Sunday, October 26, 2014

ಹೊಳೆದದ್ದು ಹೊಳೆದಂತೆ-5

 1
ಅಡುಗೆ ಮಾಡಲು ಬಾರದವರು ಅಡುಗೆ ಮಾಡಲು ಹೊರಟರೆ ಮಾತ್ರ ಹೊಸ ಹೊಸ ಅಡುಗೆಗಳು ಹುಟ್ಟಲು ಕಾರಣವಾದೀತು. ಆದುದರಿಂದ ಸಿದ್ದ ಅಡುಗೆಗಳನ್ನು ಮಾಡಲು ಗೊತ್ತಿರುವವರ ಜೊತೆ ಅಡುಗೆ ಮಾಡಲು ಬಾರದವರೂ ಅಡುಗೆ ಮನೆಗೆ ಹೆಚ್ಚು ಪ್ರವೇಶಿಸುವಂತಾಗ ಬೇಕು. ಅಡುಗೆ ವೈವಿಧ್ಯಗಳು ಹೆಚ್ಚಬೇಕು
2
ಸೃಜನ ಶೀಲ ಬರಹಗಾರನೊಬ್ಬ ಕಮ್ಯುನಿಸಂ ನ ಬೆಂಕಿಯನ್ನು ತನ್ನೊಳಗೆ ಇಟ್ಟುಕೊಂಡು ಬರೆದರೆ ಮಾತ್ರ ಅದು ನೆಲದ ಜನರ ಅಭಿವ್ಯಕ್ತಿ ಯಾದೀತು. ಇದೆ ಸಂದರ್ಭದಲ್ಲಿ ತನ್ನೊಳಗೆ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತನನ್ನು ಇಟ್ಟುಕೊಂಡು ಬರೆದರೆ ಅದು ಪಕ್ಷದ ಚುನಾವಣಾ ಪ್ರಣಾಳಿಕೆ ಆದೀತು. ಸೃಜನ್ ಶೀಲ ಬರಹಗಾರನೊಬ್ಬ ತನ್ನೊಳಗಿರುವ ಕಮ್ಯುನಿಸಂನ ಬೆಂಕಿಯನ್ನು ಆರದಂತೆ ನೋಡಿಕೊಳ್ಳೋದು ಎಷ್ಟು ಮುಖ್ಯವೋ, ತನ್ನೊಳಗಿರುವ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತನನ್ನು ಒದ್ದು ಹೊರ ಹಾಕೋದು ಅಷ್ಟೇ ಮುಖ್ಯ
3
ಕೆಲವೊಮ್ಮೆ ಒಂಟಿತನ ನಮಗೆ ಕೊಡುವ ದಿಟ್ಟತನ,ಶಕ್ತಿ ಮತ್ತು ಸ್ವಾತಂತ್ರ್ಯ ಸಮೂಹದೊಂದಿಗೆ ಇದ್ದಾಗ ಸಿಗೋದಿಲ್ಲ ಅನ್ನಿಸತ್ತೆ. ಸಮೂಹ ನಮ್ಮನ್ನು ತನಗೆ ಬೇಕಾದಂತೆ ನಿಯಂತ್ರಿಸಲು ಪ್ರಯತ್ನಿಸತ್ತೆ. ನಮ್ಮೊಳಗಿನ ಧ್ವನಿ ಸಮೂಹದ ಧ್ವನಿಯ ಸದ್ದಿಗೆ ಮೆದುವಾಗತ್ತೆ. ಗುಂಪಿನೊಳಗೆ ಇದ್ದೂ ಇಲ್ಲದಂತೆ ಬದುಕುವ ಶಕ್ತಿಯನ್ನು ನಮ್ಮದಾಗಿಸಿ ಕೊಳ್ಳೋದು ಇಂದಿನ ದಿನಗಳಲ್ಲಿ ಅತ್ಯಗತ್ಯ

Saturday, October 25, 2014

ಮುರುಗದಾಸ್ ಬೀಸಿದ ಕತ್ತಿ

ತುಪಾಕಿ ನಿರೀಕ್ಷೆಯ ಗುರಿಯನ್ನು ಮುಟ್ಟಲಿಲ್ಲ ಎನ್ನುವ ಕಾರಣಕ್ಕೋ ಏನೋ ಇದೀಗ ನಿರ್ದೇಶಕ ಮುರುಗದಾಸ್ ‘ಕತ್ತಿ’ ಬೀಸಿದ್ದಾರೆ. ಅದು ಕೆಲವರ ಕುತ್ತಿಗೆಯನ್ನು ಸವರಿಕೊಂಡು ಹೋಗಿರುವುದು ಈ ಬಾರಿಯ ವಿಶೇಷ. ಸಾಧಾರಣವಾಗಿ ಮುರುದಾಸ್ ಚಿತ್ರದಲ್ಲಿ ಯಥೇಚ್ಛ ಮನರಂಜನೆಗಳಿರುತ್ತವೆ. ಘಜನಿ ಚಿತ್ರ ಮುರುಗದಾಸ್ ಅವರನ್ನು ಭಿನ್ನ ನಿರ್ದೇಶಕನ ಸಾಲಲ್ಲಿ ನಿಲ್ಲಿಸಿತು. ಒಂದು ಮಾಮೂಲಿ ಕಮರ್ಶಿಯಲ್ ಚಿತ್ರವನ್ನು ಹೊಸ ಬಗೆಯ ನಿರೂಪಣೆಯ ಮೂಲಕ ಜನರಿಗೆ ನೀಡಿದರು. ಅಂದಿನಿಂದ ಮುರುಗದಾಸ್ ಏನು ಮಾಡಿದರೂ, ಅದರಲ್ಲಿ ಒಂದಿಷ್ಟು ವಿಶೇಷಗಳಿರುತ್ತವೆ ಎಂದು ಅವರ ಅಭಿಮಾನಿಗಳು ನಂಬಿಕೊಂಡು ಬಂದಿದ್ದಾರೆ. ಆದರೆ ‘ಏಳಾಂ ಅರಿವು’ ಚಿತ್ರ ಹುಟ್ಟು ಹಾಕಿದ ನಿರೀಕ್ಷೆ ಠುಸ್ ಆಯಿತು. ಕೆಲ ಸಮಯದ ಹಿಂದೆ ಬಂದ ತುಪಾಕಿ ಅಥವಾ ಬಾಲಿವುಡ್‌ನ ಹಾಲಿಡೇ ಚಿತ್ರವೂ ನಿರೀಕ್ಷೆಯನ್ನು ತಲುಪಲಿಲ್ಲ. ಈ ಕಾರಣದಿಂದ, ಕತ್ತಿ ಚಿತ್ರವಾದರೂ ಮುರುಗದಾಸ್‌ನನ್ನು ಮೇಲೆತ್ತಬಹುದೇ ಎಂದು ಅವರ ಅಭಿಮಾನಿಗಳು ಕುತೂಹಲದಲ್ಲಿದ್ದರು. ಇದೀಗ ಎಲ್ಲರ ಕುತೂಹಲವನ್ನು ತಣಿಸುವಂತೆ, ಕತ್ತಿ ಜನಮನ ಗೆಲ್ಲುತ್ತಿದೆ.

