಾರೆ. ಟೊಪ್ಪಿಯನ್ನು ತೆಗೆಯಬಾರದೆಂದು’ ಖಾದರ್ ಉತ್ತರಿಸಿದ. ‘ಈಗ ನಾನು ನಿಮ್ಮ ಶಾಲೆಯ ಗುರುಗಳು ಹೇಳುತ್ತಿದ್ದೇನೆ.. ಟೊಪ್ಪಿಯನ್ನು ತೆಗೀರಿ’ ರೂಫೀನಾ ಟೀಚರ್ ಹೂಂಕರಿಸಿದ್ದರು.
‘ಟೊಪ್ಪಿ ತೆಗೆದರೆ ಮುಸ್ಲಿಯಾರರು ಹೊಡೀತಾರೆ...’ ಇನ್ನಾರೋ ಒಬ್ಬ ಹೇಳಿದ್ದ.
‘ಟೊಪ್ಪಿ ತೆಗೆಯದೇ ಇದ್ದರೆ ನಾನು ಹೊಡೀತೇನೆ...’ ಎಂದವರೇ ಬೆತ್ತವನ್ನು ಟೇಬಲ್‌ಗೊಮ್ಮೆ ಬಡಿದರು. ಇಡೀ ತರಗತಿ ನಮ್ಮನ್ನು ನೋಡುತ್ತಿತ್ತು. ರೂಫೀನಾ ಟೀಚರ್‌ನ್ನು ಎದುರಿಸುವುದು ಬದರ್ ಯುದ್ಧವನ್ನು ಎದುರಿಸಿದಷ್ಟು ಸುಲಭವಲ್ಲ ಎನ್ನುವುದು ನಿಧಾನಕ್ಕೆ ಅರಿವಿಗೆ ಬಂದಿತು. ನಮ್ಮ ಧೈರ್ಯ ಕರಗುತ್ತಿತ್ತು.
‘ಟೊಪ್ಪಿಯನ್ನು ತೆಗೀತೀರಾ ಇಲ್ವ?’ ಟೀಚರ್ ಮತ್ತೊಮ್ಮೆ ಟೇಬಲ್‌ಗೆ ಬೆತ್ತವನ್ನು ಬಡಿದರು.
ಎಲ್ಲರೂ ಒಬ್ಬರ ಮುಖವನ್ನು ಒಬ್ಬರು ನೋಡಿದೆವು. ಯಾರಾದರೊಬ್ಬ ಮೊದಲು ತೆಗಿಯಲಿ... ಎನ್ನುವುದು ಎಲ್ಲರ ಉದ್ದೇಶವಾಗಿತ್ತು. ರುಫೀನಾ ಟೀಚರ್ ಸಹನೆ ಕೆಡುತ್ತಿತ್ತು. ತನ್ನ ಆಜ್ಞೆಗೆ ಹುಡುಗರು ಕ್ಯಾರೇ ಅನ್ನುತ್ತಿಲ್ಲ ಎನ್ನುವುದು ಅವರಿಗೆ ಸಹಿಸಲು ಅಸಾಧ್ಯವಾಗಿತ್ತು. ‘ಟೊಪ್ಪಿಯನ್ನು ತೆಗೆಯಲು ಸಿದ್ಧರಿರುವವರು ಮಾತ್ರ ಕ್ಲಾಸಿನೊಳಗಿರಿ. ಉಳಿದವರು ಬಾಗಿಲ ಹೊರಗೆ ನಿಲ್ಲಿ’ ಎಂದು ಅಕ್ಷರಶಃ ಚೀರಿದ್ದರು. ಆ ಕಿರುಚಾಟಕ್ಕೆ ತಲ್ಲಣಿಸಿದ್ದ ನಾನು ಒಮ್ಮೆಲೆ ಟೊಪ್ಪಿಯನ್ನು ತೆಗೆದು ಉಂಡೆ ಮಾಡಿ ಕಿಸೆಯೊಳಗೆ ತುರುಕಿಸಿದ್ದೆ. ಆದರೆ ಖಾದರ್ ಒಬ್ಬ ಮಾತ್ರ ಟೊಪ್ಪಿಯೊಂದಿಗೆ ಕ್ಲಾಸಿನಿಂದ ಹೊರನಡೆದಿದ್ದ. ಇಡೀ ದಿನ ಆತ ತರಗತಿಯ ಬಾಗಿಲ ಬಳಿ ನಿಂತು ಪಾಠ ಕೇಳಿದ್ದ.
