Tuesday, January 24, 2012

ಮುಗೇರಡ್ಕ ಜಾತ್ರೆಯಲ್ಲಿ ಗದ್ದಲ!

ಉಪ್ಪಿನಂಗಡಿಗೆ 6 ಕಿ. ಮೀ ದೂರದಲ್ಲಿರುವ, ರಾಷ್ಟ್ರೀಯ ಹೆದ್ದಾರಿಗೆ ಒತ್ತಿಕೊಂಡಿರುವ ಊರು ನನ್ನದು. ಈ ರಾಷ್ಟ್ರೀಯ ಹೆದ್ದಾರಿಯನ್ನು ಸವರಿಕೊಂಡೇ ನೇತ್ರಾವತಿ ನದಿ ಹರಿಯುತ್ತದೆ. ಈ ನದಿಯಾಚೆಗೆ ಮುಗೇರಡ್ಕ ಎನ್ನುವ ಪುಟ್ಟ ಊರಿದೆ. ಇದು ಸ್ಥಳೀಯ ಬೆಳ್ತಂಗಡಿ ತಾಲೂಕಿಗೆ ಸೇರಿದ್ದರೂ, ಅದನ್ನು ತಲುಪಲು ನಾವು ನದಿಯೊಂದನ್ನು ದಾಟಿದರೆ ಸಾಕು. ಈ ನದಿ ತುಂಬಿ ಹರಿವಾಗ, ಮುಗೇರಡ್ಕ ಮತ್ತು ನನ್ನೂರನ್ನು ಬೆಸೆಯಲು ಒಂದು ದೋಣಿ ಇರುತ್ತಿತ್ತು. ಆ ದೋಣಿಯನ್ನು ಸ್ಥಳೀಯ ಕಾಸಿಂ ಬ್ಯಾರಿ ಎಂಬವರು ನಡೆಸುತ್ತಿದ್ದರು.

ವರ್ಷಕ್ಕೊಮ್ಮೆ ಬರುವ ಮುಗೇರಡ್ಕ ಜಾತ್ರೆಗಾಗಿ ನದಿಯ ಈಚೆಗಿರುವ ನಾವೆಲ್ಲ ಕಾದು ಕುಳಿತಿರುತ್ತಿದ್ದೆವು. ಮುಗೇರಡ್ಕ ಜಾತ್ರೆಯ ವಿಶೇಷವೆಂದರೆ, ಅಲ್ಲಿ ನಡೆಯುವ ಮೂರು ದಿನಗಳ ಕೋಳಿ ಅಂಕ. ಆಸು ಪಾಸಿನ ಹುಂಜಗಳೆಲ್ಲ ಮುಗೇರಡ್ಕದಲ್ಲಿ ಬಂದು ನೆರೆಯುತ್ತಿದ್ದವು. ಆ ಹುಂಜಗಳ ಗರ್ವವೋ, ಬಿಂಕವೋ, ಗಾಂಭೀರ್ಯವೋ, ಒಯ್ಯಿರವೋ...ಸುತ್ತ ಮುತ್ತಲೆಲ್ಲ ಆ ಹುಂಜಗಳ ಝೇಂಕಾರವೇ. ಕಾಲಿಗೆ ಕತ್ತಿಕಟ್ಟಿಕೊಂಡ ಈ ವೀರರ ಮಾಡು ಮಡಿ ಹೋರಾಟ, ನಮ್ಮಲ್ಲೆಲ್ಲ ವಿಚಿತ್ರ ಉನ್ಮಾನದವನ್ನೂ, ಆವೇಶವನ್ನು ಹುಟ್ಟಿಸಿ ಹಾಕುತ್ತಿತ್ತು. ಕೆಲವು ಗೆಳೆಯರಂತೂ ಕಾದಾಟಕ್ಕಿಳಿಯುವ ಹುಂಜಗಳ ಮೇಲೆ ಪಂದ್ಯ ಕಟ್ಟುವುದೂ ಇತ್ತು. ನಾನಂತೂ ಮುಗೇರಡ್ಕ ಜಾತ್ರೆಯನ್ನು ಎರಡು ಕಾರಣಕ್ಕೆ ತುಂಬಾ ಇಷ್ಟ ಪಡುತ್ತಿದ್ದೆ. ಒಂದು, ಆವರೆಗೆ ಮೂಲೆ ಸೇರಿರುತ್ತಿದ್ದ ದೋಣಿ ಕಾಸೀಂ ಬ್ಯಾರಿಯ ದೋಣಿ ಜೀವ ಪಡೆದುಕೊಳ್ಳುತ್ತಿತ್ತು. ಆ ದೋಣಿಯಲ್ಲಿ ನದಿಯ ಅತ್ತಿಂದಿತ್ತ ಓಡಾಡುವುದು ನನಗೆ ತುಂಬಾ ಇಷ್ಟವಾಗಿತ್ತು. ಹಾಗೆಯೇ, ಜಾತ್ರೆಯಲ್ಲಿ ಕಲ್ಲಂಗಡಿ ಮತ್ತು ಖಾರದ ಚರುಮುರಿ ತಿನ್ನುವುದು. ಜೊತೆಗೆ ಸುಮ್ಮಗೆ ಅಂಗಡಿ, ಅಂಗಡಿ ಸುತ್ತುವುದು. ಆ ಗದ್ದಲ, ಆ ಧೂಳು, ಜನರೇಟರ್ ಸದ್ದು, ಗ್ಯಾಸ್‌ಲೈಟ್ ಪರಿಮಳ, ‘ಬಚ್ಚಂಗಾಯಿ...ಬಚ್ಚಂಗಾಯಿ’ ‘ಬಲೆ ಬಲೆ ಬಲೆ’ ಹೀಗೆ ಎಲ್ಲ ಕರೆಗಳು ಸಮ್ಮಿಶ್ರವಾಗಿ ವಿಚಿತ್ರವಾದ ಶಂಖನಾದದ ರೂಪ ತಾಳಿ ನನ್ನ ಎದೆಯಾಳಕ್ಕೆ ಇಳಿಯುತ್ತಿತ್ತು. ಇಂದಿಗೂ ಆ ಝೇಂಕಾರ ನನ್ನಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಇದೆ ಎಂದು ಅನ್ನಿಸುತ್ತದೆ.

ಮುಗೇರಡ್ಕ ಜಾತ್ರೆ ಆರಂಭವಾಗುತ್ತಿದ್ದ ಹಾಗೆಯೇ ನಮ್ಮೂರಿನ ಹಲವು ಬ್ಯಾರಿ ಮುಸ್ಲಿಮರು ವ್ಯಾಪಾರಕ್ಕೆ ಸಿದ್ಧರಾಗುತ್ತಿದ್ದರು. ಮುಖ್ಯವಾಗಿ ಹೊಟೇಲುಗಳನ್ನು ಇಡುತ್ತಿದ್ದರು. ಉಳಿದಂತೆ, ಗಲ್ಲಂಗಡಿ, ಆಮ್ಲೆಟ್ ಅಂಗಡಿ, ಬಲೂನು ವ್ಯಾಪಾರ...ಹೀಗೆ ಸುಮಾರು ಐದು ದಿನಗಳ ಕಾಲದ ರಾತ್ರಿಯ ವ್ಯಾಪಾರಕ್ಕಾಗಿ ವರ್ಷವಿಡೀ ನಿರೀಕ್ಷೆಯಲ್ಲಿರುವವರಿದ್ದಾರೆ. ಬೆಂಚು, ಟೇಬಲ್, ಹಂಡೆ, ಬಾಣಲೆಗಳು ದೋಣಿಯಲ್ಲಿ ಸಾಗಲ್ಪಡುತ್ತಿದ್ದವು. ತಟ್ಟಿ, ಮಡಲುಗಳ ಮೂಲಕ ತಾತ್ಕಾಲಿಕ ಹೊಟೇಲುಗಳನ್ನು ನಿರ್ಮಾಣ ಮಾಡುತ್ತಿದ್ದರು. ಬ್ಯಾರಿಗಳ ಚಿಕನ್ ಸುಕ್ಕ, ಬಂಗಡೆ ಫ್ರೈಗೆ ಜಾತ್ರೆಯಲ್ಲಿ ವಿಶೇಷ ಬೇಡಿಕೆ ಇತ್ತು. ಬ್ಯಾರಿಗಳು ಈ ಜಾತ್ರೆಯಲ್ಲಿ ಕೈತುಂಬಾ ಸಂಪಾದಿಸುತ್ತಿದ್ದರು. ಜಾತ್ರೆ ಆರಂಭವಾಗುತ್ತಿದ್ದ ಹಾಗೆಯೇ ಕೆಲವು ಹುಡುಗರೂ ವ್ಯಾಪಾರಕ್ಕಿಳಿಯುತ್ತಿದ್ದರು. ಬೀಡಿ ಸಿಗರೇಟುಗಳಿಂದ ಹಿಡಿದು, ಪಾಯಸ, ಟೀ, ಇತ್ಯಾದಿ ಇತ್ಯಾದಿ ಗೂಡಂಗಡಿಗಳನ್ನಿಟ್ಟು ತಮ್ಮ ಪಾಕೆಟ್ ಮನಿಗೆ ಬೇಕಾದಷ್ಟು ಸಂಗ್ರಹಿಸುತ್ತಿದ್ದರು. ಮುಗೇರಡ್ಕ ಜಾತ್ರೆಯೆನ್ನುವುದು ದೈವಗಳ ನೇಮ ಉತ್ಸವವಾಗಿದ್ದರೂ, ಕೋಳಿ ಕಟ್ಟ ಹಾಗೂ ಸಂತೆಯ ಮೂಲಕ ಎಲ್ಲ ಜಾತಿ, ವರ್ಗಗಳನ್ನು ಒಂದು ಮಾಡುತ್ತಾ ಬರುತ್ತಿತ್ತು.

ವಿಷಾದನೀಯ ಸಂಗತಿಯೆಂದರೆ, ಇಂದು ಎಲ್ಲ ಪತ್ರಿಕೆಗಳಲ್ಲಿ ಮುಗೇರಡ್ಕ ಜಾತ್ರೆಯ ಗದ್ದಲ ವರದಿಯಾಗಿದೆ. ಮುಗೇರಡ್ಕದಲ್ಲಿ ಸಂಘಪರಿವಾರದ ಜಿರಳೆಗಳು ತಮ್ಮ ಮೀಸೆಯನ್ನು ಒಳಗೆ ನುಗ್ಗಿಸಿವೆ ಮಾತ್ರವಲ್ಲ, ಈವರೆಗೆ ಸೌಹಾರ್ದದಿಂದ ನಡೆದುಕೊಂಡು ಬರುತ್ತಿದ್ದ ಜಾತ್ರೆಯ ಸೊಬಗಿಗೆೆ ಈ ದುಷ್ಕರ್ಮಿಗಳು ಕಳಂಕವನ್ನು ಎಸಗಿದ್ದಾರೆ. ಜಾತ್ರೆ ನೋಡಲು ಬಂದ ಇಬ್ಬರು ಮುಸ್ಲಿಮ್ ಹುಡುಗರನ್ನು ಚಿನ್ನ ಕದ್ದಿದ್ದಾರೆ ಎಂದು ಆರೋಪಿಸಿ ಅವರಿಗೆ ಥಳಿಸಿದ್ದೇ ಅಲ್ಲದೆ, ಮಧ್ಯ ಪ್ರವೇಶಿಸಿದ ಪೊಲೀಸರಿಗೂ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಇದೇ ಸಂದರ್ಭವನ್ನು ಬಳಸಿ ಬ್ಯಾರಿಗಳ ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಬಚ್ಚಂಗಾಯಿಗಳು ಸೇರಿದಂತೆ ಅಂಗಡಿ ಸಾಮಾನುಗಳನ್ನು ದೋಚಿದ್ದಾರೆ. ನಾಶ, ನಷ್ಟಗಳನ್ನು ಕಂಡು ಬ್ಯಾರಿಗಳು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ.

ಬ್ಯಾರಿ ಮುಸಲ್ಮಾನರು ಮುಗೇರಡ್ಕ ಜಾತ್ರೆಯಲ್ಲಿ ಅಂಗಡಿ ಇಡುವುದರ ಕುರಿತಂತೆ ಸುಮಾರು ಆರು ವರ್ಷಗಳಿಂದ ಇಲ್ಲಿನ ಕೆಲವು ಸಂಘಪರಿವಾರದ ನಾಯಕರು ತಕರಾರು ಎತ್ತುತ್ತಲೇ ಬಂದಿದ್ದಾರೆ. ಆದರೆ ಮುಗೇರಡ್ಕ ದೈವಸ್ಥಾನದ ಆಡಳಿತ ಮಂಡಳಿ ಮಾತ್ರ ಈ ಸಂಘಪರಿವಾರವನ್ನು ನಿರ್ಲಕ್ಷಿಸುತ್ತಾ ಬಂದಿದೆ. ‘‘ತಲೆ ತಲಾಂತರಗಳಿಂದ ಬ್ಯಾರಿಗಳು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಅದಕ್ಕೆ ಅಡ್ಡಿ ಪಡಿಸುವುದು ಸಾಧ್ಯವೇ ಇಲ್ಲ’’ ಎಂದು ದೈವಸ್ಥಾನದ ಆಡಳಿತ ಮಂಡಳಿ ಖಡಾ ಖಂಡಿತವಾಗಿ ನುಡಿದೆ. ಆದುದರಿಂದ ಇಲ್ಲಿನ ಪುಡಿ ಸಂಘಪರಿವಾರದ ಕಾರ್ಯಕರ್ತರು ಸಂದರ್ಭಕ್ಕಾಗಿ ಕಾಯುತ್ತ ಇದ್ದರು. ಆಗಾಗ ಸಣ್ಣ ಪುಟ್ಟ ಕಿಡಿ ಹೊತ್ತಿಸಲು ಪ್ರಯತ್ನಿಸಿದರೂ, ದೈವಸ್ಥಾನದ ಮುಖಂಡರಿಂದಾಗಿ ಅದು ಅಲ್ಲಿಗೇ ನಂದಿ ಹೋಗಿತ್ತು.
ಎರಡು ದಿನಗಳ ಹಿಂದೆ ಉಪ್ಪಿನಂಗಡಿಯಲ್ಲಿ ಸಂಘಪರಿವಾರದ ಮುಖಂಡ ಪ್ರಭಾಕರ ಭಟ್ ಹಚ್ಚಿ ಹೋದ ಬೆಂಕಿಯನ್ನು, ಮುಗೇರಡ್ಕ ಜಾತ್ರೆಯೊಳಗೆ ಹಬ್ಬಿಸುವಲ್ಲಿ ಕಿಡಿಗೇಡಿಗಳು ಯಶಸ್ವಿಯಾಗಿದ್ದಾರೆ. ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಬೀಡು. ಸ್ಥಳೀಯ ಪುತ್ತೂರಿನಲ್ಲಿ ಕೋಮುಗಲಭೆ ಹೊತ್ತಿ ಉರಿದರೂ, ಅದು ಉಪ್ಪಿನಂಗಡಿಯನ್ನು ಯಾವತ್ತೂ ಸುಟ್ಟಿರಲಿಲ್ಲ. ಉಪ್ಪಿನಂಗಡಿ ಎಂಬ ಊರಿನ ಸಾಂಸ್ಕೃತಿಕ ಬದುಕೂ ಅದಕ್ಕೆ ಕಾರಣವಾಗಿರಬಹುದು. ಇದು ಸ್ಥಳೀಯ ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ನುಂಗಲಾರದ ತುತ್ತಾಗಿತ್ತು. ಕೆಲವು ತಿಂಗಳ ಹಿಂದೆ ಈ ಕಲ್ಲಡ್ಕ ಪ್ರಭಾಕರ ಭಟ್ಟರ ನೇತೃತ್ವದ ಶಾಲೆಯೊಂದು ಉಪ್ಪಿನಂಗಡಿಯಲ್ಲೂ ಸ್ಥಾಪನೆಯಾಯಿತು. ಅಂದ ಮೇಲೆ ಭಟ್ಟರು ಬಾರಿ ಬಾರಿ ಉಪ್ಪಿನಂಗಡಿಗೆ ಬರುವುದೂ ಅನಿವಾರ್ಯ. ಶಾಲೆ ಉದ್ಧಾರವಾಗಬೇಕಾದರೆ ಉಪ್ಪಿನಂಗಡಿಯ ಸೌಹಾರ್ದಕ್ಕೆ ಹುಳಿ ಹಿಂಡಲೇ ಬೇಕು. ಈ ಊರನ್ನು ಕಾಪಾಡಿಕೊಂಡು ಬಂದಿರುವ ಸಾಂಸ್ಕೃತಿಕ , ಸೌಹಾರ್ದ ಪರಂಪರೆಯನ್ನು ನಾಶ ಮಾಡಬೇಕು. ಅದರ ಮೊದಲ ಪ್ರಯತ್ನ ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ಪ್ರಭಾಕರ ಭಟ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದೀಗ ಉಪ್ಪಿನಂಗಡಿಯ ಮೂಲಕವಾಗಿ ಕೋಮುವಿಷ ಮುಗೇರಡ್ಕ ಜಾತ್ರೆಗೂ ತಲುಪಿತು. ನಾಲ್ವರು ವಿದ್ಯಾರ್ಥಿಗಳು ಅದರಲ್ಲಿ ಮೂವರು ಮುಸ್ಲಿಮರು ಮುಗೇರಡ್ಕ ಜಾತ್ರೆಗೆ ಹೋಗಿದ್ದಾರೆ. ಸಂದರ್ಭವನ್ನು ಬಳಸಿಕೊಂಡು ಕೆಲ ದುಷ್ಕರ್ಮಿಗಳು ಇಬ್ಬರು ಮುಸ್ಲಿಮ್ ಹುಡುಗರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ ಮಾತ್ರವಲ್ಲ, ಅವರ ತಲೆಗೆ ಸರ ಕಳ್ಳತನದ ಆರೋಪ ಹೊರಿಸಿದ್ದಾರೆ. ಈ ಹುಡುಗರ ಜೊತೆಗಿದ್ದ ಮತ್ತೊಬ್ಬ ಮುಸ್ಲಿಮೇತರ ಹುಡುಗ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಹುಡುಗರನ್ನು ಒಪ್ಪಿಸಲು ಹೇಳಿದರೂ ಅದಕ್ಕೆ ಸಂಘಪರಿವಾರ ತಕರಾರು ತೆಗೆದಿದ್ದಾರೆ. ಪೊಲೀಸರು ಬಲವಂತವಾಗಿ ಹುಡುಗರನ್ನು ವಶಕ್ಕೆ ತೆಗೆದುಕೊಂಡಾಗ ಸಂಘಪರಿವಾರ ಪೂರ್ವ ನಿರ್ಧಾರದಂತೆ ದಾಂಧಲೆಗೆ ತೊಡಗಿದೆ ಪೊಲೀಸ್ ಜೀವುಗಳ ಮೇಲೆ ಕಲ್ಲುತೂರಾಟ ನಡೆಸಿವೆ.. ಬ್ಯಾರಿ ಮುಸಲ್ಮಾರ ಅಂಗಡಿಯನ್ನೇ ಗುರಿಯಾಗಿಟ್ಟು ದಾಂಧಲೆ ನಡೆದಿದೆ.

