Wednesday, April 24, 2013

ಬೆಂಗಳೂರು ಸ್ಫೋಟ: ಬಂಧಿತರು ‘ತಕ್ಷಣ’ದ ಆರೋಪಿಗಳು’?

‘‘ಒಂದಲ್ಲ ಒಂದು ಪ್ರಕರಣದಲ್ಲಿ ವಿಚಾರಣೆಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಪೊಲೀಸರು ಆತನನ್ನು ಕರೆದೊಯ್ಯುತ್ತಾರೆ. ಎಲ್ಲಿಯಾದರೂ ಬಾಂಬ್ ಸ್ಫೋಟ ಸಂಭವಿಸಿದರೆ ನನ್ನ ಮಗ ತಕ್ಷಣದ ಶಂಕಿತನಾಗುತ್ತಾನೆ. ಆದರೆ, ಆತನ ವಿರುದ್ಧ ಪುರಾವೆಯಿಲ್ಲ ಎಂದು ಹೇಳಿ ಬಳಿಕ ಪೊಲೀಸರು ಆತನನ್ನು ಬಿಟ್ಟುಬಿಡುತ್ತಾರೆ. ಈ ಬಾರಿಯೂ ನನ್ನ ಮಗ ನಿರಪರಾಧಿ ಎಂಬುದು ಸಾಬೀತಾಗುತ್ತದೆ’’
ಬಂಧಿತ ಮಹಮ್ಮದ್ ಬುಹಾರಿಯ ತಾಯಿ

 ಒಬ್ಬ ಅತ್ಯಾಚಾರಿ ಆರೋಪಿ ಅಥವಾ ಕಳವು ಆರೋಪಿಯನ್ನು ಬಂಧಿಸಲು ವರ್ಷಾನುಗಟ್ಟಳೆ ದೂಡುವ ಪೊಲೀಸರಿಗೆ ಸ್ಫೋಟಕ್ಕೆ ಸಂಬಂಧಿಸಿದ ಅಪರಾಧಿಗಳನ್ನು ಬಂಧಿಸುವುದು ನೀರು ಕುಡಿದಷ್ಟೇ ಸುಲಭ. ಬೆಂಗಳೂರಿನಲ್ಲಿ ಸ್ಫೋಟ ನಡೆದ ಬೆನ್ನಿಗೇ ಅದರ ಹೊಣೆಯನ್ನು ಮುಸ್ಲಿಮ್ ಮೂಲಭೂತವಾದಿ ಸಂಘಟನೆ ಅಲ್‌ಉಮ್ಮಾ ಎನ್ನುವ ಗುಮ್ಮನನ್ನು ತೋರಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಈ ಮೂವರು ನಿಜವಾದ ಅಪರಾಧಿಗಳೇ ಎಂಬ ಸಂಶಯವನ್ನು ಕೆಲವು ಮಾಧ್ಯಮಗಳು ವ್ಯಕ್ತಪಡಿಸಿವೆ. ಬರೇ ಅನುಮಾನದ ಮೇರೆಗೆ ಇವರನ್ನು ಬಂಧಿಸಲಾಗಿದೆ. ಯಾವುದೇ ಬಲವಾದ ಆಧಾರಗಳು ಪೊಲೀಸರ ಬಳಿ ಇಲ್ಲ ಎಂದು ಫಸ್ಟ್‌ಪೋಸ್ಟ್ ತನ್ನ ವರದಿಯಲ್ಲಿ ತಿಳಿಸಿದೆ.

ಎಪ್ರಿಲ್ 17ರಂದು ಬೆಂಗಳೂರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಈ ಬಂಧನ ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಗುಂಪುಗಳು ಮರುಸಂಘಟಿತವಾಗಿವೆಯೇ ಹಾಗೂ ಪ್ರಕರಣವನ್ನು ದಡಕ್ಕೆ ಸೇರಿಸುವಲ್ಲಿ ತನಿಖಾ ಸಂಸ್ಥೆಗಳು ಈಗಲೂ ಪರದಾಡುತ್ತಿವೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾಕೆಂದರೆ ಅಲ್‌ಉಮ್ಮಾನ ಎನ್ನುವ ಸಂಘಟನೆ ಎಂದೋ ವಿಸರ್ಜನೆಗೊಂಡಿದೆ. ಹಾಗಾದರೆ ಪೊಲೀಸರು ಏನನ್ನು ಸಾಬೀತು ಮಾಡಲು ಹೊರಟಿದ್ದಾರೆ? ಎಂದು ಫಸ್ಟ್‌ಪೋಸ್ಟ್ ಪ್ರಶ್ನಿಸಿದೆ.

38 ವರ್ಷದ ಸೈಯದ್ ಮುಹಮ್ಮದ್ ಬುಹಾರಿ ಯಾನೆ ಕಿಚನ್ ಬುಹಾರಿ, 39 ವರ್ಷದ ಪೀರ್ ಮೊಹಿದ್ದೀನ್ ಮತ್ತು 30 ವರ್ಷದ ಬಶೀರ್ ಯಾನೆ ಸುನ್ನತ್ ಬಶೀರ್ ಅವರನ್ನು ಬಂಧಿಸಲಾಗಿದೆ. ಬುಹಾರಿಯನ್ನು ಈ ಹಿಂದೆ ಕೋಯಂಬತ್ತೂರು ಬಾಂಬ್ ಸ್ಫೋಟದಲ್ಲಿ ಆರೋಪಿ ಎಂದು ಪೊಲೀಸರು ಗುರುತಿಸಿದ್ದರು. ಆದರೆ ಆತ ವಿಚಾರಣೆಯ ಬಳಿಕ ದೋಷಮುಕ್ತ ಎಂದು ನ್ಯಾಯಾಲಯ ಹೇಳಿತ್ತು.

ಬಂಧಿತರು ಸ್ಫೋಟದಲ್ಲಿ ಯಾವ ಪಾತ್ರ ವಹಿಸಿರಬಹುದು ಎಂಬ ಬಗ್ಗೆ ವಿವರಗಳನ್ನು ಪೊಲೀಸರು ಇನ್ನಷ್ಟೆ ನೀಡಬೇಕಾಗಿದೆ. ಮೋಟರ್ ಸೈಕಲಿನ ವ್ಯವಸ್ಥೆ ಮಾಡುವ ಮೂಲಕ ಬಂಧಿತರು ಸ್ಫೋಟ ನಡೆಸಿದವರಿಗೆ ವಸ್ತು ರೂಪದಲ್ಲಿ ನೆರವು ನೀಡಿರಬಹುದು ಎಂಬುದಾಗಿ ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಬೆಂಗಳೂರಿನಲ್ಲಿ ಬೈಕ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಿಸಿತ್ತು. ಶಂಕಿತನೊಬ್ಬ ಬೈಕನ್ನು ವೆಲ್ಲೂರಿನಲ್ಲಿ ಖರೀದಿಸಿದ ವೇಳೆ ದ್ವಿಚಕ್ರ ವಾಹನ ವ್ಯಾಪಾರಿಗೆ ಮಾಡಿದ್ದ ಮಿಸ್ಡ್ ಕಾಲ್‌ನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ ಎಂಬುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಆದರೆ, ಸ್ಫೋಟ ಸ್ಥಳದಿಂದ ಕರೆಗಳನ್ನು ಮಾಡಲು ಪೀರ್ ತನ್ನ ನೆರೆಯವನ ಫೋನ್ ಬಳಸಿದ್ದ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ ಬಳಿಕ, ಚೆನ್ನೈ ಮೂಲದ ಸಂಖ್ಯೆಗಳನ್ನು ಹೊಂದಿರುವ ಸೆಲ್ ಫೋನ್‌ಗಳ ಬಳಕೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ‘ಡೆಕ್ಕನ್ ಕ್ರಾನಿಕಲ್’ ವರದಿ ಮಾಡಿದೆ.

