Tuesday, February 26, 2013

ಅಮ್ಮ ಹಚ್ಚಿದ ಒಲೆ

ಅಮ್ಮನ ಕೈಯಲ್ಲಿ ನಾಕು
ಪುರುಳೆಗಳಿದ್ದರೆ ಸಾಕು
ಒಲೆಯಲ್ಲಿ ಬೆಂಕಿ ಧಗ್ಗೆನ್ನುತ್ತದೆ....
ಅದ ನೋಡಿ ನಾನು
ಒಲೆಗೆ ಬೆಂಕಿ ಹಚ್ಚೋದು
ಬಲು ಸುಲಭ ಎಂದು ಕೊಂಡಿದ್ದೆ....

ಒಂದಿಷ್ಟು ಒಣ ಕಡ್ಡಿಗಳ

ಸೇರಿಸಿ ಸೀಮೆ ಎಣ್ಣೆ ಸುರಿದರೆ
ಬೆಂಕಿ ಭುಗ್ಗ್ ಎಂದು
ಅಷ್ಟೇ ಬೇಗ ತಣ್ಣಗಾಗುತ್ತಿತ್ತು...
ಆಮೇಲೆ ಮೈ, ಕೈ ಮಸಿ...
ಕಣ್ಣಲ್ಲಿ ನೀರು...ಹೊಗೆ ಧಗೆ
ಒಲೆಗೆ ಬೆಂಕಿ ಹಚ್ಹ್ಚುದೆಂದರೆ

ಅಮ್ಮ ಬಂದು ನನ್ನ ಪಕ್ಕಕ್ಕೆ ಸರಿಸಿ
ಹೊಸದೇ ಬೂದಿ ಕೆದಕಿ..
ಹನಿ ಸೀಮೆ ಎಣ್ಣೆ ಸುರಿದು
ನಾಲ್ಕು ಕಡ್ಡಿಯ ಜೋಡಿಸಿ
ಊದುಗೊಳವೆಯ  ಕೊಳಲಿನಂತೆ
ನುಡಿಸಿ, ಹೊಗೆಯ ಹಾವಿನಂತೆ
ಆಡಿಸಿ ಬೆಂಕಿ ಅರಳಿಸುವ ಪರಿ
ಅಮ್ಮನಿಗಷ್ಟೇ ಸಿದ್ದಿಸಿದ ಸಿದ್ಧಿ

ಅಮ್ಮನಿಲ್ಲದ ಈ  ದಿನ...
ಇದ್ದ ಎಲ್ಲ ಟೊಮೇಟೊ...ತೆಂಗಿನ ತುರಿ..
ಉಪ್ಪು, ಹುಳಿ, ಖಾರ ಸುರಿದರೂ..
ಸಾರಿಗೆ ಅಮ್ಮನ ಪರಿಮಳವಿಲ್ಲ,
ರುಚಿಯಿಲ್ಲ....!

ಅಮ್ಮನಂತೆ ಒಲೆಯ ಬೂದಿಯನ್ನು ಬಗೆಯಲು
ಕಡ್ಡಿಗೆ ಕಡ್ಡಿ ಜೋಡಿಸಿ ಒಲೆಯನ್ನು ಬೆಳಗಲು
ನಮಗೆ ಗೊತ್ತಿರಲಿಲ್ಲ....

ಅಮ್ಮ ಹಚ್ಚಿದ ಒಲೆ
ನನ್ನ ಎದೆಯಲ್ಲಿ ಧಗಿಸುತ್ತಿ
ದೆ
ಕಣ್ಣ ಕೊಡದಲ್ಲಿ ನೀರು
ಕುದಿಯುತ್ತಿ
ದೆ


ಇಲ್ಲಿ ಬಳಸಿಕೊಂಡಿರುವ ಚಿತ್ರ ಅನಾಮಿಕ ಕಲಾವಿದನದ್ದು. ನನ್ನ ಬರಹದ ತೂಕ ಹೆಚ್ಚಿಸಿದ ಆ ಕಲಾವಿದರಿಗೆ ಹೃದಯ ತುಂಬಿದ ಕೃತಜ್ಞತೆಗಳು

Saturday, February 23, 2013

ಕೈ ಪೋ ಚೆ: ಮಾನವೀಯ ಆಕಾಶದಲ್ಲಿ ಹಾರಿ ಬಿಟ್ಟ ಗಾಳಿಪಟ

ಸ್ನೇಹವೆನ್ನುವ ಅಮೃತ ಪದವನ್ನು ಯಾವ ಭೂಕಂಪಕ್ಕೂ ಅಲುಗಾಡಿಸಲಾಗದು. ಯಾವ ರಾಜಕೀಯದಿಂದಲೂ ಅದು ಮಲಿನವಾಗದು. ಎಂತಹ ದುರಂತವನ್ನು ಕೂಡ ಸುಖಾಂತ್ಯಗೊಳಿಸುವ ಶಕ್ತಿ ಅದಕ್ಕಿದೆ. ‘ಕೈ ಪೋ ಚೆ’ ಮೂರು ಯುವಕರ ಬೆಸೆದ ಮನಸ್ಸುಗಳ ಕತೆ. ಭೂಕಂಪಕ್ಕೂ ಜಗ್ಗದ ಮೂರು ಯುವಕರ ಕನಸುಗಳ ಕತೆ. ದಟ್ಟವಾದ ವಿಷಾದ, ಹಾಗೆಯೇ ಅಧಮ್ಯವಾದ ಆಶಾವಾದದೊಂದಿಗೆ ಮುಗಿಯುವ ಈ ಚಿತ್ರ, ಗೋದ್ಱೋತ್ತರ ಗಲಭೆಯ ಬಳಿಕದ ಗುಜರಾತ್‌ನ ಕುರಿತಂತೆ ಹೊಸ ಭರವಸೆಯನ್ನು ಬಿತ್ತುವ ಪ್ರಯತ್ನವನ್ನು ಮಾಡುತ್ತದೆ. 

ಚಿತ್ರ ಗೋವಿಂದ್, ಇಶಾನ್ ಮತ್ತು ಒಮಿ ಎನ್ನುವ ಸಂಪ್ರದಾಯಸ್ಥ ಗುಜರಾಥಿ ಕುಟುಂಬದ ಮೂವರು ಸ್ನೇಹಿತರ ಕತೆ ಅಥವಾ ಮೂವರು ಸೋದರರ ಕತೆ ಎಂದರೂ ನಡೆಯುತ್ತದೆ. ಇವರಲ್ಲಿ ಗೋವಿಂದ್ ಒಂದಿಷ್ಟು ಜವಾಬ್ದಾರಿಯನ್ನು ಹೊಂದಿದ್ದು, ಏನನ್ನಾದರೂ ಮಾಡಬೇಕು ಎನ್ನುವ ತುಡಿತ, ಛಲ ಇರುವ ತರುಣ. ಇಶಾನ್ ತನ್ನ ಬದುಕನ್ನು ಕ್ರಿಕೆಟ್‌ಗೆ ಒಪ್ಪಿಸಿ, ಅದರಲ್ಲೇ ದಿನ ನಿತ್ಯದ ಬದುಕನ್ನು ಕಾಣುವಾತ. ಒಮಿಗೆ ನಿರ್ದಿಷ್ಟ ಇಷ್ಟ ಗುರಿಗಳೇನೂ ಇಲ್ಲ. ಇಬ್ಬರು ಸ್ನೇಹಿತರೇ ಆತನ ಗುರಿ. ಜೊತೆಗೆ ರಾಜಕೀಯಕ್ಕಿಳಿಯಲು ಆತನ ಮಾವ ಒತ್ತಾಯಿಸುತ್ತಿದ್ದರೆ, ಈ ಗೆಳೆಯರ ಮೂಲಕ ಅದರಿಂದ ಪಾರಾಗುವ ದಾರಿಯನ್ನು ಹುಡುಕುವಾತ. ಆದರೆ ಕೊನೆಯಲ್ಲಿ ಈ ಗೆಳೆಯರ ಕನಸುಗಳಿಗಾಗಿ ಆತ ತನ್ನನ್ನು ತಾನು ರಾಜಕೀಯಕ್ಕೆ ಬಲಿ ಒಪ್ಪಿಸಬೇಕಾಗುತ್ತದೆ. ಗೋವಿಂದ್ ಸ್ಪೋರ್ಟ್ಸ್‌ಗೆ ಸಂಬಂಧಪಟ್ಟ ಅಂಗಡಿಯನ್ನು ಇಡಲು ಮುಂದಾಗುತ್ತಾನೆ. ಇಶಾನ್ ಆ ಕನಸುಗಳಿಗೆ ರೆಕ್ಕೆಯಾಗುತ್ತಾನೆ. ಹಣ ಹೊಂದಿಸುವ ಕೆಲಸವನ್ನು ಒಮಿ ಮಾಡುತ್ತಾನೆ. ಮುಂದೆ ಈ ಹಣದ ಋಣಕ್ಕಾಗಿಯೇ ಆತ ಮಾವನ ಜೊತೆಗೆ ರಾಜಕೀಯ ಕೆಲಸಕ್ಕೆ ಇಳಿಯಬೇಕಾಗುತ್ತದೆ. ಹೀಗೆ ಇವರ ಸ್ಪೋರ್ಟ್ಸ್ ಉದ್ಯಮಕ್ಕೆ ರೆಕ್ಕೆ ಪುಕ್ಕ ಬೆಳೆಯುತ್ತಿರುವ ಸಂದರ್ಭದಲ್ಲೇ ಅವರ ಬದುಕಲ್ಲಿ ಒಬ್ಬ ಮುಸ್ಲಿಮ್ ಬಾಲಕ ಪ್ರವೇಶ ಮಾಡುತ್ತಾನೆ. ಈತನ ಪ್ರವೇಶವೇ ಇಡೀ ಚಿತ್ರದ ಗತಿಯನ್ನು ಬದಲಿಸುತ್ತದೆ. ಈ ಬಾಲಕನ ಹೆಸರು ಅಲಿ. ಉಂಡಾಡಿ ಹುಡುಗ. ಈತ ಹುಟ್ಟು ಕ್ರಿಕೆಟ್ ಆಟಗಾರ. ಅದು ಅವನ ರಕ್ತದಲ್ಲೇ ಬಂದಿರುವುದು. ಒಂದು ಸಂದರ್ಭದಲ್ಲಿ ಇಶಾನ್‌ನ ಕಣ್ಣಿಗೆ ಈತ ಬೀಳುತ್ತಾನೆ. ಇಶಾನ್‌ನ ಎಲ್ಲ ಬೌಲಿಗೂ ಈತ ಸಿಕ್ಸರ್ ಬಾರಿಸುತ್ತಾನೆ. ಇಶಾನ್ ಈ ಹುಡುಗನ ಕುರಿತಂತೆ ಕುತೂಹಲ ತಾಳುತ್ತಾನೆ. ಅಲಿಯನ್ನು ಇನ್ನಷ್ಟು ತರಬೇತಿಗೊಳಿಸುವ ಜವಾಬ್ದಾರಿಯನ್ನು ಇಶಾನ್ ವಹಿಸಿಕೊಳ್ಳುತ್ತಾನೆ. ಆತನಿಗೆ ಕ್ರಿಕೆಟ್ ಕಲಿಸುವ ಇಶಾನ್‌ನ ಉತ್ಸಾಹ, ಮುಂದೆ ಹಲವು ಸಂಘರ್ಷಗಳಿಗೆ ಕಾರಣವಾಗುತ್ತದೆ. ಸಮಾಜದೊಳಗಿನ ರಾಜಕೀಯ, ಧರ್ಮ, ಭೇದ ಭಾವಗಳು ಒಮ್ಮಿಂದೊಮ್ಮೆಗೆ ಅವನಿಗೆ ಮುಖಾಮುಖಿಯಾ ಲಾರಂಭಿಸುತ್ತವೆ. ಭೂಕಂಪದಲ್ಲಿ ಅಲುಗಾಡದ ಮೂವರ ಸ್ನೇಹ ಗೋದ್ರ ಗಲಭೆಯಲ್ಲಿ ತತ್ತರಿಸುತ್ತದೆ. ಒಮಿಯ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹಿಂದು ಮುಸ್ಲಿಮ್ ದಂಗೆಯಾಗುವಾಗ ಅಲಿಯ ರಕ್ಷಣೆಗೆ ಇಶಾನ್ ಮುಂದಾಗುತ್ತಾನೆ. ಅದುವೇ ಕಟ್ಟಕಡೆಗೆ ಸಿನೆಮಾದ ಕ್ಲೈಮಾಕ್ಸ್‌ಗೆ ತಿರುವನ್ನು ನೀಡುತ್ತದೆ.

ಅಭಿಷೇಕ್ ಕಪೂರ್ ಎನ್ನುವ ಹೃದಯವಂತಿಕೆಯ ನಿರ್ದೇಶಕನಿಂದ ಮಾತ್ರ ಇಂತಹದೊಂದು ಚಿತ್ರ ಸಾಧ್ಯವೇನೋ ಎಂಬಷ್ಟು ಹೃದಯಕ್ಕೆ ಮುಟ್ಟುತ್ತದೆ ‘ಕೈ ಪೋ ಚೆ’. ಚೇತನ್ ಭಗತ್ ಅವರ ‘3 ಮಿಸ್ಟೇಕ್ಸ್ ಆಫ್ ಮೈ ಲೈಫ್’ ಕಾದಂಬರಿಯನ್ನು ಆಧರಿಸಿ ತೆಗೆದ ಚಿತ್ರವಾದರೂ, ಕಾದಂಬರಿಗಿಂತಲೂ ಭಿನ್ನವಾಗಿ, ಸಿನೆಮಾವಾಗಿಯೇ ನಮ್ಮನ್ನು ತಲುಪುತ್ತದೆ. ಚಿತ್ರದ ನಿರೂಪಣೆ ಮತ್ತು ಕ್ಲೈಮಾಕ್ಸ್ ಮನ ಮುಟ್ಟುವಂತಿದೆ. ಗೋವಿಂದ್ ಮತ್ತು ವಿದ್ಯಾ ನಡುವಿನ ಪ್ರೇಮಪ್ರಕರಣವನ್ನು ನವಿರಾಗಿ, ಎಲ್ಲೂ ಅತಿಯಾಗದಂತೆ ಕಟ್ಟಿಕೊಡುತ್ತಾರೆ ನಿರ್ದೇಶಕರು. ವಿದ್ಯಾ ಪಾತ್ರದಲ್ಲಿ ಅಮೃತಾ ಚುರುಕಾಗಿ ಕಾಣಿಸಿಕೊಳುತ್ತಾರೆ. ಸಣ್ಣ ಪಾತ್ರವಾದರೂ ತಂಗಿಯಾಗಿ, ಪ್ರೇಮಿಯಾಗಿ ಎರಡರಲ್ಲೂ ಅಮೃತಾ ಪುರಿ ಸೈ ಅನ್ನಿಸಿಕೊಳ್ಳುತ್ತಾರೆ.

 ಮೂವರು ಸ್ನೇಹಿತರ ಪಾತ್ರಕ್ಕೆ ರಾಜ್‌ಕುಮಾರ್, ಸುಶಾಂತ್ ಸಿಂಗ್ ರಾಥೋಡ್ ಮತ್ತು ಅಮಿತ್ ಸೇದ್ ಜೀವ ತುಂಬಿದ್ದಾರೆ. ಯಾವುದೇ ಹೀರೋಗಳಿಲ್ಲದ ಈ ಚಿತ್ರದಲ್ಲಿ ಪಾತ್ರಗಳಿಗೆ ಈ ಮೂವರು ತಮ್ಮನ್ನು ಒಪ್ಪಿಸಿಕೊಂಡ ಪರಿಯೇ ಚಿತ್ರದ ಯಶಸ್ವಿಗೆ ಬಹುದೊಡ್ಡ ಕೊಡುಗೆ. ರಾಥೋಡ್ ಟಿವಿ ನಟನಾದರೂ ಅನುಭವಿ ನಟನಾಗಿ ಮನಗೆಲ್ಲುತ್ತಾರೆ. ಅಮಿತ್ ತ್ರಿವೇದಿಯವರ ಸಂಗೀತ ನಮ್ಮ ಆತ್ಮವನ್ನು ಮುಟ್ಟುತ್ತದೆ. ಚಿತ್ರದ ಹರಿಯುವಿಕೆಯಲ್ಲಿ ಸಂಗೀತದ ಪಾತ್ರ ದೊಡ್ಡದು. ಮನುಷ್ಯ ಸಂಬಂಧ, ಕಣ್ಣೀರು, ನಗು ಎಲ್ಲವನ್ನು ಜೊತೆ ಜೊತೆಯಾಗಿ ಕಟ್ಟಿಕೊಡುವ ಕೈ ಪೋ ಚೆ ಅಭಿಷೇಕ್ ಕಪೂರ್ ಮಾನವೀಯ ಆಕಾಶದಲ್ಲಿ ಹಾರಿ ಬಿಟ್ಟ ಗಾಳಿ ಪಟ. ಹೃದಯವಂತರ ಕನಸುಗಳನ್ನು, ಖುಷಿ, ಸಂತೋಷಗಳನ್ನು ತನ್ನ ಬಣ್ಣಗಳಲ್ಲಿ, ರೆಕ್ಕೆಗಳಲ್ಲಿ ಕಟ್ಟಿಕೊಂಡ ಈ ಗಾಳಿಪಟವನ್ನು ಹಾರಿಸಿರುವ ಕಪೂರ್ ಉಳಿದ ನಿರ್ದೇಶಕರೆಡೆಗೆ ಯಶಸ್ಸಿನ ನಗು ನಕ್ಕು ‘ಕೈ ಪೋ ಚೆ’ ಎಂದು ಸಂತೋಷದಿಂದ ಚೀರುವುದಕ್ಕೆ ಅಡ್ಡಿಯಿಲ್ಲ.

