Thursday, February 16, 2012

ಯೋಧ ಹೇಳಿದ ಕತೆ...

ಅವನು ಒಂದು ಪುರಾತನ ಮರದಂತೆ ಅಲ್ಲಿ ಕುಳಿತಿದ್ದ. ಗಾಳಿಗೆ ಅದುರುವ ಎಲೆಗಳಂತೆ ಅವನ ತುಟಿ, ಕಣ್ಣ ರೆಪ್ಪೆಗಳು, ಹಣೆಯ ಮೇಲೆ ಬಿದ್ದ ಒಣಗಿದ ಕೂದಲರಾಶಿ ಕಂಪಿಸುತ್ತಿದ್ದವು. ಅವನ ನೆರಳಿನ ಸುತ್ತಲೂ ಅಷ್ಟೂ ಮಕ್ಕಳು ನೆರೆದಿದ್ದರು. ಅವನು ಕತೆ ಹೇಳುತ್ತಿದ್ದ. ತಾನು ಎದುರಿಸಿದ ಕೊನೆಯ ಯುದ್ಧದ ಕತೆ. ಮಕ್ಕಳೆಲ್ಲ ಕಣ್ಣು, ಕಿವಿ ಬಿಟ್ಟು ಅವನ ಮಾತುಗಳನ್ನು ಆಲಿಸುತ್ತಿದ್ದವು. ಅದಾಗಲೇ ಅವರೆಲ್ಲ ತಮ್ಮ ಇರವನ್ನು ಮರೆತು ಕೆಂಡ ಸುರಿಯುವ ಯುದ್ಧ ಭೂಮಿಯನ್ನು ಸೇರಿದ್ದರು.

