Wednesday, March 28, 2012

‘ಮೂತ್ರ ರಾಜಕೀಯ’




ಮಾರ್ಚ್ 28, 2008 ರಂದು ಬರೆದ ಲೇಖನ. ಅಪೌಷ್ಟಿಕತೆಯ ಕುರಿತಂತೆ ಚರ್ಚೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಿಮ್ಮೆದುರಿಗಿಟ್ಟಿದ್ದೇನೆ.
 
ಸಾಧಾರಣವಾಗಿ ಮನುಷ್ಯನ ಬದುಕಿನಲ್ಲಿ ‘ಮೂತ್ರ’ ಮಹತ್ವವನ್ನು ಪಡೆದುಕೊಳ್ಳುವುದು ಅದರ ವಿಸರ್ಜನೆಗೆ ಕಷ್ಟವಾದಾಗ ಮಾತ್ರ. ನಮ್ಮ ದೇಹ ತನಗೆ ಬೇಡವಾದ ತ್ಯಾಜ್ಯವನ್ನು ದ್ರವ ರೂಪದಲ್ಲಿ ಹೊರಚೆಲ್ಲುವುದನ್ನೇ ನಾವು ಮೂತ್ರ ಎಂದು ಕರೆಯುತ್ತಾ ಬಂದಿದ್ದೇವೆ. ಆರೋಗ್ಯವನ್ನು ರಕ್ಷಿಸಿಕೊಳ್ಳುವುಲ್ಲಿ ಈ ಮೂತ್ರ ವಿಸರ್ಜನೆ ವ್ಯವಸ್ಥೆ ಭಾರೀ ಮಹತ್ವವನ್ನು ಪಡೆದಿದೆ. ಇಂತಹ ವಿಸರ್ಜನೆಗೊಂಡ ಮೂತ್ರವನ್ನು ‘ಸಂಸ್ಕೃತಿ’ಯ ಹೆಸರಿನಲ್ಲಿ, ‘ಧರ್ಮ’ದ ಹೆಸರಿನಲ್ಲಿ ಮತ್ತೆ ಕುಡಿಸುವ ಪ್ರಯತ್ನ ನಡೆದರೆ? ಅದೂ ದನದ ‘ಮೂತ್ರ’ವನ್ನು? ಸಾಧಾರಣವಾಗಿ ದನದ ಸೆಗಣಿ, ಮೂತ್ರ ಇತ್ಯಾದಿ ತೆಂಗಿನ ತೋಟಕ್ಕೆ, ಮರಗಿಡಗಳಿಗೆ ಬಳಸಿಕೊಂಡು ಬಂದ ದೇಶ ನಮ್ಮದು. ಮನುಷ್ಯರಿಗೂ ಮರಗಿಡಗಳಿಗೂ ವ್ಯತ್ಯಾಸವೇ ತಿಳಿಯದ, ಮನುಷ್ಯನನ್ನು ಮರಗಿಡಗಳಿಗಿಂತಲೂ ಕೀಳಾಗಿ ಕಂಡ ಒಂದು ಗುಂಪು ಇದೀಗ ‘ಮೂತ್ರ’ವನ್ನು ಔಷಧಿ ಎಂದು ಕುಡಿಸುವ ಪ್ರಯತ್ನದಲ್ದಿ. ಎಳೆ ಮಕ್ಕಳ ತುಟಿಯಿಂದ ಹಾಲನ್ನು ಕಿತ್ತು, ಹಸಿದವರ ಕೈಯಿಂದ ಅವರ ಆಹಾರವನ್ನು ಕಿತ್ತುಕೊಂಡು ಅದಕ್ಕೆ ಬದಲಾಗಿ ಮೂತ್ರವನ್ನು ಕುಡಿಯಿರಿ ಎಂದು ಸಲಹೆ ನೀಡುತ್ತಿದೆ. ತನ್ನ ಈ ಮೂತ್ರ ರಾಜಕೀಯಕ್ಕೆ ಆರೋಗ್ಯ ಕ್ಷೇತ್ರವನ್ನು, ಪ್ರಜಾಸತ್ತಾತ್ಮಕ ಸರಕಾರವನ್ನು ಬಳಸುತ್ತಿದೆ. ಕಳೆದ ಫೆಬ್ರವರಿಯಲ್ಲಿ ಉತ್ತರಖಂಡದ ಬಿಜೆಪಿ ಸರಕಾರ ದನದ ಹಾಲಿನಂತೆಯೇ ಮೂತ್ರವನ್ನು ಸಂಸ್ಕರಿಸಿ, ರಕ್ಷಿಸಿಡುವ ಕುರಿತು ಘೋಷಣೆ ಮಾಡಿತು. ದನದ ಡೈರಿಯಂತೆಯೇ ಮೂತ್ರದ ಡೈರಿಯನ್ನ ಮಾಡಿ ಅದನ್ನು ಆಯುರ್ವೇದಿಕ್ ಫಾರ್ಮಸಿಗೆ ಮಾರುವುದು ಈ ಸರಕಾರದ ಯೋಜನೆಯಂತೆ. ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಕೂಡಾ ಈ ಮೂತ್ರ ಕುಡಿಸುವ ರಾಜಕೀಯದಲ್ಲಿ ರಾಘವೇಶ್ವರ ಸ್ವಾಮೀಜಿಯ ಜೊತೆಗೆ ಶಾಮೀಲಾಗಿದ್ದರು ಮಾತ್ರವಲ್ಲ, ಬಜೆಟ್ ಹಣವನ್ನು ಅದಕ್ಕೆ ಮೀಸಲಿರಿಸಿದ್ದರು.

ದನದ ಮೂತ್ರವನ್ನು ಔಷಧಿಯಾಗಿ ಬಳಸುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳುವುದು ಸಾಧ್ಯವೇ ? ಅದನ್ನು ಔಷಧಿಯಾಗಿ ಬಳಸಬಹುದು ಎಂದು ಘೋಷಿಸಬೇಕಾದವರು ತಜ್ಞ ವೈದ್ಯರೇ ಹೊರತು, ರಾಜಕಾರಣಿಗಳೋ, ಸಂಘಪರಿವಾರದ ನಾಯಕರೋ ಅಲ್ಲ. ವೈದ್ಯರ ಕೆಲಸವನ್ನು ರಾಜಕಾರಣಿಗಳು ಮಾಡುವಂತಿಲ್ಲ. ಔಷಧಿಗಳಿಗೆ, ವೈದ್ಯಕೀಯಕ್ಕೆ ಅದರದೇ ಆದ ಚೌಕಟ್ಟುಗಳಿವೆ. ನೀತಿ ಸಂಹಿತೆಗಳಿವೆ. ಈಗಾಗಲೇ ಆಯುರ್ವೇದ ಔಷಧ ತಜ್ಞರ ಕುರಿತಂತೆಯೇ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಆಯುರ್ವೇದದ ಹೆಸರಲ್ಲಿ ನಕಲಿ ಔಷಧಿ ಮಾರಾಟ ಸದನದಲ್ಲಿ ಗದ್ದಲಕ್ಕೆ ಕಾರಣವಾಗಿತ್ತು. ಹೀಗಿರುವಾಗ, ಒಂದು ಸರಕಾರ ಏಕಾಏಕಿ ಮೂತ್ರವನ್ನು ಸಂಗ್ರಹಿಸುವ, ಸಂಸ್ಕರಿಸುವ ಮತ್ತು ಅದನ್ನು ಔಷಧಿಗೆ ಬಳಸುವ ಒತ್ತಡ ಎಷ್ಟರ ಮಟ್ಟಿಗೆ ಸರಿ? ಕೆಲವು ಸರಕಾರಗಳು ದನದ ಮೂತ್ರದಲ್ಲಿ ಔಷಧೀಯ ಗುಣಗಳಿವೆಯೇ ಎಂದು ಸಂಶೋಧಿಸಲೆಂದೇ ಕೆಲವು ತಜ್ಞರನ್ನು ನೇಮಿಸಿ, ಅವರಿಗೆ ಒಂದಿಷ್ಟು ದುಡ್ಡು, ಫಂಡು ನೀಡುತ್ತಿವೆ. ಇನ್ನು ಮುಂದೆ ದನದ ಸೆಗಣಿಯಲ್ಲಿ ಪ್ರೊಟೀನ್ ಇದೆಯೇ? (ಗೋಮಾಂಸದ ಬದಲಿಗೆ ತಿನ್ನುವುದಕ್ಕೆ ಕೊಡಬಹುದಲ್ಲ), ದನದ ಎಂಜಲಿನಲ್ಲಿ ಏಡ್ಸ್‌ಗೆ ಔಷಧಿಯಿದೆಯೇ? ಮೊದಲಾದ ಸಂಶೋಧನೆಯನ್ನು ನಡೆಸುವುದಕ್ಕೂ ಈ ಸರಕಾರಗಳು ಮುಂದಾಗಬಹುದು. ಸಂಶೋಧನೆ ನಡೆಸುವುದಕ್ಕೇನಾಗಬೇಕು?

ಸರಕಾರ ಸಂಶೋಧನೆಗಳನ್ನು ನಡೆಸಲಿ, ರಾಜಕಾರಣಿಗಳು ಬೇಕಾದರೆ ಕಡಾಯಿಗಟ್ಟಲೆ ದನದ ಮೂತ್ರವನ್ನು ಇಟ್ಟುಕೊಂಡು ಅದನ್ನೇ ದಿನನಿತ್ಯ ಕುಡಿಯುವುದಕ್ಕೆ, ಸ್ನಾನ ಮಾಡುವುದಕ್ಕೆ, ಬಟ್ಟೆ ಒಗೆಯುವುದಕ್ಕೆ ಬಳಸಿಕೊಳ್ಳಲಿ. ಆದರೆ ಔಷಧಿಯಂತಹ ವಸ್ತುವಾಗಿ ಮೂತ್ರವನ್ನು ಬಳಸುವುದಕ್ಕೆ ಮೊದಲು ಅದನ್ನು ವೈದ್ಯಕೀಯ ರಂಗ ಅಧಿಕೃತವಾಗಿ ದೃಢಪಡಿಸಬೇಕು. ಮೂತ್ರ ಔಷಧಿ ಎನ್ನುವುದು ಈವರೆಗೆ ಯಾವುದೇ ತಜ್ಞರಿಂದ, ವೈದ್ಯಕೀಯ ಕ್ಷೇತ್ರದಿಂದ ಅಧಿಕೃತವಾಗಿ ದೃಢೀಕರಣಗೊಂಡಿಲ್ಲ. ಹೀಗಿರುವಾಗ, ಒಂದು ಸರಕಾರದ ನೇತೃತ್ವದಲ್ಲಿ ಆಯುರ್ವೇದ ಫಾರ್ಮಸಿಗಳಿಗೆ ದನದ ಮೂತ್ರವನ್ನು ಪೂರೈಕೆ ಮಾಡುವುದು ಎಷ್ಟು ಸರಿ?

ಸ್ವಾಮೀಜಿಗಳು ಹೋದಲ್ಲಿ, ಬಂದಲ್ಲಿ ‘ಮೂತ್ರ ಔಷಧಿ’ ಎಂದು ಘೋಷಣೆ ಮಾಡುವುದರಿಂದ ಆಗುತ್ತಿರುವ ಅನಾಹುತಗಳು ಹಲವೆಡೆ ಬೆಳಕಿಗೆ ಬಂದಿವೆ. ಮೂತ್ರವೆನ್ನುವುದು ತ್ಯಾಜ್ಯ. ಪ್ರಾಣಿಗಳ ತ್ಯಾಜ್ಯವನ್ನು ಮನುಷ್ಯ ಮತ್ತೆ ಉಪಯೋಗಿಸುವುದರಿಂದ ಆಗುವ ಅನಾಹುತಗಳೇನು ಎನ್ನುವುದನ್ನು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಮೂತ್ರ ಸೇವನೆಯಿಂದ ಕಿಡ್ನಿಗೆ ನೇರ ಹಾನಿಯಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಸ್ವಾಮೀಜಿಗಳ ಮಾತು ನಂಬಿ ಮೂತ್ರ ಸೇವಿಸಿದ ಹಲವರು ಕಿಡ್ನಿ ತೊಂದರೆಯಿಂದ ಆಸ್ಪತ್ರೆ ಸೇರಿದ್ದಾರೆ. ರಾಘವೇಶ್ವರ ಸ್ವಾಮೀಜಿಯವರ ದೇಹವನ್ನೇ ನೋಡಿ. ಅದು ದನದ ಮೂತ್ರ ಸೇವಿಸಿದ ದೇಹದಂತೆ ಕಾಣುತ್ತಿದೆಯೆ? ದನದ ಹಾಲು, ಮೊಸರು, ತುಪ್ಪ, ಬೆಣ್ಣೆ ಇತ್ಯಾದಿಗಳನ್ನು ತಿಂದು ಸದೃಢವಾಗಿ ಕೊಬ್ಬಿದ ದೇಹ ಅದು. ಅವರು ದಿನಕ್ಕೆ ಎಷ್ಟು ಬಾರಿ ಗೋಮೂತ್ರವನ್ನು ಸೇವಿಸುತ್ತಿದ್ದಾರೆ ಎನ್ನುವುದನ್ನು ಯಾವತ್ತಾದರೂ ಬಹಿರಂಗಪಡಿಸಿದ್ದಾರೆಯೇ? ಗೋಮೂತ್ರವನ್ನು ಔಷಧಿಯಾಗಿ ಬಿಂಬಿಸಲು ಹೊರಡುತ್ತಿರುವ ನಿಜವಾದ ಉದ್ದೇಶ ಏನು ಎನ್ನುವುದು ಎಲ್ಲರಿಗೂ ತಿಳಿದಿದೆ. ಗೋವನ್ನು ರಾಜಕೀಯ ಶಕ್ತಿಯನ್ನಾಗಿಸಿ, ಗೋಮಾಂಸ ಸೇವಿಸುವವರ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವುದಕ್ಕಾಗಿ ಗೋಮೂತ್ರವನ್ನು ಔಷಧಿಯಾಗಿಸುವ ಪ್ರಯತ್ನ ನಡೆಯುತ್ತಿದೆ. ವೈದ್ಯಕೀಯ ಕ್ಷೇತ್ರ ಇದರ ವಿರುದ್ಧ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ತಜ್ಞರು ಇದರ ವಿರುದ್ಧ ನ್ಯಾಯಾಲಯಕ್ಕೆ ತೆರಳಬೇಕಾಗಿದೆ. ಗೋಮೂತ್ರದಿಂದ ಆರೋಗ್ಯದ ಮೇಲಾಗುವ ಪರಿಣಾಮವೇನು ಎನ್ನುವುದರ ಕುರಿತಂತೆ ಜನಜಾಗೃತಿಯನ್ನು ಮಾಡಬೇಕಾಗಿದೆ. ಸ್ವಾಮೀಜಿಗಳು, ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರವನ್ನು ಬಿಟ್ಟು, ತಮ್ಮ ರಾಜಕಾರಣಕ್ಕಾಗಿ ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಿ ಅದನ್ನು ಕುಲಗೆಡಿಸುವುದನ್ನು ತಡೆಯಬೇಕಾಗಿದೆ.