Wednesday, February 20, 2013

ಹುಷಾರು!

 ನೋಡಿ...ಅವನೊಟ್ಟಿಗೆ
ತುಂಬಾ ಬೆರೀ ಬೇಡಿ
ಅವನಷ್ಟು ಸರಿ ಇಲ್ಲ....

ಇತ್ತೀಚಿಗೆ ಎಲ್ಲರ ನಿಷ್ಟುರ
ಕಟ್ಕೋತಿದ್ದಾನೆ...
ನಿಮ್ಮ ಹೆಸರು ಹಾಳಾಗಬಹುದು...


ಸರ್ಕಾರದ ವಿರುದ್ಧ ಬಾಯಿಗೆ
ಬಂದದ್ದೆಲ್ಲ ಬರೀತಾನೆ....
ರಾಜ್ಯೋತ್ಸವ ಪ್ರಶಸ್ತಿಗೆ
ಟ್ರೈ ಮಾಡ್ತಾ ಇದ್ದೀರಲ್ಲ...?
ಸ್ವಲ್ಪ ಜಾಗ್ರತೆ....

ಸಾಧ್ಯವಾದರೆ
ನಿಮ್ಮ ಫೋನ್ ನಂಬರ್
ಚೇಂಜ್ ಮಾಡ್ಬಿಡಿ...
ಹಾಗೆಲ್ಲ ಮನೆಗೆ ಸೇರ್ಸೋದು
ಒಳ್ಳೇದಲ್ಲ...
ಮನೆಗೆ ಬಂದ್ರೆ ಇಲ್ಲ ಎಂದ್ಬಿಡಿ...
ಅವನೀಗ ಮೊದಲಿನ ಹಾಗಿಲ್ಲ..
ಯಾರ್ಯಾರದೋ ಸ್ನೇಹ ಇಟ್ಕೊಂಡಿದ್ದಾನೆ...

ಮೊದಲೆಲ್ಲ ಕತೆ ಕವಿತೆ
ಬರಕೊಂಡು ಚೆನ್ನಾಗಿದ್ದ...
ನನಗೂ ಗೊತ್ತು
ಇತ್ತೀಚಿಗೆ ಅವನ ತಲೆ ಕೆಟ್ಟಿದೆ..
ನೀವು ಮಾರ್ಯದಸ್ಥರು...
ಹೆಣ್ಣು ಮಕ್ಕಳಿದ್ದಾರೆ...
ನಿಮಗೆ ಸಮಾಜದಲ್ಲಿ ಒಂದು ಗೌರವವಿದೆ...
ಸ್ಟೇಟಸ್ ಇದೆ...
ಅವನಿಗೆ ಕಳ್ಕೋಳ್ಳಿಕ್ಕಾದ್ರು ಏನಿದೆ?
ನಿಮ್ಮದು ಸರ್ಕಾರಿ ಕೆಲಸ ಬೇರೆ?

ಯಾರಿಗೆ ಗೊತ್ತು?
ಯಾವ ಹುತ್ತದಲ್ಲಿ ಯಾವ
ಹಾವು ಇದೆ ಅಂತ ?
ನೀವಂತೂ ನಿಮ್ಮ
ಜಾಗೃತೆಯಲ್ಲಿರಿ...

ಮೊನ್ನೆ ಗೊತ್ತಲ್ಲ...
ಒಬ್ಬನ್ನ ಪೊಲೀಸರು
ಆರೆಸ್ಟ್ ಮಾಡಿರೋದು...
ಉಗ್ರರ ಜೊತೆಗೆ ನಂಟನ್ತೆ
ಇದ್ರೂ ಇರಬಹುದು
ಈಗ ಯಾರನ್ನೂ ನಂಬಕ್ಕಾಗಲ್ಲ...

ಯಾವುದಕ್ಕೂ
ನಿಮ್ಮ ಹುಶಾರಲ್ಲಿ ನೀವಿರೀ....
ಅವನಷ್ಟು ಸರಿ ಇಲ್ಲ...
ಕತೆ ಕವಿತೆ ಬರೀತಾ ಇರೋವಾಗ
ಅವನು ಸರಿಯೇ ಇದ್ದ...
ಆದರೆ ಈಗ ಅವನು ಮೊದಲಿನಂತಿಲ್ಲ...
ಗೊತ್ತಲ್ಲ...?
ಈಗ ಅವನು ಕತೆ ಕವಿತೆ ಬರೀತಾ ಇಲ್ಲ!

ಕಾರ್ತಿಕದ ಕತ್ತಲಲಿ ಆಕಾಶ ದೀಪ

ವಿಜಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಕೊ ಚೆನ್ನಬಸಪ್ಪ ತನ್ನ ಮಾತಿನಿಂದ ನೆರೆದ ಜನರನ್ನು ದಂಗು ಬಡಿಸಿದ್ದಾರೆ. ಈ ಪ್ರಾಯದಲ್ಲೂ ಅವರ ಸತ್ಯದ ಕುರಿತ ಬದ್ಧತೆ ಮುಕ್ಕಾಗಿಲ್ಲ. ನಿಷ್ಟುರತೆಯ ಅಲಗು ಮೊಂಡಾಗಿಲ್ಲ. ಅವರ ಮಾತಿನ ಆಯ್ದ ಭಾಗಗಳು ಇಲ್ಲಿವೆ.

ಈ ದೇಶ ಈಗಾಗಲೇ ಸಹಿಸಲಾರದಷ್ಟು ಹದಗೆಟ್ಟು, ನೈತಿಕ ದೃಷ್ಟಿಯಿಂದ ಅಧಃ ಪಾತಾಳಕ್ಕೆ ಕುಸಿದಿದೆ. ಎಷ್ಟೇ ಆರ್ಥಿಕಾಭಿವೃದ್ಧಿ ಆಗಿದ್ದರೂ ಅದು ನೈತಿಕ ಅಧಃಪತನದ ಕೊರತೆಯನ್ನು ತುಂಬಲಾರದು. ಈ ಅವನತಿಗೆ ಎರಡು ಘೋರ ಅಪಾಯಗಳಿವೆ. ಒಂದು ಜಾತೀಯತೆ, ಇನ್ನೊಂದು ಭ್ರಷ್ಟಾಚಾರ. ಇವುಗಳ ಅಪಾಯದಿಂದ ಪಾರಾಗದೆ ಈ ದೇಶ ಉಳಿಯಲಾರದು. ಈ ಎರಡೂ ಅಪಾಯಗಳು ಘೋರ ವಿಷ ಸರ್ಪಗಳಿದ್ದಂತೆ. ಒಂದು ನಾಗರಹಾವು ಇನ್ನೊಂದು ಉರಿಮಂಡಲ. ನಾಗರಹಾವು ಭ್ರಷ್ಟಾಚಾರ, ಜಾತೀಯತೆ- ಉರಿಮಂಡಲ. ಇವುಗಳಲ್ಲಿ ಯಾವುದು ಹೆಚ್ಚು ಅಪಾಯಕಾರಿ? ಜಾತೀಯತೆ ಉರಿಮಂಡಲದ ವಿಷ ಹೆಚ್ಚು ಅಪಾಯಕಾರಿ. ಹಾಗೆಂದು ವಿಷ ವೈದ್ಯ ತಜ್ಞರು ಹೇಳುತ್ತಾರೆ. ಈ ಜಾತೀಯತೆಯ ವಿಷ ಸರ್ಪಕ್ಕೆ ವೊದಲು ಬಲಿಯಾದವರು ಬೌದ್ಧರು.
 

 ಚಾತುರ್ವರ್ಣ ಪದ್ಧತಿಯಲ್ಲಿ ಸಂಸ್ಥಾಪಕರೂ, ಸಮಾಜದಲ್ಲಿ ಮೇಲು-ಕೀಳುಗಳ ಪ್ರತಿಪಾದಕರೂ ಆದ ಸನಾತನಿಗಳು ಬೌದ್ಧರನ್ನು ದಯೆ, ದಾಕ್ಷಿಣ್ಯ, ಕರುಣೆ, ಮಾನವೀಯತೆ ... ಕಿಂಚಿತ್ತೂ ಇಲ್ಲದೆ ಕಗ್ಗೊಲೆ ಮಾಡಿ ಈ ದೇಶದಿಂದಲೆ ಅವರನ್ನು ಓಡಿಸಿದರು. ಓಡಿಸಲಾಗದೆ ಇಲ್ಲಿ ಉಳಿದಿದ್ದ ಸಹಸ್ರಾರು ಬೌದ್ಧ ಭಿಕ್ಷುಗಳನ್ನು, ಸನ್ಯಾಸಿಗಳನ್ನು ಗುಹೆಗಳಲ್ಲಿದ್ದು ಧ್ಯಾನ, ತಪಸ್ಸು, ಧರ್ಮ ಸಾಧನೆ ಮಾಡುತ್ತಿದ್ದವರನ್ನು ಸಜೀವ ದಹನ ಮಾಡಿದರು.

ಅಜಂತಾ ಭೌದ್ಧ ವಿಹಾರಗಳಲ್ಲಿ ಧ್ಯಾನಮಗ್ನರಾಗಿದ್ದ ಬೌದ್ಧ ಸನ್ಯಾಸಿಗಳನ್ನು ಸಜೀವ ದಹನ ಮಾಡಿ, ಗುಹೆಯ ಬಾಗಿಲಿಗೆ ಬಂಡೆ ಜಡಿದು, ಕಳ್ಳೆಯನ್ನು ಮುಚ್ಚಿ ಅವುಗಳು ಯಾರಿಗೂ ಕಾಣದಂತೆ ಮಾಡಿದರು. ಕ್ರಿ.ಶ. ಐದು ಆರನೆ ಶತಮಾನದಲ್ಲಿ ಕಣ್ಮರೆ ಮಾಡಿದ್ದ ಈ ಬೌದ್ಧ ವಿಹಾರಗಳು ಕ್ರಿ.ಶ.19ನೆ ಶತಮಾನದಲ್ಲಿ ಆಕಸ್ಮಿಕವಾಗಿ ಪತ್ತೆಯಾದವು! ಅವುಗಳ ಬಾಗಿಲು ತೆಗೆದು ಒಳ ಹೊಕ್ಕು ನೋಡಿದಾಗ ಆ ಗುಹೆಗಳ ಮಾಳಿಗೆ, ಗೋಡೆಗಳು ಹತ್ತಿ ಉರಿದ ಬೆಂಕಿಯ ಕಾಡಿಗೆಯ ಕಪ್ಪು ಇನ್ನೂ ದಟ್ಟವಾಗಿ ಮೆತ್ತಿದ್ದು ಕಾಣುತ್ತಿತ್ತು.

ಸನ್ಯಾಸಿಗಳನ್ನು ಕೊಂದು ನಿರ್ನಾಮ ಮಾಡಿದಂತೆ ನಿರ್ನಾಮ ಮಾಡಲಾಗದ ಬೌದ್ಧ ಚೈತ್ಯಾಲಯಗಳನ್ನು ವೈಷ್ಣವ ಮತ್ತು ಶೈವ ದೇವಾಲಯಗಳನ್ನಾಗಿ  ಪರಿವರ್ತಿಸಿದರು ಈ ಸನಾತನಿಗಳು. ಅದಕ್ಕೊಂದು ಪ್ರತ್ಯಕ್ಷ ನಿದರ್ಶನ ಇಂದಿನ ಒಡಿಶಾ ರಾಜ್ಯದಲ್ಲಿರುವ ಪೂರಿ ಜಗನ್ನಾಥ ದೇವಾಲಯ. ಇಂಥ ಉದಾಹರಣೆಗಳು ಭಾರತದಲ್ಲಿ ನೂರಾರು ಇವೆ. ಇಷ್ಟೆಲ್ಲ ಅನಾಹುತ ಮಾಡಿದರೂ, ಮಾರಣ ಹೋಮ ಮಾಡಿದರೂ, ಎಷ್ಟೋ ಚೈತ್ಯಾಲಯಗಳನ್ನು ಧ್ವಂಸ ಮಾಡಿದರೂ,  ದೇವಾಲಯಗಳನ್ನಾಗಿ ಪರಿವರ್ತಿಸಿದರೂ...ಬೌದ್ಧ ಧರ್ಮವನ್ನು ಭಾರತ ದೇಶದಿಂದ ಸಂಪೂರ್ಣ ನಾಶ ಮಾಡಲು ಸಾಧ್ಯವಾಗಲಿಲ್ಲ! ಅದು ಈಗಲೂ ಈ ದೇಶದಲ್ಲಿ ಜೀವಂತವಾಗಿದೆ. ಅದರ ಅನುಯಾಯಿಗಳು ಈಗಲೂ ವೃದ್ಧಿಯಾಗುತ್ತಿದ್ದಾರೆ! ಹಿಂದೂಗಳೆಂಬ ಶೂದ್ರರು, ಅದರಲ್ಲೂ ಅಸ್ಪಶ್ಯರು ಇಂದಿಗೂ ಮತಾಂತರ ಹೊಂದಿ ಬೌದ್ಧರಾಗುತ್ತಿದ್ದಾರೆ.

ನಮ್ಮ ದೇಶದ ಜಾತಿ ದ್ವೇಷದ ಅಗ್ನಿಕುಂಡದಲ್ಲಿ ಬೆಂದು ಹೋಗಿ ಇಡೀ ದೇಶ ಗೋದ್ರೋತ್ತರ ಕಾಳ್ಗಿಚ್ಚಿಗೆ ಬಲಿಯಾಗುವುದಕ್ಕಿಂತ ಬೌದ್ಧರಾಗಿ ಬದುಕುಳಿಯುವುದು ಉತ್ತಮ.ಸನಾತನಿಗಳ ಅಗ್ನಿಕುಂಡಕ್ಕೆ ಹಾನಿಯಾಗುವುದಕ್ಕಿಂತ ಮತಾಂತರದಿಂದ ಈ ದೇಶ ಉಳಿದು ಮಹಾಕವಿ ಕುವೆಂಪು ಹಾರೈಸಿದಂತೆ ಈ ದೇಶ-ಕನಿಷ್ಠ ಈ ಕರ್ನಾಟಕವು ಸರ್ವ ಜನಾಂಗದ ಶಾಂತಿಯತೋಟವಾಗುವಂತೆ ಮಾಡಬೇಕಾಗಿ ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ.

ಇನ್ನು ಕೊನೆಯದಾಗಿ ಭ್ರಷ್ಟಾಚಾರದ ಅರ್ಬುದ (CANCER) ರೋಗ ನಮ್ಮ ದೇಶಕ್ಕೆ ಅಂಟಿದ ಮಹಾವ್ಯಾಧಿ ಹಿರಿಬೇನೆ. ಅದು ಕಾಳಿಂಗ ಸರ್ಪದ ವಿಷದಂತೆ. ನಾಗರಹಾವಿನ ವಿಷ ಬೇಗನೆ ಏರುತ್ತದೆ. ತಕ್ಕ ಔಷಧ ಕೊಟ್ಟರೆ, ಉರಿಮಂಡಲ ವಿಷಕ್ಕಿಂತ ಬೇಗನೆ ಇಳಿಸಬಹುದು. ಒಂದು ವೇಳೆ ವಿಷ ಇಳಿಯದೆ ಹೋಗಿ ಸತ್ತರೂ ಅವನೊಬ್ಬ ಸಾಯುತ್ತಾನೆ. ಅದೇನು ಅಷ್ಟು ನಷ್ಟವೇನಲ್ಲ. ಆದರೆ ಜಾತೀಯತೆ, ಪರಮತ ದ್ವೇಷವೆಂಬ ವಿಷ ಮನಸ್ಸಿಗೆ ತಗಲುವ ವಿಷ. ಆ ವಿಷ ಹಾವು ಕಚ್ಚಿದವನ ದೇಹದ ಸಾವಿನಿಂದ ಕೊನೆಯಾದೀತು. ಸಾಯದೆ ಉಳಿದವರು ಬದುಕಿರುತ್ತಾರೆ.

