ಇದನ್ನು ಹೇಗೆ ಬರೆಯಬೇಕು ಎನ್ನುವುದು ನನಗೆ ತಿಳಿಯದಾಗಿದೆ. ಒಂದು ವಿಶ್ವವಿದ್ಯಾನಿಲಯ ಕಳೆದ ಎರಡು ವರ್ಷಗಳಿಂದ ಒಂದು ಕವಿತೆಯನ್ನು ಕಲಿಸುತ್ತಿತ್ತು. ಗ್ವಾಂಟನಾಮೋದಲ್ಲಿ ಚಿತ್ರಹಿಂಸೆ ಅನುಭವಿಸಿದ ಒಬ್ಬ ಸಂತ್ರಸ್ತ ಬರೆದ ಕವಿತೆ ಅದು. ಬಹಳಷ್ಟು ಜನರ ಹೃದಯವನ್ನು ದ್ರವವಾಗಿಸಿರುವ ಆ ಕವಿತೆಯ ಹೆಸರು ‘ಓಡ್ ಟು ದ ಸೀ’. ಈ ಕವಿತೆಯನ್ನು ಬರೆದ ಕವಿಯ ಹೆಸರು ಇಬ್ರಾಹಿಂ ಅಲ್ ರುಬೈಶ್. ಈ ಕವಿತೆಯನ್ನು ಪಠ್ಯವಾಗಿ ಪ್ರಕಟಿಸಿದ ವಿಶ್ವವಿದ್ಯಾನಿಲಯ ಇನ್ನಾವುದೂ ಅಲ್ಲ. ಕೇರಳದ ಕಲ್ಲಿಕೋಟೆ ವಿಶ್ವವಿದ್ಯಾನಿಲಯ. ಪಾಬ್ಲೋ ನೆರೂಡ, ಕಮಲಾದಾಸ್, ಸೆಲ್ವಿಯಾ ಫಾತ್‌ರಂತಹ ಶ್ರೇಷ್ಟ ಕವಿಗಳ ಕವಿತೆಗಳಿರುವ ಪಠ್ಯದಲ್ಲಿ ಇವನ ಕವಿತೆಯೂ ಸೇರಿ ಹೋಗಿತ್ತು. ಆದರೆ ಇದೀಗ ಎರಡು ವರ್ಷಗಳ ಬಳಿಕ, ವಿಶ್ವವಿದ್ಯಾನಿಲಯದಲ್ಲೊಂದು ಸ್ಫೋಟವಾಗಿದೆ. ಅದೇನೆಂದರೆ, ಈ ಕವಿತೆಯನ್ನು ಬರೆದ ಅಲ್ ರುಬೈಶ್ ಓರ್ವ ಉಗ್ರಗಾಮಿ. ಆತನಿಗೂ ಅಲ್‌ಖಾಯಿದಾಕ್ಕೂ ಸಂಬಂಧವಿದೆ. ಸೌದಿ ದೊರೆಗಳು, ಆತನ ತಲೆಗಾಗಿ ಕಾಯುತ್ತಿದ್ದಾರೆ. ಇಂಡಿಯಾ ಟುಡೇಯಲ್ಲಿ ಈ ಅಂಶ ಪ್ರಕಟವಾದ ಬೆನ್ನಿಗೇ ವಿಶ್ವ ವಿದ್ಯಾಲಯವು ವಿವಾದದಿಂದ ಹಿಂದೆ ಸರಿಯುವುದಕ್ಕೆ ಯೋಚಿಸಿದೆ. ಈ ಕವಿತೆಯನ್ನು ಪಠ್ಯದಿಂದ ತೆಗೆದುಹಾಕಲು ಒಪ್ಪಿಕೊಂಡಿದೆ.
ಮೂಲತಃ ಸೌದಿಯ ರುಬಾಯಿಶ್ ತನ್ನ ವಿಚಾರಗಳ ಮೂಲಕ ಸೌದಿ ದೊರೆಗಳ ಹಾಗೆಯೇ ಅಮೆರಿಕದ ವಿರೋಧಗಳನ್ನು ಏಕಕಾಲದಲ್ಲಿ ಕಟ್ಟಿಕೊಂಡಿದ್ದ. ಅವನನ್ನು ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿಯಲ್ಲಿ ಬಂಧಿಸಲಾಯಿತು ಎಂದು ಮೂಲಗಳು ತಿಳಿಸುತ್ತವೆ. ಸುಮಾರು ಐದು ವರ್ಷ ಗ್ವಾಂಟೆನಾಮೋ ಜೈಲಿನಲ್ಲಿ ಬರ್ಬರ ಬದುಕನ್ನು ಕಳೆದು ಬಂದಿದ್ದ ರುಬಾಯಿಶ್, ಐದು ವರ್ಷದ ಬಳಿಕ ಬಿಡುಗಡೆಗೊಂಡಿದ್ದ. ಇದಾದ ಮೇಲೆ ಆತ ಅಲ್‌ಖಾಯಿದಾ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡತೊಡಗಿದ ಎಂದೂ ಹೇಳುತ್ತಾರೆ. ಆತ ತಲೆಮರೆಸಿಕೊಂಡಿದ್ದಾನೆ ಎಂದೂ ಕೆಲವು ಮೂಲಗಳು ಹೇಳುತ್ತವೆ. ಅಥವಾ ಆತ ಸತ್ತೇ ಹೋಗಿರಬಹುದು ಎನ್ನುವವರೂ ಇದ್ದಾರೆ. ಆದರೆ ಅವನು ಬರೆದ ಕವಿತೆಯೊಂದು ಕೇರಳದ ವಿಶ್ವವಿದ್ಯಾನಿಲಯದ ಪಠ್ಯ ಪುಸ್ತಕದ ನಡುವೆ ನವಿಲುಗರಿಯಂತೆ ಹುಟ್ಟಿ ಅವನೊಳಗೆ ಕವಿಗೆ ಜೀವಕೊಟ್ಟಿತು. ರುಬಾಯಿಷ್ ಉಗ್ರನಾಗಿರಲಿ ಅಥವಾ ಅಲ್ಲದೇ ಇರಲಿ. ಆದರೆ ಈ ಕವಿತೆಗೆ ಆತನ ಮೂಲದ ಅಗತ್ಯವಿಲ್ಲ. ಹಾಗೆ ನೋಡಿದರೆ, ಯಾವ ಕವಿತೆಗಳ ಮೂಲವನ್ನೂ ಹುಡುಕ ಬಾರದು. ಅಲ್ಲವೆ?
