Thursday, October 31, 2013

ಪಟೇಲರ ತತ್ವಗಳ ಸಮಾಧಿಯ ಮೇಲೆ ಮೋದಿಯ ಪ್ರತಿಮೆ

 ಭಾರತವೆಂದರೆ ಫ್ಯಾಂಟಸಿಗಳ ತವರೂರು. ನಾವು ಇಲ್ಲಿ ವಾಸ್ತವವನ್ನು ಫ್ಯಾಂಟಸಿ ರೂಪದಲ್ಲಿ ಮಾತ್ರ ಇಷ್ಟ ಪಡುತ್ತೇವೆ. ಇರುವವರನ್ನು ಕೊಂದು, ಬಳಿಕ ಅವರನ್ನು ವರ್ಣರಂಜಿತವಾಗಿ ನಮ್ಮ ಮೂಗಿನ ನೇರಕ್ಕೆ ರೂಪಿಸಿಕೊಳ್ಳುವುದರಲ್ಲಿ ಸಿದ್ಧಹಸ್ತರು. ಇಂತಹದೊಂದು ಮನಸ್ಥಿತಿಯಲ್ಲೇ ನಾವು ಪುರಾಣ ಗಳನ್ನು ಸೃಷ್ಟಿಸಿಕೊಂಡಿದ್ದೇವೆ. ನಮ್ಮ ಇತಿಹಾಸವನ್ನು ಗೊಂದಲಗೊಳಿಸಿ, ಅದಕ್ಕೆ ರೋಚಕತೆಯನ್ನು ತುಂಬಿ ನಮಗೆ ನಾವೇ ಮೈಥುನ ಮಾಡಿ ಕೊಳ್ಳುತ್ತಿದ್ದೇವೆ. ನಮ್ಮೆಲ್ಲ ಇತಿಹಾಸ ಪುರುಷರು ನಮ್ಮ ಈ ಮನಸ್ಥಿತಿಗೆ ಬಲಿಯಾಗಿದ್ದಾರೆ. ಅದಕ್ಕೆ ಗಾಂಧಿಯೂ ಹೊರತಲ್ಲ, ಪಟೇಲರೂ ಹೊರತಲ್ಲ. 

ನರೇಂದ್ರ ಮೋದಿ ಆಗಸದೆತ್ತರ ಪಟೇಲರ ಪ್ರತಿಮೆಯೊಂದನ್ನು ತಯಾರಿಸುವುದಕ್ಕೆ ಹೊರಟಿ ದ್ದಾರೆ. ಮತ್ತು ಅದಕ್ಕೆ ಬೇಕಾದ ಕಬ್ಬಿಣಗಳನ್ನು ದೇಶಾದ್ಯಂತ ಸಂಗ್ರಹಿಸುವುದಕ್ಕೆ ಹೊರಟಿದ್ದಾರೆ. 600 ಅಡಿ ಎತ್ತರದ ಅಂದರೆ ಅಮೆರಿಕದ ಲಿಬರ್ಟಿ ಪ್ರತಿಮೆಯ ದುಪ್ಪಟ್ಟು ಎತ್ತರ ಇರುವಂತಹ ಪ್ರತಿಮೆಯನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ ನರೇಂದ್ರ ಮೋದಿ. ಅಂದ ಹಾಗೆ ಇದಕ್ಕೆ ವೆಚ್ಚವಾಗುವ ಹಣ ಎಷ್ಟು ಗೊತ್ತೆ? 2,500 ಕೋಟಿ ರೂಪಾಯಿ! ಈ ಮೂಲಕ ನರೇಂದ್ರ ಮೋದಿ ಏನನ್ನು ಸಾಧಿಸಲು ಹೊರಟಿದ್ದಾರೆ? ಕನಿಷ್ಠ ಪಟೇಲರ ವೌಲ್ಯವನ್ನಾದರೂ ಎತ್ತಿ ಹಿಡಿಯುವ ಪ್ರಯತ್ನ ಇದರ ಹಿಂದೆ ಇದೆಯೆಂದಾಗಿ ದ್ದರೆ 2500 ಕೋಟಿ ರೂ. ಯನ್ನು ದೇಶ ಸಹಿಸಬಹುದಾಗಿತ್ತು. ಒಂದೆಡೆ ಈ ದೇಶ ಶೇ. 50ರಷ್ಟು ಬಡತನ, ಆಹಾರ ಕೊರತೆಯಿಂದ ನರಳುತ್ತಿರು ವಾಗ, ಯಾರನ್ನು ಉದ್ಧರಿ ಸಲು ಇಷ್ಟು ಕೋಟಿಯನ್ನು ವ್ಯಯ ಮಾಡುತ್ತಿದ್ದಾರೆ. ಒಬ್ಬ ಮೋದಿಯನ್ನು ಪ್ರಧಾನಿ ಮಾಡುವುದಕ್ಕಾಗಿ 2,500 ಕೋಟಿ ರೂಪಾಯಿ ಯನ್ನು ವೆಚ್ಚ ಮಾಡಲಾಗುತ್ತದೆ ಎಂದರೆ ಇದು ವಲ್ಲಭಭಾಯಿ ಪಟೇಲರಿಗೆ ಮಾಡುವ ಅವಮಾನ ವಾಗಿದೆ.

ನಿಜ. ಪಟೇಲರನ್ನು ಮರೆತರೆ ಭಾರತ ಗಣರಾಜ್ಯವನ್ನು ಮರೆತ ಹಾಗೆ. ದೇಶ ಸ್ವಾತಂತ್ರಗೊಂಡ ಬಳಿಕವೂ ಒಂದೆಡೆ ಪೋರ್ಚು ಗೀಸರು, ಮಗದೊಂದೆಡೆ ಹೈದರಾಬಾದ್ ನಿಜಾಮರು ಹಾಗೆಯೇ ಮೈಸೂರು ಅರಸರು ಈ ದೇಶವನ್ನು ತಿಗಣೆಗಳಂತೆ ಕಚ್ಚಿ ಕುಳಿತ್ತಿದ್ದಾಗ ವಿವಿಧ ತಂತ್ರಗಳನ್ನು ಬಳಸಿ ಅವರಿಂದ ದೇಶಕ್ಕೆ ಮುಕ್ತಿ ನೀಡಿದ್ದು ಪಟೇಲರು. ಸ್ವತಂತ್ರ ಭಾರತದ ಅಳಿದುಳಿದ ಬಿರುಕುಗಳನ್ನು ಮುಚ್ಚಿ ಈ ದೇಶವನ್ನು ಅಖಂಡಗೊಳಿಸಿದ್ದು ವಲ್ಲಭಭಾಯಿ ಪಟೇಲ್. ಅವರು ದೇಶವನ್ನು ಒಂದು ಗೂಡಿಸಿದರು. ಆದರೆ ನರೇಂದ್ರ ಮೋದಿ ಮತ್ತು ಅವರ ಆದರ್ಶ ವಾಗಿರುವ ಆರೆಸ್ಸೆಸ್ ಇಂದು ಮಾಡುತ್ತಿರುವುದು ಏನು? ಇವರು ಕಾಲಿಟ್ಟಲ್ಲೆಲ್ಲ ದೇಶ ಒಡೆಯುತ್ತದೆ. ಹಿಂದು-ಮುಸ್ಲಿಮರು ಹೊಡೆದಾಡತೊಡಗುತ್ತಾರೆ. ವಲ್ಲಭಬಾಯಿ ಪಟೇಲ್ ಒಂದುಗೂಡಿಸಿದ ದೇಶ, ಆರೆಸ್ಸೆಸ್‌ನಂತಹ ಸಂಘಟನೆಯಿಂದ ಮತ್ತೆ ಬಿರುಕುಬಿಡುತ್ತಿದೆ. ಇಂತಹ ಸಂಘಟನೆಯ ಆಶೀರ್ವಾದಿಂದ ಅಧಿಕಾರ ಹಿಡಿಯಲು ಹೊರಟಿರುವ ನರೇಂದ್ರಮೋದಿ ಅವರು ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಾರೆನ್ನುವುದೇ ಒಂದು ಅಸಂಗತ ನಾಟಕ. ನರೇಂದ್ರ ಮೋದಿ ತನ್ನ ಒಡೆಯುವ ರಾಜಕೀಯಕ್ಕೆ ಇಂದು ಪಟೇಲರನ್ನು ಬಳಸಲು ಮುಂದಾಗಿದ್ದಾರೆ. ಆದರೆ ಈ ದೇಶಕ್ಕೆ ಬೇಕಾಗಿರುವುದು ಒಂದುಗೂಡಿಸುವ ಪಟೇಲ್. ಆದರೆ ಮೋದಿ ನಿರ್ಮಿಸಲು ಹೊರಟಿರುವುದು ದೇಶ ಒಡೆಯುವ ಪಟೇಲರನ್ನು.


 ಗುಜರಾತಿನಲ್ಲಿ 2,500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವುದು ಪಟೇಲರನ್ನು ಗೌರವಿಸುವುದಕ್ಕಲ್ಲ, ಅವಮಾನಿಸುವುದಕ್ಕೆ. ಯಾವ ಸಂಘಟನೆಯನ್ನು ಪಟೇಲರು ನಿಷೇಧಿಸಿದ್ದರೋ, ಯಾವ ಸಂಘಟನೆ ಪಟೇಲರನ್ನು ‘ದೇಶವನ್ನು ವಿಭಜಿಸಿದ್ದಾನೆ’ ಎಂದು ಅವಮಾನಿಸಿತ್ತೋ ಅದೇ ಸಂಘಟನೆ ಇದೀಗ ಪಟೇಲರನ್ನು ಬಳಸಿಕೊಂಡು ರಾಜಕೀಯ ನಾಟಕ ಆಡಲು ಹೊರಟಿದೆ. ದಿವಂಗತ ಹೊ.ವೆ.ಶೇಷಾದ್ರಿ ಆರೆಸ್ಸೆಸ್‌ನ ನೇತಾರರಾಗಿ ಕೆಲಸ ಮಾಡಿದವರು. ಅಲ್ಲದೆ ಆರೆಸ್ಸೆಸ್‌ನ ಹಿರಿಯ ಚಿಂತಕರು. ಇವರು ಬರೆದ ಕೃತಿಯೇ ‘ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್’. ಈ ಕೃತಿಯಲ್ಲಿ ಶೇಷಾದ್ರಿಯವರು ಪಟೇಲರ ಮೇಲೆ ‘ದೇಶ ವಿಭಜನೆ’ಯ ನೇರ ಆರೋಪವನ್ನು ಮಾಡುತ್ತಾರೆ. ‘ನೆಹರೂ ಹಾಗೂ ಪಟೇಲ್ ಅನುಮೋದಿಸಿರುವ ಈ ಯೋಜನೆ ಯು, ಭಾರತವನ್ನು ತುಂಡರಿಸುವುದನ್ನು ಹಾಗೂ ಪಾಕಿಸ್ತಾನದ ಸೃಷ್ಟಿಯನ್ನು ಪ್ರತಿಪಾದಿಸಿತು...’ ಎಂದು ಸ್ಪಷ್ಟವಾಗಿ ಬರೆಯುತ್ತಾರೆ. ಆರೆಸ್ಸೆಸ್ ಕಾರ್ಯಾಲಯ ಈ ಕೃತಿಯನ್ನು ಯಾವ ನಾಚಿಕೆಯೂ ಇಲ್ಲದೆ ಮಾರಾಟ ಮಾಡುತ್ತಿದೆ. ಗುಜರಾತಿನ ಮುಖ್ಯ ಕಾರ್ಯಾಲಯದಲ್ಲೂ ಇದು ಮಾರಾಟವಾಗುತ್ತಿರುವುದನ್ನು ಪತ್ರಿಕೆಗಳು ವರದಿ ಮಾಡಿವೆ. ನರೇಂದ್ರ ಮೋದಿ ನಿಜಕ್ಕೂ ಪಟೇಲರ ಮೇಲೆ ಗೌರವವನ್ನು ಹೊಂದಿ ದ್ದಾರಾದರೆ, ಅವರು ಪ್ರತಿಮೆಗೆ ಶಿಲಾನ್ಯಾಸ ನೆರವೇರಿಸುವ ಮುನ್ನ, ಈ ಕೃತಿಯನ್ನು ನಿಷೇಧಿಸಬೇಕಾಗಿತ್ತು. ಯಾಕೆ ಅವರು ಇನ್ನೂ ಈ ಕೃತಿಯನ್ನು ನಿಷೇಧಿಸಿಲ್ಲ? ಈ ಹಿಂದೆ ಜಸ್ವಂತ್ ಸಿಂಗ್ ಅವರು ‘ಜಿನ್ನಾ’ ಕುರಿತಂತೆ ಕೃತಿಯೊಂದನ್ನು ಬರೆದಿದ್ದರು. ಅದರಲ್ಲಿ ಸರ್ದಾರ್ ವಲಭಭಾಯಿ ಪಟೇಲ್ ಬಗ್ಗೆ ಆಕ್ಷೇಪಾರ್ಹ ಸಾಲುಗಳು ಇವೆ ಎಂದು ನರೇಂದ್ರ ಮೋದಿಯವರು ಈ ಕೃತಿಯನ್ನು ಗುಜರಾತ್‌ನಲ್ಲಿ ನಿಷೇಧಿಸಿದ್ದರು. ಆದರೆ ಹೊ. ವೇ. ಶೇಷಾದ್ರಿಯ ಕೃತಿಯ ತಂಟೆಗೆ ಈವರೆಗೆ ಹೋಗಿಲ್ಲ. ಇದರ ಅರ್ಥ ವೇನು? ಈ ದೇಶವನ್ನು ವಿಭಜಿಸಿದವರಲ್ಲಿ ಪಟೇಲರು ಸೇರಿದ್ದಾರೆ ಎನ್ನುವುದನ್ನು ಮೋದಿ ಪರೋಕ್ಷವಾಗಿ ಒಪ್ಪಿಕೊಂಡ ಸೂಚನೆಯೇ ಇದು?
 
