Saturday, August 25, 2012

ಕಾರ್ನಾಡ್ ಅವರ ಇನ್ನೊಂದು ಮುಖ

 ಇದು ಹಲವು ವರ್ಷಗಳ ಹಿಂದಿನ ಘಟನೆ. ನಾನು ಆಗ ಕೊಡಗಿನಲ್ಲಿ ‘ಜನವಾಹಿನಿ’ಯ ಮುಖ್ಯ ವರದಿಗಾರನಾಗಿದ್ದೆ. ನನ್ನ ಕಚೇರಿಯ ಮೇಲೊಂದು ಹೊಟೇಲ್ ಇತ್ತು. ಆ ಹೊಟೇಲ್‌ನ ಸಪ್ಲೇಯರ್ ಒಬ್ಬ ನನಗೆ ಆತ್ಮೀಯ ಮಿತ್ರನಾಗಿದ್ದ. ಆಗಾಗ ಕಚೇರಿಗೆ ಬಂದು ಅದು ಇದು ಅಂತ ಮಾತನಾಡುತ್ತಾ ಇರುತ್ತಿದ್ದ. ಅದೇ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತು. ಎಲ್ಲ ಪತ್ರಿಕೆಗಳಲ್ಲೂ ಗಿರೀಶ್ ಕಾರ್ನಾಡ್‌ಗೆ ಪ್ರಶಸ್ತಿ ಸಿಕ್ಕಿರುವುದು ಮುಖ್ಯ ಸುದ್ದಿಯಾಗಿ ಪ್ರಕಟವಾದುದು. ಆಗ ಈ ಹೊಟೇಲ್‌ನ ನನ್ನ ಗೆಳೆಯ ನನ್ನಲ್ಲಿ ಕೇಳಿದ ‘‘ಕಾರ್ನಾಡ್ ಅಂದ್ರೆ ಯಾರು?’’