ನಕ್ಸಲ್ ಮುಖಂಡ ಸಾಕೇತ್ ರಾಜನ್‌ನ ದುರಂತವನ್ನು ಸ್ಮರಿಸಬಹುದಾಗಿದೆ. ಈತ ಎರಡು ಅತ್ಯಮೂಲ್ಯ ಇತಿಹಾಸ ಪುಸ್ತಕವನ್ನು ಬರೆದಿದ್ದ. ಒಂದು ಸಂದರ್ಭದಲ್ಲಿ ಆತ ಬರೆದ ‘ಮೇಕಿಂಗ್ ಹಿಸ್ಟರಿ’ ಮಂಗಳೂರು ವಿಶ್ವವಿದ್ಯಾನಿಲಯದಿಂದ ಅಧ್ಯಯನ ಪುಸ್ತಕವಾಗಿಯೂ ಪರಿಗಣಿತವಾಗಿತ್ತು. ಅದರಲ್ಲಿ ಆತನ ಹೆಸರನ್ನು ‘ಸಾಕಿ’ ಎಂದಷ್ಟೇ ಬರೆಯಲಾಗಿತ್ತು. ಆದರೆ, ಕೆಲವೇ ವರ್ಷಗಳಲ್ಲಿ ಪ್ರೇಮ್ ಎನ್ನುವ ನಕ್ಸಲ್ ಮುಖಂಡ ಪಶ್ಚಿಮಘಟ್ಟದಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಬರ್ಬರವಾಗಿ ಸತ್ತು ಬಿದ್ದಾಗ ಗೊತ್ತಾಯಿತು, ಸಾಕಿ ಮತ್ತು ಪ್ರೇಮ್ ಒಬ್ಬನೇ ಎನ್ನುವುದು. ಸಾಕೇತ್ ರಾಜನ್ ಎನ್ನುವ ಲವಲವಿಕೆಯ ತರುಣನ ಕುರಿತಂತೆ ಗದ್ಗದವಾಗದ ಕಂಠವಿರಲಿಲ್ಲ. ಇಂದಿಗೂ ಸಾಕಿ ಬರೆದ ಮೇಕಿಂಗ್ ಹಿಸ್ಟರಿ ಭಾಗ-1 ಮತ್ತು 2 ಜೀವಂತವಾಗಿದೆ. ಸಾಕಿಯನ್ನೂ ಜೀವಂತವಾಗಿರಿಸಿದೆ. ಕರ್ನಾಟಕ ಇತಿಹಾಸದ ಕುರಿತಂತೆ ಅಪರೂಪದ ದಾಖಲೆಗಳು ಈ ಎರಡು ಕೃತಿಗಳಲ್ಲಿವೆ.
ರುಬಾಯಿಶ್ ಅಲ್‌ಖಾಯಿದಾ ಉಗ್ರನೇ ಆಗಿರಬಹುದು. ಆದರೆ ಅವನು ತನ್ನ ಕಣ್ಣಿಂದ ಒರೆಸಿ ಎಸೆದ ಈ ಕವಿತೆಯನ್ನು ನಾವು ಎನ್‌ಕೌಂಟರ್ ಮಾಡಿ ಕೊಂದು ಹಾಕುವುದು ಹೇಗೆ? ಇದನ್ನು ಓದದೇ ಇರುವುದು ಅಥವಾ ಓದಿ ಮರೆಯುವುದಕ್ಕೆ ಪ್ರಯತ್ನಿಸುವುದಷ್ಟೇ ನಮ್ಮ ಮುಂದಿರುವ ಆಯ್ಕೆ. ಅಂದ ಹಾಗೆ ಈ ಕವಿತೆ, ಆಮ್ನೆಸ್ಟಿ ಇಂಟರ್ ನ್ಯಾಶನಲ್ ಹೊರತಂದ ಕವನ ಸಂಕಲನ ‘ಪೊಯೆಮ್ಸ್ ಫ್ರಮ್ ಗ್ವಾಂಟನಾಮೋ-ದಿ ಡಿಟೈನೀಸ್ ಸ್ಪೀಕ್’ ಸಂಗ್ರಹದಲ್ಲಿ ಪ್ರಕಟಗೊಂಡಿದೆ. ಇದನ್ನೇ ಎತ್ತಿ, ಕೇರಳ ವಿಶ್ವವಿದ್ಯಾಲಯ ತನ್ನ ಪಠ್ಯಕ್ಕೆ ಆಯ್ಕೆ ಮಾಡಿತ್ತು. ನಾನಿಲ್ಲಿ ಆ ಕವಿತೆಯನ್ನು ನನಗೆ ಸಾಧ್ಯವಾದ ಮಟ್ಟಿಗೆ ಕನ್ನಡಕ್ಕಿಳಿಸಿದ್ದೇನೆ.
ಸಮುದ್ರವನ್ನು ಉದ್ದೇಶಿಸಿ...
ಓ ಸಮುದ್ರದ ಅಲೆಗಳೇ, ನನ್ನ ಪ್ರೀತಿಪಾತ್ರರ ಸುದ್ದಿಗಳನ್ನು ತನ್ನಿ...
ಈ ಅಪನಂಬಿಕೆಗಳ ಸಂಕಲೆಯೊಂದು ಇಲ್ಲದಿದ್ದರೆ ನಾನು ನಿನ್ನೊಳಗೆ ಹಾರುತ್ತಿದ್ದೆ
ನನ್ನ ಪ್ರೀತಿಯ ಕುಟುಂಬದ ಮಡಿಲನ್ನು ಸೇರುತ್ತಿದ್ದೆ ಅಥವಾ ನಿನ್ನ ಒಡಲಲ್ಲೇ ಪ್ರಾಣ ಬಿಡುತ್ತಿದ್ದೆ.
ಓ ಸಮುದ್ರವೇ,
ನಿನ್ನ ದಂಡೆಗಳು ದುಃಖ, ಬಂಧನ, ನೋವು ಮತ್ತು ಅನ್ಯಾಯದ ಒಡಲುಗಳಾಗಿವೆ
ನಿನ್ನ ಕಟುಕತನ ನನ್ನ ತಾಳ್ಮೆಯನ್ನು ಕುಕ್ಕಿ ತಿನ್ನುತ್ತಿದೆ
ನಿನ್ನ ಪ್ರಶಾಂತತೆ ಸಾವಿನಂತಿದೆ, ನಿನ್ನ ಅಲೆಗಳ ವೈಖರಿಯೇ ವಿಚಿತ್ರ
ನಿನ್ನೊಡಲಿನಿಂದ ಎದ್ದು ಬರುವ ವೌನದ ತೆಕ್ಕೆಯಲಿ ಘಾತಕತನವಿದೆ
ನಿನ್ನ ನಿರಂತರ ನಿಶ್ಚಲತೆ ಕಫ್ತಾನನ್ನೇ ಕೊಂದು ಹಾಕುತ್ತದೆ
ಮತ್ತು ಅದೆಷ್ಟೋ ನಾವಿಕರು ನಿನ್ನ ತಳ ಸೇರಿದ್ದಾರೆ
ಮೃದುವಾಗುವೆ, ಕಿವಿಗಡಚಿಕ್ಕುವೆ, ವೌನತಳೆಯುವೆ, ಉಪೇಕ್ಷಿಸುವೆ ಮತ್ತು ಚಂಡಮಾರುತವಾಗುವೆ..
ಹಾಗೂ ಸಮಾಧಿಗಳನ್ನು ಹೊತ್ತು ಸಾಗುವೆ...
ಗಾಳಿ ನಿನ್ನನ್ನು ಕೆಣಕಿತೋ ನಿನ್ನ ಅನ್ಯಾಯಕ್ಕೆ ಪಾರವೇ ಇಲ್ಲ
ಗಾಳಿ ನಿನ್ನನ್ನು ಸುಮ್ಮನಾಗಿಸಿದರೆ ಆಗ ಕೇವಲ ಏರಿಳಿತ ಮಾತ್ರ.
ಓ ಸಮುದ್ರವೇ, ನಮ್ಮ ಸಂಕಲೆಗಳು ನಿನ್ನನ್ನು ಕೆಣಕುತ್ತವೆಯೇ?
ನಾವು ಪ್ರತಿ ದಿನ ಬಂದು ಹೋಗುವುದು ನಮಗೆ ಅನಿವಾರ್ಯ
ನಾವು ಮಾಡಿದ ಪಾಪಗಳೇನು ಬಲ್ಲೆಯ?
ನಮ್ಮ ದುಃಖದ ಕಾರಣ ನಿನಗೆ ತಿಳಿದಿದೆಯೇ?
ನಮ್ಮ ಸಂಕಲೆಗಳನ್ನು ಅಣಕಿಸುವ ಓ ಸಮುದ್ರವೇ...