‘‘ಅದು ನಾನು ಎದುರಿಸಿದ ಕೊನೆಯ ಯುದ್ಧ...ಮತ್ತು ನಾನು ಆವರೆಗೆ ಕಂಡರಿಯದ ಶ್ರೇಷ್ಠ ಯುದ್ಧ. ಆ ಯುದ್ಧಕ್ಕಾಗಿಯೇ ನನಗೀ ಪದಕ ದೊರಕಿತು...’’
ಮಕ್ಕಳ ಕಣ್ಣೆಲ್ಲ ಅವನ ಎದೆಯ ಮೇಲೆ ನೇತಾಡುತ್ತಿದ್ದ ಪದಕಗಳತ್ತ ಹರಿಯಿತು. ‘‘ಸರಿ, ಮುಂದೆ ಹೇಳು....’’ ಮಕ್ಕಳು ಅವಸರಿಸಿದರು.
‘‘ಮೊದಲ ದಿನವೇ ನಮ್ಮ ಪಾಲಿಗೆ ವಿಜಯದ ದಿನವಾಗಿತ್ತು. ಶತ್ರುಗಳನ್ನು ನಾವೆಲ್ಲ ಸೇರಿ ನಡುಗಿಸಿದೆವು. ಒಂದೇ ದಿನದಲ್ಲಿ 200 ಸೈನಿಕರನ್ನು ಕೊಂದು ಮುಂದುವರಿದೆವು...’’
‘‘ಇನ್ನೂರು ಸೈನಿಕರನ್ನು ಕೊಂದಿರಾ...?’’ ಮಕ್ಕಳು ಬಾಯಗಲಿಸಿದರು. ‘‘ಅವರೆಲ್ಲ ಅಲ್ಲೇ ಸತ್ತರಾ...ಒಂದೇ ದಿನದಲ್ಲಿ ಯುದ್ಧ ಮುಗಿಯಿತೆ?’’
ಯೋಧ ನಕ್ಕ ‘‘ಹತ್ತು ಸಾವಿರಕ್ಕೂ ಅಧಿಕ ಶತ್ರು ಸೈನಿಕರು ಆ ಕಡೆಯಿರುವಾಗ ಬರೇ ಇನ್ನೂರು ಸೈನಿಕರನ್ನು ಕೊಂದರೆ ಯುದ್ಧ ಮುಗಿಯುತ್ತದೆಯೆ? ಆದರೂ ಅವರೆಲ್ಲ ಹೆದರಿ ಬಿಟ್ಟರು. ಅಂದ ಹಾಗೆ, ಆ 200 ಸೈನಿಕರೂ ಸ್ಥಳದಲ್ಲೇ ಸತ್ತಿದ್ದರು’’
‘‘ಮುಂದೆ...’’
‘‘ಮರುದಿನ ನನ್ನ ಪಾಲಿಗೆ ಶೌರ್ಯದ ದಿನ. ಯಾಕೆಂದರೆ ಯುದ್ಧದಲ್ಲಿ ನಾನು ವೀರೋಚಿತವಾಗಿ ಹೋರಾಡಿದ್ದೆ. ನನ್ನ ಹೋರಾಟಕ್ಕೆ ನನ್ನ ಕಡೆಯ ಸೈನಿಕರೇ ದಂಗು ಬಡಿದು ಹೋಗಿದ್ದರು. ಅವತ್ತು ನಾನೊಬ್ಬನೇ 50 ಸೈನಿಕರನ್ನು ಕೊಂದಿದ್ದೆ....’’
‘‘ಒಬ್ಬರೇ....’’ ಮಕ್ಕಳೆಲ್ಲ ಮತ್ತೊಮ್ಮೆ ಅವನ ಎದೆಯಲ್ಲಿ ನೇತಾಡುತ್ತಿದ್ದ ಪದಕಗಳತ್ತ ನೋಡಿದರು.
‘‘ಹೌದು ಒಬ್ಬನೆ. ನನ್ನ ಪಾಲಿಗೆ ಎರಡನೆಯ ದಿನ ಒಂದು ಸಣ್ಣ ಆರಂಭವಾಗಿತ್ತು....ಮೂರನೆಯ ದಿನ ನನಗೆ ಹೊಸ ಹುರುಪು ಬಂದಿತ್ತು. ನಾನು ಯಾವ ಭಯವೂ ಇಲ್ಲದೆ ಮುನ್ನುಗ್ಗುತ್ತಲೇ ಇದ್ದೆ....ಅದು ನನ್ನ ಪಾಲಿಗೆ ಇನ್ನೊಂದು ಹೆಗ್ಗಳಿಕೆಯ ದಿನವಾಗಿತ್ತು...ಅಂದು ನಾನು ಒಟ್ಟು ನೂರು ಶತ್ರುಗಳನ್ನು ಕೊಂದು ಹಾಕಿದ್ದೆ....ಒಬ್ಬ ಶತ್ರುವನ್ನಂತೂ ಚೂರಿಯಿಂದಲೇ ಇರಿದು ಹಾಕಿದೆ...’’
ಮಕ್ಕಳ ಉಸಿರು ಅಡಗಿತ್ತು. ಅವರು ನಿಧಾನಕ್ಕೆ ಭೀತರಾಗುತ್ತಿದ್ದರು. ಅವನೋ ಯಾವುದೋ ಉನ್ಮಾದಕ್ಕೊಳಗಾದವನಂತೆ ಮುಂದುವರಿಸಿದ ‘‘ಅದು ನಾಲ್ಕನೆಯ ದಿನ. ನನ್ನ ಸೈನಿಕರು ನನ್ನನ್ನು ಎತ್ತಿ ಮೆರೆದಾಡಿದ ದಿನ. ನಾನಂದು ನೂರಕ್ಕೂ ಅಧಿಕ ಅಂದರೆ ಲೆಕ್ಕವಿರದಷ್ಟು ಜನರನ್ನು ಚೆಂಡಾಡಿದ್ದೆ. ಮುಖ್ಯವಾಗಿ ಶತ್ರುಸೇನೆಯ ಇಬ್ಬರು ಹಿರಿಯ ಅಧಿಕಾರಿಗಳನ್ನೇ ಕೊಂದು ಹಾಕಿದ್ದೆ. ಬಹುತೇಕ ಭೂಮಿ ನಮ್ಮ ವಶವಾಗಿತ್ತು....’’
ಇದ್ದಕ್ಕಿದ್ದಂತೆಯೇ ಯೋಧ ವೌನವಾದ. ಆ ವೌನವೂ ಏನೋ ಹೇಳುತ್ತಿದೆಯೆಂದು ಭಾವಿಸಿ ಮಕ್ಕಳು ಸುಮ್ಮಗೆ ಆಲಿಸುತ್ತಿದ್ದರು.

