Monday, April 30, 2012

ಯಕ್ಷ ರಂಗದ ‘ರಾಕ್ಷಸ’ ವೇಷಗಳು!

ಜಾನಪದ ಅಕಾಡಮಿಯಿಂದ ಪ್ರತ್ಯೇಕಿಸಿ, ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿಯನ್ನು ಸರಕಾರ ನೀಡಿದಾಗ ಬರೆದ ಲೇಖನ ಇದು. ಜುಲೈ 27, 2007 ರಲ್ಲಿ ಬರೆದ ಲೇಖನ ಇದು.

1
ಅದು ವಿದ್ಯುದ್ದೀಪಾಲಂಕೃತ ರಂಗಮಂಟಪ. ಚೆಂಡೆಯ ಸದ್ದಿನ ಜೊತೆಗೆ ‘ಚಾಣಕ್ಯ’ನ ಪ್ರವೇಶವಾಗುತ್ತದೆ. ನಂದರಾಜನಿಂದ ಅವಮಾನಿತನಾದ ಚಾಣಕ್ಯ ಸಿಟ್ಟಿನಿಂದ ಧಗಧಗನೆ ಉರಿಯುತ್ತಿದ್ದಾನೆ. ‘ದಿಗಿಣ’ ಮುಗಿದಾಕ್ಷಣ ಚಾಣಕ್ಯ ಮಾತನಾಡತೊಡಗುತ್ತಾನೆ. ‘‘ನಂದಾರಾಜನನ್ನು ಪತನಗೊಳಿಸಿ, ಭರತ ಖಂಡದಲ್ಲಿ ಕುಸಿದು ಬಿದ್ದಿರುವ ವರ್ಣ ವ್ಯವಸ್ಥೆಯನ್ನು ಪುನಃ ಸ್ಥಾಪಿಸುವುದೇ ನನ್ನ ಮುಂದಿನ ಗುರಿ...’’ ಪ್ರಸಂಗದ ಹೆಸರು ‘ಚಾಣಕ್ಯ’. ಸಾಲಿಗ್ರಾಮಾದಿ ಮೇಳಗಳು ಈ ಪ್ರಸಂಗವನ್ನು ಆಡಿಸಿವೆ.
2
ಅದು ಹಾಸ್ಯ ದೃಶ್ಯ! ತಲೆಗೊಂದು ಟೊಪ್ಪಿ ಇಟ್ಟು, ಹೋತದ ಗಡ್ಡವನ್ನು ಹೊಂದಿದ ಮುಸ್ಲಿಂ ಸೈನಿಕನೊಬ್ಬ ಪ್ರವೇಶವಾಗುತ್ತಾನೆ. ಅವನ ಮುಂದೆ ಕುಮಾರರಾಮ ಬಂದು ನಿಲ್ಲುತ್ತಾನೆ ‘‘ನಿನಗೆಷ್ಟು ಹೆಂಡತಿಯರು...’’ ಕುಮಾರರಾಮ ಕೇಳುತ್ತಾನೆ. ಸೈನಿಕ ಲೆಕ್ಕಮಾಡಲು ಹೋಗುತ್ತಾನೆ. ಲೆಕ್ಕ ತಪ್ಪುತ್ತದೆ. ಕುಮಾರರಾಮ ಕೇಳುತ್ತಾನೆ ‘‘ಮನೆಯಲ್ಲಿ ಅಕ್ಕ ತಂಗಿಯರಾರು ಇಲ್ಲವೇ?’’ ‘‘ಅಕ್ಕ ತಂಗಿಯರಾರು ಇಲ್ಲ. ಆದರೆ ಚಂದದ ಮಗಳುಂಟು...’’ ಎನ್ನುತ್ತಾ ಮುಸ್ಲಿಂ ಸೈನಿಕ ನಾಲಗೆ ಚಪ್ಪರಿಸುತ್ತಾನೆ. ಕುಮಾರರಾಮ ತಿರಸ್ಕಾರದಿಂದ ಹೇಳುತ್ತಾನೆ ‘‘ಹೂಂ... ನಿಮ್ಮ ಜಾತಿಯೇ ಹಾಗೆ. ನಿಮಗೆ ತಾಯಿಯೂ ಆಗುತ್ತದೆ, ಮಗಳೂ ಆಗುತ್ತದೆ...’’ ಕುಮಾರರಾಮ ಕತೆಯನ್ನು ಹೊಂದಿರುವ ಈ ಪ್ರಸಂಗವನ್ನು ಪೆರ್ಡೂರಾದಿ ಮೇಳಗಳು ಆಡಿಸಿವೆ.
3
ಅದು ‘ಗದಾಯುದ್ಧ’ ಪ್ರಸಂಗ ಆಡಿದ್ದು ಪೆರ್ಡೂರು ಮೇಳ. ಆಗ ಅದರ ಭಾಗವತಿಕೆಯನ್ನು ಮಾಡುತ್ತಿದ್ದುದು ಸುಬ್ರಹ್ಮಣ್ಯ ಧಾರೇಶ್ವರ. ಭೀಮ ದುರ್ಯೋಧನನನ್ನು ಹುಡುಕುತ್ತಿದ್ದಾನೆ. ಅಲ್ಲಿಗೆ ಬೇಡನೊಬ್ಬ ಮಾಹಿತಿಯೊಂದಿಗೆ ಬರುತ್ತಾನೆ. ಬೇಡ ಭೀಮನಿಗೆ ‘ಸಲಾಮು’ ಎನ್ನುತ್ತಾನೆ. ಅದನ್ನು ಧಾರೇಶ್ವರ ರಾಗವಾಗಿ ‘ಸಲಾಮು ಸಲಾಮು...’ ಎಂದು ಹಾಡತೊಡಗುತ್ತಾರೆ. ನಿಧಾನಕ್ಕೆ ಅವರ ಹಾಡಿನ ‘ಸಲಾಮು’ ‘ಮುಸಲಾ.. ಮುಸಲಾ... ಮುಸಲಾ...’ ಎಂಬ ತಿರುಗು ರೂಪ ಪಡೆದಿರುತ್ತದೆ. ಹಾಗೆ ‘ಮುಸಲಾ ಮುಸಲಾ’ ಎಂದು ಹಾಡುತ್ತಾ ಧಾರೇಶ್ವರ ಹಾರ್ಮೋನಿಯಂನವನೆಡೆಗೆ ವಾರೆಗಣ್ಣಲ್ಲಿ ನೋಡಿ ವ್ಯಂಗ್ಯವಾಗಿ ನಗುತ್ತಾರೆ. ಹಾರ್ಮೋನಿಯಂ ವ್ಯಕ್ತಿ ಮೆಚ್ಚುಗೆಯಿಂದ ನಗುತ್ತಾ ತಲೆಯಾಡಿಸುತ್ತಾನೆ.
4
ಸರಪಾಡಿ ಅಶೋಕ್ ಶೆಟ್ಟಿ ಎಂಬ ಯಕ್ಷಗಾನ ಕಲಾವಿದನ ಕುರಿತಂತೆ ವ್ಯಾಪಕ ಚರ್ಚೆಗಳು ನಡೆದಿವೆ. ಚರ್ಚೆ ನಡೆದಿರುವುದು ಈತನೊಳಗಿರುವ ‘ಕಲೆಗಾರ’ನ ಕುರಿತಂತೆ ಅಲ್ಲ. ಈತನೊಳಗಿರುವ ‘ಕೊಲೆಗಾರ’ನ ಕುರಿತಂತೆ. ಬಿಜೆಪಿ ಮತ್ತು ಸಂಘಪರಿವಾರದ ಅಜೆಂಡಾಗಳನ್ನು ಸಾದಿಸಲು ಬಳಸುವ ಯಕ್ಷಗಾನದ ಈತನ ಪಾತ್ರಗಳೆಲ್ಲ ಜಗದೀಶ್ ಕಾರಂತ, ಮುತಾಲಿಕ್‌ರ ಅಪರಾವತಾರದಂತಿರುತ್ತದೆ. ಯಕ್ಷಗಾನ ಮೇಳವನ್ನು ಸಂಘ ಪರಿವಾರದ ಶಾಖೆಯನ್ನಾಗಿ ಪರಿವರ್ತಿಸಿರುವ ಇವರಂತಹ ನೂರಾರು ‘ಕೊಲಾವಿದರು’ ಕರಾವಳಿಯಲ್ಲಿದ್ದಾರೆ.
5
ಇಬ್ಬರು ತರುಣ ಕಲಾವಿದರನ್ನು ಮಂದರ್ತಿ ಮೇಳದಿಂದ ಹೊರ ಹಾಕಲಾಯಿತು. ಅವರ ಪ್ರತಿಭೆಯ ಕಾರಣಕ್ಕಾಗಿಯಲ್ಲ, ಅವರು ಬಿಲ್ಲವರು ಎನ್ನುವ ಕಾರಣಕ್ಕಾಗಿ. ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ಇದರ ವಿರುದ್ಧ ‘ಶೂದ್ರ ಸಂಘರ್ಷ’ ಎಂದು ತಲೆನಾಮ ಕೊಟ್ಟು ಜಿಲ್ಲಾಧಿಕಾರಿ ಕಚೇರಿಯ ಎದುರು ಗೆಜ್ಜೆ ಕಟ್ಟಿ ಕುಣಿದರು. ಪ್ರತಿಭಟನೆ ನಡೆಸಿದರು. ಮಂದರ್ತಿ ಮೇಳದ ವಿರುದ್ಧ ಬಿಲ್ಲವರೆಲ್ಲ ಒಂದಾದರು. ಪರಿಣಾಮವಾಗಿ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಕಾನೂನು ಪ್ರಕಾರ ಕಲಾವಿದರಿಗೆ ಮಂದರ್ತಿ ಮೇಳದಲ್ಲಿ ಅವಕಾಶ ನೀಡಿದರು. ಇದೇ ಸಂದರ್ಭದಲ್ಲಿ ಅವಕಾಶ ಬೇಡಿದ ಆ ಬಿಲ್ಲವ ತರುಣ ಕಲಾವಿದರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಯಿತು.