     ಮೊತ್ತ ಮೊದಲು ಹೇಳಬೇಕಾಗಿರುವುದು, ಕತ್ತಿ ಒಂದು ಅಪ್ಪಟ ಕಮರ್ಶಿಯಲ್ ಚಿತ್ರ. ಆದರೆ ಇದರ ಜೊತೆಗೆ ಇನ್ನೊಂದು ಧನಾತ್ಮಕ ಅಂಶವವಿದೆ. ಮುರುಗದಾಸ್ ವರ್ತಮಾನವನ್ನು ಕಾಡುತ್ತಿರುವ, ಜ್ವಲಂತ ವಸ್ತುವೊಂದನ್ನು ಈ ಚಿತ್ರಕ್ಕಾಗಿ ಎತ್ತಿಕೊಂಡಿದ್ದಾರೆ. ಈ ನೆಲದ ರೈತರ ಬಗ್ಗೆ, ಅವರ ವಿರುದ್ಧ ಸಂಚು ಹೂಡುತ್ತಿರುವ ಮಲ್ಟಿ ನ್ಯಾಶನಲ್ ಕಂಪನಿಗಳ ಬಗ್ಗೆ ಒಂದು ಕಮರ್ಶಿಯಲ್ ಚಿತ್ರದ ಮೂಲಕ ಮಾತನಾಡಲು ಒಂದಿಷ್ಟು ಧೈರ್ಯ ಬೇಕು. ಆ ಧೈರ್ಯವನ್ನು ತೋರಿಸಿದ್ದಾರೆ ನಿರ್ದೇಶಕರು. ಚಿತ್ರ ಆರಂಭವಾಗುವುದು ಮಾಮೂಲಿ ಕಮರ್ಶಿಯಲ್ ಶೈಲಿಯಲ್ಲೇ. ಸಣ್ಣ ಪುಟ್ಟ ಪಿಕ್‌ಪಾಕೆಟ್‌ಗಳನ್ನು ಮಾಡುತ್ತಾ ಕೊಲ್ಕತ್ತಾದ ಜೈಲು ಸೇರಿರುವ ಕದಿರೇಶ ಅಥವಾ ಕತ್ತಿ ಜೈಲಿನಿಂದ ಪರಾರಿಯಾಗುವಲ್ಲಿಂದ. ಪೊಲೀಸರು ಈತನನ್ನು ತೀವ್ರವಾಗಿ ಹುಡುಗಾಡುತ್ತಿರುವಾಗ ಅವನಿಗೆ ಮುಖಾಮುಖಿಯಾಗುವುದು ಇವನದೇ ರೂಪವುಳ್ಳ ಜೀವಾನಂದ. ಗೂಂಡಾಗಳ ಗುಂಡಿನೇಟಿಗೆ ಸಿಕ್ಕಿ ಸಾವು ಬದುಕಿನ ನಡುವೆ ಒದ್ದಾಡುತ್ತಿರುವ ಜೀವಾನಂದನನ್ನು ಆಸ್ಪತ್ರೆಗೆ ಒಯ್ಯುವ ಕೆಲಸವನ್ನು ಕತ್ತಿ ಮಾಡುತ್ತಾನೆ. ಇದೇ ಸಂದರ್ಭದಲ್ಲಿ ಕೊಲ್ಕತ್ತಾ ಪೊಲೀಸರು ಈತನನ್ನು ಹುಡುಕುತ್ತಾ ತಮಿಳುನಾಡಿಗೆ ಬಂದಿರುವುದು ತಿಳಿದು ಬಿಡುತ್ತದೆ. ಪೊಲೀಸರಿಂದ ಪಾರಾಗಲು, ಗಂಭೀರ ಸ್ಥಿತಿಯಲ್ಲಿರುವ ಜೀವಾನಂದನ ಪಕ್ಕ ತನ್ನ ಪರ್ಸ್ ಹಾಗೂ ಸೊತ್ತುಗಳನ್ನು ಇಟ್ಟು, ಆತನ ಪರ್ಸ್‌ನ್ನು ತಾನು ತೆಗೆದುಕೊಳ್ಳುತ್ತಾನೆ. ಜೀವಾನಂದನಾಗಿ ಆತನ ಗ್ರಾಮಕ್ಕೆ ಹೋಗುತ್ತಾನೆ. ಇಲ್ಲಿಂದ ನಿಜವಾದ ಕತೆ ಪ್ರಾರಂಭವಾಗುತ್ತದೆ. ಜೀವನಂದನ ಬದುಕು ಕತ್ತಿಯನ್ನು ಹೊಸ ಮನುಷ್ಯನನ್ನಾಗಿ ಮಾರ್ಪಡಿಸುತ್ತದೆ. ಜೀವಾನಂದ ಅರ್ಧದಲ್ಲಿ ನಿಲ್ಲಿಸಿದ ಹೋರಾಟಕ್ಕೆ ಇವನಿಂದ ಜೀವ ಬರುತ್ತದೆ.


ತನ್ನೂತು ಗ್ರಾಮವನ್ನು ಮುಂದಿಟ್ಟುಕೊಂಡು ನಿರ್ದೇಶಕರು ಮಲ್ಟಿನ್ಯಾಶನಲ್ ಕಂಪೆನಿಗಳು ಮತ್ತು ಅವುಗಳ  ಹಿಂದೆ ಬಾಲಗಳಾಗಿ ಚೇಲಗಳಾಗಿ ಅಲೆಯುತ್ತಿರುವ ಮೀಡಿಯಾ ಹಾಗೂ ಮೆಟ್ರೋ ಜನರ ವಿರುದ್ಧ ಯುದ್ಧ ಸಾರುತ್ತಾರೆ. ಕತ್ತಿ ಆ ಯುದ್ಧದ ನೇತೃತ್ವವನ್ನು ವಹಿಸುತ್ತಾನೆ. ಇಡೀ ಚಿತ್ರದಲ್ಲಿ ಮೀಡಿಯಾಗಳ ಸುದ್ದಿ ದಾಹ ಮತ್ತು ಅದರ ಹಿಂದಿರುವ ಕ್ರೌರ್ಯವನ್ನು ಎದೆ ಝಲ್ಲೆನ್ನುವಂತೆ ನಿರ್ದೇಶಕರು ಹೇಳುತ್ತಾರೆ. ರೈತರ ಸಂಕಟಗಳು, ಪ್ರತಿಭಟನೆ, ಅಸಹಾಯಕತೆ ಇವೆಲ್ಲವುಗಳನ್ನು ಮನಮುಟ್ಟುವಂತೆ ನಿರೂಪಿಸುತ್ತಾ ಹೋಗುತ್ತಾರೆ ಮುರುದಾಸ್. ಹಾಗೆಂದು ಚಿತ್ರ ಮಾಸ್ ಪ್ರೇಕ್ಷಕರಿಗೂ ಮೋಸ ಮಾಡುವುದಿಲ್ಲ. ವಿಜಯ್ ಅವರ ಆಕ್ಷನ್‌ಗಳು, ಮಂಗಚೇಷ್ಠೆಗಳು ಇದರಲ್ಲೂ ಮುಂದುವರಿಯುತ್ತವೆ. ನಾಯಕಿ ಶಮಂತಾಗೆ ಇಲ್ಲಿ ವಿಶೇಷ ಅವಕಾಶಗಳಿಲ್ಲ. ಮಲ್ಟಿ ನ್ಯಾಶನಲ್ ಕಂಪೆನಿಯ ಮುಖ್ಯಸ್ಥನಾಗಿ ನೀಲ್ ನಿತಿನ್ ಮುಖೇಶ್ ಚಿತ್ರಕ್ಕೆ ಇನ್ನಷ್ಟು ಪೂರಕವಾಗಿ ಕೆಲಸ ಮಾಡಿದ್ದಾರೆ. ಪಾತ್ರಕ್ಕೆ ಒಪ್ಪುವ ಮೈಕಟ್ಟು ಮತ್ತು ಗಾಂಭೀರ್ಯ ಮುಖೇಶ್ ಅವರದು. ನಾಯಕ ಪಾತ್ರಗಳಿಗಿಂತ ಖಳ ಪಾತ್ರಗಳಿಗೇ ನಾನು ಸೈ ಎನ್ನುವುದನ್ನು ಕತ್ತಿ ಚಿತ್ರದಲ್ಲಿ ಮುಖೇಶ್ ತೋರಿಸಿಕೊಟ್ಟಿದ್ದಾರೆ.
ಇಡೀ ಚಿತ್ರದ ಹೆಗ್ಗಳಿಕೆ ಕುತೂಹಲಕಾರಿ ನಿರೂಪಣೆ. ಹಾಗೂ ವರ್ತಮಾನಕ್ಕೆ ಪೂರಕವಾಗಿ ಅವರು ಆಯ್ದುಕೊಂಡಿರುವ ಕಥಾವಸ್ತು. ಆದರೆ ಇದರ ನಡುವೆಯೂ ನಾಯಕ ನಟ ವಿಜಯ್‌ಗಾಗಿ ನಿರ್ದೇಶಕರು ಹಲವು ರಾಜಿಗಳನ್ನು ಮಾಡಿಕೊಂಡಿದ್ದಾರೆ. ಮಾಸ್ ಚಿತ್ರ ಇದಾಗಿರೋದರಿಂದ ಅಗತ್ಯಕ್ಕೆ ತಕ್ಕಂತೆ, ಡ್ಯಾನ್ಸ್, ರೋಮಾನ್ಸ್‌ಗಳನ್ನು ತುರುಕಿಸಿದ್ದಾರೆ. ಅದೇನೇ ಇರಲಿ, ಇಡೀ ಚಿತ್ರ ರಾಜಕಾರಣಿಗಳಿಗೆ, ಮೀಡಿಯಾಗಳಿಗೆ ಮತ್ತು ಭಾರೀ ಉದ್ಯಮಿಗಳಿಗೆ ಇರಿಸು ಮುರಿಸು ಉಂಟು ಮಾಡಿರೋದಂತೂ ಸತ್ಯ. ಇಂತಹದೊಂದು ವಸ್ತುವನ್ನು ಆಯ್ದು ಚಿತ್ರವಾಗಿಸಿದ್ದಕ್ಕೆ ಮುರುಗದಾಸ್ ಅವರನ್ನು ಅಭಿನಂದಿಸಬೇಕಾಗಿದೆ.

