Friday, January 31, 2014

ಅಂಬೇಡ್ಕರ್ ಮೂಲಕ ಉತ್ತರ

 ಪ್ರಜಾಪ್ರಭುತ್ವ ದುರ್ಬಲಗೊಂಡಂತೆಲ್ಲ ನಾವು ಹತಾಶೆಯ ಮಾತನಾಡುವ ಬದಲು, ಅಂಬೇಡ್ಕರ್ ಚಿಂತನೆಗಳನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವ ಮೂಲಕ ಅದರ ಉಳಿವಿಗೆ ಪ್ರಯತ್ನಿಸಬೇಕಾಗಿದೆ. ಅಂತಹದೊಂದು ಪ್ರಯತ್ನವನ್ನು ಡಾ. ಎಚ್. ಎಸ್. ಅನುಪಮಾ ಮತ್ತು ಬಸೂ ಅವರ ಜಂಟಿ ಪ್ರಯತ್ನವಾಗಿರುವ ‘ಭೀಮಯಾನ’ ಮೂಲಕ ನಡೆದಿದೆ. ಡಾ. ಬಿ. ಆರ್. ಅಂಬೇಡ್ಕರ್ ಚಿಂತನೆಗಳ ಸಂಗ್ರಹವಾಗಿರುವ ಇದು, ಇಂದಿನ ಸಾಮಾಜಿಕ ಬೆಳವಣಿಗೆಗೆ ಅನುಗುಣವಾಗಿ ಅಂಬೇಡ್ಕರ್ ಮರು ಓದನ್ನು ಬಯಸುತ್ತದೆ. ಹಲವು ಮೂಲಗಳಿಂದ ಅಂಬೇಡ್ಕರ್ ಚಿಂತನೆಗಳನ್ನು ತಂದು ಇಲ್ಲಿ ಒಟ್ಟಾಗಿಸಲಾಗಿದೆ. ಚರಿತ್ರೆಯ ಮರೆಗೆ ಸರಿದಿರುವ ಅನೇಕ ಮಹತ್ವದ ಘಟನೆಗಳನ್ನು ಹೊರಗೆಳೆದು, ಅದನ್ನು ಯುವ ಪೀಳಿಗೆಯ ಮುಂದಿಡುವ ಮೂಲಕ, ಹೊಸ ಸಮಾಜ, ಹೊಸ ನಾಯಕನ ಮುಂಚೂಣಿಯಲ್ಲಿ ಸಾಗಬೇಕಾದ ತುರ್ತನ್ನು ಈ ಕೃತಿ  ಹೇಳುತ್ತದೆ.

ಮಹಾಡ್ ಹೋರಾಟ, ಗಾಂಧೀ ಅಂಬೇಡ್ಕರ್ ಮೊದಲ ಭೇಟಿ, ಬ್ರಾಹ್ಮಣ್ಯದ ಕುರಿತಂತೆ ಅಂಬೇಡ್ಕರ್ ಅನಿಸಿಕೆ, ಮದರಾಸ್ ಜಸ್ಟಿಸ್ ಪಾರ್ಟಿಯ ಕುರಿತು, ಬುದ್ಧನ ಕುರಿತಂತೆ ಅಂಬೇಡ್ಕರ್ ನಿಲುವು, ಕೊನೆಯ ಪ್ರಾರ್ಥನೆ ಸೇರಿದಂತೆ ಹಲವು ಅಪರೂಪದ ಘಟನೆಗಳು, ಚಿಂತನೆಗಳು, ಚರಿತ್ರೆಯ ಚೂರುಗಳು ಈ ಕೃತಿಯ ಮೂಲಕ ಬೆಳಕಿಗೆ ಬಂದಿದೆ. ಕನ್ನಡದ ಪಾಲಿಗೆ ಅಂಬೇಡ್ಕರ್‌ರನ್ನು ಮುಟ್ಟಿಸುವ ಗಟ್ಟಿ ಪ್ರಯತ್ನ ಇದು. ಇಂದಿನ ಸಮಾಜದ ಸಮಸ್ಯೆಗಳಿಗೆ ಹೇಗೆ ಅಂಬೇಡ್ಕರ್ ಮೂಲಕ ಉತ್ತರವನ್ನು ಪಡೆಯಬಹುದು ಎನ್ನುವುದನ್ನು ಈ ಕೃತಿ  ಯಶಸ್ವಿಯಾಗಿ ಹೇಳುತ್ತದೆ. ಲಡಾಯಿ ಪ್ರಕಾಶನ (9480286844) ಹೊರತಂದಿರುವ ಕತಿಯ ಮುಖಬೆಲೆ 70 ರೂ.

Thursday, January 30, 2014

ಕನ್ನಡದಲ್ಲಿ ಕುರ್‌ಆನ್ ಅನುವಾದ

 
ಒಂದು ಕಾಲವಿತ್ತು. ಕುರ್‌ಆನ್‌ನ್ನು ಕನ್ನಡ ಭಾಷೆಯಲ್ಲಿ ಕಲ್ಪಿಸಿಕೊಳ್ಳಲು ಆ ಕಾಲದಲ್ಲಿ ಮುಸ್ಲಿಮರಿಗೆ ಸಾಧ್ಯವಿರಲಿಲ್ಲ. ಕುರ್‌ಆನ್‌ನ್ನು ಕನ್ನಡದಲ್ಲಿ ಅನುವಾದಿಸುವುದೇ, ಕನ್ನಡದಲ್ಲಿ ಓದುವುದೇ? ಎಂದು ಪ್ರಶ್ನಿಸುವ ಕಾಲ. ಆ ದಿನಗಳಲ್ಲಿ ಯಾರ ಕೈಯಲ್ಲಾದರೂ ಕನ್ನಡದಲ್ಲಿ ಅನುವಾದಗೊಂಡ ಕುರ್‌ಆನನ್ನು ನೋಡಿದರೆ ಅಸ್ಪೃಶ್ಯರಂತೆ ಮುಸ್ಲಿಮ್ ಸಮಾಜ ನೋಡುತ್ತಿತ್ತು. ನನ್ನ ಪಿಯುಸಿಯ ದಿನಗಳಲ್ಲಿ ಗ್ರಂಥಾಲಯವೊಂದರಲ್ಲಿ ನನಗೆ ಕನ್ನಡ ಕುರ್‌ಆನ್ ಸಿಕ್ಕಿತು. ಅದನ್ನು ನಾನು ಮನೆಗೆ ಕೊಂಡು ಹೋದೆ. ಮರುದಿನ ನೋಡಿದರೆ ನನ್ನ ತಂದೆಗೆ ದೂರು ಹೋಗಿತ್ತು ‘‘ನಿಮ್ಮ ಮಗ ಜಮಾತೆ ಇಸ್ಲಾಮ್ ಆಗುತ್ತಿದ್ದಾನೆ. ಎಚ್ಚರ’’ ಎಂದು. ಅಂತಹ ಸಂದರ್ಭದಲ್ಲಿ ಕೆಲವೇ ಕೆಲವು ಹಿರಿಯ ಮುಸ್ಲಿಮ್ ವಿದ್ವಾಂಸರು ಕನ್ನಡದಲ್ಲಿ ಕುರ್‌ಆನನ್ನು ತರಲು ಪ್ರಯತ್ನಿಸಿದರು. ಜಮಾಅತೆ ಇಸ್ಲಾಮ್ ಸಂಘಟನೆಯೂ ಕನ್ನಡ ಕುರ್‌ಆನ್ ಅನುವಾದದಲ್ಲಿ ಮುಂಚೂಣಿಯಲ್ಲಿ ನಿಂತಿತ್ತು. ಆದರೆ ಇವರು ಬಳಸಿದ ಕ್ಲಿಷ್ಟ ಕನ್ನಡ ಅಥವಾ ಬ್ರಾಹ್ಮಣ ಕನ್ನಡ ಸಂವನಕ್ಕೆ ಒಂದಿಷ್ಟು ತೊಡಕಾದುದು ಸತ್ಯ. ಆದರೂ ಕಾಲಾನಂತರ ಈ ಅನುವಾದದಲ್ಲಿ ಬೇರೆ ಬೇರೆ ಪ್ರಯತ್ನಗಳು ನಡೆಯುತ್ತಲೇ ಬಂದವು. ಕುರ್‌ಆನ್‌ನ ಕನ್ನಡಾನುವಾದವನ್ನು ವಿರೋಧಿಸುತ್ತಿದ್ದ ಕರಾವಳಿಯ ಇನ್ನಿತರ ಸುನ್ನಿ ಸಂಘಟನೆಗಳೂ ಕನ್ನಡದಲ್ಲಿ ಕುರ್‌ಆನ್ ಅನುವಾದವನ್ನು ಇತ್ತೀಚೆಗೆ ತಂದಿರುವುದು ಶ್ಲಾಘನೀಯ.
 ಕುರ್‌ಆನ್‌ನಲ್ಲಿ ನಾನು ಗಮನಿಸಿದ್ದು ಅದು ಕ್ರಿಯೆಗೆ ಹೆಚ್ಚು ಒತ್ತುಕೊಟ್ಟಿರುವುದು. ಈ ಮೂಲಕ ಕುರ್‌ಆನ್ ಉಳಿದೆಲ್ಲ ಧಾರ್ಮಿಕ ಗ್ರಂಥಗಳಿಗಿಂತ ಹೆಚ್ಚು ಲೌಕಿಕವಾಗಿದೆ ಎನ್ನುವುದು ನನ್ನ ವೈಯಕ್ತಿಕ ಅನ್ನಿಸಿಕೆ. ಮೋಕ್ಷಗಳ ಕುರಿತಂತೆ ಅರ್ಥವಾಗದ್ದನ್ನು ವಿವರಿಸುವುದಿಲ್ಲ. ಒಬ್ಬನಿಗೆ ಸ್ವರ್ಗ-ನರಕವನ್ನು ಈ ಲೋಕದ ವ್ಯವಹಾರಕ್ಕನುಗುಣವಾಗಿಯೇ ಕುರ್‌ಆನ್ ನಿರ್ದೇಶಿಸುತ್ತದೆ. ಕುರ್‌ಆನ್ ಒಬ್ಬ ಶ್ರೀಮಂತನಿಗೆ ದಾನದ ಮಹತ್ವವನ್ನು ಮಾತ್ರ ಹೇಳುವುದಿಲ್ಲ. ನೀನು ಕಡ್ಡಾಯವಾಗಿ ದಾನಮಾಡಬೇಕಾದ ಹಣ ಅಥವಾ ಸಂಪತ್ತಿನ ಪ್ರಮಾಣವೆಷ್ಟು ಎನ್ನುವುದನ್ನು ಹೇಳುತ್ತದೆ. ಆಸ್ತಿ ಪಾಲು ಮಾಡುವಾಗ ಹೆಣ್ಣೆಗೆಷ್ಟು, ಗಂಡಿಗೆಷ್ಟು ಎನ್ನುವುದನ್ನು ವಿವರಿಸುತ್ತದೆ. ಮದುವೆಯ ಸಂದರ್ಭದಲ್ಲಿ ಹೆಣ್ಣಿಗೆ ನೀಡಬೇಕಾದ ಮೆಹರ್‌ನ್ನು ವಿವರಿಸುತ್ತದೆ. ಯಾವುದನ್ನು ತಿನ್ನಬೇಕು, ತಿನ್ನಬಾರದು ಎನ್ನುವುದನ್ನು ಕುರ್‌ಆನ್ ತಿಳಿಸುತ್ತದೆ. ಅನಾಥ ಬಾಲಕನ ಆಸ್ತಿಯ ಹೊಣೆಗಾರಿಕೆಯನ್ನು ಯಾರು ತೆಗೆದುಕೊಳ್ಳಬೇಕು, ಅದನ್ನು ಯಾವಾಗ ಆತನಿಗೆ ಮರಳಿಸಬೇಕು ಎಂಬ ಅಪ್ಪಟ ಲೌಕಿಕ ಸಂಗತಿಗಳೇ ಕುರ್‌ಆನ್‌ನ ಉದ್ದಕ್ಕೂ ಇವೆ. ಅವೆಲ್ಲವೂ ನ್ಯಾಯ ಮತ್ತು ಸಮಾನತೆಯ ತಳಹದಿಯ ಮೇಲೆ ನಿಂತಿವೆ. ಮತ್ತು ಇದನ್ನು ಮೀರಿದವರಿಗೆ ನರಕವನ್ನು ನಿರ್ದೇಶಿಸುತ್ತದೆ. ಆದುದರಿಂದ ಕುರ್‌ಆನ್ ಪ್ರತಿಪಾದಿಸುವ ಸ್ವರ್ಗ, ನರಕ ನೇರವಾಗಿ ಲೌಕಿಕತೆಯೊಂದಿಗೆ ಸಂಬಂಧವಿರುವಂತಹದು. ಕಾಡಿನಲ್ಲಿ ಕೂತು ತಪ್ಪಸ್ಸು ಮಾಡುವುದನ್ನು, ಸನ್ಯಾಸಿಯಾಗುವುದನ್ನು ಕುರ್‌ಆನ್ ಎಲ್ಲೂ ವೈಭವೀಕರಿಸುವುದಿಲ್ಲ. ಮದುವೆ, ಸಂಸಾರ, ವ್ಯಾಪಾರ, ದುಡಿಮೆ ಇಂತಹ ಲೌಕಿಕ ಅಂಶಗಳಿಗೆ ಒತ್ತುಕೊಟ್ಟು ಮನುಷ್ಯನಿಗೆ ಪೂರಕವಾಗಿ ಕುರ್‌ಆನ್ ರಚನೆಗೊಂಡಿದೆ. ಕಾಯಕಕ್ಕೆ ಕುರ್‌ಆನ್ ಹೆಚ್ಚು ಆದ್ಯತೆ ನೀಡಿದೆ. ಮಸೀದಿಯಲ್ಲೇ ಹಗಲು ರಾತ್ರಿ ಇರುವುದನ್ನು ಕುರ್‌ಆನ್ ನಿರ್ದೇಶಿಸುವುದಿಲ್ಲ. ಪ್ರಾರ್ಥನೆ ಮುಗಿಸಿ ನಿಮ್ಮ ನಿಮ್ಮ ಬದುಕನ್ನು
ರಸಿ ಹೊರಗೆ ನಡೆಯಿರಿ ಎಂದು ಆದೇಶಿಸುತ್ತದೆ. ಪ್ರತಿ ದಿನ ಉಪವಾಸ ಹಿಡಿಯುವುದನ್ನು ಕುರ್‌ಆನ್ ನಿರಾಕರಿಸುತ್ತದೆ. ಉಪವಾಸ ಮಾಡಲೇಬೇಕಾದರೆ ಅದರ ನಡುವೆ ಅಂತರ ಇರಲಿ ಎಂದು ಹೇಳುತ್ತದೆ(ರಮಝಾನ್ ತಿಂಗಳ ಹೊರತಾಗಿ). ಅಲ್‌ಮಾವೂನ್ ಎನ್ನುವ ಕೆಲವೇ ಸಾಲುಗಳ ಪುಟ್ಟ ಅಧ್ಯಾಯ ‘ನಮಾಝ್ ಮಾಡುವನನ್ನೇ ಶಪಿಸುತ್ತದೆ. ಬಡವರಿಗೆ, ಅನಾಥರಿಗೆ ಏನನ್ನೂ ನೀಡದೆ ತೋರಿಕೆಯ ನಮಾಝ್ ಮಾಡುವವನೆಗೆ ಶಾಪವಿದೆ’ ಎಂದು ಕುರ್‌ಆನ್ ಘೋಷಿಸುತ್ತದೆ.ಈ ನಿಟ್ಟಿನಲ್ಲಿ ೧೨ನೆ ಶತಮಾನದ ಕಾಯಕವೇ ಕೈಲಾಸ ತತ್ವದೊಂದಿಗೆ ವೀರ ಶೈವ ಧರ್ಮ ಮತ್ತು ಇಸ್ಲಾಂ ಹೆಚ್ಚು ಹತ್ತಿರದಲ್ಲಿದೆ ಅನ್ನಿಸುತ್ತದೆ. ಬಸವಣ್ಣ ಏಕದೇವ ತತ್ವದೊಂದಿಗೆ ನಂಬಿಕೆ ಹೊಂದಿದ್ದ. ಕಲ್ಲಿಗೆ ಹಾಲೆರಯೂದನ್ನು ವಿರೋಧಿಸಿದ್ದ. ಬಸವಣ್ಣನ ಅನುಯಾಯಿಗಳನ್ನು ಶರಣರು ಎಂದು ಕರೆಯುತ್ತಿದ್ದರು. ಮುಸ್ಲಿಮರು ಎಂದರೆ ಶರಣರು ಎಂದೇ ಅರ್ಥ. (ಮುಸ್ಲಿಂ ಎಂದರೆ ಅರ್ಥ ಶರಣ)
   