6
ಕುಂಬ್ಳೆ ಸುಂದರ ರಾವ್! ‘ಸುರತ್ಕಲ್ ಗಲಭೆ’ಯಲ್ಲಿ ಈತ ವಹಿಸಿದ ರಾಕ್ಷಸ ವೇಷ ಈ ಕಲಾವಿದನ ಜೀವಮಾನದ ಸಾಧನೆ. ಈ ರಾಕ್ಷಸ ವೇಷಧಾರಿಯ ಮಾತುಗಾರಿಕೆಯ ಫಲವಾಗಿಯೇ ಸುರತ್ಕಲ್ ಹೊತ್ತಿ ಉರಿಯಿತು. ಸುಮಾರು ಒಂಭತ್ತು ಜೀವಗಳು ಕಣ್ಮುಚ್ಚಿದವು. ಕೋಟಿಗಟ್ಟಲೆ ನಷ್ಟವಾಯಿತು. ದೊಂದಿ ಬೆಳಕಿನಲ್ಲಿ ಯಕ್ಷಗಾನ ನಡೆಯದೇ ಇದ್ದುದು ಈತನ ಗಮನಕ್ಕೆ ಬಂದ ಪರಿಣಾಮವೋ ಏನೋ. ಕೆಲವು ವರ್ಷಗಳ ಹಿಂದೆ ತೊಕ್ಕೊಟಿನಲ್ಲಿ ಈತನ ನೇತೃತ್ವದಲ್ಲಿ ರಾತ್ರಿ ದೊಂದಿ ಮೆರವಣಿಗೆ ನಡೆಯಿತು. ಬಳಿಕ, ಸಭಾಂಗಣದ ಒಳಗೆ ತಾಳಮದ್ದಲೆಯಲ್ಲಿ ಮಾತನಾಡುತ್ತಿದ್ದುದನ್ನು ಸಾರ್ವಜನಿಕ ರಾಜಕೀಯ ವೇದಿಕೆಯಲ್ಲಿ ಆಡಿದರು. ಅಷ್ಟೇ, ತೊಕ್ಕೊಟ್ಟು ಹೊತ್ತಿ ಉರಿಯಿತು. ಅಮಾಯಕರ ಅಂಗಡಿಗಳಿಗೆ ಬೆಂಕಿ ಬಿತ್ತು. ಯಾರ ಒಡಲಿಗೆ ಇನ್ನಾರೋ ಚೂರಿ ಹಾಕಿದರು. ಸಂಘಪರಿವಾರದ ಬಿಲ್ಲವ, ದಲಿತ ಹುಡುಗರನ್ನು ಕ್ರಿಮಿನಲ್ ಆರೋಪ ಹೊರಿಸಿ ಜೈಲಿಗೆ ತಳ್ಳಲಾಯಿತು. ಈಗಲೂ ಆ ತರುಣರು ಕೋರ್ಟ್, ಕಚೇರಿಯೆಂದು ಅಲೆಯುತ್ತಿದ್ದಾರೆ. ಆದರೆ, ಕುಂಬ್ಳೆ ಸುಂದರ ರಾವ್ ಮೇಲಿದ್ದ ಮೊಕದ್ದಮೆ ಮೊನ್ನೆ ಮೊನ್ನೆ ಸರಕಾರವೇ ಮುಂದೆ ನಿಂತು ಹಿಂದೆಗೆದುಕೊಂಡಿತ್ತು. (ತೊಕ್ಕೊಟು ಗಲಭೆಯಲ್ಲಿ ಪಾತ್ರ ವಹಿಸಿದ ಕುಂಬ್ಳೆಯವರ ಮೇಲಿನ ಮೊಕದ್ದಮೆಯನ್ನು ಯಾವ ಕಾರಣಕ್ಕೂ ಹಿಂದಕ್ಕೆ ತೆಗೆಯಬಾರದು ಎಂದು ಪೊಲೀಸ್ ಇಲಾಖೆ ವರದಿ ನೀಡಿದ ಬಳಿಕವೂ)
***
ಕಳೆದ ಬಜೆಟ್ ಸಂದರ್ಭದಲ್ಲಿ ಸರಕಾರ ಜಾನಪದ ಅಕಾಡಮಿಯಿಂದ ಯಕ್ಷಗಾನವನ್ನು ಪ್ರತ್ಯೇಕಗೊಳಿಸಿತು. ಸರಕಾರದ ಈ ತೀರ್ಮಾನ ಜಾನಪದಕ್ಕೂ ಯಕ್ಷಗಾನಕ್ಕೂ ಯಾವ ಸಂಬಧವೂ ಉಳಿದಿಲ್ಲ ಎನ್ನುವ ಸಂದೇಶವನ್ನು ನೀಡುವ ಉದ್ದೇಶವನ್ನು ಹೊಂದಿದೆಯಾದರೆ ಅದು ಸ್ವಾಗತಾರ್ಹವಾಗಿರುತ್ತಿತ್ತು. ಆದರೆ, ಜಾನಪದ ಅಕಾಡಮಿಯಿಂದ ಯಕ್ಷಗಾನವನ್ನು ಬೇರ್ಪಡಿಸಿ ಅದಕ್ಕೊಂದು ಸ್ವತಂತ್ರ ಅಸ್ತಿತ್ವವನ್ನು ಸರಕಾರ ಕಲ್ಪಿಸಿತು. ಅದಕ್ಕೊಂದು ಪ್ರತೇಕ ಅಕಾಡಮಿಯನ್ನು ನೀಡಿತು. ಇದರ ಪ್ರಕಾರ ಇನ್ನು ಮುಂದೆ ಯಕ್ಷಗಾನದ ಕೋಮುವಾದಿ, ಮನುವಾದಿ ಅಜೆಂಡಾಗಳಿಗೆ ಸರಕಾರದಿಂದ ಮುಕ್ತ ನೇರ ಆರ್ಥಿಕ ಪ್ರೋತ್ಸಾಹವೂ ದೊರೆಯಲಿದೆ.
ಕಳೆದ ಎರಡು ದಶಕಗಳಲ್ಲಿ ಕರಾವಳಿಗೆ ಯಕ್ಷಗಾನದಿಂದಾದ ಅತೀ ದೊಡ್ಡ ಪ್ರಯೋಜನವೆಂದರೆ, ಅದು ಕೋಮುವಾದಿ ಯೋಚನೆಗಳನ್ನು ವಿಕೃತ ಮಾತುಗಾರಿಕೆಯ ಮೂಲಕ ಹಳ್ಳಿ ಹಳ್ಳಿಗಳಿಗೆ ತಲುಪಿಸಿರುವುದು. ಹಳ್ಳಿಗಳ ಯುವಕರು, ಮಹಿಳೆಯರು ಕೋಮುವಾದಿಗಳಾಗುವುದರಲ್ಲಿ ಈ ‘ಯಕ್ಷಗಾನ ಕ(ಕೊ)ಲೆ’ಯ ಪಾತ್ರ ಮಹತ್ವದ್ದಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಜಾತಿವಾದವನ್ನು ಅಶ್ಪಶತೆಯನ್ನು ಈ ಮೇಳಗಳು ಸಾರಾಸಗಟಾಗಿ ಬಿತ್ತಿವೆ. ಇಂದು ಹೆಚ್ಚಿನ ಮೇಳಗಳು ಯಕ್ಷಗಾನವನ್ನು ಸಂಘಪರಿವಾರದ ಜಾತಿವಾದ ಮತ್ತು ಕೋಮುವಾದದ ಮುಖವಾಣಿಯಾಗಿಸಿವೆ. ಸಂಘಪರಿವಾರದ ಸಾಂಸ್ಕೃತಿಕ ವೇದಿಕೆಯಾಗಿ ಮೇಳಗಳು ಕಾರ್ಯ ನಿರ್ವಹಿಸುತ್ತಿವೆ.
ಜಾನಪದ ಅಕಾಡಮಿಯಿಂದ ಯಕ್ಷಗಾನ ಕಲೆಯನ್ನು ಬೇರ್ಪಡಿಸಿದ್ದು ಒಂದು ಆಕಸ್ಮಿಕವಲ್ಲ. ಇಂದು ಜಾನಪದದಲ್ಲಿ ಯಕ್ಷಗಾನದಷ್ಟೇ ಪ್ರಬಲವಾಗಿರುವ ದೊಡ್ಡಾಟ, ಸಣ್ಣಾಟ, ವೀರಗಾಸೆ, ಪಾರಿಜಾತ ಮೊದಲಾದವುಗಳಿವೆ. ಯಕ್ಷಗಾನಕ್ಕೆ ಸರಕಾರ ಅಕಾಡಮಿಯನ್ನು ನೀಡುವುದಾದರೆ, ಉತ್ತರ ಕರ್ನಾಟಕದ ಉಳಿದ ಜಾನಪದ ಕಲೆಗಳಿಗೆ ಅಕಾಡಮಿಯನ್ನು ನೀಡಬೇಕು. ಆದರೆ, ಕರಾವಳಿಯಲ್ಲಿ ಮಾತ್ರ ಪ್ರಬಲವಾಗಿರುವ ಯಕ್ಷಗಾನವನ್ನು ಮಾತ್ರ ಪ್ರತ್ಯೇಕಿಸಿ, ಅದಕ್ಕೊಂದು ಅಕಾಡಮಿಯನ್ನು ಘೋಷಿಸಿತು. ಇದರ ಉದ್ದೇಶವೇನು?