ನಮ್ಮ ಶತ್ರುಗಳ ಜೊತೆ ಸೇರಿ, ಅಮಾನುಷವಾಗಿ ನಮ್ಮ ಕಾವಲು ಕಾಯುತಿರುವೆ
ತಮ್ಮ ಮೇಲೆ ನಡೆದ ದೌರ್ಜನ್ಯದ ಕತೆಯನ್ನು ಬಂಡೆಗಳು ನಿನಗೆ ಹೇಳುವುದಿಲ್ಲವೇ?
ಕ್ಯೂಬ ತನ್ನ ವಿಜಯದ ಕತೆಗಳನ್ನು ನಿನಗೆ ಅನುವಾದಿಸುವುದಿಲ್ಲವೆ?
ಮೂರು ವರ್ಷಗಳಿಂದ ನೀನು ನಮ್ಮ ಜೊತೆಗಿರುವೆ, ಮತ್ತು ನೀನು ಏನು ಪಡೆದೆ?
ಸಮುದ್ರದ ಕುರಿತು ದೋಣಿಗಟ್ಟಲೆ ಕವನಗಳು; ಉರಿಯುತ್ತಿರುವ ಹೃದಯದಲ್ಲಿ ಸಮಾಧಿಯಾದ ಬೆಳಕು
ಕವಿಯ ಮಾತುಗಳೇ ನಮ್ಮ ಚೈತನ್ಯದ ಚಿಲುಮೆ;
ಆತನ ಸಾಲುಗಳೇ ನಮ್ಮ ಉರಿಯುವ ಹೃದಯಗಳಿಗೆ ಮುಲಾಮು....
ಯುದ್ಧ
ಖ್ಯಾತ ರಂಗನಟನೊಬ್ಬ ಪ್ರಾಥಮಿಕ ಶಾಲೆಯೊಂದಕ್ಕೆ ನಾಟಕ ತರಬೇತಿ ನೀಡಲು ಬಂದಿದ್ದ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಎಷ್ಟಿದೆ ಎಂದು ಗುರುತಿಸಲು ‘‘ಮಕ್ಕಳೇ...ನೀವು ಯುದ್ಧದ ದೃಶ್ಯವನ್ನು ಅಭಿನಯಿಸಿ ತೋರಿಸಿ’’ ಎಂದು ಹೇಳಿದ.
ಮಕ್ಕಳೆಲ್ಲರೂ ಬಯಲಲ್ಲಿ ಹೆಣಗಳಂತೆ ಸುಮ್ಮಗೆ ಮಲಗಿ ಬಿಟ್ಟರು.
ಮೈದಾನ
ಒಬ್ಬ ರಾಜಕಾರಣಿಯ ಭರವಸೆ ‘‘ನಾನು ಚುನಾವಣೆಯಲ್ಲಿ ಗೆದ್ದರೆ, ಪ್ರತಿ ಊರಲ್ಲೊಂದು ಕ್ರಿಕೆಟ್ ಮೈದಾನ ಮಾಡುತ್ತೇನೆ’’
ಪತ್ರಿಕೆಯವರು ಕೇಳಿದರು ‘‘ಸಾರ್, ಪ್ರತಿ ಊರಿನಲ್ಲಿ ಕ್ರಿಕೆಟ್ ಮೈದಾನ ಮಾಡುವುದಕ್ಕೆ ಜಾಗ ಎಲ್ಲಿದೆ?’’
ರಾಜಕಾರಣಿ ತಣ್ಣಗೆ ಉತ್ತರಿಸಿದ ‘‘ರೈತರ ಗದ್ದೆಗಳನ್ನು ವಶಕ್ಕೆ ತೆಗೆದುಕೊಂಡಾದರೂ ನಾನು ನನ್ನ ಭರವಸೆ ಈಡೇರಿಸುವೆ’’
ನಿಯಮ
‘‘ನೀನು ಕರಾಟೆ ಕಲಿತಿದ್ದರೂ ಕಳ್ಳ ನಿನ್ನನ್ನು ಹೇಗೆ ಹೊಡೆದ.’’ ಕರಾಟೆ ಪಟುವಿಗೆ ಆತ ಕೇಳಿದ.
ಕರಾಟೆ ಪಟು ಸಿಟ್ಟಿನಿಂದ ನುಡಿದ ‘‘ಕಳ್ಳ, ಕರಾಟೆಯ ನಿಯಮಗಳನ್ನು ಪಾಲಿಸಲಿಲ್ಲ...’’
ಅಪ್ಪ
ಅಪ್ಪ ಮಗುವನ್ನು ಆಡಿಸುತ್ತಿದ್ದ
‘‘ನನ್ನ ಬಂಗಾರ, ನನ್ನ ಚಿನ್ನ, ನನ್ನ ಸಿಂಗಾರ’’
ಅಷ್ಟರಲ್ಲಿ ಮಗು ಸೂಸು ಮಾಡಿತು.
ಸಿಟ್ಟಿನಿಂದ ಅಪ್ಪ ಕೂಗಿದ ‘‘ಲೇ...ನಿನ್ನ ಮಗು ಇಲ್ಲಿ ಸೂಸು ಮಾಡುತ್ತಿದೆ...ತೆಗೊಂಡು ಹೋಗು’’
ಕರೆ
ದಟ್ಟ ಜನಸಂದಣಿಯ ನಗರದಲ್ಲಿ ಯಾರೋ ಕೂಗಿದಂತಾಯಿತು.
ತಿರುಗಿ ನೋಡಿದ.
ಅಷ್ಟರಲ್ಲೇ ಎದುರಿಂದ ಒಂದು ವಾಹನ ಅವನಿಗೆ ಅಪ್ಪಳಿಸಿತು.
ಅವನು ಹೆಣವಾದ.
ಹಾಗಾದರೆ ಹಿಂದಿನಿಂದ ಕೂಗಿದವರು ಯಾರು?
ನಿಧಿ
ರೈತನೊಬ್ಬ ಹೊಲ ಉಳುತ್ತಿದ್ದ.
ನೇಗಿಲಿಗೆ ಅದೇನೋ ತಾಗಿತು. ಅಗೆದ. ನೋಡಿದರೆ ಪೆಟ್ಟಿಗೆ. ಅದನ್ನು ತೆರೆಯದೆಯೇ ಪಕ್ಕದ ತೋಡಿಗೆ ಎಸೆದ.
ಮಗ ಅದನ್ನೇ ನೋಡುತ್ತಿದ್ದ. ಅವನು ಕೂಗಿ ಹೇಳಿದ
‘‘ಅಪ್ಪ ಅದನ್ನು ತೆರೆದು ನೋಡಬೇಕಾಗಿತ್ತು. ನಿಧಿ ಇದ್ದರೂ ಇದ್ದೀತು...’’
‘‘ಹೌದು ಮಗು. ಆ ಭಯದಿಂದಲೇ ನಾನು ತೆರೆದು ನೋಡಲಿಲ್ಲ’’ ತಣ್ಣಗೆ ಉತ್ತರಿಸಿದ ತಂದೆ ಉಳುವುದನ್ನು ಮುಂದುವರಿಸಿದ.
ಗುರುತು
ಫೇಸ್ಬುಕ್ಕಲ್ಲಿ ಅಷ್ಟೆಲ್ಲ ಮಾತನಾಡಿಕೊಂಡವರು....
ಭೇಟಿಯಾದಾಗ ಪರಸ್ಪರ ಗುರುತಿಸದೇ ಹೋದರು.
