Monday, December 31, 2012

ಹೊನ್ನೆಮರಡು ನಡುಗಡ್ಡೆಯಲ್ಲಿ ಪತ್ರಕರ್ತರು ಮತ್ತು ಸೂರ್ಯನ ಪತ್ರಿಕಾಗೋಷ್ಠಿ!

 ಪ್ರಾರ್ಥನೆ ಎಂದರೇನು?
ಕಣ್ತೆರೆದು ನೋಡೋದು
ಕಿವಿತೆರೆದು ಕೇಳೋದು
ನನ್ನ ದೊರೆಯೇ...
ನಿನ್ನ ಅನುಭವದಿಂದ
ರೋಮಾಂಚನಗೊಳ್ಳುವುದು...!

                             -ಒಬ್ಬ ಸೂಫಿ ಕವಿಯ ಹಾಡು

ಸಾಧಾರಣವಾಗಿ ವಾರ್ತಾ ಇಲಾಖೆಗಳಿರುವುದು, ಸರಕಾರಿ ಕಾರ್ಯಕ್ರಮ ಗಳಿಗೆ ಪತ್ರಕರ್ತರನ್ನು ಸಾಗಿಸುವ ಮಾಧ್ಯಮ ವಾಗಿ ಮಾತ್ರ ಎಂದು ಕೆಲವು ಅಧಿಕಾರಿಗಳು ನಂಬಿರುತ್ತಾರೆ. ರಾಜಕಾರಣಿಗಳ ಕಾರ್ಯ ಕ್ರಮಗಳಿಗೆ ಪತ್ರಕರ್ತ ರನ್ನು ಕೊಂಡೊಯ್ಯುವುದು. ಸದಾ ಜಿಲ್ಲಾ ಉಸ್ತುವಾರಿಯ ನೆರಳಲ್ಲಿ ಓಡಾಡಿಕೊಂಡು, ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವುದು, ಇಷ್ಟಾದರೆ ನಮ್ಮ ಕೆಲಸ ಮುಗಿಯಿತು ಎಂದು ನಂಬಿದವರ ದೊಡ್ಡ ಸಂಖ್ಯೆಯೇ ಇದೆ.. ಆದರೆ ಎಲ್ಲ ವಾರ್ತಾಧಿ ಕಾರಿಗಳು ಹೀಗೆಯೇ ಇರಬೇಕೆಂದಿಲ್ಲ. ತನ್ನ ಸೀಮಿತ ಅಧಿಕಾರ ಮತ್ತು ವ್ಯಾಪ್ತಿಯಲ್ಲಿ ಪತ್ರಿಕೋ ದ್ಯಮದ ಅನಂತ ಸಾಧ್ಯತೆಗಳಿಗೆ ತಮ್ಮನ್ನು ತೆರೆದು ಕೊಂಡ ಹಲವು ಅಧಿಕಾರಿಗಳನ್ನು ನಮ್ಮ ನಡುವೆ ಗುರುತಿ ಸಬಹುದಾಗಿದೆ. ಡಿಸೆಂಬರ್ 27, 28ರಂದು ಇಂತಹದೇ ಒಂದು ಯಶಸ್ವೀ ಪ್ರಯೋಗವನ್ನು ಶಿವಮೊಗ್ಗ ಜಿಲ್ಲಾ ವಾರ್ತಾಧಿಕಾರಿಯೊಬ್ಬರು ನಡೆಸಿದರು. ಪತ್ರಕರ್ತರು ಮತ್ತು ಪರಿಸರದ ನಡುವೆ ಒಂದು ಕೊಂಡಿಯಾಗಿ, ಪತ್ರಕರ್ತರಲ್ಲಿ ಪರಿಸರದ ಕುರಿ ತಂತೆ ಹೊಸ ಒಳನೋಟವನ್ನು ನೀಡಲು ಪ್ರಯತ್ನಿಸಿದವರು ಶಿವಮೊಗ್ಗ ವಾರ್ತಾಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು. ಅವರ ಈ ‘ಸಾಹಸ’ಕ್ಕೆ ಕೈ ಜೋಡಿಸಿದ್ದು ಭಾರತೀಯ ಸಾಹಸ ಸಮನ್ವಯ ಕೇಂದ್ರ ಹೊನ್ನೆಮರಡು. ಮುಖ್ಯವಾಗಿ ಶಿವಮೊಗ್ಗ ಜಿಲ್ಲಾ ಪತ್ರಕರ್ತರನ್ನೇ ಕೇಂದ್ರವಾಗಿಟ್ಟುಕೊಂಡು ಮಾಡಿದ ಈ ಕಾರ್ಯಕ್ರಮದಲ್ಲಿ, ಬೆಂಗಳೂರು, ಮಂಗಳೂರಿನ ಪತ್ರಕರ್ತರೂ ಸೇರಿಕೊಂಡಿದ್ದರು. ‘‘ಶಿವಮೊಗ್ಗದ ಹೊನ್ನೆಮರಡುವಿನಲ್ಲಿ ವಿಚಾರ ಸಂಕಿರಣ ಇದೆ. ಹೋಗ್ತೀರಾ?’’ ಎಂದು ಗೆಳೆಯರೊಬ್ಬರು ಕೇಳಿದಾಗ ನಾನು ನಿರಾಕರಿಸಿದ್ದೆ. ಆದರೆ ಅದೇ ಕ್ಷಣದಲ್ಲಿ ‘‘ನೋಡ್ರೀ...ಅರ್ಧ ಗಂಟೆ ದೋಣಿಯಲ್ಲಿ ಪಯಣ....ರಾತ್ರಿ ಹೊನ್ನೆಮರಡು ದ್ವೀಪದಲ್ಲಿ ಟೆಂಟು.... ಬೆಳದಿಂಗಳ ರಾತ್ರಿಯ ಊಟ...’’ ಎಂಬಿತ್ಯಾದಿ ಯಾಗಿ ಹೇಳಿದ್ದೆ....ಧಿಗ್ಗನೆ ಎದ್ದು ಕೂತು ‘‘ಇಗೋ ಹೊರಟೆ’’ ಎಂದು ಸಿದ್ಧನಾಗಿ ಬಿಟ್ಟಿದ್ದೆ.
ಹೊನ್ನೆಮರಡುವಿಗೆ ಶಿವಮೊಗ್ಗದಿಂದ ಸುಮಾರು ಒಂದೂವರೆ ಗಂಟೆಯ ಪ್ರಯಾಣ ಬೇಕು. ಸಾಗರ ತಲುಪಿದರೆ, ಕೇವಲ ಇಪ್ಪತ್ತು ನಿಮಿಷದಲ್ಲಿ ಹೊನ್ನೆಮರಡನ್ನು ತಲುಪಬಹುದು. ಈ ಹೊನ್ನೆಮರಡುವಿನ ವಿಶೇಷ ಆಕರ್ಷಣೆ ಯೆಂದರೆ ಇಲ್ಲಿನ ಪುಟ್ಟ ದ್ವೀಪ, ದೋಣಿಯ ಪಯಣ... ನಡುಗಡ್ಡೆಯಲ್ಲಿ ವಾಸ್ತವ್ಯ... ಸೂರ್ಯೋದಯ, ಸೂರ್ಯಾಸ್ತ...ಪ್ರಕೃತಿ.... ಶರಾವತಿ ಅಣೆಕಟ್ಟಿನ ಹಿನ್ನೀರು...ಎಲ್ಲಕ್ಕಿಂತ ವಿಶೇಷ ವೆಂದರೆ...ಇಲ್ಲಿ ಯಾವುದೇ ಕೃತಕ ನಿರ್ಮಾಣಗಳಿಲ್ಲ. ಧಾಬಾಗಳಿಲ್ಲ. ಒಂದು ಪ್ರವಾಸಿಧಾಮವೆಂದಾಕ್ಷಣ, ಬೆಲ್ಲಕ್ಕೆ ನೊಣ ಮುತ್ತಿ ದಂತೆ ಮುತ್ತಿಕೊಳ್ಳುವ ಅಂಗಡಿ ಮುಂಗಟ್ಟು ಗಳಿಲ್ಲ. ಹೊಟೇಲು ಗಳಿಲ್ಲ. ಅದಕ್ಕೆ ಮುಖ್ಯ ಕಾರಣವೇ ಭಾರತೀಯ ಸಾಹಸ ಸಮನ್ವಯ ಕೇಂದ್ರ ಮತ್ತು ಅದರ ಮುಖ್ಯ ರೂವಾರಿ ಗಳಾಗಿರುವ ಡಾ. ಎಸ್. ಎಲ್. ಎನ್. ಸ್ವಾಮಿ ಮತ್ತು ಅವರ ಪತ್ನಿ ನೊಮಿತೋ ಕಮ್ದಾರ್ ಅವರು ಕಾವಲು.
ಈ ಕೇಂದ್ರ ಈ ಭಾಗದಲ್ಲಿ ಸ್ಥಾಪನೆಯಾಗಿ ಇಪ್ಪತ್ತು ವರ್ಷ ಗಳಾಗಿವೆ. ಬಂಗಾರಪ್ಪ ಕಾಲದಲ್ಲಿ ಇದಕ್ಕೆ ಅನುಮತಿ ದೊರಕಿತು. ಇವರಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಅನೇಕ ಟೀಕೆ, ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದೊಂದು ಪ್ರವಾಸಿ ತಾಣವಾಗುತ್ತದೆ, ಇದರಿಂದ ಇವರು ದುಡ್ಡು ಬಾಚಿಕೊಳ್ಳುತ್ತಾರೆ...ಪರಿಸರ ಕೆಡುತ್ತದೆ ಎಂಬಿತ್ಯಾದಿಯಾಗಿ. ಆದರೆ ಎಲ್ಲ ಪ್ರತಿಭಟನೆ ಯನ್ನು ಮೀರಿ, ಬಂಗಾರಪ್ಪ ಅವರು ಸ್ವಾಮಿ ತಂಡಕ್ಕೆ ಅನುಮತಿಯನ್ನು ನೀಡಿದ್ದರು. ಮಾತ್ರವಲ್ಲ ಹೊನ್ನೆಮರಡುವಿನಲ್ಲಿ ಮೊದಲ ಬಾರಿಗೆ ಬೋಟಿಂಗ್ ಮಾಡಿದ್ದೇ ಬಂಗಾರಪ್ಪ ಅವರಂತೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಹೊನ್ನೆಮರಡುವಿಗೆ ಈ ಕೇಂದ್ರ ಸಲ್ಲಿಸಿದ ಅತಿ ದೊಡ್ಡ ಕೊಡುಗೆ ಯೆಂದರೆ, ಪ್ರವಾಸಿಗರಿಂದ ಪರಿಸರ ಕೆಡುವುದನ್ನು ತಪ್ಪಿಸಿರುವುದು. ಒಂದು ಸಣ್ಣ ಮನೆ ಮತ್ತು ಅಂಗಳದಂತಹ ಪುಟ್ಟ ವೃತ್ತಾಕಾರದ ವೇದಿಕೆ ಹೊರತು ಪಡಿಸಿ ಯಾವುದೇ ನಿರ್ಮಾಣಗಳು ಇಲ್ಲಿ ಆಗಿಲ್ಲ. ಅದಕ್ಕಿಂತ ಮುಖ್ಯವಾಗಿ... ಹೊನ್ನೆಮರಡು ಪ್ರದೇಶದಲ್ಲಿ ಒಂದು ತುಂಡು ಪ್ಲಾಸ್ಟಿಕ್ ಕೂಡ ನೋಡುವುದಕ್ಕೆ ಸಿಕ್ಕಿಲ್ಲ. ಬಹುಶಃ ಇವರ ಕಾವಲು ಇಲ್ಲದೇ ಇದ್ದಿದ್ದರೆ ಇಂದು ಪ್ರವಾ ಸಿಗರು ಈ ಪ್ರದೇಶವನ್ನು ಲೂಟಿ ಹೊಡೆಯುತ್ತಿ ದ್ದರೋ ಏನೋ.

 ಡಿಸೆಂಬರ್ 27 ಮತ್ತು 28 ಎರಡು ದಿನಗಳ ಕಾಲ ವಾರ್ತಾ ಇಲಾಖೆ ಮತ್ತು ಸಾಹಸ ಸಮನ್ವಯ ಕೇಂದ್ರದ ವತಿಯಿಂದ ಪರಿಸರ ಮತ್ತು ಮಾಧ್ಯಮ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಯಿತು. ಆದರೆ ಡಿಸೆಂಬರ್ 27ರಂದು ಪತ್ರಕರ್ತರು ಒಟ್ಟು ಸೇರುವುದು ತಡವಾದುದರಿಂದ ಮೊದಲ ದಿನದ ಕಾರ್ಯಕ್ರಮ ತಡವಾಗಿಯೇ ಆರಂಭವಾಯಿತು. ಹೊನ್ನೆಮರಡು ಮುಟ್ಟುವಾಗಲೇ ಸಂಜೆಯಾಗಿತ್ತು. ಅಲ್ಲಿ ನಮಗಾಗಿ ಪರಿಸರ ಲೇಖಕ ನಾಗೇಶ್ ಹೆಗಡೆ ಬಳಗ ಕಾಯುತ್ತಿತ್ತು. ನಾಗೇಶ್ ಹೆಗಡೆ ಯವರ ಮಾತುಗಳು ಮತ್ತು ಪತ್ರಕರ್ತರ ಸಂವಾದ ಜೊತೆ ಜೊತೆಯಾಗಿ ನಡೆಯಿತು. ಪರಿಸರ ಪತ್ರಿಕೋದ್ಯಮ, ಜಿಲ್ಲಾ ವರದಿಗಾರರ ಕಾಳಜಿ, ಅವರ ಅಸಹಾಯಕತೆ ಇತ್ಯಾದಿಗಳೆಲ್ಲ ಆ ಸಂಜೆ ಚರ್ಚೆಗೊಳಗಾದವು. ಮುಂದಿನ ಕಾರ್ಯಕ್ರಮಕ್ಕೆ ಅದೊಂದು ಪೀಠಿಕೆಯಂತೆ ಇತ್ತು. 

ಸಂವಾದ ಕಾರ್ಯಕ್ರಮ ಮುಗಿದಂತೆಯೇ ಪೂರ್ಣಚಂದ್ರ ನಿಧಾನ ತನ್ನ ಬೆಳಕನ್ನು ಚೆಲ್ಲ ಹತ್ತಿದ್ದ. ರಾತ್ರಿ ದಟ್ಟವಾಗುತ್ತಾ ಹೋದ ಹಾಗೆ, ಬೆಳದಿಂಗಳು ಮಲ್ಲಿಗೆಯಂತೆ ಹರಡ ತೊಡಗಿದವು. ಸ್ವಾಮಿ ಅವರಿಂದ ಮಾರ್ಗದರ್ಶನ, ನೊಮಿತೋ ನೇತೃತ್ವದಲ್ಲಿ ದೋಣಿ ಚಲಾಯಿಸುವ ಕುರಿತು ಮಾಹಿತಿಗಳೂ ಸಿಕ್ಕಿದವು. ಸರಿ, ನಮ್ಮ ನಮ್ಮ ದೋಣಿಗಳನ್ನು ನಾವೇ ಆಯ್ಕೆ ಮಾಡಿಕೊಂಡೆವು. ನಮ್ಮ ನಮ್ಮ ಹುಟ್ಟುಗಳನ್ನೂ ಕೈಗೆತ್ತಿಕೊಂಡೆವು. ನಮ್ಮ ದೋಣಿಯಲ್ಲಿ ನಾನು, ಬೆಂಗಳೂರಿನ ಹೊಸ ದಿಗಂತ ಪತ್ರಿಕೆಯ ಪ್ರಮೋದ್, ಮಂಜುನಾಥ್ ಮತ್ತು ಸಹರಾ ಪತ್ರಿಕೆಯ ವರದಿಗಾರರು ಜೊತೆಗಿದ್ದರು. ಶರಾವತಿ ಅಣೆಕಟ್ಟಿನ ಹಿನ್ನೀರು ತಣ್ಣಗೆ ನಿದ್ದೆಯ ಮೂಡಿನಲ್ಲಿತ್ತು. ಚಳಿ ವಿಶೇಷವಾಗಿರಲಿಲ್ಲ. ಬೆಳದಿಂಗಳ ರಾತ್ರಿಯ ಪ್ರಕೃತಿಯ ವೌನದ ಮುಂದೆ ಪತ್ರಕರ್ತರ ಈಗೋಗಳು, ದುಷ್ಟತನ ಗಳೆಲ್ಲ ಸದ್ದಡಗಿ ಕುಳಿತಿದ್ದವು. ನನಗೋ ಹುಟ್ಟು ಚಲಾಯಿಸುತ್ತಿರುವ ರೋಮಾಂಚನ. ಹೆಗಲಲ್ಲಿ ಕ್ಯಾಮರಾ ಬೇರೆ. ಮಧ್ಯೆ ಮಧ್ಯೆ ಕ್ಲಿಕ್ಕಿಸುತ್ತಿದೆ. ಆದರೆ ಅದಕ್ಕಿಂತಲೂ, ಸುಮ್ಮಗೆ ಇವನ್ನೆಲ್ಲ ದೋಣಿಯಲ್ಲಿ ಕುಳಿತು ಆಸ್ವಾದಿಸುವುದೇ ಹಿತವೆನಿಸಿತ್ತು. ನಡುಗಡ್ಡೆ ತಲುಪಿದಾಗ ಗಂಟೆ ಸುಮಾರು ಹತ್ತಾಗಿತ್ತು. ನಮ್ಮ ನಮ್ಮ ಸಾಮಾನು ಸರಂಜಾ ಮುಗಳನ್ನು ನಾವೇ ಹೊತ್ತು ಕೊಂಡು, ಒಂದು ಕೊಡ ನೀರಿನ ಜೊತೆಗೆ ನಡುಗಡ್ಡೆ ಏರಿದೆವು. ಅಲ್ಲಿ ಟೆಂಟ್ ಹಾಕಬೇಕಾ ಗಿದೆ. ಸರಿ. ಅದಕ್ಕೂ ಸ್ವಾಮಿಯವರ ಪತ್ನಿ ನೊಮಿತೋ ಮಾರ್ಗ ದರ್ಶನ ನೀಡಿದರು. ನಮ್ಮ ನಮ್ಮ ಟೆಂಟ್ ಗಳನ್ನು ನಾವೇ ಸಿದ್ಧ ಪಡಿಸಿದೆವು. ಅಷ್ಟರಲ್ಲಿ ಎಲ್ಲರನ್ನು ಸುತ್ತು ಸೇರಿಸಿ ನೊಮಿತೋ ಅವರು ತಮ್ಮ ಆದೇಶ ವನ್ನು ಹೊರಡಿಸಿಯೇ ಬಿಟ್ಟರು. ‘‘ಯಾರೂ ಯಾವ ಕಾರಣಕ್ಕೂ ಸಿಗರೇಟು ಸೇದಬಾರದು. ಮದ್ಯ ಸೇವಿಸಬಾರದು. ನಾನ್‌ವೆಜ್ ತಿನ್ನೋ ಹಂಗಿಲ್ಲ...’’ ಇದಕ್ಕೆಲ್ಲ ಸಹಿ ಹಾಕಿದ ಬಳಿಕವೇ ಸಾಹಸ ಕೇಂದ್ರದವರು ನಮ್ಮನ್ನು ಇಲ್ಲಿಗೆ ಕರೆದೊಯ್ಯುತ್ತಾರೆ. ಆದರೂ ಮತ್ತೊಂದು ಮುಂಜಾಗೃತಾ ಎಚ್ಚರಿಕೆಯನ್ನು ನೀಡಿದರು.
 
