Saturday, May 26, 2012

ಆಕೆ ಮತ್ತು ಇತರ ಕತೆಗಳು

ಮಂಚ
‘‘ಇದು ನಾನು ವಿದೇಶದಿಂದ ತಂದ ಅತ್ಯಂತ ಬೆಲೆಬಾಳುವ ಮಂಚ’’
‘‘ಹೌದಾ? ಬಹುಶಃ ಇದರಲ್ಲಿ ಮಲಗಿದಾಕ್ಷಣ ನಿದ್ದೆ ಬರಬಹುದಲ್ವಾ?’’
‘‘ಹಾಗೇನೂ ಇಲ್ಲ...ನಿದ್ರೆ ಮಾತ್ರೆ ತೆಗೆದುಕೊಳ್ಳದೇ ನನಗೆ ನಿದ್ದೆ ಬರುವುದಿಲ್ಲ...’’
‘‘ಯಾವ ಮಂಚದಲ್ಲಿ ಮಲಗಿದಾಕ್ಷಣ ನಿದ್ದೆ ಬರುವುದೋ ಅದೇ ಹೆಚ್ಚು ಬೆಲೆಬಾಳುವ ಮಂಚ. ಅಂತಹ ಮಂಚವನ್ನು, ನಾನು ಹಲವು ಗುಡಿಸಲುಗಳಲ್ಲಿ ನೋಡಿದ್ದೇನೆ’’

ಬಾಡಿಗೆ ಮನೆ
‘‘ಯಾವಾಗ ನೋಡಿದರೂ ಬಾಡಿಗೆ ಮನೆಯಲ್ಲೇ ಇರುತ್ತೀರಲ್ಲ...ಒಂದು ಸ್ವಂತ ಮನೆ ಮಾಡಿಕೊಳ್ಳಬಾರದೆ?’’ ಅವರು ಕೇಳಿದರು.
‘‘ಸ್ವಂತ ಮನೆ ಮಾಡಿಕೊಳ್ಳುವ ಆಸೆಯಿದೆ. ಹಾಗೆಂದು ಹೊರಟಾಗಲೆಲ್ಲ ಯಾರದೋ ಬಾಡಿಗೆ ಮನೆಯಂತಿರುವ ಈ ಭೂಮಿಯಲ್ಲಿ ಕಟ್ಟಿದ್ದು ನನ್ನ ಸ್ವಂತ ಮನೆ ಹೇಗಾದೀತು? ಎಂಬ ಪ್ರಶ್ನೆ ಕಾಡುತ್ತದೆ’’

ಅಹಿಂಸೆ
ಅಂದು ಅಹಿಂಸೆಯ ಪ್ರತಿಪಾದಿಸಿದ ಮಹಾವೀರ ಜಯಂತಿಯ ದಿನ.
ಸೌಹಾರ್ದ ಮೆರೆಯಲು ಸರಕಾರ ಒಂದಿಡೀ ದಿನ ಮಾಂಸ ನಿಷೇಧ ಘೋಷಿಸಿತು.
ನಗರದಲ್ಲಿ ಮಾಂಸ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು.
ಕಟುಕನ ಮನೆಯಲ್ಲಿ ಅಂದಿಡೀ ಮಕ್ಕಳು ಹಸಿದು ಅಳುತ್ತಿದ್ದರು.
ಆತನ ಕದ್ದು ಮಾಂಸ ಮಾರಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ.
ಅವರ ಹೊಡೆತ ಬೀಳಬಾರದದಲ್ಲಿಗೆ ಬಿದ್ದು ಲಾಕಪ್‌ನಲ್ಲಿ ಸತ್ತು ಹೋಗಿದ್ದ.
ಮರುದಿನ ಮಹಾವೀರ ಜಯಂತಿಯ ಅಹಿಂಸೆ ಸಂದೇಶ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಯಿತು.
ಮಹಾವೀರ ಜಯಂತಿ ಯಶಸ್ವಿಯಾಗಿ ಆಚರಿಸಲ್ಪಟ್ಟಿತು.
ಸೌಹಾರ್ದ ಎತ್ತಿ ಹಿಡಿಯಲಾಗಿತ್ತು.
ಕಟುಕನ ಮನೆಯ ಹೆಂಡತಿ ಮಕ್ಕಳು ತಮ್ಮ ತಂದೆಗಾಗಿ ಇನ್ನೂ ಹುಡುಕುತ್ತಲೇ ಇದ್ದಾರೆ.

ಬೆಂಕಿ
‘‘ಭೂಮಿಯ ಒಡಲಲ್ಲಿ ಬೆಂಕಿ ಇದೆಯಂತೆ ಹೌದ?’’
‘‘ಹೌದು. ತಾಯಿಯ ಒಡಲಲ್ಲಿ ಸಿಟ್ಟಿರುವಂತೆ’’

ಕನಸು
‘‘ನಿನ್ನೆ ನನ್ನ ತಾಯಿ ತುಂಬಾ ದಿನಗಳ ಬಳಿಕ ನನ್ನ ಕನಸಲ್ಲಿ ಬಂದಿದ್ದರು...ನನ್ನ ಬಗ್ಗೆ ಅವರಿಗೆ ತುಂಬಾ ಪ್ರೀತಿ’’
‘‘ಹೌದೆ...ಅವರು ತೀರಿ ಹೋಗಿ ಎಷ್ಟು ವರ್ಷವಾಯಿತು..?’’
‘‘ಹಾಗೇನಿಲ್ಲ...ಅವರು ವೃದ್ಧಾಶ್ರಮದಲ್ಲಿದ್ದಾರೆ...’’

ಹೃದಯ
ಹಿಮಾಲಯ ಕರಗುತ್ತಿತ್ತು.
ಗಂಗಾನದಿ ದಿನದಿಂದ ವಿಶಾಲವಾಗುತ್ತಿತ್ತು.
‘ನೀನೇಕೆ ಕರಗುತ್ತಿದ್ದೀಯ?’ ಗಂಗೆ ಕೇಳಿದಳು.
‘ಬೆಟ್ಟವಾದರೇನು...ನನಗೂ ಹೃದಯ ಇರಬಾರದೇನು?’ ಹಿಮಾಲಯ ಕೇಳಿತು.

ಮಕ್ಕಳು
ಆರು ಮಂದಿ ತಾಯಂದಿರು ಒಟ್ಟು ಸೇರಿದ್ದರು.
ತಮ್ಮ ತಮ್ಮ ಮಕ್ಕಳ ಬಗ್ಗೆ ಗುಣಗಾನ ಮಾಡುತ್ತಿದ್ದರು.
‘‘ನನ್ನ ಮಗನಿಗೆ ನಾನೆಂದರೆ ತುಂಬಾ ಇಷ್ಟ...ಗೊತ್ತಾ...ಅವನು ದೊಡ್ಡ ಇಂಜಿನಿಯರ್...ದೊಡ್ಡ ದೊಡ್ಡ ಸೇತುವೆಗಳನ್ನು ಕಟ್ಟಿದ್ದಾನೆ...ತಿಂಗಳಿಗೆ ಹತ್ತು ಲಕ್ಷ ಸಂಪಾದಿಸುತ್ತಾನೆ...’’
‘‘ನನ್ನ ಮಗ ಬರಹಗಾರ...ಮೊನ್ನೆಯಷ್ಟೇ ಅವನು ಬರೆದ ಕಾದಂಬರಿಯ ಒಂದು ಲಕ್ಷ ಪ್ರತಿ ಮಾರಾಟವಾಯಿತು...ನನ್ನ ಮಗನಿಗೆ ಸಮಾಜ ತುಂಬಾ ಗೌರವ ನೀಡುತ್ತದೆ...’’
‘‘ನನ್ನ ಮಗನಿಗೂ ಅಷ್ಟೇ...ಅವನು ಪ್ರಖ್ಯಾತ ಹೃದಯ ತಜ್ಞ. ಎಂತಹ ಹೃದಯವನ್ನು ಅರೆಕ್ಷಣದಲ್ಲಿ ಬಿಚ್ಚಿ ಅದರ ರೋಗವನ್ನು ವಾಸಿ ಮಾಡುತ್ತಾನೆ...’’
ಹೀಗೆ ಮಾತನಾಡುತ್ತಿರುವಾಗ ಸಂಜೆಯಾಯಿತು. ಅಷ್ಟರಲ್ಲಿ ವಾರ್ಡನ್ ಬಂದು ಚೀರಿದಳು ‘‘ಸಮಯವಾಯಿತು...ಎಲ್ಲರೂ ಅವರವರ ಕೋಣೆಗೆ ತೆರಳಿ’’
ಅಂದ ಹಾಗೆ ಅದೊಂದು ವೃದ್ಧಾಶ್ರಮವಾಗಿತ್ತು.

ಆಕೆ
ಒಬ್ಬ ಮಹಿಳೆ ಆ ಬೀದಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದಳು.
‘‘ಅವಳು ವೇಶ್ಯೆಯಾಗಿರಬಹುದೆ?’’ ಶಿಷ್ಯ ಕೇಳಿದ.
‘‘ಆಗದೆಯೂ ಇರಬಹುದು....’’ ಸಂತ ಹೇಳಿದ.
‘‘ಅವಳ ವರ್ತನೆ ವೇಶ್ಯೆಯಂತೆ ಕಾಣುತ್ತಿದೆ...’’ ಶಿಷ್ಯ ಹೇಳಿದ.
‘‘ಅಲ್ಲ. ನಿನ್ನ ಒಳಗಿನ ವರ್ತನೆ ಆಕೆಯನ್ನು ನಿನಗೆ ವೇಶ್ಯೆಯಂತೆ ಕಾಣಿಸುತ್ತಿದೆ’’ ಸಂತ ಸಮಾಧಾನಿಸಿದ.