‘ಮುಸ್ಲಿಮ್ ಹೆಣ್ಣು ಮಕ್ಕಳು ಮಸೀದಿಗೆ ನಮಾಝ್‌ಗೆ ಹೋಗುವುದರ ಕುರಿತಂತೆ ನೀನ್ಯಾಕೆ ಮಾತನಾಡುವುದಿಲ್ಲ....?’ಎಂದು ಕೆಲವು ಗೆಳೆಯರು ನನ್ನ ಹಣೆಗೆ ಪಿಸ್ತೂಲ್ ಒತ್ತಿ ಕೇಳುತ್ತಿದ್ದಾರೆ. ಹೀಗೆಂದು ಕೇಳಿದವರಲ್ಲಿ, ಹೆಣ್ಣು ಮಕ್ಕಳು ತಲೆವಸ್ತ್ರ ಹಾಕಿ ಶಾಲೆಗೆ ಹೋಗುವುದನ್ನು ಶತಾಗತಾಯ ವಿರೋಧಿಸಿದವರಿದ್ದಾರೆ. ‘ತಲೆವಸ್ತ್ರ (ಸ್ಕಾರ್ಫ್) ಅವರಿಗೆ ಮುಖ್ಯವೆಂದಾದರೆ ಅವರು ಮನೆಯಲ್ಲೇ ಇರಲಿ’ ಎಂದು ವಾದಿಸಿದ ಕಮ್ಯುನಿಸ್ಟ್ ಗೆಳೆಯರಿದ್ದಾರೆ. ಇದೀಗ ಕೆಲವರಂತೂ ‘ದಲಿತರ ಮೇಲೆ ಪ್ರೀತಿ ತೋರಿಸುವ ನೀನು ಮುಸ್ಲಿಮ್ ಮಹಿಳೆ ಮಸೀದಿಯಲ್ಲಿ ನಮಾಝ್ ಮಾಡುವುದರ ಕುರಿತಂತೆ ಯಾಕೆ ಸುಮ್ಮನಿದ್ದೀಯ?’ ಎಂದು ಪದೇ ಪದೇ ಕೇಳಿ, ನನ್ನ ಬಾಯಿ ಮುಚ್ಚಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ನಾನಿಲ್ಲಿ ಅನಿವಾರ್ಯವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಯಾಕೆಂದರೆ ಮುಸ್ಲಿಮ್ ಮಹಿಳೆಯರು ಮಸೀದಿಗೆ ಹೋಗಬೇಕು, ಹೋಗಬಾರದು ಎನ್ನುವುದು ನನಗೆ ಯಾವತ್ತೂ ಪ್ರಶ್ನೆಯಾಗಿರಲಿಲ್ಲ. ಮಸೀದಿಗೆ ಹೋಗಲೇ ಬೇಕೆಂದರೆ, ಮುಸ್ಲಿಮ್ ಮಹಿಳೆಯರಿಗೆ ಪ್ರವೇಶ ನೀಡುವ ಮಸೀದಿಗಳು ಇದೀಗ ಎಲ್ಲ ಕಡೆ ತಲೆಯೆತ್ತುತ್ತಿವೆ. ನನಗೆ ಮುಖ್ಯವೆನಿಸುವುದು ಶಾಲೆ, ಕಾಲೇಜುಗಳಿಗೆ ಮುಸ್ಲಿಮ್ ಮಹಿಳೆಯರು ಇನ್ನಷ್ಟು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ತೆರಳಬೇಕು. ನಾವಿಂದು ಧ್ವನಿಯೆತ್ತಬೇಕಾದುದು ಈ ಕುರಿತಂತೆ.
ಹಾಸನದಲ್ಲಿ ನಡೆದ ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶ ವಿವಾದ ಹೊಸತೇನೂ ಅಲ್ಲ. ಮತ್ತು ಈ ಚಳವಳಿಯ ಹಿಂದೆ ಮುಸ್ಲಿಮ್ ಮೂಲಭೂತವಾದಿಗಳೆಂದು ಪ್ರಗತಿಪರರು ಯಾರನ್ನು ಕರೆಯುತ್ತಾರೆಯೋ ಅವರೂ ಇದ್ದಾರೆ ಎಂದರೆ ಎಂದರೆ ನೀವು ಒಪ್ಪುತ್ತೀರೋ ಇಲ್ಲವೋ. ಸುಮಾರು ಹದಿನೈದು ವರ್ಷಗಳ ಹಿಂದೊಮ್ಮೆ ಇಂತಹದೇ ಪ್ರಕರಣ ಹಾಸನದಲ್ಲಿ ನಡೆದಿತ್ತು. ಮಸೀದಿ ಪ್ರವೇಶವನ್ನು ಎತ್ತಿ ಹಿಡಿದ ಭಾನು ಮುಷ್ತಾಕ್ ಮೇಲೆ ಕೆಲವರು ನಿಷೇಧವನ್ನೂ ಹೇರಿದ್ದರು. ಆಗ ಲಂಕೇಶ್ ಪತ್ರಿಕೆಯಲ್ಲಿ ಅದನ್ನು ಬಲವಾಗಿ ಖಂಡಿಸಿದವನಲ್ಲಿ ನಾನೂ ಒಬ್ಬ. ಆದರೆ ನಾನು ಈ ಸಂದರ್ಭದಲ್ಲಿ ಇನ್ನೂ ಒಂದು ಸಾಲನ್ನು ಒತ್ತಿ ಹೇಳಿದ್ದೆ. ಮುಸ್ಲಿಮ್ ಮಹಿಳೆಯರ ಸಮಸ್ಯೆ ಮಸೀದಿಯಲ್ಲ. ಶಾಲೆ, ಕಾಲೇಜುಗಳು ಎಂದು ಅಭಿಪ್ರಾಯಿಸಿದ್ದೆ. ಅದಕ್ಕೆ ಕಾರಣವೂ ಇತ್ತು.