ಅಂದಿನ ಇಡೀ ಬೆಳದಿಂಗಳ ರಾತ್ರಿಯನ್ನು ಅರೇಬಿಯನ್ ನೈಟ್ಸ್‌ನ ರಾತ್ರಿಯಂತೆ ರಮ್ಯವಾಗಿ ಸಿದ್ದು ಗುಡ್ಡಪ್ಪ ಜೋಗಿ ತಂಡದ ಜೋಗೇರಾಟ. ಮೈಕ್ ಇಲ್ಲ. ಯಾವುದೇ ವಿದ್ಯುತ್ ಬೆಳಕಿಲ್ಲ. ಆದರೆ ಗುಡ್ಡಪ್ಪ ಜೋಗಿ ಯವರ ಶಂಖದ ಕಂಠಕ್ಕೆ ರಾತ್ರಿ ಥಕ್ಕಾಗಿ ಬಿಟ್ಟಿತ್ತು. ಅವರು ಒಂದು ರಮ್ಯ ಜಗತ್ತನ್ನು ತನ್ನ ಕಂಠ, ಹಾಡುಗಳ ಮೂಲಕ ಆ ನಡುಗಡ್ಡೆಗೆ ತಂದು ನಿಲ್ಲಿಸಿದ್ದರು. ಅವರ ಬಳಗ, ಹಾಡುತ್ತಾ, ಕುಣಿಯು ತ್ತಿದ್ದರೆ, ಎಲ್ಲ ಪಾತ್ರಗಳೂ ಥಕಥಕನೆ ಜೀವ ತಳೆದು ಕುಣಿಯುತ್ತಿದ್ದವು. ಶೀಲಾವತಿ ಪ್ರಸಂಗವನ್ನು ತಮ್ಮ ಜೋಗಿ ಹಾಡಿಗೆ ವಸ್ತುವಾಗಿರಿಸಿಕೊಂಡಿದ್ದರೂ ಗೀಗೀ ಪದಗಳು, ಜಾನಪದ ಹಾಡುಗಳು, ಶಿಶುನಾಳ ಶರೀಫರ ಹಾಡು....ಎಲ್ಲರನ್ನು ತನ್ಮಯಗೊಳಿಸಿದ್ದವು. ಸುಮಾರು ಎರಡು-ಎರಡೂವರೆ ಗಂಟೆಗಳ ಕಾಲ ಅವರು ನಮ್ಮನ್ನು ಆ ನಡುಗಡ್ಡೆ ಯಿಂದ ತಮ್ಮ ನಾದಲೋಕಕ್ಕೆ ಕರೆದೊಯ್ದಿದ್ದರು. ಅವರ ತಂಬೂರಿ ನಾದಕ್ಕೆ ನಾವೆಲ್ಲ ಶರಣೆಂದಿದ್ದೆವು. ಜೋಗೇರಾಟ ಮುಗಿದದ್ದೇ ನಮಗೆಲ್ಲ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳುವ ಸಂಭ್ರಮ. ಇವರು ಸಲ್ಮಾನ್, ಆಮೀರ್‌ಖಾನ್‌ಗೂ ಹೆಚ್ಚು ನಮಗೆ. ಇದಾದ ಬಳಿಕ ಪತ್ರಕರ್ತ ಬದುಕಿಗೆ ತೀರಾ ಅಪರಿಚಿತವಾದ ‘ಸಸ್ಯಾಹಾರಿ’ ಊಟ. ಆದರೆ ನೊಮಿತೋ ಮತ್ತು ಬಳಗದ ಪ್ರೀತಿ ಆ ಊಟವನ್ನು ತುಂಬಾ ತುಂಬಾ ರುಚಿಯಾಗಿಸಿತ್ತು. ಆ ಬಳಿಕ ಪುರುಳೆಗಳನ್ನೆಲ್ಲ ತಂದು ಬೆಂಕಿ ಹಾಕಿ ಮಾತುಕತೆ. ಬಳಿಕ ಬೆಳದಿಂಗಳನ್ನು ನೋಡುತ್ತಾ, ಹಿಮದ ಕಚಗುಳಿಯ ನಡುವೆಯೇ ನಿದ್ದೆ. ಮರುದಿನ ಸೂರ್ಯೋದಯವನ್ನು ನೋಡುವ ಕನಸಿನ ಜೊತೆಗೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ನಾನು ಸೂರ್ಯೋದಯವನ್ನು ನೋಡಿಯೇ ಇಲ್ಲ. ಸೂರ್ಯೋದಯವನ್ನು ನೋಡದೆ ಸುಮಾರು ಎರಡು ವರ್ಷಗಳಾಗಿರಬಹುದೇನೋ. ಆದುದರಿಂದ, ಯಾವನೋ ವಿವಿಐಪಿಯನ್ನು ನೋಡುವ ಸಂಭ್ರಮವನ್ನು ಕಣ್ಣಲ್ಲಿ ತುಂಬಿಕೊಂಡು ನಾವೆಲ್ಲ ನಿದ್ದೆ ಹೋದೆವು. ಬೆಳಗ್ಗೆ 5.30ಕ್ಕೆ ಎಚ್ಚರ. ಸರಿ....ಮತ್ತೆ ಹಾಕಿದ ಟೆಂಟನ್ನು ಕೀಳಬೇಕು. ಬೆಂಕಿಯ ಕಿಡಿಯನ್ನು ಹಾರಿಸಿ, ಬೂದಿಗೆ ನೀರು ಹಾಕಿ, ಅವನ್ನೆಲ್ಲ ಪರಸ್ಪರ ಮುಖಕ್ಕೆ ಫ್ಯಾರನ್‌ಲವ್ಲಿ ಥರ ಹಚ್ಚಿಕೊಂಡೆವು. ಸೂರ್ಯನನ್ನು ಎದುರುಗೊಳ್ಳುವುದಕ್ಕೆ ಮೇಕಪ್ ಮಾಡಿಕೊಳ್ಳುವ ರೀತಿಯಲ್ಲಿ. ಸರಿ 6 ಗಂಟೆಯ ಹೊತ್ತಿಗೆ ಪೂರ್ವದಲ್ಲಿ ಸೂರ್ಯನ ಪತ್ರಿಕಾಗೋಷ್ಠಿ. ರಾಜಕಾರಣಿಗಳಂತೆ ಅವನು ಕಾಯಿಸಿಲ್ಲ. ಸರಿಯಾದ ಸಮಯಕ್ಕೆ ಹಾಜರ್. ಚಕಚಕನೆ ಕ್ಲಿಕ್ಕಿಸಿದವು ಕ್ಯಾಮರಾಗಳು. ಕಣ್ಣುಗಳು. ಹೃದಯಗಳು.
  ನಮ್ಮ ತಂಡದಲ್ಲಿ ಎಲ್ಲರೂ ತರುಣರೇ. ಆದರೆ ಇವರ ನಡುವೆ ಹಿರಿಯ ಪತ್ರಕರ್ತ ದಿವಾಕರ ಹೆಗ್ಡೆ ತಮ್ಮ ಪ್ರಾಯ, ಆರೋಗ್ಯಕ್ಕೆ ಸವಾಲು ಹಾಕಿ ನಮ್ಮೆಡನೆ ಸೇರಿಕೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ತಂಡದ ಪ್ರಧಾನ ಆಕರ್ಷಣೆ ಕಾಮ್ರೇಡ್ ಎಂ. ಲಿಂಗಪ್ಪ. ಅವರಿಗೆ ವರ್ಷ 86. ಆದರೆ ದೇಹ ಜಗ್ಗಿಲ್ಲ. ಹಲ್ಲು ಉದುರಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಒಳಗಿನ ಬೆಂಕಿ ಇನ್ನೂ ಉರಿಯುತ್ತಲೇ ಇದೆ. ಶಿವಮೊಗ್ಗದಲ್ಲಿ ಇವರದೊಂದು ಎರಡು ಪುಟದ ದಿನ ಪತ್ರಿಕೆಯಿದೆ. ಅದರ ಹೆಸರು ‘ಕ್ರಾಂತಿ ಭಗತ್’. ಸುಮಾರು ಮೂರು ದಶಕಗಳಿಂದ ಅದು ಪ್ರಕಟವಾಗುತ್ತಾ ಬರುತ್ತಿದೆ ಎಂದರೆ ಸಣ್ಣ ಮಾತಲ್ಲ. ಮಾತು ಮಾತಿಗೆ ಇವರು ಕ್ರಾಂತಿಯನ್ನೇ ಘೋಷಣೆ ಮಾಡುವವರು. ಒಂದಾನೊಂದು ಕಾಲದಲ್ಲಿ ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಓಡಾಡಿದವರಂತೆ. ಮರಾಠಿ ಕ್ರಾಂತಿಗೀತೆಗಳನ್ನು ಹಾಡುತ್ತಾರೆ. ಆದರೆ ಇವರು ಹಾಡಲು ಬಾಯಿ ತೆರೆದರೆ, ಉಳಿದ ಯುವಕರು ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಾರೆ. ನಿಂಗಪ್ಪ ಮಾತನಾಡಲು ಶುರು ಹಚ್ಚಿದರೆ ಅದಕ್ಕೆ ನಿಲ್ದಾಣವೇ ಇರುತ್ತಿರಲಿಲ್ಲ. ಆದುದರಿಂದ ಇವರನ್ನು ಯಾರೂ ಬಾಯಿ ತೆರೆಯಲು ಬಿಡುತ್ತಿರಲಿಲ್ಲ. ಒಂದು ರೀತಿಯಲ್ಲಿ, ಆ ನಡುಗಡ್ಡೆಯಲ್ಲಿ ಅವರು ಇಂದಿನ ಕಮ್ಯುನಿಸಂನ ರೂಪಕದಂತೆ ನನಗೆ ಕಂಡರು. ಅವರೊಂದು ಅಸಹಾಯಕ, ಅಪ್ರಸ್ತುತ ಒಂಟಿ ದನಿ. ಅದು ಅವರಿಗೇ ಗೊತ್ತಿಲ್ಲ. ಕಡಿದಾಳು ಶಾಮಣ್ಣರ ಮೇಲೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿದಾಗ, ನಿಂಗಪ್ಪನವರು ಈಶ್ವರಪ್ಪನವರನ್ನು ತಡೆದು ನಿಲ್ಲಿಸಿ ‘‘ನನ್ನ ಮೇಲೆ ಯಾಕೆ ನಕ್ಸಲ್ ಬೆಂಬಲಿಗ ಎಂದು ಕೇಸು ದಾಖಲಿಸಿಲ್ಲ?’’ ಎಂದು ತರಾಟೆಗೆ ತೆಗೆದುಕೊಂಡರಂತೆ. ಇದಾದ ಬಳಿಕ ಈಶ್ವರಪ್ಪ ಅವರು ಕೈ ಮುಗಿದು ‘‘ನಿಂಗಪ್ಪ ಅವರೇ, ನಿಮ್ಮ ಮೇಲೂ ಕೇಸು ದಾಖಲಿಸಲಾಗುತ್ತದೆ. ಪೊಲೀಸರು ಭರವಸೆ ನೀಡಿದ್ದಾರೆ. ಬೇಗನೆ ನಿಮ್ಮನ್ನೂ ಬಂಧಿಸುತ್ತೇವೆ’’ ಎಂದ ಬಳಿಕವಷ್ಟೇ ನಿಂಗಪ್ಪ ನಿರುಮ್ಮಳರಾದರಂತೆ. ನಿಂಗಪ್ಪರ ಜೊತೆಗೂ ನಾನು ಫೋಟೋ ತೆಗೆಸಿಕೊಂಡೆ. ಮಾತನಾಡುತ್ತಾ ಅವರಿಗೆ ನಾನು ಹೇಳಿದೆ ‘‘ನಿಂಗಪ್ಪ ಅವರೇ, ನೀವು ಯಯಾತಿ ಇದ್ದ ಹಾಗೆ. ಶಿವಮೊಗ್ಗದ ಎಲ್ಲ ಯುವಕರ ಪ್ರಾಯವನ್ನೂ ನೀವು ತೆಗೆದುಕೊಂಡು ನಳನಳಿಸುತ್ತಿದ್ದೀರಿ. ಯುವಕರೆಲ್ಲ ಮುದುಕರಂತೆ ಸುಸ್ತಾಗಿ ಹೋಗಿದ್ದಾರೆ’’
 
ಸೂರ್ಯಾಸ್ತ ಮುಗಿದ ಬಳಿಕ ನಡುಗಡ್ಡೆಯಿಂದ ಮತ್ತೆ ಹೊನ್ನೆಮರಡು ತೀರ ಸೇರಿದೆವು. ಅಲ್ಲಿ ತಿಂಡಿ ಇತ್ಯಾದಿಗಳೆಲ್ಲ ಮುಗಿಸಿ ಮತ್ತೆ ಈಜು. ಈ ಎಲ್ಲ ಸಂದರ್ಭದಲ್ಲೂ ಸ್ವಾಮಿ ಬಳಗದ ಕಣ್ಗಾವಲು, ಎಚ್ಚರಿಕೆ, ಜಾಗರೂಕತೆಯಿತ್ತು. ಈ ಕಾರಣದಿಂದಲೇ ಕಳೆದ ಎರಡು ದಶಕದಲ್ಲಿ ಒಂದೇ ಒಂದು ಅವಘಡ ಈ ಭಾಗದಲ್ಲಿ ನಡೆದಿಲ್ಲ. ಪ್ರಕೃತಿಯ ಜೊತೆಗೆ ಪತ್ರಕರ್ತರ ಈ ಕೂಡುವಿಕೆ ನಿಜಕ್ಕೂ ಅವರಲ್ಲಿ ಒಂದು ಹೊಸ ಒಳನೋಟವನ್ನು ತೆರೆಸಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ಒಣ ವಿಚಾರಸಂಕಿರಣಕ್ಕಿಂತಲೂ ಈ ಒಡನಾಟ ಪತ್ರಕರ್ತರನ್ನು ಹೆಚ್ಚು ಪ್ರಬುದ್ಧರನ್ನಾಗಿಸಬಹುದು. ಸೂಫಿ ಕವಿಯೊಬ್ಬ ಹೇಳುತ್ತಾನೆ. ‘‘ಪ್ರಾರ್ಥನೆಯೆಂದರೆ, ಕಣ್ತೆರೆದು ನೋಡೋದು, ಕಿವಿ ತೆರೆದು ಕೇಳೋದು...’’ ಹೌದು...ಸೂರ್ಯಾಸ್ತ, ಸೂರ್ಯೋದಯವನ್ನು ನೋಡುವ ಕಣ್ಣು, ಪ್ರಕೃತಿಯನ್ನು ಕಣ್ತುಂಬಿಸಿಕೊಳ್ಳುವ ಮನುಷ್ಯ, ಹಕ್ಕಿಗಳ ಚಿಲಿಪಿಲಿ, ನೀರಿನ ಜುಳುಜುಳುವನ್ನು ಆಲಿಸುವ ಕಿವಿ...ಈ ಮೂಲಕವೇ ದೇವರ ಅನುಭವವನ್ನು ತನ್ನದಾಗಿಸಿಕೊಂಡು ರೋಮಾಂಚನಗೊಳ್ಳಬೇಕು. ಅದುವೇ ನಿಜವಾದ ಪ್ರಾರ್ಥನೆ. ಹೊನ್ನೆಮರಡುವಿನಲ್ಲಿ ಕಳೆದ ಎರಡು ದಿನಗಳಲ್ಲಿ ದೇವರ ಅನುಭವವನ್ನು ನಮ್ಮದಾಗಿಸಿಕೊಂಡು ನಾವೆಲ್ಲ ರೋಮಾಂಚನ ಗೊಂಡೆವು.

Sunday, December 30, 2012

ಚಪ್ಪಲಿ ಮತ್ತು ನಾನು...

ಬಸ್ಸಲ್ಲಿ ನನಗೆ ಕಿಟಕಿ ಪಕ್ಕದಲ್ಲೇ ಕೂರೋದು ಚಟ. ಅಂದು ಆಫೀಸ್ ಕಡೆಗೆಂದು 2ಸಿ ಬಸ್ಸನ್ನು ಏರಿದ್ದೇ...ಎದುರು ಸೀಟಲ್ಲಿ ಸುಮಾರು ಹತ್ತು ವರ್ಷದ ಹುಡುಗ ಕಿಟಕಿಗೆ ಅಂಟಿ ಕೂತಿದ್ದ. ಹರಿದ ಸ್ಕೂಲ್ ಬ್ಯಾಗ್, ಹರಿದ ಬಟ್ಟೆ, ಕೊಳಕು ಚಡ್ಡಿ....‘‘ಏ ಈ ಕಡೆ ಬಾರೋ...’’ ಎಂದು ಅವನನ್ನು ಎಳೆದು ಅಲ್ಲಿ ನಾನು ಕುಳಿತೆ. ಹುಡುಗ ಮುಖ ಸಪ್ಪಗೆ ಮಾಡಿ ನನ್ನ ಪಕ್ಕದಲ್ಲಿ ಕೂತ.
ಟೈಂಪಾಸ್‌ಗೆ ಒಬ್ಬ ಹುಡುಗ ಸಿಕ್ಕಿದ ಎಂದು ಮಾತಿಗೆ ಶುರು ಹಚ್ಚಿದೆ ‘‘ಏನೋ...ಹೆಸರು?’’
ಅದೇನೋ ಹೇಳಿದ. ಕೇಳಲಿಲ್ಲ ‘‘ಜೋರಾಗಿ ಹೇಳು’’ ಎಂದೆ. ‘‘ರಾಜು’’ ಎಂದ.
‘‘ಎಷ್ಟು ಕ್ಲಾಸು...?’’
‘‘ನಾಲ್ಕನೆ ಇಯತ್ತೆ’’ ಎಂದ. ‘‘ಅಪ್ಪನ ಹೆಸರೇನೋ?’’ ಎಂದು ಕೇಳಿದೆ. ಹುಡುಗ ವೌನವಾದ. ಅಪ್ಪನ ಹೆಸರನ್ನು ಹೇಳೋದು ಅಗೌರವ ಅನ್ನಿಸಿರಬೇಕೋ ಏನೋ...‘‘ಹೇಳೋ...ಅಪ್ಪನ ಹೆಸರೇನು?’’ ಮತ್ತೆ ಕುಕ್ಕಿ ಕೇಳಿದೆ.
‘‘ಯಂಕ್ಟೇಸ’’ ಒಲ್ಲದ ಮನಸ್ಸಿನಿಂದ ಉತ್ತರಿಸಿದ.
‘‘ಏನು ಕೆಲ್ಸ ಮಾಡ್ತಾನೆ...’’ ಹುಡುಗ ವೌನವಾಗಿದ್ದ ‘‘ಹೇಳೋ..ಅಪ್ಪ ಏನು ಕೆಲಸ ಮಾಡ್ತಾನೆ...’’
 ‘‘ಕೂಲಿ ಕೆಲಸ’’ ಹುಡುಗ ಬಾಯಿ ಬಿಟ್ಟ. ಹುಡುಗನನ್ನೊಮ್ಮೆ ಹೆದರಿಸುವುದಕ್ಕೆಂದು ಸುಮ್ಮನೆ ದುರುಗುಟ್ಟಿ ನೋಡಿದೆ. ಅವನು ಹೆದರಿದಂತೆ ಕಾಣಲಿಲ್ಲ. ಅವನಷ್ಟಕ್ಕೆ ಕಾಲಾಡಿಸುತ್ತಾ ಕಿಟಕಿಯ ಕಡೆಗೇ ನೋಡುತ್ತಿದ್ದ. ಆಗ ನನ್ನ ಗಮನಕ್ಕೆ ಬಂತು. ಹುಡುಗನ ಕಾಲಲ್ಲಿ ಚಪ್ಪಲಿ ಇರಲಿಲ್ಲ. ಪುಟ್ಟ ಪಾದ...ಚಪ್ಪಲಿ ಇಲ್ಲದೆ ಇರುವುದು ಯಾಕೋ ನನ್ನನ್ನು ಕಳವಳಕ್ಕೀಡು ಮಾಡಿತು.
‘‘ಏನೋ...ಚಪ್ಪಲಿ ಯಾಕೆ ಹಾಕಿಲ್ಲ...?’’ ಕೇಳಿದೆ.
ಹುಡುಗ ವೌನವಾಗಿದ್ದ. ‘‘ಹೇಳಿದ್ದು ಕೇಳ್ಳಿಲ್ವ? ಸ್ಕೂಲಿಗೆ ಹೋಗೋವಾಗ ಚಪ್ಪಲಿ ಹಾಕೋಬೇಡ್ವಾ...ಚಪ್ಪಲಿ ಏನಾಯ್ತು?’’
‘‘ಹರ್ದೋಯ್ತು?’’ ಹುಡುಗ ಚುಟುಕಾಗಿ ಉತ್ತರಿಸಿದ.
‘‘ಎಷ್ಟು ಸಮಯವಾಯಿತು ಹರ್ದು?’’ ಹುಡುಗ ಮತ್ತೆ ವೌನವಾದ. ‘‘ಏಯ್ ಬಾಯಿ ಬರಲ್ವಾ...? ಚಪ್ಪಲಿ ಹರ್ದು ಎಷ್ಟು ಸಮಯ ಆಯ್ತು?’’
‘‘ಒಂದು ವರ್ಸ...’’
ನನ್ನ ಎದೆ ಒಮ್ಮೆ ಹಾರಿತು ‘‘ಅಂದ್ರೆ...ಒಂದು ವರ್ಷದಿಂದ ಚಪ್ಪಲಿ ಹಾಕದೆ ಓಡಾಡ್ತ ಇದ್ದೀಯ...ಯಾಕೆ ಹೊಸ ಚಪ್ಪಲಿ ತೆಗೀಲಿಲ್ಲ...?’’
ಹುಡುಗ ಮತ್ತೆ ವೌನ. ‘‘ಯಾಕೋ ತೆಗೀಲಿಲ್ಲ?’’
‘‘ಹೀಗೆ....’’
‘‘ಹೀಗೆ ಅಂದ್ರೆ...ಯಾಕೆ ತೆಗೀಲಿಲ್ಲ...ಹೇಳು?’’
‘‘ಹೀಗೆ...’’ ಎಂದು ಮತ್ತೆ ಉತ್ತರಿಸಿದ. ಸ್ವಲ್ಪ ಹೊತ್ತು ವೌನವಾಗಿದ್ದೆ. ಮತ್ತೆ ಕೇಳಿದೆ ‘‘ಯಾಕೆ ತೆಗೀಲಿಲ್ಲ...ದುಡ್ಡಿರ್ಲಿಲ್ವ?’’
ಹುಡುಗ ವೌನವಾಗಿದ್ದ. ಅವನ ಮುಖವನ್ನು ಸ್ಪಷ್ಟವಾಗಿ ನೋಡಿದೆ. ಹುಡುಗನೊಳಗೊಂದು ಗಾಂಭೀರ್ಯವಿದೆ. ಆತ್ಮಾಭಿಮಾನವಿದೆ ಅನ್ನಿಸಿತು. ಬಸ್ಸು ಚಲಿಸುತ್ತಲೇ ಇತ್ತು. ನನ್ನ ಇಳಿಯುವ ಸ್ಟಾಪ್ ಹತ್ತಿರವಾಗುತ್ತಿತ್ತು. ಕಿಸೆಯಿಂದ ನೂರು ರೂಪಾಯಿ ತೆಗೆದು ಹೇಳಿದೆ ‘‘ನೋಡು...ಈ ನೂರು ರೂಪಾಯಿಯಿಂದ ಚಪ್ಪಲಿ ತೆಗೋ...’’ ಎಂದೆ. ಅವನು ನನ್ನ ಮುಖವನ್ನು ನೋಡಿದ. ಅವನ ಕಣ್ಣಲ್ಲಿ ಹೊಳಪಿತ್ತು. ಅಥವಾ ಬೆಳಕಿತ್ತು. ತೆಗೆದುಕೊಳ್ಳಬೇಕೋ...ಅಥವಾ ತಮಾಷೆಯೋ ಎಂಬ ಪ್ರಶ್ನೆಯೂ ಅಲ್ಲಿತ್ತು. ನಾನು ನೂರು ರೂಪಾಯಿಯನ್ನು ಅವನ ಕಿಸೆಗೆ ಹಾಕಿ ಹೇಳಿದೆ ‘‘ಮರ್ಯಾದೆಯಲ್ಲಿ ಈ ನೂರು ರೂಪಾಯಿಯಿಂದ ಚಪ್ಪಲಿ ತೆಗೋ ಬೇಕು. ಅಪ್ಪಂಗೆ ಕೊಟ್ಟು ಚಪ್ಪಲೀನೇ ತಗಳೋಕೆ ಹೇಳ್ಬೇಕು. ಏನಾದ್ರೂ...ಅಪ್ಪಂಗೆ ಕೊಡದೆ ಐಸ್‌ಕ್ರೀಮ್...ಅದು ಇದೂಂತ ಖರ್ಚು ಮಾಡಿದ್ರೆ...ನಿನ್ ಶಾಲೆಗೆ ಬಂದು ಮೇಷ್ಟ್ರಲ್ಲಿ ಕಂಪ್ಲೇಂಟ್ ಮಾಡ್ತೀನಿ ಅಷ್ಟೇ...ಗೊತ್ತಾಯ್ತ?...ಇನ್ನೊಮ್ಮೆ ಬರೋವಾಗ ನಿನ್ನ ಕಾಲಲ್ಲಿ ಚಪ್ಪಲಿ ಇರ್ಲೇ ಬೇಕು....’’ ಖಡಕ್ಕಾಗಿ ನುಡಿದೆ. ಹುಡುಗ ತಲೆಯಾಡಿಸಿದ. ಅಷ್ಟರಲ್ಲಿ ನನ್ನ ಸ್ಟಾಪ್ ಬಂತು. ನಾನು ಇಳಿದೆ.
 