ಮರುದಿನ ಮದರಸಕ್ಕೆ ನಡುಗುತ್ತಾ ಹೆಜ್ಜೆ ಇಟ್ಟಿದ್ದೆವು. ಇವತ್ತು ಮದರಸದಲ್ಲಿ ಏನಾದರೂ ನಡೆದೇ ನಡೆಯುತ್ತದೆ ಎನ್ನುವುದು ನಮಗೆ ಗೊತ್ತಿತ್ತು. ಮದರಸ ಆರಂಭವಾಯಿತು ಎನ್ನುವಾಗ, ಮುಸ್ಲಿಯಾರರು ಖಾದರ್‌ನನ್ನು ನಿಲ್ಲಿಸಿದರು. ಅವರಿಗಾಗಲೇ ಖಾದರ್‌ನ ವಿಜಯಗಾಥೆ ತಲುಪಿತ್ತು. ಹತ್ತಿರ ಹೋದವರೇ ಖಾದರ್‌ನ ತಲೆ ಸವರಿದರು. ಖಾದರ್‌ನ ಕೈಗೆ ತಮ್ಮ ಬೆತ್ತವನ್ನು ಕೊಟ್ಟರು. ಅದೊಂದು ಅಪೂರ್ವ ಮಂತ್ರದಂಡವೇನೋ ಎಂಬಂತೆ ಖಾದರ್ ಹಿಡಿದುಕೊಂಡಿದ್ದ. ಆತನ ಅದೃಷ್ಟಕ್ಕೆ ನಾವೆಲ್ಲ ಕರುಬಿದ್ದೆವು. ಆ ಬಳಿಕ ನಮ್ಮನ್ನೂ ನಿಲ್ಲಿಸಿದರು. ಅಂಗೈಯನ್ನು ಮುಂಚಾಚಲು ಹೇಳಿದರು. ಖಾದರ್ ಬೆತ್ತದಿಂದ ಎಲ್ಲರಿಗೂ ಎರಡೆರಡು ಏಟು ನೀಡುತ್ತಾ ಹೋದ. ಅಲ್ಲಿಂದ ನಮ್ಮ ಗುಂಪಿನಿಂದ ಖಾದರ್ ಪ್ರತ್ಯೇಕವಾದ. ಅಂದೂ ಶಾಲೆಗೆ ಟೊಪ್ಪಿ ಹಾಕಿಕೊಂಡೇ ಹೊರಟೆವು. ರುಫೀನಾ ಟೀಚರ್ ಸಿದ್ಧವಾಗಿಯೇ ಬಂದಿದ್ದರು. ‘ಎಲ್ಲರೂ ನಿಮ್ಮ ನಿಮ್ಮ ಟೊಪ್ಪಿಯನ್ನು ತಂದು ಟೇಬಲ್ ಮೇಲಿಡಿ’ ಎಂದರು.
ನಾವೆಲ್ಲ ಒಲ್ಲದ ಮನಸ್ಸಿನಿಂದ ಟೊಪ್ಪಿಯನ್ನು ರುಫೀನಾ ಟೀಚರ್‌ರ ಟೇಬಲ್ ಮೇಲಿಟ್ಟೆವು. ಬಳಿಕ ಅವರು ಪಾಠ ಮುಂದುವರಿಸಿದರು. ಪಾಠ ಮುಗಿದದ್ದೇ, ಅಷ್ಟೂ ಟೊಪ್ಪಿಗಳನ್ನು ತಮ್ಮ ವ್ಯಾನಿಟಿ ಬ್ಯಾಗಿನೊಳಗೆ ಹಾಕಿ ಹೊರಟರು. ನಮ್ಮ ಟೊಪ್ಪಿಗಳಿಗೆ ಒದಗಿದ ದುಸ್ಥಿತಿಗೆ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲಾಗದೆ ನಾವು ಅಸಹಾಯಕರಾಗಿದ್ದೆವು.
ನಮ್ಮ ಟೊಪ್ಪಿಗಳನ್ನು ಯಕಶ್ಚಿತ್ ಒಬ್ಬಳು ಕೊಂಡೊಯ್ದದ್ದು ತಿಳಿದದ್ದೇ ಮುಸ್ಲಿಯಾರರು ಕೆಂಡಮುಂಡಲವಾದರು. ಸಿಟ್ಟಿನಿಂದ ಗಾಳಿಯಲ್ಲಿ ಬೆತ್ತವನ್ನು ‘ಝಂಯ್ ಝಂಯ್’ ಎಂದು ಬೀಸಿದರು. ನಮಗೆ ಒಳಗೊಳಗೆ ಖುಷಿ. ಇಲ್ಲಿ ನಮ್ಮ ತಪ್ಪೇನು ಇದ್ದಿರಲಿಲ್ಲ. ಜೊತೆಗೆ ಇನ್ನು ಶಾಲೆಗೆ ಧರಿಸಿಕೊಂಡು ಹೋಗಲು ನಮ್ಮಲ್ಲಿ ಟೊಪ್ಪಿಯೂ ಇದ್ದಿರಲಿಲ್ಲ.