 ಬುಹಾರಿಯನ್ನು 1998ರ ಫೆಬ್ರವರಿಯಲ್ಲಿ ನಡೆದ ಕೊಯಂಬತ್ತೂರ್ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದರು. ಆದರೆ ಆತ ಕೊಯಂಬತ್ತೂರ್ ಸ್ಫೋಟ ಪ್ರಕರಣದಲ್ಲಿ ಆಗ ದೋಷಮುಕ್ತನಾಗಿದ್ದ.
‘‘ಒಂದಲ್ಲ ಒಂದು ಪ್ರಕರಣದಲ್ಲಿ ವಿಚಾರಣೆಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಪೊಲೀಸರು ಆತನನ್ನು ಕರೆದೊಯ್ಯುತ್ತಾರೆ. ಎಲ್ಲಿಯಾದರೂ ಬಾಂಬ್ ಸ್ಫೋಟ ಸಂಭವಿಸಿದರೆ ನನ್ನ ಮಗ ತಕ್ಷಣದ ಶಂಕಿತನಾಗುತ್ತಾನೆ. ಆದರೆ, ಆತನ ವಿರುದ್ಧ ಪುರಾವೆಯಿಲ್ಲ ಎಂದು ಹೇಳಿ ಬಳಿಕ ಪೊಲೀಸರು ಆತನನ್ನು ಬಿಟ್ಟುಬಿಡುತ್ತಾರೆ. ಈ ಬಾರಿಯೂ ನನ್ನ ಮಗ ನಿರಪರಾಧಿ ಎಂಬುದು ಸಾಬೀತಾಗುತ್ತದೆ’’ ಎಂದು ಆತನ ತಾಯಿ ರಮ್‌ಝಾದ್ ಹೇಳಿರುವುದಾಗಿ ವರದಿಯಾಗಿದೆ. ಆಕೆಯದು ಬೀಡಿ ಕಟ್ಟುವ ದುಡಿಮೆ. ‘‘ನನ್ನ ಮಗನನ್ನು ಕೋಯಂಬತ್ತೂರು ಬಾಂಬ್ ಸ್ಫೋಟದ ಆರೋಪದಲ್ಲಿ ಆರು ವರ್ಷ ಜೈಲಿನೊಳಗೆ ಹಾಕಿದರು. ವಿಚಾರಣೆಯ ಬಳಿಕ ಅವನನ್ನು ನಿರಪರಾಧಿ ಎಂದು ಬಿಟ್ಟು ಬಿಟ್ಟರು. ಆರು ವರ್ಷ ಅನ್ಯಾಯವಾಗಿ ಅವನು ಜೈಲಲ್ಲಿ ಕಳೆದ. ಜೈಲಿನಿಂದ ಬಿಡುಗಡೆಯಾಗಿ ಬಂದು ಅವನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾನೆ. ಸ್ವಂತವಾಗಿ ಒಂದು ವ್ಯಾಪಾರ ನಡೆಸುತ್ತಿದ್ದಾನೆ. ಆದರೆ ಪೊಲೀಸರು ಅವನ ಬೆನ್ನು ಬಿಡುತ್ತಿಲ್ಲ’’ ಎಂದು ತಾಯಿ ಅಳಲು ವ್ಯಕ್ತಪಡಿಸುತ್ತಾರೆ.

ಆತನ ಹೆಂಡತಿ ಈಗಾಗಲೇ ಮದರಾಸು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಬಾಂಬ್ ಸ್ಫೋಟ ಪ್ರಕರಣದಲ್ಲಿ ವಕೀಲರಿಗೆ ನೆರವು ನೀಡುತ್ತಿದ್ದ ತನ್ನ ಗಂಡನನ್ನು 2011ರಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿಯನ್ನು ಗುರಿಯಾಗಿರಿಸಿದ ಪೈಪ್ ಬಾಂಬ್ ದಾಳಿಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವೊಂದು ವಿಚಾರಣೆಗಾಗಿ ಕರೆದಿತ್ತು ಹಾಗೂ ತಂಡದ ಸಿಬ್ಬಂದಿ ತನ್ನ ಗಂಡನಿಗೆ ಬೆದರಿಕೆ ಹಾಕಿದ್ದರು ಎಂದು ತನ್ನ ದೂರಿನಲ್ಲಿ ಬುಹಾರಿ ಹೆಂಡತಿ ಆರೋಪಿಸಿದ್ದಾರೆ.

 ಆದಾಗ್ಯೂ, ನಿಷೇಧಿತ ಗುಂಪು ಅಲ್ ಉಮ್ಮಾ ಜೊತೆಗೆ ಬುಹಾರಿ ಹೊಂದಿರುವ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಈ ಗುಂಪು ಬೆಂಗಳೂರು ಸ್ಫೋಟದ ರೂವಾರಿಗಳಿಗೆ ನೆರವು ನೀಡಿರಬಹುದು ಎಂಬುದಾಗಿ ಅನಾಮಧೇಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳಿವೆ.ಕೊಯಂಬತೋರ್ ಸ್ಫೋಟದಲ್ಲಿ ಬಳಸಲಾಗಿದ್ದ ಸ್ಫೋಟಕಗಳನ್ನೇ ಬೆಂಗಳೂರು ಸ್ಫೋಟದಲ್ಲಿ ಬಳಸಿರುವುದು ಪೊಲೀಸರು ಬುಹಾರಿಯ ಮೇಲೆ ಸಂಶಯ ಪಡಲು ಪ್ರಮುಖ ಕಾರಣವಾಗಿದೆ ಎಂದು ಹೆಸರಿಸದ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿಯೊಂದು ಹೇಳಿದೆ.
‘‘ಕೊಯಂತೋರ್ ಸ್ಫೋಟದಲ್ಲಿ ಬಳಸಲಾದ ಸ್ಫೋಟಕಗಳನ್ನೇ ಬೆಂಗಳೂರು ಸ್ಫೋಟದಲ್ಲೂ ಬಳಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದಾಗ್ಯೂ, ಅಲ್-ಉಮ್ಮಾ ಹಲವು ವರ್ಷಗಳ ಹಿಂದೆಯೇ ಬರ್ಖಾಸ್ತುಗೊಂಡಿದೆ. ಗುಂಪಿನ ಸದಸ್ಯರು ಮರುಸಂಘಟಿತರಾಗುತ್ತಿದ್ದಾರೆ ಹಾಗೂ ಬೆಂಗಳೂರು ಸ್ಫೋಟ ಅವರ ದಾಳಿಯಾಗಿದೆ ಎಂಬುದು ನಮ್ಮ ಶಂಕೆ. ಹಲವು ನಿಷೇಧಿತ ಸಂಘಟನೆಗಳ ಸದಸ್ಯರು ಮರುಸಂಘಟಿತರಾಗುತ್ತಿರುವ ಬಗ್ಗೆ ವರದಿಗಳಿವೆ. ಅದರಲ್ಲಿ ಇದೂ ಒಂದಾಗಿರಬಹುದು’’ ಎಂದು ಅಧಿಕಾರಿಯನ್ನು ಉಲ್ಲೇಖಿಸಲಾಗಿದೆ.