Tuesday, May 22, 2012

ಬಾಡೂಟದ ಜೊತೆಗೆ ಗಾಂಧಿಜಯಂತಿ!

5 ವರ್ಷಗಳ ಹಿಂದೆ ಬರೆದ ಲೇಖನ ಇದು. ಪೇಜಾವರ ಶ್ರೀಗಳ ವಿವಾದಾತ್ಮಕ ಹೇಳಿಕೆ ಹಾಗು ಅಂಬೇಡ್ಕರ್ ಜಯಂತಿ ದಿನ ಮಾಂಸ ನಿಷೇಧ ಆದೇಶದ ಹಿನ್ನೆಲೆಯಲ್ಲಿ ಈ ಲೇಖನ ಪ್ರಸ್ತುತವಾಗಬಹುದು ಎಂದು ಹಾಕಿದ್ದೇನೆ. 

ಮೊನ್ನೆ ಗಾಂಧಿ ಜಯಂತಿ ದಿನ ಸಚಿವನ ಮಗನೊಬ್ಬ ಸಾರ್ವಜನಿಕ ಸ್ಥಳದಲ್ಲಿ ತನ್ನ ಗೆಳೆಯರೊಂದಿಗೆ ‘ಬಾಡೂಟ’ ಮಾಡಿ ಉಂಡದ್ದು ಸಾಕಷ್ಟು ಸುದ್ದಿಯಾಯಿತು. ಒಂದು ಟಿ.ವಿ. ಚಾನೆಲ್ ಅಂತೂ ಇದನ್ನು ಅನಾಹುತವೋ ಎಂಬಂತೆ ವರದಿ ಮಾಡಿತು. ಕೆಲವು ಗಾಂಧಿವಾದಿಗಳು ಇದಕ್ಕೆ ಆಘಾತ ವ್ಯಕ್ತಪಡಿಸಿದರು. ಸಚಿವನ ಮಗನೇ ಬಾಡೂಟ ಮಾಡಿ ಉಂಡಿರುವುದು ಗಾಂಧಿಗಾದ ಅವಮಾನ ಎಂಬಂತೆ ಚಿತ್ರಿತವಾಯಿತು. ಸಂಸ್ಕೃತಿಯನ್ನು ಕ್ರೆಡಿಟ್ ಕಾರ್ಡಿನಂತೆ ಕಿಸೆಯೊಳಗಿಟ್ಟು ಓಡಾಡುವ ಬಿಜೆಪಿಯ ಸಚಿವನಿಗೆ ತನ್ನ ಸುಪುತ್ರನ ಕೆಲಸದಿಂದ ಸಾಕಷ್ಟ ಮುಜುಗರವಾಯಿತು. ‘ಗಾಂಧಿ ದಿನದಂದು ಹಿಂಸೆ ಗಾಂಧಿ ದಿನದಂದು ಮಾಂಸ’! ಇತ್ಯಾದಿ ಉದ್ಗಾರಗಳು ಕೇಳಿ ಬಂದವು.

ಬಾಡೂಟವೆನ್ನುವ ಮೂರಕ್ಷರದ ಶಬ್ದಕ್ಕೆ ಸಾಂಸ್ಕೃತಿಕ ಹಿನ್ನೆಲೆಯಿದೆ. ಈ ದೇಶದ ಬಹುಜನರ ಆಹಾರ ಸಂಸ್ಕೃತಿ. ದಲಿತರು, ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರೂ ಮಾತ್ರವಲ್ಲ ದೇಶದ ಕೆಲವು ಭಾಗಗಳಲ್ಲಿ ಬ್ರಾಹ್ಮಣರೂ ಅತಿಯಾಗಿ ಇಷ್ಟಪಡುವ ಊಟ ಬಾಡೂಟ. ಬಾಡೂಟವನ್ನು ಅವಮಾನಿಸುವುದೆಂದರೆ ಗತಿಸಿಹೋದ ನಮ್ಮ ಹಿರಿಯರನ್ನು ಅವಮಾನಿಸುವುದೆಂದರ್ಥ.ತುಳುನಾಡಿನಲ್ಲಿ ಬಾಡೂಟಕ್ಕೆ ಹಲವು ಸಂಕೇತಗಳಿವೆ. ಅರ್ಥಗಳಿವೆ. ಬಾಡೂಟ ದುಡಿಮೆಯ, ಬೆವರಿನ ಸಂಕೇತ. ನೆಲದ ಮಣ್ಣಿನ ಸೊಗಡು ಅದರಲ್ಲಿ ಮಿಳಿತವಾಗಿದೆ. ಕಾಡು, ಬೇಟೆ, ಶೌರ್ಯ, ಹೋರಾಟ ಇತ್ಯಾದಿಗಳು ಈ ಬಾಡೂಟದೊಂದಿಗೆ ತಳಕು ಹಾಕಿಕೊಂಡಿವೆ. ಕೆದಂಬಾಡಿ ಜತ್ತಪ್ಪ ರೈಯವರ ‘ಬೇಟೆಯ ನೆನಪುಗಳು’ ಓದಿದರೆ ಬಾಡೂಟದ ಸೊಗಸನ್ನು, ಪರಿಮಳವನ್ನು ಅಸ್ವಾದಿಸಬಹುದು. ಈ ಊಟವನ್ನು ಆಗಷ್ಟೇ ತಾಳೆಮರದಿಂದ ಇಳಿಸಿದ ಕಳ್ಳ ಇನ್ನಷ್ಟು ಅರ್ಥಪೂರ್ಣಗೊಳಿಸುತ್ತದೆ. ಈ ಊಟದ ಜೊತೆಗೆ ಸಂಬಂಧ ಸಂಬಂಧಗಳು ಹತ್ತಿರವಾಗುತ್ತವೆ. ಬಾಡೂಟವನ್ನು ಅವಮಾನಿಸುದೆಂದರೆ ಮಣ್ಣಿನ ಮಕ್ಕಳ ದುಡಿಮೆಯನ್ನು, ಬೆವರನ್ನು ಅವಮಾನಿಸಿದಂತೆ.
  
   ಗಾಂಧಿ ಈ ದೇಶದ ಬಹುಸಂಸ್ಕೃತಿಯನ್ನು ಅತಿಯಾಗಿ ಗೌರವಿಸಿದವರು ಮಾತ್ರವಲ್ಲ. ಅದರ ಬಗ್ಗೆ ಗಟ್ಟಿ ನಂಬಿಕೆಯನ್ನು ಹೊಂದಿದ್ದರು. ಈ ದೇಶದ ಬಹು ಸಂಸ್ಕೃತಿ ಶಾಶ್ವತವಾಗಿ ಉಳಿಯಬೇಕೆಂದೇ ಗಾಂಧೀಜಿ ಜಾತಿಯನ್ನು ಬೆಂಬಲಿಸುತ್ತಿದ್ದರು. ಗಾಂಧಿ ಮಾಂಸ ತಿನ್ನದೇ ಇದ್ದುದು ಬರೇ ‘ಅಹಿಂಸೆ’ಯ ಕಾರಣಕ್ಕಾಗಿಯಲ್ಲ. ಅದು ಅವರ ಮನೆಯ ಸಂಪ್ರದಾಯವೂ ಆಗಿತ್ತು. ಕ್ರಮೇಣ ಆ ಸಂಪ್ರದಾಯ ಆಹಿಂಸೆಯೊಂದಿಗೆ ತಳಕು ಹಾಕಿಕೊಂಡಿತು. ಆಹಾರಕ್ಕಾಗಿ ಕೋಳಿ, ಕುರಿಗಳನ್ನು ಬಳಸುವುದನ್ನು ಭಾರತೀಯ ಸಂಸ್ಕೃತಿ ಯಾವತ್ತು ಹಿಂಸೆ ಎಂದು ಗುರುತಿಸಿಲ್ಲ. ಹಸಿವಿಗಿಂತ ಹಿಂಸೆ ಇನ್ನಾವುದಿದೆ? ಆ ಹಿಂಸೆಯನ್ನು ವಿರೋಧಿಸುವ ಪ್ರಕ್ರಿಯೆಯಲ್ಲಿ ಗಾಂಧೀಜಿಯ ಉಪವಾಸ ಕಲ್ಪನೆ ಹುಟ್ಟಿಕೊಂಡಿತು. ಗಾಂಧೀಜಿಯ ಹುಟ್ಟು ಹಬ್ಬದ ದಿನ ಈ ದೇಶದ 17ಕೋಟಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರಲ್ಲ, ಅದು ಹಿಂಸೆ. ಗಾಂಧೀಜಿಯ ಈ ದೇಶದಲ್ಲಿ ಒಂದು ಮಗು ಹಸಿವಿನಿಂದ ಸತ್ತು ಹೋದರೆ, ಅದು ಬರ್ಬರ ಹಿಂಸೆ. ಅಪೌಷ್ಟಿಕತೆ, ಹಸಿವು ತುಂಬಿದ ನಾಡಿನಲ್ಲಿ ಬಹು ಸಂಖ್ಯಾತರ ಆಹಾರ ಪದ್ಧತಿಯನ್ನು ತಿರಸ್ಕರಿಸುವುದು ಬಹುದೊಡ್ಡ ಹಿಂಸೆ. ನಿಮಗೆ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಬಕ್ರೀದ್ ಹಬ್ಬ ಮತ್ತು ಮಹಾವೀರ ಜಯಂತಿ ಜೊತೆ ಜೊತೆಯಾಗಿಯೇ ಬಂತು. ಆಗ ರಾಜ್ಯದ ಮೂರ್ಖ ಸರಕಾರ (ಬಾಡೂಟವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜೆ.ಎಚ್. ಪಟೇಲರೇ ಆಗ ಮುಖ್ಯಂತ್ರಿಯಾಗಿದ್ದದು ದುರಂತ) ಮಹಾವೀರ ಜಯಂತಿ ದಿನ ಮಾಂಸ ಮಾರಾಟವನ್ನು ನಿಷೇಧಿಸಿತು. ಒಂದು ಧರ್ಮವನ್ನು ಗೌರವಿಸುವ ಹೆಸರಿನಲ್ಲಿ ಇನ್ನೊಂದು ಧರ್ಮದ ವೌಲ್ಯವನ್ನು ಅವಮಾನಿಸಿತು. ಬಕ್ರೀದ್ ಹಬ್ಬದಂದು ಶ್ರೀಮಂತರು ಮಾಂಸವನ್ನು ದೇವರ ಹೆಸರಿನಲ್ಲಿ ಬಡವರಿಗೆ ದಾನವಾಗಿ ಹಂಚುತ್ತಾರೆ. ಮನೆಮನೆಗಳಲ್ಲಿ ಬಾಡೂಟದ ಪರಿಮಳ ಆವರಿಸಿಕೊಂಡಿರುತ್ತದೆ. ಮಹಾವೀರನ ಹೆಸರಿನಲ್ಲಿ ಮುಸ್ಲಿಮರು ತಮ್ಮ ಹಬ್ಬವನ್ನೇ ಆಚರಿಸಿಕೊಳ್ಳಲಾಗದಂತಹ ಸನ್ನಿವೇಶ ನಿರ್ಮಾಣವಾಯಿತು. ಮುಸ್ಲಿಮರು ಇನ್ನೊಂದು ಧರ್ಮದ ನಂಬಿಕೆಗಳನ್ನು ಗೌರವಿಸಬೇಕು ಎಂಬ ಅತೀ ದೊಡ್ಡ ಸುಳ್ಳು ಘೋಷಣೆಯನ್ನು ಸಾರ್ವಜನಿಕವಾಗಿ ಹರಡಲಾಯಿತು. ಒಂದು ಧರ್ಮದ ಹಬ್ಬ ಇನ್ನೊಂದು ಧರ್ಮದ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆಯೆಂದಾದರೆ ಅದನ್ನು ಸೌಹಾರ್ದ ಎಂದು ಕರೆಯಬಹುದೆ?

