Wednesday, January 30, 2013

ಮಅದನಿಯ ಕೈಬೆರಳುಗಳಿಗೆ ವ್ಯವಸ್ಥೆ ಜೋಡಿಸಿದ ಕೃತಕ ಉಗುರುಗಳು...!

ಮದನಿ ಕುರಿತು ಸತ್ಯಗಳನ್ನು ಬಯಲಿಗೆಳೆದ ಕೆ. ಕೆ. ಶಾಹಿನ.

(ಕಳೆದ ಗುರುವಾರದಿಂದ)
ಮಅದನಿ ಕಾನ್ಶೀರಾಮ್ ಜೊತೆಗೆ ರಾಜಕೀಯ ಮಾತುಕತೆ ನಡೆಸಲು ಮುಂದಾದಾಗ ಕೇರಳದ ರಾಜಕೀಯ ವಲಯದಲ್ಲಿ ಸಣ್ಣ ಕಲರವ ಆರಂಭವಾಯಿತು. ಬಿಎಸ್‌ಪಿ ಮತ್ತು ಪಿಡಿಪಿ ಒಂದಾಗಿದ್ದರೆ ಬಹುಶಃ ಕೇರಳದಲ್ಲಿ ಒಂದು ರಾಜಕೀಯ ಕ್ರಾಂತಿಯೇ ನಡೆದು ಬಿಡುತ್ತಿತ್ತೋ ಏನೋ. (ಮಅದನಿ ತನ್ನ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದೇ ಅಂಬೇಡ್ಕರ್ ಜಯಂತಿ ದಿನ)ಆದರೆ ಅದಕ್ಕೆ ಮೊದಲೇ ಮಅದನಿಯನ್ನು ಮಟ್ಟ ಹಾಕಲು ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಬಿಟ್ಟಿದ್ದವು.

 ಮಅದನಿಯ ದುರದೃಷ್ಟ ಮೊದಲು ತೆರೆದುಕೊಂಡದ್ದು ಮುಸ್ಲಿಮ್ ಲೀಗನ್ನು ಎದುರು ಹಾಕಿಕೊಂಡ ಕಾರಣ. ಕ್ಯಾಲಿಕಟ್ ಐಸ್‌ಕ್ರೀಮ್ ಪಾರ್ಲರ್ ಪ್ರಕರಣದಲ್ಲಿ ಮುಸ್ಲಿಮ್ ಲೀಗ್‌ನ ಕುಂಞಾಲಿಕುಟ್ಟಿ ಹೆಸರು ಕೇಳಿ ಬಂದ ಕಾರಣ, ಮಅದನಿ ಅಂದು ತನ್ನ ಪಿಡಿಪಿ ಮೂಲಕ ಕುಂಞಾಲಿಕುಟ್ಟಿಯ ವಿರುದ್ಧ ಅಭಿಯಾನ ಆರಂಭಿಸಲು ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದರು. ಬೀದಿಯಲ್ಲಿ ನಿಂತು ಅಮಾಯಕ ಮುಸ್ಲಿಮರನ್ನು ಪ್ರಚೋದಿಸಿದಂತಲ್ಲ, ರಾಜಕಾರಣಿ ಗಳನ್ನು ಮುಟ್ಟುವುದು ಎನ್ನುವುದು ಮಅದನಿಗೆ ತಿಳಿಯುವಾಗ ತಡವಾಗಿತ್ತು. ಅಂದಿನ ಕಮ್ಯುನಿಷ್ಟ್‌ನ ನಾಯಕರಾದ ನಾಯನಾರ್ ನೇತೃತ್ವದ ಸರಕಾರ 1992ರಲ್ಲಿ ಬಾಕಿ ಉಳಿದಿದ್ದ ಒಂದು ಕೇಸನ್ನು ಎತ್ತಿ ಹಾಕಿತ್ತು. 1992ರ ಮಾರ್ಚ್‌ನಲ್ಲಿ ಮಅದನಿ ಮಾಡಿದ ಭಾಷಣಕ್ಕಾಗಿ ಅವರಿಗೆ ವಾರಂಟ್ ಆಗಿತ್ತು. ಆದರೆ ಆ ವಾರಂಟ್ ಇಶ್ಯೂ ಅಗಿದ್ದು 1998ರಲ್ಲಿ. ಕುಂಞಾಲಿ ಕುಟ್ಟಿಯ ತಂಟೆಗೆ ಹೋದ ಒಂದೇ ಒಂದು ಕಾರಣಕ್ಕೆ ಅವರು ಜೈಲು ಸೇರಿದರು. ಆರು ತಿಂಗಳು ಜೈಲು ಶಿಕ್ಷೆಯೂ ಆಯಿತು. ಆದರೆ ಆ ಆರು ತಿಂಗಳು ಹತ್ತು ವರ್ಷವಾಗಿ ಮಾರ್ಪಡುತ್ತದೆ ಎಂದು ಮಅದನಿ ತಿಳಿದುಕೊಂಡಿರಲಿಲ್ಲ. 


1998ರಲ್ಲಿ ತಮಿಳು ನಾಡಿನಲ್ಲಿ ಭೀಕರ ಕೋಮು ಗಲಭೆ, ಅದರಲ್ಲಿ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯ ಮಾಧ್ಯಮಗಳಲ್ಲಿ ಸುದ್ದಿಯಾಯಿತು. 20ಕ್ಕೂ ಅಧಿಕ ಮುಸ್ಲಿಮರು ಇದರಲ್ಲಿ ಬರ್ಬರವಾಗಿ ಕೊಲ್ಲಲ್ಪ ಟ್ಟಿದ್ದರು. ಇದಾದ ಬಳಿಕ ಕೊಯಮತ್ತೂರು ಬಾಂಬ್ ಸ್ಫೋಟ ನಡೆಯಿತು. ಈ ಪ್ರಕರಣದಲ್ಲಿ ಮಅದನಿಯನ್ನು ಒಂದು ಫೋನ್ ಕರೆಯ ಆಧಾರದ ಮೇಲೆ ಸಿಲುಕಿಸಲಾಯಿತು. ಮಅದನಿ ಅದರಲ್ಲಿ 84ನೆ ಆರೋಪಿಯಾಗಿ ಗುರುತಿಸಲ್ಪಟ್ಟರು. ಇದರಲ್ಲಿ ಮಅದನಿಯ ವಿರುದ್ಧ ಯಾವೆಲ್ಲ ನಕಲಿ ದಾಖಲೆಗಳು ಸೃಷ್ಟಿಯಾದವೋ ಆ ದಾಖಲೆಗಳೇ ಮುಂದೆ ಮಅದನಿಯನ್ನು ನಿರಪರಾಧಿ ಎಂದು ಘೋಷಿಸಿತು. ಆದರೆ ಸುದೀರ್ಘ ಹತ್ತು ವರ್ಷ ಅವರು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಳೆದರು. ಅವರು ನಿರಪರಾಧಿ ಎಂದು ಸಾಬೀತಾದ ಬಳಿಕವೂ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಅಲ್ಲಿ ಅವರ ಜೀವ ಚೈತನ್ಯವನ್ನು ಸಂಪೂರ್ಣವಾಗಿ ಹೀರಿ ತೆಗೆಯಲಾಗಿತ್ತು. ಒಂದಂತೂ ಸತ್ಯ. ಅವರಿಗೆ ಶಿಕ್ಷೆಯಾಗುತ್ತದೆ ಎಂಬ ಭರವಸೆ ಪೊಲೀಸರೂ, ರಾಜಕಾರಣಿಗಳಿಗೂ ಇದ್ದಿರಲಿಲ್ಲ. ಆದರೆ ಹತ್ತು ವರ್ಷಗಳ ಜೈಲು ಬದುಕಿನಲ್ಲಿ ನಾಸರ್ ಮಅದನಿ ಮುಗಿದು ಹೋಗಬೇಕು ಎನ್ನುವ ಉದ್ದೇಶ ಎಲ್ಲರದ್ದೂ ಆಗಿತ್ತು. ಅಂತೆಯೇ ಅವರನ್ನು ಭೀಕರವಾಗಿ ಜೈಲಿನಲ್ಲಿ ನಡೆಸಿಕೊಳ್ಳಲಾಗಿತ್ತು. 100 ಕೆ.ಜಿ.ಗೂ ಅಧಿಕ ಇದ್ದ ಮಅದನಿ 50 ಕೆ.ಜಿ.ಗೆ ಇಳಿದಿದ್ದರು. ಆದರೆ ಅವರು ಜೈಲಿನಲ್ಲಿ ಸಾಯದೆ ಬದುಕಿ ಬಂದರು. ಇದು ನಿಜಕ್ಕೂ ರಾಜಕಾರಣಿ ಗಳಿಗೆ ತಲೆನೋವೇ ಆಗಿ ಬಿಟ್ಟಿತ್ತು.

 ಜೈಲಿನ ಶಿಕ್ಷೆ ಮಅದನಿಯನ್ನು ಇನ್ನಷ್ಟು ಪಳಗಿಸಿತ್ತು ಎನ್ನುವುದಂತೂ ಸತ್ಯ. ಅವರ ಧ್ವನಿಯ ಆವೇಶ ಪೂರ್ಣ ಇಳಿದಿತ್ತು. ಮಾತುಗಳು ಸೌಮ್ಯತೆಯನ್ನು ಪಡೆದಿತ್ತು. ಯಾವುದೇ ರಾಜಕೀಯ ಅಥವಾ ಧಾರ್ಮಿಕ ಹೇಳಿಕೆಯನ್ನು ನೀಡುವಾಗ ತೂಗಿ ತೂಗಿ ಮಾತನಾಡುತ್ತಿದ್ದರು. 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ಬಳಿಕ ಅವರು ಮಾಧ್ಯಮಗಳಿಗೆ ಹೇಳಿದ್ದು ‘‘ನನಗೆ ಜೈಲು ಶಿಕ್ಷೆ ತುಂಬಾ ಕಲಿಸಿದೆ. ಅದು ನನ್ನನ್ನು, ನನ್ನ ಹೃದಯವನ್ನು ಪರಿವರ್ತನೆಗೊಳಿಸಿದೆ. ಮುಂದಿನ ಜೀವನವನ್ನು ಬಡವರಿಗಾಗಿ, ಹಿಂದುಳಿದ ವರ್ಗದವರಿಗಾಗಿ, ಶೋಷಿತರಿಗಾಗಿ ಮುಡಿಪಾಗಿಡುತ್ತೇನೆ...’’ ಮಅದನಿ ಅವರ ಉಗುರು, ಹಲ್ಲುಗಳು ಸಂಪೂರ್ಣ ಉದುರಿ ಹೋಗಿದ್ದವು. ಜೈಲಿನಿಂದ ಅವರು ಹೊರಬಂದಾಗ ಅವರ ಅನುಯಾಯಿ ಗಳೆಲ್ಲ ಭಾಗಶಃ ದೂರವಾಗಿ ಬಿಟ್ಟಿದ್ದರು. ಆವೇಶಮಯ ಭಾಷಣಗಳಿಲ್ಲದ ಮಅದನಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದ್ದರು. ಬಹುಶಃ ಅವರನ್ನು ಅವರಷ್ಟಕ್ಕೆ ಬಿಟ್ಟಿದ್ದರೆ ಮುಂದಿನ ದಿನಗಳಲ್ಲಿ ಮಅದನಿ ಹೇಳ ಹೆಸರಿಲ್ಲದಂತಾಗುತ್ತಿದ್ದರು. ಯಾಕೆಂದರೆ ರಾಜಕೀಯವಾಗಿ ಸಂಘಟಿತರಾಗಲೂ ಅವರಲ್ಲಿ ಶಕ್ತಿಯಿರಲಿಲ್ಲ. ಆದರೆ ಅವರು ಅಳಿದುಳಿದ ಪಿಡಿಪಿ ಯನ್ನು ಸಂಘಟಿಸಿ, ಕಮ್ಯುನಿಷ್ಟ್ ಪಕ್ಷದತ್ತ ತನ್ನ ಒಲವನ್ನು ಯಾವಾಗ ವ್ಯಕ್ತ ಪಡಿಸಿದರೋ, ಅವರ ವಿರುದ್ಧ ರಾಜಕೀಯ ಪಕ್ಷಗಳು ಮತ್ತೆ ಒಂದಾದವು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ಸಂಭವಿಸಿ ಒಬ್ಬರು ಮೃತರಾದರು. ಈ ಸ್ಫೋಟ ಕರ್ನಾಟಕದ ಅತಂತ್ರ ಬಿಜೆಪಿ ಸರಕಾರಕ್ಕೆ ಭಾರೀ ವರವಾಯಿತು. ‘ಉಗ್ರರು, ಭಯೋತ್ಪಾದನೆ’ಯ ಕಡೆಗೆ ಬೆರಳು ತೋರಿಸಿ, ಸರಕಾರದೊಳಗಿನ ಭಿನ್ನಮತ, ಒಡಕು, ಭ್ರಷ್ಟಾಚಾರ ಇವನ್ನೆಲ್ಲ ಮುಚ್ಚಿ ಹಾಕಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಕೇರಳದ ರಾಜಕಾರಣಿಗಳಿಗೂ ಮಅದನಿ ಮತ್ತೆ ಭಯೋತ್ಪಾದಕನಾಗಿ ಗುರುತಿಸಲ್ಪಡಬೇಕಾಗಿತ್ತು. ಕೇರಳ ಮತ್ತು ಕರ್ನಾಟಕ ಸರಕಾರ ಒಟ್ಟು ಸೇರಿ ಮಅದನಿಯಲ್ಲಿ ಸರಣಿ ಸ್ಫೋಟದ ಆರೋಪಿ ಯನ್ನು ಹುಡುದವು. ಮಅದನಿಯನ್ನು ಬೆಂಗಳೂರು ಸ್ಫೋಟಕ್ಕೆ ಆರೋಪಿಯನ್ನಾಗಿ ಮಾಡುವ ಮೂಲಕ, ಅದಾಗಲೇ ಅರ್ಧ ಜೀವಚ್ಛವವಾಗಿದ್ದ ಒಂದು ದೇಹಕ್ಕೆ ಕೃತಕ ಉಗುರು, ಹಲ್ಲುಗಳನ್ನು ನೀಡುವ ಪ್ರಯತ್ನ ನಡೆಸಿದವು ಉಭಯ ಸರಕಾರಗಳು. ಇದೆಷ್ಟು ಅಪಾಯಕಾರಿ ಕೆಲಸವಾಗಿತ್ತೆಂದರೆ, ಅದಾಗಲೇ ಜೈಲಿನಲ್ಲಿ ಸತ್ತು ಹೋಗಿದ್ದ ಹಳೆಯ ಮಅದನಿಯ ಪ್ರತಿಕೃತಿಯ ಪುನರ್‌ಸೃಷ್ಟಿಯಾಗಿತ್ತು. ಜನರು ಆ ಹಳೆಯ ಮಅದನಿಯನ್ನು ಎಂದೋ ಮರೆತು ಬಿಟ್ಟಿದ್ದರು. ಆದರೆ ಇದೀಗ ಸರಕಾರವೇ ಆ ಮಅದನಿಯನ್ನು ಸೃಷ್ಟಿಸಿ ಜನರ ಮುಂದೆ ನಿಲ್ಲಿಸಿದೆ. ಜೈಲಿನಲ್ಲಿಟ್ಟು ಅಲ್ಲೇ ಅವರನ್ನು ಹೂತು ಹಾಕಲು ನಿರ್ಧರಿಸಿದಂತಿದೆ. ಜನರನ್ನು ಪ್ರಚೋದಿಸುವ ಅಪಾಯಕಾರಿ ಕೆಲಸಕ್ಕೆ ವ್ಯವಸ್ಥೆಯೇ ಇಳಿದು ಬಿಟ್ಟಿದೆ.
 ಗಮನಿಸಿ. ಬೆಂಗಳೂರಿನ ಸರಣಿ ಸ್ಫೋಟ ನಡೆಸಿರುವುದು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸರಕಾರಕ್ಕೆ ಅದು ಮಅದನಿಯಂತಹ ಯಾರಾದರೂ ನಡೆಸಿದರೆ ಹೆಚ್ಚು ಅನುಕೂಲ. ಪೊಲೀಸರಿಗೆ ತನಿಖೆ ನಡೆಸುವ ಕಷ್ಟ ಉಳಿಯಿತು. ಮಅದನಿಯ ವಿರುದ್ಧವಿರುವ ಸಾಕ್ಷಗಳು ಎಷ್ಟು ತೆಳುವಾದುದು ಎನ್ನುವುದನ್ನು ಒಮ್ಮೆ ನೋಡಿ. ಅವರು ಬಾಡಿಗೆಗಿರುವ ಮನೆಯ ಮಾಲಕ ಜೋಸ್ ವರ್ಗೀಸ್. ಪೊಲೀಸರು ಇವನನ್ನು ಠಾಣೆಗೆ ಕರೆಸಿ ಅವನಿಂದ ಒಂದು ಹೇಳಿಕೆಯನ್ನು ಬರೆಸಿದರು. ಅದೇನೆಂದರೆ, ‘‘ಒಮ್ಮೆ ನಾನು ಮನೆ ಬಾಡಿಗೆ ವಸೂಲು ಮಾಡಲು ಹೋದಾಗ ಮಅದನಿ ಯಾರೊಂದಿಗೋ ಮಾತನಾಡುತ್ತಾ ‘ಬಾಂಬ್’ ‘ಸ್ಫೋಟ’ ಎಂಬ ಶಬ್ದವನ್ನು ಹೊರಡಿಸಿದ್ದರು’’ ಎಂದು. ಆದರೆ ಮುಂದೆ ಇದೇ ಜೋಸ್ ವರ್ಗೀಸ್ ‘ಅಂತಹದು ಸಂಭವಿಸಿಯೇ ಇಲ್ಲ’’ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಮುಖ್ಯವಾಗಿ, ಮನೆಬಾಡಿಗೆ ವಸೂಲಿಗೆ ನಾನು ಮಅದನಿಯ ಮನೆಗೆ ಒಮ್ಮೆಯೂ ಹೋಗಿಲ್ಲ. ಯಾಕೆಂದರೆ ಅವರು ಬಾಡಿಗೆಯನ್ನು ಬ್ಯಾಂಕ್ (ಎಚ್‌ಡಿಎಫ್‌ಸಿ)ಗೆ ಪಾವತಿಸುತ್ತಾರೆ ಎಂದು ಮಾಧ್ಯಮಗಳಿಗೆ ಮುಖ್ಯ ವಾಗಿ ತೆಹಲ್ಕಾಗೆ ಸ್ಪಷ್ಟ ಪಡಿಸಿದ್ದಾರೆ. ತೆಹಲ್ಕಾ ವರದಿಗಾರ್ತಿ ಕೆ.ಕೆ.ಶಾಹಿನಾ ಅವರೊಂದಿಗೆ ಜಾರ್ಜ್ ಎಲ್ಲವನ್ನು ಬಾಯಿ ಬಿಡುತ್ತಾರೆ. ಇದರಿಂದ ಸಿಟ್ಟಿಗೆದ್ದ ಕರ್ನಾಟಕ ಪೊಲೀಸರು ಮುಂದೆ, ತನಿಖಾ ವರದಿಗಾರ್ತಿ ಶಾಹಿನಾ ವಿರುದ್ಧವೇ ಪ್ರಕರಣವನ್ನು ದಾಖಲಿಸುತ್ತಾರೆ. ಅಷ್ಟೇ ಅಲ್ಲ, ಜಾರ್ಜ್ ಈ ಕುರಿತಂತೆ ಪೊಲೀಸರ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನ್ನ ಹೇಳಿಕೆಯನ್ನು ಪೊಲೀಸರು ತಿರುಚಿದ್ದಾರೆ ಎಂದೂ ಹೇಳಿದ್ದರು.
ಕೊಯಮತ್ತೂರು ಸ್ಫೋಟದ ಆರೋಪದಿಂದ ಬಿಡುಗಡೆ ಯಾದ ಬಳಿಕ ಸರಕಾರ ಅವರಿಗೆ ಇಬ್ಬರು ಅಂಗರಕ್ಷಕರನ್ನು ಕೊಟ್ಟಿತ್ತು. ಇದು, ಮಅದನಿಯ ರಾಜಕೀಯ ನಡೆಯ ಬಗ್ಗೆ ಕಣ್ಣಿಡಲು ಹೊರತು, ಮಅದನಿಯ ರಕ್ಷಣೆಗಾಗಿರಲಿಲ್ಲ. ಇವರನ್ನೆಲ್ಲ ಕಣ್ಣು ತಪ್ಪಿಸಿ ಒಂಟಿ ಕಾಲಿನ ಮಅದನಿ ಕೊಡಗಿಗೆ ಹೋಗಿ, ಅಲ್ಲಿರುವ ನಝೀರ್ ಎಂಬವನ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನುವುದೇ ತಮಾಷೆಯ ವಿಷಯವಾಗಿದೆ. ಇದನ್ನು ತನಿಖೆ ನಡೆಸಲು ತೆಹಲ್ಕಾ ಪತ್ರಕರ್ತೆ ಶಾಹಿನಾ ಕೊಡಗಿಗೆ ಹೋದಾಗ ಪೊಲೀಸರು ಆಕೆಯನ್ನು ಬಂಧಿಸಿ, ಆಕೆಯ ಮೇಲೆ ಮೊಕದ್ದಮೆಯನ್ನು ದಾಖಲಿಸಿ ಅವರ ಕೈಗಳನ್ನು ಕಟ್ಟಿ ಹಾಕಿದರು. ಇದರ ವಿರುದ್ಧ ಅಂತಾರಾಷ್ಟ್ರೀಯ ಮಾಧ್ಯಮ ಗಳು ತಮ್ಮ ಖಂಡನೆಯನ್ನು ವ್ಯಕ್ತಪಡಿಸಿವೆ.


