Sunday, July 31, 2011

ರಮಝಾನ್ ಪದ್ಯಗಳು.


ಇಂದಿನಿಂದ ರಮಝಾನ್. ಇನ್ನು ಒಂದು ತಿಂಗಳು ನನಗೆ ಉಪವಾಸ. ಯಾಕೋ ತಾಯಿಯ ನೆನಪಾಗುತ್ತಾ ಇದೆ. ಅತ್ತಾಳದ ರಾತ್ರಿ(ರಾತ್ರಿ ಸುಮಾರು 4 ಗಂಟೆಗೆ ಎದ್ದು ಉಣ್ಣುವುದನ್ನು ಅತ್ತಾಳ ಎಂದು ಕರೆಯುತ್ತಾರೆ. ಹಾಗೆ ಉಂಡು, ನಮಾಝ್ ಮಾಡಿ ಮಲಗಿದರೆ, ಬಳಿಕ ಮರುದಿನ ರಾತ್ರಿ 7 ಗಂಟೆಯವರೆಗೆ ಹನಿ ನೀರೂ ಕುಡಿಯುವಂತಿಲ್ಲ) ತಾಯಿ ಎದ್ದು ನಮ್ಮನ್ನೆಲ್ಲ ‘ಏಳಿ ಮಕ್ಕಳೇ ಏಳಿ...’ ಎಂದು ಎಬ್ಬಿಸುತ್ತಿದ್ದಳು. ನಾವೋ ಸೋಂಭೇರಿಗಳು. ‘ಏಳಿ ಮಕ್ಕಳೇ...’ ಎಂದು ಕೂಗಿ ಕೂಗಿ ತಾಯಿಯ ಗಂಟಲ ಪಸೆ ಆರಿದ ಬಳಿಕ, ಮೆಲ್ಲಗೆ ಎದ್ದು ಕೂರುತ್ತಿದ್ದೆವು. ನಿದ್ದೆಗಣ್ಣಲ್ಲೇ ಅತ್ತಾಳ ಉಂಡು, ನಿದ್ದೆಗಣ್ಣಲ್ಲೇ ನೋಂಬಿನ ನಿಯತ್ತು ಹೇಳಿ, ಮಲಗಿ ಬಿಡುತ್ತಿದ್ದೆವು. ಈಗ ನಮ್ಮನ್ನು ಎಬ್ಬಿಸುವ ತಾಯಿಯ ದನಿಯೇ ಇಲ್ಲ. ಮೊಬೈಲ್ ಅಲಾರಾಂಗೆ ಎದ್ದು, ತಂಗಿ ಮಾಡಿಟ್ಟ ಅನ್ನ ಉಂಡು, ತಾಯಿಯನ್ನು, ದೇವರನ್ನು ನೆನೆದು ಮಲಗಬೇಕು.
ಬಾಲ್ಯದಲ್ಲಿ ನನ್ನ ಮದರಸದ ಗುರುಗಳು ಹೇಳಿದ್ದು ಈಗಲೂ ನನಗೆ ನೆನಪಿದೆ ‘‘ರಮಝಾನ್ ತಿಂಗಳಲ್ಲಿ ತಿನ್ನುವುದಕ್ಕೆ ಏನೂ ಸಿಗದೇ ಇದ್ದರೆ ಕೆಲವೊಮ್ಮೆ ನಾಯಿಯೂ ಹಸಿದಿರುತ್ತದೆ. ಹಾಗೆಂದು ಅದು ರಮಝಾನ್ ವ್ರತ ಹಿಡಿದಿದೆ ಎಂದು ಹೇಳುವುದಕ್ಕಾಗುತ್ತದೆಯೆ? ರಮಝಾನ್‌ನ ಉಪವಾಸ ನಮ್ಮನ್ನು ಒಳ್ಳೆಯ ಮನುಷ್ಯರಾಗಿ ತಿದ್ದುವುದಕ್ಕೆ ಸಹಾಯವಾಗಬೇಕು. ತಪ್ಪಿ ನೀರು ಕುಡಿದರೆ ನಿಮ್ಮ ಉಪವಾಸಕ್ಕೆ ತೊಂದರೆಯಾಗುವುದಿಲ್ಲ. ಆದರೆ ಇನ್ನೊಬ್ಬರನ್ನು ನೋಯಿಸಿದರೆ, ಕೆಟ್ಟದ್ದನ್ನು ಮಾಡಿದರೆ, ಇನ್ನೊಬ್ಬರಿಗೆ ಬೈದರೆ ಉಪವಾಸ ಮುರಿಯುತ್ತದೆ. ಕೆಟ್ಟದನ್ನು ಮಾಡುತ್ತಾ, ಯೋಚಿಸುತ್ತಾ ನೀವು ಹಸಿದು ಕುಳಿತುಕೊಳ್ಳುವುದು ಸುಮ್ಮನೆ. ರಮಝಾನ್‌ನಲ್ಲಿ ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ. ಬಡವರ ಹಸಿವನ್ನು ಅರ್ಥ ಮಾಡಿಕೊಳ್ಳಿ. ಅವರಿಗೆ ನೆರವು ನೀಡಿ. ಕೆಟ್ಟದ್ದನ್ನು ತಡೆಯಿರಿ. ಅನ್ಯಾಯಕ್ಕೊಳಗಾದವರ ಪರವಾಗಿ ನಿಲ್ಲಿ. ರಮಾಝಾನ್‌ನ ಹಸಿವು ನಿಮ್ಮ ವ್ಯಕ್ತಿತ್ವವನ್ನು ಬದಲಿಸಿ, ನಿಮ್ಮನ್ನು ಒಳ್ಳೆಯ ಮನುಷ್ಯರನ್ನಾಗಿಸಬೇಕು. ರಮಝಾನ್‌ನಲ್ಲಿ ಸುಮ್ಮನೆ ಹಸಿದು ಕೂರುವುದಕ್ಕೆ ಯಾವ ಅರ್ಥವೂ ಇಲ್ಲ....’’
ಫಕೀರ್ ಮಹಮ್ಮದ್ ಕಟ್ಪಾಡಿಯ ‘ನೋಂಬು’ ಕತೆ ನೆನಪಾಗುತ್ತದೆ. ನಾನು ಓದಿದ ಅತಿ ಒಳ್ಳೆಯ ಕತೆಗಳಲ್ಲಿ ಇದೂ ಒಂದು. ಬಡವರ ಮನೆಯ ಸಣ್ಣ ಹುಡುಗನೊಬ್ಬ ತಂದೆ ತಾಯಿಗಳೊಂದಿಗೆ ಹಟ ಹಿಡಿದು ನೋಂಬು ಹಿಡಿಯುತ್ತಾನೆ. ಸಂಜೆಯ ಹೊತ್ತಿಗೆ ನೋಂಬು ಬಿಟ್ಟ ಬಳಿಕ ತಾಯಿಯೊಂದಿಗೆ ಅಚ್ಚರಿಯಿಂದ ಕೇಳುತ್ತಾನೆ ‘‘ಅರೆ, ನೋಂಬು ಎಂದರೆ ಇಷ್ಟೇಯಾ? ಇದನ್ನು ನಾವು ಆಗಾಗಾ ಹಿಡಿಯುತ್ತಾ ಇರುತ್ತೇವಲ್ಲ...’’ ಹಸಿದು ಕೂರುವುದೇ ನೋಂಬು ಎಂದಾದರೆ ಬಡವರಿಗೆ ವರ್ಷವಿಡೀ ರಮಝಾನ್ ಅಲ್ಲವೆ? ಬಡವರ ಹಸಿವನ್ನು, ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ರಮಝಾನ್ ನನಗೊಂದು ಅವಕಾಶ ಎಂದು ಭಾವಿಸಿದ್ದೇನೆ. ಅವರು ಪ್ರತಿ ದಿನ ಉಣ್ಣುತ್ತಿರುವ ಹಸಿವಿನ ಒಂದು ತುತ್ತನ್ನು ರಮಝಾನ್ ತಿಂಗಳಲ್ಲಿ ಉಣ್ಣ ಬೇಕು ಎಂದು ತೀರ್ಮಾನಿಸಿದ್ದೇನೆ. ಈ ಬಾರಿಯಾದರೂ ರಮಝಾನ್ ನನ್ನನ್ನು ಒಳ್ಳೆಯ ಮನುಷ್ಯನನ್ನಾಗಿಸುತ್ತದೆ ಎಂಬ ನಿರೀಕ್ಷೆಯಲ್ಲಿ, ರಮಝಾನ್ ತಿಂಗಳನ್ನು ಸ್ವಾಗತಿಸಿದ್ದೇನೆ. ನಿಮಗೆಲ್ಲರಿಗೂ ರಮಝಾನ್ ಶುಭಾಶಯಗಳು.
ಕಳೆದ ರಮಝಾನ್ ಹಬ್ಬದ ಸಂದರ್ಭದಲ್ಲಿ ಬರೆದ ಪದ್ಯವೊಂದನ್ನು ನಿಮ್ಮಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ರಮಝಾನ್ ಪದ್ಯಗಳು

ನಾನು ತುಕ್ಕು ಹಿಡಿದ ಕಬ್ಬಿಣ
ಹಸಿವಿನ ಕುಲುಮೆಯಲ್ಲಿ
ಧಗಿಸಿ ಹೊರ ಬಂದಿದ್ದೇನೆ
ಈಗಷ್ಟೇ ಸ್ನಾನ ಮುಗಿಸಿದ
ನವಜಾತ ಶಿಶುವಿನಂತೆ
ಬೆಳಗುತ್ತಿದ್ದೇನೆ

ಮೇಲೊಬ್ಬ ಕಮ್ಮಾರ
ಬಾಗಿದ್ದೇನೆ ಅವನ ಮುಂದೆ
ಉಳುವವನಿಗೆ ನೊಗವೋ
ಮನೆಗೊಂದು ಕಿಟಕಿಯೋ
ಬಾಗಿಲಿಗೆ ಚಿಲಕವೋ, ಬೀಗವೋ
ಅಥವಾ ಧರಿಸುವುದಕ್ಕೆ ಖಡ್ಗವೋ

ಎಲ್ಲಾ ಅವನ ಲೆಕ್ಕಾಚಾರ

2
ನಡು ರಾತ್ರಿ
ಅತ್ತಾಳಕ್ಕೆಂದು ಮಗನ
ಎಬ್ಬಿಸ ಬಂದ ತಾಯಿ
ತಲ್ಲಣಿಸಿ ನಿಂತಿದ್ದಾಳೆ

ಮಗುವಿನ ಗಾಢ ನಿದ್ದೆ
ಅವಳಿಗೆ ಧ್ಯಾನದಂತೆ ಭಾಸವಾಗಿದೆ

3
ರಮಝಾನ್ ದಿನಗಳು
ಅಮ್ಮನ ಕೆನ್ನೆಯ ಓಣಿಗಳಲ್ಲಿ
ಕಣ್ಣ ಹನಿಗಳಾಗಿ
ಉದುರಿ ಹೋಗುತ್ತಿವೆ
ಒಬ್ಬಂಟಿ ಕುಳಿತು

ಜಪಮಣಿಯಂತೆ ಅವಳದನ್ನು ಎಣಿಸುವಳು

4
ನನ್ನ ದ್ವೇಷ
ಹಸಿವಿನ ಬೆಂಕಿಯಲ್ಲಿ ಬೂದಿಯಾಗಿದೆ
ಏನು ಹೇಳಲಿ ಕರುಣಾಳುವಿನ ಕೃಪೆಯ?
ಮಸೀದಿಯಲ್ಲಿ ಕ್ಷಮೆಯ
ಉಡುಗೊರೆಯೊಂದಿಗೆ
ಕಾಯುತ್ತಿದ್ದಾನೆ ಗೆಳೆಯ!

Thursday, July 28, 2011

ಅಮ್ಮನ ಸೀರೆ...!



ತುಂಬಾ....ಹಳೆಯ ಕವಿತೆ. ನಾನು ಕಾಲೇಜಲ್ಲಿ ಇದ್ದಾಗ ಬರೆದದ್ದು......



ಮನೆ ತುಂಬಾ ಅಮ್ಮನಿಗೆ ತಂದ
ಸೀರೆ ಕುರಿತು ಗುಲ್ಲೇ ಗುಲ್ಲು!

ಹಸಿರು ಅಂಚಿನ ಸೀರೆ;
ತುಂಬಾ ಅರಸಿನ ಬಣ್ಣ
ತಮ್ಮ ಸಿಡುಕಿದ, ದರ್ಗಾ-ಮಸೀದಿ ಮೇಲೆ
ಹಸಿರು ಬಾವುಟ
ಹಾರಿದ್ದು ಸಾಲದೆ?
ಅಂಚು ಹಿಡಿಸಿಲ್ಲವೆಂದು ತಿರುಗಿಸಿದ ಕಣ್ಣ!

ಗುಡುಗಿದ ಅಣ್ಣ
ಈಗೀಗ ಮೆಚ್ಚುತ್ತಿದ್ದಾಳೆ ಅಮ್ಮ ಆರೆಸ್ಸೆಸ್ಸನ್ನ
ಇಲ್ಲವೆಂದರೆ ಸೀರೆಗ್ಯಾಕೆ ಕೇಸರಿ ಬಣ್ಣ?

ಅವಳು ನಕ್ಕಳು ಕನ್ನಡಿಯಂತೆ ಹೊಳೆ ನೀರು
ಕೊಡ ತುಂಬಾ ಹೊತ್ತು ತಂದಳು
ತುಸು ಹೊತ್ತು ನೆನೆಯಿಟ್ಟು ಹೊರತೆಗೆದರೆ;
ಸೀರೆ...
ಥೇಟ್ ಅವಳ ನಗುವಿನಂತೆ
ಬಿಳಿಯ ಬಣ್ಣ!

Tuesday, July 26, 2011

ಹುಂಜದ ಜಂಬ ಮತ್ತು ಇತರ ಕತೆಗಳು....



ಹುಂಜದ ಜಂಬ

ಹುಂಜವೊಂದು ಜಂಬದಿಂದ ಆ ಓಣಿಯಲ್ಲಿ ಸಾಗುತ್ತಿತ್ತು. ಸಂತನೂ ಅದೇ ದಾರಿಯಲ್ಲಿ ಮುಂದೆ ನಡೆಯುತ್ತಿದ್ದನು. ಕೋಳಿಗೆ ಸಂತನ ಕಾವಿ ವಸ್ತ್ರ, ಗಡ್ಡ ಎಲ್ಲ ನೋಡಿ ನಗು ಬಂತು. ಸಂತನನ್ನು ಕೋಳಿ ಅಣಕಿಸ ತೊಡಗಿತು.
‘ಮಹನೀಯರೇ, ಒಂದು ಒಳ್ಳೆಯ ಬಟ್ಟೆಯನ್ನಾದರೂ ಹಾಕಿಕೊಳ್ಳಬಾರದೆ...?’
ಸಂತ ನಕ್ಕು ಮುಂದೆ ಹೋಗುತ್ತಿದ್ದ.
ಕೋಳಿ ಹಿಂಬಾಲಿಸಿತು ‘ನೋಡಿ, ನನ್ನನ್ನಾದರೂ ನೋಡಿ ಕಲಿಯಬಾರದೆ. ಹೊಳೆಯುವ ಗರಿಗಳಿಂದ ಹೇಗೆ ಕಾಣುತ್ತೇನೆ ನೋಡಿ...’
‘ನನ್ನ ಜುಟ್ಟು ನೋಡಿ. ಕಿರೀಟದ ಹಾಗಿದೆ. ನೀವು ತಲೆಗೊಂದು ಮುಂಡಾಸನ್ನಾದರೂ ಕಟ್ಟಬಾರದಿತ್ತೆ ’
ಸಂತ ಮುಂದೆ ನಡೆಯುತ್ತಲೇ ಇದ್ದ.
‘ನನ್ನ ಕಾಲುಗಳನ್ನು ನೋಡಿ. ಪಾದ ನೋಡಿ. ನಾನು ನಡೆಯುವ ಠೀವಿ ನೋಡಿ. ರಾಜಗಾಂಭೀರ್ಯದಿಂದ ನಡೆಯುತ್ತಿದೇನೆ. ನೀವೇಕೆ ಹಾಗೆ ಠೀವಿಯಿಂದ ನಡೆಯಬಾರದು...’
ಅಷ್ಟರಲ್ಲಿ ಒಂದು ಮನೆ ಕಂಡಿತು. ಸಂತ ಆ ಮನೆಯತ್ತ ನಡೆದ.
ಕೋಳಿಗೆ ಮತ್ತೂ ಜಂಬ ‘ಅದು ನನ್ನ ಯಜಮಾನನ ಮನೆ. ಅಲ್ಲಿಗೆ ಭಿಕ್ಷೆಗೆ ಹೋಗುತ್ತಿದ್ದೀರಾ. ಹೋಗಿ... ಹೋಗಿ...’

ಸಂತನನ್ನು ಕಂಡದ್ದೇ ಮನೆಯ ಯಜಮಾನ ಆದರದಿಂದ ಸ್ವಾಗತಿಸಿದ. ಮಧ್ಯಾಹ್ನದ ಊಟಕ್ಕೆ ಕುಳ್ಳಿರಿಸಿದ. ಮನೆಯಲ್ಲಿ ಸಂತನಿಗೆ ಭೂರಿ ಭೋಜನ.
ಯಜಮಾನ ಅಂಗಳದಲ್ಲಿ ಠೀವಿಯಿಂದ ತಿರುಗಾಡುತ್ತಿದ್ದ ಕೋಳಿಯನ್ನು ಹಿಡಿದು ಕತ್ತರಿಸಿದ.
ಸಂತನಿಗೆ ಊಟದ ಬಟ್ಟಲನ್ನು ತಂದಿಡಲಾಯಿತು. ಮಸಾಲೆಯಿಂದ ಘಮಘಮಿಸುವ ಕೋಳಿಯನ್ನೂ ತಂದಿಡಲಾಯಿತು.
ಸಂತ ಈಗ ನಗುತ್ತಿರಲಿಲ್ಲ. ಅವನ ತುಟಿಯಲ್ಲಿ ವಿಷಾದವಿತ್ತು. ಯಜಮಾನನಲ್ಲಿ ಕೇಳಿದ ‘ಈ ಹುಂಜದ ಜಗಮಗಿಸುವ ಗರಿಗಳಿತ್ತಲ್ಲ, ಅದೇನಾಯಿತು?’
ಯಜಮಾನ ವಿನೀತನಾಗಿ ಹೇಳಿದ ‘ಕಸದ ತೊಟ್ಟಿಗೆ ಎಸೆದೆ ಗುರುಗಳೇ’
‘ಈ ಹುಂಜದ ಕಿರೀಟದಂತಹ ಜುಟ್ಟಿತ್ತಲ್ಲ, ಅದೇನಾಯಿತು?’
ಯಜಮಾನ ನುಡಿದ ‘ಅದನ್ನೂ ಕಸದ ತೊಟ್ಟಿಗೆ ಎಸೆದೆ ಗುರುಗಳೇ’
‘ರಾಜಠೀವಿಯಿದ್ದ ಅದರ ಕಾಲುಗಳು?’
‘ಅದನ್ನೂ ಎಸೆದೆ ಗುರುಗಳೇ’
‘ಇದೀಗ ಈ ಕೋಳಿ ತಿನ್ನಲು ಅರ್ಹವಾಯಿತು’ ಎನ್ನುತ್ತಾ ಸಂತ ಅದರ ತೊಡೆ ಭಾಗವನ್ನು ಬಾಯಲ್ಲಿ ಹಾಕಿ ಕರಗಿಸ ತೊಡಗಿದ.

ಕವಿಯ ಊರು
ಯಾವುದೋ ಬೆಟ್ಟ, ಗುಡ್ಡ, ದಟ್ಟ ಕಾಡುಗಳಲ್ಲಿ ಮುಚ್ಚಿ ಹೋದ ಕುಗ್ರಾಮದಲ್ಲಿ ಕುಳಿತು ಕಾವ್ಯ ಬರೆದ ಆ ಶ್ರೇಷ್ಟ ಕವಿ ಮೃತಪಟ್ಟ. ಕವಿ ಸತ್ತಾಗ, ಸತ್ತ ಜನರು ಜೀವ ಪಡೆದರು. ಕವಿಯ ಮನೆಯೆಡೆಗೆ ಅಧಿಕಾರಿಗಳ, ಪಂಡಿತರ ಹಿಂಡು ಸಾಗಿತು. ಭಾಷಣಗಳ ಮೇಲೆ ಭಾಷಣಗಳು. ಸಂತಾಪದ ಮೇಲೆ ಸಂತಾಪ. ಕವಿಯ ಮನೆಯನ್ನು ಐತಿಹಾಸಿಕ ಸ್ಮಾರಕವಾಗಿಸಲು ನಿರ್ಧರಿಸಲಾಯಿತು. ಸರಕಾರ ಲಕ್ಷಾಂತರ ರೂ.ವನ್ನು ಬಿಡುಗಡೆ ಮಾಡಿತು.
ಸರಿ, ಮನೆಯನ್ನು ಸ್ಮಾರಕ ಮಾಡಿ ಪ್ರವಾಸಿಗರು ಅಲ್ಲಿಗೆ ಸಂದರ್ಶನ ನೀಡಬೇಕೆಂದರೆ ಕವಿಯ ಮನೆಗೆ ಹೆದ್ದಾರಿಯಾಗಬೇಕು. ಹೆದ್ದಾರಿಯನ್ನು ಮಾಡಲಾಯಿತು. ದಟ್ಟ ಕಾಡುಗಳನ್ನು ಕಡಿದು ಹಾಕಲಾಯಿತು. ಮನೆಯನ್ನು ಪುನರ್ ನವೀಕರಿಸಲಾಯಿತು. ಪ್ರವಾಸಿಗರು ಆ ದಾರಿಯಾಗಿ ಬರಲಾರಂಭಿಸಿದರು. ಹೊಟೇಲುಗಳು, ಅಂಗಡಿಗಳು ತೆರೆದವು. ಗುಡ್ಡ ಬೋಳಾಯಿತು. ಹಕ್ಕಿಗಳು ವಲಸೆ ಹೋದವು. ಸೂರ್ಯೋದಯ, ಸೂರ್ಯಾಸ್ತ ಮರೆಯಾದವು. ವಸತಿ ಸಂಕೀರ್ಣಗಳು ಮೇಲೆದ್ದವು.

