Thursday, March 31, 2016

ರಾಜಕೀಯದ ಬಾಹುಬಲಕ್ಕೆ ಬಲಿಯಾದ ಸಿನೆಮಾ ಪ್ರಶಸ್ತಿ

ಸದಭಿರುಚಿಯ ಚಿತ್ರಗಳ ಬೆನ್ನಿಗೆ ಚೂರಿ 
‘‘ಬಾಹುಬಲಿ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಯಾಕೆ ದೊರಕಿತು?’’ ಎನ್ನುವ ಪ್ರಶ್ನೆ ‘‘ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ?’’ ಪ್ರಶ್ನೆಯಷ್ಟೇ ಈಗ ಮಹತ್ವವನ್ನು ಪಡೆದುಕೊಂಡಿದೆ. ಈ ಬಾರಿಯ ಸಿನೆಮಾ ಪ್ರಶಸ್ತಿ ಭಾರತದ ರಾಜಕೀಯ ಬದಲಾವಣೆಗಳ ಜೊತೆಗೆ ತಳಕು ಹಾಕಿಕೊಂಡಿವೆಯೇ ಎಂಬ ಪ್ರಶ್ನೆ ನಿರ್ಲಕ್ಷಿಸುವಂತಹದ್ದು ಖಂಡಿತ ಅಲ್ಲ. ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕೆಂದು ಹೊರಟಿರುವ ಮಂದಿಗಳು ಈ ಬಾರಿ, ಪ್ರಶಸ್ತಿಯ ತೀರ್ಪುಗಾರರಾಗಿರಬಹುದೇ? ರಾಷ್ಟ್ರೀಯತೆ, ಹಿಂದಿ ಯಜಮಾನಿಕೆ, ಭ್ರಾಮಕ, ರಮ್ಯಇತಿಹಾಸಗಳನ್ನು ಎತ್ತಿ ಹಿಡಿಯುವ ಭಾಗವಾಗಿ ಈ ಬಾರಿ ಪ್ರಶಸ್ತಿಯನ್ನು ಹಂಚಲಾಗಿದೆ ಮತ್ತು ಸೃಜನಶೀಲತೆಯ ಕುರಿತಂತೆ ಗಂಧಗಾಳಿಯಿಲ್ಲದ ಮನುಷ್ಯನಿಗೆ ಮಾತ್ರ ‘ಬಾಹುಬಲಿ’ಯನ್ನು ಅತ್ಯುತ್ತಮ ಚಿತ್ರ ಎಂದು ಆರಿಸಲು ಸಾಧ್ಯ ಎನ್ನುವುದು ಹೆಚ್ಚಿನ ವಿಮರ್ಶಕರ ಅಭಿಪ್ರಾಯವಾಗಿದೆ.
ಈ ಬಾರಿ ರಾಷ್ಟ್ರಪ್ರಶಸ್ತಿಯನ್ನು ವೆಟ್ರಿಮಾರನ್ ನಿರ್ದೇಶಿಸಿದ ತಮಿಳು ಚಿತ್ರ ‘ವಿಸಾರಣೈ’ ತನ್ನದಾಗಿಸಿಕೊಳ್ಳುತ್ತದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಒಂದು ವೇಳೆ ಹಿಂದಿ ಚಿತ್ರಕ್ಕೇ ಪ್ರಶಸ್ತಿಯನ್ನು ನೀಡಬೇಕು ಎಂಬ ಉದ್ದೇಶವಿದ್ದರೆ ಅವರ ಮುಂದೆ ನೀರಜ್ ಘಾಯ್ವಾನ್ ನಿರ್ದೇಶಿಸಿದ ‘ಮಸಾನ್’ ಚಿತ್ರವಿತ್ತು. ಈ ಎರಡೂ ಚಿತ್ರಗಳು ಸಿನಿಮಾದ ಎಲ್ಲ ಸೂಕ್ಷ್ಮಗಳನ್ನು ಬಳಸಿಕೊಂಡು ನಿರೂಪಿಸಲ್ಪಟ್ಟ,  ಪ್ರೇಕ್ಷಕರ ಮನಸ್ಸನ್ನು ಅಲ್ಲಾಡಿಸಿದ ಚಿತ್ರಗಳು. ಅದಕ್ಕೆ ಪ್ರಶಸ್ತಿಯ ಅರ್ಹತೆಯಿಲ್ಲ ಎನ್ನುವುದನ್ನು ತೀರ್ಮಾನಿಸಿದವರು ಖಂಡಿತಾ ಸಿನೆಮಾದ ಒಳಗಿನ ಜನರಲ್ಲ, ಹೊರಗಿನ ಜನರು ಎನ್ನುವುದು ಮೇಲ್ನೋಟಕ್ಕೆ ಅರ್ಥವಾಗಿ ಬಿಡುತ್ತದೆ. ಯಾಕೆಂದರೆ ಈ ಎರಡೂ ಚಿತ್ರಗಳು ವ್ಯವಸ್ಥೆಯ ಕ್ರೌರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಶ್ನಿಸುತ್ತವೆ. ‘ವಿಸಾರಣೈ’ ಚಿತ್ರ ಪೊಲೀಸ್ ವ್ಯವಸ್ಥೆಯೊಳಗಿನ ಕ್ರೌರ್ಯವನ್ನು ತೆರೆದಿಟ್ಟರೆ, ‘ಮಸಾನ್’ ಚಿತ್ರ  ಸಮಾಜದ ಜಾತಿ ರಾಜಕಾರಣವನ್ನು ತೆರೆದಿಡುತ್ತದೆ. ಸದ್ಯದ  ರಾಜಕೀಯ ಸಂದರ್ಭ ಈ ಎರಡೂ ಚಿತ್ರಗಳಿಗೂ ಹೊಂದಿಕೆಯಾಗುವುದಿಲ್ಲ ಸರಿ. ವ್ಯವಸ್ಥೆಯ ಕಣ್ಣಿಗೇ ಕೈ ಹಾಕಿ ಮಾತನಾಡುವ ಈ ಚಿತ್ರಕ್ಕೆ ಪ್ರಶಸ್ತಿ ನೀಡುವುದು ಇಷ್ಟವಿಲ್ಲದೇ ಇದ್ದರೆ ಕನಿಷ್ಟ  ‘ಬಜರಂಗಿ ಭಾಯಿಜಾನ್’ಗಾದರೂ ಪ್ರಶಸ್ತಿ ಒಲಿಯಬೇಕಾಗಿತ್ತು. ಅದೂ ಕೂಡ ಇನ್ನಾವುದೋ ರಾಜಕಾರಣಕ್ಕೆ ಬಲಿಯಾಯಿತು. ಇವುಗಳಿಗೆಲ್ಲ ಪ್ರಶಸ್ತಿ ಸಿಗಲಿಲ್ಲ ಎನ್ನುವುದಕ್ಕಿಂತಲೂ ದೊಡ್ಡ ವ್ಯಂಗ್ಯ ‘ಬಾಹುಬಲಿ’ಗೆ ಪ್ರಶಸ್ತಿ ನೀಡಲಾಯಿತು ಎನ್ನುವುದು. ಆಯ್ಕೆ ಸಮಿತಿ ಈ ಬಾರಿ ತನ್ನ ಸೂಕ್ಷ್ಮತೆಗಳನ್ನು ಸಂಪೂರ್ಣ ಕಳೆದುಕೊಂಡಿದೆ ಎನ್ನುವುದಕ್ಕೆ ಈ ಆಯ್ಕೆಯೇ ಅತ್ಯುತ್ತಮ ಉದಾಹರಣೆ.

 ‘ಬಾಹುಬಲಿ’ಗೆ ಯಾಕೆ ನೀಡಬಾರದು ಎನ್ನುವುದರ ಪಟ್ಟಿಯನ್ನೇ ನೀಡಬಹುದು. ಮುಖ್ಯವಾಗಿ ‘ಬಾಹುಬಲಿ’ ಚಿತ್ರ 70ರ ದಶಕದ ಚಂದಮಾಮ ಕತೆಯನ್ನು ಹೊಂದಿದೆ. ಎರಡನೆಯದು, ಈ ಚಿತ್ರ ಅಪೂರ್ಣವಾಗಿದೆ. ಸಾಂಕೇತಿಕವಾಗಿಯಾದರೂ ಕತೆ ಮುಗಿಯುವುದಿಲ್ಲ. ದಗ್ಗುಬಾಟ್ಟಿ(ಖಳ ನಾಯಕ) ಮತ್ತು ಸತ್ಯರಾಜ್(ಕಟ್ಟಪ್ಪ) ಹೊರತುಪಡಿಸಿ ಯಾವ ಪಾತ್ರಗಳಿಗೂ ಜೀವವಿಲ್ಲ.  ನಾಯಕ ಬಾಹುಬಲಿ ಪಾತ್ರವಂತೂ ತೀರಾ ಪೇಲವವಾಗಿದೆ. ಚಿತ್ರಕತೆಯ ಹೆಣಿಗೆಯಲ್ಲಿ ಯಾವುದೇ ಬಿಗಿಯಿಲ್ಲ. ಸಂದೇಶ, ಗುರಿಯಂತೂ ಈ ಚಿತ್ರಕ್ಕೆ ಇಲ್ಲವೇ ಇಲ್ಲ. ಬರೇ ದೃಶ್ಯ ವೈಭವಕ್ಕಾಗಿ ಈ ಚಿತ್ರವನ್ನು ಆರಿಸಲಾಯಿತೇ? ಆತ್ಮವೇ ಇಲ್ಲದ ಶವವನ್ನು ಅದೆಷ್ಟು ಶೃಂಗರಿಸಿದರೇನು? ಆ ಶೃಂಗಾರಕ್ಕೆ ಆಯ್ಕೆ ಸಮಿತಿ ಸೋತಿತೆ? ಮೆಲೋಡ್ರಾಮಗಳಿಂದ ಅಬ್ಬರಿಸುವ ಈ ಚಿತ್ರ, ಸಿನೆಮಾದ ಸೂಕ್ಷ್ಮತೆಗಳನ್ನೆಲ್ಲ ಗಾಳಿಗೆ ತೂರಿದೆ. ಇಂತಹದೊಂದು ಚಿತ್ರಕ್ಕೆ ಪ್ರಶಸ್ತಿ ನೀಡುವ ಮೂಲಕ, ಚಿತ್ರ ತಯಾರಕರಿಗೆ ಆಯ್ಕೆ ಸಮಿತಿ ಅದೇನೋ ಸಂದೇಶವನ್ನು ನೀಡುವಂತಿದೆ. 

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಇದಕ್ಕೆ ಹೊರತಾಗಿಲ್ಲ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ, ಇತಿಹಾಸವನ್ನು ಅತೀ ವೈಭವೀಕರಿಸಿ, ಹಲವು ಸತ್ಯಗಳನ್ನು ಸಾರಾಸಗಟಾಗಿ ಮುಚ್ಚಿ ಹಾಕಿ, ಪರಂಪರೆಯ ಅತಿ ರಮ್ಯ, ವೈಭವೀಕರಣವನ್ನು ಮಾಡುವ ‘ಬಾಜಿರಾವ್ ಮಸ್ತಾನಿ’ ಚಿತ್ರವನ್ನು ನಿರ್ದೇಶಿಸಿದ ಬನ್ಸಾಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇತಿಹಾಸವನ್ನು ‘ಚಂದಮಾಮ ಕತೆಯಾಗಿ’ ಪುರಾಣಗಳ ಕಾಲ್ಪನಿಕ ರೂಪಾಂತರವಾಗಿ ಕಟ್ಟಿಕೊಡುವ ಈ ಎರಡು ಪ್ರಯತ್ನಗಳು ಯಾರಿಗಾದರೂ ಖುಷಿಕೊಟ್ಟಿದ್ದರೆ ಅದು ಆರೆಸ್ಸೆಸ್ ಮನಸ್ಥಿತಿಗಳಿಗೆ ಮಾತ್ರ. ಇವುಗಳ ಮುಂದೆ, ‘ವಿಸಾರಣೈ’, ‘ಮಸಾನ್’ನಂತಹ ಚಿತ್ರಗಳು ಅವರಿಗೆ ದೇಶದ್ರೋಹಿ ಚಿತ್ರಗಳಾಗಿ ಕಂಡರೂ ಅಚ್ಚರಿಯಿಲ್ಲ. 

