Sunday, November 29, 2015

ಅಲ್ಲಲ್ಲಿ ಮುಗ್ಗರಿಸುವ ಫಸ್ಟ್ ರ‍್ಯಾಂಕ್ ರಾಜು

ಶಿಕ್ಷಣ ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ಟೀಕಿಸಿ, ವಿಮರ್ಶಿಸಿ ಹತ್ತು ಹಲವು ಚಿತ್ರಗಳು ಬಂದಿವೆ. ಹಿಂದಿಯಲ್ಲಿ ಮುನ್ನಾ ಭಾಯಿ ಎಂಬಿಬಿಎಸ್ ಮತ್ತು ತ್ರೀ ಈಡಿಯಟ್ ಸಿನಿಮ ವ್ಯಂಗ್ಯದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಶಿಕ್ಷಣವ್ಯವಸ್ಥೆಯನ್ನು ಕಟ್ಟಿಕೊಟ್ಟಿವೆ.  ಒಂದು ಗಂಭೀರ ವಿಷಯವನ್ನು ಲವಲವಿಕೆಯ  ಮೂಲಕ ಹೇಗೆ ನಿರೂಪಿಸಬಹುದು ಎನ್ನುವುದಕ್ಕೆ ಈ ಎರಡು ಚಿತ್ರಗಳೇ ಅತ್ಯುತ್ತಮ ಉದಾಹರಣೆ. ಈ ಚಿತ್ರದ ಯಶಸ್ವಿಗೆ ಕಾರಣವಾದುದು ಗಟ್ಟಿಯಾದ ಚಿತ್ರಕತೆ. ಇಲ್ಲಿ ಎಲ್ಲೂ ಭಾಷಣಗಳಿಲ್ಲ. ಬರೇ ಘಟನೆಗಳ ಮೂಲಕವೇ ವಿಷಯವನ್ನು ಪ್ರೇಕ್ಷಕರ ಎದೆಗೆ ದಾಟಿಸುವ ನಿರ್ದೇಶಕನ ಜಾಣ್ಮೆ, ಚಿತ್ರದ ಯಶಸ್ಸಿಗೆ ಕಾರಣವಾಯಿತು. ಎಲ್ಲ ವರ್ಗದ ಪ್ರೇಕ್ಷಕರನ್ನೂ ಈ ಚಿತ್ರ ಸೆಳೆಯಿತು. 
ಕನ್ನಡದಲ್ಲೂ ಶಿಕ್ಷಣವ್ಯವಸ್ಥೆಯನ್ನು ವಸ್ತುವಾಗಿಟ್ಟುಕೊಂಡು ಹತ್ತು ಹಲವು ಚಿತ್ರಗಳು ಬಂದಿವೆ. ಆದರೆ ಅದು ಯಶಸ್ವಿಯಾಗಿರುವುದು ಕಡಿಮೆ. ಈ ಹಿನ್ನೆಲೆಯಲ್ಲಿ ‘ಫಸ್ಟ್ ರ‍್ಯಾಂಕ್ ರಾಜು’ ಹಲವು ಕಾರಣಗಳಿಗಾಗಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿತ್ತು. ಮೊದಲನೆಯದಾಗಿ ನರೇಶ್ ಅವರ ಮೊದಲ ನಿರ್ದೇಶನದ ಚಿತ್ರ ಇದು. ಜೊತೆಗೆ ಗುರುನಂದನ್ ಎನ್ನುವ ನವ ಯುವ ನಾಯಕ ನಟಿಸಿದ ಚಿತ್ರ. ಚಿತ್ರದ ಹೆಸರೂ ವಿಭಿನ್ನವಾದುದು. ಜೊತೆಗೆ ಶಿಕ್ಷಣವೆನ್ನುವ ಗಂಭೀರ ವಿಷಯವನ್ನು ಹಾಸ್ಯಮಯವಾಗಿ ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು. ಅಲ್ಲದೇ, ರಾಘವೇಂದ್ರ ರಾಜ್‌ಕುಮಾರ್‌ರಿಂದ ಹಿಡಿದು ಅನಂತನಾಗ್‌ವರೆಗೂ ಹಿರಿಯರೆನಿಸಿಕೊಂಡವರೆಲ್ಲ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ‘ರ‍್ಯಾಂಕ್ ಸ್ಟೂಡೆಂಟ್’ ಮಾಧ್ಯಮಗಳಲ್ಲಿ ಒಂದಿಷ್ಟು ಚರ್ಚೆಯಲ್ಲಿದ್ದ.
ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ರ‍್ಯಾಂಕ್ ಗಳಿಸಿದಾಕ್ಷಣ ಆತ ಎಲ್ಲವನ್ನೂ ತಿಳಿದವನಾಗುವುದಿಲ್ಲ. ಶಾಲೆಯಲ್ಲಿ ಮೊದಲು ಪಾಠ ಕಲಿಸಲಾಗುತ್ತದೆ. ಕೊನೆಯಲ್ಲಿ ಎಕ್ಸಾಂ ಪಾಸ್ ಮಾಡಬೇಕಾಗುತ್ತದೆ. ಆದರೆ ಬದುಕು ಎನ್ನುವ ಪರೀಕ್ಷೆಯಲ್ಲಿ ಮೊದಲು ಎಕ್ಸಾಂ ಬರೆಯಬೇಕು. ಬಳಿಕ ಪಾಠ ಕಲಿಯಬೇಕು. ಈ ಸಾಲಿನ ತಳಹದಿಯ ಮೇಲೆ ಫಸ್ಟ್ ರ‍್ಯಾಂಕ್ ರಾಜು ಸಿನೆಮಾವನ್ನು ಮಾಡಲಾಗಿದೆ. ಇಲ್ಲಿ ಫಸ್ಟ್  ರ‍್ಯಾಂಕ್ ಗಳಿಸುವ ರಾಜು ಕಾಲೇಜಿನ ಹೊರಗಡೆ, ವಾಸ್ತವ ಬದುಕಿನ ಮುಂದೆ ಸದಾ ನಗೆಪಾಟಲಿಗೀಡಾಗಬೇಕಾಗುತ್ತದೆ. ಸದಾ ಫಸ್ಟ್  ರ‍್ಯಾಂಕ್‌ನ ಕಿರೀಟವಿಟ್ಟುಕೊಂಡೇ ಬೆಳೆದಿದ್ದ ಈತನಿಗೆ, ಮೊದಲ ಬಾರಿ ಸಂದರ್ಶನವೊಂದರಲ್ಲಿ ಭಾರೀ ಮುಖಭಂಗವುಂಟಾಗುತ್ತದೆ. ಎಲ್ಲ ಅರ್ಹತೆಯಿದ್ದರೂ ಆತ ಸಂದರ್ಶನದಲ್ಲಿ ತಿರಸ್ಕೃತನಾಗುತ್ತಾನೆ. ಅಲ್ಲಿಂದ ಆತ ಹೊರಗಿನ ಬದುಕಿನ ಪರೀಕ್ಷೆಗೆ ಕೂತು ಪಾಸಾಗುವುದಕ್ಕೆ ಹವಣಿಸುವುದೇ ಕತೆಯ ಮುಖ್ಯ ವಸ್ತು.
ಇದೊಂದು ಅಪ್ಪಟ ಹಾಸ್ಯಮಯ ಚಿತ್ರ. ರ‍್ಯಾಂಕ್ ಸ್ಟೂಡೆಂಟ್ ಆಗಿ ಆ ಪಾತ್ರವನ್ನು ಗುರುನಂದನ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ಚಿತ್ರಕತೆ ಬಿಗಿಯಾಗಿಲ್ಲ. ಚಿತ್ರವನ್ನು ಇನ್ನಷ್ಟು ಕುತೂಹಲಕಾರಿಯಾಗಿ, ಲವಲವಿಕೆಯಿಂದ ಪ್ರೇಕ್ಷಕರ ಮುಂದಿಡುವ ಅವಕಾಶವನ್ನು ದುರ್ಬಲ ಚಿತ್ರಕತೆಯ ದೆಸೆಯಿಂದ ನಿರ್ದೇಶಕರು ಕಳೆದುಕೊಂಡಿದ್ದಾರೆ.  ಚಿತ್ರದ ಮೊದಲರ್ಧ ಒಂದಿಷ್ಟು ಹಾಸ್ಯಮಯವಾಗಿಯೇ ಓಡುತ್ತದೆ. ರಾಜುವಿನ ತಂದೆಯಾಗಿ ಅಚ್ಯುತ್ ಅವರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ. ತಂದೆ ಮಗನ ಸಂಬಂಧವನ್ನು ಚಿತ್ರದಲ್ಲಿ ಆತ್ಮೀಯವಾಗಿ ಕಟ್ಟಿ ಕೊಡಲಾಗಿದೆ.  ಪೆದ್ದು ಪೆದ್ದು ರಾಜು,  ಬಳಿಕ ಸ್ಟೈಲ್‌ಕಿಂಗ್ ರಾಜ್ ಆಗಿ ಬದಲಾದಾಗಲೂ ಅಷ್ಟೇ ಇಷ್ಟವಾಗುತ್ತಾನೆ. ಗುರುನಂದನ್ ಮುದ್ದು ಮುಖಕ್ಕೆ ಗಾಂಧಿ ನಗರದಲ್ಲಿ ಭವಿಷ್ಯವಿದೆ. ಭವಿಷ್ಯದಲ್ಲಿ ದಿಗಂತ್‌ನ ಸ್ಥಾನವನ್ನು ಈತ ತುಂಬುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ. ಕೆಲವು ಭಾವನಾತ್ಮಕ ಸನ್ನಿವೇಶದಲ್ಲಿ ನಂದನ್ ಸೋತಂತೆ ಕಂಡರೂ ಶ್ರಮ ಈತನನ್ನು ಇನ್ನಷ್ಟು ಬೆಳೆಸುವುದರಲ್ಲಿ ಅನುಮಾನವಿಲ್ಲ. ಹಾಡು, ಸಂಗೀತ ಚಿತ್ರಕ್ಕೆ ಪೂರಕವಾಗಿದೆ. 
ಸಿನೆಮಾ ಯಾವತ್ತೂ ಭಾಷಣವಾಗಬಾರದು. ಚಿತ್ರದ ಕ್ಲೈಮಾಕ್ಸ್‌ನಲ್ಲಿ ನಾಯಕನ ಬಾಯಿಯಿಂದ ಶಿಕ್ಷಣದ ಕುರಿತಂತೆ ಭಾಷಣ ಹೊಡೆಸುವುದು ಹಿಂಸೆ ಎನಿಸುತ್ತದೆ. ಹಾಗೆಯೇ, ತಂದೆ ತನ್ನ ಮಗನಿಗೆ ಪ್ರೇಮ ಪಾಠವನ್ನು ಹೇಳಿಕೊಡುವುದು, ಅದಕ್ಕಾಗಿ ಸಾಧುಕೋಕಿಲನಂತಹ ಶನಿ ಪಾತ್ರಗಳನ್ನು ಬಳಸುವುದೆಲ್ಲ ಅತಿರೇಕವೆನಿಸುತ್ತದೆ. ಅಲ್ಲಲ್ಲಿ ಚಿತ್ರ ಎಡವುತ್ತ, ಮುಗ್ಗರಿಸುತ್ತಾ ಸಾಗುತ್ತದೆ. ಕೆಲವೆಡೆ ಬೋರ್ ಅನ್ನಿಸುತ್ತದೆ. ಕೆಲವೆಡೆ ಚಿತ್ರದ ಸನ್ನಿವೇಶಗಳು ಮನಸ್ಸನ್ನು ಥಕ್ ಎಂದು ಆವರಿಸಿಕೊಳ್ಳುತ್ತವೆ. ನಿರ್ದೇಶಕ ನರೇಶ್ ಅವರು ಇನ್ನಷ್ಟು ಪ್ರಯತ್ನ ಪಟ್ಟಿದ್ದರೆ, ಚಿತ್ರಕತೆಯಲ್ಲಿ ಇನ್ನಷ್ಟು ಶ್ರದ್ಧೆ ಕಾಳಜಿಯನ್ನು ತೋರಿಸಿದ್ದರೆ ಕನ್ನಡಕ್ಕೆ ಒಂದು ಒಳ್ಳೆಯ, ಸದಭಿರುಚಿಯ ಹಾಸ್ಯಮಯ ಚಿತ್ರ ದೊರಕಿದಂತಾಗುತ್ತಿತ್ತು.

