Friday, November 28, 2014

ಆರ್ಯ ಸಮಾಜದ ವಿರುದ್ಧ ಬಂಡೆದ್ದ ಸ್ವಘೋಷಿತ ಸಂತ ರಾಮ್ ಪಾಲ್

ಈ ದೇಶ ಸ್ವ ಘೋಷಿತ ದೇವಮಾನವರಿಂದ ಗಬ್ಬೆದ್ದು ಹೋಗಿದೆ. ಇಲ್ಲಿ ಹಲವು ಮೊಕದ್ದಮೆಗಳನ್ನು, ಆರೋಪಗಳನ್ನು ಹೊತ್ತ ಬಾಬ ರಾಮ ದೇವ್ ನಂತಹ ಕಪಟ ರಾಜಕೀಯ ಸನ್ಯಾಸಿಗಳಿಗೆ ಸರಕಾರದ ವತಿಯಿಂದ ವಿಶೇಷ ಭದ್ರತೆ ನೀಡಲಾಗುತ್ತದೆ. ಅತ್ಯಾಚಾರ ಆರೋಪಿ ಸ್ವಾಮೀಜಿಗಳನ್ನು ರಕ್ಷಿಸಲು ನ್ಯಾಯಾಂಗವನ್ನೆ ದುರ್ಬಳಕೆ ಮಾಡಲಾಗುತ್ತದೆ. ಆದರೆ ಇವುಗಳ ನಡುವೆಯೂ ಹಿಸ್ಸಾರ್ ನ ದೇವ ಮಾನವ ರಾಮ್ ಪಾಲ್ ವಿರುದ್ಧ ಸರಕಾರ ಸೇನೆಯನ್ನು ಬಳಸಿ ಅವನನ್ನು ಜೈಲಿಗೆ ತಳ್ಳಿತು. ಇಂತಹ ದಿಟ್ಟ ನಿಲುವನ್ನು ಸರಕಾರ ತಳೆಯೂದಕ್ಕೆ ಹೇಗೆ ಸಾಧ್ಯವಾಯಿತು? ಈ ಕಾರ್ಯಾಚರಣೆಯ ಹಿಂದೆ ಯಾರಿದ್ದಾರೆ ? ಎನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ, ನಮಗೆ ಎದುರಾಗೋದು ರಾಮ್ ಪಾಲ್ ಮತ್ತು ಆರೆಸ್ಸೆಸ್ ನಡುವಿನ ಶೀತಲ ಸಮರ. ಆರ್ಯ ಸಮಾಜವನ್ನು ರಾಮ್ ಪಾಲ್ ಎದುರು ಹಾಕಿಕೊಂಡ ಒಂದೇ ಕಾರಣಕ್ಕೆ, ಆತನನ್ನು ಸರಕಾರ ಮಟ್ಟ ಹಾಕಲು ಯೋಚಿಸಿತು. ಆರ್ಯ ಸಮಾಜವನ್ನು ಎದುರು ಹಾಕಿಕೊಳ್ಳದೆ ಆರೆಸ್ಸೆಸ್ ಮೂಗಿನ ನೇರಕ್ಕೆ ತನ್ನ ಆಶ್ರಮವನ್ನು ಬೆಳೆಸಿದ್ದರೆ ರಾಂಪಾಲ್ ಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ? ರಾಮಪಾಲ್ ಮತ್ತು ಆರ್ಯ ಸಮಾಜದ ನಡುವಿನ ತಿಕ್ಕಾಟದ ಕುರಿತಂತೆ ಜಸ್ಪಾಲ್ ಸಿದ್ದು ಅವರು ಬರೆದಿರುವ ಲೇಖನ ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಸ್ವಘೋಷಿತ ದೇವಮಾನವ ರಾಮ್ ಪಾಲ್ ಬಂಧನದ ಇನ್ನೊಂದು ಮುಖವನ್ನು ಈ ಲೇಖನ ಹೇಳುತ್ತದೆ. 
 
ಲೇಖಕ-ಜಸ್ಪಾಲ್ ಸಿದ್ದು

ಸ್ವಘೋಷಿತ ‘ದೇವಮಾನವ’, 63 ವರ್ಷ ವಯಸ್ಸಿನ ರಾಮ್‌ಪಾಲ್‌ನನ್ನು ಹಿಸ್ಸಾರ್‌ನ ಬರ್ವಾಲಾದಲ್ಲಿರುವ ಆತನ ಆಶ್ರಮದಿಂದ ಬಂಧಿಸುವುದರೊಂದಿಗೆ ಎರಡುವಾರಗಳಿಂದ ಭಾರೀಪ್ರಚಾರ ಪಡೆದಿದ್ದ, ಹರ್ಯಾಣ ಪೊಲೀಸರುವ್ ಯವಸ್ಥಿತವಾಗಿ ಹೆಣೆದಿದ್ದ ನಾಟಕಕ್ಕೆಅಂತಿಮ ತೆರೆಬಿದ್ದಿದೆ. ಆದರೆ ಈ ಘಟನೆಯು ಪ್ರಾಂತ್ಯದ ಜನತೆಯ ನಡುವಿನ ಸಾಮಾಜಿಕ ಹಾಗೂ ಧಾರ್ಮಿಕ ಅಂತರವನ್ನು ಇನ್ನಷ್ಟು ವಿಸ್ತರಿಸಿದೆ. ರಾಮ್‌ಪಾಲ್‌ರ ಸತ್‌ಲೋಕ್ ಅಶ್ರಮದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯು ಐವರು ಮಹಿಳೆಯರು ಹಾಗೂ ಒಂದು ಮಗುವಿನ ಪ್ರಾಣವನ್ನು ಬಲಿಪಡೆದುಕೊಂಡಿದೆ. ಈ ಘಟನೆಯನ್ನು ವರದಿ ಮಾಡುತ್ತಿದ್ದ ಎರಡು ಡಜನ್‌ಗೂ ಅಧಿಕ ಪತ್ರಕರ್ತರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿ ರಾಮ್‌ಪಾಲ್ ನ್ಯಾಯಾಲಯದ ಮುಂದೆ ಹಾಜರಾಗಲು ಪದೇಪದೇ ನಿರಾಕರಿಸಿದ್ದರೆಂಬಕಾರಣಕ್ಕಾಗಿ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಿ, ಅವರ ಬಂಧನಕ್ಕೆ ಆದೇಶಿಸಿತ್ತು.
ಮಾಧ್ಯಮಗಳಲ್ಲಿ  ಪ್ರಕಟವಾದ ವಿಷಯಗಳಿಗಿಂತಲೂ ಹೆಚ್ಚಿನ ಒಳಸುಳಿಗಳು ಬಾರ್ವಾಲಾ ಘಟನೆಯ ಹಿಂದೆ ಅಡಗಿದೆ. ಆರ್ಯಜನಾಂಗೀಯ ಹಾಗೂ ಆರ್ಯೇತರರೆಂದು ಭಾರತೀಯರನ್ನು ವಿಭಜಿಸುವ ಸಂಘಪರಿವಾರದ ಸಿದ್ಧಾಂತವನ್ನು ರಾಮ್‌ಪಾಲ್ ತಿರಸ್ಕರಿಸಿದ್ದರು.ಬರ್ವಾಲಾ ಘಟನೆಯ ಹಿಂದಿರುವ ಮೂಲಕಾರಣಕ್ಕೆ ಕನಿಷ್ಠ ಒಂದೂವರೆ ಶತಮಾನದ (150 ವರ್ಷ) ಇತಿಹಾಸವಿದೆ. ಹರ್ಯಾಣವು ಪ್ರತ್ಯೇಕ ರಾಜ್ಯವಾಗುವ ಮುನ್ನ ಅದು ಪಂಜಾಬ್‌ನ ಒಂದು ಭಾಗವೇ ಆಗಿತ್ತು. ಆ ಕಾಲಘಟ್ಟದಲ್ಲಿ ಪಂಜಾಬ್‌ನಲ್ಲಿ ಆರ್ಯಸಮಾಜವು ಪ್ರಬಲವಾಗಿತ್ತು. ಆರ್ಯಸಮಾಜವು, ಏಕದೇವ ಸಿದ್ಧಾಂತವನ್ನು ಪ್ರತಿಪಾದಿಸುವ ಇತರ ಎಲ್ಲಾಧರ್ಮಗಳನ್ನು ದೂಷಿಸುತ್ತಿತ್ತು. ಆರ್ಯಸಮಾಜದ ಸ್ಥಾಪಕ ದಯಾನಂದಸರಸ್ವತಿ 1870ರಲ್ಲಿ ಪಂಜಾಬ್‌ಗೆ ಆಗಮಿಸಿ, ಆರ್ಯಸಮಾಜದ ಸಿದ್ಧಾಂತಗಳನ್ನು ಪ್ರಚಾರಮಾಡಿದರು. ಅವರು ವೇದ,ಶಾಸಗಳಲ್ಲಿ ನಂಬಿಕೆಯಿಡದ ಜೈನ, ಬೌದ್ಧ ಹಾಗೂ ಸಿಖ್ಖ್ ಮತ್ತಿತರ ಧರ್ಮಗಳನ್ನು ಪ್ರಬಲವಾಗಿ ಖಂಡಿಸುತ್ತಿದ್ದರು. ಈ ಧರ್ಮಗಳು ತಮ್ಮ ವಿಚಾರಗಳನ್ನು ಬೋಧಿಸಲು ಸ್ಥಳೀಯ ಭಾಷೆಗಳನ್ನು ಬಳಸಿರುವುದನ್ನೂ ಅವರು ಹೀಗಳೆದಿದ್ದರು. ವೇದಗಳ ಶ್ರೇಷ್ಠತೆಯನ್ನು ಸಾರುತ್ತಿದ್ದ ದಯಾನಂದ ಸರಸ್ವತಿಯವರು ಸಂಸ್ಕೃತವೊಂದೇ ಅಧ್ಯಾತ್ಮ, ತತ್ವ ಶಾಸ್ತ್ರ ಹಾಗೂ ಉನ್ನತವಾದ ಚಿಂತನೆಗಳ ಪ್ರಸಾರಕ್ಕೆ ಸಮರ್ಥವಾದ ಭಾಷೆಯೆಂದು ಪ್ರತಿಪಾದಿಸುತ್ತಿದ್ದರು. 1875ರಲ್ಲಿ ಸ್ವಾಮಿದಯಾನಂದಸರಸ್ವತಿ ‘ಸತ್ಯಾರ್ಥಪ್ರಕಾಶ’ ಗ್ರಂಥವನ್ನುಪ್ರಕಟಿಸಿದರು.ಈ ಕೃತಿಯಲ್ಲಿ ಅವರು ಗುರುನಾನ್‌ಕರನ್ನು ಕಟುವಾಗಿ ನಿಂದಿಸಿದ್ದಾರೆ ಹಾಗೂ ಆತ ಓರ್ವಧೂರ್ತನೆಂದು ಟೀಕಿಸಿದ್ದಾರೆ. ಸಿಖ್ಖರ ಪರಮಪವಿತ್ರ ಧಾರ್ಮಿಕಗ್ರಂಥ ‘ಗುರುಗ್ರಂಥಸಾಹೇಬ್’ ಸುಳ್ಳುಗಳಿಂದ ಕೂಡಿದೆಯೆಂದು ಅವರು ದೂಷಿಸಿದ್ದರು ಮತ್ತುಸಿಖ್ ಧರ್ಮದ ನಂಬಿಕೆಗಳನ್ನು ಅವರು ಟೀಕಿಸಿದ್ದರು. ದಯಾನಂದ ಅವರಸಿಖ್ಖ್ ಧರ್ಮನಿಂದನೆಯು, ಆರ್ಯಸಮಾಜದ ಬೆಂಬಲಿಗರು ಹಾಗೂಸಿಖ್ಖ್ ಧರ್ಮೀಯರ ನಡುವೆ ಘರ್ಷಣೆಗೆ ಕಾರಣವಾಯಿತು. ಆರ್ಯಸಮಾಜದ ಬೆಂಬಲಿಗರಲ್ಲಿ ಹೆಚ್ಚಿನವರು ಮೇಲ್ಜಾತಿಯ ಹಿಂದುಗಳಾಗಿದ್ದು ಅವರಲ್ಲಿ ಅನೇಕ ಮಂದಿ ಲಾಹೋರ್ ಮತ್ತು ಅಮೃತಸರಗಳಲ್ಲಿ ನೆಲೆಸಿರುವ ಉದ್ಯಮಿಗಳಾಗಿದ್ದರು.ಸಿಖ್ಖರುಹಾಗೂ ಅರ್ಯಸಮಾಜದ ಧಾರ್ಮಿಕಚಿಂತನೆಗಳನ್ನು ಬೆಂಬಲಿಸುತ್ತಿರುವ ಪಂಜಾಬಿ ಹಿಂದೂಗಳ ನಡುವಣ ಸಂಘರ್ಷವು ಈಗಲೂ ಮುಂದುವರಿದಿದೆ. ಇತ್ತೀಚಿನ ಪಂಜಾಬ್ ಸಮಸ್ಯೆ ಹಾಗೂ 1984ರಲ್ಲಿ ನಡೆದಸಿಖ್ ಹತ್ಯಾಕಾಂಡ ಸೇರಿದಂತೆ ವಿವಿಧಕಾಲ ಘಟ್ಟಗಳಲ್ಲಿ ಈ ಸಂಘರ್ಷವು ಅಭಿವ್ಯಕ್ತಗೊಂಡಿದೆ.
ಸಿಖ್ಖರ ಪವಿತ್ರಗ್ರಂಥ ಗುರುಗ್ರಂಥ ಸಾಹೇಬ್, ಸಂತ ಕಬೀರ್ ರಚಿಸಿದ ನೂರಕ್ಕೂ ಅಧಿಕ ದೋಹೆ (ದ್ವಿಪದಿ)ಗಳನ್ನು ಒಳಗೊಂಡಿದೆ. ವೇದಾಂತ ಹಾಗೂ ವೈಷ್ಣವಪಂಥವು ಪ್ರತಿಪಾದಿಸುವ ಜಾತಿವ್ಯವಸ್ಥೆ, ಮಡಿವಂತಿಕೆ ಹಾಗೂ ವೈರಾಗ್ಯವನ್ನು ಗುರುಗ್ರಂಥಸಾಹೇಬ್ ಬಲವಾಗಿ ವಿರೋಧಿಸುತ್ತದೆ.
1877-78ರಲ್ಲಿ ದಯಾನಂದ ಸರಸ್ವತಿ ಪಂಜಾಬ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಖ್ಖ್ ಧರ್ಮಕ್ಕೆ ಮತಾಂತರಗೊಂಡಿದ್ದ ಕ್ರೈಸ್ತರನ್ನು ಹಿಂದೂಧರ್ಮಕ್ಕೆ ಸೇರ್ಪಡೆಗೊಳಿಸಲು ಶುದ್ಧೀಕರಣ ಚಳವಳಿಯನ್ನು ಆರಂಭಿಸಿದರು. ಆನಂತರ ಅವರ ಉತ್ತರಾಕಾರಿಗಳು ಬಡಸಿಖ್ಖರನ್ನು ಸಾರ್ವಜನಿಕ ಸಮಾರಂಭಗಳಲ್ಲಿ ನೇರವಾಗಿ ಹಿಂದೂಧರ್ಮಕ್ಕೆ ಮತಾಂತರಿಸುವ ಕಾರ್ಯವನ್ನು ಆರಂಭಿಸಿದರು.ಆ ಮೂಲಕ ಆರ್ಯಸಮಾಜವು ಹಿಂದೂಗಳು ಹಾಗೂ ಸಿಕ್ಖರ ಬಾಂಧವ್ಯಗಳಿಗೆ ಶಾಶ್ವತವಾಗಿ ದ್ವೇಷದಬೀಜಗಳನ್ನು ಬಿತ್ತಿತು.
ರಾಮ್‌ಪಾಲ್‌ರನ್ನು ಅವರಶಿಷ್ಯರುಪೂಜ್ಯಭಾವನೆಯಿಂದಾಗಿ ‘ಸಂತ ರಾಮ್‌ಪಾಲ್’ ಎಂದುಕರೆಯುತ್ತಾರೆ. ಆರ್ಯಸಮಾಜದ ಯಜಮಾನಿಕೆಯ ಧೋರಣೆಯನ್ನು ಪ್ರಶ್ನಿಸುವ ಮೂಲಕ ರಾಮ್‌ಪಾಲ್ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ಆರೆಸ್ಸೆಸ್‌ನ ನಿಕಟಮಿತ್ರನಾದ ಆರ್ಯಸಮಾಜವು ಈಗಹರ್ಯಾಣದಲ್ಲಿ ಮುಖ್ಯಮಂತ್ರಿ ಮೋಹನ್‌ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರಕಾರದ ಮೇಲೆ ನೇರವಾದ ನಿಯಂತ್ರಣವನ್ನು ಹೊಂದಿದೆ. 1947ರಲ್ಲಿ ದೇಶವಿಭಜನೆಯಾದ ಬಳಿಕಆರೆಸ್ಸೆಸ್ ಸಿದ್ಧಾಂತವನ್ನು ವಸ್ತುಶಃ ಆರ್ಯಸಮಾಜವು ಒಪ್ಪಿಕೊಂಡು, ಸಂಘಪರಿವಾರದೊಂದಿಗೆವಿಲೀನಗೊಂಡಿತ್ತು.
25 ವರ್ಷಗಳಕಾಲ ರಾಮ್‌ಪಾಲ್ ಅವರು ಹಿಂದೂ ದೇವತೆಗಳಾದ ಹನುಮಾನ್ ಹಾಗೂ ಶ್ರೀಕೃಷ್ಣನ ಮಹಾಭಕ್ತರಾಗಿದ್ದರು. ಅವರು ತಾಸುಗಟ್ಟಲೆ ದೇವರಧ್ಯಾನದಲ್ಲಿ ನಿರತರಾಗಿರುತ್ತಿದ್ದರು ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಚಾಚೂತಪ್ಪದೆ ಆಚರಿಸುತ್ತಿದ್ದರು. ಆದರೆರಾಮ್‌ಪಾಲ್‌ಗೆ ಅವರು ಹಂಬಲಿಸುತ್ತಿದ್ದ ಅಧ್ಯಾತ್ಮಿಕ ಶಾಂತಿದೊರೆಯಲೇ ಇಲ್ಲ. ಆಗ ಅವರು ಹರ್ಯಾಣದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿದ್ದರು. ಈ ಸಮಯದಲ್ಲಿ ಅವರಿಗೆ 13ನೆ ಶತಮಾನದಲ್ಲಿ ಜೀವಿಸಿದ್ದ ಸಂತ, ಏಕದೇವವಾದವನ್ನು ಬೋಧಿಸಿದ ಕಬೀರನ ಭಕ್ತರಾದ, ಸ್ವಾಮಿರಾಮ್‌ ದೇವಾನಂದ ಅವರ ಪರಿಚಯವಾಯಿತು.
ಸ್ವಾಮಿ ರಾಮದೇವಾನಂದರ ವಿಚಾರಧಾರೆಗಳಿಂದ ರಾಮ್‌ಪಾಲ್ ಪ್ರಭಾವಿತರಾಗಿ, ಅವರ ಶಿಷ್ಯರಾದರು.1994ರಲ್ಲಿ ರಾಮದೇವಾನಂದರು ರಾಮ್‌ಪಾಲ್‌ಗೆ ಕಬೀರನ ಸಂದೇಶಗಳನ್ನು ಪ್ರಚಾರಪಡಿಸುವಂತೆ ಆದೇಶನೀಡಿದ ಹಿನ್ನೆಲೆಯಲ್ಲಿ ಅವರು ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು.
‘ದೇವಮಾನವ’ನಾಗಿ ರಾಮ್‌ಪಾಲ್‌ ಅವರ ಬಾಳ ಪಯಣವು ರೋಹ್ಟಕ್‌ನಿಂದ 15 ಕಿ.ಮೀ. ದೂರದಲ್ಲಿರುವ ಕರೊಂತಾ ಗ್ರಾಮದಲ್ಲಿರುವ 4 ಎಕರೆ ಜಮೀನಿನಲ್ಲಿ ಆರಂಭಗೊಂಡಿತು.ಈ ಪ್ರದೇಶದಲ್ಲಿಈಗಲೂ ಆರ್ಯಸಮಾಜದ ಪ್ರಭಾವವು ದಟ್ಟವಾಗಿದೆ.
ರಾಮ್‌ಪಾಲ್‌ರ ಬೋಧನೆಗಳಿಂದಾಗಿ ಸಹಜವಾಗಿಯೇ ಈ ಪ್ರದೇಶದಲ್ಲಿಕಬೀರ್ ಪಂಥವು ಚಿಗುರೊಡೆಯ ತೊಡಗಿತು. ಈ ಸನ್ನಿವೇಶದಲ್ಲಿ ರಾಮ್‌ಪಾಲ್‌ರ ಆಶ್ರಮ ಹಾಗೂ ಆರ್ಯ ಸಮಾಜದ ನಡುವೆ ನೇರಸಂಘರ್ಷ ಏರ್ಪಟ್ಟಿತು. ರಾಮ್‌ಪಾಲ್ ಹಾಗೂ ಆರ್ಯ ಸಮಾಜದ ಬೆಂಬಲಿಗರ ನಡುವೆ ಘರ್ಷಣೆಯಲ್ಲಿ 20 ವರ್ಷ ವಯಸ್ಸಿನ ಸೋನುಎಂಬ ಯುವಕ ಹತ್ಯೆಯಾದ. ಈ ಕೊಲೆಪ್ರಕರಣಕ್ಕೆ ಸಂಬಂಧಿಸಿ ರಾಮ್‌ಪಾಲ್ 18 ತಿಂಗಳು ಜೈಲಿನಲ್ಲಿಬೇಕಾಯಿತು.ಈಗಲೂ ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ. 2006ರಲ್ಲಿ ನಡೆದ ಈ ಕೊಲೆಪ್ರಕರಣದ ಬಳಿಕ ರಾಮ್‌ಪಾಲ್‌ ರಕಬೀರ್‌ಪಂಥ ಹಾಗೂಆರ್ಯ ಸಮಾಜದ ಬೆಂಬಲಿಗರ ನಡುವೆ ಹಲವು ಬಾರಿ ಘರ್ಷಣೆಗಳು ನಡೆದಿವೆ.ಈ ಸಂಘರ್ಷಗಳಿಂದಾಗಿ ಪ್ರದೇಶದ ಜನತೆಯ ನಡುವೆ ತೀವ್ರವಾದ ಸಾಮಾಜಿಕ ಹಾಗೂ ಧಾರ್ಮಿಕ ವಿಭಜನೆಉಂಟಾಗಿದೆ.
ವಿವಾಹಿತರಾದ ರಾಮ್‌ಪಾಲ್‌ಗೆ ಇಬ್ಬರುಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಇವರೆಲ್ಲರೂವಿವಾಹವಾಗಿದ್ದಾರೆ. ರಾಮ್‌ಪಾಲ್ ಅವರು ಕಬೀರ್ ಭಜನೆಗಳ ಗಾಯಕರಾಗಿ ಹರ್ಯಾಣದಲ್ಲಿ ಪ್ರವಾಸಮಾಡಿದ ಬಳಿಕ ಜನಪ್ರಿಯರಾದರೆಂದು ಅವರ ಅಧಿಕೃತ ವೆಬ್‌ಸೈಟ್ ಹೇಳಿಕೊಂಡಿದೆ. 1999ರಲ್ಲಿ ಸತ್ಲೋಕ್ ಅಶ್ರಮವನ್ನುಸ್ ಸ್ಥಾಪಿಸಿದ ಬಳಿಕ ರಾಮ್‌ಪಾಲ್‌ರ ಅನುಯಾಯಿಗಳ ಸಂಖ್ಯೆಯು ಹೆಚ್ಚಿತೆಂದು ವೆಬ್‌ಸೈಟ್ ಹೇಳಿದೆ.
ರಾಮ್‌ಪಾಲ್ ಅವರು  ದೇವದೇವತೆಗಳ ಅಸ್ತಿತ್ವವನ್ನು ಪ್ರಶ್ನಿಸಿದ್ದರು ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಪ್ರತಿಪಾದಿಸುವ ವಿಚಾರಗಳನ್ನು ಟೀಕಿಸುತ್ತಿದ್ದರು.
ತನ್ನ ಎಲ್ಲಾಪ್ರವಚನ ಸಭೆಗಳಲ್ಲಿ ರಾಮ್‌ಪಾಲ್ ಅಕ್ರಮಣಕಾರಿಯಾದ ರೀತಿಯ ಭಾಷೆಯನ್ನು ಬಳಸುತ್ತಿದ್ದರು. ಪುರಾತನಕಾಲದಲ್ಲಿ ಧಾರ್ಮಿಕಗ್ರಂಥಗಳ ವ್ಯಾಖ್ಯಾನವನ್ನು ಮಾಡಿರುವ ಗುರುಗಳು ಹಾಗೂ ಚಿಂತಕರು, ನಿಜವಾದ ಸತ್ಯವನ್ನು ಬಚ್ಚಿಟ್ಟಿದ್ದಾರೆಂದು ಹೇಳುತ್ತಿದ್ದರು. ದಲಿತರು, ಜಾಟ್‌ ಸಮದಾಯಕ್ಕೆ ಸೇರಿರದ ಹಿಂದುಳಿದವರ್ಗಗಳು ಸೇರಿದಂತೆ ಮೇಲ್ಜಾತಿಯಿಂದ ಶೋಷಿತರಾದ ಪಂಗಡಗಳವರು ರಾಮ್‌ಪಾಲ್ ಅವರ ಬೋಧನೆಗಳಿಂದ ಆಕರ್ಷಿತರಾಗಿದ್ದರು.
ಮಾನವರೆಲ್ಲರೂ ಒಂದೇಕುಲಕ್ಕೆ ಸೇರಿದವರು. ಹಿಂದೂ, ಮುಸ್ಲಿಂ, ಸಿಖ್ಖ್, ಕ್ರೈಸ್ತರೆಲ್ಲರೂ ಒಬ್ಬನೇ ಸೃಷ್ಟಿಕರ್ತನ ಮಕ್ಕಳು ಎಂದು ಅವರು ತನ್ನ ವೆಬ್‌ಸೈಟ್‌ನಲ್ಲಿ ಹೇಳಿದ್ದಾರೆ.
ಸಾಂಪ್ರದಾಯಿಕ ವೈದಿಕತತ್ವಜ್ಞಾನದಲ್ಲಿ ನಂಬಿಕೆಯಿರಿಸಿರುವ ಆರ್ಯಸಮಾಜದ ಚಿಂತನೆಗಳನ್ನು ರಾಮ್‌ಪಾಲ್ ಪ್ರಬಲವಾಗಿ ವಿರೋಸಿದ್ದರು. ಆರ್ಯಸಮಾಜದ ಸ್ಥಾಪಕ ದಯಾನಂದಸರಸ್ವತಿಯರ ವಿಚಾರಧಾರೆಗಳನ್ನು ಒಳಗೊಂಡಿರುವ ಗ್ರಂಥವಾದ ಸತ್ಯರ್ಥಪ್ರಕಾಶವನ್ನು 2006ರಲ್ಲಿ ರಾಮ್‌ಪಾಲ್ ಟೀಕಿಸಿದ ಬಳಿಕ, ಆರ್ಯಸಮಾಜದ ಬೆಂಬಲಿಗರು ಅವರ ವಿರುದ್ಧ ಸಂಘರ್ಷಕ್ಕಿಳಿದಿದ್ದರು.
ಸತ್ಯಾರ್ಥಪ್ರಕಾಶ ಗ್ರಂಥವು ಸತ್ಯದಬೆಳಕನ್ನು ಚೆಲ್ಲುವುದಿಲ್ಲ ಬದಲು ಅದು ಮಿಥ್ಯೆಯ ಪ್ರಕಾಶವಾಗಿದೆಯೆಂದು ಎಂದುರಾಮ್‌ಪಾಲ್ ಟೀಕಿಸಿದ್ದುದು ಭಾರೀ ವಿವಾದಕ್ಕೆಕಾರಣವಾಗಿತ್ತು. 2006ರ ಜುಲೈನಲ್ಲಿ ಕರೊಂತಾದ ಆಶ್ರಮದಲ್ಲಿ ನಡೆದ ಘರ್ಷಣೆಯ ಬಳಿಕ ರಾಮ್ ಹಾಗೂ ಅವರ 38 ಬೆಂಬಲಿಗರ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿತ್ತು. 2008ರಲ್ಲಿ ರಾಮ್‌ಪಾಲ್ ಜಾಮೀನಿನಲ್ಲಿ ಬಿಡುಗಡೆಗೊಂಡರು.
ಆದರೂ ಹಿಮ್ಮೆಟ್ಟದ ರಾಮ್‌ಪಾಲ್ ಆನಂತರ ಹರ್ಯಾಣದ ಹಿಸ್ಸಾರ್‌ನಲ್ಲಿ ಇನ್ನೊಂದು ದೇರಾ (ಆಶ್ರಮ) ವನ್ನು ಸ್ಥಾಪಿಸಿದರು. ಇಂದು ಕರೊಂತಾದಲ್ಲಿರುವ ರಾಮ್‌ಪಾಲ್ ಅವರಸತ್ಲೋಕ್ ಅಶ್ರಮವು 71 ಎಕರೆಜಮೀನನ್ನು ಹೊಂದಿದೆ. ಪಂಜಾಬ್, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲೂ ರಾಮ್‌ಪಾಲ್ ಸಾವಿರಾರು ಅನುಯಾಯಿಗಳನ್ನು ಹೊಂದಿದ್ದಾರೆ.
ಕಳೆದವಾರ ಹಿಸ್ಸಾರ್ ಆಶ್ರಮದಲ್ಲಿ ರಾಮ್‌ಪಾಲ್ ಬಂಧನವನ್ನು ವಿರೋಧಿಸುತ್ತಿದ್ದ ಅವರ ಬೆಂಬಲಿಗರನ್ನು ಹರ್ಯಾಣ ಪೊಲೀಸರು ವಿದ್ಯುತ್ ಹಾಗೂ ನೀರು ಪೂರೈಕೆಯನ್ನು ಕಡಿತ ಹಾಗೂ ಆಹಾರ ಪೂರೈಕೆ ಸ್ಥಗಿತಗೊಳಿಸುವುದು ಮತ್ತಿತರ ತಂತ್ರಗಾರಿಕೆಯನ್ನು ಅನುಸರಿಸಿ ಆಶ್ರಮದಿಂದ ಹೊರಹೋಗುವಂತೆ ಮಾಡಿದ್ದಾರೆ. ಇನ್ನು ಕೆಲವು ಅನುಯಾಯಿಗಳನ್ನು ಬಸ್‌ನಿಲ್ದಾಣ ಹಾಗೂ ರೈಲು ನಿಲ್ದಾಣಗಳಿಗೆ ಬಲವಂತವಾಗಿ ಎಳೆದೊಯ್ಯಲಾಗಿದೆ.
ಭಾರತೀಯ ಸಮಾಜವು ಜಾತಿಆಧಾರಿತವಾಗಿದ್ದು, ಬದಲಾವಣೆಯನ್ನುಬಯಸುವುದಿಲ್ಲವೆಂಬ ನಂಬಿಕೆಯನ್ನು ಈ ಬೆಳವಣಿಗೆಗಳು ಪ್ರಶ್ನಿಸಿವೆ.
ಕೃಪೆ: ಕೌಂಟರ್ ಕರೆಂಟ್ಸ್. ಆರ್ಗ್

