Saturday, December 31, 2011

ಬಳಕೆ

‘‘ನಿಮ್ಮ ಭಾರತದಲ್ಲಿ ಕಸಗಳನ್ನು ಏನು ಮಾಡುತ್ತೀರಿ?’’
‘‘ಪಕ್ಕದ ಮನೆಯ ಕಾಂಪೌಂಡ್ಗೆ ಎಸೀತೇವೆ’’
‘‘ನಿಮ್ಮಲ್ಲಿ ಸಾರ್ವಜನಿಕ ಕಸದ ತೊಟ್ಟಿಗಳು ಇಲ್ಲವೇ?’’
‘‘ಇದೆ...ಆದರೆ ಅದನ್ನು ನಾವು ಬ್ರೂಣಗಳನ್ನು, ಈಗಷ್ಟೇ ಹುಟ್ಟಿದ ಹೆಣ್ಣು ಶಿಶುಗಳನ್ನು ಎಸೆಯೂದಕ್ಕೆ ಬಳಸುತ್ತೇವೆ’’

Friday, December 30, 2011

ಥ್ಯಾಂಕ್ಸ್ ಸತೀಶ್.....

ನನ್ನ ಗುಜರಿ ಅಂಗಡಿಯ ವಿನ್ಯಾಸವನ್ನು ಒಂದು ಚೂರು ತಿದ್ದಿ ತೀಡಿದ್ದೇನೆ. ನನ್ನ ಗೆಳೆಯ, ಕನ್ನಡದ ಖ್ಯಾತ ಕಲಾವಿದ ಸತೀಶ್ ಕಲ್ಮಾಡಿ, ನನ್ನ ಸಹೋದ್ಯೋಗಿ ಈ ಗುಜರಿ ಅಂಗಡಿಗೆ ಸುಂದರವಾದ ಬೋರ್ಡ್ ಬರೆದು ಕೊಟ್ಟಿದ್ದಾರೆ. ಅವರಿಗೆ ಹೃದಯ ಪೂರ್ವಕ ಕೃತಜ್ಞತೆ.

Thursday, December 29, 2011

ತಾಯಿ

ತನ್ನ ಮಕ್ಕಳು ಅತ್ತಾಗ ತಾಯಿ ನಗುವಳೇ?
ಹೌದಂತೆ,
ನಾನು ಹುಟ್ಟಿದಾಗ ಜೋರಾಗಿ ಅತ್ತೆನಂತೆ,
ಅದ ಕೇಳಿ ತಾಯಿ ನಕ್ಕಳಂತೆ!!

Wednesday, December 28, 2011

ರಕ್ತ ಮತ್ತು ಇತರ ಕತೆಗಳು


ಭಯ
ಒಬ್ಬ ಭಯೋತ್ಪಾದಕ.
ಆತ್ಮಹತ್ಯೆಗೆ ಸಿದ್ಧನಾಗುತ್ತಿದ್ದ.
ಮೈ ತುಂಬಾ ಬಾಂಬುಗಳು.
ಅವನ ಮಕ್ಕದಲ್ಲೇ ಪುಟಾಣಿ ಮಗುವೊಂದು ಆಡುತ್ತಿತ್ತು.
ಮಗು ಇದ್ದಕ್ಕಿದ್ದಂತೆಯೇ ಅವನತ್ತ ನೋಡಿತು.
ಕಣ್ಣಿಗೆ ಕಣ್ಣು ಸೇರಿಯೇ ಬಿಟ್ಟಿತು.
ಆತ ಭಯದಿಂದ ಸಣ್ಣಗೆ ನಡುಗಿ ಬಿಟ್ಟ.

ಒಂದು ಕನಸು
ಒಂದು ಕನಸು ಆಶ್ರಯಕ್ಕಾಗಿ ಬೀದಿ ಬೀದಿ ಅಲೆಯುತ್ತಿತ್ತು. ಆ ಊರಿನ ಶ್ರೀಮಂತನೊಬ್ಬನ ಮನೆಯ ಬಾಗಿಲನ್ನು ತಟ್ಟಿತು. ‘‘ನಾನೊಂದು ಕನಸು. ನನಗೆ ಆಶ್ರಯ ಕೊಡುವೆಯ?’’ ಶ್ರೀಮಂತನಲ್ಲಿ ಕೇಳಿತು.
ಶ್ರೀಮಂತ ಸಿಟ್ಟಿನಿಂದ ಹೇಳಿದ ‘‘ನಿನ್ನಂತಹ ಕನಸುಗಳಿಗೆ ನನ್ನ ಅರಮನೆಯಲ್ಲಿ ಜಾಗವಿಲ್ಲ’’ ಎಂದು ಹೊರಗಟ್ಟಿದ.
ಆ ಕನಸು ಅದೇ ಬೀದಿಯ ಭಿಕ್ಷುಕನೊಬ್ಬನ ಬಳಿಕ ಆಶ್ರಯ ಕೇಳಿತು ‘‘ನಾನೊಂದು ಕನಸು. ನನಗೆ ಆಶ್ರಯ ಕೊಡುವೆಯ?’’ ಭಿಕ್ಷುಕ ತನ್ನ ಗುಡಿಸಲಲ್ಲಿ ಆ ಕನಸಿಗೆ ಆಶ್ರಯ ಕೊಟ್ಟ.
ಕನಸು ಆ ಗುಡಿಸಲಲ್ಲಿ ಬೆಳೆಯಿತು. ಕನಸು ಬೆಳೆದಂತೆ ಆ ಭಿಕ್ಷುಕನೂ ಬೆಳೆದ. ಇತ್ತ ಕನಸನ್ನು ಹೊರ ಹಾಕಿದ ಶ್ರೀಮಂತ ಸಿಡಿಲಿಗೆ ಸಿಲುಕಿದ ಮರದಂತೆ ಬಾಡತೊಡಗಿದ. ನಿಧಾನಕ್ಕೆ ಬಿಕಾರಿಯೇ ಆದ.

ರಕ್ತ
ಕುರಿ ಕಡಿಯುತ್ತಿದ್ದ ಕಟುಕನಲ್ಲಿ ಆತ ಕೇಳಿದ
‘‘ಇದರ ರಕ್ತ ನೋಡಿ ನಿನಗೆ ಏನೂ ಅನ್ನಿಸುತ್ತಿಲ್ಲವೆ?’’
‘‘ಇಲ್ಲ, ಯಾಕೆಂದರೆ ಹಸಿದ ನನ್ನ ಮಕ್ಕಳ ಕಣ್ಣೀರಿನ ಬಣ್ಣ ರಕ್ತಕ್ಕಿಂತಲೂ ಕೆಂಪಗಿದೆ’’ ಕಟುಕ ಉತ್ತರಿಸಿದ.

ಕನಸು
ಒಬ್ಬ ಸುಂದರವಾದ ಕನಸು ಕಾಣುತ್ತಿದ್ದ.
ಇದ್ದಕ್ಕಿದ್ದಂತೆಯೇ ಯಾರೋ ಕರೆದರು. ನೋಡಿದರೆ ಪತ್ನಿ.
‘‘ಛೇ, ಕನಸನ್ನು ಕೆಡಿಸಿಬಿಟ್ಟೆ’’ ಗಂಡ ಕಿಡಿಯಾಗಿ ಹೇಳಿದ.
‘‘ಕನಸು ನಿಮ್ಮನ್ನು ಕೆಡಿಸುವುದಕ್ಕಿಂತ ಕನಸನ್ನು ನಾನು ಕೆಡಿಸುವುದೇ ವಾಸಿ. ಕಚೇರಿಗೆ ಹೊತ್ತಾಯಿತು ಏಳಿ’’ ಪತ್ನಿ ಖಾರವಾಗಿ ಉತ್ತರಿಸಿದಳು.

ಹೀಗೊಂದು ಪತ್ರ 
ಸಾಧಾರಣವಾಗಿ ಆತ ಇಮೇಲ್ ಮೂಲಕ, ಮೊಬೈಲ್‌ಗಳ ಮೂಲಕವೇ ಮಿತ್ರರ ಸಂದೇಶಗಳನ್ನು ಸ್ವೀಕರಿಸುವುದು. ಹೀಗಿರುವಾಗ ಒಂದು ದಿನ ಆತನಿಗೆ ಇನ್‌ಲೇಂಡ್ ಲೆಟರ್‌ನಲ್ಲಿ ಒಂದು ಪತ್ರ ಬಂತು.
ಅರೆ! ನನಗೆ ಪೋಸ್ಟ್ ಮೂಲಕ ಪತ್ರವೆ? ಯಾರಿಂದ? ಎಲ್ಲಿಂದ? ಅವನಿಗೆ ಅಚ್ಚರಿಯಾಯಿತು.
ಪೋಸ್ಟ್‌ಮೇನನ್ನು ನೋಡಿದ. ಒಣಗಿದ ಮುಖ. ಆತ ಪೋಸ್ಟ್‌ಮೇನ್‌ಗೆ ಹೇಳಿದ ‘‘ನನಗೆ ಪತ್ರ ಬರೆಯುವವರು ಯಾರೂ ಇಲ್ಲ’’
 ಪೋಸ್ಟ್ ಮೇನ್ ಉತ್ತರಿಸಿದ ‘‘ಇತ್ತೀಚೆಗೆ ನಮ್ಮ ಕಚೇರಿಯಿಂದ ರವಾನಿಸಲು ಪತ್ರಗಳೇ ಇಲ್ಲ. ಹೀಗೆ ಆದರೆ ನನ್ನ ಕೆಲಸವೇ ಹೋಗಿ ಬಿಡುತ್ತೆ. ಆದುದರಿಂದ ನಾನೇ ಎಲ್ಲ ವಿಳಾಸ ಹುಡುಕಿ ಪತ್ರ ಬರೆಯುತ್ತಿದ್ದೇನೆ. ಪ್ಲೀಸ್ ತಗೊಳ್ಳಿ...’’

ಉದ್ಧಾರ
ತನ್ನ ವರ್ಗಾವಣೆಗಾಗಿ ಮೇಷ್ಟ್ರು ರಾಜಕಾರಣಿಯಾಗಿರುವ ತನ್ನ ಶಿಷ್ಯನ ಮನೆ ಬಾಗಿಲನ್ನು ತುಳಿದರು.
ರಾಜಕಾರಣಿ ವ್ಯಂಗ್ಯದಿಂದ ಕೇಳಿದ ‘‘ಏನು ಸಾರ್? ಈ ಜನ್ಮದಲ್ಲಿ ಉದ್ಧಾರವಾಗೋದಿಲ್ಲ ಅಂತ ಶಾಲೆಯಲ್ಲಿ ಎಲ್ಲರೆದುರು ಹೇಳ್ತಾ ಇದ್ದಿರಿ?’’
ಮೇಷ್ಟ್ರು ತಣ್ಣಗೆ ಹೇಳಿದರು ‘‘ಎಲ್ಲಿ ಉದ್ಧಾರ ಆಗಿದ್ದೀಯ? ರಾಜಕಾರಣಿಯಾಗಿದ್ದೀಯೆ ಹೊರತು, ಉದ್ಧಾರ ಎಲ್ಲಿ ಆಗಿದ್ದಿ?’’
ಹಾಗೆಂದು ಮೇಷ್ಟ್ರು ಬಂದ ದಾರಿಯಲ್ಲೇ ವಾಪಾಸಾದರು.

ಗೊತ್ತಿಲ್ಲ
‘‘ಎಲ್ಲಿಗೆ ಹೊರಟಿದ್ದೀಯ?’’
‘‘ಒಂದಿಷ್ಟು ಖರೀದಿ ಮಾಡುವುದಕ್ಕಿತ್ತು. ಶಾಪಿಂಗ್‌ಗೆಂದು ಮಾಲ್ ಕಡೆ ಹೊರಟಿದ್ದೇನೆ’’
‘‘ಏನು ಖರೀದಿಸುವುದಕ್ಕೆ ಹೊರಟಿದ್ದೀಯ?’’
‘‘ಗೊತ್ತಿಲ್ಲ, ಶಾಪಿಂಗ್ ಮಾಲ್‌ನಲ್ಲಿ ಏನೇನಿದೆ ಎಂದು ನೋಡಿ ಖರೀದಿಸಲಿದ್ದೇನೆ’’

ಬಾಕ್ಸಿಂಗ್
ಇಬ್ಬರೂ ಬಾಕ್ಸಿಂಗ್ ಕಲಿಗಳು.
ಕಣದಲ್ಲಿ ಪರಸ್ಪರ ಹೋರಾಡುತ್ತಿದ್ದರು.
ಜನರು ಹುಚ್ಚೆದ್ದು ಕುಣಿದು, ಪ್ರೋತ್ಸಾಹಿಸುತ್ತಿದ್ದರು.
ಮೊದಲ ಬಾಕ್ಸರ್ ಎರಡನೆಯವನಿಗೆ ಬಲವಾಗಿ ಗುದ್ದಿದ.
ಎರಡನೆಯ ವ್ಯಕ್ತಿ ಆ ಏಟಿನ ಆಘಾತಕ್ಕೆ ತತ್ತರಿಸಿದ. ಅವನ ಮೂಗಿನಿಂದ ರಕ್ತ ಒಸರತೊಡಗಿತು.
ಏನನ್ನಿಸಿತೋ, ಮೊದಲನೆ ಬಾಕ್ಸರ್ ಮೆಲ್ಲಗೆ ಹೇಳಿಯೇ ಬಿಟ್ಟ ‘‘ನೋವಾಯಿತೇ...ಕ್ಷಮಿಸಿ ಬಿಡು’’
ಎರಡನೆಯಾತ ನೋವಿನಲ್ಲಿ ಮುಲುಗುತ್ತಾ ನುಡಿದ ‘‘ನೀನು ಮೊದಲು ನೀಡಿದ ಪೆಟ್ಟಿಗಿಂತಲೂ ಹೆಚ್ಚು ತೀಕ್ಷ್ಣವಾಗಿದೆ ನಿನ್ನ ಕ್ಷಮೆ’’

ಮೊಬೈಲು
ಮನೆಗೆ ತಂದ ಮೊಬೈಲನ್ನು ಹೆಂಡತಿ ಮಕ್ಕಳಿಗೆ ಪರಿಚಯಿಸುತ್ತಿದ್ದ
‘‘ಇದನ್ನು ಮೊಬೈಲು ಎಂದು ಕರೆಯುತ್ತಾರೆ. ಎಷ್ಟು ದೂರವಿದ್ದವರೊಂದಿಗೂ ಇದರಲ್ಲಿ ಮಾತನಾಡಬಹುದು...ಪ್ರಪಂಚದ ಎಲ್ಲೇ ಇದ್ದರೂ ಅವರೊಂದಿಗೆ ಮಾತನಾಡಬಹುದು’’ ಮಗ ಮೂಲೆಯಲ್ಲಿ ಕುಳಿತಿದ್ದ ತಾಯಿಗೆ ಕೂಗಿ ಹೇಳಿದ.
‘‘ಇನ್ನಾದರೂ ನನ್ನೊಟ್ಟಿಗೆ ಸರಿಯಾಗಿ ಮಾತನಾಡಬಹುದಲ್ಲ ಮಗ’’ ತಾಯಿ ಸಂಭ್ರಮದಿಂದ ಕೇಳಿದಳು.
ಮಗ ತಲೆತಗ್ಗಿಸಿದ.

Monday, December 26, 2011

ಇರುವೆ ನೀರು ಕುಡೀತ ಇದೆ

ಶ್...ಶ್...!!! ಸದ್ದು ಮಾಡಬೇಡಿ. ಇರುವೆ ನೀರು ಕುಡೀತ ಇದೆ:
ಈ ಫೋಟೋ ನನಗೆ facebook ನಲ್ಲಿ ಸಿಕ್ತು. ಕಾಸರಗೊಡಿನವರಾದ ಚಂದ್ರಶೇಖರ್ ಈ ಫೋಟೋ ತೆಗೆದಿದ್ದಾರೆ. ಒಳ್ಳೆಯ ಫೋಟೋವನ್ನು ತೆಗೆಯೋದಕ್ಕೆ, ಒಳ್ಳೆಯಾ ಕ್ಯಾಮರ, ನೋಡುವ ಕಣ್ಣು ಮಾತ್ರವಲ್ಲ ಒಳ್ಳೆಯ ಅದೃಷ್ಟವೂ ಬೇಕು. ಆ ಅದೃಷ್ಟವನ್ನು ತನ್ನದಾಗಿಸಿಕೊಂಡ ಛಾಯಾಗ್ರಾಹಕರಿಗೆ ನನ್ನ ಅಭಿನಂದನೆ.

ಆ...ಲಯದೊಳಗೆ.....

ನಾನು ಹತ್ತು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಕ್ರಿಸ್ಮಸ್ ಸಂದರ್ಭದಲ್ಲಿ ಬರೆದ ಪುಟ್ಟ ಕವಿತೆ. ಪಿ. ಲಂಕೇಶರ ‘ಲಂಕೇಶ್ ಪತ್ರಿಕೆ’ಯಲ್ಲಿ ಈ ಕವಿತೆ ಪ್ರಕಟವಾಗಿದೆ.

ನಾದವೊಂದು
ಮಂಜಿನ ಎದೆಯ ಕದ ತೆರೆದು
ಮುಂಜಾವಿನ ಮೊಂಬತ್ತಿ
ತಂದು ಹಚ್ಚಿಟ್ಟ ಹೊತ್ತು

ವೌನಕ್ಕೆ
ತಂದೆಯ ಗತ್ತು!

ಅದುರುವ ಚಿಗುರೆಲೆಯ ಮೇಲೆ
ಒಂದೇ ಒಂದು ಹನಿ
ಕಣ್ಣೆವೆಯ ತೊಟ್ಟು
ಕಳಚಿ ಬಿದ್ದ ಕಂಬನಿ!

ನಿನ್ನೆಯ ಸಂಜೆ
ಹರೆಯಕ್ಕೆ ಲಜ್ಜೆಯ ಬಣ್ಣ
ಬಳಿದ ಹುಡುಗಿ
ತಾಯಿ ಹೆಜ್ಜೆಯಲ್ಲಿ
ಇನ್ನಿಲ್ಲದಂತೆ...

ಲಯದೊಳಗೆ ಕರಗಿ...

ದೇವರ ಪಾದದ ಬಳಿ
ಚಿಟ್ಟೆಗಳಂತಿರುವ ಮಕ್ಕಳು
ಗಿಡಗಿಡಗಳಿಗೆ ಹಾರಿ
ಕಿತ್ತು ತಂದ ಹೂವುಗಳು!

Sunday, December 25, 2011

ಡಾನ್-2: ಅದ್ದೂರಿತನವೇ ಹೆಗ್ಗಳಿಕೆ

ಸುಮ್ನೆ ಟೈಮ್ ಪಾಸ್ಗಾಗಿ ಒಂದು ಚಿತ್ರ ಮತ್ತು ವಿಮರ್ಶೆ

‘ರಾ-1’ ಚಿತ್ರದಲ್ಲಿ ನಾಯಕನ ಮಗನಿಗೆ ಒಂದು ಆಸೆಯಿರುತ್ತದೆ. ಅದೆಂದರೆ ಯಾರೂ ಸೋಲಿಸಲಾಗದ ಖಳನಾಯಕನೊಬ್ಬನನ್ನು ತನ್ನ ತಂದೆ ಸೃಷ್ಟಿಸಬೇಕು. ಅಂತಹ ಒಂದು ವೀಡಿಯೋ ಗೇಮ್‌ನನ್ನು ಸೃಷ್ಟಿಸಲು ಹೋಗಿ ‘ರಾ-1’ನ ಸೃಷ್ಟಿಯಾಗುತ್ತದೆ. ಆದರೆ ಅಲ್ಲಿ ಅವನನ್ನು ಸೋಲಿಸಲು ‘ಜಿ-1’ ಇದ್ದಾನೆ. ರಾ-1 ಕಟ್ಟಕಡೆಗೆ ಸಾಯುತ್ತಾನೆ ಕೂಡ. ಆದರೆ ತನ್ನ ಮಗನ ಆಸೆಯನ್ನು ನಿಜವಾಗಿಯೂ ಈಡೇರಿಸಲು ಶಾರುಕ್ ಖಾನ್ ‘ಡಾನ್’ ಚಿತ್ರದಲ್ಲಿ ಪ್ರಯತ್ನಿಸಿದ್ದಾರೆ. ಡಾನ್ ಎಂದರೆ ಸೋಲೇ ಇಲ್ಲದ ಖಳನಾಯಕ. ‘ಡಾನ್-2’ ಚಿತ್ರದಲ್ಲೂ ಆ ಖಳನಾಯಕನ ದ್ವಿಗ್ವಿಜಯ ಮುಂದುವರಿಯುತ್ತದೆ.

ಡಾನ್ ಚಿತ್ರಕ್ಕೂ ಡಾನ್-2 ಚಿತ್ರಕ್ಕೂ ಒಂದು ಮುಖ್ಯ ವ್ಯತ್ಯಾಸವಿದೆ. ಡಾನ್-2ವಿನಲ್ಲಿ ಚಿತ್ರಕ್ಕೆ ಒಂದು ದಾರಿಯಿದೆ. ಗುರಿಯಿದೆ. ಆ ದಾರಿಯಲ್ಲೇ ತನ್ನ ಗುರಿಯೆಡೆಗೆ ನೇರವಾಗಿ, ವೇಗವಾಗಿ ಚಲಿಸುತ್ತಾ ಹೋಗುತ್ತದೆ. ಇದು ಚಿತ್ರದ ಹೆಗ್ಗಳಿಕೆಯೂ ಹೌದು. ದೌರ್ಬಲ್ಯವೂ ಹೌದು. ಬರ್ಲಿನ್ ಖಜಾನೆಯಿಂದ ಯುರೋಗಳ ಕರೆನ್ಸಿ ಪ್ಲೇಟ್‌ಗಳನ್ನು ಅಪಹರಿಸುವುದು ಈ ಬಾರಿ ಡಾನ್‌ನ ಗುರಿ. ಒಂದೆಡೆ ಪೊಲೀಸ್ ಅಧಿಕಾರಿಣಿ, ಜಂಗ್ಲಿಬಿಲ್ಲಿ ರೋಮಾ(ಪ್ರಿಯಾಂಕಾ ಛೋಪ್ರಾ) ಡಾನ್‌ನ ಹಿಂದೆ ಬಿದ್ದಿರುತ್ತಾಳೆ. ಅದರ ನಡುವೆಯೇ ಇಂತಹದೊಂದು ಯೋಜನೆಯನ್ನು ಹಾಕುತ್ತಾನೆ. ಈ ಯೋಜನೆಯಲ್ಲಿ ಡಾನ್ ಗುರಿ ಮುಟ್ಟುತ್ತಾನೋ ಇಲ್ಲವೋ ಎನ್ನುವುದು ಕಥೆಯ ಪ್ರಧಾನ ಅಂಶ. ಇದರ ಜೊತೆ ಜೊತೆಗೆ ಡಾನ್ ಮತ್ತೊಂದು ಯೋಜನೆಯನ್ನೂ ಹಾಕಿಕೊಂಡಿದ್ದಾನೆ. ತನ್ನ ಮೇಲಿರುವ ಎಲ್ಲ ಮೊಕದ್ದಮೆಗಳನ್ನು ಪೊಲೀಸ್ ಇಲಾಖೆ ಕೈ ಬಿಡಬೇಕು. ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಆತನ ಯೋಜನೆ ಯಶಸ್ವಿಯಾಗುವುದೋ, ಇಲ್ಲವೋ ಎನ್ನುವುದನ್ನು ಡಾನ್-2 ಹೇಳ ಹೊರಡುತ್ತದೆ. ಚಿತ್ರದಲ್ಲಿ ಹಳೆಯ ಇನ್ನೊಂದು ಖಳ ಪಾತ್ರವೂ ಕತೆಯಲ್ಲಿ ಮುಖ್ಯವಾಗಿದೆ. ಅದು ಬೊಮನ್ ಇರಾನಿಯ ವರ್ದನ್ ಪಾತ್ರ.

ಚಿತ್ರದ ಓಟ ಆರಂಭವಾಗುವುದು ಡಾನ್ ಪೊಲೀಸರಿಗೆ ಶರಣಾಗುವ ಮೂಲಕ. ತನ್ನ ಯೋಜನೆಯ ಒಂದು ಭಾಗವಾಗಿಯೇ ಆತ ಪೊಲೀಸರಿಗೆ ಶರಣಾಗುತ್ತಾನೆ. ವರ್ಧನ್ ಜೊತೆಗೆ ಮತ್ತೆ ಅಲ್ಲಿಂದ ಪರಾರಿಯಾಗುತ್ತಾನೆ. ಅವರಿಬ್ಬರು ಜೊತೆಗೆ ಕರೆನ್ಸಿ ಪ್ಲೇಟ್ ಅಪಹರಣದ ಯೋಜನೆಯನ್ನು ರೂಪಿಸುತ್ತಾರೆ. ಅದಕ್ಕಾಗಿ ಅವರು ಬಳಸಿಕೊಳ್ಳುವ ಇನ್ನೊಬ್ಬ ಖಳ ಜಬ್ಬಾರ್. ಸ್ನೇಹಿತರಾಗಿದ್ದುಕೊಂಡು ಪರಸ್ಪರರ ವಿರುದ್ಧ ಸಂಚು ಹೆಣೆಯುತ್ತಾ, ಈ ತಂಡ ಮುಂದುವರಿಯುತ್ತದೆ. ಹಾಗೆಯೇ ಇವರಿಗೆ ಕಂಪ್ಯೂಟರ್ ವ್ಯೆಹಗಳನ್ನು ನಾಶ ಮಾಡಲು ಸಮೀರ್ (ಕುನಾಲ್) ಸಹಾಯ ಮಾಡುತ್ತಾನೆ. ಈ ಯೋಜನೆಯ ಸಣ್ಣ ಸುಳಿಯು ರೋಮಾ(ಪ್ರಿಯಾಂಕಾ ಛೋಪ್ರಾ)ಳಿಗೆ ಸಿಕ್ಕಿ ಅವಳೂ ಬರ್ಲಿನ್‌ಗೆ ಆಗಮಿಸುತ್ತಾಳೆ.

ರೋಮಾ ಮತ್ತು ಡಾನ್ ನಡುವಿನ ಕಣ್ಣಾಮುಚ್ಚಾಳೆ ಆಟ, ಛೇಸಿಂಗ್ ಹಿತವಾಗಿದೆ. ಡಾನ್ ಯೋಜನೆಯ ನಡುವೆಯೇ ತನ್ನ ಶತ್ರುಗಳನ್ನು ಒಬ್ಬೊಬ್ಬರನ್ನಾಗಿ ಮುಗಿಸುತ್ತಾ ಬರುತ್ತಾನೆ. ಫರ್ಹಾನ್ ಅಖ್ತರ್ ಚಿತ್ರದಲ್ಲಿ ಛೇಸಿಂಗ್, ಫೈಟಿಂಗ್, ಸಾಹಸ ದೃಶ್ಯಗಳಿಗೇ ಹೆಚ್ಚು ಒತ್ತು ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಅದಷ್ಟೇ ಜೀವಾಳ ಎಂದು ಅವರು ಭಾವಿಸಿದ್ದಾರೆ. ಚಿತ್ರದಲ್ಲಿ ಶಾರುಕ್ ಡಾನ್ ಆಗಿ ಮೈತೋರುವ ಗುಣಗಳು ಚಿತ್ರದ ಅತ್ಯುತ್ಕಟ ಕ್ಷಣವಾಗಿರುತ್ತದೆ. ಆದರೆ ಒಂದು ಚಿತ್ರಕ್ಕೆ ಬೇಕಾಗಿರುವುದು ಇದಿಷ್ಟು ಮಾತ್ರವೆ?

ಯಾವ ರೀತಿಯಲ್ಲೂ ಅಮಿತಾಭ್ ಬಚ್ಚನ್ ನಟಿಸಿದ ಡಾನ್ ಚಿತ್ರಕ್ಕೆ ಡಾನ್-2 ಚಿತ್ರ ಸರಿಗಟ್ಟಲಾರದು. ಯಾಕೆಂದರೆ ಡಾನ್-2 ಚಿತ್ರದ ಕತೆ ತೆಳುವಾದುದು. ಅಥವಾ ಒಂದು ಯೋಜನೆಯನ್ನು ಬಿಟ್ಟರೆ ಅಲ್ಲಿ ಕತೆಯೇ ಇಲ್ಲ. ಮುಖ್ಯವಾಗಿ ಯಾವ ಪಾತ್ರಗಳಿಗೂ ಪೋಷಣೆಯೇ ಇಲ್ಲ. ಆದರೆ ಮೂಲ ಡಾನ್ ಹಾಗಲ್ಲ. ಅಲ್ಲಿ ಪ್ರತಿ ಪಾತ್ರಗಳೂ ಒಂದೊಂದು ಕತೆಗಳು. ದ್ವೇಷ, ಸಿಟ್ಟು, ಅಸಹಾಯಕತೆ, ಪ್ರೀತಿ, ಮೋಸ, ಸೇಡು ಇವೆಲ್ಲವುಗಳಿಂದ ಕೆನೆಗಟ್ಟಿದ ಪಾತ್ರಗಳು ಅಲ್ಲಿವೆ. ಆದರೆ ಡಾನ್-2ವಿನಲ್ಲಿ ಯಾವ ಪಾತ್ರಗಳೂ ನಮ್ಮನ್ನು ಆಳವಾಗಿ ತಟ್ಟುವುದಿಲ್ಲ, ಕಾಡುವುದಿಲ್ಲ. ಎಲ್ಲ ಪಾತ್ರಗಳನ್ನು ಡಾನ್ ಕೀ ಕೊಟ್ಟು ಬಿಟ್ಟಂತಿದೆ. ಎಲ್ಲವೂ ಅವರನ ಸುತ್ತಲೇ ಓಡಾಡುತ್ತದೆ. ರೋಮಾ ಪಾತ್ರವೂ ಇದಕ್ಕೆ ಹೊರತಾಗಿಲ್ಲ. ರೋಮಾ ಪಾತ್ರವನ್ನು ಇನ್ನಷ್ಟು ಗಟ್ಟಿಯಾಗಿ ಬೆಳೆಸುವ ಸಾಧ್ಯತೆಯಿದ್ದರೂ, ಡಾನ್ ಅದಕ್ಕೆ ಆಸ್ಪದ ನೀಡುವುದಿಲ್ಲ. ಆದುದರಿಂದ ಆ ಪಾತ್ರ ಈ ಚಿತ್ರದಲ್ಲಿ ತೀರಾ ತೆಳುವಾಗಿದೆ. ಬಹುಶಃ ನಿರ್ದೇಶಕರು ಮಿಶನ್ ಇಂಪಾಸಿಬಲ್ ಚಿತ್ರದ ಪ್ರಭಾವದಿಂದ ಡಾನ್-2ನ್ನು ಮಾಡಿರಬೇಕು.

ಮೂಲ ಡಾನ್ ಚಿತ್ರದಲ್ಲಿ ಪಾತ್ರಗಳು ಬದಲಾದಂತೆ ತಿರುವುಗಳು ಕಾಣಿಸಿಕೊಳ್ಳುತ್ತವೆ. ಡಾನ್-1ರಲ್ಲಿ ಶಾರುಕ್-ಅಮಿತಾಬ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಪಾತ್ರಗಳ ಸಂಘರ್ಷಗಳಿವೆ ಅಲ್ಲಿ. ಅಂತಹ ಒಳಗಿನ ಸಂಘರ್ಷಗಳನ್ನು ಇಲ್ಲಿ ಕಾಣುವುವುದಿಲ್ಲ. ರೋಮಾ ಮತ್ತು ಡಾನ್ ನಡುವೆ ಸಣ್ಣದೊಂದು ಪ್ರೀತಿಯ ಎಳೆಯನ್ನು ಜೋಡಿಸಲು ನಿರ್ದೇಶಕರು ಯತ್ನಿಸಿದ್ದಾರಾದರೂ, ಅದರಲ್ಲಿ ಯಶಸ್ವಿಯಾಗಿಲ್ಲ. ಡಾನ್‌ಗಾಗಿಯೇ ಬರೆದ ಹರಿತ ಸಂಭಾಷಣೆಯಿದೆ. ಸಂಗೀತಾ ಪರವಾಗಿಲ್ಲ. ವಿದೇಶಗಳ ಸುಂದರ ದೃಶ್ಯಗಳನ್ನು ಸೆರೆಹಿಡಿದ ಕ್ಯಾಮರ ಕೆಲಸ ಅದ್ಭುತವಾಗಿದೆ. ಸಾಹಸ ಹಾಲಿವುಡ್‌ಗೆ ಸರಿಗಟ್ಟುವ ಪ್ರಯತ್ನವನ್ನು ಮಾಡಿದೆ. ಒಟ್ಟಿನಲ್ಲಿ ಡಾನ್ ಭಾಗ-1ಕ್ಕೆ ಸರಿಗಟ್ಟುವುದಿಲ್ಲ. ಅದ್ದೂರಿತನಕ್ಕಾಗಿ ಡಾನ್-2ನ್ನು ಒಮ್ಮೆ ನೋಡಬಹುದು. ಒಟ್ಟಿನಲ್ಲಿ ಡಾನ್-3ಗಾಗಿ ಶಾರುಕ್ ಈಗಲೇ ಸಿದ್ಧತೆ ನಡೆಸುತ್ತಿರಬಹುದು.

Saturday, December 24, 2011

‘ಪರುಷಮಣಿ’ ಕೃತಿಯ ಕುರಿತಂತೆ ಬಂಜಗೆರೆ ಜಯಪ್ರಕಾಶ್
























ದಿ. ಬಿ. ಎಂ. ರಶೀದ್ ಅವರ ಕತೆ, ಕವಿತೆ, ಲೇಖನಗಳ ಸಮಗ್ರ ಸಂಗ್ರಹ ಪರುಷಮಣಿ ಕೃತಿಯ ಕುರಿತಂ
ತೆ ಬಂಜಗೆರೆ ಜಯಪ್ರಕಾಶ್ ಇಲ್ಲಿ ಬರೆದಿದ್ದಾರೆ. ೨೦೦೬ ರಲ್ಲಿ ಕೃತಿ ಬಿಡುಗಡೆಗೊಂದಾಗ ಸಮಾರಂಭದಲ್ಲಿ ಅದರ ಪರಿಚಯವನ್ನು ಮಾಡಿದವರು ಬಂಜಗೆರೆ ಜಯಪ್ರಕಾಶ್.

‘ಪರುಷಮಣಿ’ಎಂಬ ಕಲ್ಪನೆಯೇ ತುಂಬಾ ಕಾವ್ಯಾತ್ಮಾಕವಾದದ್ದು. ಮಾನವ ತನ್ನ ಭೌತಿಕ
ವಾಸ್ತವಗಳಾಚೆಗೆ ಪಡೆಯಬಯಸಿದ ರಮ್ಯಾದ್ಭುತ ಸೃಷ್ಟಿಶಕ್ತಿಯ ಸಂಕೇತವಾದ ಅದು ನಿರಂತರ ಆಶಾವಾದದ ಸಂಕೇತವೂ ಹೌದು, ಅದರಂತೆಯೇ ಮಾನವನ ಮಿತಿಗಳ ದ್ಯೋತಕವೂ ಹೌದು.
ಇಂತಹ ಮೋಹಕ ಹೆಸರಿನ ಬರಹ ಸಂಕಲನದ ಕೃತಿಕಾರ ಬಿ.ಎಂ.ರಶೀದ್ ನಮ್ಮ ನಡುವೆ ಈಗಿಲ್ಲ ಎನ್ನುವ ನೋವಿನ ನೆನಪಿನ ನಡುವೆಯೇ ಇಂತಹದೊಂದು ಅರ್ಥಪೂರ್ಣ ಕೃತಿಯನ್ನು ಪ್ರಕಟಿಸಿ ರಶೀದನ ನೆನಪನ್ನು ಚಿರಂತನವಾಗಿಸಲು ಏರ್ಪಟ್ಟಿರುವ ಈ ಕಾರ್ಯಕ್ರಮ ಸಾರ್ಥಕವಾದುದೆಂದು ನಾನು ಭಾವಿಸುತ್ತೇನೆ.

‘ಪರುಷಮಣಿ’ ಬಿ.ಎಂ.ರಶೀದ್ ಬೇರೆ ಬೇರೆ ಸಂದರ್ಭದಲ್ಲಿ ಬರೆದ ಆರು ಕತೆ, ಹತ್ತು
ಕವಿತೆ, ಹಾಗೂ ಕೆಲವು ಲೇಖನಗಳನ್ನು ಒಳಗೊಂಡಿವೆ. ಈ ಕೃತಿ ನಿದರ್ಶಿಸುವಂತೆ ರಶೀದ ನಮ್ಮ ನಡುವಿನ ಅತ್ಯಂತ ಪ್ರತಿಭಾವಂತ ಪ್ರಯೋಗಶೀಲ ಲೇಖಕನಾಗಿದ್ದ. ಕಥೆ ಹಾಗೂ ಕಾವ್ಯಗಳೆರಡರಲ್ಲೂ ಆತ ಪ್ರದರ್ಶಿಸಿರುವ ಸೃಜನಶೀಲ ಶಕ್ತಿ ಇದಕ್ಕೆ ನಿದರ್ಶನವೊದಗಿಸುತ್ತಿದೆ. ಹರೆಯಕ್ಕೆ ಸಹಜವಾದ ಪ್ರೀತಿ ಪ್ರೇಮಗಳ ಸುತ್ತ ಈ ಬರಹಗಳ ವಸ್ತು ಪ್ರಧಾನವಾಗಿ ಚಲಿಸುತ್ತದೆಯಾದರೂ ಅದರೊಳಗೆ ವ್ಯಕ್ತವಾಗುವ ಜೀವಪರ ನಿಲುವು ಹಾಗೂ ಒಂದು ಆಲೋಚನಾಪೂರ್ಣ ತಾತ್ವಿಕತೆ ಒಬ್ಬ ಬರಹಗಾರನಾಗಿ ರಶೀದ ಬೆಳೆಯಬಹುದಾಗಿದ್ದ ಎತ್ತರವನ್ನು ಸೂಚಿಸುವ ಕೈಮರದಂತಿವೆ.

ಈ ಸಂಕಲನದಲ್ಲಿ ನಾವು ಗಮನಿಸಬೇಕಾದ ಎರಡು ಮುಖ್ಯ ಕತೆಗಳಿವೆ. ಕಥಾವಸ್ತುವಿನ ನಿರ್ವಹಣೆಯ ದೃಷ್ಟಿಯಿಂದ ಈ ಎರಡೂ ಕಥೆಗಳು ರಶೀದನ ಸಾರ್ಥಕ ಕಥೆಗಳಾಗಿವೆ. ‘ಪರ್ಯಾಯ’ ಹಾಗೂ ‘ಕ್ಷಮಿಸಿ, ಬಯಕೆಗಳೇ ಇನ್ನೆಂದಾದರೊಮ್ಮೆ ಬರುವೆ...’ ಎಂಬ ಈ ಕಥೆಗಳು ಸಾಕಷ್ಟು ಪಳಗಿದ ಕಥೆಗಾರನೊಬ್ಬನ ಪ್ರತಿಭೆಯನ್ನು ಅತ್ಯಂತ ಹೃದ್ಯವಾಗಿ ನಮ್ಮ ಮುಂದಿಡುತ್ತಿವೆ.
ಪುಟ್ಟ ಕಥೆಯಾದ ‘ಗರ್ಭ’ ಮತ್ತು ‘ಇಲ್ಲೊಬ್ಬಳು ಅಮೃತಮತಿ’ ಕೂಡ ಕಥಾಶಿಲ್ಪದ ದೃಷ್ಟಿಯಿಂದ ಒಳ್ಳೆಯ ಕಥೆಗಳೇ ಆದರೂ ಅವುಗಳಲ್ಲಿ ಇರುವ ಅತೀ ಭಾವುಕತೆ ಅಥವಾ ಭಾವನೆಗಳ ಉತ್ಕಟತೆ
ಕೇವಲ ಒಂದು ತೀವ್ರ ಅನುಭವ ಕಟ್ಟಿಕೊಡುವಷ್ಟಕ್ಕೆ ಮಾತ್ರ ಯಶಸ್ವಿಯಾಗಿವೆ.

ಹಾಗಾಗಿ ನಾನು ಮೊದಲು ಪ್ರಸ್ತಾಪಿಸಿದ ಎರಡು ಕಥೆಗಳು ಒಂದುಮಟ್ಟಿಗೆ ಈ ಭಾವೋತ್ಕಟತೆಯ ಅಂಶವನ್ನು ಹೊಂದಿದಾಗಲೂ ಬದುಕಿನ ವಾಸ್ತವಗಳನ್ನು ಕಣ್ಣೆದುರಿಗೆ ತರುವಲ್ಲಿ ಹೆಚ್ಚು ಯಶಸ್ವಿಯಾಗಿವೆ. ಬಹುಪಾಲು ತರುಣ ಬರಹಗಾರರ ನಡುವೆ ಒಂದಲ್ಲ ಒಂದು ಸಲ ಬರಬಹುದಾದ ‘ನಕ್ಸಲೀಯ’ ವಸ್ತು ‘ಪರ್ಯಾಯ’ ಕಥೆಯೊಳಗೆ ಬಂದಿದೆ. ಆದರೆ ತರುಣ ಹುಮ್ಮಸ್ಸಿನ ಹೋರಾಟದ ವೈಭವೀಕರಣ ಈ ಕಥೆಯ ಕೇಂದ್ರವಾಗದೆ ಅದರ ಅಂಚುಗಳ ಸುತ್ತ ಹುಟ್ಟುವ ಮಾನವ ಸಂಬಂಧಗಳ ವೇದನೆ ಹಾಗೂ ಅಸಹಾಯಕ ಹಂಬಲಗಳು ಈ ಕಥೆಯ ಮುಖ್ಯ ಲಕ್ಷವಾಗಿದೆ.

‘ಮರೋ ಪ್ರಪಂಚಂ ಪಿಲಿಚಿಂದಿ’ ಎಂಬ ಸೂಚನೆಯೊಂದಿಗೆ ಬಂದೂಕು ಧರಿಸಿ ನಡೆದುಬಿಟ್ಟ ತನ್ನ ಮಗನ ನಿರೀಕ್ಷೆಯಲ್ಲಿರುವ ಪರಮೇಶ್ವರಯ್ಯ ಎಂಬ ಉಪನ್ಯಾಸಕ ಸಲೀಮ ಎಂಬ ಕವಿ ಹೃದಯದ ತರುಣನಲ್ಲಿ ತನ್ನ ಮಗನನ್ನು ಕಂಡುಕೊಳ್ಳುವ ಒಂದು ಹಂಬಲ ಕಥೆಯ ಉದ್ದಕ್ಕೂ ಸಶಕ್ತವಾಗಿ ನಿರ್ಮಿತವಾಗಿದೆ. ಕಿಡಿಕಾರುವ ತನ್ನ ಮಗನ ಮಾತುಗಳನ್ನು ನೆನೆಯುತ್ತಾ ಅದರ ಜೊತೆಜೊತೆಗೇ ನಿಹಲಿಸ್ಟನಂತೆ ವಾದಿಸುವ ಸಲೀಮನನ್ನು ಹಂಬಲಿಸುತ್ತಾ ಪರಮೇಶ್ವರಯ್ಯ ಭ್ರಮೆ ಮತ್ತು ವಾಸ್ತವಗಳ ನಡುವೆ ತೇಲಾಡುತ್ತಾ ತಮ್ಮ ಪ್ರೀತಿಯ ನಿರೀಕ್ಷೆ ಸಾಕಾರಗೊಳ್ಳುವ ಕನಸಿನಲ್ಲಿರುತ್ತಾರೆ. ಪರಮೇಶ್ವರಯ್ಯನಿಗೆ ಕಥೆಯ ಅಂತ್ಯದಲ್ಲಿ ಕೈಗೆ ಸಿಗುತ್ತಿದೆಯೆಂದು ಭಾಸವಾಗುವ ಸಲೀಮನ ಆಗಮನದ ಭರವಸೆ ಕೂಡ ಆತ ಕಾಣುತ್ತಿರುವ ಕನಸಿನ ಭಾಗವಿರಬಹುದೇ ಎಂಬಂತಹ ಸಂದಿಗ್ಧತೆಯನ್ನು ಉಂಟುಮಾಡುತ್ತಾ ಮುಕ್ತಾಯಗೊಳ್ಳುವ ಕಥೆ ತನ್ನ ಒಡಲೊಳಗೆ ಇಟ್ಟುಕೊಂಡಿರುವ ಗಂಭೀರ ತಾತ್ವಿಕ ಜಿಜ್ಞಾಸೆಯಿಂದಾಗಿ ಓದುಗನ ಮನಸ್ಸನ್ನು ಹಿಡಿದಿಡುತ್ತದೆ.

ರಶೀದ್ ಒಬ್ಬ ಕಥೆಗಾರನಾಗಿ ತನ್ನ ವಯಸ್ಸಿಗೆ ಮೀರಿರುವ ಪ್ರಬುದ್ಧತೆಯನ್ನು ಇಂತಹ ತಾತ್ವಿಕ ಜಿಜ್ಞಾಸೆಯ ನಿರ್ವಹಣೆಯಲ್ಲಿ ಪ್ರದರ್ಶಿಸಿದ್ದಾನೆ. ‘ಮಾಡಬೇಕಾದುದರ ಬಗ್ಗೆ ಬರೆಯೋನು, ಕೊರೆಯುವವನು ಅದನ್ನಾತ ಮಾಡುವುದೇ ಇಲ್ಲ. ಚಾ, ಆಲ್ಕೋಹಾಲ್, ಸಿಗರೇಟ್ ಇದ್ದ ಹಾಗೆ ಜನಗಳಿಗೆ ಬದುಕುವುದಕ್ಕೆ ಆವೇಶಮಯ ಭಾಷಣಾನೂ ಬೇಕು. ಮಾತಾಡೋನಿಗೆ ಮಾ
ತಾಡಿ ಮುಗಿವ ಮುನ್ನವೇ ಕೇಳುವವನಿಗೆ ಕೇಳಿ ಮುಗಿದಿರುತ್ತದೆ. ಅಲ್ಲಿಗೆ ಅವರವರ ಕರ್ತವ್ಯ ಮುಗಿದಿರುತ್ತದೆ’ ಎಂಬ ಸಲೀಮ, ‘ತಾತ್ವಿಕವಾಗಿ ಸಮರ್ಥನೀಯವಲ್ಲದ್ದು ಮಾತ್ರ ಹಿಂಸೆ ಅಪ್ಪಾಜಿ...’ ಎನ್ನುವ ರವಿ ಇವೆರಡೂ ಬಿಂದುಗಳ ನಡುವೆ ನಡೆಯುತ್ತಾ ಹೋಗುವ ಕಥೆ ಉದ್ದೇಶಿಸಿರುವುದು ಹೋರಾಟದ ಬಗ್ಗೆ ತೀರ್ಪು ಕೊಡಲಿಕ್ಕಲ್ಲ, ಬದಲಾಗಿ ತನ್ನ ಮಗನ ಹಂಬಲದಲ್ಲಿರುವ ಪರಮೇಶ್ವರಯ್ಯ ಒಬ್ಬ ಸಲೀಮನ ಪ್ರೀತಿಗೆ ಸಿಕ್ಕಿ ಆರ್ತವಾಗಿ ತೊಳಲಾಡುವ ಪರಿಸ್ಥಿತಿಯ ಅಸಹನೀಯತೆಯನ್ನು. ರವಿ ಹೇಳುವ ಮಾತಿನ ತೀವ್ರತೆ, ಸಲೀಮನ ಮಾತಿನ ನಿರಾಸಕ್ತಿ ಇವೆರಡೂ ಕಥೆಯನ್ನು ಬೆಳೆಸುತ್ತಾ, ಇಲ್ಲಿಗೆ ರವಿ ಮರಳಿ ಬರುತ್ತಾನೆ ಎಂಬ ಸಾಂತ್ವನದೊಂದಿಗೆ ಮುಕ್ತಾಯವಾಗುವುದು, ಕಡೆಗೂ ಅದೊಂದು ವಾಸ್ತವದ ಮುಕ್ತಾಯವಲ್ಲದಿರುವುದು ಕಥೆಯ ಪರಿಣಾಮವನ್ನು ಹೆಚ್ಚಿಸಿದೆ. ಕಥೆಯ ನಿರೂಪಣೆಯ ಆರಂಭದಲ್ಲಿ ಯಶವಂತ ಚಿತ್ತಾಲರ ಭಾಷಾ ಶೈಲಿಯ ನೆನಪು ಹುಟ್ಟುತ್ತದೆಯಾದರೂ ಅದೇನು ಕಥೆಗೆ ಎರವಲು ತಂದ ಭಾವನೆಯನ್ನು ಉಂಟುಮಾಡುವುದಿಲ್ಲ.

ನಾನು ಮೆಚ್ಚಿಕೊಂಡ ಎರಡನೆ ಕಥೆ ‘ಕ್ಷಮಿಸಿ ಬಯಕೆಗಳೇ...’ ಕೂಡ ಮತ್ತೊಂದು ಕಾಯುವಿಕೆಯ ವಸ್ತುವನ್ನೊಳಗೊಂಡ ಕಥೆಯಾಗಿದೆ. ಅಕಸ್ಮಾತಾಗಿ ಒಂದು ಪತ್ರ ಪರಿಚಯಕ್ಕೆ ಸಿಕ್ಕಿಕೊಂಡ ಪಾಪಣ್ಣ ಆ ಪತ್ರ ಸಂಬಂಧದ ವ್ಯಕ್ತಿಯನ್ನು ಕಾಣಬೇಕೆಂದು ನಿರೀಕ್ಷಿಸುತ್ತಾ, ಆ ನಿರೀಕ್ಷೆಯನ್ನೇ ಬದುಕಿನ ರುಚಿ ಹೆಚ್ಚಿಸುವ ಗುರಿ ಎಂಬಂತೆ ಕಾಪಾಡಿಕೊಳ್ಳುತ್ತಾ ಬಂದು, ಕಡೆಗೊಂದು ದಿನ ಆ ನಿರೀಕ್ಷೆ ನಿಜವೇ ಆಗಿಬಿಡುವ ಸಂದರ್ಭ ಎದುರಾಗಿದೆ ಎನಿಸಿದಾಗ ಆ ವಾಸ್ತವದಿಂದ ತಪ್ಪಿಸಿಕೊಂಡು ಓಡುತ್ತ್ತಾನೆ. ಈ ಬಗೆಯ ಕಥಾವಸ್ತುವುಳ್ಳ ಕಥೆಗಳು ಸ್ವಲ್ಪಮಟ್ಟಿಗೆ ಅಪರೂಪ ಎಂದು ಹೇಳಬಹುದು. ರಶೀದ ತನ್ನ ವಯಸ್ಸಿಗೆ ಸಹಜವಾಗಿ ಒದಗುವ ಮಾಮೂಲಿ ಅನುಭವಗಳನ್ನು ಒಂದು ಕಥಾಭಿತ್ತಿಯೊಳಗೆ ತಂದು ಅದಕ್ಕೊಂದು ಅರ್ಥ ಸಾಧ್ಯತೆಯನ್ನು ಸಾಹಿತ್ಯಿಕವಾಗಿ ನಿರ್ಮಿಸಬಲ್ಲ ಎಂಬುದಕ್ಕೆ ಈ ಕಥೆ ಒಂದು ಸುಂದರ ಸಾಕ್ಷಿಯಾಗಿದೆ.

ಕಾಯುವಿಕೆಯ ನೀರಸತೆಯನ್ನು ವಿವರಿಸುತ್ತಲೇ ಆ ಕಾಯುವಿಕೆ ಉಂಟುಮಾಡುವ ‘ಥ್ರಿಲ್’ ಅನ್ನು ಮನಗಾಣಿಸುವುದಕ್ಕೆಂದೇ ಕಥೆಯನ್ನು ರೂಪಿಸಿದಂತಿರುವ ರಶೀದ ಲಾಟರಿ ಕೊಂಡುಕೊಳ್ಳುವ ಪ್ರಸಂಗದಲ್ಲೂ ಆ ತಾತ್ವಿಕತೆಯನ್ನು ಪ್ರತಿಪಾದಿಸುತ್ತಾನೆ. ‘ನಿನ್ನ ಲಕ್ಷ ತಗಂಡು ಹೋಗಿ ಬಾವಿಗಾಕಯ್ಯ’ ಎಂದು ರೇಗಿದ ಪಾಪಣ್ಣ ಒಂದು ಮಿನಿ ಕೊಂಡು ಜೇಬಿಗಿಳಿಸಿದ. ಸುಮ್ಮನೆ ಫಲಿತಾಂಶಕ್ಕೆ ಕಾಯುವ ‘ಥ್ರಿಲ್’ಗಾಗಿಯಾದರೂ ಇರಲಿಯೆಂದು. ಬಹುಶ: ಕಾಯುವ ‘ಥ್ರಿಲ್’ ಬಂಪರ್ ಪ್ರೈಸ್ ಬಂದಾಗಲೂ ಸಿಗಲಾರದಲ್ಲವೇ ಅಂದುಕೊಂಡ. ಸ್ಫೂರ್ತಿ ಎಂಬ ಕನಸಿನ ಹುಡುಗಿಯ ಪತ್ರಗಳಿಗೆ ಕಾದ, ಹಾಗೆ ಪತ್ರಕ್ಕೆ ಕಾಯುವ ಸುಖ, ಬಿಚ್ಚಿ ಓದು ಓದುತ್ತಾ ಹೋದಂತೆ ತಣ್ಣಗಾಗಿಬಿಡುತ್ತದೆ. ಹಾತೊರೆದು ಕಾದದ್ದನ್ನು ಪಡೆದಾಗ ‘ಇಷ್ಟೇನಾ’ ಎಂದೆನಿಸಿಬಿಡುತ್ತದೆ. ‘ಮುಂದಕ್ಕೇನು’ ಎಂಬ ಶೂನ್ಯವೇ ಬಾಯಿ ತೆರೆದು ನುಂಗಲು ಬರುತ್ತದೆ.

‘ಪರುಷಮಣಿ’ಯಲ್ಲಿರುವ ಎಲ್ಲಾ ಕಥೆಗಳೂ ಗಮನ ಸೆಳೆಯುವ ಕಥೆಗಳೇ.ಆದರೆ ರಶೀದನ ಒಳಗೆ ರೂಪುಗೊಳ್ಳುತ್ತಿದ್ದ ಸಮರ್ಥ ಕಥೆಗಾರನ ಲಕ್ಷಣಗಳನ್ನು ಬಿಂಬಿಸುವುದಕ್ಕೆ ಇವೆರಡೂ ಕಥೆಗಳು ಒಳ್ಳೆಯ ಉದಾಹರಣೆಗಳಾಗಿ ನನ್ನ ಗಮನ ಸೆಳೆದವಾದ್ದರಿಂದ ನಿಮ್ಮ ಮುಂದೆ ಅವನ್ನು ಹಂಚಿಕೊಂಡೆ. ಭಾಷೆಯ ಬಳಕೆ, ಕಥಾಶಿಲ್ಪದ ನಿರ್ಮಾಣ, ಪಾತ್ರಗಳ ವಿನ್ಯಾಸ, ಹಾಗೂ ಸಂದರ್ಭ ನಿರ್ವಹಣೆ ಮುಂತಾದ ತಾಂತ್ರಿಕ ಅಂಶಗಳ ನೆಲೆಯಿಂದ ನೋಡಿದಾಗಲೂ ರಶೀದ ಬರೆಯಬಹುದಾಗಿದ್ದ ಮತ್ತೆಷ್ಟೋ ಕಥೆಗಳು ಕನ್ನಡಕ್ಕೆ ಮತ್ತೊಬ್ಬ ಶಕ್ತ ಕಥೆಗಾರನನ್ನು ಕೊಡಲಿದ್ದವು ಎಂಬುದನ್ನು ಹೇಳುವಂತಿವೆ.

ಕಥೆಯಂತೆಯೇ ಕಾವ್ಯದಲ್ಲೂ ಸಾಕಷ್ಟು ಭರವಸೆಯನ್ನು ಹುಟ್ಟಿಸಿದ್ದ ಕವಿ ರಶೀದ್. ಈ ಸಂಕಲನದಲ್ಲಿ ‘ನಾನು ಸುಮ್ಮನಿದ್ದರೆ! ಆದರೆ ...’, ‘ನಿನಗೆ ನಾನು ಹುಟ್ಟಿದ ನಿಮಿಷ’, ‘ಪರುಷಮಣಿ’ ಮುಂತಾದ ಕವಿತೆಗಳು ಆತನ ಸಶಕ್ತ ಅಭಿವ್ಯಕ್ತಿಗೆ ಸಾಕ್ಷಿಗಳಾಗಿವೆ. ಕಥೆಗಳಲ್ಲೇ ಕಾವ್ಯಮಯ ಭಾಷೆ ಬಳಸುವ ರಶೀದ ಕವಿತೆಗಳಲ್ಲೂ ಅರ್ಥಗರ್ಭಿತ ಪ್ರತೀಕಾತ್ಮಕ ಭಾಷೆಯ ಮುಖಾಂತರ ಒಂದು ಬೆಚ್ಚನೆಯ ಸಂವೇದನೆಯನ್ನು ಉಂಟುಮಾಡುತ್ತಾನೆ.

ಪರುಶಮಣಿಯಂತೂ ಒಂದು ಪ್ರಸಂಗಾತ್ಮಕ ಕವಿತೆಯಾಗಿದ್ದು, ಕವಿ ಬದುಕಿನ ಕಹಿ ಅನುಭವದ ಸಾರವನ್ನು ಹಿಂಡಿ ಕಾವ್ಯದ ಮದಿರೆಯಾಗಿ ಬಟ್ಟಲಿಗೆ ತುಂಬಿತ್ತಿದ್ದಾನೆ
‘ನಿನ್ನ ಸಕಲ ಸೌಭಾಗ್ಯಕ್ಕೂ ನೀನು ದೇವ ಸ್ತುತಿ
ಸಲ್ಲಿಸುವಾಗ ನಾನು ಮೊರೆಯಿಡುತ್ತೇನೆ;
‘ಇಲ್ಲವಾಗಲು ನನಗೆ ಒಂದೂ ಇಲ್ಲದಿರಲಿ ದೇವರೇ..’
ಆಗ ನನ್ನೆದೆಯ ಪರುಷಮಣಿ,
ಕ್ಯಾಲೆಂಡರಿನಂತೆ ನಿನ್ನ ಮುಖಕ್ಕೆ ತಗುಲಿ ಹಾಕಿದ್ದ
ಆ ಸೂಳೆ ನಗುವಿನ ವಿರುದ್ಧ ದಿಕ್ಕಿಗೆ
ತನ್ನ ದಿವ್ಯ ಬೆಳಕಿನ ತೋರು ಬೆರಳನ್ನು ಹಿರಿಯುತ್ತಾ
ನನಗೆ ನಿರ್ದೇಶಿಸುತ್ತದೆ;
‘ಮಗನೇ, ಈ ದಾರಿಯಲ್ಲಿ ನೀನು ನಡೆ
ಇದು ಮಾತ್ರ ನೀನು ನಡೆಯಬಹುದಾದ ದಾರಿ’

ಕವಿತೆಯ ಟಿಪ್ಪಣಿ ಸೂಚಿಸುವಂತೆ ಇದು ರಶೀದನ ಕಡೆಯ ಪ್ರಕಟಿತ ಕವನ. ಕಡೆಯ ಪ್ರಕಟಿತ ಕವನ ಎಂಬುದರಲ್ಲೇನೂ ಹೆಚ್ಚಿನ ವಿಶೇಷವಿರಲಾರದು.ಆದರೆ ರಶೀದ ತನ್ನ ಜೀವನಾನುಭವದಲ್ಲಿ ಸ್ಪರ್ಶಿಸಿದ ಕಠೋರ ವಾಸ್ತವಗಳನ್ನೂ, ಅದಕ್ಕೆ ಇದಿರಾಗಿ ಬದುಕಿಗೆ ಸೂಚಿಸ ಬಯಸಿದ್ದ ದಿವ್ಯ ದೈವಿಕ ಹಾದಿಯನ್ನೂ ಇದು ಧ್ವನಿಸುತ್ತದೆಯೆಂಬ ಕಾರಣಕ್ಕೆ ಮನಕಲಕುತ್ತದೆ.

ಆತನ ಬಹುತೇಕ ಕವಿತೆಗಳು ಪ್ರೀತಿಯ ಹುಡುಕಾಟದಲ್ಲಿ, ಅದನ್ನು ಕಳೆದುಕೊಂಡ ನೋವಿನಲ್ಲಿ ರೂಪಾಕಾತ್ಮಕವಾಗಿ ನರಳುತ್ತವೆ. ಅಥವಾ ಆ ನೋವನ್ನೇ ಹಾಡುತ್ತವೆ.
‘ಆದರೆ ಇದೊಂದನ್ನು ಮಾತ್ರ ನೀನು ಒಪ್ಪಬೇಕು;
ಸಾವು ಮಾತ್ರ ಬದುಕಿಗೆ ರುಜುವಾಗುತ್ತದೆಯೆನ್ನುವುದನ್ನು...
ನಿನ್ನ ಬೆಡಗಿನಿಂದ ಚಿರಸ್ಮರಣೀಯವಾದುದನ್ನು
ಕಟ್ಟುವೆನೆಂದ ಹೆಣ್ಣೇ...
ಇದೀಗ ಕರುಣಾಳು ಸಾವು ಮಾತ್ರ
ನಿನ್ನ ಬದುಕನ್ನು ಸ್ಮರಿಸುತ್ತದೆನ್ನುವುದನ್ನು...’
ಎಂದು ಅತ್ಯಂತ ವಿಷಾದಪೂರ್ಣ ದನಿಗಳನ್ನು ಹೊಮ್ಮಿಸುವ ಈ ಕವಿತೆಗಳು ಅಂತ:ಕರಣಪೂರಕವಾದ ಅಭಿವ್ಯಕ್ತಿಗಳಾಗಿವೆ ಎಂಬುದು ಕವಿತೆಗಳ ಲಕ್ಷಣಗಳಲ್ಲೊಂದು. ಆರ್ದ್ರತೆಯಿಂದ ಓದಿಗೆ ಹೊಸತೆನಿಸುವ ರೂಪಕಗಳಿಂದ ಯಾವುದೋ ದಿವ್ಯ ಯಾಚನೆಯ ಹಂಬಲದಿಂದೆಂಬಂತೆ ನಿರೂಪಿತವಾಗಿರುವ ಈ ಕವಿತೆಗಳು ರಶೀದ ಕೇವಲ ಕಥೆಗಾರ ಮಾತ್ರವಲ್ಲ ಬದಲಾಗಿ ಉತ್ತಮ ಕವಿ ಕೂಡ ಎಂಬುದನ್ನು ಯಾವುದೇ ರಿಯಾಯಿತಿಯ ಹಂಗಿಲ್ಲದೆ ನಿದರ್ಶಿಸುತ್ತಿವೆ.

ಕಥೆ, ಕವನಗಳಲ್ಲಿ ವ್ಯಕ್ತವಾಗುವ ಅಸೀಮ ಜೀವಪರತೆ ಹಾಗೂ ಬೆಚ್ಚನೆಯ ಮಾನವೀಯ ಸಂವೇದನೆಯನ್ನು ತನ್ನ ಲೇಖನ ಹಾಗೂ ವರದಿಗಳಲ್ಲೂ ರಶೀದ ವ್ಯಕ್ತಪಡಿಸಿದ್ದಾನೆ. ಕಾವ್ಯದಂತಹುದೇ ಭಾವೋತ್ಕಟತೆಯಿಂದ ನಿರೂಪಿತವಾಗಿರುವ ‘ನೀನೊಬ್ಬನೇ ಮುಖೇಶ’, ‘ಹಾಡುವ ನಟರು’ ಎಂಬ ಲೇಖನಗಳು, ಸ್ಟಾರ್ ಉಪೇಂದ್ರನ ವಿಕೃತಿಯನ್ನು ಸಾಮಾಜಿಕ ಜವಾಬ್ದಾರಿಯಿಂದ ಪ್ರಶ್ನಿಸುವ ಪತ್ರ, ‘ಈ ದೈವ ಸಾಮ್ರಾಜ್ಯವನ್ನು ನೀವು ಕಂಡಿದ್ದೀರಾ’ ಎಂಬ ಪರಿಚಯ ಲೇಖನ ಮುಂತಾದವು ಆತನ ಜೀವನ ಪ್ರೀತಿಗೆ ಹಾಗೂ ಬರಹಗಾರನಾಗಿ ಪಡೆದಿದ್ದ ಶಕ್ತಿಗೆ ನಿದರ್ಶನವಾಗಿವೆ.

‘ಕೊಂಗಾಣದ ಅಮಾನುಷ ಕೊಲೆಗಳು’ ಎಂಬ ವರದಿ ಕೇವಲ ಅಪರಾಧ ಕೃತ್ಯದ ವರದಿ ಎಂಬಂತಿರದೆ ಅಂತಹ ಕೃತ್ಯಗಳ ಹಿಂದಿನ ಮಾನವೀಯ ಕಾರಣಗಳು, ಅಮಾನವೀಯ ಸಾಮಾಜಿಕ ಪರಿಸರಗಳು ಮುಂತಾದವುಗಳೆಲ್ಲವನ್ನೂ ಅಧ್ಯಯನ ಸ್ವರೂಪದಲ್ಲಿ ಮಂಡಿಸುತ್ತಾ ವರದಿಗಾರನೊಬ್ಬನಿಗೆ ಇರಬೇಕಾದ ಹಲವು ಆಯಾಮಗಳ ಒಳನೋಟಗಳನ್ನು ಬಿಂಬಿಸುತ್ತವೆ.

ಸುಂದರವಾಗಿ ಮನಸೆಳೆಯುವಂತೆ ಪ್ರಕಟಗೊಂಡಿರುವ ಈ ಕೃತಿ ಹಲವರ ಪರಿಶ್ರಮದಿಂದಾಗಿರಬಹುದು. ಅದರಲ್ಲಿ ಮುಖ್ಯವಾಗಿ ಅಣ್ಣನಂತೆಯೇ ಶಕ್ತ ಬರಹಗಾರನಾಗಲು ಹೊರಟಿರುವ ಸೂಕ್ಷ್ಮ ಮನಸ್ಸಿನ ತರುಣ ಬಿ.ಎಂ.ಬಶೀರ್ ಪರಿಶ್ರಮ ಈ ಸಂದರ್ಭದಲ್ಲಿ ಖಂಡಿತವಾಗಿಯೂ ಶ್ಲಾಘನೀಯವಾಗಿದೆ. ಇದು ಉಪಚಾರದ ಮಾತಲ್ಲ. ಕಳೆದು ಹೋದ ತನ್ನ ಪ್ರೀತಿಯ ಅಣ್ಣನ ಪ್ರೀತಿಗಳಲ್ಲೊಂದಾಗಿದ್ದ ಸಾಹಿತ್ಯವನ್ನು ಸದಭಿರುಚಿಯಿಂದ ಸಂಕಲನಗೊಳಿಸಿ, ಅದನ್ನೊಂದು ಅರ್ಥಪೂರ್ಣ ಸ್ಮಾರಕವನ್ನಾಗಿಸಿ ರಶೀದನನ್ನು ನೆನೆಯುತ್ತಿರುವ ಈ ಕ್ರಮ ಸಂಬಂಧ ಹಾಗೂ ಸ್ನೇಹಗಳ ವ್ಯಾಖ್ಯಾನದಂತಿವೆ.
ತನ್ನ ಬರವಣಿಗೆ ಸೂಚಿಸುತ್ತಿರುವ ಆಯಾಮಗಳು, ಒಬ್ಬ ಬರಹಗಾರನಾಗಿ ತಾನು ತಲುಪಿದ್ದ ನೆಲೆಗಳು, ತನ್ನ ಸಾಹಿತ್ಯಾಭಿರುಚಿಗೆ ಇದ್ದ ಸಾಧ್ಯತೆಗಳು ಹಾಗೂ ಈಗ ಬರೆದಿರುವುದರಲ್ಲಿ ಇರುವ ಸತ್ವ ಇವುಗಳ ಬಗ್ಗೆ ನಾವೆಲ್ಲಾ ಇಲ್ಲಿ ಚರ್ಚಿಸುತ್ತಿರುವಾಗ ಇಲ್ಲಿ ಈಗ ರಶೀದನಿಲ್ಲ. ನಿರಂತರ ನಿರೀಕ್ಷೆಯ ಮಾಯಾ ಜಿಂಕೆಯ ಬೆನ್ನು ಹತ್ತಿ ಹೋದ ಮಾನವೀಯ ಕನಸುಗಳ ಅನ್ವೇಷಕ ಈಗ ವಿಶ್ರಮಿಸುತ್ತಿರಬಹುದು. ಈತನ ನೆನಪಿಗೆ, ಸಾಹಿತ್ಯ ಪ್ರೀತಿಗೆ ಹಾಗೂ ಸ್ನೇಹ ಪೂರ್ವಕ ವ್ಯಕ್ತಿತ್ವಕ್ಕೆ ಈ ಮಾತುಗಳು ಅಪೂರ್ಣ ಶ್ರದ್ಧಾಂಜಲಿ ಎಂದು ನಾನು ಸಮರ್ಪಿಸುತ್ತಿದೇನೆ.

ಡಾ.ಬಂಜಗೆರೆ ಜಯಪ್ರಕಾಶ
ದಿನಾಂಕ 21.1.2006

Sunday, December 18, 2011

ಬಾಗಿಲು

ಕಳ್ಳರಿಗೆ ಹೆದರಿ ಮುಂಬಾಗಿಲು ಮುಚ್ಚಿಟ್ಟೆ
ಆದರೆ ದುರದೃಷ್ಟ ನೋಡಿ...
ಒಳ ಬರಬೇಕಾದ ನನ್ನವರೆಲ್ಲ
ಮುಚ್ಚಿದ ಬಾಗಿಲು ನೋಡಿ
ಹಾಗೆಯೇ ಮರಳಿದರು
ಕಳ್ಳನೋ ಹಿತ್ತಲಿಂದ ಕನ್ನ ಕೊರೆದು
ನನ್ನ ಮನೆಯನ್ನು ದೋಚಿ ಹೋಗಿದ್ದಾನೆ!

Saturday, December 17, 2011

ಮರ್ಯಾದಸ್ಥರು ಮತ್ತು ಇತರ ಕತೆಗಳು





















ಮಸ್ತಕಾಭಿಷೇಕ

ಆಳೆತ್ತರದ ಬಾಹುಬಲಿಯ ವಿಗ್ರಹಕ್ಕೆ ತುಪ್ಪ, ಹಾಲು, ಜೇನನ್ನು ಅಭಿಷೇಕ ಮಾಡಲಾಯಿತು.
‘ಇದೇನು?’ ಎಂದು ಕೇಳಿದರೆ ‘ಧರ್ಮ’ ಎನ್ನಲಾಯಿತು.
ಆತನ ಪಾದತಲದಲ್ಲಿ ಪುಟಾಣಿ ಮಗುವೊಂದು ಹಾಲಿಲ್ಲದೆ ಹಸಿವಿನಿಂದ ಕಣ್ಣೀರಿನ ಅಭಿಷೇಕ ಮಾಡುತ್ತಿತ್ತು.
‘‘ಇದೇನು?’’ ಎಂದು ಕೇಳಿದರೆ ‘‘ಕರ್ಮ’’ ಎನ್ನಲಾಯಿತು.
ಮಸ್ತಕಾಭಿಷೇಕದ ಮರುದಿನ ಬಾಹುಬಲಿ ‘ಮೈಯೆಲ್ಲ ಉರಿ’ ಎಂದು ಕಣ್ಣೀರಿಡುತ್ತಿರುವುದನ್ನು ನಾನು ಕಂಡೆ.

ರೋಬೊಟ್
ಆತನೊಬ್ಬ ವಿಜ್ಞಾನಿ. ಒಂದು ರೋಬೊಟನ್ನು ಮಾಡಲು ಹೊರಟ. ಹೆಂಡತಿ ಮಕ್ಕಳನ್ನು ಮರೆತು, ಸುಮಾರು ಇಪ್ಪತ್ತು ವರ್ಷಗಳ ಕಾಲದ ಪರಿಶ್ರಮದ ಬಳಿಕ ಒಂದು ರೋಬೊಟನ್ನು ಮಾಡಿದ. ತನ್ನ ಹೆಂಡತಿಯಲ್ಲಿ ಕೂಗಿ ಹೇಳಿದದ ‘‘ನೋಡು, ನಾನೊಂದು ಅಪರೂಪದ ರೋಬೊಟನ್ನು ನಿರ್ಮಿಸಿದ್ದೇನೆ’’
ಅದಕ್ಕೆ ಹೆಂಡತಿ ನಿಟ್ಟುಸಿರಿಟ್ಟು ಉತ್ತರಿಸಿದಳು ‘‘ಅದರಲ್ಲೇನಿದೆ ವಿಶೇಷ. ಇಪ್ಪತ್ತು ವರ್ಷಗಳ ಹಿಂದೆ ನಾನು ಅಂತಹದೇ ರೋಬೊಟೊಂದನ್ನು ಮದುವೆಯಾಗಿದ್ದೇನೆ’’

ಹಾಲು ಮಾರುವವಳು
ಸಂತೆಯಲ್ಲಿ ಹಾಲು ಮಾರುವವಳು ಮತ್ತು ಮೊಸರು ಮಾರುವವಳು ಎದುರು ಬದುರಾದರು.
ಮೊಸರು ಮಾರುವವಳು ಕಾಲು ಕೆದರಿ ಜಗಳಿಕ್ಕಿಳಿದಳು. ಹಾಲು ಮಾರುವವಳನ್ನು ಯದ್ವಾತದ್ವಾ ನಿಂದಿಸ ತೊಡಗಿದಳು. ಆದರೆ ಹಾಲು ಮಾರುವವಳು ವೌನವಾಗಿದ್ದಳು.
ತುಸು ಹೊತ್ತಿನ ಬಳಿಕ ಯಾರೋ ಕೇಳಿದರು ‘‘ಅವಳು ಅಷ್ಟು ಬೈದರೂ ನೀನೇಕೆ ಸುಮ್ಮಗಿದ್ದೆ?’’
ಹಾಲು ಮಾರುವವಳು ಉತ್ತರಿಸಿದಳು ‘‘ಹಾಲು ಮೊಸರಿನ ಮೇಲೆ ಬಿದ್ದರೂ, ಮೊಸರು ಹಾಲಿನ ಮೇಲೆ ಬಿದ್ದರೂ ಪರಿಣಾಮ ಮೊಸರೇ ಆಗುವುದು...ಏನಾದರೂ ಅದರ ಲಾಭ ಅವಳಿಗೇ. ಅದಕ್ಕೆ ವೌನವಾಗಿದ್ದೆ’’

ಬೆಲೆ
ಒಂದು ಖಾಲಿ ಕಾಗದ ಮತ್ತು ಸಾವಿರ ರೂಪಾಯಿಯ ನೋಟು ಮುಖಾಮುಖಿಯಾಯಿತು.
‘‘ನನಗೆ ಸಮಾಜದಲ್ಲಿ ಬೆಲೆಯಿದೆ. ನೀನೋ ಖಾಲಿ ಕಾಗದ’’ ನೋಟು ಬಿಂಕದಿಂದ ಬೀಗಿತು.
‘‘ನಿನ್ನ ಬೆಲೆ ಸಾವಿರಕ್ಕಿಂತ ಹೆಚ್ಚು ಬಾಳದು. ಆದರೆ ನಾನು ಖಾಲಿಯಾಗಿದ್ದೇನೆ. ಕೆಲವೊಮ್ಮೆ ನನ್ನಲ್ಲಿ ಬರೆಯಲ್ಪಡುವುದಕ್ಕೆ ಬೆಲೆಯನ್ನು ಕಟ್ಟುದಕ್ಕೂ ಕಷ್ಟವಾಗಬಹುದು’’ ಖಾಲಿ ಕಾಗದ ವಿನಯದಿಂದ ಹೇಳಿತು.

ಖಡ್ಗ
ಒಬ್ಬ ಕಮ್ಮಾನರ ರಾಜನಿಗೆ ಒಂದು ಖಡ್ಗವನ್ನು ಮಾಡಿಕೊಟ್ಟ.
‘‘ಎಂಥವನ ತಲೆಯನ್ನೂ ಈ ಖಡ್ಗ ಕ್ಷಣಾರ್ಧದಲ್ಲಿ ಕತ್ತರಿಸಿ ಹಾಕುತ್ತದೆ’’ ಕಮ್ಮಾರ ರಾಜನಲ್ಲಿ ನುಡಿದ.
‘‘ಹೌದೆ?’’ ರಾಜ ಖಡ್ಗವನ್ನು ಬೀಸಿದ.
ಕಮ್ಮಾರನ ತಲೆ ಕೆಳಗುರುಳಿತು.
‘‘ಹೌದು, ನಿಜಕ್ಕೂ ಅಪರೂಪದ ಖಡ್ಗ ಇದು’’ ರಾಜ ತೃಪ್ತಿಯಿಂದ ಖಡ್ಗವನ್ನು ಒರೆಗೆ ಹಾಕಿಕೊಂಡ.

ಪೆಟ್ಟಿಗೆ
‘‘ಅಲ್ಲೊಂದು ಪೆಟ್ಟಿಗೆ ಅನಾಥವಾಗಿ ಬಿದ್ದಿದೆ. ಅದರೊಳಗೆ ಏನೋ ಇದ್ದ ಹಾಗಿದೆ’’ ಒಬ್ಬ ಹೇಳಿದ.
‘‘ಅದು ನನ್ನದು ಕಣ್ರೀ...ತುಂಬಾ ದಿನದಿಂದ ಅದನ್ನು ಹುಡುಕುತ್ತಾ ಇದ್ದೆ’’ ಜಿಪುಣನೊಬ್ಬ ಕೂಗಿ ಅತ್ತ ಧಾವಿಸಿದ.
ನೋಡಿದರೆ ಅಲ್ಲೊಂದು ಶವಪೆಟ್ಟಿಗೆ ಅನಾಥವಾಗಿ ಬಿದ್ದಿತ್ತು.

ಮರ್ಯಾದಸ್ಥರು!
‘‘ಪ್ರಾಯ 35 ದಾಟಿರಬೇಕಲ್ಲ...ಬಹುಶಃ ನೀನು ಈ ವೃತ್ತಿಗೆ ಹೊಸಬಳು...ಅಲ್ಲವೆ’’ ವೃದ್ಧ ಗಡ್ಡ ನೀಯುತ್ತಾ ಕೇಳಿದ.
ಮಹಿಳೆ ಮುಚ್ಚಿದ ಬುರ್ಖಾದೊಳಗಿಂದಲೇ ಹೇಳಿದಳು
‘‘ಹೌದು. ಈ ಊರಿನ ದೊಡ್ಡ ಮರದ ಮಿಲ್ಲಿನ ಸಾಹುಕಾರರ ಮಗ ನನ್ನ ಮಗಳನ್ನು ಮದುವೆಯಾಗಲು ಒಪ್ಪಿದ್ದಾರೆ. 50 ಪವನ್ ಬಂಗಾರ ಹಾಕಬೇಕು. ಎಲ್ಲೂ ಹಣ ಹುಟ್ಟಲಿಲ್ಲ. ನಾವು ಬಡವರು. ಬೇರೆ ವಿಧಿಯಿಲ್ಲ...ಅದಕ್ಕಾಗಿ ಬಂದಿದ್ದೇನೆ....’’

ವೃದ್ಧ ಬೆವರಿ, ಧಿಗ್ಗನೆ ಎದ್ದು ನಿಂತ. ಬಳಿಕ ಅವಸರವಸರವಾಗಿ ಮೊಬೈಲ್ ತೆಗೆದು ಫೋನಲ್ಲಿ ಮಾತನಾಡತೊಡಗಿದ ‘‘ಮಗನೇ...ಆ ಸಂಬಂಧ ನಮಗೆ ಬೇಡ. ಅವರು ಮರ್ಯಾದಸ್ಥರಲ್ಲ...’’

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Thursday, December 15, 2011

ಬಾಗಿಲು ಮತ್ತು ಇತರ ಕತೆಗಳು

ಹಕ್ಕಿ ಮತ್ತು ಗರಿ
ಆದಿ ಅಂತ್ಯವಿಲ್ಲದ ದಿಗಂತವದು. ಬಾನಾಡಿಗಳು ಅದಾಗಲೇ ತಮ್ಮ ತಮ್ಮ ಗುರಿ ಹಿಡಿದು ಗೂಡು ಬಿಟ್ಟು ತೆರಳುತ್ತಿದ್ದವು. ಪ್ರಕೃತಿ ಅದನ್ನು ಸಂಭ್ರಮದಿಂದ ವೀಕ್ಷಿಸುತ್ತಿತ್ತು. ಹಕ್ಕಿಗಳು ಶೀಘ್ರ ಗುರಿ ತಲುಪಲಿ ಎಂದು ಹಾರೈಸುತ್ತಿದ್ದವು.
ಹೀಗೆ, ದಿಗಂತದಲ್ಲಿ ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾರಿ ಹೋಗುತ್ತಿರುವ ಸಂದರ್ಭ, ರಭಸಕ್ಕೆ ಹಕ್ಕಿಯ ಗರಿಯೊಂದು ಉದುರಿ ಬಿತ್ತು. ಗರಿ ಸ್ವ್ವತಂತ್ರವಾಗಿ ಆಕಾಶದಲ್ಲಿ ತೇಲತೊಡಗಿತ್ತು.
ಗರಿ ಹೇಳಿಕೊಂಡಿತು ‘ನಾನೀಗ ಸ್ವತಂತ್ರ. ಹಕ್ಕಿಯ ಹಂಗಿಲ್ಲದೆ ಹಾರಾಡುತ್ತಿದ್ದೇನೆ’
ಗಾಳಿಯಲ್ಲಿ ತೇಲಾಡುತ್ತಾ ಹಕ್ಕಿಯನ್ನು ನೋಡಿ ಗರಿ ಹಂಗಿಸಿತು ‘ನನ್ನ ಸಂಗಾತಿಗಳನ್ನು ರೆಕ್ಕೆಯಂತೆ ಬಳಸಿ, ನೀನು ಆಕಾಶದಲ್ಲಿ ಹಾರಾಡುತ್ತಾ ಮೆರೆದೆ. ನಮ್ಮನ್ನು ಮರೆತೆ. ಈಗ ನೋಡು... ನನಗೀಗ ನಿನ್ನ ಹಂಗಿಲ್ಲ. ಎಲ್ಲಾ ಗರಿಗಳು ನನ್ನಂತೆಯೇ ಸ್ವತಂತ್ರವಾದರೆ ನಿನಗೆಲ್ಲಿ ಅಸ್ತಿತ್ವ’
ಮತ್ತೆ ಜೋರಾಗಿ ಪ್ರಕೃತಿಗೆ ಕೂಗಿ ಹೇಳಿತು ‘ನೋಡಿರಿ, ನೋಡಿರಿ ನಾನೀಗ ಸ್ವತಂತ್ರವಾಗಿ ಹಾರಾಡುತ್ತಿದ್ದೇನೆ. ನದಿಗಳೇ ನೋಡಿ, ನನ್ನ ದೆಸೆಯಿಂದ ಹಕ್ಕಿ ಹಾರುತ್ತಿದ್ದರೂ, ನೀವೆಲ್ಲ ಹಕ್ಕಿಯನ್ನೇ ಕೊಂಡಾಡಿದಿರಿ. ಈಗ ನೋಡಿ...’ ಆದರೆ ಗಾಳಿ ನಿಧಾನವಾಗಿ ಕಡಿಮೆಯಾಯಿತು. ಗರಿ ನಿಧಾನವಾಗಿ ನೆಲವನ್ನಪ್ಪಿತು. ಮತ್ತೆ ಅಲ್ಲಿಂದ ನೆಗೆದು ಹಾರುವುದಕ್ಕೆ ಯತ್ನಿಸಿತು. ಊಹುಂ...ಆಗುತ್ತಿಲ್ಲ. ಅದೆಷ್ಟು ಪ್ರಯತ್ನಿಸಿದರೂ ಹಾರುವುದಕ್ಕಾಗುತ್ತಿಲ್ಲ... ಗರಿ ಅಸಹಾಯಕತೆಯಿಂದ ಮೇಲೆ ನೋಡಿತು. ಅಲ್ಲಿ ಹಕ್ಕಿ ಸದ್ದು ಗದ್ದಲವಿಲ್ಲದೆ ಹಾರುತ್ತಾ ಹಾರುತ್ತಾ, ತನ್ನ ಗುರಿಯೆಡೆಗೆ ಸಾಗುತ್ತಿತ್ತು.

ಬಾಗಿಲು
ಒಬ್ಬ ಫಕೀರ ಶ್ರೀಮಂತನ ಮಹಲಿಗೆ ಬಂದವನು ಅಂಗಳದಲ್ಲಿ ನಿಂತು ಆ ಮನೆಯನ್ನೇ ನೋಡುತ್ತಿದ್ದ.
ಶ್ರೀಮಂತ ಅಚ್ಚರಿಯಿಂದ ಕೇಳಿದ ‘‘ಏನು ನೋಡುತ್ತಿರುವೆ?’’
‘‘ನಿನ್ನ ಮನೆಯ ಹೆಬ್ಬಾಗಿಲನ್ನು’’
ಶ್ರೀಮಂತ ಹೆಮ್ಮೆಯಿಂದ ಹೇಳಿದ ‘‘ಅದು ತೇಗದ ಮರದಿಂದ ಮಾಡಿದ ಬಲಿಷ್ಠ ಬಾಗಿಲು...’’
‘‘ಯಾರಿಗೆ ಹೆದರಿ ಈ ಬಾಗಿಲನ್ನು ತಯಾರಿಸಿದ್ದೀಯ?’’
‘‘ಕಳ್ಳಕಾಕರಿಗೆ ಹೆದರಿ...’’
‘‘ನೀನು ಯಾವಾಗ ಈ ಬಲಿಷ್ಟ ಬಾಗಿಲನ್ನು ತಯಾರಿಸಬೇಕೆಂದು ತೀರ್ಮಾಸಿದ್ದೆಯೋ ಆಗಲೇ ಕಳ್ಳ ನಿನ್ನ ಮನೆಯನ್ನು ಪ್ರವೇಶಿಸಿಯಾಗಿದೆ ಅವನನ್ನು ಮನೆಯೊಳಗಡೆ ಬಿಟ್ಟು ಬಾಗಿಲು ಭದ್ರ ಪಡಿಸಿ, ನೀನು ಹೊರಗೆ ಬಂದು ನಿಂತಿದ್ದೀಯ’’
ಎಂದವನೇ ಫಕೀರ ಮುಂದೆ ನಡೆದ.

ಹೆಸರು
ಅವನು ಓಡೋಡಿ ಬಂದ.
‘‘ಗುರುಗಳೇ ನನಗೆ ಗಂಡು ಮಗು ಹುಟ್ಟಿದೆ. ಸುಂದರವಾದ ಒಂದು ಹೆಸರನ್ನು ಹೇಳಿ’’
ಸಂತ ನುಡಿದ ‘‘ಸುಂದರವಾದ ಹೆಸರುಗಳಿಲ್ಲ. ಸುಂದರವಾದ ಮನುಷ್ಯರಿದ್ದಾರೆ. ಆ ಮಗುವಿನಿಂದಾಗಿಯೇ ಹೆಸರು ಸುಂದರವಾಗುತ್ತದೆ. ಹೋಗು, ಆ ಮಗುವನ್ನು ಹೆತ್ತ ತಾಯಿಯಲ್ಲಿ ಕೇಳು. ಅವಳ ಆಸೆಯಂತೆ ಹೆಸರನ್ನಿಡು’’

ನಗು
ಅವರೆಲ್ಲ ಹಿರಿಯರು, ಶ್ರೀಮಂತರು, ಅಧಿಕಾರಿಗಳು...ಎಲ್ಲರೂ ಮುಂಜಾನೆ ಆ ಮೈದಾನದಲ್ಲಿ ಸೇರಿ ಜೋರಾಗಿ ನಗುವಿನ ವ್ಯಾಯಾಮ ಮಾಡುತ್ತಿದ್ದರು. ಬಾರದ ನಗುವನ್ನು ಎಲ್ಲರೂ ಸೇರಿ ಜೋರಾಗಿ ನಗುವುದಕ್ಕೆ ಪ್ರಯತ್ನಿಸುತ್ತಿದ್ದರು. ಆ ನಗುವಿನಿಂದ ಅವರ ಆರೋಗ್ಯ ಉತ್ತಮವಾಯಿತೋ ಗೊತ್ತಿಲ್ಲ. ಪಕ್ಕದ ಗುಡಿಸಲಿನ ಮಕ್ಕಳು ಅವರನ್ನು ನೋಡಿ ನಕ್ಕು ನಕ್ಕು ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಂಡರು.

ಸ್ನೇಹಿತರು
‘‘ಸುಮ್ನೆ ಸ್ನೇಹಿತರ ಜೊತೆ ಅಲೆಯುತ್ತಿದ್ದೀಯಲ್ಲ, ಯಾವ ಲಾಭಕ್ಕಾಗಿ ಅವರನ್ನು ಜೊತೆ ಸೇರಿಸ್ಕೊಂಡಿದ್ದೀಯ?’’
ತಂದೆ ಮಗನ ಮುಂದೆ ಸಿಟ್ಟಿನಿಂದ ಕಿರುಚಿದ.
‘‘ನನ್ನಿಂದ ಯಾವ ಲಾಭವೂ ಇಲ್ಲದಿದ್ದರೂ ಅವರು ನನ್ನ ಜೊತೆಗಿದ್ದಾರೆ. ಅದಕ್ಕಾಗಿ ನಾನೂ ಅವರ ಜೊತೆಗಿದ್ದೇನೆ’’ ಮಗ ತಣ್ಣಗೆ ಹೇಳಿದ.

ಆಳ
‘‘ನೀರು ಆಳವಿದೆಯೆ?’’ ಆತ ಕೇಳಿದ.
ನೀರಲ್ಲಿದ್ದವ ‘‘ಇಲ್ಲ’’ ಎಂದ.
ಆತ ನೀರಿಗೆ ಹಾರಿದ. ನೋಡ ನೋಡುತ್ತಿದ್ದಂತೆ ಆತ ಮುಳುಗ ತೊಡಗಿದ ‘‘ಏನ್ರೀ...ಆಳವಿಲ್ಲ ಎಂದ್ರಿ...?’’
‘‘ಈಜಲು ಗೊತ್ತಿರುವವನ ಆಳಕ್ಕೂ, ಗೊತ್ತಿಲ್ಲದವನ ಆಳಕ್ಕೂ ವ್ಯತ್ಯಾಸವಿದೆ. ನನಗೆ ಈಜಲು ಗೊತ್ತಿದೆ’’

ಉಪ್ಪು
ಮದುವೆಯ ಊಟ ಭರ್ಜರಿಯಾಗಿತ್ತು.
ಯಾರೋ ಜೋರಾಗಿ ಹೇಳಿದರು ‘‘ಉಪ್ಪು ಜಾಸ್ತಿಯಾಗಿದೆ...’’
ಇನ್ನಾರೋ ವಿನಯದಿಂದ ಉತ್ತರಿಸಿದರು ‘‘ಮದುವೆ ಹೆಣ್ಣಿನ ತಂದೆಯ ಕಣ್ಣೀರು ಒಂದಿಷ್ಟು ಹೆಚ್ಚು ಬಿದ್ದಿರಬೇಕು. ಕ್ಷಮಿಸಿ ಬಿಡಿ. ಯಾವುದೇ ತಕರಾರು ಮಾಡದೇ ದಯವಿಟ್ಟು ಊಟ ಮುಗಿಸಿ’’

ವರದಿ
‘‘ನಗರದಲ್ಲಿ ಕೋಮುಗಲಭೆ, ಇಬ್ಬರ ಬರ್ಬರ ಕೊಲೆ’’
ವರದಿಗಾರ ಸುದ್ದಿ ಮಾಡುತ್ತಿದ್ದ.
ಇನ್ನೊಬ್ಬ ಕೇಳಿದ ‘‘ಅಂತದ್ದು ಯಾವುದೂ ನಡೆದಿಲ್ಲವಲ್ಲ?’’
‘‘ಇದು ಪ್ರಕಟವಾದ ಬಳಿಕ ನಡೆಯುತ್ತೆ. ಸುಮ್ಮನೆ ತಲೆಕೆಡಿಸಿಕೊಳ್ಳಬೇಡ’’ ವರದಿಗಾರ ಉತ್ತರಿಸಿದ.

Tuesday, December 13, 2011

ಕಳಚಿಟ್ಟು ಬಾ ಒಳಗೆ...

ಒಳ ಬರುವ ಮೊದಲು ಗೆಳೆಯ ಕೇಳಿದ
ಚಪ್ಪಲಿಯನ್ನು ಕಳಚಿಟ್ಟು ಬರಲೆ?
ಹೇಳಿದೆ:
ಗೆಳೆಯ ಕಾಲಿನಲ್ಲಿರುವ ಚಪ್ಪಲಿ
ಹಾಗೇ ಇರಲಿ
ನೀನು ಬಳಸಿ ಸವೆದು ಹೋಗಿರುವ
ನಿನ್ನ ಹೆಸರನ್ನು ಕಳಚಿ ಒಳಗೆ ಬಾ...

ಗೆಳೆಯಾ,
ತಪ್ಪು, ಹೆಸರನ್ನು ಹೊಲಿದ
ಚಮ್ಮಾರನದ್ದಲ್ಲ
ಅದನ್ನು ಧರಿಸಿ ನೀನು
ತುಳಿದ ದಾರಿಯದ್ದು

ನೀನು ಧರಿಸಿಕೊಂಡ
ಚಪ್ಪಲಿಯಲ್ಲಿ
ಅಂಟಿಕೊಂಡ ಧರ್ಮ, ಜಾತಿ
ವರ್ಗ, ಕುಲ, ಗೋತ್ರ...
ಇತ್ಯಾದಿ ಹೊಲಸುಗಳ ನೋಡು
ಒಳಗೆ ಬರುವುದಾದರೆ
ಕಳಚಿಟ್ಟು ಬಾ...
ಆ ನಿನ್ನ ಹೆಸರನ್ನ!

ಗೆಳೆಯಾ...
ಹೊಂಡ ತೋಡಿ ಮುಚ್ಚುವಾಗ
ನೀನೊಂದು ಬರೇ ಹೆಣ!
ನೀನು ಧರಿಸಿಕೊಂಡ
ಹೆಸರೆಂಬ ಚಪ್ಪಲಿಯನ್ನು
ಹರಿದು ಎಸೆದಿದ್ದಾರೆ ನೋಡು,
ಗುಜರಿ ಅಂಗಡಿಯ ತಕ್ಕಡಿಯಲ್ಲಿ
ತೂಗುತ್ತಿರುವ ನಿನ್ನ ಹೆಸರು
ಹತ್ತು ರೂಪಾಯಿಯಷ್ಟೂ
ಬೆಲೆ ಬಾಳುತ್ತಿಲ್ಲ!!

Tuesday, November 22, 2011

ದೇಶ

ಅಂದು ಮುಂಜಾನೆ ಎದ್ದು ನೋಡುತ್ತೇನೆ...
ಭಾರತ ಕಾಣೆಯಾಗಿದೆ
ಎಲ್ಲಿ ಹೋಯಿತು?
ಮಲಗುವವರೆಗೂ
ತನ್ನ ತ್ರಿವರ್ಣ ಸೆರಗನ್ನು
ಹಾರಿಸುತ್ತ ಬಿಂಕ ಬಿನ್ನಾಣದಿಂದ ಇಲ್ಲೇ ಓಡಾಡುತ್ತಿತ್ತಲ್ಲ
ಎಂದು ಹಿತ್ತಲಿಗೆ ಬಂದರೆ...
ತೆರೆದ ಮಲದ ಗುಂಡಿಯಲ್ಲಿ

ನನ್ನ ದೇಶದ ಹೆಣ ತೇಲುತ್ತಿತ್ತು!

Sunday, November 20, 2011

ಸಿರಿಸಂಪಿಗೆಯ ನೆನಪು

ಈ ಗ್ರೂಫ್ ಫೋಟೋದಲ್ಲಿ ಹಲ್ಲು ಕಿರಿಯುತ್ತಿರುವ ಜೋಕರ್ ಒಬ್ಬ(ಬಲಭಾಗದಲ್ಲಿ) ಇದ್ದಾನಲ್ಲ, ಅದು ನನ್ನ ಫೋಟೋ. ಸುಮಾರು 15 ವರ್ಷಗಳ ಹಿಂದೆ ಮುಂಬೈಯಲ್ಲಿ ಆಡಿದ ಚಂದ್ರಶೇಖರ ಕಂಬಾರ ಅವರ ಸಿರಿಸಂಪಿಗೆ ನಾಟಕದಲ್ಲಿ ಅವಳಿ-ಜವಳಿ ಹಾಸ್ಯಗಾರ ಪಾತ್ರದಲ್ಲಿ ನಾನು ಜವಳಿ ಪಾತ್ರ ವಹಿಸಿದ್ದೆ. ಅವಳಿ ಪಾತ್ರವನ್ನು ನನ್ನ ಗೆಳೆಯ ನವೀನ್ ಸುನಗ ವಹಿಸಿದ್ದರು. ಅವರೀಗ ನಾಟಕ, ಸಿನಿಮ ಅಂತ ಬಿಸಿಯಾಗಿದ್ದಾರೆ. ಸಿರಿಸಂಪಿಗೆ ನಾಟಕದ ರಾಜಕುಮಾರಿ ಪಾತ್ರದಲ್ಲಿ ಹಾ.ಮ. ಕನಕ (ಹಸಿರು ಸೀರೆ ಉಟ್ಟು ರಾಜಕುಮಾರಿ ತರ ಮುದ್ದಾಗಿದ್ದಾರಲ್ಲ, ಅವರೇ,) ನಟಿಸಿದ್ದರು. ಸುರೇಶ ಹಾನಗಲ್ಲಿ ಈ ನಾಟಕವನ್ನು ನಿರ್ದೇಶಿಸಿದ್ದರು. (ಕುಳಿತ ಗಡ್ಡಧಾರಿ ಮೂಗಿಗೆ ಕೈ ಇಟ್ಟಿದ್ದಾರಲ್ಲ ಅವರೇ). ಕೈಯಲ್ಲಿ ಮಗುವನ್ನು ಹಿಡಿದು ಎಡಭಾಗದಲ್ಲಿ ನಿಂತಿದ್ದಾರಲ್ಲ, ಅವರು ರಂಗಕರ್ಮಿ ಗಿರಿಧರ್ ಕಾರ್ಕಳ್, ಈಗವರು ಮೈಸೂರಲ್ಲಿದ್ದಾರೆ.

Thursday, November 17, 2011

ವೃತ್ತಿ ಮತ್ತು ಇತರ ಕತೆಗಳು


ಶ್ರೀಮಂತ
ನ್ಯಾಯಾಲಯ ಆದೇಶ ನೀಡಿತು ‘‘ಓರ್ವ ಪ್ರತಿ ದಿನ 35 ರೂ. ಖರ್ಚು ಮಾಡುತ್ತಿದ್ದರೆ ಅವನನ್ನು ಶ್ರೀಮಂತನೆಂದು ಕರೆಯಬೇಕು’’
ಅಂತೆಯೇ ರೈತನೊಬ್ಬ 35 ರೂ. ತೆತ್ತು ವಿಷವನ್ನು ಕೊಂಡ.
ಮಾಧ್ಯಮಗಳಲ್ಲಿ ಸುದ್ದಿ ‘‘ಶ್ರೀಮಂತ ರೈತನಿಂದ ಸಾಲ ಪಾವತಿಸಲಾಗದೆ ಆತ್ಮಹತ್ಯೆ’’

ಭಯ
ಮೀನು ಹಿಡಿಯಲೆಂದು ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಆಗಷ್ಟೇ ದಡ ಸೇರಿದ್ದರು
‘‘ಮೀನು ಕೊಳ್ಳಲೆಂದು ಶ್ರೀಮಂತನೊಬ್ಬ ಕೇಳಿದ ‘‘ಮೀನು ಹಿಡಿಯಲೆಂದು ಹೋದ ಅದೆಷ್ಟು ಮೀನುಗಾರರು ಕಡಲಲ್ಲಿ ಮುಳುಗಿ ಸತ್ತಿದ್ದಾರೆ. ಆದರೂ ನೀವು ಸಮುದ್ರಕ್ಕೆ ಮೀನು ಹಿಡಿಯಲೆಂದು ಹೋಗುತ್ತೀರಲ್ಲ? ನಿಮಗೆ ಭಯವಾಗುವುದಿಲ್ಲವೆ?್ಫ್ಫ
ಮೀನುಗಾರ ನಕ್ಕು ಹೇಳಿದ ‘‘ನಿಮ್ಮ ಹಿರಿಯರೆಲ್ಲ ನಿಮ್ಮ ಮನೆಯ ವಿಶಾಲವಾದ ಮಂಚದ ಮೇಲೆ ಮೃತಪಟ್ಟಿದ್ದಾರೆ. ಆದರೂ ನೀವು ನಿದ್ರಿಸುವುದಕ್ಕೆ ಮತ್ತೆ ಅದೇ ಮಂಚದೆಡೆಗೆ ಧಾವಿಸುತ್ತೀರಲ್ಲ, ನಿಮಗೆ ಭಯವಾಗುವುದಿಲ್ಲವೆ?’’

ವೃತ್ತಿ
ಅವನ ವೃತ್ತಿಯೇ ಅಪರಾಧಿಗಳನ್ನು ಗಲ್ಲಿಗೇರಿಸುವುದು.
ಸುಮಾರು 49 ಜನರನ್ನು ಗಲ್ಲಿಗೇರಿಸಿದ್ದಾನೆ ಅವನು.
ಇದೀಗ ಇನ್ನೊಬ್ಬನನ್ನು ಗಲ್ಲಿಗೇರಿಸಿದರೆ 50 ಪೂರ್ತಿಯಾಗುವುದು.
ಯಾರೋ ಅವನ ಸಂದರ್ಶನಕ್ಕೆ ಬಂದರು.
‘‘ನೀವು ಇನ್ನು ಒಬ್ಬನನ್ನು ಗಲ್ಲಿಗೇರಿಸಿದರೆ ಅರ್ಧ ಶತಕವಾಗುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆಯೇನು?’’
ಅವನು ನಿರ್ಲಿಪ್ತನಾಗಿ ಹೇಳಿದ ‘‘ನಲ್ವತ್ತ ಒಂಬತ್ತು ಬಾರಿ ನಾನು ಸತ್ತಿದ್ದೇನೆ. ಇನ್ನು 50ನೆ ಬಾರಿ ಸಾಯುವುದರಲ್ಲೇನು ವಿಶೇಷ?’’

ಕನಸಿನ ಅಂಗಡಿ
ಅವನೊಬ್ಬ ಸ್ಫುರದ್ರೂಪಿ ತರುಣ. ಅಂಗಡಿಯನ್ನು ತೆರೆದ. ಅಂಗಡಿಗೊಂದು ಬೋರ್ಡು
‘ಇಲ್ಲಿ ನಿಮಗೆ ಬಿದ್ದ ಕನಸುಗಳಿಗೆ ಅರ್ಥ ಹೇಳಲಾಗುತ್ತದೆ’
ಎಲ್ಲರು ತಮ್ಮ ತಮ್ಮ ಕನಸುಗಳೊಂದಿಗೆ ಅಂಗಡಿಗೆ ಮುಗಿ ಬಿದ್ದರು.
ಒಬ್ಬ ತರುಣಿ ಒಂದು ತಿಂಗಳಿನಿಂದ ಆ ಅಂಗಡಿಗೆ ಕನಸುಗಳನ್ನು ಹಿಡಿದುಕೊಂಡು ಬರುತ್ತಿದ್ದಳು.
ಅವನು ಅವುಗಳಿಗೆ ಅರ್ಥ ಹೇಳಲು ಪ್ರಯತ್ನಿಸುತ್ತಿದ್ದ.
ಕೊನೆಗೊಂದು ದಿನ ಹುಡುಗಿ ಸಿಟ್ಟಿನಿಂದ ಹೇಳಿದಳು.
‘‘ನನ್ನ ಕಣ್ಣನೊಮ್ಮೆ ನೀನು ಕಣ್ಣಿಟ್ಟು ನೋಡಿದ್ದರೆ ಸಾಕಿತ್ತು. ನಾ ಕಂಡ, ಕಾಣುತ್ತಿರುವ ಕನಸಿನ ಅರ್ಥ ನಿನಗೆ ತಿಳಿದು ಬಿಡುತ್ತಿತ್ತು’’

ವರ್ಷ
‘‘ತಾತ, ನಿನಗೆ ಎಷ್ಟು ವರ್ಷ?’’ ಮೊಮ್ಮಗು ಕೇಳಿತು
‘‘ಗೊತ್ತಿಲ್ಲ ಮಗು, ಆದರೆ ಕೆಲವು ದಿನಗಳನ್ನು ನಾನು ನೂರಾರು ವರ್ಷ ಬದುಕಿದ್ದೇನೆ’’ ತಾತ ಉತ್ತರಿಸಿದ.

ಋಣ
ಪುಟಾಣಿ ಮಗು ಹೇಳಿತು ‘‘ಅಮ್ಯಾ ರಾತ್ರಿ...ನಿನ್ನ ಕಾಲನ್ನು ಒತ್ತಿದ್ದೇನೆ. ನನಗೆ ಅದಕ್ಕಾಗಿ 100 ರೂ. ಪಾಕೆಟ್ ಮನಿ ಕೊಡಬೇಕು’’
‘‘ಅಯ್ಯೋ ನನ್ನ ಬಂಗಾರ...ಅದರ ಋಣವನ್ನು ಹಣದಿಂದ ಹೇಗೆ ತೀರಿಸಲಿ...ಜೀವನ ಪರ್ಯಂತ ನಿನ್ನ ಸೇವೆ ಮಾಡಿ ಅದರ ಸಾಲವನ್ನು ತೀರಿಸುತ್ತೇನೆ ಆಗದೆ?’’ ತಾಯಿ ಮಗುವಿನ ಕೆನ್ನೆ ಹಿಂಡಿ ಕೇಳಿದಳು.

ಮಾತು
‘‘ನನ್ನ ಮಗ ತನ್ನ ತಾಯಿಯೊಂದಿಗೆ ಮೊಬೈಲ್‌ನಲ್ಲಿ ಗಂಟೆಗಟ್ಟಳೆ ಮಾತನಾಡುತ್ತಾನೆ...ನನಗೆ ಅದೇ ಚಿಂತೆಯಾಗಿದೆ’’
‘‘ತಾಯಿಯೊಂದಿಗೆ ತಾನೆ, ಇದರಲ್ಲಿ ಚಿಂತೆ ಮಾಡುವುದೇನು ಬಂತು? ಮಕ್ಕಳು ತಾಯಿಯೊಟ್ಟಿಗಲ್ಲದೆ ಇನ್ನಾರೊಟ್ಟಿಗೆ ಮಾತನಾಡುತ್ತಾರೆ?’’
‘‘ಅವನ ತಾಯಿ ಇಹಲೋಕ ತ್ಯಜಿಸಿ ಇಂದಿಗೆ ಹತ್ತು ವರ್ಷಗಳಾದುವು’’

Wednesday, November 16, 2011

ನನ್ನನ್ನು ‘ಬ್ಯಾರಿ’ ಎಂದು ಕರೆದರೆ ಹುಷಾರ್!

ರಾಜ್ಯ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿದ ಸಂದರ್ಭದಲ್ಲಿ ಬರೆದ ಲೇಖನ ಇದು.

ಬ್ಯಾರಿಗಳಿಗೊಂದು ಸಾಹಿತ್ಯ ಅಕಾಡಮಿ ದೊರಕಿದ ಸುದ್ದಿ ಕೇಳಿ ರೋಮಾಂಚಿತನಾದವನಲ್ಲಿ ನಾನೂ ಒಬ್ಬ. ಅದಕ್ಕೆ ಕಾರಣ ನಾನೊಬ್ಬ ಬ್ಯಾರಿ ಸಮುದಾಯದಲ್ಲಿ ಹುಟ್ಟಿದವನು ಎನ್ನುವುದಷ್ಟೇ ಆಗಿರಲಿಲ್ಲ. ‘ಬ್ಯಾರಿ’ ಎನ್ನುವ ಶಬ್ದ ಕಳೆದ ಮೂರು ದಶಕಗಳಿಂದ ಸಾಮಾಜಿಕವಾಗಿ ಅನುಭವಿಸಿಕೊಂಡು ಬಂದ ಕೀಳರಿಮೆ ತುಳಿತ, ಅವಮಾನಗಳ ಕುರಿತಂತೆ ಅರಿವಿರುವವರೆಲ್ಲರಿಗೂ, ಈ ಸುದ್ದಿ ರೋಮಾಂಚನ ತರಿಸಬಲ್ಲುದು. ಕಳೆದ ಮೂರು ದಶಕಗಳಲ್ಲಿ ‘ಬ್ಯಾರಿ’ ಎನ್ನುವ ಶಬ್ದ ಬಳಕೆಯಾಗುತ್ತಿದ್ದುದು ಕರಾವಳಿ ಮುಸ್ಲಿಮರನ್ನು ಅವಮಾನಿಸುವುದಕ್ಕಾಗಿ ಮಾತ್ರವಾಗಿತ್ತು. ‘ಬ್ಯಾರಿ ಬುದ್ದಿ ತೋಜ್ಪಾವೊಡ್ಚಿ (ಬ್ಯಾರಿ ಬುದ್ದಿ ತೋರಿಸಬೇಡ)’ ‘ಮಲ್ಲ ಬ್ಯಾರಿ ಮಾರಾಯ (ಭಯಂಕರ ಬ್ಯಾರಿ ಮಾರಾಯ)’, ‘ದಾನೆಂಬೆ ಬ್ಯಾರಿ (ಏನೋ ಬ್ಯಾರಿ)’ ಮೊದಲಾದ ಪದಗಳು ಕರಾವಳಿಯ ಜನಜೀವನದಲ್ಲಿ ಹೇಗೆ ಅವಿನಾಭಾವವಾಗಿ ಸೇರಿಕೊಂಡಿದ್ದವೋ ಅದನ್ನು ಪ್ರತಿರೋಧಿಸುವ ಆತುರದಲ್ಲಿ ಕರಾವಳಿಯ ಮುಸ್ಲಿಮರು ಕೂಡ ಆ ಐಡೆಂಟಿಟಿಯನ್ನು ಅಷ್ಟೇ ತೀವ್ರವಾಗಿ ತಿರಸ್ಕರಿಸುತ್ತಿದ್ದರು. ‘ಬ್ಯಾರೀಂದ್ ಪನೋಡ್ಚಿ (ಬ್ಯಾರೀಂತ ಕರೀಬೇಡ)’ ‘ನನೋರ ಬ್ಯಾರೀಂದ್ ಪನ್‌ಗೆ’ (ಧೈರ್ಯ ಇದ್ರೆ ಇನ್ನೊಮ್ಮೆ ಬ್ಯಾರೀಂತ ಹೇಳು)?’ ‘ಅಂವ ಬ್ಯಾರೀಂತ ಕರ್ದ, ಅದಕ್ಕೆ ಹೊಡ್ದೆ’ ‘ಸಾರ್, ‘ಇವ ನನ್ನನ್ನು ಬ್ಯಾರೀಂತ ಕರೀತಿದ್ದಾನೆ’ ಹೀಗೆ ಬ್ಯಾರಿ ಎಂಬ ‘ಐಡೆಂಟಿಟಿ’ಯ ಅವಮಾನದಿಂದ ಪಾರಾಗುವುದಕ್ಕೆ ಒಂದು ತಲೆಮಾರು ಸಾಕಷ್ಟು ಹೆಣಗಾಡಿದೆ. ತನ್ನದೇ ಅಸ್ಮಿತೆಯ ವಿರುದ್ಧ ಹೋರಾಡಿ ಆ ತಲೆಮಾರಿನ ಜನರು ಹುತಾತ್ಮರಾಗಿದ್ದಾರೆ. ತನ್ನದೇ ನೆರಳನ್ನು ತನ್ನ ಶತ್ರುವೆಂಬಂತೆ ಭಾವಿಸಿ, ಅದರಿಂದ ಪಲಾಯನ ಮಾಡಲು ಪ್ರಯತ್ನಿಸಿದ, ವಿಫಲವಾದ ಈ ತಲೆಮಾರಿನ ದುರಂತ ಹೃದಯವಿದ್ರಾವಕವಾದುದು.

ಒಂದೆಡೆ ಈ ತಲೆಮಾರಿಗೆ ತಾವು ಆಡುವ ಭಾಷೆ ಒಂದು ಸ್ವತಂತ್ರ ಭಾಷೆ ಎಂಬ ಅರಿವೇ ಇದ್ದಿರಲಿಲ್ಲ. ‘ನಿಮ್ಮ ಮಾತೃಭಾಷೆ ಯಾವುದು?’ ಎಂದು ಯಾರಾದರೂ ಕೇಳಿದರೆ ಅವರು ‘ಮಲಯಾಳಂ’ ಎಂದು ಹೇಳುತ್ತಿದ್ದರು. ಇತ್ತ ಮಲಯಾಳಂ ಮಾತನಾಡುವವರು ಆ ಭಾಷೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ‘ಬ್ಯಾರಿ’ ಎನ್ನುವ ಪದಕ್ಕೆ ಅಂಜುತ್ತಾ ಬದುಕುತ್ತಿದ್ದ ಈ ತಲೆಮಾರಿಗೆ ತಮ್ಮ ಭಾಷೆಯನ್ನು ‘ಬ್ಯಾರಿ ಭಾಷೆ ’ ಎಂದು ಕರೆಯುವುದಕ್ಕೆ ಧೈರ್ಯ ಸಾಲುತ್ತಿರಲಿಲ್ಲ. ಈ ಭಾಷೆಯನ್ನು ಕರಾವಳಿಯ ಒಂದು ಪ್ರದೇಶದ ಜನರು ‘ನಕ್ಕ್‌ನಿಕ್ಕ್’ ಭಾಷೆ ಎಂದು ಕರೆಯುತ್ತಿದ್ದರು. ‘ನಕ್ಕ್-ನಿಕ್ಕ್’ ಅಂದರೆ ‘ನನಗೆ-ನಿನಗೆ’ ಎಂದರ್ಥ. ಇದೊಂದು ರೀತಿಯಲ್ಲಿ ಒಂದು ಭಾಷೆಯನ್ನು ‘ಸಾರ್ವತ್ರಿಕ’ವಾಗಿಸುವಲ್ಲಿರುವ ಭಯವನ್ನು, ಕೀಳರಿಮೆಯನ್ನು ಎತ್ತಿ ತೋರಿಸುತ್ತದೆ. ‘ನನಗೆ ಮತ್ತು ನಿನಗೆ’ ಮಾತ್ರ ಅನ್ವಯವಾಗುವ ಒಂದು ಭಾಷೆಯಿದ್ದರೆ ಅದು ‘ಬ್ಯಾರಿ ಭಾಷೆ’ ಮಾತ್ರ ಎಂದು ಹೇಳಬೇಕು. ಒಂದು ಕಡೆ ತನ್ನ ಭಾಷೆಯನ್ನು ಮಲಯಾಳಂ ಎಂದು ಕರೆಯುತ್ತಲೇ ‘ಮಲಯಾಳಂ ಅಂದರೆ ಮಲಯಾಳಂ ಅಲ್ಲ. ಸ್ವಲ್ಪ ವ್ಯತ್ಯಾಸವಿದೆ..’ ಎಂಬಿತ್ಯಾದಿ ಸಮರ್ಥನೆಗಳನ್ನು ವ್ಯಾಖ್ಯಾನಗಳನ್ನು ನೀಡುತ್ತಾ, ತನ್ನದೇ ಭಾಷೆಯ ಕುರಿತು ಒಂದು ತಲೆಮಾರು ಕೀಳರಿಮೆಯಿಂದ ಬದುಕುತ್ತಾ ಬಂತು. ಅನ್ಯಭಾಷಿಕರ ನಡುವೆ ಇಬ್ಬರು ಬ್ಯಾರಿ ಭಾಷೆಯಲ್ಲಿ ಮಾತನಾಡಿದರೆ, ಅದನ್ನು ನೋಡಿ ತಮಾಷೆ ಮಾಡುವ ಸಮುದಾಯದ ನಡುವೆ ಬ್ಯಾರಿಗಳ ಒಂದು ತಲೆಮಾರು ಬದುಕಿದೆ, ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಕಡತಗಳಲ್ಲಿ ಬ್ಯಾರಿಗಳು ತಮ್ಮ ಭಾಷೆಯ ಹೆಸರನ್ನು ‘ಮಲಯಾಳಂ’ ಎಂದು ಬರೆಯುತ್ತಿದ್ದರು. ಆದರೆ ಅವರು ಮಲಯಾಳಿಗಳಾಗಿರದೆ, ಕರಾವಳಿಯ ತುಳು ಮಣ್ಣಿನ ಮುಸ್ಲಿಮರೇ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮಲಯಾಳಿಗಳಿಂದ ಈ ಸಮುದಾಯ ಮತ್ತು ಅವರು ಆಡುವ ಭಾಷೆ ತಿರಸ್ಕೃತವಾಗಿದ್ದವು. ಜೊತೆಗೆ, ತಮ್ಮದೇ ನೆಲದ ಜನರಿಂದಲೂ ತಮ್ಮ ಭಾಷೆ ಮತ್ತು ಐಡೆಂಟಿಟಿಯ ಕಾರಣಕ್ಕಾಗಿ ಅವರು ಅವಮಾನಿತರಾಗಿ ಬದುಕಬೇಕಾಗಿತ್ತು. ಕರಾವಳಿಯ ಮುಸ್ಲಿಮರನ್ನು ನಿಂದಿಸಬೇಕೆಂದರೆ ‘ಸೂ..ಮಗ, ಬೇ.. ಬೋ...ಮಗ’,ಇತ್ಯಾದಿಗಳನ್ನು ಬಳಸಬೇಕೆಂದಿರಲಿಲ್ಲ. ‘ಬ್ಯಾರಿ!’ ಎಂದರೆ ಸಾಕಿತ್ತು. ಬ್ಯಾರಿಗಳು ತಮ್ಮ ಮಸೀದಿಗಳಲ್ಲಿ ‘ವೌಲ್ವಿ’ಗಳಿಂದ ಧರ್ಮ ಪ್ರವಚನ ಮಾಡಿಸಬೇಕೆಂದರೆ ಕೇರಳದಿಂದಲೇ ಮುಸ್ಲಿಯಾರುಗಳನ್ನು ತರಿಸುತ್ತಿದ್ದರು. ಯಾಕೆಂದರೆ ‘ಧರ್ಮಪ್ರವಚನ’ ಬ್ಯಾರಿ ಭಾಷೆಯಲ್ಲಿ ಮಾಡುವುದು ಅವರಿಗೆ ನಿಲುಕುವ ವಿಷಯವಾಗಿರಲಿಲ್ಲ. ‘ಗಂಭೀರ ಮತ ಪ್ರಸಂಗ’ ಏನಿದ್ದರೂ ಅದು ‘ಗಂಭೀರ ಮಲಯಾಳಂ’ನಲ್ಲೇ ನಡೆಯಬೇಕು ಎಂದು ಅವರು ನಂಬಿದ್ದರು. ಧಾರ್ಮಿಕ ವಿಷಯಗಳನ್ನು ಮಲಯಾಳಂನಲ್ಲೇ ಮುಸ್ಲಿಯಾರುಗಳು ಬೋಧಿಸುತ್ತಿದ್ದ ಕಾಲವಿತ್ತು. ಬ್ಯಾರಿ ಭಾಷೆಯನ್ನು ಅಲ್ಲಿ ಬಳಸಲಾಗುತ್ತಿರಲಿಲ್ಲ. ತಮ್ಮದಲ್ಲದ, ಅರ್ಥವಾಗದ ‘ಕಠಿಣ ಮಲಯಾಳಂ’ನಲ್ಲೇ ವಿದ್ಯಾರ್ಥಿಗಳು ಧಾರ್ಮಿಕ ವಿಷಯಗಳನ್ನು ಕಲಿಯುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾರಿ ಭಾಷೆಗೆ ಲಿಪಿಯಿಲ್ಲ. ಬ್ಯಾರಿ ಭಾಷೆಯನ್ನು ಬರೆಯುವುದಕ್ಕೆ ಬಳಕೆ ಮಾಡುವ ಸಂದರ್ಭವೇ ತೀರ ಕಡಿಮೆಯಿತ್ತು. ಆದುದರಿಂದಲೇ ಲಿಪಿಯ ಕುರಿತಂತೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮದರಸಗಳ ಲೆಕ್ಕಪತ್ರಗಳನ್ನೆಲ್ಲ ಕನ್ನಡದಲ್ಲೇ ಬರೆಯಲಾಗುತ್ತಿತ್ತು. ಬ್ಯಾರಿಗಳು ಮನೆಯಲ್ಲಿ ಬ್ಯಾರಿ ಭಾಷೆ, ಹೊರಗೆ ತುಳು ಭಾಷೆ, ಶಾಲೆ, ಕಚೇರಿಗಳಲ್ಲಿ ಕನ್ನಡ ಹೀಗೆ ಒಂದೇ ಸಂದರ್ಭದಲ್ಲಿ ಹಲವು ಭಾಷೆಗಳನ್ನು ಕಲಿಯಬೇಕಾದ, ಹಲವು ಭಾಷೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿತ್ತು. ಇಷ್ಟು ಅವಮಾನ, ಪ್ರತಿಕೂಲ ಪರಿಸ್ಥಿತಿಯ ನಡುವೆ ಒಂದು ಭಾಷೆ ಉಳಿದು ಬೆಳೆದು, ಇದೀಗ ಸರಕಾರದಿಂದ ಸಾಹಿತ್ಯ ಅಕಾಡೆಮಿಯನ್ನು ತನ್ನದಾಗಿಸಿಕೊಂಡಿರುವುದು, ಆ ಭಾಷೆಯ ಸಾಮರ್ಥ್ಯವನ್ನು ಎತ್ತಿ ಹಿಡಿಯುತ್ತದೆ.

ಹಾಗೆಂದು ಬ್ಯಾರಿಗಳು ತಲೆ ತಲಾಂತರದಿಂದ ಹೀನಾಯವಾಗಿ ಬದುಕಿಕೊಂಡು ಬಂದವರಲ್ಲ ಎನ್ನುವುದು ಕೂಡ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಬರೇ 60 ವರ್ಷಗಳ ಹಿಂದೆ ಬ್ಯಾರಿಗಳು ತುಳು ನಾಡಿನಲ್ಲಿ ಅತ್ಯುನ್ನತ ಬದುಕನ್ನು ಬಾಳಿದವರು. ವ್ಯಾಪಾರ, ಯುದ್ದ, ಬೇಟೆ, ಪಾಳೇಗಾರಿಕೆ, ಶ್ರೀಮಂತಿಕೆ ಎಲ್ಲ ದಿಕ್ಕಿನಲ್ಲೂ ಅವರು ಕರಾವಳಿಯ ಉಳಿದ ತುಳುವರಿಗೆ ನೇರ ಸ್ಪರ್ಧೆಯನ್ನು ನೀಡಿದವರು. ಸೀದಿ ಬ್ಯಾರಿ, ಪೊಡಿಯ ಬ್ಯಾರಿ, ಉಸ್ಮಾನ್ ಬ್ಯಾರಿ ಇಂತಹ ಹೆಸರುಗಳಿಗೆ ಒಂದು ಕಾಲದಲ್ಲಿ ತುಳುವರು ಬಾಗಿ ‘ಸಲಾಂ’ಹೇಳುತ್ತಿದ್ದ ಕಾಲ ಅದು. ರಾಣಿ ಅಬ್ಬಕ್ಕ ದೇವಿಯ ಸೈನ್ಯದಲ್ಲಿ ಬ್ಯಾರಿ ಸೈನಿಕರ ಪಾತ್ರ ವರ್ಣಿಸಳಸದಳವಾದುದು. ಅಬ್ಬಕ್ಕನ ಬೆಂಗಾವಲಾಗಿ ನಿಂತವರು ಬ್ಯಾರಿಗಳು. ‘ಎಣ್ಬೂರಿನ’ ಜೈನ ಅರಸರ ಜೊತೆಗೂ ಬ್ಯಾರಿಗಳ ಸಂಬಂಧ ಅನ್ಯೋನ್ಯವಾಗಿತ್ತು. ಪ್ರತಿ ಊರಲ್ಲೂ ಒಬ್ಬ ಬ್ಯಾರಿ ಪಾಳೇಗಾರನಿದ್ದ. ಒಂದು ಕಾಲದಲ್ಲಿ ಬ್ಯಾರಿಗಳು ಭಾರೀ ದಿನಸಿ ವ್ಯಾಪಾರಿಗಳಾಗಿದ್ದರೆ, ಸ್ಥಳೀಯ ಕೊಂಕಣಿಗಳು ಅವರ ಬಂಡಸಾಲೆಗಳಲ್ಲಿ ಲೆಕ್ಕ ಬರೆಯುತ್ತಿದ್ದರು. ‘ಬ್ಯಾರ್ಲು ಬರೊಂದುಲ್ಲೆರ್ (ಬ್ಯಾರಿಗಳು ಬರುತ್ತಿದ್ದಾರೆ)’ ಎನ್ನುವ ಮಾತು, ಸುತ್ತಲಿನ ಜನರನ್ನು ಸಂಚಲನಗೊಳಿಸುತ್ತಿತ್ತು. ತುಳುವರ ಬದುಕಿನಲ್ಲಿ ಬ್ಯಾರಿಗಳನ್ನು ಕಳೆದರೆ, ತುಳುವರಿಗೆ ಅಸ್ತಿತ್ವವೇ ಇದ್ದಿರಲಿಲ್ಲ. ತುಳು ಪಾಡ್ದನಗಳಲ್ಲಿ ಜಾನಪದಗಳಲ್ಲಿ ಬ್ಯಾರಿಗಳ ಪ್ರಸ್ತಾಪವಿದೆ. ಬಪ್ಪನಾಡಿನಲ್ಲಿ ‘ಬಪ್ಪಬ್ಯಾರಿ’ಯ ಆರ್ಥಿಕ ಸಹಾಯದಿಂದಲೇ ಅಲ್ಲಿಯ ಇಡೀ ಊರು ಅಭಿವೃದ್ಧಿಗೊಂಡಿರುವುದು ಇತಿಹಾಸ. ಅಂದಿನ ಬ್ಯಾರಿಗಳು ತಮ್ಮ ಹೆಸರಿನೊಂದಿಗೆ ಕಡ್ಡಾಯವಾಗಿ ‘ಬ್ಯಾರಿ’ ಎನ್ನುವ ಐಡೆಂಟಿಟಿಯನ್ನು ಸೇರಿಸುತ್ತಿದ್ದರು. ಅದು ಅವರಿಗೆ ಸಮಾಜದಲ್ಲಿ ಘನತೆಯನ್ನು, ಗೌರವವನ್ನು ನೀಡುತ್ತಿತ್ತು. ನೀವು ಎಪ್ಪತ್ತರ ದಶಕದ ಹಿಂದಿನ ಕರಾವಳಿಯ ಯಾವ ಕಡತಗಳಲ್ಲಿ ನೋಡಿದರೂ, ಸ್ಥಳೀಯ ಮುಸ್ಲಿಮರ ಹೆಸರಿನ ಮುಂದೆ ‘ಬ್ಯಾರಿ’ ಎಂದು ಉಲ್ಲೇಖಿಸಿರುವುದನ್ನು ಕಾಣಬಹುದು. ಬ್ಯಾರಿಗಳು ಬ್ರಿಟಿಷರೊಂದಿಗೆ ಮಾತ್ರವಲ್ಲ, ಸ್ಥಳೀಯ ಪುರೋಹಿತಶಾಹಿಗಳೊಂದಿಗೆ, ಪಾಳೇಗಾರರೊಂದಿಗೂ ಸಡ್ಡು ಹೊಡೆದಿದ್ದರು. ಧರ್ಮಸ್ಥಳದ ಹೆಗಡೆ ಕುಟುಂಬದ ವಿರುದ್ಧವೂ ಕೋರ್ಟು, ನ್ಯಾಯ ಎಂದು ಅಲೆದಾಡಿ ಗೆದ್ದ ಅದೆಷ್ಟೋ ಬ್ಯಾರಿಗಳಿದ್ದಾರೆ. ಬ್ಯಾರಿಗಳೊಂದಿಗೆ ಜಿದ್ದಿಗೆ ಬೀಳಲು ಜನರು ಹೆದರುತ್ತಿದ್ದ ಕಾಲ ಅದು.

ಅತಂಹದೊಂದು ಸಮುದಾಯಕ್ಕೆ ಇದ್ದಕ್ಕಿದ್ದಂತೆಯೇ ಯಾಕೆ ಗ್ರಹಣ ಬಡಿಯಿತು? ಅನಂತರದ ಕೆಲವು ತಲೆಮಾರುಗಳು ಯಾಕೆ ತಮ್ಮ ಹೆಸರಿಗೆ ಅಂಜುವಂತಹ ಪರಿಸ್ಥಿತಿ ಎದುರಾಯಿತು?ಇದು ಅತ್ಯಂತ ಕುತೂಹಲಕರವಾಗಿದೆ. ಕಾಲ ಹೇಗೆ ಉರುಳಿತೆಂದರೆ, ಬ್ಯಾರಿಗಳ ಭಂಡಸಾಲೆಯಲ್ಲಿ ಲೆಕ್ಕ ಬರೆಯುತ್ತಿದ್ದವರೆಲ್ಲ ಕ್ರಮೇಣ ಪ್ರಬಲರಾದರು. ಹೆಸರುವಾಸಿಗಳಾಗಿದ್ದ ಬ್ಯಾರಿಗಳ ನಂತರದ ತಲೆಮಾರು ಲೆಕ್ಕ ಬರೆಯುತ್ತಿದ್ದವರನ್ನೇ ಒಡೆಯರೆಂದು ಕರೆಯುವ ಪರಿಸ್ಥಿತಿ ಎದುರಾಯಿತು. ತುಳುನಾಡಿನಲ್ಲಿ ಬ್ರಾಹ್ಮಣ್ಯದ ಪ್ರವೇಶವಾದಂತೆ ಕ್ರಮೇಣ ಬ್ಯಾರಿಗಳು ತುಳುವರಿಗೆ ಅನ್ಯರಾಗತೊಡಗಿದರು. ಬ್ಯಾರಿಗಳ ಅತಿ ಆತ್ಮವಿಶ್ವಾಸ, ‘ಒಂದಾನೊಂದು ಕಾಲದಲ್ಲಿ ನನ್ನಜ್ಜನಿಗೊಂದಾನೆಯಿತ್ತು’ ಎನ್ನುವ ಒಣ ಹುಂಬತನ, ಪಾಳೇಗಾರಿಕೆಯ ಕಾಲದ ಆ ‘ಭ್ರಮೆ’ಗಳಿಂದ ಹೊರಬರಲು ಸಿದ್ಧವಿಲ್ಲದ ಅನಂತರದ ಪೀಳಿಗೆ ಸಮಾಜದಲ್ಲಿ ತಮಾಷೆಗೆ ಗುರಿಯಾಯಿತು. ಶಿಕ್ಷಣದಿಂದ ವಂಚಿತವಾದ ಈ ಪೀಳಿಗೆಗೆ, ಕೈ ತಪ್ಪಿದ ‘ತರವಾಡು ಅಂತಸ್ತಿ’ನಿಂದ ಏಕಾಏಕಿ ಮೀನು ಮಾರುವುದು, ಗುಜರಿ ಹೆಕ್ಕುವುದು ಇತ್ಯಾದಿಯೇ ಅನಿವಾರ್ಯವಾಯಿತು. ಬ್ಯಾರಿಗಳನ್ನು ಏಕಾಏಕಿ ಆಹುತಿ ತೆಗೆದುಕೊಂಡ ಬಡತನ, ನಾಯಕತ್ವದ ಕೊರತೆ ಅವರನ್ನು ಅತಂತ್ರವನ್ನಾಗಿಸಿದವು. ಅವರ ಅಸಹಾಯಕತೆಯನ್ನು ಚೆನ್ನಾಗಿಯೇ ಬಳಸಿಕೊಂಡ ‘ಮೇಲ್ವರ್ಗ’ ಬ್ಯಾರಿಗಳನ್ನು ಕಳ್ಳರನ್ನಾಗಿಯೂ, ಕಾಮುಕನ್ನಾಗಿಯೂ ಬಿಂಬಿಸುವ ಪ್ರಯತ್ನ ನಡೆಸಿತು. ಅದರ ಪರಿಣಾಮ ಎಷ್ಟು ತೀವ್ರವಾಯಿತೆಂದರೆ ಒಂದು ತಲೆಮಾರು ತನ್ನ ಭಾಷೆ, ಐಡೆಂಟಿಟಿಗಾಗಿ ನಾಚಿಕೊಳ್ಳುವಷ್ಟು. ಇದರಿಂದಾಗಿ ಬ್ಯಾರಿ ಭಾಷೆ, ಸಂಸ್ಕೃತಿಯೊಳಗೆ ಅಡಕವಾಗಿದ್ದ ಜಾನಪದಗಳು, ಸಾಹಿತ್ಯಗಳು ಸಂಪೂರ್ಣ ಅವಜ್ಞೆಗೊಳಗಾದವು.

ಇಂತಹ ಒಂದು ಭಾಷೆ ಏಕಾಏಕಿ ಆತ್ಮವಿಶ್ವಾಸದೊಂದಿಗೆ ತಲೆ ಎತ್ತಿ ನಿಂತುದು 90ರ ದಶಕದಲ್ಲಿ. ಕೆಲವು ಬ್ಯಾರಿ ಸಾಹಿತಿಗಳು, ಮುಖಂಡರು ಒಂದಾಗಿ ‘ನಾವೆಲ್ಲ ಬ್ಯಾರಿಗಳು’ ಎಂದು ಘೋಷಿಸಿಕೊಂಡುದು ತುಳುನಾಡಿನ ಜನರಿಗೆ ಅಚ್ಚರಿಯನ್ನು ತಂದಿತ್ತು. ಅಷ್ಟೇ ಅಲ್ಲ, ಬ್ಯಾರಿ ಸಮುದಾಯದ ಜನರಿಗೆ ಇದು ಮೊತ್ತ ಮೊದಲ ಬಾರಿಗೆ ‘ತಮಾಷೆ’ಯಾಗಿ ಕಂಡಿತ್ತು. ಆದರೆ ಕೆಲವು ಮುಖಂಡರು ಸೇರಿ ಮೊತ್ತ ಮೊದಲ ಬ್ಯಾರಿ ಸಮಾವೇಶ ಮಾಡಿದಾಗ, ಅದರಲ್ಲಿ ಸರ್ವ ಬ್ಯಾರಿಗಳು ಒಂದಾಗಿ ತಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸಿದಾಗ ಕರಾವಳಿಯ ಇತರ ಮೇಲ್ವರ್ಣಿಯ ತುಳುವರು ‘ಅಪರಾಧಿಗಳಂತೆ’ ತಲೆ ತಗ್ಗಿಸಿದರು. ಆ ಒಂದು ಸಮ್ಮೇಳನದಲ್ಲಿ ಬ್ಯಾರಿ ಭಾಷೆ, ಸಮುದಾಯ ತನ್ನ ಅವಮಾನ, ಕೀಳರಿಮೆ ಇತ್ಯಾದಿಗಳನ್ನು ಕೊಡವಿ ತಲೆಯೆತ್ತಿ ನಿಂತಿತು. ಅನಂತರ ಬ್ಯಾರಿಗಳು ಮಾಡಿದ ಎಲ್ಲ ಸಮಾವೇಶಗಳು ಉಳಿದ ಸಮಾವೇಷಗಳಿಗೆ ಒಂದು ಮಾದರಿಯಂತಿದ್ದವು. ಪ್ರಪ್ರಥಮ ಬ್ಯಾರಿ ಸಮ್ಮೇಳನದಲ್ಲಿ ಸಭಿಕರಲ್ಲೊಬ್ಬನಾಗಿ ನಾನೂ ಭಾಗವಹಿಸಿದ್ದೆ. ರೋಮಾಂಚಿತನಾಗಿದ್ದೆ. ಈ ಸಮ್ಮೇಳನ ನಡೆದ ಬರೇ ಹತ್ತು ವರ್ಷಗಳಲ್ಲಿ ಬ್ಯಾರಿ ಭಾಷೆ ತನ್ನದೇ ಆದ ಒಂದು ಅಕಾಡಮಿಯನ್ನು ಸರಕಾರದಿಂದ ಗಿಟ್ಟಿಸಿಕೊಂಡಿತು. ಬ್ಯಾರಿ ಭಾಷೆಗೆ ಯಾಕೆ ಅಕಾಡಮಿ ನೀಡುವುದು? ಎಂದು ಕೇಳಿದವರೇ ಬ್ಯಾರಿಗಳ ಒಂದು ಕಾಲದ ಹೀನಾಯ ಸ್ಥಿತಿಗೆ ಕಾರಣರಾದವರು ಎನ್ನುವುದನ್ನು ನಾನಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

ಬ್ಯಾರಿ ಭಾಷೆಗೆ ಅಕಾಡಮಿ ನೀಡುವ ಮೂಲಕ 12 ಲಕ್ಷಕ್ಕೂ ಅಧಿಕ ಜನರಿರುವ ಒಂದು ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರಕಾರ ಮಾಡಿದೆ. ಒಂದು ಕಾಲದಲ್ಲಿ ಅವಮಾನ, ಕೀಳರಿಮೆಯ ಬದುಕನ್ನು ಸವೆಸಿದ ಸಮುದಾಯಕ್ಕೆ ನ್ಯಾಯವನ್ನು ನೀಡುವ ಪ್ರಯತ್ನ ಇದಾಗಿದೆ. ಆದುದರಿಂದ ಬ್ಯಾರಿಗಳ ಸಂಭ್ರಮದಲ್ಲಿ ಕರಾವಳಿಯ ತುಳುವರು ಮಾತ್ರವಲ್ಲ ಇಡೀ ಕನ್ನಡಿಗರೇ ಪಾಲುಗೊಳ್ಳಬೇಕು. ಅವರಿಗೆ ಮಾರ್ಗದರ್ಶನವನ್ನು ನೀಡಬೇಕು. ಈ ಮೂಲಕ, ಬ್ಯಾರಿ ಸಮುದಾಯಕ್ಕೆ ಈವರೆಗೆ ಆದ ಅನ್ಯಾಯಕ್ಕೆ ಪಶ್ಚಾತ್ತಾಪ ಪಡಬೇಕು.