ಭಾರತೀಯ ಸಿನಿಮಾಗಳ ಪಾಲಿಗೆ ಬಾಲಿವುಡ್  ಹಿರಿಯಣ್ಣನಾಗಿದ್ದರೂ, ಅತ್ಯುತ್ತಮ ಚಿತ್ರಗಳೆಲ್ಲವೂ ಬಂದಿರುವುದು ಬಂಗಾಳಿ, ಮರಾಠಿ, ಮಲಯಾಳಂ, ಕನ್ನಡದಂತಹ ಪ್ರಾದೇಶಿಕ ಭಾಷೆಗಳಿಂದ. ಕಳೆದ ಬಾರಿ ‘ಕೋರ್ಟ್’ ಎನ್ನುವ ಮರಾಠಿ ಚಿತ್ರ ದೇಶದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತು. ಇನ್ನೊಂದು ಮರಾಠಿ ಚಿತ್ರ ‘ಶ್ವಾಸ್’ನ್ನು ನಾವಿಲ್ಲಿ ನೆನೆಯಬಹುದು. ಕಮರ್ಷಿಯಲ್ ಚಿತ್ರಗಳಿಗೂ ಕಲಾತ್ಮಕ ಸ್ಪರ್ಶವನ್ನು ನೀಡಿದ ಹೆಗ್ಗಳಿಗೆ  ಮಲಯಾಳಂ, ತಮಿಳು ಚಿತ್ರಗಳಿಗಿದೆ.   ಸ್ವರ್ಣಕಮಲ ಪಡೆದ ಕನ್ನಡ ಚಿತ್ರಗಳ ಸಾಲುಗಳನ್ನು ಇಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ. ಬಂಗಾಳಿ ಮತ್ತು ಮಲಯಾಳಂ ಚಿತ್ರಗಳೆಲ್ಲ ತಮ್ಮ ಸೃಜನಶೀಲತೆಯ ಬಲದಿಂದಲೇ ಗೆದ್ದವುಗಳು. ಇವುಗಳ ನಡೆವೆಯೂ ಮಧುರ್ ಭಂಡಾರ್ಕರ್ ನಿರ್ದೇಶಿಸಿದ ಪೇಜ್ ತ್ರೀ, ಚಾಂದ್ನಿಬಾರ್, ಟ್ರಾಫಿಕ್ ಸಿಗ್ನಲ್ನಂತಹ ಹಿಂದಿ ಚಿತ್ರಗಳನ್ನು ನಾವು ನೆನೆಯಲೇಬೇಕಾಗುತ್ತದೆ. ಆದರೆ ಈ ಬಾರಿ, ಅತ್ಯುತ್ತಮ ಚಿತ್ರವೆಂದು ಗುರುತಿಸುವ ಸಂದರ್ಭದಲ್ಲಿ ಸಂವೇದನಾಹೀನ ಮನಸ್ಸುಗಳು ಆಯ್ಕೆಯ ಹಿಂದೆ ಕೆಲಸ ಮಾಡಿರುವುದು ಎದ್ದು ಕಾಣುತ್ತದೆ. ಈ ಕಾರಣದಿಂದಲೇ, ಸಿನೆಮಾದ ಎಲ್ಲ ಸೂಕ್ಷ್ಮಗಳನ್ನು ಬದಿಗೊತ್ತಿ ಜನಪ್ರಿಯ ಮೆಲೋಡ್ರಾಮಗಳನ್ನೇ ಅತ್ಯುತ್ತಮ ಸಂವೇದನೆ ಎಂದು ಘೋಷಿಸಲಾಯಿತು. ಸಿನೆಮಾದ ಸೂಕ್ಷ್ಮಗಳು ಗೊತ್ತಿಲ್ಲದ ಜನರಿಂದಷ್ಟೇ ಇಂತಹ ಘೋಷಣೆ ಸಾಧ್ಯ. 

ತಮಾಷೆಯೆಂದರೆ ಇದೇ ಸಂದರ್ಭದಲ್ಲಿ ಇನ್ನೊಂದು ಹೊಸ ಪ್ರಶಸ್ತಿಯನ್ನು ಘೋಷಿಸಲಾಯಿತು. ಆ ಪ್ರಶಸ್ತಿಯ ಹೆಸರು ‘ಚಿತ್ರಸ್ನೇಹಿ ರಾಜ್ಯ’! ಮತ್ತು ಆ ಪ್ರಶಸ್ತಿಯನ್ನು ಕೊಟ್ಟದ್ದು ಗುಜರಾತಿಗೆ.  ಯಾವ ಕಾರಣಕ್ಕಾಗಿ ಎನ್ನುವ ಉತ್ತರ ಇನ್ನೂ ಹೊರ ಬಿದ್ದಿಲ್ಲ. ಗುಜರಾತನ್ನು ಚಿತ್ರ ಸ್ನೇಹಿ  ರಾಜ್ಯ ಎಂದು ಯಾವ ಮಾನದಂಡದಲ್ಲಿ ಗುರುತಿಸಲಾಯಿತು? ಶಾರುಕ್ ಖಾನ್  ಅವರ ‘ದಿಲ್ವಾಲೆ’ ಚಿತ್ರ ಬಿಡುಗಡೆಯಾದಾಗ ಗುಜರಾತ್ನಲ್ಲಿ ಸಣ್ಣದೊಂದು ಗಲಭೆಯೇ ನಡೆಯಿತು. ಕಳೆದ ಡಿಸೆಂಬರ್ನಲ್ಲಿ ಅಹ್ಮದಾಬಾದ್, ಸೂರತ್ ಹಾಗೂ ಮೆಹ್ಸಾನಾದಲ್ಲಿ ನಡೆದ ತೀವ್ರ ಪ್ರತಿಭಟನೆಯ ಕಾರಣವನ್ನು ನೆಪವಾಗಿಟ್ಟುಕೊಂಡು ‘ದಿಲ್ವಾಲೆ’ ಚಿತ್ರ ಪ್ರದರ್ಶನವನ್ನೇ ಗುಜರಾತ್ನಲ್ಲಿ ರದ್ದುಗೊಳಿಸಲಾಯಿತು. 2016ರ ಫೆಬ್ರವರಿಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಖಾನ್ ಅವರ ‘ರಯೀಸ್’ ಚಿತ್ರದ ಶೂಟಿಂಗ್ಗೆ ಅಡ್ಡಿ ಪಡಿಸಿದರು.ಅಷ್ಟೇ ಅಲ್ಲ, ಎರಡು ವರ್ಷಗಳ ಹಿಂದೆ, ಆಮಿರ್ ಖಾನ್ ಅವರ ‘ಪೀಕೆ’ ಚಿತ್ರದ ವಿರುದ್ಧವೂ ಗುಜರಾತ್ನಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯಿತು. ಈ ಕಾರಣದಿಂದ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದುಗೊಳಿಸಲಾಯಿತು. ಗುಜರಾತ್ ನಿಂದ  ಈ ದೇಶಕ್ಕೆ ಅತ್ಯುತ್ತಮ ಚಿತ್ರಗಳು ದೊರಕಿರುವ ಉದಾಹರಣೆಗಳೂ ಕಡಿಮೆ. ಬರೇ ಹಣದ ವ್ಯವಹಾರ, ಹೂಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರಶಸ್ತಿಯನ್ನು ನೀಡಲಾಯಿತೆ? ಅಥವಾ ಇನ್ನಾವುದಾದರೂ ರಾಜಕೀಯ ಉದ್ದೇಶ ಇದರ ಹಿಂದೆ ಇದೆಯೆ? ಈ ಪ್ರಶ್ನೆ ಚರ್ಚೆಗೆ ಅರ್ಹವಾದುದು. ನಿಜಕ್ಕೂ ಚಿತ್ರ ಸ್ನೇಹಿ ಪ್ರಶಸ್ತಿ ನೀಡುದಿದ್ದರೆ ಅದು ಆಂಧ್ರ ಅಥವಾ ತಮಿಳು ನಾಡಿಗೆ ಸಲ್ಲಬೇಕು. ಇಂದು ಬಾಲಿವುಡ್ ನಿಂತಿರೋದೆ ತಮಿಳು, ತೆಲುಗು ಚಿತ್ರಗಳ ರಿಮೇಕ್ ಮೇಲೆ. ಬಾಲಿವುಡ್ ಗೆ ಹತ್ತು ಹಲವು ನಿರ್ಮಾಪಕರನ್ನು, ನಿರ್ದೇಶಕರನ್ನು, ನಟರನ್ನು, ಇನ್ನಿತರ ಕಲಾವಿದರನ್ನು ಈ ರಾಜ್ಯಗಳು ನೀಡಿವೆ. ಕೇರಳವೂ ಇದರಲ್ಲಿ ಹಿಂದೆ ಬಿದ್ದಿಲ್ಲ. 

ಭಾರತೀಯ ಚಿತ್ರೋದ್ಯಮದಲ್ಲಿ ಕ್ರಿಮಿನಲ್ಗಳು, ರಾಜಕಾರಣಿಗಳ ನಂಟು ಇಂದು ನಿನ್ನೆಯದಲ್ಲ. ಆದರೆ ಆ ಪಾತ್ರ ಹಣ ಹೂಡಿಕೆ, ನಿರ್ಮಾಣ ಇತ್ಯಾದಿಗಳಿಗಷ್ಟೇ ಸೀಮಿತವಾಗಿತ್ತು. ಸಿನೆಮಾದ ಆತ್ಮವಾಗಿರುವ ಸೃಜನಶೀಲತೆಯ ಸೂಕ್ಷ್ಮಗಳಿಗೆ ಯಾರೂ ಈವರೆಗೆ ಕೈ ಹಾಕಿರಲಿಲ್ಲ. ಪ್ರಶಸ್ತಿಯ ಆಯ್ಕೆ ಸಂದರ್ಭದಲ್ಲಿ ಹಲವು ರಾಜಕಾರಣಗಳು ಈ ಹಿಂದೆಯೂ ನಡೆದಿದೆಯಾದರೂ, ಈ ಬಾರಿ ನಡೆದಂತಹ ಪ್ರಮಾದ ಈ ಹಿಂದೆ ಯಾವತ್ತೂ ನಡೆದಿಲ್ಲ. ಸಿನೆಮಾವನ್ನು ಗಂಭೀರವಾಗಿ ಸ್ವೀಕರಿಸಿದಂತಹ ನಿರ್ದೇಶಕರಿಗೆ, ಕಲಾವಿದರಿಗೆ ಇದೊಂದು ಆಘಾತವೇ ಸರಿ. ಅಷ್ಟೇ ಅಲ್ಲ, ಈ ಬಾರಿಯ ಆಯ್ಕೆ, ಈ ದೇಶಕ್ಕೆ ಭವಿಷ್ಯದಲ್ಲಿ ಬೇಕಾದ ಚಿತ್ರ ಯಾವ ರೀತಿಯದ್ದು ಎನ್ನುವ ಮಾದರಿಯನ್ನು ಕೊಟ್ಟಿದೆ. ಇದು ಸಿನೆಮಾವನ್ನು ಗಂಭೀರವಾಗಿ ಸ್ವೀಕರಿಸಿದ ಜನರಿಗೆ ನೀಡಿರುವ ಎಚ್ಚರಿಕೆಯೂ ಹೌದು.

Monday, March 28, 2016

ಪ್ರಧಾನಿಯ ಮೌನದ ಹಿನ್ನೆಲೆಯಲ್ಲಿ ಅಝಾನ್!