ನನಗೆ ತಕ್ಷಣ ಹೇಗೆ ವಿವರಿಸಬೇಕು ಎಂದು ಹೊಳೆಯಲಿಲ್ಲ. ಆದರೂ ಬುದ್ಧಿ ಪ್ರಯೋಗಿಸಿದೆ. ‘‘ಪ್ರಭುದೇವ್ ನಟಿಸಿರುವ ‘ಕಾದಲನ್’ ತಮಿಳು ಚಿತ್ರದ ಖಳನಾಯಕ ಪಾತ್ರವನ್ನು ವಹಿಸಿದ ನಟ ಇಲ್ಲವೆ, ಅವರೇ ಗಿರೀಶ್ ಕಾರ್ನಾಡ್’’. ಒಮ್ಮೆಲೆ ಅವನಿಗೆ ಅರ್ಥವಾಗಿ ಹೋಯಿತು. ‘‘ಓ...ಅವರಾ, ಅವರು ಒಳ್ಳೆಯ ಆ್ಯಕ್ಟರ್ ಮಾರಾಯ. ಜ್ಞಾನಪೀಠ ಎಂದರೆ ಒಳ್ಳೆಯ ಆ್ಯಕ್ಟರ್‌ಗೆ ಕೊಡುವ ಪ್ರಶಸ್ತಿಯಾ?’’ ಎಂದು ಅವನು ಮರು ಪ್ರಶ್ನಿಸಿದ. ಅವನ ಮುಗ್ಧ ಪ್ರಶ್ನೆಗೆ ಕಾರಣಗಳೂ ಇವೆ. ಗಿರೀಶ್ ಕಾರ್ನಾಡ್‌ಗೆ ಕನ್ನಡದ ‘ಮೇಲ್‌ಸ್ತರ’ ಓದುಗರಲ್ಲ, ಅಕಾಡೆಮಿಕ್ ಆಗಿರದ ಒಂದು ಅಭಿಮಾನಿ ವರ್ಗವಿದೆ. ಹಾಗೆಂದು ಹೇಳುವುದಕ್ಕಿಂತ, ತನ್ನೆಲ್ಲ ಅಕಾಡೆಮಿಕ್ ಕೆಲಸಗಳಾಚೆಗೆ, ಒಂದು ಜನಪ್ರಿಯ ಮುಖ ಗಿರೀಶ್ ಕಾರ್ನಾಡ್‌ಗಿದೆ. ನಮಗೆ ಚಿರಪರಿಚಿತವಾಗಿರುವ ಕಾರ್ನಾಡ್ ಬೇರೆ. ಅಲ್ಲಿ ನಮಗೆ ಜ್ಞಾನಪೀಠ ಮುಖ್ಯವಾಗುತ್ತೆ. ಅವರ ಅಂತಾರಾಷ್ಟ್ರೀಯ ಹಿನ್ನೆಲೆ, ಖ್ಯಾತಿ ಮುಖ್ಯವಾಗತ್ತೆ. ಅಲ್ಲಿ ನಾಟಕಗಳು ಪ್ರಧಾನ ಪಾತ್ರವನ್ನು ಪಡೆಯತ್ತೆ. ಅವರ ಚಿಂತನೆಗಳು ನಮ್ಮನ್ನು ಸೆಳೆಯತ್ತದೆ. ಇನ್ನೊಂದು ಜನಪ್ರಿಯ ಕಾರ್ನಾಡ್ ಬೇರೆಯೇ ಇದ್ದಾರೆ. ಅದು ಕಮರ್ಶಿಯಲ್ ಚಿತ್ರಗಳಲ್ಲಿ ಖಳನಟ, ಪೋಷಕನಟನಾಗಿ ಗುರುತಿಸಲ್ಪಡುವ ಕಾರ್ನಾಡ್. ಹಿಂದಿ, ತಮಿಳು, ಕನ್ನಡ ಭಾಷೆಗಳ ಹಲವು ಕಮರ್ಷಿಯಲ್ ಚಿತ್ರಗಳಲ್ಲಿ ಕಾರ್ನಾಡ್ ತಮ್ಮದೇ ಆದ ಜನಪ್ರಿಯ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಆ ಮೂಲಕ ತಮ್ಮದೇ ಆದ ಬೇರೆಯೇ ಒಂದು ಅಭಿಮಾನಿವರ್ಗವನ್ನು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ನಾನು ನೋಡಿದ ‘ಏಕ್ ಥಾ ಟೈಗರ್’ನಲ್ಲಿ ಇದೇ ಗಿರೀಶ್ ಕಾರ್ನಾಡ್ ‘ರಾ’ ಮುಖ್ಯಸ್ಥನ ಪಾತ್ರದಲ್ಲಿ ಗಮನಾರ್ಹವಾಗಿ ನಟಿಸಿ, ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ಅವರು ಸಲ್ಮಾನ್ ಖಾನ್ ಅವರ ಚೀಫ್ ಆಗಿ ನಟಿಸಿದ್ದಾರೆ. ಕೆಲವೇ ದಶ್ಯಗಳಲ್ಲಿ ಕಾಣಿಸಿಕೊಳ್ಳುವ ಈ ಪಾತ್ರ ಸಣ್ಣದಾದರೂ, ಭಿನ್ನ ಮತ್ತು ಭಾವುಕತೆಯನ್ನು ಮೈಗೂಡಿಸಿಕೊಂಡ ಪಾತ್ರ. ಕಾರ್ನಾಡ್ ಆ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ‘ಏಕ್ ಥಾ ಟೈಗರ್’ನಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರೀನಾ ಬಳಿಗ ನಮಗೆ ಇಷ್ಟವಾಗುವುದು ಕಾರ್ನಾಡ್ ಅವರ ಪಾತ್ರ. ಇಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರೀನಾ ಬಿಟ್ಟರೆ ಯಾವ ಪಾತ್ರಗಳೂ ಪುಷ್ಟಿಯಾಗಿಲ್ಲದೆ ಇರುವ ಕಾರಣ, ಕಾರ್ನಾಡ್ ತನಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಇನ್ನಷ್ಟು ಅವಕಾಶಗಳನ್ನು ಪಡೆಯುವ ಸಾಧ್ಯತೆಯನ್ನು ಈ ಚಿತ್ರದಲ್ಲಿ ಕಾಣಿಸಿದ್ದಾರೆ.


