Tuesday, February 28, 2012

ಪಾಲು ಮತ್ತು ಇತರ ಕತೆಗಳು

ಮಾತು
ಸಂತನ ಪ್ರೀತಿಯ ಒಬ್ಬ ಶಿಷ್ಯನಿಗೆ ಬಾಯಿ ಬರುತ್ತಿರಲಿಲ್ಲ.
ಒಂದು ದಿನ ಅವನನ್ನು ಕರೆದು ‘‘ನೀನು ವಿದೇಶಗಳಿಗೆ ತೆರಳಿ ನನ್ನ ಸಂದೇಶವನ್ನು ಹರಡು’’ ಎಂದು ಸಂತ ಹೇಳಿದ.
ಉಳಿದ ಶಿಷ್ಯರಿಗೆ ಅಸೂಯೆ.
‘‘ಗುರುಗಳೇ, ಅವನಿಗೆ ಬಾಯಿ ಬರುವುದಿಲ್ಲ. ವಿದೇಶಿಯರ ಜೊತೆ ಹೇಗೆ ಯಾವ ಭಾಷೆಯಲ್ಲಿ ಮಾತನಾಡಬಲ್ಲ’’
‘ಸಂತ ನಕ್ಕು ಉತ್ತರಿಸಿದ ‘‘ಯಾವ ದೇಶಕ್ಕೆ ಹೋದರೂ, ಕೋಗಿಲೆಯ ಭಾಷೆ ಒಂದೇ. ಯಾವ ದೇಶಕ್ಕೇ ಹೋಗಿ ಗುಬ್ಬಚ್ಚಿಗಳಿಗೆ ಗುಬ್ಬಿಚ್ಚಿಗಳ ಮಾತು ಅರ್ಥವಾಗುತ್ತದೆ. ಅಂತೆಯೇ ಮೂಕ ಮಾತ್ರ ಎಲ್ಲರ ಭಾಷೆಯಲ್ಲಿ ಮಾತನಾಡಬಲ್ಲ’’

ಗೆಳೆತನ
‘‘ಅವನ ಗೆಳೆತನವನ್ನು ಬಿಟ್ಟು ಬಿಡು. ನಿನ್ನ ಪ್ರಾಣಕ್ಕೆ ಅದರಿಂದ ಅಪಾಯವಿದೆ’’ ಅವನು ಸಲಹೆ ನೀಡಿದ.
‘‘ಗೆಳೆತನಕ್ಕಾಗಿ ಪ್ರಾಣ ಕೊಡುವುದರಲ್ಲೇ ಮಜಾ ಇರುವುದು’’ ಇವನು ಉತ್ತರಿಸಿದ.

ಭಯ
ನಿರಪರಾಧಿಯೊಬ್ಬನಿಗೆ ನ್ಯಾಯವಾದಿಗಳ ಕುಯುಕ್ತಿಯಿಂದ ಮರಣದಂಡನೆ ಶಿಕ್ಷೆಯಾಯಿತು.
ಸಹ ಕೈದಿಯೊಬ್ಬ ಕೇಳಿದ ‘‘ಭಯವಾಗುತ್ತಿಲ್ಲವೆ?’’
‘‘ನನಗೇಕೆ ಭಯವಾಗಬೇಕು. ನಾನು ನಿರಪರಾಧಿ. ನನ್ನನ್ನು ಗಲ್ಲಿಗೇರಿಸಲು ಹೊರಟವರು ಭಯಪಡಬೇಕು.’’

ಊರು
‘‘ಗೊತ್ತಿಲ್ಲದ ಊರದು. ಅಲ್ಲಿ ಹೋದರೆ ಎಲ್ಲಿ ಉಳ್ಕೋತೀಯ? ಹೇಗೆ ಬದುಕುತ್ತೀಯ?’’
ಪ್ರಯಾಣ ಹೊರಟ ಅವನನ್ನು ಕೇಳಿದರು.
‘‘ಈ ಭೂಮಿಗೆ ಬರುವಾಗಲೂ ನನಗೆ ಇದು ಅಪರಿಚಿತ ಊರಾಗಿತ್ತು. ಎಲ್ಲಿ ಉಳ್ಕೊಳ್ಳೋದು, ಹೇಗೆ ಬದುಕೋದು ಎನ್ನುವುದೊಂದೂ ಗೊತ್ತಿರಲಿಲ್ಲ. ಆಗಲೇ ಇಲ್ಲದ ಚಿಂತೆ ಈಗ ಯಾಕೆ?’’

ಜೀವ
 ಮಸೀದಿಯ ಸ್ಮಶಾನದಲ್ಲಿ ಗೋರಿಗಳನ್ನು ಮೊದಲೆ ತೋಡಿರುತ್ತಾರೆ. ಆ ಬಾರಿ ತೋಡಿದ ಗೋರಿಗಳು ಹಾಗೆಯೇ ಉಳಿಯಿತು. ಯಾರೂ ಸಾಯಲಿಲ್ಲ. ಮಳೆಗಾಲ. ತೋಡಿದ ಗುಂಡಿ ನೀರು ತುಂಬಿ ವ್ಯರ್ಥವಾಗುವುದು ಬೇಡ ಎಂದು ಅದರಲ್ಲಿ ತೆಂಗಿನ ಗಿಡಗಳನ್ನು ನೆಟ್ಟರು. ಮಳೆಗಾಲ ಮುಗಿಯುವ ಹೊತ್ತಿಗೆ ಗಿಡಗಳು ಜೀವ ಹಿಡಿದು, ಅವುಗಳಲ್ಲಿ ಹೊಸ ತೆಂಗಿನ ಗರಿಗಳು ನಳನಳಿಸುತ್ತಿದ್ದವು.

ಪಾಲು
ತಂದೆ ತೀರಿ ಹೋದ ಒಂದು ತಿಂಗಳಲ್ಲಿ ಮಕ್ಕಳೆಲ್ಲ ಸೇರಿ ಮನೆಯನ್ನು ಪಾಲು ಮಾಡಲು ಹೊರಟರು.
ಎಲ್ಲವನ್ನು ತುಂಡು ಮಾಡಾಯಿತು.
ತಮಗೆ ಬಂದುದನ್ನು ಕಿತ್ತುಕೊಂಡರು.
ಕಟ್ಟ ಕಡೆಯಲ್ಲಿ ತಾಯಿಯೊಬ್ಬಳು ಉಳಿದಳು.
ಮಕ್ಕಳು ಪರಸ್ಪರ ಪಿಸುಗುಟ್ಟಿದರು ‘‘ಅಮ್ಮನನ್ನು ಹೇಗೆ ಪಾಲು ಮಾಡುವುದು?’’
 ತಾಯಿ ನಕ್ಕು ಹೇಳಿದಳು ‘‘ಮಕ್ಕಳೆ, ನನ್ನನ್ನು ಎಂದೋ ನಿಮಗೂ ನಿಮ್ಮ ತಂದೆಗೂ ಪಾಲು ಮಾಡಿ ಹಂಚಿಯಾಗಿದೆ. ಇಲ್ಲಿ ಪಾಲು ಮಾಡುವುದಕ್ಕೆ ಏನೂ ಉಳಿದಿಲ್ಲ. ನಿಮ್ಮ ನಿಮ್ಮ ಪಾಲಿನೊಂದಿಗೆ ನೀವು ಮೊದಲು ಇಲ್ಲಿಂದ ಹೊರಡಿ’’

ಕಿವುಡ
ಅವನೇನೋ ಹೊಸತನ್ನು ಹೇಳುತ್ತಿದ್ದ.
ಅದನ್ನು ಕೇಳಲು ಸಿದ್ಧನಿಲ್ಲದ ಇವನು ತನ್ನೆರಡು ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡ. ಕಿವಿ ತೆರೆದಾಗ ಜಗತ್ತಿನ ಪಾಲಿಗೆ ಇವನು ಶಾಶ್ವತ ಕಿವುಡನಾಗಿದ್ದ.

ಕಣ್ಣು
‘‘ಕುರುಡರ ಜಗತ್ತಿನಲ್ಲಿ ಹುಟ್ಟಿದ್ದೀಯ. ಕುರುಡನಂತೆ ನಟಿಸಿ ಬದುಕುವುದಕ್ಕೆ ಕಲಿ’’
ಅವನು ಸಲಹೆ ನೀಡಿದ.
‘‘ಕಣ್ಣಿದ್ದೂ ಕುರುಡನಂತೆ ನಟಿಸಿ ಬದುಕುವುದಕ್ಕಿಂತ ಅವರ ಕಣ್ಣು ತೆರೆಸುವ ಪ್ರಯತ್ನದಲ್ಲಿ ಹುತಾತ್ಮನಾಗಲು ಇಷ್ಟಪಡುವೆ’’
ಇವನು ಉತ್ತರಿಸಿದ.

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Sunday, February 26, 2012

ಕಳೆದು ಹೋದ ಬಾಲ್ಯ....

ಕಟ್ಟಕಡೆಗೆ ನ್ಯಾಯಾಲಯ ಹೇಳಿತು
‘‘ಅಗೆಯಿರಿ’’

ದೇವಾಲಯವೊಂದನ್ನು ಹುಡುಕುತ್ತಾ
ಮಸೀದಿಯ ಅಗೆದರು
ಮಸೀದಿಯ ಹುಡುಕುತ್ತಾ
ದೇವಾಲಯವ ಬಗೆದರು

ಅಗೆದಂತೆ ಅವರಿಗೆ
ಓಣಿಯೊಂದು ತೆರೆಯಿತು

ಇಬ್ಬದಿಯಲ್ಲೂ ಸುಟ್ಟು ಹೋದ ಕಾಡು
ನಡೆದಂತೆ ಮುಂದೆ...
ಮುರಿದು ಬಿದ್ದ ಒಂದು ನಾಡು!
ಆ ಪಾಳು ನಗರದಲ್ಲಿ
ಅಶಾಂತ ಆತ್ಮಗಳ ಊಳು
ಅರೆ! ಭೂತವನ್ನು ಅಗೆಯುತ್ತಾ
ಭವಿಷ್ಯವನ್ನು ತಲುಪುತ್ತಿದ್ದೇವೆಯೋ
ಯಾರೋ ಅನುಮಾನಪಟ್ಟರು!

ಅಗೆಯುತ್ತಾ ಹೋದವರು
ಥಟ್ಟನೆ ನಿಂತರು
ಒಂದಾಗಿ ಚೀರಿದರು
‘‘ಕೊನೆಗೂ ಸಿಕ್ಕಿತು’’
ಸಿಕ್ಕಿದ್ದಾದರೂ ಏನು?
ಶಂಖಾಕಾರವಾಗಿದೆ ಎಂದರು
ಅರ್ಧಚಂದ್ರನನ್ನು ಹೋಲುತ್ತಿದೆ ಎಂದರು
 ಉಜ್ಜಿದಂತೆ ಹೊಳೆಯತೊಡಗಿತು
ಅದರ ಬೆಳಕಿಗೆ ಕಣ್ಣು ಕುರುಡಾಯಿತು
ಮೂಸಿ ನೋಡಿದರು
ಮೊದಲ ಮಳೆ ಬಿದ್ದ
ಮಣ್ಣಿನ ಪರಿಮಳದ ಕಂಪು...
ಕವಿಯೊಬ್ಬ ಸ್ಪರ್ಶ ಮಾತ್ರದಿಂದ ಹೇಳಿದ
‘‘ಇದು ಕಳೆದು ಹೋದ ನಮ್ಮ ಬಾಲ್ಯ’’
(2002)

Saturday, February 25, 2012

ದಿ ಆರ್ಟಿಸ್ಟ್: ಮಾತು-ವೌನಗಳ ನಡುವಿನ ಸಂಘರ್ಷ


ಆಸ್ಕರ್ ಪ್ರಶಸ್ತಿಗಾಗಿ ಹತ್ತು ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ದಿ ಆರ್ಟಿಸ್ಟ್ ಚಿತ್ರವನ್ನು ನೋಡಿದ ಖುಷಿಯನ್ನಿಲ್ಲಿ ಹಂಚಿಕೊಂಡಿದ್ದೇನೆ. 

ಆಸ್ಕರ್ ಪ್ರಶಸ್ತಿಗಾಗಿ ಹತ್ತು ವಿಭಾಗಗಳಲ್ಲಿ ಸ್ಪರ್ಧಿಸುತ್ತಿರುವ ‘ದಿ ಆರ್ಟಿಸ್ಟ್’ ಚಿತ್ರವನ್ನು ನೋಡು ನೋಡುತ್ತಿದ್ದಂತೆಯೇ ಅದು ನಿಮ್ಮನ್ನು ದಿಗ್ಭ್ರಮೆಗೆ ಕೆಡಹುತ್ತದೆ. ಅರೆ...ಇದೇನಿದು! ಎನ್ನುವು ಉದ್ಗಾರವೊಂದು ನಿಮ್ಮಿಂದ ಹೊರ ಬಿದ್ದರೂ ಬೀಳಬಹುದು. ಆಧುನಿಕ ಸಿನಿಮಾಗಳ ವ್ಯಾಕರಣಗಳಲ್ಲಿ ಒಂದಾಗಿ ಬಿಟ್ಟಿರುವ ತಂತ್ರಜ್ಞಾನ, ಮಾತಿನ ಅಬ್ಬರ, ಅದ್ದೂರಿತನ ಇವೆಲ್ಲವುಗಳಿಂದ ನಿಮ್ಮನ್ನು ಸುಮಾರು 80 ವರ್ಷಗ ಹಿಂದಕ್ಕೆ ಕೊಂಡೊಯ್ಯುತ್ತದೆ. ಮಾತುಗಳಾಚೆಯ ವೌನವೊಂದರಲ್ಲಿ ನೀವು ಕಳೆದು ಹೋಗಿ ಬಿಡುತ್ತೀರಿ.

   ಹೌದು. ದಿ ಆರ್ಟಿಸ್ಟ್ ಚಿತ್ರ ಒಂದು ರೀತಿಯಲ್ಲಿ ಮೂಕ ಚಿತ್ರ. ಎಲ್ಲಕ್ಕಿಂತ ಮುಖ್ಯವಾಗಿ ಬ್ಲಾಕ್‌ಎಂಡ್ ವೈಟ್ ಚಿತ್ರ. ಪುರಾತನ ತಂತ್ರಜ್ಞಾನಗಳನ್ನೇ ಬಳಸಿ ತೆಗೆದ ಚಿತ್ರ. ಆದರೆ ಕತೆ ಹೇಳುವ ತಂತ್ರ ಮತ್ತು ಒಟ್ಟು ಸಿನಿಮಾದ ನಿರೂಪಣೆ ಮಾತ್ರ ಅತ್ಯಾಧುನಿಕವಾದುದು. ಮೂಕಿ-ಟಾಕಿ ಚಿತ್ರಗಳ ನಡುವಿನ ಸಂಘರ್ಷದಂತೆ ಕಾಣುವ ಈ ಚಿತ್ರ ಮಾತು-ವೌನಗಳ ನಡುವಿನ ತಿಕ್ಕಾಟವೂ ಹೌದು. ಮೂಕಿ ಚಿತ್ರಗಳ ಯುಗದಲ್ಲಿ ಸ್ಟಾರ್ ಆಗಿದ್ದ ಕಥಾನಾಯಕ, ಟಾಕಿ ಚಿತ್ರಗಳನ್ನು ಒಪ್ಪಿಕೊಳ್ಳಲು ಸಿದ್ಧನಾಗದೆ ತನ್ನ ವೌನದೊಳಗೇ ಕುಸಿಯುತ್ತಾ ಹೋಗುವ ಕತೆ ‘ದಿ ಆರ್ಟಿಸ್ಟ್’. ಅವನ ಅಹಂ ಬರೇ ಚಿತ್ರದ ಮಾತುಗಳಿಗೆ ಮಾತ್ರವಲ್ಲ, ತಾನು ಇಷ್ಟ ಪಡುವ ತರುಣಿಯ ಮಾತುಗಳಿಗೂ ಕಿವುಡಾಗುತ್ತದೆ. ಅವಳೊಳಗಿನ ಮಾತುಗಳನ್ನು ಕೇಳಿಸಿಕೊಳ್ಳುವಲ್ಲೂ ವಿಫಲನಾಗುತ್ತಾನೆ. ಒಂಟಿಯಾಗುತ್ತಾನೆ. ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಕೊನೆಗೂ ತನ್ನ ಅಹಂನ್ನು ಬಿಟ್ಟುಕೊಡಲು ಸಿದ್ಧನಿಲ್ಲದ ನಾಯಕ ಆತ್ಮಹತ್ಯೆಗೆ ಮುಂದಾಗುತ್ತಾನೆ. ಆದರೆ ಕಟ್ಟಕಡೆಯಲ್ಲಿ ಕಥಾನಾಯಕಿಯ ಮಾತುಗಳನ್ನು ಕಿವಿಕೊಡುವ ಧೈರ್ಯ ತೋರಿ ಉಳಿಯುತ್ತಾನೆ. ಅಲ್ಲಿಯವರೆಗೆ ಮೂಕವಾಗಿದ್ದ ಚಿತ್ರ ಒಮ್ಮಿಂದೊಮ್ಮೆ ಮಾತನಾಡತೊಡಗುತ್ತದೆ. 

ಅದು ಮೂಕಿ ಚಿತ್ರಗಳ ಯುಗ... ನಟ ಜಾರ್ಜ್ ವಾಲೆಂಟಿನ್ (ಜೀನ್ ಡುಜಾರ್ಡಿನ್) ಆಗ ಮೂಕಿಚಿತ್ರರಂಗದ ಅನಭಿಷಕ್ತ ರಾಜನೇ ಆಗಿದ್ದ. ಆತನಿಗೆ ಭಾವನೆಗಳನ್ನು ವ್ಯಕ್ತಪಡಿಸಲು ಮಾತುಗಳ ಅಗತ್ಯವೇ ಇಲ್ಲ. ಆತ ತನ್ನ ಮುಖ ಹಾಗೂ ಅಂಗಿಕ ಹಾವಭಾವಗಳ ಮೂಲಕ ಯಾವುದೇ ಭಾವನೆಗಳಿಗೂ ಜೀವತುಂಬಬಲ್ಲ. ಆತನಿಗೆ ತನ್ನ ಚಿತ್ರ ಸೂಪರ್ ಹಿಟ್ ಆಗಲು ಸಹನಟರ ಅಗತ್ಯವೇ ಇಲ್ಲ. ಬೆಳ್ಳಿ ತೆರೆಯಲ್ಲಿ ವಾಲೆಂಟಿನ್‌ನ ಅಚ್ಚುಮೆಚ್ಚಿನ ಸಂಗಾತಿಯೆಂದರೆ, ಅತ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಆತನ ಮುದ್ದಿನ ನಾಯಿ ಮಾತ್ರ. ಹೀಗೆ ಸಿನೆಮಾದಲ್ಲಿ ಯಾವುದೇ ಪಾತ್ರ ಮಾಡಲಿ, ಜನಮುಗಿಬಿದ್ದು ಆತನ ಚಿತ್ರ ನೋಡುತ್ತಾರೆ. ಚಿತ್ರ ಭರ್ಜರಿ ಯಶಸ್ಸು ಪಡೆಯುತ್ತದೆ.
 
ಆದರೆ ಕಾಲ ಚಲಿಸುತ್ತಿರುತ್ತದೆ. ಮೊತ್ತ ಮೊದಲ ಬಾರಿಗೆ ಅವನ ಮೂಕಿ ಚಿತ್ರಗಳ ಕೋಟೆಯೊಳಗೆ ಮಾತಿನ ಪಿಸುಮಾತು ಕೇಳುತ್ತದೆ. ನಿಧಾನವಾಗಿ ಟಾಕಿ ಚಿತ್ರಗಳ ಯುಗ ಆರಂಭವಾಗುತ್ತದೆ. ಆದರೆ ನಾಯಕ ಅದನ್ನು ಸ್ವೀಕರಿಸಲು ಸಿದ್ಧನಿಲ್ಲ. ಸಿನಿಮಾದಲ್ಲಿ ಮಾತು ಎನ್ನುವುದು ಅವನಿಗೆ ತಮಾಷೆಯ ವಸ್ತುವಾಗುತ್ತದೆ. ಆದರೆ ಹೊಸ ತಲೆಮಾರು ಇವನನ್ನು ಕಾಯುವುದಿಲ್ಲ. ಅದು ಇವನನ್ನು ಬದಿಗೆ ತಳ್ಳಿ ಮುಂದುವರಿಯುತ್ತದೆ. ಚಾರ್ಜ್‌ನಿಂದಲೇ ನಟಿಯಾಗುವ ಸೌಭಾಗ್ಯಕಂಡ ಪೆಪ್ಪಿಮಿಲ್ಲರ್ ಮೊದಲ ಬಾರಿ ಬೆಳ್ಳಿತೆರೆಯಲ್ಲಿ ಮಾತನಾಡತೊಡಗುತ್ತಾಳೆ. ಟಾಕಿ ಚಿತ್ರಕ್ಕೆ ಸವಾಲಾಗಿ ಜಾರ್ಜ್ ವ್ಯಾಲೆಂಟಿನ್ ಕೂಡ ಒಂದು ಮೂಕಿ ಚಿತ್ರವನ್ನು ತೆಗೆಯುತ್ತಾನೆ. ಅದರ ಹೆಸರು ಟಿಯರ್ಸ್‌ ಆಫ್ ಲವ್. ತನ್ನೆಲ್ಲ ಸಂಪತ್ತನ್ನು ಅದರಲ್ಲಿ ಹೂಡುತ್ತಾನೆ. ತಾನೆ ನಾಯಕ, ನಿರ್ದೇಶಕ, ನಿರ್ಮಾಪಕ. ಆದರೆ ಇತ್ತ ಟಾಕಿ ಚಿತ್ರದ ನಾಯಕಿ ಅವನೇ ಬೆಳೆಸಿದ ಪೆಪ್ಪಿ ಮಿಲ್ಲರ್. ಜಾರ್ಜ್‌ನ ಚಿತ್ರ ಮೊದಲ ದಿನವೇ ಮುಗ್ಗರಿಸುತ್ತದೆ. ಆದರೆ ಮೊದಲ ದಿನ ಪೆಪ್ಪಿ ಮಿಲ್ಲರ್ ಆ ಚಿತ್ರವನ್ನು ಬಾಲ್ಕನಿಯಲ್ಲಿ ಕೂತು ನೋಡುತ್ತಿರುತ್ತಾಳೆ. ಅವಳು ಆ ಚಿತ್ರವನ್ನು ನೋಡಿ ಕಣ್ಣೀರು ಸುರಿಸುತ್ತಾಳೆ. ಆ ಮೂಕ ಚಿತ್ರದ ಸಂದೇಶ ಅವಳನ್ನು ತಟ್ಟಿರುತ್ತದೆ. ಅವಳು ತನ್ನ ಅಭಿನಂದನೆಯನ್ನು ತಿಳಿಸಲು ಜಾರ್ಜ್ ವ್ಯಾಲೆಂಟಿನ್ ಮನೆಗೆ ಬರುತ್ತಾಳೆ. ಆದರೆ ಅಷ್ಟರಲ್ಲೇ ಪತನದ ಅಂಚಿನಲ್ಲಿದ್ದ ಅವನಿಗೆ ಪೆಪ್ಪಿ ಮಿಲ್ಲರ್ ತನ್ನನ್ನು ವ್ಯಂಗ್ಯ ಮಾಡುವುದಕ್ಕೆ ಬಂದಿದ್ದಾಳೆ ಎಂದು ತಪ್ಪು ತಿಳಿಯುತ್ತಾನೆ. ಅವಳೊಳಗಿನ ಮೂಕ ಮಾತುಗಳಿಗೆ ಕಿವುಡಾಗುತ್ತಾನೆ.
‘‘ನಾನು ನಿನ್ನ ಚಿತ್ರವನ್ನು ನೋಡಿದೆ...’’ ಎಂದು ನಾಯಕಿ ಹೇಳುತ್ತಾಳೆ.
‘‘ಓಹೋ...ಟಿಕೆಟ್‌ನ ಹಣವನ್ನು ವಾಪಾಸ್ ಕೇಳಲು ಬಂದೆಯ?’’ ನಾಯಕ ಅಣಕಿಸುತ್ತಾನೆ.
   ಒಬ್ಬ ಕಲಾವಿದ ಆಧುನಿಕತೆಗೆ ತೆರೆದುಕೊಳ್ಳದೆ, ಹೊರಗಿನ ಮಾತುಗಳಿಗೆ ಕಿವುಡಾಗುತ್ತಾ, ತನ್ನೊಳಗಿನ ಅಹಂನ್ನು ಪೋಷಿಸುತ್ತಾ ಹೋದಾಗ ಏನಾಗುತ್ತದೆಯೋ ಅದೇ ಅವನಿಗೂ ಆಗುತ್ತದೆ. ಅವನಿಗೆ ಕನಸು ಬೀಳುತ್ತದೆ. ಅದರಲ್ಲಿ ಎಲ್ಲವೂ ಸದ್ದು ಮಾಡತೊಡಗಿವೆ. ಆಕಾಶದಿಂದ ಉದುರಿದ ಹಕ್ಕಿ ಗರಿ ನೆಲಕ್ಕೆ ಬಿದ್ದಾಗ ದೊಡ್ಡ ಬಾಂಬ್ ಸ್ಫೋಟಿಸಿದಂತಹ ಸದ್ದು ಅವನಿಗೆ ಕೇಳಿಸುತ್ತದೆ. ಅವನು ತನ್ನ ಸುತ್ತಲೂ ಕಟ್ಟಿಕೊಂಡ ಮೂಕ ಜಗತ್ತಿನ ಕೋಟೆಗೆ ಮಾತು ದೊಡ್ಡ ಬಿರುಕನ್ನು ಮಾಡಿತ್ತು.
 
