ಗೆಳೆಯರೇ, ನಾನು ಮುಂಬಯಿಯಲ್ಲಿ ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಬರೆದ ಕವಿತೆ ಇದು. ಬಳಿಕ ನನ್ನ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ ಕೃತಿಯಲ್ಲಿ ಈ ಕವನ ಪ್ರಕಟಗೊಂಡಿತು. 1996ರಲ್ಲಿ ಈ ಕೃತಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’ಯೂ ದೊರಕಿತ್ತು. ನನ್ನ ತೀರಾ ಹಳೆಯ ಈ ಕವಿತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಹಂಚಿಕೊಂಡಿದ್ದೇನೆ.
ನನ್ನ ಪುಟ್ಟ ತಂಗಿಗೀಗ ತಿಳಿದು ಹೋಗಿದೆ
ನಾ ಕೊಟ್ಟ ನವಿಲು ಗರಿಗೆ ಎಂದೂ
ಜೀವ ಬರುವುದಿಲ್ಲ ಎಂದು
ಪತ್ರದಲ್ಲಿ ತಿಳಿಸಿದ್ದಾಳೆ
ನಾನೀಗ ಬೆಳೆದಿದ್ದೇನೆ!
ಹಾರಿ ಬಿಟ್ಟ ಗಾಳಿಪಟ
ದೈತ್ಯ ವೃಕ್ಷದ ಎದೆಗೂಡೊಳಗೆ ಸಿಕ್ಕಿ
ಹರಿದು ಚೆಲ್ಲಾಪಿಲ್ಲಿಯಾದ ಬಗೆ;
ನಿನ್ನೆಯ ಮುಂಗಾರು ಮಳೆ ತಿಳಿಸಿ ಹೋಗಿದೆ...
ನೀ ಕೊಟ್ಟ ಕಾಗದದ ದೋಣಿ
ಅದರೊಳಗೇ ಕರಗಿ ಕಡಲ ಸೇರಿದೆ!
ತಿಳಿಸಿದ್ದಾಳೆ-
ಏಳು ಕೋಟೆಯ ಒಳಗಿರುವ
ಮಲ್ಲಿಗೆ ತೂಕದ ರಾಜಕುಮಾರಿ
ಕುದುರೆಯೇರಿ ಬರುವ ರಾಜಕುವರನ
ಕಾದು-ಸೋತು
ತಾನೇ ಕೋಟೆಯೇರುವ ಹುನ್ನಾರ ನಡೆಸಿದ
ಹೊಸ ಕಥೆ!
ಪಶ್ಚಿಮದ ಗಾಳಿ ಅವಳ ಕೆನ್ನೆ ಸವರಿ
ಉಸುರಿದ ಬಗೆ
ತಿಳಿಸಿದ್ದಾಳೆ ಪತ್ರದಲ್ಲಿ....
ನೀ ಮುತ್ತಿಕ್ಕಿದ ಹಾಲ್ಗೆನ್ನೆಯಲ್ಲೀಗ
ಮೊಡವೆಯೆದ್ದು ಕೀವು ತುಂಬಿದೆ
ಅದೀಗ ಒಡೆಯುವುದಕ್ಕೆ ಕಾದು ನಿಂತಿದೆ!
ಬಶೀರ್ ಭಾಯ್..ಬಹಳ ಚಿಂತನೆಗೆ ಮಂಥನಕೆ ತಳ್ಳುವ ಯೋಚನಾಲಹರಿಯ ಪದ-ಚಿತ್ತಾರ ಬಿಡಿಸಿದ್ದೀರಿ...ತಂಗಿಗೆ ವಾಸ್ತವಗಳ ಅರಿವಾಗಿದೆ ಎನ್ನುವುದು ಮುಖ್ಯ..ಅಲ್ಲವೇ...? ಇಷ್ಟವಾಯ್ತು ನಿಮ್ಮ ಶೈಲಿ ಮತ್ತು ಲಹರಿ.
ReplyDelete