ಒಂದಿಷ್ಟು ಕ್ರಾಂತಿ ಪದಗಳು

1
ಮಸೀದಿ-ಮಂದಿರದೊಳಗೆ
ದೇವರನ್ನು ಹುಡುಕುವ
ಭಕ್ತನಿಗೂ
ಕಮ್ಯುನಿಸ್ಟ್ ಪಕ್ಷದ ಕಚೇರಿಯೊಳಗೆ
ಕಮ್ಯುನಿಸಂ ಹುಡುಕುವ
ಕಾರ್ಯಕರ್ತನಿಗೂ
ಹೆಚ್ಚಿನ ವ್ಯತ್ಯಾಸವಿಲ್ಲ
2
ಮಾಕ್ಸಿಂ ಗಾರ್ಕಿಯ
ತಾಯಿ
ನಂದಿಗ್ರಾಮದ ಮುಸ್ಲಿಮರ
ಮನೆ ಮನೆಯಲ್ಲಿ
ಎದೆ ಬಡಿದುಕೊಂಡು  ಅಳುತ್ತಿದ್ದಾಳೆ
3
ಸಿಂಗೂರಿನಲ್ಲಿ
ಟಾಟಾ ಕಾರು ಹರಿದದ್ದು
ಮಾರ್ಕ್ಸ್ ನ ಎದೆಯ ಮೇಲೆ !
ಚಾಲಕ ಸೀಟಿನಲ್ಲಿ
ಕಾರಟ್ ಕೂತಿದ್ದರು
4
ಕಂಬಾಲಪಲ್ಲಿಯಲ್ಲಿ
ದಲಿತರು ಬೆಂದು
ಕರಟಿ ಹೋಗುತ್ತಿರುವಾಗ
ಭಾರತೀಯ ಕಮ್ಯುನಿಸ್ಟರ
ಕುಡುಗೋಲು ಮೊಂಡಾಗಿತ್ತು
ಸುತ್ತಿಗೆ ಹಿಡಿ ಕಳೆದು ಕೊಂಡಿತ್ತು
ನಕ್ಷತ್ರ
ವೈದಿಕರ ದೀಪಾವಳಿಗೆ
ಮನೆಯ ಹೆಬ್ಬಾಗಿಲಲ್ಲಿ
ಹೆಣವಾಗಿ ತೂಗುತಿತ್ತು
5
ಚೀನಾದ ತಿಯಾನೈನ್ ಚೌಕದಲ್ಲಿ
ಕೆಂಪು ಯುದ್ಧ ಟ್ಯಾಂಕರ್ ಗಳು
ನೂರಾರು ನಿಶ್ಶಸ್ತ್ರ ವಿದ್ಯಾರ್ಥಿಗಳ 

ಎದೆಯ ಮೇಲೆ ಹರಿದಾಗ
ನೆನಪಾಯಿತು
ರಕ್ತ ಸಾಕ್ಷಿಗಳಿಗೆ ಮರಣವಿಲ್ಲ
6
ಕುತ್ತಿಗೆಗೆ ಕೆಂಪು ಪಟ್ಟಿ
ಕಟ್ಟಿಕೊಂಡು ತಿರುಗಾಡುವ
ನನ್ನ ಕಮ್ಯುನಿಸ್ಟ್ ಗೆಳೆಯನನ್ನು ನೋಡಿದಾಗ
ನನಗೆ ಮೇಡ್ ಇನ್ ಚೈನಾ
ಹಣೆ ಪಟ್ಟಿ ಹೊತ್ತ
ನಕಲಿ ಸರಕುಗಳ ನೆನಪಾಗುತ್ತದೆ
7
ಪಕ್ಷದ ಕಚೇರಿಯಲ್ಲಿ
"ಕಮ್ಯುನಿಸಂ ಎಂದರೇನು?'' ಎನ್ನೋದನ್ನು
ಎರಡು ಗಂಟೆ ತಮ್ಮ ನಾಯಕನಿಂದ
ಕೊರೆಸಿಕೊಂಡ ಆತನಿಗೆ
ಏನೊಂದೂ ಅರ್ಥವಾಗಲಿಲ್ಲ

ತಲೆಗೆಟ್ಟು ಮನೆಗೆ ಬಂದ ಮಗನಿಗೆ
ತಂದೆ ಅಂಗಳದ ಕಡೆ ಕೈ ತೋರಿಸಿ
ಹೇಳಿದ "ಇದೆ ಕಮ್ಯುನಿಸಂ"
ಅಲ್ಲಿ ಕಾಗೆಗಳು ಜೊತೆಯಾಗಿ ಹಂಚಿ ತಿನ್ನುತ್ತಿದ್ದವು

Tuesday, October 21, 2014

ನುಡಿಸಿರಿ ಮತ್ತು ವಿಚಾರವಾದಿಗಳ ಬೆಕ್ಕಿನ ಬಿಡಾರ!

 
ಒಬ್ಬ ಲೇಖಕನಿಗೆ, ಚಿಂತಕನಿಗೆ ವೇದಿಕೆ ಎಂದರೆ ಏನು? ಅದೊಂದು ಸ್ಥಾನವೆ? ಅದೊಂದು ಗೌರವವೆ? ಅಥವಾ ತನ್ನೊಳಗಿನ ವಿಚಾರಗಳನ್ನು ತೆರೆದಿಡಲು ಅವನಿಗೆ ದಕ್ಕಿದ ಒಂದು ಮಾಧ್ಯಮವೆ? ನುಡಿಸಿರಿಯಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ಭಾಗವಹಿಸುತ್ತಿರುವ ಬಗ್ಗೆ ಕೆಲವು ಗೆಳೆಯರು ನಡೆಸುತ್ತಿರುವ ದಾಳಿಯನ್ನು ನೋಡಿ ನನ್ನನ್ನು ಕಾಡಿದ ಪ್ರಶ್ನೆ ಇದು. ನನಗೆ ಸಿದ್ದಲಿಂಗಯ್ಯ ಯಾವ ವೇದಿಕೆಯನ್ನು ಏರಿದರು, ಯಾರ ವೇದಿಕೆಯನ್ನು ಏರಿದರು ಎನ್ನುವುದು ಮುಖ್ಯವಾಗುವುದಿಲ್ಲ. ಅವರು ಆ ವೇದಿಕೆಯಲ್ಲಿ ನಿಂತು ಏನನ್ನು ಮಾತನಾಡಿದರು ಎನ್ನುವುದಷ್ಟೇ ಮುಖ್ಯ. ಸಹಸ್ರಾರು ಜನರು ಸೇರಿರುವ ನುಡಿಸಿರಿ ವೇದಿಕೆಯಲ್ಲಿ ನಿಂತು ಸಿದ್ದಲಿಂಗಯ್ಯ ದಲಿತಪರ, ಪ್ರಗತಿಪರ, ಶೋಷಿತರ ಪರ ಮಾತುಗಳನ್ನು ಆಡಿದರೆ ಅದು ಅವರು ಯಾವುದೋ ಪ್ರಗತಿಪರ ವೇದಿಕೆಯಲ್ಲಿ ನಿಂತು ಆಡುವುದಕ್ಕಿಂತ ಹೆಚ್ಚು ಅರ್ಥಪೂರ್ಣ. ಯಾಕೆಂದರೆ, ಅಂತಹ ಮಾತುಗಳು ತಲುಪಬೇಕಾದವರನ್ನು ಮೊದಲು ತಲುಪಬೇಕು. ಸಿದ್ದಲಿಂಗಯ್ಯ ನುಡಿಸಿರಿ ವೇದಿಕೆಯಲ್ಲಿ ಅದನ್ನು ತಲುಪಿಸಲಿ ಎಂದು ನಾನು ಆಶಿಸುತ್ತೇನೆ.

