Tuesday, April 29, 2014

ಸುಖ ಮತ್ತು ಇತರ ಕತೆಗಳು

 ಬೆಂಕಿ-ನೀರು
ಅವನು ಅಗ್ನಿ ಶಾಮಕ ದಳದ ಸಿಬ್ಬಂದಿ.
ಮನೆ ಸೇರುವಾಗ ಒಡಲು ಬೆಂಕಿಯಂತೆ ಧಗಿಸುತ್ತಿರುತ್ತದೆ.
ಅವಳ ಒಂದು ಸಣ್ಣ ಮುಗುಳ್ನಗೆಗೆ ಧಗಿಸುವ ಬೆಂಕಿ ನಂದಿ ಹೋಗುವುದು.

ಸುಖ
ಹೆಂಡತಿ ಸದಾ ಗಂಡನಿಗೆ ಬಯ್ಯೋದು ರೂಢಿ.
ಬದುಕಿನುದ್ದಕ್ಕೂ ಆಕೆಯ ಬಯ್ಕಳನ್ನು ಕೇಳಿಯೇ ದಿನಗಳೆದ.
ಒಂದು ದಿನ ಪತ್ನಿ ತೀರಿ ಹೋದಳು.
ಅವನು ದಿಕ್ಕೆಟ್ಟ. ಮಗ ಕೇಳಿದ ‘‘ಏನಪ್ಪ...ಇದ್ದಷ್ಟು ದಿನ ಬೈಯ್ತೆನೆ ಇರ್ತಿದ್ಳು...ಯಾಕೇಂತ ಅಳ್ತೀಯಾ?’’
ಅಪ್ಪ ಉತ್ತರಿಸಿದ ‘‘ಅವಳಿಂದ ಬೈಸಿಕೊಳ್ಳೋ ಸುಖ ನಿನಗೇನು ಗೊತ್ತೋ?’’ ಎಂದು ಬಿಕ್ಕತೊಡಗಿದ.

ಕೊಲೆ
ನಕ್ಸಲರನ್ನು ನಿಯಂತ್ರಿಸಲೆಂದು ಪೊಲೀಸ್ ಪಡೆ ಹೋಯಿತು.
ಮೊದಲು ನಕ್ಸಲರನ್ನು ಕೊಂದರು. ಅವರಿಲ್ಲ ಎಂದಾಗ ಜನರನ್ನು ನಕ್ಸಲರೆಂದು ಅನುಮಾನಿಸಿ ಕೊಂದರು.
ಇದಾದ ಬಳಿಕ ತಮ್ಮದೇ ಸಹೋದ್ಯ್ಯೋಗಿಗಳನ್ನು ಕೊಂದರು.
ಕೊಲ್ಲುವುದು ಚಟದಂತೆ ಅಂಟಿಕೊಂಡಿತು.
ಯಾರೂ ಕೊಲ್ಲುವುದಕ್ಕೆ ಇಲ್ಲ ಎನ್ನುವುದು ಮನವರಿಕೆಯಾದಾಗ, ತಮ್ಮ ಹಣೆಗೇ ಗುಂಡಿಟ್ಟುಕೊಂಡರು.

ಕಳವು
ಧರ್ಮ ಗ್ರಂಥವೊಂದನ್ನು ಬಿಡಿಸಿಕೊಂಡು ಅವನು ಅದೇನೋ ಹುಡುಕುತ್ತಿದ್ದ.
ಸಂತ ಕೇಳಿದ ‘‘ಅದೇನು ಹುಡುಕುತ್ತಿದ್ದೀರಿ?’’
‘‘ಹಸಿದವನೊಬ್ಬ ಅನ್ನ ಕದ್ದು ಸಿಕ್ಕಿ ಬಿದ್ದಿದ್ದಾನೆ....ಧರ್ಮ ಏನು ಹೇಳುತ್ತದೆ ಎಂದು ಹುಡುಕುತ್ತಿದ್ದೇನೆ...’’
‘‘ಹಸಿದವನು ಕದ್ದ ಅನ್ನ ಅವನ ಸ್ವಂತದ್ದು. ಹೊಟ್ಟೆ ತುಂಬಿದವನ ಬಟ್ಟಲಲ್ಲಿ ಅನ್ನವಿದ್ದರೆ ಅದು ಕದ್ದದ್ದು....’’ ಹೀಗೆಂದು ಹೇಳಿ ಸಂತ ಮುಂದೆ ಹೋದ.

ಸುಳ್ಳು
ಭಗವದ್ಗೀತೆಯ ಮೇಲೆ ಕೈಯಿಟ್ಟು ಆತ ನ್ಯಾಯಾಲಯದಲ್ಲಿ ಸುಳ್ಳು ಹೇಳಿದ.
ಅವನು ತುಂಬಾ ಜಾಣ.
ಯಾಕೆಂದರೆ ಅವನ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯಾಗಿರಲಿಲ್ಲವಂತೆ.
ಹಾಗಾಗಿ ಸುಳ್ಳು ಹೇಳುವುದು ಅವನಿಗೆ ಸಲೀಸಾಯಿತಂತೆ.

ವಿಮಾನ
ಎಲ್ಲಿ ಕಳೆದು ಹೋಗಿದೆಯೋ ಅಲ್ಲೇ ಹುಡುಕಬೇಕು ಎನ್ನುವುದನ್ನು ಯಾವತ್ತೂ ಪಾಲಿಸಬೇಕಾಗಿಲ್ಲ.
ವಿಮಾನ ಆಕಾಶದಲ್ಲಿ ಕಳೆದು ಹೋಯಿತು ಎಂದು ಆಕಾಶದಲ್ಲಿ ಹುಡುಕಿದರೆ ಅದು ಸಿಗುತ್ತದೆಯೆ?
ಕೆಲವೊಮ್ಮೆ ಕಡಲಲ್ಲೂ ಹುಡುಕಬೇಕಾಗುತ್ತದೆ.

ಮುಟ್ಬೇಡ
ಹಿರಿಯರೊಬ್ಬರು ಹೇಳಿದ್ದು-
"ನಾನು ಸಣ್ಣ ಇರುವಾಗ ನನ್ನ ತಂದೆ ರೇಡಿಯೋ ತಂದರು. ಕುತೂಹಲದಿಂದ ಮುಟ್ಟಲು ಹೋದರೆ ತಂದೆ "ನಿಂಗೆ ಅದರ ಬಗ್ಗೆ ಏನೂ ಗೊತ್ತಿಲ್ಲ, ಮುಟ್ಬೇಡ" ಎಂದು ದಬಾಯಿಸಿದ. ಇದೀಗ ನನ್ನ ಮಗ ಮನೆಗೆ ಕಂಪ್ಯೂಟರ್ ತಂದಿದ್ದಾನೆ. ಕುತೂಹಲದಿಂದ ಮುಟ್ಟಲು ಹೋದರೆ ಅವನೂ ಕೂಡ "ನಿಂಗೆ ಅದರ ಬಗ್ಗೆ ಏನೂ ಗೊತ್ತಿಲ್ಲ ಮುಟ್ಬೇಡ" ಎಂದು ದಬಾಯಿಸುತ್ತಾನೆ"

Thursday, April 17, 2014

ಮುಸ್ಲಿಮರ ಕುರಿತಂತೆ ಹರಡಿದ ಕೆಲವು ಮಿಥ್ಯೆಗಳು

ಇಂಗ್ಲಿಷ್ ಮೂಲ: ನಿವೇದಿತಾ ಮೆನನ್ 

ಈ ಬಾರಿಯ ಸಾರ್ವತ್ರಿಕ ಚುನಾವಣೆ ಆರಂಭ ವಾಗಿರುವಂತೆಯೇ ಅಗತ್ಯವಾದುದನ್ನು ಹೇಳಲೇಬೇಕಾದ ಸಮಯ ಇನ್ನೊಮ್ಮೆ ಬಂದಿದೆ. ಭಾರೀ ಪ್ರಮಾಣದ ಪ್ರಚಾರಾಭಿನಯ, ಏಕತಾನತೆಗಳಿಂದ ಕೂಡಿದ ಸುಳ್ಳು ಮಾತು ಗಳಿಗೆ ಮತ್ತೆ ಜೀವ ಬಂದಿದೆ. ಈ ರಾಜಕೀಯ ಸಂದರ್ಭದಲ್ಲಿ ವಿಶ್ವದ ಅತಿ ಎರಡನೆ ದೊಡ್ಡ ಧರ್ಮವೊಂದರ ಅನುಯಾಯಿಗಳ ಬಗ್ಗೆ ಪಾಶ್ಚಿಮಾತ್ಯ ಮತ್ತು ಭಾರತೀಯ ಮಾಧ್ಯಮಗಳು ಹರಡುವ, ಹರಡಿರುವ ಸುಳ್ಳುಗಳು ಮೇಲಕ್ಕೆ ಬಂದು ನಿಲ್ಲುತ್ತವೆ. ಮಾಧ್ಯಮಗಳು ಮತ್ತು ರಾಜಕಾರಣಿಗಳು ಜಾಗತಿಕ ಮುಸ್ಲಿಮರ ಕುರಿತಂತೆ ಹರಡುತ್ತಿರುವ ಸುಳ್ಳುಗಳನ್ನು ಒಡೆಯುವ ಮತ್ತು ಸತ್ಯವನ್ನು ತೆರೆದಿಡುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ.

ಸುಳ್ಳು: ಮುಸ್ಲಿಂ ರಾಷ್ಟ್ರಗಳು ಎಂದೂ ಜಾತ್ಯತೀತವಲ್ಲ. ಮುಸ್ಲಿಮರು ಬಹುಸಂಖ್ಯಾತವಾಗಿರುವ ‘ತಮ್ಮ’ದೇಶಗಳಲ್ಲಿ ಅಲ್ಪಸಂಖ್ಯಾತರನ್ನು ಸಹಿಸುವುದಿಲ್ಲ. ಆದರೆ ಇತರ ದೇಶಗಳಲ್ಲಿ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಒತ್ತಾಯಿಸುತ್ತಾರೆ.

ನಿಜ: ಇಂಡೋನೇಶ್ಯ ವಿಶ್ವದ ಅತಿದೊಡ್ಡ ಮುಸ್ಲಿಂ ಬಾಹುಳ್ಯದ ದೇಶವಾಗಿದೆ. (ಒಟ್ಟು ಜನಸಂಖ್ಯೆ ಅಂದಾಜು 25 ಕೋಟಿ. ಪಾಕಿಸ್ತಾನಕ್ಕಿಂತ ಹೆಚ್ಚು.) ಇಂಡೋನೇಶ್ಯ ಒಂದು ಜಾತ್ಯತೀತ ಪ್ರಜಾಪ್ರಭುತ್ವವುಳ್ಳ ದೇಶವಾಗಿದೆ. ನಿಜವಾಗಿಯೂ ಅದರ ಜನಸಂಖ್ಯೆ ಭಾರತದ ಕನ್ನಡಿಯ ಪ್ರತಿಬಿಂಬವಾಗಿದೆ. ಶೇ.88 ಮುಸ್ಲಿಮರು, ಶೇ.9ಕ್ರೈಸ್ತರು, ಶೇ.3ಹಿಂದೂಗಳು, ಶೇ. 2 ಬೌದ್ಧರು ಇತ್ಯಾದಿ.. (ಭಾರತದಲ್ಲಿ ಶೇ.80 ಹಿಂದೂಗಳು, ಶೇ.13.4 ಮುಸ್ಲಿಮರು, ಶೇ.2.3 ಕ್ರೈಸ್ತರು ಇತ್ಯಾದಿಗಳಿ ದ್ದಾರೆ.)‘ವಿವಿಧತೆಯಲ್ಲಿ ಏಕತೆ’ ಇಂಡೋನೇಶ್ಯದ ರಾಷ್ಟ್ರೀಯ ಘೋಷಣೆಯಾಗಿದೆ. ಇಂಡೋನೇಶ್ಯದಲ್ಲೂ ಆಗಾಗ ದಂಗೆಗಳು, ಬಾಂಬ್ ಸ್ಫೋಟಗಳಾಗುತ್ತವೆ. ಭಾರತದಲ್ಲೂ ಆಗುತ್ತವೆ. ವಾಸ್ತವವಾಗಿ ಪ್ರಪಂಚದ ಮುಸ್ಲಿಂ ಬಾಹುಳ್ಯದ ಹೆಚ್ಚಿನ ದೇಶಗಳು ಜಾತ್ಯತೀತವಾಗಿವೆ. ಟರ್ಕಿ, ಮಾಲಿ, ಸಿರಿಯ, ನೈಗರ್ ಹಾಗೂ ಕಝಕಿಸ್ತಾನಗಳನ್ನು ಇದಕ್ಕೆ ಉದಾಹರಣೆ ನೀಡಬಹುದು. ಇಸ್ಲಾಂ ‘ರಾಷ್ಟ್ರೀಯ ಧರ್ಮ’ವಾಗಿದ್ದರೂ ಬಾಂಗ್ಲಾದೇಶ ಸರಕಾರ ಕಾನೂನಿನಲ್ಲಿ ಜಾತ್ಯತೀತವಾಗಿದೆ. ಇತರ ಅನೇಕ ದೇಶಗಳಲ್ಲೂ ಇದು ನಿಜವಾಗಿದೆ.
ವಿಶ್ವದ ಕೇವಲ 6 ದೇಶಗಳಷ್ಟೇ ತಮ್ಮ ಕಾನೂನು ರಚನೆಗೆ ಇಸ್ಲಾಂ ಆಧಾರವೆಂದು ಹೇಳುತ್ತಿವೆ. ಅವುಗಳ ಒಟ್ಟು ಜನಸಂಖ್ಯೆಯು ಇಂಡೋನೇಷ್ಯ, ಟರ್ಕಿ ಹಾಗೂ ಕಝಕಿಸ್ತಾನ ಗಳ ಒಟ್ಟು ಜನಸಂಖ್ಯೆಯಷ್ಟಿದೆ. ಎಂದರೆ, ಹೆಚ್ಚಿನ ಮುಸ್ಲಿಂ ಬಾಹುಳ್ಯದ ದೇಶಗಳು ಜಾತ್ಯತೀತವಾಗಿವೆ ಹಾಗೂ ಬಹುಸಂಖ್ಯಾತ ಮುಸ್ಲಿಮರು ಜಾತ್ಯತೀತ ಸರಕಾರಗಳ ಅಡಿಯಲ್ಲಿ ಬದುಕುತ್ತಿದ್ದಾರೆ.

ಸುಳ್ಳು: ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು.


ನಿಜ: ಭಾರತದಲ್ಲಿ ಭಯೋತ್ಪಾದಕರು ಯಾರೆಂಬ ಬಗ್ಗೆ ನಾವು ಸರಕಾರದ ವ್ಯಾಖ್ಯೆಯನ್ನು ಅಂಗೀಕರಿಸಿದರೂ, ಇದು ಸಂಪೂರ್ಣ ಸತ್ಯವಲ್ಲ. ಭಾರತದಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ವಯ ‘ಭಯೋತ್ಪಾದಕರೆಂದು’ ನಿಷೇಧಿಸಲಾಗಿರುವ ಮುಸ್ಲಿಂ ಸಂಘಟನೆಗಳು ಮೂರನೆ ಒಂದಕ್ಕಿಂತಲೂ ಕಡಿಮೆಯಿದೆ. ಅಂತಾರಾಷ್ಟ್ರೀಯವಾಗಿ ವಿಶ್ವದಲ್ಲಿ ಅತಿ ಹೆಚ್ಚು ಆತ್ಮಹತ್ಯಾ ದಾಳಿಗಳನ್ನು ನಡೆಸುವ ಗುಂಪು ಶ್ರೀಲಂಕಾದ ಎಲ್ಟಿಟಿಇಯಾಗಿದ್ದು, ಅವರ ಸದಸ್ಯರು ಹೆಚ್ಚಿನವರು ಹಿಂದೂಗಳು ಹಾಗೂ ಕ್ರೈಸ್ತ ಮೂಲದವರು.
ಮುಸ್ಲಿಂ ಸಂಘಟನೆಗಳು ಭಾರತದಲ್ಲಿ ಹೆಚ್ಚು ಹಿಂಸಾಚಾರ ನಡೆಸುತ್ತಿವೆಯೆಂಬುದೂ ಸತ್ಯವಲ್ಲ. ದಕ್ಷಿಣ ಏಷ್ಯಾದ ಭಯೋತ್ಪಾದನೆಯ ಪೋರ್ಟಲ್ ಒಂದರ ಪ್ರಕಾರ 2005ರಿಂದ 14ರ ಅವಧಿಯಲ್ಲಿ ಇದರ ಎರಡು ಪಾಲು ಜನರು ಈಶಾನ್ಯದ ಉಗ್ರವಾದಿ ಸಂಘಟನೆಗಳು ಹಾಗೂ ‘ಎಡಪಂಥೀಯ ತೀವ್ರವಾದಿಗಳ’ಭಯೋತ್ಪಾದಕ ಚಟುವಟಿಕೆಗಳಿಗೆ ಬಲಿಯಾಗಿ ದ್ದಾರೆ. ಇವೆಲ್ಲ ಮುಸ್ಲಿಮೇತರ ಸಂಘಟನೆಗಳಾಗಿದ್ದು, ಈಶಾನ್ಯದ ಅತಿದೊಡ್ಡ ಸಂಘಟನೆಯಾಗಿರುವ ಉಲ್ಫಾದಲ್ಲಿ ಹೆಚ್ಚು ಹಿಂದೂಗಳು ಹಾಗೂ ಮೇಲ್ಜಾತಿಗಳ ನಾಯಕತ್ವವಿದೆ.
 ಅಲ್ಲದೆ ಭಯೋತ್ಪಾದನೆಯ ಕುರಿತು ಸರಕಾರ ಉಪಯೋಗಿ ಸುತ್ತಿರುವ ವ್ಯಾಖ್ಯೆ ವಿರೋಧಾಭಾಸದಿಂದ ಕೂಡಿದೆ. ಬಾಂಬ್ ಸ್ಫೋಟದಿಂದ 20 ಮಂದಿಯನ್ನು ಕೊಲ್ಲುವುದು ಭಯೋತ್ಪಾದನೆ ಯೆಂದು ಪರಿಗಣಿಸಲ್ಪಡುತ್ತದೆ. ಆದರೆ, 1984ರಲ್ಲಿ ಸಾವಿರಾರು ಜನರ ಹತ್ಯೆ, 2002ರಲ್ಲಿ ಗುಜರಾತ್‌ನಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯ ಕೊಲೆ (ಅಥವಾ ಮುಝಫ್ಫರ್ ನಗರದಲ್ಲಿ)40 ಮಂದಿಯ ಹತ್ಯೆ, 2008ರಲ್ಲಿ ಒಡಿಶಾದಲ್ಲಿ 68 ಮಂದಿಯ ಹತ್ಯೆ...ಇತ್ಯಾದಿ) ಭಯೋತ್ಪಾದನೆ ಎನಿಸುವುದಿಲ್ಲ. ಎಲ್ಲ ಹಿಂಸಾಚಾರ ಘಟನೆಗಳಲ್ಲಿ ಯೋಜನೆ, ಶಸ್ತ್ರಾಸ್ತ್ರ ದಾಸ್ತಾನು ಹಾಗೂ ವ್ಯವಸ್ಥಿತ ದಾಳಗಳು ಒಳಗೊಂಡಿದ್ದವು. ಆದರೆ, ಅವುಗಳನ್ನೇಕೆ ಭಯೋತ್ಪಾದನೆಯೆಂದು ಪರಿಗಣಿಸಿಲ್ಲ?

