Sunday, September 17, 2017

ಗೌರಿಯ ಪದಗಳು


1
ಅವರು ಒಳ್ಳೆಯ ಭಾಷಣಕಾರರಾಗಿರಲಿಲ್ಲ 
ಆದರೂ ಅವರು ಒಳ್ಳೆಯದನ್ನು ಮಾತನಾಡಿದರು
ಅವರು ಪ್ರಕಾಂಡ ಲೇಖಕಿಯಾಗಿರಲಿಲ್ಲ 
ಅಕ್ಷರ ಅಕ್ಷರಗಳನ್ನು ಜೋಡಿಸಿ 
ಬರೆದು, ತಾನೇ ಮಾದರಿ ಪುಸ್ತಕವಾದರು
ವ್ಯವಹಾರ ಗೊತ್ತಿರಲಿಲ್ಲ 
ಸಾಲ ಸೋಲಗಳ ಶಿಲುಬೆ ಹೊತ್ತು 
ನಡುಗು ಹೆಜ್ಜೆಯಲ್ಲಿ ಮುಂದೆ ನಡೆದರು, 
ಪತ್ರಿಕೆಯ ಲಾಭದ 
ಕೊಯ್ಲನ್ನು ನಮಗೆಂದು ಬಿಟ್ಟು ಹೋದರು
ಸಂಸಾರವಂದಿಗಳಲ್ಲ
ಒಂಟಿ ಹೆಣ್ಣು ಆಕೆ 
ಆದರೂ, ಇಂದು ಜಗದ ಮಕ್ಕಳು 
ಅನಾಥರಾದೆವೆಂದು ಅಳುತ್ತಿದ್ದಾರೆ
ಆಕೆ ದೈಹಿಕವಾಗಿ 
ದುರ್ಬಲರಾಗಿದ್ದರು 
ಆದರೂ ಅವರನ್ನು ಕೊಲ್ಲಲು 
ಏಳು ಗುಂಡುಗಳು ಬೇಕಾಯಿತು !
2
ಹೌದು, ನಾನು ಅತ್ತಿದ್ದೇನೆ
ಹೀಗೆನ್ನಲು ನಾನು ನಾಚೂದಿಲ್ಲ 
ನೆಲಕ್ಕೆ ಬಿದ್ದ ನನ್ನ ಕಣ್ಣ ಹನಿಗಳು 
ವ್ಯರ್ಥವಾಗುವುದಿಲ್ಲ... 
ಅವು ಸಂಕ್ರಾಂತಿಯನ್ನು 
ಒಡಲೊಳಗೆ ಬಚ್ಚಿಟ್ಟುಕೊಂಡ ಬೀಜಗಳು
3
ಆ ಓಣಿಯಲ್ಲಿ ಸಾಗುವಾಗ ಎಚ್ಚರ 
ಅದು ಸಜ್ಜನರು ಬದುಕುವ ಓಣಿ 
ಈಗಷ್ಟೇ ಒಂದು ಹೆಣವನ್ನು ನೋಡಿದವರಂತೆ 
ಅಲ್ಲಿ ಆವರಿಸಿಕೊಂಡ ಮೌನ 
ನಿಮ್ಮನ್ನು ಬೆಚ್ಚಿ ಬೀಳಿಸಬಹುದು !