Tuesday, November 25, 2014

ಇನ್ನೊಂದಿಷ್ಟು ಇರುವೆಗಳು

1
ಈ ಜಗತ್ತಿನಲ್ಲಿ ನನಗೆ
ಯಾರನ್ನೂ ಕಳೆದು ಕೊಳ್ಳೋದಕ್ಕಿಲ್ಲ
ಒಂದು ಸಣ್ಣ
ಇರುವೆಯನ್ನೂ ಕೂಡ
2
ಒಂದು ಇರುವೆ
ನನ್ನ ಬಲವಾಗಿ ಕಚ್ಚಿತು
ಯಾವ ಜನ್ಮದ ಸಾಲವೋ
ಈ ಜನ್ಮದಲ್ಲಿ ತೀರಿತು
3
ನದಿಯಲ್ಲಿ ಉಸಿರಿಲ್ಲದೆ
ತೇಲುತ್ತಿರುವ ದೇಹದ ಮೇಲೆ
ಉಸಿರಾಡುತ್ತಾ
ಇರುವೆ
4
ಆನೆಯ ಮೇಲೆ
ಕುಳಿತ ರಾಜ
ಅವನ ಕಿರೀಟದ
ತುತ್ತ ತುದಿಯ ಮೇಲೆ
ಪಾದ ಊರಿ
ಇರುವೆ !
5
ಅವನು ಇರುವೆಯನ್ನು ತುಳಿದ
ನನ್ನ ಪ್ರಾಣ ಇರುವೆಯೊಳಗಿರುವ
ಗುಟ್ಟು
ಅವನಿಗೆ ತಿಳಿದು ಹೋಗಿರಬೇಕು

Monday, November 24, 2014

ದೀಪದ ಸನ್ನೆಗಾಗಿ ಕಾಯುತ್ತಾ....

'ಇರುವೆ ಪ್ರಕಾಶನ' ದ ಮೂಲಕ ನನ್ನ ಎರಡನೇ ಕವನ ಸಂಕಲನ "ಅಮ್ಮ ಹಚ್ಚಿದ ಒಲೆ" ಕೃತಿ ಸಿದ್ಧ ಗೊಳ್ಳುತ್ತಿದೆ. ಕೆಲಸ ಬಹುತೇಕ ಮುಗಿದಿದೆ. ಎಲ್ಲ ಎಣಿಸಿದಂತೆ ಆದರೆ ಡಿಸೆಂಬರ್ ನಲ್ಲಿ ನಿಮ್ಮ ಕೈ ಸೇರಲಿದೆ. ಕೃತಿಯ ಕುರಿತಂತೆ ನನ್ನ ಮೆಚ್ಚಿನ ಕವಿ ಜಯಂತ್ ಕಾಯ್ಕಿಣಿ ಆತ್ಮೀಯವಾಗಿ ಬರೆದಿದ್ದಾರೆ. ಅದನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ.

ಪ್ರೀತಿಯ ಬಶೀರ್,
ಎಷ್ಟೋ ವರುಷಗಳ ಹಿಂದೆ ಮಾಟುಂಗಾದ ಕನ್ನಡ ಸಂಘದ ಪುಟ್ಟ ಕೋಣೆಯಲ್ಲಿ ಪುಸ್ತಕಗಳ ಕಪಾಟುಗಳ ನಡುವೆ ಪುಸ್ತಕಗಳಂತೆ ಕೂತ ಹತ್ತಿಪ್ಪತ್ತು ಆಪ್ತರ ನಡುವೆ ನೀನು ಕವಿತೆ ಓದಿದ್ದು ನನ್ನ ಉಜ್ವಲ ನೆನಪುಗಳಲ್ಲಿ ಒಂದು. ಭೋರ್ಗರೆಯುವ ಮಳೆಗಾಳಿಯ ನಡುವೆ ಹೆಮ್ಮರವೊಂದರಲ್ಲಿ ಸಿಕ್ಕಿಕೊಂಡು ಒದ್ದಾಡುವ ಗಾಳಿಪಟದ ಚಿತ್ರಣವಿತ್ತು ಅದರಲ್ಲಿ. ಊರಿನಿಂದ ತಂಗಿ ಬರೆದ ಪತ್ರದ ಒಕ್ಕಣಿಕೆಯಿತ್ತು. ನಂತರ ಬಂದ ನಿನ್ನ ಕವನ ಸಂಕಲನಕ್ಕೆ ನಿನ್ನದೇ ತೀವ್ರ ಸಾಲುಗಳನ್ನೇ ಪೋಣಿಸಿ ಹಿನ್ನುಡಿಯ ರೂಪದಲ್ಲಿ ಶುಭಾಶಯ ಹೇಳಿದ್ದೆ. ಅಮ್ಮ ಹಚ್ಚಿದ ಒಲೆೆಯ ಈ ಕವಿತೆಗಳೂ ಸಹ ಅದೇ ಕಾವಿನಲ್ಲಿ ನನ್ನನ್ನು ಆವರಿಸಿಕೊಂಡಿದೆ.
ಅಮ್ಮ ಹಚ್ಚಿದ ಒಲೆಯಿಂದಲೇ ಎಲ್ಲ ಜೀವಗಳ ಪಯಣದ ಶುರುವಾತು. ಅಕ್ಷರ ಕೇಂದ್ರವೇ ಆ ಒಲೆ. ಆ ಕಾವಿನ ವಿಸ್ತರಣೆಯೇ ನಮ್ಮೆಲ್ಲರ ವಿಕಾಸ. ಸ್ನಾನಕ್ಕೆ ನೀರೂ ಅಲ್ಲೇ ಕುದಿಯಬೇಕು, ಒಣಮೀನೂ ಅಲ್ಲೇ ಸುಡಬೇಕು, ಹಬ್ಬದ ಖೀರೂ ಅಲ್ಲೇ ಉಕ್ಕಬೇಕು...ಮಗುವಿನ ಹಾಲುಗೆನ್ನೆಯ ದಿಟ್ಟಿ ಬೊಟ್ಟಿನ ಕಪ್ಪೂ ಅಲ್ಲಿಂದಲೇ ಬರಬೇಕು... ರೂಪಕ ಎಂದು ಕರೆದರೆ ಜುಜುಬಿಯಾಗಿ ಬಿಡಬಹುದಾದ ಒಂದು ಪರಮ ಮೌಲ್ಯ ಈ ಒಲೆ. ಮತ್ತು ಅದರ ಹಿಂದಿನ ಮಸಿ ಹಿಡಿದ ಗೋಡೆ. ಸಾಮಾಜಿಕ ಸಂಬಂಧಗಳೆಲ್ಲ ವ್ಯಸ್ತಗೊಂಡಿರುವ, ವ್ಯಗ್ರಗೊಂಡಿರುವ ಈ ನಮ್ಮ ಸಮಯದಲ್ಲಿ ಎಲ್ಲ ಗಾಯಗಳನ್ನೂ ಮಾಯಿಸಬಲ್ಲ ಏಕಮೇವ ಮದ್ದು ಪ್ರತಿ ಜೀವಿಯಲ್ಲಿರಬೇಕಾದ ತಾಯ್ತನ. ನಿನ್ನ ಈ ಎಲ್ಲ ರಚನೆಗಳೂ ಈ ತಾಯ್ತನವೆಂಬ ಆವರಣಕ್ಕಾಗಿನ ತೀವ್ರ ತುಡಿತಗಳಾಗಿವೆ. ಅವುಗಳ ಅಮೃತ ಹಸ್ತ ಸಹಜೀವಗಳನ್ನು ಸ್ಪರ್ಶಿಸಲು ಬೆಳಕಿನಂತೆ ಚಾಚುತ್ತಿವೆ.
ನಿನ್ನ ವೈಖರಿ ಚತುರೋಕ್ತಿಯದು. ಅನುರಣನಶೀಲವಾದ ಪುಟ್ಟ ಪುಟ್ಟ ಚಿತ್ರಿಕೆಗಳ ಮೂಲಕ ಈ ರಚನೆಗಳು ಜೀವಂತವಾದ ಒಂದು ಆವರಣವನ್ನು ಕಲ್ಪಿಸುತ್ತವೆ.
ಒಳಗೆ ಅಮ್ಮ
ಅವಳ ನಿಟ್ಟುಸಿರಿನಂತೆ

ದೋಸೆ ಹುಯ್ಯುವ ಸದ್ದು....

ಗೋಡೆಯ ಮೇಲೆ ಹೊಸ ಬಟ್ಟೆ
ಹೆಣದಂತೆ ತೂಗುತ್ತಿತ್ತು....


ತೊಟ್ಟು ಕಳಚಿ ಬಿದ್ದ ಕಂಬನಿ...

ಇಂಥ ಚಿತ್ರಗಳು ವಾಚ್ಯಾರ್ಥ ತಿಳಿಯುವ ಮೊದಲೇ ಒಂದು ಆಳವಾದ ಅನುಭವವನ್ನು ಉಕ್ಕಿಸಬಲ್ಲವು. ಅದು ಹಾಗಾದಾಗಲೇ ಕವಿತೆ. ಹಾಗಂತ ಇದು ಹುಸಿ ರಮ್ಯತೆಯಿಂದ ಆಪ್ತವಾಗುವ ಭಾವುಕತೆಯಲ್ಲ. ಏಕೆಂದರೆ ಚಿಂತನೆಯ ಅಥವಾ ವೈಚಾರಿಕತೆಯ ಹಂಗಿಲ್ಲದ ಹುಸಿ ಭಾವುಕತೆಗೆ ಸಾಹಿತ್ಯದಲ್ಲಿ ಸ್ಥಾನವೇ ಇಲ್ಲ. ಮುಂಬಯಿಯ ಇನ್ನೊಬ್ಬ ಕವಿ ಮರಿಯಪ್ಪ ನಾಟೇಕರರ ಒಂದು ಸಾಲಿನಲ್ಲಿ, ನೀರಿನಲ್ಲೆಸೆದ ಕಲ್ಲಿನ ತರಂಗದ ಚಲನೆಯ ವರ್ಣನೆ ಬರುತ್ತದೆ. ಅಂದರೆ ಆಕಾರದಿಂದ ನಿರಾಕಾರದೆಡೆಗೆ ಚಲನೆ. ಒಳ್ಳೆಯ ಬರವಣಿಗೆಯ ಮುಖ್ಯ ಲಕ್ಷಣವೇ ಈ ನಿರಾಕಾರದೆಡೆಗಿನ ಚಲನೆ. ನಿನ್ನ ಸಾರ್ಥಕ ರಚನೆಗಳಲ್ಲಿ ಈ ಗುಣವಿದೆ. ಒಂದು ಚಿತ್ರ, ಒಂದು ಯೋಚನೆ, ಒಂದು ಲಹರಿ ಆಕಾರ ತೊಡುತ್ತಿರುವಾಗಲೇ... ನಿರಾಕಾರದೆಡೆ ಚಲಿಸುವಂಥ ಧ್ವನಿ ತರಂಗ ಅದು. ಅದರ ಆಸ್ವಾದವೇ ಕವಿತೆಯ ಓದು. ಹೊರತು ವ್ಯಾಖ್ಯಾನವಲ್ಲ.
ದೇವರ ಪಾದದ ಬಳಿ
ಚಿಟ್ಟೆಗಳಂತಿರುವ ಮಕ್ಕಳು
ಗಿಡಗಿಡಗಳಿಗೆ ಹಾರಿ
ಕಿತ್ತು ತಂದ ಹೂಗಳು...


ಅವಳ ಮಡಿಲಲ್ಲಿ ಮುಳುಗೇಳುತ್ತಿದ್ದ ಮಗು
ಪಕ್ಕನೆ ಅವಳ ಮುಖ ಪರಚಿಬಿಟ್ಟಿತು......


ಇನ್ನೂ ಹೆರಿಗೆ ನೋವಿಗೆ ತೆರಿಗೆ
ಕಟ್ಟುತ್ತಿರುವ ಅಮ್ಮ.......