 ಕುರ್‌ಆನ್‌ನ ಅತಿ ದೊಡ್ಡ ಹೆಗ್ಗಳಿಕೆಯೆಂದರೆ ಅದು ಸರಳ ಭಾಷೆಯಲ್ಲಿರುವುದು. ಮತ್ತು ಅದು ಪ್ರಜ್ಞಾಪೂರ್ವಕವಾಗಿಯೇ ನಡೆದಿದೆ ಎನ್ನುವುದನ್ನು ಸ್ವತಃ ಕುರ್‌ಆನ್‌ನಲ್ಲೇ ವಿವರಿಸಲಾಗುತ್ತದೆ. ಅಂದರೆ ಜನರಿಗೆ ತಲುಪಬೇಕು ಎನ್ನುವ ಸ್ಪಷ್ಟ ಉದ್ದೇಶದಿಂದಲೇ ಆ ಸರಳ ಭಾಷೆ ಮತ್ತು ನಿರೂಪಣೆಯನ್ನು ಬಳಸಲಾಗಿದೆ. ಅಂದರೆ ಜನರಭಾಷೆಯಲ್ಲಿ ಕುರ್‌ಆನ್ ಇದೆ. ಎಲ್ಲೂ ಭಾಷೆಯ ವೈಭವೀಕರಣವಿಲ್ಲ. ಆದರೆ, ಈ ಸರಳತೆಯ ಒಳಗೇ ಅರ್ಥಗಳು ಹಿಗ್ಗುವ ಗುಣಗಳನ್ನೂ ಪಡೆದಿವೆ. ಆದುದರಿಂದಲೇ, ಕುರ್‌ಆನ್‌ನ ಅನುವಾದವೆಂದರೆ, ತಂತಿಯ ಮೇಲೆ ನಡೆದಂತೆ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ಅರೇಬಿಕ್ ತನ್ನ ಗರ್ಭದೊಳಗೆ ಅಡಗಿಸಿಕೊಂಡಿರುವ ಅರ್ಥ ವೈಶಾಲ್ಯತೆಯನ್ನು, ಇನ್ನೊಂದೆ ಭಾಷೆಗೆ ತರುವುದೆಂದರೆ ಸಣ್ಣ ವಿಷಯವಲ್ಲ. ಆದುದರಿಂದ ಯಾವುದೇ ಕುರ್‌ಆನ್ ಅನುವಾದಗಳನ್ನೂ ನಾವು ಪರಿಪೂರ್ಣ ಎಂದು ಕರೆಯುವಂತಿಲ್ಲ. ಕನ್ನಡದಲ್ಲಿ ಈ ಕಾರಣಕ್ಕೇ ಇರಬಹುದು. ಹಲವು ಕುರ್‌ಆನ್ ಅನುವಾದಗಳು ಬಂದಿವೆ. ಇವುಗಳಲ್ಲಿ, ಮುಖ್ಯವಾದುದು ಇತ್ತೀಚೆಗೆ ಮಾಧ್ಯಮ ಪ್ರಕಾಶನ ಬೆಂಗಳೂರು ಹೊರತಂದಿರುವ, ಹಿರಿಯ ಪತ್ರಕರ್ತ, ಲೇಖಕ ಅಬ್ದುಸ್ಸಲಾಮ್ ಪುತ್ತಿಗೆ ಅನುವಾದಿಸಿರುವ ‘ಕನ್ನಡದಲ್ಲಿ ಕುರ್‌ಆನ್ ಅನುವಾದ’. ಬಹುಶಃ ಅತ್ಯಂತ ಸರಳ ಮತ್ತು ಸುಂದರ ಕಸ್ತೂರಿ ಕನ್ನಡದಲ್ಲಿ ಬಂದ ಅನುವಾದ ಇದೇ ಮೊದಲಿರಬೇಕು. ಎಲ್ಲೂ ವಾಕ್ಯಗಳನ್ನು ಶಬ್ದಗಳ ಮೂಲಕ ವೈಭವೀಕರಿಸುವ ಹಟವಿಲ್ಲದೆ, ಒಂದು ಪುಟ್ಟ ಮಗುವಿಗೆ ಹಾಲುಣಿಸುವಂತೆ, ಇಲ್ಲಿ ಅನುವಾದವನ್ನು ಓದುಗರಿಗೆ ಉಣಿಸುತ್ತಾರೆ. ಈ ಕಾರಣಕ್ಕಾಗಿಯೇ ಕಿರಿಯರಿಗೂ, ಹಿರಿಯರಿಗೂ ಅನುವಾದ ಇಷ್ಟವಾಗಬಹುದು.
ಹಾಗೆಯೇ ಕುರ್‌ಆನ್‌ಗೆ ಸಂಬಂಧ ಪಟ್ಟ ಮಾಹಿತಿಗಳ ಪಟ್ಟಿಯೊಂದು ಕೃತಿಯ ಕೊನೆಯಲ್ಲಿದೆ. ಇದು ಲೇಖಕರ ಅಪಾರ ಅಧ್ಯಯನಕ್ಕೆ ಸಾಕ್ಷಿಯಾಗಿದೆ. ಈ ಕುರ್‌ಆನ್ ಅನುವಾದ, ಇಸ್ಲಾಮನ್ನು ಕನ್ನಡದ ನೆಲಕ್ಕೆ ಇನ್ನಷ್ಟು ಹತ್ತಿರವಾಗಿಸಿದೆ.

Tuesday, January 28, 2014

ಭಾರತಿ ಕಂಡ ಬದುಕು ಮತ್ತು ಸಾವು

ಬದುಕಿನ ಸಾರ್ಥಕತೆಯಿರುವುದು ನಾವು ಸಾವನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರಲ್ಲಿ. ಮನುಷ್ಯ ತನ್ನ ಬದುಕನ್ನು ಅರ್ಥಪೂರ್ಣಗೊಳಿಸುತ್ತಾ ಹೋದ ಹಾಗೆಯೇ ತನ್ನ ಸಾವನ್ನೂ ಅರ್ಥಪೂರ್ಣಗೊಳಿಸುತ್ತಾ ಹೋಗುತ್ತಾನೆ. ಸಾವನ್ನು ಗೆಲ್ಲುವುದೆಂದರೆ ಬದುಕನ್ನು ಗೆಲ್ಲುವುದೂ ಹೌದು. ಬದುಕು ಕಲಿಸಿದಂತೆಯೇ ಸಾವೂ ಬದುಕನ್ನು ಕಲಿಸುತ್ತದೆ. ಭಾರತಿ ಬಿ. ವಿ. ಅವರ ‘ಸಾಸಿವೆ ತಂದವಳು’ ಕತಿ ಈ ಸಾವು-ಬದುಕಿನ ನಡುವಿನ ಈ ಜಗ್ಗಾಟವನ್ನು ಹದಯ ಮುಟ್ಟುವ ಹಾಗೆ ಹೇಳುತ್ತದೆ. ಇದು ಆರೋಗ್ಯವಂತ ಮನುಷ್ಯನೊಬ್ಬ ತನಗೆ ಬಂದ ಕಾಯಿಲೆಯನ್ನು ಗೆಲ್ಲುವ ಕತೆ. ಕಾಯಿಲೆಯೆನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದೇ ಆಗಿರಬೇಕಾಗಿಲ್ಲ. ಅದು ಮನಸ್ಸಿಗೆ ಸಂಬಂಧಿಸಿದ್ದೂ ಹೌದು. ಮನಸ್ಸು ದೇಹ ಜೊತೆಗೂಡಿ ಕ್ಯಾನ್ಸರ್ ಕಾಯಿಲೆಯ ಜೊತೆಗೆ ನಡೆಸಿದ ಹೋರಾಟ ಭಾರತಿ ಅವರ ಸಾಸಿವೆ ತಂದವಳು ಕತಿಯ ವಸ್ತು. ಇದು ಆತ್ಮಕತೆಯೂ ಹೌದು. ಆತ್ಮದ ಜೊತೆಗೆ ದೇಹದ ಕತೆಯೂ ಹೌದು. ‘ಸಾಸಿವೆ ತಂದವಳು’ ಎನ್ನುವ ಹೆಸರೇ ಸಾವಿನ ಸಾಮಿಪ್ಯವನ್ನು ಹೇಳುತ್ತದೆ. ‘‘ಸಾವಿಲ್ಲದ ಮನೆಯ ಸಾಸಿವೆ ತಾ’ ಎಂಬ ಬುದ್ಧನ ಮಾತಿನಿಂದ, ಪ್ರತಿ ಮನೆಯ ಬಾಗಿಲನ್ನು ತಟ್ಟಿ ತಾಯಿ ತನ್ನ ಮಗುವನ್ನು ಬದುಕಿಸಲು ಯತ್ನಿಸುತ್ತಾಳೆ. ಆದರೆ ಎಲ್ಲೂ ಸಾವಿಲ್ಲದ ಮನೆಯೇ ಇಲ್ಲ. ಅವಳಿಗೆ ಸಾಸಿವೆ ಸಿಗಲೇ ಇಲ್ಲ. ಆದರೆ ಇಲ್ಲಿ, ಭಾರತಿ ತನ್ನದೇ ಎದೆಯ ಬಾಗಿಲನ್ನು ತಟ್ಟಿ ಅಲ್ಲಿಂದ ಸಾಸಿವೆ ತಂದು ಬುದ್ಧನ ಕೈಗಿಡುತ್ತಾರೆ. ಕ್ಯಾನ್ಸರ್‌ನಿಂದ ಪಾರಾಗುತ್ತಾರೆ.
  ಅದರರ್ಥ ಸಾವಿನಿಂದ ಪಾರಾದರೂ ಎಂದಲ್ಲ. ಕ್ಯಾನ್ಸರ್ ಎಂದರೆ ಸಾವು ಎಂದು ಭಾವಿಸಿಕೊಂಡು, ತಕ್ಷಣ ಶರಣಾಗತರಾಗುವವರಿಗೆ ಈ ಕತಿಯಲ್ಲಿ ಸ್ಫೂರ್ತಿಯಿದೆ. ಯಾವುದೇ ರೋಗಗಳು ಮನಸ್ಸಿಗೆ ಆವರಿಸಲು ಬಿಡಬಾರದು ಎನ್ನುವ ಸಂದೇಶವೊಂದು ಇಲ್ಲಿದೆ. ಅತ್ಯಂತ ಜೀವಪರವಾದ, ಬದುಕಿಗೆ ಮುಖಕೊಟ್ಟು ಮಾತನಾಡುವ ಕತಿ ಇದು. ಅನಂತ ಮೂರ್ತಿ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ ‘‘ಕ್ಯಾನ್ಸರಿನಂತಹ ಒಂದು ಕಾಯಿಲೆಯನ್ನು ಗೆಲ್ಲುವ ಪ್ರಯತ್ನದಲ್ಲಿ ಗೆಲುವು, ಸೋಲು ಎರಡೂ ಒಟ್ಟೊಟ್ಟಿಗೆ ಎದುರಾಗುವ ಭರವಸೆಯೂ ಇದೆ. ಸಂಕಟವೂ ಇದೆ. ಇದನ್ನು ಬರೆಯುವಾಗ ಬರಹಗಾರ್ತಿಗೆ ಜೀವನದ ಪ್ರೀತಿ ಇರಬೇಕು. ಆದರೆ ಅದು ಆತ್ಮರತಿಯಾಗಬಾರದು. ಅಥವಾ ಆತ್ಮ ಮರುಕದ ಉತ್ಕಟತೆಯಲ್ಲಿ ಸಾಯಬೇಕೆಂಬ ಅಪೇಕ್ಷೆಯೂ ಆಗಕೂಡದು. ಭಾರತಿ ಇದನ್ನು ಅಪೂರ್ವವೆಂಬಂತೆ ಸಾಧಿಸುತ್ತಾಳೆ’’
ಬದುಕುವುದಕ್ಕೆ ಅಪಾರ ಸ್ಫೂರ್ತಿಯನ್ನು ಕೊಡುವ ಈ ಕತಿಯನ್ನು ಎಲ್ಲರೂ ಓದಬೇಕು. ಅಹರ್ನಿಶಿ ಪ್ರಕಾಶನ(94491 74662, 94486 28511) ಶಿವಮೊಗ್ಗ ಹೊರತಂದಿರುವ ಈ ಕತಿಯ ಮುಖಬೆಲೆ 100 ರೂಪಾಯಿ.

ನೆರವು ಮತ್ತು ಇತರ ಕತೆಗಳು

 ಅಷ್ಟೇ!
‘‘ನಿನ್ನೆದುರು ಯಾರೋ ನೀರಿಗಿಳಿದು ಕೊಚ್ಚಿ ಕೊಂಡು ಹೋಗುತ್ತಿದ್ದಾರೆ...ನೀನೇನು ಮಾಡುತ್ತೀಯ?’’
‘‘ನೀರಿನಲ್ಲಿ ಸುಳಿಯಿದೆ ಎಂದು ಗೊತ್ತಾದಂತಾಯಿತು. ನೀರಿಗೆ ಇಳಿಯುವುದಿಲ್ಲ ಅಷ್ಟೇ....’’

ನೆರವು
ಒಬ್ಬ ಆಳದ ಹೊಂಡಕ್ಕೆ ಬಿದ್ದಿದ್ದ.
ಮೇಲಿನಿಂದ ಇನ್ನೊಬ್ಬ ಅವನಡೆಗೆ ಕೈ ಚಾಚಿ, ಮೇಲೆ ಬರಲು ಕರೆಯುತ್ತಿದ್ದ.
ಮೇಲಿದ್ದವನು ಅದೆಷ್ಟು ಪ್ರಯತ್ನಿಸಿದರೂ ಹೊಂಡದಲ್ಲಿದವನನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ.
ಯಾಕೆಂದರೆ ಅವನಿಗೆ ಮೇಲೆತ್ತುವ ಮನಸ್ಸೇ ಇರಲಿಲ್ಲ.
ಇದ್ದಿದ್ದರೆ, ತನ್ನ ಪಕ್ಕದಲ್ಲೇ ಹಗ್ಗವನ್ನು ಇಳಿಸಿ ಅವನನ್ನು ಮೇಲೆತ್ತುತ್ತಿದ್ದ.

ಬುದ್ಧ

ಒಬ್ಬ ಬುದ್ಧನ ವಿಗ್ರಹವನ್ನು ಹಲವು ವರ್ಷಗಳಿಂದ ಆರಾಧಿಸುತ್ತಿದ್ದ.
ಆದರೂ ಆತನಿಗೆ ಜ್ಞಾನೋದಯವಾಗಲಿಲ್ಲ.
ಒಂದು ದಿನ ಸಿಟ್ಟಿನಿಂದ ಬುದ್ಧನ ವಿಗ್ರಹವನ್ನು ಸುತ್ತಿಗೆಯಿಂದ ಒಡೆದು ಹಾಕಿದ.
ವಿಗ್ರಹ ಚೂರಾಚೂರಾಗುತ್ತಿದ್ದಂತೆಯೇ ಭಕ್ತನಿಗೆ ಬುದ್ಧ ದರ್ಶನವಾಯಿತು.
ಜ್ಞಾನೋದಯವಾಯಿತು.

ಆಕೆ
ಆಕೆಯನ್ನು ಮನೆಯವರೆಲ್ಲ ಸೇರಿ ಕೋಣೆಯೊಳಗೆ ಕೂಡಿ ಹಾಕುತ್ತಾರೆ.
ಸುಮಾರು 20 ವರ್ಷ ಆಕೆ ಕೋಣೆಯೊಳಗೆ ಒಬ್ಬಂಟಿಯಾಗಿ ಕೂತು, ಗೋಡೆಗಳ ಜೊತೆ ತನ್ನ ಒಳಗಿನ ಮಾತುಗಳನ್ನು ಆಡುತ್ತಾ ಆಕೆ ಬದುಕುತ್ತಿರುತ್ತಾಳೆ.
ಆಕೆಯ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಒಂದು ದಿನ ಗೋಡೆಗಳು ಬಿರುಕು ಬಿಟ್ಟವು.
ಮನೆಯವರು ಬಂದು ನೋಡಿದರೆ ಕಲ್ಲು ಗೋಡೆ ಕುಸಿದು ಬಿದ್ದಿದೆ.
ಕೋಣೆ ಬಯಲಾಗಿತ್ತು. ಆಕೆ ಅಲ್ಲಿರಲಿಲ್ಲ.