***
ಕಚೇರಿಗೆ ಹೋದದ್ದೆ ನನ್ನ ಮಾನವೀಯತೆಯನ್ನು, ಹೃದಯವಂತಿಕೆಯನ್ನು ನಾನು ನನ್ನ ಗೆಳೆಯನಲ್ಲಿ ಹಂಚಿಕೊಂಡೆ. ‘‘ಮನಸ್ಸು ತಡೆಯಲಿಲ್ಲ. ನೂರು ರೂಪಾಯಿ ಕೊಟ್ಟು ಚಪ್ಪಲಿ ತೆಗೋ ಎಂದೆ ಕಣೋ..’’ ಎಂದು ವಿವರಿಸಿದೆ.
ನನ್ನ ಕತೆ ಕೇಳಿ ಗೆಳೆಯ ಕಿಸಕ್ಕನೆ ನಕ್ಕ. ‘‘ಅಲ್ವೋ...ಚಪ್ಪಲಿ ಹಾಕೋದು...ಹಾಕದೇ ಇರೋದು ಅವರಿಗೆ ವಿಷಯವೇ ಅಲ್ಲ...ಆ ಹಣವನ್ನು ಹುಡುಗ ಮಜಾ ಮಾಡ್ತಾನೆ...ಇಲ್ಲಾ ಅವನಪ್ಪ ತಗೊಂಡು ಹೆಂಡ ಕುಡೀತಾನೆ...ಹೆಂಡದ ಅಮಲಲ್ಲಿ ನಿನಗೆ ಒಂದಿಷ್ಟು ಉಗೀತಾನೆ...ತನ್ನ ಸ್ನೇಹಿತರ ಜೊತೆಗೆ ಆಡ್ಕೊಂಡು ನಗ್ತಾನೆ....ಅಷ್ಟೇ...ಆ ಹುಡುಗನಿಗೆ ಭಿಕ್ಷೆ ಬೇಡುವುದನ್ನು ಕಲಿಸಿದೆ ನೀನು...ಅವನಿನ್ನೆಂದೂ ಚಪ್ಪಲಿ ಹಾಕಲ್ಲ...ತಿಳ್ಕೋ...ಎಲ್ಲರ ಕೈಯಲ್ಲಿ ಚಪ್ಪಲಿಗೆ ದುಡ್ಡು ಕೇಳೋಕೆ ಶುರು ಮಾಡ್ತಾನೆ...’’
ಹೌದಲ್ಲ ಅನ್ನಿಸ್ತು. ಆ ಹುಡುಗನ ಕುರಿತಂತೆ ಮೈಯೆಲ್ಲ ಕುದಿಯ ತೊಡಗಿತು.
 

***
ಇದು ನಡೆದು ಒಂದು ವಾರವಾಗಿರಬಹುದು. ಮತ್ತೊಮ್ಮೆ ಅದೇ 2ಸಿ ಬಸ್ಸಲ್ಲಿ ಆ ಹುಡುಗನನ್ನು ನೋಡಿ ಬಿಟ್ಟೆ. ಅದೇ ಹರಿದ ಸ್ಕೂಲ್ ಬ್ಯಾಗ್. ಕೊಳಕು ಬಟ್ಟೆ, ಹರಿದ ಚೆಡ್ಡಿ. ಕಾಲಲ್ಲಿ....ಓಹ್...ಕಾಲಲ್ಲಿ ನೋಡಿದರೆ ಚಪ್ಪಲಿ ಇಲ್ಲ! ನನಗೆ ಸಿಟ್ಟು ಉಕ್ಕಿ ಬಂತು. ‘‘ಏಯ್ ಇಲ್ಲಿ ಬಾರೋ...’’ ಕರೆದೆ. ಅವನು ನನ್ನನ್ನು ನೋಡಿದ್ದೇ ಅಡಗಿಕೊಳ್ಳ ತೊಡಗಿದ. ನಾನೇ ಎದ್ದು ಅವನ ಕಿವಿ ಹಿಡಿದು ನನ್ನ ಪಕ್ಕ ಕೂರಿಸಿದೆ.
‘‘ಲೋ...ದುಡ್ದೇನು ಮಾಡಿದೆ...?’’ ಅವನು ಅಳುಮುಖ ಮಾಡಿದ್ದ. ನನ್ನ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ.
‘‘ಹೇಳು...ದುಡ್ಡೇನು ಮಾಡಿದೆ...? ಇಲ್ಲಾಂದ್ರೆ...ನಾಳೆ ನಿನ್ನ ಶಾಲೆಗೇ ಬಂದು ಕಂಪ್ಲೇಂಟ್ ಮಾಡ್ತೀನಿ....ಹೇಳೋ...ಆ ನೂರು ರೂಪಾಯಿ ಏನು ಮಾಡಿದೆ...?’’
ಹುಡುಗನಲ್ಲಿ ಉತ್ತರವೇ ಇರಲಿಲ್ಲ. ಅವನು ನನ್ನ ಮುಖವನ್ನೇ ನೋಡುತ್ತಿದ್ದ.
‘‘ಉತ್ತರ ಹೇಳದೇ ಇದ್ರೆ ಬಾರಿಸಿ ಬಿಡ್ತೇನೆ...’’ ಎಂದೆ.
ಈಗ ಬಾಯಿ ಬಿಟ್ಟ ‘‘ದುಡ್ಡು ಅಪ್ಪಂಗೆ ಕೊಟ್ಟೆ’’
‘‘ಚಪ್ಪಲಿ ಯಾಕೆ ತೆಗೀಲಿಲ್ಲ ಆ ಬೋಳಿಮಗ?’’
ಹುಡುಗ ಅಳುಧ್ವನಿಯಲ್ಲಿ ಉತ್ತರಿಸಿದ ‘‘ಮನೇಲಿ ಅಕ್ಕಿ ಮುಗಿದು ಎರಡು ದಿನ ಆಗಿತ್ತು. ಆ ದುಡ್ಡಲ್ಲಿ ಅಪ್ಪ ಅಕ್ಕಿ ತಂದ. ರಾತ್ರಿ ನಾನು, ಅಪ್ಪ, ಅವ್ವ, ತಮ್ಮ, ತಂಗಿ ಎಲ್ಲ ಸೇರಿ ಊಟ ಮಾಡಿದ್ವು’’
ಬಸ್ಸು ಚಲಿಸುತ್ತಲೇ ಇತ್ತು. ಹೊರಗಿನ ಗಾಳಿ, ಧೂಳು ಮುಖಕ್ಕೆ ಅಪ್ಪಳಿಸುತ್ತಿತ್ತು. ಯಾವುದೂ ನನ್ನ ಅರಿವಿಗೆ ಬರುತ್ತಿರಲಿಲ್ಲ. ಹುಡುಗನ ಮುಖ ನೋಡುವುದಕ್ಕೂ ಅಂಜಿಕೆ.
ಅಷ್ಟರಲ್ಲಿ ಹುಡುಗನೇ ಹೇಳಿದ ‘‘ಸಾರ್...ನಿಮ್ಮ ಸ್ಟಾಪ್ ಬಂತು...’’

ಅಹಿಂದ ಎನ್ನುವ ಕರುಳ ಬಂಧ!

 ಬಹಳ ಹಿಂದಿನ ಮಾತಿದು. ಮೋಂಟ ನಮ್ಮ ಮನೆಗೆ ತುಂಬಾ ಆಪ್ತ. ಆತ ನಮ್ಮ ಮನೆಗೆ ಕಟ್ಟಿಗೆಗಳನ್ನು ಹೊತ್ತು ತರುತ್ತಿದ್ದ. ತೆಂಗಿನ ಗಿಡಗಳ ಬುಡಗಳನ್ನು ಬಿಡಿಸುವುದಕ್ಕೆ ಬರುತ್ತಿದ್ದ. ನನ್ನ ಮನೆಯ ಜಮೀನಿನಲ್ಲಿ ನನ್ನ ಮತ್ತು ನನ್ನ ತಂದೆಯ ಬೆವರು ಬೀಳುವುದಕ್ಕಿಂತ ಹೆಚ್ಚಾಗಿ ಮೋಂಟನ ಬೆವರು ಹರಿದಿದೆ. ನಾನು ತೀರಾ ಸಣ್ಣವನಿರುವಾಗಲೇ ಆತ ನನ್ನ ಮನೆಗೆ ಬರುತ್ತಿದ್ದ. ನಾನು ಬೆಳಗ್ಗೆ ತಡವಾಗಿ ಎದ್ದು ಹಲ್ಲುಜ್ಜಿ ಟೇಬಲ್ ಮೇಲೆ ರೊಟ್ಟಿ ತಿನ್ನುತ್ತಿದ್ದರೆ ಆತ, ಬೆವರಿಳಿಸಿ ದುಡಿದು ನಮ್ಮ ಮನೆಯ ಹೊರಗೆ ಮೆಟ್ಟಿಲಲ್ಲಿ ಕೂತು ರೊಟ್ಟಿ ತಿನ್ನುತ್ತಿದ್ದ. ವಿಶೇಷವೆಂದರೆ ತೀರಾ ಸಣ್ಣವನಿದ್ದ ನನ್ನನ್ನು ಅವನು ಬಹುವಚನದಿಂದ ಕರೆಯುತ್ತಿದ್ದ. ನಾನು ಆತನನ್ನು ಏಕವಚನದಿಂದ ಕರೆಯುತ್ತಿದ್ದೆ. ಪಿಯುಸಿಗೆ ಕಾಲಿಡುತ್ತಿದ್ದ ಹಾಗೆ ನನಗೆ ನಿಧಾನಕ್ಕೆ ವಿಪರ್ಯಾಸ ಅರ್ಥವಾಗತೊಡಗಿತು. ಬಳಿಕ ಆತನನ್ನು ಮನೆಯ ಒಳಗೆ ಕರೆದು ರೊಟ್ಟಿ ಕೊಡುವಷ್ಟು ನಾನು ಸುಧಾರಿಸಿದೆ. ನಿಧಾನಕ್ಕೆ ಅವನಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ದುರದಷ್ಟವಶಾತ್, ನಾವು ಹತ್ತಿರವಾಗುವುದು ಅಷ್ಟು ಸುಲಭವಿರಲಿಲ್ಲ. ‘‘ನನ್ನನ್ನು ಏಕವಚನದಿಂದ ಕರಿ’’ ಎಂದು ಅವನಲ್ಲಿ ಹೇಳುವುದಾಗಲಿ, ಅವನನ್ನು ಬಹುವಚನದಿಂದ ಕರೆಯುವುದಾಗಲಿ ನನ್ನಿಂದ ಸಾಧ್ಯವೇ ಆಗಲಿಲ್ಲ. ಎಷ್ಟೋ ಸಮಯದ ಬಳಿಕ, ಅಲ್ಲಿಲ್ಲಿ ಅವನು ಎದುರಾದರೆ ಅವನಿಗೆ ಐವತ್ತೋ, ನೂರೋ ಹಣ ಕೊಡುತ್ತಿದ್ದೆ. ಅವನದನ್ನು ನೇರ ಹೆಂಡದಂಗಡಿಗೆ ದಾಟಿಸುತ್ತಿದ್ದ ಎನ್ನುವುದು ಗೊತ್ತಿದ್ದರೂ. ಅದು ನನ್ನ ಪಾಪ ಪ್ರಜ್ಞೆಯ ಫಲವಾಗಿರಬಹುದು. ಇತ್ತೀಚೆಗೆ ಮೋಂಟ ತೀರಿಕೊಡ. ಆದರೆ ಪ್ರಶ್ನೆ ಈಗಲೂ ನನ್ನಲ್ಲಿ ಉಳಿದಿದೆ. ಯಾಕೆ ಅವನನ್ನು ಬಹುವಚನದಿಂದ ನನಗೆ ಕರೆಯಲು ಸಾಧ್ಯವಾಗಲಿಲ್ಲ? ಈ ಕ್ಷಣದಲ್ಲೂ ಆತನನ್ನು ‘‘ನೀವು’’ ಎಂದು ಕರೆಯಲಾಗದಂತೆ ನನ್ನನ್ನು ಕಟ್ಟಿ ಹಾಕಿದ ಶಕ್ತಿ ಯಾವುದು? ನಿಜಕ್ಕೂ ನನ್ನನ್ನು ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಅರ್ಹನೆ...ಈ ಪ್ರಶ್ನೆಗಳು ಈ ಕ್ಷಣದಲ್ಲೂ ನನ್ನನ್ನು ಕಾಡುತ್ತಿದೆ.

 ಇತ್ತೀಚಿನ ದಿನಗಳಲ್ಲಿ ದಲಿತರು-ಮುಸ್ಲಿಮರು-ಕ್ರಿಶ್ಚಿಯನ್ನರು-ಹಿಂದುಳಿದ ವರ್ಗಗಳು ಒಂದಾಗುವ ಮಾತುಗಳು ಕೇಳಿ ಬರುತ್ತಿವೆ. ಹಲವು ರಾಜಕೀಯ ಪಕ್ಷಗಳ ಸಮಾರಂಭಗಳಲ್ಲೂ ಇದು ನಡೆಯುತ್ತಿದೆ. ಆದರೆ ಈ ಒಂದಾಗುವ ಮಾತುಗಳು ಕೇಳಿ ಬರುತ್ತಿರುವುದಾದರೂ ಯಾವ ಉದ್ದೇಶಕ್ಕೆ? ಈ ಮೂರು ಗುಂಪಿಗೂ ಒಬ್ಬ ಸಮಾನವಾದ ಶತ್ರುವಿದ್ದಾನೆ. ಆ ಶತ್ರುವಿನ ಕಾರಣಕ್ಕಾಗಿ ನಾವು ಒಂದಾಗಿದ್ದೇವೆ. ಒಂದು ವೇಳೆ ಈ ಶತ್ರು ಇಲ್ಲದೇ ಇರುತ್ತಿದ್ದರೆ ಅಥವಾ ಹುಟ್ಟಿಕೊಳ್ಳದೇ ಇರುತ್ತಿದ್ದರೆ ಮುಸ್ಲಿಮರು, ದಲಿತರು ಅಥವಾ ಹಿಂದುಳಿದವರ್ಗ -ದಲಿತರು ಒಂದಾಗುವ ಮಾತುಗಳು ಬರುತ್ತಿತ್ತೆ? ಒಂದು ರೀತಿಯಲ್ಲಿ ಪೇಜಾವರಶ್ರೀಗಳಿಗೂ ದಲಿತರು ಬೇಕಾಗಿರುವುದು ಇದೇ ಕಾರಣಕ್ಕೆ. ದಲಿತರ ಕೇರಿಗೆ ಕಾಲಿಡದೇ ಇದ್ದರೆ, ಮುಂದಿನ ದಿನಗಳಲ್ಲಿ ಅಪಾಯ ತನ್ನ ಕಾಲ ಬುಡಕ್ಕೇ ಬರಬಹುದು ಎನ್ನುವ ಆತಂಕದಿಂದ, ತನ್ನ ಪೀಠದಿಂದ ಕೆಳಗಿಳಿದು ದಲಿತ ಕೇರಿಯೆಡೆಗೆ ದಾವಿಸಿದ್ದಾರೆ. ಇಂದು ಮುಸ್ಲಿಮರು, ಕ್ರಿಶ್ಚಿಯನ್ನರು ತಮ್ಮ ತಮ್ಮ ಪೀಠದಿಂದ ಕೆಳಗಿಳಿದು ದಲಿತರ ಜೊತೆ ಒಂದಾಗುವುದಕ್ಕೂ ಇಂತಹದೇ ಇನ್ನೊಂದು ಬಗೆಯ ಆತಂಕ. ಬಹುಶಃ ಅಹಿಂದ ಚಳವಳಿಯ ಬಹುದೊಡ್ಡ ಬಿರುಕು ಕೂಡ ಇದೇ ಆಗಿದೆ. ಈ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರು ಒಟ್ಟು ಸೇರುವುದಕ್ಕೆ ಒಬ್ಬ ಸಮಾನ ಶತ್ರುವಿನ ಅಗತ್ಯವಿತ್ತೆ? ಎನ್ನುವ ಪ್ರಶ್ನೆಯನ್ನು ಎಲ್ಲರೂ ಹಾಕಿಕೊಳ್ಳಬೇಕಾಗಿದೆ. ಮುಸ್ಲಿಮರು ಮತ್ತು ದಲಿತರ ನಡುವಿನ ಸಂಬಂಧ ಕರುಳಬಳ್ಳಿಯದು. ಆ ಸಂಬಂಧವನ್ನು ಉಭಯ ಸಮುದಾಯ ಜೋಪಾನವಾಗಿ, ಗಟ್ಟಿ ಮಾಡಿಕೊಂಡಿದ್ದಿದ್ದರೆ ಯಾವ ಶತ್ರುವಿನ ಭಯವೂ ಈ ಸಮುದಾಯಗಳಿಗೆ ಸದ್ಯದ ದಿನಗಳಲ್ಲಿ ಇರುತ್ತಿರಲಿಲ್ಲ. ಶತ್ರುವಿದ್ದರೂ ತಲೆಯೆತ್ತುವ ಧೈರ್ಯ ಮಾಡುತ್ತಿರಲಿಲ್ಲ. ಮುಖ್ಯವಾಗಿ ಅಲ್ಪಸಂಖ್ಯಾತರು ದಲಿತರ ಜೊತೆಗಿನ ಕರುಳ ಸಂಬಂಧವನ್ನು ಮರೆತರು. ಅದರ ಪರಿಣಾಮವನ್ನು ಇದೀಗ ದಲಿತರೂ ಉಣ್ಣುತ್ತಿದ್ದಾರೆ. ಅಲ್ಪಸಂಖ್ಯಾತರೂ ಉಣ್ಣುತ್ತಿದ್ದಾರೆ.

