ಒಂದು ಐತಿಹಾಸಿಕ ಉದ್ಯಾನವನವನ್ನು ಶ್ಮಶಾನ ಮಾಡಿದ ಹೆಗ್ಗಳಿಕೆ ನಿಜಕ್ಕೂ ಮಹಾರಾಷ್ಟ್ರ ಸರಕಾರದ್ದು. 1925ರಲ್ಲಿ ಬ್ರಿಟಿಷರ ಕಾಲದಲ್ಲಿ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಿರ್ಮಿಸಿದ ಈ ಶಿವಾಜಿ ಪಾರ್ಕ್‌ನಲ್ಲಿ ಬಾಳಾ ಠಾಕ್ರೆಯ ಅಂತ್ಯಕ್ರಿಯೆ ನಡೆಸಲು ಅನುಮತಿಯನ್ನು ನೀಡುವ ಮೂಲಕ, ತಾನೆಂತಹ ತಪ್ಪು ಮಾಡಿದ್ದೇನೆ ಎನ್ನುವುದು ಸರಕಾರಕ್ಕೆ ಈಗಲಾದರೂ ಮನವರಿಕೆಯಾಗಿರಬಹುದು. ಠಾಕ್ರೆ ಅಂತ್ಯಕ್ರಿಯೆ ನಡೆದ ಕೆಲವೇ ದಿನಗಳಲ್ಲಿ, ‘ಅಂತ್ಯಕ್ರಿಯೆ’ ನಡೆದ ಸ್ಥಳದ ಮೇಲೆ ಮಹಾರಾಷ್ಟ್ರದ ಶಿವಸೇನೆ ಪುಂಡರು ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ಅಷ್ಟೇ ಅಲ್ಲ, ಆ ಸ್ಥಳ ನಮಗೆ ‘ಅಯೋಧ್ಯೆ’ಯಷ್ಟೇ ಪವಿತ್ರ. ಅಂತ್ಯಕ್ರಿಯೆ ಸ್ಥಳದಲ್ಲಿ ನಿರ್ಮಿಸಿರುವ ರಚನೆಯನ್ನು ಶಿವಸೇನೆ ತೆರವುಗೊಳಿಸುವುದಿಲ್ಲ ಎಂದು ಸಂಜಯ್ ರಾವತ್ ಗುಡುಗಿದ್ದಾರೆ. ಈ ಮೂಲಕ, ಭವಿಷ್ಯದಲ್ಲಿ ಮುಂಬೈಯೊಳಗೆ ವಿವಾದಿತ ಅಯೋಧ್ಯೆಯೊಂದನ್ನು ಸೃಷ್ಟಿಸುವ ಸಂದೇಶವನ್ನೂ ನೀಡಿದ್ದಾರೆ. ಅತ್ಯಂತ ವಿಷಾದನೀಯ ಸಂಗತಿಯೊಂದನ್ನು ಈ ಸಂದರ್ಭದಲ್ಲಿ ನಾವು ನೆನಪು ಮಾಡಿಕೊಳ್ಳಬೇಕಾಗಿದೆ. ಈ ಹಿಂದೆ ಡಾ. ಬಿ. ಆರ್. ಅಂಬೇಡ್ಕರ್ ಅವರು ನಿಧನರಾದಾಗ ಇದೇ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯ ಕ್ರಿಯೆ ನಡೆಸಲು ಅನುಮತಿ ಬೇಡಲಾಗಿತ್ತು. ಆದರೆ ಅಂದಿನ ಸರಕಾರ ಅದಕ್ಕೆ ಅನುಮತಿ ನೀಡಲಿಲ್ಲ. ಈ ದೇಶದ ತುಳಿಯಲ್ಪಟ್ಟ ಒಂದು ದೊಡ್ಡ ಸಮುದಾಯದ ಆತ್ಮಾಭಿಮಾನವನ್ನು ಎಚ್ಚರಿಸಿದ, ಅವರನ್ನು ತುಳಿದ ಮಂದಿಯಲ್ಲಿ ಪಾಪಪ್ರಜ್ಞೆಯನ್ನು ಬಿತ್ತಿ, ಅವರನ್ನೂ ಉನ್ನತಿಗೇರಿಸಿದ ಅಂಬೇಡ್ಕರ್‌ಗೆ ಸಿಗದ ಅವಕಾಶ, ಹಿಂಸೆಯ ತಳಹದಿಯಲ್ಲಿ ರಾಜಕೀಯ ನಡೆಸುತ್ತಾ, ಭಾಷೆ, ಧರ್ಮದ ಹೆಸರಲ್ಲಿ ದ್ವೇಷವನ್ನು ಬಿತ್ತಿ ರಾಜಕೀಯ ಪಕ್ಷವನ್ನು ಕಟ್ಟಿದ ನಾಯಕನಿಗೆ ಸಿಕ್ಕಿತು. ಇದೀಗ ಶಿವಾಜಿ ಪಾರ್ಕ್‌ನಲ್ಲಿ ಬಾಳಾಠಾಕ್ರೆಯ ಸ್ಮಾರಕವನ್ನು ನಿರ್ಮಿಸಲು ಪ್ರಯತ್ನ ನಡೆಯುತ್ತಿದೆ. ಈ ಶಿವಾಜಿ ಪಾರ್ಕ್‌ನಲ್ಲಿ ಈ ನೆಲದ ನಿಜವಾದ ಹೋರಾಟಗಾರ, ಬಂಡಾಯಗಾರ ಶಿವಾಜಿಯ ಪ್ರತಿಮೆಯಿದೆ. ಒಂದು ವೇಳೆ, ಠಾಕ್ರೆಯ ಪ್ರತಿಮೆ ಇದಕ್ಕೆ ಸ್ಪರ್ಧೆ ನೀಡಿದರೆ, ಶಿವಾಜಿಗೆ ಮಾಡುವ ಅತಿ ದೊಡ್ಡ ಅವಮಾನ.
ಶಿವಾಜಿಯ ವ್ಯಕ್ತಿತ್ವವನ್ನು ವಿರೂಪಗೊಳಿಸಿ, ಆತನನ್ನು ತನ್ನ ರಾಜಕೀಯ ಅಜೆಂಡಾಗಳಿಗೆ ಬಳಿಸಿದ ಹೆಗ್ಗಳಿಕೆ ಬಾಳಾಠಾಕ್ರೆಯದು. ಶಿವಾಜಿ ಪಾರ್ಕ್‌ನಲ್ಲಿ ಯಾಕೆ ಬಾಳಾಠಾಕ್ರೆಗೆ ಅವಕಾಶ ನೀಡಬಾರದು ಎನ್ನುವುದಕ್ಕೆ ನಾವೊಮ್ಮೆ ಶಿವಾಜಿಯ ಬದುಕಿನ ಪುಟಗಳನ್ನು ಹಿಂದಕ್ಕೆ ಬಿಡಿಸಿದರೆ ಸಾಕು, ತಿಳಿದು ಬಿಡುತ್ತದೆ. ಬಾಳಾಠಾಕ್ರೆ ಮಾತ್ರವಲ್ಲ, ಇಡೀ ಸಂಘಪರಿವಾರ ಶಿವಾಜಿಯ ವ್ಯಕ್ತಿತ್ವಕ್ಕೆ ಮಾಡಿದ ಅನ್ಯಾಯ ಬಯಲಾಗಿ ಬಿಡುತ್ತದೆ. ಇಂದು ಈ ದೇಶದ ಹೊಸತಲೆಮಾರಿಗೆ ಶಿವಾಜಿಯೆಂದರೆ, ಮೊಗಲರ ವಿರುದ್ಧ, ಮುಸ್ಲಿಮರ ವಿರುದ್ಧ ಹೋರಾಡಿದ ಒಬ್ಬ ಹಿಂದೂ ಸಾಮ್ರಾಟ ಮಾತ್ರ. ಇದು ಸಂಘಪರಿವಾರ ಮತ್ತು ಠಾಕ್ರೆ ಬಳಗ ಶಿವಾಜಿಯನ್ನು ವಿರೂಪಗೊಳಿಸಿದ ಪರಿ. ಮಳೆ ಬಿದ್ದ ನೆಲದಲ್ಲಿ ಬೀಜ ಸಹಜವಾಗಿ ಪುಟಿಯೊಡೆಯು ವಂತೆ ಶಿವಾಜಿ ಈ ನೆಲದಿಂದ ಎದ್ದು ಬಂದ. ಅವನನ್ನು ತಿಳಿಯದೇ ಇರುವ ಮಕ್ಕಳು, ಈ ನೆಲದ ಸ್ಪರ್ಶವನ್ನು ತನ್ನದಾಗಿಸಿಕೊಳ್ಳಲಾರರು. ಠಾಕ್ರೆ ಮತ್ತು ಸಂಘಪರಿವಾರದ ಹೀನ ರಾಜಕೀಯವನ್ನು ಅರ್ಥ ಮಾಡಿಕೊಳ್ಳುವ ಒಂದೇ ಒಂದು ಸುಲಭ ವಿಧಾನವೆಂದರೆ, ಶಿವಾಜಿಯ ಬದುಕಿನ ಪುಟಗಳನ್ನು ಬಿಡಿಸುವುದು. ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು.
***
ಕರ್ನಾಟಕದ ಪಾಲಿಗೆ ಟಿಪ್ಪು ಸುಲ್ತಾನ್ ಹೇಗೆಯೋ ಹಾಗೆಯೇ ಮಹಾರಾಷ್ಟ್ರಕ್ಕೆ ಶಿವಾಜಿ. ಇವರ ನೋವು, ದುಮ್ಮಾನ, ಹೋರಾಟ, ಸಂಘರ್ಷ, ಇವರಿಗಾದ ವಂಚನೆ ಮತ್ತು ಇವರ ಅಂತ್ಯಗಳಲ್ಲಿ ಹಲವು ಸಾಮ್ಯತೆಗಳಿವೆ. ಶಿವಾಜಿಗೂ ಟಿಪ್ಪುವಿಗೂ ಇರುವ ಎರಡು ಮುಖ್ಯ ವ್ಯತ್ಯಾಸಗಳೆಂದರೆ, ಟಿಪ್ಪುವಿಗೆ ಹೈದರಾಲಿಯ ಮೂಲಕ ರಾಜ್ಯ ಸಿಕ್ಕಿತು. ಆದರೆ ಶಿವಾಜಿ ಆದಿವಾಸಿಗಳು, ದಲಿತರು, ಬುಡಕಟ್ಟು ಜನರು ಮತ್ತು ಮುಸ್ಲಿಮರನ್ನು ಕಟ್ಟಿಕೊಂಡು ಒಂದು ಹೊಸ ಸಾಮ್ರಾಜ್ಯವನ್ನು ಕಟ್ಟಿದ. ಟಿಪ್ಪು ವಿದ್ಯಾವಂತನಾಗಿದ್ದ. ಅವನಲ್ಲಿ ವೈಜ್ಞಾನಿಕ ದೂರದೃಷ್ಟಿಯಿತ್ತು. ಶಿವಾಜಿ ನೆಲದಿಂದ ಸಿಡಿದು ಬಂದ ಸಹಜ ಮರ. ಶೌರ್ಯ, ಎದೆಗಾರಿಕೆಯೇ ಅವನ ಪಾಲಿನ ವರ. ಇಬ್ಬರಲ್ಲೂ ಇನ್ನೊಂದು ಮುಖ್ಯ ಸಾಮ್ಯತೆಯಿತ್ತು. ಈ ನೆಲದ ಮೇಲ್ವರ್ಣೀಯರ ಪಾಲಿಗೆ ಟಿಪ್ಪು ಮ್ಲೇಚ್ಛನಾಗಿ ದ್ದರೆ, ಶಿವಾಜಿ ಮೇಲ್ಜಾತಿಯವರ ಕಣ್ಣಲ್ಲಿ ಶೂದ್ರ ಅದರಲ್ಲೂ ಹೀನ ಜಾತಿಯವನಾಗಿದ್ದ. ಹಲವರ ಕಣ್ಣಲ್ಲಿ ಹಲವು ರೂಪಗಳನ್ನು ಶಿವಾಜಿ ಪಡೆದಿದ್ದ. ಸಂಘಪರಿವಾರದ ಕಣ್ಣಲ್ಲಿ ಶಿವಾಜಿ ಹಿಂದೂ ಸಾಮ್ರಾಟ. ದಲಿತರ ಕಣ್ಣಲ್ಲಿ ಶಿವಾಜಿ ಅಪ್ಪಟ ಬ್ರಾಹ್ಮಣ ವಿರೋಧಿ. ಬ್ರಾಹ್ಮಣರು ಶಿವಾಜಿಗೆ ಮಾಡಿದ ವಂಚನೆ, ಮತ್ತು ಶಿವಾಜಿಯಿಂದ ನಡೆದ ಹಲವು ಬ್ರಾಹ್ಮಣರ ಹತ್ಯೆಯನ್ನು ಇಟ್ಟುಕೊಂಡು ತಮ್ಮ ವಾದವನ್ನು ಮಂಡಿಸುತ್ತಾರೆ. ಮುಸ್ಲಿಮರು ಶಿವಾಜಿಯ ಕುರಿತಂತೆ ವೌನವನ್ನು ತಳೆದಿದ್ದಾರೆ. ಬಹುಶಃ ಸಂಘಪರಿವಾರ ಶಿವಾಜಿಯನ್ನು ವಿರೂಪಗೊಳಿಸಿದ ಕಾರಣ ವಿರಬಹುದು. ಶಿವಾಜಿ ನಡೆಸಿದ ಗೆರಿಲ್ಲಾ ಯುದ್ಧದ ಕಾರಣಕ್ಕಾಗಿ ಅವನನ್ನು ಡಕಾಯಿತ ಗುಂಪಿನ ನಾಯಕ ಎಂದು ವಾದ ಮಂಡಿಸುವವರೂ ಇದ್ದಾರೆ. ಒಂದಂತೂ ಸತ್ಯ. ಶಿವಾಜಿ ಯಾವುದೇ ನಿರ್ದಿಷ್ಟವಾದ ಸಿದ್ಧಾಂತ, ಅಜೆಂಡಾಗಳನ್ನು ಇಟ್ಟುಕೊಂಡು ಹೊರಟವನಲ್ಲ. ಬಂಡಾಯ ಶಿವಾಜಿಯ ಮೂಲಗುಣ. ಅವನ ದಾರಿಯಲ್ಲಿ ಎದುರಾದ ಎಲ್ಲರ ವಿರುದ್ಧವೂ ಹೋರಾಡಿದ. ಮರಾಠರು, ಮೊಗಲರು, ಬ್ರಾಹ್ಮಣರು ಎಲ್ಲರೂ ಅವನ ದಾರಿಯಲ್ಲಿ ಎದುರಾದರು. ಇದೇ ಸಂದರ್ಭದಲ್ಲಿ ಅವನ ಬೆಂಬಲವಾಗಿ ಮುಸ್ಲಿಮರು, ಬ್ರಾಹ್ಮಣರು, ಮರಾಠರೂ ಇದ್ದರು.
ಶಿವಾಜಿಯ ಬದುಕು ಹೋರಾಟದಲ್ಲೇ ಮುಗಿಯಿತು. ಅವನು ರಾಜ್ಯಾಭಿಷೇಕವಾದ ಬಳಿಕ ಬದುಕಿದ್ದು ಬರೇ ಆರು ವರ್ಷ. ರಾಜ್ಯ ಪದವಿಯನ್ನು ಅನುಭವಿಸುವುದಕ್ಕೆ ಅವನಿಂದಾಗ ಲಿಲ್ಲ. ಅಕಾಲ ಮರಣಕ್ಕೆ ಶಿವಾಜಿ ತುತ್ತಾದ. ಸತ್ತು ಒಂದು ವಾರದ ಬಳಿಕವಷ್ಟೇ ಜನರಿಗೆ ಗೊತ್ತಾಯಿತು ಶಿವಾಜಿ ಸತ್ತ ವಿಷಯ. ಆತನಿಗೆ ವಿಷ ಉಣಿಸಿ ಕೊಲ್ಲಲಾಯಿತು ಎನ್ನುತ್ತಾರೆ. ಟಿಪ್ಪುವಿನ ಮರಣವೂ ನಡೆದಿರುವುದು ವಂಚನೆ ಯಿಂದಲೇ ತಾನೆ. ನಿಜಾಮರು, ಮರಾಠರು, ಮೀರ್‌ಸಾದಿಕ್, ಪೂರ್ಣಯ್ಯ ಎಲ್ಲರೂ ಸೇರಿ ಮಾಡಿದ ವಿಷಪ್ರಾಷಣದ ಫಲ, ಟಿಪ್ಪುವಿನ ಭೀಕರ ಸೋಲು ಮತ್ತು ಮರಣ.
ಶಿವಾಜಿಯ ಪಟ್ಟಾಭಿಷೇಕವೇ ಒಂದು ದುರಂತವಾಗಿ ಹೋಯಿತು. ಅವನ ಪಟ್ಟಾಭಿಷೇಕ ನಡೆಸಲು ಅಂದಿನ ಬ್ರಾಹ್ಮಣರು ಒಪ್ಪಲಿಲ್ಲ. ಯಾಕೆಂದರೆ ಶಿವಾಜಿ ಭೋಸಲೆ ಕೀಳು ಜಾತಿಗೆ ಸೇರಿದಾತ. ರಾಜ್ಯದ ಚಕ್ರವರ್ತಿಯಾಗಬೇಕಾದರೆ ಆತ ಕ್ಷತ್ರಿಯನಾಗಿರಬೇಕು. ಅಂತಿಮವಾಗಿ ಕಾಶಿಯ ಗಾಗಾಭಟ್ಟನನ್ನು ಅತಿ ಹಣದ ಆಮಿಶವೊಡ್ಡಿ ಕರೆತರಲಾಯಿತು. ಅವನಿಗೂ ಅವನ ಶಿಷ್ಯರಿಗೂ ಶಿವಾಜಿ ನೀಡಿದ ದಕ್ಷಿಣೆಯನ್ನು ಕೋಟೆಯಿಂದ ಒಯ್ಯುವುದಕ್ಕೇ ಶ್ರಮ ಪಡಲಾಯಿತು ಎಂಬ ಮಾತಿದೆ. ಗಾಗಾ ಭಟ್ಟ ಶಿವಾಜಿಯನ್ನು ಶುದ್ಧೀಕರಿಸಿದ ಮಾತ್ರವಲ್ಲ, ಆತನಿಗೆ ನಲವತ್ತರ ವಯಸ್ಸಿನಲ್ಲಿ ಹೊಸದಾಗಿ ಉಪನಯನ ಮಾಡಿದ. ಅಷ್ಟೇ ಅಲ್ಲ, ಹೊಸದಾಗಿ ವೈದಿಕ ಪದ್ಧತಿಯ ಪ್ರಕಾರ ಮದುವೆ ಮಾಡಿಸಿದ. ಇದಾದ ಬಳಿಕವಷ್ಟೇ ಶಿವಾಜಿಗೆ ಪಟ್ಟಾಭಿಷೇಕ ಮಾಡಲಾಯಿತು.
ಸರಿ. ಹೀಗಾದರೂ ಈ ಪಟ್ಟಾಭಿಷೇಕ ಯಶಸ್ವಿಯಾಯಿತೇ? ಎಂದರೆ ಅದೂ ಇಲ್ಲ. ಶಿವಾಜಿಯ ಮೊದಲ ರಾಜ್ಯಾಭಿಷೇಕ ನಡೆದದ್ದು ರಾಯಗಡದಲ್ಲಿ. ಜೂನ್ 6, 1674ರಲ್ಲಿ. ಇದಾದ ಬಳಿಕ ಮತ್ತೆ ಶೈವರು ತಗಾದೆ ತೆಗೆದರು. ಶಿವಾಜಿಯ ಪಟ್ಟಾಭಿಷೇಕ ಸರಿಯಾಗಿ ನಡೆದಿಲ್ಲ ಎಂದು ಟೀಕಿಸತೊಡಗಿ ದರು. ಇದೇ ಸಂದರ್ಭದಲ್ಲಿ ಶಿವಾಜಿಯ ತಾಯಿ ಜೀಜಾಬಾಯಿ ತೀರಿಕೊಂಡರು. ಇನ್ನೋರ್ವ ಸೇನಾಪತಿ ಅಸುನೀಗಿದ್ದ. ಪತ್ನಿ ಕಾಶಿಬಾಯಿ ಮೃತ್ಯುವಶರಾದರು. ಇದೆಲ್ಲಕ್ಕೂ ಕಾರಣ ಗಾಗಾ ಭಟ್ಟ ಮಾಡಿದ ರಾಜ್ಯಾಭಿಷೇಕ ಎಂದು ಪುಕಾರು ಹಬ್ಬಿಸಲಾಯಿತು. ಜನರನ್ನು ಸಂತುಷ್ಟಿಗೊಳಿಸುವುದಕ್ಕಾಗಿಯೇ ಮೂರೇ ತಿಂಗಳಲ್ಲಿ ಮತ್ತೊಮ್ಮೆ ರಾಜ್ಯಾಭಿಷೇಕವನ್ನು ಮಾಡಿಸಿಕೊಳ್ಳಬೇಕಾಯಿತು. ಯಜುರ್ವೇದಿ ತಾಂತ್ರಿಕ ಗೋಸ್ವಾಮಿಯೊಬ್ಬನ ನೇತೃತದಲ್ಲಿ ಈ ರಾಜ್ಯಾಭಿಷೇಕ ನಡೆಯಿತು. ಇದು ಶಿವಾಜಿ ಆಡಳಿತದಲ್ಲಿ ಶೈವರು ಮತ್ತು ವೈದಿಕ ಬ್ರಾಹ್ಮಣರ ನಡುವಿನ ತಿಕ್ಕಾಟಕ್ಕೆ ಕಾರಣವಾಯಿತು. ಆಳದಲ್ಲಿ ಬ್ರಾಹ್ಮಣರು ಶಿವಾಜಿ ಯನ್ನು ಒಪ್ಪಿಕೊಂಡಿರಲೇ ಇಲ್ಲ. ಈ ಎಲ್ಲ ಸಂಘರ್ಷದ ನಡುವೆ ಆರು ವರ್ಷ ಆಡಳಿತ ನಡೆಸಿದ ಶಿವಾಜಿ ಅಕಾಲಿಕವಾಗಿ ಮರಣವಪ್ಪಿದ.
ಶಿವಾಜಿಯನ್ನು ಜಾತಿಯ ಕಾರಣಕ್ಕಾಗಿ ಕೆಲವು ಮೇಲ್ವರ್ಣೀ ಯರು ರಾಜನೆಂದು ಒಪ್ಪಿಕೊಂಡಿರಲೇ ಇಲ್ಲ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ.ರಾಂಝ್ಯದ ಪಾಟೀಲನೊಬ್ಬ ರೈತನ ಮಗಳನ್ನು ಬಲಾತ್ಕಾರ ಮಾಡಿದನೆಂಬ ಕಾರಣಕ್ಕೆ ಅವನನ್ನು ಹೆಡೆಮುರಿ ಕಟ್ಟಿ ಪುಣೆಯಲ್ಲಿ ಶಿವಾಜಿಯ ಎದುರಿಗೆ ತರಲಾಯಿತು. ಶಿವಾಜಿ ಪಾಟೀಲನಿಗೆ ಶಿಕ್ಷೆಯನ್ನು ಆದೇಶಿದ. ಆಗ ಪಾಟೀಲ, ಸಭೆಯಲ್ಲಿ ಹಾಜರಾಗಿದ್ದ ದಾದೋಜಿ ಕೊಂಡದೇವನಿಗೆ ಹೇಳಿದ ‘‘ಪಂತ ಕುಲೀನ ಮನೆತನದವರು ನ್ಯಾಯ ನೀಡಲಿ’’
ನೇರವಾಗಿ ಶಿವಾಜಿಯನ್ನು ಪಾಟೀಲ ನಿಂದಿಸಿದ್ದ. ‘‘ಶಿವಾಜಿ ಕೆಳಜಾತಿಯವನಾಗಿ ರುವುದರಿಂದ ನನ್ನ ವಿರುದ್ಧ ನ್ಯಾಯ ನೀಡಲು ಅವನಿಗೆ ಅರ್ಹತೆಯಿಲ್ಲ’’ ಎಂದು ಹೇಳಿದ್ದ. ಮರಾಠ ಸರದಾರರಲ್ಲೂ ಹಲವರಿಗೆ ಶಿವಾಜಿಯನ್ನು ರಾಜನೆಂದು ಒಪ್ಪಿಕೊಳ್ಳಲು ಮುಜುಗರವಿತ್ತು. ಮರಾಠ ಕ್ಷತ್ರಿಯ ಕುಲವೆಂದು 96 ವಿಭಾಗಗಳನ್ನು ಉಲ್ಲೇಖಿಸುತ್ತದೆ. ಅದರಲ್ಲಿ ಭೋಸಲೆ ಎಂಬ ಹೆಸರಿಲ್ಲ. ಶಿವಾಜಿಯು ಭೋಸಲೆ ಅಡ್ಡ ಹೆಸರನ್ನು ಹೊಂದಿದ್ದ. ಮಹಾತ್ಮ ಜೋತಿಭಾ ಫುಲೆಯವರು ತಮ್ಮ ಪೋವಾಡೆ ಯಲ್ಲಿ ಶಿವಾಜಿಯನ್ನು ‘‘ಕೃಷಿಕ ಭೂಷಣ’’ ಎಂದು ಕರೆದಿರುವುದು ಇದೇ ಕಾರಣಕ್ಕೆ. ಶಿವಾಜಿ ರೈತ ಅಥವಾ ಕೃಷಿಕ ಸಮುದಾಯದಲ್ಲಿ ಬೆಳೆದು ಬಂದವನಾಗಿದ್ದ.
ಶಿವಾಜಿ ಸಾಮ್ರಾಜ್ಯ ಕಟ್ಟುವ ಸಂದರ್ಭದಲ್ಲಿ ಅವನ ಜೊತೆ ಜೊತೆಗೆ ಹೆಜ್ಜೆಯಿಟ್ಟವರಾರು. ಪ್ರಾಣಕ್ಕೆ ಪ್ರಾಣ ಕೊಟ್ಟು ಅವನನ್ನು ಕಾಪಾಡಿದವರಾರು? ಅವನಿಗೆ ದ್ರೋಹ ಬಗೆದವರಾರು? ಎಂಬಿತ್ಯಾದಿ ಪುಟಗಳನ್ನು ಬಿಡಿಸುತ್ತಾ ಹೋದರೆ ನಮ್ಮ ಎದೆ ಧಸ್ಸೆನ್ನುತ್ತದೆ. ಅದನ್ನು ಮುಂದಿನ ವಾರ ಹಂಚಿಕೊಳ್ಳುವೆ.
ನನ್ನ ತಂಗಿಯ ಎರಡೂವರೆ ವರ್ಷದ ಮಗಳು ಫಿಝಾ ಕಳೆದ ಒಂದು ತಿಂಗಳು ಮನೆಯಲ್ಲೇ ಇದ್ದಳು. ಅವಳಿರುವ ಪ್ರತಿ ಘಳಿಗೆಯೂ ನನ್ನ ಪಾಲಿಗೆ ಅಮೃತ ಘಳಿಗೆ. ಅವಳು ಕೊಡುವ ಕಾಟಗಳೆಲ್ಲ ಹಿತವಾಗಿರುತ್ತದೆ. ಸುಖವಾಗಿರುತ್ತದೆ. ಇಂತಹ ಫಿಝಾಳಿಗೆ ನಾನು ಇತ್ತೀಚೆಗೆ ಸುಮ್ಮನೆ ಆಡುವುದಕ್ಕಾಗಿ ಎಬಿಸಿಡಿ ಕಾರ್ಡ್‌ಗಳನ್ನು ಕೊಟ್ಟೆ. ಸುಮ್ಮನೆ ಆಟವಾಡುತ್ತಾ ಎಬಿಸಿಡಿ ಕಾರ್ಡ್‌ಗಳನ್ನು ಗುರುತಿಸುವುದನ್ನು ಹೇಳಿಕೊಡುತ್ತಾ ಹೋದೆ. ಅವಳು ಅದನ್ನು ಆಟವೆಂದು ನಂಬಿ, ಎಬಿಸಿಡಿಯನ್ನು ಸುಲಭವಾಗಿ ಹೇಳುತ್ತಾ ಹೋದಳು. ಇತ್ತೀಚೆಗೆ ಅವಳಿಗೆ ಏಕಾಏಕಿ ನನ್ನ ಮೇಲೆ ಅನುಮಾನ ಬಂದು ಬಿಟ್ಟಿತು. ಇದು ಆಟ ಅಲ್ಲ. ಇದು ಪಾಠ ಎನ್ನುವುದು ಸ್ಪಷ್ಟವಾದದ್ದೇ ಕಾರ್ಡ್‌ಗಳನ್ನು ಮುಟ್ಟಿ ನೋಡುವುದನ್ನೇ ಬಿಟ್ಟಳು. ಎಬಿಸಿಡಿ ಎನ್ನುವಷ್ಟರಲ್ಲಿ ಓಡಿ ಹೋಗುತ್ತಿದ್ದಳು. ಆಮೇಲೆ ಅವಳಿಗೆ ಒನ್ ಟೂ ತ್ರಿಯ ಪ್ಲಾಸ್ಟಿಕ್ ಅಕ್ಷರಗಳನ್ನು ತಂದುಕೊಟ್ಟೆ. ಅದರ ಆಕರ್ಷಣೆಯಲ್ಲಿ ಒಂದೇ ವಾರದಲ್ಲಿ ಅವಳು ಹತ್ತರವರೆಗೆ ಅಂಕಿಗಳನ್ನು ಹೇಳತೊಡಗಿದಳು. ಆದರೆ ಇತ್ತೀಚೆಗೆ ಅದರ ಕುರಿತಂತೆಯೂ ಅವಳಿಗೆ ಅನುಮಾನ ಬಂತು. ನಾವು ಒನ್‌ಟೂತ್ರಿ ಕುರಿತು ಹೆಚ್ಚು ಹೆಚ್ಚು ಆಸಕ್ತಿ ವಹಿಸಿದಂತೆ ಅವಳಿಗೆ ಅದರ ಕುರಿತ ಆಸಕ್ತಿ ಕಡಿಮೆಯಾಗ ತೊಡಗಿತು. ಇತ್ತೀಚೆಗಂತೂ ಎಬಿಸಿಡಿ, ವನ್‌ಟೂತ್ರಿಗಳನ್ನು ಮುಟ್ಟಿಯೂ ನೋಡುತ್ತಿಲ್ಲ. ‘‘ಎಬಿಸಿಡಿ ಹೇಳು ಮಗಳೆ’’ ಎಂದರೆ ಅವಳಿಗೆ ಸಿಟ್ಟು ಏರುತ್ತದೆ. ಹೇಳಿಕೊಟ್ಟರೆ, ಅದನ್ನು ತಿರುಚಿ ಹೇಳಿ ಸೇಡು ತೀರಿಸಿಕೊಳ್ಳುತ್ತಿದ್ದಳು. ಇನ್ನು ಕೆಲಸ ಕೆಟ್ಟಿತು ಎಂದು ಅವಳಿಗೆ ಏನನ್ನೂ ಹೇಳಿಕೊಡುವುದಕ್ಕೆ ಹೋಗಿಲ್ಲ. ಯಾಕೆಂದರೆ, ಯಾವಾಗ ಅವಳಿಗೆ ತಾನು ಆಡುತ್ತಿಲ್ಲ, ಕಲಿಯುತ್ತಿದ್ದೇನೆ ಎನ್ನುವುದು ಒಳ ಮನಸ್ಸಿಗೆ ಗೊತ್ತಾಗಿ ಬಿಟ್ಟಿತೋ, ಎಬಿಸಿಡಿಗಳು ಅವಳಾದಾಗಲು ಸಾಧ್ಯವಿಲ್ಲ. ನಮ್ಮದಾಗಿರುವ ಎಬಿಸಿಡಿಗಳನ್ನು ಅವಳು ಯಾವತ್ತೂ ಕಲಿಯಲು ಹೋಗುವುದಿಲ್ಲ. ಅದು ಅವಳ ಜಗತ್ತಿಗೆ ಸಂಬಂಧ ಪಟ್ಟ ವಿಷಯವಾಗಿರುವವರೆಗೆ ಮಾತ್ರ ಅವಳು ಅದರ ಕುರಿತಂತೆ ಆಸಕ್ತಿ ವಹಿಸಲು ಸಾಧ್ಯ. ನಾವು ಕಲಿಯುವುದು, ಕಲಿಸುವುದು ಎನ್ನುವುದನ್ನು ಹೇರುವುದು ಎಂಬುದಾಗಿ ತಿಳಿದುಕೊಂಡಿದ್ದೇವೆ. ಹೇರುವಾಗ ಸಹಜವಾಗಿಯೇ ಪ್ರತಿಭಟನೆ ವ್ಯಕ್ತವಾಗುತ್ತದೆ. ಹೀಗೆ ಕಲಿಕೆ ಎಂಬ ಹೇರುವಿಕೆಯ ಮೂಲಕ ಒಂದು ಭಾಷೆಯನ್ನು ಮಕ್ಕಳ ಪಾಲಿಗೆ ಕಷ್ಟವಾಗಿಸಿ, ಹಿಂಸೆಯಾಗಿಸಿ ಬಿಟ್ಟಿದ್ದೇವೆ.
ಸಾಧಾರಣವಾಗಿ ನಾವು ಪ್ರಾದೇಶಿಕ ಭಾಷೆಗಳನ್ನು ಕಲಿಯುವುದಿಲ್ಲ. ಬದಲಿಗೆ ಅದರೊಂದಿಗೆ ಬದುಕುತ್ತೇವೆ. ಅದನ್ನು ನಮ್ಮ ಮೇಲೆ ಯಾರೂ ಕಲಿಸುವ ನೆಪದಲ್ಲಿ ಹೇರುವುದಿಲ್ಲ. ಅದು ನಮ್ಮ ಬಾಲ್ಯದ ವ್ಯವಹಾರಗಳಿಗೆ ಅಗತ್ಯವಾಗಿರುತ್ತದೆ. ಆದುದರಿಂದ ಅದನ್ನು ಸಹಜವಾಗಿ ನಮ್ಮದಾಗಿಸಿಕೊಳ್ಳುತ್ತೇವೆ. ಕರಾವಳಿಯಲ್ಲಿ ಒಬ್ಬ ಮುಸ್ಲಿಮ್ ಹುಡುಗ ತನ್ನ ಮನೆಯೊಳಗೆ ಬ್ಯಾರಿ ಭಾಷೆಯನ್ನು ತನ್ನದಾಗಿಸಿಕೊಳ್ಳುತ್ತಾನೆ. ಆದರೆ ಮನೆಯಿಂದ ಹೊರಗಡೆ ಕಾಲಿಟ್ಟ ಹಾಗೆ ಅವನು ತುಳು ಭಾಷೆಯನ್ನು ತನ್ನದಾಗಿಸಿಕೊಳ್ಳ ತೊಡಗುತ್ತಾನೆ. ಮಸೀದಿಯಲ್ಲಿ ಅವನಿಗೆ ತಿಳಿಯದಂತೆಯೇ ಮಲಯಾಳಂನ್ನು ತನ್ನದಾಗಿಸಿಕೊಳ್ಳುತ್ತಾನೆ. ಶಾಲೆಗೆ ಕಾಲಿಟ್ಟವನು ಅಲ್ಲಿಯ ಹುಡುಗರೊಂದಿಗೆ ಆಡುತ್ತಾ, ಜಗಳಾಡುತ್ತಾ ಕನ್ನಡವನ್ನು ತನ್ನದಾಗಿಸಿಕೊಳ್ಳುತ್ತಾನೆ. ಹೀಗೆ ತೀರ ಹತ್ತನೆ ವರ್ಷದಲ್ಲಿ ಬ್ಯಾರಿ, ತುಳು, ಮಲಯಾಳಂ, ಕನ್ನಡ ಭಾಷೆಗಳು ಅವನದಾಗಿ ಬಿಟ್ಟಿರುತ್ತವೆ. ಇವೆಲ್ಲವನ್ನು ಅವನು ಯಾವುದೇ ಮೇಷ್ಟ್ರುಗಳ ಹಂಗಿಲ್ಲದೆಯೇ ತನ್ನದಾಗಿಸಿಕೊಂಡಿರುತ್ತಾನೆ. ಆದರೆ ಇದೇ ಸಂದರ್ಭದಲ್ಲಿ ಇಂಗ್ಲಿಷ್‌ನ್ನು ತನ್ನದಾಗಿಸಿಕೊಳ್ಳುವಾಗ ಮಾತ್ರ ಅವನು ಎಡವುತ್ತಾನೆ. ಇದು ಹುಡುಗರ ಸಮಸ್ಯೆಯಂತೂ ಅಲ್ಲವೇ ಅಲ್ಲ. ಇಂಗ್ಲಿಷ್‌ನ್ನು ಅವರಿಗೆ ಪರಿಚಯಿಸುವ ರೀತಿಯಿಂದಾಗಿಯೇ ಆ ಭಾಷೆ ಕಷ್ಟವಾಗಿ ಬಿಡುತ್ತದೆ. ಅನ್ಯವಾಗಿ ಬಿಡುತ್ತದೆ. ಇಷ್ಟೂ ಭಾಷೆಗಳನ್ನು ಸುಲಭವಾಗಿ ಅವನಿಗೆ ಅರಿವಿಲ್ಲದಂತೆಯೇ ತನ್ನದಾಗಿಸಿಕೊಂಡ ವಿದ್ಯಾರ್ಥಿ, ಇಂಗ್ಲಿಷ್‌ನ್ನು ಮಾತ್ರ ‘ಕಲಿಯ’ಬೇಕಾಗುತ್ತದೆ.
ಇತ್ತೀಚೆಗೆ ಟಿವಿಯಲ್ಲಿ ಒಂದು ಕಾರ್ಯಕ್ರಮ ನೋಡುತ್ತಿದ್ದೆ. ಅದರಲ್ಲಿ ನವಿಲು ಗರಿ ಮಾರಾಟ ಮಾಡುತ್ತಿದ್ದ ಬೀದಿಯ ಹುಡುಗ ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಿರುವುದನ್ನು ‘ಅತ್ಯದ್ಭುತ’ ಎಂಬಂತೆ ತೋರಿಸುತ್ತಿದ್ದರು. ಯಾವ ಮೇಷ್ಟ್ರುಗಳೂ ಇಲ್ಲದೆ ಅವನು ಇಂಗ್ಲಿಷ್ ಕಲಿತಿದ್ದಾನೆ ಎಂಬ ವಿವರಗಳು ಬೇರೆ. ಬದುಕಿಗಿಂತ ದೊಡ್ಡ ಮೇಷ್ಟ್ರು ಇಲ್ಲವೆಂಬ ಸಂಗತಿ ಆ ಟಿವಿ ವಾಹಿನಿಯವರಿಗೆ ಗೊತ್ತೇ ಇರಲಿಲ್ಲ. ಅವನು ಇಂಗ್ಲಿಷ್‌ನ್ನು ಎಲ್ಲೂ ಕಲಿತಿರಲಿಲ್ಲ. ಬದಲಿಗೆ ತನ್ನ ಅಗತ್ಯಕ್ಕೋಸ್ಕರ ಇಂಗ್ಲಿಷ್‌ನ್ನು ತನ್ನದಾಗಿಸಿಕೊಂಡಿದ್ದ. ಅಂದರೆ, ಒಂದು ಭಾಷೆಯನ್ನು ಹೇಗೆ ತನ್ನದಾಗಿಸಿಕೊಳ್ಳಬೇಕೋ ಆ ಸಹಜದಾರಿಯಲ್ಲಿ ತನ್ನದಾಗಿಸಿಕೊಂಡಿದ್ದ. ಇಂಗ್ಲಿಷ್‌ನಲ್ಲಿ ಎಂ. ಎ ಮಾಡಿದ ವಿದ್ಯಾರ್ಥಿಗಳು ಒಂದು ವಾಕ್ಯವನ್ನು ಇಂಗ್ಲಿಷ್‌ನಲ್ಲಿ ಆಡಲು ತಡವರಿಸುವಾಗ, ಇವನು ಲೀಲಾಜಾಲವಾಗಿ ಇಂಗ್ಲಿಷ್ ಮಾತನಾಡಲು ಸಾಧ್ಯವಾದುದು, ಕಲಿಯುವುದರಿಂದಲ್ಲ, ಭಾಷೆಯ ಜೊತೆಗೆ ಬೆರೆಯುವುದರಿಂದ ಅಥವಾ ಭಾಷೆಯ ಜೊತೆಗೆ ಬದುಕುವುದರಿಂದ.
ಇಂತಹ ಸಂದರ್ಭದಲ್ಲಿ ಒಂದು ತಿಂಗಳಲ್ಲಿ ನಿಮಗೆ ಇಂಗ್ಲಿಷ್ ಕಲಿಸುತ್ತೇವೆ ಎಂದು ಹೊರಡುವ ರ್ಯಾಪಿಡೆಕ್ಸ್ ಪುಸ್ತಕಗಳನ್ನು ನೆನಪಿಸಿಕೊಳ್ಲಿ. ಅದನ್ನು ಮುಂದಿಟ್ಟುಕೊಂಡು, ಒಂದೊಂದು ವಾಕ್ಯವನ್ನು ಬಾಯಿಪಾಠ ಕಲಿಯಲು ಯತ್ನಿಸುತ್ತಾ ಒಂದೇ ವಾರದಲ್ಲಿ ರ್ಯಾಪಿಡೆಕ್ಸ್ ಪುಸ್ತಕ ಅಟ್ಟ ಸೇರಿ ಬಿಡುತ್ತಿತ್ತು. ಅದರ ಬದಲಿಗೆ ಸುಮ್ಮನೆ ತೀರಾ ಸಹಜವಾಗಿ ಒಂದಿಷ್ಟು ಇಂಗ್ಲಿಷ್ ಕಾಮಿಕ್ಸ್‌ಗಳನ್ನು ತಂದಿಟ್ಟುಕೊಂಡು, ಸಣ್ಣದೊಂದು ಡಿಕ್ಷನರಿಯನ್ನೂ ಪಕ್ಕಕ್ಕಿಟ್ಟುಕೊಂಡಿದ್ದರೆ ಆರು ತಿಂಗಳಲ್ಲಿ ನಮ್ಮ ಇಂಗ್ಲಿಷ್ ಸುಧಾರಣೆಯಾಗಿ ಬಿಡುತ್ತಿತ್ತೇನೋ.
ಇಂಗ್ಲಿಷ್‌ನ ಒಂದು ವಾಕ್ಯವನ್ನು ನನ್ನ ತಲೆಗೆ ಹೊಗ್ಗಿಸಲು ಬೊಬ್ಬಿಡುತ್ತಿದ್ದ ರೂಫಿನಾ ಟೀಚರ್ ಈಗಲೂ ನನಗೆ ನೆನಪಾಗುತ್ತಾರೆ. ಎಲ್ಲದಕ್ಕೂ ಗೋಯಿಂಗ್, ಕಮಿಂಗ್...ಎಂದು ಇಂಗ್ ಸೇರಿಸುತ್ತಾ ಮಾತನಾಡುವಾಗ ನನ್ನ ಪ್ರಾಂಶುಪಾಲರಾದ ಅಬ್ರಹಾಂ ವರ್ಗೀಸರ ಬಿಪಿ ಜಾಸ್ತಿಯಾಗಿ ‘‘ಎಲವೋ ಇಂಗು ತಿಂದ ಮಂಗ...’’ ಎಂದು ಅಬ್ಬರಿಸುತ್ತಿರುವುದು ನೆನಪಾಗುತ್ತದೆ. ಅವರು ತಮ್ಮ ಶಕ್ತಿ ಮೀರಿ ನಮಗೆ ಇಂಗ್ಲಿಷ್ ಕಲಿಸಲು ಹೆಣಗುತ್ತಿದ್ದರು. ಆದರೆ ಒಂದು ವಾಕ್ಯವೂ ನನ್ನ ತಲೆಗೆ ಹೋಗುತ್ತಿರಲಿಲ್ಲ. ಬಹುಶಃ ಈಗ ಅರ್ಥವಾಗುತ್ತದೆ. ಹೇರುವಿಕೆಯನ್ನು ನಾನು ಬಾಲ್ಯದಲ್ಲಿ ಪ್ರತಿಭಟಿಸುತ್ತಿದೆ. ಆದುದರಿಂದಲೇ ಮಹಾ ಅಶಿಸ್ತಿನ ಹುಡುಗ ಎಂದು ಶಾಲೆಯಲ್ಲಿ ಹೆಸರುವಾಸಿಯಾಗಿದ್ದೆ. ಈ ಕಾರಣಕ್ಕೆ ಅವರ ಇಂಗ್ಲಿಷ್‌ನ್ನು ನನ್ನ ಮನಸ್ಸು ಸ್ವೀಕರಿಸುತ್ತಿರಲಿಲ್ಲ ಎಂದು ಕಾಣುತ್ತದೆ. ಇಂದು ಇಂಗ್ಲಿಷ್‌ನ್ನು ನಾವು ನಮ್ಮ ಮಕ್ಕಳಿಗೆ ಹೇರುವುದನ್ನು ನಿಲ್ಲಿಸಬೇಕಾಗಿದೆ. ಇಂಗ್ಲಿಷ್‌ನ್ನು ಮಾತ್ರವಲ್ಲ, ಯಾವುದೇ ವಿಷಯವನ್ನು ‘ಕಲಿಸುವು’ದನ್ನು ನಿಲ್ಲಿಸಬೇಕು. ಯಾಕೆಂದರೆ ಕಲಿಸುತ್ತಿದ್ದೇವೆ ಎನ್ನುವ ನಮ್ಮ ಭ್ರಮೆ, ಅಹಂಕಾರ ಕಲಿಯುವವರಿಗೆ ಹೇರಿಕೆಯಾಗಿ ಪರಿಣಮಿಸುತ್ತದೆ. ಸಾಧ್ಯವಾದರೆ, ನಾವು ಅವರೊಂದಿಗೆ ಇಂಗ್ಲಿಷ್‌ನಲ್ಲಿ ಪ್ರೀತಿಯಿಂದ ಮಾತನಾಡುತ್ತಾ, ಇಂಗ್ಲಿಷ್ ಮೂಲಕ ಆಟವಾಡುತ್ತಾ ಒಂದೊಂದು ಶಬ್ದವನ್ನು ಪರಿಚಯಿಸುತ್ತಾ ಹೋಗುವುದು ಒಳ್ಳೆಯ ಕ್ರಮ ಎನ್ನಿಸುತ್ತದೆ. ಸಹಜ ದಾರಿ ಎನ್ನಿಸುತ್ತದೆ. ಎಚ್‌ಬಿಓ ಚಾನೆಲ್‌ನಲ್ಲಿ ಇಂಗ್ಲಿಷ್ ಚಿತ್ರ ನೋಡುತ್ತಾ ನೋಡುತ್ತಾ ನನ್ನ ಇಂಗ್ಲಿಷ್‌ನ್ನು ನಾನು ನನಗೆ ತಿಳಿಯದೆಯೇ ತೀರಾ ಸಹಜವಾಗಿ ಸಣ್ಣದಾಗಿ ಸುಧಾರಿಸಿಕೊಂಡಿದ್ದೇನೆ. ಯಾವುದೇ ಭಾಷೆಯ ಅಗತ್ಯ ನಮಗೆ ಬಿತ್ತೆಂದರೆ, ಅದು ಸಹಜವಾಗಿಯೇ ನಮ್ಮದಾಗುತ್ತದೆ. ಅಗತ್ಯವಿಲ್ಲದವರಿಗೆ ಬಲವಂತವಾಗಿ ಭೂರಿಭೂಜನವನ್ನು ಉಣಿಸಿದರೂ ಅವರು ವಾಂತಿಮಾಡಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಹಸಿವಿರುವವರಿಗೆ ಗಂಜಿಚಟ್ನಿ ಬಡಿಸಿದರೂ ಗಬಗಬನೆ ಉಣ್ಣುತ್ತಾರೆ. ಉಣ್ಣುವುದು ಒಂದು ಸಹಜಕ್ರಿಯೆ. ಆದುದರಿಂದ ನಾವು ಮಕ್ಕಳಲ್ಲಿ ಮೊದಲು ಹಸಿವನ್ನು ಸೃಷ್ಟಿಸಬೇಕು. ಬಳಿಕವಷ್ಟೇ ಅವರಿಗೆ ಭೂರಿಭೋಜನ ಉಣಿಸುವ ಪ್ರಯತ್ನ ಮಾಡಬಹುದು.
ಇದೇ ಸಂದರ್ಭದಲ್ಲಿ ಒಂದು ಸಣ್ಣ ಜೋಕು ನೆನಪಾಗತ್ತೆ. ನಗರದ ಹಿರಿಯರೊಬ್ಬರು ಇಂಗ್ಲೆಂಡಿಗೆ ಹೋಗಿ ಬಂದರು. ಅವರು ಗೆಳೆಯರೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದರು ‘‘ಇಂಗ್ಲೆಂಡ್‌ನವರು ಎಷ್ಟು ಬುದ್ಧಿವಂತರು ಎಂದರೆ, ಅಲ್ಲಿರುವ ಮೂರು ವರ್ಷದ ಮಗು ಕೂಡ ನಮಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತೆ’’
ಸಮೂಹದೊಂದಿಗೆ ಸೇರಿ ರಾಕ್ಷಸನಂತಾಡುವ ಮನುಷ್ಯನನ್ನು ನೀವು ಯಾವತ್ತಾದರೂ ಖಾಸಗಿ ಯಾಗಿ ಭೇಟಿಯಾಗಿ ನೋಡಿ. ನಿಮಗೆ ಕೆಲವು ಆಘಾತಕಾರಿಯಾದ ಅಂಶಗಳು ದೊರೆಯುತ್ತವೆ. ಅರೆ! ನಾನು ಈವರೆಗೆ ಓದಿರುವುದು, ಕೇಳಿರುವುದು ಇದೇ ಮನುಷ್ಯನ ಕುರಿತೆ? ಎಂಬ ಅಚ್ಚರಿಗೆ ನೀವು ಒಳಗಾಗುತ್ತೀರಿ. ಗಾಂಧೀಜಿ ಈ ಕಾರಣಕ್ಕೆ ಸಮೂಹಕ್ಕಿಂತಲೂ ಮನುಷ್ಯನನ್ನು ಖಾಸಗಿಯಾಗಿ ಮುಖಾಮುಖಿಯಾಗಲು ಇಷ್ಟ ಪಡುತ್ತಿದ್ದರು. ಆದುದರಿಂದಲೇ, ಅವರು ಎಂತಹ ರಾಕ್ಷಸ ಗುಣದ ಮನುಷ್ಯನನ್ನು ಎದುರಿಸಲೂ ಅಂಜುತ್ತಿರಲಿಲ್ಲ. ಯಾಕೆಂದರೆ ಒಂಟಿ ಮನುಷ್ಯನ ಕುರಿತಂತೆ ಅವರಿಗೆ ಅಗಾಧ ಭರವಸೆಯಿತ್ತು. ಹೃದಯದ ಜೊತೆಗೆ ಮಾತನಾಡುವುದು ಅವರಿಗೆ ಕರತಲಾಮಲಕ ವಾಗಿತ್ತು.
ನಾನು ಮಂಗಳೂರಿನಲ್ಲಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವಾಗ ಒಂದು ಘಟನೆ ನಡೆಯಿತು. ಸುರತ್ಕಲ್ ಗಲಭೆಯ ಕುರಿತಂತೆ ಮಂಗಳೂರಿನಲ್ಲಿ ಸದಾಶಿವ ಆಯೋಗ ತನಿಖೆ, ವಿಚಾರಣೆ ನಡೆಸುತ್ತಿತ್ತು. ನಾನು ಪತ್ರಿಕೆಯೊಂದಕ್ಕೆ ಅದರ ವರದಿಯನ್ನು ಮಾಡಲು ತೆರಳಿದ್ದೆ. ಪತ್ರಕರ್ತರ ಗ್ಯಾಲರಿಯಲ್ಲಿ ಕಿಕ್ಕಿರಿದ ಜನ. ಒಬ್ಬ ಮನುಷ್ಯ ನನ್ನ ಪಕ್ಕದಲ್ಲೇ ನಿಂತಿದ್ದ. ನಾನು ಅವರಿಗೆ ಇದ್ದುರದಲ್ಲೇ ತುಸು ಜಾಗ ಮಾಡಿಸಿ, ನನ್ನ ಪಕ್ಕದಲ್ಲೇ ಕುಳ್ಳಿರಿಸಿದೆ. ವಿಚಾರಣೆ ನಡೆಯುತ್ತಾ ನಡೆಯುತ್ತಾ ಮಧ್ಯಾಹ್ನವಾಯಿತು. ಒಳಗಿನ ಸೆಕೆಯಿಂದಲೂ, ವಿಚಾರಣೆಯಿಂದಲೂ ನಾವೆಲ್ಲರೂ ಕುದ್ದು ಹೋಗಿದ್ದೆವು. ಹೊರಗೆ ಬಂದದ್ದೇ ತಣ್ಣನೆಯ ಗಾಳಿ. ‘ಉಸ್ಸಪ್ಪ’ ಎನ್ನುವಾಗ ನನ್ನ ಪಕ್ಕದಲ್ಲಿ ಕುಳಿತಿದ್ದ ಆ ಮನುಷ್ಯ ನನ್ನನ್ನು ನೋಡಿ ನಕ್ಕಿತು. ‘‘ಪತ್ರಕರ್ತರ?’’ ಎಂದು ಕೇಳಿತು. ಹೌದು ಎಂದೆ. ಸರಿ, ಅದು ಇದು, ಮಾತನಾಡುತ್ತಾ, ಅವನು ತನ್ನ ಹೆಸರನ್ನೂ ಹೇಳಿದ. ನಾನು ‘ನನ್ನ’ ಹೆಸರನ್ನೂ ಪ್ರತಿಯಾಗಿ ವಿನಿಮಯಿಸಿದೆ. ‘‘ಬನ್ನಿ ಊಟಕ್ಕೆ ಹೋಗುವ’’ ಎಂದ. ಅವನದೇ ಬೈಕ್‌ನಲ್ಲಿ ಕುಳಿತು ಊಟಕ್ಕೆ ಹೋದೆ. ಹೊಟೇಲಲ್ಲಿ ಜೊತೆಯಾಗಿ ಊಟ ಮಾಡಿದೆವು. ದುಡ್ಡು ನಾನು ಪಾವತಿಸಿದೆ. ಅಪರಾಹ್ನ ಮತ್ತೆ ಆಯೋಗದ ವಿಚಾರಣೆಯ ಸಮಯ ಆರಂಭ ವಾಯಿತು. ನಾನು ಪತ್ರಕರ್ತರ ಜಾಗದಲ್ಲಿ ಹೋಗಿ ಕೂತೆ. ಆದರೆ ಆ ಮನುಷ್ಯ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನೋಡಿದರೆ ಅವನು ಕಟಕಟೆಯಲ್ಲಿ ನಿಂತಿದ್ದ. ನನ್ನ ಎದೆ ಧಗ್ ಎಂದಿತು. ಸುರತ್ಕಲ್ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ, ಕುಖ್ಯಾತ ಗೂಂಡ, ಸಂಘಪರಿವಾರದ ವ್ಯಕ್ತಿ ಅವನಾಗಿದ್ದ. ಅವನ ಜೊತೆಗೆ ನಾನು ಉಂಡಿದ್ದೆ. ಮಾತನಾಡಿದ್ದೆ. ನಗುವನ್ನು ಹಂಚಿಕೊಂಡಿದ್ದೆ. ಆದರೆ ಅವೆಲ್ಲವನ್ನೂ ಚೆಲ್ಲಾಪಿಲ್ಲಿಗೊಳಿಸುವಂತೆ... ಇದೀಗ ನನ್ನ ಮುಂದೆ ಬೇರೆಯೇ ವ್ಯಕ್ತಿಯಾಗಿ ನಿಂತಿದ್ದಾನೆ. ಇಲ್ಲಿ ನಾನು ಅವನ ಯಾವ ಮುಖವನ್ನು ಸ್ವೀಕರಿಸಬೇಕು? ಬಹುಶಃ ಅವನೀಗ ಸಾರ್ವಜನಿಕ ವ್ಯಕ್ತಿಯಾಗಿ, ಸಮೂಹದ ವ್ಯಕ್ತಿಯಾಗಿ ನಿಂತಿದ್ದಾನೆ.
