Tuesday, June 30, 2015

ಪ್ರೇಮ ಎನ್ನುವ ವಿಸ್ಮಯ!

ಈ ಜಗತ್ತಿನ ಅತ್ಯಂತ ವಿಸ್ಮಯ ಯಾವುದು? ಎಂಬ ಪ್ರಶ್ನೆಗೆ ನಿಸ್ಸಂಶಯವಾಗಿ ಉತ್ತರಿಸಬಹುದು, ಅದು ಪ್ರೇಮ!
ದೇವರ ಎಲ್ಲಾ ಸೃಷ್ಟಿಗಳೂ ಅರ್ಥಪೂರ್ಣತೆಯನ್ನು ಪಡೆದುಕೊಳ್ಳುವುದು ಪ್ರೇಮದಿಂದ. ಕಡಲನ್ನು ಸೇರಲು ತಹತಹಿಸುತ್ತಾ ಓಡುವ ನದಿಗಳು, ನದಿಗಳನ್ನು ಸೇರಲು ತಹತಹಿಸುವ ತೊರೆಗಳು, ಮುಗಿಲ ಮೋಡವಾಗಲು ಹಂಬಲಿಸುವ ಕಡಲು, ಭೂಮಿಯನ್ನು ಸೇರಲು ತವಕಿಸುವ ಮಳೆ...ಈ ಎಲ್ಲ ಪ್ರಕ್ರಿಯೆಗಳು ಪ್ರೇಮಕ್ಕೆ ರೂಪಕಗಳಾಗಿವೆ. ಮರಗಿಡಗಳು  ಪರಸ್ಪರ ಪ್ರೇಮದ ಕಾರಣದಿಂದಲೇ ಈ ಭೂಮಿಯ ಮೇಲೆ ಹರಡಿಕೊಂಡವು. ಜೊತೆ ಜೊತೆಗೇ ಕೀಟಗಳು, ಪಕ್ಷಿಗಳು, ಪ್ರಾಣಿಗಳು,ಡೈನಾಸರ್‌ಗಳು...ಅಂತಿಮವಾಗಿ ಮನುಷ್ಯ...ಹೀಗೆ ಭೂಮಿಯ ವ್ಯಾಖ್ಯಾನ ವಿಸ್ತಾರವಾಗುವುದಕ್ಕೆ ಕಾರಣವಾದದ್ದು ಪ್ರೇಮ. ಪ್ರೇಮ ಎಲ್ಲಿದೆ? ಕೆಲವರು ಎದೆಯನ್ನು ಮುಟ್ಟಿಕೊಳ್ಳುತ್ತಾರೆ. ಮನಸ್ಸು, ಬುದ್ಧಿ, ಮೆದುಳು ಹೀಗೆ ಬಗೆ ಬಗೆಯ ರೂಪದಲ್ಲಿ ಅದು ಬಚ್ಚಿಟ್ಟುಕೊಂಡಿದೆ ಎನ್ನುತ್ತಾರೆ. ರಕ್ತ, ಮಾಂಸದಲ್ಲೇ ಅದು ಹರಿಯುತ್ತಿದೆ ಎನ್ನುವವರೂ ಇದ್ದಾರೆ. ಆದರೆ ಎಲ್ಲ ಅಂಗಗಳನ್ನು ಮುಟ್ಟಿ ಸ್ಪಷ್ಟಪಡಿಸಿಕೊಳ್ಳುವಂತೆ ಪ್ರೀತಿಯನ್ನು ಸ್ಪಷ್ಟಪಡಿಸುವುದು ಸಾಧ್ಯವಿಲ್ಲ. ಇನ್ನೊಂದು ಜೀವವನ್ನು ಪ್ರೀತಿಸಬೇಕು ಎಂದು ನಮಗೆ ಅನ್ನಿಸುವ ಕಾರಣಗಳು ಯಾವುವು? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಈವರೆಗೆ ದೊರಕಿಲ್ಲವಾದುದರಿಂದಲೇ ಪ್ರೀತಿ ಬಗೆ ಬಗೆಯಲ್ಲಿ ವ್ಯಾಖ್ಯಾನಗೊಳ್ಳುತ್ತಲೇ ಇದೆ. 