ಅಷ್ಟರಲ್ಲಿ ಒಬ್ಬ ಹುಡುಗ ಕೇಳಿದ ‘‘ಐದನೆಯ ದಿನ ಏನಾಯ್ತು?’’
‘‘ಹೌದು, ಏನಾಯ್ತು...?’’ ಮಕ್ಕಳೆಲ್ಲ ಒಟ್ಟಾಗಿ ಮತ್ತೆ ಕೇಳಿದರು.
ಯೋಧನ ಗಂಟಲು ಕಟ್ಟಿತ್ತು ‘‘ಅದು ನನ್ನ ಬದುಕಿನ ಸರ್ವ ಶ್ರೇಷ್ಟ ದಿನ...ನಾನಿಂದಿಗೂ ನನ್ನ ಎದೆಯಲ್ಲಿ ಹೊತ್ತು ಕೊಂಡು ತಿರುಗುತ್ತಿರುವ ದಿನ....’’
‘‘ಹೌದೆ? ಎಷ್ಟು ಶತ್ರುಗಳನ್ನು ಕೊಂದಿರಿ?’’ ಮಕ್ಕಳು ಹುಚ್ಚೆದ್ದು ಒಟ್ಟಾಗಿ ಕೇಳಿದರು.
ಯೋಧ ವೌನವಾಗಿದ್ದ.
ಮಕ್ಕಳೇ ಪ್ರಶ್ನಿಸಿದರು ‘‘500 ಶತ್ರುಗಳನ್ನು....?’’
ಯೋಧ ಉತ್ತರಿಸಲಿಲ್ಲ.
‘‘1000?’’ ಮಕ್ಕಳೇ ಕೇಳಿದರು.
ಯೋಧ ಯಾವುದೋ ಗುಂಗಿನಲ್ಲಿ ವೌನವಾಗಿಯೇ ಇದ್ದ.
‘‘ಒಂದು ಲಕ್ಷ?’’ ಮಕ್ಕಳು ಮತ್ತೆ ಉತ್ಸಾಹದಿಂದ ಅಂಕಿಯನ್ನು ಮುಂದಿಟ್ಟರು.
ಊಹುಂ...ಯೋಧ ಮಾತನಾಡುತ್ತಿಲ್ಲ.
‘‘ಒಂದು ಕೋಟಿ...?’’ ಮಕ್ಕಳು ಮತ್ತೇ ಜೋರಾಗಿ ಕೇಳಿದರು.
ಯೋಧ ಈಗ ಬಾಯಿ ತೆರೆದ ‘‘ಇಲ್ಲ...ಅವತ್ತು ಒಬ್ಬ ಸೈನಿಕನನ್ನು ನಾವೆಲ್ಲರೂ ಸೇರಿ ಕೊಂದು ಹಾಕಿದೆವು’’
‘‘ಬರೇ ಒಬ್ಬನನ್ನೇ...’’ ಮಕ್ಕಳು ನಿರಾಶೆಯಿಂದ ಕೇಳಿದರು. ಅವರ ಉತ್ಸಾಹ ಒಮ್ಮೆಲೆ ಕುಗ್ಗಿತ್ತು.
‘‘ಹೌದು, ಒಬ್ಬನನ್ನು’’ ಯೋಧ ಮತ್ತೊಮ್ಮೆ ಉಚ್ಚರಿಸಿದ.
‘‘ಆ ಸೈನಿಕ ಅಷ್ಟು ಬಲಿಷ್ಟನಾಗಿದ್ದನೆ?’’ ಮಕ್ಕಳು ಅಚ್ಚರಿಯಿಂದ ಕೇಳಿದರು.
 ‘‘ಹೂಂ...ಈ ಜಗತ್ತಿನ ಯಾವ ಯೋಧರೂ ಎದುರಿಸಲಾಗದಷ್ಟು ಅವನು ಬಲಿಷ್ಟನಾಗಿದ್ದ....’’ ಒಂದು ಕ್ಷಣ ವೌನವಾಗಿದ್ದ ಯೋಧ ಮುಂದುವರಿಸಿದ ‘‘ಹೌದು, ಅದು ಐದನೆಯ ದಿನ. ನಾನು ಗುಂಪಿನಿಂದ ಬೇರೆಯಾಗಿ ಶತ್ರುಗಳೆಡೆಗೆ ಉನ್ಮಾದದಿಂದ ದಾವಿಸುತ್ತಲೇ ಇದ್ದೆ. ಒಬ್ಬೊಬ್ಬರ ಹೆಣಗಳೂ ಉರುಳುತ್ತಿದ್ದವು. ಹಾಹಾಕಾರ, ಚೀತ್ಕಾರ...ನಮ್ಮವರದೋ, ಶತ್ರುಗಳದೋ ಎಂದು ಗುರುತಿಸುವುದು ಕಷ್ಟವಾಗುತ್ತಿತ್ತು. ಯಾಕೆಂದರೆ ಸಾವಿನ ಚೀತ್ಕಾರ ಎಲ್ಲವೂ ಒಂದೇ ಥರ ಕೇಳಿಸುತ್ತದೆ. ಅದಕ್ಕೆ ದೇಶ, ಭಾಷೆ, ಜಾತಿ, ಧರ್ಮಗಳ ಹಂಗಿಲ್ಲ...ಅವೆಲ್ಲದಕ್ಕೂ ಕಿವುಡನಾಗಿ ನಾನು ಮುಂದುವರಿಯುತ್ತಿದ್ದೆ. ಇದ್ದಕ್ಕಿದ್ದಂತೆ ಅದೆಲ್ಲಿಂದ ಧಾವಿಸಿ ಬಂತೋ...ಒಂದು ಗುಂಡು ನನ್ನ ಬಲಭಾಗದ ಎದೆಯನ್ನು ಸೀಳಿತು....ಇನ್ನೊಂದು ನನ್ನ ತೊಡೆಯನ್ನು ಮುರಿದು ಹಾಕಿತು. ನಾನು ಯುದ್ಧಭೂಮಿಯ ಪಕ್ಕದಲ್ಲೇ ಇದ್ದ ಕಂದರಕ್ಕೆ ಉರುಳಿ ಬಿದ್ದಿದ್ದೆ....’’
ಮಕ್ಕಳೆಲ್ಲ ‘‘ಓಹ್....’’ ಎಂದು ಬಾಯಿಗೆ ಕೈಯಿಟ್ಟು ಉದ್ಗರಿಸಿದರು. ಯೋಧನೂ ಒಂದರೆಕ್ಷಣ ವೌನವಾದ.