ಅದೇ ವೇಳೆ, ಬುಹಾರಿ ಇತ್ತೀಚಿನ ವರ್ಷಗಳಲ್ಲಿ ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಪೊಲೀಸರೇ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಕಣ್ಗಾವಲಿನಿಂದ ಹೊರಗಿಡಲಾಗಿದೆ ಎಂದು ಅದೇ ಅಧಿಕಾರಿ ಹೇಳುತ್ತಾರೆ.

Monday, April 22, 2013

ಮರ

ಮರ
ಈ ಮರ ನಾನೂರು
ವರ್ಷ ಹಿಂದಿನದಂತೆ!
ಇದರ ನೆರಳಲ್ಲಿ
ಕೆಲ ನಿಮಿಷ ತಂಗಿದ ನಾನು
ಅದರ ಕಾಂಡಕ್ಕೆ ಕಿವಿ ನೀಡಿದೆ...
ನಾನೂರು ವರ್ಷಗಳ ಹಿಂದಿನ
ಜನರ ಪಿಸು ಮಾತುಗಳು ಕೇಳುತ್ತಿತ್ತು
ಅಷ್ಟೂ ಹೊತ್ತು
ಆ ತಲೆಮಾರುಗಳ ಜೊತೆ
ಉಸಿರಾಡಿದೆ
ಆ ಮರದ
ನೆರಳಿಂದ ಹೊರ ಬಂದ ನಾನು
ನಾನೂರು ವರ್ಷಗಳ ಹಿಂದಿನ
ಮನುಷ್ಯನಾದೆ!

ನಾನು
ನನ್ನ ನೋವು ನಿನ್ನದು
ನಗು ನಿನ್ನದು...
ಧ್ವನಿ ನಿನ್ನದು
ಮೌನ ನಿನ್ನದು
ನನ್ನ ದೇಹದ ಕಣ ಕಣಗಳಲ್ಲೂ ನೀನು!
ಹೇಳು ದೊರೆ
ಹಾಗಾದರೆ ನಾನೆಲ್ಲಿದ್ದೇನೆ?
ನನ್ನ ನೆಪದಲ್ಲಿ
ಈ ಜಗದಲ್ಲಿ ಬದುಕುತ್ತಿರೂದು
ನೀನೇ ಎನ್ನುದನ್ನು
ಈ ರಾತ್ರಿ ನಾನು ಅರಿತೆ

Saturday, April 20, 2013

ಎಂಜಿನಿಯರ್ ಮತ್ತು ಇತರ ಕತೆಗಳು

ಮರಳು ಶಿಲ್ಪಿ
ಅವನೊಬ್ಬ ವಿಶ್ವವಿಖ್ಯಾತ ಮರಳ ಶಿಲ್ಬಿ.
ಮರಳಿನಲ್ಲಿ ಅದೆಂತಹ ಅದ್ಭುತವಾದುದನ್ನು ಕಟ್ಟಿ ನಿಲ್ಲಿಸಬಲ್ಲ. ಹಲವಾರು ಪ್ರಶಸ್ತಿಗಳು ದೊರಕಿತ್ತು.
ಅವನಿಗೆ ಮದುವೆಯಾಯಿತು. ಒಂದೇ ತಿಂಗಳಲ್ಲಿ ದಾಂಪತ್ಯ ಮುರಿದು ಬಿತ್ತು.
ಅವಳಲ್ಲಿ ಕೇಳಿದರು ‘‘ಅಂತಹ ಕಲಾವಿದನೊಂದಿಗೆ ಯಾಕೆ ಬದುಕಲಾಗಲಿಲ್ಲ’’
‘‘ಅವನೊಬ್ಬ ಮರಳ ಶಿಲ್ಪಿ. ಮರಳಲ್ಲಿ ಕಟ್ಟಿದ್ದು ಹೆಚ್ಚು ಬಾಳಲಾರದು ಎನ್ನುವುದು ನನಗೆ ಗೊತ್ತಿರಲಿಲ್ಲ’’

ಎಂಜಿನಿಯರ್
ಅವನೊಬ್ಬ ಶ್ರೇಷ್ಟ ಎಂಜಿನಿಯರ್.
ಅವಳಲ್ಲಿ ಹೇಳಿದ ‘‘ಹೇಳು...ನೀನು ಮದುವೆಯಾಗುವುದಾದರೆ...ನಿನಗೆ ತಾಜ್‌ಮಹಲ್‌ಗಿಂತಲೂ ಸುಂದರ ಕಟ್ಟಡ ಕಟ್ಟಿಕೊಡುವೆ...’’
ಅವಳು ನಕ್ಕು ಉತ್ತರಿಸಿದಳು...‘‘ನೀನು ನಿಜಕ್ಕೂ ಶ್ರೇಷ್ಟ ಎಂಜಿನಿಯರ್ ಆಗಿದ್ರೆ...ಆ ಕಾಜಾಣ ಹಕ್ಕಿಯ ಗೂಡನ್ನು ನಿನ್ನ ಕೈಯಾರೆ ನನಗೆ ಕಟ್ಟಿಕೊಡು...ನಿನ್ನ ಮದುವೆಯಾಗುವೆ...’’

ಕಲಿಕೆ
ನದಿ ತೀರದ ಮುಂದೆ ನಿಂತು ಆತ ಚಳಿಯಿಂದ ನಡುಗುತ್ತಾ ಗೆಳೆಯನಲ್ಲಿ ಕೇಳಿದ ‘‘ಈಜು ಕಲಿಯುವ ಮೊದಲ ಹಂತ ಯಾವುದು?’’
ಗೆಳೆಯ ‘‘ಇದು ಮೊದಲ ಹಂತ’’ ಎನ್ನುತ್ತಾ ಆತನನ್ನು ನದಿಗೆ ದೂಡಿದ.

ಗುರು-ಶಿಷ್ಯ
 ‘‘ಒಳ್ಳೆಯ ಗುರು, ಒಳ್ಳೆಯ ಶಿಷ್ಯನ ಮಾನದಂಡ ಯಾವುದು ಗುರುಗಳೇ?’’
ಶಿಷ್ಯ ಕೇಳಿದ.
ಸಂತ ಶಾಂತವಾಗಿ ಉತ್ತರಿಸಿದ ‘‘ಪ್ರತಿ ಗುರುವಿನಲ್ಲಿ ಒಬ್ಬ ಶಿಷ್ಯನಿರುತ್ತಾನೆ. ಪ್ರತಿ ಶಿಷ್ಯನಲ್ಲಿ ಒಬ್ಬ ಗುರುವೂ ಇರುತ್ತಾನೆ. ತನ್ನೊಳಗೆ ಶಿಷ್ಯನಿರುವುದು ಅರಿತ ಗುರು ಒಳ್ಳೆಯ ಗುರು. ತನ್ನೊಳಗೆ ಗುರುವಿರುವುದು ಅರಿಯದ ಶಿಷ್ಯ ಒಳ್ಳೆಯ ಶಿಷ್ಯ’’

