Sunday, January 25, 2015

ಬಿಡುಗಡೆಯ ಹುಡುಕುತ್ತಾ ಕ್ರಾಂತಿಯ ಬಂಧನದಲ್ಲಿ...

ಇತ್ತೀಚೆಗೆ ಮಂಗಳೂರಿನ ವಿ.ವಿ. ಕಾಲೇಜಿನಲ್ಲಿ ಅನುಪಮಾ ಅವರ ‘ಮೋಟರ್ ಸೈಕಲ್ ಡೈರಿ’ ಕೃತಿಯ ಕುರಿತಂತೆ ನಾನು ಹಂಚಿಕೊಂಡ ಮಾತುಗಳು.

ಈ ಕೃತಿಯ ಕುರಿತಂತೆ ಮಾತನಾಡುವ ಮೊದಲು ಒಂದನ್ನು ಸ್ಪಷ್ಟ ಪಡಿಸುವುದು ನನ್ನ ಕರ್ತವ್ಯವಾಗಿದೆ. ಉಗ್ರವಾದವೆನ್ನುವುದು ಬೇರೆ ಬೇರೆ ರೂಪಗಳಲ್ಲಿ ನಮ್ಮ ನಡುವೆ ಬೇರಿಳಿಸುತ್ತಿರುವ ಈ ದಿನಗಳಲ್ಲಿ ‘ಜೆಗುವಾರ’ ಎನ್ನುವ ಉಗ್ರವಾದೀ ಹೋರಾಟಗಾರನ ಅತಿ ವೈಭವೀಕರಣ ಓದುಗರನ್ನು ತಪ್ಪು ದಾರಿಗೆ ಸೆಳೆಯಬಾರದು. ಅತಿಶಯಗಳನ್ನು ಕಳಚಿಕೊಂಡು ವಾಸ್ತವಗಳ ಕಣ್ಣಲ್ಲಿ ಅರ್ಥಮಾಡಿಕೊಳ್ಳುತ್ತಾ ಹೋದಂತೆ ಚೆಗುವಾರ ಹೆಚ್ಚು ನಮ್ಮವನಾಗುತ್ತಾನೆಯೇ ಹೊರತು, ಅತಿ ರೋಚಕತೆಯನ್ನು, ಭಾವುಕತೆಯನ್ನು ಆವಾಹಿಸುತ್ತಾ ಹೋದಂತೆ ಅವನು ನೆಲದ ಹಸಿ ಮನುಷ್ಯನಾಗಿ ಉಳಿಯದೇ, ಅತಿಮಾನವನಾಗುತ್ತಾ ಹೋಗುತ್ತಾನೆ. ಚೆಗುವಾರ ನನಗೆ ಇಷ್ಟವಾಗುವುದು, ಸಹ ಮನುಷ್ಯನ ಕುರಿತಂತೆ ಅವನು ಹೊಂದಿದ ಅದಮ್ಯ ಪ್ರೀತಿಯ ಕಾರಣದಿಂದಲೇ ಹೊರತು, ಅವನು ಆರಿಸಿಕೊಂಡ ಉಗ್ರವಾದಿ ಮಾರ್ಗದ ಕಾರಣದಿಂದಲ್ಲ. ಆ ಪ್ರೀತಿಯೇ ಅವನನ್ನು ಅನಿವಾರ್ಯವಾಗಿ ಶಸ್ತ್ರಾಸ್ತ್ರ ಎತ್ತಿಕೊಳ್ಳುವಂತೆ ಮಾಡಿತು. ಆದರೆ, ಅದನ್ನು ಕೆಳಗಿಡುವ ಆಯ್ಕೆ ಅವನದಾಗಿ ಉಳಿಯಲಿಲ್ಲ. ಸಹ ಮನುಷ್ಯನ ಜೊತೆಗೆ ನಾವು ಹಂಚಿಕೊಳ್ಳಬೇಕಾದ ಬದುಕು ಮತ್ತು ಪ್ರೀತಿಯ ಭಾಗವಾಗಿ ಚೆಗೆವಾರ ನಮ್ಮೊಳಗಿರಬೇಕೆ ಹೊರತು,  ಅವನು ಮೈತುಂಬಾ ಅಂಟಿಸಿಕೊಂಡ ಗಂಧಕದ ಪುಡಿಯ ವಾಸನೆಯ ಜೊತೆಗಲ್ಲ.
***
 

   ‘ಮೋಟರ್ ಸೈಕಲ್ ಡೈರಿ’ ಈ ಪುಸ್ತಕದ ಹೆಸರು ನಾನು ಅದೆಷ್ಟೋ ಸಮಯದಿಂದ ಕೇಳುತ್ತಾ ಬಂದಿದ್ದೇನೆ. ಮತ್ತು ಕನ್ನಡದಲ್ಲಿ ತೀರಾ ಇತ್ತೀಚೆಗೆ ಓದಿದೆ. ಮೋಟರ್ ಸೈಕಲ್ ಎನ್ನುವುದೇ ಹುಡುಗರ ಬದುಕಿಗೆ ವೇಗ ಕೊಡುವ ಪದ. ಚೆ ಎನ್ನುವ ಪದ ಕೂಡ ಅಷ್ಟೇ. ಚೆಗೆವಾರನನ್ನ ಎದೆಯ ಮೇಲೆ ಒತ್ತಿಕೊಳ್ಳೋದಕ್ಕೆ ನೀವು ಕಮ್ಯುನಿಸ್ಟ್ ಕಾರ್ಯಕರ್ತನೇ ಆಗಬೇಕಾಗಿಲ್ಲ. ತಮ್ಮ ಟೀಶರ್ಟ್‌ಗಳಲ್ಲಿ ಚೆ ಚಿತ್ರಗಳನ್ನು ಹಾಕಿಕೊಂಡು ತಿರುಗಾಡುವ ಅದೆಷ್ಟೋ ಹುಡುಗರಿಗೆ ಕಮ್ಯುಸಂನ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದೇ ಇರುವುದೂ ಇದೆ. 20-30ರೊಳಗಿನ ವಯಸ್ಸಿನಲ್ಲಿ ನಮ್ಮಿಳಗೊಂದು ಬಂಡುತನವಿರುತ್ತದೆ. ಪ್ರತಿಭಟಿಸುವ, ಬಂಡಾಯವೇಳುವ ಯಾರೇ ಆಗಿರಲಿ, ಅವರು ನಮ್ಮನ್ನು ಅತಿ ಬೇಗ ಆಕರ್ಷಿಸುತ್ತಾರೆ. ಅವರ ಕುರಿತಂತೆ ನಾವು ಒಂದು ರಮ್ಯ, ರೋಚಕತೆಯನ್ನು ಆವಾಹಿಸಿಕೊಳ್ಳುತ್ತಾ ಆ ಮೂಲಕ ನಮ್ಮ ಇಷ್ಟಾನಿಷ್ಟಗಳನ್ನು ಸಾಧಿಸಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಇವತ್ತಿನ ಹುಡುಗರ ಪಾಲಿಗೆ ಚೆ ಒಂದು ಜೀವನ ಶೈಲಿಯೇ ಆಗಿದ್ದಾನೆ. ಅವನ ಹೋರಾಟ, ಸೈದ್ಧಾಂತಿಕ ಚಿಂತನೆ, ಸಾಮಾಜಿಕ ಸಮಾನತೆಯ ಕಲ್ಪನೆ ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದೇ ಬರೇ ಚೆಯನ್ನು ಚೆ ಎನ್ನುವ ಕಾರಣಕ್ಕಾಗಿಯೇ ಇಷ್ಟಪಡುವ ಅದೆಷ್ಟೋ ಹುಡುಗರನ್ನು ನೋಡಿದ್ದೇನೆ. 

ಹಾಗೆ ನೋಡಿದರೆ ಹದಿಹರೆಯದಲ್ಲಿ ಸ್ವತಃ ಚೆ ಕೂಡ ಅದೇ ಥರ ಇದ್ದ. ಅವನು ಮಹಾ ಚೆಲುವನಾಗಿದ್ದ, ತುಂಟನಾಗಿದ್ದ, ತನ್ನ ಪ್ರವಾಸದ ಸಂದರ್ಭದಲ್ಲಿ ಹಲವು ಕಡೆ ಸುಂದರ ಸುಳ್ಳುಗಳನ್ನು ಹೇಳುತ್ತಾನೆ. ಕೆಲವು ಕಡೆ ಬರೇ ವೈನ್‌ಗಾಗಿ ಸಣ್ಣ ಪುಟ್ಟ ಮೋಸಗಳನ್ನು ಮಾಡುತ್ತಾನೆ. ಹುಲಿಯೆಂದು ಭಯ ಬಿದ್ದು, ನಾಯಿಯನ್ನು ಗುಂಡಿಟ್ಟುಕೊಲ್ಲುತ್ತಾನೆ. ಒಟ್ಟಿನಲ್ಲಿ ಚೆ ಹೇಗಿದ್ದ ಎಂದರೆ, ಎಲ್ಲ ಹುಡುಗರ ಹಾಗೆಯೇ ಇದ್ದ. ಅಸ್ತಮಾ ಕಾಯಿಲೆ ಇದ್ದರೂ ಇಡೀ ಭೂಮಿಯನ್ನೇ ತನ್ನ ಮುಷ್ಟಿಗೆ ತೆಗೆದುಕೊಂಡು ಚೆಂಡಾಟ ಆಡಬೇಕು ಎನ್ನುವ ಅವನ ಉತ್ಸಾಹವೇ ಅವನನ್ನು ನಿಜವಾದ ಬದುಕಿನ ಕಡೆಗೆ ಹೊರಳುವಂತೆ ಮಾಡಿತು. ಮೋಟಾರ್ ಸೈಕಲ್ ಡೈರಿ ಕೃತಿಯನ್ನು ಆತ್ಮಕತೆ ಎಂದು ಗ್ರಹಿಸಬಹುದೋ ಎಂದು ಆಲೋಚಿಸಿದ್ದೆ. ಆದರೆ ಆತ್ಮಕತೆಗೆ ನಿಲುಕದ, ಡೈರಿಯ ಕೆಲವು ಚೂರುಗಳಂತಿರುವ ಕಥನ ಇದು. ಆದರೆ ಅವನ ಮುಂದಿನ ಬದುಕಿನ ಒಂದು ಬಹು ದೊಡ್ಡ ಪಯಣಕ್ಕೆ ದಾರಿಯನ್ನು ತೆರೆದುಕೊಟ್ಟ ಸಣ್ಣ ಪಯಣ. ಚೆ ವೃತ್ತಿಯಲ್ಲಿ ಒಬ್ಬ ವೈದ್ಯ ಆಗಿದ್ದ. ಸಮಾಜವನ್ನೂ ವೈದ್ಯನ ಕಣ್ಣಲ್ಲೇ ನೋಡಿದ. ಕಾಯಿಲೆಯ ಬೇರೆ ಬೇರೆ ರಾಜಕೀಯ, ಸಾಮಾಜಿಕ ಆಯಾಮಗಳನ್ನು ಗ್ರಹಿಸುತ್ತಾ ಹೋದ. ಅವನಿಗೆ ಅಂತಹ ಗ್ರಹಿಕೆಯನ್ನು ನೀಡಿದ್ದು ಒಂದು ಮೋಟಾರ್ ಸೈಕಲ್. ಆ ಗುಜರಿ ಮೋಟಾರ್ ಸೈಕಲ್‌ನ ಹೆಸರು ಲಾ ಪಡರೋಸಾ. ಅವನು ಅದರ ಮೇಲೆ ಕುಳಿತು ಬಿಡುಗಡೆಯನ್ನು ಅರಸಿಕೊಂಡು ಹೊರಟ ಪಯಣವೇ ‘ಮೋಟಾರ್ ಸೈಕಲ್ ಡೈರಿ’.