ದೇವರೇ..ಇನ್ನು ಮುಂದೆ
ಹೆಸರಿರುವ ಎಲ್ಲ ತಾಯಂದಿರುವ ಬಂಜೆಯರಾಗಲಿ
ಕೊಡುವುದಾದರೆ
ಕಸದ ತೊಟ್ಟಿಗಳಿಗೆ, ಗಟಾರಗಳಿಗೆ, ಬಸ್ ನಿಲ್ದಾಣಗಳಿಗೆ

ಹೆರಿಗೆ ಬೇನೆ ಕೊಡು...

ಎಲ್ಲವನ್ನೂ ಬಲ್ಲ ಜೀವದ ಗೆಳೆಯನಿಗೇ, ತನ್ನ ಗೆಳೆತನದ ಬಗ್ಗೆ ಪುರಾವೆ ಕೊಡಬೇಕಾದ ಪ್ರಸಂಗ ಬಂದರೆ ಅದೆಂಥ ನೋವಿನದಾದೀತು. ಅಂಥ ಅವ್ಯಕ್ತ ಕಳವಳವೇ ನಿನ್ನ ಈ ಕವಿತೆಗಳನ್ನು ನಡುಗುವ ಕೈಗಳಲ್ಲಿ ಒಟ್ಟಿಗೆ ಹಿಡಿದಿವೆ. ಆ...ಲಯದೊಳಗೆ, ಚಿತ್ತಾಲರ ಜೊತೆ ಸಂಜೆ, ಗುಜರಿ ಆಯುವ ಹುಡುಗ, ರಮಝಾನ್ ಪದ್ಯಗಳು, ಸ್ನೇಹ, ಮೂರು ಬೆರಳುಗಳು, ಧ್ಯಾನ, ಅಮ್ಮನ ಕೊಳಲು, ಭಾಮಿಯಾನ್‌ನಲ್ಲಿ ಬುದ್ಧ, ಎರಡು ಮಂಚಗಳು, ಕಳೆದು ಹೋದ ಬಾಲ್ಯ, ಹುಷಾರು, ನಮ್ಮ ಎದೆ, ಮನೆ ಸೇರೂದರೊಳಗೆ, ಹೆಣ್ಣು ಮಲಗೋದು, ಕಾಗೆ ಮರಿಯ ಹಾಡು ಓದಿನಲ್ಲೂ ಬೆಳೆಯಬಲ್ಲ ರಚನೆಗಳಾಗಿವೆ. ಕವಿತೆಯೊಳಗಿನ ಅವ್ಯಕ್ತ, ಓದುಗನ ಅವ್ಯಕ್ತದೊಂದಿಗೆ ಸಜೀವ ಸಂಬಂಧ ಹೊಂದುವಂತಾಗುವ ರಚನೆಗಳಿವು. 

ಮಗುವಿನ ಗಾಢ ನಿದ್ದೆ 
ಅವಳಿಗೆ ಧ್ಯಾನದಂತೆ ಭಾಸವಾಗಿದೆ 
ಮೌನಕ್ಕೆ ತಂದೆಯ ಗತ್ತು...- 
ಇಂಥ ಸಾಲುಗಳು ಒಂದು ರಚನೆಗೆ ನೀಡುವ ಶಾರೀರ ಸೂಕ್ಷ್ಮವಾದದ್ದು. ಈ ಸಾಲುಗಳು ಅನುಭವದಿಂದ ಹೊಮ್ಮಿದಷ್ಟೂ ಚತುರೋಕ್ತಿಗಳು ಚತುರತೆಯಿಂದ ಮೇಲೇಳುತ್ತವೆ.

...ಹಸಿವನ್ನು ಹೂಡಿ ದಿನಸಿ ಅಂಗಡಿ ತೆರೆದ
ಗೆಲುವನ್ನು ಜವಳಿ ಅಂಗಡಿಗೆ ಮಾರಿ ಸೋತ
ಸೋರುವ ಸೂರನ್ನು ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ದುಂದುಗಾರ ಅಪ್ಪ...ಸವಕಲು ಮಾತುಗಳನ್ನೇ

ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
 ಅಮ್ಮನ ಮೌನದ ತಿಜೋರಿಯನ್ನೇ ದೋಚಿದ...
ನೋಡಲು ಸರಳವಾಗಿ ಕಾಣುವ ಇಂತಹ ಸಾಲುಗಳಿಗೆ ತೀವ್ರವಾದ ಕಥನ ವಿಸ್ತಾರವಿದೆ. ಏಕೆಂದರೆ, ಇವು ವರದಿಗಾರ ಕಲೆ ಹಾಕಿದ ವಿವರಗಳಲ್ಲ. ಇವು ಜೀವನವನ್ನು ಹಣ್ಣಾಗಿಸಿದ ಬಾಳಿನ ವಿವರಗಳು. ಕೊನೆಗೂ ನಮ್ಮೆಲ್ಲರ ಕಾಯಕ, ಸವಕಲು ಮಾತುಗಳನ್ನೇ ಉಜ್ಜಿ ಮತ್ತೆ ಚಲಾವಣೆಗೆ ಬಿಡುವುದಲ್ಲವೆ? ಮೌನದ ತಿಜೋರಿಯನ್ನೆಲ್ಲ ದೋಚುವುದಲ್ಲವೆ?
 ನೀನು ಪೂರ್ವನಿಯೋಜಿತ ನಿಲುವನ್ನು ತೆಗೆದುಕೊಂಡು ತುಂಬಾ ನಿಷ್ಠನಾಗಿ ಬರೆದಾಗ ನಿನ್ನ ರಚನೆಗೆ ನಿಬಂಧ ರೂಪ ಬರುತ್ತದೆ.  ಬಲಿ ಹಬ್ಬದ ಬೆಳಗು, ಮೊಬೈಲ್ ಹಾಡು ಅಮ್ಮ ಹಚ್ಚಿದ ಒಲೆ ಈ ಕವಿತೆಗಳಿಗೆ ಭಿನ್ನವಾದ ಉದಾಹರಣೆಗೆ ಹೌದು, ನಿಮ್ಮ ಅನುಮಾನ ಸರಿ, ರಾವಣಾಯನ, ಸಿಹಿಸುದ್ದಿ ಕವಿತೆಗಳಲ್ಲಿ ಒಬ್ಬ ವಕ್ತಾರನಂತೆ ನೀನು ಮಾತನಾಡ ತೊಡಗಿದಾಗೆಲ್ಲ ಕವಿತೆ ತಾನಾಗಿಯೇ ನೀನು ಮಾತಾಡಿಕೋ ಮಾರಾಯ, ನಾನು ಆಮೇಲೆ ಸಿಗ್ತೇನೆ ಎಂದು ಸದ್ದಿಲ್ಲದೆ ಮಾಯವಾಗುತ್ತದೆ. ನಿನ್ನ ಹವಣಿಕೆ ಮೀರಿದ ಕ್ಷಣಗಳಲ್ಲೇ ನಿನ್ನ ಅತ್ಯುತ್ತಮ ಕಾವ್ಯ ಭಾಗಗಳಿವೆ. ಉದಾಹರಣೆ ನನ್ನನ್ನು ತುಂಬಾ ಸೆಳೆದ ಈ ಸಾಲು:

....ಉಂಡ ಎಲೆಯಿಂದ ಬೇರ್ಪಡುವಂತೆ ಅವರು
ಪರಸ್ಪರ ಕಳಚಿಕೊಂಡಾಗ
ಅವನ ಮುಷ್ಟಿಯಿಂದ ಮೊಲೆಯನ್ನು ಬಿಡಿಸಿಕೊಂಡ ಅವಳು

ಕಳಚಿಟ್ಟ ಇಸ್ತ್ರಿಪೆಟ್ಟಿಗೆ ತುಂಬಾ ಮತ್ತೆ ಸುರಿವಳು ಕೆಂಡ....

ಎವೆ ಕಳಚಿ, ಮುಷ್ಟಿ, ಮೊಲೆ, ಇಸ್ತ್ರಿ ಪೆಟ್ಟಿಗೆ, ಸುರಿವ ಕೆಂಡ-ಇವೆಲ್ಲ ತಂತಮ್ಮ ವೈಯಕ್ತಿಕ ಧ್ವನಿಯನ್ನಿಟ್ಟುಕೊಂಡೇ ಒಟ್ಟಿಗೇ ಸಾಧಿಸುವ ಪರಿಣಾಮ ವಿಶಿಷ್ಟ. ನಿನ್ನ ಕವಿತೆಯ ಉಸಿರಾಟ ಇಂಥಭಾಗಗಳಲ್ಲೇ ಇದೆ. ಇವೆಲ್ಲ ಹವಣಿಕೆಯಿಂದ, ಆಲೋಚನೆಯಿಂದ, ಎಚ್ಚರದ ವಿನ್ಯಾಸದಿಂದ ಆಗುವಂತಹದಲ್ಲ. ಗೊತ್ತಿರುವ ಬಿಡಿಗಳ ಮೂಲಕ ಗೊತ್ತಿರದ ಇಡಿಗಾಗಿ ಒದ್ದಾಡುವಾಗಲೇ ಆಗುವಂಥದ್ದು.

....ಎಳೆ ಕಂಬನಿಯಂತಿರುವ ಆ ನಾಕು ಸಾಲುಗಳು...
....ಫ್ರಿಜ್ಜಿನಲ್ಲಿಟ್ಟ ತರಕಾರಿಯಂತೆ 

ಅಕ್ಕಪಕ್ಕ ಕುಳಿತ ಕಣ್ಣುಗಳು....
ಇಂತಹ ಬಿಡಿಗಳು ಆಯಾ ಕ್ಷಣದಲ್ಲಿ ತಾಜಾ ಅನಿಸುತ್ತಾ ಬೇರೊಂದು ಆಳವಾದ ವ್ಯಾಪಕವಾದ ಅನುಭವದೆಡೆ ನಮ್ಮನ್ನು ನೂಕಿದಾಗಲೇ ಅವುಗಳ ಸಾರ್ಥಕತೆ. ನಮ್ಮ ಅಕ್ಕರೆಯ ಮುಂಬಯಿಯ ಹಿರಿ ಕವಿ ವಿ.ಜಿ. ಭಟ್ಟರ ಒಂದು ಸಾಲು ಹೀಗಿದೆ- ಅಮರ ಲೋಕದ ಕಿಡಕಿಗಳಂಥ ಕಣ್ಣುಗಳನ್ನು ಕಂಡೆನು...  ಪ್ರಪಂಚದ ಎಲ್ಲ ಕವಿತೆಗಳೂ ತಮ್ಮದೇ ರೀತಿಯಲ್ಲಿ ತಮ್ಮದೇ ಆದ ಅಮರಲೋಕವೊಂದಕ್ಕೆ ತೆರೆದ ಕಿಡಕಿಗಳೇ ಆಗಿವೆ. ಅಂಥ, ನಮ್ಮೆಲ್ಲರನ್ನೂ ಉಳಿಸುವಂತಹ, ಬೆಳೆಸುವಂಥ ಗಹನವಾದ, ಘನವಾದ, ಅಮರಲೋಕವೊಂದು ನಿನ್ನ ಮನದೊಳಗೇ ನಿನ್ನ ಬರವಿಗಾಗಿ ಕಾದಿದೆ. ಈ ಪೇಸ್‌ಬುಕ್ಕು, ಟ್ವಿಟ್ಟರು, ಒಂದೊಂದು ಸಾಲನ್ನು ಎರಡೆರಡು ಸಲ ಓದಿ ಶ್ರುತಿ ಕಳೆದುಕೊಂಡಿರುವ ನೀರಸ ಕರ್ಕಶಗೊಂಡಿರುವ ಕವಿಗೋಷ್ಠಿಗಳು, ಬಿಡುಗಡೆ ಸಮಾರಂಭದ ರೂಪಕರು...ಇಂಥದೆಲ್ಲ ನರ್ತನವನ್ನು ಚೂರು ಬದಿಗಿಟ್ಟು ನಾವೆಲ್ಲ ಖಾಲಿ ಕಾಗದದ ಅಸೀಮ ಚಡಪಡಿಕೆಗೆ ಶರಣಾಗಬೇಕಾಗಿದೆ. ಯಾವ ದೀಪದ ಸನ್ನೆಗಾಗಿಯೂ ಕಾಯದೆ...ಅಮ್ಮನ ಒಲೆಯೆದುರಿನ ಊದುಗೊಳವೆಯ ನಾದದ ಜಾಡಿನಲ್ಲೇ, ಅಶರೀರದ ಅಂಚಿನಲ್ಲಿರುವ ನಿರಾಕಾರದ ಎಟುಕಿನಲ್ಲಿರುವ ಆವರಣದೆಡೆಗೆ ಚಲಿಸಬೇಕಾಗಿದೆ.

ಇಬ್ಬರೆಂದರೆ ಬರೇ ಇಬ್ಬರು
ನಾನು ಮತ್ತು ಅವರು
ಹಾಯಿ ದೋಣಿಯಂತೆ ತೇಲುತ್ತಿರುವ
ಕತೆಯ ಸಾಲೊಂದನ್ನು ಏರಿ ಕುಳಿತಿದ್ದೇವೆ

ಮೊರೆವ ಎದೆಯೊಳಗೆ
ಭೋರ್ಗರೆವ ಅಕ್ಷರದ ಕಡಲು
ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ
ನನಗೇಕೆ ಮುಳುಗುವ ಚಿಂತೆ...

ನಿನ್ನ ಈ ಸರಳ ಸಾಲುಗಳಲ್ಲಿರುವ ಅಭಯ, ಸಮಾಧಾನ ಅದ್ವಿತೀಯವಾದದ್ದು. ಹೆಗಲ ಮೇಲೆ ಆಧಾರಕ್ಕೆಂದು ಇಟ್ಟಿದ್ದ ಸೋದರನ ಹೂವಿನ ಎಸಳಿನಷ್ಟೇ ಭಾರವಾದ ಮೂರು ಬೆರಳಿನಷ್ಟೇ ಭಂಗುರವಾದದ್ದು.
  ಇದನ್ನು ಜೋರು ಮಳೆಯಲ್ಲಿ ಗೋಕರ್ಣದಲ್ಲಿ ಬರೆಯುತ್ತಿದ್ದೇನೆ. ಮಳೆಯಲ್ಲಿ ಭೋರ್ಗರೆವ ಸಮುದ್ರದಲ್ಲಿ ಉರುವಲು ಒಲೆ ಸೌದೆಗಾಗಿ ಮನುಜಾಕೃತಿಗಳು ಯುದ್ಧೋಪಾದಿಯಲ್ಲಿ, ಉಕ್ಕುವ ತೆರೆಗಳೊಂದಿಗೆ ಸೆಣಸಾಡುತ್ತಿವೆ. ತಮ್ಮ ತಮ್ಮ ಒಲೆಗಳನ್ನು ಬೆಚ್ಚಗಿಡಲು ನಡೆಯುತ್ತಿರುವ ಒಂದು ಮಹಾ ಜಲ ಯಜ್ಞ ಇದು. ಇದೇ ಮಳೆ ಧಾರಾವಿಯಲ್ಲೂ ಬೀಳುತ್ತಿದೆ. ಅಲ್ಲಿ ಮಳೆಯಿಂದ ಒಲೆಯನ್ನು ಬಚಾವು ಮಾಡಲು ಅಮ್ಮಂದಿರು ಹೋರಾಡುತ್ತಿದ್ದಾರೆ. ಎಲ್ಲ ರಾಜಕೀಯ ಸಮರ್ಪಕತೆಯ ಮೂತಿಗೆ ತಿವಿಯುವಂಥ ಸಮರ ಇದು. ಮಾನವೀಯತೆಬಗ್ಗೆ ಚಂದವಾಗಿ ಎಲ್ಲರೂ ಮಾತಾಡಿದ್ದೇವೆ. ಚಿತ್ತಾಲರು ಪದೇ ಪದೇ ಹೇಳುವ ಮಾನವಂತಿಕೆ ನಮ್ಮೆಲ್ಲರ ಪದಯಾತ್ರೆಯ ಜೀವಾಳವಾಗಲಿ ಎಂದು ಹಾರೈಸೋಣ.

ವಾತ್ಸಲ್ಯಪೂರ್ವಕ,
ಜಯಂತ ಕಾಯ್ಕಿಣಿ


Sunday, November 23, 2014

ಇಂಟರ್‌ಸ್ಟೆಲ್ಲಾರ್: ಅಂತರಿಕ್ಷದಲ್ಲಿ ಭಾವನೆಗಳ ತಾಕಲಾಟ...

ಭೂಮಿ ಮರಣ ಶಯ್ಯೆಯಲ್ಲಿ ಮಲಗಿದೆ. ಮನುಷ್ಯನ ಎಲ್ಲ ತಂತ್ರಜ್ಞಾನಗಳು, ಯಂತ್ರಗಳು ಅಸಹಾಯಕವಾಗಿವೆ. ಎಲ್ಲಿ ನೋಡಿದರಲ್ಲಿ ಧೂಳು. ಮನುಷ್ಯನಿಗೆ ಬೇಕಾಗಿರುವುದು ಕೇವಲ ಆಹಾರ ಮಾತ್ರ. ಅದಕ್ಕಾಗಿ ಕೃಷಿಕರನ್ನಷ್ಟೇ ಭೂಮಿ ತನ್ನ ಕಟ್ಟ ಕಡೆಯ ದಿನಗಳಲ್ಲಿ ನಂಬಿ ಕೊಂಡಿದೆ. ಎಂಜಿನಿಯರ್‌ಗಳು ಅದಕ್ಕೆ ಬೇಡವಾಗಿದೆ. ವ್ಯವಸ್ಥೆಗೆ  ಅತ್ಯುತ್ತಮ ಕೃಷಿಕರು ಬೇಕು. ರೋಗ ಪೀಡಿತ ಭೂಮಿಯ ಒಡಲೊಳಗಿಂದ ಆಹಾರ ಬೆಳೆಗಳನ್ನು ಹೊರತೆಗೆಯುವ ಅನಕ್ಷರಸ್ಥ ರೈತರು ಮಾತ್ರ ಅದರ ತಕ್ಷಣದ ಆವಶ್ಯಕತೆ. ಇಂತಹದೊಂದು ಸಂದರ್ಭವನ್ನಿಟ್ಟುಕೊಂಡು ‘ಇಂಟರ್‌ಸ್ಟೆಲ್ಲರ್’ ಸಿನೆಮಾದ ಕತಾವಸ್ತುವನ್ನು ಹೆಣೆಯಲಾಗಿದೆ. 

ಇಂತಹ ಹೊತ್ತಿನಲ್ಲಿ ತಂತ್ರಜ್ಞಾನದ ಕುರಿತಂತೆ ಇನ್ನೂ ಭರವಸೆಯನ್ನು, ಆಸಕ್ತಿಯನ್ನು ಉಳಿಸಿಕೊಂಡಿರುವ ಕೂಪರ್(ಮಕಾನಹೆ) ಮತ್ತು ಆತನ ಮಗಳು ಮರ್ಫ್(ಫಾಯ್) ಅಪ್ರಸ್ತುತರಾಗಿ ಬದುಕುತ್ತಿದ್ದಾರೆ. ಆದರೆ ಅವರ ಹುಡುಕಾಟ ಅವರ ಬದುಕಿನಲ್ಲಿ ಹೊಸ ಜಗತ್ತೊಂದನ್ನು ತೆರೆಯುತ್ತದೆ. ಕೂಪರ್‌ಗೆ ಅನಿರೀಕ್ಷಿತವಾಗಿ ಬಾಹ್ಯಾಕಾಶ ಯಾನದ ಅವಕಾಶವನ್ನು ತೆರೆದು ಕೊಡುತ್ತದೆ. ಇದೇ ಸಂದರ್ಭದಲ್ಲಿ ಬಾಲಕಿ ಮರ್ಫ್‌ಗೆ ಸಿಗುವ ಅಗೋಚರ ಸಂಕೇತಗಳು ಭೂಮಿಯ ಅಳಿದುಳಿದ ಭರವಸೆಯಾಗಿ ಕಾಣಿಸಿಕೊಳ್ಳುತ್ತದೆ. ಒಂದೆಡೆ ಹೊಸ ಮನುಕುಲದ ಉಳಿವಿಗಾಗಿ ಹೊಸ ಗ್ರಹವನ್ನು ಹುಡುಕುತ್ತಾ ಗ್ಯಾಲಕ್ಸಿಯಾಚೆಗೆ ಹೊರಟಿರುವ ಗಗನಯಾತ್ರಿಗಳ ತಂಡ. ಮಗದೊಂದೆಡೆ ತಂದೆಯನ್ನು ಹೋಗದಂತೆ ತಡೆಯುವಲ್ಲಿ ವಿಫಲಳಾಗಿ, ಆತನ ನಿರೀಕ್ಷೆಯಲ್ಲಿ ಹೊಸತೊಂದರ ಹುಡುಕಾಟದಲ್ಲಿರುವ ಮಗಳು. ಇವರಿಬ್ಬರ ನಡುವಿನ ಭಾವನಾತ್ಮಕ ಸಂಬಂಧವನ್ನು ತೆರೆದಿಡುವ ಚಿತ್ರವಾಗಿ ಇಂಟರ್‌ಸ್ಟೆಲ್ಲರ್ ನಮ್ಮನ್ನು ಸೆಳೆಯುತ್ತದೆ. 