ಈಜು
ಸಿದ್ಧ 10 ನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದ.
ಮೊದಲ ಪ್ರಶ್ನೆಯೇ ‘ಈಜು ಕಲಿತರೆ ಆಗುವ ಪ್ರಯೋಜನ ಏನು?’
ಸಿದ್ಧನಿಗೆ ಉತ್ತರ ಬರೆಯಲು ಸಾಧ್ಯವಾಗಲಿಲ್ಲ.
ಯಾಕೆಂದರೆ, ಹಳ್ಳಿಯಿಂದ ಬಂದ ಸಿದ್ಧನಿಗೆ ಈಜು ಗೊತ್ತಿತ್ತು. ಆದರೆ ಇಂಗ್ಲಿಷ್ ಗೊತ್ತಿರಲಿಲ್ಲ.

ಹೀಗೆ
ಶಿಷ್ಯ ಕೇಳಿದ ‘‘ಗುರುಗಳೇ, ರುಚಿಯಾದ ಮಾವಿನ ಹಣ್ಣು, ಬೇಕೆ?್ಫ’’ ಬೇಕೇ ಎಂದು ಕೇಳಿದ.
ಸಂತ ಆಸೆಯಿಂದ ‘‘ಹಣ್ಣು ಬೇಡ. ಅದರೊಳಗಿರುವ ಮರವನ್ನು ಕೊಡು...’’ ಎಂದ.
‘‘ಹೇಗೆ ಗುರುಗಳೇ?’’ ಶಿಷ್ಯ ಕೇಳಿದ.
‘‘ಹೀಗೆ’’ ಎಂದು ಶಿಷ್ಯ ಹಣ್ಣು ತಿಂದು ಎಸೆದ ಕೊರಟೆಯನ್ನು ಬಿತ್ತಿ ಅದಕ್ಕೆ ನೀರು ಸುರಿದ.

Monday, January 27, 2014

ದಿ ಬುಕ್ ಆಫ್ ಎಲಿ: ಪತನದ ಅಂಚಿನಲ್ಲಿ ನಂಬಿಕೆಯ ಹಸ್ತ

ಈ ಚಿತ್ರವನ್ನು ನಾನು ಕಳೆದ ರಾತ್ರಿ ಅಂದರೆ ರವಿವಾರ ನೋಡಿದ್ದು. ಚಿತ್ರದ ಹೆಸರು ‘ದಿ ಬುಕ್ ಆಫ್ ಎಲಿ’. ನನಗ್ಯಾಕೋ ಇಷ್ಟವಾಯಿತು ಈ ಚಿತ್ರ. ಮನುಷ್ಯ ಕುಲದ ದುರಂತದ, ಪತನದ ಕಟ್ಟ ಕಡೆಯ ಅಂಚಿನಲ್ಲಿ ನಡೆಯುವ ಘಟನೆಗಳನ್ನು ಈ ಚಿತ್ರ ಹಿಡಿದಿಡುತ್ತದೆ. ಇದನ್ನು ನಾವು ಮಿಥ್‌ನ ಭಾಗವಾಗಿಯೂ ಸ್ವೀಕರಿಸಬಹುದು. ಆದರೆ ಅದರಾಚೆಗೆ ಹಲವು ಹೊಳಹುಗಳನ್ನು ನೀಡುವ ಶಕ್ತಿ ಈ ಚಿತ್ರಕ್ಕಿದೆ ಎಂದು ನನಗನ್ನಿಸಿತು. ಬೈಬಲ್ ಕತಿಯ ಆಶಯವನ್ನು ಇಟ್ಟುಕೊಂಡು ಈ ಚಿತ್ರದ ಕತೆಯನ್ನು ಹೆಣೆಯಲಾಗಿದೆ.
 

 ಈ ಭೂಮಿ ತನ್ನೆಲ್ಲ ತಪ್ಪುಗಳಿಗೆ ತನ್ನನ್ನು ತೆತ್ತುಕೊಂಡು, ಸರ್ವನಾಶವಾಗಿ ಪಾಳು ಬೀಳುತ್ತದೆ. ಆಧುನಿಕತೆಗಳೆಲ್ಲ ನುಚ್ಚು ನೂರಾಗಿ ಅದರಲ್ಲೇ ತೆವಳುತ್ತಾ ಅಳಿದುಳಿದ ಮನುಷ್ಯರು ಬದುಕುತ್ತಿರುತ್ತಾರೆ. ಮುರಿದು ಬಿದ್ದ ಸೇತುವೆ, ಗೋಪುರ, ಕಟ್ಟಗಳ ಮಧ್ಯೆ, ಯಾವ ಗೊತ್ತುಗುರಿಗಳೂ ಇಲ್ಲದೆ ಈ ಹಿಂದಿನ ಪಳೆವುಳಿಕೆಗಳನ್ನೇ ಬಳಸಿಕೊಂಡು, ದರೋಡೆ ಮಾಡಿಕೊಂಡು ಜೀವಿಸುತ್ತಿರುತ್ತಾರೆ. ಮನುಷ್ಯ ನಂಬಿಕೆ ಸರ್ವನಾಶವಾಗಿ, ಪ್ರೀತಿ, ವಿಶ್ವಾಸಗಳೆಲ್ಲ ನುಚ್ಚು ನೂರಾಗಿ ಬರೇ ಕೋವಿಯ ತುದಿಯಿಂದಲೇ ಬದುಕುತ್ತಿರುವ ದಿನಗಳು ಅವು. ನಾಗರಿಕತೆ ರೂಪಿಸಿದ ಎಲ್ಲ ಮಾಧ್ಯಮಗಳೂ ಕುಸಿದು, ಕರೆನ್ಸಿಗಳೂ ಇಲ್ಲದೆ, ಬರೇ ಅಳಿದುಳಿದ ವಸ್ತುಗಳನ್ನೇ ಅದಲು ಬದಲಿಸಿ ಬದುಕುವ ಕಾಲ. ಕಾಡಿನ ಆದಿ ಕಾಲವನ್ನು ನೆನಪಿಸುವ ಮನುಷ್ಯನ ವ್ಯಕ್ತಿತ್ವ. ಮುರಿದ ಕನ್ನಡಿ, ಕಟ್ಟ ಕಡೆಯ ಶ್ಯಾಂಪು, ಬಟ್ಟೆ, ಎಲ್ಲವೂ ಬೆಲೆಬಾಳುವ ಕ್ಷಣಗಳು. ಒಂದು ಗುಟುಕು ನೀರಿಗೆ ತನ್ನಲ್ಲಿರುವ ಅದೆಷ್ಟೋ ವಸ್ತುಗಳನ್ನು ತೆರಬೇಕಾದಂತಹ ಸ್ಥಿತಿ. ಒಂದು ರೀತಿಯಲ್ಲಿ ಭೂಮಿಯ ನಾಗರಿಕತೆ ಬಹತ್ ಗುಜರಿ ಅಂಗಡಿಯಂತಾಗಿದೆ. ಇಂತಹ ಕಾಲಘಟ್ಟದಲ್ಲಿ ಒಂದು ಪುಸ್ತಕಕ್ಕಾಗಿ ಇಬ್ಬರಲ್ಲಿ ನಡೆಯುವ ತಿಕ್ಕಾಟವೇ ‘ದಿ ಬುಕ್ ಆಫ್ ಎಲಿ’. 

ಅದೊಂದು ಪಾಳು ಬಿದ್ದ ನಗರ. ಅಲ್ಲಿನ ಮುಖ್ಯಸ್ಥ ಕಾರ್ನೆಗಿ(ಗ್ಯಾರಿ ಓಲ್ಡ್‌ಮೇನ್). ಅವನಿಗೆ ಪುಸ್ತಕ ಓದುವುದು ಗೊತ್ತು. ಗುಜರಿ ಅಂಗಡಿಯಂತಹ ಬಹತ್ ಭೂಮಿಯಲ್ಲಿ ಅವನು ಒಂದು ಹಳೆಯ ಕಳೆದು ಹೋದ ಪುಸ್ತಕಕ್ಕಾಗಿ ಹುಡುಕಾಡುತ್ತಿರುತ್ತಿರುತ್ತಾನೆ. ತನ್ನ ಜನರನ್ನು ಅದರ ಹುಡುಕಾಟಕ್ಕೆ ಹಚ್ಚಿದ್ದಾನೆ. ದರೋಡೆ ನಡೆದ ಸಂದರ್ಭದಲ್ಲಿ ಯಾರಲ್ಲಾದರೂ ಪುಸ್ತಕಗಳಿದ್ದರೆ ಅದನ್ನು ಈತನಿಗೆ ತಲುಪಿಸುತ್ತಾರೆ. ಆದರೆ ಅವನು ಹುಡುಕುವ ಪುಸ್ತಕ ಅದಾಗಿರುವುದಿಲ್ಲ. ಮುರಿದು ಬಿದ್ದ ಇಡೀ ವ್ಯವಸ್ಥೆಯನ್ನು ಪುನರ್ ನಿರ್ಮಿಸಿ ಆಳುವುದು ಅವನ ಕನಸು. ಅದಕ್ಕೆ ಆ ಪುಸ್ತಕ ಭಾರೀ ಸಹಾಯ ಮಾಡುತ್ತದೆ ಎಂದು ಅವನು ನಂಬಿದ್ದಾನೆ. ಆ ಪುಸ್ತಕಕ್ಕೆ ಅಸಾಮಾನ್ಯ ಶಕ್ತಿಯಿದೆ ಎಂದು ಅವನಿಗೆ ಗೊತ್ತಿದೆ. ಅದಕ್ಕಾಗಿಯೇ ತನ್ನ ಗೂಂಡಾಗಳನ್ನು ಎಲ್ಲೆಡೆ ಹರಿಬಿಟ್ಟಿದ್ದಾನೆ. ಹೀಗಿರುವಾಗ ಆ ಮುರಿದು ಬಿದ್ದ ನಗರಕ್ಕೆ ಒಬ್ಬ ಅಪರಿಚಿತ ಎಲಿಯ(ಡೆಂಝಿಲ್ ವಾಷಿಂಗ್ಟನ್)ನ ಆಗಮನವಾಗುತ್ತದೆ. ಅವನು ಅಲ್ಲಿಗೆ ಆಗಮಿಸಿರುವುದು ಒಂದಿಷ್ಟು ನೀರಿಗಾಗಿ. ಅದಕ್ಕೆಂದೇ ಕಾರ್ನೆಗಿಯ ಬಾರ್‌ಗೆ ಆಗಮಿಸಿದ್ದಾನೆ. ಆ ನೀರಿರುವುದು ಒಂದು ನಿಗೂಢ ಜಾಗದಲ್ಲಿ. ನೀರಿಗಾಗಿ ಕೆಲವು ಅಮೂಲ್ಯ ವಸ್ತು ನೀಡುವ ಮೂಲಕ ಅವನು ಎಲ್ಲರ ಗಮನ ಸೆಳೆಯುತ್ತಾನೆ. ಅಲ್ಲಿರುವ ದುಷ್ಕರ್ಮಿಗಳು ಅವನ ಮೇಲೆ ಎರಗುತ್ತಾನೆ. ಆದರೆ ಅವನದು ಅಧಮ್ಯ ಶಕ್ತಿ. ದೈತ್ಯ ವ್ಯಕ್ತಿತ್ವ. ನಿರ್ಲಿಪ್ತ ಕಣ್ಣುಗಳು. ಒಂದು ಕ್ಷಣದಲ್ಲೇ ಹಲವರ ಹೆಣ ಬೀಳುತ್ತದೆ. ಅವನಿಗೆ ಆ ಹಿಂಸೆ ಇಷ್ಟವಿರುವುದಿಲ್ಲ. ಆದರೆ ಅಲ್ಲಿರುವ ದುಷ್ಚರು ಹಲವು ದಾರಿಹೋಕರನ್ನು ಕೊಂದು, ಅವರನ್ನು ದರೋಡೆ ಮಾಡಿರುವುದನ್ನು ಅವನು ಹಾದು ಬಂದ ಹಾದಿಯಲ್ಲಿ ಗಮನಿಸಿದ್ದಾನೆ. ಬಾರ್‌ನಲ್ಲಿ ನಡೆದ ಹೋರಾಟ ಅವನನ್ನು ಕಾರ್ನೆಗಿಯ ಕಡೆ ತಲುಪಿಸುತ್ತದೆ. ಒಂದು ದಿನದ ಮಟ್ಟಿಗೆ ತನ್ನ ಅತಿರ್ಥಿಯಾಗಬೇಕು ಎಂದು ಕಾರ್ನೆಗಿ ಒತ್ತಾಯಿಸುತ್ತಾನೆ. ಎಲಿ ಒಪ್ಪುತ್ತಾನೆ. ಎಲಿಯ ಗುಟ್ಟನ್ನು ತಿಳಿದುಕೊಳ್ಳಲು, ರಾತ್ರಿ ಆತನ ಕೋಣೆಗೆ ತನ್ನ ಕುರುಡಿ ಪ್ರೇಯಸಿ ಕ್ಲಾಡಿಯಾಳನ್ನು ಕಾರ್ನೆಗಿ ಕಳುಹಿಸುತ್ತಾನೆ. ಆದರೆ ಎಲಿ ಆಕೆಯನ್ನು ನಯವಾಗಿ ನಿರಾಕರಿಸುತ್ತಾನೆ. ಆತನೊಳಗಿನ ಶಕ್ತಿ ಆ ಕುರುಡಿಗೆ ಅನುಭವವಾಗುತ್ತದೆ. ಕಾರ್ನೆಗಿ ಸಿಟ್ಟಾಗುತ್ತಾನೆ. ಪ್ರೇಯಸಿಯ ಮಗಳು ಅಥವಾ ಮಲಮಗಳು ಸೊಲಾರಳನ್ನು ಕಳುಹಿಸುತ್ತಾನೆ. ಆದರೆ ಆಕೆಯನ್ನೂ ನಿರಾಕರಿಸುತ್ತಾನೆ. ‘‘ತಾನು ವಿಫಲಳಾಗಿ ಹೋದರೆ ಕಾರ್ನೆಗಿ ತನ್ನ ತಾಯಿಯನ್ನು ಹಿಂಸಿಸುತ್ತಾನೆ. ಆದುದರಿಂದ ಒಂದು ರಾತ್ರಿ ನಿನ್ನ ಜೊತೆಗೆ ಇರಲು ಬಿಡು’’ ಎಂದು ಆಕೆ ಮನವಿ ಮಾಡುತ್ತಾಳೆ. ಎಲಿ ಒಪ್ಪುತ್ತಾನೆ. ಅದೇ ಸಂದರ್ಭದಲ್ಲಿ ಸೊಲಾರಗೆ ಒಂದು ಸತ್ಯ ಮನವರಿಕೆಯಾಗುತ್ತದೆ. ಅದೆಂದರೆ ‘ಅಪರಿಚಿತ’ನಿಗೆ ಪುಸ್ತಕ ಓದುವ ಸಾಮರ್ಥ್ಯವಿದೆ! ಅವನು ಪುಸ್ತಕವೊಂದನ್ನು ತನಗೆ ತಿಳಿಯದಂತೆ ಮುಚ್ಚಿಡಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬರುತ್ತದೆ. ಮುಂದೆ ಅದು ಕಾರ್ನೆಗಿಗೆ ತಿಳಿಯುತ್ತದೆ. ಕಾರ್ನೆಗಿ ಆ ಪುಸ್ತಕಕ್ಕಾಗಿ ಎಲಿಯ ಬೆನ್ನು ಬೀಳುತ್ತಾನೆ. 