Sunday, November 15, 2015

ಮಸೀದಿ ಧ್ವಂಸಗೈದವರಿಗೆ ಕೃತಜ್ಞನಾಗಿದ್ದೇನೆ

ನಾನು ನಮಾಝಿಗೆ ನಿಂತಲ್ಲೇ 
ನನ್ನ ಮಸೀದಿ 
ನನ್ನ ದೊರೆಗೆ ಬಾಗುವ ಮನಸಾದರೆ 
ಮಸೀದಿಯೇ ನನ್ನೆಡೆಗೆ ಓಡೋಡಿ ಬರೂದು 

ನನ್ನ ಮಸೀದಿಯನ್ನು ಧ್ವಂಸಗೈದವರಿಗೆ 
ಕೃತಜ್ಞನಾಗಿದ್ದೇನೆ 
ಈಗ ತೆರೆದ ಹಸಿರು ಬಯಲನ್ನೆ 
ಮಸೀದಿಯಾಗಿ ಹಾಸಿದ್ದೇನೆ 
ಹಿಮಾಲಯದ  ಬೆಟ್ಟಗಳೇ ಇಲ್ಲಿನ  ಮಿನಾರಗಳು 
ಮುಂಜಾವಿನ ಹಕ್ಕಿ ಕಲರವವೇ ನನ್ನ ಅಝಾನ್ 
ಚಲಿಸುತ್ತಿರುವ ಸೂರ್ಯನೇ ನನ್ನ ಕಾಬಾ 
ಹಿಂದೂ ಮಹಾಸಾಗರದ ತೀರದಲ್ಲಿ  ಕುಳಿತು 
ವುಜೂ ಮುಗಿಸಿ ಶುದ್ಧಿಯಾಗಿದ್ದೇನೆ 
ಈ ಮಸೀದಿಯ ವೈಭವಕ್ಕೆ ದಂಗಾಗಿದ್ದೇನೆ  
ನನ್ನ ದೊರೆಗೆ ಬಾಗಿದ್ದೇನೆ 

ಹಂದಿಯಿರಲಿ, ಗೋಮಾಂಸವಿರಲಿ 
ಎಸೆಯೂದೇನೋ ಎಸೆದು ಬಿಟ್ಟಿರಿ 
ಮಸೀದಿ, ದೇವಸ್ಥಾನದ ಮುಂದೆ ಯಾಕೆ ಎಸೆದಿರಿ? 
ಹಸಿದವನ ಮನೆಯ ಅಂಗಳಕ್ಕೆ ಎಸೆಯ ಬಹುದಿತ್ತು 

ಬಡವನ  ಮನೆ ಉರಿಯುವ ಬದಲು, 
ಒಲೆ ಉರಿಸಿದ ಪುಣ್ಯ ನಿಮ್ಮದಾಗುತ್ತಿತ್ತು

Monday, November 9, 2015

ಟಿಪ್ಪು... ನಿನ್ನೊಳಗೇ ಮಹಾ ಭಾರತ!