 ಇದೀಗ ಮಅದನಿಯ ಬೆಂಬಲಿಗರು ಹೇಳುವುದು ಇಷ್ಟೇ. ‘‘ಸರಣಿ ಸ್ಫೋಟ ನಡೆಸಿದ್ದರೆ ಅವರಿಗೆ ಮರಣದಂಡನೆ ಯಾಗಲಿ. ಆದರೆ ವಿಚಾರಣೆಯ ಹೆಸರಿನಲ್ಲಿ ಅವರನ್ನು ಜೈಲಿನಲ್ಲಿ ಸಾಯಿಸುವುದು ಬೇಡ’’.
ಇಂದು ಅನುಕಂಪದ ಬಲದ ಮೇಲೆ ಮತ್ತೆ ಮಅದನಿಯ ಅಭಿಮಾನಿಗಳು ಹುಟ್ಟಿಕೊಳ್ಳು ತ್ತಿದ್ದಾರೆ. ಒಂದು ವೇಳೆ, ಮಅದನಿ ವಿಚಾರಣೆಯ ಹೆಸರಿನಲ್ಲಿ ಅನಾರೋಗ್ಯದಿಂದ ಸತ್ತೇ ಹೋದರೆ, ಅದು ಕೇರಳದ ಒಂದು ವರ್ಗದ ಮುಸ್ಲಿಮರ ಮೇಲೆ ಭೀಕರ ಪರಿಣಾಮವನ್ನು ಬೀರಬಹುದು. ಇದರಿಂದ ಮಅದನಿಗೆ ಯಾವುದೇ ನಷ್ಟವಾಗುವು ದಿಲ್ಲ. 92ರ ದಶಕದ ಮಅದನಿಯನ್ನು ಮತ್ತೆ ಪೊಲೀಸರೇ ಜೀವಂತಗೊಳಿಸಿದಂತಾಗು ತ್ತದೆಯಷ್ಟೇ. ಈ ಪ್ರಕರಣದಲ್ಲಿ ಮಅದನಿಯ ಪಾತ್ರ ಗುರುತಿಸಿ ನ್ಯಾಯಾಲಯ ಅವರನ್ನು ಶಿಕ್ಷಿಸಿದರೆ ಅದು ಸ್ವಾಗತಾರ್ಹ. ಆದರೆ ನಿರಪರಾಧಿಯಾಗಿ ಜೈಲಲ್ಲೇ ಅವರು ಸತ್ತು ಹೋದರೆಂದರೆ, ಕೇರಳದಲ್ಲಿ 92ರ ದಶಕದ ಮಅದನಿಗಳು ಮತ್ತೆ ಚಿಗುರುವ ಸಾಧ್ಯತೆಯಿದೆ. ಅಂತಹದ್ದು ಯಾವುದೂ ಘಟಿಸದಿರಲಿ. ಈ ದೇಶ, ಈ ಸಂವಿಧಾನದ ಮೇಲಿರುವ ಭರವಸೆ ನಮ್ಮ ಯುವಕರಲ್ಲಿ ಅಜರಾಮರವಾಗಿ ಇರಲಿ ಎನ್ನುವುದೇ ನನ್ನ ಆಶಯ.

Sunday, January 27, 2013

ಒಂದಿಷ್ಟು ಪದ್ಯಗಳು

 ಅಕೌಂಟ್
ಇತ್ತೀಚೆಗೆ ದುಬೈಯಿಂದ
ಬಂದ ಗೆಳೆಯ ಕೇಳಿದ
ಹೇಳು ನಿನ್ನ ಅಕೌಂಟ್ ನಲ್ಲಿ
ಎಷ್ಟು ದುಡ್ಡಿದೆ...?
ಫೇಸ್ಬುಕ್ ಅಕೌಂಟ್
ತೆರೆದು ತೋರಿಸಿದೆ
ಸಾವಿರಾರು ಗೆಳೆಯರು
ಅಲ್ಲಿ ನಗುತ್ತಿದ್ದರು

ಸದ್ದು
ಮರ ಗಿಡಗಳಿಗೂ ಆತ್ಮ
ಇರಬಹುದೇ
ಎಂಬ ಪ್ರಶ್ನೆ ಹೊಳೆದಂದಿನಿಂದ
ನಡೆಯುವಾಗೆಲ್ಲ
ನನ್ನ ಪಾದ ತುಳಿತಕ್ಕೆ
ಹುಲ್ಲುಗರಿಗಳು ನರಳುವ
ಸದ್ದು ಕೇಳುತ್ತಿವೆ...

ಮಾವಿನ ಗೊರಟೆ
ನಾನು ತಿಂದು ಎಸೆದ
ಮಾವಿನ ಗೊರಟೆ
ನನ್ನ ಕವಿತೆ!
ಅದು
ಯಾವುದಾದರೂ
ಹಸಿ ಎದೆಯ ಮೇಲೆ ಬಿದ್ದು
ಮೊಳಕೆಯೊಡೆದು
ಗಿಡವಾಗಿ, ಮರವಾಗಿ
ಹಣ್ಣುಗಳು ತೂಗಿ
ಹಕ್ಕಿಗಳಿಗೆ ಗುಡಿಲಾಗಿ,
ನೂರಾರು ಜನರಿಗೆ ನೆರಳಾಗಿ
ಬೆಳೆದರೆ ಅದಕ್ಕೆ ನಾನು
ಹೊಣೆಯಲ್ಲ...!

ಮತ್ತೊಮ್ಮೆ
ಗಣರಾಜ್ಯೋತ್ಸವದ ದಿನ
ಬೀದಿಯಲ್ಲಿ ಸಂಭ್ರಮಗಳೆಲ್ಲ ಕಳಚಿ
ಅನಾಥವಾಗಿ ಬಿದ್ದಿದ್ದ
ಪ್ಲಾಸ್ಟಿಕ್ ಧ್ವಜಗಳ
ಮೇಲೆ ಯಾರ್ಯಾರದೋ
ಪಾದ ಗುರುತುಗಳು!
ಮರುದಿನ ಬೀದಿ ಗುಡಿಸುವವರ
ಮಕ್ಕಳ ಕೈಯಲ್ಲಿ
ಈ ದೇಶಕ್ಕೆ ಮತ್ತೊಮ್ಮೆ
ಗಣರಾಜ್ಯೋತ್ಸವ!

Saturday, January 26, 2013

ಹೃದಯದಲ್ಲಿ ಗಾಯವಿಟ್ಟುಕೊಂಡೇ ವಿಧಿವಶರಾದರು

ಜ್ಯೋತಿ ಪುನ್ವಾನಿ
ಕೃಪೆ: ದ ಹಿಂದೂ


ಮೌಲಾನ ಹುಸೈನ್ ಉಮರ್‌ಜೀ ರವಿವಾರ ಮೆದುಳಿನ ರಕ್ತಸ್ರಾವದಿಂದಾಗಿ ಮೃತಪಟ್ಟರು. ಎಲ್ಲಾ ಆರೋಪಗಳಿಂದ ಮುಕ್ತರಾಗಿದ್ದರೂ ಕಳಂಕಿತರಾಗಿಯೇ ಇಹಲೋಕ ತ್ಯಜಿಸಿದರು.“ತನ್ನ ಪ್ರತಿಷ್ಠೆಗೆ ಉಂಟಾದ ಕಳಂಕದಿಂದ ಮುಕ್ತವಾಗಲು ಅವರ ಮನಸ್ಸಿಗೆ ಸಾಧ್ಯವಾಗಲಿಲ್ಲ. ಅವರು ಆರೋಪ ಮುಕ್ತಗೊಂಡರೂ ಮಾಧ್ಯಮಗಳು ಕೇಳುತ್ತಲೇ ಇದ್ದವು: “ರೂವಾರಿ ಹೇಗೆ ತಪ್ಪಿಸಿಕೊಂಡ” ಎಂದು ಅವರ ಮಗ ಸಯೀದ್ ಹೇಳುತ್ತಾರೆ.

2002 ಫೆಬ್ರವರಿ 27ರಂದು ಸಾಬರ್‌ಮತಿ ಎಕ್ಸ್‌ಪ್ರೆಸ್‌ನ ಎಸ್ 6 ಕೋಚ್ ಉರಿಯುವವರೆಗೆ ಮೌಲಾನ ಉಮರ್‌ಜೀ ಯಾರೆಂದು ಗೋಧ್ರಾದ ಹೊರಗೆ ಯಾರಿಗೂ ಗೊತ್ತಿರಲಿಲ್ಲ. ಆ ದುರಂತ ದಲ್ಲಿ 59 ಪ್ರಯಾಣಿಕರು ಸುಟ್ಟು ಹೋಗಿದ್ದರು. ಅವರ ಪೈಕಿ ಹೆಚ್ಚಿನವರು ವಿಶ್ವ ಹಿಂದೂ ಪರಿಷತ್‌ಗೆ ಸೇರಿದವರು.ಬಳಿಕ ಗುಜರಾತ್‌ನಾದ್ಯಂತ ಮುಸ್ಲಿಮರ ವಿರುದ್ಧ ನಡೆದ ಹಿಂಸಾಚಾರದಲ್ಲಿ ಸಾವಿರಾರು ಮಂದಿ ಮೃತಪಟ್ಟರು, ಗಾಯಗೊಂಡರು, ಅತ್ಯಾಚಾರಕ್ಕೊಳಗಾದರು, ಅನಾಥರಾದರು ಹಾಗೂ ಗಂಡಂದಿರನ್ನು ಕಳೆದುಕೊಂಡರು. ಅವರೆಲ್ಲರೂ ಸಮೀಪದ ಹಳ್ಳಿಗಳಿಂದ ಗೋಧ್ರಾಗೆ ವಲಸೆ ಬಂದರು. ಅಲ್ಲಿ ಅವರಿಗಾಗಿ ಶಿಬಿರಗಳನ್ನು ಏರ್ಪಡಿಸಲಾಯಿತು.

ಪಟ್ಟಣದ ಘಾಂಚಿ ಸಮುದಾಯದ ಮುಖ್ಯಸ್ಥ ಮೌಲಾನ ಉಮರ್‌ಜೀ ಮೂರು ಶಿಬಿರಗಳನ್ನು ನಡೆಸಿದರು ಹಾಗೂ ಆ ಮೂಲಕ ಪ್ರಸಿದ್ಧಿಗೆ ಬಂದರು. ಇದುವೇ ಅವರಿಗೆ ಮುಳುವಾಯಿತು.ಘಟನೆ ನಡೆದ ವರ್ಷದ ಬಳಿಕ ರೈಲು ದಹನ ಘಟನೆಯ ರೂವಾರಿ ಎಂಬ ಆರೋಪ ಹೊರಿಸಿ ಅವರನ್ನು ಬಂಧಿಸಲಾಯಿತು. “ಸಮಾಜ ಸೇವೆ ಮಾಡಿದುದಕ್ಕಾಗಿ ಇದು ನಮಗೆ ದೊರಕಿದ ಪ್ರತಿಫಲವಾದರೆ, ಈ ದೇಶವನ್ನು ದೇವರೇ ಕಾಪಾಡಬೇಕು” ಎಂದು ಸಯೀದ್ ಉಮರ್‌ಜೀ ಹೇಳುತ್ತಾರೆ.