ದಲಿತರು ಎನ್ನುವ ಶಬ್ದಕ್ಕೆ ವಿರುದ್ಧಾರ್ಥ ಬ್ರಾಹ್ಮಣ ಎಂದು ಬಹುತೇಕ ಜನರು ತಿಳಿದುಕೊಂಡಿದ್ದಾರೆ. ಆದರೆ ಬ್ರಾಹ್ಮಣ್ಯ ಎನ್ನುವುದು ಒಂದು ಆಲೋಚನೆ ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕಾಗಿದೆ. ಆ ಆಲೋಚನೆ ನಮ್ಮ ನಿಮ್ಮಲ್ಲೆಲ್ಲ ಗುಟ್ಟಾಗಿ ಮನೆ ಮಾಡಿಕೊಂಡಿರಬಹುದು. ಮನು ಸಂವಿಧಾನದ ಫಲವನ್ನು ಕೇವಲ ಬ್ರಾಹ್ಮಣರು ಮಾತ್ರ ಉಂಡಿಲ್ಲ. ಇಂದು ಅಹಿಂದ ಜೊತೆಗೆ ಗುರುತಿಸಿಕೊಳ್ಳಲು ತಹತಹಿಸುವ ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರೂ ಈ ದೇಶದಲ್ಲಿ ಉಂಡಿದ್ದಾರೆ. ಇಂದು ಬ್ರಾಹ್ಮಣ್ಯವಾದ ನೇರ ಕಾರ್ಯಾಚರಣೆಯನ್ನು ನಿಲ್ಲಿಸಿ, ಬ್ರಾಹ್ಮಣೇತರ ಕೈಗಳ ಮೂಲಕ ತನ್ನ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುತ್ತಿದೆ. ಮನುಸಂವಿಧಾನವನ್ನು ಬರೆದು ಅದನ್ನು ಉಳಿದವರ ಕೈಯಲ್ಲಿಟ್ಟು, ಅವರು ದೂರದಲ್ಲಿ ನಿಂತು ಅದನ್ನು ಗಮನಿಸುತ್ತಿದ್ದಾರೆ. ಅಂದರೆ ಅದರ ಲಾಭಗಳನ್ನು ಇತರ ಮೇಲ್ವರ್ಗಗಳೊಂದಿಗೆ ಹಂಚಿಕೊಳ್ಳುವಷ್ಟು ಉದಾರರಾಗಿದ್ದಾರೆ. ಇದರ ಪರಿಣಾಮವನ್ನು ನಾವು ಅಲ್ಲಲ್ಲಿ ನೋಡುತ್ತಿದ್ದೇವೆ. ಖೈರ್ಲಾಂಜಿ, ಗುಜರಾತ್, ಧರ್ಮಪುರಿ...ಹೀಗೆ. ದಲಿತರ ಮೇಲಿನ ದೌರ್ಜನ್ಯದಲ್ಲಿ ಶೂದ್ರರೂ ಸೇರಿಕೊಂಡಿದ್ದಾರೆ. ಮುಸ್ಲಿಮರೂ ದಲಿತರನ್ನು ತುಳಿದಿದ್ದಾರೆ. ಕ್ರಿಶ್ಚಿಯನ್ನರ ಪಾಲೇನು ಸಣ್ಣದಲ್ಲ. ಬ್ರಾಹ್ಮಣ್ಯವೆನ್ನುವುದು ಶೂದ್ರರಲ್ಲಿ, ಮುಸ್ಲಿಮರಲ್ಲಿಯೂ ವಿಷದ ಹಾವಿನಂತೆ ತಣ್ಣಗೆ ಮಲಗಿರುವುದನ್ನು ನಾನು ನೋಡಿದ್ದೇನೆ.
   
ಮುಸ್ಲಿಮರು ತಮ್ಮ ಧರ್ಮ ಸಹೋದರತೆಯನ್ನು, ಸಮಾನತೆಯನ್ನು ಬೋಧಿಸುತ್ತದೆ ಎಂದು ಗಾಢವಾಗಿ ನಂಬಿದ್ದಾರೆ. ಹಾಗಿದ್ದರೂ ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಯಾಕೆ ಅನ್ನಿಸಲಿಲ್ಲ? ಇದೇ ಪ್ರಶ್ನೆಯನ್ನು ನನ್ನೊಬ್ಬ ಆತ್ಮೀಯ ಧರ್ಮಗುರುವಿಗೆ ಕೇಳಿದ್ದೆ. ಅವರು ಹೇಳಿದರು ‘‘ಬಹುಶಃ ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರಬೇಕು’’ ವಿಪರ್ಯಾಸವೆಂದರೆ, ಇಸ್ಲಾಮನ್ನು ಅಂಬೇಡ್ಕರ್ ಅರ್ಥ ಮಾಡಿಕೊಳ್ಳಲು ವಿಫಲರಾದುದಲ್ಲ. ಇಲ್ಲಿನ ಮುಸ್ಲಿಮರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇಸ್ಲಾಮಿನೊಳಗೆ ಗಡ್ಡವೇ ಹೊರತು, ಗಡ್ಡದೊಳಗೆ ಇಸ್ಲಾಮ್ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಅವರು ಬಹುತೇಕ ವಿಫಲರಾಗಿದ್ದಾರೆ. ಭಾರತದ ಜಾತೀಯತೆಯ ಚರಂಡಿ ಈ ದೇಶದ ಮುಸ್ಲಿಮರ ಮನದಾಳದಲ್ಲಿ ಇನ್ನೂ ಅಂತರ್‌ಗಂಗೆಯಂತೇ ಹರಿಯುತ್ತಿದೆ. ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಆ ಕಾಲದಲ್ಲಿ ಅನ್ನಿಸದೇ ಇರುವುದು ಭಾರತದ ಇಂದಿನ ಸಂದರ್ಭದಲ್ಲಿ ನೋಡಿದರೆ, ಅದು ಇಲ್ಲಿನ ಮುಸ್ಲಿಮರ ಅತಿ ದೊಡ್ಡ ಸೋಲು. ಅದಕ್ಕಾಗಿ ಇಲ್ಲಿನ ಮುಸ್ಲಿಮರು ಈಗಲೂ ಬೆಲೆ ತೆರುತ್ತಲೇ ಇದ್ದಾರೆ. ಇದು ಮುಸ್ಲಿಮರಿಗಷ್ಟೇ ಸೀಮಿತವಾಗಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರ ಶವ ದಫನ ಹಲವು ಚರ್ಚುಗಳಲ್ಲಿ ವಿವಾದವಾದುದನ್ನು ನಾವು ನೋಡಿದ್ದೇವೆ. ದಲಿತ ಪಾದ್ರಿಗಳೇ ಅಲ್ಲಿ ಕೀಳರಿಮೆಯಿಂದ ಬದುಕುವ ಸನ್ನಿವೇಶವಿದೆ. ದಲಿತರು ದಲಿತರಾಗಿದ್ದುಕೊಂಡು ಅವಮಾನ ಅನುಭವಿಸುವುದಕ್ಕಿಂತ ಇದು ಕ್ರೂರವಾದುದು. ಇವೆಲ್ಲವೂ ಯಾಕೆ ಸಂಭವಿಸುತ್ತಿದೆಯೆಂದರೆ, ಇಂದು ನಾವು ರಾಜಕೀಯ ಕಾರಣಗಳಿಗಾಗಿ ದಲಿತರನ್ನು ಪ್ರೀತಿಸತೊಡಗಿರುವುದು. ದಲಿತರನ್ನು ಪ್ರೀತಿಸುವುದಕ್ಕೆ ಈ ದೇಶದ ಅಲ್ಪಸಂಖ್ಯಾತರಿಗೆ ರಾಜಕೀಯ ಕಾರಣಗಳ ಅಗತ್ಯವಿಲ್ಲ. ಕರುಳ ಸಂಬಂಧವೊಂದೇ ಸಾಕು. ಅವರೊಂದಿಗೆ ನೂರಾರು ಜನ್ಮ ಜೊತೆ ಜೊತೆಯಾಗಿ ಬಾಳುವುದಕ್ಕೆ.

ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿರಬಹುದು. ಬೌದ್ಧರಾಗಿದ್ದರೂ ಅವರು ಅತ್ಯುತ್ತಮ ಮುಸ್ಲಿಮರಾಗಿಯೂ, ಅತ್ಯುತ್ತಮ ಕ್ರಿಶ್ಚಿಯನ್ನರಾಗಿಯೂ ಬಾಳಿದರು. ಆದುದರಿಂದಲೇ ನಮಗಾರಿಗೂ ಅಂಬೇಡ್ಕರ್ ಇಲ್ಲದ ಭಾರತವನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ. ಈ ದೇಶದ ಅಹಿಂದ ವರ್ಗ ನಿಜ ಕಾರಣಕ್ಕಾಗಿ ಒಂದುಗೂಡುವ ಅಗತ್ಯವಿದೆ. ಒಬ್ಬ ದಲಿತನಿಗೆ ನೋವಾದಾಗ ಅದಕ್ಕಾಗಿ ಈ ದೇಶದ ಸರ್ವ ಶೋಷಿತರ ಕರುಳೂ ಸಹಜವಾಗಿ ಮಿಡಿಯಬೇಕು. ಅಂತಹ ಪ್ರಾಮಾಣಿಕ ಸಂಬಂಧವಷ್ಟೇ ಅಹಿಂದವನ್ನು ಬಲವಾಗಿ ಜೋಡಿಸೀತು. ಇದಕ್ಕೆ ಹೊರತು ಪಡಿಸಿದ ಎಲ್ಲ ಸಮಾಗಮಗಳೂ ಸಭೆ ಮುಗಿದು ವಿಸರ್ಜನೆಯಾಗುವವರೆಗೆ ಮಾತ್ರ ಉಳಿದೀತು. ಅದು ಈ ದೇಶದ ಬಿಕ್ಕಟ್ಟಿಗೆ ಪರಿಹಾರವನ್ನು ನೀಡಲಾರದು.

Tuesday, December 25, 2012

2009ರಲ್ಲಿ ತೆರೆದ ನನ್ನ ಗುಜರಿ ಅಂಗಡಿ ಇದೀಗ 2013ಕ್ಕೆ ಕಾಲಿಡುವ ಸಿದ್ಧತೆಯಲ್ಲಿದೆ. ವ್ಯಾಪಾರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ...ನೂರಾರು ಗೆಳೆಯರನ್ನು ಈ ಬ್ಲಾಗ್ ನನಗೆ ಕೊಟ್ಟಿದೆ. ಇಲ್ಲಿರುವ ಸರಕುಗಳನ್ನು ಮೆಚ್ಚಿದವರು, ಚಚ್ಚಿದವರು, ಚುಚ್ಚಿದವರು...ಎಲ್ಲರು ನನ್ನ ಗೆಳೆಯರೇ...ಅವರಿಗೆ ಹೃದಯ ತುಂಬಿದ ಕೃತಜ್ಞತೆಗಳು....ಈ ಬ್ಲಾಗ್ ಬರೆಯಲು ಸ್ಫೂರ್ತಿಯಾದ ಅವಧಿ ಮ್ಯಾಗ್ ಮತ್ತು ಜಿ. ಎನ್. ಮೋಹನ್ ಸೇರಿದಂತೆ, ಉಳಿದ ಬ್ಲಾಗ್ ಬರಹಗಾರರಿಗೂ ಋಣಿ. ಅಂದ ಹಾಗೆ ಗೆಳೆಯ ಸತೀಶ್ ಕಲ್ಮಾಡಿ ಅವರು ಮಾತು ಕೊಟ್ಟಂತೆ ಗುಜರಿ ಅಂಗಡಿಗೆ ಹೊಸ ಬೋರ್ಡ್ ಬರೆದು ಕೊಟ್ಟಿದ್ದಾರೆ. ಅವರ ಕಲೆಗೆ ಬೆಲೆ ಕಟ್ಟಲು ಅಸಾಧ್ಯ.  ಹೊಸ ಬೋರ್ಡ್ ಹೇಗೆ ಲಕ ಲಕಿಸುತ್ತಿದೆ ಎನ್ನುದನ್ನು ನೀವೇ ನೋಡಿ...

Monday, December 24, 2012

ಮೈಸೂರ್ ಪಾಕ್ ಮತ್ತು ಇತರ ಕವಿತೆಗಳು

ಗಾಯ
ಹಳೆಗಾಯಗಳೆ ಬೇಗ
ಒಣಗಿಬಿಡಿ
ಹೊಸ ಗಾಯಗಳಿಗೆ
ತುಸು ಜಾಗ ಕೊಡಿ!
2
ಮೈಸೂರ್ ಪಾಕ್
ಈದ್ ದಿನ ಮುಸ್ತಫಾ
ಕಚೇರಿಯಲ್ಲಿ
ಮೈಸೂರ್ ಪಾಕ್ ಹಂಚಿದ....
ಮೈಸೂರ್ ಏನೋ
ಚೆನ್ನಾಗಿದೆ
ಆದರೆ "ಪಾಕ್'' ಕುರಿತಂತೆ
ಕೆಲವರಿಗೆ
ಸಣ್ಣದೊಂದು ಅನುಮಾನ...
3
ಹಾರ್ಮೋನಿಯಂ
ಕುರುಡನೊಬ್ಬ ಹಾರ್ಮೋನಿಯಂನ್ನು
ಅದ್ಭುತವಾಗಿ ನುಡಿಸುತ್ತಿದ್ದ.
ಅದೆಷ್ಟೋ ಕಾಲದ
ಬಳಿಕ ಅವನಿಗೆ ಕಣ್ಣು ಬಂತು
ಇದೀಗ ಅದೇ ಹಾರ್ಮೋನಿಯಂ
ಕೀ ಬೋರ್ಡ್ ಮುಂದೆ
ಅವನ ಬೆರಳುಗಳು
 ತಡವರಿಸುತ್ತಿವೆ....!
ಕಣ್ಣು ಮುಚ್ಚದೆ ಅವನು
ಹಾರ್ಮೋನಿಯಂ ನುಡಿಸಲಾರ!!
4
ಬಾಹುಗಳು
ಗೆಳೆಯನ ಬಾಹುಗಳಲ್ಲಿ
ಆಸರೆಗೆಂದು ಅವಳು ಧಾವಿಸಿದಳು..
ಸುತ್ತಿಕೊಂಡ ತೋಳುಗಳು
ನಿಧಾನಕ್ಕೆ ಬಂಧನಿಕೆಯಂತೆ
ಬಿಗಿಯಾಗ ತೊಡಗಿದವು...
ಶತಮಾನಗಳ ಬಳಿಕ
ಆ ತೋಳನ್ನು ಬಿಡಿಸಿದಾಗ
ಸತ್ತು ಹೋದ ಮರಗಳಂತೆ
ಅಲ್ಲಿ ನೂರಾರು ಅಸ್ಥಿ ಪಂಜರಗಳು...!
5
ಅನಾಥ ಹೆಣ
ರೈಲ್ವೆ ಹಳಿಯ ಮೇಲೆ
ಒಂದು ಅನಾಥ ಹೆಣ ಸಿಕ್ಕಿದೆ....
ಶರ್ಟ್ ಮೇಲೆ
ಅಂಬೇಡ್ಕರ್ ಟೈಲರ್
ಅಂಗಡಿಯ ಹೆಸರಿದೆ...
ಬೆನ್ನಿಗೆ ಚುಚ್ಚಿದ ಚೂರಿಯ  ಮೇಲೆ
ಮೋದಿ ಕಂಪೆನಿಯ ಲಾಂಛನವಿದೆ...
ಅಂದ ಹಾಗೆ ಈ ರೈಲ್ವೆ ಹಳಿ
ಗುಜರಾತ್ ಕಡೆಗೆ ಹೋಗುತ್ತದೆ.....
6
ಸ್ಫೋಟ
ಹೀಗೊಂದು ವಿಚಿತ್ರ ಕನಸು....
ಸಬ್ಸಿಡಿಯಿಲ್ಲದೆ ಖಾಲಿ ಬಿದ್ದಿದ್ದ
ಬಡವರ ಮನೆಯ ಗ್ಯಾಸ್ ಸಿಲಿಂಡರ್ಗಳು
ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡವು
ಆ ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ
ಸರಕಾರಗಳೆಲ್ಲ
ಛಿದ್ರ ಛಿದ್ರವಾಗಿ ಬಿದ್ದಿವೆ..!!

Tuesday, December 18, 2012

ಬೆಂಕಿ ಮತ್ತು ಇತರ ಕತೆಗಳು

ಕಣ್ಣು
ತನ್ನ ಕುರುಡ ಮಗನಲ್ಲಿ ತಾಯಿ ಹೇಳಿದಳು
‘‘ನಾನು ಬೇಗ ಸಾಯ್ತೇನೆ. ಸತ್ತ ಬಳಿಕ ನನ್ನೆರಡು ಕಣ್ಣುಗಳನ್ನು ನೀನು ತೆಗೆದುಕೊ...’’
ಕುರುಡು ಮಗ ವಿಷಾದದಿಂದ ಹೇಳಿದ
‘‘ನನ್ನ ತಾಯಿಯನ್ನು ಕೊಟ್ಟು ಎರಡು ಕಣ್ಣುಗಳನ್ನು ಖರೀದಿಸುವಷ್ಟು ಕುರುಡುತನ ನನ್ನದಲ್ಲ...ಈಗಾಗಲೇ ನಿನ್ನ ಕಣ್ಣಿನ ಮೂಲಕ ನಾನು ಜಗತ್ತನ್ನು ನೋಡುತ್ತಿದ್ದೇನೆ...’’

ಬೆಂಕಿ
ಗ್ಯಾಸ್ ಸಿಲಿಂಡರ್‌ಗೆ ಸಬ್ಸಿಡಿ ನಿರಾಕರಣೆಯಾದದ್ದೇ...ಒಬ್ಬ ಅಸಹಾಯಕನಾಗಿ ಗೊಣಗಿದ ‘‘ಇನ್ನು ನಾನು ಗಂಜಿ ಬೇಯಿಸುವುದು ಯಾವುದರಿಂದ?’’
ಪಕ್ಕದಲ್ಲೇ ಇದ್ದ ಶ್ರೀ ಸಾಮಾನ್ಯ ನಿಟ್ಟುಸಿರಿಟ್ಟು ಉತ್ತರಿಸಿದ ‘‘ಒಡಲೊಳಗೆ ಧಗಿಸುತ್ತಿರುವ ಬೆಂಕಿಯಿಂದ’’

ಊಟ
ಸಚಿವೆ ಹೇಳಿದಳು ‘‘600 ರೂಪಾಯಿ ಇದ್ದರೆ ಐದು ಜನರಿರುವ ಕುಟುಂಬ ಒಂದು ತಿಂಗಳು ಊಟ ಮಾಡಬಹುದು’’
ಮರುದಿನ ಬೆಳಗ್ಗೆ ಶಾಲೆಗೆ ಹೋಗುವ ತನ್ನ ಪುಟಾಣಿ ಮಗಳಿಗೆ ‘ಒಂದು ಸಾವಿರ ರೂಪಾಯಿಯನ್ನು’ ಪಾಕೆಟ್ ಮನಿ ಎಂದು ಕೊಟ್ಟಳು.

ಬದುಕು
‘‘ಬದುಕುವ ಕಲೆ’’ ಎಂಬ ಪುಸ್ತಕವನ್ನು ತಂದು ಅವನು ಓದ ತೊಡಗಿದ.
ಪುಸ್ತಕದಲ್ಲಿ ಮೊದಲ ಪುಟದಲ್ಲೇ ಸಲಹೆಯಿತ್ತು ‘‘ಬದುಕನ್ನು ಪುಸ್ತಕ ಓದಿ ಕಲಿಯಬೇಡಿ, ಬದುಕಿ ಕಲಿಯಿರಿ’’

ಜಾಮೀನು
ಅದು ಜನಾರ್ದನ ಪೂಜಾರಿಯವರು ಹಣಕಾಸು ಸಚಿವರಾಗಿದ್ದ ಕಾಲ.
ಸಾಲಮೇಳ ಘೋಷಣೆಯಾಗಿದ್ದೂ ಅದೇ ಕಾಲದಲ್ಲಿ. ಜನಸಾಮಾನ್ಯರಿಗೆ ಬ್ಯಾಂಕ್‌ನ ಮೆಟ್ಟಿಲು ಏರುವ ಸ್ವಾತಂತ್ರ ಸಿಕ್ಕಿದ್ದು ಆಗ.
ರೈತನೊಬ್ಬ ದನ ಕೊಳ್ಳಲು ಸಾಲ ಕೇಳಲು ಬ್ಯಾಂಕ್‌ಗೆ ಹೋದ.
ಮ್ಯಾನೇಜರ್ ಗುರಾಯಿಸಿ ಕೇಳಿದರು ‘‘ಜಾಮೀನು ಯಾರು ಕೊಡ್ತಾರೆ?’’
ರೈತ ಹೇಳಿದ ‘‘ಜನಾರ್ದನ ಪೂಜಾರಿ’’

ಕುರುಡ
ಕುರುಡ ಮಗುವೊಂದು ಸಂತೆಯಲ್ಲಿ ಕಳೆದು ಹೋಯಿತು.
ತಾಯಿ ಎಲ್ಲೆಡೆ ಹುಡುಕ ತೊಡಗಿದಳು.
ಊಹುಂ...ಪತ್ತೆಯಿಲ್ಲ.
ಕಟ್ಟ ಕಡೆಗೆ ತನ್ನೆರಡು ಕಣ್ಣುಗಳನ್ನು ಮುಚ್ಚಿಕೊಂಡಳು.
ದಟ್ಟ ಕತ್ತಲೆ....
ನೋಡು ನೋಡುತ್ತಿದ್ದಂತೆಯೇ ಆ ದಟ್ಟ ಕತ್ತಲೆಯನ್ನು ಸೀಳಿಕೊಂಡು ಮಗ ನಡೆದು ಬರುತ್ತಿರುವುದನ್ನು ಅವಳು ಕಂಡಳು.