ರವಿವಾರ ಅಝಾನ್ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾದರಂತೆ. ಮತ್ತು ‘‘ನಮ್ಮಿಂದಾಗಿ ಯಾರದೇ ಪ್ರಾರ್ಥನೆಗೆ ಯಾವುದೇ ತೊಂದರೆಯಾಗಬಾರದು. ಅದಕ್ಕಾಗಿ ನಾನು ಕೆಲ ಕ್ಷಣ ಭಾಷಣ ನಿಲ್ಲಿಸಿದೆ’’ ಎಂದು ಔದಾರ್ಯವನ್ನು ಮೆರೆದಿದ್ದಾರೆ. ಇದು ಒಳ್ಳೆಯ ವಿಷಯವೇ ಸರಿ. ಅವರ ಮೌನದ  ಹಿಂದಿರುವ ಆಶಯವನ್ನು ನಾನು ಈ ಸಂದರ್ಭದಲ್ಲಿ ತಿರಸ್ಕರಿಸುವುದಿಲ್ಲ. ಬದಲಿಗೆ ಗೌರವಿಸುತ್ತೇನೆ. ಮುಸ್ಲಿಮರೆಂದಲ್ಲ, ಯಾರದೇ ಪ್ರಾರ್ಥನೆ, ಆರಾಧನೆಗಳಿಗೆ ಯಾರೇ ಆಗಿದ್ದರೂ ತೊಂದರೆ ಮಾಡುವುದು ಸರಿಯಲ್ಲ. ಆದರೆ, ಕೋಮುಗಲಭೆಗಳ ಹೆಸರಲ್ಲಿ ನೂರಾರು ಮಸೀದಿ, ದರ್ಗಾಗಳನ್ನು ಧ್ವಂಸಗೊಳಿಸುವುದಕ್ಕೆ ಪರೋಕ್ಷವಾಗಿ ಕಾರಣರಾದ, ಸಾವಿರಾರು ಮುಸ್ಲಿಮ್ ಮಹಿಳೆ, ಮಕ್ಕಳ ಹತ್ಯಾಕಾಂಡದಲ್ಲಿ ಪರೋಕ್ಷ ಆರೋಪಿಯಾಗಿರುವ ಮೋದಿಯವರ ಈ ಮೌನ, ಆ ಗುಜರಾತ್‌ನ ಬಲಿಪಶುಗಳಿಗಾಗಿ ವ್ಯಕ್ತಪಡಿಸಿದ "ಶೋಕ ಮೌನ"ವಾಗಿದ್ದರೆ ಇನ್ನಷ್ಟು ಅರ್ಥ ಪೂರ್ಣವಾಗಿತ್ತೇನೋ. ಯಾಕೆಂದರೆ, ಸದ್ಯದ ಸಂದರ್ಭದಲ್ಲಿ ಪ್ರಧಾನಿಯ ‘ಮೌನ’ ದೇಶದೊಳಗೆ ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಪರವಾಗಿ ಪ್ರಧಾನಿ ಮೋದಿ ತನ್ನ ಮೌನವನ್ನು ಮುರಿಯುವ ಅಗತ್ಯವಿದೆಯೇ ಹೊರತು, ಇನ್ನಷ್ಟು ಮೌನದ ಅಗತ್ಯ ದೇಶಕ್ಕೆ, ಅದರಲ್ಲೂ ಮುಖ್ಯವಾಗಿ ಮುಸ್ಲಿಮರಿಗೆ ಖಂಡಿತಾ ಇಲ್ಲ.
 ಅಝಾನ್ ಸಂದರ್ಭದಲ್ಲಿ ತಮ್ಮ ಭಾಷಣವನ್ನು ನಿಲ್ಲಿಸಿ, ಜಾತ್ಯತೀತತೆಯನ್ನು ಮೆರೆಯುವ, ಆ ಮೂಲಕ ಮುಸ್ಲಿಮರನ್ನು ಭಾವನಾತ್ಮಕವಾಗಿ ಮರುಳು ಮಾಡುವ ಹಲವು ನಾಯಕರು ಹಲವು ಪಕ್ಷಗಳಲ್ಲಿದ್ದಾರೆ. ಅವರ ಕೊರತೆಯಂತೂ ದೇಶಕ್ಕೆ ಇಲ್ಲ.  ಆದರೆ, ಮುಸ್ಲಿಮರ ಮೂಲಭೂತ ಅಭಿವೃದ್ಧಿ ಸಂದರ್ಭದಲ್ಲಿ ಅವರ ಈ ಮೌನ ಯಾವ ಪ್ರಯೋಜನಕ್ಕೂ ಬರುವುದಿಲ್ಲ.
ಇಷ್ಟಕ್ಕೂ ಅಝಾನ್ ಎಂದರೆ ಮುಸ್ಲಿಮೇತರ ರಾಜಕಾರಣಿಗಳಲ್ಲಿ ಮಾತ್ರವಲ್ಲ, ಮುಸ್ಲಿಮರಲ್ಲೂ ತಪ್ಪು ಕಲ್ಪನೆಗಳಿವೆ. ಮುಸ್ಲಿಮೇತರರು ಆಗಾಗ ಮುಸ್ಲಿಮರಲ್ಲಿ ಕೇಳುವ ವ್ಯಂಗ್ಯ ಪ್ರಶ್ನೆಯೊಂದಿದೆ ‘‘ನಿಮ್ಮ ಅಲ್ಲಾಹನಿಗೆ ಕಿವಿ ಕೇಳಿಸುವುದಿಲ್ಲವಾ? ಮೈಕ್‌ನಲ್ಲಿ ಅಷ್ಟು ಜೋರಾಗಿ ಬೊಬ್ಬೆ ಹೊಡೆದು ಪ್ರಾರ್ಥನೆ ಮಾಡುವುದು ಯಾಕೆ?’’
ನರೇಂದ್ರ ಮೋದಿ ತಿಳಿದುಕೊಂಡಂತೆ ‘ಅಝಾನ್’ ಎಂದರೆ ಪ್ರಾರ್ಥನೆಯಲ್ಲ. ಬದಲಿಗೆ ‘ಪ್ರಾರ್ಥನೆಯ ಹೊತ್ತಾಯಿತು, ಬನ್ನಿ’ ಎಂದು ಜನರಿಗೆ ನೀಡುವ ಕರೆ ಅದು. ಈ ಅಝಾನ್ ಆರಂಭವಾದುದು, ಪ್ರವಾದಿ ಮುಹಮ್ಮದ್ ಮದೀನಾಕ್ಕೆ ವಲಸೆ ಹೋದ ಅನಂತರದ ಎರಡನೇ ವರ್ಷದಲ್ಲಿ. ಮಕ್ಕಾದಲ್ಲಿ ಅವರ ವಿರೋಧಿಗಳು ಕೊಲ್ಲೂದಕ್ಕೆ ಹೊಂಚು ಹಾಕುತ್ತಿರುವ ಹಿನ್ನೆಲೆಯಲ್ಲಿ ಅವರು ಮದೀನಕ್ಕೆ ವಲಸೆ ಹೋಗೂದು ಅನಿವಾರ್ಯವಾಯಿತು. ಮದೀನದ ಜನರು ಪ್ರವಾದಿಗೆ ಆಶ್ರಯ ನೀಡಿದ್ದೆ ಅಲ್ಲದೆ, ಅವರ ಸಂದೇಶಗಳಿಗೆ ಮನ ಸೋಲ ತೊಡಗಿದರು.  ಆರಂಭದಲ್ಲಿ ಬೆರಳೆಣಿಕೆಯಲ್ಲಿದ್ದ ಪ್ರವಾದಿಯ ಸಂಗಾತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚ ತೊಡಗಿತು. ಎಲ್ಲರೂ ಜೊತೆಯಾಗಿ ನಮಾಝ್ ನಿರ್ವಹಿಸುವುದು ಹೆಚ್ಚು ಪುಣ್ಯಕರ ಎಂದು ಇಸ್ಲಾಮ್ ಧರ್ಮ ನಂಬಿದೆ. ಆದರೆ ನಮಾಝಿನ ಸಮಯದ ಗೊಂದಲದಿಂದಾಗಿ ಅವರ ಸಂಗಾತಿಗಳಲ್ಲಿ ಒಬ್ಬೊಬ್ಬರು ಒಂದೊಂದು ಸಮಯಕ್ಕೆ ಬಂದು ನಮಾಝ್ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರವಾದಿ ಮತ್ತು ಅವರ ಸಂಗಾತಿಗಳು ನಮಾಝ್ ಸಮಯವನ್ನು ಎಲ್ಲರಿಗೂ ಗೊತ್ತು ಪಡಿಸಲು ಯಾವುದಾದರೂ ಒಂದು ಕ್ರಮವನ್ನು ಅನುಸರಿಸಬೇಕು ಎಂದು ಚರ್ಚಿಸತೊಡಗಿದರು. ಈ ಕುರಿತಂತೆ ಪ್ರವಾದಿ ಮತ್ತು ಸಂಗಾತಿಗಳ ನಡುವೆ ಒಂದು ಸಭೆ ನಡೆಯಿತು.
ಯಹೂದಿಗಳು ಪ್ರಾರ್ಥನೆಯ ಸಂದರ್ಭದಲ್ಲಿ ‘ಶಬ್ದ’ ಹೊರಡಿಸುವಂತೆ ಯಾವುದಾರೂ ಶಬ್ದ ಮಾಡಿದರೆ ಹೇಗೆ ಎಂಬ ಸಲಹೆಯನ್ನು ಕೆಲವರು ನೀಡಿದರು. ಆದರೆ ಅದು ಯಹೂದಿಗಳ ಅನುಕರಣೆಯಾಗಿ ಬಿಡುವ ಸಾಧ್ಯತೆ ಇದೆ ಎಂದು ಅದನ್ನು ನಿರಾಕರಿಸಲಾಯಿತು. ಪ್ರಾರ್ಥನೆಯ ಸಮಯವಾದಾಕ್ಷಣ ಗಂಟೆ ಬಾರಿಸಿ ಜನರನ್ನು ಎಚ್ಚರಿಸಿದರೆ ಹೇಗೆ? ಎಂದು ಕೆಲವರು ಕೇಳಿದರು. ‘ಅದು ಕ್ರಿಶ್ಚಿಯನ್ನರ ಅನುಕರಣೆಯಾಗುತ್ತದೆ’ ಎಂದು ಕೈ ಬಿಡಲಾಯಿತು. ‘ಪ್ರಾರ್ಥನೆಯ ಹೊತ್ತಿನಲ್ಲಿ ಎತ್ತರ ಪ್ರದೇಶದಲ್ಲಿ ದೊಂದಿಯನ್ನು ಹಚ್ಚಿದರೆ ಹೇಗೆ?’ ಎಂಬ ಪ್ರಸ್ತಾಪವೂ ತಿರಸ್ಕೃತವಾಯಿತು. ಯಾಕೆಂದರೆ, ಕೊನೆಯಲ್ಲಿ ಅದು ‘ಅಗ್ನಿ ಆರಾಧನೆ’ಗೆ ಕಾರಣವಾಗಬಹುದು ಎಂಬ ಭಯದಿಂದ. ಹೀಗೆ ಕೆಲವು ದಿನ ಚರ್ಚೆಗಳು ಮುಂದುವರಿದವು. ಒಂದು ದಿನ ಪ್ರವಾದಿ ಸಂಗಾತಿ ಅಬ್ದುಲ್ಲಾ ಬಿನ್ ಝೈದ್ ಒಂದು ಪ್ರಸ್ತಾಪವನ್ನಿಟ್ಟರು. ಅದೇ ಅಝಾನ್. ಈ ವರೆಗೆ ‘ಪ್ರಾರ್ಥನೆಯ ಸಮಯವಾಯಿತು ಬನ್ನಿ’ ಎಂದು ಜೋರಾಗಿ ಕೂಗಿ ಹೇಳಲಾಗುತ್ತಿತ್ತು. ಆದರೆ, ಅಬ್ದುಲ್ಲಾ ಬಿನ್ ಝೈದ್ ಅವರು ಸಂಪೂರ್ಣವಾದ  ಅಝಾನ್ ಪಠ್ಯವೊಂದನ್ನು ತೆರೆದಿಟ್ಟರು. ‘‘ದೇವರು ಸರ್ವಶಕ್ತನು, ದೇವರು ಒಬ್ಬನೇ, ಪ್ರವಾದಿ ಮುಹಮ್ಮದ್ ಅವನ ಸಂದೇಶವಾಹಕ, ನಮಾಝಿಗೆ(ಪ್ರಾರ್ಥನೆ) ಬನ್ನಿ, ಆ ಮೂಲಕ ವಿಜಯದೆಡೆಗೆ ಬನ್ನಿ, (ಮುಂಜಾವಿನ ಅಝಾನ್ ಸಂದರ್ಭದಲ್ಲಿ ‘ಮಲಗುವುದಕ್ಕಿಂತ ಪ್ರಾರ್ಥನೆ ಅತ್ಯುತ್ತಮ’ ಎನ್ನುವ ಸಾಲುಗಳು ಸೇರ್ಪಡೆಯಾಗುತ್ತದೆ), ದೇವರು ಮಹಾಮಹಿಮನು, ಅವನು ಒಬ್ಬನೇ’’ ಇದು ಅವರು ಪ್ರಸ್ತಾಪಿಸಿದ ಅಝಾನ್‌ನ ಭಾವಾನುವಾದ. ಇದನ್ನು ಪ್ರವಾದಿಯೂ ಸೇರಿದಂತೆ ಎಲ್ಲ ಸಂಗಾತಿಗಳು ಒಪ್ಪಿಕೊಂಡರು. ಮತ್ತು, ಮೊತ್ತ ಮೊದಲ ನಮಾಝ್ ಕರೆಯನ್ನು ನೀಡುವ ಹೊಣೆಗಾರಿಕೆಯನ್ನು ಬಿಲಾಲ್ ಅವರಿಗೆ ವಹಿಸಲಾಯಿತು. ( ಬಿಲಾಲ್ ಒಬ್ಬ ನೀಗ್ರೋ ಗುಲಾಮರಾಗಿದ್ದರು. ಇಸ್ಲಾಮ್ ಸ್ವೀಕರಿಸಿದ ಕಾರಣಕ್ಕಾಗಿ ಅತ್ಯಧಿಕ ದೌರ್ಜನ್ಯವನ್ನು ವಿರೋಧಿಗಳಿಂದ ಎದುರಿಸಿದವರಲ್ಲಿ ಬಿಲಾಲ್ ಒಬ್ಬರು. ಇಸ್ಲಾಮ್ ಸ್ವೀಕರಿಸಿದ ಮೊತ್ತ ಮೊದಲ ನೀಗ್ರೋ ಅವರಾಗಿದ್ದಾರೆ). ಬಿಲಾಲ್ ಮೊತ್ತ ಮೊದಲ ಬಾರಿ ನೀಡಿದ ಅಝಾನ್ ಕರೆ, ಮುಂದೆ ಸಂಪ್ರದಾಯವಾಗಿ ಮುಂದುವರಿಯಿತು.