ಇತ್ತೀಚೆಗೆ ಬಾಹ್ಯಾಕಾಶಯಾನಕ್ಕೆ ಸಂಬಂಧಿಸಿದ ಚಿತ್ರಗಳು ಸಾಲು ಸಾಲಾಗಿ ಬರುತ್ತಿವೆ. ಗ್ರಾವಿಟಿಯಂತೂ ಅಂತಹ ಉತ್ತಮ ಚಿತ್ರಗಳಲ್ಲಿ ಒಂದು. ಇಂಟರ್‌ಸ್ಟೆಲ್ಲರ್ ಚಿತ್ರ ಅಂತಹ ಹಲವು ಬಾಹ್ಯಾಕಾಶ ಸಂಬಂಧಿ ಚಿತ್ರಗಳ ಕೊಂಡಿಯನ್ನು ತನ್ನೊಳಗೆ ಇರಿಸಿಕೊಂಡಿದೆ. ಈ ಹಿಂದೆ ತೆರೆಕಂಡ ವಿವಿಧ ವೈಜ್ಞಾನಿಕ ಚಿತ್ರಗಳನ್ನು ಒಟ್ಟಿಗೆ ನೋಡಿದ ಅನುಭವವನ್ನು ‘ಇಂಟರ್‌ಸ್ಟೆಲ್ಲರ್’ ನೀಡುತ್ತದೆ.ಈ ಚಿತ್ರದಲ್ಲಿ ‘2001: ಎ ಸ್ಪೇಸ್ ಒಡೆಸ್ಸಿ ’ಚಿತ್ರದ ದಟ್ಟ ಛಾಯೆ ಕಾಣುತ್ತದೆ. ಜೊತೆಜೊತೆಗೆ ಕಂಟ್ಯಾಕ್ಟ್, ಗ್ರಾವಿಟಿ ಚಿತ್ರಗಳೂ ನೆನಪಾಗುತ್ತವೆ. ಇಂಟರ್‌ಸ್ಟೆಲ್ಲರ್ ಮೂಲಕ ನಿರ್ದೇಶಕ ನೊಲಾನ್ ಪ್ರೇಕ್ಷಕರಲ್ಲಿ ಬಾಹ್ಯಾಕಾಶದ ಬಗ್ಗೆ ಕುತೂಹಲವನ್ನು ಕೆರಳಿಸುವಲ್ಲಿ ಸಫಲರಾಗಿದ್ದಾರೆ. ಒಂದು ವೈಜ್ಞಾನಿಕ ಕಥಾಪ್ರಧಾನ ಚಿತ್ರದಲ್ಲೂ ಮಾನವೀಯ ಸಂಬಂಧಗಳನ್ನು ಎಷ್ಟು ಸುಂದರ ವಾಗಿ ಹಾಗೂ ನವಿರಾಗಿ ತೋರಿಸ ಬಹುದೆಂಬುದನ್ನು ಅವರು ಈ ಚಿತ್ರದಲ್ಲಿ ಸಾಬೀತುಪಡಿಸಿದ್ದಾರೆ.ಅತ್ಯದ್ಭುತ ದೃಶ್ಯವೈಭವದ ಜೊತೆ ಸಮರ್ಥ ಕತೆ, ಪ್ರತಿಭಾವಂತ ತಾರೆಯರ ಭಾವಪೂರ್ಣ ಅಭಿನಯ ಇವೆಲ್ಲವೂ ಇಂಟರ್‌ಸ್ಟೆಲ್ಲರ್‌ನ್ನು, ಒಂದು ನೋಡಬಹುದಾದ ಚಿತ್ರವಾಗಿ ಪರಿವರ್ತಿಸಿದೆ. ಇಡೀ ಚಿತ್ರದ ಕುತೂಹಲಕಾರಿ ಘಟ್ಟವೆಂದರೆ, ಭೂಮಿಯಾಚೆಗಿರುವ ತಂದೆ ಮತ್ತೆ ಮಗಳನ್ನು ಸೇರುತ್ತಾನೆಯೋ ಇಲ್ಲವೋ ಎನ್ನುವುದು. ಚಿತ್ರದ ಕ್ಲೈಮಾಕ್ಸ್ ಕೂಡ ಹೃದಯಂಗಮವಾಗಿದೆ. ಮನುಷ್ಯ ಸಂಬಂಧಗಳನ್ನು ಎತ್ತಿ ಹಿಡಿಯುವಂತಿದೆ.

 ಆದರೆ ಇಡೀ ಭೂಮಿಯನ್ನು ತಂತ್ರಜ್ಞಾನದ ಅಡಿಯಾಳನ್ನಾಗಿ ಈ ಚಿತ್ರ ನೋಡುತ್ತದೆ. ಕೂಪರ್‌ನನ್ನು ಈ ತಂತ್ರಜ್ಞಾನದ ಪ್ರತಿನಿಧಿಯಾಗಿ ವೈಭವೀಕರಿಸುತ್ತದೆಯೋ ಎಂಬ ಅತೃಪ್ತಿ ಕಾಡುತ್ತದೆ. ಕೃಷಿಯೇ ಅಂತಿಮವೆನ್ನುವ ಸ್ಥಿತಿಯನ್ನು ಒಪ್ಪಿಕೊಳ್ಳುವ ದಿನಗಳ ಕಡೆಗೆ ವಾಲುವ ಭೂಮಿಯನ್ನು ಇನ್ನಷ್ಟು ಮಾನವೀಯ ನೆಲೆಯಲ್ಲಿ ಕಟ್ಟಿಕೊಡುವ ಅವಕಾಶ ನಿರ್ದೇಶಕನಿಗಿತ್ತು. ಆದರೆ ಚಿತ್ರದ ಗುರಿ ಬಾಹ್ಯಾಕಾಶವೇ ಆಗಿರುವುದರಿಂದ ಭೂಮಿಯ ಕೆಲವು ವಾಸ್ತವಗಳನ್ನು ನಿರ್ದೇಶಕರು ಉದ್ದೇಶಪೂರ್ವಕವಾಗಿ ಬದಿಗೆ ಸರಿಸುತ್ತಾರೆ ಎನ್ನಿಸುತ್ತದೆ.  ಚಿತ್ರದ ಮಿತಿಯೂ ಇದೇ ಆಗಿದೆ. ಅನ್ನದಾತ ರೈತರು ಮುಖ್ಯ ಎನ್ನುವುದನ್ನು ಭೂಮಿ ಒಪ್ಪಿಕೊಳ್ಳುವ ಸಂದರ್ಭವನ್ನು ಭೂಮಿಯ ಸೋಲು ಎಂದು ನಿರ್ದೇಶಕರು ಚಿತ್ರಿಸಲು ಹೊರಟಿರುವುದು ಚಿತ್ರದ ವೈಫಲ್ಯವೂ ಆಗಿದೆ.

 ನಾಸಾದ ಮಾಜಿ ಪೈಲಟ್ ಆಗಿ ಕೂಪರ್ ಪಾತ್ರದಲ್ಲಿ ಮ್ಯಾಕ್ ಹೃದಯಂಗಮವಾಗಿ ನಟಿಸಿದ್ದಾರೆ. ಮರ್ಫ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಫಾಯ್ ಈ ಚಿತ್ರದ ಇನ್ನೊಂದು ಹೆಗ್ಗಳಿಕೆ. ಕೂಪರ್ ಜೊತೆಗಿರುವ ಗಗನಯಾತ್ರಿಕರಾದ ಅಮೆಲಿಯಾ (ಹ್ಯಾತ್‌ವೆ), ರೊಮಿಲ್ಲಿ (ಗ್ಯಾಸಿ), ಡೊಯ್ಲಾ (ಬೆಂಟ್ಲೆ) ಕೂಡ ತಮ್ಮ ಪಾತ್ರಕ್ಕೆ ನ್ಯಾಯವನ್ನು ಕೊಟ್ಟಿದ್ದಾರೆ. 169 ನಿಮಿಷಗಳ ಈ ಚಿತ್ರವು ನಿಧಾನಗತಿಯಲ್ಲಿ ಸಾಗುತ್ತಿದೆಯೇನೋ ಎಂದು ಅಲ್ಲಲ್ಲಿ ಅನ್ನಿಸುತ್ತದೆ. ಚಿತ್ರದಲ್ಲಿ ಅದ್ಬುತವಾದ ವಿಶ್ಯುವಲ್ ಎಫೆಕ್ಟ್ (ದೃಶ್ಯ ಪರಿಣಾಮ)ಗಳಿವೆ. ಐಮ್ಯಾಕ್ಸ್ ತಂತ್ರಜ್ಞಾನದ ಪರದೆಯಲ್ಲಿ ಇಂಟರ್‌ಸ್ಟೆಲ್ಲರ್ ವೀಕ್ಷಿಸಿದಲ್ಲಿ ಅದರ ಅನುಭವವೇ ಬೇರೆ. ಹ್ಯಾನ್ಸ್‌ಝಿಮ್ಮರ್ ಅವರ ಹಿನ್ನೆಲೆ ಸಂಗೀತ, ಚಿತ್ರಕ್ಕೆ ವಿಶಿಷ್ಟವಾದ ಮೆರುಗನ್ನು ನೀಡುತ್ತದೆ. ಒಮ್ಮೆ ನೋಡಲೇ ಬೇಕಾದ ಚಿತ್ರ ಇಂಟರ್‌ಸ್ಟೆಲ್ಲರ್.

Saturday, November 22, 2014

ಅಮ್ಮ ಹೇಳಿದ ಕಥೆ


ಇದು ತುಂಬಾ ವರ್ಷಗಳ ಹಿಂದೆ ನನ್ನ ತಾಯಿ ನನಗೆ ಹೇಳಿದ ಕತೆ ಇದು.
ಅಂದು ಸಂಜೆ ಶಾಲೆ ಬಿಟ್ಟು ಮನೆಗೆ ಬಂದಿದ್ದೆ. ಅಮ್ಮ ಎಂದಿನಂತೆ ನನಗಾಗಿ ಬಾಗಿಲ ಬಳಿ ಕಾದು ಕುಳಿತಿರಲಿಲ್ಲ. ಅಮ್ಮನನ್ನು ಹುಡುಕುತ್ತಾ ಒಳ ಮನೆಗೆ ಹೋದೆ. ಅಲ್ಲೂ ಇಲ್ಲ. ಅಡುಗೆ ಮನೆಯಲ್ಲೂ ಇಲ್ಲ. 
ಭಯವಾಯಿತು. "ಅಮ್ಮ" ಎಂದು ಕರೆದೆ. ಉತ್ತರವೇ ಇಲ್ಲ. 
ಮನೆಯ ಹಿತ್ತಲಲ್ಲಿ ನೋಡಿದರೆ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಕಡೆದಿಟ್ಟ ಕಲ್ಲಿನಂತೆ ಕುಳಿತಿದ್ದಳು. 
"ಅಮ್ಮ" ಎಂದು ಕರೆದೆ. ಒಮ್ಮೆಲೇ ಬೆಚ್ಚಿ ನನ್ನ ಕಡೆ ನೋಡಿದಳು. 
ಅವಳ ಕಣ್ಣು ಒದ್ದೆಯಾಗಿತ್ತು. ಅಥವಾ ನನಗೆ ಹಾಗೆ ಕಂಡಿರ ಬೇಕು. ಅಂದು ರಾತ್ರಿ ಮಲಗುವಾಗ ಹೇಳಿದ ಕಥೆ ಇದು. ಒಂದು ರೀತಿಯಲ್ಲಿ ಅಪೂರ್ಣವಾದ ಕಥೆ. ಅಥವಾ ಈ ಅಪೂರ್ಣತೆಯೇ ಕಥೆಯ ಪೂರ್ಣತೆಯೂ ಆಗಿರಬಹುದು. ಕಥೆ ಹೀಗಿದೆ. 
ಇಬ್ಬರು ಗಂಡ-ಹೆಂಡತಿ ಇದ್ದರಂತೆ. ಅವರಿಗೆ ಒಬ್ಬ ಪುಟಾಣಿ ಮಗು. ಮಗುವಿಗೆ ತಂದೆ ತಾಯಿಗಳ ಮೇಲೆ ಸಮಾನ ಪ್ರೀತಿ. ಗಂಡ ಇದ್ದಾನಲ್ಲ ಅವನಿಗೆ ಮೂಗಿನಲ್ಲೇ ಕೋಪ. ಸಣ್ಣ ತಪ್ಪಿಗೂ ಭಯಂಕರ ಸಿಟ್ಟು ಮಾಡಿ, ಆಕೆಗೆ ಥಳಿಸುತ್ತಿದ್ದನಂತೆ. ಒಂದು ದಿನ ಪೇಟೆಗೆ ದುಡಿಯಲೆಂದು ಹೋದ ಆತ, ಮಧ್ಯಾಹ್ನ ಆಡಿನ ಮಾಂಸ ಹಿಡಿದುಕೊಂಡು ಬಂದನಂತೆ. ಅವನಿಗೆ ಸಿಕ್ಕಾಪಟ್ಟೆ ಹಸಿವು. ಹೆಂಡತಿಯ ಕೈಗೆ ಮಾಂಸವನ್ನು ಕೊಟ್ಟು ‘‘ಬೇಗ ಅಡುಗೆ ಮಾಡಿ ಇಡು. ನಾನು ಇಲ್ಲೇ ನದಿಯಲ್ಲಿ ಸ್ನಾನ ಮಾಡಿ ಬರುವೆ. ಸಿಕ್ಕಾಪಟ್ಟೆ ಹಸಿವಾಗುತ್ತಿದೆ’’ ಎಂದನಂತೆ. ಅವಳು ಮಾಂಸವನ್ನು ತೆಗೆದುಕೊಂಡು ಅಡುಗೆಗೆ ಸಿದ್ಧ ಮಾಡತೊಡಗಿದಳು. ಗಂಡ ನದಿಗೆ ಸ್ನಾನಕ್ಕೆಂದು ಹೋದ. ಮಾಂಸವನ್ನು ಕತ್ತರಿಸಬೇಕಲ್ಲ. ಅದಕ್ಕೆಂದು ಕತ್ತಿ ತರಲೆಂದು ಅವಳು ಒಳ ಹೋದಳು. ಅಷ್ಟರಲ್ಲಿ ಒಂದು ನಾಯಿ ಅದೆಲ್ಲಿತ್ತೋ, ಅಲ್ಲಿದ್ದ ಎಲ್ಲಾ ಮಾಂಸವನ್ನೂ ತಿಂದು ಬಿಟ್ಟಿತು. ಹೆಂಡತಿ ಬಂದು ನೋಡುತ್ತಾಳೆ, ನಾಯಿ ಮಾಂಸವನ್ನೆಲ್ಲ ತಿಂದು ಬಿಟ್ಟಿದೆ. ಆಕೆಯ ಎದೆ ಒಡೆದು ಹೋಯಿತು. ಗಂಡ ಬಂದು ನನ್ನನ್ನು ಕೊಂದೇ ಬಿಡುವನು ಎಂದು ಅವಳು ಭಯಭೀತಳಾದರು. ಮಾಡುವುದೇನು? ನಾಯಿಯನ್ನು ನೋಡಿದಳು. ಸಿಟ್ಟಿನಿಂದ ಕೈಯಲ್ಲಿರುವ ಕತ್ತಿಯಿಂದ ನಾಯಿಗೆ ಒಂದೇಟು ಬಿಗಿದಳು. ನಾಯಿ ಅಲ್ಲಿಯೇ ಸತ್ತು ಹೋಯಿತು. ಅವಳಿಗೆ ಬೇರೆ ಉಪಾಯವೇ ಇರಲಿಲ್ಲ. ನಾಯಿಯನ್ನೇ ಮಾಂಸ ಮಾಡಿ, ಅಡುಗೆ ಮಾಡಿದಳು. ಉಳಿದ ಅವಶೇಷವನ್ನು ದೂರ ಎಸೆದು ಬಂದಳು. ಆದರೆ ಇದನ್ನೆಲ್ಲ ಆಕೆಯ ಮುದ್ದು ಮಗ ಕಣ್ಣು ಬಿಟ್ಟು ನೋಡುತ್ತಿದ್ದ.

ಅಪ್ಪ ಬಂದ. ‘‘ಹಸಿವಾಗುತ್ತಿದೆ. ಬೇಗ ಬಡಿಸು....’’ ಅಬ್ಬರಿಸಿದ. ಅವಳು ಒಳಗೊಳಗೆ ನಡುಗುತ್ತಾ ನಾಯಿ ಮಾಂಸದ ಸಾರನ್ನು ಮತ್ತು ಅನ್ನವನ್ನು ಬಡಿಸಿದಳು.
ಮಗ ನೋಡುತ್ತಲೇ ಇದ್ದ.
ಅಪ್ಪ ಮಾಂಸದ ತುಂಡಿನ ಜೊತೆ ತುತ್ತನ್ನು ಕಲಸಿ ಬಾಯಿಗಿಡಬೇಕು.
ಮಗ ‘‘ಅಪ್ಪಾ....’’ ಎಂದು ಕೂಗಿದ. ತಾಯಿ ಆತಂಕದಿಂದ ಮಗನ ನೋಡಿದಳು.

ಅಪ್ಪ ‘ಏನು?’’ ಎನ್ನುತ್ತಾ ಮಗನ ಕಡೆಗೆ ನೋಡಿದ. ಮಗು ಪಾಪ ಏನು ಮಾಡಬೇಕು?
ಸುಳ್ಳು ಹೇಳಿದರೆ ಅಪ್ಪ ನಾಯಿ ತಿನ್ನುತ್ತಾನೆ. ಸತ್ಯ ಹೇಳಿದರೆ ಅಮ್ಮ ಸಾಯುತ್ತಾಳೆ.....

ನನ್ನ ಅಮ್ಮ ಹೇಳಿದ ಈ ಕತೆ ನನಗೆ ಈಗಲೂ ನೆನಪಿದೆಯಾದರೂ  ಆ ಕತೆಯಲ್ಲಿ ಮಗ ಸುಳ್ಳು ಹೇಳಿದನೋ, ಸತ್ಯ ಹೇಳಿದನೋ ಎನ್ನುವುದು ಮಾತ್ರ ನೆನಪಿಲ್ಲ. ಅಥವಾ ಅಮ್ಮ ಅದನ್ನು ನನಗೆ ಅವತ್ತು ಹೇಳಿರಲೇ ಇಲ್ಲ. ಅಥವಾ ಅವಳು ಕತೆ ಪೂರ್ಣ ಗೊಳಿಸುವ ಮೊದಲೇ ನಾನು ನಿದ್ದೆ ಹೋಗಿರಬೇಕು 

13 ಮತ್ತು 14 ಡಿಸೆಂಬರ್ ಮಂಗಳೂರು : “ಜನನುಡಿ 2014”




ಬಾಯ್‌ಹುಡ್: ನೋವು, ನಲಿವುಗಳ ಮೆರವಣಿಗೆ

ಸಿನಿಮಾದ ಬೇರೆ ಬೇರೆ ಸಾಧ್ಯತೆಗಳನ್ನು ಹಾಲಿವುಡ್ ಪರಿಣಾಮಕಾರಿಯಾಗಿ ತನ್ನದಾಗಿಸಿ ಕೊಂಡು ಬೆಳೆಯುತ್ತಾ ಬಂದಿದೆ. ಬಾಯ್ ಹುಡ್ ಚಿತ್ರ  ಕೂಡ ಅಂಥಹದೆ ಒಂದು ಪ್ರಯೋಗದ ಮೂಲಕ ರೂಪ ಪಡೆದಿರುವ ಚಿತ್ರ. ಬಾಲ್ಯದಿಂದ ತಾರುಣ್ಯದ ಕಡೆಗೆ ಚಲಿಸುವ ಕಾಲವನ್ನು ಇಲ್ಲಿ ನಿರ್ದೇಶಕ ಅದರ ಜೊತೆ ಜೊತೆಗೆ ನಡೆಯುತ್ತಲೇ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದಾನೆ. ಈ ಚಿತ್ರ ಬರೋಬ್ಬರಿ ೧೨ ವರ್ಷಗಳ ಕಾಲ ಚಿತ್ರೀಕರಣಗೊಂಡಿದೆ. ಒಬ್ಬ ಬಾಲಕ ಬೆಳೆಯುತ್ತಾ ತಾರುಣ್ಯಕ್ಕೆ ತಲುಪುವ ವರೆಗಿನ ಕಾಲಘಟ್ಟ ಇಲ್ಲಿದೆ. ಇಲ್ಲಿ ನಾಯಕ ಪಾತ್ರಕ್ಕೆ ಬೇರೆ ಬೇರೆ ನಟರನ್ನು ಆಯ್ದುಕೊಳ್ಳದೆ ಒಬ್ಬನೇ ಬಾಲ ನಟನನ್ನು ಬಳಸಿಕೊಂಡಿದ್ದಾರೆ. ಯುವಕನ ಪಾತ್ರವನ್ನು ಅವನೇ ನಟಿಸಿದ್ದಾನೆ. 

 ‘ಬಾಯ್‌ಹುಡ್’, ಈ ದಶಕದ ಅಪರೂಪದ ಚಿತ್ರಗಳಲ್ಲೊಂದೆಂಬುದನ್ನು ನಿಸ್ಸಂಕೋಚವಾಗಿ ಹೇಳಬಹುದು. ಕಥಾನಾಯಕ ಮೇಸನ್ (ಎಲ್ಲರ್ ಕಾಲ್ಟ್ರೇನ್) ಆರು ವರ್ಷದ ಬಾಲಕನಾಗಿರುವಾಗಿನಿಂದ ಹಿಡಿದು,ಆತ 18 ವರ್ಷದ ಕಾಲೇಜ್ ವಿದ್ಯಾರ್ಥಿಯಾಗುವವರೆಗಿನ ಆತನ ಬದುಕಿನ ನೋವು,ನಲಿವು, ತುಮುಲ,ತಲ್ಲಣಗಳ ಬದುಕನ್ನು ಈ ಚಿತ್ರವು ಹೃದಯಂಗಮವಾಗಿ ಪ್ರೇಕ್ಷಕರ ಮುಂದಿಡುತ್ತದೆ.

