Friday, March 28, 2014

ಚಿನ್ನದ ಅಂಗಡಿ ಮತ್ತು ಇತರ ಕತೆಗಳು

ಆಕೆ
‘‘ಆ ಬೀದಿಯ ಕೊನೆಯಲ್ಲಿರುವ ಕವಿ ಸತ್ತು ಹೋದ’’
ಆ ಮಾತನ್ನು ಕೇಳಿ, ಆ ಬೀದಿಯ ಕೊನೆಯಲ್ಲಿರುವ ಸರಕಾರಿ ಬಾವಿಗೆ ನೀರಿಗೆಂದು ಹೊರಟ ಆಕೆ ಅರ್ಧ ದಾರಿಯಲ್ಲೇ ಮರಳಿ ಬಂದಳು.

ಊಟ
ರಾಜಕಾರಣಿ ಘೋಷಿಸಿದ ‘‘ಎರಡು ಲಕ್ಷ ಕೊಟ್ಟರೆ ನನ್ನ ಜೊತೆ ಊಟ ಮಾಡಬಹುದು’’
ಬಡವ ಗೊಣಗಿದ ‘‘ಒಂದು ಕೆ.ಜಿ. ಅಕ್ಕಿ ಕೊಟ್ಟರೆ ನಾನು ನನ್ನ ಹೆಂಡತಿ ಮಕ್ಕಳ ಜೊತೆ ಊಟ ಮಾಡಬಹುದು’’

ಹೊಟೇಲು
ಹೊಟೇಲೊಂದರಲ್ಲಿ ದಲಿತನೂ, ಬ್ರಾಹ್ಮಣನೂ, ಮ್ಲೇಚ್ಛನೂ ಒಂದೇ ಟೇಬಲಲ್ಲಿ ಅಕ್ಕಪಕ್ಕ ಕೂತು, ಒಂದೇ ಮಡಕೆಯಲ್ಲಿ ಬೆಂದ ಅನ್ನವನ್ನು ಉಣ್ಣು ತ್ತಿದ್ದರು. ಈ ಕಾರಣಕ್ಕೇ ಇರಬೇಕು, ಇತ್ತೀಚೆಗೆ ಮಠ, ದೇವಸ್ಥಾನಗಳನ್ನು ಬಿಟ್ಟು ದೇವರು ಹೊಟೇಲುಗಳಲ್ಲಿ ಕಾಲ ಕಳೆಯುತ್ತಿರುವುದು.

ಚಿನ್ನದ ಅಂಗಡಿ
ಅವಳು ಚಿನ್ನದ ಅಂಗಡಿಯಲ್ಲಿ ಕೆಲಸಕ್ಕಿದ್ದಳು.
ಅವಳ ಕನಸುಗಳು ಕಪಾಟಿನಲ್ಲಿ ಮಾರಾಟಕ್ಕೆಂದು ತೂಗುತ್ತಿದ್ದವು.

ಬಚಾವು
ಒಬ್ಬ ಕೊಲೆಗಾರನಿಗೆ ಸಂತನನ್ನು ಕೊಲ್ಲಲು ಸುಪಾರಿ ನೀಡಲಾಯಿತು.
ಕೊಲೆಗಾರ ಆಶ್ರಮಕ್ಕೆ ಹೋಗಿ ನೋಡಿದರೆ ಸಂತ ಇವನಿಗಾಗಿಯೇ ಕಾಯುತ್ತಿದ್ದ.
‘‘ನಿನಗಾಗಿಯೇ ಕಾಯುತ್ತಿದ್ದೆ. ಸದ್ದು ಮಾಡಬೇಡ...ಶಿಷ್ಯರು ಎಚ್ಚರಗೊಂಡಾರು. ಬೇಗ ನಿನ್ನ ಕೆಲಸ ಮುಗಿಸಿ ಬಿಡು’’
ಕೊಲೆಗಾರ ಹೆದರಿ ಓಡತೊಡಗಿದ.
ಸಂತ ಅವನ ಹಿಂದೆಯೇ ಓಡುತ್ತಾ ಹೇಳಿದ ‘‘ಅರೆ! ನಿಲ್ಲು. ಯಾಕೆ ಹೆದರುತ್ತೀಯ? ಮರಳಿ ಬಾ...’’
ಕೊಲೆಗಾರ ಕೊನೆಗೂ ತಪ್ಪಿಸಿಕೊಂಡು ‘‘ಅಬ್ಬ ಬಚಾವಾದೆ...’’ ಎಂದ.
ಇತ್ತ ಕೊಲೆಗಾರ ಕಾಣದಾದದ್ದನ್ನು ನೋಡಿ ಸಂತನೂ ನಿಟ್ಟುಸಿರು ಬಿಟ್ಟ ‘‘ಅಬ್ಬ ಬಚಾವಾದೆ’’

ಕಲಿಕೆ
ಚಹಾ ಮಾಡುವುದರ ಕುರಿತಂತೆ ಸ್ನಾತಕೋತ್ತರ ಪದವಿ ಪಡೆದು, ಅಂಕ ಪಟ್ಟಿಯೊಂದಿಗೆ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿದ.
ಚಹಾ ಮಾಡುವುದನ್ನು ಹೊಟೇಲ್‌ನ ಅಡುಗೆಯವನ ಬಳಿ ಕಲಿತ.

Monday, March 24, 2014

ಚಿತ್ತಾಲ-ಸಾಹಿತ್ಯ ಲೋಕದ ಆಲ

ಜಯಂತ್ ಕಾಯ್ಕಿಣಿ ಮತ್ತು ಚಿತ್ತಾಲರು. ಬಾಲ್ಕನಿಯಲ್ಲಿ ಕಂಡದ್ದು (ಚಿತ್ರ ಕೃಪೆ-ಸ್ಮಿತಾ ಕಾಯ್ಕಿಣಿ)
ಒಂದು ಹೂವಿನ ಪಕಳೆಯಷ್ಟು ಮೃದುವಾಗಿಯೂ, ಸೂಕ್ಷ್ಮವಾಗಿಯೂ ಬದುಕಿದವರು ಯಶವಂತ ಚಿತ್ತಾಲರು. ಬೆರಳ ತುದಿಯ ಸಣ್ಣ ಒರಟು ಸ್ಪರ್ಶಕ್ಕೂ ಆತಂಕಗೊಳ್ಳುವ ಅವರ ಒಳಗಿನ ಸ್ಥಿತಿಯೇ ಅವರಿಂದ ‘ಶಿಕಾರಿ’ ಕಾದಂಬರಿಯನ್ನು ಬರೆಸಿರಬೇಕು. ಮುಂಬೈಯನ್ನು ಕರ್ಮಭೂಮಿಯಾಗಿ ಆರಿಸಿಕೊಂಡರೂ ಆ ಶಹರದ ಗಲ್ಲಿಗಳಲ್ಲಿ ತನ್ನ ಉತ್ತರಕನ್ನಡದ ಹನೇಹಳ್ಳಿಯ ಒಳದಾರಿಗಳನ್ನು ಕಂಡು ಕೊಳ್ಳಲು ಅವರು ಹಪಹಪಿಸುತ್ತಿದ್ದರು. ಅವರ ಸೃಜನಶೀಲ ಕೃತಿಗಳೆಲ್ಲವುಗಳ ಸ್ಫೂರ್ತಿಯೂ ಅವರ ಹುಟ್ಟು ನೆಲವಾದ ಹನೇಹಳ್ಳಿಯಾಗಿತ್ತು. ಮನುಷ್ಯನ ಬದುಕುವ ಶೈಲಿಯಲ್ಲೇ ಸುತ್ತಿಕೊಂಡಿರುವ ಹಾವಿನಂತಹ ಕ್ರೌರ್ಯವನ್ನು ಗೆಲ್ಲುವುದಕ್ಕೆ ಅವರು ಬರಹವನ್ನು ಮಾಧ್ಯಮವಾಗಿಸಿಕೊಂಡರು. ಮನುಷ್ಯನ ಹೊರಗಿನ ಜಗತ್ತನ್ನು ನೆಪವಾಗಿಟ್ಟು ಕೊಂಡು ಅವನ ಒಳಗಿನ ಬದುಕನ್ನು ತನ್ನ ಎಲ್ಲ ಕಾದಂಬರಿಗಳಲ್ಲಿ, ಕತೆಗಳಲ್ಲಿ ಬರೆದರು. ಅವರ ಕಾದಂಬರಿಗಳನ್ನು ಸತತವಾಗಿ ಓದುತ್ತಾ ಹೋದರೆ, ಮನುಷ್ಯನನ್ನು ನೋಡುವ ನಮ್ಮ ದೃಷ್ಟಿ, ನೋಟವೇ ಬದಲಾಗಿ ಬಿಡುತ್ತದೆ. ಅವರ ಬರಹಗಳ ಶಕ್ತಿಯೇ ಹಾಗೆ. ಅದು ನೇರವಾಗಿ ಯಾವ ಅಪ್ಪಣೆಯನ್ನೂ ಬೇಡದೆ ನಮ್ಮ ಎದೆಯೊಳಗೆ ನುಗ್ಗಿ ಬಿಡುತ್ತದೆ.

ಬೊಮ್ಮಿಯ ಹುಲ್ಲು ಹೊರೆಯಿಂದ ಆರಂಭಗೊಂಡ ಚಿತ್ತಾಲರ ಮನುಷ್ಯನ ಮುಖಾಮುಖಿಯ ಪಯಣ ತಿರುವು ಪಡೆದದ್ದು ‘ಆಟ’ ಕತೆಯ ಮೂಲಕ. ನವ್ಯ ಜಗತ್ತು ಕಾಮದ ಸುತ್ತ ತಿರುಗುತ್ತಿರುವಾಗಲೇ ಚಿತ್ತಾಲರು ‘ಆಟ’ ಕತೆಯ ಮೂಲಕ ಸಾವು ಮತ್ತು ಮನುಷ್ಯನ ನಡುವಿನ ಕಣ್ಣು ಮುಚ್ಚಾಲೆಯನ್ನು ತನ್ನ ಬರಹಗಳಲ್ಲಿ ಕಟ್ಟಿಕೊಟ್ಟರು. ನವ್ಯದೊಳಗಿದ್ದುಕೊಂಡು ಅವರು ನವ್ಯದವರಿಗಿಂತ ಭಿನ್ನರಾಗುತ್ತಾ ಹೋದದ್ದೇ ಹೀಗೆ. ಅವರ ಪಾತ್ರಗಳೆಲ್ಲ ಪೂರ್ವನಿರ್ಧರಿತವಾದವುಗಳಲ್ಲ. ಪಾತ್ರಗಳ ಜೊತೆಗೆ ಬದುಕುತ್ತಾ ಬದುಕುತ್ತಾ ಅವುಗಳಿಗೆ ಜೀವ ತುಂಬುತ್ತಾ ಹೋಗುವುದು ಚಿತ್ತಾಲರ ಕಲೆಗಾರಿಕೆಯಾಗಿತ್ತು. ಅವರ ಕತೆಗಳಲ್ಲಿ ಅರ್ಧ ಬದುಕಿದ ಪಾತ್ರ ಇನ್ನೊಂದು ಕಾದಂಬರಿಯೊಳಗೆ ಮತ್ತೆ ತನ್ನ ಬದುಕನ್ನು ಪೂರ್ಣಗೊಳಿಸುವ ಹಟದಲ್ಲಿ ಜನ್ಮ ಪಡೆಯುತ್ತದೆ. ಅವರ ಎಲ್ಲ ಕಾದಂಬರಿಗಳನ್ನೂ, ಕತೆಗಳನ್ನೂ ಓದುತ್ತಾ ಹೋದ ಹಾಗೆ, ಈ ಪಾತ್ರಗಳನ್ನು ಇನ್ನೆಲ್ಲೋ ಭೇಟಿ ಮಾಡಿದ್ದೇನಲ್ಲ ಎಂದು ಅನ್ನಿಸುವುದು ಇದೇ ಕಾರಣಕ್ಕೆ. ಅವರ ಒಂದು ಕತೆ ಹಿಂದಿನ ಕತೆಯ ಮುಂದುವರಿಕೆಯೋ ಎಂದೆನ್ನಿಸುವುದೂ ಇದೇ ಕಾರಣಕ್ಕೆ. ಅವರ ಮನೆಗೆ ಭೇಟಿಕೊಟ್ಟರೆ, ಅವರು ‘ಶಿಕಾರಿ’ ಕಾದಂಬರಿಯ ನಾಗಪ್ಪನ ವ್ಯಕ್ತಿತ್ವವನ್ನು ಒಬ್ಬ ಗೆಳೆಯನೋ, ಆತ್ಮಬಂಧುವೋ ಎಂಬಂತೆ ವಿವರಿಸುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಾ, ಈ ನಾಗಪ್ಪ ಒಂದು ಕತೆಯ ಪಾತ್ರ ಆಗಿರಲಿಕ್ಕಿಲ್ಲ. ಇವರ ಮನೆಯ ಸದಸ್ಯನೊಬ್ಬನ ಕುರಿತಂತೆ ಮಾತನಾಡುತ್ತಿರಬೇಕು ಎಂದೆನ್ನಿಸುತ್ತಿತ್ತು. ಅವರ ಬಾಲ್ಕನಿಯಲ್ಲೋ, ಅವರು ಕುಳಿತ ಸೋಫಾದಲ್ಲೋ ಆ ಪಾತ್ರ ನಮ್ಮನ್ನ್ನು ನೋಡುತ್ತಿದೆ ಎಂಬಂತೆಯೇ ಅವರು ನಾಗಪ್ಪನನ್ನು ವಿವರಿಸುತ್ತಿದ್ದರು. ಆದುದರಿಂದ, ಚಿತ್ತಾಲರ ಮನೆಗೆ ಹೋಗುವಾಗ, ಜೊತೆಗೆ ನಮ್ಮ ಮನದ ಜೋಳಿಗೆಯನ್ನು ಖಾಲಿ ಹೊತ್ತೊಯ್ಯುತ್ತಿದ್ದೆವು. ಅಲ್ಲಿ ಅವರೊಬ್ಬರೇ ಮಾತನಾಡುತ್ತಿದ್ದರು. ನಮಗೆ ಕೇಳುವ ಕೆಲಸ ಮಾತ್ರ ಅಲ್ಲಿರುತ್ತಿತ್ತು.

