Saturday, April 2, 2016

ಘೋಷಣೆ...!

‘‘ನಿನ್ನ ಹೆಸರೇನು?’’
ಹುಡುಗ ಮೌನವಾಗಿದ್ದ.
‘‘ತಲೆಯ ಟೋಪಿ ನೋಡಿದಾಗಲೇ ನಮಗೆ ನಿನ್ನ ಹೆಸರು ಗೊತ್ತಾಯಿತು...ಹೇಳು ಭಾರತ ಮಾತಾಕಿ ಜೈ....’’
ಹುಡುಗ ಅವರನ್ನೇ ನೋಡಿದ.
‘‘ಹೇಳು ‘ಭಾರತ ಮಾತಾಕಿ ಜೈ...ವಂದೇ ಮಾತರಂ...’’
ಹುಡುಗ ಏನನ್ನೋ ಹೇಳಲು ಬಾಯಿ ತೆರೆದ.
ಕೇಸರಿ ನಾಮಧಾರಿಯೊಬ್ಬ ಛಟೀರನೇ ಅವನ ಕೆನ್ನೆಗೆ ಬಾರಿಸಿದ ‘‘ಭಾರತ ಮಾತಾಕೀ ಜೈ ಎನ್ನಲು ನಿನಗೆ ಕಷ್ಟವಾಗುವುದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು...ಇಲ್ಲಿ ಯಾಕೆ ಬಾಕಿಯಾಗಿದ್ದೀಯ...ಅಲ್ಲಿ ನಿನಗೆ ಬೇಕಾದ ಘೋಷಣೆ ಕೂಗಬಹುದು...ಹೇಳು ‘ಭಾರತ್ ಮಾತಾಕಿ ಜೈ...’’
ಹುಡುಗ ಏನೋ ಹೇಳಲು ಕೈ ಮುಂದೆ ಮಾಡಿದ.
‘‘ನೋಡೋ...ಕೈ ಮೇಲೆ ಮಾಡುತ್ತಾನೆ...’’ ಇನ್ನೊಬ್ಬ ಇನ್ನೊಂದು ಕೆನ್ನೆಗೆ ಛಟೀರನೇ ಬಾರಿಸಿದ.
 ಅಷ್ಟರಲ್ಲಿ ಜನ ಸೇರಿದರು. ಒಬ್ಬರು ಸದ್ಗೃಹಸ್ಥರು ಮಧ್ಯ ಪ್ರವೇಶಿಸಿದರು.
 ‘‘ನೋಡಿ...ನೀವು ಹೀಗೆ ವ್ಯವಹರಿಸಿದರೆ ಹೇಗೆ? ಅವರ ಮನವೊಲಿಸುವುದು ಮುಖ್ಯ. ಮಾತಿಗೆ ಮುಂಚೆ ತೋಳ್ಬಲ ಪ್ರದರ್ಶಿಸುವುದು ಭಾರತೀಯ ಸಂಸ್ಕೃತಿಯಲ್ಲ. ಮಹಾತ್ಮಗಾಂಧೀಜಿಯ ನೆಲ. ನೀವು ಪಕ್ಕಕ್ಕೆ ಸರಿಯಿರಿ. ನಾನು ಅವನಿಗೆ ವಿವರಿಸುತ್ತೇನೆ...ನೋಡಪ್ಪ ಭಾರತ ಮಾತೆ ನಮ್ಮೆಲ್ಲರ ತಾಯಿ. ನಮಗೆ ಅನ್ನಕೊಡುವ ತಾಯಿ ನೆಲ ಇದು. ಇದಕ್ಕೆ ಜೈ ಎನ್ನುವುದು ನಮ್ಮ ಕರ್ತವ್ಯ. ನಮ್ಮ ತಾಯಿಗೆ ನಾವು ನಮಿಸದೆ ಇನ್ಯಾರಿಗೆ ನಮಿಸಬೇಕು...? ಹೇಳು ...ಭಾರತ್ ಮಾತಾಕಿ ಜೈ ಎಂದು ಜೋರಾಗಿ ಕೂಗಿ ನಿನ್ನ ದೇಶಪ್ರೇಮವನ್ನು ಇಲ್ಲಿರುವ ಎಲ್ಲರಿಗೂ ಸಾಬೀತು ಪಡಿಸು...ನಾವು ಕೂಡ ನಿನ್ನ ಜೊತೆಗೆ ಜೋರಾಗಿ ಜೈ ಎಂದು ಕೂಗುತ್ತೇವೆ....’’