ಸುಳ್ಳು: ಮುಸ್ಲಿಮರು ಸದಾ ಮೂಲಭೂತವಾದಿ ಗಳಾಗಿರುತ್ತಾರೆ ಹಾಗೂ ಇತರ ಮತೀಯರಿಗಿಂತ ಹೆಚ್ಚು ‘ಮತೀಯವಾದಿ’ ಗಳಾಗಿದ್ದಾರೆ.

ನಿಜ: ಇತ್ತೀಚೆಗಿನ ಚರಿತ್ರೆಯು ಇದು ಸುಳ್ಳೆಂದು ತೋರಿಸುತ್ತದೆ. ಈಗಿನ, ‘ಮುಸ್ಲಿಂ ಮೂಲಭೂತವಾದ’ ಎಲ್ಲಿಂದ ಬಂತೆಂಬುದನ್ನು ಅದು ಬಹಿರಂಗಪಡಿಸಿದೆ. ಕೇವಲ 40-60 ವರ್ಷಗಳ ಹಿಂದೆ ಭಾರೀ ಮುಸ್ಲಿಂ ಜನಸಂಖ್ಯೆಯ ವಿಶ್ವದ ಪ್ರಮುಖ ಪ್ರದೇಶಗಳಲ್ಲಿ- ಇಂಡೋನೇಶ್ಯ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಗಳಲ್ಲಿ-ಪ್ರಬಲ ರಾಜಕೀಯ ಶಕ್ತಿಯಾಗಿದ್ದುದು ಜಾತ್ಯತೀತ ವಾದಿ ಎಡಪಂಥೀಯರು. ಇದು ಹಲವು ರೂಪ ತಳೆಯಿತು. ಇಂಡೋನೇಶ್ಯದ ಕಮ್ಯುನಿಷ್ಟ್ ಪಕ್ಷ ಈಜಿಫ್ಟ್‌ನ ಸಿರಿಯ ಹಾಗೂ ಇರಾಕ್‌ನ ನಾಸಿರೈಟ್ಸ್ ಹಾಗೂ ಬಾತಿಸ್ಟ್ ಆಡಳಿತಗಳು, ಮುಹಮ್ಮದ್ ಮೊನ್ಸಾದೆಹ್‌ರ ಇರಾನ್ ಸರಕಾರ...ಇತ್ಯಾದಿ ಈ ರಾಷ್ಟ್ರಗಳಲ್ಲಿ ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ-ತಾವು ವಿರೋಧಿಸು ತ್ತಿರುವ ಜಾತ್ಯತೀತವಾದಿ ಎಡಪಂಥೀಯರನ್ನು ಮಣಿಸಲೆಂದೇ, ಬಲಪಂಥೀಯ ಹಾಗೂ ಮತೀಯ ಮೂಲಭೂತವಾದಿ ಸಂಘಟನೆಗಳನ್ನು ಪ್ರಾಯೋಜಿಸಿ, ಆರ್ಥಿಕ ಹಾಗೂ ಶಸ್ತ್ರಾಸ್ತ್ರ ನೆರವು ನೀಡಿ ಬೆಳೆಸಿದವರು ಅಮೆರಿಕ ಹಾಗೂ ಅದರ ಗ್ರಾಹಕ ರಾಷ್ಟ್ರಗಳು (ಸೌದಿ ಅರೇಬಿಯ ಇತ್ಯಾದಿ). ಪಿಎಲ್‌ಒವನ್ನು ವಿರೋಧಿಸಲು ಹಮಾಸನ್ನು ಬೆಳೆಸಿದುದರಲ್ಲಿ ಇಸ್ರೇಲ್‌ನ ಪಾತ್ರವು ಚೆನ್ನಾಗಿ ತಿಳಿದುದೇ ಆಗಿದೆ. ಇದು ಅನಂತರ ಅಲ್‌ಖಾಯಿದಾವನ್ನು ಹುಟ್ಟುಹಾಕಿದ ಜನರಿಗೆ ಅಮೆರಿಕ ಹಣ ಹಾಗೂ ತರಬೇತಿ ನೀಡಿ ಅಫ್ಘಾನ್ ಯುದ್ಧವಾಗುವ ತನಕ 1980ರವರೆಗೆ ತುರೀಯಾವಸ್ಥೆ ತಲುಪಿತ್ತು. ಇದೇ ಅವಧಿಯಲ್ಲಿ ಪಾಕಿಸ್ತಾನದ ಝಿಯಾ ಆಡಳಿತದ‘ಇಸ್ಲಾಮೀಕರಣ’ ಪ್ರಕ್ರಿಯೆಗೆ ಅಮೆರಿಕ ಆರ್ಥಿಕ ಸಹಾಯ ಹಾಗೂ ಬೆಂಬಲವನ್ನು ನೀಡಿತ್ತು. ಮಧ್ಯಪ್ರಾಚ್ಯದಲ್ಲಿ ಪುಸ್ತಕದ ಇಸ್ಲಾಮಿಕ್ ಮೂಲಭೂತವಾದ ಚಳವಳಿಯ ಬಲವು, ಇಸ್ಲಾಮಿಕ್ ಮೂಲಭೂತವಾದವನ್ನು ಸಹಿಸಿ ಹಾಗೂ ಉತ್ತೇಜಿಸಿ ಎಡಪಂಥೀಯರ ಎಲ್ಲ ಪ್ರತಿರೋಧವನ್ನು ಕೊನೆಗಾಣಿಸುವ ಅಮೆರಿಕದ ಕಾರ್ಯವ್ಯೆಹದ ಫಲವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಮುಖ್ಯ ವಿಚಾರವನ್ನು ಇನ್ನೊಮ್ಮೆ ಹೇಳು ವುದಾದರೆ, ಇಸ್ಲಾಮಿಕ್ ಮೂಲಭೂತವಾದವು ಹಿಂದುತ್ವ, ಕ್ರೈಸ್ತ ಮೂಲಭೂತ ವಾದ ಹಾಗೂ ಬಲಪಂಥೀಯ ಚಳವಳಿಯ ಇತರೆಲ್ಲ ರೂಪಗಳಂತೆ ನಿರ್ದಿಷ್ಟ ಚರಿತ್ರೆಯೊಂದು ಸೃಷ್ಟಿಸಿದ ಒಂದು ರಾಜಕೀಯ ಪ್ರಕ್ರಿಯೆಯಾಗಿದೆ. ‘ಧರ್ಮಯುದ್ಧ’ (ಕ್ರುಸೇಡ್) ಹಾಗೂ ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆಯ ಆ ಬಳಿಕದ ಪ್ರಯತ್ನಗಳ ಸುತ್ತ ಐರೋಪ್ಯ ಮಿಥ್ಯೆ ಸೃಷ್ಟಿಗೆ ಸ್ವಾಭಾವಿಕ ಮುಸ್ಲಿಂ ಮೂಲಭೂತವಾದಿ ಮಿಥ್ಯೆ ಬಹಳಷ್ಟು ಕೊಡುಗೆ ನೀಡಿದೆ.

ಸುಳ್ಳು: ಯಾವಾಗಲೂ ಮುಸ್ಲಿಮರೇ ಹಿಂಸಾಚಾರ ಆರಂಭಿಸುತ್ತಾರೆ. ಹಿಂದೂಗಳು ಪ್ರತಿಕ್ರಿಯೆ ಅಥವಾ ಸ್ವರಕ್ಷಣೆಯ ಕಾರ್ಯ ನಡೆಸುತ್ತಾರೆ.

ನಿಜ:   ಸಾಮೂಹಿಕ ಹತ್ಯೆಯಲ್ಲಿ ತೊಡಗಿದ ಪ್ರತಿಗುಂಪು ಪ್ರತೀಕಾರ ಅಥವಾ ಆತ್ಮರಕ್ಷಣೆಯ ಪ್ರತಿಪಾದನೆ ಮಾಡುತ್ತದೆ. ಅಮೆರಿಕದಲ್ಲಿ ಸೆ.11ರಂದು ನಡೆದ ದಾಳಿಯನ್ನು ಅಮೆರಿಕ ಹಾಗೂ ಇಸ್ರೇಲ್‌ಗಳು, ಇರಾಕ್ (ನಿಷೇಧದ ಮೂಲಕ) ಹಾಗೂ ಫೆಲೆಸ್ತೀನ್‌ಗಳಲ್ಲಿ ಸಾವಿರಾರು ಜನರ ಹತ್ಯೆ ನಡೆಸಿದುದಕ್ಕೆ ಪ್ರತೀಕಾರವೆಂದು ಹೇಳಲಾಗಿತ್ತು. 2008ರ ದಿಲ್ಲಿ ಹಾಗೂ ಅಹ್ಮದಾಬಾದ್ ಬಾಂಬ್ ಸ್ಫೋಟಗಳ ಮೊದಲು ಕಳುಹಿಸಲಾಗಿದ್ದ ಇ-ಮೇಲ್‌ಗಳನ್ನು ನೀವು ನಂಬುವಿರಾದರೆ, ಅವು ಪೊಲೀಸ್ ದೌರ್ಜನ್ಯ ಹಾಗೂ ಗುಜರಾತ್‌ನಲ್ಲಿ ಮುಸ್ಲಿಮರ ಹತ್ಯೆಗಳಿಗೆ ಪ್ರತೀಕಾರವಾಗಿತ್ತು. 2008ರಲ್ಲಿ ಒಡಿಶಾದಲ್ಲಿ ವಿಎಚ್‌ಪಿ ನಾಯಕನೊಬ್ಬನ ಹತ್ಯೆಗೆ ಪ್ರತಿಕಾರ ವಾಗಿ ಕ್ರೈಸ್ತರ ಹತ್ಯೆ ನಡೆದಿತ್ತು. ಚರಿತ್ರೆಯಲ್ಲಿ ಇನ್ನಷ್ಟು ಹಿಂದೆ ಹೋದರೆ, ನಾಝಿಗಳು ಯಹೂದಿಗಳ ವಿರುದ್ಧ ತಮ್ಮ ಪ್ರಪ್ರಥಮ ಸರಕಾರಿ ಪ್ರಾಯೋಜಿತ ದಂಗೆಯನ್ನು ಜರ್ಮನ್ ರಾಜತಾಂತ್ರಿಕನೊಬ್ಬನ ಕೊಲೆಗೆ ಪ್ರತೀಕಾರ ವಾಗಿದ್ದು, ಅಂತಾರಾಷ್ಟ್ರೀಯ ಯಹೂದಿ ವಸಾಹತಿ ನಿಂದ ತಮ್ಮನ್ನು ರಕ್ಷಿಸುವುದು ಅಗತ್ಯವಾಗಿತ್ತೆಂದು ಹೇಳಿದ್ದರು. ಈ ದಂಗೆಯಲ್ಲಿ ಸಾವಿರಾರು ಚರ್ಚ್‌ಗಳು ಹಾಗೂ ಮನೆಗಳು ನಾಶವಾಗಿದ್ದವು. ಇದಕ್ಕೆ ಕಾರಣ ಸರಳ. ತಾವು ಮಾಡಿದ ಅಮಾನವೀಯ ದೌರ್ಜನ್ಯವನ್ನು ಸ್ವರಕ್ಷಣೆ ಅಥವಾ ಪ್ರತೀಕಾರವೆಂದು ನಂಬುವಂತೆ ಮಾಡುವುದೇ ಜನರನ್ನು ಸಮಾಧಾನಿಸಲಿರುವ ಏಕೈಕ ಮಾರ್ಗವಾಗಿರುತ್ತದೆ. ಪ್ರತೀಕಾರದ ಕುರಿತು ಮಾತನಾಡುವುದೇ ತೀವ್ರ ಅಮಾನವೀಯತೆಯೆಂಬುದು ಸಹಜವಾಗಿದೆ. ಎಂಎನ್‌ಎಸ್ ಅಥವಾ ಶಿವಸೇನೆಯ ದಾಳಿಗೆ ಪ್ರತಿಯಾಗಿ ಬಿಹಾರಿಗಳು ಮಹಾರಾಷ್ಟ್ರೀಯನ್ನರನ್ನು ‘ಪ್ರತೀಕಾರವೆಂದು’ ಕೊಚ್ಚಿಕೊಂದರೆ, ‘ಹಿಂದುಗಳು ಕೇವಲ ಪ್ರತಿಕ್ರಿಯಿಸುತ್ತಾರೆ’ ಎನ್ನುವವರಿಗೆ ಸಮಾಧಾನವಾದೀತೆ? ದಿಲ್ಲಿಯಲ್ಲಿ ಈಶಾನ್ಯದ ಜನರ ವಿರುದ್ಧದ ದೌರ್ಜನ್ಯ ಹಾಗೂ ಜನಾಂಗೀಯ ತಾರತಮ್ಯಕ್ಕೆ ಪ್ರತೀಕಾರವಾಗಿ ಈಶಾನ್ಯದ ಸಶಸ್ತ್ರ ಸಂಘಟನೆಗಳು ದಿಲ್ಲಿಗರ ಹತ್ಯಾಕಾಂಡ ನಡೆಸಿದರೆ ಅವರದನ್ನು ಅಂಗೀಕರಿಸ ಬಲ್ಲರೇ? ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯಾಕಾಂಡ ಗಳನ್ನು ಪ್ರತಿದಾಳಿ ಹಾಗೂ ಸ್ವಯಂ ರಕ್ಷಣೆಯೆಂಬಂತೆ ಘೋಷಣೆ ಕೂಗುತ್ತ ಹಲವರು ತಿರುಗಾಡು ವುದು ನೋಡಿದರೆ, ಸಮಾಜವಾಗಿ ನಾವು ಎಷ್ಟು ಕೆಳ ಮಟ್ಟದಲ್ಲಿದ್ದೇವೆಂಬುದನ್ನು ಸೂಚಿಸುತ್ತದೆ.

ಸುಳ್ಳು: ಹಿಂದೂಗಳು ಮತಾಧಾರಿತವಾಗಿ ಕೊಲ್ಲುವುದಿಲ್ಲ. ಆದರೆ, ಕೇವಲ ಮುಸಲ್ಮಾನರಷ್ಟೇ ಈ ರೀತಿ ಮಾಡುತ್ತಾರೆ. ಏಕೆಂದರೆ, ಅವರ ಮತವು ಮುಸ್ಲಿಮರು ಹಾಗೆ ಮಾಡಬೇಕೆಂದು ಹೇಳುತ್ತದೆ.