 ನುಡಿಸಿರಿಯಲ್ಲಿ ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು ಭಾಗವಹಿಸಿ ಆಡಿದ ಮಾತುಗಳನ್ನು ನಾನು ಕೇಳಿದ್ದೇನೆ. ಕನ್ನಡದ ಸಂಸ್ಕೃತಿ ದುರ್ಯೋಧನ ಸಂಸ್ಕೃತಿ ಎಂದು, ಸ್ನೇಹ, ಛಲ, ಶೌರ್ಯಗಳನ್ನು ಹೊಸ ಪರಿಭಾಷೆಯಲ್ಲಿ ಅವರು ವಿವರಿಸಿದ್ದರು. ಹಾಗೆಯೇ ದಸರಾ ಸಮಾರಂಭವನ್ನು ಉದ್ಘಾಟಿಸಿ ಅವರು ಆಡಿದ ಮಾತುಗಳನ್ನೂ ಕೇಳಿದ್ದೇನೆ. ಅಲ್ಲಿ ಸೇರಿದ ಅಷ್ಟೂ ಜನರನ್ನು ದಂಗುಬಡಿಸುವಂತೆ, ಹಿಂಸೆಯ ಮೌಲ್ಯವನ್ನು ಪ್ರತಿಪಾದಿಸುವ ವಿಜಯದಶಮಿ ಆಚರಣೆಯ ಬಗ್ಗೆಯೇ ಪ್ರಶ್ನೆ ಎತ್ತಿದ್ದರು. ಈ ಮಾತುಗಳನ್ನು ವಿಚಾರವಾದಿಗಳ ವೇದಿಕೆಯಲ್ಲಿ ನಿಂತು ಆಡುವುದಕ್ಕಿಂತ, ಪುರೋಹಿತ ಶಾಹಿಗಳ ವೇದಿಕೆಯಲ್ಲಿ ನಿಂತು ಆಡುವುದಕ್ಕೆ ಹೆಚ್ಚು ಧೈರ್ಯಬೇಕು. ಶಕ್ತಿ ಬೇಕು. ವೈದಿಕ ಮೌಲ್ಯಗಳನ್ನು ನಂಬಿದವರು, ಆ ನಂಬಿಕೆಗೆ ಮೋಸ ಹೋದವರು ಸಹಿತ ಲಕ್ಷೋಪಲಕ್ಷ ಜನರು ಸೇರಿದ ವೇದಿಕೆಯಲ್ಲಿ ನಿಂತು ಇಂತಹ ಮಾತುಗಳನ್ನು ಆಡಿದರೆ ಅವು ಹೆಚ್ಚು ಪ್ರಯೋಜನಕಾರಿ. ಈ ಮಾತುಗಳಿಂದ ಬೆರಳೆಣಿಕೆಯ ಜನರು ಪ್ರಭಾವಿತರಾದರೂ ಸಾಕು, ಅದು ಮುಂದಿನ ದಿನಗಳಲ್ಲಿ ವೈಚಾರಿಕತೆಗೆ ಹೊಸ ದಿಕ್ಕನ್ನು ನೀಡಬಹುದು. ಆದರೆ ವಿಚಾರವಾದಿಗಳದ್ದು ಇತ್ತೀಚಿನ ದಿನಗಳಲ್ಲಿ ಬೆಕ್ಕಿನ ಬಿಡಾರವಾಗುತ್ತಿದೆ. ತಮ್ಮ್ನ ಸುತ್ತ ತಾವೇ ಬೇಲಿಯನ್ನು ಕಟ್ಟಿ, ಗೆರೆಗಳನ್ನು ಹಾಕಿಕೊಂಡು ಬಹುದೊಡ್ಡ ಸಂಖ್ಯೆಯ ಜನರನ್ನು ತನ್ನ ವಿಚಾರಗಳಿಂದ ದೂರವಿಡುತ್ತಿದ್ದಾರೆ. ತನ್ನ ವಿಚಾರಗಳನ್ನು ಹಂಚಿಕೊಳ್ಳಲು ಎಲ್ಲ ಮಾಧ್ಯಮಗಳನ್ನೂ ಶಕ್ತವಾಗಿ ಬಳಸಿಕೊಳ್ಳುತ್ತಾ, ಹೆಚ್ಚು ಹೆಚ್ಚು ಜನರನ್ನು ತಲುಪಬೇಕಾದವರು, ಇದು ಯಾರ ಪತ್ರಿಕೆ, ಇದು ಯಾರ ವೇದಿಕೆ ಎಂದು ಮೂಸಿ ನೋಡುತ್ತಾ, ಹೊಸ ರೂಪದ ಅಸ್ಪಶ್ಯತೆಯೊಂದನ್ನು ಹುಟ್ಟು ಹಾಕುತ್ತಿದ್ದಾರೆ. ಇದರ ಸಂಪೂರ್ಣ ಲಾಭವನ್ನು ವೈದಿಕಶಾಹಿ, ಪುರೋಹಿತಶಾಹಿ ಶಕ್ತಿಗಳು ತಮ್ಮದಾಗಿಸಿಕೊಳ್ಳುತ್ತಿವೆ.

ಹಾಗೆ ನೋಡಿದರೆ ಇಂದು ವೈದಿಕರು, ಉದ್ಯಮಿಗಳು ಆಕ್ರಮಿಸಿಕೊಳ್ಳದ ಒಂದೇ ಒಂದು ವೇದಿಕೆ ನಮ್ಮಲ್ಲಿಲ್ಲ. ಕನ್ನಡಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನಗಳೂ ಇಂದು ವೈದಿಕ ಸಮ್ಮೇಳನಗಳಾಗಿ ಪರಿವರ್ತನೆಯಾಗುತ್ತಿವೆ. ನಾವೇ ಒಂದಷ್ಟು ಸಮಾನಮನಸ್ಕರು ಹಮ್ಮಿಕೊಂಡ ಸಮ್ಮೇಳನ ತನ್ನ ಉದ್ದೇಶವನ್ನು ಸಂಪೂರ್ಣವಾಗಿ ಸಾಧಿಸಿಕೊಳ್ಳುವುದಿಲ್ಲ. ನಾವೇ ಆಡಿದ ಮಾತುಗಳನ್ನು ನಾವೇ ಕುಳಿತು ಕೇಳಿ, ಎದ್ದು ಬಂದಂತೆ ಇದು. ಅದೇ ಸಂದರ್ಭದಲ್ಲಿ ಯಾರೋ ಒಬ್ಬ ಒಂದೈವತ್ತು ಸಾವಿರ ಜನರನ್ನು ಸೇರಿಸಿ ಒಬ್ಬ ವಿಚಾರವಾದಿಗೆ ವೇದಿಕೆ ಕೊಟ್ಟಾಗ, ತಾನು ಭಾಗವಹಿಸುವುದಿಲ್ಲ ಎಂದರೆ ಅದರಿಂದ ನಷ್ಟ ಯಾರಿಗೆ? ಒಬ್ಬ ಭಾಷಣಕಾರ ಅಲ್ಲಿ ನರ್ತಿಸುವುದಕ್ಕೋ, ಮನರಂಜಿಸುವುದಕ್ಕೋ ವೇದಿಕೆ ಏರುವುದಿಲ್ಲ. ಅವನು ಆ ವೇದಿಕೆಯೇರಿ, ಆ ವೇದಿಕೆಯ ಮನಸ್ಥಿತಿಗೆ ಸಂಬಂಧ ಪಡದ ಹೊಸ ವಿಷಯವೊಂದನ್ನು ಮುಂದಿಟ್ಟಾಗ ಸೇರಿದ ಯುವಕರಲ್ಲಿ ನಾಲ್ಕು ಜನ ಆಲಿಸಿ ಅದನ್ನು ಒಪ್ಪಿಕೊಂಡರೂ ಅದು ಸಮಾಜಕ್ಕೆ ಸಿಗುವ ಅತಿ ದೊಡ್ಡ ಲಾಭ. ವೈಚಾರಿಕತೆ ಜನಸಾಮಾನ್ಯರಿಂದ ದೂರದಲ್ಲಿ ಬೆಕ್ಕಿನ ಬಿಡಾರ ಕಟ್ಟಿಕೊಂಡು ತಮಗೆ ತಾವೇ ಬದುಕಿಕೊಳ್ಳುತ್ತಿರುವಾಗ ಆರೆಸ್ಸೆಸ್‌ನಂತಹ ಸಂಘಟನೆಗಳು ಏನೇನೂ ತಿಳಿಯದ ಹುಡುಗರನ್ನು ಒಟ್ಟುಗೂಡಿಸಿ ಕಬಡ್ಡಿ ಆಡಿಸುತ್ತಾ, ಮೊಸರುಕುಡಿಕೆ ಆಡಿಸುತ್ತಾ ತನ್ನ ಆಲೋಚನೆಗಳನ್ನು ಬಿತ್ತುತ್ತವೆ. ಯಾವ ವಿಚಾರಗಳನ್ನು ಹಂಚಲು ಯಾವ ವೇದಿಕೆ ಏರುವುದಕ್ಕೂ ಅವರು ಅಂಜುವುದಿಲ್ಲ. ಆದರೆ, ಇತ್ತೀಚಿನ ವೈಚಾರಿಕ ಚಿಂತಕರು ಮಾತ್ರ ಎಲ್ಲಿ ತಮ್ಮ್ನ ವೈಚಾರಿಕ ಇಸ್ತ್ರಿ, ಮಡಿ ಹಾಳಾಗಿ ಬಿಡುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.