ಅಲ್ಲಿಂದ ಎಲಿ ಮತ್ತು ಕಾರ್ನೆಗಿಯ ಗೂಂಡಾಗಳ ನಡುವಿನ ಹೋರಾಟ ಆರಂಭವಾಗುತ್ತದೆ. ಆ ಪುಸ್ತಕಕ್ಕಾಗಿ ಹಲವು ಜೀವಗಳು ನೆಲವಪ್ಪುತ್ತದೆ. ಎಲ್ಲ ಹೋರಾಟಗಳ ಬಳಿಕ ಎಲಿ ಆ ಪುಸ್ತಕವನ್ನು ಅನಿವಾರ್ಯವಾಗಿ ಕಾರ್ನೆಗಿಗೆ ಒಪ್ಪಿಸಬೇಕಾಗುತ್ತದೆ. ಸೊಲಾರಳ ಜೀವ ಅಪಾಯದಲ್ಲಿರುವುದರಿಂದ ಆತ ತನ್ನದಲ್ಲಿದ್ದ ಪುಸ್ತಕವನ್ನು ಕಾರ್ನೆಗಿಗೆ ಒಪ್ಪಿಸುತ್ತಾನೆ. ಕಾರ್ನೆಗಿಯಿಂದ ಪಾರಾಗಿ ಎಲಿ ಮತ್ತು ಸೋಲಾರ ಆಮೆರಿಕದ ಪಶ್ಚಿಮವನ್ನು ತಲುಪುತ್ತಾರೆ. ಎಲಿಯ ಬದುಕಿನ ಬಹು ಮುಖ್ಯ ಧ್ಯೇಯವೇ ಆ ಪುಸ್ತಕದಲ್ಲಿರುವ ಪ್ರೀತಿ, ಸ್ನೇಹ, ನಂಬಿಕೆಯನ್ನು ಅಮೆರಿಕದ ಪಶ್ಚಿಮದ ಕಡೆಗೆ ತಲುಪಿಸುವುದಾಗಿತ್ತು. ಆದರೆ ಪುಸ್ತಕವೇ ಅವನಲ್ಲಿಲ್ಲ. ಸೋಲಾರ ಕೇಳುತ್ತಾಳೆ ‘‘ನೀನೀಗ ಆ ಪುಸ್ತಕವನ್ನು ಹೇಗೆ ಪಶ್ಚಿಮದ ಕಡೆಗೆ ತಲುಪಿಸುತ್ತೀಯ?’’ ಎಲಿ ಹೇಳುತ್ತಾನೆ. ‘‘ಅದರಲ್ಲಿರುವ ಪ್ರತಿ ಅಕ್ಷರಗಳೂ ನನಗೆ ನೆನಪಿದೆ’’

ಇತ್ತ ಕಾರ್ನೆಗಿ ಭದ್ರ ಪಡಿಸಿದ್ದ ಪುಸ್ತಕವನ್ನು ತಂತ್ರಜ್ಞನ ಸಹಾಯದಿಂದ ಬಿಡಿಸುತ್ತಾನೆ. ನೋಡಿದರೆ ಅದರ ತುಂಬಾ ಖಾಲಿ ಹಾಳೆಗಳು. ಅದರಲ್ಲೇನೂ ಇಲ್ಲ. ಅವನು ವಿಕಾರವಾಗಿ ಚೀರುತ್ತಾನೆ. ಆತನ ಕುರುಡಿ ಪ್ರೇಯಸಿ ಆ ಪುಸ್ತಕವನ್ನು ಬಿಡಿಸುತ್ತಾಳೆ. ಖಾಲಿ ಹಾಳೆಗಳನ್ನು ಮುಟ್ಟಿದಂತೆಯೇ ಅದರಲ್ಲಿರುವ ಸಾಲುಗಳು ಅವಳ ಒಳಗೆ ಅನುಭವವಾಗುತ್ತಾ ಹೋಗುತ್ತದೆ. ಯಾಕೆಂದರೆ ಅದು ಬ್ರೈಲ್ ಲಿಪಿಯಲ್ಲಿತ್ತು. ಅದನ್ನು ಓದಿ ವಿವರಿಸಲು ಕಾರ್ನೆಗಿ ಆದೇಶಿಸುತ್ತಾನೆ. ಆದರೆ ಆಕೆಗೆ ಆ ಪುಸ್ತಕ, ಅವನ ಆದೇಶವನ್ನು ಧಿಕ್ಕರಿಸುವ ಶಕ್ತಿಯನ್ನು ನೀಡುತ್ತದೆ.


 ಇಡೀ ಭೂಮಿ ವಿಚ್ಛಿದ್ರವಾಗಿದ್ದಾಗ ಮನುಷ್ಯನನ್ನು ಪರಸ್ಪರ ಬೆಸೆಯುವುದು ನಾಗರಿಕತೆಯಲ್ಲ. ಬರೇ ನಂಬಿಕೆ ಎನ್ನುವುದನ್ನು ಚಿತ್ರ ಹೇಳುತ್ತದೆ. ಚಿತ್ರದಲ್ಲಿ ಆ ಪುಸ್ತಕ ‘ಬೈಬಲ್’ ಆಗಿರುತ್ತದೆ. ಆದುದರಿಂದ ಚಿತ್ರಕ್ಕೆ ಕೆಲವು ಮಿತಿಗಳೂ, ಪೂರ್ವಾಗ್ರಹಗಳು ಅಂಟಿ ಬಿಡುತ್ತದೆ. ಆದರೆ ಇದರಾಚೆಗೆ ಚಿತ್ರವನ್ನು ತಂದು ನೋಡಿದರೆ, ಅದರ ಆಶಯ ನಮ್ಮೆಳಗೆ ಬೆಳೆಯುತ್ತಾ ಹೋಗುತ್ತದೆ. ಎಲಿ ತನ್ನೊಳಗಿನ ಬೈಬಲ್‌ಗೆ ಪುಸ್ತಕರೂಪ ನೀಡಿ ಸಾಯುತ್ತಾನೆ.ಮುರಿದ ಬಿದ್ದ ಜಗತ್ತನು ನಂಬಿಕೆಯ ಮೂಲಕ ಕಟ್ಟುವ ಆಶಯವನ್ನು ಎಲಿಯಿಂದ ಸೋಲಾರ ತನ್ನದಾಗಿಸಿಕೊಂಡು ತನ್ನ ನಗರಕ್ಕೆ ಮರಳುವಲ್ಲಿಗೆ ಚಿತ್ರ ಮುಗಿಯುತ್ತದೆ.
 ಎಲಿಯ ವ್ಯಕ್ತಿತ್ವ ಇಡೀ ಕತೆಯ ಕೇಂದ್ರ ಬಿಂದು. ಈತ ಜೀಸಸ್‌ನಂಥವನಲ್ಲ. ಇಡೀ ಭೂಮಿಯಲ್ಲಿ ಮತ್ತೆ ಪರಸ್ಪರ ನಂಬಿಕೆಯನ್ನು ಬಿತ್ತಿ, ಹೊಸ ನಾಗರಿಕತೆಯನ್ನು ಕಟ್ಟುವುದಕ್ಕಾಗಿ ಅವನು ಹಲವರೊಡನೆ ಸೆಣಸುತ್ತಾನೆ. ಹಲವರನ್ನು ಕೊಲ್ಲುತ್ತಾನೆ. ತಾನೂ ಗಾಯಗೊಳ್ಳುತ್ತಾನೆ. ಕೊನೆಗೂ ತನ್ನ ಉದ್ದೇಶವನ್ನು ಸಾಧಿಸುತ್ತಾನೆ. ಕ್ಲಾಡಿಯಾ ಪಾತ್ರ ಸಣ್ಣದಾದರೂ, ಇಡೀ ಕತೆಗೆ ಆಳ, ಅಗಲವನ್ನು ಕೊಡುತ್ತದೆ. ಒಂದು ಪುಸ್ತಕವನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿ ಹಲವು ಕಾಲಗಳನ್ನು ಕಳೆದು, ಹೋರಾಟ ಮಾಡಿ ತನ್ನದಾಗಿಸಿಕೊಂಡರೂ, ಅದನ್ನು ಓದಲು ಕಾರ್ನೆಗಿ ಅಸಮರ್ಥನಾಗುವುದರಲ್ಲಿ ಅವನ ದುರಂತವನ್ನು ಚಿತ್ರ ಕಟ್ಟಿಕೊಡುತ್ತದೆ. ಎಲಿಯ ನಿಸ್ವಾರ್ಥ ಕರ್ಮ ಮತ್ತು ಅವನ ನಂಬಿಕೆ ಅವನನ್ನು ಅವನ ಗುರಿಯೆಡೆಗೆ ಸಾಗಿಸುತ್ತದೆ. ಮತ್ತು ಆ ನಂಬಿಕೆಯೇ ವಿಶ್ವವನ್ನು ಮತ್ತೊಮ್ಮೆ ಶುರುವಿನಿಂದ ಮುನ್ನಡೆಸುತ್ತದೆ. ಆ ನಂಬಿಕೆಯ ಬಲದೊಂದಿಗೆ ಸೋಲಾರ ಮತ್ತೆ ತನ್ನ ಮುರಿದು ಬಿದ್ದ ನಗರಕ್ಕೆ ಮರಳುತ್ತಾಳೆ.


ಸಂಗೀತ ಮತ್ತು ಛಾಯಾಗ್ರಹಣ ಭೂಮಿಯ ದುರಂತ, ಕ್ರೌರ್ಯ ಮತ್ತು ಹೊಸ ನಿರೀಕ್ಷೆಗಳನ್ನು ಕಟ್ಟಿಕೊಡುವಲ್ಲಿ ಉದ್ದಕ್ಕೂ ಯಶಸ್ವಿಯಾಗುತ್ತದೆ. ಚಿತ್ರದೊಳಗೊಂದು ದರ್ಶನವಿದೆ. ಆ ದರ್ಶನವೇ ಚಿತ್ರವನ್ನು ನಮಗೆ ಹತ್ತಿರವಾಗಿಸುತ್ತದೆ. ತೀರಾ ಶ್ರೇಷ್ಟವಲ್ಲದಿದ್ದರೂ, ಒಂದಿಷ್ಟು ಆಪ್ತತೆಯನ್ನು ಕಟ್ಟಿಕೊಡುವ ಚಿತ್ರ ಇದು. ಹಾಗೆಂದು ಇದು ಎಲ್ಲರಿಗೂ ಇಷ್ಟವಾಗಬೇಕೆಂದೂ ಇಲ್ಲ. ಯಾಕೆಂದರೆ, ಚಿತ್ರ ಪ್ರತಿಪಾದಿಸುವ ಆಶಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೂ ಇಲ್ಲ.

Saturday, January 18, 2014

ಚೂರಿ ಮತ್ತು ಇತರ ಕತೆಗಳು

ಅಕ್ಕ
ಅಪರೂಪಕ್ಕೆ ಬಂದ ತಮ್ಮ ಅಕ್ಕನ ಮನೆಗೆ ಹೋದ.
ತಮ್ಮನನ್ನು ಅನಿರೀಕ್ಷಿತವಾಗಿ ಕಂಡ ಅಕ್ಕನಿಗೆ ಅಚ್ಚರಿ, ಗೊಂದಲ, ಖುಷಿ, ತಲ್ಲಣ.
ತಮ್ಮ ಕೇಳಿದ ‘‘ಹೇಗಿದ್ದೀಯ?’’
‘‘ಚೆನ್ನಾಗಿದ್ದೇನೆ...’’ ಎನ್ನುತ್ತಾ ತನ್ನ ಕೆನ್ನೆಯ ಬೆರಳಚ್ಚನ್ನು ಸೆರಗಿನಿಂದ ಮುಚ್ಚಿಕೊಂಡಳು.

ಗುರಿ
‘‘ಶೂಟ್ ಮಾಡು...ಶೂಟ್ ಮಾಡು...’’
ಯಾರೋ ಕೂಗಿದರು.
ಗಸ್ತು ತಿರುಗುತ್ತಿದ್ದ ಪೊಲೀಸರು ‘‘ನಕ್ಸಲೀಯರಿರಬಹುದು’’ ಎಂದು ಸುತ್ತುವರಿದರು.
ನೋಡಿದರೆ ಇಬ್ಬರು ಫೋಟೋಗ್ರಾಫರ್‌ಗಳು, ಮರದ ಮೇಲಿರುವ ಎರಡು ಹಕ್ಕಿಗಳ ಪ್ರೀತಿಯನ್ನು ಶೂಟ್ ಮಾಡುತ್ತಿದ್ದರು.

ಆಸೆ
ನದಿಯಲ್ಲಿ ಅದೇನೋ ತೇಲಿ ಕೊಂಡು ಬರುತ್ತಿದೆ.
ತೆಂಗಿನ ಕಾಯಿ ಇರಬಹುದೋ ಎಂದು ನದಿಗೆ ಹಾರಿದ.
ನೋಡಿದರೆ ಅದ್ಯಾವನೋ ಒಬ್ಬ ಕೊಚ್ಚಿಕೊಂಡು ಹೋಗುತ್ತಿದ್ದಾನೆ.
‘ಛೆ’ ನಿರಾಸೆಯಿಂದ ದಡ ಸೇರಿದ.

ಖಾಲಿ
ಒಂದು ಖಾಲಿ ಕಾಗದ ಬಿದ್ದುಕೊಂಡಿತ್ತು.
ಸಂತ ಅದನ್ನೆತ್ತಿ ಭದ್ರವಾಗಿ ತಿಜೋರಿಯಲ್ಲಿಟ್ಟ.
‘‘ಗುರುಗಳೇ, ಅದೊಂದು ಖಾಲಿ ಕಾಗದ. ಯಾಕೆ ಅದಕ್ಕೆ ಅಷ್ಟು ಭದ್ರತೆ’’ ಶಿಷ್ಯ ಕೇಳಿದ.
ಸಂತ ಗಂಭೀರವಾಗಿ ಉತ್ತರಿಸಿದ ‘‘ಬರೆದ ಕಾಗದಕ್ಕಿಂತಲೂ ಖಾಲಿ ಕಾಗದ ಹೆಚ್ಚು ಅಪಾಯಕಾರಿ’’

ಯುದ್ಧ
ಒಬ್ಬ ಯೋಧ ಯುದ್ಧದಲ್ಲಿ ಮತಪಟ್ಟ.
ಅವನ ಮತದೇಹವನ್ನು ಊರಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಗೆ ಯಾರೋ ಕಲ್ಲು ಎಸೆದರು.
ಈಗ ಊರಲ್ಲೇ ಯುದ್ಧ ಶುರುವಾಯಿತು.
ನಾಲ್ವರು ಮತಪಟ್ಟರು.
ಯೋಧ ಮಲಗಿದಲ್ಲೇ ಕಣ್ಣೀರು ಹಾಕಿದ.

ಚೂರಿ
ಬೆಳಗ್ಗೆ ಕಮ್ಮಾರನೊಬ್ಬ ದರೋಡೆಕೋರನೊಬ್ಬನಿಗೆ
ಹರಿತವಾದ ಸುಂದರ ಚೂರಿಯೊಂದನ್ನು ಮಾಡಿಕೊಟ್ಟ.
ಸಂಜೆ ಅದೇ ಚೂರಿಯನ್ನು ತೋರಿಸಿ
ಕಮ್ಮಾರನನ್ನು ದರೋಡೆಕೋರ ದರೋಡೆ ಮಾಡಿದ.

Friday, January 17, 2014

ಬೇಡ ನಿನಗೆ ಪಾಪದ ತಂಟೆ...

 
ಪಾಪ ಮಾಡಬೇಡ, ಪಾಪದ ಮಗುವೇ...
ಬೇಡ ನಿನಗೆ ಪಾಪದ ತಂಟೆ...

ನೀನು ತಿಂದು ಎಸೆದ
ಪಾಪದ ಹಣ್ಣಿನ ಬೀಜ
ನಿನ್ನ ಇರುಳ ಕಪ್ಪು ಮಣ್ಣಿನ ಆಳದಲ್ಲಿ
ಮೊಳಕೆಯೊಡೆಯುವ ಸದ್ದಿಗೆ ನೀನು ಬೆಚ್ಚಿ ಬೀಳುವೆ...
ಬೇಡ ನಿನಗೆ ಪಾಪದ ತಂಟೆ.