ದೊಡ್ಡ ಕವಿ
ಮಹಾ ಕವಿಯಾತ. ಬರೆದರೆ ಮಹಾಕಾವ್ಯವನ್ನೇ ಬರೆಯುತ್ತಿದ್ದ.
ಒಮ್ಮೆ ಅವನ ಪುಟ್ಟ ಮಗು ಕೇಳಿತು ‘‘ಅಪ್ಪಾ ನೀನು ಬರೆದದ್ದು ಯಾಕೆ ಅರ್ಥವಾಗುವುದಿಲ್ಲ...’’
‘‘ಯಾಕೆಂದರೆ ಪಂಡಿತರಿಗಷ್ಟೇ ಅದು ಅರ್ಥವಾಗುತ್ತದೆ ಮಗು...’’
‘‘ಸರಿ, ನನಗೆ ಅರ್ಥವಾಗುವಂತಹ ಒಂದು ಪದ್ಯ ಬರಿ...’’
ಕವಿ, ಸರಳ ಪದ್ಯವೊಂದನ್ನು ಬರೆಯಲು ಹೊರಟ.
ವರ್ಷ ಒಂದು ಉರುಳಿತು. ಎರಡಾಯಿತು. ಸರಳವಾದ ಪದ್ಯವೊಂದನ್ನು ಬರೆಯಲು ಅವನಿಗಾಗಲಿಲ್ಲ.
ಕೊನೆಗೆ ಸೋತು ಮಗುವಿಗೆ ಹೇಳಿದ ‘‘ಮಗುವೇ....ಮಕ್ಕಳಿಗೆ ಅರ್ಥವಾಗುವ ಸರಳ ಪದ್ಯ ಬರೆಯುವಷ್ಟು ದೊಡ್ಡ ಕವಿ ನಿನ್ನ ಅಪ್ಪ ಅಲ್ಲ’’
ಅಂದು ಅವನಿಗೆ ಮೊದಲ ಬಾರಿಗೆ ಒಂದು ಸರಳ ಶಬ್ಬ ಹೊಳೆಯಿತು. 


ಹುಟ್ಟು ಹಬ್ಬ
ತಾಯಿಗೆ ನೂರು ವರ್ಷ ಪೂರ್ತಿಯಾಯಿತು.
 ಎಲ್ಲ ಮಕ್ಕಳಿಗೂ ಸಂಭ್ರಮ. ದೇಶವಿದೇಶಗಳಲ್ಲಿರುವ ಮಕ್ಕಳೆಲ್ಲ ಭಾರತಕ್ಕೆ ಬಂದರು.
ತಾಯಿಯ ಹುಟ್ಟು ಹಬ್ಬ ಆಚರಣೆಗೆ ವೇದಿಕೆ ಸಿದ್ಧವಾಯಿತು.
ಕೇಕು ತಂದರು. ಅದರ ಮೇಲೆ ಮೊಂಬತ್ತಿ ಹಚ್ಚಿದರು.
ಹಿರಿಯ ಮಗ ಹೇಳಿದ ‘‘ಇಬ್ಬರು ಹೋಗಿ, ತಕ್ಷಣ ತಾಯಿಯನ್ನು ವೃದ್ಧಾಶ್ರಮದಿಂದ ಕರೆತನ್ನಿ’’

ಮರಣ
ಒಬ್ಬ ಲೇಖಕನನ್ನು ಜೈಲಿನೊಳಗೆ ಬಂಧಿಸಿಡಲಾಯಿತು.
ಕಲ್ಲಿನಿಂದ ಕಟ್ಟಿದ ಸಣ್ಣ ಕೋಣೆ.
ಅಲ್ಲಿ ಬೇರೇನೂ ಇಲ್ಲ. ಸಣ್ಣದೊಂದು ಕಿಂಡಿ. ಅದರಲ್ಲಿ ಅವನಿಗೆ ಆಹಾರ ಪೂರೈಸಲಾಗುತ್ತಿತ್ತು.
ಒಂದು ದಿನ ಜೈಲರ್ ಕೇಳಿದ ‘‘ಹೇಳು, ನಿನಗೇನು ಬೇಕು’’
ಲೇಖಕ ಹೇಳಿದ ‘‘ಪೆನ್ನು ಮತ್ತು ಕಾಗದ’’
‘‘ಅದೊಂದು ಬಿಟ್ಟು ಬೇರೇನಾದರೂ ಕೇಳು’’ ಜೈಲರ್ ಇನ್ನೊಂದು ಅವಕಾಶ ನೀಡಿದ.
‘‘ಹಾಗಾದರೆ ನನಗೆ ಮರಣವನ್ನು ಕೊಡಿ’’ ಲೇಖಕ ಕೇಳಿದ.

ತುಳಿತ
ರೈತ ಮಣ್ಣನ್ನು ತುಳಿದ. ಬೆಳೆ ಬೆಳೆದ.
ಅದನ್ನು ಉಂಡ ಮನುಷ್ಯ ರೈತನನ್ನು ತುಳಿದ.
ತಾನೇ ಅಳಿದ.

Thursday, April 18, 2013

ಈ ವಿಶ್ವದಲ್ಲಿರುವುದು ಎರಡೇ ಸಮುದಾಯ

 ಭಾರತದಲ್ಲಿ ಅಲ್ಪಸಂಖ್ಯಾತರು ಕೇವಲ ಬಿಜೆಪಿ ಯಿಂದ ಅಥವಾ ಮೋದಿಯಂತಹ ನಾಯಕರಿಂದಷ್ಟೇ ಆತಂಕವನ್ನು ಎದುರಿಸುತ್ತಾರೆ ಎನ್ನುವುದು ಎಷ್ಟು ಸತ್ಯ? ಸಿಖ್ ಹತ್ಯಾಕಾಂಡದಲ್ಲಿ ಕೇವಲ ಕಾಂಗ್ರೆಸಿಗರಷ್ಟೇ ಭಾಗವಹಿಸಿದ್ದರು ಎನ್ನುವುದು ಎಷ್ಟರಮಟ್ಟಿಗೆ ಸತ್ಯ? ಈ ಎರಡು ಪ್ರಶ್ನೆಗಳನ್ನು ನಾವು ಉಜ್ಜಿ ನೋಡಬೇಕಾಗಿದೆ. ಸಿಖ್ ಹತ್ಯಾಕಾಂಡ ಈ ದೇಶದಲ್ಲಿ ನಡೆದುದು ಇಂದಿರಾಗಾಂಧಿಯ ಹತ್ಯೆಯ ಕಾರಣಕ್ಕಾಗಿ ಯಷ್ಟೇ ಅಲ್ಲ, ಸಿಕ್ಖರು ಈ ದೇಶದಲ್ಲಿ ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೂ ಅವರ ಮೇಲೆ ಅಂದು ಆ ಪರಿಯ ಹಿಂಸೆ ನಡೆಯಿತು. ಆ ಹಿಂಸೆಯಲ್ಲಿ ಭಾಗವಹಿಸಿದ್ದು ಕೇವಲ ಕಾಂಗ್ರೆಸ್ ಕಾರ್ಯ ಕರ್ತರು ಅಥವಾ ಮುಖಂಡರು ಮಾತ್ರ ಎನ್ನುವುದು ಅತಿ ದೊಡ್ಡ ಸುಳ್ಳು. ಆಳದಲ್ಲಿ ಸಿಖ್ ಸಮು ದಾಯದ ಜೊತೆಗೆ ತೀವ್ರ ಅಸಮಾಧಾನವನ್ನು ಹೊಂದಿದ್ದ ಆರೆಸ್ಸೆಸ್ ನಾಯಕರೂ ಇದೇ ಸಂದರ್ಭವನ್ನು ಬಳಸಿಕೊಂಡು ತಮ್ಮ ಅಸಹನೆಯನ್ನು ತೀರಿಸಿ ಕೊಂಡರು. ಸಿಖ್ ಹತ್ಯಾಕಾಂಡ ದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಮುಖಂಡರಿದ್ದರೂ, ಆಳದಲ್ಲಿ ಆರೆಸ್ಸೆಸ್ ಮನಸ್ಸು ಭಾರೀ ಕೆಲಸ ವನ್ನು ಮಾಡಿತ್ತು. ಸಿಖ್ಖರು ಅಂದು ಆ ಪರಿಯ ಹಿಂಸೆಯನ್ನು ಎದುರಿಸಿದ್ದು ಯಾಕೆಂದರೆ, ಅವರು ಈ ದೇಶದ ಅಲ್ಪ ಸಂಖ್ಯಾತ ಸಮುದಾಯ ವಾಗಿದ್ದರು.