ನಿಜ: 2002ರಲ್ಲಿ ಗುಜರಾತ್‌ನಲ್ಲಿ 1984ರಲ್ಲಿ ದಿಲ್ಲಿ ಮತ್ತು ಇತರ ನಗರಗಳಲ್ಲಿ 1989ರಲ್ಲಿ ಭಾಗಲ್ಪುರದಲ್ಲಿ ಮತ್ತು ಇತರ ಹೆಚ್ಚಿನ ದಂಗೆಗಳಲ್ಲಿ ಹತರಾದವರಲ್ಲಿ ಅಲ್ಪಸಂಖ್ಯಾತ (ಮುಸ್ಲಿಂ ಸಿಖ್) ಸಮುದಾಯದವರೇ ಅಧಿಕ. ಹಿಂದುತ್ವ ಸಂಘಟನೆಗಳ ಇತ್ತೀಚಿನ ಬಾಂಬ್ ಸ್ಫೋಟ ಪ್ರಕರಣಗಳೂ ನಮ್ಮಲ್ಲಿವೆ. ಈ ಎಲ್ಲ ಪ್ರಕರಣಗಳಲ್ಲಿ ಹಂತಕರಲ್ಲಿ ಹೆಚ್ಚಿನವರು ಹಿಂದೂಗಳು. ಹತ್ಯೆ ನಡೆಸಿದ ಸಂಘಟನೆಗಳು ಹಿಂದುವೇತರರ ಹತ್ಯೆ ನಡೆಸುವಂತೆ ಕರೆ ನೀಡಿದ್ದವು. ಹಾಗಾದರೆ, ಹಿಂದುತ್ವ ಅವರಿಗೆ ಹೀಗೆ ಮಾಡುವಂತೆ ಉಪದೇಶಿಸಿದೆ ಎನ್ನುವುದು ಸರಿಯಾದೀತೇ? ಖಂಡಿತ ಇಲ್ಲ. ಈ ಎಲ್ಲ ಘಟನೆಗಳಲ್ಲಿ ದಾಳಿಕಾರರು ಹಾಗೂ ಸಂಘಟಕರು ಸ್ಪಷ್ಟವಾಗಿ ರಾಜಕೀಯ ಗುರಿ ಸಾಧನೆಗೆ ಬಯಸಿದ್ದ ರಾಜಕೀಯ ಗುಂಪುಗಳಾಗಿವೆ. (ಅದಕ್ಕೆ ಮತೀಯ ಗುರಿಯೆಂಬ ಬಣ್ಣ ನೀಡಲಾಗಿದೆ). ಇದನ್ನೇ ಮುಸ್ಲಿಂ ಗುಂಪುಗಳ ಕುರಿತೂ ಹೇಳಬಹುದು.
ಪ್ರತಿ ಧರ್ಮವೂ ಇತರ ಧರ್ಮಗಳೊಂದಿಗೆ ಸಂಘರ್ಷಕ್ಕೆ ಒತ್ತಾಯಿಸುವ ಗುಂಪುಗಳನ್ನು ಹೊಂದಿದ್ದು, ಪ್ರತಿಯೊಂದು ಮತದ ಪವಿತ್ರ ಗ್ರಂಥಗಳು ದೌರ್ಜನ್ಯವನ್ನು ಬೆಂಬಲಿಸುತ್ತವೆ. (ಉದಾ: ಮನುಸ್ಮತಿಯಲ್ಲಿ ಮಹಿಳೆಯರು ಹಾಗೂ ದಲಿತರ ಬಗ್ಗೆ ಹೇಳಿರುವುದು ಅಥವಾ ಬೈಬಲ್‌ನ ಹಳೆಯ ಒಡಂಬಡಿಕೆಯು ಜೂದೇತರರ ಹತ್ಯಾಕಾಂಡದ ಕುರಿತು ಹೇಳಿರುವುದು.) ಆ ಮತಗಳ ಅನುಯಾಯಿಗಳೆಲ್ಲ ಆ ಗ್ರಂಥಗಳನ್ನು ಅಕ್ಷರಶಃ ಅನುಸರಿಸುತ್ತಾರೆಂದು ಇದರರ್ಥವಲ್ಲ. ಹಿಂದೂ, ಕ್ರೈಸ್ತ ಹಾಗೂ ಇತರ ಗುಂಪುಗಳ ಬಹುಸಂಖ್ಯಾತರಂತೆಯೇ ಮುಸ್ಲಿಂ ಬಹುಸಂಖ್ಯಾತರೂ ಎಂದೂ ಯಾರನ್ನೂ ಕೊಂದಿಲ್ಲ. ಕೊಲ್ಲಲಾರರು.

ಸುಳ್ಳು: ಮುಸ್ಲಿಮರಲ್ಲಿ ಒಗ್ಗಟ್ಟಿದೆ ಹಾಗೂ ಒಗ್ಗಟ್ಟಾಗಿ ಕಾರ್ಯಾಚರಿಸುತ್ತಾರೆ. ಹಿಂದೂಗಳು ವಿಭಜಿತರು ಹಾಗೂ ದುರ್ಬಲರಾಗಿದ್ದಾರೆ.


ನಿಜ: ಮುಸ್ಲಿಮರೂ ಇತರ ಸಮುದಾಯಗಳ ಮತದಾರರಂತೆಯೇ ಸೌಲಭ್ಯಕ್ಕಾಗಿ ಅಭ್ಯರ್ಥಿಯನ್ನು ಹೊಂದಿಕೊಂಡು, ತಾವು ಆ ರಾಜಕೀಯ ಪಕ್ಷವನ್ನು ಮೆಚ್ಚುತ್ತೇವೆಯೇ? ಇತ್ಯಾದಿಗಳನ್ನು ಪರಿಗಣಿಸಿ ಮತ ಚಲಾಯಿಸುತ್ತಾರೆಂಬುದು ಈವರೆಗೆ ಮಾಡಿದ ಪ್ರತಿ ಚುನಾವಣಾ ಅಧ್ಯಯನದಲ್ಲಿ ತಿಳಿದು ಬಂದಿದೆ. ವಾಸ್ತವದಲ್ಲೂ ಮುಸ್ಲಿಮರು ಇತರ ಯಾವುದೇ ಬೇರೆ ಗುಂಪುಗಳಿಗಿಂತ ಹೆಚ್ಚು ಒಗ್ಗಟ್ಟಾಗಿಲ್ಲ. ಅವರೂ, ಭಾರತದ ಇತರ ಸಮುದಾಯಗಳಂತೆಯೇ, ಮತೀಯ, ಜಾತಿ, ಲಿಂಗ, ಪ್ರಾದೇಶಿಕ, ಭಾಷೆ ಹಾಗೂ ಇತರ ಅನೇಕ ನೆಲೆಗಳಲ್ಲಿ ಆಂತರಿಕ ವಿಭಜನೆ ಹೊಂದಿದ್ದಾರೆ. ಮುಸ್ಲಿಮರು ಒಗ್ಗಟ್ಟಾಗಿರುವುದು ನಿಜವಾದರೆ, ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯ ಸಾಕಷ್ಟು ಸಂಖ್ಯೆಯಲ್ಲಿ ಇರಬೇಕಿತ್ತು. ಆದರೆ, ವಾಸ್ತವವಾಗಿ ಶೇ.13 ಜನಸಂಖ್ಯೆ ಹೊಂದಿರುವ ಮುಸ್ಲಿಮ್ ಸಂಸದರು ನಿರ್ಗಮನ ಲೋಕಸಭೆಯಲ್ಲಿ ಶೇ.5.5ರಷ್ಟು ಮಾತ್ರ ಇದ್ದಾರೆ.
ಇಂದಿನ ನಗರಗಳಲ್ಲಿ ‘ಮುಸ್ಲಿಮರು ಒಟ್ಟಾಗಿ ಬದುಕುತ್ತಾರೆ. ಎಂಬಂತಾಗಲು ಅವರ ವಿರುದ್ಧದ ತಾರತಮ್ಯ ಧೋರಣೆ ಹಾಗೂ ಅವರನ್ನು ಬಲವಂತವಾಗಿ ನಿರ್ದಿಷ್ಟ ಕೊಂಪೆಗಳಲ್ಲಿ ವಾಸಿಸುವಂತೆ ಮಾಡಿರುವುದೇ ಕಾರಣ. ಅದೇ ವೇಳೆ, ಮತದಾನದಲ್ಲಿ ಜನರು ತಮ್ಮ ಭೌತಿಕ ಸುರಕ್ಷತೆಯ ಬಗ್ಗೆ ಚಿಂತಿಸುತ್ತಾರೆ. ಉದಾಹರಣೆಗೆ ಬಿಹಾರಿಯೊಬ್ಬ ಶಿವಸೇನೆಯ ಅಭ್ಯರ್ಥಿಗೆ ಮತ ನೀಡಲಾರ. ಅಂತೆಯೇ ಹೆಚ್ಚಿನ ಮುಸ್ಲಿಮರು ಬಿಜೆಪಿಗೆ ಮತ ನೀಡುವುದಿಲ್ಲ. ಇದು ಮತ್ತೆ ಸಾಮಾನ್ಯ ಜ್ಞಾನ ವಿಷಯವಾಗಿದೆ. ಪಕ್ಷವೊಂದು ನಿಮ್ಮನ್ನು ವಿದೇಶಿಯರು, ಭಯೋತ್ಪಾದಕರು ಹಾಗೂ ದೇಶವಿರೋಧಿಗಳೆಂಬ ಭಾವನೆಯನ್ನು ತನ್ನ ಸುತ್ತ ಬೆಳೆಸಿಕೊಂಡರೆ, ಅದು ನಿಮ್ಮ ಮತ ಪಡೆಯಲಾರದು.’

ಸುಳ್ಳು: ಸರಕಾರವು ಮುಸ್ಲಿಮರನ್ನು ಬೆಂಬಲಿಸುತ್ತದೆ ಹಾಗೂ ಮುದ್ದು ಮಾಡುತ್ತಿದೆ.

 ನಿಜ: ಈ ಮಾತಿಗೆ ವಿರುದ್ಧವಾಗಿ ಮುಸ್ಲಿಮರ ವಿರುದ್ಧ ವ್ಯವಸ್ಥಿತ ತಾರತಮ್ಯವನ್ನು ಅಧಿಕೃತ ಮಾಹಿತಿ ಸೂಚಿಸುತ್ತಿದೆ. ಹತ್ತಿರದ ಹಿಂದೂ ಬಾಹುಳ್ಯದ ಗ್ರಾಮಗಳಿಗೆ ಹೋಲಿಸಿದರೆ, ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಬಸ್ ನಿಲ್ದಾಣ, ರಸ್ತೆ, ಬ್ಯಾಂಕ್ ಶಾಖೆಗಳ ಲಭ್ಯತೆ ಕಡಿಮೆಯೆಂದು ಸಾಚಾರ್ ಸಮಿತಿ ಹೇಳಿದೆ. ಮುಸ್ಲಿಮರು ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಹಂಚಿಕೆ ಮಾಡುವ ಸಾಲದ ಮೂರನೆ ಎರಡು ಭಾಗದಷ್ಟು ಮಾತ್ರ ಪಡೆಯುತ್ತಾರೆ. ಇತರರ ಬಡತನದ ಮಟ್ಟಕ್ಕೆ ಹೋಲಿಸಿದರೆ, ನಗರಗಳಲ್ಲೂ ಹಳ್ಳಿಗಳಲ್ಲೂ ಪಕ್ಕಾ ಮನೆಗಳಲ್ಲಿ ವಾಸಿಸುವ ಮುಸ್ಲಿಮರ ಪ್ರಮಾಣ ಇತರರಿಗಿಂತ ಕಡಿಮೆಯಾಗಿದೆ. ಜನಸಂಖ್ಯೆ ಶೇ 13ರಷ್ಟಿದ್ದರೂ ಮುಸ್ಲಿಮರಲ್ಲಿ ಐಎಎಸ್ ಅಧಿಕಾರಿಗಳು ಶೇ.3 ಹಾಗೂ ಐಪಿಎಸ್ ಅಧಿಕಾರಿಗಳು ಶೇ.4ಕ್ಕಿಂತಲೂ ಕಡಿಮೆಯಿದ್ದಾರೆ. ಒಟ್ಟಾರೆಯಾಗಿ ಸರಾಸರಿ ಮುಸ್ಲಿಮರ ಸಾಮಾಜಿಕ-ಆರ್ಥಿಕ ಮಟ್ಟವು ಸ್ಥೂಲವಾಗಿ ದಲಿತರು ಹಾಗೂ ಆದಿವಾಸಿಗಳಷ್ಟೇ ಇದೆಯೆಂದು ಸಾಚಾರ್ ಸಮಿತಿ ತೀರ್ಮಾನಿಸಿದೆ.
 ಅದೇ ರೀತಿ 2007ರಲ್ಲಿ ಇಕಾನಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಪ್ರಕಟವಾಗಿದ್ದ ಅಧ್ಯಯನವೊಂದರಂತೆ ಲೇಖಕರು ವಲಯದ ಸಂಸ್ಥೆಗಳ 548 ಉದ್ಯೋಗ ಜಾಹಿರಾತುಗಳಿಗೆ ಮೂರು ಏಕರೀತಿಯ ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಮೇಲ್ಜಾತಿಯ ಹಿಂದೂ ಹೆಸರಲ್ಲಿ, ಇನ್ನೊಂದು ದಲಿತನ ಹೆಸರಲ್ಲಿ ಮೂರನೆಯದು ಮುಸ್ಲಿಂ ಹೆಸರಲ್ಲಿ ಅರ್ಜಿಗಳೆಲ್ಲ ಎಲ್ಲ ರೀತಿಯಲ್ಲೂ ಒಂದೇ ರೀತಿ ಇದ್ದಾಗಲೂ, ದಲಿತನ ಹೆಸರು ಸಂದರ್ಶನಕ್ಕೆ ಕರೆಯಲ್ಪಟ್ಟ ಸಂಭಾವ್ಯತೆ ಅಂದಾಜು ಮೂರನೆ ಒಂದು ಭಾಗಕ್ಕೂ ಕಡಿಮೆಯಿತ್ತು. ಮುಸ್ಲಿಮನ ಹೆಸರು ಮೂರನೆ ಎರಡರಷ್ಟು ಕಡಿಮೆಯಿತ್ತು. ಸರಕಾರಿ ಹಾಗೂ ಖಾಸಗಿ ರಂಗಗಳೆರಡರಲ್ಲೂ ಮುಸ್ಲಿಮರಿಗೆ ಅವಕಾಶ ನಿರಾಕರಿಸಲಾಗುತ್ತಿದೆ.

ಸುಳ್ಳು: ಆದರೆ, ಹಿಂದೂಗಳಿಗೆ ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿ ಸಾಧ್ಯವಿಲ್ಲ.
ನಿಜ: ಕಾಶ್ಮೀರಿಗಳಲ್ಲದವರು ಜಮ್ಮು-ಕಾಶ್ಮೀರದಲ್ಲಿ ಭೂಮಿ ಖರೀದಿಸುವಂತಿಲ್ಲ. ಅದರಂತೆಯೇ ಹಿಮಾಚಲಿಗಳಲ್ಲದವರು ಹಿಮಾಚಲ ಪ್ರದೇಶದಲ್ಲಿ ಜಮೀನು ಖರೀದಿಸುವಂತಿಲ್ಲ. ಅನುಮತಿಯ ಹೊರತು ಹೊರಗಿನವರು ನಾಗಲ್ಯಾಂಡ್ ಪ್ರವೇಶಿಸುವಂತಿಲ್ಲ. ಉತ್ತರಾಖಂಡಿಗಳಲ್ಲದವರು ಉತ್ತರಾಖಂಡದಲ್ಲಿ ತುಂಡು ನೆಲವನ್ನು ಖರೀದಿಸುವಂತಿಲ್ಲ. ಹೀಗೆ ಭಾರತದ ಅನೇಕ ಕಡೆ ಸ್ಥಳೀಯರ ರಕ್ಷಣೆಗಾಗಿ ಇಂತಹ ನಿಬಂಧನೆಗಳಿವೆ. ಇದಕ್ಕೂ ಮತಕ್ಕೂ ಯಾವುದೇ ಸಂಬಂಧವಿಲ್ಲ.


ಸುಳ್ಳು: ಮುಸ್ಲಿಮರ ಜನಸಂಖ್ಯೆ ಹಿಂದೂಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಏಕೆಂದರೆ ಮುಸ್ಲಿಮರು ಅನೇಕ ಹೆಂಡತಿಯರನ್ನು ಹೊಂದಬಹುದು. ಬಹುಸಂಖ್ಯಾತರಾಗುವುದು ಅವರ ಗುರಿಯಾಗಿದೆ.


ನಿಜ: ಯುವ ಮುಸ್ಲಿಂ ಮಹಿಳೆಯು ಸಮಾನ ಆರ್ಥಿಕ ಮಟ್ಟದ ಯುವ ಹಿಂದೂ ಮಹಿಳೆಯಷ್ಟೇ ಗರ್ಭಧಾರಣದರ ಹೊಂದಿದ್ದಾಳೆ. ಸರಾಸರಿಯಲ್ಲಿ ಮುಸ್ಲಿಮರು ಹಿಂದೂಗಳಿಗಿಂತ ಬಡವರಾಗಿರುವುದೇ ಒಟ್ಟಾರೆಯಾಗಿ ಅಲ್ಪಪ್ರಮಾಣದ ಮುಸ್ಲಿಂ ಬೆಳವಣಿಗೆ ದರ ಹೆಚ್ಚಳಕ್ಕೆ ಕಾರಣವಾಗಿದೆ. ಸಾಮಾನ್ಯ ಜ್ಞಾನವೂ ಇದನ್ನೇ ಸೂಚಿಸುತ್ತದೆ. ಶೇ. 25ರಷ್ಟು ಮುಸ್ಲಿಂ ಜನಸಂಖ್ಯೆ ಹೊಂದಿರುವ ಕೇರಳದಲ್ಲೂ ದೇಶದ ಯಾವುದೇ ರಾಜ್ಯಕ್ಕಿಂತ ಜನಸಂಖ್ಯಾ ಬೆಳವಣಿಗೆ ಕಡಿಮೆಯಿದೆ. ನೀವೆಷ್ಟು ಮಕ್ಕಳನ್ನು ಹೊಂದಿದ್ದೀರಿ ಎಂಬುದನ್ನು ನಿರ್ಧರಿಸುವಲ್ಲಿ ಮತಕ್ಕಿಂತಲೂ ಹೆಚ್ಚು ಬಡತನ ಹಾಗೂ ಸೌಲಭ್ಯದ ಕೊರತೆ ಪ್ರಧಾನ ಪಾತ್ರ ವಹಿಸುತ್ತದೆ. ಉದಾಹರಣೆಗೆ: ತಮಿಳುನಾಡು ಹಾಗೂ ಕೇರಳಗಳಂತಹ ರಾಜ್ಯಗಳಲ್ಲಿ ಮುಸ್ಲಿಮರ ಪ್ರಜನನ ದರ ಉತ್ತರ ಪ್ರದೇಶ ರಾಜಸ್ಥಾನ ಅಥವಾ ಬಿಹಾರಗಳ ಹಿಂದೂಗಳಿಗಿಂತ ತೀರ ಕಡಿಮೆ. ಮುಸ್ಲಿಮರು ಹಲವು ಹೆಂಡತಿಯರನ್ನು ಹೊಂದಿರುವ ಕುರಿತು ಹೇಳುವುದಾದರೆ, ಇದರಿಂದ ಜನಸಂಖ್ಯಾ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮವಾಗದು. ಒಬ್ಬ ಮುಸ್ಲಿಂ ಪುರುಷ ಇಬ್ಬರು ಹೆಂಡತಿಯರನ್ನು ಹೊಂದಿದ್ದಾನೆಂದರೆ ಯಾವನೋ ಒಬ್ಬನಿಗೆ ಹೆಂಡತಿಯೇ ಇಲ್ಲವಾಗುತ್ತಾಳೆ. (ಮುಸ್ಲಿಮರಲ್ಲಿ ಪುರುಷರು ಹಾಗೂ ಮಹಿಳೆಯರ ಸಂಖ್ಯೆ ಹೆಚ್ಚುಕಡಿಮೆ ಸಮಾನವಾಗಿದೆ ಎಂದು ಭಾವಿಸಿದಲ್ಲಿ)ಇದೇ ವೇಳೆ, ಈ ವಿಭಾಗದಲ್ಲಿ ಎನ್‌ಎಫ್‌ಎಚ್‌ಎಸ್ ನಡೆಸಿದ ಏಕೈಕ ಸಮೀಕ್ಷೆಯಂತೆ, ಮುಸ್ಲಿಮರಲ್ಲಿ ಕೇವಲ ಶೇ.5.73 ಮಂದಿಗೆ ಬಹುಪತ್ನಿಯರಿದ್ದರೆ, ಹಿಂದೂಗಳಲ್ಲಿ ಸುಮಾರು ಶೇ.5.8 ಮಂದಿ ಒಂದಕ್ಕಿಂತ ಹೆಚ್ಚು ಮಡದಿಯರನ್ನು ಹೊಂದಿದ್ದಾರೆ.