ಚೆಯ ಬದುಕೇ ಒಂದು ಸುದೀರ್ಘ ಪ್ರವಾಸ. ಅದು ಅರ್ಜೇಂಟೈನಾದಿಂದ ಆರಂಭವಾಗಿ ಬೊಲಿವಿಯಾದಲ್ಲಿ ಬಂದು ನಿಲ್ಲುತ್ತದೆ. ಹಾಗೆ ನೋಡಿದರೆ ಈ ಜಗತ್ತಿನ್ಲ ಎಲ್ಲ ಮಹಾ ಹೋರಾಟಗಾರರ ಬದುಕನ್ನು ಬದಲಾಯಿಸಿದ್ದೂ ಪ್ರವಾಸವೇ ಆಗಿದೆ. ಮತ್ತು ಬಹುತೇಕ ಹೋರಾಟಗಾರರು ತಮ್ಮ ಬದುಕನ್ನು, ಗುರಿಯನ್ನು ಪ್ರವಾಸದಲ್ಲೇ ಕಂಡುಕೊಂಡಿದ್ದಾರೆ. ಬುದ್ಧ ಹುಟ್ಟಿದ್ದು ಮನೆಯಿಂದ ಹೊರಗೆ ಇಳಿದ ಬಳಿಕ. ಸುದೀರ್ಘ ಪ್ರಯಾಣದಲ್ಲಿ ಅವನು ಬದುಕಿನ ಅರ್ಥವನ್ನು ಕಂಡುಕೊಂಡ. ಇಸ್ಲಾಮ್ ತತ್ವ ಶಾಸ್ತ್ರದಲ್ಲಿ ಈ ಪ್ರವಾಸವನ್ನು ಎರಡು ಬಗೆಯಾಗಿ ವಿಂಗಡಿಸುತ್ತಾರೆ. ಒಂದು ರಿಹ್ಲಾ. ಇನ್ನೊಂದು ಸಫರ್. ಪ್ರವಾಸಗಳಲ್ಲಿ ನಾವು ಕಂಡ ಬದುಕನ್ನು ದಾಖಲಿಸುತ್ತಾ ಹೋಗುತ್ತೇವೆ. ಇಬ್ನ್ ಬತೂತಾ, ಹೂಯೆನ್‌ತ್ಸಾಂಗ್‌ನಂತಹ ಪ್ರವಾಸಿಗರು ಈ ಥರ ನೋಡಿ ದಾಖಲಿಸುವ ಪ್ರವಾಸವನ್ನು ಮಾಡಿದವರು. ಇದನ್ನು ಇಸ್ಲಾಮ್‌ನಲ್ಲಿ ರಿಹ್ಲಾ ಎಂದು ಕರೆಯುತ್ತಾರೆ. ಈ ದೇಶದ ಇತಿಹಾಸ ಇಂದಿಗೂ ಒಂದಿಷ್ಟು ನಮ್ಮ ಕೈಯಲ್ಲಿದ್ದರೆ ಅದಕ್ಕೆ ಮುಖ್ಯ ಕಾರಣ ಇಂತಹ ಪ್ರವಾಸಿಗರೇ ಆಗಿದ್ದಾರೆ. ಕನ್ನಡದಲ್ಲೇ ‘ಪ್ರವಾಸಿ ಕಂಡ ಇಂಡಿಯಾ’ ಹಲವು ಸಂಪುಟಗಳು ಬಂದಿವೆ. ಅಲ್ಲೆಲ್ಲ ಹಲವು ಪ್ರವಾಸಿಗರು ತಾವು ಕಂಡ ಇಂಡಿಯಾದ ಜನರ ಜನಜೀವನವನ್ನು ಬಗೆದಿಡುತ್ತಾರೆ.


  ಎರಡನೆಯ ಬಗೆಯ ಪ್ರವಾಸವಿದೆ. ಇದು ಒಳಗೊಳ್ಳುವಿಕೆಗೆ ಸಂಬಂಧಿಸಿದ್ದು. ಅಲ್ಲಿನ ಜನರ ಬದುಕಿನ ಜೊತೆಗೆ ಭಾಗಿಯಾಗುತ್ತಾ, ಸ್ಪಂದಿಸುತ್ತಾ, ಅವರೊಂದಿಗೆ ಒಳಗೊಳ್ಳುತ್ತಾ ಸಾಗುವುದು. ಬುದ್ಧ ಇಂತಹ ಒಂದು ಪ್ರವಾಸದ ಮೂಲಕ ತನ್ನ ಗುರಿಯನ್ನು ಕಂಡ. ಮಹಮ್ಮದ್ ಪ್ರವಾದಿಯಾಗಿದ್ದು ಕೂಡ ಇಂತಹದೇ ಪ್ರವಾಸಗಳ ಮೂಲಕ. ತಳಸ್ತರದ ಜನರ ಬದುಕಿನ ಜೊತೆಗೆ ಸಂಬಂಧವನ್ನು ಬೆಸೆಯುವ ಮೂಲಕ. ಚೆಯನ್ನು ಬದಲಿಸಿದ್ದು ಕೂಡ ಅಂತಹದೇ ಒಂದು ಸಫರ್. ಅವನ ಜೀವನದ ಆರಂಭದ ಘಟ್ಟದ ಎರಡು ಪ್ರಯಾಣವನ್ನು ಬಹುಮುಖ್ಯವಾಗಿ ಗುರುತಿಸಬಹುದು. ಒಂದು 1950ರಲ್ಲಿ. ಮಗದೊಂದು 1951ರಲ್ಲಿ. ಮೊದಲನೆಯ ಪ್ರವಾಸದಲ್ಲಿ ಉತ್ತರ ಅರ್ಜೆಂಟೀನಾದ 4, 500 ಕಿ.ಮೀ.ಗೆ ಕಳೆದ. ಆದರೆ 1951ರಲ್ಲಿ ಆಲ್ಪರ್ಟೋ ಗ್ರೆನಾಡೋ ಜೊತೆಗೂಡಿ 8000 ಕಿ. ಮೀ. ದೂರವನ್ನು ಒಂಬತ್ತು ತಿಂಗಳಲ್ಲಿ ಕ್ರಮಿಸಿದ. ಈ ಎರಡನೆಯ ಪ್ರವಾಸದ ಬಹುತೇಕ ಭಾಗಗಳನ್ನು ಅವನು ಲ್ಯಾಟಿನ್ ಅಮೆರಿಕದಲ್ಲಿ ಕಳೆದಿದ್ದ. ಅರ್ಜೆಂಟಿನಾದಿಂದ ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನಿಜುವೆಲಾ, ಪನಾಮಾ ಮತ್ತು ಮಿಯಾಮಿಗಳಲ್ಲಿ ಸುತ್ತಾಡಿ, ಆ ದಾರಿಯಲ್ಲಿ ಅವನು ಕಂಡ ಬಡತನ, ಹಸಿವು, ಶೋಷಣೆ, ನೋವುಗಳ ಜೊತೆಗೆ ಅವನು ಅವನಿಗೆ ತಿಳಿಯದಂತೆಯೇ ಭಾಗಿಯಾಗುತ್ತಾ ಹೋದ. ಆ ಒಳಗೊಳ್ಳುವಿಕೆಯೇ ಅವನನ್ನು ಮತ್ತೊಂದು ಮಹಾ ಯಾನದ ಕಡೆಗೆ ಅವನನ್ನು ಸಿದ್ಧಗೊಳಿಸಿತು. ಅವರು ದಾರಿಯುದ್ದಕ್ಕೂ ಗಾಳಿ ಬೆಳಕನ್ನು ಸ್ವತಂತ್ರವಾಗಿ ಅನುಭವಿಸಿದರು.. ಕಷ್ಟ ಪಟ್ಟರು. ಸುಳ್ಳು ಹೇಳಿದರು. ಸಂಕಟಪಟ್ಟರು. ಕಣ್ಣೀರಿಟ್ಟರು ಕಾಯಿಲೆ ಬಿದ್ದರು. ತಾಯಿಯನ್ನು ನೆನೆದುಕೊಂಡು ಪತ್ರ ಬರೆದರು. ಗೆಳತಿಯನ್ನು ನೆನೆದುಕೊಂಡು ಕವಿತೆಯ ಸಾಲುಗಳನ್ನು ಅನುರಣಿಸಿದರು. ಹೀಗೆ ಬದುಕನ್ನು ಇದ್ದಂತೆಯೇ ಸ್ವೀಕರಿಸುತ್ತಾ, ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುತ್ತಾ ಹೋದವರು ನಿಧಾನಕ್ಕೆ ಆ ಪಯಣದೊಂದಿಗೆ ತಾವೂ ಬದಲಾಗುತ್ತಾ ನಡೆದರು. ಒಂದು ಯಾನ ಅವರನ್ನು ಬದಲಿಸಿತು. ಆ ಬದಲಾವಣೆ ತನ್ನ ಸಮಾಜವನ್ನ್ನು ಬದಲಿಸುವುದಕ್ಕೆ ಕಾರಣವಾಯಿತು.

ಅತ್ಯಂತ ಕುತೂಹಲಕರವಾದ ಅಂಶವೆಂದರೆ, ಎಲ್ಲೂ ತನ್ನ ಪ್ರವಾಸವನ್ನು ಯಾಕೆ ಕೈಗೊಳ್ಳುತ್ತಿದ್ದೇನೆ ಎನ್ನುವುದನ್ನು ಚೆ ಹೇಳಿಕೊಳ್ಳುತ್ತಿಲ್ಲ. ಅಥವಾ ಯಾಕೆ ಎನ್ನುವುದು ಅವನಿಗೇ ಗೊತ್ತಿಲ್ಲ. ಅವನು ಭೇಟಿ ನೀಡಿದ ಯಾವ ಪ್ರದೇಶಗಳೂ ಮೋಜಿನ ಪ್ರದೇಶಗಳಲ್ಲ. ಅಥವಾ ಪೂರ್ವ ಸಿದ್ಧತೆಯೊಂದಿಗೆ, ಹಣದ ಬಲದೊಂದಿಗೆ ಈ ಯಾನವನ್ನು ಹಮ್ಮಿಕೊಳ್ಳಲಿಲ್ಲ. ಬದಲಿಗೆ ತನ್ನ ಲಟಾರಿ ಮೋಟಾರ್‌ಸೈಕಲ್, ಗೆಳೆಯ ಅಲ್ಬರ್ಟೋ, ತಾಯಿ ಮತ್ತು ಗೆಳತಿಯ ನೆನಪುಗಳು, ಕೆಲವು ಪುಸ್ತಕಗಳಷ್ಟೇ ಅವನ ಜೊತೆಗಿದ್ದವು. ತಮ್ಮ ಪ್ರತಿ ದಿನದ ರೊಟ್ಟಿಯನ್ನು ದುಡಿದು, ಬೇಡಿ ಅಥವಾ ಸುಳ್ಳು ಹೇಳಿ ಸಂಪಾದಿಸಬೇಕಾಗಿತ್ತು. ಹೊರಡುವಾಗ ಅವನು ಇರುವುದರಿಂದ ಬಿಡುಗಡೆಯನ್ನಷ್ಟೇ ಬಯಸಿದ್ದ. ಯಾವುದೇ ಗೆರಿಲ್ಲಾ ಹೋರಾಟದ ಕಲ್ಪನೆಯೂ ಇರಲಿಲ್ಲ. ತಾನಿರುವ ಸ್ಥಿತಿಯ ಕುರಿತಂತೆ ಆಳವಾದ ಅಸಹನೆಯೊಂದು ಅವನನ್ನು ಕಾಡುತ್ತಿತ್ತು. ಅದಕ್ಕೆ ಕಾರಣ ಅವನು ಓದಿರುವ ಅಗಾಧವಾದ ಪುಸ್ತಕಗಳೋ, ಅಥವಾ ಆ ಕಾರಣ ಅವನ ಹುಟ್ಟಿನಲ್ಲೇ ಇತ್ತೋ! ಅವನೇ ಹೇಳುವಂತೆ, ಪ್ರಯಾಣವೆನ್ನುವುದು ಅವನ ಪಾಲಿಗೆ ಬಿಡುಗಡೆಯ ಹುಡುಕಾಟ. ಅವನೊಂದು ಅನ್ವೇಷಣೆಯಲ್ಲಿದ್ದ. ಆದರೆ ಅದು ಯಾವುದು ಎನ್ನುವುದು ಅವನಿಗೆ ಗೊತ್ತಿರಲಿಲ್ಲ. ಅವನೊಳಗಿನ ಎದೆ, ಎಲ್ಲ ಯುವಕರ ಎದೆಗಳಂತೆಯೇ ಒಂದು ತಹತಹಕಿಯಲ್ಲಿತ್ತು. ‘‘ಪ್ರಯಾಣವೆನ್ನುವುದು ಒಂದು ಅಮೂರ್ತವಾದ ಅವಕಾಶ. ಪ್ರಯಾಣ ಕೊನೆಗೊಳ್ಳುವುದು ಅವಕಾಶ ಕೊನೆಗೊಂಡಾಗಲೇ ಮತ್ತು ಕೊನೆ ಮುಟ್ಟಲು ಒಂದಕ್ಕಿಂತ ಹೆಚ್ಚು ವಿಧಾನಗಳಿವೆ. ಅಸಂಖ್ಯ ದಾರಿಗಳಿವೆ’’ ಅಂತೆಯೇ ಅವನ ಬದುಕಿನಲ್ಲಿ ಒಂದು ಪಯಣ ಮುಗಿಯುತ್ತಿದ್ದ ಹಾಗೆಯೇ ಇನ್ನೊಂದು ಪಯಣ ತೆರೆದುಕೊಳ್ಳುತ್ತಿತ್ತು. ಕ್ಯೂಬಾ ಸ್ವತಂತ್ರಗೊಂಡರೂ ಅವನ ಬಿಡುಗಡೆಯ ಕಡೆಗಿನ ಅವನ ಪಯಣ ಮಾತ್ರ ನಿಲ್ಲಲೇ ಇಲ್ಲ. ಅದು ಮತ್ತೆ ಅವನನ್ನು ಬೊಲಿವಿಯಾದ ಕಡೆಗೆ ಎಳೆದೊಯ್ಯಿತು. ಒಂದು ರೀತಿಯಲ್ಲಿ ಅವನು ಬಿಡುಗಡೆಯ ಹುಡುಕುತ್ತಾ ಕ್ರಾಂತಿಯ ಬಂಧನದಲ್ಲಿ ಸಿಲುಕಿ ಬಿಟ್ಟ. 