ಇನ್ನೊಂದು ಘಟನೆಯನ್ನು ಇಲ್ಲಿ ಸ್ಮರಿಸಬೇಕು. ಗುಜರಾತ್‌ನಲ್ಲಿ ಜೈನಧರ್ಮೀಯರ ಹಬ್ಬವೊಂದರ ನೆಪದಲ್ಲಿ ಅಲ್ಲಿನ ಮಹಾನಗರ ಪಾಲಿಕೆ ಒಂದು ವಾರ ಕಾಲ ಮಾಂಸ ನಿಷೇಧಿಸಿ ಹೊರಡಿಸಿದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ನ ಪೀಠವೊಂದು ಸಮರ್ಥಿಸಿತು. 1998ರಲ್ಲಿ ಜೈನರ ‘ಪರ್‌ಯೂಶನ್’ ಹಬ್ಬದ ಹಿನ್ನೆಲೆಯಲ್ಲಿ ಗುಜರಾತ್‌ನ ಅಹ್ಮದಾಬಾದ್ ಮಹಾನಗರ ಪಾಲಿಕೆಯು ಆಗಸ್ಟ್ 19ರಿಂದ 26ರವರೆಗೆ ನಗರದಲ್ಲಿ ಮಾಂಸವನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಯಿಂದ ಮೂರು ಸಾವಿರಕ್ಕೂ ಅಧಿಕ ಮಾಂಸದ ವ್ಯಾಪಾರಿಗಳು ಸಂಕಷ್ಟವನ್ನು ಎದುರಿಸಬೇಕಾಯಿತು. ಇಷ್ಟು ವ್ಯಾಪಾರಿಗಳ ಕುಟುಂಬಗಳು ಇನ್ನೊಂದು ಧರ್ಮದ ಹಬ್ಬಕ್ಕಾಗಿ ತಮ್ಮ ದೈನಂದಿನ ಬದುಕನ್ನು ತೆತ್ತುಕೊಳ್ಳುವಂತಹ ಸನ್ನಿವೇಶ ಒದಗಿ ಬಂತು. ಸಹಜವಾಗಿಯೇ ಮಹಾನಗರ ಪಾಲಿಕೆಯ ವಿರುದ್ಧ ವ್ಯಾಪಾರಿಗಳ ಸಂಘ ನ್ಯಾಯಾಲಯದ ಮೆಟ್ಟಿಲೇರಿತು. 2005 ಜೂನ್ 22ರಂದು ಹೈಕೋರ್ಟ್ ಪೀಠವೊಂದು ಈ ಅಧಿಸೂಚನೆಯ ವಿರುದ್ಧ ತೀರ್ಪನ್ನು ನೀಡಿತು. ವ್ಯಾಪಾರಿಗಳ ಮೂಲಭೂತ ಹಕ್ಕನ್ನು ಈ ಅಧಿಸೂಚನೆ ಕಸಿದುಕೊಳ್ಳುತ್ತದೆ ಎಂದಿತು ಹೈಕೋರ್ಟ್. ಆದರೆ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಅಹ್ಮದಾಬಾದ್‌ನ ‘ಹಿಂಸಾವಿರೋಧಕ್ ಸಂಘ್’ ಸುಪ್ರೀಂಕೋರ್ಟ್‌ಗೆ ಹೋಯಿತು. ಕಳೆದ ಮಾರ್ಚ್ 14ರಂದು ತನ್ನ ತೀರ್ಪನ್ನು ನೀಡಿದ ಸುಪ್ರೀಂಕೋರ್ಟ್ ಪೀಠ, ಮಹಾನಗರ ಪಾಲಿಕೆಯ ತೀರ್ಪನ್ನು ಸಮರ್ಥಿಸಿಕೊಂಡಿತು.ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ನೀಡಿದ ಹೇಳಿಕೆ ಏನು ಗೊತ್ತೆ ‘‘ಅಕ್ಬರ್ ಮಹಾರಾಜನು ಗುಜರಾತಿನಲ್ಲಿ ಆರು ತಿಂಗಳ ಕಾಲ ಮಾಂಸಾಹಾರದಿಂದ ದೂರವಿದ್ದಿರುವಾಗ, ಇನ್ನೊಂದು ಹಬ್ಬವನ್ನು ಗೌರವಿಸಲು ದೂರವಿರುವುದಕ್ಕಾಗುವುದಿಲ್ಲವೇ?’’ ಒಂದಾನೊಂದು ಕಾಲದಲ್ಲಿ ಅಕ್ಬರ್ ಮಹಾರಾಜನ ‘ನಾನ್‌ವೆಜಿಟೇರಿಯನ್’ ಕತೆಯನ್ನು ಮುಂದಿಟ್ಟುಕೊಂಡು ಈ ದೇಶದ ಬಹುಸಂಖ್ಯಾತ ಜನರ ಆಹಾರದ ಹಕ್ಕುಗಳ ಮೇಲೆ ದಾಳಿ ನಡೆಸುವ ನ್ಯಾಯವನ್ನು ‘ನ್ಯಾಯ’ವೆಂದು ಒಪ್ಪಿಕೊಳ್ಳಲು ಸಾಧ್ಯವೆ? ಎಲ್ಲಕ್ಕಿಂತ ಮುಖ್ಯವಾಗಿ, ಒಂದು ಸಮುದಾಯ ಹಬ್ಬ ಆಚರಿಸುತ್ತಿರುವಾಗ ಇನ್ನೊಂದು ಸಮುದಾಯ ತನ್ನ ಬದುಕುವ ಹಕ್ಕುಗಳನ್ನು ಕಳೆದುಕೊಳ್ಳುವುದು ಹೇಗೆ ‘ಸೌಹಾರ್ದ’ದ ಸಂಕೇತವಾಗಾತ್ತದೆ?

ಈ ದೇಶದ ಆಹಾರದ ಕೊರತೆಯನ್ನು ಎದುರಿಸುತ್ತಿರುವ ದಿನಗಳಲ್ಲಿ ‘ಮಾಂಸ’ವನ್ನು ಆಹಾರದ ಮುಖ್ಯವಾಹಿನಿಯಿಂದ ಹೊರಗಿಡುವ ಹುನ್ನಾರಕ್ಕೆ ನ್ಯಾಯಾಲಯ ತೀರ್ಪು ಪರೋಕ್ಷ ಬೆಂಬಲವನ್ನು ನೀಡಿತು. ಈ ದೇಶದ ಮುಖ್ಯ ಆಹಾರ ಮೀನು, ಕೋಳಿ, ಆಡು, ಕುರಿ, ಹಸು, ಮೊಟ್ಟೆ ಇತ್ಯಾದಿಗಳು. ಜನ ಸಾಮಾನ್ಯರ ಬದುಕಿನಲ್ಲಿ ಆಹಾರವಾಗಿ ಮಾತ್ರವಲ್ಲ, ಸಂಸ್ಕೃತಿಯಾಗಿ ಸೇರಿಕೊಂಡಿದೆ. ಲಕ್ಷಾಂತರ ಮೊಗವೀರರು ಮೀನಿನ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಮೀನುಗಾರಿಕೆ ಅವರ ‘ಧರ್ಮ’ವಾಗಿದೆ. ಅವರ ಬದುಕನ್ನು ಪೊರೆಯುವ ಕಡಲನ್ನು ಹೊರತುಪಡಿಸಿದ ಧರ್ಮ ಅವರಿಗಿಲ್ಲ. ಹಾಗೆಯೇ ಕೋಳಿಯ ಉದ್ಯಮವೂ ಈ ದೇಶದಲ್ಲಿ ಲಕ್ಷಾಂತರ ಜನರನ್ನು ಪೊರೆಯುತ್ತಿದೆ. ಕುರಿ, ಆಡಿನ ಮಾಂಸವೂ ಒಂದು ಉದ್ಯಮವಾಗಿ ಈ ದೇಶದಲ್ಲಿ ಬೆಳೆದಿದೆ. ಕುರಿ, ಆಡಿನ ಮಾಂಸ ತನ್ನ ದರದಿಂದಾಗಿ ಕೆಳವರ್ಗದ ಜನರ ಕೈಗೆಟಕದೇ ಇದ್ದಾಗ, ಗೋಮಾಂಸ ಅದನ್ನು ಪೊರೆದಿದೆ.