ಕರಾವಳಿಯಲ್ಲಿ ಯಕ್ಷಗಾನವು ‘ಕಲೆ’ಯ ಪಾತ್ರವನ್ನು ಮಾತ್ರ ನಿರ್ವಹಿಸುತ್ತಿಲ್ಲ. ಅದು ರಾಜಕೀಯವಾಗಿ ಕೆಲಸ ಮಾಡುತ್ತಿವೆ. ಯಕ್ಷಗಾನದ ಸಂಪೂರ್ಣ ನಿಯಂತ್ರಣ ವೈದಿಕರ ಕೈಯಲ್ಲಿದೆ. ಒಂದು ಕಾಲದಲ್ಲಿ ಯಕ್ಷಗಾನದಲ್ಲಿ ನೃತ್ಯ, ವೇಶ ಮತ್ತು ಭಾಗವತಿಕೆಯಷ್ಟೇ ಮುಖ್ಯವಾಗಿತ್ತು. ಆದರೆ ಯಾವಾಗ ಮೇಲ್ವರ್ಣೀಯರು ತಮ್ಮ ಮಾತುಗಾರಿಕೆಯೊಂದಿಗೆ ಯಕ್ಷಗಾನವನ್ನು ಪ್ರವೇಶಿಸಿದರೋ ಅಲ್ಲಿಂದ ಯಕ್ಷಗಾನದೊಳಗಿದ್ದ ಕೆಳಸ್ತರದ ಶೂದ್ರರೂ ಕೆಳಗೆ ತಳ್ಳಲ್ಪಟ್ಟರು. ಭಗವದ್ಗೀತೆ, ಶ್ಲೋಕಗಳು ಯಕ್ಷಗಾನದ ಮಾತುಗಾರಿಕೆಯಲ್ಲಿ ಪ್ರಾಮುಖ್ಯ ಪಡೆದವು. ಮನು ಧರ್ಮವನ್ನು ಮರು ಪ್ರತಿಷ್ಠಾಪಿಸುವ ಏಕ ಮೇವ ಅಜೆಂಡಾವನ್ನು ಯಕ್ಷಗಾನ ತನ್ನದಾಗಿಸಿಕೊಂಡಿತ್ತು. ಇದೇ ಸಂದರ್ಭದಲ್ಲಿ ತೆಂಕುತಿಟ್ಟಿನಲ್ಲಿ ಯಕ್ಷಗಾನವನ್ನು ಅಲ್ಪಸ್ವಲ್ಪ ಉಳಿಸಿರುವುದು ಕಲಾವಿದರ ‘ಹಸಿವು’. ಜನರನ್ನು ರಂಜಿಸುವ ಒಂದೇ ಒಂದು ಉದ್ದೇಶದಿಂದ ತೆಂಕುತಿಟ್ಟು ಕಲಾವಿದರು ಯಕ್ಷಗಾನವನ್ನು ವ್ಯಾಪಾರೀಕರಣಗೊಳಿಸಿದರು. ಸಿನಿಮಾ ಕತೆಗಳನ್ನು ಯಕ್ಷಗಾನದಲ್ಲಿ ಅಳವಡಿಸಿಕೊಂಡರು. ಹಾಸ್ಯ ಪ್ರಧಾನ ಯಕ್ಷಗಾನ ಪ್ರಸಂಗಗಳು ಬಂದವು. ಆದರೆ, ಇದನ್ನು ಮೇಲ್ವರ್ಣೀಯ ಕಲಾವಿದರು ಪ್ರತಿಭಟಿಸತೊಡಗಿದರು. ಅವರೀಗ ಯಕ್ಷಗಾನ ಸಾಂಪ್ರದಾಯ ಬದ್ಧವಾಗಿರಬೇಕು ಎಂದು ಹೇಳುತ್ತಿದ್ದಾರೆ. ಶಾಸ್ತ್ರ ಬದ್ಧವಾಗಿರಬೇಕು ಎಂದು ‘ವೃತ್ತಿ ಮೇಳ’ಗಳಿಗೆ ಆದೇಶ ನೀಡುತ್ತಿದ್ದಾರೆ. ಇಂದು ಶೂದ್ರರಿಗೆ ಶಾಸ್ತ್ರ, ಸಂಪ್ರದಾಯದ ಕಡಿವಾಣವನ್ನು ತೊಡಿಸುವವರು ಒಂದು ನೆನಪಿನಲ್ಲಿಟ್ಟುಕೊಳ್ಳಬೇಕು. ವರ್ತಮಾನದಲ್ಲಿ ಯಕ್ಷಗಾನ ಏನಾದರೂ ತನ್ನ ಅಲ್ಪಸ್ವಲ್ಪ ಅಸ್ತಿತ್ವವನ್ನು ಉಳಿಸಿಕೊಂಡಿದ್ದರೆ ಅದಕ್ಕೆ ಕಾರಣ ಕಲಾವಿದರ ‘ಹಸಿವು’. ಮನೋರಂಜನೆಯ ಹೆಬ್ಬಾಗಿಲೇ ತೆರೆದಿರುವ ಇಂದಿನ ದಿನಗಳಲ್ಲಿ ಜನರನ್ನು ಆಕರ್ಷಿಸುವುದಕ್ಕಾಗಿ ವಿಶೇಷ ಬದಲಾವಣೆಗಳನ್ನು ಮಾಡಿ, ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿ ಹೊಟ್ಟೆ ತುಂಬಿಸಿಕೊಳ್ಳುವ ಕಲಾವಿದರ ಮೇಲೆ ಶಾಸ್ತ್ರ, ಸಂಪ್ರದಾಯವನ್ನು ಹೇರುವ ಯಾವ ಅಧಿಕಾರವೂ ವೈದಿಕ ವಿದ್ವಾಂಸರಿಗಿಲ್ಲ.

ಕರಾವಳಿಯಲ್ಲಿ ಯಕ್ಷಗಾನ ಎರಡು ಕವಲಾಗಿ ಒಡೆದಿದೆ. ಒಂದು, ಅದು ಕಮರ್ಶಿಯಲ್ ಆಗಿದೆ. ಎರಡು, ಅದು ವೈದಿಕೀಕರಣ ಹಾಗೂ ಕೋಮುವಾದಿಕರಣಗೊಂಡಿದೆ. ಕಮರ್ಶಿಯಲ್ ಆಗಿರುವುದು ಹಸಿವಿನ ಕಾರಣದಿಂದ ಅದನ್ನು ಯಾವ ಕಾರಣಕ್ಕೂ ಪ್ರಶ್ನಿಸುವಂತಿಲ್ಲ. ಕಲೆಗಿಂತ ದೊಡ್ಡದು ಬದುಕು. ಕಲೆಗಿಂತ ದೊಡ್ಡ ಸತ್ಯ ಬದುಕು. ಆದರೆ ಎರಡನೆಯದನ್ನು ನಾವು ಪ್ರಶ್ನಿಸಲೇಬೇಕಾಗುತ್ತದೆ. ಒಂದು ಜನಪದ ಕಲೆಯನ್ನು ಜಾತಿ ಮತ್ತು ಕೋಮುವಾದವನ್ನು ಹರಡುವುದಕ್ಕಾಗಿ ಬಳಸುವುದು ಅಪರಾಧ. ಜನಪದ ಅಕಾಡಮಿಯಿಂದ ಯಕ್ಷಗಾನ ಪ್ರತ್ಯೇಕಗೊಂಡು, ತನ್ನದೇ ಅಕಾಡಮಿಯೊಂದನ್ನು ಸರಕಾರದಿಂದ ಗಿಟ್ಟಿಸಿರುವುದರ ಹಿಂದೆ ವೈದಿಕರ, ಸಂಘಪರಿವಾರದ ಸಂಚನ್ನು ನಾವು ಗುರುತಿಸಬೇಕಾಗಿದೆ. ಆದುದರಿಂದ, ಸರಕಾರ ಯಕ್ಷಗಾನ ಅಕಾಡಮಿಯನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು. ಉಳಿದ ಜಾನಪದ ಕಲೆಗಿಂದ ಕರಾವಳಿ ಜಾನಪದ ಕಲೆ ವಿಭಿನ್ನವಾಗಿರುವುದಾದರೆ ಅದಕ್ಕೆ ಒಂದೇ ಕಾರಣ. ಇಲ್ಲಿ ಕಲೆ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಮನುಧರ್ಮದ ಪುನಃಸ್ಥಾನೆೆಗಾಗಿ ಬಳಕೆಯಾಗುತ್ತಿದೆ. ಶೂದ್ರರ ಮುಂದಾಳ್ತನವುಳ್ಳ ಉಳಿದ ಜಾನಪದ ಕಲೆಗಳೊಂದಿಗೆ ಗುರುತಿಸಲು ಇಷ್ಟವಿಲ್ಲದೆ, ಅದಕ್ಕೆ ಪ್ರತ್ಯೇಕ ರೂಪವನ್ನು ಕೊಡುವ ಹುನ್ನಾರದ ಮೊದಲ ಭಾಗವಾಗಿ, ಅದು ಜಾನಪದ ಅಕಾಡಮಿಯಿಂದ ಕಳಚಿ ಕೊಳ್ಳಲ್ಪಟ್ಟಿದೆ. ಕರಾವಳಿಯ ಬಿಜೆಪಿ ಮುಖಂಡರ ಒತ್ತಡಕ್ಕೆ ಸರಕಾರ ಮಣಿದ ಪರಿಣಾಮವಾಗಿಯೇ ಇಂತಹದೊಂದು ದುರಂತ ಸಂಭವಿಸಿದೆ. ಶೂದ್ರ ಪರಂಪರೆಯಿಂದ ಬಂದ ಯಕ್ಷಗಾನ ಕಲೆಯನ್ನು ವೈದಿಕ ಮತ್ತು ಕೋಮುಶಕ್ತಿಗಳಿಂದ ಉಳಿಸಬೇಕಾದ ಸರಕಾರವೇ, ಆ ಶಕ್ತಿಗಳ ಜೊತೆ ಶಾಮಿಲಾಗಿರುವುದು ಯಕ್ಷಗಾನದ ದುರಂತ ಮಾತ್ರವಲ್ಲ, ಸಮಾಜದ ದುರಂತವೂ ಕೂಡ.