ನಿನ್ನೊಳಗೊಬ್ಬ ದುರ್ಯೋಧನ
ಶಕ್ತಿಯಲ್ಲ್ಲಿ ಭೀಮ, ಗುರಿಯಲ್ಲಿ ಅರ್ಜುನ
ಸಂಚಿನ ಮನೆಯೊಳಗೆ ಸಿಲುಕಿಕೊಂಡ ಅಭಿಮನ್ಯು
ಒಳಗೆ ಕಣ್ಣೀರಿಡುವ ಕರ್ಣ 
ಇತಿಹಾಸ ಕತ್ತರಿಸಿಕೊಂಡ ಏಕಲವ್ಯನ ಹೆಬ್ಬೆರಳು 
ಟಿಪ್ಪು....
ನಿನ್ನೊಳಗೇ ಒಂದು ಮಹಾ ಭಾರತ!

ಮುಡಿದುಕೊಂಡೆ ಕೆಂಡದಂತಹ ಕನಸುಗಳ
ಏರಿದ್ದು ಕುದುರೆಯನ್ನಲ್ಲ, ಹುಲಿಯನ್ನು!
ಕೆಳಗಿಳಿಯುವಂತಿಲ್ಲ!
ಮುಳ್ಳು ಹಾಸಿನ ಮೇಲೆ ವಿಶ್ರಾಂತಿ!
ನಾಲ್ದಿಕ್ಕುಗಳಲ್ಲಿ ಉರುಳುತ್ತಿರುವ ದಾಳಗಳು
ಕನಸು ನನಸಾಗುವುದು ಸುಲಭವಿಲ್ಲ!

ಕಟ್ಟಿಕೊಂಡೆ ನೆಲದ ಜನರನ್ನು ಬೆನ್ನಲ್ಲಿ
ದಲಿತ ಮಕ್ಕಳಿಗೆ ಎದೆಯ ಊಡಿಸಿದೆ
ಮಾನ ಮುಚ್ಚಿಕೊಳ್ಳಲು ತೆರಿಗೆ ಕಟ್ಟಬೇಕಾದ
ಮಾನಗೇಡಿ ಸಮಾಜದ ವಿರುದ್ಧ ಕತ್ತಿ ಹಿರಿದೆ
ಸಾರಾಯಿಯ ಉರುಳಿಂದ ಉಳಿಸಿದೆ
ಹರಿವ ನದಿಗೆ ಒಡ್ಡು ಕಟ್ಟಿದೆ
ಕೆಸರು ಗದ್ದೆಯಲ್ಲಿ ಹಸಿರು ಬೆಳೆದೆ
ಪುಸ್ತಕ, ವಿಜ್ಞಾನ,ಕಾವ್ಯ ಎಂದು
ಯುದ್ಧರಂಗದಲ್ಲೇ ಕೂತು ತಲೆಕೆಡಿಸಿಕೊಂಡೆ
ನಿನ್ನ ಯೋಚನೆಗೆ ರಾಕೆಟ್‌ನ ವೇಗ
ರಾಜತಂತ್ರಕ್ಕೆ ಹೊಸ ಭಾಷ್ಯ ಬರೆದೆ

ನರಿಗಳು ಬರೆದ ನಿನ್ನ ಚರಿತ್ರೆಯನ್ನು
ನರಿಗಳೇ ಓದಿ ವಿಶ್ಲೇಷಿಸುವಾಗ
ನಿನ್ನ ಮತಾಂಧನೆಂದು ಜರೆವಾಗ
ಶೃಂಗೇರಿ, ಕೊಲ್ಲೂರು, ಶ್ರೀರಂಗಪಟ್ಟಣ
ದೇಗುಲಗಳ ಘಂಟಾನಾದ ನಾಡನ್ನು ಎಚ್ಚರಿಸುತ್ತವೆ!
ಲೂಟಿಕೋರ ಮರಾಠಿಗರಿಂದ, ನಿಜಾಮರಿಂದ, ಬ್ರಿಟಿಷರಿಂದ
ರಕ್ಷಿಸಲ್ಪಟ್ಟ ನಾಡು, ಮನೆ, ಮಠ, ದೇಗುಲಗಳ 
ಗೋಡೆಗಳು ಇತಿಹಾಸದ ಹಸಿ ಸತ್ಯಗಳನ್ನು ತೆರೆದಿಡುತ್ತವೆ

ಯಾವುದು ಮತಾಂತರ!?
ಚಂಡಾಲನನ್ನು ಮನುಷ್ಯನನ್ನಾಗಿ ಪರಿವರ್ತಿಸುವುದು?
ಹೌದು, ಒಂದಿಷ್ಟು ಜನರು ಮತಾಂತರಗೊಂಡರು
ಬದುಕು ಕಂಡುಕೊಂಡರು...
ತಮ್ಮದೇ ಕೆರೆ ನೀರನ್ನು ಬೊಗಸೆಯೆತ್ತಿ ಕುಡಿಯುವಂತಾದರು