 ಈ ಚಿತ್ರವನ್ನು ಬರೋಬ್ಬರಿ 12 ವರ್ಷಗಳ ಕಾಲ, ಒಂದೇ ತಾರಾಬಳಗದೊಂದಿಗೆ ಚಿತ್ರೀಕರಿಸಿರುವ ನಿರ್ದೇಶಕ ರಿಚರ್ಡ್ ಲಿಂಕ್‌ಲೇಟರ್ ಸಾಧನೆ ಬೆರಗುಮೂಡಿಸುತ್ತದೆ.
ಮಾನವ ಬೆಳೆದಂತೆಲ್ಲಾ ಸಂದರ್ಭಕ್ಕೆ ತಕ್ಕಂತೆ ಆತನ ವ್ಯಕ್ತಿತ್ವವು ಹೇಗೆ ರೂಪುಗೊಳ್ಳುತ್ತಾ ಹೋಗುತ್ತದೆ ಯೆಂಬುದನ್ನು ಬಹಳ ಮಾರ್ಮಿಕವಾಗಿ ತೋರಿಸಿದ್ದಾರೆ. ಹೀಗೆ ಈ ಚಿತ್ರದ ತಾರೆಯರು, ಸಿನೆಮಾ ಮುಂದಕ್ಕೆ ಸಾಗಿದಂತೆ ನಮ್ಮ ಕಣ್ಣೆದುರೇ ಬೆಳೆಯುತ್ತಾ ಹೋಗುವುದು ವಾಸ್ತವಕ್ಕೆ ತೀರ ಹತ್ತಿರದ ಅನುಭವವನ್ನು ನೀಡುತ್ತದೆ.
    1995ರಲ್ಲಿ ತೆರೆಕಂಡ ಸೂಪರ್‌ಹಿಟ್ ಹಾಲಿವುಡ್ ಚಿತ್ರ ‘ಬಿಫೋರ್ ಸನ್‌ರೈಸ್’ನ ನಿರ್ದೇಶಕ ರಿಚರ್ಡ್ ಲಿಂಕ್‌ಲೇಟರ್, ‘ಬಾಯ್‌ಹುಡ್’ ಚಿತ್ರವನ್ನು ಹನ್ನೆರಡು ವರ್ಷಗಳ ಸುದೀರ್ಘ ಅವಧಿಗೆ, ಒಂದೇ ತಾರಾಬಳಗದೊಂದಿಗೆ ಚಿತ್ರಿಸುವ ಮೂಲಕ ಯಾವ ಸಿನೆಮಾ ತಂತ್ರಜ್ಞನೂ ಕನಸುಮನಸಿನಲ್ಲೂ ಯೋಚಿಸಿರದಂತಹ ಸಾಹಸ ಮಾಡಿದ್ದಾರೆ.
  ಈ ಚಿತ್ರಕ್ಕಾಗಿ ಲಿಂಕ್‌ಲೆಟರ್ ವಹಿಸಿದ್ದ ತಾಳ್ಮೆ ಹಾಗೂ ತೆಗೆದುಕೊಂಡಿರುವ ರಿಸ್ಕ್ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತದೆ. 2002ರಲ್ಲಿ ಚಿತ್ರೀಕರಣ ಆರಂಭವಾದಾಗ ಕಥಾನಾಯ ಕ ಎಲ್ಲಾರ್‌ಕೊಲ್ಟ್ರೇನ್‌ಗೆ ಕೇವಲ ಏಳು ವರ್ಷ ವಯಸ್ಸು. ಆ ಸಮಯದಲ್ಲಿ 12 ವರ್ಷಗಳ ಬಳಿಕ ಆತ ಹೇಗಿರಬಹುದೆಂಬ ನಿರ್ದೇಶಕರಿಗೆ ಯಾವುದೇ ಸುಳಿವು ಇರಲಾರದು. ಪತಿಯಿಂದ ಪರಿತ್ಯಕ್ತಳಾದ ಕೊಲ್ಟ್ರಿನ್‌ನ ತಾಯಿ ಒಲಿವಿಯಾಳ ಪಾತ್ರದಲ್ಲಿ ಪ್ಯಾಟ್ರಿಶಿಯಾ ಅರ್ಕ್ವೆಟ್ ಅದ್ಭುತವಾಗಿ ನಟಿಸಿದ್ದಾರೆ. ತನ್ನ ಇಬ್ಬರು ಮಕ್ಕಳ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಬಿರುಗಾಳಿ ಎಬ್ಪಿಸಿ ಹೋಗುವ ಪರಿತ್ಯಕ್ತ ತಂದೆಯ ಪಾತ್ರದಲ್ಲಿ ಎಥಾನ್ ಹಾಕ್ ನಟನೆಯೂ ಮೆಚ್ಚುಗೆ ಗಳಿಸುತ್ತದೆ. ಆದಾಗ್ಯೂ, ಚಿತ್ರದುದ್ದಕ್ಕೂ ಬಾಲನಟ ಎಲ್ಲಾರ್ ಕೊಲ್ಟ್ರೇನ್ ಪ್ರೇಕ್ಷಕರ ಮನಸ್ಸನ್ನು ಆವರಿಸಿಬಿಡುತ್ತಾನೆ. ಗೊಂದಲ, ಬಂಡಾಯ ಪ್ರವೃತ್ತಿ, ವೇದನೆ ಹಾಗೂ ಭಾವುಕತೆಯ ಸನ್ನಿವೇಶಗಳಲ್ಲಿ ಆತ ಅವಿಸ್ಮರಣೀಯವಾಗಿ ನಟಿಸಿದ್ದಾನೆ. ಇವನ ತುಮುಲ, ಸಂಕಟಗಳಲ್ಲಿ ನಾವು ಜೊತೆಯಾಗಿರುತ್ತೇವೆ.  ಕಥೆಗೆ ಅನುಗುಣವಾಗಿ ಈ ಚಿತ್ರವು ಡಾಕ್ಯುಮೆಂಟರಿ ಚಿತ್ರದ ಹಾಗೆ ಆಮೆನಡಿಗೆಯಲ್ಲಿ ಸಾಗುತ್ತದೆ. ಆದರೆ ಎರಡು ತಾಸುಗಳ ಈ ಚಿತ್ರವು ಭಾವನಾತ್ಮಕವಾಗಿ ನಮ್ಮನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಾ, ಚಿತ್ರದ ಭಾಗವಾಗಿಸಿಕೊಳ್ಳುತ್ತದೆ. ಈ ಚಿತ್ರದಲ್ಲಿ ಕಥಾಪಾತ್ರಗಳ ದೈನಂದಿನ ಬದುಕಿನ ಉಜ್ವಲ ಕ್ಷಣಗಳು ಅತ್ಯಂತ ಸುಂದರ ವಾಗಿ ಮೂಡಿಬಂದಿವೆ.
‘‘ಇಂತಹದ್ದೊಂದು ಚಿತ್ರವನ್ನು ನೀವು ಹಿಂದೆಂದೂ ಕಂಡಿರಲಾರಿರಿ. ಪ್ರಾಯಶಃ ಮತ್ತೊಮ್ಮೆ ಕಾಣಲಾರಿರಿ’’ ಎಂದು ನಿರ್ದೇಶಕ ಲಿಂಕ್‌ಲೇಟರ್ ಹೇಳಿರುವುದು ಅಕ್ಷರಶಃ ನಿಜವೆಂದು ಚಿತ್ರ ನೋಡಿ ಹೊರಬಂದ ಪ್ರೇಕ್ಷಕನಿಗೆ ಮನವರಿಕೆಯಾಗುವುದು ಖಂಡಿತ.
 2002ನೆ ಇಸವಿಯಲ್ಲಿ ಆರು ವರ್ಷದ ಬಾಲಕ ಮೇಸನ್ ಹಾಗೂ ಆತನ ಸಹೋದರಿ ಸಮಂತಾ (ನಿರ್ದೇಶಕರ ಪುತ್ರಿ ಲೊರೆಲಿ ಲಿಂಕ್‌ಲೇಟ್) ಟೆಕ್ಸಾಸ್‌ನಲ್ಲಿರುವ ತಮ್ಮ ಮನೆಯಲ್ಲಿ ತುಂಟಾಟವಾಡುತ್ತಿರುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಈ ಚಿಣ್ಣರ ತಾಯಿ ಒಲಿವಿಯಾ (ಪ್ಯಾಟ್ರಿಶಿಯಾ ಆರ್ಕ್ವೆಟ್) ಪತಿಯಿಂದ ಪರಿತ್ಯಕ್ತಳಾಗಿರುತ್ತಾಳೆ. ತನ್ನ ಮಕ್ಕಳನ್ನು ನೋಡಿಕೊಳ್ಳುವ ಪೂರ್ಣ ಜವಾಬ್ದಾರಿ ಈಕೆಯ ಹೆಗಲೇರಿರುತ್ತದೆ. ಅರ್ಧದಲ್ಲೇ ಕೈಬಿಟ್ಟಿರುವ ತನ್ನ ವ್ಯಾಸಂಗವನ್ನು ಪೂರ್ತಿಗೊಳಿಸಲು ಆಕೆ ಮಕ್ಕಳೊಂದಿಗೆ ಟೆಕ್ಸಾಸ್ ತೊರೆದು ಹ್ಯೂಸ್ಟನ್ ನಗರಕ್ಕೆ ಬಂದು ನೆಲೆಸುತ್ತಾಳೆ. ಹ್ಯೂಸ್ಟನ್‌ನಲ್ಲಿ, ಮೇಸನ್‌ನ ತಂದೆ, ಒಲಿಯಾಳ ಮಾಜಿ ಪತಿ (ಎಥಾನ್ ಹೌಕ್) ಮಕ್ಕಳನ್ನು ತನ್ನೊಂದಿಗೆ ಕರೆದೊಯ್ಯುತ್ತಾನೆ. ಆತನ ಹೊಣೆಗೇಡಿತನ ಹಾಗೂ ಅಲೆದಾಟದ ವರ್ತನೆಯನ್ನು ಕಂಡು ಒಲಿವಿಯಾ ಸಿಡಿಮಿಡಿಗೊಳ್ಳುತ್ತಾಳೆ. ತಮ್ಮ ತಂದೆತಾಯಿಗಳು ಹಾವುಮುಂಗುಸಿಗಳಂತೆ ತಮ್ಮ ಕಣ್ಣೆದುರೇ ಜಗಳವಾಡುವುದನ್ನು ಕಂಡು ಮಕ್ಕಳು ಬೆಚ್ಚಿಬೀಳುತ್ತಾರೆ. ಆನಂತರ ಒಲಿವಿಯಾ ಎರಡನೆ ವಿವಾಹವಾಗುತ್ತಾಳೆ. ಮೇಸನ್‌ನ ಬದುಕು ಇನ್ನೊಂದು ಆಯಾಮವನ್ನು ಪಡೆಯುತ್ತದೆ.

ಹೀಗೆ 6ನೆ ವಯಸ್ಸಿನಿಂದ 18ನೆ ವಯಸ್ಸಿನವರೆಗೆ ಮೇಸನ್ ಬೆಳೆದಂತೆ, ಆತನಿಗೆ ಎದುರಾಗುವ ನೋವು, ನಲಿವುಗಳಲ್ಲಿ, ಸುಖ, ದು:ಖಗಳಲ್ಲಿ ನಾವೂ ಸಹಭಾಗಿಗಳಾಗುತ್ತೇವೆ. ತನ್ನ ಹೆತ್ತವರ ಸಂಘರ್ಷ, ಒಡಹುಟ್ಟಿದವರೊಂದಿಗೆ ವೈಮನಸ್ಸು, ಮೊದಲ ಪ್ರೇಮ, ಆನಂತರ ಎದುರಿಸುವ ಪ್ರೇಮ ವೈಫಲ್ಯ ಇವೆಲ್ಲವೂ ಆತನನ್ನು ಓರ್ವ ಪರಿಪಕ್ವ ವ್ಯಕ್ತಿಯನ್ನಾಗಿ ರೂಪಿಸುತ್ತವೆ. . ಛಾಯಾಗ್ರಹಣವೂ ಉತ್ಕೃಷ್ಟವಾಗಿದ್ದು, ಚಿತ್ರದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.

ಏನೇ ಇರಲಿ, ನಿರ್ದೇಶಕ ಲಿಂಕ್‌ಲೇಟರ್ ಬಾಯ್‌ಹುಡ್ ಚಿತ್ರವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ. ನವಿರಾದ ಭಾವನೆಗಳನ್ನು ಮೂಡಿಸುತ್ತಲೇ ಈ ಚಿತ್ರವು ನಮ್ಮ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ. ಸಣ್ಣಪುಟ್ಟ ಸಂಗತಿಗಳಲ್ಲೇ ಜೀವನದ ಸ್ವಾರಸ್ಯ ಅಡಗಿದೆಯೆಂಬುದನ್ನು ನಿರ್ದೇಶಕರು ಅತ್ಯಂತ ಸೊಗಸಾಗಿ ನಿರೂಪಿಸಿದ್ದಾರೆ.

Monday, November 17, 2014

ಕಳ್ಳರು ಮತ್ತು ಇತರ ಕತೆಗಳು


ಸ್ವಚ್ಛತಾ ಆಂದೋಲನ
ಅವನು ತನ್ನ ಮನೆ ಮುಂದಿನ ಬೀದಿಯನ್ನು ದಿನಾ ಗುಡಿಸಿ ಸ್ವಚ್ಛವಾಗಿಡುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆಯೇ ಮುನ್ಸಿಪಾಲಿಟಿ ವ್ಯಾನ್ ಬಂದು ಒಂದಿಷ್ಟು ಕಸ ಸುರಿಯಿತು.
‘‘ಏನಯ್ಯ ಇದು?’’ ಅವನು ಕೇಳಿದ.
‘‘ನಾಳೆ ಗಾಂಧೀಜಯಂತಿ ಹೆಸರಲ್ಲಿ ಸ್ವಚ್ಛತಾ ಆಂದೋಲನ ನಡೆಯುತ್ತದೆ. ಮಿನಿಸ್ಟರ್ ಬಂದು ಕಸ ಗುಡಿಸಲಿದ್ದಾರೆ. ಮಿನಿಷ್ಟರ್ ಬರೋವರೆಗೆ ಇದನ್ನು ಗುಡಿಸಿದರೆ ಹುಷಾರ್!’’ ಅವನು ಉತ್ತರಿಸಿದ.

ಕಾಗೆಗಳು
ಪಕ್ಷದ ಕಚೇರಿಯಲ್ಲಿ ‘ಕಮ್ಯುನಿಸಂ ಎಂದರೇನು?‘ ಎನ್ನುವುದನ್ನು ತನ್ನ ನಾಯಕನಿಂದ ಗಂಟೆಗಟ್ಟಳೆ ಕೊರೆಸಿಕೊಂಡ. ಆದರೂ ತಲೆ ಬುಡ ಅರ್ಥವಾಗಲಿಲ್ಲ.
ತಲೆಗೆಟ್ಟು ಮನೆಗೆ ಬಂದ ಮಗನನ್ನು ಅಪ್ಪ ಪ್ರೀತಿಯಿಂದ ಬಳಿಗೆ ಕರೆದ. ಬಳಿಕ ಅಂಗಳದ ಕಡೆಗೆ ಕೈ ತೋರಿಸಿ ಹೇಳಿದ ‘‘ನೋಡು, ಇದೇ ಕಮ್ಯುನಿಸಂ’’
ಅಲ್ಲಿ ಕಾಗೆಗಳು ಜೊತೆಯಾಗಿ ಹಂಚಿ ತಿನ್ನುತ್ತಿದ್ದವು.

ಕಳ್ಳರು
ಶ್ರೀಮಂತನ ಮನೆಯ ಕಾಂಪೌಂಡ್‌ಗೆ ಕಳ್ಳರು ನುಗ್ಗಿದರು.
ಆತ ಪೊಲೀಸರನ್ನು ಕರೆದ. ಕೋವಿ ಸಮೇತ ಬಂದ ಪೊಲೀಸರು ಕಳ್ಳರನ್ನು ಗುಂಡಿಟ್ಟುಕೊಂದರು.
ಬಡವನ ಜಮೀನಿಗೆ ಕಳ್ಳರು ನುಗ್ಗಿದರು.
ಪೊಲೀಸರು ಬಂದರು. ತಡೆದ ಬಡವನನ್ನು ಗುಂಡಿಟ್ಟು ಕೊಂದರು.

ವಿಷಯ
‘‘ಹೇ...ವಿಷಯ ಗೊತ್ತಾಯಿತಾ? ಅವತ್ತು ಹಿಂದೂ ಹುಡುಗಿ ಮತ್ತು ಮುಸ್ಲಿಮ್ ಹುಡುಗ ಮದುವೆ ಮಾಡ್ಕೊಂಡು ಓಡಿ ಹೋದ್ರಲ್ಲ...’’
‘‘ಹೌದು...ಏನಾಯಿತು? ಎಂತ ಕಥೆ?’’
‘‘ಅವರಿಗೀಗ ಮುದ್ದಾದ ಇಬ್ಬರು ಮಕ್ಕಳಂತೆ’’

ಬಂಗಾರದ ಮಂಚ

ಶ್ರೀಮಂತನೊಬ್ಬ ವಿದೇಶದಿಂದ ಬಂಗಾರದ ಮಂಚವೊಂದನ್ನು ಮಾಡಿಸಿ ತರಿಸಿದ. ಎಲ್ಲರನ್ನೂ ಕರೆದು ಆ ಮಂಚವನ್ನು ತೋರಿಸಿದ. ಎಲ್ಲರೂ ಬೆಕ್ಕಸ ಬೆರಗಾದರು.
ರಾತ್ರಿ ಆ ಮಂಚದಲ್ಲಿ ಮಲಗಿದ ಶ್ರೀಮಂತನಿಗೆ ನಿದ್ದೆಯೇ ಇಲ್ಲ. ಹೊರಳಾಡಿ ಸುಸ್ತಾಗಿ, ಎದ್ದು ಹೊರ ಬಂದ.
ಅಂಗಳದಲ್ಲಿ ಮಂಚವನ್ನು ಹೊತ್ತು ತಂದ ಕೆಲಸದಾಳು ಗೋಣಿ ರಾಶಿಯ ಮೇಲೆ ಗೊರಕೆ ಹೊಡೆಯುತ್ತಿದ್ದ.

Sunday, November 16, 2014

ಹೊಳೆದದ್ದು ಹೊಳೆದಂತೆ-8

1
ಕುಡಿತ ಮತ್ತು ಸೆಕ್ಸ್ ಗಳನ್ನ ಎಲ್ಲಿಯವರೆಗೆ ಒಂದು ಖಾಸಗಿ ಅನುಭೂತಿಯಾಗಿ ಉಳಿಸಿ ಕೊಳ್ಳುತ್ತೇವೋ ಅಲ್ಲಿಯವರೆಗೆ ಅದು ನಮ್ಮ ಸೃಜನ ಶೀಲತೆಗೆ ಪೂರಕವಾಗಿರುತ್ತದೆ. ಆದರೆ ಹೆಚ್ಚಿನ ಲೇಖಕರು ಇವೆರಡನ್ನೂ ತಮ್ಮ ಅಹಂನ ಭಾಗವಾಗಿಸಿ ಕೊಂಡಿದ್ದಾರೆ
2
ಕವಿಯೊಬ್ಬನ ಆತ್ಮ ಕತೆ ಒಂದು ದೊಡ್ಡ ಆತ್ಮ ವಂಚನೆ. ಕವಿತೆಯಲ್ಲಿ ಮಾತ್ರ ಅವನು ಸತ್ಯ ಹೇಳಬಲ್ಲ
3
ಹತ್ತು ಪುಸ್ತಕಗಳ ಓದು, ನಮಗೆ ಒಂದು ಬರಹವನ್ನು ಬರೆಯುವ ನೈತಿಕತೆಯನ್ನು ತಂದು ಕೊಡುತ್ತದೆ
4
ನಮ್ಮನ್ನು ನಾವು ಹತ್ತು ಬಾರಿ ವಿಮರ್ಶೆಗೆ ಒಳ ಪಡಿಸಿದ ಬಳಿಕವಷ್ಟೇ ನಮ್ಮ ಹೊರಗನ್ನು ಒಂದು ಬಾರಿ ವಿಮರ್ಶೆಗೆ ಒಳ ಪಡಿಸುವ ಹಕ್ಕನ್ನು ಪಡೆದು ಕೊಳ್ಳುತ್ತೇವೆ
5
ಕನ್ನಡಿಗೆ ಅಂಜಿದಷ್ಟೂ ನಮ್ಮ ಕುರೂಪ ಹೆಚ್ಚುತ್ತಾ ಹೋಗುತ್ತದೆ.

Friday, November 14, 2014

ಹೊಳೆದದ್ದು ಹೊಳೆದಂತೆ-7

 1
ದೇವರಿಗೆ ತಕ್ಕವನಾಗಿ  ಬದುಕೋದಕ್ಕೆ ನಿಮಗೆ ಸಾಧ್ಯವಿಲ್ಲವೆಂದರೆ, ದೇವರನ್ನೇ ನಿಮಗೆ ತಕ್ಕವನಾಗಿ ಬದಲಿಸೋದು ಸುಲಭ ಉಪಾಯ
2
ಅದೆಂಥಹ ಕಠೋರ  ಕಮ್ಯುನಿಸ್ಟನ  ಮನೆಯಾದರೂ ಸರಿ. ಕಿಟಕಿ, ಬಾಗಿಲು ತೆರೆದಿಡದಿದ್ದರೆ ನಿಧಾನಕ್ಕೆ ಮನೆ ತುಂಬಾ ಜೇಡ, ಹಳ್ಳಿ, ಚೇಳು ವಾಸ ಮಾಡಲಾರಂಭಿಸುತ್ತವೆ.
3
ಕಳ್ಳರಿಗೆ  ಅಂಜಿ ಮುಂಬಾಗಿಲನ್ನು ಮುಚ್ಚಿದರೆ, ಕೆಲವೊಮ್ಮೆ ಮುಚ್ಚಿದ ಬಾಗಿಲು ನೋಡಿ ನಮ್ಮವರೇ ಮರಳಿ ಹೋಗುವ ಸಾಧ್ಯತೆ ಇದೆ. ಕಳ್ಳ ಹಿಂಬಾಗಿಲಿಂದ ಬಂದು ದೋಚಿ ಹೋಗುವ ಸಾಧ್ಯತೆಯೂ ಇದೆ. 