ಸುಳ್ಳು: ಪಾಕಿಸ್ತಾನ ಸೃಷ್ಟಿಯಾಗುವಾಗ ಮುಸ್ಲಿಮರು ತಮ್ಮ ದೇಶವನ್ನು ಪಡೆದಿದ್ದಾರೆ. ಆದುದರಿಂದ ಅವರು ನಮ್ಮ ದೇಶವನ್ನು ಬಿಡಬೇಕು.


ಹಿಂದೂಗಳು ಹಾಗೂ ಮುಸ್ಲಿಮರಿಗೆ ಪ್ರತ್ಯೇಕ ದೇಶಗಳಿರಬೇಕೆಂದು ಮೊದಲು ಮಾತನಾಡಿದ ನಾಯಕರು ಬಳಿಕ ಹಿಂದೂ ಮಹಾಸಭಾದ ಭಾಗವಾಗಿದ್ದವರು. ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಭಾಯಿ ಪರಮಾನಂದ್ 1905ರಲ್ಲೇ ಈ ಬೇಡಿಕೆ ಇಟ್ಟಿದ್ದರು. ಪಾಕಿಸ್ತಾನದ ಬೇಡಿಕೆ ಮುಸ್ಲಿಂ ಲೀಗ್‌ನಿಂದ 1940ರವರೆಗೂ ಬಂದಿರಲಿಲ್ಲ. ಅಲ್ಲದೆ ಅದು ರಾಜಕೀಯ ಪಕ್ಷವೊಂದರ ರಾಜಕೀಯ ಬೇಡಿಕೆಯಾಗಿತ್ತು. ಭಾರತದ ಅತಿ ದೊಡ್ಡ ಇಸ್ಲಾಮಿಕ್ ಮತೀಯ ಸಂಸ್ಥೆ ದೇವ್‌ಬಂದ್ ಸೇರಿದಂತೆ ದೊಡ್ಡ ಸಂಖ್ಯೆಯ ಮುಸ್ಲಿಮರು ಪಾಕಿಸ್ತಾನ ರಚನೆಯ ಚಿಂತನೆಯನ್ನು ವಿರೋಧಿಸಿದ್ದರು. ದೇಶದ ಖ್ಯಾತ ಸ್ವಾತಂತ್ರ ಹೋರಾಟಗಾರರಲ್ಲೊಬ್ಬರಾಗಿದ್ದ ವೌಲಾನಾ ಆಝಾದ್ ಕೂಡ ಇದನ್ನು ಆಕ್ಷೇಪಿಸಿದ್ದರು. ಪಾಕಿಸ್ತಾನದ ಬೇಡಿಕೆ ರಾಜಕೀಯ ಪಕ್ಷವೊಂದರ ಬೇಡಿಕೆಯೇ ಹೊರತು ಒಟ್ಟು ಮುಸ್ಲಿಮರದಲ್ಲ.
ಸಂಕ್ಷೇಪವಾಗಿ ಇದು ಸರಳ: ಮುಸ್ಲಿಮರೂ ಇತರ ಜನ ಸಮುದಾಯಗಳಂತೆಯೇ ವಿವಿಧತೆ ಹಾಗೂ ಮುಕ್ತ ಯೋಚನೆ ಹೊಂದಿದವರಾಗಿದ್ದಾರೆ. ಮುಸ್ಲಿಂ ದ್ವೇಷದ ಈ ವಾತಾವರಣದಲ್ಲಿ ಈ ಜನಾಂಗವಾದಿ ಮಿಥ್ಯೆಗಳನ್ನು ತಿರಸ್ಕರಿಸುವುದು ಅಗತ್ಯವಾಗಿದೆ. ಬದಲಿಗೆ, ಮಾನವ ಘನತೆಗೆ ವೌಲ್ಯ ನೀಡುವ ವಿಶ್ವಕ್ಕಾಗಿ ಎದ್ದು ನಿಲ್ಲಬೇಕಾಗಿದೆ.

Saturday, April 5, 2014

ಕ್ಷಮಿಸಿ, ಬಯಕೆಗಳೆ ಇನ್ನೆಂದಾದರೊಮ್ಮೆ ಬರುವೆ..!


ಮನುಷ್ಯನ ನಿರೀಕ್ಷೆ ಮತ್ತು ನಿರಾಸೆ ಇವುಗಳನ್ನು ಕಟ್ಟಿಕೊಡುವ ಒಂದು ಅಪರೂಪದ ಕತೆ "ಕ್ಷಮಿಸಿ ಬಯಕೆಗಳೇ ಇನ್ನೆಂದಾದರೊಮ್ಮೆ ಬರುವೆ". ಪತ್ರಕರ್ತ, ಕತೆಗಾರ ದಿ. ಬಿ.ಎಂ. ರಶೀದ್ ಬರೆದ ಕತೆ ಇದು. ಪರುಷ ಮಣಿ ಸಂಗ್ರಹದಿಂದ ಆರಿಸಲಾಗಿದೆ. ತನಗೆ ಬಿದ್ದ ಕನಸಲ್ಲಿ ಸಿಕ್ಕಿದ ವಿಳಾಸವೊಂದರ ಹುಡುಗಿಯನ್ನು ಭೇಟಿಯಾಗಲು ಹೊರಟ ಕತಾ ನಾಯಕ ಪಾಪಣ್ಣನ ತುಮುಲಗಳನ್ನು ಈ ಕತೆ ಕಟ್ಟಿಕೊಡತ್ತೆ.
They never dream
that it fades from kiss to kiss.
                  w.b.Yeats

 ಇದೀಗ ಹತ್ತು ನಿಮಿಷಗಳ ಹಿಂದೆ ತೊಡಗಿದ್ದೆಂದು ನಂಬುವುದಕ್ಕೆ ಕಷ್ಟವಾದ ಈ ಕಾಯುವಿಕೆಗೆ ತಾನಿಲ್ಲಿ ನಿಂತು ಶತಮಾನಗಳೇ ಉರುಳಿದುವೋ ಎಂಬಂತಹ ಭಾಸಗಳಿಗೆ ತುತ್ತಾದ ಸುರೇಂದ್ರ ಯಾನೆ ಪಾಪಣ್ಣನ ನಿಲುವಿನುದ್ದಕ್ಕೂ ಅಕಾರಣವಾದ ಭಯ, ಕಾತರ, ತಲ್ಲಣಗಳು ನಿಮಿರಿ ನಿಂತಿದ್ದವು.‘‘ಈ ಕಾಯುವುದು ಎಷ್ಟು ಖುಷಿಯದ್ದೋ ಅಷ್ಟೇ ದರಿದ್ರದ್ದೂ ಕೂಡ’’ ಎಂದು ಮುಖ ಕಿವುಚಿಕೊಂಡ ಪಾಪಣ್ಣನಿಗೆ ಈ ಹತ್ತು ನಿಮಿಷದ ಅಂತರದಲ್ಲಿ ಹೀಗೆ ಅಂದುಕೊಳ್ಳುತ್ತಿರುವುದಾದರೂ ಎಷ್ಟನೇ ಸಲ? ಎಂದೆನಿಸಿ ಸುಮ್ಮನೇ ನಕ್ಕ. ಬೆನ್ನಿಗೇ ತನ್ನನ್ನು ಉಲ್ಲಾಸಗೊಳಿಸುವ ಯಾವ ಚೈತನ್ಯವೂ ಇಲ್ಲದ ಈ ನಗು ತಾನೇನೂ ಧತಿಗೆಟ್ಟಿಲ್ಲ ಎಂಬುವುದನ್ನು ತನಗೇ ನಂಬಿಸಿಕೊಳ್ಳುವ ಹತಾಶ ಯತ್ನವಲ್ಲವೇ? ಎಂಬ ಅನುಮಾನಕ್ಕೆ ತೊಡಗಿ ತನ್ನ ಮೇಲೆಯೇ ಅನುಕಂಪ ಹುಟ್ಟಿತು. ಮನಸ್ಸಿನ ಉದ್ವೇಗವೆಲ್ಲಾ ಅವನ ತರತರಹದ ವರ್ತನೆಗಳಲ್ಲಿ ವ್ಯಕ್ತಗೊಳ್ಳುತ್ತಾ, ಅದನ್ನು ಹತ್ತಿಕ್ಕಬೇಕೆನ್ನುವ ಒತ್ತಾಯಗಳೆಲ್ಲಾ ಮಣ್ಣುಪಾಲಾಗುತ್ತಿರುವುದಕ್ಕೆ ತೀವ್ರ ವಿಷಾದಗೊಂಡ ಪಾಪಣ್ಣನಿಗೆ ಒಂದು ಬಗೆಯ ಹೇಸಿಗೆಯೂ ಹುಟ್ಟಿ, ‘ಥೂ ದರಿದ್ರವನೇ, ಒಂಚೂರು ನೆಟ್ಟಗೆ ನಿಂತುಕೊಳ್ಳುವ ಕೆಪಾಸಿಟಿನೂ ಇಲ್ಲವೇನಯ್ಯ ನಿಂಗೆ’ ಎಂದು ತನ್ನನ್ನೇ ಬಯ್ದುಕೊಂಡನು. ಇದ್ದಕ್ಕಿದ್ದಂತೆ ಉದ್ಭವಿಸಿದ ‘ಇಲ್ಲಿಂದ ಓಡಿದರೆ ಹೇಗೆ?’ಎಂಬ ಆಲೋಚನೆ ಅವನನ್ನು ಉಲ್ಲಾಸಗೊಳಿಸಿ, ಸುಖಕರವಾಗಿ ತೋರುತ್ತಿರುವ ಆ ಯೋಚನೆಯನ್ನು ಕೂಡಲೇ ಜಾರಿಗೊಳಿಸುವಂತೆ ಮನಸ್ಸು ಒತ್ತಾಯಿಸತೊಡಗಿತು. ಕೊಂಚ ಕೊಂಚವಾಗಿ ಸಡಿಲಗೊಂಡ ಪಾಪಣ್ಣ ಕೊನೆಗೊಮ್ಮೆ ನಿರಳ ನಿಟ್ಟುಸಿರೊಂದನ್ನು ಬಿಟ್ಟು ಜೇಬಿನಲ್ಲಿದ್ದ ಸಿಗರೇಟನ್ನು ತುಟಿಗಿಟ್ಟು ಬೆಂಕಿ ಸೋಕಿಸಿ, ಹೊಗೆ ಸವಿಯುತ್ತಾ ತನ್ನ ಸುತ್ತಮುತ್ತವನ್ನು ನಿರುಕಿಸತೊಡಗಿದನು.
ತಾನು ಕೂತಿದ್ದ ಪರಿಸರವನ್ನು ಹೊಸದಾಗಿ ನೋಡುತ್ತಿರುವಂತೆ ನೋಡಿದವನಿಗೆ, ಸ್ವಲ್ಪ ಹೊತ್ತಿನ ಮೊದಲು ಅಲ್ಲಿತ್ತೆಂದು ನಂಬಲೇ ಅಸಾಧ್ಯವಾಗುವಂತಹ ದಶ್ಯಗಳು ಕಣ್ಣಿಗೆ ಗೋಚರಿಸತೊಡಗಿ ‘‘ಅರೆ, ಆ ಮುದುಕ, ಆ ಮೇ ಫ್ಲವರ್ ಗಿಡ ಅಲ್ಲಿರಲಿಲ್ಲವಲ್ಲ..’’ಎಂಬ ಉದ್ಗಾರ ಹೊರಟಿತು.ತನಗಾದ ಗೊಂದಲಕ್ಕೆ ಉತ್ತರ ಪಡೆಯುವವನಂತೆ ನೇರವಾಗಿ ಪತ್ರಿಕೆ ಓದುತ್ತಿದ್ದ ಮುದುಕನ ಬಳಿ ನಡೆದು ‘‘ಕ್ಷಮಿಸಿ, ತಾವಿಲ್ಲಿಗೆ ಬಂದು ಎಷ್ಟು ಹೊತ್ತಾಯ್ತು?’’ಎಂದು ಪ್ರಶ್ನಿಸಿದ, ‘ಪ್ರಶ್ನೆಗಳು ಈ ತರಹದಲ್ಲೂ ಇರುತ್ತವೆಯೇ’ ಎಂಬ ಮುಖಭಾವದಿಂದ ನೋಡಿದ ಮುದುಕ.

‘‘ಸುಮಾರು ಇಪ್ಪತ್ತು ನಿಮಿಷ ಕಳೆದಿರಬಹುದು. ನೀವಿಲ್ಲಿಗೆ ಬರುವ ಮುನ್ನವೇ ಇದ್ದೆನಲ್ಲ. ತಾವು ಯಾರಿಗೋ ಕಾಯುವಂತಿದೆ..?’’ತನ್ನತ್ತಲೇ ತಿರುಗಿದ ಪ್ರಶ್ನೆಗೆ ಪಾಪಣ್ಣ ಹೌದೆಂದ. ‘‘ತುಂಬಾ ಟೆನ್ಶನ್‌ನಲ್ಲಿದ್ದೀರಿ. ಯಾರೆಂದು ಕೇಳಬಹುದೇ?...’’