ವಿಶ್ವದಲ್ಲಿ ‘ಅಲ್ಪಸಂಖ್ಯಾತ’ ಎನ್ನುವುದೇ ಒಂದು ಸಮುದಾಯ. ಇವರು ಮುಸ್ಲಿಮರಾಗಿ ರಬಹುದು, ಹಿಂದೂಗಳಾಗಿರಬಹುದು, ಬೌದ್ಧ ರಾಗಿರಬಹುದು, ತಮಿಳರಾಗಿರಬಹುದು. ಭಾರತದಲ್ಲಿ ಮುಸ್ಲಿಮರ ಮೇಲೆ ಹೇಗೆ ಹಿಂಸೆ, ದಬ್ಬಾಳಿಕೆ ನಡೆಯುತ್ತಿದೆಯೋ ಹಾಗೆಯೇ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೂ ನಡೆಯುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕು. ಯಾಕೆಂದರೆ ಹಿಂದೂಗಳು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು. ಬಾಂಗ್ಲಾದಲ್ಲೂ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಿದೆ. ಯಾಕೆಂದರೆ ಅಲ್ಲಿ ಅವರದು ಅಲ್ಪಸಂಖ್ಯಾತ ಸಮುದಾಯ. ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಬೌದ್ಧರ ಮೇಲೆ ಶಂಕರಾಚಾರ್ಯ ನೇತೃತ್ವದಲ್ಲಿ ಭಾರೀ ನರಮೇಧ ನಡೆಯಿತು. ಬೌದ್ಧರನ್ನು ಕಂಡ ಕಂಡಲ್ಲಿ ಅಟ್ಟಾಡಿಸಿ ಅವರನ್ನು ಕೊಂದು ಹಾಕಲಾಯಿತು. ಇಂದು ಅದೇ ಬೌದ್ಧರು ಶ್ರೀಲಂಕಾದಲ್ಲಿ, ಮ್ಯಾನ್ಮಾರ್‌ನಲ್ಲಿ ರಾಕ್ಷಸರಾಗಿ ಮೆರೆದಿರುವುದನ್ನು ನಾವು ಕಂಡಿದ್ದೇವೆ. ಬೌದ್ಧ ಧರ್ಮವನ್ನು ನಾವು ಅಹಿಂಸೆಯ ಸಂಕೇತ ಎಂದು ಕೊಂಡಾಡುತ್ತೇವೆ. ಜಗತ್ತಿನಲ್ಲಿ ಬೌದ್ಧರು ಬಹುಸಂಖ್ಯಾತರಾಗಿ ರುವಲ್ಲೆಲ್ಲ ಹಿಂಸೆ ಬರ್ಬರ ರೂಪವನ್ನು ತಾಳಿದೆ. ಥಾಯ್ಲೆಂಡ್‌ನಲ್ಲಿ 2004ರಲ್ಲಿ ನಡೆದ ಕೋಮು ಗಲಭೆಯಲ್ಲಿ ಒಂದೆರಡು ದಿನಗಳಲ್ಲಿ 200 ಮಂದಿ ಅಮಾಯಕ ಮುಸ್ಲಿಮರನ್ನು ಧರ್ಮದ ಹೆಸರಿನಲ್ಲಿ ಇದೇ ಬೌದ್ಧರು ಕೊಂದು ಹಾಕಿದ್ದರು. ಮ್ಯಾನ್ಮಾರ್‌ನಲ್ಲಿ ಬೌದ್ಧರು ಕ್ರೌರ್ಯ ಮೆರೆಯು ತ್ತಿರುವುದನ್ನು ಕಳೆದ ಕೆಲವು ತಿಂಗಳಿನಿಂದ ನೋಡುತ್ತಿದ್ದೇವೆ. ಜಗತ್ತಿನ ಅತಿ ಸಣ್ಣ ಧರ್ಮ ವಾಗಿರುವ ಬೌದ್ಧಧರ್ಮ ಅವಕಾಶ ಸಿಕ್ಕಿದಾಗ ಯಾವುದೇ ಬಹುಸಂಖ್ಯಾತ ಧರ್ಮಕ್ಕಿಂತ ಕಡಿಮೆ ಹಿಂಸೆಯನ್ನು ಎಸಗಲಿಲ್ಲ. ಶ್ರೀಲಂಕಾದ ಹಿಂಸೆಯಲ್ಲಿ ಬೌದ್ಧ ಸನ್ಯಾಸಿಗಳ ನೇರ ಪಾತ್ರವಿದೆ ಎನ್ನುವುದು ಈಗಾಗಲೇ ವರದಿಯಿಂದ ಬಯಲಾಗಿದೆ.

 ಆದುದರಿಂದಲೇ, ನಾವು ಭಾರತದ ಕೋಮು ಗಲಭೆಯನ್ನು ಬರೇ ಬಿಜೆಪಿಗಷ್ಟೇ ನಂಟು ಹಾಕುವುದಕ್ಕಾಗುವುದಿಲ್ಲ. ಬ್ರಾಹ್ಮಣ್ಯವೆನ್ನುವುದು ಮೈಗೂಡಿಸಿಕೊಂಡಿರುವುದು ಕೇವಲ ಬಿಜೆಪಿ ಮಾತ್ರವಲ್ಲ. ಇಲ್ಲಿನ ಕಾಂಗ್ರೆಸ್, ಎಡಪಕ್ಷಗಳ ನಾಯಕರ ಆಳದಲ್ಲೂ ಬ್ರಾಹ್ಮಣ ಹೆಡೆಯಾಡು ವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಬಿಜೆಪಿ ಸರಕಾರಗಳೆಲ್ಲ ಅಳಿದು ಇಡೀ ದೇಶ ಕಾಂಗ್ರೆಸ್‌ಮಯವಾದರೆ ಇಲ್ಲಿ ಕೋಮುಗಲಭೆ ಶಾಶ್ವತವಾಗಿ ಅಳಿದು ಹೋಗುತ್ತದೆ ಎನ್ನುವುದು ಒಂದು ಭ್ರಮೆ ಮಾತ್ರ. ಈ ದೇಶದ ಇತಿಹಾಸ ವನ್ನು ಗಮನಿಸಿದರೆ, ಹೆಚ್ಚಿನ ಕೋಮುಗಲಭೆ ಗಳಲ್ಲಿ ಕೇವಲ ಬಿಜೆಪಿ ಮತ್ತು ಆರೆಸ್ಸೆಸ್ಸಿಗರು ಮಾತ್ರ ಭಾಗವಹಿಸಿರುವುದಲ್ಲ. ಆಳದಲ್ಲಿ ಕಾಂಗ್ರೆಸ್‌ನ ಬಹುತೇಕ ನಾಯಕರು ಬಿಜೆಪಿ ಯನ್ನು ಇಷ್ಟಪಡದಿದ್ದರೂ, ಅವರ ಕೋಮು ನಿಲುವನ್ನು ಇಷ್ಟಪಡುತ್ತಾರೆ. ಅನೇಕ ಕಾಂಗ್ರೆಸ್ ನಾಯಕರು ಆಳದಲ್ಲಿ ಆರೆಸ್ಸೆಸ್‌ನ ‘ದೇಶಭಕ್ತಿ’ ಯನ್ನು ಇಷ್ಟಪಡುತ್ತಾರೆ. ಯಾಕೆಂದರೆ, ಆ ದೇಶಭಕ್ತಿ, ಮುಸ್ಲಿಮರನ್ನು ಅಥವಾ ಅಲ್ಪಸಂಖ್ಯಾತ ರನ್ನು ದ್ವೇಷಿಸುತ್ತದೆ. 