  ಗೋಮೂತ್ರ ಔಷಧವಲ್ಲ. ಗೋವಿನ ಹಾಲು, ತುಪ್ಪ, ಬೆಣ್ಣೆ, ಮೊಸರು ಔಷಧ. ಎಲ್ಲಕ್ಕಿಂತ ಮುಖ್ಯವಾಗಿ ಭಾರತದಂತಹ ಬಡ ದೇಶಕ್ಕೆ ಗೋಮಾಂಸ ಅತಿ ಪರಿಣಾಮಕಾರಿ ಔಷಧ. ಬಡತನ, ಅಪೌಷ್ಠಿಕತೆ ಅತಿ ದೊಡ್ಡ ಕಾಯಿಲೆಯಾಗಿ ಈ ದೇಶವನ್ನು ಕಾಡುತ್ತಿದೆ. ದೇಶದಲ್ಲಿ ಕ್ಷಯ ರೋಗ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಈಗಾಗಲೇ ವರದಿಗಳು ಬಹಿರಂಗಪಡಿಸಿವೆ. ಪ್ರೋಟಿನ್‌ನ ಕೊರತೆಯಿಂದ ಕ್ಷಯ ರೋಗಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಕುರಿ, ಕೋಳಿ ಈ ದೇಶದಲ್ಲಿ ಅತಿ ದುಬಾರಿಯಾಗಿರುವಾಗ, ಅತ್ಯಂತ ಅಗ್ಗವಾಗಿ, ಅತ್ಯುತ್ತಮ ಆಹಾರವಾಗಿ ಗೋಮಾಂಸ ನಮ್ಮ ಮುಂದಿದೆ. ಗೋಮಾಂಸ ಕ್ಷಯ ರೋಗಕ್ಕೆ ರಾಮ ಬಾಣವಾಗಿದೆ. ಸಂಘ ಪರಿವಾರದ ರಾಜಕೀಯದಿಂದಾಗಿ ಇಂದು ಗೋಮಾಂಸವೂ ದುಬಾರಿಯಾಗುವಂತಹ ಸನ್ನಿವೇಶ ಎದುರಾಗಿದೆ. ಈ ಕಾರಣದಿಂದ ತಕ್ಷಣ ಗೋಮಾಂಸವನ್ನು ಜನಪ್ರಿಯಗೊಳಿಸುವ ಕಾರ್ಯಕ್ಕೆ ಸರಕಾರಗಳು ಮುಂದಾಗಬೇಕು. ಗೋಮಾಂಸವನ್ನು ಆಹಾರವಾಗಿ ಸ್ವೀಕರಿಸುವವರಿಗೆ ಅದು ಸುಲಭ ದರದಲ್ಲಿ ಮಾರುಕಟ್ಟೆಯಲ್ಲಿ ಸಿಗುವುದಕ್ಕೆ ವ್ಯವಸ್ಥೆ ಮಾಡಬೇಕಾಗಿದೆ. ಗೋಮಾಂಸವನ್ನು ಜನಪ್ರಿಯಗೊಳಿಸುವುದರಿಂದ ಅಪೌಷ್ಟಿಕತೆ, ಆಹಾರದ ಕೊರತೆ ಮೊದಲಾದವುಗಳಿಗೆ ಒಂದು ಪರಿಹಾರ ದೊರಕಿದಂತಾಗುತ್ತದೆ. ಗೋಮೂತ್ರದಲ್ಲಿ ಔಷಧೀಯ ಗುಣಗಳಿವೆಯೇ? ಸೆಗಣಿಯಲ್ಲಿ ಆಹಾರದ ಗುಣಗಳಿವೆಯೇ? ಎಂಬ ಹಾಸ್ಯಾಸ್ಪದ ಸಂಶೋಧನೆಗಳಿಗೆ ಕೋಟಿಗಟ್ಟಲೆ ಸುರಿಯುವುದಕ್ಕಿಂತ ಅತ್ಯುತ್ತಮ ಗೋಮಾಂಸವನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯಕ್ಕೆ ಆ ಹಣವನ್ನು ವ್ಯಯ ಮಾಡಲಿ. ಭಾರತದ ಗೋಮಾಂಸ ವಿಶ್ವದಲ್ಲೇ ಜನಪ್ರಿಯ. ನಮ್ಮ ಮಕ್ಕಳೂ ಆ ಗೋಮಾಂಸವನ್ನು ತಿಂದು ಗೋವಿನಂತಹ ಗುಣಗಳನ್ನು ತಮ್ಮದಾಗಿಸಿಕೊಳ್ಳಲಿ.


(ಮಾರ್ಚ್ 28, 2008 ಶುಕ್ರವಾರ)

Monday, March 26, 2012

ಗೋಲ್ಡನ್ ಬೀಚ್ ಕಡಲ ದಂಡೆಯಲ್ಲಿ ಕೆಲವು ಪಾಠಗಳು....

ಪತ್ರಕರ್ತ, ಕವಿ. ದಿ. ಬಿ. ಎಂ. ರಶೀದ್ ಅವರು ಬರೆದ ಕವಿತೆ. ‘ಪರುಷಮಣಿ’ ಕೃತಿಯಿಂದ ಆರಿಸಿಕೊಳ್ಳಲಾಗಿದೆ.

1
ಇಳಿದರೆ ಉಪ್ಪು-
ಮೈಯೆಲ್ಲಾ ಅಂಟು
ಅಡಿಯಿಟ್ಟರೆ ನುಂಗುವ ಆಳ...
ಎತ್ತಿ ಕುಕ್ಕುವ ಅಲೆ
ಕೂತು ನೋಡುವುದೇ ಚೆಂದವೆನಿಸಿತು

2
ನಿನ್ನ ಉಲ್ಲಾಸಕ್ಕೆ ಅಲೆಗಳು;
ನಿನ್ನ ನಗುವಿನ ಶುಭ್ರತೆಗೆ
ನೊರೆಗಳು ನಾಚಿಕೊಂಡವು
ಹೆಮ್ಮೆ ಪಡದಿರು ಹುಡುಗಿ...
ನಿನ್ನನ್ನು ನಿರ್ನಾಮಗೊಳಿಸುವ ಹಗೆಯಿಂದ ಭುಸುಗುಟ್ಟಿ
ಹವಣಿಸಿದ ಅಲೆಗಳ ಸಂಚುಗಳು
ನಿನ್ನ ಗಮನಕ್ಕೆ ಬಂದಿದ್ದರೆ...?

3
ಅದೆಷ್ಟೋ
ಕಸುವಿಂದ ಛಲತೊಟ್ಟು
ಈಸಿದ ಕೈಗಳು;
ಹಾಯಿ ಕಡಿದು
ದಿಕ್ಕೆಟ್ಟು ನಡೆದ ದೋಣಿಗಳು;
ನೆಲ ಮುಗಿಲ ನಡುವೆ
ಜೀಕುವ ತಳ ಮುರಿದ ಹಡಗುಗಳೆಲ್ಲವ
ನುಂಗಿ ನೊಣೆದ ಈ ಕಡಲು-
ನಿರಂತರ ತೊಡೆ ತಟ್ಟಿ ಕರೆವ
ಶತ್ರುವಿನ ಸವಾಲು:
‘ಬಾ ನನ್ನ ಗೆಲ್ಲು...’
ನನ್ನಲ್ಲಿರಲಿಲ್ಲ ಹತಾರು-ತಾಲೀಮು
ನಾನೆತ್ತಲಿಲ್ಲ ಸೊಲ್ಲು
ನೀನು ನಸು ನಕ್ಕು ನಡೆದೆ
ಕಡಲನ್ನೇ ಬೊಗಸೆಯೆತ್ತಿ ಕುಡಿದೆ
ನಿನ್ನ ಕಿರು ನಗೆಗೆ 
ಕಡಲು ಸೋತದ್ದು ಹೇಗೆ...?

4
ನೀನು ಮತ್ತು ಕಡಲು
ಕಡಲೊಳಗೆ ನೀನು
ನಿನ್ನೊಳಗೆ ಕಡಲು
ಪರಸ್ಪರ ಕಡಲು
ಪರಸ್ಪರ ಕರಗುವ ಆಳ
ಉಪಮೆ ಯಾರಿಗೆ ಯಾರು ಹೇಳು...?

(ಜುಲೈ 21, 1993)
ಲಂಕೇಶ್ ಪತ್ರಿಕೆ

Sunday, March 25, 2012

ನೆನಪು ಮತ್ತು ಇತರ ಕತೆಗಳು

 ತಪ್ಪು
ವಿಜ್ಞಾನಿಗಳು ಹಾರಿಸಿದ ಉಪಗ್ರಹ ವಿಫಲಗೊಂಡು ಅರ್ಧದಲ್ಲೇ ಸ್ಫೋಟಗೊಂಡಿತು.
ವಿಜ್ಞಾನಿಗಳೆಲ್ಲರೂ ತಕ್ಷಣ ಸಭೆ ಸೇರಿದರು.
ವೈಫಲ್ಯಕ್ಕೆ ಕಾರಣಗಳನ್ನು ಹುಡುಕಲಾಯಿತು.
 ಅಷ್ಟರಲ್ಲಿ ಒಬ್ಬ ಸಹಾಯಕ ವಿಜ್ಞಾನಿ ಹೆದರುತ್ತಾ ಹೇಳಿದ ‘‘ಸಾರ್...ಒಂದು ವಿಷಯದಲ್ಲಿ ವಿಜ್ಞಾನಿಗಳ ಲೆಕ್ಕ ತಪ್ಪಿ ಹೋಯಿತು’’
‘‘ಯಾವ ವಿಷಯದಲ್ಲಿ?’’ ಹಿರಿಯ ವಿಜ್ಞಾನಿ ಕೇಳಿದ.
‘‘ನಮ್ಮ ಎಣಿಕೆ ತಪ್ಪಿದೆ. ರಾಹುಕಾಲ ಮುಗಿಯುವ ಮೊದಲೇ ಉಪಗ್ರಹವನ್ನು ಹಾರಿಸಿ ಬಿಡಲಾಯಿತು...’’
ಹಿರಿಯ ವಿಜ್ಞಾನಿ ಒಮ್ಮೆಲೆ ಸ್ಫೋಟಗೊಂಡ
‘‘ಇಷ್ಟು ದೊಡ್ಡ ತಪ್ಪು ಹೇಗೆ ನಡೆಯಿತು? ತಕ್ಷಣ ತನಿಖೆ ನಡೆಸಿ ವರದಿ ನೀಡಿ’’
 
ನೆನಪು
‘‘ಪ್ರತಿ ದೀಪಾವಳಿಗೆ ಅಮ್ಮ ನನಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು...ನನಗೆ ಎಣ್ಣೆ ಎಂದರೆ ಅಮ್ಮನ ನೆನಪಾಗುತ್ತೆ....’’ ಆತ ದೀಪಾವಳಿ ದಿನ ಭಾವುಕನಾಗಿ ಹೇಳಿದ.
ಪತ್ನಿ ತನಗೆ ತಾನೆ ಪಿಸುಗುಟ್ಟಿದಳು ‘‘ಹೌದು ನನಗೂ ಎಣ್ಣೆ ಎಂದರೆ ಅತ್ತೆಯ ನೆನಪಾಗುತ್ತೆ...ಸೀಮೆಎಣ್ಣೆ ಎಂದರೆ....’’ ಕನ್ನಡಿಯಲ್ಲಿ ಹಳೆಯ ಸುಟ್ಟ ಗಾಯಗಳನ್ನೊಮ್ಮೆ ನೋಡಿಕೊಂಡಳು.

ಕನ್ನಡಿ
ಅವನ ಕಣ್ಣಿನ ಕನ್ನಡಿ ಆಕಸ್ಮಿಕವಾಗಿ ಒಡೆಯಿತು.
ಆದರೆ ಕೈಯಲ್ಲಿ ಪುಸ್ತಕವಿದೆ. ಅತ್ಯಂತ ಆಸಕ್ತಿಯಿಂದ ಓದುತ್ತಿರುವ ಪುಸ್ತಕ.
ಅವನು ಒಡೆದ ಕನ್ನಡಿಯನ್ನು ಜೋಡಿಸಲು ಯತ್ನಿಸಿದ.
ಅಕ್ಷರಗಳೆಲ್ಲ ಒಡೆದಂತೆ. ಕಣ್ಣೆಲ್ಲ ಮಂಜು ಮಂಜು...
ಎದುರಿನಲ್ಲಿ ಪತ್ನಿ ನಿಂತಿದ್ದಾಳೆ
‘‘ಏನಾಯ್ತು...?’’
‘‘ಕನ್ನಡಿ ಒಡೆಯಿತು ಕಣೇ...ಓದುವುದಕ್ಕೆ ಆಗುತ್ತಿಲ್ಲ....’’
‘‘ಒಂದೆರಡು ದಿನ ಪುಸ್ತಕ ಬದಿಗಿಡಿ. ನನ್ನ ಮುಖವನ್ನು ಓದಿ. ಇದನ್ನು ಓದುವುದಕ್ಕೇನು ಕನ್ನಡದ ಅಗತ್ಯವಿಲ್ಲವಲ್ಲ’’ ಪತ್ನಿ ನುಡಿದಳು.

ರಾಜ
ಅವನೊಬ್ಬ ರಾಜವಂಶಸ್ಥ. ಈಗ ಮಾತ್ರ ಗುಡಿಸಲಲ್ಲಿದ್ದಾನೆ.
ಅವನಿಗೆ ತನ್ನ ಗುಡಿಸಲಿನ ಕುರಿತಂತೆ ಕೀಳರಿಮೆ. ರಾಜನ ವಂಶಸ್ಥನೊಬ್ಬ ಗುಡಿಸಲಲ್ಲಿರುವುದೇ. ಅವನಿಗೆ ತೀರಾ ಅವಮಾನವಾಗುತ್ತಿತ್ತು.
ಒಂದು ದಿನ ತನ್ನ ಗುಡಿಸಲಿಗೆ ತಾನೇ ಬೆಂಕಿ ಕೊಟ್ಟ.
ಬಳಿಕ ತನಗೆ ತಾನೆ ಹೇಳಿದ ‘‘ಈಗ ನಾನು ನಿಜಕ್ಕೂ ರಾಜ. ಇನ್ನು ನಾನು ಬಡವನೆಂದು ಸಾರುವ ಯಾವ ವಸ್ತುವು ನನ್ನಲ್ಲಿಲ್ಲ’’

ಹಾಡು
‘‘ಸ್ವಲ್ಪ ಹಾಡನ್ನು ಮೆಲ್ಲಗಿಡುತ್ತೀರಾ?’’ ಅವನು ಮನವಿ ಮಾಡಿದ.
‘‘ಯಾಕೆ, ಯಾಕೆ ಹಾಡನ್ನು ಮೆಲ್ಲ ಮಾಡಬೇಕು..ನಮಗೆ ಹಾಡನ್ನು ಕೇಳಬೇಕು’’ ಅವರು ಗದರಿಸಿದರು.
‘‘ಹೌದು, ನನಗೂ ಹಾಡನ್ನು ಕೇಳಬೇಕಾಗಿದೆ....’’ ಅವನು ಉತ್ತರಿಸಿದ.

ಇಷ್ಟ
ಒಂದು ಹಂಸ ಕೊಳದಲ್ಲಿ ಬಳುಕುತ್ತಿತ್ತು. ಅಲ್ಲೇ ಒಂದು ಬಿಳಿ ಕಾಗೆ ಓಡಾಡುತ್ತಿತ್ತು. ಎಲ್ಲರೂ ಹಂಸವನ್ನು ಬಿಟ್ಟು ಕಾಗೆಯೆಡೆಗೆ ನೋಡತೊಡಗಿದರು ‘‘ಬಿಳಿ ಕಾಗೆ ಬಿಳಿಕಾಗೆ..’’ ಎಂದು ಮಕ್ಕಳು ಬೊಬ್ಬಿಡತೊಡಗಿದರು.
ಕಾಗೆ ಇದನ್ನು ನೋಡಿ ಬೀಗಿತು ‘‘ನೋಡಿದೆಯಾ ಹಂಸ...ಜನ ಈಗೀಗ ಕಾಗೆಯನ್ನು ಇಷ್ಟ ಪಡಲು ತೊಡಗಿದ್ದಾರೆ’’
ಹಂಸ ನಕ್ಕು ಹೇಳಿತು ‘‘ಜನ ಇಷ್ಟಪಡುತ್ತಿರುವುದು ಕಾಗೆಯನ್ನಲ್ಲ. ನಿನ್ನಲ್ಲಿರುವ ಹಂಸದ ಬಣ್ಣವನ್ನು...’’

ಮಳೆ
ಶಿಷ್ಯನೊಬ್ಬ ಕೂಗಿದ ‘‘ಮಳೆ ಬರ್ತಾ ಇದೆ...ಒಳಗೆ ಬನ್ನಿ....’’
 ಅಷ್ಟರಲ್ಲಿ ಆಶ್ರಮದೊಳಗಿದ್ದ ಸಂತ ಅಂಗಳಕ್ಕೆ ಬಂದು ಕೂಗಿದ ‘‘ಮಳೆ ಬರ್ತಾ ಇದೆ...ಎಲ್ಲರೂ ಹೊರಗೆ ಬನ್ನಿ...’’

 
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Sunday, March 18, 2012

ಬ್ಯಾರಿ ಚಿತ್ರ ಮತ್ತು ಸಾರಾ ಅಬೂಬಕರ್ ಕುರಿತಂತೆ ಕೆಲವು ಮಾತುಗಳು....

 ಇತ್ತೀಚಿಗೆ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಬ್ಯಾರಿ ಚಿತ್ರದ ಕುರಿತಂತೆ ಸಾರಾ ಅಬುಬಕ್ಕರ್ ಒಂದು ಲೇಖನವನ್ನು ಬರೆದಿದ್ದರು. ಅದರಲ್ಲಿ "ನನ್ನ ಕತೆಯನ್ನು ಕದ್ದಿದ್ದಾನೆ'' ಎಂದು ಬ್ಯಾರಿ ಚಿತ್ರದ ನಿರ್ಮಾಪಕರ ಬಗ್ಗೆ ಸಾರ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಈ ಲೇಖನವನ್ನು ಬರೆದಿದ್ದೇನೆ. ಮಾರ್ಚ್ 28 , 2012 ರ ಸಂಚಿಕೆಯ ಗೌರಿ ಲಂಕೆಶ್ನಲ್ಲಿ ಇದು ಪ್ರಕಟವಾಗಿದೆ.