 ಯಾವುದಾದರೂ ವೇದಿಕೆ ಏರುವುದಕ್ಕೆ ಅವಕಾಶ ಸಿಕ್ಕಿದರೆ ಅವರ ಎಂಜಲೆಲೆ ನೆಕ್ಕುವುದಕ್ಕೆ ಸಿದ್ಧರಿರುವ, ತನ್ನ ವಿಚಾರಗಳನ್ನು ಮಾರಿಬಿಡುವ ಒಂದು ವರ್ಗವಿದೆ. ಅವರ ಕುರಿತಂತೆ ನಾನಿಲ್ಲಿ ಮಾತನಾಡುತ್ತಿಲ್ಲ. ತಮ್ಮ ವಿಚಾರಗಳನ್ನು ಹಂಚಲು ವೇದಿಕೆಗಾಗಿ ಕಾಯುತ್ತಿರುವ ಚಿಂತಕರು, ನಾಯಕರು ನಮ್ಮ ನಡುವೆ ಸೃಷ್ಟಿಯಾಗಬೇಕು ಎನ್ನುವುದು ನನ್ನ ಬಯಕೆ. ನುಡಿಸಿರಿಯ ಅಸಂಖ್ಯ ಜನರ ನಡುವೆ, ನುಡಿಸಿರಿಯೊಳಗಿರುವ ವಿಪರ್ಯಾಸಗಳನ್ನು ಹೇಳುವ ಧೈರ್ಯವುಳ್ಳ ಚಿಂತಕರು ಬೇಕಾಗಿದ್ದಾರೆ. ಯಾಕೆಂದರೆ ಇಂದು ಹೊಸ ತಲೆಮಾರಿನ ಹೊಸ ಹುಡುಗರಿಗೆ ವೈಚಾರಿಕ, ಪ್ರಗತಿಪರ ಚಿಂತನೆ ದಕ್ಕದಂತೆ ಕೋಟೆ ಕಟ್ಟುವ ಪ್ರಯತ್ನವೊಂದು ನಡೆಯುತ್ತಿದೆ. ಅಂತಹ ಕೋಟೆಗಳನ್ನು ಮುರಿದು ಅವರೆಡೆಗೆ ತಮ್ಮ ಆಲೋಚನೆಗಳನ್ನು ಹೊತ್ತುಕೊಂಡು ಹೋಗುವ ಬರಹಗಾರರು ಹುಟ್ಟಬೇಕಾಗಿದೆ. ಅಂತಹವರು ಯಾವ ವೇದಿಕೆಯೇರಿದರೂ, ಆ ವೇದಿಕೆಯನ್ನೇ ತಮಗೆ ಪೂರಕವಾಗಿ ಬದಲಾಯಿಸಿ ಬಿಡುತ್ತಾರೆ. ತನಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಇಡೀ ವೇದಿಕೆಯನ್ನು ತನಗೆ ಪೂರಕವಾಗಿ ಸಿದ್ದಲಿಂಗಯ್ಯ ಪರಿವರ್ತಿಸಬೇಕು ಎಂದು ಎಲ್ಲ ವಿಚಾರವಾದಿಗಳು ಅವರಿಗೆ ಒತ್ತಡ ಹೇರಬೇಕೇ ವಿನಃ ಅವರನ್ನು ವ್ಯಂಗ್ಯ ಮಾಡುತ್ತಾ, ತಮಾಷೆ ಮಾಡುತ್ತಾ ಕಾಲಹರಣ ಮಾಡುವುದಲ್ಲ. ನುಡಿಸಿರಿ ಎಂದಲ್ಲ, ಯಾವುದೇ ವೇದಿಕೆಯನ್ನು ನಮಗೆ ಪೂರಕವಾಗಿ ಬಳಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಇಂದು ವಿಚಾರವಾದಿಗಳು ಒಟ್ಟು ಸೇರಿ ನಡೆಸುವ ಸಮ್ಮೇಳನದಲ್ಲಿ ಶ್ರೀಸಾಮಾನ್ಯರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಆದುದರಿಂದ ಎಲ್ಲಿ ಶ್ರೀಸಾಮಾನ್ಯರಿರುತ್ತಾರೆಯೋ ಆ ವೇದಿಕೆಯನ್ನು ಹುಡುಕಿಕೊಂಡು ಹೋಗುವ ಪ್ರಯತ್ನ ನಡೆಯಬೇಕಾಗಿದೆ. ಹಾಗೆಯೇ ಅಲ್ಲಿ ಭಾಗವಹಿಸುವ ಚಿಂತಕರಿಗೆ, ವೇದಿಕೆಯನ್ನು ಸದ್ಬಳಕೆ ಮಾಡಲು ಒತ್ತಡಹೇರುವ ಕೆಲಸ ಹೆಚ್ಚು ಹೆಚ್ಚು ನಡೆಯಬೇಕು. ಈ ಹಿನ್ನೆಲೆಯಲ್ಲಿ ನಾನು ನುಡಿಸಿರಿಗೆ ಶುಭಾಶಯ ಹೇಳುವುದಿಲ್ಲ. ಆದರೆ ಅದರಲ್ಲಿ ಭಾಗವಹಿಸುತ್ತಿರುವ ಸಿದ್ದಲಿಂಗಯ್ಯನವರಿಗೆ ಶುಭಾಶಯ ಸಲ್ಲಿಸುತ್ತೇನೆ. ಅವರಿಂದ ವಿಶೇಷವಾದುದನ್ನು ನಿರೀಕ್ಷಿಸುತ್ತೇನೆ.

Sunday, October 19, 2014

ಹೊಳೆದದ್ದು ಹೊಳೆದಂತೆ-4

 1
ಚಹಾ ತಯಾರಿಸುವವನಷ್ಟೇ ಚಹದ ಕುರಿತಂತೆ
ನಿಜದ ಮಾತುಗಳನ್ನಾಡಬಲ್ಲ ಹೊರತು,
ಚಹಾ ಮಾರುವವನಲ್ಲ

2
ಇನ್ನಷ್ಟು ಮಾತನಾಡಲಿ ಎಂದು ಬಯಸುತ್ತಿರುವಾಗಲೇ ವಿವೇಕಿ ತನ್ನ ಮಾತು ನಿಲ್ಲಿಸಿ ಬಿಡುತ್ತಾನೆ.
ಇನ್ನೊಂದು ದಿನ ಇರು ಎನ್ನುವಷ್ಟರಲ್ಲಿ ವಿವೇಕಿ ತನ್ನ ಗಂಟು ಮೂಟೆಯೊಂದಿಗೆ ಹೊರಟು ಬಿಟ್ಟಿರುತ್ತಾನೆ
3
ಎಲ್ಲಿ ನಮ್ಮ ಉಪಸ್ಥಿತಿ ಅನಗತ್ಯವೋ, ಅಲ್ಲಿ ನಮ್ಮ ಅಸ್ತಿತ್ವ ಹೆಣದಂತೆ ಕೊಳೆಯತೊಡಗುತ್ತದೆ.

Sunday, October 12, 2014

ಲೈಬ್ರರಿಯಿಂದ ಆಯ್ದ ಪದ್ಯಗಳು


ಕೆಲವರ ಮನೆಯ
ಲೈಬ್ರರಿಗಳು
ಅವರ ಡೈನಿಂಗ್ ಟೇಬಲ್
ಮೇಲಿರುವ ಪ್ಲಾಸ್ಟಿಕ್
ಬಾಳೆಹಣ್ಣುಗಳಂತೆ
ಆಕರ್ಷಿಸುತ್ತವೆ

ಮನೆಗೊಂದು ಲೈಬ್ರರಿ ಬೇಕು
ಎಂದು ಕಪಾಟು ತುಂಬಾ
ಪುಸ್ತಕಗಳ ತಂದು ಸುರಿದೆ
ಇದೀಗ ಜಿರಳೆಗಳೆಲ್ಲ
ಪಂಡಿತರಂತೆ ಮನೆ ತುಂಬಾ
ಓಡಾಡುತ್ತಿವೆ

ಶ್ರೀಮಂತನ ಮನೆಯ
ಕಪಾಟಿನಲ್ಲಿ ಆರಾಧಿಸಲ್ಪಡುವ
ಗೋಕಾಕರ ಮಹಾ ಕಾವ್ಯದ
ದರದಲ್ಲಿ
ಬಡ ಓದುಗನೊಬ್ಬ ದೇವನೂರರ
ಎಲ್ಲ ಕೃತಿಗಳನ್ನು ಕೊಂಡು ಓದಬಹುದಿತ್ತು

ಬಡ ಓದುಗನ ಮುಂದೆ
ಇದು ನನ್ನ ಲೈಬ್ರರಿ ಎಂದು ಕೊಚ್ಚಿಕೊಳ್ಳುವ
ಶ್ರೀಮಂತನಿಗೆ ಗೊತ್ತಿಲ್ಲ
ಆ ಕಪಾಟು ಲೇಖಕರ ಗೋರಿ
ಎನ್ನೋದು