ತಾನೇ ಪ್ರಶ್ನಿಸಿಕೊಳ್ಳಬಯಸದ ಮುದುಕನ ಪ್ರಶ್ನೆಗಳು ಘೋರ ಅಧಿಕಪ್ರಸಂಗತನವಾಗಿ ಕಂಡು ಬಂದು ಪಾಪಣ್ಣ ಒಳಗೊಳಗೇ ರೇಗಿದರೂ, ಮುದುಕನ ಪ್ರಶ್ನೆ ತಾನೇ ಪ್ರಶ್ನಿಸಿಕೊಳ್ಳಬೇಕಾದುದನ್ನು ತನ್ನೊಳಗೆ ಮುಚ್ಚು ಮರೆಯಲ್ಲಿಡಲು ಮಾಡಿದ ಹಿಕಮತ್ತುಗಳನ್ನು ಪ್ರಶ್ನಿಸುತ್ತಿರುವಂತಿದೆಯಲ್ಲ ಎಂದು ಕಂಗಾಲಾದ. ತನಗೆ ಗೊತ್ತೇ ಇಲ್ಲದ ಉತ್ತರವನ್ನು ಹೇಳುವುದಾದರೂ-ಏನೆಂದು, ಹೇಳುವುದಿದ್ದರೂ ಈ ದರಿದ್ರ ಮುದುಕನಿಗೇಕೆ ಹೇಳಬೇಕೆಂದು ಮನಸ್ಸು ಹಗೆ ಕಾರಲು ಹವಣಿಸಿದರೂ, ‘ತಾನು ಹೇಳುವಂತಹದೇನಿದ್ದರೂ ಸತ್ಯವಲ್ಲವೇ’ ಎಂಬ ಸಮಾಧಾನದಿಂದ ‘‘ಗೊತ್ತಿಲ್ಲ’’ಅಂದ.
‘‘ಗೊತ್ತಿಲ್ಲ...?’’ ಹುಡುಗನೋ, ಹುಡುಗಿಯೋ ಎಂಬುದಾದರೂ ಗೊತ್ತಿದೆಯೇ...?’’
‘‘ಇಲ್ಲ... ಇಲ್ಲ.. ಬಹುಶಃ ಅದೂ ಗೊತ್ತಿಲ್ಲ’’
ಹುಚ್ಚನನ್ನು ನೋಡುವಂತಹ ಮುದುಕನ ಇರಿಯುವ ಹಗುರ ನೋಟಕ್ಕೆ ತತ್ತರಿಸಿದ ಪಾಪಣ್ಣ ‘ಥತ್, ತಲೆಹರಟೆ ಮುದುಕ’ ಎಂದು ಗೊಣಗುತ್ತಾ ತನ್ನ ಸ್ವಸ್ಥಾನ ಸೇರಿದ. ಕೊನೆಯ ‘ದಂ’ಎಳೆದು ಸಿಗರೇಟು ತುಂಡು ಬಿಸುಟಾಗ ಸಿಗರೇಟು ಮುಗಿದಿರುವುದು ಗಮನಕ್ಕೆ ಬಂದು ದಿಗಿಲಾದರೂ ದೂರದಲ್ಲಿ ಪೆಟ್ಟಿಗೆ ಅಂಗಡಿಯೊಂದು ಕಂಡು ಬಂದು ಸಮಾಧಾನವಾಯಿತು.
 ತಾನಿಲ್ಲಿ ಭೇಟಿ ಮಾಡಬೇಕಾದ ವ್ಯಕ್ತಿ ಯಾರು, ಅದು ಹೇಗಿದೆ ಮತ್ತು ಭೇಟಿಯಾಗಬೇಕಾದ ಜರೂರೇನು ಎಂಬಿತ್ಯಾದಿ ವಿವರಗಳೆಲ್ಲದರ ಕುರಿತು ಪೂರ್ಣ ಅಜ್ಞಾನಿಯಾಗಿರುವ ಪಾಪಣ್ಣನಿಗೆ, ತನ್ನ ಈ ಕಾಯುವಿಕೆಗೆ ಅರ್ಥಗಳೇ ಇಲ್ಲದೆ ತನಗೆ ಮತ್ತು ಭೇಟಿಯಾಗಬೇಕಾದ ಜರೂರೇನು ಎಂಬಿತ್ಯಾದಿ ವಿವರಗಳೆಲ್ಲದರ ಕುರಿತು ಪೂರ್ಣ ಅಜ್ಞಾನಿಯಾಗಿರುವ ಪಾಪಣ್ಣನಿಗೆ, ತನ್ನ ಈ ಕಾಯುವಿಕೆಗೆ ಅರ್ಥಗಳೇ ಇಲ್ಲದೆ ತನಗೆ ತಾನೇ ಹಾಸ್ಯಾಸ್ಪದನಾಗುತ್ತಿರುವೆನೇ ಎಂಬ ಯೋಚನೆ ತುಸು ಕಿರಿಕಿರಿಗೊಳಿಸಿತು. ಆದರೂ ಈ ಕಾಯುವಿಕೆಯ ದೆಸೆಯಿಂದ ಪಡುತ್ತಿರುವ ತಲ್ಲಣಗಳು ಕೊಡುತ್ತಿರುವ ಥ್ರಿಲಿಂಗ್ ತಾನು ಬಯಸಿದ್ದೇ ಅಲ್ಲವೇ ಎಂದೆನಿಸಿ ತುಸು ಹೊತ್ತಿನ ಮುಂಚೆ ಅವನನ್ನು ಉಲ್ಲಾಸಗೊಳಿಸಿದ ಪಲಾಯನದ ಪ್ರಸ್ತಾಪ ತಳ್ಳಿಹಾಕಲ್ಪಟ್ಟಿತು.
 ಮಹತ್ವದಲ್ಲ ಎನ್ನುವ ಮಾತಿನಿಂದ ಕೂಡ ಪರೋಕ್ಷವಾಗಿ ಮಹತ್ವದೆನಿಸಿಕೊಳ್ಳಬಹುದಾದ ಒಂದು ಯಕಶ್ಚಿತ್ ಕನಸು ತನ್ನ ಈ ಎಲ್ಲಾ ‘ತೊಂದರೆ’ಗಳಿಗೆ ಬೀಜವಾದ ಒಂದು ಸಂಭವವನ್ನು ನೆನೆಯುತ್ತಾ ಚಕಿತಗೊಳ್ಳತೊಡಗಿದ.
ಇದೆಲ್ಲಾ ಶುರುವಾದದ್ದು ಹೀಗೆ, ಸರಿ ಸುಮಾರು ನಾಲ್ಕು ತಿಂಗಳ ಹಿಂದೆ.
ಒಂದು ಬೆಳಗಿನ ಜಾವ ಪಾಪಣ್ಣನಿಗೆ ಎಚ್ಚರವಾದಾಗ ನೆನಪಿನಲ್ಲುಳಿದದ್ದಿಷ್ಟೇ. ಪೂರ್ಣ ವಿಳಾಸವಿರುವ ಒಂದು ಹೆಸರು! ಮತ್ತೆ ನಿದ್ದೆ ಹತ್ತಲಾರದು ಎನ್ನುವುದು ಖಾತ್ರಿಯಾಗುವಷ್ಟು ಚಡಪಡಿಕೆ ಹತ್ತಿದ್ದರಿಂದ ಮೆಲ್ಲನೆ ಎದ್ದು ಕಿಟಕಿಗೆ ಮುಖ ಹಚ್ಚಿ ಹೊರಗೆ ಕತ್ತಲ ಗರ್ಭದಲ್ಲಿ ಚಿಗುರೊಡೆಯುತ್ತಿದ್ದ ಬೆಳಕನ್ನು ಗಮನಿಸುತ್ತಾ ಕೂತ. ಈ ದಿನದ ಬೆಳಗು ತನಗೆ ಎಂದಿನ ಬೆಳಗಿನಂತಿಲ್ಲ ಎಂಬ ಭಾವ ಉಲ್ಲಾಸ ಕೊಡತೊಡಗಿದ್ದೇ, ಪಾಪಣ್ಣನಿಗೆ ಇದು ಈಗ ತುಸು ಹೊತ್ತಿಗೆ ಮುಂಚೆ ಬಿದ್ದ ಕನಸಿನ ದೆಸೆಯಿಂದ ಇರಬಹುದೇ ಎಂಬ ಯೋಚನೆ ಶುರುವಾಗಿ ಕೊಡವಿಕೊಳ್ಳಬೇಕೆಂದು ಹೊರಟ ಚಡಪಡಿಕೆ ಅವನನ್ನಿಡೀ ಮತ್ತೆ ಆವರಿಸಿತು. ಬಿದ್ದದ್ದೇ ಖಾತ್ರಿಯಿಲ್ಲದ ಕನಸನ್ನು ಇನ್ಯಾವ ಇಲ್ಲದ ಅರ್ಥಕ್ಕೆ ಹಚ್ಚಿ ನೋಡಲಿ ಎನ್ನುವುದು ಅವನ ಚಡಪಡಿಕೆಯ ಮೂಲವಾಗಿತ್ತಾದರೂ ಅದು ಬಲವಾಗಿ ಚಾಚಿಕೊಂಡದ್ದು ತನ್ನೊಳಗೆ ಸುಂದರವಾದದ್ದೇನೋ ನಡೆದಿದೆ, ಆದರೆ ಅದೇನೆಂದು ನಿರ್ಧರಿಸಲಾಗದ ಅಸಹಾಯಕತೆಗೆ. ಅವನು ಹಿಡಿಯಲು ಹೋದಂತೆ ಜಾರಿಕೊಂಡಂತೆನಿಸಿ, ಅಂಗಾತ ಬಿದ್ದ ಜಿರಳೆ ಬೋರಲಾಗಲು ನಡೆಸುವ ಪ್ರಯತ್ನದ ಶೈಲಿಯಲ್ಲಿ ನೆನಪಿಗೆ ದಕ್ಕಿದ ಬಣ್ಣದ ತುಣುಕುಗಳನ್ನು ನವ್ಯ ಕಲಾವಿದನ ಕೊಲಾಜ್ ಕತಿಯ ವರ್ಣ ಸಂಯೋಜನೆಯಂತೆ ಕಣ್ಣ ಮುಂದೆ ಒಟ್ಟಾರೆಯಾಗಿ ಪೋಣಿಸುತ್ತಾ ನಡೆದಾಗ ಕೊನೆಗೂ ದಕ್ಕಿದ್ದು ಅವನು ನಡೆಸಿದ್ದೆಲ್ಲದಕ್ಕೂ ಸ್ಪಷ್ಟ ನಿಶಾನೆಯಾಗಿ ನಿಂತ ಒಂದು ವಿಳಾಸ ಚೀಟಿ! ಅದು ಅವನ ನೆನಪಿಗೆ ದಕ್ಕಿದ್ದೇ ಉಳಿದದ್ದೆಲ್ಲಾ ಹಿಂದಾಯಿತು. ಭಿತ್ತಿಯ ಮೇಲೆ ಅದೇಯಾಗಿ ನಿಂತಿದ್ದನ್ನು ಪಾಪಣ್ಣ ಓದಿಕೊಂಡ. ಡೈರಿಯಲ್ಲಿ ಬರೆದುಕೊಂಡ. ‘ಸ್ಫೂರ್ತಿ ವುಮೆನ್ಸ್ ಹಾಸ್ಟೆಲ್, ಮಂಗಳೂರು’
 ವಿನಾಕಾರಣ ಕನಸಿನಲ್ಲಿ ಕಾಣಿಸಿಕೊಂಡ ಒಂದು ವಿಳಾಸ ಚೀಟಿ ನೆನಪಾದುದಕ್ಕಿಂತಲೂ ವೇಗವಾಗಿ ಮರೆತು ಹೋದುದರಿಂದ ಆ ನಂತರದಿಂದ, ಈವರೆಗಿನದಕ್ಕೆಲ್ಲದಕ್ಕೂ ಅದೊಂದೇ ಕಾರಣವಾಯಿತೆಂದು ಹೇಳುವುದು ಅಷ್ಟು ಸಾಧ್ಯವಾದುದಲ್ಲ. ಒಂದು ಯಕಶ್ಚಿತ್ ಕನಸಿನ ಕುರಿತು ಜಿಜ್ಞಾಸೆ ಮಾಡುತ್ತಾ ಕೂರುವುದರಿಂದ ತಾನೆಲ್ಲಿ ಹಾಸ್ಯಾಸ್ಪದನಾಗಿ ಬಿಡುವನೇನೋ ಎಂಬ ಶಂಕೆಯ ಬಲವಂತದಿಂದ ಮರೆತುಬಿಟ್ಟನೋ ಅಥವಾ ಅದನ್ನು ನೆನೆಸಿಕೊಳ್ಳುವುದಕ್ಕೆ ಕಾರಣಗಳಿಲ್ಲದೇ ಇದ್ದುದು, ಅದು ಮತ್ತೆ ನೆನಪಾಗದಿದ್ದುದರ ಕಾರಣವಾಗಿತ್ತೋ ಒಟ್ಟಿನಲ್ಲಿ ಪಾಪಣ್ಣನ ಕನಸಿನಲ್ಲಿ ಕಂಡ ‘ಸ್ಫೂರ್ತಿ’ ಎಂಬ ಪರಿಮಳಭರಿತ ಹೆಸರು ಅವನ ಡೈರಿಯ ಪುಟಗಳಲ್ಲಿ ಹೂತು ಹೋದದ್ದು ಮತ್ತೆ ಮಹತ್ವವನ್ನು ಪಡೆದದ್ದು ಒಂದು ಸಂಜೆ ಆತ ಜರೂರಿನಿಂದ ಬಂದು ಡೈರಿ ಬಿಚ್ಚಿ ‘ಹೊಸ ವರ್ಷದ ಶುಭಾಶಯ’ಗಳನ್ನು ಕಳಿಸಬೇಕಾದವರ ಪಟ್ಟಿ ತಯಾರಿಸಲು ಕೂತಾಗ. ಆ ಹೆಸರನ್ನೇ ಸುಮಾರು ಹೊತ್ತು ನೋಡುತ್ತಾ ಕೂತವನಿಗೆ ಏನನ್ನಿಸಿತೋ ಕೊನೆಗೆ ‘ತಾನೊಂದು ಶುಭಾಶಯ ಪತ್ರವನ್ನು ಮಾತ್ರ ಕಳೆದುಕೊಳ್ಳಬಹುದಲ್ಲದೇ ನಷ್ಟ ಪಡಲು ಮತ್ತೇನೂ ಇಲ್ಲ’ ಎಂದು ನೆಪಮಾತ್ರಕ್ಕೆ ಸುಳಿದು ಬಂದ ಯೋಚನೆಯ ದೆಸೆಯಿಂದ ಇದ್ದುದರಲ್ಲೇ ಚಂದದ ಕಾರ್ಡೊಂದನ್ನು ಕನಸಿನಲ್ಲಿ ಸಿಕ್ಕಿದ ವಿಳಾಸಕ್ಕೆ ಕಳಿಸಿ, ಹೇಗೆ ತನಗೆ ಕನಸಿನಲ್ಲಿ ಕಂಡ ವಿಳಾಸಕ್ಕೆ ಅರ್ಥಗಳಿಲ್ಲವೋ ಹಾಗೆಯೇ ತನ್ನ ಈ ಕ್ರಿಯೆಗೂ ಅರ್ಥಗಳಿಲ್ಲ ಎಂದು ತೀರ್ಮಾನಿಸಿಕೊಂಡು ಸ್ವಸ್ಥನಾಗಿದ್ದನು. ಆದರೆ ಆ ನೆಮ್ಮದಿಯನ್ನು ಛಿದ್ರಗೊಳಿಸುವಂತಹ ಅಚ್ಚರಿಯೊಂದು ಹತ್ತು ದಿವಸಗಳ ತರುವಾಯದ ಒಂದು ಬೆಳಗ್ಗೆ ಆಫೀಸು ಹೊಕ್ಕ ಅವನನ್ನು ಕಾಯುತ್ತಿತ್ತು. ಮೇಜಿನ ಮೇಲೆ ಬಿದ್ದಿದ್ದ ಅಂಚೆಯಲ್ಲಿ ಅವನ ಹೆಸರಿಗೆ ಬಂದಿದ್ದ ಶುಭಾಶಯ ಪತ್ರವೊಂದರ ಬೆನ್ನಿಗೆ ಕಣ್ಣೋಡಿಸಿದರೆ ಅಲ್ಲಿ ಚಂದದ ಅಕ್ಷರಗಳಲ್ಲಿ ಬರೆದಿತ್ತು ‘ಸ್ಫೂರ್ತಿಯಿಂದ’.
 ಪಾಪಣ್ಣನಿಗೆ ಒಂದು ಕ್ಷುಲ್ಲಕ ಕನಸು ಕೂಡ ತನ್ನ ಬದುಕಿನಲ್ಲಿ ವಿಲಕ್ಷಣ ಆಯಾಮಗಳನ್ನು ಪಡೆಯುತ್ತಾ, ವಿಶೇಷ ಅರ್ಥಗಳನ್ನು ಸಾಕ್ಷಾತ್ಕಾರಗೊಳಿಸಬಹುದಾದ ಸಾಧ್ಯತೆಯ ಅರಿವಾಗತೊಡಗಿದ್ದು ಇಲ್ಲಿಂದಲೇ.
***
ಸುರೇಂದ್ರ ಯಾನೆ ಪಾಪಣ್ಣ ತುಂಬಾ ಚಂದದ ತರುಣ. ಎಲ್ಲರಿಗೂ ಮುದ್ದಿನ ಪಾಪಣ್ಣ. ಭುಜ ವಾಲಿಸಿಕೊಂಡು ಬೀದಿಯಲ್ಲಿ ನಡೆಯತೊಡಗಿದನೆಂದರೆ ಗಂಡು ಹುಡುಗರೇ ತಿರುಗಿ ತಿರುಗಿ ನೋಡಬೇಕು! ಇದು ಹೀಗಿರುವಾಗ ಬಡಪಾಯಿ ಹುಡುಗಿಯರ ಪಾಡಿನ್ನೇನು..? ಚಂದದ ಹುಡುಗಿಯರನ್ನು ಸೆಳೆಯಲು ಬೇಕಾದ ಎಲ್ಲಾ ಬಗೆಯ ಬಂಡವಾಳಗಳು ತನ್ನಲ್ಲಿವೆ ಎಂಬ ವಿಶ್ವಾಸದಿಂದ ಪಾಪಣ್ಣ ಹೆಮ್ಮೆ ಪಡುವುದಿತ್ತು.ಈ ಹೆಮ್ಮೆ ಅವನಿಗರಿವಿಲ್ಲದೆ ಅಹಂಕಾರಗಳನ್ನು ಬೆಳೆಸಿವೆ. ಅಷ್ಟೇನೂ ಅಪಾಯಕಾರಿಯಲ್ಲದ ಅಹಂಕಾರವನ್ನು ಅವನಿಗೆ ಮುಗಿಬಿದ್ದು ಶರಣಾಗುವ ಹುಡುಗಿಯರೂ ಪೋಷಿಸುತ್ತಾ ಬಂದಿರುವುದರಿಂದ ಈ ಅಹಂಕಾರ ಅಂತಹ ಅಸಹಜವಾದದ್ದೇನೂ ಅಲ್ಲ ಎಂಬ ವಿಮರ್ಶೆಯನ್ನು ಖುದ್ದು ಪಾಪಣ್ಣನೇ ಮಾಡಿಕೊಂಡಿದ್ದಾನೆ. ಇಂತಹದೇ ಮೂಡಿನಲ್ಲಿ ತನ್ನ ‘ಪಡ್ಡೆ’ಗೆಳೆಯರೊಡನೆ ಕೊಚ್ಚಿಕೊಂಡದ್ದೂ ಇದೆ. ‘‘ನಾನೆಲ್ಲಿಯಾದ್ರೂ ಹುಡುಗಿಯಾಗಿ ಹುಟ್ಟಿದ್ದಿದ್ದರೆ ಇಡೀ ಜಗತ್ತಿನಲ್ಲಿ ಒಬ್ಬನೇ ಹುಡುಗನನ್ನು ಪ್ರೀತಿಸುತ್ತಿದ್ದೆ- ಅದು ಪಾಪಣ್ಣ.’’
ಇಂತಹ ಪಾಪಣ್ಣ ಈಗ ಕಷ್ಟದಲ್ಲಿ ಬಿದ್ದಿದ್ದಾನೆ!