ಆರೆಸ್ಸೆಸ್ ಪಟೇಲರಿಗೆ ವಂಚಿಸಿದ ಕತೆ ಇತಿಹಾಸ. ಗಾಂಧಿ ಹತ್ಯೆಯ ಬಳಿಕ ಆರೆಸ್ಸೆಸ್ಸನ್ನು ನಿಷೇಧಿಸಲು ಶಿಫಾರಸು ಮಾಡಿರುವುದೇ ವಲ್ಲಭಭಾಯಿ ಪಟೇಲ್. ಗಾಂಧಿ ಹತ್ಯೆಗೆ ಆರೆಸ್ಸೆಸ್ ಚಿಂತನೆಗಳೇ ಕಾರಣ ಎಂದು ಪಟೇಲ್ ನಂಬಿದ್ದರು. 1948ರಲ್ಲಿ ಆರೆಸ್ಸೆಸ್ಸನ್ನು ನಿಷೇಧಿಸುವ ಸಂದರ್ಭದಲ್ಲಿ ಪಟೇಲರು ಹೊರಡಿಸಿದ ನೋಟಿಫಿಕೇಶನ್‌ನಲ್ಲಿ ‘‘ಆರೆಸ್ಸೆಸ್ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದೆ. ದ್ವೇಷವನ್ನು ಬಿತ್ತಿದೆ. ಗಲಭೆಗಳನ್ನು ನಡೆಸಲು ಪ್ರೇರಣೆ ನೀಡಿದೆ’’ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ, ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ‘‘ಆರೆಸ್ಸೆಸ್ ದೇಶ ವಿರೋಧಿ ಲಕ್ಷಣಗಳನ್ನು ಹೊಂದಿದೆ’’ ಎಂದಿದ್ದರು. ಆರೆಸ್ಸೆಸ್‌ನ ಮುಖಂಡ ಶ್ಯಾಮ್ ಪ್ರಸಾದ್ ಮುಖರ್ಜಿ ಯವರಿಗೆ ಬರೆದ ಪತ್ರದಲ್ಲೂ ಆರೆಸ್ಸೆಸ್‌ನ ದೇಶ ವಿರೋಧಿ ಚಟುವಟಿಕೆಗಳನ್ನು ಉಲ್ಲೇಖಿಸಿದ್ದರು. ಹಾಗೆಯೇ ಗೋಳ್ವಾಲ್ಕರ್‌ಗೆ ಬರೆದ ಪತ್ರದಲ್ಲಿ, ಆರೆಸ್ಸೆಸ್ ಚಿಂತನೆಯೇ ಗಾಂಧೀಜಿಯನ್ನು ಬಲಿತೆಗೆದು ಕೊಂಡಿತು ಎಂದು ಬರೆಯು ತ್ತಾರೆ. ಇಷ್ಟೆಲ್ಲ ಆದರೂ ವಲಭಭಾಯಿ ಪಟೇಲ್ ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಹಿಂದೆಗೆಯುತ್ತಾರೆ. ಅದಕ್ಕೆ ಕಾರಣ, ಆರೆಸ್ಸೆಸ್ ಅವರಿಗೆ ನೀಡಿದ ವಾಗ್ದಾನ. 1949ರಲ್ಲಿ ಆರೆಸ್ಸೆಸ್ ಪಟೇಲ್ ಅವರಿಗೆ ಕೆಲವು ವಾಗ್ದಾನ ವನ್ನು ನೀಡಿತು. ಒಂದು, ಅದು ತನ್ನ ಸಂವಿಧಾನ ವನ್ನು ಪುನರ್ ರಚಿಸಿತು. ಮತ್ತು ರಾಜಕೀಯ ದಲ್ಲಿ ಯಾವತ್ತೂ ಪ್ರವೇಶಿಸುವುದಿಲ್ಲ ಹಾಗೂ ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ತನ್ನನ್ನು ಸೀಮಿತಗೊಳಿಸುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿತು. ಆ ವಾಗ್ದಾನವನ್ನು ನಂಬಿ ಪಟೇಲರು ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಹಿಂದೆಗೆಯಲು ಕಾರಣರಾದರು. ಆದರೆ ಇಂದು ಆರೆಸ್ಸೆಸ್ ತನ್ನ ಆ ವಾಗ್ದಾನವನ್ನು ಉಳಿಸಿ ಕೊಂಡಿದೆಯೆ? ತಾನು ನೀಡಿದ ವಾಗ್ದಾನವನ್ನೇ ಮರೆತ ಆರೆಸ್ಸೆಸ್ ಮತ್ತು ಅದರ ಪ್ರೀತಿಯ ಕುವರ ನರೇಂದ್ರ ಮೋದಿ ಇಂದು ಅತ್ಯಂತ ಎತ್ತರದ ಪಟೇಲರ ಪ್ರತಿಮೆಯನ್ನು ನಿಲ್ಲಿಸಲು ಹೊರಟಿ ದ್ದಾರೆ. ಇದು ಪಟೇಲರ ತತ್ವಗಳ ಸಮಾಧಿಯ ಮೇಲೆ ನಿಲ್ಲಿಸುವ ಪ್ರತಿಮೆಯಲ್ಲದೆ ಇನ್ನೇನು?


ಇಂದು ಆರೆಸ್ಸೆಸ್ ಮತ್ತು ಮೋದಿ ನಿಜವಾದ ಪಟೇಲರನ್ನು ಅಳಿಸಿ ಅಲ್ಲಿ ಆರೆಸ್ಸೆಸ್ ಪಟೇಲರನ್ನು ನಿಲ್ಲಿಸಲು ಹೊರಟಿದ್ದಾರೆ. ಪಟೇಲರ ನಿಜವಾದ ವ್ಯಕ್ತಿತ್ವವನ್ನು ಅಳಿಸಿ ಹಾಕಿ ತಮ್ಮ ರಾಜಕೀಯ ಪೂರಕವಾದ ಪಟೇಲರನ್ನು ಅಂದರೆ ನೆಹರು ವಿರೋಧಿ ಪಟೇಲರನ್ನು ಪ್ರತಿಷ್ಠಾಪಿಸುವ ಉದ್ದೇಶ ನರೇಂದ್ರ ಮೋದಿ ಮತ್ತು ಬಳಗದ್ದಾಗಿದೆ. ಆದರೆ ನರೇಂದ್ರ ಮೋದಿಯ ಪಟೇಲರ ಪ್ರತಿಮೆ ಅದೆಷ್ಟೇ ಎತ್ತರವಿರಲಿ, ನಿಜವಾದ ಪಟೇಲರ ವ್ಯಕ್ತಿತ್ವದ ಎತ್ತರವನ್ನು ಆ ಪಟೇಲರ ಪ್ರತಿಮೆ ಸರಿಗಟ್ಟಲಾರದು. ಇದನ್ನು ಮೋದಿ ಬಳಗ ನೆನಪಿನಲ್ಲಿಡಬೇಕಾಗಿದೆ.