ಹಾಗೆ ನೋಡಿದರೆ ಚೆಯ ಮೊತ್ತ ಮೊದಲ ಸಾಹಸ ಮಯ ಪಯಣ ಅವನ 11 ವರ್ಷದಲ್ಲೇ ನಡೆದಿತ್ತು. ತನ್ನ 8 ವರ್ಷದ ತಮ್ಮ ರಾಬರ್ಟೋ ಜೊತೆಗೆ ಅವನು ಮನೆಯಿಂದ ಇದ್ದಕ್ಕಿದ್ದಂತೆಯೇ ಮಾಯವಾಗಿ ಬಿಟ್ಟಿದ್ದ. ಟ್ರಕ್ಕಿನ ಹಿಂಭಾಗದಲ್ಲಿ ಕೂತು ತನ್ನ ಊರಾದ ಕಾರ್ಡೊಬಾಕ್ಕೆ 800 ಕಿ. ಮೀ. ದೂರ ಅವರು ಪುಕ್ಕಟೆ ಪ್ರಯಾಣ ಮಾಡಿದ್ದರು. ಅಮೆಜಾನ್ ನದಿ ತೀರದಲ್ಲೊಮ್ಮೆ ತರುಣನಾಗಿದ್ದಾಗ ಅಲ್ಬರ್ಟೋ ಜೊತೆ ಇಂತಹದೇ ಪ್ರಯಾಣಗೈದು, ಕಾಡು ಮೇಡು ಅಲೆದು ಹಲವು ದಿನಗಳ ಬಳಿಕ ಮನೆಯನ್ನು ತಲುಪಿದ್ದ. ಆದರೆ 1951ರಲ್ಲಿ ಅವನು ಕ್ರಮಿಸಿದ ಪ್ರಯಾಣ ಎಂದಿನಂತಹದಾಗಿರಲಿಲ್ಲ. ಒಂದು ರೀತಿಯಲ್ಲಿ ತಾನು ಆವಾಹಿಸಿಕೊಳ್ಳಲಿರುವ ದೇಹದ ಮೈಲ್ಮೆೃಯನ್ನು ಮೆಲ್ಲಗೆ ಸವರುವ ಕೈಗಳಂತೆ ‘ಈ ಮೋಟಾರ್ ಸೈಕಲ್ ಡೈರಿ’ ಚಲಿಸುತ್ತದೆ. ಬಹುಶಃ ಅವರೆಗಿನ ಪಯಣದಲ್ಲಿ ತನ್ನ ನರನರಗಳನ್ನು ಹದ ಮಾಡಿಕೊಂಡ ಚೆಗೆವಾರ ಜಾಗತಿಕ ರಾಜಕಾರಣವನ್ನು ಅರ್ಥಮಾಡಿಕೊಳ್ಳಲು ತೊಡಗಿದ್ದು ಚಿಲಿಯ ಚುಕಿಕಮಾಟಾದ ತಾಮ್ರ ಪರ್ವತದಲ್ಲಿರಬೇಕು. ಈ ತಾಮ್ರ ಪರ್ವತವನ್ನು ಸುತ್ತಿಕೊಂಡ ಆರ್ಥಿಕ, ರಾಜಕೀಯ ಯುದ್ಧಗಳು, ಇವುಗಳ ನಡುವೆ ಸವೆಯುತ್ತಿರುವ ಮೂರು ಸಾವಿರಕ್ಕೂ ಅಧಿಕ ಕಾರ್ಮಿಕರು ಇವೆಲ್ಲವನ್ನು ಅವನು ಒಳಗೊಂಡಿದ್ದು ಚಿಲಿಯಲ್ಲಿ. ಆದುದರಿಂದ, ತಾನು ಪ್ರಯಾಣಿಸಿದ ಊರಿನ ವಿವರಗಳು, ರಾಜಕೀಯ ಇತಿಹಾಸಗಳು ಬಹುತೇಕ ನಮಗೆ ದಕ್ಕುವುದು ಚಿಲಿಯ ನಂತರದ ಪಯಣದಲ್ಲಿ. ಅಲ್ಲಿ ಆತ ಮುಖಾಮುಖಿಯಾಗುವ ವ್ಯವಸ್ಥೆಯ ಮೂಲಕ. ಚಿಲಿ, ಟರಾಟಾ, ಕೊಸ್ಕೋ...ಅಲ್ಲಿಂದ ಇಂಕಾ ಸಾಮ್ರಾಜ್ಯ ಪೆರು...ಈ ದಾರಿಯಲ್ಲಿ ಇವರು ಎದುರಿಸುವ ಸಂಕಟಗಳು, ಅದರ ನಡುವೆಯೇ ಕಾರ್ಮಿಕರ ಸಂಕಟಗಳಿಗೆ ಸ್ಪಂದಿಸುವ ರೀತಿ, ಕೊಸ್ಕೋದಾ ಬರಡಾಗಿರುವ ಪುರಾತತ್ವ ಮ್ಯೂಸಿಯಂ, ಲೀಮಾ ಎನ್ನುವ ಚಂದದ ನಗರದ ಒಳಗಿರುವ ವಾಸ್ತವ, ಈ ಹಾದಿಯ ನಡುವೆ ನೆನಪಾಗುವ ಅಪ್ಪ ಮತ್ತು ಅಮ್ಮ. ಅವರಿಗಾಗಿ ಬರೆಯುವ ಟಿಪ್ಪಣಿಗಳು...ಎಲ್ಲವೂ ನಿಮ್ಮನ್ನೂ ಪ್ರಯಾಣದ ಜೊತೆಗೆ ಕೊಂಡೊಯ್ಯುತ್ತದೆ. 

ಈ ಕೃತಿ ನಿಮ್ಮನ್ನು ಖಂಡಿತ ಕ್ರಾಂತಿಕಾರರನ್ನಾಗಿ ಮಾಡಲಾರದು. ಆದರೆ ಪ್ರಯಾಣ, ಯಾತ್ರೆಯ ಕುರಿತಂತೆ ನಿಮಗೊಂದು ಹೊಸ ಒಳನೋಟವನ್ನು ನೀಡಬಹುದು. ಈ ಕೃತಿಯನ್ನು ಓದಿದ ಬಳಿಕ, ಮನೆಯೊಳಗೆ ಬೇರಿಳಿಸಿ ಕೂತವರಿಗೆ ಮೋಟಾರ್ ಸೈಕಲನ್ನು ನೋಡಿದಾಕ್ಷಣ ಇದ್ದಕ್ಕಿದ್ದಂತೆಯೇ ಏರಿ ಬಿಟ್ಟರೆ ಹೇಗೆ ಎಂದು ಅನ್ನಿಸದಿರದು. ನೀವು ಪ್ರವಾಸ ಮಾಡುವವರೇ ಆಗಿದ್ದರೆ, ಈವರೆಗಿನ ನಮ್ಮ ಕೃತಕ ಪ್ರವಾಸಗಳ ಕುರಿತಂತೆ ಸಣ್ಣದೊಂದು ಕಸಿವಿಸಿಯಾಗುವುದು ಖಚಿತ. ಬದುಕಿನ ಹೊಸ ಪ್ರವಾಸಕ್ಕೆ ನೀವು ಸಜ್ಜಾಗುವುದು ಖಂಡಿತ. ಅಷ್ಟಾದರೆ ಈ ಪುಸ್ತಕ ತನ್ನ ಉದ್ದೇಶವನ್ನು ಸಾಧಿಸಿದಂತೆಯೇ ಸರಿ.

Saturday, January 24, 2015

ಹಡಗು ಮತ್ತು ಇತರ ಕತೆಗಳು

ಹೆಚ್ಚಳ
ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ ಎಂಬ ವರದಿ ಬಂತು.
ದೇಶ ಸಂಭ್ರಮಿಸಿತು.
ಮನುಷ್ಯರ ಸಂಖ್ಯೆಯಲ್ಲಿ ಹೆಚ್ಚಳ ಎಂಬ ವರದಿ ಹೊರ ಬಿತ್ತು.
ದೇಶ ಆತಂಕಕ್ಕೊಳಗಾಯಿತು.

ಧರ್ಮ
ಕೋಮುಗಲಭೆಯಿಂದ ಹೊತ್ತು ಉರಿಯುತ್ತಿತ್ತು ಆ ಊರು.
ಸಂತ ಆ ದಾರಿಯಲ್ಲಿ ಒಬ್ಬನೇ ನಡೆಯುತ್ತಿದ್ದ. ಹಿಂದೂಗಳು ತಡೆದರು ‘‘ನಿನ್ನದು ಯಾವ ಧರ್ಮ?’’
‘‘ನಾನೊಬ್ಬ ಮುಸಲ್ಮಾನ’’ ಎಂದ ಸಂತ.
ಎಲ್ಲರೂ ಸೇರಿ ಥಳಿಸಿದರು. ಅಲ್ಲಿಂದ ಸಂತ ಮುಂದುವರಿದ.
ದಾರಿಯ ಮಧ್ಯೆ ಮುಸ್ಲಿಮರ ತಂಡ ತಡೆಯಿತು ‘‘ನಿನ್ನದು ಯಾವ ಧಮ?’’
ಸಂತ ಉತ್ತರಿಸಿದ ‘‘ನಾನೊಬ್ಬ ಹಿಂದೂ’’
ಮುಸ್ಲಿಮರೆಲ್ಲ ಸೇರಿ ಅವನನ್ನು ಥಳಿಸಿದರು.
ಬಳಿಕ ಶಿಷ್ಯರು ಕೇಳಿದರು ‘‘ನಿಜಕ್ಕೂ ನೀವು ಯಾವ ಧರ್ಮ?’’
ಸಂತ ಗಾಯಗಳಿಗೆ ಔಷಧಿ ಹಚ್ಚುತ್ತಾ ಹೇಳಿದ ‘‘ಮುಸಲ್ಮಾನರಿಗೆ ನಾನೊಬ್ಬ ಹಿಂದು. ಹಿಂದೂಗಳಿಗೆ ನಾನೊಬ್ಬ ಮುಸಲ್ಮಾನ’’

ವ್ಯತ್ಯಾಸ
‘ದೇವರಿಗೂ ಮನುಷ್ಯನಿಗೂ ವ್ಯತ್ಯಾಸವೇನು?’
ಯಾರೋ ಸಂತನಲ್ಲಿ ಕೇಳಿದರು.
‘ದೇವರು ಸಷ್ಟಿಸುತ್ತಾನೆ. ಮನುಷ್ಯ ನಾಶ ಮಾಡುತ್ತಾನೆ’’ ಸಂತ ತಣ್ಣಗೆ ಉತ್ತರಿಸಿದ

ಮೇಕ್ ಇನ್ ಇಂಡಿಯಾ
‘‘ಮೇಕ್ ಇನ್ ಇಂಡಿಯಾ ಎಂದರೆ ಏನಜ್ಜ?’’ ಮೊಮ್ಮಗ ತನ್ನ ತಾತನಲ್ಲಿ ಕೇಳಿದ.
‘‘ನಿನ್ನ ಅಪ್ಪನ ಭತ್ತದ ಗದ್ದೆಯಲ್ಲಿ ಬೇರೆ ಊರಿನ ಜನರು ಬಂದು ಶುಂಠಿ ಬೆಳೆದು ಕೊಯ್ದುಕೊಂಡು ಹೋಗುತ್ತಿದ್ದಾರಲ್ಲ. ಅದೇ ಮೇಕ್ ಇನ್ ಇಂಡಿಯಾ ಮರೀ...’’ ತಾತ ವಿವರಿಸಿದ.