ನೀನು ಈ ನೆಲವನ್ನು ಪ್ರೀತಿಸಿದಷ್ಟು ಇನ್ನಾರೂ ಪ್ರೀತಿಸಲಿಲ್ಲ
ತನ್ನ ತಾಯಿ, ಪತ್ನಿ, ಮಕ್ಕಳಿಗಿಂತಲೂ ಹೆಚ್ಚೆಂದು ಬಗೆದೆ
ನಿನ್ನದಾದುದನ್ನೆಲ್ಲ ನಾಡಿಗಾಗಿ ಅರ್ಪಿಸಿ
ಬರಿದಾಗುತ್ತಾ ಹೋದೆ...
ಋಣ ಮುಗಿಯಲಿಲ್ಲ
ತಾಯಿನಾಡಿನ ಋಣವನ್ನು ಒಬ್ಬ ಯೋಧ
ತನ್ನ ಪ್ರಾಣವನ್ನು ಅರ್ಪಿಸದೇ ತೀರಿಸುವುದು ಸಾಧ್ಯವೂ ಇಲ್ಲ

ಬದುಕು ರಣರಂಗವೆಂದು ಹೇಳುವರು
ನಿನಗೋ ರಣರಂಗವೇ ಬದುಕು
ನಿನ್ನನ್ನು ಕೆಡವಿದ್ದು ಬ್ರಿಟಿಷರ ಗುಂಡುಗಳಲ್ಲ
ತನ್ನವರ ವಂಚನೆ, ದ್ರೋಹ

ಇತಿಹಾಸದ ಹಿತ್ತಲಲ್ಲಿ ಹೆಣವಾಗಿ 
ಪೂರ್ಣಯ್ಯ, ಮೀರ್‌ಸಾದಿಕ್‌ಗಳು ಕೊಳೆಯುತ್ತಿದ್ದಾರೆ...
ನೀನೋ ಮತ್ತೆ ಈ ದೇಶದ ಜನಮನದ ಕಣ್ಣುಗಳಲ್ಲಿ
ಬೆಂಕಿಯಾಗಿ ಉರಿಯುತ್ತಿರುವೆ
ಈ ದೇಶವನ್ನು ಕಾಯುತಿರುವೆ! ಪೊರೆಯುತಿರುವೆ!!