ನಿನ್ನ ನಿದ್ದೆಯ ಆಳದ
ಕಗ್ಗತ್ತಲಲ್ಲಿ ಬೇರಿಳಿಸುತ್ತಾ ಈ ಪಾಪದ ಬೀಜ
ನಿನ್ನ ಕನಸನ್ನೆಲ್ಲ ಆವರಿಸಿ ಬೆಳೆಯುತ್ತಾ
ನಿನ್ನ ವಾಸ್ತವದ ಹಗಲಲ್ಲಿ ಕೊಂಬೆ ರೆಂಬೆ ಚಾಚಿ
ಇದೀಗ ಮರ ತುಂಬಾ ತೂಗುವ ಹಣ್ಣುಗಳು
ನಿನಗಾಗಿ ನೀನೇ ಬಿತ್ತಿ ಬೆಳೆದ  ಹಣ್ಣುಗಳು
ಬೇಡದಿತ್ತು ನಿನಗೆ ಈ ಪಾಪದ ತಂಟೆ

ನಿನಗೆ ಗೊತ್ತಿಲ್ಲ ಮಗುವೆ
ಒಂದು ಪಾಪದ ಹಣ್ಣನ್ನು ತಿಂದ ತಪ್ಪಿಗೆ
ಪ್ರತಿ ಹಣ್ಣಿನೊಳಗೂ ಪುತಗುಡುವ ಹುಳಗಳಂತೆ
ಕಣ್ಣು ಪಿಳುಕಿಸಲು ತವಕಿಸುವ ಲೆಕ್ಕವಿರದಷ್ಟು ಮರಗಳಿಗೆ
ನೀನೆ ವಾರಸುದಾರನಾಗಬೇಕಾಗುತ್ತದೆ
ಈ ಸತ್ಯ ಮತ್ತೆಂದೂ ನಿನ್ನನ್ನು
ನಿದ್ದೆ ಮಾಡಕೊಡುವುದಿಲ್ಲ
ಪಾಪದ ಮಗುವೇ...
ಬೇಡ ನಿನಗೆ ಪಾಪದ ತಂಟೆ

Sunday, January 12, 2014

ಟೀಪು ಸುಲ್ತಾನ್ ಕುರಿತ ಸತ್ಯಗಳು

ಕನ್ನಡದ ಹಿರಿಯ ಲೇಖಕರಾದ ಕೋ. ಚೆನ್ನಬಸಪ್ಪ ಅವರು ಸಂಗ್ರಹಿಸಿ, ಸಂಪಾದನೆ ಮಾಡಿರುವ ಕೃತಿ ‘ಅಪ್ರತಿಮ ದೇಶಭಕ್ತ ಟೀಪುಸುಲ್ತಾನ್’. ಈ ಕೃತಿ ಸಂಶೋಧನೆಗೆ ಸಂಬಂಧಪಟ್ಚಿರುವುದು. ಆದುದರಿಂದಲೇ, ಇದರಲ್ಲಿ ಲೇಖಕರಾಗಿ ಗುರುತಿಸಿಕೊಳ್ಳದೆ, ಈ ಸಂಶೋಧನೆಯ ಹಿಂದಿರುವ ದಾಖಲೆಗಳಿಗೆ ಲೇಖಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಟೀಪು ಸುಲ್ತಾನ್‌ನ ಕುರಿತಂತೆ ರಾಜಕೀಯ ಕಾರಣಗಳಿಗೆ ಅಪಪ್ರಚಾರ ಮಾಡುತ್ತಿರುವ ಸಂಚುಗಳನ್ನು ಈ ಕೃತಿ ಬಯಲಿಗೆಳೆಯುತ್ತದೆ. ಟೀಪು ಸುಲ್ತಾನ್ ತನ್ನ ಬದುಕಿನುದ್ದಕ್ಕೂ ಹೇಗೆ ‘ರಾಜಧರ್ಮ’ವನ್ನು ಪಾಲಿಸಿದ್ದ ಎನ್ನುವ ಸತ್ಯವನ್ನು ಈ ಕೃತಿ ತೆರೆದಿಡುತ್ತದೆ.
ದಿ. ತೀ. ತಾ. ಶರ್ಮಾರ ಗ್ರಂಥವನ್ನು ಮುಂದಿಟ್ಟುಕೊಂಡು ಟಿಪ್ಪು ಸುಲ್ತಾನ್ ಹೇಗೆ ಮರಾಠರು ಸೇರಿದಂತೆ ಅನ್ಯರಿಂದ ಕನ್ನಡದ ಹಿಂದೂಗಳಿಗೆ ತೊಂದರೆಯಾದಾಗ ಅವರ ರಕ್ಷಣೆಗೆ ಧಾವಿಸಿದ ಎನ್ನುವುದನ್ನು ಮೊದಲ ಅಧ್ಯಾಯದಲ್ಲಿ ದಾಖಲಿಸುತ್ತಾರೆ. ಅಷ್ಟೇ ಅಲ್ಲ, ಟಿಪ್ಪು ಅಪ್ಪಟ ದೇಶಭಕ್ತ ಎನ್ನುವುದನ್ನು ದಾಖಲೆಗಳ ಸಹಿತ ಕೃತಿಯಲ್ಲಿ ನಿರೂಪಿಸುತ್ತಾರೆ. ಟೀಪು ತನ್ನ ಆಳ್ವಿಕೆಯಲ್ಲಿ ರೈತರಿಗೆ, ದಲಿತರಿಗೆ ಹೇಗೆ ನೆರವಾದ ಎನ್ನುವ ಅಂಶವೂ ಈ ಕೃತಿಯಲ್ಲಿದೆ. ಹಾಗೆಯೇ ಟೀಪುವಿನ ಕುರಿತಂತೆ ಹರಡಿರುವ ‘ಮತಾಂತರ’ದ ಹಿಂದಿರುವ ರಾಜಕೀಯ ಏನು ಎನ್ನುವುದನ್ನು ಈ ಕೃತಿ ತೆರೆದಿಡುತ್ತದೆ.
‘ಬ್ರಿಟಿಷರಿಗೆ ನೆರವಾದವರ ಕತೆ’ ಇದರ ಕೊನೆಯ ಅಧ್ಯಾಯ. ಈ ಅಧ್ಯಾಯ ನಿಜವಾದ ದೇಶದ್ರೋಹಿಗಳು ಮತ್ತು ದೇಶಪ್ರೇಮಿಗಳು ಯಾರು ಎನ್ನುವ ಬೆಚ್ಚಿ ಬೀಳು ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತದೆ. ಟಿಪ್ಪುವಿನ ದುರಂತಕ್ಕೆ ಕಾರಣರಾದ ದೇಶದ್ರೋಹಿಗಳನ್ನು ಈ ಅಧ್ಯಾಯ ತೆರೆದಿಡುತ್ತದೆ. ರಾಜಕೀಯ ವಿರೋಧಿಗಳನ್ನು ಟಿಪ್ಪು ಹಿಂಸಿಸಿರಬಹುದು. ಅದು ಅಂದಿನ ರಾಜಕೀಯ ಕಾಲಘಟ್ಟದಲ್ಲಿ ಅನಿವಾರ್ಯ. ಆದರೆ ಧರ್ಮದ ಹೆಸರಿನಲ್ಲಿ ಎಂದೂ ಟಿಪ್ಪು ಸುಲ್ತಾನ್ ಯಾರನ್ನೂ ಬೆದರಿಸಿರಲಿಲ್ಲ. ಜೊತೆಗೆ ಅವನು ಜಾತ್ಯತೀತನಾಗಿ ತನ್ನ ಕರ್ತವ್ಯವನ್ನು ಪಾಲಿಸಿದ ಎನ್ನುವುದನ್ನು ಈ ಕೃತಿ ಹೇಳುತ್ತದೆ.
ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಮುಖಬೆಲೆ 40 ರೂ.

Tuesday, January 7, 2014

ಕೊಂಗಾಣದ ಅಮಾನುಷ ಕೊಲೆಗಳು

 ಕವಿ, ಪತ್ರಕರ್ತ ದಿ. ಬಿ. ಎಮ್. ರಶೀದ್, ಲಂಕೇಶ್ ಪತ್ರಿಕೆಗೆ ಮಾಡಿದ ಒಂದು ವರದಿ. ಕೊಡಗಿನ ವೀರಾಜ ಪೇಟೆಯ ಕೊಂಗಾಣದಲ್ಲಿ ನಡೆದ ಬರ್ಬರ ಕೊಲೆಗಳ ಹಿಂದಿರುವ, ರಾಜಕೀಯ, ಸಾಮಾಜಿಕ ಮಗ್ಗುಲುಗಳನ್ನು ಶೋಧಿಸುವ ಕೆಲಸ ಈ ವರದಿ ಮಾಡುತ್ತದೆ. ಕ್ರೈಮ್ ಗಳನ್ನು  ವೈಭವೀಕರಿಸದೆಯೇ ಒಬ್ಬ ವರದಿಗಾರ ಮಾನವೀಯ ನೆಲೆಯಲ್ಲಿ ಹೇಗೆ ವರದಿ ಮಾಡಬಹುದು ಎನ್ನೂದಕ್ಕೆ ಉದಾಹರಣೆ ಯಾಗಿ ಇಲ್ಲಿ ನೀಡಿದ್ದೇನೆ. ಬಿ. ಎಮ್. ರಶೀದ್ ನ ಬರಹಗಳ ಸಂಗ್ರಹ "ಪರುಷ ಮಣಿ" ಕೃತಿಯಿಂದ ಇದನ್ನು ಆರಿಸಲಾಗಿದೆ.