ಹುಡುಗ ಆ ಗೃಹಸ್ಥರನ್ನೇ ದಿಟ್ಟಿಸಿ ನೋಡಿದ. ಅವನ ಕಣ್ಣಂಚಲ್ಲಿ ಹನಿ ತುಳುಕಿತು. ಅವನು ಏನೋ ಹೇಳಲು ಪ್ರಯತ್ನಿಸಿದ. ಕೇಸರಿ ಶಾಲು ಹೊದ್ದವನೊಬ್ಬ ಗೃಹಸ್ಥರನ್ನು ಅಣಕಿಸಿದ ‘‘ನೋಡಿ...ನಿಮ್ಮನ್ನು ಅವನು ಹೇಗೆ ಕೆಕ್ಕರಿಸಿ ನೋಡುತ್ತಿದ್ದಾನೆ...ನಿಮಗೆ ಹಾಗೆ ಆಗಬೇಕು. ನಿಮ್ಮಿಂದಲೇ ಅವರು ಕೊಬ್ಬಿರುವುದು. ನಾನು ಇನ್ನೊಂದು ಏಟು ಬಿಟ್ಟಿದ್ದರೆ ಅವನು ಈಗಾಗಲೇ ‘ಭಾರತ್ ಮಾತಾಕಿ ಜೈ’ ಎಂದು ಘೋಷಿಸಿಯೂ ಆಗುತ್ತಿತ್ತು...’’
ಅಷ್ಟರಲ್ಲಿ ಹಣೆಯಲ್ಲಿ ಅಷ್ಟು ದೊಡ್ಡ ಕುಂಕುಮವನ್ನೂ, ಕುತ್ತಿಗೆಯಲ್ಲಿ ಇಷ್ಟು ಭಾರದ ತಾಳಿಯನ್ನು ಧರಿಸಿದ ಸದ್ಗೃಹಿಣಿಯೊಬ್ಬರು ಆತಂಕದಿಂದ ಕೇಳಿದರು ‘‘ಅದೇನು ಅವನ ಕೈಯಲ್ಲಿ...ಚೀಲ ನೋಡಿ...ಸ್ವಲ್ಪ ತನಿಖೆ ಮಾಡಿ...ಮಕ್ಕಳ ಕಿವಿಗೆ ಜಿಹಾದ್ ತುಂಬಿಸುತ್ತಾರಂತೆ...ಈಗ ಯಾರನ್ನೂ ನಂಬಲು ಬರುವುದಿಲ್ಲವಲ್ಲ...’’
‘‘ಹೌದು... ಹೌದು...’’
ಯಾರೋ ಅವನ ಚೀಲ ಎಳೆದುಕೊಂಡರು. ಚೀಲದಲ್ಲಿ ಪುಸ್ತಕ. ಪುಸ್ತಕದಲ್ಲಿ ಅರಬೀ ಅಕ್ಷರಗಳು...‘‘ಇದೇನು ಪುಸ್ತಕ..ಅರ್ಥವಾಗದ ಭಾಷೆಯಲ್ಲಿ ಬರೆದಿದೆ...’’ ಒಬ್ಬ ಕೇಳಿದ.
‘‘ಅರ್ಥವಾಗದ ಭಾಷೆಯಲ್ಲಿ ಮತ್ತೇನಿರುತ್ತದೆ? ಜಿಹಾದ್...ದೇಶದ್ರೋಹ...’’
ಯಾರೋ ಹುಡುಗನ ಹೊಟ್ಟೆಗೆ ತುಳಿದರು. ಹುಡುಗ ಚಿಟಾರನೇ ಚೀರುತ್ತಾ ಅಷ್ಟು ದೂರ ಬಿದ್ದ.
ಸದ್ಗೃಹಸ್ಥ ಹೇಳಿದ ‘‘ಶಾಂತಿ...ಶಾಂತಿ...ನೀವು ಅವಸರ ಮಾಡಬೇಡಿ...ಅವನು ನನ್ನ ಮಾತನ್ನು ಆಲಿಸುತ್ತಿದ್ದ. ಇನ್ನೇನು ಘೋಷಣೆ ಕೂಗುವುದರಲ್ಲಿದ್ದ. ಅವರೂ ಕೂಡ ನಮ್ಮಂತೆಯೇ ಮನುಷ್ಯರು ತಾನೆ....ಏನೋ ಕೆಲವರು ಸಂಸ್ಕಾರದ ಕಾರಣದಿಂದ ದಾರಿ ತಪ್ಪಿರುತ್ತಾರೆ...ನಾವು ಸರಿ ಪಡಿಸಬೇಕು....ಹೇಳಪ್ಪ...ಘೋಷಣೆ ಕೂಗಿ ಒಮ್ಮೆ ನಿನ್ನ ದೇಶಪ್ರೇಮವನ್ನು ನಮಗೆಲ್ಲ ಸಾಬೀತು ಮಾಡಿ ಬಿಡು...’’