ಒಂದು ಕಾದಂಬರಿಯನ್ನು ಬರೆಯುವ ಮುನ್ನವೇ ಅವರು ಘೋಷಿಸುತ್ತಿದ್ದರು. ಅವರ ಒಂದು ಕಾದಂಬರಿಯ ಮುಕ್ತಾಯವೆಂದರೆ ಇನ್ನೊಂದು ಕಾದಂಬರಿಯ ಹುಟ್ಟು ಎಂದೇ ಹೇಳಬೇಕು. ಅದು ಸರಪಣಿಯಂತೆ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಈ ಕಾರಣದಿಂದಲೇ, ಅವರು ಮುದ್ರಣಗೊಂಡ ಕಾದಂಬರಿಯಲ್ಲೇ ತನ್ನ ಹೊಸ ಕಾದಂಬರಿಯ ಹೆಸರನ್ನು ಘೋಷಿಸಿ ಬಿಡುತ್ತಿದ್ದರು. ಬರೆಯುವ ಮೊದಲೇ ಹೆಸರನ್ನು ಪ್ರಕಟಿಸುತ್ತಿದ್ದರು. ಬಳಿಕ ಬರೆಯುವುದಕ್ಕೆ ಕೂರುತ್ತಿದ್ದರು. ಈ ಕಾರಣದಿಂದಲೇ ‘ಮೂರು ದಾರಿಗಳು’ ಕಾದಂಬರಿಯಲ್ಲಿ, ಬರಲಿರುವ ಕಾದಂಬರಿ ಛೇದ ಎಂದು ಮುದ್ರಣಗೊಳ್ಳುತ್ತಿತ್ತು. ಶಿಕಾರಿ ಕಾದಂಬರಿಯಲ್ಲಿ ಪುರುಷೋತ್ತಮ ಕಾದಂಬರಿ ಬರಲಿದೆ ಎಂದು ಘೋಷಿಸುತ್ತಿದ್ದರು. ಕೇಂದ್ರವೃತ್ತಾಂತ ಕಾದಂಬರಿಯನ್ನು ಮುಗಿಸಿ ‘ದಿಗಂಬರ’ವನ್ನು ಘೋಷಿಸಿದ ಸಂದರ್ಭದಲ್ಲಿ ನಾನು ನನ್ನ ಗೆಳೆಯರ ಜೊತೆಗೆ ಅವರ ಮನೆಗೆ ಹೋಗಿದ್ದೆ. ಆಗ ಅವರೊಂದಿಗೆ ಈ ಕುರಿತಂತೆ ಕೇಳಿದ್ದೆವು. ‘ಆ ಪಾತ್ರದ ಬಗ್ಗೆ ಸ್ವಲ್ಪ ವಿವರಿಸಿ’ ಎಂದಾಗ ಅವರು ಹೇಳಿದ ಮಾತು ಚಿತ್ತಾಲರಿಗೆ ತಕ್ಕ ಹಾಗೆಯೇ ಇತ್ತು. ‘‘ನೋಡಿ...ನನ್ನ ಮುಂದೆ ಒಂದು ವ್ಯಕ್ತಿತ್ವ ಇದೆ. ಅದು ಏನು ಎನ್ನುವುದು ನನಗೂ ಗೊತ್ತಿಲ್ಲ. ನಾನು ಆ ದೊಡ್ಡ ವ್ಯಕ್ತಿತ್ವಕ್ಕೆ ದಿಗಂಬರ ಎಂದು ಹೆಸರಿಟ್ಟಿದ್ದೇನೆ. ಬರೆಯುವುದೆಂದರೆ ಆ ವ್ಯಕ್ತಿತ್ವವನ್ನು ನಿಧಾನಕ್ಕೆ ತನ್ನದಾಗಿಸಿಕೊಳ್ಳುತ್ತಾ ಹೋಗುವುದು. ಬರೆಯುತ್ತಾ ಹೋದ ಹಾಗೆಯೇ ಅದು ಸ್ಪಷ್ಟವಾಗುತ್ತಾ ಹೋಗುತ್ತದೆ...’’

 ಅವರು ತನ್ನ ಬರಹಗಳಿಗೆ ಅದೆಷ್ಟು ಬದ್ಧರಾಗಿದ್ದರು ಮತ್ತು ತನ್ನ ಪಾತ್ರಗಳನ್ನು ಅದೆಷ್ಟು ಹಚ್ಚಿಕೊಳ್ಳುತ್ತಿದ್ದರು ಎಂದರೆ ಒಂದು ಸಣ್ಣ ವಿಮರ್ಶೆ, ಸಣ್ಣ ವ್ಯಂಗ್ಯಕ್ಕೂ ನಲುಗಿ ಹೋಗುತ್ತಿದ್ದರು. ಹಲವರಿಗೆ ಈ ಕುರಿತಂತೆ ಸಿಟ್ಟೂ ಇತ್ತು. ‘‘ಚಿತ್ತಾಲರು ವಿಮರ್ಶೆಯನ್ನು ಸಹಿಸಿಕೊಳ್ಳುವುದಿಲ್ಲ’’ ಎಂಬ ಸಿಟ್ಟು ಅದಾಗಿತ್ತು. ‘‘ಕಾಫ್ಕಾನ ಪ್ರಭಾವ ಬಿಟ್ಟರೆ ಚಿತ್ತಾಲರಲ್ಲಿ ಇನ್ನೇನಿದೆ?’’ ಎಂದಾಗಲೂ ಚಿತ್ತಾಲರು ವ್ಯಗ್ರರಾಗಿದ್ದರು. ನವ್ಯದ ಉತ್ಕರ್ಷದ ಹಂತದಲ್ಲಿ, ಕಾಫ್ಕಾನನ್ನು ಚಿತ್ತಾಲರಿಗೆ ತಗಲಿ ಹಾಕುವ ಪ್ರಯತ್ನ ನಡೆದಿತ್ತು.ಫ್ರಾಂಜ್ ಕಾಫ್ಕಾನ ಟ್ರಯಲ್ ಕಾದಂಬರಿಯ ಪ್ರಭಾವ ಚಿತ್ತಾಲರ ಶಿಕಾರಿ ಮೇಲಿದೆ ಎನ್ನೋದೇ ಇದಕ್ಕೆ ಕಾರಣ. ಶಿಕಾರಿಯ ನಿರೂಪಣೆಯ ತಂತ್ರದ ಮೇಲೆ ಟ್ರಯಲ್ ಕಾದಂಬರಿ ತನ್ನ ಪ್ರಭಾವ ಬೀರಿರಬಹುದು. ಆದರೆ ಟ್ರಯಲ್ ಕಾದಂಬರಿ ನೀಡುವ  ಒಳನೋಟವೆ ಬೇರೆ. ಶಿಕಾರಿ ಕಾದಂಬರಿ ಕೊಡುವ ಬದುಕಿನ ಒಳನೋಟವೆ ಬೇರೆ. ಕಾಫ್ಕಾನ ಹೆಚ್ಚಿನ ವಸ್ತುಗಳಲ್ಲಿ ಒಂದು ಸಿನಿಕತನ ಕೆಲಸ ಮಾಡಿದೆ. ಚಿತ್ತಾಲರು ಬದುಕಿನ ಮೇಲೆ ಅಪಾರ ಭರವಸೆ ಇಟ್ಟು ಬರೆದವರು  ಚಿತ್ತಾಲರ ಕಾದಂಬರಿಗಳ ಪಾತ್ರಗಳೊಳಗಿನ ಸಂಘರ್ಷದ ಅಂತಿಮ ಉದ್ದೇಶವೇ ಮನುಷ್ಯನೊಳಗಿರುವ ಪುರುಷೋತ್ತಮನ ಹುಡುಕಾಟ. ಅವರ ಕಾದಂಬರಿಗಳಲ್ಲಿ ಸಿನಿಕತೆಗೆ ಎಳ್ಳಷ್ಟೂ ಅವಕಾಶವಿರಲಿಲ್ಲ.

 ಒಮ್ಮೆ ಲಂಕೇಶರು ಯಶವಂತ ಚಿತ್ತಾಲರ ಬರಹಗಳ ಕುರಿತಂತೆ ಅದೇನೋ ಬರೆದು ಬಿಟ್ಟಿದ್ದರು. ಅದರಲ್ಲಿ ಚಿತ್ತಾಲರ ಕುರಿತಂತೆ ಸಣ್ಣದಾಗಿ ವೈಯಕ್ತಿಕ ಟೀಕೆಯೂ ಇತ್ತು. ಚಿತ್ತಾಲರದು ಇಳಿ ವಯಸ್ಸು. ಆರೋಗ್ಯವೂ ಆಗಾಗ ಕೆಡುತ್ತಿತ್ತು. ಆಗ ಇಡೀ ಮುಂಬೈಯ ಕನ್ನಡಿಗರು ಚಿತ್ತಾಲರಿಗೆ ಲಂಕೇಶ್ ಪತ್ರಿಕೆ ದೊರಕದಂತೆ ನೋಡಿಕೊಂಡಿದ್ದರು. ಆದರೂ ಅದಾರೋ ಕೊನೆಗೂ ಚಿತ್ತಾಲರಿಗೆ ಅದನ್ನು ತಲುಪಿಸಿದ್ದರು. ಆ ಸುದ್ದಿಯನ್ನು ಮುಚ್ಚಿಟ್ಟ ಆತ್ಮೀಯರೊಂದಿಗೂ ಅವರು ಆ ಬಳಿಕ ಜಗಳವಾಡಿದ್ದರು. ಹಾಗೆಯೇ ಅದನ್ನು ಹಲವು ತಿಂಗಳ ಕಾಲ ಒಳಗಿಟ್ಟುಕೊಂಡು ನೊಂದುಕೊಂಡಿದ್ದರು.

ಚಿತ್ತಾಲರಿಗೆ ತರುಣರು ಮನೆಗೆ ಬರುವುದೆಂದರೆ ಸಂಭ್ರಮ. ಮೊದಲೇ ಸಮಯವನ್ನು ಹೇಳಿ, ನಿಗದಿ ಪಡಿಸಿ ನಾವು ಅವರ ಮನೆ ಬಾಗಿಲು ತಟ್ಟುತ್ತಿದ್ದೆವು. ಇಳಿವಯಸ್ಸು, ಅನಾರೋಗ್ಯ ಏನೇ ಇರಲಿ. ಬರಹಗಳ ಬಗ್ಗೆ, ಸಾಹಿತ್ಯದ ಬಗ್ಗೆ ಮಾತನಾಡುವಾಗ ಅವರು ಒಂದಿಷ್ಟೂ ದಣಿಯುತ್ತಿರಲಿಲ್ಲ. ಬಂದವರಿಗೆ ಪುಸ್ತಕವನ್ನೂ ಕೊಡುತ್ತಿದ್ದರು. ಒಮ್ಮಿಮ್ಮೆ ನಾವು ಕಾವ್ಯಗಳನ್ನು ಬರೆದು ಅವರಲ್ಲಿಗೆ ಕೊಂಡೊಯ್ಯುವುದೂ ಇತ್ತು. ವಿಶೇಷವೆಂದರೆ, ಕಾವ್ಯದ ಕುರಿತಂತೆ ಅವರಿಗೆ ಅಗಾಧ ಅಚ್ಚರಿಯಿತ್ತು. ಅಷ್ಟೂ ಕಾದಂಬರಿ, ಕತೆಗಳನ್ನು ಬರೆದವರಾದರೂ, ‘ಕಾವ್ಯ ನನಗೆ ಒಗ್ಗುವುದಿಲ್ಲ’ ಎಂದು ಹಿಂಜರಿಯುತ್ತಿದ್ದರು. ಆದರೂ ಅವರು ಕಾವ್ಯಗಳನ್ನು ಕೆಲ ಕಾಲ ಬರೆದರು. ಆದರೆ ಅದನ್ನು ಕಾವ್ಯವೆಂದು ಕರೆಯಲು ಹಿಂಜರಿದರು. ಅದಕ್ಕಾಗಿಯೇ ಅವರು ‘ಲಯ ಬದ್ಧ ಸಾಲುಗಳು’ ಎಂಬ ಹೊಸ ಹೆಸರಿಟ್ಟರು. ಚಿತ್ತಾಲರ ‘ಲಬಸಾ’ ಎಂದೇ ಅದು ಮುಂದೆ ಮುದ್ರಣಗೊಂಡವು. ಆದರೆ ಕಾದಂಬರಿ ಕತೆಗಳು, ಕೈ ಹಿಡಿದಂತೆ ಕವಿತೆಗಳು ಅವರ ಕೈ ಹಿಡಿಯಲಿಲ್ಲ.