ಶ್ರೀ ಗಂಧದ ಮರ ಮತ್ತು ಗೋವು

ನಮ್ಮ ನಾಡು ಗಂಧದ ಮರಗಳಿಗೆ  ಹೆಸರಾಗಿತ್ತು. 
ಆದರೆ ಇಂದು ನಾಡಿನಲ್ಲಿ ಗಂಧದ ಮರಗಳು ತೀವ್ರ ಇಳಿಕೆಗೊಂಡಿವೆ ? ಯಾಕೆ? 
ಗಂಧದ ಮರ ರಕ್ಷಣೆಗೆ ನಿರ್ಮಿಸಿದ ಕಾನೂನುಗಳೇ ಗಂಧದ ಮರ ನಿರ್ಮೂಲನೆಗೆ ಕಾರಣವಾಯಿತು. 
ರೈತನೊಬ್ಬನ ಜಾಗದಲ್ಲಿ ಗಂಧದ ಮರ ಆಕಸ್ಮಿಕವಾಗಿ ಹುಟ್ಟಿ ಬೆಳೆದರೆ ಅದು ಆತನಿಗೆ ದೊಡ್ಡ ತಲೆ ನೋವಾಗಿ ಬಿಡುತ್ತಿತ್ತು. ಒಂದೆಡೆ ಅದರ ಮೇಲೆ ಅರಣ್ಯಾಧಿಕಾರಿಗಳ ಕಣ್ಣು. ಅದನ್ನು ಕಡಿದು ಮಾರಲು ಸಾವಿರ ಕಾನೂನಿನ ತೊಡಕುಗಳು. ಬೆಲೆ ಬಾಳುವ ಗಂಧದ ಮರ ಇದ್ದರು ಅದನ್ನು ಮಾರುವಂತಿಲ್ಲ. ಹೀಗಿರುವಾಗ ಆ ಮರವನ್ನು ಉಳಿಸಲು ಬೆಳೆಸಲು ಅವನು ಯಾಕೆ ಯತ್ನಿಸುತ್ತಾನೆ?
 ಇತ್ತ ಕಳ್ಳರು ರಾತ್ರೋ ರಾತ್ರಿ ಅದನ್ನು ಕದ್ದು ಒಯ್ಯುತ್ತಿದ್ದರು. ಅರಣ್ಯಾಧಿಕಾರಿಗಳು ಅಮಾಯಕ ರೈತನೇ ಕಡಿದು ಮಾರಿದ್ದಾನೆ ಎಂದು ಕ್ರಮ ತೆಗೆದು ಕೊಳ್ಳುತ್ತಿದ್ದರು. ಆದುದರಿಂದ ಗಂಧದ ಎಳೆ  ಗಿಡ ಏನಾದರೂ ಹಿತ್ತಲಲ್ಲಿ ಕಂಡರೆ ತಕ್ಷಣ ಅದನ್ನು ಕಿತ್ತು ಎಸೆಯುತ್ತಿದ್ದರು. ಪರಿಣಾಮ ಇಂದು ನಾಡಿನಲ್ಲಿ ಗಂಧದ ಮರಗಳು  ತೀವ್ರ ಇಳಿಕೆಯಾಗಿದೆ. 
ಇದೀಗ ಗೋವಿನ ಸ್ಥಿತಿ ಕೂಡ ಅದೇ ದಾರಿಯಲ್ಲಿದೆ. ನಮ್ಮ ರೈತರು ದನವನ್ನು ಬದುಕೂದಕ್ಕಾಗಿ ಲಾಭದಾಯಕ ವ್ಯವಹಾರವಾಗಿ ಸಾಕುತ್ತಿದ್ದರು. ಅದೊಂದು ಉದ್ಯಮವಾಗಿತ್ತೆ ಹೊರತು, ಪೂಜಿಸೂದಕ್ಕಾಗಿ ಯಾರೂ ದನವನ್ನು ಸಾಕುತ್ತಿರಲಿಲ್ಲ. ಮಾಂಸಾಹಾರಿಗಳು ಈ ದನದ ಉದ್ಯಮದ ಒಂದು ಮುಖ್ಯ ಭಾಗವಾಗಿದ್ದರು.ಹಾಲು ಕೊಡದ ಗೋವನ್ನು ಸಾಕುವ ವೆಚ್ಚ ಮಾಂಸಾ ಹಾರಿಗಳಿಂದಾಗಿ ಕಡಿಮೆಯಾಗುತ್ತಿತು. 
ಇದೀಗ ಜೀವನದಲ್ಲಿ ಯಾವತ್ತೂ ದನವನ್ನೇ ಸಾಕದ ಜನರು ದನದ ರಕ್ಷಣೆಗೆ ನಿಂತಿದ್ದಾರೆ. ಮನೆಯಲ್ಲಿ ಗೊಡ್ಡು ದನಗಳಿದ್ದರೂ ಅದನ್ನು ಮಾರಲಾಗದಂತಹ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಒಂದೆಡೆ ಕಾನೂನು, ಇನ್ನೊಂದೆಡೆ ಸಂಘ ಪರಿವಾರದ ಗೂಂಡಗಳು, ದನ ಸಾಕಾನೆಯೇ ರೈತರಿಗೆ ತಲೆ ನೋವಿನ ವಿಷಯವಾಗಿ ಬಿಟ್ಟಿದೆ. ಜೊತೆಗೆ ಹಾಲು ಕೊಡದ ದನವನ್ನೂ ಕೊತ್ತಿಗೆಯಲ್ಲಿಟ್ಟು ಸಾಕುವ ಭಾರ. ಹೈನು ಉದ್ಯಮ ಇದರಿಂದ ನಷ್ಟದಾಯಕವಾಗುತ್ತಿದೆ. ಮಗಳ ಮದುವೆ, ಇನ್ನಿತರ ಕಾರ್ಯಕ್ರಮ ಇದ್ದರೆ ದನ ಮಾರಿ ಹಣ ಹೊಂದಾಣಿಕೆ ಮಾಡುವ ಜನರು ಇದೀಗ ದನವನ್ನು ಸಾಕೋದಕ್ಕೆ ಸಾಲ ಮಾಡಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕಾರಣಕ್ಕೆ ದನ ಸಾಕೊದರಿಂದ ರೈತರು ಹಿಂದೆ ಸರಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೂಜಿಸೂದಕ್ಕೂ ದನ ಸಿಗೋದು ಕಷ್ಟವಾಗಲಿದೆ. ಗಂಧದ ಮರಗಳಿಗೆ ಬಂದ ಆಪತ್ತು ಗೋವುಗಳಿಗೂ ಬರಲಿದೆ. ಗೋ ರಕ್ಷಣೆಯ ಹೆಸರಲ್ಲಿ ಗೊಸಾಕಾಣೆಯನ್ನು ವ್ಯವಸ್ಥಿತವಾಗಿ ದುಷ್ಕರ್ಮಿಗಳು ನಾಶ ಮಾಡುತ್ತಿದ್ದಾರೆ.  ಸಂಸ್ಕೃತವನ್ನು ಬಳಸದಂತೆ ಶೂದ್ರರಿಗೆ ಒತ್ತಡ ಹೇರಿ ಸಂಸ್ಕೃತವನ್ನು ಕೊಂದವರು ಇದೀಗ ಗೋವುಗಳ ಸಂತಾನವನ್ನೇ ಅಳಿಸಲು ಹೊರಟಿದ್ದಾರೆ. ಯಾವುದೇ ಪ್ರಾಣಿ ಸಾಕಣೆ ಲಾಭದಾಯಕ ಇಲ್ಲದೆ ಹೋದರೆ ಯಾರದಾರೂ ಯಾಕೆ ಸಾಕುತ್ತಾರೆ? ಇದು ಗೋವಿನ ಹೆಸರಿನಲ್ಲ್ಲಿಸರಕಾರದಿಂದ ಅನುದಾನ ಲೂಟಿ ಹೊಡೆದ ಸ್ವಾಮೀಜಿಗಳಿಗೆ ಹೇಗೆ ಅರ್ಥವಾಗುತ್ತದೆ? 
ಕೃಷಿ, ಹೈನುಗಾರಿಕೆ ಅರ್ಥ ಶಾಸ್ತ್ರದ ಭಾಗವೆ ಹೊರತು ಧರ್ಮ ಶಾಸ್ತ್ರದ ಭಾಗ ಅಲ್ಲ ಎಂದು ಇವರಿಗೆ ತಿಳಿಸಿ ಕೊಡುವವರು ಯಾರು?

