Saturday, February 26, 2011

ಬಸ್ ನಂ. 312

ಸತ್ಯ ಸುಂದರವೂ ಹೌದು ಎನ್ನುವುದಾದರೆ ಮುಂಬಯಿಯಲ್ಲಿ ನಾವು ನೋಡಬೇಕಾಗಿರುವ ಒಂದೇ ಒಂದು ಸುಂದರ ಸತ್ಯ ಧಾರಾವಿ. ಮತ್ತು ಮುಚ್ಚಿಟ್ಟ ಹೊಲಸುಗಳನ್ನೆಲ್ಲ ಮೇಲೆತ್ತಿ ಅಣಕಿಸುವ ಧಾರಾವಿಯ ಮಳೆ. ವಿಶೇಷವೆಂದರೆ ಅದೆಂತಹ ಮಳೆ ಸುರಿದರೂ ಈ ಧಾರಾವಿಯ ಹೊಲಸುಗಳು ಕೊಚ್ಚಿ ಹೋಗುವುದಿಲ್ಲ. ತೇಲುತ್ತಾ ತೇಲುತ್ತಾ ನೀರಿಳಿಯುವ ಹೊತ್ತಿಗೆ ಮತ್ತೆ ಯಥಾಸ್ಥಾನದಲ್ಲೇ ಇರುತ್ತವೆ. ಅಂತಹ ಸುಂದರ ಧಾರಾವಿಯ 90 ಫೀಟ್ ರೋಡ್‌ನಲ್ಲಿ ನಮ್ಮ ಪತ್ರಿಕಾ ಕಚೇರಿಯಿತ್ತು. ಇತ್ತೀಚೆಗೆ ನಿಧನರಾದ ಮಲ್ಲಿಕಾರ್ಜುನಯ್ಯ ಮುಂಬಯಿಯಲ್ಲಿ ಆರಂಭಿಸಿದ್ದ ‘ಕರ್ನಾಟಕ ಮಲ್ಲ’ದಲ್ಲಿ ಸುಮಾರು ಐದು ವರ್ಷ ನಾನು ಆಶ್ರಯ ಪಡೆದಿದ್ದೆ. ಅಲ್ಲೇ ಇದ್ದು ಕನ್ನಡ ಎಂ. ಎ. ಮುಗಿಸಿದ್ದೆ. ಬದುಕನ್ನು ಅರಸುತ್ತಾ ಈ ಪತ್ರಿಕಾ ಕಚೇರಿಯನ್ನು ತಲುಪಿದ ಬಹುತೇಕ ದಕ್ಷಿಣ ಕನ್ನಡದವರೇ ಆದ ತರುಣರು ‘ಕರ್ನಾಟಕ ಮಲ್ಲ’ದ ಮೂಲಕ ಮುಂಬಯಿಯಲ್ಲಿ ಕನ್ನಡದ ದೀಪಕ್ಕೆ ಎಣ್ಣೆ ಹೊಯ್ಯುವ ಕೆಲಸವನ್ನು ಮಾಡುತ್ತಿದ್ದಾರೆ. ಮುಂಬಯಿಯ ಹೊಟೇಲ್ ಕಾರ್ಮಿಕರು, ರಾತ್ರಿ ಶಾಲೆಯ ಹುಡುಗರನ್ನೇ ಬಹುಸಂಖ್ಯೆಯ ಓದುಗರನ್ನಾಗಿ ಪಡೆದುಕೊಂಡಿರುವ ಈ ಪತ್ರಿಕೆಗೆ ಸೆಡ್ಡು ಹೊಡೆಯಲು ಈವರೆಗೆ ಉದಯವಾಣಿ, ಪ್ರಜಾವಾಣಿಯಂತಹ ಪತ್ರಿಕೆಗಳಿಗೇ ಸಾಧ್ಯವಾಗಿಲ್ಲ. ಉದಯವಾಣಿಯಂತಹ ಪತ್ರಿಕೆಗಳನ್ನು ಮುಂಬಯಿಯ ಕಾರ್ಮಿಕ ಹುಡುಗರು ಈವರೆಗೂ ತಮ್ಮದೆಂದು ಸ್ವೀಕರಿಸಿಯೇ ಇಲ್ಲ. ಇಂದು ಕರ್ನಾಟಕ ಮಲ್ಲ ಪತ್ರಿಕೆಯ ಮಾಲಕತ್ವ ಅರವಿಂದ ಶಿಂಗೋಟೆ ಎಂಬ ಮರಾಠಿ ಉದ್ಯಮಿಯ ಕೈಯಲ್ಲಿದೆ. ಕಳೆದ 20 ವರ್ಷಗಳಿಂದ ನನ್ನ ಊರಿನವರೇ ಆಗಿರುವ ಚಂದ್ರಶೇಖರ ಪಾಲೆತ್ತಾಡಿಯವರು ಸಂಪಾದಕರಾಗಿ ಇದನ್ನು ಮುನ್ನಡೆಸುತ್ತಾ ಬರುತ್ತಿದ್ದಾರೆ. ಪತ್ರಿಕೆ ಲಾಭದಲ್ಲಿ ನಡೆಯುತ್ತಿದೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಶಿಂಗೋಟೆ ಕೈಯಲ್ಲಿ ಈ ಪತ್ರಿಕೆ ಇನ್ನೂ ಉಳಿದಿದೆ. ಮಲ್ಲಿಕಾರ್ಜುನಯ್ಯರ ಕೈಯಲ್ಲಿರುವವರೆಗೆ ಧಾರಾವಿಯಲ್ಲಿದ್ದ ಪತಿಕಾ ಕಚೇರಿ, ಈಗ ಅಲ್ಲಿಂದ ಸ್ಥಳಾಂತರಗೊಂಡಿದೆ.
ಸಂಜೆ ಐದು ಗಂಟೆಯ ಹೊತ್ತಿಗೆ ಮೊಣಕಾಲವರೆಗೆ ನಿಂತ ನೀರಿನಲ್ಲಿ ದಾರಿ ಮಾಡುತ್ತಾ ನಾನು 312 ನಂಬರ್ ಬಸ್ ಹಿಡಿಯಲು ಧಾರಾವಿಯಿಂದ ಸಯನ್ ಕಡೆಗೆ ಧಾವಿಸುತ್ತಿದೆ. ನಾನು ಏದುಸಿರು ಬಿಡುತ್ತಾ ಈ ಬಸ್ ಹಿಡಿಯುವ ಹೊತ್ತಿನಲ್ಲಿ ವಿದ್ಯಾನಗರಿಯ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ತಾಳ್ತಜೆ ವಂಸತಕುಮಾರರ ಕಾವ್ಯ ಮೀಮಾಂಸೆ ಉಪನ್ಯಾಸ ಆರಂಭವಾಗಿರುತ್ತಿತ್ತು. ಪ್ರತಿ ದಿನ ಆ ತರಗತಿಗೆ ತಡವಾಗಿಯೇ ತಲುಪುತ್ತಿದ್ದೆ. ಅದು ನನಗೆ ಇಷ್ಟವಾಗಿದ್ದ ಪಠ್ಯ. ನನ್ನ ಎಂ. ಎ. ವ್ಯಾಸಂಗದಲ್ಲಿ ಆ ತರಗತಿ ನನಗೆ ತೀರಾ ದುರ್ಲಭವಾಗಿತ್ತು. ಬೆರಳೆಣಿಕೆಯ ಪಾಠಗಳಿಗಷ್ಟೇ ನಾನು ಹಾಜರಾಗಿದ್ದೆ.
ನಮ್ಮೂರಿನ ಜನರಿಗೆ ಮುಂಬೈ ಅನ್ನುವುದು ಕೊಲ್ಲಿ ರಾಷ್ಟ್ರಗಳಿಗೆ ಹೋಗುವುದಕ್ಕಿರುವ ಕೈಮರ. ನಮ್ಮೂರಲ್ಲಿ ಯಾರಾದರೂ ಮುಂಬೈಗೆ ಗಂಟುಮೂಟೆ ಕಟ್ಟಿದರೆಂದರೆ, ಮುಂದೆ ಸೌದಿಗೋ, ದುಬಾಯಿಗೋ ಹೋಗಿ ಉದ್ಧಾರ ಆದರೆಂದೇ ಅರ್ಥ. ಅಂತಹದರಲ್ಲಿ ನಾನು ಮುಂಬಯಿಗೆ ಹೊರಟಾಗ ಹಲವರಿಗೆ ಅದು ಅರ್ಥವಾಗದ ವಿಷಯವಾಗಿ ಹೋಯಿತು.
‘ಬೊಂಬಾಯಿಯಲ್ಲಿ ಕೆಲಸ ಎಂತಹದು?’
‘ಅಲ್ಲಿ ಕನ್ನಡದಲ್ಲಿ ಎಂ. ಎ. ಮಾಡ್ಲಿಕ್ಕೆ ಹೊರಟಿದ್ದೇನೆ...’ ಉತ್ತರಿಸುತ್ತಿದ್ದೆ.
‘ಕನ್ನಡದಲ್ಲಿ ಎಂ.ಎ. ಮಾಡ್ಲಿಕ್ಕೆ ಬೊಂಬಾಯಿಗಾ? ಕೆಲಸ ಮಾಡುವುದಕ್ಕಲ್ವಾ?’ ಹುಬ್ಬು ಗಂಟಿಕ್ಕಿ ಪ್ರಶ್ನಿಸುತ್ತಿದ್ದರು.
‘ಕೆಲಸ ಮಾಡ್ತಾ ಎಂ. ಎ. ಮಾಡ್ಲಿಕ್ಕೆ....’ ನನ್ನ ಉತ್ತರ ಅವರಿಗೆ ಸಮಾಧಾನ ಕೊಡುತ್ತಿರಲಿಲ್ಲ.
‘ಬೊಂಬಾಯಿಯಲ್ಲಿ ಕನ್ನಡ ಕಲಿಯುವುದು ಎಂಥದು...’ ಎಂದು ಅವರಷ್ಟಕ್ಕೇ ಅವರು ಗೊಣಗಿದ್ದರು.