Tuesday, October 29, 2013

ಒಂದು ನಿಧಿಯ ಕತೆ

ಇತ್ತೀಚೆಗೆ ಸಾಧುವಿನ ಕನಸನ್ನು ನಂಬಿಕೊಂಡು ಉತ್ತರ ಪ್ರದೇಶದಲ್ಲಿ ನಮ್ಮ ಸರಕಾರ ನಿಧಿಗಾಗಿ ಅಗೆಯಿತು. ಇದೀಗ ಆ ಸ್ಥಳದಲ್ಲಿ ನಿಧಿ ಸಿಗದೇ, ಪ್ರಾಚ್ಯ ಇಲಾಖೆ ಬೇಸ್ತು ಬಿದ್ದಿದೆ. ಈ ಪ್ರಕರಣ ಬಾಲ್ಯದಲ್ಲಿ ನಾನು ಓದಿದ ಒಂದು ಪುಟ್ಟ ಕತೆಯನ್ನು ನೆನಪಿಸಿತು. ಅದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
***
ಒಂದೂರಲ್ಲಿ ಒಬ್ಬ ವೃದ್ಧನಿದ್ದ. ಅವನಿಗೆ ಮೂವರು ಮಕ್ಕಳು. ಆದರೆ ಅವರು ಬರೇ ಸೋಮಾರಿಗಳು. ಆ ವೃದ್ಧನಿಗೆ ಮನೆಯ ಹಿತ್ತಲಲ್ಲೇ ಜಮೀನಿತ್ತು. ಆದರೆ ಸೋಮಾರಿ ಮಕ್ಕಳಿಂದಾಗಿ ಅದು ಪಾಳು ಬಿದ್ದು ಬೆಂಗಾಡಾಗಿತ್ತು. ವೃದ್ಧನಿಗೆ ತನ್ನ ಜಮೀನು ಮತ್ತು ಮಕ್ಕಳನ್ನು ನೆನೆದು ತೀರಾ ಖೇದವಾಯಿತು. ಹೀಗಿರುವಾಗ ಒಂದು ದಿನ ಅವನ ಮೃತ್ಯು ಸನಿಹವಾಯಿತು. ಮಕ್ಕಳ ಭವಿಷ್ಯ ಅವನ ಕಣ್ಣೆದುರು ಇತ್ತು. ಸಾಯುವ ಮೊದಲು ಅವರಿಗೆ ಯಾವ ರೀತಿಯಲ್ಲಾದರೂ ಸಹಾಯ ಮಾಡಬೇಕು ಎಂದು ವೃದ್ಧನಿಗೆ ಅನ್ನಿಸಿತು. ಮೂವರು ಮಕ್ಕಳನ್ನು ಅವನು ಕರೆದ. ಅವರು ತಂದೆಯ ತಲೆಪಕ್ಕ ಬಂದು ಕುಳಿತರು.
ವೃದ್ಧ ಮಕ್ಕಳನ್ನುದ್ದೇಶಿಸಿ ಹೇಳಿದ ‘‘ಮಕ್ಕಳೇ ನನ್ನ ಸಾವು ಸಮೀಪವಾಗಿದೆ. ನನ್ನ ಅನಂತರ ನೀವು ಹೇಗೆ ಜೀವನ ಮಾಡುತ್ತೀರಿ ಎಂದು ತಿಳಿಯದಾಗಿದೆ. ಆದುದರಿಂದ, ನಾನು ನಿಮಗೊಂದು ರಹಸ್ಯವನ್ನು ಹೇಳುತ್ತೇನೆ. ಮನೆಯ ಹಿತ್ತಲಿನ ಜಮೀನು ಇದೆಯಲ್ಲ. ಅದರಲ್ಲಿ ಭಾರೀ ನಿಧಿಯನ್ನು ನನ್ನ ತಂದೆ ಅಂದರೆ ನಿಮ್ಮ ತಾತಾ ಹೂತಿಟ್ಟಿದ್ದಾರೆ. ನಾನು ಸತ್ತ ಬಳಿಕ ನನ್ನ ಅಂತ್ಯಸಂಸ್ಕಾರಗಳೆಲ್ಲ ಸಂಪೂರ್ಣವಾದ ಮೇಲೆ ಆ ನಿಧಿಯನ್ನು ಹೊರತೆಗೆದು ಸುಖವಾಗಿ ಜೀವಿಸಿ’’ ಹೀಗೆಂದು ಮಾತು ಪೂರ್ತಿ ಮಾಡಿದವನೇ ವೃದ್ಧ ಸತ್ತು ಹೋದ.
ಮಕ್ಕಳು ಜೋರಾಗಿ ಅತ್ತರು. ಬೇಗ ಬೇಗ ತಂದೆಯ ಸಂಸ್ಕಾರ ಕ್ರಿಯೆಗಳನ್ನೆಲ್ಲ ನೆರವೇರಿಸಿದರು. ಬಳಿಕ ಮೂವರು ಹಾರೆ ಗುದ್ದಲಿಗಳೊಂದಿಗೆ ಮನೆಯ ಹಿತ್ತಲನ್ನು ಅಗೆಯ ತೊಡಗಿದರು. ಇಡೀ ದಿನ ಬೆವರು ಸುರಿಸಿ ಅಗೆದರು. ನಿಧಿಯ ವಿಷಯವಾದುದರಿಂದ ಈ ಕೆಲಸವನ್ನು ಬೇರೆಯವರ ಜೊತೆ ಮಾಡಿಸುವಂತಿಲ್ಲ. ಆದುದರಿಂದ ಮೂವರೇ ಬೆವರು ಸುರಿಸಿ ನೆಲವನ್ನು ಅಗೆದರು. ಆದರೆ ಎಲ್ಲೂ ನಿಧಿ ಸಿಗಲಿಲ್ಲ. ಅಗೆದು ಅಗೆದು ಸುಸ್ತಾದರು. ಮಕ್ಕಳು ಸಿಟ್ಟಿನಿಂದ ತಂದೆಗೆ ಬೈಯ್ಯತೊಡಗಿದರು. ನಮಗೆ ತಂದೆ ಮೋಸ ಮಾಡಿದರು ಎಂದು ಅಂದುಕೊಂಡರು. ಕೊನೆಗೆ ಅಗೆದ ಗುಂಡಿಯನ್ನು ಮುಚ್ಚಬೇಕಲ್ಲ, ಅದಕ್ಕಾಗಿ ಅನಿವಾರ್ಯವಾಗಿ ಒಂದಿಷ್ಟು ಬಾಳೆಗಿಡಗಳನ್ನು ತಂದು ಆ ಅಗೆದ ಗುಂಡಿಯಲ್ಲೆಲ್ಲ ನೆಟ್ಟು ಬಿಟ್ಟರು.
ಇದಾದ ಒಂದೆರಡು ದಿನ ಧಾರಾಕಾರ ಮಳೆ. ಮಣ್ಣನ್ನು ಚೆನ್ನಾಗಿ ಅಗೆದು ನೆಟ್ಟುದದರಿಂದಲೋ ಏನೋ ಹಿತ್ತಲ ಜಮೀನಿನ ತುಂಬಾ ಕೆಲವೇ ಸಮಯದಲ್ಲಿ ಬಾಳೆಗಿಡಗಳು ನಳ ನಳಿಸತೊಡಗಿದವು. ಎಲ್ಲಿ ನೋಡಿದರೂ ತೂಗುವ ಬಾಳೆಗೊನೆಗಳು. ತಾವೇ ಅಗೆದು ನೆಟ್ಟ ಬಾಳೆ ಗಿಡಗಳು. ಅದನ್ನು ಸುಮ್ಮನೆ ಬಿಟ್ಟಾರೆ? ಸಂಭ್ರಮದಿಂದ ಕೊಯ್ದು ರಾಶಿ ಹಾಕಿದರು. ಹಣ್ಣಾದ ಬಾಳೆ ಹಣ್ಣನ್ನು ತಿಂದರು. ಅದರ ಸ್ವಾದ ಅತ್ಯಂತ ರುಚಿಕರವಾಗಿತ್ತು. ಅಂತಹ ಬಾಳೆ ಹಣ್ಣನ್ನು ಅವರು ತಿಂದಿರಲೇ ಇಲ್ಲ. ನಿಜಕ್ಕೂ ಬಂಗಾರದ ಬಣ್ಣದ ಬಾಳೆ ಹಣ್ಣುಗಳು ಅವು. ಸರಿ, ಮನೆಗೆ ಒಂದಿಷ್ಟು ತೆಗೆದಿಟ್ಟು ಕೊಯ್ದ ಗೊನೆಗಳನ್ನೆಲ್ಲ ಸಂತೆಯಲ್ಲಿ ಮಾರಿದರು. ನೋಡಿದರೆ ಕೈ ತುಂಬಾ ಹಣ. ರಾಶಿ ರಾಶಿ ಹಣ. ಸಂತೋಷದಿಂದ ಹಿರಿ ಹಿರಿ ಹಿಗ್ಗಿದರು. ಆಗ ಅವರಿಗೆ ತಂದೆ ಹೇಳಿದ ನಿಧಿಯ ಮಾತು ನೆನಪಿಗೆ ಬಂತು. ತಂದೆ ಹೇಳಿದ ನಿಧಿ ಇದೀಗ ಅವರ ಕೈ ಸೇರಿತ್ತು. ನಿಜವಾದ ನಿಧಿ ಸಿಕ್ಕಿದ್ದರೂ ಅವರಿಗೆ ಈ ಪರಿಯ ಸಂತೋಷವಾಗುತ್ತಿರಲಿಲ್ಲ.
ಅಂದಿನಿಂದ ತಾವೇ ಹಿತ್ತಲನ್ನು ಅಗೆದು ಬಾಳೆಗಿಡಗಳ ತೋಟವನ್ನು ಬೆಳೆಯ ತೊಡಗಿದರು. ಪ್ರತಿ ವರ್ಷ ಹಿತ್ತಲ ಜಮೀನಿನಿಂದ ನಿಧಿಯನ್ನು ತಮ್ಮದಾಗಿಸಿಕೊಳ್ಳತೊಡಗಿದರು.
***
    ಇಡೀ ಭಾರತ ನಮ್ಮ ಹಿರಿಯರು ನಮಗೆಂದು ಬಿಟ್ಟು ಹೋದ ಜಮೀನು. ಆದರೆ ನಾವು ಸೋಮಾರಿಗಳಾಗಿ ಕಾಲ ಕಳೆಯುತ್ತಿದ್ದೇವೆ. ಸುಲಭದಲ್ಲಿ, ಐಶಾರಾಮದಲ್ಲಿ ಬದುಕುವ ಕನಸು ಕಾಣುತ್ತಿದ್ದೇವೆ. ಯಾವನೋ ಕಳ್ಳ ಸಾಧು ಹೇಳಿದ ಮಾತನ್ನು ನಂಬಿ ನಿಧಿ ಅಗೆದು ದೇಶವನ್ನು ಉದ್ಧರಿಸುವ ಕನಸು ಕಂಡಿದ್ದೇವೆ. ಬೇಸ್ತು ಬಿದ್ದಿದ್ದೇವೆ. ಆದರೆ ಈ ದೇಶದ ಫಲವತ್ತಾದ ನೆಲ, ನದಿಗಳು, ಮೂರು ದಿಕ್ಕಿನಲ್ಲಿ ಹರಡಿಕೊಂಡಿರುವ ಸಾಗರ ಇವೆಲ್ಲ ನಮಗೆ ದೊರಕಿದ ನಿಧಿ ಎನ್ನುವುದನ್ನು ಮರೆತು ಬಿಟ್ಟಿದ್ದೇವೆ. ಈ ದೇಶದ ಜನ ಸಂಪೂನ್ಮೂಲ ನಮಗೆ ಸಿಕ್ಕಿದ ನಿಧಿ ಎನ್ನುವುದನ್ನು ನಮ್ಮ ಸರಕಾರ ಮರೆತೇ ಬಿಟ್ಟಿದೆ. ಒಂದೊಂದು ಮಗು ಹುಟ್ಟಿದಾಗಲೂ, ಅದು ನಮ್ಮ ಬಟ್ಟಲ ತುತ್ತನ್ನು ಕಸಿದುಕೊಳ್ಳಲು ಬಂದ ದರೋಡೆಕೋರ ಎಂದು ಭಾವಿಸುವಷ್ಟು ಸ್ವಾರ್ಥಿಗಳಾಗಿ ಬಿಟ್ಟಿದ್ದೇವೆ. ಭಾರತ ಅಪಾರ ಭೂಪ್ರದೇಶವನ್ನು ಹೊಂದಿದ ದೇಶ. ಎಲ್ಲ ಮಕ್ಕಳಿಗೂ ಹೊಟ್ಟೆ ತುಂಬಾ ಊಟ ಹಾಕುವಷ್ಟು ಸಮರ್ಥಳು ಭಾರತ ಮಾತೆ. ಆದರೆ ಇಂದು ಈ ದೇಶದ ಮಕ್ಕಳು ಆಕೆಯನ್ನು ಬಿಕರಿಗಿಟ್ಟು ಐಶಾರಾಮ ಜೀವನ ಮಾಡುವಷ್ಟು ಸೋಮಾರಿಗಳಾಗಿದ್ದಾರೆ. ನಮ್ಮ ಕೃಷಿ ಭೂಮಿಯನ್ನು ನಾವು ವಿದೇಶಿ ಬಂಡವಾಳಗಾರರಿಗೆ ಒತ್ತೆಯಿಟ್ಟಿದ್ದೇವೆ. ಮತ್ತು ಅದನ್ನೇ ಅಭಿವೃದ್ಧಿ ಕರೆದು ಬೀಗುತ್ತಿದ್ದೇವೆ. ಇದರ ಪರಿಣಾಮವಾಗಿ ಮುಂದೊಂದು ದಿನ ತುತ್ತು ಅನ್ನಕ್ಕೂ ನಾವು ಪರಕೀಯರೆಗೆ ಬೊಗಸೆಯೊಡ್ಡಬೇಕಾದ ದಿನ ಬರುತ್ತದೆ. ಈ ನೆಲವನ್ನು ಅವರು ಹಿಂಡಿ ಹಿಪ್ಪೆ ಮಾಡಿ, ಇದರ ಸಾರಸರ್ವಸ್ವವನ್ನು ಹೀರಿ, ಇಲ್ಲಿಯ ಜಲ ನೆಲವನ್ನು ಕೆಡಿಸಿ, ಎಷ್ಟು ಗೋರಬೇಕೋ ಅಷ್ಟನ್ನು ಕೋರಿ ಅವರು ಹೊರಟು ಬಿಡುತ್ತಾರೆ. ಇಂದಿನ ನಮ್ಮ ಸ್ವಾರ್ಥ, ಭೋಗಲಾಲಸೆ, ಸೋಮಾರಿತನದ ಫಲವನ್ನು ನಾಳಿನ ನಮ್ಮ ಮಕ್ಕಳು ಉಣ್ಣ ಬೇಕಾಗುತ್ತದೆ. ಕಲುಷಿತ, ವಿಷಪೂರಿತ ಗಾಳಿಯನ್ನು ನಾವು ಅವರಿಗಾಗಿ ಸಿದ್ಧ ಮಾಡಿಡುತ್ತಿದ್ದೇವೆ. ನಮ್ಮ ಈ ಮನಸ್ಥಿತಿಯಿಂದಾಗಿಯೇ, ಸಾಧುವೊಬ್ಬ ನಿಧಿಯಿದೆ ಎಂದು ಹೇಳಿದಾಕ್ಷಣ ನಾವು ಅಲ್ಲಿ ಅಗೆದಿದ್ದೇವೆ. ‘ಇದರೂ ಇರಬಹುದು. ಕುಳಿತು ಉಣ್ಣುವ ಅವಕಾಶ ಸಿಕ್ಕಿದರೆ ಅದನ್ನು ತಪ್ಪಿಸುವುದು ಯಾಕೆ’’ ಎಂದು ಆ ಜಾಗವನ್ನು ಅಗೆದು ಬೇಸ್ತು ಬಿದ್ದಿದ್ದೇವೆ. ಸಾಧು ಈ ದೇಶಕ್ಕೆ ಸರಿಯಾದ ಪಾಠವನ್ನೇ ಕಲಿಸಿದ್ದಾನೆ. ಒಂದು ರೀತಿಯಲ್ಲಿ ಇಡೀ ದೇಶವನ್ನು ಅಣಕಿಸಿದ್ದಾನೆ.
 ಒಂದು ವೇಳೆ ಸಾಧು ಹೇಳಿದಂತೆ ಅಲ್ಲಿ ನಿಧಿ ಸಿಕ್ಕಿದ್ದರೆ ಈ ದೇಶದ ಸ್ಥಿತಿ ಏನಾಗಿ ಬಿಡುತ್ತಿತ್ತು ಎನ್ನುವುದನ್ನು ಒಂದು ಕ್ಷಣ ಯೋಚಿಸೋಣ. ಹಳ್ಳಿ ಹಳ್ಳಿಗಳಲ್ಲಿ ನಕಲಿ ಸಾಧುಗಳು ಹುಟ್ಟಿಕೊಳ್ಳುತ್ತಿದ್ದರು. ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ತಮ್ಮ ತಮ್ಮ ತೋಟ, ಹೊಲ, ಗದ್ದೆಗಳನ್ನು ಅಗೆಯುವುದಕ್ಕೆ ಶುರು ಮಾಡುತ್ತಿದ್ದರು. ಮಾಟ, ಮಂತ್ರ, ವಾಮಾಚಾರ, ನಿಧಿ ಅನ್ವೇಷಣೆಯ ವೌಢ್ಯ ಒಮ್ಮೆಲೆ ಬೆಲೆ ಪಡೆದುಕೊಳ್ಳುತ್ತಿತ್ತು. ಒಬ್ಬರಿಗೊಬ್ಬರು ಇಲ್ಲದ ನಿಧಿಗಾಗಿ ಹೊಡೆದಾಡಿಕೊಳ್ಳುತ್ತಿದ್ದರು. ಈಗಾಗಲೇ ಕಂಧಾಚಾರ, ವೌಢ್ಯದಿಂದ ಗಬ್ಬೆದ್ದಿರುವ ದೇಶ ಇನ್ನಷ್ಟು ಸರ್ವನಾಶದೆಡೆಗೆ ಜಾರಿ ಬಿಡುತ್ತಿತ್ತು. ಈ ನಿಟ್ಟಿನಲ್ಲಿ ನಿಧಿ ಸಿಗದೇ ಇರುವುದು ಈ ದೇಶದ ಭಾಗ್ಯವೇ ಸರಿ. ಉತ್ತರ ಪ್ರದೇಶದ ಈ ಪ್ರಕರಣ ನಮ್ಮ ಹೆಗಲನ್ನು ನಾವು ಮುಟ್ಟಿ ನೋಡುವಂತೆ ಮಾಡಿದೆ. ನಮ್ಮ ನಿಜವಾದ ಹೊಣೆಗಾರಿಕೆ ಏನು ಎನ್ನುವುದನ್ನು ಎಚ್ಚರಿಸಿದೆ. ಇದರಿಂದ ನಾವು ಪಾಠ ಕಲಿತು, ನಿಜವಾದ ನಿಧಿ ಯಾವುದು ಎನ್ನುವುದನ್ನು ಇನ್ನಾದರೂ ಗುರುತಿಸುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗಿದೆ.

ನಾದದ ನವನೀತ...


 ‘ನಾದೋಪಾಸನ’ ಕೃತಿ ವಿದುಷಿ ಶ್ಯಾಮಲಾ ಪ್ರಕಾಶ್ ಸಂಗೀತ ಸಾಧಕರ ಕುರಿತಂತೆ ಬರೆದ ಕೃತಿ. ಸಾಧಾರಣವಾಗಿ ನಮಗೆ ಕಲಾವಿದರ ನಾದದ ಸ್ವಾದ ಗೊತ್ತೇ ಹೊರತು, ಅವರ ಬದುಕು, ಸಾಧನೆಯ ಹಿನ್ನೆಲೆ ತೀರಾ ಅಪರಿಚಿತ. ಒಬ್ಬ ಶಾಸ್ತ್ರೀಯ ಸಂಗೀತಗಾರನ ನಾದ ಹೊರಹೊಮ್ಮುವುದು ಸಾಧನಗಳಿಂದಲ್ಲ. ಅವನ ಸಾಧನೆಯಿಂದ. ಅವನು ಅನುಭವಿಸಿದ ಬದುಕಿನಿಂದ. ಆದುದರಿಂದ ಕಲಾವಿದನನ್ನು ಇನ್ನಷ್ಟು ನಮ್ಮವರನ್ನಾಗಿಸಿಕೊಳ್ಳಬೇಕಾದರೆ, ಆ ಕಲಾವಿದ ಬದುಕನ್ನು ನಮ್ಮದಾಗಿಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ವಿದುಷಿ ಶ್ಯಾಮಲಾ ಪ್ರಕಾಶ್ ಅವರ ಪ್ರಯತ್ನ ಅಭಿನಂದನೀಯ.

ಹಿರಿಯ ವಿದ್ವಾಂಸರಾದ ಸಿರಿಕಂಠದ ಶ್ರೀ ಕಂಠನ್ ಅವರಿಂದ ಹಿಡಿದು, ಗಂಗೂಬಾಯಿ ಹಾನಗಲ್, ಡಾ. ತಾರಾನಾಥನ್, ತ್ಯಾಗರಾಜನ್, ವಸಂತ ಮಾಧವಿ, ಅಬ್ದುಲ್ ಹಲೀಂ ಜಾಫರ್‌ಖಾನ್, ಆನೂರು ಅನಂತ ಕೃಷ್ಣ ಶರ್ಮ ಹೀಗೆ ವಿವಿಧ ನಾದ ಸಾಧನಗಳ ತಂತಿಗಳನ್ನು ಶ್ಯಾಮಲಾ ಅವರು ಮಿಡಿಯುತ್ತಾ ಹೋಗುತ್ತಾರೆ. ಹಾಗೆಂದು ಇದು ಕೇವಲ ವ್ಯಕ್ತಿ ಪರಿಚಯ ಎಂದೂ ತಿಳಿದುಕೊಳ್ಳಬೇಕಾಗಿಲ್ಲ. ನಾದಲೋಕದೊಳಗಿನ ವೃತ್ತಿ ಮಾತ್ಸರ್ಯ, ಅದರಿಂದ ಹಿಂದೆ ತಳ್ಳಲ್ಪಟ ವಿದ್ವಾಂಸರ ಕುರಿತಂತೆ ಸಣ್ಣದೊಂದು ಖೇದವನ್ನೂ ಈ ಕೃತಿ ಅಲ್ಲಲ್ಲಿ ವ್ಯಕ್ತಪಡಿಸುತ್ತದೆ. ಹಾಗೆಯೇ ಉಸ್ತಾದ್ ಹಲೀಂ ಜಾಫರ್ ಖಾನ್ ಅವರನ್ನು ಹಿಂದಿಯಲ್ಲಿ ಸಂದರ್ಶಿಸಿ ಅದನ್ನು ಕನ್ನಡಕ್ಕೆ ಇಳಿಸಿದ್ದಾರೆ ಲೇಖಕಿ. ಇಲ್ಲಿರುವ ಎಲ್ಲಾ ಸಾಧಕರೂ ಒಂದೊಂದು ರತ್ನ. ಇವುಗಳ ಕುರಿತಂತೆ ತಿಳಿದುಕೊಳ್ಳುವುದು, ನಮ್ಮ ನಾದ ಪರಂಪರೆಯನ್ನು ಅರಿತುಕೊಳ್ಳುವ ಒಂದು ಭಾಗವೇ ಆಗಿದೆ ಎನ್ನುವುದು ಶ್ಯಾಮಲಾ ಅವರ ಪಯತ್ನದಿಂದ ನಮಗೆ ಅರಿವಾಗಿ ಬಿಡುತ್ತದೆ.
ಕರ್ನಾಟಕ ಸಂಘ, ಮುಂಬಯಿ ಹೊರತಂದಿರುವ ಈ ಕೃತಿಯ ಮುಖಬೆಲೆ 150 ರೂಪಾಯಿ.