ಅಕ್ಷರ
ಯುದ್ಧಪೀಡಿದ ದೇಶಕ್ಕೆ ಅಧ್ಯಾಪಕನೊಬ್ಬ ವರ್ಗಾವಣೆಯಾದ.
ಮಕ್ಕಳಿಗೆ ಅ ಆ ಕಲಿಸಬೇಕು.
‘‘ಅ ಅಂದರೆ ಅರಸ’’ ಎಂದು ಕಲಿಸತೊಡಗಿದ.
ಮಕ್ಕಳು ‘‘ಆ ಎಂದರೆ ಆಯುಧ’’ ಎಂದು ಚೀರಿದವು.

ಕೊಲೆ
‘‘ಇಲ್ಲೇ ಎಲ್ಲೋ ಒಂದು ಕೊಲೆ ನಡೆದಿದೆ ಎಂದಿರಲ್ಲ, ನಿಜವೇ...’’
‘‘ಹೌದು...’’
‘‘ಈ ಚರಂಡಿಯಲ್ಲೇ...’’
‘‘ಮೊದಲಿಗಿದು ಚರಂಡಿಯಾಗಿರಲಿಲ್ಲ. ಒಂದು ನದಿಯಾಗಿತ್ತು. ಈಗದು ಹೆಣವಾಗಿ ಕೊಳೆಯುತ್ತಿದೆ’’

ಗಾಂಧಿ
ಬಿಯರ್ ಬಾಟಲ್‌ನ ಮೇಲೆ ಗಾಂಧಿ ಚಿತ್ರವನ್ನು ಅಂಟಿಸಲಾಗಿತ್ತು.
ಕುಡುಕನೊಬ್ಬ ಆ ಬಾಟಲ್‌ನ್ನು ಕೈಗೆತ್ತಿಕೊಂಡ.
ಗಾಂಧಿಯನ್ನು ನೋಡಿ ಕೈ ನಡುಗಿ, ಬಾಟಲು ಬಿದ್ದು ಒಡೆದು ಹೋಯಿತು.

ಹಡಗು
ಸಂತ ಮತ್ತು ಶಿಷ್ಯರು ಹಡಗು ನೋಡಲು ಹೋದರು.
ಕಾರ್ಮಿಕರು ಹಡಗಿಗೆ ಸರಕುಗಳನ್ನು ಏರಿಸುತ್ತಿದ್ದರು.
‘‘ಶಿಷ್ಯರು ಈ ಹಡಗನ್ನು ತುಂಬಿಸುವುದಕ್ಕೆ ಇನ್ನೂ ನಾಲ್ಕು ದಿನ ಬೇಕು...’’ ಶಿಷ್ಯರು ನಿಟ್ಟುಸಿರಿಟ್ಟರು.
ಸಂತ ನಕ್ಕು ಹೇಳಿದ ‘‘ಪ್ರತಿ ಮನುಷ್ಯ ಒಂದು ಖಾಲಿ ಹಡಗನ್ನು ಹೊತ್ತುಕೊಂಡು ನಡೆಯುತ್ತಿದ್ದಾನೆ. ಅದನ್ನು ತುಂಬಿಸುವುದೇ ಅವನ ದಿನ ನಿತ್ಯದ ಕೆಲಸವಾಗಿದೆ. ಆದರೂ ಆ ಹಡಗು ಈವರೆಗೆ ತುಂಬಿಲ್ಲ’’
ಶಿಷ್ಯರು ವೌನವಾದರು. ಸಂತ ಮುಂದುವರಿಸಿದ ‘‘ಹೊಟ್ಟೆ...ಹಡಗನ್ನು ತುಂಬಿಸಬಹುದು. ಆದರೆ ಹೊಟ್ಟೆಯನ್ನು ತುಂಬಿಸುವುದು ಕಷ್ಟ’’

ಮಡಕೆ
ಕುಂಬಾರನ ಮಡಿಕೆಯ ಚಿತ್ರವನ್ನು ತೆಗೆದ ಛಾಯಾಗ್ರಾಹಕ ವಿಶ್ವಖ್ಯಾತಿ ಗಳಿಸಿ, ಆ ಚಿತ್ರವನ್ನು ಒಂದು ಲಕ್ಷ ರೂಪಾಯಿಗೆ ಮಾರಿದ.
ಕುಂಬಾರ ಮಾತ್ರ ಆ ಮಡಕೆಯನ್ನು ಸಂತೆಯಲ್ಲಿಟ್ಟು ಇನ್ನೂ ಗ್ರಾಹಕರಿಗಾಗಿ ಕಾಯುತ್ತಿದ್ದಾನೆ.

ಬಲೂನು
ಆ ಮನೆಯ ಕೋಣೆಯಲ್ಲಿ ಒಂದು ಬಲೂನನ್ನು ನೇತಾಡಿಸಲಾಗಿತ್ತು.
‘‘ಈ ಮನೆಯಲ್ಲಿ ಮಕ್ಕಳೇ ಇಲ್ಲ. ಮತ್ತೇಕೆ ಈ ಬಲೂನು?’’ ಯಾರೋ ಕೇಳಿದರು.
ಅವನು ಉತ್ತರಿಸಿದ ‘‘ನಾನು ತೀರಾ ಸಣ್ಣವನಾಗಿದ್ದಾಗ ಅಮ್ಮನಲ್ಲಿ ಬಲೂನು ಕೇಳಿದೆ. ಅಮ್ಮ ಬಲೂನು ಕೊಂಡು ಅದನ್ನು ಊದ ತೊಡಗಿದಳು. ನಾನು ಇನ್ನೂ ದೊಡ್ಡದಾಗಿಸು ಎಂದೆ. ಅಮ್ಮ ಇನ್ನೂ ಊದಿದಳು. ಊದಿ ಊದಿ ತನ್ನೊಳಗಿನ ಉಸಿರನ್ನ್ಲೆಲ್ಲ ಬಲೂನಿನೊಳಗೆ ತುಂಬಿಸಿ, ದಾರದಿಂದ ಬಿಗಿಯಾಗಿ ಕಟ್ಟಿ ನನ್ನ ಕೈಗಿತ್ತಳು. ಹಾಗೆ ಕೈಗಿತ್ತ ಕೆಲವೇ ಸೆಕೆಂಡುಗಳಲ್ಲಿ ಕುಸಿದು ಬಿದ್ದಳು’’
‘‘ಅಮ್ಮನ ಉಸಿರು ಈ ಬಲೂನಿನಲ್ಲಿದೆ. ಆದುದರಿಂದಲೇ ಇದನ್ನು ಇನ್ನೂ ಜೋಪಾನವಾಗಿ ನನ್ನ ಕೊಣೆಯಲ್ಲಿಟ್ಟುಕೊಂಡಿದ್ದೇನೆ...’’

Friday, January 16, 2015

ಫ್ರೆಂಚರಿಗೆ ನನ್ನ ಕಂಬನಿ... ಆದರೆ ಕ್ಷಮೆಯಾಚನೆಯಲ್ಲ!