ಬೆಳಗ್ಗೆ ಸುಮಾರು ಎಂಟು ಗಂಟೆಯ ಹೊತ್ತು. ನಿದ್ದೆಯಿಂದ ಎದ್ದು ಮೊಬೈಲ್ ನೋಡಿದರೆ ಒಂದು ಮಿಸ್ಡ್ ಕಾಲ್. ಇನ್ನೊಂದು ಮೆಸೇಜ್. ನೋಡಿದರೆ ಬೊಳುವಾರು ಮುಹಮ್ಮದ್ ಕುಂಞಿ ಅವರದು. ಮೆಸೇಜ್ ತೆರೆದು ನೋಡಿದರೆ ‘‘ಬ್ಯಾರಿ’’ ಚಿತ್ರಕ್ಕೆ ಸ್ವರ್ಣಕಮಲ ಎಂಬ ಒಂದು ಸಾಲು. ಮನಸ್ಸು ಜುಂ ಎಂದಿತು. ಎದ್ದು ಟಿ.ವಿ. ಆನ್ ಮಾಡಿದೆ. ಗಿರೀಶ್ ಕಾಸರವಳ್ಳಿಯವರ ‘ಕೂರ್ಮಾವತಾರ’ ಶ್ರೇಷ್ಠ ಕನ್ನಡ ಚಿತ್ರವಾಗಿ ಗುರುತಿಸಿಲ್ಪಟ್ಟರೆ, ಬ್ಯಾರಿ ಚಿತ್ರ ಸ್ವರ್ಣಕಮಲ ಗಳಿಸಿದೆ. ದಿಲ್ಲಿ ಅದೇ ಮೊದಲ ಬಾರಿಗೆ ಒಂದು ಸಿನಿಮಾದ ಮೂಲಕ ಬ್ಯಾರಿ ಎನ್ನುವ ಶಬ್ದವನ್ನು ಕೇಳಿರಬೇಕು. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಆಸುಪಾಸಿನ ಮುಸ್ಲಿಮರ ಒಂದು ಗುಂಪು, ಹಾಗೂ ಬೆಳ್ಚಡ, ಬೋವಿ ಜನಾಂಗದ ಒಂದಿಷ್ಟು ಜನರು ಆಡುವ ಭಾಷೆ ಬ್ಯಾರಿ. ಇಂತಹ ಒಂದು ಪುಟ್ಟ ಭಾಷೆ, ರಾಷ್ಟ್ರ ಭಾಷೆಗೆ ಮಾತ್ರವಲ್ಲ, ಕನ್ನಡ, ತುಳು, ಕೊಂಕಣಿ, ಕೊಡವ ಎಲ್ಲಾ ಭಾಷೆಗಳನ್ನು ಹಿಂದಿಕ್ಕಿ ಸರ್ವಶ್ರೇಷ್ಠ ಸ್ವರ್ಣ ಕಮಲ ಪ್ರಶಸ್ತಿ ಪಡೆದದ್ದು ನನ್ನ ಮಟ್ಟಿಗೆ ಸಣ್ಣ ವಿಷಯ ಆಗಿರಲೇ ಇಲ್ಲ.
ಅಂದು ಸಂಜೆ ಬೆಂಗಳೂರಿನಿಂದ ನನ್ನ ಪತ್ರಕರ್ತ ಮಿತ್ರ ಫೋನ್ ಕರೆ ಮಾಡಿದ್ದ. ಆತನಿಗೆ ಈ ‘ಬ್ಯಾರಿ’ ಎನ್ನುವುದು ಒಂದು ಸಮಸ್ಯೆಯಾಗಿ ಬಿಟ್ಟಿತ್ತು. ಇದಾವ ಭಾಷೆ? ಮಲಯಾಳವೆ? ಇವರಿರುವುದು ಎಲ್ಲಿ? ಇದು ಕನ್ನಡಕ್ಕೆ ಸಿಕ್ಕಿದ ಪ್ರಶಸ್ತಿಯೋ ಅಥವಾ ಕೇರಳಕ್ಕೆ ಸಿಕ್ಕಿದ ಪ್ರಶಸ್ತಿಯೋ? ಹಲವು ಗೊಂದಲಗಳನ್ನು ಇಟ್ಟುಕೊಂಡು ಫೋನ್ ಕರೆ ಮಾಡಿದ್ದ.
‘‘ಅಲ್ಲ ಮಾರಾಯ...ಈ ಬ್ಯಾರಿ ಎಂದರೆ ಯಾರು ಮಾರಾಯ?’’ ಕೇಳಿದ.
‘‘ಈ ಬ್ಯಾರಿ ಅಂದರೆ ನಾನೇ’’ ಅವನಿಗೆ ಉತ್ತರಿಸಿದ.
‘‘ನೀನು ಮುಸ್ಲಿಂ ಅಲ್ವಾ? ಹಾಗಾದ್ರೆ...’’
‘‘ನಾನು ಮುಸ್ಲಿಮನೂ ಹೌದು. ಜೊತೆಗೆ ಬ್ಯಾರಿಯೂ ಹೌದು...ನಾನು ಮಾತನಾಡುವ ಭಾಷೆ ಬ್ಯಾರಿ’’ ಎಂದೆ.
ಅವನ ಸಮಸ್ಯೆ ಇನ್ನಷ್ಟು ಜಟಿಲವಾಯಿತು ‘‘ಅದು ಹೇಗೆ? ನೀನು ಮುಸ್ಲಿಮ್ ಎಂದ ಮೇಲೆ ನಿನ್ನ ಭಾಷೆ ಉರ್ದು ಆಗಿರಬೇಕಲ್ಲ...’’
‘‘ನನಗೆ ಉರ್ದು ಗೊತ್ತಿಲ್ಲ ಮಾರಾಯ’’ ಉತ್ತರಿಸಿದೆ.
‘‘ಮುಸ್ಲಿಮರಿಗೆ ಉರ್ದು ಗೊತ್ತಿಲ್ಲ ಎಂದರೆ ನಾನು ನಂಬುವುದು ಹೇಗೆ? ತಮಾಷೆ ಮಾಡ್ಬೇಡ...’’
‘‘ನನಗೆ ಉರ್ದು ಗೊತ್ತಿಲ್ಲ. ಆ ಕುರಿತಂತೆ ನನಗೆ ಹೆಮ್ಮೆಯೇನೂ ಇಲ್ಲ. ಯಾಕೆಂದರೆ ಉರ್ದು ಗೊತ್ತಿಲ್ಲದೆ ನಾನು ತುಂಬಾ ಮಿಸ್ ಮಾಡ್ಕೊಂಡಿದ್ದೇನೆ. ಆದರೆ ನನ್ನದು ಬ್ಯಾರಿ ಮಾತೃಭಾಷೆ. ಮನೆಭಾಷೆ. ಬ್ಯಾರಿ ಬಿಟ್ರೆ ನಾನು ಕಲಿತ ಎರಡನೆ ಭಾಷೆ ತುಳು. ಅದು ಬಿಟ್ರೆ ಶಾಲೆಯ ಒಂದನೆ ತರಗತಿಯಿಂದ ಕಲಿತದ್ದು ಕನ್ನಡ’’
‘‘ಬ್ಯಾರಿ ಎಂದರೆ ಮುಸ್ಲಿಮರೊಳಗೆ ಇರುವ ಜಾತಿಯೋ...’’
‘‘ಅಲ್ಲ... ಎಲ್ಲ ಜಾತಿ ಧರ್ಮಗಳಲ್ಲಿರುವಂತೆಯೇ ಮುಸ್ಲಿಮರಲ್ಲೂ ಪ್ರಾದೇಶಿಕ ಭಿನ್ನತೆಗಳಿವೆ... ಬ್ಯಾರಿ ಎಂದರೆ ಪ್ರಾದೇಶಿಕ ಭಿನ್ನತೆ. ಮುಖ್ಯವಾಗಿ ಈ ಭಾಷೆಯನ್ನು ಆಡುವವರು ಬರೇ ಮುಸ್ಲಿಮರು ಮಾತ್ರವಲ್ಲ. ಬೋವಿ ಜನಾಂಗ, ಬೆಳ್ಚಡ ಜನಾಂಗದವರೂ ಈ ಭಾಷೆಯನ್ನೇ ಆಡ್ತಾರೆ... ಆದರೆ ಬಹುಸಂಖ್ಯಾತ ಬ್ಯಾರಿಗಳು ಮುಸ್ಲಿಮರು...ಅಮೃತ ಸೋಮೇಶ್ವರರ ಮನೆ ಭಾಷೆಯೂ ಇದೇ ಬ್ಯಾರಿ ಭಾಷೆಗೆ ಸಮೀಪದಲ್ಲಿದೆ. ಒಂದು ರೀತಿಯಲ್ಲಿ ಅವರಾಡುವ ಭಾಷೆಯೂ ಬ್ಯಾರಿಯೇ...’’
ಅವನ್ಯಾವುದೋ ಶಾಕ್‌ನಲ್ಲಿದ್ದಂತೆ ನನ್ನಲ್ಲಿ ಮಾತನಾಡುತ್ತಿದ್ದ.
***
 ನನ್ನ ಶಾಲಾ ಕಾಲದಲ್ಲಿ ‘ಬ್ಯಾರಿ’ ಎನ್ನುವ ಐಡೆಂಟಿಟಿ ನನ್ನ ಪಾಲಿಗೆ ಅವಮಾನವಷ್ಟೇ ತರುತ್ತಿತ್ತು. ಆ ಶಬ್ದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ನನ್ನ ಸಮುದಾಯಕ್ಕೆ ಹಿಡಿದ ಕನ್ನಡಿ ಮಾತ್ರವಾಗಿತ್ತು. ಈ ‘ಬ್ಯಾರಿ’ ಶಬ್ದದಿಂದ ನಾನು ನನ್ನ ಸಮುದಾಯದ ಎಲ್ಲ ತರುಣರು ಬೆನ್ನು ಹಾಕಿ ಓಡುತ್ತಿದ್ದೆವು. ಆಗೆಲ್ಲ ನಮ್ಮನ್ನು ಕಂಡಾಕ್ಷಣ ಇತರ ಹುಡುಗರು ‘‘ದಾನೆಂಬೆ ಬ್ಯಾರಿ(ಏನೋ ಬ್ಯಾರಿ?’’) ಎಂದು ಕರೆಯುತ್ತಿದ್ದರು. ಅಥವಾ ‘‘ಬ್ಯಾರಿ ಬತ್ತೆ(ಬ್ಯಾರಿ ಬಂದ) ಎಂದು ಹೇಳುತ್ತಿದ್ದರು. ನಮಗೋ ಸಿಟ್ಟು ಉಕ್ಕಿ ಬರುತ್ತಿತ್ತು. ‘‘ಇನ್ನೊಮ್ಮೆ ಬ್ಯಾರಿ ಅಂದ್ರೆ ಜಾಗೃತೆ’’ ಎಂದು ಎಚ್ಚರಿಸುತ್ತಿದ್ದೆವು. ಬ್ಯಾರಿ ಎಂದು ಕರೆದದ್ದಕ್ಕಾಗಿಯೇ ನಮ್ಮ ನಡುವೆ ಅದೆಷ್ಟೋ ಗಲಾಟೆಗಳಾಗಿವೆ. ಬ್ಯಾರಿ ಎನ್ನುವುದು ಅಂದು ನಮ್ಮ ಪಾಲಿಗೇ ಅಷ್ಟರ ಮಟ್ಟಿಗೆ ಅಸ್ಪಶ್ಯವಾಗಿತ್ತು.

ಯಾರಾದರೂ ನಿಮ್ಮ ಮನೆ ಭಾಷೆ ಯಾವುದು ಎಂದು ಕೇಳಿದರೆ ‘‘ಮಲಯಾಳಂ’’ ಎನ್ನುತ್ತಿದ್ದೆವು. ಆದರೆ ಮಲಯಾಳಿಗಳು ನಮ್ಮ ಭಾಷೆಯನ್ನು ಮಲಯಾಳಂ ಎಂದು ಒಪ್ಪುತ್ತಿರಲಿಲ್ಲ. ನಾವೇ ಸಣ್ಣದೊಂದು ಟಿಪ್ಪಣಿಯನ್ನೂ ನೀಡುತ್ತಿದ್ದೆವು ‘‘ಮಲಯಾಳಂ ಎಂದರೆ ಮಲಯಾಳಂ ಅಲ್ಲ. ಮಲಯಾಳಂ ಹಾಗೆ ಇರುವ ಭಾಷೆ. ಸ್ವಲ್ಪ ಬೇರೆ’’ ಇಷ್ಟೆಲ್ಲ ಸಮರ್ಥನೆ ನೀಡುವಷ್ಟರಲ್ಲಿ ಸುಸ್ತಾಗುತ್ತಿದ್ದೆವು. ವಿಚಿತ್ರವೆಂದರೆ ನಮ್ಮ ಭಾಷೆಯನ್ನು ನಾವು ‘ನಕ್ಕ್-ನಿಕ್ಕ್’ ಎಂದು ಕರೆಯುತ್ತಿದ್ದೆವು. ‘ನಕ್ಕ್-ನಿಕ್ಕ್’ ಎಂದರೆ ‘ನನಗೆ-ನಿನಗೆ’ ಎಂದರ್ಥ. ನನಗೂ-ನಿನಗೂ ಮಾತ್ರ ಈ ಭಾಷೆ. ಹೊರಗೆ ತುಳು, ಇನ್ನೂ ತುಸು ಹೊರಗೆ ಹೋದರೆ ಕನ್ನಡ ಭಾಷೆಯನ್ನು ಬಳಸುತ್ತಿದ್ದವರು ನಾವು. ಮದರಸದಲ್ಲಿ ಮುಸ್ಲಿಯಾರ್‌ಗಳು ಕೇರಳದಿಂದಲೇ ಬರುತ್ತಿದ್ದರು. ಅವರು ಮಲಯಾಳಂನಲ್ಲಿ ಅರಬಿಯನ್ನು ಕಲಿಸುತ್ತಿದ್ದರು. ಅತ್ತ ಮಲಯಾಳಂನ್ನೂ ಜೀರ್ಣಿಸದೆ, ಇತ್ತ ಅರೆಬಿಕ್‌ನ್ನೂ ಕಲಿಯಲಾಗದೆ ನಾವು ನಡು ನೀರಲ್ಲಿ ಮುಳುಗುತ್ತಿದ್ದೆವು. ಜಮಾಅತ್‌ನ ಲೆಕ್ಕ ಪುಸ್ತಕಗಳೆಲ್ಲ ಕನ್ನಡದಲ್ಲೇ ಇರುತ್ತಿತ್ತು. ಪತ್ರ ವ್ಯವಹಾರಗಳೂ ಕನ್ನಡ ಭಾಷೆಯಲ್ಲೇ ಇರುತ್ತಿತ್ತು. ಬ್ಯಾರಿ ವೌಖಿಕ ಭಾಷೆ. ಅದಕ್ಕೆ ಲಿಪಿ ಇದ್ದಿರಲೇ ಇಲ್ಲ. ಲಿಪಿಯ ಅಗತ್ಯ ಬಿದ್ದರೆ ನಾವು ಕನ್ನಡವನ್ನು ಬಳಸುತ್ತಿದ್ದೆವು.

ಒಂದಾನೊಂದು ಕಾಲದಲ್ಲಿ ನನ್ನಜ್ಜನಜ್ಜನಜ್ಜನವರೆಲ್ಲ ಬ್ಯಾರಿಗಳೆಂದೇ ದರ್ಬಾರು ನಡೆಸಿದವರು. ಆದಂ ಬ್ಯಾರಿ, ಪೊಡಿಯ ಬ್ಯಾರಿ, ಯೂಸುಫ್ ಬ್ಯಾರಿ ಹೀಗೆ ನೂರಾರು ಹೆಸರುವಾಸಿಯಾದ ಬ್ಯಾರಿಗಳು ಆಗಿ ಹೋಗಿದ್ದರು. ಒಂದಾನೊಂದು ಕಾಲದ ಯಾವುದೇ ಕಡತ ಬಿಡಿಸಿ ನೋಡಿದರೂ ಹೆಸರಿನ ಮುಂದೆ ‘ಬ್ಯಾರಿ’ ಎನ್ನುವ ಪದವನ್ನು ಒಂದು ಬಿರುದಿನಂತೆ ಧರಿಸುತ್ತಿದ್ದರು. ಆದರೆ 70ರ ದಶಕದ ನಂತರ ಈ ಸಮುದಾಯಕ್ಕೆ ಅದಾವ ಗ್ರಹಣ ಬಡಿಯಿತೋ ಗೊತ್ತಿಲ್ಲ. ಬ್ಯಾರಿ ಎನ್ನುವ ಶಬ್ದಕ್ಕೆ, ನೆರಳಿಗೆ ಅಂಜುತ್ತಾ ಬದುಕತೊಡಗಿತು. ನಿಧಾನಕ್ಕೆ ಈ ಸಮುದಾಯದಲ್ಲಿ ಬಿ.ಎಂ. ಇದಿನಬ್ಬ, ಬಿ.ಎ. ಮೊಯ್ದಿನ್, ಮುಹಮ್ಮದ್ ಕಮಾಲ್, ಬಿ.ಎ. ಉಮರಬ್ಬ, ಬಿ.ಎ. ಹಸನಬ್ಬ... ಬೊಳುವಾರು, ಫಕೀರ್ ಮೊದಲಾದವರ ಪ್ರವೇಶವಾದಂತೆ ಬ್ಯಾರಿಗಳು ಕನ್ನಡದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡರು. ಇದು ಸಹಜವಾಗಿಯೇ ಬ್ಯಾರಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬತೊಡಗಿತು. ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ಚಳವಳಿ ಆರಂಭವಾಯಿತು. ಬ್ಯಾರಿ ಹೆಸರಲ್ಲಿ ಸಂಘಟನೆ ಹುಟ್ಟಿಕೊಂಡಿತು. ನನ್ನಂತಹ ವಿದ್ಯಾವಂತನಿಗೇ ಇದು ತಮಾಷೆಯಾಗಿ ಕಾಣುತ್ತಿತ್ತು. ಆದರೂ ಒಂದು ರೀತಿ ಹಿತ ಅನ್ನಿಸುತ್ತಿತ್ತು. ಈ ಚಳವಳಿಯ ಪರಿಣಾಮವಾಗಿಯೇ ಮೂರು ವರ್ಷಗಳ ಹಿಂದೆ ಬ್ಯಾರಿ ಅಕಾಡೆಮಿ ದೊರಕಿತು.