ಆದ್ದರಿಂದ ಇಡೀ ಜನಾಂಗದ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ ಜಾತೀಯತೆಯಿಂದ ವಿಷವಿತರಕ  ವರ್ತಕರನ್ನು  ಜನ ದೂರವಿಡಬೇಕು. ದ್ವೇಷದ ಕಿಚ್ಚನ್ನು ಹಚ್ಚಬೇಡಿ. ಈ ಕರ್ನಾಟಕ,  ಈ ಶಹರ ವಿಜಾಪುರ ಸುಲ್ತಾನರ ಆಳ್ವಿಕೆ ಇದ್ದಾಗ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು. ಇಲ್ಲಿ ಹಿಂದೂ-ಇಸ್ಲಾಂ ಧರ್ಮಗಳ ಐಕ್ಯಮತದ ಸೂಫಿ ದರ್ಗಾ (ಸಮಾಧಿ) ಈಗಲು ಜೀವಂತ ಇದೆ. ಆ ದರ್ಗಾ ಅನೇಕ ಸಹಸ್ರ ಸಹಸ್ರ ಜನರ ಸಂಕಟ ದುಃಖಕ್ಕೆ ಪರಿಹಾರ ನೀಡುತ್ತಿದೆ. ಆ ಶರಣರನ್ನು ಕರ್ನಾಟಕದ ಸಾಧಾರಣ ಹಿಂದೂ ಜನ ಪೂಜಿಸುತ್ತಿದ್ದಾರೆ. ಅಂಥ ಶಾಂತಿಧಾಮದ ಅಮೃತ ಕಲಶದಲ್ಲಿ ದ್ವೇಷದ ವಿಷದ ಹುಳಿ ಹಿಂಡಬೇಡಿ. “ನರಜನ್ಮ ಬಂದಾಗ ನಾಲಗೆಯು ಇದ್ದಾಗ ರಾಮಾ ಎನಬಾರದೆ?” ಎಂದ ದಾಸವರೇಣ್ಯರ ಈ ನಾಡಿನಲ್ಲಿ ಸಾಹಿತಿಗಳ ಸುಳ್ಳನ್ನು ಬಿತ್ತರಿಸಲಾರೆ ಈ ಸರಸ್ವತಿಯ ಪವಿತ್ರ ಪೀಠದಿಂದ.ಅವರಾಡಿದ ಅಪ್ಪಟ ತಾಜಾ ಸುಳ್ಳಿನ ಒಂದು ಸ್ಯಾಂಪಲ್ ಕೊಡುತ್ತೇನೆ. ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವರ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಟಿಪ್ಪು ವಿಶ್ವವಿದ್ಯಾನಿಲಯ ಎಂದು ಹೆಸರಿಡಬೇಕೆಂದು ನಿರ್ಧರಿಸಿರುವುದನ್ನು ವಿರೋಧಿಸುವಾಗ ಟಿಪ್ಪು ಹಿಂದುಗಳ ದ್ವೇಷಿಯೆಂದೂ, ಅವನು 71,000 ಹಿಂದುಗಳನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದನೆಂಬ ಸುಳ್ಳನ್ನು ಹೇಳುತ್ತಿದ್ದಾರೆ.

ಇದನ್ನು ಕೇಳಿದೊಡನೆ ಅವನ ಆಳ್ವಿಕೆಯ ಕಾಲದಲ್ಲು ಕೊಡಗು ಪ್ರಾಂತ್ಯದಲ್ಲಿ ಅಷ್ಟು ಜನಸಂಖ್ಯೆ ಇತ್ತೆ ಎಂಬ ಸಂಶಯ ಬಂದು ಸರಕಾರವೇ ಪ್ರಕಟಿಸಿರುವ ‘ಕೂರ್ಗ್ ಗೆಝಟಿಯರ್’ ತೆಗೆದು ನೋಡಿದೆ. 1971ರಲ್ಲಿ ಇಡೀ ಕೂರ್ಗ್ ರಾಜ್ಯದಲ್ಲಿ ಕೇವಲ 1,65,321 ಜನರಿದ್ದರು. 1961ರ ಜನಗಣತಿ ಪ್ರಕಾರ ಒಟ್ಟು 3,22,829 ಪ್ರಜಾಸಂಖ್ಯೆ ಇತ್ತು (ಪುಟ-69). ಹಾಗಾದರೆ  1792-1799ರ ಅವಧಿಯಲ್ಲಿ ಅಲ್ಲಿ ಎಷ್ಟು ಜನರಿದ್ದಿರಬಹುದು ಎಂದು ಲೆಕ್ಕ ಹಾಕಿದರೆ ಒಂದು ಲಕ್ಷ (ನೂರು ಸಾವಿರ)ಕ್ಕಿಂತ ಹೆಚ್ಚಾಗಿರಲಾರದು.

ಆ ನೂರು ಸಾವಿರ ಜನರಲ್ಲಿ  71 ಸಾವಿರ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದರೆ ಈ ಇನ್ನೂರ ಹತ್ತು ವರ್ಷಗಳಲ್ಲಿ ಎಷ್ಟು ಜನ ಮುಸ್ಲಿಮರಿರಬೇಕು? ಕನಿಷ್ಠ 2,00,000 ಇರಬೇಕು!! ಆದರೆ ಈಗ ಕೊಡಗು ಜಿಲ್ಲೆಯ ಒಟ್ಟು ಮುಸ್ಲಿಮರು 14,730 ಮಾತ್ರ ಇದ್ದಾರೆ. (ಕೂರ್ಗ್ ಗೆಝಟಿಯರ್ ಪುಟ 98 ನೋಡಿ) ಸರಸ್ವತಿಯ ಸುಪುತ್ರರೂ ಸಂಶೋಧಕರೂ ಆದಂಥವರೆಂದು ಹೇಳಿಕೊಳ್ಳುವವರು ಇಂಥ ಹಸಿ ಸುಳ್ಳನ್ನು ಹೇಳಬಹುದೇ?

ಟಿಪ್ಪು ಹಿಂದು ಮತದ್ವೇಷಿ ಎಂಬುದೂ ಅಪ್ಪಟ ಸುಳ್ಳಿನ ಮುದ್ದೆ. ಯಾಕೆಂದರೆ ಮರಾಠಿಗರಿಂದ ಭಗ್ನವಾದ ಶೃಂಗೇರಿ ಶ್ರೀಶಾರದಮ್ಮನ ದೇವಾಲಯವನ್ನು ಪುನಃ ನಿರ್ಮಾಣ ಮಾಡಿದವರು ಹೈದರ್ ಮತ್ತು ಟಿಪ್ಪು. ಶ್ರೀಶೃಂಗೇರಿ ಜಗದ್ಗುರುಗಳಿಗೆ ಕನ್ನಡದಲ್ಲಿ  ಪತ್ರಗಳನ್ನು ಬರೆದು ಅಮ್ಮನ ಮೆರವಣಿಗೆಗೆ ಪಲ್ಲಕಿ ಕಾಣಿಕೆ ಕೊಟ್ಟವನು ಟಿಪ್ಪು. ಅಂಥವನು ಹಿಂದೂ ಮತದ್ವೇಷಿಯೇ? (ನೋಡಿ, ಮಹಮ್ಮದ್ ವೊಯಿದ್ದೀನ್ ಅವರು ಬರೆದು, ಓರಿಯಂಟ್ ಲಾಂಗ್ಮನೆ, 2000ದಲ್ಲಿ ಪ್ರಕಟಿಸಿದ ಪುಸ್ತಕದ Plates 21ರಿಂದ 27 ರವರೆಗೆ Appendix-5 ಪುಟ 136-37) ಈ ದಾಖಲೆಗಳು ಸುಳ್ಳೊ ಅಥವಾ ಈಗಿನ ಸಂಶೋಧಕರು ಹೇಳುವುದು ಸುಳ್ಳೊ? ಜನ ತೀರ್ಮಾನಿಸಬೇಕು. ಕೋಮು ದ್ವೇಷದ ಕಿಚ್ಚು ಹಚ್ಚಬೇಡಿ. ಸಾಹಿತಿಗಳು ಕೋಮು ಸೌಹಾರ್ದದ ಶಾಂತಿ ಸಂದೇಶವನ್ನು ಸಾರ ಬೇಕಾಗಿ ಸಾಹಿತಿಗಳನ್ನು ಬೇಡಿಕೊಳ್ಳುತ್ತೇನೆ.

Tuesday, February 12, 2013

ಸಿಹಿ ಸುದ್ದಿ.....!

 
ಇತ್ತೀಚಿಗೆ ಸಾವು
ಸಂಭ್ರಮದ ವಿಷಯವಾಗಿದೆ...
ಸಿಹಿ ತಿಂಡಿಯ ಅಂಗಡಿಗಳು
ಸಾಲು ಸಾಲಾಗಿ ತೆರೆಯುತ್ತಿವೆ....

ದೇಶ ಸೂತಕದ ಮನೆಯಾಗಿದೆ
ತಿಥಿಯೂಟ ಹಬ್ಬದ ಸಂಭ್ರಮ
ಪಡೆದಿದೆ....

ಮನರಂಜನೆಗಳಿಗೆ ಸಿನಿಮ ಮನೆಗಳು
ಟಿವಿ ಪೆಟ್ಟಿಗೆಗಳು ಸಾಕಾಗುತ್ತಿಲ್ಲ.
ನಟನೆಗಳನ್ನು ನೋಡಿ ಮನಸ್ಸುಗಳಿಗೆ
ಆಲಸ್ಯ ಹಿಡಿದು ಹೋಗಿದೆ...
ಅವಕ್ಕೆ ನಿಜ ಮನುಷ್ಯನೊಬ್ಬ
ವಿಲ ವಿಲ ಒದ್ದಾಡೂದು ನೋಡಬೇಕಾಗಿದೆ...

ಹೆಣ್ಣೊಬ್ಬಳ ಅತ್ಯಾಚಾರದ ಸುದ್ದಿ
ಎಷ್ಟು ರಸವತ್ತಾಗಿರುತ್ತದೆಯೆಂದರೆ
ವರದಿಗಾರ ಈಗಷ್ಟೇ ಒಂದು ಹೆಣ್ಣನ್ನು
ಕೊಂದು ಅದರ ರಕ್ತದಿಂದ ಸುದ್ದಿಯನ್ನು
ಹೀರಿ ಕೊರೆಯುತ್ತಿದ್ದಾನೆ
ಯಾಕೆಂದರೆ ಸುದ್ದಿಯ ಗುರಿ
ಮನ ರಂಜಿಸೋದು


ಮುದ್ರಣ ಮಶೀನ್ ಗಳೆಲ್ಲ
ರುದ್ರವರ್ಣ ತಾಳಿವೆ
ಸುರಿದ
ಷ್ಟೂ ಬಣ್ಣಗಳ 
ದಾಹ ತೀವ್ರವಾಗಿದೆ
 
ಇಂಕುಗಳ ಬದಲಿಗೆ
ರಕ್ತವನ್ನೇ ಪೂರೈಸೂದಕ್ಕೆ
ಜನರನ್ನು ನೇಮಿಸಲಾಗಿದೆ...
ಇಷ್ಟಕ್ಕೂ
ಬಣ್ಣದ ಇಂಕುಗಳು ಮಾರುಕಟ್ಟೆಯಲ್ಲಿ
ಭಾರೀ ದುಬಾರಿ...ರಕ್ತ ಬಲು ಅಗ್ಗ!
ಪತ್ರಿಕೆಗಳು ಬಣ್ಣ ಬಣ್ಣದ
ಪುಟಗಳಾಗಿ ಸೂಳೆಯರಂತೆ
ಮೈ ಬಳುಕಿಸುತ್ತಿವೆ

ದೀಪಾವಳಿಗೆ ಹಣತೆಯ
ಬೆಳಕು ಸಾಕಾಗೋದಿಲ್ಲ
ನೆರೆಮನೆಗೆ ಬಿದ್ಧ ಬೆಂಕಿಯಿಂದ
ಆಚರಿಸುವ ಹಬ್ಬಕ್ಕೆ
ನಮ್ಮ ಮನದೊಳಗೆ
ಪುಳಕ 
ಆ ಬೆಳಗಿಗೆ ನಮ್ಮ ಕಣ್ಣು ಹೃದಯ
ಧಗ ಧಗ ಉರಿದರೆ
ಹಬ್ಬಕ್ಕೊಂದು ಮಜಾ...

ದೇಶ ಪ್ರೇಮಕ್ಕೆ ಒಂದಿಷ್ಟು
ರಕ್ತ ಮೆತ್ತಿದರೇನೆ
ರುಚಿ ಜಾಸ್ತಿ....

ಇತ್ತೀಚೆಗೆ ಸಾವು
ಸಂಭ್ರಮದ ವಿಷಯವಾಗಿದೆ...
ಸಿಹಿ ತಿಂಡಿಯ ಅಂಗಡಿಗಳು
ಸಾಲು ಸಾಲಾಗಿ ತೆರೆಯುತ್ತಿವೆ....

Monday, February 11, 2013

ತಿಹಾರ್ ಜೈಲಿನಲ್ಲೀಗ ವಿಷಾದದ ನೆರಳು

ಸೋಮವಾರ (ಫೆಬ್ರವರಿ 11ರ ಸಂಚಿಕೆ) ದಿ ಹಿಂದೂ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ವರದಿ. ಇದನ್ನು ನನ್ನ ಗೆಳೆಯರೊಬ್ಬರು ಕನ್ನಡಕ್ಕೆ ಇಳಿಸಿದ್ದಾರೆ. ಜೈಲಾಧಿಕಾರಿಗಳು ಹಿಂದೂ ಪತ್ರಿಕೆಯ ವರದಿಗಾರರೊಂದಿಗೆ ಹಂಚಿಕೊಂಡ ಕೆಲವು ಮಾತುಗಳು ಇಲ್ಲಿವೆ...................
***
ಹಿಂದೂ-ಇಸ್ಲಾಮ್ ತತ್ವಗಳನ್ನು ಆಳವಾಗಿ ಅರಿತಿದ್ದ ಅಫ್ಝಲ್!

 
ಎರಡುಗಂಟೆಗೆ ಮೊದಲು ಆತನಿಗೆ ಗಲ್ಲಿಗೇರಿಸುವ ವಿಷಯ ಅರುಹಲಾಯಿತು!


ಸುಮಾರು ಎರಡು ಗಂಟೆ ಜೈಲಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದ ಅಫ್ಝಲ್!

‘‘ಆತನ ಅಧ್ಯಾತ್ಮಿಕತೆಯೇ ಆತನಿಗೆ ಸಾವನ್ನು ಎದುರಿಸಲು ಬೇಕಾದ ಬಲವನ್ನು ನೀಡಿದೆ. ಆತ ಸುಶಿಕ್ಷಿತನಾಗಿದ್ದ. ಆತ ಇಸ್ಲಾಂ ಹಾಗೂ ಹಿಂದೂಧರ್ಮದ ತತ್ವಗಳನ್ನು ಅಳವಾಗಿ ಅರಿತಿದ್ದ. ಈ ಎರಡು ಧರ್ಮಗಳ ನಡುವೆ ಇರುವ ಸಾಮ್ಯತೆಯ ಬಗ್ಗೆಯೂ ಆತ ಆಗಾಗ್ಗೆ ಹೇಳುತ್ತಿದ್ದ. ಜನರು ಸಾಮಾನ್ಯವಾಗಿ ದುಷ್ಟಶಕ್ತಿಯ ಅಂತ್ಯವನ್ನು ಸಂಭ್ರಮಿಸುತ್ತಾರೆ. ಆದರೆ ಧರ್ಮಶ್ರದ್ಧೆಯಿಂದ ಕೂಡಿದ ಆತ್ಮವೊಂದು ನಿರ್ಗಮಿಸಿದಾಗ, ವಿಷಾದದ ನೋವುಂಟಾಗುತ್ತದೆ’’ ಎಂದು ತಿಹಾರ್‌ನ ಜೈಲಿನ ಅಧಿಕಾರಿಯೊಬ್ಬರು ಮ್ಲಾನವದನರಾಗಿ ಹೇಳುತ್ತಾರೆ.
ಹೌದು, ಅವರು ಮಾತನಾಡುತ್ತಿದ್ದದ್ದು ಶನಿವಾರ ಮುಂಜಾವು ಗಲ್ಲಿಗೇರಿದ್ದ ಅಫ್ಝಲ್ ಗುರುವಿನ ಕುರಿತಂತೆ.