ತಳವರ್ಗದ ಜನರ ಹಬ್ಬ ಮಾಂಸವಿಲ್ಲದೆ ಪೂರ್ತಿಯಾಗುವುದಿಲ್ಲ. ಮಾಂಸದ ಪರಿಮಳದೊಂದಿಗೇ ಅವರ ಹಬ್ಬ ಸಂಭ್ರಮವನ್ನು ಪಡೆದುಕೊಳ್ಳುತ್ತದೆ. ಸಸ್ಯಾಹಾರಿಗಳ ಹಬ್ಬ ಸಸ್ಯಾಹಾರದ ಖಾದ್ಯಗಳ ಜೊತೆಗೆ ನಡೆಯುತ್ತದೆ. ಒಬ್ಬರ ಹಬ್ಬಗಳನ್ನು ಇನ್ನೊಬ್ಬರ ಆಹಾರದ ಜೊತೆಗೆ ತಳಕು ಹಾಕುವುದೇ ತಪ್ಪು. ಸಸ್ಯಾಹಾರಿಗಳ ಹಬ್ಬದ ದಿನ ಮಾಂಸಾಹಾರಿಗಳು ಮಾಂಸ ತ್ಯಜಿಸಬೇಕೆಂದು ಬಯಸುವುದು, ಮಾಂಸಾಹಾರಿಗಳ ಹಬ್ಬದ ದಿನ ಸಸ್ಯಾಹಾರಿಗಳು ಮಾಂಸವನ್ನು ಸೇವಿಸಿ ‘ಸೌಹಾರ್ದ’ವನ್ನು ಮೆರೆಯಬೇಕೆಂದು ಬಯಸಿದಷ್ಟೇ ಹಾಸ್ಯಾಸ್ಪದ. ಕನಿಷ್ಠ ಹಬ್ಬದ ದಿನವಾದರೂ ಮಾಂಸಹಾರವನ್ನು ತ್ಯಜಿಸಬೇಕು ಎಂಬ ಹೇಳಿಕೆಯಲ್ಲಿ ಪರೋಕ್ಷವಾಗಿ ಮಾಂಸಾಹಾರಿಗಳನ್ನು ‘ಅಪರಾಧಿ’ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರವಿದೆ. ‘ಮಾಂಸ’ವನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಸಂಚಿದೆಈ ದೇಶದಲ್ಲಿ ಮಾಂಸ ಮತ್ತು ಮದ್ಯವನ್ನು ಒಂದೇ ತಕ್ಕಡಿಯಲ್ಲಿಡುವ ಪ್ರಯತ್ನ ಮೊದಲಿನಿಂದಲೂ ನಡೆದು ಬಂದಿದೆ. ಮಾಂಸ ಆಹಾರ, ಆದರೆ ಮದ್ಯ ಆಹಾರವಲ್ಲ. ಅದನ್ನು ಜೋಡಿಪದವಾಗಿ ಬಳಸುವುದೇ ಒಂದು ರಾಜಕೀಯ. ಜನರನ್ನು ಅವಿವೇಕದೆಡೆ ನಡೆಸುವ, ಅವರ ವಿವೇಕವನ್ನು, ಪ್ರಜ್ಞೆಯನ್ನು ನಾಶ ಮಾಡುವ ಪಾನೀಯ ಮದ್ಯ. ಅದನ್ನು ಸಾಧಾರಣವಾಗಿ ಅಕ್ಟೋಬರ್ 2, ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ನಿಷೇಧಿಸುವ ಪದ್ಧತಿಯಿದೆ. ಚುನಾವಣೆಯ ಸಂದರ್ಭದಲ್ಲೂ ಮದ್ಯದಂಗಡಿಗಳನ್ನು ನಿಷೇಧಿಸಲಾಗುತ್ತಿದೆ. ಕಾನೂನು, ಶಾಂತಿ ಸುವ್ಯವಸ್ಥೆಗೆ ಇದು ಅತ್ಯಗತ್ಯ. ಆದರೆ ಮಾಂಸ ತಿಂದು ಯಾರೂ ಹಿಂಸೆಗಿಳಿದ ಘಟನೆ ಈವರೆಗೆ ನಡೆದ ಉದಾಹರಣೆಯಿಲ್ಲ.

   ಈ ಸಂದರ್ಭದಲ್ಲಿ ಯುವ ದಲಿತ ಕವಿಯೊಬ್ಬರು ಬರೆದ ‘ಗೋವು ತಿಂದು ಗೋವಿನಂತಾದವನು...’ ಎಂಬ ಕವಿತೆಯ ಸಾಲು ನೆನಪಾಗುತ್ತದೆ. ಈ ಸನಾತನ ದೇಶದಲ್ಲಿ ಬ್ರಾಹ್ಮಣರು ಮಾಂಸ ತಿನ್ನದೇ ಬದುಕಿದರು. ದಲಿತರು ದನ ತಿಂದು ಬದುಕಿದರು. ಆದರೆ ಇತಿಹಾಸದಲ್ಲಿ ದಲಿತರು ಬ್ರಾಹ್ಮಣರು ಹಲ್ಲೆ ನಡೆಸಿದ ಉದಾಹರಣೆಯೇ ಇಲ್ಲ. ಆದರೆ ಬ್ರಾಹ್ಮಣರು ದಲಿತರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಲೆಕ್ಕವೇ ಇಲ್ಲ. ದನದ ಮಾಂಸ ತಿಂದು ದಲಿತರು ದನದ ಹಾಗೆ ಸಾತ್ವಿಕವಾಗಿ ಬದುಕಿದರು. ಸೊಪ್ಪು ಕಡ್ಡಿ ತಿಂದರೂ ಬ್ರಾಹ್ಮಣರೂ ವ್ಯಾಘ್ರರಂತೆ ಅವರ ಮೇಲೆ ಎರಗಿದರು. ಈಗ ಹೇಳಿ ಗಾಂಧಿ ಜಯಂತಿಯ ದಿನ ಬಾಡೂಟ ಮಾಡಿದ ಕಾರಣದಿಂದ ಗಾಂಧಿಗೆ ಅವಮಾನವಾಯಿತೆನ್ನುವುದು ನಂಬುವುದಕ್ಕೆ ಅರ್ಹ ವಿಷಯವೇ?

ಹಸಿವು ತಡೆಯಲಾಗದೆ ವಿಶ್ವಾಮಿತ್ರ ನಾಯಿ ಮಾಂಸವನ್ನೇ ತಿಂದ ಕತೆಯನ್ನು ಹೊಂದಿದ ದೇಶ ನಮ್ಮದು. ಇಂತಹ ದೇಶದಲ್ಲಿ ಸಾವಿರಾರು ಜನರ ಹೊಟ್ಟೆಯ ಮೇಲೆ ಹೊಡೆದು, ಲಕ್ಷಾಂತರ ಜನರ ಆಹಾರವನ್ನು ಕಿತ್ತುಕೊಂಡು ಅದಕ್ಕೆ ಸೌಹಾರ್ದದ ಹೆಸರನ್ನು ನೀಡುವುದು ಅಮಾನವೀಯ. ಮತ್ತು ಈ ಅಮಾನವೀಯತೆಗೆ ಅಕ್ಬರನ ಕತೆಯನ್ನು ಸಮರ್ಥನೆಯಾಗಿ ನೀಡುವುದು ನಮ್ಮ ನ್ಯಾಯ ವ್ಯವಸ್ಥೆಯ ವಿಡಂಬನೆಯೇ ಸರಿ. ಅಂತಹ ತೀರ್ಪನ್ನು ನ್ಯಾಯಾಧೀಶ ತನ್ನ ವೈಯಕ್ತಿಕ ನಂಬಿಕೆಯ ಆಧಾರದಲ್ಲಿ ನೀಡಿದ್ದಾನೆಯೇ ಹೊರತು, ಸಂವಿಧಾನದ ಆಧಾರದ ಮೇಲಲ್ಲ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಧಾರ್ಮಿಕ ಹಬ್ಬಗಳೆನ್ನುವುದು ಆಯಾ ಧರ್ಮಗಳ ಖಾಸಗಿ ವಿಷಯಳು. ಹಬ್ಬದ ಹೆಸರಿನಲ್ಲಿ ಮೆರವಣಿಗೆ ಇತ್ಯಾದಿಗಳನ್ನು ಮಾಡಿ, ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಮಾಡಿದಷ್ಟೇ ಪ್ರಮಾದದಿಂದ ಕೂಡಿದೆ, ಹಬ್ಬದ ಹೆಸರಿನಲ್ಲಿ ಮಾಂಸಾಹಾರ ನಿಷೇಧ ಮಾಡುವುದು. ಇನ್ನೊಬ್ಬರ ಹಬ್ಬಕ್ಕಾಗಿ ಉಳಿದ ಧರ್ಮೀಯರು ತಮ್ಮ ಜೀವನಾವಶ್ಯಕ ಆಹಾರವನ್ನು ತ್ಯಜಿಸಬೇಕೆಂದು ಆದೇಶಿಸುವುದು. ಇದರಿಂದ ಸೌಹಾರ್ದ ಹೆಚ್ಚುವುದಿಲ್ಲ. ಪರಸ್ಪರ ಅಸಹನೆ ಬೆಳೆಯುತ್ತದೆ. ಹಸಿವಿಗಿಂತ ದೊಡ್ಡ ಹಿಂಸೆ ಬೇರಿಲ್ಲ. ಈ ದೇಶದಲ್ಲಿ 17 ಕೋಟಿ ಮಕ್ಕಳು ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ಇದು ಹಿಂಸೆ. ಇವರ ಉದರ ಯಾವತ್ತು ಸಂಪೂರ್ಣ ತುಂಬುತ್ತದೋ, ಅಂದು ಈ ದೇಶಕ್ಕೆ ನಿಜವಾದ ಹಬ್ಬ. ಅದುವೇ ನಿಜವಾದ ಸೌಹಾರ್ದ. ಅಂದು ಆಚರಿಸುವ ಗಾಂಧೀಜಯಂತಿಯೇ ನಿಜವಾದ ಅರ್ಥದ ಗಾಂಧೀಜಯಂತಿ.
(ಅಕ್ಟೋಬರ್ 5, 2007, ಶುಕ್ರವಾರ)