ಹುಡುಗ ತಡವರಿಸುತ್ತಾ ಎದ್ದವನು ಚದುರಿ ಬಿದ್ದ ಪುಸ್ತಕವನ್ನು ಎತ್ತಿಕೊಂಡು ಕಣ್ಣಿಗೊತ್ತಿದ.
‘‘ನೋಡಿ...ನೋಡಿ ಅವನನ್ನು...ಭಾರತ್ ಮಾತಾಕಿ ಜೈ ಹೇಳು ಎಂದರೆ ಅವನ ಉದ್ಧಟತನ ನೋಡಿ...ನಮ್ಮನ್ನು ಅಣಕಿಸಲೆಂದೇ .ಆ ಪುಸ್ತಕವನ್ನು ಕಣ್ಣಿಗೊತ್ತುತ್ತಿದ್ದಾನೆ...’’ ಯಾರೋ ತೋರಿಸಿದರು.
ಒಬ್ಬ ಅವನನ್ನು ಎತ್ತಿ ಕುಕ್ಕಿದ. ಇನ್ನೊಬ್ಬ ಅವನ ಬಟ್ಟೆಯನ್ನು ಹರಿದ. ಎಲ್ಲೆಲ್ಲಿಂದಲೂ ತಟಪಟನೆ ಏಟುಗಳ ಮಳೆ. ಅವನ ಹಣೆಯಲ್ಲಿ ರಕ್ತ ಒಸರಿತು.
ಒಟ್ಟಿನಲ್ಲಿ ಒಂದು ದೇಶಪ್ರೇಮದ ಘೋಷಣೆಯನ್ನು ಅವನಿಂದ ಹೊರಡಿಸಲು ಅವರೆಲ್ಲ ಹರ ಸಾಹಸ ಪಡುತ್ತಿದ್ದರು. ಒಂದು ರೀತಿ ನೋಡಿದರೆ ಅವರೆಲ್ಲ ಸುಸ್ತಾಗಿದ್ದರು. ಆ ಹುಡುಗನ ಮುಂದೆ ಅಸಹಾಯಕರಾಗಿದ್ದರು. ಆ ಅಸಹಾಯಕತೆ, ಹತಾಶೆ ಅವರನ್ನು ಇನ್ನಷ್ಟು ಕ್ರೂರಿಗಳನ್ನಾಗಿಸುತ್ತಿತ್ತು.
‘‘ಹೇಳುತ್ತೀಯ ಇಲ್ಲವಾ?’’ ನಾಮಧಾರಿ ಕೊನೆಯ ಅವಕಾಶ ಎಂಬಂತೆ ಅಬ್ಬರಿಸಿದ. ಅದೆಲ್ಲಿತ್ತೋ, ಅವನ ಕೈಯಲ್ಲಿ ಚೂರಿಯೊಂದು ಪಳಪಳನೇ ಹೊಳೆಯುತ್ತಿತ್ತು. ಹುಡುಗ ಮಂಜುಗಣ್ಣಿನಿಂದ ಆ ಚೂರಿಯನ್ನೇ ನೋಡುತ್ತಿದ್ದ. 
ನಾಮಧಾರಿಯ ಕೈಯಲ್ಲಿ ಚೂರಿ ಕಂಡದ್ದೇ, ನೆರೆದ ಸದ್ ಗೃಹಸ್ಥರು, ಸುಸಂಸ್ಕೃತ ಗೃಹಿಣಿಯರೆಲ್ಲ ಅಲ್ಲಿಂದ ಜಾಗ ಖಾಲಿ ಮಾಡತೊಡಗಿದರು. ಜನರೆಲ್ಲ ಚದುರಿ ಹೋಗುತ್ತಿರುವುದು ನಾಮಧಾರಿಯನ್ನು ಕೆರಳಿಸಿತ್ತು. ಅವನು ಚೂರಿಯನ್ನು ಹುಡುಗನ ಹೊಟ್ಟೆಗೆ ಇಳಿಸಿಯೇ ಬಿಟ್ಟ. ಹುಡುಗ ವಿಲ ವಿಲ ಒದ್ದಾಡುತ್ತಿದ್ದಂತೆಯೇ ನಾಮಧಾರಿ ಸಹಿತ ಎಲ್ಲರೂ ಅಲ್ಲಿಂದ ಕರಗಿದರು. ಅಷ್ಟರಲ್ಲಿ ಪೊಲೀಸ್ ಜೀಪೊಂದು ಬಂತು. ಅಂಬ್ಯುಲೆನ್ಸ್ ಸದ್ದು ಮಾಡತೊಡಗಿತು.