ರಾಣಾ ಅಯ್ಯೂಬ್  
ಪೇಶಾವರದಲ್ಲಿ ತಾಲಿಬಾನಿಗಳು ಪಾಕಿಸ್ತಾನದ ಮಕ್ಕಳ ಮೇಲೆ ಬರ್ಬರ ದಾಳಿ ನಡೆಸಿದಾಗ ಇಡೀ ಜಗತ್ತು ಒಂದಾಗಿ ಕಂಬನಿ ಮಿಡಿಯಿತು. ವೈಯಕ್ತಿಕವಾಗಿ ನಮ್ಮ ಮಕ್ಕಳ ಮೇಲೆಯೇ ನಡೆದ ದಾಳಿ ಇದು. ಅಂದು ರಾತ್ರಿ ನಾನು ನಿದ್ದೆ ಇಲ್ಲದೆ ನರಳಿದ್ದೆ. ಅಂತಾರಾಷ್ಟ್ರೀಯ ರಾಜಕೀಯ ಅದೆಷ್ಟು ಬರ್ಬರವಾಗುತ್ತಿದೆ ಎಂದರೆ ಅದು ಯಾವುದೇ ಊಹೆಗಳಿಗೆ ನಿಲುಕದಂತಾಗಿದೆ.
ಆದರೆ ಪೇಷಾವರದ ಬರ್ಬರ ಘಟನೆಯನ್ನು ಮುಂದಿಟ್ಟುಕೊಂಡು ಒಂದು ಗುಂಪು‘ಇಸ್ಲಾಮಾಫೋಬಿಯಾ’ಯವನ್ನು ಮತ್ತೆ ಜಾಗತಗೊಳಿಸತೊಡಗಿತು. ಇದರಜೊತೆ ಜೊತೆಗೇ ಪ್ರತಿ ಮುಸ್ಲಿಮನು ಪ್ರತ್ಯೇಕವಾಗಿ ‘ಅದನ್ನು ನಾನು ಖಂಡಿಸಿದ್ದೇನೆ’ ಎನ್ನುವುದು ಕಡ್ಡಾಯವಾಗಿ ಘೋಷಿಸಬೇಕಾಯಿತು. ಮತ್ತು ಜಗತ್ತು ಮುಸ್ಲಿಮರಿಗೆ ಹೊಣೆಗಾರಿಕೆಗಳ ಪಾಠಗಳನ್ನು ಬೋಧಿಸಿದವು. ಫೇಸ್‌ಬುಕ್‌ನಲ್ಲಂತೂ ನೇರವಾಗಿ ಇಸ್ಲಾಮಿನ ಮೇಲೆ, ಮುಸ್ಲಿಮರ ಮೇಲೆ ಬರ್ಬರವಾಗಿ ದಾಳಿ ನಡೆದವು. ತಾಲಿಬಾನಿಗಳು ದಾಳಿ ನಡೆಸಿರುವುದು ಮುಸ್ಲಿಮರ ಮೇಲೆ ಅದರಲ್ಲೂ ಮುಸ್ಲಿಮರೇ ಬಹುಸಂಖ್ಯಾತವಾಗಿರುವ ದೇಶವೊಂದರ ಮೇಲೆಯೇ ಆಗಿದ್ದರೂ, ಅದಕ್ಕೂ ಧರ್ಮಕ್ಕೂ ನೇರವಾಗಿ ತಳಕು ಹಾಕಲಾಯಿತು.
ಪೇಷಾವರದ ಈ ದಾಳಿಯ ಮರುದಿನ ಇರಬೇಕು. ನನ್ನ ಮೆಚ್ಚಿನ ಪತ್ರಿಕೆಯಾಗಿರುವ ಗೌರಿ ಲಂಕೇಶ್‌ನಿಂದ ನನ್ನ ಆತ್ಮೀಯರಾಗಿರುವ ವರದಿಗಾರ ರಾ. ಸೋಮನಾಥ್ ಫೋನ್ ಮಾಡಿದ್ದರು. ಫೋನ್‌ನಲ್ಲಿ ಅವರು ನನ್ನಲ್ಲಿ ಕೇಳಿದ ಪ್ರಶ್ನೆ ‘‘ಸಾರ್...ಕುರ್‌ಆನ್‌ನ ಯಾವ ಅಧ್ಯಾಯದ ಆಧಾರದಲ್ಲಿ ಈ ತಾಲಿಬಾನಿಗಳು ಈ ಕೊಲೆಗಳನ್ನು ಮಾಡುತ್ತಿರುವುದು? ಆ ಅಧ್ಯಾಯದ ಬಗ್ಗೆ ಸ್ವಲ್ಪ ಮಾಹಿತಿ ನೀಡುತ್ತೀರಾ?’’ ಎಂದರು.
ನನಗೋ ಶಾಕ್. ಪ್ರಗತಿಪರವಾಗಿರುವ ಮನಸ್ಸುಗಳೇ ತಮಗೆ ಅರಿವಿಲ್ಲದೆ ಈ ರೀತಿಯಲ್ಲಿ ಯೋಚನೆ ಮಾಡುತ್ತಿರುವಾಗ ಉಳಿದವರ ಪಾಡೇನು? ನಾನು ನನಗೆ ಸಾಧ್ಯವಾಷ್ಟು ಅವರಿಗೆ ದೂರವಾಣಿಯಲ್ಲಿ ವಿವರಿಸಿದೆ. ಅಥವಾ ಒಂದಿಷ್ಟು ಕೊರೆದೆ.
‘‘ತಾಲಿಬಾನ್‌ನ ಈ ಕೊಲೆಗಳಿಗೆ ಕಾರಣಗಳನ್ನು ನೀವು ಕುರ್‌ಆನ್‌ನಲ್ಲಿ ಹುಡುಕಿದರೆ ನಿಮಗೆ ಸಿಗಲಾರದು. ಅಂತಾರಾಷ್ಟ್ರೀಯ ರಾಜಕೀಯಗಳನ್ನು ಒಂದಿಷ್ಟು ಅಧ್ಯಯನ ಮಾಡಿದರೆ ಅದರ ಕಾರಣಗಳನ್ನು ಗುರುತಿಸಬಹುದೇನೋ. ತಾಲಿಬಾನ್ ಹುಟ್ಟಿಕೊಂಡಿದ್ದು ಇಸ್ಲಾಮ್‌ನ ರಕ್ಷಣೆಗಾಗಿಯಲ್ಲ. ಅಫ್ಘಾನಿಸ್ತಾನವನ್ನು ಹಿಡಿತದಲ್ಲಿಟ್ಟುಕೊಂಡಿರುವ ರಷ್ಯನ್ನರನ್ನು ಓಡಿಸುವುದಕ್ಕಾಗಿ. ಎಲ್ಲಕ್ಕಿಂತ ಮುಖ್ಯವಾಗಿ ಈ ತಾಲಿಬಾನ್‌ಗಳನ್ನು ಕಟ್ಟಿದ್ದೇ ಪಾಕಿಸ್ತಾನ ಮತ್ತು ಅಮೆರಿಕ ಜೊತೆ ಸೇರಿಕೊಂಡು. ಅವರಿಗೆ ಹಣ ಮತ್ತು ತರಬೇತಿಯನ್ನು ನೀಡಿದ್ದು ಅಮೆರಿಕ ಮತ್ತು ಪಾಕಿಸ್ತಾನ ಜೊತೆ ಸೇರಿ. ತಾಲಿಬಾನ್‌ಗಳು ರಷ್ಯನ್ನರ ವಿರುದ್ಧ ಹೋರಾಟ ನಡೆಸುತ್ತಿದ್ದಾಗ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಇದೇ ತಾಲಿಬಾನ್‌ಗಳನ್ನು ‘ತಾಯ್ನೆಲದ ಬಿಡುಗಡೆಗಾಗಿ ಹೋರಾಡುತ್ತಿರುವ ಸ್ವಾತಂತ್ರ ಹೋರಾಟಗಾರರು’ ಎಂದು ಕರೆದಿದ್ದರು. ಯಾವಾಗ ಅಫ್ಘಾನಿಸ್ತಾನದಿಂದ ತಾಲಿಬಾನ್‌ಗಳು ರಶ್ಯನ್ನರನ್ನು ಓಡಿಸಲು ಯಶಸ್ವಿಯಾದರೋ ಅಲ್ಲಿಂದ ಅಮೆರಿಕಕ್ಕೆ ತಾಲಿಬಾನ್‌ಗಳು ಉಗ್ರಗಾಮಿಗಳಾದರು. ಅಮೆರಿಕ ಅಫ್ಘಾನಿಸ್ತಾನದ ಮೇಲೆ ತನ್ನ ಹಿಡಿತವನ್ನು ಸಾಧಿಸುವ ಹವಣಿಕೆಯ ಫಲವಾಗಿಯೇ ತಾಲಿಭಾನ್ ಎನ್ನುವ ಮೂಲಭೂತವಾದಿ ಸಂಘಟನೆ ಹುಟ್ಟಿಕೊಂಡಿತು. ಇಂದು ಪೇಷಾವರದಲ್ಲಿ ಮಕ್ಕಳ ಮಾರಣಹೋಮಕ್ಕೆ ಪರೋಕ್ಷವಾಗಿ ಅಮೆರಿಕ ಮತ್ತು ಪಾಕಿಸ್ತಾನವೂ ಹೊಣೆ. ವಿಪರ್ಯಾಸವೆಂದರೆ ತಾಲಿಬಾನ್‌ಗೆ ಇಂದಿನ ಸಂದರ್ಭದಲ್ಲಿ ಹಣ ಹೂಡುತ್ತಿರುವುದು ಸೌದಿ ರಾಷ್ಟ್ರಗಳು. ಅಂತಹ ಸೌದಿ ಅಮೆರಿಕದ ಪಾಲಿಗೆ ಅತ್ಯಂತ ಆಪ್ತ ರಾಷ್ಟ್ರವಾಗಿದೆ. ಇದೇ ಸೌದಿಯಲ್ಲಿ ನಾಳೆ ದೊರೆಗಳ ಆಳ್ವಿಕೆ ಕೊನೆಯಾಗಿ ಜನಸಾಮಾನ್ಯರು ದಂಗೆ ಎದ್ದರೆ, ಈ ಸೌದಿಯ ವಿರುದ್ಧ ಇದೇ ಅಮೆರಿಕ ಭಯೋತ್ಪಾದನಾ ವಿರೋಧಿ ಹೋರಾಟ ಹಮ್ಮಿಕೊಳ್ಳುತ್ತದೆ.
ನೋಡಿ, ತಾಲಿಬಾನ್ ದಾಳಿ ನಡೆಸಿರುವುದು ಮುಸ್ಲಿಮ ಸಮುದಾಯದ ಮಕ್ಕಳ ಮೇಲೆಯೇ ಆಗಿದೆ. ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕ ಉಗ್ರರ ವಿರುದ್ಧ ನಿರಂತರ ನಡೆಸುತ್ತಿರುವ ಡ್ರೋನ್ ದಾಳಿಯಲ್ಲಿ ಸಾವಿರಾರು ಮಕ್ಕಳು ಸತ್ತು ಹೋಗಿದ್ದಾರೆ. ಅವರೂ ಮಕ್ಕಳೇ ಹೌದು. ತಮ್ಮ ಮಕ್ಕಳನ್ನು ಕೊಂದದ್ದಕ್ಕೆ ನಿಮ್ಮ ಮಕ್ಕಳನ್ನು ಕೊಲ್ಲುತ್ತಿದ್ದೇವೆ ಎಂದು ತಾಲಿಬಾನ್ ಪೈಶಾಚಿಕವಾಗಿ ಸೇಡು ತೀರಿಸಿಕೊಂಡಿದೆ. ಈ ದಾಳಿ ಅಪ್ಪಟ ರಾಜಕೀಯ ಕಾರಣಗಳಿಗಾಗಿ ಹುಟ್ಟಿಕೊಂಡಿರುವುದೇ ಹೊರತು, ಧಾರ್ಮಿಕ ಕಾರಣಗಳಿಗಾಗಿ ಅಲ್ಲ....ಫೆಲೆಸ್ತೀನ್‌ನಲ್ಲಿ ಹಮಸ್ ಹುಟ್ಟುಕೊಂಡಿರುವುದೂ ಜಿಹಾದ್ ಮಾಡುವುದಕ್ಕಾಗಿ ಅಥವಾ ಧರ್ಮದ ಹೆಸರಿನಲ್ಲಿ ಕೊಲ್ಲುವುದಕ್ಕಾಗಿ ಅಲ್ಲ. ಅದು ಹುಟ್ಟಿಕೊಂಡಿರುವುದು ತಮ್ಮ ತಾಯ್ನೆಲದ ಬಿಡುಗಡೆಗಾಗಿ. ಮಧ್ಯಪ್ರಾಚ್ಯದಲ್ಲಿ ಪಶ್ಚಿಮ ರಾಷ್ಟ್ರಗಳು ಸೇರಿ ನಡೆಸಿದ ರಾಜಕೀಯ ಇಂದು ಇಡೀ ಏಶ್ಯಾವನ್ನೇ ರಕ್ತಸಿಕ್ತಗೊಳಿಸಿದೆ. ಫೆಲೆಸ್ತೀನ್‌ನ ಮೇಲೆ ನಡೆದ ಆಕ್ರಮಣವನ್ನು ಮಹಾತ್ಮಗಾಂಧೀಜಿ ‘ಏಶ್ಯಾದ ಎದೆಗೆ ನೆಟ್ಟ ಚೂರಿ’ ಎಂದು 30ರ ದಶಕದಲ್ಲಿ ಬಣ್ಣಿಸಿದ್ದರು. ಅದೀಗ ನಿಜವಾಗುತ್ತಿದೆ......’’
‘‘ಹಾಗಾದ್ರೆ ಮೂಲಭೂತವಾದಿಗಳು ಈ ಹಿಂಸೆಗೆ ಕಾರಣರು ಅಲ್ಲ ಅನ್ನುತ್ತೀರಾ?’’ ಎಂದು ಸೋಮನಾಥ್ ಕೇಳಿದರು.
‘‘ನಾನೆಲ್ಲಿ ಹಾಗೆಂದೇ? ಅಮಾಯಕ ಮಕ್ಕಳನ್ನು, ಶಸ್ತ್ರ ಹಿಡಿಯದ ಪತ್ರಕರ್ತರನ್ನು ಕೊಲ್ಲುವವರು ಮೂಲಭೂತವಾದಿಗಳಲ್ಲದೆ ಇನ್ಯಾರು? ಆದರೆ ಈ ಮೂಲಭೂತವಾದಿಗಳ ಸೃಷ್ಟಿಗೆ ಕಾರಣ ಇಸ್ಲಾಮ್ ಅಲ್ಲ. ಬದಲಿಗೆ ಅಂತಾರಾಷ್ಟ್ರೀಯ ರಾಜಕೀಯ. ಇದನ್ನು ಅರ್ಥ ಮಾಡಿಕೊಳ್ಳದೆ ಇಸ್ಲಾಮಾಫೋಬಿಯಾವನ್ನು ಸೃಷ್ಟಿಸಿ ಜಾಗತಿಕವಾಗಿ ಮುಸ್ಲಿಮರ ಮೇಲೆ, ಅವರ ನಂಬಿಕೆಗಳ ಮೇಲೆ ನಡೆಸುವ ದಾಳಿ ಇನ್ನಷ್ಟು ಅಪಾಯಗಳನ್ನು ಸೃಷ್ಟಿಸಬಹುದೇ ಹೊರತು, ಕೆಡುಕನ್ನು ನಿಯಂತ್ರಿಸಲಾರದು’’ ಎಂದು ನನ್ನ ಮಾತನ್ನು ಮುಗಿಸಿದೆ.
ಇತ್ತೀಚೆಗೆ ಫ್ರಾನ್ಸ್‌ನಲ್ಲಿ ಪತ್ರಕರ್ತರ ಮೇಲೆ ನಡೆದ ಬರ್ಬರ ದಾಳಿಯ ಬಳಿಕ ಖ್ಯಾತ ಪತ್ರಕರ್ತೆ, ರಾಜಕೀಯ ಚಿಂತಕಿ ರಾಣಾ ಆಯ್ಯೂಬ್ ಅವರು ಬರೆದ ಲೇಖನವೊಂದು ನನ್ನ ಗಮನ ಸೆಳೆಯಿತು. ಇಸ್ಲಾಮಾಫೋಬಿಯಾದಿಂದ ನರಳುತ್ತಿರುವ ಹಲವರಿಗೆ ಈ ಲೇಖನದಲ್ಲಿ ಉತ್ತರಗಳಿವೆ.ನಿಮ್ಮ ಜೊತೆ ಆ ಲೇಖನವನ್ನು ಹಂಚಿಕೊಂಡಿದ್ದೇನೆ 



ಫ್ರೆಂಚರಿಗೆ ನನ್ನ ಕಂಬನಿ... ಆದರೆ ಕ್ಷಮೆಯಾಚನೆಯಲ್ಲ!