‘ಅಲ್ವಿದಾ...!’
   ಸಂಸತ್‌ಭವನ ದಾಳಿ ಪ್ರಕರಣದ ದೋಷಿ ಅಫ್ಝಲ್‌ಗುರು ತನ್ನನ್ನು ಗಲ್ಲಿಗೇರಿಸಲಿರುವವನಿಗೆ ಅಂತಿಮ ವಿದಾಯ ಹೇಳಿದ್ದು ಹೀಗೆ. ಇದಕ್ಕೂ ಕೆಲವು ಸೆಕೆಂಡ್‌ಗಳ ಮೊದಲು ಫಾಶಿಗಾರ ಕೂಡಾ ಅದೇ ಪದಗಳಿಂದ ಅಫ್ಝಲ್‌ಗೆ ಗುಡ್‌ಬೈ ಹೇಳಿದ್ದ. ಆತ ಸನ್ನೆಗೋಲನ್ನು ಎಳೆಯುತ್ತಿದ್ದಂತೆಯೇ, ಅಫ್ಧಲ್‌ನ ದೇಹ ನೇಣು ಗಂಬದಲ್ಲಿ ನೇತಾಡತೊಡಗಿತು.
ಗಲ್ಲಿಗೇರಿಸಲ್ಪಟ್ಟ ಒಂದೇ ನಿಮಿಷದಲ್ಲಿ ಅಫ್ಝಲ್ ಹೆಣವಾದರೂ, ಜೈಲಿನ ನಿಯಮಗಳ ಪ್ರಕಾರ ಆತನ ಮೃತದೇಹವನ್ನು, ಭರ್ತಿ ಅರ್ಧತಾಸಿನವರೆಗೆ ಗಲ್ಲುಗಂಬದಲ್ಲೇ ನೇತಾಡಿಸಲಾಯಿತೆಂದು, ಈ ಗಲ್ಲುಶಿಕ್ಷೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆ ಬಳಿಕ ಅಫ್ಝಲ್‌ನ ಮೃತದೇಹವನ್ನು ನೇಣುಗಂಬದಿಂದ ಇಳಿಸಲಾಯಿತು ಹಾಗೂ ಜೈಲ್ ಕಟ್ಟಡ ನಂ.3ರ ಬಳಿ ಇಸ್ಲಾಂ ಧಾರ್ಮಿಕ ವಿಧಿಗಳೊಂದಿಗೆ ಆತನ ಮೃತದೇಹವನ್ನು ದಫನಮಾಡಲಾಯಿತು. ತಿಹಾರ್ ಜೈಲಿನಲ್ಲಿ 30 ವರ್ಷಗಳ ಹಿಂದೆ ಗಲ್ಲಿಗೇರಿಸಲ್ಪಟ್ಟ ಕಾಶ್ಮೀರದ ಪ್ರತ್ಯೇಕವಾದಿ ಹೋರಾಟಗಾರ ಮಕ್ಬೂಲ್ ಭಟ್ಟ್‌ನ ಸಮಾಧಿಯ ಪಕ್ಕದಲ್ಲೇ ಅಫ್ಧಲ್‌ನನ್ನು ಸಮಾಧಿ ಮಾಡಲಾಯಿತು.
‘‘ಆದರೆ ಇವರಿಬ್ಬರ ನಡುವೆ ಒಂದು ವ್ಯತ್ಯಾಸವಿದೆ. ಮಕ್ಬೂಲ್ ಭಟ್ ಪ್ರತ್ಯೇಕತಾವಾದಿ ನಾಯಕನಾಗಿದ್ದರೆ, ಅಫ್ಝಲ್ ಎಂದು ಕೂಡಾ ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಗೊಳಿಸುವ ಮಾತನ್ನು ಆಡಿರಲಿಲ್ಲ. ವಾಸ್ತವವಾಗಿ ತನ್ನನ್ನು ಈ ವಿಷಯದಲ್ಲಿ ಅನಗತ್ಯವಾಗಿ ಎಳೆಯಲಾಗಿದೆಯೆಂದೇ ಆತ ಹೇಳುತ್ತಿದ್ದ’’ ಎಂದು ಆ ಅಧಿಕಾರಿ ನೆನಪಿಸಿಕೊಳ್ಳುತ್ತಾರೆ.

 ‘‘ಅಫ್ಝಲ್‌ನನ್ನು ಗಲ್ಲಿಗೇರಿಸಿದ್ದನ್ನು ದೇಶಾದ್ಯಂತ ಬಲಪಂಥೀಯ ಕಾರ್ಯಕರ್ತರು ಸಂಭ್ರಮೋಲ್ಲಾಸಗಳೊಂದಿಗೆ ಆಚರಿಸಿದರು. ಆದರೆ ತಿಹಾರ್ ಜೈಲಿನಲ್ಲಿ ಅಂತಹ ಯಾವುದೇ ಸಂಭ್ರಮವೂ ಕಂಡುಬರಲಿಲ್ಲ. ಬದಲಿಗೆ ಅಲ್ಲಿನ ಸಿಬ್ಬಂದಿಯ ಮುಖಗಳಲ್ಲಿ ವಿಷಾದದ ಕಳೆಯಿತ್ತು.‘‘ ಅತ ಧರ್ಮಶ್ರದ್ಧೆಯುಳ್ಳವನಾಗಿದ್ದ ಹಾಗೂ ಉತ್ತಮ ನಡವಳಿಕೆಯನ್ನು ಹೊಂದಿದ್ದ. ಆತನನ್ನು ಗಲ್ಲುಗಂಬದೆಡೆಗೆ ಕೊಂಡೊಯ್ಯುವಾಗಲೂ ಆತ ಜೈಲು ಸಿಬಂ್ಬದಿಯ ಹೆಸರು ಹಿಡಿದು ಕರೆಯುತ್ತಾ ಅವರಿಗೆ ಶುಭಕೋರುತ್ತಿದ್ದ. ತಾನು ಗಲ್ಲಿಗೇರುವ ಮೊದಲು ಆತನ ಒಂದೇ ಒಂದು ಕೋರಿಕೆಯೆಂದರೆ‘‘ಮುಜೆ ಉಮಿದ್ ಹೈ ಅಪ್ ಮುಜೆ ದರ್ಧ್ ನಹಿ ಕರೇಂಗೆ(ನನಗೆ ತಾವು ನೋವುಂಟು ಮಾಡುವುದಿಲ್ಲವೆಂದು ಆಶಿಸುವೆ) ಎಂದಾಗಿತ್ತು. ಆ ಮಾತನ್ನು ಕೇಳಿ ಅಫ್ಝಲ್‌ನ ಮುಖಕ್ಕೆ ಕಪ್ಪುಬಟ್ಟೆಯ ಹೊದಿಕೆಯನ್ನು ತೊಡಿಸುತ್ತಿದ್ದ ಫಾಶಿಗಾರ ಕೂಡಾ ಒಂದು ಕ್ಷಣ ಭಾವುಕನಾದ. ಆಬಳಿಕ ಸಾವಿನೆಡೆಗೆ ಅಫ್ಝಲ್‌ನ ಸುಗಮ ಪಯಣ ಆರಂಭವಾಯಿತು’’.
 ಅಫ್ಧಲ್‌ನನ್ನು ಗಲ್ಲಿಗೇರಿಸುವ ವಿಷಯವನ್ನು ಆತನಿಗೆ ಅಂದು ಬೆಳಗ್ಗಿನ ವೇಳೆಗಷ್ಟೇ ತಿಳಿಸಲಾತು.ಆದರೆ ಕೆಲವು ಮಾಧ್ಯಮಗಳು ಅಫ್ಝಲ್‌ಗೆ ಹಿಂದಿನ ದಿನ ಸಂಜೆಯೇ ಆತನನ್ನು ಗಲ್ಲಿಗೇರಿಸುವ ಬಗ್ಗೆ ಜೈಲು ಅಧಿಕಾರಿಗಳು ತಿಳಿಸಿದ್ದರೆಂದು ವರದಿ ಮಾಡಿದ್ದವು.
ಅಂದು ಬೆಳಗ್ಗೆ ಆತ ಒಂದು ಕಪ್ ಚಹಾ ಮಾತ್ರ ಸೇವಿಸಿದ್ದ. ಯಾಕೆಂದರೆ ಆತನಿಗೆ ಅಂದು ಯಾವುದೇ ಆಹಾರವನ್ನು ನೀಡಿರಲಿಲ್ಲ. ಆತ ಎಷ್ಟು ಸಹಜವಾಗಿದ್ದನೆಂದರೆ, ಒಂದು ವೇಳೆ ಆತನಿಗೆ ಆಹಾರ ನೀಡಿದ್ದಲ್ಲಿ ಅದನ್ನು ಆತ ಅದನ್ನು ಎಂದಿನಂತೆ ಸೇವಿಸಿಬಿಡುತ್ತಿದ್ದ.
ಅಂದು ಬೆಳಗ್ಗೆ ಅಫ್ಝಲ್ ಫೆರಾನ್ ಅಥವಾ ಕಾಶ್ಮೀರಿ ನಿಲುವಂಗಿಯೊಂದನ್ನು ಧರಿಸಿದ್ದ.ಆತ ಸ್ನಾನ ಮಾಡಿದ ಬಳಿಕ ಬಿಳಿ ಕುರ್ತಾ ಹಾಗೂ ಪೈಜಾಮ ಧರಿಸಿ ನಮಾಝ್ ಸಲ್ಲಿಸಿದನು.


 ‘‘ತಿಹಾರ್ ಜೈಲಿನಲ್ಲಿ ಈವರೆಗೆ ಸುಮಾರು 25 ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಅಲ್ಲಿ ಈಗ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳು 10 ಮಂದಿಯನ್ನು ಗಲ್ಲಿಗೇರಿಸಿದ್ದನ್ನು ಕಂಡಿದ್ದಾರೆ. ಆದರೆ ಅಫ್ಝಲ್‌ನಂತೆ ಗಲ್ಲುಗಂಬವನ್ನು ಏರುವವರೆಗೂ ಶಾಂತಭಾವನೆಯನ್ನು ಪ್ರದರ್ಶಿಸಿದ ಒಬ್ಬನೇ ಒಬ್ಬ ಕೈದಿಯನ್ನು ತಾವು ಕಂಡಿಲ್ಲವೆಂದು ಅವರು ಹೇಳುತ್ತಾರೆ.
  ತನ್ನ ಬದುಕಿನ ಕೊನೆಯ ಎರಡು ತಾಸುಗಳನ್ನು ಅಫ್ಝಲ್ ಜೈಲಿನ ಕೆಲವು ಅಧಿಕಾರಿಗಳೊಂದಿಗೆ ಕಳೆದನು. ಜೀವನ ಮತ್ತು ಮೃತ್ಯುವಿನ ಬಗ್ಗೆ ತನ್ನ ಚಿಂತನೆಗಳನ್ನು ಆತ ಅವರ ಮುಂದೆ ವಿವರಿಸಿದ.‘‘ಆತ ವಿಶ್ವಭಾತೃತ್ವ ಹಾಗೂ ಮನುಕುಲದ ಏಕತೆಯ ಬಗ್ಗೆ ಮಾತನಾಡಿದ.ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಒಳ್ಳೆಯವರೇ ಆಗಿರುತ್ತಾರೆ ಹಾಗೂ ಪ್ರತಿಯೊಬ್ಬನಲ್ಲಿರುವ ಆತ್ಮವೂ ಒಂದೇ ದೇವರ ಸೃಷ್ಟಿಯಾಗಿದೆಯೆಂದು ಎಂಬ ಬಗ್ಗೆ ಆತ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದ. ನೀವು ಸತ್ಯದ ದಾರಿಯಲ್ಲಿ ನಡೆದರೆ, ಅದುವೇ ನಿಮ್ಮ ಜೀವನದ ಅತಿ ದೊಡ್ಡ ಸಾಧನೆಯಾಗುವುದು’’ ಎಂದು ಅಫ್ಜಲ್ ಹೇಳಿದನೆಂದು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.
ಅಂದು ಬೆಳಗ್ಗೆ ಆತ ಎಷ್ಟು ಶಾಂತಚಿತ್ತನಾಗಿದ್ದನೆಂದರೆ, ತನ್ನ ಕೆಲವು ಚಿಂತನೆಗಳನ್ನು ಆತ ಹಾಳೆಯೊಂದರಲ್ಲಿ ಬರೆದಿದ್ದ. ಅದರಲ್ಲಿ ಆತ ಅಂದಿನ ದಿನಾಂಕ ನಮೂದಿಸಿದ್ದ ಹಾಗೂ ತನ್ನ ಸಹಿ ಕೂಡಾ ಹಾಕಿದ್ದ.
 ಆತನ ಕುಟುಂಬವನ್ನು ಯಾರು ಸಲಹುತ್ತಾರೆಂದು ಜೈಲಿನ ಸಿಬ್ಬಂದಿ ಅಫ್ಝಲ್‌ನಲ್ಲಿ ಪ್ರಶ್ನಿಸಿದಾಗ, ಪ್ರತಿಯೊಬ್ಬರನ್ನು ದೇವರು ಸಲಹುತ್ತಾನೆಂದು ಆತ ಉತ್ತರಿಸಿದ.


ಗಲ್ಲಿಗೇರುವಾಗಲೂ ಅಫ್ಝಲ್ ಹರ್ಷಚಿತ್ತನಾಗಿದ್ದ ಮತ್ತು ಶಾಂತಚಿತ್ತನಾಗಿದ್ದ ಎಂದವರು ಹೇಳುತ್ತಾರೆ. ಈ ಹಿಂದೆ ಗಲ್ಲುಗಂಬದೆಡೆಗೆ ತೆರಳುವ ಕೈದಿಗಳು ಭಯದಿಂದ ನಡುಗುತ್ತಿರುವುದನ್ನು ತಾವು ಕಂಡಿದ್ದೆವು.ಆದರೆ ಗಲ್ಲುಗಂಬದೆಡೆಗೆ ನಸುನಗುತ್ತಾ ತೆರಳುತ್ತಿದ್ದ ವ್ಯಕ್ತಿಗಳ ಬಗ್ಗೆ ನಾವು ಕೇಳಿದ್ದ ಕಥೆಗಳು ಅಫ್ಧಲ್ ವಿಷಯದಲ್ಲೂ ನಿಜವಾಗಿದೆ’’


  ಭಯೋತ್ಪಾದನೆಯ ಅಪರಾಧಗಳಿಗಾಗಿ ನೇಣಿಗೇರಿಸಲಾದ ಇತರ ಕೈದಿಗಳು ಹಾಗೂ ಅಫ್ಝಲ್ ನಡುವೆ ಇರುವ ಇನ್ನೊಂದು ವ್ಯತ್ಯಾಸವೆಂದರೆ, ಬಹುತೇಕ ಮಂದಿ ಗಲ್ಲಿಗೇರುವಾಗ ಧಾರ್ಮಿಕ ಅಥವಾ ರಾಜಕೀಯ ಘೋಷಣೆಗಳನ್ನು ಕೂಗುತ್ತಿರುತ್ತಾರೆ. ಆದರೆ ಅಫ್ಝಲ್ ತನ್ನ ಸೆಲ್‌ನಿಂದ ಗಲ್ಲುಗಂಬದವರೆಗೆ ಇರುವ 100 ಹೆಜ್ಜೆಗಳಷ್ಟು ಅಂತರವನ್ನು ಕ್ರಮಿಸುವಾಗ ತನ್ನ ಸುತ್ತಮುತ್ತಲಿರುವ ಎಲ್ಲರಿಗೂ ಶುಭ ಹಾರೈಸುತ್ತಿದ್ದ ಎಂದು ಆ ಅಧಿಕಾರಿ ಹೇಳುತ್ತಾರೆ.

Sunday, February 10, 2013

ಅಫ್ಝಲ್‌ಗೆ ಗಲ್ಲು: ಇನ್ನೂ ಉತ್ತರ ಸಿಗದ ಪ್ರಶ್ನೆಗಳು

 ಈ ಲೇಖನವನ್ನು ಬರೆದಿರುವುದು ಖ್ಯಾತ ಚಿಂತಕಿ ಅರುಂಧತಿ ರಾಯ್. ಅಫ್ಝಲ್ ಗುರುವಿಗೆ ಗಲ್ಲು ವಿಧಿಸಿದ ಕುರಿತಂತೆ ಆಕೆ ವ್ಯಕ್ತಪಡಿಸಿರುವ ಅನುಮಾನಗಳು, ಪೊಲೀಸರಿಗೆ ಹಾಕಿದ ಪ್ರಶ್ನೆಗಳು ಇಲ್ಲಿ. ‘ದಿ ಹಿಂದೂ’ ಪತ್ರಿಕೆಯಲ್ಲಿ ರವಿವಾರ(ಇಂದು) ಪ್ರಕಟವಾಗಿರುವ ಈ ಲೇಖನವನ್ನು ನನ್ನ ಗೆಳೆಯರೊಬ್ಬರು ಅನುವಾದಿಸಿದ್ದಾರೆ.
 