4
ನಮಗೆ ದೊರಕಿರುವ
 "ಅಭಿವ್ಯಕ್ತಿ" ಎನ್ನೋ ಪದ 
ಲಕ್ಷಾಂತರ ಜನರ ರಕ್ತದಲ್ಲಿ 
ನೆಂದಿದೆ 
ಎನ್ನೋ ಕೃತಜ್ಞತೆ ನಮಗಿರಬೇಕು
5
ದಾರಿ ಹೋಕರು ಎಸೆದ ನೂರು 
ಕಲ್ಲುಗಳ ತಾಳಿಕೊಂಡು 
ಹುಳಿ ಮಾವಿನ ಮರದಲ್ಲಿ ತೂಗುತ್ತಿರುವ 
ಹಣ್ಣು
ಲಂಕೇಶರ ಕನಸುಗಳ 
ಕಣ್ಣ ರೆಪ್ಪೆಯೊಳಗೆ ಜೋಪಾನ ಮಾಡಿ 
ಕಾವು ಕೊಡುತ್ತಾ 
ಎರಗುವ ಹದ್ದುಗಳ ಜೊತೆಗೆ 
ಬೀದಿಗಿಳಿದು ಬಡಿದಾಡುತ್ತಾ 
ಕೋರ್ಟು ಕಚೇರಿ ಎಂದು ಅಲೆದಾಡುತ್ತ 
ಟೀಕೆ-ಟಿಪ್ಪಣಿಗಳ ಬಾಣಕ್ಕೆ ಎದೆಗೊಟ್ಟ 
ಮುಸ್ಸಂಜೆ ಕಥಾ ಪ್ರಸಂಗದ ರಂಗವ್ವ
ಕೆಲವರ ಪಾಲಿಗೆ ಅಕ್ಕ 
ಹಲವರ ಪಾಲಿಗೆ ಅವ್ವ 
ಸಾವಂತ್ರಿ, ರಂಗವ್ವ, ಸುಭದ್ರೆ, ದೇವೀರಿ 
ನೀಲು, ನಿಮ್ಮಿ... ಎಲ್ಲರೊಳಗೂ 
ಚೂರು ಚೂರಾಗಿ ನೀವು... 
ನಿಮ್ಮೊಳಗೆ ಲಂಕೇಶರು 
ಹೊಸದಾಗಿ ಹುಟ್ಟಿದರು
ಪತ್ರಿಕೆ ನಿಮ್ಮನ್ನು ಸಿಗರೇಟಿನಂತೆ 
ಸೇದುತ್ತಿದೆ... 
ಪ್ರತಿವಾರ ಸುಡು ಕೆಂಡ 
ವಿಷ ಹೀರಿದ ನಂಜುಂಡ 
ಮಾತಿಲ್ಲದವರ ಪಾಲಿಗೆ 
ಪತ್ರಿಕೆಯೇ ನಾಲಗೆ 
ನಿರೀಕ್ಷೆ, ಸಮತೆಯ ನಾಳೆಗೆ
ಇಂದು ನಿಮಗೆ ಹುಟ್ಟಿದ ದಿನ 
ನಾಡು, ನುಡಿಯನ್ನು ನೀವು ಮುಟ್ಟಿದ ದಿನ

ಗೌರಿ ಮೇಡಂಗೆ ಪದ್ಯದ ಮೂಲಕ ನಾನು ಶುಭಾಷಯ ಹೇಳಿದಾಗ ಅವರು ನನಗೆ ಇನ್ಬಾಕ್ಸ್ ನಲ್ಲಿ ಪ್ರತಿಕ್ರಯಿಸಿದ್ದು ಹೀಗೆ ...
01/29/2015 7:12PM
Oh basheer!!!!!!!!!!! you made me cry on my birthday. thank you thank you thank you. first time someone has written a poem about me. this is the most beautiful gift i have got in all my 53 birthdays. of course the best gift i have got was LIFE from my parents.
6
ನನ್ನ ಮರಣವ 
ಕಂಡು ಅವರು ಉದ್ಗರಿಸುತ್ತಾರೆ 
ಇವನು ಮಹಮದೀಯನಲ್ಲ, 
ಕ್ರಿಶ್ಚಿಯನ್ನನಲ್ಲ, 
ಯಹೂದಿಯಲ್ಲ 
ಹಿಂದೂ ಅಂತೂ ಅಲ್ಲವೇ ಅಲ್ಲ ... 
ಈ ಮರಣ ಕೂಗಿ ಹೇಳುತ್ತಿದೆ 
ಇವನೊಬ್ಬ ಶರಣ!!

Wednesday, September 13, 2017

ಗಾಂಧಿಯ ಬೆಳಕಲ್ಲಿ ಗೌರಿ....

ಗೌರಿ ಲಂಕೇಶ್ ಪತ್ರಿಕೆಯ ಕೊನೆಯ ಸಂಚಿಕೆಗೆಂದು ಬರೆದಿರುವ ಲೇಖನ ....