 ಜಾತಿ, ಧರ್ಮ, ವರ್ಗ ಎಲ್ಲವನ್ನೂ ಮೀರಿದ ಒಂದು ಪರಂಪರೆಯನ್ನು ಕಟ್ಟಿ ಬೆಳೆಸಿದ ಮುಗೇರಡ್ಕ ಜಾತ್ರೆಯಲ್ಲಿ ನಡೆದ ಗದ್ದಲ ವಿಷಾದನೀಯವಾದುದು. ಮುಂದಿನ ದಿನಗಳಲ್ಲಿ ಈ ಜಾತ್ರೆಗೆ ಬ್ಯಾರಿ ಮುಸ್ಲಿಂರಾಗಲಿ, ವ್ಯಾಪಾರಿಗಳಾಗಲಿ ಹೋಗುವುದು ತೀರಾ ಕಷ್ಟ. ಎಲ್ಲ ಜಾತಿ ವರ್ಗಗಳಿಲ್ಲದ ಮುಗೇರಡ್ಕ ಜಾತ್ರೆ ಮತ್ತೆ ಹಿಂದಿನ ವೈಭವನ್ನು ಪಡೆದುಕೊಳ್ಳುವುದು ಅಸಾಧ್ಯ.

Monday, January 23, 2012

ಚಿತ್ತಾಲರ ಜೊತೆ ಸಂಜೆ....

ಯಾವುದೋ ಪತ್ತೇದಾರಿ ಕಾದಂಬರಿ ಇರಬೇಕು ಎಂದು ಅಣ್ಣನ ಕಪಾಟಿನಿಂದ ಎಗರಿಸಿ ಆ ಪುಸ್ತಕವನ್ನು ಕದ್ದು ಮುಚ್ಚಿ ಓದತೊಡಗಿದೆ. ಯಶವಂತ ಚಿತ್ತಾಲರು ಬರೆದ ‘ಶಿಕಾರಿ’ ಕಾದಂಬರಿಯದು. ಪುಟ ತೆರೆದ ಕೂಡಲೇ ‘‘ಕಳೆದು ಹೋಗಿರುವ ನನ್ನ ತಂಗಿಯ ಹುಡುಕಾಟವೇ ಮುಂದಿನ ಗುರಿ-ನಾಗಪ್ಪ’’ ಎಂಬ ಸಾಲು ನನ್ನನ್ನು ತಪ್ಪು ದಾರಿಗೆಳೆಯಿತು. ಅಣ್ಣನಿಗೆ ಕದ್ದು ಮುಚ್ಚಿ ಪುಟಪುಟಗಳನ್ನು ಓದುತ್ತಿದ್ದರೂ ಒಂದು ಸಾಲೂ ತಲೆಗೆ ಹೋಗುತ್ತಿಲ್ಲ. ಅಲ್ಲಲ್ಲಿ ಏನೋ ಇದೆ ಅಂತನ್ನಿಸಿದರೂ ಅದೇನು ಎನ್ನುವುದು ಗೊತ್ತಾಗುತ್ತಿರಲಿಲ್ಲ. ಹಾಗೂ ಹೀಗೂ ಪುಸ್ತಕವನ್ನು ಓದಿ ಮುಗಿಸಿದೆನಾದರೂ ‘ಅದೆಂಥದು’ ಎನ್ನುವುದು ನನಗೆ ಗೊತ್ತಾಗಿರಲಿಲ್ಲ
 ಹೀಗಿರುವಾಗ ಶಾಲೆಯ ಲೈಬ್ರರಿಯಲ್ಲಿ ಯಾವುದೋ ಪತ್ತೇದಾರಿ ಪುಸ್ತಕ ಹುಡುಕುವಾಗ ಇದೇ ಶಿಕಾರಿ ಕೈಗೆ ಸಿಕ್ಕಿತು. ನಾಲಗೆ ಸುಟ್ಟ ಬೆಕ್ಕಿನಂತೆ ಆ ಪುಸ್ತಕವನ್ನು ಕೈಗೆತ್ತಿ ಆತಂಕದಿಂದ ನೋಡುತ್ತಿರುವಾಗ, ನನ್ನ ಹಿಂದಿನಿಂದ ಕನ್ನಡ ಪಂಡಿತರಾದ ವಿ. ಆರ್. ಹೆಗ್ಡೆ ಬಂದಿದ್ದರು. ‘‘ಗುಡ್ ಓದು ಓದು...ಕೇಂದ್ರ ಸಾಹಿತ್ಯ ಅಕಾಡೆಮಿ ಸಿಕ್ಕಿದ ಪುಸ್ತಕ ಅದು. ತುಂಬಾ ಒಳ್ಳೆಯ ಕಾದಂಬರಿ’’ ಎಂದು ಬೆನ್ನು ತಟ್ಟಿದರು. ಬರೇ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡದ್ದಕ್ಕೇ ಮೇಷ್ಟ್ರು ನನ್ನ ಬೆನ್ನು ತಟ್ಟಿದ್ದರು. ಅಂತೂ ಮೇಷ್ಟ್ರ ಮುಂದೆ ಒಳ್ಳೆಯವನಾಗಲೂ ಮತ್ತೊಮ್ಮೆ ಆ ಪುಸ್ತಕವನ್ನು ಮನೆಗೆ ಕೊಂಡೊಯ್ದೆ. ಎರಡು ದಿನ ಇಟ್ಟು ಹಾಗೇ ಮರಳಿಸಿದೆ.
ಇದಾಗಿ ಮೂರು ಅಥವಾ ನಾಲ್ಕು ವರ್ಷಗಳ ಬಳಿಕ ನಾನಾಗಿಯೇ ಈ ಪುಸ್ತಕವನ್ನು ಹುಡುಕಿಕೊಂಡು ಹೋದೆ. ಆಗ ನಾನು ದ್ವಿತೀಯ ಬಿ. ಎ. ಇರಬೇಕು. ಆಕಸ್ಮಿಕವಾಗಿ ನನಗೆ ಸಿಕ್ಕಿದ ಯಶವಂತ ಚಿತ್ತಾಲರ ‘ಕತೆಯಾದಳು ಹುಡುಗಿ’ ಕತೆ ಓದಿದ ಬಳಿಕ ಶಿಕಾರಿ ಮೆಲ್ಲಗೆ ನನ್ನಾಳದಲ್ಲಿ ಕದಲ ತೊಡಗಿತು. ಮನೆಗೆ ಕೊಂಡೊಯ್ದು ಓದ ತೊಡಗಿದೆ. ಈ ಕೃತಿಯನ್ನು ಬಿಡಿಸಿ ಓದತೊಡಗಿದಂತೆ, ನನ್ನದೇ ಆತ್ಮದ ಪುಟಗಳನ್ನು ಬಿಡಿಸುವಂತೆ ಕಂಪಿಸುತ್ತಾ ಓದುತ್ತಿದ್ದೆ. ಇದಾದ ಬಳಿಕ ಅವರ ಪುಟ್ಟ ಕಾದಂಬರಿ ಛೇದ ನನ್ನ ಕೈಗೆ ಸಿಕ್ಕಿತು. ಅದೇನೋ ಗೊತ್ತಿಲ್ಲ, ಇಂದಿಗೂ ನನಗೆ ಚಿತ್ತಾಲರ ಕೃತಿಗಳಲ್ಲಿ ಅತ್ಯಂತ ಇಷ್ಟವಾದ ಕಾದಂಬರಿ ಛೇದ. ಸಂಬಂಧಗಳನ್ನು ಕೆಲವೊಮ್ಮೆ ನಾವು ಅನಗತ್ಯ, ಭಯೋ, ಸಂಶಯಗಳಿಂದ ಹೇಗೆ ಕೊಂದು ಹಾಕುತ್ತೇವೆ ಎನ್ನುವುದು ಛೇದ ಹೃದಯ ಛೇದಿಸುವಂತೆ ಮುಂದಿಡುತ್ತದೆ. ತಾನು ಭಯಪಡುವ, ದ್ವೇಷಿಸುವ, ಕಿಡಿಕಾರುವ ವ್ಯಕ್ತಿ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇಲ್ಲ ಎನ್ನುವುದು ವೃದ್ಧ ಪೊಚಖಾನವಾಲನಿಗೆ ತಿಳಿಯುವ ಹೊತ್ತಿನಲ್ಲಿ ಎಲ್ಲವೂ ಮುಗಿದಿರುತ್ತದೆ. ಎಂದೂ ಸರಿಪಡಿಸಲಾಗದ ಒಡೆದ ಮನಸ್ಸಷ್ಟೇ ಅಲ್ಲಿ ಉಳಿದಿರುತ್ತದೆ. ಛೇದ ನನ್ನನ್ನೂ ಇಂದಿಗೂ ಕಾಡುತ್ತಿರುವ ಕಾದಂಬರಿ.
 ದೂರದ ಮುಂಬೈಗೆ ಎಂ.ಎ ಮಾಡುವ ನೆಪದಲ್ಲಿ ಹೊರಟಾಗಲೂ ಆಳದಲ್ಲಿ ಚಿತ್ತಾಲರ ಪಾತ್ರಗಳು ನನಗೆ ಧೈರ್ಯ ತುಂಬಿದ್ದವು. ಅಲ್ಲಿ ನನಗಾಗಿಯೇ ಕೆಲವು ಮನುಷ್ಯರು ಕಾಯುತ್ತಿದ್ದಾರೆ ಎಂಬ ನಂಬಿಕೆಯನ್ನು ನನಗೆ ಕೊಟ್ಟದ್ದೇ ಚಿತ್ತಾಲರ ಪಾತ್ರಗಳು. ನಾನು ಬಸ್ಸು ಹತ್ತಿದ್ದೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ. ಮುಂದೊಂದು ದಿನ, ಆ ಗೆಳೆಯರ ಜೊತೆಗೆ ಚಿತ್ತಾಲರ ಮನೆಗೆ ಹೋದೆ. ಅವರ ಕಾದಂಬರಿಯಲ್ಲಿ ಬರುವ ಸೋಫಾದಲ್ಲಿ ಕುಳಿದೆ. ಬಾಲ್ಕನಿಯಲ್ಲಿ ನಿಂತು ಕಡಲನ್ನು ನೋಡಿದೆ. ನಾಗಪ್ಪನನ್ನು ಅವರ ಧ್ವನಿಯ ಮೂಲಕವೇ ಆಲಿಸಿದೆ. ಅವರ ಮನೆಯಿಂದ ನನ್ನ ಕೋಣೆ ಸೇರಿದ್ದೆ, ಆ ಅನುಭವವನ್ನು ಪುಟ್ಟ ಕವಿತೆಯನ್ನಾಗಿಸಿದೆ. ಮುಂಬಯಿ ಬಿಡುವ ಹೊತ್ತಿನಲ್ಲಿ ಚಿತ್ತಾಲರೇ ನನ್ನ ಮೊತ್ತ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು ಬಿಡುಗಡೆ’ ಮಾಡಿದರು. ಚಿತ್ತಾಲರ ಮುಂದೆಯೇ ನಾನು, ಚಿತ್ತಾಲರ ಕುರಿತ ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ. ಚಿತ್ತಾಲರ ಕುರಿತ ಕವಿತೆಯನ್ನು ಆ ಸಂಕಲನದಲ್ಲಿ ಸೇರಿಸಲು ಧೈರ್ಯ ಸಾಲಲಿಲ್ಲ. ಆ ಕವಿತೆ ಇಲ್ಲಿ ನಿಮ್ಮ ಮುಂದಿದೆ.

ಚಿತ್ತಾಲರ ಜೊತೆ ಸಂಜೆ...


....ಕೇಳಿದರು
ಎಲ್ಲಿಂದ ಬಂದೆ?
ನಿಮ್ಮೆದೆಯಿಂದ
ಎಂದೆ

ದಿನವಿಡೀ ದುಡಿದು
ಬಳಲಿದ ಶಹರದಂತೆ ಒರಗಿದರು
ಆ ಸೋಫಾದಲ್ಲಿ
ಕೇಳಿದೆ ಇಲ್ಲಿ
ಯಾವ ಒಳದಾರಿಯಲ್ಲಿ ನಡೆದರೆ
ಹನೇಹಳ್ಳಿ?

ಅಲ್ಲಲ್ಲಿ ಬಿತ್ತಿ
ಬೆಳೆಸಿದ ವೌನ-
ದ ಗಿಡದಲ್ಲಿ ಮಾತು
ಚಿಗುರುವ ಹೊತ್ತು
ಅಸಂಖ್ಯ ಬೋಗಿಗಳನ್ನು ಹೊತ್ತ
ಗಾಡಿಯೊಂದು
ದೀಪದ ಸನ್ನೆಗಾಗಿ ಕಾಯುತ್ತಿತ್ತು!

ತೆರೆದ ಬಾಲ್ಕನಿಯಾಚನೆ
ಶಹರವನ್ನು ಆಳುವ ಕಡಲು
ಬೀಸುವ ಗಾಳಿಗೆ
ಪಟಪಟನೆ ಬಡಿದುಕೊಳ್ಳುವ ಅದರ
ರಕ್ತವರ್ಣದ ಸೆರಗು
ತೆಕ್ಕೆಯಲ್ಲಿ ಅಧರಕ್ಕೆ ಅಧರ
ಒತ್ತೆ ಇಟ್ಟವರು!

ಇಬ್ಬರೆಂದರೆ ಬರೇ ಇಬ್ಬರು
ನಾನು ಮತ್ತು ಅವರು
ಹಾಯಿ ದೋಣಿಯಂತೆ ತೇಲುತ್ತಿರುವ
ಕತೆಯ ಸಾಲೊಂದನ್ನು
ಏರಿ ಕುಳಿತಿದ್ದೇವೆ...

ಮೊರೆವ ಎದೆಯೊಳಗೆ
ಭೋರ್ಗರೆವ ಅಕ್ಷರದ ಕಡಲು
ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ
ನನಗೇಕೆ ಮುಳುಗುವ ಚಿಂತೆ...?

Saturday, January 21, 2012

ಉಪೇಂದ್ರರಿಗೊಂದು ಪತ್ರ !

ಇದು ನಾನು ಬರೆದ ಬರಹವಲ್ಲ. ದಿವಂಗತ ಪತ್ರಕರ್ತ, ಲೇಖಕ ಬಿ. ಎಂ. ರಶೀದ್ ಬರೆದ ಬರಹ. ಅವರ ಸಮಗ್ರ ಬರಹಗಳ ‘ಪರುಷಮಣಿ’ ಕೃತಿಯಿಂದ ಆಯ್ದು ನಿಮ್ಮ ಮುಂದೆ ಇಟ್ಟಿದ್ದೇನೆ.

 ಪ್ರಿಯ ಉಪೇಂದ್ರರಿಗೆ, 
ನಿಮ್ಮದೇ ಹೆಸರಿನ ನಿಮ್ಮ ಸಿನಿಮಾ ಮಂಗಳೂರಿಗೆ ಬಂದಿದೆ. ಮಂಗಳೂರಿನ ಗೋಡೆಗಳ ತುಂಬಾ ನಿಮ್ಮದೇ ಚಿತ್ರಗಳು. ದೀಪಾ ಮೇಹ್ತಾರ 1947-ಅರ್ತ್, ಸ್ಟೀಲ್ ಬರ್ಗ್‌ನ ಸೇವಿಂಗ್ ಪ್ರೈವೇಟ್ ರ್ಯಾನ್‌ನಂತಹ ಚಿತ್ರಗಳು ಬಂದು ಹೋದ ಕುರುಹನ್ನೂ ಉಳಿಸದ ಮಂಗಳೂರಿನ ಥಿಯೇಟರ್ ಅಂಗಳದಲ್ಲಿ ನಿಮ್ಮ ಚಿತ್ರಕ್ಕೆ ಜನರ ಜಾತ್ರೆ! ನಿಮಗೆ ಅಭಿನಂದನೆಗಳು. ಅಭಿನಂದನೆ ಯಾಕೆಂದರೆ ಉಪೇಂದ್ರ ಬಾಬು, ಆ ಥಿಯೇಟರ್ ಅಂಗಳದಲ್ಲಿ ಸಿಡಿಲುಬಡಿದ ಕೊರಡುಗಳಂತೆ ನಿಂತು ನಿಮ್ಮ ಚಿತ್ರದ ಟಿಕೆಟ್‌ಗಾಗಿ ಕಾದಿರುವ ಆ ಜನಗಳಲ್ಲಿ ಏನನ್ನು ನೋಡಲು ಬಂದಿರೆಂದು ಒಮ್ಮೆ ಕೇಳಿ ನೋಡಿ. ಅವರಲ್ಲಿ ಉತ್ತರಗಳಿಲ್ಲ! ಆಮೇಲೆ ಏನನ್ನು ನೋಡಿದಿರೆಂದು ಕೇಳಿ ನೋಡಿ. ಇಲ್ಲ, ಅದಕ್ಕೂ ಉತ್ತರಗಳಿಲ್ಲ!! ನಾನು ನಿಮ್ಮನ್ನು ಅಭಿನಂದಿಸದೇ ಇರುವುದಕ್ಕಾಗುತ್ತದೆಯೇ ಉಪೇಂದ್ರಜೀ? ತಮ್ಮ ತಮ್ಮ ಆತ್ಮ ಮರುಕವನ್ನೂ, ಸ್ವಯಂ ಪ್ರೇಮವನ್ನೂ ಕಲೆಯ ಹೆಸರಿನಲ್ಲಿ ಮಾರಿದವರನ್ನು ನಾನಿಲ್ಲಿ ತನಕ ಕಂಡಿದ್ದೆ. ಈಗ ತನ್ನ ವಿಕೃತಿಯನ್ನು ಹೀಗೆ ಕಾಸು ಪಡೆದು ಜನರಿಗೆ ಧಾಟಿಸುವ ಈ ದಂಧೆ ನಿಮಗೆ ಲಾಭವನ್ನು ತರಬಹುದು. ಒಳ್ಳೆಯದು, ಮುಂದುವರಿಸಿ. ತನ್ನ ಕೃತ್ಯಗಳಿಗಾಗಿ ಸ್ವಯಂ ನಾಚಿಕೊಳ್ಳದವನನ್ನು ಯಾವ ಬಗೆಯಲ್ಲೂ ಶಿಕ್ಷಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ.