ರಾಣಾ ಅಯ್ಯೂಬ್

ಇದು ಭಾವೋದ್ವೇಗದ ಅಥವಾ ಸಿಟ್ಟಿನ ಪತ್ರವಲ್ಲ. ನಿಜ ಹೇಳಬೇಕೆಂದರೆ ನಮ್ಮ ಭಾವನೆಗಳ ಮುಕ್ತ ಅಭಿವ್ಯಕ್ತಿಗೆ ಜಾಗತಿಕ ಮಟ್ಟದಲ್ಲಿ ಒಮ್ಮತ ಮೂಡಬೇಕು ಎನ್ನುವ ಮುಕ್ತ ಅನಿಸಿಕೆ.
ಫ್ರಾನ್ಸ್ ನ ನಿಯತಕಾಲಿಕದ ಮೇಲೆ ಗುಂಡಿನ ದಾಳಿ ನಡೆದ ಸಂದರ್ಭ ಸ್ನೇಹಿತರೊಬ್ಬರು "ನೀವು ಮುಸಲ್ಮಾನರು ಯಾಕೆ ಯಾವಾಗಲೂ ಹತ್ಯೆ ಮಾಡುತ್ತೀರಿ?" ಎಂದು ಪ್ರಶ್ನಿಸಿದರು. ಅದು ತಮಾಷೆಯಾಗಿ ಹೇಳಿದ್ದು. ಭಾರತ- ಪಾಕಿಸ್ತಾನ ಕ್ರಿಕೆಟ್ ಪಂದ್ಯಾಟಕ್ಕೆ ಮುನ್ನ ನನ್ನ ಐದನೆ ತರಗತಿಯ ಸ್ನೇಹಿತೆಯರು "ಇಂದು ಪಾಕಿಸ್ತಾನ ಅಲ್ಲವೇ?" ಎಂದು ಕಿಚಾಯಿಸುತ್ತಿದ್ದಂತೆ ಈ ಸ್ನೇಹಿತೆ ಕೂಡಾ ತೀರಾ ಲಘು ಧಾಟಿಯಲ್ಲಿ ಈ ಪ್ರಶ್ನೆ ಕೇಳಿದಳು.
ಬಹಳ ಹಿಂದಿನಿಂದಲೂ ನಾನು ಅಕೃತ ವೇದಿಕೆಗಳಲ್ಲಿ ಇಸ್ಲಾಂ ಬಗೆಗಿನ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತೇನೆ. ಏಕೆಂದರೆ ನನ್ನ ನಂಬಿಕೆ ವೈಯಕ್ತಿಕ ವಿಚಾರ. ಅದು ಪ್ರಮುಖ ಹಾಗೂ ವಿಮರ್ಶೆಗೆ ಒಳಪಡುವಂಥದ್ದು. ಇದನ್ನು ಕೇಳಿದ ತಕ್ಷಣ ನಾನು ಹೆಮ್ಮೆಯ ಮುಸ್ಲಿಂ ಎಂದುಕೊಂಡೆ, ನನ್ನ ಸಂಶೋಧನಾತ್ಮಕ ಬರಹಗಳಿಗೆ ನಾನು ಸಾಕಷ್ಟು ಕಟುವಿಮರ್ಶೆಗಳನ್ನು ಸ್ವೀಕರಿಸಿದ್ದೇನೆ. ನನ್ನ ಬಹುತೇಕ ಸಂಶೋಧನಾತ್ಮಕ ಬರಹಗಳನ್ನು ಧರ್ಮದ ದರ್ಪಣದಲ್ಲಿ ನೋಡಿ ಮಾಡುವ ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳು ನನ್ನನ್ನು ಹೆಚ್ಚು ಪ್ರಚೋದಿಸುತ್ತವೆ. ನನ್ನ ಲೇಖನಗಳನ್ನು ನೈಜವಾಗಿ ವಿಮರ್ಶಿಸುವ ವ್ಯಕ್ತಿಗಳಿಗಿಂತ ಇಂಥ ವ್ಯಕ್ತಿಗಳು ನನ್ನನ್ನು ಪ್ರಚೋದಿಸುತ್ತಾರೆ.
ನಕಲಿ ಎನ್‌ಕೌಂಟರ್ ಬಗ್ಗೆ ನಾನು ವರದಿ ಮಾಡಿದರೆ, ಅದನ್ನು ನಿಖರತೆಯ ಮಾನದಂಡದಿಂದ ನಿರಾಕರಿಸಿ, ಉದ್ವಿಗ್ನತೆಯನ್ನು ಸೃಷ್ಟಿಸಲಾಗುತ್ತದೆ. ನಾನು ನಂಬಿಕೆಗೆ ಅರ್ಹಳೇ ಎಂದು ತನಿಖೆ ನಡೆಸುತ್ತಾರೆ. ಆದರೆ ಬುಡಕಟ್ಟು ಜನರ ಅಥವಾ ದಲಿತರ ಮೇಲೆ ಸಂಶೋಧನಾತ್ಮಕ ಲೇಖನ ಬರೆದರೆ ನನಗೆ ಪ್ರಶಸ್ತಿಗಳು ಬರುತ್ತವೆ. ಆದರೆ ಇದು ನನ್ನ ವಿಮರ್ಶಕರಿಗಾಗಲಿ, ಸ್ನೇಹಿತರಿಗಾಗಲಿ ಗಮನಕ್ಕೆ ಬರುವುದಿಲ್ಲ.
ನನ್ನ ನಂಬಿಕೆಗಳ ಬಗ್ಗೆ ಕಪೋಲ ಕಲ್ಪಿತ ವಿಷಯಗಳನ್ನು ಎತ್ತಿದರೆ, ನನ್ನ ಮಿತವಾದ ಜ್ಞಾನದಿಂದ ಆ ತಪ್ಪುಕಲ್ಪನೆಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತೇನೆ. ಇಸ್ಲಾಂ ಧರ್ಮದ ಬಗೆಗಿನ ನನ್ನ ತಿಳಿವಳಿಕೆ ನನಗೆ ತಂದೆಯಿಂದ ಬಂದ ಬಳುವಳಿ. ನನ್ನ ತಂದೆ ಪ್ರಗತಿಪರ ಲೇಖಕರ ಚಳವಳಿಯ ಹಿನ್ನೆಲೆಯಿಂದ ಬಂದವರು. ಅವರ ಕಮ್ಯುನಿಸ್ಟ್ ಗೆಳೆಯರು ಸಂತೋಷಕೂಟದಲ್ಲಿ ವಿಸ್ಕಿ ಮತ್ತು ಸಿಗರೇಟ್‌ನಿಂದ ಸಂತೋಷಪಡುತ್ತಿದ್ದರೆ, ನನ್ನ ತಂದೆ, ಮಬ್ಬು ಬೆಳಕಿನ ಕೊಠಡಿಗೆ ತೆರಳಿ ನಮಾಝ್‌ಮಾಡಿ ವಾಪಸ್ಸಾಗುತ್ತಿದ್ದರು. ಸ್ನೇಹಿತರ ಜತೆ ಮೋಜಿನ ದ್ವಿಪದಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಅವರಿಗೆ ನಮಾಝ್‌ಅವರ ಖಾಸಗಿ ಮತ್ತು ವೈಯಕ್ತಿಕ ವಿಚಾರ. ಅಂಥ ಸಂತೋಷಕೂಟದಲ್ಲಿ ನೀಡುವ ಆಲ್ಕೊಹಾಲನ್ನು ನಯವಾಗಿ ತಿರಸ್ಕರಿಸುತ್ತಿದ್ದರು. ಅವರು ಎಂದೂ ಮದ್ಯ ಮುಟ್ಟಿರಲಿಲ್ಲ. ಆದರೆ ಅವರ ಸ್ನೇಹಿತರ ಕೂಟದಲ್ಲಿ ಇದ್ದ ಇತರರನ್ನು ತಮ್ಮ ನಂಬಿಕೆಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಎಂದೂ ಒತ್ತಡ ಹಾಕಿರಲಿಲ್ಲ. ಆ ಸಮಾನ ಮನಸ್ಕ ಕೂಟದಲ್ಲಿ ಕೈಫಿ ಅಜ್ಮಿ, ಅಲಿ ಸರ್ದಾರ್ ಜಫ್ರಿ, ಅಹ್ಮದ್ ರಾಜ್ ಅವರಂಥ ಉದಾರವಾದಿ ಲೇಖಕರು ಇದ್ದರು. ಅವರ ಇಸ್ಲಾಂ ಮತ್ತು ಕುರುಆನ್ ಇಗ್ರಾ (ಓದು/ಹಾಡು) ದೊಂದಿಗೆ ಆರಂಭವಾಗುತ್ತಿತ್ತು. ಜಮೀನ್ದಾರನ ಮಗನಾಗಿದ್ದರೂ, ನಿವೃತ್ತರಾಗುವವರೆಗೂ ಮುಂಬೈನ ಸರಕಾರಿ ಶಾಲೆಯಲ್ಲಿ ಪಾಠ ಮಾಡುವುದರಲ್ಲೇ ಸಂತೋಷ ಕಂಡವರು. ಕುಟುಂಬದ ವ್ಯಾಪಾರವನ್ನು ನಡೆಸಿಕೊಂಡು ಹೋಗುವ ಬದಲಾಗಿ, ಮುಸಲ್ಮಾನೇತರ ಮಕ್ಕಳೇ ಅಕವಾಗಿದ್ದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಆರು ಮಂದಿಯ ನಮ್ಮ ಕುಟುಂಬ ಮುಂಬೈನ ತೀರಾ ಸಾಮಾನ್ಯ ಅಪಾರ್ಟ್‌ಮೆಂಟ್‌ನಲ್ಲಿ ಜೀವನ ಸಾಗಿಸುತ್ತಿತ್ತು. ಒಂದು ಕೊಠಡಿ ಮತ್ತು ಅಡುಗೆಮನೆಯನ್ನಷ್ಟೇ ಹೊಂದಿದ್ದ ್ಲಾಟ್ ಅದು. ಮುಂಬೈ ಆರೆಸ್ಸೆಸ್ ಕಾರ್ಯಾಲಯಕ್ಕೆ ಹೊಂದಿಕೊಂಡಿತ್ತು. ಬಹುತೇಕ ಆರೆಸ್ಸೆಸ್ ಕಾರ್ಯಕರ್ತರು ಬಹಳಷ್ಟು ಸಂಜೆಗಳನ್ನು ನಮ್ಮ ತಂದೆ (ಅವರ ಪ್ರೀತಿಯ ಮಾಸ್ಟರ್‌ಜಿ) ಜೊತೆ ಜಾಗತಿಕ ವಿದ್ಯಮಾನಗಳನ್ನು ಚರ್ಚಿಸುವುದರಲ್ಲಿ ಕಳೆಯುತ್ತಿದ್ದರು.
ನಮ್ಮಪ್ಪ ಮಾಸ್ಟರ್‌ಜಿ ಎಂದೇ ಖ್ಯಾತರಾಗಿದ್ದರು. ಶಾಲೆಗೆ ಸೇರಿದ ಎಲ್ಲ ಮಕ್ಕಳಿಗೂ ಉಚಿತ ಟ್ಯೂಷನ್ ನೀಡುತ್ತಿದ್ದರು. ಜತೆಗೆ ಆರೆಸ್ಸೆಸ್ ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದರೂ, ಹಲವು ಬಾರಿ ಶಾಖೆಗಳಿಗೆ ಭೇಟಿ ಕೊಡುತ್ತಿದ್ದರು. ಗುರುಪೂರ್ಣಿಮೆಯಂದು ಆ ಶಾಖಾ ಪ್ರಮುಖರು, ಕಟ್ಟುವ ಮೊದಲ ಕೆಂಪು ನೂಲು ಅವರ ಪ್ರೀತಿಯ ಮಾಸ್ಟರ್‌ಜಿಗೆ.
ನಮ್ಮ ಅಪಾರ್ಟ್‌ಮೆಂಟಿನ ಎದುರು ಅಯ್ಯಪ್ಪ ಮಂದಿರ ಇತ್ತು. ನನಗೆ ಹಾಗೂ ನನ್ನ ಸಹೋದರ/ಸಹೋದರಿಯರಿಗೆ ಅಯ್ಯಪ್ಪಮಂದಿರ ಅಚ್ಚುಮೆಚ್ಚು. ಕಾರಣ ಅಲ್ಲಿ ಸಿಗುತ್ತಿದ್ದ ಬೆಲ್ಲದ ಪ್ರಸಾದದ ರುಚಿ. ಕೆಲ ಸಂದರ್ಭದಲ್ಲಿ ನಾವು ಅಲ್ಲಿಗೆ ಹೋಗದಿದ್ದರೆ, ಆ ಮಂದಿರದ ಪೂಜಾರಿ ಬಾಳೆ ಎಲೆಯಲ್ಲಿ ನಮ್ಮ ಮನೆಗೇ ಪ್ರಸಾದ ಕಳುಹಿಸಿಕೊಡುತ್ತಿದ್ದರು. ವಾರ್ಷಿಕ ಅಯ್ಯಪ್ಪಪೂಜೆ ವೇಳೆ, ನಮ್ಮ ಉದ್ಯಾನವನದ ಎಲ್ಲ ಗಿಡಗಳನ್ನು ಮಂದಿರಕ್ಕೆ ಒಯ್ಯಲಾಗುತ್ತಿತ್ತು. ಅಲ್ಲಿನ ನೀರಿನ ಪೈಪ್‌ಗಳನ್ನು ನಮ್ಮ ಅಡುಗೆ ಮನೆಗೆ ಜೋಡಿಸಲು ನಮ್ಮಮ್ಮ ಸಹಕರಿಸುತ್ತಿದ್ದರು. ಇದು ಭಾರತದಂಥ ಬಹುಸಂಸ್ಕೃತಿಯ ದೇಶದಲ್ಲಿ ವಾಸಿಸುವ ವಿಶಿಷ್ಟ ಸಂತೋಷ.
ನಾನು ಇಂದು ಈ ಲೇಖನ ಬರೆದಾಗ ಪ್ರತಿಯೊಂದು ಶಬ್ದವನ್ನೂ ಹತಾಶೆಯಿಂದಲೇ ಬರೆಯುತ್ತಿದ್ದೇನೆ. ಏಕೆಂದರೆ ನನ್ನನ್ನು ಹಾಗೂ ನನ್ನ ಬರಹವನ್ನು ಉಗ್ರರ ಪರವಾಗಿ ಕ್ಷಮೆಯಾಚನೆ ಮಾಡುವ ದೃಷ್ಟಿಯಿಂದಷ್ಟೇ ನೋಡಲಾಗುತ್ತದೆ. ಒಂದು ನಿರ್ದಿಷ್ಟ ಜನರನ್ನು ವಿರೋಸುವ ಒಬ್ಬ ಮುಸ್ಲಿಂ ಆಗಿ ನನ್ನನ್ನು ನೋಡಲಾಗುತ್ತದೆ. ಪ್ರತಿ ಬಾರಿ ಉಗ್ರಗಾಮಿ ಕೃತ್ಯಗಳು ನಡೆದಾಗಲೂ ನಾನು ರಾಜಕೀಯವಾಗಿ ಸರಿ ಎನಿಸುವ ಚೌಕಟ್ಟನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಕೆಲವು ಮುಸ್ಲಿಂ ಸಮುದಾಯದವರ ಕೃತ್ಯಗಳಾಗಿದ್ದರೆ ಮತ್ತೆ ಕೆಲವು ಮುಸ್ಲಿಂ ಸಿದ್ಧಾಂತದ ನಂಬಿಕೆಗಳಿಗೆ ಸಂಪೂರ್ಣ ವಿರೋಧವಾಗಿರುವವರು ಎಸಗುವ ಕೃತ್ಯ.
ಖೈರ್ಲಾಂಜಿಯಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಹಾಡಹಗಲೇ ಹತ್ಯೆ ಮಾಡಿದಾಗ ಅಥವಾ ದೇಶಾದ್ಯಂತ ನಂಬಿಕೆ ಹೆಸರಿನಲ್ಲಿ ಮೇಲ್ವರ್ಗದವರು ದಲಿತರ ಮೇಲೆ ದೌರ್ಜನ್ಯ ಎಸಗಿದಾಗ ದೇಶದ ಬ್ರಾಹ್ಮಣರನ್ನು ಏಕೆ ಬೆಟ್ಟು ಮಾಡಿ ತೋರಿಸಲಿಲ್ಲ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಗರ್ಭಪಾತ ಮಾಡುವ ಕ್ಲಿನಿಕ್‌ನ ಮೇಲೆ ದಾಳಿ ನಡೆದಾಗ ಕ್ರಿಶ್ಚಿಯನ್ನರನ್ನು ಯಾರೂ ಸಂಶಯದ ದೃಷ್ಟಿಯಿಂದ ನೋಡುವುದಿಲ್ಲ ಅಥವಾ ಅವರ ವಿರುದ್ಧ ಕೋಪ ವ್ಯಕ್ತವಾಗುವುದಿಲ್ಲ. ಅಮಾಯಕ ವಿದ್ಯಾರ್ಥಿಗಳ ಮೇಲೆ ಒಬ್ಬ ಬಿಳಿಯ ವ್ಯಕ್ತಿ ವಿನಾಕಾರಣ ದಾಳಿ ಮಾಡಿದ್ದಾಗಿ ಒಪ್ಪಿಕೊಂಡರೂ ಅವರ ಮೇಲೆ ಯಾರೂ ಕೋಪಗೊಳ್ಳುವುದಿಲ್ಲ. ಪ್ಯಾಲೆಸ್ತೀನಿಯನ್ನರ ಹತ್ಯಾ ಕಾಂಡಕ್ಕೆ ಕ್ಷಮೆಯಾಚಿಸಲು ಯಹೂದಿಯ ನೊಬ್ಬನಿಗೆ ಸೂಚಿಸಿದರೆ? ಅಮೆರಿಕದ ಸೇನೆ ಅಮಾಯಕ ಅ್ಘನಿಯರ ಮತ್ತು ಇರಾಕಿಗಳನ್ನು ಹತ್ಯೆ ಮಾಡಿದ ಘಟನೆಗೆ ಕ್ಷಮೆ ಕೋರಲು ಏಕೆ ಹೇಳಿಲ್ಲ ಎನ್ನುವ ಬಲವಾದ ಸಂಶಯಗಳು ನನ್ನಲ್ಲಿ ಉಳಿದುಕೊಂಡಿವೆ. ಈ ದಾಳಿಯ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂದು ಕೇಳುವಾಗ ನನ್ನ ನೈತಿಕತೆ ಮತ್ತು ಮಾನವೀಯತೆಯ ಬಗ್ಗೆ ಪೂರ್ವಾಗ್ರಹ ಏಕೆ?