ಲೇಖಕಿ: ಅರುಂಧತಿ ರಾಯ್
ಕೃಪೆ- ದಿ ಹಿಂದು

ಹೌದಲ್ವೇ?. ಕಳೆದ ಶನಿವಾರ ದಿಲ್ಲಿಗೆ ವಸಂತ ಋತು ಕಾಲಿಟ್ಟಿತು. ಸೂರ್ಯ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ. ಹಾಗೆಯೇ ಕಾನೂನು ತನ್ನ ದಾರಿಯಲ್ಲಿ ಸಾಗಿತು. ನಾವು ಬೆಳಗ್ಗಿನ ಉಪಹಾರ ಸೇವಿಸುವ ಸ್ವಲ್ಪ ಮುನ್ನ, 2001ರ ಸಂಸತ್‌ಭವನ ದಾಳಿ ಪ್ರಕರಣದ ಆರೋಪಿ ಅಫ್ಝಲ್ ಗುರುವನ್ನು ರಹಸ್ಯವಾಗಿ ಗಲ್ಲಿಗೇರಿಸಲಾಯಿತು ಹಾಗೂ ಆತನ ಮೃತದೇಹವನ್ನು ತಿಹಾರ್ ಜೈಲಿನಲ್ಲಿ ದಫನ ಮಾಡಲಾಯಿತು. ಆತನನ್ನು ಮಕ್ಬೂಲ್ ಭಟ್‌ನ ಪಕ್ಕದಲ್ಲೇ ಹೂಳಲಾಯಿತೇ? (1984ರಲ್ಲಿ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲ್ಪಟ್ಟ ಇನ್ನೋರ್ವ ಕಾಶ್ಮೀರಿ). ಅಫ್ಝಲ್‌ನನ್ನು ಗಲ್ಲುಗಂಬಕ್ಕೇರಿಸಿದ ವಿಷಯವನ್ನು ಆತನ ಪತ್ನಿ ಹಾಗೂ ಪುತ್ರನಿಗೆ ತಿಳಿಸಿರಲಿಲ್ಲ. ಆದರೆ ಕೇಂದ್ರ ಗೃಹಕಾರ್ಯದರ್ಶಿ ಮಾತ್ರ ‘‘ಅಫ್ಝಲ್ ಕುಟುಂಬಕ್ಕೆ ಸ್ಪೀಡ್‌ಪೋಸ್ಟ್ ಹಾಗೂ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಮಾಹಿತಿ ನೀಡಲಾಗಿದೆ’’ ಎಂದು ಸುದ್ದಿಗಾರರಿಗೆ ವಿವರಿಸಿದ್ದರು.ಆದರೆ ಅದು ಕುಟುಂಬಿಕರಿಗೆ ತಲುಪಿದೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸುವಂತೆ ಜಮ್ಮುಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರನ್ನು ಕೇಳಿಕೊಳ್ಳಲಾಗಿದೆ ಎಂದು ಹೇಳಿ ಕೈತೊಳೆದಕೊಂಡಿದ್ದರು. ಅದೇನೂ ದೊಡ್ಡ ವಿಷಯವಲ್ಲ. ಯಾಕೆಂದರೆ ಪತ್ನಿ ಹಾಗೂ ಮಗ ಇಬ್ಬರೇ ಅಫ್ಝಲ್‌ನ ಕುಟುಂಬದ ಸದಸ್ಯರು.


ಅಫ್ಝಲ್‌ನನ್ನು ಗಲ್ಲಿಗೇರಿಸಿದ ಬಳಿಕ ಅತ್ಯಂತ ಅಪರೂಪವೆಂಬವಂತೆ ದೇಶವು ಒಗ್ಗಟ್ಟನ್ನು ಪ್ರದರ್ಶಿಸಿತು. ಕನಿಷ್ಠ ಪಕ್ಷದೇಶದ ಪ್ರಮುಖ ರಾಜಕೀಯ ಪಕ್ಷಗಳು ಏಕತೆಯನ್ನು ಪ್ರದರ್ಶಿಸಿದವು (ಅಫ್ಝಲ್‌ನನ್ನು ಗಲ್ಲಿಗೇರಿಸಿದ್ದು ತೀರಾ ವಿಳಂಬವಾಯಿತೆಂಬ ಬಗ್ಗೆ ಕೆಲವೊಂದು ಆಕ್ಷೇಪಗಳನ್ನು ಹೊರತುಪಡಿಸಿ).ಕಾಂಗ್ರೆಸ್, ಬಿಜೆಪಿ ಹಾಗೂ ಸಿಪಿಎಂ ಪಕ್ಷಗಳು ಪರಸ್ಪರ ಕೈಜೋಡಿಸಿ ಕಾನೂನಿನ ಆಳ್ವಿಕೆಗೆ ಸಂದ ಜಯವೆಂದು ಬಣ್ಣಿಸಿದವು.
   ಈಗಿನ ದಿನಗಳಲ್ಲಿ ಟಿವಿ ಚಾನೆಲ್‌ಗಳಿಂದ ನೇರ ಪ್ರಸಾರವಾಗುವ ದೇಶದ ಆತ್ಮಸಾಕ್ಷಿಯು ನಮ್ಮ ಮೇಲೆ ತನ್ನ ಬೌದ್ಧಿಕತೆಯನ್ನು ಹೇರತೊಡಗಿತು. ಹೇಡಿಗಳು ಗುಂಪುಗುಂಪಾಗಿ ಬೇಟೆಯಾಡುವಂತೆ ಆ ವ್ಯಕ್ತಿಯು ಮೃತಪಟ್ಟ ಬಳಿಕವೂ ಮಾಧ್ಯಮಗಳೆಲ್ಲವೂ ಭಾವೋದ್ರೇಕಗಳನ್ನು ಹಾಗೂ ಅತಿರಂಜಿತ ವಾಸ್ತವಾಂಶಗಳನ್ನು ಕಲಸುಮೇಲೋಗರಗೊಳಿಸಿ ವೀಕ್ಷಕರಿಗೆ ಉಣಬಡಿಸಿದವು. ತಮ್ಮ ಧೈರ್ಯವನ್ನು ಉಳಿಸಿಕೊಳ್ಳಲು ಅವರಿಗೆ ಒಬ್ಬರಿಗೊಬ್ಬರ ಅಗತ್ಯವಿತ್ತು. ಯಾಕೆಂದರೆ ತಾವು ಯಾವುದೋ ಘೋರವಾದ ತಪ್ಪು ಮಾಡುತ್ತಿದ್ದೇವೆಂಬ ಭಾವನೆ ಅವರ ಮನದಾಳವನ್ನು ಚುಚ್ಚುತ್ತಿತ್ತು.
ಹಾಗಾದರೆ ಸತ್ಯಾಂಶಗಳೇನು?


2001ರ ಡಿಸೆಂಬರ್ 13ರಂದು ಐವರು ಸಶಸ್ತ್ರಧಾರಿಗಳು ಬಿಳಿ ಅಂಬಾಸಿಡರ್ ವಾಹನವೊಂದರಲ್ಲಿ ಸಂಸತ್ ಭವನದ ಗೇಟುಗಳನ್ನು ದಾಟಿ ಮುನ್ನುಗ್ಗಿದರು. ಆ ಕಾರಿನಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಅಳವಡಿಸಲಾಗಿತ್ತು. ಅವರನ್ನು ಭದ್ರತಾ ಸಿಬ್ಬಂದಿಗಳು ತಡೆಯಲೆತ್ನಿಸಿದಾಗ ಅವರು ಕಾರಿನಿಂದ ಜಿಗಿದು, ಗುಂಡೆಸೆಯತೊಡಗಿದರು. ಅವರು ಎಂಟು ಭದ್ರತಾಸಿಬ್ಬಂದಿಯನ್ನು ಹಾಗೂ ಓರ್ವ ಉದ್ಯಾನವನದ ಮಾಲಿಯನ್ನು ಹತ್ಯೆಗೈದರು. ಆನಂತರ ನಡೆದ ಗುಂಡಿನ ಕಾಳಗದಲ್ಲಿ ಎಲ್ಲಾ ಐವರು ದಾಳಿಕೋರರನ್ನು ಕೊಲ್ಲಲಾಯಿತು. ಪೊಲೀಸ್ ಕಸ್ಟಡಿಯಲ್ಲಿ ಅಫ್ಝಲ್ ನೀಡಿದ ಹಲವಾರು ತಪ್ಪೊಪ್ಪಿಗೆ ಹೇಳಿಕೆಗಳ ಪೈಕಿ ಒಂದರಲ್ಲಿ ಆತ, ಸಂಸತ್ ಭವನದ ದಾಳಿಯಲ್ಲಿ ಪಾಲ್ಗೊಂಡವರನ್ನು ಮುಹಮ್ಮದ್, ರಾಣಾ,ರಾಜಾ, ಹಂಝಾ ಹಾಗೂ ಹೈದರ್ ಎಂದು ಗುರುತಿಸಿದ್ದ. ಇಂದಿನವರೆಗೂ ಅವರ ಬಗ್ಗೆ ನಮಗೆ ಗೊತ್ತಿರುವುದು ಇಷ್ಟು ಮಾತ್ರ. ಆಗ ಗೃಹಸಚಿವರಾಗಿದ್ದ ಎಲ್.ಕೆ. ಅಡ್ವಾಣಿ , ದಾಳಿಕೋರರು ಪಾಕಿಸ್ತಾನಿಗಳ ಹಾಗೆ ಕಾಣುತ್ತಿದ್ದರು ಎಂದು ಹೇಳಿದ್ದರು.(ಸ್ವತಃ ಸಿಂಧಿಯಾಗಿರುವ ಅವರಿಗೆ ಪಾಕಿಸ್ತಾನಿಗಳು ಹೇಗೆ ಕಾಣುತ್ತಾರೆಂದು ಗೊತ್ತಿರಬೇಕಲ್ಲವೇ).

  ಕೇವಲ ಅಫ್ಝಲ್‌ನ ತಪ್ಪೊಪ್ಪಿಗೆ ಹೇಳಿಕೆ (ಸುಪ್ರೀಂಕೋರ್ಟ್ ಆತನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ನ್ಯೂನತೆಗಳಿವೆ ಹಾಗೂ ವಿಚಾರಣಾ ಪ್ರಕ್ರಿಯೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಕ್ಷೇಪ ವ್ಯಕ್ತಪಡಿಸಿತ್ತು)ಯನ್ನು ಆಧರಿಸಿ ಭಾರತ ಸರಕಾರವು ಪಾಕಿಸ್ತಾನದಲ್ಲಿನ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು ಹಾಗೂ ಪಾಕಿಸ್ತಾನದ ಗಡಿಯಲ್ಲಿ 5 ಲಕ್ಷಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿತ್ತು.ಅಣ್ವಸ್ತ್ರ ಸಮರವನ್ನು ಸಾರುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದ್ದವು. ವಿದೇಶಿ ರಾಯಭಾರಿ ಕಚೇರಿಗಳು ತಮ್ಮ ದೇಶದ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಎಚ್ಚರವಹಿಸುವಂತೆ ಸಲಹೆ ನೀಡಿದವು ಹಾಗೂ ದಿಲ್ಲಿಯಲ್ಲಿರುವ ತಮ್ಮ ಸಿಬ್ಬಂದಿಯನ್ನು ತೆರವುಗೊಳಿಸಿದವು. ಎರಡೂದೇಶಗಳ ನಡುವೆ ಬಿಗುವಿನ ವಾತಾವರಣ ಹಲವು ತಿಂಗಳುಗಳವರೆಗೆ ಮುಂದುವರಿಯಿತು ಹಾಗೂ ಭಾರತದ ಬೊಕ್ಕಸಕ್ಕೆ ಸಹಸ್ರಾರು ಕೋಟಿ ರೂ.ಗಳ ವೆಚ್ಚ ತಗಲಿತು.


   2001ರ ಡಿಸೆಂಬರ್ 14ರಂದು ದಿಲ್ಲಿ ಪೊಲೀಸರು ತಾವು ಸಂಸತ್ ದಾಳಿ ಪ್ರಕರಣವನ್ನು ಭೇದಿಸಿರುವುದಾಗಿ ಘೋಷಿಸಿದರು. ಡಿಸೆಂಬರ್ 15ರಂದು ಅವರು ಪ್ರಕರಣದ ‘ಸೂತ್ರಧಾರಿ’ ಪ್ರೊಫೆಸರ್ ಎಸ್.ಆರ್. ಗೀಲಾನಿಯನ್ನು ದಿಲ್ಲಿಯಲ್ಲಿ ಹಾಗೂ ಶೌಕತ್‌ಗುರು ಹಾಗೂ ಅಫ್ಝಲ್‌ಗುರುನನ್ನು ಶ್ರೀನಗರದ ಹಣ್ಣುಹಂಪಲಿನ ಮಾರುಕಟ್ಟೆಯೊಂದರಲ್ಲಿ ಬಂಧಿಸಿತು. ತರುವಾಯ, ಅವರ ಶೌಕತ್‌ನ ಪತ್ನಿ ಅಫ್ಸನಾ ಗುರುಳನ್ನು ಬಂಧಿಸಿತು.ಮಾಧ್ಯಮಗಳು ಪ್ರಕರಣದ ಬಗ್ಗೆ ವಿಶೇಷ ತನಿಖಾದಳದ ವರದಿಯನ್ನು ಮಾಧ್ಯಮಗಳು ಉತ್ಸಾಹದಿಂದ ಪ್ರಕಟಿಸಿದವು. ಪ್ರಕರಣಕ್ಕೆ ಸಂಬಂಧಿಸಿ ಆ ಸಮಯದಲ್ಲಿ ದೇಶದ ಕೆಲವು ಪ್ರಮುಖ ಪತ್ರಿಕೆಗಳು ಪ್ರಕಟಿಸಿದ ಕೆಲವು ಆಂಗ್ಲ ತಲೆಬರಹಗಳು ಭಾವಾರ್ಥಗಳು ಹೀಗಿದ್ದವು. ‘ ಭಯೋತ್ಪಾದನೆ ಸಂಚಿನ ಕೇಂದ್ರದಲ್ಲಿ ದಿಲ್ಲಿ ವಿವಿಯ ಉಪನ್ಯಾಸಕ’, ‘ವಿಶ್ವವಿದ್ಯಾನಿಲಯದ ಡಾನ್‌ನಿಂದ ಫಿದಾಯೆನ್‌ಗಳಿಗೆ ಮಾರ್ಗದರ್ಶನ’, ‘ಬಿಡುವಿನ ಸಮಯದಲ್ಲಿ ಡಾನ್‌ನಿಂದ ಭಯೋತ್ಪಾದನೆಯ ಉಪನ್ಯಾಸ’ ಇತ್ಯಾದಿ.
      
  ಝೀ ಸುದ್ದಿವಾಹಿನಿ ಒಂದು ಹೆಜ್ಜೆ ಮಂದೆ ಹೋಗಿ ಸಂಸತ್‌ದಾಳಿ ಪ್ರಕರಣದ ಬಗ್ಗೆ ‘ಡಿಸೆಂಬರ್ 13’ ಎಂಬ ಡಾಕ್ಯುಮೆಂಟರಿ ನಾಟಕವೊಂದನ್ನು ಪ್ರಸಾರ ಮಾಡಿತು. ಪೊಲೀಸರ ದೋಷಾರೋಪಪಟ್ಟಿಯನ್ನು ಆಧರಿಸಿದ ಸತ್ಯಘಟನೆಗಳ ಮರು ಅವತರಣಿಕೆ ಎಂಬ ಹಣೆಪಟ್ಟಿಯೊಂದಿಗೆ ಪ್ರಸಾರವಾದ ಈ ಟಿವಿ ಫಿಲ್ಮ್ ಅನ್ನು ಪ್ರಧಾನಿ ಎ.ಬಿ.ವಾಜಪೇಯಿ ಹಾಗೂ ಆಗಿನ ಗೃಹ ಸಚಿವ ಎಲ್.ಕೆ. ಆಡ್ವಾಣಿ ಮುಕ್ತಕಂಠದಿಂದ ಪ್ರಶಂಸಿಸಿದರು. ಈ ಚಿತ್ರದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಮಾಧ್ಯಮಗಳ ಕಾರ್ಯಕ್ರಮಗಳು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲಾರವೆಂದು ಪ್ರತಿಪಾದಿಸಿದ ಸುಪ್ರೀಂಕೋರ್ಟ್ ಆ ಡಾಕ್ಯುಮೆಂಟರಿ ಡಾಕ್ಯುಮೆಂಟರಿ ನಾಟಕದ ಪ್ರಸಾರವನ್ನು ತಡೆಹಿಡಿಯಲು ನಿರಾಕರಿಸಿತು. ತ್ವರಿತ ವಿಚಾರಣಾ ನ್ಯಾಯಾಲಯವು ಅಫ್ಝಲ್‌ಗುರು, ಶೌಕತ್ ಹಾಗೂ ಗೀಲಾನಿಗೆ ಗಲ್ಲು ಶಿಕ್ಷೆಯನ್ನು ವಿಧಿಸುವ ತೀರ್ಪನ್ನು ಘೋಷಿಸಿದ ಕೆಲವೇ ದಿನಗಳ ಮೊದಲು ಆ ಟಿವಿ ಚಿತ್ರ ಪ್ರಸಾರವಾಗಿತ್ತು. ತರುವಾಯ ಹೈಕೋರ್ಟ್ ಪ್ರಕರಣದ ಸೂತ್ರಧಾರಿಯೆಂಬ ಆರೋಪ ಹೊತ್ತಿದ್ದ ಪ್ರೊ.ಎಸ್.ಎ.ಆರ್.ಗೀಲಾನಿ ಹಾಗೂ ಅಫ್ಸಾನಗುರುಳನ್ನು ದೋಷಮುಕ್ತಗೊಳಿಸಿತು. ಇವರಿಬ್ಬರನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. ಆದರೆ 2005ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪೊಂದರಲ್ಲಿ ಮುಹಮ್ಮದ್‌ಅಫ್ಝಲ್‌ಗುರುಗೆ ಮೂರು ಬಾರಿ ಜೀವಾವಧಿ ಶಿಕ್ಷೆ ಹಾಗೂ ಅವಳಿ ಮರಣದಂಡನೆಯನ್ನು ಘೋಷಿಸಿತು.


   ಕೆಲವು ಹಿರಿಯ ಪತ್ರಕರ್ತರು ಕಟ್ಟಿದ ಸುಳ್ಳಿನ ಕಂತೆಗಳಿಗೆ ವ್ಯತಿರಿಕ್ತವೆಂಬಂತೆ ಅಫ್ಝಲ್‌ಗುರು 2001ರ ಡಿಸೆಂಬರ್ 13ರಂದು ಸಂಸತ್ ಭವನದ ಮೇಲೆ ದಾಳಿ ನಡೆಸಿದ ಉಗ್ರರಲ್ಲೊಬ್ಬನಾಗಿರಲಿಲ್ಲ. ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿ, ಅವರನ್ನು ಕೊಂದವನೂ ಆತನಲ್ಲ (ಬಿಜೆಪಿಯ ರಾಜ್ಯಸಭಾ ಎಂ.ಪಿ.ಚಂದನ್ ಮಿತ್ರಾ ಕೂಡಾ 2006ರ ಅಕ್ಟೋಬರ್ 7ರಂದು ಪಯೋನಿರ್ ಪತ್ರಿಕೆಯಲ್ಲಿ ಈ ಅನಿಸಿಕೆ ವ್ಯಕ್ತಪಡಿಸಿದ್ದರು). ಪೊಲೀಸ್ ಚಾರ್ಜ್‌ಶೀಟ್‌ನಲ್ಲೂ ಆ ರೀತಿ ಆರೋಪಿಸಲಾಗಿಲ್ಲ. ಆದರೆ ಪುರಾವೆಯು ಸಾಂದರ್ಭಿಕವಾದುದೆಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಆದು ಮುಂದುವರಿದು ‘‘ಭಾರೀ ಸಾವುನೋವಿಗೆ ಕಾರಣವಾದ ಈ ಘಟನೆಯು ಇಡೀ ದೇಶವನ್ನು ನಡುಗಿಸಿದೆ. ಅಪರಾಧಿಗೆ ಮರಣದಂಡನೆಯನ್ನು ವಿಧಿಸಿದಲ್ಲಿ ದೇಶದ ಆತ್ಮಸಾಕ್ಷಿಗೆ ತೃಪ್ತಿಯಾಗಲಿದೆ’’ಎಂದು ಹೇಳಿತ್ತು.
ಸಂಸತ್‌ಭವನ ದಾಳಿ ಪ್ರಕರಣದ ಕುರಿತಾದ ಸಮಗ್ರ ಆತ್ಮಸಾಕ್ಷಿಯನ್ನು ಯಾರು ರೂಪಿಸಿದರು. ಆ ಘಟನೆಯ ಸತ್ಯಾಂಶಗಳನ್ನು ಪತ್ರಿಕೆಗಳಿಂದ ಅಥವಾ ಟಿವಿಯಲ್ಲಿ ನಾವು ಕಂಡ ಸಿನೆಮಾಗಳಿಂದ ಅರಿತುಕೊಂಡೆವಾ?.


  ಎಸ್.ಎ.ಆರ್ ಗೀಲಾನಿಯನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯಗಳು, ಅಫ್ದಲ್ ಗುರುವನ್ನು ಅಪರಾಧಿಯೆಂದು ಘೋಷಿಸಿವೆ. ಹಾಗಾದರೆ ಈ ವಿಚಾರಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿತ್ತೆಂಬುದು ಹೇಳುವುದು ಎಷ್ಟು ಸರಿ ಎಂದು ವಾದಿಸುವವರೂ ಇದ್ದಾರೆ.
  ಸಂಸತ್ ಭವನದ ಮೇಲೆ ದಾಳಿ ಪ್ರಕರಣದ ವಿಚಾರಣೆಯು 2002ರ ಮೇನಲ್ಲಿ ಆರಂಭಗೊಂಡಿತು. ಆ ವೇಳೆ 9/11 ಭಯೋತ್ಪಾದಕ ದಾಳಿ ಘಟನೆಯ ಬಳಿಕ ಉಂಟಾದ ಭಯದಿಂದ ಮುಕ್ತವಾಗಲು ಜಗತ್ತು ಇನ್ನೂ ಒದ್ದಾಡುತ್ತಿತ್ತು. ಅಮೆರಿಕವು ಆಗ ತಾನೇ ಅಫ್ಘಾನಿಸ್ತಾನದಲ್ಲಿ ತನಗೆ ದೊರೆತ ಮಿಲಿಟರಿ ವಿಜಯದಿಂದ ಬೀಗುತ್ತಿತ್ತು. ಆಗ ಗುಜರಾತ್ ಭೀಕರ ನರಮೇಧಕ್ಕೆ ಸಾಕ್ಷಿಯಾಗಿತ್ತು ಮತ್ತು ಸಂಸತ್ ಭವನದ ಮೇಲಿನ ದಾಳಿ ಪ್ರಕರಣದಲ್ಲಿ ಕಾನೂನು ನಿಜಕ್ಕೂ ತನ್ನದೇ ದಾರಿಯಲ್ಲಿ ಸಾಗುತ್ತಿತ್ತು.
ಸಾಕ್ಷಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾಗುವುದು ಯಾವುದೇ ಕ್ರಿಮಿನಲ್ ಪ್ರಕರಣದ ವಿಚಾರಣೆಯ ನಿರ್ಣಾಯಕ ಹಂತವಾಗಿದೆ. ಸಾಕ್ಷಿಗಳನ್ನು ಪಾಟಿಸವಾಲಿಗೊಳಪಡಿಸುವಾಗ, ವಾದಪ್ರತಿವಾದಗಳನ್ನು ಮಂಡಿಸುವಾಗ ನಾವು ಕಾನೂನಿನ ಅಂಶಗಳ ಆಧಾರದಲ್ಲಿ ಮಾತ್ರ ವಾದಿಸಬಹುದಾಗಿದೆಯೇ ಹೊರತು ನಿಮಗೆ ಹೊಸ ರೀತಿಯ ಪುರಾವೆಗಳನ್ನು ಮಂಡಿಸಲು ಸಾಧ್ಯವಿಲ್ಲ. ಅತ್ಯಂತ ಬಿಗಿಭದ್ರತೆಯ ಕಾರಾಗೃಹದಲ್ಲಿ ಏಕಾಂತವಾಗಿ ಇರಿಸಲ್ಪಟ್ಟ ಅಫ್ಝಲ್ ಗುರು ಪರವಾಗಿ ವಾದಿಸಲು ಅಗ ವಕೀಲರೇ ಇರಲಿಲ್ಲ. ನ್ಯಾಯಾಲಯ ನೇಮಿಸಿದ ಕಿರಿಯ ನ್ಯಾಯವಾದಿಯು, ಒಮ್ಮೆಯೂ ಆತನನ್ನು ಜೈಲಿನಲ್ಲಿ ಭೇಟಿಯಾಗಿರಲಿಲ್ಲ. ಅಫ್ಝಲ್ ಪರವಾಗಿ ವಾದಿಸಲು ಯಾವುದೇ ಸಾಕ್ಷಿಯನ್ನು ಆತ ಕರೆಸಿಕೊಳ್ಳಲಿಲ್ಲ ಹಾಗೂ ಪ್ರಾಸಿಕ್ಯೂಶನ್ ಸಾಕ್ಷಿಯನ್ನು ಪಾಟಿಸವಾಲಿಗೊಳಪಡಿಸಲಿಲ್ಲ. ನ್ಯಾಯಾಧೀಶರು ಕೂಡಾ ಆ ಪರಿಸ್ಥಿತಿಯಲ್ಲಿ ತಾನೇನೂ ಮಾಡಲು ಸಾಧ್ಯವಿಲ್ಲವೆಂದು ಅಸಹಾಯಕತೆಯನ್ನು ತೋಡಿಕೊಂಡಿದ್ದರು.


 ಹೀಗಿದ್ದೂ ಉತ್ತರಿಸಲಾಗದ ಕೆಲವು ಪ್ರಶ್ನೆಗಳು ಈ ಪ್ರಕರಣವನ್ನು ಕಾಡುತ್ತಿವೆ. ಅಂತಹ ಕೆಲವು ಉದಾಹರಣೆಗಳು ಇಲ್ಲಿವೆ.
 1.ಅಫ್ಝಲ್‌ನನ್ನು ಪೊಲೀಸರು ಹೇಗೆ ಬಂಧಿಸಿದರು?. ಎಸ್.ಎ.ಆರ್.ಗೀಲಾನಿಯ ಮೂಲಕ ಸಂಸತ್ ಭವನ ದಾಳಿ ಪ್ರಕರಣದಲ್ಲಿ ಅಫ್ಝಲ್‌ನ ಪಾತ್ರವನ್ನು ತಿಳಿದುಕೊಂಡೆವೆಂದು ಪೊಲೀಸರು ಹೇಳುತ್ತಾರೆ. ಆದರೆ ಪೊಲೀಸ್ ದಾಖಲೆಗಳ ಪ್ರಕಾರ, ಗೀಲಾನಿಯನ್ನು ಬಂಧಿಸುವ ಮೊದಲೇ ಪೊಲೀಸರು ಅಫ್ಧಲ್‌ನ ಬಂಧನಕ್ಕಾಗಿ ಜಾಲ ಬೀಸಿದ್ದರು. ಹೈಕೋರ್ಟ್ ಇದನ್ನು ‘ವಿಷಯದ ವ್ಯತಿರಿಕ್ತತೆ’ ಎಂದು ಕರೆದಿದೆ.


     2.ಸಂಸತ್ ಭವನ ದಾಳಿ ಪ್ರಕರಣದಲ್ಲಿ ಅಫ್ಝಲ್ ವಿರುದ್ಧ ಲಭಿಸಿರುವ ಪ್ರಮುಖ ಸಾಕ್ಷಗಳೆಂದರೆ ಆತನಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳೆಂದು ಪೊಲೀಸರು ಹೇಳಿಕೊಂಡಿದ್ದಾರೆ. ಬಂಧನಾದೇಶದ ನೋಟಿಸ್‌ಗಳಿಗೆ ಗೀಲಾನಿಯ ಸಹೋದರ ಬಿಸ್ಮಿಲ್ಲಾ ಸಹಿಹಾಕಿದ್ದನು. ಈ ನೋಟಿಸ್‌ಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆಯ ಇಬ್ಬರು ವ್ಯಕ್ತಿಗಳ ಸಹಿ ಇತ್ತು. ಅವರಲ್ಲಿ ಒಬ್ಬಾತ ಶರಣಾಗತಿಗೊಂಡ ಉಗ್ರನಾಗಿದ್ದು, ಈ ಹಿಂದೆ ಆತ ಅಫ್ಝಲ್‌ಗೆ ಕಿರುಕುಳ ನೀಡಿದವನಾಗಿದ್ದ. ಅಫ್ಝಲ್‌ನಿಂದ ವಶಪಡಿಸಿಕೊಳ್ಳಲಾದ ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್‌ಗಳಿಗೆ ಮೊಹರು ಮಾಡಲಾಗಿರಲಿಲ್ಲ. ಯಾವುದೇ ಅಪರಾಧದ ಪುರಾವೆಯಾಗಿ ವಶಪಡಿಸಿಕೊಳ್ಳಲಾದ ವಸ್ತುಗಳನ್ನು ಪೊಲೀಸರು ಸೀಲ್ ಮಾಡುವುದು ಅತ್ಯಗತ್ಯವಾಗಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಲ್ಯಾಪ್‌ಟಾಪ್‌ನ ಹಾರ್ಡ್ ಡಿಸ್ಕ್‌ನಲ್ಲಿ ಕೇವಲ ಗೃಹ ಸಚಿವಾಲಯದ ನಕಲಿ ಪಾಸ್‌ಗಳು ಹಾಗೂ ಸಂಸತ್ ಭವನದ ಆವರಣವನ್ನು ಪ್ರವೇಶಿಸಲು ಉಗ್ರರು ಬಳಸಿದ ನಕಲಿ ಗುರುತುಚೀಟಿಗಳ ವಿವರಗಳು ಹಾಗೂ ಸಂಸತ್‌ಭವನಕ್ಕೆ ಸಂಬಂಧಿದ ಝೀಟಿವಿ ವಿಡಿಯೋ ಕ್ಲಿಪ್ಪಿಂಗ್‌ನ್ನು ಮಾತ್ರ ಒಳಗೊಂಡಿದ್ದವು. ಆದರೆ ಪೊಲೀಸರು ಹೇಳುವ ಪ್ರಕಾರ ಅಫ್ಝಲ್ ಕೆಲವು ಅತ್ಯಂತ ಮುಖ್ಯಾಂಶಗಳನ್ನು ಹೊರತುಪಡಿಸಿ ಲ್ಯಾಪ್‌ಟಾಪ್‌ನಲ್ಲಿನ ಉಳಿದೆಲ್ಲ ಮಾಹಿತಿಗಳನ್ನು ಅಳಿಸಿಹಾಕಿದ್ದ ಹಾಗೂ ಆತ ಅದನ್ನು, ಭಯೋತ್ಪಾದನಾ ಕಾರ್ಯಾಚರಣೆಯ ಮುಖ್ಯಸ್ಥನೆನ್ನಲಾದ ಘಾಝಿ ಬಾಬಾನಿಗೆ ಹಸ್ತಾಂತರಿಸಲು ಧಾವಿಸುತ್ತಿದ್ದ.


3.ಪ್ರಾಸಿಕ್ಯೂಶನ್ ಪರ ಸಾಕ್ಷಿದಾರ ಕಮಲ್ ಕಿಶೋರ್ ಎಂಬಾತ, ಪ್ರಕರಣದ ಎಲ್ಲ ಆರೋಪಿಗಳಿಗೆ ತಾನು ಸಿಮ್‌ಕಾರ್ಡ್‌ಗಳನ್ನು 2001ರ ಡಿಸೆಂಬರ್ 4ರಂದು ಮಾರಾಟ ಮಾಡಿರುವುದಾಗಿ ಹೇಳಿಕೊಂಡಿದ್ದ. ಆದರೆ ಪ್ರಾಸಿಕ್ಯೂಶನ್‌ನ ಸ್ವಂತ ದಾಖಲೆಗಳಲ್ಲಿ, ವಾಸ್ತವವಾಗಿ ಆ ಸಿಮ್ 2001ರ ನವೆಂಬರ್ 6ರಂದು ಸಕ್ರಿಯವಾಗಿತ್ತು.


ಹೀಗೆ ಪ್ರಕರಣದ ವಿಚಾರಣೆಯನ್ನು ಕೆದಕುತ್ತಾ ಹೋದರೆ ಸುಳ್ಳುಗಳು ಹಾಗೂ ಕಪೋಲಕಲ್ಪಿತ ಸಾಕ್ಷಗಳ ಕಂತೆಗಳು ಒಂದೊಂದಾಗಿ ಅನಾವರಣಗೊಳ್ಳತೊಡಗುತ್ತವೆ. ನ್ಯಾಯಾಲಯಗಳ ಗಮನಕ್ಕೆ ಈ ವಿಷಯಗಳು ಗಮನಕ್ಕೆ ಬಂದರೂ ಸಹ, ಅವು ಪೊಲೀಸರಿಗೆ ಮೃದುವಾಗಿ ಬುದ್ದಿ ಹೇಳಿ ಸುಮ್ಮನಾಗುತ್ತವೆಯೇ ಹೊರತು ಹೆಚ್ಚಿನದೇನೂ ಆಗುವುದಿಲ್ಲ.


    ಶರಣಾಗತರಾದ ಹೆಚ್ಚಿನ ಉಗ್ರಗಾಮಿಗಳಂತೆ ಅಫ್ಧಲ್ ಗುರು ಚಿತ್ರಹಿಂಸೆ,ಬ್ಲಾಕ್‌ಮೇಲ್, ಸುಲಿಗೆಗಳಿಂದ ಪೀಡಿತವಾದ ಕಾಶ್ಮೀರದಲ್ಲಿ ಪೊಲೀಸರಿಗೆ ಸುಲಭವಾಗಿ ದಕ್ಕಿದ ಬೇಟೆಯಾಗಿದ್ದಾನೆ. ನಿಜವಾಗಿಯೂ ಸಂಸತ್ ಭವನ ದಾಳಿ ಪ್ರಕರಣದ ರಹಸ್ಯವನ್ನು ಭೇದಿಸಲು ಯಾರಿಗಾದರೂ ಆಸಕ್ತಿಯಿದ್ದಲ್ಲಿ, ಆತ ರಾಶಿರಾಶಿಯಾಗಿರುವ ಪುರಾವೆಗಳ ಕುರಿತಾಗಿ ನಡೆದಿರುವ ತನಿಖೆಗಳನ್ನು ಜಾಲಾಡಬೇಕಾಗಿದೆ. ಆದರೆ ಯಾರೂ ಕೂಡಾ ಹಾಗೆ ಮಾಡಿಲ್ಲ. ಆ ಮೂಲಕ ಈ ಸಂಚಿನ ನಿಜವಾದ ಸೂತ್ರಧಾರರು ಇನ್ನೂ ಗುರುತಿಸಲ್ಪಡದೆ ಹಾಗೂ ತನಿಖೆಗೊಳಪಡದೆ ತೆರೆಯಮರೆಯಲ್ಲೇ ಉಳಿದಿದ್ದಾರೆ.
 ಆದರೆ ಈಗ ಅಫ್ಝಲ್ ಗುರುನನ್ನು ಗಲ್ಲಿಗೇರಿಸಲಾಗಿದೆ. ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ತೃಪ್ತಿಯಾಗಿದೆಯೆಂದು ಆಶಿಸುತ್ತೇನೆ ಅಥವಾ ರಕ್ತದಿಂದ ಕೂಡಿದ ನಮ್ಮ ಕಪ್ ಇನ್ನೂ ಅರ್ಧ ಮಾತ್ರ ತುಂಬಿದೆಯೇ ಎಂಬುದನ್ನು ತಿಳಿಯಲಿಚ್ಛಿಸುವೆ?