ಬಾಳಠಾಕ್ರೆಯ ಕೊನೆಯ ಐದು ವರ್ಷಗಳಲ್ಲಿ ಅವನನ್ನು ಚಿಕಿತ್ಸೆ ಉಪಚರಿಸಿದ್ದ ಡಾಕ್ಟರ್ ಒಬ್ಬ ಮುಸ್ಲಿಮ್ ಆಗಿದ್ದ. ಅವನ ಹೆಸರು ಡಾ. ಜಲೀಲ್. ಅವನಿಗೆ ಮಾತ್ರವಲ್ಲ, ಅವನ ಮಗನಿಗೂ ಮೆಚ್ಚಿನ ವೈದ್ಯನಾಗಿದ್ದ ಡಾಕ್ಟರ್ ಜಲೀಲ್. ಒಬ್ಬ ಡಾಕ್ಟರ್ ನನ್ನು ನಾವು ಮುಸ್ಲಿಮ್ ಡಾಕ್ಟರ್, ಹಿಂದೂ ಡಾಕ್ಟರ್ ಎಂದು ಕರೆಯುವುದು ತಪ್ಪು. ಅಮಾನವೀಯ. ಬಾಳಾಠಾಕ್ರೆಗೂ ಇದು ಚೆನ್ನಾಗಿ ಗೊತ್ತಿತ್ತು. ಡಾಕ್ಟರ್‌ಗಳಲ್ಲಿ ಮುಸ್ಲಿಮ್-ಹಿಂದೂ ಎಂದು ಇರುವುದಿಲ್ಲ. ಬರೇ ಡಾಕ್ಟರ್ ಎನ್ನುವ ಜಾತಿ, ಧರ್ಮ ಮಾತ್ರವಿರುತ್ತದೆ. ಇಷ್ಟು ಗೊತ್ತಿರುವ ಠಾಕ್ರೆ ಬೀದಿಗಳಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದ ಡ್ರೈವರ್‌ಗಳಲ್ಲಿ ಬಿಹಾರಿ-ಕನ್ನಡಿಗ ಎಂದು ವರ್ಗ ಮಾಡುತ್ತಿದ್ದ. ಒಬ್ಬ ಚಾಲಕನ ಧರ್ಮ ಕಾರ್ ಚಾಲನೆ ಮಾಡುವುದಷ್ಟೇ ಆಗಿರುತ್ತದೆ. ಅವನಲ್ಲಿ ಬಿಹಾರಿ, ಕನ್ನಡ ಚಾಲಕ, ಅಥವಾ ಹಿಂದೂ- ಮುಸ್ಲಿಮ್ ಚಾಲಕ ಎಂದಿರುವುದಿಲ್ಲ. ಹಾಗೆಯೇ ಮುಂಬಯಿ ನಗರದ ಬೀದಿ ವ್ಯಾಪಾರಿಗಳಿಗೂ ಧರ್ಮವಿರುವುದಿಲ್ಲ. ಹಿಂದೂ ವ್ಯಾಪಾರಿ, ಮುಸ್ಲಿಮ್ ವ್ಯಾಪಾರಿ, ತಮಿಳು ವ್ಯಾಪಾರಿ, ಬಿಹಾರದ ವ್ಯಾಪಾರಿ ಎಂದು ಯಾರನ್ನೂ ಕರೆಯುವುದಿಲ್ಲ. ಇದು ಠಾಕ್ರೆಗೆ ಖಾಸಗಿಯಾಗಿ ಚೆನ್ನಾಗಿ ಗೊತ್ತಿತ್ತು. ಆದುದರಿಂದಲೇ ಅವನ ಖಾಸಗಿ ವೈದ್ಯರಾಗಿ ಕೊನೆಯ ವರ್ಷಗಳಲ್ಲಿ ಒಬ್ಬ ‘ಮುಸ್ಲಿಮ್’ ವೈದ್ಯ ಚಿಕಿತ್ಸೆ ನೀಡಲು ಸಾಧ್ಯ ವಾಯಿತು.
ಠಾಕ್ರೆಯ ಕುರಿತಂತೆ ಇನ್ನೊಂದು ಉದಾಹರಣೆ ಯನ್ನು ನೀಡಬಹುದು. 80ರ ದಶಕದಲ್ಲಿ ಠಾಕ್ರೆ ತಮಿಳರು ಮತ್ತು ಕನ್ನಡಿಗರ ವಿರುದ್ಧ ಶಂಖ ಊದಿದ ಸಮಯ. ಆದರೆ ಆ ಸಂದರ್ಭದಲ್ಲಿ ಠಾಕ್ರೆಯ ಎಡಬಲದ ಅಂಗರಕ್ಷಕರು ಕನ್ನಡಿಗರು, ಅದರಲ್ಲೂ ಮುಖ್ಯವಾಗಿ ತುಳುನಾಡಿನ ಬಂಟರಾಗಿದ್ದರು. ಅಲ್ಲಿ ಠಾಕ್ರೆಗೆ ಭಾಷೆ ಅಡ್ಡಿ ಬರಲಿಲ್ಲ. ಯಾಕೆಂದರೆ ಅದು ಠಾಕ್ರೆಯ ಖಾಸಗಿ ಬದುಕು. ಅಲ್ಲಿ ಅವರ ಮನಸ್ಸು ಹೇಳುವುದಷ್ಟೇ ಮುಖ್ಯ. ಸಾರ್ವಜನಿಕವಾಗಿ ಆಡುವ ರಾಜಕಾರಣ ಯಾವ ಪ್ರಯೋಜನಕ್ಕೂ ಬರುವು ದಿಲ್ಲ. ಪಾಕಿಸ್ತಾನ-ಕ್ರಿಕೆಟ್ ಮ್ಯಾಚ್ ಸಂದರ್ಭ ದಲ್ಲಿ ಪಿಚ್ ಅಗೆಸಿದ ಠಾಕ್ರೆಯೇ, ‘ಪುಂಡ’ ಕ್ರಿಕೆಟಿಗನೆಂದೇ ಹೆಸರಾದ ಪಾಕಿಸ್ತಾನದ ಮಿಯಾಂದಾದ್ ಅವರನ್ನು ಮನೆಗೆ ಕರೆಸಿ ಆತಿಥ್ಯ ನೀಡಿದ್ದನ್ನೂ ಇಲ್ಲಿ ನೆನಪಿಸಬಹುದಾಗಿದೆ.
ಇತ್ತೀಚೆಗೆ ನೀವು ಪತ್ರಿಕೆಗಳಲ್ಲಿ ಓದುತ್ತಿರಬ ಹುದು. ಕರಾವಳಿಯಲ್ಲಿ ಒಬ್ಬ ಹಿಂದೂ ವಿದ್ಯಾರ್ಥಿ ಮುಸ್ಲಿಮ್ ವಿದ್ಯಾರ್ಥಿನಿಯೊಂದಿಗೆ ಅಥವಾ ಒಬ್ಬ ಮುಸ್ಲಿಮ್ ವಿದ್ಯಾರ್ಥಿ ಹಿಂದೂ ವಿದ್ಯಾರ್ಥಿನಿಯ ಜೊತೆಗೆ ಮಾತನಾಡಿದರೆ ಅಥವಾ ಪಿಕ್‌ನಿಕ್‌ಗೆ ತೆರಳಿದರೆ ಸಾಕು ಸಂಘ ಪರಿವಾರ ಕೆರಳಿ ನಿಲ್ಲುತ್ತದೆ. ಅಮಾಯಕ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸುತ್ತದೆ. ಅಂತರ್ಧಮೀಯ ಮದುವೆ ಇಡೀ ಊರಿಗೆ ಕಿಚ್ಚು ಹಚ್ಚುವಂತಹ ಸನ್ನಿವೇಶ ಕರಾವಳಿಯಲ್ಲಿದೆ. ಸಾರ್ವಜನಿಕ ಸಮಾವೇಶದಲ್ಲಿ ಸಂಘಪರಿವಾರ ನಾಯಕರ ಮುಖ್ಯ ಅಜೆಂಡಾವೇ ‘ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸಿ, ಮುಸ್ಲಿಮರು ಮದುವೆಯಾಗುತ್ತಾರೆ’ ಎಂಬುದಾಗಿದೆ. ಇಂತಹದೇ ವಿಕಾರ ರಾಜಕೀಯವನ್ನು ಮಾಡುತ್ತಾ ಠಾಕ್ರೆ ತನ್ನ ಪಕ್ಷವನ್ನೂ ಕಟ್ಟಿದ್ದರು. ಆದರೆ ಅವರ ಖಾಸಗಿ ಬದುಕಿನ ಪುಟಗಳಲ್ಲಿ ಮಾತ್ರ, ನಾವು ಬೇರೆಯದೇ ಆದ ನಂಬಿಕೆಯನ್ನು ಓದುತ್ತೇವೆ. ಅದು ಅವರ ಸಾರ್ವಜನಿಕ ವಿಕಾರ ಮುಖಕ್ಕಿಂತ ಭಿನ್ನವಾದ ಆದ್ರ‰ ಮುಖ. ಅವರು ತನ್ನ ಮೊಮ್ಮಗಳನ್ನು ಆಕೆ ಪ್ರೀತಿಸಿದ ಮುಸ್ಲಿಮ್ ಯುವಕನಿಗೆ ದಾರೆಯೆರೆದುಕೊಟ್ಟರು. ಬಾಳಾ ಠಾಕ್ರೆಯವರ ಹಿರಿಯ ಮಗ ಬಿಂದುಮಾಧವ ಅವರ ಪುತ್ರಿ ನೇಹಾ ಅವರು ಮನಾನ್ ಎಂಬ ಮುಸ್ಲಿಮ್ ಹುಡುಗನನ್ನು ಪ್ರೀತಿಸಿದಳು. ಈ ಮನಾನ್‌ನ ತಂದೆ ಇನ್ನಾರೂ ಅಲ್ಲ. ಬಿಂದು ಮಾಧವ ಮತ್ತು ರಾಜ್ ಠಾಕ್ರೆಯವರ ಮೆಚ್ಚಿನ, ಹಿರಿಯ ಗೆಳೆಯನ ಮಗ. ತನ್ನ ಮೊಮ್ಮಗಳು ಮುಸ್ಲಿಮ್ ಹುಡುಗನನ್ನು ಪ್ರೀತಿಸಿದಳು ಎಂದು ಠಾಕ್ರೆ ಸಾರ್ವಜನಿಕ ಬೀದಿಯಲ್ಲಿ ಗರ್ಜಿಸಲಿಲ್ಲ. ಅಥವಾ ಶಿವಸೈನಿಕ ಗೂಂಡಾಗಳನ್ನು ಬಿಟ್ಟು ಹುಡುಗನನ್ನೋ, ಹುಡುಗನ ಕುಟುಂಬವನ್ನೋ ಥಳಿಸಲಿಲ್ಲ. ಲವ್‌ಜಿಹಾದ್ ಎಂದು ಬಂಬ್ಡ ಬಜಾಯಿಸಲಿಲ್ಲ. ರಾಜ್‌ಠಾಕ್ರೆ ಕುಟುಂಬ ಸೇರಿದಂತೆ ಶಿವಸೇನೆಯ ಹಲವಾರು ಮುಖಂಡರು ತಾಜ್‌ಹೊಟೇಲ್‌ನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದರು. ಬಾಳಾಠಾಕ್ರೆ ಈ ಮದುವೆಯಲ್ಲಿ ಸಾರ್ವಜನಿಕವಾಗಿ ಭಾಗ ವಹಿಸಲಿಲ್ಲ ಎನ್ನುವ ಮಾತಿದೆ. ಆದರೆ ಖಾಸಗಿಯಾಗಿ ಮಾತೋಶ್ರೀಯಲ್ಲಿ ಠಾಕ್ರೆ ವಧೂವರರನ್ನು ಆಶೀರ್ವದಿಸಿದ್ದರು. ಇದು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಯಿತು.
ಪ್ರೀತಿ, ಪ್ರೇಮ ಎಂತಹ ಗಡಿ, ಕೋಟೆ ಗಳನ್ನೂ ನುಚ್ಚು ನೂರು ಮಾಡಬಹುದು ಎನ್ನುವುದಕ್ಕೆ ಇನ್ನೊಂದು ಉದಾಹರಣೆ, ಬಿಜೆಪಿಯ ಸರ್ವೋಚ್ಚ ನೇತಾರ ಅಡ್ವಾಣಿ. ಇವರು ಸಿಂಧಿ. ಇವರ ಸೋದರ ತಂಗಿ ಮದುವೆಯಾಗಿರುವುದು ಒಬ್ಬ ಮುಸ್ಲಿಮ್ ಹುಡುಗನನು.್ನ ವಿಶೇಷವೆಂದರೆ ಈ ಮದುವೆಗೆ ಅಡ್ವಾಣಿ ಖುದ್ದಾಗಿ ಹಾಜರಾಗಿ, ವಧೂವರರನ್ನು ಹಾರೈಸಿದ್ದರು. ಈ ಮದುವೆ ಇಡೀ ಕುಟುಂಬ ಒಂದಾಗಿ ಒಪ್ಪಿ ನಡೆಸಿದ ಆರೇಂಜ್‌ಡ್ ಮದುವೆಯಾಗಿತ್ತು. ಇಲ್ಲಿ ಹಿಂದೂ ಮುಸ್ಲಿಮ್ ಎನ್ನುವ ಯಾವುದೇ ಗಡಿಗಳಿರಲಿಲ್ಲ. ಯಾರಲ್ಲೂ ದ್ವೇಷ, ಸಿಟ್ಟು ಇರಲಿಲ್ಲ. ಎಲ್ಲವನ್ನೂ ‘ಪ್ರೀತಿ’ ಅಳಿಸಿ ಹಾಕಿತ್ತು. ಎಲ್.ಕೆ. ಅಡ್ವಾಣಿಯ ಡ್ರೈವರ್‌ಗಳಲ್ಲಿ ಮುಸ್ಲಿಮರಿದ್ದರು. ಆದರೆ ಇದೇ ಸಂದರ್ಭದಲ್ಲಿ, ಕೇರಳದಲ್ಲಿ ಅಡ್ವಾಣಿ ಆಗಮಿಸಿದಾಗ, ಭದ್ರತೆಗಾಗಿ ಇಲ್ಲಿನ ಸರಕಾರ ಇಬ್ಬರು ಮುಸ್ಲಿಮ್ ಚಾಲಕರನ್ನು ತಂಡದಿಂದ ತೆಗೆದು ಹಾಕಿತು.
ಗೋಹತ್ಯೆಯನ್ನು ರಾಜಕಾರಣ ಮಾಡಿಯೇ ಬಿಜೆಪಿ ಮತ್ತು ಸಂಘಪರಿವಾರ ಸಾಕಷ್ಟು ಮತಗಳನ್ನು ಬಾಚಿಕೊಂಡಿದೆ. ಆದರೆ ಈ ದೇಶದಲ್ಲಿ ಅತ್ಯಧಿಕ ಗೋಮಾಂಸ ರಫ್ತಾಗಿರು ವುದು ಎನ್‌ಡಿಎ ಆಡಳಿತ ಕಾಲದಲ್ಲಿ. ಆಗ ಈ ದೇಶದ ಪ್ರಧಾನಿಯಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ. ಸಾರ್ವ ಜನಿಕವಾಗಿ ಗೋವು ನಿಷೇಧ ವಾಗಿದ್ದರೂ, ಖಾಸಗಿ ಯಾಗಿ ಅಟಲ್ ಬಿಹಾರಿ ವಾಜಪೇಯಿ ಗೋಮಾಂಸ ತಿನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಈ ಕುರಿತಂತೆಯೇ ಒಮ್ಮೆ ವಿದೇಶದಲ್ಲಿ ಅಟಲ್ ಜೊತೆಗೆ ಯಾರೋ ಕೇಳಿದ್ದರಂತೆ ‘‘ಅಟಲ್‌ಜೀ...ದೇವತೆಗಳು ಆವಾಹಿಸಿಕೊಂಡಿ ರುವ ಗೋಮಾಂಸವನ್ನು ನೀವು ಭಕ್ಷಿಸುತ್ತಿದ್ದೀರಿ...’’
ಅದಕ್ಕೆ ಅಷ್ಟೇ ಲವಲವಿಕೆಯಿಂದ ಉತ್ತರಿಸಿದ ಅಟಲ್ ಬಿಹಾರಿ ವಾಜಪೇಯಿ ‘‘ಭಾರತದ ಗೋವುಗಳಲ್ಲಿ ಮಾತ್ರ ದೇವತೆಗಳಿರುತ್ತವೆ. ಇದು ವಿದೇಶಿ ಗೋವು’’ ಎಂದು ನಕ್ಕರಂತೆ. ಹೀಗೆ ಮಾತನಾಡುವಾಗ ಅವರ ಮುಂದೆ ಸಾರ್ವಜನಿಕ ವೇದಿಕೆಯಿರಲಿಲ್ಲ. ಲಕ್ಷಾಂತರ ಮತದಾರರಲಿಲ್ಲ. ಅದು ಅವರ ಖಾಸಗಿ ಕ್ಷಣವಾಗಿತ್ತು. ಅವರ ಅತ್ಯಂತ ಖಾಸಗಿ ಮಾತಾಗಿತ್ತು. ಸಾರ್ವಜನಿಕ ಸಮಾರಂಭದಲ್ಲಿ ನಾವು ನಮಗೆ ಬೇಕಾದುದನ್ನು ಮಾತನಾಡುವುದಕ್ಕಿಂತ, ಸಾರ್ವಜನಿಕರಿಗೆ ಬೇಕಾದುದನ್ನೇ ಮಾತನಾಡಬೇಕಾದ ಅನಿವಾರ್ಯತೆ ಇರುತ್ತದೆ.
ಚಿದಾನಂದಮೂರ್ತಿ ಕನ್ನಡದ ಖ್ಯಾತ ಚಿಂತಕರು. ಆದರೆ ಕಳೆದ ಎರಡು ದಶಕಗಳಿಂದ ಅವರು ಸಂಶೋಧನೆಗೆ ರಾಜೀನಾಮೆ ನೀಡಿ, ಅಪ್ಪಟ ಸಂಘಪರಿವಾರ ಕಾರ್ಯಕರ್ತರಾಗಿ ಕೆಲಸ ಮಾಡತೊಡಗಿದ್ದಾರೆ. ಅದರ ಹಿಂದೆ ಯಾವ ರಾಜಕೀಯ ಉದ್ದೇಶವಿದೆಯೋ, ಮುಸ್ಲಿಮರ ವಿರುದ್ಧ ದ್ವೇಷ ಕಾರುವುದನ್ನೇ ಅವರು ತನ್ನ ಬದುಕಿನ ಪರಮ ಗುರಿಯಾಗಿಸಿ ಕೊಂಡಿದ್ದಾರೆ. ಇಂಥವರ ಜೀವನದಲ್ಲಿ ಒಬ್ಬ ಮುಸ್ಲಿಮ್ ಬಹುಮುಖ್ಯ ಪಾತ್ರ ವಹಿಸಿದ್ದ ಎನ್ನುವುದನ್ನು ನೀವು ನಂಬುತ್ತೀರ? ಇದನ್ನು ಸ್ವತಃ ಚಿದಾನಂದಮೂರ್ತಿಯವರೇ ಹಿಂದೆ ಹಂಚಿ ಕೊಂಡಿದ್ದರು.
ಈ ಚಿದಾನಂದಮೂರ್ತಿಯವರು ಒಮ್ಮೆ ಜೀವನದಲ್ಲಿ ತೀವ್ರ ಖಿನ್ನತೆಗೊಳಗಾಗಿ, ಆತ್ಮಹತ್ಯೆಗೆ ಯತ್ನಿಸಿದ್ದರು.
ಕನ್ನಡದ ಭಾಷೆಯ ಕುರಿತಂತೆ, ಭವಿಷ್ಯದ ಕುರಿತಂತೆ ತೀವ್ರ ಭ್ರಮನಿರಸನಕ್ಕೊಳಗಾಗಿ, ಸುದೀರ್ಘ ಪತ್ರವೊಂದನ್ನು ಬರೆದಿಟ್ಟು ಅವರು ತುಂಗಾ ನದಿಗೆ ಹಾರಿದರು. ಈ ಸಂದರ್ಭದಲ್ಲಿ ಅವರು ಸತ್ತೇ ಹೋಗಬೇಕಾಗಿತ್ತು. ಆಗ ಒಬ್ಬ ಅಂಬಿಗ ಅವರ ಪ್ರಾಣವನ್ನು ರಕ್ಷಿಸಿದ. ಆ ಅಂಬಿಗ ಒಬ್ಬ ಮುಸಲ್ಮಾನನಾಗಿದ್ದ. ಸದ್ಯಕ್ಕೆ ಮುಸ್ಲಿಮರನ್ನು ಶತಾಯಗತಾಯ ದ್ವೇಷಿಸುತ್ತಿರುವ ಚಿದಾನಂದಮೂರ್ತಿ ಆ ಅಂಬಿಗನ ವಿರುದ್ಧ ಈ ಮೂಲಕ ಸೇಡು ತೀರಿಸುತ್ತಿದ್ದಾರೆಯೇ ಎಂಬ ಅನುಮಾನ ನನ್ನನ್ನು ಆಗಾಗ ಕಾಡಿದ್ದಿದೆ. ಚಿದಾನಂದಮೂರ್ತಿಯ ಬದುಕಿನ ಈ ಕತೆಯನ್ನು ನಾನು ಒಬ್ಬ ಮಿತ್ರರಿಗೆ ಹೇಳಿದಾಗ, ಆತ ಸಿಟ್ಟನ್ನು ನಟಿಸುತ್ತಾ ಹೇಳಿದ್ದ ‘‘ಎಲ್ಲಿದ್ದಾನೆ ಆ ಮುಸ್ಲಿಮ್ ಅಂಬಿಗ. ನಾವು ಮೊದಲು ಅವನಿಗೊಂದು ಪಾಠ ಕಲಿಸಬೇಕಾಗಿದೆ’’ ಸಾರ್ವಜನಿಕವಾಗಿ ಮುಸ್ಲಿಮರ ಕುರಿತಂತೆ ಅತ್ಯಂತ ಕಠೋರವಾಗಿ ರಾಜಕಾರಣ ಮಾಡುತ್ತಿರುವ ಚಿದಾನಂದ ಮೂರ್ತಿ, ಖಾಸಗಿಯಾಗಿಯೂ ಅಷ್ಟೇ ಕಟುವಾಗಿ ಮುಸ್ಲಿಮರನ್ನು ದ್ವೇಷಿಸುತ್ತಾರೆಯೆ? ಈ ಕುರಿತಂತೆ ನನಗೆ ಅನುಮಾನವಿದೆ.
ಸಂಘಪರಿವಾರ ಹೇಳುವಂತೆ ಪಾಕಿಸ್ತಾನಕ್ಕೆ ಕಾರಣ ಮಹಮ್ಮದ್ ಅಲಿ ಜಿನ್ನಾ. ಇವರ ಎದೆಯ ಒಳಬಾಗಿಲನ್ನು ತಟ್ಟಿದರೆ ತೆರೆದುಕೊಳ್ಳುವ ಅಚ್ಚರಿಗಳೋ ನಂಬಲು ಅಸಾಧ್ಯವಾದಂತಹವುಗಳು. ಜಿನ್ನಾ ಸಾಹೇಬರ ಅಜ್ಜನ ಹೆಸರು ಪೂಂಜ ಗೋಕುಲ್ ದಾಸ್ ಮೇಘ್‌ಜಿ. ಇವರು ಹಿಂದೂ ಭಾಟಿಯಾ ರಜ್‌ಪೂತ್. ಬಳಿಕ ಇವರು ಇಸ್ಲಾಂಗೆ ಮತಾಂತರವಾದರು. ಕಟ್ಟಾ ಮುಸ್ಲಿಂ ಎಂದು ಎಲ್ಲರೂ ನಂಬಿರುವ ಜಿನ್ನಾ ಅವರ ಪತ್ನಿಯ ಹೆಸರು ರತ್ನಾಬಾಯಿ. ಈಕೆ ಪಾರ್ಸಿ. ಇವರ ಮಗ ಖ್ಯಾತ ಉದ್ಯಮಿ ನುಸ್ಲುವಾಡಿಯಾ. ಇವರು ಭಾರತೀಯರಲ್ಲಿ ಒಂದಾಗಿ ಬಿಟ್ಟಿದ್ದಾರೆ. ಅಂದ ಹಾಗೆ ಅಪ್ಪಟ್ಟ ಪಾಶ್ಚಿಮಾತ್ಯ ಅನುಕರಣೆಯ ವ್ಯಕ್ತಿ ಜಿನ್ನಾ. ಇವರು ನಮಾಝ್ ಮಾಡುವುದು ತೀರಾ ಅಪರೂಪವಾಗಿತ್ತು. ಮದ್ಯ ಇವರಿಗೆ ತುಂಬಾ ಪ್ರೀತಿ. ಹಂದಿಮಾಂಸವೂ ಇವರ ಇಷ್ಟದ ಆಹಾರವಾಗಿತ್ತು ಎಂದು ಆಪ್ತರು ಹೇಳುತ್ತಾರೆ. ಗಾಂಧೀಜಿಗೆ ‘ಬಾಲ’ವಾಗಿ ಸೇರಿದ್ದ ‘ಮಹಾತ್ಮ’ ಎಂಬ ಪದವನ್ನು ದಿಟ್ಟವಾಗಿ ನೀವಾಳಿಸಿ ತೆಗೆದವರು ಜಿನ್ನಾ. ಸಭೆಯೊಂದರಲ್ಲಿ ಮಹಾತ್ಮಗಾಂಧಿಯ ಬಳಿಕ ಮಾತನಾಡುವಾಗ ಜಿನ್ನಾ ದಿಟ್ಟವಾಗಿ ‘‘ಮಿ. ಗಾಂಧಿ’ ಎಂದು ಕರೆಯುತ್ತಾರೆ. ಸೇರಿದ ಜನರೆಲ್ಲ ಇದನ್ನು ಪ್ರತಿಭಟಿಸಿ, ಮಹಾತ್ಮಗಾಂಧಿ ಎಂದು ಕರೆಯಲು ಒತ್ತಾಯಿಸುತ್ತಾರೆ. ಆದರೆ ಅದನ್ನು ಗಟ್ಟಿಯಾಗಿ ಅಲ್ಲಗಳೆದ ಜಿನ್ನಾ ‘ಮಿ. ಗಾಂಧಿ’ ಎಂದೇ ಕರೆದು ತನ್ನ ಮಾತನ್ನು ಮುಂದುವರೆಸುತ್ತಾರೆ.