    ಹಾಗೆಯೇ ಜಾನಪದ ಕಲೆಯ ಹೆಸರಿನಲ್ಲಿ ಯಕ್ಷಗಾನಕ್ಕೆ ಸರಕಾರ ಅನುದಾನವನ್ನು, ಸಹಾಯಧನವನ್ನು ನೀಡುವಾಗ, ಕಲಾವಿದನ ಹಿನ್ನೆಲೆಯನ್ನು, ಆ ಮೇಳದ ಹಿಂದಿನ ಜಾತಕಗಳನ್ನು ಬಿಡಿಸಬೇಕು. ಕಲೆ ಯಾವತ್ತೂ ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತದೆಯೇ ಹೊರತು, ಒಡೆಯುವ ಕೆಲಸವನ್ನಲ್ಲ. ಒಂದು ವೇಳೆ ತಮ್ಮ ಕಲೆಯನ್ನು ಬಳಸಿಕೊಂಡು ಅವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರಾದರೆ ಅವರು ಯಾವ ಕಾರಣಕ್ಕೂ ಕಲಾವಿದರೂ ಅನ್ನಿಸಿಕೊಳ್ಳಲಾರರು. ಇವರಿಗೆ ಯಾವ ಕಾರಣಕ್ಕೂ ಸರಕಾರದ ಸಹಾಯ ದೊರಕಬಾರದು. ಈ ನಿಟ್ಟಿನಲ್ಲಿ ಯಕ್ಷಗಾನ ಕರಾವಳಿಯಲ್ಲಿ ಪಡೆಯುತ್ತಿರುವ ರೂಪಾಂತರವನ್ನು ಯಕ್ಷಗಾನ ಪಂಡಿತರು, ತಜ್ಞರು ಗಮನಿಸಬೇಕು. ಅಮೃತವೆಂದು ವಿಷವನ್ನು ಹಂಚಿದರೆ ಅದು ಸಮಾಜವನ್ನು ಸುಡದೇ ಇರದು. ಈ ನಿಟ್ಟಿನಲ್ಲಿ, ಸರಕಾರ ಯಕ್ಷ್ಷಗಾನವನ್ನು ಪೋಷಿಸುವ ಭರದಲ್ಲಿ ನಾಗರವನ್ನು ಸಾಕಿದಂತಾಗಬಾರದು. ಅಥವಾ ಈ ಯಕ್ಷಗಾನದ ವೇಷದಲ್ಲಿರುವ ರಾಕ್ಷಸ ಪಾತ್ರದಾರಿಗಳನ್ನು ಗುರುತಿಸಿ ಅವರನ್ನು ಪ್ರತ್ಯೇಕಿಸುವ ಕೆಲಸವಾದರೂ ತಕ್ಷಣದಿಂದ ನಡೆಯಬೇಕು. ನಿಜವಾದ ಪ್ರತಿಭೆಗಳನ್ನು, ವ್ಯಕ್ತಿತ್ವಗಳನ್ನು, ಕಲಾವಿದರನ್ನು ಗುರುತಿಸಿ ಪೋಷಿಸಿ ಯಕ್ಷಗಾನವನ್ನು ಬೆಳೆಸಬೇಕಾಗಿದೆ. ತಮ್ಮ ವ್ಯಕ್ತಿತ್ವ, ಪ್ರತಿಭೆ, ಪಾಂಡಿತ್ಯ ಹಾಗೂ ಕಲಾತ್ಮಕತೆಯ ಮೂಲಕ ಯಕ್ಷಗಾನವನ್ನು ದೇಶವಿದೇಶಗಳಿಗೆ ತಲುಪಿಸಿದ ಶೇಣಿ, ಶಂಭುಹೆಗ್ಡೆ, ಚಿಟ್ಟಾಣಿ, ಸಾಮಗ, ಜಲವಳ್ಳಿಯಂತಹ ನೂರಾರು ಹಿರಿಯ ಕಲಾವಿದರು ನಮ್ಮ ಮುಂದಿದ್ದಾರೆ. ಕಲೆಯನ್ನು ಕಲೆಯಾಗಿಯೇ ಸ್ವೀಕರಿಸಿ ಆ ಮೂಲಕವೇ ಜನಮನವನ್ನು ಗೆದ್ದವರಿವರು. ಜಾತಿ ಮತ್ತು ಧರ್ಮ ರಾಜಕಾರಣದಿಂದ ಯಕ್ಷಗಾನವನ್ನು ಉಳಿಸುವುದು, ಇಂದಿನ ರಾಜಕೀಯದಿಂದ ಕಲುಷಿತವಾಗದಂತೆ ನೋಡಿಕೊಳ್ಳುವುದೂ ಕಲಾರಸಿಕರ ಜವಾಬ್ದಾರಿಯಾಗಿದೆ.

ಜುಲೈ 27, 2007

Wednesday, April 25, 2012

ಒಂದಾಗುವುದಕ್ಕೆ ಕರುಳ ಸಂಬಂಧವೊಂದೇ ಸಾಕು....

ಕಳೆದ ವರ್ಷ ಉಡುಪಿಯಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳು ಒಂದಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದ್ದವು. ಅದರ ಉದ್ಘಾಟನಾ ಭಾಷಣವನ್ನು ನಾನು ಮಾಡಿದ್ದೆ. ಆ ಭಾಷಣದ ಸಂಗ್ರಹ ಇಲ್ಲಿದೆ.

ನಾನಿಲ್ಲಿ ಮೈಕ್‌ನ ಮುಂದೆ ನಿಂತು ಈ ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಲು ಹೊರಟಿದ್ದರೆ ನನ್ನ ಮುಂದೆ ಮೋಂಟನ ಮುಖ ದುತ್ತೆಂದು ನಿಂತು, ನನ್ನನ್ನು ಅಣಕಿಸಿದಂತೆ ಭಾಸವಾಗುತ್ತಿದೆ. ಮೋಂಟ ನನ್ನ ಮನೆಗೆ ಕಟ್ಟಿಗೆಗಳನ್ನು ಹೊತ್ತು ತರುತ್ತಿದ್ದ. ತೆಂಗಿನ ಗಿಡಗಳ ಬುಡಗಳನ್ನು ಬಿಡಿಸುವುದಕ್ಕೆ ಬರುತ್ತಿದ್ದ. ನನ್ನ ಮನೆಯ ಜಮೀನಿನಲ್ಲಿ ನನ್ನ ಮತ್ತು ನನ್ನ ತಂದೆಯ ಬೆವರು ಬೀಳುವುದಕ್ಕಿಂತ ಹೆಚ್ಚಾಗಿ ಮೋಂಟನ ಬೆವರು ಹರಿದಿದೆ. ನಾನು ತೀರಾ ಸಣ್ಣವನಿರುವಾಗಲೇ ಆತ ನನ್ನ ಮನೆಗೆ ಬರುತ್ತಿದ್ದ. ನಾನು ಬೆಳಗ್ಗೆ ತಡವಾಗಿ ಎದ್ದು ಹಲ್ಲುಜ್ಜಿ ಟೇಬಲ್ ಮೇಲೆ ರೊಟ್ಟಿ ತಿನ್ನುತ್ತಿದ್ದರೆ ಆತ, ಬೆವರಿಳಿಸಿ ದುಡಿದು ನನ್ನ ಮನೆಯ ಹೊರಗೆ ಮೆಟ್ಟಿಲಲ್ಲಿ ಕೂತು ರೊಟ್ಟಿ ತಿನ್ನುತ್ತಿದ್ದ. ವಿಶೇಷವೆಂದರೆ ತೀರಾ ಸಣ್ಣವನಿದ್ದ ನನ್ನನ್ನು ಅವನು ಬಹುವಚನದಿಂದ ಕರೆಯುತ್ತಿದ್ದ. ನಾನು ಆತನನ್ನು ಏಕವಚನದಿಂದ ಕರೆಯುತ್ತಿದ್ದೆ. ಪಿಯುಸಿಗೆ ಕಾಲಿಡುತ್ತಿದ್ದ ಹಾಗೆ ನನಗೆ ನಿಧಾನಕ್ಕೆ ವಿಪರ್ಯಾಸ ಅರ್ಥವಾಗತೊಡಗಿತು. ಬಳಿಕ ಆತನನ್ನು ಮನೆಯ ಒಳಗೆ ಕರೆದು ರೊಟ್ಟಿ ಕೊಡುವಷ್ಟು ನಾನು ಸುಧಾರಿಸಿದೆ. ನಿಧಾನಕ್ಕೆ ಅವನಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ದುರದೃಷ್ಟವಶಾತ್, ನಾವು ಹತ್ತಿರವಾಗುವುದು ಅಷ್ಟು ಸುಲಭವಿರಲಿಲ್ಲ. ‘‘ನನ್ನನ್ನು ಏಕವಚನದಿಂದ ಕರಿ’’ ಎಂದು ಅವನಲ್ಲಿ ಹೇಳುವುದಾಗಲಿ, ಅವನನ್ನು ಬಹುವಚನದಿಂದ ಕರೆಯುವುದಾಗಲಿ ನನ್ನಿಂದ ಸಾಧ್ಯವೇ ಆಗಲಿಲ್ಲ. ಎಷ್ಟೋ ಸಮಯದ ಬಳಿಕ, ಅಲ್ಲಿಲ್ಲಿ ಅವನು ಎದುರಾದರೆ ಅವನಿಗೆ ಐವತ್ತೋ, ನೂರೋ ಹಣ ಕೊಡುತ್ತಿದ್ದೆ. ಅವನದನ್ನು ನೇರ ಹೆಂಡದಂಗಡಿಗೆ ಕೊಡುತ್ತಿದ್ದ ಎನ್ನುವುದು ಗೊತ್ತಿದ್ದರೂ. ಅದು ನನ್ನ ಪಾಪ ಪ್ರಜ್ಞೆಯ ಫಲವಾಗಿರಬಹುದು. ಇತ್ತೀಚೆಗೆ ಮೋಂಟ ತೀರಿಕೊಡ. ಆದರೆ ಪ್ರಶ್ನೆ ಈಗಲೂ ನನ್ನಲ್ಲಿ ಉಳಿದಿದೆ. ಯಾಕೆ ಅವನನ್ನು ಬಹುವಚನದಿಂದ ನನಗೆ ಕರೆಯಲು ಸಾಧ್ಯವಾಗಲಿಲ್ಲ? ಈ ಕ್ಷಣದಲ್ಲೂ ಆತನನ್ನು ‘ನೀವು’ ಎಂದು ಕರೆಯುವುದಕ್ಕೆ ನನ್ನನ್ನು ಕಟ್ಟಿ ಹಾಕಿದ ಶಕ್ತಿ ಯಾವುದು? ನಿಜಕ್ಕೂ ನನ್ನನ್ನು ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಅರ್ಹನೆ...ಈ ಪ್ರಶ್ನೆಗಳು ಈ ಕ್ಷಣದಲ್ಲೂ ನನ್ನನ್ನು ಕಾಡುತ್ತಿದೆ.