ನಾಗರಿಕ ಜಗತ್ತಿನ ಸಂಪರ್ಕವೇ ಇಲ್ಲದ ಅರಣ್ಯಗಳು ಮನುಷ್ಯನ ಮನಸ್ಸಿನ ಮೇಲೆ ಎಂತಹ ಪ್ರಭಾವವನ್ನು ಸ್ಥಾಪಿಸಿರುತ್ತವೆನ್ನುವುದಕ್ಕೆ, ಕೊಡಗಿನ ಕೊಂಗಾಣ ಎಂಬ ಕುಗ್ರಾಮದಲ್ಲಿ ನಡೆದಿರುವ ಘಟನಾವಳಿಗಿಂತ ಬೇರೆ ಸಾಕ್ಷಿಯೇ ಬೇಕಾಗಿಲ್ಲ. ಕಾಡಿನ ಮೂಲಭೂತ ಗುಣ ಮತ್ತು ನಾಗರಿಕತೆಯ ನಡುವಿನ ಘರ್ಷಣೆಯಲ್ಲಿಯೇ ಬಹುಶಃ ಸನ್ನುವಿನಂತಹ ವಿಕ್ಷಿಪ್ತ ಮನಸ್ಸಿನ ಕೊಲೆಗಡುಕರು ಸೃಷ್ಟಿಯಾಗುತ್ತಾರೇನೋ! ನಾಗರಿಕ ಸಮಾಜ,ಪ್ರತಿಭಟನೆಗೆ ಪ್ರಜಾಸತ್ತಾತ್ಮಕ ದಾರಿಗಳನ್ನು ತೋರಿಸಿ ಕೊಟ್ಟಿವೆ ನಿಜ.ಆದರೆ ಕಾಡನ್ನೇ ತನ್ನ ಅಸ್ತಿತ್ವಕ್ಕಾಗಿ ನೆಚ್ಚಿಕೊಂಡಿರುವ ಮನುಷ್ಯರ ಮೇಲೆ ಕಾಡಿನ ನ್ಯಾಯ, ತನ್ನ ಪ್ರಭಾವವನ್ನು ಬೀರಿಯೇ ತೀರುತ್ತದೆನ್ನುವುದನ್ನು ಕೊಂಗಾಣದಲಿ ನಡೆದ ಸರಣಿ ಹತ್ಯೆಗಳು ಮನಗಾಣಿಸಿ ಕೊಡುತ್ತಿವೆ.
ಸ್ವಂತ ಪತ್ನಿ, ಮಗು, ಅಣ್ಣ, ಅತ್ತಿಗೆಯರನ್ನು ಕೊಂದು ಕೊನೆಗೆ ತನ್ನ ಅಣ್ಣನ ಮಗನಿಂದಲೇ ಸಿನಿಮೀಯ ರೀತಿಯಲ್ಲಿ ಹತ್ಯೆಗೀಡಾದ ಸನ್ನುವಿನ ಕೈಯಲ್ಲಿದ್ದದ್ದು ನಾಲ್ಕಲ್ಲ; ಕೊಲ್ಲಬೇಕಾದ ಹದಿನೈದು ಜನರ ಯಾದಿ! ತನಗೆ ಕಿರುಕುಳ ಕೊಟ್ಟವರನ್ನೆಲ್ಲಾ ಕೊಂದು ಭೂಗತ ಮಾಡುವುದೇ ತನ್ನ ಸಮಸ್ಯೆಗಳಿಗೆ ಅಂತಿಮ ಪರಿಹಾರವೆಂದು ಭಾವಿಸಿದ್ದ ಸನ್ನುವಿನ ಕೊಲೆಗಡುಕ ಮನೋಸ್ಥಿತಿಗೆ ನಿರ್ದಿಷ್ಟವಾಗಿ ಇಂತಹದೇ ಒಂದು ಕಾರಣವಿರಬಹುದೆಂದು ಊಹಿಸುವುದು ಮೂರ್ಖತನದ ಕೆಲಸವಾಗಲಾರದೇ? ಸನ್ನು ಕೊಲ್ಲಬೇಕೆಂದಿದ್ದವರ ಪಟ್ಟಿಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಕೊಲೆಯ ಕಾರಣಗಳು ಭಿನ್ನವಾಗುತ್ತಾ ಹೋಗುವ ಸಾಧ್ಯತೆಯೇ ಹೆಚ್ಚಲ್ಲವೇ? ಹಾಗಿದ್ದರೆ ಕಾಡಲ್ಲಿ ಬಚ್ಚಿಟ್ಟುಕೊಂಡು ತನಗೆ ತೊಂದರೆ ಕೊಟ್ಟ ಹದಿನೈದು ಮಂದಿಯನ್ನು ಸರಣಿಯೋಪಾದಿಯಲ್ಲಿ ಕೊಲ್ಲಬೇಕೆಂದುಕೊಂಡ ಸನ್ನುವಿನ ಮನೋಸ್ಥಿತಿಯ ಹಿನ್ನಲೆ ಎಂತಹದು?ಯಾವುದಕ್ಕೂ ಮೊದಲು ಕೊಂಗಾಣವೆಂಬ ಕುಗ್ರಾಮವನ್ನು ಕಣ್ಣಲ್ಲಿ ಕಂಡು ಬಿಡಬೇಕು. ಅಷ್ಟಾಯಿತೆಂದರೆ ನಮ್ಮ ಅರ್ಧದಷ್ಟು ಪ್ರಶ್ನೆಗಳಿಗೆ ಆ ಊರೇ ಉತ್ತರ ನೀಡಿ ಬಿಡುತ್ತದೆ.
ಹೇಗಿದೆ ಕೊಂಗಾಣ?
ವೀರಾಜಪೇಟೆಯಿಂದ ಸುಮಾರು 18ಕಿ.ಮೀ. ದೂರದಲ್ಲಿರುವ ಕೊಂಗಾಣಕ್ಕೆ ತಲುಪಬೇಕೆಂದರೆ ದಬಾಯಿಸಿ ನಿಂತ ಕಾಡೊಳಗೆ ನಾಲ್ಕು ಕಿ.ಮೀ. ನಡೆಯಬೇಕು. ಹಾಗೆ ಪರಿಪಾಟಲು ಪಟ್ಟು ತಲುಪಿದ ಊರಿನಲ್ಲಿ ಟೆಲಿಫೋನಿರಲಿ, ಒಂದು ವಿದ್ಯುತ್ ಕಂಬದ ಕುರುಹೂ ಕೂಡ ನಿಮ್ಮ ಕಣ್ಣಿಗೆ ಬೀಳುವುದಿಲ್ಲ.ಕಾಡಿನ ನಡುವೆ ಹುದುಗಿ ಹೋದ ಹತ್ತಿಪ್ಪತ್ತು ಮನೆಗಳು ಹಂಚಿನ ಸಂದುಗಳಲ್ಲಿ ಹೊಗೆ ಕಾರುತ್ತಾ ಜೂಗರಿಸುವುದನ್ನು ನೀವು ಕಾಣುತ್ತೀರಿ. ಎಲ್ಲವೂ ಕಡೇಮಾಡ ಮನೆತನಕ್ಕೆ ಸೇರಿದ ಕೊಡವರ ಮನೆಗಳು. ಗ್ರಾಮವನ್ನಿಡೀ ಕಂಬಳಿಯಂತೆ ಕವುಚಿದ ಕಾಡಿನ ದೆಸೆಯಿಂದ ಹಗಲಿಗೂ,ರಾತ್ರಿಗೂ ಭೇದವೇ ಇಲ್ಲ.
ಕೊಂಗಾಣದ ಕೊಡವರು ಹೆಸರಿಗೊಂದಿಷ್ಟು ಕಾಫಿ. ಕರಿಮೆಣಸು, ಶುಂಠಿ ಕೃಷಿಗಳನ್ನು ನಡೆಸುತ್ತಿರುವವರಾದರೂ, ಮರಗಳ್ಳ ಸಾಗಾಣಿಕೆ, ಕಳ್ಳಬೇಟೆ, ಕಳ್ಳಭಟ್ಟಿ ಸಾರಾಯಿ ಎಲ್ಲರಿಗೂ ವರಮಾನದ ದಿಡ್ಡಿ ಬಾಗಿಲು.
ಅದರಲ್ಲೂ ಎರಡು ಗುಂಪು ಬೇರೆ. ಒಂದು ಗುಂಪು ಸನುವಿನದಾದರೆ ಮತ್ತೊಂದು ತಂಡಕ್ಕೆ ಕುಂಜಂಡ ರವಿ ಎಂಬ ಕುಖ್ಯಾತ ರೌಡಿ ನಾಯಕ. ಹೀಗಾಗಿ ದ್ವೇಷ ಸಾಧನೆ, ಜಗಳ, ಹಲ್ಲೆ ಕೊಲೆಗಳಿಗೆ ಕೊಂಗಾಣದಲ್ಲಿ ಬರವೂ ಇಲ್ಲ. ಕೊಂಗಾಣ 1974ರಿಂದಲೇ ಕೊಲೆಗಳಿಗೆ ಕುಪ್ರಸಿದ್ಧವಾದ ಊರು. 74ರಲ್ಲಿ ಕಾಳೆಂಗಡ ದೊರೆಯಪ್ಪ ಎಂಬ ನಟೋರಿಯಸ್ ಢಕಾಯಿತನ ಹೆಸರೆತ್ತಿದರೆ ಇಡೀ ಕೊಂಗಾಣವೇ ತತ್ತರ ನಡುಗುತ್ತಿತ್ತು. ಶಾಲೆಗೆ ಹೊರಟ ಹೆಣ್ಣುಮಕ್ಕಳು ದೊರೆಯಪ್ಪನ ಕಾಟದಿಂದ ಮರಳಿ ಮನೆ ಸೇರುವುದೇ ಅನಿಶ್ಚಿತವೆಂಬ ದಿನವಾಗಿತ್ತದು. ಕೊನೆಗೆ ಕೊಂಗಾಣದ ಜನರು ಏಳು ಮಂದಿಯ ತಂಡ ಕಟ್ಟಿ ದೊರೆಯಪ್ಪನ ಮೇಲೆ ಮುಗಿಬಿದ್ದು ಮುಗಿಸಿ ಹಾಕಿದರು.ಮೊನ್ನೆ ಸನ್ನುವಿನ ಕೈಯಿಂದ ಹತನಾಗಿ ಹೋದ ಗೋಪಿ ಬೋಪಯ್ಯಮತ್ತು ಕೂದಲೆಳೆ ಅಂತರದಿಂದ ಪಾರಾದ ಕಾಶಿ, ದೊರೆಯಪ್ಪನ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆನ್ನುವುದನ್ನು ಕೂಡ ನಾವಿಲ್ಲಿ ಮರೆಯುವಂತಿಲ್ಲ. ಮುಂದೆ ಅದೇನಾಯ್ತೋ, ದೊರೆಯಪ್ಪನ ಕೊಲೆಯ ಬಳಿಕ ಕೊಂಗಾಣದಲ್ಲಿ ಅಲ್ಲೊಂದು ಇಲ್ಲೊಂದರಂತೆ ಹೆಣಗಳು ಉರುಳುತ್ತಲೇ ಹೋಯ್ತು. ಎರವನೊಬ್ಬನನ್ನು ಪೆಟ್ರೋಲ್ ಹುಯ್ದು ಸಜೀವವಾಗಿ ಸುಟ್ಟು ಬಿಡಲಾಯ್ತು. ಮುದ್ದೇಡ ವಿಜಯ, ಜಗದಿ ಮುಂತಾದ ಯುವಕರು ಸದ್ದಿಲ್ಲದೆ ಕೊಲೆಯಾಗಿ ಹೋದರು. ಹೀಗೆ ಕೊಂಗಾಣದಲ್ಲಿ ಯಾವುದಕ್ಕೂ ಕೊಲೆಯೇ ಅಂತಿಮ ಪರಿಹಾರವೆನ್ನುವ ಅಘೋಷಿತ ನಿಯಮವೊಂದು ಅನಾದಿ ಕಾಲದಿಂದಲೇ ಜಾರಿಗೆ ಬಂದಿತ್ತು. ಹೆಣಗಳು ಬಿದ್ದಷ್ಟು ತಮಗೆ ಸುಗ್ಗಿಯೆಂದು ಬಗೆದು ಪೊಲೀಸರೆಂಬ ಪಾತಕಿಗಳು, ಕೊಂಗಾಣದ ಕೊಲೆಗಡುಕರಿಗೆ ತಮ್ಮ ಕೈಲಾದ ಸಹಾಯವನ್ನು ನೀಡುತ್ತಲೇ ಬಂದರು.
ಸನ್ನು ದುಷ್ಟನೇ?
ಇಂತಹ ಕೊಂಗಾಣವೆಂಬ ಕಗ್ಗಾಡಿನಲ್ಲಿ ಬೆಳೆದು ಬಂದ ಸನ್ನುವಿಗೆ ಇದೀಗ ವಿಕ್ಷಿಪ್ತ ಮನಸ್ಸಿನ ಕೊಲೆಗಡುಕನೆಂಬ ಹಣೆಪಟ್ಟಿ ಲಭಿಸಿದ್ದರೂ, ಬಲ್ಲವರ ಪ್ರಕಾರ ಆತ ಅಂತಹ ದುಷ್ಟನೇನೂ ಆಗಿರಲಿಲ್ಲ. ಒಂಭತ್ತು ವರ್ಷದ ಹಿಂದೆ ನೀತೂ ಎಂಬ ಸುಂದರಿಯನ್ನು ಮದುವೆಯಾಗಿದ್ದ ಸನ್ನುವಿಗೆ ಹೆಂಡತಿಯ ಕಡೆಗೆ ಪ್ರೀತಿಯಿತ್ತು. ಅವರ ದಾಂಪತ್ಯಕ್ಕೆ ನಾಲ್ಕು ವರ್ಷದ ಮಗು ನೀಷ್ಮಾ ಸಾಕ್ಷಿಯಾಗಿತ್ತು. ಪಿತ್ರಾರ್ಜಿತವಾಗಿ ಬಂದ ಇಪ್ಪತ್ತೈದು ಎಕರೆ ಜಮೀನಿನಲ್ಲಿ ಕಾಫಿ, ಕರಿಮೆಣಸು ಬೆಳೆದಿದ್ದ ಸನ್ನು, ಇನ್ನೊಂದು ಕಡೆಯಿಂದ ಕೊಂಗಾಣದ ಎಲ್ಲಾ ಮಹನೀಯರಂತೆ ಮರಗಳ್ಳ ಸಾಗಾಣಿಕೆಯ ದಂಧೆಯನ್ನೂ ನಡೆಸುತ್ತಿದ್ದವನು. ಇದೆಲ್ಲಾ ತಪ್ಪೆಂದು ಮನಗಾಣಿಸುವಂತಹ ಸಾಮಾಜಿಕ ವೌಲ್ಯಗಳು ಕೂಡ ಕೊಂಗಾಣದಲ್ಲಿರದಿದ್ದುದರಿಂದ ಕಳ್ಳ ಸಾಗಾಣಿಕೆ ಕೂಡ ಅಲ್ಲಿನ ಜನರಿಗೆ ಸಹಜ ದಂಧೆಯಾಗಿತ್ತು. ಒಟ್ಟಿನಲ್ಲಿ ಸನ್ನು ತನ್ನ ಕುಟುಂಬದೊಂದಿಗೆ ನೆಮ್ಮದಿಯಾಗಿದ್ದಕ್ಕೆ ನಿದರ್ಶನಗಳಿದ್ದವು. ಆದರೆ ಪರಿಸರದ ನೆಮ್ಮದಿ ಕೆಟ್ಟಾಗ ಮನೆಯ ನೆಮ್ಮದಿಯೂ ಕೆಡುತ್ತದೆನ್ನುವಂತೆ ಕೊಂಗಾಣದ ಮರಗಳ್ಳರು ಎರಡು ಗುಂಪುಗಳಾಗಿ ವಿಭಜಿಸಿ ಹೋಗಿ ಒಬ್ಬರಿಗೊಬ್ಬರ ವಿರುದ್ಧ ಕತ್ತಿ ಮಸೆಯುತ್ತಿದ್ದರು. ಒಬ್ಬರಿಗೊಬ್ಬರ ಕಳ್ಳ ನಾಟಕಗಳ ವಿವರಗಳನ್ನು ಇಲಾಖೆಗೆ ನೀಡಿ ರೈಡ್ ಮಾಡಿಸುವುದು ಇತ್ತಂಡಗಳ ಮುಖ್ಯ ಕಸುಬಾಗಿತ್ತು.
ನರ ಬೇಟೆಯ ಹಿಂದಿನ ಕಾರಣಗಳು!
ವೈಯಕ್ತಿಕವಾಗಿ ಒಳ್ಳೆಯವನೇ ಆಗಿದ್ದ ಸನ್ನುವಿನ ಬದುಕಿನಲ್ಲಿ ಕಡೆ ಮಾಡಕಾಶಿಯ ಮಗ ಗಣಪನ ಜೊತೆ ಪಾಲುದಾರಿಕೆಯಲ್ಲಿ ಶುಂಠಿ ಬೆಳೆದದ್ದು ಒಂದು ಮುಖ್ಯ ತಿರುವು. ಸ್ವತಃ ಕಠಿಣ ಪರಿಶ್ರಮಿಯಾಗಿದ್ದ ಸನ್ನು ಅದೇಕೆ ಅಂತಹ ಮೂರ್ಖ ನಿರ್ಧಾರ ತಳೆದನೋ? ಬರೇ ಇಪ್ಪತ್ತೇಳು ವರ್ಷ ಪ್ರಾಯದ ಎಳಸು ಗಣಪನೊಂದಿಗೆ ಸೇರಿ ತನ್ನ ಜಮೀನಿನಲ್ಲಿ ಶುಂಠಿ ಬೆಳೆಯ ತೊಡಗಿದನು. ಇದೇ ಹೊತ್ತಿನಲ್ಲಿ ಗಣಪ, ಸನ್ನುವಿನ ಮನೆಗೆ ಬಂದು ಹೋಗುವುದೆಲ್ಲಾ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸನ್ನುವಿನ ಪತ್ನಿ ನೀತೂಗೂ, ಗಣಪನಿಗೂ ನಡುವೆ ಸ್ನೇಹ ಬೆಳೆದಿತ್ತೇ? ಹಾಗಂತ ಹೇಳುವವರಿದ್ದಾರೆ. ಆದರೆ ಕಂಡವರಿಲ್ಲ. ದಿನ ಕಳೆದಂತೇ ಗಣಪ ತನ್ನ ವಿರೋಧಿ ಪಾಳಯದಲ್ಲಿ ಪ್ರತ್ಯಕ್ಷನಾದದ್ದೇ ಸನ್ನುವಿನ ನೆಮ್ಮದಿಗೆಡತೊಡಗಿತು.ಇದರಿಂದ ಅವರಿಬ್ಬರೊಳಗಿನ ಸಂಬಂಧ ಹದಗೆಟ್ಟು ಗಣಪ, ಸನ್ನುವಿಗೆ 60 ಸಾವಿರ ರೂಪಾಯಿ ನಾಮ ತಿಕ್ಕಿಯೇ ಬಿಟ್ಟನು. ಹುಟ್ಟಾ ವಂಚಕ ಗಣಪ, ಸನ್ನುವಿಗೆ ವಂಚಿಸಲೆಂದೇ ಆತನ ವಿರೋಧಿ ಬಲಾಢ್ಯನೂ ಆಗಿದ್ದ ಕುಂಜಂಡ ರವಿಯ ಪಾಳಯ ಸೇರಿಬಿಟ್ಟಿದ್ದನು. ಶುಂಠಿಯ ಮೇಲೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದ ಸನ್ನುವಿಗೆ ಇದು ಬಹುದೊಡ್ಡ ಏಟಾಯ್ತು. ಮೊದಲೇ ಸರಿಯಾದ ಬೆಲೆ ಇಲ್ಲದೇ ಕಾಫಿ, ಕರಿಮೆಣಸು ಕೈ ಕಚ್ಚಿ ಬಿಟ್ಟಿತ್ತು. ಸಮಯ ಹೀಗಿರುವಾಗಲೇ ಬೆಂಗಳೂರಿನಲ್ಲಿ ಮನೆ ಮಾಡಿ ಕೂತಿದ್ದ ಇಬ್ಬರು ಅಣ್ಣಂದಿರು ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಸನ್ನು ಬಳಿ ಕುಸ್ತಿಗೆ ಬಂದು ಬಿಟ್ಟರು. ತಂದೆಯ ಪಾಲಿನ ಮನೆ ಪಡೆದು ಪಕ್ಕದಲ್ಲೇ ಕೂತಿದ್ದ ಮೂರನೆಯ ಅಣ್ಣ ಗೋಪಿ ಬೋಪಯ್ಯನಂತೂ ಕಳೆದ ಹದಿನೈದು ವರ್ಷಗಳಿಂದ ವ್ಯಾಜ್ಯದ ಹೆಸರಿನಲ್ಲಿ ಕೋರ್ಟು-ಕಚೇರಿ ಅಲೆದಾಡಿಸುತ್ತಿರುವುದು ಸನ್ನುವಿನ ಪಾಲಿನ ಮತ್ತೊಂದು ರೇಜಿಗೆ! ಇನ್ನೊಂದೆಡೆಯಿಂದ ತನಗೆ ಅರವತ್ತು ಸಾವಿರ ರೂಪಾಯಿ ನಾಮ ತಿಕ್ಕಿದ ಪಾಲುದಾರ ಗಣಪ, ತನ್ನ ವಿರೋಧಿ ಪಾಳಯ ಸೇರಿ ತನ್ನ ಕಳ್ಳನಾಟಕಗಳನ್ನೆಲ್ಲಾ ಒಂದೊಂದಾಗಿ ಇಲಾಖೆಯವರಿಗೆ ಸುಳಿವು ಕೊಟ್ಟು ಹಿಡಿಸುತ್ತಿದ್ದಾನೆ. ಸನ್ನುವಿನ ತಲೆ ಕೆಟ್ಟು ಕೆರ ಹಿಡಿಯಲು ಇನ್ನೇನು ಬೇಕು?
ಸರಣಿ ಕೊಲೆಗಳು!
 ಗಣಪನನ್ನು ಕೊಲ್ಲುವ ನಿರ್ಧಾರ ಕೈಗೊಳ್ಳುವ ಕೆಲವು ದಿನಗಳ ಮುನ್ನ ಸನ್ನು ಗಣಪನಲ್ಲಿ ತನಗೆ ಬರಬೇಕಾದ ಅರವತ್ತು ಸಾವಿರ ರೂಪಾಯಿಯನ್ನು ಕೇಳಿದ್ದನಂತೆ. ಅದಕ್ಕೆ ಗಣಪ ‘‘ಕುಂಜುಂಡ ರವಿಗೆ ಹೇಳಿ ನಿನ್ನ ಕೈಕಾಲು ಮುರಿಸುತ್ತೇನೆ’’ ಎಂದು ರೋಪು ಹೊಡೆದಿದ್ದನು. ಕೊಲೆಗಳಿಗಾಗಿ ಸನ್ನು ಅಂತಿಮವಾಗಿ ಸನ್ನದ್ಧವಾದದ್ದು ಅಂದೇ! ತನ್ನ ಪತಿಯನ್ನು ಈ ಪರಿ ಪೀಡಿಸುತ್ತಿರುವವರ ಬಗ್ಗೆ ಪತ್ನಿ ನೀತಾಳಲ್ಲೂ ಒಂದು ಅವ್ಯಕ್ತ ಆಕ್ರೋಶ ಮಡುಗಟ್ಟಿತ್ತು. ಆಕೆಯ ಬಳಿ ತನ್ನ ಶತ್ರುಗಳನ್ನು ಕೊಲ್ಲುವ ಪ್ರಸ್ತಾಪವನ್ನು ಸನ್ನು ಮಾಡಿದಾಗ ಆಕೆಗದು ಸರಿಯೆಂದೂ ಕಂಡಿತು. ನೀತೂ ಮಗುವಿನೊಂದಿಗೆ ತವರಿಗೆ ಹೋಗಬೇಕೆಂದೂ, ತಾನವರನ್ನು ಕೊಂದು ತಾನೂ ಸಾಯುತ್ತೇನೆಂದು ಸನ್ನು ಹೇಳಿದಾಗ ಮಾತ್ರ ಆಕೆ ಒಪ್ಪದಾದಳು. ಸಾಯುವುದಿದ್ದರೆ ನಾವೆಲ್ಲಾ ಜೊತೆಯಾಗಿಯೇ ಸಾಯೋಣ ಎಂದು ಸನ್ನುವಿನ ಪತ್ನಿ ಹಟ ಹಿಡಿದಳು. ಇದಕ್ಕೆ ಸಮ್ಮತಿಸಿದ ಸನ್ನು ಡೈರಿಯಲ್ಲಿ ತಮ್ಮ ನಿರ್ಧಾರವನ್ನು ಬರೆದಿಟ್ಟನು. ಆಗಸ್ಟ್ 2ರಂದು ಶುಕ್ರವಾರ ರಾತ್ರಿ ಸನ್ನು ತನ್ನ ತುಂಬಿದ ಕೋವಿಯೊಂದಿಗೆ ಮನೆಯಿಂದ ಹೊರ ಬಿದ್ದಾಗ ನೀತಾ ತಮ್ಮ ಅಂತಿಮ ಮರಣ ಪತ್ರ ಬರೆಯುತ್ತಿದ್ದಳು.
  ಕೋವಿಯೊಂದಿಗೆ ಆ ಕಗ್ಗತ್ತಲ ರಾತ್ರಿ ಮನೆಯಿಂದ ಹೊರಬಿದ್ದ ಸನ್ನು ಮೊದಲು ನಡೆದದ್ದೇ ಕಡೇಮಾಡ ಗಣಪನ ಮನೆಗೆ. ಗೋಣಿಕೊಪ್ಪಕ್ಕೆ ಹೋಗಿದ್ದ ಗಣಪ ಮರಳುವಾಗ ರಾತ್ರಿ ಹನ್ನೊಂದಾಗಿತ್ತು. ಗಣಪ ಕಾರಿಂದಿಳಿಯುವುದು ಕಂಡದ್ದೇ ಸನ್ನು ಗುಂಡು ಹಾರಿಸಿಯೇ ಬಿಟ್ಟನು. ಆದರೆ ಗುರಿ ತಪ್ಪಿ ಹೋಯ್ತು. ಗಣಪ ಕತ್ತಲಲ್ಲೇ ತೆವಳಿ ಪಾರಾಗಿಬಿಟ್ಟನು. ‘‘ಏನಿದು ಗುಂಡಿನ ಸದ್ದು’’ ಎಂದು ನೋಡಲು ಬಂದ ಗಣಪನ ಅಪ್ಪ ಕಾಶಿಯ ಮೇಲೂ, ಸನ್ನು ಒಂದು ಗುಂಡು ಹಾರಿಸಿದನು. ಆದರೆ ಗುಂಡು ಕಶಿಯ ಭುಜ ಸವರಿಕೊಂಡು ಹೋಯ್ತೇ ವಿನಾಃ ಜೀವಕ್ಕೆ ಹಾನಿಯಾಗಲಿಲ್ಲ. ಅವರಿಬ್ಬರು ಸತ್ತೇ ಹೋದರೆಂದು ಬಗೆದ ಸನ್ನು ಮನೆಗೆ ತೆರಳಿದ್ದಾನೆ. ಇತ್ತ ಗುಂಡಿನ ಸದ್ದು ಕೇಳುತ್ತಿದ್ದಂತೆ ತನ್ನ ಮಗುವಿಗೆ ವಿಷ ಕುಡಿಸಿದ ನೀತೂ ತಾನು ಕುಡಿದು ಒದ್ದಾಡುತ್ತಿದ್ದಳು. ಅವರಿಬ್ಬರ ಮೇಲೂ ಒಂದೊಂದು ಗುಂಡು ಹೊಡೆದ ಸನ್ನು, ತನ್ನ ಪತ್ನಿ- ಮಗುವಿನ ಬದುಕಿಗೆ ತಾನೇ ಇತಿಶ್ರೀ ಬರೆದಿದ್ದಾನೆ. ಅಲ್ಲಿಂದ ಪಕ್ಕದ ಪುಳಿಕೆ ಎಸ್ಟೇಟ್‌ಗೆ ಹೋದ ಸನ್ನು, ಅಲ್ಲಿನ ಅಪ್ಪಚ್ಚನ್ ಎಂಬವರ ಟೆಲಿಫೋನ್‌ನಿಂದ ಬೆಂಗಳೂರಿನಲ್ಲಿವ ತನ್ನ ಅಣ್ಣ ಕಾವೇರಿಯಪ್ಪನಿಗೆ ಫೋನಾಯಿಸಿ ‘ತಾನು ತನ್ನ ಪತ್ನಿ.. ಮಗುವನ್ನು ಸಾಯಿಸಿರುವುದಾಗಿಯೂ ತಾನು ಕೂಡ ಸಾಯುತ್ತಿರುವುದಾಗಿಯೂ, ಶವಸಂಸ್ಕಾರ ಮಾಡಲು ನೀವೆಲ್ಲಾ ಬರಬೇಕೆಂದೂ’ ತಿಳಿಸಿದ್ದಾನೆ. ಅಲ್ಲಿಂದ ಮನೆಗೆ ಮರಳಿ ಅಟ್ಟದಲ್ಲಿ ಅಡಗಿ ಕೂತು ಬಿಟ್ಟಿದ್ದಾನೆ. ಮರುದಿನ ಸನ್ನುವಿನ ಅಣ್ಣಂದಿರು, ಪೊಲೀಸರು ಬಂದು ಹೆಣ್ಣಗಳನ್ನು ಕೊಂಡೊಯ್ಯುವಾಗಲೂ ಸನ್ನು, ತನ್ನ ಮನೆಯ ಅಟ್ಟದಲ್ಲೇ ಇದ್ದ ಸಂಶಯಗಳಿವೆ. ಸನ್ನು ತಾನೂ ಸಾಯುತ್ತಿರುವುದಾಗಿ ಹೇಳಿದ್ದುದರಿಂದ ಆತ ಬರ, ಪೊಳೆ ನದಿಯ ಬದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಯೋಚಿಸಿದ್ದವರೇ ಅನೇಕರು. ಆದರೆ ಸೋಮವಾರ ಬೆಳಗಾಗುತ್ತಲೇ ತಮ್ಮದೆಂತಹ ಮೂರ್ಖ ಯೋಚನೆಯಾಗಿತ್ತೆನ್ನುವುದು ಹಲವರಿಗೆ ಮನವರಿಕೆಯಾಗಿಬಿಟ್ಟಿತು.
ಎರಡು ದಿನ ತನ್ನ ಮನೆಯ ಅಟ್ಟದಲ್ಲೇ ಬಚ್ಚಿಟ್ಟು ಕೂತ ಸನ್ನು, ಸೋಮವಾರ ಬೆಳ್ಳಂಬೆಳಗ್ಗೆ ತನ್ನ ಮೂರನೆಯ ಅಣ್ಣ ಗೋಪಿ ಬೋಪಯ್ಯನ ಮನೆ ಹಿತ್ತಿಲಲ್ಲಿ ಬಂದೂಕು ಸಮೇತ ಪ್ರತ್ಯಕ್ಷನಾಗಿ ಬಿಟ್ಟಿದ್ದಾನೆ. ಬೆಳಗೆದ್ದು ಹಿತ್ತಿಲಲ್ಲಿ ನಿಂತು ಹುಲ್ಲು ತಿಕ್ಕುವುದರಲ್ಲಿ ಮಗ್ನನಾಗಿದ್ದ ಬೋಪಯ್ಯ ತಲೆಯೆತ್ತಿ ನೋಡಿದರೆ, ನರಭಕ್ಷಕನಂತೆ ಗುರುಗುಡುತ್ತಿರುವ ಕಿರಿಯ ತಮ್ಮ ಸನ್ನು! ತಕ್ಷಣ ಕಿರುಚಿ ಮನೆಯೊಳಗೆ ಓಡಲು ಉದ್ಯುಕ್ತನಾದ ಅಣ್ಣನನ್ನು ಸನ್ನು ಬಹು ಹತ್ತಿರದಿಂದಲೇ ಹೊಡೆದು ಕೊಂದು ಹಾಕಿದ್ದಾನೆ.
ಗಂಡನ ಬೊಬ್ಬೆ ಕೇಳಿ ಓಡಿ ಬಂದ ಅತ್ತಿಗೆ ರತು ಗಂಗಮ್ಮನ ಎದೆಗೂ ಗುಂಡು ಹೊಡೆದ ಸನ್ನು ಆಕೆಯನ್ನು ಪರಂಧಾಮಕ್ಕಟ್ಟಿದ್ದಾನೆ. ಅಷ್ಟರಲ್ಲಿ ಬೋಪಯ್ಯನ ಮಗ ವಿಲೀನ್ ಗದ್ದಲ ಕೇಳಿ ಓಡಿ ಬಂದರೆ ಕಣ್ಣೆದುರಲ್ಲೇ ರಣರಂಗ! ಆದರೂ ಧೃತಿಗೆಡದ ವಿಲೀನ್ ಮನೆಯೊಳಗಿಂದ ಕೋವಿ ತಂದು ಚಿಕ್ಕಪ್ಪನಿಗೂ ಗುರಿ ಹಿಡಿದು ಕೆಡವಿ ಹಾಕಿಯೇ ಬಿಟ್ಟನು. ಸನ್ನು ಸತ್ತು ಬಿದ್ದ ವಾರ್ತೆ ಅರಿತದ್ದೇ ಆತನ ಶತ್ರು ಪಟಾಲಂ ಬಿಟ್ಟ ನಿಟ್ಟುಸಿರನ್ನು ಇಡೀ ಕೊಡಗು ಆಲಿಸಿದೆ.
ಅಂತಿಮವಾಗಿ ನಮ್ಮೆಲ್ಲರನ್ನು ಕಾಡುವ ಪ್ರಶ್ನೆ ಮತ್ತೆ ಅದೇ! ಸನ್ನುವಿಗೆ ತನ್ನ ಸಮಸ್ಯೆಗಳಿಂದ ಪಾರಾಗುವುದಕ್ಕೆ ಶತ್ರುಗಳನ್ನು ಕೊಲ್ಲುವುದೇ ಅಂತಿಮ ದಾರಿಯಾಗಿತ್ತೇ? ಪೊಲೀಸ್-ಕಾನೂನು-ನ್ಯಾಯಾಲಯಗಳ ಮೂಲಕ ಸನ್ನು ನ್ಯಾಯ ಪಡೆಯುವುದು ಸಾಧ್ಯವಿರಲಿಲ್ಲವೇ? ಸಾಕ್ಷಾತ್ ದಂಡಕಾರಣ್ಯದಂತಿರುವ ಕೊಂಗಾಣೇ ಉತ್ತರ ಹೇಳಬೇಕು.