ವರ್ಚಸ್ಸು
ಅವನು ಕಚೇರಿಗೆ ಬಂದ ಹೊಸ ಎಂಡಿ
‘‘ಕೋಣೆಗೆ ಎಸಿ ಯಾಕೆ ಹಾಕಿಲ್ಲ’’ ಎಂದು ಸಹಾಯಕನಲ್ಲಿ ಕೇಳಿದ.
‘‘ಗಾಳಿ, ಬೆಳಕು ಕಿಟಕಿಯಿಂದ ಚೆನ್ನಾಗಿ ಬರುತ್ತದೆಯೆಂದು ಹಳೆ ಎಂಡಿ ಕಿಟಕಿಯನ್ನು ಹಾಕಿಲ್ಲ’’ ಎಂದು ಸಹಾಯಕ ಉತ್ತರಿಸಿದ.
‘‘ಗಾಳಿ, ಬೆಳಕಿಗಿಂತ ನನಗೆ ನನ್ನ ವರ್ಚಸ್ಸು ಮುಖ್ಯ’’ ಹೊಸ ಎಂಡಿ ಆದೇಶಿಸಿದ.
ಕಿಟಕಿಯನ್ನು ಮುಚ್ಚಿ ಕೋಣೆಗೆ ಎಸಿ ಹಾಕಲಾಯಿತು.

ವ್ಯಾಪಾರ
 ಅವಳು ತನ್ನ ಆಗಷ್ಟೇ ಹುಟ್ಟಿದ ಕೂಸನ್ನು ಹಿಡಿದು ಕೇಳಿದಳು ‘‘ಸ್ವಾಮಿ, ಒಂದು ಸಾವಿರ ರೂಪಾಯಿ ಕೊಡಿ...ಕೂಸು ಕೊಡ್ತೇನೆ...’’
‘‘ತುಂಬಾ ಜಾಸ್ತಿಯಾಯಿತು’’
‘‘ಹಾಗಾದ್ರೆ 500 ರೂ. ಕೊಡಿ ಸಾಮಿ’’
‘‘ಅದೂ ಜಾಸ್ತಿಯಾಯಿತು...’’
‘‘ನೂರು ರೂ. ಕೊಡಿ ಸಾಮಿ’’
‘‘ಊಹುಂ...ಅದೂ ಜಾಸ್ತಿಯಾಯಿತು...’’
‘‘ಹಾಗಾದ್ರೆ...ಮಧ್ಯಾಹ್ನ ಊಟ ಕೊಡಿ...ಮಗು ಕೊಡ್ತೀನಿ...’’
‘‘ಊಹುಂ....’’
‘‘ಸರಿ...ಹಂಗಾರೆ...ಈ ಮಗುವಿಗಾದರೂ ಹಾಲು ಕುಡಿಸಿ...ತಗೊಂಡೋಗಿ...’’

ನಿರ್ಮಾಪಕ
ನಿರ್ಮಾಪಕ ಹೇಳಿದ ‘‘ನಾನು ‘ಬಡವ’ರ ಬದುಕನ್ನು ಅನುಭವಿಸಿ ಬಡವರ ಕುರಿತಂತೆ ಒಂದು ಹೊಸ ಚಿತ್ರವನ್ನು ತೆಗೆದಿದ್ದೇನೆ’’
‘‘ಹೌದಾ, ಏನಾಯ್ತು’’
‘‘ನಾನೀಗ ಬಡವನಾಗಿ ಅನುಭವಿಸುತ್ತಿದ್ದೇನೆ’’

ನನ್ನ ಕತೆ, ಕವಿತೆ ಬರಹಗಳಿಗೆ ಬಳಸಿರುವ ಹೆಚ್ಚಿನ ಚಿತ್ರಗಳು, ಪೇಂಟಿಂಗ್‌ಗಳು ಗೂಗಲ್ ಇಮೇಜ್‌ನ ಅನ್ವೇಷನೆಯಾಗಿದೆ. ನನ್ನ ಸರಕುಗಳ ತೂಕವನ್ನು ಹೆಚ್ಚಿಸಿದ ಆ ಎಲ್ಲ ಅನಾಮಿಕ ಕಲಾವಿದರಿಗೆ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

Monday, December 17, 2012

ಮೂರು ಹನಿಗಳು

 1
ಸಮಯ


ಜೀಸಸ್ ನ ಮೊಳೆ ಹೊಡೆದ
ಎರಡು ಕೈಗಳಂತೆ
ಗಡಿಯಾರದ ಮುಳ್ಳುಗಳು
ಸಮಯವನ್ನು ತೋರಿಸುತ್ತಿತ್ತು
ಟಿಕ್
ಟಿಕ್
ಟಿಕ್
ರಕ್ತ ತೊಟ್ಟಿಕ್ಕುತ್ತಿತ್ತು....


2
ಮರು ಹುಟ್ಟು


ರಾತ್ರಿ ಕನಸಲ್ಲಿ
ಭೀಕರ ಅಪಘಾತಕ್ಕೆ
ಸಿಲುಕಿ ಒಂದೇ ಏಟಿಗೆ ನಾನು ಸತ್ತೆ !
ಮುಜಾನೆ ಎದ್ದು
ಕಣ್ಣು ತೆರೆದಾಗ
ನನಗೆ ಮರು ಹುಟ್ಟು !!


3
ಮುಗ್ಧ


ಕನಸಲ್ಲಿ ವೇಶ್ಯೆಯ ಜೊತೆ
ಮಲಗಿದ ಮುಗ್ಧ ಗೋಪಿ
ಬೆಳಗಾದದ್ದೇ
ಎಚ್ ಐ ವಿ ಪರೀಕ್ಷೆಗೆಂದು
ವೈದ್ಯರೆಡೆಗೆ ಧಾವಿಸಿದ !

Wednesday, December 12, 2012

ನಮ್ಮ ನೆಲದ ಶಿವಾಜಿ: ಶಿವಾಜಿಯ ಹಿಂದುತ್ವ ವರ್ಸಸ್ ಪೇಶ್ವೆ ಹಿಂದುತ್ವ

ಮಹಾಸ್ತಂಭ
ಶಿವಾಜಿಯ ಕಾಲದಲ್ಲಿ ನಡೆದ ಒಂದು ವಿಸ್ಮಯ ವೆಂದರೆ, ಆತನ ಹೋರಾಟ ಅಪ್ರಜ್ಞಾಪೂರ್ವಕವಾಗಿ ಒಂದು ಜಾತ್ಯತೀತ ಭಾರತೀಯ ಕಲ್ಪನೆ ತನಗೆ ತಾನೆ ಸಹಜವಾಗಿ ಅರಳಿಕೊಳ್ಳಲು ಕಾರಣವಾದುದು. ಶಿವಾಜಿ ಎಂದೂ ತನ್ನ ಹೋರಾಟ ಸಂದರ್ಭದಲ್ಲಾಗಲಿ, ಪತ್ರ ವ್ಯವಹಾರ ಸಂದರ್ಭ ದಲ್ಲಾಗಲಿ ‘ಹಿಂದೂ’ ಎನ್ನುವ ಶಬ್ದವನ್ನು ಬಳಸಿಲ್ಲ. ಹಿಂದೂ ಎನ್ನುವ ಶಬ್ದ ಆಗ ರಾಜಕೀಯ, ಧಾರ್ಮಿಕ ಅರ್ಥವನ್ನೂ ಪಡೆದುಕೊಂಡಿರಲಿಲ್ಲ. ಅವನ ಮಗ ಸಾಂಭಾಜಿ ಪತ್ರದಲ್ಲಿ ಒಂದೆಡೆ ಹೈಂದವ ಎನ್ನುವ ಶಬ್ದವನ್ನು ಬಳಸುತ್ತಾನೆ. ಹಾಗೆಂದು ನಾವು ಶಿವಾಜಿ ಯನ್ನು ಸಮತಾವಾದಿ, ಜಾತ್ಯತೀತ ಎಂಬಿತ್ಯಾದಿ ಆಧುನಿಕ ಪರಿಭಾಷೆಗಳಿಂದ ಗುರುತಿಸುವುದೂ ಹಾಸ್ಯಾಸ್ಪದ. ಅವನ ಕಾಲ ಮತ್ತು ಸಂದರ್ಭ ಎಲ್ಲರನ್ನು ಒಳಗೊಂಡ ಭಾರತೀಯತೆಯೊಂದನ್ನು ಅವನ ಮೂಲಕ ಕಂಡುಕೊಂಡಿತು. ಶಿವಾಜಿ ಮರಾಠರು, ಕುಣಬಿಗಳು, ಬ್ರಾಹ್ಮಣರು, ಕ್ಷತ್ರಿಯರು, ಮಹಾರ ದಲಿತರು, ಮುಸ್ಲಿಮರು, ಕೋಳಿ, ಭಂಡಾರಿ, ಕುರುಬ, ಪ್ರಭು, ರಾಮೋಶಿ, ನಾವಲಿಗ, ಶೆಣವಿ ಹೀಗೆ ಸುಮಾರು 56 ಜಾತಿಯ ಜನರನ್ನು ತನ್ನ ಪಡೆಯಲ್ಲಿ ಸೇರಿಸಿಕೊಂಡಿದ್ದ. ಜಾತಿ ವ್ಯವಸ್ಥೆ ಉಲ್ಬಣಾವಸ್ಥೆಯಲ್ಲಿದ್ದ ಹೊತ್ತಿನಲ್ಲಿ ಶಿವಾಜಿ ಇವರೆಲ್ಲರನ್ನು ಸಂಘಟಿಸಿ ಒಂದು ವೇದಿಕೆಗೆ ತಂದುದು ಸಣ್ಣ ವಿಷಯವಲ್ಲ. ಆದರೆ ಇದು ಮುಂದೆ ಶಿವಾಜಿಯ ವಂಶಸ್ಥ ರಿಂದ ರಾಜ್ಯವನ್ನು ಮೋಸದಿಂದ ಕೈವಶಮಾಡಿ ಕೊಂಡ ಬ್ರಾಹ್ಮಣ ಪೇಶ್ವೆಗಳಿಗೆ ಸಾಧ್ಯವಾಗಲಿಲ್ಲ. ಶಿವಾಜಿಯ ಹಿಂದುತ್ವವೇ ಬೇರೆ. ಪೇಶ್ವೆಗಳ ಹಿಂದುತ್ವವೇ ಬೇರೆ. ಶಿವಾಜಿಯ ಸುಮಾರು ಎಂಟು ವರ್ಷದ ಆಳ್ವಿಕೆ ಮುಗಿದು, ಮೂರು ತಲೆಮಾರುಗಳಲ್ಲೇ ಈ ಜಾತ್ಯತೀತ ಸಂಘಟನೆ ಪೇಶ್ವೇ ಗಳಿಂದಾಗಿ ಒಡೆದು ಹೋಯಿತು. ಯಾವಾಗ ಶಿವಾಜಿ ವಂಶಸ್ಥರಿಂದ ಆಡಳಿತ ಚಿತ್ಪಾವನ ಬ್ರಾಹ್ಮಣವಂಶಜರಾದ ಪೇಶ್ವೆಗಳ ಕೈಗೆ ಹಸ್ತಾಂತರವಾಯಿತೋ ಅಲ್ಲಿಂದಲೇ ಮತ್ತೆ ಜಾತೀಯತೆ ಭುಗಿಲೆದ್ದಿತು. ಶಿವಾಜಿಯ ಹಿಂದುತ್ವ, ಧಾರ್ಮಿಕತೆ ಎಲ್ಲ ಧರ್ಮೀಯರನ್ನು ಒಟ್ಟು ಸೇರಿಸಿ ಒಂದು ನಾಡನ್ನು ಕಟ್ಟಲು ಕಾರಣವಾದರೆ, ಪೇಶ್ವೆಗಳ ಬ್ರಾಹ್ಮಣ್ಯ ರೂಪದ ಹಿಂದುತ್ವ ಸೇನೆಯನ್ನು ಒಡೆಯಿತು. ಜಾತೀಯತೆಯನ್ನು ಬೆಳೆಸಿತು. ದಲಿತರು ಬಂಡೆದ್ದು ಬ್ರಿಟಿಷರ ಸೇನೆಯನ್ನು ಸೇರಿ, ಪೇಶ್ವೆಗಳನ್ನು ಸೋಲಿಸುವಲ್ಲಿಗೆ ಇದು ಅಂತ್ಯವಾಯಿತು. ಶಿವಾಜಿಯ ಕನಸು ಪೇಶ್ವೆಗಳ ದೆಸೆಯಿಂದ ಸುಟ್ಟು ಬೂದಿ ಯಾಯಿತು.
 
 ಶಿವಾಜಿ ಪೇಶ್ವೆಗಳಂತೆ ಯಾವತ್ತೂ ಧರ್ಮಾಂಧ ನಾಗಿರಲಿಲ್ಲ. ಆದುದರಿಂದಲೇ ಶಿವಾಜಿಯನ್ನು ಮುಸ್ಲಿಮರು, ದಲಿತರೂ ಎದೆ ತುಂಬಿ ಪ್ರೀತಿಸಿದರು. ಅವನಿಗಾಗಿ ಪ್ರಾಣವನ್ನು ತೆತ್ತರು. ಸೇನೆಯಲ್ಲಿ ಮುಸ್ಲಿಮರ ಕುರಿತಂತೆ ಶಿವಾಜಿಗೆ ಅದೆಷ್ಟು ಹೆಮ್ಮೆಯಿತ್ತೆಂದರೆ ರಾಯಗಡದಲ್ಲಿ ಮುಸ್ಲಿಮ್ ಸೈನಿಕರಿಗಾಗಿಯೇ ಮಸೀದಿಯನ್ನು ಕಟ್ಟಿಸಿದ್ದ. ಜಿಝಿಯಾ ಕರವನ್ನು ವಿರೋಧಿಸಿ ಶಿವಾಜಿಯು ಔರಂಗಜೇಬನಿಗೆ ಬರೆದ ಪತ್ರದ ಸಾಲುಗಳು ಶಿವಾಜಿಯ ವ್ಯಕ್ತಿತ್ವವನ್ನು, ಅವನ ಆಡಳಿತದ ಮುನ್ನೋಟವನ್ನು ತಿಳಿಸುತ್ತದೆ. ಅವನು ಎಷ್ಟು ಸೂಕ್ಷ್ಮವಾಗಿ, ಹೃದ್ಯವಾಗಿ ಆ ಪತ್ರವನ್ನು ಬರೆಯು ತ್ತಾನೆಂದರೆ, ಅಕ್ಬರ್, ಜಹಂಗೀರ್ ಮೊದಲಾದ ವರನ್ನು ಆ ಪತ್ರದಲ್ಲಿ ಮನಬಿಚ್ಚಿ ಹೊಗಳುತ್ತಾನೆ. ಅದರ ಆಯ್ದ ಕೆಲವು ಸಾಲುಗಳನ್ನು ಇಲ್ಲಿವೆ ‘‘.....ಈ ಹಿಂದೆ ಅಕಬರ ಬಾದಶಹಾ ನ್ಯಾಯದಿಂದ ಐವತ್ತೆರಡು ವರ್ಷ ರಾಜ್ಯವಾಳಿದರು. ಇದರಿಂದ ಈಸವಿ, ದಾವುದಿ, ಮಹಮದಿ ಮುಂತಾದವರು, ಬ್ರಾಹ್ಮಣ, ಶೆವಡೆ ವಗೈರೆ ಧರ್ಮ ಚೆನ್ನಾಗಿ ನಡೆಯಿತು. ಆ ಧರ್ಮಕ್ಕೆ ಬಾದಶಹಾ ಸಹಾಯ ಮಾಡಿದ್ದರಿಂದ ಜಗದ್ಗುರು ಎಂದು ಪ್ರಸಿದ್ಧರಾದರು. ಇಂತಹ ಸದ್ವಿವೇಕದ ನೋಟ ಎಲ್ಲೆಡೆ ಇರುತ್ತಿತ್ತು. ಯಶವೂ ಸಿಗುತ್ತಿತ್ತು.....ಆ ಬಳಿಕ ನೂರುದ್ದೀನ ಜಹಂಗೀರ್ ಬಾದಶಹಾ ಅವರು ದೇವರ ಮೇಲೆ ನಂಬಿಕೆಯಿಟ್ಟು ಇಪ್ಪತ್ತೆರಡು ವರ್ಷ ರಾಜ್ಯವಾಳಿ ದರು......ಶಹಜಹಾನ ಸಾಹೇಬ ಕಿರಾನ ಅವರು ಮೂವತ್ತೆರಡು ವರ್ಷ ರಾಜ್ಯವಾಳಿ ಪ್ರಸಿದ್ಧರಾದರು. ಒಳ್ಳೆಯ ರೀತಿಯಲ್ಲಿ ಬದುಕಿ ಕೀರ್ತಿ ಸಂಪಾದಿಸಿ ದರು..... ಆ ಬಾದಶಹರೂ ಜಿಝಿಯಾ ಕರ ಹೇರಲು ಸಮರ್ಥರಾಗಿದ್ದರು. ಆದರೆ ಚಿಕ್ಕವರು ದೊಡ್ಡವರು ತಂತಮ್ಮ ಧರ್ಮದಲ್ಲಿದ್ದಾರೆ. ಅದೆಲ್ಲ ದೇವರದ್ದು ಎಂದು ಭಾವಿಸಿ ಯಾರ ಮೇಲೂ ಅನ್ಯಾಯವಾಗದಂತೆ ನೋಡಿಕೊಂಡರು. ಅವರ ಉಪಕಾರ ಇವತ್ತಿಗೂ ಉಳಿದಿದೆ... ಎಲ್ಲರ ಬಾಯಲ್ಲಿ ಅವರ ಸ್ತುತಿಯಿದೆ...’’ ಹೀಗೆ ಬಾಯಿ ತುಂಬಾ ಅಕ್ಬರ್, ಜಹಂಗೀರ್, ಶಹಜಹಾನ್ ಅವರನ್ನು ಹೊಗಳುತ್ತಾ, ಔರಂಗಜೇಬನನ್ನು ಪರೋಕ್ಷವಾಗಿ ಟೀಕಿಸುತ್ತಾ ಹೋಗುತ್ತಾನೆ ಶಿವಾಜಿ. ವಿಶೇಷವೆಂದರೆ ತನ್ನ ಪತ್ರದಲ್ಲಿ ಕುರ್‌ಆನನ್ನು ಸ್ಮರಿಸಿ ಔರಂಗಜೇಬನಿಗೆ ಉಪದೇಶ ಮಾಡುತ್ತಾನೆ ಶಿವಾಜಿ ‘‘ಕುರ್‌ಆನ್ ಇದು ಆಕಾಶವಾಣಿಯ ಗ್ರಂಥ. ಅದು ದೇವರ ವಾಣಿ. ಅದರಲ್ಲಿ ಆಜ್ಞಾಪಿಸಿ ದ್ದೇನೆಂದರೆ, ದೇವರು ಜಗತ್ತಿನವನು, ಇಲ್ಲವೇ ಮುಸಲ್ಮಾನವರನು, ಒಳ್ಳೆಯವರಿರಲಿ, ಕೆಟ್ಟವರಿರಲಿ, ಅವರೆಲ್ಲ ಈಶ್ವರನ ಸೃಷ್ಟಿ...ಮಸೀದಿಯಲ್ಲಿ ದೇವರನ್ನು ಕೂಗಿ ಕರೆದು ಸ್ಮರಣೆ ಮಾಡುತ್ತಾರೆ. ದೇಗುಲದಲ್ಲಿ ಗಂಟೆ ಬಾರಿಸುತ್ತಾರೆ...’’ ಶಿವಾಜಿ ಕಟ್ಟಿದ ಸಾಮ್ರಾಜ್ಯದ ಪತನ ಆರಂಭ ವಾದದ್ದು ಪೇಶ್ವೆಗಳಿಂದ. ಶಿವಾಜಿ ವಂಶಸ್ಥರಿಂದ ಚಿತ್ಪಾವನ ಬ್ರಾಹ್ಮಣರು- (ಮಹಾತ್ಮಾ ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆ ಕೂಡ ಚಿತ್ಪಾವನ ಬ್ರಾಹ್ಮಣನಾಗಿದ್ದ) ಚುಕ್ಕಾಣಿ ಯನ್ನು ಕೈ ವಶ ಮಾಡಿದ್ದೇ, ದಲಿತರ ಸ್ಥಿತಿ ಸೇನೆ ಯಲ್ಲಿ ಹೀನಾಯವಾಗತೊಡಗಿತು. ಜಾತಿವ್ಯವಸ್ಥೆ ಮತ್ತೆ ತಾಂಡವವಾಡತೊಡಗಿತು. ಒಂದು ಕಾಲದಲ್ಲಿ ಸಂತ ತುಕರಾಮರು ತಮ್ಮ ಅಭಂಗದಲ್ಲಿ ‘‘ಮಹಾರಾಸಿ ಶಿವೇ-ಕೋಪೇತೋ ಬ್ರಾಹ್ಮಣ ನವ್ಹೆ’’ ಎಂದು ಹೇಳಿದ್ದರು. ಬ್ರಾಹ್ಮಣರಿಗಿಂತ ಮಹಾರರು ಮಹಾ ಮಹಿಮರು ಎಂದು ಇದರ ಅರ್ಥ. ಶಿವಾಜಿಯ ಸೇನೆಯಲ್ಲಿ ದಲಿತ ಮಹಾರರ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ. ಮಹಾರರ ಮೇಲೆ ಶಿವಾಜಿಗೆ ಅಪಾರ ನಂಬಿಕೆಯಿತ್ತು. (ಇದೇ ಮಹಾರ್ ಜಾತಿಯಲ್ಲಿ ಮುಂದೆ ಬಿ. ಆರ್. ಅಂಬೇಡ್ಕರ್ ಹುಟ್ಟುತ್ತಾರೆ. ದಲಿತರ ಹಕ್ಕಿಗಾಗಿ ಹೋರಾಡುತ್ತಾರೆ)ಅವರದೇ ಆದ ವಿಶೇಷ ತುಕಡಿಯೂ ಶಿವಾಜಿಯ ಸೇನೆಯಲ್ಲಿತ್ತು. ಮಹಾರರನ್ನು ಕಿಲ್ಲೇದಾರರು ಎಂಬ ಜವಾಬ್ದಾರಿ ಯುತ್ತ ಪದವಿಗೆ ಆಯ್ದುಕೊಳ್ಳುತ್ತಿದ್ದ್ದ. ಆದರೆ ಪೇಶ್ವೆಕಾಲದಲ್ಲಿ ಇದು ತಿರುವು ಮುರುವಾಯಿತು. ಜಾತಿ ಮತ್ತೆ ಪ್ರಾಬಲ್ಯವನ್ನು ಪಡೆಯಿತು. ಇದನ್ನು ಸಹಿಸಿ ಸಾಕಾದ ದಲಿತರು ಅಂತಿಮವಾಗಿ ಬಂಡೆದ್ದರು. ಬ್ರಿಟಿಷರ ಸೇನೆ ಸೇರಿದರು. ಪೇಶ್ವೆಗಳ ನಾಶಕ್ಕೆ ಅದುವೇ ಕಾರಣ ವಾಯಿತು. ಪೇಶ್ವೆಗಳು ನಾಶವಾದ ಈ ದಿನವನ್ನು ಇಂದಿಗೂ ದಲಿತರು ಸಂಭ್ರಮದ ರೂಪದಲ್ಲಿ ಆಚರಿಸುತ್ತಾರೆ. ಕೋರೆಗಾವ ಕದನದಲ್ಲಿ ದಲಿತರು ಪಡೆದ ದಿಗ್ವಿಜಯ, ಜಾತೀಯತೆಯ ವಿರುದ್ಧ ಪಡೆದ ಜಯವೂ ಹೌದು. ಈ ಕೋರೆಗಾವ ಯುದ್ಧದಲ್ಲಿ ಅಂತಿಮವಾಗಿ ಗೆದ್ದಿರುವುದು ಬ್ರಿಟಿಷರೇ ಆದರೂ, ಪೇಶ್ವೆಗಳ ಜಾತೀಯತೆ ಈ ಯುದ್ಧದಲ್ಲಿ ತಕ್ಕ ಫಲವನ್ನು ಅನುಭವಿಸಿತು.
ಶಿವಾಜಿಯ ಸಂಯಮ, ಹೃದಯ ವೈಶಾಲ್ಯತೆ ಪೇಶ್ವೆಗಳಲ್ಲಿ ಇರಲಿಲ್ಲ. ಒಂದು ರಾಜ್ಯವನ್ನು ಗೆಲ್ಲುವ ಸಂದರ್ಭದಲ್ಲಾಗಲಿ, ಅದನ್ನು ಲೂಟಿ ಮಾಡುವ ಸಂದರ್ಭದಲ್ಲಾಗಲಿ ಇದು ಎದ್ದು ಕಾಣುತ್ತಿತ್ತು. ಶೃಂಗೇರಿ ಮಠದ ಮೇಲೆ ಪೇಶ್ವೆಗಳು ನಡೆಸಿದ ದಾಳಿ, ಮತ್ತು ಮಠದ ದರೋಡೆಯೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಸಂದರ್ಭದಲ್ಲಿ ಶೃಂಗೇರಿ ಮಠದ ನೆರವಿಗೆ ನಿಂತದ್ದು ಟಿಪ್ಪು ಸುಲ್ತಾನ್ ಎನ್ನುವುದು ಇತಿಹಾಸ.