ಮೂಕಿ ಯುಗದ ನಾಯಕ ಜಾರ್ಜ್ ವ್ಯಾಲೆಂಟನ್‌ನ ಪಾತ್ರದಲ್ಲಿ ಜೀನ್ ಡುವಾರ್ಜಿನ್ ಅದ್ಬುತ ಅಭಿನಯ ನೀಡಿದ್ದಾರೆ. ಆತ ನಿಜಕ್ಕೂ ನಮ್ಮನ್ನು 1920ರ ದಶಕದ ಮೂಕಿ ಚಿತ್ರಗಳ ಲೋಕಕ್ಕೆ ಕೊಂಡೊಯ್ಯುತ್ತಾರೆ. ಆತನ ತುಂಟತನದ ಮೀಸೆ,ನೀಟಾಗಿ ಬಾಚಿದ ಕೂದಲು, ಜಂಭತನ ಹಾಗೂ ನೃತ್ಯದ ಮೂಲಕ ಮೂಕಿಚಿತ್ರಗಳ ಗತವೈಭವವನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ್ದಾರೆ. ಚಿತ್ರದಲ್ಲಿ ಕೊನೆಯವರೆಗೂ ನಾಯಕನಿಗೆ ಸಾಥ್ ನೋಡುವ ಪುಟ್ಟ ನಾಯಿ ಮಾತುಗಳನ್ನು ಮೀರಿ ನಮ್ಮನ್ನು ತಲುಪುತ್ತದೆ. ನಾಯಕನಿಗೆ ಕೊನೆಯವರೆಗೂ ಮನುಷ್ಯ ಭಾಷೆಯನ್ನು ಅರಿಯದ ಈ ಮೂಕ ನಾಯಿ ಧ್ವನಿಯಾಗುತ್ತದೆ.
  ಚಿತ್ರವನ್ನು ಮೂಕಿ ಚಿತ್ರವಾಗಿ, 1930ರ ಸಂದರ್ಭದ ಚಿತ್ರದಂತೆಯೇ ತೋರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಚಿತ್ರವನ್ನು ಲವಲವಿಕೆಯಿಂದ, ತಮಾಷೆಯ ರೂಪದಲ್ಲಿ ಹೇಳುತ್ತಾ ವೌನವಾಗಿ ಹೇಳುತ್ತಾ ಹೋಗುತ್ತಾರೆ ಹಾಗೆಂದು ಇದು ಸಂಪೂರ್ಣವಾಗಿ ಮೂಕಿಚಿತ್ರವೆನ್ನುವಂತಿಲ್ಲ. ಅಲ್ಲಲ್ಲಿ ಸದ್ದುಗಳನ್ನು ರೂಪಕದಂತೆ ಬಳಸಿದ್ದಾರೆ. ಚಿತ್ರದ ಕ್ಲೈಮಾಕ್ಸ್ ಮಾತಿನೊಂದಿಗೆ ಆರಂಭವಾಗುತ್ತದೆ.ನಿರ್ದೇಶಕ ಮೈಕೆಲ್ ಹಝಾನಾವಿಸಿಯಸ್ ಪ್ರತಿಭೆಗೆ ಸಾಟಿಯೇ ಇಲ್ಲ. ಒಂದು ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಬ್ಬರದಲ್ಲಿ ಮೈಮರೆತಿರುವ ಹಾಲಿವುಡ್‌ನ್ನು ತನ್ನ ಪುಟ್ಟ ಮೂಕಿ ಚಿತ್ರದ ಮೂಲಕ ಅಣಕಿಸುತ್ತಾರೆ. ಈ ಮೂಕ, ಕಪ್ಪು ಬಿಳುಪು ಚಿತ್ರದ ಮುಂದೆ ಬಾಲಿವುಡ್ ಅಬ್ಬರಗಳು, ಅದ್ದೂರಿತನ ಅರ್ಥಹೀನವಾಗಿಬಿಡುತ್ತವೆ.

  ಸಂಭಾಷಣೆಯೇ ಇಲ್ಲದ ಈ ಚಿತ್ರದಲ್ಲಿ ಹಿನ್ನೆಲೆ ಸಂಗೀತ ಅತ್ಯಂತ ಮಧುರವಾಗಿದೆ. ಚಾರ್ಲಿ ಚಾಪ್ಲಿನ್ ಚಿತ್ರಗಳ ಹಿತಾನುಭವವನ್ನು ಆರ್ಟಿಸ್ಟ್ ಚಿತ್ರ ನಮಗೆ ನೀಡುತ್ತದೆ. ಒಂದರ್ಥದಲ್ಲಿ ಆರ್ಟಿಸ್ಟ್ ಮೂಕಿ ಚಿತ್ರಗಳ ಯುಗಕ್ಕೆ ಸಲ್ಲಿಸಿದ ಶ್ರದ್ಧಾಂಜಲಿ ಎಂದರೂ ತಪ್ಪಾಗಲಾರದು.

Thursday, February 23, 2012

ಕೋಳಿ ಅಂಕಕ್ಕೆ ಒಂದು ಸುತ್ತು....

 
ಜನವರಿ-18- 2008ರಲ್ಲಿ ನಾನು ಬರೆದ ಒಂದು ಲೇಖನ ಇದು.

‘ಅಮಾನವೀಯ’ ‘ಬರ್ಬರ’ ‘ಅನಾಗರಿಕ’!
ಕಳೆದ ಒಂದು ವಾರದಿಂದ ಮಾಧ್ಯಮಗಳಲ್ಲಿ, ಟಿ.ವಿ. ಚಾನೆಲ್‌ಗಳಲ್ಲಿ ‘ಮಾನವೀಯತೆ’, ‘ನಾಗರಿಕತೆ’ಗಳ ಕುರಿತು ಪಾಠವೋ ಪಾಠ! ಯಾವುದೋ ದೌರ್ಜನ್ಯ, ಹತ್ಯಾಕಾಂಡಕ್ಕಾಗಿ ಈ ಮಾಧ್ಯಮಗಳು ಹಾಹಾಕಾರ ಮಾಡುತ್ತಿವೆ ಎಂದು ಕಿವಿ, ಕಣ್ಣು ತೆರೆದು ನೋಡಿದವರಿಗೆ ಅಲ್ಲಿ ನಿರಾಸೆ ಕಾದಿತ್ತು. ತಮಿಳುನಾಡಿನಲ್ಲಿ ಗ್ರಾಮೀಣ ಜನರ ಸಾಂಪ್ರದಾಯಿಕ ‘ಜಲ್ಲಿಕಟ್ಟು’ ಎಂಬ ಕ್ರೀಡೆಯ ಕುರಿತಂತೆ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದಾಗಲೇ ನ್ಯಾಯಾಲಯ ಈ ಜಲ್ಲಿಕಟ್ಟು ಕ್ರೀಡೆಯನ್ನು ಅಮಾನವೀಯ ಎಂದು ನಿರ್ಧರಿಸಿ, ಅದಕ್ಕೆ ನಿಷೇಧ ಹೇರಿತ್ತು. ನ್ಯಾಯಾಲಯದ ತೀರ್ಪಿಗೆ ಮಾಧ್ಯಮಗಳು ತಮ್ಮ ಹಿಮ್ಮೇಳವನ್ನು ಬಾರಿಸುತ್ತಿದ್ದವು. ಆದರೆ ಗ್ರಾಮೀಣ ಜನರೆಲ್ಲ ಒಂದಾಗಿ ಈ ತೀರ್ಪಿನ ವಿರುದ್ಧ ತಿರುಗಿ ಬಿದ್ದುದರಿಂದ, ತಾತ್ಕಾಲಿಕವಾಗಿ ನಿಷೇಧವನ್ನು ನ್ಯಾಯಾಲಯ ಹಿಂದಕ್ಕೆ ತೆಗೆದುಕೊಂಡಿತ್ತು. ಜಲ್ಲಿಕಟ್ಟು ತಮಿಳುನಾಡಿನ ಗ್ರಾಮೀಣ ಜನರಿಗೆ ಒಂದು ಕ್ರೀಡೆ ಮಾತ್ರ ಆಗಿರಲಿಲ್ಲ. ಅವರ ಪಾಲಿಗೆ ಅದೊಂದು ಪರಂಪರೆಯೂ ಆಗಿತ್ತು. ಆ ಸಾಹಸದ ಆಟಕ್ಕಾಗಿ ಅವರು ವರ್ಷವಿಡೀ ತುದಿಗಾಲಲ್ಲಿ ಕಾದು ನಿಲ್ಲುತ್ತಾರೆ. ಆ ಆಟ ಊರಿಗೊಬ್ಬ ಸಾಹಸಿಗನನ್ನು, ‘ಹೀರೋ’ನನ್ನು ಸೃಷ್ಟಿ ಮಾಡುತ್ತಿತ್ತು. ‘ಹೀರೋ’ ಆಗುವುದಕ್ಕೆ ತರುಣರು ತಮ್ಮ ಪ್ರಾಣವನ್ನೇ ಪಣವಿಟ್ಟು ಅಂಕಣಕ್ಕೆ ಇಳಿಯುತ್ತಿದ್ದರು. ಕೊಬ್ಬಿದ ಗೂಳಿಯನ್ನು ಸಿಟ್ಟಿಗೆಬ್ಬಿಸಿ ಅದನ್ನು ಮಣಿಸುವುದು ‘ಜಲ್ಲಿಕಟ್ಟು’ ಕ್ರೀಡೆಯ ಪ್ರಧಾನ ಅಂಶ. ಆದರೆ ಇದು ಅಷ್ಟೇ ಅಪಾಯಕಾರಿಯಾದ ಆಟ ಕೂಡಾ ಆಗಿದೆ. ಹಲವರ ಪ್ರಾಣಗಳಿಗೆ ಈ ಆಟ ಕುತ್ತು ತಂದಿತ್ತು. ಪ್ರಾಣಿ ಹಿಂಸೆಯೂ ಈ ಸಂದರ್ಭದಲ್ಲಿ ನಡೆಯುತ್ತಿತ್ತು. ಮನುಷ್ಯರ ದೃಷ್ಟಿಯಿಂದಲೂ, ಪ್ರಾಣಿಯ ದೃಷ್ಟಿಯಿಂದಲೂ ಈ ಆಟ ನಿಷೇಧಕ್ಕೆ ಎಲ್ಲ ಅರ್ಹತೆಯನ್ನು ಹೊಂದಿದೆ. ಆದರೆ ಈ ಸಂದರ್ಭದಲ್ಲಿ ಒಂದು ಮುಖ್ಯ ಪ್ರಶ್ನೆ ಎದುರಾಗುತ್ತದೆ. ಈ ದೇಶದಲ್ಲಿ ಪ್ರಾಣಕ್ಕೆ ಅಪಾಯವಿರುವ ಅದೆಷ್ಟೋ ಆಟಗಳನ್ನು ಸರಕಾರವೇ ಪ್ರಾಯೋಜಿಸುತ್ತಿರುವಾಗ, ನ್ಯಾಯದ ಕಣ್ಣು ಈ ಆಟದ ಮೇಲೆ ಮಾತ್ರ ಯಾಕೆ ಬಿತ್ತು?

ಕರಾವಳಿಯನ್ನೇ ತೆಗೆದುಕೊಳ್ಳೋಣ. ಇಲ್ಲಿ ‘ಕೋಳಿ ಅಂಕ’ ಎಂಬ ಕ್ರೀಡೆಯಿದೆ. ಗ್ರಾಮೀಣ ಪ್ರದೇಶದಲ್ಲಿ ತುಳುವರು ಈ ಆಟಕ್ಕಾಗಿ ಮನೆ, ಮಾರು ಕಳೆದುಕೊಂಡವರಿದ್ದಾರೆ. ಕೋಳಿಕಟ್ಟ ಎನ್ನುವುದು ತುಳುನಾಡಿನಲ್ಲಿ ಅದೆಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ ಎಂದರೆ, ಇಲ್ಲಿ ಹುಂಜವನ್ನು ಸಾಕುವುದು ಮಾಂಸಕ್ಕಾಗಿ ಮಾತ್ರವಲ್ಲ. ಕೋಳಿಕಟ್ಟಕ್ಕಾಗಿಯೇ ಹುಂಜವನ್ನು ಸಾಕುವವರಿದ್ದಾರೆ. ಇವರ ಪಾಲಿಗೆ ಹುಂಜ ಎಂದರೆ ಬರೇ ಹುಂಜ ಮಾತ್ರವಲ್ಲ. ಅದರಲ್ಲೂ ವಿವಿಧ ಬಗೆಯನ್ನು ಅವರು ಗುರುತಿಸುತ್ತಾರೆ. ತಮ್ಮ ಪತ್ನಿಗಿಂತಲೂ ಹೆಚ್ಚಾಗಿ ತಾವು ಕೋಳಿಕಟ್ಟಕ್ಕಾಗಿ ಸಾಕಿದ ಹುಂಜವನ್ನು ಪ್ರೀತಿಸುವವರಿದ್ದಾರೆ. ಹುಂಜಗಳ ಗಾಂಭೀರ್ಯ, ಬಣ್ಣ , ನೆಗೆತ ಇತ್ಯಾದಿಗಳಿಗೆ ಪೂರಕವಾಗಿ ಅವರು ಅದಕ್ಕೆ ನಾಮಕರಣವನ್ನು ಮಾಡುತ್ತಾರೆ. ಕೆಲವು ಕೋಳಿಕಟ್ಟಗಳು ಆಸುಪಾಸಿನಲ್ಲೇ ಅತ್ಯಂತ ಪ್ರಸಿದ್ಧ. ಎಷ್ಟೋ ಮೈಲು ದೂರದಿಂದ ತಮ್ಮ ಕೋಳಿಗಳನ್ನು ಹಿಡಿದುಕೊಂಡು ಬರುತ್ತಾರೆ. ಅದರ ಹಿಂದೆಯೇ ಆ ಕೋಳಿಯ ಅಭಿಮಾನಿಗಳು ಆಗಮಿಸುತ್ತಾರೆ. ಬೆಳ್ತಂಗಡಿ ಸಮೀಪದ ಮುಗೇರಡ್ಕ ಎಂಬಲ್ಲಿ ಪ್ರತಿ ವರ್ಷ ಜಾತ್ರೆಯೊಂದು ನಡೆಯುತ್ತದೆ. ಇಲ್ಲಿ ಭೂತಸ್ನಾನಗಳಿದ್ದು, ಪ್ರತಿ ವರ್ಷ ನೇಮ ನಡೆಯುವ ಸಂದರ್ಭದಲ್ಲಿ ಈ ಜಾತ್ರೆ ಜರಗುತ್ತದೆ. ನೇಮಕ್ಕೆ ಮುಂಚೆ ಇಲ್ಲಿ ಮೂರು ದಿನಗಳ ಕಾಲ ಕೋಳಿ ಅಂಕ ನಡೆಯುತ್ತದೆ. ಮುಗೇರಡ್ಕ ಜಾತ್ರೆಯನ್ನು ಕೋಳಿಗಳ ಜಾತ್ರೆ ಎಂದೇ ಕರೆಯಬಹುದು. ಕೋಳಿ ಅಂಕದ ಆ ಮೂರು ದಿನಗಳಿಗಾಗಿ ಆಸುಪಾಸಿನ ಜನಗಳು ಇಡೀ ವರ್ಷ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಅದಕ್ಕಾಗಿ ಸಿದ್ಧತೆ ನಡೆಸುತ್ತಿರುತ್ತಾರೆ. ಈ ಕೋಳಿ ಅಂಕ ಪ್ರವೀಣರಿಗೆ ಯಾರ ಬಳಿ ಎಂತಹ ಕೋಳಿಗಳಿವೆ. ಯಾವ ಕೋಳಿ ಎಷ್ಟು ಗರ್ವವನ್ನು ಹೊಂದಿದೆ. ಯಾವ ಕೋಳಿ ಹೆಚ್ಚು ನೆಗೆಯುತ್ತದೆ ಇತ್ಯಾದಿಗಳ ಮಾಹಿತಿಗಳಿರುತ್ತವೆ. ಒಬ್ಬನ ಗರ್ವವನ್ನು ಮುರಿಯುವುದಕ್ಕಾಗಿಯೇ ಇನ್ನೊಬ್ಬ ಕೋಳಿಯನ್ನು ಸಾಕುವುದಿದೆ. ತಮ್ಮ ತಮ್ಮ ಸೇಡುಗಳನ್ನು ಕೋಳಿಯನ್ನು ಛೂ ಬಿಡುವ ಮೂಲಕ ತೀರಿಸುವುದಿದೆ. ತನ್ನ ಪ್ರೀತಿಯ ಕೋಳಿಗೆ ಇನ್ನೊಂದು ಕೋಳಿ ಎದೆಗೆ ಇರಿದದ್ದನ್ನು ನೋಡಲಾಗದೆ ಕಣ್ಣೀರಿಟ್ಟವರಿದ್ದಾರೆ. ಹರಿದ ಕೋಳಿಯ ಹೊಟ್ಟೆಯನ್ನು ಸ್ಥಳದಲ್ಲೇ ಹೊಲಿದು ಮತ್ತೆ ಅಂಕಕ್ಕೆ ಇಳಿಸಿ ಗೆದ್ದವರಿದ್ದಾರೆ. ಎದುರಾಳಿ ಕೋಳಿಯ ಕಾಲಿಗೆ ಕಟ್ಟಿದ ಕತ್ತಿ ಇರಿಯುವುದು ಇನ್ನೊಂದು ಕೋಳಿಯ ಹೊಟ್ಟೆಯನ್ನೇ ಆದರೂ, ಅದರ ನೋವು ಮಾಲಕನಿಗೆ ಎನ್ನುವುದು ಕೋಳಿಗಳಿಗೂ ಗೊತ್ತಿದೆ. ತಮ್ಮ ಗೌರವವನ್ನು, ಅಭಿಮಾನವನ್ನು ಕೋಳಿಯ ಮೇಲೆ ಅವಾಹಿಸಿ, ಕಣಕ್ಕಿಳಿಸುತ್ತಾರೆ. ಇದು ಕೋಳಿ ಅಂಕ ತುಳುವ ಜನರ ಬದುಕಿನಲ್ಲಿ ಬೆರೆತಿರುವ ರೀತಿ.

ಕೋಳಿ ಅಂಕ ಹಿಂಸೆ ನಿಜ. ಅದೊಂದು ಜೂಜಾಟವೆನ್ನೂದು ನಿಜ. ಹಲವರು ಈ ಜೂಜಾಟದಲ್ಲಿ ಹಣವನ್ನು ಕಳೆದುಕೊಂಡವರಿದ್ದಾರೆ. ಹಾಗೆಯೇ ಇದು ಎರಡು ಗುಂಪುಗಳ ನಡುವೆ ಕಿಚ್ಚನ್ನೂ ಹಚ್ಚಿದೆ. ಹೊಡೆದಾಟಗಳಾಗಿ, ಪ್ರಕರಣಗಳು ಪೊಲೀಸ್ ಠಾಣೆಯನ್ನು ತುಳಿದಿವೆ. ಆದರೆ, ಅಷ್ಟಕ್ಕೆ ಇದನ್ನು ಏಕಾಏಕಿ ನಿಷೇಧಿಸುವುದು ಎಷ್ಟರ ಮಟ್ಟಿಗೆ ಸರಿ? ಈ ರಾಜ್ಯದಲ್ಲಿ ಜೂಜನ್ನು ಹೋಲುವ ಯಾವ ಕ್ರೀಡೆಯೂ ನಡೆಯದೇ ಇದ್ದಲ್ಲಿ ಇದನ್ನು ನಿಷೇಧಿಸುವುದರಲ್ಲಿ ಅರ್ಥವಿತ್ತು. ಆದರೆ, ಜನ ಸಾಮಾನ್ಯರ ಬದುಕಿನೊಂದಿಗೆ ತಳಕು ಹಾಕಿರುವ ಕೋಳಿ ಅಂಕವನ್ನು ನಿಷೇಧಿಸುವಾಗ, ಕಾನೂನಿಗೆ ಮುಖ್ಯವಾಗುವುದು ಅಂದೊಂದು ‘ಅನಾಗರಿಕರ ಕ್ರೀಡೆ’ ಎನ್ನುವುದು. ಇಲ್ಲಿ ಕೋಳಿ ಮೇಲೆ ಹಣ ಹೂಡಿ ಕಳೆದುಕೊಳ್ಳುವುದನ್ನೇ ಜೂಜು ಎಂದು ಕರೆಯುವುದಾದರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಕುದುರೆಯ ಮೇಲೆ ಹಣ ಹೂಡೆ ಕಳೆದುಕೊಳ್ಳುವುದನುನ ಸರಕಾರ ಯಾಕೆ ನಿಷೇಧಿಸುವುದಿಲ್ಲ? ನಿಜ, ಕೋಳಿ ಅಂಕ ನಿಷೇಧಿಸತಕ್ಕಂತಹ ಕ್ರೀಡೆಯೇ ಆಗಿದೆ. ಹಾಗೆಯೇ ಕುದುರೆ ರೇಸ್ ಕೂಡಾ ನಿಷೇಧಿಸತಕ್ಕಂತಹ ಜೂಜೆ ಆಗಿದೆ. ಒಂದೆಡೆ ಶ್ರೀಮಂತರ ಖಯಾಳಿಗಳನ್ನು ಪೋಷಿಸುತ್ತಾ, ಬಡವರ ಖಯಾಲಿಗಳನ್ನು ನಿಷೇಧಿಸುವ ಕ್ರಮ ಎಷ್ಟು ಸರಿ?
ಪತ್ರಿಕೆಗಳಲ್ಲಿ ಒಮ್ಮಿಮ್ಮೆ ಸುದ್ದಿ ಓದುವಾಗ ನಗು ಬರುತ್ತದೆ. ‘ಕೋಳಿ ಅಂಕಕ್ಕೆ ದಾಳಿ: ಎರಡು ಕೋಳಿಗಳ ವಶ’ ಎಂಬ ಸುದ್ದಿ ಪ್ರಕಟವಾಗುತ್ತದೆ. ಕಾರ್ಯಾಚರಣೆಯಲ್ಲ್ಲಿ ಭಾಗವಹಿಸಿದ ಮಹಾನ್ ಸಾಹಸಿ ಪೊಲೀಸರ ಹೆಸರುಗಳೂ ಕೆಳಗಡೆ ಪ್ರಕಟವಾಗುತ್ತದೆ. ಆದರೆ, ವಶಪಡಿಸಿದ ಕೋಳಿಗಳು ಎಲ್ಲಿ ಹೋಗುತ್ತವೆ ಎನ್ನುವ ಕುರಿತಂತೆ ಯಾವ ಮಾಹಿತಿಯೂ ಇರುವುದಿಲ್ಲ. ಯಾಕೆಂದರೆ ಕಾರ್ಯಾಚರಣೆ ನಡೆಸಿದ ಪೊಲೀಸರ ಹೊಟ್ಟೆಯೊಳಗೆ ಆ ಕೋಳಿಗಳು ಜೀರ್ಣವಾಗಿರುತ್ತದೆ. ಕೋಳಿ ಅಂಕಕ್ಕೆ ದಾಳಿ ನಡೆಸಿ, ಬಡವರಿಂದ ಹತ್ತು, ಇಪ್ಪತ್ತು ದೋಚುವುದು ಪೊಲೀಸರಿಗೆ ಅತ್ಯಂತ ಸುಲಭ ಕಾರ್ಯಾಚರಣೆಯಾಗಿದೆ.