  ‘‘ಸುಮಾರು ನಾಲ್ಕು ಗಂಟೆ....ನಾಲ್ಕು ಗಂಟೆ ನಾನು ಸಾವು ಬದುಕಿನ ನಡುವೆ ಒದ್ದಾಡುತ್ತಲೇ ಇದೆ. ನನ್ನ ನಾಲಗೆ ಸೂರ್ಯನ ಝಳಕ್ಕೆ ಕುದಿಯುತ್ತಿರುವ ಮರೂಭೂಮಿಯಂತೆ ಸುಡುತ್ತಿತ್ತು. ನನಗೆ ಬೇಕಾಗಿದ್ದದ್ದು ಒಂದು ಗುಟುಕು, ಒಂದೇ ಒಂದು ಗುಟುಕು ನೀರು....ನಾನು ‘ನೀರು...ನೀರು’ ಎಂದು ಆರ್ತನಾದಗೈಯುತ್ತಿದ್ದೆ. ಆದರೆ ನನ್ನ ಧ್ವನಿ ನನಗೇ ಕೇಳುತ್ತಿರಲಿಲ್ಲ...ನಿಧಾನಕ್ಕೆ ಆಕಾಶದ ಬಣ್ಣ ಬದಲಾಗುತ್ತಿತ್ತು. ನನ್ನ ಸುತ್ತಮುತ್ತಲಿದ್ದ ಗಿಡಮರಗಳ ಬಣ್ಣವೂ ಕೆಂಪಾಗುತ್ತಿತ್ತು. ನಾನು ಸಾವಿನ ಅಂಚಿಗೆ ಜಾರುತ್ತಿದ್ದೆ....ಅಷ್ಟರಲ್ಲಿ ದೂರದಿಂದ ಯಾರೋ ಬರುತ್ತಿದ್ದ ಹಾಗೆ ಕಂಡಿತು....ಯಾವನೋ ದೇವದೂತನಂತೆ ಮೊದಲು ಕಂಡರೂ ಅವನು ಹತ್ತಿರ ಹತ್ತಿರವಾದ ಹಾಗೆ ಮನುಷ್ಯ ರೂಪವನ್ನು ಪಡೆಯುತ್ತಿದ್ದ. ಇನ್ನೂ ಹತ್ತಿರವಾದಂತೆ ಆ ಸ್ಥಿತಿಯಲ್ಲೂ ನಾನು ಬೆಚ್ಚಿ ಬಿದ್ದೆ. ಶತ್ರು ಸೈನಿಕನನ್ನು ಯಾವ ಸ್ಥಿತಿಯಲ್ಲೂ, ಎಷ್ಟು ದೂರದಲ್ಲೂ ಗುರುತು ಹಿಡಿಯುವವನು ನಾನು. ಬರುತ್ತಿದ್ದವನು ಶತ್ರು ಸೈನಿಕನಾಗಿದ್ದ....ಸರಿ...ಹೇಗೂ ಸಾಯಲಿದ್ದ ನಾನು ಅವನ ಕೈಯಲ್ಲಿ ಸಾಯುವುದಕ್ಕೆ ಅಣಿಯಾದೆ....’’
‘‘ಓಹ್....’’ ಮಕ್ಕಳೆಲ್ಲ ಮತ್ತೆ ಚೀತ್ಕರಿಸಿದರು.