ಆದರೆ ಒಂದು ವಿಕೃತಿಯನ್ನು ಕಾಣಲು ಕಾಸು ಕೊಟ್ಟು ಸರತಿಯಲ್ಲಿ ನಿಂತವರನ್ನು ಕಂಡು ನನ್ನಂಥವರಲ್ಲಾಗುತ್ತಿರುವ ದುಗುಡ ನಿಮಗೆ ಅರ್ಥವಾಗಲಾರದು ಉಪೇಂದ್ರಜೀ. ಈ ನಾಡಿನ ಕಲೆ, ಸಿನಿಮಾ, ಜನ, ಜನರ ಅಭಿರುಚಿ ಏನಾದರೆ ನಿಮಗೇನಂತೆ? ಇದು ಉಪೇಂದ್ರನಿಂದ ಅಲ್ಲದೆ ಇನ್ಯಾರಿಂದ ಎಂಬ ಧಿಮಾಕಷ್ಟೆ ನಿಮಗೆ ಮುಖ್ಯ. ಇಂತಹ ಅಗ್ಗದ ಸಾಧನೆಗಳಿಗೆ ನಿಮ್ಮೆಳಗಿನ ವಿಕೃತಿಯ ವಿನಃ ಇನ್ಯಾವುದರ ನೆರವು ದೊರೆಯಬಲ್ಲುದು ಹೇಳಿ?

  ನಿಮ್ಮ ಸಿನಿಮಾವನ್ನು ನಾನು ಕೂಡ ನೋಡಿದೆ. ರೋಗಕ್ಕೆ ಚಿಕಿತ್ಸೆ ನೀಡ ಬೇಕಾದ ವೈದ್ಯ ರೋಗವನ್ನೊಮ್ಮೆ ಕಣ್ಣಿಂದಲಾದರೂ ನೋಡುವುದು ಒಳ್ಳೆಯದಲ್ಲವೇ? ಥಿಯೇಟರ್‌ನಲ್ಲಿ ನಾನು ಸಿಡಿಮಿಡಿಗೊಂಡು ಎದ್ದಾಗಲೆಲ್ಲಾ ಪಕ್ಕದಲ್ಲಿ ಕೂತಿದ್ದ ಗೆಳೆಯ, ನನ್ನನ್ನು ಮತ್ತೆ ಆಸನಕ್ಕೆ ಒತ್ತಿ ಉಪಕರಿಸುತ್ತಿದ್ದ. ಚಿತ್ರ ಮುಗಿದು ಹೊರಬಂದಾಗ ಬೃಹತ್ ಗಾತ್ರದ ಕೆಲಿಡೋಸ್ಕೋಪ್‌ನಿಂದ ಹೊರ ಬಿದ್ದ ಅನುಭವವಾಯಿತು! ಥಿಯೇಟರ್ ಬಾಗಿಲಿನಲ್ಲಿ ನಿಂತು ಇಷ್ಟು ಹುತ್ತು ಕಣ್ಣ ಮುಂದೆ ನಡೆದದ್ದೇನು ಎಂದು ನೆನಪಿಸಿಕೊಳ್ಳಲು ಹೋದರೆ ಹುಚ್ಚೇ ಹಿಡಿವ ಸ್ಥಿತಿ. ನೂರು ಥರದ ಬಣ್ಣಗಳು, ಚೀರಾಟಗಳು, ನಾಲ್ಕು ತುಣುಕು ಒಣಕಲು ಫಿಲಾಸಫಿ, ಪ್ರೇಮ -ಕಾಮದ ಬೊಗಳೆಗಳು ಎಲ್ಲಾವನ್ನೂ ಒಂದು ಮಿಕ್ಸರ್ ಗ್ರೈಂಡರ್‌ನಲ್ಲಿ ತಿರಿವಿ ಕಣ್ಣ ಮುಂದೆ ಇಟ್ಟಂತಿತ್ತು ! ಇರಲಿ ಎಲ್ಲವನ್ನು ಸಹಿಸಿದ್ದಾಯಿತು. ಆದರೆ ಉಪೇಂದ್ರರೇ, ನಟಿ ಪ್ರೇಮಾ ಜೊತೆ ನೀವು ಕುಚು ಕುಚು ಕುಚು ಎಂಬ ಸದ್ದು ಹೊರಡಿಸುತ್ತಿದ್ದಿರಲ್ಲಾ. ಅದು ಯಾವ ಮೃಗದ ಭಾಷೆ? ಅದೇನಿದ್ದರೂ ಕಾಡು ಮೃಗದಂತೆ ಕಾಣುವ ನಿಮಗೆ ಆ ಭಾಷೆ ಚೆನ್ನಾಗಿಯೇ ಒಪ್ಪುತ್ತದೆ ಬಿಡಿ.ಚಿತ್ರದಲ್ಲಿ ನೀವು ನ್ಯಾಖ್ಯಾನಿಸುವ ಪ್ರಕಾರ ಈ ಕೋಡಂಗಿತನಗಳನ್ನ್ನೆಲ್ಲಾ ಮಾಡುವ ಧೈರ್ಯ ಉಪೇಂದ್ರನಿಗೆ ಮಾತ್ರ ಇದೆ. ಉಳಿದವರಿಗೆ ಆಸೆ ಇದೆ, ಆದರೆ ದೈರ್ಯವಿಲ್ಲ! ನೀವು ಹೇಗೂ ದೈರ್ಯವಂತರಲ್ಲವೇ ಉಪೇಂದ್ರ, ಈ ಚಿತ್ರವನ್ನು ಒಮ್ಮೆ ನಿಮ್ಮ ಖಾಸಾ ತಾಯಿ, ತಂಗಿ, ಪ್ರೇಯಸಿಯರ ಜೊತೆ ಕೂತು ನೋಡಿ ಬಿಡಿ. ನಿಮಗೊಂದು ಆತ್ಮಸಾಕ್ಷಿ ಇದ್ದೂ ಕೂಡ ಆಗ ಅದು ವಿಲಿವಿಲಿ ಒದ್ದಾಡಲಿಲ್ಲ ಎಂದಾದರೆ, ಇಗೋ ಈ ಚರ್ಚೆಯನ್ನು ಇಲ್ಲಿಗೇ ಕೈ ಬಿಟ್ಟೆ.

 ಚಿತ್ರದಲ್ಲಿ ನಿಮ್ಮ ಹೆಸರು ನಾನು! ಚಿತ್ರದುದ್ದಕ್ಕೂ ನಾನು ನಾನು ಎಂದು ಒರಲುತ್ತಿದ್ದ ಉಪೇಂದ್ರ ನೀನು ನಿಜಕ್ಕೂ ಬಫೂನು! ತನ್ನ ಹಾವಭಾವಗಳ ಬಗ್ಗೆ ಇನ್ನೊಬ್ಬನಿಗೆ ಏನನ್ನಿಸುತ್ತದೆ ಎನ್ನುವುದನ್ನೂ ಲೆಕ್ಕಿಸದೆ ಕುಣಿಯುವವನು ಬಫೂನು ಅಲ್ದೆ ಇನ್ನೇನು ? ನಿನ್ನ ಚಿತ್ರದಲ್ಲಿ ರತಿ , ಕೀರ್ತಿ ಸ್ವಾತಿ ಎಂಬ ಮೂರು ಸ್ರ್ತೀಪಾತ್ರಗಳು ಬೇರೆ! ಚಿತ್ರ ಮುಗಿಯುವ ಹೊತ್ತಿಗೆ ಆ ಮೂರು ಪಾತ್ರಗಳು ಮನುಷ್ಯರೇ ಅಲ್ಲವಂತೆ! ಮನುಷ್ಯನ ಬದುಕಿನಲ್ಲಿ ಬರುವ ಮೂರು ಋತುಕಾಲಗಳು ಅವು?! ತಾವ್ಯಾರು ಸಿನಿಮಾ ರಂಗದ ಜಿಡ್ಡು ಕೃಷ್ಣ ಮೂರ್ತಿ ಎಂದು ತಿಳಿದುಕೊಂಡಿರಾ ಉಪೇಂದ್ರ ಸಾಬ್? ಫಿಲಾಸಫಿ ಸಿನಿಮಾದ ಭಾಷೆಗೆ ಒಗ್ಗುವಂತಹದಲ್ಲ ಮಾರಾಯ್ರೇ. ಅಂತಹದರಲ್ಲಿ ನಿಮಗೆ ಫಿಲಾಸಫಿಯೂ ಗೊತ್ತಿಲ್ಲ, ಸಿನಿಮಾ ತೆಗೆಯಲು ಕೂಡಾ ಗೊತ್ತಿಲ್ಲ. ಗೊತ್ತಿರುವುದು ಬರೇ ಕುಚೇಷ್ಟತೆಗಳು ಮಾತ್ರ. ನಿಮ್ಮ ಕುಚೇಷ್ಟೆಗಳಿಗಾಗಿ ಒಂದು ಸಮೂಹದ ಅಭಿರುಚಿಯೇ ಭ್ರಷ್ಟಗೊಳ್ಳಬೇಕೇ? ಹೇಳಿ ಮಿ.ಉಪೇಂದ್ರ.

ವರ್ಷದ ಹಿಂದೆ ನಿಮ್ಮ ‘ಎ’ ಎಂಬ ಚಿತ್ರ ಬಂದಿತ್ತು. ಅದಕ್ಕೆ ಬುದ್ಧಿವಂತರಿಗೆ ಮಾತ್ರ ಎಂಬ ಲೇಬಲ್ಲು ಬೇರೆ! ಅಂದ ಮೇಲೆ ಹುಟ್ಟಿನಿಂದಲೇ ಬುದ್ಧಿವಂತಿಕೆಯನ್ನು ಗುತ್ತಿಗೆಪಡೆದ ನಾವದನ್ನು ನೋಡದಿರಲು ಹೇಗೆ ಸಾಧ್ಯ? ಚಿತ್ರವನ್ನು ನೋಡಿದಾಗಲಷ್ಟೇ ನಾವೆಷ್ಟು ದಡ್ಡರು ಎಂದು ಸಾಬೀತಾಯಿತು.ಮುಂದೆ ನಮ್ಮಂತಹ ದಡ್ಡರಿಗೋಸ್ಕರವಾದರೂ ಒಂದು ಸಿನಿಮಾ ತೆಗೆಯಿರಿ ಸ್ವಾಮಿ ಎಂದು ವಿನಂತಿಸಿಕೊಂಡಿದ್ದೆವು. ನಮ್ಮ ಆ ವಿನಂತಿಗೆ ಕಿವಿಗೊಟ್ಟು ನೀವು ಈ ಬಾರಿ ತೆಗೆದ ಚಿತ್ರವೇ ಇದು ಉಪೇಂದ್ರ? ಜಾಹೀರಾತುಗಳಲ್ಲಿ ನಿಮ್ಮ ಉಪೇಂದ್ರ ಕ್ಕೆ 2ಡಿ ಚಿತ್ರ ಎಂಬ ಘೋಷಣೆಯೂ ಬೇರೆ ಇದೆಯಲ್ಲ! ನಾವು ನುಗ್ಗಿದ್ದು ಚಿತ್ರಮಂದಿರಕ್ಕೆ. ಹೊರಬಿದ್ದದ್ದು ಹುಚ್ಚಾಸ್ಪತ್ರೆಯಿಂದ!! 2ಡಿ ಎಂದರೆ ಅರ್ಥ ಅದೇನಾ?

 ಕಲೆಯ ಸ್ಪಂದನಗಳನ್ನೂ ಸಂವೇದಿಸಲಾರದ ನಿಮ್ಮಂತಹ ಸೋಗಲಾಡಿಗಳಿಗೆ ಘೋಷಣೆಗಳು ಒಂದು ಬೇರೆ ಕೇಡು.ಘೋಷಣೆಗಳ ಮರೆಯಲ್ಲಿ ನಿಮ್ಮ ನಾಚಿಕೆಗೆಟ್ಟ ಮುಖಗಳನ್ನು ಅವಿತಿರಿಸಬಹುದು ಎನ್ನುವುದಲ್ಲವೇ ನಿಮ್ಮ ಉಪಾಯ? ಬಂಡವಾಳವಿಲ್ಲದವನಿಗೆ ಕೊನೆಗೆ ಘೋಷಣೆಗಳೆ ಗತಿ.ತಿಳಿಯಿರಿ.

ಸಿನಿಮಾ ಭ್ರಮೆಯ ಮಾಧ್ಯಮ ನಿಜ. ಆದರೆ ಅದು ಪ್ರತಿ ಸೃಷ್ಟಿಯ ಮಟ್ಟವನ್ನು ಮುಟ್ಟಿದರೆ ಮಾತ್ರ ಕಲೆ ಎಂದೆನಿಸಿಕೊಳ್ಳುತ್ತದೆ. ವಾಸ್ತವದ ನಖಗಳು ಪ್ರೇಕ್ಷಕನ ಮನಸ್ಸನ್ನು ಪರಚದೇ ಹೋದರೆ ಸಿನಿಮಾ ಕಲೆಯ ಅಸ್ತಿತ್ವವೇ ಅರ್ಥ ಶೂನ್ಯ! ನಮ್ಮ ಪಕ್ಕದಲ್ಲೇ ಒಂದು ಪುಟ್ಟ ರಾಜ್ಯವಿದೆ. ಹೆಸರು ಕೇರಳ. ಅಲ್ಲೂ ಕೂಡ ಸಿನಿಮಾಗಳನ್ನೂ ತೆಗೆಯುತ್ತಾರೆ.ಅಲ್ಲಿನ ಭರತನ್ ಎಂಬ ನಿರ್ದೇಶಕನ ‘ವೈಶಾಲಿ’ ಎಂಬ ಚಿತ್ರವನ್ನು ನೋಡಿದ ನಾನು ಇಡೀ ಒಂದು ರಾತ್ರಿ ನಿದ್ರಿಸಲಿಲ್ಲ. ಪುರೋಹಿತ ಶಾಹಿಯ ಕುತಂತ್ರಗಳಿಗೆ ಬಲಿಯಾದ ಒಬ್ಬ ದಲಿತ ಹೆಣ್ಣು ಮಗಳ ಕತೆಯದು. ಆ ಚಿತ್ರದಲ್ಲೂ ಫ್ಯಾಂಟಸಿಗಳಿದ್ದವು.ಋಷ್ಯಶೃಂಗ ಮುನಿಯ ಹೋಮಕ್ಕೆ ಆಕಾಶದಿಂದ ಮಳೆಯೇ ಸುರಿದು ಬೀಡುತ್ತದೆ. ಆತನ ಮಂತ್ರದ ಶಕ್ತಿಗೆ ಬೃಹತ್ ಬಂಡೆಗಳೆ ಉರುಳುರುಳಿ ಬೀಳುತ್ತವೆ. ಆದರೆ ಆ ಚಿತ್ರ ಅಂತಿಮವಾಗಿ ಸೂಚಿಸಿದ ಸೂಚನೆ ಮಾತ್ರ ಕಲೆಯ ಕರ್ತವ್ಯದ ಭಾಗವಾಗಿತ್ತು.
 
ಭ್ರಮೆ ಮತ್ತು ವಾಸ್ತವದ ನಡುವಿನ ಗೆರೆಯನ್ನು ಕಳೆದುಕೊಂಡ ನಿಮಗೆ ಇದನ್ನೆಲ್ಲಾ ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದು ನಮಗೆ ಗೊತ್ತು.ಆದರೆ ಸಿನಿಮಾದ ಹೆಸರಿನಲ್ಲಿ ನೀವು ಎಸಗುವ ವಿಕೃತಿಗಳು ಏನನ್ನೆಲ್ಲಾ ಕಳೆದುಹಾಕುತ್ತವೆ ನೋಡಿ.ನಿಮ್ಮ ಚಿತ್ರಗಳು ಜನರ ಅಭಿರುಚಿಯನ್ನು, ಕಲೆಯ ಆತ್ಮಗೌರವವನ್ನೂ ಕಳೆದು ಹಾಕಲಿದೆ. ಜನರನ್ನು ಕೊಡಂಗಿಗಳಂತೆ ವರ್ತಿಸಲು ಪ್ರೇರೇಪಿಸುವುದೇ ಒಂದು ಸಾಧನೆ ಎಂದು ನೀವು ತಿಳಿದುಕೊಂಡಂತಿದೆ. ನಾಗರಿಕ ಸಮಾಜದ ಕಳಂಕಗಳಂತಿರುವ ನಿಮ್ಮ ಆ ವಿಕೃತ ವೇಷಗಳನ್ನು ಚಿತ್ರದಲ್ಲಿ ಕಾಣಿಸುತ್ತಾ ಧೈರ್ಯವಿದ್ದರೆ ನೀನೂ ಮಾಡು ಎಂದು ಪ್ರೇಕ್ಷಕನಿಗೆ ಸವಾಲೆಸೆಯುವ ನೀವು ನಾಡಿನ ಅಭಿರುಚಿಯನ್ನು ಎತ್ತ ಕಡೆಗೆ ಒಯ್ಯಲಿದ್ದೀರಿ? 

ಒಬ್ಬ ಮತಿವಿಕಲನ ಮನೋಭಿತ್ತಿಯಂತಿರುವ ನಿಮ್ಮ ಚಿತ್ರಗಳಿಗೆ ಜನ ಮುಗಿಬಿದ್ದು ಆನಂದಿಸುವುದನ್ನು ಕಂಡು ಇದನ್ನೆಲ್ಲಾ ನಿಮಗೆ ಬರೆಯದಿರಲು ಸಾಧ್ಯವೇ ಆಗಲಿಲ್ಲ. ಉಪೇಂದ್ರಜೀ ನಿಮಗೆ ಶಕ್ತಿಯಿದ್ದರೆ ಜನರಲ್ಲಿ ಒಳ್ಳೆಯ ಅಭಿರುಚಿಯನ್ನು ರೂಪಿಸಿ. ಒಳ್ಳೆಯ ಅಭಿರುಚಿಯಿಂದ ಮಾತ್ರ ಒಳ್ಳೆಯ ವ್ಯಕ್ತಿಗಳು ರೂಪುಗೊಳ್ಳುವುದು; ಒಳ್ಳೆಯ ವ್ಯಕ್ತಿಗಳಿಂದ ಒಳ್ಳೆಯ ಸಮಾಜ.
ನೀವೂ ಕೂಡಾ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಕಾರಣ ನನಗೆ ನೀವು ಅನ್ಯರಲ್ಲ .ಅದಕ್ಕಾಗಿಯೇ ಈ ಪತ್ರ. ನಿಮಗಿದೆಲ್ಲಾ ಇನ್ನಾದರೂ ಅರ್ಥವಾಗುತ್ತದೆಯೆಂದು ನಂಬಲೇ ಉಪೇಂದ್ರ ?

Thursday, January 19, 2012

‘ಅವ್ವ’ನ ಮಕ್ಕಳು....