 ಮೈಕ್‌ನ ಸಂಶೋಧನೆಯಾದ ಮೇಲೆ ಹಲವರು ಮೈಕ್ ಬಳಸುವುದಕ್ಕೆ ತೊಡಗಿದರು. ಅದೂ ತುಂಬಾ ದೂರದವರೆಗೆ ಎಲ್ಲರ ಕಿವಿಗಳನ್ನು ತಲುಪುತ್ತದೆ ಎನ್ನುವ ಕಾರಣಕ್ಕೆ ಹೊರತು ದೇವರಿಗೆ ತಲುಪುತ್ತದೆ ಎನ್ನುವ ಕಾರಣಕ್ಕಾಗಿ ಅಲ್ಲ. ಹಾಗೆ ನೋಡಿದರೆ, ನಮ್ಮೂರ ಎಷ್ಟೋ ಮಸೀದಿಗಳಲ್ಲಿ ವಿದ್ಯುತ್ ಬಂದದ್ದೇ ಮೂರು ದಶಕಗಳ ಹಿಂದೆ. ಕೆಲವು ಮಸೀದಿಗಳಲ್ಲಿ ‘ವಿದ್ಯುತ್ ಸಂಪರ್ಕ ಕೊಡಬೇಕೆ, ಬೇಡವೇ’ ಎನ್ನುವ ವಿಷಯದಲ್ಲೇ ತಕರಾರುಗಳು ನಡೆದು, ಎಷ್ಟೋ ವರ್ಷಗಳ ಬಳಿಕ ಮಸೀದಿಗಳಿಗೆ ವಿದ್ಯುತ್ ಸಂಪರ್ಕ ಬಂತು. ಮೈಕ್ ವ್ಯವಸ್ಥೆಗಳಿಗೆ ಎರಡು-ಮೂರು-ನಾಲ್ಕು ದಶಕಗಳ ಇತಿಹಾಸವಷ್ಟೇ ಇದೆ. ಆರಂಭದಲ್ಲಿ ‘ಅಝಾನ್’ ಕರೆ ನೀಡುವುದಕ್ಕೆ ಮೈಕ್ ಬಳಸುವುದು, ಸರಿಯೋ ತಪ್ಪೋ ಎಂಬ ಬಗ್ಗೆಯೂ ಚರ್ಚೆ ನಡೆದಿದ್ದವು. ಹಲವರು ಮೈಕ್ ಬಳಸುವುದನ್ನು ವಿರೋಧಿಸಿದ್ದರು ಕೂಡ. ಈಗಲೂ ಕರೆಂಟ್ ಹೋದಾಗ, ಮೈಕ್ ಇಲ್ಲದೆಯೇ ಅಝಾನ್ ನೀಡಲಾಗುತ್ತದೆ. ವಿದ್ಯುತ್ ಸಂಪರ್ಕವಿಲ್ಲದ ಎಷ್ಟೋ ಮಸೀದಿಗಳಲ್ಲಿ, ಅಝಾನ್‌ನ್ನು ಮೈಕ್ ಮೂಲಕ ಕೊಡುವುದಿಲ್ಲ. ಸಾಧಾರಣವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ ಮೂಲಕ ಅಝಾನ್ ಕೊಟ್ಟರೆ ಇತರರಿಗೆ ವಿಶೇಷ ತೊಂದರೆಯಾಗುವುದಿಲ್ಲ.  ಮುಸ್ಲಿಮೇತರರು ಕೂಡ ಹಳ್ಳಿಗಳಲ್ಲಿ ‘‘ಓ..ಮಧ್ಯಾಹ್ನದ.ಬಾಂಗ್ ಆಯಿತು ಮಾರಾಯರೆ, ನನ್ನ ಕೆಲಸ ಇನ್ನೂ ಮುಗಿಯಲಿಲ್ಲ...’’ ಎಂದು ಸಮಯ ಗುರುತಿಸುವುದಕ್ಕೂ ಬಾಂಗ್ ಅಥವಾ ಅಝಾನನ್ನು ಬಳಸುವುದಿದೆ. ಅಷ್ಟು ಅವಿನಾಭಾವವಾಗಿ ಅವರು ಅದನ್ನು ಸ್ವೀಕರಿಸಿದ್ದಾರೆ.   ಬರೇ ಒಂದು ನಿಮಿಷದ ಅಝಾನ್ ಕರೆ  ಮೈಕ್ ಮೂಲಕ ನೀಡಿದರೆ ಇಡೀ ಊರಿಗೆ ತೊಂದರೆಯಾಗುತ್ತದೆ ಎನ್ನುವ ಅಪಸ್ವರಗಳು ಕೇಳಿಸಲಾರಂಭಿಸಿರುವುದು ಇತ್ತೀಚಿನ ದಿನಗಳಲ್ಲಿ. ಅದಕ್ಕೆ ತನ್ನದೇ ಆದ ರಾಜಕೀಯ ಕಾರಣಗಳೂ ಇವೆ. ಆದರೂ, ಜನನಿಬಿಡ ನಗರಗಳಲ್ಲಿ ಎರಡೆರಡು ಮಸೀದಿಗಳು ಹತ್ತಿರವಿದ್ದಾಗ, ಕಿವಿಗೆ ಅಪ್ಪಳಿಸುವಂತೆ ಅಝಾನ್‌ಗಳು ಅಬ್ಬರಿಸಿದಾಗ ಹಲವರಿಗೆ ಕಿರಿಕಿರಿಯಾಗುವ ಸಾಧ್ಯತೆಗಳು ಖಂಡಿತ ಇವೆ. ಎರಡೆರಡು ಮಸೀದಿಗಳ ಅಝಾನ್‌ಗಳು ಮೈಕ್‌ನಲ್ಲಿ ಅಬ್ಬರಿಸುವಾಗ ಮುಸ್ಲಿಮರಿಗೆ ಅದು ಹಿತವಾಗಿಯೇ ಕಂಡರೂ, ಮುಸ್ಲಿಮೇತರರಿಗೆ, ಅದರ ಮೇಲೆ ನಂಬಿಕೆಯಿಲ್ಲದವರಿಗೆ ಕಿರಿಕಿರಿಯಾಗುವುದು ಸಹಜವೇ ಆಗಿದೆ. ಇಂತಹ ಸಂದರ್ಭದಲ್ಲಿ, ಮೈಕ್‌ನ ಸದ್ದುಗಳನ್ನು ಇಳಿಸುವ ತಂತ್ರಜ್ಞಾನವನ್ನು ಬಳಸುವುದು ಅತ್ಯಗತ್ಯ. ನಗರಗಳಲ್ಲಿ ನಮಾಝ್ ಸಮಯ ಊಹಿಸುವುದಕ್ಕೆ ಜನರು ಅಝಾನನ್ನೇ ಅವಲಂಬಿಸುವುದಿಲ್ಲ. ಕರೆಂಟ್ ಇಲ್ಲದಾಗ ಅಝಾನ್ ಕೇಳಿಸದಿದ್ದರೂ, ನಮಾಝ್ ಸಮಯ ಊಹಿಸಿ ಮಸೀದಿಗೆ  ದಾವಿಸಲು ಹಲವು ದಾರಿಗಳು ಈಗ ತೆರೆದುಕೊಂಡಿವೆ. ನಗರಗಳಲ್ಲಿರುವ ಎಲ್ಲ ಮಸೀದಿಗಳು ತಮ್ಮ ತಮ್ಮ ಮೈಕ್‌ಗಳ ಸ್ವರವನ್ನು ಇಳಿಸುವುದು ಈ ಹಿನ್ನೆಲೆಯಲ್ಲಿ ಅತ್ಯಗತ್ಯ. ಮಸೀದಿಯ ಆವರಣ, ಪರಿಸರಕ್ಕೆ ಸೀಮಿತವಾಗುವಂತೆ ಸೌಂಡ್‌ಬಾಕ್ಸ್, ಸ್ಪೀಕರ್‌ಗಳನ್ನು ಬಳಸುವುದು ಅತ್ಯುತ್ತಮ. ಹಾಗೆಯೇ ನಮಾಝ್ ಸಮಯವನ್ನು ತಿಳಿಸುವುದಕ್ಕೆ ವಾಟ್ಸಪ್, ಎಸ್‌ಎಂಎಸ್ ಸಂದೇಶ ಇವುಗಳನ್ನೆಲ್ಲ ಪರಿಣಾಮಕಾರಿಯಾಗಿ ಬಳಸಬಹುದು. ಹೇಗೆ ಆಧುನಿಕ ತಂತ್ರಜ್ಞಾನವಾದ ಮೈಕ್‌ಗಳನ್ನು ಬಳಸಿಕೊಳ್ಳಲಾಯಿತೋ, ಹಾಗೆಯೇ ಮೊಬೈಲ್, ವಾಟ್ಸಪ್ ಮೊದಲಾದವುಗಳನ್ನು ಪೂರಕವಾಗಿ ಬಳಸಿಕೊಳ್ಳಬೇಕು. ಇಲ್ಲಿ, ಪ್ರಾರ್ಥನೆಯ ಸಮಯವಾಯಿತೆಂದು ಎಚ್ಚರಿಸುವುದಕ್ಕೋಸ್ಕರ ಅಝಾನ್ ಇದೆಯೇ ಹೊರತು, ಅಝಾನ್‌ನನ್ನೇ ಪ್ರಾರ್ಥನೆ ಎಂದು ಜನರು ತಪ್ಪು ತಿಳಿದುಕೊಳ್ಳುವಂತೆ ಆಗಬಾರದು. ಹಾಗೆಯೇ, ಜನರು ನಮಾಝ್ ಸಮಯಕ್ಕೆ ಪೂರಕವಾಗಿ ಅಝಾನ್‌ನ್ನು ತಮ್ಮ ತಮ್ಮ ಮೊಬೈಲ್‌ಗಳಲ್ಲೇ ಅಳವಡಿಸಿಕೊಳ್ಳಬಹುದು. ಇದು ಅತ್ಯಂತ ಸುಲಭ ಮತ್ತು ಯಶಸ್ವೀ ಮಾರ್ಗ. ಅಝಾನ್‌ನ ಸಂದರ್ಭದಲ್ಲಿ ಕೆಲವು ಮುಸ್ಲಿಮರು ಗೌರವಪೂರ್ವಕವಾಗಿ ಮೌನವಾಗಿರುತ್ತಾರೆ. ಆದರೆ ಅದರ ಮುಖ್ಯ ಉದ್ದೇಶ, ಅಝಾನ್ ಇತರರಿಗೂ ಕೇಳಿಸಲಿ ಎನ್ನುವ ಕಾರಣಕ್ಕಾಗಿ. ಆದುದರಿಂದ, ಅಝಾನ್ ಸಂದರ್ಭದಲ್ಲಿ ಮೋದಿ ಭಾಷಣ ಮಾಡಿದರೂ ಅದರಿಂದ ಮುಸ್ಲಿಮರ ಪ್ರಾರ್ಥನೆಗೆ ಯಾವ ತೊಂದರೆಯೂ ಆಗುತ್ತಿರಲಿಲ್ಲ. ಮುಸ್ಲಿಮರಿಗೆ ಇಂದು ಬೇಕಾಗಿರುವುದು, ನರೇಂದ್ರ ಮೋದಿಯ ಔದಾರ್ಯದ ‘ಮೌನ’ವಲ್ಲ. ಬದಲಿಗೆ ಮುಸ್ಲಿಮರ ಮೇಲೆ ದೇಶಾದ್ಯಂತ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಅವರು ತಮ್ಮ ವೌನ ಮುರಿಯಬೇಕು. ಹಾಗೆಯೇ ಸಂವಿಧಾನದತ್ತ ಹಕ್ಕುಗಳು ಅವರಿಗೆ ತಲುಪುವ ಕುರಿತಂತೆ ಮೋದಿ ಆಸಕ್ತಿ ವಹಿಸಬೇಕು. ಒಬ್ಬ ಪ್ರಧಾನಿಯಾಗಿ, ಅದುವೇ ಅವರು ಮಾಡಬೇಕಾಗಿರುವ ಆದ್ಯತೆಯ ಕೆಲಸ. ಈ ದೇಶದ ಮುಸ್ಲಿಮರು ಪ್ರಧಾನಿಯಿಂದ ನಿರೀಕ್ಷಿಸುವುದು ಮೌನವನ್ನಲ್ಲ, ಮಾತುಗಳನ್ನು.