ಖುಲಾಸೆ

2002ರ ಆ ಹಿಂಸಾತ್ಮಕ ತಿಂಗಳುಗಳಲ್ಲಿ ಸಯೀದ್‌ರ ತಂದೆ ಕೇವಲ ಸಮಾಜ ಸೇವೆಯನ್ನಷ್ಟೆ ಮಾಡಲಿಲ್ಲ. ಯಾವುದೇ ಹೆಚ್ಚಿನ ಸಹಾಯವಿಲ್ಲದೆ ಶಿಬಿರಗಳನ್ನು ನಡೆಸುವುದು ಕಷ್ಟದ ಕೆಲಸವೇ ಹೌದು. ಆದರೆ, ಅದನ್ನು ಯಾರು ಬೇಕಾದರೂ ಮಾಡಬಹುದಿತ್ತು. ಮುಖ್ಯವಾದ ವಿಚಾರವೆಂದರೆ ಅವರು ಅಂದು ತನ್ನ ಸಮುದಾಯದವರನ್ನು ತನ್ನ ನಿಯಂತ್ರಣದಲ್ಲಿಟ್ಟು ಕೊಂಡರು. ತಮ್ಮ ಧರ್ಮಕ್ಕೆ ಚೂರೇ ಚೂರು ಚ್ಯುತಿಯಾದರೂ ಗೋಧ್ರಾದ ಘಾಂಚಿ ಮುಸ್ಲಿಮರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಗೋಧ್ರಾದ ಪಕ್ಕದ ಹಳ್ಳಿಗಳಿಂದ ಶಿಬಿರಕ್ಕೆ ಬಂದವರಿಂದ ದೌರ್ಜನ್ಯದ ಕತೆಗಳನ್ನು ಕೇಳಿ ಗೋಧ್ರಾ ಮುಸ್ಲಿಮರು ಆಕ್ರೋಶಗೊಂಡಿದ್ದರು.

ತಮ್ಮದಲ್ಲದ ತಪ್ಪಿಗೆ ತಮಗೆ ಶಿಕ್ಷೆ ನೀಡಲಾಗಿತ್ತು ಎಂಬ ನಿರಾಶ್ರಿತರ ಮಾತುಗಳನ್ನು ಕೇಳಿ ಅವರು ಕುದಿದು ಹೋಗಿದ್ದರು. ಅದೂ ಅಲ್ಲದೆ, ಆಗ ರಾತ್ರಿ ಕರ್ಫ್ಯೂ ಜಾರಿಯಲ್ಲಿತ್ತು. ಪೊಲೀಸರು ಘಾಂಚಿ ಪ್ರದೇಶಗಳಿಗೆ ರಾತ್ರಿ ಹೊತ್ತು ದಾಳಿ ನಡೆಸಿ ರೈಲು ಸುಟ್ಟವರಿಗಾಗಿ ಹುಡುಕುತ್ತಿದ್ದರು ಹಾಗೂ ಸಿಕ್ಕಿದವರನ್ನು ಎತ್ತಿ ಕೊಂಡು ಹೋಗುತ್ತಿದ್ದರು.  (94 ಆರೋಪಿಗಳ ಪೈಕಿ 63 ಮಂದಿಯನ್ನು ದೋಷಮುಕ್ತ ಗೊಳಿಸಲಾಗಿದೆ).

ಇಂಥ ಸ್ಫೋಟಕ ಪರಿಸ್ಥಿತಿಯಲ್ಲಿ ಪೊಲೀಸರು ಮತ್ತು ತನ್ನವರ ನಡುವೆ ಭಾರೀ ಹಿಂಸೆಯೊಂದು ಸ್ಫೋಟಿಸುವುದನ್ನು ತಡೆಯುವಲ್ಲಿ ಮೌಲಾನ ಉಮರ್‌ಜೀ ಯಶಸ್ವಿಯಾಗಿದ್ದರು. ಅವರ ಸಾಧನೆ ಅಷ್ಟೇ ಅಲ್ಲ. ಸಾಬರ್‌ಮತಿ ಕೋಚ್‌ನ್ನು ಸುಟ್ಟಿರುವುದಕ್ಕಾಗಿ ತನ್ನ ಸಮುದಾಯದ ಪರವಾಗಿ ಕ್ಷಮೆ ಯಾಚಿಸಿದ ಮೊದಲಿಗರಾಗಿದ್ದರು ಅವರು. ಗೋಧ್ರಾಕ್ಕೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಸೋನಿಯಾ ಗಾಂಧಿ ಬಂದಾಗಲೂ ಅವರು ಕ್ಷಮೆ ಯಾಚಿಸಿದ್ದರು. ಆದರೆ, ಅವರ ಕ್ಷಮೆ ಯಾಚನೆಗಳು ಪತ್ರಿಕೆಗಳಲ್ಲಿ ವರದಿಯಾಗಲಿಲ್ಲ. ಘಟನೆಯ ಕುರಿತು ಅವರು ವ್ಯಕ್ತಪಡಿಸಿದ ಖಂಡನೆಯೂ ಪ್ರಕಟವಾಗಲಿಲ್ಲ.

ಇಂಥ ವ್ಯಕ್ತಿಯನ್ನು ಕಸ್ಟಡಿಯಲ್ಲಿದ್ದ ಕ್ರಿಮಿನಲ್ ಒಬ್ಬನ ಹೇಳಿಕೆಯ ಆಧಾರದಲ್ಲಿ ರೈಲು ದಹನ ಘಟನೆಯ ರೂವಾರಿ ಎಂಬುದಾಗಿ ಬಂಧಿಸಲಾಯಿತು. ಹೇಳಿಕೆ ನೀಡಿದ ವ್ಯಕ್ತಿ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹಾಜರಾದ ಕೂಡಲೇ ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದ.

63ವರ್ಷ ಪ್ರಾಯದ ತಮ್ಮ ಆಧ್ಯಾತ್ಮಿಕ ನಾಯಕನನ್ನು ಮುಂಜಾನೆ ಅವರ ಮನೆಯಿಂದ ಕನ್ನಡಕ ಮತ್ತು ನಡೆಯುವ ಕೋಲು ಇಲ್ಲದೆಯೇ ಪೊಲೀಸರು ಕರೆದುಕೊಂಡು ಹೋಗುತ್ತಿರುವುದನ್ನು ಗೋಧ್ರಾದ ಪ್ರಮುಖ ಮುಸ್ಲಿಂ ಪ್ರದೇಶ ಪೋಲನ್ ಬಝಾರ್‌ನ ಎಲ್ಲರೂ ನೋಡಿದರು. ಇಷ್ಟೇ ಸಾಕಾಯಿತು. ಮರುದಿನದ ಪತ್ರಿಕೆಗಳಲ್ಲಿ ಲಂಗು ಲಗಾಮಿಲ್ಲದ ವರದಿಗಳು ಬಂದವು- ಅವರಿಗೆ ಪಾಕಿಸ್ತಾನದ ಐಎಸ್‌ಐ, ಅಫ್ಘಾನಿಸ್ತಾನದ ಮುಲ್ಲಾ ಉಮರ್‌ನೊಂದಿಗೆ ಸಂಪರ್ಕವಿದೆ, ಉಗ್ರ ಭಾಷಣಗಳು, ಹುದುಗಿಸಿಟ್ಟ ನಿಧಿಗಳು ಹಾಗೆ ಹೀಗೆ ಎಂಬುದಾಗಿ.

ಎಲ್ಲ ಸುದ್ದಿಗಳಲ್ಲೂ ಅವರ ಕ್ಲೋಸ್ ಅಪ್ ಫೋಟೊಗಳು ಇದ್ದವು. ಇಂಥ ವರದಿಗಾರಿಕೆಯ ಪ್ರಭಾವ ಎಷ್ಟಿತ್ತೆಂದರೆ, ಎಂಟು ವರ್ಷಗಳ ಬಳಿಕ ಅವರ ಬಿಡುಗಡೆಯಾದಾಗ ಗುಜರಾತ್‌ನಾದ್ಯಂತದ ಹಿಂದೂಗಳು ‘ರೂವಾರಿ’ಯನ್ನು ಬಿಟ್ಟಿದ್ದಕ್ಕೆ ಪೊಲೀಸರಿಗೆ ಶಪಿಸಿದರು.

ಮೌಲಾನರ ಪಾಲಿಗೆ ಇದಕ್ಕಿಂತ ಹೇಯ ಆರೋಪ ಬೇರೆ ಇರಲಿಲ್ಲ. 2002ರ ಎಪ್ರಿಲ್‌ನಲ್ಲಿ ಅವರು ಈ ವರದಿಗಾರನಿಗೆ ಹೀಗೆ ಹೇಳಿದ್ದರು: “ಸಮಾಧಾನದಿಂದ ಇರಲು ಮುಸ್ಲಿಮರಿಗೆ ಕಲಿಸಲಾಗುತ್ತಿದೆ. ಹಾಗಾಗಿ, ಈ ಹಿಂಸಾಚಾರವನ್ನು ಅವರು ಅನುಭವಿಸಲೇ ಬೇಕು. ಆದರೆ, ಅವರು ನಮ್ಮ ದೇಶಭಕ್ತಿಯನ್ನು ಪ್ರಶ್ನಿಸುವಾಗ ಕೋಪ ಬರುತ್ತದೆ. ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ 14,000 ಉಲೆಮಾಗಳನ್ನು ದಿಲ್ಲಿಯ ಮರಗಳಿಂದ ನೇತು ಹಾಕಿದ ವಿಷಯ ಅವರಿಗೆ ತಿಳಿದಿಲ್ಲವೇ? ನನ್ನ ಸ್ವಂತ ಗುರು ಆರು ವರ್ಷಗಳ ಕಾಲ ಮಾಲ್ಟದ ಜೈಲಿನಲ್ಲಿದ್ದರು. ಗಾಂಧೀಜಿಯ ಸಂಗವನ್ನು ತೊರೆದರೆ ಬಿಡುಗಡೆ ಮಾಡುವ ಆಶ್ವಾಸನೆಯನ್ನು ಬ್ರಿಟಿಶರು ನೀಡಿದ್ದರು. ಆದರೆ, ಅವರು ಅದನ್ನು ತಿರಸ್ಕರಿಸಿದರು”.

ಮೌಲಾನ ಉಮರ್‌ಜೀಗೆ ಜಾಮೀನು ಸಿಗಲಿಲ್ಲ. ಅವರ ವಿರುದ್ಧದ ಭಯೋತ್ಪಾದನೆ ಆರೋಪಗಳನ್ನು 2009ರಲ್ಲಿ ಹಿಂದಕ್ಕೆ ಪಡೆದ ಬಳಿಕವೂ ಸಿಗಲಿಲ್ಲ. ಅವರು ಜೈಲಿನಲ್ಲಿರುವಾಗ ಅವರ ಆರು ಮಕ್ಕಳಿಗೆ ಮದುವೆಯಾಯಿತು. ಅಂತಿಮವಾಗಿ 2011 ಫೆಬ್ರವರಿಯಲ್ಲಿ ಅವರನ್ನು ಖಲಾಸೆಗೊಳಿಸಲಾಯಿತು. ಮೋದಿ ಸರಕಾರ ಮತ್ತು ಮಾಧ್ಯಮಗಳು ಹಚ್ಚಿದ ಕಳಂಕವನ್ನು ತೊಡೆದು ಹಾಕುವಲ್ಲಿ  ಹೆಚ್ಚಿನ ಪ್ರಯತ್ನಗಳು ನಡೆಯಲಿಲ್ಲ. ಬಿಡುಗಡೆಗೊಂಡ ಬಳಿಕ ಅವರು ಎರಡು ವರ್ಷವಷ್ಟೆ ಬದುಕಿದರು.

Friday, January 25, 2013

ಮಅದನಿಯ ಕೈಬೆರಳುಗಳಿಗೆ ವ್ಯವಸ್ಥೆ ಜೋಡಿಸಿದ ಕೃತಕ ಉಗುರುಗಳು...!

ಅದು 1992. ಬಾಬರಿ ಮಸೀದಿ ಧ್ವಂಸಗೊಂಡ ಸಮಯ. ನನ್ನೂರಿನ ಮುಸ್ಲಿಮ್ ಹುಡುಗರು ಒಂದು ರೀತಿಯ ಗೊಂದಲ, ಅಸಹಾಯಕತೆ, ಹತಾಷೆಯ ಸ್ಥಿತಿಯಲ್ಲಿದ್ದಂತೆ ಕಂಡಿತ್ತು. ಬಾಬರಿ ಮಸೀದಿ ಧ್ವಂಸವನ್ನು ಹೇಗೆ ಸ್ವೀಕರಿಸಬೇಕು ಎನ್ನುವುದು ಅವರಿಗೆ ಅರ್ಥವಾಗಿರಲಿಲ್ಲ. ಅದನ್ನು ಅರ್ಥ ಮಾಡಿಸುವ ನಾಯಕರೂ ಅವರ ಬಳಿ ಇರಲಿಲ್ಲ. ಇಂತಹ ಸಂದರ್ಭದಲ್ಲೇ ನನ್ನೂರಿನ ಹುಡುಗರ ಕೈಯಲ್ಲಿ ಒಂದೆರಡು ಕ್ಯಾಸೆಟ್‌ಗಳು ಹರಿದಾಡತೊಡಗಿದವು. ಕೆಲವರು ಅದನ್ನು ಗುಟ್ಟಾಗಿಯೆಂಬಂತೆ ಕೇಳುತ್ತಿದ್ದರು. ಒಂದು ದಿನ ನನ್ನ ಆತ್ಮೀಯ ಸ್ನೇಹಿತನ ಬಳಿ ನಾನು ಆ ಕ್ಯಾಸೆಟನ್ನು ನೋಡಿದೆ.

‘‘ಏನದು?’’ ಎಂದು ಕೇಳಿದೆ. ಅವನು ಒಂದು ರೀತಿಯ ನಿಗೂಢತೆಯ ನಗು ನಕ್ಕ. ‘‘ಹೇಳು ಏನದು?’’ ನಿಧಾನಕ್ಕೆ ಬಾಯಿ ಬಿಟ್ಟ. ‘‘ಮಅದನಿಯವರ ಭಾಷಣದ ಕ್ಯಾಸೆಟ್’’ ನನ್ನ ಅಚ್ಚರಿ ತಿಳಿಯಾಗಲಿಲ್ಲ.‘‘ಯಾವ ಮಅದನಿ?’’ ‘‘ಕೇರಳದ ಅಬ್ದುಲ್ ನಾಸರ್ ಮಅದನಿಯವರ ಕ್ಯಾಸೆಟ್’’
 ‘‘ಅದನ್ನು ಇಷ್ಟು ಗುಟ್ಟಾಗಿ ಕೇಳುವ ಅಗತ್ಯ ಏನಿದೆ?’’
 ‘‘ಬಾಬರಿ ಮಸೀದಿ ಧ್ವಂಸದ ಬಗ್ಗೆ ಅವರು ಮಾಡಿದ ಭಾಷಣ ಇದು...’’ ದಿನಕ್ಕೆ ಸರಿಯಾಗಿ ಒಂದು ಹೊತ್ತು ನಮಾಜೂ ಮಾಡದ, ಮಸೀದಿಯ ಕುರಿತಂತೆ ಯಾವ ಕಾಳಜಿಯೂ ಇಲ್ಲದ ಗೆಳೆಯ ಅವನು. ಅಷ್ಟೇಕೆ, ರಾಜಕೀಯದ ಕುರಿತಂತೆಯೂ ಅವನಿಗೆ ವಿಶೇಷ ತಿಳುವಳಿಕೆ ಇದ್ದಿರಲಿಲ್ಲ. ಇಂತಹದರಲ್ಲಿ ಬಾಬರಿ ಮಸೀದಿ ಧ್ವಂಸದ ಕುರಿತಂತೆ ಅವನಿಗಿರುವ ಆಸಕ್ತಿ ಕಂಡು ನನಗೆ ಕುತೂಹಲವಾಯಿತು. ‘‘ನನಗೊಮ್ಮೆ ಕೊಡು’’ ಎಂದು ಆ ಕ್ಯಾಸೆಟನ್ನು ಇಸಿದುಕೊಂಡೆ. ಅಂದು ಮನೆಯಲ್ಲಿ ಆ ಕ್ಯಾಸೆಟನ್ನು ಕೇಳಿದೆ. ಹೀಗೆ ನಾಸರ್ ಮಅದನಿ ಎನ್ನುವ ಒಬ್ಬ ದುರಂತ ನಾಯಕನ ಪರಿಚಯ ಆದುದು ಆಗ. ಆಮೇಲೆ ಹಲವು ಭಾಷಣಗಳನ್ನು ಕ್ಯಾಸೆಟ್‌ಗಳ ಮೂಲಕ ಕೇಳಿಸಿಕೊಂಡೆ.

ಬಾಬರಿ ಮಸೀದಿ ಧ್ವಂಸವನ್ನು ಅತ್ಯಂತ ಭಾವುಕವಾಗಿ ಕಟ್ಟಿಕೊಡುವ ಮಲಯಾಳಂ ಭಾಷಣಗಳು ಅವು. ಭಾರತೀಯ ಸಂವಿಧಾನದ ವೈಫಲ್ಯವನ್ನು, ಮುಸ್ಲಿಮರಿಗಾದ ಅನ್ಯಾಯವನ್ನು, ಆರೆಸ್ಸೆಸ್ ಮಾಡುತ್ತಿರುವ ದೌರ್ಜನ್ಯವನ್ನು ಅತ್ಯಂತ ತೀವ್ರ ರೀತಿಯಲ್ಲಿ ಅವುಗಳು ಮಂಡಿಸುತ್ತಿದ್ದವು. ನಾನು ಈ ಭಾಷಣದ ನಡುವೆ ಒಂದು ಸೈಕಿಕ್ ಅಂತರವನ್ನು ಕಾಪಾಡಿಕೊಂಡಿದ್ದರಿಂದ ಅದು ನನ್ನ ಮೇಲೆ ಯಾವುದೇ ಪರಿಣಾಮವನ್ನು ಬೀರಲಿಲ್ಲ. ಆದರೆ ನನ್ನ ಗೆಳೆಯರಿಗೆ ಮಾತ್ರ ಹೇಳಿದೆ ‘‘ಬಾಬರಿ ಮಸೀದಿ ಧ್ವಂಸಕ್ಕೆ ಈ ಕ್ಯಾಸೆಟ್ ಪರಿಹಾರವಲ್ಲ. ಈ ದೇಶ ನಮ್ಮದು. ಈ ದೇಶದ ಸಂವಿಧಾನ ನಮಗೆ ಅದರ ವಿರುದ್ಧ ಪ್ರತಿಭಟನೆಗೆ ನೂರಾರು ಬಾಗಿಲುಗಳನ್ನು ತೆರೆದುಕೊಟ್ಟಿದೆ. ನಮ್ಮ ಸಂವಿಧಾನವೇ ನಮಗೆ ಪರಿಹಾರ...’’