ಮನುಷ್ಯ  ತನ್ನ ವಿಜ್ಞಾನ, ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃತಕವಾಗಿ ನೂರಾರು ವಸ್ತುಗಳನ್ನು ಸೃಷ್ಟಿಸಿದ್ದಾನೆ. ಆದರೆ ಅವನ ಸೃಷ್ಟಿ ಪರಸ್ಪರ ಪ್ರೀತಿಸಲಾರವು. ಒಂದು ಫ್ರಿಜ್ಜು ಇನ್ನೊಂದು ಪ್ರಿಜ್ಜಿನ ಜೊತೆಗೆ ಪ್ರೀತಿಗೊಳಗಾಗಿ ಮರಿ ಫ್ರಿಜ್ಜೊಂದನ್ನು ಸೃಷ್ಟಿಸಲು ಅವುಗಳಿಗೆ ಸಾಧ್ಯವಿಲ್ಲ. ಒಂದು ರೋಬೊಟ್ ಇನ್ನೊಂದು ರೋಬೊಟ್‌ನ್ನು ಪ್ರೀತಿಸಿ ಮಗದೊಂದು ಮರಿ ರೋಬಟ್‌ನ್ನು ಸೃಷ್ಟಿಸಲಾರದು. ಒಂದು ಕಣ್ಣನ್ನು ಮಾದರಿಯಾಗಿಟ್ಟುಕೊಂಡು ಮನುಷ್ಯ ಶತಶತಮಾನಗಳಿಂದ ಸಂಶೋಧನೆ ನಡೆಸಿ ಕ್ಯಾಮರಾವೊಂದನ್ನು ಸೃಷ್ಟಿಸಿದ. ಅವನ ಜೀವನವೆಲ್ಲವನ್ನೂ ಸವೆಸಿದರೂ ಒಂದು ಕಣ್ಣನ್ನು ಸರಿಗಟ್ಟುವ ಕ್ಯಾಮರಾವನ್ನು ಸೃಷ್ಟಿಸಲಾರ. ಇದೇ ಸಂದರ್ಭದಲ್ಲಿ ಇಬ್ಬರು ಪ್ರೇಮಿಗಳು ಪ್ರೇಮಿಸುವ ಐದು ನಿಮಿಷದ ಗಳಿಗೆಯಲ್ಲಿ ಕಣ್ಣು ಮಾತ್ರವಲ್ಲ, ಮೆದುಳು, ಹೃದಯಗಳೆನ್ನುವ ಅತ್ಯದ್ಭುತ ತಂತ್ರಜ್ಞಾನಕ್ಕೆ ವೇದಿಕೆ ನಿರ್ಮಾಣವಾಗಿ ಬಿಡುತ್ತದೆ. ತಾನು ಪ್ರೀತಿಸುವ ಗಳಿಗೆಯಲ್ಲಿ ತಾನೊಂದು ಸೃಷ್ಟಿಕ್ರಿಯೆಯಲ್ಲಿ ತೊಡಗಿದ್ದೇನೆ ಎನ್ನುವ ಅರಿವೂ ಇಲ್ಲದ ಹೊತ್ತಿನಲ್ಲಿ, ಅವನು ಅತ್ಯದ್ಭುತವಾದ ಸೃಷ್ಟಿಯೊಂದಕ್ಕೆ ಕಾರಣನಾಗುತ್ತಾನೆ. ಇದಕ್ಕೆ ಅವನು ವಿಜ್ಞಾನಿಯಾಗಬೇಕಾಗಿಲ್ಲ, ತಂತ್ರಜ್ಞಾನಿಯಾಗಬೇಕಾಗಿಲ್ಲ, ಚಿಂತಕನಾಗಬೇಕಾಗಿಲ್ಲ. ಬರೇ ಪ್ರೇಮಿಯಾಗಿರಬೇಕು ಅಷ್ಟೇ. ಪ್ರೇಮವೆನ್ನುವುದು ಸೃಷ್ಟಿಕ್ರಿಯೆಯ ಭಾಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿಯೇ ಗಂಡು ಮತ್ತು ಹೆಣ್ಣು ಕೂಡಿದಾಗಲೇ ಪ್ರೇಮವೆನ್ನುವುದು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುವುದು. ಆದರೆ ಇದೇ ಸಂದರ್ಭದಲ್ಲಿ ಇವಷ್ಟೇ ಸತ್ಯ ಆಗಬೇಕಾಗಿಲ್ಲ. ಕೆಲವೊಮ್ಮೆ ಪ್ರಕೃತಿಗೆ ತನಗೆ ಎಲ್ಲವೂ ಗೊತ್ತು ಎನ್ನುವುದನ್ನು ತೋರಿಸುವ ಚಪಲ ಇರುತ್ತದೆ. ಮನುಷ್ಯನಿಗೆ ಅವನೊಳಗಿರುವ ಸಾಧನಗಳ ಮಹತ್ವ ಅರಿವು ಮಾಡುವ ಉದ್ದೇಶ ಇದರ ಹಿಂದಿರಬಹುದು. ಕಣ್ಣನ್ನೇ ತೆಗೆದುಕೊಳ್ಳೋಣ. ಕಣ್ಣಿನ ಅರಿವನ್ನು ಮನುಷ್ಯನಿಗೆ ಅರಿವು ಮಾಡಿಕೊಡಲೋ ಎಂಬಂತೆ ಕೆಲವೊಮ್ಮೆ ಹುಟ್ಟುಕುರುಡರನ್ನು ಪ್ರಕೃತಿ ಸೃಷ್ಟಿಸಿ ಬಿಡತ್ತೆ. ಮನುಷ್ಯನೆಂದ ಮೇಲೆ ಅವನಿಗೆ ಕಣ್ಣಿರತ್ತೆ. ಇವನು "ಹುಟ್ಟುಕುರುಡ" ಎಂದ ಮೇಲೆ ಮನುಷ್ಯನಿಗೆ ಹೊರತಾದವನು ಎಂದು ಅವನ ಮೇಲೆ ತಪ್ಪನ್ನು ಹೊರಿಸುವಂತಿಲ್ಲ. ಎಲ್ಲರಿಗೂ ಕಾಣುವ ಜಗತ್ತು ಅವನಿಗೆ ಕಾಣುವುದಿಲ್ಲ ಎನ್ನುವುದನ್ನು, ಪ್ರಕೃತಿಗೆ ವಿರೋಧವಾದುದು, ಅವನು ಪ್ರಕೃತಿ ವಿರೋಧಿ ಎಂದು ಜರೆಯುವುದಕ್ಕಾಗುವುದಿಲ್ಲ. ಸಮಾಜದಿಂದ ದೂರವಿಡುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ ಸ್ವತಃ ಪ್ರಕೃತಿಯೇ ಆತನನ್ನು ತನ್ನದೊಂದು ಭಾಗವಾಗಿ ಸೃಷ್ಟಿಸಿದೆ. ಉಳಿದ ಮನುಷ್ಯರೆಲ್ಲರೂ ಅವನನ್ನು ಒಪ್ಪಿಕೊಂಡು ಅವನ ಬದುಕನ್ನು ಗೌರವಿಸಬೇಕಾಗುತ್ತದೆ. ಗೌರವಿಸುತ್ತಾರೆ. ಅದುವೂ ಪ್ರೀತಿಯ ಒಂದುಭಾಗವೇ ಆಗಿದೆ. 

ಮನುಷ್ಯ ಮೂಲತಃ ಒಂದು ತಲೆಯವನು. ಆದರೆ ಪ್ರಕೃತಿ ತನಗೆ ಎರಡು ತಲೆಯವನನ್ನು ಸೃಷ್ಟಿಸಲೂ ಗೊತ್ತು ಎನ್ನುವ ಕಾರಣಕ್ಕಾಗಿ, ಅಪರೂಪಕ್ಕೆ ಸಯಾಮಿಗಳು, ಎರಡು ತಲೆಯ ಜೀವಿಗಳನ್ನು ಸೃಷ್ಟಿಸಿ ಬಿಡುತ್ತದೆ. ಹಿಂದೆ ಹೀಗೆ ಹುಟ್ಟಿದವರನ್ನು ದೆವ್ವ ಎಂಬ ಭೀತಿಯಿಂದ ಕೊಂದು ಬಿಟ್ಟದ್ದೂ ಇದೆ. ಮನುಷ್ಯ ತನಗೆ ಸಾಧ್ಯವಿದ್ದಷ್ಟೂ ಮಿತಿಯಲ್ಲಿ ಆ ಮಗುವಿಗೆ ಬದುಕುವುದಕ್ಕೆ ನೆರವಾಗುತ್ತಾನೆ.ನೆರವಾಗಬೇಕು. ಅದು ಮನುಷ್ಯನ ಕರ್ತವ್ಯ ಕೂಡ.
    
ಇದೇ ಸಂದರ್ಭದಲ್ಲಿ ಇನ್ನೊಂದು ಸೃಷ್ಟಿ ವೈಚಿತ್ರವೊಂದು ನಮಗೆ ಸವಾಲಾಗಿದೆ. ಅದು ಮತ್ತೆ ಪ್ರೇಮಕ್ಕೆ ಸಂಬಂಧಪಟ್ಟದ್ದು. ಗಂಡು-ಹೆಣ್ಣು ಪ್ರೀತಿಸಿದರಷ್ಟೇ ಪ್ರೇಮವೇ? ಎಂದು ಏಕಾಏಕಿ ಪ್ರಕೃತಿ ಪ್ರಶ್ನಿಸುತ್ತದೆ. ತನ್ನ ಸೃಷ್ಟಿ ಪ್ರಕ್ರಿಯೆಯನ್ನು ಅದು ತಾನೇ ಪ್ರಶ್ನಿಸಿ ಕೊಳ್ಳುತ್ತದೆ. ಆಗ ಗೇ ಅಥವಾ ಸಲಿಂಗ ಪ್ರೇಮಿ ಎನ್ನುವ ನತದೃಷ್ಟ ಹುಟ್ಟುತ್ತಾನೆ. ಪ್ರೇಮವೆನ್ನುವುದು 'ಸೃಷ್ಟಿಕ್ರಿಯೆ'ಗೆ ಪೂರಕವಾದದ್ದು. ಮತ್ತು ಅದು ಆಡಂ ಮತ್ತು ಈವ್ ನಡುವೆ ನಡೆದಾಗಷ್ಟೇ ಅರ್ಥಪೂರ್ಣವಾಗುತ್ತದೆ ಎನ್ನುವುದನ್ನು ಕಲಿಸಿರುವುದು ಪ್ರಕೃತಿಯೇ. ಆದರೆ ಈಗ ಗೇಗಳನ್ನು ಸೃಷ್ಟಿಸಿ ಆ ಪ್ರಕ್ರಿಯೆಯನ್ನು ಪರೀಕ್ಷೆಗೊಡ್ಡುತ್ತಿರುವುದೂ ಪ್ರಕೃತಿಯೇ. ಇಲ್ಲಿ ಮನುಷ್ಯನ ಸ್ವಯಂಕೃತಾಪರಾಧವಿಲ್ಲ. ಹೇಗೆ ಮನುಷ್ಯ ಕಣ್ಣನ್ನು ಸ್ವಯಂ ಸೃಷ್ಟಿಸಿಕೊಳ್ಳಲಾರನೋ, ಹಾಗೆಯೇ ಪ್ರೇಮವನ್ನು ಕೂಡ ಸ್ವಯಂ ಸೃಷ್ಟಿಸಿಕೊಳ್ಳಲಾರ. ಪ್ರೇಮವೆನ್ನುವುದು ಬೋಧನೆಯಲ್ಲ. ಕಾನೂನು, ಕಾಯ್ದೆಗಳಿಂದ ಹುಟ್ಟುವಂತಹದಲ್ಲ. ಅದು ದೇಹದೊಳಗಿನ ಸಹಜಾತಿ ಸಹಜ ಅನುಭೂತಿ. ನೀನು ಇಂಥವರನ್ನು ಪ್ರೇಮಿಸಬೇಕು ಎಂದು ಕಲಿಸುವುದು ಮನುಷ್ಯನಲ್ಲ. ಒಬ್ಬ ಗೇ ಆಗಿರುವ ಗಂಡು ಅಥವಾ ಲೆಸ್ಬಿಯನ್ ಆಗಿರುವ ಹೆಣ್ಣು ಪರಸ್ಪರ ಪ್ರೇಮಿಸಲು ಹೊರಡುವುದು ಪ್ರಕೃತಿಯ ಲಯಕ್ಕೆ ಮೀರಿದ್ದಾಗಿರಬಹುದು. ಸೃಷ್ಟಿ ಕ್ರಿಯೆಯನ್ನು ವಿರೋಧಿಸುವಂತಹದ್ದೂ ಆಗಿರಬಹುದು. ಆದರೆ ಆ ಪ್ರಕೃತಿ ವಿರೋಧಿ ಗುಣವನ್ನು ಅವನು ಅಥವಾ ಅವಳಲ್ಲಿ ಬಿತ್ತಿರುವುದು ಸ್ವತಹ ಪ್ರಕೃತಿಯೇ ಆಗಿದೆ. ಸಲಿಂಗ ಪ್ರೇಮಿಯ ಮುಂದೆ ದೇವತೆಯಂತಹ ತರುಣಿಯೊಬ್ಬಳು ಹಾದು ಹೋದರೂ ಅವನು ಅದಕ್ಕೆ ಪ್ರೇಮ ರೂಪದಲ್ಲಿ ಪ್ರತಿಕ್ರಿಯಿಸಲಾರ. ಇದೇ ಸಂದರ್ಭದಲ್ಲಿ ಒಬ್ಬ ಗಂಡು ಅವನ ಮುಂದೆ ಹಾದು ಹೋದಾಕ್ಷಣ ಅವನೆದೆಯಲ್ಲಿ ಬಿರುಗಾಳಿಯೇ ಏಳಬಹುದು. ಅವನ ಬದುಕು ಚಂಡಮಾರುತಕ್ಕೆ ಸಿಕ್ಕ ದೋಣಿಯಂತಾಗಬಹುದು. ಆ ಒಬ್ಬ ಹುಡುಗನನ್ನು ನೋಡಿದಾಕ್ಷಣ ಇನ್ನೊಬ್ಬ ಹುಡುಗನ ಎದೆಯಲ್ಲಿ ಪ್ರೇಮವನ್ನು ಬಿತ್ತಿದ್ದು ಯಾರು? ಈಗ ಅವನೇನು ಮಾಡಬೇಕು? ಒಂದು ವೇಳೆ ಅವನು ಎದುರಾದ ಹುಡುಗನೂ ಗೇ ಆಗಿದ್ದು ಇಬ್ಬರೂ ಪರಸ್ಪರ ಪ್ರೇಮಿಸತೊಡಗಿದರೆ ಅದು ಯಾರ ತಪ್ಪು? ಭಾರತದ ಕಾನೂನು ಅದನ್ನು ತಪ್ಪು ಎಂದು ಹೇಳುತ್ತದೆ. ಅದು ಪ್ರಕೃತಿ ವಿರೋಧಿಯಾದುದು ಎಂದು ವ್ಯಾಖ್ಯಾನಿಸುತ್ತದೆ. ಪರಸ್ಪರ ಪ್ರೇಮಿಸಿದ ಕಾರಣಕ್ಕಾಗಿಯೇ ಇಬ್ಬರು ಹುಡುಗರು ಜೈಲು ಸೇರಬೇಕಾದಂತಹ ವಾತಾವರಣ ನಾಗರಿಕತೆಗೆ ಒಪ್ಪುವಂತಹದೆ? ಎನ್ನುವ ಪ್ರಶ್ನೆ ಪ್ರೇಮಕ್ಕೆ ಒಂದು ಅಗ್ನಿಪರೀಕ್ಷೆಯೇ ಸರಿ. 