ಬಂಧುಗಳಿಲ್ಲದ, ಮಿತ್ರರಿಲ್ಲದ ಬೊಂಬಾಯಿಗೆ ಆತ್ಮೀಯರೊಬ್ಬರ ಧೈರ್ಯದ ಮೇಲೆ ಹೊರಟಿದ್ದೆ. ಎಂ. ಎ. ಮಾಡುವುದಕ್ಕಿಂತ ನನಗೆ ಅಪ್ಪನ ಗುಜರಿ ಅಂಗಡಿಯಿಂದ ಕಳಚಿಕೊಳ್ಳುವುದು ಅತ್ಯವಶ್ಯವಾಗಿತ್ತು. ಇಲ್ಲವಾದರೆ ಈ ಗುಜರಿ ಅಂಗಡಿಯೊಳಗೇ ನಾನು ಕಳೆದು ಹೋಗಿ ಬಿಡುತ್ತೇನೆ ಎಂಬ ಭಯ ನನ್ನನ್ನು ಆವರಿಸಿತ್ತು. ಎಲ್ಲರೂ ‘ಬೇಡ ಬೇಡ’ ಎಂದರೂ ಮುಂಬಯಿಯ ಬಸ್ಸನ್ನೇರಿದ್ದೆ. ಮುಂಬಯಿಯ ಹತ್ತಿರ ಬರುವಾಗ ಬಸ್ಸಲ್ಲಿ ಅಬ್ದುರ್ರಹ್ಮಾನ್ ಎನ್ನುವ ವ್ಯಕ್ತಿಯ ಪರಿಚಯವಾಯಿತು. ವಿಶೇಷವೆಂದರೆ ಈತನೂ ಧಾರಾವಿಯಲ್ಲೇ ಒಂದು ಅಂಗಡಿಯನ್ನಿಟ್ಟಿದ್ದ. ನನ್ನನ್ನು ಧಾರಾವಿಯಲ್ಲಿರುವ ‘ಕರ್ನಾಟಕ ಮಲ್ಲ’ ಕಚೇರಿಯವರೆಗೆ ತಲುಪಿಸಿದ ಈತನನ್ನು ಮತ್ತೆ ಭೇಟಿಯಾಗುವ ಅವಕಾಶವೇ ನನಗೆ ಒದಗಿ ಬರಲಿಲ್ಲ. ಅವನ ಮುಖವನ್ನು ಸ್ಪಷ್ಟ ಮಾಡಿಕೊಳ್ಳಲು ಅದೆಷ್ಟೋ ಪ್ರಯತ್ನ ಪಟ್ಟಿದ್ದೇನೆ. ಈವರೆಗೂ ಸಾಧ್ಯವಾಗಿಲ್ಲ. ನನ್ನನ್ನು ಅಲ್ಲಿಯವರೆಗೆ ತಲುಪಿಸುವುದಕ್ಕಾಗಿಯೇ ಆತ ಆ ಬಸ್ಸನ್ನೇರಿದ್ದನೋ ಎಂಬ ಅನಿಸಿಕೆ ಬಹಳ ಸಮಯದವರೆಗೂ ನನ್ನಲ್ಲಿ ಉಳಿದು ಬಿಟ್ಟಿತ್ತು. ಅಂತೂ ನನಗಾಗಿ ಮಾಡಬೇಕಾಗಿದ್ದ ಅವನ ಪಾಲಿನ ಕೆಲಸವನ್ನು ನಿರ್ವಹಿಸಿ ವಿದಾಯಹೇಳಿದ್ದರೂ, ಇಂದಿಗೂ ಅವನೊಂದು ಅವ್ಯಕ್ತ ಪ್ರತಿಮೆಯಾಗಿ ನನ್ನೊಳಗೆ ನೆಲೆಸಿದ್ದಾನೆ.
ಅಚಾನಕ್ಕಾಗಿ ದೇವರ ಸಂದೇಶದಂತೆ ಇಂತಹ ಹಲವು ಕೈಗಳು ನನ್ನೆಡೆಗೆ ಚಾಚಲ್ಪಟ್ಟಿವೆ. ನಾನು ‘ಥ್ಯಾಂಕ್ಸ್’ ಹೇಳುವ ಮುನ್ನವೇ ಯಾವ ಸುಳಿವೂ ಇಲ್ಲದಂತೆ ಕಣ್ಮರೆಯಾಗಿವೆ.
ಒಮ್ಮೆ 312 ನಂಬರ್ ಬಸ್ಸಲ್ಲಿಯೂ ಹೀಗೆಯೇ ಆಯಿತು.
ಎಂ. ಎ. ತರಗತಿ ಮುಗಿಸಿ ಹೊರಟಿದ್ದೆ. ರಾತ್ರಿ ಒಂಭತ್ತು ಗಂಟೆ. ಮತ್ತೆ ರೂಂ ತಲುಪುವ ಧಾವಂತ. ತುಂಬಿ ಹೋಗಿದ್ದ 312 ಬಸ್ಸನ್ನೇರಿದ್ದೆ. ಬಸ್ ಒಂದು ಕಿ. ಮೀ. ಹೋಗಿರಬೇಕು. ಕಿಸೆಗೆ ಕೈ ಹಾಕಿದರೆ ಪರ್ಸ್ ಮಾಯ.! ತಿಂಗಳ ಕೊನೆ. ಆ ಹರಿದ ಪರ್ಸ್‌ನಲ್ಲಿ ಇದ್ದದ್ದೇ ಒಂದು ರೂಪಾಯಿಯ ಮೂರು ನಾಣ್ಯ. ಬಸ್ಸಿಗೆ ಕೊಡಲೆಂದೇ ಇರಿಸಿದ್ದೆ. ಯಾವನೋ ದುರ್ದೈವಿ ಅದನ್ನು ಎಗರಿಸಿದ್ದ.
ಕಂಡಕ್ಟರ್ ಹತ್ತಿರವಾಗುತ್ತಿದ್ದ. ನನ್ನೆದೆ ಢವಢವಿಸತೊಡಗಿತು. ಬಸ್ಸಿನಿಂದ ಇಳಿಸಿದರೆ ಕುರ್ಲಾದಿಂದ ಧಾರಾವಿಯವರೆಗೆ ನಡೆಯುವುದಕ್ಕೇನೋ ನಾನು ಸಿದ್ಧನಿದ್ದೆ. ಆದರೆ ಬಸ್ಸಿನಲ್ಲಿ ಆಗಬಹುದಾದ ಅವಮಾನವನ್ನು ನೆನೆದುಕೊಂಡು ನಿಂತಲ್ಲೇ ತಲ್ಲಣಿಸಿದೆ. ಕಂಡಕ್ಟರ್ ಬಂದವನೇ ನನ್ನೆದುರು ನಿಂತು ‘ಟಿಕೆಟ್’ ಅಂದು ಬಿಟ್ಟ. ನಾನು ತಡವರಿಸತೊಡಗಿದೆ. ಒಮ್ಮೆ ಪ್ಯಾಂಟಿನ ಜೇಬಿಗೂ, ಇನ್ನೊಮ್ಮೆ ಶರ್ಟಿನ ಜೇಬಿಗೂ ಕೈ ಹಾಕಿದೆ. ಇಲ್ಲದ ದುಡ್ಡನ್ನು ಸುಮ್ಮನೆ ಹುಡುಕಾಡ ತೊಡಗಿದೆ. ನನ್ನ ಕೈಯಲ್ಲಿದ್ದ ಪುಸ್ತಕಗಳಿಂದ, ಧರಿಸಿದ್ದ ಬಟ್ಟೆಗಳಿಂದ ಕಂಡಕ್ಟರ್ ನನ್ನನ್ನು ನಿಧಾನಕ್ಕೆ ಅರ್ಥ ಮಾಡಿಕೊಳ್ಳುತ್ತಿದ್ದನೇನೋ...ಅಷ್ಟರಲ್ಲಿ ಅದ ಬಸ್ಸಲ್ಲಿ ಮುಂದಿನ ಸಾಲಿನಲ್ಲಿದ್ದ, ಕೊಳಕು ಬಟ್ಟೆ ಧರಿಸಿದ್ದ ಒಣಗಿದ ಮುಖದವನೊಬ್ಬ ತನ್ನ ಒರಟು ಹಿಂದಿಯಲ್ಲಿ ‘ಕ್ಯಾರೇ ಕ್ಯಾರೇ...ನಾಟಕ ಮಾಡ್ತಿಯೇನೋ...’ ಎನ್ನುತ್ತಾ ನನ್ನ ಹತ್ತಿರ ಬರ ತೊಡಗಿದ. ಬಸ್ಸು, ಮುಂಬಯಿ, ಜಗತ್ತು ಎಲ್ಲವೂ ಒಂದು ಕ್ಷಣ ನನ್ನ ಪಾಲಿಗೆ ಸ್ತಬ್ಧವಾಯಿತು. ಇದ್ದಕ್ಕಿದ್ದಂತೆಯೇ ನಾನು ನಿಂತುಕೊಂಡ ಪಕ್ಕದ ಸೀಟಿನಿಂದ ಒಂದು ವೃದ್ಧ ಕೈ ನನ್ನನ್ನು ಪಕ್ಕನೆ ಎಳೆದು ತನ್ನ ಹತ್ತಿರ ಕೂರಿಸಿಕೊಂಡಿತು. ‘ಎಲ್ಲಿಗೆ ಹೋಗಬೇಕು?’ ಕೇಳಿತು. ‘ಸಯನ್’ ಅಂದೆ. ಕಂಡಕ್ಟರನಿಗೆ ಟಿಕೆಟಿನ ದುಡ್ಡು ಕೊಟ್ಟಿತು.
ಆಮೇಲೆ ಮಾತಿಲ್ಲ, ಕತೆಯಿಲ್ಲ. ಎಲ್ಲೋ ಒಂದೆಡೆ ಆ ವೃದ್ಧ ಜೀವ ಇಳಿಯಿತು. ನಾನು ಒಂದು ಥ್ಯಾಂಕ್ಸನ್ನೂ ಆತನಿಗೆ ಹೇಳಿರಲಿಲ್ಲ. ಇಳಿದು ಹೋದ ಬಳಿಕ ನನಗೆ ತಪ್ಪಿನ ಅರಿವಾಯಿತು. ಆ ಕತ್ತಲಲ್ಲಿ ಆತನ ಮುಖವನ್ನೂ ಸರಿಯಾಗಿ ಗಮನಿಸಿರಲಿಲ್ಲ.
ಮುಖವೇ ಇಲ್ಲದ ಒಂದು ಕೈ! ಧರ್ಮ, ಜಾತಿ, ದೇಶ, ರಕ್ತಸಂಬಂಧ ಇತ್ಯಾದಿಗಳ ಹಂಗಿಲ್ಲದ ಆ ಕೈಯ ಸ್ಪರ್ಶವನ್ನು ನಾನು ‘ದೇವರ ಸ್ಪರ್ಶ’ ಎಂದು ಕರೆಯುತ್ತೇನೆ.

Wednesday, February 16, 2011

ಮೌನದ ಮನೆಯ ಹಿತ್ತಲಲ್ಲಿ....

...ನಾನು ಅವನ ಮಗ
ಅವನ ಮೌನದ ಮನೆಯ
ಹಿತ್ತಲಲ್ಲಿ ನಿಂತ
ಗುಜರಿ ಆಯುವ ಹುಡುಗ!

-ಗುಜರಿ ಆಯುವ ಹುಡುಗ(ನನ್ನದೇ ಪದ್ಯವೊಂದರ ಸಾಲು)
***

ನೀವು ಯಾವತ್ತಾದರೂ ನಿಮ್ಮ ಮನೆಯ ಹಳೇ ಸಾಮಾನುಗಳನ್ನು ಗೋಣಿಯೊಳಗೆ ತುಂಬಿಸಿ ಯಾವುದಾದರೊಂದು ಗುಜರಿ ಅಂಗಡಿಯ ಮೆಟ್ಟಿಲನ್ನು ಹತ್ತಿದ್ದೀರಾ? ನೀವು ತಕ್ಕಡಿಯಲ್ಲಿ ತೂಗಿ ಕೊಟ್ಟ ಗುಜರಿ ವಸ್ತುಗಳು ನಿಮ್ಮ ಒಂದು ಕಾಲದ ‘ಸರ್ವಸ್ವ ಸತ್ಯ’ಗಳಾಗಿದ್ದವು ಎನ್ನುವುದು ಆ ಕ್ಷಣದಲ್ಲಿ ನಿಮಗೆ ಹೊಳೆದದ್ದಿದೆಯೆ? ನೀವು ನಿಮ್ಮ ಸಂಸಾರದೊಂದಿಗೆ ನಗು ನಗುತ್ತಾ ಜೊತೆಯಾಗಿ ಉಂಡ ಊಟದ ಬಟ್ಟಲನ್ನು, ಮದುಮಗನಿಗೆಂದು ಇಡೀ ದಿನ ಕೂತು, ‘ಅದಲ್ಲ ಇದು, ಇದಲ್ಲ ಅದು’ ಎಂದು
ಆರಿಸಿದ್ದ ಚಪ್ಪಲಿಗಳನ್ನು ಗುಜರಿ ಅಂಗಡಿಯ ಯಜಮಾನ ನಿಷ್ಕರುಣೆಯಿಂದ ಹರಿದು, ಜಜ್ಜಿ ನಿರ್ಭಾವುಕನಾಗಿ ತಕ್ಕಡಿಯಲ್ಲಿಟ್ಟು ತೂಗಿ ಬೆಲೆ ಕಟ್ಟುತ್ತಿರುವಾಗ ನಿವ್ಮೊಳಗಿನ ಜೀವತಂತಿಯನ್ನು ಒಳಗೇ ಯಾರೋ ಮೀಟಿದಂತಾಗಿರಲಿಲ್ಲವೆ? ನೀವು ಗುಜರಿ ಅಂಗಡಿಯೊಳಗೆ ಕಣ್ಣಾಯಿಸಿ...ಅಲ್ಲಿ ಹರಿದು ಬಿದ್ದಿರುವ ಪಾದಗಳು ಬೆಟ್ಟದಷ್ಟು ಎತ್ತರ! ಮುರಿದ ಬಕೀಟುಗಳು, ವಿರೂಪಗೊಂಡಿರುವ ಪಾತ್ರೆಗಳು, ತುಕ್ಕು ಹಿಡಿದಿರುವ ಡಬ್ಬಗಳು...ಬದುಕೇ ಅಲ್ಲಿ ರೆಕ್ಕೆ ಮುರಿದು ಬಿದ್ದಿದೆ. ಅವುಗಳ ಯೋಗ್ಯತೆಯೆಷ್ಟು ಎನ್ನುವುದನ್ನು ತಕ್ಕಡಿಯಲ್ಲಿ ತೂಗಿ ಬೆಲೆ ಕಟ್ಟಿ ಮೂಲೆಗೆ ಎಸೆದು ಬಿಟ್ಟಿರುವ ಗುಜರಿ ಅಂಗಡಿಯ ಯಜಮಾನ...ಹಳೆಯ ಮುರಿದ ಕಬ್ಬಿಣದ ಕುರ್ಚಿಯೊಂದರಲ್ಲಿ ‘ಕಾಲ’ನಂತೆ ರಾಜಮಾನನಾಗಿದ್ದಾನೆ!
***

ನನಗೆ ಒಂದಿಷ್ಟು ಬದುಕು ಮತ್ತು ಅಧ್ಯಾತ್ಮದ ದರ್ಶನವಾಗಿದ್ದರೆ ಅದು ಮದರಸದಿಂದಲೋ, ಶಾಲೆಯಿಂದಲೋ, ಯಾವ ಮಹಾತ್ಮರ ಪುಸ್ತಕಗಳಿಂದಲೋ ಅಲ್ಲ. ಸುಮಾರು ಹತ್ತು ವರ್ಷಗಳ ಕಾಲ ನಾನು ಕಳೆದ ಗುಜರಿ ಅಂಗಡಿಯೇ ನನ್ನ ಅಧ್ಯಾತ್ಮ ಗುರು. ಬದುಕಿನ ನಶ್ವರತೆಯನ್ನು, ಇಲ್ಲಿ ನಾವು ರೂಪಿಸಿಕೊಳ್ಳಬೇಕಾದ ನಿರ್ಲಿಪ್ತತೆಯನ್ನು, ಅಖಂಡ ಗುಜರಿ ಅಂಗಡಿಯೊಳಗೆ ಕಲಿಯಲು ಪ್ರಯತ್ನಿಸಿದೆ. ಬಣ್ಣ ಕಳಚಿ ಬಿದ್ದಿರುವ ಬದುಕಿನ ಸಂಭ್ರಮಗಳನ್ನು ತಕ್ಕಡಿಯಲ್ಲಿ ತೂಗುವ ಕ್ಷಣಗಳಲ್ಲಿ ನಾನು ಗಾಂಭೀರ್ಯವನ್ನು ಕಲಿತೆ. ಹಲವು ಸತ್ಯಗಳಿಗೆ ನನ್ನನ್ನು ನಾನು ಒಪ್ಪಿಸಿಕೊಂಡೆ.
ನನ್ನ ಪಾಲಿಗೆ ಗುಜರಿ ಅಂಗಡಿ ಒಂದು
ಅದ್ಭುತ ರೂಪಕ. ಇರುವಷ್ಟು ದಿನ ತನ್ನ ವಿಧಿಯೊಂದಿಗೆ ಹಲ್ಲು ಕಚ್ಚಿ ಗುದ್ದಾಡಿದ್ದ ನನ್ನ ತಂದೆ, ಕೊನೆಯ ಹತ್ತು ಹನ್ನೆರಡು ವರ್ಷಗಳ ಕಾಲ ತನ್ನ ಬದುಕನ್ನು ಗುಜರಿ ಅಂಗಡಿಯೊಳಗೆ ಹುಡುಕಾಡಿದ್ದರು. ನನ್ನ ಅಮ್ಮನನ್ನು ಮದುವೆಯಾದ ಹೊತ್ತಿನಲ್ಲಿ ಸಣ್ಣ ಚಿಮಿಣಿ ದೀಪವನ್ನು ಇಟ್ಟು ಕಟ್ಲೇರಿ ಅಂಗಡಿಯೊಂದನ್ನು ತೆರೆದವರು ಬಳಿಕ ದಿನಸಿ ಅಂಗಡಿಯಿಟ್ಟು, ಅಡಿಕೆ ವ್ಯಾಪಾರ ಮಾಡಿ, ಜೀಪು-ರಿಕ್ಷಾಗಳನ್ನಿಟ್ಟು, ಹಂಚು, ಜವಳಿ, ಮೀನು, ದಿನಸಿ ಹೀಗೆ....ಒಂದೊಂದೇ ವ್ಯಾಪಾರದ ಮೋಹಕ್ಕೆ ಸಿಲುಕಿ, ಎರಡರಲ್ಲಿ ಗೆದ್ದು, ಆ ಗೆಲುವನ್ನು ಇನ್ನೆರಡು ಸೋಲುಗಳಿಗೆ ಮಾರಿ, ಹತ್ತುವಲ್ಲಿ ಹತ್ತಿ, ಇಳಿವಲ್ಲಿ ಇಳಿದು, ಕೋರ್ಟು ಕಚೇರಿ ಅಲೆದು, ವ್ಯಾಪಾರವನ್ನೇ ಬದುಕಾಗಿಸಿಕೊಂಡವರು, ಬದುಕಿನ ಕೊನೆಯಲ್ಲಿ ಸುಸ್ತಾಗಿ ಗುಜರಿ ಅಂಗಡಿಯನ್ನಿಟ್ಟರು. ಹತ್ತು ಹಲವು ಅವಮಾನಗಳಿಂದ, ಹಸಿವಿನಿಂದ ನಮ್ಮನ್ನೆಲ್ಲ ಈ ಗುಜರಿ ಅಂಗಡಿಯೇ ಕಾಪಾಡಿತು.
ನಾನು ಆಗ ಪಿಯುಸಿ ಓದುತ್ತಿದ್ದೆ. ಕಾಲೇಜು ಬಿಟ್ಟು ನೇರ ಈ ಗುಜರಿ ಅಂಗಡಿಯನ್ನು ಸೇರುತ್ತಿದ್ದೆ. ಗುಜರಿ ಅಂಗಡಿಗೆ ಬರುವ ವಸ್ತುಗಳ ಕುರಿತು ನನಗೆ ವಿಚಿತ್ರ ಕುತೂಹಲ. ತೂಗಿ ರಾಶಿ ಹಾಕಿದ್ದ ಕಬ್ಬಿಣ, ಅಲ್ಯೂಮಿನಿಯಂ, ಹಿತ್ತಾಳೆ ವಸ್ತುಗಳ ನಡುವೆ ಸುಮ್ಮಗೆ ಹುಡುಕಾಡುವುದು ನನಗೆ ಖುಷಿ ಕೊಡುತ್ತಿತ್ತು. ಚಿತ್ರ-ವಿಚಿತ್ರವಾದ ವಸ್ತುಗಳು ಅಲ್ಲಿ ಸಿಗುತ್ತಿದ್ದವು. ಹಲವು ವಸ್ತುಗಳನ್ನು ತಂದೆಯ ಬೈಯ್ಗುಳದ ನಡುವೆಯೇ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದೆ.
ಮೇಲ್ನೋಟಕ್ಕೆ ಕಸಕಡ್ಡಿಗಳ ವ್ಯವಹಾರವಾಗಿ ಕಾಣುವ ಗುಜರಿ, ನಿಜಕ್ಕೂ ಲಾಭದಾಯಕ ವ್ಯಾಪಾರವಾಗಿತ್ತು. ಹರಿದ ಚಪ್ಪಲಿಗಳೂ ಕೆ.ಜಿ.ಗೆ ೧೦-೧೨ರೂ. ಬೆಲೆ ಬಾಳುತ್ತಿದ್ದವು. ಮನೆಯಿಂದ ತರುವವರು ಚೀಲದೊಳಗೆ ಮುಚ್ಚಿ, ಯಾರಿಗೂ ಕಾಣದಂತೆ ಹರಿದ ಚಪ್ಪಲಿಗಳನ್ನು ತರುವರು. ಸಿಕ್ಕಿದ ಹಣವನ್ನು ಕೈಗೆ ತೆಗೆದುಕೊಂಡು ಅಲ್ಲಿಂದ ಜಾಗ ಕಾಲಿ ಮಾಡುವರು. ಅವರಿಗೆ ಅದರ ನಿಜ ಬೆಲೆ ತಿಳಿಯುವ ಕುತೂಹಲ ಕೂಡ ಇರುತ್ತಿರಲಿಲ್ಲ. ತುಕ್ಕು ಹಿಡಿದ ಕಬ್ಬಿಣ, ಮುರಿದ ಬಕೀಟುಗಳನ್ನು ಕೆಲವರು ಕಸ-ಕಡ್ಡಿಗಳು ಎಂದೇ ಕೊಡುತ್ತಿದ್ದರು. ಯಾರಾದರು ‘ಕಬ್ಬಿಣಕ್ಕೆ ಎಷ್ಟು ರೇಟು?’ ಎಂದು ಕೇಳಿದರೆ ‘ಎಂತ ರೇಟು...ಈ ತುಕ್ಕು ಹಿಡಿದ ಕಸಕಡ್ಡಿಗಳಿಗೆ...ಒಟ್ಟಾರೆ ತೆಗೆದುಕೊಳ್ಳುವುದು ಅಷ್ಟೇ...’ ಎನ್ನುವುದು ಗುಜರಿ ವ್ಯಾಪಾರಿಗಳಿಂದ ಸಲೀಸಾಗಿ ಹೊರಡುವ ಉತ್ತರ.
ಆ ಕಾಲದಲ್ಲಿ ನಾನು ಅತಿಯಾಗಿ ಇಷ್ಟ ಪಡುತ್ತಿದ್ದ ‘ಲಂಕೇಶ್ ಪತ್ರಿಕೆ’ಯೂ ರದ್ದಿ ಪೇಪರ್‌ಗಳೊಂದಿಗೆ ಬರುತ್ತಿತ್ತು. ನಾನು ಯಾವುದು ಅತ್ಯಮೂಲ್ಯ ಎಂದು ತಿಳಿದುಕೊಂಡಿದ್ದೆನೋ ಆ ಲಂಕೇಶ್ ಪತ್ರಿಕೆಗೆ ಗುಜರಿ ಅಂಗಡಿಯಲ್ಲಿ ಯಾವುದೇ ಸ್ಥಾನವಿದ್ದಿರಲಿಲ್ಲ. ಅಂಗಡಿಯ ಕೆಲಸದಾಳುಗಳು ರದ್ದಿ ಪತ್ರಿಕೆಯಿಂದ ಲಂಕೇಶ್ ಗಾತ್ರದ ಪತ್ರಿಕೆಗಳನ್ನು ಬೇರೆಯಾಗಿ ಎತ್ತಿಟ್ಟು, ‘ಇದಕ್ಕೆ ಬೆಲೆಯಿಲ್ಲ’ ಎನ್ನುತ್ತಿದ್ದರು. ತಂದೆಯಿಲ್ಲದ ಹೊತ್ತಿನಲ್ಲಿ ಅಂತಹ ಪತ್ರಿಕೆಗಳೇನಾದರೂ ಸಿಕ್ಕಿದರೆ ನಾನು ಎತ್ತಿಟ್ಟುಕೊಳ್ಳುತ್ತಿದ್ದೆ. ಗುಜರಿ ಆಯುವ ಹುಡುಗರಲ್ಲಿ ‘ಇಂತಹ ಪತ್ರಿಕೆ ಸಿಕ್ಕಿದರೆ ನನಗೆ ತಂದುಕೊಂಡಿ...ನಾನು ದುಡ್ಡುಕೊಡುತ್ತೇನೆ...’ ಅನ್ನುತ್ತಿದ್ದೆ. ಲಂಕೇಶ್ ಪತ್ರಿಕೆ ಸೇರಿದಂತೆ ಯಾವು ಯಾವುದೋ ವಾರ ಪತ್ರಿಕೆಗಳನ್ನು ನನಗಾಗಿಯೇ ಹುಡುಗರು ಹೊತ್ತು ತರುತ್ತಿದ್ದರು. ತಂದೆಯ ಕಣ್ಣು ತಪ್ಪಿಸಿ ಅವುಗಳನ್ನು ಇಸಿದುಕೊಂಡು ದುಡ್ಡು ಕೊಡುತ್ತಿದ್ದೆ. ಬಳಿಕ ಅವುಗಳನ್ನು ಓದುತ್ತಾ ತಂದೆಯ ಕೆಂಗಣ್ಣಿಗೆ ಗುರಿಯಾಗುತ್ತಿದ್ದೆ. ಗುಜರಿ ಅಂಗಡಿ ನನಗೊಂದು ಪುಟ್ಟ ಲೈಬ್ರರಿಯೇ ಆಗಿತ್ತು.
ಗುಜರಿಯ ಮಹಾರಾಶಿಯಲ್ಲಿ ಕೆಲವೊಮ್ಮೆ ಯಾರು ಯಾರಿಗೋ ಬರೆದ ಪತ್ರಗಳು ಸಿಗುತ್ತಿದ್ದವು. ನಾಲ್ಕನೆಯ ತರಗತಿಯ ಹುಡುಗಿಯೊಬ್ಬಳು ನಡುಗುವ ಕೈಯಿಂದ ಬರೆದ ರಜಾ ಅರ್ಜಿ, ಚಿತ್ರಗಳನ್ನು, ಪದ್ಯಗಳನ್ನು Uಚಿದ ವಿಜ್ಞಾನ, ಗಣಿತ ನೋಟುಬುಕ್ಕುಗಳು, ಇನ್ನು ಹದಿನೈದು ದಿನಗಳಲ್ಲಿ ಕಂತುಗಳನ್ನು ಕಟ್ಟದಿದ್ದಲ್ಲಿ ಜಪ್ತಿ ಮಾಡಲಾಗುವುದು ಎಂದು ಯಾವುದೋ ಬಡಪಾಯಿಗೆ ನೀಡಲ್ಪಟ್ಟ ಬ್ಯಾಂಕಿನ ನೋಟಿಸು, ‘ನೂರು ಗ್ರಾಂ ಚಾ ಹುಡಿ...ಕಾಲು ಕೆ.ಜಿ. ಸಕ್ಕರೆ...’ ಹೀಗೆ ಮನೆ ಸಾಮಾನುಗಳ ಪಟ್ಟಿ...ವೊಗೆದಷ್ಟು ಬದುಕು ಅಲ್ಲಿ ಉಕ್ಕುತ್ತಿತ್ತು.
ಗುಜರಿ ಅಂಗಡಿಯಲ್ಲಿ ಚಿತ್ರ ವಿಚಿತ್ರ ವಸ್ತುಗಳ ಮುಖಾಮುಖಿ ಮಾತ್ರವಲ್ಲ, ಚಿತ್ರವಿಚಿತ್ರ ವ್ಯಕ್ತಿಗಳ ಮುಖಾಮುಖಿಯೂ ನಡೆಯುತ್ತಿತ್ತು. ಮುಖ್ಯವಾಗಿ ವಸ್ತುಗಳನ್ನು ಕದ್ದು ತರುವವರು. ರೈಲ್ವೇ ಹಳಿಯನ್ನೇ ಎಗರಿಸಿ ತರುವವರ ದೊಡ್ಡ ಗುಂಪುಗಳೇ ಇದ್ದವು. ಆಗೆಲ್ಲ. ಬಹಳ ಜಾಗರೂಕವಾಗಿರಬೇಕು. ಕದ್ದು ತರುವವರು ಹೆಚ್ಚಿನವರು ಕುಡುಕರಾಗಿರುತ್ತಿದ್ದರು. ತಕ್ಕಡಿಯ ಮುಂದೆ ಕುಳಿತವರಿಗೆ ಕದ್ದ ಮಾಲು ಯಾವುದು ಎಂದು ಗುರುತಿಸುವ ಶಕ್ತಿ ಇರಬೇಕಾಗುತ್ತದೆ. ತಮ್ಮ ತಮ್ಮ ಮನೆಯ ವಸ್ತುಗಳನ್ನೇ ಅನೇಕ ಸಂದರ್ಭದಲ್ಲಿ ಎಗರಿಸಿ ತಂದು ‘ಇದಕ್ಕೆ ಎಷ್ಟಾಗುತ್ತದೆ...?’ ಎನ್ನುವವರೂ ಇದ್ದರು.
ಪಿಯುಸಿ ಓದುತ್ತಿರುವಾಗ ನನಗೊಬ್ಬ ಬ್ರಾಹ್ಮಣ ಗೆಳೆಯನಿದ್ದ. ಶಾಲೆಯಲ್ಲಿ ಕಲಿಯುವುದರಲ್ಲಿ ಸದಾ ಮುಂದಿರುತ್ತಿದ್ದ ಈತನ ಹೆಸರು ಪದ್ಮನಾಭ. ಈತನ ಮುಖವನ್ನೇ ಹೋಲುವ ಈತನ ಅಣ್ಣನೊಬ್ಬ ಇದ್ದ. ಪಕ್ಕಾ ಕುಡುಕ ಎಂದು ಆಸುಪಾಸಿನಲ್ಲೆಲ್ಲ ಖ್ಯಾತಿ ಪಡೆದಿದ್ದ. ನನ್ನ ಗೆಳೆಯ ಈತನಿಂದಾಗಿ ಸಾಕಷ್ಟು ಮುಜುಗರ ಅನುಭವಿಸುತ್ತಿದ್ದ. ಈ ಪದ್ಮನಾಭನ ಅಣ್ಣ ಆಗೊಮ್ಮೆ ಈಗೊಮ್ಮೆ ಗುಜರಿ ಅಂಗಡಿಗೆ ವಸ್ತುಗಳನ್ನು ಹಿಡಿದುಕೊಂಡು ಬರುತ್ತಿದ್ದ. ಹೀಗಾಗಿ ನನಗೆ ಸಾಕಷ್ಟು ಪರಿಚಿತನಾಗಿದ್ದ. ಒಂದು ದಿನ ಈ ಕೈಯಲ್ಲಿ ಚೀಲವೊಂದನ್ನು ಹಿಡಿದು ಬಂದ. ಅಂಗಡಿಯಲ್ಲಿ ನಾನಿದ್ದೆ.
‘ಹಿತ್ತಾಳೆಗೆಷ್ಟು?’ ಎಂದು ಕೇಳಿದ.
ನಾನು ಹೇಳಿದೆ.
ಆತ ಮೆಲ್ಲ ಚೀಲದಿಂದ ವಸ್ತುಗಳನ್ನು ಹೊರ ತೆಗೆದ. ನೋಡಿದರೆ ಅದು ಹಿತ್ತಾಳೆಯ ಕಾಲು ದೀಪ ಮತ್ತು ಗಂಟೆ. ದೇವರ ಕೋಣೆಯಿಂದಲೇ ಎತ್ತಿಕೊಂಡು ಬಂದಿದ್ದ! ಕಾಲು ದೀಪವನ್ನು ಕೈಗೆತ್ತಿಕೊಂಡೆ. ದೀಪದಲ್ಲಿ ಎಣ್ಣೆಯ ಜಿಡ್ಡು ಇನ್ನೂ ಅಂಟಿಕೊಂಡಿತ್ತು. ಯಾಕೋ ನಾನು ಆ ಕ್ಷಣ ಸಂಕಟದಿಂದ ಒದ್ದಾಡಿದ್ದೆ. ನನಗ್ಯಾಕೋ ಪದ್ಮನಾಭನ ತಾಯಿಯ ಮುಖ ಎದುರಿಗೆ ಬಂದಿತ್ತು. ದೇವರಕೋಣೆಯಲ್ಲಿ ದೀಪವಿಡಲೆಂದು ಹೋಗುವಾಗ ಕಾಲುದೀಪ, ಗಂಟೆಗಳೇ ಇಲ್ಲದೆ ಇರುವುದು ತಿಳಿದು, ಅದನ್ನು ತನ್ನ ಮಗ ಕುಡಿಯುವುದಕ್ಕಾಗಿ ಎತ್ತಿಕೊಂಡು ಹೋಗಿದ್ದಾನೆ ಎನ್ನುವುದನ್ನು ಅರಿತು ಒದ್ದಾಡುವ ಆ ತಾಯಿಯ ಸಂಕಟ ಕಣ್ಣೆದುರು ಇಳಿದು ಕಂಪಿಸಿದ್ದೆ.
‘ಎಲ್ಲಿಂದ ಇದು ತಂದದ್ದು?’ ಕೇಳಿದೆ.
‘ನಾವೆಲ್ಲಿಂದ ತಂದರೆ ನಿಮಗೇನು? ನಿಮಗೆ ವ್ಯಾಪಾರ ಮುಖ್ಯ ಅಲ್ವಾ?’ ಅವನು ತಿರುಗಿ ಪ್ರಶ್ನಿಸಿದ್ದ.
‘ಮರ್ಯಾದೆಯಲ್ಲಿ ಈ ಗಂಟೆ, ದೀಪ ಎಲ್ಲಿತ್ತೋ ಅಲ್ಲೇ ಕೊಂಡ್ಹೋಗಿ ಇಡು. ಇಲ್ಲದಿದ್ದರೆ ನಿನ್ನ ತಮ್ಮ ಪದ್ಮನಾಭನ ಹೇಳುತ್ತೇನೆ...ಅಷ್ಟೇ...’ ಎಂದು ನಾನು ಸಿಟ್ಟಿನಲ್ಲಿ ಕಂಪಿಸುತ್ತಾ ಹೇಳಿದಾಗ ಆತ ಒಮ್ಮೆಲೆ ತಣ್ಣಗಾಗಿದ್ದ. ಗೊಣಗುಟ್ಟುತ್ತಾ ಅಲ್ಲಿಂದ ಹೊರಟು ಹೋಗಿದ್ದ. ಯಾಕೋ ಆ ಘಟನೆ ನನ್ನ ಮನಸ್ಸಲ್ಲಿ ಬಹಳ ದಿನದವರೆಗೂ ಉಳಿದು ಬಿಟ್ಟಿತ್ತು.
***

ಗುಜರಿ ಅಂಗಡಿ ನನ್ನ ತಂದೆ ಮಾಡಿದ ಕೊನೆಯ ವ್ಯಾಪಾರ. ಅಪ್ಪನ ಕಷ್ಟದ ದಿನಗಳಲ್ಲಿ ನಾನು ಅವನೊಂದಿಗಿದ್ದೆ ಎನ್ನುವ ತೃಪ್ತಿ ನನಗೆ ಈಗಲೂ ಇದೆ. ಒಂದು ರಾತ್ರಿ ಆತ ಏಕಾಏಕಿ ಕುಸಿದಾಗ ಅವರ ಬಳಿಗೆ ದಾವಿಸಿದ್ದೆ. ತನ್ನ ಹಟ, ಸ್ವಾಭೀಮಾನ, ಸಿಟ್ಟುಗಳಿಗಾಗಿಯೇ ಬದುಕನ್ನು ಪಣವಾಗಿಟ್ಟಿದ್ದ ಅವರು ಆ ರಾತ್ರಿ ರೆಕ್ಕೆ ಹರಿದ ಗುಬ್ಬಚ್ಚಿಯಂತೆ ನನ್ನನ್ನು ನೋಡುತ್ತಿದ್ದರು. ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಅವರ ತಲೆಯ ಪಕ್ಕದಲ್ಲಿದ್ದಾಗಲೂ ಅವರು ನನ್ನನ್ನೇ ನೋಡುತ್ತಿದ್ದಾರೆ ಎಂದು ನನಗೆ ಭಾಸವಾಗುತ್ತಿತ್ತು. ನಳಿಗೆಯ ಮೂಲಕ ಉಸಿರಾಡುತ್ತಿದ್ದ ಅವರು ಕ್ಷಣ ಕ್ಷಣಕ್ಕೂ ನನ್ನಿಂದ ದೂರವಾಗುತ್ತಿರುವುದನ್ನು ನಾನು ಗಮನಿಸುತ್ತಿದ್ದೆ. ಮಾತನಾಡುವುದನ್ನು ಅತ್ಯಂತ ಇಷ್ಟ ಪಡುತ್ತಿದ್ದ, ಯಾವತ್ತು ನೋಡಿದರೂ ಮಾತೇ ಆಡುತ್ತಿದ್ದ ತಂದೆ ತಮ್ಮ ವ್ಯಾಪಾರ ನಿಲ್ಲಿಸಿದಂದಿನಿಂದ ನಿಧಾನಕ್ಕೆ ಮೌನಕ್ಕೆ ಶರಣಾಗಿದ್ದರು. ‘ಅದೆಷ್ಟು ಬೇಕಾದರೂ ಮಾತನಾಡಿ, ನಾನು ಕೇಳುವುದಕ್ಕೆ ಸಿದ್ಧ’ ಎಂದು ಆ ಕ್ಷಣದಲ್ಲಿ ನನಗೆ ಹೇಳಬೇಕೆನ್ನಿಸಿತ್ತು. ಇಡೀ ರಾತ್ರಿ, ಎಣ್ಣೆ ಆರಿದ ದೀಪವೊಂದು ನಿಧಾನಕ್ಕೆ ನಂದಿ ಹೋಗುತ್ತಿರುವುದಕ್ಕೆ ನಾನು ಮೌನ ಸಾಕ್ಷಿಯಾಗಿದ್ದೆ.