Thursday, May 17, 2012

ಗೂಡಂಗಡಿಯಲ್ಲಿ ಒಂದು ಗ್ಲಾಸ್ ಚಹಾದ ಜೊತೆಗೆ......

ಕಾಫಿ ಶಾಪೊಂದರಲ್ಲಿ ಚಹಾ ಕುಡಿದು, ನಾಲಗೆ ಕೆಡಿಸಿಕೊಂಡು, ಅಂದೇ ಸಂಜೆ ಬರೆದ ಒಂದು ಪುಟ್ಟ ಲೇಖನ. ಡಿಸೆಂಬರ್ 28, 2007ರಲ್ಲಿ ಬರೆದಿದ್ದು.

 ಒಂದು ಕಾಫಿ ಶಾಪ್‌ನಲ್ಲಿ ಆ ಸಂಜೆಯ ಕೆಲವು ನಿಮಿಷಗಳನ್ನು. ತಣ್ಣಗಿನ ಎಸಿ. ಅದಕ್ಕೆ ಒಪ್ಪಿತವಾಗುವ ವೌನ. ಆ ವೌನದ ಗೂಡೊಳಗೆ ಕುಳಿತು ಪಿಸುಗುಟ್ಟಿತ್ತಿರುವ ಹೊಸ ತಲೆ ಮಾರು. ವೈಟರ್‌ಗಳು ತಮ್ಮದೇ ಆದ ಯುನಿಫಾರ್ಮು ಹಾಕಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ತಿಂಡಿಯ ಐಟಂಗಳನ್ನು ನೋಡಿದೆ. ಪೀಝಾ, ಪಪ್ಸ್, ಕೆಲವು ದುಬಾರಿ ಬಿಸ್ಕತ್‌ಗಳು. ವೈಟರ್ ಹಾಕಿಕೊಂಡ ಯುನಿಫಾರ್ಮುನಂತಹದ್ದೇ ಕಂಪೆನಿ ತಿಂಡಿಗಳು. ಯಾವುದೇ ಕಾಫಿ ಶಾಫ್‌ಗೆ ಹೋದರು, ಕಾಫಿಯ ರುಚಿ ಒಂದೇ. ಯಾಕೆಂದರೇ ಅವೆಲ್ಲವೂ ಒಂದೇ ಕಂಪೆನಿಯದು. ರುಚಿಯೂ ಒಂದೇ.

    ಯಾಕೋ ನನ್ನ ಹದಿಹರೆಯ ನೆನೆಪಾಯಿತು. ಧೋ ಎಂದು ಸುರಿಯುವ ಮಳೆಯಿಂದ ಪಾರಾಗುತ್ತಾ ನಾನು ಸೇರಿಕೊಳ್ಳುತ್ತಿದ್ದ ನನ್ನೂರಿನ ಬಸ್‌ಸ್ಟಾಂಡ್ ಪಕ್ಕದಲ್ಲಿದ್ದ ಅಬ್ಬೂ ಕಾಕನ ಗೂಡಂಗಡಿ. ಅಬ್ಬೂ ಕಾಕನ ಚಹ ಎಂದರೆ ನನಗೆ, ನನ್ನ ಗೆಳೆಯರಿಗೆಲ್ಲಾ ಅತೀವ ಪ್ರೀತಿ. ಹಾಗೆ ನೋಡಿದರೆ ನನ್ನ ಮತ್ತು ನನ್ನ ಗೆಳೆಯರ ಕನಸುಗಳು, ರಾಜಕೀಯ ಚಿಂತನೆಗಳು ಅರಳಿದ್ದು, ಈ ಗೂಡಂಗಡಿಯಲ್ಲೇ. ಅಬ್ಬೂ ಕಾಕನ ತಟ್ಟಿಯ ಅಂಗಡಿ ಎಂದರೆ ಒಂದು ಪುಟ್ಟ ಕ್ಲಾಸ್ ರೂಮ್. ಅಲ್ಲಿರುವ ಉದ್ದನೆಯ ಎರಡು ಬೆಂಚು, ಟೇಬಲ್‌ಗಳು ಸಂಜೆ 5ರ ನಂತರ ನಾನು ಮತ್ತು ನನ್ನ ಗೆಳೆಯರಿಂದ ತುಂಬಿ ಹೋಗುತ್ತಿತ್ತು. ಹಾಗೆಂದು ಅಬ್ಬೂ ಕಾಕನಿಗೆ ನಮ್ಮಿಂದ ಸಖತ್ ವ್ಯಾಪಾರವಾಗುತ್ತ್ತಿತ್ತು ಎಂದೇನಲ್ಲ. ಒಂದು ಟೀಯನ್ನು ಎರಡೆರಡು ಮಾಡಿ ಅದನ್ನೇ ಗಂಟೆಗಟ್ಟಲೇ ಕೈಯಲ್ಲಿ ಹಿಡಿದುಕೊಂಡು ದೇಶದ , ರಾಜ್ಯದ, ಊರಿನ ಸಮಸ್ಯೆಗಳನ್ನು ಚರ್ಚೆ ಮಾಡುತ್ತಿದ್ದೆವು. ಅಬ್ಬೂಕಾಕನಿಗೆ ನಾವೆಂದರೆ ವಿಶೇಷ ಪ್ರೀತಿ. ಈ ಗೂಡಂಗಡಿಗೆ ಅವರೇ ಮಾಲಕರು, ವೈಟರ್, ಕ್ಲೀನರ್ ಎಲ್ಲ. ಅವರೇನೂ ಈ ಕಾಫಿಶಾಫ್‌ನ ವೈಟರ್‌ಗಳಂತೆ ಯೂನಿಫಾರ್ಮ್ ಹಾಕಿಕೊಂಡಿರುತ್ತಿರಲಿಲ್ಲ. ಒಂದು ನೀಲಿ ಗೀಟು ಗೀಟಿನ ಲುಂಗಿ ಉಡುತ್ತಿದ್ದರು. ಮೈ ಮುಚ್ಚಲು ಬಿಳಿ ಬನಿಯಾನ್. ತಲೆಗೊಂದು ನೀರು ದೋಸೆಯ ಟೊಪ್ಪಿ. ನಾವೆಂದರೆ ಅವರಿಗೆ ವಿಶೇಷ ಪ್ರೀತಿ. ಈ ದೇಶದ ರಾಜಕೀಯದ ಕುರಿತಂತೆ ವಿಶೇಷ ಆಸಕ್ತಿ. ನಾವು ಬಂದು ಕುಳಿತರೆ ಅವರು ಒಂದು ಕಿವಿಯನ್ನು ನಮ್ಮ ಚರ್ಚೆಯತ್ತ ಬಿಟ್ಟು ಬಿಡುತ್ತಿದ್ದರು. ನಾವು ಬಂದು ಕುಳಿತರೆ ಸಾಕು, ನಮಗಾಗಿಯೇ ಖಡಕ್ ಚಹಾದ ಸಿದ್ಧತೆ ಮಾಡುತ್ತಿದ್ದರು. ಅನೇಕ ಸಂದರ್ಭದಲ್ಲಿ ಇತರ ಗಿರಾಕಿಗಳನ್ನೇ ನಮಗಾಗಿ ಕಳೆಕೊಳ್ಳುವುದಿತ್ತು. ಯಾಕೆಂದರೆ ಬೆಂಚು ತುಂಬಾ ನಮ್ಮ ಪಟಾಲಂಗಳೇ ತುಂಬುಕೊಂಡಿರುತ್ತಿದ್ದವು. ನಮ್ಮ ಮಾತಿನ ನಡುವೆ ವಿ.ಪಿ.ಸಿಂಗ್ ಹೆಸರು ಬಂದಾಕ್ಷಣ, ಓಡೋಡಿ ಬರುತ್ತಿದ್ದರು. ಅವರ ಪ್ರಕಾರ ಈ ದೇಶದ ನ್ಯಾಯಕ್ಕೆ ಹೇಳಿದ ಮನುಷ್ಯ ವಿ.ಪಿ.ಸಿಂಗ್ ಮಾತ್ರ ಆಗಿದ್ದ. ಯಾಕೆಂದರೆ ಬಾಬರಿ ಮಸೀದಿಗಾಗಿ ಆತ ಅಧಿಕಾರವನ್ನೇ ತ್ಯಾಗ ಮಾಡಿದನಲ್ಲ ಎನ್ನುವುದು ಅವರ ಸಮರ್ಥನೆಯಾಗಿತ್ತು. ಅವರಿಗೆ ನಮ್ಮ ಮಾತಿನ ನಡುವೆ ಒಂದೇ ಒಂದು ಆಸೆ. ವಿ.ಪಿ. ಸಿಂಗ್ ಮತ್ತೆ ಪ್ರಧಾನಿಯಾಗುವ ಚಾನ್ಸ್ ಉಂಟೋ?