ನನ್ನ ಲೈಬ್ರರಿಯಲ್ಲಿ
ಅವಳಿಗಿಷ್ಟವಾದುದು
ಅಡುಗೆ ಪುಸ್ತಕ ಮಾತ್ರ!
ಸಾಹಿತ್ಯಕ್ಕೆ ಅನ್ನದ  ಪರಿಮಳವಿದೆ
ಎನ್ನೋದನ್ನು ಸಾಬೀತು
ಮಾಡಿದ್ದಾಳೆ ಅವಳು

ಮನೆಯಲ್ಲಿ ಅಡುಗೆ ಅನಿಲ
ಮುಗಿದಾಗೆಲ್ಲ
ಅವಳು ನನ್ನ ಲೈಬ್ರರಿ ಮುಂದೆ
ಅನುಮಾನಾಸ್ಪದವಾಗಿ ಓಡಾಡುವಾಗ
ನನಗೆ ಭಯವಾಗುತ್ತದೆ

Friday, October 10, 2014

ಹೊಳೆದದ್ದು ಹೊಳೆದಂತೆ-3

1
ಈ ಭೂಮಿ ತಿಂದು ಮುಗಿಯಲಾರದಷ್ಟು ಶ್ರೀಮಂತವಾಗಿದೆ.ಯಾಕೆಂದರೆ ಅದನ್ನು ದೇವರು ಸೃಷ್ಟಿಸಿದ.
ಆದರೂ ಸ್ವಾರ್ಥಿ ಮನುಷ್ಯ ಬಡತನವನ್ನು ಸೃಷ್ಟಿಸಿದ
2
ಕಾಡುಗಳಲ್ಲಿ ಗೆಡ್ಡೆ ಗೆಣಸುಗಳನ್ನು
ಅಗೆಯುತ್ತಾ ಬದುಕುತ್ತಿದ್ದಾಗ
ಮನುಷ್ಯರ ನಡುವೆ ಬಡವರಿರಲಿಲ್ಲ

ಚಿನ್ನ, ವಜ್ರ, ವೈಡೂರ್ಯಗಳನ್ನು
ಅಗೆಯಲು ಶುರು ಮಾಡಿದ ಬಳಿಕ
ಮನುಷ್ಯರೊಳಗೆ ಬಡವ ಹುಟ್ಟಿಕೊಂಡ
3
ವಿಜ್ಞಾನ-ಅಧ್ಯಾತ್ಮ ಎರಡರದೂ ಹುಡುಕುವ ಆಟ
ಒಂದು, ಬಚ್ಚಿಟ್ಟದ್ದನ್ನು ಹುಡುಕುತ್ತದೆ
ಇನ್ನೊಂದು, ಬಚ್ಚಿಟ್ಟವನನ್ನು
4
ಮಾನವ ನಿರ್ಮಿಸಿದ ಯಂತ್ರಗಳು ಪರಸ್ಪರ ಪ್ರೇಮಿಸಿ ಸಂಭೋಗಕ್ಕಿಳಿದಾಗ
ದೇವರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ

Saturday, October 4, 2014

ಪಾತುಮ್ಮಜ್ಜಿಯ ದಾಹ

 ರಾತ್ರಿ ಹನ್ನೊಂದು ಗಂಟೆ ಇರಬಹುದು. ಅಮ್ಮ, ತಂಗಿಯರೆಲ್ಲ ಒಳಗೆ ನಿದ್ದೆ ಹೋಗಿದ್ದರು. ಕರೆಂಟ್ ಇಲ್ಲದ ಕಾರಣ ಚಿಮಿಣಿ ದೀಪ ಹಚ್ಚಿಟ್ಟು ನಾನು ಅದೇನೋ ಓದುತ್ತಿದ್ದೆ. ಹೋರಗೆ ಧಾರಾಕಾರ ಮಳೆ. ಅಂಗಳದ ತುಂಬಾ ನೀರು. ಆಗಲೇ ಇರಬೇಕು.... ಆ ಒದ್ದೆ ರಾತ್ರಿಯನ್ನು ಈಜಿಕೊಂಡು ಬಂದ ಕರೆ ನನ್ನನ್ನು ಬೆಚ್ಚಿ ಬೀಳಿಸಿದ್ದು. ಯಾರೋ ನನ್ನ ಹೆಸರಿಡಿದು ಕರೆಯುತ್ತಿದ್ದರು. ಬಾಗಿಲು ತಟ್ಟಿದ ಸದ್ದು ಬೇರೆ. ಒಳ ಹೊರಗೆ ಸುಳಿದಾಡುತ್ತಿದ್ದ ಚಳಿಗಾಳಿಗೆ ಚಿಮಿಣಿ ದೀಪ ಚಡಪಡಿಸುತ್ತಿತ್ತು. ನನ್ನಾಳದಲ್ಲಿ ಅವ್ಯಕ್ತ  ಭಯವೊಂದು ಭುಗ್ಗೆಂದು ಎದ್ದು, ತಳ ಸೇರಿತು. ಹೋಗಿ ಬಾಗಿಲು ತೆರೆದರೆ ಕೆಳಗಿನ ಮನೆಯ ಅದ್ದು ಚಳಿಯೋ, ಭಯವೋ ನಡುಗುತ್ತಾ ನಿಂತಿದ್ದ. ಕೊಡೆ ಬಿಡಿಸಿ ನಿಂತಿದ್ದರೂ ಅವನ ತಲೆ, ಮುಖ, ಮೈಯೆಲ್ಲ ಒದ್ದೆಯಾಗಿತ್ತು. ಅವನು ನನ್ನನ್ನು ಕಂಡದ್ದೇ ಒಂದೇ ಉಸಿರಿಗೆ ಹೇಳಿದ ‘‘ನೀರು ಬೇಕಾಗಿತ್ತು...ಝಂಝಂ ನೀರು ಬೇಕಾಗಿತ್ತು''
ಅವನ ಧ್ವನಿ ಕಂಪಿಸುತ್ತಿರುವ ರೀತಿಗೇ ನನಗೆಲ್ಲ ಅರ್ಥವಾಗಿ ಹೋಯಿತು. ಅದ್ದುವಿನ ಮುತ್ತಜ್ಜಿ ಪಾತುಮ್ಮಾದ ಸಾವಿನ ಅಂಚನ್ನು ತಲುಪಿದ್ದಾರೆ. ನನ್ನ ಝಂಝಂ ನೀರಿಗಾಗಿ ಆಕೆ ಕೊನೆಯ ಉಸಿರನ್ನು ಹೊರದಬ್ಬದೇ ಹಾಗೆ ಕಾಯುತ್ತಾ ಮಲಗಿದ್ದಾಳೆ.
ಪಾತುಮ್ಮಾದ ನಮ್ಮೂರಿನ ಅತಿ ಹಿರಿಯ ಜೀವ. ವಯಸ್ಸು ನೂರು ದಾಟಿರಬಹುದು. ಆ ಊರಿನ ಹೆಚ್ಚಿನ ತರುಣರನ್ನು ತಾಯಿಯ ಗರ್ಭದಿಂದ ಹೊರಗೆಳೆದದ್ದು, ಹುಟ್ಟಿದ ಮಗುವನ್ನು ನಲವತ್ತು ದಿನ ಮೀಯಿಸಿದ್ದು, ಸಣ್ಣ ಪುಟ್ಟ ತುಂಟ ರೋಗಗಳಿಂದ ಮಕ್ಕಳನ್ನು ತನ್ನ ಹಳ್ಳಿ ಮದ್ದಿನ ಮೂಲಕ ರಕ್ಷಿಸಿದ್ದು  ಇದೇ ಪಾತುಮ್ಮಾದ. ನಾನು ತಾಯಿಯ ಹೊಟ್ಟೆಯಿಂದ ನೇರವಾಗಿ ಪಾತುಮ್ಮನ ಬೊಗಸೆಗೆ ಬೀಳಲಿಲ್ಲವಂತೆ. ತಲೆಯನ್ನು ಉಲ್ಟಾ ಮಾಡಿ, ತಾಯಿಯ ಗರ್ಭದಿಂದ ಬರಲಾರೆ ಎಂದು ಹಟ ಹಿಡಿದಿದ್ದೆನಂತೆ. ಇದೇ ಪಾತುಮ್ಮಜ್ಜಿ ತನ್ನೆಲ್ಲ ಶ್ರಮದಿಂದ, ತಾಯಿಯ ಗರ್ಭವನ್ನು ನೀವಿ ನೀವಿ ತಲೆಯನ್ನು ಉಲ್ಟಾ ಮಾಡಿ, ಮೆಲ್ಲಗೆ ತಾಯಿಯ ಗರ್ಭದಿಂದ ಹೊರಗೆ ಜಾರಿಸಿದರಂತೆ.
‘‘ನಿನ್ನ ಹಟ ನನ್ನಲ್ಲಿ ತೋರಿಸಬೇಡ. ನೀನು ಗರ್ಭದೊಳಗೆ ಇದ್ದಾಗಲೇ ನಿನ್ನ ಆಟಕ್ಕೆ ಹೆದರಲಿಲ್ಲ. ಈಗ ಹೆದರುತ್ತೇನಾ... ಹೆಚ್ಚಿಗೆ ಮಾತನಾಡಿದರೆ ಮತ್ತೆ ತಲೆ ಉಲ್ಟಾ ಮಾಡಿ, ಅಲ್ಲಿಗೇ ವಾಪಸ್ ಕಳುಹಿಸಿಲಿಕ್ಕುಂಟು’’ ಎಂದು ಪಾತುಮ್ಮ ನನ್ನಲ್ಲಿ ಆಗಾಗ ಕೊಚ್ಚಿಕೊಳ್ಳುವುದಿತ್ತು.
ನನ್ನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿದ್ದೂ ಆಕೆಯೇ ಅಂತೆ. ನಾನು ಅಳದೆ ಆಕೆಯನ್ನು ನೋಡಿ ನಕ್ಕೆನಂತೆ. ಅದು ನಿಜವೇ ಇರಬಹುದು. ಆಕೆ ನನ್ನ ನಲ್ವತ್ತು ದಿನ ಮೀಯಿಸಿದಳು. ಕೈ ಹಿಡಿದು ನಡೆಸಿದಳು. ರೋಗಗಳಿಂದ ರಕ್ಷಿಸಿದಳು. ಕತೆ ಹೇಳಿಕೊಟ್ಟಳು. ಪದ ಹಾಡಿ ಮಲಗಿಸಿದಳು. ಅಂತಹ ಅಜ್ಜಿಗಳಿಗೆಲ್ಲ ಅಜ್ಜಿಯೆನ್ನಬಹುದಾದ ಪಾತುಮ್ಮ ನಾಲ್ಕೆೃದು ತಿಂಗಳ ಹಿಂದೆ ನನ್ನ ಕೈಯನ್ನು ತನ್ನ ಕಂಪಿಸುವ ಕೈಗಳಲ್ಲಿ ತುಂಬಿ ಕೇಳಿದ್ದಳು. ‘ಮಗನೇ ... ನಾನು ಸಾಯುವಾಗ ಝಂಝಂ ನೀರು ಕುಡಿದು ಸಾಯಬೇಕು ಎಂದು ಆಸೆ. ಎಲ್ಲಿಂದಾದರೂ ಝಂಝಂ ನೀರು ತರಿಸಿಟ್ಟುಕೋ... ಸಾಯುವ ಮೊದಲು ನನ್ನ ಪುಳ್ಳಿ ಅದ್ದುವನ್ನು ಕಳಿಸುತ್ತೇನೆ...’’ ಇದೀಗ ಈ ಹೊತ್ತಲ್ಲದ ಹೊತ್ತಿನಲ್ಲಿ ಪಾತುಮ್ಮಾದಳ ಪುಳ್ಳಿ ಅದ್ದು ನನ್ನ ಮುಂದೆ ನಿಂತು ಝಂಝಂ ನೀರು ಕೇಳುತ್ತಿದ್ದಾನೆ.
ಸಾವಿರಾರು ವರ್ಷಗಳ ಹಿಂದೆ ಮಕ್ಕಾ ಮರುಭೂಮಿಯಲ್ಲಿ ಪ್ರವಾದಿ ಇಬ್ರಾಹೀಂರ ಪತ್ನಿ ಹಾಜಿರಾ ಎನ್ನುವ ತಾಯಿ ತನ್ನ ಮಗುವಿನ ಜೊತೆ ಮರುಭೂಮಿ ಪಾಲಾದರಂತೆ. ಆ ಮರುಭೂಮಿಯ ನಟ್ಟ ನಡುವೆ ಮಗು ಬಾಯಾರಿ ಅಳತೊಡಗಿತು. ಪತ್ನಿ ಹಾಜಿರಾಂ ಎದೆ ಹಾಲು ಬತ್ತಿ ಹೋಗಿತ್ತು. ಮಗುವಿನ ಅಳುವಿನ ಸದ್ದು ಜೋರಾದಂತೆ ಹಾಜಿರಾ ನೀರಿಗಾಗಿ ಅತ್ತಿತ್ತ ತಡಕಾಡತೊಡಗಿದರು. ಮಗುವಿನ ಅಳು ಮರುಭೂಮಿಯನ್ನು ವ್ಯಾಪಿಸತೊಡಗಿದಂತೆ ಹಾಜಿರಾ ಏಳು ಬಾರಿ ನೀರಿಗಾಗಿ ಅಲೆಯುತ್ತಾ ಸಫಾ- ಮರ್ವಾ ಪರ್ವತವನ್ನಿ ಏರಿ ಇಳಿದರಂತೆ. ಆದರೆ ಒಂದು ಹನಿ ನೀರೂ ಸಿಗಲಿಲ್ಲ. ಇತ್ತ ಮಗುವಿನ ಬಳಿ ಅಂದರೆ ಬಾಯಾರಿ ನೊಂದ ಮಗುವಿನ ಪಾದದ ಬಡಿತಕ್ಕೆ ಎದೆಯಿಂದ ಹಾಲುಕ್ಕುವಂತೆ ಮರುಭೂಮಿಯಿಂದ ನೀರಿ ಚಿಮ್ಮಿತಂತೆ. ಚಿಮ್ಮಿ ಹರಿಯ ತೊಡಗಿದ ನೀರನ್ನು ತಾಯಿ ಹಾಜಿರಾ ‘‘ಝಂಝಂ(ನಿಲ್ಲು ನಿಲ್ಲು)’’ ಎಂದು ತಡೆದು, ತನ್ನ ಮಗುವಿಗೆ ಉಣಿಸಿದರಂತೆ. ಇಂದಿಗೂ ಮಕ್ಕಾದಲ್ಲಿ ಝಂಝಂ ನೀರು ಉಕ್ಕಿ ಹರಿಯುತ್ತಿದೆ. ಹಜ್ ಯಾತ್ರೆಗೆ ಹೋದ ಎಲ್ಲ ಯಾತ್ರಿಕರೂ ಹಾಜಿರಾ ಏಳು ಬಾರಿ ಬೆಟ್ಟವೇರಿ ಇಳಿದ ಸಂಕೇತವಾಗಿ, ಸಫಾ ಮರ್ವಾವನ್ನು ನಿರ್ವಹಿಸುತ್ತಾರೆ. ಜೊತೆಗೆ ಈ ಝಂಝಂ ನೀರಿನೊಂದಿಗೆ ಮರಳುತ್ತಾರೆ. ಹಜ್ ಯಾತ್ರೆ ನಿರ್ವಹಿಸಿ ಬಂದವರ ಮನೆಯಲ್ಲಿ ಈ ಝಂಝಂ ನೀರು ಜೋಪಾನವಾಗಿರುತ್ತದೆ. ಆ ಮನೆಯ ಬಾಗಿಲು ತಟ್ಟುವ ಮರಣ ದೇವತೆಯ ಪಾದವನ್ನು ತೊಳೆಯುವುದಕ್ಕೆ. ಮರಣಯ್ಯೆಯಲ್ಲಿರುವವರ ಕೊನೆಯ ದಾಹವನ್ನು ತಣಿಸುವುದಕ್ಕಾಗಿ.
ನನ್ನ ತಾಯಿಯ ಅಣ್ಣ ಮತ್ತು ಅವರ ಪತ್ನಿ ಅಂದರೆ ಮಾವ ಮತ್ತು ಅತ್ತೆ ಹಜ್ ನಿರ್ವಹಿಸುವುದಕ್ಕೆ ಹೋದವರು ಎರಡು ತಿಂಗಳ ಹಿಂದೆ ಮರಳಿದ್ದರು. ಬಳಿಕ ನಮ್ಮ ಮನೆಗೂ ಬೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮಕ್ಕಾದಿಂದ ತಂದ ಒಂದು ಜಪಮಣಿ ಸರ, ಸಣ್ಣದೊಂದು ನಮಾಜು ನಿರ್ವಹಿಸುವ ಚಾಪೆ ಹಾಗೂ ಒಂದು ದೊಡ್ಡ ಬಾಡಲಿಯಲ್ಲಿ ಝಂಝಂ ನೀರು ತಂದಿದ್ದರು. ಆದ ನನಗೆ ಪಾತುಮ್ಮಾದಳ ನೆನಪಾಯಿತು. ಇರಲಿ ಎಂದು ಜೋಪಾನವಾಗಿ ಇಟ್ಟಿದ್ದೆ. ನಮ್ಮ ಮನೆಯಲ್ಲಿ ಝಂಝಂ ನೀರಿರುವುದು ಹಲವರಿಗೆ ತಿಳಿದು, ತಮ್ಮ ಅಜ್ಜಿ, ತಾಯಿ... ಹೀಗೆ ಯಾರದಾದರೂ ಮರಣದ ಸುದ್ದಿಯ ಜೊತೆಗೆ ಈ ಝಂಝಂ ನೀರಿಗಾಗಿ ಬರುತ್ತಿದ್ದರು. ಇಲ್ಲ ಎನ್ನುವುದು ತೀರಾ ಕಷ್ಟವಾಗಿತ್ತು. ವಾರದ ಹಿಂದೆ ಈ ಪಾತುಮ್ಮಜ್ಜಿ ಬಂದವಳು ‘‘ಮಗನೇ... ಎಲ್ಲವನ್ನು ಕೊಟ್ಟು ಮುಗಿಸಬೇಡ... ನನಗೆ ಎರಡು ಗುಟುಕು ನೀರು ಇರಲಿ’’ ಎಂದು ಮುದ್ದಾದ ಬೊಚ್ಚು ಬಾಯಿಯಿಂದ ಪಟ್ಟ ಮಗುವಿನಂತೆ ನಕ್ಕಿದ್ದಳು.