ಎಷ್ಟೋ ಹುಡುಗರಿಗೆ ನನ್ನ ಕೈಲಾದಷ್ಟು ನಾನು ಮನವರಿಕೆ ಮಾಡಿಸಿದ್ದೆ. ಕೆಲವರು ನನ್ನನ್ನು ‘‘ಗಾಂಧಿ...’’ ಎಂದು ತಮಾಷೆಯೂ ಮಾಡಿದ್ದರು. ಅವರಿಗೆ ಗಾಂಧಿಯ ಕುರಿತಂತೆ ಹೇಳಿದ್ದೆ. ‘‘ಗಾಂಧಿಯನ್ನು ಕೊಂದವರೂ ಆರೆಸ್ಸೆಸ್ಸಿಗರು. ಗಾಂಧಿ ಒಬ್ಬ ಶ್ರೇಷ್ಠ ಹಿಂದು. ಮುಸ್ಲಿಮರು ಸರ್ವನಾಶವಾಗುತ್ತಿರುವ ಕಾಲದಲ್ಲಿ ಅವರನ್ನು ರಕ್ಷಿಸಿದ್ದು ಗಾಂಧಿ. ಇದನ್ನು ನಾವು ನೆನಪಿನಲ್ಲಿಡೋಣ. ನಮಗೆ ಬೇಕಾಗಿರುವುದು ನಾಸರ್ ಮಅದನಿಯಲ್ಲ, ಗಾಂಧೀಜಿ’’ ಎಂದೂ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೆ. ಕೆಲವೊಮ್ಮೆ ತಮಾಷೆಯ ವಸ್ತುವೂ ಆಗಿದ್ದೆ. ಕೆಲವು ಹುಡುಗರು ಅದಾಗಲೇ ನಾಸರ್ ಮಅದನಿಯ ಭಾಷಣದಲ್ಲಿ ಕೊಚ್ಚಿ ಹೋಗಿದ್ದರು.
ಭಾಷಣಗಳಲ್ಲಿ ನಾಸರ್ ಮಅದನಿ ಎಲ್ಲೂ ಹಿಂಸೆಯ ಬಗ್ಗೆ ಮಾತನಾಡಿರಲಿಲ್ಲ. ಆದರೆ ಬಾಬರಿ ಮಸೀದಿಯ ಧ್ವಂಸವನ್ನು ಅವರು ಭಾವುಕವಾಗಿ ನಿರೂಪಿಸಿದ ರೀತಿ ಪರೋಕ್ಷವಾಗಿ ಹಿಂಸೆಯನ್ನೇ ಪ್ರೇರೇಪಿಸುತ್ತಿತ್ತು.ಇಂದು ಕರ್ನಾಟಕದ ಜೈಲಿನಲ್ಲಿ ಸಾವು-ಬದುಕಿನ ನಡುವೆ ಜಗ್ಗಾಡುತ್ತಿರುವ ನಾಸರ್ ಮಅದನಿಯ ಮೊತ್ತ ಮೊದಲ ವ್ಯಕ್ತಿತ್ವ ಇದು. ಅವರು ಕೇರಳದ ಆಚೆಯ ಜನರಿಗೆ ಪರಿಚಯವಾದುದೇ ಬಾಬರಿ ಮಸೀದಿ ಧ್ವಂಸದ ಬಳಿಕ. ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಮುಸ್ಲಿಮರನ್ನು ಮುನ್ನಡೆಸಲು ಒಬ್ಬ ಶ್ರೇಷ್ಠ ನಾಯಕ ಹುಟ್ಟಿ ಬರಲೇಬೇಕಾಗಿತ್ತು.

ಅದಾಗಲೇ ಇದ್ದ ಮುಸ್ಲಿಮ್ ನಾಯಕರು ರಾಷ್ಟ್ರೀಯ ಪಕ್ಷಗಳು ಎಸೆದ ಬಿಸ್ಕೆಟ್‌ಗಳನ್ನು ತಿನ್ನುತ್ತಾ, ತನ್ನ ಮಕ್ಕಳು, ಮೊಮಕ್ಕಳಿಗೆ ಆಸ್ತಿ ಮಾಡುವುದರಲ್ಲಿ ಮಗ್ನರಾಗಿದ್ದರು. ಅವರು ಮುಸ್ಲಿಮ್ ತರುಣರ ಹತಾಶೆಗೆ ಸ್ಪಂದಿಸಲಿಲ್ಲ. ಆ ಶೂನ್ಯ ವಾತಾವರಣದಲ್ಲಿ ಕೇರಳ ಮತ್ತು ಕರಾವಳಿ ಭಾಗದ ಭಾಗಶಃ ಮುಸ್ಲಿಮರು ನಾಸರ್ ಮಅದನಿಯಲ್ಲಿ ಆ ನಾಯಕನನ್ನು ಹುಡುಕಿದರು. ಅವರ ಭಾಷಣಗಳಿಗೆ ಕಿವಿಯಾದರು. ಆದರೆ ನಾಸರ್ ಮಅದನಿಯ ಅಷ್ಟೂ ಭಾಷಣಗಳಲ್ಲಿ ದೇಶದ್ರೋಹದ ಒಂದು ಮಾತುಗಳಿರಲಿಲ್ಲ ನಿಜ. ಆದರೆ ಅವರ ಭಾವೋದ್ವೇಗದ ಮಾತುಗಳು, ಅನಕ್ಷರಸ್ಥ ಯುವಕರನ್ನು ತಪ್ಪು ಹಾದಿಗೆ ಒಯ್ಯುವ ಸಾಧ್ಯತೆ ಇತ್ತು ಎನ್ನುವುದನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ.

ಬಾಬರಿ ಮಸೀದಿ ಧ್ವಂಸದ ಕುರಿತಂತೆ ಮಾಡಿದ ಭಾಷಣದ ವಿರುದ್ಧ ಅವರ ಮೇಲೆ ಕೇಸೂ ದಾಖಲಾಗಿತ್ತು. ಆದರೆ ಎಲ್ಲ ಕೇಸುಗಳೂ ವಜಾಗೊಂಡವು. ‘‘ವಾಜಪೇಯಿ, ಅಡ್ವಾಣಿಯವರನ್ನು ವಿಮರ್ಶೆ ಮಾಡುವುದು ಧಾರ್ಮಿಕ ನಿಂದನೆ ಅಲ್ಲ. ಅದು ರಾಜಕೀಯ ಮಾತುಗಳು’’ ಎಂದು ನ್ಯಾಯಾಲಯ ಹೇಳಿತು. ನಾಸರ್ ಮಅದನಿಯನ್ನು ಕೇರಳದ ಮುಸ್ಲಿಮರು ನಾಯಕರನ್ನಾಗಿ ಸ್ವೀಕರಿಸಲು ಪ್ರಧಾನ ಪಾತ್ರವೇ ಬಲಪಂಥೀಯ ಸಂಘಟನೆಗಳದ್ದು ಎಂದರೆ ನೀವು ನಂಬುತ್ತೀರ?

ಕೇರಳದಲ್ಲಿ ಒಬ್ಬ ಮುಸ್ಲಿಮ್ ರಾಜಕಾರಣಿ ನಾಯಕನಾಗುವುದು ಅಷ್ಟು ಸುಲಭವಲ್ಲ. ಯಾಕೆಂದರೆ, ಮುಸ್ಲಿಮರು ಮುಸ್ಲಿಮ್ ಲೀಗ್, ಕಮ್ಯುನಿಷ್ಟ್, ಕಾಂಗ್ರೆಸ್ ಎಂದು ಸಮಸಮವಾಗಿ ಒಡೆದು ಹೋಗಿದ್ದರು. ಮಅದನಿಯನ್ನು ಅಷ್ಟು ಸುಲಭವಾಗಿ ಸ್ವೀಕರಿಸುವ ವಾತಾವರಣವೂ ಕೇರಳದಲ್ಲಿ ಇರಲಿಲ್ಲ. 1990ರ ದಶಕದಲ್ಲಿ ಅಡ್ವಾಣಿ, ತೊಗಾಡಿಯಾ ಸೇರಿದಂತೆ ಎಲ್ಲ ಕ್ಷುದ್ರ ಶಕ್ತಿಗಳು ಮತಾಂಧತೆಯ ಮೂಲಕ ಇಡೀ ದೇಶವನ್ನು ಕೊಚ್ಚಿ ಹಾಕಿದ ಕಾಲ. ಅವರ ಭಾಷಣಗಳು ಮೆದು ಎದೆಯ ಮೇಲೆ ವಿಷ ಬೀಜಗಳಾಗಿ ಊರಿದವು. ಅದು ದೇಶಾದ್ಯಂತ ಮುಸ್ಲಿಮರ ಮೇಲೆ ತನ್ನ ಪ್ರಭಾವವನ್ನು ಬೀರ ತೊಡಗಿತ್ತು.

ಇಂತಹ ಸಂದರ್ಭದಲ್ಲಿ ಕೇರಳದ ಜನರು ಇದಕ್ಕೊಂದು ಪರ್ಯಾಯದ ನಿರೀಕ್ಷೆಯಲ್ಲಿದ್ದಂತಿತ್ತು. ಮುಸ್ಲಿಮ್ ಲೀಗ್ ಅಪ್ಪಟ ರಾಜಕೀಯ ಪಕ್ಷವಾಗಿದ್ದುದರಿಂದ ಅದಕ್ಕಿಂತ ಭಿನ್ನವಾಗಿ ಇನ್ನೊಂದು ತೊಗಾಡಿಯಾ, ಅಡ್ವಾಣಿಯ ಹುಡುಕಾಟದಲ್ಲಿ ಕೆಲ ಯುವ ತರುಣರು ಇದ್ದರು. ಆಗ ಕೇರಳದಲ್ಲಿ ಎದ್ದು ಬಂದವರು ಮಅದನಿ.ಇವರ ಹೆಸರು ಅಬ್ದುಲ್ ನಾಸರ್. ಮಅದನಿ ಎನ್ನುವುದು ಇವರ ಹೆಸರಲ್ಲ. ಧಾರ್ಮಿಕ ಶಿಕ್ಷಣ ಇವರಿಗೆ ನೀಡಿರುವ ಪದವಿ ಅದು. ಧಾರ್ಮಿಕ ಉಪನ್ಯಾಸಗಳನ್ನು ನೀಡಿ ಖ್ಯಾತರಾಗುತ್ತಾ ಆಗುತ್ತಾ...ನಿಧಾನಕ್ಕೆ ಅಲ್ಲಿಂದ ರಾಜಕೀಯ ಭಾಷಣಗಳೆಡೆಗೆ ಹೊರಳಿದರು.ತೊಗಾಡಿಯ, ಅಡ್ವಾಣಿಯವರ ಭಾಷಣಗಳಿಗೆ ತಮ್ಮ ಭಾಷಣಗಳ ಮೂಲಕ ಉತ್ತರ ಕೊಡಲು ಹೊರಟರು. ಅದು ಎಲ್ಲಿಯವರೆಗೆ ಎಂದರೆ, 1991ರಲ್ಲಿ ಆರೆಸ್ಸೆಸ್ ಎನ್ನುವ ಬಲಪಂಥೀಯ ಉಗ್ರ ಸಂಘಟನೆಗೆ ಪರ್ಯಾಯವಾಗಿ ಐಎಸ್‌ಎಸ್ ಎನ್ನುವ ಸಂಘಟನೆಯನ್ನು ಸ್ಥಾಪಿಸುವ ಮೂಲಕ. ಆರೆಸ್ಸೆಸ್ ಚಡ್ಡಿ ಹಾಕಿ ಕವಾಯತು ನಡೆಸತೊಡಗಿದರೆ, ಕೇರಳದಲ್ಲಿ ಐಎಸ್‌ಎಸ್ ಪ್ಯಾಂಟು ಹಾಕಿ ಕವಾಯತು ನಡೆಸತೊಡಗಿತು. ಅದಾಗಲೇ ಆರೆಸ್ಸೆಸ್ ಕೇರಳದಲ್ಲಿ ಹಿಂಸಾಚಾರದ ನೀಲ ನಕ್ಷೆಯನ್ನು ಸಿದ್ಧ ಪಡಿಸಿತ್ತು.

ಇಂತಹ ಒಂದು ಸಂದರ್ಭದಲ್ಲೇ ನಾಸರ್ ಮಅದನಿಯ ಮೇಲೆ ಬಾಂಬ್ ದಾಳಿ ನಡೆಯಿತು. ಮೇಲ್ನೋಟಕ್ಕೆ ಇದು ಆರೆಸ್ಸೆಸ್ ನಡೆಸಿದ ದಾಳಿ ಎನ್ನುವು ಸಾಬೀತಾಗಿದ್ದರೂ, ಅದಕ್ಕೆ ಯಾವ ಸಾಕ್ಷಿಗಳೂ ಇಲ್ಲದೇ ಇದ್ದುದರಿಂದ ಇಂದಿಗೂ ಈ ದಾಳಿಯ ಕುರಿತಂತೆ ಗೊಂದಲಗಳಿವೆ. ಈ ದಾಳಿಯಲ್ಲಿ ನಾಸರ್ ಮಅದನಿ ತನ್ನ ಕಾಲೊಂದನ್ನು ಶಾಶ್ವತವಾಗಿ ಕಳೆದುಕೊಂಡರು. ಆದರೆ ಆ ಒಂದು ಕಾಲಿಗೆ ಬದಲಾಗಿ ಕೇರಳದಲ್ಲಿ ಲಕ್ಷಾಂತರ ತರುಣರನ್ನು ತಮ್ಮ ಬಗಲಲ್ಲಿ ಹಾಕಿಕೊಂಡರು. ಬಹುಶಃ ನಾಸರ್ ಮಅದನಿಯ ಮೇಲೆ ಈ ಬಾಂಬ್ ದಾಳಿ ನಡೆಯದೇ ಇದ್ದಿದ್ದರೆ ಅವರು ಹತ್ತು ಹಲವು ನಾಯಕರಲ್ಲಿ ಒಬ್ಬರಾಗಿ ಉಳಿದು ಬಿಡುತ್ತಿದ್ದರೋ ಏನೋ.ಪರೋಕ್ಷವಾಗಿ ಆರೆಸ್ಸೆಸ್ ಸಂಘಟನೆ ಈ ಅನುಮಾನಾಸ್ಪದ ದಾಳಿಯನ್ನು ಹಮ್ಮಿಕೊಳ್ಳುವ ಮೂಲಕ ನಾಸರ್ ಮಅದನಿಯನ್ನು ಒಬ್ಬ ನಾಯಕನಾಗಿಸಿ ಬಿಟ್ಟಿತು. ಕೇರಳದಲ್ಲಿ ಐಎಸ್‌ಎಸ್ ಜನಪ್ರಿಯವಾದುದೇ ಇದರ ಬಳಿಕ. ಬಳಿಕ ಅವರ ಒಂಟಿ ಕಾಲೇ ಜನರನ್ನು ಒಟ್ಟು ಸೇರಿಸಲು ಸಹಾಯ ಮಾಡಿತು. ಬಾಬರಿ ಮಸೀದಿ ಧ್ವಂಸವಾದುದೇ ಕೇರಳದ ತರುಣರು ಸಹಸ್ರಾರು ಸಂಖ್ಯೆಯಲ್ಲಿ ಐಎಸ್‌ಎಸ್ ಸೇರತೊಡಗಿದರು.