Friday, January 3, 2014

ಹೆಂಡತಿಯ ತಾಳಿ ಅಡವಿಡಲು ಹೊರಟ ಬಿಬಿಎಂಪಿ


ಮನೆಯ ಯಜಮಾನ ದುಂದುವೆಚ್ಚದವನೂ, ಕುಡುಕನೂ ಆಗಿದ್ದರೆ, ಸಾಲಗಾರನಾಗುವುದು ಬಹು ಬೇಗ. ಅಷ್ಟೇ ಅಲ್ಲ ಅವನು ನಿಧಾನಕ್ಕೆ ತನ್ನ ಮನೆಯಲ್ಲಿ ಅನಗತ್ಯವಾದುದು ಏನಿದೆ ಎನ್ನುವುದನ್ನು ಹುಡುಕತೊಡಗುತ್ತಾನೆ. ಒಂದೊಂದನ್ನೇ ಮಾರುವುದಕ್ಕೋ, ಅಡವಿಡುವುದಕ್ಕೋ ತೊಡಗುತ್ತಾನೆ. ತನ್ನ ಮನೆಯಲ್ಲಿರುವ ಹಿರಿಯರ ವಸ್ತುಗಳೆಲ್ಲ ಆತನಿಗೆ ನಿಷ್ಪ್ರಯೋಜಕವಾಗಿ ಕಾಣತೊಡಗುತ್ತದೆ. ಅವನ ಒಳಗಣ್ಣು ಸಂಪೂರ್ಣ ಮುಚ್ಚಿ ಹೋಗುತ್ತದೆ. ಹೆಂಡತಿಯ ಕುತ್ತಿಗೆಯಲ್ಲಿರುವ ತಾಳಿ ಕೂಡ ಅವನಿಗೆ ಅಡವಿಡುವ ವಸ್ತುವಾಗಿ ಭಾಸವಾಗುತ್ತದೆ. ಇದು ಒಂದು ಮನೆಗೆ ಸಂಬಂಧಿಸಿದ್ದಷ್ಟೇ ಆಗಬೇಕಾಗಿಲ್ಲ. ಒಂದು ಊರಿಗೆ, ಒಂದು ರಾಜ್ಯಕ್ಕೆ, ಒಂದು ದೇಶಕ್ಕೆ ಸಂಬಂಧ ಪಟ್ಟ ವಿಷಯವೂ ಆಗಬಹುದು. ಭಾರತ ಇಂದು ವಿಶ್ವಬ್ಯಾಂಕಿಗೆ ಬಡ್ಡಿ ತೆತ್ತು ತೆತ್ತು, ತನ್ನ ಸಾರ್ವಭೌಮತೆಯನ್ನೆ ಅಡವಿಟ್ಟಿರುವುದು ಹಳೆಯ ವಿಷಯ. ಅಮೆರಿಕದ ಮುಂದೆ ಭಾರತ ಯಾಕೆ ಬಾಲ ಮಡಚಿ ಕೂರಬೇಕೆಂದರೆ, ಭಾರತ ತನ್ನ ಆತ್ಮಾಭಿಮಾನವನ್ನು ವಿಶ್ವಬ್ಯಾಂಕಿಗೆ ಎಂದೋ ಒತ್ತೆ ಇಟ್ಟಿದೆ.

ರಾಜ್ಯದಲ್ಲೇ ಗಮನಿಸಿ. ಬೆಂಗಳೂರು ಮಹಾ ನಗರ ಪಾಲಿಕೆ 200 ಕೋಟಿ ರೂಪಾಯಿ ಸಾಲ ಪಡೆಯಲು ಪಾರಂಪರಿಕ ಕಟ್ಟಡವಾದ ಟೌನ್ ಹಾಲನ್ನು ಅಡವಿಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಬೆಂಗಳೂರು ನೋಡುವುದಕ್ಕೇನೋ ಶ್ರೀಮಂತ. ತನ್ನ ಅದ್ದೂರಿತನಕ್ಕಾಗಿ, ಐಟಿ, ಬಿಟಿಗಾಗಿ ವಿಶ್ವವನ್ನು ಸೆಳೆಯುತ್ತಿದ್ದೇನೆ ಎನ್ನುವ ಕೋಡು ಬೇರೆ. ಆದರೆ ಬೆಂಗಳೂರು ಮಹಾನಗರ ಪಾಲಿಕೆಯ ಸಾಲ ಎಷ್ಟು ಗೊತ್ತೆ? ಮೂರುವರೆ ಸಾವಿರ ಕೋಟಿ ರೂಪಾಯಿ. ಇದೀಗ ಆ ಮೂರುವರೆ ಸಾವಿರ ಕೋಟಿ ರೂಪಾಯಿಯನ್ನು ತೀರಿಸುವ ಮಾರ್ಗವಾಗಿ ಕೆನರಾ ಬ್ಯಾಂಕ್‌ನಿಂದ 200 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದೆ. ಅದಕ್ಕಾಗಿ ತನ್ನ ಹೆಂಡತಿಯ ತಾಳಿಯನ್ನೇ ಅಡವಿಡಲು ಮುಂದಾಗಿದೆ. ಹೌದು. ಬೆಂಗಳೂರು ಟೌನ್ ಹಾಲ್ ಅಥವಾ ಕೆ.ಪಿ.ಪುಟ್ಟಣ್ಣ ಚೆಟ್ಟಿ ಹಾಲ್ ಎನ್ನುವುದು ಬೆಂಗಳೂರು ಎನ್ನುವ ಸುಂದರಿಯ ಕುತ್ತಿಗೆ ಕರಿಮಣಿ ಸರವೇ ಹೌದು. ಇದೀಗ ಗಂಡ ಆ ಕರಿಮಣಿ ಸರವನ್ನೇ ತನ್ನ ಸಾಲಕ್ಕಾಗಿ ಅಡವಿಡಲು ಮುಂದಾಗಿದ್ದಾನೆ.