Monday, February 7, 2011

ಮೂರು ಬೆರಳುಗಳು!

ಬಿ.ಎ. ಫಲಿತಾಂಶ ಹೊರ ಬಿದ್ದದ್ದೇ ನಾನು ಮನೆ ಮಂದಿಯೆಲ್ಲ ಬೇಡ ಬೇಡವೆಂದರೂ, ಗಂಟುಮೂಟೆಯೊಂದಿಗೆ ಮುಂಬಯಿಗೆ ಹೊರಡುವ ನಿರ್ಧಾರ ಮಾಡಿದೆ. ಅಲ್ಲಿ ನನ್ನ ಬಂಧುಗಳು, ಮಿತ್ರರು ಎನ್ನುವವರು ಯಾರೂ ಇದ್ದಿರಲಿಲ್ಲ. ಆದರೂ ಯಾವುದೋ ಒಳಗಿನ ನಂಬಿಕೆಯಿಂದ(ಅಲ್ಲಿ ನನ್ನವರೆನ್ನುವವರು ಯಾರೋ ನನಗಾಗಿ ಕಾದು ನಿಂತಿರಬಹುದು ಎಂಬ ನಂಬಿಕೆಯಿಂದ) ಹೊರಟು ನಿಂತಿದ್ದೆ. ಮುಂಬೈಗೆ ಹೊರಟ ದಿನ ಇನ್ನೂ ಬೆಳಕು ಹರಿದಿರಲಿಲ್ಲ. ಕತ್ತಲು, ಚುಮುಚುಮು ಚಳಿ. ನಾನಿನ್ನೇನೂ ಮನೆಯಿಂದ ಹೊ ಕಾಲಿಡಬೇಕು ಎನ್ನುವಾಗ ನನ್ನ ಅಣ್ಣ ‘‘ಬಸ್‌ಸ್ಟಾಂಡ್‌ವರೆಗೆ ನಾನೂ ಬರುತ್ತೇನೆ’’ ಎಂದ. ನಾನು ಬಸ್ ಹತ್ತಿ, ಅದು ಹೊರಡುವವರೆಗೂ ಅಣ್ಣ ನನ್ನ ಜೊತೆಗಿದ್ದ. ಸುಮಾರು ಹತ್ತು ವರ್ಷಗಳ ಬಳಿಕ ‘ಆ ಕ್ಷಣ’ ನನ್ನೊಳಗೆ ಕವಿತೆಯ ರೂಪ ಪಡೆಯಿತು. ಅದನ್ನು ನಿಮ್ಮ ಮುಂದಿಟ್ಟಿದ್ದೇನೆ.

ಅವನ ಮೂರು ಬೆರಳುಗಳ
ಭಾರವನ್ನು ಹೆಗಲಲ್ಲಿ ಹೊತ್ತು

ನಾನು ಮುಂಬೈಯ ದಾರಿ ಹಿಡಿದೆ


ಅಮ್ಮನ ಕಣ್ಣ ಹನಿಗಿಂತ,

ಅಪ್ಪನ ಸಿಟ್ಟಿಗಿಂತ,

ತಂಗಿಯರ ನಿಟ್ಟುಸಿರಿಗಿಂತ ಭಾರವಾದದ್ದು

ಇನ್ನೊಂದು ಇದೆ ಎನ್ನುವುದನ್ನು ಅರಿತ ದಿನ ಅದು!


ಹಗಲಿನ್ನೂ ತೆರೆಯದ ಹೊತ್ತು

ಎಣ್ಣೆ ಮಗಿದಿದ್ದ ಚಿಮಿಣಿ ದೀಪ

ಇನ್ನೂ ಆ ಕ್ಷಣದ ಯಾಜಮಾನ್ಯಕ್ಕಾಗಿ ಒದ್ದಾಡುತ್ತಿತ್ತು

ಇನ್ನೊಬ್ಬರ ಮುಖದರ್ಶನಕ್ಕೆ

ಅವಕಾಶ ಕೊಡದ ಆ ಕತ್ತಲೇ

ನಮ್ಮನ್ನೆಲ್ಲ ರಕ್ಷಿಸಿತ್ತು!


ಏನನ್ನಿಸಿತೋ,

‘ತಮ್ಮನನ್ನು ಬಸ್ಸಿನವರೆಗೆ

ಬಿಟ್ಟು ಬರುವೆ’ ಅಂದ

ಬೇಡ ಅನ್ನಲಿಲ್ಲ ನಾನೂ


ದಾರಿ ಅರ್ಧ ಮುಗಿದರೂ ಮಾತಾಡಿರಲಿಲ್ಲ ಇಬ್ಬರೂ
ಮಂಜುಗತ್ತಲಲ್ಲಿ

ಎಡವುತ್ತಾ ಸಾಗುತ್ತಿದ್ದರೂ

ಪರಸ್ಪರ ಕೈ ಚಾಚಲಿಲ್ಲ

ಒಬ್ಬರನ್ನೊಬ್ಬರು ಆಧರಿಸಿ ನಿಲ್ಲಲಿಲ್ಲ

ನಾನೇ ಹೊತ್ತ ನನ್ನ ಭಾರವನ್ನು

ಕಣ್ಣು ತಪ್ಪಿಸಿ ನೋಡಿ,

ಪಕ್ಕನೆ ತಲೆತಗ್ಗಿಸುತ್ತಿದ್ದ!


ಈಗಲೂ ನೆನಪಿದೆ ನನಗೆ

ಕೆನ್ನೆಯ ಮೇಲೆ ಉದುರಿದ

ಆ ಮೊದಲ ಹನಿ!

‘ಓ ಮಳೆ...!’ ಎಂದೆ
‘ಹೌದು...ಮಳೆ...’ ಎಂದ

ಆಕಾಶ-ಭೂಮಿ ಇದ್ದಕ್ಕಿದ್ದಂತೆಯೇ ಒಂದಾಯಿತು

ಬಿಡಿಸಿದ ನನ್ನ ಛತ್ರಿಯೊಳಗೆ

ಸೇರಿಕೊಂಡ...

ಎರಡು ಮರೂಭೂಮಿಗಳು ಒಂದಾಗುವಂತೆ

ಪರಸ್ಪರ ಹತ್ತಿರವಾದೆವು


ಆಧಾರಕ್ಕೆಂದು ಒಂದು ಕೈಯನ್ನು ನನ್ನ ಹೆಗಲ ಮೇಲಿಟ್ಟ

ಅವನದೆಷ್ಟು ಜಿಪುಣನಾಗಿದ್ದ!?