ಕರಾವಳಿಯಲ್ಲೂ ಈ ಐಎಸ್‌ಎಸ್ ಕಾಲಿಟ್ಟಿತ್ತಾದರೂ, ತರುಣರು ಯೂನಿಫಾರ್ಮ್ ಹಾಕಿ ಕವಾಯತು ನಡೆಸುವುದನ್ನು ಇಲ್ಲಿನ ಸಜ್ಜನ ಮುಸ್ಲಿಮರೇ ಟೀಕಿಸತೊಡಗಿದರು. ಕೆಲವರು ತಮಾಷೆಯನ್ನೂ ಮಾಡತೊಡಗಿದರು. ಇದು ಈ ಭಾಗದಲ್ಲಿ ಒಂದು ಹಾಸ್ಯಾಸ್ಪದವಾಗಿಯಷ್ಟೇ ಸುದ್ದಿಯಾಯಿತು. ಆದರೆ ಕೆಲವು ತರುಣರ ಆಳದಲ್ಲಿ ಮಾತ್ರ ಮಅದನಿ ಹೊರಳಾಡುತ್ತಿದ್ದರು. ಬಾಬರಿ ಮಸೀದಿ ಧ್ವಂಸವಾದುದರ ಬೆನ್ನಿಗೇ ಈ ಐಎಸ್‌ಎಸ್ ನಿಷೇಧಕ್ಕೊಳಗಾಯಿತು. ಮದನಿ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಜೈಲು ಪಾಲಾದರು.

ಜೈಲು ಮಅದನಿಯ ಪಾಲಿಗೆ ಆತ್ಮ ವಿಮರ್ಶೆಗೆ ಸೂಕ್ತವಾದ ಸ್ಥಳವಾಗಿತ್ತು ಅನ್ನಿಸುತ್ತದೆ ನನಗೆ. ಯಾಕೆಂದರೆ ಅಲ್ಲಿ ಹಿಂಬಾಲಕರಿಂದ ಅವರು ಒಂಟಿಯಾಗುತ್ತಿದ್ದರು. ಪ್ರತಿ ಬಾರಿ ಜೈಲು ಸೇರಿ ಹೊರಬಂದಾಗ ಅವರು ಇನ್ನಷ್ಟು ಪಕ್ವವಾಗುತ್ತಿದ್ದರು. 1993ರಲ್ಲಿ ಜೈಲಿನಿಂದ ಹೊರ ಬಂದವರೇ ಮೊದಲಿಗಿಂತ ವಿವೇಕತನದಿಂದ ಕೆಲಸ ಮಾಡಿದರು. ಹಿಂದುಳಿದವರ್ಗವನ್ನು, ದಲಿತರನ್ನು ಸಂಘಟಿಸುವ ಕೆಲಸಕ್ಕಿಳಿದರು. ಅದರ ಫಲವಾಗಿಯೇ ಹುಟ್ಟಿದ್ದು ಪೀಪಲ್ ಡೆಮಾಕ್ರಟಿಕ್ ಪಾರ್ಟಿ.

ಕೇರಳದ ರಾಜಕಾರಣಿಗಳಿಗೆ ಮಅದನಿ ನಿಜವಾದ ಉಗ್ರ ಎಂದು ಅನಿಸತೊಡಗಿದ್ದು ಆಗ. ಮುಸ್ಲಿಮ್ ಲೀಗ್ ಸೇರಿದಂತೆ ಎಲ್ಲ ಪಕ್ಷಗಳು ಮಅದನಿ ವಿರುದ್ಧ ಒಂದಾದದ್ದು ಕೂಡಾ ಆಗಲೇ. ಮಅದನಿ ಪಿಡಿಪಿಯನ್ನು ಸಂಘಟಿಸಿದ ರೀತಿ ಅವರೆಲ್ಲರಿಗೂ ತಲೆನೋವಾಗಿತ್ತು. ಪಿಡಿಪಿಯ ರಾಜ್ಯ ಹಿರಿಯ ಉಪಾಧ್ಯಕ್ಷ ಅಂದಿನ ಸ್ವಾಮಿ ವರ್ಕಲ ರಾಜ್ ಆಗಿದ್ದರು. ಅವರು ಸ್ಥಳೀಯ ದೇವಸ್ಥಾನದ ಧರ್ಮದರ್ಶಿಯಾಗಿದ್ದರು. ಕೇಸರಿ ಉಟ್ಟೇ ಓಡಾಡುತ್ತಿದ್ದರು. ಪಕ್ಷದ ಪ್ರಮುಖ ಹುದ್ದೆಯಲ್ಲಿ ಹಿಂದೂ, ಕ್ರಿಶ್ಚಿಯನ್ನರನ್ನೂ ಸೇರಿಸಿಕೊಂಡಿದ್ದರು.

ಬಹುಶಃ ಮಅದನಿ ದ್ವೇಷದ ಮಾತುಗಳನ್ನು ಬಿತ್ತುತ್ತಾ ತೊಗಾಡಿಯ ಥರ ಓಡಾಡುತ್ತಿದ್ದರೆ ರಾಜಕೀಯ ಪಕ್ಷಗಳು ಅವರನ್ನು ಮುಟ್ಟುತ್ತಿರಲಿಲ್ಲವೋ ಏನೋ. ಮತಾಂಧ, ಉಗ್ರವಾದಿ ಮಅದನಿಯನ್ನು ಅಲ್ಲಿನ ಎಲ್ಲ ಪಕ್ಷಗಳೂ ಸಹಿಸಿಕೊಳ್ಳುತ್ತಿದ್ದವು. ಆದರೆ ಆ ಇಮೇಜಿನಿಂದ ಹೊರಬಂದು, ಅಹಿಂದ ಶಕ್ತಿಯನ್ನು ಒಂದಾಗಿಸಿ, ಒಂದು ಪಕ್ಷವನ್ನು ಕಟ್ಟುವ ಪ್ರಯತ್ನ ಮಾಡುತ್ತಿದ್ದಾಗ, ಎಲ್ಲ ಪಕ್ಷಗಳಿಗೂ ಮಅದನಿ ಒಬ್ಬ ಮತಾಂಧ, ಉಗ್ರವಾದಿ ಎನ್ನುವುದು ನೆನಪಾಯಿತು. ಬಿಜೆಪಿ, ಆರೆಸ್ಸೆಸ್ ಸೇರಿದಂತೆ ಕೇರಳದ ಎಲ್ಲ ಪಕ್ಷಗಳು ಸೇರಿ ಮಅದನಿಯನ್ನು ಜೈಲು ಸೇರಿಸುವ ನಕ್ಷೆಯೊಂದನ್ನು ಹಾಕಿದವು. ಕೊನೆಗೆ ಅದರಲ್ಲಿ ಯಶಸ್ವಿಯೂ ಆದವು.

(ಮುಂದಿನ ಗುರುವಾರಕ್ಕೆ ಮುಂದುವರಿಯುವುದು)

Wednesday, January 23, 2013

ಗಾಜು ಮತ್ತು ಇತರ ಕತೆಗಳು

ಹರಿದ ಹಾಳೆ
ಒಂದು ಸಾವಿರ ಪುಟಗಳ ಕೃತಿ ಅದು.
ಯಾರೋ ಮಧ್ಯದಲ್ಲಿ ಒಂದೇ ಒಂದು ಹಾಳೆಯನ್ನು ಹರಿದಿದ್ದರು.
ಅಷ್ಟೂ ದೊಡ್ಡ ಕೃತಿಯನ್ನು ಓದಿದ ಅವನು ಹರಿದ ಆ ಒಂದು ಹಳೆಯ ಕುರಿತಷ್ಟೇ ಚಿಂತಿಸ ತೊಡಗಿದ.

ಗಾಜು
‘‘ಸಂಬಂಧ ಒಡೆದರೆ, ಗಾಜು ಒಡೆದಂತೆ. ಮತ್ತೆ ಮುಟ್ಟಲು ಹೋದರೆ ಕೈ ಗಾಯವಾಗುತ್ತದೆ...’’
ಅವಳಿಗೆ ಯಾರೋ ಸಲಹೆ ನೀಡಿದರು.
  ‘‘ಕನಿಷ್ಟ ಇನ್ನೊಬ್ಬರ ಕಾಲಿಗೆ ತಾಗದ ಹಾಗೆ ಎತ್ತಿ ಎಸೆಯುವುದಕ್ಕಾದರೂ ಹೆಣ್ಣು ಆ ಗಾಜಿನ ಜೂರುಗಳನ್ನು ಮುಟ್ಟಲೇ ಬೇಕು...’’
ಅವಳು ಉತ್ತರಿಸಿದಳು.

ತಟ್ಟೆ
ಆತನಿಗೆ ಆ ಹೊಟೇಲ್‌ನಲ್ಲಿ ದಲಿತ ವೃದ್ಧನೊಬ್ಬನಿಗೆ ಪ್ರತ್ಯೇಕ ತಟ್ಟೆ.
ಯಾರೋ ಕೇಳಿದರು ‘‘ಪ್ರತಿಭಟಿಸು’’
ದಲಿತ ವೃದ್ಧ ಹೇಳಿದ ‘‘ಇಲ್ಲ...ಆ ನೀಚರು ಉಂಡ ತಟ್ಟೆಯಲ್ಲಿ ನಾನು ಊಟ ಮಾಡಲಾರೆ’’

ಯೋಧ
‘‘ನಿಜವಾದ ಯೋಧ ಹೇಗಿರಬೇಕು?’’
ಶಿಷ್ಯ ಸಂತನಲ್ಲಿ ಕೇಳಿದ.
‘‘ಅವನ ಶತ್ರುವು ಅವನನ್ನು ಇಷ್ಟಪಡಬೇಕು’’ ಸಂತ ಉತ್ತರಿಸಿದ.

ಗಡ್ಡ
‘‘ನೀನೊಬ್ಬ ಮುಸ್ಲಿಮನಲ್ಲವೆ? ಮತ್ತೇಕೆ ಗಡ್ಡವಿಡುವುದಿಲ್ಲ?’’ ಪಂಡಿತ ಅವನನ್ನು ತಡೆದು ಕೇಳಿದ.
ಅವನು ನಕ್ಕು ‘‘ನಮ್ಮ ಮನೆಯ ಮೇಕೆಗೂ ಗಡ್ಡವಿದೆ. ಅದಕ್ಕೆ’’ ಎಂದು ಹೇಳಿ ಮುಂದೆ ಹೋದ.

ಅಭಿವೃದ್ಧಿ
ಅಧಿಕಾರಿ ಬಂದು ಹೇಳಿದ ‘‘ದೇಶದ ಅಭಿವೃದ್ಧಿಗಾಗಿ ನೀನು ನಿನ್ನ ಭೂಮಿಯನ್ನು ಬಿಟ್ಟುಕೊಡಬೇಕು?’’
ರೈತನ ಕುಟುಂಬ ಬೀದಿಗೆ ಬಿತ್ತು. ಜೋಪಡಾ ಪಟ್ಟಿಯಲ್ಲಿ ವಾಸಿಸ ತೊಡಗಿದ. ಒಂದು ದಿನ ಅಧಿಕಾರಿಯ ಬಳಿ ಹೋಗಿ ಕೇಳಿದ ‘‘ಅದ್ಯಾವುದೋ ದೇಶದ ಅಭಿವೃದ್ಧಿಗಾಗಿ ನನ್ನ ಭೂಮಿ ಕಿತ್ತುಕೊಂಡಿರಿ. ಹೇಳಿ...ಆ ದೇಶ ಅಭಿವೃದ್ಧಿಯಾಯಿತೆ?’’

Sunday, January 20, 2013

ನಂಬರ್ ಮತ್ತು ಇತರ ಕತೆಗಳು...

ವ್ಯಕ್ತಿ
ಪತ್ರಿಕೆಯಲ್ಲಿ ಬಂದ ಒಂದು ಸುದ್ದಿ.
ಇಲ್ಲಿ ನಡೆದ ಭೀಕರ ಕೋಮುಗಲಭೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟ ಹೆಸರು ತಿಳಿಯದ "ವ್ಯಕ್ತಿಯೊಬ್ಬ" ಇಂದು ಮೃತ ಪಟ್ಟಿದ್ದಾನೆ.

ಯುದ್ಧ
"ಯುದ್ಧವಾಗಲಿ, ಗಡಿಯಲ್ಲಿ ಯುದ್ಧವಾಗಲಿ''
ಅವನು ಬೀದಿಯಲ್ಲಿ ಚೀರುತ್ತಿದ್ದ.
ಅವನ ಮಗ ಅಮೇರಿಕಾದಲ್ಲಿ ಐಟಿ ಕಂಪೆನಿ ನಡೆಸುತ್ತಿದ್ದ.
"ಯುದ್ಧ ಬೇಡ, ಯುದ್ಧ ಬೇಡ, ಶಾಂತಿ, ಶಾಂತಿ..." ಆ ಹಿರಿಯ ಪ್ರತಿ ದಿನ ಪ್ರಾರ್ಥಿಸುತ್ತಿದ್ದ.
ಅವನ ಮಗ ಗಡಿಯಲ್ಲಿ ನಿಂತು ದೇಶ ಕಾಯುತ್ತಿದ್ದ.

ನಂಬರ್
ಅವನ ಅನ್ನದ ಬಟ್ಟಲಲ್ಲಿ ಕಲ್ಲು ಸಿಕ್ಕಿತು.
ದಂಪತಿ ನಡುವೆ ಹೊಡೆದಾಟ ಶುರುವಾಯಿತು.
ಯಾರೋ ಮಹಿಳಾ ಸಹಾಯವಾಣಿಗೆ ಫೋನ್ ಮಾಡಿದರು.
ಮಹಿಳ ಸಹಾಯವಾಣಿಯವರು, ಟಿವಿ ಚಾನೆಲ್ಗಳ ನಂಬರ್ ಕೊಟ್ಟರು.

ಧರ್ಮ
"ಶಾಂತಿಯನ್ನು ಬೋಧಿಸುವ ನಿಜವಾದ ಧರ್ಮ ಯಾವುದು?''
ಗುಂಪಿನಲ್ಲಿ ಯಾರೋ ಕೇಳಿದರು.
"ನಮ್ಮದು"
"ನಮ್ಮದು"
"ನಮ್ಮದು"
ಅರ್ಧ ಗಂಟೆಯಲ್ಲಿ ಅಲ್ಲಿ ನಾಲ್ಕು ಹೆಣ ಬಿದ್ದವು.
20 ಜನ ಗಾಯಗೊಂಡು ಆಸ್ಪತ್ರೆ ಸೇರಿದರು.

ನದಿ
ತನ್ನೂರಿನ ನದಿಯನ್ನು ಕಸ, ಕಡ್ಡಿ, ತ್ಯಾಜ್ಯ ಹಾಕಿ ಕೆಡಿಸಿದವನು ಲಕ್ಷಾಂತರ ವೆಚ್ಚ ಮಾಡಿ ವಿದೇಶದಲ್ಲಿ ದೋಣಿಯಾನ ಮಾಡಿ, ಫೋಟೋ ಹೊಡೆಸಿಕೊಂಡ.

ಊರು
ಅಪರಿಚಿತ ಕೇಳಿದ "ಈ ಊರಿನಲ್ಲಿ ಸಾಹಿತಿಗಳು, ಚಿಂತಕರು, ಕವಿಗಳು ಇಲ್ಲವೇ?"
ಗ್ರಾಮಸ್ಥ ಉತ್ತರಿಸಿದ "ಓಹೋ ಬೇಕಾದಷ್ಟು ಇದ್ದಾರೆ..."
"ನನಗವರನ್ನು ಭೇಟಿ ಮಾಡಬೇಕಾಗಿದೆ"
"ಇದೆ ದಾರಿಯಲ್ಲಿ ಒಂದು ಕಿಲೋಮೀಟರ್ ಹೋದರೆ ಈ ಊರಿನ ಜೈಲು ಸಿಗತ್ತೆ. ಎಲ್ಲ ಅಲ್ಲಿದ್ದರೆ..."

ನಿವೃತ್ತಿ
ಗದ್ದೆಯಲ್ಲಿ ನೂರಾರು ಕ್ವಿಂಟಾಲ್ ಬತ್ತ ಬೆಳೆದ ರೈತ ನಿವೃತ್ತನಾದ.
ಸುದ್ದಿಯಾಗಲಿಲ್ಲ.
ಕ್ರೀಸ್ನಲ್ಲಿ ಸಾವಿರಾರು ರನ್ ತೆಗೆದ ಸಚಿನ್ ನಿವೃತ್ತನಾದ.
ದೇಶ ಗೋಳಾಡ ತೊಡಗಿತು.

Wednesday, January 9, 2013

ದೇಶದ್ರೋಹಿಯಾಗಿದ್ದರೆ ನನ್ನ ಮಗನ ಹೆಣವನ್ನು ನಾನು ನೋಡಲಾರೆ!!!

ಆಕೆಯ ಹೆಸರು ಸಫಿಯತ್. 2008ರ ಸಂದರ್ಭದಲ್ಲಿ ಈ ಅನಕ್ಷರಸ್ಥ ತಾಯಿಯ ಹೆಸರು ಕೇರಳದ ಮಾಧ್ಯಮಗಳಲ್ಲಿ ಕೇಂದ್ರ ಬಿಂದುವಾಯಿತು. ಕೇರಳ ಮಾತ್ರವಲ್ಲ, ದೇಶದ ಇಡೀ ಮುಸ್ಲಿಮರ ಪಾಲಿನ ‘ದೇಶಪ್ರೇಮ’ದ ಸಂಕೇತವಾದರು. ಒಂದೇ ಒಂದು ಕಾರಣಕ್ಕಾಗಿ. ಆಕೆ ತನ್ನ ಮಗನ ಹೆಣವನ್ನು ನೋಡಲು ನಿರಾಕರಿಸಿದರು.