‘‘ಆ ಶತ್ರು ಸೈನಿಕ ಇನ್ನೂ ಹತ್ತಿರವಾದಂತೆ ಅವನ ಹೆಗಲಲ್ಲಿರುವ ಕೋವಿ ನನಗೆ ಸ್ಪಷ್ಟವಾಗಿ ಕಾಣ ತೊಡಗಿತು. ಅವನು ನನ್ನನ್ನು ನೋಡಿದ್ದಾನೆ....ನನ್ನೆಡೆಗೆ ಧಾವಿಸಿ ಬರುತ್ತಿದ್ದ...ಅಂದಹಾಗೆ ಅವನ ಕೈಯಲ್ಲಿ ಇನ್ನೇನೋ ಇತ್ತು. ಇನ್ನಷ್ಟು ಹತ್ತಿರವಾದಾಗ ನನಗೆ ಗೊತ್ತಾಯಿತು. ಅವನ ಕೈಯಲ್ಲಿ ನೀರಿನ ಬ್ಯಾಗೊಂದಿತ್ತು....ಆದರೆ ನನಗೆ ಅದರ ಮೇಲೆ ಯಾವ ನಿರೀಕ್ಷೆಯೂ ಇರಲಿಲ್ಲ. ನನ್ನ ಗಮನವೆಲ್ಲ ಅವನ ಹೆಗಲ ಮೇಲಿದ್ದ ಕೋವಿಯ ಮೇಲಿತ್ತು’’
‘‘ಆದರೆ ಯುದ್ಧ ಭೂಮಿಯಲ್ಲಿ ನಡೆಯಲೇ ಬಾರದಂತಹ ಒಂದು ವಿಚಿತ್ರ ಅಲ್ಲಿ ನಡೆಯಿತು. ಅವನು ನೇರ ನನ್ನ ಬಳಿ ಸಾರಿದವನೇ ಬಾಗಿದ. ನನ್ನ ಬಾಯಿಂದ ಅಯಾಚಿತವಾಗಿ ‘ನೀರು’ ಎಂಬ ಶಬ್ದ ಹೊರಬಿತ್ತು. ಅವನು ನನ್ನ ತಲೆಯನ್ನು ಎತ್ತಿ ಅವನ ತೊಡೆಯ ಮೇಲೆ ಇಟ್ಟುಕೊಂಡ. ಬಳಿಕ ಒಂದು ಮಗುವಿನ ಬಾಯಿಗೆ ಹಾಲೂಡಿಸುವಂತೆ ತನ್ನಲ್ಲಿದ್ದ ನೀರನ್ನು ಹನಿ ಹನಿಯಾಗಿ ನನ್ನ ಬಾಯಿಗೆ ಹನಿಸತೊಡಗಿದ. ಅವನಲ್ಲಿದ್ದ ಆ ನೀರು ನಿಜಕ್ಕೂ ನೀರಾಗಿರಲಿಲ್ಲ. ಅದು ಅಮತವಾಗಿತ್ತು. ಒಂದೊಂದು ಹನಿ ನನ್ನ ನನ್ನೊಳಗನ್ನು ಸೇರುತ್ತಿದ್ದ ಹಾಗೆಯೇ ನಾನು ಚೇತರಿಸಿಕೊಳ್ಳುತ್ತಿದ್ದೆ...ಇನ್ನು ಸಾಕು ಎನ್ನುವವರೆಗೆ ನನ್ನ ಬಾಯಿಗೆ ನೀರು ಸುರಿದ. ಬಳಿಕ ಗಾಯಗಳಿಗೆ ತನ್ನಲ್ಲಿದ್ದ ಬಟ್ಟೆಯಿಂದ ರಕ್ತ ಸೋರದಂತೆ ಮಾಡಿದ. ಎತ್ತಿ ಪಕ್ಕದ ಮರದ ಕೆಳಗೆ ನನ್ನನ್ನು ಒರಗಿಸಿದ....’’