ಕ್ರೀಡೆಯಲ್ಲಿ ಹಿಂಸೆ ಕೂಡದು ಎನ್ನುವುದಾದರೆ, ಬಾಕ್ಸಿಂಗ್ ಕ್ರೀಡೆಗೆ ನ್ಯಾಯಾಲಯ ತಕ್ಷಣ ನಿಷೇಧ ಹೇರಬೇಕು. ಮನುಷ್ಯನನ್ನು ಮನುಷ್ಯನ ವಿರುದ್ಧ ಛೂ ಬಿಟ್ಟು, ಅದನ್ನು ಮನರಂಜನೆ ಎಂದು ಕರೆಯುವ ವಿಕೃತ ಹಿಂಸೆಯನ್ನು ನಿಷೇಧ ಮಾಡುವ ಅಗತ್ಯವಿದೆ. ಬಾಕ್ಸಿಂಗ್‌ನಿಂದಾಗಿ ಪ್ರಾಣ ಕಳೆದುಕೊಂಂಡ ಅದೆಷ್ಟೋ ಕ್ರೀಡಾಳುಗಳಿದ್ದಾರೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಅಮಾನವೀಯವಾಗಿ ಥಳಿಸುವುದು ಯಾವ ರೀತಿಯ ಕ್ರೀಡೆ ? ‘ರೆಸ್ಲಿಂಗ್’ ಹೆಸರಿನಲ್ಲಿ ಯದ್ವಾ ತದ್ವಾ ಥಳಿಸುವುದನ್ನು ನಾವು ಟಿ.ವಿ. ವಾಹಿನಿಯಲ್ಲಿ ನೋಡುತ್ತಿದ್ದೇವೆ. ಅದು ಯಾವ ವರ್ಗದ ಜನರ ಮನರಂಜನೆ? ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನಿಗೆ ಥಳಿಸುವುದು ನಮ್ಮನ್ನು ರಂಜಿಸುತ್ತದೆ ಎಂದಾದರೆ ಗುಜರಾತ್ ಹತ್ಯಾಕಾಂಡವೂ ನಮ್ಮನ್ನು ರಂಜಿಸಬಲ್ಲದು. ನಮ್ಮ ಹೃದಯಾಳದಲ್ಲಿ ಕೆನೆಗಟ್ಟಿರುವ ಕ್ರೌರ್ಯದ ದೆಸೆಯಿಂದ ಬಾಕ್ಸಿಂಗ್ ನಮ್ಮನ್ನು ರಂಜಿಸುತ್ತದೆ. ಆ ಕ್ರೌರ್ಯವೇ, ಗುಜರಾತ್ ಹತ್ಯಾಕಾಂಡದ ಕುರಿತಂತೆ ನಮ್ಮನ್ನು ವೌನ ವಹಿಸುವಂತೆ ಮಾಡುತ್ತದೆ.

‘ಕಾಬೂಲ್ ಎಕ್ಸ್‌ಪ್ರೆಸ್’ ಎಂಬ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತದೆ. ತಾಲಿಬಾನ್‌ಗಳು ಅಘ್ಘಾನಿಸ್ತಾನವನ್ನು ಅದಾಗಲೇ ಬಿಟ್ಟು ಹೋಗಿದ್ದಾರೆ. ಅಲ್ಲೊಂದು ಗ್ರಾಮೀಣ ಕ್ರೀಡೆಯಿತ್ತು. ಒಂದು ಆಡಿನ ದೇಹವನ್ನು ಮೈದಾನದಲ್ಲಿ ಎಸೆಯಲಾಗುತ್ತದೆ. ಆ ಬಳಿಕ ನೂರಾರು ಒಂಟೆ ಸವಾರರು ಆ ಆಡಿನ ದೇಹಕ್ಕಾಗಿ ಪೈಪೋಟಿ ನಡೆಸುವುದು. ಈ ಕ್ರೀಡೆ ನಡೆಯುತ್ತಿರುವ ಸ್ಥಳದಲ್ಲಿ ಸ್ಥಳೀಯ ಅಫ್ಘಾನಿಯೊಬ್ಬ ಪ್ರವಾಸಿಗರಲ್ಲಿ ಹೇಳುತ್ತಾನೆ ‘‘ತಾಲಿಬಾನ್ ಆಡಳಿತ ಕಾಲದಲ್ಲಿ ಈ ಆಟವನ್ನು ನಿಷೇಧಿಸಲಾಗಿತ್ತು’’ ಪ್ರವಾಸಿಗರು ಕೇಳುತ್ತಾರೆ ‘‘ಯಾಕೆ’’?
ಅಘ್ಘಾನಿ ನಗುತ್ತಾ ಹೇಳುತ್ತಾನೆ ‘‘ರಕ್ತಪಾತ ಆಗುತ್ತದೆ ಎಂಬ ಕಾರಣಕ್ಕೆ ತಾಲಿಬಾನರು ಈ ಆಟವನ್ನು ನಿಷೇಧಿಸಿದ್ದರು’’
ಈ ಸಣ್ಣ ದೃಶ್ಯ ಹಿಂಸೆಯ ಕುರಿತ ಅದೆಂತಹ ಪರಿಣಾಮಕಾರಿ ವಿಡಂಬನೆ ಅಲ್ಲವೆ?
(ಜನವರಿ-18- 2008, ಶುಕ್ರವಾರ)

Thursday, February 16, 2012

ಯೋಧ ಹೇಳಿದ ಕತೆ...

ಅವನು ಒಂದು ಪುರಾತನ ಮರದಂತೆ ಅಲ್ಲಿ ಕುಳಿತಿದ್ದ. ಗಾಳಿಗೆ ಅದುರುವ ಎಲೆಗಳಂತೆ ಅವನ ತುಟಿ, ಕಣ್ಣ ರೆಪ್ಪೆಗಳು, ಹಣೆಯ ಮೇಲೆ ಬಿದ್ದ ಒಣಗಿದ ಕೂದಲರಾಶಿ ಕಂಪಿಸುತ್ತಿದ್ದವು. ಅವನ ನೆರಳಿನ ಸುತ್ತಲೂ ಅಷ್ಟೂ ಮಕ್ಕಳು ನೆರೆದಿದ್ದರು. ಅವನು ಕತೆ ಹೇಳುತ್ತಿದ್ದ. ತಾನು ಎದುರಿಸಿದ ಕೊನೆಯ ಯುದ್ಧದ ಕತೆ. ಮಕ್ಕಳೆಲ್ಲ ಕಣ್ಣು, ಕಿವಿ ಬಿಟ್ಟು ಅವನ ಮಾತುಗಳನ್ನು ಆಲಿಸುತ್ತಿದ್ದವು. ಅದಾಗಲೇ ಅವರೆಲ್ಲ ತಮ್ಮ ಇರವನ್ನು ಮರೆತು ಕೆಂಡ ಸುರಿಯುವ ಯುದ್ಧ ಭೂಮಿಯನ್ನು ಸೇರಿದ್ದರು.

‘‘ಅದು ನಾನು ಎದುರಿಸಿದ ಕೊನೆಯ ಯುದ್ಧ...ಮತ್ತು ನಾನು ಆವರೆಗೆ ಕಂಡರಿಯದ ಶ್ರೇಷ್ಠ ಯುದ್ಧ. ಆ ಯುದ್ಧಕ್ಕಾಗಿಯೇ ನನಗೀ ಪದಕ ದೊರಕಿತು...’’
ಮಕ್ಕಳ ಕಣ್ಣೆಲ್ಲ ಅವನ ಎದೆಯ ಮೇಲೆ ನೇತಾಡುತ್ತಿದ್ದ ಪದಕಗಳತ್ತ ಹರಿಯಿತು. ‘‘ಸರಿ, ಮುಂದೆ ಹೇಳು....’’ ಮಕ್ಕಳು ಅವಸರಿಸಿದರು.
‘‘ಮೊದಲ ದಿನವೇ ನಮ್ಮ ಪಾಲಿಗೆ ವಿಜಯದ ದಿನವಾಗಿತ್ತು. ಶತ್ರುಗಳನ್ನು ನಾವೆಲ್ಲ ಸೇರಿ ನಡುಗಿಸಿದೆವು. ಒಂದೇ ದಿನದಲ್ಲಿ 200 ಸೈನಿಕರನ್ನು ಕೊಂದು ಮುಂದುವರಿದೆವು...’’
‘‘ಇನ್ನೂರು ಸೈನಿಕರನ್ನು ಕೊಂದಿರಾ...?’’ ಮಕ್ಕಳು ಬಾಯಗಲಿಸಿದರು. ‘‘ಅವರೆಲ್ಲ ಅಲ್ಲೇ ಸತ್ತರಾ...ಒಂದೇ ದಿನದಲ್ಲಿ ಯುದ್ಧ ಮುಗಿಯಿತೆ?’’
ಯೋಧ ನಕ್ಕ ‘‘ಹತ್ತು ಸಾವಿರಕ್ಕೂ ಅಧಿಕ ಶತ್ರು ಸೈನಿಕರು ಆ ಕಡೆಯಿರುವಾಗ ಬರೇ ಇನ್ನೂರು ಸೈನಿಕರನ್ನು ಕೊಂದರೆ ಯುದ್ಧ ಮುಗಿಯುತ್ತದೆಯೆ? ಆದರೂ ಅವರೆಲ್ಲ ಹೆದರಿ ಬಿಟ್ಟರು. ಅಂದ ಹಾಗೆ, ಆ 200 ಸೈನಿಕರೂ ಸ್ಥಳದಲ್ಲೇ ಸತ್ತಿದ್ದರು’’
‘‘ಮುಂದೆ...’’
‘‘ಮರುದಿನ ನನ್ನ ಪಾಲಿಗೆ ಶೌರ್ಯದ ದಿನ. ಯಾಕೆಂದರೆ ಯುದ್ಧದಲ್ಲಿ ನಾನು ವೀರೋಚಿತವಾಗಿ ಹೋರಾಡಿದ್ದೆ. ನನ್ನ ಹೋರಾಟಕ್ಕೆ ನನ್ನ ಕಡೆಯ ಸೈನಿಕರೇ ದಂಗು ಬಡಿದು ಹೋಗಿದ್ದರು. ಅವತ್ತು ನಾನೊಬ್ಬನೇ 50 ಸೈನಿಕರನ್ನು ಕೊಂದಿದ್ದೆ....’’
‘‘ಒಬ್ಬರೇ....’’ ಮಕ್ಕಳೆಲ್ಲ ಮತ್ತೊಮ್ಮೆ ಅವನ ಎದೆಯಲ್ಲಿ ನೇತಾಡುತ್ತಿದ್ದ ಪದಕಗಳತ್ತ ನೋಡಿದರು.
‘‘ಹೌದು ಒಬ್ಬನೆ. ನನ್ನ ಪಾಲಿಗೆ ಎರಡನೆಯ ದಿನ ಒಂದು ಸಣ್ಣ ಆರಂಭವಾಗಿತ್ತು....ಮೂರನೆಯ ದಿನ ನನಗೆ ಹೊಸ ಹುರುಪು ಬಂದಿತ್ತು. ನಾನು ಯಾವ ಭಯವೂ ಇಲ್ಲದೆ ಮುನ್ನುಗ್ಗುತ್ತಲೇ ಇದ್ದೆ....ಅದು ನನ್ನ ಪಾಲಿಗೆ ಇನ್ನೊಂದು ಹೆಗ್ಗಳಿಕೆಯ ದಿನವಾಗಿತ್ತು...ಅಂದು ನಾನು ಒಟ್ಟು ನೂರು ಶತ್ರುಗಳನ್ನು ಕೊಂದು ಹಾಕಿದ್ದೆ....ಒಬ್ಬ ಶತ್ರುವನ್ನಂತೂ ಚೂರಿಯಿಂದಲೇ ಇರಿದು ಹಾಕಿದೆ...’’
ಮಕ್ಕಳ ಉಸಿರು ಅಡಗಿತ್ತು. ಅವರು ನಿಧಾನಕ್ಕೆ ಭೀತರಾಗುತ್ತಿದ್ದರು. ಅವನೋ ಯಾವುದೋ ಉನ್ಮಾದಕ್ಕೊಳಗಾದವನಂತೆ ಮುಂದುವರಿಸಿದ ‘‘ಅದು ನಾಲ್ಕನೆಯ ದಿನ. ನನ್ನ ಸೈನಿಕರು ನನ್ನನ್ನು ಎತ್ತಿ ಮೆರೆದಾಡಿದ ದಿನ. ನಾನಂದು ನೂರಕ್ಕೂ ಅಧಿಕ ಅಂದರೆ ಲೆಕ್ಕವಿರದಷ್ಟು ಜನರನ್ನು ಚೆಂಡಾಡಿದ್ದೆ. ಮುಖ್ಯವಾಗಿ ಶತ್ರುಸೇನೆಯ ಇಬ್ಬರು ಹಿರಿಯ ಅಧಿಕಾರಿಗಳನ್ನೇ ಕೊಂದು ಹಾಕಿದ್ದೆ. ಬಹುತೇಕ ಭೂಮಿ ನಮ್ಮ ವಶವಾಗಿತ್ತು....’’
ಇದ್ದಕ್ಕಿದ್ದಂತೆಯೇ ಯೋಧ ವೌನವಾದ. ಆ ವೌನವೂ ಏನೋ ಹೇಳುತ್ತಿದೆಯೆಂದು ಭಾವಿಸಿ ಮಕ್ಕಳು ಸುಮ್ಮಗೆ ಆಲಿಸುತ್ತಿದ್ದರು.

ಅಷ್ಟರಲ್ಲಿ ಒಬ್ಬ ಹುಡುಗ ಕೇಳಿದ ‘‘ಐದನೆಯ ದಿನ ಏನಾಯ್ತು?’’
‘‘ಹೌದು, ಏನಾಯ್ತು...?’’ ಮಕ್ಕಳೆಲ್ಲ ಒಟ್ಟಾಗಿ ಮತ್ತೆ ಕೇಳಿದರು.
ಯೋಧನ ಗಂಟಲು ಕಟ್ಟಿತ್ತು ‘‘ಅದು ನನ್ನ ಬದುಕಿನ ಸರ್ವ ಶ್ರೇಷ್ಟ ದಿನ...ನಾನಿಂದಿಗೂ ನನ್ನ ಎದೆಯಲ್ಲಿ ಹೊತ್ತು ಕೊಂಡು ತಿರುಗುತ್ತಿರುವ ದಿನ....’’
‘‘ಹೌದೆ? ಎಷ್ಟು ಶತ್ರುಗಳನ್ನು ಕೊಂದಿರಿ?’’ ಮಕ್ಕಳು ಹುಚ್ಚೆದ್ದು ಒಟ್ಟಾಗಿ ಕೇಳಿದರು.
ಯೋಧ ವೌನವಾಗಿದ್ದ.
ಮಕ್ಕಳೇ ಪ್ರಶ್ನಿಸಿದರು ‘‘500 ಶತ್ರುಗಳನ್ನು....?’’
ಯೋಧ ಉತ್ತರಿಸಲಿಲ್ಲ.
‘‘1000?’’ ಮಕ್ಕಳೇ ಕೇಳಿದರು.
ಯೋಧ ಯಾವುದೋ ಗುಂಗಿನಲ್ಲಿ ವೌನವಾಗಿಯೇ ಇದ್ದ.
‘‘ಒಂದು ಲಕ್ಷ?’’ ಮಕ್ಕಳು ಮತ್ತೆ ಉತ್ಸಾಹದಿಂದ ಅಂಕಿಯನ್ನು ಮುಂದಿಟ್ಟರು.
ಊಹುಂ...ಯೋಧ ಮಾತನಾಡುತ್ತಿಲ್ಲ.
‘‘ಒಂದು ಕೋಟಿ...?’’ ಮಕ್ಕಳು ಮತ್ತೇ ಜೋರಾಗಿ ಕೇಳಿದರು.
ಯೋಧ ಈಗ ಬಾಯಿ ತೆರೆದ ‘‘ಇಲ್ಲ...ಅವತ್ತು ಒಬ್ಬ ಸೈನಿಕನನ್ನು ನಾವೆಲ್ಲರೂ ಸೇರಿ ಕೊಂದು ಹಾಕಿದೆವು’’
‘‘ಬರೇ ಒಬ್ಬನನ್ನೇ...’’ ಮಕ್ಕಳು ನಿರಾಶೆಯಿಂದ ಕೇಳಿದರು. ಅವರ ಉತ್ಸಾಹ ಒಮ್ಮೆಲೆ ಕುಗ್ಗಿತ್ತು.
‘‘ಹೌದು, ಒಬ್ಬನನ್ನು’’ ಯೋಧ ಮತ್ತೊಮ್ಮೆ ಉಚ್ಚರಿಸಿದ.
‘‘ಆ ಸೈನಿಕ ಅಷ್ಟು ಬಲಿಷ್ಟನಾಗಿದ್ದನೆ?’’ ಮಕ್ಕಳು ಅಚ್ಚರಿಯಿಂದ ಕೇಳಿದರು.
 ‘‘ಹೂಂ...ಈ ಜಗತ್ತಿನ ಯಾವ ಯೋಧರೂ ಎದುರಿಸಲಾಗದಷ್ಟು ಅವನು ಬಲಿಷ್ಟನಾಗಿದ್ದ....’’ ಒಂದು ಕ್ಷಣ ವೌನವಾಗಿದ್ದ ಯೋಧ ಮುಂದುವರಿಸಿದ ‘‘ಹೌದು, ಅದು ಐದನೆಯ ದಿನ. ನಾನು ಗುಂಪಿನಿಂದ ಬೇರೆಯಾಗಿ ಶತ್ರುಗಳೆಡೆಗೆ ಉನ್ಮಾದದಿಂದ ದಾವಿಸುತ್ತಲೇ ಇದ್ದೆ. ಒಬ್ಬೊಬ್ಬರ ಹೆಣಗಳೂ ಉರುಳುತ್ತಿದ್ದವು. ಹಾಹಾಕಾರ, ಚೀತ್ಕಾರ...ನಮ್ಮವರದೋ, ಶತ್ರುಗಳದೋ ಎಂದು ಗುರುತಿಸುವುದು ಕಷ್ಟವಾಗುತ್ತಿತ್ತು. ಯಾಕೆಂದರೆ ಸಾವಿನ ಚೀತ್ಕಾರ ಎಲ್ಲವೂ ಒಂದೇ ಥರ ಕೇಳಿಸುತ್ತದೆ. ಅದಕ್ಕೆ ದೇಶ, ಭಾಷೆ, ಜಾತಿ, ಧರ್ಮಗಳ ಹಂಗಿಲ್ಲ...ಅವೆಲ್ಲದಕ್ಕೂ ಕಿವುಡನಾಗಿ ನಾನು ಮುಂದುವರಿಯುತ್ತಿದ್ದೆ. ಇದ್ದಕ್ಕಿದ್ದಂತೆ ಅದೆಲ್ಲಿಂದ ಧಾವಿಸಿ ಬಂತೋ...ಒಂದು ಗುಂಡು ನನ್ನ ಬಲಭಾಗದ ಎದೆಯನ್ನು ಸೀಳಿತು....ಇನ್ನೊಂದು ನನ್ನ ತೊಡೆಯನ್ನು ಮುರಿದು ಹಾಕಿತು. ನಾನು ಯುದ್ಧಭೂಮಿಯ ಪಕ್ಕದಲ್ಲೇ ಇದ್ದ ಕಂದರಕ್ಕೆ ಉರುಳಿ ಬಿದ್ದಿದ್ದೆ....’’
ಮಕ್ಕಳೆಲ್ಲ ‘‘ಓಹ್....’’ ಎಂದು ಬಾಯಿಗೆ ಕೈಯಿಟ್ಟು ಉದ್ಗರಿಸಿದರು. ಯೋಧನೂ ಒಂದರೆಕ್ಷಣ ವೌನವಾದ.

  ‘‘ಸುಮಾರು ನಾಲ್ಕು ಗಂಟೆ....ನಾಲ್ಕು ಗಂಟೆ ನಾನು ಸಾವು ಬದುಕಿನ ನಡುವೆ ಒದ್ದಾಡುತ್ತಲೇ ಇದೆ. ನನ್ನ ನಾಲಗೆ ಸೂರ್ಯನ ಝಳಕ್ಕೆ ಕುದಿಯುತ್ತಿರುವ ಮರೂಭೂಮಿಯಂತೆ ಸುಡುತ್ತಿತ್ತು. ನನಗೆ ಬೇಕಾಗಿದ್ದದ್ದು ಒಂದು ಗುಟುಕು, ಒಂದೇ ಒಂದು ಗುಟುಕು ನೀರು....ನಾನು ‘ನೀರು...ನೀರು’ ಎಂದು ಆರ್ತನಾದಗೈಯುತ್ತಿದ್ದೆ. ಆದರೆ ನನ್ನ ಧ್ವನಿ ನನಗೇ ಕೇಳುತ್ತಿರಲಿಲ್ಲ...ನಿಧಾನಕ್ಕೆ ಆಕಾಶದ ಬಣ್ಣ ಬದಲಾಗುತ್ತಿತ್ತು. ನನ್ನ ಸುತ್ತಮುತ್ತಲಿದ್ದ ಗಿಡಮರಗಳ ಬಣ್ಣವೂ ಕೆಂಪಾಗುತ್ತಿತ್ತು. ನಾನು ಸಾವಿನ ಅಂಚಿಗೆ ಜಾರುತ್ತಿದ್ದೆ....ಅಷ್ಟರಲ್ಲಿ ದೂರದಿಂದ ಯಾರೋ ಬರುತ್ತಿದ್ದ ಹಾಗೆ ಕಂಡಿತು....ಯಾವನೋ ದೇವದೂತನಂತೆ ಮೊದಲು ಕಂಡರೂ ಅವನು ಹತ್ತಿರ ಹತ್ತಿರವಾದ ಹಾಗೆ ಮನುಷ್ಯ ರೂಪವನ್ನು ಪಡೆಯುತ್ತಿದ್ದ. ಇನ್ನೂ ಹತ್ತಿರವಾದಂತೆ ಆ ಸ್ಥಿತಿಯಲ್ಲೂ ನಾನು ಬೆಚ್ಚಿ ಬಿದ್ದೆ. ಶತ್ರು ಸೈನಿಕನನ್ನು ಯಾವ ಸ್ಥಿತಿಯಲ್ಲೂ, ಎಷ್ಟು ದೂರದಲ್ಲೂ ಗುರುತು ಹಿಡಿಯುವವನು ನಾನು. ಬರುತ್ತಿದ್ದವನು ಶತ್ರು ಸೈನಿಕನಾಗಿದ್ದ....ಸರಿ...ಹೇಗೂ ಸಾಯಲಿದ್ದ ನಾನು ಅವನ ಕೈಯಲ್ಲಿ ಸಾಯುವುದಕ್ಕೆ ಅಣಿಯಾದೆ....’’
‘‘ಓಹ್....’’ ಮಕ್ಕಳೆಲ್ಲ ಮತ್ತೆ ಚೀತ್ಕರಿಸಿದರು.