ಕರ್ನಾಟಕದಲ್ಲಿ ಮುಸ್ಲಿಮ್ ಮಹಿಳೆಯರೂ ಧರ್ಮದ ಪ್ರಮುಖ ಭಾಗವಾದುದು ಈ ಭಾಗದಲ್ಲಿ ಜಮಾತೆ ಇಸ್ಲಾಮ್ ತಲೆ ಎತ್ತಿದ ಬಳಿಕ ಎನ್ನುವುದನ್ನು ಗಮನಿಸಬೇಕು. ಜಮಾತೆ ಇಸ್ಲಾಮನ್ನು ಕೆಲವರು ಮುಸ್ಲಿಮ್ ಮೂಲಭೂತವಾದಿ ಸಂಘಟನೆಯೆಂದು ಕರೆಯುತ್ತಿರುವುದೂ ಇಲ್ಲಿ ಮುಖ್ಯವಾಗುತ್ತದೆ. ನಿಜಕ್ಕೂ ಇದೊಂದು ಬಿಕ್ಕಟ್ಟೇ ಸರಿ. ನಾವು ಯಾರನ್ನು ಮುಸ್ಲಿಮ್ ಮೂಲಭೂತವಾದಿಗಳೆಂದು ಟೀಕಿಸುತ್ತೇವೆಯೋ ಅವರೇ ಮೊತ್ತ ಮೊದಲಾಗಿ ಕನ್ನಡದಲ್ಲಿ ಕುರ್‌ಆನನ್ನು ತರ್ಜುಮೆ ಮಾಡಿದರು. ಬಹುಸಂಸ್ಕೃತಿಯ ಪ್ರತಿನಿಧಿಗಳೆನಿಸಿಕೊಂಡ ಇಲ್ಲಿನ ದರ್ಗಾದ ಜನರೆಲ್ಲ ಇದನ್ನು ಪ್ರತಿಭಟಿಸಿದ್ದರು. ‘‘ಕನ್ನಡದಲ್ಲಿ ಕುರ್‌ಆನ್...ತರುವುದೇ...’’ ಎಂದು ಆಘಾತ ವ್ಯಕ್ತಪಡಿಸಿದ್ದರು. ನನ್ನ ಬಾಲ್ಯದಲ್ಲಿ, ಮುಸ್ಲಿಮ್ ಸಮುದಾಯದ ಬಹುತೇಕ ಮಂದಿ ಜಮಾತೆ ಇಸ್ಲಾಮಿನ ವಿರುದ್ಧ ಧ್ವನಿಯೆತ್ತಿದ್ದರು. ಕತ್ತಿ ಹಿಡಿದು ಅವರ ಮೇಲೆ ಏರಿ ಹೋದವರೂ ಇದ್ದಾರೆ. ಅದಕ್ಕೆ ಮುಖ್ಯ ಕಾರಣವೊಂದಿತ್ತು. ಜಮಾತೆ ಇಸ್ಲಾಮ್ ದರ್ಗಾಗಳನ್ನು ನಂಬುವುದಿಲ್ಲ. ಅದಕ್ಕೆ ಕುರ್‌ಆನ್‌ನಲ್ಲಿ ಸ್ಥಾನವಿಲ್ಲ ಎಂದು ವಾದಿಸುತ್ತಾರೆ. ದರ್ಗಾದಲ್ಲಿ ದೀಪ ಹಚ್ಚುವುದು, ಉರೂಸ್ ಆಚರಿಸುವುದು ಇತ್ಯಾದಿಗಳೆಲ್ಲ ಇಸ್ಲಾಮ್ ಧರ್ಮಕ್ಕೆ ವಿರುದ್ಧ ಎಂದು ಜಮಾತೆ ಇಸ್ಲಾಮಿನ ಮಂದಿ ವಾದಿಸುತ್ತಾರೆ. ಬಾಬಾಬುಡಾನ್‌ಗಿರಿ ದರ್ಗಾದ ಬಗ್ಗೆ ಯಾವುದೇ ಧಾರ್ಮಿಕ ಭಾವನೆಗಳನ್ನೂ ಜಮಾಅತೆ ಇಸ್ಲಾಮಿ ಪಂಗಡವಾಗಲಿ, ಸಲಫಿ ಪಂಗಡವಾಗಲಿ ಹೊಂದಿಲ್ಲ. ಪರೋಕ್ಷವಾಗಿ ಅದು ಧ್ವಂಸವಾಗಬೇಕು ಎಂದೇ ಅವರು ಆಶಿಸುತ್ತಾರೆ. ಆದರೆ ಸೂಫಿ ಸಂತರ ದರ್ಗಾಗಳ ಬಗ್ಗೆ, ಭಾರತದ ಭಾವನೆ ಭಿನ್ನವಾದುದು. ಅದು ಈ ದೇಶದ ಬಹುಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಗತಿಪರರ ಸಹಿತ ಎಲ್ಲರೂ ವಾದಿಸುತ್ತಾರೆ. ಆದರೆ ಇಂದು ನಮ್ಮ ನಡುವಿನ ದರ್ಗಾಗಳನ್ನು ನೆಲೆ ಮಾಡಿಕೊಂಡ ಸುನ್ನಿಗಳು ಮುಸ್ಲಿಮ್ ಮಹಿಳೆಯರು ಶಾಲಾ ಕಾಲೇಜುಗಳಿಗೆ ಹೋಗುವುದನ್ನು ಇಷ್ಟಪಡುವುದಿಲ್ಲ. ಮಸೀದಿಗಳಲ್ಲಿ ಮಹಿಳೆಯರು ನಮಾಝ್ ಮಾಡುವುದನ್ನು ಅಷ್ಟೇ ತೀವ್ರವಾಗಿ ವಿರೋಧಿಸುತ್ತಾರೆ. ಇಂತಹ ಕಾಲಘಟ್ಟದಲ್ಲಿ, ಇಸ್ಲಾಮ್‌ನ ಮೂಲಭೂತ ತತ್ವಗಳ ಆಧಾರದ ಮೇಲೆ ನಿಂತಿದ್ದೇವೆ ಎನ್ನುವ ಜಮಾತೆ ಇಸ್ಲಾಮಿಗಳು ಮುಸ್ಲಿಮರು ವೇದಿಕೆ ಏರುವುದನ್ನು, ಶಾಲೆಗೆ ಹೋಗುವುದನ್ನು ಪ್ರೋತ್ಸಾಹಿಸಿದರು. ಆದರೆ ಅದು ಧಾರ್ಮಿಕ ಗೆರೆಗಳ ಒಳಗೆ ಎನ್ನುವುದನ್ನು ನಾವು ಗಮನಿಸಬೇಕು.
ಜಮಾತೆ ಇಸ್ಲಾಮಿನ ನಂತರ ಕರಾವಳಿಯಾದ್ಯಂತ ತಲೆಯೆತ್ತಿದ ಸಂಘಟನೆ ಸಲಫಿ ಮೂವ್‌ಮೆಂಟ್. ಅದೀಗ ತನ್ನ ರೆಕ್ಕೆಗಳನ್ನು ಬಿಚ್ಚಿದೆ. ಇದು ಜಮಾತೆ ಇಸ್ಲಾಮಿಗಿಂತಲೂ ಕಟುವಾಗಿ ಇಸ್ಲಾಮ್ ಮೂಲಭೂತ ತತ್ವಗಳನ್ನು ಪಾಲಿಸಲು ಹೆಣಗುತ್ತಿದೆ. ಮುಸ್ಲಿಮ್ ಮಹಿಳೆಯರು ಮಸೀದಿಗಳಿಗೆ ಹೋಗಬೇಕು ಎನ್ನುವ ಚಳವಳಿ ಆರಂಭಿಸಿದ್ದು, ಅದಕ್ಕೆ ಕುರ್‌ಆನ್‌ನ ಸಾಕ್ಷಗಳನ್ನು ಒದಗಿಸಿದ್ದು ಇದೇ ಸಲಫಿಗಳು. ಕರಾವಳಿಯಲ್ಲಿ ಉಳ್ಳಾಲ ದರ್ಗಾಕ್ಕೆ ಸವಾಲಾಗಿ ಸಲಫಿಗಳು ಹುಟ್ಟಿಕೊಂಡರು. ಸೌದಿ ಅರೇಬಿಯಾದ ಸಲಫಿಗಳು ಇವರಿಗೆ ಆದರ್ಶವಾದರು. ದರ್ಗಾಗಳ ವಿರುದ್ಧ ಇವರ ಹೋರಾಟ ಹಲವು ಮನೆಗಳನ್ನು, ಕುಟುಂಬಗಳನ್ನು ಒಡೆದಿದೆ. ಪ್ರವಾದಿಯ ಹುಟ್ಟು ಹಬ್ಬ ದಿನಾಚರಣೆಯನ್ನು, ಸಾರ್ವಜನಿಕ ಮೆರವಣಿಗೆಯನ್ನು ಇವರು ಶತಾಯಗತಾಯ ವಿರೋಧಿಸುತ್ತಾರೆ. ಒಂದೇ ಮನೆಯಲ್ಲಿ ತಂದೆ ಸುನ್ನಿ, ಮಗ ಸಲಫಿಗಳಾಗಿ ಬದುಕುವುದಿದೆ. ಅವರ ನಡುವೆಯೇ ಜಗಳಗಳಾಗುವುದಿದೆ. ಮನೆಯಲ್ಲಿ ಪ್ರವಾದಿಯ ಪಾರಾಯಣ(ವೌಲೂದು)ವನ್ನು ತಂದೆ ಒಪ್ಪಿದ್ದರೆ ಮಗ ವಿರೋಧಿಸುವುದಿದೆ. ಇದೇ ಸಲಫಿಗಳು ಮಹಿಳೆಯರು ಮಸೀದಿಗಳಿಗೆ ಹೋಗಬೇಕು ಎನ್ನುವ ಚಳವಳಿ ಆರಂಭಿಸಿದ್ದು ಮತ್ತು ಮಂಗಳೂರು ಸೇರಿದಂತೆ ಇವರ ಎಲ್ಲ ಮಸೀದಿಗಳಲ್ಲಿ ಮಹಿಳೆಯರು ಮಸೀದಿಗೆ ಹೋಗುತ್ತಾರೆ. ಮಾತ್ರವಲ್ಲ, ಇವರ ಶಾಲಾ ಕಾಲೇಜುಗಳಿವೆ. ಅಲ್ಲಿ ಮುಸ್ಲಿಮ್ ಮಹಿಳೆಯರು ಕೇವಲ ಅರಬೀ ಅಕ್ಷರ ಮಾತ್ರ ಕಲಿಯುವುದಲ್ಲ, ಅದರ ಅರ್ಥ ಸಹಿತ ಕಲಿಯುತ್ತಾರೆ. ಸಲಫಿಯ ಮಹಿಳೆಯರು ಯಾವುದೇ ಮುಸ್ಲಿಮ್ ಧರ್ಮಗುರುವನ್ನು ಮೀರುವಂತೆ ಧಾರ್ಮಿಕ ಜ್ಞಾನವನ್ನು ಹೊಂದಿರುತ್ತಾರೆ. ಸುನ್ನಿ ಮಸೀದಿಗಳಲ್ಲಿ ಮುಸ್ಲಿಮ್ ಮಹಿಳೆಯರು ಮಸೀದಿಗೆ ಹೋಗಲು ಅವಕಾಶ ನೀಡಬೇಕು ಎಂದು ಮಂಗಳೂರಿನ ಕೆಲವು ಸಲಫಿ ಮಹಿಳೆಯರು ನ್ಯಾಯಾಲಯಕ್ಕೂ ತೆರಳಿದ್ದಾರೆ.