2008ರಲ್ಲಿ ನಡೆದ ಘಟನೆ ಅದು. ಕೇರಳದ ನಾಲ್ವರು ತರುಣರು ಜಮ್ಮು ಕಾಶ್ಮೀರದಲ್ಲಿ ಬರ್ಬರವಾಗಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದರು. ಅವರು ಲಷ್ಕರೆ ತಯ್ಯಿಬಾ ಉಗ್ರರಾಗಿದ್ದು, ಪೊಲೀಸರ ವಿರುದ್ಧ ದಾಳಿ ನಡೆಸುವ ಸಂದರ್ಭದಲ್ಲಿ ಹತ್ಯೆಗೀಡಾದರು ಎಂದು ಪೊಲೀಸ್ ಇಲಾಖೆ ಹೇಳಿತು. ಅಷ್ಟೇ ಅಲ್ಲ, ಉಗ್ರವಾದಕ್ಕೆ ಸಂಬಂಧಿಸಿ, ಕಾಶ್ಮೀರ ಮತ್ತು ಕೇರಳದ ನಡುವೆ ದಾರಿ ತೆರೆದದ್ದು ಅದೇ ಮೊದಲ ಬಾರಿ. ಇದನ್ನೇ ನೆಪವಾಗಿಟ್ಟುಕೊಂಡು ಪೊಲೀಸರು ಕೇರಳದ ಹಲವರನ್ನು ಬಂಧಿಸಿದರು. ಈ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಫಯಾಝ್ ಎಂಬ 22 ವರ್ಷದ ತರುಣನ ತಾಯಿಯೇ ಸಫೀಯತ್. ಕಾಶ್ಮೀರದಲ್ಲಿ ನಾಲ್ವರು ತರುಣರು ಹತ್ಯೆಯಾದ ವಿವರಗಳು ಮಾಧ್ಯಮಗಳಲ್ಲಿ ‘ರೋಮಾಂಚಕಾರಿ’ ಯಾಗಿ ವರದಿಯಾಗುತ್ತಿರುವ ಸಂದರ್ಭದಲ್ಲಿ ಇನ್ನೊಂದು ರೋಮ್ಯಾಂಟಿಕ್ ಹೇಳಿಕೆ ಈ ತಾಯಿಯ ಬಾಯಿಯಿಂದ ಹೊರ ಬಿತ್ತು. ‘‘ದೇಶದ್ರೋಹಿಯಾಗಿದ್ದರೆ ನನ್ನ ಮಗನ ಹೆಣವನ್ನು ನಾನು ನೋಡುವುದಿಲ್ಲ’’ ಕೊನೆಗೂ ಸಫಿಯತ್ ತನ್ನ ಮಗನ ಹೆಣವನ್ನು ನೋಡಲಿಲ್ಲ. ಫಯಾಝ್‌ನ ಮೃತದೇಹ ವನ್ನು ಪೊಲೀಸರು ಜಮ್ಮುಕಾಶ್ಮೀರದಲ್ಲೆಲ್ಲೋ ದಫನ ಮಾಡಿದರು.

ಆವರೆಗೆ ಫಯಾಝ್‌ನ ಹೆಣವನ್ನು ಕುಕ್ಕಿ ತಿಂದ ಮಾಧ್ಯಮಗಳು, ಇದೀಗ ಸಫಿಯತ್‌ರ ಹೇಳಿಕೆಯ ಸುತ್ತ ರೋಮಾಂಚಕ ವರದಿಗಳನ್ನು ತಯಾರಿಸ ತೊಡಗಿದವು. ಈ ದೇಶದ ಎಲ್ಲಾ ಮುಸ್ಲಿಮರನ್ನು ಪ್ರತಿನಿಧಿಸುವ ದೇಶಪ್ರೇಮಿ ತಾಯಿಯಾಗಿ ಆಕೆಯನ್ನು ಬಿಂಬಿಸಿ, ಮಾಧ್ಯಮಗಳಲ್ಲಿ ಸಾಲು ಸಾಲಾಗಿ ವರದಿ ಬಂದವು. ದೇಶವೆಂದರೇನು, ರಾಜ್ಯವೆಂದರೇನು, ದೇಶಪ್ರೇಮವೆಂದರೇನು, ಉಗ್ರವಾದ ಎಂದರೇನು ಇತ್ಯಾದಿಗಳ ಬಗ್ಗೆ ಒಂದಿನಿತು ಅರಿವಿಲ್ಲದ ಸಫಿಯತ್ ಏಕಾಏಕಿ ದೇಶಪ್ರೇಮದ ಮಾತುಗಳನ್ನಾಡಿ ಮುಸ್ಲಿಮ್ ಮಹಿಳೆಯರ ನಡುವೆ ತಾರೆಯಾಗಿ ಬೆಳಗತೊಡಗಿದರು. ಮುಸ್ಲಿಮರು, ಮುಸ್ಲಿಮ್ ಸಂಘಟನೆಗಳು ಸಫಿಯತ್‌ರ ನಿರ್ಧಾರವನ್ನು ಬಾಯಿ ತುಂಬ ಹೊಗಳ ತೊಡಗಿದವು. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್‌ನ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಕೂಡ, ಸಫಿಯತ್‌ರ ದೇಶಪ್ರೇಮವನ್ನು ಅಭಿನಂದಿಸಿದರು. ಕೆಲವೇ ದಿನಗಳಲ್ಲಿ ಎಲ್ಲರೂ ಇದನ್ನು ಮರೆತರು. ಮಾಧ್ಯಮ ಗಳು ಬೇರೆ ಎನ್‌ಕೌಂಟರ್‌ಗಳ ವಾಸನೆ ಹಿಡಿದು ಹೊರಟವು. ಸಫಿಯತ್ ಮತ್ತೆ ಈ ದೇಶದ ಕೋಟಿ ಕೋಟಿ ಅನಕ್ಷರಸ್ಥ ತಾಯಂದಿರಲ್ಲಿ ಒಬ್ಬರಾಗಿ ಕಳೆದುಹೋದರು.

 ಎರಡು ವರ್ಷಗಳ ಬಳಿಕ, ಇದೇ ತಾಯಿಯನ್ನು ಮಾಧ್ಯಮವೊಂದು ಸಂದರ್ಶಿಸಿತು. ಆಗ ಆಕೆ ಹೇಳಿದ ಮಾತೋ.. ಒಬ್ಬ ಅಪ್ಪಟ ತಾಯಿಯ ಹೃದಯದ ಮಾತಾಗಿತ್ತು. ‘‘ಯಾವ ತಾಯಿ ಯಾದರೂ ತನ್ನ ಮಗನ ಹೆಣವನ್ನು ನೋಡುವುದಿಲ್ಲ ಎಂದು ಹೇಳುವುದಕ್ಕೆ ಸಾಧ್ಯವಿದೆಯೆ’’ ಎಂಬ ಪ್ರಶ್ನೆಯನ್ನು ಅವರು ಹಾಕಿದರು. ಅಂದಿನ ಸನ್ನಿವೇಶ ನನ್ನಿಂದ ಆ ಮಾತನ್ನು ಹೇಳಿಸಿತೇ ಹೊರತು, ಅದು ನನ್ನ ಮಾತಲ್ಲ ಎಂದು ಬಿಟ್ಟರು. ಒಂದೆಡೆ ಪೊಲೀಸರ ಕೆಂಗಣ್ಣು, ಪದೇ ಪದೇ ಪೊಲೀಸರ ಆಗಮನ, ನೆರೆಮನೆ, ಸಮಾಜದ ಕೆಟ್ಟ ನೋಟ, ಪೇಪರ್‌ಗಳಲ್ಲಿ, ಟಿ.ವಿ.ಗಳಲ್ಲಿ ಚಿತ್ರವಿಚಿತ್ರ ವರದಿಗಳು...ಇವೆಲ್ಲವನ್ನು ನೋಡುತ್ತಾ ನನಗೆ ಅಂತಹ ಹೇಳಿಕೆಯನ್ನು ನೀಡದೇ ವಿಧಿಯೇ ಇರಲಿಲ್ಲ ಎಂದು ಅಳತೊಡಗಿದ್ದರು ಸಫಿಯತ್. ತನ್ನ ಮಗನ ಮುಖವನ್ನು ನೋಡುವುದಕ್ಕೆ ಅವರು ಆ ಕ್ಷಣದಲ್ಲೂ ಹಪಹಪಿಸುತ್ತಿದ್ದರು.

 ರಾಜದ್ರೋಹ, ದೇಶಪ್ರೇಮ ಎಂಬಿತ್ಯಾದಿ ಶಬ್ದಗಳು ರಾಜಕೀಯವಾದುದು. ಆದರೆ ತಾಯ್ತನವೆನ್ನುವುದು ರಾಜಕೀಯೇತರವಾದುದು. ಅದು ಅಪ್ಪಟ ಹೃದಯಮುಖಿಯಾದುದು. ಇಂದಿನ ಕ್ಷುದ್ರ ರಾಜಕಾರಣ, ಒಬ್ಬ ತಾಯಿಯ ಬಾಯಿಯಲ್ಲೂ ರಾಜಕಾರಣದ ಮಾತುಗಳನ್ನು ಬಲವಂತವಾಗಿ ಹೇಗೆ ಕಕ್ಕಿಸುತ್ತದೆ ಎನ್ನುವುದಕ್ಕೆ ಸಫಿಯತ್ ಹೃದಯವಿದ್ರಾವಕ ಉದಾಹರಣೆ ಯಾಗಿದ್ದಾರೆ. ಒಬ್ಬ ಮಗ ಕಳ್ಳನಾಗಿರಬಹುದು. ಅಥವಾ ಉಗ್ರವಾದಿಯೇ ಆಗಿರಬಹುದು. ಒಬ್ಬ ತಾಯಿಗೆ ಆತ ಮಗನೇ ಹೌದು. ಅವನೆಂತಹ ದುಷ್ಟನಾಗಿದ್ದರೂ ಅವನನ್ನು ನೋಡುವ ಕಟ್ಟ ಕಡೆಯ ಅವಕಾಶವನ್ನು ತಪ್ಪಿಸುವುದು ಅಥವಾ ಅಂತಹ ಗಳಿಗೆಯನ್ನು ರಾಜಕೀಕರಣಗೊಳಿಸಿ ರೋಮಾಂಚಕವಾಗಿ ವರದಿ ಮಾಡು ವುದು ಅತ್ಯಂತ ಕ್ರೌರ್ಯವಾದುದು. ಆ ಕ್ರೌರ್ಯಕ್ಕೆ ಇಂದು ಸಫಿಯತ್ ಮಾತ್ರವಲ್ಲ, ಅಂತಹ ನೂರಾರು ತಾಯಂದಿರು ಬಲಿಯಾಗುತ್ತಿದ್ದಾರೆ. ಮಾಧ್ಯಮಗಳು ಅತ್ಯಂತ ನಿಷ್ಕರುಣಿ ಹೃದಯ ದಿಂದ ಇವುಗಳಿಗೆ ‘ದೇಶಪ್ರೇಮ’ದ ಹೆಸರು ಕೊಟ್ಟು ಬಣ್ಣಿಸುತ್ತವೆ. ಆಕೆಯ ಸಂದರ್ಶನ ಮಾಡುತ್ತವೆ. ಕೊನೆಗೂ ಅದು ಆಕೆ ಆಡುವ ಮಾತುಗಳೆಲ್ಲ ಆಕೆಯ ಮಾತಲ್ಲ, ಮಾಧ್ಯಮ ಗಳೇ ಅವರ ಬಾಯಿಯಿಂದ ಹೊರಡಿಸಿದ ಮಾತು ಎನ್ನುವುದು ಮುಚ್ಚಿ ಹೋಗುತ್ತದೆ. ಯಾವತಾ ್ತದರೂ ಒಂದು ದಿನ ಆಕೆಯ ಖಾಸಗಿ ಕ್ಷಣದಲ್ಲಿ ಅವಳ ಹೃದಯವನ್ನು ಮುಟ್ಟಿದಾಗ, ಆಕೆಯ ಒಳಗಿನ ನಿಜವಾದ ಮಾತುಗಳು ಹೊರಬರ ಬಹುದು.

ಮಕ್ಕಳು ಎಷ್ಟೇ ಕ್ರೂರವಾದ ತಪ್ಪುಗಳನ್ನು ಮಾಡಿರಲಿ. ಅದಕ್ಕಾಗಿ ಅವರ ತಾಯಂದಿರಿಗೆ ಶಿಕ್ಷೆ ವಿಧಿಸುವ ಯಾವ ಹಕ್ಕೂ ನಮ್ಮ ಸಮಾಜಕ್ಕಾಗಲಿ, ಕಾನೂನಿಗಾಗಲಿ ಇಲ್ಲ. ಉಗ್ರವಾದ, ದೇಶದ್ರೋಹವೆಂಬಿತ್ಯಾದಿ ರಾಜಕಾರಣಕ್ಕೆ ಯಾವ ತಾಯಂದಿರೂ ಬಲಿಪಶುವಾಗಬಾರದು. ಮೃತ ನಾದ ಬಳಿಕ, ಹೆಸರನ್ನು ಕಳೆದುಕೊಂಡು ಬರೇ ಹೆಣವಾಗಿ ಬಿದ್ದುಕೊಂಡಿರುವ ಆ ದೇಹಕ್ಕೆ ಒಂದು ಘನತೆಯಿದೆ. ಮನುಷ್ಯರಾಗಿ, ನಾಗರಿ ಕರಾಗಿ ಆ ಘನತೆಯನ್ನು ಅದಕ್ಕೆ ನೀಡಲೇಬೇಕು. ಮಗನ ಹೆಣವನ್ನು ಕಟ್ಟ ಕಡೆಗೊಮ್ಮೆ ನೋಡುವ ಅವಕಾಶ ತಾಯಿಗೆ ಸಿಗಲೇಬೇಕು. ಸರಕಾರ, ಸಮಾಜ ಅದಕ್ಕೆ ದೊಡ್ಡ ಮನಸ್ಸಿನಿಂದ ಅನುವು ಮಾಡಿಕೊಡಬೇಕು.