ಹೌದು. ಪೇಶಾವರದಲ್ಲಿ ಉಗ್ರರು ನಂಬಿಕೆಯ ಹೆಸರಿನಲ್ಲಿ ಮುಗ್ಧ ಶಾಲಾ ಮಕ್ಕಳ ಹತ್ಯಾಕಾಂಡ ಮಾಡಿದಾಗ ನನಗೆ ಸಂತೋಷವಾಗಲಿಲ್ಲ. ಇಸ್ಲಾಂ ಇಂಥ ಕ್ರೌರ್ಯವನ್ನು ಬೋಧಿಸುತ್ತದೆ ಎಂದು ನೀವು ಎಣಿಸಿದ್ದೀರಾ? ಅಂದರೆ ಇಸ್ಲಾಂ ವಿಚಾರದಲ್ಲಿ ನಿಮ್ಮನ್ನೂ ದಾರಿ ತಪ್ಪಿಸಲಾಗಿದೆ. ಇಸ್ಲಾಂ ಉಗ್ರರು ಮತ್ತು ನೀವು ಈ ವಿಚಾರದಲ್ಲಿ ಏಕೆ ಕೈಜೋಡಿಸಿದ್ದೀರಿ?
ಕೆಲವೊಮ್ಮೆ ನಾನು ಅನಿವಾರ್ಯವಾಗಿ ಕೆಲ ಅಭಿಪ್ರಾಯಗಳನ್ನು ಟ್ವೀಟ್ ಮಾಡಲೇಬೇಕಾಗುತ್ತದೆ. ್ರಾನ್ಸ್‌ನಲ್ಲಿ ಪತ್ರಕರ್ತರ ಜೀವ ಉಳಿಸಲು ಹೋಗಿ ತಮ್ಮ ಜೀವ ಕಳೆದುಕೊಂಡ ಅಕಾರಿಯ ಜಾತಿ ಯಾವುದು ಎಂದು ಕೇಳಲೇಬೇಕಾಗುತ್ತದೆ. ಯಾಕೆ?
ಕೊಶೇರ್ ಸುಪರ್ ಮಾರ್ಕೆಟ್‌ನಲ್ಲಿ ವಿಕ್ಷಿಪ್ತ ದಾಳಿಕೋರನಿಂದ ಯಹೂದಿಯರ ಪ್ರಾಣರಕ್ಷಣೆಗಾಗಿ ಜೀವ ಪಣಕ್ಕಿಟ್ಟ ವ್ಯಕ್ತಿ ಮುಸ್ಲಿಂ ಎನ್ನುವುದು ಎಲ್ಲರಿಗೂ ತಿಳಿಯಬೇಡವೇ? ಗಾಳಿಯಲ್ಲಿ ಮೃತಪಟ್ಟ ಪತ್ರಕರ್ತರ ಗೌರ ವಾರ್ಥ ್ರಾನ್ಸ್‌ನಲ್ಲಿ ನಮಾಝ್ ಮಾಡುತ್ತಿರುವ ಮುಸಲ್ಮಾನರ ಚಿತ್ರಗಳನ್ನು ಪೋಸ್ಟ್ ಮಾಡಲೇಬೇಕಾದ ಕಾರಣ ಏನು?
‘ನೋಡಿ, ದಾಳಿಕೋರರ ವಿರುದ್ಧದ ಅಂತಿಮ ಕಾರ್ಯಾಚರಣೆಯಲ್ಲಿ ಕಮಾಂಡಿಂಗ್ ಆಫೀಸರ್ ಆಗಿದ್ದವರು ಮುಸ್ಲಿಂ ಎಂದು ನಾನು ಏಕೆ ಸ್ನೇಹಿತರಿಗೆ ಒತ್ತಿಹೇಳಬೇಕಾಯಿತು?
ನನ್ನ ನಂಬಿಕೆ ಇರುವುದು ಇಸ್ಲಾಂ ಧರ್ಮದ ನಂಬಿಕೆಯ ಸಂರಕ್ಷಕರು ಎಂದು ಹೇಳಿಕೊಳ್ಳುವ, ತಪ್ಪುದಾರಿ ಹಿಡಿದ ಕೆಲವರ ಕೃತ್ಯಗಳ ಬಗ್ಗೆ ಅಲ್ಲ ಎಂದು ಸಾರಿಹೇಳಿ ನನಗೆ ದಣಿವಾಗಿದೆ; ಮುಜುಗರವೂ ಆಗಿದೆ. ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಗಲಭೆಗಳಲ್ಲಿ ಮುಸಲ್ಮಾನರನ್ನು ಗುರಿಮಾಡುವ ಬೌದ್ಧಭಿಕ್ಷುಗಳಷ್ಟೇ ಇವರೂ ತಪ್ಪುಮಾರ್ಗದರ್ಶನಕ್ಕೆ ಒಳಗಾದವರು. ಅವರ ಕೃತ್ಯ ಬೌದ್ಧಧರ್ಮದ ಮೂಲ ಅಂತಃಸತ್ವಕ್ಕೆ ವಿರುದ್ಧವಾದದ್ದು.
ಪ್ರತಿಯೊಂದಕ್ಕೂ ಮುಸಲ್ಮಾನರನ್ನೇ ಹೊಣೆಮಾಡುವ ವಿಚಾರಧಾರೆಯನ್ನು ಖಂಡಿತವಾಗಿಯೂ ನಾನು ವಿರೋಸುತ್ತೇನೆ. ಮುಂದೆಯೂ ಇದೇ ಧೋರಣೆ ಹೊಂದಿರುತ್ತೇನೆ. ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಅದು ಉಗ್ರಗಾಮಿಗಳ ಪರ ನಿಲುವು ಆಗಿ ಪರಿವರ್ತನೆಯಾಗಲು ಸಾಧ್ಯವೇ ಇಲ್ಲ. ನಾನು ಖಂಡಿತಾ ಮಂದಗಾಮಿ ಮುಸ್ಲಿಂ ಅಲ್ಲ. ಏಕೆಂದರೆ ಆ ಪದಗುಚ್ಛವೇ ನನ್ನ ನಂಬಿಕೆಗೆ ಅವಮಾನ ತರುವಂಥದ್ದು. ಅದು ಹಿಂದೂಗಳಿರಲಿ; ಯಹೂದಿಯರು ಇರಲಿ ಅಥವಾ ಸಿಖ್ಖರಿರಲಿ, ಅವರ ನಂಬಿಕೆಯನ್ನು ಪರಿಮಾಣವಾಗಿ ಅಳೆಯಬಾದರು. ಏಕೆಂದರೆ ಅದು ನಂಬಿಕೆ.