ಮಸೀದಿಗೆ ತೆರಳಿದಾಕ್ಷಣ ಮುಸ್ಲಿಮ್ ಮಹಿಳೆಯರ ಹಕ್ಕುಗಳು ಸಿಕ್ಕೇ ಬಿಡುತ್ತವೆ ಎಂದು ನಾನು ಈ ಕಾರಣಕ್ಕಾಗಿಯೇ ನಂಬುವುದಿಲ್ಲ. ಕೆಲವು ಕಟ್ಟಾ ಸಲಫಿಗಳು ಮುಸ್ಲಿಮ್ ಮಹಿಳೆಯ ಕುರಿತಂತೆ ಅಷ್ಟೇ ಕಟ್ಟಾ ನಿಲುವನ್ನು ತಳೆದಿದ್ದಾರೆ. ಕಣ್ಣು ಮಾತ್ರ ಕಾಣುವಂತೆ ಮುಖ ಮುಚ್ಚಿಕೊಳ್ಳುವ ಬುರ್ಖಾಗಳು ಬಂದಿರುವುದು ಈ ಸಲಫಿಗಳ ಮೂಲಕವೇ ಎನ್ನುವುದನ್ನು ನಾವು ಗಮನಿಸಬೇಕು. ಕೆಲವು ಸಲಫಿಗಳ ಗಡ್ಡಗಳು ವಿಕಾರವಾಗಿ ಬೆಳೆದಿರುತ್ತವೆ. ಮತ್ತು ಅವರು ಅದನ್ನು ಉದ್ದೇಶಪೂರ್ವಕವಾಗಿ, ಪ್ರದರ್ಶನಕ್ಕಾಗಿಯೇ ಬಿಟ್ಟಿರುತ್ತಾರೆ. ಪ್ರವಾದಿಯವರು ಮಧ್ಯಮ ನಿಲುವಿಗೆ ಆದ್ಯತೆ ನೀಡಿದವರು. ಪ್ರೀತಿ, ದ್ವೇಷ ಮಾತ್ರವಲ್ಲ ಆರಾಧನೆಯೂ ತನ್ನ ಮಧ್ಯಮ ನಿಲುವನ್ನು ದಾಟ ಬಾರದು ಎಂದು ಹೇಳಿದವರು. ಮನುಷ್ಯನ ಸೌಂದರ್ಯಕ್ಕೆ ಒತ್ತುಕೊಟ್ಟವರು. ಗಡ್ಡ ಆಧ್ಯಾತ್ಮದ ಸಂಕೇತ. ಅದು ಮನುಷ್ಯನ ಮುಖದಲ್ಲಿ ಆಧ್ಯಾತ್ಮದ ಬೆಳಕನ್ನು ಚಿಮ್ಮಿಸಬೇಕು. ನನ್ನ ಸಲಫಿ ಗೆಳೆಯನಿದ್ದ. ಅವನಿಗೆ ಗಲ್ಲದಲ್ಲಿ ಅದಾಗಷ್ಟೇ ನಾಲ್ಕೈದು ಕೂದಲುಗಳಷ್ಟೇ ಮೂಡಿತ್ತು. ಅದನ್ನು ವಿಕಾರವಾಗಿ ನೇತಾಡಿಸಿಕೊಂಡು ಓಡಾಡುತ್ತಿದ್ದ. ನಾನು ಹೇಳಿದೆ ‘‘ಅದನ್ನು ಸ್ವಲ್ಪ ಟ್ರಿಮ್ ಮಾಡಿಸು. ಇನ್ನಷ್ಟು ಸುಂದರವಾಗಿ ಕಾಣುತ್ತೀಯ’’
‘‘ಇಲ್ಲ, ಗಡ್ಡದಲ್ಲಿ ಮಲಾಯಿಕ್‌ಗಳು ನೇತಾಡುತ್ತಾರಂತೆ...ಪ್ರವಾದಿಯವರು ಹೇಳಿದ್ದಾರೆ...’’
ಇಸ್ಲಾಮ್‌ನಲ್ಲಿ ಯಾವುದೇ ಆಚರಣೆಗಳಿಗೂ ಲೌಕಿಕ ಕಾರಣವೊಂದು ಇರುತ್ತದೆ. ಇದೇ ಸಲಫಿಗಳು ತಮ್ಮ ಪ್ಯಾಂಟನ್ನು ಮೊಣಕಾಲುವರೆಗೆ ಮಾತ್ರ ಬಿಡುತ್ತಾರೆ. ಬಟ್ಟೆಯನ್ನು ನೆಲ ತಾಗುವಂತೆ ಬಿಡುವುದನ್ನು ಪ್ರವಾದಿಯವರು ದ್ವೇಷಿಸಿದ್ದರು. ಅದು ದುರಹಂಕಾರದ, ಅಶುಚಿತ್ವದ ಸಂಕೇತ ಎಂದೂ ಹೇಳಿದ್ದರು. ಲೌಕಿಕ ಕಾರಣವಿಲ್ಲದ ಯಾವ ಆಚರಣೆಯೂ ಇಸ್ಲಾಮ್ ಧರ್ಮದಲ್ಲಿಲ್ಲ.