ನಾನು ಬಾಲ್ಯದಲ್ಲಿ ಕೇಳಿದ ಕತೆ ಇದು. ಈ ಕತೆ ಹೇಳಿದ್ದು ನನ್ನ ತಾಯಿ. ಆಕೆ ಅದನ್ನು ನನಗೆ ಹೇಳುವ ಸಂದರ್ಭದಲ್ಲಿ ಯಾವ ಉದ್ದೇಶ ಇತ್ತು ಎನ್ನುವುದು ನನಗೆ ಅರಿಯದು. ಆದರೆ ಆ ಬಳಿಕ, ಈ ಕತೆ ನಾನು ಬೆಳೆದಂತೆ ಹೆಚ್ಚು ಹೆಚ್ಚು ಉಜ್ವಲಗೊಳ್ಳುತ್ತಾ ನನ್ನನ್ನು ವಾಸ್ತವಕ್ಕೆ ಮುಖಾಮುಖಿಯಾಗುವುದಕ್ಕೆ ಪ್ರೇರೇಪಿಸಿದೆ. ನನ್ನ ತಾಯಿ ಹೇಳಿದ ಕತೆ ಹೀಗಿದೆ. 

ಪ್ರವಾದಿ ಮಹಮ್ಮದ್ ಆಗಷ್ಟೇ ಮಕ್ಕಾದಲ್ಲಿ ತನ್ನ ಚಿಂತನೆಗಳನ್ನು ಹರಡುತ್ತಿದ್ದ ಕಾಲ. ಅವರು ಭಾಗಶಃ ಒಂಟಿಯಾಗಿದ್ದರು. ಹಲವರಿಂದ ಹುಚ್ಚ ಎಂಬ ಟೀಕೆಗೀಡಾಗಿದ್ದರಷ್ಟೇ ಅಲ್ಲದೆ ಹಲ್ಲೆಗೂ ಒಳಗಾಗಿದ್ದರು. ಎಲ್ಲರಿಗೂ ಅವರೊಂದು ತಮಾಷೆಯ ವಸ್ತು. ಇನ್ನೊಂದೆಡೆ ಮಹಮ್ಮದರ ಸಂಬಂಧಿಯಾಗಿರುವ ಮಕ್ಕಾದ ನಾಯಕ ಅಬೂಜಹಲ್(ಈತನ ನಿಜವಾದ ಹೆಸರು ಅಮ್ರ್ ಬಿನ್ ಹಿಶಾಮ್) ಮಹಮ್ಮದರಿಗೆ ಸರಿಯಾದ ಪಾಠ ಕಲಿಸಲು ಕಾಯುತ್ತಿದ್ದ. ಕೈಗೆ ಸಿಕ್ಕಿದರೆ ಕೊಂದೇ ಹಾಕುವುದೆಂದು ತೀರ್ಮಾನಿಸಿದ್ದ. ಮಕ್ಕಾದ ಪುಂಡರೆಲ್ಲ ಸಮಯ ಸಿಕ್ಕಿದಾಗ ಮಹಮ್ಮದರ ಮೇಲೆ ಟೀಕೆ, ದಾಳಿಗಳನ್ನು ನಡೆಸುತ್ತಿದ್ದರು.