 ಅವನ ಕನಸಿನಲ್ಲಿ ಅಕಸ್ಮಾತ್ ಕಾಣಸಿಕ್ಕ ಹುಡುಗಿ ‘‘ನಾನೇ ಕಣೋ, ನಿನ್ನ ಕನಸಿನಲ್ಲಿ ಬಂದ ಹುಡುಗಿ’’ ಎಂದು ಧುತ್ತನೇ ತನ್ನ ಅಸ್ತಿತ್ವವನ್ನು ಸಾರಿದಂದಿನಿಂದ ಪಾಪಣ್ಣನ ಬಳಿ ನಿದ್ದೆ ಸುಳಿಯಲು ಬಹಳ ಚೌಕಾಶಿ ಮಾಡಿತು. ಅರ್ಥವೇ ಇಲ್ಲದ ಒಂದು ಕನಸು ಹೀಗೆ ಜೀವ ಪಡೆಯುತ್ತಿರುವ ಕ್ರಿಯೆ ಅವನನ್ನು ಚಕಿತಗೊಳಿಸಿ, ಕನಸಿನಲ್ಲಿ ಬಂದವಳು ನಿಜಕ್ಕೂ ತನ್ನ ಶುಭಾಶಯ ಪತ್ರಕ್ಕೆ ಉತ್ತರಿಸಿದ ಹುಡುಗಿಯೇ ಅಥವಾ ತನಗೆ ಬಿದ್ದ ಕನಸು ಬರೇ ನಿಮಿತ್ತ ಮಾತ್ರದ್ದೋ ಎಂಬಂತಹ ಜಿಜ್ಞಾಸೆಗೆ ಶುರು ಹಚ್ಚಿತ್ತು. ಇತ್ತೀಚಿನ ದಿನಗಳ ನೀರಸ ಬದುಕಿನಲ್ಲಿ ಏನಾದರೂ ಹೊಸ ಸಪ್ರೈಸ್‌ಗಳು ಒದಗಿ ಬರಬಾರದೇ ಎಂಬ ತನ್ನ ಸುಪ್ತ ಹಾರೈಕೆಗೇ ಆ ಕನಸೊಂದು ನಿಶಾನೆಯಂತೆ ಮೂಡಿ ಬಂದಿರಬಾರದೇಕೆ ಎಂಬ ಪರಿಹಾರವೂ ಹೊಳೆದಿತ್ತು. ಆದರೂ ಆ ಕನಸು ಕೊಡುತ್ತಿರುವಂತಹ ಥ್ರಿಲ್‌ಗಳಿಗಿಂತ ಅದರ ಅರ್ಥ ಅಷ್ಟೊಂದು ಮಹತ್ವದ್ದಾಗಿಯೇನೂ ಕಂಡಿರಲಿಲ್ಲ. ಹೀಗೆ ಪಾಪಣ್ಣನ ಬದುಕಿನ ಕೆಲವು ರಾತ್ರಿಗಳು ಸುದೀರ್ಘವಾಗಿ ನಿಟ್ಟುಸಿರತೊಡಗಿ, ಅವನನ್ನು ರೋಮಾಂಚನಗೊಳಿಸುತ್ತಿರುವ ಈ ಸಂಭವನೀಯತೆಗಳನ್ನೆಲ್ಲಾ ಯಾರೊಡನೆಯಾದರೂ ಹಂಚಿಕೊಳ್ಳಬೇಕೆಂಬ ತಹತಹಿಕೆ ಶುರುವಾಗಿ, ಇದನ್ನೆಲ್ಲಾ ಹೇಳಿಕೊಳ್ಳಲು ಕನಸಿನಲ್ಲಿ ಬಂದ ಹುಡುಗಿಗಿಂತ ಒಳ್ಳೆಯ ವ್ಯಕ್ತಿ ಇನ್ನಾರು ಎಂಬ ಐಡಿಯಾವು ಬಂದು ಅದನ್ನು ಕೂಡಲೇ ಕಾರ್ಯಕ್ಕಿಳಿಸಿದ್ದ.
 ‘ಬದುಕುವುದರಲ್ಲೂ ಇಷ್ಟೊಂದು ಥ್ರಿಲ್ ಇದೆಯೆಂದು ಮನವರಿಕೆ ಮಾಡಿಸಿದ ಈ ಕಾಯುವಿಕೆಯ ನಿಜವಾದ ಆರಂಭ ಅಲ್ಲಿಂದಲೇ ಅಲ್ಲವೇ?’ ಎಂದು ಪಾಪಣ್ಣ ನೆನೆಸಿಕೊಂಡ. ಸಿಗರೇಟು ಸೇದಬೇಕೆನಿಸಿ, ಎದ್ದು ಪೆಟ್ಟಿಗೆಯಂಗಡಿ ಬಳಿಗೆ ನಡೆಯತೊಡಗಿದ. ಸಿಗರೇಟಿಲ್ಲದೆ ಬದುಕಲು ಸಾಧ್ಯವೇ ಇಲ್ಲವೆಂಬ ಸ್ಥಿತಿ, ನೆಪ ಮಾತ್ರಕ್ಕೆ ತೊಡಗಿದ ಪತ್ರಗಳಿಗೂ ಅನ್ವಯಿಸಿದ್ದು ನೆನೆದು ವಿಸ್ಮಯಗೊಂಡ. ತಾನು ನಂಬಲೇ ಅನುಮಾನಪಡುತ್ತಿದ್ದ ಸಂಭವವನ್ನು ಅದಕ್ಕೆ ಬೀಜವಾದ ವ್ಯಕ್ತಿಗೇ ನಂಬಿಸಲು ಮಾಡುವ ಪ್ರಯತ್ನದಂತಿದ್ದ ಪತ್ರಕ್ಕೆ ಅವಳಿಂದ ಬರಬಹುದಾಗಿದ್ದ ಉತ್ತರಕ್ಕೆ ಕಾಯುವ ಅವಧಿಯಲ್ಲಿ ಅನುಭವಿಸಿದ ತಲ್ಲಣ ಕಾತರಗಳೆಲ್ಲವೂ ಬದುಕಿನಲ್ಲಿಯೇ ಅಪರೂಪದ ಅನುಭವಗಳಂತ್ತಿತ್ತೆಂದು ಪಾಪಣ್ಣನ ಸ್ಮರಣೆಗೆ ಬರುತ್ತಿದೆ. ಇಲ್ಲಿ ಈ ಪಾರ್ಕ್‌ನಲ್ಲಿ ಅವಳಿಗಾಗಿ ಕಾಯುತ್ತಿರುವಾಗ ಆಗುತ್ತಿರುವಂತಹದೇ ಕಾತರಗಳು.. ‘ಲೇಟ್ ಪಾಪಣ್ಣ’ ಎಂದು ಕರೆಸಿಕೊಳ್ಳುತ್ತಿದ್ದವನು ಬೀಗ ಬಿಚ್ಚುವ ಮುನ್ನವೇ ಆಫೀಸಿನ ಬಾಗಿಲಲ್ಲಿ ಹಾಜರ್..ಒಳಗೇ ನುಗ್ಗಿದ್ದೇ ಪೋಸ್ಟ್ ನೋಡುವ ತವಕ.. ಇಲ್ಲವೆಂದಾಗ ಆವರಿಸುತ್ತಿದ್ದ ನಿರಾಶೆಯನ್ನು ಮೆಟ್ಟಿ ನಿಲ್ಲುತ್ತಿದ್ದ ನಾಳೆ ಬರಬಹುದೆಂಬ ನಿರೀಕ್ಷೆ... ‘ನಾಳೆ’ಯ ನಿರೀಕ್ಷೆಯಲ್ಲಿ ಸಲೀಸಾಗಿ ಜಾರುತ್ತಿದ್ದ ‘ಇಂದು’ಗಳು..ಪಾಪಣ್ಣ ಅಂಗಡಿಗೂಡಿನೊಳಗಿನ ಕತ್ತಲಲ್ಲಿ ಕೂತು ಪಿಳಿಪಿಳಿ ಕಣ್ಣು ಬಿಡುತ್ತಿದ್ದ ಅಂಗಡಿಯಾತನಲ್ಲಿ‘‘ಐಟಿಸಿ ಕಿಂಗ್ ಕೊಡ್ರಿ ನಾಲ್ಕು’’ ಅಂದ.
‘‘ಕಿಂಗ್ ಇಲ್ಲ ಸಾರ್, ಬ್ರಸ್ಟಲ್ ಮಾತ್ರ ಇದೆ...’’
ಪಾಪಣ್ಣನ ತುಟಿಯಿಂದ ಹೊರಬಿದ್ದ ‘ಪ್ಚ್’ ಎಂಬ ಸದ್ದು ಅವನಿಗಾದ ಅಸಹನೆಯನ್ನು ವ್ಯಕ್ತಪಡಿಸಿತು.
  ‘‘ಸರಿ ಕೊಡಯ್ಯ ಒಂದು. ಇನ್ನೇನ್ಮಾಡೋದು...’’ಅಂದ ಬೇಸರದಿಂದ. ಅವನಿಗೇನನ್ನಾದರೂ ಸೇದಬೇಕಾಗಿತ್ತು. ಸಿಗರೇಟು ಕೊಂಡು ಎರಡು ದಮ್ಮು ಎಳೆದವನೇ ‘‘ಥತ್, ಈ ದರಿದ್ರ ಸಿಗರೇಟಿಗಿಂತ ಬೀಡಿನಾದ್ರೂ ಸೇದಬಹುದಿತ್ತು...’’ ಜಿಗುಪ್ಸೆಯಿಂದ ಗೊಣಗುತ್ತಾ ಸಿಗರೇಟನ್ನು ನೆಲಕ್ಕಪ್ಪಳಿಸಿದ. ಅಲ್ಲಿ ನಿಂತು ಮಾಡುವುದಕ್ಕೇನೂ ತೋಚದೇ ಅತ್ತ ಇತ್ತ ನೋಡಿದ ಪಾಪಣ್ಣ ಎದುರಿನ ಅಂಗಡಿಯೊಂದಕ್ಕೆ ತಗುಲಿದ್ದ ಬೋರ್ಡನ್ನು ಓದುವ ಪ್ರಯತ್ನ ಮಾಡಿದ. ‘ಸ್ಪೇರ್ ಪಾರ್ಟ್ಸ್’ ಎಂದು ಬರೆದಿರುವುದು ‘‘ಸ್ಪೇರ್ ಹಾರ್ಟ್ಸ್’’ ಎಂದು ಬದಲಾಯಿಸಿದರೆ ಹೇಗೆ? ಇತ್ಯಾದಿಯಾಗಿ ಯೋಚಿಸಿದ. ಇವು ಯಾವುವೂ ಅವನ ಮನಸ್ಸಿಗೆ ಕವಿದ ಮಂಕುತನವನ್ನು ಓಡಿಸುವಷ್ಟು ಶಕ್ತವಾಗಿರಲಿಲ್ಲ. ತನಗೆ ಇದ್ದಕ್ಕಿದ್ದ ಹಾಗೆ ಬಡಿದ ಈ ಮಂಕುತನಕ್ಕೆ ಕಾರಣಗಳನ್ನು ಹುಡುಕತೊಡಗಿದ. ‘ಪಾರ್ಕಿನಲ್ಲಿದ್ದ ಮುದುಕ ತನ್ನನ್ನು ಹುಚ್ಚನೆಂದು ತಿಳಿದನೆಂದೆ!’
ಯಾಕೋ ಒಪ್ಪುವುದಕ್ಕೆ ಮನಸ್ಸಾಗದೇ ‘ಸಿಗರೇಟಿಲ್ಲದ್ದಕ್ಕೆ ಇರಬಹುದು’ ಎಂದು ಸಮಾಧಾನಿಸಿಕೊಂಡ. ಇವೆಲ್ಲಾ ಸಾಯಲಿ ಅಂದುಕೊಂಡು ‘ಸ್ಫೂರ್ತಿ’ ಎಂಬ ಕನಸಿನ ಕನ್ಯೆಯ ಉಲ್ಲಾಸಭರಿತ ಕಲ್ಪನೆಗಳಲ್ಲಿ ತನ್ನ ಬದುಕಿನ ಇತ್ತೀಚಿನ ದಿನಗಳು ಹೊಚ್ಚ ಹೊಸದಾಗಿ ನವೀಕತಗೊಳ್ಳತೊಡಗಿದ ಪವಾಡವನ್ನು ನೆನೆದು ಪುಳಕಗೊಳ್ಳತೊಡಗಿದ.
 ಒಂದರಿಂದ ಇನ್ನೊಂದಕ್ಕೆ ವ್ಯತ್ಯಾಸಗಳೇ ಇಲ್ಲದ ಎಂದಿನದೇ ನೋಟ, ಊಟ, ಹಗಲು, ರಾತ್ರಿಗಳು, ಈ ಜೀವನಕ್ಕೂ ಮರಣಕ್ಕೂ ಏನಂತಹ ಮಹಾ ವ್ಯತ್ಯಾಸವಿದೆ?’ ಪ್ರಶ್ನಿಸುವಂತೆ ಮಾಡಿದ ಪಾಪಣ್ಣನ ನಿರ್ಜೀವ ಬದುಕಿನಲ್ಲಿ ಹಗಲುಗಳು ಹೊಸದಾಗಿ ಹುಟ್ಟತೊಡಗಿದವು. ಕೊನೆಗೂ ಒಂದು ದಿನ ಅವನು ಕಾಯುತ್ತಿದ್ದ ಪತ್ರ ಅವನ ಕೈ ಸೇರಿತ್ತು ಒಡೆದು ಓದುವ ಧೈರ್ಯವಾಗದೆ ತುಂಬಾ ಹೊತ್ತು ಕಂಪಿಸುವ ಕೈಗಳಿಂದ ಅದನ್ನು ಹಿಡಿದು ದಿಟ್ಟಿಸಿದ್ದ. ಆದರೆ ಒಡೆದು ಓದಿದ್ದೇ ಉತ್ಸಾಹ ಜರ್ರನೇ ಇಳಿದು ಹೋಗಿತ್ತು.
ಬರೆದಿದ್ದಳವಳು: ‘‘ಸುಳ್ಳು ಅನ್ನೋದು ಕೂಡ ಇಷ್ಟು ಚಂದವಾಗಿರುತ್ತಾ ಎಂದು ಆಶ್ಚರ್ಯವಾಗಿರುತ್ತದೆ ಹುಡುಗಾ. ಯಾವ ಸಿನಿಮಾದಿಂದ ಕಲಿತೆಯೋ? ಅಲ್ಲ ಕಣೋ, ಅವೆಲ್ಲದರ ಬದಲು ‘ಹುಡುಗಿ, ನೀನು ನನ್ನ ಗೆಳತಿಯಾಗುವಿಯಾ?’’ಎಂದು ನೇರವಾಗಿ ಕೇಳಿದ್ದರೆ ಕೆಲಸಗಳೆಲ್ಲಾ ಎಷ್ಟು ಸುಲಭವಾಗಿರುತ್ತಿತ್ತು! ನೀನು ಹಾಗೆಲ್ಲ ‘ಕಲರ್‌ಫುಲ್’ ಆಗಿ ಬರೆದ ತಕ್ಷಣ ಹುಡುಗಿ ‘ಔಟ್’ ಅಂದುಕೊಂಡೆಯಾ...? ನೀವು ಗಂಡಸರು ಇಂತಹದನ್ನೇ ಅಸ್ತ್ರವಾಗಿಟ್ಟುಕೊಂಡು ನಮ್ಮ ಶೋಷಣೆ ಮಾಡುತ್ತಾ ಬಂದಿದ್ದೀರಲ್ಲ? ನಿನ್ನ ‘ಕನಸಿನಾಟ’ಎಲ್ಲಾ ನನ್ನಲ್ಲಿ ನಡೆಯುವುದಿಲ್ಲ ಜೋಕೆ!’’
 ಪಾಪಣ್ಣ ಆ ದಿನ ಇಡೀ ಚೈತನ್ಯವೇ ಬತ್ತಿ ಹೋದವನಂತಿದ್ದ. ಈ ಪವಾಡದಂತಹ ಸತ್ಯವನ್ನು ಅವಳು ನಂಬಲಿಲ್ಲ ಎನ್ನುವುದಕ್ಕಿಂತಲೂ, ತಾನು ಕೀಳುಮಟ್ಟದ ಕ್ರಿಯೆಗಳಿಗೆ ಇಳಿಯುವಂಥವನು ಎಂದು ತೀರ್ಮಾನಿಸಿದಳಲ್ಲ ಎಂಬುದು ಅವನ ಸಂಕಟವನ್ನು ಹೆಚ್ಚಿಸಿತು. ತಾನು ಅಷ್ಟೊಂದು ಕಾತರದಿಂದ ಕಾದ ಪತ್ರ ನೀಡಿದ ಬೇಜಾರನ್ನು ತಾಳಿಕೊಳ್ಳಲಾಗದೇ ಪಾಪಣ್ಣ ನೆಮ್ಮದಿಗೆಟ್ಟು ನರಳಿದ್ದ. ಅವಳಿಗೆ ಸತ್ಯವನ್ನು ಇದ್ದಂತೆಯೇ ಮನವರಿಕೆ ಮಾಡುವ ದಾರಿಗಳು ತೋಚದೇ ಹಾಳೆ, ಪೆನ್ನು, ತೆಗೆದು ತನ್ನ ಅಶಾಂತ ಮನಸ್ಸಿನ ಬೇಗುದಿಯನ್ನೆಲ್ಲಾ ಲಗಾಮಿಲ್ಲದೇ ಹರಿಯಬಿಟ್ಟ. ಡೈರಿಯ ಪುಟ ತಿರುವಿ ಆ ವಿಲಕ್ಷಣ ಕನಸಿನ ಕುರಿತು ಬರೆದಿದ್ದ ಪುಟವನ್ನು ಹರಿದು ಜೊತೆಗಿಟ್ಟು ಅವಳಿಗೆ ಕಳಿಸಿದ್ದ.
ಬಯಕೆ ಮತ್ತೆ ಚಿಗುರಿತ್ತು. ಬೆಳಗ್ಗೆ ಆಫೀಸು ಮುಟ್ಟುವ ಹೊತ್ತಿಗೆ ಮತ್ತೆ ಅವನ ಮನಸ್ಸಿನ ರಾಗಗಳಿಗೆ ತಕ್ಕಂತೆ ಹದಯ ತಾಳ ಬಡಿಯತೊಡಗಿದವು. ಕಾಯುವುದು ಮತ್ತೆ ತೊಡಗಿತ್ತು. ಜೊತೆಗೆ ಆಶೆ-ನಿರಾಶೆ, ಕಾತರ-ದುಗುಡ ಇತ್ಯಾದಿ ಇತ್ಯಾದಿಗಳು...
   ಪಾಪಣ್ಣನ ವಿವರಣೆಗಳನ್ನು ಅವಳು ನಂಬಿದಳೋ, ಬಿಟ್ಟಳೋ ಅಲ್ಲಿಂದ ಅವನ ಮತ್ತು ಅವಳ ನಡುವೆ ಓಡಾಡತೊಡಗಿದ ಪತ್ರಗಳು ನಿಮಿತ್ತವನ್ನೇ ಮರೆತು ತಮಗೆ ಅರಿವೇ ಇಲ್ಲದಂತಹ ನಿಶ್ಚಿತ ಒಪ್ಪಂದವನ್ನೂ, ಕರಾರುಗಳನ್ನೂ ಹಾಕಿಕೊಂಡವು. ಆ ನಿಯಮಿತವಾದ ಪತ್ರಗಳಿಲ್ಲದಿದ್ದರೆ ತಾನು ಬದುಕಿನ ಕೊಂಡಿಯಿಂದಲೇ ಕಳಚಿಕೊಳ್ಳುತ್ತಿರುವೆನೇನೋ ಎಂಬಂತಹ ಗಾಬರಿಗಳು ಅವನಲ್ಲಿ ಹುಟ್ಟುತ್ತಿದ್ದವು. ಬದುಕಿನ ಶೂನ್ಯತೆಯನ್ನೆಲ್ಲಾ ಆ ಪತ್ರಗಳು ತುಂಬ ತೊಡಗಿದಾಗ, ಅವುಗಳಿಗಾಗಿ ಕಾಯುತ್ತಾ ಕೂಡುವುದು ಪರಮ ಸುಖದ ಕೆಲಸವೆನಿಸಿ ಕೊನೆಗೆ ಆ ಪತ್ರಗಳಿಲ್ಲದೇ ತಾನು ಬದುಕಲಾರೆನೆಂಬುದನ್ನೂ ಕೂಡ ಆತ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಇಷ್ಟಾದರೂ ಅವನಿಗಿನ್ನೂ ಬಗೆಹರಿದಿರದ ಪ್ರಶ್ನೆಯೊಂದಿದೆ: ತನ್ನ ಜೀವನದುದ್ದಕ್ಕೂ ಪ್ರೀತಿಸಿದ ಹುಡುಗಿಯರೆಲ್ಲರಲ್ಲೂ ನಾಲ್ಕೇ ದಿನಕ್ಕೆ ನಿರಾಸಕ್ತನಾಗುತ್ತಿದ್ದ ತನ್ನನ್ನು ‘ಸ್ಫೂರ್ತಿ’ ಎಂಬ ಕಂಡು ಕೇಳರಿಯದ ಹುಡುಗಿ ಜೀವದುದ್ದಕ್ಕೂ ಕಲಕುತ್ತಿರುವ ಬಗೆ ಹೇಗೆ...?
ಪಾಪಣ್ಣನ ಯೋಚನೆಗಳೆಲ್ಲಾ ಹೀಗೆ ಸಾಗಿ ತುಂಬಾ ಹೊತ್ತು ಜಾರಿರುವುದು ಅವನ ಗಮನಕ್ಕೆ ಬಂದು ತಾನಿಲ್ಲಿಂದ ಇನ್ನೂ ಕದಲದಿರುವ ಬಗ್ಗೆ ಅನುಮಾನ ಮೂಡಿತು. ‘ಭಯಪೀಡಿತ ಮನಸ್ಸು ತಾನಿಲ್ಲಿಂದ ಕದಲದಂತೆ ಪಿತೂರಿ ಹೂಡಿದೆ’ ಎಂದು ಹೊಳೆದ ಬೆನ್ನಿಗೇ ಇದು ದೊಡ್ಡ ಅವಮಾನದಂತೆ ಕಂಡು ಎದ್ದು ಹೊರಟದ್ದಕ್ಕೂ, ಅವನನ್ನೇ ಆಸೆಗಣ್ಣಾಗಿ ನೋಡುತ್ತಿದ್ದ ಲಾಟರಿ ಹುಡುಗನೊಬ್ಬ ಲಾಟರಿ ಕೊಳ್ಳುವಂತೆ ಪೀಡಿಸುವುದಕ್ಕೂ ಸರಿಯಾಯಿತು.
‘‘ಸರಿ, ಐವತ್ತು ಪೈಸೆ ಮಿನಿ ಕೊಡಯ್ಯ’’ಅವನಿಂದ ತಪ್ಪಿಸಿಕೊಳ್ಳುವ ಕಡೆಯ ಮಾರ್ಗವೆಂಬಂತೆ ಅಂದ.
‘‘ಮಿನಿ ಯಾಕೆ ಸಾರ್? ಲಕ್ಷದ್ದು ತಗೊಳ್ಳಿ. ಬರೇ ಎರಡು ರೂಪಾಯಿಗೆ ಒಂದು ಲಕ್ಷ.’’