ಆ ದಾರಿಯಲ್ಲಿ ಸಂತ ಒಂದು ದಿನ ನಡೆಯುತ್ತಾ ಬಂದ. ಅವನಿಗೆ ಮೃತನಾದ ಮಹಾ ಕವಿಯ ಕಾವ್ಯದಲ್ಲಿ ಬರುವ ಕಾಡುಗಳನ್ನು, ಹಕ್ಕಿಗಳನ್ನು ನೋಡಬೇಕಾ
ಗಿತು.
ಮಹಾಕವಿಯ ಮನೆ ಹುಡುಕುತ್ತಾ, ಹುಡುಕುತ್ತಾ ಬಂದ. ಎಲ್ಲೂ ಸಂತನಿಗೆ ಮಹಾಕವಿಯ ಊರು, ಮನೆ ಕಾಣುತ್ತಿಲ್ಲ. ಒಬ್ಬನಲ್ಲಿ ಕೇಳಿದ ‘‘ಮಹಾಕಾವ್ಯವನ್ನು ಬರೆದ ಆ ಮಹಾಕವಿಯ ಊರೆಲ್ಲಿದೆ’’
ವ್ಯಕ್ತಿ ನಗುತ್ತಾ ‘ಇದೇ ಸ್ವಾಮಿ ಆ ಊರು. ಅಷ್ಟು ಗೊತ್ತಾಗಲ್ವಾ’ ಎಂದು ವ್ಯಂಗ್ಯವಾಡಿದ. ಸಂತ ವಿಷಾದದಿಂದ ಗೊಣಗಿದ ‘‘ಈ ಊರಲ್ಲಿ ಕವಿ ಹುಟ್ಟಲು ಸಾಧ್ಯವೇ ಇಲ್ಲ. ಇಲ್ಲಿ ಕವಿಯ ಮನೆಯಿರಲು ಸಾಧ್ಯವಿಲ್ಲ. ಇಲ್ಲಿ ಕವಿಯನ್ನು ಮಣ್ಣು ಮಾಡುವ ಸ್ಮಶಾನವಷ್ಟೇ ಇರಲು ಸಾಧ್ಯ’’

ಕೆಟ್ಟ ತಂದೆ
ಆತ ತಂದೆ. ತನ್ನ ಮಗನನ್ನು ತನ್ನ ಕನಸಿನಂತೆಯೇ ಸಾಕಿದ. ಮಗ ತನ್ನಂತೆಯೇ ಕುದುರೆ ಸವಾರನಾಗಬೇಕು ಎಂಬುದು ಅವನ ಆಸೆಯಾಗಿತ್ತು. ಮಗ ಅವನ ಕನಸನ್ನು ನನಸು ಮಾಡಿದ. ಪಂಡಿತನಾಗಬೇಕೆನ್ನುವುದು ತಂದೆಯ ಆಸೆಯಾಗಿತ್ತು. ಮಗ ಅದನ್ನೂ ನನಸು ಮಾಡಿದ. ಮಗ ವ್ಯಾಪಾರಿಯಾಗಿ ಕೈತುಂಬ ಗಳಿಸಬೇಕೆನ್ನುವುದು ತಂದೆಯ ಕನಸಾಗಿತ್ತು.
ಮಗ ಅದನ್ನೂ ನನಸು ಮಾಡಿದ. ತಂದೆ ಆಸೆಯಂತೆ ಸಮಾಜದಲ್ಲಿ ಸದ್ಗುಣಿಯಾಗಿ ಬೆಳೆದ. ಎಲ್ಲರಿಂದ ತಂದೆಗೆ ತಕ್ಕ ಮಗ ಎನ್ನುವ ಪ್ರಶಂಸೆಗಳಿಸಿದ.
ಆ ಮನೆಗೆ ಒಂದು ದಿನ ಸಂತ ಬಂದ. ತಂದೆ - ಮಗ ಜತೆ ಸೇರಿ ಸಂತನನ್ನು ಸತ್ಕರಿಸಿದರು. ತಂದೆ ತನ್ನ ಮಗನನ್ನು ತೋರಿಸಿ, ಆಶೀರ್ವದಿಸಬೇಕು ಎಂದು ಹೇಳಿದ. ಮಗ ಸಂತನಿಗೆ ಬಾಗಿದ.
ಸಂತ ಮಗನ ಮುಖವನ್ನು ಬೊಗಸೆಯಿಲ್ಲಿ ತುಂಬಿಕೊಂಡ. ಅವನ ಕಣ್ಣಿಗೆ ಕಣ್ಣಿಟ್ಟು ನೋಡಿದ.
ಬಳಿಕ ವಿಷಾದದಿಂದ, ದುಃಖದಿಂದ ತಂದೆಗೆ ಹೇಳಿದ ‘‘ಛೆ...ಎಷ್ಟು ಕೆಟ್ಟದಾಗಿ ಮಗನನ್ನು ಬೆಳೆಸಿದೆ’’
ತಂದೆಯ ಎದೆ ಧಕ್ ಎಂದುತು.
‘‘ನಿನ್ನ ಮಗನ ಕಣ್ಣುಗಳನ್ನು ನೋಡಿದೆಯಾ? ಅಲ್ಲೊಂದು ಹೆಣ ತೇಲುತ್ತಾ ಇದೆ’’ ಸಂತ ಹೇಳಿದ.
‘‘ಯಾರ ಹೆಣ?’’ ತಂದೆ ಆತಂಕದಿಂದ ಕೇಳಿದ.
‘‘ನಿನ್ನ ಮಗನ ಹೆಣ’’

ಓದು!
ಸಂತನಿಗೆ ಓದು ಎಂದರೆ ಉಣ್ಣುವಷ್ಟೇ ಸಹಜ. ಸಂತ ಓದದ ಪುಸ್ತಕಗಳಿಲ್ಲ ಎನ್ನುವುದು ಸಂತನ ಶಿಷ್ಯರ ಒಮ್ಮತದ ಅಭಿಪ್ರಾಯ.
ಇದು ದೊಡ್ಡ ಪಂಡಿತನೋರ್ವನಿಗೆ ತಿಳಿಯಿತು. ಅವನಿಗೆ ಸಂತನೊಂದಿಗೆ ಸವಾಲು ಹಾಕಬೇಕೆನಿಸಿತು. ತನ್ನ ಪುಸ್ತಕ ಭಂಡಾರದೊಂದಿಗೆ ಸಂತನಿದ್ದಲ್ಲಿಗೆ ನಡೆದ.
ಸಂತ ಮನೆಯ ಅಂಗಳವನ್ನು ಆವರಿಸಿದ್ದ ಮರದ ನೆರಳನ್ನು ಆಸ್ವಾದಿಸುತ್ತಿದ್ದ.
ಸಂತನನ್ನು ಕಂಡವನೇ ಪಂಡಿತ ಕೇಳಿದ ‘‘ಗುರುಗಳೇ, ನಾನು ಇದುವರೆಗೆ ಮೂರು ಸಾವಿರದ ಆರುನೂರು ಪುಸ್ತಕಗಳನ್ನು ಓದಿದ್ದೇನೆ. ಹೇಳಿ, ನೀವು ಓದಿದ ಪುಸ್ತಕಗಳೆಷ್ಟು?’’
ಸಂತ ನಕ್ಕು ಉತ್ತರಿಸಿದ ‘‘ನಾನು ಪುಸ್ತಕಗಳನ್ನು ಓದುವುದಿಲ್ಲ’’
ಪಂಡಿತ ಆವಕ್ಕಾದ ‘‘ನೀವು ಪುಸ್ತಕ ಓದುವುದಿಲ್ಲ ಎನ್ನುವುದು ನಂಬಲಸಾಧ್ಯವಾದುದು. ಹಾಗಾದರೆ ಶಿಷ್ಯರು ಹೇಳುತ್ತಿರುವುದು ಸುಳ್ಳೆ?’’
ಸಂತನ ನಗು ಮೊಗದಗಲ ವಿಸ್ತರಿಸಿತು ‘‘ಪುಸ್ತಕಗಳು ಇರುವುದು ಓದುವುದಕ್ಕಲ, ಅನುಭವಿಸುವುದಕ್ಕೆ. ಓದಿದ್ದನ್ನು ಲೆಕ್ಕವಿಡಬಹುದು. ಅನುಭವಿಸಿದ್ದನ್ನು ಲೆಕ್ಕವಿಡುವುದು ಹೇಗೆ?’’

ಒಂದು ಪುಟ್ಟ ಮೋಡ!
ಹರಡಿ ನಿಂತ ಅನಂತ ಆಕಾಶದಲ್ಲಿ ಒಂದು ಪುಟ್ಟ ಮೋಡ ತೇಲುತ್ತಿತ್ತು. ಆಸುಪಾಸಿನಲ್ಲಿ ಬೃಹದಾಕಾರದ ಮೋಡಗಳು ಬಿರುಸಿನಿಂದ ಓಡಾಡುತ್ತಿದ್ದವು. ಈ ಪುಟಾಣಿ ಮೋಡಕ್ಕೆ ಅಳು. ‘ನಾನೆಷ್ಟು ಸಣ್ಣವ’ ಎಂದು ಭಯವಾಯಿತು. ಜೋರಾಗಿ ಅಳ ತೊಡಗಿತು. ದೇವರಿಗೆ ಆ ಅಳು ಕೇಳಿಸಿತು.
ಪುಟ್ಟ ಮೋಡ ಇದೀಗ ತೇಲುತ್ತಾ ತೇಲುತ್ತಾ ಹಿರಿದಾದ ಮೋಡದೊಂದಿಗೆ ಸೇರಿಕೊಂಡು ಇನ್ನಷ್ಟು ಹಿರಿದಾಯಿತು. ‘ಓಹೋ, ನಾನೆಷ್ಟು ದೊಡ್ಡವನು, ನನಗಾರು ಸಾಟಿ...’ ಅಹಂಕಾರದಿಂದ ಮೆರೆಯಿತು. ಜೋರಾಗಿ ತೇಲುತ್ತಾ ಇನ್ನೊಂದು ಮೋಡಕ್ಕೆ ‘ಢೀ’ ಕೊಟ್ಟಿತು. ಅಷ್ಟೇ...ಮೋಡ ಹನಿ ಹನಿಯಾಗಿ ಉದುರತೊಡಗಿತು. ‘ಅರೇ...ಅಷ್ಟು ದೊಡ್ಡವನಾಗಿದ್ದ ನಾನು ಅದೆಷ್ಟು ಸಣ್ಣ ಹನಿಯಾದೆ...’ ಎನ್ನುತ್ತಿರುವಾಗಲೇ ಹನಿಯು ತೊರೆಯೊಂದನ್ನು ಸೇರಿ, ಕಲ್ಲು ಮುಳ್ಳು, ಗುಡ್ಡಗಳ ಸೆರೆಯಲ್ಲಿ ಹರಿಯತೊಡಗಿತು.
‘ದೇವರೇ...ನನಗ್ಯಾಕೆ ಈ ಶಿಕ್ಷೆ’ ಎಂದು ಹನಿ ಗೋಳು ತೋಡಿಕೊಳ್ಳುತ್ತಿರುವಾಗಲೇ ತೊರೆ ನದಿಯನ್ನು ಸೇರಿತು. ನದಿ ಕಡಲನ್ನು ಸೇರಿತು. ‘ಆಹಾ...ನಾನೀಗ ನಿಜವಾಗಿಯೂ ಏನಾಗಿದ್ದೇನೋ ಅದೇ ಆಗಿದ್ದೇನೆ....ಇನ್ನು ನನ್ನನ್ನು ಮೀರಿಸುವವರಿಲ್ಲ’ ಎಂದು ಯೋಚಿಸಿತು. ಯೋಚಿಸುತ್ತಿರುವಾಗಲೇ ಆಕಾರವೇ ಇಲ್ಲದ ಆವಿಯಾಯಿತು. ನಿಧಾನಕ್ಕೆ ಆಗಸವನ್ನು ಸೇರಿ ಒಂದು ಪುಟ್ಟ ಮೋಡವಾಯಿತು.

ವಿಚಿತ್ರ!
ಆತ ಶವ ಪೆಟ್ಟಿಗೆಯನ್ನು ನಿರ್ಮಿಸುವವನು. ಅದೆಷ್ಟು ಸುಂದರವಾಗಿ ಶವದ ಪೆಟ್ಟಿಗೆಯನ್ನು ತಯಾರಿಸುತ್ತಾನೆಂದರೆ, ತನ್ನ ಸರ್ವ ಪ್ರತಿಭೆಗಳನ್ನು ಆ ಶವಪೆಟ್ಟಿಗೆಗೆ ಧಾರೆಯೆರೆಯುತ್ತಾನೆ. ವಿವಿಧ ಬಣ್ಣಗಳಿಂದ ಹೂಬಳ್ಳಿಗಳನ್ನು ಅದರ ನಾಲ್ಕು ಅಂಚುಗಳಲ್ಲಿ ಬಿಡಿಸುತ್ತಾನೆ. ಅದರ ಮುಚ್ಚಳವನ್ನು ವಿವಿಧ ಝರಿ ಕಾಗದಗಳಿಂದ ಅಲಂಕರಿಸುತ್ತಾನೆ. ಚಿಟ್ಟೆಗಳು, ದುಂಬಿಗಳು, ನಕ್ಷತ್ರಗಳು, ಪ್ರಕೃತಿಯ ಸುಂದರ ವಸ್ತುಗಳನ್ನೆಲ್ಲಾ ಆ ಪೆಟ್ಟಿಗೆಯ ಮೇಲೆ ಬಿಡಿಸುತ್ತಾನೆ. ಸರ್ವಾಲಂಕೃತಳಾಗಿ ಹಸೆಮಣೆಯೇರಲು ಸಿದ್ಧಳಾಗಿರುವ ಮದುಮಗಳಂತೆ ಆ ಶವಪೆಟ್ಟಿಗೆ ಭಾಸವಾಗುತ್ತದೆ.
ಆದರೆ ವಿಚಿತ್ರ ನೋಡಿ! ಅಷ್ಟು ಸುಂದರವಾಗಿ ಮಾಡಿದ್ದರೂ, ಒಬ್ಬರಿಗೂ ಅದರೊಳಗೆ ಮಲಗಬೇಕೆಂಬ ಬಯಕೆ ಮೂಡುವುದಿಲ್ಲ. ಆ ಪೆಟ್ಟಿಗೆಯನ್ನು ನೋಡಿ, ಹಾವು ಕಂಡವರಂತೆ ಬೆಚ್ಚಿ ಬೀಳುತ್ತಾರೆ!

ಕವಿತೆಯ ಅಂಗಡಿ
ಆತ ಕವಿ. ಬದುಕುವುದಕ್ಕಾಗಿ ಒಂದು ಅಂಗಡಿಯಿಟ್ಟ. ಕವಿತೆಗಳ ಅಂಗಡಿಯದು. ಅಲ್ಲಿ ಬಗೆ ಬಗೆಯ ಕವಿತೆಗಳು ಮಾರಾಟಕ್ಕಿದ್ದವು. ವಿಷಾದ ಕವಿತೆಗಳು, ಪ್ರಕೃತಿ ಕವಿತೆಗಳು, ಪ್ರೇಮ ಕವಿತೆಗಳು, ವಿರಹ ಕವಿತೆಗಳು....ಹೀಗೆ. ತರುಣರು, ತರುಣಿಯರು ಬರುತ್ತಿದ್ದರು. ಗ್ರೀಟಿಂಗ್ಸ್‌ಗಾಗಿ, ಪ್ರೇಮಪತ್ರಗಳಿಗೆ ಜೋಡಿಸುವುದಕ್ಕಾಗಿ, ಯಾರನ್ನೋ ಮೆಚ್ಚಿಸುವುದಕ್ಕಾಗಿ, ಪ್ರಶಸ್ತಿ ಪಡೆಯಲಿಕ್ಕಾಗಿ ಅಲ್ಲಿಂದ ಕವಿತೆಗಳನ್ನು ಕೊಂಡು ಕೊಳ್ಳುತ್ತಿದ್ದರು. ಕೊಂಡುಕೊಂಡ ಬಳಿಕ ಆ ಕವಿತೆಯ ಹಕ್ಕು ಸಂಪೂರ್ಣ ಹಣಕೊಟ್ಟುಕೊಂಡವರದೇ ಆಗಿರುತ್ತಿತ್ತು.
ಒಂದು ದಿನ ನಾಡಿನ ಶ್ರೇಷ್ಟ ಪಂಡಿತ, ವಿಮರ್ಶಕ ಬಂದವನೇ ಕವಿಯಲ್ಲಿ ‘‘ಹೀಗೆ ಮಾಡುವುದು, ವೇಶ್ಯಾವಾಟಿಕೆ ಮಾಡುವುದು ಒಂದೇ. ಹಣದಿಂದ ಕಾವ್ಯದ ಸ್ಫೂರ್ತಿ ಪಡೆಯುವುದನ್ನು ನಾನು ಕಂಡದ್ದು ನಿನ್ನೊಬ್ಬನಲ್ಲಿ ಮಾತ್ರ. ಕವಿ ಸಂಕುಲಕ್ಕೆ ನಾಚಿಕೆಯ ವಿಷಯ’’ ಎನ್ನುತ್ತಾ ಛೀಮಾರಿ ಹಾಕಿದ.
ಕವಿ ಹಸನ್ಮುಖಿಯಾಗಿ ನುಡಿದ ‘‘ಇಲ್ಲ, ನನ್ನ ಗುರುವಿನ ಅಪ್ಪಣೆಯ ಮೇರೆಗೇ ಈ ಅಂಗಡಿಯನ್ನಿಟ್ಟಿದ್ದೇನೆ’’
‘‘ಯಾರು ನಿನ್ನ ಆ ಗುರು?’’ ಪಂಡಿತ ಕೇಳಿದ.
‘‘ಹೊರಗಡೆ ನಾಮಫಲಕ ನೋಡಿಲ್ಲವೆ? ನನ್ನ ಗುರುವಿನ ಹೆಸರನ್ನೇ ಈ ಅಂಗಡಿಗಿಟ್ಟಿದ್ದೇನೆ’’
ಪಂಡಿತ ಹೊರಗಡೆ ಬಂದು ಅಂಗಡಿಯ ನಾಮಫಲಕ ನೋಡಿದ. ನಾಮಫಲಕದಲ್ಲ್ಲಿ ‘‘ಹಸಿವು’’ ಎಂದು ಬರೆದಿತ್ತು.

Saturday, July 23, 2011

ಅಂಗಡಿ

ನನ್ನ ಈ ಕತೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ನನಗಿದೆ.


ಆ ಬಸ್ ನಿಲ್ದಾಣದ ತುಸು ದೂರದಲ್ಲಿರುವ ಒಂಟಿ ಮರವೊಂದರ ಕೆಳಗೆ ಆತ ಕುಳಿತಿದ್ದ. ದಷ್ಟಪುಷ್ಟನಾಗಿದ್ದರೂ, ಹರಿದ ಅಂಗಿ, ಕುರುಚಲು ಗಡ್ಡ, ಸ್ನಾನ ಕಾಣದ ತಲೆ ಇತ್ಯಾದಿಗಳೆಲ್ಲ ಆತ ಒಬ್ಬ ಪರದೇಶಿಯೆಂದು ಪರಿಚಯಿಸುತ್ತಿದ್ದವು. ಅಲ್ಲಿಯವರೆಗೆ ಮಲಗಿದ್ದವನು, ಎದ್ದು ಕೂತು ಆಕಳಿಸತೊಡಗಿದ. ಹೊಟ್ಟೆ ಚುರ್ರೆನ್ನುತ್ತಿತ್ತು. ನಿನ್ನೆ ರಾತ್ರಿಯೂ ಉಣ್ಣದಿರುವುದು ಆತನಿಗೆ ನೆನಪಾಯಿತು. ತನ್ನ ಮುಂದೆ ಹಾದು ಹೋಗುತ್ತಿರುವವರನ್ನು ಯಾವುದೋ ನಿರೀಕ್ಷೆಯಲ್ಲಿ ಸುಮ್ಮಗೆ ನೋಡತೊಡಗಿದ. ಆಗಾಗ ತನ್ನ ಹರಿದ ಲುಂಗಿಯ ಒಳಗಿರುವ ದೊಗಳೆ ಚಡ್ಡಿಗೆ ಕೈ ಹಾಕಿ ‘ಅದನು’್ನ ಮುಟ್ಟಿ ನೋಡುತ್ತಿದ್ದ. ಅದೊಂದು ಹವ್ಯಾಸ ಅವನಿಗೆ. ರಾತ್ರಿ ನಿದ್ದೆ ಮಾಡುವಾಗ ‘ಅದನ್ನು’ ಹಿಡಿದುಕೊಂಡೇ ಅವನು ಆ ಮರದ ಕೆಳಗೆ ನಿದ್ರಿಸುವುದು.