ವಿಪರ್ಯಾಸವನ್ನು ಗಮನಿಸಿ. ಇಂದು ಮದ್ರಸಗಳನ್ನು ಸಂಘಪರಿವಾರ ಸಹಿತ ಬಿಜೆಪಿ ನಾಯಕರು ಕಟುವಾಗಿ ಟೀಕಿಸುತ್ತಾರೆ. ಮದ್ರಸ ದೇಶದ್ರೋಹಿಗಳನ್ನು ಸೃಷ್ಟಿಸುತ್ತಿದೆ ಎಂದು ಅನುಮಾನಿಸುತ್ತಿದ್ದಾರೆ. ಸ್ವಾತಂತ್ರಪೂರ್ವದಲ್ಲಿ ಬ್ರಿಟಿಷ ವಿರುದ್ಧ ಹೋರಾಡಿದ ಮುಸ್ಲಿಮರಲ್ಲಿ ಹೆಚ್ಚಿನವರು ಮದ್ರಸದಿಂದ ಬಂದ ವಿದ್ಯಾರ್ಥಿಗಳು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಜಿನ್ನಾ ಮದ್ರಸದ ವಿದ್ಯಾರ್ಥಿಯಾಗಿರಲಿಲ್ಲ. ಅವನು ಅಪ್ಪಟ ಪಾಶ್ಚಿಮಾತ್ಯ ದೃಷ್ಟಿವುಳ್ಳ ನಾಯಕ. ವೌಲಾನ ಅಬುಲ್ ಕಲಾಂ ಅಝಾದ್ ಅಪ್ಪಟ ಮದ್ರಸದಿಂದ ಬಂದ, ಇಸ್ಲಾಮಿ ವಿದ್ವಾಂಸ. ಆದರೆ ಜಿನ್ನಾ ಪಾಕಿಸ್ತಾನದ ಜೊತೆಗೆ ನಿಂತರು. ಆಝಾದ್ ಭಾರತದ ಜೊತೆಗೆ ನಿಂತರು. ಎಷ್ಟೆಂದರೆ, ಗಾಂಧಿಯ ಪಕ್ಕದಲ್ಲಿ ಆಝಾದ್ ಅವರನ್ನು ಕಲ್ಪಿಸಿಕೊಳ್ಳದೆ ಗಾಂಧಿಯ ಚಿತ್ರ ಪೂರ್ತಿಯಾಗುವುದಿಲ್ಲ ಎನ್ನುವವರೆಗೆ.
ಜಿನ್ನಾ ಪಾಕಿಸ್ತಾನವನ್ನು ಪಡೆದದ್ದು ಮುಸ್ಲಿಂ ಮತಾಂಧತೆಯ ಮೂಲಕ ಅಲ್ಲ. ಕೇವಲ ಒಂದು ಟೈಪ್‌ರೈಟರ್ ಮಶಿನ್ ಮೂಲಕ ಎನ್ನುವ ಹೇಳಿಕೆ ಈಗಾಗಲೇ ಜನಜನಿತವಾಗಿದೆ. ಸಂದರ್ಭವನ್ನಷ್ಟೇ ಅವರು ಬಳಸಿಕೊಂಡರು. ಪಾಕಿಸ್ತಾನ ನಿರ್ಮಾಣ ಸಂದರ್ಭದಲ್ಲಿ ಅವರಿಗೆ ಅದು ಮುಸ್ಲಿಮ್ ಮೂಲಭೂತವಾದಿಗಳ ಕೈ ಸೇರಬೇಕೆಂಬ ಯಾವ ಇಚ್ಛೆಯೂ ಇರಲಿಲ್ಲ. ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಬರೆದದ್ದೇ ಒಬ್ಬ ಭಾರತೀಯ. ಹಿಂದೂ. ಜಿನ್ನಾ ಅವರ ಆರಂಭದ ಭಾಷಣವೇ ಅವರ ಒಳಗಿನ ತಳಮಳವನ್ನು ಸೂಚ್ಯವಾಗಿ ಹೇಳುತ್ತದೆ. ಇತ್ತೀಚೆಗೆ ಅಡ್ವಾಣಿ ಪಾಕಿಸ್ತಾನಕ್ಕೆ ಹೋದಾಗ ಅವರು ಬಹುಶಃ ಜಿನ್ನಾ ಅವರ ಎದೆಯ ಖಾಸಗಿ ಬಾಗಿಲನ್ನು ತಟ್ಟಿದರು. ಜಿನ್ನಾ ಅವರನ್ನು ಸೆಕ್ಯುಲರ್ ಎಂದು ಕರೆಯುವ ಮೂಲಕ, ಇಡೀ ಪಾಕಿಸ್ತಾನ ಅವರನ್ನು ಮಾದರಿಯಾಗಿಟ್ಟುಕೊಂಡು ಸೆಕ್ಯುಲರ್ ದೇಶವಾಗಬೇಕು ಎಂಬ ಆಶಯ ಅಡ್ವಾಣಿ ಅವರ ಬಳಿಯಿತ್ತು. ಈ ಮೂಲಕ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಸರಕಾರ ತನ್ನ ರಕ್ಷಣೆಯನ್ನು ಇನ್ನಷ್ಟು ಬಲಪಡಿಸಬೇಕು ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದರು. ಈ ಮಾತಿನ ಉದ್ದ-ಅಗಲ ಅರಿಯದೇ ಭಾರತದಲ್ಲಿ ಸಂಘಪರಿವಾರ ನಾಯಕರು ಕಿರುಚಾಡಿದರು.
ಕಮಲ್‌ಹಾಸನ್ ಭಾರತದ ಶ್ರೇಷ್ಠ ಕಲಾವಿದ. ಈತನ ಹೆಸರಿನ ಮುಂದಿರುವ ಹಾಸನ್ ಕಾರಣದಿಂದ ಅವರು ಹಲವು ಬಾರಿ ತೊಂದರೆಗೆ ಸಿಲುಕಿಕೊಂಡಿದ್ದಾರೆ. ವಿದೇಶಗಳಲ್ಲಿ ಹಲವು ಬಾರಿ ಹಾಸನ್ ಎನ್ನುವ ಕಾರಣಕ್ಕಾಗಿ ಇವರನ್ನು ತನಿಖೆಗೊಳಪಡಿಸಲಾಗಿದೆ. ಅವಮಾನ ಪಡಿಸಲಾಗಿದೆ. ಎಷ್ಟೋ ಭಾರತೀಯರು ಕಮಲ್ ಹಾಸನ್ ಅವರನ್ನು ಮುಸ್ಲಿಮರೆಂದೇ ತಿಳಿದುಕೊಂಡಿದ್ದಾರೆ. ಆದರೆ ಕಮಲ್ ಅವರು ಮೂಲತಃ ಬ್ರಾಹ್ಮಣರು. ಹಾಸನ್ ಎನ್ನುವ ಹೆಸರು ಅವರಿಗೆ ದೊರಕಿರುವುದರ ಹಿಂದೆ ಒಂದು ಹೃದಯಸ್ಪರ್ಶಿ ಕತೆಯಿದೆ.
ಕಮಲ್ ಹಾಸನ್ ತಂದೆಯ ಹೆಸರು ಶ್ರೀನಿವಾಸನ್. ಅವರ ಆತ್ಮೀಯ ಮಿತ್ರರ ಹೆಸರು ಯಾಕೂಬ್ ಹಸನ್. ಇವರಿಬ್ಬರೂ ಸ್ವಾತಂತ್ರ ಹೋರಾಟಗಾರರು. ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ ಕಾರಣ ಇವರನ್ನು ಜೊತೆಯಾಗಿಯೇ ಜೈಲಲ್ಲಿಡಲಾಗಿತ್ತು. ಆಗ ತಮಿಳಿನಾಡಿನಲ್ಲಿ ಬ್ರಿಟಿಷರ ವಿರುದ್ಧ ಯಾವ ರೀತಿಯ ಆಕ್ರೋಶವಿತ್ತೋ, ಹಾಗೆಯೇ ಬ್ರಾಹ್ಮಣರ ವಿರುದ್ಧವೂ ಆಕ್ರೋಶವಿತ್ತು. ತಮಿಳುನಾಡಿನಲ್ಲಿ ದ್ರಾವಿಡ ಚಳವಳಿಯ ಕಾಲ ಅದು. ಆಗ ಜೈಲಿನಲ್ಲಿ ಉಳಿದ ಕೈದಿಗಳು ಶ್ರೀನಿವಾಸನ್ ವಿರುದ್ಧ ತಿರುಗಿ ಬಿದ್ದರು. ಇಂತಹ ಸಂದರ್ಭದಲ್ಲಿ ಯೂಕಬ್ ಹಸನ್ ಜೈಲಿನಲ್ಲಿರುವವರೆಗೂ ಶ್ರೀನಿವಾಸನ್ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದರು. ಈ ಯಾಕೂಬ್ ಹಸನ್ ಅವರನ್ನು ಬಳಿಕ ಶ್ರೀನಿವಾಸ್ ಎಷ್ಟು ಹಚ್ಚಿಕೊಂಡರು ಎಂದರೆ, ತನ್ನ ಮೂರು ಗಂಡು ಮಕ್ಕಳಿಗೂ ಹಸನ್ ಹೆಸರನ್ನು ನೀಡಿದರು. ಚಂದ್ರ ಹಾಸನ್, ಚಾರು ಹಾಸನ್, ಕಮಲ ಹಾಸನ್. ಇಂದು ದೇಶ ಕಮಲ್‌ನನ್ನು ಗುರುತಿಸುವುದು ಅವರ ತಂದೆಯ ಹೆಸರಿನ ಮೂಲಕ ಅಲ್ಲ, ಬದಲಿಗೆ ಅವರ ಮಿತ್ರ ಯಾಕೂಬ್ ಹಸನ್ ಮೂಲಕ. ಇದನ್ನು ಸ್ವತಃ ಕಮಲ್ ಹಾಸನ್ ಅವರೇ ಹೃದ್ಯವಾಗಿ ಟಿವಿ ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಕಮಲ್ ಹಾಸನ್ ಅವರ ಹೆಚ್ಚಿನ ಚಿತ್ರಗಳಲ್ಲಿ ಹಿಂದೂ-ಮುಸ್ಲಿಮ್ ಸಂಬಂಧ ಆತ್ಮೀಯವಾಗಿ ಕಾಣಿಸಿಕೊಳ್ಳುವುದಕ್ಕೆ ಇದೂ ಕಾರಣವಿರಬಹುದು. ‘ಹೇ ರಾಮ್’ ಚಿತ್ರದಲ್ಲಿ ಮುಸ್ಲಿಮ್ ಸ್ನೇಹಿತನ ಸಂಸರ್ಗದಿಂದ ಗಾಂಧಿಯನ್ನು ಕೊಲ್ಲುವುದನ್ನು ಸಾಕೇತ್‌ರಾಮ್ ಕೈ ಬಿಡುತ್ತಾನೆ. ಅಷ್ಟೇ ಅಲ್ಲ, ತನ್ನ ಪ್ರಾಣವನ್ನು ಒತ್ತೆಯಿಟ್ಟು ಸ್ನೇಹಿತನ ಕುಟುಂಬವನ್ನು ರಕ್ಷಿಸುತ್ತಾನೆ. ತನ್ನ ತಂದೆಯನ್ನು ರಕ್ಷಿಸಿದ ಯೂಕೂಬ್ ಹಸನ್ ಅವರು ಕಮಲ್ ಹಾಸನ್ ಎದೆಯಲ್ಲಿ ಜೀವಂತವಾಗಿದ್ದುದೇ ಹೇರಾಮ್ ಚಿತ್ರಕ್ಕೆ ಕಾರಣವಾಗಿರಬಹುದು.
ನಾವು ಒಬ್ಬಂಟಿಯಾಗಿದ್ದಾಗ ಮನುಷ್ಯರಾಗಿಯೇ ಇರುತ್ತೇವೆ. ಆದರೆ ಸಾರ್ವಜನಿಕವಾಗಿ, ಸಮೂಹವಾಗಿ ಗುರುತಿಸಿಕೊಳ್ಳುವಾಗ ನಾವು ಮೃಗವಾಗಿ ಬಿಡುವ ಅಪಾಯ ಇಂದಿನ ರಾಜಕೀಯ ಸಂದರ್ಭಗಳಲ್ಲಿ ಹೆಚ್ಚುತ್ತಾ ಇದೆ. ಸಾರ್ವಜನಿಕ ವೇದಿಕೆಯಲ್ಲಿ ಒಬ್ಬ ಉನ್ಮತ್ತ ವ್ಯಕ್ತಿ ಆಡುವ ಭಾಷಣವನ್ನು ನಿಜವೆಂದೇ ಭಾವಿಸಿ, ಅದನ್ನು ಆವಾಹಿಸಿಕೊಂಡು ಇನ್ನೊಬ್ಬನನ್ನು ದ್ವೇಷಿಸಲು ಹೊರಡುತ್ತೇವೆ. ಈ ದೇಶದ ಎಲ್ಲ ಕೋಮುಗಲಭೆಗಳು ನಡೆದಿರುವುದು ಇಂತಹದೇ ಸಂದರ್ಭಗಳಲ್ಲಿ. ನಾವು ಒಬ್ಬಂಟಿಯಾಗಿದ್ದಾಗ ರಕ್ತಕ್ಕೆ ಅಂಜುತ್ತೇವೆ. ಸಾವಿಗೆ ಮರುಗುತ್ತೇವೆ. ಯಾವುದೇ ಬರ್ಬರ ಕೊಲೆ ನಡೆದಾಗ ಅದಕ್ಕೆ ಅಸಹ್ಯ ಪಟ್ಟುಕೊಳ್ಳುತ್ತೇವೆ. ಆದರೆ ಸಮೂಹದೊಂದಿಗೆ ಉನ್ಮತ್ತರಾಗಿರುವಾಗ ಹಾಗಿರಬೇಕೆಂದೇನೂ ಇಲ್ಲ. ಸಣ್ಣ ರಕ್ತ ಹನಿಗೆ ಅಂಜುವ ನಾವು ಸಮೂಹದೊಂದಿಗೆ ಸೇರಿ ಒಂದು ಕೊಲೆಯನ್ನೇ ಮಾಡಿ ಬಿಡಬಹುದು. ಈ ಕಾರಣದಿಂದಲೇ ಸಾರ್ವಜನಿಕ ಭಾಷಣಗಳನ್ನು ಆಲಿಸುವಾಗ ನಾವು ಸದಾ ಎಚ್ಚರವಾಗಿರಬೇಕು.
ವೇದಿಕೆಯಲ್ಲಿ ಮಾತನಾಡುವವ ತನ್ನ ಹೃದಯದ ಮಾತುಗಳನ್ನು ಆಡುತ್ತಿಲ್ಲ. ತಾನು ಏನು ಮಾತನಾಡಬೇಕೋ ಅದನ್ನು ಆಡುತ್ತಿಲ್ಲ. ಬದಲಿಗೆ ಸಮೂಹಕ್ಕೆ ಏನು ಬೇಕೋ ಅದನ್ನು ಆಡುತ್ತಿದ್ದಾನೆ ಎಂಬ ಪ್ರಜ್ಞೆ ಇಟ್ಟುಕೊಂಡು ಅದನ್ನು ಒಂದು ಕಿವಿಯಲ್ಲಿ ಕೇಳಿ, ಇನ್ನೊಂದು ಕಿವಿಯಲ್ಲಿ ಬಿಡಬೇಕು. ನಾನು ನಮ್ಮ ಎದೆಯ ಒಳಗಿನ ಖಾಸಗಿ ಧ್ವನಿಯನ್ನು ಆಲಿಸಲು ಕಲಿಯಬೇಕು. ನಮಗೆ ಕಮಲ್ ಹಸನ್‌ನ ತಂದೆಯಂಥವರು ಮಾದರಿಯಾಗಬೇಕು. ಸೌಹಾರ್ದ ಯಾವುದೇ ವೇದಿಕೆಗಳಲ್ಲಿ, ಸಮಾರಂಭಗಳಲ್ಲಿ ಹುಟ್ಟುವಂತಹದ್ದಲ್ಲ. ಅದು ಎರಡು ವ್ಯಕ್ತಿಗಳು ಪರಸ್ಪರರ ಹೃದಯವನ್ನು ಆಲಿಸುವಾಗ ಹುಟ್ಟುವಂಥದ್ದು. ಈ ಕಾರಣದಿಂದ ನಾವು, ಹೃದಯದ ಧ್ವನಿಯನ್ನು ಆಲಿಸುವುದಕ್ಕೆ ಶುರುಮಾಡೋಣ. ಸಾಧ್ಯವಾದರೆ, ಸಾರ್ವಜನಿಕ ವೇದಿಕೆಯ ಅಬ್ಬರದ ಭಾಷಣಗಳಿಗೆ ಶಾಶ್ವತ ಕಿವುಡರಾಗೋಣ.
ಮಾತು
‘‘ಮಾತನಾಡುವುದನ್ನು ಬೇಗ ಮಾತನಾಡಿ ಮುಗಿಸು...ನನ್ನಲ್ಲಿ ಕರೆನ್ಸಿ ತುಂಬಾ ಕಡಿಮೆ ಇದೆ...’’ ಆ ಕಡೆಯಿಂದ ಗೆಳೆಯ ಹೇಳುತ್ತಿದ್ದ.
‘‘ಮುಗಿಸುವುದಕ್ಕಿರುವ ಮಾತುಗಳನ್ನು ಆಡದೇ ಇರುವುದೇ ಒಳ್ಳೆಯದು’’ ಈ ಕಡೆಯಿಂದ ಗೆಳೆಯ ಮಾತನಾಡಿ ಮುಗಿಸಿದ.
ವ್ಯಾಪಾರ
ಅದು ಸುಡುವ ಬಿಸಿಲಿನ ದಿನಗಳು.
ಒಬ್ಬ ಮರದಡಿಯಲ್ಲಿ ಬೋರ್ಡ್ ಹಾಕಿ ಕುಳಿತಿದ್ದ.
‘‘ಇಲ್ಲಿ ನೆರಳನ್ನು ಮಾರಲಾಗುತ್ತದೆ. ಒಂದು ಗಂಟೆಯ ನೆರಳಿಗೆ ನೂರು ರೂ.’’
ಜೇನು
ನಾಳೆಗಿರಲಿ ಎಂದು ನೊಣಗಳು ಜೇನು ಸಂಗ್ರಹಿಸಿದವು.
ಮನುಷ್ಯ ಅದನ್ನು ದೋಚಿ ಅವುಗಳಿಗೆ ಬುದ್ಧಿ ಹೇಳಿದ ‘‘ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ’’
ಮರ
ನೂರಾರು ವರ್ಷ ಬಾಳಿ ಬದುಕಿದ್ದ ಬೃಹತ್ ಮರವೊಂದು ಉರುಳಿ ಬಿತ್ತು.
‘‘ಗುರುಗಳೇ ಪುರಾತನ ಮರ ಬಿದ್ದು ಬಿಟ್ಟಿತು’ ಮರುಕದಿಂದ ಶಿಷ್ಯರು ಹೇಳಿದರು.
ಸಂತ ಖೇದದಿಂದ ಉತ್ತರಿಸಿದ ‘‘ನನಗೆ ದುಃಖ ಆ ಮರದ ಬಗ್ಗೆಯಲ್ಲ. ಅದರ ಸುತ್ತಮುತ್ತ ಹಲವು ಸಣ್ಣು ಪುಟ್ಟ ಗಿಡಗಳು ಮರವಾಗುವ ಕನಸು ಕಾಣುತ್ತಿದ್ದವು. ಪುರಾತನ ಮರ ಅವುಗಳ ಮೇಲೆಯೇ ಬಿದ್ದು ಬಿಟ್ಟಿತು’’
ಗೆಳೆಯರು
‘‘ನನಗೆ ಜಾತಿ, ಧರ್ಮ ಇತ್ಯಾದಿಗಳಲ್ಲಿ ನಂಬಿಕೆಯಿಲ್ಲ. ನನಗೆ ಮುಸ್ಲಿಮ್ ಗೆಳೆಯರಿದ್ದಾರೆ, ಕ್ರಿಶ್ಚಿಯನ್ ಗೆಳೆಯರಿದ್ದಾರೆ, ಹಿಂದೂ ಗೆಳೆಯರಿದ್ದಾರೆ, ಬ್ರಾಹ್ಮಣ ಗೆಳೆಯರಿದ್ದಾರೆ, ದಲಿತ ಗೆಳೆಯರಿದ್ದಾರೆ...’’ ಅವನು ಹೇಳಿದ.
‘‘ಹೌದಾ? ನನಗೆ ಬರೇ ಗೆಳೆಯರು ಮಾತ್ರ ಇದ್ದಾರೆ’’ ಇವನು ಉತ್ತರಿಸಿದ.
ಸೆಕೆ
‘ಯಾಕೋ ಒಡಲು ಉರಿಯುವಂತೆ ವಿಪರೀತ ಸೆೆಕೆ...ಯಾಕಿರಬಹುದು...?’
ಅವನು ಕೇಳಿದ.
‘ಬಹುಶಃ ಮಳೆಯಾಗುವ ಸೂಚನೆಯದು.. ಸಹನೆಯಿರಲಿ.’ ಇವನು ಸಂತೈಸಿದ.
ಕುಡುಕ
‘‘ಸಾರ್...ನನ್ನ ಕಿಡ್ನಿ ಮಾರ್ತಾ ಇದ್ದೇನೆ....ತಗೋತೀರಾ ಸಾರ್?’’
‘‘ಯಾಕೆ ಅಷ್ಟು ಹಣದ ಅಗತ್ಯ?’’
‘‘ಕುಡಿಯೋದಕ್ಕೆ ಹಣ ಬೇಕಾಗಿದೆ ಸಾರ್...ಹೇಗೂ ಕುಡಿದ್ರೆ ಕಿಡ್ನಿ ಹೋಗುತ್ತೆ ಅಂತ ಹೇಳ್ತಾರೆ...ಅದಕ್ಕೆ ಮೊದಲೇ ಅದನ್ನು ಮಾರಿ ಕುಡಿಯೋಣ ಅಂತ ಸಾರ್...’’
ಮನುಷ್ಯತ್ವ
‘‘ಅಮ್ಮಾ ನಿಮ್ಮ ಮಗನಿಗೆ ಅರ್ಜಂಟಾಗಿ ಆಪರೇಷನ್ ಮಾಡಬೇಕಾಗಿದೆ. ಹತ್ತು ಲಕ್ಷ ರೂ. ತೆಗೊಂಡು ಬಾ...’’
‘‘ಅಷ್ಟು ಹಣ ನನ್ನಲ್ಲಿ ಇಲ್ಲ ಕಣಪ್ಪ...’’
‘‘ಸರಿ ಹಾಗಾದ್ರೆ...ಮಾತ್ರೆ ಬರ್ದುಕೊಡ್ತೀನಿ...ನಿನ್ನ ಮಗನ್ನ ಕರ್ಕೊಂಡು ಹೋಗು’’
‘‘ಹಾಗಾದ್ರೆ ಆಪರೇಷನ್...’’
‘‘ಅದಕ್ಕೆ ಬೇರೆ ಪೇಷಂಟನ್ನು ನೋಡ್ಕೋತೀನಿ...ನಮಗೂ ಮನುಷ್ಯತ್ವ ಅನ್ನೋದು ಇದೆ...’’
ಇತ್ತೀಚೆಗೆ ನನ್ನ ಊರಿನಲ್ಲಿರುವ ಬಾಲ್ಯದ ಸಹಪಾಠಿಗೆ ಮದುವೆಯಾಯಿತು. ಸಿಕ್ಕಿದಾಗಲೆಲ್ಲ "ಮದುವೆಯಾಯಿತಾ" ಎಂದು ಕೇಳಿದರೆ ‘‘ಈ ತೋಟ ಕಾಯುವ ಮಾಣಿಯನ್ನು ಯಾರು ಮದುವೆಯಾಗುತ್ತಾರೆ ಮಾರಾಯ...ಒಳ್ಳೆಯ ಬ್ರಾಹ್ಮಣ ಹುಡುಗಿ ನಿನಗೆ ಗೊತ್ತಿದ್ದರೆ ಹೇಳು...ಮದುವೆಯಾಗುವೆ’’ ಎನ್ನುತ್ತಿದ್ದ. ನಾನೂ ಅದನ್ನು ತಮಾಷೆಯಾಗಿಯೇ ತೆಗೆದುಕೊಳ್ಳುತ್ತಿದ್ದೆ. ‘‘ಲವ್ ಮ್ಯಾರೇಜ್ ಆಗು’’ ಎಂದರೆ, ‘‘ತೋಟ ಕಾಯುವ ಮಾಣಿಯನ್ನು ಯಾರು ಲವ್ ಮಾಡ್ತಾರೆ ಮಾರಾಯ... ನಿನಗಾದರೆ ಪರವಾಗಿಲ್ಲ... ಹುಡುಗಿಯ ಜೊತೆಗೆ ಕೆಜಿಗಟ್ಟಳೆ ಚಿನ್ನವನ್ನೂ ಹಾಕ್ತಾರೆ.... ಅತ್ಲಾಗಿ ಬ್ಯಾರಿಯಾಗಿ ಕನ್ವರ್ಟ್ ಆದ್ರೆ ಹೇಗೆ ಎಂದು ಯೋಚಿಸುತ್ತಿದ್ದೇನೆ...’’ ಎಂದು ನಕ್ಕಿದ್ದ. ಆದರೆ ಅವನ ನಗುವಿನ ಆಳದಲ್ಲೊಂದು ಸಣ್ಣ ವಿಷಾದವೊಂದು ಹೆಪ್ಪುಗಟ್ಟಿರುವುದು ತೀರ ತಡವಾಗಿ ತಿಳಿಯಿತು.
ಇತ್ತೀಚೆಗೆ ನನ್ನ ಆ ಸಹಪಾಠಿಗೆ ಮದುವೆಯಾಯಿತಂತೆ. ಅಷ್ಟು ಆತ್ಮೀಯನಾಗಿದ್ದ ಅವನು ತನ್ನ ಮದುವೆಯ ವಿಷಯವನ್ನು ನನಗೆ ತಿಳಿಸಿಯೇ ಇರಲಿಲ್ಲ. ಇನ್ಯಾರದೋ ಮೂಲಕ ತಿಳಿಯಿತು. ನನಗೇ ಅಚ್ಚರಿ ಉಂಟು ಮಾಡುವಂತೆ ಅವನು ಅಂತರ್ಜಾತೀಯ ವಿವಾಹವಾಗಿದ್ದ. ಆದರೆ ಮದುವೆಗೆ ಮುನ್ನ ಹುಡುಗಿಯನ್ನು ಶುದ್ಧೀಕರಣ ಮಾಡಿ ಬ್ರಾಹ್ಮಣಳನ್ನಾಗಿ ಮತಾಂತರ ಮಾಡಲಾಯಿತಂತೆ. ನನಗೆ ಎರಡು ರೀತಿಯಲ್ಲಿ ಖುಷಿಯಾಯಿತು. ಒಂದು, ಕೊನೆಗೂ ನನ್ನ ಸಹಪಾಠಿಗೆ ವಿವಾಹವಾಯಿತು. ಎರಡನೆಯದು, ತೀರಾ ಸಂಪ್ರದಾಯಸ್ಥನಾಗಿದ್ದ ಅವನು ಅಂತರ್ಜಾತಿಯ ವಿವಾಹವಾಗಿದ್ದ. ಎಲ್ಲಕ್ಕಿಂತ ಮುಖ್ಯವಾಗಿ ಕೆಳಜಾತಿಯ ತರುಣಿಯನ್ನು ತನ್ನ ಜಾತಿಯ ಸ್ಥಾನಮಾನಕೊಟ್ಟು ‘ಔದಾರ್ಯ’ ಮೆರೆದಿದ್ದ. ಮದುವೆಯ ಸುದ್ದಿ ತಂದ ಆ ಇನ್ನೊಬ್ಬ ಗೆಳೆಯನಲ್ಲಿ ಪ್ರಶ್ನೆ ಹಾಕಿದೆ ‘‘ಎಂತ, ಲವ್ ಮ್ಯಾರೇಜಾ?’’