‘‘ಆ ಶತ್ರು ಸೈನಿಕ ಇನ್ನೂ ಹತ್ತಿರವಾದಂತೆ ಅವನ ಹೆಗಲಲ್ಲಿರುವ ಕೋವಿ ನನಗೆ ಸ್ಪಷ್ಟವಾಗಿ ಕಾಣ ತೊಡಗಿತು. ಅವನು ನನ್ನನ್ನು ನೋಡಿದ್ದಾನೆ....ನನ್ನೆಡೆಗೆ ಧಾವಿಸಿ ಬರುತ್ತಿದ್ದ...ಅಂದಹಾಗೆ ಅವನ ಕೈಯಲ್ಲಿ ಇನ್ನೇನೋ ಇತ್ತು. ಇನ್ನಷ್ಟು ಹತ್ತಿರವಾದಾಗ ನನಗೆ ಗೊತ್ತಾಯಿತು. ಅವನ ಕೈಯಲ್ಲಿ ನೀರಿನ ಬ್ಯಾಗೊಂದಿತ್ತು....ಆದರೆ ನನಗೆ ಅದರ ಮೇಲೆ ಯಾವ ನಿರೀಕ್ಷೆಯೂ ಇರಲಿಲ್ಲ. ನನ್ನ ಗಮನವೆಲ್ಲ ಅವನ ಹೆಗಲ ಮೇಲಿದ್ದ ಕೋವಿಯ ಮೇಲಿತ್ತು’’
‘‘ಆದರೆ ಯುದ್ಧ ಭೂಮಿಯಲ್ಲಿ ನಡೆಯಲೇ ಬಾರದಂತಹ ಒಂದು ವಿಚಿತ್ರ ಅಲ್ಲಿ ನಡೆಯಿತು. ಅವನು ನೇರ ನನ್ನ ಬಳಿ ಸಾರಿದವನೇ ಬಾಗಿದ. ನನ್ನ ಬಾಯಿಂದ ಅಯಾಚಿತವಾಗಿ ‘ನೀರು’ ಎಂಬ ಶಬ್ದ ಹೊರಬಿತ್ತು. ಅವನು ನನ್ನ ತಲೆಯನ್ನು ಎತ್ತಿ ಅವನ ತೊಡೆಯ ಮೇಲೆ ಇಟ್ಟುಕೊಂಡ. ಬಳಿಕ ಒಂದು ಮಗುವಿನ ಬಾಯಿಗೆ ಹಾಲೂಡಿಸುವಂತೆ ತನ್ನಲ್ಲಿದ್ದ ನೀರನ್ನು ಹನಿ ಹನಿಯಾಗಿ ನನ್ನ ಬಾಯಿಗೆ ಹನಿಸತೊಡಗಿದ. ಅವನಲ್ಲಿದ್ದ ಆ ನೀರು ನಿಜಕ್ಕೂ ನೀರಾಗಿರಲಿಲ್ಲ. ಅದು ಅಮತವಾಗಿತ್ತು. ಒಂದೊಂದು ಹನಿ ನನ್ನ ನನ್ನೊಳಗನ್ನು ಸೇರುತ್ತಿದ್ದ ಹಾಗೆಯೇ ನಾನು ಚೇತರಿಸಿಕೊಳ್ಳುತ್ತಿದ್ದೆ...ಇನ್ನು ಸಾಕು ಎನ್ನುವವರೆಗೆ ನನ್ನ ಬಾಯಿಗೆ ನೀರು ಸುರಿದ. ಬಳಿಕ ಗಾಯಗಳಿಗೆ ತನ್ನಲ್ಲಿದ್ದ ಬಟ್ಟೆಯಿಂದ ರಕ್ತ ಸೋರದಂತೆ ಮಾಡಿದ. ಎತ್ತಿ ಪಕ್ಕದ ಮರದ ಕೆಳಗೆ ನನ್ನನ್ನು ಒರಗಿಸಿದ....’’

ಮಕ್ಕಳು ದಿಗ್ಭ್ರಮೆಗೊಂಡಿದ್ದರು. ‘‘ಆಮೇಲೆ ಏನಾಯ್ತು...ಆಮೇಲೆ....ಅವನೇನಾದ...ಎಲ್ಲಿ ಹೋದ....ಅವನನ್ನು ನಮ್ಮ ದೇಶಕ್ಕೆ ಕರೆದುಕೊಂಡು ಬಂದಿರಾ?’’ ಹುಡುಗನೊಬ್ಬ ಆತುರದಿಂದ ಕೇಳಿದ.
ಯೋಧನ ಗಂಟಲು ಗೊಗ್ಗರು ಸ್ವರ ಹೊರಡಿಸುತ್ತಿತ್ತು. ಕೆಮ್ಮಿ ಗಂಟಲನ್ನು ಸರಿಪಡಿಸಿಕೊಂಡ. ಮತ್ತು ಹೇಳಿದ ‘‘ಅಷ್ಟರಲ್ಲಿ ನಮ್ಮವರ ತಂಡ ನನ್ನೆಡೆಗೆ ಧಾವಿಸಿ ಬಂತು. ಆ ಸೈನಿಕನನ್ನು ನಮ್ಮವರು ಕೊಂದು ಹಾಕಿದರು....’’
‘‘ಯಾಕೆ? ಯಾಕೆ ಕೊಂದರು. ಅವನೇನು ತಪ್ಪು ಮಾಡಿದ್ದ?’’ ಹುಡುಗನೊಬ್ಬ ಅಳುತ್ತಾ ಕೇಳಿದ.
ಒಂದು ಕ್ಷಣ ವೌನವಾಗಿದ್ದ ಯೋಧ ಹೇಳಿದ ‘‘ಯಾಕೆಂದರೆ, ಅವನು ನಮ್ಮ ದೇಶದ ಶತ್ರುವಾಗಿದ್ದ’’

Tuesday, February 14, 2012

ಎರಡು ಮಂಚಗಳು

ಮದುವೆಯೆಂದರೆ
ಎರಡು ಮಂಚಗಳನ್ನು
ಒಂದಾಗಿ ಜೋಡಿಸುವುದೆ?

ಯಾವ ಮರದ ಹಲಗೆಯೋ,
ಯಾವ ಬಡಿಗ ಕೆತ್ತಿದ ಕಾಲೋ
ಮದುವೆಯ ರಾತ್ರಿ
ಎರಡು ಮಂಚಗಳನ್ನು ತಂದು ಜೋಡಿಸಿದ್ದಾರೆ!

ಹೊದಿಸಿದ್ದಾರೆ ಹಾಸಿಗೆಯನ್ನು
ನೀಳ ಗಾಯವೊಂದಕ್ಕೆ
ಬಿಳಿ ಬಟ್ಟೆಯೊಂದನ್ನು
ಬಿಗಿದು ಕಟ್ಟುವಂತೆ

ಅದೆಷ್ಟೋ ರಾತ್ರಿಗಳು
ಉರುಳಿವೆ
ಹಾಸಿಗೆ ಎತ್ತಿ ನೋಡಿದರೆ
ಗಾಯವಿನ್ನೂ
ತೆರೆದೇ ಇದೆ...!

Sunday, February 12, 2012

ಬೀಜಗಳು ಮತ್ತು ಇತರ ಕತೆಗಳು

ಬೀಜಗಳು
ಮಂಗಳನಲ್ಲಿ ನೀರಿರುವುದು ಪತ್ತೆಯಾಯಿತು.
ಮಂಗಳ ಯಾತ್ರೆಗೆ ವಿಜ್ಞಾನಿಗಳು ಹೊರಟರು.
ಬೇಕಾದ ಎಲ್ಲ ವಸ್ತುಗಳನ್ನೂ ಏರಿಸಿದರು.
ಹಿರಿಯ ವಿಜ್ಞಾನಿ ತನ್ನ ಮನೆಯವರನ್ನೆಲ್ಲ ಬೀಳ್ಕೊಟ್ಟ.
ಅಷ್ಟರಲ್ಲಿ ಅವನ ಕಿರಿಯ ಪುಟ್ಟ ಮಗು ಓಡೋಡಿ ಬಂತು. ತಂದೆಯ ಬೊಗೆಸೆಗೆ ಅದೇನನ್ನೋ ಹಾಕಿತು.
ನೋಡಿದರೆ, ಅದು ಒಂದಿಷ್ಟು ಬೀಜಗಳು.
ಮಗು ಹೇಳಿತು ‘‘ನೀನು ಬರುವಾಗ, ಇದನ್ನು ಬಿತ್ತಿ ಬಾ...ನಾನು ದೊಡ್ಡವನಾಗಿ ಮಂಗಳಗ್ರಹಕ್ಕೆ ಹೋಗುವಾಗ ಅದು ಬೆಳೆದು ಫಲ ಬಿಟ್ಟರೂ ಬಿಡಬಹುದು’’

ಎಂಜಲು
ಸದನದಲ್ಲಿ ನೋಡಬಾರದ್ದನ್ನು ನೋಡಿದ ಸಚಿವರಿಗೆ
ಥೂ ಎಂದು ಉಗಿದೆ.
ಕನ್ನಡಿ ನೋಡಿದರೆ
ನನ್ನ ಮುಖ ತುಂಬ ಎಂಜಲು

ಭಾರ
ಹೆಣವನ್ನು ಹೊತ್ತು
ಸಾಗುತ್ತಿದ್ದರು.
ಹೊರುತ್ತಿರುವವರಲ್ಲಿ ಒಬ್ಬ ಹೇಳಿದ ‘‘ನಾನು ಹೊತ್ತ ಹೆಣಗಳಲ್ಲಿ ಇದು ತುಂಬಾ ಭಾರವಾದುದು’’
ಇನ್ನೊಬ್ಬ ಹೇಳಿದ ‘‘ನಾನು ಹೊತ್ತ ಹೆಣಗಳಲ್ಲಿ ಇದು ತುಂಬಾ ಹಗುರವಾದುದು’’
ಹೆಣದ ಹಿಂದುಗಡೆ ಇರುವವನಿಗೆ ಇವರ ಮಾತು ಅರ್ಥವಾಗಲಿಲ್ಲ.
ಪಕ್ಕದಲ್ಲಿದ್ದವ ಅರ್ಥ ಮಾಡಿಸಿದ. ‘‘ಮೊದಲನೆಯವನು ಮೃತನಿಗೆ ಸಾಲಕೊಟ್ಟವನು. ಎರಡನೆಯವನು ಮೃತನಿಂದ ಸಾಲ ಇಸ್ಕೊಂಡವನು’’

ಸಂಗ್ರಹ
ಸಚಿನ್ ದಾಖಲೆ ರನ್ ಸಂಗ್ರಹಿಸಿದ.
ಮಗ ಅಪ್ಪನಲ್ಲಿ ಖುಷಿಯಿಂದ ಹೇಳಿದ ‘‘ಅಪ್ಪ, ಸಚಿನ್ ದಾಖಲೆ ರನ್ ಸಂಗ್ರಹಿಸಿದ್ದಾನೆ’’
‘‘ಈ ಬಾರಿ ಭತ್ತ ಬೆಳೆ ಸರಿಯಾಗಿ ಬಂದಿಲ್ಲ ಮಗಾ....ಸಚಿನ್ ಬಳಿ ಹೋಗಿ ಉಣ್ಣಕ್ಕೆಂದು ಎರಡು ಗೋಣಿ ರನ್ ಸಾಲ ತಕಂಬಾ ಮಗಾ...ಮುಂದೆ ಬೆಳೆ ಸರಿಯಾಗಿ ಬಂದಾಗ ಕೋಡೋಣಂತೆ...’’ ಅಪ್ಪ ಹೇಳಿದ.

ಮೂಟೆ
ಮಗ ಹೇಳಿದ, ‘‘ಅಪ್ಪಾ, ನೀನು ಮಾರ್ಕೆಟ್‌ನಲ್ಲಿ ಮೂಟೆ ಹೊರುವುದರಿಂದ ನನಗೆ ನಾಚಿಕೆಯಾಗುತ್ತೆ. ನನ್ನ ಕಾನ್ವೆಂಟ್ ಗೆಳೆಯರೆಲ್ಲ ತಮಾಷೆ ಮಾಡುತ್ತಾರೆ...ನೀನು ಮೂಟೆ ಹೊರುವುದನ್ನು ಬಿಟ್ಟು ಬಿಡಪ್ಪ’’
ಅಪ್ಪ ವಿಷಾದದಿಂದ ಉತ್ತರಿಸಿದ ‘‘ನಾನು ಮೂಟೆ ಹೊರುವುದನ್ನು ಬಿಟ್ಟರೆ, ಮುಂದೆ ನೀನು ಮೂಟೆ ಹೊರಬೇಕಾಗುತ್ತದೆ. ಅದು ಇದಕ್ಕಿಂತ ಅವಮಾನಕಾರಿ. ಆದುದರಿಂದ ಈ ಸಣ್ಣ ಅವಮಾನವನ್ನು ನೀನು ಸಹಿಸಲೇಬೇಕು ಮಗಾ...’’

ಸಂದರ್ಶನ
ಅವನು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದ. 
ಅತ್ಯಗತ್ಯವಾಗಿ ಅವನಿಗೊಂದು ಕೆಲಸ ಬೇಕಾಗಿತ್ತು
ಅದೊಂದು ಕಚೇರಿಗೆ ಸಂದರ್ಶನಕ್ಕೆ ಹೋದಾಗ ಗೊತ್ತಾಯಿತು, ಸಂದರ್ಶನ ಮಾಡುತ್ತಿರುವ, ಕಂಪೆನಿಯ ಮುಖ್ಯಸ್ಥ ತನ್ನ ಬಾಲ್ಯದ ಪ್ರಾಣ ಸ್ನೇಹಿತ ಎನ್ನುವುದು. ಕೈಯಲ್ಲಿ ಪ್ರಮಾಣ ಪತ್ರಗಳ ಫೈಲ್ ಇತ್ತು.
ನೇರವಾಗಿ ಸಂದರ್ಶನದ ಕೋಣೆಯೊಳಗೆ ಹೊಕ್ಕ.
ನೆಲ ಸಣ್ಣಗೆ ಕಂಪಿಸುತ್ತಿತ್ತು.
ತಲೆ ಮೇಲೆ ಫ್ಯಾನ್ ತಿರುಗುತ್ತಿದ್ದರೂ ಬೆವರುತ್ತಿದ್ದ.
ಸಂದರ್ಶನ ಎದುರಿಸುತ್ತಿರುವ ಅವನಿಗೆ ಗೊತ್ತು. 
ಎದುರಿನ ಕುರ್ಚಿಯಲ್ಲಿರುವ ಗೆಳೆಯ ನನ್ನ ಕೈಯಲ್ಲಿದ್ದ ಫೈಲ್ ಬಿಡಿಸಿದರೆ ನನಗೆ ಕೆಲಸ ಸಿಗುತ್ತದೆ.
ಆದರೆ ಗೆಳೆಯನನ್ನು ಕಳೆದುಕೊಳ್ಳಬೇಕಾಗುತ್ತದೆ.
ಒಂದು ವೇಳೆ ಫೈಲ್ ಮುಟ್ಟದೆ, ಆತ ನನ್ನ ಅಂಗೈಯನ್ನು ಸ್ಪರ್ಶಿಸಿದರೆ ನನಗೆ ಗೆಳೆಯ ಸಿಗುತ್ತಾನೆ.
ಆದರೆ ಕೆಲಸ ಸಿಗುವುದಿಲ್ಲ.
ನೋಡುತ್ತಿದ್ದ ಹಾಗೆಯೇ....
ಸಂದರ್ಶಕನ ಒಂದು ಬೆರಳು ಅವನ ಕಿರು ಬೆರಳನ್ನು ಸ್ಪರ್ಶಿಸಿಯೇ ಬಿಟ್ಟಿತು.
ಅವನು ಕೆಲಸ ಕಳೆದುಕೊಂಡ.

Thursday, February 9, 2012

ದಲಿತರು ‘ಸತ್ತ ದನ’ದ ವಾರಸುದಾರರಾಗಬೇಕೆ?

ಇದು ನಾನು 2008 ಫೆಬ್ರವರಿ 8ರಂದು ಪತ್ರಿಕೆಗಾಗಿ ಬರೆದ ಲೇಖನ
 
ಪೇಜಾವರ ಶ್ರೀಗಳ ಜೊತೆ ಸಂವಾದ ನಡೆಸುವಾಗ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಚಿಂತಕರು, ದಲಿತ ಸಂಘಟಕರು, ಪತ್ರಕರ್ತರು ಕೇಳುವ ಸಾಮಾನ್ಯ ಪ್ರಶ್ನೆ ಒಂದಿದೆ. ‘‘ನೀವು ದಲಿತರನ್ನು ದೇವಸ್ಥಾನದ ಅರ್ಚಕರನ್ನಾಗಿಸಲು ಸಿದ್ಧರಿದ್ದೀರಾ?’’
 ಈ ಪ್ರಶ್ನೆಗಳಿಗೆ ಪೇಜಾವರರು ಕೂಡ ಅಡ್ಡ ಗೋಡೆಯಲ್ಲಿ ದೀಪವಿಟ್ಟು, ಬಹಳ ನಾಜೂಕಾಗಿ ಉತ್ತರಿಸುತ್ತಾರೆ. ಪೇಜಾವರರನ್ನು ಸಂಕಷ್ಟಕ್ಕೆ ಸಿಲುಕಿಸಲೆಂದೇ ಕೇಳುವ ಪ್ರಶ್ನೆ, ಮುಂದಿನ ದಿನಗಳಲ್ಲಿ ದಲಿತರನ್ನೇ ಸಂಕಷ್ಟಕ್ಕೆ ಸಿಲುಕಿಸೀತೆಂಬ ಪ್ರಜ್ಞೆ ಕೇಳಿದವರಲ್ಲಿ ಇದ್ದಂತಿಲ್ಲ.

ಒಂದು ಕಾಲದಲ್ಲಿ ಸಂಸ್ಕೃತವನ್ನು ಶೂದ್ರ, ದಲಿತರಿಂದ ಇದೇ ‘ಬ್ರಾಹ್ಮಣ’ ವರ್ಗ ಮುಚ್ಚಿಟ್ಟಿತು. ಪರಿಣಾಮವಾಗಿ ಒಂದು ಶ್ರೀಮಂತ ಭಾಷೆ ಜನಸಾಮಾನ್ಯರ ನಡುವಿನಿಂದ ಅಳಿದೇ ಹೋಯಿತು. ಇಂದು ಸಂಸ್ಕೃತವನ್ನು ನಾವು ಗುರುತಿಸುವುದು ‘ಸತ್ತ ಭಾಷೆ’ ಎಂದಾಗಿದೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಜಮೀನ್ದಾರರು ಜೀವಂತ ದನಗಳನ್ನು ದಲಿತರಿಗೆ ಯಾವತ್ತೂ ಕೊಟ್ಟ ಉದಾಹರಣೆಗಳಿರುತ್ತಿರಲ್ಲಿಲ್ಲ. ಆದರೆ ದನ ಸತ್ತಾಕ್ಷಣ ದಲಿತರಿಗೆ ಬುಲಾವ್ ಹೋಗುತ್ತಿತ್ತು. ದಲಿತರು ಪುಕ್ಕಟೆ ಸಿಕ್ಕಿದ ಕಾರಣ ಆ ಸತ್ತ ದನವನ್ನು ಆಹಾರಕ್ಕಾಗಿ ಹೊತ್ತೊಯ್ಯುತ್ತಿದ್ದರು. ಇದೀಗ ಅದೇ ಮಾರ್ಗವನ್ನು ಬ್ರಾಹ್ಮಣ ವರ್ಗ ಅನುಸರಿಸುತ್ತಿದೆ. ಜೀವಂತವಿದ್ದಾಗ ಸಂಸ್ಕೃತ ಭಾಷೆಯನ್ನು ಆಲಿಸುವುದಕ್ಕೂ ಅವಕಾಶ ನೀಡದ ಪುರೋಹಿತಶಾಹಿ ವರ್ಗ, ಅದು ಸತ್ತು ಹೋದ ಬಳಿಕ, ‘ಬನ್ನಿ ಉಪಯೋಗಿಸಿ’ ಎಂದು ಕರೆಯುತ್ತಾರೆ ಎಂದು ಕರೆ ನೀಡುತ್ತಿದ್ದಾರೆ. ಸತ್ತ ಸಂಸ್ಕೃತವನ್ನು ಶೂದ್ರ, ದಲಿತರ ಹೆಗಲಿಗೆ ಕಟ್ಟಿ, ತಾವು ಮಾತ್ರ ಇಂಗ್ಲಿಷ್ ಜೊತೆಗೆ ಅಮೆರಿಕದಲ್ಲಿ ಬೆಚ್ಚಗೆ ಬದುಕಲು ಸಿದ್ಧತೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ. ದಲಿತರಿಗೆ ಭಾರೀ ಉಪಕಾರ ಮಾಡುವವರಂತೆ ‘ಸಂಸ್ಕೃತ ಕಲಿಯುವುದಕ್ಕೆ’ ಕರೆ ನೀಡುತ್ತಿದ್ದಾರೆ.

‘ದಲಿತರನ್ನು ದೇವಸ್ಥಾನದ ಅರ್ಚಕರನ್ನಾಗಿಸಲು ಸಿದ್ಧರಿದ್ದೀರಾ?’ ಎಂಬ ಪ್ರಶ್ನೆ ಕೇಳುವವರು ಮೇಲಿನ ಉದಾಹರಣೆಯನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಇಂದು ಬ್ರಾಹ್ಮಣರನ್ನು ಇರುಸುಮುರಿಸುಗೊಳಿಸುವ ಈ ಪ್ರಶ್ನೆಯನ್ನು ನಾಳೆ ಬ್ರಾಹ್ಮಣರೇ ದಲಿತರಿಗೆ ಮರು ಪ್ರಶ್ನಿಸುವ ದಿನಗಳು ಬರಬಹುದು. ‘ಸತ್ತ ದನವನ್ನು’ ‘ಸತ್ತ ಸಂಸ್ಕೃತವನ್ನು’ ದಲಿತರಿಗೆ ಕೊಟ್ಟು ಉಪಕಾರ ಮಾಡುವ ಹಾಗೆ. ಇತ್ತೀಚಿನ ಪರ್ಯಾಯೋತ್ಸವ ವಿವಾದ ಒಂದನ್ನಂತೂ ಈ ನಾಡಿನ ಶೂದ್ರರಿಗೆ, ದಲಿತರಿಗೆ ಸ್ಪಷ್ಟಪಡಿಸಿದೆ. ಸದ್ಯದ ಸ್ಥಿತಿಯಲ್ಲಿ ಯಾವ ಕಾರಣಕ್ಕೂ ದಲಿತರು ದೇವಸ್ಥಾನದ ಒಳ ಹೊಕ್ಕು ಅರ್ಚಕ ಸ್ಥಾನವನ್ನು ಪಡೆಯುವುದು ಅಸಾಧ್ಯ. ಒಂದು ವೇಳೆ ಇದು ಸಾಧ್ಯವಾಯಿತು ಎಂದು ಇಟ್ಟುಕೊಳ್ಳೋಣ. ಆಗಲೂ ದಲಿತರ ಸಮಸ್ಯೆ ಮುಗಿಯುವುದಿಲ್ಲ.