ಮಧ್ಯಾಹ್ನ ನಿಧಾನಕ್ಕೆ ಬಾಡಿ, ಸಂಜೆಯ ಬಣ್ಣವನ್ನು ಪಡೆಯುತ್ತಿತ್ತು. ಅಷ್ಟರಲ್ಲಿ ಒಬ್ಬ ಗುಂಗುರು ಕೂದಲಿನ, ದಪ್ಪ ಮುಖದ, ಕುಳ್ಳು ಶರೀರದ, ಬಿಳಿ ಬಣ್ಣದ ಮಧ್ಯವಯಸ್ಕ ಅವನ ಕೈಗೆ ಅದೇನನ್ನೋ ಕೊಟ್ಟು, ಮುಂದೆ ನಡೆದ. ‘‘ರೊಟ್ಟಿಯಿರಬಹುದೆ?’’ ಎಂದು ಆತ ಅದನ್ನು ಮೂಗಿನ ಬಳಿಗೆ ತಂದ. ರೊಟ್ಟಿಯ ವಾಸನೆಯಿತ್ತಾದರೂ ಅದೊಂದು ಪುಸ್ತಕವಾಗಿತ್ತು. ಕುಳಿತಲ್ಲೇ ಸುಮ್ಮಗೆ ಅದನ್ನು ಹಿಂದೆ ಮುಂದೆ ಮಾಡಿದ. ಅವನಿಗೆ ಅಕ್ಷರ ಗೊತ್ತಿರಲಿಲ್ಲ. ಚಂದದ ಬಣ್ಣ ಬಣ್ಣದ ಪುಸ್ತಕ. ‘ಏನಿರಬಹುದು? ನನಗೇಕೆ ಇದನ್ನು ಕೊಟ್ಟ?’ ಎಂದೆಲ್ಲ ಯೋಚಿಸುತ್ತಾ ಅದನ್ನು ಕಣ್ಣ ಮುಂದೆ ತಂದ. ನೀಳ ಗಡ್ಡವನ್ನು ಧರಿಸಿದ ಒಬ್ಬನ ಫೋಟೋ ಅದರಲ್ಲಿತ್ತು. ಅದರ ಪಕ್ಕದಲ್ಲೇ ದೊಡ್ಡದೊಂದು ‘ಕೂಡಿಸು’ ಚಿಹ್ನೆ. ಜೊತೆಗೆ ಆ ಚಿಹ್ನೆಯ ಮೇಲೆ ಅದೇ ಗಡ್ದದ ಮನುಷ್ಯ ನೇತಾಡುತ್ತಿದ್ದ. ಕೈಯಿಂದ, ಕಾಲಿಂದ ರಕ್ತ ಒಸರುತ್ತಿತ್ತು.
ಸಮಯ ಕಳೆಯುವುದಕ್ಕೆಂದು ಆ ಪುಸ್ತಕವನ್ನು ಬಿಡಿಸಿದ. ಅದೇ ಗಡ್ಡದ ಸ್ವಾಮಿ. ಆತನ ಕೈಯಲ್ಲೊಂದು ಕೋಲು. ಸುತ್ತಲೂ ಕುರಿಗಳು. ಒಂದೊಂದೇ ಪುಟ ಬಿಡಿಸತೊಡಗಿದ. ಮತ್ತೆ ಅದೇ ಗಡ್ಡದ ಸ್ವಾಮಿಯ ಚಿತ್ರ, ಪ್ರತಿ ಪುಟಗಳಲ್ಲೂ. ಅವನ ಸುತ್ತ ಜನರು ಸೇರಿದ್ದಾರೆ. ಮಹಿಳೆಯೊಬ್ಬಳು ಅವನ ಮುಂದೆ ಅಳುತ್ತಾ ಬಾಗಿದ್ದಾಳೆ. ಹೀಗೆ...ಆ ಪುಸ್ತಕವನ್ನು ಬಿಡಿಸುತ್ತಾ ಬಿಡಿಸುತ್ತಾ ಆ ಸಂಜೆಯನ್ನು ಕಳೆಯ ತೊಡಗಿದ. ಆಗಾಗ ತನ್ನ ಹರಿದ ಚಡ್ಡಿಯ ಒಳಗೆ ಕೈ ಹಾಕಿ ‘ಅದನ್ನು’ ಮುಟ್ಟಿ ನೋಡುವುದನ್ನು ಮರೆಯುತ್ತಿರಲಿಲ್ಲ.
ಮರುದಿನ ಮಧ್ಯಾಹ್ನದ ಹೊತ್ತಿಗೂ ಅವನು ಆ ಮರದಡಿಯಲ್ಲಿ ಕುಳಿತಿದ್ದ. ಪುಸ್ತಕ ಮಣ್ಣಿಂದ ಮಸುಕಾಗಿ, ಅನಾಥವಾಗಿ ಅವನ ಕಾಲ ಬುಡದಲ್ಲಿ ಚೆಲ್ಲಿತ್ತು. ಅಷ್ಟರಲ್ಲಿ ಅದೇ ಗುಂಗುರು ಕೂದಲಿನ ವ್ಯಕ್ತಿ ಆತನ ಬಳಿ ಬಂದ. ಅವನ ಹೆಗಲಲ್ಲಿ ಚೀಲವಿತ್ತು. ಅವನು ಕೇಳಿದ ‘‘ಊಟ ಮಾಡಿದೆಯ?’’
ಆತನಿಗೆ ಆಶ್ಚರ್ಯವಾಯಿತು. ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅವನ ಬಳಿ ಇಂತಹದೊಂದು ಪ್ರಶ್ನೆಯನ್ನು ಕೇಳಿದ್ದರು. ಯಾವುದೋ ಒಂದು ಕಾಲದಲ್ಲಿ ಅವನ ಪತ್ನಿಯಾಗಿದ್ದವಳೂ ಈ ಪ್ರಶ್ನೆಯನ್ನು ಅವನಲ್ಲಿ ಕೇಳಿರಲಿಲ್ಲ. ತಲೆಯೆತ್ತಿ ನೋಡಿದ. ತಮಾಷೆ ಮಾಡುತ್ತಿರಬಹುದೆಂದು ತಲೆಯನ್ನು ಬಸ್ ನಿಲ್ದಾಣದ ಕಡೆಗೆ ಹೊರಳಿಸಿದ.
ಗುಂಗುರು ಕೂದಲಿನಾತ ಕೇಳಿದ ‘‘ಪುಸ್ತಕ ಓದಿದೆಯ?’’
ಇವನಲ್ಲಿ ಉತ್ತರವಿಲ್ಲ. ಆತನ ಪಾದದ ಬಳಿ ಬಿದ್ದಿರುವ ಪುಸ್ತಕವನ್ನು ನೋಡುತ್ತಾ ಗುಂಗುರು ಕೂದಲಿನಾತ ಹೇಳಿದ ‘‘ನೋಡು...ಈ ಸರವನ್ನು ಕುತ್ತಿಗೆಯಲ್ಲಿ ಧರಿಸಿಕೋ...ನಿನ್ನ ಸಂಕಷ್ಟವೆಲ್ಲ ಪರಿಹಾರವಾಗುತ್ತದೆ....’’ ಆತ ಆ ಮಣಿ ಸರವನ್ನು ಕೈಗೆ ತೆಗೆದುಕೊಂಡ. ಅದರ ತುದಿಯಲ್ಲಿ ಮರದಲ್ಲಿ ಮಾಡಿದ ಒಂದು ‘ಕೂಡಿಸು’ ಚಿಹ್ನೆ. ಪುಸ್ತಕದಲ್ಲಿ ಕಂಡಂತಹದೆ. ‘‘ಆದರೆ ಇದಕ್ಕೆ ಕೊಡಲು ನನ್ನಲ್ಲಿ ದುಡ್ಡಿಲ್ಲ’’ ಆತ ಹೇಳಿದ.
ಗುಂಗುರು ಕೂದಲಿನಾತ ನಕ್ಕ ‘‘ಪ್ರಭು ಕೊಡುತ್ತಾನೆ. ಚಿಂತೆ ಮಾಡಬೇಡ. ಕೊರಳಿಗೆ ಹಾಕಿಕೊ’’ ಎಂದವನೇ ಅವನ ಕೈಗೆ ಐದು ರೂ. ಕೊಟ್ಟ. ಈತನಿಗೋ ಆಶ್ಚರ್ಯ! ತನ್ನ ಕೈಯಲ್ಲಿ ಅನಾಯಾಸವಾಗಿ ಐದು ರೂ. ಬಂದು ಸೇರಿದೆ. ಆ ನೋಟನ್ನು ಗಟ್ಟಿಯಾಗಿ ಕೈಯಲ್ಲಿ ಮುಚ್ಚಿಕೊಂಡು ಗುಂಗುರು ಕೂದಲಿನ ವ್ಯಕ್ತಿಗೆ ಕೈ ಮುಗಿಯಬೇಕೆಂದರೆ ಅವನು ಎದ್ದು ಮುಂದೆ ನಡೆದಾಗಿತ್ತು.

ಮರುದಿನ ಮಧ್ಯಾಹ್ನದ ಹೊತ್ತಿಗೆ ಅದೇ ಮರದ ಕೆಳಗೆ ಕೂತಿದ್ದ ಆತನ ಕಣ್ಣು ಯಾರದೋ ನಿರೀಕ್ಷೆಯಲ್ಲಿತ್ತು. ಆಗಾಗ ಮಲಗುತ್ತಾ, ಏಳುತ್ತಾ ಮಾಡುತ್ತಿದ್ದ. ಆಕಳಿಕೆ ತೆಗೆಯುತ್ತಿದ್ದ. ಪಕ್ಕದಲ್ಲೇ ಇದ್ದ ಪುಸ್ತಕವನ್ನು ಬಿಡಿಸಿ ಅದರಲ್ಲಿರುವ ನೀಳ ಗಡ್ಡದ ಸ್ವಾಮಿಯ ಚಿತ್ರ ನೋಡುತ್ತಿದ್ದ. ಅಷ್ಟರಲ್ಲಿ ಅವನು ಬಂದ. ಈತನ ಕೈಯಲ್ಲಿ ಪುಸ್ತಕ ಕಂಡು ಅವನು ಹಸನ್ಮುಖಿಯಾದ. ಬಂದವನೇ ‘‘ಊಟ ಆಯ್ತಿ?’’ ಎಂದು ಕೇಳಿದ. ಈತ ಮಾತನಾಡಲಿಲ್ಲ. ತುಸು ಹೊತ್ತಿನ ಬಳಿಕ ಗುಂಗುರು ಕೂದಲಿನವ ಹೇಳಿದ ‘‘ನೀನ್ಯಾಕೆ ಚರ್ಚಿಗೆ ಬರಬಾರದು...ನಾಳೆ ರವಿವಾರ...ಅಲ್ಲಿ ನಾವೆಲ್ಲ ದೇವರೊಟ್ಟಿಗೆ ಪ್ರಾರ್ಥನೆ ಮಾಡುತ್ತೇವೆ...ಇಲ್ಲೇ ಬಸ್ ನಿಲ್ದಾಣದ ಹಿಂದೆ ಚರ್ಚಿದೆ....’’
‘‘ಆದರೆ....’’ಇವನೇನೋ ಹೇಳುವುದಕ್ಕೆ ಮುಂದಾದಾಗ ಗುಂಗುರು ಕೂದಲಿನಾತ ಅವನ ಮಾತನ್ನು ತಡೆದು ಕಿಸೆಗೇನೋ ಹಾಕಿದ. ಇಣುಕಿ ನೋಡಿದರೆ ನೂರು ರೂಪಾಯಿಯ ನೋಟು! ಅವನು ದಂಗಾಗಿ ಗುಂಗುರು ಕೂದಲಿನವನನ್ನು ನೋಡಿದ. ‘‘ಬರ್ತೀಯ?’’ ಕೇಳಿದ.
‘‘ಬರ್ತೇನೆ...ಆದರೆ ಯಾಕೆ?’’ ಎಂದ.
‘‘ಅಲ್ಲಿ ಪ್ರಾರ್ಥನೆಯಾದ ಮೇಲೆ ಬ್ರೆಡ್ ಮತ್ತು ಹಾಲು ಕೊಡುತ್ತಾರೆ, ಬಡವರಿಗಾಗಿ’’ ಎಂದ. ಎದ್ದು ನಿಂತು ಗುಂಗುರು ಕೂದಲಿನವನಿಗೆ ಆತ ಕೈ ಮುಗಿದ. ಗುಂಗುರು ಕೂದಲಿನವ ಹೋದದ್ದೆ, ಆತ ತನ್ನ ಕಿಸೆಯಲ್ಲಿದ್ದ ನೂರು ರೂ. ನೋಟನ್ನು ಬಿಡಿಸಿ ಕಣ್ಣ ಮುಂದೆ ತಂದ. ಆತನ ಕೈ ಸಣ್ಣಗೆ ಕಂಪಿಸುತ್ತಿತ್ತು.

ಮರುದಿನ ಬೆಳಗ್ಗೆ ಚರ್ಚಿನ ಬಳಿ ಹೋದ. ತುಸು ಹೊತ್ತಲ್ಲೇ ಅವನಿಗೆ ಆ ಗುಂಗುರು ಕೂದಲಿನವ ಎದುರಾದ. ‘‘ಬಾ...ಪ್ರಾರ್ಥನೆಯ ಸಮಯವಾಯಿತು’’ ಎಂದ. ಈತ ಅವನೊಂದಿಗೆ ಆ ವಿಶಾಲ ಭವನದ ಒಳಗೆ ನಡೆದ. ಎಲ್ಲರೂ ಜೊತೆಯಾಗಿ ಹಾಡುತ್ತಿದ್ದರು. ಆತನು ತುಟಿ ಅಲ್ಲಾಡಿಸತೊಡಗಿದ. ಪ್ರಾರ್ಥನೆ ಮುಗಿದ ಬಳಿಕ ಗುಂಗುರು ಕೂದಲಿನವ 5 ರೂ. ಕೊಟ್ಟು ‘‘ಯಾವುದಾದರೂ ಹೊಟೇಲಿನಲ್ಲಿ ಚಹಾ ಕುಡಿ. ಮುಂದಿನ ರವಿವಾರ ನೆನಪಲ್ಲಿ ಬಾ’’ ಎಂದ. ಈತ ಅದನ್ನು ಜೋಪಾನ ಮಡಚಿ, ನಿಲ್ದಾಣದ ಪಕ್ಕದ ತನ್ನ ಮರದ ಬಳಿಗೆ ನಡೆದ.

ಎರಡು ರವಿವಾರವೂ ಆತ ಪ್ರಾರ್ಥನೆಗೆ ಹೋದ. ಅಲ್ಲಿ ಗುಂಗುರು ಕೂದಲಿನವನ ಜೊತೆಗೆ ಅದೇನೋ ಹಾಡಿದ. ಒಂದು ದಿನ ಗುಂಗುರುಕೂದಲಿನವ ಆತನೊಂದಿಗೆ ಕೇಳಿದ ‘‘ನೀನು ಕ್ರಿಶ್ಚಿಯನ್ ಧರ್ಮಕ್ಕೆ ಯಾಕೆ ಬರಬಾರದು? ಅದೇ ಪ್ರಭುವಿನ ನಿಜವಾದ ಧರ್ಮ. ನೀನು ನಿನ್ನ ಧರ್ಮವನ್ನು ಬದಲಿಸು’’
ಆತನಿಗೆ ಅರ್ಥವಾಗಲಿಲ್ಲ. ‘‘ಧರ್ಮವನ್ನು ಬದಲಿಸುವುದು ಹೇಗೆ?’’ ಕೇಳಿದ.
‘‘ಆ ಕೆಲಸವನ್ನು ನಮ್ಮ ಧರ್ಮಗುರುಗಳು ಮಾಡುತ್ತಾರೆ’’
‘‘ಧರ್ಮವನ್ನು ಬದಲಿಸಿದಾಗ ನನಗೆ ಏನಾಗುತ್ತದೆ? ಧರ್ಮ ಬದಲಾಗಿದೆ ಎಂದು ನನಗೆ ಗೊತ್ತಾಗುವುದು ಹೇಗೆ?’’ ಆತ ಕೇಳಿದ.
‘‘ನಿನ್ನಲ್ಲಿ ಬದಲಾವಣೆಯಾಗುತ್ತದೆ’’ ಗುಂಗುರು ಕೂದಲಿನವ ಹೇಳಿದ.
ಆತನಿಗೆ ಅಚ್ಚರಿಯಾಯಿತು ‘‘ನನ್ನಲ್ಲಿ ಬದಲಾವಣೆಯಾಗುತ್ತದೆಯೆ?’’
‘‘ಹೌದು, ನಿನ್ನ ಒಳಗೂ ಹೊರಗೂ ಬದಲಾವಣೆಯಾಗುತ್ತದೆ’’
ಈತ ಒಮ್ಮೆಲೆ ಕಂಪಿಸಿದ. ಅಂದರೆ ಹೊರಗೂ...ಒಳಗೂ...ಅಂದರೆ ಒಳಗೂ ಬದಲಾವಣೆಯಾಗುತ್ತದೆಯೇ? ಅವನಲ್ಲೇನೋ ಒಂದು ಆಸೆ ಮಿಂಚಿತು. ಒಳಗೆ ಅಂದರೆ ನನ್ನ ‘ಅದೂ’ ಬದಲಾವಣೆಯಾಗಬಹುದೆ?
ಅವನ ಚಡ್ಡಿಯೊಳಗಿನ ಅದು ಬಹಳ ಸಣ್ಣದು. ಮದುವೆಯಾದ ರಾತ್ರಿಯೇ ಅವಳು ಸಿಟ್ಟಿನಿಂದ ಒದರಿದ್ದಳು ‘‘ನಿಮ್ಮದು ಬರೇ ಸಣ್ಣದು’’. ಅವನು ಅವಮಾನದಿಂದ ಕುಗ್ಗಿ ಒಂದೇ ವಾರದಲ್ಲಿ ಮನೆ ಬಿಟ್ಟಿದ್ದ. ಅವಳು ಹೇಳಿದ್ದೂ ಸರಿಯಾಗಿಯೇ ಇತ್ತು. ‘ನನ್ನದು ಬರೇ ಸಣ್ಣದು’. ಆ ದಿನದಿಂದ ನೋವಿನ ಹಲ್ಲನ್ನು ನಾಲಿಗೆ ಮುಟ್ಟುವಂತೆ ಸದಾ ಅದನ್ನು ಮುಟ್ಟಿ ನೋಡುವುದು ಅವನಿಗೆ ಹವ್ಯಾಸವಾಗಿತ್ತು. ಇದೀಗ ಗುಂಗುರು ಕೂದಲಿನವ ‘ಒಳಗೂ ಬದಲಾವಣೆಯಾಗುತ್ತದೆ’ ಎಂದದ್ದು ಅವನಿಗೆ ಬದುಕುವುದಕ್ಕೆ ಹೊಸ ಸ್ಫೂರ್ತಿಯನ್ನು ನೀಡಿತ್ತು.
‘‘ಸರಿ, ನಾನು ಧರ್ಮ ಬದಲಿಸುತ್ತೇನೆ’’ ಅವನು ಘೋಷಿಸಿದ. ಅವನ ಧ್ವನಿಯಲ್ಲಿರುವ ದೃಢತೆಯನ್ನು ಕಂಡು ಗುಂಗುರು ಕೂದಲಿನವನಿಗೆ ಸಂತೋಷವಾಯಿತು. ‘‘ಹಾಗಾದರೆ ಮುಂದಿನ ರವಿವಾರ ನಾನು ವ್ಯವಸ್ಥೆ ಮಾಡುತ್ತೇನೆ’’ ಎಂದ.

ಅಂತೂ ರವಿವಾರ ಬಂತು. ನಿಲ್ದಾಣದ ಪಕ್ಕದಲ್ಲೇ ಹರಿಯುತ್ತಿರುವ ನದಿಯಲ್ಲಿ ಸ್ನಾನ ಮಾಡಿ, ಆತ ಚರ್ಚಿಗೆ ಬಂದ. ಅಲ್ಲಿ ಗುಂಗುರು ಕೂದಲಿನವ ಕಾಯುತ್ತಿದ್ದ. ಅವನ ಜೊತೆಗೆ ಇನ್ನೂ ಇಬ್ಬರಿದ್ದರು. ಈತನನ್ನು ಚರ್ಚಿನ ಒಳಗೆ ಒಯ್ದರು. ಅಲ್ಲಿ ಬಿಳಿ ಗವನ್ ಹಾಕಿದವರಿದ್ದರು. ಗಡ್ಡವಿದ್ದರೆ ಆ ಪುಸ್ತಕದಲ್ಲಿದ್ದ ಸ್ವಾಮಿಯಂತೆಯೇ ಕಾಣುತ್ತಿದ್ದರೇನೋ. ಅವರು ಅದೇನೋ ಪುಸ್ತಕದಲ್ಲಿದ್ದುದನ್ನು ಓದ ತೊಡಗಿದರು. ಈತನಿಗೂ ಓದಿಸಿದರು. ನೀರನ್ನು ತಲೆಯ ಮೇಲೆ ಪ್ರೋಕ್ಷಿಸಿದರು. ಮಧ್ಯಾಹ್ನದವರೆಗೂ ಕೆಲಸ ನಡೆಯಿತು. ಎಲ್ಲವೂ ಆದ ಬಳಿಕ ಗುರುಗಳು ಆಶೀರ್ವದಿಸಿ ಅಲ್ಲಿಂದ ತೆರಳಿದರು.
‘‘ನಾನು ಧರ್ಮವನ್ನು ಬದಲಿಸುವುದು ಯಾವಾಗ?’’ ಆತ ಕೇಳಿದ.
ಗುಂಗುರು ಕೂದಲಿನವ ನಕ್ಕು ‘‘ನೀನೀಗ ಕ್ರೈಸ್ತನಾಗಿದ್ದೀಯ. ನಿನ್ನ ಧರ್ಮ ಬದಲಾಗಿದೆ’’ ಎಂದು ಘೋಷಿಸಿದ.
ಅವನಿಗೆ ಆಶ್ಚರ್ಯ. ‘‘ಹೌದೆ, ನಾನೀಗ ಬದಲಾಗಿದ್ದೇನೆಯೆ?’’
‘‘ಹೌದು...ನೀನೀಗ ಬದಲಾಗಿದ್ದೀಯ’’
‘‘ನನ್ನ ಹೊರಗೂ, ಒಳಗೂ ಬದಲಾಗಿದೆಯೆ?’’
‘‘ಹೌದು ಬದಲಾಗಿದೆ’’
‘‘ಒಳಗೂ ಬದಲಾಗಿದೆಯೆ?’’
‘‘ಹೌದು, ಬದಲಾಗಿದೆ’’ ಗುಂಗುರು ಕೂದಲಿನವ ಒತ್ತಿ ಹೇಳಿದ.
ಆತನಿಗೇನೋ ಗೊಂದಲ. ‘‘ನಾನೀಗ ಟಾಯ್ಲೆಟ್ಟಿಗೆ ಹೋಗಿ ಬರಬಹುದೆ?’’ ಎಂದ. ಅವರು ಅನುಮತಿ ನೀಡಿದರು.
ಟಾಯ್ಲೆಟ್ಟಿಗೆ ಹೋದವನೇ ಅವಸರವಸರವಾಗಿ ತನ್ನ ದೊಗಳೆ ಚಡ್ಡಿಯನ್ನು ಬಿಚ್ಚಿ ಬಗ್ಗಿ ನೋಡಿದ. ನೋಡಿದರೆ ‘ಅದು’ ಅಷ್ಟೇ ಸಣ್ಣದಿತ್ತು. ಎಳೆದು ಉದ್ದವಾಗುತ್ತದೆಯೋ ಎಂದು ನೋಡಿದ. ಊಹುಂ...ಯಾವುದೇ ಬದಲಾವಣೆ ಕಾಣುತ್ತಿಲ್ಲ. ಆದರೆ ಅವರ ಬಳಿ ‘‘ಒಳಗೆ ಬದಲಾವಣೆ ಆಗಿಲ್ಲ’’ ಎಂದು ಹೇಗೆ ಹೇಳುವುದು? ಅವನಿಗೆ ಸಂಕಟವಾಯಿತು. ಬಹುಶಃ ಹೊರಗೆ ಮಾತ್ರ ಬದಲಾವಣೆಯಾಗಿದ್ದು, ಒಳಗೆ ಬದಲಾವಣೆಯಾಗುವುದಕ್ಕೆ ಏನೋ ಸಮಸ್ಯೆಯಾಗಿದೆ ಎಂದುಕೊಂಡ. ಅಥವಾ ಕೆಲವು ದಿನ ಕಳೆದ ಮೇಲೆ ಬದಲಾವಣೆಯಾಗಬಹುದೋ? ಚಡ್ಡಿಯನ್ನು ಧರಿಸಿ, ತನಗೆ ತಾನೆ ಅತ್ತ. ಬಳಿಕ ಮುಖತೊಳೆದು ಹೊರಬಂದ. ಟಾಯ್ಲೆಟ್ಟಿನಿಂದ ಹೊರ ಬಂದ ಅವನು ಮಂಕಾಗಿರುವುದು ಗುಂಗುರು ಕೂದಲಿನವನ ಗಮನಕ್ಕೆ ಬಂತು. ನೂರು ರೂ. ನೋಟನ್ನು ಅವನ ಕಿಸೆಗೆ ಹಾಕಿ ‘‘ಪ್ರತಿ ರವಿವಾರ ಚರ್ಚಿಗೆ ಪ್ರಾರ್ಥನೆಗೆ ಬರಬೇಕು’’ ಎಂದ.
ಆತ ‘‘ಆಯಿತು’’ ಎಂದ. ಆದರೆ ನೂರು ರೂ.ವನ್ನು ಕಂಡು ಎಂದಿನ ಉತ್ಸಾಹದಿಂದ ಅವನು ಪ್ರತಿಕ್ರಿಯಿಸಿರಲಿಲ್ಲ.

***
ಇದಾಗಿ ಎರಡು ವಾರ ಕಳೆದಿದೆ. ಅವನು ಆ ಬಳಿಕ ಚರ್ಚಿಗೆ ಕಾಲಿಟ್ಟಿರಲಿಲ್ಲ. ಅವನನ್ನು ಹುಡುಕಿಕೊಂಡು ಗುಂಗುರು ಕೂದಲಿನವನೂ ಬರಲಿಲ್ಲ. ಕೊರಳಲ್ಲಿ ಮಾತ್ರ ಕೂಡಿಸು ಚಿಹ್ನೆ ಇರುವ ಸರ ನೇತಾಡುತ್ತಿತ್ತು. ಅವನು ತನ್ನ ಚಡ್ಡಿಯೊಳಗಿರುವ ‘ಅದನ್ನು’ ಆಗಾಗ ಮುಟ್ಟಿ ನೋಡುತ್ತಾ ಸಮಯ ಕಳೆಯುತ್ತಿದ್ದ. ಅವನ ಹೊಟ್ಟೆ ಚುರ್ರೆನ್ನುತ್ತಿತ್ತು. ಬೆಳಗ್ಗೆ ಏನೂ ತಿಂದಿರಲಿಲ್ಲ. ಮಧ್ಯಾಹ್ನ ಏನಾದರೂ ಸಿಗುತ್ತದೆ ಎಂಬ ಭರವಸೆ ಅವನಿಗಿರಲಿಲ್ಲ. ನಾಲಗೆ ಒಣಗಿತ್ತು. ನೀರು ಕುಡಿಯ ಬೇಕೆನಿಸಿತು. ಆದರೆ ಹೊಟೇಲಿಗೆ ಹೋದರೂ ಅವನಿಗೆ ನೀರು ಕೊಡುವವರಾರೂ ಇದ್ದಿರಲಿಲ್ಲ.

ಅಷ್ಟರಲ್ಲಿ ಅಲ್ಲಿಗೆ ಇಬ್ಬರು ಬಂದರು. ಒಬ್ಬ ತಲೆಗೆ ಟೊಪ್ಪಿ ಹಾಕಿಕೊಂಡಿದ್ದ. ಪರಿಚಿತರಂತೆ ನಕ್ಕು ಅವನ ಪಕ್ಕ ಕೂತರು. ಟೊಪ್ಪಿಯವ ಕೇಳಿದ ‘‘ಭಯಂಕರ ಬಿಸಿಲಲ್ಲವ?’’ ಆತನಿಗೆ ಅದು ಅರ್ಥವಾಗಲಿಲ್ಲ. ಅದನ್ನು ಈತ ನನ್ನ ಬಳಿ ಯಾಕೆ ಹೇಳುತ್ತಿದ್ದಾನೆ?
‘‘ಊಟ ಆಯ್ತ?’’ ಟೊಪ್ಪಿ ಧರಿಸಿದಾತ ಮತ್ತೆ ಕೇಳಿದ.
‘‘ಇಲ್ಲ’’ ಆತನ ಬಾಯಿಯಿಂದ ಉತ್ತರ ಜಾರಿ ಬಿತ್ತು.
‘‘ಮತ್ತೆ ಒಟ್ಟಿಗೆ ಊಟ ಮಾಡುವ. ನನ್ನ ಸಂಬಂಧಿಕರ ಮದುವೆ ಉಂಟು ಹೋಗುವ. ಬಿರಿಯಾನಿ ಊಟ...’’ ಎಂದ.
ಆತನಿಗೆ ಅಚ್ಚರಿ. ಇವನ ಸಂಬಂಧಿಕರ ಮದುವೆಗೆ ನನ್ನನ್ನೇಕೆ ಕರೆಯುತ್ತಿದ್ದಾನೆ?
ತುಸು ಹೊತ್ತು ವೌನ.
ಇದ್ದಕ್ಕಿದ್ದಂತೆಯೇ ಟೊಪ್ಪಿ ಧರಿಸಿದಾತ ಕೇಳಿದ ‘‘ಅಲ್ಲಾ ಇವ್ರೆ...ನೀವು ಧರ್ಮ ಬದಲಿಸುತ್ತೀರಿ ಅಂತಾದ್ರೆ ನಮ್ಮತ್ರ ಒಂದು ಮಾತು ಹೇಳುವುದಲ್ವಾ...? ಹೋಗಿ ಹೋಗಿ ಆ ಹಂದಿ ತಿನ್ನುವವರ ಧರ್ಮಕ್ಕೆ ಸೇರುವುದಾ...?’’
ಆತ ಒಮ್ಮೆಲೆ ಚುರುಕಾದ. ಆದರೆ ಏನೂ ಉತ್ತರಿಸಲಿಲ್ಲ.
‘‘ನೋಡಿ ಇವ್ರೆ...ಅವ್ರ ಧರ್ಮಕ್ಕೆ ಸೇರಿದಿರಿ. ಆದರೆ ಏನಾದರೂ ಬದಲಾವಣೆಯಾಯಿತಾ ನಿಮ್ಮಲ್ಲಿ?’’ ಟೊಪ್ಪಿ ಧರಿಸಿದಾತ ಕೇಳಿದ.
ಈ ಪ್ರಶ್ನೆ ಮಾತ್ರ ಅರ್ಥವುಳ್ಳದ್ದು. ನನ್ನಲ್ಲಿ ಬದಲಾವಣೆಯಾಗಲಿಲ್ಲ ಎನ್ನುವುದು ಇವನಿಗೆ ಹೇಗೆ ಗೊತ್ತಾಯಿತು? ಟೊಪ್ಪಿಯವನ ಮಾತಿನ ಕಡೆಗೆ ತುಸು ಆಕರ್ಷಿತನಾದ.
‘‘ಕ್ರಿಸ್ತನನ್ನು ಮುಸ್ಲಿಮರೂ ನಂಬುತ್ತಾರೆ. ಆದರೆ ಇವರೆಲ್ಲ ಕ್ರಿಸ್ತನ ಹಾದಿಯಲ್ಲಿಲ್ಲ. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸ್ಸಲ್ಲಂ ಕ್ರೈಸ್ತ ಬೋಧಿಸಿದ ನಿಜವಾದ ತತ್ವವನ್ನು ಹೇಳುವುದಕ್ಕಾಗಿಯೇ ಭೂಮಿಗೆ ಬಂದದ್ದು. ಛೆ...ನಾನು ಇದನ್ನೆಲ್ಲ ನಿಮಗೆ ಮೊದಲೇ ಹೇಳಬೇಕು ಅಂತ ಇದ್ದೆ. ಅಷ್ಟರಲ್ಲಿ ನೀವು ಆ ಹಂದಿ ತಿನ್ನುವವರ ಜಾತಿ ಸೇರಿದ್ದಾ?’’ ಅವನು ಹಣೆಗೆ ಕೈ ಚಚ್ಚಿಕೊಂಡ.
‘‘ನೀವು ಇಸ್ಲಾಂ ಧರ್ಮಕ್ಕೆ ಬದಲಾಗುವುದಾದರೆ ನಾನು ಈಗಲೇ ಅದಕ್ಕೆ ವ್ಯವಸ್ಥೆ ಮಾಡುತ್ತೇನೆ...ಹೇಳಿ ಧರ್ಮ ಬದಲಿಸುತ್ತೀರಾ....?’’ ಕೇಳಿದ.
ಆತನೊಳಗೆ ಸಣ್ಣದೊಂದು ಸುಂಟರಗಾಳಿ ಬೀಸತೊಡಗಿತು ‘‘ಆದರೆ.....’’
‘‘ಆದರೆ ಗೀದರೆ ಎಂತದು ಇಲ್ಲ....’’ ಎನ್ನುತ್ತಾ ಟೊಪ್ಪಿಯವ ಆತನ ಕಿಸೆಗೆ ನೋಟೊಂದನ್ನು ತುರುಕಿಸಿದ. ಆತ ತನ್ನ ಕಿಸೆಗೆ ಇಣುಕಿ ನೋಡಿದ ‘ನೂರು...!’ ಅಪ್ರಯತ್ನವಾಗಿ ಅವನ ಬಾಯಿಯಿಂದ ಉದ್ಗಾರ ಹೊರಟಿತು.
‘‘ಬನ್ನಿ ಬನ್ನಿ ಹೊತ್ತಾಯಿತು...ನನ್ನ ಹತ್ತಿರದ ನೆಂಟನ ಮದುವೆ...ಮೊದಲು ಬಿರಿಯಾನಿ ತಿಂದು ನಂತರ ಮಾತನಾಡುವ...’’ ಎಂದು ಎಬ್ಬಿಸಿದ. ಆತ ಯಂತ್ರದಂತೆ ಎದ್ದು ನಿಂತ.

ಮರುದಿನ ಮಧ್ಯಾಹ್ನ ಆತ ಅದೇ ಮರದ ನೆರಳಲ್ಲಿ ಕುಳಿತಿದ್ದ. ಅವರು ನಗುತ್ತಾ ಬಂದರು ‘‘ಭಾರೀ ಬಿಸಿಲಲ್ವಾ...?’’
‘‘ಹೌದೌದು ಬಿಸಿಲು...’’ ಆತ ಉತ್ತರಿಸಿದ. ನಿನ್ನೆಯ ನೂರರ ನೋಟು ಪುಡಿಯಾಗಿ 50 ರೂ. ನೋಟಿನ ರೂಪವನ್ನು ತಾಳಿತ್ತು.
ಅವನು ನೇರ ವಿಷಯಕ್ಕೆ ಬಂದ ‘‘ಹೇಳಿ ಧರ್ಮ ಬದಲಿಸುತ್ತೀರಾ?’’
ಆತ ತನ್ನ ಸಮಸ್ಯೆಯನ್ನು ಮುಂದಿಟ್ಟ ‘‘ನನ್ನ ಧರ್ಮ ಬದಲಾಗಿದೆ ಎಂದು ನನಗೆ ಗೊತ್ತಾಗುವುದು ಹೇಗೆ?’’
ಈ ಪ್ರಶ್ನೆಗೆ ಇಬ್ಬರೂ ಕಕ್ಕಾಬಿಕ್ಕಿಯಾದರು. ಆದರೆ ಟೊಪ್ಪಿಯವ ತಕ್ಷಣ ಚೇತರಿಸಿಕೊಂಡ ‘‘ನಿಮ್ಮ ‘ಅದು’ ಕಟ್ ಮಾಡುತ್ತೇವಲ್ಲ...ಅದರಿಂದ ನೀವು ಮುಸ್ಲಿಂ ಆಗುತ್ತೀರಿ’’
ಇದನ್ನು ಕೇಳಿದ್ದೇ ಆತನ ಪ್ರಾಣ ಬಾಯಿಗೆ ಬಂದಂತಾಯಿತು ‘‘ಅದು ಅಂದರೆ ‘ಅದನ್ನು’ ಕಟ್ ಮಾಡುವುದೇ?’’
ಟೊಪ್ಪಿ ಧರಿಸಿದಾತ ಸಹಜವೆಂಬಂತೆ ಹೇಳಿದ ‘‘ಹೌದು, ಮುಸ್ಲಿಂ ಆಗುವ ಮೊದಲು ನಾವು ‘ಅದರ’ ತುದಿಯನ್ನು ಕಟ್ ಮಾಡುತ್ತೇವೆ’’
ಆತ ಕುಳಿತಲ್ಲಿಂದ ಥಕ್ಕನೆ ಎದ್ದು ನಿಂತು ಹೇಳಿದ ‘‘ಅದನ್ನು ಮುಟ್ಟುವುದಕ್ಕೆ ನಾನು ಬಿಡುವುದಿಲ್ಲ. ಅದನ್ನು ಕಟ್ ಮಾಡುವುದಾದರೆ ನಾನು ಧರ್ಮ ಬದಲಿಸುವುದೇ ಇಲ್ಲ...ಬೇಕಾದರೆ ನಿಮ್ಮ ದುಡ್ಡು ನಿಮಗೇ ಇರಲಿ...’’ ಎಂದವನೇ ಕಿಸೆಯಲ್ಲಿ ಉಳಿದಿದ್ದ 50ರ ನೋಟನ್ನು ಅವರ ಮುಂದೆ ಚಾಚಿದ.
ಆತನ ನಡವಳಿಕೆಯಿಂದ ಅವರೂ ಆವಕ್ಕಾದರು. ‘‘ಸರಿ, ನಾವು ನಮ್ಮ ಗುರುಗಳತ್ರ ಕೇಳಿ ಹೇಳ್ತೇವೆ. ಅದನ್ನು ಕಟ್ ಮಾಡಬೇಕಾಗಿಲ್ಲ ಅಂದ್ರೆ ನೀನು ಮುಸ್ಲಿಂ ಆಗುವುದಕ್ಕೆ ರೆಡಿಯಾ?’’
ಆತನಿಗೆ ತುಸು ಸಮಾಧಾನವಾಯಿತು ‘‘ಅದನ್ನು ಏನೂ ಮಾಡಬಾರದು. ಅದನ್ನು ಮುಟ್ಟುವುದಾದರೆ ಧರ್ಮ ಬದಲಿಸುವ ಪ್ರಶ್ನೆಯೇ ಇಲ್ಲ. ಕಟ್ ಮಾಡಬೇಕಾಗಿಲ್ಲ ಅಂದ್ರೆ ನೋಡುವ’’ ಆತ ಪಕ್ಕಾ ವ್ಯವಹಾರಿಯಂತೆ ಮಾತನಾಡಿದ.
ಅವರಿಗೂ ಸಮಾಧಾನವಾಯಿತು. ‘‘ಗುರುಗಳತ್ರ ಚರ್ಚೆ ನಡೆಸಿ, ನಾಳೆ ಬರ್ತೇವೆ’’ ಎಂದವರೇ ಅಲ್ಲಿಂದ ಹೊರಟರು.

