Friday, October 30, 2009

ಮೊಬೈಲ್ ಹಾಡು....!


ಮೊಬೈಲ್ ಒಮ್ಮೆಲೆ ಅಳತೊಡಗುತ್ತದೆ. ಎತ್ತಿಕೊಳ್ಳಲು ಬಾಗಿದರೆ ಒಂದು ಅಪರಿಚಿತ ಸಂಖ್ಯೆ ಕಂಪಿಸುತ್ತಿದೆ. ಒಂದು ಅಪರಿಚಿತ ಧ್ವನಿ ಹಲೋ ಎನ್ನುತ್ತದೆ. ಎತ್ತಿ ಕಿವಿಗಿಡುವ ಆ ಕ್ಷಣ...ಯಾರಿರಬಹುದೆಂಬ ಆತಂಕ...ತಲ್ಲಣ...ಒಂದು ಕ್ಷಣದ ನಿಗೂಢತೆ ಕೆಲವೊಮ್ಮೆ ಒಂದು ವಿಶಿಷ್ಟ ಅನುಭವವಾಗಿ ನಮ್ಮನ್ನು ಸುತ್ತಿಕೊಳ್ಳುತ್ತದೆ.... ಆ ಅನುಭವವೇ ಇಲ್ಲಿ ಕವಿತೆಯಾಗಿದೆ.......

***

ಮತ್ತೆ ಮೊಬೈಲ್ ಕಂಪಿಸುತ್ತಿದೆ...
ಇನ್‌ಬಾಕ್ಸ್ ತೆರೆದು ನೋಡಿದರೆ
ಅವನೇ...ನಗುತ್ತಿದ್ದಾನೆ!

‘ಯಾರು?’ ಎಂಬ ನನ್ನ
ಎರಡಕ್ಷರದ ಮೆಸೇಜಿಗೆ
‘ಹುಡುಕು’ ಎಂಬ ಮೂರಕ್ಷರದ
ರಿಪ್ಲೆ ಕಳುಹಿಸುತ್ತಾನೆ...
‘ಸಾಯಿ’ ಎಂದು ಕಳುಹಿಸಿದರೆ
‘ಬದುಕು’ ಎಂದು ಮರಳಿಸಿದ
ಸಿಟ್ಟಿನಿಂದ ಮೆಸೇಜನ್ನೆಲ್ಲ ಅಳಿಸಿದರೆ
ಎದೆಯೊಳಗೇ ‘ಸೇವ್’ ಆಗಿ ನಗುತ್ತಿದ್ದ
ಅಳಿಸಿದರೆ...ತುಂಬಿಕೊಳ್ಳುತ್ತಿದ್ದ!

ನಂಬರ್‌ಗೆ ಕರೆ ಮಾಡಿದರೆ
ಉತ್ತರವಿಲ್ಲ
ಯಾಕೆ ಈ ಪ್ರಯಾಸ ಎಂದು
ನೇರ ಸೆಂಟರಿಗೆ ನಡೆದು
ಸಂಖ್ಯೆ ತೋರಿಸಿದರೆ
ಅಲ್ಲೊಂದು ನಕಲಿ ವಿಳಾಸ!

ನಗಿಸುತ್ತಿದ್ದ
ಅಳಿಸುತ್ತಿದ್ದ
ಕಾಡುತ್ತಿದ್ದ
ಹಾಡುತ್ತಿದ್ದ
ಆಕಾಶದಷ್ಟು ದೂರದಲ್ಲಿದ್ದರೂ
ಕೊರಳ ನೀಳ ನರದಷ್ಟು ಹತ್ತಿರದಲ್ಲಿ
ನನ್ನ ನೋಡುತ್ತಿದ್ದ

ಯಾರಿರಬಹುದು?
ತೋರು ಬೆರಳು ಹಿಡಿದು ನಡೆಸಿದ
ನನ್ನ ತಂದೆಯೆ?
ಚಹಾ ಹೀರುತ್ತಾ ನನ್ನ ಮುಂದೆಯೇ
ತುಂಟ ನಗು ಬೀರುತ್ತಿರುವ ಒಲವೆ?
ಅಥವಾ...ಮಾತು ಬಿಟ್ಟ ಗೆಳೆಯ?
ನನ್ನ ಜನ್ಮಾಂತರದ ಶತ್ರು?
ಅಥವಾ..ನೀನೊಬ್ಬನೇ ಇಲ್ಲಿ ಸಾಯಿ ಎಂದು
ಸತ್ತು ಹೋದ ಅಣ್ಣ?
ಇನ್ನೂ ಹೆರಿಗೆ ನೋವಿನ ತೆರಿಗೆ
ಕಟ್ಟುತ್ತಿರುವ ಅಮ್ಮ?
ಅಥವಾ...
ನನಗೆ ಹುಟ್ಟಲೇ ಇಲ್ಲದ ನನ್ನ ಮುದ್ದಿನ ತಮ್ಮ!?