ಈ ಲೇಖನವನ್ನು ನಾನು ಬರೆದದ್ದು ಕವಿತಾ ಲಂಕೇಶ್ ಅವರ ‘ಅವ್ವ’ ಚಿತ್ರ ಬಿಡುಗಡೆಯಾದಾಗ. ಬಹುಶಃ ಫೆಬ್ರವರಿ 15, 2008ರಲ್ಲಿ.

ಕವಿತಾ ಲಂಕೇಶ್‌ರ ‘ಅವ್ವ’ ಚಿತ್ರದಲ್ಲಿ ಶೃತಿ ತನ್ನ ಕೋಮಲ, ಮುಗ್ಧ ಮುಖದಲ್ಲಿ ‘ರಂಗವ್ವ’ನನ್ನು ಆವಾಹಿಸಲು ಪಡುತ್ತಿರುವ ಶ್ರಮವನ್ನು ನೋಡುತ್ತಿದ್ದಾಗ ನನ್ನಲ್ಲೊಂದು ತುಂಟ ಆಲೋಚನೆ ಹುಟ್ಟಿತು. ಲಂಕೇಶರೇನಾದರೂ ಬದುಕಿದಿದ್ದರೆ ಗಯ್ಯಿಳಿ, ಜಗಳಗಂಟಿ ‘ರಂಗವ್ವ’ನ ಪಾತ್ರಕ್ಕೆ ಯಾರನ್ನು ಆರಿಸುತ್ತಿದ್ದರು? ಸಂಶಯವಿಲ್ಲ. ಲಂಕೇಶರು ಆ ಪಾತ್ರಕ್ಕೆ ಗೌರಿ ಲಂಕೇಶರನ್ನೇ ಆಯ್ಕೆ ಮಾಡುತ್ತಿದ್ದರು. ಸದಾ ಪತ್ರಿಕೆ, ಹೋರಾಟ ಎಂದು ಸಂಘಪರಿವಾರದೊಂದಿಗೆ, ಭ್ರಷ್ಟ ವ್ಯವಸ್ಥೆಯೊಂದಿಗೆ ಜಗಳ ಕಾಯುತ್ತಾ, ಕೋಮುವಾದ, ಮೂಲಭೂತವಾದವನ್ನು ಕಟುವಾಗಿ ಖಂಡಿಸುತ್ತಾ, ಕೋರ್ಟು, ಕಚೇರಿ ಎಂದು ಅಲೆಯುತ್ತಿರುವ ಈ ಕನ್ನಡದ ‘ಹೆಣ್ಣು ಕರುಳು’ ಮುಸ್ಸಂಜೆಯ ಕಥಾ ಪ್ರಸಂಗದ ‘ರಂಗವ್ವ’ನನ್ನು ಎಲ್ಲೋ ಹೋಲುತ್ತದಲ್ಲ ಎಂದೆನಿಸಿತು ನನಗೆ. ನನ್ನ ಆ ತಕ್ಷಣದ ಭಾವುಕತೆಯೂ ಅದಕ್ಕೆ ಕಾರಣ ಇರಬಹುದು.

ಆದರೆ ಒಂದಂತೂ ಸತ್ಯ. ಕರ್ನಾಟಕದ ವರ್ತಮಾನ ತನ್ನೊಳಗಿನ ಹೆಣ್ಣು ಮನಸ್ಸನ್ನು ಕಳೆದುಕೊಳ್ಳುತ್ತಿದೆ. ಇನ್ನೊಬ್ಬರಿಗಾಗಿ ಕಣ್ಣೀರಿಡುವ, ಮಾಡಿದ ತಪ್ಪಿಗೆ ಲಜ್ಜೆ ಪಡುವ, ಅನ್ಯಾಯಕ್ಕೆ ಮರುಗುವ, ಅದನ್ನು ಪ್ರತಿಭಟಿಸುವ ಹೆಣ್ಣು ಗುಣವನ್ನು ಈ ನಾಡು ಕಳೆದುಕೊಳ್ಳುತ್ತಿರುವ ಪರಿಣಾಮವನ್ನು ನಾವು ಉಣ್ಣುತ್ತಿದ್ದೇವೆ. ರಾಜಕೀಯ, ಧರ್ಮ, ಪತ್ರಿಕೋದ್ಯಮ ಹೀಗೆ ಎಲ್ಲವೂ ನಿಧಾನಕ್ಕೆ ಕುಲಗೆಡುತ್ತಿವೆ. ಗಂಡಿನ ಸ್ವಾರ್ಥ, ದುರಭಿಮಾನ, ಕೌರ್ಯದ ಝಳದಿಂದ ನಮ್ಮ ವರ್ತಮಾನ ಬಿಳಿಚಿಕೊಂಡಿದೆ. ತಾಯ್ತನದ ಮನಸ್ಸುಳ್ಳ ಪತ್ರಕರ್ತರ, ರಾಜಕಾರಣಿಗಳ, ಸಾಹಿತಿಗಳ, ಚಿಂತಕರ, ಹೋರಾಟಗಾರರ ಕೊರತೆ ಕರ್ನಾಟಕವನ್ನು ದುರಂತದೆಡೆಗೆ ತಳ್ಳುತ್ತಿದೆ.

ಯಾವುದೇ ಹೋರಾಟ ಅರಳುವುದು ‘ತಾಯಿ’ ಮನಸ್ಸಿನಿಂದ. ಗಾಂಧೀಜಿಯ ಒಳಗೊಬ್ಬ ಹೆಣ್ಣಿದ್ದಳು. ಅವರ ಹೋರಾಟ ಆ ಕಾರಣಕ್ಕಾಗಿಯೇ ಭಗತ್‌ಸಿಂಗ್, ಸುಭಾಶ್‌ಚಂದ್ರ ಭೋಸರಂತೆ ಭಗ್ಗನೆ ಉರಿದು ಮುಗಿದು ಹೋಗಲಿಲ್ಲ. ಅದು ಗಂಗಾ ನದಿಯಂತೆ ಉದ್ದಗಲಕ್ಕೆ ಹರಿಯಿತು. ದೇಶವನ್ನಿಡೀ ವ್ಯಾಪಿಸಿ ಸಮೃದ್ಧವಾಯಿತು. ಪಿ. ಲಂಕೇಶರನ್ನೇ ನೆನೆಯೋಣ. ಅವರ ಬರಹ, ಅವರ ಪತ್ರಿಕೆ ಯಾಕೆ ಸಮೃದ್ಧವಾಗಿ ಮೂಡಿ ಬರುತ್ತಿತ್ತೆಂದರೆ ಅವರಲ್ಲೊಬ್ಬ ‘ಹೆಣ್ಣು’ ನದಿಯಂತೆ ಹರಿಯುತ್ತಿದ್ದಳು. ತನ್ನೊಳಗಿರುವ ಗಂಡಿನ ದಾರ್ಷ್ಟ, ದುರಹಂಕಾರಕ್ಕೆ ಸಿಕ್ಕಿ ಸೃಜನಶೀಲತೆ ಬರಡಾಗಿ ಬಿಡುವ ಭಯ ಅವರನ್ನು, ಜೀವನದ ಕೊನೆಯ ಹೊತ್ತಿನಲ್ಲಿ ಅತಿಯಾಗಿ ಕಾಡುತ್ತಿತ್ತು. ಆ ಕಾರಣದಿಂದ ‘ನಿಮ್ಮಿ’ ಎನ್ನುವ ಕಾಲ್ಪನಿಕ ಹೆಣ್ಣು ಮಗಳ ಹೆಸರಿನಲ್ಲಿ ಹೆಣ್ಣಿನ ಮನದಾಳದ ಕಾತರಗಳನ್ನು ಬರೆಯತೊಡಗಿದರು. ಲಂಕೇಶರನ್ನು ವೈದೇಹಿ ‘ಗೆಳತಿ’ ಎಂದು ಕರೆಯುತ್ತಾರೆ. ಅಂಕೇಶ್ ತೀರಿ ಹೋದ ಸಂದರ್ಭದಲ್ಲಿ ವೈದೇಹಿ ಲಂಕೇಶರೊಳಗಿನ ಹೆಣ್ಣಿನ ಕುರಿತಂತೆ ಹೃದ್ಯ ಲೇಖನವೊಂದನ್ನು ಬರೆದಿದ್ದರು.
ಈಗಲೂ ಅಷ್ಟೇ ಲಂಕೇಶರ ‘ಪ್ರೀತಿಯ ರಾಮು’ ಖೋಡೆ, ಉಪೇಂದ್ರ, ಖೇಣಿ, ಬಾಲಿವುಡ್ ಎಂದು ‘ಅಪಾ ಪೋಲಿ’ ಬಿದ್ದಿರುವಾಗ ಗೌರಿ ಲಂಕೇಶ್ ಮತ್ತು ಕವಿತಾ ಲಂಕೇಶ್ ‘ರಂಗವ್ವ’ನಂತೆ ಹಲ್ಲು ಕಚ್ಚಿ ಲಂಕೇಶರ ನೆನಪುಗಳನ್ನು ಉಳಿಸಿಕೊಳ್ಳುವ ಹೋರಾಟದಲ್ಲಿದ್ದಾರೆ. ರಂಗವ್ವ ತನ್ನ ಮಗಳು ‘ಸಾವಂತ್ರಿ’ಯನ್ನು ಕಣ್ಣಿಟ್ಟು ಕಾಯುವಂತೆ ಇವರು ಲಂಕೇಶ್ ನೆನಪುಗಳನ್ನು ಕಾಯುತ್ತಿದ್ದಾರೆ.

ಇಡೀ ಕರ್ನಾಟಕ ‘ಮುಸ್ಸಂಜೆ ಕಥಾ ಪ್ರಸಂಗ’ದ ಹಳ್ಳಿಯಂತೆ ವ್ಯಭಿಚಾರ, ರಾಜಕಾರಣ, ಜಾತಿ ಇತ್ಯಾದಿಗಳಿಂದ ಕುಲಗೆಟ್ಟು ಹೋಗುತ್ತಿರುವ ದಿನಗಳಲ್ಲಿ ಕವಿತಾ ಲಂಕೇಶ್ ‘ಮುಸ್ಸಂಜೆ ಕಥಾಪ್ರಸಂಗ’ ಕಾದಂಬರಿಯನ್ನು ಸಿನಿಮಾ ಮಾಡಲು ಹೊರಟದ್ದು ಅರ್ಥ ಪೂರ್ಣವಾಗಿಯೇ ಇದೆ. ಆದರೆ ಅದಕ್ಕೆ ಬೇಕಾದ ಸಿದ್ಧತೆ ಎಲ್ಲಕ್ಕಿಂತ ಮುಖ್ಯವಾಗಿ ಒಂದು ದೊಡ್ಡ ಕತೆಯ ಕಣಜದಿಂದ ತನಗೆ ಬೇಕಾದ ಕಾಳುಗಳನ್ನು ಆರಿಸಿ ಅದನ್ನು ಒಂದು ದಾರದಲ್ಲಿ ಸರಾಗವಾಗಿ ಪೋಣಿಸುವ ಚಾಕಚಕ್ಯತೆಯ ಕೊರತೆ ಒಟ್ಟು ಚಿತ್ರವನ್ನು ತುಸು ಮಂಕಾಗಿಸಿದೆ.
 ***
‘ಮುಸ್ಸಂಜೆಯ ಕಥಾ ಪ್ರಸಂಗ’ ಕಾದಂಬರಿಯನ್ನು ಕವಿತಾ ಲಂಕೇಶ್ ಎತ್ತಿಕೊಂಡಾಗಲೇ, ನಿರ್ದೇಶಕಿಯಾಗಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದರು. ಚಿತ್ರದಲ್ಲಿ ಮಂಜ ಮತ್ತು ಸಾವಂತ್ರಿಯ ಪ್ರೀತಿಯನ್ನು ಮುಖ್ಯವಸ್ತುವನ್ನಾಗಿ ಮಾಡಿಕೊಂಡಿದ್ದೇನೆಂದು ಈಗಾಗಲೇ ಮಾಧ್ಯಮಗಳಲ್ಲಿ ಹೇಳಿದ್ದರೂ, ಚಿತ್ರದಲ್ಲಿ ಮಾತ್ರ ಇಡೀ ಕಾದಂಬರಿಯನ್ನೇ ಎರಡೂವರೆ ಗಂಟೆಗಳ ‘ರೀಲಿ’ನೊಳಗೆ ತುಂಬಲು ಪ್ರಯತ್ನಿಸಿದ್ದಾರೆ. ಕಾದಂಬರಿ ಬೇರೆ. ಸಿನಿಮಾ ಬೇರೆ. ಇಲ್ಲಿ ಲಂಕೇಶ್ ಮುಂದೆ ಕವಿತಾ ಲಂಕೇಶ್‌ರ ಮಿತಿ ಕೆಲಸ ಮಾಡಿದಂತೆಯೇ, ಕಾದಂಬರಿಯ ಅನಂತ ಸಾಧ್ಯತೆಯ ಮುಂದೆ ದೃಶ್ಯ ಮಾಧ್ಯಮದ ಮಿತಿಯೂ ಕೆಲಸ ಮಾಡಿದೆ. ಕಾದಂಬರಿಯ ಪಾತ್ರಗಳಿಗೆ ಓದುಗನ ಕಲ್ಪನೆಯ ವಿಶಾಲ ಪರದೆಯಲ್ಲಿ ಬೇಕಾದಂತೆ ಆಕಾರ ಪಡೆದುಕೊಳ್ಳುವ ಅವಕಾಶವಿದೆ. ಸಿನಿಮಾದ ಪರದೆಗಳಿಗೆ ನಿರ್ದಿಷ್ಟ ಅಳತೆಗಳಿವೆ. ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಸಿನಿಮಾ ಆದಾಗ ಇದೇ ನಿರಾಸೆ ಕಾದಂಬರಿಯ ಅಭಿಮಾನಿಗಳನ್ನು ಕಾಡಿತ್ತು. ಅದು ನಿರ್ದೇಶಕನ ತಪ್ಪಲ್ಲ. ಒಂದು ಕಾದಂಬರಿಯ ಅನುಭವವನ್ನು ಒಂದು ಸಿನಿಮಾ ಒಂದೇ ಕ್ಷಣದಲ್ಲಿ ಧ್ವಂಸ ಮಾಡಬಲ್ಲುದು.