Tuesday, February 5, 2013

ಕಮಲ್ ಹಾಸನ್ ಅವರ ವಿಶ್ವ ವಿ-ರೂಪಂ

 ‘ನೀವು ಒಂದೋ ನಮ್ಮ ಜೊತೆಗೆ, ಇಲ್ಲವೇ ಭಯೋತ್ಪಾದಕರ ಜೊತೆಗೆ’ ಸೆಪ್ಟೆಂಬರ್ 11ರ ದಾಳಿಯ ಬಳಿಕ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್‌ಬುಶ್ ವಿಶ್ವದ ಮುಂದಿಟ್ಟ ಎರಡು ಆಯ್ಕೆಗಳು. ಅಮೆರಿಕದ ಜೊತೆಗೆ ನಿಲ್ಲದವರೆಲ್ಲ ಪರೋಕ್ಷವಾಗಿ ಭಯೋತ್ಪಾದಕರ ಜೊತೆಗೆ ನಿಂತಿದ್ದಾರೆಂದೇ ಅರ್ಥ ಎನ್ನುವ ಫತ್ವಾವನ್ನು ಜಾರ್ಜ್ ಬುಶ್ ಹೊರಡಿಸಿದ್ದರು. ಕಮಲ್ ಹಾಸನ್ ತನ್ನ ವಿಶ್ವವನ್ನು ಅಮೆರಿಕದ ಜೊತೆಗೆ ಜೋಡಿಸಿಕೊಂಡು, ವಿಶ್ವರೂಪಂನ್ನು ಬಿಡಿಸಿದ್ದಾರೆ. ಇದು ವಿವಾದವಾಗಬೇಕಾದ, ಚರ್ಚೆಯಾಗಬೇಕಾದ ಚಿತ್ರವೇ ಅಲ್ಲ. ಅಮೆರಿಕದ ಕಣ್ಣಲ್ಲಿ ಕಮಲ್‌ಹಾಸನ್ ಅಫ್ಘಾನಿಸ್ತಾನವನ್ನು ನೋಡಿದ್ದಾರೆ ಎನ್ನುವುದು ಯಾವ ಕಾರಣಕ್ಕೂ ಅಪರಾಧವಲ್ಲ. ಹಾಗೆ ನೋಡುವುದು ಜಗತ್ತಿನ ‘ಮುಖ್ಯವಾಹಿನಿ’ ಎಂದು ಸ್ವಯಂ ಘೋಷಿಸಿಕೊಂಡವರ ಹಕ್ಕು. ಇಡೀ ಚಿತ್ರ, ಅಮೆರಿಕ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತದೆ. ಮತ್ತು ಅಮೆರಿಕದ ವಿರುದ್ಧ ಹೋರಾಡುವವರು ಭಯೋತ್ಪಾದಕರು ಎನ್ನುವುದನ್ನು ಸಾಧಿಸುವುದಕ್ಕೆ ಪ್ರಯತ್ನಿಸುತ್ತದೆ. ಜಗತ್ತಿನ ಇಂದಿನ ರಾಜಕೀಯ ವಿದ್ಯಮಾನವನ್ನು ಕಮಲ್ ಹಾಸನ್ ಹೇಗೆ ಅರ್ಥಮಾಡಿಕೊಂಡಿದ್ದಾರೆ ಎನ್ನುವುದನ್ನಷ್ಟೇ ಈ ಚಿತ್ರದಲ್ಲಿ ನೋಡಬಹುದು. ಅದು ಅವರ ಅಭಿವ್ಯಕ್ತಿ ಸ್ವಾತಂತ್ರ. ನಾವದನ್ನು ಒಪ್ಪಲೇ ಬೇಕು. ಒಬ್ಬ ಸೃಜನ ಶೀಲ ಕಲಾವಿದ ವಿಶ್ವ ರಾಜಕೀಯದಂತೆ ಕುರಿತಂತೆ ಅಜ್ಞಾನಿಯಾಗುವುದಕ್ಕೆ ಎಲ್ಲ ಹಕ್ಕೂ ಇದೆ. ಅದನ್ನು ನಾವು ಮನ್ನಿಸಲೇಬೇಕು.

ಸೃಜನಶೀಲ ಅಭಿವ್ಯಕ್ತಿಯ ಇನ್ನೊಂದು ಹೆಸರು ಕಮಲ್. ಮನಸ್ಸು, ದೇಹ ಎಲ್ಲವನ್ನು ಅಭಿನಯದಲ್ಲಿ ತೊಡಗಿಸಿಕೊಳ್ಳುವ ಕಮಲ್ ಇಲ್ಲದ ಭಾರತೀಯ ಚಿತ್ರ ನೀರಸ. ‘ನಾಯಕನ್’ ಚಿತ್ರದ ಕಮಲ್ ಮೂಲಕ ಇಂದಿಗೂ ಧಾರಾವಿಯ ವರದರಾಜ ಮೊದಲಿಯಾರ್ ನಮ್ಮ ಏದುಸಿರುಗಳಲ್ಲಿ ಒಂದಾಗಿದ್ದಾರೆ. ಯಾವುದೇ ಪಾತ್ರ, ವಸ್ತುವನ್ನು ಬ್ಲಾಕ್ ಎಂಡ್ ವೈಟ್‌ನಲ್ಲಿ ಕಮಲ್ ನೋಡಿದ್ದು ಕಡಿಮೆ. ಆದರೆ ಕೆಲವು ಚಿತ್ರಗಳಲ್ಲಿ ಕಮಲ್ ಬೇಕು ಬೇಕೆಂದೆ ಎಡವಿ ಬೀಳುತ್ತಾರೆ. ಯಾಕೆ? ಕಮಲ್‌ನ ಆಳದಲ್ಲಿ ವಿಲಗುಟ್ಟುವ ಯಾವ ಗಾಯ ಅವರನ್ನು ಅವರಿಗರಿವಿಲ್ಲದೆ ಇಂತಹ ತಪ್ಪುಗಳನ್ನು ಮಾಡಿಸುತ್ತದೆ.

 ‘ದಶಾವತಾರಂ’ ಚಿತ್ರ ನಿಮಗೆ ಗೊತ್ತಿರಬಹುದು. ಅದರ ಮೊದಲ ಅಧ್ಯಾಯ ತೆರೆದುಕೊಳ್ಳುವುದು ಕಮಲ್‌ನ ಇಂತಹ ತಪ್ಪಿನ ಮೂಲಕವೇ. ಚೋಳರ ಕಾಲದಲ್ಲಿ ತಮಿಳುನಾಡಲ್ಲಿ ಶೈವ-ವೈಷ್ಣವರ ನಡುವಿನ ಸಂಘರ್ಷವನ್ನು ಅದು ತೋರಿಸುತ್ತದೆ. ಅಲ್ಲಿಯೂ ಅವರು ವಿಶ್ವರೂಪಂನ ತಪ್ಪುಗಳನ್ನೇ ಮಾಡುತ್ತಾರೆ. ಶೈವರನ್ನು ಖಳನಾಯಕರಾಗಿ, ಕ್ರೌರ್ಯ ಮೈವೆತ್ತ ರಾಕ್ಷರರಂತೆ ಬಿಂಬಿಸಿದರೆ, ವೈಷ್ಣವರನ್ನು ದಮನಿತ ಅಮಾಯಕರಂತೆ ತೋರಿಸುತ್ತಾರೆ. ಶೈವರ ಪಾತ್ರಗಳು ಅಲ್ಲಿ ವಿಕಾರವಾಗಿವೆ. ಅದು ಮೂರ್ತವಾಗಿಯೂ, ಅಮೂರ್ತವಾಗಿಯೂ. ವಿಷ್ಣು ಭಕ್ತನನ್ನು ಕಡಲಿಗೆಸೆಯುವ ಆ ದೃಶ್ಯ ಸಾಕಷ್ಟು ವಿವಾದಕ್ಕೆಡೆ ಮಾಡಿತ್ತು. ಪೆರಿಯಾರ್‌ನ ಕುರಿತಂತೆಯೂ ಸಣ್ಣದೊಂದು ಅಸಮಾಧಾನ ಚಿತ್ರದಲ್ಲಿ ಮಿಸುಕಾಡುತ್ತಿತ್ತು. ಕಮಲ್‌ನ ತಂದೆ ಶ್ರೀನಿವಾಸನ್ ಕಾಲಘಟ್ಟದಲ್ಲಿ ಮತ್ತು ತದನಂತರದ ಕಾಲಘಟ್ಟದಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರು ಎದುರಿಸಿದ ದ್ರಾವಿಡ ಚಳವಳಿ, ಪೆರಿಯಾರ್ ಬೆಂಬಲಿಗರಿಂದ ನಡೆದ ಪ್ರತಿಭಟನೆಗಳು ಪರೋಕ್ಷವಾಗಿ ಆ ಚಿತ್ರದಲ್ಲಿ ತನ್ನ ಪರಿಣಾಮವನ್ನು ಬೀರಿರುವುದರಲ್ಲಿ ಯಾವ ಸಂಶಯವೂ ಇಲ್ಲ. ದ್ರಾವಿಡ ಚಳವಳಿಯ ಬಲಿಪಶುಗಳಲ್ಲಿ ಕಮಲ್ ಹಾಸನ್‌ನ ತಂದೆಯೂ ಒಬ್ಬರು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲೇ ಬ್ರಾಹ್ಮಣ ವಿರೋಧಿ ಚಳವಳಿಯೂ ತಮಿಳು ನಾಡಿನಲ್ಲಿ ತಲೆಯೆತ್ತಿತ್ತು. ಈ ಸಂದರ್ಭದಲ್ಲಿ ಕಮಲ್‌ನ ತಂದೆ, ಸಂಬಂಧಿಕರೂ ಇದರ ಪರಿಣಾಮವನ್ನು ಅನುಭವಿಸಬೇಕಾಗಿತ್ತು. ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಕಮಲ್‌ನ ತಂದೆ ಶ್ರೀನಿವಾಸನ್ ಜೈಲು ಸೇರಿದಾಗ ಅಲ್ಲಿ ಬ್ರಾಹ್ಮಣ ವಿರೋಧಿಗಳಿಂದ ಅವರ ಮೇಲೆ ಹಲ್ಲೆಯೂ ನಡೆದಿತ್ತು. ಆ ಸಂದರ್ಭದಲ್ಲಿ ಶ್ರೀನಿವಾಸನ್ ಅವರ ಗೆಳೆಯ, ಮುಸ್ಲಿಮ್ ಸ್ವಾತಂತ್ರ ಹೋರಾಟಗಾರ ಯಾಕೂಬ್ ಹಸನ್ ಅವರು ಶ್ರೀನಿವಾಸನ್‌ರನ್ನು ಕಾಪಾಡಿದ್ದರು. ಈ ಕಾರಣದಿಂದಲೇ ಶ್ರೀನಿವಾಸನ್ ತನ್ನ ಮೂರು ಮಕ್ಕಳಿಗೆ ಗೆಳೆಯನ ಸ್ಮರಣಾರ್ಥ ಹಸನ್ ಎಂಬ ಹೆಸರನ್ನೂ ಇಟ್ಟರು.

ತಂದೆಯ ಬದುಕಿನಲ್ಲಾದ ನೋವನ್ನು ಕಮಲ್ ಕೂಡ ಎದುರಿಸಿದ್ದಾರೆ. ಅದು ಆಳದಲ್ಲಿ ಮುಲುಗುಟ್ಟುತ್ತಿರುವುದರಿಂದಲೇ ದಶಾವತಾರಂ ಚಿತ್ರದಲ್ಲಿ ಅವರಿಂದ ಅಂತಹದೊಂದು ದೃಶ್ಯ ಹೊರ ಬರುವುದಕ್ಕೆ ಕಾರಣವಾಗಿರಬಹುದು. ಶೈವರ ಕುರಿತ ಸಿಟ್ಟು, ಆಕ್ರೋಶಗಳೇ ಅವರ ಪಾತ್ರಗಳನ್ನು ಅಷ್ಟು ಭೀಕರವಾಗಿ ಕಟ್ಟಿಕೊಡಲು ಅವರಿಗೆ ಅನಿವಾರ್ಯವನ್ನು ತಂದೊಡ್ಡಿರಬಹುದು. ವಿಶ್ವರೂಪವನ್ನೇ ತೆಗೆದುಕೊಳ್ಳೋಣ. ಇದೊಂದು ಅಪ್ಪಟ ಕಮರ್ಶಿಯಲ್ ಚಿತ್ರ. ಕಮರ್ಶಿಯಲ್ ಚಿತ್ರವೆನ್ನುವಾಗ ಅಭಿವ್ಯಕ್ತಿ ಸ್ವಾತಂತ್ರದ ಮಾತು ತನ್ನದೇ ಆದ ಸೀಮಿತತೆಯನ್ನು ಪಡೆಯುತ್ತದೆ. ಒಬ್ಬ ತನ್ನ ಕಮರ್ಶಿಯಲ್ ಚಿತ್ರವನ್ನು ಯಶಸ್ವಿಗೊಳಿಸಲು ಬೇಕಾಬಿಟ್ಟಿಯಾಗಿ ಅಶ್ಲೀಲ ದೃಶ್ಯಗಳನ್ನು ಹಾಕುವುದು ಹೇಗೆ ಅಭಿವ್ಯಕ್ತಿ ಸ್ವಾತಂತ್ರದ ವ್ಯಾಪ್ತಿಯಲ್ಲಿ ಬರುವುದಿಲ್ಲವೋ ಹಾಗೆಯೇ, ವಿವಾದ ಮಾಡುವುದಕ್ಕಾಗಿಯೇ ಕೆಲವೊಮ್ಮೆ ಹಿಂಸೆ, ಕ್ರೌರ್ಯ, ವಿದ್ವೇಷಗಳನ್ನು ತುರುಕುವುದೂ ಅಭಿವ್ಯಕ್ತಿ ಸ್ವಾತಂತ್ರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ವಿಶ್ವರೂಪಂನಲ್ಲಿ ಕ್ರೌರ್ಯ, ರಕ್ತವನ್ನು ಕೆಲವೆಡೆ ಅತ್ಯಂತ ಭಯಾನಕವಾಗಿ ತೋರಿಸಲಾಗಿದೆ. ಇದು ಇಸ್ಲಾಮ್‌ನ ಕುರಿತಂತೆ ಯಾವ ಧೋರಣೆಯನ್ನೂ ಹೊಂದಿಲ್ಲ. ಆದರೆ, ಅಮೆರಿಕದ ಭಯೋತ್ಪಾದಕ ವಿರೋಧಿ ಹೋರಾಟಕ್ಕೆ ತನ್ನದೇ ಆದ ಶಹಬಾಷ್‌ಗಿರಿಯನ್ನು ನೀಡಲು ಪ್ರಯತ್ನಿಸುತ್ತದೆ. ಅಫ್ಘಾನಿಸ್ತಾನ ಸೇರಿದಂತೆ ಜಾಗತಿಕವಾಗಿ ಮುಸ್ಲಿಮ್ ರಾಷ್ಟ್ರಗಳ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ‘ಸರಿ’ ಎಂದು ಹೇಳಲು ಪ್ರಯತ್ನಿಸುತ್ತಿದೆ. ವಿಶ್ವ ಭಯೋತ್ಪಾದನೆಯ ಹೆಸರಿನಲ್ಲಿ ನಡೆಯುತ್ತಿರುವ ಅಘ್ಘಾನಿಸ್ತಾನ, ಇರಾಕ್‌ನಂತಹ ರಾಷ್ಟ್ರಗಳ ದಮನವನ್ನು ಇಷ್ಟು ಸರಳವಾಗಿ ಕಮಲ್ ಚಿಂತಿಸಿದ್ದಾರೆ ಎನ್ನುವುದು ಮಾತ್ರ ಅವರ ಸೃಜನಶೀಲ ವ್ಯಕ್ತಿತ್ವಕ್ಕೆ ಭಾರೀ ಅವಮಾನವೇ ಸರಿ. ಅಮೆರಿಕ ಭಾರತವನ್ನು ತನ್ನ ಚೇಲಾ ರಾಷ್ಟ್ರವಾಗಿಸಲು ಇಚ್ಚೆ ಪಡುತ್ತಿರುವ ದಿನಗಳಲ್ಲಿ, ಕಮಲ್ ಮೂಲಕ ಅಮೆರಿಮಕವೇ ಇಂತಹದೊಂದು ಸಿನಿಮಾವನ್ನು ಭಾರತಕ್ಕೆ ಬಡಿಸಿದೆ ಎಂದರೆ ಅದರಲ್ಲಿ ಅಚ್ಚರಿ ಪಡಬೇಕಾದುದೇನೂ ಇಲ್ಲ. ಮಾತು ಮಾತಿಗೆ ವಿಶ್ವರೂಪಂ ಎನ್ನುವ ತನ್ನ ಕಮರ್ಶಿಯಲ್ ಚಿತ್ರದ ಕುರಿತಂತೆ ಹುತಾತ್ಮ ಹೇಳಿಕೆಯನ್ನು ನೀಡುತ್ತಿರುವ ಕಮಲ್ ಅವರ ಭಾರತ ತ್ಯಜಿಸುವ ಮಾತು ತೀರಾ ಆಕಸ್ಮಿಕವೇನೂ ಅಲ್ಲ. ಬಾಲಿವುಡ್‌ನ್ನು ಬಿಟ್ಟು ಹಾಲಿವುಡ್‌ಗೆ ತೆರಳುವ ಅವರ ಕನಸಿಗೆ ನಿಧಾನಕ್ಕೆ ರೆಕ್ಕೆ ಬಂದಂತಿದೆ. ಹಾಲಿವುಡ್‌ನಲ್ಲಿ ತೊಡಗಿಸಿಕೊಳ್ಳುವ ಅವರ ಆಸೆಯ ಭಾಗವಾಗಿ, ಈಗಾಗಲೇ ನಿರ್ಮಾಪಕ ಬೇರಿ ಎಮ್. ಓಸ್‌ಬೋರ್ನ್(ಲಾರ್ಡ್ ಆಫ್ ದಿ ರಿಂಗ್ಸ್) ಕಮಲ್ ಜೊತೆಗೆ ಹೊಸ ಚಿತ್ರ ಮಾಡುವ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಹಾಲಿವುಡ್‌ನಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದಲೇ, ಆಂಗ್‌ಲೀಯಂತಹ ನಿರ್ದೇಶಕರೂ ಕಮಲ್ ಜೊತೆಗೆ ಈಗಾಗಲೇ ಕೈ ಜೋಡಿಸಿದ್ದಾರೆ. ಇದೆಲ್ಲದರ ಅರ್ಥ, ಭಾರತವನ್ನು ಬಿಡಲು ವರ್ಷಗಳ ಹಿಂದೆಯೇ ಕಮಲ್ ನಿರ್ಧರಿಸಿದ್ದಾರೆ. ಮತ್ತು ವಿಶ್ವರೂಪಂ ಚಿತ್ರದ ಮೂಲಕ ಅದಕ್ಕೊಂದು ವಾತಾವರಣವನ್ನು, ವೇದಿಕೆಯನ್ನು ನಿರ್ಮಿಸಿದ್ದಾರೆ.