ನಾನು ಇಂದು ಬರೆಯುವಂತೆ, ಮುಸಲ್ಮಾನರನ್ನು ಪ್ರತಿಯೊಂದಕ್ಕೂ ಹೊಣೆಮಾಡುವ ದೃಷ್ಟಿಕೋನ ಮತ್ತು ವಿವೇಚನಾರಹಿತ ಇಸ್ಲಾಂೆಬಿಯಾ ಎರಡನ್ನೂ ನಾನು ವಿರೋಸುತ್ತೇನೆ. ಧರ್ಮದ ಮುಂದಾಳುಗಳು ನನ್ನ ನಂಬಿಕೆಯನ್ನು ಬೆಂಬಲಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ಇಂಥ ವಿವೇಚನಾ ರಹಿತವಾಗಿ ದ್ವೇಷಿಸುವ ಜನರು ಮುಸಲ್ಮಾನೇತರರು ಎಂದು ಘಂಟಾಘೋಷವಾಗಿ ಹೇಳಬಯಸುತ್ತೇನೆ.
ಇಡೀ ಸಮುದಾಯವನ್ನು ದ್ವೇಷಿಸುವ ಮನೋಭಾವವನ್ನು ಬೆಂಬಲಿಸುವ ಪ್ರತಿ ರೂಪಕ್ ಮರ್ಡೋಕ್‌ಗಳಿಗೂ ಒಂದು ವಿಷಯ ಹೇಳಬಯಸುತ್ತೇನೆ. ನೂರಾರು ಪತ್ರಕರ್ತರು, ಹೋರಾಟಗಾರರು, ಮಾನವತಾವಾದಿಗಳು ವಿಶ್ವಾದ್ಯಂತ ಪ್ರತಿದಿನ ಇಸ್ಲಾಂ ಧರ್ಮದ ವಿರುದ್ಧ ಬೆಳೆಯುತ್ತಿರುವ ಪೂರ್ವಾಗ್ರಹದ ವಿರುದ್ಧ ಹೋರಾಡುತ್ತಿದ್ದಾರೆ ಎನ್ನುವುದೇ ಸಂತೋಷದ ವಿಚಾರ. ಇಡೀ ಸಮುದಾಯವನ್ನು ದ್ವೇಷಿಸುವ ಮನೋಭಾವದ ವಿರುದ್ಧ ನಿರಂತರ ಚಳವಳಿ ನಡೆಸುತ್ತಿರುವ ಸಹ ಪತ್ರಕರ್ತ ಇಂಡಿಪೆಂಡೆಂಡ್ ಪತ್ರಿಕೆಯ ಓವೆನ್ ಜೋನ್ಸ್ ಹೇಳುವಂತೆ, ಮುಸ್ಲಿಂ ಧರ್ಮದ ಬಗೆಗಿನ ಪೂರ್ವಾಗ್ರಹ ವಿರುದ್ಧ ಸಾರ್ವಜನಿಕವಾಗಿ ಧ್ವನಿ ಎತ್ತುವ ಕೆಲವೇ ಮಂದಿ ಈ ಚಳವಳಿ ನಡೆಸಿಕೊಂಡು ಬಂದಿದ್ದೇವೆ. ಇದು ನಾವು ಮಾಡಬೇಕಾದ ಕಾರ್ಯ ಮತ್ತು ಇತಿಹಾಸ ನಮ್ಮನ್ನು ಕೀಳಾಗಿ ಕಾಣಬಾರದು.
(ರಾಣಾ ಅಯ್ಯೂಬ್ ಪ್ರಶಸ್ತಿ ಪುರಸ್ಕೃತ ತನಿಖಾ ವರದಿಗೆ ಹೆಸರಾದ ಪತ್ರಕರ್ತೆ. ಉತ್ತಮ ರಾಜಕೀಯ ವಿಶ್ಲೇಷಕಿ. ಪ್ರಧಾನಿ ನರೇಂದ್ರ ಮೋದಿ ಬಗೆಗಿನ ಕೃತಿರಚನೆಯಲ್ಲಿ ತೊಡಗಿದ್ದು, ಈ ವರ್ಷದಲ್ಲಿ ಕೃತಿ ಬಿಡುಗಡೆಯಾಗಲಿದೆ)

Monday, January 12, 2015

ಮನ ತಟ್ಟುವ ಥ್ರಿಲ್ಲರ್ ‘ಅಗ್ಲಿ’

ಅನುರಾಗ್ ಕಶ್ಯಪ್ ಚಿತ್ರವೆಂದರೆ, ಅದು ಹೃದಯವನ್ನು ಛೇದಿಸಿ ನಮ್ಮ ನರನರಗಳನ್ನು ಆವಾಹಿಸಿಕೊಳ್ಳುತ್ತದೆ.ಅನುರಾಗ್ ಕಶ್ಯಪ್ ಬಾಲಿವುಡ್ ಸಿನಿಮಾಗಳಿಗೆ ಒಂದು ಪ್ರತಿ ಭಾಷೆಯನ್ನು ಕೊಟ್ಟವರು. ತಮ್ಮ ಸಿನಿಮಾಗಳ ಮೂಲಕ ಹಲವು ಶಾಕ್ ಗಳನ್ನ ಅವರು ನೀಡಿದರು. ಗುಲಾಲ್,  ‘ಗ್ಯಾಂಗ್ಸ್ ಆಫ್ ವಾಸ್ಸೇಪುರ್’ ಭಾಗ ಒಂದು, ಎರಡು ಚಿತ್ರಗಳ ಮೂಲಕ ಬಾಲಿವುಡ್ ಕಮರ್ಷಿಯಲ್ ಸಿನಿಮಾಗಳು ಹೊಸ ತಿರುವನ್ನು ಪಡೆದು ಕೊಂಡವು. ಆದರೂ ಇತ್ತೀಚಿಗೆ ಕಶ್ಯಪ್ ತುಸು ತಣ್ಣ ಗಾಗಿದ್ದರು. ಗ್ಯಾಂಗ್ಸ್ ಆಫ್... ನಂತಹ ಚಿತ್ರಗಳಿಗೆ ತಮ್ಮೆಲ್ಲ ಪ್ರತಿಭೆಯನ್ನು ಮೊಗೆದು ಕೊಟ್ಟು ಸುಸ್ತಾಗಿ ಬಿಟ್ಟರೋ ಎನ್ನುವಂತೆ. ಆದರೂ ನಿರ್ಮಾಣ, ಚಿತ್ರಕತೆ ಎಂದು ಬಗೆ ಬಗೆಯಲ್ಲಿ ಬಾಲಿವುಡ್‌ನಲ್ಲಿ ತೊಡಗುತ್ತಲೇ ಇದ್ದಾರೆ. ಹೊಸ ಪ್ರತಿಭಾವಂತರನ್ನು ಹುಡುಕಿ ಅವರಿಗೆ ಅವಕಾಶಗಳನ್ನು ನೀಡುತ್ತಾ ಬರುತ್ತಿದ್ದಾರೆ. ಕಶ್ಯಪ್ ಎಂದರೆ ಬಾಲಿವುಡ್‌ನ ಒಂದು ಪ್ರತ್ಯೇಕ ಶಕ್ತಿಯೇ ಸರಿ. ಬಹಳ ಸಮಯದ ಬಳಿಕ ಇದೀಗ ಅವರ ಅಗ್ಲಿ ಎನ್ನೋ ಚಿತ್ರ ಬಿಡುಗಡೆಯಾಗಿದೆ.ಆದರೆ  ಪೀಕೆ ಚಿತ್ರದ ಗದ್ದಲಗಳ ನಡುವೆ ಅನುರಾಗ್ ಕಶ್ಯಪ್ ಅವರ ‘ಅಗ್ಲಿ’ ಚಿತ್ರ ಬಂದು ಹೋದುದು ಬಹುತೇಕರಿಗೆ ಗೊತ್ತೇ ಇರಲಿಕ್ಕಿಲ್ಲ.
ನಗರದೊಳಗಿನ ಮನುಷ್ಯ ಸಂಬಂಧಗಳನ್ನು ಇಟ್ಟುಕೊಂಡು  ಒಂದು ವಿಭಿನ್ನ ಥ್ರಿಲ್ಲರ್ ಚಿತ್ರವನ್ನು ‘ಅಗ್ಲಿ’ ರೂಪದಲ್ಲಿ ಅವರು ಕೊಟ್ಟಿದ್ದಾರೆ. ಒಂದು ಮಗುವಿನ ನಾಪತ್ತೆ ಪ್ರಕರಣವನ್ನು ಕೇಂದ್ರವಾಗಿಟ್ಟು ನಗರದ ಸಾಂಸಾರಿಕ ಬದುಕು ಮತ್ತು ಅದರ ಬಿಚ್ಚಿ ಹೋದ ಹೆಣಿಕೆಗಳನ್ನು ಹೃದಯ ಛೇದಿಸುವಂತೆ ಅವರು ಕಟ್ಟಿಕೊಡುತ್ತಾರೆ. ಚಿತ್ರದ ಕತೆ ತೀರಾ ಹೊಸತಾದುದೇನೂ ಅಲ್ಲ. ಆದರೆ ಅದರ ನಿರೂಪಣೆಯ ತಂತ್ರ ಮಾತ್ರ ಹೊಸತು. ಒಂದು ಮಗು ಇದ್ದಕ್ಕಿದ್ದಂತೆಯೇ ನಾಪತ್ತೆಯಾಗುತ್ತದೆ. ನಗರದ ಇಡೀ ಪೊಲೀಸರು ಆ ಮಗುವಿನ ಪತ್ತೆಯ ಹಿಂದೆ ಬೀಳುತ್ತಾರೆ. ಯಾಕೆಂದರೆ ಆ ಮಗು ಪೊಲೀಸ್ ಅಧಿಕಾರಿ ಶೌಮಿಕ್ ಭೋಸ್(ರೋನಿತ್ ರಾಯ್)ಯ ಮಲ ಮಗು. ಅಂದರೆ ಪತ್ನಿಯ ಮೊದಲ ಗಂಡನ ಮಗು. ಶೌಮಿಕ್ ತನ್ನೆಲ್ಲ ಶ್ರಮವನ್ನು ವಹಿಸಿ ಆ ಮಗುವಿನ ಪತ್ತೆಯ ಹಿಂದೆ ಬೀಳುತ್ತಾನೆ. ಆದರೆ ಇದೇ ಸಂದರ್ಭದಲ್ಲಿ ಆ ಮಗುವನ್ನು ಮುಂದಿಟ್ಟುಕೊಂಡು ಸಂಬಂಧಗಳೇ ವ್ಯವಹಾರಕ್ಕಿಳಿಯುತ್ತವೆ. ಗಂಡ, ಮನೆ, ಕುಟುಂಬದ ಹಿಂದಿರುವ ಅಶ್ಲೀಲತನ, ನೀಚತನಗಳು ಬಯಲಾಗುತ್ತಾ ಹೋಗುತ್ತವೆ. ಅಂತಿಮವಾಗಿ ಹೇಗೆ ಈ ತಿಕ್ಕಾಟಕ್ಕೆ ಮುಗ್ದ ಮಗು ಬಲಿಯಾಗಬೇಕಾಗುತ್ತದೆ ಎನ್ನುವುದೇ ‘ಅಗ್ಲಿ’ ಚಿತ್ರದ ಕಥಾವಸ್ತು.
  ಮೊದಲ ಪ್ರೇಮಿಯಾಗಿ ರಾಹುಲ್ ಭಟ್ ನಟನೆ, ಶೌಮಿಕ್ ಭೋಸ್ ಆಗಿ ರೋನಿತ್ ರಾಯ್ ನಟನೆ ಇಡೀ ಚಿತ್ರದ ಹೆಗ್ಗಳಿಕೆ. ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಳ್ಳುವ ಚಿತ್ರ ಇದು. ಒಂದು ಸರಳ ಕತೆಯನ್ನು ಬಿಗಿಯಾಗಿ ನಿರೂಪಿಸುತ್ತಾ, ಕೊನೆಯವರೆಗೂ ಅದನ್ನು ಹಿಡಿದಿಟ್ಟುಕೊಳ್ಳುವಲ್ಲಿ ಕಶ್ಯಪ್ ಮಾಡಿದ ಪ್ರಯತ್ನಕ್ಕೆ ಸಾಟಿಯಿಲ್ಲ. ಕ್ರೌರ್ಯ, ವಿಷಾದ, ಸಮಯಸಾಧಕಗಳಿಂದ ಕೂಡಿಕೊಂಡ ಅಶ್ಲೀಲ ಸಂಬಂಧಗಳನ್ನು ಕಶ್ಯಪ್ ಕಟ್ಟಿಕೊಟ್ಟ  ನಮ್ಮನ್ನು ಬಹು ಕಾಲ ಕಾಡುತ್ತದೆ