ತನ್ನ ಇದ್ದ ಬಿದ್ದ ಶಕ್ತಿಯೊಂದಿಗೆ ಒಂದು ಸಣ್ಣ ಭಾಷೆ, ಸಂಸ್ಕೃತಿ ಸಿನಿಮಾ ರೂಪ ಪಡೆದು ಹಿಂದಿ ಸೇರಿದಂತೆ ರಾಜ್ಯದ ಎಲ್ಲ ಭಾಷೆಗಳಿಗೆ ಸೆಡ್ಡು ಹೊಡೆದು ಸ್ವರ್ಣಕಮಲವನ್ನು ತನ್ನದಾಗಿಸುವುದು ಸಣ್ಣ ವಿಷಯ ಅಲ್ಲವೇ ಅಲ್ಲ. ಅದು ಈ ದೇಶದ ಬಹುಸಂಸ್ಕೃತಿಯನ್ನು ನಾಶಮಾಡಿ ಏಕ ಸಂಸ್ಕೃತಿಯನ್ನು ಪ್ರತಿಷ್ಠಾಪನೆ ಮಾಡುವವರಿಗೆ ಹಾಕಿದ ಸವಾಲು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದ ಸಮುದಾಯಕ್ಕೆ ಸಣ್ಣದೊಂದು ಅವಕಾಶ ಕೊಟ್ಟರೆ ಯಾವ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಉದಾಹರಣೆ.

***
ಬ್ಯಾರಿ ಭಾಷೆಯಲ್ಲಿ ಒಂದು ಚಿತ್ರ ಬರುತ್ತದೆ ಎಂದು ನನಗೆ ಗೊತ್ತಾದುದೇ ಸಾರಾ ಅಬೂಬಕರ್ ಅವರು ದೂರವಾಣಿ ಕರೆ ಮಾಡಿದಾಗ. ‘‘ಅಲ್ತಾಫ್ ಎಂಬಾತ ‘ಬ್ಯಾರಿ’ ಎಂಬ ಚಿತ್ರ ಮಾಡುತ್ತಿದ್ದಾನಂತೆ. ಅದು ನನ್ನ ಕತೆಯನ್ನು ಆಧರಿಸಿದೆ ಎಂದು ಟಿವಿ ಸಂದರ್ಶನವೊಂದರಲ್ಲಿ ಕೇರಳದ ನಟ ಮಮ್ಮುಕೋಯ ಹೇಳಿದ್ದಾರೆ. ಈ ಹಿಂದೆ ಈತ ನನ್ನ ಮನೆಗೆ ಬಂದಿದ್ದ. ನಾನು ಅದರ ಹಕ್ಕನ್ನು ಕೊಡುವುದಿಲ್ಲ ಎಂದೂ ಹೇಳಿದ್ದೆ. ಮುಖ್ಯವಾಗಿ ಅದರ ಹಕ್ಕು ಎನ್‌ಎಫ್‌ಡಿಸಿ ಕೈಯಲ್ಲಿದೆ. ಎರಡನೆಯದಾಗಿ ಅದನ್ನು ಚಿತ್ರ ಮಾಡುವುದಾಗಿ ಜಯಮಾಲ ಅವರು ನನ್ನೊಂದಿಗೆ ಹೇಳಿದ್ದಾರೆ. ಇದೀಗ ನನ್ನ ಅನುಮತಿ ಇಲ್ಲದೆ ಚಿತ್ರೀಕರಣಕ್ಕೆ ಇಳಿದಿದ್ದಾನೆ...’’

ನಾನು ವಿಚಿತ್ರವಾದ ಸಂದಿಗ್ಧಕ್ಕೆ ಬಿದ್ದಿದೆ. ಅವರ ಮಾತು ಕೇಳಿದಾಕ್ಷಣ ನನಗೆ ನೋವಾಗಿರಲಿಲ್ಲ. ಬದಲಿಗೆ ಒಂದು ರೀತಿಯ ಖುಷಿಯಾಗಿತ್ತು. ಅದಕ್ಕೆ ಎರಡು ಮುಖ್ಯ ಕಾರಣಗಳಿತ್ತು. ಒಂದು ಕಾಲದಲ್ಲಿ ಸಾರಾ ಅಬೂಬಕರ್ ಕಾದಂಬರಿ ‘ಚಂದ್ರಗಿರಿ ತೀರದಲ್ಲಿ’’ ಕೃತಿಯನ್ನು ನನ್ನ ಸಮುದಾಯದ ಕೆಲ ಜನರು ತೀವ್ರವಾಗಿ ವಿರೋಧಿಸಿದ್ದರು. ಇದೀಗ ಅವರು ಕದ್ದಾದರೂ ಸರಿ, ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದರಲ್ಲಿ ನನಗೆ ಸಂತೋಷ ಪಡಬೇಕಾದದ್ದು ಬಿಟ್ಟರೆ ಬೇರೇನೂ ಕಂಡಿರಲಿಲ್ಲ. ಇನ್ನೊಂದು ಮುಖ್ಯ ಕಾರಣ, ಬ್ಯಾರಿ ಭಾಷೆಯಲ್ಲಿ ಆತ ಸಿನಿಮಾ ಮಾಡಲು ಹೊರಟಿದ್ದಾನೆ. ಅದೇನೂ ಆತನಿಗೆ ಲಾಭ ಕೊಡುವ ವಿಷಯವಾಗಿರಲಿಲ್ಲ. ಹೆಚ್ಚೆಂದರೆ ಆತನಿಗೆ ನಟಿಸುವ ತೆವಲಿರಬಹುದು. ಅದಕ್ಕಾಗಿ ಆತ ಕನ್ನಡ ಭಾಷೆಯನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ ಬ್ಯಾರಿ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮೊತ್ತ ಮೊದಲ ಬಾರಿಗೆ ಚಿತ್ರ ಮಾಡಲು ಹೊರಟಿದ್ದಾನೆೆ. ಆದರೆ ನೋವು ಕೊಡುವ ವಿಚಾರವೆಂದರೆ, ಆತ ಸಾರಾ ಅಬೂಬಕರ್ ಕತೆಯನ್ನು ಕದ್ದಿದ್ದಾನೆ. ಸಾರಾ ಅಬೂಬಕರ್ ತುಂಬಾ ಸಿಟ್ಟು ಮತ್ತು ನೋವಿನಿಂದ ಮಾತನಾಡುತ್ತಿದ್ದರು. ಯಾವ ರೀತಿಯಲ್ಲಾದರೂ ಅವರನ್ನು ಸಮಾಧಾನಿಸಬಹುದೋ ಎಂದು ದೂರವಾಣಿಯಲ್ಲಿ ಸಣ್ಣದೊಂದು ಪ್ರಯತ್ನ ಮಾಡಿದ್ದೇ...‘‘ಪರವಾಗಿಲ್ಲ ಮೇಡಂ... ಈ ರೀತಿಯಲ್ಲಾದರೂ ನಿಮ್ಮ ಕಾದಂಬರಿ ನಮ್ಮ ಜನರಿಗೆ ತಲುಪುತ್ತಲ್ಲ...’’ ಎಂದಿದ್ದೆ. ‘‘ಅದು ತಲುಪುವುದೆಲ್ಲ ತಲುಪಿಯಾಗಿದೆ. ಇವನು ನನಗೆ ಮೋಸ ಮಾಡಿ ತಲುಪಿಸುವ ಅಗತ್ಯವಿಲ್ಲ...’’ ಎಂದು ಕಿಡಿಯಾಗಿದ್ದರು.
‘‘ಸರಿ, ಅದರ ಬಗ್ಗೆ ನಾನು ವಿಚಾರಿಸಿ ಹೇಳುತ್ತೇನೆ ಮೇಡಂ...’’ ಎಂದಿದ್ದೆ.
ನನಗೆ ಆಗಲೂ ಈಗಲೂ ಈ ಅಲ್ತಾಫ್ ಚೊಕ್ಕಬೆಟ್ಟು ಎಂಬವರ ಬಗ್ಗೆ ಒಂದಕ್ಷರವೂ ಗೊತ್ತಿಲ್ಲ. ವೈಯಕ್ತಿಕವಾಗಿ ಇವರನ್ನು ನೋಡಿಯೂ ಇಲ್ಲ. ಫೋನ್‌ನಲ್ಲಿ ಮಾತನಾಡಿಯೂ ಇಲ್ಲ. ಕೆಲವರಿಂದ ದೊರಕಿದ ಮಾಹಿತಿಯನ್ನು ಸಾರಾ ಅಬೂಬಕರ್ ಅವರಿಗೆ ನೀಡಿದೆ ‘‘ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ.’’
‘‘ಏನು ಮಾಡೋದು...ಪತ್ರಿಕಾಗೋಷ್ಠಿ ಕರೀಲಾ?’’ ಎಂದು ಕೇಳಿದ್ದರು.
‘‘ಬೇಡ... ಇದರಿಂದ ಸುಮ್ಮನೆ ಆ ಚಿತ್ರಕ್ಕೆ ನೀವೇ ಪ್ರಚಾರ ಕೊಟ್ಟ ಹಾಗೆ ಆಗುತ್ತೆ. ಸಾಧ್ಯವಾದರೆ ಇಂಡಸ್ಟ್ರಿಗೆ ಪತ್ರ ಬರೆಯಿರಿ. ಎನ್‌ಎಫ್‌ಡಿಸಿ ಕೈಯಲ್ಲಿರುವ ಹಕ್ಕುಗಳ ಕುರಿತ ದಾಖಲೆಗಳನ್ನು ಜೊತೆಗಿಡಿ. ಜಯಮಾಲ ಸೇರಿದಂತೆ ಉದ್ಯಮದ ಎಲ್ಲ ಗಣ್ಯರಿಗೂ ಪತ್ರ ಬರೆಯಿರಿ. ಜೊತೆಗೆ ಒಳ್ಳೆಯ ನ್ಯಾಯವಾದಿಯನ್ನು ಹಿಡಿದು, ಚಿತ್ರ ಪ್ರದರ್ಶನವಾಗದಂತೆ... ಅದಕ್ಕೆ ತಡೆ ತನ್ನಿ... ಇದರಾಚೆಗೆ ಈ ಬಗ್ಗೆ ಏನೂ ಮಾಡುವುದು ಅಷ್ಟು ಸರಿಯಲ್ಲ’’ ಎಂದಿದ್ದೆ.
ಆಮೇಲೆ ಈ ಬಗ್ಗೆ ಹಲವು ಬಾರಿ ನನ್ನಲ್ಲಿ ಮಾತನಾಡಿದ್ದರು. ನನ್ನ ಸಲಹೆಗಳನ್ನು ಕೊಟ್ಟಿದ್ದೆ. ಇದೇ ಸಂದರ್ಭದಲ್ಲಿ ವಾರ್ತಾಭಾರತಿ ಪತ್ರಿಕೆಯಲ್ಲೂ ಸಾರಾ ಅಬೂಬಕರ್ ಅವರ ನೋವುಗಳನ್ನು ಬರೆದಿದ್ದೆ. ಅವರ ಹೇಳಿಕೆಗಳನ್ನೂ ಹಾಕಿದೆ. ಹಾಗೆಯೇ ಅಲ್ತಾಫ್ ಎನ್ನುವ ಅಪರಿಚಿತ ತರುಣನ ಸಾಧನೆಯ ಕುರಿತಂತೆಯೂ ಜೊತೆ ಜೊತೆಗೆ ಮೆಚ್ಚುಗೆಯ ಮಾತುಗಳನ್ನು ಹಾಕಿದ್ದೆ. ಯಾಕೆಂದರೆ ಆತನ ಸಾಹಸವನ್ನು ಮೆಚ್ಚದೇ ಇರುವುದಕ್ಕೆ ನನ್ನಲ್ಲಿ ಕಾರಣವೇ ಇರಲಿಲ್ಲ. ಬಳಿಕ ತುಂಬಾ ಸಮಯ ಸಾರಾ ಅಬೂಬಕರ್ ಸಂಪರ್ಕದಲ್ಲೇ ಇರಲಿಲ್ಲ. ಚಿತ್ರ ಬಿಡುಗಡೆಯಾಯಿತು. ಆಗಲೂ ಚಿತ್ರದ ಸಾಧನೆಯ ಬಗ್ಗೆ ಮೆಚ್ಚ್ಚುಗೆ ವ್ಯಕ್ತಪಡಿಸಿ ಪುಟ್ಟ ಲೇಖನ ಬರೆದಿದ್ದೆ. ಜೊತೆಗೆ ಅದು ಸಾರಾ ಅಬೂಬಕರ್ ಅವರ ಕದ್ದ ಕತೆ ಎನ್ನುವುದನ್ನೂ ಉಲ್ಲೇಖಿಸಿದ್ದೆ.

***
ಆದರೆ ಇದೇ ಸಂದರ್ಭದಲ್ಲಿ ಒಂದು ಮುಖ್ಯ ಬದಲಾವಣೆಯನ್ನು ನಾವು ಗಮನಿಸಬೇಕು. ಒಂದು ಕಾಲದಲ್ಲಿ ‘ಚಂದ್ರಗಿರಿಯ ತೀರದಲ್ಲಿ’ ಕೃತಿಯನ್ನು ವಿರೋಧಿಸಿ ನನ್ನ ಜನರಲ್ಲಿ ಒಂದು ಸಣ್ಣ ಗುಂಪು ಪ್ರತಿಭಟನೆ ನಡೆಸಿತ್ತು. ಅಭಿವ್ಯಕ್ತಿ ಸ್ವಾತಂತ್ರ ಆಗ ಚರ್ಚೆಗೊಳಗಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಆ ಕೃತಿಯ ಮೂಲಕ ಮುಸ್ಲಿಮ್ ಮಹಿಳೆ ವ್ಯಾಪಕ ಚರ್ಚೆಗೊಳಗಾದಳು.