   ಅಬ್ಬೂ ಕಾಕನನನ್ನು ನಾವೆಲ್ಲರೂ ಕಾಕ ಎಂದು ಕರೆಯತ್ತಿದ್ದೆವು. ನಮ್ಮ ಪಾಲಿಗೆ ಅವರು ಬರೇ ಚಹಾ ತಯಾರಿಸುವ ಕಾಕ ಮಾತ್ರ ಆಗಿರಲಿಲ್ಲ. ನಮ್ಮ ರಾಜಕೀಯ ಚಿಂತನೆಗಳ ಸಹಭಾಗಿಯಾಗಿದ್ದರು. ನಾವು ಇಂದಿರಾ ಗಾಂಧಿಗೆ ಬೈದರೆ, ಅವರಿಗೆ ಅತೀವ ಸಿಟ್ಟು ಬರುತ್ತಿತ್ತು. ಈ ದೇಶ ಇವತ್ತಿಗೂ ಇಂದಿರಾ ಗಾಂಧಿಯ ಹೆಸರು ಹೇಳಿ ಬದುಕುತ್ತಿರುವುದು ಎನ್ನುವುದು ಅವರ ವಾದ. ದೂರದ ಕೊಕ್ಕಡಕ್ಕೆ ಇಂದಿರಾ ಗಾಂಧಿ ಬಂದಾಗ ಅಲ್ಲಿ ವಾಸವಿರುವ ಅವರ ತಾಯಿ ಇಂದಿರಾ ಗಾಂಧಿಗೆ ಹೂಮಾಲೆ ಹಾಕಿದರಂತೆ. ಇಂದಿರಾ ಗಾಂಧಿ ಅವರ ತಾಯಿಯ ಕೆನ್ನೆ ಮುಟ್ಟಿದರಂತೆ. ಇವುಗಳನ್ನೆಲ್ಲಾ ಪ್ರತಿ ಬಾರಿಯೂ ನಮ್ಮ ಚರ್ಚೆಯ ನಡುವೆ ತರುತ್ತಿದ್ದರು. ನಮ್ಮ ಮೇಲೆ ಅದೆಷ್ಟು ಪ್ರೀತಿಯಿದ್ದರೂ, ಕಮ್ಯುನಿಸ್ಟರು ಎಂದು ಬೈಯುತ್ತಿದ್ದರು. ನಾವು ಒಮ್ಮಿಮ್ಮೆ ಕಮ್ಯುನಿಸ್ಟರಿಗೆ ಛೀಮಾರಿ ಹಾಕುವಾಗ ಹಾಗಾದರೆ ನೀವು ಕಮ್ಯುನಿಸ್ಟ್ ಅಲ್ವಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು.

    ಅಬ್ಬೂಕಾಕನ ಗೂಡಂಗಡಿಯಲ್ಲಿ ಮನೆಯಲ್ಲಿ ಮಾತ್ರ ಸಿಗಬಹುದಾದ ಆತ್ಮೀಯತೆಯಿತ್ತು. ಅವರ ಫೇಮಸ್ ಐಟಂಗಳ ರುಚಿಯೇ ಬೇರೆ. ನೀರು ದೋಸೆ, ಕಲ್ತಪ್ಪವನ್ನು ಮೀನು ಸಾರಿನ ಜೊತೆ ಬಡಿಸಿದರೆಂದರೆ ಅದರ ಮುಂದೆ ಯಾವ ಪೀಝಾವು ನಿಲ್ಲಲಾರದು. ಅಷ್ಟು ಸಣ್ಣ ಗೂಡಂಗಡಿಯಲ್ಲಿ ಇಡ್ಲಿ, ಕಲ್ತಪ್ಪ, ನೀರು ದೋಸೆ ಎಲ್ಲವನ್ನು ಮಾಡಿಡುತ್ತಿದ್ದರು. ತಿನ್ನುವಾಗ ಪ್ರೀತಿಯಿಂದ ‘ತಿನ್ನಿ ಮಕ್ಕಳೇ ತಿನ್ನಿ’ ಎನ್ನುತ್ತಿದ್ದರು. ಆ ಗೂಡಂಗಡಿಯಲ್ಲಿ ಹಲವರು ವಾರಕ್ಕೊಮ್ಮೆ ದುಡ್ಡು ಪಾವತಿಸುತ್ತಿದ್ದರು. ಅದಕ್ಕಾಗಿಯೇ ಒಂದು ಲೆಕ್ಕ ಪುಸ್ತಕ ಇಟ್ಟಿದ್ದರು. ಅನೇಕರು ದುಡ್ಡು ಕೊಡದೆ ಕೈಕೊಟ್ಟಿದ್ದರು. ಹಲವರು ಹಿಂದಿನ ಬಾಕಿ ಇಟ್ಟುಕೊಂಡೇ ಮತ್ತೆ ಬಂದು ತಿಂದು ಹೋಗುತ್ತಿದ್ದರು. ಕೇಳಿದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ಬಹಳ ಕಷ್ಟಪಟ್ಟು ಹಿಂದಿನ ಬಾಕಿ ಕೇಳುತ್ತಿದ್ದರು.

     ಈಗಲೂ ಅಷ್ಟೇ ಎಲ್ಲಾದರೂ ಒಂದು ಸಣ್ಣ ಗೂಡಂಗಡಿ ಕಂಡರೆ ಅದರೊಳಗೆ ನುಗ್ಗುತ್ತೇನೆ. ಅಲ್ಲಿರುವ ವ್ಯಕ್ತಿಯಲ್ಲಿ ಅಬ್ಬೂಕಾಕನನ್ನು ಕಾಣಲು ಪ್ರಯತ್ನಿಸುತ್ತೇನೆ. ಅಲ್ಲಿರುವ ವೈವಿಧ್ಯಮಯ ತಿಂಡಿಗಳನ್ನು ಆತ್ಮೀಯವಾಗಿ ಆಸ್ವಾದಿಸುತ್ತೇನೆ. ಒಂದು ಗೂಡಂಗಡಿಗಿಂತ, ಇನ್ನೊಂದು ಗೂಡಂಗಡಿಯ ತಿಂಡಿಗಳ ರುಚಿಯೇ ಬೇರೆ. ಚಹಾದಲ್ಲೂ ಅಷ್ಟೇ. ಅವರು ಇಟ್ಟುಕೊಳ್ಳುವ ಗ್ಲಾಸಿನ ಆಕಾರದಲ್ಲೂ ಅಷ್ಟೇ ವೈವಿಧ್ಯತೆ. ಅಬ್ಬೂಕಾಕನ ಗೂಡಂಗಡಿಯ ಗ್ಲಾಸ್‌ನ ಚಂದವೇ ಬೇರೆ. ಪ್ಲೇನ್ ಗ್ಲಾಸ್‌ಗೆ ಕೆಂಪು ದೊಡ್ಡ ಆಕಾರದ ಹೂವುಗಳು ಸುತ್ತಿಕೊಂಡಿರುತ್ತವೆ. ಆ ಗ್ಲಾಸ್‌ಗಳಲ್ಲಿ ಕುಡಿದರೇನೆ ನಮಗೆ ತೃಪ್ತಿ. ನಮ್ಮ ಮನೆಗಳಲ್ಲಿ ಅವಸಾನದ ಅಂಚಿನಲ್ಲಿರುವ ತಿಂಡಿಯ ವೈವಿಧ್ಯಗಳು ಅಲ್ಪಸ್ವಲ್ಪ ಜೀವಂತ ಉಳಿದುಕೊಂಡಿರುವುದು ಈ ಗೂಡಂಗಡಿಗಳಲ್ಲಿ ಮಾತ್ರ. ಇಂದಿಗೂ ನಾನು ನೋಡುವ ಗೂಡಂಗಡಿಗಳಲ್ಲಿ ಯಾರಾದರು ನಾಲ್ಕು ತರುಣರೋ, ಹಿರಿಯರೋ ಒಂದು ಗ್ಲಾಸ್ ಚಹದ ಜೊತೆಗೆ ಹರಟೆ ಕೊಚ್ಚುತ್ತಿರುತ್ತಾರೆ. ಅವರಲ್ಲಿ ನನ್ನ ಹದಿಹರೆಯದ ದಿನಗಳನ್ನು ಹುಡುಕುವ ಪ್ರಯತ್ನ ಮಾಡುತ್ತೇನೆ. ಈ ಗೂಡಂಗಡಿಗಳು ಒಂದು ರೀತಿಯಲ್ಲಿ ಆ ಊರಿನ ಜೀವಂತಿಕೆಯ ಸಂಕೇತ. ಯಾಕೆಂದರೆ, ಆ ಊರಿನ ಹಿರಿಯರನ್ನು, ಯುವಕರನ್ನು ಒಂದೆಡೆ ಸೇರಿಸುವ ಕ್ಲಬ್‌ಗಳು ಈ ಗೂಡಂಗಡಿ. ಅದು ಬರೇ ವ್ಯಾಪಾರವನ್ನಷ್ಟೇ ಗುರಿಯಾಗಿಸಿಕೊಂಡಿರುವುದಿಲ್ಲ. ಚಹಾದ ಜೊತೆಗೆ ಸ್ನೇಹವನ್ನು, ಆತ್ಮೀಯತೆಯನ್ನು ಗೂಡಂಗಡಿಗಳು ಹಂಚುತ್ತವೆ. ಒಂದು ಊರಿನ ವೈವಿಧ್ಯಮಯ ಆಲೋಚನೆಗಳಿಗೆ ಆ ಗೂಡಂಗಡಿಗಳು ವೇದಿಕೆಯಾಗುತ್ತವೆ.