‘‘ಆಯಿತಜ್ಜಿ ಎಂದು ಭರವಸೆ ನೀಡಿದ್ದೆ. ಮೂರು ದಿನಗಳ ಹಿಂದೆ ಪಾತುಮ್ಮಜ್ಜಿ ಕುಸಿದು ಬಿದ್ದ ಸುದ್ದಿ ಸಿಕ್ಕಿತ್ತು. ಆಕೆಯನ್ನು ನೋಡುವುದಕ್ಕೂ ಹೋಗಿದ್ದೆ. ಆಕೆ ನನ್ನನ್ನೇ ನೋಡಿ ವಿಚಿತ್ರವಾಗಿ ನಕ್ಕಿದ್ದಳು. ಆಮೇಲೆ ಆಕೆಯ ಆರೋಗ್ಯ ಕೆಡುತ್ತಾ ಬಂದಿತ್ತು.
***
‘‘ಇಲ್ಲೇ ನಿಲ್ಲು’’ ಎಂದು ಅದ್ದುವಿಗೆ ಹೇಳಿ, ನಾನು ಚಿಮಿಣಿ ಹಿಡಿದು ಒಳಕೋಣೆಗೆ ಹೋದೆ. ‘‘ಯಾರೋ ಅದು...’’ ಒಳಗಿನಿಂದ ಅಮ್ಮ ಕೇಳಿದಳು.
‘‘ಪಾತುಮ್ಮಜ್ಜಿ ಪುಳ್ಳಿ ಬಂದಿದ್ದಾನೆ... ಝಂಝಂ ನೀರು ಬೇಕಂತೆ...’’ ಎಂದೆ. ‘‘ಕೊನೆಗೂ ಮುದುಕಿಗೆ ಹೋಗುವ ಸಮಯ ಬಂತೂಂತ ಕಾಣುತ್ತದೆ...’’ ಅಮ್ಮನ ಗೊಣಗು ಕೇಳಿತು.
ನಾನು ಕೋಣೆಯ ಕಪಾಟು ತೆರೆದೆ. ಮೇಲಿನ ಚೌಕದಲ್ಲಿ ಝಂಝಂ ಬಾಟಲಿ ಹೊಳೆಯುತ್ತಿದೆ. ಕೈಗೆತ್ತಿಕೊಂಡೆ ಬಾಟಲಿ ನೋಡುತ್ತಿದ್ದಂತೆಯೇ ನನ್ನ ಹದಯ ಬಾಯಿಗೆ ಬಂತು... ಬಾಟಲಿ ಖಾಲಿಯಾಗಿತ್ತು. ಮೊನ್ನೆ ನೋಡಿದಾಗ ಬಾಟಲಿಯಲ್ಲಿ ನೀರಿತ್ತಲ್ಲ? ಬಹುಶಃ ತಂಗಿಯರು ಯಾರೋ ಕೇಳಿದರೆಂದು ಕೊಟ್ಟು ಬಿಟ್ಟರ? ಬಾಟಲಿಯ ತಳ ಒಣಗಿತ್ತು. ಯಾಕೋ ನನ್ನ ಕೈ ಕಂಪಿಸಿತು. ಗಂಟಲು ಕಟ್ಟಿದಂತಾಯಿತು. ಅದ್ದುವಿಗೆ ಏನೆಂದು ಹೇಳಲಿ? ಒಂದು ಕ್ಷಣ ಹಾಗೇ ಪಕ್ಕದ ಮಂಚದಲ್ಲಿ ಕೂತು ಬಿಟ್ಟೆ. ಅಷ್ಟೇ... ಏನೋ ಹೊಳೆಯಿತು ನನಗೆ. ಆ ಕತ್ತಲಲ್ಲಿ ಮಿಂಚೊಂದು ಸುಳಿಯುವಂತೆ. ಬಾಟಲಿಯೊಂದಿಗೆ ನೇರವಾಗಿ ಅಡುಗೆ ಕೋಣೆ ಹೊಕ್ಕೆ. ಅಲ್ಲಿ ಅಮ್ಮ ಬಾವಿಯಿಂದ ತಂದ ನೀರು ಕೊಡ ತುಂಬ ಹೊಳೆಯುತ್ತಿತ್ತು. ಅರ್ಧ ಬಾಟಲು ನೀರನ್ನು ತುಂಬಿಸಿ, ಹೊರಗೆ ಕಾಯುತ್ತಿರುವ ಅದ್ದುವಿನ ಕೈಗಿತ್ತೆ. ‘‘ಸ್ವಲ್ಪ ಉಳಿದಿತ್ತು... ತೆಗೆದುಕೋ’’ ಎಂದೆ.
***
ಮರುದಿನ ನಾನು ತಾಯಿ ಮತ್ತು ತಂಗಿಯರ ಜೊತೆಗೆ ಪಾತುಮ್ಮನ ಮನೆಗೆ ಹೋದೆ. ಮತದೇಹವನ್ನು ಮೀಯಿಸುವುದಕ್ಕೆ ಇಟ್ಟಿದ್ದರು. 

ಅದ್ದು ಯಾರಲ್ಲೋ ಹೇಳುತ್ತಿದ್ದ.‘‘...ಝಂಝಂ ನೀರು ತಂದಿದ್ದೇನೆ.... ಎಂದು ಹೇಳಿದಾಕ್ಷಣ ಅಜ್ಜಿ ಕಣ್ಣು ತೆರೆದಳು.. ಬಾಯಿಗೆ ನೀರು ಹಾಕಿದಂತೆ, ಗಳಗಳನೆ ಕುಡಿದಳು... ಆಮೇಲೆ ಮೆಲ್ಲಗೆ ‘ ಈಗ ಸಮಾಧಾನವಾಯಿತು’ ಎಂದು ಉಸುರಿದಳು... ಹಾಗೆ ಕಣ್ಣು ಮುಚ್ಚಿದವಳು ಕಣ್ಣು ತೆರೆಯಲೇ ಇಲ್ಲ....’’
ಅಮ್ಮ ಮತ್ತು ತಂಗಿ  ಪಾತುಮ್ಮಜ್ಜಿಯನ್ನು ಮೀಯಿಸುವಲ್ಲಿಗೆ ಹೋದರು. ನನಗೆ ಪಾತುಮ್ಮಜ್ಜಿಯ ಮುಖವನ್ನು ನೋಡುವ ಧೈರ್ಯವಿರಲಿಲ್ಲ. ಅಂಗಳದಲ್ಲೇ ಕರ್ಪೂರದ ವಾಸನೆಯನ್ನು ಆಘ್ರಾಣಿಸುತ್ತಾ ನಿಂತಿದ್ದೆ. ಅಷ್ಟರಲ್ಲಿ ಆಕಾಶದಿಂದ ಒಂದು ಹನಿ ನನ್ನ ಕೆನ್ನೆಯ ಮೇಲೆ ಉದುರಿತು. ಮೇಲೆ ನೋಡಿದೆ. ಇನ್ನೇನು ಸುರಿಯುವುದಕ್ಕೆ ಸಿದ್ಧವಾಗಿ ನಿಂತಿರುವ ಮೋಡಗಳು.
‘‘ಝಂ ಝಂ’’ ಎನ್ನುವ ಎರಡು ಶಬ್ದಗಳು ನನ್ನ ಅಪ್ಪಣೆಯನ್ನು ಮೀರಿ ನನ್ನ ಬಾಯಿಂದ ಉದುರಿದವು.