Monday, October 28, 2013

ಕವಿಯ ಕಣ್ಣುಗಳನ್ನು ಕಿತ್ತು ಹಾಕು

ಕವಿಯ ನಾಲಗೆಯನ್ನು
ಕತ್ತರಿಸು
ಕಣ್ಣುಗಳನ್ನು ಕಿತ್ತು ಹಾಕು
ಕೈಗಳನ್ನೂ ತುಂಡರಿಸು
ಕಾಲನ್ನು ಮುರಿ
ಕಿವಿಗೆ ಕಾದ
ಸೀಸವನ್ನು ಹೊಯ್ಯಿ

ಅದರೂ ನಿನಗೆ
ಕೇಳುತ್ತಿದೆ ಗುಡುಗಿನಂತೆ
ಅವನ ಎದೆ ಬಡಿತ
ಬಿರುಗಾಳಿಯಂತೆ
ಅವನ ಏದುಸಿರು

ಸರ್ವಾಧಿಕಾರಿಯೇ ...
ಅದು ನಿಂತ ಬಳಿಕವಷ್ಟೇ
ನೀನು ಆ ಸಿಂಹಾಸನವನ್ನು
ಏರಬೇಕಾಗುತ್ತದೆ...!

Tuesday, October 22, 2013

ಚಂಡಮಾರುತ ಮತ್ತು ಇತರ ಕತೆಗಳು

 ಬಲಿ
ಎಲ್ಲರೂ ಸೇರಿ ಅಲ್ಲಿ ನಡೆಯುವ ಪ್ರಾಣಿ ಬಲಿಯನ್ನು ತಡೆದರು.
ಅಂದು ಬಲಿ ಹಬ್ಬದ ಮಾಂಸ ದಾನವಾಗಿ ಮನೆಗೆ ಬರುತ್ತದೆ ಎಂದು ಇದ್ದ ಬಿದ್ದ ಮೆಣಸಿನ ಚೂರುಗಳನ್ನು ಅರೆದಿಟ್ಟ ಖತೀಜಾಬಿ ಕಾದು, ಕೊನೆಗೆ ಮಕ್ಕಳಿಗೆ ಗಂಜಿಯ ಜೊತೆಗೆ ನೆಂಜಿಕೊಳ್ಳಲು ಅರೆದಿಟ್ಟ ಮೆಣಸನ್ನೇ ಬಡಿಸಿದಳು.

ತಿಂಡಿ
ಮಗು ಅದೇನೋ ಬಾಯಿಗಿಟ್ಟಿತ್ತು.
ತಾಯಿ ಓಡಿ ಬಂದಳು ‘‘ಲೋ ಅದನ್ನು ತಿನ್ಬೇಡ. ಅದು ಕೆಟ್ಟು ಹೋಗಿದೆ. ಕೆಲಸದಾಕೆಯ ಮಗುವಿಗಾಯಿತು. ಇರಲಿ...’’

ಜೇನು
‘‘ಅಪ್ಪಾ, ಜೇನು ತೆಗೆಯುವಾಗ ನೊಣ ಯಾಕೆ ಕಚ್ಚುತ್ತವೆ?’’ ಮಗ ಕೇಳಿದ.
‘‘ನಾವು ತೆಗೆಯುತ್ತಿಲ್ಲ ಮಗಾ, ಕದಿಯುತ್ತಿದ್ದೇವೆ ಅದಕ್ಕೆ’’ ತಂದೆ ಉತ್ತರಿಸಿದ 


ಬೆದರಿಕೆ
‘‘ನೀನು ಹೀಗೆಲ್ಲ ಮಾಡಿದರೆ ನಿನ್ನನ್ನು ಹುಲಿಗೆ ಕೊಟ್ಟು ಬಿಡುತ್ತೇನೆ’’ ತಾಯಿ ಮಗುವಿಗೆ ಜೋರು ಮಾಡಿದಳು.
ಮಗು ಮಾತ್ರ ನಗುತ್ತಿತ್ತು.
ಹುಲಿಯೆಂದರೆ ಏನು ಎನ್ನುವುದು ಗೊತ್ತಿಲ್ಲದೇ ಅಲ್ಲ, ಅದಕ್ಕೆ ತಾಯಿಯೆಂದರೆ ಏನು ಎನ್ನುವುದು ಗೊತ್ತಿತ್ತು.

ವಿಚಿತ್ರ
ಅಷ್ಟೂ ದೊಡ್ಡ ಪಂಚತಾರ ಹೊಟೇಲು ಅದು.
ಭಿಕ್ಷುಕನೊಬ್ಬನ ಕೈಯಲ್ಲಿ ಕೈತುಂಬ ಹಣವಿತ್ತು.
ಒಳಹೋಗಲು ಪ್ರಯತ್ನಿಸಿದ. ಕೈಯಲ್ಲಿರುವ ಹಣವನ್ನು ತೋರಿಸಿದ.
ಪ್ರವೇಶ ಸಿಗಲಿಲ್ಲ.
ಆತ ಸೂಟುಬೂಟು ಹಾಕಿಕೊಂಡಾತ.
ಜೇಬಲ್ಲಿ ಒಂದು ರೂ. ಇರಲಿಲ್ಲ.
ಬದಲಿಗೆ ಕ್ರೆಡಿಟ್ ಕಾರ್ಡ್ ಇತ್ತು. ಅವನಿಗೆ ಪ್ರವೇಶ ಸಿಕ್ಕಿತು.

ಗೋಡೆ
ಆ ಮನೆಗೆ ಅತಿಥಿಗಳು ಬಂದಿದ್ದರು.
ಮನೆಯ ಗೋಡೆ ತುಂಬಾ ಮಕ್ಕಳು ಅದೇನೇನೋ ಬರೆದು ಚಿತ್ತು ಮಾಡಿದ್ದರು.
‘‘ಗೋಡೆಗೆ ಹೊಸದಾಗಿ ಸುಣ್ಣ ಬಳಿಯಬಾರದೆ?’’ ಅತಿಥಿಗಳು ಕೇಳಿದರು.
‘‘ಕಳೆದ ವರ್ಷ ತೀರಿ ಹೋದ ನನ್ನ ಎರಡು ವರ್ಷದ ಮಗು ಬರೆದ ಗೋಡೆಬರಹಗಳವು. ಸುಣ್ಣ ಬಳಿಸಿದರೆ ಅದು ಅಳಿದುಹೋಗುತ್ತದೆ ಎಂದೇ ಉಳಿಸಿದ್ದೇವೆ. ನಮ್ಮ ಮನೆಗೆ ಸುಣ್ಣ ಬಳಿಸುವುದೇ ಇಲ್ಲ ಎಂದು ತೀರ್ಮಾನಿಸಿದ್ದೇವೆ’’ ಮನೆಯ ತಾಯಿ ಹೇಳಿದಳು.

ಆಟ
ಕ್ರಿಕೆಟ್ ತಾರೆಯೊಬ್ಬ ನಿವೃತ್ತನಾದ.
‘‘ದೇಶಕ್ಕಾಗಿ ಆಡಿದ್ದೇನೆ...’’ ಎಂದು ಹೇಳಿದ.
ಆದರೆ ಅವನ ಅಕೌಂಟಿನಲ್ಲಿ ಕೋಟಿಗಟ್ಟಳೆ ಹಣ ಎಲ್ಲಿಂದ ಬಂತು ಎನ್ನುವುದನ್ನು ಹೇಳಲಿಲ್ಲ.
ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ.
ಅವನೆಂದಿಗೂ ‘ದೇಶಕ್ಕಾಗಿ ದುಡಿದಿದ್ದೇನೆ’ ಎಂದಿರಲಿಲ್ಲ.
ಅವನ ತಿಜೋರಿಯಲ್ಲಿ ಸಾಲ ಪತ್ರಗಳಿದ್ದವು.

ಚಂಡಮಾರುತ
ನಾಳೆ ಚಂಡಮಾರುತ ಬರುತ್ತದೆ ಎಂದು ಎಲ್ಲರೂ ಫಕೀರರಂತೆ ಮನೆ ಜಮೀನು ಬಿಟ್ಟು ಓಡಿದರು.
ಮರುದಿನ ಚಂಡಮಾರುತ ಬರಲೇ ಇಲ್ಲ.
ಬಿಟ್ಟು ಹೋದವರು ಮತ್ತೆ ಮರಳಿದರು. ತಮ್ಮದು ನನ್ನದು ಎಂದು ಕಚ್ಚಾಡತೊಡಗಿದರು.
ಚಂಡಮಾರುತ ಅವರೊಳಗೇ ಇತ್ತು.

ಸುದ್ದಿ
‘‘ಮಾಧ್ಯಮಗಳ ಸುದ್ದಿ ನಂಬುವುದಕ್ಕೆ ಅರ್ಹವಲ್ಲ’’ ರಾಜಕಾರಣಿ ಹೇಳಿದ.
‘‘ರಾಜಕಾರಣಿಗಳು ನಂಬದ ಸುದ್ದಿಗಳಷ್ಟೇ ನಂಬುವುದಕ್ಕೆ ಅರ್ಹ’’ ಓದುಗನೊಬ್ಬ ಹೇಳಿದ

Monday, October 21, 2013

ಗಣಿ ಪಾತಾಳದಲ್ಲಿ ಸಿಲುಕಿಕೊಂಡ ಮನುಷ್ಯ

2010ರ ಅಕ್ಟೋಬರ್‌ನಲ್ಲಿ ಚಿಲಿ ಎಂಬ ಪುಟ್ಟ ದೇಶದಲ್ಲಿ ನಡೆದ ಗಣಿ ದುರಂತ ಮತ್ತು ಏಳು ನೂರು ಮೀಟರ್ ಆಳದಲ್ಲಿ ಸಿಲುಕಿಕೊಂಡ 33 ಗಣಿಗಾರರ ಸಾವು ಬದುಕಿನ ಹೋರಾಟದ ಕತೆಯೇ ಸರೋಜಾ ಪ್ರಕಾಶ ಬರೆದ ‘ಚಿಲಿಯ ಕಲಿಗಳು’ ಕೃತಿ. 33 ಜನ ಪಾತಾಳದಲ್ಲಿ ಕಳೆದ 69 ದಿನಗಳನ್ನು ಎದೆ ತಟ್ಟುವಂತೆ ಈ ಕೃತಿಯಲ್ಲಿ ಲೇಖಕಿ ನಿರೂಪಿಸಿದ್ದಾರೆ. ಇದು ಕೇವಲ ಗಣಿಯಲ್ಲಿ ಸಿಲುಕಿಕೊಂಡವರ ಕತೆ ಮಾತ್ರವಲ್ಲ. ಈ ಗಣಿಯೆಂಬ ಉದ್ಯಮದ ಒಳಸುಳಿಗಳನ್ನು, ಅದರ ಆಳವನ್ನು ಈ ಪುಟ್ಟ ಕೃತಿ ಸರಳವಾಗಿ ತೆರೆದಿಡುತ್ತದೆ.
ಆರಂಭದಲ್ಲಿ ಯಾವುದೋ ಒಂದು ದೇಶದ ಗಣಿಗೆ ಸಂಬಂಧ ವಿಷಯ, ಕೊನೆಯಲ್ಲಿ ಇಡೀ ಮನುಷ್ಯ ಕುಲದ, ಮನುಷ್ಯ ಸಂಬಂಧದ, ಮನುಷ್ಯ ಬಲದ ವಿಷಯವಾಗಿ ಕೊನೆಯಾಗುವುದು ಈ ಕೃತಿಯ ಹೆಗ್ಗಳಿಕೆ. ಒಬ್ಬನಿಗಾಗಿ ಮತ್ತೊಬ್ಬ ಅಥವಾ, ಒಬ್ಬನಿಗಾಗಿ ಎಲ್ಲರೂ ಬದುಕಿದಾಗ ಹೇಗೆ ಮನುಷ್ಯತ್ವ ವಿಜೃಂಭಿಸುತ್ತದೆ ಎನ್ನುವುದನ್ನು ಹೃದಯಸ್ಪರ್ಶಿಯಾಗಿ ಈ ಕೃತಿ ತೆರೆದಿಡುತ್ತದೆ. ಇದೊಂದು ಅಪ್ಪಟ ಸಾಹಸಮಯ ಕೃತಿಯೂ ಹೌದು. ಹಾಗೆಯೇ ಮನುಷ್ಯ ಸಂಬಂಧಗಳನ್ನು ತೆರೆದಿಡುವ ಕೃತಿಯೂ ಹೌದು. ಗಣಿಗಾರಿಕೆಯ ಕುರಿತಂತೆ, ಗಣಿದುರಂತಗಳ ಕುರಿತಂತೆ ಅಪಾರ ಮಾಹಿತಿಯನ್ನು ಈ ಕೃತಿ ಸರಳವಾಗಿ ಅರ್ಥವಾಗುವಂತೆ ತೆರೆದಿಡುತ್ತದೆ. ಭೂಮಿ ಬುಕ್ಸ್ ಬೆಂಗಳೂರು ಹೊರತಂದಿರುವ ಈ ಕೃತಿಯ ಮುಖಬೆಲೆ 110 ರೂಪಾಯಿ.

Sunday, October 20, 2013

ರಾತ್ರಿ ಕಳ್ಳ ಮನೆಗೆ ನುಗ್ಗಿದ್ದಾನೆ...!