ಮಕ್ಕಳು ದಿಗ್ಭ್ರಮೆಗೊಂಡಿದ್ದರು. ‘‘ಆಮೇಲೆ ಏನಾಯ್ತು...ಆಮೇಲೆ....ಅವನೇನಾದ...ಎಲ್ಲಿ ಹೋದ....ಅವನನ್ನು ನಮ್ಮ ದೇಶಕ್ಕೆ ಕರೆದುಕೊಂಡು ಬಂದಿರಾ?’’ ಹುಡುಗನೊಬ್ಬ ಆತುರದಿಂದ ಕೇಳಿದ.
ಯೋಧನ ಗಂಟಲು ಗೊಗ್ಗರು ಸ್ವರ ಹೊರಡಿಸುತ್ತಿತ್ತು. ಕೆಮ್ಮಿ ಗಂಟಲನ್ನು ಸರಿಪಡಿಸಿಕೊಂಡ. ಮತ್ತು ಹೇಳಿದ ‘‘ಅಷ್ಟರಲ್ಲಿ ನಮ್ಮವರ ತಂಡ ನನ್ನೆಡೆಗೆ ಧಾವಿಸಿ ಬಂತು. ಆ ಸೈನಿಕನನ್ನು ನಮ್ಮವರು ಕೊಂದು ಹಾಕಿದರು....’’
‘‘ಯಾಕೆ? ಯಾಕೆ ಕೊಂದರು. ಅವನೇನು ತಪ್ಪು ಮಾಡಿದ್ದ?’’ ಹುಡುಗನೊಬ್ಬ ಅಳುತ್ತಾ ಕೇಳಿದ.
ಒಂದು ಕ್ಷಣ ವೌನವಾಗಿದ್ದ ಯೋಧ ಹೇಳಿದ ‘‘ಯಾಕೆಂದರೆ, ಅವನು ನಮ್ಮ ದೇಶದ ಶತ್ರುವಾಗಿದ್ದ’’

24 comments:

  1. ಬಷೀರ್ ಸರ್ ಅದ್ಭತ ಕಥೆ , ಪ್ರತಿಯೊಬ್ಬರೂ ಕಾತರದಿಂದ ಓದುವಂತೆ ಮಾಡುತ್ತದೆ.ಮಾನವೀಯತೆ ?ಹಾಗು ಕರ್ತವ್ಯದ ಹೊಣೆ ?ಯಾವುದು ಹೆಚ್ಚು ಎಂಬುದು ಪ್ರಶ್ನಾರ್ಥಕವಾಗಿ ಉಳಿದುಬಿಡುತ್ತದೆ. ಯಾದರಲ್ಲಿ ಯಾರನ್ನೂ ತಪ್ಪು ಎನ್ನೆವುದು ಆಗದಂತ ಪರಿಸ್ಥಿತಿ , ತಮಗೆ ಧನ್ಯವಾದಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. ನಿಜಕ್ಕೂ ಮೈ ಜುಮ್ ಅನುಸುವಂತೆ ಮಾಡಿದ ಕತೆ...ಕಣ್ಣಲಿ ತೆಳು ನೀರಿನ ಪೊರೆ...
    ಶತ್ರು ದೇಶದ ಆ ಸೈನಿಕನ ಮಾಯವಿಯತೆ ನಿಜಕ್ಕೂ ದೊಡ್ಡದು...
    ಕರ್ತವ್ಯ ಮತ್ತು ಮಾನವೀಯತೆಯನ್ನು ತೂಕಕ್ಕೆ ಹಾಕುವಂತಿಲ್ಲ...

    ಮನದೊಳಗೆ ಕೂತು ಕಾಡುವಂಥ ಬರಹ...