ಚಿತ್ತಾಲರ ಅತಿ ಚರ್ಚಿತ ಕತೆಗಳಲ್ಲಿ ಕತೆಯಾದಳು ಹುಡುಗಿ ಒಂದು. ತನ್ನ ಮಗುವಿನ ದುರಂತವನ್ನು ಕತೆಗಾರನೊಬ್ಬ ಕತೆಯಾಗಿಸಲು ಹೊರಟು, ಆ ಕ್ರೌರ್ಯದೊಳಗೆ ತಾನೇ ನಲುಗುವ ಕತೆ ಇದು. ಛೇದ ಅವರ ಪುಟ್ಟ ಕಾದಂಬರಿ. ಅನಗತ್ಯ ಭಯ ಸಂಶಯಗಳಿಂದ ನಾವು ಸಂಬಂಧಗಳನ್ನು ಹೇಗೆ ಕೊಂದು ಕೊಳ್ಳುತ್ತೇವೆ ಎನ್ನುವುದನ್ನು ಛೇದ ಹೃದಯ ಛೇದಿಸುವಂತೆ ನಮ್ಮ ಮುಂದಿಡುತ್ತದೆ. ವೃದ್ಧ ಪಾರ್ಸಿ ಪೊಚಖಾನವಾಲಾ ಇದರ ಕೇಂದ್ರ ಪಾತ್ರ. ಈತ ದ್ವೇಷಿಸುವ, ಭಯಪಡುವ ಕಿಡಿಗಾರುವ ವ್ಯಕ್ತಿ ಈ ಜಗತ್ತಲ್ಲಿ ಬದುಕಿಯೇ ಇರುವುದಿಲ್ಲ. ಅವನೆಂದೋ ಒಂದು ದುರಂತದಲ್ಲಿ ಕೊಲೆಯಾಗಿರುತ್ತಾನೆ. ಬರೇ ಆತನ ನೆರಳನ್ನೇ ದ್ವೇಷಿಸುತ್ತಾ, ಭಯಪಡುತ್ತಾ, ಕಿಡಿಗಾರುತ್ತಾ ಇರುವ ಪೊಚಖಾನವಾಲಾನಿಗೆ ಸತ್ಯ ತಿಳಿಯುವ ಹೊತ್ತಿಗೆ ಎಲ್ಲ ಮುಗಿದಿರುತ್ತದೆ. ಎಂದೂ ಸರಿಪಡಿಸಲಾಗದ ಒಡೆದ ಮನಸಷ್ಟೇ ಅಲ್ಲಿ ಉಳಿದಿರುತ್ತದೆ. ‘ಶಿಕಾರಿ’ ಹೇಗೆ ನಗರದಲ್ಲಿ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಬೇಟೆಯಾಡುತ್ತಾನೆ ಎನ್ನುವುದನ್ನು ವಸ್ತುವಾಗಿಸಿಕೊಂಡಿದೆ ಮತ್ತು ಅದರಿಂದ ಪಾರಾಗಲು ನಾಗಪ್ಪ ನಡೆಸುವ ಹೋರಾಟ ಶಿಕಾರಿಯ ನಿಜವಾದ ಕತೆ. ಪುರುಷೋತ್ತಮ ಚಿತ್ತಾಲರ ಮತ್ತೊಂದು ಮಹತ್ವದ ಕೃತಿ. ದಾಯಾದಿ ಕಲಹ, ತಿಕ್ಕಾಟಗಳನ್ನು ಹೇಳುತ್ತಲೇ, ಆ ಮೂಲಕ ನಾಯಕ ಪುರುಷೋತ್ತಮನಾಗಿ ರೂಪುಗೊಳ್ಳುವ ಬಗೆಯನ್ನು ಕಟ್ಟಿಕೊಡುತ್ತಾರೆ. ಚಿತ್ತಾಲರು ಕತೆ ಹೇಳುವ ಸಂದರ್ಭದಲ್ಲಿ ಪತ್ತೆದಾರಿಗೆ ಸಮಾನವಾದ ಒಂದು ತಂತ್ರವನ್ನು ಬಳಸಿಕೊಳ್ಳುತ್ತಾರೆ. ಛೇದ ಮತ್ತು ಶಿಕಾರಿಯಲ್ಲಿ ಆ ತಂತ್ರ ನಮ್ಮಾಳಗೆ ವಿಸ್ಮಯವನ್ನು ಉಂಟು ಮಾಡುತ್ತದೆ. ತನ್ನ ಅಣ್ಣನನ್ನು ಹುಡುಕುತ್ತಾ ಮುಂಬೈಗೆ ಬರುವ ಒಬ್ಬ ತರುಣನ ಮೂಲಕ ಛೇದ ಕತೆ ತೆರೆದುಕೊಳ್ಳುತ್ತದೆ. ನಿಗೂಢ ಕಾರಣಕ್ಕಾಗಿ ನಾಗಪ್ಪನನ್ನು ರಜೆಯ ಮೇಲೆ ಕಳುಹಿಸಿ, ಆತನನ್ನು ಕಂಪೆನಿ ವಿಚಾರಣೆಗೆ ಒಳಪಡಿಸುತ್ತದೆ. ಈ ಸಂದರ್ಭದಲ್ಲಿ ತನ್ನನ್ನು ಬೇಟೆಯಾಡುತ್ತಿರವವರನ್ನು ಕಂಡುಕೊಳ್ಳುವುದು ಮತ್ತು ತನ್ನನ್ನು ತಾನು ಉಳಿಸಿಕೊಳ್ಳುವುದು ಶಿಕಾರಿಯ ಕತೆ.


ದಿಗಂಬರನನ್ನು ಪೂರ್ಣವಾಗಿ ಕಡೆದು ನಿಲ್ಲಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ. ಆ ಕಾದಂಬರಿ ಅರ್ಧದಲ್ಲೇ ಉಳಿದಿದೆ. ಸಾಹಿತ್ಯದ ಕುರಿತಂತೆ ಅವರು ಏನು ಹೇಳಿದ್ದರೋ, ಯಾವ ನಿಲುವನ್ನು ತಳೆದಿದ್ದರೋ ಅವುಗಳಿಗೆ ಒಂದು ರೂಪಕವಾಗಿ ದಿಗಂಬರ ಅರ್ಧದಲ್ಲೇ ನಿಂತಿದೆ. ಉಳಿದರ್ಧ ನಮ್ಮ ನಮ್ಮಳಗೆ ಪೂರ್ತಿಯಾಗಬೇಕಾಗಿದೆ. ಎಲ್ಲವನ್ನೂ ತಾನೇ ಪೂರ್ತಿ ಮಾಡಿದರೆ ಅದು ಸಾಹಿತ್ಯ ಹೇಗಾದೀತು ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟು ಚಿತ್ತಾಲರು ನಮ್ಮಿಂದ ದೂರವಾಗಿದ್ದಾರೆ. ತನ್ನ ಶಾಶ್ವತವಾದ ಹನೇಹಳ್ಳಿಗೆ.

Thursday, March 20, 2014

ಬರೇ ಪದಗಳು ಅಷ್ಟೇ...

1
ಮನಸ್ಸು ಬೆಣ್ಣೆಯಂತೆ
ಎಂದು ಹೇಳುತ್ತಾರೆ...
ಒಂದು ಬೆಣ್ಣೆಯ ಮುದ್ದೆ ಕರಗೂದನ್ನು ನೋಡಿ
ಇನ್ನೊಂದು ಬೆಣ್ಣೆ ಕರಗುತ್ತದೆಯೇ?
2
ಹೊಟೇಲೊಂದರಲ್ಲಿ
ದಲಿತನೂ ಬ್ರಾಹ್ಮಣನೂ
ಎದುರು ಬದುರು ಕೂತು
ಒಂದೇ ಮಡಕೆಯಲ್ಲಿ ಬೆಂದ
ಅನ್ನವನ್ನು ಉಣ್ಣುತ್ತಿದ್ದಾರೆ !
ಇತ್ತೀಚಿಗೆ ಮಠ, ದೇವಸ್ತಾನಗಳನ್ನು
ತೊರೆದು ದೇವರು ಯಾಕೆ
ಹೊಟೇಲುಗಳಲ್ಲಿ ಕಾಲ ಕಳೆಯುತ್ತಿದ್ದಾನೆ
ಎನ್ನೋದು ಈಗ ಗೊತ್ತಾಯಿತು
3
ಮಾವಿನ ಹಣ್ಣನ್ನು
ಮುಚ್ಚಿಡಬಹುದು
ಹಣ್ಣಿನ ಪರಿಮಳವ
ಏನು ಮಾಡಲಿ!?
4
ಒಂದು ಪುಟಾಣಿ ಇರುವೆ
ಬಂದ ಕೆಲಸ ಮುಗಿಸಿ
ಎದುರಾದ ಎಲ್ಲ ಅಡೆತಡೆ ದಾಟಿ
ಹೇಗೋ ಮನೆ ಮುಟ್ಟುವಷ್ಟರಲ್ಲಿ
ಹಣ್ಣು ಹಣ್ಣು
ಮುದಿಯಾಗಿತ್ತು
5
ವಿಜ್ಞಾನ ಟಿವಿಯನ್ನು
ಕಂಡು ಹಿಡಿಯಿತು
ಆ ಟಿವಿಯನ್ನು ಮನೆಯ ಯಾವ
ಮೂಲೆಯಲ್ಲಿ ಇಡಬೇಕು
ಎನ್ನೋದಕ್ಕೆ ಜೋತಿಷಿಯನ್ನು
ಕರೆಯಲಾಯಿತು

Saturday, March 15, 2014

ಕ್ವೀನ್: ತನ್ನ ತಾನು ಕಂಡುಕೊಳ್ಳುವ ಪಯಣ

ಮದುವೆಯಾಗುವ ಹೆಣ್ಣು ತನ್ನ ವ್ಯಕ್ತಿತ್ವವನ್ನು, ಎದೆಯ ಒಳಗೂಡಿನಲ್ಲಿ ಬಚ್ಚಿಟ್ಟ ಆಸೆ, ಆಕಾಂಕ್ಷೆಗಳನ್ನು ಕಳೆದು ಕೊಳ್ಳದೆ ಒಬ್ಬ ಒಳ್ಳೆಯ ಹೆಂಡತಿಯಾಗಲು ಭಾರತದಲ್ಲಿ ಸಾಧ್ಯವಿಲ್ಲವೆ? ಮದುವೆಯ ದಿನವೇ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಪ್ರೇಮಿಯಿಂದ ತಿರಸ್ಕರಿಸ್ಕರಿಸಲ್ಪಟ್ಟು, ಆವರಿಸಿದ ಶೂನ್ಯತೆಯಿಂದ ಪಾರಾಗಲು ಮೊದಲೇ ನಿರ್ಧರಿಸಿದ ಹನಿಮೂನಿಗೆ ಮದುಮಗಳು ಒಂಟಿಯಾಗಿ ಪಯಣಿಸು ತ್ತಾಳೆ. ಅಪರಿಚಿತ ಪ್ಯಾರಿಸ್‌ನಲ್ಲಿ ಒಬ್ಬಂಟಿಯಾಗಿ ಹನಿಮೂನ್‌ಗೆ ಹೋಗುವ ರಾಣಿ ಮೆಹ್ರಾ(ಕಂಗನಾ ರಣಾವತ್) ಅಲ್ಲಿ ತನ್ನ ವ್ಯಕ್ತಿತ್ವವನ್ನು ಮರಳಿ ಗಳಿಸಿಕೊಂಡು ಗಟ್ಟಿಯಾಗುವ ಕತೆಯೇ ಕ್ವೀನ್. ಪ್ಯಾರಿಸ್‌ನ ಒಂಟಿ ಪಯಣ ಆಕೆಯ ಪಾಲಿಗೆ ಆತ್ಮಶೋಧನೆಯ, ತನ್ನನ್ನು ತಾನು ಕಂಡುಕೊಳ್ಳುವ ಪಯಣವಾಗುತ್ತದೆ. ಚಿತ್ರದ ಕೊನೆಯಲ್ಲಿ ತನ್ನೆಡೆಗೆ ಮರಳಿ ಬಂದ ಪ್ರೇಮಿಯನ್ನು ರಾಣಿ ತಿರಸ್ಕರಿಸುತ್ತಾಳೆ. ಆ ಮೂಲಕ ತನ್ನ ವ್ಯಕ್ತಿತ್ವವನ್ನು ಅವಳು ಗೌರವಿಸುತ್ತಾಳೆ. ನಿರಾಳವಾಗುತ್ತಾಳೆ.