ಈ ಸಮಾರಂಭದಲ್ಲಿ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕ್ರಿಶ್ಚಿಯನ್ನರೂ ಇದ್ದಾರೆ. ಈಗ ನನ್ನನ್ನು ಮತ್ತೊಂದು ಪ್ರಶ್ನೆ ಕಾಡುತ್ತಿದೆ. ಇಲ್ಲಿ ದಲಿತರು-ಮುಸ್ಲಿಮರು-ಕ್ರಿಶ್ಚಿಯನ್ನರು ಒಂದಿಷ್ಟು ಶೂದ್ರವರ್ಗದ ಜನರು ಒಂದಾಗಿ ಕುಳಿತಿದ್ದಾರೆ. ಆದರೆ ಯಾವ ಕಾರಣಕ್ಕೆ? ಹೌದು, ಕಾರಣ ಒಂದೇ...ಎಲ್ಲರಿಗೂ ಸಮಾನವಾದ ಒಬ್ಬ ಶತ್ರುವಿದ್ದಾನೆ. ಆ ಶತ್ರುವಿನ ಕಾರಣಕ್ಕಾಗಿ ನಾವು ಒಂದಾಗಿದ್ದೇವೆ. ಒಂದು ವೇಳೆ, ಈ ಶತ್ರು ಇಲ್ಲದೇ ಇರುತ್ತಿದ್ದರೆ ನಾವಿಲ್ಲಿ ಒಟ್ಟು ಸೇರುತ್ತಿದ್ದೇವೆಯೆ? ಸೇರುತ್ತಿರಲಿಲ್ಲ ಅನ್ನಿಸುತ್ತದೆ. ಆದುದರಿಂದಲೇ ನಾವೆಲ್ಲರೂ ನಮ್ಮಿಳಗಿನ ಜಾತ್ಯತೀತತೆಯನ್ನು ಉಜ್ಜಿ ನೋಡುವ ಸಂದರ್ಭ ಈ ಅಂಬೇಡ್ಕರ್ ಜಯಂತಿ.

ಮುಖ್ಯವಾಗಿ ದಲಿತರು ಮತ್ತು ಮುಸ್ಲಿಮರು ಒಟ್ಟು ಸೇರುವುದಕ್ಕೆ ಯಾವ ಶತ್ರುವಿನ ಅಗತ್ಯವೂ ಇಲ್ಲ. ಈ ಎರಡು ಸಮುದಾಯಗಳದ್ದು ಕರುಳ ಬಳ್ಳಿಯ ಸಂಬಂಧ. ಆ ಸಂಬಂಧವನ್ನು ನಾವು ಜೋಪಾನವಾಗಿ, ಗಟ್ಟಿ ಮಾಡಿ ಇಟ್ಟುಕೊಂಡಿದ್ದಿದ್ದರೆ ಯಾವ ಶತ್ರುವೂ ನಮ್ಮ ನಡುವೆ ಹುಟ್ಟುತ್ತಿರಲಿಲ್ಲ. ಶತ್ರುವಿದ್ದರೂ ನಮ್ಮ ಮುಂದೆ ತಲೆಯೆತ್ತುವ ಧೈರ್ಯ ಮಾಡುತ್ತಿರಲಿಲ್ಲ. ನಾವು ಕರುಳ ಸಂಬಂಧವನ್ನು ಮರೆತೆವು. ಅದರ ಪರಿಣಾಮವನ್ನು ಉಣ್ಣುತ್ತಿದ್ದೇವೆ.
ದಲಿತರು ಎನ್ನುವ ಶಬ್ದಕ್ಕೆ ವಿರುದ್ಧಾರ್ಥ ಬ್ರಾಹ್ಮಣ ಎಂದು ನಾವೆಲ್ಲ ತಿಳಿದುಕೊಂಡಿದ್ದೇವೆ. ಆದರೆ ಬ್ರಾಹ್ಮಣ್ಯ ಎನ್ನುವುದು ಒಂದು ಆಲೋಚನೆ ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕಾಗಿದೆ. ಆ ಆಲೋಚನೆ ನಮ್ಮ ನಿಮ್ಮಲ್ಲೆಲ್ಲ ಗುಟ್ಟಾಗಿ ಮನೆ ಮಾಡಿರಬಹುದು. ಮನು ಸಂವಿಧಾನದ ಫಲವನ್ನು ಕೇವಲ ಬ್ರಾಹ್ಮಣರು ಮಾತ್ರ ಉಂಡಿಲ್ಲ. ಅದರ ಸವಲತ್ತನ್ನು ಇಲ್ಲಿ ಕುಳಿತಿರುವ ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಉಂಡಿದ್ದಾರೆ. ಹಾಗೆ ನೋಡಿದರೆ ಇಂದು ಬ್ರಾಹ್ಮಣ್ಯವಾದ ಕಾರ್ಯ ನಿರ್ವಹಿಸುತ್ತಿರುವುದು ಬ್ರಾಹ್ಮಣೇತರ ಕೈಗಳ ಮೂಲಕ. ಮನು ಸಂವಿಧಾನವನ್ನು ಬರೆದು ಅದನ್ನು ಉಳಿದವರ ಕೈಯಲ್ಲಿಟ್ಟು, ಅವರು ದೂರದಲ್ಲಿ ನಿಂತು ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಂದರೆ ಅದರ ಲಾಭಗಳನ್ನು ಇತರರೊಂದಿಗೆ ಹಂಚಿಕೊಳ್ಳುವಷ್ಟು ಉದಾರರಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿರುವವರಲ್ಲಿ ಶೂದ್ರರೇ ಬಹುಸಂಖ್ಯಾತರು. ಹಾಗೆಯೇ ಮುಸ್ಲಿಮರೂ ದಲಿತರನ್ನು ತುಳಿದಿದ್ದಾರೆ. ಕ್ರಿಶ್ಚಿಯನ್ನರೂ ದಲಿತರನ್ನು ತುಳಿದಿದ್ದಾರೆ. ಬ್ರಾಹ್ಮಣ್ಯವೆನ್ನುವುದು ಶೂದ್ರರಲ್ಲಿ, ಮುಸ್ಲಿಮರಲ್ಲಿಯೂ ವಿಷದ ಹಾವಿನಂತೆ ತಣ್ಣಗೆ ಮಲಗಿರುವುದನ್ನು ನಾನು ನೋಡಿದ್ದೇನೆ.

 ಇಲ್ಲಿರುವ ಮುಸ್ಲಿಮರನ್ನು ನಾನೊಂದು ಪ್ರಶ್ನೆಯನ್ನು ಕೇಳುವುದಕ್ಕೆ ಬಯಸುತ್ತೇನೆ. ಇಸ್ಲಾಂ ಸಹೋದರತೆಯನ್ನು, ಸಮಾನತೆಯನ್ನು ಬೋಧಿಸುತ್ತದೆ ಎಂದು ನಾವೆಲ್ಲ ನಂಬಿದ್ದೇವೆ. ಆದರೂ ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಯಾಕೆ ಅನ್ನಿಸಲಿಲ್ಲ? ಇದೇ ಪ್ರಶ್ನೆಯನ್ನು ನನ್ನೊಬ್ಬ ಆತ್ಮೀಯ ಧರ್ಮಗುರುವಿಗೆ ಕೇಳಿದ್ದೆ. ಅವರು ಹೇಳಿದರು ‘‘ಬಹುಶಃ ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರಬೇಕು’’