ಇಂದು ಅದೇ ಸಮುದಾಯ ‘ಚಂದ್ರಗಿರಿಯ ತೀರದಲ್ಲಿ’ ಕೃತಿಯನ್ನು ಸಿನಿಮಾ ಮಾಡಿದೆ. ಲೇಖಕಿ ಒಪ್ಪಿಗೆ ಕೊಡದ ಕಾರಣಕ್ಕಾಗಿ ಅದನ್ನು ಕದ್ದು ಸಿನಿಮಾ ಮಾಡಿದೆ. ಇದು ಆರೋಗ್ಯಕರ ಬದಲಾವಣೆ ಎನ್ನುವುದನ್ನು ನಾವು ಗಮನಿಸಬೇಕು. ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಎತ್ತಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರ ಇದು. ಆ ಕೃತಿಯನ್ನು ಸಮುದಾಯ ಸ್ವೀಕರಿಸುವ ಮನಸ್ಸನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಲೇಖಕಿ ಅದರ ಮೇಲೆ ಹಕ್ಕುಗಳನ್ನು ಸಾಧಿಸುತ್ತಾ, ಅವರನ್ನು ಟೀಕೆ ಮಾಡುವುದು ನನಗೆ ಕಾಲದ ವ್ಯಂಗ್ಯವಾಗಿ ಕಾಣುತ್ತದೆ. ಬ್ಯಾರಿ ಸಿನಿಮಾದ ನಿರ್ದೇಶಕ ಒಂದು ಸಣ್ಣ ಮಾರುಕಟ್ಟೆಯ ಭರವಸೆಯೂ ಇಲ್ಲದೆ ಲಕ್ಷಗಟ್ಟಲೆ ಹಣ ಹೂಡಿ ಆ ಸಿನಿಮಾವನ್ನು ಮಾಡಿದ್ದಾನೆ. ಯಾರೋ ಹೇಳಿದಂತೆ ಆತ ಸಾಲ ಸೋಲದಲ್ಲಿ ಮುಳುಗಿದ್ದಾನೆ. ಯಾವುದೋ ಹುಚ್ಚು, ತೆವಲು, ಆಸೆ, ಕನಸು ಆತನನ್ನು ಆ ಕೃತ್ಯಕ್ಕೆ ಪ್ರೇರೇಪಿಸಿರಬಹುದು. ಸಾರಾ ಅಬೂಬಕರ್ ಹಕ್ಕು ಕೊಡಲಿಲ್ಲವೆಂದು ಅವನು ಕೈ ಚೆಲ್ಲಲಿಲ್ಲ. ಕದ್ದಾದರೂ ಅದನ್ನು ಮಾಡಿಯೇ ತೀರುತ್ತೇನೆ ಎಂದು ಹೊರಟ ಅವನ ಹುಂಬ ಸಾಹಸ ನನಗೆ ತುಂಬಾ ಹಿತವಾಗಿ ಕಾಣಿಸುತ್ತದೆ. (ಒಂದು ವೇಳೆ ಇದಕ್ಕೆ ಸ್ವರ್ಣಕಮಲ ಸಿಗದೇ ಇದ್ದಿದ್ದರೆ ಶಾಶ್ವತವಾಗಿ ಕಸದ ಬುಟ್ಟಿ ಸೇರುತ್ತಿತ್ತೇನೋ. ಯಾಕೆಂದರೆ ಮಂಗಳೂರಿನ ಥಿಯೇಟರ್‌ಗಳಲ್ಲೇ ಈ ಚಿತ್ರ ಎರಡು ವಾರ ಓಡಿಲ್ಲ.) ಇಂತಹ ಕಳವುಗಳು ವ್ಯಾಪಕವಾಗಿ ನಡೆಯಬೇಕಾಗಿದೆ. ಸಾರಾ, ಫಕೀರ್, ಬೊಳುವಾರರಂತಹ ಅಪರೂಪದ ಕತೆಗಾರರ ಕೃತಿಗಳು ಒಂದು ಸಮುದಾಯಕ್ಕೆ ಬೆಳಕು ನೀಡುವ ಕಿಟಕಿಗಳು ಕೂಡ. ಅದು ನನ್ನ ಕಿಟಕಿ. ನನಗೆ ಮನಸು ಬಂದಾಗ ತೆರೆಯುತ್ತೇನೆ, ಮುಚ್ಚುತ್ತೇನೆ ಎನ್ನುವ ಲೇಖಕ ನನಗೆ ಪ್ರಶ್ನಾರ್ಹವಾಗಿ ಕಾಣುತ್ತಾನೆ. ಇಂತಹ ಸಂದರ್ಭದಲ್ಲಿ ಅದನ್ನು ಕದಿಯುವುದನ್ನು ನಾನು ಖಂಡಿತವಾಗಿ ಒಪ್ಪುತ್ತೇನೆ. ಫಕೀರ್, ಕಟ್ಬಾಡಿ ವಿಚಾರಗಳನ್ನು ಕದ್ದಾದರೂ, ಅದನ್ನು ತಲುಪಬೇಕಾದವರಿಗೆ ತಲುಪಿಸಿ ಎನ್ನುತ್ತೇನೆ. ಅನಾರೋಗ್ಯ ಪೀಡಿತ ಜನರಿರುವ ಸಮಾಜದಲ್ಲಿ ಒಬ್ಬ ಒಂದು ಔಷಧವನ್ನು ಕಂಡು ಹಿಡಿದಿದ್ದಾನೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ, ಅದರ ಹಕ್ಕುಗಳು ತನ್ನದು ಮತ್ತು ತಾನು ಬಯಸಿದರೆ ಮಾತ್ರ ಅದನ್ನು ಕೊಡಬಲ್ಲೆ ಎನ್ನುವ ಸಂದರ್ಭದಲ್ಲಿ ಅದನ್ನು ಕದ್ದಾದರೂ ಅಗತ್ಯವಿರುವವರಿಗೆ ತಲುಪಿಸುವುದನ್ನು ಮನುಷ್ಯರೆನಿಸಿಕೊಂಡವರೆಲ್ಲರೂ ಸ್ವಾಗತಿಸುತ್ತಾರೆ ಎಂದು ತಿಳಿದಿದ್ದೇನೆ. ಇಂದು ಫಕೀರ್, ಬೊಳುವಾರು, ಸಾರಾ ಮೊದಲಾದವರ ಕತೆಗಳು ಬ್ಯಾರಿ ಭಾಷೆಯಲ್ಲಿ ನಾಟಕ, ಸಿನಿಮಾ, ಟಿ.ವಿ. ಧಾರಾವಾಹಿಯಾಗಿ ಬರಬೇಕು. ಅದಕ್ಕಾಗಿ ಅವರೊಂದಿಗೆ ಅನುಮತಿಯನ್ನು ಕೇಳಬೇಕು. ಕೊಡದಿದ್ದಲ್ಲಿ ಅವರ ಬೆನ್ನು ಬೀಳಬೇಕು. ಮತ್ತೂ ಕೊಡದಿದ್ದಲ್ಲಿ ಅದನ್ನು ಕದಿಯಬೇಕು.

 ***
ಇದೇ ಸಂದರ್ಭದಲ್ಲಿ ಒಬ್ಬ ಸೃಜನಶೀಲ ಲೇಖಕಿಗೆ ತಕ್ಕುದಲ್ಲದ ಕೆಲವು ಸಾಲುಗಳನ್ನು ಕಳೆದ ವಾರ ಲಂಕೇಶ್ ಪತ್ರಿಕೆಯಲ್ಲಿ ಸಾರಾ ಅಬೂಬಕರ್ ಬರೆದಿದ್ದಾರೆ. ಅದರಲ್ಲಿ ಮುಖ್ಯವಾದುದು ಬ್ಯಾರಿ ಸಾಹಿತ್ಯ ಅಕಾಡೆಮಿ ಒಬ್ಬ ಮುಸ್ಲಿಮನಿಗೆ ಅದರ ಡಿಟಿಪಿ ವರ್ಕ್‌ಗಳನ್ನು ಕೊಡಲಿಲ್ಲ ಎನ್ನುವ ಆರೋಪ. ಮತ್ತು ಅದರ ಹಿಂದೆಯೂ ಹತ್ತು ಹಲವು ಸಂಚುಗಳನ್ನು ಹುಡುಕಲು ಪ್ರಯತ್ನಿಸಿದ್ದಾರೆ.
 ತಿಂಗಳ ಹಿಂದೆ ಬ್ಯಾರಿ ಅಕಾಡೆಮಿ ಒಂದು ಸಮಾರಂಭ ಮಾಡಿತ್ತು. ಅದರಲ್ಲಿ ಸಾರಾ ಅಬೂಬಕರ್ ಭಾಗವಹಿಸಬೇಕಾಗಿತ್ತು. ಕೊನೆಯ ಕ್ಷಣದಲ್ಲಿ ಅವರು ಭಾಗವಹಿಸುವುದಿಲ್ಲ ಎನ್ನುವ ಸುದ್ದಿ ನನಗೆ ಸಿಕ್ಕಿತು. ಸಂಘಟಕರಲ್ಲಿ ‘‘ಸಾರಾ ಅವರು ಯಾಕೆ ಭಾಗವಹಿಸುತ್ತಿಲ್ಲ?’’ ಎಂದು ನಿಷ್ಠುರವಾಗಿ ಕೇಳಿದ್ದೆ. ಆಗ ಅವರು ಹೇಳಿದ ಮಾತು ನನ್ನಲ್ಲಿ ಯಾಕೋ ಮುಜುಗರ ಸೃಷ್ಟಿಸಿತ್ತು. ಯಾಕೋ ನನಗೆ ನನ್ನ ಕುರಿತಂತೆಯೇ ನಾಚಿಕೆಯಾಯಿತು. ‘‘ಸಾರಾ ಅಬೂಬಕರ್ ಫೋನ್ ಮಾಡಿದ್ದರು ‘‘ಈಗ ಅಕಾಡೆಮಿಯ ಜಾಬ್‌ವರ್ಕ್ ನನ್ನ ಮಗನಿಗೆ ಕೊಡುತ್ತಿಲ್ಲ ಯಾಕೆ? ಮಗ ಸಮಾರಂಭಕ್ಕೆ ಹೋಗ್ಬೇಡಾ ಎಂದು ಹೇಳಿದ್ದಾನೆ’’ ಎಂದು ಫೋನಲ್ಲಿ ಹೇಳಿದ್ದಾರೆ ಎಂದರು’’. ಅಕಾಡೆಮಿಯವರ ಈ ಉತ್ತರ ನನಗೆ ನಂಬುವುದಕ್ಕೆ ಕಷ್ಟವಾಯಿತು. ಆದರೆ ಲಂಕೇಶ್‌ನಲ್ಲಿ ಸ್ವತಃ ಅವರೇ ಇದನ್ನು ಬರೆದಾಗ ನಾನು ನಂಬಲೇಬೇಕಾಯಿತು. ಅಕಾಡೆಮಿಯವರು ಇದಕ್ಕೆ ತಮ್ಮದೇ ಆದ ಸ್ಪಷ್ಟೀಕರಣವನ್ನೂ ನೀಡುತ್ತಾರೆ. ‘ಅಕಾಡೆಮಿ ಆಗುವ ಮೊದಲು ನಾವು ಸಾರಾ ಅಬೂಬಕರ್ ಅವರ ಮಗನಿಗೇ ಎಲ್ಲ ಜಾಬ್‌ವರ್ಕ್‌ಗಳನ್ನು ನೀಡುತ್ತಿದ್ದೆವು. ಆದರೆ ಅಕಾಡೆಮಿ ಆದ ಮೇಲೆ ನಮಗೆ ಇಚ್ಛಿಸಿದ ಹಾಗೆ ಮಾಡುವುದಕ್ಕೆ ಸಾಧ್ಯವಿಲ್ಲ. ಯಾವುದೇ ಜಾಬ್‌ವರ್ಕ್‌ಗಳನ್ನು ಕೊಟೇಶನ್ ಕರೆದು ಆ ಮೂಲಕವೇ ಕೊಡಬೇಕಾಗುತ್ತದೆ. ಹಾಗೂ ಪುಸ್ತಕಗಳನ್ನು ಅತ್ಯಂತ ಸುಂದರವಾಗಿ ಮುದ್ರಿಸುವ ಜವಾಬ್ದಾರಿಯೂ ಅಕಾಡೆಮಿಯ ಮೇಲಿರುತ್ತದೆ. ಈಗ ಆಕೃತಿ ಪ್ರಕಾಶನದ ನಾಗೇಶ್ ಕಲ್ಲೂರು ಎಂಬವರಿಗೆ ನೀಡುತ್ತಿದ್ದೇವೆ. ಈವರೆಗೆ ಬಂದ ಎಲ್ಲ ಕೃತಿಗಳನ್ನು ನಮ್ಮ ಅಕಾಡೆಮಿಗೆ ತಕ್ಕುದಾಗಿ ಸುಂದರವಾಗಿ ಮುದ್ರಿಸಿ ಕೊಟ್ಟಿದ್ದಾರೆ. ಇದರಲ್ಲಿ ಬ್ಯಾರಿ ಅಕಾಡೆಮಿ ಎನ್ನುವ ಕಾರಣಕ್ಕಾಗಿ ತನ್ನ ಮಗನಿಗೇ ಕೊಡಬೇಕು, ಮುಸ್ಲಿಮೇತರನಿಗೆ ಕೊಡಬಾರದು ಎನ್ನುವ ಸಾರಾ ಅಬೂಬಕರ್ ಮಾತು ಎಷ್ಟರಮಟ್ಟಿಗೆ ಸರಿ’ ಎಂದು ಅಕಾಡೆಮಿಯ ಸದಸ್ಯರು ಕೇಳುತ್ತಾರೆ.
ಬ್ಯಾರಿ ಅಕಾಡೆಮಿ ಸುಮಾರು 20 ಪುಸ್ತಕಗಳನ್ನು ಈ ಮೂರು ವರ್ಷಗಳ ಅವಧಿಯಲ್ಲಿ ಹೊರ ತಂದಿದೆ. ಮುದ್ರಣ ಮತ್ತು ಮುಖಪುಟಗಳು ಅತ್ಯದ್ಭುತವಾಗಿ ಮೂಡಿ ಬಂದಿವೆ. ನಾಗೇಶ್ ಪ್ರತಿಭಾವಂತ, ಸೃಜನಶೀಲ ತರುಣ. ಅವನ ಪ್ರಾಮಾಣಿಕತೆಯ ಬಗ್ಗೆ ಯಾವ ಆಧಾರವೂ ಇಲ್ಲದೆ ಸಾರಾ ಅಬೂಬಕರ್ ಸಂಶಯಿಸಿದ್ದು ನನಗೆ ನೋವು ತಂದಿದೆ.

***
ಇಷ್ಟೆಲ್ಲ ಹೇಳಿದ ಬಳಿಕವೂ ಬ್ಯಾರಿ ಸಿನಿಮಾ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯನ್ನು ಕದ್ದದ್ದು ಎನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಇದರಲ್ಲಿ ಸಾರಾ ಅಬೂಬಕರ್‌ಗೆ ಅನ್ಯಾಯವಾಗಿರುವುದು ನೂರಕ್ಕೆ ನೂರರಷ್ಟು ನಿಜ. ಆದರೆ ಅದರಿಂದ ಒಂದು ಸಮುದಾಯ ಪಡೆದ ಲಾಭಕ್ಕೆ ಹೋಲಿಸಿದರೆ ಸಾರಾ ಅಬೂಬಕರ್‌ಗೆ ಆದ ಅನ್ಯಾಯವನ್ನು ನಾನು ಸಹಿಸಿಕೊಳ್ಳಬಲ್ಲೆ. ಮತ್ತು ಇಷ್ಟು ದೊಡ್ಡ ಲಾಭವಾಗುವುದಾದರೆ ಆಗಾಗ ಇಂತಹ ಸಣ್ಣ ಪುಟ್ಟ ಅನ್ಯಾಯಗಳು ನಡೆದರೂ ಪರವಾಗಿಲ್ಲ ಅನ್ನಿಸುತ್ತದೆ ನನಗೆ. ಇದೊಂದು ರೀತಿ ಕೆರೆಯ ನೀರು, ಕೆರೆಗೆ ಚೆಲ್ಲಿದಂತೆ. ಸಾರಾ, ಬೊಳುವಾರು, ಫಕೀರ್ ಮೊದಲಾದವರೆಲ್ಲ ಬರೆದದ್ದು ತಮ್ಮ ಸಮುದಾಯದ ಹೆಣ್ಣು ಮಕ್ಕಳ ಕಣ್ಣೀರನ್ನು. ಆ ಕಣ್ಣೀರಿನ ಹಕ್ಕುಗಳು ಯಾರದ್ದು ಎನ್ನುವುದನ್ನು ತೀರ್ಮಾನಿಸಬೇಕಾದವರು ಸೃಜನಶೀಲ ಲೇಖಕರಾದ ನಾವುಗಳಲ್ಲ. ಆ ಸಮುದಾಯದ ಹೆಣ್ಣು ಮಕ್ಕಳೇ ಅದನ್ನು ನಿರ್ಧರಿಸಬೇಕು. ಮತ್ತು ಅತಿ ಬೇಗನೇ ನಿರ್ಧರಿಸುತ್ತಾರೆ ಕೂಡ.

Tuesday, March 13, 2012

ಪರುಷ ಮಣಿ

ಇದು ನಾನು ಬರೆದ ಕವಿತೆಯಲ್ಲ. ಕವಿ, ಪತ್ರಕರ್ತ, ದಿವಂಗತ ಬಿ. ಎಂ. ರಶೀದ್ ಬರೆದ ಕವಿತೆ. ಜನವಾಹಿನಿ ದೈನಿಕದಲ್ಲಿ 1999ರಲ್ಲಿ ಪ್ರಕಟವಾಗಿತ್ತು. ಆತನ 'ಪರುಷಮಣಿ' ಸಮಗ್ರ ಬರಹದಿಂದ ಇದನ್ನು ಆರಿಸಲಾಗಿದೆ.

ನಿನ್ನ ನೆಮ್ಮದಿಗಳಿಗೆ ಅತಿಥಿಯಾಗಿ ಕರೆದು
ಕಣ್ಣು ವಂಚಿಸಿ ನೀನು ನನ್ನ ಜೇಬಿಗೆ ಇಣುಕಿದೆ
ನಾನದನ್ನು ಅರಿತೆನೆಂದು ನಿನಗೆ ತಿಳಿಸಲಿಲ್ಲ
ಕಾಣಿಸುವುದೇನಿದೆಯೆಂದು ಕ್ಷಣ ಚಿಂತಿಸಿದೆ ಮಾತ್ರ...

ಹೆಚ್ಚೆಂದರೆ ಗೆಳೆಯಾ...
'ಪತ್ರಿಕೆ'ಯೊಂದರ ಐಡೆಂಟಿಟಿ ಕಾರ್ಡು
ಪೂರ್ತಿಯಾಗದೇ ಉಳಿದ ಒಂದು ಪದ್ಯ,
ನೂರಾ ನಾಲ್ಕನೆ ಬಾರಿ ಓದಿ ಮುಗಿಸಿದ ಪ್ರೇಯಸಿಯ ಪತ್ರ,
ಮತ್ತು ಮುಖ್ಯವಾಗಿ ನಿನ್ನ ಮುಖಕ್ಕೆ ನಿರಾಸೆಯ ರಾಹು ಕವಿಸುವ
ಎಲ್ಲ ಶೂನ್ಯಕ್ಕೂ ಭಾಷ್ಯವಾಗುವ ಒಂದು ಬ್ಯಾಂಕು ಪಾಸು ಪುಸ್ತಕ!