‘‘ನಿನ್ನ ಲಕ್ಷ ತಗೊಂಡು ಹೋಗಿ ಬಾವಿಗಾಕಯ್ಯ’’ಎಂದು ರೇಗಿದ ಪಾಪಣ್ಣ ಒಂದು ಮಿನಿ ಕೊಂಡು ಜೇಬಿಗಿಳಿಸಿದ. ಸುಮ್ಮನೇ ಫಲಿತಾಂಶಕ್ಕೆ ಕಾಯುವ ‘ಥ್ರಿಲ್’ಗಾಗಿಯಾದರೂ ಇರಲಿಯೆಂದು. ಬಹುಶಃ ಕಾಯುವ ‘ಥ್ರಿಲ್’ಬಂಪರ್ ಪ್ರೈಸ್ ಬಂದಾಗಲೂ ಸಿಗಲಾರದಲ್ಲವೇ ಅಂದುಕೊಂಡ. ಸ್ಫೂರ್ತಿ ಎಂಬ ಕನಸಿನ ಹುಡುಗಿಯ ಪತ್ರಗಳಿಗೆ ಕಾದ, ಹಾಗೆ ಪತ್ರಕ್ಕೆ ಕಾಯುವ ಸುಖ, ಬಿಚ್ಚಿ ಓದು ಓದುತ್ತಾ ಹೋದಂತೇ ತಣ್ಣಗಾಗಿಬಿಡುತ್ತದೆ. ಹಾತೊರೆದು ಕಾದದ್ದನ್ನು ಪಡೆದಾಗ ‘ಇಷ್ಟೆನಾ’ಎಂದೆನಿಸಿ ಬಿಡುತ್ತದೆ. ‘ಮುಂದಕ್ಕೇನು’ ಎಂಬ ಶೂನ್ಯವೇ ಬಾಯಿ ತೆರೆದು ನುಂಗಲು ಬರುತ್ತದೆ. ನಿಧಾನಕ್ಕೆ ಪಾರ್ಕ್ ಕಡೆ ಹೆಜ್ಜೆ ಹಾಕತೊಡಗಿದ ಪಾಪಣ್ಣನಿಗೆ ಹತ್ತಿರ ಬಂದು ನೋಡುತ್ತಿದ್ದಂತೆಯೇ ಏಕಾಏಕೀ ಎದೆ ‘ಧಡ್’ ಎಂದಿತು. ಪೇಪರು ಓದುತ್ತಾ ಕೂತಿದ್ದ ಮುದುಕ ಅಲ್ಲಿರಲಿಲ್ಲ! ಯಾರೋ ಒಬ್ಬಳು ತರುಣಿ ಯಾರಿಗೋ ಕಾಯುತ್ತಿರುವಂತೆ ಕುಳಿತಿದ್ದಾಳೆ!! ಪಾಪಣ್ಣ ತಟ್ಟನೆ ನಾಲ್ಕು ಹೆಜ್ಜೆ ಹಿಂದೆ ಸರಿದು ಮರವೊಂದರ ಮರೆಗೆ ನಿಂತು ಹುಡುಗಿಯನ್ನು ಗಮನಿಸತೊಡಗಿದ. ಅವನಿಗೆ ಅನುಮಾನ ಪಡುವುದಕ್ಕೇನೂ ಉಳಿಯಲಿಲ್ಲ. ಅವನಿಗಾದ ಉದ್ರೇಕದಲ್ಲಿ ಅನಿಯಂತ್ರಿತ ಎದೆ ‘ಡಬ್...ಡಬ್..’ಎಂದು ಒಂದೇ ಸಮನೆ ಹೊಡೆಯ ತೊಡಗಿದ್ದೂ ಅರಿವಿಗೆ ಬರಲಿಲ್ಲ. ಪಾಪಣ್ಣ ತೆಳುವಾಗಿ ಬೆವರತೊಡಗಿದ. ತಾನೀಗ ಅವಳೊಡನೆ ಮಾತಾಡಬೇಕಾದ ಮೊತ್ತ ಮೊದಲ ಮಾತೇನು ಎಂಬುದು ಸದ್ಯದ ಗಂಭೀರ ಸಮಸ್ಯೆಯಾಗಿ ಕಂಡು ಬಂದು, ಇಷ್ಟು ಹೊತ್ತು ತಾನಿಲ್ಲಿ ಕೂತು ಅದನ್ನು ಯೋಚನೆಯೇ ಮಾಡದೇ ಇದ್ದುದಕ್ಕೆ ತನ್ನನ್ನೇ ಹಳಿದುಕೊಂಡ. ಕರವಸ್ತ್ರ ತೆಗೆದು ಬೆವರನ್ನು ಒರೆಸಿಕೊಳ್ಳುತ್ತಾ ಸುಧಾರಿಸಿಕೊಂಡ ಪಾಪಣ್ಣ.
ಮೆಲ್ಲನೇ ಮರೆಯಿಂದ ಹೊರಬಿದ್ದು, ಮುಖದಲ್ಲಿ ಪ್ರಸನ್ನತೆಯನ್ನು ತರುವ ಪ್ರಯತ್ನ ಮಾಡುತ್ತಾ, ಸಿಮೆಂಟು ಬೆಂಚಲ್ಲಿ ಕುಳಿತ ಹುಡುಗಿಯ ಬಳಿ ಬಂದ ಪಾಪಣ್ಣ ಬಾಗಿ ‘‘ಹಲೋ.ನೀವು... ನೀವು.. ಸ್ಫೂರ್ತಿ ಅಲ್ಲವೇ..?’’ಎಂದು ಪ್ರಶ್ನಿಸಿದ.
ಹುಡುಗಿ ಧಡಕ್ಕನೆ ಎದ್ದು ನಿಂತಳು. ಅವಳ ಕಣ್ಣುಗಳಲ್ಲಿ ವಿಸ್ಮಯ ಚಿಮ್ಮಿತ್ತು. ‘ಸ್ಫೂರ್ತಿ..?’ ಯಾವ ಸ್ಫೂರ್ತಿ..’’
 ಕಪಾಳಕ್ಕೆ ಏಟು ಬಿದ್ದವನಂತೆ ಪಾಪಣ್ಣ ಒದ್ದಾಡಿದ. ತನಗೂ ಕೇಳಿಸದಂತೆ ಗೊಣಗತೊಡಗಿದ: ‘‘ಸ್ಫೂರ್ತಿ..ಸ್ಫೂರ್ತಿ..’’
ಪಾಪಣ್ಣನನ್ನು ವಿಚಿತ್ರವಾಗಿ ದಿಟ್ಟಿಸುತ್ತಾ ಹುಡುಗಿ ಅಲ್ಲಿಂದೆದ್ದು ನಡೆದಳು. ತನಗಾದ ಶಾಕ್‌ನಿಂದ ನಿಧಾನಕ್ಕೆ ಚೇತರಿಸಿಕೊಂಡ ಪಾಪಣ್ಣ ‘‘ಛೇ! ತನ್ನಂತೆ ಯಾರಿಗೋ ಕಾಯುತ್ತಿದ್ದವಳೋ ಏನೋ? ಕರೆದು ನಿಜ ವಿಷಯ ಹೇಳಲೇ’’ ಅಂದುಕೊಂಡ. ಆದರೆ ಪಾಪಣ್ಣನನ್ನು ಒಂದು ವಿಧದ ಸುಸ್ತು ಆವರಿಸಿತು. ಕಣ್ಣು ಕತ್ತಲು ಬಂದವನಂತೆ ಬೆಂಚಿನ ಮೇಲೆ ಕುಸಿದ.
 ಯಾಕೋ ನಾಲ್ಕೆೃದು ವರ್ಷಗಳ ಹಿಂದಿನ ‘ಪಡ್ಡೆ’ದಿನಗಳ ನೆನಪುಗಳು ತೇಲಿ ತೇಲಿ ಬಂದವು. ದಿನಕ್ಕೊಂದು ಹುಡುಗಿಯ ಬೆನ್ನು ಹತ್ತಿ ನಾಲ್ಕೆ ದಿನಕ್ಕೆ ಹೋದಷ್ಟೇ ವೇಗದಲ್ಲಿ ತಿರುಗಿ ಬಂದು ಮೂಲೆ ಹಿಡಿದು ಕೂರುತ್ತಿದ್ದ ದಿನಗಳು! ಪಾಪಣ್ಣನ ಸಮಸ್ಯೆಯ ಅರಿವಿದ್ದ ಗೆಳೆಯರೆಲ್ಲಾ ಸೇರಿ ಸಮಾಧಾನಿಸುತ್ತಿದ್ದರು.
‘‘ಪ್ರೆಸಿಲ್ಲಾ ಇವತ್ತು ಏನಂದಳೋ ಪಾಪಣ್ಣ..’’
‘‘ಯಾವ ಪ್ರೆಸಿಲ್ಲಾ..?’’
‘‘ಅದೇ ನಿನ್ನ ಹೊಸ ಪಾರ್ಟ್‌ನರ್’’
‘‘ಏ, ಅವಳನ್ನು ನಾ ಒಲ್ಲೆ ಕಣ್ರೋ..?’’
‘‘ಯಾಕೋ ಪಾಪಣ್ಣ, ಅಷ್ಟು ಚಂದವಿದ್ದಾಳೆ..’’
‘‘ಅವಳಿಗೆ ಮುಖದಲ್ಲಿ ಮೀಸೆ ಮೊಳಿತಿದೆ. ನಾನವಳನ್ನೊಲ್ಲೆ’’
‘‘ಸರಿ ಬಿಡು, ಆ ರಾಗಿಣಿ ಸಂಗತಿ ಏನಾಯ್ತು..?’’
‘‘ಓ ಅದಾ? ದೂರದ ಬೆಟ್ಟ ನುಣ್ಣಗೆ. ಮುಖ ತುಂಬಾ ಮೊಡವೆ ಕಲೆ...’’ಈ ತರಹವಾಗಿಯೆಲ್ಲಾ ಚಂಡಿ ಹಿಡಿಯುತ್ತಿದ್ದ ಪಾಪಣ್ಣ ಮಂಡಿಯೂರಿ ಬೊಗಸೆಯೊಡ್ಡಿದ್ದು ವೀಣಾ ಎಂಬ ಹುಡುಗಿಯೊಬ್ಬಳಿಗೇ. ‘ತನ್ನ ಪ್ರೇಮವೇನಿದ್ದರೂ ನಾಲ್ಕು ಸಲ ನೋಡಿ, ನಕ್ಕು, ಮಾತಾಡಿ,ಮುಟ್ಟಿ-ತಟ್ಟುವುದರೊಳಗೇ ಮುಗಿದು ಹೋಗುತ್ತದೆ. ಕೊರಗಿ ಕರಗಿ ಗಳಿಸಿಕೊಂಡ ವೀಣಾ ಎಂಬ ಹುಡುಗಿಯನ್ನೂ ಉಳಿಸಿಕೊಳ್ಳುವುದು ತನ್ನಿಂದಾಗಲಿಲ್ಲ’ ಎಂದು ಪಾಪಣ್ಣ ವಿಷಾದಭರಿತನಾಗಿ ಯೋಚಿಸಿದ.
ಇದ್ದಕ್ಕಿದ್ದಂತೇ ಅವನಲ್ಲಿ ಉದ್ಭವಿಸಿದ ಮೈ ನಡುಗಿಸುವಂತಹ, ಭಯಾನಕ ಆಲೋಚನೆಯೊಂದು ಅವನಿಗರಿವೇ ಇಲ್ಲದ ಸಂಗತಿಯನ್ನು ನಿಚ್ಚಳಗೊಳಿಸುತ್ತಾ ಹೊಸ ಅರ್ಥಗಳನ್ನು ಹೊಳೆಯಿಸತೊಡಗಿತು.
‘‘ಈ ಕಾಯುವಿಕೆಯ ಹಿಂದೆ ಇರುವುದೆಲ್ಲಾ ಯಃಕಶ್ಚಿತ್ ಕುತೂಹಲ ಬಿಟ್ಟು ಬೇರೇನೂ ಆಗಿರದಿದ್ದರೆ...?’’ ಈ ಯೋಚನೆ ಮೂಡಿದ್ದೇ ಪಾಪಣ್ಣ ಧಿಗ್ಗನೆದ್ದು ನಿಂತ. ಕಣ್ಣಿನೆದುರು ವೀಣಾ, ಪ್ರೆಸಿಲ್ಲಾ, ರಾಗಿಣಿಯರ ಚಿತ್ರಗಳು ಮೂಡಿ ನಿಂತವು.
ಅವನ ಮನಸ್ಸು ಒಂದೇ ಸಮನೆ ಮೊರೆಯಿಡತೊಡಗಿತು. ‘‘ಅವಳು ಬಾರದಿರಲಿ..ಅವಳು ಬಾರದಿರಲಿ..’’ಅಷ್ಟರಲ್ಲಿ ಪಾರ್ಕಿನ ಗೇಟ್ ಬಳಿ ಆಟೋ ರಿಕ್ಷಾವೊಂದರಿಂದ ತರುಣಿಯೋರ್ವಳು ಇಳಿಯುತ್ತಿರುವ ಕುರುಹುಗಳನ್ನು ಕಂಡ ಸುರೇಂದ್ರ ಯಾನೇ ಪಾಪಣ್ಣ ತಿರುಗಿ ನೋಡದೆ ಓಡತೊಡಗಿದ.