ನಾಗರಿಕ ಕಾನೂನು ಹೇಳುತ್ತದೆ, ''ಒಬ್ಬ ಹುಡುಗ ಇನ್ನೊಂದು ಹುಡುಗಿಯನ್ನೇ ಪ್ರೀತಿಸಬೇಕು. ಹುಡುಗ ಇನ್ನೊಬ್ಬ ಹುಡುಗನನ್ನು ಪ್ರೀತಿಸುವುದು ಅಪರಾಧ".  ಸರಿ, ಅದನ್ನು ಒಪ್ಪಿ ಒಬ್ಬ ಹುಡುಗ ಇನ್ನೊಂದು ಹುಡುಗಿಯನ್ನು ಪ್ರೀತಿಸುವುದಕ್ಕೆ ಸಾಧ್ಯವೋ ಎಂದು ಶ್ರಮಿಸಬಹುದು. ಪ್ರೇಮವೆನ್ನುವುದು ಶ್ರಮದಿಂದ ಹುಟ್ಟುವಂತಹದಲ್ಲ ಎನ್ನುವುದು ಗೊತ್ತಿದ್ದೂ ಅದಕ್ಕಾಗಿ ಆತ ಶ್ರಮಿಸಬಹುದು. ಬಾಬಾ ರಾಮ್‌ದೇವ್‌ನಂತಹ ಬಾಬಗಳ  ನಕಲಿ ಕಂಪನಿಗಳಿಂದ ನಕಲಿ ಔಷಧಿಗಳನ್ನು ಸೇವಿಸಿ ಮೋಸ ಹೋಗಬಹುದು. ಕಟ್ಟಕಡೆಗೆ ವಿಫಲನಾಗಿ ಹತಾಶನಾಗಬಹುದು. ಒಬ್ಬ ಹುಡುಗನ ಜೊತೆಗಿನ ತನ್ನ ಪ್ರೀತಿಯನ್ನು ಅದುಮಿಕ್ಕಲು ಅವನು ಬದುಕಿನುದ್ದಕ್ಕೂ ತನ್ನೊಳಗಿನ ಪ್ರೇಮದ ಅನುಭೂತಿಯ ಜೊತೆಗೆ ಹೋರಾಡಬೇಕಾಗಬಹುದು. ಒಬ್ಬ ತನಗೆ ಕುರಿ ಇಷ್ಟ, ಕೋಳಿ ಇಷ್ಟ, ತರಕಾರಿ ಇಷ್ಟ ಎಂದು ಇಷ್ಟಪಟ್ಟಂತಲ್ಲ ಪ್ರೇಮ ಎನ್ನುವುದು. ತಾನು ಸಲಿಂಗ ಪ್ರೇಮಿ ಎನ್ನುವುದನ್ನು ನಿರ್ಧರಿಸುವುದು ಸ್ವಯಂ ಅವನಲ್ಲ. ಕಾನೂನು ರೂಪಿಸುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಗೇ ಎಂದರೆ ಏನು? ಅವನ ಮನಸ್ಸು ಹೇಗಿರುತ್ತದೆ? ಮತ್ತು ಅದಕ್ಕಿರುವ ಹಿನ್ನೆಲೆ ಏನು? ಎನ್ನುವುದನ್ನು ಒಬ್ಬ ಮನಶ್ಶಾಸ್ತ್ರಜ್ಞನಾಗಿ ಅರ್ಥ ಮಾಡಿಕೊಳ್ಳದೇ 'ಗೇ' ಗಳ ವಿರುದ್ಧ ಕಾನೂನನ್ನು ರೂಪಿಸಿದರೆ, ಅದು ಪರೋಕ್ಷವಾಗಿ ಮನುಷ್ಯನೊಬ್ಬ ಪ್ರೇಮಿಸಿದ ಕಾರಣಕ್ಕೆ ಜೈಲು ಪಾಲಾಗುವ ಪರಿಸರವನ್ನು ನಿರ್ಮಾಣ ಮಾಡಿ ಬಿಡುತ್ತದೆ.