1
ಧರ್ಮ ಪಂಡಿತರ
ಮೇಲೆ ನಂಬಿಕೆ
ಕಳೆದು ಕೊಂಡ ದಿನ
ನಿನ್ನ ಮೇಲಿನ ನಂಬಿಕೆ
ದುಪ್ಪಟ್ಟಾಯಿತು
ನನ್ನ ದೊರೆಯೇ
2
ದೋಚಲು ಬಂದ
ಕಳ್ಳರು ನನ್ನ ನಮಾಝಿನ
ಹರಿದ ಚಾಪೆಯನ್ನು
ನನಗೇ  ಉಳಿಸಿ ಹೋದರು !
ಕೇಳಿದ್ದರೆ ಈ ಚಾಪೆಯನ್ನೂ
ಕೊಟ್ಟು ಬಿಡುತ್ತಿದ್ದೆ 

ನನ್ನ ದೊರೆಯೇ,
ಈ ಚಾಪೆಯನ್ನು ಹೊತ್ತು
ನನ್ನ ಬೆನ್ನು ಗೂನಾಗಿ ಬಿಟ್ಟಿದೆ
3
ಹಣೆಯ ಮೇಲಿರುವ
ನಮಾಜಿನ ಗುರುತು
ನಿಮ್ಮನ್ನು ನನ್ನ ದೊರೆಯ
ಬಳಿ ಒಯ್ಯಲಾರದು
ಧರ್ಮ ಪಂಡಿತರೆ...
ಅವನು ನಿಮ್ಮ ಎದೆಯ ಬಗೆದು
ಗುರುತನ್ನು ಹುದುಕುವನು
4
ನನ್ನ ಸಂಕಟಗಳ
ಒಲೆಯಲ್ಲಿ ನನ್ನ ಅನ್ನ
ಬೇಯುತ್ತಿದೆ
ನನ್ನ ದೊರೆಯೇ,
ಎದೆಯ ಮಡಕೆಯಿಂದ
ಹೊಮ್ಮುವ ಪರಿಮಳಕ್ಕೆ
ನಿನ್ನ ಸ್ವರ್ಗದ ಸ್ವಾದವಿದೆ
5
ಹಿಂಬಾಗಿಲು ಮುರಿದಿದೆ,
ಕಿಟಕಿ ಒಡೆದಿದೆ,
ರಾತ್ರಿ ಕಳ್ಳ ಮನೆಗೆ ನುಗ್ಗಿದ್ದಾನೆ
ನನ್ನ ದೊರೆಯೇ,
ಅವನು ಕದ್ದದ್ದೇನು ಎನ್ನೂದೆ
ನನಗೆ ತಿಳಿಯುತ್ತಿಲ್ಲ

Friday, October 18, 2013

‘ಬಲುತ’ ದಲಿತನ ಎದೆಯ ಧಗಿಸುವ ಕೆಂಡ

 ಸಾಹಿತ್ಯದ ಮಾರ್ದವತೆಯನ್ನು ಅಲುಗಾಡಿಸುವಂತೆ, ಬೆಚ್ಚಿ ಬೀಳಿಸುವ ಆತ್ಮಕಥನಗಳು ಬಂದಿರುವುದು ಮಹಾರಾಷ್ಟ್ರದಿಂದಲೇ ಎನ್ನುವುದರಲ್ಲಿ ಅನುಮಾನವಿಲ್ಲ. ಅದಕ್ಕೆ ಮುಖ್ಯ ಕಾರಣ, ಮರಾಠಿ ದಲಿತ ಲೇಖಕರು ಸಾಲು ಸಾಲಾಗಿ ಬರೆಯಲು ಶುರು ಹಚ್ಚಿದ್ದು, ಉಚಲ್ಯಾ, ಅಕ್ರಮ ಸಂತಾನದಂತಹ ಕೃತಿಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದವು. ಭಾರತದ ಭ್ರಮೆಗಳನ್ನು ಒಡೆದು ಹಾಕಿದವು. ಇಲ್ಲಿ, ಇನ್ನೋರ್ವ ಪ್ರಮುಖ ದಲಿತ ಬರಹಗಾರನ ಆತ್ಮಕಥನವೊಂದನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ದಯಾ ಪವಾರ ಅವರ ‘ಬಲುತ’ ಆತ್ಮ ಕಥನವನ್ನು ಪ್ರೊ. ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕಿಳಿಸಿದ್ದಾರೆ.

ಒಂದು ಆತ್ಮಕಥನ ಸಮಾಜದ ಮೇಲೆ ಬೀರುವ ಪ್ರಭಾವ, ಅದು ಸಮಾಜದಲ್ಲಿ ಸೃಷ್ಟಿಸುವ ಕೀಳರಿಮೆ ಹಾಗೆಯೇ ಆ ನೋವು ಸಂಕಟಗಳೇ ಮೇಲೆದ್ದು ನಿಲ್ಲುವುದಕ್ಕೆ ಇಂಧನವಾಗುವ ಪರಿಯನ್ನು ಲೇಖಕ ದಯಾ ಪವಾರ ಕೃತಿಯಲ್ಲಿ ತೋಡಿಕೊಳ್ಳುತ್ತಾರೆ. ಆತ್ಮಕಥನ ಬರೆಯುವ ಲೇಖಕನ ಬಿಕ್ಕಟ್ಟುಗಳನ್ನು ಅವರ ಮಾತುಗಳಲ್ಲಿ ನಾವು ಗಮನಿಸಬಹುದು. ಬೆನ್ನು ಡಿ ಹೇಳುವಂತೆ, ದಲಿತ ಸಮಾಜದ ಅವಸ್ಥೆಯನ್ನು ದಗಡೂ ಮಾರುತಿ ಪವಾರನಾಗಿ ಗುರುತಿಸುತ್ತಲೇ ಬಾಲ್ಯ ಕಳೆದು ಶಾಲೆಗೆ ಹೋಗುವ ಸೌಭಾಗ್ಯ ದೊರೆತು ವಿದ್ಯಾವಂತರಾಗಿ ‘ಬಲುತ’ ಬರೆಯುವ ದಯಾ ಪವಾರರಾಗಿ ರೂಪುಗೊಂಡು ಈ ಕೃತಿಯ ಹೂರಣ. ‘‘ಕೃತಿಯ ಹೊಚ್ಚ ಹೊಸ ಪ್ರತಿಯನ್ನು ಕೈಯಲ್ಲಿ ಹಿಡಿದಾಗ ಒಂದು ಕ್ಷಣ ಧಗಿಸುವ ಕೆಂಡವನ್ನು ಹಿಡಿದಂತಾಯಿತು’’ ಎನ್ನುವ ಲೇಖಕರ ಮಾತೇ ಈ ಕೃತಿಯ ಒಡಲಾಳದ ಬೆಂಕಿಯನ್ನು ವ್ಯಕ್ತಗೊಳಿಸುತ್ತದೆ. ಕೃತಿಯ ಮುಖಬೆಲೆ 125 ರೂ.

Thursday, October 17, 2013

ಕತೆಗಾರ ಮತ್ತು ಪತ್ರಕರ್ತನ ತಿಕ್ಕಾಟ

 
ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಒಂದೆರಡಲ್ಲ. ಸದ್ಯದ ಸಂದರ್ಭದಲ್ಲಿ ಪತ್ರಿಕೋದ್ಯಮ ಎದುರಿಸುತ್ತಿರುವ ಸವಾಲು ಗಳೊಂದಿಗೆ ನೇರ ಸಂಬಂಧವನ್ನು ಇವು ಹೊಂದಿವೆ. ಕೆಲವು ವಿದ್ಯಾರ್ಥಿಗಳು ಕತೆ, ಕವಿತೆಗಳು ಬರೆಯುವುದು ಪತ್ರಿಕೋದ್ಯಮಕ್ಕಿರುವ ಅರ್ಹತೆ ಎಂದೇ ತಿಳಿದುಕೊಂಡಿದ್ದಾರೆ. ಮತ್ತು ಸಂದರ್ಶನಕ್ಕೆ ಬರುವಾಗ ತಾವು ಬರೆದಿರುವ ಕವಿತೆಗಳ ಕಟ್ಟನ್ನು ಜೊತೆ ತರುತ್ತಾರೆ. ಒಬ್ಬ ಪತ್ರಕರ್ತನಿಗೂ, ಕತೆಗಾರನಿಗೂ ಇರುವ ವ್ಯತ್ಯಾಸ ತಿಳಿಯದೇ ಇರುವ ಪರಿಣಾಮವಾಗಿಯೇ ಇಂದು ಪತ್ರಿಕೆಗಳಲ್ಲಿ ವರದಿಗಳು ಇರುವ ಜಾಗದಲ್ಲಿ ಕತೆಗಳಿರುತ್ತವೆ. ಕತೆಗಳಿರುವ ಜಾಗದಲ್ಲಿ ವರದಿಗಳಿರುತ್ತವೆ. ಕತೆಗಾರನಾದ ವನು ಹೆಚ್ಚು ಸಂವೇದನಾಶೀಲನಾಗಿರುತ್ತಾನೆ. ಜೊತೆಗೆ ಅವನು ವರದಿಯೊಳಗೆ ತನಗೆ ತಿಳಿಯದೆಯೇ ಪ್ರವೇಶಿಸಿ ಬಿಟ್ಟಿರುತ್ತಾನೆ. ಇದೊಂದು ವಿಚಿತ್ರ ತಿಕ್ಕಾಟ. 

ವರದಿ ಮಾಡುವ ಸಂದರ್ಭದಲ್ಲಿ ನಾನು ಹೆಚ್ಚು ಭಾವೋದ್ವೇಗಗೊಳ್ಳುತ್ತಿದ್ದೆ. ಭಾವುಕನಾಗಿ ಬಿಡುತ್ತಿದ್ದೆ. ಆಗ ನನ್ನನ್ನು ಎಚ್ಚರಿಸಿದ್ದು ಒಬ್ಬ ಹಿರಿಯ ಪತ್ರಕರ್ತರು. ‘‘ನೀನೊಬ್ಬ ಒಳ್ಳೆಯ ಕತೆಗಾರ ನಿಜ. ಆದರೆ ಪತ್ರಕರ್ತ ಬೇರೆ, ಕತೆಗಾರ ಬೇರೇ. ಅವೆರಡೂ ಬೇರೆ ಬೇರೆ ಕ್ಷೇತ್ರ. ಪತ್ರಕರ್ತನ ಕ್ಷೇತ್ರದಲ್ಲಿ ಕತೆಗಾರನನ್ನು ಯಾವ ಕಾರಣಕ್ಕೂ ಪ್ರವೇಶಿಸಲು ಬಿಡಬೇಡ’’ ಎಂದಿದ್ದರು. ಅಂದಿನಿಂದ ನನ್ನೊಳಗಿನ ಕತೆಗಾರನಿಂದ ಪತ್ರಕರ್ತನನ್ನು ರಕ್ಷಿಸಿಕೊಳ್ಳಲು, ಹಾಗೆಯೇ ನನ್ನೊಳಗಿನ ಕತೆಗಾರನನ್ನು ಪತ್ರಕರ್ತ ನಿಂದ ರಕ್ಷಿಸಿಕೊಳ್ಳಲು ಪ್ರಯತ್ನ ನಡೆದೇ ಇದೆ. ಒಂದು ರೀತಿಯಲ್ಲಿ ಕತೆಗಾರ ಪತ್ರಕರ್ತನಾಗುವುದು ಅತ್ಯಂತ ಅಪಾಯಕಾರಿ. ಅದರ ಪರಿಣಾಮವನ್ನು ಇಂದಿನ ಪತ್ರಿಕೆಗಳು ಅನುಭವಿಸುತ್ತಿವೆ. ಜೊತೆಗೆ ಸಮಾಜವೂ ಅನುಭವಿಸುತ್ತಿದೆ. ವರದಿಗಳನ್ನು ಮಾಡುವ ಬದಲು ಕತೆಗಳನ್ನು ಹೆಣೆಯುವುದರಲ್ಲಿ ಮಗ್ನರಾಗಿದ್ದಾರೆ ಇಂದಿನ ಪತ್ರಕರ್ತರು. ಭಯೋತ್ಪಾದಕರ ಕುರಿತಂತೆ, ನಕ್ಸಲೀಯರ ಕುರಿತಂತೆ ಕತೆಕಟ್ಟಲು ಇವರಷ್ಟು ಜಾಣರು ಇನ್ನೊಬ್ಬರಿಲ್ಲ. ಕುಳಿತಲ್ಲೇ ಅವರು, ಭಯೋತ್ಪಾದಕರ ನಿಗೂಢತಾಣಗಳನ್ನು, ಸಂಚುಗಳನ್ನು ಸೊಗಸಾಗಿ ವಿವರಿಸಬಲ್ಲರು. ಯಾವ್ಯಾವ ಸಂಚು ಎಲ್ಲೆಲ್ಲಿ ನಡೆದಿದೆ, ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕರು ಹೇಗೆ ಅದರಲ್ಲಿ ಶಾಮೀಲಾಗಿದ್ದಾರೆ ಎಂಬಿತ್ಯಾದಿಗಳನ್ನು ರಸವತ್ತಾಗಿ ಪೋಣಿಸಬಲ್ಲರು. ಕತೆಗಾರರು ತಪ್ಪಿ ಪತ್ರಕರ್ತರಾದ ಪರಿಣಾಮ ಇದು.

ವರದಿಗಾರನದು ಯಾವತ್ತಿದ್ದರೂ ಮೂರನೆಯ ಪಾತ್ರ. ಅವನು ಅದರೊಳಗಿದ್ದೂ ಇಲ್ಲದಂತಿರಬೇಕು. ಒಂದು ರೀತಿಯಲ್ಲಿ ವರದಿ ಒಪ್ಪಿಸುವುದಷ್ಟೇ ಅವನ ಕರ್ತವ್ಯ. ಯಾರದು ತಪ್ಪು, ಯಾರದು ಸರಿ ಎನ್ನುವುದನ್ನು ನಿರ್ಣಯಿಸುವ ಅಧಿಕಾರವೂ ಅವನಿಗಿಲ್ಲ. ಅದನ್ನು ನಿರ್ಣಯಿಸಬೇಕಾದ ಅಧಿಕಾರವಿರುವುದು ಓದುಗರಿಗಷ್ಟೇ. ಓದುಗರ ಮೇಲೆ ತನ್ನದಾದ ಯಾವುದನ್ನೂ ಹೇರುವ ಅಧಿಕಾರ ವರದಿಗಾರನಿಗಿಲ್ಲ. ಘಟನೆಗೆ ಅವನೊಂದು ರೀತಿ ಮೂರನೆಯವನು. ನಿರ್ಭಾವುಕನು. ತನ್ನ ವರದಿಯಲ್ಲಿ ಕಣ್ಣೀರಿಡುವ ಹಕ್ಕೂ ಅವನಿಗಿಲ್ಲ. ಕಣ್ಣೀರಿಡುವುದೇನಿದ್ದರೂ, ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ ಮೇಲೆ. ಅದುವೇ ಅವನ ನಿಜವಾದ ಹೊಣೆಗಾರಿಕೆ. ಯಾಕೆಂದರೆ ಅವನಿಗೆ ಕಣ್ಣೀರು ತರಿಸಿದ್ದು ಓದುಗನಿಗೆ ಕಣ್ಣೀರು ತರಿಸಬೇಕಾಗಿಲ್ಲ. ಆದುದರಿಂದಲೇ ವರದಿಗಾರ ತನ್ನ ವರದಿಯಲ್ಲಿ ಯಾವತ್ತೂ ಕಣ್ಣೀರಿಡಬಾರದು. ವೈಯಕ್ತಿಕವಾದ ಯಾವ ಭಾವನೆಗಳೂ ಅದರಲ್ಲಿರಬಾರದು. ಯಾವ ವೈಭವೀಕರಣ, ರೋಚಕತೆ ಅದರಲ್ಲಿರಬಾರದು. ವಿಪರ್ಯಾಸ ನೋಡಿ. ಇತ್ತೀಚಿನ ದಿನಗಳಲ್ಲಿ ಟಿ.ವಿ.ಗಳಲ್ಲಿ ಯಾವುದೋ ಬರ್ಬರ ಅಪಘಾತ ಅಥವಾ ಆತ್ಮಹತ್ಯೆಗಳ ಸುದ್ದಿಗಳು ಪ್ರಕಟವಾಗುತ್ತಿರುತ್ತದೆ. ಒಂದೆಡೆ ವರದಿಗಾರ ಅದನ್ನು ರೋಚಕವಾಗಿ ಮಂಡಿಸುತ್ತಿರುತ್ತಾನೆ. ಇನ್ನೊಂದೆಡೆ ಆ ದೃಶ್ಯಗಳಿಗೆ ಹಿನ್ನೆಲೆ ಸಂಗೀತವನ್ನು ಅಳವಡಿಸಲಾಗಿರುತ್ತದೆ. ಸುದ್ದಿ ಸುದ್ದಿಯಾಗಿಯಷ್ಟೇ ನಮ್ಮನ್ನು ತಟ್ಟಬೇಕಾಗುತ್ತದೆ. ಇಲ್ಲಿ, ಟಿ. ವಿ.ಗಳು ಏನು ಮಾಡುತ್ತಿದೆಯೆಂದರೆ ಬಲವಂತವಾಗಿ ನಮ್ಮ ಎದೆಯೊಳಗೆ ಅದನ್ನು ನುಗ್ಗಿಸುವ ಕೆಲಸವನ್ನು ಮಾಡುತ್ತದೆ. ವರದಿಗಾರ ವರದಿ ಮಾಡುವ ಕೆಲಸವೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಾನೆ. ತೀರ್ಪನ್ನು ಕೊಟ್ಟು, ಆರೋಪಿಗಳನ್ನು ಗಲ್ಲಿಗೇರಿಸುವ ಕೆಲಸವೂ ಅವನಿಂದಲೇ ನಡೆದು ಬಿಡುತ್ತದೆ. ಕೆಲವು ವರದಿಗಾರರಿಗಂತೂ ಸಂಪಾದಕೀಯ ಬರೆಯುವ ಚಟ. ಆ ಪತ್ರಿಕೆಗಳಿಗೆ ಸಂಪಾದಕೀಯವೆನ್ನುವುದೇ ಇರುವುದಿಲ್ಲ. ಇದ್ದರೂ ಅದರ ಸಂಪಾದಕೀಯ ಪುಟದಲ್ಲಿ ಸಂಪಾದಕೀಯದ ಹೆಸರಿನಲ್ಲಿ ವರದಿಗಳಿರುತ್ತದೆ. ವರದಿಗಳಿರಬೇಕಾದ ಜಾಗದಲ್ಲಿ ಸಂಪಾದಕೀಯವಿರುತ್ತದೆ. ಸಾಧಾರಣವಾಗಿ ಯಾವುದೇ ಪತ್ರಿಕೆ ವರದಿಗಳಲ್ಲಿ ತನ್ನ ನಿರ್ಣಯವನ್ನು ಹೇಳುವುದಿಲ್ಲ. ಹೇಳಿಕೊಳ್ಳಬಾರದು ಕೂಡ. ಇತರರ ಮಾತುಗಳನ್ನಷ್ಟೇ ವರದಿಯಾಗಿ ನೀಡುತ್ತವೆ. ಆ ಘಟನೆಯ ಬಗ್ಗೆ ಪತ್ರಿಕೆಯ ನಿಲುವು ಏನು ಎನ್ನುವುದನ್ನು ಪತ್ರಿಕೆಯ ಸಂಪಾದಕೀಯ ಪುಟ ನಿರ್ಣಯಿಸುತ್ತದೆ. ಆದರೆ ಕೆಲವು ಪತ್ರಿಕೆಗಳ ಸಂಪಾದಕೀಯ ಓದಿದರೆ, ಅದು ಘಟನೆಯ ಕುರಿತಂತೆ ಏನನ್ನು ಹೇಳುತ್ತದೆ ಎನ್ನುವುದೇ ಅರ್ಥವಾಗುವುದಿಲ್ಲ. ಅದೇ ಸಂದರ್ಭದಲ್ಲಿ ಅವುಗಳು ಪ್ರಕಟಿಸಿರುವ ವರದಿಗಳನ್ನು ಓದಿದಾಕ್ಷಣ ಆ ಪತ್ರಿಕೆಯ ನಿಲುವು ಏನು ಎನ್ನುವುದು ಅರ್ಥವಾಗಿ ಬಿಡುತ್ತದೆ. ಇದು ಇಂದಿನ ಪತ್ರಿಕೋದ್ಯಮದ ದುರಂತ ಕೂಡ.