    ReplyDelete
  3. ಬಷೀರ್ ಸರ್ ನಿಮ್ಮ ಕಾವ್ಯ ಪ್ರೌಢಿಮೆಗೆ ಕೈ ಎತ್ತಿ ಮುಗಿಯುತ್ತೇನೆ.. ಕಥೆಯ ಅಂತ್ಯವನ್ನು ಓದಿದವನೆ ಸ್ಥಂಭೀಭೂತನಾಗಿಬಿಟ್ಟೆ.. ಯಾವ ರೀತಿ ಪ್ರತಿಕ್ರಿಯಿಸಬೇಕೋ ತಿಳಿಯದಂತೆ ಮಾಡಿತು ನಿಮ್ಮ ಕಥೆ.. ಯುದ್ಧದ ಭೀಭತ್ಸವಾದ ಮುಖವನ್ನು ಪರಿಚಯಿಸುತ್ತದೆ ಕಥೆ.. ಯುದ್ಧ ಮತ್ತು ಯುದ್ಧ ಸಲಕರಣೆಗಳು ಎಂಬ ಪರಿಕಲ್ಪನೆ ಮೊದಲು ಮೂಡಿದ್ದು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ನಂತರದಲ್ಲಿ ಈ ಅವಕಾಶವಾದಿ ಮನುಷ್ಯ ಅದನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡ, ತನ್ನ ರಾಜ್ಯದ ದಾಹಕ್ಕೆ, ಅಧಿಕಾರದ ಮದಕ್ಕೆ, ಹೀಗೆ ಹತ್ತು ಹಲವು ಕಾರಣಗಳಿಗೆ ಅಮಾಯಕ ಮುಗ್ಧರನ್ನು ಬಲಿ ಕೊಡಬೇಕಾಯ್ತು.. ಕುತೂಹಲವನ್ನು ಕೆರಳಿಸುತ್ತಾ ಓದಿಸಿಕೊಳ್ಳುವ ಕಥೆ, ಕಥೆ ಕೇಳುತ್ತಿದ್ದ ಮಕ್ಕಳಲ್ಲಿ ನಾನೂ ಒಬ್ಬನಾಗಿ ಕಥೆ ಓದಿದೆ..

    ReplyDelete
  4. ನಿಜವಾದ ಹೋರಾಟಗಾರ ಯುದ್ಧ ಧರ್ಮ ಪಾಲಿಸ್ತಾನೆ... ಆದ್ರೆ ಕಲಿಯುಗದಲ್ಲಿ ಲೆಕ್ಕ ಮಾತ್ರ ಕೆಲ್ಸ ಮಾಡುತ್ತೆ. ಉತ್ತಮ ಲೇಖನ...

    ReplyDelete
  5. ಥ್ಯಾಂಕ್ಸ್ ಸರ್... ತುಂಬಾ ಚೆನ್ನಾಗಿದೆ. ನಂಗೆ ಕ್ಷಣ ಕ್ಷಣಕ್ಕೂ ಕುತೂಹಲ ಇತ್ತು. ಕೊನೆಗೆ ಏನಾಯಿತು ಮಾನವೀಯತೆ ಲೆಕ್ಕಕ್ಕಿಲ್ಲ.. ಸರ್ ಇದನ್ನು ನಿಮ್ಮ ಅನುಮತಿ ಇಲ್ಲದೆ ಫೇಸ್‌ಬುಕ್‌ಗೆ ಅಪಲೋಡ್ ಮಡ್ತಾ ಇದ್ದೇನೆ ಕ್ಷಮಿಸಿ.

    ReplyDelete
  6. ಹೃದಯ ಸ್ಪರ್ಷಿ ನಿರೂಪಣೆ... ಅದ್ಭುತ ಪರಿಕಲ್ಪನೆ... ಯೊಚನೆಗೂ ನಿಲುಕದ ಕಥಾವಸ್ತು... ಬಶೀರ್... ನಿಮಗೆ ಅಭಿನಂದನೆ....

    ReplyDelete
  7. ತುಂಬಾ ಅದ್ಭುತ ಬರವಣಿಗೆ. ಕಣ್ಣಲ್ಲಿ ನೀರೂರಿಸಿದ ಕ್ಷಣ.