ಇದೊಂದು ರೀತಿಯಲ್ಲಿ ಶ್ರೀದೇವಿಯ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದ ಎರಡನೆಯ ಭಾಗದಂತಿದೆ. ಅಲ್ಲಿ, ಭಾರತೀಯ ಗೃಹಿಣಿಯೊಬ್ಬಳ ಕುಟುಂಬದೊಳಗೆ ಇಂಗ್ಲಿಷ್ ತರುವ ಬಿಕ್ಕಟ್ಟು ಕೇಂದ್ರ ವಸ್ತು. ಆಕೆಯ ಏಕಾಂಕಿತನ ಮತ್ತು ಅನಿರೀಕ್ಷಿತವಾಗಿ ನ್ಯೂಯಾರ್ಕ್‌ಗೆ ಹೋಗುವ ಅವಕಾಶ ಸಿಕ್ಕಿದಾಗ ಅಲ್ಲಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇಂಗ್ಲಿಷ್‌ಗೂ, ಭಾರತೀಯ ಮನಸ್ಥಿತಿಗೆ ಸೆಡ್ಡು ಹೊಡೆಯುತ್ತಾಳೆ. ಆದರೆ ‘ಕ್ವೀನ್’ ಕತೆ ಇನ್ನಷ್ಟು ಗಾಢವಾಗಿದೆ. ಭಾರತದ ಸಾಂಪ್ರದಾಯಿಕ ಮನಸ್ಥಿತಿಯನ್ನು, ಗಂಡಸರ ಇಗೋಗಳನ್ನು ಚಿತ್ರ ವಿಶ್ಲೇಷಿಸು ತ್ತದೆ. ಬಿಗಿಯಾದ ಚಿತ್ರಕತೆ, ನವಿರಾದ ನಿರೂಪಣೆ ಹಾಗೂ ರಾಣಿಯಾಗಿ ಕಂಗನಾ ಅವರ ಮುಗ್ಧ, ಮನಮುಟ್ಟುವ ಅಭಿನಯ ಈ ಚಿತ್ರದ ಹೆಗ್ಗಳಿಕೆಗಳು. ತೀರಾ ಅತ್ಯಾಧುನಿಕ ಹೆಣ್ಣಾಗಿಯೇ ಬೆಳ್ಳಿಪರದೆಯಲ್ಲಿ ಗುರುತಿಸಿಕೊಳ್ಳುತ್ತಾ ಬಂದಿದ್ದ ಕಂಗನಾ ಇದರಲ್ಲಿ ಸಂಪ್ರದಾಯಸ್ಥ ಮನೆತನದ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಗಾಢ ವಿಷಾದ, ಮುಗ್ಧತೆಯನ್ನು ತಮ್ಮ ಕಣ್ಣುಗಳಲ್ಲೇ ಮೊಗೆದುಕೊಟ್ಟಿದ್ದಾರೆ ಕಂಗನಾ. ಚಿತ್ರ ಎಲ್ಲೂ ಸಂದೇಶಗಳಿಂದ ಭಾರವಾಗಿಲ್ಲ. ಆದರೆ ನಿರ್ದೇಶಕ ಬೆಹ್ಲ್ ಅವರು ತಾನು ಏನೆಲ್ಲ ಹೇಳಬೇಕೋ ಅದೆಲ್ಲವನ್ನು ಲವಲವಿಕೆಗಳ ಮೂಲಕವೇ ನಮ್ಮ ಎದೆಗಿಳಿಸುತ್ತಾರೆ. ರಾಣಿಯನ್ನು ತಿರಸ್ಕರಿಸುವ ಹಾಗೆಯೇ ಕ್ಲೆೃಮಾಕ್ಸ್‌ನಲ್ಲಿ ಆಕೆಗಾಗಿ ದುಂಬಾಲು ಬೀಳುವ ವಿಜಯ್ ಪಾತ್ರದಲ್ಲಿ ರಾಜ್‌ಕುಮಾರ್ ಇಷ್ಟವಾಗುತ್ತಾರೆ. ಪುರುಷರ ಇಗೋಗಳನ್ನು ಅವರು ಪರಿಣಾಮಕಾರಿಯಾಗಿಯೇ ಅಭಿವ್ಯಕ್ತಿಗೊಳಿಸಿದ್ದಾರೆ. ಪ್ಯಾರಿಸ್‌ನಲ್ಲಿ ರಾಣಿಗೆ ಪರಿಚಯವಾಗುವ ವಿಜಯಲಕ್ಷ್ಮಿ ಪಾತ್ರ ತುಂಬಾ ಬೋಲ್ಡ್ ಆಗಿದೆಯಾದರೂ, ಆ ಪರಿಸರಕ್ಕೆ ಅದು ಅತಿಯೆನಿಸುವುದಿಲ್ಲ. ರಾಣಿಯ ವ್ಯಕ್ತಿತ್ವವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯೆಯಲ್ಲಿ ಬರುವ ಎಲ್ಲ ಪಾತ್ರಗಳೂ ಅತ್ಯಂತ ಆತ್ಮೀಯವಾಗಿವೆ. ಹಿಂದಿಯಲ್ಲಿ ಇತ್ತೀಚೆಗೆ ನಾಯಕಿ ಪ್ರಧಾನ ಚಿತ್ರಗಳು ಬರುತ್ತಿರುವುದು ಶ್ಲಾಘನೀಯ. ಇಂಗ್ಲಿಷ್ ವಿಂಗ್ಲಿಷ್, ಡರ್ಟಿ ಪಿಕ್ಚರ್‌ನಿಂದ ಹಿಡಿದು ಇದೀಗ ಗುಲಾಬ್ ಗ್ಯಾಂಗ್‌ವರೆಗೆ. ಇದೀಗ ಆ ಸಾಲಿಗೆ ಕ್ವೀನ್ ಎನ್ನುವ ಸದಭಿರುಚಿಯ ಹಾಗೆಯೇ ಸ್ತ್ರೀ ಮನೋಧರ್ಮವನ್ನು ಎತ್ತಿಹಿಡಿಯುವ ಚಿತ್ರವೂ ಸೇರುತ್ತದೆ. ಹೆಣ್ಣು ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬುವ, ಹಾಗೆಯೇ ಪುರುಷರ ಅಹಂನ್ನು ತಿದ್ದುವ ಕೆಲಸವನ್ನು ಈ ಚಿತ್ರ ಪರಿಣಾಮಕಾರಿಯಾಗಿ ಮಾಡುತ್ತದೆ.

Wednesday, March 12, 2014

ಏ ಬುಲ್ ಬುಲ್ ಮಾತಾಡಕಿಲ್ವಾ....?

ಉಪ್ಪಿನಂಗಡಿಯ ಪ್ರೀತಂ ಟಾಕೀಸು. 1.50 ರೂಪಾಯಿಯ ಟಿಕೆಟ್. ಮುಂದೆ ಕುಳಿತರೆ ತುಂಬಾ ಚೆನ್ನಾಗಿ ಕಾಣುತ್ತದೆ ಎಂದು ನಾನು ಮತ್ತು ನನ್ನ ಗೆಳೆಯ ಮುಂದಿನ ಗಾಂಧಿ ಕ್ಲಾಸಲ್ಲಿ ಬೆಂಚಿನ ಮೇಲೆ ಕುಳಿತು ನೋಡಿದ ಚಿತ್ರ ಅದು. ಹೆಸರು ‘ಅಂತ’. ‘‘ಕುತ್ತೇ ಕನ್ವರ್ ಲಾಲ್ ಬೋಲೋ...’’ ಎನ್ನುವ ಕನ್ವರ್ ಲಾಲ್‌ನ ಒರಟು ಧ್ವನಿ ನಮ್ಮೆದೆಯೊಳಗೆ ಗಾಜಿನ ಚೂರುಗಳಂತೆ ಇಳಿಯುತ್ತಿತ್ತು. ಹಣೆ ಯಿಂದ ಸುರಿಯುತ್ತಿರುವ ಬೆವರು ಕನ್ವರ್‌ಲಾಲ್‌ನ ಕ್ರೌರ್ಯಕ್ಕೋ, ಥಿಯೇಟರ್‌ನ ವಾತಾವರಣಕ್ಕೋ ಗೊತ್ತಿಲ್ಲ. ಇಡೀ ಚಿತ್ರವನ್ನು ನೋಡಿ ಬಂದ ನಾನು ಮನೆ ಯಲ್ಲಿ ಅದೇನೋ ದುಸ್ವಪ್ನ ಬಿದ್ದವನಂತೆ ಗುಮ್ಮನೆ ಕೂತಿದ್ದೆ. ಮನೆಯವರಾ ರಿಗೂ ಆ ಸಣ್ಣ ವಯಸ್ಸಲ್ಲಿ ನಾನು ಕದ್ದುಮುಚ್ಚಿ ಸಿನಿಮಾ ನೋಡೋದಕ್ಕೆ ಹೋಗೋದು ಗೊತ್ತಿಲ್ಲ. ಇಂದಿಗೂ ನೆನಪಿದೆ. ಅಂದು ಸುಶೀಲ್ ಕುಮಾರ್‌ನ ಚೀರಾಟ ನನ್ನ ರಾತ್ರಿಯ ನಿದ್ದೆಯನ್ನು ಅಲುಗಾಡಿಸಿತ್ತು. ಕರೆಂಟ್ ಶಾಕ್ ಮತ್ತು ಉಗುರುಗಳನ್ನು ಕೀಳುವ ಚಿತ್ರಹಿಂಸೆಗಳ ನಡುವೆ ನಾಯಕನ ಚೀರಾಟ...ಅವುಗಳ ನಡುವೆಯೂ ಆತನ ಆತ್ಮಸ್ಥೆೃರ್ಯ, ಗರ್ಭಿಣಿ ಪತ್ನಿಯನ್ನು ಸಾಯಿಸುತ್ತಿದ್ದರೂ ಅಸಹಾಯಕನಾಗಿ ನರಳುವ ಸುಶೀಲ್‌ಕುಮಾರ್, ಆತನ ಆಕ್ರಂದನ.. ಓಹ್! ಅದಾಗಲೇ ಡಾ.ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಬದಲಿಗೆ ನಾನು ನನ್ನ ನಾಯಕನನ್ನು ಆರಿಸಿ ಕೊಂಡಿದ್ದೆ. ಆತನ ಹೆಸರೇ ಅಂಬರೀಷ್!

 ಅದು ಡಾ. ರಾಜ್‌ಕುಮಾರ್ ಕನ್ನಡ ಚಿತ್ರೋದ್ಯಮವನ್ನು ಆಳುತ್ತಿದ್ದ ಕಾಲ. ಶ್ರೀಕೃಷ್ಣದೇವರಾಯ, ಮಯೂರ, ಗಂಧದಗುಡಿ ಹೀಗೆ ರಾಜ್ ಕುಮಾರ್ ಸಿನಿಮಾದಲ್ಲೇ ಒಂದು ಕಲ್ಪನೆಯ ಕನ್ನಡ ನಾಡನ್ನು ಕಟ್ಟಿದ್ದರು. ಮತ್ತು ನಾವಿಂದು ಅದೇ ಕಲ್ಪನೆಯ ನಾಡನ್ನೇ ನಮ್ಮದೆಂದು ಒಪ್ಪಿ ಕೊಂಡು ಅದರಲ್ಲಿ ಬಾಳುತ್ತಿದ್ದೇವೆ. ಇಂತಹ ಹೊತ್ತಿನಲ್ಲಿ ಗಾಂಧಿನಗರಕ್ಕೆ ನಾಗರಹಾವಿನ ಪ್ರವೇಶವಾಯಿತು. ಆತನ ಹೆಸರು ವಿಷ್ಣುವರ್ಧನ್. ಅಂದು ಯುವ ತಲೆಮಾರು ರಾಜ್‌ಕುಮಾರ್‌ನನ್ನು ಅಧಿಕತವಾಗಿ ಒಪ್ಪಿಯೇ ಬಿಟ್ಟಿತ್ತು. ಅವರಿಗೆ ಪರ್ಯಾಯ ವೆನ್ನುವುದೇ ಇರಲಿಲ್ಲ. ಇಂತಹ ಹೊತ್ತಿನಲ್ಲಿ ಕೆಲವು ಸ್ವರಗಳು ಭಿನ್ನವಾಗತೊಡಗಿ ದವು. ‘‘ನಾನು ವಿಷ್ಣುವರ್ಧನ್ ಅಭಿಮಾನಿ’’ ಎಂಬ ಬಂಡಾಯದ ಮಾತುಗಳು ಕೆಲವರ ಸಹನೆಯನ್ನು ಕೆಡಿಸತೊಡ ಗಿತು. ಶಾಲೆಗಳಲ್ಲೇ ಯುವಕರೊಳಗೆ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಗುಂಪುಗಳು ಹುಟ್ಟಿ ಕೊಂಡವು. ವಿಶೇಷವೆಂದರೆ, ರಾಜ್ ಕುಮಾರ್ ನನ್ನು ಬಿಟ್ಟು ವಿಷ್ಣುವರ್ಧನ್‌ನನ್ನು ಇಷ್ಟಪಡುವು ದೆಂದರೆ ಅದೊಂದು ರೀತಿ, ಸಂಪ್ರ ದಾಯವನ್ನು ಬಿಟ್ಟು ಹೊಸತನಕ್ಕೆ ತುಡಿಯುವ ಸಂಗತಿ ಯಾಗತೊಡಗಿತು. ಹೊಸತನ್ನು ಆಲೋಚಿ ಸುತ್ತೇವೆ ಎಂದು ಭಾವಿಸಿದವರು ವಿಷ್ಣುವರ್ಧನ್‌ನ ಫೋಟೋ ಹಾಕಿಕೊಂಡು ತಿರುಗಾಡತೊಡಗಿ ದರು. ನಮ್ಮ ನಮ್ಮ ಅಭಿಮಾನಿಗಳನ್ನು ನಾವು ಗುರುತಿಸುವುದು ಪುಸ್ತಕಕ್ಕೆ ಹಾಕುವ ಬೈಂಡ್‌ಗಳ ಮೂಲಕ. ಆಗ ‘ರೂಪತಾರ’ ಮತ್ತು ‘ವಿಜಯ ಚಿತ್ರ’ ಎನ್ನುವ ಎರಡು ಸಿನಿಮಾ ಪತ್ರಿಕೆಗಳಿದ್ದವು. ಹಾಗೆಯೇ ‘ಪ್ರಜಾಮತ’ ಎಂಬ ದೊಡ್ಡ ಸೈಜಿನ ವಾರ ಪತ್ರಿಕೆಯ ಮುಖಪುಟದಲ್ಲಿ ಸಿನಿಮಾ ತಾರೆಯರ ಫೋಟೋವನ್ನೇ ಹಾಕುತ್ತಿದ್ದರು. ಅದನ್ನು ನಾವು ನೋಟ್‌ಬುಕ್‌ಗಳಿಗೆ ಹೊದಿಸಿ ಕೊಳ್ಳುತ್ತಿದ್ದೆವು. ಆಗೆಲ್ಲ ರಾಜ್‌ಕುಮಾರ್ ಹೊದಿಕೆಗಳಿಗೆ ಬೇಡಿಕೆ ಗಳಿತ್ತು. ಆದರೆ ಏಕಾಏಕಿ ವಿಷ್ಣುವರ್ಧನ್ ವಿದ್ಯಾರ್ಥಿಗಳ ನೋಟ್‌ಬುಕ್ ಗಳಲ್ಲಿ ಕಾಣಿಸಿಕೊಳ್ಳತೊಡ ಗಿದರು. ಬಂಧನದ ಬಳಿಕವಂತೂ ಎಲ್ಲರೂ ಕ್ಯಾನ್ಸರ್ ಪೇಶಂಟ್ ಗಳಂತೆಯೇ ಕೆಮ್ಮುತ್ತಾ ಓಡಾಡುತ್ತಿ ದ್ದರು ಬಿಡಿ.