‘ಅವರು ಕೇಳಿದರೆಂದಾಕ್ಷಣ ನೀವ್ಯಾಕೆ ತಲೆಯಿಂದ ತೆಗೆದು ಕೊಟ್ಟಿರಿ?’ ಮುಸ್ಲಿಯಾರರು ನಮ್ಮನ್ನು ಪ್ರಶ್ನಿಸಿದರು. ಎಂತಹ ಪ್ರಶ್ನೆ! ಒಂದು ಟೊಪ್ಪಿಧರಿಸುವ ಹೆಸರಿನಲ್ಲಿ ನಾವೇ ಇಷ್ಟು ಕಷ್ಟಪಟ್ಟಿರಬೇಕಾದರೆ, ಸಹಾಬಿಗಳು ಅದೆಷ್ಟು ಕಷ್ಟ ಪಟ್ಟಿರಲಿಕ್ಕಿಲ್ಲ ಎನ್ನಿಸಿತು. ಅಷ್ಟರಲ್ಲಿ ಖಾದರ್ ಉತ್ತರಿಸಿದ ‘ನಾವು ಕೊಡುವುದಿಲ್ಲ ಎಂದು ಹೇಳಿದೆವು ಉಸ್ತಾದ್. ಅವರೇ ಬಂದು ತಲೆಯಿಂದ ಕಿತ್ತುಕೊಂಡರು’ ಅವನು ಹಸಿ ಸುಳ್ಳು ಹೇಳಿದ್ದ.
‘ಕಿತ್ತುಕೊಳ್ಳುವಷ್ಟು ಧೈರ್ಯವೇ ಅವರಿಗೆ’ ಎನ್ನುತ್ತಾ ಗಾಳಿಯಲ್ಲಿ ಬೆತ್ತವನ್ನು ಮತ್ತೆ ಬೀಸಿದರು.
ನಮ್ಮ ಟೊಪ್ಪಿಯನ್ನು ಕಿತ್ತುಕೊಂಡದ್ದು, ಜಮಾತ್‌ನಲ್ಲಿ ಸುದ್ದಿಯಾಯಿತು. ಜಮಾತ್ ಪ್ರೆಸಿಡೆಂಟ್‌ರ ಮುಂದೆ, ಮುಸ್ಲಿಯಾರರು ವಿಷಯವಿಟ್ಟರು. ಶಾಲೆಗೆ ಒಂದು ಸಣ್ಣ ನಿಯೋಗ ಹೋಯಿತು. ಅಲ್ಲಿ ಎಲ್ಲ ಟೊಪ್ಪಿಗಳನ್ನು ಮರಳಿಸಲಾಯಿತು. ‘ತರಗತಿಯೊಳಗೆ ಟೊಪ್ಪಿ ಹಾಕಬಾರದು. ಹೊರಗಡೆ ಹಾಕಿದರೆ ಚಿಂತಿಲ್ಲ’ ಎಂದು ಮುಖ್ಯ ಶಿಕ್ಷಕರು ಅವರಿಗೆ ತಿಳಿಸಿದರು.
ತಮ್ಮ ಮಕ್ಕಳು ‘ಟೊಪ್ಪಿ’ಯ ದೆಸೆಯಿಂದ ಪಾಠ ತಪ್ಪಿಸಿಕೊಳ್ಳುವುದು ಜಮಾತಿನ ಯಾವ ಪಾಲಕರಿಗೂ ಇಷ್ಟವಿರಲಿಲ್ಲ. ಆದ್ದರಿಂದ ಶಾಲೆಯ ದಾರಿಯಲ್ಲಿ, ಮೈದಾನದಲ್ಲಿ ಟೊಪ್ಪಿ ಹಾಕುವುದು ಮತ್ತು ತರಗತಿ ಪ್ರವೇಶಿಸುವಾಗ ಈ ಟೊಪ್ಪಿಯನ್ನು ತೆಗೆದು ಹಾಕುವುದು ಎಂದು ತೀರ್ಮಾನವಾಯಿತು. ಈ ತೀರ್ಮಾನವೂ ತುಂಬಾ ದಿನ ಉಳಿಯಲಿಲ್ಲ. ಜಮಾತಿನ ಕಾರ್ಯದರ್ಶಿಯ ಮುಂದೆ ‘ರಾಂಗ್’ ಮಾತನಾಡಿದರೆಂದು ಮುಸ್ಲಿಯಾರರನ್ನು ಕೆಲವೇ ತಿಂಗಳಲ್ಲಿ ಕಿತ್ತು ಹಾಕಲಾಯಿತು. ಅಲ್ಲಿಗೆ ಟೊಪ್ಪಿಯ ಶಾಲೆಯ ಋಣ ತೀರಿತು. ಹೀಗೆ... ಹತ್ತು ಹಲವು ಕಾರಣಗಳಿಂದ ನೆನೆದರೆ ಮುಗಿಯಲಾರದಷ್ಟು ಮುಸ್ಲಿಯಾರರು, ಬಗೆ ಬಗೆಯ ಅತ್ತರಿನ ಪರಿಮಳದಂತೆ ನಮ್ಮ ಬಾಲ್ಯವನ್ನು ಆವರಿಸಿದ್ದಾರೆ. ಶಾಲೆಗೆ ಹೋಗದ ಹುಡುಗರನ್ನು ಪತ್ತೆ ಹಚ್ಚಿ, ಅವರನ್ನು ಎಳೆದೊಯ್ದು ಮೇಷ್ಟ್ರ ಕೈಗೆ ಒಪ್ಪಿಸಿದ ಮುಸ್ಲಿಯಾರರಿದ್ದಾರೆ. ಹುಡುಗರೊಂದಿಗೆ ಸೇರಿ, ವಾಲಿಬಾಲ್, ಕ್ರಿಕೆಟ್ ಆಡುತ್ತಿದ್ದ ಮುಸ್ಲಿಯಾರರು, ಬೆಳಗ್ಗಿನ ತಿಂಡಿಗೆ ಅಕ್ಕಿರೊಟ್ಟಿಯಲ್ಲದೆ ಬೇರೇನು ಕೊಟ್ಟರೂ ಒಲ್ಲೆಯೆನ್ನುತ್ತಿದ್ದ ಮುಸ್ಲಿಯಾರರು... ಮದರಸ ಕಲಿಸುವ ಹೊತ್ತಿನಲ್ಲಿ ತಮ್ಮ ಸಣ್ಣ ಟ್ರಾನ್ಸಿಸ್ಟರ್‌ನಲ್ಲಿ ಕ್ರಿಕೆಟ್ ಕಮೆಂಟರಿ ಕೇಳುತ್ತಿದ್ದ ಮುಸ್ಲಿಯಾರರು... ಇಸುಮು-ಮಂತ್ರತಂತ್ರವೆಂದು ಉಪವೃತ್ತಿಯನ್ನು ಮಾಡಿ ಒಂದಿಷ್ಟು ಹಣದ ದಾರಿಯನ್ನು ಹುಡುಕಿಕೊಳ್ಳುತ್ತಿದ್ದ ಮುಸ್ಲಿಯಾರರು...
ಅವರದು ಸ್ವರ್ಗ-ನರಕಗಳ ಸೇತುವೆಯನ್ನು ಕಾಯುವ ಕೆಲಸ. ನಮ್ಮಂತಹ ಮಕ್ಕಳು ತಪ್ಪಿ ನರಕದ ಸೇತುವೆಯ ಬಳಿ ಸಾಗದಂತೆ ನೋಡಿಕೊಳ್ಳಬೇಕು. ಸ್ವರ್ಗದ ಸೇತುವೆಯನ್ನು ಕೈ ಹಿಡಿದು ದಾಟಿಸಬೇಕು. ಆದರೆ ಅದೆಂತಹ ವಿಚಿತ್ರವೋ.... ಮುಸ್ಲಿಯಾರರು ಸ್ವರ್ಗವನ್ನು ಎಷ್ಟು ವರ್ಣಿಸಿದರೂ ನಮಗೆ ‘ಇಷ್ಟೇನಾ...’ ಅನ್ನಿಸುತ್ತಿತ್ತು. ಅವರು ವರ್ಣಿಸುವ ಧಗಿಸುವ ಭಯಾನಕ ನರಕ, ಅದರೊಳಗಿನಿಂದ ಕೇಳಿಸುವ ಪಾಪಿಗಳ ಆರ್ತನಾದ ಮನಸ್ಸನ್ನು ದಟ್ಟವಾಗಿ ಆವರಿಸಿಕೊಳ್ಳುತ್ತಿತ್ತು. ಆ ನರಕಕ್ಕೆ ಒಂದು ವಿಚಿತ್ರ ಸೆಳೆತವಿತ್ತು. ಆ ಆಕರ್ಷಣೆ, ಸೆಳೆತ ಒಂದು ಪ್ರತಿಮೆಯಂತೆ ಮನದಾಳದಲ್ಲಿ ಇನ್ನೂ ಅಚ್ಚೊತ್ತಿ ಕುಳಿತಿದೆ.