ಆದರೆ...
ಸ್ವಲ್ಪ ಅದರಾಚೆಯ ಆಳಕ್ಕೆ ಇಳಿಯುವ ಕಣ್ಣುಗಳಿದ್ದರೆ
ನೀನು ಬೆರಗುಗೊಂಡು ಕಾಣಬಹುದಿತ್ತು;
ಸ್ಪರ್ಶಕ್ಕೆ ದಕ್ಕಿದೆಲ್ಲಕ್ಕೂ ಬೆಳಕೆರೆದು
ಹೊಳೆಯಿಸುವ ಒಂದು ಪರುಷ ಮಣಿ!
ಕುಲುಮೆಯಿಂದ ಅದಾಗ ಮೇಲೆದ್ದ ಖಡ್ಗದ ಧಾರೆಯಂತೆ
ಬೆಳಗುವ ಪರುಷ ಮಣಿ!

ಮತ್ತೂ ನಿನಗೆ ನಾನು ತಿಳಿಸಲಿಲ್ಲ,
ಬದುಕಿನ ಎಲ್ಲಾ ಬೆಂಕಿಗಳಿಗೂ ತೆರೆದು
ಪುಟಗೊಂಡ ಈ ಪರುಷ ಮಣಿಯನ್ನೂ ಕೂಡಾ
ಇಲ್ಲಿ ನಡುಗಿಸುವುದೊಂದಿದ್ದರೆ ಗೆಳೆಯಾ,
ಅದು ತಣ್ಣನೆಯ ಬಾಹುಗಳ ಈ ನೆಮ್ಮದಿ!

ಕೇಡನ್ನು ಶಂಕಿಸುವ ಶಕುನದ ಹಕ್ಕಿಯಂತೆ
ರೆಕ್ಕೆ ಬಡಿಯುತ್ತಾ ತಲ್ಲಣಗೊಳಿಸುವ ನೆಮ್ಮದಿ!!
ನಿನ್ನ ಸಕಲ ಸೌಭಾಗ್ಯಕ್ಕೂ ನೀನು ದೇವಸ್ತುತಿ
ಸಲ್ಲಿಸುವಾಗ ನಾನು ಮೊರೆಯಿಡುತ್ತೇನೆ;
'ಇಲ್ಲವಾಗಲು ನನಗೆ ಒಂದೂ ಇಲ್ಲದಿರಲಿ ದೇವರೇ...'
ಆಗ ನನ್ನೆದೆಯ ಪರುಷಮಣಿ,
ಕ್ಯಾಲೆಂಡರಿನಂತೆ ನಿನ್ನ ಮುಖಕ್ಕೆ ತಗುಲಿ ಹಾಕಿದ್ದ
ಆ ಸೂಳೆ ನಗುವಿನ ವಿರುದ್ಧ ದಿಕ್ಕಿಗೆ
ತನ್ನ ದಿವ್ಯ ಬೆಳಕಿನ ತೋರು ಬೆರಳನ್ನು ಹಿರಿಯುತ್ತಾ
ನನಗೆ ನಿರ್ದೇಶಿಸುತ್ತದೆ;
'ಮಗನೇ, ಈ ದಾರಿಯಲ್ಲಿ ನೀನು ನಡೆ
ಇದು ಮಾತ್ರ ನೀನು ನಡೆಯಬಹುದಾದ ದಾರಿ'

Saturday, March 10, 2012

ಕಹಾನಿ: ನೋಡಬಹುದಾದ ಥ್ರಿಲ್ಲರ್ ಚಿತ್ರ

ಒಂದು ಟೈಂಪಾಸ್ ಚಿತ್ರ ವಿಮರ್ಶೆ

 ‘ಕಹಾನಿ’ ನಾಯಕಿ ಪ್ರಧಾನ ಚಿತ್ರ. ಜೊತೆಗೆ ಏಳು ತಿಂಗಳ ಗರ್ಭಿಣಿ ಮಹಿಳೆಯ ಸುತ್ತ ತಿರುಗುವ ಚಿತ್ರ ಇದಾದುದರಿಂದ, ಭಾವನಾತ್ಮಕ ಕತೆಯೊಂದರ ನಿರೀಕ್ಷೆಯಲ್ಲಿ ಚಿತ್ರಮಂದಿರದೊಳಗೆ ಕಾಲಿಡುವ ಪ್ರೇಕ್ಷಕರಿಗೆ ಈ ಚಿತ್ರ ಸಣ್ಣದೊಂದು ಶಾಕ್ ಕೊಡುತ್ತದೆ. ತುಂಬು ಗರ್ಭಿಣಿ ವಿದ್ಯಾ ಬಾಗ್ಚಿ(ವಿದ್ಯಾಬಾಲನ್) ಲಂಡನ್‌ನಿಂದ ಕೊಲ್ಕತಾಕ್ಕೆ ಬಂದಿಳಿಯುವಲ್ಲಿಂದ ಕತೆ ಆರಂಭವಾಗುತ್ತದೆ. ತನ್ನ ಸಂಸ್ಥೆಯ ರೀಸರ್ಚ್ ಕೆಲಸಕ್ಕೆಂದು ಕೊಲ್ಕತಾಗೆ ಹೋಗಿರುವ ಆಕೆಯ ಪತಿ ಅನಿರೀಕ್ಷಿತವಾಗಿ ಕಾಣೆಯಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ತನ್ನ ಪತಿಯನ್ನು ಹುಡುಕುತ್ತಾ ಆಕೆ ಕೊಲ್ಕತಾ ನಗರಕ್ಕೆ ಬಂದಿಳಿಯುತ್ತಾಳೆ. ಏರ್‌ಪೋರ್ಟ್‌ನಿಂದ ಆಕೆ ನೇರವಾಗಿ ಪೊಲೀಸ್ ಸ್ಟೇಷನ್‌ಗೆ ತೆರಳುತ್ತಾಳೆ. ಕತೆ ಇಲ್ಲಿಂದಲೇ ಬಿಚ್ಚಿಕೊಳ್ಳುತ್ತದೆ. ಇಲ್ಲಿ ಆಕೆಯ ನೆರವಿಗೆ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ರಾನಾ(ಪರಂಬ್ರತ ಚಟರ್ಜಿ) ಮುಂದಾಗುತ್ತಾನೆ. ಇವರ ಹುಡುಕಾ
ದ ಪ್ರಯತ್ನ ಆಕೆಯ ಪತಿಯ ಇರವನ್ನು ಇನ್ನಷ್ಟು ನಿಗೂಢವಾಗಿಸುತ್ತಾ ಹೋಗುತ್ತದೆ. ಮುಂದೆ ಹೋದಂತೆ ಆಕೆಯ ಪತಿಯನ್ನೇ ಹೋಲುವ ಇನ್ನೊಬ್ಬನ ಜೊತೆಗೆ ಪ್ರಕರಣ ತಳಕು ಹಾಕುತ್ತದೆ. ಅವನನ್ನು ಹುಡುಕಿದರೆ ತನ್ನ ಪತಿ ಸಿಗುತ್ತಾನೆ ಎನ್ನುವ ಗುರಿಯಿಟ್ಟು ವಿದ್ಯಾ ಬಾಗ್ಚಿ ತನ್ನದೇ ದಾರಿಯಲ್ಲಿ ಅನ್ವೇಷಣೆಗೆ ತೊಡಗುತ್ತಾಳೆ. ಪ್ರೆಡಿಕ್ಟೆಬಲ್ ಕತೆಯೊಂದರ ನಿರೀಕ್ಷೆಯಲ್ಲಿ ಕುಳಿತರನ್ನು ಚಿತ್ರ ನಿಧಾನಕ್ಕೆ ಕೊಲ್ಕತಾದ ನಿಗೂಢತೆಯೊಳಗೆ ಕೊಂಡೊಯ್ಯತೊಡಗುತ್ತದೆ. ಇದೊಂದು ಥ್ರಿಲ್ಲರ್ ಚಿತ್ರವಾಗಿ ಮುಂದೆ ಸಾಗುತ್ತಿರುವುದು ಅರಿವಿಗೆ ಬರುತ್ತದೆ. ಚಿತ್ರದ ಕ್ಲೈಮಾಕ್ಸ್ ನಮ್ಮೆಲ್ಲರ ನಿರೀಕ್ಷೆಯನ್ನೂ ಬುಡಮೇಲೂ ಮಾಡುತ್ತದೆ. ಅಪ್ಪಟ ನಾಟಕೀಯ, ಕಮರ್ಶಿಯಲ್ ಕೊನೆಯೊಂದನ್ನು ನೀಡುವ ಮೂಲಕ ಎಲ್ಲ ವರ್ಗಕ್ಕೂ ಸಲ್ಲುವ ಚಿತ್ರವಾಗಿ ತನ್ನ ‘ಕಹಾನಿ’ಯನ್ನು ನಿರ್ದೇಶಕ ಸುಜೊಯ್ ಘೋಷ್ ಮುಗಿಸಿದ್ದಾರೆ.

ತುಂಬು ಗರ್ಭಿಣಿ ಹೆಣ್ಣು-ಜನನಿಬಿಡ ಕೊಲ್ಕತಾದ ಬದುಕು-ದುರ್ಗಾಪೂಜೆ ಇದನ್ನು ತನ್ನ ಕತೆಗೆ ಒಂದು ರೀತಿಯಲ್ಲಿ ರೂಪಕದಂತೆ ಬಳಸಿದ್ದಾರೆ ನಿರ್ದೇಶಕರು. ಕೊಲ್ಕತಾದ ತುಂಬು ನಗರದ ಬದುಕಿನಲ್ಲಿ ದಾರಿ ಮಾಡಿಕೊಳ್ಳುತ್ತಾ ತನ್ನ ಪತಿಯ ಹುಡುಕಾಟಕ್ಕೆ ತೊಡಗುತ್ತಾಳೆ. ಆ ಹುಡುಕಾಟದ ಜೊತೆಗೆ ಕೊಲ್ಕತಾದ ದೈನಂದಿನ ಬದುಕೂ ಈ ಚಿತ್ರದ ಮೂಲಕ ಹಂತಹಂತವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಚಾಯ್ ವಾಲಾ ಹುಡುಗ, ಲಾಡ್ಜ್ ಮ್ಯಾನೇಜರ್, ಪೊಲೀಸ್ ವ್ಯವಸ್ಥೆ, ರೈಲು ನಿಲ್ದಾಣದ ಜನಜಂಗುಳಿ, ಕ್ರಿಮಿನಲ್‌ಗಳ ಅಡ್ಡೆ ಇವೆಲ್ಲವನ್ನೂ ದಾಟುತ್ತಾ ತನ್ನ ಗುರಿಯೆಡೆಗೆ ಸಾಗುವ ಗರ್ಭಿಣಿ ಮಹಿಳೆಯ ಪಯಣ ನಿಜಕ್ಕೂ ಥ್ರಿಲ್ ಹುಟ್ಟಿಸುತ್ತದೆ. ಆಕೆಯ ಸಮಸ್ಯೆ ನಿಧಾನಕ್ಕೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸುತ್ತಾ ಅದು ವಿವಿಧ ಅಧಿಕಾರಿಗಳು, ರಾಜಕಾರಣಿಗಳ ಬೇರನ್ನೂ ಸಣ್ಣಗೆ ಅಲುಗಾಡಿಸುತ್ತದೆ. ಒಂದು ರೀತಿಯಲ್ಲಿ ಈ ಥ್ರಿಲ್ಲರ್ ಪತ್ತೇದಾರಿಯಂತಹ ಕತೆಯೊಂದನ್ನು ಹೋಲುವ ಕಹಾನಿ ಆರಂಭದಿಂದ ಕೊನೆಯವರೆಗೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.

ಚಿತ್ರದಲ್ಲಿ ನಿರ್ದೇಶಕ ಸುಜೊಯ್ ಘೋಷ್ ಅವರ ಯಶಸ್ಸಿಗೆ ಅವರ ಮೂರು ಆಯ್ಕೆಗಳು ಮುಖ್ಯ ಕಾರಣ. ಒಂದು, ಬಿಗಿಯಾಗಿರುವ ಕತೆ. ಎರಡು, ಪಾತ್ರಧಾರಿಗಳು. ಮೂರು, ಚಿತ್ರದ ಕ್ಲೈಮಾಕ್ಸ್. ಚಿತ್ರದಲ್ಲಿ ವಿದ್ಯಾಬಾಲನ್ ತನ್ನ ಪಾತ್ರವನ್ನು ಅತ್ಯದ್ಭುತವಾಗಿ ನಿರ್ವಹಿಸಿದ್ದಾರೆ. ಒಬ್ಬ ಅಬಲೆ ಹೆಣ್ಣು ನಿಧಾನಕ್ಕೆ ಬೆಳೆಯುತ್ತಾ ಬೆಳೆಯುತ್ತಾ ದುರ್ಗಾ ಪೂಜೆಯ ದಿನ ತನ್ನ ಗುರಿಯನ್ನು ಸಾಧಿಸುವ ಕ್ಲೈಮಾಕ್ಸ್ ಪ್ರೇಕ್ಷಕರ ಎಲ್ಲೂ ಊಹೆಗಳನ್ನು ಬುಡಮೇಲು ಮಾಡುವಲ್ಲಿ ಯಶಸ್ವಿಯಾಗುತ್ತದೆ. ಕೊನೆ ಒಂದು ರೀತಿ ನಾಟಕೀಯವಾಗಿದೆ. ಆದರೆ ಒಂದು ಕಮರ್ಶಿಯಲ್ ಚಿತ್ರಕ್ಕೆ ತಕ್ಕುದಾಗಿದೆ. ಚಿತ್ರದಲ್ಲಿ ಗಮನ ಸೆಳೆಯುವ ಇನ್ನೊಂದು ಪಾತ್ರ ಬಂಗಾಳಿ ನಟ ಪರಂಬ್ರತ ಚಟರ್ಜಿಯವರದು. ಸಬ್‌ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಅತ್ಯಂತ ಹೃದಯಸ್ಪರ್ಶಿಯಾಗಿ ನಟಿಸುತ್ತಾರೆ. ಮುಗ್ಧ, ಸುಂದರ ಮುಖದ ಈ ತರುಣ, ಪಾತ್ರದ ವ್ಯಕ್ತಿತ್ವಕ್ಕೆ ಪೂರಕವಾಗಿದ್ದಾರೆ. ಇನ್ನಾರೂ ಈ ಪಾತ್ರವನ್ನು ನಿರ್ವಹಿಸಲು ಸಾಧ್ಯವಿರಲಿಲ್ಲವೇನೋ ಎನ್ನುವಷ್ಟು ಚೆನ್ನಾಗಿ ಇನ್ಸ್‌ಪೆಕ್ಟರ್ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದ ಯಶಸ್ಸಿಗೆ ಕಾರಣವಾಗುವ ಮೂರನೆಯ ಪಾತ್ರ ಇಂಟೆಲಿಜೆನ್ಸ್ ಅಧಿಕಾರಿ ಖಾನ್. ನವಾಝುದ್ದೀನ್ ಸಿದ್ದೀಖಿ ಈ ಒರಟು ಪಾತ್ರದಲ್ಲಿ ಅಷ್ಟೇ ತೀವ್ರವಾಗಿ ಕಾಣಿಸಿಕೊಳ್ಳುತ್ತಾರೆ. ಗರ್ಭಿಣಿ ಮಹಿಳೆಯೊಂದಿಗಿನ ಈತನ ಮೊದಲ ಮುಖಾಮುಖಿ ಈ ಪಾತ್ರದ ಕುರಿತಂತೆ ಪ್ರೇಕ್ಷಕರಲ್ಲಿ ಪೂರ್ವಾಗ್ರಹವೊಂದನ್ನು ಬಿತ್ತುತ್ತದೆ. ಆದರೆ ನಿಧಾನಕ್ಕೆ ಕತೆ ಮುಂದುವರಿಯುತ್ತಾ ಹೋದ ಹಾಗೆ ಪಾತ್ರ ಇನ್ನಷ್ಟು ಗಟ್ಟಿಯಾಗುತ್ತಾ, ಬೆಳೆಯುತ್ತಾ ಹೋಗುತ್ತದೆ. ಬಹುಶಃ ಚಿತ್ರಕತೆಯ ಹೆಗ್ಗಳಿಕೆಯೇ ಇದು. ಇಲ್ಲಿ ಎಲ್ಲ ಪಾತ್ರಗಳೂ ನಿಂತಲ್ಲಿ ನಿಲ್ಲದೆ, ಕತೆ ಮುಂದುವರಿದ ಹಾಗೆ ಬೆಳೆಯುತ್ತಾ, ತಿರುವುಗಳನ್ನು ಕಾಣುತ್ತಾ ಮುಂದೆ ಸಾಗುವುದು. 


ವಿದ್ಯಾಬಾಲನ್ ಪಾಲಿಗೆ ಇದು ನಿಜಕ್ಕೂ ಒಳ್ಳೆಯ ಹೆರಿಗೆ. ಮಗು ಆರೋಗ್ಯಪೂರ್ಣವಾಗಿದೆ.

Friday, March 9, 2012

ದಿಕ್ಕು

ನಮಾಜ್ ನಿರ್ವಹಿಸುವಾಗ
ಕಾಬದೆಡೆಗೆ ಮುಖ ಮಾಡಿ...
ಮಹಾ ಪಂಡಿತನೊಬ್ಬ ಬೋಧಿಸುತ್ತಿದ್ದ.