    ReplyDelete
  8. ಕಥೆ ಓದುತಿದಂತೆ ದೃಶ್ಯಗಳು ಕಾಣುತಿತು.ಕಣ್ಣು ಹಾಗೂ ಮನಸ್ಸು ಕಾತುರದಿಂದ ಕಥೆಯಲ್ಲಿ ಮುಳುಗಿತು.

    ReplyDelete
  9. ಕಥೆ ಓದುತಿದಂತೆ ದೃಶ್ಯಗಳು ಕಾಣುತಿತು.ಕಣ್ಣು ಹಾಗೂ ಮನಸ್ಸು ಕಾತುರದಿಂದ ಕಥೆಯಲ್ಲಿ ಮುಳುಗಿತು.

    ReplyDelete
  10. ಅದ್ಬುತ ಸರ್ ಪ್ರತಿ ಪದಗಳ ಜೋಡಣೆಯಲ್ಲಿ ಕಾತರವಿದೆ

    ReplyDelete
  11. I don have courage to read more.am into rain of tears.humanity comes first.respect

    ReplyDelete
  12. We are in a dilemma that professionalism is important than humanity.

    Better we Refer
    Sorry ಕನ್ನಡ .
    ಕುವೆಂಪು ರವರ ವಿಶ್ವ ಮಾನವ ಸಂದೇಶಾನ ಪಾಲಿಸೊನ

    ReplyDelete
  13. ಅಂಚನ್ ಗೀತಾSeptember 30, 2016 at 8:07 AM

    ಓ ದೇವರೆ..ಕೊನೆ ಸಾಲುಗಳು ಮೈ ಜುಮ್ಮೆನ್ನುವಂತೆ ಭಾಸವಾಗುತ್ತೆ...

    ReplyDelete
  14. Hmmm..Confusing
    Awesome story..awanannu kollade eddare desha drohawagutte..kodare papawagutte.. So sad..

    ReplyDelete
  15. Hmmm..Confusing
    Awesome story..awanannu kollade eddare desha drohawagutte..kodare papawagutte.. So sad..

    ReplyDelete
  16. ಮನ ಮೆಚ್ಚುವ ಕಥೆ. ಮಾನವೀಯತೆಯನ್ನು ಬಡಿದೆಬ್ಬಿಸುವ ಕಥೆ. ಜೀವವನ್ನೇ ಪಣಕ್ಕಿಟ್ಟು ದೇಶ ಕಾಯುವ ಶ್ರೇಷ್ಠ ಯೋಧರೂ ಈ ಕಥೆಯನ್ನು ಓದುವಂತಾಗಲಿ ಹಾಗೂ ಯುದ್ಧ ನಡೆಯುವಂತಾದರೆ ಮಾನವೀಯತೆ ಗೆಲ್ಲಲಿ

    ReplyDelete
  17. Ohhh tumba chennagide edu nijavagalu nave youdhha bhoomige hodantide ��

    ReplyDelete
  18. ಕೊನೆ ಸಾಲುಗಳು ಮೈ ಜುಮ್ಮೆನ್ನುವಂತೆ ಭಾಸವಾಗುತ್ತೆ...

    ReplyDelete
  19. ಇದು ಸತ್ಯ ಘಟನೆಯಾ

    ReplyDelete
  20. ಮಾನವೀಯತೆಗಿಂತಲೂ ಯುದ್ದ ಧರ್ಮವೇ ಮೇಲು ಎನಿಸುತ್ತದೆ. ಕುತೂಹಲ ಮತ್ತು ಕಾತರತೆ ಮೂಡಿಸುವ ಜೊತೆಗೆ ಮೈ ಜುಮ್ಮೆನ್ನಿಸುವ ರೋಚಕ ಅಂತ್ಯ ಅದ್ಭುತ ಪರಿಕಲ್ಪನೆ.

    ReplyDelete
  21. ಮಾನವೀಯತೆಗಿಂತಲೂ ಯುದ್ದ ಧರ್ಮವೇ ಮೇಲು ಎನಿಸುತ್ತದೆ. ಕುತೂಹಲ ಮತ್ತು ಕಾತರತೆ ಮೂಡಿಸುವ ಜೊತೆಗೆ ಮೈ ಜುಮ್ಮೆನ್ನಿಸುವ ರೋಚಕ ಅಂತ್ಯ ಅದ್ಭುತ ಪರಿಕಲ್ಪನೆ.

    ReplyDelete