   ಈ ಚಿತ್ರ ವಿವಾದವಾಗುವುದು ಕಮಲ್‌ಗೂ, ಕಮಲ್‌ನ ಹಿಂದಿರುವ ಅಮೆರಿಕ ಹಿತಾಸಕ್ತಿಗಳಿಗೆ ಅತ್ಯಗತ್ಯವಾಗಿತ್ತು. ಆ ಮೂಲಕ ವಿಶ್ವರೂಪಂ ಏನನ್ನು ಹೇಳುತ್ತದೆಯೋ ಅದನ್ನ್ನು ಸಮರ್ಥಿಸಿಗೊಳ್ಳುವುದೇ ಇದರ ಹಿಂದಿರುವವರ ಉದ್ದೇಶ. ಅಮೆರಿಕದ ಭಯೋತ್ಪಾದನಾ ವಿರೋಧಿ ಯುದ್ಧಕ್ಕೆ ಪರವಾಗಿರುವ ವಾತಾವರಣವನ್ನು ರೂಪಿಸುವುದೇ ಚಿತ್ರದ ಮೊದಲ ಗುರಿ. ಹಾಲಿವುಡ್ ಹಿತಾಸಕ್ತಿಗಳು ಕಮಲ್‌ನಂತಹ ಸೃಜನಶೀಲ ಕಲಾವಿದನನ್ನೇ ಇದಕ್ಕಾಗಿ ಬಳಸಿಕೊಂಡಿದೆ. ಭಾರತದಲ್ಲಿ ಒಂದು ಕೃತಕ ವಿವಾದವನ್ನು ವಿಶ್ವರೂಪಂಗಂಗಾಗಿ ಸೃಷ್ಟಿಸಲಾಯಿತು. ಈ ಕೃತಕ ವಿವಾದದ ನಿರ್ದೇಶನದ ಹೊಣೆಯನ್ನು ತಮಿಳುನಾಡಿನ ಜಯಲಲಿತಾ ಹೊತ್ತುಕೊಂಡರು. ಡಿಟಿಎಚ್‌ನಿಂದ ಈ ವಿವಾದ ಮೊದಲು ಆರಂಭವಾಯಿತು. ಪ್ರಸಾರ ಹಕ್ಕು ಜಯಲಲಿತಾ ಟಿವಿಗೆ ಸಿಗದೇ ವಿಜಯ್ ಟಿವಿಗೆ ಸಿಕ್ಕಿದಾಕ್ಷಣ, ಜಯಲಲಿತಾ ಹೊರಾಂಗಣ ಚಿತ್ರೀಕರಣವನ್ನು ಆರಂಭಿಸಿದರು. ಭಾರತದ ಶೇ. 00.1ರಷ್ಟಿರುವ ಮುಸ್ಲಿಮರ ಒಂದು ಗುಂಪನ್ನು ಬಳಸಿಕೊಂಡು ಜಯಲಲಿತಾ ಪ್ರತಿಭಟನೆಯನ್ನು ಹಮ್ಮಿಕೊಂಡರು. ಭಾರತದ ಮುಸ್ಲಿಮರು ವಿಶ್ವರೂಪಂನ್ನು ಪ್ರತಿಭಟಿಸುತ್ತಿದ್ದಾರೆ ಎಂಬಂತಹ ವಾತಾವರಣವನ್ನು ಮಾಧ್ಯಮಗಳು ಮುಖಪುಟದಲ್ಲಿ
ನಿರ್ಮಿಸಿದವು. ಈ ಮೂಲಕ ಒಂದು ಸಾಮಾನ್ಯದಲ್ಲಿ ಸಾಮಾನ್ಯವಾಗಿರುವ ಸಿನಿಮಾ(ತಂತ್ರಜ್ಞಾನ ಹೊರತು ಪಡಿಸಿ)ವನ್ನು ಅಭಿವ್ಯಕ್ತಿಯ ಸೋಲು-ಗೆಲುವುಗಳ ಮಾನದಂಡಗಳನ್ನಿಟ್ಟು ವಿಶ್ಲೇಷಣೆ ನಡೆದವು. ಅಭಿವ್ಯಕ್ತಿಯ ದಮನ ಎಂದಾಗ ಮುಸ್ಲಿಮ್ ಮತಾಂಧತೆ ಚರ್ಚೆಗೆ ಬರಲೇಬೇಕಲ್ಲ. ಮುಸ್ಲಿಮರ ಮತಾಂಧತೆ ಮತ್ತೊಮ್ಮೆ ಸುದ್ದಿಗೆ ಬಂದವು. ಕಮಲ್ ‘ನಾನು ನಷ್ಟದಿಂದ ಸರ್ವನಾಶವಾಗುತ್ತೇನೆ...ದೇಶ ಬಿಡುತ್ತೇನೆ’’ ಎಂದು ಅಲವತ್ತುಕೊಂಡರು. ಮಾಧ್ಯಮಗಳು ಕಂಗಾಲಾದವು. ಕಮಲ್‌ನನ್ನು ಸರ್ವನಾಶವಾಗಲು ಖಂಡಿತವಾಗಿಯೂ ಅವರ ಬೆನ್ನಿಗಿರುವವರು ಬಿಡಲಾರರು. ಕಮಲ್ ಸರ್ವನಾಶವಾಗುವಷ್ಟು ದಡ್ಡನಂತೂ ಅಲ್ಲವೇ ಅಲ್ಲ. ಯಾಕೆಂದರೆ, ಕಮಲ್ ಸರ್ವನಾಶವಾಗಬೇಕಾದರೆ ದಶಾವತಾರಂನಲ್ಲೇ ಸರ್ವನಾಶವಾಗಬೇಕಾಗಿತ್ತು. ಚಿತ್ರಮಂದಿರಗಳಿಂದ ಒಂದೇ ವಾರದಲ್ಲಿ ಎತ್ತಂಗಡಿಯಾದ ಹಲವು ಚಿತ್ರಗಳನ್ನು ಪಟ್ಟಿ ಮಾಡಬಹುದಾಗಿದೆ. ಅವರು ಮತ್ತೆ ಮತ್ತೆ ಎದ್ದು ಬಂದಿದ್ದಾರೆ. ಕಮಲ್ ಶೀಘ್ರವೇ ತನ್ನ ಮೆಚ್ಚಿನ ಹಾಲಿವುಡ್‌ನ ಜೊತೆಗೂಡುವ ದಿನ ಹತ್ತಿರವಾಗಲಿದೆ ಎನ್ನುವುದರ ಸಂಕೇತವೇ ಕಮಲ್ ಅವರ ವಿಶ್ವ ವಿರೂಪಂ.

 ಕಮಲ್ ‘ವಿಶ್ವ ರೂಪಂ’ನಲ್ಲಿ ಭಾರತೀಯ, ದೇಶಭಕ್ತ ಮುಸಲ್ಮಾನನಾಗಿ ನಟಿಸಿದ್ದಾರೆ. ನಾನು ಭಾರತೀಯ ಮುಸ್ಲಿಮರನ್ನು ಕೆಟ್ಟದಾಗಿ ಬಿಂಬಿಸಿಲ್ಲ ಎಂದಿದ್ದಾರೆ. ಕಮಲ್‌ನ ಪ್ರಕಾರ ಭಾರತೀಯ ಮುಸ್ಲಿಮರು ಒಳ್ಳೆಯವರಾಗಿ ಗುರುತಿಸಲ್ಪಡಬೇಕಾದರೆ ಒಂದೋ ಕಥಕ್ ಕಲಿಯಬೇಕು. ಇಲ್ಲವೇ ರಾ ಏಜೆಂಟ್ ಆಗಬೇಕು. ಇದರ ಜೊತೆ ಜೊತೆಗೆ ನಮಾಝ್ ಮಾಡಿದರೆ ಅದು ಸಹಿಸಲಾರ್ಹ.
***

‘ದಿ ಬೀಸ್ಟ್’ ಚಿತ್ರವನ್ನು ನೀವೂ ನೋಡಿರಬಹುದು. 80ರ ದಶಕದಲ್ಲಿ ಅಫ್ಘಾನಿಸ್ತಾನದ ಫಶ್ತೂನ್ ಗ್ರಾಮದಲ್ಲಿ ರಶ್ಯನ್ನರ ಜೊತೆಗೆ ಹೋರಾಟ ನಡೆಸಿದ ಯುವ ಮುಜಾಹಿದೀನ್‌ಗಳ ಹೃದಯವಿದ್ರಾವಕ ಕತೆ ಅದು. ಈ ಚಿತ್ರ ಹೊರ ಬಂದುದು 1988ರಲ್ಲಿ. ಚಿತ್ರವನ್ನು ನಿರ್ದೇಶಿಸಿದವರು ಕೆವಿನ್ ರೆನಾಲ್ಡ್ಸ್.(ರಾಬಿನ್ ಹುಡ್, ವಾಟರ್‌ವರ್ಲ್ಡ್‌ನಂತಹ ಅದ್ಭುತ ಚಿತ್ರಗಳನ್ನು ಈತ ನಿರ್ದೇಶಿಸಿದ್ದಾರೆ). ‘ದಿ ಬೀಸ್ಟ್’ ಚಿತ್ರ ಒಂದು ರಷ್ಯನ್ನರ ಟ್ಯಾಂಕರ್‌ನ್ನು ಹೊಡೆದುರುಳಿಸಲು ಅಫ್ಘಾನಿಸ್ತಾನದ ಫಶ್ತೂನರು ನಡೆಸುವ ಹೃದಯವಿದ್ರಾವಕ. ಬರೇ ಒಂದು ಕೋವಿಯಂತಹ ದುರ್ಬಲ ಆಯುಧವನ್ನು ಇಟ್ಟುಕೊಂಡು, ಮುಜಾಹಿದೀನ್‌ಗಳ ಯುವ ನಾಯಕ ತನ್ನ ತಂಡದೊಂದಿಗೆ ಗೆರಿಲ್ಲಾ ಯುದ್ಧದ ಮೂಲಕ ರಶ್ಯನ್ನರ ಟ್ಯಾಂಕ್‌ನ್ನು ಎದುರಿಸುತ್ತಾನೆ. ಟ್ಯಾಂಕರ್ ಅಫ್ಘಾನ್‌ನ್ನು ಕ್ರೂರವಾಗಿ ಧ್ವಂಸ ಮಾಡುತ್ತಿರುವಾಗ, ಆ ಟ್ಯಾಂಕರ್‌ನಲ್ಲಿದ್ದ ಒಬ್ಬ ಯೋಧ, ಅದನ್ನು ಪ್ರತಿಭಟಿಸುತ್ತಾನೆ. ಮಾತ್ರವಲ್ಲ, ಅಲ್ಲಿಂದ ಹೊರ ಹೋಗಿ ಮುಜಾಹಿದೀನ್‌ಗಳ ಜೊತೆ ನಿಂತು ರಷ್ಯನ್ ಸೈನಿಕರ ವಿರುದ್ಧ ಹೋರಾಡುತ್ತಾನೆ.

ಅಫ್ಘಾನಿಸ್ತಾನದ ಬರ್ಬರ ಸ್ಥಿತಿಯನ್ನು, ದುರಂತವನ್ನು, ಸೈನಿಕರ ಕ್ರೌರ್ಯವನ್ನು ಹೃದಯದ ಕಣ್ಣಿನ ಮೂಲಕ ನೋಡಿ, ‘ದಿ ಬೀಸ್ಟ್’ ಚಿತ್ರವನ್ನು ಕೆವಿನ್ ನಿರ್ದೇಶಿಸಿದ್ದಾನೆ. ಅಫ್ಘಾನಿಸ್ತಾನದ ಹೃದಯವನ್ನು ಯುದ್ಧವೆನ್ನುವ ಮಾರಿ ಹೇಗೆ ಕೊರೆದು ಹಾಕುತ್ತಿದೆ ಎನ್ನುವುದನ್ನು ಈ ಚಿತ್ರ ಹೃದಯಂಗಮವಾಗಿ ಕಟ್ಟಿಕೊಡುತ್ತದೆ. ಒಂದಾನೊಂದು ಕಾಲದಲ್ಲಿ ಅಮೆರಿಕವೆನ್ನುವ ಅಮೆರಿಕವೇ ತಾಲಿಬಾನ್‌ಗಳನ್ನು ಸ್ವಾತಂತ್ರ ಯೋಧರು ಎಂದು ಕರೆದಿತ್ತು. ಯಾಕೆಂದರೆ ತಾಲಿಬಾನರನ್ನು ಸೃಷ್ಟಿಸಿದ್ದೇ ಅಮೆರಿಕ. ರಷ್ಯನ್ನರ ವಿರುದ್ಧ ಅಫ್ಘಾನಿಸ್ತಾನ ಹೋರಾಟ ನಡೆಸಿದಾಗ ಅದನ್ನು ಮೆಚ್ಚಿದ ಅಮೆರಿಕವೇ ಇಂದು ವಿಶ್ವರೂಪಂನಲ್ಲಿ, ತನ್ನ ವಿರುದ್ಧದ ಅಫ್ಘಾನಿಗಳ ಹೋರಾಟವನ್ನು, ಭಯೋತ್ಪಾದಕರ ಕ್ರೌರ್ಯವಾಗಿ ಬಿಂಬಿಸಿದೆ. ಪರೋಕ್ಷವಾಗಿ ಅದಕ್ಕೆ ಇಸ್ಲಾಮನ್ನು ಹೊಣೆ ಮಾಡಿದೆ. ತಾನು ಮಾತ್ರ ಸಂಪೂರ್ಣ ಹೊಣೆ ಮುಕ್ತನಾಗಿದೆ.
ದಿ ಬೀಸ್ಟ್ ಚಿತ್ರವನ್ನು ನೋಡಿದ ಬಳಿಕ ನೀವು ‘ವಿಶ್ವರೂಪಂ’ನ್ನು ನೋಡಿದರೆ ಕಮಲ್ ಹಾಸ್ಯಕ್ಕೂ, ಅನುಕಂಪಕ್ಕೂ ಯೋಗ್ಯರಾಗುತ್ತಾರೆ.