ಈ ದೇಶದಲ್ಲಿ ಕೋಮುಗಲಭೆ ಸಂಭವಿಸಿದ ಇಸವಿ ಮತ್ತು ಆಗ ಯಾವ ಸರಕಾರವಿತ್ತು ಎನ್ನುವುದನ್ನು ಗಮನಿಸಿದರೆ ಇದು ಅರ್ಥ ವಾಗುತ್ತದೆ. 1990ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಭೀಕರ ಕೋಮುಗಲಭೆಗೆ ಸುಮಾರು 400 ಮಂದಿ ಮುಸ್ಲಿಮರು ಬಲಿಯಾದರು. ಈ ಸಂದರ್ಭದಲ್ಲಿ ಆಂಧ್ರದಲ್ಲಿ ಕಾಂಗ್ರೆಸ್ ಸರಕಾರ ವಿತ್ತು. ಚೆನ್ನಾರೆಡ್ಡಿ ಮುಖ್ಯಮಂತ್ರಿಯಾಗಿದ್ದರು. 1990ರಲ್ಲಿ ಅಲಿಘರ್‌ನಲ್ಲಿ ನಡೆದ ಕೋಮು ಗಲಭೆಗೆ ಸುಮಾರು 200 ಅಲ್ಪಸಂಖ್ಯಾತರು ಬಲಿಯಾದರು. ಆಗ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಇದ್ದುದು ಮುಲಾಯಂ ಸಿಂಗ್ ಯಾದವ್. 1992ರಲ್ಲಿ ಸೂರತ್‌ನಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು. ಸುಮಾರು 200 ಮಂದಿ ಬಲಿಯಾದರು. ಆಗ ಅಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರ ಆಳ್ವಿಕೆ ನಡೆಸುತ್ತಿತ್ತು. 1993ರಲ್ಲಿ ಮುಂಬೈಯಲ್ಲಿ ಭೀಕರ ಕೋಮುಗಲಭೆ ನಡೆಯಿತು. ಸುಮಾರು 1000 ಸಾವಿರ ಜನರು ಅದಕ್ಕೆ ಬಲಿಯಾದರು. ಆಗ ಅಲ್ಲಿದ್ದ ಸರಕಾರ ಕಾಂಗ್ರೆಸ್. ಸುಧಾಕರ ನಾಯ್ಕೆ ಮುಖ್ಯಮಂತ್ರಿ ಯಾಗಿದ್ದರು. ಆ ಸಾವು ನೋವಿನ ಗಾಯಗಳು ಇನ್ನೂ ಒಣಗಿಲ್ಲ. ಅಪರಾಧಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ಎಲ್ಲ ಬಿಡಿ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗಲೇ ಬಾಬರೀ ಮಸೀದಿ ಕುಸಿದು ಬಿತ್ತು. ಆಗ ಈ ದೇಶದ ಪ್ರಧಾನಿ ಯಾಗಿದ್ದವರು ನರಸಿಂಹ ರಾವ್. ಈತ ಧರ್ಮದಲ್ಲಿ ಮಾತ್ರ ಬ್ರಾಹ್ಮಣನಲ್ಲ. ಮನಸ್ಸಿನಲ್ಲೂ ಬ್ರಾಹ್ಮಣ. ಕಾಂಗ್ರೆಸ್‌ನ ನಾಯಕನಾದಾಕ್ಷಣ ತನ್ನೊಳಗಿನ ಬ್ರಾಹ್ಮಣ್ಯವನ್ನು ಬಲಿಕೊಡ ಬೇಕೆಂದಿಲ್ಲ. ತನ್ನ ಅಧಿಕಾರಾವಧಿಯಲ್ಲಿ ಇದನ್ನೇ ಮಾಡಿದರು. ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಹೆಗ್ಗಳಿಕೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೇ ಸೇರಬೇಕು. ಒಬ್ಬ ಎಡಪಕ್ಷದ ನಾಯಕನ ಆಳದಲ್ಲೂ ಮುಸ್ಲಿಮ್ ದ್ವೇಷ ವಿರುವುದನ್ನು ನಾನು ನೋಡಿದ್ದೇನೆ. ಅಲ್ಪಸಂಖ್ಯಾತರ ಕುರಿತಂತೆ ಅವನೊಳಗೆ ವಿಚಿತ್ರ ದ್ವೇಷ ಮತ್ತು ಸೇಡನ್ನು ಅಲ್ಲಿ ಕಂಡಿದ್ದೆ. ಆಳವಾಗಿ ಬ್ರಾಹ್ಮಣ್ಯದ ವಿಚಿತ್ರ ರೂಪಾಂತರ ಅದು. ಅವನು ಎಡಪಕ್ಷದವನಾಗಿದ್ದರೂ ಅವನ ಆಳ ದಲ್ಲಿ ಬ್ರಾಹ್ಮಣ್ಯ ಇನ್ನೂ ಹೆಡೆಯಾಡುತ್ತಲೇ ಇತ್ತು. 