    ಮೊದಲನೆ ಬಾಜಿರಾಯನ ಕಾಲದಲ್ಲಿ ಪೇಶ್ವೆಗಳ ತಂತ್ರ ಕುತಂತ್ರಗಳು ಪರಾಕಾಷ್ಠೆಯನ್ನು ತಲುಪಿತು.. ಪುಣೆ ಸಾಂಸ್ಕೃತಿಕವಾಗಿ ವಿಜೃಂಭಿಸಿದ್ದೂ ಇದೇ ಕಾಲದಲ್ಲಿ ಎನ್ನುವುದನ್ನು ನಾವು ಗಮನಿಸಬೇಕು. ಆದರೆ ಇದೇ ಸಂದರ್ಭದಲ್ಲಿ ಜಾತೀಯತೆ ಸೇನೆಯಲ್ಲಿ ತಾಂಡವವಾಡತೊಡಗಿತು. ದಲಿತರ ಕುರಿತಂತೆ ತಾರತಮ್ಯಗಳು ಹೆಚ್ಚಾಗತೊಡಗಿದವು. ದಲಿತರಲ್ಲಿ, ಮುಖ್ಯವಾಗಿ ಮಹಾರ್ ಯೋಧರು ಒಳಗೊಳಗೆ ಭುಸುಗುಡತೊಡಗಿದರು. ಇದು ಎರಡನೆ ಬಾಜಿರಾಯನ ಕಾಲದಲ್ಲಿ ಸ್ಫೋಟಿಸಿತು. ಭೀಮಾ ಕೋರೆಗಾವ ಕದನದಲ್ಲಿ ದಲಿತರು ಬಂಡೆದ್ದು ಬ್ರಿಟಿಷರನ್ನು ಸೇರಿಕೊಂಡರು. ಬ್ರಿಟಿಷರ ಪಡೆಯಲ್ಲಿ ಮರಾಠರು, ಮುಸ್ಲಿಮರು, ಕ್ರಿಶ್ಚಿಯನ್ನರು ಇದ್ದರೂ, ದೊಡ್ಡ ಮಟ್ಟದಲ್ಲಿ ಮಹಾರರಿದ್ದರು. ಕೋರೆಗಾವ ಕದನದಲ್ಲಿ 20 ಸಾವಿರದಷ್ಟಿದ್ದ ಮರಾಠ ಸೇನೆಯನ್ನು ಪುಟ್ಟ ಮಹಾರ ಪಡೆ ಸೋಲಿಸಿತು. ಕೋರೆಗಾವ ಕದನದಲ್ಲಿ ಹುತಾತ್ಮರಾದ ದಲಿತರು ಮತ್ತು ಇತರರಿಗಾಗಿ ಬ್ರಿಟಿಷರು ಸ್ಮಾರಕಸ್ತಂಭವೊಂದನ್ನು ನಿರ್ಮಿಸಿದರು. 26 ಮಾರ್ಚ್ 1821ರಲ್ಲಿ ಈ ಸ್ತಂಭಕ್ಕೆ ಅಡಿಗಲ್ಲು ಹಾಕಲಾಯಿತು. ಇದಕ್ಕೆ ಮಹಾ
ಸ್ತಂಭ ಎಂದೂ ಕರೆಯಲಾಗುತ್ತದೆ. ಮಹಾರರ ಬೆಂಬಲವಿಲ್ಲದೇ ಇರುತ್ತಿದ್ದರೆ ಪೇಶ್ವೆಗಳನ್ನು ಗೆಲ್ಲುವುದಕ್ಕೆ ಯಾವ ಕಾರಣದಿಂದಲೂ ಸಾಧ್ಯವಾಗುತ್ತಿರಲಿಲ್ಲ ಎನ್ನುವುದನ್ನು ಬ್ರಿಟಿಷರೇ ಒಪ್ಪಿಕೊಂಡಿದ್ದಾರೆ.

   ಪೇಶ್ವೆಗಳನ್ನು ಬ್ರಿಟಿಷರು ಸೋಲಿಸಿದ ಈ ಘಟನೆ ನಿಜಕ್ಕೂ ವಿಶಿಷ್ಟವಾದುದು. ಭಾರತೀಯ ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸುವಲ್ಲಿ ಇದು ಸಹಾಯ ಮಾಡುತ್ತದೆ. ಶಿವಾಜಿ ಮಹಾರರನ್ನು ತನ್ನವರೆಂದು ಬಗೆದು ಸಾಮ್ರಾಜ್ಯವನ್ನು ಕಟ್ಟಿದ. ಆದರೆ ದಲಿತರನ್ನು ಪರಕೀಯರೆಂದು ಬಗೆದ ಪೇಶ್ವೆಗಳು ತಮ್ಮ ರಾಜ್ಯವನ್ನು ಕಳೆದು ಕೊಂಡರು. ಪರಕೀಯರಾದ ಬ್ರಿಟಿಷರು ತಮಗೆ ಗೌರವನೀಡಿದರೆಂಬ ಒಂದೇ ಕಾರಣಕ್ಕೆ ಮಹಾರರು ಬ್ರಿಟಿಷರ ಪರವಾಗಿ ನಿಂತು, ಪೇಶ್ವೆಗಳನ್ನು ಸೋಲಿಸಿದರು. ದೇಶದ ಪಾಲಿಗೆ ಇದು ಬ್ರಿಟಿಷರ ಗೆಲುವಾಗಿರಬಹುದು. ಆದರೆ ದಲಿತರ ಪಾಲಿಗೆ ಇದು ಶೋಷಿತರ, ನೊಂದವರ ಗೆಲುವು. ಡಾ. ಬಿ.ಆರ್. ಅಂಬೇಡ್ಕರ್ ಜನವರಿ1, 1927ರಲ್ಲಿ ತಮ್ಮ ಅನುಯಾಯಿಗಳೊಂದಿಗೆ ಭೀಮಾ-ಕೋರೆಗಾವಕ್ಕೆ ಬಂದು ಮಹಾರ್ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸಿದರು. ಆ ದಿನವನ್ನು ಅಂದಿನಿಂದ ಕೋರೆಗಾವ ಕದನದ ಮಹಾರ ಕಲಿಗಳ ಸ್ಮತಿ ದಿನವನ್ನಾಗಿ ಆಚರಿಸಲಾ ಯಿತು. ಇಂದಿಗೂ ಜನವರಿ 1ರಂದು ದೇಶದ ದಲಿತರೆಲ್ಲ ಕೋರೆಗಾವ ಕದನವನ್ನು ನೆನಪಿಸಿಕೊಂಡು, ಹುತಾತ್ಮರಾದ ಮಹಾರರಿಗೆ ತಮ್ಮ ಶೃದ್ಧಾಂಜಲಿಯನ್ನು ಸಲ್ಲಿಸುತ್ತಾರೆ.


ಇಂದು ಆರೆಸ್ಸೆಸ್ ಸೇರಿದಂತೆ ಸಂಘಪರಿವಾರ ಪೇಶ್ವೆ ಹಿಂದುತ್ವವನ್ನು ದೇಶದ ಮೇಲೆ ಹೇರಲು ಪ್ರಯತ್ನಿಸುತ್ತಿದೆ. ಶಿವಾಜಿಯ ನಿಜವಾದ ವ್ಯಕ್ತಿತ್ವವನ್ನು ಕುರೂಪಗೊಳಿಸಿ, ಅವನ ವ್ಯಕ್ತಿತ್ವಕ್ಕೇ ಕಳಂಕ ಎಸಗುತ್ತಿದೆ. ಶಿವಾಜಿ ಕೇವಲ ಮಹಾರಾಷ್ಟ್ರೀಯನಲ್ಲ. ಕೇವಲ್ಲ ಬೋಸಲೆಯೂ ಅಲ್ಲ. ಕೇವಲ ಹಿಂದೂ ಕೂಡ ಅಲ್ಲ. ಅವನು ಅಪ್ಪಟ ಭಾರತೀಯ. ಈ ದೇಶದ ಪ್ರತಿಯೊಬ್ಬರಿಗೂ ಸೇರಿದವನು ಶಿವಾಜಿ. ಅವನನ್ನು ತಮ್ಮ ಕ್ಷುಲ್ಲಕ ಭಾಷಾ ರಾಜಕೀಯಕ್ಕೆ, ಬ್ರಾಹ್ಮಣ್ಯ ರಾಜಕೀಯಕ್ಕೆ ಬಳಸಿಕೊಳ್ಳುವುದು ಭಾರತೀಯತೆಗೆ ಮಾಡುವ ಅಪಚಾರ. ನಮಗಿಂದು ಬೇಕಾದುದು ಶಿವಾಜಿಯ ಹಿಂದುತ್ವವೇ ಹೊರತು ಪೇಶ್ವೆಗಳ ಹಿಂದುತ್ವವಲ್ಲ. ಪೇಶ್ವೆಗಳ ಹಿಂದುತ್ವ ಶಿವಾಜಿ ಸಾಮ್ರಾಜ್ಯವನ್ನು ಸರ್ವನಾಶ ಮಾಡಿ, ಬ್ರಿಟಿಷರಿಗೆ ತಲೆಬಾಗುವಂತೆ ಮಾಡಿತು. ನಮಗಿಂದು ಬೇಕಾದುದು ಪೇಶ್ವೆ ವಂಶಜನಾದ ನಾಥೂರಾಂ ಗೋಡ್ಸೆ ಹಿಂದುತ್ವವಲ್ಲ. ದಲಿತ ಮಾಹಾರರ ವಂಶಜರಾದ ಬಿ. ಆರ್. ಅಂಬೇಡ್ಕರ್ ಹಿಂದುತ್ವ. ನಾಥೂರಾಂನಿಂದ ಕಗ್ಗೊಲೆಗೀಡಾದ ಮಹಾತ್ಮಗಾಂಧೀಜಿಯ ಹಿಂದುತ್ವ. ಅದು ಮಾತ್ರ ಈ ದೇಶವನ್ನು ಒಂದಾಗಿರುವಂತೆ ಮಾಡೀತು. ದಲಿತರು, ಬ್ರಾಹ್ಮಣರು, ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಒಟ್ಟಾಗಿ ಕೊಂಡು ಹೋಗುವ ಶಿವಾಜಿಯಂತಹ ನಾಯಕನ ದೂರದೃಷ್ಟಿ ರಾಜಕಾರಣ ಮಾತ್ರ ಈ ದೇಶವನ್ನು ಉಳಿಸೀತು. ಬೆಳೆಸೀತು.
ಆಕರ ಗ್ರಂಥ: ಸರ್ಕಾರ್ ಜೆ.ಎನ್.ಶಿವಾಜಿ ಎಂಡ್ ಹಿಸ್ ಟೈಮ್ಸ್
ಗ್ರಾಂಡ್ ಡಫ್-ಹಿಸ್ಟರಿ ಆಫ್ ಮರಾಠಾಸ್
ಭಾವರೆ ಎನ್. ಜಿ: ಕಾಸ್ಟ್ಸ್ ಫೇವರ್ಸ್‌, ಪ್ಯಾಟರ್ನೇಜ್ ಎಂಡ್ ಪ್ರಿವಿಲೇಜಸ್ ಅಂಡರ್ ಶಿವಾಜಿಸ್ ರೂಲ್
ಶಕಕರ್ತಾ ಶಿವಾಜಿ
ಗೋವಿಂದ ಪಾನಸರೆ ‘ಶಿವಾಜಿ ಯಾರು?’
ಸುಧಾಕರ ಖಾಂಬೆ: ಭೀಮಾ ಕೋರೆಗಾವಾಚಾ ವಿಜಯಸ್ತಂಭ

Wednesday, December 5, 2012

ನಮ್ಮ ನೆಲದ ಶಿವಾಜಿ: ಮುಸ್ಲಿಂ ವಿರೋಧಿಯೆಂಬ ಸುಳ್ಳಿನ ಮುಳ್ಳು ಕಿರೀಟ

ಶಿವಾಜಿ ಸಮಾಧಿ
ಹಿಂದಿನ ವಾರದಿಂದ ಮುಂದುವರೆಯುದು

ಶಿವಾಜಿಯ ಹೋರಾಟ, ಸಂಘರ್ಷಗಳಿಗೆ ‘ಹಿಂದುತ್ವ’ ವನ್ನು ಆರೋಪಿಸಿದ್ದು ಆತನ ಆನಂತರದ ಕಾಲದಲ್ಲಿ. ಅದನ್ನು ವೈಭವೀಕರಿಸಿ ಆತನನ್ನು ಹಿಂದೂನಾಯಕನಾಗಿ ಪರಿವರ್ತಿಸಿದ್ದು ಬಾಲ ಗಂಗಾಧರ ತಿಲಕ್‌ರ ರಾಷ್ಟ್ರೀಯವಾದದ ಸಂದರ್ಭದಲ್ಲಿ. ಜನರಲ್ಲಿ ಹಿಂದೂ ರಾಷ್ಟ್ರೀಯತೆಯನ್ನು ಬಿತ್ತುವ ಉದ್ದೇಶದಿಂದ, ಇತಿಹಾಸವನ್ನು ವೈಭವೀಕರಿಸಲಾಯಿತು. ಮುಂದೆ ಇದನ್ನು ಸಂಘಪರಿವಾರ ಮುಸ್ಲಿಮರನ್ನು ವಿರೋಧಿಸುವು ದಕ್ಕಾಗಿ ಬಳಸಿಕೊಂಡಿತು. ಒಂದು ರೀತಿಯಲ್ಲಿ ಇತಿಹಾಸವನ್ನು ತಿರುಚಲಾಯಿತು. ಪುರಾಣವೂ ಇತಿಹಾಸದೊಂದಿಗೆ ಅನೈತಿಕ ಸಂಬಂಧ ಬೆಳೆಸಿತು. ಈ ಕಾರಣದಿಂದಲೇ ಶಿವಾಜಿಯ ಕೈಯಲ್ಲಿರುವ ಕತ್ತಿಯನ್ನು ಭವಾನಿಯೇ ಪ್ರತ್ಯಕ್ಷಳಾಗಿ ನೀಡಿದಳು ಎನ್ನಲಾಯಿತು. ಆದರೆ ಆತನ ಕೈಯಲ್ಲಿರುವ ಕತ್ತಿ ಪೋರ್ಚುಗೀಸರ ಕಾಲದ್ದು ಎಂದು ಇತಿಹಾಸಕಾರರು ಸಾಬೀತು ಪಡಿಸಿದ್ದಾರೆ. ಆ ಸಂದರ್ಭದಲ್ಲಿ ಪೋರ್ಚುಗೀಸರ ಕಾಲದ ಖಡ್ಗಗಳು ಯುದ್ಧ ಭೂಮಿಯಲ್ಲಿ ಪ್ರಸಿದ್ಧವಾಗಿದ್ದವು.