ಅವನು ಕಿಸಕ್ಕನೆ ನಕ್ಕ ‘‘ಎಂಥ ಲವ್? ಅವನು ಯಾವಾಗ ಲವ್ ಮಾಡ್ಲಿಕ್ಕೆ? ಬ್ರಾಹ್ಮಣರಲ್ಲೀಗ ಸಿಕ್ಕಾಪಟ್ಟೆ ಹುಡುಗಿಯರ ಶಾರ್ಟೇಜು. ಕಲಿತ ಹುಡುಗಿಯರು, ಹಳ್ಳಿಯಲ್ಲಿ ತೋಟ ನೋಡಿಕೊಂಡು ಇರುವ ಹುಡುಗನನ್ನು ಮದುವೆಯಾಗುವುದಕ್ಕೆ ಒಪ್ಪುವುದಿಲ್ಲವಂತೆ. ಅದಕ್ಕೆ ಕೆಳವರ್ಗದ, ಬಡ ಹುಡುಗಿಯನ್ನು ಶುದ್ಧೀಕರಣ ಮಾಡಿ ಮದುವೆಯಾಗಿದ್ದಾನೆ...’’
ಇದು ಗೊತ್ತಿಲ್ಲದ ವಿಷಯವೇನೂ ಆಗಿರಲಿಲ್ಲ. ಹೆಣ್ಣಿನ ಕುರಿತಂತೆ ಗಂಡಿನ ದರ್ಪ, ದುರಹಂಕಾರಕ್ಕೆ ಪ್ರಕೃತಿಯೇ ನೀಡಿದ ಶಾಪದಂತೆ ತರುಣಿಯರ ಸಮಸ್ಯೆ ಹಲವು ಜಾತಿಗಳನ್ನು ಕಾಡುತ್ತಿದೆ. ಒಂದೆಡೆ ತಮ್ಮ ಜಾತಿಯ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ಇನ್ನೊಂದೆಡೆ ಮದುವೆಯಾಗಿ ಸಕುಟುಂಬಸ್ಥನಾಗಬೇಕು. ಈ ಸಂಘರ್ಷ ಹಲವು ಜಾತಿಗಳ ಹುಡುಗರನ್ನು ಕಾಡುತ್ತಿದೆ. ಹೆಣ್ಣಿನ ಕುರಿತಂಥ ತಾತ್ಸಾರ ಹೀಗೆ ಮುಂದುವರಿದರೆ ಇದು ಕೇವಲ ಬ್ರಾಹ್ಮಣ ಸಮಾಜವನ್ನು ಮಾತ್ರವಲ್ಲ, ಇಡೀ ಗಂಡು ಜಾತಿಯನ್ನೇ ಕಾಡಲಿದೆ. ಬ್ರಾಹ್ಮಣ ಸಮುದಾಯದಲ್ಲಿ ಅದರ ಒಂದು ಗ್ರಾಂಡ್ ರಿಹರ್ಸಲ್ ನಡೆಯುತ್ತಿದೆ ಅಷ್ಟೇ. ಬಹುಶಃ ಈ ಸಮಸ್ಯೆ ಬ್ರಾಹ್ಮಣ ತರುಣರಿಗೆ ಒಂದು ಹೊಸ ಅವಕಾಶವನ್ನೂ ತೆರೆದುಕೊಟ್ಟಿದೆ. ಜಾತಿ ಅಸಮಾನತೆಯ ಪಾಪಪ್ರಜ್ಞೆಯಿಂದ ಕಳಚಿಕೊಳ್ಳುವುದಕ್ಕೆ ಪೂರಕವಾಗಿ, ಈ ಅಂತರ್ಜಾತೀಯ ವಿವಾಹವನ್ನು ಬಳಸಿಕೊಳ್ಳಬಹುದಾಗಿದೆ. ನಿಧಾನಕ್ಕೆ ಇದು ಜಾತಿ ಅಸಮಾನತೆಯನ್ನೇ ಅಳಿಸುವುದಕ್ಕೆ ಸಹಾಯ ಮಾಡಬಹುದಾಗಿದೆ. ಆದುದರಿಂದ, ಈ ಕಾರಣಕ್ಕಾಗಿಯಾದರೂ ನನ್ನ ಸ್ನೇಹಿತ ಜಾತಿಯನ್ನು ಮೀರುವಂತಾಯಿತಲ್ಲ ಎಂದು ನನಗೆ ನಾನೇ ಖುಷಿ ಪಟ್ಟುಕೊಂಡಿದ್ದೆ.
ಆದರೆ ಇತ್ತೀಚೆಗೆ ಮುಂಬೈಯಿಂದ ಬಂದ ನನ್ನ ಗೆಳೆಯರಾದ ಕೆ. ಕೆ. ಸುವರ್ಣ ಅವರು ಬಿಚ್ಚಿಟ್ಟ ಸಂಗತಿ, ನನ್ನನ್ನು ಒಂದು ಕ್ಷಣ ತಲ್ಲಣಕ್ಕೀಡು ಮಾಡಿತು. ನಾನು ಬ್ರಾಹ್ಮಣ ತರುಣರ ಅಂತರ್ಜಾತೀಯ ವಿವಾಹದ ಕುರಿತಂತೆ ಮಾತಾಡಲು ತೊಡಗಿದಾಗ ಸುವರ್ಣ ಒಮ್ಮೆಲೆ ಸ್ಫೋಟಿಸಿದರು. ‘‘ಯಾರು ಹೇಳಿದ್ದು ಇದು ಅಂತರ್ಜಾತೀಯ ವಿವಾಹ ಅಂತ. ಇದು ಹಣದ ಆಮಿಷವೊಡ್ಡಿ ಕೆಳವರ್ಗದ ತರುಣಿಯರನ್ನು ಬ್ರಾಹ್ಮಣರ ತೊತ್ತಾಗಿಸುವ ಒಂದು ಭಾಗವೇ ಹೊರತು ಇನ್ನೇನು ಅಲ್ಲ...’’ ಎಂದು ಬಿಟ್ಟರು. ಅವರು ಬಿಚ್ಚಿಟ್ಟ ಸಂಗತಿಯನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಬ್ರಾಹ್ಮಣರೊಳಗೆ ಇತ್ತೀಚೆಗೆ ತರುಣಿಯರ ಕೊರತೆಯಿಂದಾಗಿ, ಮದುವೆ ದಲ್ಲಾಳಿಗಳಿಗೆ ವಿಪರೀತ ಬೆಲೆ ಬಂದು ಬಿಟ್ಟಿದೆ. ಎಲ್ಲಿ, ಯಾವ ಮೂಲದಲ್ಲಿ ಬ್ರಾಹ್ಮಣ ಸಮುದಾಯದ, ಅದರಲ್ಲೂ ತಮ್ಮದೇ ಪಂಗಡದ ಹುಡುಗಿಯಿದ್ದಾರೆಂದು ಹುಡುಕಿ ತೆಗೆದು, ಕೈ ತುಂಬಾ ದುಡ್ಡು ಬಾಚುವ ದಲ್ಲಾಳಿಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರಭಾರತದಿಂದ ಅದರಲ್ಲೂ ಕಾಶ್ಮೀರದಿಂದ ಹುಡುಗಿಯರನ್ನು ಕರಾವಳಿಗೆ ಕರೆತಂದು ಬ್ರಾಹ್ಮಣ ಹುಡುಗರಿಗೆ ಕಟ್ಟುವ ಕೆಲಸವನ್ನೂ ದಲ್ಲಾಳಿಗಳು ಮಾಡುತ್ತಿದ್ದಾರೆ. ಹಲವು ದಲ್ಲಾಳಿಗಳು ಇದನ್ನೇ ಬಳಸಿಕೊಂಡು ಹಲವು ಬ್ರಾಹ್ಮಣ ಕುಟುಂಬಕ್ಕೆ ವಂಚಿಸಿದ್ದಾರೆ.ಅನ್ಯ ಜಾತಿಯ ಹುಡುಗಿಯನ್ನೇ ಬ್ರಾಹ್ಮಣ ಹುಡುಗಿಯೆಂದು ತಲೆಗೆ ಕಟ್ಟಿ, ಅದು ರಾದ್ಧಾಂತವಾಗಿ, ವಿವಾಹವೇ ಮುರಿದ ಪ್ರಸಂಗಗಳಿವೆ. ಕೆಲವು ಕುಟುಂಬಗಳಂತೂ ಮರ್ಯಾದೆಗೆ ಅಂಜಿ ಬಾಯಿ ಮುಚ್ಚಿ ಕುಳಿತಿದ್ದಾರೆ. ಲಕ್ಷಾಂತರ ಹಣ ಪಡೆದು ಬ್ರಾಹ್ಮಣ ಕುಟುಂಬಗಳಿಗೆ ವಂಚಿಸಿದ ಪ್ರಕರಣಗಳಂತೂ ನೂರಾರು ಇವೆ. ಇಂತಹ ಸಂದರ್ಭದಲ್ಲೇ ಅವರು ಒಂದಿಷ್ಟು ಉಸಿರು ಬಿಡುವಂತಾದುದು ‘‘ಶುದ್ಧೀಕರಣ’’ದ ಮೂಲಕ ಕೆಳ ಜಾತಿಯ ತರುಣಿಯರನ್ನು ಮನೆತುಂಬಿಸಿಕೊಳ್ಳುವ ಪದ್ಧತಿ ಸಮಾಜದಲ್ಲಿ ಪ್ರಚಾರ ಪಡೆದ ಮೇಲೆ. ಹಾಗೆಂದು ಬ್ರಾಹ್ಮಣ ತರುಣರು ಕೇಳಿದಾಕ್ಷಣ ಯಾರೂ ತಮ್ಮ ಮನೆಯ ಮಗಳನ್ನು ಇಕೋ ಎಂದು ಕೊಡುವುದಿಲ್ಲ. ಹೆಣ್ಣು ಮಕ್ಕಳು ಹೆಚ್ಚಿರುವ ತೀರಾ ಬಡ ಕುಟುಂಬಕ್ಕೆ ಒಂದಿಷ್ಟು ವಧುದಕ್ಷಿಣೆಯನ್ನು ಕೊಟ್ಟು, ಅವರನ್ನು ಶುದ್ಧೀಕರಣಗೊಳಿಸಿ, ಬ್ರಾಹ್ಮಣ ಕುಟುಂಬದ ಸೊಸೆಯಾಗಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಗೋ ವನಿತಾಶ್ರಮ’ ಎನ್ನುವುದೊಂದಿದೆ. ಇದರ ಮುಖಂಡರು ಬಹಿರಂಗ ಸಭೆಯಲ್ಲೇ ಈ ಕುರಿತಂತೆ ಹೇಳಿಕೆ ನೀಡಿದ್ದರು. ‘‘ನಮ್ಮಲ್ಲಿ ವಿವಿಧ ತಳಿಯ ಅಪರೂಪದ ಗೋವುಗಳನ್ನು ಸಾಕಲಾಗುತ್ತದೆ. ಹಾಗೆಯೇ ಇಲ್ಲಿ, ಬಡ ವನಿತೆಯರಿಗೂ ಆಶ್ರಯ ನೀಡಲಾಗುತ್ತದೆ. ಕೆಳಜಾತಿಯ ತೀರಾ ಬಡ ಕುಟುಂಬದ ಹೆಣ್ಣು ಮಕ್ಕಳು ಇದ್ದರೆ, ನಿಮಗೆ ಸಾಕಲು ಕಷ್ಟವಾಗುತ್ತಿದೆಯಾದರೆ, ಅನಾಥ ಹೆಣ್ಣು ಮಕ್ಕಳು ಇದ್ದರೆ ಈ ಆಶ್ರಮಕ್ಕೆ ಸೇರಿಸಿ. ಈ ವನಿತೆಯರು ಗೋವುಗಳ ಸೇವೆಯನ್ನು ಮಾಡಿದಂತಾಗುತ್ತದೆ. ಹಾಗೆಯೇ ಇವರ ಮದುವೆಯ ವ್ಯವಸ್ಥೆಯನ್ನು ನಾವೇ ಮಾಡುತ್ತೇವೆ. ಈ ಆಶ್ರಮದಲ್ಲಿದ್ದ ಹಲವು ಕೆಳಜಾತಿಯ ಹೆಣ್ಣು ಮಕ್ಕಳನ್ನು ಬ್ರಾಹ್ಮಣರಂತಹ ಮೇಲ್ಜಾತಿಯ ತರುಣರಿಗೆ ಮದುವೆ ಮಾಡಿಕೊಟ್ಟಿದ್ದೇವೆ...’’ ಈ ಮಾತಿನ ರಹಸ್ಯ ಇಷ್ಟೇ. ಈ ಗೋವುಗಳ ಸೇವೆಗೆ ವೇತನವೇ ಇಲ್ಲದೆ ಬಡ ಹೆಣ್ಣು ಮಕ್ಕಳು ದೊರಕುತ್ತಾರೆ. ಅವರಿಗೆ ಒಂದಿಷ್ಟು ವೈದಿಕ ಆಚರಣೆ ಕಳಿಸಿ ಅವರನ್ನು ಶುದ್ಧೀಕರಣಗೊಳಿಸಿ, ಬ್ರಾಹ್ಮಣ ತರುಣರಿಗೆ ಮದುವೆ ಮಾಡಿಕೊಡುವುದಷ್ಟೇ ಅಂತಿಮ ಉದ್ದೇಶ. ತೀರಾ ಅನಾಥ ಹೆಣ್ಣು ಮಕ್ಕಳಾದರೆ ಇದರಿಂದ ಪ್ರಯೋಜನವಿದೆ. ಆದರೆ ಬಡತನದ ಕಾರಣದಿಂದ ಬಂದ ಹೆಣ್ಣು ಮಕ್ಕಳ ಕುಟುಂಬಕ್ಕೆ ಹಣದ ಆಮಿಶ ತೋರಿಸಿ ಅವರನ್ನು ಶುದ್ಧೀಕರಣಗೊಳಿಸಿ, ಆ ಕುಟುಂಬದಿಂದಲೇ ಬೇರ್ಪಡಿಸಿ, ಬ್ರಾಹ್ಮಣರ ತರುಣರಿಗೆ ವರ್ಗಾಯಿಸುವುದನ್ನು ಮದುವೆ ಎಂದು ಕರೆಯಲಾಗುತ್ತದೆಯೆ? ಈ ಪ್ರಶ್ನೆಯನ್ನು ಸುವರ್ಣ ಅವರು ಕೇಳುವುದಕ್ಕೂ ಒಂದು ಕಾರಣವಿತ್ತು. ಅವರ ದೂರದ ಸಂಬಂಧಿಕರ ಹುಡುಗಿಯೊಬ್ಬರನ್ನು ಇದೇ ರೀತಿ ಶುದ್ಧೀಕರಣ ಮಾಡಿ ಬ್ರಾಹ್ಮಣ ಕುಟುಂಬಕ್ಕೆ ಕೊಡಲಾಗಿತ್ತು. ಆನಂತರದ ಬಿಕ್ಕಟ್ಟು, ಅದು ವಧುವಿನ ಮೇಲೆ ಮತ್ತು ಆಕೆಯ ಕುಟುಂಬದ ಮೇಲೆ ಬಿದ್ದ ಪರಿಣಾಮಗಳೇ ಸುವರ್ಣರ ಆಕ್ರೋಶಕ್ಕೆ ಕಾರಣ.
ಮದುವೆ ಎಂದರೆ ಒಂದು ಹೆಣ್ಣು ಮತ್ತು ಗಂಡು ಒಂದಾಗುವುದಷ್ಟೇ ಅಲ್ಲ, ಎರಡು ಕುಟುಂಬಗಳು ಜೊತೆಯಾಗುವುದು. ಗಂಡಿಗೆ ಹೆಣ್ಣು ಮಾತ್ರ ದೊರಕುವುದಲ್ಲ, ಅವಳ ಜೊತೆಗೆ ತಾಯಿ ಸಮಾನಳಾದ ಅತ್ತೆ ಮತ್ತು ತಂದೆ ಸಮಾನರಾದ ಮಾವನೂ ದೊರಕುತ್ತಾರೆ. ಹಾಗೆಯೇ ಹೆಣ್ಣಿಗೂ ಕೂಡ. ಆದರೆ ಇಲ್ಲಿ ಹಾಗಲ್ಲ. ಬ್ರಾಹ್ಮಣ ಕುಟುಂಬಕ್ಕೆ ಬೇಕಾಗಿರುವುದು ಬರೇ ಹೆಣ್ಣು ಮಾತ್ರ. ಅವಳ ಕುಟುಂಬ ಅಂದರೆ ಆಕೆಯ ತಂದೆ, ತಾಯಿ ಯಾರೂ ಬೇಕಾಗಿಲ್ಲ. ಒಂದು ರೀತಿಯಲ್ಲಿ ಆಕೆ ತನ್ನ ಕುಟುಂಬದ ಜೊತೆಗೆ ಸಂಬಂಧವನ್ನೇ ಕಡಿದು ಕೊಳ್ಳುತ್ತಾಳೆ. ತನ್ನ ಸಂಸ್ಕೃತಿ, ಆಹಾರ, ಆಚಾರ, ವಿಚಾರ ಎಲ್ಲವನ್ನು ಬಲಿಕೊಟ್ಟು, ಆಕೆ ಬ್ರಾಹ್ಮಣ ಕುಟುಂಬವನ್ನು ಪ್ರವೇಶಿಸಬೇಕಾಗುತ್ತದೆ. ಆಕೆ ಇದೆಲ್ಲವನ್ನು ಮಾಡಬೇಕಾಗಿರುವುದು ಬಡ ಕೆಳಜಾತಿಯ ಕುಟುಂಬದಲ್ಲಿ ಹುಟ್ಟಿದ್ದೇನೆನ್ನುವ ಒಂದೇ ಕಾರಣಕ್ಕಾಗಿ. ಬಡ ಹಿಂದುಳಿದ ವರ್ಗದ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿ, ಹಣದ ಆಮಿಷ ತೋರಿಸಿ ಆ ಹೆಣ್ಣನ್ನು ಶುದ್ಧೀಕರಣದ ಹೆಸರಲ್ಲಿ ಬ್ರಾಹ್ಮಣ ಕುಟುಂಬಕ್ಕೆ ಒಪ್ಪಿಸುವುದು ಅದು ಹೇಗೆ ವಿವಾಹ ಸಮ್ಮತಿಯನ್ನು ಪಡೆದುಕೊಳ್ಳುತ್ತದೆ? ಒಂದು ವೇಳೆ ಅವರಿಗೆ ಹೆಣ್ಣು ಒಪ್ಪಿಗೆಯಾದರೆ, ಆಕೆಯ ಇಡೀ ಕುಟುಂಬವನ್ನೇ ಬ್ರಾಹ್ಮಣ ಜಾತಿಗೆ ಶುದ್ಧೀಕರಣ ಮಾಡಿ ಸೇರಿಸಬಹುದಲ್ಲ? ಆಕೆಯ ತಂದೆ ತಾಯಿ ಬೇಡ. ಆಕೆಯ ಕುಟುಂಬ ಬೇಡ. ಬರೇ ಆಕೆ ಮಾತ್ರ, ಗಂಡಿನ ತೆವಲಿಗೆ, ಮನೆಯ ಚಾಕರಿಗೆ ಬೇಕು. ಇದು ಮದುವೆಯೆ? ಅಥವಾ ದಂಧೆಯೆ? ಎಂದು ಸುವರ್ಣ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೆಣ್ಣಿನ ಸಮ್ಮತಿಯನ್ನು ಮೀರಿ, ಬರೇ ದಲ್ಲಾಳಿಗಳ ಹಣದಾಸೆಗೆ ಬಡ ಬಿಲ್ಲವ, ಮೊಗವೀರ ತರುಣಿಯರನ್ನು ಶುದ್ಧೀಕರಣಗೊಳಿಸಿ ಬ್ರಾಹ್ಮಣ ತರುಣರಿಗೆ ಮದುವೆ ಮಾಡಿಕೊಡಲಾಗುತ್ತದೆ. ಅಲ್ಲಾದರೂ ಆಕೆ ಸುಖವಾಗಿರಲು ಹೇಗೆ ಸಾಧ್ಯ? ತನ್ನದಲ್ಲದ ಸಂಸ್ಕೃತಿ. ಆಚರಣೆ. ಹಣತೆತ್ತು ಕೊಂಡುಕೊಂಡ ಹೆಣ್ಣನ್ನು ಗಂಡಾಗಲಿ ಆತನ ತಂದೆತಾಯಿಯಾಗಲಿ ಮಾನಸಿಕವಾಗಿ ಪತ್ನಿ, ಸೊಸೆ ಎಂದು ಒಪ್ಪಿಕೊಳ್ಳಲು ಸಾಧ್ಯವೆ? ಆಕೆ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮಾಂಸ ತಿನ್ನಬೇಕು ಎನ್ನುವ ಆಸೆಯಾದರೂ ಅದನ್ನು ಅದುಮಿಟ್ಟುಕೊಳ್ಳಬೇಕು. ಅನೇಕ ಸಂದರ್ಭದಲ್ಲಿ ಅಪರೂಪಕ್ಕೆ ತವರು ಮನೆಗೆ ಹೋಗುವ ಅವಕಾಶವೂ ಆಕೆಗಿರುವುದಿಲ್ಲ. ಕಾರಣವೆಂದರೆ, ಅಲ್ಲಿ ಆಕೆ ಮೀನು, ಮಾಂಸ ತಿಂದು ಬಂದರೆ? ಮನೆಯ ಆಚರಣೆಯನ್ನು ಕೆಡಿಸಿ ಬಂದರೆ? ಹೆಣ್ಣನ್ನು ಶುದ್ಧೀಕರಣ ಮಾಡಲಾಗಿದೆ. ಆದರೆ ಆಕೆಯ ಕುಟುಂಬವನ್ನು ಶುದ್ಧೀಕರಣ ಮಾಡಲಾಗಿಲ್ಲವಲ್ಲ? ಇಂತಹ ಬಿಕ್ಕಟ್ಟನ್ನು ಎದುರಿಸುತ್ತಾ, ಒಲ್ಲದ ಗಂಡನೊಂದಿಗೆ ಸಂಸಾರ ಮಾಡುವ, ವೈದಿಕೀಕರಣ ಅಥವಾ ಬ್ರಾಹ್ಮಣೀಕರಗೊಂಡ ಹೆಣ್ಣಿನ ಮಾನಸಿಕ ಸ್ಥಿತಿ ಅದೆಷ್ಟು ಭೀಕರವಾಗಿರಬೇಡ?
ಯಾವುದೇ ಧರ್ಮಕ್ಕೆ ಸ್ವ ಒಪ್ಪಿಗೆಯಿಂದ, ಯಾವ ಕಾರಣಕ್ಕೆ ಇರಲಿ ಮತಾಂತರವಾಗುವುದನ್ನು ನಾನು ಒಪ್ಪುತ್ತೇನೆ. ಹಣಕ್ಕಾಗಿ ಒಬ್ಬ ತಂದೆ ತಾನು ಶುದ್ಧೀಕರಣಗೊಂಡು ಬ್ರಾಹ್ಮಣನಾಗಲಿ, ಕ್ರೈಸ್ತನಾಗಲಿ, ಮುಸ್ಲಿಮನಾಗಲಿ. ಅದಕ್ಕೆ ಸಮಾಜದ ಅಭ್ಯಂತರವಿಲ್ಲ. ಆದರೆ ಹಣಪಡೆದು, ತನ್ನ ಮಗಳನ್ನು ಒಬ್ಬ ಇನ್ನೊಂದು ಧರ್ಮದ ಅಥವಾ ಜಾತಿಯ ಗಂಡಿಗೆ ಒಪ್ಪಿಸಿ ಕೈತೊಳೆದುಕೊಳ್ಳುವುದನ್ನು ಮದುವೆ ಎಂದು ಕರೆಯಲಾಗುವುದಿಲ್ಲ. ಶುದ್ಧೀಕರಣ ಎಂದು ಕರೆಯಲೂ ಆಗುವುದಿಲ್ಲ. ಜಾತಿಯನ್ನು ಮೀರಲು ಸಾಧ್ಯವಿಲ್ಲವೆಂದಾದರೆ ಬ್ರಾಹ್ಮಣ ತರುಣರು ಅನ್ಯ ಜಾತಿಯ ತರುಣಿಯರನ್ನು ಮರೆತು ತಮ್ಮ ತಮ್ಮ ಜಾತಿಯಲ್ಲೇ ಹುಡುಗಿಯನ್ನು ಹುಡುಕುವುದು ಹೆಚ್ಚು ಶೋಭೆ ತರುವ ವಿಷಯ. ಜಾತಿಯನ್ನು ಮೀರುವ ಎದೆಗಾರಿಕೆಯಿದ್ದರೆ, ಕೆಳಜಾತಿಯ ಕುಟುಂಬವನ್ನು ಮೇಲ್‌ಜಾತಿಗೆ ತರುವುದು ಮಾತ್ರವಲ್ಲ, ತಾನು ತನ್ನ ಮೇಲ್‌ಜಾತಿಯಿಂದ ಕೆಳಜಾತಿಗಿಳಿಯಲು ಸಿದ್ಧನಾಗಿರಬೇಕು. ಆಕೆಯ ತಂದೆತಾಯಿಯನ್ನು ಮಾವ, ಅತ್ತೆ ಎಂದು ಸ್ವಾಗತಿಸಲೂ ಸಿದ್ಧನಾಗಿರಬೇಕು. ಇಲ್ಲವಾದರೆ ಅದು ನಾಗರಿಕ ವ್ಯವಸ್ಥೆಯಲ್ಲಿ ಅಮಾನವೀಯವಾಗುತ್ತದೆ. ಹಾಗೆಯೇ ಕೈಯಲ್ಲಿ ಹಣದ ಕಟ್ಟು ಹಿಡಿದುಕೊಂಡು ಬ್ರಾಹ್ಮಣ ಹುಡುಗರಿಗಾಗಿ ಬಿಲ್ಲವ, ಮೊಗವೀರ, ಬಂಟ ಮೊದಲಾದ ಕೆಳಜಾತಿಯ ಬಡಹುಡುಗಿಯರನ್ನು ಹುಡುಕುತ್ತಾ ಓಡಾಡುವ ದಲ್ಲಾಳಿಗಳನ್ನು ಮದುವೆ ದಲ್ಲಾಳಿಗಳು ಎಂದು ಕರೆಯಲಾಗುವುದಿಲ್ಲ. ಅವರಿಗೆ ಬೇರೆ ಬೇರೆ ಹೆಸರುಗಳನ್ನು ಸಮಾಜ ನೀಡುತ್ತವೆ. ಆದುದರಿಂದ ವಿವಿಧ ಜಾತಿ ಸಂಘಟನೆಗಳು ಇಂತಹ ಸಮಾಜ ಬಾಹಿರ ದಲ್ಲಾಳಿಗಳಿಗೆ, ಇವರು ನಡೆಸುವ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಬಡ ಹೆಣ್ಣು ಮಕ್ಕಳನ್ನು ಹಣಕ್ಕಾಗಿ ಪರೋಕ್ಷವಾಗಿ ಮಾರಾಟ ಮಾಡುವ ಈ ವ್ಯವಸ್ಥೆಗೂ ಕಡಿವಾಣ ಹಾಕಬೇಕಾಗಿದೆ. ಹಾಗೆಯೇ ಬಲವಂತದ ಮತಾಂತರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಪೇಜಾವರಶ್ರೀ ಗಳೂ ಈ ವಿಷಯದವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಾಗಿದೆ. ಹಣಕೊಟ್ಟು ಬಡ ಹೆಣ್ಣು ಮಕ್ಕಳನ್ನು ಬಲವಂತವಾಗಿ ಬ್ರಾಹ್ಮಣೀಕರಿಸಿ, ಮನೆ ಚಾಕರಿಗೆ ಬಳಸಿಕೊಳ್ಳುವ ಕೃತ್ಯ ತಪ್ಪು ಎಂದು ಸ್ಪಷ್ಟವಾಗಿ ಹೇಳಬೇಕಾಗಿದೆ. ಅವರು ಅದನ್ನು ಹೇಳುತ್ತಾರೆ ಎಂದು ನಾವೆಲ್ಲ ಬಯಸೋಣ. ಆದರೆ ಅವರು ಅಂತಹ ಹೇಳಿಕೆಯನ್ನು ನೀಡುತ್ತಾರೆ ಎಂಬ ಬಗ್ಗೆ ಸುವರ್ಣ ಅವರಿಗೆ ಯಾವ ನಂಬಿಕೆಯೂ ಇಲ್ಲ.