 ದಲಿತರು ದೇವಸ್ಥಾನದ ಅರ್ಚಕರಾಗಿ ಯಾವ ಪೂಜಾ ವಿಧಾನವನ್ನು ಬಳಸಬೇಕು? ದಲಿತರ ದೈವಗಳೇ ಬೇರೆ. ಅವರ ಪೂಜಾ ವಿಧಾನಗಳೇ ಬೇರೆ. ಆ ವಿಧಾನವನ್ನು ದೇವಳದಲ್ಲಿ ಅನುಸರಿಸುವುದಕ್ಕೆ ಅವಕಾಶವಿದೆಯೇ? ಆಗ ವೇದ, ಮಂತ್ರಗಳ ಪ್ರಶ್ನೆ ಬರುತ್ತದೆ. ಅದನ್ನು ದಲಿತರಿಗೆ ಕಲಿಸಬೇಕಾದವರೂ ಬ್ರಾಹ್ಮಣರೇ, ಇತ್ತೀಚೆಗೆ ಸರಕಾರವೇ ದಲಿತರಿಗೆ ಅರ್ಚಕ ಹುದ್ದೆಯನ್ನು ಕೊಡುವ ಕುರಿತಂತೆ ಮಾತನಾಡಿತ್ತು. ಅರ್ಚಕರ ಸ್ಥಾನದಲ್ಲಿ ದಲಿತರಿಗೆ ಮೀಸಲಾತಿ ನೀಡುವ ಕುರಿತಂತೆ ಸರಕಾರ ಯೋಚಿಸುತ್ತಿದೆ ಎಂದು ತಿಳಿಸಿತು. ಮೀಸಲಾತಿ ನೀಡುವುದೇನೋ ಹೌದು. ಆಗ ದಲಿತರು ಆ ಅರ್ಚಕ ಸ್ಥಾನಕ್ಕೆ ಅರ್ಹವಾದ ವೇದ, ಮಂತ್ರಗಳನ್ನು (ತಮ್ಮದಲ್ಲದ, ಅನ್ಯ) ಕಲಿಯಬೇಕು. ಅದನ್ನು ಕಲಿಸುವ ಹೊಣೆ ಮತ್ತೆ ಬ್ರಾಹ್ಮಣರದ್ದಾಗುತ್ತದೆ. ದಲಿತರಿಗೆ ವೇದ, ಮಂತ್ರವನ್ನು ಕಲಿಸುವುದಕ್ಕಾಗಿ ಬ್ರಾಹ್ಮಣರು ಮತ್ತೆ ಸರಕಾರದಿಂದ ಸವಲತ್ತುಗಳನ್ನು ಬಾಚಿಕೊಳ್ಳುತ್ತಾರೆ. ಅಂತಿಮವಾಗಿ ವೇದ, ಮಂತ್ರವನ್ನು ಕಲಿತು ದಲಿತರ ಮಕ್ಕಳು ದೇವಸ್ಥಾನದೊಳಗೆ ಪ್ರವೇಶಿಸಿ ಪೂಜೆಗೆ ಅಣಿಯಾಗುವಾಗ, ಬ್ರಾಹ್ಮಣರ ಮಕ್ಕಳೆಲ್ಲಾ ಅಮೆರಿಕದಲ್ಲಿ ಕಂಪ್ಯೂಟರ್ ಮುಂದೆ ಕೂತು ಲಕ್ಷ ಲಕ್ಷ ಬಾಚುತ್ತಿರುತ್ತಾರೆ. ಆಗ ದಲಿತರಿಗೆ ಗೊತ್ತಾಗುತ್ತದೆ. ತಮ್ಮ ಕೈಗೆ ಸಿಕ್ಕಿರುವುದು ‘ಸತ್ತ ದನ’ ಎನ್ನುವುದು.

ಪೇಜಾವರರಲ್ಲಿ ಕೇಳಬಹುದಾದ ಅತ್ಯುತ್ತಮ ಪ್ರಶ್ನೆಯೆಂದರೆ ಒಂದೇ. ‘‘ನೋಡಿ...ನೀವು ನಿಮ್ಮ ಮಠಗಳನ್ನು, ದೇವಸ್ಥಾನಗಳನ್ನು ಹಿಂದೂಗಳ ದೇವಸ್ಥಾನ ಎನ್ನುತ್ತೀರಿ. ಶೂದ್ರರಿಂದ ಲಕ್ಷ ಲಕ್ಷ ರೂ.ಗಳನ್ನು ದೇಣಿಗೆ ಪಡೆಯುತ್ತೀರಿ. ಈ ಮಠದ ಆದಾಯದಿಂದ ನೀವು ಶೂದ್ರರ, ದಲಿತರ ಶಿಕ್ಷಣಕ್ಕಾಗಿ ಎಷ್ಟು ವೆಚ್ಚ ಮಾಡಿದ್ದೀರಿ? ಅದರ ಲೆಕ್ಕ ಕೊಡುತ್ತೀರಾ?’’ ಎಂಬ ಪ್ರಶ್ನೆಯನ್ನು ಕೇಳಿ. ಉದಾಹರಣೆಗೆ ಆದಿಚುಂಚನಗಿರಿ ಮಠ ತನ್ನವರಿಂದ ಎಷ್ಟು ದೇಣಿಗೆಗಳನ್ನು ಸಂಗ್ರಹಿಸುತ್ತಿದೆಯೋ, ಅದರ ಸ್ವಲ್ಪವನ್ನಾದರೂ ತನ್ನ ಸಮುದಾಯಕ್ಕಾಗಿ ವ್ಯಯ ಮಾಡುತ್ತಿದೆ. ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಜೈನರಾಗಿದ್ದರೂ, ಅಲ್ಲಿ ಸಂಗ್ರಹವಾಗಿರುವ ಹಣವನ್ನು ವ್ಯಾಪಕವಾಗಿ ಸಾಮಾಜಿಕ ಕಾರ್ಯಕ್ಕಾಗಿ ಬಳಸುವ ನಿದರ್ಶನವಿದೆ. ದಕ್ಷಿಣ ಕನ್ನಡದ ಉಳ್ಳಾಲ ದರ್ಗಾವನ್ನೇ ತೆಗೆದುಕೊಂಡರೂ, ಅಲ್ಲಿ ಸಂಗ್ರಹವಾದ ಹಣದಿಂದ ಶಾಲೆ, ಆಸ್ಪತ್ರೆಗಳನ್ನು ಕಟ್ಟಿ ಮುಸ್ಲಿಂ ಸಮುದಾಯಕ್ಕೆ ಸಹಾಯ ಮಾಡುವ ಕಾರ್ಯ ನಡೆಯುತ್ತಿದೆ. ಆದರೆ ಒಂದೆಡೆ ‘ಹಿಂದೂ’ ಎಂಬ ಹೆಸರಿನಲ್ಲಿ ಉಡುಪಿ ಮಠಗಳು ಎಲ್ಲ ಶೂದ್ರ, ದಲಿತರಿಂದ ದೇಣಿಗೆಗಳನ್ನು ಪಡೆಯುತ್ತಿವೆ. ಅದನ್ನು ವ್ಯಯಿಸುವ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಬಳಗ ಶೂದ್ರ, ದಲಿತರನ್ನು ದೂರವಿಡುತ್ತವೆ. ಇದೊಂದೇ ಸಾಕು. ಈ ಉಡುಪಿಯಲ್ಲಿರುವ ಮಠ ಹಿಂದೂಗಳ ಮಠ ಅಲ್ಲ. ಬ್ರಾಹ್ಮಣರ ಮಠ ಎನ್ನುವುದನ್ನು ತಿಳಿದುಕೊಳ್ಳಲು. ಹೀಗಿರುವಾಗ ಅಲ್ಲಿ ನನಗೆ ಪೂಜೆಗೆ ಅವಕಾಶ ಕೊಡಬೇಕು ಎಂದು ದಲಿತರು ಕೇಳುವುದೇ ಹಾಸ್ಯಾಸ್ಪದ. ಗೋಕುಲಾಷ್ಠಮಿಗೂ- ಇಮಾಂ ಸಾಬಿಗೂ ಇರುವ ಸಂಬಂಧವೇ ದಲಿತರಿಗೂ ಅರ್ಚಕ ಹುದ್ದೆಗೂ ಇರುವ ಸಂಬಂಧ.

ದಲಿತರ ಉದ್ಧಾರ ಅವರು ಅರ್ಚಕರಾಗುವುದರಿಂದ ಸಾಧ್ಯವಿಲ್ಲ. ದಲಿತರು ಕಂಪ್ಯೂಟರ್ ಕಲಿಯಲಿ. ಇಂಗ್ಲಿಷ್ ಕಲಿಯಲಿ. ಆರ್ಥಿಕವಾಗಿ ಸುಭಿಕ್ಷರಾಗಲಿ. ಬ್ರಾಹ್ಮಣ್ಯವನ್ನು ತಲೆಯಲ್ಲಿ ಹೊತ್ತವರ ‘ಬಾಸ್’ಗಳಾಗಿ ಹುದ್ದೆ ನಿರ್ವಹಿಸಲಿ. ದಲಿತರ ಸ್ವಾತಂತ್ರದ ದಾರಿ ಅಲ್ಲಿದೆ. ಅರ್ಚಕ ಹುದ್ದೆ ಪೇಜಾವರರ ಕುಡಿಗಳಿಗೇ ಇರಲಿ. ಅದು ದಲಿತರಿಗೆ ಬೇಡವೇ ಬೇಡ. ದಲಿತರ ಉದ್ಧಾರಕ್ಕೆ ಅವರ ದೈವಗಳು, ಪಾಡ್ದನಗಳು, ಸಂಸ್ಕೃತಿಗಳೇ ಸಾಕು. ಬ್ರಾಹ್ಮಣ್ಯವನ್ನು ತಲೆಯಲ್ಲಿ ಹೊತ್ತವರೆಲ್ಲಾ ತಮ್ಮ ತಮ್ಮ ಮಕ್ಕಳಿಗೆ ಕಂಪ್ಯೂಟರ್ ಕಲಿಸಿ, ಇಂಗ್ಲಿಷ್ ಕಲಿಸಿ ಅವರನ್ನು ಅಮೆರಿಕದಂತಹ ಶ್ರೀಮಂತ ದೇಶಕ್ಕೆ ರವಾನಿಸುತ್ತಿರುವಾಗ, ಇಲ್ಲಿ ದಲಿತ ಮುಖಂಡರೆಂದು ಕರೆಸಿಕೊಂಡವರು, ಚಿಂತಕರೆಂದು ಕರೆಸಿಕೊಂಡವರು ‘ನಮಗೆ ದೇವಸ್ಥಾನದ ಅರ್ಚಕರಾಗಲು ಅವಕಾಶ ನೀಡಿ ಎಂದು ಕೇಳುವುದು ಹಾಸ್ಯಾಸ್ಪದ ಮಾತ್ರವಲ್ಲ. ಅದು ದಲಿತರ ಪಾಲಿನ ದುರಂತವೂ ಕೂಡಾ. ಆದುದರಿಂದ, ಬ್ರಾಹ್ಮಣರ ಸಾಂಸ್ಕೃತಿಕ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುತ್ತಾ ದಲಿತರು ತಮ್ಮ ಹೆಜ್ಜೆಗಳನ್ನಿಡಬೇಕು. ಸತ್ತ ಸಂಸ್ಕೃತ, ಸತ್ತ ಸಂಸ್ಕೃತಿ ಇತ್ಯಾದಿಗಳನ್ನು ದಲಿತರ ಹೆಗಲಿಗೆ ಕಟ್ಟುವ ಹುನ್ನಾರದಿಂದ ದಲಿತರನ್ನು ಪಾರು ಮಾಡುವ ಕುರಿತಂತೆ ನಾಯಕರು ಯೋಚಿಸಬೇಕು. ನಾಳೆ ‘ದಲಿತರು ಅರ್ಚಕ ಹುದ್ದೆಯನ್ನು ನಿರ್ವಹಿಸಬಹುದು’ ಎಂದು ಕ್ರಾಂತಿಕಾರಿಯಂತೆ ಪೇಜಾವರರು ಘೋಷಿಸಬಹುದು. ಅಂತಹ ಸಂದರ್ಭದಲ್ಲಿ ಮೋಸವನ್ನು ಅರಿಯದೇ ಮುಗ್ಧ ದಲಿತರು ರೋಮಾಂಚನಗೊಂಡು ಅತ್ತ ಧಾವಿಸುವಂತಾಗಬಾರದು. ದಲಿತರು ಹುಲಿಗಳು. ಅವರಿಗೆ ಸತ್ತ ದನದ ಅಗತ್ಯವಿಲ್ಲ. ಜೀವಂತ ದನ, ಜಿಂಕೆಗಳನ್ನ್ನು ಬೇಟೆಯಾಡಿ ತಮ್ಮ ಆಹಾರವನ್ನು ಅವರು ಗಳಿಸಬಲ್ಲರು.
(ಫೆಬ್ರವರಿ 8, 2008)

Wednesday, February 8, 2012

ನನ್ನ ತಂದೆಯನ್ನು ಯಾಕೆ ಕೊಂದೆ?

ಉತ್ತರಪ್ರದೇಶದಲ್ಲಿ, ಚುನಾವಣ ಪ್ರಚಾರಕ್ಕಿಳಿದಿರುವ ಪ್ರಿಯಾಂಕ ಗಾಂಧಿಯ ಚೈತನ್ಯದಾಯಕ ಮುಖವನ್ನು ನೋಡಿದಾಗ ಈಕೆಯ ಕುರಿತಂತೆ ಏಪ್ರಿಲ್ 18  2008ರಲ್ಲಿ  ನಾನು ಬರೆದ ಲೇಖನವೊಂದು ನೆನಪಾಯಿತು. ನಿಮ್ಮೊಂದಿಗೆ ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ನಾನು ಹುಟ್ಟಿದ ನೆಲವನ್ನು ಕಾಪಾಡಲು ಮರಣವೇ ಮಾನದಂಡವಾದರೆ, ನಮಗದೇ ಬದುಕಿನ ಆರಂಭ. 
-ಮೂ. ಪುಷ್ಪರಾಜನ್ (ಶ್ರೀಲಂಕಾದ ತಮಿಳು ಕವಿ)

‘‘ನನ್ನ ತಂದೆ ಎಷ್ಟು ಒಳ್ಳೆಯವರಾಗಿದ್ದರು. ನೀನು ಅವರನ್ನು ಯಾಕೆ ಕೊಂದೆ?’’ ಜೈಲಿನೊಳಗಿರುವ ಹಂತಕಿಯನ್ನು ಆಕೆ ಕೇಳುತ್ತಾಳೆ.
ಯಾವುದೋ ವಿಷಾದ ನಾಟಕದ ಹೃದಯ ಕತ್ತರಿಸುವ ದೃಶ್ಯದಿಂದ ಆಯ್ದು ತೆಗೆದ ಸಾಲುಗಳಂತಿದೆ ಈ ಪ್ರಶ್ನೆ. ಆದರೆ ಈ ಪ್ರಶ್ನೆಯನ್ನು ಕೇಳಿದವಳು ಪ್ರಿಯಾಂಕ ಗಾಂಧಿ. ತನ್ನ ತಂದೆಯನ್ನು ಕೊಂದ ಹಂತಕಿ ನಳಿನಿ ಮುರುಗನ್ ಮುಂದೆ ನಿಂತು ಈ ಪ್ರಶ್ನೆಯನ್ನು ಕೇಳಿದಾಗ, ಆಕೆ ತಲೆ ತಗ್ಗಿಸಿದ್ದಳು. ವೆಲ್ಲೂರು ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ರಾಜೀವ್ ಗಾಂಧಿ ಹಂತಕಿ ನಳಿನಿಯನ್ನು ಕಳೆದ ಮಾರ್ಚ್ ತಿಂಗಳಲ್ಲಿ ಪ್ರಿಯಾಂಕ ಗಾಂಧಿ ಭೇಟಿ ಮಾಡಿದ ಸಂದರ್ಭ.
ಒಂದು ದೇಶದ ಭಾವೀ ನಾಯಕಿಯಾಗಿ ಪ್ರಿಯಾಂಕಗಾಂಧಿಯ ಈ ಭೇಟಿ ಅತ್ಯಂತ ಮುತ್ಸದ್ದಿತನದಿಂದ ಕೂಡಿದ್ದು, ಹಾಗೆಯೇ ನಳಿನಿಯೊಂದಿಗೆ ಪ್ರಿಯಾಂಕ ಕೇಳಿದ ಪ್ರಶ್ನೆ ಮಾತ್ರ ಅತ್ಯಂತ ಅಪಕ್ವತೆ ಮತ್ತು ಬಾಲಿಶತನದಿಂದ ಕೂಡಿದ್ದು, ಆದರೆ ಒಬ್ಬ ಮಗಳಾಗಿ ಆಕೆ ಕೇಳಿದ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಪ್ರಿಯಾಂಕ ಗಾಂಧಿಯೆಂದಲ್ಲ, ಈ ಜಗತ್ತಿನ ಕೋಟ್ಯಾಂತರ ಅನಾಥ ಮಕ್ಕಳ ಹೃದಯಾಳದ ಪ್ರಶ್ನೆ ಇದು ‘‘ನನ್ನ ತಂದೆಯನ್ನು ಯಾಕೆ ಕೊಂದೆ?’’ ಆದರೆ ಈ ಪ್ರಶ್ನೆಗೆ ಉತ್ತರಿಸಬೇಕಾದವರು ಯಾರು?

ಪ್ರಿಯಾಂಕ ಗಾಂಧಿಯ ಪ್ರಶ್ನೆಗೆ ನಳಿನಿ ಉತ್ತರಿಸಲಾಗದೆ ತಲೆ ತಗ್ಗಿಸಿ ನಿಂತಿದ್ದಳಂತೆ. ಆದರೆ ಕಣ್ಣಿಗೆ ಕಣ್ಣು ಕೊಟ್ಟು ನೋಡುವ ಧೈರ್ಯವಿದ್ದಿದರೆ ನಳಿನಿಯ ಕಣ್ಣಿನಲ್ಲಿ ಪ್ರಿಯಾಂಕಗಾಂಧಿಗೂ ಕೆಲವು ಪ್ರಶ್ನೆಗಳಿದ್ದವು. ಆ ಕಣ್ಣ ತಳದಲ್ಲಿ ಪ್ರಿಯಾಂಕಳ ಪ್ರಶ್ನೆ ಪ್ರತಿಫಲಿಸುತ್ತಿರುವುದನ್ನು ಕಾಣಬಹುದಿತ್ತು. ಪ್ರಿಯಾಂಕಗಾಂಧಿ ಕೇಳಿದ ಪ್ರಶ್ನೆ ಮಾಧ್ಯಮಗಳಲೆಲ್ಲಾ ಸುದ್ದಿಯಾದವು. ಆದರೆ ನಳಿನಿಯೂ ‘‘ನನ್ನ ತಂದೆಯನ್ನು ನೀವೆಲ್ಲ ಸೇರಿ ಯಾಕೆ ಕೊಂದಿರಿ?’’ ಎಂದು ಮರು ಪ್ರಶ್ನಿಸಿದ್ದರೆ? ಪ್ರಿಯಾಂಕ ಬಳಿ ಅದಕ್ಕೆ ಉತ್ತರವಿತ್ತೆ? ನಳಿನಿ ಮಾತ್ರವಲ್ಲ, ಶ್ರೀಲಂಕಾದ ಲಕ್ಷಾಂತರ ತಮಿಳು ಮಕ್ಕಳು ಒಟ್ಟಾಗಿ ‘‘ನನ್ನ ತಂದೆಯನ್ನು ಯಾಕೆ ಕೊಂದಿರಿ?’’ ಎಂದು ಕೇಳಿದ್ದರೆ, ಪ್ರಿಯಾಂಕ ಗಾಂಧಿ ಏನನ್ನು ಉತ್ತರಿಸುತ್ತಿದ್ದರು? 1987 ಜುಲೈ 29 ದಿನಾಂಕವನ್ನು ತಂದೆಯನ್ನು ಕಳೆದುಕೊಂಡ ಶ್ರೀಲಂಕದ ತಮಿಳು ಮಕ್ಕಳ ಹೃದಯದಲ್ಲಿ ಚೂರಿಯಿಂದ ಕೆತ್ತಲಾಗಿದೆ. ಆ ದಿನಾಂಕವನ್ನು ಸಂಭ್ರಮದಿಂದ ಭಿತ್ತರಿಸಿದ ದೂರದರ್ಶನ, ಪತ್ರಿಕೆಗಳು ಇದೀಗ ಮರೆತೇ ಬಿಟ್ಟಿದೆ. ಆದರೆ ಅದನ್ನು ಈ ಮಕ್ಕಳು ಹೇಗೆ ಮರೆತಾವು? 1987 ಜುಲೈ 29 ಇಂಡಿಯಾ- ಶ್ರೀಲಂಕಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ದಿನ. ಶ್ರೀಲಂಕದ ನಾಯಕ ಜಯವರ್ಧನೆ ಮತ್ತು ಭಾರತದ ನಾಯಕ ರಾಜೀವ್ ಗಾಂಧಿ ಬೆಂಗಳೂರಿನಲ್ಲಿ ಬೇಟಿ ಮಾಡಿದ ಆ ಅವಿಸ್ಮರಣೀಯ ದಿನದ ಕುರಿತಂತೆ ಶ್ರೀಲಂಕದ ತಮಿಳು ಕವಿ ಚೇರನ್ ತನ್ನ ಕವಿತೆಯಲ್ಲಿ ಹೀಗೆ ವರ್ಣಿಸುತ್ತಾರೆ ‘‘ಕಪ್ಪುಗಳಲ್ಲಿ ಚಹ ದಿಢೀರನೆ ರಕ್ತವಾಗಿದ್ದನ್ನು ತಿಳಿಯದೆ/ ಇಬ್ಬರು ನಾಯಕರು ಕುರುಡು ರಾಜಕೀಯದಲ್ಲಿ ಕಾಲ ಕಳೆದರು/ ಮನುಷ್ಯ ಮೂಳೆಗಳು ಸುಂದರ ಚಮಚಗಳಾಗಿ/ ತಲೆಬುರುಡೆಗಳು ತಟ್ಟೆಗಳಾಗಿ ರೂಪಾಂತರಗೊಂಡವು/ ಊಟದ ಮೇಜಿನ ಮೇಲೆ/ ದೂರದರ್ಶನ ಕಣ್ಣುಗಳೆಲ್ಲ ಕುರುಡಾದವು/ ನಾವಿಲ್ಲದೆ ನಡೆದ ಒಪ್ಪಂದ ಸಾವಿರಾರು ಜೀವಗಳ ನುಂಗಿ ನೆತ್ತರಲ್ಲಿ ಬರೆದ ಚರಿತ್ರೆ...’’

ಪ್ರಿಯಾಂಕಗಾಂಧಿ ಹೇಳಿದು ಸತ್ಯ. ರಾಜೀವ್ ಗಾಂಧಿ ನಿಜಕ್ಕೂ ಒಳ್ಳೆಯ ಮನುಷ್ಯ. ಕನಸುಗಾರ. ಕೊಳೆತು ಹೋದ ಆಲೋಚನೆಗಳನ್ನು ಹೊತ್ತು ತಿರುಗುತ್ತಿದ್ದ ವೃದ್ಧ ನಾಯಕರ ನಡುವೆ, ತಾರುಣ್ಯದಿಂದ ನಳನಳಿಸುವ ಭಾರತವೊಂದನ್ನು ತಲೆಯಲ್ಲಿ ಮುಡಿದುಕೊಂಡು ಓಡಾಡಿದ ನಾಯಕ. ಆದರೆ ಯಾವಾಗ ರಾಜೀವ್‌ಗಾಂಧಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೋ, ಪರೋಕ್ಷವಾಗಿ ಅದು ಮೃತ್ಯುವಿಗೆ ಹಾಕಿದ ರುಜುವಾಗಿತ್ತು. ಶಾಂತಿ ಒಪ್ಪಂದದ ಪರಿಣಾಮವನ್ನು ನಿಜವಾಗಿಯೂ ಅರಿತಿದ್ದರೆ, ತಮಿಳರ ಮಾರಣ ಹೋಮಕ್ಕಾಗಿ ಭಾರತದ ಸೈನಿಕರನ್ನು ರಾಜೀವ್‌ಗಾಂಧಿ ಕಳುಹಿಸುತ್ತಿರಲಿಲ್ಲವೇನೋ? ಆದರೆ ‘ಶಾಂತಿ ಒಪ್ಪಂದ’ ಎಂಬ ಎರಡು ಶಬ್ದಗಳಿಗೆ ಸ್ವತಃ ರಾಜೀವ್‌ಗಾಂಧಿ ಮೋಸ ಹೋಗಿದ್ದರು. ರಾಜೀವ್ ಜೊತೆಗಿದ್ದವರು ಅವರನ್ನು ದಾರಿ ತಪ್ಪಿಸಿದ್ದರು. ಶ್ರೀಲಂಕಾದಲ್ಲಿ ಭಾರತದ ಸೈನಿಕರು ತಮಿಳರ ಮಾರಣಹೋಮವನ್ನು ನಡೆಸಿದರು. ಸಹಸ್ರಾರು ಮಕ್ಕಳು ಅನಾಥರಾದರು. ‘‘ನನ್ನ ತಂದೆಯನ್ನು ಯಾಕೆ ಕೊಂದೆ?’’ ಈ ಪ್ರಶ್ನೆಯಿಲ್ಲದ ತಮಿಳರ ಮನೆಯಿಂದ ಒಂದು ಹಿಡಿ ಸಾಸಿವೆ ತಂದರೆ ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದ ನಳಿನಿ ಹೇಳಿದಿದ್ದರೆ, ಆ ಒಂದು ಹಿಡಿ ಸಾಸಿವೆಯನ್ನು ತಂದು ಕೊಡಲು ಪ್ರಿಯಾಂಕಗೆ ಸಾಧ್ಯವಿತ್ತೆ?