ಏಕ್‌ಥಾ ಟೈಗರ್ ಚಿತ್ರದ ಅತಿ ದೊಡ್ಡ ಕೊರತೆಯೆಂದರೆ ಕತೆ. ಮುಖ್ಯವಾಗಿ ಚಿತ್ರಕತೆ. ಕತೆಗೆ ಇಲ್ಲಿ ಯಾವ ವಿಶೇಷ ಮಹತ್ವವೂ ಇಲ್ಲ. ಚಿತ್ರದಲ್ಲಿ ಸಲ್ಮಾನ್ ಖಾನ್ ರಾ ಏಜೆಂಟ್ ಆಗಿದ್ದರೂ, ಆತನ ಗೂಢಚರ ಕೆಲಸ ಚಿತ್ರದಲ್ಲಿ ಬರೆ ನೆಪವಾಗಿ ಮಾತ್ರ ಬರುತ್ತದೆ. ಅದಕ್ಕೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬ ಅಣು ವಿಜ್ಞಾನಿ ಪ್ರೊಫೆಸರ್‌ನ ಮೇಲೆ ಕಣ್ಣಿಡುವುದಕ್ಕಾಗಿ ಸಲ್ಮಾನ್‌ನನ್ನು ವಿದೇಶಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅವನಿಗೆ ಐಎಸ್‌ಐ ಏಜೆಂಟ್ ರೆಯ ಮುಖಾಮುಖಿಯಾಗುತ್ತಾಳೆ. ಇದಾದ ಮೇಲೆ ಅವರ ನಡುವೆ ಪ್ರೇಮ ಹುಟ್ಟುತ್ತದೆ. ಅಲ್ಲಿಗೆ ಪ್ರೊಫೆಸರ್‌ನ ಕತೆ ಮುಗಿದೇ ಹೋಗಿ ಬಿಡುತ್ತದೆ. ಟೈಗರ್ ಮತ್ತು ರೆಯಾರನ್ನು ಪರಸ್ಪರ ಭೇಟಿ ಮಾಡಿಸುವುದಕ್ಕಾಗಿಯೇ ಈ ಪ್ರೊಪೆಸರ್ ಸನ್ನಿವೇಶವನ್ನು ಹೆಣೆಯಲಾಗಿದೆ ಎನ್ನುವುದು ಗೊತ್ತಾಗಿ ಬಿಡುತ್ತದೆ. ಚಿತ್ರ ವೇಗವಾಗಿ ಓಡುವುದು ಇಂಟರ್‌ವೆಲ್ ನಂತರ. ರೆಯ ಮತ್ತು ಟೈಗರ್ ಪ್ರೀತಿಯನ್ನು ಪಾಕಿಸ್ತಾನದ ಐಎಸ್‌ಐ ಮತ್ತು ಭಾರತ ರಾ ಜಂಟಿಯಾಗಿ ಬೆಂಬತ್ತುವುದು ಮತ್ತು ಅವರಿಂದ ಈ ಪ್ರೇಮಿಗಳು ಪಾರಾಗುವ ಆ್ಯಕ್ಷನ್ ಸನ್ನಿವೇಶಗಳು ಚಿತ್ರಕ್ಕೆ ಒಂದಿಷ್ಟು ಕಾವು ನೀಡುತ್ತದೆ.

ಚಿತ್ರ ತನ್ನ ಕ್ಲೆೃಮಾಕ್ಸ್‌ನಲ್ಲಿ ಉಳಿಸುವ ಸಂದೇಶ ಮಾತ್ರ ಇಷ್ಟವಾಗುತ್ತದೆ. ಮನಸ್ಸಿಗೆ ಮುಟ್ಟುತ್ತದೆ. ‘‘ಎರಡೂ ದೇಶಗಳ ವೈರ ಕಟ್ಟಿಕೊಂಡು ಎಲ್ಲಿಯವರೆಗೆ ತಪ್ಪಿಸಿಕೊಳ್ಳುತ್ತೀಯ ಟೈಗರ್?’’ ಎಂದು ಮೊಬೈಲ್‌ನಲ್ಲಿ ಚೀಫ್ ಪ್ರಶ್ನಿಸುತ್ತಾರೆ.
ಆಗ ಟೈಗರ್ ಒಂದು ಅರ್ಥಪೂರ್ಣ ಡೈಲಾಗ್ ಹೊಡೆಯುತ್ತಾನೆ. ‘‘ಯಾವಾಗ ಪಾಕಿಸ್ತಾನ ಮತ್ತು ಭಾರತಕ್ಕೆ ಐಎಸ್‌ಐ ಮತ್ತು ರಾ ಸಂಸ್ಥೆಗಳ ಅಗತ್ಯಬೀಳುವುದಿಲ್ಲವೋ, ಆಗ ನಾವಿಬ್ಬರು ಮರಳಿ ನಮ್ಮ ದೇಶಕ್ಕೆ ಬರುತ್ತೇವೆ’’
‘‘ಗುಡ್‌ಲಕ್’’ ಎಂದು ಚೀಫ್ ತನ್ನ ಫೋನ್ ಕಟ್ ಮಾಡುತ್ತಾನೆ. ಏನೇ ಇರಲಿ, ಸಲ್ಮಾನ್, ಕತ್ರೀನಾ ಬಳಿಕ ಏಕ್‌ಥಾ ಟೈಗರ್ ಚಿತ್ರದಲ್ಲಿ ಗುರುತಿಸಲ್ಪಡುವ ಪಾತ್ರ ಕಾರ್ನಾಡ್ ಅವರದು ಎನ್ನುವದರಲ್ಲಿ ಸಂಶಯವಿಲ್ಲ. ಸಲ್ಮಾನ್ ಒಳಗೆ ಒಂದು ಆರ್ದ್ರತೆಯನ್ನು ಬಿತ್ತುವುದು ಕಾರ್ನಾಡ್ ನಿರ್ವಹಿಸಿದ ಚೀಫ್ ಪಾತ್ರ. ಹಾಗೆಯೇ ಕರ್ತವ್ಯದ ಕಾರಣಕ್ಕಾಗಿ, ಅದೇ ಸಲ್ಮಾನ್‌ನನ್ನು ಬೇಟೆಯಾಡುವ ಸನ್ನಿವೇಶವನ್ನು ನಿರ್ವಹಿಸುವಲ್ಲೂ ಕಾರ್ನಾಡ್ ಯಶಸ್ವಿಯಾಗುತ್ತಾರೆ. ಪ್ರಕಾಶ್ ರೈ ಜೊತೆ ಜೊತೆಗೇ ಕಾರ್ನಾಡ್ ಕೂಡ ಹಿಂದಿ ಚಿತ್ರರಂಗದಲ್ಲಿ ತನ್ನ ಬೇರನ್ನು ಗಟ್ಟಿಗೊಳಿಸಲಿ ಎನ್ನುವುದು ಎಲ್ಲ ಕನ್ನಡಿಗರ ಹಾರೈಕೆ.