ನಿನ್ನೆ ತಡ ರಾತ್ರಿ ನಮಾಜ್ ಮುಗಿಸಿ ಚಾಪೆ ಮಡಚುವ ಹೊತ್ತಿನಲ್ಲಿ ಹೊಳೆದ ಕೆಲವು ಸಾಲುಗಳು.
೧.
ಮಸೀದಿಯಲ್ಲಿ ನಮಾಜಿಗೆಂದು
ಸಾಲಾಗಿ ನಿಂತ ಧರ್ಮ ಪಂಡಿತರು
ಉರು ಹೊಡೆದ ಶ್ಲೋಕಗಳನ್ನು
ಪಟ ಪಟನೆ ಉದುರಿಸುತ್ತಿದ್ದಾರೆ,
ನಾನೋ, ಪದಗಳು ಸಿಕ್ಕದೆ
ಕಂಗಾಲಾಗಿದ್ದೇನೆ ನನ್ನ ದೊರೆಯೇ,
ನನಗೆ ನಿನ್ನನ್ನು ಆರಾಧಿಸಬೇಕಾಗಿದೆ
ಕೈಯೊಡ್ಡಿ ಬೇಡುವೆ
ನಾಲ್ಕು ಪದಗಳನ್ನು ಭಿಕ್ಷೆಯಾಗಿ ನೀಡು
೨
ಧರ್ಮ ಪಂಡಿತನೊಬ್ಬ
ತನ್ನ ತೋರು ಬೆರಳನ್ನು ಹಿರಿದು
ನನ್ನ ಹಣೆಗೆ ಚುಚ್ಚಿ ಹೇಳಿದ,
ನೀನೊಬ್ಬ ದರ್ಮ ವಿರೋಧಿ...
ನನ್ನ ದೊರೆಯೇ
ಅವನ ಉಳಿದ ಮೂರು ಬೆರಳುಗಳು
ಅವನ ಎದೆಯ ಕಡೆಗೆ
ಚಾಚಿರುದನ್ನು ಅವನು ಕಂಡಿರಲಿಲ್ಲ...
೩.
ಅಮೃತ ಶಿಲೆಗಳಿಂದ
ಕಟ್ಟಲ್ಪಟ್ಟ ಆ ಭವ್ಯ ಮಸೀದಿಯ
ಮೀನಾರ ಆಕಾಶವನ್ನು ಚುಚ್ಚುತ್ತಿತ್ತು...
ನನ್ನ ದೊರೆಯೇ...
ನಿನ್ನ ಹುಡುಕುತ್ತ
ಆ ಮಿನಾರದ ತುತ್ತ ತುದಿಯನ್ನು ಏರಿದರೆ
ಮಿನಾರದ ಬುಡದಲ್ಲಿ
ತಲೆಗೆ ಸೂರಿಲ್ಲದೆ ಬಿಸಿಲಲ್ಲಿ ಒಣಗುತ್ತಿರುವ,
ಮಳೆಯಲ್ಲಿ ನೆನೆಯುತ್ತಿರುವ
ಲಕ್ಷಾಂತರ ಭಿಕಾರಿಗಳ ಕಂಡೆ...
೪
ಮಸೀದಿಯ ಅಮೃತ ಶಿಲೆಯ
ನೆಲದ ಹಾಸು ಕನ್ನಡಿಯಂತೆ
ಹೊಳೆಯುತ್ತಿತ್ತು...
ನನ್ನ ದೊರೆಯೇ,
ನಿನಗೆಂದು ಬಾಗಿದವರು
ಆ ಕನ್ನಡಿಯಲ್ಲಿ
ತಮ್ಮ ಮುಖವನ್ನೇ ನೋಡಿ ಸುಖಿಸುತ್ತಿದ್ದಾರೆ...
೫
ನಾನು ಮಾಡಿದೆ ಎಂದವನು
ಏನನ್ನು ಮಾಡಲಿಲ್ಲ
ನನ್ನ ದೊರೆಯೇ,
ನಾನು ಮಾಡಲಿಲ್ಲ ಎಂದವನು
ಎಲ್ಲವನ್ನು ಮಾಡಿದ...
|
ಜನಾರ್ದನ ಪೂಜಾರಿ |
(ಕಳೆದ ವಾರದ ‘ಮುಂಬಯಿ ಕನ್ನಡಿಗರು, ಕುದ್ರೋಳಿ ದೇವಸ್ಥಾನ ಮತ್ತು ವೈದಿಕ ಹುನ್ನಾರಗಳು’ ಬರಹದ ಮುಂದುವರಿದ ಭಾಗ)
ಪುರಾಣದ ಬಲಿಚಕ್ರವರ್ತಿಯ ದುರಂತ ಕತೆ ನಿಮಗೆ ಗೊತ್ತಿರಬಹುದು. ವಾಮನನೆಂಬ ಪುಟ್ಟ ವೈದಿಕನಿಗೆ ಮೂರು ಹೆಜ್ಜೆಗಳನ್ನು ಇಡಲು ಅವಕಾಶ ನೀಡಿದ್ದಕ್ಕಾಗಿ ಬಲಿಚಕ್ರವರ್ತಿ ತನ್ನ ರಾಜ್ಯ, ಸಂಪತ್ತು, ನೆಲೆ ಎಲ್ಲವನ್ನೂ ಕಳೆದುಕೊಂಡು ಬೀದಿ ಪಾಲಾಗ ಬೇಕಾಯಿತು. ವೈದಿಕರಿಗೆ ಒಂದು ಹೆಜ್ಜೆಯನ್ನು ತಲೆಯ ಮೇಲೆ ಇಡಲು ಅವಕಾಶ ನೀಡಿದ ತಪ್ಪಿಗೆ ಇಂದಿಗೂ ಅಧಿಕಾರ, ನೆಲೆ, ವರ್ಚಸ್ಸು ಎಲ್ಲವನ್ನು ಕಳೆದುಕೊಂಡು ಬೀದಿಪಾಲಾಗಿರುವ ಕರಾವಳಿಯ ಬಲಿಚಕ್ರವರ್ತಿ ಜನಾರ್ದನ ಪೂಜಾರಿ. ಇಂದಿರಾ ಗಾಂಧಿಯ ಕಾಲದಲ್ಲಿ ಜನಾರ್ದನ ಪೂಜಾರಿಯವರು, ಹಣಕಾಸು ಸಚಿವರಾಗಿ ಮಾಡಿದ ಕ್ರಾಂತಿ ಇಂದಿಗೂ ನಾವು ನೆನಪು ಮಾಡಿಕೊಳ್ಳುವಂತಹದ್ದು. ಬಡವರು, ದೀನ ದಲಿತರಿಗೆ ಬ್ಯಾಂಕ್‌ನ ಬಾಗಿಲು ತೆರೆದುದು ಇದೇ ಜನಾರ್ದನ ಪೂಜಾರಿಯವರ ದೆಸೆಯಿಂದ. ಒಂದಿಷ್ಟು ದುರಹಂಕಾರಿ, ತುಸು ನಾಟಕೀಯ ವ್ಯಕ್ತಿ ಎಂದು ಬಿಂಬಿತಗೊಂಡಿದ್ದರೂ ಜನಾರ್ದನ ಪೂಜಾರಿ ಎಂದೂ ಭ್ರಷ್ಟರಾಗಿರಲಿಲ್ಲ. ಅವರ ಪ್ರಾಮಾಣಿ ಕತೆಯ ಕುರಿತಂತೆ ಅನುಮಾನ ಪಡಲು ಯಾವ ಕಾರಣಗಳೂ ಇಲ್ಲ. ‘ಸಾಲ ಮೇಳ’ ಮಾಡುವ ಮೂಲಕ ಬ್ಯಾಂಕ್‌ನ್ನು ಬಡವರಿಗೇನೋ ಅವರು ತೆರೆದುಕೊಟ್ಟರು. ಆದರೆ ಅದರಿಂದಾಗಿ ವ್ಯಾಪಕವಾಗಿ ಮೇಲ್ವರ್ಣೀಯ ಜನರ ವಿರೋಧವನ್ನು ಕಟ್ಟಿಕೊಂಡರು. ಯಾಕೆಂದರೆ ದೇಶದ ಬ್ಯಾಂಕ್ ತಿಜೋರಿಗಳ ಬೀಗದ ಕೈಗಳಿರುವುದು ಮೇಲ್ವರ್ಣೀಯರ ಬಳಿ. ಇತ್ತ ಸಾಲ ಪಡೆದು ಕೊಂಡವರೂ ಬರಕತ್ತಾಗಲಿಲ್ಲ. ದನ, ಎಮ್ಮೆಯನ್ನು ಕೊಂಡು ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವಲ್ಲಿ ವಿಫಲ ರಾದರು.ಜನರು ಇದರಿಂದ ಬ್ಯಾಂಕ್‌ನ ಸಾಲಗಾರರಾಗಬೇಕಾಯಿತು. ‘ಜನಾರ್ದನ ಪೂಜಾರಿ ಬಡವರನ್ನು ಸಾಲಗಾರರನ್ನಾಗಿ ಮಾಡಿದರು’ ಎಂದು ಬ್ಯಾಂಕಿನ ಮೆನೇಜರ್‌ಗಳಿಂದ ಹಿಡಿದು ಗುಮಾಸ್ತರವರೆಗೆ ಅಪಪ್ರಚಾರ ಮಾಡಿಕೊಂಡು ಓಡಾಡ ತೊಡಗಿದರು.ತನ್ನ ಸಮಾಜಕ್ಕೆ ಒಳಿತು ಮಾಡುವ ಅವರ ಆತುರದ ನಿರ್ಣಯಗಳೆಲ್ಲ ಅವರಿಗೇ ಕೊನೆಯಲ್ಲಿ ಮುಳುವಾಯಿತು. ಇಂತಹದೊಂದು ಆತುರದ ನಿರ್ಣಯವನ್ನು ಅವರು ಕುದ್ರೋಳಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆಯೂ ತೆಗೆದು ಕೊಂಡರು.
ಕುದ್ರೋಳಿ ದೇವಸ್ಥಾನದ ಮರು ನವೀಕರಣ ಕಾಮಗಾರಿ ಕೆಲಸ ನಡೆದುದು ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ. ಅದನ್ನು ಕೇವಲ ಬಿಲ್ಲವರ, ಶೂದ್ರರ ದೇವಸ್ಥಾನ ಮಾತ್ರವಲ್ಲ ಎಲ್ಲರ ದೇವಸ್ಥಾನವಾಗಿ ಪರಿವರ್ತಿಸುತ್ತೇನೆ ಎಂದು ಅವರು ಹೊರಟರು. ಅದರ ಹಿಂದೆ ಅವರ ರಾಜಕೀಯ ದುರುದ್ದೇಶವೂ ಇತ್ತು. ‘ಎಲ್ಲರ ದೇವಸ್ಥಾನ’ ಎಂದರೆ, ಅದರ ಕೀಲಿಕೈಯನ್ನು ವೈದಿಕರ ಕೈಗೆ ಕೊಡುವುದು. ಹಾಗೆಂದು, ದೇವಸ್ಥಾನದ ಪುನರ್ನವೀಕರಣ ಕಾರ್ಯಕ್ರಮವನ್ನು ಶೃಂಗೇರಿ ಸ್ವಾಮೀಜಿಯ ಕೈಯಲ್ಲಿ ನೆರವೇರಿಸಲು ಅವರು ಮುಂದಾದರು. ಇದು ನಡೆದುದು ಸುಮಾರು 1989ರಲ್ಲಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮುಖ್ಯ ಅತಿಥಿ. ಶೃಂಗೇರಿ ಸ್ವಾಮೀಜಿಯನ್ನು ಕರೆಸುವ ಜನಾರ್ದನ ಪೂಜಾರಿಯ ನಿರ್ಧಾರಕ್ಕೆ ಬಿಲ್ಲವರೊಳಗೇ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮೇಲುಕೀಳುಗಳೆಂಬ ಭೇದವನ್ನು ಅಳಿಸುವುದಕ್ಕಾಗಿ ನಾರಾಯಣ ಗುರುಗಳು ಕುದ್ರೋಳಿ ದೇವಸ್ಥಾನದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಇದೀಗ ಮತ್ತೆ ಅದನ್ನು ವೈದಿಕ ಸ್ವಾಮೀಜಿಗಳ ಕೈಗೆ ಕುದ್ರೋಳಿ ದೇವಸ್ಥಾನವನ್ನು ಒಪ್ಪಿಸುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನು ಹಲವರು ಎತ್ತಿದರು. ಮುಂಬಯಿಯ ಚಿಂತಕ ರವಿ. ರಾ. ಅಂಚನ್ ಪತ್ರಿಕೆಯಲ್ಲಿ ಬಹಿರಂಗ ಪತ್ರದ ಮೂಲಕ ಅದನ್ನು ಪ್ರಶ್ನಿಸಿದರೆ, ಮುಂಗಾರಿನಲ್ಲಿ ಹಿರಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ದಿನೇಶ್ ಅಮೀನ್ ಮಟ್ಟು ಮೊದಲಾದವರು ಬಹಿರಂಗವಾಗಿ ಉಪವಾಸ ಕೂರುವ ಬೆದರಿಕೆ ಹಾಕಿದರು.ಆದರೆ ಈ ಆಕ್ರೋಶವನ್ನು ಕಾಲಲ್ಲಿ ತುಳಿದು, ಜನಾರ್ದನ ಪೂಜಾರಿ ಶೃಂಗೇರಿ ಸ್ವಾಮೀಜಿಯ ಪಾದಕ್ಕೆ ತನ್ನ ತಲೆಯನ್ನು ಒಪ್ಪಿಸಿದರು. ಕುದ್ರೋಳಿ ದೇವಸ್ಥಾನದ ಈ ನಿರ್ಣಯದಿಂದ ಅಸಮಾಧಾನಗೊಂಡು ನಾರಾಯಣ ಗುರುಗಳು ಸ್ಥಾಪಿಸಿದ ಶಿವಗಿರಿ ಪೀಠಸ್ಥ ಸ್ವಾಮೀಜಿಗಳು ಅಂದಿನ ಕಾರ್ಯಕ್ರಮ ವನ್ನು ಬಹಿಷ್ಕರಿಸಿದರು. ಮಾಜಿ ಹಿರಿಯ ಸ್ವಾಮೀಜಿಗಳು ಆ ಕಾರ್ಯಕ್ರಮಕ್ಕೆ ಆಗಮಿಸ ಬೇಕಾಯಿತು.ನಡೆದದ್ದು ಇಷ್ಟೇ ಅಲ್ಲ.ಮೊದಲ ಬಾರಿ ಕುದ್ರೋಳಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಅಷ್ಟಮಂಗಲ ಪ್ರಶ್ನೆಯನ್ನು ಇಡಲಾಯಿತು. ಮತ್ತು ದೇವಸ್ಥಾನದ ಮುಂಭಾಗದಲ್ಲಿ ವಿಷ್ಣು ದೇವರನ್ನು ಪ್ರತಿಷ್ಠಾಪಿಸಬೇಕು ಎಂದು ವೈದಿಕ ಮುಖಂಡರು ತಿಳಿಸಿದರು. ಅಂತೆಯೇ ಕುದ್ರೋಳಿ ದೇವಸ್ಥಾನದಲ್ಲಿ ನಾರಾಯಣ ಗುರುಗಳ ಆಶಯದ ವಿರುದ್ಧ ಶ್ರೀಕೃಷ್ಣ ದೇವರನ್ನು ಬಾಗಿಲ ಬಳಿ ಪ್ರತಿಷ್ಠಾಪಿಸ ಲಾಯಿತು. ಇದೀಗ ಕೃಷ್ಣನಿಗೆ ಕೈ ಮುಗಿದೇ ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ಶಿವಲಿಂಗದತ್ತ ಭಕ್ತರು ಮುಂದುವರಿಯಬೇಕು. ಇಂತಹದೊಂದು ಸ್ಥಿತಿಯನ್ನು ಬಿಲ್ಲವ ಶೂದ್ರರಿಗೆ ನಿರ್ಮಾಣ ಮಾಡಿಕೊಟ್ಟವರು ಜನಾರ್ದನ ಪೂಜಾರಿ.
ಇತ್ತ ಕುದ್ರೋಳಿ ದೇವಸ್ಥಾನ ಪುನರ್‌ನವೀಕರಣಕ್ಕೆ ಶೃಂಗೇರಿ ಸ್ವಾಮೀಜಿಯೇನೋ ಒಪ್ಪಿದ್ದರು. ಆದರೆ, ಅವರು ಹಲವು ನಿಂಬಂಧನೆಗಳನ್ನು ಹಾಕಿದ್ದರು. ಅದರಲ್ಲಿ ಮುಖ್ಯ ವಾದುದು, ತಾನು ಮತ್ತು ತನ್ನ ಶಿಷ್ಯರು ಅಭಿಷೇಕ ಮಾಡಿದ ಬಳಿಕವಷ್ಟೇ ಉಳಿದವರು ಪ್ರವೇಶಿಸ ಬಹುದು. ಆದನ್ನು ಯಥಾವತ್ ಪಾಲಿಸಲಾಯಿತು.ಸ್ವಾಮೀಜಿಗಳು ಮತ್ತು ಶಿಷ್ಯರಿರುವ ಕಟ್ಟಡಕ್ಕೆ ಯಾವ ಬಿಲ್ಲವರಿಗೂ ಪ್ರವೇಶವಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ನಾರಾಯಣ ಗುರುಗಳ ಭಾವಚಿತ್ರಕ್ಕೆ ಶೃಂಗೇರಿ ಸ್ವಾಮೀಜಿಗಳು ಹಾರಾರ್ಪಣೆ ಮಾಡಲಿಲ್ಲ. ಖುದ್ದು ರಾಜೀವ್ ಗಾಂಧಿ ಆಹ್ವಾನಿಸಿದಾಗಲೂ, ಔಪಚಾರಿಕವಾಗಿ ನಾರಾಯಣ ಗುರುಗಳನ್ನು ಗೌರವಿಸಲೂ ಶೃಂಗೇರಿ ಸ್ವಾಮೀಜಿಗಳು ಸಿದ್ಧರಿರಲಿಲ್ಲ.ಮೇಲು ಕೀಳುಗಳೆಂಬ ಭೇದವನ್ನು ಅಳಿಸಿ, ಎಲ್ಲ ಭಕ್ತರು ದೇವರಿಗೆ ಒಂದೇ ಎಂಬ ಆಶಯದಿಂದ ನಾರಾಯಣ ಗುರುಗಳು ದೇವಸ್ಥಾನವನ್ನು ಕಟ್ಟಿದರೆ, 1989ರಲ್ಲಿ ಅದರೊಳಗೆ ವೈದಿಕರು ಪ್ರವೇಶಿಸುವುದಕ್ಕೆ ಸ್ವತಃ ಜನಾರ್ದನ ಪೂಜಾರಿಯೇ ಕಾರಣರಾದರು. ನಿಧಾನಕ್ಕೆ ಕುದ್ರೋಳಿಯ ಹಿಡಿತ ಬಿಲ್ಲವರ ಕೈ ತಪ್ಪಿತು. ಹೆಸರಿಗಷ್ಟೇ ಜನಾರ್ದನ ಪೂಜಾರಿ ಅದರ ನೇತೃತ್ವವನ್ನು ವಹಿಸಿಕೊಂಡಿದ್ದರೂ, ಒಳಗಿಂದ ಸಂಘಪರಿವಾರ ಅದರ ಲಾಭಗಳನ್ನು ತನ್ನದಾಗಿಸಿಕೊಳ್ಳತೊಡಗಿತು. ಕುದ್ರೋಳಿ ದಸರಾ ಪ್ರತಿ ವರ್ಷ ನಡೆಯುತ್ತಿತ್ತಾದರೂ ಇಡೀ ಮಂಗಳೂರು ಕೇಸರಿ ಬಾವುಟಗಳ ಆವಾಸಸ್ಥಾನ ವಾಗುತ್ತಿತ್ತು.
ಕುದ್ರೋಳಿ ದೇವಸ್ಥಾನವನ್ನು ಹೊರಗಿನಿಂದ ವೈದಿಕರು, ಸಂಘ ಪರಿವಾರ ನಿಯಂತ್ರಿಸತೊಡಗಿದಂತೆ, ಬಿಲ್ಲವ ಹುಡುಗರು ನಿಧಾನಕ್ಕೆ ಸಂಘ ಪರಿವಾರದ ಪಾಲಾಗತೊಡಗಿದರು. ಪ್ರತಿ ಚುನಾವಣೆಯಲ್ಲೂ ಜನಾರ್ದನ ಪೂಜಾರಿಗೆ ಸೋಲೇ ಗತಿಯಾಯಿತು. ಬಹುಸಂಖ್ಯಾತ ಬಿಲ್ಲವರಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದಬಾರಿ ಸುಮಾರು 40 ಸಾವಿರಕ್ಕೂ ಅಧಿಕ ಮತಗಳಿಂದ ಜನಾರ್ದನ ಪೂಜಾರಿ ಸೋತರು. ಇಂದು ಸಂಘಪರಿವಾರ ಬಿಲ್ಲವ ತರುಣರನ್ನು ಕರಾವಳಿಯಲ್ಲಿ ತನ್ನ ಕಾಲಾಳುಗಳಾಗಿ ಬಳಸುತ್ತಿದೆ. ಇಷ್ಟು ಪ್ರಬಲವಾದ ಸಮುದಾಯ, ರಾಜಕೀಯವಾಗಿ ಸಂಪೂರ್ಣವಾಗಿ ಸೋತು ನೆಲಕಚ್ಚಿದೆ. ಒಂದು ಕಾಲದಲ್ಲಿ ಇಬ್ಬರು ಲೋಕಸಭಾ ಸದಸ್ಯರು ಸೇರಿದಂತೆ ಏಳು ಮಂದಿ ಬಿಲ್ಲವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದರು. ಈಗ ನೋಡಿದರೆ ಈ ಸಮುದಾಯವನ್ನು ಪ್ರತಿನಿಧಿಸುವ ಒಬ್ಬನೇ ಒಬ್ಬ ಸಚಿವ ದ.ಕ.ಜಿಲ್ಲೆಯಲ್ಲಿಲ್ಲ. ಬಿಲ್ಲವ ಮುಖಂಡರು ತಲೆಯೆತ್ತುತ್ತಾರೆಂದಾಕ್ಷಣ ಅವರನ್ನು ಬಿಲ್ಲವರ ಕೈಯಿಂದಲೇ ಸಂಘ ಪರಿವಾರ ಬಗ್ಗುಬಡಿಯುತ್ತಿದೆ. ಸುನೀಲ್ ಕುಮಾರ್, ರುಕ್ಮಯ ಪೂಜಾರಿ ಸೇರಿದಂತೆ ಹಲವು ನಾಯಕರನ್ನು ಬಿಜೆಪಿ ಬಳಸಿ ಎಸೆಯುತ್ತಿದೆ. ಇತ್ತೀಚೆಗೆ ಅನಿವಾರ್ಯ ಎನ್ನುವ ಹೊತ್ತಿನಲ್ಲಿ ಉಡುಪಿಯ ಕೋಟಾ ಶ್ರೀನಿವಾಸ ಪೂಜಾರಿಗೆ ಒಂದು ಸಚಿವ ಸ್ಥಾನ ಸಿಕ್ಕಿತು. ಅದೂ ಮುಜರಾಯಿ ಇಲಾಖೆ.ಆ ಇಲಾಖೆಯ ಮೂಲಕ ಶ್ರೀನಿವಾಸ ಪೂಜಾರಿಯವರು ವೈದಿಕರ ಚಾಕರಿಯನ್ನೇ ಮಾಡುತ್ತಿದ್ದಾರೆ. ಬಿಲ್ಲವ ಸಮುದಾಯಕ್ಕೆ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ಇತ್ತ ಬಹುಸಂಖ್ಯೆಯ ಬಿಲ್ಲವ ಯುವಕರು ಕೋಮುಗಲಭೆಗಳಲ್ಲಿ ಭಾಗವಹಿಸಿ ಆರೋಪಿಗಳಾಗಿ ಜೈಲು, ಕೋರ್ಟು ಎಂದು ಅಲೆಯುತ್ತಿದ್ದಾರೆ.
ಇದೆಲ್ಲದಕ್ಕೂ ಪರೋಕ್ಷವಾಗಿ ಜನಾರ್ದನ ಪೂಜಾರಿಯವರೇ ಕಾರಣರಾಗಿದ್ದಾರೆ. ಈ ಸತ್ಯವನ್ನು ಅವರು ನಿಧಾನಕ್ಕಾದರೂ ಅರ್ಥ ಮಾಡಿಕೊಂಡಂತಿದೆ. ಇದರ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಕುದ್ರೋಳಿ ದಸರಾ ಸಂದರ್ಭದಲ್ಲಿ ಕೇಸರಿ ಬಾವುಟವನ್ನು ಹಾರಿಸುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ನಾರಾಯಣಗುರುಗಳನ್ನು ಮುಂದಿಟ್ಟುಕೊಂಡು, ಹಳದಿ ಬಾವುಟ ನಿಧಾನಕ್ಕೆ ರಾರಾಜಿಸ ತೊಡಗಿದೆ. ಆದರೆ ಅದರಿಂದಷ್ಟೇ ಜನಾರ್ದನ ಪೂಜಾರಿಯವರ ಅಥವಾ ಬಿಲ್ಲವ ಮುಖಂಡರ ಕರ್ತವ್ಯ ಮುಗಿಯುವುದಿಲ್ಲ. ರಾಜಕೀಯವಾಗಿ ಸಂಪೂರ್ಣ ಹತಾಶ ಸ್ಥಿತಿಯಲ್ಲಿರುವ ಬಿಲ್ಲವರನ್ನು ಮತ್ತೆ ತಲೆಯೆತ್ತಿ ನಿಲ್ಲಿಸುವ ಕೆಲಸ ಜನಾರ್ದನ ಪೂಜಾರಿಯವರ ಹೊಣೆಯಾಗಿದೆ. ಈ ಕಾರಣಕ್ಕಾಗಿ ಜನಾರ್ದನ ಪೂಜಾರಿಯವರು ಮಾಡಬೇಕಾದ ಮೊದಲ ಕೆಲಸ, ರಾಜಕೀಯದಿಂದ ದೂರ ಸರಿಯುವುದು. ಮುಖ್ಯವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದು. ಕಾಂಗ್ರೆಸ್ ವರಿಷ್ಠರು ಜನಾರ್ದನ ಪೂಜಾರಿಗೆ ಮಾಡಬೇಕಾದ ಅತಿ ದೊಡ್ಡ ಉಪಕಾರವೆಂದರೆ ಅವರಿಗೆ ಟಿಕೆಟ್ ಕೊಡದೇ ಇರುವುದು. ಹಾಗೆಯೇ ಒಂದಾನೊಂದು ಕಾಲದಲ್ಲಿ ಪೂಜಾರಿ ಕರಾವಳಿಯಲ್ಲಿ ಕಾಂಗ್ರೆಸ್‌ನ್ನು ಕಟ್ಟಿ ಬೆಳೆಸಿದವರು. ಸಾಧ್ಯವಾದರೆ ಅವರಿಗೆ ಯಾವುದಾದರೂ ಉನ್ನತ ಹುದ್ದೆಯನ್ನು ನೀಡಬೇಕಾಗಿದೆ. ಕನಿಷ್ಠ ಯಾವುದಾದರೂ ರಾಜ್ಯದ ರಾಜ್ಯಪಾಲರಾಗಿ ಮಾಡಿದರೂ ಸರಿಯೇ. ಆಸ್ಕರ್‌ರಂತಹ ನಾಯಕರು ದಿಲ್ಲಿಯಲ್ಲಿ ನಿರಾಯಾಸವಾಗಿ ಅಧಿಕಾರ ಅನುಭವಿಸುತ್ತಿರುವಾಗ, ಇಂದಿರಾಗಾಂಧಿಯ ಕಾಲದಿಂದಲೇ ನಿಷ್ಠಾವಂತ ಕಾಂಗ್ರೆಸ್ಸಿಗರಾಗಿ ಗುರುತಿಸಿಕೊಂಡ ಜನಾರ್ದನ ಪೂಜಾರಿಯನ್ನು ವರಿಷ್ಠರು ಕೈ ಬಿಡಬಾರದು. ಯಾವುದೂ ಸಾಧ್ಯವಿಲ್ಲವೆಂದಾದರೆ ಹಿಂದಿನಂತೆ, ರಾಜ್ಯಸಭಾ ಸದಸ್ಯರನ್ನಾಗಿಯಾದರೂ ಮಾಡಬೇಕು.