‘‘ಏನಿದ್ದರೂ ಅದನ್ನು ಮಾತುಕತೆಯ ಮೂಲಕ ಬಗೆಹರಿಸಬಹುದಿತ್ತಲ್ಲ?’’ ಪ್ರಿಯಾಂಕ ನಳಿನಿಯೊಂದಿಗೆ ಕೇಳಿದ ಇನ್ನೊಂದು ಪ್ರಶ್ನೆ. ಶ್ರೀಲಂಕಾ- ಭಾರತದ ನಡುವೆ ನಡೆದ ಶಾಂತಿ ಒಪ್ಪಂದದಲ್ಲಿ ನಳಿನಿ ಪ್ರತಿನಿಧಿಸುವ ವರ್ಗವನ್ನೂ ಸೇರಿಸಿಕೊಂಡಿದಿದ್ದರೆ ಬಹುಶಃ ರಾಜೀವ್‌ಗಾಂಧಿ ಹತ್ಯೆಯಂತಹ ದುರಂತ ಸಂಭವಿಸುತ್ತಿರಲಿಲ್ಲ. ಆದರೆ ಜಯವರ್ಧನೆ- ರಾಜೀವ್ ನಡುವೆ ಮಾತುಕತೆಯ ಸಂದರ್ಭದಲ್ಲಿ ನಳಿನಿ ಅಥವಾ ಆಕೆ ಪ್ರತಿನಿಧಿಸುವ ಗುಂಪು ಅದರ ಸಮೀಪವಾದರೂ ಸುಳಿಯುವ ಅವಕಾಶವಿತ್ತೆ? ನಳಿನಿ ಪ್ರತಿನಿಧಿಸುವ ವರ್ಗದ ಜೊತೆಗೆ ಪ್ರಾಮಾಣಿಕವಾಗಿ ಮಾತನಾಡುವ ಪ್ರಯತ್ನವನ್ನು ಜಗತ್ತು ಯಾವತ್ತಾದರೂ ಮಾಡಿತ್ತೆ? ಇಂದು ಜೈಲಿನೊಳಗೆ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ನಳಿನಿಯ ಬಳಿ ‘ಮಾತುಕತೆ ನಡೆಸಬಹುದಿತ್ತಲ್ಲ...’ ಎಂಬ ಪ್ರಶ್ನೆ ಕ್ರೂರವಾದದ್ದು ಎನ್ನುವುದರ ಅರಿವಾದರೂ ಪ್ರಿಯಾಂಕರಿಗಿದೆಯೇ?

 ‘ನನ್ನ ತಂದೆಯನ್ನು ಯಾಕೆ ಕೊಂದೆ?’ ಈ ಪ್ರಶ್ನೆ ಬರೇ ಪ್ರಿಯಾಂಕಳದ್ದು ಮಾತ್ರವಲ್ಲ. ನಳಿನಿಯದ್ದು ಕೂಡಾ. ಇರಾಕ್‌ನ ಲಕ್ಷಾಂತರ ಮಕ್ಕಳು ಇಂದು ಬುಶ್‌ನ ಜೊತೆಗೆ ಕೇಳುತ್ತಿರುವ ಪ್ರಶ್ನೆಯೂ ಇದೇ ಆಗಿದೆ. ‘ಇರಾಕ್‌ನಲ್ಲಿ ಅಮೆರಿಕ ಸ್ಥಾಪಿಸುತ್ತಿರುವ ಶಾಂತಿ’ಗೆ ಈ ಜಗತ್ತು ಕೊಡಬೇಕಾದ ಬೆಲೆ ಏನು ಎನ್ನುವುದನ್ನು ಭಾರತಕ್ಕೆ ಪ್ರತ್ಯೇಕವಾಗಿ ತಿಳಿಸಿಕೊಡಬೇಕಾದ ಅಗತ್ಯವಿಲ್ಲ. ಸೆಪ್ಟಂಬರ್ 11ರಂದು ನಡೆದ ದುರಂತದ ಸಂದರ್ಭದಲ್ಲಿ ಅಮೆರಿಕದ ಅಮಾಯಕರು ಕೇಳಿದ ಪ್ರಶ್ನೆಯನ್ನು ವಿಯೆಟ್ನಾಂ, ಅಘ್ಘಾನಿಸ್ತಾನ, ಇರಾಕ್, ಫೆಲೆಸ್ತೀನ್ ಕ್ಯೂಬಾ ಮೊದಲಾದ ರಾಷ್ಟ್ರಗಳು ಶತಮಾನಗಳಿಂದ ಅಮೆರಿಕದ ಜೊತೆ ಕೇಳುತ್ತಾ ಬಂದಿದೆ. ಆದರೆ ಇಂದು ಜಗತ್ತಿನಲ್ಲಿ ಧ್ವನಿ ಪಡೆದಿರುವುದು ಸೆಪ್ಟಂಬರ್ 11ರ ಅಮೆರಿಕದ ಪ್ರಶ್ನೆ ಮಾತ್ರ. ಮಾಧ್ಯಮಗಳು ಪ್ರಿಯಾಂಕಾಳ ಪ್ರಶ್ನೆಯನ್ನು ವೈಭವೀಕರಿಸಿದಂತೆ ಫೆಲೆಸ್ತೀನ್‌ನಲ್ಲಿ ಲಕ್ಷಾಂತರ ಯುವಕ, ಯುವತಿಯರು ಕೇಳುತ್ತಿರುವ ಅದೇ ಪ್ರಶ್ನೆಗೆ ಈವರೆಗೆ ಉತ್ತರಿಸಲು ಸಾಧ್ಯವಾಗದ ಜಗತ್ತು, ‘ಅಮೆರಿಕದ ಪ್ರಶ್ನೆ’ಗೆ ಕಣ್ಣೀರು ಮಿಡಿಯುತ್ತಿರುವುದು ವಿಪರ್ಯಾಸವಲ್ಲವೆ?

ಹಾಗೆಂದು ನಳಿನಿ ಮತ್ತು ಪ್ರಿಯಾಂಕ ಭೇಟಿಯ ಮಹತ್ವವನ್ನು ನಿರ್ಲಕ್ಷಿಸುವಂತಿಲ್ಲ. ಬೆಂಗಳೂರಿನಲ್ಲಿ ಜಯವರ್ಧನೆ ಮತ್ತು ರಾಜೀವ್‌ಗಾಂಧಿ 1987, ಜುಲೈ 29ರಂದು ಮಾಡಿದ ಭೇಟಿಯಷ್ಟೇ ಮಹತ್ವಪೂರ್ಣ ಭೇಟಿ ಇದು. ಒಂದು ರೀತಿಯಲ್ಲಿ ಅದಕ್ಕಿಂತಲೂ ಉನ್ನತವಾದ, ಮಾನವೀಯ ಭೇಟಿ ಇದು. ಒಂದು ರಾಜಕೀಯ ಕುರುಡು ನಿರ್ಣಯದ ಪರಿಣಾಮವನ್ನು ಉಂಡ ಇಬ್ಬರು ಮಹಿಳೆಯರ ಪರಸ್ಪರ ಭೇಟಿ, ಈ ಜಗತ್ತಿನ ಅಳಿದುಳಿದ ಭರವಸೆಯಾಗಿದೆ.
(ಎಪ್ರಿಲ್ 18, 2008)

Tuesday, February 7, 2012

ರಾವಣಾಯನ

1

ಮೂಗು, ಕಿವಿ, ಹೃದಯ ಹರಿದುಕೊಂಡು
ಆಕ್ರಂದನವಿಡುತ್ತಿದ್ದ
ವಿಧವೆ ಶೂರ್ಪನಖಿಯ
ನೋಡಿ ನಕ್ಕಳು ಸೀತೆ
ಅದಕ್ಕಾಗಿ ತೆತ್ತ ಬೆಲೆ
ರಾಮಾಯಣ!

2
ಯಾರು ಹೇಳಿದರು
ರಾಮಾಯಣ ಹುಟ್ಟಿದ್ದು
ವಾಲ್ಮೀಕಿಯ ‘ಮಾನಿಷಾದ’
ಎಂಬ ವಿಷಾದದೊಂದಿಗೆ ಎಂದು...?

ರಾಮಾಯಣ ಹುಟ್ಟಿದ್ದು
ಶೂರ್ಪನಖಿಯ ‘ಅಣ್ಣಾ...’
ಎಂಬ ಆಕ್ರಂದನದೊಂದಿಗೆ

ಶೂರ್ಪನಖಿಯ ಶೋಕ
ರಾಮಾಯಣದ ಶ್ಲೋಕವಾಯಿತು

3
‘ಅಣ್ಣಾ...’ ಎಂಬ ಆಕ್ರಂದನಕ್ಕೆ
ರಾವಣ ‘ಏನಾಯ್ತು ಬಂಗಾರ...?’
ಎಂದು ಧಾವಿಸಿದ
 
ಕಿವಿ, ಮೂಗು, ಮುಖ ಕಳೆದುಕೊಂಡ
ತಂಗಿಯ ಕಣ್ಣಲ್ಲಿ ಕಣ್ಣೀರಿನಂತೆ 
ರಕ್ತ ಸುರಿಯುತ್ತಿತ್ತು!

‘ಇದೇನಿದು ಬಂಗಾರ...’
ರಾವಣ ಮಡಿಲಲ್ಲಿಟ್ಟು ಕೇಳಿದ
‘ನಾಡಿನಿಂದ ಬಂದವರು
ಈ ಸ್ಥಿತಿಗೆ ತಂದರು’
ಶೂರ್ಪನಖಿ ಗಳಗಳನೆ ಅತ್ತಳು
‘‘ನೀನೇನು ತಪ್ಪು ಮಾಡಿದೆ’’
‘‘ನಾನವರ ಇಷ್ಟ ಪಟ್ಟೆ’’

ಅಷ್ಟೇ...
ಮುಂದೆ ರಾಮಾಯಣ ನಡೆಯಿತು
ತಂಗಿಗಾಗಿ ಪ್ರಾಣ ಕೊಟ್ಟ
ಅಣ್ಣನ ಕತೆ
ಜನಮನದಲ್ಲಿ ಹಾಡಾಯಿತು....!!

Monday, February 6, 2012

ಕ್ಷಮೆ ಇರಲಿ.....

ನಕ್ಸಲ್ ಚಳುವಳಿಯ ಹೆಸರಲ್ಲಿ ಪೊಲೀಸರಿಗೆ ಆಹುತಿಯಾದ ಪಾರ್ವತಿ, ಹಾಜಿಮಾರನ್ನು ನೆನೆದು ಬರೆದದ್ದು...

ಸುರಿಯುತ್ತಿದೆ ಬೆಂಕಿಯ ಮಳೆ
ಹರಡಿಕೊಂಡ
ಕಾರಿರುಳ ಛತ್ರಿ ಚಿಂದಿಯಾಗಿದೆ

ಆಸರೆಗೆಂದು

ಒಂದೇ ಸಮನೆ ಬಾಗಿಲು ತಟ್ಟುತ್ತಿದ್ದಿರಿ
ಸದ್ದಿಗೆ ಮನೆ ಅದುರುತ್ತಿದ್ದವು
ಮರ, ಗಿಡ, ಗಾಳಿ
ಅರಳುತ್ತಿದ್ದ ಹೂಗಳೂ
ಅರೆಗಳಿಗೆ ಸ್ತಬ್ಧವಾಗಿದ್ದವು
ನಾನೋ...
ಚಿಲುಕ ಸರಿಸಲೋ ಬೇಡವೋ
ಎಂದು ಬಾಗಿಲ ಬಳಿ ತಡವರಿಸುತ್ತಿದ್ದೆ

ಕ್ಷಮೆ ಇರಲಿ ತಂಗಿಯರೇ...

ನೀವು ಅಣ್ಣಾ ಎಂದು
ಧರೆಗುರುಳಿದ ಕ್ಷಣ
ಚಿಲಕ ಸರಿಸಲಾಗದ
ಅವಮಾನದಿಂದ ಬಾಗಿಲ ಬುಡದಲ್ಲಿ
ಕುಸಿದು ಕುಳಿತಿದ್ದೆ!

ನನ್ನ ರಾತ್ರಿಯನ್ನು

ಬೆಳಗಲೆಂದು ನೀವು
ಹಣತೆ ಹಿಡಿದು ಬಂದಿರಿ
ನಾನು ಬಾಗಿ ಉಫ್
ಎಂದು ಆರಿಸಿದ್ದೆ!

Sunday, February 5, 2012

ಅಮ್ಮನ ಕೊಳಲು

ಮೊನ್ನೆ ಕೊಳಲು ವಾದನ
ಕಾರ್ಯಕ್ರಮಕ್ಕೆ ಹೋಗಿದ್ದೆ....
ತನ್ನ ಉಸಿರಿಂದ ನಾದವನ್ನು
ಹೊರಹೊಮ್ಮಿಸುವ ಆತನ
ಯತ್ನವ ಕಂಡು
ನನಗೆ ನನ್ನ ತಾಯಿಯ ನೆನಪಾಯಿತು

ಅಡುಗೆ ಮನೆಯ ಒಲೆಯ ಮುಂದೆ
ಈ ಬಿದಿರಿನ
ಕೊಳವೆಯಂತಹದೆ
ಕಬ್ಬಿಣದ ಕೊಳವೆಯನ್ನು ಆಕೆ ಊದುತ್ತಿದ್ದರೆ
ನಾದವೊಂದು ಹೊರಹೊಮ್ಮುತಿತ್ತು
ಆಕೆಯ ಬೆನ್ನಿಗೆ ಆತುಕೊಂಡು
ನಾನದನ್ನು ಸವಿಯುತ್ತಿದ್ದೆ

ಮಲಗಿದ ಹಾವು ಥಕ್ಕನೆ
ಹೆಡೆ ಬಿಚ್ಚಿದಂತೆ
ಆ ನಾದಕ್ಕೆ ಹಸಿಸೌದೆ
ಧಗ್ಗನೆ ಹೊತ್ತಿಕೊಳ್ಳುತ್ತಿತ್ತು

ಕಬ್ಬಿಣದ ಕೊಳಲ ಊದಿ
ನನ್ನೆದೆಯಲ್ಲಿ ಬೆಂಕಿ ಹಚ್ಚಿದ
ನನ್ನಮ್ಮನ ನೆನಪಿನ ನಾದದ  ಮುಂದೆ
ಈ ವಿದ್ವಾಂಸನ ಕೊಳಲು
ಬರೇ ಹಸಿ ಸೌದೆ

ಒಬ್ಬ ಚಿಂತಕ-ಸೇನಾಧಿಕಾರಿಯ ನಡುವಿನ ಮುಖಾಮುಖಿ!

ಮೊನ್ನೆ ಅನಂತಮೂರ್ತಿಯವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಬಂದೆ. ತುಸು ಅನಾರೋಗ್ಯದಿಂದಿದ್ದರೂ ನಮ್ಮೆಂದಿಗೆ(ನಾನು, ಬೊಳುವಾರು ಜೊತೆ ಹೋಗಿದ್ದೆ) ಅದೆಷ್ಟು ಚೈತನ್ಯದಾಯಕ ಮಾತುಗಳನ್ನಾಡಿದರೆಂದರೆ, ಈಗಲೂ ಅದೇ ಮಾತಿನ ಗುಂಗಿನಲ್ಲಿದ್ದೇನೆ. ಅವರ ಭೇಟಿಯ ನೆನಪಿಗಾಗಿ, ಅವರ ಒಂದು ಕೃತಿಯ ಕುರಿತಂತೆ 2011 ಜುಲೈಯಲ್ಲಿ ನಾನು ಬರೆದ ಬರಹವೊಂದನ್ನು ಇಲ್ಲಿ ನೀಡುತ್ತಿದ್ದೇನೆ.

ಮನಸ್ಸು-ಮನಸ್ಸುಗಳನ್ನು ಕಟ್ಟುವಲ್ಲಿ ತಮ್ಮ ತಮ್ಮ ಕೊಡುಗೆಗಳನ್ನು ನೀಡಿದ ವಿಶ್ವದ ಹತ್ತು ಸಮಸ್ತರು ಇಲ್ಲಿ ಮಾತನಾಡುತ್ತಾರೆ. ಅದಕ್ಕಿಂತ ಮುಖ್ಯವಾಗಿ ಭಾರತದ ಅಪರೂಪದ ಚಿಂತಕರೊಬ್ಬರು ಆ ಹತ್ತು ಸಮಸ್ತರನ್ನು ಮಾತನಾಡಿಸುತ್ತಾರೆ. ಈ ಮಾತುಗಳನ್ನು ನಾಡಿನ ಇನ್ನೊಬ್ಬ ಹಿರಿಯ ಚಿಂತಕರು ದಾಖಲಿಸಿ ಬರಹರೂಪಕ್ಕಿಳಿಸುತ್ತಾರೆ. ಒಂದು ಪುಸ್ತಕದ ಕುರಿತಂತೆ ಕುತೂಹಲವನ್ನು ಹುಟ್ಟಿಸಿ ಹಾಕಲು ಇಷ್ಟು ಧಾರಾಳ ಸಾಕು.ದೇಶದ ಹಿರಿಯ ಚಿಂತಕ ಯು. ಆರ್. ಅನಂತಮೂರ್ತಿಯವರು ವಿವಿಧ ಕ್ಷೇತ್ರಗಳಲ್ಲಿ ದುಡಿಮೆ ಮಾಡಿದ ವಿಶ್ವದ ಹತ್ತು ಗಣ್ಯರ ಜೊತೆ ನಡೆಸಿದ ಮಾತುಕತೆಯ ಸಂಗ್ರಹವೇ ಎಚ್. ಪಟ್ಟಾಭಿರಾಮ ಸೋಮಯಾಜಿ ಅವರು ಸಂಪಾದಿಸಿದ ‘ಹತ್ತು ಸಮಸ್ತರ ಜೊತೆ’ ಕೃತಿ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ.

 ಕೆ. ಎಂ. ಕಾರಿಯಪ್ಪ, ಆರ್. ಕೆ. ನಾರಾಯಣ್, ಆರ್. ಕೆ. ಲಕ್ಷ್ಮಣ್, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ, ಅಚಿಬೆ, ಜೆ. ಎಚ್. ಪಟೇಲ್, ಎಸ್. ಎಂ. ಕೃಷ್ಣ, ಕೆ. ವಿ. ಸುಬ್ಬಣ, ಜಿ. ಎಸ್. ಶಿವರುದ್ರಪ್ಪ, ರಾಜೀವ ತಾರಾನಾಥ, ಗಿರೀಶ್ ಕಾರ್ನಾಡ್ ಇವರೊಂದಿಗೆ ಅನಂತಮೂರ್ತಿಯವರು ಮಾತುಕತೆಯನ್ನು ನಡೆಸಿದ್ದಾರೆ. ಸಾಧಾರಣವಾಗಿ ಮಾತುಕತೆ ಎನ್ನುವಾಗ ನಾವು ಅದಕ್ಕೆ ‘ಸಂದರ್ಶನ’ ಎಂಬ ಹಣೆಪಟ್ಟಿಯನ್ನು ಲಗತ್ತಿಸಿ ಬಿಡುತ್ತೇವೆ. ಅಂದರೆ, ಒಬ್ಬ ಪ್ರಶ್ನೆ ಕೇಳುವುದು ಮತ್ತು ಇನ್ನೊಬ್ಬ ಉತ್ತರಿಸುವುದು. ಇಲ್ಲಿ ಕೆಲವೊಮ್ಮೆ ಏನಾಗುತ್ತದೆಯೆಂದರೆ ಪ್ರಶ್ನೆ ಕೇಳುವವನಿಗೆ ಯಾವ ಜವಾಬ್ದಾರಿಗಳೂ ಇರುವುದಿಲ್ಲ. ಎಲ್ಲ ಜವಾಬ್ದಾರಿಯನ್ನು ಉತ್ತರ ಹೇಳುವವನೇ ಹೊರಬೇಕಾಗುತ್ತದೆ. ಆದರೆ ಇಲ್ಲಿ ಹಾಗಾಗಿಲ್ಲ. ಇದೊಂದು ಮಾತುಕತೆ. ಇಲ್ಲಿ ಅನಂತಮೂರ್ತಿ ಸಂಪೂರ್ಣ ಹೊರಗೆ ನಿಂತು ಲೇಖಕರೊಂದಿಗೆ ಮಾತನಾಡಿಲ್ಲ. ಬದಲಿಗೆ ಅವರೊಂದಿಗೆ ಒಂದಾಗಿ ಮಾತುಕತೆಯನ್ನು ನಡೆಸಿದ್ದಾರೆ. ಆದುದರಿಂದ, ಈ ಕೃತಿಯಲ್ಲಿ ನಮಗೆ ಅನಂತಮೂರ್ತಿಯವರ ಮಾತುಗಳನ್ನೂ ಆಲಿಸುವ ಅವಕಾಶ ಸಿಗುತ್ತದೆ.

 ಪ್ರಶ್ನೆಗಳೆನ್ನುವುದು ಉತ್ಖನನ ನಡೆಸಿದಂತೆ ಇರಬೇಕು. ಅವನಿಗೊಂದು ಜವಾಬ್ದಾರಿಯಿದೆ. ಉತ್ತರವನ್ನು ಅಗೆಯುವ ಭರದಲ್ಲಿ ಒಳಗಿರುವ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವ ಮುಖ್ಯ ಜವಾಬ್ದಾರಿ ಪ್ರಶ್ನೆ ಕೇಳುವವನಿಗಿರುತ್ತದೆ. ಇಲ್ಲಿ ಅನಂತಮೂರ್ತಿ ತಮ್ಮ ವಿವೇಕ, ವಿನಯ, ಸಹೃದಯತೆ, ತಿಳುವಳಿಕೆ, ವೈಚಾರಿಕತೆ, ಕಾಳಜಿ ಎಲ್ಲವನ್ನು ಸಮರ್ಥವಾಗಿ ಬಳಸಿಕೊಂಡು ಗಣ್ಯರೊಳಗಿನ ವಿಚಾರಗಳನ್ನು ಅಗೆಯುತ್ತಾ, ಬಗೆಯುತ್ತಾ ಹೋಗುತ್ತಾರೆ. ಆಳಕ್ಕೆ ಹೋದಂತೆ ಅವರೂ ಅವರ ವಿಚಾರಗಳಲ್ಲಿ ಒಂದಾಗುತ್ತಾರೆ. ಇಲ್ಲಿರುವ ಎಲ್ಲ ಮಾತುಕತೆಗಳಲ್ಲೂ ಅದನ್ನು ನಾವು ಅನುಭವಿಸುತ್ತಾ ಓದಿಕೊಂಡು ಹೋಗಬಹುದಾಗಿದೆ.

ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಮತ್ತು ಅನಂತಮೂರ್ತಿಯವರ ನಡುವಿನ ಮುಖಾಮುಖಿಯೇ ಒಂದು ರೀತಿಯಲ್ಲಿ ಕುತೂಹಲಕಾರಿಯಾದುದು. ಕಾರ್ಯಪ್ಪ ನಿವೃತ್ತ ಯೋಧ. ಯುದ್ದ್ಧಭೂಮಿಯಲ್ಲಿ ಕೆಲಸ ಮಾಡಿದವರು. ದೇಶದ ಬಗ್ಗೆ, ಜನರ ಬಗ್ಗೆ ಅವರಿಗೆ ಅವರದೇ ಆದ ಕೆಲವು ಶಿಸ್ತುಬದ್ಧವಾದ ನಿರಂಕುಶ ನಿಲುವುಗಳಿವೆ. ಒಬ್ಬ ಕವಿ, ಚಿಂತಕ ದೇಶದ ಕುರಿತಂತೆ ಯೋಚಿಸುವುದಕ್ಕೂ ಒಬ್ಬ ಸೇನಾಧಿಕಾರಿ ಯೋಚಿಸುವುದಕ್ಕೂ ಭಾರೀ ವ್ಯತ್ಯಾಸಗಳಿವೆ. ಇವರಿಬ್ಬರ ಮುಖಾಮುಖಿಯಾದರೆ ಅದರ ಸ್ವಾರಸ್ಯವೇ ಬೇರೆ. ಇಲ್ಲಿ ಕಾರಿಯಪ್ಪರ ಒಳಗೆ ಅನಂತಮೂರ್ತಿ ನಿಧಾನಕ್ಕೆ ಪ್ರವೇಶಿಸುವ ರೀತಿ, ಅವರೊಳಗೆ ಗಣಿಗಟ್ಟಿರುವ ಮಾತುಗಳನ್ನು ನಿಧಾನಕ್ಕೆ ಬಗೆಯುವ ವಿಧಾನ ಅವರ ಪ್ರತಿಭೆಗೆ ಸಾಕ್ಷಿ.