ಹೀಗಿರುವಾಗ ನಾವು ಮೋದಿಗೆ ಶಿಕ್ಷೆಯಾದಾಕ್ಷಣ ಅಥವಾ ಬಿಜೆಪಿ ಸರ್ವನಾಶ ವಾದಾಕ್ಷಣ ಇಲ್ಲಿ ಅಲ್ಪಸಂಖ್ಯಾತ ರಿಗೆ ಭದ್ರತೆ ಸಿಗುತ್ತದೆ ಎಂದು ನಂಬುವುದಾದರೂ ಹೇಗೆ. ಅಲ್ಪಸಂಖ್ಯಾತರು ಯಾವ ಧರ್ಮಕ್ಕೆ ಬೇಕಾದರೂ ಸೇರಿರಲಿ. ಅವರ ಭದ್ರತೆ ಸರಕಾರದ ಹೊಣೆ. ಆ ಕರ್ತವ್ಯದಲ್ಲಿ ದೌರ್ಬಲ್ಯಗಳು ಕಾಣಿಸಿಕೊಂಡಾಗ ಬಹು ಸಂಖ್ಯಾತರೊಳಗಿರುವ ದುಷ್ಕರ್ಮಿಗಳು ಚುರುಕಾಗು ತ್ತಾರೆ. ದೋಚುವುದಕ್ಕೆ, ಕೊಲ್ಲುವುದಕ್ಕೆ, ಅಕ್ರಮಗಳನ್ನು ನಡೆಸುವುದಕ್ಕೆ ಅವರಿಗೆ ಪರೋಕ್ಷವಾಗಿ ಕುಮ್ಮಕ್ಕು ಸಿಕ್ಕಿದಂತಾಗುತ್ತದೆ. ಆಗ ಸಂಭವಿಸುವುದು ಕೋಮುಗಲಭೆ. ಕೋಮು ಗಲಭೆಯಿಂದ ರಾಜಕೀಯ ಪಕ್ಷಗಳಿಗೆ ಲಾಭವಿದೆ. ಹಾಗೆಯೇ ಸ್ಥಳೀಯ ದರೋಡೆ ಕೋರರಿಗೆ, ಗೂಂಡಾಗಳಿಗೆ, ವ್ಯಾಪಾರಿಗಳಿಗೆ, ವಂಚಕರಿಗೆ, ದಲ್ಲಾಳಿಗಳಿಗೆ, ಪರಸ್ಪರ ಸ್ಪರ್ಧಿಗಳಿಗೆ...ಹೀಗೆ ಹಲವು ವರ್ಗಗಳಿಗೆ ಲಾಭವಿದೆ. ನಷ್ಟ ಕೇವಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ. ಇದೇ ಸಂದರ್ಭದಲ್ಲಿ ನಾನು ಆಗಾಗ ಮುಸ್ಲಿಮ್ ಗೆಳೆಯರ ಜೊತೆಗೆ ಕೇಳುತ್ತಿದ್ದ ಪ್ರಶ್ನೆ ಇದು. ‘‘ಈ ದೇಶದಲ್ಲಿ ಮುಸ್ಲಿಮರು ಶೇ. 80ರಷ್ಟಿದ್ದು, ಹಿಂದೂಗಳು ಶೇ. 20 ರಷ್ಟಿದ್ದರೆ ಅವರ ಸ್ಥಿತಿ ಏನಾಗುತ್ತಿತ್ತು?’’ ಇದಕ್ಕೆ ಸ್ಪಷ್ಟ ಉತ್ತರ ಕೊಡುವಲ್ಲಿ ಎಲ್ಲ ಗೆಳೆಯರೂ ಹಿಂಜರಿದಿದ್ದರು. ನಾನೇ ಉತ್ತರಿಸಬೇಕಾಯಿತು ‘‘ಹಿಂದೂಗಳು ಶೇ. 20 ರಷ್ಟಿದ್ದರೆ ಅವರ ಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು.’’.

  ಯಾಕೆಂದರೆ ಈ ವಿಶ್ವದಲ್ಲಿ ಎರಡೇ ಸಮುದಾಯ ಇರುವುದು. ಒಂದು ಬಹುಸಂಖ್ಯಾತ. ಇನ್ನೊಂದು ಅಲ್ಪಸಂಖ್ಯಾತ. ಒಂದು ಪ್ರಬಲ ಸಮುದಾಯ. ಇನ್ನೊಂದು ದುರ್ಬಲ ಸಮುದಾಯ. ಅಲ್ಪಸಂಖ್ಯಾತರು ಎಂದಾಕ್ಷಣ ನಾವು ಅವರನ್ನು ಮುಸ್ಲಿಮರು, ಕ್ರಿಶ್ಚಿಯನ್ನರು ಎಂಬ ಕಣ್ಣಿನಲ್ಲಿ ನೋಡಬೇಕಾಗಿಲ್ಲ. ಪಾಕಿಸ್ತಾನದ ಹಿಂದೂಗಳು, ಶ್ರೀಲಂಕಾದ ತಮಿಳರು, ಮ್ಯಾನ್ಮಾರ್‌ನ ಮುಸ್ಲಿಮರು ಎಲ್ಲರೂ ಅಲ್ಪಸಂಖ್ಯಾತರೇ. ಭಾರತದ ಅಲ್ಪಸಂಖ್ಯಾತರನ್ನು ಕೆಂಗಣ್ಣಿನಿಂದ ನೋಡುವವರಿಗೆ, ಪಾಕಿಸ್ತಾನದ ಅಲ್ಪಸಂಖ್ಯಾತರ ಕುರಿತಂತೆ ಮಾತನಾಡುವ ನೈತಿಕತೆಯಿರುವುದಿಲ್ಲ. ಅಲ್ಪಸಂಖ್ಯಾತರೆಂದರೆ ಯಾವುದೇ ಒಂದು ನಿರ್ದಿಷ್ಟ ಧರ್ಮವಲ್ಲ. ಅವೆಲ್ಲವನ್ನೂ ಮೀರಿದ ಒಂದು ದುರ್ಬಲ ಸಮುದಾಯ. ಅವರೆಲ್ಲಿದ್ದರೂ, ಹೇಗಿದ್ದರೂ ಅವರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ. ಇದು ನನ್ನ ಮಾತಲ್ಲ. ಮಹಾತ್ಮಗಾಂಧೀಜಿಯ ಮಾತು.

Wednesday, April 3, 2013

ಹಸಿದವರ ಕಣ್ಣುಗಳಲ್ಲಿ ಮಸೀದಿ

ಹಸಿದ ನಾಯಿಗೆ
ತುತ್ತು ಉಣಿಸಿದಾತನಿಗೆ
ನೀನು ನಿನ್ನ ಸ್ವರ್ಗವನ್ನಿತ್ತೆ
ಎಂಬ ಸುದ್ದಿ ಕೇಳಿದಂದಿನಿಂದ
 
ಹಸಿದವರ  ಕಣ್ಣುಗಳಲ್ಲಿ
ನನ್ನ ಮಸೀದಿಯನ್ನು
ಕಾಣುತ್ತಿದ್ದೇನೆ....ದೊರೆಯೇ...
2
ಮದುಮಗನನ್ನು ಮೀಯಿಸುತ್ತಿದ್ದಾರೆ...
ಕರ್ಪೂರ ಪರಿಮಳ ತೊಯ್ದಿದೆ...
ಶೃಂಗರಿಸಿದ ಮಂಚ ಕಾಯುತ್ತಿದೆ...
ನನ್ನ ದೊರೆಯೇ....
ಮಸೀದಿಯ ಅಂಗಳದಲ್ಲಿ
ತಬ್ಬಿಕೊಳ್ಳುದಕ್ಕೆಂದು
ತೋಳು ಚಾಚಿ
ಸೆರಗು ಹಾಸಿ ನಿರೀಕ್ಷಿಸುತ್ತಿದ್ದಾಳೆ
ಮದುಮಗಳು....
ಅವಳೆದೆಯ ದಾಹವ ಕಂಡು
ಮದುಮಗ ಕಂಪಿಸುತ್ತಿದ್ದಾನೆ...
3
ನನ್ನ ಹಣೆಯ ಸ್ಪರ್ಶಕ್ಕೆ
ಚಾಪೆ ಸವೆದು ಹೋಗಿದೆ
ದೊರೆಯೇ...
ಚಾಪೆಯಂತೂ ಸ್ವರ್ಗ ಸೇರಿತು...
ನನ್ನ ಹಣೆಯ
ಒಂದು ಗೆರೆಯೂ ಸವೆದಿಲ್ಲ...
ಸವೆಯದವನಿಗೆ ನಿನ್ನ
ಸ್ವರ್ಗವಿಲ್ಲ...
4
ಎಣಿಸಿದ ರಭಸಕ್ಕೆ
ಜಪಮಾಲೆ ಹರಿದು
ಚೆಲ್ಲಾಪಿಲ್ಲಿಯಾದವು ದೊರೆಯೇ...
ಇದೀಗ ಈ ರಾತ್ರಿ
ನೀನು ಭಿಕ್ಷೆಯಾಗಿ
ನೀಡಿದ ನಾಲ್ಕು ಪದಗಳನ್ನೇ
ಜಪ ಮಣಿಗಳಂತೆ
ಎಣಿಸುತ್ತಿದ್ದೇನೆ
5
ಪಂಡಿತರೆಲ್ಲ ನಿಟ್ಟುಸಿರಿಟ್ಟು
ಹೇಳಿದರು....
ಧರ್ಮವನ್ನು ನಾವೆಲ್ಲ ಸೇರಿ
ಉಳಿಸಬೇಕು...
ತನ್ನನ್ನು ಉಳಿಸಿಕೊಳ್ಳಲಾಗದ ಧರ್ಮ
ಸಾಯಲಿ ಬಿಡಿ....
ಇದೋ ಪಾಳು ಬಿದ್ದ ಧರ್ಮದ
ಬಲೆ ಹರಿದು ಬಂದಿದ್ದೇನೆ
ನೀನೆ ನನ್ನನ್ನು ಉಳಿಸಬೇಕು ದೊರೆಯೇ....

Tuesday, April 2, 2013

ಮುಳುಗಿದರೂ ಮುಗಿಯಲಾರದ್ದೂ...

 ಹೂವಿನ ಎಸಳೊಂದ ಕಿತ್ತು
ಇದರ ಪರಿಮಳ ನೋಡು
ಎಂದು ಅಕ್ಕಸಾಲಿಗನಿಗೆ ಕೊಟ್ಟೆ...
ನನ್ನ ದೊರೆಯೇ....
ಅವನದನ್ನು ಕಲ್ಲಿಗೆ ತಿಕ್ಕಿ
ಮೂಸಿ ನೋಡಿ ಹೇಳಿದ...
ಇದರಲ್ಲಿ ಅಂತಹದೇನು ಇಲ್ಲ....
2
ರೊಟ್ಟಿ ಮಾಡಲು
ಬರೋದಿಲ್ಲ ಎಂದು ಹೇಳುವಂತಿಲ್ಲ...
ನಾವು ಮಾಡಿದ
ರೊಟ್ಟಿಯನ್ನೇ ತಿನ್ನಬೇಕಾದ
ದಿನವೊಂದಿದೆ
ನೆನಪಿಡು
3
ಸ್ವತಹ ಭಿಕ್ಷುಕರಾದ
ಮನುಷ್ಯರ ಮುಂದೆ
ಕೈ ಚಾಚೂದು ಬೇಡವೆಂದು
ನಿನ್ನೆಡೆಗೆ ಕೈ ಚಾಚಿದೆ
ನನ್ನ ದೊರೆಯೇ...
4
ಕಾಣದ ದೇವರಿಗೆ
ಬಾಗೂದಿಲ್ಲವೆಂದ,
ನನ್ನ ದೊರೆಯೇ...
ನಾನೋ ಕಾಣುವ
ಮನುಷ್ಯರಿಗೆ ಬಾಗೂದಿಲ್ಲ
ಎಂದೇ, ಅಷ್ಟೇ....
5
ಅವರು ಹೇಳುತ್ತಾರೆ
ನಿನಗೆ ಅಂಜ ಬೇಕೆಂದು
ನನ್ನ ದೊರೆಯೇ,
ನಾನು ಕಣ್ಣು ತೆರೆದು ನೋಡುತ್ತಿದ್ದೇನೆ...
ತಾಯೊಬ್ಬಳು ಬೆತ್ತ ಹಿಡಿದು ನಿಂತಿದ್ದರೆ
ಆಕೆಯ ಮುಂದಿರುವ ಮಗು ಕಿಲ ಕಿಲ ನಗುತ್ತಿತ್ತು...
6
ನೀನು ಅರ್ಥವಾಗುತ್ತಿಲ್ಲವೆಂದು
ಅವರು ನಿನ್ನನ್ನು ನಂಬುತ್ತಿದ್ದಾರೆ
ನನ್ನ ದೊರೆಯೇ,
ನಿನ್ನೊಬ್ಬನನ್ನು ಬಿಟ್ಟು
ಈ ಜಗದಲ್ಲಿ ನನಗೆ ಯಾವುದೂ ಅರ್ಥವಾಗುತ್ತಿಲ್ಲ !
7
ನೀನೇಕೆ ಮಸೀದಿಗೆ
ಬರುತ್ತಿಲ್ಲ, ಎಂದು ಅವರು ಕೇಳುತ್ತಾರೆ...
ನನ್ನ ದೊರೆಯೇ,
ಭವ್ಯ ಮಸೀದಿಯ ಅಮೃತ ಶಿಲೆಯ
ನೆಲ ಹಾಸಿನಲ್ಲಿ
ನನಗೆ ನಿನ್ನ ಬದಲು
ನನ್ನ ಪ್ರತಿಬಿಂಬವೇ ಕಾಣುತ್ತದೆ
8
ನಮಾಜಿಗೆ ನಿಂತ ನನ್ನನ್ನು
ಕೇಳಿದರು, ಶುದ್ಧಿಯಾಗಿದ್ದೀಯ?
ಇಲ್ಲ ಎಂದೇ...
ಅವರೆಲ್ಲ ನನ್ನ ಹೊರ ದಬ್ಬಿದರು...
ನನ್ನ ದೊರೆಯೇ
ಅವರಿಗೇನು ಗೊತ್ತು?
ನನ್ನ ಅಶುದ್ಧಿ ಏಳು ಕಡಲನ್ನು
ಮುಳುಗಿದರೂ
ಮುಗಿಯಲಾರದ್ದೂ ಎಂದು...
ಶುದ್ಧಿಯಾಗಲೆಂದೇ ನಾನು
ನಿನ್ನ ಮುಂದೆ ನಿಂತಿದ್ದೆ ಎಂದು?
9
ದೇವರನ್ನು ನಂಬೋದು
ಎಂದರೆ ಏನು?
ಅವನು ಕೇಳಿದ...
ಏನು ಹೇಳಲಿ ನನ್ನ ದೊರೆಯೇ...
ನನ್ನನ್ನು ನಾನು ನಂಬೋದು
ಎಂದರೆ ಏನು?
10
ದೇವರನ್ನು
ಹೇಗೆ ಆರಾಧಿಸಬೇಕು?
ಅವನು ಕೇಳಿದ...
ನೀನು ಅವನ ಆರಾಧಿಸುತ್ತಿರೂದು
ನಿನಗೇ ತಿಳಿಯದಿರಬೇಕು
ಹಾಗೆ...ಎಂದೆ...
11
ಗೋರಿಯ ಮೇಲೆ ಕುಳಿತು
ರೊಟ್ಟಿ ತಿನ್ನುತ್ತಿದ್ದೀಯ ಪಾಪಿ?
ಅವರು ಕೇಳಿದರು...
ನನ್ನ ದೊರೆಯೇ
ಅವರಿಗೇನು ಗೊತ್ತು?
ಗೋರಿಯೊಳಗಿರುವವರೂ
ತಮ್ಮ ತಮ್ಮ ರೊಟ್ಟಿಗಳನ್ನು
ತಿನ್ನುವ ಹೊತ್ತು ಇದೆಂದು?