Saturday, March 26, 2016

ಒಂದು ಪ್ರಮಾದ!


ಫೂಟ್‌ಪಾತ್‌ನಲ್ಲಿ ಮಲಗಿದ್ದ ಆ ವೃದ್ಧ. ಹಸಿದು ಕಂಗಾಲಾಗಿದ್ದ ಆತ. ಉಣ್ಣದೆ, ಹೊಟ್ಟೆ ಬೆನ್ನಿಗೆ ಅಂಟಿಕೊಂಡಿತ್ತು. ಕಣ್ಣು ಮಂಜಾಗಿತ್ತು. ಅಷ್ಟರಲ್ಲಿ ಯಾರೋ ಅವನ ತಲೆ ಬದಿಯಲ್ಲಿ ಒಂದು ಕಟ್ಟು ಎಸೆದು ಹೋದರು. ನಡುಗುವ ಕೈಗಳಿಂದ ಅದನ್ನು ಮುಟ್ಟಿದ. ಬಿಸಿಯಿತ್ತು. ಅನ್ನದ ಪರಿಮಳ ಮೂಗಿಗೆ ಬಡಿಯಿತು. ಕಷ್ಟದಿಂದ ಎದ್ದು ಕೂತು, ಆತುರಾತುರದಿಂದ ಅದನ್ನು ಬಿಡಿಸಲು ಯತ್ನಿಸಿದ.  ಹಸಿವಿನಿಂದ ನಡುಗುತ್ತಿದ್ದುದರಿಂದ, ಕೈಗಳು ಸಹಕರಿಸುತ್ತಿರಲಿಲ್ಲ.  ಕೊನೆಗೂ ಕಟ್ಟು ತೆರೆದರೆ ಬಿಸಿ ಬಿಸಿ ಅನ್ನ ಹೊಗೆಯಾಡುತ್ತಿತ್ತು! ಮಾಂಸದ ತುಂಡು ಮತ್ತು ಸಾರು...ಗಮಗಮಿಸುತ್ತಿತ್ತು! ಯಾರೋ ಒಬ್ಬ ದಾನಿ ಎಸೆದು ಹೋಗಿರಬೇಕು.  ಬತ್ತಿ ಹೋಗಿದ್ದ ಅವನ ಕಣ್ಣಿನಾಳದಲ್ಲಿ ನೀರಿನ ಒಸರು ಮಿಂಚಿದಂತೆ ಬೆಳಕು. ಕಟ್ಟನ್ನು ಸಂಪೂರ್ಣ ಬಿಡಿಸಿ ಒಂದು ತುತ್ತು ತೆಗೆದು ಬಾಯಿಗಿಟ್ಟ. ಮಾಂಸದ ಪರಿಮಳ ಅವನ ನರನರವನ್ನೂ ಕೆರಳಿಸಿತ್ತು. ಇನ್ನೊಂದು ತುತ್ತು ಬಾಯಿಗಿಡಬೇಕು ಅಷ್ಟರಲ್ಲಿ...ಪಕ್ಕದ ಬಸ್‌ಸ್ಟಾಫ್‌ನಿಂದ ಯಾರೋ ಚೀರಿದರು 
‘‘ಅಯ್ಯೋ...ಅನ್ಯಾಯ...ಬೀಫ್...ಆತ ಬೀಫ್ ತಿನ್ತಿದ್ದಾನೆ...’’
ಬಸ್ ಸ್ಟಾಪ್‌ನಲ್ಲಿದ್ದವರೆಲ್ಲರ ಗಮನ ಇವನೆಡೆಗೆ ಹರಿಯಿತು ‘ಓಹ್....ಬೀಫ್...’ ಹಲವರು ಉದ್ಗರಿಸಿದರು. 
ಅವರೆಲ್ಲರು ಕಚೇರಿಗಳಿಗೆ ಕೆಲಸಕ್ಕೆಂದು ತೆರಳುತ್ತಿದ್ದವರು. ಬಸ್ಸಿಗಾಗಿ ಕಾಯುತ್ತಿದ್ದ ಸಭ್ಯ ನಾಗರಿಕರು. ಬೆಳಗ್ಗೆ ಎದ್ದು ಮಿಂದು, ಮಡಿಯುಟ್ಟು, ದೇವರ ಪೂಜೆ ಮಾಡಿ, ಸಸ್ಯಾಹಾರವನ್ನಷ್ಟೇ ಸೇವಿಸಿ, ತಮ್ಮ  ಅತ್ಯಂತ ಸಾತ್ವಿಕವಾದ ವಸ್ತ್ರಗಳನ್ನು ಧರಿಸಿ, ತಮ್ಮ ಮುದ್ದು ಮಕ್ಕಳಿಗೆ ಟಾಟಾ ಹೇಳಿ ತಮ್ಮ ಕಾಯಕಕ್ಕೆ ಹೊರಟವರು.
 ‘‘ಪೊಲೀಸರಿಗೆ ಫೋನ್ ಮಾಡಿ...’’ ಯಾರೋ ಸಲಹೆ ನೀಡಿದರು. 
‘‘ಅಷ್ಟರಲ್ಲಿ ಅವನದನ್ನು ತಿಂದು ಮುಗಿಸಬಹುದು...ಸಾಕ್ಷಿ  ಸಮೇತ ಅಪರಾಧಿಯನ್ನು ಬಂಧಿಸಬೇಕು.....ಮೊದಲು ಅವನಿಂದ ಅದನ್ನು ಕಿತ್ತುಕೊಳ್ಳಿ....’’
ಎಲ್ಲರೂ ಅವನನ್ನು ಸುತ್ತುವರಿದರು. ವೃದ್ಧ ಅವರೆಲ್ಲರನ್ನು ಗಮನಿಸದೇ ಇನ್ನೊಂದು ಮುಷ್ಟಿ ಅನ್ನವನ್ನು ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಒಬ್ಬ ಬಂದು ಅವನ ಕೈಯನ್ನು ಹಿಡಿದುಕೊಂಡ. ಬಲಾಢ್ಯ. ಹೆಗಲಲ್ಲಿ ಕೇಸರಿ ಶಾಲು. ಹಣೆಯಲ್ಲಿ ಕೆಂಪು ನಾಮ. ‘‘ಏಯ್...ಗೋಮಾಂಸ ತಿನ್ನುತ್ತಿದ್ದೀಯ ...?’’ ಅವನ ಗರ್ಜನೆಗೆ ವೃದ್ಧ ನಡುಗಿದ. ಆದರೆ ಕೈಯಲ್ಲಿದ ಮುಷ್ಟಿ ಅನ್ನವನ್ನು ಕೆಳಗೆ ಹಾಕಲಿಲ್ಲ.
‘‘ಹೇಳು...ಗೋಮಾಂಸ ತಾನೆ?’’ ಮುದುಕನಿಗೆ ಅರ್ಥವಾಗಲಿಲ್ಲ.
 ಅವರೆಲ್ಲ ಈ ಅನ್ನದ ಜೊತೆಗೆ ಪಾಲು ಕೇಳಲು ಬಂದಿದ್ದಾರೆ ಎಂದೇ ಅವನು ತಿಳಿದುಕೊಂಡಿದ್ದ. 
‘‘ಕೊಡು ಅದನ್ನು...ಈಗ ಪೊಲೀಸರು ಬರುತ್ತಾರೆ...ಮಾಲು ಪರೀಕ್ಷೆಯಾಗಬೇಕು...’’ ಇನ್ನೊಬ್ಬ ಆದೇಶ ನೀಡಿದ.
ವೃದ್ಧ ಮುಷ್ಟಿಯಲ್ಲಿದ್ದ ಅನ್ನವನ್ನು ಕೆಳಗೆ ಹಾಕಲಿಲ್ಲ. ಒಬ್ಬ ಅವನ ಅನ್ನದ ಎಲೆಯನ್ನು ಎಳೆದುಕೊಂಡು ಜಾಗೃತವಾಗಿ ಕಟ್ಟಿಟ್ಟ. ಯಾಕೆಂದರೆ ಪೊಲೀಸರಿಗೆ ಕೊಡಲು ಸಾಕ್ಷ್ಯಗಳು ಬೇಕು. ಅನ್ಯಾಯವಾಗಿ ಯಾರಿಗೂ ಶಿಕ್ಷೆಯಾಗಬಾರದು.  ಇನ್ನಿಬ್ಬರು ಅವನ ಮುಷ್ಟಿಯಲ್ಲಿದ್ದ ಮಾಂಸದ ತುಂಡು, ಅನ್ನವನ್ನು ಬಿಡಿಸಲು ಪ್ರಯತ್ನಿಸಿದರು. ವೃದ್ಧ ಮುಷ್ಟಿಯನ್ನು ಸರ್ವ ಶಕ್ತಿ ಪ್ರಯೋಗಿಸಿ  ಬಾಯಿಯಿಡೆಗೆ ಕೊಂಡೊಯ್ಯುತ್ತಿದ್ದರೆ, ಉಳಿದಿಬ್ಬರು ಆ ಪ್ರಮಾದವನ್ನು ತಪ್ಪಿಸಲು ತಮ್ಮ ಸರ್ವಶಕ್ತಿಯನ್ನು ಪ್ರಯೋಗಿಸುತ್ತಿದ್ದರು. ವೃದ್ಧ ಎನಿಸಿದಷ್ಟು ದುರ್ಬಲನಲ್ಲ. ಇನ್ನೊಬ್ಬ ಪ್ರವೇಶ ಮಾಡಬೇಕಾಯಿತು. ಅವನ ಒಂದೊಂದೇ ಬೆರಳನ್ನು ಬಿಡಿಸಿ ಮಾಂಸವನ್ನು, ಅನ್ನವನ್ನು ಕೊನೆಗೂ  ಕೆಳಗೆ ಹಾಕುವಲ್ಲಿ ಯಶಸ್ವಿಯಾದರು. 
ಅಷ್ಟರಲ್ಲಿ ಪೊಲೀಸರ ಪ್ರವೇಶವಾಯಿತು. ವೃದ್ಧನನ್ನು ಪೊಲೀಸ್‌ ಜೀಪಲ್ಲಿ ಕುಳ್ಳಿರಿಸಿ, ಮಾಲನ್ನು ವಿಧಿವಿಜ್ಞಾನದೆಡೆಗೆ ಸಾಗಿಸುವ ಮಾತನಾಡಿದರು. ಜನರು ನಿರಾಳರಾದರು. ಒಂದು ದೊಡ್ಡ ಪ್ರಮಾದ ತಪ್ಪಿ ಹೋಯಿತು.
‘‘ಮುಕ್ಕೋಟಿ ದೇವರಿರುವ ತಾಯಿಯನ್ನು ತಿನ್ನುತ್ತಾರಲ್ಲ...ರಾಕ್ಷಸರು ರಾಕ್ಷಸರು...’’ ಯಾರೋ ಜಿಗುಪ್ಸೆ ಪಟ್ಟುಕೊಳ್ಳುತ್ತಿದ್ದರು.
ಮರು ದಿನ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು ‘‘ಗೋಮಾಂಸ ಸೇವನೆ: ಪ್ರಮಾದ ತಪ್ಪಿಸಿದ ಸಾರ್ವಜನಿಕರು’’
ಎರಡು ದಿನಗಳಲ್ಲೇ ಮಾಂಸದ ವಿಧಿ ವಿಜ್ಞಾನ ವರದಿ ಪ್ರಕಟವಾಯಿತು. 
‘ಚಿಂತೆ ಬೇಡ. ಮಾಂಸ ಎತ್ತಿನದಲ್ಲ, ಕುರಿಯದ್ದು’’ ಪೊಲೀಸರು ನಿರಾಳರಾದರು.
ಮಾಲನ್ನು ಮತ್ತೆ ಆ ವೃದ್ಧನ ಕೈಗೆ ಕೊಟ್ಟು, ಅದೇ ಫುಟ್‌ಪಾತ್‌ನಲ್ಲಿ ಬಿಟ್ಟು ಬಿಟ್ಟರು.
ಆತ ನಡುಗುವ ಕೈಗಳಲ್ಲಿ ಕಟ್ಟನ್ನು ಬಿಡಿಸಿದ. ನೋಡಿದರೆ ಅನ್ನ ಮಾಂಸದಲ್ಲಿ ಹುಳಗಳು ಓಡಾಡುತ್ತಿದ್ದವು. ಅದೇನನಿಸಿತೋ...ಯಾರಾದರೂ ಮತ್ತೆ ಕಿತ್ತುಕೊಳ್ಳಲು ಬಂದಾರೂ ಎಂಬ ಭಯದಿಂದ, ಗಬಗಬನೆ ತಿನ್ನತೊಡಗಿದ. ಮರುದಿನದ ಪತ್ರಿಕೆಯಲ್ಲಿ ಸಣ್ಣದೊಂದು ಸುದ್ದಿ 
‘‘ನಗರದಲ್ಲಿ ತೀವ್ರ ಚಳಿ: ಓರ್ವ ವದ್ಧನ ಬಲಿ’’

Monday, March 21, 2016

ಕಾಮ್ರೇಡ್ ಎಂ. ಲಿಂಗಪ್ಪ ಮತ್ತು ದೇಶದ್ರೋಹ

ಕಾಮ್ರೇಡ್ ಲಿಂಗಪ್ಪ ಜೊತೆ ನಾನು 
ಶಿವಮೊಗ್ಗದ ಪತ್ರಕರ್ತರಿಗೆ ಕಾಮ್ರೇಡ್ ಎಂ. ಲಿಂಗಪ್ಪ ಹೆಸರು ಚಿರಪರಿಚಿತ. ತನ್ನ 90ನೆ ವರ್ಷದಲ್ಲೂ ತನ್ನ ಎರಡು ಪುಟದ ಕ್ರಾಂತಿ ಭಗತ್ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವವರು. ಸುಮಾರು ಮೂರು ದಶಕಗಳ ಕಾಲ ಅದನ್ನು ನಡೆಸುತ್ತಾ ಬಂದಿದ್ದಾರೆ.. ಮಾತು ಮಾತಿಗೆ ಇವರು ಕ್ರಾಂತಿಯನ್ನೇ ಘೋಷಣೆ ಮಾಡುವವರು. ಒಂದಾನೊಂದು ಕಾಲದಲ್ಲಿ ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಓಡಾಡಿದವರಂತೆ. ಮರಾಠಿ ಕ್ರಾಂತಿಗೀತೆಗಳನ್ನು ಹಾಡುತ್ತಿದ್ದರು. ಆದರೆ ಇವರು ಹಾಡಲು ಬಾಯಿ ತೆರೆದರೆ, ಉಳಿದ ಯುವಕರು ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ. ಲಿಂಗಪ್ಪ ಮಾತನಾಡಲು ಶುರು ಹಚ್ಚಿದರೆ ಅದಕ್ಕೆ ನಿಲ್ದಾಣವೇ ಇರುತ್ತಿರಲಿಲ್ಲ. ಆದುದರಿಂದ ಇವರನ್ನು ಯಾರೂ ಬಾಯಿ ತೆರೆಯಲು ಬಿಡುತ್ತಿರಲಿಲ್ಲ. ಒಂದು ರೀತಿಯಲ್ಲಿ, ಇಂದಿನ ಕಮ್ಯುನಿಸಂನ ರೂಪಕದಂತೆ ಬದುಕುತ್ತಿದ್ದಾರೆ ಅವರೊಂದು ಅಸಹಾಯಕ, ಅಪ್ರಸ್ತುತ ಒಂಟಿ ದನಿ. ಅದು ಅವರಿಗೇ ಗೊತ್ತಿಲ್ಲ.