ಇದೇ ಸಂದರ್ಭದಲ್ಲಿ, ಮುಖ್ಯವಾಹಿನಿಯಿಂದ ದೂರ ಸರಿದು, ಕಲ್ಲಡ್ಕ ಪ್ರಭಾಕರ ಭಟ್ಟರ ಚಾಕರಿ ಮಾಡುತ್ತಾ, ಕ್ರಿಮಿನಲ್ ಹಣೆಪಟ್ಟಿ ಹೊತ್ತುಕೊಂಡು ತಿರುಗಾಡುತ್ತಿರುವ ಬಿಲ್ಲವ ತರುಣರನ್ನು ಮತ್ತೆ ಮುಖ್ಯವಾಹಿನಿಗೆ ತರುವುದು, ಅವರನ್ನು ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಅಭಿವೃದ್ಧಿಯತ್ತ ಮುನ್ನಡೆಸುವುದು ಪೂಜಾರಿಯ ಕರ್ತವ್ಯವಾಗಿದೆ. ಇತ್ತೀಚೆಗೆ ಪೂಜಾರಿಯವರು ವಿಧವೆ ಮಹಿಳೆಯರ ಕೈಯಲ್ಲಿ ರಥವನ್ನು ಎಳೆಸಿ, ಪೂಜೆಯನ್ನು ಮಾಡಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದರು. ಇದು ನಿಜಕ್ಕೂ ನಾರಾಯಣಗುರುಗಳು ಮೆಚ್ಚುವ ಕೆಲಸ. ಇದನ್ನು ರಾಜಕೀಯ ಕಾರಣಕ್ಕಾಗಿ ಮಾಡದೆ, ಕನಿಷ್ಠ ತನ್ನ ಸಮುದಾಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಜನಾರ್ದನ ಪೂಜಾರಿಯವರು ಮಾಡಬೇಕಾಗಿದೆ.ಬಿಲ್ಲವ ತರುಣರಿಗೆ, ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ಪರಿಚಯವನ್ನು ಮಾಡಿಸುವ ಕೆಲಸವೂ ಅವರಿಂದಲೇ ಆಗಬೇಕಾಗಿದೆ. ಅವರ ಕ್ರಾಂತಿ ಸಂದೇಶವನ್ನು ಕೇವಲ ಬಿಲ್ಲವರಲ್ಲಿ ಮಾತ್ರವಲ್ಲ, ಕರಾವಳಿಯ ಎಲ್ಲ ತರುಣರ ಎದೆಯಲ್ಲಿ ಬಿತ್ತುವ ಕೆಲಸ ನಡೆಯಬೇಕಾಗಿದೆ. ಕುದ್ರೋಳಿ ದೇವಸ್ಥಾನದ ವತಿಯಿಂದಲೇ ನಾರಾಯಣ ಗುರುಗಳ ಬದುಕು, ಆಶಯಗಳನ್ನು ತಿಳಿಸಿಕೊಡುವ ಸಣ್ಣಪುಟ್ಟ ಕೃತಿಗಳನ್ನು ಹೊರತರಬೇಕು. ಅಥವಾ ಇದಕ್ಕಾಗಿ ಪ್ರತ್ಯೇಕವಾದ ಒಂದು ಪ್ರತಿಷ್ಠಾನವನ್ನು ಮಾಡಿದರೂ ಆದೀತು.
ಮುಂಬಯಿಯಂತಹ ಶಹರದಲ್ಲಿ ಬಿಲ್ಲವರು ಸಂಘಟಿತರಾಗಿ ಶಾಲೆಗಳನ್ನು ಬ್ಯಾಂಕುಗಳನ್ನು, ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ಅದು ಮಂಗಳೂರಿನ, ಉಡುಪಿಯ ಬಿಲ್ಲವರಿಗೂ ಸಾಧ್ಯವಾಗಬೇಕು. ಮುಂಬಯಿ ಬಿಲ್ಲವರ ಸಾಧನೆ ಯಾರ ಭಿಕ್ಷೆಯೂ ಅಲ್ಲ. ನಾರಾಯಣ ಗುರುಗಳ ಮಾಗದರ್ಶನದಲ್ಲಿ ಸಂಘಟಿತರಾದುದರಿಂದ ಈ ಅಭಿವೃದ್ಧಿ ಸಾಧಿಸುವುದಕ್ಕೆ ಬಿಲ್ಲವರಿಗೆ ಸಾಧ್ಯವಾಯಿತು. ಇದೀಗ ಪ್ರಭಾಕರ ಭಟ್ಟರ ದಂಡು ಮುಂಬಯಿಗೆ ತೆರಳಿ, ಅಲ್ಲಿನ ಬಿಲ್ಲವರು, ಬಂಟರಿಂದ ‘ಭಾರತ ಭಾರತಿ’ ಸಮ್ಮೇಳನದ ಹೆಸರಿನಲ್ಲಿ ಅನಧಿಕೃತವಾಗಿ ಸುಮಾರು ಎರಡು ಕೋಟಿ ರೂಪಾಯಿಯಷ್ಟು ಕಪ್ಪ ವಸೂಲು ಮಾಡಿಕೊಂಡು ಬಂದಿದೆ. ಪ್ರಭಾಕರ ಭಟ್ಟರ ಬಳಗ ಮುಂಬಯಿ ಕನ್ನಡಿಗರಿಂದ ಹಫ್ತಾ ವಸೂಲು ಮಾಡಿಕೊಂಡು ಬಂದಿರುವ ಸಂಗತಿ, ಇದೀಗ ಎಲ್ಲರ ಬಾಯಲ್ಲೂ ಹರಿದಾಡುತ್ತಿದೆ. ಇಲ್ಲಿ ಗುಟ್ಟೆಂಬುದು ಉಳಿದೇ ಇಲ್ಲ.ಮುಂಬಯಿ ಕನ್ನಡಿಗರು ತಾವು ಕಟ್ಟಿ ಬೆಳೆಸಿದ ಭವ್ಯ ನಿರ್ಮಾಣಕ್ಕೆ, ಹೊರಗಿನ ಹಾವುಗಳನ್ನು ಯಾವ ಕಾರಣಕ್ಕೂ ನುಸುಳಲು ಬಿಡಬಾರದು. ಒಮ್ಮೆ ನುಸುಳಲು ಬಿಟ್ಟರೆ, ಅದರೊಳಗಿರುವ ನಿಜವಾದ ಕನ್ನಡಿಗರೆಲ್ಲ ಹೊರಬರುವಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಆದುದರಿಂದ, ಇಂತಹ ಕ್ಷುದ್ರ ರಾಜಕೀಯ ಕೀಟಗಳಿಂದ ಮುಂಬಯಿ ಕನ್ನಡ ಸಂಸ್ಕೃತಿಯನ್ನು ರಕ್ಷಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ.
ಅಭಿವೃದ್ಧಿ ಮತ್ತು ಸೌಹಾರ್ದ ಒಂದೇ ನಾಣ್ಯದ ಎರಡು ಮುಖಗಳು. ಬಿಲ್ಲವರು, ಬಂಟರು, ಮೊಗವೀರರು ಮತ್ತು ಬ್ಯಾರಿಗಳು ಜೊತೆಗೂಡದೆ ತುಳುನಾಡಿನ ಅಭಿವೃದ್ಧಿ ಸಾಧ್ಯವಿಲ್ಲ. ತುಳುನಾಡಿಗೆ ವೈದಿಕರು ಕಾಲಿಡುವ ವೊದಲಿನ ಉಚ್ಛ್ರಾಯ ದಿನಗಳನ್ನು ಇವರೆಲ್ಲ ನೆನೆದುಕೊಳ್ಳಬೇಕಾಗಿದೆ.ಅಬ್ಬಕ್ಕರಾಣಿಯ ಸೇನಾಪಡೆಯಲ್ಲಿ ಒಂದಾಗಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿದ ದಿನಗಳನ್ನು ಸ್ಮರಿಸಬೇಕಾಗಿದೆ. ಬಪ್ಪಬ್ಯಾರಿಯ ಸೌಹಾರ್ದ ಕನಸುಗಳಿಗೆ ನೀರೆರೆಯಬೇಕಾಗಿದೆ.ಎಣ್ಮೂರು, ಪಂಜ, ಉಳ್ಳಾಲ ಹೀಗೆ ಎಲ್ಲಿ ನೋಡಿದರಲ್ಲಿ ಈ ಎಲ್ಲ ಸಮುದಾಯಗಳ ಕೊಡುಕೊಳ್ಳುವಿಕೆಯೇ ಕಾಣ ಸಿಗುತ್ತದೆ. ಇವರೆಲ್ಲ ಒಂದಾಗಿಲ್ಲದ ತುಳುನಾಡನ್ನು ಕಲ್ಪಿಸಲೂ ಸಾಧ್ಯವಿಲ್ಲ. ಅದನ್ನು ಒಂದಾಗಿಸುವ ಭಾಗವಾಗಿ, ಕಳಚಿಕೊಂಡ ಬಹುಮುಖ್ಯ ಕೊಂಡಿ, ಬಿಲ್ಲವರನ್ನು ಮತ್ತೆ ಜೋಡಿಸುವ ಕೆಲಸ ಕುದ್ರೋಳಿ ದೇವಸ್ಥಾನದಿಂದಲೇ ಆರಂಭವಾಗಬೇಕಾಗಿದೆ. ಈ ಮೂಲಕ ಕರಾವಳಿಯಾದ್ಯಂತ ನಾರಾಯಣ ಗುರುಗಳ ಹಳದಿ ಧ್ವಜ ಹಾರಾಡಬೇಕಾಗಿದೆ.
|
ಶ್ರೀ ನಾರಾಯಣ ಗುರು |
ಮುಂಬೈ ಕನ್ನಡ ಮತ್ತು ಅಲ್ಲಿನ ಗೆಳೆಯರು ನನ್ನ ಪಾಲಿಗೆ ಜೀವ ದ್ರವ್ಯವಿದ್ದಂತೆ. ವಾರಕ್ಕೊಮ್ಮೆ ಮುಂಬೈಯ ಯಾರಾದರೊಬ್ಬ ಗೆಳೆಯರು ಫೋನ್ ಕರೆ ಮಾಡಿದರೆ, ಮಂಗಳೂರಿನ ಬಿಸಿಲಿಗೆ ಒಣಗಿದ ನನ್ನ ಬರಡು ಬದುಕಲ್ಲಿ ಜೀವ ಚಿಮ್ಮಿ ಬಿಡುತ್ತದೆ. ಸಾಧಾರಣವಾಗಿ ವಾರಕ್ಕೊಮ್ಮೆ ಅಣ್ಣನಂತಹ ಗೆಳೆಯ ಸಾ.ದಯಾ(ದಯಾನಂದ ಸಾಲ್ಯಾನ್) ‘ಹೇಗಿದ್ದೀರಿ, ಏನು ಬರೆದಿದ್ದೀರಿ?’’ ಎಂಬ ಎರಡು ಶಬ್ದಗಳನ್ನು ಕೇಳದೇ ಇದ್ದಲ್ಲಿ ಏನೋ ಕಳೆದುಕೊಂಡ ಭಾವನೆ. ದಯಾ, ಗೋಪಾಲ್, ರವಿ ರ.ಅಂಚನ್, ಅರುಷಾ, ಕುಸುಮಾ ಹೀಗೆ ನನ್ನ ಹತ್ತು ಹಲವು ಗೆಳೆಯರು ನನ್ನನ್ನು ಮುಂಬೈ ಕನ್ನಡದ ಗಲ್ಲಿಗಳಲ್ಲಿ ಕೈ ಹಿಡಿದು ನಡೆಸಿದ್ದಾರೆ. ಒಂದು ರೀತಿಯಲ್ಲಿ ಮುಂಬೈಯ ಈ ಕನ್ನಡ ಜಗತ್ತು ನನ್ನ ಏಕಾಂತದ ಕನಸು. ಈ ಕನಸನ್ನು ಭಗ್ನಗೊಳಿಸುವ ರೀತಿಯಲ್ಲಿ ಎರಡು ದಿನಗಳ ಹಿಂದೆ ಮುಂಬೈಯಿಂದ ಫೋನ್ ಕರೆಯೊಂದು ಬಂದಿತ್ತು. ಮುಂಬೈಯಲ್ಲಿ ನಡೆದ ಒಂದು ಸಮಾವೇಶದ ಕುರಿತಂತೆ ಆತ್ಮೀಯರೊಬ್ಬರು ನನ್ನೊಂದಿಗೆ ಕೆಲವು ಮಾತುಗಳನ್ನು, ವಿಚಾರಗಳನ್ನು ಹಂಚಿಕೊಂಡರು. ನನ್ನ ಮುಂಗನ್ನಡದ ಮಾನಸ ಸರೋವರವನ್ನು ಅಪರಿಚಿತರಾರೋ ಕಲ್ಲು ಚೂರುಗಳನ್ನೆಸೆದು ಕಲಕಿದಂತೆ ಆ ಮಾತುಗಳಿಂದ ದುಗುಡಗೊಂಡೆ.
ಕರಾವಳಿಯ ತುಳುವರಿಗೆ ಮುಂಬಯಿ ಕಾಯಕದ ನಗರ. ತಾಯ್ನೆಲದ ಸಾಮಾಜಿಕ ಸಂಘರ್ಷಗಳು ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದಾಗ, ಇಲ್ಲಿನ ಮೊಗವೀರರು, ಬಂಟರು, ಬಿಲ್ಲವ ತರುಣರು ಮುಂಬೈಯನ್ನು ಸೇರಿ, ಅಲ್ಲಿ ನೆಲೆಕಂಡು, ಬೇರು ಬಿಟ್ಟು, ಮುಂಗನ್ನಡವೆಂಬ ವಿಶಿಷ್ಟ ಸಂಸ್ಕೃತಿ ಕಟ್ಟಿ ಬೆಳೆಸಿದರು. ನಗರ ಶೈಲಿಯ ಹಿಂದಿ ಮಿಶ್ರಿತ ತುಳುಭಾಷೆಯೊಂದನ್ನು ರೂಢಿಸಿಕೊಂಡರು. ಜಾತಿಯ ನೆಲೆಯಲ್ಲೇ ಸಂಘಟಿತರಾಗಿ, ಆ ಮೂಲಕವೇ ತಮ್ಮ ಅಸ್ತಿತ್ವವನ್ನು ಮರಳಿ ಗಳಿಸಿಕೊಂಡರು. ಊರವರಿಂದ ಸೈ ಅನ್ನಿಸಿ ಕೊಂಡರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರಾಗಿ, ಬಳಿಕ ಕನ್ನಡದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡರು.ಮುಂಬೈಯ ಜಾತಿ ಸಂಘಟನೆಗಳು ಇಲ್ಲಿನ ಕನ್ನಡತನಕ್ಕೆ ಎಲ್ಲೂ ಧಕ್ಕೆ ತರಲಿಲ್ಲ. ಬದಲಿಗೆ ಪೂರಕವಾಯಿತು. ಬಿಲ್ಲವರು, ಬಂಟರು, ಮೊಗವೀರರು ಕರ್ನಾಟಕ ಸಂಘದಲ್ಲಿ ಕನ್ನಡದ ಛತ್ರಿಯ ನೆರಳೊಳಗೆ ಸೇರಿಕೊಳ್ಳುವವರು. ಬದುಕಿನ ಅಳಿವು ಉಳಿವಿನ ಸಂದರ್ಭದಲ್ಲಿ ಮುಂಬೈಯನ್ನು ಆರಿಸಿಕೊಂಡಿದ್ದರೇ ಹೊರತು, ಹಣದ ದಾಹಕ್ಕಾಗಿ ಅವರು ಮುಂಬೈಗೆ ತೆರಳಿದವರಲ್ಲ. ತೆರಳಿದ ಬಳಿಕವೂ ತನ್ನ ತಾಯ್ನೆಲದ ಜೀವಜಲ ವನ್ನು ಉಳಿಸಿಕೊಂಡವರು.
ಆದರೆ ಒಂದು ವಾರದ ಹಿಂದೆ ಇಲ್ಲಿ ಒಂದು ಸಮಾವೇಶ ನಡೆಯಿತು. ಯಾವುದೇ ಅಧಿಕೃತ ಹೆಸರಿನಲ್ಲಿ ಗುರುತಿಸಿಕೊಳ್ಳದ ಕೆಲವರು ಒಟ್ಟು ಸೇರಿ ಮುಂಬೈಯಲ್ಲಿ ಭಾರತ ಭಾರತಿ ಎನ್ನುವ ಸಮಾವೇಷವನ್ನು ಕಳೆದವಾರ ಹಮ್ಮಿಕೊಂಡರು. ಅದಕ್ಕೆ ‘ಹಿಂದೂ ಕೌಟುಂಬಿಕ ಸಮ್ಮಿಲನ’ ಎಂಬ ಇನ್ನೊಂದು ಹೊರ ಮುಖವಾಡವನ್ನೂ ಹಾಕಲಾಯಿತು.ಇದೊಂದು ಸಾಂಸ್ಕೃತಿಕ ಸಮಾವೇಷವೆಂದು ಅಲ್ಲಿನ ವಿವಿಧ ಜಾತಿ ಸಂಘಟನೆಗಳನ್ನು, ಕನ್ನಡ ಸಂಘಟನೆಗಳನ್ನು ವಂಚಿಸಿ ಅವರನ್ನೆಲ್ಲ ಒಂದೆಡೆ ಸೇರಿಸಿ ಅವರಿಗೆ ಕೋಮು ವಿಷವನ್ನು ಉಣಿಸುವ ಪ್ರಯತ್ನವೊಂದು ಅಲ್ಲಿ ನಡೆಯಿತು. ಈ ಭಾರತ ಭಾರತಿ ಸಮಾವೇಶದಲ್ಲಿ ಮುಂಬೈಯ ಹಿರಿಯ ಕನ್ನಡಿಗರಿಗೆ ಹಿಂದುತ್ವದ ಉಪದೇಶ ನೀಡಲು ನಾಡಿನಿಂದ ತೆರಳಿದವರು ಇನ್ನಾರೂ ಅಲ್ಲ. ಉಪ್ಪಿನಂಗಡಿಯ ಸೌಹಾರ್ದವನ್ನು ಕೆಡಿಸಿ, ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿರುವ ಪ್ರಭಾಕರ ಭಟ್, ಕೋಮು ರಾಜಕೀಯ ಮಾಡುವುದಕ್ಕಾಗಿಯೇ ಸೃಷ್ಟಿಯಾದ ಕರಾವಳಿಯ ಸುಬ್ರಹ್ಮಣ್ಯ ಭಟ್, ಆರೆಸ್ಸೆಸ್ ಮುಖಂಡ ಮೈ.ಚ.ಜಯದೇವ ಮೊದಲಾದವರು ಮುಂಬೈಯ ಕನ್ನಡಿಗರಿಗೆ ಹಿಂದುತ್ವದ ಬಾಲ ಬೋಧೆಗಳನ್ನು ಮಾಡಿದರು. ಯಾವುದೇ ಅಧಿಕೃತ ವಾರಸುದಾರರಿಲ್ಲದ ಈ ಭಾರತ ಭಾರತಿ ಸಮಾವೇಶದ ಉದ್ದೇಶವೇ ಮುಂಬೈ ಕನ್ನಡದ ಸೌಹಾರ್ದಮಯ ಬದುಕಿಗೆ ರಾಜಕೀಯ, ಕೋಮು ಮತ್ತು ಜಾತೀಯತೆಯ ವಿಷವನ್ನು ಬೆರೆಸುವುದು. ಇದನ್ನು ಎಷ್ಟು ಜಾಣತನದಿಂದ ಹಮ್ಮಿಕೊಳ್ಳಲಾಯಿತು ಎಂದರೆ ಕೆಲವರಿಗೆ ಪ್ರಭಾಕರ ಭಟ್ಟರು ಮತ್ತು ಅವರ ರಾಜಕೀಯ ಸಂಗಡಿಗರು ಇದರಲ್ಲಿ ಪಾಲುಗೊಳ್ಳುವ ವಿಷಯವನ್ನೇ ಮುಚ್ಚಿಡಲಾಗಿತ್ತು. ಕೊನೆಯ ಗಳಿಗೆಯಲ್ಲಿ ಇದನ್ನು ಪ್ರಕಟಪಡಿಸಲಾಯಿತು. ಈ ಕೋಮು ರಾಜಕೀಯ ಸಮಾವೇಶಕ್ಕೆ ಮುಂಬೈಯ ಎಲ್ಲ ಕನ್ನಡ ಸಂಘಗಳನ್ನು ಜಾಣತನದಿಂದ ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು.ಮನುವಾದ ಮತ್ತು ವೈದಿಕಶಾಹಿಯ ನೇರ ಬಲಿಪಶುಗಳಾಗಿರುವ ಬಿಲ್ಲವರು, ಮೊಗವೀರರು ಮತ್ತು ಬಂಟ ಸಮುದಾಯಗಳ ಮೇಲಿನ ಹಿಡಿತವನ್ನು ಮತ್ತೆ ಗಟ್ಟಿ ಮಾಡಿಕೊಳ್ಳುವುದು, ಈ ಸಮುದಾಯದ ಜುಟ್ಟನ್ನು ಮತ್ತೆ ತಮ್ಮ ಕೈ ವಶ ಮಾಡಿಕೊಳ್ಳುವ ಏಕಮೇವ ಉದ್ದೇಶದಿಂದ ಮುಂಬೈಯಲ್ಲಿ ಇಂತಹದೊಂದು ಸಮಾವೇಶವನ್ನು ಮಾಡಲಾಗಿತ್ತು.
ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಈ ಸಮವೇಶದಲ್ಲಿ ಮುಂಬೈ ಕನ್ನಡಿಗರ ತಾಯಿಯಂತಹ ಸುನೀತಾ ಶೆಟ್ಟಿ ಅಥವಾ ಎಲ್ಲರ ಮೆಚ್ಚಿನ ಸುನೀತಕ್ಕ(ನನ್ನ ಕವನ ಸಂಕಲವೊಂದನ್ನು ಇವರೇ ಬಿಡುಗಡೆ ಮಾಡಿದ್ದರು), ಅತ್ಯಂತ ನಿಷ್ಠುರ ವ್ಯಕ್ತಿತ್ವವೆಂದು ಗುರುತಿಸಲ್ಪಟ್ಟ ಡಾ.ಸಂಜೀವ ಶೆಟ್ಟಿ(ಮುಂಬೈಯಲ್ಲಿ ಎಂ.ಎ. ಕಲಿಯುತ್ತಿರುವ ಹೊತ್ತಿನಲ್ಲಿ ಇವರು ನನಗೆ ಗುರುಗಳು) ಈ ಸಮಾವೇಶದಲ್ಲಿ ಬಲಿಪಶುಗಳಾದುದು.ಹಿಂದುತ್ವದ ಕುರಿತಂತೆ ಪ್ರಭಾಕರ ಭಟ್ಟರು ಮತ್ತು ಅವರ ಶಿಷ್ಯರಿಗೆ 48ಗಂಟೆ ನಿರಂತರ ಪಾಠ ಹೇಳುವ ಸಾಮರ್ಥ್ಯವಿರುವವರು ಇವರು. ಈ ದೇಶದ ಸೌಹಾರ್ದ, ಸಂಸ್ಕೃತಿ, ಪರಂಪರೆ ಮೊದಲಾದವುಗಳ ಕುರಿತಂತೆ ಸುನೀತಕ್ಕ, ಸಂಜೀವ ಶೆಟ್ಟಿಯಂಥವರೇ ಪ್ರಭಾಕರ ಭಟ್, ಜಯದೇವ, ಸುಬ್ರಹ್ಮಣ್ಯ ಭಟ್‌ನಂತವರಿಗೆ ಸಮಾವೇಶದಲ್ಲಿ ಪಾಠ ತೆಗೆದುಕೊಂಡಿದ್ದಿದ್ದರೆ ಸಮಾವೇಶದ ಉದ್ದೇಶ ಸಾರ್ಥಕವಾಗುತ್ತಿತ್ತು. ನಿಜವಾದ ಹಿಂದುತ್ವವೆಂದರೆ ಏನು ಎನ್ನುವುದನ್ನು ಮುಂಬೈ ಕನ್ನಡಿಗರೇ ಈ ಪ್ರಭಾಕರ ಭಟ್ಟರಿಗೆ ಚೆನ್ನಾಗಿ ಕಲಿಸಿಕೊಡುತ್ತಿದ್ದರು. ಆದರೆ ದುರದೃಷ್ಟವಶಾತ್, ಹಿಂದುತ್ವದ ಬಗ್ಗೆ ಭಟ್ಟರು ಮುಂಬೈ ಕನ್ನಡಿಗರಿಗೆ ವಿವರಿಸಿಕೊಟ್ಟರು.
ಈ ವೇದಿಕೆಯಲ್ಲಿ ಇನ್ನೊಂದು ಅವಮಾನಕಾರಿ ವಿಷಯ ನಡೆಯಿತು. ಊರಿನಿಂದ ಸಾಮಾಜಿಕವಾಗಿ, ಧಾರ್ಮಿಕವಾಗಿ ತಿರಸ್ಕೃತರಾಗಿ, ಮುಂಬೈಯಲ್ಲಿ ನೆಲೆಕಂಡು, ಅಲ್ಲಿ ಮತ್ತೆ ತಮ್ಮ ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡ ಬಿಲ್ಲವರಿಗೆ ಪ್ರಭಾಕರ ಭಟ್ಟರು ಛೀಮಾರಿ ಹಾಕಿದರಂತೆ. ಯಾಕೆಂದು ಕೇಳುತ್ತೀರಾ? ಕುದ್ರೋಳಿ ದೇವಸ್ಥಾನಕ್ಕೆ ಸೋನಿಯಾ ಗಾಂಧಿಯನ್ನು ಕರೆಸಿ ರುವುದಕ್ಕೆ? ಆ ಛೀಮಾರಿಯನ್ನು ಹಿರಿಯ ಬಿಲ್ಲವ ನಾಯಕರು ತಲೆತಗ್ಗಿಸಿ ಸ್ವೀಕರಿಸಿದರಂತೆ. ನಾರಾಯಣ ಗುರುವಿನ ಬದುಕು, ತತ್ವ, ಸಿದ್ಧಾಂತವನ್ನು ಒಂದಿಷ್ಟು ತಿಳಿದುಕೊಂಡಿದ್ದಿದ್ದರೆ ಆ ಬಿಲ್ಲವ ಮುಖಂಡರು ತಲೆತಗ್ಗಿಸುವ ಪ್ರಶ್ನೆ ಬರುತ್ತಿರಲಿಲ್ಲವೇನೋ? ಭಟ್ಟರಿಗೆ ಬಿಲ್ಲವರನ್ನು ಛೀಮಾರಿ ಮಾಡುವ ಧೈರ್ಯವೂ ಬರುತ್ತಿರಲಿಲ್ಲ ವೇನೋ?ಜಾತಿ, ಧರ್ಮ, ಮೇಲು, ಕೀಳು ಇತ್ಯಾದಿಗಳನ್ನೆಲ್ಲ ಮೀರಿ ಮಾನವೀಯ ತಳಹದಿಯಲ್ಲಿ ನಾರಾಯಣ ಗುರು ಸ್ಥಾಪಿಸಿದ ಕುದ್ರೋಳಿ ದೇವಸ್ಥಾನದ ಮೆಟ್ಟಿಲ ಮೇಲೆ ಕಾಲಿಡಲೂ ಯೋಗ್ಯತೆಯಿಲ್ಲದ ಪ್ರಭಾಕರ ಭಟ್ಟರಿಗೆ, ಪ್ರತಿಯಾಗಿ ಛೀಮಾರಿ ಹಾಕದೆ ಅವರನ್ನು ಹಾಗೆಯೇ ಮರಳಿ ಊರಿಗೆ ತಲುಪಿಸಿರುವುದು ಮುಂಬೈಯ ಬಿಲ್ಲವರ ಸಜ್ಜನಿಕೆಯನ್ನು, ಹಿರಿಮೆಯನ್ನು ಹೇಳುತ್ತದೆ. ಆದರೆ ಇಡೀ ಘಟನೆ ಕರಾವಳಿಯ ಬಹುಸಂಖ್ಯಾತರಾದ ಬಿಲ್ಲವರ ರಾಜಕೀಯ ದುರಂತವನ್ನು ಮಾತ್ರ ಹೊರಗೆಡಹಿತು. ಕರಾವಳಿಯ ಬಿಲ್ಲವರ ರಾಜಕೀಯ ಏಳು-ಬೀಳುಗಳ ಹಿಂದಿರುವ ಕುದ್ರೋಳಿ ದೇವಸ್ಥಾನ, ನಾರಾಯಣ ಗುರುಗಳ ಮಂಗಳೂರು ಭೇಟಿ, ಈ ದೇವಸ್ಥಾನವನ್ನು ಮುಂದಿಟ್ಟು ವೈದಿಕ ಶಕ್ತಿಗಳು ಹೂಡಿದ ಸಂಚು ಇವೆಲ್ಲವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ನನ್ನ ಈ ಬರಹದ ಉದ್ದೇಶ.