    ನಾನಿಲ್ಲಿ ಬೈ ಸೆಕ್ಷುಯಲ್ ಬಗ್ಗೆ ಚರ್ಚಿಸುತ್ತಿಲ್ಲ. ಪೂರ್ತಿ ಗೇ ಆದವನ ಸಂಕಟಗಳು ಹೇಗಿರಬಹುದು ಎನ್ನುವುದನ್ನು ಮಾತ್ರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಬೈ ಸೆಕ್ಷುವಲ್‌ಗೆ ಒಬ್ಬ ಹುಡುಗಿಯ ಜೊತೆಗೂ ಪ್ರೀತಿಸುವ ಅವಕಾಶ ಇರುತ್ತದೆ. ಅಂತವನಿಗೆ ಕನಿಷ್ಟ ಒಬ್ಬ ಹುಡುಗಿಯ ಜೊತೆಗೂ ಕಾಮ-ಪ್ರೇಮ ಯಾವುದಾದರೊಂದು ಹೆಸರಲ್ಲಿ ಬದುಕುವ ಅವಕಾಶವಿರುತ್ತದೆ. ಆದರೆ ಒಬ್ಬ ಪೂರ್ಣ 'ಗೇ' ಒಬ್ಬನ ಸಂಕಟ ಭಿನ್ನವಾದುದು.ಆತ ತನ್ನ ನೆರೆಯ ಹುಡುಗನನ್ನೇ ಪ್ರೀತಿಸುತ್ತಿರಬಹುದು. ತಾನು ಪ್ರೀತಿಸಿದವನೂ ಗೇ ಆಗಿದ್ದರೆ ಅದು ಅವನ ಅದಷ್ಟ. ಆದರೆ ತಾನು ಪ್ರೀತಿಸಿದ ನೆರೆಯ ಹುಡುಗ 'ಗೇ' ಅಲ್ಲದೇ ಇದ್ದರೆ,ಬದುಕಿನುದ್ದಕ್ಕೂ ತನ್ನ ಪ್ರೀತಿಯನ್ನು ಮನದಲ್ಲೇ ಇಟ್ಟುಕೊಂಡು ಅವನೊಂದಿಗೆ ಒಡನಾಡಬೇಕಾಗುತ್ತದೆ.ಸಾಧಾರಣವಾಗಿ ಅಸಂಖ್ಯ ಗೇಗಳು ಹೀಗೆಯೇ ಬದುಕುತ್ತಿರುತ್ತಾರೆ.ಒಂದು ಅಶಾಂತ್ಮ ಆತ್ಮದಂತೆ. ತಾನು ಇಷ್ಟಪಟ್ಟವನ ಜೊತೆಗೆ ಬದುಕಲೂ ಆಗದೆ, ಸಮಾಜದಲ್ಲಿ ನಾಗರಿಕರ ವೇಷದಲ್ಲಿರುವವರಿಂದ ಲೈಂಗಿಕವಾಗಿ ಶೋಷಣೆಗೊಳಗಾಗುವ 'ಗೇ'ಗಳೂ ಇದ್ದಾರೆ. ಒಂದು ವೇಳೆ ಎದುರಿನವನೂ ಗೇ ಆಗಿರಬಹುದು.ಆದರೆ ಅದನ್ನು ವಿಚಾರಿಸಿ ಪರಸ್ಪರ ಹಂಚಿಕೊಳ್ಳುವಷ್ಟು ದೊಡ್ಡ ಹೃದಯದ ಸಮಾಜ ನಮ್ಮದಲ್ಲ. ಯಾವುದೋ ಅದಷ್ಟಕ್ಕ್ಕೆ ಒಬ್ಬ ಗೇಗೆ ಪ್ರೀತಿಸುವ ಇನ್ನೊಬ್ಬ ಗೇ ದೊರಕಬಹುದು.ಅವರಿಬ್ಬರು ತಮ್ಮ ಬದುಕನ್ನು,ಪ್ರೀತಿಯನ್ನು ಹಂಚಿಕೊಳ್ಳಬಹುದು. ಅದೂ ಸಮಾಜದಿಂದ ಗುಟ್ಟಾಗಿ. ಆದರೆ ವಿಪರ್ಯಾಸ ಗಮನಿಸಿ. ಒಂದು ವೇಳೆ ಯಾರಾದರೂ ಅವರ ಮೇಲೆ ದೂರು ಕೊಟ್ಟದ್ದೇ ಆದಲ್ಲಿ ಪ್ರೀತಿಸಿದ ಕಾರಣಕ್ಕಾಗಿ ಅವರು ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗಬಹುದು.


   ಹಾಗಾದರೆ ಸಮಾಜ ಗೇಗಳಿಗೆ ಏನನ್ನು ನಿರ್ದೇಶಿಸುತ್ತದೆ? ಇಬ್ಬರು ಹುಡುಗರು ಪ್ರೀತಿಸುವುದು ಅಪರಾಧ ಎಂದು ಹೇಳುತ್ತದೆ. ಸರಿ. ಹಾಗಾದರೆ ಒಬ್ಬ ಗೇಗೆ ತನ್ನ ಬದುಕಿನುದ್ದಕ್ಕೂ ಪ್ರೀತಿಸುವ ಅವಕಾಶವೇ ಇಲ್ಲವೆ? ನೀನು ಹುಡುಗಿಯನ್ನು ಪ್ರೀತಿಸು ಎನ್ನುತ್ತದೆ ನಮ್ಮ ಕಾನೂನು, ಸಮಾಜ. ಆದರೆ ಯಾವ ಹುಡುಗಿಯೂ ಅವನ ಮನದಲ್ಲಿ ನವಿರುಭಾವನೆಗಳನ್ನೇ ಹುಟ್ಟಿಸುತ್ತಿಲ್ಲವೆ!? ಹಾಗಾದರೆ ನೀನು ಷಂಡ ಇರಬೇಕು ಎನುತ್ತದೆ ಸಮಾಜ.