ಆದರೆ ಅಂತಹ ಅಪಾಯ ‘ಅವ್ವ’ ಚಿತ್ರದಲ್ಲಿಲ್ಲ. ಆ ಮಟ್ಟಿಗೆ ಸಿನಿಮಾ ಗೆದ್ದಿದೆ. ಆದರೆ ಕವಿತಾ ಲಂಕೇಶರ ಅಭಿಮಾನಿಗಳಿಗೆ ಚಿತ್ರ ನಿರಾಸೆ ತರುತ್ತದೆ. ಕವಿತಾ ಲಂಕೇಶ್ ‘ಅವ್ವ’ ಚಿತ್ರದಲ್ಲಿ ‘ಮಂಜ-ಸಾವಂತ್ರಿ’ ಕತೆಯನ್ನು ಸಲೀಸಾಗಿ ನಿರೂಪಿಸುತ್ತಾ ಹೋಗುವಲ್ಲಿ ಸೋಲುತ್ತಾರೆ. ಬಿಡಿ ಬಿಡಿಯಾದ ಚಿತ್ರಗಳು ಒಂದು ನಿರ್ದಿಷ್ಟ ದಾರಿಯಲ್ಲಿ ಚಲಿಸುವುದಿಲ್ಲ. ಕಾದಂಬರಿಯ ಹ್ಯಾಂಗೋವರ್‌ನಿಂದ ಹೊರಬಂದು, ಮಂಜ ಮತ್ತು ಸಾವಂತ್ರಿಯ ಪ್ರೀತಿಯ ಲೋಕವನ್ನು ಅತ್ಯದ್ಭುತವಾಗಿ ಕಟ್ಟುವ ಸಾಧ್ಯತೆ ನಿರ್ದೇಶಕಿ ಕವಿತಾ ಮುಂದಿತ್ತು. ವಿಜಯ್‌ನಂತಹ ನಟನನ್ನು ಕೈಯಲ್ಲಿಟ್ಟುಕೊಂಡು ಅದನ್ನು ಸಾಧಿಸಲಾಗಲಿಲ್ಲವೆಂದರೆ, ಅದಕ್ಕೆ ಕಾರಣ ಚಿತ್ರದುದ್ದಕ್ಕೂ ನಿರ್ದೇಶಕಿಯನ್ನು ಕಾಡಿದ ಲಂಕೇಶ್ ನೆರಳು. ಅದರಿಂದಾಗಿ ಅತ್ತ ಕವಿತಾರ ಚಿತ್ರವೂ ಆಗದೆ, ಇತ್ತ ಲಂಕೇಶರ ಕಾದಂಬರಿಯೂ ಆಗದೆ ಪ್ರೇಕ್ಷಕರನ್ನು ನಡುಗಡಲಲ್ಲಿ ಕೈ ಬಿಟ್ಟುಬಿಡುತ್ತದೆ. ಸೆನ್ಸಾರ್ ಬೋರ್ಡ್‌ನ ‘ಎ’ ಸರ್ಟಿಫೀಕೇಟ್ ಮತ್ತು ನಟ ವಿಜಯ್‌ನನ್ನು ತಲೆಯಲ್ಲಿ ತುಂಬಿಕೊಂಡು ಒಂದು ತುಂಟ, ತುಡುಗು ಪ್ರೀತಿ ಪ್ರೇಮದ ಅನುಭವವನ್ನು ತಮ್ಮದನ್ನಾಗಿಸಿಕೊಳ್ಳಲು ಬಂದವರಿಗೆ ಚಿತ್ರ ತೀರಾ ನಿರಾಸೆಯನ್ನು ಕೊಡುವ ಸಾಧ್ಯತೆಯಿದೆ. ಆದರೂ ಚಿತ್ರ ಮಂದರದಿಂದ ಹೊರಬೀಳುವಾಗ ಸಾವಂತ್ರಿಯ ಪಾತ್ರವನ್ನು ಮಾಡಿದ ನಟಿಯ ಕೆನ್ನೆಯ ಗುಳಿ ಒಂದು ಹಿತವಾದ ಅನುಭವವಾಗಿ ಪ್ರೇಕ್ಷಕನ ಮನದಾಳದಲ್ಲಿ ಸುಳಿಸುಳಿಯಾಗಿ ಸುತ್ತುತ್ತದೆ. ಹಾಗೆಯೇ ‘ಅವ್ವ’ ರಂಗವ್ವ ಸೇರಿದಂತೆ ಚಿತ್ರದ ವಿವಿಧ ಪಾತ್ರಗಳ ಬಾಯಿಂದ ಹೊರ ಬೀಳುವ ಬೈಗಳು ಪದಗಳು ಒಂದು ಸಂಗೀತದಂತೆ ಎದೆಯೊಳಗೆ ಮಾರ್ದನಿಯನ್ನು ಪಡೆಯುತ್ತದೆ. ***
  ಲಂಕೇಶರ ‘ಅವ್ವ’ ಒಂದು ಸಮೃದ್ಧ ಪಾತ್ರ. ಲಂಕೇಶರು ತನ್ನ ತಾಯಿಯನ್ನು ‘ಬನದ ಕರಡಿ’ಗೆ ಹೋಲಿಸುತ್ತಾರೆ. ಆದರೆ ಕವಿತಾ ಲಂಕೇಶ್ ಒಳ್ಳೇ ದೇಸೀ ಹಸುವಿಗೆ ಮೇಕಪ್ ಮಾಡಿ ಚಿತ್ರದಲ್ಲಿ ಅದನ್ನು ‘ಕರಡಿ’ಯಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ‘ರಂಗವ್ವ’ನ ಪಾತ್ರಕ್ಕೆ ಶೃತಿಯನ್ನು ಆಯ್ಕೆ ಮಾಡಿರುವುದೇ ಮೊದಲ ತಪ್ಪು. ಶೃತಿಯ ಸಾತ್ವಿಕ ಮುಖದಲ್ಲಿ ರಂಗವ್ವನ ಸಿಟ್ಟು, ಆಕ್ರೋಶ, ಅಸಹಾಯಕತೆ, ಪ್ರತಿಭಟನೆ ತಾಳೆ ಪಡೆಯುವುದೇ ಇಲ್ಲ. ಮುಖದಲ್ಲಿ ಒಂದು ಸಕ್ಕೂ ಇಲ್ಲದ ‘ಶೃತಿ’ ಯಾಕೋ ‘ಅವ್ವ’ ಆಗಿ ಇಳಿಯುವುದಿಲ್ಲ. ಶೃತಿ ಒಪ್ಪಿಸುವ ಬೈಗಳೇನೋ ಪಸಂದಾಗಿಯೇ ಇದೆ. ಆದರೆ ಅದು ‘ಅವ್ವ’ನ ಒಡಲ ಬೆಂಕಿಯ ಕಿಡಿಗಳಂತೆ ಹೊರ ನೆಗೆದಿದ್ದರೆ ಚಿತ್ರಕ್ಕೆ ಇನ್ನಷ್ಟು ಪ್ರಯೋಜನವಾಗುತ್ತಿತ್ತು. ಈ ಕಾರಣದಿಂದಲೇ ‘ಅವ್ವ’ನನ್ನು ಮೀರಿ ರಂಗಾಯಣ ರಘು ಚಿತ್ರದಲ್ಲಿ ಬೆಳೆಯುತ್ತಾರೆ. ಚಿತ್ರದಲ್ಲೇನೋ ಭರ್ಮಣ್ಣನ ವಿರುದ್ಧ ರಂಗವ್ವ ಗೆಲ್ಲುತ್ತಾಳೆ. ಆದರೆ ಪ್ರೇಕ್ಷಕರ ಮನದಲ್ಲಿ ಭರ್ಮಣ್ಣ ಗೆಲ್ಲುತ್ತಾನೆ. ರಂಗವ್ವ ಸೋಲುತ್ತಾಳೆ.
                ***
ಕವಿತಾ ಲಂಕೇಶ್ ಕನ್ನಡದ ಪ್ರತಿಭಾವಂತ ನಿರ್ದೇಶಕಿ. ಚಿತ್ರಲೋಕದ ಕಮರ್ಶಿಯಲ್ ನರ ನಾಡಿಯನ್ನು ಅರ್ಥ ಮಾಡಿಕೊಂಡು ಚಿತ್ರ ಮಾಡಬಲ್ಲರು ಕವಿತಾ. ಅವರು ನಿರ್ದೇಶಿಸಿದ ‘ಪ್ರೀತಿ, ಪ್ರೇಮ, ಪ್ರಣಯ’ ಒಂದು ಉತ್ತಮ, ಸದಭಿರುಚಿಯ ಚಿತ್ರ, ದೇವೀರಿ ಕವಿತಾ ಲಂಕೇಶರ ಮೊತ್ತ ಮೊದಲ ಚಿತ್ರ ಎನ್ನುವ ಕಾರಣಕ್ಕಾಗಿ ಅದರ ಮೈನಸ್‌ಗಳು ಹಿಂದೆ ಪ್ಲಸ್‌ಗಳು ಎತ್ತಿ ಹಿಡಿಯಲ್ಪಟ್ಟವು. ದೇವಿರಿ ಚಿತ್ರ ಕವಿತಾ ಅವರ ಕುರಿತು ಅಪಾರ ನಿರೀಕ್ಷೆಗಳನ್ನು ಹುಟ್ಟಿಸಿ ಹಾಕಿತು. ಅದರ ಬೆನ್ನಿಗೇ ಬಂದ ‘ಪ್ರೀತಿ, ಪ್ರೇಮ, ಪ್ರಣಯ’ಯದ ಮೂಲಕ ಕವಿತಾ ನಿರೀಕ್ಷೆಗಳಿಗೆ ಅರ್ಹವಾಗಿಯೇ ಸ್ಪಂದಿಸಿದರು. ಭಾರತಿ ಮತ್ತು ಅನಂತ್‌ನಾಗ್ ಅವರನ್ನು ನಾಯಕಿ, ನಾಯಕರನ್ನಾಗಿಸಿ ಒಂದು ವಿಭಿನ್ನ ಕತೆಯನ್ನು ಅಷ್ಟೇ ಲವಲವಿಕೆಯಿಂದ ನಿರೂಪಿಸಿ ಗೆದ್ದರು. ಆದರೆ ‘ತನನಂ ತನನಂ’ನಲ್ಲಿ ಮತ್ತೆ ಎಡವಿದರು. ಕತೆಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ತೋರಿಸಿದ ಆತುರವೇ ಅವರನ್ನು ದಾರಿ ತಪ್ಪಿಸಿತು. ಮೂರು ಚಿತ್ರಗಳಿಗಾಗುವಂತಹ ಕತೆಯನ್ನು ತನ್ನ ಒಂದೇ ಚಿತ್ರದಲ್ಲಿ ತುಂಬಿಸಿ ‘ತನನಂ ತನನಂ’ ಹಾಡಲು ಹೋದರೆ ಇನ್ನೇನಾಗುತ್ತದೆ? ‘ಮಲಯ ಮಾರುತ’ ‘ರಂಗನಾಯಕಿ’ ಚಿತ್ರಗಳಿಗೆ ‘ಪ್ರೇಮ-ಪ್ರೀತಿ’ಯನ್ನು ಮಿಕ್ಸ್ ಮಾಡಿ ‘ಹೊಸರುಚಿ’ಯೆಂದು ಬಡಿಸಲಾಗಿತ್ತು. ನಾಯಕ (ಶ್ಯಾಮ್) ಮತ್ತು ಸಂಗೀತ ವಿದ್ವಾಂಸರ (ಗಿರೀಶ್ ಕಾರ್ನಾಡ್) ನಡುವಿನ ಆರಂಭದ ಮುಖಾಮುಖಿಯನ್ನೇ ಒಂದು ಅತ್ಯುತ್ತಮ ಚಿತ್ರವಾಗಿ ಮಾಡುವ ಅವಕಾಶ ಕವಿತಾ ಅವರಿಗಿತ್ತು. ಆದರೆ ಅದನ್ನವರು ಬಳಸಿಕೊಳ್ಳಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ‘ತನನಂ ತನನಂ’ ಕುರಿತಂತೆ ‘ಲಂಕೇಶ್’ನಲ್ಲಿ ವಾರಗಟ್ಟಲೇ ಸ್ವತಃ ಕವಿತಾ ಅವರೇ ಬರೆದದ್ದೂ ಚಿತ್ರದ ಕುರಿತಂತೆ ಅತಿ ನಿರೀಕ್ಷೆಯನ್ನು ಹುಟ್ಟಿಸಿ ಹಾಕಿತು. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎನ್ನುವ ಗಾದೆ ಚಿತ್ರ ನೋಡಿದ ಬಳಿಕ ನೆನಪಾಯಿತು.

ಸರಳ ಕತೆ, ವಿಭಿನ್ನ ನಿರೂಪಣೆ ಇಷ್ಟರಲ್ಲೇ ಎಂತಹ ಸದಭಿರುಚಿಯ ಮನಸು ಮುಟ್ಟುವ ಚಿತ್ರ ತೆಗೆಯಬಹುದು ಎನ್ನುವುದಕ್ಕೆ ಕವಿತಾ ಅವರಿಗೆ ನೆರೆಯ ಮಲಯಾಳಂ ಚಿತ್ರಗಳು ಸ್ಫೂರ್ತಿಯಾಗಲಿ. ದೇವೀರಿ, ಅವ್ವನಂತಹ ಚಿತ್ರಗಳನ್ನು ನಿರ್ದೇಶಿಸಿದ ಸಾಹಸಿ ನಿರ್ದೇಶಕಿಯ ಅಗತ್ಯ ಗಾಂಧೀನಗರಕ್ಕಿದೆ. ಮಲಯಾಳಂನಲ್ಲಿ ಹೇಗೆ ಕಮರ್ಶಿಯಲ್ ಮತ್ತು ಕಲಾತ್ಮಕ ಚಿತ್ರಗಳ ನಡುವೆ ಒಂದು ಸಮನ್ವಯ ದಾರಿ ಸಿದ್ಧಗೊಂಡಿತೋ, ಅಂತಹದ್ದು ಕನ್ನಡದಲ್ಲೂ ಸಿದ್ಧಗೊಳ್ಳಬೇಕಾಗಿದೆ. ಪುಟ್ಟಣ್ಣ ಕಣಗಲ್ ಬಳಿಕ ಕನ್ನಡ ಚಿತ್ರರಂಗದಲ್ಲಿ ಹೆಂಗರುಳು ಕೆಲಸ ಮಾಡಿದ್ದು ತೀರ ಕಡಿಮೆ. ಕವಿತಾ ಈ ಕಾರಣಕ್ಕೆ ಕನ್ನಡ ಚಿತ್ರರಂಗಕ್ಕೆ ಮುಖ್ಯವಾಗುತ್ತಾರೆ. ಲಂಕೇಶರ ಈ ಸಾವಂತ್ರಿ ಕನ್ನಡ ಚಿತ್ರೋದ್ಯಮಕ್ಕೆ ಹೊಸ ಹುರುಪನ್ನು, ಲವಲವಿಕೆಯನ್ನು ತರಲಿ.
(ಫೆಬ್ರವರಿ 15, 2008, ಶುಕ್ರವಾರ)

Wednesday, January 18, 2012

ದರೋಡೆ!

ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಲು ಹೋದೆ.
‘‘ಟಿಕೆಟ್ ಬೆಲೆ 200’’ ಎಂದು ಆಕೆ ಇಂಗ್ಲಿಷ್‌ನಲ್ಲಿ ಹೇಳಿದಳು.
ನಗುತ್ತಾ ದುಡ್ಡು ಕೊಟ್ಟು, ನಾನೇ ಆಕೆಗೆ ‘‘ಥ್ಯಾಂಕ್ಸ್’’ ಎಂದೆ.
ಇಂಟರ್‌ವೆಲ್.
ಒಂದು ಟೀ ಕುಡಿದೆ. ‘‘ಎಷ್ಟು?’’ ಎಂದು ಕೇಳಿದೆ
‘‘40 ರೂ.’’ ಎಂದ.
ಜೋಳಪುರಿ ತೆಗೆದುಕೊಂಡೆ.
ಎಷ್ಟು ಎಂದು ಕೇಳಿದೆ.
‘‘70 ರೂ.’’ ಎಂದು ಇಂಗ್ಲಿಷ್‌ನಲ್ಲಿ ನುಡಿದ.
ನಾನು ನಗು ನಗುತ್ತಾ ಅವನಿಗೆ ಪಾವತಿಸಿದೆ.
ಚಿತ್ರ ಮುಗಿದ ಬಳಿಕ, ರಸ್ತೆಗೆ ಬಂದೆ.
ಆಟೋದವನನ್ನು ಕರೆದೆ.
ಮನೆ ತನಕ ಬಿಟ್ಟ.
ಮೀಟರ್ 28 ರೂ. ತೋರಿಸುತ್ತಿತ್ತು.
ಎರಡು ರೂ. ಚಿಲ್ಲರೆ ಇಲ್ಲ ಎನ್ನುತ್ತಿದ್ದಾನೆ.
ಈ ಆಟೋದವರ ನಾಟಕ ನನಗೆ ಚೆನ್ನಾಗಿ ಗೊತ್ತು
‘‘ಚಿಲ್ಲರೆ ಇಲ್ಲ ಅಂದರೆ ಯಾಕೆ ಆಟೋ ಇಟ್ಟಿದ್ದೀಯ?’’
ನಾನು ನನ್ನ ಹಕ್ಕಿಗಾಗಿ ಹೋರಾಡ ತೊಡಗಿದೆ.
ಪ್ರಶ್ನೆ 2 ರೂಪಾಯಿಯದ್ದಲ್ಲ. ಆಟೋ ಚಾಲಕರು ಮಾಡುತ್ತಿರುವ ದರೋಡೆಯದ್ದು..
ಕೊನೆಗೂ ಆತ ಯಾರಲ್ಲೋ  ಬೇಡಿ ಎರಡು ರೂ. ತಂದುಕೊಟ್ಟ.
ಒಂದು ದೊಡ್ಡ ದರೋಡೆಯಿಂದ ಪಾರಾದ ಸಂತಸ ನನಗೆ.
ವಿಸಿಲ್ ಹಾಕುತ್ತಾ ಮನೆಯ ಕಡೆ ನಡೆದೆ.

Tuesday, January 17, 2012

ಆತ್ಮಗಳೆಲ್ಲಿ?

ಅವನು ಚೂಡಿಧಾರಾಗಳ ಅಂಗಡಿಯ ಮುಂದೆ ನಿಂತಿದ್ದ
ಸಾಲು ಸಾಲಾಗಿ ಚೂಡಿಧಾರಗಳನ್ನು ನೇತು ಹಾಕಲಾಗಿತ್ತು.
ಎಲ್ಲವನ್ನು ಒಂದೊಂದಾಗಿ ಸ್ಪರ್ಶಿಸುತ್ತಾ ಬಂದ
ಅಂಗಡಿಯಾತ ಅನುಮಾನದಿಂದ ಕೇಳಿದ ‘‘ಏನು ಬೇಕು?’’
ಅವನು ಕಂಪಿಸುವ ಧ್ವನಿಯಲ್ಲಿ ಉತ್ತರಿಸಿದ ‘‘ಇದರೊಳಗಿನ ಆತ್ಮಗಳು ಎಲ್ಲಿ, ಹೇಗೆ ಹಾರಿಹೋದವು? ಎಂದು ನೋಡುತ್ತಿದ್ದೇನೆ’’

ವಿವೇಕ್ ಶಾನುಭಾಗ್ ಕಂಡ ಉದ್ಯಾನವೊಂದರ ಕನಸು


ವಿವೇಕ್ ಶಾನುಭಾಗ್ ಅವರ ಸಂಪಾದಕತ್ವದ ‘ದೇಶಕಾಲ’ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಒಂದು ಪುಟ್ಟ ಬರಹ.