ಅದು ಬಿಜೆಪಿ ರಾಜ್ಯವನ್ನು ಆಳುತ್ತಿದ್ದ ಸಂದರ್ಭ. ಕೆಲವು ಸಾಹಿತಿಗಳನ್ನು, ಹೋರಾಟಗಾರರನ್ನು ಅಂದಿನ ಬಿಜೆಪಿ ಸರಕಾರ "ನಕ್ಸಲ್ ಬೆಂಬಲಿಗರು" ಎಂದು ಘೋಷಿಸಿ ಪಟ್ಟಿ ಬಿಡುಗಡೆ ಮಾಡಿದ ಸಂದರ್ಭ. ಪಟ್ಟಿಯಲ್ಲಿ ಕಡಿದಾಳ್ ಶಾಮಣ್ಣರ ಹೆಸರು ಇತ್ತು. ಪಟ್ಟಿಯನ್ನು ಓದಿದ ಲಿಂಗಪ್ಪ ಸಿಕ್ಕಾಪಟ್ಟೆ ಕೆರಳಿದರಂತೆ. ಯಾಕೆಂದರೆ ಪಟ್ಟಿಯಲ್ಲಿ ಲಿಂಗಪ್ಪ ಅವರ ಹೆಸರೇ ಇದ್ದಿರಲಿಲ್ಲ. ತನ್ನನ್ನು ಘಂಟಾ ಘೋಷವಾಗಿ ಕ್ರಾಂತಿಕಾರಿ ಎಂದು ಸ್ವಯಂ ಘೋಷಿಸಿಕೊಂಡಿದ್ದ ಲಿಂಗಪ್ಪ ಅವರಿಗೆ ಸಿಕ್ಕಾ ಪಟ್ಟೆ ಅವಮಾನ ಆಗಿತ್ತು . ಒಂದು ದಿನ ಶಿವಮೊಗ್ಗಕ್ಕೆ ಅಂದಿನ ಸಚಿವ ಈಶ್ವರಪ್ಪ ಆಗಮಿಸಿದಾಗ ಅವರನ್ನು ತಡೆದು ನಿಲ್ಲಿಸಿದ ಲಿಂಗಪ್ಪ ‘‘ನನ್ನ ಮೇಲೆ ಯಾಕೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿಲ್ಲ?’’ ಎಂದು ಸಿಕ್ಕಾ ಪಟ್ಟೆ ತರಾಟೆಗೆ ತೆಗೆದುಕೊಂಡರಂತೆ. ಅವರನ್ನು ಸಮಾಧಾನಿಸಲು ವಿಫಲರಾದ ಈಶ್ವರಪ್ಪ ಕೈ ಮುಗಿದು ‘‘ಲಿಂಗಪ್ಪ ಅವರೇ, ನಿಮ್ಮ ಮೇಲೂ ಕೇಸು ದಾಖಲಿಸಲಾಗುತ್ತದೆ. ಪೊಲೀಸರು ಭರವಸೆ ನೀಡಿದ್ದಾರೆ. ಬೇಗನೆ ನಿಮ್ಮನ್ನೂ ಬಂಧಿಸುತ್ತೇವೆ’’ ಎಂದ ಬಳಿಕವಷ್ಟೇ ಲಿಂಗಪ್ಪ ನಿರುಮ್ಮಳರಾದರಂತೆ.
ಇತ್ತೀಚಿಗೆ ಕೇಂದ್ರ ಸರಕಾರ ತನ್ನ ವಿರುದ್ಧ ಮಾತನಾಡಿದವರನ್ನೆಲ್ಲ ದೇಶದ್ರೋಹಿ ಎಂದು ಕರೆದು ಪ್ರಕರಣ ದಾಖಲಿಸೋದು ಕಂಡು ಲಿಂಗಪ್ಪ ಯಾಕೋ ನೆನಪಾದರು

Tuesday, March 8, 2016

ನೀನೂ ಕೂಡ....!


ಮೈದಾನದಲ್ಲಿ ಕ್ರಿಕೆಟ್ ಮುಗಿಸಿ, ಗೆಳೆಯ ಕಬೀರ್‌ನಿಗೆ ‘ಬೈ’ ಹೇಳಿದ ಮೃತ್ಯುಂಜಯ ಪಕ್ಕದ ಬಾವಿಕಟ್ಟೆಯಲ್ಲಿ ಕೈಕಾಲು ತೊಳೆದು ತನ್ನ ಬೈಕ್ ಏರಿದ. ತಾಯಿ ಅದೇನೋ ಒಂದಿಷ್ಟು ದಿನಸಿ ತರಲು ಹೇಳಿದ್ದು ನೆನಪಾಯಿತು.ನೇರ ಅಲ್ಲಿಂದ ಪೇಟೆಗೆ ತೆರಳಿದ. ಪೇಟೆ ಯಾಕೋ ಎಂದಿನಂತಿಲ್ಲ. ಅಂಗಡಿಗಳೆಲ್ಲ ಮುಚ್ಚಿತ್ತು. ಓಣಿಗಳೆಲ್ಲ ಅಪರಿಚಿತ ಅನ್ನಿಸ ತೊಡಗಿತು ಮತ್ಯುಂಜಯನಿಗೆ. ಅಮ್ಮ ಹೇಳಿದ್ದು ನೆನಪಾಯಿತು ‘‘ಮನೆಗೆ ಬೇಗ ಬಾ ಮಗ...ಊರು ಸರಿಯಿಲ್ಲ, ಮನುಷ್ಯ ತಾನು ಮನುಷ್ಯ ಅನ್ನೋದನ್ನೇ ಮರೆತು ಬಿಟ್ಟಿದ್ದಾನೆ...’’
‘‘ನನಗೆ ಯಾರ ಜೊತೆಗೂ ಜಗಳ ಇಲ್ಲ ಅಮ್ಮ. ಎಲ್ಲರೂ ನನ್ನ ಗೆಳೆಯರೇ....ಪರಿಚಿತರೇ...ಸುಮ್ಮನೆ ಯಾರಾದರೂ ನನ್ನ ಮೇಲೆ ಬಂದು ಬೀಳುತ್ತಾರೆಯೇ?’’ ತಾಯಿಗೆ ಬುದ್ಧಿವಾದ ಹೇಳಿದ್ದ.
ಪೇಟೆಯ ರಸ್ತೆಗಳ ಇಕ್ಕೆಡೆಗಳನ್ನು ಕತ್ತಲು ನಿಧಾನಕ್ಕೆ ನುಂಗತೊಡಗಿತ್ತು. ಯಾಕೋ ‘ಬೇಗ ಮನೆ ಸೇರಬೇಕು’ ಅನ್ನಿಸಿತು ಮೃತ್ಯುಂಜಯನಿಗೆ. ಎಲ್ಲ ಅಂಗಡಿಗಳೂ ಎಂದಿಗಿಂತ ಬೇಗ ಮುಚ್ಚಿವೆ. ಇದು ಪೇಟೆಯೊಳಗೆ ಏನೋ ನಡೆದಿದೆ, ನಡೆಯಲಿದೆ ಎನ್ನುವುದರ ಸೂಚನೆ ಎಂದು ಅನ್ನಿಸಿತು ಅವನಿಗೆ. ನೇರ ಮನೆಯ ಕಡೆಗೆ ಬೈಕ್ ಓಡಿಸಿದ.
ಅರ್ಧ ಕಿಲೋಮೀಟರ್ ಹೋಗಿರಬಹುದು. ದೂರದಲ್ಲೊಂದು ರಿಕ್ಷಾ ಕಾಣಿಸಿತು ಮೃತ್ಯುಂಜಯನಿಗೆ. ಯಾರೋ ಸಹಾಯಕ್ಕೆ ಕಾಯುತ್ತಿರುವ ಹಾಗೆ. ಯಾರೋ ಕೈ ಬೀಸುತ್ತಿದ್ದ ಹಾಗೆ. ಸೀದಾ ರಿಕ್ಷಾದ ಬಳಿ ಸಾಗಿದ. ವ್ಯಕ್ತಿಯ ಮುಖ ಕಾಣುತ್ತಿಲ್ಲ. ಕೈ ಬೀಸುತ್ತಿದ್ದಾನೆ ಅಷ್ಟೇ. ಬೈಕ್ ನಿಲ್ಲಿಸಿ, ಮತ್ಯುಂಜಯ ಕೆಳಗಿಳಿದ.
ಅಷ್ಟೇ...ಎಲ್ಲಿ ಬಚ್ಚಿಟ್ಟುಕೊಂಡಿದ್ದರೋ...ಮುಖ ಮುಚ್ಚಿದ ಐವರು ಮೃತ್ಯುಂಜಯನನ್ನು ಸುತ್ತುವರಿದರು.
ಓಹ್! ಅವನೊಳಗಿನ ಶಂಕೆ ಇದೀಗ ಅವನ ಮುಂದೆಯೇ ದುತ್ತೆಂದು ಮೈತಳೆದು ನಿಂತಿವೆ. ಅವರ ಕೈಯಲ್ಲಿ ಹೊಳೆಯುತ್ತಿರುವ ತಲವಾರುಗಳು, ಅವನೊಳಗಿನ ಕರುಳನ್ನು ಒಮ್ಮೆಲೆ ಮೀಟಿದಂತಾಯಿತು.
‘‘ಯಾರು ನೀವು ? ಏನು ಬೇಕು ನಿಮಗೆ? ಯಾಕೆ ಹೀಗೆ ನಿಂತಿದ್ದೀರಿ...?’’ ಅವನು ಕೇಳಿದ.
ಅಷ್ಟರಲ್ಲಿ ಮಿಂಚಿನ ಬಳ್ಳಿಯೊಂದು ತನ್ನ ಬೆನ್ನನ್ನು ಸವರಿ ಹೋದಂತೆ....ಕತ್ತಿಯ ಅಲಗು ಸವರಿ ಹೋಯಿತು.‘ಆಹ್...’ ಎಂದ ಮತ್ಯುಂಜಯ ಬೈಕಿನತ್ತ ದಾವಿಸಿದ. ಅವರು ತಡೆದರು. ಆಳೆತ್ತರ ಜೀವ ಮೃತ್ಯುಂಜಯನದು. ಬದುಕುವುದಕ್ಕಾಗಿ ಹೋರಾಡಲೇ ಬೇಕು. ಸರ್ವ ಪ್ರಯತ್ನ ಮಾಡತೊಡಗಿದ. ಅಪರಿಚಿತನೊಬ್ಬನ ಹೊಟ್ಟೆಗೆ ಒದ್ದ. ಅವನು ಅಷ್ಟು ದೂರ ಬಿದ್ದ. ಮೂವರು ಒಮ್ಮೆಲೆ ಮತ್ಯುಂಜಯನ ಮೇಲೆ ಮುಗಿ ಬಿದ್ದರು.
ಈ ಎಳೆದಾಟದ ಸಂದರ್ಭದಲ್ಲೇ ಒಬ್ಬ ಆಗಂತುಕನ ಮುಖದ ಬಟ್ಟೆ ಸರಿದು ಹೋಯಿತು....‘‘ಓಹ್...ಕಬೀರ್...ನೀನು ಕೂಡ....?’’ ಮೃತ್ಯುಂಜಯಉದ್ಗರಿಸಿದ.
ಆ ಉದ್ಗಾರಕ್ಕೆ ಕಬೀರ್ ನಿಂತಲ್ಲೇ ಕಂಪಿಸಿದ. ಅಷ್ಟರಲ್ಲೇ ಮತ್ತೊಬ್ಬ ಮತ್ಯುಂಜಯನ ಮೇಲೆ ಎರಗಿದ. ಮತ್ಯುಂಜಯನೋ ಕಬೀರನ ಕಡೆಗೆ ದಾವಿಸುತ್ತಿದ್ದ. ಈ ಗೊಂದಲಗಳ ನಡುವೆಯೇ ಮತ್ಯುಂಜಯನಿಗೆಂದು ಬೀಸಿದ ಕತ್ತಿಯೊಂದು ಕಬೀರನ ಕೊರಳನ್ನು ಸವರಿ ಹೋಯಿತು.
ಅಪರಿಚಿರಿಬ್ಬರು ಒಟ್ಟಿಗೇ ಉದ್ಗರಿಸಿದರು ‘‘ಛೇ...ತಪ್ಪಾಯಿತು....’’
ಕಬೀರ್ ಕುಸಿದು ಬೀಳುತ್ತಿರುವುದನ್ನು ಮತ್ಯುಂಜಯ ನೋಡುತ್ತಿದ್ದ. ಅಷ್ಟರಲ್ಲೇ ಯಾರೋ ಹಿಂಬದಿಯಿಂದ ಮೃತ್ಯುಂಜಯನಿಗೆ ಚುಚ್ಚಿದಂತಾಯಿತು. ಅಪರಿಚಿತರು ಅದೇನೋ ಒದರಾಡುತ್ತಿದ್ದರು ‘‘ಓಡು ಓಡು...ಯಾರೋ ದೂರದಲ್ಲಿ ಬರುತ್ತಿದ್ದಾರೆ....’’
‘‘ಕಬೀರ್‌ನನ್ನು ಏನು ಮಾಡುವುದು?’’
‘‘ಅವನೂ ಸತ್ತಿದ್ದಾನೆ...ಮೊದಲು ಈ ಜಾಗದಿಂದ ಓಡುವ....’’
ಮೃತ್ಯುಂಜಯ ನೆಲಕ್ಕೊರಗುವಾಗಲೂ ಕಬೀರನನ್ನು ನೋಡುತ್ತಿದ್ದ. ಇಂದು ಸಂಜೆ ಮೈದಾನದಲ್ಲಿ ಜೊತೆ ಜೊತೆಯಾಗಿ ಕ್ರಿಕೆಟ್ ಆಡಿದೆವು. ಜೊತೆಯಾಗಿ ನಮ್ಮ ತಂಡಕ್ಕೆ ರನ್ ಸಂಗ್ರಹಿಸಿದೆವು. ಆ ಸಂದರ್ಭದಲ್ಲಿ ಆತನ ಕಣ್ಣುಗಳಲ್ಲಿ ಈ ಕುರಿತ ಒಂದು ಕುರುಹೂ ಇರಲಿಲ್ಲವಲ್ಲ?
ಕಬೀರ್ ತಣ್ಣಗೆ ಬಿದ್ದುಕೊಂಡಿದ್ದಾನೆ. ಮೃತ್ಯುಂಜಯ ಜೋರಾಗಿ ಚೀರುವುದಕ್ಕೆ ಪ್ರಯತ್ನಿಸಿದ. ಇಲ್ಲ...ಧ್ವನಿ ಹೊರಡುತ್ತಿಲ್ಲ....ಇಡೀ ಕತ್ತಲು ಒಟ್ಟಾಗಿ ತನ್ನ ಮೈಮೇಲೆ ಬಿದ್ದಂತಾಯಿತು ಮತ್ಯುಂಜಯನಿಗೆ.