 ಒಂದು ದಿನ ಮಕ್ಕಾದ ನಗರದ ಮೂಲೆಯಲ್ಲಿ, ರೌಡಿಗಳೆನಿಸಿಕೊಂಡ ಕೆಲವರು ಕುಳಿತು ಮಹಮ್ಮದರ ಚಿಂತನೆ, ಹೋರಾಟವನ್ನು ಚರ್ಚಿಸಿ ನಗುತ್ತಿದ್ದರು. ಆ ಸಂದರ್ಭದಲ್ಲಿ ಆ ಗುಂಪಿನ ಕಡೆಗೆ ಒಬ್ಬ ಬಡ ಕಾರ್ಮಿಕ ಬಂದ. ‘‘ಈ ನಗರದ ಆಗರ್ಭ ಶ್ರೀಮಂತ ಅಬೂಜಹಲ್ ನನಗೆ ಹಣವನ್ನು ಕೊಡುವುದಕ್ಕಿದೆ. ಕೇಳಿದರೆ ಬೆದರಿಸುತ್ತಾನೆ. ದಯವಿಟ್ಟು ಅದನ್ನು ವಸೂಲಿ ಮಾಡಿ ಕೊಡಿ’’ ಎಂದು ಗೋಗರೆಯ ತೊಡಗಿದ. ಅಲ್ಲಿದ್ದವರೆಲ್ಲ ಬಲಿಷ್ಟರು. ಶಕ್ತಿವಂತರು. ಗಣ್ಯರೂ ಅವರ ನಡುವೆ ಇದ್ದರು. ಆದರೆ ಅವರ್ಯಾರಿಗೂ ಈ ಕಾರ್ಮಿಕನಿಗಾಗಿ ಅಬೂಜಹಲ್‌ನೊಂದಿಗೆ ನಿಷ್ಠುರ ಕಟ್ಟಿಕೊಳ್ಳುವ ಇರಾದೆಯಿರಲಿಲ್ಲ. ಇನ್ನೇನು ಆತನನ್ನು ಗದರಿಸಿ ಓಡಿಸಬೇಕು ಎನ್ನುವಷ್ಟರಲ್ಲಿ ಒಬ್ಬನಿಗೆ ಏನನ್ನಿಸಿತೋ ‘‘ನೋಡು, ಓ ದೂರದಲ್ಲಿ ಒಬ್ಬ ಏಕಾಂಗಿಯಾಗಿ ಕುಳಿತಿದ್ದಾನಲ್ಲ. ಅವನ ಬಳಿಗೆ ಹೋಗು. ಅವನು ಖಂಡಿತವಾಗಿಯೂ ನಿನ್ನ ಹಣವನ್ನು ಅಬೂಜಹಲ್‌ನಿಂದ ವಸೂಲಿ ಮಾಡಿ ಕೊಡುತ್ತಾನೆ’’ ಎಂದು ಹೇಳಿದ. ಕೂಲಿ ಕಾರ್ಮಿಕ ಅದನ್ನು ನಂಬಿ ಆ ವ್ಯಕ್ತಿಯ ಕಡೆಗೆ ನಡೆದ. ಅಲ್ಲಿ ಮುಹಮ್ಮದರು ಏಕಾಂಗಿಯಾಗಿ ಕೂತಿದ್ದರು. ಕಾರ್ಮಿಕನನ್ನು ಮತ್ತು ಮಹಮ್ಮದರನ್ನು ಏಕಕಾಲದಲ್ಲಿ ತಮಾಷೆ ಮಾಡುವುದು ಅಲ್ಲಿ ಗುಂಪು ಕೂಡಿದ್ದವರ ಉದ್ದೇಶವಾಗಿತ್ತು. ಕಾರ್ಮಿಕ ಇವರ ಮಾತನ್ನು ನಂಬಿ ಮಹಮ್ಮದರ ಬಳಿಗೆ ಸಾರಿ, ತನ್ನ ಅಳಲನ್ನು ಹೇಳಿದ. ಕಾರ್ಮಿಕನ ಅಳಲನ್ನು ವಿವರವಾಗಿ ಆಲಿಸಿದ ಮಹಮ್ಮದರು, ಎಲ್ಲರೂ ನೋಡು ನೋಡುತ್ತಿದ್ದಂತೆಯೇ ಆತನ ಕೈ ಹಿಡಿದು ನೇರವಾಗಿ ಅಬೂಜಹಲನ ಮನೆಯ ಕಡೆಗೆ ನಡೆದರು. ಹೋದವರೇ ಅಬೂಜಹಲರ ಮನೆ ಬಾಗಿಲನ್ನು ತಟ್ಟಿದರು. ಆತ ಬಾಗಿಲು ತೆರೆದರೆ, ತನ್ನ  ಮುಂದೆ ತಾನು ಹುಡುಕುತ್ತಿರುವ ಮುಹಮ್ಮದ್! ಜೊತೆಗೆ ತಾನು ಹಣ ನೀಡುವುದಕ್ಕೆ ಬಾಕಿಯಿಟ್ಟಿರುವ ಕಾರ್ಮಿಕ!  