Sunday, November 1, 2015

ತಿತ್ಲೀ: ಕತ್ತಲೆಯ ಬದುಕನ್ನು ತೆರೆದಿಟ್ಟ ಬೆಹ್ಲ್

‘ಫ್ಯಾಮಿಲಿ!’ ಗಗನಚುಂಬಿ ಕಟ್ಟಡಗಳ ಪದತಳದಲ್ಲಿ ಹಾವುಗಳಂತೆ ತೆವಲುವ ಓಣಿಗಳ ಇಕ್ಕೆಲಗಳ ಚಾಳ್‌ಗಳ ಪುಟ್ಟ ಕೋಣೆಯೊಳಗೆ ಕುಟುಂಬವೆಂಬ ಹೆಸರಲ್ಲಿ ಸಿಲುಕಿಕೊಂಡು ಒದ್ದಾಡುವ ಜೀವಗಳು ಮತ್ತು ಆ ಕತ್ತಲಿಂದ ಪಾರಾಗಲು ನಡೆಸುವ ಒದ್ದಾಟವೇ ‘ತಿತ್ಲೀ’. ತಿತ್ಲೀ ಕಥಾನಾಯಕನ(ಶಶಾಂಕ್ ಅರೋರಾ) ಹೆಸರು. ತನ್ನ ತಂದೆ, ಇಬ್ಬರು ಸೋದರರ ನಡುವೆ ಉಸಿರುಗಟ್ಟುವ ಸಂಬಂಧಗಳಿಗೆ ಜೋತು ಬಿದ್ದು ಒದ್ದಾಡುತ್ತಿರುವ ಈತ, ಅದರಿಂದ ಪಾರಾಗಲು ನಡೆಸುವ ಹವಣಿಕೆಯೇ ಚಿತ್ರದ ಕಥಾವಸ್ತು. ಕಾನು ಬೆಹ್ಲ್ ನಿರ್ದೇಶಿಸಿದ ಮೊತ್ತ ಮೊದಲ ಚಿತ್ರ ಇದಾಗಿದ್ದರೂ, ನಗರಗಳ ತಳದಲ್ಲಿ ಒದ್ದಾಡುತ್ತಿರುವ ಬದುಕನ್ನು ಅಷ್ಟೇ ತೀವ್ರವಾಗಿ ತೆರೆದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ, ಪ್ರೇಕ್ಷಕರಿಗೆ ಸಣ್ಣದೊಂದು ಶಾಕ್ ಕೊಟ್ಟಿದ್ದಾರೆ. ಯಾವುದೇ ಭಾರೀ ಬಜೆಟ್‌ಗಳಿಲ್ಲದ, ಸ್ಟಾರ್‌ಗಳಿಲ್ಲದ ಈ ಚಿತ್ರ, ನಮ್ಮನ್ನು ತಟ್ಟುವುದೇ ನಮಗೆ ಅಪರಿಚಿತವಾದ ಬದುಕನ್ನು ತೆರೆದಿಡುವ ಮೂಲಕ.