ನನ್ನ ಕೈಗೆ ಮೊತ್ತ ಮೊದಲ ‘ದೇಶಕಾಲ’ ಸಂಚಿಕೆ ಸಿಕ್ಕಿದಾಗ ನಾನು ದಂಗಾಗಿದ್ದೆ. ನನ್ನಂಥವರು ‘ಕೈ ತೊಳೆದು’ ಮುಟ್ಟಬೇ
ಕಾದಷ್ಟು ಚೆಂದವಾಗಿತ್ತು, ಮುದ್ದಾಗಿತ್ತು, ಅದ್ದೂರಿಯಾಗಿತ್ತು ಮತ್ತು ಶ್ರೀಮಂತವಾಗಿತ್ತು. ಒಂದು ರೀತಿಯಲ್ಲಿ ಮೊತ್ತ ಮೊದಲ ಬಾರಿ ಮಾರ್ಬಲ್ ಹಾಸಿದ ಮನೆ(ಸಾಹಿತ್ಯದ)ಯೊಳಗೆ ಕಾಲಿಟ್ಟ ಸ್ಥಿತಿ ನನ್ನದು. ಪುಟಪುಟಗಳನ್ನು ಬಿಡಿಸುವಾಗ ಸಣ್ಣದೊಂದು ಅಳುಕು. ಒಳ್ಳ ಕೋಣೆಯ ವಿನ್ಯಾಸ, ಲೈಬ್ರರಿ ರೂಮ್, ಡೈನಿಂಗ್ ಹಾಲ್, ಬಾಲ್ಕನಿ...ಹೀಗೆ ಪ್ರತಿಯೊಂದು ಒಪ್ಪ ಓರಣ, ಅಚ್ಚುಕಟ್ಟು. ಹಾಗೆಯೇ ಅದರೊಳಗಿರುವ ಶ್ರೀಮಂತ ಬರಹಗಳನ್ನು, ಅದಕ್ಕೆ ಮಾಡಿರುವ ವಿನ್ಯಾಸಗಳನ್ನು ನೋಡಿದಾಗ....ಇದೆಲ್ಲ ಕನ್ನಡದಲ್ಲಿ ಸಾಧ್ಯವೆ ಅನ್ನಿಸಿತ್ತು. ಆದರೆ ಅದೇ ಸಂದರ್ಭದಲ್ಲಿ ಒಂದು ಸಂಚಿಕೆಗೆ ನೂರು ರೂಪಾಯಿಯೆ ಎಂದು ನಿಟ್ಟುಸಿರು ಚೆಲ್ಲಿದ್ದೆ. ಆದರೂ ಕೊಂಡುಕೊಂಡಿದ್ದೆ. ಈಚಿನ ತಲೆಮಾರಿಗೆ ವಿವೇಕ್ ಶಾನುಭಾಗ್, ಜಯಂತ್ ಕಾಯ್ಕಿಣಿ, ನಟರಾಜ್ ಹುಳಿಯಾರ್, ಮೊಗಳ್ಳಿ ಮೊದಲಾದ ತಲೆಗಳು ತೀರಾ ಚಿರಪರಿಚಿತ. ಜಯಂತ್‌ರ ಕತೆಗಳಂತೆಯೇ ವಿವೇಕ್ ಶಾನುಭಾಗ್ ಅವರ ಕತೆಗಳೂ ನನಗೆ ಇಷ್ಟ. ಇದೀಗ ಅವರು ಒಂದು ಪತ್ರಿಕೆಯ ನೇತೃತ್ವವಹಿಸಿದ್ದಾರೆನ್ನುವುದು ನನ್ನಲ್ಲಿ ನಿಜಕ್ಕೂ ಕುತೂಹಲವನ್ನು ಹುಟ್ಟಿಸಿತ್ತು.ಚಂದ್ರಶೇಖರ ಪಾಟೀಲರ ‘ಸಂಕ್ರಮಣ’ ಒಂದು ಕಾಲದಲ್ಲಿ ಹುಟ್ಟಿಸಿ ಹಾಕಿದ ಸಾಹಿತ್ಯಕ ಚರ್ಚೆಗಳನ್ನು ನಾನು ಅರಿತಿದ್ದೇನೆ. ಓದಿದ್ದೇನೆ. ರುಜುವಾತು ಕೂಡ ಹಲವು ಕಾರಣಗಳಿಗಾಗಿ ನನ್ನೊಳಗೆ ಉಳಿದುಕೊಂಡಿದೆ. ಇದೀಗ ಹೊಸತಲೆಮಾರಿನ ತಲ್ಲಣಗಳನ್ನು, ಆಲೋಚನೆಗಳನ್ನು ಹಿಡಿದಿಡುವಲ್ಲಿ ಈ ಪತ್ರಿಕೆಗೆ ಖಂಡಿತವಾಗಿಯೂ ಸಾಧ್ಯವಿದೆ ಅನ್ನಿಸಿತ್ತು. ಆದುದರಿಂದಲೇ ಪ್ರತಿ ಸಂಚಿಕೆಗಾಗಿ ಕಾದು ಕೊಂಡುಕೊಂಡಿದ್ದೇನೆ. ಕೆಲವೊಮ್ಮೆ ‘ಗೆಳೆಯರಿಂದಲೂ ಪಡೆದು’ ಓದಿದ್ದೇನೆ.
 ಕೆಲವು ಸಂಚಿಕೆಗಳ ಬಳಿಕ ನನ್ನೊಳಗೆ ದೇಶಕಾಲದ ಕುರಿತಂತೆ ಸಣ್ಣದೊಂದು ಅಸಹನೆ ಸಿಡಿಯತೊಡಗಿತು. ಜಗತ್ತಿನ ಶ್ರೇಷ್ಟವಾದುದೆಲ್ಲ ತನ್ನಲ್ಲಿರಬೇಕೆಂಬ ಹಟ ಈ ಪತ್ರಿಕೆಯೊಳಗಿದೆ ಅನ್ನಿಸಿತು. ಶ್ರೀಮಂತನೊಬ್ಬನ ಮನೆಯ ಪಳಪಳ ಹೊಳೆಯುವ ಶೋಕೇಸ್‌ನಂತೆ ಭಾಸವಾಗತೊಡಗಿತು. ಈ ಪತ್ರಿಕೆಗೆ ಒಂದು ಪ್ರತಿ ಆಲೋಚನೆಯನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಾಗತೊಡಗಿತು. ಅದಕ್ಕೆ ಕಾರಣವೂ ಇದೆ. ತಿಳಿದೋ ತಿಳಿಯದೆಯೋ ಈ ‘ದೇಶ ಕಾಲ’ ತನ್ನ ಓದುಗರನ್ನು ಮೊದಲೇ ನಿರ್ಧರಿಸಿಟ್ಟುಕೊಂಡಿದೆ. ತನ್ನಲ್ಲಿ ಪ್ರಕಟವಾಗಬಹುದಾದ ಬರಹಗಳನ್ನೂ ಮೊದಲೇ ನಿರ್ಧರಿಸಿಟ್ಟುಕೊಂಡಿದೆ. ಅಲ್ಲಿ ಯಾವುದೂ ಹೊಸದಾಗಿ ಘಟಿಸುತ್ತಿಲ್ಲ. ಕಳಪೆಯೆನ್ನುವುದು ಇರಲೇ ಬಾರದು ಎಂದಾಗ ಹುಟ್ಟುವ ಸಮಸ್ಯೆಯಿದು.

ಈ ಸಂದರ್ಭದಲ್ಲಿ ನಾನು ‘ದೇಶಕಾಲ’ದ ಜೊತೆಗೆ ‘ಸಂಕ್ರಮಣ’ವನ್ನು ಇಡಲು ಇಷ್ಟ ಪಡುತ್ತೇನೆ. ಚಂಪಾ ‘ಸಂಕ್ರಮಣ’ವನ್ನು ಸಾಧ್ಯವಾದಷ್ಟು ಜನರ ಬಳಿಗೆ ಕೊಂಡೊಯ್ಯಲು ಪ್ರಯತ್ನ ಪಟ್ಟರು. ಚಂದಾ ಸಂಗ್ರಹಿಸುವ ಅನಿವಾರ್ಯತೆ ಅವರಿಗಿದ್ದುದರಿಂದ ಅವರು ಯಾವುದೇ ವರ್ಚಸ್ಸು ಇತ್ಯಾದಿಗಳಿಗೆ ಕಟ್ಟು ಬೀಳದೆ, ಪಕ್ಕಾ ಬ್ಯಾರಿಯೊಬ್ಬ ಸಂತೆಯಲ್ಲಿ ವ್ಯಾಪಾರ ನಡೆಸುವಂತೆ ಸಹಜವಾಗಿ ಸಂಕ್ರಮಣವನ್ನು ಸಾಹಿತ್ಯವಲಯದಲ್ಲಿ ನಡೆಸಿದರು. ಸಾಹಿತ್ಯ ಸಮ್ಮೇಳನದಲ್ಲಿ ಅಪರಿಚಿತರೊಂದಿಗೂ ಪರಿಚಿತರಂತೆ ಹಲ್ಲುಕಿರಿಯುತ್ತಾ, ಚಂದಾ ವಸೂಲಿ ಮಾಡುತ್ತಿದ್ದರು. ಸಾಹಿತಿಗಳು, ಶಿಕ್ಷಕರು, ವಿದ್ಯಾಥಿಗಳು, ಉದಯೋನ್ಮುಖ ಕವಿಗಳು, ಜೊತೆಗೆ ಚಿಂತಕರೂ ಬರೆದರು. ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಿದರು. ಒಂದು ರೀತಿ ಸಹಜವಾಗಿ ಅರಳುವ ಕಾಡಿನಂತೆ ಸಂಕ್ರಮಣ ಒಂದಾನೊಂದು ಕಾಲದಲ್ಲಿ ಓದುಗರಲ್ಲಿ ಹಬ್ಬತೊಡಗಿತು. ಅಲ್ಲಿ ಕಳಪೆ ಕಳೆಗಳು ಜಾಸ್ತಿಯಿರಬಹುದು ನಿಜ. ಆದರೆ ಅದರ ಜೊತೆಗೇ ಹೊಸ ಹೊಸ ವೈವಿಧ್ಯಗಳು ಸಂಕ್ರಮಣದ ಮೂಲಕ ಹುಟ್ಟಿಕೊಂಡವು. ತನ್ನಷ್ಟಕ್ಕೆ ಹುಟ್ಟಿ, ಸಾಯುವ ಗಿಡಮರಗಳಿದ್ದುದರಿಂದ ಸಂಕ್ರಮಣವನ್ನು ಕುಂಡದೊಳಗಿಟ್ಟು ಸಾಕುವ ಅನಿವಾರ್ಯತೆ ಚಂಪಾ ಅವರಿಗೆ ಒದಗಲಿಲ್ಲ. ಆದರೆ ಶಾನುಭಾಗ್ ಅರಲ್ಲಿ ಕಾಡು ಬೆಳೆಸುವ ಉದ್ದೇಶವಿರಲಿಲ್ಲ. ಕುಂಡದೊಳಗಿಟ್ಟು ಗಿಡಗಳನ್ನು ಸಾಕಿ ಒಂದು ಉದ್ಯಾನವನವನ್ನು ಮಾಡುವ ಪ್ರಯತ್ನ ಮಾಡಿದರು. ಸಂಜೆಯ ಹೊತ್ತು ಅವರದೇ ಬಳಗ, ಅವರದೇ ಆಲೋಚನೆ, ಅವರದೇ ಅಭಿರುಚಿ ಅಲ್ಲಿ ಉಸಿರಾಡತೊಡಗಿತು. ಕುಂಡದೊಳಗಿಟ್ಟು ಸಾಕಿದ ಗಿಡಗಳು ಬಹಳ ದುಬಾರಿ. ಅದನ್ನು ಸಹಜವಾಗಿ ಬಿಡುವಂತಿಲ್ಲ. ಪ್ರತಿದಿನ ಅದರೆಡೆಗೆ ಕಣ್ಣಾಯಿಸುತ್ತಿರಬೇಕು. ನೀರು ಹನಿಸುತ್ತಿರಬೇಕು. ತುಸು ಎತ್ತರ ಹುಲ್ಲು ಬೆಳೆದರೆ ಅಳತೆಗೋಲು ಇಟ್ಟು ತುದಿಗಳನ್ನು ಕತ್ತರಿಸಬೇಕು. ಉದ್ಯಾನವನವೆಂದರೆ ಸುಮ್ಮಗಾಗುವುದಿಲ್ಲ. ಅಲ್ಲಿ ಒಂದು ಗಿಡ ಸತ್ತರೂ, ಒಂದು ಹೊಸ ಗಿಡ ಬಂದರೂ ಲಾಭ-ನಷ್ಟಗಳ ವಿಷಯವಾಗುತ್ತದೆ. ಆದರೆ ಸಹಜವಾಗಿ ಹರಡಿದ ಕಾಡುಗಳಲ್ಲಿ ಆ ಸಮಸ್ಯೆಯಿಲ್ಲ. ಒಂದು ಸತ್ತರೆ ಹತ್ತು ಹುಟ್ಟಿರುತ್ತವೆ. ಅಲ್ಲಿ ಬರೇ ನೋಡುವುದಕ್ಕಷ್ಟೇ ಅಲ್ಲ, ಅಡ್ಡಾಡಬಹುದು, ಕಾಯಿ ಉದುರಿಸಬಹುದು, ಮರ ಹತ್ತಬಹುದು. ಶಿಸ್ತಿನ ಚೌಕಟ್ಟು ಅಲ್ಲಿಲ್ಲ.

ಬಹುಶಃ ಸಂಕ್ರಮಣ ಮತ್ತು ದೇಶಕಾಲದ ನಡುವೆ ಇರುವ ಮುಖ್ಯ ವ್ಯತ್ಯಾಸ ಇದು. ಒಂದು ಸಹಜವಾಗಿ ಹರಡಿಕೊಂಡ ಕಾಡಾದರೆ ಇನ್ನೊಂದು ಕಷ್ಟಪಟ್ಟು, ಶಿಸ್ತಿನಿಂದ ಬೆಳೆಸಿದ ಉದ್ಯಾನವನ. ಒಂದು ಭೂಮಿಯಿಂದ ಸಹಜವಾಗಿ ಸಿಡಿದೆದ್ದ ಮೊಳಕೆಯ ಗಿಡವಾದರೆ, ಇನ್ನೊಂದು ಹೂಕುಂಡದಲ್ಲಿ ಸಂಗ್ರಹಿಸಿಟ್ಟ ಗಿಡ. ಶ್ರಮದ ಮಟ್ಟಿಗೆ ಶಾನುಭಾಗ್ ತುಂಬಾ ಬೆವರು ಸುರಿಸಿದ್ದಾರೆ. ದೇಶಕಾಲ ಇರುವಷ್ಟು ದಿನ ಒಂದಿಷ್ಟು ಕನಸು ಕಂಡಿದ್ದಾರೆ. ಏನೋ ಕಟ್ಟಬೇಕೆಂದು ಪ್ರಯತ್ನಿಸಿ ಸುಸ್ತಾಗಿದ್ದಾರೆ. ಆದರೆ ಅವರ ದೇಶಕಾಲದ ಪ್ರಯತ್ನವನ್ನು ಯಾವ ಕಾರಣಕ್ಕೂ ನಿರಾಕರಿಸುವಂತಿಲ್ಲ. ಅದು ಸದಾ ಉಳಿಯುವಂತಹದ್ದು. ಅಪರೂಪದ ಕೆಲವು ಹೂವುಗಿಡಗಳನ್ನು ಎಲ್ಲೆಲ್ಲಿಂದಲೋ ತಂದು ತನ್ನ ಉದ್ಯಾನವನದಲ್ಲಿ ನಟ್ಟು, ಅದರಲ್ಲಿ ಒಂದು ಸಂಜೆಯನ್ನು ಕಳೆಯಲು ನಮಗೂ ಅವಕಾಶ ನೀಡಿದ್ದಕ್ಕಾಗಿ ವಿವೇಕ್ ಶಾನುಭಾಗರಿಗೆ ಮತ್ತು ಅವರ ಬಳಗಕ್ಕೆ ಹೃದಯ ತುಂಬಿದ ಕೃತಜ್ಞತೆಗಳು. ಇದೀಗ ದೇಶಕಾಲ ತಾತ್ಕಾಲಿಕವಾಗಿ ನಿಂತಿರಬಹುದು. ಹೊಸ ಉತ್ಸಾಹ, ಸ್ಫೂರ್ತಿ, ಜೀವಂತಿಕೆಯೊಂದಿಗೆ ಶಾನುಭಾಗ್ ಮತ್ತೆ ಬಂದೇ ಬರುತ್ತಾರೆ. ಕನ್ನಡದ ಎಲ್ಲ ಸಾಹಿತ್ಯ ಪ್ರಿಯರು ಅವರ ನಿರೀಕ್ಷೆಯಲ್ಲಿದ್ದಾರೆ.

Monday, January 16, 2012

ದೃಷ್ಟಿ
ಆತ ಅಪಘಾತವೊಂದರಲ್ಲಿ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡ.
ಅವನು ಪ್ರೀತಿಸುತ್ತಿದ್ದ ಗೆಳತಿ ಅವನಿಂದ ದೂರವಾದಳು.
ಗೆಳೆಯರೂ ಒಬ್ಬೊಬ್ಬರಾಗಿ ದೂರ ಸರಿದರು.
ಹುಡುಗ ತನಗೆ ತಾನೇ ಜೋರಾಗಿ ಹೇಳಿಕೊಂಡ
‘‘ಕಣ್ಣಿದ್ದಾಗ ನನಗೇನು ಕಾಣುತ್ತಿರಲಿಲ್ಲ. ಈ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ. ಕೃತಜ್ಞತೆಗಳು ದೇವರೇ.....’’

Thursday, January 12, 2012

ಹುಚ್ಚ ಮತ್ತು ಇತರ ಕತೆಗಳು

ಹುಚ್ಚ
ಅವನೊಬ್ಬ ಹುಚ್ಚ. ಅಥವಾ ಅವನನ್ನು ಹಾಗೆಂದು ಕರೆಯುತ್ತಿದ್ದರು. 
ತನ್ನಷ್ಟಕ್ಕೆ ಮಾತನಾಡುತ್ತಿದ್ದ. ತನಗೆ ತಾನೆ ನಗುತ್ತಿದ್ದ. ಎಲೆ, ಸೊಪ್ಪುಗಳನ್ನು ವಿಚಿತ್ರವಾಗಿ ಅಚ್ಚರಿಯಿಂದ ನೋಡುತ್ತಿದ್ದ. ಮಣ್ಣನ್ನು ಏನೋ ಅಮೂಲ್ಯ ವಸ್ತುವೋ ಎಂಬಂತೆ ಪರೀಕ್ಷಿಸುತ್ತಿದ್ದ. ಬಟ್ಟೆಗಳು ಕೊಳಗಾಗಿದ್ದವು. ಹರಿದಿದ್ದವು. ಗಡ್ಡ ಕೂದಲನ್ನು ತೆಗೆಯದೆ ವರ್ಷ ಕಳೆದಿತ್ತು. ಅಂತಹ ಹುಚ್ಚನ ಜೊತೆಗೆ ಸಂತ ಪ್ರತಿ ದಿನ ಒಂದೆರಡು ಗಂಟೆ ಕಳೆಯುತ್ತಿದ್ದ. ಹುಚ್ಚನ ಹುಚ್ಚು ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದ. ಕೆಲವುಗಳಿಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದ. ಅಧ್ಯಾತ್ಮದ ಬಗ್ಗೆಯೂ ಚರ್ಚಿಸುತ್ತಿದ್ದ. ಇದು ಶಿಷ್ಯರಿಗೆಲ್ಲ ಅಸಹನೀಯವೆನ್ನಿಸಿತು. ಆದರೆ ಸಂತನನ್ನು ಪ್ರಶ್ನಿಸುವ ಧೈರ್ಯ ಸಾಲದೆ ಸುಮ್ಮಗಿದ್ದರು.
ಒಂದು ದಿನ ಸಂತ ಹುಚ್ಚನ ಜೊತೆ ಕಳೆದು ಆಶ್ರಮದಲ್ಲಿ ಮಂಕಾಗಿ ಕುಳಿತಿದ್ದ. ಶಿಷ್ಯರು ಕೇಳಿದರು. ‘‘ಏನಾಯಿತು ಗುರುಗಳೇ?’’
ಸಂತ ಆಕಾಶ ನೋಡಿ ಉತ್ತರಿಸಿದ ‘‘ನಾನು ಅವನಂತಾಗಲು ಇನ್ನೂ ಅದೆಷ್ಟು ಸಾಧನೆ ಮಾಡಬೇಕೋ?’’

ಕಲಿಕೆ
‘‘ಗುರುಗಳೇ...ನಾನು ಈ ಆಶ್ರಮಕ್ಕೆ ಸೇರಿ ಇಂದಿಗೆ ಒಂದು ವರ್ಷವಾಯಿತು. ನೀವೇಕೆ ಏನನ್ನೂ ಕಲಿಸುತ್ತಿಲ್ಲ?’’
‘‘ನನ್ನದೂ ಅದೇ ಪ್ರಶ್ನೆ. ಈ ಆಶ್ರಮಕ್ಕೆ ಸೇರಿ ನೀನು ಒಂದು ವರ್ಷವಾಯಿತು. ನೀನೇಕೆ ಏನೂ ಕಲಿಯುತ್ತಿಲ್ಲ?’’ ಸಂತ ಮರು ಪ್ರಶ್ನಿಸಿದ.?