ಇಂದು ಗೂಡಂಗಡಿಗಳು ನಗರಗಳಿಗೆ ಒಂದು ಸಮಸ್ಯೆಯಾಗಿದೆ. ಅವರ ಪ್ರಕಾರ ಈ ಗೂಡಂಗಡಿಗಳು ನಗರದ ಸೌಂಧರ್ಯಕ್ಕೆ ಧಕ್ಕೆ ತರುತ್ತಿವೆ. ಕಾಫಿ ಶಾಫ್‌ಗಳು, ಪೀಝಾಹಟ್‌ಗಳು, ಬೃಹತ್ ಹೊಟೇಲ್‌ಗಳ ಸಂಚಿನಿಂದಾಗಿ ಈ ಗೂಡಂಗಡಿಗಳು ನೆಲೆ ಕಳೆದುಕೊಳ್ಳುತ್ತಿವೆ. ಇದರ ಜೊತೆಗೆ ತಿಂಡಿಗಳ ಗ್ರಾಮೀಣ ಸೊಗಡು, ಚಹಾದಲ್ಲಿರುವ ಆತ್ಮೀಯ ಪರಿಮಳವೂ ಇಲ್ಲವಾಗುತ್ತಿವೆ. ವೈವಿಧ್ಯತೆ ನಾಶವಾಗಿ, ನಮ್ಮನ್ನೆಲ್ಲಾ ವಿವಿಧ ಕಂಪೆನಿಗಳ, ಬ್ರಾಂಡ್‌ಗಳ ಚಹಾ, ಕಾಫಿಗಳ ಋಣಕ್ಕೆ ಬಲಿ ಬೀಳಿಸಲಾಗುತ್ತಿದೆ. ಕಾಫಿಶಾಫ್‌ಗಳಲ್ಲಿ ಯಾವುದೋ ಕಂಪೆನಿಯ ಚಹಾ, ಕಾಫಿ, ತಿಂಡಿ ಸಿಗಬಹುದು. ಆದರೆ ತಂದೆಯಂತಹ ಅಬ್ಬುಕಾಕನ ಆತ್ಮೀಯತೆ, ಪ್ರೀತಿ ಮಾತ್ರ ಸಿಗಲಾರದು.
ಡಿಸೆಂಬರ್ 28, 2007

Tuesday, May 15, 2012

"ಅಂಗೈಯಲ್ಲೇ ಆಕಾಶ''

ನನ್ನ ಹನಿ ಹನಿ ಕತೆಗಳು...
"ಅಂಗೈಯಲ್ಲೇ ಆಕಾಶ'' ಕೃತಿ ಬೇಕಾದವರು ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು
.
ಅಕ್ಷತ ಹುಂಚದಕಟ್ಟೆ,
ಅಹರ್ನಿಶಿ ಪ್ರಕಾಶನ,
ಪ್ರಶಾಂತ ನಿಲಯ,
ಜ್ಯೋತಿ ರಾವ್ ಬೀದಿ,
4 ನೆ ಕ್ರಾಸ್, ವಿದ್ಯಾನಗರ,
ಶಿವಮೊಗ್ಗ
ದೂರವಾಣಿ: 08182 -241681
ಮೊಬೈಲ್- 94491 74662

Monday, May 14, 2012

ಅನ್ನ ಮತ್ತು ಇತರ ಕತೆಗಳು

ನಟನೆ
ಆತ ಖ್ಯಾತ ನಿರ್ದೇಶಕ.
ಪ್ರತಿಭೆಗಳನ್ನು ಹುಡುಕಿ ತೆಗೆಯುವುದರಲ್ಲಿ ನಿಸ್ಸೀಮ.
ಅತ್ಯುತ್ತಮ ನಟರನ್ನೆಲ್ಲ ಅವನು ಪರಿಚಯಸಿದ್ದ.
ಒಂದು ದಿನ ಅವನ ಮನೆಯ ಕೆಲಸದಾಳು ಬಂದು ಹೇಳಿದ
‘‘ಸ್ವಾಮಿ...ನನ್ನ ಪತ್ನಿ ಅಸೌಖ್ಯದಿಂದ ಮಲಗಿದ್ದಾಳೆ...ಇವತ್ತೊಂದು ದಿನ ರಜ ಕೊಡಿ’’
ನಿರ್ದೇಶಕ ಅವನ ಮುಖವನ್ನು ದಿಟ್ಟಿಸಿ ನೋಡಿ ಹೇಳಿದ ‘‘ಚೆನ್ನಾಗಿ ನಟಿಸುತ್ತೀಯ...ಮುಂದಿನ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡುತ್ತೀಯ?’’

ನಾಲ್ಕು ಸಾಲು
ಅವನು ಕಾದಂಬರಿ ಬರೆಯಲು ಕುಳಿತ.
ತುಸು ಹೊತ್ತಲ್ಲೇ ಇದೊಂದು ಸಣ್ಣ ಕತೆಯಾಗಿ ಮುಗಿಯಬಹುದು ಅನ್ನಿಸಿತು.
ಬರೆಯಲು ಕುಳಿತ.
ನಾಲ್ಕು ಸಾಲು ಬರೆದ.
ಮತ್ತೆ ಬರೆಯಲು ಮುಂದುವರೆದರೆ, ಅರೆ, ಕತೆ ಇಲ್ಲಿಗೆ ಮುಗಿಯಿತಲ್ಲ ಎಂದು ಕಂಗಾಲಾದ.
ಯಾರೋ ಕೇಳಿದರು ‘‘ಕಾದಂಬರಿ ಬರೆಯಲು ಹೊರಟವರು ಬರೇ ನಾಲ್ಕು ಸಾಲಿನ ಕತೆ ಬರೆದು ಮುಗಿಸಿದ್ದೀರಲ್ಲ?’’
ಕತೆಗಾರ ಭರವಸೆಯಿಂದ ಹೇಳಿದ ‘‘ಆ ನಾಲ್ಕು ಸಾಲುಗಳು ಓದುಗರ ಮನದೊಳಗೆ ಮಹಾ ಕಾದಂಬರಿಯಾಗಿ ಬೆಳೆಯಲಿದೆ ಎನ್ನುವ ವಿಶ್ವಾಸ ನನಗಿದೆ’’

ಸಾಲ
‘‘ಛೆ, ತಡವಾಗಿ ಬಂದೆ. ನಿನ್ನೆ ಬಂದು ಕೇಳಿದ್ದಿದ್ದರೆ ಕೊಡುತ್ತಿದ್ದೆ’’ ಸಾಲ ಕೇಳಲು ಬಂದ ಗೆಳೆಯನಲ್ಲಿ ಅವನು ಹೇಳಿದ.
ವಿಚಿತ್ರವೆಂದರೆ, ಸಾಲ ಕೇಳುವ ಎಲ್ಲರೂ ಗೆಳೆಯರಲ್ಲಿ ಒಂದು ದಿನ ತಡವಾಗಿಯೇ ಸಾಲ ಕೇಳುತ್ತಾರೆ. ಯಾಕೆ?

ಮಾವು
ಶಿಷ್ಯನೊಬ್ಬ
ಮಾವು ತಿಂದು ಗೊರಟನ್ನು ಎಸೆಯುತ್ತಿದ್ದ.
ಸಂತ ನಕ್ಕು ಕೇಳಿದ ‘‘ಎಲ್ಲರೊಂದಿಗೆ ಹಂಚಿ ತಿನ್ನ ಬಹುದಿತ್ತಲ್ಲ?’’
‘‘ಒಂದೇ ಒಂದು ಮಾವಿತ್ತು ಗುರುಗಳೇ’’ ಶಿಷ್ಯ ಉತ್ತರಿಸಿದ.
‘‘ಹಂಚುವ ಮನಸ್ಸಿದ್ದರೆ ಆ ಒಂದು ಮಾವನ್ನು ಇಡೀ ಜಗತ್ತಿಗೇ ಹಂಚಬಹುದು’’
‘‘ಹೇಗೆ ಗುರುಗಳೇ?’’
‘‘ಹೀಗೆ...’’ಎನ್ನುತ್ತಾ ಶಿಷ್ಯನು ತಿಂದು ಬಿಟ್ಟ ಗೊರಟನ್ನು ಸಂತ ಆರಿಸಿ ಆಶ್ರಮದ ಅಂಗಳದಲ್ಲಿ ಬಿತ್ತಿದ.

ಕನ್ನಡಿ
ಜಿಪುಣನೊಬ್ಬ ಮುಖ ನೋಡುವ ಕನ್ನಡಿಯನ್ನು ಕೊಂಡ.
ಮನೆಗೆ ತಲುಪುವಷ್ಟರಲ್ಲಿ ಕನ್ನಡಿ ಅವನ ಕೈಯಿಂದ ಬಿದ್ದು ನೂರು ಚೂರಾಯಿತು.
ಯಾರೋ ಹೇಳಿದರು ‘‘ಛೇ, ಕನ್ನಡಿ ಒಡೆದು ಚೂರಾಯಿತಲ್ಲ?’’
ಜಿಪುಣ ಒಡೆದ ಕನ್ನಡಿಯ ಚೂರಲ್ಲೇ ಮುಖ ನೋಡುತ್ತಾ ಹೇಳಿದ ‘‘ಇಲ್ಲ, ಕನ್ನಡಿ ಒಡೆದಿಲ್ಲ. ಅದೀಗ ನೂರಾರು ಕನ್ನಡಿಯಾಗಿದೆ’’
 
ಅನ್ನ
ಪ್ರತಿ ಅನ್ನದ ಅಗುಳಲ್ಲೂ ಉಣ್ಣುವವನ ಹೆಸರಿರುತ್ತದೆಯಂತೆ...
ಆ ಅನ್ನದ ಮೇಲೆ ರಾತ್ರಿಯವರೆಗೂ ಶ್ರೀಮಂತನ ಹೆಸರೇ ಇತ್ತು.
ಹಳಸಿದಾಕ್ಷಣ ಆ ಅನ್ನದ ಅಗುಳ ಮೇಲೆ, ಮನೆಗೆಲಸದ ಹುಡುಗನ ಹೆಸರು ಬರೆಯಲ್ಪಟ್ಟಿತು.