ಒಂದು ಹಿತವಾದ ಗಾಯದಂತಿರುವ ಈತ
ಬರೇ ಸಂಖ್ಯೆಯೇ ಆಗಿದ್ದರೆ
ಕಳೆದುಳಿದ ಬದುಕಿನ ಒಟ್ಟು ಮೊತ್ತದಿಂದ
ಅದನ್ನೂ ಕಳೆದು ಬಿಡುತ್ತಿದ್ದೆ
ಅಕ್ಷರವೇ ಆಗಿದ್ದರೆ
ಒಂದೇ ಏಟಿಗೆ ಒರೆಸಿ ಹಾಕಿ ಬಿಡುತ್ತಿದ್ದೆ

ಭಯವಾಗುತ್ತಿದೆ ನನಗೆ...
ಅವನ ಉಸಿರಾಟ ಕೇಳಿಸುತ್ತಿದೆ
ಪರಿಮಳ ನನ್ನನ್ನು ಆವರಿಸಿದೆ
ಅವನ ರುಚಿ, ಸ್ಪರ್ಶವೂ ದಕ್ಕುತ್ತಿದೆ
ಆದರೂ ದೃಷ್ಟಿಗೆ ಸಿಗುತ್ತಿಲ್ಲ....
ಯಾರಿರಬಹುದು ಇವನು?

ಹುಡುಕುತ್ತಾ ಹುಡುಕುತ್ತಾ
ಮೊಬೈಲ್ ಕರೆನ್ಸಿ ಕರಗುತ್ತಿದೆ
ರೀಚಾರ್ಜ್ ಮಾಡಲು ಕೈ ಬರಿದಾಗಿದೆ
ಕರೆನ್ಸಿ ಮುಗಿಯುವ ಮುನ್ನ
ನನ್ನ ಹುಡುಕಾಟ ಮುಗಿಯಬೇಕಿದೆ
ಭಯವಾಗುತ್ತಿದೆ...

ಅಗೋ..ಮತ್ತೆ ಮೊಬೈಲ್ ಕಂಪಿಸುತ್ತಿದೆ...!

*

8 comments:

 1. ಅದ್ಹೇಗೆ ಒಂದು ಸಣ್ಣ ಕವಿತೆಯ ಗರ್ಭದಲ್ಲಿ ಇಷ್ಟೊಂದು ಹಳೆಯ ಗಾಯಗಳನ್ನೆಲ್ಲ ಅಡಗಿಸಿಟ್ಟುಕೊಂಡು ಸಾಕ್ತಿರಿ ಅನ್ನೋದು ಬಹಳ ಆಶ್ಚರ್ಯ ---ಐವನ್ ಡಿಸಿಲ್ವ

  ReplyDelete
 2. ಕವಿತೆ ಚೆನ್ನಾಗಿದೆ. ಸಾಹಿತ್ಯದ ಸವಿಗೆ ವೈಯುಕ್ತಿಕ ರಾಗ ದ್ವೇಶದ ಹಂಗೇಕೆ?
  ನಿಮ್ಮೊಳಗಿನ ಕವಿ ಮನಸ್ಸು ಹೀಗೆಯೇ ತುಡಿಯುತ್ತಿರಲಿ....

  ReplyDelete
 3. nimma kannada baraha mathhu shaily sogasaagidey.
  nanagoo kannadadalli blog maadabekidey...
  aadarey hegey madabekendu gothhlla..
  yaaraadaroo thilisuviraa?..dayavittu

  ReplyDelete
 4. ನೀನೊಬ್ಬನೇ ಇಲ್ಲಿ ಸಾಯಿ ಎಂದು
  ಸತ್ತು ಹೋದ ಅಣ್ಣ?
  ಇನ್ನೂ ಹೆರಿಗೆ ನೋವಿನ ತೆರಿಗೆ
  ಕಟ್ಟುತ್ತಿರುವ ಅಮ್ಮ?-
  ಈ ಸಾಲುಗಳಿಂದ ಕಲಕಿಹೋಯಿತು ಮನಸು. ಯಾಕೆ ನಾಲ್ಕೇ ಬರಹದೊಂದಿಗೆ ಬ್ಲಾಗ್ ಮೌನವಾಗಿದೆ?

  ReplyDelete
 5. Dear Basheer,

  Its a wonderful poem and very touching too. Keep writing. Expecting many more.

  Good luck

  Regards,

  Santhosh Ananthapura

  ReplyDelete
 6. ತುಂಬಾ ಅರ್ಥವತ್ತಾದ ಕವನವಾಗಿದೆ. ಪ್ರಸ್ತುತ ಈ ದಿನಗಳಲ್ಲಿ ಮೊಬೈಲ್ ಎಂಬ ಮುರಕ್ಷರದ ಪದಕ್ಕೆ ಮಾತ್ರ ಸೀಮಿತವಾಗಿರುವ ಇಂದಿನ ಯುವ ಜನತೆ ಇಂತಹ ಕವನಗಳನ್ನು ಓದಿ ಬದಲಾಗಬೇಕಾಗಿದೆ. ನಿಮ್ಮ ಕವನದ ಶೈಲಿಯು ತುಂಬಾ ಚೆನ್ನಾಗಿದೆ. ಅಭಿನಂದನೆಗಳು.

  ReplyDelete
 7. ಪತ್ತೇದಾರಿ ಕತೆಯೊಂದರ ಆರಂಭ..ಆಧ್ಯಾತ್ಮಿಕ ಗ್ರಂಥವೊಂದರ ಮುಕ್ತಾಯದಂತಿದೆ.

  ReplyDelete