ಮರುದಿನ ಮಧ್ಯಾಹ್ನ ಆತ ಅವರ ನಿರೀಕ್ಷೆಯಲ್ಲಿ ಕುಳಿತಿರುವಾಗಲೇ ಅವರು ಗಲಗಲನೆ ನಗುತ್ತಾ ಬಂದರು. ಟೊಪ್ಪಿ ಧರಿಸಿದಾತ ಓಡಿ ಬಂದು ಆಲಂಗಿಸಿದ ‘‘ಶುಕ್ರಿಯಾ, ಅದನ್ನು ಕಟ್ ಮಾಡುವುದು ಕಡ್ಡಾಯ ಅಲ್ಲವಂತೆ. ನೀನು ಧರ್ಮ ಬದಲಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ...’’ ಹೀಗೆಂದು ಅವನ ಕಿಸೆಗೆ ಒಂದು ನೋಟನ್ನು ತುರುಕಿಸಿದ. ಇಣುಕಿದರೆ ಮತ್ತೆ ನೂರರ ನೋಟು!
ಆದರೆ ಅವನಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದಿತ್ತು. ‘‘ಧರ್ಮ ಬದಲಿಸಿದರೆ ನನಗೆಂತದು ಲಾಭ?’’
ಅವನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದರು. ಆದರೆ ಟೊಪ್ಪಿಯವ ಪಕ್ಕನೆ ಚೇತರಿಸಿದ ‘‘ನಾವೆಲ್ಲ ಸಹೋದರರು. ನಮ್ಮ ಮದುವೆ, ಸಮಾರಂಭಕ್ಕೆ ನೀನು ಬರಬಹುದು. ಬಿರಿಯಾನಿ ತಿಂದು ಹೋಗಬಹುದು’’
‘‘ಮತ್ತೆ?’’
ಮತ್ತೆ!? ಟೊಪ್ಪಿಯವ ಹೇಳಿದ ‘‘ಪ್ರತಿ ಶುಕ್ರವಾರ ನಮ್ಮ ಮಸೀದಿಯ ಅಂಗಳದಲ್ಲಿ ನಿನಗೆ ಭಿಕ್ಷೆ ಬೇಡಲು ಅವಕಾಶ ಮಾಡಿ ಕೊಡುತ್ತೇವೆ. ಅಷ್ಟೇ ಅಲ್ಲ...ಮಸೀದಿಯಲ್ಲೇ ಮಲಗುವುದಕ್ಕೂ ವ್ಯವಸ್ಥೆ ಮಾಡುತ್ತೇವೆ...’’
ಶುಕ್ರವಾರ ಮಸೀದಿಯ ಅಂಗಳದಲ್ಲಿ ಭಿಕ್ಷೆ ಬೇಡಬಹುದು ಎನ್ನುವುದು ಆತನಿಗೆ ತುಸು ಲಾಭದಾಯಕವಾಗಿ ಕಂಡಿತು. ದೇವಸ್ಥಾನದ ಪಕ್ಕ ಭಿಕ್ಷೆ ಬೇಡಿದರೆ ಎಂಟಾನೆಗಿಂತ ಜಾಸ್ತಿ ಗಿಟ್ಟುವುದಿಲ್ಲ. ಆದರೆ ಶುಕ್ರವಾರ ಮಸೀದಿ ಪಕ್ಕ ಬೇಡಿದರೆ ಹತ್ತೂ, ಇಪ್ಪತ್ತರ ನೋಟುಗಳು ಬೀಳುತ್ತವೆ. ಹಲವು ಮಸೀದಿಗಳಲ್ಲಿ ಆತನಿಗೆ ಬೇಡಿ ಅನುಭವವಿದೆ. ಆದರೆ ಒಂದು ಮಸೀದಿಯಲ್ಲಿ ಆತ ಮುಸ್ಲಿಮನಲ್ಲ ಎನ್ನುವುದು ಗೊತ್ತಾಗಿ ಹೋಯಿತು. ಅವರು ಹೇಳಿದರು ‘‘ಇಲ್ಲಿ ಮಸೀದಿಯ ಅಂಗಳದಲ್ಲಿ ಮುಸ್ಲಿಮರಿಗೆ ಮಾತ್ರ ಭಿಕ್ಷೆ ಬೇಡುವುದಕ್ಕೆ ಅವಕಾಶ...’’
ಒಂದು ವೇಳೆ ತಾನು ಧರ್ಮ ಬದಲಿಸಿದರೆ ಮಸೀದಿಯ ಅಂಗಳದಲ್ಲಿ ಯಾವ ಭಯವೂ ಇಲ್ಲದೆ ಭಿಕ್ಷೆ ಬೇಡಬಹುದು ಎನ್ನುವುದು ಅವನಿಗೆ ಬಹಳ ನೆಮ್ಮದಿಯನ್ನು ಕೊಟ್ಟಿತು. ‘‘ಸರಿ, ನಾನು ಧರ್ಮ ಬದಲಿಸುತ್ತೇನೆ’’ ಘೋಷಿಸಿದ. ಅವನ ಕೊರಳಲ್ಲಿದ್ದ ಕೂಡಿಸು ಚಿಹ್ನೆಯ ಸರವನ್ನು ತೆಗೆದು ಹಾಕಿದರು. ಬಳಿಕ ‘ಅಲ್ಲಾಹು ಅಕ್ಬರ್’ ಎಂದು ತಕ್ಬೀರ್ ಹೇಳಿದರು.
‘‘ಸರಿ, ಮುಂದಿನ ಶುಕ್ರವಾರ ನಿನ್ನನ್ನು ಕರೆದುಕೊಂಡು ಮಸೀದಿಗೆ ಹೋಗುತ್ತೇವೆ. ಬರುವಾಗ ಹೊಸ ಬಿಳಿ ಬಟ್ಟೆ, ಲುಂಗಿ, ಎಲ್ಲ ತರುತ್ತೇವೆ...ನೀನು ಸ್ನಾನ ಮಾಡಿ ಸಿದ್ಧವಾಗಿರು’’ ಎಂದು ಹೊರಡುವುದಕ್ಕೆ ಸಿದ್ಧತೆ ನಡೆಸಿದರು.
ಅಷ್ಟರಲ್ಲಿ ಅವನು ಕೇಳಿದ ‘‘ಧರ್ಮ ಬದಲಿಸಿದರೆ ನನ್ನಲ್ಲಿ ಬದಲಾವಣೆಯಾಗುತ್ತದೆಯೆ?’’
ಅರ್ಥವಿಲ್ಲದ ಪ್ರಶ್ನೆಗೆ ಅವರು ‘‘ಹೌದು, ಬದಲಾವಣೆಯಾಗುತ್ತದೆ’’ ಎಂದರು.
‘‘ಒಳಗೂ ಬದಲಾವಣೆಯಾಗುತ್ತದೆಯೆ?’’
‘‘ಹೌದು, ಒಳಗೂ ಬದಲಾವಣೆಯಾಗುತ್ತದೆ’’ ಎಂದು ಹೊರಟೇ ಬಿಟ್ಟರು.
ಒಳಗೆ ಬದಲಾವಣೆಯಾಗದೇ ಇದ್ದರೂ ಪರವಾಗಿಲ್ಲ, ಪ್ರತಿ ಶುಕ್ರವಾರ ಮಸೀದಿಯ ಅಂಗಳದಲ್ಲಿ ಭಿಕ್ಷೆ ಬೇಡಬಹುದಲ್ಲ ಎಂದು ಅವನು ಮನದೊಳಗೆ ಹಿರಿ ಹಿರಿ ಹಿಗ್ಗಿದ. ಅಭ್ಯಾಸ ಬಲದಂತೆ ಒಳಗೆ ಕೈ ಹಾಕಿ ಅದನ್ನೊಮ್ಮೆ ಮುಟ್ಟಿ ನೋಡಿದ.

***
ಅವನು ಕ್ರೈಸ್ತ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಬದಲಾಗಿ ಒಂದು ತಿಂಗಳೇ ಆಗಿರಬಹುದು. ಪ್ರತಿ ಶುಕ್ರವಾರ ಮಸೀದಿಗೆ ಭಿಕ್ಷೆ ಬೇಡುವುದಕ್ಕೆ ಹೋಗುತ್ತಾನೆ. ಆದರೆ ಇವನು ತುಂಬಾ ದಷ್ಟಪುಷ್ಟನಾಗಿರುವುದರಿಂದ ಭಿಕ್ಷೆ ಬೀಳುವುದು ತೀರಾ ಕಡಿಮೆ. ಬುರ್ಖಾ ಹಾಕಿದ ಮಹಿಳೆಯರಿಗೆ, ಅಂಗವಿಕಲರಿಗೇ ದೊಡ್ಡ ದೊಡ್ಡ ನೋಟು ಬೀಳುವುದು ಕಂಡು ಅಸಹನೆಯಿಂದ ಮಸೀದಿಗೆ ಭಿಕ್ಷೆ ಬೇಡುವುದಕ್ಕೆ ಹೋಗುವುದನ್ನೇ ನಿಲ್ಲಿಸಿದ.

ಅವನೀಗ ಮತ್ತೆ ಅದೇ ಮರದ ನೆರಳಲ್ಲಿ ಯಾರದೋ ನಿರೀಕ್ಷೆಯಲ್ಲೆಂಬಂತೆ ಕುಳಿತಿದ್ದಾನೆ. ಗುಂಗುರು ಕೂದಲಿನವನ ಪತ್ತೆಯೂ ಇಲ್ಲ. ಟೊಪ್ಪಿ ಧರಿಸಿದವನೂ ಇಲ್ಲ. ಹೊಟ್ಟೆ ಚುರ್ರೆನ್ನುತ್ತಿತ್ತು. ಮೊದಲೆಲ್ಲ ಹಸಿವೆಯನ್ನು ತಡೆದುಕೊಳ್ಳುವ ಶಕ್ತಿಯಿತ್ತು. ಈಗ ಆ ಶಕ್ತಿಯೂ ಇಲ್ಲ. ಕುಳಿತಲ್ಲೇ ಹೊರಳಾಡ ತೊಡಗಿದ. ಅದರ ಜೊತೆಗೇ ಮಧ್ಯಾಹ್ನ ಸಂಜೆಗೆ ಹೊರಳಿತು.
ಅಷ್ಟರಲ್ಲಿ ಒಂದು ಗುಂಪು ಅಲ್ಲಿಗೆ ಆಗಮಿಸಿತು. ಅವರೆಲ್ಲ ಕೇಸರಿ ಶಾಲು ತೊಟ್ಟಿದ್ದರು. ಬಂದವರೇ ಇವನೆಡೆಗೆ ಕೈ ಮಾಡಿ ‘‘ಜೈ ಶ್ರೀರಾಂ’’ ಎಂದರು.
ಇವನಿಗೋ ಅರ್ಥವಾಗಲಿಲ್ಲ. ಆದರೆ ಅವರನ್ನು ನೋಡಿದಾಗ, ಒಳ್ಳೆಯ ಉದ್ದೇಶಕ್ಕೆ ಬಂದವರಂತೆ ಕಾಣಲಿಲ್ಲ. ಅವನ ಎದೆ ಸಣ್ಣಗೆ ನಡುಗಿತು.
ಹಣೆಗೆ ದೊಡ್ಡ ಕುಂಕುಮವನ್ನು ಎಳೆದಾತ ಅವನೆದುರು ಬಂದು ನಿಂತು ಕೇಳಿದ ‘‘ನಿನ್ನನ್ನು ಕಳೆದ ತಿಂಗಳು ಶುಕ್ರವಾರ ಮಸೀದಿಯಲ್ಲಿ ಬಲವಂತವಾಗಿ ಮತಾಂತರ ಮಾಡಿದರಂತೆ ಹೌದೆ?’’
ಕುಂಕುಮಧಾರಿ ಏನು ಹೇಳುತ್ತಿದ್ದಾನೆ ಎನ್ನುವುದೇ ಆತನಿಗೆ ಅರ್ಥವಾಗಲಿಲ್ಲ.
‘‘ಹೆದರಬೇಡ. ನಿನ್ನ ಜೊತೆಗೆ ಕೋಟಿ ಕೋಟಿ ಹಿಂದೂಗಳಿದ್ದಾರೆ. ಬಲವಂತವಾಗಿ ಮತಾಂತರ ಮಾಡಿದ್ದು ಹೌದೋ ಅಲ್ಲವೋ....’’
ಬಲವಂತ ಮತ್ತು ಮತಾಂತರ ಇದು ಎರಡೂ ಆತನಿಗೆ ಹೊಸ ಶಬ್ದಗಳು. ಆದುದರಿಂದ ಏನು ಹೇಳಬೇಕೆಂದು ಹೊಳೆಯದೆ ಆತ ತೊದಲ ತೊಡಗಿದ.
ಅಷ್ಟರಲ್ಲಿ ಇನ್ನಷ್ಟು ಜೋರಾಗಿ ಕುಂಕುಮಧಾರಿ ಕೇಳಿದ ‘‘ಅದನ್ನು ‘ಕಟ್’ ಮಾಡಿದ್ದಾರ...?’’
ಆತ ಮತ್ತೆ ತಡವರಿಸತೊಡಗಿದ. ತಕ್ಷಣ ಕುಂಕುಮಧಾರಿ ಆದೇಶ ನೀಡಿದ ‘‘ಅವನ ಚಡ್ಡಿ ಜಾರಿಸಿ ನೋಡಿ...ಸೂ...ಮಕ್ಕಳು ಅದನ್ನು ಕಟ್ ಮಾಡಿದ್ದಾರ ಅಂತ ನೋಡಿ...’’ ಉಳಿದ ಕೇಸರಿ ಧರಿಸಿದ ಯುವಕರು ಆತನನ್ನು ಹಿಡಿದುಕೊಂಡರು. ಒಬ್ಬ ಆತನ ಚಡ್ಡಿ ಅರ್ಧ ಜಾರಿಸಿದ. ಮೆಲ್ಲಗೆ ಕೈ ಹಾಕಿ ತಪಾಸಣೆ ಮಾಡತೊಡಗಿದ. ‘‘ಕಾಣ್ತಾ ಇಲ್ಲ...ತುಂಬಾ ಸಣ್ಣದಿದೆ...’’ ಎಂದ.
ಕುಂಕುಮಧಾರಿ ಆರ್ಭಟಿಸಿದ ‘‘ಸೂ...ಮಕ್ಕಳು...ಹಾಗಾದರೆ ಕಟ್ ಮಾಡಿರಬೇಕು....’’
ಅಷ್ಟರಲ್ಲಿ ಆತ ಚೇತರಿಸಿ ಬೊಬ್ಬೆ ಹಾಕ ತೊಡಗಿದ ‘‘ಇಲ್ಲ...ಇಲ್ಲ...ಕಟ್ ಮಾಡಿಲ್ಲ....ಕಟ್ ಮಾಡುವುದಕ್ಕೆ ಬಿಡಲಿಲ್ಲ....ನನ್ನದು ಇರುವುದೇ ಅಷ್ಟು.....’’
ಮತ್ತೆ ತಪಾಸಣೆ ನಡೆಯಿತು. ‘‘ಇಲ್ಲ...ಕಟ್ಟಾಗಿಲ್ಲ....ಅವನದು ತುಂಬಾ ಸಣ್ಣದು’’
ಎಲ್ಲರೂ ದೀರ್ಘ ನಿಟ್ಟುಸಿರೊಂದನ್ನು ಬಿಟ್ಟರು. ಅವರೆಲ್ಲರ ಮುಖದಲ್ಲಿ ಮಂದಸ್ಮಿತ ಲಾಸ್ಯವಾಡತೊಡಗಿದವು.
ಈ ‘ಸಾಬರಿಗೆ’ ಹುಟ್ಟಿದವರು ‘ಅದನ್ನು’ ‘ಕಟ್’ ಮಾಡುವುದು ಅವರೆಲ್ಲರಿಗೂ ಒಂದು ದೊಡ್ಡ ಸಮಸ್ಯೆಯಾಗಿತ್ತು. ‘ಮರಳಿ ಮಾತೃ ಧರ್ಮಕ್ಕೆ’ ಅಭಿಯಾನಕ್ಕೆ ‘ಅದು’ ಒಂದು ದೊಡ್ಡ ತೊಡಕಾಗಿತ್ತು. ಇದನ್ನು ಕುಂಕುಮಧಾರಿ ತನ್ನ ಸ್ವಾಮೀಜಿಯ ಬಳಿ ತೆರೆದಿಟ್ಟಿದ್ದ ‘‘ಸ್ವಾಮೀಜಿ...ಕ್ರೈಸ್ತರನ್ನು ತರುವುದು ತುಂಬಾ ಸುಲಭ. ಆದರೆ ಈ ಸಾಬರುಗಳ ‘ಅದನ್ನು’ ಏನು ಮಾಡುವುದು? ಹಿಂದೂ ಧರ್ಮಕ್ಕೆ ಮರಳುವಾಗ ಅದು ‘ಕಟ್’ ಆಗಿರುತ್ತದಲ್ಲ?’’
ಸ್ವಾಮೀಜಿಗಳಿಗೂ ‘ಅದು’ ಧರ್ಮಸೂಕ್ಷ್ಮದ ಪ್ರಶ್ನೆಯಾಗಿಯೇ ಕಂಡಿತು. ‘ಅದನ್ನು’ ಏನು ಮಾಡುವುದು? ಹಿರಿ ಸ್ವಾಮೀಜಿಗಳ ಜೊತೆಗೆ ‘ಅದರ’ ಕುರಿತಂತೆ ಗಂಭೀರವಾಗಿ ಚರ್ಚೆ ನಡೆಸಿ, ಅದನ್ನು ಕೇವಲ ಶಸ್ತ್ರಕ್ರಿಯೆ ಎಂದು ಭಾವಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಅಪಘಾತವಾದಾಗ ದೇಹದ ಯಾವುದಾದರೂ ಅಂಗ ತುಂಡಾಗುವುದಿಲ್ಲವೆ? ಹಾಗೆಂದೇ ಇದನ್ನೂ ಪರಿಭಾವಿಸಬೇಕು ಎಂಬ ಅಂತಿಮ ನಿರ್ಣಯಕ್ಕೆ ಬರಲಾಗಿತ್ತು. ಆದರೂ ಕುಂಕುಮಧಾರಿಗೆ ತೃಪ್ತಿಯಾಗಿರಲಿಲ್ಲ. ಇದೀಗ ಈತನ ‘ಅದನ್ನು’ ಕಟ್ ಮಾಡದೇ ಇರುವುದು ಅವನಿಗೆ ಸಂತೋಷವನ್ನು, ನೆಮ್ಮದಿಯನ್ನು ತಂದಿತ್ತು. ಮುಂದಿನ ಕಾರ್ಯಕ್ಕೆ ‘ಅದು’ ತುಂಬಾ ಅನುಕೂಲವನ್ನು ಮಾಡಿಕೊಟ್ಟಿತ್ತು.
‘‘ಸರಿ, ನೀನು ಮಾತೃಧರ್ಮಕ್ಕೆ ಮರಳಬೇಕು...’’ ಕುಂಕುಮಧಾರಿ ಘೋಷಿಸಿದ.
‘‘ಆದರೆ....’’ ಅವನು ತಡವರಿಸಿದ. ಒಬ್ಬ ಕೇಸರಿಧಾರಿ ಸಣ್ಣದೊಂದು ನೋಟನ್ನು ಅವನ ಕಿಸೆಗೆ ತುರುಕಿದ. ಇಣುಕಿದರೆ ಬರೇ ‘ಹತ್ತು ರೂ.’. ನಿರಾಶೆಯಾಯಿತು. ಆದರೆ ಸದ್ಯಕ್ಕೆ ಇದನ್ನು ಇಟ್ಟುಕೊಳ್ಳುವುದೇ ಸರಿ ಎಂದು ಅವನಿಗೆ ಕಂಡಿತು.
‘‘ಹಿಂದೂ ಸಂಸ್ಕೃತಿ ಎಷ್ಟು ಹಿರಿದಾದುದು...ಎಷ್ಟು ಭವ್ಯವಾದುದು...’’ ಎಂದು ಕುಂಕುಮಧಾರಿ ಭಾಷಣವನ್ನು ಮಾಡಿದ. ಎಲ್ಲರೂ ‘ಜೈ ಶ್ರೀರಾಂ’ ಎಂದು ಘೋಷಣೆ ಕೂಗಿದರು. ಅವನನ್ನು ಸ್ವಾಮೀಜಿಯ ಬಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯುವುದಕ್ಕೆ ವಾಹನ ಸಿದ್ಧವಾಯಿತು.
ಮರುದಿನ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ‘ಮರಳಿ ಮಾತೃ ಧರ್ಮಕ್ಕೆ’ ಎಂಬ ತಲೆಬರಹದಲ್ಲಿ ಸುದ್ದಿ ಪ್ರಕಟವಾಯಿತು.

***
ಇದೆಲ್ಲ ಕಳೆದು ತಿಂಗಳು ಉರುಳಿದೆ. ಅದೇ ಮಧ್ಯಾಹ್ನ, ಅದೇ ಮರ ಮತ್ತು ಮಲಗಿದ ಅವನು. ಹೊಟ್ಟೆ ಚುರ್ರೆನ್ನುತ್ತಿತ್ತು. ಯಾರಾದರೂ ಬರಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಆತನ ಕಣ್ಣುಗಳು ಬಳಲಿದ್ದವು. ಗುಂಗುರು ಕೂದಲಿನವನಾಗಲಿ, ಟೊಪ್ಪಿ ಧರಿಸಿದವನಾಗಲಿ, ಕುಂಕುಮಧಾರಿಯಾಗಲಿ...ಯಾರೂ ಇವನತ್ತ ತಿರುಗಿಯೂ ನೋಡುತ್ತಿರಲಿಲ್ಲ. ಯಾವುದೋ ಕನಸಿನಲ್ಲಿ ಬಂದು ಇಳಿದಂತೆ ನೂರರ ನೋಟು...ಅವನ ನಿದ್ದೆಯನ್ನು ಕಸಿಯ ತೊಡಗಿತ್ತು. ಇತ್ತೀಚೆಗೆ ಅಲ್ಪಸ್ವಲ್ಪ ಅನುಕಂಪ ತೋರಿಸುತ್ತಿರುವವರೂ ದೂರ ಮಾಡಿದ್ದರು. ಕೈ ಚಾಚಿದರೆ ದೂರ ಓಡಿಸುತ್ತಿದ್ದರು. ಇನ್ನು ಈ ಮರದಡಿಯಲ್ಲಿ ಹೀಗೆ ಮಲಗಿ ದಿನ ದೂಡುವುದು ಕಷ್ಟ ಎಂದೆನಿಸಿತು. ಹೊಟ್ಟೆ ಹೊರೆಯುವುದಕ್ಕಾಗಿ ಏನಾದರೂ ಮಾಡಬೇಕು....ಸೋಮಾರಿಯಾಗಿ ಕಾಲ ಕಳೆಯಬಾರದು...ಎಂದೆಲ್ಲ ಯೋಚಿಸತೊಡಗಿದ. ಒಂದು ಸಣ್ಣ ಅಂಗಡಿಯಿಟ್ಟರೆ ಹೇಗೆ ಎಂಬ ಅಲೋಚನೆಯೊಂದು ಅವನ ತಲೆಯಲ್ಲಿ ಸುಳಿಯಿತು. ಹೊಟ್ಟೆ ಅನ್ನ ಕೇಳುತ್ತಿದ್ದುದರಿಂದ, ತಲೆ ಚುರುಕಾಗಿ ಕೆಲಸ ಮಾಡತೊಡಗಿತು. ಪಕ್ಕದಲ್ಲೇ ಒಂದು ರಟ್ಟಿನ ಹಾಳೆ ಬಿದ್ದಿತ್ತು. ಅದನ್ನು ಎತ್ತಿಕೊಂಡ. ಅಂಗಡಿಗೊಂಡು ಬೋರ್ಡ್ ಬೇಡವೆ? ಯಾರಲ್ಲಿ ಬರೆಸುವುದು? ಅಕ್ಷರ ಗೊತ್ತಿರುವವರನ್ನು ಹುಡುಕತೊಡಗಿದ.