ಆದರೆ ಗೇ ಷಂಡನಲ್ಲ. ಅದುವೇ ಅವನ ಸಮಸ್ಯೆ. ಒಬ್ಬ ಷಂಡ ಇಲ್ಲಿ ಯಾವ ಸಮಸ್ಯೆ,ಬಿಕ್ಕಟ್ಟಿಲ್ಲದೆ ಬದುಕಬಲ್ಲ.ಆದರೆ ಗೇ ಹಾಗೆ ಬದುಕುವುದಕ್ಕೆ ಸಾಧ್ಯವಿಲ್ಲ.ಯಾಕೆಂದರೆ,ಅವನಿಗೆ ಪ್ರೀತಿಸುವುದು ಗೊತ್ತು. ಯಾರನ್ನು ನೋಡಿದಾಗ ಅವನ ಎದೆಯಲ್ಲಿ ನವಿರು ಭಾವನೆ ಹುಟ್ಟುತ್ತದೆಯೋ ಅವನನ್ನು ಮಾತ್ರ ಪ್ರೀತಿಸುವುದಕ್ಕೆ ಗೊತ್ತು. ಕಾನೂನು ಹೇಳಿದವನನ್ನು ಪ್ರೀತಿಸುವುದು ಅಸಾಧ್ಯ.ನಿಜಕ್ಕೂ ಇಂಥವರನ್ನು ಪ್ರೀತಿಸಿ ಎಂದು ಕಾನೂನು ನಿರ್ದೇಶಿಸುವುದೇ ಪ್ರಕೃತಿ ವಿರೋಧವಾದುದು. ಈ ದೇಶದಲ್ಲಿ ಗೇ ಗಳನ್ನು ಬೆಂಬಲಿಸೋದು ಎಂದರೆ, ಅಂಥಹ ಪ್ರೇಮಗಳಿಗೆ ಉತ್ತೇಜನ ನೀಡೋದು ಎಂಬ ತಪ್ಪು ಕಲ್ಪನೆ ಇದೆ. ಕುರುಡರನ್ನು ಬೆಂಬಲಿಸೋದು ಎಂದರೆ ಅದರರ್ಥ ಕುರುಡುತನ ಸರಿ ಎಂದಲ್ಲ. ಎಲ್ಲರೂ ಕುರುಡರಾಗಿ ಹುಟ್ಟಲಿ ಎಂಬ ಹಂಬಲಿಕೆಯೂ ಅಲ್ಲ. ಅವರಿಗೆ ಅವರ ಸ್ಥಿತಿಯಲ್ಲಿ ಅತ್ಯುತ್ತಮವಾಗಿ ಬದುಕಲು ಅವಕಾಶ ಕಲ್ಪಿಸಿ ಕೊಡೋದು ಇದರ ಉದ್ದೇಶ. ಇಲ್ಲಿ ಯಾರು ಗೇ ಪ್ರೇಮವನ್ನು, ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿಲ್ಲ. ಬದಲಿಗೆ ಅವರು ಇರುವ ಸ್ಥಿತಿಯಲ್ಲಿ ಅವರಿಗೆ ಪರ್ಯಾಯ ದಾರಿಯನ್ನು ಸಮಾಜ ಹುಡುಕಿ ಕೊಡುವವರೆಗೆ ಅವರ ಹಕ್ಕುಗಳನ್ನು ಗೌರವಿಸೋದು ನಮ್ಮ ಕರ್ತವ್ಯ. ಇದೆ ಸಂದರ್ಭದಲ್ಲಿ ಪುರುಷ-ಪುರುಷರ ನಡುವೆ ಅಥವಾ ಹೆಣ್ಣು-ಹೆಣ್ಣಿನ ನಡುವೆ ಮದುವೆ ಸಂಬಂಧ ಎಲ್ಲಿಯವರೆಗೆ ಉಳಿದುಕೊಳ್ಳುತ್ತದೆ ಎನ್ನುವ ಅನುಮಾನ ಉಳಿದೇ ಇದೆ. ಪ್ರಕೃತಿ ಸರ್ವ ರೀತಿ ಪೂರಕವಾಗಿದ್ದು ನಡೆಯುವ ಗಂಡು- ಹೆಣ್ಣಿನ ಮದುವೆಯೇ ಉಳಿಯೋದಿಲ್ಲ. ಹೀಗಿರುವಾಗ ಗೆ ಗಳ ನಡುವಿನ ಮದುವೆ ಮುರಿದು ಬೀಳಲು ಹೆಚ್ಚು ಸಮಯ ಬೇಕಾಗಿಲ್ಲ. ಮಕ್ಕಳು, ಕುಟುಂಬ ಎಂದು ಅವರ ಸಂಬಂಧಗಳನ್ನು ಬಿಗಿ ಗೊಳಿಸುವ ಪ್ರಾಕೃತಿಕ ಸಹಾಯ, ಕೊಡುಗೆ   ಅವರಿಗಿಲ್ಲವಾದುದರಿಂದ, ಸಮಾಜದ ವಿರೋಧವೂ ಇರೋದರಿಂದ ಮದುವೆ ಎನ್ನುವ ವ್ಯವಸ್ಥೆಯೊಳಗೆ ಕಾಲಿಡುವಾಗ ಅವರು ಸಾವಿರ ಬಾರಿ ಯೋಚಿಸ ಬೇಕಾಗುತ್ತದೆ. ಅದು ಅಂತಿಮವಾಗಿ ಅವರಿಗೇ ಉರುಳಾಗುವ ಸಾಧ್ಯತೆಯೂ ಇದೆ. 