4
ದೇವರು ನಿರಾಕಾರನಾಗಿರುವ ಸಮಸ್ಯೆ, ಮತ್ತು ಲಾಭ ಏನು ಎಂದರೆ ನಮಗೆ ಬೇಕಾದ ಆಕಾರವನ್ನು ಅವನಿಗೆ ನೀಡಬಹುದು.

Wednesday, November 12, 2014

ಇಂತಿ ನಮಸ್ಕಾರಗಳು: ಅವರ ತಲೆ-ಇವರ ದೇಹಗಳ ನಡುವೆ

 ‘ಇಂತಿ ನಮಸ್ಕಾರಗಳು’ ಕನ್ನಡದ ಖ್ಯಾತ ಲೇಖಕ ನಟರಾಜ್ ಹುಳಿಯಾರ್ ಅವರು ಬರೆದಿರುವ ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಕುರಿತ ಸೃಜನಶೀಲ ಕಥಾನಕ. ಪಿ. ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಅವರು ಕನ್ನಡ ಸಾಹಿತ್ಯ ಕಂಡ ಎರಡು ವಿಸ್ಮಯಗಳು. ಈ ಎರಡೂ ಲೇಖಕರು ಒಬ್ಬರ ಜೊತೆ ಇನ್ನೊಬ್ಬರು ಇದ್ದೂ ಇಲ್ಲದಂತೆ ಬದುಕಿದರು. ಪರಸ್ಪರರಿಗೆ ಹೆದರಿಕೊಂಡು, ಪರಸ್ಪರ ಹೆಮ್ಮೆಪಟ್ಟುಕೊಂಡು, ಪರಸ್ಪರ ವಿಮರ್ಶೆಗೊಳಪಡಿಸಿಕೊಳ್ಳುತ್ತಾ ಸಮಕಾಲೀನರಾಗಿ ಬದುಕಿದವರು ಡಿ. ಆರ್. ನಾಗರಾಜ್ ಮತ್ತು ಲಂಕೇಶ್. ಒಂದು ರೀತಿಯಲ್ಲಿ ಲಂಕೇಶ್ ಅವರು ನಾಗರಾಜ್ ಜೊತೆಗೆ ಅಂತರ ಕಾಯುತ್ತಾ ಬರೆದರು. ಹಾಗೆಯೇ ನಾಗರಾಜ್ ಕೂಡ ಲಂಕೇಶ್ ಜೊತೆಗೆ ಒಂದು ಅಂತರವನ್ನು ಕೊನೆಯವರೆಗೂ ಉಳಿಸಿಕೊಂಡರು. ಹೀಗಿದ್ದರೂ ಅವರು ಪರಸ್ಪರ ದೂರವಾಗಲು ಯಾವತ್ತೂ ಇಷ್ಟಪಡಲಿಲ್ಲ.

ಈ ಎರಡು ದಿಗ್ಗಜರ ಜೊತೆಗೆ ಒಬ್ಬ ಸೃಜನಶೀಲ ಯುವ ಬರಹಗಾರ ಸಿಕ್ಕಿ ಹಾಕಿಕೊಂಡರೆ ಆತ ತನ್ನ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುವುದಕ್ಕಿಂತ ಮುದುಡಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆದರೆ ನಟರಾಜ್ ಹುಳಿಯಾರ್ ಅದಕ್ಕೆ ಅವಕಾಶ ಕೊಡದೆ, ಈ ಎರಡು ದೈತ್ಯ ಪ್ರತಿಭೆಗಳ ಜೊತೆಗೆ ತನ್ನತನವನ್ನು ಉಳಿಸಿಕೊಳ್ಳಲು ಏಗಾಡಿದವರು. ಈ ಎರಡೂ ಮೇಷ್ಟ್ರುಗಳು ತಮ್ಮನ್ನು ಆಹುತಿ ತೆಗೆದುಕೊಳ್ಳದ ಹಾಗೆ ಕೊನೆಯವರೆಗೂ ಜಾಗರೂಕತೆಯಿಂದ ತನ್ನ ಸೃಜನಶೀಲ ಚಟುವಟಿಕೆಗಳಿಗೆ ಪೂರಕವಾಗಿ ಆ ಬೆಂಕಿಯ ಕಾವನ್ನು ತಮ್ಮದಾಗಿಸುತ್ತಾ  ಬಂದವರು. ಒಂದೆಡೆ ನಾಗರಾಜ್ ಅವರ ಮೆದುಳು ಮತ್ತು ಲಂಕೇಶ್ ಅವರ ದೇಹ ಎರಡನ್ನೂ ತನ್ನದಾಗಿಸಿಕೊಳ್ಳುವ ಹಪಹಪಿಕೆ ಅವರ ಬಹುತೇಕ ಬರಹಗಳಲ್ಲಿ ಕಾಣುತ್ತದೆ. ‘ಗಾಳಿ-ಬೆಳಕು’ ಅಂಕಣವನ್ನು ನಟರಾಜ್ ಅವರು ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಇತ್ತೀಚೆಗೆ ಅದು ಸಂಕಲನವಾಗಿ ಹೊರಬಂದಿದೆ. ಅಲ್ಲಿನ ಬರಹಗಳಲ್ಲಿ ಇಬ್ಬರೂ ಮೇಧಾವಿಗಳ ಪ್ರಭಾವ, ಪರಿಣಾಮಗಳು ಎದ್ದು ಕಾಣುತ್ತವೆ. ಹಾಗೆಯೇ ಅದರಿಂದ ಕಳಚಿಕೊಳ್ಳುವ ಹವಣಿಕೆ ಕೂಡ. ಗಿರೀಶ್ ಕಾರ್ನಾಡರ ಹಯವದನ ನಾಟಕದಲ್ಲಿ ಪದ್ಮಿನಿ ಎನ್ನುವ ಕಥಾನಾಯಕಿ ಕಪಿಲನ ದೇಹ ಮತ್ತು ದೇವದತ್ತನ ತಲೆ ಎರಡನ್ನೂ ತನ್ನದಾಗಿಸಿಕೊಂಡು ಪೂರ್ಣತೆಯನ್ನು ಪಡೆಯುವ ವಿಫಲ ಹೋರಾಟದಂತೆಯೇ ಇದು. ಈ ಹೋರಾಟದಲ್ಲೇ ಅವರ ಬರಹಗಳು ತನ್ನತನವನ್ನು ಕಂಡುಕೊಳ್ಳುತ್ತವೆ.


 ಮೇಲಿನೆಲ್ಲ ಕಾರಣಗಳಿಂದ ನಟರಾಜ್ ಹುಳಿಯಾರ್ ಅವರು ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಅವರನ್ನು ಹೇಗೆ ನೋಡುತ್ತಾರೆ ಎನ್ನುವುದು ಹೆಚ್ಚು ಕುತೂಹಲವನ್ನು ಹುಟ್ಟಿಸುತ್ತದೆ. ಎರಡು ಬೆಂಕಿಯ ಕುಲುಮೆಯ ನಡುವೆ ತನ್ನನ್ನು ತಾನು ಸುಟ್ಟು ಹೋಗದಂತೆ ಕಾಪಾಡಿಕೊಳ್ಳುತ್ತ ಅವರ ಕಾವನ್ನು ತನ್ನದಾಗಿಸಿಕೊಂಡ ನಟರಾಜ್ ಕಥಾನಕ ನಿಜಕ್ಕೂ ಎಲ್ಲ ಸೃಜನಶೀಲ ಬರಹಗಾರರಿಗೂ ಒಂದು ಕೈ ದೀವಿಗೆಯಾಗಬಹುದು. ನಾಗರಾಜ್ ಮತ್ತು ಲಂಕೇಶ್ ಬರಹಗಳಿಗೆ ಒಂದು ಒಳ್ಳೆಯ ಪ್ರವೇಶವಾಗಿಯೂ ಈ ಕತಿಯನ್ನು ನಾವು ಸ್ವೀಕರಿಸಬಹುದು. ಲಂಕೇಶ್ ಮತ್ತು ನಾಗರಾಜ್ ಎಂಬ ಎರಡು ಮಾರ್ಗಗಳು ಸೇರುವ ಕೊಂಡಿಗಳನ್ನು ಗುರುತಿಸುತ್ತಲೇ ಅದು ಪ್ರಜ್ಞೆಗೆ ಮಾತ್ರ ಸೀಮಿತವಾಗಿದೆ ಎನ್ನುವೂದನ್ನೂ ನಟರಾಜ್ ಉಲ್ಲೇಖಿಸುತ್ತಾರೆ. ಬಹುಶಃ ನಟರಾಜ್ ಅಂತಹ ಒಂದು ಪ್ರಮುಖ ಕೊಂಡಿಯಾಗಿಯೂ ನಮಗಿಲ್ಲಿ ಭಾಸವಾಗುತ್ತಾರೆ.

 ಈ ಕೃತಿಯಲ್ಲಿ ಸುಮಾರು 11 ಅಧ್ಯಾಯಗಳನ್ನು ಲಂಕೇಶರಿಗೂ, 13 ಅಧ್ಯಾಯಗಳನ್ನು ಡಿ. ಆರ್. ನಾಗರಾಜರಿಗೂ ಮೀಸಲಿಟ್ಟಿದ್ದಾರೆ ಹುಳಿಯಾರ್. ಲಂಕೇಶರ ಕೃತಿಗಳನ್ನು ಪರಿಚಯಿಸುತ್ತಲೇ ಅದರೊಳಗಿನ ಪಾತ್ರಗಳ ಮೂಲಕ ಲಂಕೇಶರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ವಸಾಹತು ಶಾಹಿಯನ್ನು ಹಾಗೂ ದೇಶೀ ಲೋಕಗಳನ್ನು ಗ್ರಹಿಸುವ ಆಳವಾದ ಬೌದ್ಧಿಕ ಚಿಂತನೆಯನ್ನು ಬೆಳೆಸಿದ ಡಿ. ಆರ್. ನಾಗರಾಜ್ ಎನ್ನುವ ಗುರುವಿನ ಕುರಿತಂತೆ ಬರೆಯುವಾಗಲೂ ಅವರು, ಒಂದು ಅಂತರವನ್ನು ಇಟ್ಟುಕೊಂಡೇ ಬರೆಯುತ್ತಾರೆ. ಎಲ್ಲೂ ಭಾವನಾತ್ಮಕವಾಗಿ ಕೊಚ್ಚಿ ಹೋಗದೆ ಅಥವಾ ತನ್ನನ್ನು ಉಳಿಸಿಕೊಳ್ಳುವ ಭರದಲ್ಲಿ ಬರಹಗಳನ್ನು ಬರೇ ವರದಿಯಾಗಿಯೂ ಉಳಿಸಿಕೊಳ್ಳದೇ ಹೊಸ ಕಥನ ಶೈಲಿಯ ಮೂಲಕ ಲಂಕೇಶ್ ಮತ್ತು ಡಿ. ಆರ್. ನಾಗರಾಜ್ ಅವರನ್ನು ಪರಿಚಯಿಸುತ್ತಾರೆ. ನಟರಾಜ್ ಅವರೇ ಹೇಳುವ ರೀತಿಯಲ್ಲಿ ಈ ಕೃತಿ ವಿವಿಧ ಪ್ರಕಾರಗಳು ಬೆರೆತ ಆಧುನಿಕೋತ್ತರ ಸಾಂಸ್ಕೃತಿಕ ಕಾದಂಬರಿಯೂ ಹೌದು. ಲಂಕೇಶ್ ಮತ್ತು ನಾಗರಾಜ್ ಅವರ ಕುರಿತಂತೆ ಹೊಸ ಓದಿಗೆ ನಿಮ್ಮನ್ನು ಈ ಕತಿ ಎಳೆಯುತ್ತದೆ. ಅದುವೇ ಈ ಕೃತಿಯ ಹೆಚ್ಚುಗಾರಿಕೆ. ಪಲ್ಲವ ಪ್ರಕಾಶನ ಹೊರತಂದಿರುವ ಈ ಪುಸ್ತಕದ  ಮುಖಬೆಲೆ 180 ರೂ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ-94803 53507

ಅಶಾಂತಿ ಪರ್ವ

ಅತ್ಯಾಚಾರ ಸುದ್ದಿಗಳು ಭಾರತದ ನೈತಿಕ ಬುಡವನ್ನೇ ಅಲುಗಾಡಿಸುತ್ತಿರುವ ಇಂದಿನ ಸಂದರ್ಭಕ್ಕೆ ಅನ್ವಯವಾಗುವ ಕವಿತೆ ದಿವಂಗತ ಬಿ. ಎಂ. ರಶೀದ್ ಬರೆದಿರುವ ‘ಅಶಾಂತಿ ಪರ್ವ’. ಅತ್ಯಾಚಾರವೆನ್ನುವುದು ಇಲ್ಲಿ ರಾಜಕೀಯ ರೂಪವನ್ನೂ ಪಡೆಯುತ್ತದೆ. ಶತಶತಮಾನಗಳಿಂದ ಹೇಗೆ ಭಾರತ ಬೇರೇ ಬೇರೆ ಶಕ್ತಿಗಳಿಂದ ದೌರ್ಜನ್ಯಕ್ಕೊಳಗಾಗುತ್ತಾ ಬಂತು ಮತ್ತು ಈಗ ತನ್ನವರಿಂದಲೇ ಹೇಗೆ ಶೋಷಣೆಗೀಡಾಗುತ್ತಿದೆ ಎನ್ನುವುದನ್ನು ತಿಳಿಸುವ ಪದ್ಯ ಇದು. ಬಿ. ಎಂ. ರಶೀದ್ ಅವರ ಪ್ರಪ್ರಥಮ ಪ್ರಕಟಿತ ಕವಿತೆ ಇದು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬರೆದಿರುವುದು. ಮಣಿಪಾಲ ಸಾಹಿತ್ಯ  ಸಂಘಟನೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಡಾ. ಟಿ. ಎಂ. ಎ. ಪೈ ಸ್ಮಾರಕ ಕನ್ನಡ ಆಶುಕವಿತಾ ರಚನೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವನ. ಆಗ ಕವಿ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಈ ಕವಿತೆ ಮುಂದೆ ತರಂಗ ವಾರಪತ್ರಿಕೆಯಲ್ಲಿ 1992ರಲ್ಲಿ ಪ್ರಕಟವಾಯಿತು. ಈ ಕವನವನ್ನು ದಿ. ಬಿ. ಎಂ. ರಶೀದ್ ಅವರ ಸಮಗ್ರ ಬರಹಗಳ ಸಂಕಲನ ‘ಪರುಷಮಣಿ’ ಸಂಕಲನದಿಂದ ಆರಿಸಲಾಗಿದೆ.


ಅಶಾಂತಿ ಪರ್ವ
1
ಅಂದು ನೀನು ಹರೆಯದ ಬಾಲೆ
ಸಮೃದ್ಧ ದೇಹದ ಲಲನೆ
ನಿನ್ನ ಕೈ ಕಾಲು ಬಿಗಿದು; ಮೈ ಬರಿದು-
ಮಾಡಿದರು ಅತ್ಯಾಚಾರ...
ಬಿಳಿಯ-ಕರಿಯ
ದಿವಾನ-ಜವಾನ
ಹಗಲೂ-ರಾತ್ರಿ ಎನ್ನದೇ...
ನಿನ್ನ ಉಬ್ಬು-ತಗ್ಗು, ಏರಿಳಿತಗಳಲ್ಲಿ
ಕೈಯಿಳಿಸಿ, ಧ್ವಜವ ನೆಟ್ಟರು ಕಿತ್ತಾಡಿ
ಬಾಯಿಯಿಲ್ಲದ ಕೋಟಿಯಲ್ಲಿ ಯಾರೋ
ಕೆಲವು ಮಕ್ಕಳು ನಿನ್ನ ಬಾಯಾದರು

2
ಕಳಚಿ ಬಿತ್ತು ನಿನ್ನ ಸುತ್ತಿದ ಸಂಕಲೆ
ನರ ಸತ್ತವರಿಗಾಗ ಬಂತು ಉಸಿರು
ಉದ್ಘೋಷಿಸಿದರು ನಿನ್ನ ಹೆಸರು ಮೇಲೆ
ನಿನ್ನ ಬಾಯಾದವರು ಹುಡುಕಿದರೆ ತೆಪ್ಪಗೆ ಮೂಲೆ
ನೀನು ಪೊರೆವ ತೊಟ್ಟಿಲಾದವಳು; ಮೆರೆವ ಮಡಿಲಾದವಳು
ಬೆದೆಗೆ ಬಂದ ನಿನ್ನ ಹೈಕಳೋ ‘ಈಡಿಪಸ್’ಗಳಾದರು
ಸರಿ ರಾತ್ರಿಯಲಿ ನಿನ್ನ ಉಡಿಗೆ ಕೈಯಿಕ್ಕಿದರು
ಹಾರಿದರು; ಏರಿದರು; ಊರಿದರು
ಬರಿ ಬರಿದು ಮಾಡಿ ತೋಡಿದರು
ಖಾದಿ-ಗಾದಿಗಾಗಿ ನಿನ್ನ ಅಡವಿಟ್ಟು ಮಾರಿದರು

3
ಈಗೆಲ್ಲಿ ನಿನ್ನೊಳಗಿನ ಲಾಲಿತ್ಯದ ಬಾಲೆ...?
ನೀನೋ ಈಗ ಮೂರು ಕಾಸಿಗೂ ಬೇಡದ
ಬಡಕಲು ಮೈಯ ಸೂಳೆ!
ಬಹು ಪರಾಕು; ಭಟ್ಟಂಗಿತನದ ‘ಬ್ರಾ’ದೊಳಗಿರುವ
ನಿನ್ನ ಬತ್ತಿ ಬರಡಾದ ಮೊಲೆಗಾಗಿ
ಹಂಬಲಿಸಿ ಬರುವ ಹೈಕಳಿಗೆ ಏನನ್ನಿಡುವೆ ನಾಳೆ...?

4
ನಿನ್ನ ತಲೆ ಕಾಶ್ಮೀರ,
ಹೃದಯ ಪಂಜಾಬ
ಭುಜದಲ್ಲೊಂದು ಅಯೋಧ್ಯೆ,
ಕಾಲ ಬುಡದಲ್ಲೊಂದು ಲಂಕೆ
ಮೈಯ ನರನರಗಳಲ್ಲೂ ಕುಲುಮೆ ಬೆಂಕಿ
ಮುಖದ ಸುಕ್ಕುಗಳಲ್ಲಿ ಹೃದಯದ ಬಿಕ್ಕು
ತನ್ನೊಡನೆ ಗರ್ಭದಲ್ಲಿ
ಜೀವ ಸೆಲೆಯೊರತೆಯ ಕೊರತೆಗೆ
ಸುಟ್ಟು ಕರಕಲಾದ ರಾಷ್ಟ್ರಪಿತನ ಕನಸಿನ ಬೀಜಗಳು
ಮತ್ತೆ ಚಿಗುರೀತೆ... ? ಚಿಗಿತು ಅರಳೀತೇ... ?