ದರೋಡೆ
ಕಳ್ಳ ಮದುವೆ ಮನೆಗೆ ನುಗ್ಗಿದ.
ಹಣದ ತಿಜೋರಿಯ ಕೋಣೆ ಹೊಕ್ಕಾಗ ಅಲ್ಲಿ ದಂಪತಿಗಳು ಬಂದು ಬಿಟ್ಟರು.
ಬಂದವರು ಮದುವೆ ಹೆಣ್ಣಿನ ತಂದೆ ತಾಯಿ.
ಅವರಿಬ್ಬರು ತುಂಬಾ ಹೊತ್ತು ಪರಸ್ಪರ ಮಾತನಾಡಿ, ಬಳಿಕ ಕಣ್ಣೊರೆಸುತ್ತಾ ಅಲ್ಲಿಂದ ತೆರಳಿದರು.
ಕಳ್ಳ ತನಗೆ ತಾನೆ ನಿರಾಸೆಯಿಂದ ನುಡಿದ ‘‘ಈ ಮನೆಯನ್ನು ಈಗಾಗಲೇ ದರೋಡೆಕೋರರು ದೋಚಿ ಬಿಟ್ಟಾಗಿದೆ’’

ಶುಚಿ
ದಲಿತನೊಬ್ಬ ದೇವಸ್ಥಾನದ ಆವರಣವನ್ನು ಪ್ರವೇಶಿಸುತ್ತಿದ್ದ.
ಪುರೋಹಿತ ಆತನನ್ನು ತಡೆದ ‘‘ನಿಲ್ಲು. ನೀನು ಪ್ರವೇಶಿಸುವಂತಿಲ್ಲ. ಅಪವಿತ್ರವಾಗುತ್ತದೆ’’
ದಲಿತ ವಿನೀತನಾಗಿ ನುಡಿದ ‘‘ನಾನು ದೇವಸ್ಥಾನದ ಆವರಣವನ್ನು ಶುಚಿಗೊಳಿಸುವುದಕ್ಕೆ ಬಂದಿದ್ದೇನೆ...’’
‘‘ಓಹೋ..ಶುಚಿಗೊಳಿಸುವುದಕ್ಕೆ ಬಂದಿದ್ದೀಯ? ಹಾಗಾದರೆ ಹೋಗು....ಬೇಗ ಕೆಲಸ ಮುಗಿಸು....’’

ಊರು
‘‘ಗುರುಗಳೇ ಕನಸುಗಳಿಲ್ಲದ ಊರಿದೆಯೆ?’’
‘‘ಇದೆ. ಆ ಊರಿಗೆ ಸ್ಮಶಾನ ಎಂದು ಹೆಸರು’’

ಅನ್ನ
‘‘ಕೃತಘ್ನ, ನನ್ನ ಅನ್ನ ತಿಂದು ನೀನು ಬೆಳೆದಿದ್ದೀಯ, ಅದನ್ನು ಮರೆತೆಯ?’’
ಅವನು ಅಬ್ಬರಿಸಿದ.
‘‘ನಿಮ್ಮ ಅನ್ನವನ್ನು ನಾನು ತಿಂದದ್ದು ನಿಜವಾದರೆ ನೀವು ಹುಲ್ಲು ತಿಂದು ಬೆಳೆದಿರಾ?’’
ಅವನು ತಣ್ಣಗೆ ಮರು ಪ್ರಶ್ನಿಸಿದ.

ಪುನರ್ಜನ್ಮ
‘‘ನಿಮಗೆ ಪುನರ್‌ಜನ್ಮದಲ್ಲಿ ನಂಬಿಕೆ ಇದೆಯೆ?’’ ಶಿಷ್ಯ ಕೇಳಿದ.
‘‘ಇದೆ. ಮನುಷ್ಯ ತಾಯಿಯ ಹೊಟ್ಟೆಯಿಂದ ಒಮ್ಮೆ ಹುಟ್ಟಿದರೆ ಪರಿಸ್ಥಿತಿಗಳ ಹೊಟ್ಟೆಯಿಂದ ಪ್ರತಿ ಬಾರಿ ಹುಟ್ಟುತ್ತಾ, ಸಾಯುತ್ತಾ ಇರುತ್ತಾನೆ. ನಾನು ಈಗಾಗಲೇ ಹಲವು ಬಾರಿ ಹುಟ್ಟಿ, ಹಲವು ಬಾರಿ ಸತ್ತಿದ್ದೇನೆ’’ ಸಂತ ಉತ್ತರಿಸಿದ.

Thursday, January 5, 2012

ಪಾತುಮ್ಮಜ್ಜಿಯ ದಾಹ!

ರಾತ್ರಿ ಹನ್ನೊಂದು ಗಂಟೆ ಇರಬಹುದು. ಅಮ್ಮ, ತಂಗಿಯರೆಲ್ಲ ಒಳಗೆ ಹೋಗಿದ್ದರು. ಕರೆಂಟ್ ಇಲ್ಲದ ಕಾರಣ ಚಿಮಿಣಿ ದೀಪ ಹಚ್ಚಿಟ್ಟು ನಾನು ಅದೇನೋ ಓದುತ್ತಿದ್ದೆ. ಹೊರಗೆ ಧಾರಾಕಾರ ಮಳೆ. ಅಂಗಳದ ತುಂಬಾ ನೀರು. ಆಗಲೇ ಇದಬೇಕು.... ಆ ಒದ್ದೆ ರಾತ್ರಿಯನ್ನು ಈಜಿಕೊಂಡು ಬಂದ ಕರೆ ನನ್ನನ್ನು ಬೆಚ್ಚಿ ಬೀಳಿಸಿದ್ದು. ಯಾರೋ ನನ್ನ ಹೆಸರಿಡಿದು ಕರೆಯುತ್ತಿದ್ದರು. ಬಾಗಿಲು ತಟ್ಟಿದ ಸದ್ದು ಬೇರೆ. ಒಳ ಹೊರಗೆ ಸುಳಿದಾಡುತ್ತಿದ್ದ ಚಳಿಗಾಳಿಗೆ ಚಿಮಿಣಿ ದೀಪ ಚಡಪಡಿಸುತ್ತಿತ್ತು. ನನ್ನಾಳದಲ್ಲಿ ಒಂದು ಬಗೆಯ ಭಯ ಭುಗ್ಗೆಂದು ಎದ್ದು, ತಳ ಸೇರಿತು. ಹೋಗಿ ಬಾಗಿಲು ತೆರೆದರೆ ಕೆಳಗಿನ ಅದ್ದು ಚಳಿಯೋ, ಭಯವೋ ನಡುಗುತ್ತಾ ನಿಂತಿದ್ದ. ಕೊಡೆ ಬಿಡಿಸಿ ನಿಂತಿದ್ದರೂ ಅವನ ಮುಖ, ಮೈಯೆಲ್ಲ ಒದ್ದೆಯಾಗಿತ್ತು. ಅವನು ನನ್ನನ್ನು ಕಂಡದ್ದೇ ಒಂದೇ ಉಸಿರಿಗೆ ಹೇಳಿದ ‘‘ನೀರು ಬೇಕಾಗಿತ್ತು...ಝಂಝಂ ನೀರು ಬೇಕಾಗಿತ್ತು''
ಅವನ ಧ್ವನಿ ಕಂಪಿಸುತ್ತಿರುವ ರೀತಿಗೇ ನನಗೆಲ್ಲ ಅರ್ಥವಾಗಿ ಹೋಯಿತು. ಅದ್ದುವಿನ ಮುತ್ತಜ್ಜಿ ಪಾತುಮ್ಮಾದ ಸಾವಿನ ಅಂಚನ್ನು ತಲುಪಿದ್ದಾರೆ. ನನ್ನ ಝಂಝಂ ನೀರಿಗಾಗಿ ಆಕೆ ಕೊನೆಯ ಉಸಿರನ್ನು ಹೊರದಬ್ಬದೇ ಹಾಗೆ ಕಾಯುತ್ತಾ ಮಲಗಿದ್ದಾಳೆ.
ಪಾತುಮ್ಮಾದ ನಮ್ಮೂರಿನ ಅತಿ ಹಿರಿಯ ಜೀವ. ವಯಸ್ಸು ನೂರು ದಾಟಿರಬಹುದು. ಆ ಊರಿನ ಹೆಚ್ಚಿನ ತರುಣರನ್ನು ತಾಯಿಯ ಗರ್ಭದಿಂದ ಹೊರಗೆಳೆದದ್ದು, ಹುಟ್ಟಿದ ಮಗುವನ್ನು ನಲವತ್ತು ದಿನ ಮೀಯಿಸಿದ್ದು, ಸಣ್ಣ ಪುಟ್ಟ ತುಂಟ ರೋಗಗಳಿಂದ ಮಕ್ಕಳನ್ನು ತನ್ನ ಹಳ್ಳಿ ಮದ್ದಿನ ಮೂಲಕ ರಕ್ಷಿಸಿದ್ದು  ಇದೇ ಪಾತುಮ್ಮಾದ. ನಾನು ತಾಯಿಯ ಹೊಟ್ಟೆಯಿಂದ ನೇರವಾಗಿ ಪಾತುಮ್ಮನ ಬೊಗಸೆಗೆ ಬೀಳಲಿಲ್ಲವಂತೆ. ತಲೆಯನ್ನು ಉಲ್ಟಾ ಮಾಡಿ, ತಾಯಿಯ ಗರ್ಭದಿಂದ ಬರಲಾರೆ ಎಂದು ಹಟ ಹಿಡಿದಿದ್ದೆನಂತೆ. ಇದೇ ಪಾತುಮ್ಮಜ್ಜಿ ತನ್ನೆಲ್ಲ ಶ್ರಮದಿಂದ, ತಾಯಿಯ ಗರ್ಭವನ್ನು ನೀವಿ ನೀವಿ ತಲೆಯನ್ನು ಉಲ್ಟಾ ಮಾಡಿ, ಮೆಲ್ಲಗೆ ತಾಯಿಯ ಗರ್ಭದಿಂದ ಹೊರಗೆ ಜಾರಿಸಿದರಂತೆ.
‘‘ನಿನ್ನ ಹಟ ನನ್ನಲ್ಲಿ ತೋರಿಸಬೇಡ. ನೀನು ಗರ್ಭದೊಳಗೆ ಇದ್ದಾಗಲೇ ನಿನ್ನ ಆಟಕ್ಕೆ ಹೆದರಲಿಲ್ಲ. ಈಗ ಹೆದರುತ್ತೇನಾ... ಹೆಚ್ಚಿಗೆ ಮಾತನಾಡಿದರೆ ಮತ್ತೆ ತಲೆ ಉಲ್ಟಾ ಮಾಡಿ, ಅಲ್ಲಿಗೇ ವಾಪಸ್ ಕಳುಹಿಸಿಲಿಕ್ಕುಂಟು’’ ಎಂದು ಪಾತುಮ್ಮ ನನ್ನಲ್ಲಿ ಆಗಾಗ ಕೊಚ್ಚಿಕೊಳ್ಳುವುದಿತ್ತು.
ನನ್ನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿದ್ದೂ ಆಕೆಯೇ ಅಂತೆ. ನಾನು ಅಳದೆ ಆಕೆಯನ್ನು ನೋಡಿ ನಕ್ಕೆನಂತೆ. ಅದು ನಿಜವೇ ಇರಬಹುದು. ಆಕೆ ನನ್ನ ನಲ್ವತ್ತು ದಿನ ಮೀಯಿಸಿದಳು. ಕೈ ಹಿಡಿದು ನಡೆಸಿದಳು. ರೋಗಗಳಿಂದ ರಕ್ಷಿಸಿದಳು. ಕತೆ ಹೇಳಿಕೊಟ್ಟಳು. ಪದ ಹಾಡಿ ಮಲಗಿಸಿದಳು. ಅಂತಹ ಅಜ್ಜಿಗಳಿಗೆಲ್ಲ ಅಜ್ಜಿಯೆನ್ನಬಹುದಾದ ಪಾತುಮ್ಮ ನಾಲ್ಕೆೃದು ತಿಂಗಳ ಹಿಂದೆ ನನ್ನ ಕೈಯನ್ನು ತನ್ನ ಕಂಪಿಸುವ ಕೈಗಳಲ್ಲಿ ತುಂಬಿ ಕೇಳಿದ್ದಳು. ‘ಮಗನೇ ... ನಾನು ಸಾಯುವಾಗ ಝಂಝಂ ನೀರು ಕುಡಿದು ಸಾಯಬೇಕು ಎಂದು ಆಸೆ. ಎಲ್ಲಿಂದಾದರೂ ಝಂಝಂ ನೀರು ತರಿಸಿಟ್ಟುಕೋ... ಸಾಯುವ ಮೊದಲು ನನ್ನ ಪುಳ್ಳಿ ಅದ್ದುವನ್ನು ಕಳಿಸುತ್ತೇನೆ...’’ ಇದೀಗ ಈ ಹೊತ್ತಲ್ಲದ ಹೊತ್ತಿನಲ್ಲಿ ಪಾತುಮ್ಮಾದಳ ಪುಳ್ಳಿ ಅದ್ದು ನನ್ನ ಮುಂದೆ ನಿಂತು ಝಂಝಂ ನೀರು ಕೇಳುತ್ತಿದ್ದಾನೆ.
ಸಾವಿರಾರು ವರ್ಷಗಳ ಹಿಂದೆ ಮಕ್ಕಾ ಮರುಭೂಮಿಯಲ್ಲಿ ಪ್ರವಾದಿ ಇಬ್ರಾಹೀಂಮರ ಪತ್ನಿ ಹಾಜಿರಾ ಎನ್ನುವ ತಾಯಿ ತನ್ನ ಮಗುವಿನ ಜೊತೆ ಮರುಭೂಮಿ ಪಾಲಾದರಂತೆ. ಆ ಮರುಭೂಮಿಯ ನಟ್ಟ ನಡುವೆ ಮಗು ಬಾಯಾರಿ ಅಳತೊಡಗಿತು. ಪತ್ನಿ ಹಾಜಿರಾಂ ಎದೆ ಹಾಲು ಬತ್ತಿ ಹೋಗಿತ್ತು. ಮಗುವಿನ ಅಳುವಿನ ಸದ್ದು ಜೋರಾದಂತೆ ಹಾಜಿರಾ ನೀರಿಗಾಗಿ ಅತ್ತಿತ್ತ ತಡಕಾಡತೊಡಗಿದರು. ಮಗುವಿನ ಅಳು ಮರುಭೂಮಿಯನ್ನು ವ್ಯಾಪಿಸತೊಡಗಿದಂತೆ ಹಾಜಿರಾ ಏಳು ಬಾರಿ ನೀರಿಗಾಗಿ ಅಲೆಯುತ್ತಾ ಸಫಾ- ಮರ್ವಾ ಪರ್ವತವನ್ನಿ ಏರಿ ಇಳಿದರಂತೆ. ಆದರೆ ಒಂದು ಹನಿ ನೀರೂ ಸಿಗಲಿಲ್ಲ. ಇತ್ತ ಮಗುವಿನ ಬಳಿ ಅಂದರೆ ಬಾಯಾರಿ ನೊಂದ ಮಗುವಿನ ಪಾದದ ಬಡಿತಕ್ಕೆ ಎದೆಯಿಂದ ಹಾಲುಕ್ಕುವಂತೆ ಮರುಭೂಮಿಯಿಂದ ನೀರಿ ಚಿಮ್ಮಿತಂತೆ. ಚಿಮ್ಮಿ ಹರಿಯ ತೊಡಗಿದ ನೀರನ್ನು ತಾಯಿ ಹಾಜಿರಾ ‘‘ಝಂಝಂ(ನಿಲ್ಲು ನಿಲ್ಲು)’’ ಎಂದು ತಡೆದು, ತನ್ನ ಮಗುವಿಗೆ ಉಣಿಸಿದರಂತೆ. ಇಂದಿಗೂ ಮಕ್ಕಾದಲ್ಲಿ ಝಂಝಂ ನೀರು ಉಕ್ಕಿ ಹರಿಯುತ್ತಿದೆ. ಹಜ್ ಯಾತ್ರೆಗೆ ಹೋದ ಎಲ್ಲ ಯಾತ್ರಿಕರೂ ಹಾಜಿರಾ ಏಳು ಬಾರಿ ಬೆಟ್ಟವೇರಿ ಇಳಿದ ಸಂಕೇತವಾಗಿ, ಸಫಾ ಮರ್ವಾವನ್ನು ನಿರ್ವಹಿಸುತ್ತಾರೆ. ಜೊತೆಗೆ ಈ ಝಂಝಂ ನೀರಿನೊಂದಿಗೆ ಮರಳುತ್ತಾರೆ. ಹಜ್ ಯಾತ್ರೆ ನಿರ್ವಹಿಸಿ ಬಂದವರ ಮನೆಯಲ್ಲಿ ಈ ಝಂಝಂ ನೀರು ಜೋಪಾನವಾಗಿರುತ್ತದೆ. ಆ ಮನೆಯ ಬಾಗಿಲು ತಟ್ಟುವ ಮರಣ ದೇವತೆಯ ಪಾದವನ್ನು ತೊಳೆಯುವುದಕ್ಕೆ. ಮರಣಯ್ಯೆಯಲ್ಲಿರುವವರ ಕೊನೆಯ ದಾಹವನ್ನು ತಣಿಸುವುದಕ್ಕಾಗಿ.
ನನ್ನ ತಾಯಿಯ ಅಣ್ಣ ಮತ್ತು ಅವರ ಪತ್ನಿ ಅಂದರೆ ಮಾವ ಮತ್ತು ಅತ್ತೆ ಹಜ್ ನಿರ್ವಹಿಸುವುದಕ್ಕೆ ಹೋದವರು ಎರಡು ತಿಂಗಳ ಹಿಂದೆ ಮರಳಿದ್ದರು. ಬಳಿಕ ನಮ್ಮ ಮನೆಗೂ ಬೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮಕ್ಕಾದಿಂದ ತಂದ ಒಂದು ಜಪಮಣಿ ಸರ, ಸಣ್ಣದೊಂದು ನಮಾಜು ನಿರ್ವಹಿಸುವ ಚಾಪೆ ಹಾಗೂ ಒಂದು ದೊಡ್ಡ ಬಾಡಲಿಯಲ್ಲಿ ಝಂಝಂ ನೀರು ತಂದಿದ್ದರು. ಆದ ನನಗೆ ಪಾತುಮ್ಮಾದಳ ನೆನಪಾಯಿತು. ಇರಲಿ ಎಂದು ಜೋಪಾನವಾಗಿ ಇಟ್ಟಿದ್ದೆ. ನಮ್ಮ ಮನೆಯಲ್ಲಿ ಝಂಝಂ ನೀರಿರುವುದು ಹಲವರಿಗೆ ತಿಳಿದು, ತಮ್ಮ ಅಜ್ಜಿ, ತಾಯಿ... ಹೀಗೆ ಯಾರದಾದರೂ ಮರಣದ ಸುದ್ದಿಯ ಜೊತೆಗೆ ಈ ಝಂಝಂ ನೀರಿಗಾಗಿ ಬರುತ್ತಿದ್ದರು. ಇಲ್ಲ ಎನ್ನುವುದು ತೀರಾ ಕಷ್ಟವಾಗಿತ್ತು. ವಾರದ ಹಿಂದೆ ಈ ಪಾತುಮ್ಮಜ್ಜಿ ಬಂದವಳು ‘‘ಮಗನೇ... ಎಲ್ಲವನ್ನು ಕೊಟ್ಟು ಮುಗಿಸಬೇಡ... ನನಗೆ ಎರಡು ಗುಟುಕು ನೀರು ಇರಲಿ’’ ಎಂದು ಮುದ್ದಾದ ಬೊಚ್ಚು ಬಾಯಿಯಿಂದ ಪಟ್ಟ ಮಗುವಿನಂತೆ ನಕ್ಕಿದ್ದಳು.’’ ‘‘ಆಯಿತಜ್ಜಿ ಎಂದು ಭರವಸೆ ನೀಡಿದ್ದೆ. ಮೂರು ದಿನಗಳ ಹಿಂದೆ ಪಾತುಮ್ಮಜ್ಜಿ ಕುಸಿದು ಬಿದ್ದ ಸುದ್ದಿ ಸಿಕ್ಕಿತ್ತು. ಆಕೆಯನ್ನು ನೋಡುವುದಕ್ಕೂ ಹೋಗಿದ್ದೆ. ಆಕೆ ನನ್ನನ್ನೇ ನೋಡಿ ವಿಚಿತ್ರವಾಗಿ ನಕ್ಕಿದ್ದಳು. ಆಮೇಲೆ ಆಕೆಯ ಆರೋಗ್ಯ ಕೆಡುತ್ತಾ ಬಂದಿತ್ತು.
***
‘‘ಇಲ್ಲೇ ನಿಲ್ಲು’’ ಎಂದು ಅದ್ದುವಿಗೆ ಹೇಳಿ, ನಾನು ಚಿಮಿಣಿ ಹಿಡಿದು ಒಳಕೋಣೆಗೆ ಹೋದೆ. ‘‘ಯಾರೋ ಅದು...’’ ಒಳಗಿನಿಂದ ಅಮ್ಮ ಕೇಳಿದಳು.
‘‘ಪಾತುಮ್ಮಜ್ಜಿ ಪುಳ್ಳಿ ಬಂದಿದ್ದಾನೆ... ಝಂಝಂ ನೀರು ಬೇಕಂತೆ...’’ ಎಂದೆ. ‘‘ಕೊನೆಗೂ ಮುದುಕಿಗೆ ಹೋಗುವ ಸಮಯ ಬಂತೂಂತ ಕಾಣುತ್ತದೆ...’’ ಅಮ್ಮನ ಗೊಣಗು ಕೇಳಿತು.
ನಾನು ಕೋಣೆಯ ಕಪಾಟು ತೆರೆದೆ. ಮೇಲಿನ ಚೌಕದಲ್ಲಿ ಝಂಝಂ ಬಾಟಲಿ ಹೊಳೆಯುತ್ತಿದೆ. ಕೈಗೆತ್ತಿಕೊಂಡೆ ಬಾಟಲಿ ನೋಡುತ್ತಿದ್ದಂತೆಯೇ ನನ್ನ ಹದಯ ಬಾಯಿಗೆ ಬಂತು... ಬಾಟಲಿ ಖಾಲಿಯಾಗಿತ್ತು. ಮೊನ್ನೆ ನೋಡಿದಾಗ ಬಾಟಲಿಯಲ್ಲಿ ನೀರಿತ್ತಲ್ಲ? ಬಹುಶಃ ತಂಗಿಯರು ಯಾರೋ ಕೇಳಿದರೆಂದು ಕೊಟ್ಟು ಬಿಟ್ಟರ? ಬಾಟಲಿಯ ತಳ ಒಣಗಿತ್ತು. ಯಾಕೋ ನನ್ನ ಕೈ ಕಂಪಿಸಿತು. ಗಂಟಲು ಕಟ್ಟಿದಂತಾಯಿತು. ಅದ್ದುವಿಗೆ ಏನೆಂದು ಹೇಳಲಿ? ಒಂದು ಕ್ಷಣ ಹಾಗೇ ಪಕ್ಕದ ಮಂಚದಲ್ಲಿ ಕೂತು ಬಿಟ್ಟೆ. ಅಷ್ಟೇ... ಏನೋ ಹೊಳೆಯಿತು ನನಗೆ. ಆ ಕತ್ತಲಲ್ಲಿ ಮಿಂಚೊಂದು ಸುಳಿಯುವಂತೆ. ಬಾಟಲಿಯೊಂದಿಗೆ ನೇರವಾಗಿ ಅಡುಗೆ ಕೋಣೆ ಹೊಕ್ಕೆ. ಅಲ್ಲಿ ಅಮ್ಮ ಬಾವಿಯಿಂದ ತಂದ ನೀರು ಕೊಡ ತುಂಬ ಹೊಳೆಯುತ್ತಿತ್ತು. ಅರ್ಧ ಬಾಟಲು ನೀರನ್ನು ತುಂಬಿಸಿ, ಹೊರಗೆ ಕಾಯುತ್ತಿರುವ ಅದ್ದುವಿನ ಕೈಗಿತ್ತೆ. ‘‘ಸ್ವಲ್ಪ ಉಳಿದಿತ್ತು... ತೆಗೆದುಕೋ’’ ಎಂದೆ.
***
ಮರುದಿನ ನಾನು ತಾಯಿ ಮತ್ತು ತಂಗಿಯರ ಜೊತೆಗೆ ಪಾತುಮ್ಮನ ಮನೆಗೆ ಹೋದೆ. ಮತದೇಹವನ್ನು ಮೀಯಿಸುವುದಕ್ಕೆ ಇಟ್ಟಿದ್ದರು. ಅದ್ದು ಯಾರಲ್ಲೋ ಹೇಳುತ್ತಿದ್ದ.‘‘...ಝಂಝಂ ನೀರು ತಂದಿದ್ದೇನೆ.... ಎಂದು ಹೇಳಿದಾಕ್ಷಣ ಅಜ್ಜಿ ಕಣ್ಣು ತೆರದಳು.. ಬಾಯಿಗೆ ನೀರು ಹಾಕಿದಂತೆ ಗಳಗಳನೆ ಕುಡಿದಳು... ಆಮೇಲೆ ಮೆಲ್ಲಗೆ ‘ ಈಗ ಸಮಾಧಾನವಾಯಿತು’ ಎಂದು ಉಸುರಿದಳು... ಹಾಗೆ ಕಣ್ಣು ಮುಚ್ಚಿದವಳು ಕಣ್ಣು ತೆರೆಯಲೇ ಇಲ್ಲ....’’
ಅಮ್ಮ ತಂಗಿಯನ್ನು ಪಾತುಮ್ಮಜ್ಜಿಯನ್ನು ಮೀಯಿಸುವಲ್ಲಿಗೆ ಹೋದರು. ನನಗೆ ಪಾತಿಮ್ಮಜ್ಜಿಯ ಮುಖವನ್ನು ನೋಡುವ ಧೈರ್ಯವಿರಲಿಲ್ಲ. ಅಂಗಳದಲ್ಲೇ ಕರ್ಪೂರದ ವಾಸನೆಯನ್ನು ಆಘ್ರಾಣಿಸುತ್ತಾ ನಿಂತಿದ್ದೆ. ಅಷ್ಟರಲ್ಲಿ ಆಕಾಶದಿಂದ ಒಂದು ಹನಿ ನನ್ನ ಕೆನ್ನೆಯ ಮೇಲೆ ಉದುರಿತು. ಮೇಲೆ ನೋಡಿದೆ. ಇನ್ನೇನು ಸುರಿಯುವುದಕ್ಕೆ ಸಿದ್ಧವಾಗಿ ನಿಂತಿರುವ ಮೋಡಗಳು.
‘‘ಝಂಝಂ’’ ಎನ್ನುವ ಎರಡು ಶಬ್ದಗಳು ನನ್ನ ಅಪ್ಪಣೆಯನ್ನು ಮೀರಿ ನನ್ನ ಬಾಯಿಂದ ಉದುರಿದವು.