‘‘ಸುಂದರವಾಗಿ ಕಾಣುವುದು ಪ್ರವಾದಿಯವರ ಆಗ್ರಹವಾಗಿತ್ತು. ನೀನು ಗಡ್ಡ ತೆಗೆದರೆ ಗಡ್ಡದಲ್ಲಿ ನೇತಾಡುವ ಮಲಾಯಿಕ್‌ಗಳೇನು ನೆಲೆಯಿಲ್ಲದೆ ಮರದಲ್ಲಿ ನೇತಾಡುವ ಪ್ರಸಂಗ ಬರುವುದಿಲ್ಲ. ಗಡ್ಡವನ್ನು ಚೆಂದ ಬಾಚಿ, ಟ್ರಿಮ್ ಮಾಡು’’ ಎಂದು ಆ ಸಲಫಿ ಹುಡುಗನಿಗೆ ಸಲಹೆ ನೀಡಿದ್ದೆ. ಆದರೆ ಅವನು ನನಗೇ ಗಡ್ಡ ಬಿಡಲು ಪ್ರತಿ ಸಲಹೆ ಕೊಟ್ಟಿದ್ದ.
ಪ್ರಗತಿ ಪರರು ಸೇರಿದಂತೆ ಕೆಲವು ಮಹಿಳಾವಾದಿಗಳು ‘‘ಮುಸ್ಲಿಮ್ ಮಹಿಳೆಯರಿಗೆ ಮಸೀದಿ ಪ್ರವೇಶಿಸಲು ಅವಕಾಶ ನೀಡಬೇಕು’’ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ಅದಕ್ಕೆ ಪ್ರೋತ್ಸಾಹ ನೀಡುವ ಜಮಾಅತೆ ಇಸ್ಲಾಮಿ ಮತ್ತು ಸಲಫಿ ಮೂವ್‌ಮೆಂಟ್‌ಗಳನ್ನು ಮೂಲಭೂತವಾದಿಗಳು ಎಂದೂ ಕರೆಯುತ್ತಾರೆ. ಇದು ನಿಜಕ್ಕೂ ನಮ್ಮ ಮುಂದಿರುವ ಬಿಕ್ಕಟ್ಟು. ಈ ಬಿಕ್ಕಟ್ಟಿನಿಂದ ಪಾರಾಗಲು ನಾನು ಆರಿಸಿದ್ದು ಒಂದೇ. ನಾನೇ ಮಸೀದಿಗೆ ಹೋಗುವುದು ಅಪರೂಪವಾಗಿರುವಾಗ, ಇನ್ನು ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶದ ಕುರಿತಂತೆ ಆಗ್ರಹಿಸುವುದು ಹಾಸ್ಯಾಸ್ಪದ. ಆದರೆ ಮುಸ್ಲಿಮ್ ಮಹಿಳೆಯರು ಹೆಚ್ಚು ಹೆಚ್ಚು ಶಾಲೆ, ಕಾಲೇಜುಗಳಿಗೆ ತೆರಳಬೇಕು, ಅದಕ್ಕೆ ಅವಕಾಶ ನೀಡಬೇಕು ಎನ್ನುವುದು ನನ್ನ ಆಗ್ರಹ.
ಇತ್ತೀಚೆಗೆ ಮುಸ್ಲಿಮ್ ಮಹಿಳೆಯರು ವ್ಯಾಪಕವಾಗಿ ಕಾಲೇಜು ಮೆಟ್ಟಲುಗಳನ್ನು ಹತ್ತುತ್ತಿದ್ದಾರೆ. ಇಂಜಿನಿಯರ್, ಡಾಕ್ಟರ್‌ಗಳಾಗಿ ಮೆರೆಯುತ್ತಿದ್ದಾರೆ. ಇದು ಮುಸ್ಲಿಮ್ ಸಮುದಾಯಕ್ಕೆ ತುಂಬಾ ಸಂತೋಷ ತರುವ ವಿಚಾರ. ಪಿಯುಸಿ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಮುಸ್ಲಿಮ್ ಬಾಲಕಿಯರ ಫೋಟೋಗಳು ಪತ್ರಿಕೆಯ ಸಂಪಾದಕೀಯ ವಿಭಾಗಗಳಲ್ಲಿ ರಾಶಿರಾಶಿಯಾಗಿ ಬೀಳುತ್ತಿರುವುದು ನೋಡುವಾಗ ಎದೆ ತುಂಬುತ್ತದೆ. ದುರದೃಷ್ಟಕ್ಕೆ ಮಸೀದಿ ಪ್ರವೇಶ ಪಕ್ಕಕ್ಕಿರಲಿ, ಮುಸ್ಲಿಮ್ ಮಹಿಳೆಯರಿಗೆ ಶಾಲೆಗಳಿಗೆ ಪ್ರವೇಶ ನೀಡಲು ನಾವು ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಾಲದಲ್ಲಿ ಮುಸ್ಲಿಮ್ ಮಹಿಳೆ ಶಾಲೆ ಮೆಟ್ಟಿಲು ಹತ್ತುವುದೇ ಕಷ್ಟಕರವಾಗಿತ್ತು. ಇಂದು ಅದಕ್ಕೆ ಭಿನ್ನವಾಗಿ ಮಹಿಳೆಯರೇ ಆಸಕ್ತಿಯಿಂದ ಶಾಲೆಯ ಮೆಟ್ಟಿಲನ್ನು ತುಳಿಯುವಾಗ, ಸ್ಕಾರ್ಫ್ ಹಾಕಿದರೆ ಪ್ರವೇಶವಿಲ್ಲ ಎಂದು ಅವರನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ.
ಮನೆಯಲ್ಲಿ ತಂದೆ ತಾಯಿಗಳನ್ನು ಒಲಿಸಿ, ಮುಸ್ಲಿಮ್ ಬಾಲಕಿಯರು ಶಾಲೆಗೆ ಬಂದರೆ, ಅಲ್ಲಿ ‘ನೀನು ಸ್ಕಾರ್ಫ್ ಹಾಕಿದರೆ ಶಾಲೆಗೆ ಪ್ರವೇಶವಿಲ’್ಲ ಎಂದು ವಿದ್ಯಾವಂತರೆನಿಸಿಕೊಂಡವರೇ ತಡೆಯುವುದು ಅಮಾನವೀಯ, ಕ್ರೌರ್ಯ. ಮಸೀದಿಯ ಪ್ರವೇಶಕ್ಕಿಂತಲೂ ಶಾಲೆಯ ಪ್ರವೇಶ ಬಹಳ ಮುಖ್ಯ. ಆದರೆ ವಿದ್ಯಾವಂತರೆನಿಸಿಕೊಂಡವರೇ ಇದಕ್ಕೆ ತಡೆಯಾಗಿರುವಾಗ, ಮಸೀದಿಯ ಪ್ರವೇಶದ ಬಗ್ಗೆ ನಾವು ಬೊಬ್ಬೆ ಹೊಡೆಯುವುದರಲ್ಲಿ ಯಾವ ಅರ್ಥವಿದೆ? ಶಿಕ್ಷಣಕ್ಕೆ ಪೂರಕವಾಗಿ ಯುನಿಫಾರ್ಮ್ ಹೊರತು, ಯುನಿಫಾರ್ಮ್‌ಗಾಗಿ ಶಿಕ್ಷಣವಲ್ಲ. ಯುನಿಫಾರ್ಮ್ ಬಣ್ಣದ ಸ್ಕಾರ್ಫನ್ನೇ ತಲೆಗೆ ತೊಟ್ಟುಕೊಳ್ಳುತ್ತೇವೆ ಎಂದರೂ ಆಸ್ಪದ ನೀಡದೆ ಅದೆಷ್ಟೋ ಮುಸ್ಲಿಮ್ ಬಾಲಕಿಯರನ್ನು ಕರಾವಳಿಯಲ್ಲಿ ಶಾಲೆಯಿಂದ ಹೊರ ಹಾಕಿದರಲ್ಲ, ಅದು ಇಂದಿನ ನಿಜವಾದ ಸಮಸ್ಯೆ. ಮುಸ್ಲಿಮರು ಮಾತ್ರವಲ್ಲ, ಇಡೀ ಸಮಾಜ ಇಂದು ಇದರ ವಿರುದ್ಧ ಧ್ವನಿಯೆತ್ತಬೇಕು. ಮುಸ್ಲಿಮ್ ವಿದ್ಯಾರ್ಥಿನಿಯರ ಶಾಲಾ ಕಲಿಕೆಯ ಪರವಾಗಿ ನಿಲ್ಲಬೇಕು. ಈ ಬಗ್ಗೆ ಮಾಧ್ಯಮಗಳು ಹೆಚ್ಚು ಒತ್ತು ಕೊಟ್ಟು, ಚರ್ಚೆಗಿಳಿಯಬೇಕಾಗಿದೆ. ಮುಸ್ಲಿಮ್ ಮಹಿಳೆಯರನ್ನೂ, ಸಮಾಜವನ್ನು, ದೇಶವನ್ನು ಒಟ್ಟಾಗಿ ಮೇಲೆತ್ತಬೇಕಾಗಿದೆ.