ಹೆಚ್ಚಿನ ವರದಿಗಾರರು ರಾಜಕೀಯ ವ್ಯಕ್ತಿಗಳೊಂದಿಗೆ ಸಂಬಂಧಗಳನ್ನು ಹೊಂದಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಅದು ವರದಿಗಳ ಮೇಲೆ ತಿಳಿದೋ ತಿಳಿಯದೆಯೋ ಪ್ರಭಾವವನ್ನು ಬೀರಿಯೇ ಬೀರುತ್ತದೆ. ಆದುದರಿಂದಲೇ ವರದಿಗಾರನಿಗೆ ಯಾರೊಂದಿಗೂ ಸಂಬಂಧ ಇರಬಾರದು. ಸಂಪರ್ಕವಷ್ಟೇ ಇರಬೇಕು. ಸಂಪರ್ಕವಿಲ್ಲದೇ ಇದ್ದರೆ ವರದಿಗಾರರು ಸುದ್ದಿ ಮೂಲವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಸಂಪರ್ಕದಾಚೆಗಿನ ಸಂಬಂಧವನ್ನು ಇಟ್ಟುಕೊಂಡರೆ, ಸುದ್ದಿ ಸುದ್ದಿಯಾಗಿ ಉಳಿಯದೇ ವಿರೂಪಗೊಳ್ಳುವ ಸಾಧ್ಯತೆಗಳಿರುತ್ತದೆ. ಇವನ್ನೆಲ್ಲ ಒಳಗೊಳ್ಳುವಂತೆ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದೆಂದರೆ ಸುಲಭ ಸಾಧ್ಯವಲ್ಲ. ಬೇರೆ ಯಾವುದೇ ತರಗತಿಗಳಲ್ಲಿ ಪ್ರವೇಶ ಸಿಗದೇ ಇದ್ದ ಕಾರಣ, ಎಂಸಿಜೆ ಅಥವಾ ಪತ್ರಿಕೋದ್ಯಮದಲ್ಲಿ ಎಂ.ಎ ಮಾಡುವ ವಿದ್ಯಾರ್ಥಿಗಳಿಂದ ಇವನ್ನು ನಿರೀಕ್ಷಿಸುವುದು ತೀರಾ ಕಷ್ಟ. ಹಾಗೆಯೇ ಪತ್ರಿಕೋದ್ಯಮವನ್ನು ಒಂದು ಪದವಿಯಾಗಿ ಕಲಿತು, ಅದರ ಅಂಕಪಟ್ಟಿಯ ಆಧಾರದಲ್ಲಿ ಕೆಲಸ ಹುಡುಕುತ್ತಾ ಹೋಗುವ ವಿದ್ಯಾರ್ಥಿ ಗಳಿಂದಲೂ ನಾವು ನಿರೀಕ್ಷೆ ಗಳನ್ನು ಇಟ್ಟುಕೊಳ್ಳುವುದು ತೀರಾ ಕಷ್ಟ .ಇಂದು ಎಂಸಿಜೆಯಿಂದ ಹೊರಬರುವ ವಿದ್ಯಾರ್ಥಿಗಳಲ್ಲಿ ಶೇ. 2ರಷ್ಟು ವಿದ್ಯಾರ್ಥಿಗಳಷ್ಟೇ ನಿಜಕ್ಕೂ ಪತ್ರಿಕೋದ್ಯಮಕ್ಕೆ ಅರ್ಹರಾಗಿರುತ್ತಾರೆ. ಪತ್ರಕರ್ತನಿಗೆ ಮೊತ್ತಮೊದಲಿರಬೇಕಾದುದು ತಾಳ್ಮೆ. ಇನ್ನೊಬ್ಬರ ಮಾತನ್ನು ಆಲಿಸುವ ತಾಳ್ಮೆ. ನಡೆದ ಘಟನೆಯನ್ನು ಕೂಲಂಕಷವಾಗಿ ವೀಕ್ಷಿಸುವ ತಾಳ್ಮೆ. ಇವೆರಡೂ ಇಂದಿನ ವಿದ್ಯಾರ್ಥಿಗಳಲ್ಲಿಲ್ಲ. ಇನ್ನೊಬ್ಬರ ಮಾತುಗಳನ್ನು ಆಲಿಸುವುದು ತನ್ನ ಹುದ್ದೆಯ ಘನತೆಗೆ ತಕ್ಕುದಲ್ಲ ಎಂಬ ತಪ್ಪು ಇಗೋಗಳಿಂದ ನರಳುತ್ತಿದ್ದಾರೆ ಹೆಚ್ಚಿನ ಪತ್ರಕರ್ತರು. ಇನ್ನೊಬ್ಬರನ್ನು ಮಾತನಾಡುವುದಕ್ಕೆ ಬಿಡದೆ ತಾವೇ ಮಾತನಾಡುವುದನ್ನು ಚಟವಾಗಿಸಿ ಕೊಂಡಿದ್ದಾರೆ. ಹಾಗೆಯೇ ವೀಕ್ಷಣೆ. ಯಾವುದೇ ಘಟನೆಯನ್ನು ಸಂಪೂರ್ಣವಾಗಿ ವೀಕ್ಷಿಸುವ ತಾಳ್ಮೆ ಇಂದಿನ ಪತ್ರಿಕೋದ್ಯಮಕ್ಕಿಲ್ಲ. ಸ್ಥಳಕ್ಕೆ ಭೇಟಿ ಕೊಡದೆಯೇ ಸುದ್ದಿಗಳನ್ನು ಮಾಡಿ ಎಷ್ಟು ಬೇಗ ತಲುಪಿಸಿಯೇನೂ ಎಂಬ ಆತುರ ಪತ್ರಕರ್ತರದು. ಇದರ ಪರಿಣಾಮವನ್ನು ವರದಿ ಅನುಭವಿಸಬೇಕಾಗುತ್ತದೆ. ತಪ್ಪು ವರದಿಗಳಿಗೆ, ಅಸ್ಪಷ್ಟ ವರದಿಗಳಿಗೆ, ಗೊಂದಲದ ವರದಿಗಳಿಗೆ ಇದೇ ಕಾರಣವಾಗಿದೆ. ‘ಯಾರು ಮೊತ್ತ ಮೊದಲು ವರದಿ ನೀಡಿದರು’ ಎನ್ನುವುದೇ ಇಂದು ಮುಖ್ಯ. ಯಾರು ಎಷ್ಟು ಸತ್ಯವಾದ, ಸ್ಪಷ್ಟವಾದ, ನಿಷ್ಪಕ್ಷಪಾತವಾದ ವರದಿ ನೀಡಿದರು ಎನ್ನುವುದು ಅನಂತರದ ವಿಷಯ ಎಂಬಂತಾಗಿದೆ. ಆದರೆ ನಿಜವಾದ ಪತ್ರಿಕೋದ್ಯಮದ ಉಳಿವು ‘ಬ್ರೇಕಿಂಗ್ ನ್ಯೂಸ್’ನಲ್ಲಿಲ್ಲ. ಇದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ನಡೆಯಬೇಕಾಗಿದೆ.


 ಎಂಸಿಜೆ ವಿದ್ಯಾರ್ಥಿಗಳು ಕನಿಷ್ಠ ತಾನು ನಿಜಕ್ಕೂ ಕಲಿಯುವುದು ಇನ್ನು ಮುಂದೆ ಎಂಬ ಅರಿವನ್ನು ಹೊಂದಿದರೆ ಒಂದಿಷ್ಟಾದರೂ ಬೆಳೆಯಬಹುದು. ಯಾವುದೇ ಪತ್ರಿಕೆಗಳಲ್ಲಿ ಎಂಸಿಜೆ ವಿದ್ಯಾರ್ಥಿಗಳಿಗೆ ನೇರವಾಗಿ ಕೆಲಸವನ್ನು ನೀಡುವುದು ಅಪಾಯಕಾರಿ. ಅವರನ್ನು ಪತ್ರಿಕೋದ್ಯಮಕ್ಕೆ ಸಿದ್ಧಗೊಳಿಸುವ ಕೆಲಸ ನಡೆಯಬೇಕಾಗಿದೆ. ಹಿರಿಯ ಪತ್ರಕರ್ತರಿಂದ ಅವರನ್ನು ಉಜ್ಜಿ, ತಿದ್ದಿ, ತೀಡಿ ಬಯಲಿಗಿಳಿಸಬೇಕು. ಕನಿಷ್ಠ ಒಂದೈವತ್ತು ಪುಸ್ತಕಗಳನ್ನು ಕೊಟ್ಟು ಇದನ್ನು ಒಂದು ವರ್ಷದೊಳಗೆ ಓದಿ ಮುಗಿಸಿ ಎಂಬ ಆದೇಶ ನೀಡಬೇಕಾಗಿದೆ. ಸರಳ ಭಾಷೆ, ಸರಳ ವಾಕ್ಯ ಹೀಗೆ ಅವರನ್ನು ಸರಳರನ್ನಾಗಿಸುವ ಕೆಲಸ ಮೊದಲು ನಡೆಯಬೇಕು. ಭಾಷೆಯನ್ನು ಹೊಸದಾಗಿ ಕಲಿಸಬೇಕು. ಬೆಳೆಸಬೇಕು. ಅದರ ಮೂಲಕ ಪತ್ರಿಕೋದ್ಯಮ ಬೆಳೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜಕ್ಕೆ ಪ್ರಯೋಜನವಾಗುತ್ತದೆ.

Thursday, October 10, 2013

ಪತ್ರಿಕೋದ್ಯಮದ ವಿದ್ಯಾರ್ಥಿಗಳು ಮತ್ತು ಸವಾಲು...

 ಒಂದು ಪತ್ರಿಕೆ ಹತ್ತು ಹಲವು ಬದ್ಧತೆ, ವೌಲ್ಯಗಳ ಚೌಕಟ್ಟಿನಲ್ಲಿ ಆರಂಭವಾಯಿತೆಂದರೂ, ಅದನ್ನು ಮುಂದೆ ತೆಗೆದುಕೊಂಡು ಹೋಗಬೇಕಾದವರು ಸಿಬ್ಬಂದಿಗಳು. ಒಂದು ಪತ್ರಿಕೆಯನ್ನು ರೂಪಿಸುವ ಮೆದುಳು ಸಿಬ್ಬಂದಿಗಳು. ಒಂದು ಬ್ಯಾಂಕಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿದಂತಲ್ಲ, ಒಂದು ಪತ್ರಿಕೆಗೆ ಬೇಕಾದ ಉಪಸಂಪಾದಕರ ಆಯ್ಕೆ. ಅವರ ಆಲೋಚನೆಗಳ ಮೂಲಕ ಪ್ರತಿ ದಿನದ ಪುಟಗಳು ಸಿದ್ಧಗೊಳ್ಳುತ್ತವೆ. ಯಾವುದೇ ಒಂದು ಪತ್ರಿಕೆಗೆ ಕೆಲವು ಅಜೆಂಡಾಗಳಿರುತ್ತವೆ. ಜನಪರವಾದ, ರೈತಪರವಾದ, ಕಾರ್ಮಿಕ, ದಲಿತಪರವಾದ ಕಾಳಜಿಗಳೇ ಇರಬಹುದು. ಒಂದು ಪತ್ರಿಕೆ ಆ ಆಶಯದೊಂದಿಗೆ ಆರಂಭವಾಯಿತೆಂದೇ ಇಟ್ಟುಕೊಳ್ಳೋಣ. ಆದರೆ ಆಯ್ಕೆ ಮಾಡುವ ಸಿಬ್ಬಂದಿಗಳು ತಪ್ಪಾಗಿದ್ದರೆ ಇಡೀ ಪತ್ರಿಕೆಯ ಉದ್ದೇಶವೇ ನೆಲಕಚ್ಚಿ ಬಿಡಬಹುದು. ಅದನ್ನು ಹುತ್ತವಾಗಿಟ್ಟುಕೊಂಡು ಜನವಿರೋಧಿ ಹಾವುಗಳು ಆಶ್ರಯ ಪಡೆದುಕೊಳ್ಳಬಹುದು. ಯಾರದೋ ಹಣ, ಎಲ್ಲಮ್ಮನ ಜಾತ್ರೆ ಎನ್ನುವ ಗಾದೆ ಮಾತು ಇಂದಿನ ಹೆಚ್ಚಿನ ಪತ್ರಿಕೆಗಳಿಗೆ ಹೊಂದಿಕೆಯಾಗುತ್ತದೆ. ಒಂದು ಪತ್ರಿಕೆಗೆ ದುಡ್ಡು ಹೂಡುವವರೇ ಪತ್ರಿಕೆಯನ್ನು ಬಳಸಿಕೊಳ್ಳಬೇಕೆಂದಿಲ್ಲ, ಕೆಲವೊಮ್ಮೆ ಅದನ್ನು ಜನವಿರೋಧಿ ಹಿತಾಸಕ್ತಿ ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು.

 ಇದಕ್ಕೊಂದು ಉದಾಹರಣೆಯನ್ನು ನೀಡಬಹುದು. ರಾಜ್ಯಮಟ್ಟದ, ಖ್ಯಾತ ಪತ್ರಿಕೆಯೊಂದರ ಮುಖಪುಟದಲ್ಲಿ ಕೆಲವು ಗೊಂದಲಗಳು ಕಾಣಿಸಿಕೊಳ್ಳುತ್ತಿದ್ದವು. ಕೆಲವೊಮ್ಮೆ ಮುಖಪುಟಗಳನ್ನು ಕೆಲವು ಹಿತಾಸಕ್ತಿಗಳು ಬಳಸಿಕೊಳ್ಳುತ್ತಿರುವಂತೆ ಅನ್ನಿಸಿತು. ಕೆಲವೊಮ್ಮೆ ಆ ಪತ್ರಿಕೆ ಪಕ್ಕಾ ರೈತಪರ, ದಲಿತಪರ ಅನ್ನಿಸಿಕೊಳ್ಳುತ್ತಿತ್ತು. ಇದ್ಯಾಕೆ ಹೀಗೆ? ಎನ್ನುವುದು ತಲೆತಿನ್ನ ತೊಡಗಿತು. ಒಂದು ದಿನ ಅದರಲ್ಲಿರುವ ಹಿರಿಯರೊಬ್ಬರ ಜೊತೆ ನಾನು ನನ್ನ ಸಮಸ್ಯೆಯನ್ನು ಹಂಚಿಕೊಂಡೆ. ಆಗ ಅವರು ಹೇಳಿದ್ದು ಹೀಗೆ. ‘‘ನೋಡಿ, ನಮ್ಮ ಫ್ರಂಟ್ ಪೇಜ್‌ನ್ನು ಇಬ್ಬರು ಹಿರಿಯ ಸಂಪಾದಕರು ನೋಡಿಕೊಳ್ಳುತ್ತಾರೆ. ಅದರಲ್ಲಿ ಒಬ್ಬರು ದಲಿತರ ಪರ. ಇನ್ನೊಬ್ಬರು ಮೋದಿ ಪರ. ಅವರವರ ಶಿಪ್ಟ್‌ನಲ್ಲಿ ಪತ್ರಿಕೆಯನ್ನು ಅವರವರಿಗೆ ಬೇಕಾದಂತೆ ರೂಪಿಸಿಕೊಳ್ಳುತ್ತಾರೆ’’
ನಿಜಕ್ಕೂ ದಂಗಾಗಬೇಕಾದ ವಿಷಯ. ಒಂದು ರಾಜ್ಯಮಟ್ಟದ ಪತ್ರಿಕೆಗೆ ತನ್ನದೇ ಆದ ನಿಲುವು ಇಲ್ಲವೆ? ಅದಕ್ಕೆ ಅವರು ಹೇಳಿದ್ದು ಈ ಉತ್ತರವನ್ನು ‘‘ಇದೆ. ನಮ್ಮ ಪ್ರಧಾನ ಸಂಪಾದಕರು ತುಂಬಾ ಜನಪರ ಮನುಷ್ಯ. ಆದರೆ ಅವರೆಲ್ಲಿ ಪತ್ರಿಕೆಯನ್ನು ನೋಡುತ್ತಾರೆ. ನಿಮಗೆ ಗೊತ್ತಿರುವ ಹಾಗೆ ನಮ್ಮ ಪತ್ರಿಕೆ ಒಂದು ಸಾಗರ. ಒಂದೊಂದು ಎಡಿಶನ್‌ಗೂ ಒಂದೊಂದು ಮುಖಪುಟ ಇರುತ್ತೆ. ಹೀಗಿರುವಾಗ ಇದನ್ನೆಲ್ಲ ತಲೆಕೆಡಿಸಿಕೊಳ್ಳಲು ಅವರಿಗೆ ಹೇಗೆ ಸಾಧ್ಯ?’’ ಆದರೆ ಆ ಪತ್ರಿಕೆಯ ಒಟ್ಟು ಧೋರಣೆಗೆ ಜನ ಅವರನ್ನೇ ಹೊಣೆ ಮಾಡುತ್ತಾರೆ ಎನ್ನುವುದು ಮಾತ್ರ ಸುಳ್ಳಲ್ಲ. ‘ತಪ್ಪು ಸಿಬ್ಬಂದಿ’ಗಳ ಆಯ್ಕೆಯ ಪರಿಣಾಮ ಇದು.

ನಿಮಗೆ ನೆನಪಿರಬಹುದು. ಕರಾವಳಿಯಲ್ಲಿ ‘ಪಾಕಿಸ್ತಾನ ಧ್ವಜ’ದ ವಿವಾದ. ಖ್ಯಾತ ದಿನಪತ್ರಿಕೆಯೊಂದರಲ್ಲಿ ದರ್ಗಾದ ಹಸಿರು ಧ್ವಜವನ್ನು ಪಾಕಿಸ್ತಾನ ಧ್ವಜ ಎಂದು ಆ ಪತ್ರಿಕೆ ಬರೆಯಿತು. ಜೊತೆಗೆ ಜನರನ್ನು ಉದ್ರೇಕಗೊಳಿಸುವ ಅಡಿಬರಹ ಬೇರೆ. ಆದರೆ ಆ ಫೋಟೋಗೆ ಸಂಪೂರ್ಣ ಸಂಪಾದಕರು ಹೊಣೆಯಾಗಿರಲೇ ಇಲ್ಲ. ಅಂದು ರಾತ್ರಿ ಆ ಪುಟವನ್ನು ಮಾಡಿದ ಹಿರಿಯ ಉಪಸಂಪಾದಕನ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ಆ ಪತ್ರಿಕೆ ಆ ಕಳಂಕವನ್ನು ಹೊತ್ತುಕೊಳ್ಳಬೇಕಾಯಿತು. ಪ್ರಧಾನ ಸಂಪಾದಕ ಕ್ಷಮೆಯನ್ನು ಯಾಚಿಸಬೇಕಾಯಿತು. ಸದ್ಯಕ್ಕೆ ಹೆಚ್ಚಿನ ಸಂದರ್ಭದಲ್ಲಿ ಪತ್ರಿಕೆಯೊಳಗೆ ನುಸುಳಿಕೊಂಡಿರುವ ಹಿತಾಸಕ್ತಿಗಳಿಂದ ಪತ್ರಿಕೆಗಳು ನಾಶವಾಗಬೇಕಾಗುತ್ತದೆ. ಅತ್ಯುತ್ತಮ ಉದಾಹರಣೆಯಾಗಿ ಮುಂಗಾರು ಪತ್ರಿಕೆಯನ್ನೇ ನೀಡಬಹುದು. ಯಾವ ಪತ್ರಿಕೆ, ಜಾತಿ ಭೇದ, ವರ್ಣಭೇದದ ವಿರುದ್ಧ ಹಗಲಿರುಳು ಸೆಣಸಾಡಿತೋ, ತನ್ನ ಕೊನೆಯ ದಿನಗಳಲ್ಲಿ ಆ ಹಿತಾಸಕ್ತಿಗಳ ಕೈಯೊಳಗೆ ಸಿಕ್ಕಿ ನಲುಗಿತು. ಎಂಸಿಜೆ ಮಾಡಿದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನೇ ಅರ್ಹತೆ ಎಂದು ಭ್ರಮಿಸಿಕೊಂಡು ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ, ಸಾಹಿತ್ಯ, ಬರಹ ಇತ್ಯಾದಿಗಳ ಬಗ್ಗೆ ಪರಿಚಯವೇ ಇಲ್ಲ. ಬರೇ ಪದವಿಗಾಗಿ ಅವರು ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದು ಒಂದೆರಡು ಪ್ರಶ್ನೆಗಳನ್ನು ಅವರ ಮುಂದಿಟ್ಟಾಗ ಸ್ಪಷ್ಟವಾಗಿ ಬಿಡುತ್ತದೆ. ಸಾಧಾರಣವಾಗಿ ಸಂದರ್ಶನಕ್ಕೆ ಬಂದ ಹುಡುಗರ ಜೊತೆಗೆ ನಾವು ಮೊತ್ತ ಮೊದಲು ಕೇಳುವ ಪ್ರಶ್ನೆ, ನೀವು ಈವರೆಗೆ ಓದಿದ ಒಂದು ಹತ್ತು ಪುಸ್ತಕಗಳ ಹೆಸರನ್ನು ಹೇಳಿ ಎಂಬುದಾಗಿ. ಅದರಲ್ಲೇ ಅವರ ಮನಸ್ಥಿತಿ, ಅವರ ಪರಿಸ್ಥಿತಿ ಅರ್ಥವಾಗಿ ಬಿಡುತ್ತದೆ. ದಿಗ್ಭ್ರಮೆ ಹುಟ್ಟಿಸುವಂತಹ ಉತ್ತರ ಅವರಿಂದ ಬರುತ್ತದೆ. ಇಡೀ ಜೀವಮಾನದಲ್ಲಿ ಓದಿದ ಹತ್ತು ಪುಸ್ತಕಗಳ ಹೆಸರನ್ನು ಹೇಳಲು ಅವರು ತಡಕಾಡುತ್ತಾರೆ. ಕೆಲವರು ಪಿಯುಸಿಯಲ್ಲಿ, ಪದವಿಯಲ್ಲಿ ಪಠ್ಯವಾಗಿದ್ದ ಪುಸ್ತಕಗಳ ಹೆಸರನ್ನು ಹೇಳಿ ಬಿಡುತ್ತಾರೆ. ಕುವೆಂಪು ಬರೆದ ಎರಡು ಮಹಾಕಾದಂಬರಿಗಳ ಹೆಸರನ್ನು ಹೇಳಲಾಗದೆ ತಲೆಕೆರೆದುಕೊಳ್ಳುತ್ತಾರೆ. ‘ಪಥೇರ್ ಪಾಂಚಾಲಿ’ ಎನ್ನುವ ಸಿನಿಮಾದ ಹೆಸರನ್ನು ಜೀವಮಾನದಲ್ಲೇ ಕೇಳಿರುವುದಿಲ್ಲ. ಲಂಕೇಶ್, ತೇಜಸ್ವಿ ಹೆಸರೇನೋ ಗೊತ್ತು. ಆದರೆ ಅವರ ಒಂದೇ ಒಂದು ಕೃತಿ ಓದಿರುವುದಿಲ್ಲ. ಒಂದೆರಡು ವಿದ್ಯಾರ್ಥಿಗಳು ಪ್ರತಾಪ ಸಿಂಹರ ಕೃತಿಗಳ ಹೆಸರನ್ನು ಹೇಳುತ್ತಾರೆ. ಅದನ್ನು ಓದಲಿ. ಆದರೆ ಕೇವಲ ಆ ಲೇಖಕ ಬರೆದ ಪುಸ್ತಕವನ್ನಷ್ಟೇ ಓದಿ ಬಂದಿರುವ ಈ ಹುಡುಗನ ಮನಸ್ಥಿತಿ ಹೇಗಿರಬಹುದು ಮತ್ತು ಈತನ ಕೈಗೆ ಒಂದು ಪತ್ರಿಕೆಯ ಜವಾಬ್ದಾರಿ ಕೊಟ್ಟರೆ ಅದು ಎಂತಹ ಅಪಾಯಕಾರಿ ಕೃತ್ಯವಾಗಿ ಬಿಡಬಹುದು.


ಕನ್ನಡ ಪತ್ರಿಕೋದ್ಯಮ ಎಂದ ಮೇಲೆ ಕನಿಷ್ಟ ಶಿವರಾಮ ಕಾರಂತ, ಕುವೆಂಪು, ಅನಂತಮೂರ್ತಿ, ತೇಜಸ್ವಿ, ಭೈರಪ್ಪ, ವೈಎನ್‌ಕೆ, ಲಂಕೇಶ್, ಕಲಬುರ್ಗಿ...ಹೀಗೆ ಬೇರೆ ಬೇರೆ ಖ್ಯಾತನಾಮರನ್ನು ಒಂದಿಷ್ಟಾದರೂ ಓದಿ ತಿಳಿದುಕೊಳ್ಳಲೇ ಬೇಕು. ಆ ಮೂಲಕ ನಮ್ಮ ಭಾಷೆ, ತಿಳುವಳಿಕೆ, ಸತ್ವ ಇನ್ನಷ್ಟು ಪುಷ್ಟಿಗೊಳ್ಳುತ್ತದೆ. ನಮ್ಮ ಬರಹ ಇನ್ನಷ್ಟು ಗಟ್ಟಿಯಾಗುತ್ತದೆ. ಹಿರಿಯರನ್ನು ಓದಿದಂತೆ ನಮ್ಮಿಳಗೊಂದು ವಿನಯ ರೂಪುಗೊಳ್ಳುತ್ತದೆ. ಅದು ನಮ್ಮನ್ನು ಅತಿರೇಕಕ್ಕೆ ಹೋಗದಂತೆ ಕಾಪಾಡುತ್ತದೆ. ಆದರೆ ಎಂಸಿಜೆಯಿಂದ ಹೊರ ಬರುವ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಅಂತಹ ಯಾವುದೇ ಬದ್ಧತೆಗಳನ್ನು ಕಂಡಿದ್ದು ತೀರಾ ಕಡಿಮೆ. ಇನ್ನು ಒಂದಿಷ್ಟು ಹುಡುಗರಂತೂ ತೀರಾ ಭ್ರಮಾ ಲೋಕದಲ್ಲಿರುತ್ತಾರೆ. ಟಿವಿಗಳನ್ನು ನೋಡುತ್ತಾ ಅವರು ತಮ್ಮ ಪತ್ರಿಕೋದ್ಯಮದ ಕನಸುಗಳನ್ನು ಬೆಳೆಸಿರುತ್ತಾರೆ. ಅಲ್ಲಿನ ಓತಪ್ರೋತ ಮಾತುಗಾರಿಕೆಯೇ ಪತ್ರಿಕೋದ್ಯಮ ಎಂದು ತಿಳಿದು, ವಾಚಾಳಿಗಳಾಗಿ ಬಿಟ್ಟಿರುತ್ತಾರೆ ಮತ್ತು ಮಾತನಾಡುವ ಹಸಿವೆಯಿಂದ ತಹತಹಿಸುತ್ತಿರುತ್ತಾರೆ. ಇವರದು ಇನ್ನೊಂದು ಅಪಾಯಕಾರಿ ವ್ಯಕ್ತಿತ್ವ. 


ಇನ್ನೂ ಕೆಲವು ಎಂಸಿಜೆ ವಿದ್ಯಾರ್ಥಿಗಳಿರುತ್ತಾರೆ. ಮಹಾ ಮಹತ್ವಾಕಾಂಕ್ಷಿಗಳು. ಅವರಾಗಲೇ ತಾವೇನಾಗಬೇಕು ಎನ್ನುವುದನ್ನು ನಿರ್ಧರಿಸಿ ಬಿಟ್ಟಿರುತ್ತಾರೆ. ಬರುವ ಬಸ್‌ಗಾಗಿ ಕಾಯಲು ಒಂದು ಬಸ್‌ಸ್ಟಾಪ್ ಬೇಕು. ಅಂಥವರೂ ಸಂದರ್ಶನಕ್ಕೆ ಬರೋದಿದೆ. ಒಂದೆರಡು ಮಾತಿನಲ್ಲೇ ಅದು ಅರ್ಥವಾಗಿ ಬಿಡುತ್ತದೆ. ಬಂದವರು, ಎಲ್ಲಾ ರೀತಿಯ ಕೆಲಸವನ್ನು ಕಲಿತು ಒಂದು ದಿನ ಇದ್ದಕ್ಕಿದ್ದಂತೆಯೇ ಹಾರಿಹೋಗುತ್ತಾರೆ. ಸಾಧಾರಣವಾಗಿ ಪ್ರಾದೇಶಿಕ ಪತ್ರಿಕೆಗಳಿಗೆ, ಹೋರಾಟದಲ್ಲಿರುವ ಪತ್ರಿಕೆಗಳಿಗೆ ಇಂಥಹ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಅತ್ಯುತ್ತಮವಾದ ಅಭ್ಯರ್ಥಿಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಬರಬೇಕು ಎಂದು ನಿರೀಕ್ಷಿಸುವುದೂ ತಪ್ಪಾಗುತ್ತೆ. ಹಾಗೆಂದು, ಕಳಪೆ ಅಭ್ಯರ್ಥಿಗಳನ್ನು ವರ್ಷವಿಡೀ ಸಹಿಸಿ, ಅವರಿಗೆ ತರಬೇತಿ ನೀಡಿ, ಅವರ ಭಾಷೆಯನ್ನು ತಿದ್ದಿ, ತೀಡಿ ಇನ್ನೇನು ನಮಗೆ ಉಪಯೋಗಕ್ಕೆ ಬಂದಾರು ಎನ್ನುವಾಗ ಅವರು ಇನ್ನೊಂದು ದೊಡ್ಡ ಪತ್ರಿಕೆಯನ್ನು ಸೇರಿ ಬಿಡುತ್ತಾರೆ.

 ಇಂತಹ ಸಂದರ್ಭದಲ್ಲಿ, ಕನ್ನಡದ ಸಾಹಿತ್ಯದಲ್ಲಿ, ಪತ್ರಿಕೋದ್ಯಮದಲ್ಲಿ ನಿಜಕ್ಕೂ ಆಸಕ್ತಿಯಿರುವ, ಒಂದಿಷ್ಟು ಕನ್ನಡ ಸಾಹಿತ್ಯವನ್ನು ಓದಿಕೊಂಡಿರುವ ಹಸಿವಿರುವ ಹುಡುಗರನ್ನು ತಯಾರು ಮಾಡುವ ಯೋಜನೆ ಪತ್ರಿಕೋದ್ಯಮದ ಪಾಲಿಗೆ ಅತ್ಯಂತ ಆಶಾದಾಯಕವಾಗಿದೆ. ಇವರು ಯಾವುದೇ ಎಂಸಿಜೆ ಮಾಡಿರುವುದಿಲ್ಲ. ಪದವಿಯನ್ನು ಅರ್ಧದಲ್ಲೇ ಕಾರಣಾಂತರಗಳಿಂದ ತೊರೆದಿರುತ್ತಾರೆ. ಆದರೆ ಒಬ್ಬ ಪತ್ರಕರ್ತನಿಗೆ ಇರಬೇಕಾಗಿರುವ ಮೂಲಭೂತವಾದ ಎಲ್ಲ ಗುಣಗಳೂ ಆತನಲ್ಲಿರುತ್ತವೆ. ಅಂತಹ ಹುಡುಗರನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಿ, ಅವರನ್ನು ಒಳ್ಳೆಯ ಪತ್ರಕರ್ತರನ್ನಾಗಿಸುವುದು. ಒಂದನ್ನು ತಿಳಿದುಕೊಳ್ಳಬೇಕು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇಂತಹ ಸ್ಥಿತಿಯಲ್ಲೇ ಮೇಲೆ ಬಂದ ನೂರಾರು ಹಿರಿಯ ಪತ್ರಕರ್ತರು ನಮ್ಮ ಮುಂದಿದ್ದಾರೆ. ವಡ್ಡರ್ಸೆ ರಘುರಾಮ ಶೆಟ್ಟಿ ಕೂಡ ಹೀಗೆ, ಮಣ್ಣಿಂದಲೇ ಹುಟ್ಟಿ ಬಂದ ಪತ್ರಕರ್ತರು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಪತ್ರಕರ್ತರಾಗುವುದಕ್ಕಾಗಿಯೇ ಹುಟ್ಟಿ ಬಂದ ಹಲವು ತರುಣರು, ಯಾವುದೇ ಅಂಕಪಟ್ಟಿ, ಪದವಿಗಳಿಲ್ಲದೆ ನಮ್ಮ ನಡುವೆ ಓಡಾಡುತ್ತಿದ್ದಾರೆ. ಅವರನ್ನು ಗುರುತಿಸಿ, ಬೆಳೆಸುವ ಕೆಲಸ ನಡೆದರೆ ನಮ್ಮ ಪತ್ರಿಕೋದ್ಯಮ ಇನ್ನಷ್ಟು ಸತ್ವಪೂರ್ಣವಾಗಬಹುದೇನೋ.
(ಮುಂದುವರಿಯುವುದು)

Wednesday, October 9, 2013

ಪಂಥದಾಚೆಗೆ ವಿವೇಕಾನಂದರು

ಭಾರತದ ಮಣ್ಣಿನ ಸಾರಸತ್ವವನ್ನು ಹೀರಿ, ಬೆಳೆದು ನಿಂತ ಸಂತ ಸ್ವಾಮಿ ವಿವೇಕಾನಂದ. ನಮ್ಮ ನಮ್ಮ ಬೊಗಸೆ ಎಷ್ಟು ದೊಡ್ಡದಿದೆಯೋ ಅಷ್ಟರ ಮಟ್ಟಿಗೆ ಮಾತ್ರ ನಾವು ವಿವೇಕಾನಂದರನ್ನು ಪಡೆದುಕೊಳ್ಳಬಹುದು. ಅವರನ್ನು ತಮಗೆ ಬೇಕಾದಂತೆ ತಿದ್ದಿ, ತಮ್ಮ ಸಿದ್ಧಾಂತದ ಮುಖವಾಣಿಯಾಗಿ ಬಳಸಿಕೊಂಡವರೂ ಹಲವರಿದ್ದಾರೆ. ಯಾರಿಗೆ ಏನು ಬೇಕೋ ಅದನ್ನಷ್ಟೇ ವಿವೇಕಾನಂದರಲ್ಲಿ ನಿರೀಕ್ಷಿಸಿದವರೂ ಇದ್ದಾರೆ. ಆದರೆ ವಿವೇಕಾನಂದರು ಮಾತ್ರ ಯಾವುದೇ ಸಿದ್ಧಾಂತದ ಚೌಕಟ್ಟಿನಲ್ಲಿ ಹಿಡಿದರೆ ನುಣುಚಿಕೊಳ್ಳುತ್ತಾ ಹೋಗುತ್ತಾರೆ. ಇದೇ ಅವರ ವ್ಯಕ್ತಿತ್ವದ ಹೆಗ್ಗಳಿಕೆ. ಬಲಪಂಥೀಯರು ವಿವೇಕಾನಂದರನ್ನು ದುರುಪಯೋಗ ಪಡಿಸುತ್ತಿರುವ ಸಂದರ್ಭದಲ್ಲೇ, ನಿಜವಾದ ವಿವೇಕಾನಂದರ ಹುಡುಕಾಟವನ್ನು ಹಲವರು ಮಾಡಿದ್ದಾರೆ. ಬರೆದಿದ್ದಾರೆ. ಹಾಗೆ ಬರೆದಾಗಲೆಲ್ಲ ಬಲಪಂಥೀಯರು ವ್ಯಗ್ರರಾಗಿದ್ದಾರೆ. ಒಂದು ರೀತಿಯಲ್ಲಿ ಭಾರತದ ಪಾಲಿಗೆ ವಿವೇಕಾನಂದರು ಅಪ್ರಿಯ ಸತ್ಯ.

 ‘ಕಮ್ಯುನಿಸ್ಟರ ದೃಷ್ಟಿಯಲ್ಲಿ ವಿವೇಕಾನಂದರು’ ಹೇಗಿರುತ್ತಾರೆ ಎನ್ನುವ ಕುತೂಹಲಕ್ಕೆ ಉತ್ತರವಾಗಿ ವಿ. ಎಸ್. ಎಸ್. ಶಾಸ್ತಿಯವರು ತನ್ನ ಸಂಗ್ರಹಾನುವಾದನ್ನು ನೀಡಿದ್ದಾರೆ. ಕೆ. ದಾಮೋದರನ್, ಬಿನಯ್ ಕೆ. ರಾಯ್, ನಂಬೂದರಿಪಾದ್, ಸಿ. ರಾಜೇಶ್ವರ ರಾವ್, ಎ. ಬಿ. ಬರ್ಧನ್ ಅವರು ವಿವೇಕಾನಂದರು ನೋಡಿದ ಬಗೆಯೇ ‘ಕಮ್ಯುನಿಸ್ಟರ ದೃಷ್ಟಿಯಲ್ಲಿ ವಿವೇಕಾನಂದರು’. ಈ ಮೂಲಕ ವಿವೇಕಾನಂದರನ್ನು ಹಿಂದುತ್ವದ ಗೋಡೆಗಳಾಚೆಗಿರುವ ವಿವೇಕಾನಂದರ ಪರಿಚಯ ನಮಗಾಗುತ್ತದೆ. ಸಂಘಪರಿವಾರದ ಜನರು ವಿವೇಕಾನಂದರನ್ನು ಸಂಕುಚಿತ ಗೊಳಿಸುತ್ತಿರುವುದರ ಕುರಿತಂತೆ ಪ್ರಬಲ ಆಕ್ಷೇಪಣೆಯನ್ನು ಈ ಕೃತಿ ಹೊಂದಿದೆ. ಅಷ್ಟೇ ಅಲ್ಲ, ವಿವೇಕಾನಂದರು ಹೊಂದಿದ್ದ ಪ್ರಖರ ವಿಚಾರವಾದದ ಕುರಿತಂತೆ ಈ ಕೃತಿ ಗಮನ ಸೆಳೆಯುತ್ತದೆ. ವಿವೇಕಾನಂದರು ಅತ್ಯಾಧುನಿಕ ಮನಸ್ಥಿತಿಯನ್ನು ಹೊಂದಿದ್ದರು ಎನ್ನುವ ಅಂಶವನ್ನು ಕೃತಿ ಹೊರಗೆಡಹುತ್ತದೆ. ಎಡಪಂಥೀಯ ವಿಚಾರಧಾರೆಗೆ ವಿವೇಕಾನಂದರನ್ನು ಒಗ್ಗಿಸುವ ಪ್ರಯತ್ನ ಕೃತಿಯಲ್ಲಿ ಎದ್ದು ಕಾಣುತ್ತದೆಯಾದರೂ, ವಿವೇಕಾನಂದರೂ ಆ ಪ್ರಯತ್ನವನ್ನು ಮೀರಿ ನಮ್ಮಿಳಗೆ ಬೆಳೆಯುತ್ತಾರೆ. ಹೇಗೆ ವಿವೇಕಾನಂದರೂ ಬಲಪಂಥೀಯರ ನಿಲುವಿಗೆ ಒಗ್ಗಿಗೊಳ್ಳುವುದಿಲ್ಲವೋ ಹಾಗೆಯೇ ಎಡಪಂಥೀಯ ಕೈಗೂ ಸಿಗುವುದಿಲ್ಲ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 60 ರೂ.

Tuesday, October 8, 2013

ನಿನ್ನೆ ಉದುರಿದ ಹನಿಗಳು

 1
ತುಂಬಿದ ಮನ
ತುಳುಕೂದು
ಕಣ್ಣಲ್ಲಿ
2
ಇಲ್ಲ, ನಾನಿನ್ನು ಯಾರನ್ನೂ
ನೋಯಿಸೂದಿಲ್ಲ ಎಂದೆ
ಅಷ್ಟಕ್ಕೇ ಅವನು ನೊಂದು ಬಿಟ್ಟ
3
ನನ್ನ ಕೈಯಲ್ಲಿರುವ
ಒಂದು ತುತ್ತು
ಅನ್ನ
ಬಾಯಿಗಿಡುವ ಮುನ್ನ...
ಯಾರದೋ ಬಟ್ಟಲಿಂದ
ಕಸಿದುಕೊಂಡೆನೆನ್ನುವ
ತಳಮಳ
4
ನಾನು ಅವನೆಡೆಗೆ
ಬೀಸಿದ ಕತ್ತಿ ಏಟಿಗಿಂತ
ಹರಿತವಾಗಿತ್ತು
ಅವನ ಕ್ಷಮೆ
5
ಅವಳೊಂದು
ಜೇನು
ಗೂಡು
6
ಮನೆ
ಕತ್ತಲು

ಕ್ಷರದಿಂದ
ಹಣತೆ ಹಚ್ಚಿದಳು
7
ಕವಿತೆ ಬರೆದಾದ ಮೇಲೆ
ಇದನೆಲ್ಲೋ
ಓದಿದಂತಿದೆಯಲ್ಲ
ಎಂಬ ಕಳ್ಳ ಭಾವ
8
ಕಣ್ಣು ದಾನ ಮಾಡಿ
ನಾನು ಸತ್ತೆ
ಇದೀಗ ನನ್ನ ಗೋರಿಯ
ಮುಂದೆ ನನ್ನದೇ ಕಣ್ಣುಗಳು
ಕೃತಜ್ಞತೆಯಿಂದ
ಅಳುತ್ತಿವೆ