***

ಮತ್ಯುಂಜಯ ಕಣ್ಣು ತೆರೆದ. ತನ್ನ ಸುತ್ತ ಜನ ಸೇರಿದ್ದಾರೆ. ಗೆಳೆಯರು, ಬಂಧುಗಳು.
ತಾನು ಆಸ್ಪತ್ರೆಯಲ್ಲಿದ್ದೇನೆ ಎನ್ನುವುದು ಅವನಿಗೆ ಅರಿವಾಯಿತು.
‘ಓಹ್...ನಾನಿನ್ನೂ ಬದುಕಿದ್ದೇನೆ....’ ಸುತ್ತಲಿರುವವರಲ್ಲಿ ಯಾರು ತನ್ನವರು? ಮತ್ಯುಂಜಯನಿಗೆ ಗೊಂದಲವಾಯಿತು.
ಅಮ್ಮ ತಲೆ ಪಕ್ಕದಲ್ಲೇ ಕುಕ್ಕರಿಸಿದ್ದಾಳೆ. ಅತ್ತು ಅತ್ತು ಅವಳ ಮುಖ ಜರ್ಝರಿತವಾಗಿದೆ. ಅಷ್ಟರಲ್ಲೇ ಅವನ ಕಣ್ಣ ಮುಂದೆ ಕುಸಿದು ಬೀಳುತ್ತಿರುವ ಕಬೀರನ ಮುಖ ತೇಲಿತು.
‘ಕಬೀರ್....’ ಅವನ ಬಾಯಿಯಿಂದ ಅವನಿಗರಿವಿಲ್ಲದೆ ಉದ್ಗಾರ ಹೊರಟಿತು.
ಅಷ್ಟರಲ್ಲೇ ಯಾರೋ ಅವನಿಗೆ ಹಿಂದಿನ ದಿನದ ದಿನಪತ್ರಿಕೆ ತಂದು ಕೊಟ್ಟರು. ಮತ್ಯುಂಜಯ ಅದರ ತಲೆಬರಹದ ಮೇಲೆ ಕಣ್ಣಾಯಿಸಿದ. ‘‘ಹಿಂದೂ ಗೆಳೆಯನಿಗಾಗಿ ಪ್ರಾಣ ತೆತ್ತ ಮುಸ್ಲಿಮ್ ಗೆಳೆಯ!’’
ಮೃತ್ಯುಂಜಯನಿಗೆ ಅರ್ಥವಾಗಲಿಲ್ಲ. ಇದೇನಿದು ಹಿಂದೂ ಗೆಳೆಯ! ಮುಸ್ಲಿಮ್ ಗೆಳೆಯ!
ಸುದ್ದಿಯ ಮೇಲೆ ಕಣ್ಣಾಡಿಸಿದ ‘‘ಹಿಂದೂ ಗೆಳೆಯನ ಮೇಲೆ ದಾಳಿ ನಡೆಸಿದ ಮತಾಂಧರ ಎದುರಿಸಿ, ಗೆಳೆಯನ ಪ್ರಾಣಕ್ಕಾಗಿ ತನ್ನ ಪ್ರಾಣ ಅರ್ಪಿಸಿದ ಮುಸ್ಲಿಮ್ ತರುಣ’’
‘‘ಕೋಮುದ್ವೇಷದ ನಡುವೆಯೂ ಒಂದು ಆಶಾಕಿರಣ...ಕಬೀರ್...’’
ಮೃತ್ಯುಂಜಯನ ಮೇಲೆ ದುಷ್ಕರ್ಮಿಗಳು ಎರಗಿದಾಗ ಅಲ್ಲೇ ಹತ್ತಿರದಲ್ಲಿ ಕಬೀರ್ ಗೆಳೆಯನ ನೆರವಿಗೆ ದಾವಿಸಿದ. ಗೆಳೆಯನನ್ನು ಇರಿಯಲು ಹೊರಟ ಕತ್ತಿಗೆ ತಾನು ಎದೆಯೊಡ್ಡಿದ....ತುಂಬಾ ರೋಚಕವಾಗಿ ಪತ್ರಿಕೆಗಳಲ್ಲಿ ಬರೆಯಲಾಗಿತ್ತು.
‘‘ನಿಮ್ಮ ಗೆಳೆಯ ಕಬೀರ್‌ನ ಬಗ್ಗೆ ಏನು ಹೇಳಲು ಬಯಸುತ್ತೀರಿ?’’ ಯಾರೋ ತಲೆಪಕ್ಕದಲ್ಲಿ ನಿಂತವನೊಬ್ಬ ಕೇಳಿದಂತಾಯಿತು. ಪತ್ರಕರ್ತನಿರಬೇಕು.
ಮೃತ್ಯುಂಜಯನ ಕಣ್ಣಿನಿಂದ ನೀರು ಹನಿಯಿತು. ‘‘ಯಾರಿಗಾಗಿ, ಯಾಕಾಗಿ ಈ ಕಣ್ಣೀರು...?’’ ಮೃತ್ಯುಂಜಯನ ಬಳಿ ಉತ್ತರವಿರಲಿಲ್ಲ.
‘ತನಗಾಗಿ ಪ್ರಾಣಕೊಟ್ಟ ಗೆಳೆಯನಿಗೆ ಕಣ್ಣೀರಿನ ಬಾಷ್ಪಾಂಜಲಿ’ ಮರುದಿನ ಪತ್ರಿಕೆಗಳಲ್ಲಿ ತಲೆಬರಹ ಪ್ರಕಟವಾಯಿತು.

***

‘‘ದಾರಿ ಬಿಡಿ ದಾರಿ ಬಿಡಿ. ಗಾಯಾಳುವಿನಿಂದ ಸ್ಟೇಟ್‌ಮೆಂಟ್ ತೆಗೆದುಕೊಳ್ಳಬೇಕು...ಎಲ್ಲರೂ ಹೊರಗೆ ಹೋಗಿ...’’ ಪೊಲೀಸ್ ಇನ್ಸ್‌ಪೆಕ್ಟರ್ ಕೊಠಡಿಗೆ ಪ್ರವೇಶಿಸಿದರು. ಜೊತೆಗೊಬ್ಬ ಪೊಲೀಸ್ ಪೇದೆ ಕೂಡ. ಎಲ್ಲರೂ ಹೊರ ಹೋದರು. ಪೊಲೀಸ್ ಅಧಿಕಾರಿ, ಪೇದೆ ಮತ್ತು ಹಾಸಿಗೆಯ ಮೇಲೆ ಮಲಗಿರುವ ಮೃತ್ಯುಂಜಯ ಮಾತ್ರ.
‘‘ಹೇಳಿ. ಅವತ್ತು ರಾತ್ರಿ ನಿಜಕ್ಕೂ ಏನು ನಡೆಯಿತು. ನಿಮ್ಮ ಮೇಲೆ ಯಾರೆಲ್ಲ ಹಲ್ಲೆ ನಡೆಸಿದರು. ಯಾರದ್ದಾದರೂ ಪರಿಚಯ ಇದೆಯಾ?’’
ಮೃತ್ಯುಂಜಯ ಮೌನವಾಗಿದ್ದ. ಏನು ಹೇಳಬೇಕು? ‘‘ಆರೋಪಿಗಳನ್ನು ಹುಡುಕಬೇಕಾದರೆ ನೀವು ಬಾಯಿ ತೆರೆಯಲೇ ಬೇಕು...ಹೇಳಿ...ದುಷ್ಕರ್ಮಿಗಳಲ್ಲಿ ಯಾರೆಲ್ಲ ಇದ್ದರು...ಅವರ ಗುರುತು ಇದೆಯಾ?’’
‘‘ಯಾರ ಗುರುತೂ ಇಲ್ಲ...ಅವರು ಯಾಕೆ ನನ್ನ ಮೇಲೆ ದಾಳಿ ನಡೆಸಿದ್ದಾರೆ ಎನ್ನುವುದೂ ಗೊತ್ತಿಲ್ಲ....ಗೊತ್ತಿದ್ದರೆ ಒಂದಿಷ್ಟು ನನಗೆ ಸಮಾಧಾನವಾಗುತ್ತಿತ್ತು....’’ ಮತ್ಯುಂಜಯ ಬಾಯಿ ತೆರೆದ.
‘‘ಅವತ್ತು ರಾತ್ರಿ ನಾನು ಒಂಟಿಯಾಗಿ ಬೈಕ್‌ನಲ್ಲಿ ಮನೆಯ ಕಡೆ ಹೋಗುತ್ತಿದ್ದೆ. ಅರ್ಧ ಕಿಲೋಮೀಟರ್ ಹೋಗಿರಬಹುದು. ಅಷ್ಟರಲ್ಲಿ ಒಂದು ರಿಕ್ಷಾ ಕಾಣಿಸಿತು. ಮುಖ ಮುಚ್ಚಿದ ನಾಲ್ಕೆೃದು ಜನರು. ಎಲ್ಲರೂ ನನ್ನನ್ನು ಸುತ್ತುವರಿದರು....’’
ಮೃತ್ಯುಂಜಯ ಕ್ಷಣ ಹೊತ್ತು ವೌನವಾದ. ‘‘ನಂತರ ಏನಾಯಿತು?’’ ಪೊಲೀಸ್ ಅಧಿಕಾರಿ ಪ್ರಶ್ನಿಸಿದರು.
 ‘‘ಅಷ್ಟರಲ್ಲಿ ಅದೆಲ್ಲಿದ್ದನೋ ಗೊತ್ತಿಲ್ಲ...ನನ್ನ ಗೆಳೆಯ ಕಬೀರ್....ಓಡೋಡಿ ಬಂದ. ನನಗೂ ದುಷ್ಕರ್ಮಿಗಳಿಗೂ ಅಡ್ಡವಾಗಿ ನಿಂತ. ಅವರನ್ನು ತಡೆದು, ನನ್ನನ್ನು ಕಾಪಾಡಲು ಯತ್ನಿಸಿದ. ಜೀವದ ಕೊನೆಯವರೆಗೂ ನನಗಾಗಿ ಅವರಲ್ಲಿ ಹೋರಾಡಿದ....ಈ ಸಂದರ್ಭದಲ್ಲಿ ನನಗೂ ಗಾಯಗಳಾದವು. ಅವರು ಕಬೀರ್‌ನ ಕುತ್ತಿಗೆಯನ್ನೇ ಕೊಯ್ದರು...ನಾನೂ ಕೆಳಗೆ ಬಿದ್ದಿದ್ದೆ. ನಾವು ಸತ್ತಿದ್ದೇವೆ ಎಂದು ತಿಳಿದು ಅವರು ಅಲ್ಲಿಂದ ಹೋದರು...’’ ಗೊಗ್ಗರು ಸ್ವರದಲ್ಲಿ ನಡೆದ ಘಟನೆಯನ್ನು ಮತ್ಯುಂಜಯ ವಿವರಿಸಿದ.
ಪೊಲೀಸ್ ಅಧಿಕಾರಿ ಮೃತ್ಯುಂಜಯನನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ.
‘‘ನಿಜಕ್ಕೂ ಇದೇ ನಡೆದಿರುವುದಾ?’’ ಪೊಲೀಸ್ ಅಧಿಕಾರಿ ಮತ್ತೆ ಕೇಳಿದ.
ಅಧಿಕಾರಿಯ ಕಣ್ಣಿಗೆ ಕಣ್ಣು ಕೊಡಲು ಮತ್ಯುಂಜಯನಿಗೆ ಸಾಧ್ಯವಾಗಲಿಲ್ಲ ‘‘ಹೌದು. ಕಬೀರನಿಂದ ನನ್ನ ಜೀವ ಉಳಿಯಿತು...’’
‘‘ಇನ್ನೊಮ್ಮೆ ಕೇಳುತ್ತಿದ್ದೇನೆ...ನಿಜಕ್ಕೂ ನಡೆದಿರುವುದು ಇಷ್ಟೇಯಾ?’’ ಪೊಲೀಸ್ ಅಧಿಕಾರಿ ಮತ್ತೆ ಕೇಳಿದ.
‘‘ಹೌದು. ಕಬೀರ್ ನನ್ನ ಜೀವ ಉಳಿಸಿದ. ನನಗಾಗಿ ಅವನು ಪ್ರಾಣ ಕೊಟ್ಟ’’ ಮತ್ಯುಂಜಯ ಸ್ಪಷ್ಟವಾಗಿ, ಜೋರಾಗಿ ಹೇಳಿದ. ಹಾಗೆ ಹೇಳುವಾಗ ಅವನ ಕಣ್ಣಂಚಲ್ಲಿ ನೀರು ತುಳುಕಿತು.
ಮತ್ಯುಂಜಯ ತನ್ನ ಹೇಳಿಕೆಯನ್ನು ಬಲವಾಗಿ ನಂಬಿ ಹೇಳಿದ್ದ. ಪೊಲೀಸ್ ಅಧಿಕಾರಿ ಮೃತ್ಯುಂಜಯನ ಕೈಯನ್ನು ಮೆದುವಾಗಿ ಹಿಸುಕಿದ ‘ತನಗೆಲ್ಲ ಗೊತ್ತು’ ಎಂಬಂತೆ.
ಮತ್ಯುಂಜಯ ಕಿರು ನಗೆ ನಕ್ಕ. ಇಡೀ ಆಸ್ಪತ್ರೆಯ ವೌನವನ್ನು, ಸುತ್ತಲು ಆವರಿಸಿದ  ಕತ್ತಲನ್ನು ಬೆಳಗುವ ಶಕ್ತಿ ಇತ್ತು ಕಿರು ನಗೆಗೆ. ಪೊಲೀಸ್ ಅಧಿಕಾರಿಯ ಕಣ್ಣಲ್ಲಿ ಆ ನಗು ಪ್ರತಿಫಲಿಸಿತು.
ಪೊಲೀಸ್ ಅಧಿಕಾರಿ ತನ್ನ ಟೋಪಿಯನ್ನು ತಲೆಗೇರಿಸಿಕೊಂಡ.

Sunday, March 6, 2016

ಎಲ್ಲರ ಹಾಗಲ್ಲ....!