Tuesday, November 11, 2014

ಮಲಾಲಾ ಆತ್ಮಕತೆ: ಅರ್ಧಸತ್ಯ

" ಐ ಆ್ಯಮ್ ಮಲಾಲ’’ ಕೃತಿ ಮಲಾಲಾ ಯೂಸುಫ್ ಝಾಯಿಯ ಆತ್ಮಕತೆ. 2014ರ ನೊಬೆಲ್ ಶಾಂತಿ ಪುರಸ್ಕೃತ ಬಾಲಕಿ, ಇಂದು ಹಲವು ಅಂತಾರಾಷ್ಟ್ರೀಯ ಕಾರಣಗಳಿಗಾಗಿ ಜಗತ್ತಿನಾದ್ಯಂತ ಸುದ್ದಿಯಾಗಿದ್ದಾರೆ.ತಾಲಿಬಾನ್ ಮತ್ತು ಮುಸ್ಲಿಮ್ ಮೂಲಭೂತವಾದದ ವಿರುದ್ಧಸೆಡ್ಡು ಹೊಡೆದ ಬಾಲಕಿಯಾಗಿ ಪಶ್ಚಿಮ ದೇಶಗಳು ಈಕೆಯನ್ನು ಗೌರವಿಸುತ್ತಿದೆ. ಇದೇ ಸಂದರ್ಭದಲ್ಲಿ ಪಶ್ಚಿಮ ದೇಶದ ಸೋಗಲಾಡಿತನ ಮತ್ತು ದ್ವಂದ್ವಗಳ ಸೃಷ್ಟಿಯಾಗಿಯೂ ಮಲಾಲಾ ಗುರುತಿಸಲ್ಪಡುತ್ತಿದ್ದಾಳೆ. ಭಯೋತ್ಪಾದನೆಯ ವಿರುದ್ಧದ ತನ್ನ ಹೋರಾಟಕ್ಕೆಮಲಾಲ ಎನ್ನುವ ಹೆಣ್ಣು ಮಗಳನ್ನು ಪಶ್ಚಿಮ ದೇಶಗಳುಗುರಾಣಿಯಾಗಿಸಿಕೊಳ್ಳುತ್ತಿದೆ ಎನ್ನುವುದು ಒಂದುಟೀಕೆ.ಇದೇಸಂದರ್ಭದಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಂತಹ ದೇಶಗಳಲ್ಲಿ ಮಹಿಳೆಯಶೋಷಣೆಯ ವಿರುದ್ಧ ಹುಟ್ಟಿಕೊಂಡ ಧ್ವನಿಯಾಗಿಯೂ ಮಲಾಲಾ ನಮ್ಮ ನಡುವೆ ಗುರುತಿಸಲ್ಪಡುತ್ತಾಳೆ. ಪಶ್ಚಿಮ ದೇಶಗಳು ಕಟ್ಟಿಕೊಡುತ್ತಿರುವ ಮಲಾಲಾ ಆಚೆಗೂ ಆಕೆಯಿಂದ ಈ ಜಗತ್ತು ಪಡೆದುಕೊಳ್ಳುವಂತಹದ್ದು ದೊಡ್ಡದಿದೆ. ಆದುದರಿಂದ, ಈ ಬಾಲಕಿಯ ಧ್ವನಿ ಯಾವ ರೀತಿಯಲ್ಲೂ ತಿರಸ್ಕಾರಕ್ಕೆಒಳಗಾಗುವಂತಹದ್ದಲ್ಲ.ಈ ಸಂದರ್ಭದಲ್ಲೇ ಮಲಾಲಾ ಆತ್ಮಕತೆ ಸುದ್ದಿಯಾಗತೊಡಗಿತು. ಈ ಕೃತಿ ಕೆಲವು ಕಾರಣಗಳಿಂದ ಮುಖ್ಯವಾಗುತ್ತದೆ. ಇದೇ ಸಂದರ್ಭದಲ್ಲಿ ಒಂದು ಆತ್ಮಕತೆಯಾಗಿ ಇದನ್ನು ಓದುವಾಗ ಹಲವು ಸಂಶಯಗಳನ್ನೂ ಹುಟ್ಟಿಸುತ್ತದೆ. ಇದು ಮಲಾಲಾ ಆತ್ಮಕತೆಯಾಗಿದ್ದರೂ ಅದನ್ನು ನಿರೂಪಿಸಿರುವುದು ಕ್ರಿಸ್ಟಿನಾಲ್ಯಾಂಬ್ ಎನ್ನುವ ಪಶ್ಚಿಮ ದೇಶದ ಪತ್ರಕರ್ತೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ವಿದೇಶಿ ವರದಿಗಾರ್ತಿಯಾಗಿ ಕೆಲಸಮಾಡಿರುವವರು ಲ್ಯಾಂಬ್. ಇದೊಂದು ಬೃಹತ್ ಕೃತಿ.ಇದು ಕೇವಲ ಮಲಾಲಾ ಆತ್ಮಕತೆಯಲ್ಲ.ಬದಲಿಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹೆಣ್ಣುಮಕ್ಕಳಶೋಚನೀಯ ಸ್ಥಿತಿಗಳ ಕುರಿತಂತೆಯೂ ಕೃತಿ ಪ್ರೌಢವಾಗಿ ಮಾತನಾಡುತ್ತದೆ. ಅಲ್ಲಿಯ ರಾಜಕೀಯ ಬದಲಾವಣೆಗಳ ಬಗ್ಗೆ ಚರ್ಚಿಸುತ್ತದೆ. ಆದುದರಿಂದ ಲ್ಯಾಂಬ್ ಅವರು ಮಲಾಲಾಮಾತುಗಳನ್ನು ಕೇವಲ ನಿರೂಪಿಸಿದ್ದಾರಷ್ಟೇ ಎಂದು ನಂಬುವಂತೆ ಈ ಕೃತಿ ಇಲ್ಲ. ತನ್ನ ಮಾತುಗಳನ್ನು ಕ್ರಿಸ್ಟಿನಾಲ್ಯಾಂಬ್ ಮಲಾಲಾ ಬಾಯಿಯಲ್ಲಿ ಆಡಿಸಿದ್ದಾಳೆಯೋ ಎಂಬ ಅತೃಪ್ತಿ ಪುಟಪುಟಗಳಲ್ಲೂ ನಮಗೆ ಕಾಣಿಸುತ್ತದೆ. ಏಷ್ಯಾದ ರಾಜಕೀಯ ಮಗ್ಗುಲುಗಳನ್ನು ಪಶ್ಚಿಮ ದೇಶದ ಕಣ್ಣಿನಲ್ಲಿ ನೋಡಲಾಗಿರುವ ಕೃತಿ ಇದಾಗಿರಬಹುದೇ ಎಂಬ ಅನುಮಾನ ನಮ್ಮನ್ನು ಕಾಡುತ್ತದೆ. ಆದುದರಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ದುಃಸ್ಥಿತಿಗೆ ಕಾರಣವಾದ ಪಶ್ಚಿಮ ದೇಶಗಳ ಆಷಾಢಭೂತಿತನ ಇಲ್ಲಿ ಕಾಣ ಸಿಗುವುದಿಲ್ಲ. ತಾಲಿಬಾನ್‌ಗಳ ಕ್ರೌರ್ಯದ ಕುರಿತಂತೆ ಮಾತನಾಡುವ ಮಲಾಲ ಕೃತಿ, ತಾಲಿಬಾನ್ ಹುಟ್ಟಿಗೆ ಕಾರಣವಾಗಿರುವ ಅಮೆರಿಕದಂತಹ ದೇಶಗಳಸಂಚುಗಳ ಕುರಿತಂತೆ ಮೌನವಾಗುತ್ತದೆ. ಆದುದರಿಂದ ಒಂದು ದೊಡ್ಡ  ಕೃತಿಯಾಗಿಯೂ ಇದು ಪಾಕಿಸ್ತಾನ, ಅಫ್ಘಾನಿಸ್ತಾನದ ವಾಸ್ತವಗಳ ಆಳಕ್ಕಿಳಿಯದೆ ಮೇಲಿಂದ ಮೇಲೆ ನಿರೂಪಿತವಾಗುತ್ತಾ ಹೋಗುತ್ತದೆ. 
ಇಡೀ ಕೃತಿ ರೋಚಕವಾಗಿದೆ. ನಿರೂಪಣೆ ಅಷ್ಟೇ ನಾಟಕೀಯವೂ ಆಗಿದೆ. ಮಲಾಲಾಳ ಮುಗ್ಧತೆ ಇಲ್ಲಿ ಕಾಣುವುದಿಲ್ಲ. ಪ್ರಬುದ್ಧ ಪತ್ರಕರ್ತೆಯ ಧ್ವನಿ ಆತ್ಮಕತೆಯಲ್ಲಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ರಾಜಕೀಯ ಹೇಗೆ ಅಲ್ಲಿನ ಶಿಕ್ಷಣ ಮತ್ತು ಮಹಿಳೆಯ ಮೇಲೆ ಪ್ರಭಾವ ಬೀರಿತು, ತಾಲಿಬಾನಿಗಳು ಹೇಗೆ ಸಂಗೀತದ ತುಟಿಯನ್ನು ಹೊಲಿದರು ಎನ್ನುವುದನ್ನು ಕೃತಿ ಹೇಳುತ್ತದೆ. ಪಾಕಿಸ್ತಾನದ ಆಡಳಿತದ ಇತಿಹಾಸವನ್ನು ಮುಟ್ಟುತ್ತಾ, ಹೇಗೆ ಅಲ್ಲಿ ಮೂಲಭೂತವಾದ ಹಂತಹಂತವಾಗಿ ತನ್ನ ಕಬಂಧ ಬಾಹುವನ್ನು ಚಾಚಿತು ಎನ್ನುವುದನ್ನು ಹೇಳುತ್ತದೆ. ಹಲವು ವಾಸ್ತವಗಳನ್ನು ಮುಟ್ಟೂದಕ್ಕೆ, ವಿಪರ್ಯಾಸಗಳ ತೊಡಕುಗಳನ್ನು ಮುಟ್ಟಲು ಈ ಕೃತಿಗೆ  ಯಾಕೆ ಸಾಧ್ಯವಾಗಲಿಲ್ಲ ಎಂದರೆ ಇದನ್ನು ಮಲಾಲಾ ಮತ್ತು ಲ್ಯಾಂಬ್ ಜೊತೆಗೂಡಿ ಬರೆದಿದ್ದಾರೆ. ಅಥವಾ ಮಲಾಲಾಳನ್ನು ನೆಪವಾಗಿಟ್ಟುಕೊಂಡು ಲ್ಯಾಂಬ್ ನಿರೂಪಿಸಿದ ಕತೆಯಿದು.ಪಶ್ಚಿಮದ ಪತ್ರಕರ್ತೆ ತನ್ನ ಕಣ್ಣಿನ ಮೂಲಕಕಂಡ ಪಾಕಿಸ್ತಾನ, ಅಫ್ಘಾನಿಸ್ತಾನದ ಚರಿತ್ರೆಯನ್ನು ಮಲಾಲ ಮೂಲಕ ನಿರೋಪಿಸಿದ್ದಾರೆ. .ಈ ಎಲ್ಲ ಮಿತಿಗಳನ್ನು ಅರಿತು ಈ ಕೃತಿಯನ್ನು ಓದಿದರೆ ಹೆಣ್ಣಿನ ಶೋಷಣೆಯ ಹಿಂದಿರುವ ರಾಜಕೀಯದ ಒಂದು ಮುಖವನ್ನು ನಾವು ನಮ್ಮದಾಗಿಸಿಕೊಳ್ಳುವಲ್ಲಿ ಸಂಶಯವಿಲ್ಲ.
ಇದನ್ನು ಕನ್ನಡಕ್ಕಿಳಿಸಿದ ಬಿ.ಎಸ್. ಜಯಪ್ರಕಾಶ್ ನಾರಾಯಣ ಅವರ ಪ್ರಯತ್ನವನ್ನು ನಾವುಮೆಚ್ಚಬೇಕಾಗಿದೆ. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆಇಂತಹ ಆತ್ಮಕತೆಗಳನ್ನು ಇಳಿಸುವುದು ಸುಲಭವಲ್ಲ.ಇಂತಹ ಸಂದರ್ಭದಲ್ಲಿ ತನ್ನ ಸರಳಗನ್ನಡದಲ್ಲಿ ಮಲಾಲಾ ಕತೆಯ ರೋಚಕತೆ ಸಡಿಲವಾಗದಂತೆ ಜೋಪಾನವಾಗಿ ಅನುವಾದಿಸಿದ್ದಾರೆ. ಕನ್ನಡಕ್ಕೆ ಬಂದ ಒಂದು ಅಪರೂಪದಇಂಗ್ಲಿಷ್ ಅನುವಾದಇದು ಎನ್ನುವುದರಲ್ಲಿ ಎರಡು ಮಾತಿಲ್ಲ.
***
ಆಕೃತಿ ಪುಸ್ತಕ ಬೆಂಗಳೂರು ಈ ಅನುವಾದಿತ ಕೃತಿಯನ್ನು ಹೊರತಂದಿದೆ. ಕೃತಿಯ ಮುಖ ಬೆಲೆರೂ. 250/- ಕೃತಿಗಾಗಿ  080-2340 9479
ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸಬಹುದು. 


ಹೊಳೆದದ್ದು ಹೊಳೆದಂತೆ-6

 1
ವಿಚಾರ ಮತ್ತು ವಿಜ್ಞಾನ ಹೃದಯ ಶೂನ್ಯವಾದರೆ ಮನುಷ್ಯನ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ.
2
ಮನುಷ್ಯ ಗಡಿಯಾರವನ್ನಷ್ಟೇ ಸೃಷ್ಟಿಸಿದ. ಆದರೆ ಸಮಯವನ್ನು ಸೃಷ್ಟಿಸಿದವನಂತೆ ವರ್ತಿಸುತ್ತಾನೆ.
3
"ಗಂಡು-ಹೆಣ್ಣು ಸಮಾನರು'' ಈ ಸವಕಲು ಹೇಳಿಕೆಯನ್ನು ಹುಟ್ಟು ಹಾಕಿದಾತನೆ ಗಂಡು.  ಆತನ ಕೀಳರಿಮೆ, ಆತಂಕ ಹುಟ್ಟು ಹಾಕಿದ ಪದ ಇದು. ಗಂಡು ಹೆಣ್ಣು ಸಮಾನರಾಗಲಾರರು. ಗಂಡು ಯಾವತ್ತೂ ಹೆಣ್ಣಿಗೆ ಸಾಟಿಯಾಗಲಾರ. ತನ್ನ ರೆಟ್ಟೆಯ ಬಲವೊಂದನ್ನಷ್ಟೇ ನೆಚ್ಚಿಕೊಂಡು ಹೆಣ್ಣಿಗೆ ಸಮನಾಗಲು ತುಡಿಯುವ ಗಂಡು ದೊಡ್ಡ ಆತ್ಮ ವಂಚಕ

Saturday, November 8, 2014

ಮುಂಬೈಯ ಬದುಕು-ಮರೆತೇನೆಂದರೆ ಮರೆಯಲಿ ಹ್ಯಾಂಗ...

ನನ್ನ ಬಿ ಎ ಮುಗಿದಾಕ್ಷಣ ನಾನು ಊರಿಂದ ಮುಂಬೈಗೆ ಪಲಾಯನ ಮಾಡಿದೆ. ಮುಂಬೈ ಕನ್ನಡ ನನ್ನನ್ನು ಮನೆ ಮಗನಂತೆ ಪ್ರೀತಿಯಿಂದ ಸ್ವೀಕರಿಸಿತು.(ಈ ಕುರಿತ ಹಲವು ವಿವರಗಳನ್ನು ಹಿಂದೆ ಹಲವು ಬಾರಿ ಗುಜರಿ ಅಂಗಡಿಯಲ್ಲಿ ಬರೆದಿದ್ದೆ). ಕರ್ನಾಟಕ ಮಲ್ಲ ಕನ್ನಡ ದೈನಿಕದಲ್ಲಿ ಕೆಲಸ ಮಾಡುತ್ತಲೇ ಮುಂಬೈ ವಿ ವಿ ಯಲ್ಲಿ ಚಿನ್ನದ ಪದಕದ ಜೊತೆಗೆ ಕನ್ನಡ ಎಂ ಎ ಮುಗಿಸಿದೆ. ನೂರಾರು ಕನ್ನಡ ಮನಸ್ಸಿನ ಆತ್ಮೀಯ ಗೆಳೆಯರನ್ನು ಪಡೆದೆ. ಚಿತ್ತಾಲ, ವ್ಯಾಸ ರಾಯ ಬಲ್ಲಾಳ, ಬಿ ಎ ಸನದಿ, ರವಿ ರಾ ಅಂಚನ್, ಬನ್ನಂಜೆ ಬಾಬು ಆಮೀನ್, ಸುನೀತಕ್ಕ, ಜಯಂತ್ ಕಾಯ್ಕಿಣಿ  ಮೊದಲಾದ ಹಿರಿ ಮರಗಳ ನೆರಳನ್ನು ಪಡೆದೆ.  ನಾನು ಹುಟ್ಟಿದ್ದೇ ಮುಂಬೈಯಲ್ಲಿ ಎಂಬಂತೆ ಸುಮಾರು ಐದು ವರ್ಷಗಳನ್ನು ಅಲ್ಲಿ ಬದುಕಿದೆ.  ಅಲ್ಲಿಂದ ಮರಳಿದ ಬಳಿಕವೂ ಮುಂಬೈಯನ್ನು ಮರೆಯಲು ನನ್ನಿಂದ ಸಾಧ್ಯವಾಗಿಲ್ಲ. ಅದು ನನಗೆ ಆಶ್ರಯ, ಅನ್ನವನ್ನು ಕೊಟ್ಟ ನೆಲ. ನನ್ನ ಸಾಹಿತ್ಯಾಸಕ್ತಿಯ ಬುಡಕ್ಕೆ ನೀರೆರೆದ ಗೆಳೆಯರನ್ನು ಮರೆಯೋದು ಹೇಗೆ ಸಾಧ್ಯ? ಬಹುಶ ಮುಂಬೈ ಬದುಕು ನನ್ನ ಪಾಲಿನ ಒಂದು ಜನ್ಮವೇ ಆಗಿರಬಹುದು.  ಮೊನ್ನೆ ಹಳೆ ಆಲ್ಬಮ್ ಗಳನ್ನ ತಡವುತ್ತಿದ್ದಾಗ ಎಲ್ಲ ನೆನಪುಗಳು ಒದ್ದು ಬಂದವು. ಕಣ್ಣು ಹನಿಯಾಯಿತು. ಧಾರಾವಿ ಸಮೀಪದ 90 ಫೀಟ್ ರಸ್ತೆಯಲ್ಲಿ ಮುಂಬೈ ವಿ ವಿ ಕಡೆ ಹೋಗುವ ೩೧೨ ಬಸ್ಸಿಗಾಗಿ ಕಾಯುತ್ತಿರುವ ನನ್ನನ್ನು ನಾನು ಮತ್ತೊಮ್ಮೆ ಈ ಫೋಟೋ ಗಳಲ್ಲಿ ನೋಡಿದೆ. 90 ಫೀಟ್ ರಸ್ತೆಯ ಉದ್ದಕ್ಕೂ ನಡೆಯುತ್ತಾ ಮಾಟುಂಗಾದ ಕರ್ನಾಟಕ ಸಂಘವನ್ನು ತಲುಪುತ್ತಿರುವ ಆ ಬಶೀರ ನಿಜಕ್ಕೂ ನಾನೇ ಆಗಿರಬಹುದೇ ಎಂಬ ಕುರಿತು ಸಣ್ಣದೊಂದು ಅನುಮಾನ ಕಾಡಿತು.  ಫೋಟೋಗಳಲ್ಲಿ ಅದೇನು ಸಿಹಿಯಿತ್ತೋ ಕೆಲವನ್ನು ನನ್ನ ಪ್ರೀತಿಯ ಇರುವೆಗಳು ತಿಂದು ಹಾಕಿದ್ದವು. ಉಳಿದವುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 

ನಾವೇ ಒಂಬತ್ತು ಮಂದಿ ಗೆಳೆಯರು  ಕಟ್ಟಿಕೊಂಡ "ಮುಂಬೈ ಚುಕ್ಕಿ ಸಂಕುಲ" ಗುಂಪು ಸಂಪಾದಿಸಿದ "ಚುಕ್ಕಿ ಕತೆಗಳು" ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕವನ ಓದುವ ಮೂಲಕ ಕಾರ್ಯಕ್ರಮ ಆರಂಭಿಸುತ್ತಿರೋದು.
 
ಮುಂಬೈ ವಿಶ್ವ ವಿದ್ಯಾಲಯ ಕುಲಪತಿಗಳಿಂದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸ್ನಾತ್ತಕೋತ್ತರ ಪದವಿ ಪತ್ರ ಸ್ವೀಕರಿಸುತ್ತಿರೋದು

ಗೆಳೆಯ ಸಾ. ದಯಾ ನಿರ್ದೇಶಿದ "ಉಬರ್" ತುಳು ನಾಟಕದಲ್ಲಿ. ಮಧ್ಯದಲ್ಲಿರುವ ಹುಡುಗನೊಬ್ಬ(ಕಪ್ಪು ಅಂಗಿ) ಅದೇನೋ ಹೇಳಲು ಪ್ರಯತ್ನಿಸುತ್ತಿದ್ದಾನಲ್ಲ, ಅದು ನಾನು 

ಮುಂಬೈಯ ಕರ್ನಾಟಕ ವಿಶ್ವ ಕರ್ಮ ಅಸೋಸಿಯೇಶನ್ ಹಮ್ಮಿಕೊಂಡ ಕವಿಗೋಷ್ಠಿಯಲ್ಲಿ ನಾನು ಕವಿತೆ ವಾಚಿಸುತ್ತಿರೋದು
ಮುಂಬೈ ವಿವಿ ಕನ್ನಡ ವಿಭಾಗದ ಕಾರ್ಯಕ್ರಮದಲ್ಲಿ ನಾನು ಮಾತಾಡ್ತಾ ಇರೋದು. ವೇದಿಕೆಯಲ್ಲಿ ಆಗಿನ ವಿಭಾಗದ ಮುಖ್ಯಸ್ಥರಾದ ತಾಳ್ತಜೆ ವಸಂತ ಕುಮಾರ್, ಹಿರಿಯ ಕನ್ನಡ ಸಂಘಟದ, ಲೇಖಕ ಜಿ ಡಿ ಜೋಷಿ ಮೊದಲಾದವರು ಇದ್ದಾರೆ.