ಭಕ್ತನೊಬ್ಬಮುಖ ಮಾಡಿದೆಡೆಗೆ
ಕಾಬಾ ತನ್ನ ದಿಕ್ಕನ್ನು ಬದಲಿಸುವ
ಮಹಾ ಗುಟ್ಟೊಂದನ್ನು
ಅವನು ಯಾವ ಗ್ರಂಥದಲ್ಲೂ
ಓದಿರಲಿಲ್ಲ!

Wednesday, March 7, 2012

ಖಾಲಿ ಹಾಳೆ ಮತ್ತು ಇತರ ಕತೆಗಳು

ಖಾಲಿ ಹಾಳೆ
ಆತ ಮಹಾಕಾವ್ಯವೊಂದನ್ನು ಬರೆದು ವಿಮರ್ಶಕನಿಗೆ ಕೊಟ್ಟು ಹೇಳಿದ...‘‘ಗುರುಗಳೇ ಓದಿ ಅಭಿಪ್ರಾಯ ತಿಳಿಸಿ...’’
ಒಂದು ವಾರ ಬಿಟ್ಟು ಆತ ವಿಮರ್ಶಕನಲ್ಲಿಗೆ ತೆರಳಿ ‘‘ಗುರುಗಳೇ, ನನ್ನ ಕಾವ್ಯದಲ್ಲಿ ನಿಮಗೆ ಯಾವ ಅಧ್ಯಾಯ ಇಷ್ಟವಾಯಿತು’’
ವಿಮರ್ಶಕ ನುಡಿದ ‘‘ಕೃತಿಯ ಕೊನೆಯಲ್ಲಿ ಒಂದು ಖಾಲಿ ಹಾಳೆಯನ್ನು ಉಳಿಸಿದ್ದೀಯಲ್ಲ...ಅದು ನನಗೆ ತುಂಬಾ ಇಷ್ಟವಾಯಿತು...’’

ಆಯಸ್ಸು....
‘‘ಒಂದು ಚಿಟ್ಟೆಯ ಆಯಸ್ಸು ಬರೇ ಒಂದು ವಾರವಂತೆ ಹೌದೆ...?’’
‘‘ಹೌದು. ಮನುಷ್ಯರ ಪಾಲಿಗೆ ಬರೇ ಒಂದು ವಾರ. ಆದರೆ ಚಿಟ್ಟೆಯ ಪಾಲಿಗಲ್ಲ’’

ಬಿತ್ತು
‘‘ಗುರುಗಳೇ ನಮ್ಮ ರಸ್ತೆಯ ಕೊನೆಯಲ್ಲಿರುವ ಪುರಾತನ ಮರವೊಂದು ಬಿತ್ತು...’’
ಖೇದದಿಂದ ನುಡಿದ.
‘‘ಸರಿ ಬಿತ್ತು...’’ ಸಂತ ನಿಶ್ಚಿಂತೆಯಿಂದ ಹೇಳಿದ.
‘‘ಗುರುಗಳೇ ಆ ಬೃಹತ್ ಮರ ಬಿತ್ತು’’ ಮತ್ತೆ ಶಿಷ್ಯ ಆತಂಕದಿಂದ ಒತ್ತಿ ಹೇಳಿದ.
‘‘ಸರಿ ಬಿತ್ತು ಎಂದೆ’’ ಸಂತ ಪುನರುಚ್ಚರಿಸಿದ.

ದರೋಡೆ
ಕುಖ್ಯಾತ ದರೋಡೆಕೋರ.
ಅವನಲ್ಲಿ ಸಂದರ್ಶಕನೊಬ್ಬ ಕೇಳಿದ ‘‘ಮಾಡಬಾರದಿತ್ತು ಅನ್ನಿಸಿದ ಯಾವುದಾದರೂ ಒಂದು ದರೋಡೆಯನ್ನು ನೀನು ಮಾಡಿದ್ದೆಯ?’’
ದರೋಡೆಕೋರ ಒಂದು ಕ್ಷಣ ವೌನವಾದ. ಬಳಿಕ ಹೇಳಿದ ‘‘ಹೌದು. ಅದು ನಾನು ಹತ್ತುವರ್ಷದವನಿದ್ದಾಗ ಮಾಡಿದ ದರೋಡೆ. ಅಮ್ಮ ತನ್ನ ಸಂಚಿಯಲ್ಲಿ ಒಂದಿಷ್ಟು ದುಡ್ಡು ಮಡಗಿ, ಸೊಂಟಕ್ಕೆ ಕಟ್ಟಿ ಮಲಗಿದ್ದಳು. ನಾನು ಅದನ್ನು ಸೊಂಟದಿಂದ ಕತ್ತರಿಸಿ, ದುಡ್ಡನ್ನು ಕದ್ದು ಸಿನಿಮಾ ನೋಡಿ ಮಜಾ ಮಾಡಿ ಬಂದೆ. ಮನೆಗೆ ಬಂದಾಗ ಅಮ್ಮ ಅಳುತ್ತಿದ್ದಳು ‘‘ಅಯ್ಯೋ...ನನ್ನ ಮಗನ ಇಸ್ಕೂಲಿನ ಪೀಸು ಕಟ್ಟುವುದಕ್ಕೆಂದು ಇಟ್ಟ ಹಣವನ್ನು ಯಾರೋ ಕದ್ದು ಬಿಟ್ರಲ್ಲಪ್ಪ....ನನ್ನ ಮಗ ಸಾಲೆಗೆ ಹೋಗದೆ ಬೀದಿ ಪಾಲಾದ್ನಲ್ಲಪ್ಪ...ನನ್ನ ಮಗನ ಬದುಕು ಹಾಳು ಮಾಡಿದೋರು ಹಾಳಾಗಿ ಹೋಗ್ಲಿ...ಸರ್ವನಾಸವಾಗಿ ಹೋಗ್ಲಿ....’ಎಂದು ಶಾಪ ಇಡುತ್ತಿದ್ದಳು’’

ಆಗ್ರಹ
ಅಲ್ಲಿ ಇಲ್ಲಿ ಎಂದು ಸಿಕ್ಕಿದಲ್ಲಿ ಡೇರೆ ಊರಿ ಬದುಕುತ್ತಿದ್ದ ಸಮುದಾಯದ ಜನರು ಅವರು.
ಉಳಿದುಕೊಳ್ಳುವುದಕ್ಕೆ ನೆಲೆಯಿರಲಿಲ್ಲ. ಇಲ್ಲಿಂದ ಎಬ್ಬಿಸಿದರೆ ಅಲ್ಲಿಗೆ. ಅಲ್ಲಿಂದ ಎಬ್ಬಿಸಿದರೆ ಇಲ್ಲಿಗೆ.
ಹೀಗೆ ಬದುಕು ನಡೆಸುತ್ತಿದ್ದರು. ಆದರೆ ಅವರಿಗೆ ಒಂದು ದೊಡ್ಡ ಸಮಸ್ಯೆ ಎದುರಾಯಿತು.
ಒಂದು ದಿನ ಎಲ್ಲರೂ ಸಂಘಟಿತರಾದರು.
ಸರಕಾರದ ಮುಂದೆ ಪ್ರತಿಭಟನೆಗಿಳಿದರು. ಒಕ್ಕೊರಲಲ್ಲಿ ಕೇಳಿದರು ‘‘ನಮ್ಮ ಸಮುದಾಯಕ್ಕೊಂದು ಸ್ಮಶಾನ ಕೊಡಿ’’

ಐದಡಿ ಜಾಗ
ಆತ ಮಸೀದಿಯೊಂದಕ್ಕೆ ಅರ್ಜಿ ಹಾಕಿದ.
‘‘ನನ್ನ ಅಪ್ಪ ಮರಣಕ್ಕೆ ಸಿದ್ಧರಾಗಿದ್ದಾರೆ...ಗೋರಿ ತೋಡುವುದಕ್ಕೆ ಐದಡಿ ಉದ್ದ, ಮೂರು ಅಂಗುಲ ಅಗಲದ ಜಾಗ ಬೇಕಿತ್ತು’’
ಮಸೀದಿಯ ಅಧ್ಯಕ್ಷ ಹೇಳಿದ ‘‘ಇಂಚಿಗೆ 5 ಸಾವಿರ ರೂ. ಕೊಡಬೇಕಾಗುತ್ತದೆ....ಮಸೀದಿಯ ಪಕ್ಕದಲ್ಲಾದರೆ ರೇಟು ಜಾಸ್ತಿ...ಯಾಕೆಂದರೆ ನಮಾಝ್ ಮಾಡುವ ಕುರಾನ್ ಶಬ್ದಗಳು ಗೋರಿಗೆ ಕೇಳಿಸುತ್ತಾ ಇರುತ್ತದೆ...ಮದರಸದ ಪಕದಲ್ಲಿರುವ ಗೋರಿಗಾದರೆ ಅದಕ್ಕಿಂತ ಒಂದು ಚೂರು ಕಡಿಮೆ...ಅಲ್ಲಿ ಮದರಸದ ವಿದ್ಯಾರ್ಥಿಗಳು ಕುರಾನ್ ಓದುವುದು ಕೇಳಿಸುತ್ತಾ ಇರುತ್ತದೆ....ಯಾವುದಾಗಬಹುದು...?’’
‘‘ನನ್ನಲ್ಲಿ ಅಷ್ಟು ದುಡ್ಡಿಲ್ಲ....ಇದು ತುಂಬಾ ಜಾಸ್ತಿಯಾಯಿತು...’’
‘‘ಹಾಗಾದರೆ ನೀನು ಯಾವುದಾದರೂ ರಿಯಲ್ ಎಸ್ಟೇಟ್ ಬ್ರೋಕರ್‌ಗಳ ಹತ್ರ ಹೋಗಿ ನೋಡು...ಕಡಿಮೆಯಲ್ಲಿ ಬೇರೆ ಮಸೀದಿಯಲ್ಲೆಲ್ಲಾದರೂ ಸಿಕ್ಕಿದರೂ ಸಿಕ್ಕೀತು...ಈಗೀಗ ಮನೆ ಕಟ್ಟುವುದಕ್ಕಾದರೂ ಐದು ಸೆನ್ಸ್ ಜಾಗ ಸಿಗುತ್ತದೆ. ಆದರೆ ದಫನ ಮಾಡುವುದಕ್ಕೆ ಜಾಗ ಸಿಗುವುದು ಕಷ್ಟ’’

ಅದೃಷ್ಟ
ಹಕ್ಕಿಗಳದು ಅದೆಷ್ಟು ಅದೃಷ್ಟ.
ಸತ್ತರೆ ಸಂಸ್ಕಾರ ಮಾಡಲು ಪೂಜಾರಿಗಳ ಅಗತ್ಯವೇ ಇಲ್ಲ

ಸಂದರ್ಶನ
ನೀನು
ರೇ೦ಕ್
ಗಳಿಸಿದ್ದಿ ನಿಜ.
ಪ್ರತಿಭಾವಂತನೂ ಹೌದು.
ಪತ್ರಕರ್ತನಾಗಲು ಎಲ್ಲ ಅರ್ಹತೆಯೂ ಇದೆ.
ಆದರೆ...
ನಮ್ಮ ಕಚೇರಿಯ ಮುಖ್ಯ ಜ್ಯೋತಿಷಿಗಳು ಹೇಳುವಂತೆ
ನಿನ್ನ ಜಾತಕ ಈ ಕಚೇರಿಗೆ ಹೊಂದುತ್ತಿಲ್ಲ.
ಆದ್ದರಿಂದ ನಿನಗೆ ಕೆಲಸವಿಲ್ಲ.

Thursday, March 1, 2012

ಗೋರಿಗಳ ತೋಟದ ಕಾವಲುಗಾರರು

ರಸ್ತೆ ಅಗಲೀಕರಣಕ್ಕೆ ಶಿವರಾಮಕಾರಂತರ ಮನೆ ನೆಲಸಮ! ಈ ಕುರಿತಂತೆ ಕಾರಂತರ ಅಭಿಮಾನಿಯೊಬ್ಬರು ಗೋಳಾಡುತ್ತಿದ್ದರು. ದಕ್ಷಿಣ ಕನ್ನಡದಲ್ಲಿ ರಸ್ತೆ ಅಗಲೀಕರಣ, ಸೆಝ್, ಕೈಗಾರಿಕೆ ಇತ್ಯಾದಿಗಳ ಹೆಸರು ಸಹಸ್ರಾರು ಮನೆಗಳು ನೆಲ ಸಮವಾಗಿವೆ. ಹಸಿರು ತೋಟಗಳು ಬುಡ ಕಳಚಿ ಬಿದ್ದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಬಡ ಕುಟುಂಬಗಳು ಬೀದಿ ಪಾಲಾಗಿವೆ. ಶಿವರಾಮಕಾರಂತರ ಮನೆ ನೆಲಸಮವಾಗಿರುವುದು ಇವೆಲ್ಲಕ್ಕಿಂತ ಭಿನ್ನವೆಂದು ಸ್ವೀಕರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಒಂದು ರೀತಿಯಲ್ಲಿ, ಪ್ರದರ್ಶನಕ್ಕಷ್ಟೇ ಇದ್ದ ಈ ಮನೆ ಬಿದ್ದರೂ, ಹೋದರು ದೊಡ್ಡ ನಷ್ಟವೆಂದು ಅನ್ನಿಸುತ್ತಿಲ್ಲ. ಕಾರಂತರ ಸಾಹಿತ್ಯಕ್ಕೂ ಆ ಮನೆಗೂ ಯಾವ ಸಂಬಂಧವನ್ನೂ ಕಲ್ಪಿಸಲು ನನಗೆ ಸಾಧ್ಯವಾಗುತ್ತಿಲ್ಲ.ಕರಾವಳಿಯ ಸಹಸ್ರಾರು ಜನರ ಬದುಕೇ ಈ ಅಭಿವೃದ್ಧಿಯ ಪಾಲಾಗುತ್ತಿರುವಾಗ, ಸ್ಮಾರಕದಂತಿರುವ ಈ ಮನೆ ಹೋದರೆಷ್ಟು ಬಿದ್ದರೆಷ್ಟು? ಎಲ್ಲಿಯವರೆಗೆ ನಮ್ಮ ನಾಡುವೆ ಕಾರಂತರ ಕೃತಿಗಳು, ಚಿಂತನೆಗಳು ಜೀವಂತವಿರುತ್ತದೋ ಅಲ್ಲಿಯವರೆಗೆ ನಾವು ಈ ಸ್ಮಾರಕಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ.

 ತುಂಬಾ ವರ್ಷಗಳ ಹಿಂದೆ ಮೂಡಿಗೆರೆಯ ತೇಜಸ್ವಿ ಅಭಿಮಾನಿಯೊಬ್ಬರು ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡುತ್ತಾ, ತೇಜಸ್ವಿ ಅವರ ಮನೆ, ತೋಟವನ್ನು ಮಾರುತ್ತಿದ್ದಾರಂತೆ ಎಂದು ಆತಂಕದಿಂದ ನುಡಿದರು. ‘ನಾವು ಈ ಕುರಿತಂತೆ ಅವರ ಕುಟುಂಬದ ಜೊತೆಗೆ ವಿಚಾರಿಸಿದೆವು. ಅಂತಹ ಪ್ರಸ್ತಾಪವಿಲ್ಲ ಎಂದು ಅವರು ನಮಗೆ ಸಮಜಾಯಿಶಿ ನೀಡಿದರು. ಅವರ ಸಮಜಾಯಿಶಿ ಕೇಳಿ ಒಂದಿಷ್ಟು ಸಮಾಧಾನವಾಯಿತು ’ ಎಂದೆಲ್ಲ ಬಡಬಡಿಸಿದರು. ಈ ಹಿಂದೆ ಲಂಕೇಶರ ಮಾವಿನ ತೋಟವನ್ನು ಅವರ ಪುತ್ರ ಮಾರಿದ್ದಾರಂತೆ ಎಂದು ಲಂಕೇಶ್ ಅಭಿಮಾನಿಯೊಬ್ಬರು, ಅಘಾತದಂದ ತಮ್ಮ ದುಃಖವನ್ನು ತೋಡಿಕೊಂಡಿದ್ದರು. ‘ನೋಡಿ ಸಾರ್, ಲಂಕೇಶ್‌ಗೆ ಎಂತಹ ಅವಮಾನ ಮಾಡಿ ಬಿಟ್ರು...?’ ಎಂದು ಗೋಳಾಡಿದ್ದರು. ಲಂಕೇಶರ ಅಲೋಚನೆಗಳಿಗೆ, ಚಿಂತನೆಗಳಿಗೆ ದ್ರೋಹವಾದಾಗ ಇದೇ ಮನುಷ್ಯ ಲಂಕೇಶ್ ವಿರೋಧಿಗಳ ಗುಂಪಿನಲ್ಲಿ ನಿಂತು ಮಾತನಾಡಿದ್ದು, ನಂತರದ ವಿಷಯ.
 