ಟೌನ್ ಹಾಲ್ ಎನ್ನುವುದು ಅಡವಿಡುವ ಒಂದು ಕಟ್ಟಡವಾಗಿ ಮಾತ್ರ ಬಿಬಿಎಂಪಿ ಅರ್ಥ ಮಾಡಿಕೊಂಡಿದೆ. ಅದರಾಚೆಗೆ ಅದರಲ್ಲಿ ಏನನ್ನು ನೋಡುವ, ಕಾಣುವ ಕಣ್ಣು ನಮ್ಮ ಬಿಬಿಎಂಪಿಗೆ ಇಲ್ಲವಾಗಿದೆ. ಇಂದು ನಮ್ಮ ಬೆಂಗಳೂರು ಯಾಕೆ ಹೃದಯಹೀನವಾಗುತ್ತಿದೆ ಎನ್ನುವುದಕ್ಕೆ ಬಿಬಿಎಂಪಿಯ ಈ ನಿರ್ಧಾರವನ್ನು ಅರ್ಥ ಮಾಡಿಕೊಂಡರೆ ಸಾಕು. ಪುರಭವನ ವೆನ್ನುವುದು ಬೆಂಗಳೂರಿನ ಹೃದಯವಿದ್ದಂತೆ. ಮನುಷ್ಯನ ಮಾತುಗಳು, ಭಾವನೆಗಳು ಕಳೆದ ನೂರು ವರ್ಷಗಳಿಂದ ಇಲ್ಲಿ ಅಂಕುರವೊಡೆದಿವೆ.ಚಿಗುರು ಬಿಟ್ಟಿವೆ. ಅರಳಿ, ಕಾಯಾಗಿ, ಹಣ್ಣಾಗಿ ಫಲಕೊಟ್ಟಿವೆ. ಇಲ್ಲಿ ಅನುರಣಿಸಿದ ಗೆಜ್ಜೆಗಳ ಸದ್ದುಗಳು, ಘೋಷಣೆಗಳು, ಮಹಾ ಹಿರಿಯರ ಭಾಷಣಗಳು, ರಾಜಕೀಯ ನಿರ್ಧಾರಗಳು ಅನಾವರಣಗೊಂಡ ಸ್ಥಳ ಪುರಭವನ. ಬೆಂಗಳೂರಿನ ಹೃದಯದ ಧ್ವನಿಗೆ ಈ ಟೌನ್‌ಹಾಲ್ ವೇದಿಕೆಯಾಗಿದೆ. ಅಂತಹ ವೇದಿಕೆಯನ್ನೇ ಇದೀಗ ಬರೇ 200 ಕೋಟಿ ರೂಪಾಯಿ ಸಾಲಕ್ಕಾಗಿ ಕೆನರಾ ಬ್ಯಾಂಕಿಗೆ ಅಡವಿಡಲು ಹೊರಟಿದೆ.

ಬೆಂಗಳೂರು ಟೌನ್‌ಹಾಲ್‌ಗೆ ದೊಡ್ಡ ಇತಿಹಾಸವಿದೆ. ಅದು ತಲೆಯೆತ್ತಿದ್ದು ಇಂದು ನಿನ್ನೆಯಲ್ಲ. 1933ರಲ್ಲಿ ಕೃಷ್ಣ ರಾಜೇಂದ್ರ ಒಡೆಯರ್ ಅವರು ಈ ಟೌನ್‌ಹಾಲ್‌ಗೆ ಶಿಲಾನ್ಯಾಸ ಮಾಡಿದರು. ಇದರ ಎಂಜಿನಿಯರ್ ಇನ್ನಾರೂ ಅಲ್ಲ. ದಿವಾನರಾಗಿದ್ದ ಸರ್ ಮಿರ್ಝಾ ಇಸ್ಮಾಯೀಲ್. ಅಂದ ಹಾಗೆ, ಕಟ್ಟುವ ಸಂದರ್ಭದಲ್ಲಿ ಇದರ ಒಟ್ಟು ಅಂದಾಜು ವೆಚ್ಚ ಎಷ್ಟು ಗೊತ್ತೆ? 1,75,000 ರೂಪಾಯಿ. ಎರಡೇ ಎರಡು ವರ್ಷದಲ್ಲಿ ಈ ಕಟ್ಟಡ ನಿರ್ಮಾಣ ಪೂರ್ತಿಯಾಯಿತು. ಸೆಪ್ಟಂಬರ್ 11, 1935 ರಂದು ಕಂಠೀರವ ನರಸಿಂಹ ರಾಜ ಒಡೆಯರ್ ಈ ಕಟ್ಟಡವನ್ನು ಉದ್ಘಾಟಿಸಿದರು. ಒಡೆಯರ ಕಣ್ಗಾವಲಿನಲ್ಲೇ ಮುಂದೆ ಕಟ್ಟಡಕ್ಕೆ ಒಂದು ಅಂತಸ್ತು ದೊರಕಿತು. ಎರಡು ಬಾರಿ ಈ ಕಟ್ಟಡ ಪುನರ್ನವೀಕರಣಗೊಂಡಿದೆ.

ಬೆಂಗಳೂರಿನಲ್ಲಿ ಹಾಲ್‌ಗಳು ಹೇಗೆ ದುಬಾರಿಯಾಗುತ್ತಿವೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ಖಾಸಗಿ ಹಾಲ್‌ಗಳು ಜನ ಸಾಮಾನ್ಯರಿಗೆ ಎಟಕುವುದು ತೀರಾ ಕಷ್ಟ ಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಈ ಟೌನ್ ಹಾಲ್ ಜನರ ಪಾಲಿನ ಧ್ವನಿಯಾಗಿ, ಸಹಸ್ರಾರು ಸಮಾರಂಭಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿ ಪೊರೆದಿದೆ. ಈ ವೇದಿಕೆಯಲ್ಲೇ ಹತ್ತು ಹಲವು ಚಳವಳಿಗಳು ಹುಟ್ಟಿಕೊಂಡಿವೆ. ಈ ಪುರಭವನ ಸರಕಾರದ ನಿರ್ಲಕ್ಷದಿಂದ ಈಗಾಗಲೇ ಕುಪೋಷಣೆಗೆ ಒಳಗಾಗಿದೆ. ಸೀಟುಗಳು ಹರಿದಿವೆ. ಹೊರಗಿನ ವೈಭವ, ಒಳ ಹೊಕ್ಕರೆ ಕಾಣ ಸಿಗುವುದಿಲ್ಲ. ಆದರೂ ಜನರು ತಮ್ಮ ಕಾರ್ಯಕ್ರಮಕ್ಕಾಗಿ ಪುರ ಭವನವನ್ನೇ ಬಯಸುತ್ತಾರೆ. ಕಾರಣ ಸ್ಪಷ್ಟ. ಜನಸಾಮಾನ್ಯರ ಕಾರ್ಯಕ್ರಮಕ್ಕೆ ಸುಲಭದಲ್ಲಿ ದಕ್ಕುವ ಹಾಲ್ ಇದೊಂದೆ. ಇದನ್ನೇ ಬ್ಯಾಂಕಿಗೆ ಅಡವಿಟ್ಟರೆ, ಪರೋಕ್ಷವಾಗಿ ಜನರ ಧ್ವನಿಯನ್ನೇ ಅಡವಿಟ್ಟಂತೆ. ರಾಜ್ಯದ ಸಾಂಸ್ಕೃತಿಕ, ರಾಜಕೀಯ ಧ್ವನಿಯನ್ನೇ ಒಂದು ಬ್ಯಾಂಕಿಗೆ ಒಪ್ಪಿಸಿದಂತೆ. ಸರಿ. 200 ಕೋಟಿ ರೂಪಾಯಿಗೆ ಟೌನ್ ಹಾಲನ್ನು ಬಿಬಿಎಂಪಿ ಅಡವಿಟ್ಟಿತು ಎಂದೇ ಇಟ್ಟುಕೊಳ್ಳೋಣ. ಅದನ್ನು ಬಿಡಿಸಿಕೊಳ್ಳುವ ಸಾಧ್ಯತೆಯಾದರೂ ಬಿಬಿಎಂಪಿಗಿದೆಯಾ ಎನ್ನುವುದು ಮತ್ತೊಂದು ಪ್ರಶ್ನೆ. ಈಗಾಗಲೇ ಮೂರುವರೆ ಸಾವಿರ ಕೋಟಿ ರೂಪಾಯಿ ಸಾಲವನ್ನು ಹೊಂದಿದೆ. ಸಾಲ ತೀರಿಸುವುದಕ್ಕಾಗಿ ಮತ್ತಷ್ಟು ಸಾಲವನ್ನು ಮಾಡಲು ಬಿಬಿಎಂಪಿ ಹೊರಟಿದೆ. ಹೀಗಿರುವಾಗ, ಟೌನ್‌ಹಾಲನ್ನು ಬ್ಯಾಂಕಿಗೆ ಅಡಿವಿಟ್ಟರೆ ಯಾವ ಮೂಲದಿಂದ ಅದನ್ನು ಮತ್ತೆ ಬಿಡಿಸಿಕೊಳ್ಳುತ್ತದೆ? ಬಿಡಿಸಿಕೊಳ್ಳುವ ಮೂಲದ ಬಗ್ಗೆ ಒಂದಿಷ್ಟು ತಲೆಕೆಡಿಸಿಕೊಳ್ಳದೇ ಅಡವಿಡುವಷ್ಟು ನಿಕೃಷ್ಟವಾದ ಕಟ್ಟಡವೆಂದು ಟೌನ್ ಹಾಲನ್ನು ಬಿಬಿಎಂಪಿ ಭಾವಿಸಿದೆ ಎಂದಾಯಿತು.

ಟೌನ್ ಹಾಲ್‌ನ ಬೆಲೆಯನ್ನು ಕೇವಲ ಹಣದಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ. ಭೌತಿಕವಾಗಿಯೂ ಟೌನ್ ಹಾಲ್ ಅಪಾರ ಬೆಲೆಬಾಳುತ್ತದೆ. ಹಾಗೆಯೇ ಹಣದಾಚೆಗೂ ಬೆಲೆಬಾಳುವಂತಹ ಕಟ್ಟಡ ಟೌನ್ ಹಾಲ್. ನಾಳೆ ಈ ಕಟ್ಟಡ ಬ್ಯಾಂಕ್‌ನ ಪಾಲಾದರೆ ಅದರಿಂದ ಆಗುವ ನಷ್ಟ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಒಬ್ಬನೇ ಒಬ್ಬ ಸದಸ್ಯ ಬಿಬಿಎಂಪಿಯಲ್ಲಿ ಇಲ್ಲದಿರುವುದು ಬೆಂಗಳೂರಿನ ಜೊತೆಗೆ ನಾಡಿನ ದುರದೃಷ್ಟವೇ ಸರಿ.ಟೌನ್‌ಹಾಲ್ ಬ್ಯಾಂಕಿನ ಪಾಲಾದರೆ, ನಾಳೆ ಅಲ್ಲೊಂದು ದೊಡ್ಡ ಮಾಲ್ ತಲೆಯೆತ್ತೀತು. ಅಥವಾ ಅದನ್ನು ಇನ್ನಾರೋ ಶ್ರೀಮಂತರು ಹರಾಜು ಕೂಗಿ ಅಲ್ಲಿ ಖಾಸಗಿಯಾದ, ಐಶಾರಾಮಿಯಾದ ಒಂದು ಹಾಲನ್ನು ಕಟ್ಟಿಸಿ ಯಾರು. ಆದರೆ ಅದರೊಳಗೆ ಜನಸಾಮಾನ್ಯರಿಗೆ ಪ್ರವೇಶಿಸಲು ಕಷ್ಟಸಾಧ್ಯವಾದೀತು. ಒಂದು ಪುಸ್ತಕ ಬಿಡುಗಡೆ, ಯಾವುದೋ ಅರಂಗೇಟ್ರಂ ಅಥವಾ ನೃತ್ಯ ಕಾರ್ಯಕ್ರಮಗಳನ್ನು ಖಾಸಗಿ ಹಾಲ್‌ನಲ್ಲಿ ನಡೆಸಲು ಜನಸಾಮಾನ್ಯರಿಗೆ ಅಸಾಧ್ಯ.

ಹೀಗಿರುವಾಗ, ಅವರೆಲ್ಲ ಮುಂದಿನ ದಿನಗಳಲ್ಲಿ ಬೆಂಗಳೂರಿನ ಯಾವುದಾದರೂ ಬಯಲಿನಲ್ಲಿ ಅಥವಾ ಬನಪ್ಪ ಪಾರ್ಕ್‌ನಲ್ಲಿ ತಮ್ಮ ಕಾರ್ಯ ಕ್ರಮಗಳನ್ನು ನಡೆಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಈ ಅಡವು ಪ್ರಕರಣದ ಹಿಂದೆ ಖಾಸಗಿ ಭೂಗಳ್ಳರು, ಹಣವಂತರು ಭಾಗಿ ಯಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ. ಅವರೆಲ್ಲರೂ ಇದರ ಹರಾಜಿಗಾಗಿ ರಣಹದ್ದು ಗಳಂತೆ ಕಾದು ಕುಳಿತಿದ್ದಾರೆ. ಯಾವ ಕಾರಣಕ್ಕೂ ಟೌನ್ ಹಾಲ್ ಇವರ ಬಾಯಿಗೆ ಬೀಳು ವಂತಾಗಬಾರದು.ಈ ಕಾರಣದಿಂದ ಬೆಂಗಳೂರಿನ ಜನರು ಮಾತ್ರವಲ್ಲ, ಸಾಂಸ್ಕೃತಿಕ, ರಾಜಕೀಯ, ಸಾಹಿತ್ಯಕ ಗುರಿಗಳುಳ್ಳ ಎಲ್ಲರೂ ಟೌಲ್‌ಹಾಲ್ ಅಡವಿಡುವುದನ್ನು ವಿರೋಧಿಸಬೇಕಾಗಿದೆ. ಆ ಮೂಲಕ ಬೆಂಗಳೂರಿನ ಘನತೆ ಯನ್ನು ಉಳಿಸಲು ಮುಂದಾಗ ಬೇಕಾಗಿದೆ. ಅದೆಷ್ಟು ಸಾಂಸ್ಕೃತಿಕ ವೈವಿಧ್ಯತೆಗಳನ್ನು, ಜನಪರ ಚಳವಳಿಗಳನ್ನು ಪೊರೆದ ಟೌನ್ ಹಾಲ್ ರಕ್ಷಣೆಗೆ ಈಗ ಜನರೇ ಮುಂದಡಿಯಿಡಬೇಕಾಗಿದೆ.

ಜನರ ಆಲೋಚನೆಗಳನ್ನು ರೂಪಿಸಲು ಈ ಒಂದು ಟೌನ್ ಹಾಲ್ ಸಾಕಾಗುವುದಿಲ್ಲ. ಇಂತಹ ಇನ್ನೊಂದು ಟೌನ್‌ಹಾಲ್ ತಲೆಯೆತ್ತುವ ಅಗತ್ಯವಿದೆ. ಹಾಗೆಯೇ ಈಗಿರುವ ಟೌನ್‌ಹಾಲನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು. ಹೆಚ್ಚು ಹೆಚ್ಚು ಚಟುವಟಿಕೆಗಳು ನಡೆಸಲು ಆಸ್ಪದ ನೀಡಬೇಕು. ಬಿಬಿಎಂಪಿಯ ಸಾಲವನ್ನು ತೀರಿಸಲು ಬೇರೆ ಹಲವು ಮಾರ್ಗಗಳಿವೆ.
ಐಟಿಗಳಿಗೆ, ಬಿಟಿಗಳಿಗೆ ನೀಡುವ ಸವಲತ್ತಿಗೆ ಪ್ರತಿಯಾಗಿ ವಿಶೇಷ ತೆರಿಗೆಯನ್ನು ಅವರಿಂದ ವಸೂಲು ಮಾಡಲಿ. ಹಾಗೆಯೇ ಬಿಬಿಎಂಪಿಯ ಅಕ್ರಮ ಒತ್ತುವರಿಗಳನ್ನು ಸರಿಪಡಿಸಿದರೆ, ಅರ್ಧ ಸಾಲವನ್ನು ತೀರಿಸಬಹುದು. ಹೆಂಡತಿಯ ತಾಳಿಯನ್ನು ಒತ್ತೆಯಿಟ್ಟರೆ, ಪರೋಕ್ಷವಾಗಿ ತನ್ನ ಮಾನ, ಮರ್ಯಾದೆಯನ್ನು ಒತ್ತೆಯಿಟ್ಟಂತೆ. ಇನ್ನಾದರೂ ಬಿಬಿಎಂಪಿ ಇದನ್ನು ಅರ್ಥ ಮಾಡಿಕೊಳ್ಳಬೇಕು.