ಶಿವಾಜಿಯು ಮೊಗಲರ ವಿರುದ್ಧ ನಡೆಸಿದ ಯುದ್ಧ ಹಿಂದೂಗಳು ಮುಸ್ಲಿಮರ ವಿರುದ್ಧ ನಡೆಸಿದ ಯುದ್ಧವೇ ಆಗಿದ್ದರೆ ಶಿವಾಜಿಯ ಸೇನೆಯಲ್ಲಿ ಮುಸ್ಲಿಮ್ ಯೋಧರು ಇರುವುದಕ್ಕೆ ಸಾಧ್ಯವಿರಲಿಲ್ಲ. ಹಾಗೆಯೇ ಮೊಗಲರ ಸೇನೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಹಿಂದೂಗಳು ಯೋಧರಾಗಿ ಇರುವುದಕ್ಕೆ ಸಾಧ್ಯ ವಿರಲಿಲ್ಲ. ಶಿವಾಜಿಯ ಸೇನೆಯ ಮಹತ್ವದ ವಿಭಾಗಗಳ ಉಸ್ತುವಾರಿಯನ್ನೆಲ್ಲ ಮುಸ್ಲಿಮರೇ ನೋಡಿಕೊಳ್ಳುತ್ತಿದ್ದರು. ಶಿವಾಜಿಯ ಸೇನೆಯಲ್ಲಿದ್ದ ಹೆಚ್ಚಿನ ಮುಸ್ಲಿಮರು ಮಹತ್ವದ ಪದವಿಯನ್ನು ಹೊಂದಿದ್ದರು. ಶಿವಾಜಿಯ ಸೇನೆಯ ಮುಖ್ಯ ಅಂಗ ತೋಪುಖಾನೆ. ಅದರ ನಿಯಂತ್ರಣ ಇಬ್ರಾಹೀಂ ಖಾನ್ ಬಳಿಯಿತ್ತು. ಶಿವಾಜಿ ಮುಸ್ಲಿಮರ ವಿರುದ್ಧ, ಹಿಂದೂ ಧರ್ಮದ ಪರವಾಗಿ ಯುದ್ಧ ನಡೆಸಿದ್ದು ನಿಜವೇ ಆಗಿದ್ದರೆ ಇದು ಸಾಧ್ಯವಾಗುವ ಮಾತಾಗಿತ್ತೆ? ಇನ್ನೊಂದು ಬಹುಮುಖ್ಯ ವಿಭಾಗ ನೌಕಾಸೇನೆ. ಯಾಕೆಂದರೆ ಕೊಂಕಣದ ಬಹುತೇಕ ಭೂಮಿ ಸಮುದ್ರಕ್ಕೆ ಅಂಟಿಕೊಂಡಿತ್ತು. ಈ ನೌಕಾಸೇನೆಯ ಮುಖ್ಯಸ್ಥನಾಗಿ ದರ್ಯಾಸಾರಂಗ ದೌಲತ್‌ಖಾನ್ ಎಂಬ ಸರದಾರನನ್ನು ಶಿವಾಜಿ ನೇಮಕ ಮಾಡಿದ್ದ. ಶಿವಾಜಿಯ ಖಾಸಾ ಅಂಗರಕ್ಷಕರಲ್ಲಿ 11 ಮಂದಿ ಮುಸ್ಲಿಮರಿದ್ದರು. ಅವರಲ್ಲಿ ಮುಖ್ಯನಾದ ಮಲಾರಿ ಮ್ಹೇತರ ಎಂಬ ವ್ಯಕ್ತಿಯ ಪ್ರಸ್ತಾಪವಿದೆ. ಆಗ್ರಾದಲ್ಲಿ ಶಿವಾಜಿಯ ಬಿಡುಗಡೆಗಾಗಿ ಅತಿ ದೊಡ್ಡ ಸಹಾಯ ವನ್ನು ಮಾಡಿದಾತ ಇದೇ ಮುಸ್ಲಿಮ್ ಅಂಗರಕ್ಷಕ ನಾಗಿದ್ದ. ಶಿವಾಜಿಯ ಹೋರಾಟ ಮುಸ್ಲಿಮರ ಅಥವಾ ಸಂಘಪರಿವಾರ ಹೇಳುವಂತೆ ಮ್ಲೇಚ್ಛರ ವಿರುದ್ಧದ ಹೋರಾಟವಾಗಿದ್ದರೆ ಇದು ಸಂಭವಿಸಲು ಸಾಧ್ಯವಿತ್ತೆ? ಸಾಲೇರಿಯಾ ಕಾಳಗದ ಬಳಿಕ ಮಾತುಕತೆಗಾಗಿ ಶಿವಾಜಿಯು ಔರಂಗಜೇಬನ ಅಧಿಕಾರಿಗಳ ಬಳಿಗೆ ಕಳಿಸಿದ ದೂತನ ಹೆಸರು ಖಾಝಿ ಹೈದರ್. ಇದೇ ಸಂದರ್ಭದಲ್ಲಿ ಔರಂಗಜೇಬನ ಅಧಿಕಾರಿಗಳು ಶಿವಾಜಿಯ ಬಳಿಗೆ ಕಳುಹಿಸಿದ ವಕೀಲ ಒಬ್ಬ ಬ್ರಾಹ್ಮಣನಾಗಿದ್ದ. ಶಿವಾಜಿಗಾಗಿ ಅನೇಕ ಮುಸ್ಲಿಮ್ ಸರದಾರರು ಪ್ರಾಣಾರ್ಪಣೆ ಮಾಡಿದ್ದಾರೆ. 1660ರಲ್ಲಿ ಸಿದ್ದಿ ಜೌಹರನು ಪನ್ಙಾಳಗಡವನ್ನು ಮುತ್ತಿದಾಗ ಶಿವಾಜಿಯ ಪರವಾಗಿ ಸಿದ್ದಿ ಹಿಲಾಲ ಎಂಬ ಮುಸಲ್ಮಾನ ಸರದಾರ ತನ್ನ ಮಗನ ಜೊತೆಗೆ ಹೋರಾಡಿದ. ಈ ಹೋರಾಟದಲ್ಲಿ ಹಿಲಾಲನ ಮಗ ವಾಹವಾಹನು ಗಾಯಗೊಂಡು ಶತ್ರುಗಳಿಗೆ ಸೆರೆಸಿಕ್ಕ. ಶಿವಾಜಿಯ ನಂಬಿಗಸ್ಥ ಮುಖ್ಯ ಹನ್ನೊಂದು ಮುಸ್ಲಿಮ್ ಸರದಾರರ ಹೆಸರು ಕೆಳಗಿನಂತಿವೆ.
1. ಸಿದ್ದಿ ವಾಹ್‌ವಾಹ್2.ನೂರ್‌ಖಾನ್ ಬೇಗ್ 3.ಶಮಾ ಖಾನ್4. ಹುಸೈನ್ ಖಾನ್ ಮಿಯಾನಿ5. ದಾರ್ಯ ಸಾರಂಗ್6. ಇಬ್ರಾಹೀಂ ಖಾನ್7. ದೌಲತ್ ಖಾನ್8. ಸಿದ್ದಿ ಮಿಸ್ತ್ರಿ 9. ಸುಲ್ತಾನ್ ಖಾನ್ 10. ಇಬ್ರಾಹೀಂ ಖಾನ್11. ದಾವೂದ್ ಖಾನ್
1672ರಲ್ಲಿ ಇಂಗ್ಲೆಂಡ್‌ನ ರಾಣಿಗೆ ಇಂಗ್ಲಿಷ್ ಅಧಿಕಾರಿ ಜೋನ್ ಫೈರ್ ಬರೆದ ಪತ್ರದಲ್ಲಿ 66 ಸಾವಿರ ಮುಸ್ಲಿಮರು ಶಿವಾಜಿಯ ಸೇನೆಯಲ್ಲಿ ರುವುದನ್ನು ಉಲ್ಲೇಖಿಸುತ್ತಾನೆ.

ಮನುಸ್ಮತಿ ವಿರೋಧಿ ಶಿವಾಜಿ:
ಶಿವಾಜಿಯನ್ನು ಮನು ವಿರೋಧಿ ಅಥವಾ ಬ್ರಾಹ್ಮಣ ವಿರೋಧಿ ಎಂದು ಮಹಾರಾಷ್ಟ್ರದ ದಲಿತ ಹೋರಾಟಗಾರರು, ಇತಿಹಾಸಕಾರರು ಕರೆಯುವುದಿದೆ. ಶಿವಾಜಿ ಮನು ವಿರೋಧಿ ಎನ್ನುವುದಕ್ಕಿಂತ ಮನುಷ್ಯ ಪರನಾಗಿದ್ದ.. ಆ ಹಿನ್ನೆಲೆಯಲ್ಲಿ ಅವನು ತೆಗೆದುಕೊಂಡ ಕ್ರಮಗಳೆಲ್ಲ ಮನು ವಿರೋಧಿಯಾಗಿದ್ದವು. ಪ್ರಜ್ಞಾಪೂರ್ವಕವಾಗಿ ಹೇಗೆ ಆತ ಮುಸ್ಲಿಮ್ ವಿರೋಧಿಯಾಗಿರಲಿಲ್ಲವೋ ಹಾಗೆಯೇ ಮನು ವಿರೋಧಿಯೂ ಆಗಿರಲಿಲ್ಲ. ಆದರೆ ಶಿವಾಜಿಯು ಶೈವ ಪಂಥದವನಾಗಿದ್ದ. ಆದುದರಿಂದ ಒಳಗೊಳಗೆ ವೈದಿಕ ಗುಂಪುಗಳು ಅವನನ್ನು ದ್ವೇಷಿಸಿದವು. ಆದರೂ ಶಿವಾಜಿಯ ಮನು ವಿರೋಧಿ ಗುರುತಿಸಬಹುದಾದ ನಿಲುವುಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದಾಗಿದೆ.
1. ಶೂದ್ರರು, ದಲಿತರಿಗೆ ಸೇನೆಯಲ್ಲಿ ಅವಕಾಶ:
ಮನುಸೃತಿಯ ಪ್ರಕಾರ ಶೂದ್ರರು ಅತಿ ಶೂದ್ರರು ಸೇನೆಗೆ ಸೇರಲು ಸಾಧ್ಯವಿಲ್ಲ. ಆದರೆ ಶಿವಾಜಿಯ ಸೇನೆಯಲ್ಲಿ ಶೂದ್ರರು ಮತ್ತು ದಲಿತರು ಬಹುಸಂಖ್ಯೆಯಲ್ಲಿದ್ದರು. ರೈತರನ್ನು, ಬುಡಕಟ್ಟು ಜನರನ್ನು ಸಂಘಟಿಸಿ ಅವನು ಸೇನೆಯನ್ನು ಕಟ್ಟಿದ. ಜೊತೆಗೆ ಮ್ಲೇಚ್ಛರು ಎಂದು ಬ್ರಾಹ್ಮಣರು ತಿಳಿದುಕೊಂಡಿರುವ ಮುಸ್ಲಿಮರು ಶಿವಾಜಿಗೆ ತುಂಬಾ ಆಪ್ತರಾಗಿದ್ದರು. ಅವರ ವಿಶೇಷ ಅಂಗರಕ್ಷಕ ಪಡೆಯಲ್ಲಿ ಮುಸ್ಲಿಮರು ಅಥವಾ ಮ್ಲೇಚ್ಛರು ದೊಡ್ಡ ಸಂಖ್ಯೆಯಲ್ಲಿದ್ದರು.
2. ಸತಿ ಪದ್ಧತಿಯನ್ನು ವಿರೋಧಿಸಿದ:
ಶಿವಾಜಿಯ ತಂದೆ ಶಾಹಜಿ ಸತ್ತಾಗ ಜೀಜಾಬಾಯಿ ಸತಿ ಹೋಗಲು ನಿರ್ಧರಿಸಿದಳು. ಆದರೆ ಇದನ್ನು ಶಿವಾಜಿ ವಿರೋಧಿಸಿ, ತನ್ನ ತಾಯಿಯನ್ನು ರಕ್ಷಿಸಿಕೊಂಡ. ಈ ಮೂಲಕ ಸತಿ ಪದ್ಧತಿಯನ್ನು ಖಾಸಗಿ ನೆಲೆಯಲ್ಲೇ ವಿರೋಧಿಸಿದ. ಹಾಗೆಯೇ ಸಮುದ್ರ ದಾಟಬಾರದು ಎಂಬ ವಾದವನ್ನು ಮೀರಿ, ಸಮುದ್ರದಲ್ಲಿ ನೌಕಾ ಸೇನೆಯನ್ನು ಕಟ್ಟಿದ. ಅದರ ನೇತೃತ್ವವನ್ನು ಮುಸ್ಲಿಮ್ ಸರದಾರರಿಗೆ ವಹಿಸಿದ.
3. ಮತಾಂತರ:
ನೇತಾಜಿ ಪಾಲೇಕರ್ ಶಿವಾಜಿಯ ಸೇನೆಯಲ್ಲಿದ್ದ ಅಧಿಕಾರಿಗಳಲ್ಲೊಬ್ಬ. ಆದರೆ ಅವನು ಬಹು ವರ್ಷಗಳ ಹಿಂದೆಯೇ ಇಸ್ಲಾಮ್ ಸ್ವೀಕರಿಸಿದ್ದ. ಕಾಲಾನಂತರ ಇವನು ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸಲು ಇಷ್ಟಪಟ್ಟಾಗ ಶಿವಾಜಿ ಅದನ್ನು ಹಾರ್ದಿಕವಾಗಿ ಅಂಗೀಕರಿಸಿದ. ಹಾಗೆಯೇ ಬಾಜಾಜಿ ನಿಂಬಾಳ್ಕರ್ ಸುಮಾರು 40 ವರ್ಷಗಳ ಕಾಲ ಮುಸ್ಲಿಮಾಗಿ ಬದುಕಿದ್ದ. ಹೋರಾಟದ ಸಂದರ್ಭದಲ್ಲಿ ಕಾಲು ಕಳೆದುಕೊಂಡು ಎಲ್ಲರಿಂದ ಕುಂಟನೆಂದು ಅಪಮಾನಕ್ಕೂ ಒಳಗಾಗಿದ್ದ. ಅವನನ್ನು ಮರು ಮತಾಂತರಗೊಳಿಸಿದ ಶಿವಾಜಿ, ತನ್ನ ಅಳಿಯನನ್ನಾಗಿ ಮಾಡಿಕೊಂಡ.
4. ದಲಿತ ಹೆಣ್ಣನ್ನು ವಿವಾಹವಾದ:
ಶಿವಾಜಿಯ ಪಟ್ಟಾಭಿಷೇಕಕ್ಕೆ ಸ್ಥಳೀಯ ಬ್ರಾಹ್ಮಣರು ವಿರೋಧವನ್ನು ವ್ಯಕ್ತಪಡಿಸಿದ್ದನ್ನು ಈ ಹಿಂದೆ ಬರೆದಿದ್ದೇನೆ. ಇದಾದ ಬಳಿಕ ಶೈವರು ಮತ್ತೊಮ್ಮೆ ಶಿವಾಜಿಗೆ ಪಟ್ಟಾಭಿಷೇಕ ಮಾಡಿದರು. ಶಾಕ್ತ ನಿಯಮದ ಪ್ರಕಾರ ಪಟ್ಟಾಭಿಷೇಕದ ಸಂದರ್ಭದಲ್ಲಿ ಅತಿಶೂದ್ರ ಅಥವಾ ದಲಿತ ಹೆಣ್ಣನ್ನು ಶಿವಾಜಿ ಮದುವೆಯಾದ. ಈ ಮೂಲಕ ಮನುಸ್ಮತಿಯ ಅಡಿಗಲ್ಲನ್ನೇ ಅಲುಗಾಡಿಸಿದ.

5. ಬ್ರಾಹ್ಮಣರ ಕಗ್ಗೊಲೆ:
ಶಿವಾಜಿ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಅಡ್ಡಿ ಬಂದವರನ್ನೆಲ್ಲ ಕತ್ತರಿಸಿ ಹಾಕಿದ. ಮುಸ್ಲಿಮರು- ಬ್ರಾಹ್ಮಣರೆಂದು ಅವನು ನೋಡಲಿಲ್ಲ.
ಶಿವಾಜಿಯ ಇತಿಹಾಸದಲ್ಲಿ ಅಫ್ಝಲ್ ಖಾನ್‌ನನ್ನು ಆತ ಕೊಂದಿರುವುದು ಬಹುಮುಖ್ಯ ಪ್ರಸಂಗ. ಸಂಘಪರಿವಾರದ ಕಣ್ಣಲ್ಲಿ ಇದು ಹಿಂದು- ಮುಸ್ಲಿಮ್ ಮುಖಾಮುಖಿ. ಆದರೆ ಗಮನಿಸಿ. ಅಂದು ಅಫ್ಜಲ್‌ಖಾನ್‌ನ ಅಂದಿನ ಅಂಗರಕ್ಷಕನಾಗಿ ಬಂದುದು ಒಬ್ಬ ಬ್ರಾಹ್ಮಣ. ಅವನ ಹೆಸರು ಕೃಷ್ಣಜೀ ಭಾಸ್ಕರ್ ಕುಲಕರ್ಣಿ. ಅಫ್ಝಲ್ ಖಾನ್‌ನನ್ನು ಶಿವಾಜಿ ಕೊಲ್ಲುತ್ತಿರುವ ಸಂದರ್ಭದಲ್ಲಿ ಈ ಕುಲಕರ್ಣಿ ಶಿವಾಜಿಯ ಮೇಲೆ ಹಿಂದಿನಿಂದ ದಾಳಿ ನಡೆಸಿದ. ಶಿವಾಜಿಯ ತಲೆಗೆ ಗಾಯ ಮಾಡಿದ. ಆಗ ಶಿವಾಜಿ ಮತ್ತು ಆತನ ಅಂಗರಕ್ಷಕ ಇಬ್ರಾಹೀಂ ಖಾನ್ ಜೊತೆ ಸೇರಿ ಕೃಷ್ಣಜೀ ಭಾಸ್ಕರ್ ಕುಲಕರ್ಣಿಯನ್ನು ಬರ್ಬರವಾಗಿ ಕೊಂದು ಹಾಕಿದರು.

  ಶಿವಾಜಿ ಮಾತ್ರವಲ್ಲ, ಶಿವಾಜಿಯ ಮಗ ಸಾಂಭಾಜಿ ಕೂಡ ಬ್ರಾಹ್ಮಣರನ್ನು ಕೊಂದ ಕುರಿತಂತೆ ಇತಿಹಾಸದಲ್ಲಿ ದಾಖಲೆಗಳು ಸಿಗುತ್ತವೆ. ಸಾಂಭಾಜಿಗೆ ಕೆಲ ಬ್ರಾಹ್ಮಣರು ಸೇರಿ ವಿಷಪ್ರಾಷಣ ಪ್ರಯತ್ನ ನಡೆಸಿ ದಾಗ, ಸಿಟ್ಟಿಗೆದ್ದ ಸಾಂಭಾಜಿ ಬ್ರಾಹ್ಮಣರ ಹತ್ಯಾಕಾಂಡವನ್ನೇ ನಡೆಸಿದ್ದ. ಶಿವಾಜಿಯನ್ನೂ ಅವನ ಮಗನನ್ನೂ ಸೋಲಿಸಿ ಆಗ್ರಾದ ಸೆರೆಯಲ್ಲಿಟ್ಟಿದ್ದು ಯಾವುದೇ ಮುಸ್ಲಿಮ್ ಅರಸನಲ್ಲ. ಅವನ ವಿರುದ್ಧ ಯುದ್ಧ ಘೋಷಿಸಿದವನು ಮಿರ್ಝಾ ರಾಜೇ ಜಯಸಿಂಹ, ಅಸಲಿ ರಜಪೂತ ಹಿಂದು. ಮೊಗಲರ ಸೇನಾಪತಿ ಈತ. ಶಿವಾಜಿಯ ವಿರುದ್ಧ ಹೋರಾಡುವಾಗ ಜಯಸಿಂಹನ ಸೇನೆಯಲ್ಲಿ ಜಾಠರು, ಮರಾಠರು, ರಜಪೂತರಿದ್ದರು. ರಾಜಾ ರಾಯಸಿಂಗ್, ಸುಜನ್ ಸಿಂಗ್, ಹರಿಭಾನ್ ಸಿಂಗ್, ಉದಯಭಾನ್ ಗೌರ, ಶೇರ್ ಸಿಂಹ್ ರಾಥೋಡ್, ಚತುರ್ಭುಜ ಚೌಹಾನ್, ಮಿತ್ರಸೇನ, ಬಾಜಿರಾವ ಚಂದ್ರರಾವ್ ಇವರೆಲ್ಲ ಶಿವಾಜಿಯ ವಿರುದ್ಧ ಹೋರಾಡಿದ್ದರು. ಇದೇ ಸಂದರ್ಭದಲ್ಲಿ ಮುಸ್ಲಿಮ್ ಸರದಾರರು ಶಿವಾಜಿಯ ರಕ್ಷಣೆಯಲ್ಲಿ ಬಹುದೊಡ್ಡ ಪಾತ್ರವಹಿಸಿದ್ದರು.

ಅಂದ ಹಾಗೆ ರಾಜಾ ಜಯಸಿಂಹ, ಮೊಗಲರ ಪರವಾಗಿ ಶಿವಾಜಿಯ ವಿರುದ್ಧ ಯುದ್ಧಕ್ಕೆ ಬಂದಾಗ ಶಿವಾಜಿಯ ಸೋಲಿಗೆ ಏನು ಮಾಡಬೇಕು ಎಂದು ಸ್ಥಳೀಯ ಬ್ರಾಹ್ಮಣರ ಸಲಹೆ ಕೇಳಿದನಂತೆ. ಬಳಿಕ ಬ್ರಾಹ್ಮಣರ ಸಲಹೆಯಂತೆ ಕೋಟಿ ಚಂಡಿಹವನ ಮಾಡಿದ ಕತೆಯೂ ಇತಿಹಾಸದಲ್ಲಿ ದಾಖಲಾಗಿದೆ. ಹನ್ನೊಂದು ಕೋಟಿ ಲಿಂಗ ತಯಾರಿಸಲಾಯಿತಂತೆ. ಕಾಮನಾರ್ಥಕ್ಕಾಗಿ ಬಗಲಾಮುಖಿ ಕಾಳರಾತ್ರಿ ಪ್ರೀತ್ಯರ್ಥ ಜಪ ಮಾಡಲಾಯಿತಂತೆ. ನಾನೂರು ಬ್ರಾಹ್ಮಣರು ಈ ಯಾಗದಲ್ಲಿ ಭಾಗವಹಿಸಿದರು. ಇದಕ್ಕಾಗಿ ಜಯಸಿಂಹ ಎರಡು ಕೋಟಿ ರೂಪಾಯಿಯನ್ನು ತೆಗೆದಿರಿಸಿದನಂತೆ. ಮೂರು ತಿಂಗಳ ಕಾಲ ಈ ಅನುಷ್ಠಾನ ನಡೆಯಿತು. ಅನುಷ್ಠಾನದ ಪೂರ್ಣಾಹುತಿ ಮುಗಿಸಿ ಬ್ರಾಹ್ಮಣರಿಗೆ ದಾನ ದಕ್ಷಿಣೆ ನೀಡಿ ಅನ್ನ ಸಂತರ್ಪಣೆ ಮಾಡಲಾಯಿತು. ಇದೇ ಯುದ್ಧದಲ್ಲಿ ಶಿವಾಜಿ ಮತ್ತು ಅವನ ಮಗ ಸಾಂಭಾಜಿ ಸೋತು ಜಯಸಿಂಹನಿಗೆ ಸೆರೆ ಸಿಕ್ಕರು. 