ಸಂಶೋಧನೆ
‘‘ಸಾರ್, ನನಗೆ ಹಸಿವಾಗುತ್ತಿದೆ’’ ಅವನು ಗೋಗರೆದ.
ಸಂಶೋಧಕ ನುಡಿದ ‘‘ಹಸಿವಿನ ಬಗ್ಗೆ ನಾನು ಹೆಚ್ಚು ಓದಿಲ್ಲ, ಅಧ್ಯಯನ ಮಾಡಿಲ್ಲ. ಆದುದರಿಂದ ಅದರ ಕುರಿತಂತೆ ನಾನು ಯಾವ ಹೇಳಿಕೆಯನ್ನು ನೀಡಲಾರೆ’’
ಕೊರತೆ
ಹೀಗೊಂದು ಸುದ್ದಿ.
ವಿಧಾನಸಭೆಯಲ್ಲಿ ಕಸದ ಬುಟ್ಟಿಯ ಕೊರತೆ.
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಜನಸಾಮಾನ್ಯರ ಅರ್ಜಿಗಳು.
ಸಮಯ
‘ಡೀಸೆಲ್ ಬೆಲೆಯನ್ನು ಮಧ್ಯರಾತ್ರಿಯಲ್ಲೇ ಯಾಕೆ ಏರಿಸುತ್ತಾರೆ?’
‘ಕಳ್ಳರು ಮನೆಗೆ ನುಗ್ಗಲು ಆಯ್ಕೆ ಮಾಡುವ ಸಮಯ ಮಧ್ಯರಾತ್ರಿಯಲ್ವೆ?’
ಮರ
ಮಗ ಮನೆಯಂಗಳದ ಮರವನ್ನು ಕಡಿಯಲು ನಿರ್ಧರಿಸುತ್ತಿದ್ದ.
‘‘ಯಾಕೋ ಮಗಾ, ಅದನ್ನು ಕಡಿಯುವುದು’’ ತಾಯಿ ಖೇದದಿಂದ ಕೇಳಿದಳು.
‘‘ಸುಮ್ನೆ ಯಾಕೆ ಮನೆ ಮುಂದೆ ಕಾವಲುಗಾರನಂತೆ ನಿಂತಿರಬೇಕು. ಮೊದಲಿನ ಹಾಗೆ ಫಲ ಬಿಡುತ್ತಿಲ್ಲ. ಅಂಗಳ ತುಂಬಾ ಕಸ. ಇಂದೋ ನಾಳೆ ಬೀಳೋ ಮರ. ತಲೆ ಮೇಲೆ ಬೀಳೋ ಮೊದಲು ನಾವೇ ಕಡಿದು ಹಾಕುವ ಅಂತ...’’
ಅಂದು ರಾತ್ರಿ ವಯಸ್ಸಾದ ಆ ತಾಯಿಗೆ ನಿದ್ದೆಯೇ ಬರಲಿಲ್ಲ.ನೆರವು
ಪ್ರವಾಹದಲ್ಲಿ ಒಬ್ಬ ಕೊಚ್ಚಿ ಕೊಂಡು ಹೋಗುತ್ತಿದ್ದ. ‘‘ದೇವರೆ ನೆರವು ಕೊಡು’’
ಮೊರೆ ಇಡ ತೊಡಗಿದ.
ಒಂದು ದೊಡ್ಡ ಮರ ತೇಲುತ್ತಾ ಬರುತ್ತಿತ್ತು. ಅವನು ಈಜಿ ಅದನ್ನು ಹತ್ತಿ ಕೂತ.
ಅಷ್ಟರಲ್ಲಿ ಇನ್ನೊಬ್ಬ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿದ. ಅವನು ನೆರವಿಗಾಗಿ ಮರದ ಬಳಿಗೇ ಈಜುತ್ತಾ ಬರುತ್ತಿದ್ದ.
ಮರದ ಮೇಲೆ ಕೂತವನು ಹೇಳಿದ ‘‘ಇದು ನನ್ನ ಮರ. ಇದನ್ನು ಮುಟ್ಟಬೇಡ’’
ಬೋರು
‘ಯಾಕೆ ಕೊಲೆ ಮಾಡಿದೆ?’ ನ್ಯಾಯಾಲಯದಲ್ಲಿ ಆ ವಿದ್ಯಾವಂತ ಯುವಕನಲ್ಲಿ ನ್ಯಾಯಾಧೀಶರು ಪ್ರಶ್ನಿಸಿದರು.
‘‘ಬದುಕು ತುಂಬಾ ಬೋರಾಗ್ತಾ ಇತ್ತು,. ಅದಕ್ಕೆ’’ ಯುವಕ ಉತ್ತರಿಸಿದ
ಫೇಸ್‌ಬುಕ್
ಫೇಸ್‌ಬುಕ್‌ನಲ್ಲಿ ಅವನಿಗೆ ಸಹಸ್ರಾರು ಮಿತ್ರರು.
ಒಂದು ದಿನ ಅವನು ಸತ್ತು ಹೋದ.
ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಭಾರೀ ಹಾಲ್ ಬುಕ್ ಮಾಡಲಾಯಿತು.
ಸಂಜೆಯವರೆಗೆ ಕಾದರೂ ಕುಟುಂಬದವರನ್ನು ಬಿಟ್ಟರೆ ಇನ್ನಾರ ಪತ್ತೆಯೂ ಇಲ್ಲ.
ಸತ್ತವನ ಮಿತ್ರರು ಫೇಸ್‌ಬುಕ್‌ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ‘ಲೈಕ್’ ಮಾಡುತ್ತಿದ್ದರು.
ಹಸಿವು
‘‘ಸಾರ್ ನನಗೆ ಹಸಿವಾಗ್ತಿದೆ’’ ಆತ ಗೋಗರೆದ.
ಸಂಶೋಧಕ ವಿವರಿಸಿದ ‘‘ನೋಡು...ನಮ್ಮ ಸಂಶೋಧನೆಯಲ್ಲಿ ನಿನಗೆ ಹಸಿವಾಗುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದೇವೆ...’’
‘‘ಆದರೆ ನನಗೆ ಹಸಿವಾಗ್ತಾ ಇದೆ ಸಾರ್...’’
‘‘ಅದು ನಿನ್ನ ಭ್ರಮೆ ಮತ್ತು ಅಜ್ಞಾನ. ನಾನು ಬರೆದ ಎರಡು ಪುಸ್ತಕಗಳನ್ನು ಮೊದಲು ಓದು...ಆಗ ನಿನಗೇ ಗೊತ್ತಾಗುತ್ತದೆ ಹಸಿವಾಗುವುದಿಲ್ಲ ಎಂದು...’’