  ‘‘ಯಾವ ತಾಯಿಯಾದರೂ ತನ್ನ ಮಗನ ಹೆಣವನ್ನು ನೋಡದಿರುತ್ತಾಳೆಯೇ’’ ಎಂಬ ಸಫಿಯತ್‌ರ ಮಾತುಗಳು ಕೆಲವು ಯುವಕರನ್ನು ತಟ್ಟಿದವು. ದೇಶಪ್ರೇಮ, ರಾಜದ್ರೋಹವೆನ್ನುವ ರಾಜಕೀಯಕ್ಕೆ ಬಲಿಪಶುವಾದ ಸಫಿಯತ್‌ನ ವಿಷಾದ ಅವರೊಳಗೆ ಹಾಡಿನ ರೂಪ ತಳೆದವು. ಕಾಫಿ ಶಾಪ್‌ನಲ್ಲಿ ಕಾಫಿ ಕುಡಿಯುತ್ತಾ ಅವರು ಈ ಕುರಿತಂತೆ ಮಾತುಕತೆ ನಡೆಸಿದರು. ಸಫಿಯತ್‌ನ ಗಂಡ ಅಂದರೆ ಹತ್ಯೆಗೀಡಾದ ಫಯಾಝ್‌ನ ತಂದೆ ಯನ್ನು ಭೇಟಿ ಯಾದರು. ಅವರ ಒಳಗಿನ ಮಾತನ್ನು ಕೇಳುತ್ತಾ ಕೇಳುತ್ತಾ ಅವರೊಳಗೆ ಒಂದು ಕಲ್ಪನೆ ಮೊಳಕೆ ಹೊಡೆಯಿತು. ರಾಜದ್ರೋಹಿ ಆರೋಪದಲ್ಲಿ ಹತ್ಯೆ ಗೀಡಾದ ಮಗನ ತಂದೆಯ ಹತಾಶ ಮಾತುಗಳೇ ರಾಕ್ ಹಾಡಿನ ರೂಪ ಪಡೆಯಿತು.. ಒಂದು ವಿಭಿನ್ನ ಮಾಪಿಳ್ಳೆ ಹಿಪ್ ಹಾಪ್ ಆ ತರುಣರಲ್ಲಿ ಹುಟ್ಟಲು ಕಾರಣವಾಯಿತು. ಅದಕ್ಕೆ ಅವರು ‘ನೇಟಿವ್ ಬಾಪಾ’ ಎಂದು ಹೆಸರಿಟ್ಟರು. ಬಾಪಾ ಎಂದರೆ ತಂದೆ. ಉಗ್ರಗಾಮಿಯೆಂದು ಕೊಲ್ಲಲ್ಪಟ್ಟ ಮಗನ ತಂದೆಯೀತ. ಅನಕ್ಷರಸ್ಥ ಮಾಪಿಳ್ಳೆ. ಆದರೆ ಊರನವರೆಲ್ಲರಿಗೂ ಬೇಕಾದಾತ. ಅವನು ತನ್ನ ಸಂಕಟಗಳನ್ನು, ಮಗನ ಕುರಿತ ನೆನಪುಗಳನ್ನು ಹೆಕ್ಕಿ, ಕೇಳುಗನ ಮುಂದಿಡುತ್ತಾ ಹೋಗುತ್ತಾರೆ. ಅದಕ್ಕೆ ಪೂರಕವಾಗಿ, ನಾಲ್ವರು ತರುಣರು ರಾಕ್ ಮೂಲಕ ‘ಉಗ್ರವಾದ’ದ ಹಿಂದಿರುವ ಒಳಹೊರಗಿನ ರಾಜಕೀಯಗಳನ್ನು ತೆರೆದಿಡುತ್ತಾ ಹೋಗುತ್ತಾರೆ. ‘ನೇಟಿವ್ ಬಾಪಾ’ ಆಲ್ಬಮ್ ಇದೀಗ ಕೇರಳ ಮಾತ್ರವಲ್ಲ, ಭಾಷೆಯ ಗಡಿದಾಟಿ ಹೃದಯಗಳನ್ನು ತಲುಪುತ್ತಿದೆ. ನೇಟಿವ್ ಬಾಪಾನ ಪಾತ್ರದಲ್ಲಿ ಮಾಮು ಕೋಯ, ತಂದೆಯ ಮಾತುಗಳನ್ನು ಹೃದಯಂ ಗಮವಾಗಿ ನಿರೂಪಿಸುತ್ತಾ ಹೋಗುತ್ತಾರೆ. ಮಗನ ಕುರಿತ ಅಪ್ಯಾಯಮಾನ ಮಾತುಗಳು, ಹಾಗೆಯೇ ಮಾಧ್ಯಮಗಳ ವರದಿಗಳ ಕುರಿತ ಆತನ ವ್ಯಂಗ್ಯಗಳು ಹೃದಯವಿರುವ ಸಮಾಜವನ್ನು ಇರಿಯಲೇ ಬೇಕು. ಬಾಲ್ಯದಲ್ಲಿ ಸಣ್ಣ ಪಟಾಕಿಗೂ ಹೆದರುತ್ತಿದ್ದ ನನ್ನ ಮಗುವಿನ ಕೈಯಲ್ಲಿ ಇದೀಗ ಅದೇನೋ ಬೋಂಬು ಸಿಕ್ಕಿದೆ ಎನ್ನುವ ಪತ್ರಿಕಾ ವರದಿಯನ್ನು ಅತ್ಯಚ್ಚರಿಯಿಂದ ಹೇಳುವ ನೇಟಿವ್ ಬಾಪಾ, ಚಳಿಗೆ ಹೊದ್ದುಕೊಳ್ಳಲೆಂದು ನನ್ನ ಶಾಲನ್ನು ಕೊಟ್ಟಿದ್ದೆ.. ಇದೀಗ ಪತ್ರಿಕೆಯಲ್ಲಿ ನೋಡಿದರೆ, ಆ ಶಾಲಿನಲ್ಲಿ ಅದೇನೋ ಅರಬೀ ಅಕ್ಷರ ಗಳಿವೆಯಂತೆ. ಅಷ್ಟೇ ಅಲ್ಲ. ಆ ಶಾಲಿನಲ್ಲಿ ಅವನು ಬಾಂಬನ್ನು ಸುತ್ತಿಕೊಂಡಿದ್ದನಂತೆ...’’ ಎಂದು ಗದ್ಗದನಾಗಿ ತೋಡಿಕೊಳ್ಳುತ್ತಾನೆ ನೇಟಿವ್ ಬಾಪಾ. ‘ನೇಟಿವ್ ಬಾಪಾ’ ಹಾಡಿನ ಸಂಗೀತದಲ್ಲಿ ಒಂದು ರೀತಿಯ ತೀವ್ರತೆಯಿದೆ. ಅದು ನೇರವಾಗಿ ನಮ್ಮ ಹೃದಯಕ್ಕೇ ನುಗ್ಗುತ್ತದೆ. ನೂರಾರು ಫಯಾಝ್‌ಗಳ ತಾಯಿ ಮತ್ತು ತಂದೆಯರ ನೋವನ್ನು ಈ ಆಲ್ಬಂ ದೇಶದ ಮುಂದಿಟ್ಟಿದೆ.

Monday, January 7, 2013

ಕೇರಳದಲ್ಲಿ ಸುದ್ದಿ ಮಾಡುತ್ತಿರುವ ‘ನೇಟಿವ್ ಬಾಪಾ’ನ ತಲ್ಲಣಗಳು

ಒಂದು ರಾಕ್ ಶೈಲಿಯ ಹಾಡು ಮಲಯಾಳಂನ ಗಡಿಗಳನ್ನು ದಾಟಿ ದೇಶಾದ್ಯಂತ ವಿಸ್ತರಿಸಿಕೊಳ್ಳುತ್ತಿದೆ. ಅದರ ಹೆಸರು ‘ನೇಟಿವ್ ಬಾಪ’. ಕೇರಳದಲ್ಲಿ ಬೇರು ಬೀಡುತ್ತಿರುವ ಭಯೋತ್ಪಾದನೆ ಮತ್ತು ಸುಳ್ಳು ಭಯೋತ್ಪಾದನೆಯ ಹೆಸರಿನಲ್ಲಿ ತಲ್ಲಣಿಸಿರುವ ಕುಟುಂಬಗಳ ತಳಮಳವನ್ನು ಹಿಡಿದಿಡುವ ಕೆಲಸವನ್ನು ಮಾಡಿದೆ ಈ ಒಂದು ಹಾಡು. ಒಬ್ಬ ಮುಸ್ಲಿಮ್ ತಂದೆಯ ಒಳಕುದಿಯೇ ‘ನೇಟಿವ್ ಬಾಪ’ ರಾಕ್ ಹಾಡಿನ ವಸ್ತು. ಮಮ್ಮು ಕೋಯ ನೇಟಿವ್ ಬಾಪ(ಬಾಪ ಅಂದ್ರೆ ತಂದೆ) ಪಾತ್ರದಲ್ಲಿ ತನ್ನ ಮಗನ ಕತೆಯನ್ನು ನಿರೂಪಿಸುತ್ತಾ ಹೋಗುತ್ತಾರೆ. ಅದಕ್ಕೆ ಪೂರಕವಾಗಿ, ಹೊಸತಲೆಮಾರಿನ ತರುಣರ ಸಂಗೀತ ಲಯಗಳು ಕೆಲಸ ಮಾಡಿವೆ.
‘ನೇಟಿವ್ ಬಾಪಾ’ ಎಂಬ ರಾಕ್ ಶೈಲಿಯ ವೀಡಿಯೊ ಹಾಡು ಕೇವಲ ಆರು ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ವೀಕ್ಷಕರ ಮನಸೆಳೆದಿದೆ.
ಜಾಗತಿಕವಾಗಿ ಯಾವುದೇ ವಿಷಯಕ್ಕಾದರೂ ಮುಸ್ಲಿಮರ ಹೆಸರನ್ನು ಉಗ್ರರ ಜತೆಗೆ ಥಳುಕು ಹಾಕುವುದನ್ನು ಪ್ರಶ್ನಿಸಿರುವ ಈ ವೀಡಿಯೊ ಹಾಡಿನಲ್ಲಿ ಸಾರ್ವಜನಿಕ ಪ್ರಜ್ಞೆಯನ್ನು ಅದೇ ರೀತಿಯಲ್ಲಿ ಒಯ್ಯುತ್ತಿರುವ ಮಾಧ್ಯಮ ಸಂಸ್ಕೃತಿಯನ್ನೂ ಟೀಕಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 2008 ಅಕ್ಟೋಬರ್‌ನಲ್ಲಿ ಕೇರಳದ ನಾಲ್ವರು ಮುಸ್ಲಿಂ ಯುವಕರನ್ನು ಉಗ್ರರು ಎಂದು ಆರೋಪಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದವು. ಇದಾದ ನಂತರ ಹತ್ಯೆಯಾದ ಒಬ್ಬ ಯುವಕನ ತಾಯಿ ‘‘ಆತ ಉಗ್ರನಾಗಿರುವುದರಿಂದ ಆತನ ಶವ ನೋಡಲು ತಾನು ಇಚ್ಛಿಸುವುದಿಲ್ಲ’’ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಮಾಧ್ಯಮಗಳು ರೋಚಕವಾಗಿ ಬರೆದವು. ಹಾಗೆಯೇ ರಾಜ್ಯದ ರಾಜಕೀಯ ಪಕ್ಷಗಳು ಇದನ್ನು ತಮಗೆ ಬೇಕಾದಂತೆ ಬಳಸಿಕೊಂಡವು. ಹೀಗಾಗಿ ಆ ತಾಯಿ ಕೇರಳದ ಮುಸ್ಲಿಂ ಮಹಿಳೆಯರ ಸಾಲಿನಲ್ಲಿ ತಾರೆಯಾಗಿಬಿಟ್ಟರು.
ಇದಾದ ಕೆಲ ವರ್ಷಗಳ ನಂತರ ಅದೇ ತಾಯಿ ಕೆಲ ಮಾಧ್ಯಮಗಳ ಮುಂದೆ ತಮ್ಮ ಆಂತರಂಗವನ್ನು ಬಿಚ್ಚಿಟ್ಟರು.
ಆ ಪರಿಸ್ಥಿತಿಯಲ್ಲಿ ತಾನು ಅಂತಹ ಹೇಳಿಕೆ ನೀಡುವುದು ಅನಿವಾರ್ಯವಾಗಿತ್ತು. ಒಂದು ಕಡೆ ಪೊಲೀಸರು ಮಧ್ಯರಾತ್ರಿಯಲಿ ಮನೆಗೆ ಬಂದು ದಾಳಿ ನಡೆಸುತ್ತಿದ್ದರು. ಮತ್ತೊಂದು ಕಡೆ ನೆರೆಹೊರೆಯವರು ಮತ್ತು ಸಂಬಂಧಿಕರು ನನ್ನನ್ನು ಸಂಶಯದ ಕಣ್ಣುಗಳಿಂದ ನೋಡುತ್ತಿದ್ದರು. ಯಾವ ತಾಯಿಯೂ ಸತ್ತ ಮಗನ ಮುಖ ನೋಡುವುದಿಲ್ಲ ಎಂದು ಹೇಳುವುದಿಲ್ಲ. ಆದರೆ ಅಂದಿನ ಪರಿಸ್ಥಿತಿ ನನ್ನನ್ನು ಹಾಗೆ ಹೇಳಿಕೆ ನೀಡುವಂತೆ ಮಾಡಿತ್ತು ಎಂದಿದ್ದರು.
ಕೆಲವೇ ಸ್ನೇಹಿತರು ಸಂಜೆ ಕಾಫಿ ಕುಡಿಯುತ್ತ ಚರ್ಚೆ ನಡೆಸುತ್ತಿದ್ದ ವೇಳೆ ಹುಟ್ಟಿಕೊಂಡಿದ್ದೇ ಮಾಪಿಳ್ಳ ಲಹಲ ವಾದ್ಯಗೋಷ್ಠಿ. 2008ರಲ್ಲಿ ನಡೆದ ಈ ಘಟನೆಯನ್ನು ಮುಂದಿಟ್ಟುಕೊಂಡು ಮ್ಯೂಸಿಕಲ್ ವೀಡಿಯೊ ಆಲ್ಬಂ ಮಾಡಲು ಕನಸು ಕಂಡರು. ಅದಕ್ಕೆ ನೇಟಿವ್ ಬಾಪಾ ಎಂಬ ಹೆಸರನ್ನಿಟ್ಟರು.
ಈ ತಂಡದಲ್ಲಿ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ವೃತ್ತಿಪರರಿದ್ದಾರೆ. ಮಲಬಾರ್‌ನ ಸಂಸ್ಕೃತಿಯನ್ನು ಹಿನ್ನೆಲೆಯನ್ನಾಗಿಸಿಕೊಂಡು ತಂಡ ತನ್ನ ಆಲ್ಬಂನ್ನು ಹೊರ ತಂದಿದೆ. ಸ್ಥಳೀಯ ಕಲ್ಲಿಕೋಟೆ ಮತ್ತು ಮಲಬಾರಿ ಮಾಪಿಳ್ಳೆಗಳ ಶೈಲಿಯಲ್ಲಿ ಇಂಗ್ಲಿಷ್ ಮತ್ತು ಮಲಯಾಳಿ ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಲಾಗಿದೆ.
2008ರಲ್ಲಿ ಭದ್ರತಾ ಸಿಬ್ಬಂದಿಯ ಗುಂಡಿಗೆ ಬಲಿಯಾದ ಕೇರಳದ ಕಣ್ಣೂರಿನ ಯುವಕನ ತಂದೆಯ ಪಾತ್ರದಲ್ಲಿ ಮಲಯಾಳಂನ ಖ್ಯಾತ ನಟ ಮತ್ತು ಕಲ್ಲಿಕೋಟೆಯ ಭಾಷಾ ಶೈಲಿಯನ್ನು ಬಳಕೆ ಮಾಡಿಕೊಳ್ಳುವ ಮಮ್ಮುಕೋಯಾ ನಟಿಸಿದ್ದಾರೆ.
ತನ್ನ ಮಗನ ಹತ್ಯೆಯ ನಂತರ ಪೊಲೀಸರು ಮತ್ತು ಮಾಧ್ಯಮಗಳು ಹೆಣೆದ ಕತೆಗಳು, ಅದರಿಂದ ತನಗಾದ ಮಾನಸಿಕ ಹಿಂಸೆ, ಮುಸ್ಲಿಮರ ತಲ್ಲಣ ಇವೆಲ್ಲವನ್ನು ನೇಟಿವ್ ಬಾಬ ಹೃದಯವಿದ್ರಾವಕವಾಗಿ ಮಂಡಿಸುತ್ತಾ ಹೋಗುತ್ತಾರೆ.
ನೇಟಿವ್ ಬಾಪಾದಲ್ಲಿನ ರ್ಯಾಪ್ ಶೈಲಿಯ ಹಾಡು ಇಂಗ್ಲಿಷ್‌ನಲ್ಲಿರುವುದರಿಂದ ಮಾಪಿಳ್ಳ ತಂಡ ಇದನ್ನು ಮಾಪಿಳ್ಳ ಹಿಪ್ ಹಾಪ್ ಎಂದು ಕರೆಯುತ್ತಿದೆ. ಇಂತಹ ಶೈಲಿ ಕೇರಳದಲ್ಲಿ ಇದೇ ಮೊದಲ ಪ್ರಯೋಗವಾಗಿರುವುದರಿಂದ ವೀಡಿಯೊ ಅಲ್ಬಂ ಕೇವಲ ಆರು ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡಿದೆ.

Sunday, January 6, 2013

ನಾಲ್ಕೇ ನಾಲ್ಕು ಸಾಲು

 1
ನಾನು ಬರೆದದ್ದು
ಯಾವುದೂ ನನ್ನ ಕವಿತೆಯಲ್ಲ...
ಬರೆಯದೆ ಉಳಿದ್ದದ್ದೆಲ್ಲ
ನನ್ನ ಕವಿತೆ...
2
ನಾನು ಬರೆದದ್ದು
ನಾಲ್ಕೇ ನಾಲ್ಕು ಸಾಲು
ನಾನು ಸತ್ತಾಗ ಹೆಗಲು ಕೊಡೂದಕ್ಕೆ
ಇರಲಿ ಎಂದು...
3
ಅರೆಮನೆ
ನಿಜದ ಕವಿಗೆ
ಸೆರೆಮನೆ
4
ದ್ವೇಷವನ್ನು
ದ್ವೇಷಿಸದೆ
ಪ್ರೀತಿಯನ್ನು
ಪ್ರೀತಿಸೋದು ಹೇಗೆ?
5
ಬೆಂಕಿ ಕೇಳಲು
ಬಂದವರು
ನೀರು ಕೇಳಲು
ಬಾರದಿರುತ್ತಾರೆಯೇ?
6
ಪ್ರಪಾತದ  ಅಂಚಿನಿಂದ
ಬದುಕು ಆರಂಭವಾಗಿದೆ...
ಮುಂದೆ ಹೆಜ್ಜೆ ಇಡದೆ
ಬದುಕಾದರೂ ಎಲ್ಲಿದೆ?

ಬೆಲ್ಲದ ತುಂಡು ಮತ್ತು ನೀರು

ಇಪತ್ತು ವರ್ಷಗಳ ಬಳಿಕ ನನ್ನ ಬಾಲ್ಯದ ಗೆಳೆಯ ಫೋನ್‌ನಲ್ಲಿ ಸಿಕ್ಕಿದ್ದಾನೆ ‘‘ಮನೆ ಬಾ’’ ಎಂದು ಕರೆಯುತ್ತಿದ್ದಾನೆ.
ನನಗೆ ನಿಜಕ್ಕೂ ರೋಮಾಂಚನವಾಯಿತು. ನೆನಪುಗಳು ಸಣ್ಣಗೆ ಜುಳುಜುಳು ಸದ್ದು ಮಾಡ ತೊಡಗಿದವು.