 ಕಾರಿಯಪ್ಪರನ್ನು ‘ಭಾರತದ ಹೆಮ್ಮೆಯ ಪುತ್ರ’ ಎಂದು ಕರೆದು ಮಾತು ಆರಂಭಿಸುವ ಅನಂತಮೂರ್ತಿ, ನಿಧಾನಕ್ಕೆ ಒಂದೊಂದೇ ಪ್ರಶ್ನೆಗಳ ಮೂಲಕ ಮುಚ್ಚಿರುವ ಅವರ ಎದೆಬಾಗಿಲನ್ನು ತಟ್ಟುತ್ತಾ ಹೋಗುತ್ತಾರೆ. ‘ಸೇನೆಯ ಜನ ಅದ್ಭುತ ಸಾರ್’ ಎನ್ನುತ್ತಾ, ಕಾಶ್ಮೀರದ ಅವರ ಅನುಭವಕ್ಕೆ ತಲೆದೂಗುತ್ತಾ, ಥಕ್ಕನೆ ಒಂದು ಪ್ರಶ್ನೆಯನ್ನು ಎಸೆಯುತ್ತಾರೆ ‘‘ದ್ವೇಷವೇ ಇಲ್ಲದೆ ಯುದ್ಧ ಮಾಡೋದಕ್ಕೆ ಸಾಧ್ಯ ಇದ್ಯಾ ಸರ್?’’ ಇದು ಒಬ್ಬ ಸೇನಾಧಿಕಾರಿಯನ್ನು ಅಲುಗಾಡಿಸುವ ಪ್ರಶ್ನೆ. ಇದು ಅಪ್ಪಟ ಅನಂತಮೂರ್ತಿ ಪ್ರಶ್ನೆ. ಇದಕ್ಕೆ ಕಾರಿಯಪ್ಪ ಹೇಳುತ್ತಾರೆ ‘‘ಸ್ವಲ್ಪ ಮಟ್ಟಿಗಾದರೂ ದ್ವೇಷ ಇರಲೇಬೇಕಾಗುತ್ತದೆ. ಇಲ್ಲಾಂದ್ರೆ ಸುಮ್ಮನೆ ಶೂಟ್ ಮಾಡೋಕೆ ಆಗೋಲ್ಲ....’’ ಇಂತಹ ಮಾತನ್ನು ಒಬ್ಬ ಸೇನಾಧಿಕಾರಿಯ ಬಾಯಿಯಿಂದ ಹೊರಡಿಸುವುದು ಸಣ್ಣ ವಿಷಯವಲ್ಲ. ಒಂದು ರೀತಿಯಲ್ಲಿ ಅನಂತಮೂರ್ತಿಯ ಮೋಡಿಗೆ ಸಂಪೂರ್ಣ ಒಳಗಾಗಿರುವ ಕಾರಿಯಪ್ಪ ಅನಂತಮೂರ್ತಿಯ ಮನದಾಳದ ಮಾತುಗಳನ್ನೇ ತಮಗರಿಯದೇ ಆಡುತ್ತಾ ಹೋಗುವ ಸೋಜಿಗವನ್ನು ಕಾಣುತ್ತೇವೆ. ಅನಂತಮೂರ್ತಿಯವರ ಒಂದೊಂದು ಪ್ರಶ್ನೆಗಳಿಗೂ ಕಾರಿಯಪ್ಪ ತನ್ನ ಸೇನಾಧಿರಿಸುಗಳನ್ನು ಒಂದೊಂದಾಗಿ ಕಳಚುತ್ತಾ ಅಪ್ಪಟ ಮನುಷ್ಯರಾಗಿ ಮಾತನಾಡುವುದನ್ನು ಕಾಣುತ್ತೇವೆ. ನಿಜಕ್ಕೂ ಕಾರಿಯಪ್ಪ ಏನು ಅನ್ನುವುದನ್ನು ಕಂಡುಕೊಳ್ಳಬೇಕಾದರೆ, ಅನಂತಮೂರ್ತಿಯ ಜೊತೆಗೆ ಅವರು ಆಡಿದ ಮಾತುಗಳನ್ನು ನಾವು ಆಲಿಸಬೇಕು. ಆ ಸಂಭಾಷಣೆಗಳನ್ನು ಪಟ್ಟಾಭಿರಾಮ ಸೋಮಯಾಜಿಯವರು ಎಷ್ಟು ಜಾಗರೂಕತೆಯಿಂದ ಆರಿಸಿ ಬರಹ ರೂಪಕ್ಕಿಳಿಸಿದ್ದಾರೆಂದರೆ, ಆ ಮಾತುಕತೆಯಲ್ಲಿ ಪಟ್ಟಾಭಿಯೂ ಒಂದಾಗಿ ಬಿಟ್ಟಂತಿದೆ.

‘‘ಆಸ್ಟ್ರೇಲಿಯಾದ ಬಗ್ಗೆ ನಮಗೆ ಸ್ವಲ್ಪ ಹೇಳ್ತೀರಾ ಸರ್?’’ ಎಂದು ಅನಂತಮೂರ್ತಿ ಕೇಳಿದರೆ, ಅವರು ಅಲ್ಲಿನ ಮಿಲಿಟರಿ ಶಕ್ತಿಯ ಕುರಿತಾಗಿಯಾಗಲಿ, ರಾಜಕೀಯ ಶಕ್ತಿಯ ಕುರಿತಾಗಿಯಾಗಲಿ ಮಾತನಾಡುವುದಿಲ್ಲ. ಬದಲಿಗೆ, ಅಲ್ಲಿಯ ಎಬ್ ಓರಿಜಿನ್ಸ್‌ಗಳ ಕುರಿತಂತೆ ಮಾತನಾಡುತ್ತಾರೆ. ಆಸ್ಟ್ರೇಲಿಯಾವನ್ನು ಕಟ್ಟಿದ್ದು ಅವರು ಎನ್ನುತ್ತಾರೆ. ಆದರೂ ಅವರ ಮಾತುಗಳಲ್ಲಿ ಕೊಡಗಿನ ಶ್ರೀಮಂತ ಪಾಳೇಗಾರನ ಗುಣ ಮತ್ತು ಅವರ ಆಳದಲ್ಲಿ ಮಲಗಿರುವ ಸಾಮಾನ್ಯ ಮನುಷ್ಯನ ನಡುವಿನ ತಾಕಲಾಟವನ್ನು ಅಲ್ಲಲ್ಲಿ ಗುರುತಿಸಬಹುದು. ಆದರೆ ಅದನ್ನು ಹೊರಗೆಡಹಿದ ಚಾಕಚಕ್ಯತೆ ಮಾತ್ರ ಅನಂತಮೂರ್ತಿಯವರಿಗೆ ಸೇರಿದ್ದು.
ಯುದ್ದ ಭೂಮಿಯಲ್ಲಿ ಮನುಷ್ಯರ ವಿರುದ್ದ ಗುಂಡಿನ ದಾಳಿ ನಡೆಸಲು ಆದೇಶ ನೀಡುವ ಸೇನಾನಿಯೊಬ್ಬ ಹಿಂಸೆಯ ಕುರಿತಂತೆ ಮಾತನಾಡುವ, ಅಥವಾ ಅದರ ಕುರಿತಂತೆ ಅವರಿಗಿರುವ ಗೊಂದಲಗಳನ್ನು ಕೆಲವು ಮಾತುಗಳು ಅಭಿವ್ಯಕ್ತಿಗೊಳಿಸುತ್ತದೆ.
ಅನಂತ ಮೂರ್ತಿ ಕೇಳುತ್ತಾರೆ ‘‘ನೀವು ಸಸ್ಯಾಹಾರಿ ಯಾಗಿದ್ದೀರಿ ಅಂತ...’’ ಆದರೆ ತಾನು ಸಸ್ಯಾಹಾರಿಯಲ್ಲ ಎನ್ನುತ್ತಾರೆ ಕಾರಿಯಪ್ಪ. ಕೋಳಿ, ಮೀನುಗಳ ಬಗ್ಗೆ ನನಗೆ ಅತೀವ ಪ್ರೀತಿ ಅನ್ನುತ್ತಾರೆ. ಜೀವನದ ಕೊನೆಯ ಘಟ್ಟದಲ್ಲಿ ಕೋಳಿ, ಹಂದಿಯನ್ನು ಬಿಡುತ್ತಾರೆ. ಬಳಿಕ ಮೀನನ್ನೂ ಬಿಡುತ್ತಾರೆ. ಅವರು ಈ ಕುರಿತಂತೆ ಹೇಳುವ ಮಾತು ಅತ್ಯಂತ ಮುಗ್ದವಾಗಿದೆ. ಹಾಗೇ ಅಷ್ಟೇ ತಮಾಷೆಯೂ ಆಗಿದೆ ‘‘ಕುರಿ, ಕೋಳಿ, ಬಾತುಕೋಳಿ ಮರಿಗಳು, ಮತ್ತೆ ಹಂದಿ ಮರಿಗಳು, ಕರುಗಳು ಎಲ್ಲ ಬೆಳೆದು ದೊಡ್ಡ ಆಗ್ತವೆ. ಅದನ್ನು ಕತ್ತರಿಸಿ ತಿಂತಾರೆ ಕ್ರೂರಿ ಮನುಷ್ಯರು. ನಾನು ಕ್ರೂರಿಯಲ್ಲ...’’ ಇದು ಒಬ್ಬ ನಿವೃತ್ತ ಸೇನಾಧಿಕಾರಿಯ ಒಳಗಿನ ತಳಮಳ, ಘರ್ಷಣೆಗಳು. ಅಥವಾ ಪಾಪಪ್ರಜ್ಞೆ! ಒಂದು ಕಾದಂಬರಿಗೆ ವಸ್ತುವಾಗಬಲ್ಲ ಸಾಲುಗಳು ಇವು.

ಆದುದರಿಂದಲೇ ಮಾತುಕತೆ ಮುಂದುವರಿದಂತೆಲ್ಲ, ಅನಂತಮೂರ್ತಿಯವರು ಕಾರ್ಯಪ್ಪರ ಇನ್ನಷ್ಟು ಆಳಕ್ಕೆ ಹೋಗಬೇಕು ಎಂಬ ಆತುರ ದುರಾಸೆ ನಮ್ಮನ್ನು ಕಾಡುತ್ತದೆ. ಈ ಸಂದರ್ಶನಕ್ಕೆ ಆ ಸಾಧ್ಯತೆಯಿತ್ತು. ಆದರೆ ಅನಂತ ಮೂತಿರ್ಯ ಮುಂದೆ ಕುಳಿತಿರುವವರು, ಸೇನೆಯಿಂದ ನಿವೃತ್ಥರಾಗಿರುವ ವೃದ್ಧ ಜೀವ. ಅದರ ಘನತೆಯನ್ನು ಬಿಟ್ಟುಕೊಡುವುದಕ್ಕೆ ಅನಂತಮೂರ್ತಿ ಸಿದ್ಧರಿಲ್ಲ. ಆದುದರಿಂದ ಎಲ್ಲಿಯೂ ಪ್ರಶ್ನೆಯನ್ನ್ನು ಹರಿತವಾಗಿಸಿಲ್ಲ. ಸಂದರ್ಭದ ಸೂಕ್ಷ್ಮತೆಯನ್ನು ಅರಿತುಕೊಂಡು, ಅನಂತಮೂರ್ತಿಯವರು ಪ್ರಶ್ನಿಸುತ್ತಾ ಹೋದ ಕಾರಣ, ಎಲ್ಲೂ ಮಾತುಕತೆಯ ಸಹಜ ಸೌಂದರ್ಯಕ್ಕೆ ಧಕ್ಕೆಯಾಗದಂತೆಯೇ ಪ್ರಶ್ನೆಗಳನ್ನು ಇಡುತ್ತಾ ಹೋಗುತ್ತಾರೆ. ಇನ್ನಷ್ಟು ಅಗೆಯಬೇಕು, ಬಗೆಯಬೇಕು, ಅವರಿಂದ ಉತ್ತರಗಳನ್ನು ಬಲವಂತದಿಂದ ಪಡೆಯಬೇಕು ಎಂಬಿತ್ಯಾದಿ ಸಂದರ್ಶಕನ ಸ್ವಾರ್ಥ ಅನಂತಮೂರ್ತಿಯವರ ಪ್ರಶ್ನೆಗಳಿಲ್ಲ. ಇದು ಒಟ್ಟು ಮಾತುಕತೆಯ ಹೆಗ್ಗಳಿಕೆಯೂ ಹೌದು.

ಇಡೀ ಪುಸ್ತಕದಲ್ಲಿ ಒಬ್ಬ ನಿವೃತ್ತ ಸೇನಾಧಿಕಾರಿ ಮತ್ತು ಚಿಂತಕನ ನಡುವಿನ ಮಾತುಕತೆ ಸದ್ಯದ ಸಂದರ್ಭಕ್ಕೆ ಅತ್ಯಂತ ಮಹತ್ವದ್ದು ಎಂದು ನಾನು ಭಾವಿಸಿ, ಅದಕ್ಕೆ ಆದ್ಯತೆ ನೀಡಿ ಉಲ್ಲೇಖಿಸಿದ್ದೇನೆ. ರಾಜೀವ ತಾರಾನಾಥ್ ಮತ್ತು ಅನಂತಮೂರ್ತಿಯವರ ನಡುವಿನ ಸಂಭಾಷಣೆ ಯಂತೂ ಹೃದ್ಯ, ಪದ್ಯವೆನಿಸುವ ಜುಗಲ್‌ಬಂದಿ. ಜೆ. ಎಚ್. ಪಟೇಲ್ ಮತ್ತು ಎಸ್. ಎಂ. ಕೃಷ್ಣ ಅವರೊಂದಿಗಿನ ಮಾತುಕತೆಯೂ ಇಲ್ಲಿ ಉಲ್ಲೇಖಿಸಬೇಕಾದುದು. ಸದ್ಯದ ಕರ್ನಾಟಕ ರಾಜಕೀಯ ಸ್ಥಿತಿಗತಿಯ ಸಂದರ್ಭದಲ್ಲಿ ಈ ಮಾತುಕತೆ ಇನ್ನಷ್ಟು ಮಹತ್ವವನ್ನು ಪಡೆಯುತ್ತದೆ. ಮಾಸ್ತಿ ಮತ್ತು ಶಿವರಾಮಕಾರಂತರೊಂದಿಗಿನ ಸಂಭಾಷಣೆಗಳೂ ದಾಖಲಾರ್ಹ. ಇವೆಲ್ಲವನ್ನು ಜಾಗರೂಕತೆಯಿಂದ ಸಂಗ್ರಹಿಸಿದ ಪಟ್ಟಾಭಿರಾಮ ಸೋಮಯಾಜಿ ನಿಜಕ್ಕೂ ಅಭಿನಂದನಾರ್ಹರು. ಅನಂತಮೂರ್ತಿಯವರ ಜೊತೆಗಿನ ಅವರ ಸಾಮೀಪ್ಯವೂ ಈ ಪುಸ್ತಕವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದೆ. ಮುತ್ತುಗಳಂತೆ ಪದ ಪದಗಳನ್ನೂ ಜಾಗರೂಕತೆಯಿಂದ ಆರಿಸಿ ತೆಗೆದಿರುವ ಪಟ್ಟಾಭಿ, ಕನ್ನಡ ಜಗತ್ತಿಗೆ ಒಂದು ಒಳ್ಳೆಯ ಕೊಡುಗೆಯನ್ನು ನೀಡಿದ್ದಾರೆ. ಈ ಪುಸ್ತಕದ ಮುಖಬೆಲೆ 125 ರೂ. ಆದರೆ ಈ ಪುಸ್ತಕ ನಮಗೆ ಕೊಡುವ ಸುಖಕ್ಕೆ, ಸಂತೋಷಕ್ಕೆ, ಆನಂದಕ್ಕೆ ಯಾವ ಬೆಲೆಯನ್ನೂ ಕಟ್ಟಲು ಸಾಧ್ಯವಿಲ್ಲ.
 
ಪುಸ್ತಕ : ಅನಂತಮೂರ್ತಿ ಮಾತುಕತೆ
       ಹತ್ತು ಸಮಸ್ತರ ಜೊತೆ
ಸಂಪಾದಕರು: ಎಚ್. ಪಟ್ಟಾಭಿರಾಮ ಸೋಮಯಾಜಿ
ಪ್ರಥಮ ಮುದ್ರಣ: 2010
ಬೆಲೆ: 125ರೂ.
ಪ್ರಕಾಶಕರು: ಅಹರ್ನಿಶಿ ಪ್ರಕಾಶನ
ಪ್ರಶಾಂತ ನಿಲಯ, 4ನೇ ತಿರುವು, ವಿದ್ಯಾನಗರ ಶಿವಮೊಗ್ಗ

Saturday, February 4, 2012

ನಮ್ಮನ್ನು ನಾವೇ ಅರಿಯುವ ಪ್ರಯತ್ನ ‘ಕಾಸ್ಮಿಕ್ ಡಿಟೆಕ್ಟಿವ್’

ವರ್ತಮಾನ ಡಾಟ್ ಕಾಮ್ ಹೊರತಂದಿರುವ ಸಾಕ್ಷಚಿತ್ರ ‘ಭೂಮಿ ಹುಟ್ಟಿದ್ದು ಹೇಗೆ’ ಎಂಬ ಸಿಡಿಯನ್ನು ವೀಕ್ಷಿಸಿದಾಗ ವರ್ಷದ ಹಿಂದೆ ನಾನು ಓದಿದ ಮಣಿ ಭೌಮಿಕ್ ಅವರ ‘ಕಾಸ್ಮಿಕ್ ಡಿಟೆಕ್ಟಿವ್’ ನೆನಪಿಗೆ ಬಂತು. ಇದನ್ನು ಕೆ. ಪುಟ್ಟಸ್ವಾಮಿಯವರು ಸರಳವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅಭಿನವ ಪ್ರಕಾಶನ ಇದನ್ನು ಬೆಳಕಿಗೆ ತಂದಿದೆ. ಈ ಕೃತಿಯನ್ನು ಓದಿದ ಖುಷಿಯನ್ನು ನಾನು ಕೃತಿಯ ಪರಿಚಯ ರೂಪದಲ್ಲಿ ಹಂಚಿಕೊಂಡಿದ್ದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಬರೆದ ಆ ಕೃತಿ ಪರಿಚಯ ಇಲ್ಲಿದೆ.

‘‘ನಾನು ಪಡೆಯುವ ಅತ್ಯಂತ ಸುಂದರವಾದ ಅನುಭವ, ನಿಗೂಢತೆ’’ ಆಲ್ಬರ್ಟ್ ಐನ್‌ಸ್ಟೀನ್ ಅವರ ಮಾತುಗಳೊಂದಿಗೆ ಮಣಿ ಭೌಮಿಕ್ ಅವರ ‘ಕಾಸ್ಮಿಕ್ ಡಿಟೆಕ್ಟಿವ್’ ತೆರೆದುಕೊಳ್ಳುತ್ತದೆ. ನಿಜ, ಈ ಪುಸ್ತಕದ ಸಬ್ ಎಡ್ಡಿಂಗ್ ‘ನಮ್ಮ ವಿಶ್ವದ ನಿಗೂಢಗಳ ಅನ್ವೇಷಣೆ’ ಎಂದು ಹೇಳುತ್ತದೆಯಾದರೂ, ಅನ್ವೇಷಣೆ ಮಾಡು ತ್ತಲೇ ನಾವು ನಿಗೂಢತೆಯ ಇನ್ನಷ್ಟು ಆಳಕ್ಕೆ ಇಳಿಯುತ್ತಾ ಹೋಗುತ್ತೇವೆ. ಕೆ. ಪುಟ್ಟಸ್ವಾಮಿಯವರು ಅನುವಾದಿಸಿರುವ ಕಾಸ್ಮಿಕ್ ಡಿಟೆಕ್ಟಿವ್ ಕನ್ನಡದ ಪುಸ್ತಕ ಲೋಕಕ್ಕೆ ಒಂದು ಅಪ ರೂಪದ ಕೊಡುಗೆ ಎನ್ನುವುದಕ್ಕೆ ಯಾವ ಅಡ್ಡಿಯೂ ಇಲ್ಲ.

ಪುಟ್ಟಸ್ವಾಮಿಯವರು ಈ ಹಿಂದೆ ಮಣಿ ಭೌಮಿಕ್ ಅವರ ‘ಕೋಡ್ ನೇಮ್ ಗಾಡ್’ ಕೃತಿಯನ್ನು ಅನುವಾದಿಸಿದ್ದರು. ವಿಜ್ಞಾ ನಗಳ ಪರಿಕಲ್ಪನೆಗಳ ಮೂಲಕ ದೇವರ ವಿನ್ಯಾಸವನ್ನು ಅರಿ ಯುವ, ಆಧ್ಯಾತ್ಮ ಮತ್ತು ವಿಜ್ಞಾನವನ್ನು ಬೆಸೆಯುವ ಪ್ರಯತ್ನ ಈ ಕೃತಿಯಲ್ಲಿ ನಡೆದಿತ್ತು. ಹಾಗೆ ನೋಡಿದರೆ, ಕಾಸ್ಮಿಕ್ ಡಿಟೆಕ್ಟಿವ್ ಕೃತಿಯೂ ಇದಕ್ಕೆ ಭಿನ್ನವಾದುದೇನೂ ಅಲ್ಲ. ವಿಶ್ವದ ರಹಸ್ಯವನ್ನು ಭೇದಿಸುವ ಪತ್ತೇದಾರಿ ಕೆಲಸವನ್ನು ಮಾಡುತ್ತಲೇ ಈ ಕೃತಿ ಅಂತಿ ಮವಾಗಿ ಹೋಗಿ ನಿಲ್ಲುವುದು ನಾವೆಲ್ಲರೂ ಒಂದೇ ಮೂಲ ದಿಂದ ಉಗಮವಾಗಿದ್ದೇವೆ ಎನ್ನುವ ಅಂಶದ ಬಳಿಗೆ. ಹೇಗೆ ಒಂದು ಮರದ ನಕ್ಷೆಯು ಅದರ ಬೀಜದಲ್ಲಿಯೇ ಅಡಗಿರುತ್ತದೆ ಯೋ ಹಾಗೆ ಜೀವ ಉಗಮವಾಗುವ ಸಾಧ್ಯತೆಯು ವಿಶ್ವದ ನೀಲ ನಕಾಶೆಯಲ್ಲಿತ್ತು ಎನ್ನುವ ಅಂಶವನ್ನು ಅತ್ಯಂತ ಸರಳ ಭಾಷೆ ಯಲ್ಲಿ ನಿರೂಪಿಸಲು ಈ ಕೃತಿ ಪ್ರಯತ್ನಿಸುತ್ತದೆ. ಅಂದರೆ, ಮನು ಷ್ಯನಿಗಾಗಿ ಒಂದು ವೇದಿಕೆ ಸೃಷ್ಟಿಸುವ ಉದ್ದೇಶ ಅದರ ಮೂಲ ದಲ್ಲೇ ಇತ್ತು. ಈ ಅಂಶದೊಂದಿಗೇ ಕೃತಿ ಮುಕ್ತಾಯವಾಗುತ್ತದೆ. ಅಂದರೆ ನಿಗೂಢತೆಯ ಅನ್ವೇಷಣೆಗೆ ಹೊರಟ ಮನುಷ್ಯ, ಅದರಾ ಚೆಗಿನ ಇನ್ನೊಂದು ನಿಗೂಢತೆಯ ಮುಂದೆ ದಿಗ್ಮೂಢನಾಗಿ ನಿಲ್ಲಬೇಕಾಗುತ್ತದೆ.