***
ನಾರಾಯಣ ಗುರುಗಳು ಮಂಗಳೂರಿಗೆ ಮೊತ್ತ ಮೊದಲು ಪಾದವೂರಿದ್ದು ಸುಮಾರು 1908ರಲ್ಲಿ. ಅವರು ಮಂಗಳೂರಿಗೆ ಆಗಮಿಸುವುದಕ್ಕೆ ಕಾರಣಕರ್ತರಾದ ಹಲವು ಬಿಲ್ಲವ ನಾಯಕರಿದ್ದರೂ, ಅದರಲ್ಲಿ ಮುಖ್ಯ ಹೆಸರು ಸಾಹುಕಾರ್ ಕೊರಗಪ್ಪ ಪೂಜಾರಿಯವರದು. ನಾರಾಯಣ ಗುರುಗಳು ಮತ್ತು ಕೊರಗಪ್ಪ ಪೂಜಾರಿಯವರ ಭೇಟಿ ಒಂದು ಯೋಗಾಯೋಗ ಎನ್ನಬೇಕು. ಕರಾವಳಿಯ ಬಿಲ್ಲವರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತಲೆಯೆತ್ತಿ ನಿಲ್ಲುವುದಕ್ಕೆ ಈ ಭೇಟಿ ಒಂದು ಪೀಠಿಕೆಯಾಯಿತು.
ಅಬ್ದುಂಞಿ ರಝಾಕಾರ್ ಎಂಬ ಹಿರಿಯ ಮುಸ್ಲಿಂ ಉದ್ಯಮಿ ಅಂದು ಮಂಗಳೂರಿನ ಹಿರಿಯ ವ್ಯಾಪಾರಿಗಳೆಂದು ಗುರುತಿಸಲ್ಪಟ್ಟವರು. ಒಣ ಮೀನು, ಸಾಂಬಾರ ಪದಾರ್ಥ ಇತ್ಯಾದಿಗಳನ್ನು ಅವರು ಶ್ರೀಲಂಕಾ, ಸೌದಿ ಅರೇಬಿಯಾ ಮೊದಲಾದೆಡೆಗೆ ಹಡಗಿನ ಮೂಲಕ ಸಾಗಿಸುತ್ತಿದ್ದರು. ರಝಾಕಾರ್‌ರ ಜೊತೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದವರು ಕೊರಗಪ್ಪ ಪೂಜಾರಿ.ಕುದ್ರೋಳಿ ದೇವಸ್ಥಾನದ ಉಗಮದ ಹಿಂದೆ ಬಿಲ್ಲವ-ಮುಸ್ಲಿಮರ ನಡುವಿನ ಒಂದು ಸೌಹಾರ್ದ ಬಂಧವೂ ಕೆಲಸ ಮಾಡಿದೆ. ರಝಾಕಾರ್ ಮತ್ತು ಕೊರಗಪ್ಪ ಅವರ ನಡುವಿನ ಸಂಬಂಧ ಎಷ್ಟು ಹತ್ತಿರವಿತ್ತು ಎಂದರೆ ಅದು ರಝಾಕಾರ್ ಅವರ ಮಕ್ಕಳ ಕಾಲದಲ್ಲೂ ಮುಂದುವರಿಯಿತು. ರಝಾಕಾರ್ ಅವರ ಪುತ್ರ ರಹಿಮಾನ್ ಅವರು ಕೊರಗಪ್ಪ ಪೂಜಾರಿಯವರನ್ನು ತಮ್ಮ ವ್ಯಾಪಾರದ ಪಾಲುದಾರರಾಗಿ ಮಾಡಿಕೊಂಡರು. ಹೀಗೆ ಕೆಲಸದವರಾಗಿ ಸೇರಿದ್ದ ಕೊರಗಪ್ಪ ಪೂಜಾರಿಗಳು ಮುಂದೆ ಸಾಹುಕಾರ್ ಕೊರಗಪ್ಪರಾಗಿ ಬದಲಾದರು. ಸಿ.ಅಬ್ದುಲ್ ರಹಿಮಾನ್ ಎಂಡ್ ಕೊರಗಪ್ಪ ಕಂಪೆನಿ ಎಂಬ ಪಾಲುದಾರಿಕೆಯ ಸಂಸ್ಥೆಯೊಂದನ್ನು ಮಾಡಿಕೊಂಡು ತಮ್ಮ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಿದರು. ಶ್ರೀಲಂಕಾ, ಅರೇಬಿಯಾದಲ್ಲಿ ವ್ಯಾಪಾರ ಇನ್ನಷ್ಟು ಕುದುರಿತು.
ಕೊರಗಪ್ಪ ಪೂಜಾರಿಯವರು ಕುದ್ರೋಳಿಯಲ್ಲಿ ಗೋಕರ್ಣ ದೇವಸ್ಥಾನ ನಿರ್ಮಾಣ ಮಾಡಿದುದರ ಹಿಂದೆ ಒಂದು ವಿಷಾದನೀಯ ಘಟನೆ ಇದೆ. ಕೊರಗಪ್ಪ ಅವರು ಸಾಹುಕಾರರಾದ ಮೇಲೆ ಗೋಕರ್ಣಕ್ಕೆ ಹೋದಾಗ ಅಲ್ಲಿಯ ದೇವಸ್ಥಾನಕ್ಕೂ ಭೇಟಿ ನೀಡಿದರು. ಇವರ ವ್ಯಕ್ತಿತ್ವ, ಅಂತಸ್ತು ಕಂಡು ದೇವಸ್ಥಾನದ ಅರ್ಚಕರು ಸ್ವಾಗತಿಸಿ, ಊಟ, ಪ್ರಸಾದ ನೀಡಿದರು. ಹೊರಡುವ ಹೊತ್ತಲ್ಲಿ, ಕೊರಗಪ್ಪ ಪೂಜಾರಿಯವರು ಬಿಲ್ಲವ ಜಾತಿಗೆ ಸೇರಿದವರು ಎನ್ನೋದು ಗೊತ್ತಾಗಿ, ಅವರನ್ನು ತಡೆದು ದಂಡ ಕಾಣಿಕೆಯನ್ನು ಪಡೆದರು. ಇದರಿಂದ ಕೊರಗಪ್ಪ ಪೂಜಾರಿಯವರಿಗೆ ತೀವ್ರ ಅವಮಾನವಾಯಿತು. ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿದ್ದರೂ ಅವರಿಗೆ ಅಲ್ಲಿ ಜಾತಿ ಕಾರಣಕ್ಕಾಗಿ ಅವಮಾನವಾಯಿತು.
ಇದೇ ಸಂದರ್ಭದಲ್ಲಿ ಸಾಹುಕಾರ್ ಕೊರಗಪ್ಪ ಪೂಜಾರಿಯವರ ಸೋದರನಿಗೆ ಮಾರಕ ಕಾಯಿಲೆಯೊಂದು ಎರಗಿತು. ಯಾವ ಔಷಧಿಯಿಂದಲೂ ಅವರ ಕಾಯಿಲೆ ಗುಣವಾಗಲಿಲ್ಲ. ಆಗ ಯಾರೋ ಅವರಿಗೆ ‘ಕೇರಳದಲ್ಲಿ ಒಬ್ಬ ಭಟ್ರು ಇದ್ದಾರೆ. ಅವರು ಬಲ್ಮೆ ಹೇಳಿ ಗುಣಪಡಿಸುತ್ತಾರೆ’ ಎಂದು ಹೇಳಿದರಂತೆ. ಹಾಗೆ ತಮ್ಮ ಸೋದರನನ್ನು ಅವರು ಕೇರಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ನೋಡಿದರೆ ಯಾವುದೇ ಭಟ್ರು, ಜೋಯಿಸರು ಇರಲಿಲ್ಲ. ಬದಲಿಗೆ, ಇವರನ್ನು ತಮ್ಮಂತೆಯೇ ಸ್ವೀಕರಿಸುವ ನಾರಾಯಣ ಗುರುಗಳಿದ್ದರು. ಆಯುರ್ವೇದದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದ ನಾರಾಯಣ ಗುರುಗಳು ಇವರನ್ನು ತಮ್ಮ ಬಾಹುಗಳಲ್ಲಿ ತೆಗೆದುಕೊಂಡದ್ದು ಅಚ್ಚರಿಯನ್ನುಂಟು ಮಾಡಿತು. ಸಾಹುಕಾರ ಕೊರಗಪ್ಪನವರು ಅದೆಷ್ಟೇ ಶ್ರೀಮಂತರಾಗಿದ್ದರೂ ವೈದಿಕರಿಗೆ ಅಸ್ಪೃಶ್ಯರಾಗಿದ್ದರು. ಸಾಮಾಜಿಕವಾಗಿ ವೈದಿಕರ ಮುಂದೆ ತಲೆಯೆತ್ತಿ ನಿಲ್ಲುವುದು ಅಸಾಧ್ಯವಾಗಿತ್ತು. ಅದರಲ್ಲೂ ಕೊರಗಪ್ಪರಿಗೆ ಮಂಗಳೂರಿನ ಮುಸ್ಲಿಮರ ಜೊತೆಗೆ ವ್ಯಾಪಾರ ಸಂಬಂಧ, ಒಡನಾಟ, ಸ್ನೇಹ ಇತ್ಯಾದಿಗಳಿವೆ. ಆದುದರಿಂದ ಮೇಲ್ವರ್ಗಕ್ಕೆ ಕೊರಗಪ್ಪನವರು ಸದಾ ಅಸಹನೆಯ ವಿಷಯವೇ ಆಗಿದ್ದರು. ಈವರೆಗೆ, ಸ್ವಾಮೀಜಿಗಳೆಂದರೆ ಮೇಲ್ಜಾತಿಯವರು ಎಂದು ತಿಳಿದವರಿಗೆ ಮೊದಲ ಬಾರಿಗೆ ಜಾತಿರಹಿತ ಸ್ವಾಮೀಜಿಯೊಬ್ಬರು ಮುಖಾಮುಖಿಯಾಗಿದ್ದರು. ಕೆಲವೇ ದಿನಗಳಲ್ಲಿ ಕೊರಗಪ್ಪ ಪೂಜಾರಿಯ ಸೋದರ ಗುಣಮುಖರಾದರು.
ಈ ಅವಧಿಯಲ್ಲಿ ನಾರಾಯಣಗುರುಗಳು ಎಲ್ಲ ಜಾತಿಯನ್ನು ಒಂದೇ ಎಂದು ಬಗೆಯುವ, ಮೇಲು-ಕೀಳೆನ್ನುವುದನ್ನು ಯೋಚಿಸದ, ನಮ್ಮದೇ ಬಿಲ್ಲವ ಸಮುದಾಯಕ್ಕೆ ಸೇರಿದ ಸ್ವಾಮಿ ಎನ್ನುವುದನ್ನು ಅರಿತಾಗ ಅವರು ರೋಮಾಂಚಿತರಾದರು. ಗುರುಗಳನ್ನು ಮಂಗಳೂರಿಗೆ ಬರಬೇಕು ಎಂದು ಆಹ್ವಾನಿಸಿದರು. ಆಗ ಗುರುಗಳು ತನ್ನದೇ ಆದ ಅಪೇಕ್ಷೆಯನ್ನು ಮುಂದಿಟ್ಟರು. ಅದರಲ್ಲಿ ಮುಖ್ಯವಾದುದು ಮೂರು. 1. ಬಿಲ್ಲವರು ಮೂರ್ತೆಧಾರಿಕೆಯನ್ನು ಬಿಡಬೇಕು. ಅಂದರೆ ಶೇಂದಿ ಮಾರುವುದನ್ನು ನಿಲ್ಲಿಸಬೇಕು. ಕೈಮಗ್ಗ, ಕೃಷಿ, ವ್ಯಾಪಾರ ಮೊದಲಾದ ಮುಖ್ಯವಾಹಿನಿಯ ಕಸುಬುಗಳನ್ನು ಮಾಡುತ್ತಾ ಸಾಮಾಜಿಕವಾಗಿ ಎತ್ತರದ ಸ್ಥಾನಕ್ಕೆ ಏರಬೇಕು.
2. ಮಂಗಳೂರಿನಲ್ಲಿ ಎಲ್ಲ ಜಾತಿ, ಧರ್ಮದ ವಿದ್ಯಾರ್ಥಿಗಳು ಕಲಿಯಲು ಅನುಕೂಲವಾಗುವಂತೆ ಒಂದು ಶಾಲೆಯನ್ನು ತೆರೆಯಬೇಕು.
3. ಕೀಳು-ಮೇಲುಗಳಿಲ್ಲದ, ಎಲ್ಲ ಜಾತಿಗಳನ್ನು ಒಂದೇ ಎಂದು ಬಗೆಯುವುದಕ್ಕಾಗಿ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡಬೇಕು.
ಕೊರಗಪ್ಪ ಪೂಜಾರಿಯವರು ಅದಕ್ಕೆ ಒಪ್ಪಿ ಮಂಗಳೂರಿಗೆ ಮರಳಿದರು. ಬಂದವರೇ ಬಿಲ್ಲವ ಹಿರಿಯರನ್ನು ಒಟ್ಟು ಸೇರಿಸುವ ಕೆಲಸದಲ್ಲಿ ತೊಡಗಿದರು. ಜಾತೀಯತೆಯ ಕುರಿತ ಜಾಗೃತಿಯನ್ನು ಹಂಚುತ್ತಾ, ನಾರಾಯಣ ಗುರುಗಳನ್ನು ಕರೆಸುವ ಕುರಿತು ನೀಲನಕ್ಷೆಯನ್ನು ಹಾಕಿದರು. ಅಂತೆಯೇ 1908ರಲ್ಲಿ ನಾರಾಯಣಗುರುಗಳ ಸಮ್ಮುಖದಲ್ಲಿ ಬಿಲ್ಲವ ಹಿರಿಯರ ಸಭೆಯೊಂದು ನಡೆಯಿತು. ಶೆಡ್ಡೆ ಸೋಮಯ್ಯ ಮೇಸ್ತ್ರಿ, ಐತಪ್ಪ ಪೂಜಾರಿ, ಅಮ್ಮಣ್ಣ ಮೇಸ್ತ್ರಿ, ಕಾಂಟ್ರಾಕ್ಟರ್ ಧೂಮಪ್ಪ ಪೂಜಾರಿ ಹೀಗೆ ಎಲ್ಲ ಗಣ್ಯರು ಆ ಸಭೆಯಲ್ಲಿ ಭಾಗವಹಿಸಿದ್ದರು.ಆ ಸಂದರ್ಭದಲ್ಲಿ ಮಂಗಳೂರಿನ ನೆಹರೂ ಮೈದಾನದ ಸ್ಥಳ ಬಿಲ್ಲವರ ಕೈಯಲ್ಲಿತ್ತು. ದೇವಸ್ಥಾನ ಎಲ್ಲಿ ನಿರ್ಮಿಸಬಹುದು ಎನ್ನುವಾಗ ಹಲವರಲ್ಲಿ ಈ ಸ್ಥಳದ ಕುರಿತಂತೆ ಸಮ್ಮತಿಯ ಅಭಿಪ್ರಾಯವಿತ್ತು. ಆದರೆ ನಾರಾಯಣ ಗುರುಗಳು ಕುದ್ರೋಳಿಯನ್ನು ಆರಿಸಿದರು. ವಿಶೇಷವೆಂದರೆ, ಕುದ್ರೋಳಿ ಮುಸ್ಲಿಂ ಬಾಹುಳ್ಯದ ಸ್ಥಳ. ಅದರಲ್ಲೂ ಕಸಾಯಿಖಾನೆಯಿರುವ ಸ್ಥಳ. ಕುದುರೆಗಳನ್ನು ಕಟ್ಟುತ್ತಿದ್ದ ಸ್ಥಳ. ಆದರೆ ಇಂತಹ ಸ್ಥಳವನ್ನೇ ನಾರಾಯಣ ಗುರುಗಳು ಆರಿಸುವಾಗ ಅವರಲ್ಲಿ ದೂರದೃಷ್ಟಿಯೊಂದು ಕೆಲಸ ಮಾಡಿತ್ತು. ಇತರ ಸಮುದಾಯಗಳೊಂದಿಗೆ ಬೆರೆಯುವ ಆಶಯ ಅದರಲ್ಲಿತ್ತು. ಕುದ್ರೋಳಿ ಮುಸ್ಲಿಮರ ಜೊತೆಗೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ ಕೊರಗಪ್ಪ ಪೂಜಾರಿಯವರಿಗೆ ಅಲ್ಲಿ ದೇವಸ್ಥಾನ ನಿರ್ಮಿಸುವುದು ಕಷ್ಟವಾಗಿರಲಿಲ್ಲ.ಕುದ್ರೋಳಿಯ ಮುಸ್ಲಿಮರು ಕೊರಗಪ್ಪ ಪೂಜಾರಿಯವರಿಗೆ ಸಂಪೂರ್ಣ ಸಹಕಾರ ನೀಡಿದರು. ಅಂದೇ ನಾರಾಯಣ ಗುರುಗಳು ದೇವಸ್ಥಾನಕ್ಕೆ ಚೌಕಟ್ಟು ಹಾಕಿದರು. 1912ರಲ್ಲಿ ಕರಾವಳಿಯ ಬಿಲ್ಲವರ ಪಾಲಿಗೆ ಮಾತ್ರವಲ್ಲ, ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲದ ಎಲ್ಲ ಶೂದ್ರರ ಪಾಲಿಗೆ ಸಾಮಾಜಿಕವಾಗಿ ಬಿಡುಗಡೆಯ ಸಂಕೇತವೊಂದನ್ನು ತೋರಿಸಿಕೊಟ್ಟರು. ಅಂದು ಫೆಬ್ರವರಿ ತಿಂಗಳಲ್ಲಿ ನಾರಾಯಣ ಗುರುಗಳು ಮಂಗಳೂರಿನ ಕುದ್ರೋಳಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠೆ ಮಾಡಿದರು. ಸ್ವಾತಂತ್ರ ಹೋರಾಟದ ಕಾವು ಮಂಗಳೂರಿನಲ್ಲಿ ಜಾಗೃತವಾಗಿದ್ದಾಗಲೇ ಈ ಪ್ರಕ್ರಿಯೆಯೂ ನಡೆದಿರುವುದು ಮುಂದಿನ ಬೆಳವಣಿಗೆಗಳಿಗೆ ಅನುಕೂಲವಾಯಿತು.
ದೇವಸ್ಥಾನ ಮೊತ್ತಮೊದಲು ಎದುರಿಸಿದ್ದು ಅರ್ಚಕರ ಸಮಸ್ಯೆಯನ್ನು. ಕೇರಳದಲ್ಲಿ ನಂಬೂದ್ರಿಗಳು, ಹೊರಗಿನಿಂದ ಬಂದ ಬ್ರಾಹ್ಮಣರಿಗೆ ಪೋತಿ ಎಂದು ಕರೆಯುತ್ತಿದ್ದರು. ಅದಕ್ಕೆ ಪರ್ಯಾಯವಾಗಿ ನಾರಾಯಣ ಗುರುಗಳು ಶಾಂತಿ ಎಂಬ ಪದವನ್ನು ಬಳಸಿದರು. ನಂಬೂದರಿಗಳ ಪೋತಿ ಜನಿವಾರ ಹಾಕುತ್ತಿದ್ದರೆ, ನಾರಾಯಣ ಗುರುಗಳ ಶಾಂತಿ ಜನಿವಾರ ರಹಿತನಾಗಿದ್ದ. ಆರಂಭದಲ್ಲಿ ಪುತ್ಥಳಿ ಬಾಳಪ್ಪ ಅರ್ಚಕರಾದರು. ಮುಂದೆ ಕೃಷ್ಣ ಶಾಂತಿ ಅರ್ಚಕರಾಗಿ ಮುಂದುವರಿದರು. ಕೃಷ್ಣ ಶಾಂತಿಗೆ ನಾರಾಯಣಗುರುಗಳೇ ತರಬೇತಿಯನ್ನೂ ನೀಡಿದ್ದರು. ಹೀಗೆ ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಬಿಲ್ಲವರಿಂದ ವೈದಿಕರ ವಿರುದ್ಧ ಒಂದು ಬಂಡಾಯ ಆರಂಭವಾಯಿತು. ಜನಿವಾರವಿಲ್ಲದ ಶಾಂತಿ ಅವರ ಪೂಜೆ ಪುರಸ್ಕಾರಗಳನ್ನು ನಿರ್ವಹಿಸುವಂತಾದರು. ಆದರೆ ಕುದ್ರೋಳಿ ದೇವಸ್ಥಾನದ ವಿರುದ್ಧ ವೈದಿಕರಿಂದ ಒಳಸಂಚುಗಳು ನಡೆಯುತ್ತಲೇ ಇದ್ದವು. ಬಿಲ್ಲವ ಮುಖಂಡರನ್ನೇ ಬಳಸಿಕೊಂಡು ಅವರು ಅದನ್ನು ತಮ್ಮ ಕೈಗೆ ತೆಗೆದುಕೊಳ್ಳುವ ವಿಫಲ ಪ್ರಯತ್ನ ಮಾಡಿದರು. ಆದರೆ ದುರದೃಷ್ಟವಶಾತ್ ಕೆಲವು ವಿಷಯಗಳಲ್ಲಿ ಅವರು ಯಶಸ್ವಿಯಾದರು. ಮೊತ್ತ ಮೊದಲಾಗಿ, ಅರ್ಚಕರಿಗೆ ಜನಿವಾರ ಹಾಕಿಸುವ ಅವರ ಯತ್ನ ಯಶಸ್ವಿಯಾಯಿತು.
ಕುದ್ರೋಳಿಯ ದೇವಸ್ಥಾನದ ವಿಷಯದಲ್ಲಿ ಮೊತ್ತ ಮೊದಲು ಬಿಲ್ಲವರೊಳಗೆ ಒಡಕು ಕಾಣಿಸಿಕೊಂಡದ್ದು 1947ರಲ್ಲಿ. ಆಗ ಕರ್ಕೇರ ಎಂಬವರು ದೇವಸ್ಥಾನ ಮಂಡಳಿಯ ಅಧ್ಯಕ್ಷರಾಗಿದ್ದರು. ಮೊದಲ ಬಾರಿಗೆ ದಲಿತರನ್ನು ದೇವಸ್ಥಾನಕ್ಕೆ ಪ್ರವೇಶಿಸುವ ಪ್ರಯತ್ನವೊಂದು ಈ ಸಂದರ್ಭದಲ್ಲಿ ನಡೆಯಿತು. ಆಗ ಇಲ್ಲಿನ ಕೆಲವು ವೈದಿಕ ಶಕ್ತಿಗಳು ಬಿಲ್ಲವರೊಂದಿಗೆ ಸೇರಿಕೊಂಡು ಒಡಕು ಬಿತ್ತುವುದಕ್ಕೆ ಆರಂಭಿಸಿದರು.ಕೆಲವು ಬಿಲ್ಲವ ಹಿರಿಯರು ದಲಿತರು ದೇವಸ್ಥಾನ ಪ್ರವೇಶಿಸುವುದನ್ನು ವಿರೋಧಿಸಿದರು. ಕೊನೆಗೂ ಭಿನ್ನಾಭಿಪ್ರಾಯಗಳ ನಡುವೆಯೇ ದಲಿತರು ದೇವಸ್ಥಾನವನ್ನು ಪ್ರವೇಶಿಸಿದರು. ದಲಿತರು ದೇವಸ್ಥಾನವನ್ನು ಪ್ರವೇಶಿಸುವುದನ್ನು ತಡೆಯುವುದೆಂದರೆ ಸ್ವತಃ ನಾರಾಯಣ ಗುರುಗಳೇ ದೇವಸ್ಥಾನ ಪ್ರವೇಶಿಸುವುದನ್ನು ತಡೆದಂತೆ ಎಂಬ ಸತ್ಯವನ್ನು ಕೆಲ ಬಿಲ್ಲವರು ವೈದಿಕಶಕ್ತಿಗಳ ಮಾತಿಗೆ ಕಿವಿಯಾಗಿ ಮರೆತು ಬಿಟ್ಟರು. ಯಾಕೆಂದರೆ, ನಾರಾಯಣ ಗುರುಗಳಿಗೆ ಅಡುಗೆ ಕೆಲಸವನ್ನು ಮಾಡುತ್ತಿದ್ದವರು ದಲಿತರೇ ಆಗಿದ್ದರು. ಆ ಕಾಲದಲ್ಲಿ ಅಡುಗೆ ಕೆಲಸಕ್ಕೆ ನಾರಾಯಣಗುರುಗಳು ದಲಿತರನ್ನು ನೇಮಕ ಮಾಡಿಕೊಂಡಿದ್ದರು. ಇದಾದ ಬಳಿಕ ವೈದಿಕಶಕ್ತಿ ವಾಮನನಂತೆ ಬಿಲ್ಲವರ ಮೇಲೆ ತನ್ನ ಮೂರನೆ ಪಾದವನ್ನು ಊರಿದ್ದು 1989ರಲ್ಲಿ. ಅದಕ್ಕೆ ನೇರ ಹೊಣೆ ಇಂದಿನ ಮಾಜಿ ಸಚಿವ ಜನಾರ್ದನ ಪೂಜಾರಿ. ಆ ಮೂರನೆ ಪಾದವನ್ನು ತನ್ನ ತಲೆಯ ಮೇಲೆ ಊರಲು ಬಿಟ್ಟ ಕಾರಣವೇ ಇಂದು ಜನಾರ್ದನ ಪೂಜಾರಿ, ರಾಜಕೀಯವಾಗಿ ಸಂಪೂರ್ಣ ಬೀದಿಪಾಲಾಗಿ ಅಂಡಲೆಯುತ್ತಿದ್ದಾರೆ. ತಮ್ಮ ಸ್ವಯಂಕೃತಾಪರಾಧಕ್ಕೆ ಬೆಲೆ ತೆರುತ್ತಿದ್ದಾರೆ. ಇದನ್ನು ನಾನು ಮುಂದಿನ ವಾರ ಬರೆಯುತ್ತೇನೆ.