ಅವನು ನನ್ನ ಬಾಲ್ಯದ ಗೆಳೆಯ. ನನ್ನ ಮನೆಗೂ ತೀರಾ ತೀರಾ ಪರಿಚಿತ. ಅವನ ಮನೆಗಿಂತ ನನ್ನ ಮನೆಯಲ್ಲಿ ಇದ್ದದ್ದೇ ಹೆಚ್ಚು. ನನ್ನ ಮನೆಯಲ್ಲೂ ಅವನು ಪ್ರೀತಿಯ ಹುಡುಗ. ಯಾವತ್ತೂ ಅಮ್ಮ ‘‘ಅವನನ್ನು ನೋಡಿ ಕಲಿತುಕೋ’’ ಎಂದು ದೂರುವವಳು. ಅವನು ಸುಮ್ಮಗೆ ನಿಂತು ನಾಚುತ್ತಿದ್ದ. ಅವನೆಂದೂ ನನ್ನನ್ನು ಅವನ ಮನೆಗೆ ಆಹ್ವಾನಿಸಿರಲಿಲ್ಲ. ಅವನದು ಗುಡಿಸಲ ಮನೆ. ಅದು ನನಗೆ ಗೊತ್ತಾದದ್ದು, ಒಂದು ದಿನ ಅವನನ್ನು ಹುಡುಕುತ್ತಾ ಅವನ ಮನೆಗೆ ಹೋದಾಗ. ಅವನ ತಂದೆ-ತಾಯಿ ಇಬ್ಬರೂ ಕೂಲಿ ಕಾರ್ಮಿಕರು. ಮನೆಗೆ ಹೋದ ನನ್ನನ್ನು ಅವನ ತಾಯಿ ಪ್ರೀತಿಯಿಂದ ಒಳಗೆ ಕರೆಸಿ ಚಾಪೆ ಹಾಸಿ ಕುಳ್ಳಿರಿಸಿದ್ದರು. ‘‘ತಾಯಿ ಹೇಗಿದ್ದಾರೆ?’’ ಎಂದು ನನ್ನ ತಾಯಿಯ ಕುಶಲ ವಿಚಾರಿಸಿದರು. ನೀರು-ಬೆಲ್ಲದ ತುಂಡು ಕೊಟ್ಟರು. ನಾನು ತಿಂದೆ. ಮಣ್ಣಿನ ಮಡಕೆಯಿಂದ ಮೊಗೆ ಆ ತಣ್ಣನೆಯ ನೀರನ್ನೂ ಕುಡಿದೆ. ಅಷ್ಟರಲ್ಲಿ ಒಳಗಿಂದ ನಿದ್ದೆಯಿಂದ ಎದ್ದು ಬಂದ ಗೆಳೆಯ ಆತುರಾತುರವಾಗಿ ನನ್ನನ್ನು ಎಬ್ಬಿಸಿದ. ಅವನು ಗಲಿಬಿಲಿಗೊಂಡಂತಿದ್ದ. ‘‘ನೀನೇಕೆ ಇಲ್ಲಿಗೆ ಬಂದೆ, ನಾನೆ ಬರುತ್ತಿದ್ದೆನಲ್ಲ?’’ ಎಂದು ವಿಚಿತ್ರವಾಗಿ ಕೇಳಿದ. ನನಗೆ ಪೆಚ್ಚೆನಿಸಿತು. ಅವನ ಮನೆಗೆ ಹೋದುದು ಇಷ್ಟವಾಗಲಿಲ್ಲ ಎನ್ನುವುದಷ್ಟೇ ನನಗೆ ಗೊತ್ತಾಯಿತು. ಮುಂದೆಂದೂ ನಾನು ಅವನ ಮನೆಗೆ ಕಾಲಿಡಲಿಲ್ಲ. ಆದರೆ ಅವನ ತಾಯಿಯ ಆಪ್ತ ನಗು, ಬೆಲ್ಲದ ತುಂಡು, ತಣ್ಣಗಿನ ನೀರು...ಎಲ್ಲ ಒಳಗೆ ಒಂದು ಒರತೆಯಾಗಿ ಹರಿಯುತ್ತಿರುವಂತೆ ಅನ್ನಿಸುತ್ತಿತ್ತು. ಪಿಯುಸಿಯವರೆಗೆ ನಾವು ಒಟ್ಟಿಗೆ ಓದಿದೆವು. ಬಳಿಕ ನನ್ನ ದಾರಿಯನ್ನು ನಾನು ಆರಿಸಿಕೊಂಡೆ. ಅವನ ದಾರಿಯನ್ನು ಅವನು ಆರಿಸಿಕೊಂಡ. ಇಬ್ಬರು ಒಟ್ಟಿಗೆ ಸೇರಲಾಗದ ದಾರಿ ಇದಾಗಿರಬಹುದು ಎಂದು ನನಗೆ ಆಗ ಅನ್ನಿಸಿತ್ತು. ಕ್ರಮೇಣ ಅವನನ್ನು ಮರೆತೇ ಬಿಟ್ಟಿದ್ದೆ.

ಇದೀಗ ಇಪ್ಪತ್ತು ವರ್ಷಗಳ ಬಳಿಕ ನನ್ನನ್ನು ಅದೇ ಎದೆಯಲ್ಲಿ ತುಂಬಿಕೊಂಡು ‘‘ಬಾ...ಮನೆಗೆ ಬಾ’’ ಎಂದು ಕರೆಯುತ್ತಿದ್ದಾನೆ.
ಅವನ ಫೋನ್ ಕರೆ ಕೇಳಿದ್ದೇ...ತಣ್ಣಗೆ ಭೂಗರ್ಭದೊಳಗೆ ಗುಟ್ಟಾಗಿ ಹರಿಯುತ್ತಿದ್ದ ತೊರೆಯೊಂದರ ಜುಳು ಜುಳು ಸದ್ದು ನನ್ನ ಕಿವಿಗೆ ಕೇಳಿಸುತ್ತಿತ್ತು. ‘‘ಒಮ್ಮೆ ಹೋಗಿ ಬರಬೇಕು’’ ಎಂದು ಅದಾಗಲೇ ನಿರ್ಧಾರ ಮಾಡಿದ್ದೆ. ಆದರೆ ಸಮಯ ಸಿಕ್ಕಿರಲಿಲ್ಲ. ಇದಾದ ಒಂದೆರಡು ವಾರ ಗೆಳೆಯನ ನಿರಂತರ ಮೊಬೈಲ್ ಕರೆ. ‘‘ಗೆಳೆಯಾ...ಮನೆಗೆ ಬಾ...’’
ಒಂದು ದಿನ ಇಗೋ ಬಂದೆ ಎಂದು ಎದ್ದು ಅವನ ಮನೆಯ ವಿಳಾಸ ಹಿಡಿದು ಹೋದೆ.
***
ಅವನ ಮನೆಯ ಎದುರು ನಿಂತದ್ದೇ ನಾನು ಆಘಾತಗೊಂಡಿದ್ದೆ. ಕೋಟೆಯಂತಹ ಕಾಂಪೌಡ್. ಅದರೊಳಗಿರುವ ಅವನ ಅರಮನೆಯಂತಹ ಮನೆಯ ಕಿರೀಟವಷ್ಟೇ ನನಗೆ ಕಾಣುತ್ತಿತ್ತು. ಗೇಟಿನ ಸಣ್ಣ ಕಿಟಕಿಯಿಂದ ನಾನು ಮುಖ ತೂರಿಸಿದೆ. ‘ತೋ’ಗಳಂತಹ ಎರಡು ನಾಯಿಗಳಿಗೆ ಸುಳಿವು ಸಿಕ್ಕಿ ಬಿಟ್ಟಿತು. ಒಂದೇ ಸಮನೆ ಬೊಗಳ ಹತ್ತಿದವು. ನನ್ನ ಎದೆ ಬಾಯಿಗೆ ಬಂತು. ತೊಡೆ ಸಂಧಿ ಸಣ್ಣಗೆ ಕಂಪಿಸ ತೊಡಗಿತು.
‘‘ಯಾರದು?’’ ಧ್ವನಿಯೊಂದು ಸೀಳಿ ಬಂತು. ಕಿಟಕಿಯಿಂದ ಇಣುಕಿದ್ದೇ...‘‘ಓ...ನೀನಾ...’’ ಎಂದ. ಅವನು ನನ್ನ ಗೆಳೆಯ. ನಾನು ಸ್ತಂಭೀಭೂತನಾಗಿದ್ದೆ.
ಯಾರೋ ಬಂದು ಗೇಟು ತೆರೆದರು. ಅವನ ಜೊತೆಗೆ ಅವನ ಪತ್ನಿಯೂ ಇದ್ದಳು. ‘‘ಹಾಯ್’’ ಎಂದಳು.
ಗೆಳೆಯ ನನ್ನನ್ನು ಬಾಹುಗಳಲ್ಲಿ ತೆಗೆದುಕೊಂಡ. ನಾಯಿಗಳು ಬೊಗಳುತ್ತಲೇ ಇದ್ದವು. ಅದರ ಸದ್ದಿಗೆ ಅವನ ಬಾಹುಗಳಲ್ಲಿ ನಾನು ಕಂಪಿಸುತ್ತಿದ್ದೆ.
ಅವನು ಮನೆಯೊಳಗೆ ಕರೆದುಕೊಂಡು ಹೋದದ್ದೇ ‘‘ಹೊಸ ಮನೆ ಮಾರಾಯ...ಬಾ ಮನೆ ತೋರಿಸುತ್ತೇನೆ....’’ ಎಂದ.
 20 ವರ್ಷಗಳನಂತರ ಸಿಕ್ಕಿದ ಗೆಳೆಯ. ‘‘ಹೇಗಿದ್ದೀಯ?’’ ‘‘ಏನು ಮಾಡುತ್ತಿದ್ದೀಯ?’’ ಎಂಬಂತಹ ನೂರಾರು ಹಿತವಾದ ಪ್ರಶ್ನೆಗಳನ್ನು ಇಟ್ಟುಕೊಂಡು, ನಾನು ಬಂದಿದ್ದೆ. ಹಿಂದಿನ ಹಲವು ನೆನಪುಗಳನ್ನು ಬಹಳ ಕಷ್ಟಪಟ್ಟು ಆರಿಸಿ ತೆಗೆದು, ಅವನೊಂದಿಗೆ ಹಂಚಿಕೊಳ್ಳಲು ಇಟ್ಟುಕೊಂಡಿದ್ದೆ. ಅದರಲ್ಲಿ ಅವನ ತಾಯಿ ನನಗೆ ಕೊಟ್ಟ ‘‘ಬೆಲ್ಲದ ತುಂಡು ಮತ್ತು ನೀರು’’ ಕೂಡ ಇತ್ತು.
ಅವನು ತನ್ನ ಮನೆಯನ್ನು ತೋರಿಸುತ್ತಿದ್ದಾನೆ...ಬೆಡ್‌ರೂಂ, ಡ್ರಾಯಿಂಗ್ ರೂಂ, ಲೈಬ್ರರಿ, ಗೆಸ್ಟ್ ರೂಂ...ಬಾಲ್ಕನಿ...ಹಾಂ...ಬಾಲ್ಕನಿಯಲ್ಲಿ ನಿಂತು ನೋಡಿದರೆ ಅವೆರಡೂ ನಾಯಿಗಳು ನನ್ನನ್ನು ದುರುಗುಟ್ಟಿ ನೋಡುತ್ತಲೇ ಇದ್ದವು.
ಗೆಳೆಯನ ಪತ್ನಿ ಜ್ಯೂಸ್ ತಂದಳು. ‘‘ಅವಳಿಗೆ ಕನ್ನಡಗೊತ್ತಿಲ್ಲ ಮಾರಾಯ. ದಿಲ್ಲಿಯವಳು. ಇಂಗ್ಲಿಷ್ ಚೆನ್ನಾಗಿ ಮಾತನಾಡ್ತಾಳೆ...ನಾವೆಲ್ಲ ಕನ್ನಡ ಮೀಡಿಯಂ ಅಲ್ವಾ?’’ ಎಂದು ಕಿಚಾಯಿಸಿದ.
‘‘ಹಾ...ಹೌದು’’ ಎಂದು ನಕ್ಕಂತೆ ನಕ್ಕೆ.
ಇದ್ದಕ್ಕಿದ್ದಂತೆಯೇ ಏನೋ ನೆನಪಾಯಿತು ‘‘ನಿನ್ನ ತಾಯಿ-ತಂದೆ ಎಲ್ಲಿದ್ದಾರೆ?’’ ಕೇಳಿದೆ.
ಅವನು ಕೇಳದವನಂತೆ ‘‘ಅವಳ ಅಣ್ಣ ಅಮೆರಿಕದಲ್ಲಿದ್ದಾನೆ....ಮುಂದಿನ ತಿಂಗಳು ನಾವಿಬ್ಬರು ಅಮೆರಿಕಕ್ಕೆ ಹೋಗಬೇಕೆಂದು ಮಾಡಿದ್ದೇವೆ’’ ಎಂದ.
‘‘ನಿನ್ನ ತಂದೆ ತಾಯಿ ಎಲ್ಲಿದ್ದಾರೆ? ನಿನ್ನ ತಾಯಿ ತುಂಬಾ ಚೆಂದವಿದ್ದರು. ನಾನು ನಿನ್ನ ಮನೆಗೆ ಬಂದಾಗ ನನಗೆ ಬೆಲ್ಲದ ತುಂಡು ಮತ್ತು ನೀರು ಕೊಟ್ಟಿದ್ದರು. ನಿನಗೆ ನೆನಪಿದೆಯೇ...’’ ಕೇಳಿದೆ.
‘‘ಆ ವಿಷಯ ಬಿಡು. ಅದೇಕೆ ಈಗ....ಅಮೆರಿಕದಲ್ಲಿ ನಿನಗೆ ಏನಾದರೂ ಕೆಲಸವಿದ್ದರೆ ಹೇಳು...ಮುಂದಿನ ತಿಂಗಳು...ಹೋಗುವ ಮೊದಲು ಮತ್ತೊಮ್ಮೆ ಭೇಟಿಯಾಗುವ’’ ಎಂದ.
‘‘ನಿನ್ನ ತಾಯಿಯನ್ನು ನನಗೊಮ್ಮೆ ನೋಡಬೇಕಾಗಿತ್ತು’’ ಒತ್ತಿ ಕೇಳಿದೆ.
ಅವನು ಒಂದು ಕ್ಷಣ ವೌನವಾದ. ಮುಖದಲ್ಲಿ ಅಸಹನೆ ಎದ್ದು ಕಾಣುತ್ತಿತ್ತು ‘‘ಅವರು ಹಳೆ ಮನೆಯಲ್ಲೇ ಇದ್ದಾರೆ. ಇಲ್ಲಿ ಅವರಿಗೆ ನಿದ್ದೆ ಹತ್ತುವುದಿಲ್ಲವಂತೆ’’
ನಾನು ಎದ್ದೆ
‘‘ಹೊರಡಬೇಕು, ನನಗೆ. ಸ್ವಲ್ಪ ಕೆಲಸವಿತ್ತು’’ ಎಂದೆ.
 ಅವನು ತಕ್ಷಣ ‘‘ಸರಿ’’ ಎಂದ.
ಹೊರಗೆ ಬಂದೆ. ‘‘ಆ ನಾಯಿ ಕಚ್ಚುತ್ತದೆಯೆ?’’ ಜೋರಾಗಿ ಕೇಳಿದೆ.
‘‘ಅಪರಿಚಿತರಿಗೆ ಕಚ್ಚಿಯೇ ಬಿಡುತ್ತದೆ ಮಾರಾಯ...ಸುಮ್ಮನೆ ಅದಕ್ಕೆ ದುಡ್ಡು ಕೊಟ್ಟದ್ದ?’’ ಎಂದು ಅಷ್ಟೇ ಜೋರಾಗಿ ಹೇಳಿದ.
 ‘‘ಹಾಗಾದರೆ ಅದನ್ನು ಸ್ವಲ್ಪ ಕಟ್ಟಿ ಹಾಕು...ನನಗೆ ಹೋಗಬೇಕಾಗಿದೆ....’’ ಇನ್ನಷ್ಟು ಜೋರಾಗಿ ಹೇಳಿದೆ. ಕೆಲಸದಾಳು ಬಂದು ಅಷ್ಟರಲ್ಲೇ ಅದನ್ನು ಸರಪಳಿಯಲ್ಲಿ ಕಟ್ಟಿ ಹಾಕಿದ. ನಾನು ಬಿರ ಬಿರನೇ ಕಾಂಪೌಂಡ್ ದಾಟಿದವನೇ ನಿರಾಳವಾಗಿ ಉಸಿರಾಡತೊಡಗಿದೆ.