ಪುಸ್ತಕವನ್ನು ಕುತೂಹಲ ಮನಸ್ಸಿನ ಜಗತ್ತಿನ ಎಲ್ಲ ಮಕ್ಕಳಿಗೆ ಅರ್ಪಿಸಲಾಗಿದೆ. ಅದರರ್ಥ ಇದು ಮಕ್ಕಳಿಗಾಗಿ ಮಾಡಿರುವ ಪುಸ್ತಕವೆಂದಲ್ಲ. ಇಡೀ ಪುಸ್ತಕವನ್ನು ಓದಿ ಮುಗಿಸಿದಾಗ, ಈ ಬ್ರಹ್ಮಾಂಡದ ಮುಂದೆ ನಾವೆಲ್ಲ ಅಂಬೆಗಾಲಿಕ್ಕುವ ಪುಟ್ಟ ಮಕ್ಕಳು ಎಂಬ ಅನುಭವವನ್ನು ನಮಗೆ ಕೊಡುತ್ತದೆ. ಬಹುಶಃ ಈ ಕಾರ ಣಕ್ಕಾಗಿ ಕೃತಿಯನ್ನು ಲೇಖಕರು ಮಕ್ಕಳಿಗಾಗಿ ಅರ್ಪಿಸಿರಬಹುದು. ಹಾಗೆ ನೋಡಿದರೆ, ಇಡೀ ಕೃತಿಯ ನಿರೂಪಣೆಯಲ್ಲಿ ಮಣಿ ಭೌಮಿಕ್ ಅವರ ಮಕ್ಕಳ ಮನಸ್ಸೊಂದು ಕೆಲಸ ಮಾಡಿದೆ. ಅವರು ಖಗೋಳ ವಿಜ್ಞಾನ ಮತ್ತು ಕಾಸ್ಮಾಲಜಿಯನ್ನು ಅಧ್ಯಯನ ಮಾಡಿರುವುದು ಒಂದು ರೀತಿಯ ವಿರಾಗಿ ಸನ್ನಿವೇಶದಲ್ಲಿ. ಬಡತನದಲ್ಲಿ ಹುಟ್ಟಿ ಬೆಳೆದ ಭೌಮಿಕ್ ರಾತ್ರಿ ಆಕಾಶವನ್ನು ನೋಡುತ್ತಾ ಅಲ್ಲಿರುವ ನಕ್ಷತ್ರ ಮಣಿಗಳನ್ನು ಕಂಡು ‘‘ಅಪ್ಪಾ ಅದೇ ದೇವರೇನು?’’ ಎಂದು ಕೇಳುತ್ತಿದ್ದರಂತೆ. ಭೂಮಿಯ ಜಂಜಡ ಗಳಿಂದ ಪಾರಾಗುವುದಕ್ಕೆ ಅವರು ಕಂಡು ಕೊಂಡದ್ದು ರಾತ್ರಿಯ ಆಕಾಶ. ಅಷ್ಟೇ ಅಲ್ಲ, ಆಕಾಶವನ್ನು ಅಧ್ಯಯನ ಮಾಡುತ್ತಾ ಮಾಡುತ್ತಾ ತಾನು ಕಂಡುಕೊಂಡ ಸಂಗತಿಗಳನ್ನೆಲ್ಲ ಇತರ ರೊಡನೆ ಮಕ್ಕಳ ಮನಸ್ಸಿನೊಂದಿಗೆ ಹಂಚಿಕೊಳ್ಳುತ್ತಾರೆ. ಅತ್ಯಂತ ಸರಳವಾದುದನ್ನು ಹೇಳುತ್ತಿದ್ದೇನೆ ಎಂಬ ಅನುಭ ವವನ್ನು ಕೊಡುತ್ತಲೇ ಅವರು ಅತ್ಯಂತ ನಿಗೂಢವಾದು ದರ ಕಡೆಗೆ ನಮ್ಮನ್ನು ಕೊಂಡೊಯ್ದು ನಿಲ್ಲಿಸುತ್ತಾರೆ.

 ವಿಶ್ವದ ರಹಸ್ಯವನ್ನು ಅರಿಯುವುದಕ್ಕೆ ಅವರು ನಮ್ಮನ್ನು ಸಿದ್ಧಗೊಳಿಸುವುದರಲ್ಲೇ ಒಂದು ಆಕರ್ಷಕ, ಜನಪ್ರಿಯ ವಿಧಾನವಿದೆ. ನಮ್ಮನ್ನವರು ಮರಿ ಪತ್ತೇದಾರರು ಎಂದು ಕರೆದು ವಿಶ್ವದ ರಹಸ್ಯಗಳನ್ನು ಪತ್ತೆ ಮಾಡುವ ಒಂದೊಂ ದೇ ಹೊಣೆಗಾರಿಕೆಯನ್ನು ವಹಿಸುತ್ತಾ ಹೋಗುತ್ತಾರೆ. ಅದಕ್ಕಾಗಿ ಒಂದು ಪ್ರವಾಸವನ್ನು ಸಜ್ಜುಗೊಳಿಸುತ್ತಾರೆ. ಆಕಾಶವೆಂದರೆ ದೂರದಿಂದ ನೋಡುವಾಗ ನಮ್ಮಲ್ಲಿ ರೊಮ್ಯಾಂಟಿಕ್ ಭಾವನೆಯೊಂದು ಹುಟ್ಟುತ್ತದೆ. ಫ್ಯಾಂಟಸಿ ಜಗತ್ತೊಂದು ತೆರೆದುಕೊಳ್ಳುತ್ತದೆ. ಆರಂಭದಲ್ಲಿ ಭೌಮಿಕ್ ಆಕಾಶವನ್ನು ಕಂಡದ್ದೇ ಆ ಕಣ್ಣಿನಲ್ಲಿ. ಬಳಿಕ ನಿಧಾನಕ್ಕೆ ಆ ಫ್ಯಾಂಟಸಿ ಜಗತ್ತಿನಿಂದ ನಮ್ಮನ್ನು ಹೊರಕ್ಕೆ ತಂದು, ಅಲ್ಲಿರುವ ವಾಸ್ತವಗಳನ್ನು ತೆರೆದುಕೊಡುತ್ತಾರೆ. ಆರಂಭದಲ್ಲಿ ಗ್ಯಾಲಕ್ಸಿಗಳು, ನಕ್ಷತ್ರಗಳು, ಅದರ ಹುಟ್ಟು ಸಾವು, ಸೂರ್ಯ ಮತ್ತು ಅದರ ಪರಿವಾರ, ಒಂದೊಂದೇ ಗ್ರಹಗಳು ಮತ್ತು ಅದರೊಳಗಿರುವ ವಿಸ್ಮಯಗಳನ್ನು ಪರಿಚಯಿಸುತ್ತಾ ಸೃಷ್ಟಿಯ ಮೂಲದವರೆಗೆ ತಂದು ನಿಲ್ಲಿಸುತ್ತಾರೆ. ನಾವೇನೋ ಬ್ರಹ್ಮಾಂಡದ ಕುರಿತಂತೆ ಭಾರೀ ಭಾರೀ ವಿವರಗಳನ್ನು ಕಂಡುಕೊಂಡಿದ್ದೇವೆ ಎಂಬ ಭ್ರಮೆ ನಮ್ಮಲ್ಲಿ ಹುಟ್ಟುತ್ತಿರುವಾಗಲೇ, ಅವರು ಈ ವಿಶ್ವದ ಅತಿ ದೊಡ್ಡ ಇನ್ನೊಂದು ಪ್ರಶ್ನೆಯ ಮುಂದೆ ನಮ್ಮನ್ನು ನಿಲ್ಲಿಸಿ ಪುಸ್ತಕವನ್ನು ಮುಗಿಸುತ್ತಾರೆ.

    ಬ್ರಹ್ಮಾಂಡದ ಕುರಿತಂತೆ ಅವರು ತಿಳಿಸುವ ಮಾಹಿತಿಗಳೋ ನಮ್ಮ ಎದೆಯನ್ನು ಧಗ್ಗೆನಿಸುವಂತೆ ಮಾಡುತ್ತದೆ. ಇಲ್ಲಿ ಯಾವ ಲೆಕ್ಕಗಳೂ ಸಣ್ಣಪುಟ್ಟದಾಗಿರುವುದಿಲ್ಲ. 4.6 ಬಿಲಿಯನ್ ವರ್ಷಗಳ ಹಿಂದೆ ನಮ್ಮ ಸೂರ್ಯ, ನಕ್ಷತ್ರಗಳು ಸೃಷ್ಟಿಯಾದ ವಿಸ್ಮಯದ ಬಗ್ಗೆ, ಇನ್ನು ಐದು ಬಿಲಿಯನ್ ವರ್ಷಗಳಲ್ಲಿ ಈ ಸೂರ್ಯ ನಾಶವಾಗುವುದನ್ನು ಅತ್ಯಂತ ರೋಚಕವಾಗಿ ಭೌಮಿಕ್ ಕಟ್ಟಿ ಕೊಡುತ್ತಾರೆ. ಈ ಸೂರ್ಯ ಉರಿಯುತ್ತಿರುವು ದಾದರೂ ಯಾವ ಇಂಧನದಿಂದ ಬಲದಿಂದ? ತನ್ನ ಬೆಂಕಿ ಯನ್ನು ಆರದಂತೆ ಉಳಿಸಲು ಸೂರ್ಯ ಸೆಕೆಂಡಿಗೆ 600 ಮಿಲಿಯನ್ ಟನ್ ಜಲಜನಕವನ್ನು ಉರಿಸುತ್ತಾನೆ. ಆದರೂ ಮುಂದಿನ ಐದು ಬಿಲಿಯನ್ ವರ್ಷಗಳಷ್ಟು ಕಾಲ ಉರಿಸು ವಷ್ಟು ಜಲಜನಕ ದಾಸ್ತಾನು ಅವನಲ್ಲಿದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಕೋಟಿ ಕೋಟಿ ವರ್ಷಗಳಿಂದ ಬೆಳಗುತ್ತಿರುವ ಸೂರ್ಯನ ಸಾವಿನ ಕುರಿತ ವರದಿಯೇ ನಮ್ಮನ್ನು ಒಂದು ಕ್ಷಣ ಬೆಚ್ಚಿ ಬೀಳಿಸುವುದಿಲ್ಲವೆ?
ಖಗೋಳ ಶಾಸ್ತ್ರದ ಕುರಿತಂತೆ ಕುತೂಹಲವುಳ್ಳವರು ಮಾತ್ರವಲ್ಲ, ತಮ್ಮನ್ನು ತಾವು ಅರಿಯುವ ಕುತೂಹಲವುಳ್ಳ ವರೂ ಓದ ಬೇಕಾದ ಕೃತಿ ಇದು. ವಿಷಯಕ್ಕೆ ಪೂರಕವಾಗಿ ಫೋಟೋಗಳನ್ನು ನೀಡಲಾಗಿದೆ. ಇದು ಆಕಾಶವನ್ನು ಅರ್ಥ ಮಾಡಿಕೊಳ್ಳಲು ನಮಗೆ ಇನ್ನಷ್ಟು ಸಹಾಯವನ್ನು ಮಾಡುತ್ತವೆ. ಚಂದ್ರನ ಮೇಲೆ ಕಾಲಿರಿಸಿದ ಆರನೇ ಮಾನವ ಎಂಬ ಹೆಗ್ಗಳಿಕೆ ಯನ್ನು ಪಡೆದಿರುವ ಎಡ್ಗರ್ ಮಿಶೆಲ್ ಅವರ ಅಪರೂಪದ ಮುನ್ನುಡಿಯು ಈ ಪುಸ್ತಕದ ತೂಕವನ್ನು ಹೆಚ್ಚಿಸಿದೆ. ‘‘ವಿಜ್ಞಾನ ಮತ್ತು ತಂತ್ರಜ್ಞಾನದ ಮಹಾ ಸಂಶೋಧನೆಗಳಿಂದ ನಮಗೆ ದೊರಕಿರುವ ಬ್ರಹ್ಮಾಂಡದ ಗಹನತೆ ಮತ್ತು ಸೌಂದರ್ಯ ಗಳನ್ನು ನಮ್ಮ ಪೂರ್ವಿಕರು ಕನಸು ಮತ್ತು ಕಲ್ಪನೆಗಳಲ್ಲಿ ಮಾತ್ರ ಕಾಣುವುದು ಸಾಧ್ಯವಿತ್ತು. ನಮ್ಮ ತಂತ್ರಜ್ಞಾನಗಳು ವಿನಾಶಕ್ಕೆ ಮತ್ತು ಸಂಘರ್ಷಕ್ಕೆ ಕಾರಣವಾಗುವ ಆಯುಧಗಳನ್ನು ನೀಡಿವೆ. ಆದರೆ ಕಿತ್ತಾಟ, ಹಿಂಸೆಗಳಿಗೆ ಬದಲು ನಮ್ಮ ಭೂಮಿಯ ನಾಗರಿಕತೆಯನ್ನು ಹೆಚ್ಚಿನ ಸಹಕಾರ, ಸೌಹಾರ್ದ, ಶಾಂತಿಯತ್ತ ಮುನ್ನಡೆಸುವುದು ನಮ್ಮ ಹೊಣೆ. ಎಳೆಯ ಓದುಗರ ದೃಷ್ಟಿ ಯಿಂದ ಮಣಿ ಭೌಮಿಕ್ ಬರೆದಿರುವ ಈ ಕೃತಿಯು, ನಕ್ಷತ್ರಗಳ ಕರೆಗೆ ಓಗೊಟ್ಟು ಸೂಕ್ತವಾದ ಆಯ್ಕೆ ಮಾಡಿಕೊಂಡರೆ ಈ ಬ್ರಹ್ಮಾಂಡದ ಸಾಮರ್ಥ್ಯ ಮತ್ತು ಸೌಂದರ್ಯಗಳನ್ನು ಅರಿಯಲು ಸಾಧ್ಯ ಎಂಬ ದರ್ಶನ ನೀಡುತ್ತದೆ’’ ಮಿಶೆಲ್ ಅವರ ಈ ಮಾತು, ಬಾಹ್ಯಾಕಾಶ ವಿಜ್ಞಾನದ ಉದ್ಧೇಶಗಳನ್ನು ಇನ್ನಷ್ಟು ಹಿರಿದುಗೊಳಿಸುತ್ತದೆ. ಅದು ಭೌತಿಕ ಜ್ಞಾನವನ್ನು ಮಾತ್ರವಲ್ಲ ನಮ್ಮ ಅಂತರಂಗದ ಜ್ಞಾನ, ಸೌಂದರ್ಯವನ್ನೂ ವಿಕಾಸಗೊಳಿಸುವಂತಹದ್ದು ಎನ್ನುವುದನ್ನು ಹೇಳುತ್ತದೆ.

ಮಕ್ಕಳು, ಹಿರಿಯರು ಜೊತೆಕೂತು ಓದಬೇಕಾದ ಕೃತಿ ಇದು. ಕನ್ನಡದಲ್ಲಿ ವಿಜ್ಞಾನ ಬರಹಗಳ ಕೊರತೆಯನ್ನು ತುಂಬಿಕೊಡುವಂತಹದ್ದು ಮಾತ್ರವಲ್ಲ, ಬಾಹ್ಯಾಕಾಶದ ಕುರಿತಂತೆ ಹೊಸ ಒಳನೋಟವನ್ನು ನೀಡುವಂತಹ ಪುಸ್ತಕ ಇದು. ಇದನ್ನು ಸರಳ ಕನ್ನಡದಲ್ಲಿ, ಸಮರ್ಥವಾಗಿ ಅನುವಾದಿಸಿರುವ ಕೆ. ಪುಟ್ಟಸ್ವಾಮಿ ಅವರು ಅಭಿನಂದನೀಯರು. ಅವರಿಂದ ಇಂತಹ ಇನ್ನಷ್ಟು ಕೃತಿಗಳ ನಿರೀಕ್ಷೆಯಲ್ಲಿದೆ ಕನ್ನಡ ಜಗತ್ತು.

Wednesday, February 1, 2012

ದಫನ ಭೂಮಿ ಮತ್ತು ಇತರ ಕತೆಗಳು

ದಫನ ಭೂಮಿ
ಅನಿರೀಕ್ಷಿತವಾಗಿ ಊರಿಗೆ ಹೋಗಿದ್ದೆ.
 ಆತ್ಮೀಯರೊಬ್ಬರು ಸಲಹೆ ನೀಡಿದರು ‘‘ನಿನ್ನ ತಾಯಿಯ ದಫನ ಮಾಡಿದ ಜಾಗಕ್ಕೊಮ್ಮೆ ಹೋಗಿ ಬಾ. ಅವಳನ್ನು ಮಣ್ಣು ಮಾಡಿದ ಬಳಿಗ ತಿರುಗಿಯೂ ಆ ಭಾಗಕ್ಕೆ ಹೋಗಿಲ್ಲ ನೀನು....’’
ನಾನು ಸುಮ್ಮನೆ ನಕ್ಕೆ.
ರಕ್ತ, ಮಾಂಸವನ್ನು ಬಗೆದು ನನ್ನ ಎದೆಯೊಳಗೆ ಆಕೆಯನ್ನು ದಫನ ಮಾಡಿರುವುದು ಅವರಿಗೇನು ಗೊತ್ತು? ಪ್ರತಿ ದಿನವೂ ನಾನು ದಫನ ಭೂಮಿಯೊಂದನ್ನು ಹೊತ್ತುಕೊಂಡು ತಿರುಗಾಡುತ್ತಿರುವುದು ಪಾಪ, ಅವರಿಗೇನು ಗೊತ್ತು?

ಪ್ರಾಣ
ನಾನು ಉಸಿರಾಡುತ್ತಿರುವಾಗ 
ನನ್ನ ಉಸಿರಿನ ಜೊತೆಗೆ
ನನ್ನೊಳಗಿಂದ ಅದೇನೋ ಹಾರಿ ಹೋದಂತಾಯಿತು
ಏನದು ಎಂದು ಬೆಚ್ಚಿ
ಕಣ್ತೆರೆದು ನೋಡಿದರೆ
ನನ್ನ ಪ್ರಾಣವಾಗಿತ್ತು!

ಏನೂ ಇಲ್ಲ
ಆತ ಉಣ್ಣುತ್ತಿದ್ದ.
ಒಂದು ಕೈಯಲ್ಲಿ ಪುಸ್ತಕ ಹಿಡಿದು ಓದುತ್ತಿದ್ದ.
ಜೊತೆಗೆ ಸಣ್ಣಗೆ ತೇಲಿ ಬರುವ ಸಂಗೀತವನ್ನು ಆಲಿಸುತ್ತಿದ್ದ.
‘‘ಗುರುಗಳೇ ಅವನೇನು ಮಾಡುತ್ತಿದ್ದಾನೆ ಹೇಳಿ...’’ ಶಿಷ್ಯ ಕೇಳಿದ.
‘‘ಇಲ್ಲ, ಅವನೇನನ್ನೂ ಮಾಡುತ್ತಿಲ್ಲ...’’ ಸಂತ ಉತ್ತರಿಸಿದ.

ತುತ್ತು
ಕೆಲಸದಾಕೆ ಮನೆಯೊಡತಿಯ ಮಗುವಿಗೆ ತುತ್ತು ತಿನ್ನಲು ಒತ್ತಾಯಿಸುತ್ತಿದ್ದಳು
ಆ ಮನೆಯೊಡತಿಯ ಮಗು ತಿನ್ನುವುದಕ್ಕೆ ಕೇಳುತ್ತಿರಲಿಲ್ಲ.
‘‘ನೀನು ತಿನ್ನದಿದ್ದರೆ ಎಲ್ಲ ನನ್ನ ಮಗುವಿಗೆ ಕೊಡುತ್ತೇನೆ’’ ಕೆಲಸದಾಕೆ ಮಗುವನ್ನು ಆಗಾಗ ಆಸೆಯಿಂದ ಎದುರಿಸುತ್ತಿದ್ದಳು.
ಕೊನೆಗೂ ಮಗು ತಿನ್ನ ತೊಡಗಿತು.
ಕೆಲಸದಾಕೆ ತುತ್ತಿಗಾಗಿ ಕಾಯುತ್ತಿದ್ದ ತನ್ನ ಮಗುವನ್ನು ನೋಡಿದಳು.

ಕೆಲಸದಾಕೆ
ಹೊರಗೆ ಬಿದ್ದ ಸದ್ದು.
 ‘‘ಅಯ್ಯೋ ಚಿಕ್ಕ ಯಜಮಾನ್ರು ಬಿದ್ರು’’ ಎಂದು ಕೆಲಸದಾಕೆ ಹೊರ ಓಡಿದಳು.
ಹಾಗೆ ಹೋದವಳು ಸಮಾಧಾನದಿಂದ ವಾಪಾಸಾದಳು
ಮನೆಯಾಕೆ ಕೇಳಿದಳು ‘‘ಏನಾಯ್ತೆ ನನ್ನ ಮಗುವಿಗೆ?’’
‘‘ಏನೂ ಆಗಿಲ್ಲ ಅಮ್ಮಾವ್ರೆ...ಬಿದ್ದದ್ದು ಚಿಕ್ಕ ಯಜಮಾನ್ರಲ್ಲ, ನನ್ನ ಮಗ’’ ಕೆಲಸದಾಕೆ ಉತ್ತರಿಸಿದಳು.

ಉಡುಗೊರೆ
ಮದುವೆ ಮುಗಿಯಿತು.
ಮದುಮಗ ಮತ್ತು ಮದುಮಗಳು ತಮಗೆ ಬಂದ ಉಡುಗೊರೆಗಳನ್ನು ಒಂದೊಂದಾಗಿ ತೆರೆಯುತ್ತಿದ್ದಳು.
ಒಂದು ಬಾರೀ ದೊಡ್ಡ ಅಲಂಕೃತ ಪೆಟ್ಟಿಗೆಯಿತ್ತು.
ಭಾರೀ ನಿರೀಕ್ಷೆಯಿಂದ ಅದನ್ನು ತೆರೆದರು.
ತೆರೆಯುತ್ತಾ ಹೋದಂತೆ ಒಳಗೆ ಖಾಲಿ ಖಾಲಿ ಪೆಟ್ಟಿಗೆ. ಕೊನೆಯ ಪೆಟ್ಟಿಗೆಯೂ ಖಾಲಿ. ಅದರೊಳಗೊಂದು ಚೀಟಿಯಿತ್ತು.
‘‘ಮದುವೆಯೆಂದರೆ ಹೀಗೆ...ಏನೇನೋ ನಿರೀಕ್ಷೆಗಳು.. ತೆರೆಯುತ್ತಾ ಹೋದರೆ ಖಾಲಿ ಖಾಲಿ....’’

ಕಸದ ಬುಟ್ಟಿ
‘‘ಗುರುಗಳೇ ಈ ಜಗತ್ತು ನನಗೊಂದು ಕಸದ ಬುಟ್ಟಿಯಂತೆ ಕಾಣುತ್ತಿದೆ’’ ಶಿಷ್ಯ ಹೇಳಿದ.
‘‘ಜಗತ್ತು ಕಸದ ಬುಟ್ಟಿಯಂತಿದ್ದರೆ, ಆ ಜಗತ್ತು ಬಳಸುವ ಕಸದ ಬುಟ್ಟಿಯಲ್ಲಿ ಅಮೂಲ್ಯವಾದುದನ್ನು ಹುಡುಕು’’ ಸಂತ ಉತ್ತರಿಸಿದ.

ತುಳಿತ
‘‘ನನಗವನನ್ನು ತುಳಿಯಬೇಕು ಅನ್ನಿಸಿದೆ. ಆದರೆ ನನ್ನನ್ನು ನಾನು ಹತೋಟಿಗೆ ತೆಗೆದುಕೊಳ್ಳುತ್ತಿದ್ದೇನೆ’’ ಆತ ಹೇಳಿದ.
‘‘ಯಾವಾಗ ನಿನಗನ್ನಿಸಿತೋ, ಆಗಲೇ ನೀನವನನ್ನು ತುಳಿದು ಆಯಿತು’’ ಸಂತ ಉತ್ತರಿಸಿದ.

ಚಿಟ್ಟೆ
ಚಿಟ್ಟೆಯೊಂದು
ನನ್ನ ಕಣ್ಣ ಕಿಟಕಿಯನ್ನು ಮುರಿದು
ಹೃದಯದೊಳಗೆ
ಇಳಿಯಿತು
ಪ್ರಾಣ ಮಕರಂದವನ್ನು ಹಿರಿದ ಚಿಟ್ಟೆ
ಉಸಿರಿನ ಜೊತೆ
ದಾರಿ ಮಾಡಿ
ಹಾರಿ ಹೋಯಿತು!