‘‘ವಿಷಯ ಗೊತ್ತಾ?’’
‘‘ಏನು?’’
‘‘ಬೆಳ್ಳಂಬೆಳಗ್ಗೆ ನಿಮಗೆ ಗದ್ದಲ ಕೇಳಿಸಲಿಲ್ಲವಾ?’’
‘‘ಹೌದು...ವಾಹನ ಬಂದ ಸದ್ದು, ಮಾತು, ಅಳು....’’
‘‘ಅದೇ, ಕಳೆದ ವಾರ ಬಾಡಿಗೆಗೆ ಬಂದ್ರಲ್ಲ, ಅವರ ಮನೆಗೆ ಬೆಳ್ಳಂಬೆಳಗ್ಗೆ ಪೊಲೀಸರು ಬಂದಿದ್ದರು. ಮನೆಯವರನ್ನೆಲ್ಲ ಎಳ್ಕೊಂಡು ಹೋದ್ರು....’’
‘‘ಅಯ್ಯೋ...ಹೌದಾ? ಏನಂತೆ? ಯಾಕಂತೆ?’’
‘‘ಯಾರಿಗೆ ಗೊತ್ತು? ಬುರ್ಖಾ ಹಾಕಿದ ಹೆಂಗಸು ಜೋರು ಅಳುತ್ತಾ ಇತ್ತು...’’
‘‘ಅಯ್ಯೋ ದೇವ್ರೇ...ಆಕೆಯ ಗಂಡನ ಗಡ್ಡ ನೋಡಿಯೇ ನನಗೆ ಅನ್ನಿಸಿತ್ತು. ನಾನು ಓನರ್ ಜೊತೆ ಹೇಳಿದ್ದೆ....ಆ ಜಾತಿಯವ್ರಿಗೆ ಬಾಡಿಗೆಗೆ ಕೊಡ್ಬೇಡಿ...ಇಲ್ಲಿರುವ ಉಳಿದವರಿಗೆಲ್ಲ ಪ್ರಾಬ್ಲಂ ಆಗತ್ತೆ...ಅಂತ. ಕೇಳಿಲ್ಲ...ಈಗ ನಾವೆಲ್ಲರೂ ಅನುಭವಿಸಬೇಕಾಗಿದೆ...ಅದಿರ್ಲಿ...ಆ್ಯರೆಸ್ಟ್ ಆದದ್ದು ಯಾಕೆ ಗೊತ್ತಾ?’’
‘‘ಮತ್ಯಾಕೆ ಆ್ಯರೆಸ್ಟ್ ಮಾಡ್ತಾರೆ....ಅವರ ಮಗ ಒಬ್ಬ ಇದ್ದಾನಂತಲ್ಲ. ಅವನ ಬಗ್ಗೆ ಏನಾದರೂ ಅವರು ನಮ್ಮಲ್ಲಿ ಮಾತನಾಡಿದ್ದಾರ...?’’
‘‘ಓ...ಅವರಿಗೆ ಮೂರು ಹೆಣ್ಣು ಮಕ್ಕಳಲ್ಲದೆ ಒಬ್ಬ ಗಂಡು ಮಗ ಇದ್ದಾನ? ಗೊತ್ತೇ ಇರಲಿಲ್ಲ...’’
‘‘ಮೊನ್ನೆ ಬಾವಿ ಕಟ್ಟೆಯಲ್ಲಿ ನಾನು ಆ ಹೆಂಗಸಿನೊಟ್ಟಿಗೆ ಕೇಳಿದ್ದೆ, ನಿಮ್ಮ ಗಂಡು ಮಗ ಎಲ್ಲಿದ್ದಾನೆ ಅಂತ? ಅವಳು ಸರಿಯಾಗಿ ಉತ್ತರವೇ ಕೊಡಲಿಲ್ಲ...ಮುಖ ಇಷ್ಟು ದೊಡ್ಡದು ಮಾಡಿ ಹೊರಟು ಹೋದಳು...’’
‘‘ಅಂದ್ರೆ...ಟೆರರಿಸ್ಟಾ...?’’
‘‘ಮತ್ತೆಂತ್ತ? ಇಲ್ಲದಿದ್ದರೆ ಒಂದು ದಿನವಾದರೂ ಮನೆಗೆ ಬರ್ತಿರಲಿಲ್ಲವಾ? ಈಗ ಮನೆಯವರನ್ನು ಸುಮ್ನೆ ಯಾರಾದ್ರೂ ಆ್ಯರೆಸ್ಟ್ ಮಾಡಿ ಕೊಂಡೋಗ್ತಾರ? ನಮ್ಮನ್ನೆಲ್ಲ ಯಾಕೆ ಆರೆಸ್ಟ್ ಮಾಡುವುದಿಲ್ಲ...? ಅವರನ್ನೇ ಯಾಕೆ ಆ್ಯರೆಸ್ಟ್ ಮಾಡಬೇಕು?’’
‘‘ಅವಳ ಗಂಡನ ಇಷ್ಟುದ್ದ ಗಡ್ಡ ನೋಡಿಯೇ ಅನುಮಾನ ಬಂದಿತ್ತು ನನಗೆ...ಅದಲ್ಲ, ಈ ಓನರ್‌ಗಳು ಬಾಡಿಗೆ ಸಿಗ್ತದೆ ಎಂದು ಸಿಕ್ಕಿದವರಿಗೆಲ್ಲ ಮನೆ ಕೊಡ್ತಾರಲ್ಲ...ಇವರನ್ನು ಮೊದಲು ಸ್ಟೇಷನ್‌ಗೆ ಕರ್ಕೊಂಡು ಹೋಗಿ ನಾಲ್ಕು ಒದಿಸ ಬೇಕು...’’
‘‘ಅಲ್ಲ, ಹೀಗಾದ್ರೆ ನಮ್ಮಂಥವರೆಲ್ಲ ಸಮಾಜದಲ್ಲಿ ಓಡಾಡುವುದು ಕಷ್ಟ. ಜನರನ್ನು ನಂಬುವುದಾದರೂ ಹೇಗೆ?’’
‘‘ಸಂಜೆ ಮನೆ ಓನರ್ ಬಂದ ಕೂಡ್ಲೆ...ನಾವೆಲ್ಲ ಗಂಡಂದಿರ ಜೊತೆಗೆ ಹೋಗಿ ಹೇಳ್ಬೇಕು....ಇನ್ನು ಮುಂದೆ ಹೀಗೆಲ್ಲ ಆದರೆ ನಾವು ಮನೆ ಖಾಲಿ ಮಾಡ್ತೇವೆ ಅಂತ...’’
‘‘ಹೌದೌದು...ಛೆ...ಗೌರವದಿಂದ  ಬಾಳುತ್ತಿದ್ದ ನಮ್ಮ ಕಾಲನಿಗೇ ಪೊಲೀಸರು ಬರುವಂತಾಯಿತಲ್ಲ...’’
‘‘ಅನ್ನ ಕೊಟ್ಟ ನೆಲಕ್ಕೆ ದ್ರೋಹ ಬಗೆಯುವವರು...ನಂಬಲೇ ಬಾರದು ಅವರನ್ನು’’

***

‘‘ಏನು ಎಲ್ಲ ಒಟ್ಟಿಗೆ ಬಂದಿದ್ದೀರಿ....ಮನೆ ಬಾಡಿಗೆ ಏರಿಸಿರುವುದಕ್ಕ? ಏರಿಸದೇ ಉಪಾಯವೇ ಇಲ್ಲ. ಕಳೆದ ಬಾರಿ ಕೂಡ ಏರಿಸಿಲ್ಲ. ಈಗ ಎಲ್ಲ ದುಬಾರಿ ಅಲ್ಲವ?’’
‘‘ಅದಲ್ಲ...ವಿಷಯ...’’
‘‘ಮತ್ತೆಂತ?’’
‘‘ಅದೇ...ನಾವು ನಿಮ್ಮ ಕಾಲನಿಯಲ್ಲಿ ಇರಬೇಕೋ, ಬಿಟ್ಟು ಹೋಗಬೇಕೋ?’’
‘‘ಏನಾಯ್ತು? ಎಂತಾಯಿತು? ನೀರು, ಕರೆಂಟು ಎಲ್ಲ ಸರಿ ಉಂಟಲ್ಲ...’’
‘‘ಅಲ್ಲ, ಸಮಾಜದಲ್ಲಿ ಗೌರವ ಮುಖ್ಯ. ನೀವು ಹಣದಾಸೆಗೆ ಯಾರ್ಯಾರಿಗೋ ಬಾಡಿಗೆಗೆ ಮನೆ ಕೊಟ್ಟು...ಈಗ ನೋಡಿ...’’
‘‘ಎಂತ ವಿಷಯ ಹೇಳಿ...ವಿವರಿಸಿ ಹೇಳಿ...’’
‘‘ವಿವರಿಸುವುದು ಎಂತ. ನೀವು ಮುಚ್ಚಿಟ್ಟರೂ ಊರಿಗೆ ಗೊತ್ತಾಗದೇ ಇರುತ್ತದ? ಪೇಪರಿನವರು ನಿಮ್ಮನ್ನು ಹುಡುಕಿಕೊಂಡು ಬಂದದ್ದು ಗೊತ್ತಾಯಿತು. ನಾಳೆ ಇಡೀ ಪೇಪರಿನಲ್ಲಿ ಈ ಕಾಲನಿಯ ಹೆಸರು ಬರುವುದಿಲ್ಲವ? ಅವರಿಂದಾಗಿ ನಮಗೆಲ್ಲ ಅವಮಾನ ಅಲ್ಲವಾ?’’
‘‘.......?’’
‘‘ಅದೇ ಬೆಳಗ್ಗೆ ಪೊಲೀಸರು ಬಂದು ಕರೆದುಕೊಂಡು ಹೋದದ್ದು...’’
‘‘ಓ ಅದಾ? ಅದರಿಂದ ನಮಗೆ ಅವಮಾನ ಎಂತ? ನಮಗೆಲ್ಲ ಹೆಮ್ಮೆ ಅಲ್ಲವಾ?’’
‘‘ಎಂತದು ಹೆಮ್ಮೆ? ’’
‘‘ನಿಮಗೆ ಗೊತ್ತಿಲ್ಲವಾ? ಕಳೆದ ವಾರ ಪಕ್ಕದ ಮನೆಗೆ ಬಾಡಿಗೆ ಬಂದವರ ಹೆಸರು ಗಫಾರ್ ಖಾನ್ ಅಂತ. ನೀವು ಪರಿಚಯ ಮಾಡಿಕೊಳ್ಳಲಿಲ್ಲವಾ?’’
‘‘ಅವರ ಗಡ್ಡ ನೋಡಿಯೇ ನಮಗೆಲ್ಲ ಗೊತ್ತಾಗಿತ್ತು ಆಗಲೆ....’’
 ‘‘ಎಂತ ಗೊತ್ತಾದದ್ದು? ಅವರ ಹಿರಿಯ ಮಗ ಇದ್ದಾನಲ್ಲ...ಅವನ ಹೆಸರು ಮುಸ್ತಫಾ ಅಂತ...ಅವನು ಮಿಲಿಟರಿಯಲ್ಲಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಇದ್ದ. ತುಂಬಾ ಒಳ್ಳೆಯ ಹುಡುಗ...ಈ ಬಾರಿ ಮದುವೆ ಮಾಡಿ ಬಿಡಬೇಕು ಎಂದು ಹುಡುಗಿಯನ್ನು ಹುಡುಕಿ ಇಟ್ಟಿದ್ರು. ನೋಡಿದರೆ ಮೊನ್ನೆ ಗಡಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಗುಂಡು ತಾಗಿ ಮೃತಪಟ್ಟಿದ್ದಾನೆ....ಜಿಲ್ಲಾಧಿಕಾರಿಗಳಿಗೆ ನಿನ್ನೆ ಬೆಳಗ್ಗೆ ಸುದ್ದಿ ಬಂದಿದೆ. ಆದುದರಿಂದ ಬೆಳಗ್ಗೆ ಎಸ್ಪಿಯವರೇ ಬಂದು ಯೋಧನ ತಂದೆಯನ್ನು, ಕುಟುಂಬವನ್ನು ಕರೆದುಕೊಂಡು ಹೋಗಿದ್ದಾರೆ. ನಾಳೆ ಬೆಳಗ್ಗೆ ಮೃತ ದೇಹ ಬರುತ್ತದೆಯಂತೆ....ಜಿಲ್ಲಾ ಭವನದಲ್ಲಿ ವಿಶೇಷ ಕಾರ್ಯಕ್ರಮ ಇಟ್ಟಿದ್ದಾರೆ.....ನಾವೆಲ್ಲ ಹೋಗಿ ಬರೋಣ....ಆ ಹುಡುಗನ ತ್ಯಾಗ, ಬಲಿದಾನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಅಲ್ಲವೆ?............’’
‘‘................’’
‘‘.........................’’
‘‘ಹೌದು...ನಾನು ಒಮ್ಮೆ ಅವರೊಟ್ಟಿಗೆ ಮಾತನಾಡಿದ್ದೆ....ಮೊದಲ ಮಾತಿನಲ್ಲೇ ಗೊತ್ತಾಯಿತು...ಅವರು ಆ ಜಾತಿಯ ಎಲ್ಲರ ಹಾಗಲ್ಲ...ಅಂತ. ಇವರು ಎಲ್ಲರ ಹಾಗಲ್ಲ, ತುಂಬಾ ಒಳ್ಳೆಯವರು ಎಂದು ಹೆಂಡತಿಗೆ ನಾನು ಹೇಳಿದ್ದೆ.....ಬೇಕಾದರೆ ಕೇಳಿ....’’