ಸಮಾಜ ನೆನಪಿಟ್ಟುಕೊಳ್ಳ ಬೇಕಾದ ಇನ್ನೊಂದು ವಿಷಯವಿದೆ.  ಗೇ ಗಳ ಬಗ್ಗೆ ಭಾರೀ ತಪ್ಪು ಕಲ್ಪನೆಗಳಿವೆ.ಗೇ ಹಕ್ಕುಗಳಿಗಾಗಿ ಬೀದಿಯಲ್ಲಿ  ವಿಚಿತ್ರ ವೇಷಭೂಣಗಳೊಂದಿಗೆ ಒಯ್ಯಾರದಿಂದ ಹೆಜ್ಜೆ ಇಡುವವರನ್ನೇ ಗೇಗಳೆಂದು ತಿಳಿದುಕೊಂಡವರಿದ್ದಾರೆ. ಮಂಗಳ ಮುಖಿಯರನ್ನು ಗೇ ಗಳು ಎಂದು ತಪ್ಪು ಭಾವಿಸುವವರೂ ನಮ್ಮ ನಡುವೆ ಇದ್ದಾರೆ. ಗೇಗಳು ಎಲ್ಲರಂತೆ ಸಹಜವಾಗಿರುವ ಮನುಷ್ಯರು. ನಿಮ್ಮ ಮನೆಯಲ್ಲಿ ಅತ್ಯಂತ ದೃಢ ಮೈ ಕಟ್ಟಿರುವ,ಗಂಭೀರವಾದ ಅಜಾನುಭಾಹು ಅಣ್ಣ ನೇ ಗೇ ಆಗಿರುವ ಸಾಧ್ಯತೆಯನ್ನು ಅಲ್ಲಗಳೆಯುವ ಆಗಿಲ್ಲ. ಅಥವಾ ಆರೋಗ್ಯಪೂರ್ಣವಾಗಿರುವ, ಮೋಹಕವಾಗಿರುವ ಒಬ್ಬ ಸುಂದರ ಹೆಣ್ಣು ಲೆಸ್ಬಿಯನ್ ಆಗಿರುವ ಸಾಧ್ಯತೆಗಳಿರುತ್ತವೆ.


ಗೇ ಯನ್ನು ಗುರುತಿಸುವುದು ಇನ್ನೊಬ್ಬ ಗೇ ಗೆ ಮಾತ್ರ ಸಾಧ್ಯ. ನಾವು ಅವನನ್ನು ಊಹಿಸಿ, ಕಲ್ಪಿಸಿ, ಟೀಕಿಸ ಬಲ್ಲೆವು. ಅಸಹ್ಯಪಟ್ಟುಕೊಳ್ಳಬಲ್ಲೆವು. ಆದರೆ ಅಂತಿಮವಾಗಿ ಒಬ್ಬ ಗೇ ಯ ಒಳಗಿನ ಸುಳಿಗಳನ್ನು ಕಾಣಬಲ್ಲವನು ಇನ್ನೊಬ್ಬ ಗೇ ಮಾತ್ರ. ಪ್ರಕೃತಿ ಸಹಜವಾಗಿ ಬದುಕುತ್ತಿದ್ದೇವೆ ಎಂಬ ದುರಹಂಕಾರಿಗಳು, ಯಾವಾಗ ಇದನ್ನು ಅರ್ಥ ಮಾಡಿಕೊಳ್ಳುತಾರೋ ಆಗ ಅವರು ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಪ್ರೇಮವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಗೇಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಮತ್ತು ಗೌರವಿಸಲೂ ಶುರು ಮಾಡುತ್ತಾರೆ. ಗೆ ಪ್ರೇಮ ಸಂಬಂಧ ಪ್ರಕೃತಿಯ ಹಲವು ವಿಸ್ಮಯಗಳಲ್ಲಿ ಒಂದು ಎನ್ನೋದನ್ನು ವಿನೀತವಾಗಿ ಒಪ್ಪಿಕೊಳ್ಳುತ್ತಾರೆ.