    ಇಂತಹ ಹೊತ್ತಿನಲ್ಲೇ ನಾನು ಪ್ರೀತಂ ಟಾಕೀಸ್‌ನಲ್ಲಿ ‘ಅಂತ’ ಪಿಚ್ಚರ್ ನೋಡಿದ್ದು. ಈ ಸಿನಿಮಾವೋ ಅಥವಾ ಅಂಬರೀಷ್ ಅಭಿನ ಯವೋ ನನ್ನನ್ನು ಸಂಪೂರ್ಣ ಅಲುಗಾಡಿಸಿತ್ತು. ರಾಜ್‌ಕುಮಾರ್‌ನ ಸಜ್ಜನಿಕೆ, ವಿಷ್ಣುವರ್ಧನ್‌ನ ಆಪ್ತತೆ ಎಲ್ಲಕ್ಕಿಂತಲೂ ಹೆಚ್ಚು ಇಷ್ಟವಾಯಿತು ಅಂಬರೀಷ್‌ರ ಆಕ್ರೋಶ. ಬಹುಶಃ ಅದು ಅದಾಗಲೇ ನನ್ನೊಳಗೆ ತಣ್ಣಗೆ ಮಲಗಿದ್ದ ಅರಾಜಕ ನನ್ನು ಎಚ್ಚರಿಸಿತ್ತು ಎಂದು ಕಾಣುತ್ತದೆ. ಈ ಚಿತ್ರದ ಬಳಿಕ ನಾನು ಚಕ್ರವ್ಯೆಹವನ್ನು ನೋಡಿದೆ. ಒಂದು ರೀತಿಯ ಜನಪ್ರಿಯ ರಾಜಕೀಯ ಚಿಂತನೆ ಯನ್ನು ಮೊತ್ತ ಮೊದಲಾಗಿ ಬಿತ್ತಿದ್ದು ಅಂಬರೀಷ್ ಚಿತ್ರಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕಾರಣಿಗಳೆಲ್ಲ ಭ್ರಷ್ಟರು. ಮತ್ತು ನಾಯಕ ಅವರ ವಿರುದ್ಧ ಹೋರಾಡುವುದು ಅನಿವಾರ್ಯ ಎನ್ನುವ ಕಪ್ಪು-ಬಿಳುಪು ರಾಜಕೀಯ ಚಿತ್ರವೊಂದು ಅಂಬರೀಷ್ ಮೂಲಕ ನನ್ನೊಳಗೆ ಅಚ್ಚೊತ್ತಿತು. ಅಂತ, ಚಕ್ರವ್ಯೆಹಗಳ ಬಳಿಕ ನಾನು ಅಂಬರೀಷ್ ಅಭಿಮಾನಿಯಾದೆ. ಇದೇ ಸಂದ ರ್ಭದಲ್ಲಿ ಅಂಬಿಕಾ ಎನ್ನುವ ನಟಿ ಅಂಬರೀಷ್ ನನ್ನು ವಿವಾಹವಾಗುತ್ತಾಳೆಯೋ ಇಲ್ಲವೋ ಎಂದು ನಾನು ತಲೆಕೆಡಿಸುತ್ತಾ ಓಡಾಡಿದೆ. ಗೆಳೆಯ ರೊಂದಿಗೆ ಆ ಬಗ್ಗೆ ಚರ್ಚಿಸುತ್ತಿದ್ದೆೆ. ಗಲಾಟೆ ಮಾಡುತ್ತಿದ್ದೆ. ಅದೇ ಸಂದರ್ಭದಲ್ಲಿ ಗೀತಾ ಮತ್ತು ಅಂಬರೀಷ್ ಜೋಡಿ ಕೂಡ ಕ್ಲಿಕ್ ಆಗಿತ್ತು. ಅಂಬರೀಷ್ ಯಾರನ್ನು ವರಿಸುತ್ತಾರೆ? ಅಂಬಿಕಾಳನ್ನೋ, ಗೀತಾಳನ್ನೋ ಎನ್ನುವುದು ನಾವು ಒಂದಿಷ್ಟು ಮಂದಿ ಕೂತು ಚರ್ಚಿಸುತ್ತಿದ್ದೆವು. ಇದೆಲ್ಲ ನಮ್ಮ ಪ್ರೌಢಶಾಲಾ ಅವಧಿಯಲ್ಲಿ ಎನ್ನು ವುದು ಮುಖ್ಯ. ಅಂಬಿಕಾಳ ಮೇಲೆ ನನಗೇಕೋ ಒಂದಿಷ್ಟು ಒಲವು. ಯಾಕೆಂದರೆ ಅಂಬರೀಷ್‌ನ ತರಹನೇ ಫೈಟ್ ಮಾಡುವುದರಲ್ಲೂ ಅಂಬಿಕಾ ಎಕ್ಸ್‌ಪರ್ಟ್. ಜೋಡಿ ಸರಿಯಾಗುತ್ತೆ ಎನ್ನುವುದು ನನ್ನ ಅನಿಸಿಕೆ. ಪತ್ರಿಕೆಗಳಲ್ಲಿ ಅದಾಗಲೇ ‘ಅಂಬ-ಅಂಬಿ’ ಜೋಡಿಗಳ ಬಗ್ಗೆ ಬಹಳಷ್ಟು ಬರೆಯಲಾಗುತ್ತಿತ್ತು. ಒಟ್ಟಿನಲ್ಲಿ ಪಠ್ಯಕ್ಕಿಂತಲೂ ಹೆಚ್ಚು ಕ್ಲಿಷ್ಟ ವಿಷಯವಾಗಿತ್ತು ಅಂಬರೀಷ್ ಮದುವೆ. ಕೊನೆಗೂ ಅವರು ಸುಮಲತಾರನ್ನು ಮದುವೆಯಾದದ್ದು ಇತಿಹಾಸ.


  ಪುಟ್ಟಣ್ಣ ಕಣಗಲ್ ಅವರ ‘ನಾಗರಹಾವು’ ಚಿತ್ರದ ಜಲೀಲ್‌ನ ಪಾತ್ರ ನಿಜಕ್ಕೂ ಅದು ಅಂಬರೀಷ್ ವ್ಯಕ್ತಿತ್ವಕ್ಕಾಗಿಯೇ ಕೆತ್ತಿಟ್ಟ ಪಾತ್ರ. ‘ಏ ಬುಲ್ ಬುಲ್, ಮಾತಾಡಕಿಲ್ವಾ...’ ಎನ್ನುವ ಅಂಬರೀಷ್ ಮತ್ತು ಅಂತಹ ವ್ಯಕ್ತಿತ್ವವಿರುವ ಪಾತ್ರಗಳು ಅಂಬರೀಷ್ ಅವರಿಗೆ ಒಪ್ಪುತ್ತಿತ್ತು. ‘ಪಡುವಾರಳ್ಳಿ ಪಾಂಡವರು’ ಚಿತ್ರದಲ್ಲೂ ಅಂಬರೀಷ್‌ಗೆ ಒಳ್ಳೆಯ ಪಾತ್ರವೇ ಸಿಕ್ಕಿತು. ಅವರ ಮುಖ ಮತ್ತು ಧ್ವನಿಯೊಳಗಿರುವ ಒರಟುತನ, ಆಕ್ರೋಶ ಮತ್ತು ಸಹಜ ಬಂಡಾಯವನ್ನು ಗುರುತಿಸಿಯೇ ಅವರು ಪಾತ್ರಗಳಿಗೆ ಆ ಸಂದ ರ್ಭದಲ್ಲಿ ಆಯ್ಕೆಯಾಗುತ್ತಿದ್ದರು. ಆ ಕಾರಣಕ್ಕೆ ಆರಂಭದಲ್ಲಿ ಅವರು ವಿಲನ್ ಆಗಿಯೂ ಕೆಲವು ಚಿತ್ರಗಳಲ್ಲಿ ಗುರುತಿಸಬೇಕಾಯಿತು. ಇದೇ ಸಂದರ್ಭದಲ್ಲಿ, ತನಗೆ ಸಿಗುತ್ತಿರುವ ಏಕತಾ ನತೆಯ ಪಾತ್ರಗಳಿಗೆ ಸವಾಲು ಹಾಕಿ ಅವರು ‘ರಂಗನಾಯಕಿ’ ಚಿತ್ರದಲ್ಲಿ ನಟಿಸಿದರು. ಇದರಲ್ಲಿ ರಂಗನಾಯಕಿ ಚಿತ್ರದ ನಾಯಕಿ ಆರತಿಗೆ ಮಾರ್ಗದರ್ಶಕ ಅಣ್ಣನಾಗಿ ಅವರು ಕಾಣಿಸಿ ಕೊಳ್ಳುತ್ತಾರೆ. ಮತ್ತು ಆರತಿಯನ್ನು ಬಿಟ್ಟರೆ ಈ ಚಿತ್ರದಲ್ಲಿ ಭಾವ ನಾತ್ಮಕವಾಗಿ ತಟ್ಟುವುದು ಅಂಬರೀಷ್ ಅವರೇ. ಅಂಬರೀಷ್‌ನ ಒಡಲಾಳದಲ್ಲಿ ಒಂದು ಒಳ್ಳೆಯತನ, ಸಜ್ಜನಿಕೆ ಇತ್ತು. ಭಾವನಾತ್ಮಕ ಪಾತ್ರದಲ್ಲಿ ಅದು ಅವರೊಳಗಿಂದ ವ್ಯಕ್ತ ವಾಗುತ್ತಿತ್ತು. ಕನ್ವರ್ ಲಾಲ್ ಪಾತ್ರವನ್ನು ನಿರ್ವಹಿಸಿದ ಅಂಬರೀಷ್ ಇವರೇನಾ ಎಂದು ಅಚ್ಚರಿ ಪಡುವಷ್ಟು ಭಾವುಕ ಸನ್ನಿವೇಶಗಳಲ್ಲಿ ಅವರು ನಮ್ಮನ್ನು ಮುಟ್ಟುತ್ತಿದ್ದರು. ಏಳು ಸುತ್ತಿನ ಕೋಟೆ, ಮಸಣದ ಹೂವು ಚಿತ್ರಗಳು ಅವರೊ ಳಗಿನ ಕಲಾವಿದನನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದ ಚಿತ್ರಗಳು. ಅಂಬರೀಷ್ ಕೌಟುಂಬಿಕ ಚಿತ್ರದಲ್ಲೂ ಮಿಂಚಿದರು. ಅವರ ಮಮತೆಯ ಮಡಿಲು, ಒಲವಿನ ಉಡುಗೊರೆ ಮತ್ತು ದೇವರೆಲ್ಲಿದ್ದಾನೆ ಚಿತ್ರಗಳು ಒಂದು ಕಾಲದಲ್ಲಿ ಎಲ್ಲ ಹೆಂಗಳೆಯರ ಕಣ್ಣೀರನ್ನು ತನ್ನದಾಗಿಸಿಕೊಂಡಿತು. ಇದರ ಯಶಸ್ಸಿನಿಂದ ಕೆಲ ಕಾಲ ಅಂಬರೀಷ್ ಮಸಾಲೆ ಚಿತ್ರ ಗಳಿಂದಲೇ ದೂರ ಉಳಿದರು. ಆದರೂ ಅಂಬರೀಷ್ ಎಂದರೆ ಇಂದಿಗೂ ಎಲ್ಲರೂ ಗುರುತಿಸು ವುದು ಅಂತ ಚಿತ್ರದ ಕನ್ವರ್‌ಲಾಲ್‌ನನ್ನೇ. ಹಾಗೆಯೇ ನಾಗರಹಾವು, ಮಗಾಲಯ, ಹದಯ ಹಾಡಿತು, ನ್ಯೂ ಡೆಲ್ಲಿ ಡೈರಿ ಚಿತ್ರಗಳು ಇಂದಿಗೂ ಕಾಡುವಂತಹವುಗಳು. ಅಂಬರೀಷ್ ಚಿತ್ರೋದ್ಯಮದಲ್ಲಿದ್ದೇ ಜನರಿಗೆ ಹತ್ತಿರವಾಗಿದ್ದರು. ತಮ್ಮ ದಾನಧರ್ಮ ಇತ್ಯಾದಿ ಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಅವರು ಯಾವ ಕಾರಣಕ್ಕೂ ರಾಜಕೀಯಕ್ಕೆ ಬರಬಾರದಿತ್ತು. ರಾಜಕೀಯಕ್ಕೆ ಬೇಕಾದ ಶಿಸ್ತು, ಸಮಯ ಪ್ರಜ್ಞೆ ಅವರಲ್ಲಿ ಇದ್ದಿರಲಿಲ್ಲ. ಕುಡಿತ ಮತ್ತು ಸ್ವೇಚ್ಛೆಯ ಬದುಕು ಅವರನ್ನು ಅದಾಗಲೇ ಮುಕ್ಕಿ ತಿಂದಿತ್ತು. ಬರೇ ಅಭಿಮಾನಿಗಳ ಹಾರೈಕೆಯಿಂದ ರಾಜಕೀಯ ಮಾಡಲು ಸಾಧ್ಯವೂ ಇಲ್ಲ. ಈ ಕಾರಣದಿಂದಲೇ ಎಂಪಿ ಯಾಗಿ ಆಯ್ಕೆಯಾದರೂ ಯಾವ ಸಾಧನೆ ಯನ್ನೂ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾಗುವ ಕೆಲವು ದಿನಗಳ ಮುಂಚೆ ಸ್ಪೀಕರ್ ಕೈಯಿಂದ ತರಾಟೆಗೊಳಗಾಗಿದ್ದರು. ‘‘ನಾವು ಸದನಕ್ಕೆ ಬರುವುದು ಅಪರೂಪ. ಆದುದರಿಂದ ಒಂದಿಷ್ಟು ಹೆಚ್ಚು ಮಾತನಾಡಲು ಅವಕಾಶ ನೀಡಬೇಕು’’ ಎಂಬಂತಹ ಮಾತುಗಳನ್ನು ಸ್ಪೀಕರ್ ಮುಂದೆ ಆಡಿದ್ದರು. ಕಾಗೋಡು ತಿಮ್ಮಪ್ಪ ಇದರಿಂದ ಸಿಟ್ಟುಗೊಂಡು ‘‘ಸದನದ ಗಾಂಭೀರ್ಯವನ್ನು ಕಾಪಾಡಬೇಕು’’ ಎಂದಿದ್ದರು. ಮತ್ತು ಸದನಕ್ಕೆ ಹಾಜರಾಗುವುದು ಶಾಸಕರ, ಸಚಿವರ ಕರ್ತವ್ಯ ಎಂದೂ ಕಿವಿ ಮಾತು ಹೇಳಿದ್ದರು. ಆದರೆ ಇದೀಗ ನೋಡಿದರೆ ಅಂಬರೀಷ್ ಆರೋಗ್ಯ ತೀರಾ ಹದಗೆಟ್ಟಿದೆ. ಅವರ ಅಭಿಮಾನಿಗಳೆಲ್ಲ ‘ಮಾತನಾಡಿ ಮಾತನಾಡಿ’ ಎಂದು ಹೇಳು ತ್ತಿದ್ದಾರೆ. ಆದರೆ ಅವರು ಮಾತನಾಡುವುದಕ್ಕೆ ಒಪ್ಪದೆ ಹಟ ಮಾಡುತ್ತಿದ್ದಾರೆ. ಸ್ಪೀಕರ್ ಅವರೇ ಈಗ ಜೋರಾಗಿ ಕೇಳಬೇಕು ‘ಏ ಬುಲ್ ಬುಲ್ ಮಾತಾಡಕಿಲ್ವಾ?’

Wednesday, March 5, 2014

ಇನ್ನಷ್ಟು ಸರಸ್ವತಿಯರನ್ನು ಸೃಷ್ಟಿಸದಿರೋಣ...

ರಾಮ್ ತೇರಿ ಗಂಗಾ ಮೈಲಿ
ಭಾರತ ನದಿಗಳ ನೆಲ. ಗಂಗಾ, ಯಮುನಾ, ಸಿಂಧು, ಕಾವೇರಿಯ ಜೊತೆ ಜೊತೆಗೆ ನಾವು ಸರಸ್ವತಿಯ ಹೆಸರನ್ನೂ ಹೇಳುತ್ತೇವೆ. ಆದರೆ ಆ ನದಿ ಮಾತ್ರ ಇಂದು ನಮ್ಮ ನಡುವೆ ಇಲ್ಲ. ಋಗ್ವೇದ ಕಾಲದಲ್ಲಿ ಹರಿಯುತ್ತಿದ್ದಳೆನ್ನಲಾದ ಸರಸ್ವತಿ, ಈಗ ಗುಪ್ತಗಾಮಿನಿಯಾಗಿ ಈ ನೆಲದಲ್ಲಿ ಹರಿಯುತ್ತಿದ್ದಾಳೆ ಎನ್ನುವುದು ಭಾರತೀಯರ ನಂಬಿಕೆ. ಬರೇ ನಂಬಿಕೆ ಎನ್ನುವಂತಿಲ್ಲ. ರಾಜಸ್ತಾನ ಭಾಗದಲ್ಲಿ ಸರಸ್ವತಿ ನದಿ ಹರಿಯುತ್ತಿದ್ದ  ಕುರಿತಂತೆ ಹಲವು ಸಂಶೋಧಕರು ಸಾಕ್ಷಗಳನ್ನು ನೀಡುತ್ತಾರೆ. ಇಂದೂ ಆಕೆ ನೆಲದ ಗರ್ಭದೊಳಗೆ ಹರಿಯುತ್ತಲೇ ಇದ್ದಾಳೆ ಎಂದು ನಂಬುವವರೂ ಇದ್ದಾರೆ.ಹಾಗೆ ಅಜ್ಞಾತವಾಗಿ ಗುಪ್ತವಾಗಿ ಹರಿಯುವಂತಹ ಸ್ಥಿತಿಯನ್ನು ಆಕೆಗೆ ನಿರ್ಮಿಸಿದವರು ಯಾರು ಎನ್ನುವುದು ಮಾತ್ರ ನಿಗೂಢ ವಾಗಿದೆ. ಸರಸ್ವತಿ ಗುಪ್ತವಾಗಿ ಹರಿಯುತ್ತಿದ್ದಾಳೆಯೋ ಇಲ್ಲವೋ ಅನಂತರದ ಮಾತು. ಆದರೆ, ಅಂತಹದೊಂದು ನದಿ ಇಂದು ರಾಜಸ್ತಾನ ಭಾಗದಲ್ಲಿ ಹರಿಯುತ್ತಿದ್ದರೆ ಆ ಭಾಗ ಹಚ್ಚ ಹಸಿರಾಗಿರುತ್ತಿತ್ತು ಎನ್ನುವುದನ್ನು ನಾವು ನಿರಾಕರಿಸುವಂತಿಲ್ಲ.

ಗಂಗಾ ನದಿಯನ್ನು ಹೊರತುಪಡಿಸಿದ ಭಾರತವನ್ನು ಕಲ್ಪಿಸಲು ಸಾಧ್ಯವಿಲ್ಲ. ಆದರೆ ಇಡೀ ದೇಶದ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ವಲಯಗಳು ಕೆಟ್ಟು ಕೆರ ಹಿಡಿಯುತ್ತಿರುವುದಕ್ಕೆ ರೂಪಕವಾಗಿ ಇಂದು ಗಂಗಾ ನದಿ ಹರಿಯುತ್ತಿದೆ. ನಮ್ಮ ಪುಣ್ಯ ಕ್ಷೇತ್ರಗಳ ತಡಿಯಲ್ಲಿ ಹರಿಯುವ ಆಕೆಯ ಸ್ಥಿತಿಯನ್ನೊಮ್ಮೆ ಕಣ್ಣು ಮತ್ತು ಹದಯವನ್ನು ತೆರೆದು ನೋಡಬೇಕಾಗಿದೆ. ಒಂದೆಡೆ ಧರ್ಮದ ತ್ಯಾಜ್ಯಗಳು, ಇನ್ನೊಂದೆಡೆ ಅಭಿವದ್ಧಿಯ ತ್ಯಾಜ್ಯಗಳು. ಒಂದು ನದಿಯನ್ನು ತ್ಯಾಜ್ಯ ಹರಿಯ ಬಿಡುವ ಚರಂಡಿಯನ್ನಾಗಿ ಪರಿವರ್ತಿಸಿದ ಮನುಷ್ಯನ ಕ್ರೌರ್ಯಕ್ಕೆ ಎಣೆಯಿಲ್ಲ. ಆಕೆ ತನ್ನ ಅಸ್ತಿತ್ವವನ್ನು ಉಳಿಸಿ ಕೊಳ್ಳಬೇಕಾದರೆ ಸರಸ್ವತಿಯಂತೆ ಗುಪ್ತಗಾಮಿನಿ ಯಾಗಿ ಹರಿಯುವುದಷ್ಟೇ ಉಳಿದಿರುವ ದಾರಿ. ಇದು ಗಂಗೆಯ ಕತೆ ಮಾತ್ರವಲ್ಲ. ಈ ದೇಶದ ಎಲ್ಲ ನದಿಗಳ ಮೇಲೂ ಹಣವಂತರ ಕಣ್ಣು ಬಿದ್ದಿದೆ. ಹರಿಯುತ್ತಿರುವುದು ನದಿಗಳಲ್ಲ, ಹಣ ಎನ್ನುವುದನ್ನು ಕಂಡುಕೊಂಡಿರುವ ರಾಜಕಾರಣಿಗಳು ಮತ್ತು ಕಾರ್ಪೊರೇಟ್ ಜನಗಳು ನದಿಗಳ ಹರಾಜಿಗೆ ಇಳಿದಿದ್ದಾರೆ. ಇದೇನೂ ಅತಿಶಯೋಕ್ತಿಯಲ್ಲ. ಈ ಹಿಂದೆ ಮಹಾರಾಷ್ಟ್ರದಲ್ಲಿ ನೀರಾ ನದಿ ಮತ್ತು ಅದರ ಡ್ಯಾಂನ್ನು ಸಂಪೂರ್ಣವಾಗಿ ಹರಾಜುಹಾಕಲು ಮುಂದಾಗಿರುವುದು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ಬರೇ ಒಂದು ಸಾವಿರ ಕೋಟಿ ರೂಪಾಯಿಗೆ ಸರಕಾರ ಈ ಹರಾಜಿಗೆ ಮುಂದಾಗಿತ್ತು. ಮತ್ತು ಒಂದು ನದಿ ಮತ್ತು ಆ ನೀರಿನ ಹಕ್ಕನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿತ್ತು. ಇಂತಹ ಸ್ವಾರ್ಥ ಮನುಷ್ಯರಿಂದ ಪಾರಾಗುವುದಕ್ಕೆ ನದಿಗಳಿಗೆ ಒಂದೇ ದಾರಿ. ಭೂಮಿಯ ಹೊರಗೆ ಹರಿಯುವ ಬದಲು, ಮನುಷ್ಯರ ಕಣ್ಣಿಗೆ ಬೀಳದಂತೆ ಗುಪ್ತಗಾಮಿನಿಯಾಗಿ ಹರಿಯುವುದು. ಇತ್ತೀಚೆಗೆ ಕರಾವಳಿಯಲ್ಲಿ ಎತ್ತಿನ ಹೊಳೆ ಭಾರೀ ಸುದ್ದಿಯನ್ನು ಸಷ್ಟಿಸುತ್ತಿದೆ. ರಾಜಕಾರಣಿಗಳು ತೀರಾ ಲಘುವಾಗಿ ಮಾತನಾಡುತ್ತಿದ್ದರೆ, ಕರಾವಳಿಯ ಜನರು ಮಾತ್ರ ಭುಗಿಲೆದ್ದಿದ್ದಾರೆ. ಕರಾವಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಭಾಗದಲ್ಲಿ ಸ್ವಯಂಪ್ರೇರಿತ ಬಂದ್ ನಡೆಯಿತು. ಎಲ್ಲ ಪಕ್ಷ, ಧರ್ಮಗಳ ಜನರು ಒಂದಾಗಿ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿದರು. ರಾಜಕಾರಣಿ ಗಳಿಗೋ ಈ ಯೋಜನೆಯಲ್ಲಿ ಹರಿಯುವ ಹಣದ ಕಡೆಗೆ ಕಣ್ಣು. ಆದರೆ ಆ ಮೂಲಕ ಹರಿಯುತ್ತಿರುವ ಒಂದು ನದಿಯನ್ನೇ ನಾವು ಕೊಲ್ಲುವುದಕ್ಕೆ ಹೊರಟಿದ್ದೇವೆ ಎನ್ನುವ ಅರಿವು ಇವರಿಗೆ ಇದ್ದಂತಿಲ್ಲ. ಅಥವಾ ಅದು ಅವರಿಗೆ ಗಂಭೀರ ವಿಷಯವಾಗಿಲ್ಲ.
 
ಒಂದು ನದಿಯನ್ನು ಸಾಯಿಸುವುದು ನಮ್ಮಿಂದ ಸಾಧ್ಯವೆ? ಎಂಬ ಪ್ರಶ್ನೆಗೆ ಉತ್ತರವಾಗಿ ನಮ್ಮ ಮುಂದೆ ಚೀನಾ ಇದೆ. ನದಿಯನ್ನು ಅಪ್ಪಟ ಭೌತಿಕ ಕಣ್ಣಲ್ಲಿ ನೋಡಿದ ಪರಿಣಾಮ ಇಲ್ಲಿ ಕಣ್ಮರೆಯಾಗಿ ರುವ ನದಿಗಳ ಸಂಖ್ಯೆ ಎಷ್ಟು ಗೊತ್ತೆ? ಸುಮಾರು 28 ಸಾವಿರ ನದಿಗಳು! ಸಣ್ಣ ಪುಟ್ಟ ನದಿಗಳೂ ಸೇರಿದಂತೆ ಸಹಸ್ರಾರು ನದಿಗಳು ಇಲ್ಲಿ ಕಣ್ಮರೆಯಾಗಿವೆ. ಮಾತ್ರವಲ್ಲ, ನದಿಗಳನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿರುವುದರ ಪರಿಣಾಮವಾಗಿ ಹಲವು ಕಿರುನದಿಗಳು ಅವಸಾನದ ಅಂಚಿನಲ್ಲಿವೆ. ನದಿಯೆಂದರೆ ಬರೇ ನೀರಲ್ಲ. ಲಕ್ಷಾಂತರ ಜಲಚರಗಳನ್ನು ಪೊರೆವ ತಾಯಿ ನದಿ. ಹಾಗೆಯೇ ಇಕ್ಕೆಡೆಗಳನ್ನು ಹಸಿರಾಗಿಸುತ್ತಾ, ಆ ಮೂಲಕ ಪ್ರಾಣಿ ಪಕ್ಷಿಗಳಿಗೆ ನೆಲೆಯನ್ನು ಒದಗಿಸಿಕೊಡುತ್ತಾ ಹೋಗುತ್ತದೆ. ಒಂದು ನದಿಯನ್ನು ಕೊಲ್ಲುವು ದೆಂದರೆ, ಪಕ್ಷಿ ಸಂಕುಲವನ್ನು, ಕಾಡುಗಳನ್ನು, ಕೀಟಗಳನ್ನು ಕೊಲ್ಲುವುದೆಂದು ಅರ್ಥ. ಅಷ್ಟೇ ಅಲ್ಲ, ಹರಿಯುವ ನದಿ ಕಟ್ಟ ಕಡೆಗೆ ಸಮುದ್ರ ಸೇರುವುದೆಂದರೆ ವ್ಯರ್ಥ ಅಲ್ಲವೇ ಅಲ್ಲ. ಸಮುದ್ರ ಸೇರುವ ಮೂಲಕ ಒಂದು ನದಿ ಮುಗಿದು ಹೋಗುವುದಿಲ್ಲ. ಸಮುದ್ರದ ಚೈತನ್ಯಕ್ಕೆ ನದಿಗಳ ಪಾತ್ರವೂ ಇದೆ. ಹಾಗೆಯೇ ಮಳೆ, ಬೆಳೆ ಇತ್ಯಾದಿಗಳ ಜೊತೆಗೂ ಅದು ಸಂಬಂಧವನ್ನು ಹೊಂದಿದೆ. ಜೀವ ಸರಪಣಿಯನ್ನು ಚಿಂದಿಯಾಗಿ ಸುವ ಮನುಷ್ಯ ತಾನೊಬ್ಬನೇ ಈ ಜಗದಲ್ಲಿ ಬದುಕುತ್ತೇನೆ ಎಂದು ಹೊರಟರೆ ಅದರ ಅನಾಹುತವನ್ನು ಅನುಭವಿಸಲೇ ಬೇಕಾಗುತ್ತದೆ. ನಾವು ನದಿಯನ್ನು ಮುಟ್ಟುವುದಿಲ್ಲ. ಬರೇ ನೀರನ್ನಷ್ಟೇ ಪೈಪ್ ಮೂಲಕ ಸಾಗಿಸುತ್ತೇವೆ ಎನ್ನುವ ಮೂರ್ಖ ರಾಜಕಾರಣಿಗಳೂ ಇದ್ದಾರೆ.ಒಂದು ನದಿಗೂ ಡ್ರೈನೇಜಿಗೂ ವ್ಯತ್ಯಾಸ ಇದೆ. ನದಿಯೆಂದರೆ ಬರೀ ಹರಿಯುವ ನೀರಲ್ಲ. ಅದೊಂದು ಚೈತನ್ಯ. ಜೀವವಿಕಾಸದಲ್ಲಿ ನದಿಗಳಿಗೂ ಪಾತ್ರವಿತ್ತು. ಮತ್ತು ಇದೆ. ಗಣಿಗಾರಿಕೆ ಸೇರಿದಂತೆ ಅಭಿವದ್ಧಿಯ ಮೋಹಕ್ಕೆ ಸಿಲುಕಿ ನದಿ ಪಾತ್ರಗಳನ್ನೇ ಒಡೆದು ಹಾಕಿದ ಪರಿಣಾಮವನ್ನು ನಾವು ಇತ್ತೀಚೆಗೆ ಉತ್ತರಾಖಂಡದಲ್ಲಿ ನೋಡಿದ್ದೇವೆ. ಇದೀಗ ಇಂತಹ ನೂರಾರು ಉತ್ತರಾಖಂಡಗಳನ್ನು ಸಷ್ಟಿಸುವುದಕ್ಕೆ ಹೊರಟಿದ್ದೇವೆ. ಬಹತ್ ಅಣೆಕಟ್ಟುಗಳು ಮತ್ತು ನದಿಜೋಡಣೆಗಳಿಂದ ಆಗುವ ಅನಾಹುತಗಳ ಕುರಿತಂತೆ ಈಗಾಗಲೇ ವಿಶ್ವದ ಬಹತ್ ರಾಷ್ಟ್ರಗಳು ಅರಿತುಕೊಂಡಿವೆ. ಮಾತ್ರವಲ್ಲ, ಅಣೆಕಟ್ಟುಗಳ ಪ್ರಮಾಣವನ್ನು ಅದು ಇಳಿಸುತ್ತಿವೆ. ಆದರೆ ಭಾರತ ಮಾತ್ರ, ಈ ಯೋಜನೆಗಳ ಕುರಿತಂತೆ ಇತ್ತೀಚೆಗೆ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸುತ್ತಿದೆ. ಭಾರತದಲ್ಲಿ ನದಿ ಜೋಡಣೆ ಯೋಜನೆ ಇಂದು ನಿನ್ನೆಯ ಕಲ್ಪನೆಯಲ್ಲ. 19ನೆ ಶತಮಾ ದಲ್ಲೇ ಈ ಯೋಜನೆಗೆ ನಕ್ಷೆ ರೂಪಿಸಿದವರು ಸರ್ ಆರ್ಥರ್ ಕಾಟನ್. ಬಳಿಕ ಕಳೆದ 70ರ ದಶಕದಲ್ಲಿ ಗಂಗಾ-ಕಾವೇರಿಯನ್ನು ಜೋಡಿಸುವ ಕುರಿತಂತೆ ಪ್ರಸ್ತಾಪ ಕೇಳಿ ಬಂತು. ಆದರೆ ಕೊನೆಗೂ ಈ ದುಸ್ಸಾಹಸಕ್ಕೆ ಇಳಿಯದೇ ಪ್ರಸ್ತಾಪವನ್ನು ಅರ್ಧದಲ್ಲೇ ಕೈ ಬಿಡಲಾಯಿತು. ದೇಶದ ಮಧ್ಯ ಮತ್ತು ದಕ್ಷಿಣ ಭಾಗವನ್ನು ಸಂಪರ್ಕಿಸುವ 9,300 ಕಿ. ಮೀ. ಉದ್ದದ ಗಾರ್ಲಾಂಡ್ ಕಾಲುವೆ, ಗಂಗಾ-ಕಾವೇರಿ ಜೋಡಣೆ. ಇವುಗಳಿಗೆ ಆಗ ಕ್ಯಾಪ್ಟನ್ ದಸ್ತೂರ್ ಅವರು 24, 095 ಕೋಟಿ ರೂ. ಬೇಕು ಎಂದು ಅಂದಾಜಿಸಿದ್ದರು. ಮತ್ತು ತಜ್ಞರು ಇದನ್ನು ಕಾರ್ಯಸಾಧುವಲ್ಲ ಎಂದು ಕೈ ಬಿಟ್ಟಿದ್ದರು. ಬರೇ ಆರ್ಥಿಕ ಕಾರಣಗಳಿಗಾಗಿ ಯಲ್ಲ, ಭೌಗೋಳಿಕ ಕಾರಣಗಳಿಗಾಗಿಯೂ ಈ ಯೋಜನೆಯನ್ನು ಕೈ ಬಿಡಲಾಗಿತ್ತು.
  
 ನದಿ ಜೋಡಣೆಯ ಯೋಜನೆಗೆ ಮತ್ತೆ ರೆಕ್ಕೆ ಬಂದಿದ್ದು ಎನ್‌ಡಿಎ ಸರಕಾರದ ಅವಧಿಯಲ್ಲಿ. ಇಂದಿಗೂ ಈ ನದಿ ಜೋಡಣೆ ಯೋಜನೆ ಅಟಲ್ ಬಿಹಾರಿ ವಾಜಪೇಯಿಯವರ ಮಹತ್ವಾಕಾಂಕ್ಷಿ ಕನಸು ಎಂದೇ ಬಿಜೆಪಿ ಹೇಳಿಕೊಳ್ಳುತ್ತಿದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನರ್ಮದಾ-ಕ್ಷಿಪ್ರಾ ನದಿ ಜೋಡಣೆಗೆ ಎಲ್.ಕೆ. ಅಡ್ವಾಣಿ ಶಂಕು ಸ್ಥಾಪನೆಗೈದರು. ಅಟಲ್ ಬಿಹಾರಿ ವಾಜಪೇಯಿಯ ಕನಸು ಮೊತ್ತ ಮೊದಲು ಸಾಕ್ಷಾತ್ಕಾರವಾದುದೇ ಮಧ್ಯಪ್ರದೇಶ ದಲ್ಲಿ. ಆದರೆ ಇಂದಿಗೂ ಈ ಬಹತ್ ಯೋಜನೆ ವಾಜಪೇಯಿಯವರ ಪಾಳು ಬಿದ್ದ ಕನಸಾಗಿಯೇ ಉಳಿದಿದೆ. ಗಂಭೀರವಾಗಿ ಅನುಷ್ಠಾನಕ್ಕೆ ತರಲು ಇದು ಯೋಗ್ಯವಲ್ಲ. ಸುಮಾರು ಐದು ಲಕ್ಷ ಕೋಟಿ ರೂ. ವೌಲ್ಯದ ಯೋಜನೆ ಇದು. ಆದರೆ ಈ ಯೋಜನೆ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದರ ಬಗ್ಗೆ ತಜ್ಞರಿಗೆ ಅನುಮಾನ ಈಗಲೂ ಇದ್ದೇ ಇದೆ. ಹಾಗೆಂದು ಜನರಿಗೆ ಕುಡಿಯುವ ನೀರನ್ನು ಒದಗಿಸುವುದು ಬೇಡವೇ ಎಂದು ರಾಜಕಾರಣಿಗಳು ಕೇಳುತ್ತಾರೆ. ಈ ದೇಶದಲ್ಲಿರುವ ಲಕ್ಷಾಂತರ ಕೆರೆ, ಕಾಲುವೆಗಳನ್ನು ಬತ್ತಿಸಿ, ನೀರಿನ ಸಾಧ್ಯತೆಗಳಿರುವ ತೊರೆಗಳನ್ನೆಲ್ಲ ನಾಶ ಮಾಡಿದ ಬಳಿಕ, ನದಿಗಳ ಸೆರಗಿಗೆ ಕೈ ಹಾಕಿ, ನೀರು ಒದಗಿಸುತ್ತೇವೆ ಎಂದು ಹೇಳುವುದು ಸರಿಯಾದ ಮಾರ್ಗವಲ್ಲ. ಈ ನೆಲ ಬಂಜೆಯಲ್ಲ. ಇಲ್ಲಿ ಒಸರು ಇದ್ದೇ ಇದೆ. ರಾಜಸ್ತಾನದಲ್ಲಿ ಮಳೆ ನೀರು ಇಂಗಿಸುವ ಮೂಲಕ ಇಡೀ ಪ್ರದೇಶವನ್ನು ಹಸಿರಾಗಿಸಿದ ಹೆಮ್ಮೆ ಪರಿಸರ ಹೋರಾಟಗಾರ ರಾಜೇಂದ್ರ ಸಿಂಗರಿಗೆ ಸೇರಬೇಕು. ರಾಜಸ್ತಾನದ ಆಳ್ವಾರ್ ಒಂದು ಕಾಲದಲ್ಲಿ ನೀರಿಲ್ಲದ ಕಪ್ಪು ಪ್ರದೇಶ ಎಂದು ಘೋಷಿಸಲ್ಪಟ್ಟಿತ್ತು. ಅಂತಹ ಪ್ರದೇಶದಲ್ಲಿ ಮಳೆನೀರು ಇಂಗುಗುಂಡಿಗಳನ್ನು ಸಷ್ಟಿಸಿ ಇಡೀ ಪ್ರದೇಶವನ್ನೇ ಹಸಿರಾಗಿಸಿದ ಸಿಂಗ್‌ನಂತಹ ಪರಿಸರ ತಜ್ಞರು ರಾಜಕಾರಣಿಗಳಿಗೆ ಮಾರ್ಗ ದರ್ಶಕರಾಗಬೇಕು. ಅಂತಹ ತಜ್ಞರನ್ನು ಒಟ್ಟು ಮಾಡಿ, ಅವರೊಂದಿಗೆ ಚರ್ಚೆ ನಡೆಸಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕೇ ಹೊರತು, ಕಾರ್ಪೊರೇಟ್ ಲಾಬಿಗಳ ಜೊತೆಗಲ್ಲ.
ನಮ್ಮ ದೇಶದ ಅಸ್ಮಿತೆ ನಮ್ಮ ನದಿಗಳು. ಅವುಗಳು ಕಣ್ಮರೆಯಾದರೆ ನಮ್ಮ ದೇಶವೇ ಕಣ್ಮರೆಯಾದಂತೆ. ಸರಸ್ವತಿಯಂತಹ ಇನ್ನಷ್ಟು ಸರಸ್ವತಿಯರನ್ನು ನಾವು ಸೃಷ್ಟಿಸುವುದು ಬೇಡ. ನದಿಯನ್ನು ಕೊಂದ ದ್ರೋಹ, ಮನುಕುಲವನ್ನು ಬಲಿತೆಗೆದುಕೊಳ್ಳದೇ ಮುಗಿದು ಹೋಗದು. ಈ ಎಚ್ಚರಿಕೆ ದಿಲ್ಲಿಯಲ್ಲಿರುವ ರಾಜಕಾರಣಿಗಳಿಗೆ ಬೇಕು. ಹಾಗೆಯೇ ನೇತ್ರಾವತಿ ನದಿ ತಿರುವು ಯೋಜನೆಗೆ ಅತ್ಯುತ್ಸಾಹದಲ್ಲಿ ಇಳಿದಿರುವ ವೀರಪ್ಪ ಮೊಯ್ಲಿಯೂ ಈ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡಬೇಕು. ಈ ಯೋಜನೆಗಾಗಿ ರಾಜಕೀಯ ಸಮಾಧಿಯಾದರೂ ಪರವಾಗಿಲ್ಲ ಎಂದಿದ್ದಾರೆ ಮೊಯ್ಲಿ. ಆದರೆ ಸಮಾಧಿ ಯಾಗುವುದು ರಾಜಕೀಯವಲ್ಲ, ಈ ನಾಡು ಎನ್ನುವ ಪ್ರಜ್ಞೆಯನ್ನು ಇಟ್ಟುಕೊಂಡು ಅವರು ಮುನ್ನಡಿಯಿಡಬೇಕು.

Tuesday, March 4, 2014

ಒಂದಿಷ್ಟು ಪದಗಳು

 1
ನಂಬಿಕೆ!

ಅಪರಿಚಿತ
ಕ್ಷೌರಿಕನ ಕತ್ತಿಗೆ
ಒಂದಿಷ್ಟು ಆತಂಕವಿಲ್ಲದೆ
ಕತ್ತು ಕೊಡೂದು

2
ಕವಿತೆ

ಕವಿತೆ ಎಂದರೆ
ಎದೆಗೆ ಚುಚ್ಚಿಕೊಂಡ
ಕಾಣದ ಮುಳ್ಳು
ಒತ್ತಾಯದಿಂದ ಹೊರಗೆಳೆಯ
ಹವಣಿಸಿದರೆ
ಕೈಗೆ ಸಿಗೋದು ಬರಿದೆ ನೋವು
ತಾನೇ ಮಾಗಿ
ಹಣ್ಣಾಗಿ ಒಡೆಯಬೇಕು
ಸಹಜವಾಗಿ ಹೊರಬರಬೇಕು
ಕೀವು

3
ಹೆಜ್ಜೆ

ಉದುರಿದ ಕಂಬನಿ
ಮತ್ತೆ ಕಣ್ಣ ಸೇರದು
ಗೆಳತಿ,
ಹೆಜ್ಜೆ ಮುಂದಿಡುವ
ಮುನ್ನ ಇನ್ನೊಮ್ಮೆ
ಯೋಚಿಸಬಾರದೇ ?

4
ಮಿತ್ರರು

ಬಾಣ ಎಸೆದದ್ದು
ಶತ್ರುವಿನ ಕಡೆಗೆ
ಆದರೆ ನನ್ನ ದುರ್ವಿಧಿಯೇ
ಅದು ಇರಿಯುತ್ತಾ
ಹೋದದ್ದು ನನ್ನ
ಮಿತ್ರರ ಎದೆಯನ್ನೇ....

Monday, March 3, 2014

ಹೃದಯಹೀನ ಮನುಷ್ಯನ ಕ್ರೌರ್ಯದ ಉತ್ಕರ್ಷವನ್ನು ತೆರೆದಿಡುವ ‘12 ಇಯರ್ಸ್‌ ಎ ಸ್ಲೇವ್’

 ‘12 ಇಯರ್ಸ್‌ ಎ ಸ್ಲೇವ್’ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ದೊರಕಿದೆ. ಬ್ಯಾಂಡಿಟ್ ಕ್ವೀನ್, ‘ದಿ ಪ್ಯಾಸನ್ ಆಫ್ ದಿ ಕ್ರೈಸ್ಟ್’ನ ಬಳಿಕ ಹಿಂಸೆ ಹಸಿಯಾಗಿ ನನ್ನನ್ನು ಕಾಡಿದ್ದು, ನಿದ್ದೆಗೆಡಿಸಿದ್ದು ‘12 ಇಯರ್ಸ್‌ ಎ ಸ್ಲೇವ್’ ಚಿತ್ರದ ಬಳಿಕ . ಆ ಚಿತ್ರದ ಕುರಿತಂತೆ ಇಲ್ಲಿದೆ ನಾಲ್ಕು ಸಾಲು.

ಅಮೆರಿಕದಲ್ಲಿ 18ನೆ ಶತಮಾನದಲ್ಲಿ ವ್ಯಾಪಕವಾಗಿದ್ದ ಗುಲಾಮಗಿರಿ ಪದ್ಧತಿಯ ಬಗ್ಗೆ ಈ ಮೊದಲು ಕೂಡಾ ಹಲವಾರು ಹಾಲಿವುಡ್ ಚಿತ್ರಗಳು ಬಂದುಹೋಗಿವೆ. ಆದರೆ ಈ ಗುಲಾಮಗಿರಿ ಪದ್ಧತಿಯ ಕ್ರೌರ್ಯ ಹಾಗೂ ಭೀಕರತೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ‘12 ಇಯರ್ಸ್‌ ಎ ಸ್ಲೇವ್’ ಖಂಡಿತವಾಗಿಯೂ ಯಶಸ್ವಿಯಾಗಿದೆ.
ಸ್ಟೀವ್ ಮ್ಯಾಕ್ವಿನ್ ನಿರ್ದೇಶನದ ಈ ಚಿತ್ರವು 1841ರಲ್ಲಿ ವಾಷಿಂಗ್ಟನ್‌ನ ಬೀದಿ ಯೊಂದರಲ್ಲಿ ಅಪಹರಿಸಲ್ಪಟ್ಟು, ಗುಲಾಮ ನಾಗಿ ಮಾರಾಟವಾದ ಸೊಲೊಮೊನ್ ನಾರ್ತ್ ಅಪ್ ಎಂಬ ಆಫ್ರಿಕನ್- ಅಮೆರಿಕನ್ ವ್ಯಕ್ತಿಯ ಕತೆಯನ್ನು ಹೇಳುತ್ತದೆ.
 ‘12 ಇಯರ್ಸ್‌ ಎ ಸ್ಲೇವ್’ ಚಿತ್ರದಲ್ಲಿ ಪ್ರೇಕ್ಷಕರ ಎದೆಯನ್ನು ಇರಿಯುವಂತಹ ಸಾಕಷ್ಟು ಹಿಂಸಾತ್ಮಕ ದಶ್ಯಗಳಿವೆ. ಆದರೆ ವಾಸ್ತವವನ್ನು ಮುಖಾಮುಖಿಯಾಗಿಸಲು, ಕತೆಯನ್ನು ಪರಿಣಾಮಕಾರಿಯಾಗಿ ತೆರೆದಿಡಲು ಅದು ಅನಿವಾರ್ಯ. ಕರಿಯ ಜನಾಂಗೀಯ ಗುಲಾಮನೊಬ್ಬನನ್ನು ಮರಕ್ಕೆ ನೇಣುಬಿಗಿದು ಉಸಿರುಗಟ್ಟಿಸಿ ಕೊಲ್ಲಲಾಗುತ್ತದೆ. ಅಲ್ಲಿಯೇ ಪಕ್ಕದಲ್ಲಿ ಸಣ್ಣ ಪುಟ್ಟ ಮಕ್ಕಳು ಆಟವಾಡುತ್ತಿರುತ್ತಾರೆ. ಉಳಿದ ಗುಲಾಮರು ಏನೂ ಆಗದವರಂತೆ ತಮ್ಮ ಎಂದಿನ ಜೀತದ ಕೆಲಸಕ್ಕೆ ಹೋಗುತ್ತಿರುತ್ತಾರೆ. ಒಂದು ವೇಳೆ ಆ ಕಡೆ ನೋಡಿದಲ್ಲಿ ತಮಗೂ ಆ ಗತಿ ಬರಬಹುದೆಂಬ ಅಂಜಿಕೆ ಅವರಿಗೆ. ಜೊತೆ ಜೊತೆಗೆ ಅಂತಹ ಬರ್ಬರ ಸಾವುಗಳು ಆ ವ್ಯವಸ್ಥೆಯಲ್ಲಿ ಎಷ್ಟು ಸಹಜವಾಗಿತ್ತು ಎನ್ನುವುದನ್ನು ಕಟ್ಟಿಕೊಡುತ್ತಾರೆ. ಜನರ ಈ ಅಸಹಾಯಕತೆಯನ್ನು ನಿರ್ದೇಶಕರು ಅತ್ಯಂತ ಹದಯಂಗಮವಾಗಿ ಚಿತ್ರಿಸಿದ್ದಾರೆ.
  ಅಂದಹಾಗೆ ಈ ಚಿತ್ರವು ಸೊಲೊಮನ್ ನಾರ್ತ್‌ಅಪ್ ಎಂಬ ಗುಲಾಮನ ನೈಜ ಆತ್ಮಕತೆಯನ್ನು ಆಧರಿಸಿದ ಚಿತ್ರವಾಗಿದೆ. ಸೊಲೊಮನ್ ನಾರ್ತ್‌ಅಪ್ (ಶಿವೆಟೆಲ್ ಎಜೆಯೊಫೆರ್) 1841ನೆ ಇಸವಿಯಲ್ಲಿ ಓರ್ವ ಸ್ವತಂತ್ರ ಕರಿಯ ಜನಾಂಗೀಯನಾಗಿದ್ದು, ಆತ ನ್ಯೂಯಾರ್ಕ್‌ನ ಸಾರಾಟೊಗಾದಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ. ಆದರೆ ಒಂದು ದಿನ ಆತನನ್ನು ಅಪಹರಿಸಿ, ಗುಲಾಮನಾಗಿ ಮಾರಾಟ ಮಾಡಲಾಯಿತು. ಅಮೆರಿಕದ ದಕ್ಷಿಣ ಪ್ರಾಂತ್ಯದಲ್ಲಿನ ತೋಟವೊಂದರಲ್ಲಿ ಆತ ನನ್ನು ಜೀತಕ್ಕೆ ಇಟ್ಟುಕೊಳ್ಳಲಾಗುತ್ತದೆ. ಅಲ್ಲಿಂದ ಸೊಲೊಮನ್ ಶ್ವೇತ ಜನಾಂ ಗೀಯ ಮಾಲಕರ ಅಮಾನವೀಯ ಹಿಂಸೆ ಹಾಗೂ ಜೀತದೊಂದಿಗೆ 12 ವರ್ಷಗಳನ್ನು ಕಳೆಯಬೇಕಾಯಿತು.ಸೊಲೊಮನ್‌ನ ಮೊದಲ ಮಾಲಕ (ಬೆನೆಡಿಕ್ಟ್ ಕ್ಯಂಬರ್‌ಬ್ಯಾಚ್) ಸ್ವಲ್ಪ ಸಹಾನುಭೂತಿಯಿರುವ ವ್ಯಕ್ತಿ. ಆದರೆ ನಂತರ ಆತ ಸೊಲೊಮನ್‌ನನ್ನು ಸ್ಯಾಡಿಸ್ಟ್ ಆಗಿರುವ ಹತ್ತಿ ತೋಟದ ಮಾಲಕನ ಎಪ್ಸ್ (ಮೈಕೆಲ್ ಫಾಸ್ಸ್‌ಬೆಂಡರ್)ಗೆ ಮಾರು ತ್ತಾನೆ. ಅಲ್ಲಿ ಆತನಿಗೆ ಹಾಗೂ ಇತರ ಗುಲಾಮರಿಗೆ ನೀಡಲಾಗುವ ಶಿಕ್ಷೆಗಳೇ ರೀಲು ತುಂಬಾ ತಿರುಗುತ್ತವೆ. ನಮ್ಮ ಎದೆಯೊಳಗೂ ಕೂಡ. ನಮ್ಮ ಉಸಿರಿಗೆ ಸಮೀಪವೇ ಅವುಗಳು ಘಟಿಸುತ್ತಿವೆಯೇನೋ ಎಂಬಷ್ಟು ಹಸಿಯಾಗಿ, ಸಹಜವಾಗಿ ದಶ್ಯಗಳನ್ನು ನಿರ್ದೇಶಕರು ಕಟ್ಟಿಕೊಡುತ್ತಾರೆ. ಮನುಷ್ಯನ ಕ್ರೌರ್ಯದ ಉತ್ಕರ್ಷ ಸ್ಥಿತಿಯ ಕಡೆಗೆ ಕ್ಯಾಮರಾವನ್ನು ಹಿಡಿದಿಡಲಾಗಿದೆ. ಗುಲಾಮಿ ಮಹಿಳೆಯರನ್ನು ಹಾಗೂ ಪುರುಷರನ್ನು ಅವರ ಬೆನ್ನಿನ ಚರ್ಮವೇ ಕಿತ್ತುಹೋಗುವಂತೆ ಚಾಟಿಯಿಂದ ಭಾರಿಸುವ ದಶ್ಯದಲ್ಲಿ ನಮ್ಮ ಬೆನ್ನಿನ ಚರ್ಮವೇ ಎದ್ದಂತಾಗಿ, ಕುಳಿತಲ್ಲಿಂದ ಎದ್ದು ನಿಂತು ಸಾವರಿಸಿಕೊಳ್ಳುವಂತಾಗುತ್ತದೆ. ‘ದಿ ಪ್ಯಾಸನ್ ಆಫ್ ದಿ ಕ್ರೈಸ್ಟ್’ ಚಿತ್ರದಲ್ಲಿ ಕ್ರಿಸ್ತನಿಗೆ ನೀಡುವ ಬರ್ಬರ ಹಿಂಸೆಯ ಪುನರಪಿಯಾಗಿದೆ ಇದು.

ಚಿತ್ರವು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬರಲು ಅದರ ಪಾತ್ರವರ್ಗದ ಕೊಡುಗೆಯೂ ಅಪಾರವಾಗಿದೆ. ನಾಯಕ ಸೊಲೊಮನ್ ನಾರ್ತ್‌ಅಪ್‌ನ ಪಾತ್ರದಲ್ಲಿ ಚಿವೆಟೆಲ್ ಎಜಿಯೊಫೊರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಒಬ್ಬ ಗುಲಾಮನಾಗಿ ಅನುಭವಿಸುವ ನೋವು ಮತ್ತು ಅದು ಆತನಲ್ಲಿ ಪುಟಿದೆಬ್ಬಿಸುವ ಆಕ್ರೋಶವನ್ನು ಆತನು ತನ್ನ ಕಣ್ಣುಗಳಲ್ಲೇ ಅಭಿವ್ಯಕ್ತಿಗೊಳಿಸುತ್ತಾನೆ.ಕ್ರೂರಿ ಮಾಲಕನ ಪಾತ್ರದಲ್ಲಿ ಮೈಕೆಲ್ ಫಾಸ್‌ಬೆಂಡರ್ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಅತ್ಯುತ್ತಮ ಛಾಯಾಗ್ರಾಹಣ ಹಾಗೂ ಸಂಕಲನವು ಚಿತ್ರಕ್ಕೆ ಇನ್ನಷ್ಟು ಜೀವವನ್ನು ತುಂಬಿದೆ.ಚಿತ್ರದ ಪ್ರತಿ ದಶ್ಯಗಳಲ್ಲೂ ನಿರ್ದೇಶಕ ಮೆಕ್ವಿನ್ ಕೈಚಳಕ ಎದ್ದುಕಾಣುತ್ತದೆ. ಚಿತ್ರ ನೋಡಿ ಹೊರ ಬಂದ ಪ್ರೇಕ್ಷಕನಿಗೆ ‘‘12 ಇಯರ್ಸ್‌ ಆಫ್ ಎ ಸ್ಲೇವ್’’ ಕೆಲವು ದಿನಗಳವರೆಗಾದರೂ ಕಾಡದೆ ಇರದು.