Wednesday, January 12, 2011

ಹೀಗೊಂದು ಮುಖಾಮುಖಿ...!


ಆತ ಅಮಾಯಕ. ಒಂದಿಷ್ಟು ಧಾರ್ಮಿಕ. ಒಂದು ಸ್ಫೋಟಕ್ಕೆ ಸಂಬಂಧಿಸಿ ಇದ್ದಕ್ಕಿದ್ದಂತೆಯೇ ಪೊಲೀಸರು ಆತನ ಮನೆಗೆ ನುಗ್ಗಿ ಆತನನ್ನು ಬಂಧಿಸುತ್ತಾರೆ. ಅವನನ್ನು ಹಿಂಸಿಸುತ್ತಾರೆ. ಪೊಲೀಸ್ ಠಾಣೆಯ ಎಲ್ಲ ತಂತ್ರಗಳನ್ನು ಬಳಸಿ ಅವನಿಂದ ತಪ್ಪೊಪ್ಪಿಗೆಯನ್ನು ಬರೆಸಲಾಗುತ್ತದೆ. ಸುಮಾರು ಎರಡು ವರ್ಷಗಳಿಂದ ಆತ ಜೈಲಲ್ಲೇ ಕೊಳೆಯುತ್ತಿರುತ್ತಾನೆ.ಆತನ ಕನಸುಗಳು ಜೈಲಿನಲ್ಲಿ ನುಚ್ಚು ನೂರಾಗುತ್ತವೆ. ಹೀಗಿರುವಾಗ ಒಂದು ದಿನ ಆ ಸ್ಫೋಟಕ್ಕೆ ಸಂಬಂಧ ಪಟ್ಟ ನಿಜವಾದ ಆರೋಪಿಯನ್ನು ಬಂಧಿಸಲಾಗುತ್ತದೆ. ಆತನನ್ನೂ ಇದೇ ಅಮಾಯಕನಿರುವ ಜೈಲಿನೊಳಗೇ ಸೇರಿಸಲಾಗುತ್ತದೆ. ಅಮಾಯಕ ಮತ್ತು ಅಪರಾಧಿ ಮುಖಾಮುಖಿಯಾಗುತ್ತಾರೆ. ಕೆಲವೇ ದಿನಗಳಲ್ಲಿ ಅಮಾಯಕ ಮತ್ತು ಅಪರಾಧಿ ಆತ್ಮೀಯರಾಗುತ್ತಾರೆ.
ಸ್ಫೋಟದ ನಿಜವಾದ ಆರೋಪಿ ತುಸು ವೃದ್ಧ. ಆತನಿಗೆ ನೆರವಿಗೊಬ್ಬ ಜನ ಬೇಕು. ಈ ಅಮಾಯಕ ಆತನಿಗೆ ನೆರವಾಗುತ್ತಾನೆ. ಆತನ ಓಡಾಟಕ್ಕೆ ಹೆಗಲು ಕೊಡುತ್ತಾನೆ. ಆತನ ಆಹಾರವನ್ನು ಈತನೇ ತಂದು ಕೊಡುತ್ತಾನೆ. ಅಸ್ವಸ್ಥನಾದಾಗ ಅಮಾಯಕ ಆತನನ್ನು ಜೋಪಾನವಾಗಿ ನೋಡಿಕೊಳ್ಳುತ್ತಾನೆ. ತನ್ನ ಸ್ಥಿತಿಗೆ ಕಾರಣನಾದ ಅಪರಾಧಿಯನ್ನು ಒಂದಿಷ್ಟೂ ದ್ವೇಷಿಸದೇ ಅಮಾಯಕ, ಅಪರಾಧಿಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಾನೆ. ಅಪರಾಧಿ ಕೆಲವೊಮ್ಮೆ ಈ ಅಮಾಯಕನನ್ನು ಕಣ್ಣಿಗೆ ಕಣ್ಣಿಟ್ಟು ನೋಡಲು ಪ್ರಯತ್ನಿಸುತ್ತಾನೆ.ಆದರೆ ಸಾಧ್ಯವಾಗದೆ ತಲೆತಗ್ಗಿಸುತ್ತಾನೆ. ಯಾವತ್ತಾದರೊಮ್ಮೆ ಅಮಾಯಕನನ್ನು ಆತನ ನಿರಪರಾಧಿತ್ವದ ಕುರಿತಂತೆ ಮಾತನಾಡಲು ಪ್ರೇರೇಪಿಸುತ್ತಾನೆ. ಆದರೆ ಅಮಾಯಕ ‘‘ಎಲ್ಲ ನಮ್ಮ ಹಣೆಬರಹ’’ ಎಂದು ತೇಲಿ ಬಿಡುತ್ತಾನೆ. ಕೆಲವೊಮ್ಮೆ ಮಾತ್ರ ಅಮಾಯಕ ತನ್ನ ಮನೆಯವರನ್ನು ನೆನೆದು ಭಾವುಕನಾಗುತ್ತಾನೆ.
ನಿಧಾನಕ್ಕೆ ಅಪರಾಧಿಯ ಕಣ್ಣು ತೆರೆಯುತ್ತಾ ಹೋಗುತ್ತದೆ. ‘ತನ್ನ ದ್ವೇಷ ಎಷ್ಟು ಕುರುಡಾದುದು’ ಎನ್ನುವುದನ್ನು ಅವನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಅಮಾಯಕ ಶಿಕ್ಷೆ ಅನುಭವಿಸುತ್ತಿರುವುದು ತನ್ನ ಕಾರಣದಿಂದ ಎನ್ನುವುದು ಅವನನ್ನು ಕಾಡತೊಡಗುತ್ತದೆ, ಚುಚ್ಚತೊಡಗುತ್ತದೆ. ಒಂದು ದಿನ ಇದ್ದಕ್ಕಿದ್ದಂತೆಯೇ ಆತ ಪೊಲೀಸರೊಂದಿಗೆ ತಾನು ಮಾಡಿದ ಎಲ್ಲ ತಪ್ಪುಗಳನ್ನು ಅಧಿಕೃತವಾಗಿ ಒಪ್ಪಿಕೊಂಡ. ನ್ಯಾಯಾಲಯದಲ್ಲೂ ‘ಸ್ಫೋಟದ ಹಿಂದೆ ನನ್ನ ಮತ್ತು ನನ್ನ ಸಂಗಡಿಗರ ಸಂಚಿದೆ’ ಎನ್ನುವುದನ್ನು ಒಪ್ಪಿ, ಪಾಯಶ್ಚಿತ ಮಾಡಿಕೊಂಡ.‘‘ನನಗೆ ಮರಣದಂಡನೆ ದೊರೆಯಬಹುದೆಂಬುದನ್ನು ನಾನು ಬಲ್ಲೆ. ಆದರೂ ಕೂಡಾ ನಾನು ತಪ್ಪೊಪ್ಪಿಗೆ ನೀಡಲು ಬಯಸುತ್ತಿದ್ದೇನೆ’’ ಇದು ಅಪರಾಧಿ ಮ್ಯಾಜಿಸ್ಟ್ರೇಟರ ಮುಂದೆ ಹೇಳಿದ ಮಾತು.