ಮಹಮ್ಮದರು ಕಾರ್ಮಿಕನನ್ನು ತೋರಿಸಿ ಒಂದೇ ವಾಕ್ಯ ಹೇಳಿದರು ‘‘ಈತನಿಗೆ ನೀಡಬೇಕಾಗಿರುವ ಹಣವನ್ನು ಕೊಟ್ಟು ಬಿಡಿ’’. ಅಬೂಜಹಲ್ ಯಾವುದೋ ವಿಸ್ಮೃತಿಗೆ ತಳ್ಳಲ್ಪಟ್ಟವನಂತೆ ನೇರ ಒಳಹೋದವನೇ ಹಣವನ್ನು ತಂದು ಕಾರ್ಮಿಕನಿಗೆ ಒಪ್ಪಿಸಿದ. ಮಹಮ್ಮದ್ ಕಾರ್ಮಿಕನ ಜೊತೆಗೆ ಅಲ್ಲಿಂದ ವಾಪಾಸಾದರು. ಇವನ್ನೆಲ್ಲ ವಿಸ್ಮಿತರಾಗಿ ನೋಡುತ್ತಿದ್ದ ಮಕ್ಕಾ ನಗರದ ಪುಂಡರು ಅಬೂಜಹಲ್‌ನನ್ನು ತರಾಟೆಗೆ ತೆಗೆದುಕೊಂಡರು. ಆಗ ಅಬೂಜಹಲ್ ನುಡಿದನಂತೆ ‘‘ಮಹಮ್ಮದರ ಎರಡು ಭುಜಗಳಲ್ಲಿ ನಾನು ಎರಡು ಸಿಂಹಗಳು ಘರ್ಜಿಸುತ್ತಿರೂದನ್ನು ನೋಡಿದೆ’’
   ಮಹಮ್ಮದರ ಭುಜಗಳಲ್ಲಿ ಎರಡು ಸಿಂಹಗಳು ಗರ್ಜಿಸುತ್ತಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಮಹಮ್ಮದರು ಒಬ್ಬ ಅನಕ್ಷರಸ್ಥರು. ಅನಾಥರು. ದೈಹಿಕವಾಗಿ ದುರ್ಬಲರು. ಬಡವರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಏಕಾಂಗಿ. ಆದರೆ ಮಹಮ್ಮದರ ಪ್ರಾಮಾಣಿಕತೆ, ನಿಷ್ಠುರತೆ, ನ್ಯಾಯಪರತೆಗೆ ಅವನು ಹೆದರಿದ. ಒಬ್ಬ ಮನುಷ್ಯನೊಳಗಿರುವ ನೈತಿಕ ಶಕ್ತಿಯೇ ಆತನ ನಿಜವಾದ ಬಲ ಎನ್ನುವುದನ್ನು ಆ ಕತೆಯಿಂದ ಅರಿತುಕೊಳ್ಳುತ್ತಾ ಹೋದೆ. ಯಾವಾಗ ಗಾಂಧೀಜಿಯ ಬದುಕು ಮತ್ತು ಹೋರಾಟವನ್ನು ನಾನು ಓದತೊಡಗಿದೆನೋ, ಮೇಲಿನ ಕತೆ ತನ್ನ ಒಳ ತಿಳಿವನ್ನು ಇನ್ನಷ್ಟು ಇನ್ನಷ್ಟು ಬಿಟ್ಟು ಕೊಡತೊಡಗಿತು. ತನ್ನೆಲ್ಲ ಸೋಗಲಾಡಿತನಗಳ ಮೂಲಕ ಬದುಕುವ ಮನುಷ್ಯ ತನ್ನ ದೌರ್ಬಲ್ಯಗಳನ್ನು ಖಾಕಿಯ ಮೂಲಕ, ಹಣದ ಮೂಲಕ, ದೈಹಿಕ ಬಲದ ಮೂಲಕ, ಹಿಂಬಾಲಕರ ಮೂಲಕ, ಪುರೋಹಿತ ಶಾಹಿ ವ್ಯವಸ್ಥೆಯ ಮೂಲಕ ರಕ್ಷಿಸಿಕೊಳ್ಳಲು ಯತ್ನಿಸುತ್ತಾನೆ. ಅನೇಕ ಸಂದರ್ಭಗಳಲ್ಲಿ ಆತ ತನ್ನ ಪಾಂಡಿತ್ಯ, ವಿದ್ವತ್ತುಗಳ ಮೂಲಕವೂ ಬಚ್ಚಿಟ್ಟುಕೊಳ್ಳಲು ಯತ್ನಿಸುತ್ತಾನೆ. ಆದರೆ ಮೂಲತಃ ಅವನು ಪ್ರಾಮಾಣಿಕ, ನ್ಯಾಯನಿಷ್ಠುರ ಮನುಷ್ಯನಿಗೆ ಒಳಗೊಳಗೆ ಅಂಜುತ್ತಾ ಬದುಕುತ್ತಾನೆ. ಇಲ್ಲವಾದರೆ, ಒಬ್ಬ ಫಕೀರ, ವೃದ್ಧ, ನಿಶ್ಶಸ್ತ್ರ ಮನುಷ್ಯನನ್ನು ಗೋಡ್ಸೆಯಂತಹ ವ್ಯಕ್ತಿಗೆ ಗುಂಡು ಹಾಕಿ ಕೊಲ್ಲುವ ಅಗತ್ಯವೇ ಬೀಳುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ನೆಹರೂನ ಮಾತಿನ ಲಾಲಿತ್ಯ, ವಲ್ಲಭಬಾಯಿ ಪಟೇಲರ ಶಕ್ತಿ, ಬಾಲಗಂಗಾಧರ ತಿಲಕರ ವಾಕ್ ವೈಭವ ಎಲ್ಲವನ್ನೂ ಗಾಂಧಿ ಮೀರಿದ್ದು ತನ್ನ ನ್ಯಾಯನಿಷ್ಠುರವಾದ ವ್ಯಕ್ತಿತ್ವದ ಮೂಲಕ. ತನ್ನ ಸರಳತೆಯ ಮೂಲಕ. 

ರಾಜ್ಯದಲ್ಲಿ ಲಂಕೇಶರ ವಿದ್ವತ್‌ಭರಿತ ವ್ಯಕ್ತಿತ್ವವನ್ನು ಮೀರಿ ಗೌರಿ ಲಂಕೇಶ್ ಬೆಳೆದು, ನಾಡನ್ನು ಆವರಿಸಿದ್ದು ಇದೇ  ನೈತಿಕಶಕ್ತಿಯಿಂದ ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಗೌರಿ ಆಳದಲ್ಲಿ ಒಂಟಿಯಾಗಿದ್ದವರು. ದೈಹಿಕವಾಗಿ ದುರ್ಬಲರಾಗಿದ್ದರು. ಒಳ್ಳೆಯ ಭಾಷಣಕಾರ್ತಿಯಂತೂ ಆಗಿರಲೇ ಇಲ್ಲ. ಹಾಗೆಯೇ ವಿದ್ವ,ತ್ ಪೂರ್ಣ ಬರಹಗಾರ್ತಿಯೂ ಅವರಲ್ಲ. ಆದರೆ ನಡು ಬೀದಿಯಲ್ಲಿ ಅಮಾಯಕನೊಬ್ಬ ಬರ್ಬರವಾಗಿ ಹಲ್ಲೆಗೀಡಾಗುತ್ತಿರುವಾಗ ಅವನು ನಮ್ಮಿಂದ ನಿರೀಕ್ಷಿಸುವುದು ಪ್ರಗಲ್ಭ ಭಾಷಣವನ್ನಲ್ಲ, ವಿದ್ವತ್ತನ್ನಲ್ಲ  ಎನ್ನುವುದು ಗೌರಿಗೆ ಗೊತ್ತಿತ್ತು. ‘ನಿಲ್ಲಿಸಿ’ ಎನ್ನುವ ಒಂದೇ ಒಂದು ಶಬ್ಬ ನಮ್ಮ ಬಾಯಿಯಿಂದ ಮೊಳಗಿದರೆ ಅಥವಾ ನಮ್ಮ ಲೇಖನಿಯಿಂದ ಉದುರಿದರೆ ಅದನ್ನು ವರ್ತಮಾನ ಆಲಿಸುತ್ತದೆ. ತಿರಸ್ಕರಿಸುತ್ತದೆ. ಅಥವಾ ಆ ಪದವನ್ನು ಗಂಭೀರವಾಗಿ ಚರ್ಚಿಸುತ್ತದೆ. "ನಿಲ್ಲಿಸಿ" ಅಥವಾ "ಬೇಡ" ಎನ್ನುವುದು ಇಂದಿನ ದಿನಗಳಲ್ಲಿ ಒಂದು ಪದ ಅಥವಾ ಒಂದು ವಾಕ್ಯ ಮಾತ್ರವಲ್ಲ, ಅದೊಂದು ಪೂರ್ಣ ಲೇಖನವೂ ಕೂಡ. ಇಂಗ್ಲಿಶ್  ಪತ್ರಿಕೋದ್ಯಮದಿಂದ ಬಂದ ಗೌರಿಗೆ ಕನ್ನಡದಲ್ಲಿ ವಿದ್ವತ್ ಪೂರ್ಣವಾಗಿ ಬರೆಯಲು ಸಾಧ್ಯವಿರಲಿಲ್ಲ. ಅವರು  ಕನ್ನಡದಲ್ಲಿ ತಡವರಿಸುತ್ತಾ ಮಾತನಾಡಿದರು. ಅಕ್ಷರಕ್ಷರಗಳನ್ನು ಕೂಡಿಸಿ ಬರೆದರು. ‘ಕನ್ನಡವೇ ಸರಿಯಾಗಿ ತಿಳಿಯದ ಈಕೆ ಲಂಕೇಶರ ಪತ್ರಿಕೆಯನ್ನು ಹೇಗೆ ಮುಂದುವರಿಸಿಯಾಳು?’ ಎಂಬ ಪ್ರಶ್ನೆಗಳಿಗೆ ತನ್ನ ಸರಳ ಆದರೆ ಅಷ್ಟೇ ನಿಷ್ಠುರವಾದ ವ್ಯಕ್ತಿತ್ವದ ಮೂಲಕ ಅವರಿಗೆ ಉತ್ತರಿಸಿದರು. ಅವರು ಸಾಹಿತ್ಯದ ಭಾಷೆಯಲ್ಲಿ ಮಾತನಾಡದೆ, ಜನಸಾಮಾನ್ಯರ ಸರಳ ಕನ್ನಡದಲ್ಲಿ  ಮಾತನಾಡಿದರು. ಗೌರಿಯ ಸರಳ ಕನ್ನಡ ಕಾಲದ ಅಗತ್ಯವಾಗಿತ್ತು. ಹನ್ನೆರಡನೇ ಶತಮಾನದಲ್ಲಿ  ವಚನಕಾರರು ಬಳಸಿದ ಪಾಂಡಿತ್ಯ ರಹಿತ  ಸರಳ ಕನ್ನಡ ಅದು. ಇಂದಿನ ಕಾಲದ ಬೇಡಿಕೆಯೇ  ಸರಳ, ಸ್ಪಷ್ಟ ಮಾತುಗಳಾಗಿರುವಾಗ, ಗೌರಿಯ ಸರಳ ಭಾಷೆ ಅವರ ದೌರ್ಬಲ್ಯವಾಗದೆ, ಸಾಮರ್ಥ್ಯವಾಗಿ ಪರಿವರ್ತನೆಯಾಯಿತು.  ಆಕೆಯ ಸರಳ  ಮಾತು ಕಾಲದ ಬೇಡಿಕೆಯಾಗಿತ್ತು.  ಲಿಂಗಾಯತ ಸಮುದಾಯದಿಂದ ಬಂದಿದ್ದರೂ ಅವರು ಆ ಗುರುತನ್ನು ತಿರಸ್ಕರಿಸಿದ್ದರು. ಆದರೆ ಬಸವಣ್ಣನ ಆಶಯ ಅವರ ಅವರ ಹೋರಾಟಗಳ  ಅಡಿಗಲ್ಲಾಗಿತ್ತು. ಲಿಂಗಾಯತ ಧರ್ಮವನ್ನು ಇಂದಿನ ಕೆಲ ಸ್ವಾಮೀಜಿಗಳಿಗಿಂತ  ಹೆಚ್ಚು ತನ್ನದಾಗಿಸಿ ಕೊಂಡಿದ್ದರು. ರಾಜ್ಯದಲ್ಲಿ ಹರಡುತ್ತಿರುವ ಲಿಂಗಾಯತ ಚಳವಳಿಯ ಮಹತ್ವವನ್ನು ಮನಗಂಡಿದ್ದರು. ಆಕೆ ಬದುಕಿದ ರೀತಿ, ಆಕೆಯ ಅಸೀಮ ಧೈರ್ಯ, ಹೋರಾಟ, ಮತ್ತು ಅಂತ್ಯ   ಒಬ್ಬ ಶ್ರೇಷ್ಠ ಶರಣೆಗೆ ತಕ್ಕುದಾಗಿತ್ತು.   