ಮರುದಿನ ಆ ಮರದಲ್ಲೊಂದು ಬೋರ್ಡ್ ನೇತಾಡುತ್ತಿತ್ತು ‘‘ಇಲ್ಲಿ ಯಾವುದೇ ಧರ್ಮಕ್ಕೆ ಮತಾಂತರವಾಗುವುದಕ್ಕೆ ಜನರು ಲಭ್ಯವಿದ್ದಾರೆ. ಕೇವಲ ನೂರು ರೂ. ಚಾರ್ಜು ಕೊಟ್ಟರೆ ಸಾಕು’’. ಅವನು ಆ ಮರದ ಕೆಳಗೆ ಕೂತು ಗಿರಾಕಿಗಳಿಗಾಗಿ ಕಾಯ ತೊಡಗಿದ.

Wednesday, July 20, 2011

ಮುಗಿಯದ ಬದುಕಿನ ಇನ್ನಷ್ಟು ಕತೆಗಳು

















ಓಟ
ಆತ ವೇಗದ ಓಟಗಾರ.
ಅದೆಷ್ಟೋ ಓಟಗಳಲ್ಲಿ ಭಾಗವಹಿಸಿದ್ದ.
ಬೇರೆ ಬೇರೆ ಓಟಗಳಲ್ಲಿ ಗೆಲ್ಲುತ್ತಾ, ಅವನು ಮುದುಕನಾದ. ಅವನ ಬೆನ್ನು ಬಾಗಿತು. ಕಾಲು ನಡುಗತೊಡಗಿತು.
ಒಂದು ದಿನ ಆತ ಒಂದು ಓಣಿಯಲ್ಲಿ ನಡೆಯುತ್ತಿದ್ದ. ಅವನಿಗೆ ಇನ್ನೊಬ್ಬ ಮುದುಕ ಮಾತುಕತೆಗೆ ಜೊತೆಯಾದ.
ಓಟಗಾರ ಹೆಮ್ಮೆಯಿಂದ ಹೇಳಿದ ‘‘ನಾನು ನನ್ನ ಕಾಲದ ವೇಗದ ಓಟಗಾರ. ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಓಟದಲ್ಲಿ ನನ್ನನ್ನು ಮೀರಿಸಿದವರೇ ಇಲ್ಲ’’
‘‘ಹೌದೆ? ಅದೆಷ್ಟು ಓಟಗಳಲ್ಲಿ ನೀನು ಭಾಗವವಹಿಸಿದ್ದೀಯ?’’ ಇನ್ನೊಬ್ಬ ಮುದುಕ ಕೇಳಿದ
‘‘ಲೆಕ್ಕವಿಲ್ಲದಷ್ಟು’’ ಈತ ಹೇಳಿತ
‘‘ಅಶ್ಚರ್ಯ! ಅಷ್ಟು ವೇಗದ ಓಟಗಾರನಾಗಿದ್ದರೂ ನೀನು ಇನ್ನೂ ಎಲ್ಲಿದ್ದೀಯೋ ಅಲ್ಲೇ ಇದ್ದೀ. ಒಂದು ಮೈಲು ಕೂಡ ಮುಂದೆ ಹೋಗಿಲ್ಲ. ನಾನು ನೋಡು...ನಿಧಾನಕ್ಕೆ ನಡೆಯುತ್ತಾ ನಡೆಯುತ್ತಾ ಇಲ್ಲಿಯವರೆಗೆ ಬಂದಿದ್ದೇನೆ. ಯಾರೂ ಊಹಿಸದಷ್ಟು ದಾರಿಯನ್ನು ಈಗಾಗಲೇ ಮುಗಿಸಿದ್ದೇನೆ...’’

ಮರ
ಸಂತನನ್ನು ಭೇಟಿ ಮಾಡಲೆಂದು ಅದೆಷ್ಟೋ ದೂರದಿಂದ ಬಂದಿದ್ದ. ಸಂತನ ಆಶ್ರಮದಲ್ಲಿ ಉಳಿದ. ಸುಮಾರು ಹತ್ತು ದಿನಗಳ ಕಾಲ ಸಂತನ ಹಿಂದೆ ಅಲೆದ. ಆದರೆ ಆತನಿಗೆ ಸಂತನ ಕುರಿತಂತೆ ನಿರಾಶೆಯಾಯಿತು. ಇವನೇನೋ ಪವಾಡ ಪುರುಷನೆಂದು ಇವನ ಶಿಷ್ಯತ್ವವನ್ನು ಸ್ವೀಕರಿಸಲು ಬಂದರೆ, ಈತನಲ್ಲಿ ಯಾವ ವೈಶಿಷ್ಟವೂ ಕಾಣುತ್ತಿಲ್ಲ ಎಂದು ಆತ ಒಳಗೊಳಗೆ ಮರುಗತೊಡಗಿದ.
ಒಂದು ದಿನ ಸಂತ ಎದುರಾದಾಗ ಕೇಳಿಯೇ ಬಿಟ್ಟ ‘‘ಗುರುಗಳೇ ನಿಮಗೇನಾದರೂ ಪವಾಡ ಬರುತ್ತದೆಯೆ?’’ ಸಂತ ನಿರ್ಲಿಪ್ತನಾಗಿ ಉತ್ತರಿಸಿದ ‘‘ಇಲ್ಲವಲ್ಲ’’
‘‘ಛೆ...ನಾನು ನಿಮ್ಮನ್ನು ಏನೇನೋ ಕಲ್ಪಿಸಿ ಗುರುವಾಗಿ ಸ್ವೀಕರಿಸಲು ಬಂದೆ. ಕ್ಷಮಿಸಿ ನಾನು ಹೊರಟು ಹೋಗುತ್ತಿದ್ದೇನೆ...’’ ಅವನು ಹೇಳಿದ.
ಸಂತ ನಕ್ಕು ಹೇಳಿದ ‘‘ನೋಡು...ಅಲ್ಲಿ ನಿಂತಿದೆಯಲ್ಲ, ಆ ಮರ. ಅದಕ್ಕೆ ಪವಾಡ ಬರುತ್ತದೆ. ಬರಿದೇ ಒಂದು ಸಣ್ಣ ಬೀಜವಾಗಿದ್ದ ಅದು ನಾನು ನೋಡು ನೋಡುತ್ತಿದ್ದಂತೆಯೇ ಬೆಳೆಯಿತು. ಕಪ್ಪು ತೊಗಟೆಗಳಿರುವ ಅದರ ಕಾಂಡದಲ್ಲಿ ಹಸಿರು ಬಣ್ಣಗಳಲ್ಲಿ ಅದ್ದಿದ್ದ ಎಲೆಗಳು ಚಿಗುರಿದವು. ಬಳಿಕ ನೋಡಿದರೆ ಬಣ್ಣ ಬಣ್ಣಗಳಿಂದ ತುಂಬಿದ ಹೂವುಗಳು. ಸ್ವಲ್ಪ ದಿನ ಬಿಟ್ಟು ನೋಡಿದರೆ ಪರಿಮಳ ಭರಿತ ಹಣ್ಣುಗಳು. ಅದೆಷ್ಟು ರುಚಿಯಾದ ಹಣ್ಣುಗಳೆಂದರೆ ಹುಳಿ, ಉಪ್ಪು, ಸಿಹಿ ಇವುಗಳ ಸಮಪಾಕದಿಂದ ತಯಾರಿಸಿದ ಹಣ್ಣುಗಳು...ಪವಾಡ ತಿಳಿದವರನ್ನೇ ಗುರುವಾಗಿ ಸ್ವೀಕರಿಸಬೇಕೆಂದು ನೀನು ನಿಶ್ಚಯಿಸಿದ್ದರೆ ಆ ಮರವನ್ನು ಗುರುವಾಗಿ ಸ್ವೀಕರಿಸಬಹುದು...’’ ಎಂದವನೇ ಸಂತ ಮುಂದೆ ನಡೆದ.
ಕೊಂಬೆ ರೆಂಬೆಗಳನ್ನು ವಿಸ್ತರಿಸಿ, ವಿಶಾಲವಾಗಿ, ದಟ್ಟವಾಗಿ ಹರಡಿ ನಿಂತ ಆ ಮರ ಸಂತನೊಬ್ಬ ತಪಸ್ಸಿನಲ್ಲಿ ಲೀನವಾಗಿರುವಂತೆ ಅಲ್ಲಿ ನಿಂತಿರುವುದನ್ನು ಆತ ಮೊದಲ ಬಾರಿಗೆ ನೋಡಿದ.

ಕೊನೆಯ ಪುಟ
ಆತ ರಹಸ್ಯ ಪತ್ತೇದಾರಿ, ಕಾದಂಬರಿಯೊಂದನ್ನು ಓದುತ್ತಿದ್ದ. ಇನ್ನೇನು ಮುಗಿಯಬೇಕು. ಕೊಲೆಗಾರ ಯಾರು ಎನ್ನುವುದು ಗೊತ್ತಗಾಬೇಕು... ಆದರೆ ಕಾದಂಬರಿಯ ಕೊನೆಯ ಪುಟವನ್ನೇ ಯಾರೋ ಹರಿದಿದ್ದರು. ಒಂದು ಕ್ಷಣ ಅವನು ಹತಾಶನಾದ.
ಆದರೆ ಆ ಮೂಲಕ ಒಂದು ಪುಸ್ತಕ ಮುಗಿದು ಹೋಗದೆ ಶಾಶ್ವತವಾಗಿ ಅವನ ಮನಸಿನೊಳಗೆ ಉಳಿದು ಹೋಯಿತು. ಆ ಕೊನೆಯ ಪುಟವನ್ನು ಓದಿದ್ದಿರೆ, ಕೊಲೆಗಾರ ಯಾರು ಎಂದು ಗೊತ್ತಾಗಿದಿದ್ದರೆ ಆ ಪುಸ್ತಕವೇ ಅಲ್ಲಿಗೆ ಮುಗಿದು ಹೋಗುತ್ತಿತ್ತು. ಅವನದನ್ನು ಶಾಶ್ವತ ಮರೆತು ಬಿಡುತ್ತಿದ್ದ.
ಅವನು ಕೊನೆಯ ಪುಟವನ್ನು ಹರಿದವನಿಗೆ ಕೃತ್ಯಜ್ಞತೆ ಹೇಳಿದ. ಲೇಖಕ ತನ್ನ ಕಾದಂಬರಿಯನ್ನು ಮುಗಿಸಲಿದ್ದ. ಆದರೆ, ಕೊನೆಯ ಪುಟವನ್ನು ಹರಿದವನು ಆ ಕಾದಂಬರಿಯನ್ನು ಮುಂದುವರಿಸಿದ. ಅದರ ಅನಂತ ಸಾಧ್ಯತೆಯನ್ನು ಎತ್ತಿ ತೋರಿಸಿದ. ಸಮಾಪ್ತಿಯಾಗದ ಆ ಪುಸ್ತಕ ಈಗ ಎಲ್ಲ ಓದುಗರ ಎದೆಯಲ್ಲಿ ತನಗೆ ತೋಚಿದ ರೀತಿಯಲ್ಲಿ ಬೆಳೆಯುತ್ತಿದೆ.

ಕಣ್ಣು
ಆತ ಒಬ್ಬ ಮಹಾ ತ್ಯಾಗಿ, ಎಂದೂ ಕೆಟ್ಟದ್ದನ್ನು ಮಾಡದವನು, ನೋಡದವನು.
ಎಲ್ಲರಿಗೂ ಒಳಿತನ್ನು ಬಯಸುವವನು.
ಒಂದು ದಿನ ಆತ ಸತ್ತ. ಅವನ ಆಪೇಕ್ಷೆಯಂತೆ ಅವನ ಕಣ್ಣುಗಳನ್ನು ದಾನ ಮಾಡಲಾಯಿತು. ದಿನಗಳ ಬಳಿಕ ಆ ಕಣ್ಣುಗಳನ್ನು ಕುರುಡನೊಬ್ಬನಿಗೆ ಇಡಲಾಯಿತು. ಕತ್ತಲಲ್ಲಿ ಕಳೆದುಹೋದ ಕುರುಡನ ಪ್ರಪಂಚ ಸಂತನ ದೆಸೆಯಿಂದ ಮತ್ತೆ ಬೆಳಗಿತು.
ಈ ವರೆಗೆ ಕತ್ತಲು ತುಂಬಿದ ಜಗತ್ತಿನಲ್ಲಿ ಬದುಕುತ್ತಿದ್ದ ಕುರುಡನ ಮುಂದೆ ಬಣ್ಣ ಬಣ್ಣದ ಜಗತ್ತೊಂದು ತೆರೆದುಕೊಂಡಿತು.
ಕಂಡದ್ದನ್ನೆಲ್ಲಾ ಅನುಭವಿಸಬೇಕೆಂಬ ಮೋಹ ಅವನಲ್ಲಿ ಉತ್ಕಟವಾಯಿತು. ಈ ವರೆಗೆ ತನಗೆ ದಕ್ಕದ್ದನ್ನೆಲ್ಲಾ, ಒಳ್ಳೆಯದು ಕೆಡುಕೆಂಬ ಭೇದವಿಲ್ಲದೆ ದೃಷ್ಟಿಬಾಕನಂತೆ ನೋಡ ತೊಡಗಿದ. ವೇಶ್ಯೆಯರ ಅಂಗ ಅಂಗಗಳನ್ನು ತನ್ನ ಕಣ್ಣುಗಳಿಂದ, ಸ್ಪರ್ಶದಿಂದ ಸವಿಯತೊಡಗಿದ. ತನಗೆ ಸಿಕ್ಕಿದ ಕಣ್ಣುಗಳನ್ನು ಕೆಡುಕುಗಳಿಗಾಗಿಯೇ ಅಡವಿಟ್ಟ.
ಇತ್ತ ಸಂತ ತನ್ನ ಒಳ್ಳೆಯತನಕ್ಕಾಗಿ ಸ್ವರ್ಗ ಸೇರಿದ.
ಆದರೆ, ಆತನ ಕಣ್ಣು ಮಾತ್ರ ಕುರುಡಾಗಿತ್ತು.
ಸಂತ ದೇವರಿಗೆ ಮೊರೆಯಿಟ್ಟ ‘ದೇವರೆ ನನ್ನ ಒಳ್ಳೆಯತನಕ್ಕೆ ಸ್ವರ್ಗವನ್ನು ಕೊಟ್ಟೆ. ಆದರೆ ಈ ಸ್ವರ್ಗವನ್ನು ನೋಡಲು ಅಸಾಧ್ಯವಾಗುವಂತೆ ನನ್ನ ಕಣ್ಣನ್ನು ಕಿತ್ತು ಕೊಂಡೆ...ಯಾಕೆ?’
ದೇವರು ನಕ್ಕು ಹೇಳಿದ ‘‘ಸಂತನೇ... ನೀನು ನಿನ್ನ ಕಣ್ಣನ್ನು ದಾನ ಮಾಡಿ ಒಬ್ಬ ಕುರುಡನ ಸ್ವರ್ಗವನ್ನೇ ಆತನಿಂದ ಕಿತ್ತುಕೊಂಡೆ. ಅದಕ್ಕೆ’’

ಚಿಕಿತ್ಸೆ
ಸಂತನ ಬಳಿಗೆ ರೋಗಿಗಳೂ ಬರುತ್ತಿದ್ದರು. ಸಂತ ಔಷಧಿಕೊಟ್ಟರೆ, ಕುಡಿದ ಮರುಕ್ಷಣ ರೋಗಿ ಗುಣಮುಖನಾಗುತ್ತಿದ್ದ. ದೂರ ದೂರದಿಂದ ಸಂತನೆಡೆಗೆ ರೋಗಿಗಳು ಬರುತ್ತಿದ್ದರು. ಇದು ನಾಡಿನ ವೈದ್ಯ ಪಂಡಿತರಿಗೆಲ್ಲಾ ತಲೆನೋವಾಯಿತು. ಯಾವ ವೈದ್ಯ ಶಾಸ್ತ್ರವನ್ನೂ ಕಲಿಯದ ಸಂತ ಕೊಡುವ ಔಷಧಿ, ಅದಕ್ಕೆ ಸಂಬಂಧಪಟ್ಟ ಬೇರುಗಳಾದರೂ ಯಾವುದು. ಅವನು ಔಷಧಿಗೆ ಬಳಸುವ ಗಿಡಮೂಲಿಕೆಗಳಾವುವು ಎನ್ನುವುದು ಅವರಿಗೆ ಅರ್ಥವಾಗುತ್ತಿರಲಿಲ್ಲ. ಒಂದು ದಿನ ವೈದ್ಯರ ದಂಡು ಸಂತನಿದ್ದಲ್ಲಿಗೆ ನಡೆಯಿತು.
ಅಲ್ಲಿ ಸಂತ ರೋಗಿಗಳೊಂದಿಗೆ ಸುಮ್ಮನೆ ಹರಟೆಕೊಚ್ಚುತ್ತಿದ್ದ. ವೈದ್ಯರು ಸಂತನನ್ನು ಏಕಾಂತ ಸ್ಥಳಕ್ಕೆ ಕರೆದರು. ‘ತಾವು ಚಿಕಿತ್ಸೆಗೆ ಬಳಸುವ ಗಿಡಮೂಲಿಕೆಗಳು ಯಾವುವು ಗುರುಗಳೇ...’ ಎಂದು ಪ್ರಶ್ನಿಸಿದರು.
ಸಂತ ಒಂದು ಕ್ಷಣ ವೌನವಾದ. ಆ ಮೇಲೆ ಅವರನ್ನು ರೋಗಿಗಳೆಡೆಗೆ ಕರೆದೊಯ್ದ.
‘‘ಓ ಅಲ್ಲಿ ಗಿಡ ನೆಡುತ್ತಿರುವವನನ್ನು ನೋಡಿ. ಅವನು ಒಂದು ಪುಟ್ಟ ರಾಜ್ಯದ ಸಾಮಂತ. ಅರಮನೆಯಲ್ಲಿ ವಾಸಿಸುತ್ತಿದ್ದರೂ, ಸಕಲ ರುಚಿ ರುಚಿಯಾದ ಭೋಜನವಿದ್ದರೂ ಆತನಿಗೆ ಹಸಿವೆಯೇ ಆಗುತ್ತಿರಲಿಲ್ಲ. ಅವನಿಗೆ ಮಾವಿನ ಮರದ ಪುಟ್ಟ ಸಸಿಯೊಂದನ್ನು ಕೊಟ್ಟು ಅದರ ಎಲೆಯ ಚಿಗುರುಗಳಲ್ಲಿ ಎಷ್ಟು ಬಣ್ಣಗಳಿವೆ ಎಂದು ಗುರುತಿಸಲು ಹೇಳಿದೆ. ಮೊದಲು ಹಸಿರನ್ನು ಮಾತ್ರ ಗುರುತಿಸಿದ. ಮತ್ತೆ ಹೌದೋ ಅಲ್ಲವೋ ಎಂಬಂತಿದ್ದ ಕೆಂಪನ್ನು, ಹಳದಿಯನ್ನು, ನೇರಳೆಯನ್ನು, ಗುರುತಿಸಿದ. ಅದರ ಪರಿಮಳವನ್ನು ಆಘ್ರಾಣಿಸಲು ಹೇಳಿ
ದೆ. ಅರೆ ಇದಕ್ಕೆ ಪರಿಮಳವಿದೆಯೇ ಎಂದು ಅಚ್ಚರಿಯಿಂದ ಕೇಳಿದ. ಬಳಿಕ ಈವರೆಗೆ ಉಂಡರಿಯದ ಪರಿಮಳವನ್ನು ಆಘ್ರಾಣಿಸತೊಡಗಿದ. ‘ಪುಟ್ಟ ಮಗುವೊಂದರ ಪಾದದಡಿಯ ರೇಖೆಗಳಂತಿರುವ ಅದರ ಬೇರುಗಳನ್ನು ನೋಡು’ ಎಂದೆ. ಅವನು ಪುಟ್ಟ ಮಗುವಿನಂತೆ ಅದನ್ನು ಗಮನಿಸಿದ. ‘ಈಗದನ್ನು ನೆಡು’ ಎಂದೆ. ಅದನ್ನು ನೆಟ್ಟ. ಅದಕ್ಕೆ ನೀರು ಹನಿಸಿದ. ಆ ಗಿಡ ಜೀವ ಪಡೆಯುತ್ತಿದ್ದಂತೆಯೇ ಅವನ ಹಸಿವು ಜೀವ ಪಡೆಯಿತು. ಇದೀಗ ಪ್ರತಿ ದಿನ ಗಿಡಗಳನ್ನು ನೆಡುವ ಕಾಯಕದಲ್ಲಿ ತೊಡಗಿದ್ದಾನೆ. ಹೊತ್ತು ಹೊತ್ತಿಗೆ ಅವನಿಗೆ ಹಸಿವಾಗುತ್ತಿದೆ’ ಸಂತ ವೈದ್ಯರನ್ನೇ ದಿಟ್ಟಿಸಿ ನೋಡಿ, ಬಾಗಿ ಸಣ್ಣ ಮಾವಿನ ಸಸಿಯೊಂದನ್ನು ಅವರೆಡೆಗೆ ಚಾಚಿ ಕೇಳಿದ ‘‘ಇದರ ಚಿಗುರಲ್ಲಿರುವ ಬಣ್ಣಗಳನ್ನು, ಇದರಲ್ಲಿರುವ ಪರಿಮಳವನ್ನು ಗುರುತಿಸಬಲ್ಲಿರಾ....’’
ತಲೆತಗ್ಗಿಸಿದ ಪಂಡಿತರನ್ನು ಸಂತ ಸಂತೈಸಿ, ಹೇಳಿದ ‘‘ಒಬ್ಬ ರೋಗಿಗೆ ಇನ್ನೊಬ್ಬ ರೋಗಿಯನ್ನು ಗುಣಪಡಿಸುವುದಕ್ಕಾಗುವುದಿಲ್ಲ ಪಂಡಿತರೇ’’