Sunday, January 1, 2012

ಚಿಕ್ಕಿಯ ಬೆಳಗಿನ ತಿಂಡಿ!

ಚಿಕ್ಕಿ ಮತ್ತು ಪಿಂಕಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಎರಡು ಪುಟ್ಟ ಗುಬ್ಬಚ್ಚಿ ಮರಿಗಳು. ಇಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಹಚ್ಚಿಕೊಂಡವರು. ಚಿಕ್ಕಿ ತನ್ನ ಶಾಲೆಯ ಹಿಂದುಗಡೆಯ ಓಣಿಯಲ್ಲಿರುವ ಜೋಪಡಾಪಟ್ಟಿಯ ಗುಡಿಸಲಿಂದ ಬರುತ್ತಾಳೆ. ಪಿಂಕಿ ಶ್ರೀಮಂತ ಮನೆಯ ಬಂಗಾರ ತೊಟ್ಟಿಲಿಂದ ಈಗಷ್ಟೇ ಇಳಿದು ಬಂದವಳು.

ಒಂದು ದಿನ ಬೆಳಗ್ಗೆ ಇಬ್ಬರು ಜೊತೆಯಾದರು. ಪಿಂಕಿ ಸದಾ ಚಿಂವ್ ಚಿಂವ್ ಎನ್ನುವ ಹುಡುಗಿ, ಹೇಳಿದಳು ‘‘ನಮ್ಮ ಮನೆಯಲ್ಲಿವತ್ತು ಬೆಳಗ್ಗೆ ತಿಂಡಿಗೆ ಅಮ್ಮ ನೀರುಸೌತೆಯ ಕಡುಬು ಮಾಡಿದ್ದಳು. ನಿಮ್ಮ ಮನೆಯಲ್ಲಿ ಎಂತ?’’
ಚಿಕ್ಕಿ ಒಂದರೆಕ್ಷಣ ವೌನವಾಗಿದ್ದಳು ಮೆಲ್ಲನೆ ಬಾಯಿ ತೆರೆದಳು ‘‘ನಮ್ಮ ಮನೆಯಲ್ಲಿ ಬೆಳಗ್ಗೆ ಉಪವಾಸ’’
ಉಪವಾಸ! ಪಿಂಕಿಗೆ ಅದು ಯಾವ ಬಗೆಯ ತಿಂಡಿ ಎಂದು ಅರ್ಥವಾಗಲಿಲ್ಲ.
ಪಿಂಕಿ ಕೇಳಿದಳು ‘‘ಅದು ಸಿಹಿಯಾಗಿರತ್ತ?’’
ಚಿಕ್ಕಿ ವೌನವಾಗಿದ್ದಳು.
ಪಿಂಕಿ ಮತ್ತೆ ಕೇಳಿದಳು. ‘‘ಅದನ್ನು ಹೇಗೆ ಮಾಡುತ್ತಾರೆ? ಅದಕ್ಕೆ ಗೋಡಂಬಿ ಹಾಕ್ತಾರಾ?’’
ಗೋಡಂಬಿ! ಈ ವಸ್ತುವನ್ನು ಚಿಕ್ಕಿ ಇದೇ ಮೊದಲ ಬಾರಿ ಕೇಳಿದ್ದಳು ‘‘ಗೋಡಂಬಿ ಅಂದ್ರೇನು? ಅದು ಸಿಹಿಯಾಗಿರತ್ತ?’’
ಪಿಂಕಿ ನಕ್ಕು ಕೇಳಿದಳು ‘‘ಅಯ್ಯೋ ದೇವರೆ, ನಿನಗೆ ಗೋಡಂಬಿ ಗೊತ್ತಿಲ್ಲವ? ನಮ್ಮ ಮನೆಯ ಎಲ್ಲ ಪದಾರ್ಥಕ್ಕೆ ಗೋಡಂಬಿ ಹಾಕ್ತಾರೆ...ಸಿಹಿಯಾಗಿರಲ್ಲ, ಆದ್ರೆ ಒಂಥರಾ ತಿನ್ನೋಕೆ ನೆಲಕಡಲೆ ಥರ ಚೆನ್ನಾಗಿರತ್ತೆ...ನೀವು ಬೆಳಗ್ಗೆ ಮಾಡೋ ಉಪವಾಸಕ್ಕೆ ಗೋಡಂಬಿ ಹಾಕಲ್ವಾ?’’
ಚಿಕ್ಕಿ ಮೆಲ್ಲ ಬಾಯಿ ತೆರೆದಳು ‘‘ಹೂಂ. ಗೋಡಂಬಿ, ತುಪ್ಪಾ, ಸಕ್ಕರೆ, ಬೆಲ್ಲ, ಎಲ್ಲ ಹಾಕ್ತಾರೆ...ಅದು ಒಲೆಯಲ್ಲಿ ಬೇಯುವಾಗ ಅಕ್ಕ ಪಕ್ಕದಲ್ಲೆಲ್ಲ ಪರಿಮಳ ಬರತ್ತೆ....’’
ಪಿಂಕಿಗೆ ಬಾಯಿಯಲ್ಲಿ ನೀರು ಬಂತು ‘‘ನಿಮ್ಮ ಮನೆಯಲ್ಲಿ ದಿನಾ ಬೆಳಗ್ಗೆ ಅದನ್ನೇ ಮಾಡೋದಾ?’’
ಚಿಕ್ಕಿ ತಲೆಯಾಡಿಸಿದಳು ‘‘ಹೌದು, ನಮ್ಮ ಮನೆಯಲ್ಲಿ ದಿನಾ ಬೆಳಗ್ಗೆ ಉಪವಾಸ’’ ಬಳಿಕ ಯಾಕೋ ವೌನವಾದಳು.
***
ಅಂದು ಪಿಂಕಿಯ ಮನೆಯಲ್ಲಿ ದೊಡ್ಡ ಗಲಾಟೆ. ಬೆಳಗ್ಗಿನ ತಿಂಡಿ ತಿನ್ನುವುದಕ್ಕೆ ಪಿಂಕಿ ಕೇಳುತ್ತಿಲ್ಲ. ‘‘ತಿನ್ನೇ...ನೀರುದೋಸೆ ಚೆನ್ನಾಗಿದೆ ಕಣೇ....’’ ತಾಯಿ ಒತ್ತಾಯಿಸುತ್ತಿದ್ದರೂ ಪಿಂಕಿಯದು ಒಂದೇ ಹಟ ‘‘ನನಗೆ ಉಪವಾಸ ಮಾಡಿಕೊಡು...ನನಗೆ ಅದು ಇಷ್ಟ...’’
‘ಇದೆಂಥದು ಉಪವಾಸ! ಅದನ್ನು ಮಾಡಿಕೊಡುವುದು ಹೇಗೆ...?’ ಪಿಂಕಿಯ ತಾಯಿಗೆ ಅಚ್ಚರಿ.
‘‘ಉಪವಾಸ ಅನ್ನೋದು ತಿಂಡಿಯಲ್ಲ ಕಣೇ...ಅಂಥದೊಂದು ತಿಂಡಿ ಇಲ್ಲ’’ ಪಿಂಕಿಯ ತಾಯಿ ಸಮಜಾಯಿಶಿ ನುಡಿದಳು.
ಪಿಂಕಿ ಹಟ ಬಿಡಲಿಲ್ಲ ‘‘ನನ್ನ ಗೆಳತಿ ಚಿಕ್ಕಿಯ ಮನೆಯಲ್ಲಿ ದಿನಾ ಬೆಳಗ್ಗೆ ಉಪವಾಸವಂತೆ....ಅದಕ್ಕೆ ಗೋಡಂಬಿ, ತುಪ್ಪ ಎಲ್ಲ ಹಾಕ್ತಾರಂತೆ. ನಿನ್ನೆಯೂ ಚಿಕ್ಕಿಯ ಮನೆಯಲ್ಲಿ ಬೆಳಗ್ಗೆ ಉಪವಾಸ ಅಂತೆ. ಗೊತ್ತಾ?’’ ಹೇಳಿಯೇ ಬಿಟ್ಟಳು.
ಪಿಂಕಿಯ ತಾಯಿ ದಂಗಾಗಿ ನಿಂತು ಬಿಟ್ಟಳು. ಯಾಕೋ ಎನೋ ಆಕೆಯ ಕಣ್ಣು ತುಂಬಿತ್ತು. ಪಿಂಕಿಯನ್ನು ಮೆಲ್ಲನೆ ಎದೆಗೊತ್ತಿಕೊಂಡಳು.
ಅಂದು ಪಿಂಕಿಯ ತಾಯಿ ಮಗಳ ಟಿಫಿನ್‌ಬಾಕ್ಸ್‌ನಲ್ಲಿ ಎಂದಿಗಿಂತ ಎರಡು ಸೌಟು ಜಾಸ್ತಿ ಉಪ್ಪಿಟ್ಟು ಹಾಕಿದಳು. ಮತ್ತು ಪಿಂಕಿಗೆ ಹೇಳಿದಳು ‘‘ನಿನ್ನ ಗೆಳತಿ ಚಿಕ್ಕಿಯಲ್ಲಿ ಹೇಳು, ದಿನಾ ಬೆಳಗ್ಗೆ ಉಪವಾಸವನ್ನು ತಿನ್ನುವುದು ಸರಿಯಲ್ಲ, ಹೊಟ್ಟೆ ಹಾಳಾಗತ್ತೆ, ಹೊಟ್ಟೆ ನೋವಾಗತ್ತೆ. ಇನ್ನು ಮುಂದೆ ನಾನು ಟಿಫಿನ್‌ಬಾಕ್ಸ್ ತುಂಬಾ ತಿಂಡಿ ತರ್ತೇನೆ, ಅದನ್ನೇ ತಿನ್ನು ಅಂತ ಹೇಳು...ಆಯ್ತ್’’
ಪಿಂಕಿ ತಾಯಿಯನ್ನೇ ನೋಡಿದಳು. ಏನು ಅನಿಸಿತೋ ‘‘ಆಯ್ತಮ್ಮ...’’ ಎಂದವಳೇ ಚೀಲ ಹೆಗಲೇರಿಸಿ, ಟಿಫಿನ್‌ಬಾಕ್ಸ್‌ನ್ನು ಹೆಮ್ಮೆಯಿಂದ ಕೈಯಲ್ಲಿ ಧರಿಸಿ, ಮನೆಯಿಂದ ಹೊರಗೆ ಹೆಜ್ಜೆಯಿಟ್ಟಳು.

ಚೇತನ ತೀರ್ಥ ಹಳ್ಳಿಯವರ ಫೇಸ್‌ಬುಕ್ ಸ್ಟೇಟಸ್‌ಗೆ ಮಾಲತಿ ಶೆಣೈ ಅವರು ಒಂದು ಕಮೆಂಟ್ ಹಾಕಿದ್ದರು. ಆ ಕಮೆಂಟ್‌ನ ಸ್ಫೂರ್ತಿಯಿಂದ ಈ ಪುಟ್ಟ ಕತೆಯನ್ನು ಬರೆದಿದ್ದೇನೆ.