ಬ್ರೆಕ್ಟ್‌ನ ಅಸಂಗತ ನಾಟಕದ ತುಣುಕಿನಂತಿರುವ ಈ ಘಟನೆಯ ಎಲ್ಲ ಪಾತ್ರಗಳು ನಮ್ಮ ನಡುವೆ ಜೀವಂತ ಇವೆ. ಸ್ಫೋಟ ಸಂಚಿನಲ್ಲಿ ಭಾಗಿಯಾದ ಆ ಅಪರಾಧಿ ಇನ್ನಾರೂ ಅಲ್ಲ, ಕೇಸರಿ ಉಗ್ರ ಎಂದು ಹಣೆಪಟ್ಟಿ ಧರಿಸಿರುವ ಸ್ವಾಮೀ ಅಸೀಮಾನಂದ. ಭಾರತ-ಪಾಕಿಸ್ತಾನದ ನಡುವಿನ ಸ್ನೇಹದ ಬಳ್ಳಿಯಾಗಬಹುದಾಗಿದ್ದ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಸೇರಿದಂತೆ ಹಲವು ಸ್ಫೋಟಗಳ ಸಂಚಿನಲ್ಲಿ ಭಾಗಿಯಾದವನೀತ. ಆತನ ಮನ ಪರಿವರ್ತನೆಯನ್ನು ಮಾಡಿದ ಅಮಾಯಕ, ಮಕ್ಕಾ ಮಸೀದಿ ಸ್ಫೋಟದಲ್ಲಿ ಯಾವ ತಪ್ಪೆಸಗದಿದ್ದರೂ ಬಂಧಿತನಾಗಿದ್ದ ಅಬ್ದುಲ್ ಕಲೀಂ. ಹಿಂದೂಗಳನ್ನು ದ್ವೇಷಿಸುವ ಮುಸ್ಲಿಮ್ ಮತಾಂಧರನ್ನು, ಮುಸ್ಲಿಮರನ್ನು ದ್ವೇಷಿಸುವ ಹಿಂದೂ ಮತಾಂಧರನ್ನು ಖಾಸಗಿಯಾಗಿ ಕೆಲ ಕಾಲ ಜೊತೆಯಾಗಿ ಬಾಳಲು ಬಿಟ್ಟರೆ ಅವರು ಪರಸ್ಪರ ಮಾನವೀಯತೆಯನ್ನು ಕಲಿತಾರಲ್ಲವೆ? ಹಾಗೊಂದು ಮಿನುಕು ಆಸೆ ನನ್ನದು.