ಬೆಲೆ!
ಆತ ಗೋರಿಯನ್ನು ಅಗೆಯುವುದರಲ್ಲಿ ನಿಸ್ಸೀಮ. ಅಂದು ಕೂಡ ಯಾರದೋ ಗೋರಿಯನ್ನು ಅಗೆಯುತ್ತಿದ್ದ. ಆತ ಗೋರಿಯೊಳಗಿದ್ದು, ಮಣ್ಣನ್ನು ಅಗೆದು ಅಗೆದು ಮೇಲೆ ಎತ್ತಿ ಹಾಕುತ್ತಿದ್ದ.
‘ಇದು ಯಾರಿಗಾಗಿ ಅಗೆಯುತ್ತಿರುವ ಗೋರಿ?’’ ಮೇಲಿನಿಂದ ಯಾರೋ ಪ್ರಶ್ನೆ ಎಸೆದರು. ಆತ ತಲೆಯೆತ್ತಿ ನೋಡಿದ.
ಮೇಲೊಬ್ಬ ಬಿಳಿ ವಸ್ತ್ರ ತಲೆಗೆ
ಹೊದ್ದ ಮನುಷ್ಯ ನಿಂತಿದ್ದ.
ಆತ ನಗುತ್ತಾ ‘‘ಯಾರ ಗೋರಿಯಾದರೇನು. ನನಗೆ ಸಿಗುವುದು ಒಂದು ಗೋರಿಗೆ ನೂರು ರೂಪಾಯಿ. ನನ್ನ ಪಾಲಿಗೆ ಯಾವ ಗೋರಿಗಳೂ ನೂರು ರೂಪಾಯಿಗಿಂತ ಹೆಚ್ಚು ಬೆಲೆಬಾಳುವುದಿಲ್ಲ’’ ಎಂದು ನುಡಿದ.
‘‘ಆದರೆ, ಈ ಗೋರಿ ನಿನ್ನ ಪಾಲಿಗೆ ನೂರು ರೂಪಾಯಿಗೂ ಹೆಚ್ಚು ಬೆಲೆ ಬಾಳುವಂತಹದ್ದು’’ ಮೇಲಿದ್ದಾತ ಹೇಳಿದ್ದು ಕೇಳಿಸಿತು.
‘‘ಅದು ಹೇಗೆ?’’ ಎನ್ನುತ್ತಾ ಆತ ಪಕ್ಕನೆ ತಲೆ ಎತ್ತಿ ನೋಡಿದ. ಬಿಳಿ ವಸ್ತ್ರಧಾರಿ ನಗುತ್ತಾ ನಿಂತಿದ್ದ.
ಆಗಷ್ಟೇ ಒರೆಯಿಂದ ಎಳೆದ ಖಡ್ಗದ ಅಲಗಿನಂತೆ ಆ ನಗು ಮಿಂಚುತ್ತಿತ್ತು!
ಆತನಿಗೆ ಯಾಕೋ ಎದೆಗೂಡಲ್ಲೆಲ್ಲೋ ‘‘ಝಳ್’’ ಅನ್ನಿಸಿತು.
ಗೋರಿಯೊಳಗೆ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದ.

Friday, July 15, 2011

ಮತ್ತೊಂದಿಷ್ಟು ಸಂತನ ಕತೆಗಳು


ಕೊಲೆಗಾರ
ಅಲ್ಲೊಂದು ಕೊಲೆ ನಡೆದಿತ್ತು.
ಎಲ್ಲರೂ ಕೊಲೆಗಾರನನ್ನು ಶಪಿಸುತ್ತಿದ್ದರು.
ಸಂತ ಆ ದಾರಿಯಾಗಿ ಹೋಗುತ್ತಿದ್ದ.
ಆ ಬರ್ಬರ ಕೊಲೆಯನ್ನು ನೋಡಿ ದಂಗು ಬಡಿದ ಆತ ಹೇಳಿದ ‘‘ಕೊಲೆಗೀಡಾದವನ ಸ್ಥಿತಿಯೇ ಇಷ್ಟು ಭೀಕರವಾಗಿದೆ. ಇನ್ನು ಪಾಪ ಕೊಂದ ಆ ಕೊಲೆಗಾರನ ಸ್ಥಿತಿ ಅದೆಷ್ಟು ಭೀಕರವಿರಬಹುದು’’

ಹೃದಯ
ಅವನು ತನ್ನ ಹೃದಯವನ್ನು ಅವಳಿಗೆ ದಾಟಿಸುವಾಗ ಕೈ ಜಾರಿತು.
ಹುಡುಗ ಅತ್ತ ‘‘ದೇವರೇ, ದೇಹವನ್ನೋ ಮಾಂಸ, ಚರ್ಮದಿಂದ ಮಾಡಿದೆ. ಆದರೆ ಹೃದಯವನ್ನೇಕೆ ಗಾಜಿನಿಂದ ಸೃಷ್ಟಿಸಿದೆ?’’

ಮುಳ್ಳು
ಮಗ ಕೇಳಿದ
‘‘ಅಪ್ಪಾ, ಗಡಿಯಾರದಲ್ಲೇಕೆ ಮುಳ್ಳಿದೆ’’
ತಂದೆ ಉತ್ತರಿಸಿದ
‘‘ಕಳೆದು ಹೋಗುವ ಪ್ರತಿ ಸೆಕೆಂಡೂ ನಿನ್ನನ್ನು ಚುಚ್ಚುತ್ತಿರಬೇಕು. ಅದಕ್ಕಾಗಿ ಗಡಿಯಾರದಲ್ಲಿ ಮುಳ್ಳಿದೆ’’

ದೇವರು
ಪ್ರಾರ್ಥನೆ ಮುಗಿಸಿ ಬಂದ ಧರ್ಮಗುರು ಮಂದಿರದ ಬಾಗಿಲಲ್ಲಿ ಆರಾಮವಾಗಿ ಉಣ್ಣುತ್ತಿದ್ದ ಫಕೀರನೊಬ್ಬನನ್ನು ಕಾಲಿಂದ ತುಳಿದು ಕೇಳಿದ
‘‘ಪ್ರಾರ್ಥನೆಯ ಹೊತ್ತಿನಲ್ಲಿ ಉಣ್ಣುತ್ತಿದ್ದೀಯ? ನಿನಗೆ ದೇವರ ಭಯವಿಲ್ಲವೆ?’’
ಫಕೀರ ಸಿಟ್ಟಾಗದೆ ಉತ್ತರಿಸಿದ ‘‘ಸದಾ ರಾಜನ ಹಿಂದೆ ಅಲೆಯುತ್ತಿರುವ ನಿನ್ನಂಥವರಿಗೆ ದೇವರೆಂದರೆ ಭಯ. ನನ್ನಂತಹ ನಿರ್ಗತಿಕರಿಗೆ, ಅನಾಥರಿಗೆ ದೇವರೆಂದರೆ ಭಯವಲ್ಲ, ಭದ್ರತೆ. ನೀನು ದೇವರಿದ್ದಾನೆಂದು ಭಯಪಡುತ್ತಿದ್ದಿ. ನಾನು ದೇವರಿದ್ದಾನೆಂದು ನಿರ್ಭಯನಾಗಿದ್ದೇನೆ’’

ಬಿತ್ತು
ಒಬ್ಬ ಸದಾ ದೇವರ ಹೆಸರುಗಳನ್ನು ಹೇಳುತ್ತಾ ಬಿತ್ತುತ್ತಿದ್ದ.
ಯಾರೋ ಕೇಳಿದರು ‘‘ಏನೋ...ಭತ್ತ ಬಿತ್ತುದ್ದೀಯ?’’
ಅವನು ಹೇಳಿದ ‘‘ಇಲ್ಲ, ದೇವರ ನಾಮಗಳನ್ನು ಬಿತ್ತುತ್ತಿದ್ದೇನೆ’’
‘‘ನಿನ್ನ ಬುಟ್ಟಿಯಲ್ಲಿರುವುದು ದೇವರ ನಾಮಗಳೆ?’’
‘‘ನಾನು ಬಿತ್ತುತ್ತಿರುವುದು ಕೈಯಲ್ಲಿರುವ ಬುಟ್ಟಿಯಲ್ಲಿರುವುದನ್ನಲ್ಲ, ಎದೆಯ ಬುಟ್ಟಿಯಲ್ಲಿರುವುದನ್ನು’’
‘‘ಹಾಗಾದರೆ ಕೈಯಲ್ಲೇಕೆ ಆ ಬುಟ್ಟಿಯನ್ನು ಹಿಡಿದುಕೊಂಡಿದ್ದೀಯ?’’
‘‘ಕೈಯಲ್ಲಿರುವುದು ಸಮಯ ಕಳೆಯುವುದಕ್ಕಾಗಿ. ಮನದಲ್ಲಿರುವುದು ಉತ್ತು ಉಣ್ಣುವುದಕ್ಕಾಗಿ...’’

ಪರೀಕ್ಷೆ
ದೇವರ ಪರೀಕ್ಷೆಯೇ ವಿಚಿತ್ರ.
ಅವನು ಪರೀಕ್ಷೆ ನಡೆಸುತ್ತಾನೆ.
ಜೊತೆಗೆ ನಕಲು ಮಾಡುವುದಕ್ಕೆ ಅವನೇ ನೆರವು ನೀಡುತ್ತಾನೆ!

ಪ್ರಾರ್ಥನೆ
ದೇವರೇ,
ಬೃಹತ್ತಾದ ಗುಡಿಯನ್ನು ಕಟ್ಟಿದ್ದ ಆ
ನೂರಾರು ಕೂಲಿ ಕಾರ್ಮಿಕರು ಅವರು,
ಸುಸ್ತಾಗಿ ಆ ಬಯಲಲ್ಲಿ ಈಗಷ್ಟೇ ನಿದ್ದೇ ಹೋಗಿದ್ದಾರೆ
ಕಟ್ಟಿದ ಗುಡಿಯಲ್ಲಿ ಭಕ್ತಾದಿಗಳೆಲ್ಲ ಕುಳಿತು
ನಿನ್ನ ಭಜಿಸುತ್ತಿದ್ದಾರೆ!
ಆ ಕೂಲಿ ಕಾರ್ಮಿಕರ ನಿದ್ದೆ
ನನ್ನನ್ನು ಧ್ಯಾನದಂತೆ ಆಕರ್ಷಿಸುತ್ತಿದೆ
ಹೇಳು, ನಾ ಏನು ಮಾಡಲಿ?

Wednesday, July 13, 2011

ಶಹರದಲ್ಲಿ ಹದಿಹರೆಯ




















ನಾನು ಮುಂಬೈಯಲ್ಲಿದ್ದಾಗ ಬರೆದ ಪದ್ಯ ಇದು. ಪ್ರವಾದಿಯ ಕನಸು ಸಂಕಲನದಲ್ಲಿ ಇದು ಪ್ರಕಟವಾಗಿದೆ.

ಕೋಣೆಯ ಮಧ್ಯೆ
ಗೋಡೆ ಬಿತ್ತಿ
ಮನೆಗಳ ಬೆಳೆ ತೆಗೆವ ಶಹರದಲ್ಲಿ
ಹದಿಹರೆಯ ಕಾಲಿರಿಸಿ
ಮರಗಿಡಗಳ ನೆನಪು ಹುಟ್ಟಿಸುವುದು!

ಪ್ರಾಯದ ತೆನೆ ತೂಗಿ ಬಾಗುವ ಮಕ್ಕಳು
ಬಿಸಿಯುಸಿರಗರೆದರೆಂದು
ಕನಸಿನಲ್ಲಿ ಬೆಚ್ಚಿ
ತಾಯಿ ದೀಪ ಹಚ್ಚಿ ಕೂರುವಳು

ಕತ್ತಲಲ್ಲಿ ಬೆವರುತ್ತಾ
ನಿದ್ದೆ ಹೋದ ಹೆಣ್ಣು ಮಗಳು
ಸ್ವಪ್ನದ ಹಿತ್ತಲಲ್ಲಿ
ಜಾತ್ರ್ರೆ ಹೂಡಿದ್ದ
ಏಕಾಂತದ ಜತೆ ವ್ಯಾಪಾರಕ್ಕಿಳಿದು
ತನಗೆ ತಾನೆ ನಗುವಳು

ಅಣ್ಣ ಆಯಿಯ ನಡುವೆ
ಒದ್ದೆಯಾದ
ಜೀನ್ಸ್ ಹುಡುಗನ
ಬಿಸಿಯುಸಿರು ಬಡಿದು
ಕೋಣೆಯ ಗೋಡೆ ಬಿರುಕು ಬಿಡುವವು!

Sunday, July 10, 2011

ಕತೆ: ಪಯಣ




















ರೈಲುಗಾಡಿ ವೇಗವನ್ನು ಪಡೆಯುತ್ತಿದ್ದಂತೆಯೇ ಅವರ ಮಾತಿನ ತಿಕ್ಕಾಟವೂ ತೀವ್ರ ರೂಪವನ್ನು ಪಡೆಯತೊಡಗಿತ್ತು. ಓರ್ವ ವೃದ್ದ ಮತ್ತು ಇನ್ನೊಬ್ಬ ಮಧ್ಯಮ ವಯಸ್ಸಿನ ಸಣಕಲ ಕುಳಿತುಕೊಳ್ಳುವ ಆಸನದ ವಿಷಯದಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಅದು ಫಸ್ಟ್‌ಕ್ಲಾಸ್ ಬೋಗಿ. ಯಾವುದೋ ತಾಂತ್ರಿಕ ಸಮಸ್ಯೆಯಿಂದ ಅವರಿಬ್ಬರ ಆಸನ ಅದಲು ಬದಲಾಗಿತ್ತು. ವೃದ್ಧರಿಗೆ ಸಿಕ್ಕಿದ ಆಸನದ ಒಂದು ಭಾಗ ಹರಿದು ಹೋಗಿದ್ದು ಆತ, ಎದುರಿನ ಆಸನದ ಮಧ್ಯವಯಸ್ಕನೊಂದಿಗೆ ಜಗಳಕ್ಕೆ ನಿಂತಿದ್ದರು. ‘‘ಅದು ನನ್ನ ಜಾಗ. ತಕ್ಷಣ ಅದರಿಂದ ಎದ್ದೇಳಬೇಕು’’ ಏದುಸಿರು ಬಿಡುತ್ತಾ ಜೋರಾಗಿ ಒದರಿದರು.

ಮಧ್ಯ ವಯಸ್ಕನೋ ಆಸನದಿಂದ ಏಳುವ ಲಕ್ಷಣವಿಲ್ಲ. ತಲೆಯೆತ್ತಿ ವೃದ್ಧರನ್ನು ಕೆಕ್ಕರಿಸಿ ನೋಡಿ ಹೇಳಿದ ‘‘ನೀವು ಹೋಗಿ...ರೈಲ್ವೇ ಸಿಬ್ಬಂದಿಯನ್ನು ಕರಕೊಂಡು ಬನ್ನಿ...ಮತ್ತೆ ನೋಡುವ...’’ ಎನ್ನುತ್ತಾ ಉಡಾಫೆಯಿಂದ ಯಾವುದೋ ಆಂಗ್ಲ ಪತ್ರಿಕೆಯನ್ನು ಬಿಡಿಸತೊಡಗಿದ.
ವೃದ್ಧರು ಸಿಟ್ಟಿನಿಂದ ಕಂಪಿಸುತ್ತಿದ್ದರು.

ಅಷ್ಟರಲ್ಲಿ ಅವರ ಬಲಭಾಗದ ಸೀಟಿನಿಂದ ಮಾತೊಂದು ತೂರಿ ಬಂತು ‘‘ಹಟ ಹಿಡಿಯುವುದಕ್ಕೆ ಇದೇನೂ ಸ್ವಂತ ಮನೆಯೇನೂ ಅಲ್ಲವಲ್ಲ...ಒಂದು ರಾತ್ರಿ ಕಳೆದರೆ ಈ ಗಾಡಿಯಿಂದ ಎಲ್ಲರೂ ಅವರವರ ನಿಲ್ದಾಣದಲ್ಲಿ ಇಳಿಯಲೇ ಬೇಕು. ತುಸು ಹೊಂದಾಣಿಕೆ ಮಾಡಿಕೋಬಾರದೆ...’’

ವೃದ್ಧ ಧ್ವನಿ ಬಂದತ್ತ ಹೊರಳಿದರು. ತರುಣನೊಬ್ಬ ಕುಳಿತಿದ್ದಾನೆ. ಆತನ ಮುಖದಲ್ಲಿ ಕಂಗೊಳಿಸುತ್ತಿರುವ ನಗು ವೃದ್ಧರನ್ನು ಇನ್ನಷ್ಟು ಸಿಟ್ಟಿಗೆಬ್ಬಿಸಿತು.
‘‘ಹಾಗಾದರೆ ನೀ ಬಂದು ಈ ಸೀಟಲ್ಲಿ ಕುಳಿತುಕೋ...’’ ವೃದ್ಧ ಸಿಟ್ಟಿನಿಂದ ಕಂಪಿಸುತ್ತಾ ಅಬ್ಬರಿಸಿದರು.
‘‘ಸರಿ ಹಾಗೇ ಮಾಡೋಣ...’’ ಎಂದು ಅದೇ ಮುಗುಳ್ನಗೆಯೊಂದಿಗೆ ತರುಣ ತನ್ನ ಬ್ಯಾಗ್‌ನೊಂದಿಗೆ ಎಡಭಾಗಕ್ಕೆ ಬಂದ. ಅಷ್ಟೇ ಅಲ್ಲ, ವೃದ್ಧರ ಬ್ಯಾಗುಗಳನ್ನು ಜೋಪಾನ ಎತ್ತಿ ಬಲಭಾಗದ ಸೀಟಿನ ಮೇಲೆ ಇಟ್ಟ.

ಆ ಮೇಲೆ ರೈಲು ಗಾಡಿಯ ಚಲನೆಯನ್ನು ಬಿಟ್ಟರೆ, ಆ ಭೋಗಿಯಲ್ಲಿ ಬೇರೆ ಸದ್ದುಗದ್ದಲವಿಲ್ಲ್ಲ. ಮಾತಂತೂ ಇಲ್ಲವೇ ಇಲ್ಲ. ಯುದ್ಧದನಂತರದ ರಣರಂಗದಂತೆ. ಎಲ್ಲರೂ ನಿದ್ದೆಗೆ ಅಣಿಯಾದರು. ಬೋಗಿಯೊಳಗಿನ ಬೆಳಕು ಆರಿತು. ಅವರೆಲ್ಲ ಚಲಿಸುತ್ತಿರುವ ತೊಟ್ಟಿಲೊಂದರಲ್ಲಿ ನಿದ್ದೆಗೆ ಶರಣಾದ ಕಂದಮ್ಮಗಳಂತೆ ಕಾಣುತ್ತಿದ್ದರು. ಗೊಣಗುತ್ತಾ ವೃದ್ಧರೂ ನಿದ್ದೆ ಹೋದರು.
***

ಗಾಢ ಕತ್ತಲನ್ನು ಸೀಳಿ ಬಂದ ಕೈಯೊಂದು ‘‘ನಿಲ್ಲಾಣ ಬಂತು. ಇಳಿಯಿರಿ’’ ಎಂದು ತಟ್ಟಿ ಎಬ್ಬಿಸಿದಂತಾಗಿ ಆ ವೃದ್ಧರು ಗಕ್ಕನೆ ಎದ್ದು ಕುಳಿತರು. ಕಿಟಕಿಯಿಂದ ನೋಡಿದರೆ ಬರೇ ಕತ್ತಲು. ಅಕ್ಕಪಕ್ಕದಲ್ಲಿ ಯಾರೂ ಇಲ್ಲ. ರೈಲು ವೇಗವಾಗಿ ಚಲಿಸುತ್ತಿತ್ತು. ಬೋಗಿಯೊಳಗೆ ಮಂದ ಬೆಳಕು. ಎಲ್ಲರೂ ಗಾಢ ನಿದ್ದೆಯಲ್ಲಿದ್ದಾರೆ.

‘ಇದು ಸ್ವಂತ ಮನೆಯೇನೂ ಅಲ್ಲವಲ್ಲ...ಎಲ್ಲರೂ ಅವರವರ ನಿಲ್ದಾಣದಲ್ಲಿ ಇಳಿಯಲೇ ಬೇಕು’ ಎನ್ನುವ ಮಾತು ಅವರೊಳಗಿನ ಆಳದಿಂದ ಪಿಸುಗುಟ್ಟಿದಂತಾಯಿತು. ರಾತ್ರಿ ಮಲಗುವ ಮುನ್ನ ತರುಣ ಹೇಳಿದ ಮಾತು ಅವರೊಳಗೆ ಚಿತ್ರವಿಚಿತ್ರ ಅರ್ಥ ಪಡೆದುಕೊಳ್ಳುತ್ತಿತ್ತು. ಅವರ ಏದುಸಿರು ಜೋರಾಯಿತು.