ಅಮ್ಮ
‘‘ಅಮ್ಮನಿಲ್ಲದ ಭೂಮಿ ಹೇಗಿರುತ್ತಿತ್ತು?’’ ಅವನು ಪ್ರಶ್ನಿಸಿದ.
‘‘ಅಮ್ಮನಿಲ್ಲದೆ ಭೂಮಿ ಎಲ್ಲಿರುತ್ತಿತ್ತು?’’ ಇವನು ಪ್ರಶ್ನೆಯನ್ನು ತಿದ್ದಿದ

Saturday, May 5, 2012

ಪರುಷ ಮಣಿ

ಪತ್ರಕರ್ತ, ಕವಿ ದಿವಂಗತ ಬಿ. ಎಂ. ರಶೀದ್  ಅವರ "ಸಮಗ್ರ ಬರಹಗಳ ಸಂಗ್ರಹ'' -"ಪರುಷ ಮಣಿ'' ಕೃತಿಯ ಕುರಿತಂತೆ ಹಲವು ಗೆಳೆಯರು ಕೇಳಿದ್ದಾರೆ. ಈ ಕೃತಿ 2004 ರಲ್ಲಿ ಬಿಡುಗಡೆಯಾಗಿದೆ. ಬಿ. ಎಂ. ರಶೀದ್ ಪ್ರಕಾಶನದಿಂದಲೇ ಇದನ್ನು ಪ್ರಕಟಿಸಲಾಗಿದೆ.
ಈ ಕೃತಿ ಬೇಕಾದವರು ನನ್ನ ವಿಳಾಸವನ್ನು ಸಂಪರ್ಕಿಸಬಹುದು.
ಬಿ. ಎಂ. ಬಷೀರ್.
ಸುದ್ದಿ ಸಂಪಾದಕರು,
ವಾರ್ತಾಭಾರತಿ ದೈನಿಕ,
ಕೈಗಾರಿಕಾ ಪ್ರದೇಶ, ಬೈಕಂಪಾಡಿ,
ಮಂಗಳೂರು-11
ಮೊಬೈಲ್-9448835621

ಕೃತಿಯ ಮುಖಬೆಲೆ 80 ರುಪಾಯಿ. "ಬಿ. ಎಂ. ಬಶೀರ್" ಈ ಹೆಸರಿಗೆ ಮೊತ್ತವನ್ನು ಡಿಡಿ ಮಾಡಬಹುದು. ಅಥವಾ ಎಂ.ಓ ಮಾಡಬಹುದು.

ಪಂಜರ ಮತ್ತು ಇತರ ಕತೆಗಳು

ನಮಸ್ಕಾರ
‘‘ಗುರುಗಳೇ ನನಗೆಲ್ಲರೂ ನಮಸ್ಕರಿಸುತ್ತಿದ್ದಾರೆ. ಅಂದರೆ ನಾನೀಗ ಈ ಊರಿನಲ್ಲಿ ದೊಡ್ಡ ವ್ಯಕ್ತಿಯಾಗಿದ್ದೇನೆ ಎಂದು ಅರ್ಥವಲ್ಲವೆ?’’ ಶಿಷ್ಯ ಕೇಳಿದ.
ಸಂತ ನಕ್ಕು ಉತ್ತರಿಸಿದ ‘‘ಅಲ್ಲ. ಈ ಊರಿನ ಜನರು ದೊಡ್ಡ ವ್ಯಕ್ತಿಗಳಾಗಿದ್ದಾರೆ ಎಂದು ಅರ್ಥ’’

ನಕ್ಷತ್ರ
ಆಕಾಶದಿಂದ ಒಂದು ನಕ್ಷತ್ರ ಭೂಮಿಯ ಮೇಲೆ ಬಿದ್ದಂತಾಯಿತು.
ಹುಡುಕುತ್ತಾ ಹುಡುಕುತ್ತಾ ಕೊನೆಗೂ ಆಕೆಯ ಕಣ್ಣೊಳಗೆ ಅದನ್ನು ನಾನು ನೋಡಿದೆ.

ಕಲಾವಿದೆ
ಖ್ಯಾತ ಕೊಳಲು ವಾದಕನೊಬ್ಬನ ಸಂದರ್ಶನ ನಡೆಯುತತಿತ್ತು.
‘‘ನಿಮ್ಮ ಗುರು ಯಾರು?’’ ಪತ್ರಕರ್ತ ಕೇಳಿದ.
‘‘ಅಮ್ಮ...ನನ್ನ ಅಮ್ಮ ನನ್ನ ಗುರು’’ ಕೊಳಲು ವಾದಕ ಹೇಳಿದ.
‘‘ಅವರೂ ಕೊಳಲು ವಾದಕರಾಗಿದ್ದರೆ?’’
‘‘ಹೌದು...ಒಲೆಯ ಮುಂದೆ ಕಬ್ಬಿಣದ ಊದುಗೊಳವೆಯಿಂದ ನಾದವನ್ನು ಹೊರತೆಗೆಯುತ್ತಿದ್ದ ಮಹಾ ಕಲಾವಿದೆ ಆಕೆ. ತನ್ನ ಅಸ್ತಮಾದ ಎದೆಯಿಂದ ಉಸಿರನ್ನು ಎಳೆಯುತ್ತಾ ಊದುಗೊಳವೆಯ ಮೂಲಕ ಒಲೆಯಲ್ಲಿ ಬೆಂಕಿ ಹಚ್ಚುವುದನ್ನು ನೋಡಿ ನೋಡಿ ನಾನು ಕೊಳಲು ವಾದಕನಾದೆ’’

ಫೋಟೋ
‘‘ನನ್ನ ಫೋಟೋ ಒಂದು ತೆಗೆಯಿರಿ. ತುಂಬಾ ಚೆನ್ನಾಗಿ ಬರಬೇಕು’’ ಆತ ಫೋಟೋಗ್ರಾಫರ್‌ನಲ್ಲಿ ಹೇಳಿದ.
‘‘ನಿಮಗೆ ನಿಮ್ಮ ಫೋಟೋ ಬೇಕೋ, ಅಥವಾ ಚೆನ್ನಾಗಿರುವ ಫೋಟೋ ಬೇಕೋ...ಸ್ಪಷ್ಟವಾಗಿ ಹೇಳಿ’’ ಫೋಟೋಗ್ರಾಫರ್ ಕೇಳಿದ.

ಕೋಲು
‘‘ತಾತಾ...ಎರಡು ಕಾಲಿರುವಾಗ ಮತ್ತೇಕೆ ಕೋಲು ಹಿಡಿದುಕೊಂಡು ಓಡಾಡುತ್ತಿದ್ದೀಯ?’’ ಮೊಮ್ಮಗಳು ಕೇಳಿದಳು.
‘‘ಮತ್ತೆ ಶುರುವಿನಿಂದ ನಡೆಯುವುದನ್ನು ಕಲಿಯುತ್ತಿದ್ದೇನೆ ಮಗಾ’’ ತಾತ ನಕ್ಕು ಉತ್ತರಿಸಿದ.

ಮಳೆ
ಆಕಾಶದ ಉದ್ದಗಲಕ್ಕೆ ದಟ್ಟ ಮೋಡ ಕವಿದಿತ್ತು.
ಅವನೊಬ್ಬ ದಾರಿ ಹೋಕ.
‘‘ಓ ದೇವರೇ ಮಳೆ ಬರದಿರಲಿ...’ ಎಂದ.
ಆದರೆ ಸ್ವಲ್ಪ ಹೊತ್ತಲ್ಲೇ ಧೋ ಎಂದು ಮಳೆ ಸುರಿಯತೊಡಗಿತು.
ಈತ ದೇವರಿಗೆ ಶಪಿಸತೊಡಗಿದ.
ಅವನಿಗೆ ಗೊತ್ತಿರಲಿಲ್ಲ, ಲಕ್ಷಾಂತರ ರೈತರು ಮಳೆ ಬಂದ ಸಂತೋಷದಲ್ಲಿ ದೇವರನ್ನು ಸ್ತುತಿಸುತ್ತಿರುವುದು.

ಪಂಜರ
ಪಕ್ಷಿಗಳೆಂದರೆ ಅವನಿಗೆ ತುಂಬಾ ಇಷ್ಟ. ಅವನದನ್ನು ಪ್ರೀತಿಸುತ್ತಿದ್ದ.
ಆದುದರಿಂದ ಅವನ ಮನೆಯ ತುಂಬಾ ಪಂಜರಗಳು.
ಪಂಜರಗಳಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳು.
‘ಹೌದು, ಪ್ರೀತಿಯೆಂದರೆ ಪಂಜರ ಎಂದು ಗೊತ್ತಿದ್ದರೆ ನಾನಿವನನ್ನು ಪ್ರೀತಿಸುತ್ತಿರಲಿಲ್ಲ’ ಆತನ ಪತ್ನಿ ಹಕ್ಕಿಗಳ ಜೊತೆಗೆ ಪಿಸುಗುಡುತ್ತಿದ್ದಳು.