Thursday, August 23, 2012

ಆತ್ಮಕತೆ ಎಂದರೆ...

 ಆತ್ಮಕತೆ ಎಂದರೆ
ಸ್ವಯಂ ಇರಿದುಕೊಳ್ಳುವುದು...
ಮುಖವನ್ನು ಚರ್ಮದಂತೆ
ಅಂಟಿಕೊಂಡ ಹೆಸರನ್ನು
ಹರಿದುಕೊಳ್ಳುವುದು!

ಇನ್ನೂ ದೇಹದ ದಾಹವೇ
ಮುಗಿಯದೇ ಇರುವಾಗ
ಈ ಹಿತವಾದ ಸುಳ್ಳು ಜಗತ್ತನ್ನು
ಬಲಿಕೊಟ್ಟು
ನನ್ನ ಆತ್ಮದ ದಾಹವನ್ನು ಹೇಗೆ ತಣಿಸಲಿ?

ನಾನು ಬರೆಯಬೇಕಾಗಿರುವುದು
ಮೊದಲ ಒಂದು ಸಾಲು...
ನನಗೆ ಗೊತ್ತು, ಅದನ್ನು ಬರೆದು ಬಿಟ್ಟರೆ
ಉಳಿದೆಲ್ಲವನ್ನೂ ನೀವೆ ಬರೆದು
ನಿಮಿಷಾರ್ಧದಲ್ಲಿ ಮುಗಿಸಿ ಬಿಡುತ್ತೀರಿ...

ಬರೆಯಬೇಕಾಗಿರುವ ಮೊದಲ 

ಒಂದೇ ಒಂದು ಸಾಲು ನಾನು
ಬರೆಯುವುದಕ್ಕೆ ಸಮರ್ಥನಾದರೆ
ಉಳಿದುದೆಲ್ಲ ನಿಮಿಷಾರ್ಧದಲ್ಲಿ
ಮುಗಿದು ಹೋಗುತ್ತದೆ....

ಆದರೆ ನಿಮಗೇನು ಗೊತ್ತು?
ಆ ಒಂದು ಸಾಲನ್ನು ಅಲ್ಲಾಡಿಸಿದರೆ
ನಾನೀವರೆಗೆ ಕಟ್ಟಿ ನಿಲ್ಲಿಸಿರುವ
ಈ ಬದುಕೆಂಬ ಸುಳ್ಳು ಕಟ್ಟಡ
ದಢಾರನೆ ಉರುಳಿ ಬೀಳುವುದು?
ಅದರ ಧೂಳಿನೊಳಗೆ
ನನ್ನ ಜೊತೆ ಜೊತೆಗೇ
ನೀವು ಧಫನವಾಗುವ ಭಯ ನನಗೆ

ನನ್ನ ಜೊತೆ ಸರ್ವನಾಶವಾಗುವುದಕ್ಕೆ
ಸಿದ್ಧರಿದ್ದರೆ ಹೇಳಿ ಬಿಡಿ
ನನ್ನ ಆತ್ಮಕತೆಯ ಮೊದಲ ಸಾಲನ್ನು
ನಿಮ್ಮೆದೆಯ ಮೇಲೆ ನಾನು
ಚೂರಿಯಿಂದ ಕೆತ್ತಿಯೇ ಬಿಡುವೆ!


ಚಿತ್ರ ಕೃಪೆ: www.myclassiclyrics.com