ಇಲ್ಲ, ಅದಲ್ಲ. ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾದುದಲ್ಲ. ಬದಲಿಗೆ ಇಲ್ಲಿನ ಮುಸ್ಲಿಮರು ಇಸ್ಲಾಮನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗಡ್ಡವನ್ನೇ ಇಸ್ಲಾಮಿನ ಅಸ್ತಿತ್ವ ಎಂದು ನಂಬಿಕೊಂಡಿರುವ ವೌಲವಿಗಳು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನಾವು, ನೀವು ಇಸ್ಲಾಮನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಆಳದಲ್ಲಿ ಭಾರತದ ಜಾತೀಯತೆಯ ಚರಂಡಿ ಇನ್ನೂ ನಮ್ಮ ಮನದಾಳದಲ್ಲಿ ಅಂತರ್‌ಗಂಗೆಯಂತೆ ಹರಿಯುತ್ತಿದೆ. ಆದುದರಿಂದಲೇ ನಾನು ಹೇಳುತ್ತಿದ್ದೇನೆ, ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಅನ್ನಿಸದೇ ಇರುವುದು ಭಾರತದ ಆಧುನಿಕ ದಿನಗಳಲ್ಲಿ ಇಸ್ಲಾಮ್ ಧರ್ಮದ ಅತಿ ದೊಡ್ಡ ಸೋಲು. ಅದಕ್ಕಾಗಿ ಇಲ್ಲಿನ ಮುಸ್ಲಿಮರು ಈಗಲೂ ಬೆಲೆ ತೆರುತ್ತಲೇ ಇದ್ದಾರೆ. ಭಾರತದ ಎಲ್ಲ ವೌಲ್ವಿಗಳು ಇದಾಕ್ಕಾಗಿ ನಾಚಿಕೆ ಪಟ್ಟುಕೊಳ್ಳಬೇಕು. ಇದು ಇಸ್ಲಾಂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರರಾದ ದಲಿತರ ಶವ ದಫನ ಹಲವು ಚರ್ಚುಗಳಲ್ಲಿ ವಿವಾದವಾದುದನ್ನು ನಾವು ನೋಡಿದ್ದೇವೆ. ದಲಿತ ಪಾದ್ರಿಗಳೇ ಅಲ್ಲಿ ಕೀಳರಿಮೆಯಿಂದ ಬದುಕುವ ಸನ್ನಿವೇಶವಿದೆ. ದಲಿತರು ದಲಿತರಾಗಿದ್ದುಗೊಂಡು ಅವಮಾನ ಅನುಭವಿಸುವುದಕ್ಕಿಂತಲೂ ಇದು ಕ್ರೂರವಾದುದು. ಇದೆಲ್ಲವೂ ಯಾಕೆ ಸಂಬಂಧವಿಸುತ್ತಿದೆಯೆಂದರೆ, ಇಂದು ನಾವು ರಾಜಕೀಯ ಕಾರಣಗಳಿಗಾಗಿ ದಲಿತರನ್ನು ಪ್ರೀತಿಸಲು ತೊಡಗಿರುವುದು. ದಲಿತರನ್ನು ಪ್ರೀತಿಸುವುದಕ್ಕೆ ಈ ದೇಶದ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ರಾಜಕೀಯ ಕಾರಣಗಳ ಅಗತ್ಯವಿಲ್ಲ. ಕರುಳ ಸಂಬಂಧವೊಂದೇ ಸಾಕು. ಅವರೊಂದಿಗೆ ನೂರಾರು ಜನ್ಮ ಜೊತೆ ಜೊತೆಯಾಗಿ ಬಾಳುವುದಕ್ಕೆ.

 ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿರಬಹುದು. ಬೌದ್ಧರಾಗಿದ್ದರೂ ಅವರು ಅತ್ಯುತ್ತಮ ಮುಸ್ಲಿಮರಾಗಿಯೂ, ಅತ್ಯುತ್ತಮ ಕ್ರಿಶ್ಚಿಯನ್ನರಾಗಿಯೂ ಬಾಳಿದರು. ಈ ದೇಶದಲ್ಲಿ ನಾನು ಅತಿಯಾಗಿ ಗೌರವಿಸುವ, ಇಷ್ಟ ಪಡುವ ಎರಡು ಜೀವಗಳು ಗಾಂಧಿ ಮತ್ತು ಅಂಬೇಡ್ಕರ್. ಇದೇ ಸಂದರ್ಭದಲ್ಲಿ ಗಾಂಧಿ ಇಲ್ಲದ ಭಾರತವನ್ನು ನಾನು ಕಲ್ಪಿಸಬಲ್ಲೆ. ಆದರೆ ಅಂಬೇಡ್ಕರ್ ಇಲ್ಲದ ಭಾರತವನ್ನು ನನಗೆ ಕಲ್ಪಿಸಲು ಸಾಧ್ಯವಿಲ್ಲ. ಗಾಂಧಿ ಮತ್ತು ಅಂಬೇಡ್ಕರ್‌ರಲ್ಲಿ ಯಾರನ್ನಾದರೂ ಒಬ್ಬರನ್ನು ಆರಿಸುವ ಅನಿವಾರ್ಯತೆ ಬಂದರೆ ನಾನು ಆರಿಸುವುದು ಅಂಬೇಡ್ಕರ್‌ರನ್ನು. ಇಂತಹ ನಾಯಕ ಜಯಂತಿ ಈ ದಿನ ನಾವು ಒಂದುಗೂಡಿದ ಉದ್ದೇಶ ಪ್ರಾಮಾಣಿಕವಾಗಿರುವುದು ಅತ್ಯಗತ್ಯ. ಈ ದಿನ ದಲಿತರು ಮತ್ತು ಇತರ ಶೋಷಿತ ಸಮುದಾಯಗಳು ತಮ್ಮ ನಡುವಿನ ಕರುಳ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವತ್ತ ಯೋಚಿಸಬೇಕು. ಒಬ್ಬ ದಲಿತನಿಗೆ ನೋವಾದಾಗ ಅದಕ್ಕಾಗಿ ಈ ದೇಶದ ಸರ್ವ ಶೋಷಿತರ ಕರುಳುಗಳೂ ಸಹಜವಾಗಿ ಮಿಡಿಯಬೇಕು.

ನಮ್ಮ ಶತ್ರುಗಳನ್ನು ಹೇಗೆ ಎದುರಿಸುವುದು ಎನ್ನುವುದಕ್ಕಾಗಿ ನಾವು ಇಲ್ಲಿ ಒಂದಾಗಿದ್ದೇವೆ ಎಂದಾದರೆ ಅದು ಅಪ್ರಾಮಾಣಿಕ ನಡೆಯಾಗಿರುತ್ತದೆ. ಅಂತಹ ಬಾಂಧವ್ಯ ಹೆಚ್ಚು ಸಮಯ ಬಾಳದು. ಶತ್ರು ನಮ್ಮಾಳಗಿದ್ದಾನೆ. ಅವನನ್ನು ಹುಡುಕಿ ಎದಿರುಸುವುದು ಹೇಗೆ ಎನ್ನುವುದಕ್ಕಾಗಿ ನಾವು ಈ ದಿನವನ್ನು ಬಳಸಿಕೊಳ್ಳೋಣ. ನಾವು ಇನ್ನಷ್ಟು ಜಾತ್ಯತೀತರಾಗುವ ದಾರಿಯನ್ನು ಹುಡುಕೋಣ. ಎಲ್ಲರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

Friday, April 20, 2012

ಗರ್ಭ!

ಪತ್ರಕರ್ತ, ಕವಿ, ಕತೆಗಾರ ದಿ. ಬಿ. ಎಂ. ರಶೀದ್ ಅವರ ಮೊತ್ತ ಮೊದಲ ಪ್ರಕಟಿತ ಕತೆ ಇದು. ಪಿ. ಲಂಕೇಶ್ ಅವರ ‘ಲಂಕೇಶ್ ಪತ್ರಿಕೆ’ಯಲ್ಲಿ ಈ ಕತೆ 1992ರಲ್ಲಿ ಪ್ರಕಟವಾಗಿತ್ತು.

ಮೊದಲು ಅವನು ನೋಡಿದನೋ...ಅವಳು ನೋಡಿದಳೋ...ಪರಸ್ಪರ ಅವರು ನೋಡಿದರು!
ದೃಷ್ಟಿಗಳು ಒಂದಕ್ಕೊಂದು ‘ಢಿಕ್ಕಿ’ಸಿಕೊಂಡವು!!
ಹುಡುಗ ತನ್ನೊಳಗೇ ಪಿಸುಗುಟ್ಟಿಕೊಂಡ ‘‘ದೇವರಿಗೆಷ್ಟು ಲಂಚ ಕೊಟ್ಟಿದ್ದಿ ಹುಡುಗೀ, ಅಷ್ಟು ಚೆಂದದ ಕಣ್ಣುಗಳನ್ನು ಕೊಟ್ಟಿದ್ದಾನಲ್ಲ...’’
ಹುಡುಗಿ ಅಂದುಕೊಂಡಳು ‘‘ದೇವರು ನನಗೆ ಬರೇ ಎರಡು ಕಣ್ಣುಗಳನ್ನು ಕೊಟ್ಟು ಅನ್ಯಾಯ ಮಾಡಿದ್ದಾನಲ್ಲ! ನಿನ್ನ ನೋಡುವುದಕ್ಕೆ ಅವು ಸಾಲುವುದಿಲ್ಲವಲ್ಲೋ ಹುಡುಗಾ...’’
ಆದರೆ ಅವರೆಂದೂ ಮಾತಾಡಲಿಲ್ಲ.
ಅವನು ಮಾತಾಡಲಿಲ್ಲ ಎಂದು ಅವಳೋ...ಅವಳು ಮಾತಾಡಲಿಲ್ಲ ಎಂದು ಅವನೋ...ಅವರು ಮಾತಾಡಲಿಲ್ಲ.
ಹೀಗಿದ್ದರೂ ಅವರು ಏನನ್ನೂ ಮಾತಾಡದೇ ಎಲ್ಲವನ್ನೂ ಮಾತಾಡುತ್ತಿದ್ದರು.
ಇದು ಹೀಗೆಯೇ ಸಾಗಿತ್ತು. ಅವನು ಅವಳನ್ನು ನೋಡುವುದು...ಅವಳು ಅವನನ್ನು ನೋಡುವುದು...ಕೊನೆಗೆ ತಮ್ಮ ತಮ್ಮ ಬಸ್ಸು ಬಂದರೆ ಹತ್ತಿ ಹೋಗುವುದು...ಮೊದ ಮೊದಲು ಪರಸ್ಪರರ ತುಟಿಗಳಲ್ಲಿದ್ದ ಮಂದಹಾಸದ ಬಿಂದು ದಿನಕಳೆದಂತೆ ತುಟಿಗಳಗಲಕ್ಕೂ ಅಭಿವೃದ್ಧಿಸಿದುವು.
ಆದರೂ ಅವರು ಒಮ್ಮೆಯೂ ಮಾತಾಡಿದವರಲ್ಲ.
ಹೀಗೊಂದು ದಿನ ಸಂಜೆ, ಬಸ್ಸುಗಳಿಗಾಗಿ ಕಾಯುತ್ತಾ, ಕಣ್ಣುಗಳಲ್ಲೇ ಮಾತು ಹೊಸೆಯುತ್ತಾ ಅವರಿಬ್ಬರೂ ಕೂತಿದ್ದಾಗ, ಅವಳು ತಾನು ಕೂತಿದ್ದ ಸ್ಥಳ ಬಿಟ್ಟು ಅವನ ಬಳಿಗೆ ಮೆಲ್ಲನೆ ಬಂದಳು. ಅವನತ್ತ ಬಾಗಿ ಪಿಸುಗುಟ್ಟಿದಳು;
‘‘ಹುಡುಗಾ, ನಾನು ಗರ್ಭವತಿ’’
ಹುಡುಗ ನಡುಗಿ ಹೋದ. ಉದ್ದಕ್ಕೆ ಬೆವೆತ. ಚೈತನ್ಯವಿಡೀ ಕಾಲ ಬುಡದಲ್ಲಿ ಸೋರಿ ಹೋದಂತೆ ಬಳಲಿದ.
‘ತನ್ನ ತೋರು ಬೆರಳ ತುದಿಯಿಂದ ಸ್ಪಶಿಸುವುದೂ ಇರಲಿ, ತಾನು ಒಂದು ಬಾರಿ ಮಾತಾಡಿಯೂ ಇರದ ಹುಡುಗಿ ಗರ್ಭಿಣಿ! ‘ಮೋಸ’ ಎಂದು ಕಿರುಚಲೇ, ಎಂದುಕೊಂಡ.
ಹುಡುಗಿ ಎಳೆ ಸೂರ್ಯ ಕಿರಣದ ಹಾಗೆ ಮತ್ತೆ ಪಲುಕಿದಳು: ‘‘ಹುಡುಗಾ, ನಾನು ನಿನ್ನ ಸ್ವಪ್ನಗಳ ಗರ್ಭವನ್ನು ಧರಿಸಿರುವೆನು’’