3 comments:

 1. ಬಷೀರ್ ಸಾಬ್, ನಿಮ್ಮ ಬ್ಲಾಗಿನ ಹೆಸರು ದಟ್ಸ್ ಕನ್ನಡದಲ್ಲಿ ನೋಡಿದ ನೆನಪು. ಪ್ರಕಾಶಣ್ಣನ ಬ್ಲಾಗಿನಲ್ಲಿ ಮತ್ತೆ ನೋಡಿದಾಗ ಇಣುಕುವ ಆಸೆಯಾಗಿ ನೋಡಿದೆ. ನಾನೂ ಬ್ರೆಕ್ಟ್ ನನ್ನು ಇಷ್ಟಪಡುತ್ತೇನೆ. ಒಳ್ಳೇಯತನ ಯಾವತ್ತಿದ್ದರೂ ಗೆಲ್ಲುತ್ತದೆ. ನಿಮ್ಮ ಆಶಯ ಚೆನ್ನಾಗಿದೆ.

  ನಿಮ್ಮ ಹಿಂದಿನ ಪೋಸ್ಟ್:ಗರ್ಭಪಾತ, ನಾಲ್ಕೇ ಸಾಲಿನದಾದರೂ ಕಥೆ ಅರ್ಥಪೂರ್ಣವಾಗಿದೆ. ನನ್ನ ಬ್ಲಾಗ್ : www.nallanalle.blogspot.com ಗೆ ನಿಮಗೆ ಸ್ವಾಗತ.

  ReplyDelete
 2. ಗುಜರಿ ಅಂಗಡಿಯಲ್ಲೂ ಬೆಲೆಬಾಳುವ ವಸ್ತುಗಳು ಸಿಕ್ಕುವಂತೆ ನಿಮ್ಮ ಲೇಖನದಿಂದ ಒಳ್ಳೆಯ ವಿಷಯಗಳನ್ನು ಆರಿಸಿಕೊಳ್ಳಬಹುದು. ನಿಮ್ಮ ಬ್ಲಾಗ್ ಚೆನ್ನಾಗಿ ಮೂಡಿಬರುತ್ತಿದೆ.

  ReplyDelete
 3. ಕೇಸರಿ ಉಗ್ರ !! ಬಣ್ಣದೊಡನೆ ಉಗ್ರವಾದವನ್ನು ತಳಕು ಹಾಕುವ ತಮ್ಮ ಬುದ್ದಿ !! ಇದನ್ನೇ ನಾನು ಹಸಿರು ಉಗ್ರ ಎಂದು ಕರೆದರೆ ಕೋಮುವಾದಿ ಎನ್ನುತ್ತೀರಿ ! ತಾವು ಮಾತ್ರ 'ಕೇಸರಿ' 'ಹಿಂದೂ' ಏನಾದರೂ ಹೇಳಿ, ಆದರೆ ಪರಿಶುದ್ದರು ಮತ್ತು ಜಾತ್ಯಾತೀತರು ಅಲ್ವೇ ?

  ReplyDelete