ಎದ್ದು ನಿಂತ ಅವರು ಎಡಭಾಗದಲ್ಲಿ ಗಾಢ ನಿದ್ದೆಯಲ್ಲಿರುವ ತರುಣನತ್ತ ನೋಡಿದರು. ಸಿಟ್ಟಿನ ಭರದಲ್ಲಿ ಅವನ ಮುಖವನ್ನೇ ಸರಿಯಾಗಿ ಗಮನಿಸಿರಲಿಲ್ಲ. ಎನ್ನುತ್ತಾ ಅವನೆಡೆಗೆ ಬಾಗಿದರು. ಮುಖ ಕಂಬಳಿಯಿಂದ ಮುಚ್ಚಿತ್ತು. ಕಂಬಳಿಯಿಂದ ಇಣುಕುತ್ತಿದ್ದ ಪಾದ ಮಾತ್ರ ಆ ಮಂದ ಬೆಳಕಿನಲ್ಲಿ ಹೊಳೆಯುತ್ತಿತ್ತು. ವೃದ್ಧರು ಬಾಗಿ ಆ ತರುಣನ ಪಾದವನ್ನು ಸ್ಪರ್ಶಿಸಿದವರು ಹಾವನ್ನು ಮುಟ್ಟಿದವರಂತೆ ಪಕ್ಕನೆ ಕೈಯನ್ನು ಹಿಂದೆಗೆದುಕೊಂಡರು. ಆ ತರುಣನ ಪಾದ ಮಂಜಿನಂತೆ ಕೊರೆಯುತ್ತಿತ್ತು.!

Sunday, July 3, 2011

ಸಂತನ ಜೋಳಿಗೆಯಿಂದ ಇನ್ನೊಂದಿಷ್ಟು ಕತೆಗಳು

















ಕ್ಷಮೆ ಮತ್ತು ಭಯ
ತನ್ನ ಪ್ರೀತಿಯ ಶಿಷ್ಯನೊಬ್ಬ ಗಂಭೀರವಾದ ತಪ್ಪೊಂದನ್ನು ಮಾಡಿದ ಕುರಿತು ಸಂತನಿಗೆ ಮಾಹಿತಿ ಸಿಕ್ಕಿತು.
ಶಿಷ್ಯನ ಕುರಿತು ಅಸೂಯೆಯನ್ನು ಹೊಂದಿದ್ದ ಇತರ ಶಿಷ್ಯರು ಸಂತನೊಂದಿಗೆ ಇದನ್ನು ಚುಚ್ಚಿ ಆಡಿದರು.
ಅಂದು ಸಂತನಿಗೆ ದೇವರ ಕ್ಷಮೆಯ ಕುರಿತಂತೆ ಮಾತನಾಡಬೇಕೆನಿಸಿತು.
ಹಾಗೆಂದು ನಿರ್ಧರಿಸಿ ತನ್ನೆಲ್ಲ ಶಿಷ್ಯರನ್ನು ತನ್ಮುಂದೆ ಕುಳ್ಳಿರಿಸಿ ಕೊಂಡ. ಸಂತ ಪ್ರವಚನ ಮಾಡುವುದು ತೀರಾ ಅಪರೂಪ.
ಯಾವಾಗಲೂ ಗದ್ದೆ, ತೋಟ ಎಂದು ಕೆಲಸದಲ್ಲೇ ತೊಡಗಿರುತ್ತಾರೆ. ಆದುದರಿಂದ ಶಿಷ್ಯರೆಲ್ಲ ಸಂತನ ಮುಂದೆ ಕುತೂಹಲದಿಂದ ನೆರೆದರು.
ಮಾತನಾಡಲು ಹೊರಟ ಸಂತನ ಗಂಟಲು ಯಾಕೋ ಕಟ್ಟಿತು. ತುಂಬಾ ಹೊತ್ತು ವೌನದಿಂದ ಕುಳಿತ.
ಬಳಿಕ ಏನೋ ಹೇಳಲು ಬಾಯಿ ತೆರೆದ.
ಆಡಲಾಗದೆ ಸಂಕಟ ಪಟ್ಟ. ಆಮೇಲೆ ನಿಟ್ಟುಸಿರಿಟ್ಟು ಹೇಳಿದ ‘‘ದೇವರ ಕ್ಷಮೆಯ, ಕರುಣೆಯ ಆಳ, ಅಗಾಧತೆಯನ್ನು ನೆನೆದರೆ ನನಗೆ ಭಯವಾಗುತ್ತದೆ’’
ಶಿಷ್ಯರು ಅಚ್ಚರಿಯಿಂದ ಕೇಳಿದರು ‘‘ಕ್ಷಮೆ, ಕರುಣೆಯ ಬಗ್ಗೆ ಭಯ ಯಾಕೆ ಗುರುಗಳೇ?’’
‘‘ಅವನ ಕ್ಷಮೆ ಕರುಣೆ ಅದೆಷ್ಟು ದೊಡ್ಡದೆಂದರೆ, ಅದರ ಧೈರ್ಯದಿಂದ ಎಲ್ಲಿ ನಾನು ಕೆಡುಕಿನೆಡೆಗೆ ಹೆಜ್ಜೆ ಹಾಕಿ ಬಿಡುವೆನೋ ಎಂಬ ಭಯ’’ ಹೀಗೆಂದ ಸಂತ ತನ್ನ ಪ್ರವಚನ ಮುಗಿಸಿದ.

ರಸ್ತೆ
ಮರದ ಕೆಳಗೆ ನಿಂತ ಸಂತನಲ್ಲಿ ಆತ ಕೇಳಿದ
‘‘ಈ ರಸ್ತೆ ಎಲ್ಲಿಗೆ ಹೋಗುತ್ತದೆ?’’
‘‘ಈ ರಸ್ತೆ ಇದ್ದಲ್ಲೇ ಇದೆ. ರಸ್ತೆಯ ಹಿಂದೆ ಹೋದರೆ ನೀನೂ ಇದ್ದಲ್ಲೇ ಇರುವೆ’’
‘‘ಹಾಗಾದರೆ ನಾನೇನು ಮಾಡಬೇಕು?’’
‘‘ನೀನು ಮುಂದೆ ಹೋಗು. ರಸ್ತೆ ನಿನ್ನನ್ನು ಹಿಂಬಾಲಿಸುತ್ತದೆ’’

ಗಳಿಕೆ
‘‘ಬರೆದು ನೀನು ಏನನ್ನು ಪಡೆದುಕೊಂಡೆ? ಬಡತನ, ದುಃಖ, ದಾರಿದ್ರ...ನಿನ್ನ ಬರಹದಿಂದ ನೀನು ಸಂಪಾದಿಸಿದ್ದು ಇಷ್ಟೇ...ಮತ್ತೂ ಯಾಕೆ ಬರಹ ಬರಹ ಅಂತ ಸಾಯ್ತ ಇದ್ದೀಯ?’’
‘‘ನೀನು ತಪ್ಪು ಹೇಳುತ್ತಿದ್ದೀಯ, ಬಡತನ ದುಃಖ, ದಾರಿದ್ರದಿಂದ ನಾನು ಬರಹವನ್ನು ಸಂಪಾದಿಸಿದೆ’’

ಕವಿತೆ ಮತ್ತು ಮಂಚ
ಆತ ದೊಡ್ಡ ಕವಿ. ಸದಾ ಭಾವನೆಗಳ ಭಾರವನ್ನು ಹೊತ್ತು ತಿರುಗುವವನು.
ಜಗತ್ತು ತನ್ನನ್ನು ಗೌರವಿಸುತ್ತದೆಯೆಂಬ ಜಂಬ ಬೇರೆ.
ಒಮ್ಮೆ, ಆತನಿಗೆ ಒಂದು ಸುಂದರ ಮಂಚ ಬೇಕಾಯಿತು. ಅದಕ್ಕಾಗಿ ಆತ ಒಂದು ದಿನ ಬಡಿಗನಲ್ಲಿ ಹೋದ. ಬಡಿಗ ಒಂದು ಸುಂದರ ಮಂಚವನ್ನು ನಿರ್ಮಿಸುತ್ತಿದ್ದ. ಬಡಿಗನ ಸ್ಪರ್ಶಕ್ಕೆ ಮರ, ಗಿಡ, ಬಳ್ಳಿ, ಹೂವುಗಳು, ಚಿಟ್ಟೆ ಹೀಗೆ...ಅರಳುತ್ತಿದ್ದವು.
ಕವಿ ಆ ಪವಾಡಕ್ಕೆ ಮಾರು ಹೋದ.
ಭಾವುಕನಾಗಿ, ಸಣ್ಣಗೆ ಕಂಪಿಸುತ್ತಾ ‘‘ಅಯ್ಯೋ, ಇದು ಮಂಚವಲ್ಲ, ಒಂದು ಸುಂದರ ಕವಿತೆ...’’ ಎಂದು ಜೋರಾಗಿ ಉದ್ಗರಿಸಿದ.
ಕೆಲಸದಲ್ಲಿ ಮಗ್ನನಾಗಿದ್ದ ಬಡಿಗ ತಲೆ ಎತ್ತಿದ.
ಕವಿಯಲ್ಲಿ ಕೇಳಿದ ‘‘ಕವಿತೆ! ಹಾಗೆಂದರೇನು ಸ್ವಾಮಿ?’’

ಕವಿಗೆ ಒಂದು ಕ್ಷಣ ಮುಖಭಂಗವಾದರೂ ಹೇಳಿದ ‘‘ಕವಿತೆಯನ್ನು ಕವಿಯಷ್ಟೇ ಕಟ್ಟಬಲ್ಲ. ಕವಿತೆಗೆ ವ್ಯಾಖ್ಯಾನಗಳೇ ಇಲ್ಲ. ಜಗತ್ತಿನಲ್ಲಿ ಅದಕ್ಕೆ ಬೆಲೆಕಟ್ಟುವುದಕ್ಕಾಗದು’’
ಬಡಿಗನಿಗೆ ಅಚ್ಚರಿ ‘‘ನೀವು ಹೇಳಿದ ಆ ಕವಿತೆಯಲ್ಲಿ ಕುಳಿತುಕೊಳ್ಳುವುದಕ್ಕಾಗುತ್ತದೆಯೆ?’’ ಪ್ರಶ್ನಿಸಿದ.
‘‘ಇಲ್ಲ’’ ಕವಿ ಉತ್ತರಿಸಿದ.
‘‘ಸರಿ, ಆ ಕವಿತೆಯ ಮೇಲೆ ವಸ್ತುಗಳನ್ನಿಡಲು ಆಗುತ್ತದೆಯೆ?’’ ಪ್ರಶ್ನಿಸಿದ ಬಡಗಿ.
‘‘ಇಲ್ಲ’’ ಕವಿ ಉತ್ತರಿಸಿದ.
‘‘ಸರಿ, ಆ ಕವಿತೆಯನ್ನು ತಿನ್ನಲಿಕ್ಕೆ, ಕುಡಿಯಲಿಕ್ಕೆ ಏನಾದರೂ ಆಗುತ್ತದೆಯೆ?’’
‘‘ಇಲ್ಲ’’ ಕವಿ ಅವಮಾನದಿಂದ ನುಡಿದ.
‘‘ಬೇಡ, ಆ ಕವಿತೆಯ ಮೇಲೆ ಸವಾರಿ ಮಾಡಲಿಕ್ಕಾದರೂ ಆಗುತ್ತದೆಯೆ?’’ ಬಡಗಿ ಕೊನೆಯದಾಗಿ ಕೇಳಿದ.
‘‘ಇಲ್ಲ’’ ಕವಿ ಹೇಳಿದ.
ಬಡಗಿಗೆ ಸಿಟ್ಟು ಬಂತು ‘‘ಮತ್ಯಾಕೆ ಆ ನಿಷ್ಪ್ರಯೋಜಕ ವಸ್ತುವಾದ ಕವಿತೆಗೆ ನನ್ನ ಈ ಸುಂದರ ಮಂಚವನ್ನು ಹೋಲಿಸಿದಿರಿ?’’

ಲೆಕ್ಕ
ಸಂತ ಮತ್ತು ಶಿಷ್ಯರು ಒಂದು ಮಾವಿನ ಮರದಡಿಯಲ್ಲಿ ತಂಗಿದ್ದರು.
ಶಿಷ್ಯನೊಬ್ಬ ತುಂಟನದಿಂದ ಕೇೀಳಿದ ‘‘ಗುರುಗಳೇ, ಈ ಮರದಲ್ಲಿ ಅದೆಷ್ಟು ಮಾವಿನಕಾಯಿಗಳಿವೆ. ನೀವು ಲೆಕ್ಕ ಹಾಕಿ ಹೇಳಬಲ್ಲಿರಾ?’’
ಸಂತ ನಕ್ಕು ಉತ್ತರಿಸಿದ ‘‘ಒಂದು ಮಾವಿನ ಕಾಯಿಯೊಳಗೆ ಅದೆಷ್ಟು ಮಾವಿನ ಮರಗಳಿವೆ ಎನ್ನುವುದನ್ನು ನಾನು ಲೆಕ್ಕ ಹಾಕುತ್ತಿದ್ದೇನೆ. ಬಳಿಕ ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ’’

ತಾಯಿ
‘‘ಪೋಸ್ಟ್...’’ ಅಂಚೆಯವನ ಧ್ವನಿ.
ಆಕೆ ಹೊರಗೆ ಓಡಿ ಬಂದಳು.
ದೂರದ ಹಾಸ್ಟೆಲ್‌ನಲ್ಲಿಂದ ಮಗ ಬರೆದ ಪತ್ರ
‘‘ಕಾಲೇಜಿಗೆ ಫೀಸು ಕಟ್ಟಲಿಕ್ಕಿದೆ. ತಕ್ಷಣ ಹಣ ಕಳಿಸು’’ ಒಂದೇ ವಾಕ್ಯ.
ಅವಳ ಆರೋಗ್ಯ ಕೆಟ್ಟು ಕೂತಿತ್ತು.
ಆಕೆ ಜೀವವಿಮೆಯನ್ನು ಮಾಡಿದ್ದಳು.
ಮಗನಿಗೆ ಬರೆದಳು ‘‘ಚಿಂತೆ ಮಾಡಬೇಡ. ಇನ್ನೊಂದು ತಿಂಗಳಲ್ಲಿ ನಿನ್ನ ಹಣ ಸೇರುತ್ತದೆ. ಅಲ್ಲಿಯವರೆಗೆ ಸ್ವಲ್ಪ ತಡಕೋ ಮಗಾ...’’

ವ್ಯಾಪಾರ
ಫಕೀರನೊಬ್ಬ ನಟ್ಟ ನಡು ಬಿಸಿಲಿನಲ್ಲಿ ವೇಗದ ಹೆಜ್ಜೆಯಿಡುತ್ತಾ ಸಾಗುತ್ತಿದ್ದನು. ಅದೇ ದಾರಿಯಲ್ಲಿ ಫಕೀರನಿಗೆ ರೈತನೊಬ್ಬ ಜೊತೆಯಾದ. ಫಕೀರನ ಅವಸರ ನೋಡಿ ಈತ ಯಾವುದೋ ಘನಕಾರ್ಯಕ್ಕೆ ಹೋಗುತ್ತಿದ್ದಾನೆ ಅನ್ನಿಸಿತು. ರೈತ ತಡೆಯಲಾರ
ದೆ ಕೇಳಿದ.
‘‘ಇಷ್ಟು ವೇಗವಾಗಿ ಎಲ್ಲಿಗೆ ಹೋಗುತ್ತಿದ್ದೀರಿ?’’
ಫಕೀರ ಮುಂದೆ ಬಿದ್ದುಕೊಂಡಿರುವ ದಾರಿಯನ್ನು ನೋಡುತ್ತಾ ಹೇಳಿದ

‘‘ ಎಲ್ಲಿಂದ ಬಂದೆನೋ ಅಲ್ಲಿಗೆ’’.
ರೈತ ಅಚ್ಚರಿಯಿಂದ ಮರುಪ್ರಶ್ನಿಸಿದ. ‘‘ಎಲ್ಲಿಂದ ಬಂದಿರಿ?’’
ಫಕೀರ ತನ್ನ ವೇಗವನ್ನು ಒಂದಿಷ್ಟೂ ಇಳಿಸದೆ ಹೇಳಿದ. ‘‘ಎಲ್ಲಿಗೆ ಹೋಗಲಿದ್ದೇನೋ ಅಲಿಂ್ಲದ’’.
ರೈತನಿಗೆ ಫಕೀರನಲ್ಲಿ ಏನೋ ವಿಶಿಷ್ಟ ಕಂಡಿತು. ‘‘ಇದೇ ದಾರಿಯಲ್ಲಿ ನನ್ನ ಮನೆ ಸಿಗುತ್ತದೆ. ಅಲ್ಲಿ ಒಂದಿಷ್ಟು ಹೊತ್ತು ತಂಗಿ ಹೋಗಿ’’ ಮನವಿ ಮಾಡಿದ.
‘‘ಆ ಮನೆಯನ್ನು ಶಾಶ್ವತವಾಗಿ ನನಗೆ ಕೊಡುವುದಿದ್ದರೆ ಅಲ್ಲಿ ತಂಗಿಯೇನು’’ ಫಕೀರ ಉತ್ತರಿಸಿದ.

‘‘ಅದಕ್ಕೆ ಪ್ರತಿಯಾಗಿ ನನಗೇನು ನೀಡುತ್ತೀರಿ?’’ ರೈತ ದುರಾಸೆಯಿಂದ ಕೇಳಿದ.
‘‘ನಾನು ಈಗ ಹೊರಟಿರುವ ದಾರಿಯನ್ನು ನಿನಗೆ ಪ್ರತಿಫಲವಾಗಿ ನೀಡುತ್ತೇನೆ. ವ್ಯಾಪಾರಕ್ಕೆ ಸಿದ್ಧನಿದ್ದೀಯ?’’ ಫಕೀರ ಉದ್ದಕ್ಕೆ ನಡೆಯುತ್ತಲೇ ಕೇಳಿದ.


ದುಖ-ಸಂತೋಷ
ಕೋಗಿಲೆ ಇಂಪಾಗಿ ಹಾಡುವುದು ನವಿಲಿನ ಕಿವಿಗೆ ಬಿತ್ತು. ತನ್ನ ಕುರೂಪಿ ಸ್ವರಕ್ಕಾಗಿ ದುಕ್ಹಗೊಂದ್ ನವಿಲು, ಏಕಾಏಕಿ ಖಿನ್ನವಾಯಿತು. ಒಮ್ಮೆ ನವಿಲು ಕುಣಿಯುವುದು ಕೋಗಿಲೆಯ ಕಣ್ಣಿಗೆ ಬಿತ್ತು. ಸರೋವರದ ಕನ್ನಡಿಯಲ್ಲಿ ತನ್ನ ಕುರೂಪಿ ದೇಹವನ್ನು ಕಂಡು ಕೋಗಿಲೆ ಅಳ ತೊಡಗಿತು. ನವಿಲು - ಕೋಗಿಲೆ ಒಂದು ದಿನ ಪರಸ್ಪರ ಭೇಟಿಯಾದವು. ನವಿಲು ಹೇಳಿತು ‘‘ನಿನ್ನ ಧ್ವನಿಯನ್ನು ನನಗೆ ಕೊಟ್ಟರೆ ಜಗತ್ತಿನಲ್ಲೇ ನನ್ನಷ್ಟು ಸಂತೋಷದ ಜೀವಿ ಯಾರೂ ಇರುವುದಿಲ್ಲ’’
ಕೋಗಿಲೆ ಹೇಳಿತು ‘‘ಖಂಡಿತಾ ಕೊಡುವೆ. ಆದರೆ ನಿನ್ನ ರೂಪವನ್ನು ನನಗೆ ಕೊಡಬೇಕು. ಅದು ನನಗೆ ಸಿಕ್ಕಿದರೆ ನನ್ನಷ್ಟು ಸಂತೋಷದ ಜೀವಿ ಇನ್ನಾರೂ ಇರುವುದಿಲ್ಲ’’
ಹಾಗೆಯೇ ಪರಸ್ಪರ ರೂಪ-ಧ್ವನಿಯನ್ನು ಅದಲು ಬದಲು ಮಾಡಿಕೊಂಡವು. ಸ್ವಲ್ಪ ದಿನದ ಬಳಿಕ ನವಿಲು ಮೊದಲಿಗಿಂತಲೂ ಹೆಚ್ಚು ದುಖಿಯಾಗಿತ್ತು.
‘‘ ಛೆ, ನನ್ನ ಅಷ್ಟು ಚಂದದ ರೂಪವನ್ನು ಕೊಟ್ಟು ಬಿಟ್ಟೆನಲ್ಲ’’
ಕೋಗಿಲೆ ಮೊದಲಿಗಿಂತಲೂ ಜೋರಾಗಿ ಅಳತೊಡಗಿತು.
‘‘ಛೆ, ನನ್ನ ಅಷ್ಟು ಇಂಪಾದ ಧ್ವನಿಯನ್ನು ಕಳೆದು ಕೊಂಡೆನಲ್ಲ’’