Sunday, April 15, 2012

ಮೊಳಕೆ

ನಿನ್ನೆ ನನ್ನ ಮನೆಯಂಗಳದಲ್ಲಿ 
ಧೋ ಎಂದು ಹೊಯ್ದ
ದುಃಖದ ಮಳೆ...
ಇಂದು ನೋಡಿದರೆ
ಅಂಗಳದ ತುಂಬಾ
ಕವಿತೆಯ ಬೀಜಗಳು
ಮೊಳಕೆ ಒಡೆದಿವೆ!

ಮಾತು

ನನ್ನ ಬದುಕನ್ನು
ಒತ್ತೆ ಇಟ್ಟು ಬೆಳೆಸಿದ್ದೆ
ಎಂದು ನಾನು ಈವರೆಗೂ ಭಾವಿಸಿಕೊಂಡಿದ್ದ
ಅವಳು ನುಡಿದು ಬಿಟ್ಟಳು
"ನೀನು ಸತ್ತರೆ ನನಗೇನು?''

ನನಗೋ ಭಯವಾಯಿತು!
ತನ್ನ ಬಾಯಿಯಿಂದ ತಪ್ಪಿ
ಉದುರಿ ಬಿದ್ದ ಮಾತನ್ನು
ಮರಳಿ ಹೊಟ್ಟೆಗೆ ಹಾಕಿಕೊಳ್ಳುವ
ಅವಳ ಪ್ರಯತ್ನ ಫಲಿಸಿ ಬಿಡಲಿ ದೇವರೇ!

ನಾನು...

ನೀನಿಲ್ಲದೆಯೂ
ನಾನು ಬದುಕಬಲ್ಲೆ...
ಎಂಬ ಮಾತು
ನಿನ್ನೆದೆಯಿಂದ ಸ್ಫೋಟಗೊಂಡ
ದಿನದಿಂದ
ನಾನು
ನನ್ನ ಹೆಣವನ್ನು
ಹೊತ್ತುಕೊಂಡು ತಿರುಗಾಡುತ್ತಿದ್ದೇನೆ!

ಅಂಗೈಯಲ್ಲಿ ಆಕಾಶ!


ಮಿಂಚಿ ಮಾಯವಾಗುವ ಕೆಲವು ಕ್ಷಣಗಳು, ಘಟನೆಗಳು, ದೃಶ್ಯಗಳು, ಮಾತುಗಳು, ಸಾಲುಗಳು ಜೀವದ ಕೊನೆಯ ಉಸಿರಿನವರೆಗೂ ಮುಳ್ಳಿನಂತೆ ಕಚ್ಚಿ ಹಿಡಿದು ಬಿಡೂದಿದೆ. ಸಣ್ಣದಾದದ್ದು ನಮ್ಮೊಳಗೆ ಆಕಾಶದಂತೆ ಕೆಲವೊಮ್ಮೆ ಹರಡುತ್ತಾ ಹೋಗುವ ವಿಸ್ಮಯಕ್ಕೆ ನೀವೂ ಸಿಲುಕಿರಬಹುದು. ಇಲ್ಲಿನ ಕತೆಗಳಲ್ಲಿ ಅಂತಹ ಸಣ್ಣ ಸಣ್ಣ ಕ್ಷಣಗಳನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದೇನೆ. ಒಂದು ದೊಡ್ಡ ಕಾದಂಬರಿಯೇ ಆಗುವ ವಸ್ತುವೂ ಕೆಲವು ಹನಿಗಳಲ್ಲಿದೆ. ಅದನ್ನು ಬರಹದಲ್ಲಿ ಬೆಳೆಸುವ ಧೈರ್ಯ ಸಾಲದೆ, ಇದ್ದ ಹಾಗೆಯೇ ನಿಮ್ಮ ಮುಂದೆ ಇಟ್ಟಿದ್ದೇನೆ. ಕೆಲವೊಮ್ಮೆ ನನ್ನೊಳಗಿನ ಪತ್ರಕರ್ತನ ಅವಸರವೂ, ಜನ್ಮತಹ ನನ್ನ ಹಕ್ಕಾಗಿರುವ ಅಶಿಸ್ತು, ಮತ್ತು ಸೋಮಾರಿತನವೂ ಈ ಪುಟ್ಟ ಕತೆಗಳನ್ನು ಬರೆಸಿರುವ ಸಾಧ್ಯತೆ ಇರಬಹುದೇನೋ ಎಂಬ ಅನುಮಾನವೂ ಕಾಡಿದ್ದಿದೆ. ಏನೇ ಇರಲಿ, ಈ ಅಂಗೈಯ ಹನಿಗಳು ನಿಮ್ಮೊಳಗೂ ಆಕಾಶದಂತೆ ವಿಸ್ತರಿಸಿದರೆ, ನನ್ನ ಮತ್ತು ಅಹರ್ನಿಶಿ ಪ್ರಕಾಶನದ ಪ್ರಯತ್ನ ಸಾರ್ಥಕ.

Tuesday, April 10, 2012

‘ಮಾತು-ಮೌನ’ದ ಕುರಿತಿಷ್ಟು...

 ಪತ್ರಕರ್ತ, ಕವಿ ದಿ. ಬಿ. ಎಂ. ರಶೀದ್ ಅವರು ‘ಮಾತು-ಮೌನ’ದ ಕುರಿತಂತೆ ಬರೆದ ಕವಿತೆ ಇಲ್ಲಿದೆ. ಈ ಕವಿತೆಯನ್ನು ಅವರ ‘ಪರುಷಮಣಿ’ ಸಮಗ್ರ ಬರಹದಿಂದ ಆರಿಸಿಕೊಳ್ಳಲಾಗಿದೆ.


1.
ಒಳಗೊಂದು ಸಭೆ!
‘ಮಾತು-ಮೌನ’ದ 
ನಡುವೆ ಜಟಾಪಟಿ!!
ಮಾತಿಗೆ ಶಬ್ದಗಳಿವೆ: ಅರ್ಥಗಳಿಲ್ಲ
 

ಮೌನಕ್ಕೋ ಅರ್ಥಗಳಿವೆ; ಶಬ್ದಗಳಿಲ್ಲ

2
ಮಾತಿಗೇನೋ
ಹೇಳುವುದಿತ್ತು
ಆದರೆ..
ಹೇಳಲಿರುವುದನ್ನು
ಹೇಳದೇ ಬಿಡುವ;
ಹೇಳಲಿಲ್ಲದ್ದನ್ನು
ಹೇಳಿ ಬಿಡುವ
ಭಯದಿಂದ 
ಮಾತು ಮೌನವಾಯಿತು

3
ಮಾತು
ಮೌನವಾಗಿತ್ತು
ಮಾತನಾಡಲೇನೂ 
ಇರಲಿಲ್ಲ-
ವೆಂದಲ್ಲ
ಸಮಸ್ಯೆ ಯಾವುದಾಗಿತ್ತೆಂದರೆ
ಒಳಗೆ ಶಬ್ದಗಳ
ಮುಷ್ಕರವಿತ್ತು

4
ಮಾತಿನೊಳಗೊಂದು
 

ಮೌನವಿತ್ತು
ಮಾತು
 

ಮೌನವಾದೊಡನೆ 
ಮೌನ...
ಮಾತನಾಡತೊಡಗಿತು

5
ಮಾತಿಗೇನೂ ಇಲ್ಲದಾಗ
ಮಾತಿಗೆಲ್ಲ ಇದ್ದಾಗ
ಮಾತು-
ಮೌನ!
ನಮ್ಮ ಮುಖಾಮುಖಿಯಲ್ಲಿ
ನಾವೋ,
ಏನನ್ನೂ ಮಾತಾಡದೇ
ಎಲ್ಲವನ್ನೂ ಮಾತಾಡಿದೆವು
 

ಮೌನ-ಮಾತು!!