ಅಪರಾಧ, ಹಿಂಸೆ, ಕ್ರೌರ್ಯದ ಹೊಗೆಯ ನಡುವೆ ಆ ಕುಟುಂಬದ ಕೊಂಡಿಗಳು ನಿಂತಿವೆ. ಸಣ್ಣ ಚಾಳ್‌ನಲ್ಲಿ, ತಿತ್ಲೀ ತನ್ನ ಸೋದರರಾದ ವಿಕ್ರಮ್ (ರಣವೀರ್ ಶೋರೆ), ಪ್ರದೀಪ್ (ಅಮಿತ್ ಸಾಯಲ್) ಹಾಗೂ ತಂದೆ(ಲಲಿತ್ ಬೆಹ್ಲ್) ಜೊತೆಗೆ ಬದುಕುತ್ತಿರುತ್ತಾನೆ. ತಿತ್ಲೀ ಕಿರಿಯವನಾದರೆ, ಹಿರಿಯವನು ವಿಕ್ರಮ್. ಈತ ಹೆಸರಿಗೆ ಮಾಲ್ ಒಂದರಲ್ಲಿ ವಾಚ್‌ಮೆನ್. ಮಧ್ಯ ರಾತ್ರಿ ತನ್ನ ಸೋದರರ ಜೊತೆಗೆ ಒಂಟಿ ವಾಹನಗಳನ್ನು ನಿಲ್ಲಿಸಿ ದೋಚುವುದು ಕಾಯಕ. ಇಡೀ ಕುಟುಂಬ ಅದನ್ನು ದಂಧೆಯಾಗಿ ನಂಬಿಕೊಂಡಿದೆ. ಹಿಂಸೆಯ ಹೊಗೆ, ದುರ್ಬಲ ಸಂಬಂಧ, ಧೂಳುಗಳ ನಡುವೆ ಒದ್ದಾಡುತ್ತಿರುವ ಈ ಬದುಕಿನಿಂದ ಬಿಡುಗಡೆಗೊಂಡು, ತನ್ನ ಕನಸಿನ ಬದುಕೊಂದಕ್ಕೆ ಪಯಣಿಸುವ ತಹತಹಿಕೆ ತಿತ್ಲೀಯದು. ಅಣ್ಣಂದಿರ ಬಲವಂತಕ್ಕೆ ಮದುವೆಯಾಗಬೇಕಾಗುತ್ತದೆ. ಮದುಮಗಳು ನೀಲು (ಶಿವಾನಿ ರಘುವಂಶಿ) ಬೇರೊಬ್ಬ ಬಿಲ್ಡರ್ ಪ್ರಿನ್ಸ್ ಎಂಬಾತನ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ಆತ ತನ್ನನ್ನು ಪ್ರೀತಿಸಿದ್ದಾನೆ ಎಂದು ನಂಬಿದ್ದಾಳೆ. ಇದೇ ಸಂದರ್ಭದಲ್ಲಿ ತಾನು ಮದುವೆಯಾಗಿ ಬಂದಿರುವ ಮನೆಯ ವಾಸ್ತವ ಆಕೆಗೆ ಅರಿವಾಗುತ್ತದೆ. ತಿತ್ಲೀಗೂ ಆಕೆಯ ಮೇಲೆ ಪ್ರೀತಿಯಿಲ್ಲ. ಅವನ ಗುರಿ ಈ ಮನೆಯಿಂದ ಪಾರಾಗುವುದು. ಅವಳದು, ತನ್ನ ಪ್ರೇಮಿಯನ್ನು ಸೇರಿ ಹೊಸ ಬದುಕು ಕಂಡುಕೊಳ್ಳುವುದು. ತಿತ್ಲೀ ತನ್ನ ಪ್ರಯತ್ನಕ್ಕೆ ಪತ್ನಿಯ ಸಹಾಯ ಬಯಸುತ್ತಾನೆ. ಆಕೆಯಿಂದ ದುಡ್ಡಿನ ನೆರವು ಬಯಸುತ್ತಾನೆ. ಇದೇ ಸಂದರ್ಭದಲ್ಲಿ ಪ್ರಿನ್ಸ್‌ನನ್ನು ಸೇರಲು ತಾನು ಸಹಕರಿಸುತ್ತೇನೆ ಎಂದು ಭರವಸೆ ನೀಡುತ್ತಾನೆ. ಇವರಿಬ್ಬರು ತಮ್ಮ ತಮ್ಮ ಗುರಿಯನ್ನು ಸೇರಲು ನಡೆಸುವ ಒದ್ದಾಟ ಮತ್ತು ಕೊನೆಯಲ್ಲಿ ಇವರಿಬ್ಬರು ವಾಸ್ತವವನ್ನು ಅರಿತುಕೊಂಡು, ಮೂರನೆಯ ದಾರಿಯೊಂದನ್ನು ಆಯ್ದುಕೊಳ್ಳುವುದು ಚಿತ್ರದ ಒಟ್ಟು ಕತೆ.

ಕುಟುಂಬ ಎಂದಾಕ್ಷಣ ಬಾಲಿವುಡ್‌ನಲ್ಲಿ ನೆನಪಾಗುವುದು ಹಮ್ ಆಪ್ ಕೆ ಕೌನ್, ಹಮ್ ಸಾತ್ ಸಾತ್ ಹೇ ಅಥವಾ ಕರಣ್ ಜೋಹರ್ ಅವರ ಕಭಿ ಖುಷಿ ಕಭಿ ಗಮ್. ಆದರೆ ಇಲ್ಲಿ, ದಿಲ್ಲಿಯಂತಹ ಶಹರದ ತಳದಲ್ಲಿರುವ ಕಾಳ ಕತ್ತಲೆಯ ಅಪರಿಚಿತ ಬದುಕನ್ನು ಬೆಹ್ಲ್ ತೆರೆದಿಟ್ಟಿದ್ದಾರೆ. ಸರಳ ನೈಯ್ಗೆಯ, ಕಡಿಮೆ ಪಾತ್ರಗಳ ಚಿತ್ರ ಇದಾಗಿದ್ದರೂ, ಇದು ಕೊಡುವ ಅನುಭವ ಮಾತ್ರ ಗಾಢವಾದದ್ದು. ಮೂರು ಮುಖ್ಯ ಪಾತ್ರಗಳ ಅಭಿನಯ ಗಮನಾರ್ಹ. ತಿತ್ಲೀ ಪಾತ್ರದಲ್ಲಿ ಶಶಾಂಕ್ ಹಾಗೂ ವಿಕ್ರಮ್ ಪಾತ್ರದಲ್ಲಿ ರಣವೀರ್ ನಟನೆ ಇಡೀ ಚಿತ್ರದ ಹೆಗ್ಗಳಿಕೆ. ವಂಚನೆ, ಮೋಸ, ದ್ರೋಹ, ಹಿಂಸೆಯನ್ನು ಸುತ್ತಿಕೊಂಡ ಚಾಳ್‌ಗಳೊಳಗಿನ ಅಸಹನೀಯ ಬದುಕನ್ನು ಒಂದು ಥ್ರಿಲ್ಲರ್ ಮಿಶ್ರಿತ ಚಿತ್ರವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಪೂರ್ಣ ಯಶಸ್ವಿಯಾಗಿದ್ದಾರೆ. ಬೆಹ್ಲ್ ಅವರಿಂದ ಇನ್ನಷ್ಟು ಪರಿಣಾಮಕಾರಿಯಾದ ಚಿತ್ರಗಳನ್ನು ನಿರೀಕ್ಷಿಸಬಹುದಾಗಿದೆ.