Thursday, April 3, 2014

ಸೂಲಿಬಾವಿ ಅವರನ್ನು ಸಂಪರ್ಕಿಸಿ.

ನನ್ನ "ಬಾಡೂಟದ ಜೊತೆಗೆ ಗಾಂಧೀ ಜಯಂತಿ" ಕೃತಿಗಾಗಿ ಹಲವು ಗೆಳೆಯರು ಸಂಪರ್ಕಿಸುತ್ತಿದ್ದಾರೆ. ದಯವಿಟ್ಟು ಈ ಕೃತಿಗಾಗಿ ಲಡಾಯಿ ಪ್ರಕಾಶನದ ಬಸವರಾಜ ಸೂಲಿಬಾವಿ ಅವರನ್ನು ಸಂಪರ್ಕಿಸಿ. ಅವರ ಮೊಬೈಲ್ ನಂಬರ್ ಇಲ್ಲಿದೆ -94802 86844
ಪ್ರೀತಿಗೆ ಕೃತಜ್ಞತೆಗಳು

Tuesday, April 1, 2014

ಉಳಿದವರು ಕಂಡಂತೆ: ಕನ್ನಡ ಚಿತ್ರೋದ್ಯಮದ ಭರವಸೆಗಳು

‘ಉಳಿದವರು ಕಂಡಂತೆ’ ಚಿತ್ರ ನಿಮಗೆ ಹೊಸ ಜಗತ್ತೊಂದನ್ನು ಕಟ್ಟಿಕೊಡುತ್ತದೆ. ಕನ್ನಡ ಸಿನಿಮಾ ಲೋಕಕ್ಕೆ ತೀರಾ ಅಪರಿಚಿತವಾದ ದಕ್ಷಿಣ ಕನ್ನಡದ ಉಡುಪಿ ಆಸುಪಾಸಿನ ಜಗತ್ತು ಅದು. ಕನ್ನಡದ ಸಿನಿಮಾಗಳು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಅಪರಾಧ ಲೋಕವನ್ನು ಕಟ್ಟಿಕೊಡುತ್ತಿರುವ ಸಂದರ್ಭದಲ್ಲಿ, ಭಿನ್ನ ಪರಿಸರವೊಂದರಲ್ಲಿ, ಒಂದು ಅಪರಾಧವನ್ನು ವಿವಿಧ ಕೋನಗಳಲ್ಲಿ ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ನಿರೂಪಿಸಲಾಗಿದೆ. ಉಡುಪಿ, ಮಲ್ಪೆ ಪರಿಸರ, ಕಡಲು, ಹುಲಿವೇಷ ಮತ್ತು ಅಲ್ಲಿನ ಮ್ಯಾನರಿಸಂನ್ನು ಒಟ್ಟೊಟ್ಟಿಗೇ ಚಿತ್ರದ ಕತೆಯ ಭಾಗವಾಗಿ ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ ಜೋಡಿಸಿದ ಚಿತ್ರ ಇದು. ಈ ಚಿತ್ರಕ್ಕೆ ಕತೆಯಿಲ್ಲ. ಒಂದು ಘಟನೆಯನ್ನು ಕೇಂದ್ರವಾಗಿರಿಸಿ, ಅದನ್ನು ವಿವಿಧ ಕಣ್ಣುಗಳ ಮೂಲಕ ನೋಡುವ ಪ್ರಯತ್ನವನ್ನು ಈ ಚಿತ್ರ ಮಾಡುತ್ತದೆ. ಸಣ್ಣ ಪುಟ್ಟ ತೊಡಕುಗಳ ನಡುವೆಯೂ, ಎಲ್ಲವನ್ನು ಒಟ್ಟಾಗಿ ಜೋಡಿಸಿ ಅದಕ್ಕೆ ಒಂದು ಸಿನಿಮಾ ಚೌಕಟ್ಟು ನೀಡುವ ಕೆಲಸ ಹಗ್ಗದ ನಡಿಗೆಯೇ ಸರಿ. ನಿರ್ದೇಶಕ ರಕ್ಷಿತ್ ಶೆಟ್ಟಿಯವರು ಎಲ್ಲೂ ಆಯ ತಪ್ಪದೆ ಗುರಿ ಮುಟ್ಟುವಲ್ಲಿ ಸಫಲರಾಗಿದ್ದಾರೆ. 

ಚಿತ್ರ ಮುಖ್ಯವಾಗಿ ಮೂರು ಪಾತ್ರಗಳ ಸುತ್ತ ಸುತ್ತುತ್ತದೆ. ಒಂದು ರಾಘು. ಇನ್ನೊಬ್ಬ ರಿಚ್ಚಿ. ಮಗದೊಬ್ಬ ಮುನ್ನಾ. ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಸ್ಪಷ್ಟ ಕಾರಣವೇ ಇಲ್ಲದೆ ಈ ಮೂವರು ಒಬ್ಬರಿಂದ ಒಬ್ಬರು ಎನ್ನುವಂತೆ ಕೊಲೆಯಾಗುತ್ತಾರೆ. ಅಥವಾ ಹಾಗೆಂದು ಕೆಲವರು ನಂಬಿದ್ದಾರೆ. ಇದರಲ್ಲಿ ರಾಘುವನ್ನು ಕೊಂದಿರುವುದು ರಿಚ್ಚಿ ಎಂದು ಕೆಲವು ಪಾತ್ರಗಳು ಹೇಳಿದರೆ, ‘ರಾಘು-ರಿಚ್ಚಿ ಬಾಲ್ಯ ಸ್ನೇಹಿತರು. ಅವನೇಕೆ ರಾಘುವನ್ನು ಕೊಲ್ಲುತ್ತಾನೆ’ ಎಂದು ಇನ್ನೊಂದು ಪಾತ್ರ ಹೇಳುತ್ತದೆ. ರಿಚ್ಚಿಯನ್ನು ಒಂದು ತಪ್ಪು ಗ್ರಹಿಕೆಯಲ್ಲಿ ಮುನ್ನಾ ಕೊಂದು ಹಾಕುತ್ತಾನೆ. ಇವೆಲ್ಲದಕ್ಕೂ ನಿಮಿತ್ತವಾಗುವುದು ಬಾಲು ಎನ್ನುವ ಹುಲಿವೇಷ ಪಾತ್ರಧಾರಿ. ಮತ್ತು ಅವನಿಗೆ ಆಕಸ್ಮಿಕವಾಗಿ ಕಡಲಿನಲ್ಲಿ ಸಿಗುವ ನಿಧಿ.

   ರಿಚ್ಚಿ (ರಕ್ಷಿತ್ ಶೆಟ್ಟಿ) ಪಾತ್ರವಂತೂ ಕನ್ನಡಕ್ಕೆ ಹೊಸ ಬಗೆಯದು. ಮಂಗಳೂರಿನ ಮ್ಯಾನರಿಸಂನ್ನು ಸೂಕ್ಷ್ಮವಾಗಿ ಗ್ರಹಿಸಿ ಕಡೆದ ಪಾತ್ರ ಅದು. ರಕ್ಷಿತ್ ಶೆಟ್ಟಿ ಅವರ ಅತ್ಯಂತ ಲವಲವಿಕೆಯ ನಟನೆ ಚಿತ್ರವನ್ನು ನೋಡುವಂತೆ ಮಾಡುತ್ತದೆ. ಎದೆಯನ್ನೇ ಇರಿಯುವ  ತಣ್ಣಗಿನ ಕ್ರೌರ್ಯವನ್ನು ರಿಚ್ಚಿ ತನ್ನ ಮ್ಯಾನರಿಸಂ ಮೂಲಕ ಅಭಿವ್ಯಕ್ತಿಗೊಳಿಸಿದ ರೀತಿ ಅನನ್ಯವಾದುದು. ತಲ್ಲಣಗೊಳಿಸುವಂತಹದು. ರಿಚ್ಚಿಯ ಬಳಿಕ ಅತ್ಯಂತ ಇಷ್ಟವಾಗುವ ಪಾತ್ರ ಮುನ್ನಾ(ಕಿಶೋರ್)ನದು. ಉತ್ತರಕರ್ನಾಟಕದಿಂದ ಮಂಗಳೂರಿಗೆ ಬಂದಿರುವ ಮುನ್ನಾ, ಆತನ ಬೈಕು, ತನ್ನ ಕನಸಿನಲ್ಲಿ ಆತ ಪ್ರೀತಿಸುವ ಹುಡುಗಿ ಹಾಗೂ ಮುನ್ನಾನ ಸಂಗಡಿಗ ಎಳೆ ಹುಡುಗ ಡೆಮಾಕ್ರಸಿ ಇವೆಲ್ಲ ಎದೆಮುಟ್ಟುತ್ತವೆ. ಒರಟು ಮುಖವಾದರೂ ಎದೆಯಲ್ಲಿ ತಣ್ಣಗೆ ಪ್ರೀತಿಯನ್ನು ಬಚ್ಚಿಟ್ಟು ತಿರುಗುವ ಮುನ್ನಾನೇ ಚಿತ್ರಕ್ಕೆ ಒಂದು ಅನಿರೀಕ್ಷಿತ ಅಂತ್ಯವನ್ನು ನೀಡುತ್ತಾನೆ.  ರಾಘು ಪಾತ್ರದಲ್ಲಿ ರಿಷಬ್ ತನ್ನ ಗಾಂಭೀರ್ಯವನ್ನು ಉಳಿಸಿಕೊಂಡಿದ್ದಾರೆ. ಪಾತ್ರ ಸಣ್ಣದಾದರೂ ಭವನಗಳನ್ನು ಬಡಿದೆಬ್ಬಿಸುವಂಥದ್ದು. ಈತನ ತಾಯಿಯಾಗಿ ತಾರ ನೀಡಿದ ಅಭಿನಯ ಕೂಡ ಅಷ್ಟೇ ತೀವ್ರವಾಗಿದೆ.  ಬಾಲು ಪಾತ್ರದಲ್ಲಿ ಅಚ್ಯುತ್ ಇನ್ನೊಂದು ಹೆಗ್ಗಳಿಕೆ. ಹುಲಿವೇಷಧಾರಿಯಾಗಿದ್ದ ಬಾಲುವನ್ನು ರಿಚ್ಚಿ ಥಳಿಸುವುದು, ಹುಲಿಯನ್ನು ರಿಕ್ಷಾದಲ್ಲಿ ಹಾಕಿ ಒಯ್ಯೋದು...ತಮಾಷೆ, ಕ್ರೌರ್ಯ ಜೊತೆ ಜೊತೆಯಾಗಿ ನಮ್ಮನ್ನು ಕಲಕುತ್ತದೆ.
  
ಇಡೀ ಚಿತ್ರ ತನ್ನ ಭಿನ್ನ ನಿರೂಪಣೆಯಿಂದಾಗಿ ಹಲವೆಡೆ ಕೆಲವರಿಗೆ ತೀರ ಗೊಂದಲ ಎನ್ನಿಸಬಹುದು. ಅತ್ಯಂತ ಖೇದಕರ ಸಂಗತಿಯೆಂದರೆ ಈ ಗೊಂದಲವನ್ನು ಉಪೇಂದ್ರನ ಅಭಿರುಚಿ ಹೀನ ಚಿತ್ರಗಳಿಗೆ ಕೆಲವರು ಹೋಲಿಸಿರುವುದು. ಹಾಗೆ ನೋಡಿದರೆ, ಒಂದು ಘಟನೆಯನ್ನು ಭಿನ್ನ ಕಣ್ಣುಗಳಿಂದ ನಿರೂಪಿಸುವ ತಂತ್ರವನ್ನು ತಮಿಳಿನಲ್ಲಿ ಹಲವರು ಬಳಸಿದ್ದಾರೆ.  ಇಂಗ್ಲಿಷ್‌ನಲ್ಲೂ ಹಲವು ಚಿತ್ರಗಳು ಈ ತಂತ್ರಗಳಿಂದಾಗಿಯೇ ಭಿನ್ನವಾಗಿ ಗುರುತಿಸಲ್ಪಟ್ಟಿದೆ. ಅಷ್ಟೇ ಏಕೆ, ಅಕಿರೋ ಕುರಸೋವಾನ ರಾಶಮನ್ ಒಂದು ಕೊಲೆಯನ್ನು ಮೂರು ವಿಭಿನ್ನ ಜನರ ಮೂಲಕ ನೋಡುವ ಚಿತ್ರ. ಮತ್ತು ಜಗತ್ತಿನ ಶ್ರೇಷ್ಟ ಚಿತ್ರವೂ ಹೌದು. ಈ ನಿಟ್ಟಿನಲ್ಲಿ ಉಳಿದವರು ಕಂಡಂತೆ  ಕನ್ನಡದ ಪಾಲಿಗೆ ಅಪ್ಪಟ ಪ್ರತಿಭೆಗಳಿಂದ ಸಿದ್ಧಗೊಂಡ ಒಂದು ಹೊಸ ಪ್ರಯೋಗ. ಏಕತಾನತೆಯಿಂದ ನರಳುತ್ತಿರುವ  ಕಮರ್ಶಿಯಲ್ ಚಿತ್ರಗಳ ನಡುವೆ ಹೊಸ ಪ್ರಯೋಗಗಳಿಗೆ  ಕೆಲವು ತರುಣರು ತೆರೆದು ಕೊಳ್ಳುತ್ತಿದ್ದಾರೆ. ಅದಕ್ಕಾಗಿ ತಮ್ಮ ಪ್ರತಿಭೆ, ಶ್ರಮ, ಹಣ, ಭವಿಷ್ಯ ಎಲ್ಲವನ್ನೂ ಹೂಡಲು ಸಿದ್ಧರಾಗಿದ್ದರೆ. ಇದು ಕನ್ನಡ ಚಿತ್ರೋದ್ಯಮದ ಭಾಗ್ಯ. ಇಂತಹ ಸಂದರ್ಭದಲ್ಲಿ ವಿಮರ್ಶಕರು
ಅತುರದಿಂದ ತೀರ್ಪು ನೀಡೂದು ತಪ್ಪು. ಆ ಮೂಲಕ ತಮ್ಮ ಗೊಂದಲಗಳನ್ನು ಇತರರ ಮೇಲೆ ಹೇರಿದಂತಾಗಬಹುದು. ಒಂದು ಚಿತ್ರದ ಪ್ರಾಮಾಣಿಕ ಪ್ರಯತ್ನವನ್ನು ಒಂದು ಸಾಲಿನಲ್ಲಿ ಗೀಚಿ ಎಸೆಯುವುದು ನಿಜಕ್ಕೂ ಅಪಾಯಕಾರಿ. ಅದು ಮುಂದಿನ ದಿನಗಳಲ್ಲಿ, ಹೊಸ ಆಲೋಚನೆಗಳಿಗೆ ತಲೆ ಒಡ್ಡುವ ತರುಣರನ್ನ್ನು ಕಟ್ಟಿ ಹಾಕಲು ಕಾರಣವಾಗಬಹುದು.

 ‘‘ಉಳಿದವರು ಕಂಡಂತೆ’ ಒಂದು ಕತೆಯಾಗಿ ಕೆಲವರಿಗೆ  ದಕ್ಕದಿರಬಹುದು. ಆದರೆ ಒಂದು ಸಿನಿಮಾ ಆಗಿ ನಿಮ್ಮ ಮನದಲ್ಲಿ ಖಂಡಿತವಾಗಿ ಉಳಿಯುತ್ತದೆ. ರಿಚ್ಚಿ, ಮುನ್ನಾ, ರಾಘು ಮತ್ತು ಬಾಲು ಇವರಂತೂ ಉಳಿದೇ ಉಳಿಯುತ್ತಾರೆ.ಅದ್ಭುತ ಛಾಯಾಗ್ರಹಣ, ಎದೆ ಮುಟ್ಟುವ ಹಿನ್ನೆಲೆ ಸಂಗೀತ ಚಿತ್ರವನ್ನು ನಿಮ್ಮ ಪಾಲಿಗೆ ಒಂದು ಹೊಸ ಅನುಭವವಾಗಿಸುತ್ತದೆ.  ಇಷ್ಟರ ಮಟ್ಟಿಗೆ ನಾನು ನಿಮಗೆ ಭರವಸೆ ನೀಡಬಲ್ಲೆ.