6
 

ಮೌನದೊಳಗೊಂದು
ಮಾತಿತ್ತು!
ಧ್ವನಿಯಿರಲಿಲ್ಲ
ಮಾತು
ಮೌನಕೆ ಸೋತು, 

ಮೌನದ ತೆಕ್ಕೆಗೆ ಜೋತು
ನೋಡಿದರೆ-
ಕಣ್ಣಂಚಲ್ಲೊಂದು 
ಹನಿಯಿತ್ತು!!

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Saturday, April 7, 2012

ಕಳ್ಳ ಮತ್ತು ಊರು

ಕಾಡೊಳಗೊಬ್ಬ ಕಳ್ಳ ಅವಿತಿದ್ದ.
ಆಗಾಗ ಊರಿಗೆ ನುಗ್ಗಿ ಕದಿಯುತ್ತಿದ್ದ.
ಊರವರಿಗೆ ಅವನು ದೊಡ್ಡ ತಲೆನೋವಾಗ ತೊಡಗಿದ.
ತಡೆಯಲಾರದೆ ಕೊನೆಗೆ ಸರಕಾರಕ್ಕೆ ದೂರು ಕೊಟ್ಟರು.
ಸರಕಾರ ಕಳ್ಳನನ್ನು ಹಿಡಿಯಲು ದೊಡ್ಡ ಪೋಲಿಸ್ ಪಡೆಯನ್ನು ಕಳುಹಿಸಿತು.
ಪೋಲಿಸ್ ಪಡೆ ಕಳ್ಳನನ್ನು ಹುಡುಕ ತೊಡಗಿತು.
ಕಳ್ಳ ಸಿಗಲೇ ಇಲ್ಲ. ಸಿಗುವವರೆಗೆ ಪೊಲೀಸರು ಊರೂ ಬಿಟ್ಟು ಹೋಗುವ ಹಾಗಿಲ್ಲ.
ಪೊಲೀಸರು ಊರಲ್ಲಿ ಬಿಡಾರ ಊಡಿದರು.
ಪೋಲೀಸರ ಯೋಗ ಕ್ಷೇಮ ಊರವರ ತಲೆ ಮೇಲೆ ಬಿತ್ತು.
ಪುಕ್ಕಟೆ ಊಟ, ಹಣ್ಣು ಕಾಯಿ ಒಪ್ಪಿಸೋದು ಅನಿವಾರ್ಯವಾಯಿತು.
ಪೋಲಿಸ್ ಲಾಟಿ ನಿಧಾನಕ್ಕೆ ಮಾತನಾಡ ತೊಡಗಿತು.
ಹೆಣ್ಣು ಮಕ್ಕಳು ಹೊರ ಹೋಗೂದು ಕಷ್ಟವಾಗತೊಡಗಿತು.
ಕಟ್ಟಕಡೆಗೆ ಯುವಕರು ಹೆದರಿ ಒಬ್ಬೊಬ್ಬರಾಗಿ ಕಾಡು ಸೇರ ತೊಡಗಿದರು.
ಈ ಹಿಂದೆ ಒಬ್ಬ ಕಳ್ಳನಿದ್ದನಲ್ಲ, ಅವನೇ ಯುವಕರಿಗೆ ನಾಯಕನಾದ.
ಇಡೀ ಊರು ಕಳ್ಳರ ಪರವಾಗತೊಡಗಿತು.
ಪೊಲೀಸರಿಗೂ ಊರಿಗೂ ಜಗಳ ಶುರುವಾಯಿತು.
ಇಡೀ ಊರೇ ಕಳ್ಳನನ್ನು ರಕ್ಷಿಸುತ್ತಿದೆ ಎಂದು ಸರಕಾರಕ್ಕೆ ವರದಿ ಹೋಯಿತು.
ಊರ ಪ್ರಮುಖರೆಲ್ಲ ಜೈಲು ಸೇರಿದರು.
ಹಲವರು ಎನ್ಕೌಂಟರ್ನಲ್ಲಿ ಸತ್ತರು.
ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡರು.
ಅಳಿದುಳಿದವರು ಜೀವ ಉಳಿಸಿಕೊಳ್ಳಲು ಕಾಡು ಸೇರಿದರು.
ಊರೂ ಸಂಪೂರ್ಣ ನಾಶವಾಯಿತು.
ಪೋಲಿಸರಿನ್ನು ಕಾಡಿನಲ್ಲಿ ಕಳ್ಳನಿಗಾಗಿ ಹುಡುಕುತ್ತಲೇ ಇದ್ದಾರೆ.

Thursday, April 5, 2012

ಹರಾಜು ಮತ್ತು ಇತರ ಕತೆಗಳು

ಥ್ಯಾಂಕ್ಸ್
ಆಟೋ ರಿಕ್ಷಾಚಾಲಕ ಅಂದು ಎಂದಿಗಿಂತ ತುಸು ಬೇಗ ಮನೆಗೆ ಬಂದಿದ್ದ.
ಪತ್ನಿ ಕೇಳಿದ ‘‘ಏನ್ರೀ...ಭಾರೀ ಖುಷಿಯಲ್ಲಿರೋ ಹಾಗಿದೆ. ಏನು ವಿಶೇಷ’’
ಆತ ಹೇಳಿದ ‘‘ಇಂದು ಒಂದು ವಿಚಿತ್ರ ನಡೆಯಿತು ಕಣೆ. ಪ್ರಯಾಣಿಕನೊಬ್ಬ ನನ್ನ ರಿಕ್ಷಾವನ್ನು ಏರಿದ. ಅವನು ಹೇಳಿದ ಸ್ಥಳಕ್ಕೆ ತಲುಪಿಸಿದೆ. ಮೀಟರ್ ನೋಡಿ ಹಣ ಕೊಟ್ಟ ವಿಚಿತ್ರವೆಂದರೆ ಹೋಗುವ ಮೊದಲು ಆತ ನನಗೆ ‘ಥ್ಯಾಂಕ್ಸ್’ ಹೇಳಿದ’’

ಉಪ್ಪು
‘ಕಡಲ ನೀರೇಕೆ ಉಪ್ಪು’
‘‘ನದಿಗಳೆಲ್ಲ ಹೆಣ್ಣಾದ ತಪ್ಪಿಗೆ...ಕಣ್ಣೀರ ರುಚಿಯೇ ಉಪ್ಪು’’

ಹರಾಜು
‘‘ಇಂದು ಲಂಡನ್ನಿನಲ್ಲಿ ಗಾಂಧೀಜಿಯ ವಸ್ತುಗಳ ಹರಾಜು ನಡೆಯುತ್ತದೆಯಂತೆ’’
‘‘ಹೌದಾ? ಹಾಗಾದರೆ ಗುಜರಾತ್‌ನಲ್ಲಿ 2002ರಲ್ಲಿ ನಡೆದದ್ದೇನು?’’

ಊಟ
‘ಇವತ್ತು ಮಧ್ಯಾಹ್ನ ಒಟ್ಟಿಗೆ ಊಟ ಮಾಡೋಣ. ಬರ್ತೀಯ?’ ಗೆಳೆಯ ಕೇಳಿದ.
‘ನಾನು ಇವತ್ತು ತುಸು ಬಿಜಿಯಾಗಿದ್ದೇನೆ. ನಾಳೆ ಮಧ್ಯಾಹ್ನ ಒಟ್ಟಿಗೆ ಕೂರೋಣ’’ ಎಂದೆ.
ಮರುದಿನ ಬೆಳಗ್ಗೆ ಗೆಳೆಯ ಅಪಘಾತದಲ್ಲಿ ಮೃತಪಟ್ಟ ಸುದ್ದಿ.
ಇನ್ನು ನನಗೆ ಮಧ್ಯಾಹ್ನದ ಊಟ ವರ್ಜ್ಯ.

ಅಚ್ಚರಿ
‘‘ರಾಜರಾಯರು ಇಂದು ಸತ್ತರಂತೆ...’’ ಒಬ್ಬ ಹೇಳಿದ.
‘‘ಅರೆ! ಅವರಿನ್ನೂ ಸತ್ತಿರ್ಲಿಲ್ವಾ...?’’ ಇನ್ನೊಬ್ಬ ಅಚ್ಚರಿ ವ್ಯಕ್ತ ಪಡಿಸಿದ.

ಬ್ಯಾಂಕ್
‘‘ಹಾಯ್ ಡಾರ್ಲಿಂಗ್ ಎಲ್ಲಿದ್ದೀಯ?’’ ಗೆಳತಿ ಫೋನಲ್ಲಿ ಕೇಳಿದಳು.
‘‘ನಾನು ಬ್ಯಾಂಕ್‌ನಲ್ಲಿದ್ದೇನೆ...’’ ಆತ ಉತ್ತರಿಸಿದ.
‘‘ಓಹ್ ಡಿಯರ್...ನನಗೆ ಅತ್ಯವಶ್ಯವಾಗಿ ಹತ್ತು ಸಾವಿರ ರೂ. ಬೇಕಾಗಿತ್ತು. ಬರುವಾಗ ಇಡ್ಕೊಂಡು ಬರ್ತೀಯ...’’
‘‘ನಾನು ಬ್ಯಾಂಕ್‌ನಲ್ಲಿದ್ದೀನಿ...ಅಂದ್ರೆ ಬ್ಲಡ್ ಬ್ಯಾಂಕ್‌ನಲ್ಲಿ. ಒಬ್ಬರಿಗೆ ರಕ್ತ ಕೊಡಬೇಕಾಗಿತ್ತು. ಅಂದ ಹಾಗೆ ನಿನ್ನ ಬ್ಲಡ್ ಗ್ರೂಪ್ ಯಾವುದು?’’
ಗೆಳತಿಯ ಫೋನ್‌ನ ರೇಂಜ್ ಕಟ್ಟಾಗಿ ಬಿಟ್ಟಿತು.