‘ಲಂಕೇಶರ ಪತ್ರಿಕೆ ಈಗ ಅವರ ಮಗಳಂತೆ ಸೊರಗಿದೆ’  ಕೆಲವರು  ತೆರೆ ಮರೆಯಲ್ಲಿ ವ್ಯಂಗ್ಯವಾಡುತ್ತಿದ್ದರು. ಆದರೆ ಆ ಮಾತುಗಳಿಗೆ ತನ್ನ ಬದುಕು ಮತ್ತು ಮರಣದ ಮೂಲಕವೇ ಅವರು ಉತ್ತರಿಸಿದರು. ಆಕೆಯ ತಮ್ಮನೂ ಸೇರಿದಂತೆ ಈ ನಾಡಿನ ಪ್ರಮುಖ ಟ್ಯಾಬ್ಲಾಯಿಡ್ ಪತ್ರಿಕೆಯ ಸಂಪಾದಕರು ಗನ್ ಇಟ್ಟು ಓಡಾಡುತ್ತಿರುವಾಗ, ಈಕೆ ಯಾವ ಶಸ್ತ್ರಗಳ ರಕ್ಷಣೆ ಇಲ್ಲದೆಯೇ ಓಡಾಡಿದರು. ಗಾಂಧೀಜಿಗೋ ಅವರ ‘ಮಹಾತ್ಮ’ನೆಂಬ ಪ್ರಭಾವಳಿ ರಕ್ಷಣೆಗಿತ್ತು. ಆದರೆ ಗೌರಿಯೆನ್ನುವ ಈ ತಾಯಿಗೆ ಅದೂ ಇದ್ದಿರಲಿಲ್ಲ. ಆದರೆ ಆಕೆ ಎಷ್ಟು ಶಕ್ತಿವಂತೆ ಎನ್ನುವುದು ಆಕೆಯನ್ನು ಕೊಂದವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರನ್ನು ಕೊಲ್ಲುವುದಕ್ಕಾಗಿ ಏಳು ಗುಂಡುಗಳನ್ನು ಅವರು ಬಳಸಬೇಕಾಯಿತು. ಆದರೂ ಆಕೆಯನ್ನು ಕೊಲ್ಲಲು ಸಾಧ್ಯವಾಗಲಿಲ್ಲ ಎನ್ನುವ ಅಂಶ ಕೊಲೆಗಾರರಿಗೆ ತಡವಾಗಿಯಾದರೂ ಮನವರಿಕೆಯಾಗಿರಬಹುದು. ಯಾಕೆಂದರೆ, ಗೌರಿ ಸಾಯುವ ಮೊದಲು ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದರು. ಈಗ ನೋಡಿದರೆ ದೇಶಾದ್ಯಂತ ತನ್ನ ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡು ವಿಕ್ರಮ ರೂಪತಾಳಿದ್ದಾರೆ. ಈ ದೇಶದ ಸೌಹಾರ್ದವನ್ನು ನಾಶ ಮಾಡುವ ಶಕ್ತಿಗಳಿಗೆ ಇನ್ನಷ್ಟು ಸವಾಲಾಗಿ ನಿಂತಿದ್ದಾರೆ.