ಆಕರ ಗ್ರಂಥ: ಸರ್ಕಾರ್ ಜೆ.ಎನ್.ಶಿವಾಜಿ ಎಂಡ್ ಹಿಸ್ ಟೈಮ್ಸ್
ಗ್ರಾಂಡ್ ಡಫ್-ಹಿಸ್ಟರಿ ಆಫ್ ಮರಾಠಾಸ್
ಭಾವರೆ ಎನ್. ಜಿ: ಕಾಸ್ಟ್ಸ್ ಫೇವರ್ಸ್‌, ಪ್ಯಾಟರ್ನೇಜ್ ಎಂಡ್ ಪ್ರಿವಿಲೇಜಸ್ ಅಂಡರ್ ಶಿವಾಜಿಸ್ ರೂಲ್
ಶಕಕರ್ತಾ ಶಿವಾಜಿ
ಗೋವಿಂದ ಪಾನಸರೆ ‘ಶಿವಾಜಿ ಯಾರು?’

Tuesday, December 4, 2012

ಗುರಿತಲುಪದ ತಲಾಶ್

ಒಂದು ಆ್ಯಕ್ಸಿಡೆಂಟಿನ ಸಣ್ಣ ಎಳೆಯನ್ನು ಇಟ್ಟುಕೊಂಡು ತನಿಖೆಗಿಳಿಯುವ ಪೊಲೀಸ್ ಅಧಿಕಾರಿಯೊಬ್ಬ ಒಂದು ಕೊಲೆ ಪ್ರಕರಣವನ್ನು ಬಯಲುಗೆಳೆಯುವುದಲ್ಲದೆ, ತನ್ನೊಳಗಿನ ಸಂಘರ್ಷಗಳಿಂದ ಪಾರಾಗಿ ಹೊಸ ಬದುಕಿಗೆ ಅಣಿಯಾಗುವುದು ತಲಾಶ್ ಚಿತ್ರದ ಮುಖ್ಯ ಕತೆ. ಈ ಕತೆಯ ಕೇಂದ್ರ ಬಿಂದು ಒಬ್ಬ ವೇಶ್ಯೆ. ಆಕೆಯ ಹೆಸರು ರೋಸಿ ಅಥವಾ ಸಿಮ್ರಾನ್(ಕರೀನಾ ಕಪೂರ್). ಈ ಚಿತ್ರದ ಸಸ್ಪೆನ್ಸ್ ಅವಳೇ ಆಗಿದ್ದಾಳೆ.

ಕಣ್ಣೆದುರೇ ನೀರಿನಲ್ಲಿ ಮುಳುಗಿ ಸತ್ತ ಪುಟ್ಟ ಮಗನ ಕುರಿತು ಪಾಪಪ್ರಜ್ಞೆಯಿಂದ ನರಳುವ ಸುರ್‌ಜನ್ ಸಿಂಗ್ ಶೆಖಾವತ್, ಅದರಿಂದ ಪಾರಾಗಲು ರಾತ್ರಿ ನಿದ್ದೆ ಗೆಟ್ಟು  ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿ. ಇಂತಹ ಹೊತ್ತಿನಲ್ಲೇ ಸಿನಿಮಾ ನಟ ಅರ್ಮಾನ್ ಕಪೂರ್ ಒಂದು ನಿಗೂಢ ಅಪಘಾತದಲ್ಲಿ ಸಾಯುತ್ತಾನೆ. ಅದರ ತನಿಖೆಯನ್ನು ಮಾಡುವ ಹಂತದಲ್ಲಿ ಶೆಖಾವತ್ಗೆ ನೆರವವಾಗುವವಳೇ ವೇಶ್ಯೆ ರೋಸಿ. ಇಲ್ಲಿಂದ ಮುಂಬಯಿಯ ಒಂದೊಂದೇ ಪಾತ್ರಗಳನ್ನು ಚಿತ್ರ ಪರಿಚಯಿಸುತ್ತಾ ಹೋಗುತ್ತದೆ. ಒಂದು ರೀತಿಯಲ್ಲಿ ‘ಕಹಾನಿ’ ಚಿತ್ರದಂತೆಯೇ ತಲಾಶ್ ಕೂಡ ಬೆಳೆಯುತ್ತಾ ಹೋಗುತ್ತದೆ. ಅಲ್ಲಿ ಕೊಲ್ಕತಾ ಮುಖ್ಯ ವಸ್ತುವಾದರೆ, ಇಲ್ಲಿ ಮುಂಬಯಿ ರಾತ್ರಿಗಳು ಮುಖ್ಯ ಪಾತ್ರವಹಿಸುತ್ತದೆ. ಆ ರಾತ್ರಿಯ ಜಗಮಗಿಸುವ ಬೆಳಗಿನಲ್ಲೇ ಶೆಖಾವತ್‌ನ ಬದುಕಿನ ತಲಾಶ್ ನಡೆಯುತ್ತದೆ. ಆದರೆ ಕಹಾನಿ ಚಿತ್ರದ ಜನಪ್ರಿಯ ಮಾದರಿಯ ಸಸ್ಪೆನ್ಸ್ ಇಲ್ಲಿಲ್ಲ. ಕಹಾನಿಯ ಕ್ಲೈಮಾಕ್ಸ್ ಸ್ಫೋಟಿಸಿದಂತೆ ಇಲ್ಲಿ ತಲಾಶ್ ಸ್ಫೋಟಿಸುವುದಿಲ್ಲ.


 ಒಂದನ್ನು ನಾವು ಸ್ಪಷ್ಟವಾಗಿಟ್ಟುಕೊಳ್ಳಬೇಕಾಗಿದೆ. ಇದು ಜನಪ್ರಿಯ ಮಾದರಿಯ ಸಸ್ಪೆನ್ಸ್ ಥ್ರಿಲ್ಲರ್ ಅಲ್ಲ. ಇದರ ಜೊತೆಗೆ ಹೇಳಬೇಕಾದುದನ್ನು ಹೇಳುವ ಸಂದರ್ಭದಲ್ಲಿ, ನಿರ್ದೇಶಕಿ ಚಿತ್ರದಲ್ಲಿ ಬಿಗಿಯನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ನಿಜವಾದ ಚಿತ್ರ-ಕತೆಯಲ್ಲಿರುವ ತೊಡಕುಗಳು. ಅಲ್ಲಲ್ಲಿ ಚಿತ್ರದ ನಿರೂಪಣೆ ಬೋರ್ ಎನಿಸುತ್ತದೆ. ಆದುದರಿಂದಲೇ ತಲಾಶ್ ಚಿತ್ರ ಒಟ್ಟು ಸಿನಿಮಾವಾಗಿ ಇಷ್ಟವಾಗುವುದಕ್ಕಿಂತ, ಇಲ್ಲಿನ ಕೆಲವು ಬಿಡಿ ಬಿಡಿ ಪಾತ್ರಗಳು ಕಟ್ಟಿಕೊಡುವ ದೃಶ್ಯಗಳಷ್ಟೇ ನಮ್ಮನ್ನು ಹೆಚ್ಚು ತಟ್ಟುತ್ತವೆ. ಒಂದು ಸಸ್ಪೆನ್ಸ್ ಚಿತ್ರದ ನಿರೀಕ್ಷೆಯಿಟ್ಟು ಚಿತ್ರವನ್ನು ನೋಡುತ್ತಾ ಹೋದರೆ, ಕ್ಲೈಮಾಕ್ಸ್‌ನ ನಿರಾಸೆ ನಮ್ಮನ್ನು ಎತ್ತಿ ಕುಕ್ಕುತ್ತದೆ. ಚಿತ್ರ ಏನೋ ಹೇಳಲು ಹೋಗಿ ದಾರಿ ತಪ್ಪಿ ಬಿಟ್ಟಿತೆ ಎಂಬ ಅನಿಸಿಕೆ ಚಿತ್ರಮಂದಿರದಿಂದ ಹೊರತೆರಳುವ ನಮ್ಮನ್ನು ಕಾಡುತ್ತದೆ. ತಲಾಶ್ ತನ್ನ ನಿಜವಾದ ಗುರಿಯನ್ನು ತಲುಪಿಲ್ಲವೆಂಬ ಭಾವನೆ ನಮ್ಮನ್ನು ಕಾಡುತ್ತದೆ.


 ಇಲ್ಲಿ ನಾಯಕ ಶೆಖಾವತ್ ಬರೇ ಕೊಲೆಯನ್ನು ಪತ್ತೆ ಮಾಡುವುದಕ್ಕಾಗಿ ಇರುವ ಅಧಿಕಾರಿಯಲ್ಲ. ಒಂದು ಭಿನ್ನ ಮನಸ್ಥಿತಿಯುಳ್ಳ, ಸ್ವಂತ ವ್ಯಕ್ತಿತ್ವವುಳ ಪೊಲೀಸ್ ಅಧಿಕಾರಿ ಆತ. ಆ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ ಆಮಿರ್ ಅಭಿನಂದನಾರ್ಹರು. ಆಮಿರ್ ಬಿಟ್ಟರೆ, ಚಿತ್ರದ ಇನ್ನೊಂದು ಹೆಗ್ಗಳಿಕೆ ನವಾಜುದ್ದೀನ್ ಸಿದ್ದೀಕಿ. ಪಿಂಪ್‌ನ ಪಾತ್ರಕ್ಕೆ ಗರಿಷ್ಠ ನ್ಯಾಯವನ್ನು ನೀಡಿದ್ದಾರೆ ಅವರು. ಶೆಖಾವತ್ ಪತ್ನಿಯ ಪಾತ್ರದಲ್ಲಿ ರಾಣಿ ಮುಖರ್ಜಿ ಸಹನೆಯಿಂದ ನಟಿಸಿದ್ದಾರೆ. ಪಾತ್ರದ ಗಾಂಭೀರ್ಯಕ್ಕೆ ಒಪ್ಪುವಂತಿದೆ ಅವರ ವ್ಯಕ್ತಿತ್ವ. ರಾಮ್ ಸಂಪತ್ ಸಂಗೀತ ಅಲ್ಲಲ್ಲಿ ಕುಂಟುವ ಚಿತ್ರವನ್ನು ಮುನ್ನಡೆಸುತ್ತದೆ. ಫರ್ಹಾನ್ ಅಖ್ತರ್ ಸಂಭಾಷಣೆ ಹರಿತವಾಗಿದೆ. ತಲಾಶ್ ತನ್ನ ಗುರಿಯನ್ನು ತಲುಪದೇ ಇದ್ದರೂ, ಒಂದು ಒಳ್ಳೆಯ ಚಿತ್ರ ಕೊಡುವ ಪ್ರಯತ್ನ ಮಾಡಿದ್ದಾರೆಂಬ ಕಾರಣಕ್ಕೆ ತಂಡವನ್ನು ಅಭಿನಂದಿಸಬೇಕಾಗಿದೆ.

Monday, December 3, 2012

ಒಂದು ನಿಮಿಷ ಮತ್ತು ಇತರ ಕತೆಗಳು

ಹಬ್ಬ
ಒಂದು ಪುಟ್ಟ ಗುಡಿಸಲಲ್ಲಿ ದಂಪತಿ.
ಅವರಿಗೆ ಮಕ್ಕಳಿರಲಿಲ್ಲ. ಒಂದು ಆಡನನ್ನು ಸಾಕುತ್ತಿದ್ದರು.
ಹಬ್ಬ ಬಂತು. ಬಡವರು. ಉಣ್ಣುವುದಕ್ಕೆ ಅನ್ನವಿಲ್ಲ.
ಯಾರೋ ಬಂದು ಕೇಳಿದರು ‘‘ನಿನ್ನ ಆಡನ್ನು ಕೊಡು...ಮೂರು ಸಾವಿರ ರೂ. ಕೊಡುತ್ತೇವೆ....’’
ದಂಪತಿ ಆಡನ್ನೇನೋ ಮಾರಿದರು.
ಆದರೆ ಹಬ್ಬವನ್ನು ಆಚರಿಸಲಾಗದೆ ಇಡೀ ದಿನ ದುಃಖದಲ್ಲಿ ಕಳೆದರು.

ಸಂಬಂಧ
ಅವನೊಬ್ಬ ಅನಾಥ. ದಿಕ್ಕಿಲ್ಲದವನು. ಸತ್ತು ಹೋದ.
ಯಾರೋ ಹೇಳಿದರು ‘‘ಅವನ ಗೋಣಿಚೀಲದ ತುಂಬಾ ದುಡ್ಡಿದೆ’’
ಅದ ಕೇಳಿದ್ದೇ...ನೂರಾರು ಜನ ಬಂದರು. ಸಂಬಂಧಗಳು ಕೂಡಿಕೊಂಡವು.
ಎಲ್ಲರೂ ಹೆಣಕ್ಕೆ ಹೆಗಲು ಕೊಟ್ಟರು. ಸಂಸ್ಕಾರ ಮುಗಿದದ್ದೇ ಗೋಣಿ ಚೀಲಕ್ಕಾಗಿ ಬಡಿದಾಟವಾಯಿತು.
ನೋಡಿದರೆ...
ಚೀಲದೊಳಗೆ ಹರಿದ ಚಿಂದಿ ಮಾತ್ರ ಇತ್ತು.
ವದಂತಿ ಹಬ್ಬಿಸಿದಾತ ಮರೆಯಲ್ಲಿ ನಿಂತು ಕಿಸಕ್ಕನೆ ನಕ್ಕ.

ಕನ್ನಡಿ
ತಲೆಯಲ್ಲಿ ಒಂದು ಕೂದಲು ಹಣ್ಣಾಗಿತ್ತು.
ಕಳೆದ ಒಂದು ವಾರದಿಂದ ಅದನ್ನು ಕಿತ್ತು ಹಾಕಲು ಪ್ರಯತ್ನಿಸುತ್ತಿದ್ದೆ.
ಕಪ್ಪು ಕೂದಲುಗಳ ನಡುವೆ ಅದು ಜಾರಿಕೊಳ್ಳುತ್ತಿತ್ತು. ಬಚ್ಚಿಟ್ಟುಕೊಳ್ಳುತ್ತಿತ್ತು.
ಎಳೆದರೂ ಇನ್ನಾವುದೋ ಕಪ್ಪು ಕೂದಲು ಕಿತ್ತು ಬರುತ್ತಿತ್ತು.
ನಿನ್ನೆ ರಾತ್ರಿ ಅದು ಹೇಗೋ ಕನ್ನಡಿಯ ಮುಂದೆ ಈ ಬಿಳಿ ಕೂದಲು ನನ್ನ ಕೈಗೆ ಸಿಕ್ಕು ಬಿಟ್ಟಿತು. ಎಳೆದೇ ಬಿಟ್ಟೆ. ಆ ಹಣ್ಣು ಕೂದಲು ಕೊನೆಗೂ ನನ್ನ ಕೈ ಸೇರಿತು.
ಮರುದಿನ ಜಂಬದಿಂದ ಕನ್ನಡಿ ನೋಡಿದರೆ ನಾಲ್ಕು ಬಿಳಿ ಕೂದಲು ನನ್ನ ನೋಡಿ ನಗುತ್ತಿತ್ತು.

ಒಂದು ನಿಮಿಷ
ಗಲ್ಲು ವಿಧಿಸುವ ಕಟುಕನನ್ನು ಯಾರೋ ಕೇಳಿದರು ‘‘ಬರೇ ಒಂದು ನಿಮಿಷದ ಸಾಯಿಸುವ ಕೆಲಸಕ್ಕೆ ನಿನಗೆ ಎರಡು ಸಾವಿರ ರೂಪಾಯಿ ಕೊಡ್ತಾರಾ?’’
‘‘ಸಾಯಿಸುವ ಕೆಲಸಕ್ಕಲ್ಲಪ್ಪ...ಆ ಒಂದು ನಿಮಿಷ ನಾನೂ ಅವನೊಂದಿಗೆ ಸಾಯಬೇಕಲ್ಲ...ಅದಕ್ಕೆ ಅವರು ಕೊಡುವ ಹಣ ಅದು...’’

ಅಚ್ಚರಿ
ಹಳ್ಳಿಯ ಹುಡುಗ ನಗರದ ತನ್ನ ಬಂಧುಗಳ ಮನೆಗೆ ಹೋಗಿದ್ದ.
ನಗರದ ಹುಡುಗ ಅಚ್ಚರಿಯಿಂದ ಕೇಳಿದ ‘‘ನಿಮ್ಮ ಊರಿನಲ್ಲಿ ನದಿಯಿದೆಯಂತೆ ಹೌದಾ?’’
ಹಳ್ಳಿ ಹುಡುಗ ಅಷ್ಟೇ ಅಚ್ಚರಿಯಿಂದ ಪ್ರಶ್ನಿಸಿದ ‘‘ಹೌದು. ಅದರಲ್ಲೇನು ವಿಶೇಷ?’’

ಸಂಕಟ 

ಗಲ್ಲು ವಿಧಿಸುವ ಕಟುಕನನ್ನು ಹುಡುಗನೊಬ್ಬ ಕೇಳಿದ ‘‘ಸಾಯುವವನ ಒದ್ದಾಟ ನೋಡುವುದಕ್ಕೆ ತುಂಬಾ ಸಂಕಟವಾಗಿರುವುದಿಲ್ವೆ?’’
ಕಟುಕ ಹೇಳಿದ ‘‘ಸಾಯಿಸುವವನ ಒದ್ದಾಟ ಅದಕ್ಕಿಂತಲೂ ಸಂಕಟವಾಗಿರುತ್ತದಪ್ಪಾ’’

Saturday, December 1, 2012

ಜೂಜುಗಾರನ ಹಾಡು....

೧ 
ನಾನೊಬ್ಬ ಜೂಜುಗಾರ
ಕಾಣುವ ದೊರೆಗಳನ್ನು ನಂಬದೆ
ಕಾಣದ ನಿನ್ನ ಮೇಲೆ
ನನ್ನದೆಲ್ಲವನ್ನು ಹೂಡಿದೆ...

ಭಕ್ತಿಯೆನ್ನೂದು
ಜೂಜಿನ ಚಟದಂತೆ
ನನ್ನನ್ನು ಅಂಟಿಕೊಂಡಿದೆ ದೊರೆಯೇ...
ಕಳೆದುಕೊಂಡಷ್ಟು 
ಇನ್ನಷ್ಟು ಕಳೆದು ಕೊಳ್ಳಲು
ಮನಸ್ಸು ಚಡಪಡಿಸುತ್ತಿದೆ...

ಕಳೆದು ಕೊಳ್ಳುವವರೆಗೆ
ಕಳೆದು ಕೊಳ್ಳುವ
ಸುಖ ನನಗೆ
ಗೊತ್ತಿರಲಿಲ್ಲ ನನ್ನ ದೊರೆಯೇ...

ಒಬ್ಬ ಜೂಜುಗಾರ
ಯಾರನ್ನು ನಂಬಿ
ತನ್ನದನ್ನೆಲ್ಲ ಒತ್ತೆ ಇಟ್ಟು ಆಡಿದ...?
ಕನಿಷ್ಠ
ಆ ಜೂಜುಗಾರನಿಗಿರುವ
ನಿಯತ್ತಾದರೂ ನನ್ನದಾಗಲಿ  ದೊರೆಯೇ,
ನನ್ನ ಬದುಕಿನ ಕಟ್ಟ ಕಡೆಯ
ಕವಡೆಯನ್ನೂ
ಇಟ್ಟು ಆಡುವ ಭಕ್ತಿ ನನ್ನದಾಗಲಿ...

ಭಕ್ತಿ ಎಂದರೆ
ಜೂಜು ಎನ್ನೋದು
ಗೊತ್ತಿರಲಿಲ್ಲ ದೊರೆಯೇ..
ಪಡೆದುಕೊಳ್ಳುತ್ತ
ಕಳೆದು ಕೊಳ್ಳುವ ಖುಷಿಗೆ
ನನ್ನನ್ನು ಇಗೋ
ತೆತ್ತು ಬಿಟ್ಟಿದ್ದೇನೆ...
ಪಣಕ್ಕಿಡಲು ಇನ್ನೇನು ಇಲ್ಲ
ಎನ್ನುವವರೆ
ಗೂ ಆಡುವ ಖುಷಿಯನ್ನು 
ನನಗೆ ಭಿಕ್ಷೆಯಾಗಿ ಕೊಡು