ಮೂರು ಬೆರಳುಗಳನ್ನಷ್ಟೇ ಎಣಿಸಿ ಇಟ್ಟಿದ್ದ!

ಹೂವಿನ ಎಸಳಿನಂತಹ

ಆ ಮೂರು ಬೆರಳುಗಳು

ಅದೆಷ್ಟು ಭಾರವಾಗಿದ್ದವು!


ಬಸ್ಸು ಇನ್ನೇನೂ ಹೊರಡಬೇಕು
ಎನ್ನುವಷ್ಟರಲ್ಲಿ ತನ್ನ ಜೇಬಿನಿಂದ

ಲಕೋಟೆಯೊಂದ ತೆಗೆದ

‘ಬಂಧು, ಮಿತ್ರರಿಲ್ಲದ ಊರಿಗೆ

ಹೋಗುತ್ತಿದ್ದೀಯ.

ಕೊಲಾಬದಲ್ಲೊಬ್ಬ ನನ್ನ ಗೆಳೆಯನಿದ್ದಾನೆ

ನಿನ್ನ ಕುರಿತು ಈ ಪತ್ರದಲ್ಲಿ ಬರೆದಿದ್ದೇನೆ

ಅವನಿಗೆ ತೋರಿಸು’ ಎಣಿಸಿ ಎಣಿಸಿ ನುಡಿದ!


ಭದ್ರವಾಗಿ ಮುಚ್ಚಿದ್ದ

ಲಕೋಟೆ,

ಅವನಿಂದ ಇಸಿದುಕೊಳ್ಳುವಾಗ

ಈಗಲೂ ನೆನಪಿದೆ ನನಗೆ,

ತಪ್ಪಿಯೂ ಬೆರಳುಗಳು ಸ್ಪರ್ಶಿಸಿರಲಿಲ್ಲ!


ಬಸ್ಸು ಎಲ್ಲಿ ತಲುಪಬೇಕಿತ್ತೋ ಅಲ್ಲಿಗೆ ತಲುಪಲಿಲ್ಲ

ದಾರಿ ತಪ್ಪಿದೆ

ಮನುಷ್ಯನ ನರ ನಾಡಿಗಳಂತಿದ್ದ

ಆ ಗಲ್ಲಿಗಲ್ಲಿಗಳಲ್ಲಿ ಅಲೆದೆ

ಅವನ ಗೆಳೆಯನಿಗಾಗಿ

ಕೈಯಲ್ಲಿ ಭದ್ರವಾಗಿದ್ದ ಲಕೋಟೆ ಕಳೆದುಹೋಗುವವರೆಗೂ...


ಓ ದೇವರೆ...

ಈಗ ಹೊಳೆಯುತ್ತಿದೆ ನನಗೆ

ಒಂದೊಮ್ಮೆ ಅದು ನನಗೇ ಎಂದು ಕೊಟ್ಟ

ಲಕೋಟೆಯಾಗಿದ್ದಿರಲೂ ಬಹುದಿತ್ತು

ಕಳೆದು ಹೋಗುವ ಮೊದಲು

ಆ ಲಕೋಟೆಯನ್ನು ಒಡೆದು

ನಾನು ಓದಬೇಕಾಗಿತ್ತು...

Wednesday, February 2, 2011

ಕೆಲವು ಹನಿಗಳು

ಬೇರೇನೋ ಬರೆಯುವ ಅವಸರದಲ್ಲಿದ್ದಾಗ ನನ್ನ ಪೆನ್ನಿಂದ ಉದುರಿದ ಕೆಲವು ಹನಿಗಳು ಇಲ್ಲಿವೆ. ಓದಿ ಇಷ್ಟವಾದರೆ ತಿಳಿಸಿ.

ಅಮ್ಮ

ಗುಲಾಬಿಯೆಂದರೆ
ಅಮ್ಮನಿಗೆ ಇಷ್ಟ
ಗೊತ್ತು ಅವಳಿಗೆ ಮುಳ್ಳಲ್ಲಿ
ಅರಳುವ ಕಷ್ಟ!

ಸ್ನೇಹ

ನಿನ್ನ ಕಂಡಾಗಲೆಲ್ಲ
ದ್ವೇಷಿಸಬೇಕೆಂದು
ಅನ್ನಿಸುತ್ತದೆ

ದ್ವೇಷಕ್ಕೂ ಹೀಗೊಂದು
ಸ್ನೇಹದ ಮುಖ ಇದೆ
ಎಂದು ತಿಳಿದಿರಲಿಲ್ಲ ನನಗೆ!

ದೇವರಾಣೆ
ಮೂರು ಕಾಸಿನ ಲಾಭವಿಲ್ಲದ
ನಿನ್ನ ಸ್ನೇಹದಿಂದ ಬಿಡಿಸಿಕೊಳ್ಳಲು ಅದೆಷ್ಟೋ
ಪ್ರಯತ್ನ ಮಾಡಿದ್ದೇನೆ

ಲಾಭವಿಲ್ಲ
ಎನ್ನುವ ಒಂದೇ ಒಂದು
ಕಾರಣಕ್ಕೆ
ಈ ಸ್ನೇಹ ಉಳಿದುಕೊಂಡಿದೆ

ಕೊಳಲು

ಅವನಿಂದ
ಕೊಂಡ ಕೊಳಲಿಗೆ
ತುಟಿ ಸೇರಿಸಿದೆ
ದನಿಯೇ ಇಲ್ಲ

ಕೊಳಲನ್ನು ಮಾತ್ರ ಕೊಳ್ಳುವ
ನನ್ನ ಹಣ
ಅವನ ಉಸಿರ ಕೊಳ್ಳಲಾಗದ
ಅವಮಾನದಿಂದ ತಲೆತಗ್ಗಿಸಿತು!

ಭಾಗ್ಯರೇಖೆ

ಮದಿರಂಗಿ ಹಚ್ಚಿದ
ಅವನ ಬೊಗಸೆಯಿಂದ
ಬಿಡಿಸಿಕೊಂಡ ನನ್ನ ರಕ್ತಸಿಕ್ತ ಕೈಗಳು!

ಮದುವೆಯ ಚಪ್ಪರದಿಂದ
ಕಣ್ಣೀರಿನಂತೆ ಇಳಿಯುತ್ತಿದ್ದ
ಮಳೆ ನೀರಿನಲ್ಲಿ ತೊಳೆದುಕೊಂಡೆ
ಓ ದೇವರೇ...
ನನ್ನ ಅಂಗೈಯ ಭಾಗ್ಯರೇಖೆ?

ಅವನ ಬೊಗಸೆಯೊಳಗೇ ಉಳಿದು ಬಿಟ್ಟಿದೆ!


ಧ್ಯಾನ

ನೀನು ಹೇಳುವುದೂ ಸರಿ
ಇದು ಪ್ರಾರ್ಥನೆಯ ಹೊತ್ತು
ಅವನನ್ನು ಎಬ್ಬಿಸಬೇಕು

ಆದರೆ
ಈಗಷ್ಟೇ ದೇಗುಲವೊಂದನ್ನು
ಕಟ್ಟಿ ಮುಗಿಸಿದ
ಅವನು ದಣಿದಿದ್ದಾನೆ

ನನ್ನ ಧ್ಯಾನ
ಅವನ ನಿದ್ದೆಯಿಂದ
ಸ್ಫೂರ್ತಿ ಪಡೆದಿದೆ
ಕೆಡಿಸಬೇಡ

ಕಾಗದದ ದೋಣಿ

ಹರಿಯುತ್ತಿರುವುದು
ಬೆಂಕಿಯ ನದಿ
ತೇಲುತ್ತಿರುವುದು ಕಾಗದದ ದೋಣಿ!
ಈಗಷ್ಟೇ ಹುಟ್ಟಿದಂತಹ ಹುಡುಗ
ಕೈಯಲ್ಲಿ ಹುಟ್ಟೊಂದನ್ನು
ಹಿಡಿದು
ದೋಣಿಯನ್ನು ಏರ ಹೊರಟಿದ್ದಾನೆ!

ಆ ತೀರವನ್ನು ತಲುಪುವೆ ಎನ್ನುತ್ತಿದ್ದಾನೆ!