 ಒಬ್ಬ ಸಾಹಿತಿಯ ಆಸ್ತಿ, ಮನೆ ಇತ್ಯಾದಿಗಳನ್ನು ಅವರ ಕುಟುಂಬ ಮಾರುವುದನ್ನು ತಡೆಯುವುದರಿಂದ ಸಾಹಿತ್ಯಕ್ಕೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎನ್ನುವುದು ನನಗೆ ಅರ್ಥವಾಗಲಿಲ್ಲ. ತೋಟ, ಆಸ್ತಿ ಇತ್ಯಾದಿಗಳನ್ನು ಮಾಡುವುದು ಸಾಹಿತ್ಯಿಕ ಕಾರಣಗಳಿಗಾಗಿ ಅಲ್ಲ. ಅದರ ಹಿಂದೆ ಆರ್ಥಿಕ ಕಾರಣಗಳಿರುತ್ತವೆ. ತೇಜಸ್ವಿ, ಲಂಕೇಶರು ಪಕ್ಕಾ ವ್ಯವಹಾರಿಗಳೂ ಆಗಿದ್ದರು. ತೇಜಸ್ವಿಯಲ್ಲಿ ಯಾವುದೇ ಭೂಮಾಲಕನಿಗೆ ಸಲ್ಲುವ ಸಿಟ್ಟು, ಸಿಡುಕು, ಅಹಂಕಾರ ಅವರಲ್ಲಿತ್ತು. ಅವರ ‘ಪುಸ್ತಕ ಪ್ರಕಾಶನ’ ಮತ್ತು ಅವರ ತೋಟ ಪಕ್ಕಾ ವ್ಯಾವಹಾರಿಕ ಲಾಭನಷ್ಟಗಳ ಲೆಕ್ಕಾಚಾರದಲ್ಲಿ ರೂಪುಗೊಂಡದ್ದು. ತೇಜಸ್ವಿಯವರ ತೋಟವನ್ನು ಮಾರಬೇಕೋ ಬೇಡವೋ ಎಂದು ತೀರ್ಮಾನಿಸುವವರು ತೇಜಸ್ವಿಯ ನಂತರದ ವಾರಸುದಾರರೇ ಹೊರತು ಸ್ವಯಂಘೋಷಿತ ತೇಜಸ್ವಿ ಅಭಿಮಾನಿಗಳಲ್ಲ. ತನ್ನ ತೋಟದ ವಿಷಯದಲ್ಲಿ ‘ಅಭಿಮಾನಿ’ಗಳೆಂದು ಕರೆಸಿಕೊಂಡವವರು ಮೂಗು ತೂರಿಸುವುದು ತೇಜಿಸ್ವಿಗೆ ಇಷ್ಟವಾಗುವ ವಿಷಯವೂ ಅಲ್ಲ. ನಾವು ಭೂಮಾಲಕ ತೇಜಸ್ವಿ ಮತ್ತು ಸಾಹಿತಿ ತೇಜಸ್ವಿಯನ್ನು ಈ ಸಂದರ್ಭದಲ್ಲಿ ಬೇರೆ ಬೇರೆಯಾಗಿ ನೋಡಲೇ ಬೇಕಾಗುತ್ತದೆ. ತೇಜಸ್ವಿಯ ತೋಟದಲ್ಲಿ ಒಂದು ವೇಳೆ, ಅವರ ಗೋರಿ ಇದ್ದಿದ್ದರೂ ಅದಕ್ಕಾಗಿ ನಾವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿದ್ದಿರಲಿಲ್ಲ. ನಾವು ನಿಜವಾಗಿಯೂ ತೇಜಸ್ವಿಯ ಅಭಿಮಾನಿಗಳಾಗಿದ್ದರೆ, ನಾವು ತೇಜಸ್ವಿಯನ್ನು ಹುಡುಕಬೇಕಾದದ್ದು, ತೇಜಸ್ವಿಯನ್ನು ಉಳಿಸಬೇಕಾದದ್ದು ಅವರ ಚಿಂತನೆ, ಬರಹಗಳು, ಕೃತಿಗಳ ಮೂಲಕ. ತೇಜಸ್ವಿ ಬೆಳೆಸಿದ ವಾಣಿಜ್ಯ ತೋಟದಲ್ಲಿ ಸಾಹಿತ್ಯಾಭಿಮಾನಿಗಳಿಗೇನು ಕೆಲಸ? ಆ ತೋಟದಲ್ಲಿ ತೇಜಸ್ವಿಯ ಬೆವರಿಗಿಂತ ಹೆಚ್ಚು ಅನಾಮಿಕ ಕಾರ್ಮಿಕರ ಬೆವರೇ ಹರಿದಿದೆ. ತೋಟದ ಒಡೆಯ ತೇಜಸ್ವಿಯೇ ಆಗಿರಬಹುದು. ಆದರೆ ಆ ಮರಗಿಡಗಳನ್ನು ಕೇಳಿದರೆ ಅದು ತನಗೆ ನೀರುಣಿಸಿದ ಯಾವನೋ ಕಾರ್ಮಿಕನನ್ನು, ತನಗೆ ನೆರಳು ಕೊಟ್ಟ ಯಾವುದೋ ಕೂಲಿಯವನ ಹೆಸರನ್ನು ಪಿಸುಗುಟ್ಟಬಹುದು. ತೇಜಸ್ವಿ ಎಂಬ ಮಹಾನ್ ಸಾಹಿತಿಯ ಹೆಸರು ಆ ತೋಟದ ಮರಗಿಡಗಳಿಗೆ ಗೊತ್ತಿದೆಯೋ ಇಲ್ಲವೋ ಎನ್ನುವುದನ್ನು ಅರಿತವರು ಯಾರು? ತೇಜಸ್ವಿ ತಮ್ಮ ತೋಟದ ಪ್ರತಿ ಗಿಡಗಳನ್ನು ಪ್ರೀತಿಸಿರಬಹುದು. ಆದರೆ ಯಾರು ಯಾರನ್ನು ಹೆಚ್ಚು ಪ್ರೀತಿಸಿರಬಹುದು? ಆ ಮರಗಿಡಗಳು ತೇಜಸ್ವಿಯನ್ನು ಅಷ್ಟೇ ಪ್ರೀತಿಯಿಂದ ಕಾಣುವುದಕ್ಕೆ ಅವುಗಳ ಬಳಿಯೂ ಒಂದಿಷ್ಟು ಕಾರಣಗಳು ಬೇಡವೇ? ಯಾವ ಕೂಲಿ ಕಾರ್ಮಿಕನ ಬೆರಳ ಸ್ಪರ್ಶದಿಂದ ಆ ಗಿಡಗಳು ಅರಳಿದವೋ, ಯಾವ ರೈತನ ಬೆವರ ಪರಿಮಳದಿಂದ ಗಿಡಗಳು ಚಿಗುರಿದವೋ, ಯಾವ ಕೆಲಸದಾಳು ಸುರಿದ ನೀರಿನಿಂದ ಆ ಗಿಡಗಳು ತಮ್ಮ ದಾಹ ಇಂಗಿಸಿಕೊಡವೋ ಆ ಜನರ ಸ್ಮಾರಕ ಆ ಗಿಡಗಳು. ಅಷ್ಟೇ ಹೊರತು, ಆ ತೋಟ ಯಾವ ಕಾರಣಕ್ಕೂ ತೇಜಸ್ವಿಯ ಸ್ಮಾರಕವಾಗಲಾರದು. ತೇಜಸ್ವಿ ಅದರ ಮಾಲಕರು ಅಷ್ಟೇ. ಸದ್ಯ ತೇಜಸ್ವಿ ಇಲ್ಲ. ಅದರ ವಾರಸುದಾರರು ತೇಜಸ್ವಿ ಕುಟುಂಬ. ಸಹಜವಾಗಿಯೇ ಅದನ್ನು ಮಾರಲು ಹೊರಟಿದ್ದಾರೆ. ಇಲ್ಲಿ ಸಾಹಿತ್ಯ, ಭಾವನೆ ಇತ್ಯಾದಿಗಳ ಪ್ರಶ್ನೆ ಎಲ್ಲಿ ಬಂತು?

ಸಾಹಿತಿ, ಚಿಂತಕನೊಬ್ಬ ಸತ್ತಾಕ್ಷಣ ಅವರು ಬದುಕಿದ ಮನೆ, ತೋಟ ಅವನನ್ನು ಮಣ್ಣು ಮಾಡಿದ ಸ್ಥಳ ಇತ್ಯಾದಿಗಳಲ್ಲಿ ಆತನನ್ನು ಹುಡುಕುವ ಪ್ರಯತ್ನ ನಡೆಸುತ್ತೇವೆ. ಒಂದು ಸಂಸಾರ ಬಾಳಿ ಬದುಕಿ, ಜೀವ ತುಂಬ ಬೇಕಾದ ಮನೆಯನ್ನು ಸಾಹಿತಿಯ ಹೆಸರಿನಲ್ಲಿ ನಾವು ‘ಗೋರಿ’ಯನ್ನಾಗಿ ಪರಿವರ್ತಿಸುತ್ತೇವೆ. ಯಾವ ಸಾಹಿತಿಯೂ ತಾನು ಬದುಕಿ, ಬಾಳಿದ ಮನೆ ಮನುಷ್ಯರಿಲ್ಲದ, ಮಕ್ಕಳ ಚಿಲಿಪಿಲಿಯಿಲ್ಲದ, ನಗು, ಅಳುವಿಲ್ಲದ ಶ್ಮಶಾನವಾಗಲು ಬಯಸುವುದಿಲ್ಲ. ನಾವು ಯಾವ ಕಾರಣಕ್ಕಾಗಿ ಆತ ಬದುಕಿದ ಮನೆಯನ್ನು ನೋಡಬೇಕು. ಒಬ್ಬ ಸಾಹಿತಿಯ ಕುರಿತಂತೆ ನಮಗೆ ನಿಜಕ್ಕೂ ಕಾಳಜಿಯಿದ್ದರೆ, ನಾವು ಉಳಿಸಬೇಕಾದದ್ದು ಆತನ ಚಿಂತನೆಗಳನ್ನು, ಆಲೋಚನೆಗಳನ್ನು ಆತನ ಕೃತಿಗಳನ್ನು, ಸಾಹಿತಿಗಳ ಆಲೋಚನೆ, ಚಿಂತನೆಗಳು, ಆತನ ಸಾಹಿತ್ಯಕ ಕೊಡುಗೆಗಳು ನಮ್ಮ ಕಣ್ಮುಂದೆಯೇ ಇಲ್ಲವಾಗುತ್ತಿರುವಾಗ, ನಾವು ಆತನ ಮನೆ, ಕಕ್ಕಸು, ಬಚ್ಚಲು ಮನೆ, ತೋಟ ಇತ್ಯಾದಿಗಳನ್ನು ಉಳಿಸಿ, ಅದನ್ನು ಸ್ಮಾರಕವಾಗಿಸಿ ಸಾಧಿಸುವುದಾದರೂ ಏನನ್ನು? ಈ ನಾಡನ್ನು ನಾವು ಸಾಹಿತಿಗಳ ಗೋರಿಗಳ ತೋಟವನ್ನಾಗಿಸಲು ಹೊರಟಿದ್ದೇವೆಯೇ? ಎಲ್ಲಿ ಕವಿಯನ್ನು ಜೀವಂತವಾಗಿ ಉಳಿಸಲು ನಮಗೆ ಸಾಧ್ಯವಿತ್ತೋ ಅಲ್ಲಿ ಆತನನ್ನು ಉಳಿಸುವ ಪ್ರಯತ್ನ ಮಾಡದೇ, ಆತನ ಮನೆ, ತೋಟ ಇತ್ಯಾದಿಗಳನ್ನು ಗೋರಿಗಳನ್ನಾಗಿಸಿ ಆರಾಧಿಸಲು ಹೊರಟಿರುವ ನಾವು ಕವಿ, ಸಾಹಿತಿಗಳಿಗೆ ನಿಜಕ್ಕೂ ಗೌರವ ಸಲ್ಲಿಸುತ್ತಿದ್ದೇವೆ ಎಂದೆನಿಸುತ್ತದೆಯೇ?

ತೇಜಸ್ವಿ, ಲಂಕೇಶ್ ಇಲ್ಲದ ಈ ದಿನಗಳ ಕುರಿತಂತೆ ನಾವು ಒಂದಿಷ್ಟು ಯೋಚಿಸೋಣ. ಅವರು ಯಾವ ಶಕ್ತಿಯನ್ನು ವಿರೋಧಿಸುತ್ತಿದ್ದರೋ ಆ ಶಕ್ತಿ ಇಂದು ಕರ್ನಾಟಕದಲ್ಲಿ ವಿಜೃಂಭಿಸುತ್ತಿದೆ. ಬಿಜೆಪಿಯ ವಿರುದ್ಧ ತನ್ನ ಜೀವಮಾನದುದ್ದಕ್ಕೂ ತೇಜಸ್ವಿ ಮಾತನಾಡಿದರು.. ಆದರೆ ಇಂದು ಆಗುತ್ತಿರುವುದೇನು? ತೇಜಸ್ವಿಯ ನೆಲದಲ್ಲಿ ಸಂಘಪರಿವಾರ ತನ್ನ ಹೆಡೆಯನ್ನು ಬಿಚ್ಚಿದೆ. ಲಂಕೇಶ್, ರಾಮ್‌ದಾಸ್, ತೇಜಸ್ವಿ ಇಲ್ಲದ ಈ ದಿನಗಳಲ್ಲಿ ‘ಗಬ್ಬು’ ಸಾಹಿತಿಗಳಿಗೆ ಹುಚ್ಚು ಧೈರ್ಯ ಬಂದಿದೆ. ಕೆ.ವಿ.ತಿರುಮಲೇಶ್, ಸರಜೂಕಾಟ್ಕರ್, ಚಿದಾನಂದ ಮೂರ್ತಿ, ಟಿ.ಎನ್.ಸೀತಾರಾಂ, ಭೈರಪ್ಪ... ಹೀಗೆ... ಪರಸ್ಪರರ ನಡುವಿನ ಪರದೆ ತೆಳುವಾಗಿದೆ. ಇಂತಹ ದಿನಗಳಲ್ಲಿ ನಾವು ತೇಜಸ್ವಿ, ಲಂಕೇಶ್, ಕಾರಂತರ ಬರಹಗಳನ್ನು, ಕೃತಿಗಳನ್ನು ಜೀವಂತವಾಗಿಡಲು ಶ್ರಮಿಸಬೇಕು ಹೊರತು ಅವರ ಗೋರಿಗಳನ್ನಲ್ಲ. ಶಿವರಾಮ ಕಾರಂತರು ಬಾಳಿ ಬದುಕಿದ ಕರಾವಳಿಯ ಇಂದಿನ ಸ್ಥಿತಿ ಹೇಗಿದೆ? ಅಭಿವೃದ್ಧಿ ದಾಪುಗಾಲಿಡುತ್ತಿದೆ. ಪರಿಸರ ಕೆಟ್ಟು ಕೆರಹಿಡಿಯುತ್ತಿದೆ. ಇಂತಹ ವಾತಾವರಣದಲ್ಲಿ ಶಿವರಾಮಕಾರಂತರ ಮನೆ ನೆಲಸಮವಾಗುವುದು ಒಂದು ರೂಪಕದಂತಿದೆ. ಅಷ್ಟೇ.

ನಾವು ಈ ನಾಡಿನಲ್ಲಿ ಸಾಹಿತಿಗಳ, ಕವಿಗಳ, ಚಿಂತಕರ ಗೋರಿಗಳ ತೋಟವನ್ನು ಬೆಳೆಯುವುದು ಬೇಡ. ಅದರ ಕಾವಲುಗಾರರಾಗುವುದು ಬೇಡ. ಕುವೆಂಪು ಬಾಳಿದ ಮನೆಗೂ, ಮಲೆನಾಡಿನ ಒಬ್ಬ ‘ಗುತ್ತಿ’ ಬಾಳಿದ ಮನೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಬರೇ ಕಲ್ಲು ಗೋಡೆಗಳವು. ಈ ನಾಡಿನಲ್ಲಿ ಎಲ್ಲ ಸಾಹಿತಿಗಳ ಸ್ಮಾರಕಗಳು, ಮನೆಗಳು ಬಿದ್ದು ಹೋಗಲಿ. ಉಳಿವುದಿದ್ದರೆ ಅವರ ಆಲೋಚನೆಗಳು, ಚಿಂತನೆಗಳು, ಬರಹಗಳು, ಕೃತಿಗಳು ಉಳಿಯಲಿ. ಅವುಗಳ ತಳಹದಿಯಲ್ಲಿ ಸುಭದ್ರ ಕನ್ನಡ ನಾಡು ರೂಪು ಪಡೆಯಲಿ. ಕವಿ, ಸಾಹಿತಿಗಳ ಗೋರಿಗಳ ಮೇಲೆ ಈ ನಾಡನ್ನು ಕಟ್ಟುವ ಆಲೋಚನೆಗಳನ್ನು ಬಿಟ್ಟು ಬಿಡೋಣ. ಒಂದು ವೇಳೆ ಒಬ್ಬ ಕವಿಯ ಗೋರಿ, ಮನೆ, ತೋಟ ಮಹತ್ವವನ್ನು ಪಡೆಯುತ್ತದೆಯೆಂದಾದರೆ ಆ ಮಹತ್ವ ಆ ಕವಿಯ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿ. ಅದರ ಮಹತ್ವವನ್ನು ನಿರ್ಧರಿಸುವ ಸ್ವಾತಂತ್ಯ ಅವರಿಗೆ ಮಾತ್ರ ಇರಲಿ.