***
ಮಹಿಳೆಯೊಬ್ಬಳು ಚೀರುತ್ತಲೇ ಸರಕಾರಿ ಅಸ್ಪತ್ರೆಯ ಹೊರಗೆ, ಒಳಗೆ ಓಡಾಡುತ್ತಿದ್ದಳು.
ಪೊಲೀಸರು ಕೇಳಿದರು ‘‘ಆ ಹುಡುಗನಿಗೆ ನೀನೇನಾಗಬೇಕಮ್ಮ...?’’
‘‘ನನ್ನ ಮಗ ಕಣಪ್ಪ....ಮದ್ರಸಕ್ಕೆಂದು ಹೋಗಿದ್ದ ಕಣಪ್ಪ...ಅಯ್ಯೋ ಅವನಿಗೆ ಚೂರಿಯಿಂದ ಇರಿದು ಬಿಟ್ಟಿದ್ದಾರಪ್ಪ....’’
‘‘ನೋಡಮ್ಮ ನಿಮ್ಮ ಮಗನ ಮೇಲೆ ಕೇಸು ದಾಖಲಾಗಿದೆ...’’ ಪೊಲೀಸರು ಹೇಳಿದರು.
ಮಹಿಳೆ ಸ್ತಬ್ಧಳಾಗಿ ಪೊಲೀಸರನ್ನೇ ನೋಡತೊಡಗಿದಳು.
‘‘ದೂರಿನ ಪ್ರಕಾರ ನಿನ್ನ ಮಗ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಲು ನಿರಾಕರಿಸಿದ್ದನಂತೆ....ನಿನ್ನ ಮಗನ ಮೇಲೆ ದೇಶದ್ರೋಹದ ಕೇಸು ದಾಖಲಾಗಿದೆ...’’ ಪೊಲೀಸ್ ಸಿಬ್ಬಂದಿ ಹೇಳಿದ.
ಮಹಿಳೆ ಮತ್ತೆ ತಲೆ ಚಚ್ಚಿ ರೋದಿಸತೊಡಗಿದಳು
 ‘‘ನನ್ನ ಮಗ ಹುಟ್ಟು ಮೂಗ ಕಣಪ್ಪ...ಹುಟ್ಟಿದಂದಿನಿಂದ ಈವರೆಗೆ ಒಂದು ಮಾತೂ ಆಡಿದವನಲ್ಲ ಕಣಪ್ಪ...ಬಾಯಿ ಬಾರದ ನನ್ನ ಮಗನಿಗೇ ಚೂರಿಯಿಂದ ಇರಿದರು ಕಣಪ್ಪ.....’’
ಪೊಲೀಸರು ಅರೆಕ್ಷಣ ಮೌನವಾದರು. ಬಳಿಕ ‘‘ನೋಡೋಣ...ಅದು ನಿಜ ಅಂತ ಸಾಬೀತಾದರೆ ನಿನ್ನ ಮಗನನ್ನು ಬಿಟ್ಟು ಬಿಡುತ್ತೇವೆ...ನ್ಯಾಯ ದೇವತೆ ಕೈ ಬಿಡುವುದಿಲ್ಲ. ಚಿಂತೆ ಮಾಡಬೇಡ...ಬಾಯಿ ಬಾರದವರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುವ ಅಗತ್ಯವಿಲ್ಲ...ನಿನ್ನ ಮಗನ ಮೇಲಿನ ಕೇಸು ಒಂದೆರಡು ತಿಂಗಳಲ್ಲೇ ಬಿದ್ದು ಹೋಗುತ್ತದೆ...ಹೆದರಬೇಡ’’ ಎಂದು ಮಹಿಳೆಯನ್ನು ಸಮಾಧಾನಿಸತೊಡಗಿದರು.
ಅಷ್ಟರಲ್ಲಿ ಅಲ್ಲಿಗೆ ಪ್ರವೇಶಿಸಿದ ವೈದ್ಯರು ಮಹಿಳೆಯ ಮುಂದೆ ಘೋಷಿಸಿದರು ‘‘ನಿನ್ನ ಮಗನನ್ನು ಬದುಕಿಸಲಾಗಲಿಲ್ಲ. ರಕ್ತ ತುಂಬಾ ಹೋಗಿತ್ತು. ಆತ ಸತ್ತಿದ್ದಾನೆ. ಹೆಣ ಸಾಗಿಸುವ ವ್ಯವಸ್ಥೆಯನ್ನು ಆದಷ್ಟು ಬೇಗ ಮಾಡು’’

1 comment: