Monday, May 23, 2011

ಕತೆ: ಧೂಳು ಮುಚ್ಚಿದ ಫೈಲು

ಹಳೆಯ ಧೂಳುಮುಚ್ಚಿದ ಫೈಲನ್ನು ಕೊಡವಿ ಬಿಡಿಸಿದಾಗ ನನ್ನ ಕತೆ ಸಿಕ್ಕಿತು.


ನಮ್ಮೂರಿನ ಸಹಕಾರಿ ಸಂಘಬ್ಯಾಂಕ್ಆಗಿ ಪರಿವರ್ತನೆಗೊಂಡ ಬಳಿಕವೂ ಬಾಳೆಗೊನೆ ವ್ಯಾಪಾರಿ ಅಂದು ಬ್ಯಾರಿ, ಅಡಿಕೆತೋಟದ ಅಂತಪ್ಪ ಶೆಟ್ರು, ಗ್ರಾಮ ಪಂಚಾಯತ್ ಸದಸ್ಯೆ ಬೊಮ್ಮಿಯಂತವರ ಬಾಯಲ್ಲಿ ಊರ ಸೊಸೈಟಿಯಾಗಿಯೇ ಉಳಿದಿತ್ತು. ಸೊಸೈಟಿಯ ಪಿಗ್ಮಿ ಕಲೆಕ್ಷನ್ನಲ್ಲಿಯೇ ಸುಮಾರು 5 ವರ್ಷ ಬದುಕು ಸವೆಸಿದವನು ನಾನು. ನನಗಿನ್ನೂ ಸ್ಪಷ್ಟವಿದೆ, 5 ವರ್ಷದಲ್ಲಿ ಒಂದೇ ಒಂದು ಜೋಡು ಚಪ್ಪಲಿಯಿಂದ ನನ್ನ ಬದುಕಿನ ಬಂಡಿಯನ್ನು ಎಳೆದೆ. ಹರಿದು ಚಿಂದಿಯಾಗುವವರೆಗೂ. ಅಲ್ಲಿಂದ ಸೊಸೈಟಿಯಲ್ಲಿ ಅಕೌಂಟ್ ನೋಡಲು ಶುರು ಮಾಡಿದೆ.

ನಾನು ಕುರ್ಚಿಯಲ್ಲಿ ಕುಳಿತು ಸಂಗ್ರಹಿಸಿದ ಠೇವಣಿ, ಎಣಿಸಿದ ದುಡ್ಡು, ಕೊಟ್ಟ ಸಾಲ, ಅವುಗಳಿಗೆ ಎಣಿಸಿದ ಬಡ್ಡಿ ಇವೆಲ್ಲವು ನನ್ನಪಾಲಿನ ಹೆಮ್ಮೆಯ ಸಂಗತಿಗಳಾಗಿದ್ದವು. ಕೆಳಜಾತಿ ಮತ್ತು ಬಡತನದ ಅವಮಾನಗಳನ್ನು ಉಂಡೇ ಬೆಳೆದಿದ್ದ ನನಗೆ ಮೈಯೆಲ್ಲಹಿಡಿಯಾಗಿ, ಕಣ್ಣಲ್ಲಿ ವಿಧೇಯತೆಯನ್ನು ತುಂಬಿಸಿ ಸಾಲಕ್ಕಾಗಿ ನನ್ನ ಮುಂದೆ ನಿಲ್ಲುವ ಸಣ್ಣ ಪುಟ್ಟ ರೈತರನ್ನು ನೋಡುವುದೇ ಬದುಕಿನಸೌಭಾಗ್ಯವಾಗಿತ್ತು.

ಹೀಗೆ ನನ್ನ ಸೌಭಾಗ್ಯದ ಉನ್ನತ ದಿನಗಳಾಗಿತ್ತು ಅದು. ಒಂದು ಮದ್ಯಾಹ್ನದ ಹೊತ್ತು.ಹೊರಗೆ ರಣ ಬಿಸಿಲು.ಬ್ಯಾಂಕ್ ಒಳಗೆಬಿಸಿಲಿನ ಧಗೆಯೊಂದಿಗೆ ಹತ್ತು ಹಲವು ಬಗೆಯ ಜನರ ನಿಟ್ಟುಸಿರುಗಳು ಸೇರಿ ಕಚೇರಿಗೆ ಕಚೇರಿಯೇ ಏದುಸಿರು ಬಿಡುತ್ತಿತ್ತು.ಕೊಳೆತಹೆಂಡದಂತಹ ಹಳ್ಳಿಗರ ಬೆವರಿನ ವಾಸನೆಯನ್ನು ಮಟ ಮಟ ಮಧ್ಯಾಹ್ನ ಹೀರುವುದೆಂದರೆ ಸಾಮಾನ್ಯ ವಿಷಯವಲ್ಲ. ಬ್ಯಾಂಕಿನಮೆನೇಜರರ ಕ್ಯಾಬಿನಿನಲ್ಲಿ ಮಾತ್ರ ಫ್ಯಾನು ತಿರುಗುತ್ತದೆ. ನಾನು ಸಣ್ಣದೊಂದು ರಟ್ಟಿನಿಂದ ಕೈ ಬೀಸಣಿಕೆಯೊಂದನ್ನು ಮಾಡಿ ಆಗಾಗಬೀಸಿಕೊಳ್ಳುತ್ತಿದ್ದೆ. ನನ್ನ ಇಬ್ಬರು ಸಹೋದ್ಯೋಗಿಗಳು ಆಗಲೇ ಊಟದ ನೆಪದಲ್ಲಿ ಕಚೇರಿಯಿಂದ ತೊಲಗಿದ್ದರು. ಇನ್ನೂ ಸ್ಪಷ್ಟವಿದೆನನಗೆ, ಅಂತಹ ಹೊತ್ತಿನಲ್ಲೇ ಆತನ ಪ್ರವೇಶವಾದುದು.

ಇಲ್ಲಿಗೆ ಬರುವ ಹೆಚ್ಚಿನವರದು ನನಗೆ ಪರಿಚಿತ ಮುಖ. ಕಡು ನೀಲಿ ಗೀಟು ಗೀಟಿನ ಲುಂಗಿ ಉಟ್ಟು, ಸಾವಿರ ಕಲೆಗಳನ್ನು ಹೊತ್ತುಮಸುಕಾಗಿರುವ ಅಂಗಿ ಧರಿಸಿ, ತಮ್ಮ ಬೈರಾಸನ್ನು ಕೈಯಲ್ಲಿ ಮುದ್ದೆ ಮಾಡಿ, ಒಳಗೆ ಕಾಲಿಡುವಾಗಲೇ ತಮ್ಮ ದೇಹವನ್ನುಆಮೆಯಂತೆ ಒಳಗೆ ಜಗ್ಗಿ ಬರುವವರನ್ನು ಸಾಲಗಾರರೆಂದು ನಾನು ಪಕ್ಕನೆ ಗುರುತಿಸಿ ಬಿಡುವಷ್ಟು ಪಳಗಿದ್ದೇನೆ. ಮನೆ ಜಪ್ತಿನೋಟೀಸು ದೊರಕಿದ ಬಳಿಕವಷ್ಟೇ ಅವರು ಹೀಗೆ ಮೆಲ್ಲ ಬ್ಯಾಂಕಿನ ಬಾಗಿಲು ತುಳಿಯುತ್ತಾರೆ.

ಇಂಥವರೆಲ್ಲಾ ಬರುವಾಗ ಮೆನೇಜರರು ಬೇಕೆಂದೇ ಮುಖ ಗಂಟಿಕ್ಕಿಕೊಳ್ಳುತ್ತಾರೆ. ‘ಸಸಾರ ಸಿಕ್ಕಿದರೆ ಇಡೀ ಬ್ಯಾಂಕನ್ನೇ ಮುಳುಗಿಸಿಓಡಿ ಹೋಗಲು ಇವರು ರೆಡಿಎಂದು ಅವರು ಆಗಾಗ ನನಗೆ ಎಚ್ಚರಿಸುತ್ತಾರೆ.

ಇಂತವರಲ್ಲಿ ಬಹುಸಂಖ್ಯೆಯಲ್ಲಿ ಸ್ಥಳೀಯ ಸಂತೆಯಲ್ಲಿ ಬಾಳೆಕಾಯಿ, ಮೀನು ವ್ಯಾಪಾರ ಮಾಡುವ ಬ್ಯಾರಿಗಳೇ ಜಾಸ್ತಿ ಎನ್ನುವುದುಮೆನೇಜರರ ಅಭಿಮತ. ವ್ಯಾಪಾರಕ್ಕೆಂದು ಸಾಲ ಕೇಳಲು ಬರುವ ಇವರು ಹಣ ಸಿಕ್ಕಿದರೆ, ಮತ್ತೆ ಬರುವುದು ಜಪ್ತಿ ನೋಟೀಸ್ ಸಿಕ್ಕಿದಬಳಿಕವೇ. ಹಾಗೆಂದು ಇವರು ಮೋಸಗಾರರು ಎನ್ನಲು ಬರುವುದಿಲ್ಲ. ಮರ್ಯಾದೆಗೆ ತುಂಬಾ ಅಂಜುತ್ತಾರೆ. ವ್ಯಾಪಾರದ ಜೂಜಿನಲ್ಲಿಸೋತು ಬಸವಳಿದವರು ಅವರು. ಜಪ್ತಿ ಮಾಡಬಾರದೆಂದು ವಿನೀತರಾಗಿ ಮೆನೇಜರರಿಗೆ ಸುತ್ತು ಬರುತ್ತಾರೆ. ಕೊನೆಗೆ ಅವರಲ್ಲಿದಮ್ಮಯ್ಯ ಗುಡ್ಡೆ ಹಾಕಿ ಇನ್ನೊಂದು ಸಾಲಕ್ಕೆ ಅರ್ಜಿ ಗುಜರಾಯಿಸಿ, ಹಳೆ ಸಾಲದಿಂದ ಮುಕ್ತರಾಗುತ್ತಾರೆ.

ಅಂದು, ಒಳಗೆ ಕಾಲಿಡಬೇಕಾದ ಆತ ಬಾಗಿಲಲ್ಲಿ ಒಳಗೆ ಬರಬೇಕೋ, ಬೇಡವೋ ಎಂಬಂತೆ ನಿಂತಿದ್ದ. ಬಾಗಿಲ ಚೌಕಟ್ಟಿನೊಳಗೆಒಂದು ಪೋಟೋದಂತೆ ಅವನು ಕಾಣಿಸಿಕೊಂಡಿದ್ದ. ದೂಳಿನಿಂದ ಮುಚ್ಚಿ ಹೋದ, ಕಾಲದ ಏಟಿಗೆ ಸಿಕ್ಕು ಮಸುಕಾಗಿದ್ದ ಫೈಲಿನಿಂದಎದ್ದು ಬಂದವನಂತಿದ್ದ.

ನಂತರ ಅಂಜುತ್ತಾ ಒಳಗೆ ಕಾಲಿಟ್ಟ. ನಾನು ನನ್ನ ಒಂದು ಕಣ್ಣನ್ನು ಅವನ ಹಿಂದಯೇ ಛೂ ಬಿಟ್ಟಿದ್ದೆ. ಸೀದಾ ಮೆನೇಜರ್ ಕ್ಯಾಬಿನ್ ಕಡೆನಡೆದವನನ್ನು ಯಾರೋ ತಡೆದರು. ಅವನು ಅವರೊಡನೆ ಏನೋ ವಿಚಾರಿಸಿದ. ಅವರು ನನ್ನೆಡೆಗೆ ಕೈ ತೋರಿಸಿದರು.

ಸೀದಾ ನಾನಿದ್ದಲ್ಲಿಗೆ ಬಂದ. ಕುರುಚಲ ಗಡ್ಡ. ವೀಳ್ಯದೆಲೆ ಜಗಿದು ಕೆಂಪಾಗಿದ್ದ ಹಲ್ಲು. ತಲೆಗೆ ಟುವ್ವಾಲನ್ನು ಬಿಗಿದುಕೊಂಡಿದ್ದ. ವಯಸ್ಸುಮೂವತ್ತೈದಿದ್ದರೂ, ಅಕಾಲದಲ್ಲಿ ಬಂದೆರಗಿದ ವೃದ್ಧಾಪ್ಯ.

ನಾನು ತಲೆ ಬಗ್ಗಿಸಿ ಬರೆಯುತ್ತಿದ್ದೆ.
ಧನಿ....’ ಎಂದು ಕರೆದ. ನನಗೆ ಕೇಳಿಸಿರಲಿಲ್ಲ. ಯಾಕೆಂದರೆ ನಾನು ಬರೆಯುವುದರಲ್ಲೇ ಮಗ್ನನಾಗಿದ್ದೆ. ಇನ್ನೊಮ್ಮೆಧನಿ...’ ಎಂದುಕರೆದ. ತಲೆ ಎತ್ತಿದೆ. ಅಕಾರಣ ಸಿಟ್ಟೊಂದನ್ನು ಕಣ್ಣಲ್ಲಿ ಕುಣಿಸುತ್ತಾ ಅವನತ್ತ ಪ್ರಶ್ನಾರ್ಥಕವಾಗಿ ನೋಡಿದೆ.

ಉತ್ತರವಾಗಿ ಅವನು ಹಲ್ಲು ಕಿರಿದ. ನಾನು ಮತ್ತೆ ತಲೆ ತಗ್ಗಿಸಿ ಬರೆಯಬೇಕು, ಅಷ್ಟರಲ್ಲಿ ಅವರು ಬಾಯಿ ತೆರೆದ.‘ಧನಿ, ಅಡವಿಟ್ಟಚಿನ್ನವನ್ನು ಬಿಡಿಸಿಕೊಂಡು ಹೋಗಲು ಬಂದಿದ್ದೇನೆ....’
ಹಾಗೆಂದು ಹೇಳಿದವನತ್ತ ಥಕ್ಕನೆ ನೋಡಿದೆ. ಆಗ ನಾನೆಲ್ಲಿ ತಪ್ಪಿದೆ ಎನ್ನುವುದು ನನ್ನರಿವಿಗೆ ಬಂತು. ಅವನ ದೇಹದ ವಿನ್ಯಾಸಗಳನ್ನುಕೂಡಿಸಿ, ಕಳೆದು ಅವನ ಕುರಿತು ನಾನು ಪಡೆದುಕೊಂಡು ಉತ್ತರ ತಪ್ಪಾಗಿತ್ತು. ಯಾಕೆಂದರೆ ಅವನ ಕಣ್ಣುಗಳನ್ನೊಮ್ಮೆ ದಿಟ್ಟಿಸಿನೋಡಲು ನಾನು ಮರೆತು ಹೋಗಿದ್ದೆ. ಧಗಿಸುವ ಬೇಸಿಗೆಯ ಬಾವಿಯ ಆಳದಲ್ಲಿ ಹೊಳೆಯುವ ನೀರಿನಂತೆ ಅವನ ಕಣ್ಣುಕುಣಿಯುತ್ತಿತ್ತು. ಕಿಟಕಿಯಿಂದ ತೂರಿ ಬಂದ ಬೆಳಕು ಅಲ್ಲಿ ಚಿನ್ನದಂತೆ ಮಿನುಗುತ್ತಿತ್ತು.

ಕುರ್ಚಿಯಲ್ಲಿ ಕೂತು ನಾನು ಅನುಭವಿಸಿದ ಮೊದಲ ಸೋಲು ಅದಾಗಿತ್ತು. ಒಪ್ಪಿಕ್ಕೊಳ್ಳಲಾಗದ ಮನಸ್ಸಿನಿಂದ ಒಪ್ಪಿಕ್ಕೊಳ್ಳುತ್ತಾಯಾವ ಚಿನ್ನ?’ ಎನ್ನುತ್ತಾ ಆತನ ಮೇಲೆ ಎಗರಿಬಿದ್ದೆ.

ನನ್ನ ಅಮ್ಮನ ಚಿನ್ನ ಧನಿ, ನನ್ನ ಅಮ್ಮನ ಕಿವಿಯ ಚಿನ್ನ.....’ ಆತ ಅದನ್ನು ಎಷ್ಟು ಮೆದುವಾಗಿ ಉಚ್ಚರಿಸಿದ್ದ ಎಂದರೆ, ಮೆಲ್ಲಗೆ ಅವನಿಗೆಅವನೇ ಪಿಸುಗುಟ್ಟಿದಂತಿತ್ತು. ಆಮೇಲೆ ನಿಧಾನಕ್ಕೆ ತನ್ನ ಅಂಗಿಯ ಜೇಬಿನಿಂದ ಟುವ್ವಾಲಿನ ಕಟ್ಟನ್ನು ತೆಗೆದು ಬಿಚ್ಚಿದ. ಅರ್ಧಕ್ಕಧರ್ಜೀರ್ಣವಾಗಿ ಹೋಗಿದ್ದ ಚೀಟಿಯನ್ನು ನಡುಗುವ ಕೈಯಲ್ಲಿ ಬಿಡಿಸಿ, ನನ್ನತ್ತ ಚಾಚಿದ. ಅದು ಬ್ಯಾಂಕಿನಿಂದ ಕಳೆದ ವರ್ಷ ಕಳುಹಿಸಿದಎಚ್ಚರಿಕೆಯ ನೋಟೀಸು. ಸುಮಾರು 5 ವರ್ಷಕ್ಕೂ ಹಿಂದೆ ಅಡವಿಟ್ಟ ಚಿನ್ನ ಅದು. ಮುಸ್ಲಿಂ ಹೆಂಗಸರು ಕಿವಿಯ ಮೇಲ್ಬಾಗದಲ್ಲಿಧರಿಸುವ ಐದು ಜೊತೆ ಅಲಿಕತ್ತುಗಳು. ಸುಮಾರು 4 ಪವನಿನಷ್ಟಾಗುವ ಚಿನ್ನವನ್ನಿಟ್ಟು ಈತ 4 ಸಾವಿರ ರೂ.ವನ್ನು ಪಡೆದಿದ್ದ. ತಲೆಯೆತ್ತಿ ಅವನ ಮುಖವನ್ನು ದಿಟ್ಟಿಸಿದೆ. ಯಾಕೋ ನನಗಲ್ಲಿ ಆತನ ಒಂದು ಜೊತೆ ಕಣ್ಣು ಮಾತ್ರ ಕಾಣುತ್ತಿತ್ತು.

ಮತ್ತೆ ನೋಟೀಸಿನತ್ತ ಕಣ್ಣಾಯಿಸಿ ಲೆಕ್ಕ ಹಾಕತೊಡಗಿದೆ. ಆತ ಪಡೆದ ನಾಲ್ಕು ಸಾವಿರ ರೂ. ಹಣ ಬಡ್ಡಿಯನ್ನು ನುಂಗುತ್ತಾನುಂಗುತ್ತಾ ನನ್ನ ಮೆದುಳೊಳಗೆ ಬೆಳೆಯ ತೊಡಗಿತು. ಅದರ ಜೊತೆ ಜೊತೆಗೇ ಚಿನ್ನದ ಬೆಲೆಯನ್ನು ಇನ್ನೊಂದು ತಕ್ಕಡಿಯಲ್ಲಿಟ್ಟುತೂಗಿದೆ. ಯಾಕೋ ಮನಸು ದ್ರವವಾಯಿತು. ಆತ ಚಿನ್ನದ ದುಪ್ಪಟ್ಟು ಬೆಲೆಯನ್ನು ಕಟ್ಟಬೇಕಾಗಿತ್ತು. ಆತ ದುಪ್ಪಟ್ಟು ಹಣಕಟ್ಟಿಅದನ್ನು ಪಡೆದುಕೊಳ್ಳಬೇಕಾದರೂ ಯಾಕೆ?

ಬ್ಯಾಂಕ್ ಸಿಬ್ಬಂದಿ ಎಂಬ ಹೆಮ್ಮೆಯನ್ನು ಮೊದಲು ಬಾರಿ ಪಕ್ಕಕ್ಕಿಟ್ಟು ಮಾತನಾಡ ತೊಡಗಿದೆನೋಡಯ್ಯ, ಚಿನ್ನವನ್ನು ಇನ್ನುಬಿಡಿಸಿ ಏನಾಗಬೇಕಾಗಿದೆ. ಇದಕ್ಕೆ ನೀನು ಕಟ್ಟುವ ಹಣದಿಂದ ಹೊರಗೆ 10 ಪವನ್ ಚಿನ್ನವನ್ನು ಕೊಳ್ಳಬಹುದು....’
ಇಂತಹ ಸಲಹೆಯನ್ನು ಬ್ಯಾಂಕಿನ ಗ್ರಾಹಕನೊಬ್ಬನಿಗೆ ನಾನು ನೀಡಿದ್ದು ಇದೇ ಬಾರಿ. ಆತನ ಕಣ್ಣು ಗಾಳಿಗೆ ಸಿಕ್ಕಿದ ಸೊಡರಿನಂತೆಒಮ್ಮೆ ಮಂಕಾಗಿ ಮತ್ತೆ ಬೆಳಗಿತು. ‘ಎಷ್ಟಾದರೂ ಆಗಲಿ ದನಿ, ನನಗೆ ಚಿನ್ನ ಬೇಕು...’ ನನ್ನ ಉದಾರತೆಯನ್ನು ಕಾಲಲ್ಲಿಒದ್ದನೇನೋ ಎನ್ನಿಸಿತು. ಸಿಟ್ಟು ಉಕ್ಕಿ ಬಂತು. ಇನ್ನೇನು ಅವನ ಮೇಲೆ ಎರಗಬೇಕು, ಒದ್ದೆಯಾದ ಧ್ವನಿಯೊಂದು ಅವನ ಕಣ್ಣಿಂದಒಸರಿ ಬಂತು. ‘ಅದು ನನ್ನ ಅಮ್ಮನ ಚಿನ್ನ ದನಿ, ನನ್ನ ಅಮ್ಮನ ಕಿವಿಯ ಚಿನ್ನ...’
ಕೈಯಲ್ಲಿ ಧರಿಸಿದ್ದ ಪೆನ್ನು ಯಾಕೋ ಒಮ್ಮೆಲೆ ಭಾರವೆನಿಸಿ ಕೆಳಗಿಟ್ಟೆ. ನನ್ನ ಅವನ ಮಧ್ಯೆ ಸೊಂಟದ ಮಟ್ಟದ ವರೆಗಿನ ಒಂದು ಕೃತಕಗೋಡೆ. ಅಂತರವನ್ನು ಇನ್ನಷ್ಟು ವಿಸ್ತರಿಸುವಂತೆ ನನ್ನ ಫೈಲುಗಳಿರುವ ಟೇಬಲ್.

ಸಾಲದ ಸಂಖ್ಯೆ ನೋಡಿದೆ. ಆತನ ಫೈಲು ಕಪಾಟುಗಳ ಆಳದ ಧೂಳಿನಲ್ಲಿ ಮುಚ್ಚಿ ಹೋಗಿರಬಹುದೇನೋ. ಅಟೆಂಡರ್ಗೋಪಾಲನನ್ನು ಕರೆದು, ಫೈಲು ಗುರುತು ಸಂಖ್ಯೆ, ಹೆಸರನ್ನು ತೋರಿಸಿದೆ. ಫೈಲಿರುವ ಕಪಾಟಿನ ಆಳವನ್ನು ನೆನೆದದ್ದೇ ಆತನಹಣೆಯಲ್ಲಿ ನೆರಿಗೆಗಳು ಸಮುದ್ರದ ಅಲೆಗಳಂತೆ ಏರಿಳಿಯಿತು. ನನ್ನೆದರು ನಿಂತವನನ್ನು ಕೆಕ್ಕರಿಸಿ ನೋಡಿದ.
ಇನ್ನರ್ಧ ಗಂಟೆಯಲ್ಲಿ ಫೈಲು ಬೇಕುಎಂದೆ. ನನ್ನ ಮಾತಿನಲ್ಲಿ ಆತನ ಕರ್ತವ್ಯವನ್ನು ನೆನಪಿಸುವ ಅಧಿಕಾರವಿತ್ತು. ಗೋಪಾಲಮೆತ್ತಗಾಗಿ ಹಳೆ ಫೈಲುಗಳ ಕಪಾಟಿನತ್ತ ನಡೆದ.

ಮತ್ತೆ ಈತನೆಡೆಗೆ ತಿರುಗಿಗುರುತು ಚೀಟಿ ತಂದಿದ್ದೀಯಎಂದೆ. ಆತ ಏನೇನೂ ಗೊತ್ತಾಗದೆ, ಹಲ್ಲು ಕಿರಿದ.
ಗುರುತು ಚೀಟಿ, ಗುರುತು ಚೀಟಿ....ತಂದಿದ್ದೀಯ. ಅಡವಿಟ್ಟ ಬಳಿಕ ಅದರ ಗುರುತು ಚೀಟಿಯನ್ನು ಕೊಡ್ತಾರೆ. ಬಿಡಿಸಿಕೊಂಡುಹೋಗುವಾಗ ಅದು ಬೇಕು.ಅದು ತಂದಿದ್ದೀಯ....’
ಅವನು ಅದೊಂದು ವಿಷಯವೇ ಅಲ್ಲವೆಂಬಂತೆ ಚಿನ್ನವನ್ನು ಎಲ್ಲಿದ್ದರೂ ನಾನು ಗುರುತು ಹಿಡಿಯುತ್ತೇನೆ ದನಿಎಂದ. ಪ್ರತಿಉತ್ತರಿಸಲಾಗದೆ ನಾನು ವೌನವಾದೆ.
ಐದು ಜೊತೆ ಅಲಿಕತ್ತುಗಳು ದನಿ. ಐದು ಜೊತೆ .....ಪ್ರತಿ ಅಲಿಕತ್ತಿನಲ್ಲೂ ಐದೈದು ಜಾಲರಿಗಳು ದನಿ. ಒಂದೊಂದು ಜಾಲರಿಗಳಲ್ಲೂತೂಗುವ; ಹತ್ತಿರದಲ್ಲಿ ಕಣ್ಣಿಟ್ಟು ನೋಡಿದರಷ್ಟೇ ತಿಳಿಯುವ ಬಾತುಕೋಳಿಗಳು. ಅಮ್ಮನಿಗೆ ನನ್ನ ಅಜ್ಜಿ ತನ್ನ ಕಿವಿಯಿಂದಲೇ ತೆಗೆದುಹಾಕಿದ ಅಲಿಕತ್ತುಗಳಂತೆ ಅದು. ನನ್ನ ಅಪ್ಪ ಕೇಳಿದ್ದನ್ನೆಲ್ಲಾ ತೆಗೆದು ಕೊಟ್ಟ ಅಮ್ಮ ಬೋಳು ಬೋಳಾದಳು. ಕೊನೆಗೆ ಉಳಿದದ್ದು ಅಲಿಕತ್ತುಗಳು. ಅದನ್ನು ಮಾತ್ರ ತೆಗೆದು ಕೊಡಲು ಒಪ್ಪಲಿಲ್ಲವಂತೆ ಅವಳು. ಕೊನೆಗೆ ಅಪ್ಪ ರೋಗ ಹಿಡಿದು ಮಲಗಿದಾಗಲೂ ಕೂಡ; ಮದ್ದಿನ ಹಣಕ್ಕೂ ಅಲಿಕತ್ತನ್ನು ಬಿಚ್ಚಿಕೊಡಲಿಲ್ಲವಂತೆ ನನ್ನ ಅಮ್ಮ....’

ಅವನು ತಾನು ಅಡವಿಟ್ಟ ಚಿನ್ನದ ಗುರುತನ್ನು ಹೇಳುತ್ತಿದ್ದ. ನಿಧಾನಕ್ಕೆ ನನ್ನೆದುರು ಒಂದು ಸಣ್ಣ ಗೋಡೆ ಇದೆ ಎನ್ನುವ ಸೂಚನೆಯೂಇಲ್ಲದಂತೆ ಅದನ್ನು ದಾಟಿ ಬಂದಿದ್ದ. ಬೆಳಕು ಸಾಲದೆಂದು ತಲೆ ಮೇಲೆ ಉರಿಯುತ್ತಿದ್ದ ಟ್ಯೂಬ್ ಲೈಟ್ ಬೆಳಕುಗಳೆಲ್ಲವನ್ನು ಮುಚ್ಚಿಹಾಕಿ, ತನಗೆ ತಾನೆ ಸಾರ್ವಭೌಮನಂತೆ ಅವನ ಕಣ್ಣೊಳಗಿನ ಚಿಮಿಣಿ ದೀಪ ನಿಧಾನಕ್ಕೆ ನನ್ನನ್ನು ಆವರಿಸುತ್ತಿತ್ತು.

ಅಲಿಕತ್ತುಗಳಿಲ್ಲದ ಅಮ್ಮನನ್ನು ನಾನು ನೋಡಿದ್ದೇ ಇಲ್ಲ ದನಿಹಳೆಯ ಮರದ ಛತ್ರಿಯನ್ನು ಬಿಡಿಸುವಂತೆ ಅವನು ತನ್ನನೆನಪುಗಳನ್ನು ನಿಧಾನಕ್ಕೆ ಬಿಡಿಸತೊಡಗಿದ.

ಅನ್ನ ಬಡಿಸುವುದಕ್ಕೆಂದು ಅಮ್ಮ ಬಾಗುವಾಗ ನಾನು ಅಮ್ಮನ ಕಿವಿಯಲ್ಲಿ ತೂಗುವ ಬಾತುಕೋಳಿಗಳನ್ನೇ ಗಮನಿಸುತ್ತಿದ್ದೆ. ಒಂದುಕಿವಿಯಲ್ಲಿ ಅಷ್ಟ್ಟೂ ಬಾತುಕೋಳಿಗಳು ಒಟ್ಟಿಗೆ ತೂಗುವುದು, ಎಷ್ಟು ಚಂದ ಇತ್ತು ದನಿ. ಬಾತು ಕೋಳಿಗಳನ್ನು ನೋಡುನೋಡುತ್ತಲೇ ನಾನು ಮನೆಯಲ್ಲಿ ನಾಲ್ಕು ಬಾತುಕೋಳಿಗಳನ್ನು ತಂದು ಸಾಕಿದ್ದೆ. ಮೊದ ಮೊದಲು ಅಮ್ಮ ಹುಟ್ಟುವಾಗಲೇ ಅಲಿಕತ್ತುಗಳೊಂದಿಗೆ ಹುಟ್ಟಿರಬೇಕು ಎಂದು ನಂಬಿದ್ದೆ.ನಾನೊಮ್ಮೆ ಆಡುವುದಕ್ಕೆ ಅಲಿಕತ್ತು ಬೇಕು ಎಂದು ಹಟ ಹಿಡಿದಾಗ ಅವಳುಹೇಳಿದಳು,ಅದನ್ನೂ ಎಂದೂ ಕಿವಿಯಿಂದ ತೆಗೆಯಬಾರದು ಅಂತ ಹೇಳಿ ಅವಳ ಉಮ್ಮ ಅದನ್ನು ಕಿವಿಗೆ ಸಿಕ್ಕಿಸಿದ್ದಳಂತೆ......’

ಅಮ್ಮನ ಕಿವಿಗೆ ಅಲಿಕತ್ತು ತೊಡಿಸಿದ್ದೇ ಅವಳ ಮದುವೆಯ ಹಿಂದಿನ ರಾತ್ರಿ. ನನ್ನ ಮನೆಗೆ ಕಾಲಿಡುವುದಾದರೆ 5 ಪವನುಅಲಿಕತ್ತುಗಳೊಂದಿಗೇ ಕಾಲಿಡಲಿ ಎಂದು ಮದುಮಗನ ತಾಯಿ ಹಲ್ಲು ಕಚ್ಚಿ ಹಟ ಹಿಡಿದಾಗ ನನ್ನ ಅಜ್ಜಿ ಮನಸ್ಸಿಲ್ಲದ ಮನಸ್ಸಿನಿಂದತನ್ನ ಕಿವಿಯಲ್ಲಿ ತೂಗುತ್ತಿದ್ದ ಅಲಿಕತ್ತುಗಳನ್ನು ಕಳಚಿ, ಮಗಳ ಕಿವಿಗೆ ಚುಚ್ಚಿದಳಂತೆ.

ಗಂಡನ ಮನೆಗೆ ಕಾಲಿಟ್ಟ ನಾಲ್ಕೇ ನಾಲ್ಕು ದಿನಗಳಲ್ಲಿ, ಅಮ್ಮನ ಕಿವಿಯಲ್ಲಿ ತೂಗುತ್ತಿದ್ದ ಅಲಿಕತ್ತುಗಳನ್ನು ಕಂಡು ಮಾರು ಹೋದಅವಳ ಅತ್ತೆಯ ಕಣ್ಣಲ್ಲಿ ಆಸೆ ಕುಣಿಯ ತೊಡಗಿತಂತೆ.
ನನ್ನ ಮುದ್ದು ಸೊಸೆಯೇ....ನನ್ನ ಚಿನ್ನದಂತಹ ಮಗಳೇ..’ ಎಂದು ಹೋದಲ್ಲಿ ಬಂದಲ್ಲಿ ಅಮ್ಮನನ್ನು ಮುದ್ದು ಮಾಡುತ್ತಾ ಒಂದು ದಿನಕೇಳಿಯೇ ಬಿಟ್ಟಳಂತೆ. ಅಮ್ಮ ಜಪ್ಪೆಂದರೂ ಒಪ್ಪಲಿಲ್ಲ. ಸೊಸೆಯ ದುರಾಸೆಯಿಂದ ಕೆಂಡವಾದ ಅತ್ತೆ ಮಗನ ಮೂಲಕಕೇಳಿಸಿದಳಂತೆ ,‘ಊಹುಂ.....ನನ್ನ ಪ್ರಾಣ ಕೊಂಡು ಹೋಗುವ ಅಝ್ರಾಯಿಲ್ ಮಲಾಯಿಕ್ ಬಂದು ಕೇಳಿದರೂ ಅಲಿಕತ್ತಕೊಡುವವಳಲ್ಲಎಂದು ಎಲ್ಲರಿಗೂ ಕೇಳಿಸುವಂತೆ ಅಬ್ಬರಿಸಿ ನುಡಿದಳಂತೆ ಅಮ್ಮ.
ಮದುವೆಯಾಗಿ ನಾಲ್ಕೇ ನಾಲ್ಕು ದಿನಗಳಲ್ಲಿ ಗಂಡನಿಗೆ ಹೀಗೊಂದು ಎದುರುತ್ತರ ಕೊಟ್ಟು ಮತ್ತೆ ತನ್ನ ತಾಯಿಯ ಮನೆ ಸೇರಿದಅಮ್ಮ ಮರಳಿ ಗಂಡನ ಮನೆ ಸೇರಿದ್ದು, ಅತ್ತೆ ಕಣ್ಣು ಮುಚ್ಚಿದ ಬಳಿಕವೇ.....’
ಬ್ಯಾಂಕಿನಿಂದ ಚಿನ್ನವನ್ನು ಬಿಡಿಸುವಲ್ಲಿ ಇದೆಲ್ಲಾ ಬಹಳ ಮಹತ್ವವಾದುದು ಎಂಬಂತೆ ಅವನು ಎಲ್ಲವನ್ನು ಬಿಡಿಸಿಡುತ್ತಿದ್ದರೆ, ನಾನೂಕೂಡ ಅದನ್ನು ಒಪ್ಪಿಕೊಂಡವನಂತೆ ಕೇಳಿಸಿಕೊಳ್ಳುತ್ತಿದ್ದೆ.

ನಾನೀಗ ಬಿಳಿ ಹಾಳೆಯೊಂದನ್ನು ಎತ್ತಿ ಗುರುತು ಚೀಟಿ ಕಳೆದು ಹೋದ ಕುರಿತು ಅರ್ಜಿಯನ್ನು ಸಿದ್ದ ಪಡಿಸತೊಡಗಿದೆ. ಸಾಲದಸಂಖ್ಯೆಯೂ ಸೇರಿದಂತೆ ಅಂಕಿಅಂಶಗಳು ಬೇಕಾದಲ್ಲಿ ಖಾಲಿ ಜಾಗವನ್ನು ಬಿಟ್ಟು ಅವನ ಹೆಬ್ಬೆಟ್ಟು ಕೇಳಿದೆ. ಅವನು ತನ್ನ ಹೆಬ್ಬೆಟ್ಟನ್ನುನೀಲಿಗೆ ಅದ್ದಿ, ಬಿಳಿ ಹಾಳೆಯ ಮೇಲೆ ಒತ್ತಿ ಹಿಡಿದು ನನ್ನ ಮುಖವನ್ನು ನೋಡಿದ; ತೆಗೆಯಲೋ, ಬೇಡವೋ ಎನ್ನುವಂತೆ.
ನಾನು
ಸಾಕುಎಂದದ್ದೇ, ಬಿಳಿ ಹಾಳೆಗೆ ಅಂಟಿದ್ದ ಹೆಬ್ಬೆಟ್ಟನ್ನು ಎತ್ತಿ, ಅದು ಬಿಡಿಸಿದ ಚಿತ್ತಾರವನ್ನೇ ನೋಡ ತೊಡಗಿದ. ಪಕ್ಕದಲ್ಲಿದ್ದಪ್ಲಾಸ್ಟಿಕ್ ಸ್ಟೂಲೊಂದನ್ನು ಎಳೆದು, ಕೂರು ಎಂದೆ. ನನ್ನ ಔದಾರ್ಯತೆಗೆ ಕುಗ್ಗಿ, ಸಂಕೋಚದಿಂದ ಹಿಡಿಯಾದ ಆತಬೇಡ ದನಿಎಂದ.

ಈತನನ್ನು ಕೂರಲು ಇನ್ನಷ್ಟು ಒತ್ತಾಯಿಸುವುದು ನನ್ನ ಸ್ಥಾನಕ್ಕೆ ದುಬಾರಿ ಅನ್ನಿಸಿತು. ಸುಮ್ಮಗಾದೆ. ಅವನಿಗೆ ಇನ್ನೂ ಹೇಳಲಿಕ್ಕಿದ್ದವು. ನನಗೂ ಇನ್ನೂ ಏನೇನೋ ಕೇಳಿಸಿಕೊಳ್ಳುವುದಕ್ಕಿದೆ ಅನ್ನಿಸಿ ಅವನ ಮುಖ ನೋಡಿದೆ. ತಾನು ಬಿಡಿಸಿಕೊಳ್ಳಲು ಹೊರಟಿರುವಅಲಿಕತ್ತುಗಳು ಎಷ್ಟು ಮಹತ್ವದ್ದು ಎನ್ನುವುದನ್ನು ಅವನಿಗೆ ಇನ್ನಷ್ಟು ಬಿಡಿಸಿ ಹೇಳಲಿಕ್ಕಿದೆ ಅನ್ನುವುದು ಹೊಳೆಯಿತು. ಹೇಳುಅನ್ನುವಂತೆ ಕಣ್ಣ ರೆಪ್ಪೆಯನ್ನೊಮ್ಮೆ ಬಡಿದೆ.

ಅಮ್ಮನ ಕಾಲ ಗೆಜ್ಜೆ, ಸೊಂಟದ ಬೆಳ್ಳಿಯ ಚೈನು, ಸುಮಾರು ಅರ್ಧರ್ಧ ಪವನು ತೂಗುವ ಕೈಯ ಚಿನ್ನದ ಬಳೆ ಎಲ್ಲಾ ಅಮ್ಮ ಗದ್ದೆಕೆಲಸಕ್ಕೆ ಹೋಗಿ,ಬೀಡಿಕಟ್ಟಿ ಮಾಡಿದವುಗಳು ದನಿ. ಅವೆಲ್ಲವನ್ನೂ ಅಪ್ಪ ಕೇಳಿದಾಗಲೆಲ್ಲಾ ತೆಗೆತೆಗೆದು ಕೊಟ್ಟಳು. ಅಪ್ಪನಿಗೋಅಮ್ಮನ ಕಿವಿಯಲ್ಲಿ ತೂಗುವ ಅಲಿಕತ್ತುಗಳ ಮೇಲೆಯೇ ಕಣ್ಣು. ಆದರೆ ಅಲಿಕತ್ತಿಗಾಗಿ ನಾಲ್ಕೇ ದಿನಗಳಲ್ಲಿ ಅತ್ತೆಯೊಂದಿಗೆ ಅಮ್ಮಹೂಡಿದ ಯುದ್ಧ, ಅಪ್ಪನನ್ನು ಮಾತುಗಳನ್ನು ಒತ್ತಿ ಹಿಡಿದಿತ್ತು.

ಆದರೂ
ಒಮ್ಮಮ್ಮೆ ಅಲಿಕತ್ತಿನ ಮೇಲೆ ಆಸೆ ಉಕ್ಕಿದಾಗ, ಬೀಡಿ ಕಟ್ಟುತ್ತಿದ್ದ ಅಮ್ಮನ ಪಕ್ಕ ಕೂತು ತನ್ನ ಕೈ ಬೆರಳುಗಳನ್ನುಮೃದುವಾಗಿ ಅಲಿಕತ್ತುಗಳ ಮೇಲೆ ಸವರುತ್ತಾ, ಅದರಲ್ಲಿ ತೂಗುವ ಬಾತುಕೋಳಿಗಳನ್ನು ಎಣಿಸುತ್ತಾ ತಾನು ಮಾಡಲಿರುವವ್ಯಾಪಾರವನ್ನು , ಅದರಿಂದ ತನಗೆ ಬರಲಿರುವ ಲಾಭವನ್ನು ಅಮ್ಮನಿಗೆ ವಿವರಿಸುತ್ತಿದ್ದ.

ಕಳೆದ ಬಾರಿ ಅಡಿಕೆಗೆ ಏಕಾಏಕಿ ದರ ಇಳಿಯದಿದ್ದರೆ, ನಿನ್ನ ಕಾಲ ಚೈನು, ಕೈ ಬಳೆ ಏನು, ಮೈ ತುಂಬಾ ಬಂಗಾರವನ್ನುತೋಡಿಸಬಹುದಿತ್ತು. ಹಾಗೆಂದೇ ಕನಸು ಕಂಡಿದ್ದೆ...ಕಿವಿಯಲ್ಲಿರುವ ಅಲಿಕತ್ತುಗಳಿಗಿಂತ ಚಂದದ ಅಲಿಕತ್ತನ್ನು ನೋಡಿ ಇಟ್ಟಿದ್ದೆ. ಆದರೆ ಬಾರಿ ಕಳೆದ ಬಾರಿಯ ಅಡಿಕೆ ವ್ಯಾಪಾರದಂತೆ ಆಗುವುದಿಲ್ಲ. ಈಗ ನಾನು ಒಣಮೀನು ಕೊಂಡು ಸಂಗ್ರಹಿಸಿಟ್ಟರೆ,ಬರುವಮಳೆಗಾಲಕ್ಕೆ ನೋಡು, ಬರುವ ಮಳೆಗಾಲಕ್ಕೆ ಬಂಗಾರ ,ಬಂಗಾರವಾಗಿ ಬಿಡುತ್ತದೆ...’

ಅಪ್ಪ
ಮಾತನಾಡುತ್ತಿದ್ದರೆ ಅಮ್ಮನ ಮುಖದಲ್ಲಿ ಒಂದು ಸಣ್ಣ ಪ್ರತಿಕ್ರಿಯೆಯೂ ಇರುತ್ತಿರಲಿಲ್ಲ. ಯಾಂತ್ರಿಕವಾಗಿ ಸರಸರನೇಬೀಡಿಯನ್ನು ಸುತ್ತಿ ಸುತ್ತಿ ಹಾಕುತ್ತಿದ್ದಳು.ಬೀಡಿಕಟ್ಟುವಾಗ ಅಮ್ಮ ಒಂದು ಸಣ್ಣ ಬೈತ್ನ್ನಾದರೂ ಹಾಡುತ್ತಿದ್ದರೆ ಅವಳ ಮನಸ್ಸು ತುಸುಖುಷಿಯಲ್ಲಿದೆ ಎಂದು ಅಪ್ಪನಿಗೆ ಒಂದು ಧೈರ್ಯ. ಆದರೆ ತರ ಅಮ್ಮ ವೌನವಾಗಿ, ಕಲ್ಲಲ್ಲಿ ಕೆತ್ತಿದ ಹಾಗೆ ಮುಖ ಮಾಡಿ ಕುಳಿತರೆಅಪ್ಪನ ಎಲ್ಲಾ ಧೈರ್ಯವೂ ಉಡುಗುತ್ತಿತ್ತು. ಒಮ್ಮಿಮ್ಮೆ ಅಪ್ಪ ಸುಮ್ಮ ಸುಮ್ಮಗೆ ಹೆದರಿಸಲು ನೋಡುತ್ತಿದ್ದನಾನು ಸತ್ತುಹೋಗುತ್ತೇನೆ. ಆಗ ನಿನಗೆ ಕಿವಿ ತುಂಬಾ ಅಲಿಕತ್ತು, ಕೊರಳು ತುಂಬಾ ಚಿನ್ನ ಹಾಕಿ ಕುಣಿಯ ಬಹುದಲ್ವಾ.....’

ಅಮ್ಮ ಬಾಯಿ ತುಂಬಾ ಹಾಕಿದ್ದ ಎಲೆ ಅಡಿಕೆಯನ್ನುತೂಫ್..’ ಅಂತ ಉಗುಳಿ ಹೇಳುತ್ತಿದ್ದಳು ‘...ಸಾಯುವವರನ್ನು ಹಿಡಿದು ನಿಲ್ಲಿಲ್ಲಿಕ್ಕೆನಾನು ಯಾರು.....?’

ಮೇಲಿದ್ದ ಮಲಾಯಿಕುಗಳು ಅಮ್ಮನ ಮಾತಿಗೆಆಮೀನ್ಎಂದು ಹೇಳಿದರೋ ಎಂಬಂತೆ ಒಂದು ದಿನ ಅಪ್ಪ ಹಾಸಿಗೆಹಿಡಿದನೋ.....ಅಮ್ಮನ ದುಡಿಮೆಯೆಲ್ಲಾ ಅಪ್ಪನ ರೋಗಕ್ಕೆ ಸಂದಾಯವಾಗತೊಡಗಿತು. ಕೊನೆಗೆ ಡಾಕ್ಟರು ಅಪ್ಪಉಳಿಯಬೇಕಾದರೆ ಆತ ಹೊಟ್ಟೆ ಅಪರೇಷನ್ ಆಗಬೇಕೆಂತಲೂ ...ಕಡಿಮೆಯೆಂದರೂ ಐದು ಸಾವಿರ ಬೇಕೆಂತಲೂ ಹೇಳಿದಾಗಅಮ್ಮ ಹೈರಾಣಾದಳು.ಅಮ್ಮ ಹಾಸಿಗೆಯಲ್ಲಿ ಮಲಗಿದ್ದ ಅಪ್ಪನನ್ನೇ ನೋಡುತ್ತಿದ್ದರೆ, ಅಪ್ಪ ಆಕೆಯ ಕಿವಿಯಲ್ಲಿ ತೂಗುತ್ತಿದ್ದಅಲಿಕತ್ತುಗಳನ್ನೇ ನಿರ್ಲಿಪ್ತ ಕಣ್ಣುಗಳಿಂದ ನೋಡುತ್ತಿದ್ದ.

ಹೀಗೆ ಒಬ್ಬರನ್ನೊಬ್ಬರು ಮೂರು ನಾಲ್ಕು ದಿನ ಬಿಡದೇ ನೋಡಿರಬೇಕು, ಒಂದು ದಿನ ಇನ್ನು ಸಾಧ್ಯವಿಲ್ಲ ಎಂಬಂತೆ ಅಮ್ಮಅಬ್ಬರಿಸಿದಳುಸಾಯಲೇ ಬೇಕೆಂದಿದ್ದರೆ ಸಾಯುವವರು ಸಾಯಲಿ. ಕಿವಿಯ ಅಲಿಕತ್ತು ಮಾತ್ರ ತೆಗೆದುಕೊಡುವವಳಲ್ಲ.....’
ಮಲಗಿದಲ್ಲಿಂದಲೇ ಅಮ್ಮನನ್ನು ನಿರ್ಲಿಪ್ತವಾಗಿ ನೋಡುತ್ತಿದ್ದ ಅಪ್ಪ ಅಂದು ಸಂಜೆಯೇ ಅಮ್ಮನಿಗೆ ತಲಾಖ್ ಹೇಳಿ ಬಿಟ್ಟ.

ಗಂಡನ
ಮನೆಯಿಂದ ತನ್ನೆಲ್ಲಾ ಸರಕುಗಳನ್ನು ಗೋಣಿಯೊಂದರಲ್ಲಿ ತುಂಬಿಸಿದ ಅಮ್ಮ, ನನ್ನನ್ನು ಇನ್ನೊಂದು ಕೈಯಲ್ಲಿ ಹಿಡಿದುತವರಿಗೆ ನಡೆದೇ ಬಿಟ್ಟಳು. ದಾರಿಯುದ್ದಕ್ಕೂ ಅಮ್ಮ ಅಳುತ್ತಿದ್ದಳು ದನಿ.....ಎನ್ನುತ್ತಾ ಆತ ಕಣ್ಣೋರೆಸಿಕೊಂಡ .
ಅಮ್ಮ ತವರು ಮನೆ ಮುಟ್ಟುವಷ್ಟರಲ್ಲಿ ಅಪ್ಪ ತೀರಿದ ಸುದ್ದಿ ತಲುಪಿತ್ತು ದನಿ. ಯಾರದೋ ಸಾವಿನ ಸುದ್ದಿ ಕೇಳಿದವಳಂತಿದ್ದ ಅಮ್ಮ, ಅಂದು ಸಂಜೆ ನನ್ನನ್ನು ಚೆನ್ನಾಗಿ ಬಿಸಿ ನೀರಿನಲ್ಲಿ ಮೀಯಿಸಿ ಮಲಗಿಸಿದಳು. ರಾತ್ರಿಯಿಡೀ ಅಮ್ಮ ಹೆಣದಂತೆ ನಿದ್ರಿಸಿದ್ದಳು.’

ಅಷ್ಟರಲ್ಲಿ ಅಟೆಂಡರ್ ಗೋಪಾಲ್ ಧೂಳಿನಲ್ಲಿ ಮುಚ್ಚಿ ಹೋಗಿದ್ದ ಫೈಲೊಂದನ್ನು ತಂದವನೇ, ನಮ್ಮ ಸಮೀಪದಲ್ಲೇ ಧೂಳನ್ನು ತಟ್ಟಿಸಿಟ್ಟನ್ನು ತೀರಿಸಿಕೊಂಡ. ‘ಭುಕ್ಎಂದು ಆವರಿಸಿದ ಧೂಳಿನಿಂದ ಕೆಮ್ಮು ಕರುಳಿಂದ ಕಿತ್ತು ಬಂತು. ಗೋಪಾಲನೂ ಕೆಮ್ಮ ತೊಡಗಿದರಿದ್ರದು್ದ ಎಂದ. ನನ್ನೆದುರು ನಿಂತಾತ ಮಾತ್ರ ಏನೂ ಆಗದವನಂತೆ ಧೂಳಿನ ಪರಿಮಳವನ್ನು ಹೀರ ತೊಡಗಿದ್ದ.

ಫೈಲನ್ನು ಬಿಡಿಸಿದೆ. ನಿಧಾನಕ್ಕೆ ಖಾಲಿ ಹಾಳೆಯಲ್ಲಿ ಅವನು ತೆಗೆದ ಸಾಲವನ್ನು ಬರೆದಿಟ್ಟು ಅಸಲು, ಬಡ್ಡಿಯನ್ನು ಲೆಕ್ಕಿಸತೊಡಗಿದೆ. ಯಾಕೋ ಎಂದಿನ ಉತ್ಸಾಹ ಇದ್ದಿರಲಿಲ್ಲ.

ಅವನು ಕೊಡಬೇಕಾದ ಮೊತ್ತವನ್ನು ಹಾಳೆಯ ಕೊನೆಯಲ್ಲಿ ಬರೆದು ಅವನ ಮುಂದಿಟ್ಟೆ. ಆತ ಅದನ್ನು ಕಣ್ಣೆತ್ತಿಯೂ ನೋಡಲಿಲ್ಲ. ತನ್ನಲುಂಗಿಯೊಳಗಿನ ಗೀಟು ಗೀಟು ಚಡ್ಡಿಯಿಂದ ಟವೆಲಿನ ಕಟ್ಟೊಂದನ್ನು ಹೊರತೆಗೆದು ನನ್ನ ಟೇಬಲಿನ ಮೇಲಿಟ್ಟು ಬಿಡಿಸಿದ. ಬೆವರಿನಿಂದ ಒದ್ದೆಯಾದ ನೋಟುಗಳು ಮುದ್ದೆಯಾಗಿ ಮಲಗಿತ್ತು.

ಎಣಿಸಿ ದನಿ.....’ಎಂದ.
ನೂರು, ಐವತ್ತೂ, ಹತ್ತು ಹೀಗೆ ಎಲ್ಲಾ ಬಗೆಯ ನೋಟುಗಳು ಸೇರಿಕೊಂಡಿತ್ತು. ಹಣವನ್ನು ಎಣಿಸುವಾಗ ನನ್ನ ಕೈ ನಡುಗುತ್ತಿತ್ತು. ಲಕ್ಷಗಟ್ಟಳೆ ಎಣಿಸಿದ ನನ್ನ ಕೈ ಹೀಗೇಕೆ ವರ್ತಿಸುತ್ತಿದೆ ಎನ್ನುವುದು ನನಗರ್ಥವಾಗುತ್ತಿರಲಿಲ್ಲ. ಎಣಿಸಿ ನೋಡಿದರೆ ಕಟ್ಟ ಬೇಕಾದಹಣಕ್ಕೆ ಇನ್ನೂ ಎರಡು ಸಾವಿರ ರೂ. ಕಡಿಮೆಯಿದೆ. ಇನೊಮ್ಮೆ ಎಣಿಸಿದೆ. ಊಹುಂ...

ಅವನನ್ನು ದಿಟ್ಟಿಸಿದೆ. ಇನ್ನೇನು ಚಿನ್ನ ಸಿಕ್ಕಿಯೇ ಬಿಟ್ಟಿತು ಎಂಬ ಸಂಭ್ರಮ ಅಲ್ಲಿ ಕುಣಿಯುತ್ತಿತ್ತು. ಗಂಟಲಲ್ಲಿ ಏನೋಸಿಕ್ಕಿಕೊಂಡಂತಾಗಿ ಸಣ್ಣಗೆ ಕೆಮ್ಮಿ, ‘ಚಿನ್ನ ಸಿಗಬೇಕಾದರೆ ಇನ್ನೂ ಎರಡು ಸಾವಿರ ರೂ.ಬೇಕಪ್ಪ....’ ಎಂದೆ.

ಆತ ಅರ್ಥವಾಗದೆ ನನ್ನ ಮುಖವನ್ನೇ ನೋಡಿದ.‘ಎರಡು ಸಾವಿರ ರೂ. ಕಡಿಮೆ ಇದೆ. ಏನು ಮಾಡ್ತೀಯ...?’ ಅವನಿಗೆ ಅರ್ಥವಾಗುವಹಾಗೆ ಕಟ್ಟ ಬೇಕಾದ ಹಣವನ್ನು, ಅವನು ತಂದ ಹಣವನ್ನು ವಿವರಿಸಿ ಹೇಳಿದೆ. ಅವನ ಮುಖ ನಿರ್ಜೀವವಾಗಿತ್ತು. ಕಣ್ಣ ರೆಪ್ಪೆ ಮುಚ್ಚಿತೆರೆದ ರಭಸಕ್ಕೆ ಅಲ್ಲಿ ಮಿನುಗುತ್ತಿದ್ದ ಬೆಳಕೂ ಆರಿ ಹೋಗಿತ್ತು.

ಇನ್ನೂ ಆಗಬೇಕಾ...’ ಅವನಷ್ಟಕ್ಕೆ ಗೊಣಗಿದ.
ನೋಡು... ಹಣ ನಿನ್ನಲ್ಲೇ ಇರಲಿ. ಇನ್ನೂ ಎರಡು ಸಾವಿರ ರೂ.ಕೈಯಲ್ಲಿ ಸೇರಿದಾಗ ಬಂದು ಕಟ್ಟು...’ ಅಷ್ಟೂ ಹಣವನ್ನು ಟುವ್ವಾಲಲ್ಲಿ ಕಟ್ಟಿ ಅವನ ಕೈಗಿಡಲು ನೋಡಿದೆ.
ಚೇಳು
ಕಚ್ಚಿಸಿಕೊಂಡವನಂತೆ ಅವನು ಕೈಯನ್ನು ಹಿಂದಕ್ಕೆ ತೆಗೆದ.‘ಬೇಡಾಎಂದು ಅವನಿಗೆ ಅವನೇ ಪಿಸುಗುಟ್ಟಿದ.
ಬಿಡಿಸಿ ತಂದೇ ತರುವೆ ಎಂದು ಅಮ್ಮನಿಗೆ ಹೇಳಿದ್ದೆ...’ ಒಣಗಿದ ಧ್ವನಿಯಲ್ಲಿ ಹೇಳಿದ..‘ದನಿ ಇಷ್ಟನ್ನು ಇಟ್ಟುಕೊಂಡು ಏನಾದರೂಮಾಡ್ಲ್ಲಿಕ್ಕೆ ಆಗುವುದಿಲ್ವಾ...’ ಎನ್ನುತ್ತಾ ನನ್ನನ್ನು ವಿನೀತವಾಗಿ ನೋಡಿದ.
ನಾನು ಏನನ್ನೋ ಬರೆಯುವ ನೆಪದಲ್ಲಿ ತಲೆ ತಗ್ಗಿಸಿದೆ.
ದನಿ ಇದಿಷ್ಟನ್ನು ಸಾಲಕ್ಕೆ ಸಂದಾಯ ಮಾಡಿಕೊಳ್ಳಿ. ನಾಳೆ, ನಾಡಿದ್ದರಲ್ಲಿ ಉಳಿದ ಹಣದೊಂದಿಗೆ ಬಂದು ಬಿಡಿಸಿಕೊಳ್ಳುವೆ

ನಾನು ಪಕ್ಕನೆ ತಲೆ ಎತ್ತಿದೆ. ಈತ ಭಾವುಕತೆಯಿಂದ ತನ್ನ ಚಿನ್ನ, ಹಣ ಎರಡನ್ನೂ ಕಳೆದು ಕೊಳ್ಳುತ್ತಿದ್ದಾನೆ ಎಂದು ಮನಸ್ಸುಆತಂಕಗೊಂಡಿತು. ಅವನಿಗೆ ಅರ್ಥವಾಗುವ ಹಾಗೆ ಬಿಡಿಸಿ ಹೇಳಿದೆ
ನೋಡು.....ಇಷ್ಟು ಹಣವನ್ನು ಕಟ್ಟಿ ನಾಳೆ ಎರಡು ಸಾವಿರ ರೂ.ವನ್ನು ಕಟ್ಟಲಾಗದಿದ್ದಲ್ಲಿ ನೀನು ಹಣ, ಚಿನ್ನ ಎರಡನ್ನು ಕಳೆದುಕೊಳ್ಳಬೇಕಾದೀತು. ಹಣವನ್ನು ಕೊಂಡು ಹೋಗಿ, ಎರಡು ಸಾವಿರದೊಂದಿಗೆ ಒಟ್ಟಿಗೇ ಕಟ್ಟುಎಂದೆ.
ಬೇಡ ದನಿ...’ಎನ್ನುತ್ತಾ ಹಣವನ್ನು ಟೇಬಲಿಂದ ನನ್ನೆೆಡೆಗೆ ತಳ್ಳಿದ.
ಚಿನ್ನದೊಂದಿಗೆ ಬಂದೇ ಬರುವೆ ಎಂದು ಅಮ್ಮನಿಗೆ ಹೇಳಿದ್ದೆ. ನನ್ನ ಜೀವವೊಂದಿದ್ದರೆ ಉಳಿದ ಹಣದೊಂದಿಗೇ ಬರುತ್ತೇನೆ ದನಿಎಂದವನೇ ಹೊರಡುವ ತಯಾರಿ ನಡೆಸಿದ.
****

ಘಟನೆಗೆ ದಿನಗಳು ಬಡ್ಡಿ, ಚಕ್ರ ಬಡ್ಡಿಗಳಾಗಿ ಬಿದ್ದಿವೆ. ಹೀಗೆ ಕುರ್ಚಿಯಲ್ಲಿ ಕುಳಿತು ಯಾವುದೋ ಅಸಲಿಗೆ ಬಡ್ಡಿಯನ್ನುಕೂಡಿಸುತ್ತಿರುವಾಗ ಬಾಗಿಲ ಬಳಿ ಯಾರೋ ಪಕ್ಕನೆ ಹಾದಂತೆ ಅನ್ನಿಸಿ ಆಗಾಗ ತಲೆ ಎತ್ತಿ ನೋಡುತ್ತಿರುತ್ತೇನೆ. ಗೋಡೆಗೆ ತೂಗುಬಿಟ್ಟಪೋಟೋ ಇಲ್ಲದ ಖಾಳಿ ಚೌಕಟ್ಟಿನಂತಿರುವ ಬಾಗಿಲು ನನ್ನನ್ನು ಅಣಕಿಸುತ್ತಿತ್ತು.

ಕೂತಲ್ಲೇ
ಒಮ್ಮಮ್ಮೆ ನನಗೆ ಚಿನ್ನದ ಅಲಿಕತ್ತುಗಳನ್ನು ನೋಡುವ ಆಸೆ ಹುಟ್ಟುವುದು. ಅದರಲ್ಲಿ ತೂಗುವ ಐದೈದುಜಾಲರಿಗಳು.ಜಾಲರಿಗಳಲ್ಲಿ ತೂಗುವ ಬಾತುಕೋಳಿಗಳನ್ನು ಎಣಿಸಿ ನೋಡಬೇಕೆಂಬ ಆಸೆಯನ್ನು ಅಲ್ಲಿಗೆ ಒತ್ತಿ ಹಿಡಿಯುತ್ತಿರುತ್ತೇನೆ.
ಜೀವವಿದ್ದರೆ
ಎರಡು ಸಾವಿರ ರೂ.ಗಳೊಂದಿಗೆ ಮರಳಿ ಬಂದೇ ಬರುವೆ ಎಂದು ಹೋದಾತ ಮರಳಿ ಬಂದೇ ಬರುವ ಎನ್ನುವ ನನ್ನಧೈರ್ಯಕ್ಕೆ ಹಲವು ಸಮರ್ಥಿಸಿಕೊಳ್ಳಲಾಗದ ಕಾರಣಗಳಿವೆ.

ಪ್ರತಿದಿನವು ಕಚೇರಿಗೆ ಸಿದ್ದತೆ ನಡೆಸುವಾಗಲೂ ದಿನ ಅವನು ಬಂದೇ ಬರುವ ದಿನ ಅನ್ನಿಸುತ್ತಿತ್ತು. ಚಿನ್ನವನ್ನು ಅವನಬೊಗಸೆಯಲ್ಲಿಟ್ಟು, ಅದು ಅವನ ಕಣ್ಣಲ್ಲಿ ಪ್ರತಿಫಲಿಸುವುದನ್ನೊಮ್ಮೆ ನೋಡಬೇಕು ಎಂಬ ನನ್ನ ಸ್ವಭಾವಕ್ಕೆ ಸಲ್ಲದ ಆಸೆಯನ್ನುಈಡೇರಿಸಿಕೊಳ್ಳುವ ಚಪಲದಿಂದ ಕಚೇರಿಗೆ ದಾವಿಸುತ್ತೇನೆ.

ಊಹುಂ
.....ಅವನು ಬಂದಿರುವುದಿಲ್ಲ. ತಲೆ ಎತ್ತಿ ನೋಡಿದರೆ ಒಂದು ಅಪರಿಚಿತ ಮುಖ. ತನ್ನ ಕೈಯಲ್ಲಿದ್ದ ಪೊಟ್ಟಣವೊಂದನ್ನು ನನ್ನಟೇಬಲ್ ಮೇಲಿಟ್ಟು ಚಿನ್ನಕ್ಕೆ ಎಷ್ಟು ಸಾಲ ಸಿಗಬಹುದು ಸ್ವಾಮಿಎಂದು ಕೇಳುತ್ತದೆ.
ನನ್ನ ನಾಲ್ಕೂವರೆ ರೂಪಾಯಿಯ ಪೆನ್ನನ್ನು ಕೈಗೆತ್ತಿಕ್ಕೊಂಡು ಚಿನ್ನದ ಅಂದಾಜು ಬೆಲೆಯನ್ನು ಕಟ್ಟ ತೊಡಗುತ್ತೇನೆ. ಸಂದರ್ಭನನ್ನ ಕೈಗಳು ಕಂಪಿಸುತ್ತಿರುವುದು ಯಾಕೇ? ನನ್ನ ಎದೆ ಬಡಿತ ನನಗೇ ಕೇಳಿಸುವಷ್ಟು ಜೋರಾಗಿ ಬಡಿಯುತ್ತಿರುವುದಾದರೂಯಾಕೇ?

Thursday, May 19, 2011

ಹೀಗೊಬ್ಬ ಗೆಳೆಯನ ಹಳೆಯ ನೆನಪು....

ಮೊನ್ನೆ ಜಿದ್ದಾದಿಂದ ನನ್ನ ಗೆಳೆಯ ಬಂದಿದ್ದ. ಬರುವಾಗ ನನಗೆಂದೇ ಒಂದು ಪುಟ್ಟ ವಾಕ್‌ಮೆನ್ ತಂದಿದ್ದ. ನನ್ನ ಬಾಲ್ಯ ಗೆಳೆಯನೀತ. ನಾವಿಬ್ಬರು ಕಿತ್ತಾಡಿಕೊಂಡಷ್ಟೂ ಯಾರೂ ಕಿತ್ತಾಡಿಕೊಂಡಿಲ್ಲ. ಪ್ರತಿ ಸಂಜೆ ಜಗಳ ಮಾಡುವುದಕ್ಕೆಂದೇ ಊರಿನ ಮೈದಾನ ಸೇರುತ್ತಿದ್ದೆವೋ ಅನ್ನಿಸುತ್ತದೆ ಈಗ. ಸಂಜೆ ಮೈದಾನದಲ್ಲಿ ಆಟ ಮುಗಿಸಿ ರಾತ್ರಿ ಹತ್ತು, ಹನ್ನೊಂದು ಗಂಟೆಯವರೆಗೆ ಹರಟೆಕೊಚ್ಚುತ್ತಿದ್ದೆವು. ಹಾಗೆಯೇ ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದೇವೆ. ಒಮ್ಮೆಯಂತೂ ಕಿತ್ತಾಡಿಕೊಂಡು ಎರಡು ವರ್ಷ ಮಾತು ಬಿಟ್ಟಿದ್ದೆವು. ನನ್ನನ್ನು ಸಾಕಷ್ಟು ಗೋಳಾಡಿಸಿದವನೀತ. ಯಾರಿಗಾದರೂ ಅಡ್ಡ ಹೆಸರು ಇಡುವುದರಲ್ಲಿ ಈತ ಪ್ರವೀಣ.

ಈತ ಅತ್ಯುತ್ತಮ ವಾಲಿಬಾಲ್ ಮತ್ತು ಕ್ರಿಕೆಟ್ ಆಟಗಾರ. ಕ್ರಿಕೆಟ್‌ನಲ್ಲಿ ಈತನ ತಂಡ ಸೇರುವುದೆಂದರೆ ನನಗೊಂದು ತರ ಭಯ. ಕ್ಯಾಚ್ ಬಿಟ್ಟಲ್ಲಿ ಆಕಾಶ ಭೂಮಿ ಒಂದು ಮಾಡುತ್ತಿದ್ದ. ಇವನಿಗೆ ಸಿಟ್ಟು ತಲೆಗೇರಿದರೆ ನನ್ನ ಇಡೀ ವಂಶಕ್ಕೇ ಯಥ್ವಾತದ್ವಾ ಬೈಯ್ಯುತ್ತಿದ್ದ. ಒಮ್ಮಿಮ್ಮೆ ಇವನ ಭಯದಿಂದಲೇ ಕ್ಯಾಚ್ ಬಿಡುತ್ತಿದ್ದೆ. ಕೊನೆಕೊನೆಗೆ ಇವನ ಬೈಗಳಿಗೆ ಹೆದರಿಯೇ ನಾನು ಕ್ರಿಕೆಟ್ ಆಡುವುದನ್ನು ಬಿಟ್ಟುಬಿಟ್ಟೆ. ಇಂದು ನನ್ನಲ್ಲಿ ಕ್ರಿಕೆಟ್ ಎಂದರೆ ಜಿಗುಪ್ಸೆ ಬೆಳೆದಿರುವುದಕ್ಕೆ ಇವನ ಪಾಲು ದೊಡ್ಡದಿದೆ. ಅದೇನೇ ಇರಲಿ, ನಮ್ಮಿಬ್ಬರ ಸ್ನೇಹ, ಜಗಳ ಊರಿನಲ್ಲೆಲ್ಲ ತುಂಬಾ ಜನಪ್ರಿಯವಾಗಿತ್ತು.


ಇವನಿಗೆ ಸಾಹಿತ್ಯ, ನಾಟಕ, ಪುಸ್ತಕ ಇತ್ಯಾದಿಗಳ ಗಂಧಗಾಳಿಯಿಲ್ಲ. ಕಾಲೇಜಲ್ಲೂ ಇಂವ ಕ್ರೀಡೆಯಲ್ಲಿ ಮುಂದಿದ್ದರೂ, ಕಲಿಯುವಿಕೆಯಲ್ಲಿ ಹಿಂದಿದ್ದ. ಹೀಗಿರುವಾಗ ಒಮ್ಮೆ ನಮ್ಮ ಯುವಕ ಮಂಡಲದ ವಾರ್ಷಿಕೋತ್ಸವವಿತ್ತು. ಪ್ರತಿ ವಾರ್ಷಿಕೋತ್ಸವಕ್ಕೆ ನಾವೊಂದು ತುಳು ನಾಟಕವನ್ನು ಇಟ್ಟುಕೊಳ್ಳುತ್ತಿದ್ದೆವು. ಅಂದಿನ ನಾಟಕಕ್ಕೆ ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರದ ಅಗತ್ಯವಿತ್ತು. ಕೊನೆಯ ಒಂದು ದೃಶ್ಯದಲ್ಲಿ ಮಾತ್ರ ಈ ಪೊಲೀಸ್ ಅಧಿಕಾರಿ ಕಾಣಿಸಿಕೊಳ್ಳಬೇಕು. ಒಂದೇ ಒಂದು ಡೈಲಾಗ್ ‘ಹ್ಯಾಂಡ್ಸ್‌ಅಪ್’ ಎಂದು ಖಳನಾಯಕನಿಗೆ ಪಿಸ್ತೂಲ್ ತೋರಿಸಿದರೆ ಸಾಕು. ಈ ಪಾತ್ರಕ್ಕೆ ಉತ್ತಮ ಮೈಕಟ್ಟುಳ್ಳ ನನ್ನ ಗೆಳೆಯನನ್ನೇ ಒಪ್ಪಿಸಲಾಯಿತು. ಎಲ್ಲರ ಒತ್ತಾಯದ ಮೇರೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಲು ಆತ ಕೊನೆಗೂ ಒಪ್ಪಿದ. ಒಂದು ತಿಂಗಳಿರುವಾಗಲೇ ಆತ ಆ ಪಾತ್ರದ ಆ ಒಂದೇ ಒಂದು ಡೈಲಾಗ್ ‘ಹ್ಯಾಂಡ್ಸ್‌ಅಪ್’ನ್ನು ಬಾಯಿಪಾಠ ಮಾಡಲು ಶುರು ಮಾಡಿದ. ಅವನ ಆತಂಕ, ಸಿದ್ಧತೆ ಒಂದು ತಮಾಷೆಯೇ ಆಗಿತ್ತು. ಕೊನೆಗೂ ನಾಟಕದ ದಿನ ಬಂದೇ ಬಿಟ್ಟಿತು. ನಾಟಕವೇನೋ ಚೆನ್ನಾಗಿ ಬಂತು. ಕೊನೆಯ ದೃಶ್ಯದಲ್ಲಿ ಈತನೂ ಪ್ರವೇಶ ಮಾಡಿದ. ಆದರೆ ಪಿಸ್ತೂಲ್‌ತೋರಿಸುವಾಗ ತನ್ನ ಆ ಒಂದು ಡೈಲಾಗನ್ನು ಮರೆತೇ ಬಿಟ್ಟಿದ್ದ. ‘‘ಹ್ಯಾಂಡ್ಸ್‌ಪ್’ ಎಂದು ಹೇಳುವ ಬದಲಿಗೆ ಆತ ‘ಶಟಪ್’ ಎಂದು ಹೇಳಿ ಬಿಟ್ಟಿದ್ದ. ಅವನ ತಪ್ಪು ಡೈಲಾಗ್ ನಮ್ಮಂತಹ ಕೆಲವರಿಗಷ್ಟೇ ಗೊತ್ತಾಗಿತ್ತು. ನಾವೆಲ್ಲ ನಕ್ಕಿದ್ದೇ ನಕ್ಕಿದ್ದು.

ಮೊನ್ನೆ ಅದನ್ನು ಆತನಿಗೆ ನೆನಪಿಸಿ, ಮತ್ತೊಮ್ಮೆ ಜೊತೆಯಾಗಿ ನಕ್ಕೆವು.

Monday, May 16, 2011

ಮದರಸದ ದಿನಗಳು-1 ಮನೆ ಮನೆಯ ಬುತ್ತಿಯೂಟ...


ನನ್ನನ್ನು ಶಾಲೆಯ ದಿನಗಳು ಹೇಗೆ ಬೆಳೆಸಿದೆಯೋ ಹಾಗೆಯೇ ಮದರಸದ ದಿನಗಳೂ ಬೆಳೆಸಿದೆ. ಅಂದಿನ ನೆನಪುಗಳನ್ನು ಆಗಾಗ ನಿಮ್ಮಲ್ಲಿ ಹಂಚಿಕೊಳ್ಳಬೇಕು ಎಂದು ಬಯಸಿದ್ದೇನೆ. ಇಲ್ಲಿ ದಿನಗಳ ಮೊದಲ ಬುತ್ತಿಯನ್ನು ನಿಮ್ಮ ಮುಂದೆ ತೆರೆದಿದ್ದೇನೆ.



ಇತ್ತೀಚೆಗೆ ನನ್ನ ಗೆಳೆಯನನ್ನು ನೋಡಲೆಂದು ಆಸ್ಪತ್ರೆಗೆ ಹೋದಾಗ ಅವರ ಭೇಟಿಯಾಯಿತು. ಅವರೆಂದರೆ ಇನ್ನಾರೂ ಅಲ್ಲ, ನನಗೆ ಮದರಸದಲ್ಲಿ ಕಲಿಸಿದ ಗುರುಗಳು. ತುಂಬಾ ಅಂದರೆ ತುಂಬಾ ಹಿಂದೆ...ನನಗೆ ಕುರ್‌ಆನ್ ಜೊತೆಗೆ ಬದುಕಿನ ಒಳಿತುಕೆಡುಕುಗಳನ್ನು ಕೆಲಕಾಲವಾದರೂ ಕಲಿಸಿದವರು.ನೋಡಿದಾಕ್ಷಣ ನನಗೆ ಅವರ ಮುಖ ಪರಿಚಯವಾಯಿತು. ಮೂಲತಃ ಕೇರಳದವರು. ಬಹುಶಃ ಕಾಸರಗೋಡಿರಬೇಕು. ನನಗವರ ಹೆಸರು ಗೊತ್ತಿಲ್ಲ. ವೃದ್ಧಾಪ್ಯ ಅವರ ಮುಖವನ್ನು ಜರ್ಜರಿತ ಗೊಳಿಸಿತ್ತು. ಕುಳಿತದಲ್ಲೇ ಯಾವುದೋ ಯೋಚನಾ ಲಹರಿಯಲ್ಲಿದ್ದರು. ನಾನು ನೇರ ಅವರ ಮುಂದೆ ನಿಂತು ‘ಅಸ್ಸಲಾಂ ಅಲೈಕುಂ’ ಅಂದೆ. ಅವರು ಬೆಚ್ಚಿಬಿದ್ದವರಂತೆ ತಲೆಯೆತ್ತಿ ‘ವಅಲೈಕು ಸಲಾಂ’ ಎಂದರು. ಅಷ್ಟೇ. ಬಿಳಿ ಲುಂಗಿ ಉಟ್ಟು, ಬಟ್ಟೆ ಧರಿಸಿ, ಬಿಳಿ ಮುಂಡಾಸು ಧರಿಸಿದ ಮುಸ್ಲಿಯಾರುಗಳಿಗೆ ಸಲಾಂ ಹೇಳುವುದು ಒಂದು ಪರಿಪಾಠ. ಹಾಗೆಯೇ ಇವನಾರೋ ಸಲಾಂ ಹೇಳಿರಬೇಕೆಂದು ಮತ್ತೆ ತನ್ನ ಲೋಕದೊಳಗೆ ಇಳಿದರು. ನನ್ನ ನೆನಪಿರಲಿಕ್ಕಿಲ್ಲ ಎಂಬ ಅನುಮಾನದಿಂದ ನಾನು ಅಲ್ಲಿಂದ ಹೊರಟೆ.

ಅವರಿಗೆ ನನ್ನ ನೆನಪಿಲ್ಲದೇ ಇರುವುದಕ್ಕೂ ಒಂದು ಕಾರಣವಿದೆ. ಸಾಧಾರಣವಾಗಿ ಅಂದು(ಇಂದೂ ಕೂಡ) ನಮ್ಮ ಮದರಸದಲ್ಲಿ ಒಬ್ಬ ವೌಲವಿ ಹೆಚ್ಚೆಂದರೆ ಒಂದು ವರ್ಷ ಬಾಳಿಕೆ ಬರುತ್ತಿದ್ದರು. ಅಷ್ಟರಲ್ಲೇ ಜಮಾತಿನ ಯಾರಾದರೊಬ್ಬ ಏನಾದರೂ ಒಂದು ನೆಪದಿಂದ ಅವರನ್ನು ಓಡಿಸುತ್ತಿದ್ದರು. ಈ ಮುಸ್ಲಿಯಾರರು ಕನಿಷ್ಟ ಹೆಚ್ಚೆಂದರೆ ಎಂಟು ತಿಂಗಳು ಬಾಳಿಕೆ ಬಂದಿರಬಹುದು. ಆದರೆ ಇವರನ್ನು ನಾನು ನೆನೆದುಕೊಳ್ಳಲು ಕಾರಣವಿದೆ. ಈ ಮುಸ್ಲಿಯಾರರಿಗೆ ನಾನು ಕುರ್‌ಆನ್ ಪಠಿಸುವುದನ್ನು ತುಂಬಾ ಆಸ್ವಾದಿಸುತ್ತಿದ್ದರು. ಅವರು ಹೇಳಿಕೊಟ್ಟಂತೆಯೇ ತುಂಬಾ ರಾಗವಾಗಿ ಪಠಿಸುತ್ತಿದ್ದೆ. ಅಚ್ಚ ಮಲಯಾಳದಲ್ಲಿ ಅವರು ಮಾತನಾಡುತ್ತಿದ್ದರೂ, ಆ ಮಾತಿನಲ್ಲಿ ನನ್ನ ಕುರಿತಂತೆ ಅವರಿಗಿದ್ದ ವಾತ್ಸಲ್ಯವನ್ನು ನಾನು ಗುರುತಿಸುತ್ತಿದ್ದೆ. ಬಹುಶಃ ಮದರಸದಲ್ಲಿ ನನ್ನನ್ನು ಇಷ್ಟಪಟ್ಟ ಒಬ್ಬರೇ ಒಬ್ಬ ಮುಸ್ಲಿಯಾರರೆಂದರೆ ಇವರೇ ಇರಬೇಕು. ಶಾಲೆಯಲ್ಲಿ ನನ್ನನ್ನು ಇಷ್ಟಪಡುತ್ತಿದ್ದ ಒಬ್ಬ ಮೇಷ್ಟ್ರಿರಿದ್ದರು. ಅವರ ಹೆಸರು ನಾರಾಯಣ ಮಾಷ್ಟ್ರು. ಅವರಂತೆಯೇ ಈ ಮುಸ್ಲಿಯಾರ್ ಕೂಡ ನನ್ನನ್ನು ಇಷ್ಟಪಡುತ್ತಿದ್ದರು. ಆದರೆ, ಇಂದು ಈ ಆಸ್ಪತ್ರೆಯಲ್ಲಿ ಮಾತ್ರ ನಾವು ಪರಸ್ಪರ ಅಪರಿಚಿತರಂತೆ ಸಂಧಿಸಿದೆವು.
***


ನಮ್ಮ ಮದರಸದಲ್ಲಿ ಇಬ್ಬರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಒಬ್ಬ ಮುಸ್ಲಿಯಾರ್. ಅಂದರೆ, ತುಸು ಹೆಚ್ಚು ಕಲಿತವರು. ನಮಾಝ್‌ನ ನೇತೃತ್ವವನ್ನು ವಹಿಸಿಕೊಳ್ಳುವುದು, ಶುಕ್ರವಾರ ಜುಮ್ಮಾ ನಮಾಝ್‌ನ ಸಂದರ್ಭದಲ್ಲಿ ಪ್ರವಚನವನ್ನು ನೀಡುವುದು ಇತ್ಯಾದಿ ಮುಖ್ಯ ಕೆಲಸ ಇವರಿಗೆ. ಇವರಿಗೆ ಹೆಚ್ಚೆಂದರೆ ಆಗ ಎರಡು ಸಾವಿರ ರೂಪಾಯಿ ಸಂಬಳವಿತ್ತು. ಇವರಿಗೆ ಸಹಾಯಕರಾಗಿ ಒಬ್ಬ ಮುಕ್ರಿಯನ್ನು ನೇಮಿಸುತ್ತಿದ್ದರು. ಮಸೀದಿ ನೆಲ ಒರೆಸುವುದು, ಮಸೀದಿಯ ಕೆರೆಯಲ್ಲಿ ನೀರು ಖಾಲಿಯಾಗದಂತೆ ನೋಡಿಕೊಳ್ಳುವುದು ಇತ್ಯಾದಿ ಇತ್ಯಾದಿ ಇವರ ಕೆಲಸ. ಬೆಳಗ್ಗೆ ಮದರಸದಲ್ಲಿ ಒಂದನೆ ಮತ್ತು ಎರಡನೆ ಮಕ್ಕಳಿಗೆ ಈ ಮುಕ್ರಿಯೇ ಕಲಿಸುತ್ತಿದ್ದರು. ಮುಕ್ರಿಗೆ ಹೆಚ್ಚೆಂದರೆ ಮುನ್ನೂರು ರೂಪಾಯಿ ಸಂಬಳ. ಉಳಿದ ಮುಖ್ಯ ತರಗತಿಗಳ ಉಸ್ತುವಾರಿಯನ್ನು ಮುಸ್ಲಿಯಾರ್ ನೋಡಿಕೊಳ್ಳುತ್ತಿದ್ದರು.
ಇವರಿಗೆ ಊಟವನ್ನು ಪ್ರತಿದಿನ ಮನೆ ಮನೆಯಿಂದ ತರಲಾಗುತ್ತಿತ್ತು. ನಮ್ಮ ಜಮಾತಿನಲ್ಲಿ ಆಗ ಸುಮಾರು 60 ಮನೆಗಳಿದ್ದವು. ಆಯ್ದ 30 ಮನೆಗಳನ್ನು ಗುರುತಿಸಲಾಗುತ್ತಿತ್ತು. ತಿಂಗಳಿಗೊಮ್ಮೆ ಒಂದೊಂದು ಮನೆಗೆ ಊಟದ ಜವಾಬ್ದಾರಿ ಬೀಳುತ್ತಿತ್ತು. ಮನೆಯ ತಾಯಂದಿರಿಗೆ ಈ ಊಟದ ದಿನ ಹತ್ತಿರ ಬರುತ್ತಿದ್ದಂತೆಯೇ ತಲೆ ಬಿಸಿ. ‘‘ನಾಳೆ ಮೊಯ್ಲಿರಿಗೆ ಊಟದ ದಿನ. ಎಂತ ಮಾಡುವುದೂಂತ ಗೊತ್ತಾಗುವುದಿಲ್ಲ...’’ ಸಾಧಾರಣವಾಗಿ ಕೋಳಿ, ಅಥವಾ ಮೀನು ಪದಾರ್ಥಗಳನ್ನೇ ಮಾಡಿಕೊಡುತ್ತಿದ್ದೆವು. ತಿಂಗಳಿಗೊಮ್ಮೆ ತಾನೆ. ಆದರೆ ಈ ಮೊಯ್ಲೆರುಗಳಿಗೆ ಪ್ರತಿದಿನ ಕೋಳಿ ತಿಂದು ತಿಂದೂ ಸಾಕಾಗುತ್ತಿತ್ತು.

ಆದರೆ ಎಲ್ಲಾ ದಿನಗಳು ಒಂದೇ ತರಹ ಇರುತ್ತದೆಯೆಂದು ಹೇಳಲಾಗುವುದಿಲ್ಲ. ಮೊಯ್ಲರಿನ ಮೇಲೆ ಏನಾದರೂ ಸಿಟ್ಟು ಬಂತೋ, ‘ಬುತ್ತಿಯಲ್ಲಿ ಗಂಜಿ ಮತ್ತು ಚಟ್ನಿ’ಯನ್ನು ತುಂಬಿಕೊಡುವುದಿದೆ. ಸಾಧಾರಣವಾಗಿ ಮೊಯ್ಲಿರುಗಳ ಜೊತೆಗೆ ಜಮಾತಿನ ಜನರಿಗೆ ಜಗಳವಾಗುವುದು ಮಕ್ಕಳ ವಿಷಯದಲ್ಲಿ. ಮದರಸದಲ್ಲಿ ಪಾಠ ಕಲಿಸುವಾಗ ಮಕ್ಕಳಿಗೇನಾದರು ಹೊಡೆದರೆ, ಅದನ್ನು ಮಕ್ಕಳು ಮನೆಗೆ ಹೊತ್ತು ಕೊಂಡು ಹೋದರೆ, ಒಂದು ದೊಡ್ಡ ಜಗಳವೇ ನಿರ್ಮಾಣವಾಗಿ ಬಿಡುತ್ತಿತ್ತು. ಒಂದೋ ಬಾಲಕನ ತಂದೆ ನೇರವಾಗಿ ಮದರಸದ ತರಗತಿಗೆ ನುಗ್ಗಿ ಗಲಾಟೆ ಮಾಡುತ್ತಿದ್ದ. ಅಥವಾ ವಾರದ ಮೀಟಿಂಗ್‌ನಲ್ಲ್ಲಿ ಮಸೀದಿ ಪ್ರೆಸಿಡೆಂಟ್‌ನ ಮುಂದೆ ‘‘ನನ್ನ ಮಗನಿಗೆ ಸುಮ್ಮ ಸುಮ್ಮನೆ ಹೊಡೆದಿದ್ದಾನೆ ಅಂವ. ಅವನನ್ನು ಮನೆಗೆ ಕಳುಹಿಸದೇ ಇದ್ದರೆ ನಾನು ತಿಂಗಳ ಊಟ ಕೊಡುವುದಿಲ್ಲ...ಕೋಳಿ ತಿಂದು ತಿಂದು ಚರ್ಬಿ ಅವನಿಗೆ...’’ ಬೆದರಿಕೆ ಹಾಕುತ್ತಿದ್ದ. ಮಾತು ಏಕವಚನಕ್ಕಿಳಿಯುತ್ತಿತ್ತು. ಮಕ್ಕಳ ವಿಷಯದಲ್ಲೇ ಹಲವು ಮುಸ್ಲಿಯಾರುಗಳು ಬಂದ ಬಸ್‌ನಲ್ಲೇ ವಾಪಸ್ ಹೋದದ್ದಿದೆ. ಬಡವರ ಮಕ್ಕಳಿಗೆ ಹೊಡೆದರೆ ಅದು ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ ಮಸೀದಿ ಪ್ರೆಸಿಡೆಂಟ್ ಅಥವಾ ಸೆಕ್ರಟರಿಯ ಮಕ್ಕಳಿಗೇನಾದರೂ ತಪ್ಪಿ ಮುಸ್ಲಿಯಾರರ ಬೆತ್ತದೇಟು ಬಿತ್ತೆಂದರೆ, ಆ ಮುಸ್ಲಿಯಾರರ ಗತಿ ಕೆಟ್ಟಿತೆಂದೇ ಅರ್ಥ. ಆದುದರಿಂದ ಸಾಧಾರಣವಾಗಿ ಯಾವುದೇ ಮುಸ್ಲಿಯಾರರು ನಮ್ಮ ಮಸೀದಿಗೆ ಬಂದರೂ ಅವರು ಹೋಗುವುದಕ್ಕೆ ಗಂಟುಮೂಟೆಯೊಂದಿಗೆ ರೆಡಿಯಾಗಿಯೇ ಬರುತ್ತಾರೆ.

ಒಮ್ಮೆ ಹೀಗಾಯಿತು. ನಮ್ಮೂರಿಗೆ ಹೊಸ ಮುಸ್ಲಿಯಾರರ ನೇಮಕವಾಯಿತು. ಮುಸ್ಲಿಯಾರರಿಗೆ ರಾತ್ರಿಯ ಹೊತ್ತು, ರೊಟ್ಟಿಯೋ, ದೋಸೆಯೋ ಆಗಬೇಕು. ಅನ್ನ ಇಳಿಯುವುದಿಲ್ಲ. ಅದಕ್ಕಾಗಿ ಮದರಸದ ಮಕ್ಕಳ ಮುಂದೆ, ರಾತ್ರಿ ‘ನನಗೆ ಅನ್ನ ಆಗುವುದಿಲ್ಲ. ಒಂದೋ ನಾಷ್ಟ ಆಗಬೇಕು. ನಾಷ್ಟಕೊಡುವುದಕ್ಕೆ ಆಗುವುದಿಲ್ಲಾಂತಾದ್ರೆ ಅನ್ನ ನನಗೆ ಬೇಡ. ಗಂಜಿ, ಚಟ್ನಿಯೇ ಸಾಕು’ ಎಂದು ಬಿಟ್ಟರು. ಆದರೆ, ಮಕ್ಕಳು ಮನೆಯಲ್ಲಿ ಹೇಳುವಾಗ ಮಾತ್ರ ವಿಷಯ ಬದಲಾಯಿತು. ‘‘ಹೊಸ ಮೊಯ್ಲಿರಿಗೆ ಅನ್ನ, ಕೋಳಿಸಾರು ಬೇಡವಂತೆ. ಗಂಜಿ ಚಟ್ನಿಯೇ ಇಷ್ಟವಂತೆ’’
ಸರಿ, ಎಲ್ಲ ಹೆಂಗಸರು ತುಂಬಾ ಸಂತೋಷದಿಂದ ರಾತ್ರಿಗೆ ಗಂಜಿ ಚಟ್ನಿ ಮಾಡಿಕೊಡತೊಡಗಿದರು. ಮೊಯ್ಲಿರಿಗೋ ಗಂಜಿ ಕುಡಿದು ಕುಡಿದು ಸಾಕಾಯಿತು. ವರ್ಷಕ್ಕೊಮ್ಮೆ ಮಸೀದಿಯ ವತಿಯಿಂದ ರಾತ್ರಿ ಏಳು ದಿನಗಳ ಮತಪ್ರಸಂಗವನ್ನು ಹಮ್ಮಿಕೊಳ್ಳುತ್ತಾರೆ. ಹೆಂಗಸರೂ ಈ ಮತಪ್ರಸಂಗ ಕೇಳಲು ಬರುತ್ತಾರೆ. ಮೊಯ್ಲಾರರು ಈ ಸಮಯವನ್ನು ಸರಿಯಾಗಿಯೇ ಬಳಸಿಕೊಂಡರು. ಮತ ಪ್ರಸಂಗ ಮಾಡುತ್ತಾ ಮಾಡುತ್ತಾ ಮಧ್ಯದಲ್ಲೇ ತನ್ನ ಊಟದ ಪ್ರಸ್ತಾಪವನ್ನೂ ಮಾಡಿ ಬಿಟ್ಟರು ‘‘ಈ ಊರಿನ ಹೆಂಗಸರು ಭಯಂಕರ. ನಾಷ್ಟ ಕೊಡುವುದಕ್ಕಾಗುವುದಿಲ್ಲವಾದರೆ ಗಂಜಿ ಸಾಕು ಎಂದರೆ...ಗಂಜಿಯನ್ನೇ ಪ್ರತಿ ದಿನ ಕೊಡುತ್ತಿದ್ದಾರೆ...’’ ಸಂದೇಶ ತಲುಪುವಲ್ಲಿಗೆ ತಲುಪಿಸಿತು. ಹೆಂಗಸರೆಲ್ಲ ಪಿಸಪಿಸನೆ ಒಬ್ಬರಿಗೊಬ್ಬರು ಮಾತನಾಡುತ್ತಾ ನಗತೊಡಗಿದರು. ಮರುದಿನದಿಂದ ರಾತ್ರಿ ನಾಷ್ಟದ ವ್ಯವಸ್ಥೆಯಾಯಿತು.

ಒಮ್ಮೆ ಒಂದು ಘಟನೆ ನಡೆಯಿತು. ನಾನಾಗ ಬಹುಶಃ ಮದರಸದ ಮೂರನೆ ತರಗತಿಯಲ್ಲಿರಬೇಕೆನ್ನಿಸುತ್ತದೆ. ಬೆಳಗ್ಗೆ ಮುಸ್ಲಿಯಾರರಿಗೆ ತಂದ ಬುತ್ತಿಯಲ್ಲಿ ಪುಂಡಿ ತಂದಿದ್ದರು. ಮುಸ್ಲಿಯಾರರಿಗೇಕೋ ಪುಂಡಿ ಇಳಿಯುತ್ತಿರಲಿಲ್ಲ. ಸರಿ, ಅವರು ಬೆಳಗ್ಗೆ ನಾಷ್ಟ ಮಾಡದೆಯೇ ಮದರಸದೊಳಗೆ ಬಂದರು. ನಮಗೆಲ್ಲ ಆತಂಕ. ‘ಮೊಯಿಲಾರ್ ನಾಷ್ಟ ಮಾಡಲಿಲ್ಲವಂತೆ’ ‘ಪಾಪ, ಪುಂಡಿ ಮಾಡಿದ್ದಂತೆ’ ‘ಯಾರಾದರೂ ಮುಸ್ಲಿಯಾರರಿಗೆ ಪುಂಡಿ ಮಾಡಿ ಕೊಡುತ್ತಾರ?’ ನಮ್ಮಾಳಗೆ ಗುಸುಗುಸು ಪಿಸಿಪಿಸಿ. ಅಷ್ಟರಲ್ಲೇ ನನ್ನ ಪಕ್ಕದಲ್ಲಿ ಕುಳಿತ ಜಮಾಲ್ ಎನ್ನುವ ಹುಡುಗ ಅಳತೊಡಗಿದ. ನೋಡಿದರೆ, ಅವತ್ತು ಮೊಯಿಲಾರಿಗೆ ಜಮಾಲ್‌ನ ಮನೆಯಿಂದ ಊಟ. ಜಮಾಲ್ ಬಿಕ್ಕುತ್ತಾ ಬಿಕ್ಕುತ್ತಾ ಹೇಳಿದ ‘‘ಮನೆಯಲ್ಲಿ ತಾಯಿಗೆ ಉಷಾರಿರಲಿಲ್ಲ...ಅದಕ್ಕೆ ಅಕ್ಕ ಪುಂಡಿ ಮಾಡಿದ್ದು....’’ ಎಂದೆಲ್ಲಾ ಸಮಜಾಯಿಶಿ ನೀಡತೊಡಗಿದ. ನಾವೆಲ್ಲ ಅವನನ್ನು ವಿಲನ್‌ನನ್ನು ನೋಡಿದಂತೆ ನೋಡಿದೆವು. ಅವನು ಕೊಟ್ಟ ಕಾರಣ ಸಕಾರಣ ಎಂದು ನಮಗ್ಯಾರಿಗೂ ಅನ್ನಿಸಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮುಸ್ಲಿಯಾರರು ಪಾಪ ನಾಷ್ಟವೇ ಮಾಡಿರಲಿಲ್ಲ. ಬರಿ ಹೊಟ್ಟೆಯಲ್ಲಿದ್ದಾರೆ. ತಾಯಿಗೆ ಉಷಾರಿಲ್ಲ ಅಂತ ಹೇಳಿ ಯಾರಾದರೂ ‘ಪುಂಡಿ’ ಮಾಡಿಕೊಡುತ್ತಾರ? ನಾವೆಲ್ಲ ಅವನನ್ನು ಕೆಕ್ಕರಿಸಿ ನೋಡಿದೆವು. ಅಂದಿಡೀ ಅವನು ಅಳುತ್ತಲೇ ಇದ್ದ.

Thursday, May 12, 2011

ಇಲ್ಲೊಂದಿಷ್ಟು ನಮ್ಮ ನಿಮ್ಮ ಕತೆಗಳು...


ಮಾವಿನ ಮರ
ಸದಾ ತುಂಟಾಟದಲ್ಲಿ ಕಳೆಯುತ್ತಿದ್ದ, ಕಲಿಕೆಯಲ್ಲಿ ಹಿಂದುಳಿದಿದ್ದ ಮಗನಿಗೆ ಬೈದು, ಬೈದು ತಂದೆತಾಯಿಗಳು ಸುಸ್ತಾದರು.

ಕೊನೆಗೆ, ‘ಇನ್ನು, ಮಗನಿಗೆ ಬೈಯುವುದು ಬೇಡ. ಅವನ ಮೇಲೆ ಸಿಟ್ಟು ಬಂದರೆ, ಹಿತ್ತಲಲ್ಲಿರುವ ಮಾವಿನ ಮರಕ್ಕೆ ಬೈಯುವ’ ಎಂದು ದಂಪತಿ ನಿರ್ಧರಿಸಿದರು.

ಹಾಗೆಯೇ ಮಗನನ್ನು ಅವನ ಪಾಡಿಗೆ ಬಿಟ್ಟು, ಸಿಟ್ಟು ಬಂದಾಗಲೆಲ್ಲ, ಮಾವಿನ ಮರದ ಸಮೀಪ ಬಂದು ಅದಕ್ಕೆ ಬೈಯತೊಡಗಿದರು.

ಒಂದೇ ತಿಂಗಳಲ್ಲಿ
ಮಾವಿನ ಮರ ಒಣಗಿ, ಸತ್ತೇ ಹೋಯಿತು. ಆದರೆ ಬಾಡಿ ಹೋಗಿದ್ದ ಮಗ, ಒಂದೇ ತಿಂಗಳಲ್ಲಿ ಚಿಗುರು ಬಿಟ್ಟ ಮಾವಿನ ಮರದಂತೆ ನಳನಳಿಸತೊಡಗಿದ.

ಮಗಳು

ಒಬ್ಬ ಖೈದಿ 15 ವರ್ಷ ಜೈಲಲ್ಲಿ ಕಳೆದು ಬಿಡುಗಡೆಗೊಂಡ.
ಅವನಿಗೊಬ್ಬಳು ಪುಟ್ಟ ಮಗಳಿದ್ದಳು. ನೇರ ಮನೆಗೆ ಹೋಗಿ ಆ ಮಗಳನ್ನು ಭೇಟಿ ಮಾಡಬೇಕು...

ಜೈಲಲ್ಲಿ ದುಡಿದು ಜೋಪಾನವಾಗಿಟ್ಟ ಹಣವನ್ನು ಬಿಚ್ಚಿದ.

ಅವಸರವಸರದಲ್ಲಿ ಬಟ್ಟೆಯಂಗಡಿಗೆ ಹೋಗಿ, ಪುಟ್ಟ ಚಿಟ್ಟೆಯಾಕಾರಾದ ಅಂಗಿಯನ್ನು ಮಗುವಿಗಾಗಿ ಕೊಂಡ.

ಮನೆ ತಲುಪುತ್ತಾನೆ.
ಬಾಗಿಲು ತೆರೆಯಿತು.
ಸೀರೆ ಉಟ್ಟ ತರುಣಿಯೊಬ್ಬಳು ಬಾಗಿಲ ಮರೆಯಿಂದ ಇಣುಕಿದಳು.

‘‘ಅಮ್ಮಾ ಅಪ್ಪ ಬಂದ...’’ ಎಂದು ಒಳ ಓಡಿದಳು.


ಪ್ರೀತಿ
ಒಂದು ಸುಂದರವಾದ ಹಾಡು.

ತರುಣಿಯೊಬ್ಬಳ ಕಿವಿಗೆ ಬಿತ್ತು.
ಆ ಹಾಡಿಗೆ ಮನಸೋತ ಅವಳು ಹಾಡುಗಾರನನ್ನು ಪ್ರೀತಿಸತೊಡಗಿದಳು.

ಹಾಡಿದವನನ್ನು ಹುಡುಕಿ ನಡೆದಳು.
ಕೊನೆಗೂ ಹಾಡುತ್ತಿರುವವನು ಸಿಕ್ಕಿದ.
ಅವನೊಬ್ಬ ಕುರೂಪಿ. ಕುಷ್ಠ ರೋಗ ಪೀಡಿತನಾಗಿದ್ದ.

ತರುಣಿ ತನ್ನಲ್ಲ್ಲಿದ್ದ ಒಂದು ರೂಪಾಯಿ ನಾಣ್ಯವನ್ನು ಅವನ ಮುಂದೆ ಎಸೆದು, ಅಲ್ಲಿಂದ ನಡೆದಳು.


ತೊರೆ

ದೂರದಿಂದ ಒಂದು ತೊರೆ ತನ್ನೆಡೆಗೆ ಬರುವುದು ನೋಡಿತು, ಆ ವಿಶಾಲ ನದಿ.

ನದಿ ಕೂಗಿ ಹೇಳಿತು ‘‘ಸಣ್ಣ ಪುಟ್ಟ ತೊರೆಗಳೆಲ್ಲ ನನ್ನನ್ನು ಸೇರಬಾರದು. ನಾನು ನದಿ. ತೊರೆಗಳಿಗೆ ಇಲ್ಲಿ ಪ್ರವೇಶವಿಲ್ಲ’’

ತೊರೆಗಳೆಲ್ಲ ತಮ್ಮ ದಿಕ್ಕುಗಳನ್ನು ಬದಲಿಸಿ ಒಂದು ಸೇರಿದವು.

ಒಟ್ಟು ಸೇರಿ ಅವುಗಳೇ ದೊಡ್ಡ ನದಿಯಾದವು.
ತೊರೆಯ ಬಲವಿಲ್ಲದ ನದಿ, ಈಗ ತೀರಾ ಬಡಕಲಾಗಿ, ತೊರೆಗಿಂತಲೂ ಸೂಪೂರವಾಗಿ ದಾರಿ ಮಧ್ಯೆಯೇ ಇಲ್ಲವಾಯಿತು.


ನರ್ತನ

ಒಂದು ಕಾಗೆ ಮತ್ತು ನವಿಲು ಭೇಟಿ ಮಾಡಿತು.

ನವಿಲು ಕೇಳಿತು.
‘‘ಎಲ್ಲಿಗೆ ಹೊರಟೆ?’’ ‘‘ನಮ್ಮ ಕುಟುಂಬದೊಳಗೆ ಒಂದು ಸಮಾರಂಭವಿದೆ. ಅಲ್ಲಿ ನರ್ತಿಸುವುದಕ್ಕೆ ಹೊರಟಿದ್ದೇನೆ?’’ ನವಿಲಿಗೆ ಅಶ್ಚರ್ಯವಾಯಿತು.
ಕಾಗೆ ನರ್ತಿಸುವುದೇ?
ನವಿಲು ಕುತೂಹಲದಿಂದ ಕೇಳಿತು ‘‘ನಾನು ಬರಲೇ, ನರ್ತಿಸುವುದಕ್ಕೆ’’
ಕಾಗೆ ಒಪ್ಪಿತು.
ಇಬ್ಬರು ಕಾಗೆಗಳ ಸಮಾರಂಭಕ್ಕೆ ಹೋದರು. ಕಾಗೆಗಳೇ ಪ್ರೇಕ್ಷಕರು.

ಮೊದಲು ನವಿಲು ನರ್ತಿಸಿತು. ಕಾಗೆಗಳೆಲ್ಲ ಪರಸ್ಪರ ವಿಚಿತ್ರವಾಗಿ ನೋಡತೊಡಗಿದವು. ಬೇಸರದಿಂದ ಆಕಳಿಸತೊಡಗಿದವು.

ಬಳಿಕ ಕಾಗೆ ನರ್ತಿಸಿತು. ಈಗ ಕಾಗೆಗಳೆಲ್ಲ ಹುಚ್ಚೆದ್ದು ಚಪ್ಪಾಳೆ ತಟ್ಟಿದವು. ‘ವನ್ಸ್‌ಮೋರ್’ ಎಂದವು.
ಕಾಗೆಗಳ ಲೋಕದಲ್ಲಿ ಕಾಗೆ ಮಾತ್ರ ನರ್ತಿಸಬೇಕು ಎನ್ನುವುದು ನವಿಲಿಗೆ ತಡವಾಗಿ ಹೊಳೆಯಿತು.

ನೀರು!
‘‘ಆತ ಅದೆಷ್ಟು ಶ್ರೀಮಂತನೆಂದರೆ ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾನೆ...’’

ಇನ್ನೊಂದು ಇಪ್ಪತ್ತು ವರ್ಷದ ಬಳಿಕ ಈ ಮಾತು ಯಾವ ರೂಪ ಪಡೆಯಬಹುದು?

‘‘ಆತ ಅದೆಷ್ಟು ಮೂರ್ಖನೆಂದರೆ ನೀರನ್ನು ಹಣದಂತೆ ಚೆಲ್ಲುತ್ತಿದ್ದಾನೆ...’’

ಆಟ
ಸೋಲು
ನಿಶ್ಚಿತವಾಗಿತ್ತು.
ಆದರೂ ಆಟಗಾರರು ಆಡಲೇ ಬೇಕಾಗಿತ್ತು.

ಬದುಕೇ ಹೀಗೆ.
ಕೆಲವೊಮ್ಮೆ ಸೋಲು ಘೋಷಣೆಯಾಗಿ ಬಿಡುತ್ತದೆ.
ಆದರೆ ಆಟದ ಬಯಲಿನಿಂದ ಹೊರಗೆ ಹೋಗುವಂತಿಲ್ಲ.
ಆಡಲೇ ಬೇಕು.
ಇಂತಹ ಆಟ ತುಂಬ ಕಷ್ಟ.

ಆದರೆ ಆಟಗಾರನ ಸಾಮರ್ಥ್ಯವನ್ನು ನಿರ್ಧರಿಸುವುದು ಇಂತಹದೇ ಆಟ.

ಭಿಕ್ಷೆ

ಅವಳು ಭಿಕ್ಷೆ
ಬೇಡುತ್ತಿದ್ದಳು. ‘‘ಅಣ್ಣಾ....ಭಿಕ್ಷೆ ಕೊಡಿ’’
ಆತ ಧನಿಕ. ಹೂಂಕರಿಸಿ ಹೇಳಿದ ‘‘ಕೈಕಾಲಿದೆಯಲ್ಲ, ಮತ್ತೇಕೆ ನಿನಗೆ ಭಿಕ್ಷೆ ನೀಡಬೇಕು? ಅರ್ಹರಿಗಷ್ಟೇ ನಾನು ಭಿಕ್ಷೆಯನ್ನು ಕೊಡುತ್ತೇನೆ’’

ಆಕೆ ಅಬ್ಬರಿಸಿ ಕೇಳಿದಳು ‘‘ಭಿಕ್ಷೆಯನ್ನು ಅರ್ಹರಿಗೆ ಮಾತ್ರ ನೀಡಬೇಕೆಂಬ ನಿಯಮವಿದ್ದಿದ್ದರೆ, ದೇವರು ನಿನಗೇಕೆ ಇಷ್ಟು ಧನಸಂಪತ್ತನ್ನು
ಕೊಡುತ್ತಿದ್ದ?’’

Monday, May 9, 2011

ಎಲ್ಲಿದ್ದೀಯ ನೀನು?


ಹಾಯ್...!ಎಲ್ಲಿದ್ದೀಯ? ಹೇಗಿದ್ದೀಯ? ಯಾವುದಾದರೊಂದು ಕತೆಯ ಮೂಲಕ ನೀನು ನಿನ್ನ ಇರವನ್ನು ತಿಳಿಸಬಹುದೆಂದು ಕಳೆದ ನಾಲ್ಕುವರ್ಷಗಳಿಂದ ಕನ್ನಡದ ಎಲ್ಲ ಮ್ಯಾಗಜಿನ್ಗಳ ಪುಟಗಳನ್ನು ತಿರುಗಿಸುತ್ತಿದ್ದೇನೆ. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಯಾವಮ್ಯಾಗಜಿನ್ನಲ್ಲೂ ನಿನ್ನ ಕತೆಯನ್ನು ನೋಡುತ್ತಿಲ್ಲ. ಏನಿದರ ಅರ್ಥ? ಏನಿದರ ಸಂದೇಶ?

ನಿನ್ನ ಒಂದು ಫೋನ್ ನಂಬರಿಗಾಗಿ ಕಳೆದೆರಡು ವರ್ಷಗಳಿಂದ ಹಲವು ಗೆಳೆಯರಲ್ಲಿ ಹಲ್ಲುಗಿಂಜಿದ್ದೇನೆ. ಅವರು ಕಿಸಕ್ಕನೆ ನಕ್ಕರೇ ಹೊರತು, ನಂಬರ್ ಕೊಡಲಿಲ್ಲ. ಫೇಸ್ಬುಕ್ನಲ್ಲಿ ನಿನಗಾಗಿ ಜಾಲಾಡಿದೆ. ಗೂಗಲ್ನಲ್ಲಿ ನಿನ್ನ ಇಮೇಜಿಗಾಗಿ ಹುಡುಕಿದೆ. ಹಳೆಯ ನಂಬರನ್ನೇ ಪದೇ ಪದೇ ಅದುಮಿ ಉತ್ತರಕ್ಕಾಗಿ ಕಾಯುತ್ತಾ ಕುಳಿತೆ. ಯಾರೋ ಹೇಳಿದರುಆಕೆಗೆ ಮದುವೆಯಾಯಿತುಎಂದು. ಇನ್ಯಾರೋ ಹೇಳಿದರು, ಆಕೆ ಸಿಂಗಾಪುರದಲ್ಲಿದ್ದಾಳೆಂದು. ಅದೊಂದು ಮಾತ್ರ ನನಗೆ ನಿಜ ಅನ್ನಿಸಿತು. ನೀನು ಸದಾ ಮಲ್ಟಿಪ್ಲೆಕ್ಸ್, ಸಿಂಗಾಪುರ ಎಂದೆಲ್ಲ ಧ್ಯಾನಿಸುತ್ತಾ ಇದ್ದವಳು. ಒಂದು ವೇಳೆ ಹೋದರೂ ಹೋದೀಯೇ? ಆದರೆ ನಿನ್ನಲ್ಲಿ ಹೇಳಲೇ ಬೇಕಾಗಿದ್ದ ಒಂದು ಮಾತು ನನ್ನ ನನ್ನ ಗಂಟಲಲ್ಲಿ ಮುಳ್ಲಿನಂತೆ ಸಿಕ್ಕಿಕೊಂಡಿದೆ. ಹೇಳಲೇಬೇಕಾಗಿದೆ. ಎಲ್ಲಿದ್ದೀಯೆ ನೀನು?

ಪತ್ರಿಕಾ ಕಚೇರಿಯ ತುಂಬಾ ನೀನು ಮೇಕಪ್ ಬಾಕ್ಸ್ ಜೊತೆಗೇ ಓಡಾಡುತ್ತಿದ್ದೆ. ಕುಳ್ಳಿಯಾಗಿದ್ದ ನೀನು, ಅದನ್ನು ಮರೆಮಾಚಲು, ಹೈಹೀಲ್ಸ್ ಚಪ್ಪಲಿಯನ್ನು ಹಾಕಿಕೊಂಡು ಕ್ಯಾಟ್ ವಾಕ್ ನಡಿಗೆಯಲ್ಲಿ ನಡೆಯುತ್ತಿದ್ದೆ. ನೀನೆಷ್ಟು ಗಿಡ್ಡ ಎಂದರೆ ‘‘ ಬಾಲಕಾರ್ಮಿಕರನ್ನೆಲ್ಲ ತಂದು ದುಡಿಸುವುದು ಎಷ್ಟು ಸರಿ?’’ ಎಂದು ಕೇಳಿ, ಡೆಸ್ಕಿನಲ್ಲಿದ್ದ ಎಲ್ಲರನ್ನೂ ನಗಿಸುತ್ತಿದ್ದೆ. ‘‘ದಿನಾ ಕೋಂಪ್ಲಾನ್ ಕುಡಿ...ಆರೋಗ್ಯಕ್ಕೆ ಒಳ್ಳೆದು...’’ ಎಂದರೆ ‘‘ನಿನ್ನ ಕರಿ ಮೂತಿಯನ್ನೊಮ್ಮೆ ಕನ್ನಡಿಯಲ್ಲಿ ನೋಡು’’ ಎಂದು ಸಿಡುಕಿ ಅಲ್ಲಿಂದ ಎದ್ದು ಹೋಗುತ್ತಿದ್ದೆ ನೀನು.

‘‘ಅವಳ ಪೇಜಲ್ಲಿ ಯಾವ ತಪ್ಪುಗಳೂ ಇರುವುದಿಲ್ಲ, ನೀಟಾಗಿರುತ್ತೇ...’’ ಸಂಪಾದಕರು ಮೀಟಿನ್ಗಲ್ಲಿ ಆಕೆಯನ್ನೇ ನೋಡುತ್ತಾ ಹೇಳುತ್ತಿದ್ದರೆ ನಾನು ಉರಿ ಉರಿದು ಬೀಳುತ್ತಿದ್ದೆ. ದಿನಾ ಎರಡೆರಡು ಪೇಜುಗಳನ್ನು ಮಾಡಿ ಸುಸ್ತಾಗಿ ಹೋಗುತ್ತಿದ್ದವರು ನಾವು. ಆದರೆ ಒಂದೇ ಒಂದು ಹೊಗಳಿಕೆಯನ್ನು ಪಡೆದುಕೊಂಡವರಲ್ಲ. ಡೆಸ್ಕಿನಲ್ಲಿ ಕೂತು ನೀನು ಪೇಜ್ ನೋಡಿದ್ದಕ್ಕಿಂತಲೂ ಕನ್ನಡಿ ನೋಡಿದ ಹೊತ್ತೇ ಅಧಿಕ.

ಅದೊಂದು
ದಿನ ನನ್ನ ಪಕ್ಕದ ಗೆಳೆಯ ನಿನ್ನನ್ನು ನೋಡಿ ‘‘ಥೇಟ್ ಐಶ್ವರ್ಯ ರೈ ಥರಾ ಕಾಣುತ್ತಿದ್ದೀಯ’’ ಎಂದಾಗ ನೀನು ಕತ್ತು ಕೊಂಕಿಸಿ, ಹುಸಿಮುನಿಸಿನಿಂದ ‘‘ಏಯ್, ನಾನು ಅಷ್ಟೂ ಕಪ್ಪಾ?’’ ಎಂದಾಗ ನಿನ್ನ ಹುಂಬ ಆತ್ಮವಿಶ್ವಾಸಕ್ಕೆ ನಾನು ದಂಗಾಗಿದ್ದೆ.

ಒಂದು
ದಿನ ಕೃಷಿಯ ಕುರಿತು ಸುದ್ದಿ ಬರೆಯುತ್ತಿದ್ದಾಗ ನೀನು ಕೃತಕವಾದ ಆಘಾತದಿಂದ ‘‘ಅಯ್ಯೋ...ಅಕ್ಕಿ ಬೆಳೆಯುವುದು ಗದ್ದೆಯಲ್ಲಿಯಾ? ನಾನು ಅಕ್ಕಿ ಬೆಳೆಯುವುದನ್ನು ಇಷ್ಟರವರೆಗೂ ನೋಡಿಲ್ಲಪ್ಪ’’ ಎಂದಾಗ ನಾನು ಕೈಯಲ್ಲಿದ್ದ ಪೇಜನ್ನು ಹರಿದು, ಬಾಯಿಗೆ ಬಂದಂತೆ ಒದರಿದ್ದೆ. ‘‘ತಿನ್ನುವ ಅಕ್ಕಿ ಹೇಗೆ ಬೆಳೆಯುತ್ತದೆ ಎನ್ನುವುದು ಗೊತ್ತಿಲ್ಲ ಎನ್ನುವ ನೀನು ಮನುಷ್ಯಳ? ನೀನೊಬ್ಬಳು ಕತೆಗಾರ್ತಿಯ? ಎಲ್ಲಿಂದಲೋ ಕದ್ಕೊಂಡು ಬಂದು ನಿನ್ನ ಕತೆ ಅಂತ ಹೇಳ್ತೀಯ ಅಷ್ಟೇ..’’ ಎಂದಾಗ ನೀನು ಸಿಟ್ಟಿನಿಂದ ‘‘ಏಯ್ ನನ್ನ ಕತೆಯ ಸುದ್ದಿಗೆ ಬಂದರೆಅಷ್ಟೇ...?’’ ಎಂದು ತೋರುಬೆರಳು ತೋರಿಸಿದ್ದಿ.
ಅಲ್ಲ ಕಣೆ? ನಿಜಕ್ಕೂ ನಾನು ನಿನ್ನನ್ನು ಯಾಕೆ ಅಷ್ಟು ದ್ವೇಷಿಸುತ್ತಿದ್ದೆ?

ಅಂದು ಸಂಬಳದ ದಿನ. ‘‘ಸಂಬಳ ಆಯ್ತೆನಾ? ಏಯ್...ನನಗೊಂದು ಚಂದದ ಚಪ್ಪಲಿ ತೆಗೆದುಕೊಡ?’’ ಎಂದಾಗ ನಿನ್ನ ಮುಖಕಪ್ಪಳಿಸುವಂತೆ ‘‘ನಿನಗೆ ತೆಗೆದುಕೊಡುವುದಕ್ಕಿಂತ ನನ್ನ ತಂಗಿಯರಿಗೆ ಎರಡೆರಡು ಚಪ್ಪಲಿ ತೆಗೆದುಕೊಡುತ್ತೇನೆ ಅಷ್ಟೇ..’’ ಎಂದಿದ್ದೆ. ಎಂತಹ ಮೂರ್ಖ ನಾನು. ಯಾವುದಾದರೊಂದು ಒಳ್ಳೆಯ ಚಪ್ಪಲಿ ಅಂಗಡಿಗೆ ಕರೆದೊಯ್ದು ನಿನಗೊಂದು ಜೋಡು ಒಳ್ಳೆಯ ಚಪ್ಪಲಿ ತೆಗೆದೇ ಕೊಡಬಹುದಿತ್ತಲ್ಲ ಎಂದು ಹಪಹಪಿಸುತ್ತಿದ್ದೇನೆ ಕಣೆ......

ನಿನ್ನಾವ
ಕತೆಯೂ ನನಗೆ ಇಷ್ಟವಾಗುತ್ತಿರಲಿಲ್ಲ. ಕಚೇರಿಯಲ್ಲೆಲ್ಲ...ನೀನು ಅದಾವುದೋ ಭಾಷೆಯ ಕತೆಗಳನ್ನು ಕದಿಯುತ್ತಿದ್ದಿ ಎಂಬ ಗುಲ್ಲು. ನಿನ್ನನ್ನು ಕೆಣಕಲು ನಾನದನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದೆ. ‘‘ಎಷ್ಟು ಒಳ್ಳೆಯ ಕತೆ. ಎಲ್ಲಿಂದ ಕದ್ದಿದ್ದೀಯ ಇದನ್ನು. ಕದಿಯುವ ನಿನ್ನ ಸೃಜನಶೀಲತೆಗೆ ಸಾಟಿಯೇ ಇಲ್ಲ ಕಣೇ...’’ ಎಂದಾಗ ನೀನು ನಿಜಕ್ಕೂ ಕಳ್ಳಿಯಂತೆ ಉರಿ ಉರಿದು ಬೀಳುತ್ತಿದ್ದೆ. ‘‘ನಿನ್ನ ತಂದೆ ಅದಾವುದೋ ಮಹಾರಾಜನ ಹೆಸರು ಇಟ್ಟುಕೊಂಡಿದ್ದಾನೆ ಎನ್ನುವ ಒಂದೇ ಒಂದು ಕಾರಣಕ್ಕೆ ನಿನ್ನನ್ನು ನೀನು ರಾಜಕುಮಾರಿ ಎಂದು ತಿಳಿದುಕೊಳ್ಳುವುದು ತಪ್ಪುಕಣೆ’’ ಎಂದು ಹಲವು ಸಲ ಹೇಳಿದ್ದೆ. ‘‘ನನ್ನ ಅಪ್ಪನ ಸುದ್ದಿಗೆ ಬಂದರೆ ಅಷ್ಟೇ...’’ ಎನ್ನುತ್ತಿದ್ದೆ.

‌‌‌‌‌‌‌ ‌ ಅದಾವುದೋ ಕಾರಣಕ್ಕೆ ನಾನು ಹದಿನೈದು ದಿನ ಕಚೇರಿಗೆ ರಜೆ ಹಾಕಿದ್ದೆ. ಮತ್ತೆ ಡೆಸ್ಕಿಗೆ ಬಂದಾಗ ನೀನು ನನ್ನನ್ನು ನೋಡಿ ಕಳ್ಳಿಯ ಹಾಗೆ ತಲೆತಪ್ಪಿಸಿ ಓಡಾಡುತ್ತಿದ್ದೆ. ಮತ್ತೆ ವಿಚಾರಿಸಿದಾಗ ತಿಳಿಯಿತು...ಯಾವುದೋ ನಿಧನ ಸುದ್ದಿಗೆ ಯಾರದೋ ಹೆಸರನ್ನು ಬರೆಯುವ ಬದಲು ನನ್ನ ಹೆಸರು ಬರೆದು ಬಿಟ್ಟಿದ್ದೆ. ಅದು ಕೆಲವು ಎಡಿಶನ್ಗಳಲ್ಲಿ ಪ್ರಕಟವಾಗಿಯೂ ಬಿಟ್ಟಿತ್ತು.

ನಿನಗೆ
ಒಂದು ಹಟವಿತ್ತು. ‘ನೀನು ಒಳ್ಳೆಯ ಕತೆಗಾರ್ತಿ ಎನ್ನುವುದನ್ನು ನಾನು ಒಪ್ಪಿಕೊಳ್ಳಬೇಕುಎಂಬ ಹಟ. ಆದರೆ ಯಾವತ್ತೂ ನಾನು ನಿನ್ನ ಕತೆಯನ್ನುಹೊಗಳುವ ಸಾಹಸಕ್ಕೆ ಹೋಗಿರಲಿಲ್ಲ. ಕಚೇರಿ ಬಿಟ್ಟು ಎಲ್ಲರಿಗೂ ವಿದಾಯ ಹೇಳುವ ದಿನಗಳಲ್ಲಿ, ನಿನಗೊಂದು ಕೃತಿಯನ್ನು ಕೊಟ್ಟಿದ್ದೆ. ಅದರಲ್ಲಿಮೆಚ್ಚಿನ ಕತೆಗಾರ್ತಿಯೆಂದು ಬರೆಎಂದು ಒತ್ತಾಯಿಸಿದ್ದೆ. ಕೆಟ್ಟ ಕತೆಗಾರ್ತಿಗೆ ಎಂದು ಬರೆದೇ ಅದನ್ನು ಕೊಟ್ಟಿದ್ದೆ. ಆಗಷ್ಟೇ ಬಿಡುಗಡೆಗೊಂಡ ನಿನ್ನ ಕೃತಿಯನ್ನುದ್ವೇಷಪೂರ್ವಕಎಂದು ಬರೆದು ನನಗೆ ಕೊಟ್ಟು ನೀನು ಸೇಡು ತೀರಿಸಿಕೊಂಡಿದ್ದೆ.. ಇದಾದಬಳಿಕ ನೀನು ಎಲ್ಲೋ ಕಳೆದು ಹೋದೆ. ಯಾವುದೋ ಒಂದು ಪತ್ರಿಕೆಯಲ್ಲಿ ನಿನ್ನ ಕತೆ ನೋಡಿದೆ. ಬಳಿಕ ಬರೆಯುವುದು ನಿಲ್ಲಿಸಿಯೇಬಿಟ್ಟೆಯೇನೋ, ಅಥವಾ ನೀನು ಯಾವ ಕತೆಗಾರನಿಂದ ಕದಿಯುತ್ತಿದ್ದೆಯೋ ಕತೆಗಾರನೇ ಸತ್ತು ಹೋದನೆ? ನನ್ನ ಏಕಾಂತದಲ್ಲಿ ಎಲ್ಲ ಪ್ರಶ್ನೆಗಳು ಹಿತವಾಗಿ ಕಾಡುತ್ತಿದೆ. ಅದೇ ಹಳೆಯ ಮೊಬೈಲ್ ನಂಬರನ್ನು ಮತ್ತೆ ಮತ್ತೆ ಅದುಮುತ್ತಿದ್ದೇನೆ. ‘ಸ್ವಿಚ್ಡ್ ಆಫ್ಬರುತ್ತಿದೆ. ಅದನ್ನು ನಿನ್ನ ಧ್ವನಿಯೆಂದೇ ನಂಬಿದ್ದೇನೆ ನಾನು. ಎಲ್ಲಿದ್ದೀಯ ನೀನು?

ನಿನ್ನಲ್ಲಿ
ಹೇಳಲೇ ಬೇಕಾಗಿದ್ದ ಒಂದು ಮಾತು ನನ್ನ ಗಂಟಲಲ್ಲಿ ಮುಳ್ಲಿನಂತೆ ಸಿಕ್ಕಿಕೊಂಡಿದೆ. ಹೇಳಲೇಬೇಕಾಗಿದೆ. ಎಲ್ಲಿದ್ದೀಯೆ ನೀನು?

Saturday, May 7, 2011

ಅನಿ ಮತ್ತು ದೇವರು!
















ಈ ಅನಿ ನನ್ನ ಆತ್ಮೀಯರೊಬ್ಬರ ಮಗ. ಮೊನ್ನೆ ಫೇಸ್‌ಬುಕ್‌ನಲ್ಲಿ ಅಚಾನಕ್ಕಾಗಿ ಸಿಕ್ಕಿ ‘ಹಾಯ್ ಬಶೀರ್ ಮಾಮ’ ಅಂದ. ಚೆಂದವಾಗಿ ಚಿತ್ರ ಬಿಡಿಸುವ, ಡ್ಯಾನ್ಸ್ ಕಲಿತಿರುವ ಅನಿ ಈಗ ದೂರದ ಸಿಂಗಾಪುರದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾನೆ. ಫೇಸ್‌ಬುಕ್‌ನಲ್ಲೇ ಒಂದಿಷ್ಟು ಮಾತನಾಡಿದೆವು. ತಾನೇ ಬರೆದ ಒಂದು ಇಂಗ್ಲಿಷ್ ಥೀಸಿಸ್‌ನ್ನು ಕಳುಹಿಸಿದ. ನನ್ನ ಇಂಗ್ಲಿಷ್ ಅಷ್ಟಕ್ಕಷ್ಟೇ. ಆದರೂ ಅದನ್ನು ಓದಿದೆ. ‘ಅಪ್ಪಟ ಮಾನವೀಯ ಸಂದೇಶ’ವೊಂದು ಆ ಥೀಸಿಸ್‌ನಲ್ಲಿ ಬಚ್ಚಿಟ್ಟುಕೊಂಡಿರುವುದು ಮತ್ತು ನಾನು ‘ಮಗು’ವೆಂದು ಭಾವಿಸಿದ ಅನಿ ಇದನ್ನೆಲ್ಲ ಯೋಚಿಸುತ್ತಿರುವುದು ನೋಡಿ ನನಗೆ ಅಚ್ಚರಿಯಾಯಿತು. ಕನ್ನಡಕ್ಕೆ ತರಲು ಪ್ರಯತ್ನಿಸಿ ಕೈ ಬಿಟ್ಟೆ. ಈ ಅನಿ ಅಥವಾ ಅನಿರುದ್ಧ ಹಿಂದೊಮ್ಮೆ ತಮಾಷೆಗೆಂದು ಫೋನಿನಲ್ಲಿ ‘‘ಹಲೋ...ಮಗು, ನಾನು ದೇವರು ಮಾತನಾಡುತ್ತಿದ್ದೇನೆ’’ ಎಂದು ನನ್ನನ್ನು ದಂಗು ಬಡಿಸಿದ್ದ. ಆ ದಿನ ರಾತ್ರಿ ಯಾಕೋ ನಾನು ದಟ್ಟ ವಿಷಾದದಲ್ಲಿ ಒಂದು ಕವಿತೆ ಬರೆದಿದೆ.(ಸುಮಾರು ಹತ್ತು ವರ್ಷದ ಹಿಂದೆ). ಬಳಿಕ ಅದು ಪಿ. ಲಂಕೇಶರ ‘ಲಂಕೇಶ್ ಪತ್ರಿಕೆ’ಯಲ್ಲ್ಲಿ ಪ್ರಕಟಗೊಂಡಿತು. ಮೊನ್ನೆ ಫೇಸ್‌ಬುಕ್‌ನಲ್ಲಿ ಅನಿ ಆ ಕವಿತೆಯನ್ನು ನೆನೆಸಿಕೊಂಡ. ನಾನು ಎರಡು ವರ್ಷ ಕೊಡಗಿನಲ್ಲಿದ್ದಾಗ ಅನಿ ಮತ್ತು ಅವನ ತಂದೆ, ತಾಯಿಯರು ನನಗೆ ತೋರಿಸಿದ ಪ್ರೀತಿಯ ನೆನಪಿಗಾಗಿ ಆ ಕವಿತೆಯನ್ನು ಇಲ್ಲಿ ನಿಮ್ಮಾಂದಿಗೆ ಹಂಚಿಕೊಂಡಿದ್ದೇನೆ. ಕವಿತೆಯ ಹೆಸರು ‘ಅನಿ ಮತ್ತು ದೇವರು’.


ನೀನು ನನ್ನ ದೇವರೇ
ಯಾಕಾಗಬಾರದಿತ್ತು ಎಂದು
ಒಂದು ರಾತ್ರಿಯಿಡೀ ಅತ್ತು ಬಿಟ್ಟೆ!

ನನ್ನೆದೆಯಲ್ಲೊಂದು ಮಗು
ತಾಯ ಹಾಲಿಲ್ಲದೆ
ಬಾಯಾರಿ ಕಾಯುತ್ತಿತ್ತು
ಮಗುವೇ...ಎಂಬ ಕರೆಗೆ ತಲ್ಲಣಿಸಿದ
ಮಗುವಿನ ದುರಾಸೆಯನ್ನು
ಕ್ಷಮಿಸಿ ಬಿಡು

ಅಸಂಖ್ಯ ಹಗಲುಗಳನ್ನು ತೋಡಿ
ದಫನಗೈದ ನನ್ನ ದೇವರುಗಳನ್ನು ನೋಡು
ಸ್ಮಶಾನದಂತಿರುವ ಇರುಳಲ್ಲಿ
ನಿನ್ನ ಕರೆ
ಮಾತ್ರ ಆಸರೆ!

ಸದ್ದಡಗಿದ ನನ್ನ ಉಲ್ಲಾಸಗಳು
ವೌನದ ತೆಕ್ಕೆಯಲ್ಲಿ
ಜೋಲಾಡುವ ಬಾವಲಿಗಳು
ಹಗಲ ಯಜಮಾನಿಕೆಯನ್ನು ತಿರಸ್ಕರಿಸಿ
ರಾತ್ರಿಯನ್ನು ತಬ್ಬಿಕೊಂಡ ಬಡಪಾಯಿಗಳು

ಇನ್ನೆಂದಾದರೊಮ್ಮೆ
ಬರಬಹುದಾದ ಕರೆಯ
ಅಕ್ಕರೆಗಾಗಿ ಇರುಳ
ಹೊದ್ದುಕೊಂಡು ಸಕಲ ಜಗತ್ತಿನ ಜತೆಗೆ
ಕಾಯುವೆ ಮಗುವೆ....