೧೯೯೬ ರಲ್ಲಿ ಮುಂಬೈಯಲ್ಲಿ ಇರುವಾಗಲೇ, ನನ್ನ ಕವನ ಸಂಕಲನ "ಪ್ರವಾದಿಯ ಕನಸು" ಹಸ್ತಪ್ರತಿಗೆ ಮುದ್ದಣ ಕಾವ್ಯ ಪ್ರಶಸ್ತಿ ದೊರಕಿತು. ಕಾಂತಾವರದಲ್ಲಿ ಹರಿಕೃಷ್ಣ ಪುನರೂರು ಅವರು ಶಾಲು ಹೊದಿಸಿ ಸನ್ಮಾನಿಸಿ, ಪ್ರಶಸ್ತಿ ನೀಡಿದರು. ಹೇಗಿದೆ ಫೋಟೋ !?
ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ಓದುತ್ತಿರೋದು.
ಗೋರೆಗಾಂವ್ ಕರ್ನಾಟಕ ಸಂಘ ಹಮ್ಮಿಕೊಂಡ ವಿಚಾರ ಭಾರತಿ ಸಮ್ಮೇಳನದಲ್ಲಿ
ಮುಂಬೈಯ ಕರ್ನಾಟಕ ಮಲ್ಲ ಕನ್ನಡ ದೈನಿಕ ಕಚೇರಿಯಲ್ಲಿ ಒಂದು ಭಂಗಿ
ನಮ್ಮದೇ ಮುಂಬೈ ಚುಕ್ಕಿ ಸಂಕುಲ ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ
ಮುಂಬೈಯ ತೌಳವ ಸಂಘಗಳ ತುಳು ಪರ್ಬದಲ್ಲಿ
ಯಾವ ಕಾರ್ಯಕ್ರಮದಲ್ಲಿ ಎಂದು ನೆನಪಿಲ್ಲ
ಕರ್ನಾಟಕ ಮಲ್ಲ ದೈನಿಕದ ಪಿಕ್ ನಿಕ್ ನಲ್ಲಿ, ಹಳದಿ ಟೀ ಶರ್ಟ್ ಹಾಕಿ, ಬೈರಾಸ್ ಉಟ್ಟು ಎರಡು ಕೈ ಮೇಲೆತ್ತಿರೋದು ನಾನೇ 
ಆನಗಳ್ಳಿ ನಿರ್ದೇಶಿಸಿದ ಕಂಬಾರರ ಸಿರಿಸಂಪಿಗೆ ನಾಟಕದಲ್ಲಿ ಅವಳಿ ಜವಳಿ ಪಾತ್ರದಲ್ಲಿ ಜವಳಿ ಪಾತ್ರವನ್ನು ನಾನು ನಿರ್ವಹಿಸಿದ್ದೆ. ಸುರೇಶ ಆನಗಳ್ಳಿ ಹಿಂದೆ ಎರಡು ಜೋಕರ್ ಗಲಿದ್ದಾರಲ್ಲ ಅದರಲ್ಲಿ ಬಲಭಾಗದಲ್ಲಿ ಹಲ್ಲು ಕಿರಿಯುತ್ತಿರೋದು ನಾನು. ಸಿರಿ ಸಂಪಿಗೆ ಪಾತ್ರವನ್ನು ಹಾ. ಮಾ ಕನಕ ನಿರ್ವಹಿಸಿದ್ದರು
ನನ್ನ ಪ್ರವಾದಿಯ ಕನಸು ಸಂಕಲನಕ್ಕೆ ದೊರಕಿದ ಮುದ್ದಣ ಕಾವ್ಯ ಪ್ರಶಸ್ತಿ ಫಲಕಗಳ ಜೊತೆಗೆ
ಮುಂಬೈ ಕರ್ನಾಟಕ ಸಂಘದಲ್ಲಿ ವ್ಯಾಸರಾಯ ನಿಂಜೂರು ಅವರಿಂದ ಅದ್ಯಾವುದೋ ಪ್ರಮಾಣ ಪತ್ರ
ಮುಂಬೈ ಚುಕ್ಕಿ ಸಂಕುಲದ ಕಾರ್ಯಕ್ರಮವೊಂದರಲ್ಲಿ ಸಮೂಹ ಗಾಯನ. ಗೆಳೆಯ ಸಾ ದಯಾ, ಕುಸುಮ, ಗೋಪಾಲ್, ಶಾಂತಲಾ ಮೊದಲಾದವರು ಇದ್ದಾರೆ
ಗೆಳೆಯ ಸಾ ದಯಾ ನಿರ್ದೇಶಿಸಿದ "ಗರ್ಭ" ನಾಟಕದಲ್ಲಿ. ಕೊಡೆ ರಿಪೇರಿ ಮಾಡುತ್ತಿರೋದು ನಾನು
ಕರ್ನಾಟಕ ಮಲ್ಲದ ಗೆಳೆಯರ ಜೊತೆ. ಕುಳಿತವರಲ್ಲಿ ಎರಡನೆಯವನು ನಾನು. ಜೊತೆಗೆ ಹರೀಶ್, ಭಾರತಿ, ಉಮೇಶ್, ದಯಾನಂದ್ ಪೆರ್ಮುದೆ ಮೊದಲಾದವರು ಇದ್ದಾರೆ

Monday, November 3, 2014

ನಂದಿತಾ ಎಂಬ ಅಬಲೆಯೊಬ್ಬಳ ಕೊಲೆಯ ಹಿಂದಿರುವ ನೂರು ಕೈಗಳು

ನಂದಿತಾಳನ್ನು ಕೊಂದವರು ಯಾರು? ಉತ್ತರಿಸುವುದು ಅಷ್ಟು ಸುಲಭವಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ನಾನೂ ಒತ್ತಾಯಿಸುತ್ತಿದ್ದೇನೆ. ಆದರೆ ಆರೋಪಿಗಳು ಯಾರು? ಅವರನ್ನು ಶಿಕ್ಷಿಸುವ ಬಗೆ ಹೇಗೆ. ನನ್ನ ಅರಿವಿಗೆ ಬಂದಂತೆ ನಂದಿತಾಳ ಸಾವಿನ ಹಿಂದಿರುವವರು ಒಬ್ಬರಲ್ಲ. ಹಲವು ಕೈಗಳು ಸೇರಿ ಆಕೆಯನ್ನು ಕೊಂದಿವೆ. ಅವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆ ಮಗುವಿನ ಕೊಲೆಯ ಪಾಲುದಾರರು. ಅವರೆಲ್ಲರನ್ನೂ ಶಿಕ್ಷಿಸಲು ನಮ್ಮ ಕಾನೂನಿಗೆ ಸಾಧ್ಯವೆ?
1. ಪ್ರಕರಣದ ಮೊತ್ತ ಮೊದಲ ಆರೋಪಿ ಸ್ಥಳೀಯ ಮುಸ್ಲಿಮ್ ಯುವಕ. ಈತನಿಗೂ ನಂದಿತಾಳಿಗೂ ಪರಿಚಯವಿದ್ದುದೆ ಪ್ರಕರಣ ಇವನ ವಿರುದ್ಧ ತಿರುಗಲು ಮುಖ್ಯ ಕಾರಣ.  ಒಬ್ಬ ಹೈಸ್ಕೂಲ್ ಹುಡುಗಿಯೊಂದಿಗೆ ಸಾರ್ವಜನಿಕವಾಗಿ ಮಾತುಕತೆ ನಡೆಸುವಾಗ, ವ್ಯವಹರಿಸುವಾಗ, ಅದು ಅವಳ ಮೇಲೆ, ಅವಳ ಕುಟುಂಬದ ಮೇಲೆ ಬೀರಬಹುದಾದ ಪರಿಣಾಮದ ಕುರಿತಂತೆ ಈತನಿಗೆ ಎಚ್ಚರಿಕೆಯಿರಬೇಕಾಗಿತ್ತು.  ತನ್ನದೇ ತಂಗಿಯ ಜೊತೆಗೆ ಇನ್ನೊಬ್ಬರು ಆ ರೀತಿ ವರ್ತಿಸಿದ್ದೇ ಆದರೆ ಅದು ಈತನ ಪಾಲಿಗೆ ಎಷ್ಟು ಕೆಟ್ಟದಾಗಿರುತ್ತಿತ್ತು ಎನ್ನುವುದನ್ನು ಆತ ಯೋಚಿಸಬೇಕಾಗಿತ್ತು. ಹುಡುಗಿ ಪರಿಚಯಸ್ಥೆ. ಹುಡುಗನ ಕುರಿತಂತೆ ವಿಶೇಷ ಆಸಕ್ತಿಯನ್ನು ವಹಿಸಿದ್ದಾಳೆ. ಆದರೆ ಆಕೆ ಇನ್ನೂ 14 ವರ್ಷದ ಹುಡುಗಿ. ಈ ಹಿನ್ನೆಲೆಯಲ್ಲಿಯೇ ರಾಜಕೀಯ ಶಕ್ತಿಗಳ ಸಂಶಯ ಈತನ ಮೇಲೆ ತಿರುಗಿದೆ. ತನ್ನ ಬೇಜವಾಬ್ದಾರಿಗೆ  ಈತ ಕೆಲವು ವರ್ಷಗಳಾದರೂ ಜೈಲಲ್ಲಿ ಕೊಳೆಯಬೇಕು. ಅದು ಉಳಿದ ಹುಡುಗರಿಗೆ ಪಾಠವಾಗಬೇಕು.
2. ಎರಡನೆ ಆರೋಪಿಗಳು, ಇವರನ್ನು  ಅಪರಾಧಿಗಳಂತೆ ಕಂಡು, ಅದನ್ನು ಪ್ರಶ್ನಿಸಿರುವ ಕೆಲವು ನೈತಿಕ ಪೋಲಿಸರು. ಹೈಸ್ಕೂಲ್‌ನಲ್ಲಿ ಓದುವ ಎಳೆ ಹುಡುಗಿ ಇದರಿಂದ ಆಘಾತಗೊಂಡಿದ್ದಾಳೆ. ಈಕೆಯ ತಂದೆಗೆ ದೂರು ನೀಡಿದ್ದಾರೆ. ಇದರಿಂದ ಆ ಮಗು ಎಷ್ಟು ನೊಂದಿರಬಹುದು? ಕೆಲವರಿಗೆ ಈ ವಿಷಯ ವಿಷಯ ಸಾರ್ವಜನಿಕವಾಗುವುದು ಬೇಕಾಗಿತ್ತು. ರಾಜಕೀಯಗೊಳ್ಳುವ ಅಗತ್ಯವಿತ್ತು. ಆದರೆ ಅದು ಹುಡುಗಿಯ ಬದುಕಿನ ಮೇಲೆ ಬೀರಿದ ಪರಿಣಾಮ?
  3. ಮೂರನೆಯ ಆರೋಪಿ ಆಕೆಯ ತಂದೆ. ಬಾಲಕಿಯೊಂದಿಗೆ ತಂದೆಯ ವರ್ತನೆ ತೀರಾ ಬಿರುಸಾಗಿದೆ.  ತನ್ನ ಎಳೆ ಮಗುವಿಗೆ ಪರಿಸ್ಥಿತಿಯನ್ನು ಮೃದುವಾಗಿ ವಿವರಿಸಿ, ಅವಳಿಗೆ ಅರ್ಥ ಮಾಡಿಸಬೇಕಾಗಿತ್ತು. ಈ ಎಳೆ ಪ್ರಾಯದಲ್ಲಿ ಇದೆಲ್ಲ ಸರಿಯಲ್ಲ, ವಿದ್ಯಾಭ್ಯಾಸದ ಕಡೆ ಗಮನಕೊಡು ಎಂದು ಮನವೊಲಿಸಬೇಕಾಗಿತ್ತು. ಆದರೆ ಎಲ್ಲ ಮಧ್ಯಮವರ್ಗದ ತಂದೆಯಂತೆ ಈತನೂ ಮಗಳ ಮೇಲೆ ಎಗರಿ ಬಿದ್ದಿದ್ದಾರೆ. ಇದರಿಂದ ಮುಖಭಂಗಕ್ಕೊಳಗಾದ ಅವಮಾನಕ್ಕೊಳಗಾದ ಈ ಎಳೆ ಮಗು ಇನ್ನಷ್ಟು ಜರ್ಝರಿತವಾಗಿದೆ. ಮನೆಯಿಂದ ಹೊರ ಹೋಗಿ ವಿಷ ಪದಾರ್ಥ ಸೇವಿಸಿದೆ.  ತಂದೆಗೆ ತಿಳಿಯುವಾಗ ತಡವಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ವೈದ್ಯರು  ಕೈ ಚೆಲ್ಲಿದ್ದಾರೆ. ಎರಡು ದಿನಗಳ ಕಾಲ ತಂದೆ ಯಾವುದೇ ದೂರು ನೀಡಿರಲಿಲ್ಲ.  ಘಟನೆ ನಡೆದ ಎರಡು ದಿನಗಳ ಬಳಿಕ ಅಂದರೆ ಹುಡುಗಿ ಮೃತ ಪಟ್ಟ ಬಳಿಕ ದೂರು ನೀಡಿದ್ದಾರೆ. ಆದರೆ ಆಕೆಯ ಸಾವಿನಲ್ಲಿ ತಂದೆಯ ಪಾತ್ರವೂ ಇದೆಯಲ್ಲವೆ?
4. ನಂದಿತಾ ಮೃತಪಟ್ಟ ಸುದ್ದಿ ಕೇಳಿದಾಕ್ಷಣ ಸ್ಥಳೀಯ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಚುರುಕಾದರು. ತಕ್ಷಣ ಹುಡುಗಿಯ ತಂದೆಗೆ ಒತ್ತಡ ಹಾಕಿದರು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ, ಆಕೆಗೆ ಡ್ರಗ್ಸ್ ನೀಡಿ ಅತ್ಯಾಚಾರ ಮಾಡಲಾಗಿದೆ. ಸ್ಥಳೀಯರು ರಕ್ಷಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು ಎಂದೆಲ್ಲ ವದಂತಿಗಳನ್ನು ಹಬ್ಬಿಸಿದರು. ಇಡೀ ಪ್ರಕರಣವನ್ನು ರಾಜಕೀಯಗೊಳಿಸಿ, ಮುಸ್ಲಿಮರ ಮನೆ, ಮಠಗಳಿಗೆ ಕಲ್ಲು ತೂರಿದರು. ಸಾರ್ವಜನಿಕವಾಗಿ ದಾಂಧಲೆ ನಡೆಸಿದರು. ಆದರೆ ಹುಡುಗಿಯ ಸೂಕ್ಷ್ಮ ಮನಸ್ಸನ್ನು ಘಾಸಿಗೊಳಿಸುವಲ್ಲಿ ಇವರ ಕಾರ್ಯಕರ್ತರ ಪಾತ್ರವೂ ಇದೆ. ಬದುಕಿದ್ದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಒತ್ತಡ ಹಾಕಿದವರು ಇವರೇ. ಇದೀಗ ಆಕೆಯ ಹೆಸರಿನಲ್ಲಿ ಮತ್ತೆ ರಾಜಕೀಯ ನಡೆಸುತ್ತಿದ್ದಾರೆ. ಇವರಿಗೆ ಯಾವ ಕಾನೂನು, ಯಾವ ರೀತಿಯ ಶಿಕ್ಷೆಯನ್ನು ನೀಡೀತು?
5. ಆಕೆಯ ಕೊಲೆಯಲ್ಲಿ ಮಾಧ್ಯಮಗಳ ಪಾತ್ರವೂ ಇದೆ. ಆಕೆ ತೀರಿ ಹೋದ ಬೆನ್ನಿಗೇ ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಬಹುತೇಕ ಪತ್ರಿಕೆಗಳು ದೊಡ್ಡ ಅಕ್ಷರದಲ್ಲಿ ಬರೆದವು. ಆಕೆ ಸತ್ತಿರಬಹುದು ನಿಜ. ಆದರೆ ಮೃತ ಶರೀರಕ್ಕೂ ಒಂದು ಘನತೆಯಿದೆ. ಆಕೆಯ ದೇಹವನ್ನು ಮಾಧ್ಯಮಗಳು ರವಿವಾರದ ಮುಖಪುಟದಲ್ಲಿ ಕುಕ್ಕಿ ಕುಕ್ಕಿ ತಿಂದವು. ಇದನ್ನು ಓದಿದ ಆಕೆಯ ಕುಟುಂಬ ಅದೆಷ್ಟು ನೊಂದು ಕೊಳ್ಳಬಹುದು. ಒಂದು ರೀತಿಯಲ್ಲಿ ಇಡೀ ಕುಟುಂಬವನ್ನೇ ಮಾಧ್ಯಮಗಳು ನರಕಕ್ಕೆ ತಳ್ಳಿದವು. ಆದರೆ ಇದೀಗ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುವುದು ಬಲಪಡೆಯುತ್ತಿದ್ದಂತೆ, ಮಾಧ್ಯಮಗಳು ಜಾಣ ವೌನ ತಾಳಿವೆ. ಇವರಿಗೆ ಯಾವ ಕಾನೂನು, ಯಾವ ರೀತಿಯ ಶಿಕ್ಷೆಯನ್ನು ನೀಡೀತು?


ನಂದಿತಾ ಪ್ರಕರಣದಂತಹ ಹಲವು ಘಟನೆಗಳು ಈ ಹಿಂದೆ ಕರಾವಳಿಯಲ್ಲಿ ನಡೆದಿವೆ. ವನಿತಾ ಎಂಬ ಬಿಲ್ಲವ ಸಮುದಾಯದ ಬಡ ಹೆಣ್ಣು ಮಗಳ ದುರಂತದ ಗಾಯ ಇನ್ನೂ ಒಣಗಿಲ್ಲ. ತೀರಾ ಬಡ ಕುಟುಂಬದ ಹೆಣ್ಣು ಈಕೆ. ಸ್ಥಳೀಯವಾಗಿ ಒಬ್ಬ ಮುಸ್ಲಿಮ್ ಹುಡುಗ ಒಂದು ಸಂಸ್ಥೆಯಲ್ಲಿ ಈಕೆಗೆ ಕೆಲಸ ಕೊಡಿಸಿದ್ದ. ಅವರಿಬ್ಬರು ಪರಿಚಯಸ್ಥರು. ಒಂದು ದಿನ ಇವರಿಬ್ಬರು ನಗರದಲ್ಲಿ ಒಟ್ಟಿಗೆ ನಿಂತು ಮಾತನಾಡುತ್ತಿದ್ದಾಗ ಅಲ್ಲಿಗೆ ಸಂಘಪರಿವಾರ ಕಾರ್ಯಕರ್ತರು ಆಗಮಿಸಿದ್ದಾರೆ. ಇಬ್ಬರಿಗೂ ಥಳಿಸಿದ್ದಾರೆ. ಹುಡುಗಿ ಅದನ್ನು ಪ್ರತಿಭಟಿಸಿದ್ದಾಳೆ. ಆಕೆಯನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಅಷ್ಟೇ ಅಲ್ಲ, ಆಕೆಯ ಮನೆಗೆ ತೆರಳಿ ತಂದೆತಾಯಿಗೂ ‘ಬ್ಯಾರಿ ಹುಡುಗನ ಜೊತೆ ತಿರುಗಾಡುತ್ತಿದ್ದಾಳೆ’ ಎಂದು ಬೆದರಿಕೆ ಹಾಕಿದ್ದಾರೆ. ಹೆಣ್ಣೊಬ್ಬಳ ಸೂಕ್ಷ್ಮ ಮನಸ್ಸು ಛಿದ್ರವಾಗಿದೆ. ಮನೆಯಲ್ಲಿ ಪಾಲಕರೂ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದು ರಾತ್ರಿ ಆಕೆ ಆತ್ಮಹತ್ಯೆ ಮಾಡಿಕೊಂಡಳು.
ಇನ್ನೊಂದು ಪ್ರಕರಣ ಮೂಡಬಿದ್ರೆಯಲ್ಲಿ ಸಂಭವಿಸಿತು. ಅಶ್ವಿನಿ ಮೂಲ್ಯ ಎನ್ನುವ ಕುಲಾಲ ಸಮುದಾಯದ ತರುಣಿಗೆ ದಿನಾ ಬಸ್ಸಲ್ಲಿ ಪ್ರಯಾಣಿಸುವ ಸಲೀಂ ಎಂಬ ಬಸ್ ಕಂಡಕ್ಟರ್ ಜೊತೆಗೆ ಸ್ನೇಹವಾಗಿದೆ. ಒಂದು ದಿನ ಇಬ್ಬರು ಜೊತೆಯಾಗಿರುವಾಗ ಅವರು ಸಂಘಪರಿವಾರ ತಂಡಕ್ಕೆ ಸಿಕ್ಕಿ ಬಿದ್ದಿದ್ದಾರೆ. ಇಬ್ಬರಿಗೂ ಥಳಿಸಿದ್ದಾರೆ. ಬಳಿಕ ಮೂಡಬಿದ್ರೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಹುಡುಗಿಯ ಕುರಿತಂತೆ ಸಂಜೆ ಪತ್ರಿಕೆಗಳಲ್ಲಿ ಅದೇನೇನೋ ವರದಿ ಬಂದಾಗಿತ್ತು. ಮನೆಯಲ್ಲಿ ಪೋಷಕರು ಹುಡುಗಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಕೆಯ ಮನಸ್ಸು ಒಡೆದು ಹೋಗಿದೆ. ಸಮಾಜದಲ್ಲಿ ಆದ ಅವಮಾನ ತಲೆಯೆತ್ತಲಾಗದಂತೆ ಮಾಡಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡಳು. ಬಳಿಕ ಸಿಓಡಿ ತನಿಖೆಯಾಯಿತು. ಹುಡುಗನಿಗೆ ಶಿಕ್ಷೆಯಾಯಿತು. ಆದರೆ ಆಕೆಯ ಸಾವಿಗೆ ಕೇವಲ ಆ ಹುಡುಗ ಮಾತ್ರ ಹೊಣೆಯೇ? ಆಕೆಯನ್ನು ಆತ್ಮಹತ್ಯೆಯ ಕಡೆಗೆ ದೂಡುವಲ್ಲಿ ಸಮಾಜದ ಪಾಲು, ಮಾಧ್ಯಮಗಳ ಪಾಲು ಇಲ್ಲವೆ?
ತೀರ್ಥಹಳ್ಳಿಯ ನಂದಿತಾ, ಮಂಗಳೂರಿನ ವನಿತಾ, ಕಿನ್ನಿಗೋಳಿಯ ಅಶ್ವಿನಿ....ಈ ಸಮಾಜದ ಕ್ರೌರ್ಯಕ್ಕೆ ಇನ್ನೆಷ್ಟು ಹೆಣ್ಣು ಮಕ್ಕಳು ಬಲಿಯಾಗಬೇಕೋ...!