Saturday, November 12, 2011

ರಾಕ್‌ಸ್ಟಾರ್: ಎಲ್ಲ ಗೋಡೆಗಳನ್ನು ಒಡೆದು ಪ್ರೀತಿ, ಸಂಗೀತದೆಡೆಗೆ.....

ಪ್ರೀತಿ, ಸಂಗೀತ ಮತ್ತು ಬದುಕು ಇವುಗಳನ್ನು ವಿಭಿನ್ನವಾಗಿ ಕಟ್ಟಿಕೊಡುವ ಇಮ್ತಿಯಾಝ್ ಅಲಿ ಅವರ ಇನ್ನೊಂದು ಪ್ರಯತ್ನ ‘ರಾಕ್‌ಸ್ಟಾರ್’. ಜಬ್ ವಿ ಮೆಟ್ ಮತ್ತು ಲವ್ ಆಜ್, ಕಲ್‌ನಿಂದ ಇನ್ನೊಂದು ಹಂತ ಬೆಳೆದಿದ್ದಾರೆ ನಿರ್ದೇಶಕರು. ಎಲ್ಲ ಗೋಡೆಗಳನ್ನು ಒಡೆದು ಒಂದಾಗಲು ಹಂಬಲಿಸುವ ಪ್ರೀತಿ ಮತ್ತು ಸಂಗೀತ! ಹಾಗೆಯೇ ಅದರ ಬೆನ್ನು ಹತ್ತಿ ಹರಾಜಕ ಬದುಕನ್ನು ಅಪ್ಪಿಕೊಳ್ಳುವ ರಾಕ್‌ಸ್ಟಾರ್. ಒಂದು ಅರ್ಥದಲ್ಲಿ ಇಲ್ಲಿ ಕತೆಯೇ ಇಲ್ಲ. ಬರೇ ಭಾವನೆಗಳನ್ನೇ ಸಿನಿಮಾವಾಗಿಸಿದ್ದಾರೆ. ರಾಕ್‌ಸ್ಟಾರ್‌ನ ಕೈಬೆರಳ ಸ್ಪರ್ಶದಿಂದ ಆರೋಗ್ಯಪೂರ್ಣವಾಗುವ ನಾಯಕಿ. ನಾಯಕಿಯ ಹಂಬಲಿಕೆಯಿಂದಲೇ ತನ್ನ ಸಂಗೀತದ ತೀವ್ರತೆಯನ್ನು ಮುಟ್ಟುವ ರಾಕ್‌ಸ್ಟಾರ್. ಆಧುನಿಕ ಮನಸ್ಸುಗಳ ತಳಮಳ, ಮಿಡಿತಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಚಿತ್ರದಲ್ಲಿದೆ. ಒಂದು ರೀತಿಯಲ್ಲಿ ತಂತಿಯ ಮೇಲೆ ನಡೆದಿದ್ದಾರೆ ಇಮ್ತಿಯಾಝ್. ತುಸು ಕಾಲು ಜಾರಿದರೂ ಪ್ರಪಾತಕ್ಕೆ. ಒಬ್ಬ ಖ್ಯಾತ ಸಂಗೀತಗಾರನಾಗಬೇಕಾದರೆ ಆತ ಬದುಕಿನಲ್ಲಿ ನೋವು ತಿನ್ನುವುದು ಅತ್ಯಗತ್ಯವೆ? ಅವನ ಬದುಕು ಅರಾಜಕವಾಗುವುದು ಅನಿವಾರ್ಯವೆ? ಮಧ್ಯಮ ವರ್ಗದಿಂದ ಬಂದ ಜನಾರ್ದನ್ ಜಖರ್ ಗಿಟಾರ್ ಹಿಡಿದು ಅದರಿಂದ ಸಂಗೀತವನ್ನು ಹೊರಡಿಸಲು ಪ್ರಯತ್ನಿಸುವಾಗ ಅವನಿಗೆ ಸಿಗುವ ಸಲಹೆ ಇದು. ಯಾವುದೇ ಸಂಗೀತಗಾರನ ಹಿನ್ನೆಲೆಯನ್ನು ನೋಡು. ಅವನೊಬ್ಬ ಭಗ್ನ ಪ್ರೇಮಿಯಾಗಿರುತ್ತಾನೆ. ಅವನ ಬದುಕು ನೋವಿನ ಕುಲುಮೆಯಿಂದ ಎದ್ದು ಬಂದಿರುತ್ತದೆ. ಆ ಭಗ್ನ ಹೃದಯದಿಂದ ಸಂಗೀತ ಹುಟ್ಟುತ್ತದೆ. ದಿಲ್ಲಿ ಯುನಿವರ್ಸಿಟಿಯ ಕ್ಯಾಂಟೀನ್‌ನಲ್ಲಿ ಸಮೋಸಾ ಜೊತೆಗೆ ಚಟ್ನಿಗಾಗಿ ಗದ್ದಲ ಎಬ್ಬಿಸುವ ಜನಾರ್ದನ್‌ಗೆ ಇದು ದೊಡ್ಡ ಸಮಸ್ಯೆಯಾಗುತ್ತದೆ. ನೋವುಗಳಿಲ್ಲದಿರುವುದೇ ಅವನ ನೋವುಗಳಿಗೆ ಕಾರಣ. ತಾನು ಸಂಗೀತಗಾರನಾಗಬೇಕಾದರೆ ನೋವುಗಳು ಬೇಕು. ಅದರ ಹುಡುಕಾಟದಲ್ಲಿ ಮತ್ತಷ್ಟು ಹಾಸ್ಯಾಸ್ಪದನಾಗುತ್ತಾ ಹೋಗುತ್ತಾನೆ ಜನಾರ್ದನ್.

ಹೀರಾ ಎನ್ನುವ ಕಾಲೇಜಿನ ಸ್ಟಾರ್ ಹುಡುಗಿಯನ್ನು ಪ್ರೇಮಿಸುವುದಕ್ಕೆ ಹೊರಟು, ಭಗ್ನ ಪ್ರೇಮಿಯಾಗಲು ಯತ್ನಿಸುತ್ತಾನೆ. ಆದರೆ ಕ್ಯಾಂಟೀನ್ ಮಾಲಕ ಮಾತ್ರ ಆತನಿಗೆ ಛೀಮಾರಿ ಹಾಕುತ್ತಾನೆ. ‘ನೀನು ನಿಜಕ್ಕೂ ಆ ಹುಡುಕಿಯನ್ನು ಪ್ರೀತಿಸಿದ್ದಿದ್ದರೆ ಇಲ್ಲಿ ಚಟ್ನಿಗಾಗಿ ಜಗಳ ಮಾಡುತ್ತಾ ಕಾಲ ಹರಣ ಮಾಡುತ್ತಿರಲಿಲ್ಲ’ ಎನ್ನುತ್ತಾನೆ. ಆದರೆ ಪ್ರೀತಿಯ ಕುರಿತ ಈ ಹುಡುಗಾಟವೇ ಆ ಹುಡುಗಿಯನ್ನು ಅವನಿಗೆ ಹತ್ತಿರವಾಗಿಸುತ್ತದೆ. ಹೀರಾ ಮೇಲ್ದರ್ಜೆಯ ಹುಡುಗಿ ಎನ್ನುವುದು ಜನಾರ್ದನ್ ಕಲ್ಪನೆ. ಆದರೆ ಆ ಕಲ್ಪನೆಯನ್ನು ಒಂದು ದಿನ ಹೀರಾ ಒಡೆದು ಹಾಕುತ್ತಾಳೆ. ತನಗೆ ದಿಲ್ಲಿಯ ಕಳಪೆ ಥಿಯೇಟರ್‌ನಲ್ಲಿ ‘ಜಂಗ್ಲಿಜವಾನಿ’ ಎನ್ನುವ ಕಳಪೆ ಚಿತ್ರ ನೋಡಬೇಕಾಗಿದೆ. ಹೋಗೋಣವೆ? ಎಂದು ನಾಯಕನಲ್ಲಿ ಕೇಳುತ್ತಾಳೆ. ಇಲ್ಲಿಂದ ಅವರ ಸ್ನೇಹ ತೆರೆದುಕೊಳ್ಳುತ್ತದೆ. ದಿಲ್ಲಿಯ ಕತ್ತಲ ಮೂಲೆಗಳಲ್ಲಿ ಬಚ್ಚಿಟ್ಟುಕೊಂಡಿರುವ ಗಂಧೀ ಬದುಕಿನಲ್ಲಿರುವ ಸ್ವಾತಂತ್ರವನ್ನು ಅವರಿಬ್ಬರು ಕದ್ದು ಮುಚ್ಚಿ ಅನುಭವಿಸುತ್ತಾರೆ. ಹೆಂಡ ಕುಡಿಯುತ್ತಾರೆ. ಹೋಗಬಾರದ, ನೋಡಬಾರದ ಸ್ಥಳಗಳನ್ನೆಲ್ಲ ನೋಡುತ್ತಾರೆ. ಹೀರಾಳ ಮದುವೆ ದಿನ ಹತ್ತಿರವಾಗುತ್ತದೆ. ಆಕೆಯ ಮದುವೆಯಲ್ಲಿ ಪಾಲ್ಗೊಳ್ಳಲು ನಾಯಕ ಕಾಶ್ಮೀರಕ್ಕೆ ತೆರಳುತ್ತಾನೆ. ಅಲ್ಲಿ ತಾನವಳನ್ನು ಕಳೆದುಕೊಳ್ಳುತ್ತಿರುವುದು ಅವನಿಗೆ ಮನವರಿಕೆಯಾಗುತ್ತದೆ. ಮದಿರಂಗಿ ಹಾಕಿದ ಕೈಗಳನ್ನು ಮುಂದಿಟ್ಟು ತನ್ನನ್ನು ತಬ್ಬಿಕೋ ಎಂದು ಅವಳು ಹೇಳುತ್ತಾಳೆ. ನಾಯಕ ಮೆದುವಾಗಿ ತಬ್ಬಿಕೊಳ್ಳುತ್ತಾಳೆ. ‘‘ಇನ್ನೂ ಗಟ್ಟಿಯಾಗಿ’’ ಎನ್ನುತ್ತಾಳೆ ಮದುಮಗಳು.

ಅಲ್ಲಿಂದ ಮರಳಿದ ಜನಾರ್ದನ್ ನಿಧಾನಕ್ಕೆ ಮನೆಯಲ್ಲೂ ತಿರಸ್ಕೃತನಾಗುತ್ತಾ ಹೋಗುತ್ತಾನೆ. ಗಿಟಾರ್ ಅವನ ಜೊತೆಯಾಗುತ್ತಾನೆ. ಕಳ್ಳತನದ ಸುಳ್ಳು ಆರೋಪ ಹೊತ್ತು ಮನೆಯಿಂದ ಹೊರಗಟ್ಟಿದಾಗ ಅವನು ದಿಲ್ಲಿಯ ದರ್ಗಾ ಸೇರುತ್ತಾನೆ. ಅಲ್ಲಿ ಹಾಡುತ್ತಾ ಕಾಲ ಕಳೆಯುತ್ತಾನೆ. ಬದುಕು ಅವನನ್ನು ತಿರಸ್ಕರಿಸಿದಂತೆ, ಸಂಗೀತ ಅವನೊಳಗೆ ತೀವ್ರಗೊಳ್ಳುತ್ತಾ ಹೋಗುತ್ತದೆ. ಮುಂದೆ ವಿದೇಶದಲ್ಲಿ ಹೀರಾಳನ್ನು ಅವನು ಮತ್ತೆ ಭೇಟಿ ಮಾಡುತ್ತಾನೆ. ಕಟ್ಟುಪಾಡಿನ ಜಗತ್ತಿನಲ್ಲಿ ಅವಳು ಬಂಧಿಯಾಗಿರುತ್ತಾಳೆ. ಆರೋಗ್ಯ ಕೆಟ್ಟಿರುತ್ತದೆ. ಮಾನಸಿಕ ವೈದ್ಯರನ್ನು ಬೇಟಿಯಾಗಲೆಂದು ಹೊರಟಾಗ ನಾಯಕ ಎದುರಾಗುತ್ತಾನೆ. ನಾಯಕನ ಭೇಟಿಯಿಂದ ಆಕೆ ಮತ್ತೆ ಅರಳುತ್ತಾಳೆ. ಇನ್ನೊಮ್ಮೆ ಆಕೆಯನ್ನು ಅವಳ ಮನೆಯಲ್ಲಿ ಭೇಟಿ ಮಾಡುವ ಪ್ರಯತ್ನ ಅವನನ್ನು ಅಪರಾಧಿಯನ್ನಾಗಿಸುತ್ತದೆ. ಇದು ಜಾರ್ಡನ್‌ಗೆ ಹೊಸ ಇಮೇಜ್ ನೀಡುತ್ತದೆ. ಆತ ಜೈಲು ಸೇರುತ್ತಾನೆ. ಜೈಲಿನಿಂದ ಬಿಡುಗಡೆಯ ಹಂಬಲ ಅವನ್ನು ಇನ್ನಷ್ಟು ಸಂಗೀತದ ಆಳಕ್ಕೆ ಒಯ್ಯುತ್ತದೆ. ‘‘ಈ ನಗರದಲ್ಲಿ ಒಮ್ಮೆ ದಟ್ಟ ಕಾಡಿತ್ತು. ಇಲ್ಲಿರುವ ಮರಗಳನ್ನು ಕಡಿದು ನಗರ ಮಾಡಲಾಯಿತು. ಮರವನ್ನು ಕಡಿಯುವಾಗ ಎರಡು ಜೋಡಿ ಪಾರಿವಾಳಗಳು ಇಲ್ಲಿಂದ ಹಾರಿ ಹೋದವು. ಅದನ್ನು ಯಾರಾದರೂ ಕಂಡಿರಾ...’’ ಸಂಗೀತಗಾರನ ಬಿಡುಗಡೆಯ ಹಂಬಲ. ಎಲ್ಲ ಗೋಡೆಗಳನ್ನು ಮುರಿದು ಪ್ರೀತಿಯಲ್ಲಿ ಒಂದಾಗುವ ತಹತಹಿಕೆ...ಸದ್ದಾಹಕ್ ಹಾಡು...ನಾಯಕನ ಒಳಗಿನ ಸ್ವಾತಂತ್ರದ ಕನಸುಗಳಿಗೆ ರೆಕ್ಕೆ ಕಟ್ಟುತ್ತದೆ. ನಾಯಕನ ವರ್ಚಸ್ಸಿಗೆ ಕಪ್ಪು ಬಣ್ಣ ಬಳಿದಂತೆ ಆತನ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತಾರೆ. ನಾಯಕ ಜರ್ಝರಿತನಾದಷ್ಟು ಆತನ ಸಂಗೀತ ಉತ್ಕಟ ಹಂತವನ್ನು ತಲುಪುತ್ತದೆ.

ಎಲ್ಲ ಸಭ್ಯ, ಸಂಪ್ರದಾಯದ ಗೋಡೆಗಳನ್ನು ಒಡೆದು ನಾಯಕನ ಸ್ಪರ್ಶಕ್ಕೆ ಹಂಬಲಿಸುವ ಹೀರಾ...ಹಾಗೆಯೇ ಆ ಬೆಂಕಿಯ ಪ್ರೀತಿಯಲ್ಲಿ ಧಗಧಗಿಸುವ ನಾಯಕನ ಸಂಗೀತ ಇವನ್ನು ಇಟ್ಟುಕೊಂಡು ಇಮ್ತಿಯಾಝ್ ಅಲಿ ಮಾಡಿರುವ ಪ್ರಯತ್ನವನ್ನು ನಾವು ಮೆಚ್ಚಬೇಕಾಗಿದೆ. ರಣ್‌ಬೀರ್ ಕಪೂರ್‌ಗೆ ಇದೊಂದು ವಿಭಿನ್ನ ಅವಕಾಶ. ಮುಗ್ಧ ವಿದ್ಯಾರ್ಥಿಯಾಗಿಯೂ, ರಾಕ್‌ಸ್ಟಾರ್ ಆಗಿಯೂ ಕಪೂರ್ ಮಿಂಚುತ್ತಾರೆ. ಹೀರಾ ಪಾತ್ರದಲ್ಲಿ ನರ್ಗೀಸ್ ಫಖ್ರಿ ಪರವಾಗಿಲ್ಲ ಎನ್ನುವಂತೆ ನಟಿಸಿದ್ದಾರೆ. ಎ. ಆರ್. ರಹಮಾನ್ ಸಂಗೀತ ಚಿತ್ರದ ಧ್ವನಿಯಾದರೆ, ಅನಿಲ್ ಮೆಹ್ತಾ ಅವರ ಕ್ಯಾಮರಾವರ್ಕ್ ಒಟ್ಟು ಚಿತ್ರದ ದೇಹ. ತುಡಿಯುವ ಪ್ರೇಮ ಚಿತ್ರದ ಆತ್ಮ.

ಹಾಗೆಂದು ಚಿತ್ರ ಪರಿಪೂರ್ಣವಾಗಿದೆ ಎಂದರ್ಥವಲ್ಲ. ಚಿತ್ರವನ್ನು ಇನ್ನಷ್ಟು ತೀವ್ರವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಗಂಧಿ ಜಗತ್ತಿನ ಪರಿಚಯ ನಿರ್ದೇಶಕರಿಗೆ ತುಸು ಕಡಿಮೆ ಅನ್ನಿಸುತ್ತದೆ. ಸುಂದರ ಕಾಶ್ಮೀರವನ್ನು ಕಟ್ಟಿಕೊಡುವಷ್ಟು ಉತ್ಸಾಹ ಆ ಗಂಧೀ ಜಗತ್ತನ್ನು ಕಟ್ಟಿಕೊಡುವಲ್ಲಿ ಕ್ಯಾಮರಾಗಳಿಗಿದ್ದಂತಿಲ್ಲ. ನಾಯಕಿಯ ಅಭಿನಯ ಇನ್ನಷ್ಟು ಪಕ್ವವಾಗಬೇಕಾಗಿತ್ತು ಅನ್ನಿಸುತ್ತದೆ. ತಣ್ಣಗೆ ಜುಳು ಜುಳು ಹರಿಯುವ ಈ ಚಿತ್ರದಲ್ಲಿ ವಿಶೇಷ ತಿರುವುಗಳಿಲ್ಲ. ಆದರೆ ವಿಭಿನ್ನ ದೃಷ್ಟಿಯಿದೆ. ಅದಕ್ಕಾಗಿ ನಿರ್ದೇಶಕರನ್ನು ಅಭಿನಂದಿಸಬೇಕು.

Wednesday, November 9, 2011

ಸೀತೆ ಮತ್ತು ಇತರ ಕತೆಗಳು

ಹೆಣ್ಣು ದೈವ
ಅದು ಭೂಸುಧಾರಣೆಯ ಕಾಲ.
ಹೊಲ ಉಳುತ್ತಿರುವವರೇ ಹೊಲದೊಡೆಯರಾಗುತ್ತಿರುವ ಕಾಲ.
ಆ ಸಂದರ್ಭದಲ್ಲಿ ಭೂತದ ಕೋಲದಲ್ಲಿ ದೈವವೊಂದು ಕುಣಿಯುತ್ತಾ ‘‘ಯಾರೂ ಧನಿಗಳ ಭೂಮಿಯನ್ನು ಕಬಳಿಸಬಾರದು’’ ಎಂದು ಕೂಗಿತಂತೆ.
ಆದರೆ ಭೂಮಿ ಪಡೆದ ರೈತರೆಲ್ಲ ಭೂತಕ್ಕೆ ಅಲ್ಲೇ ತಿರುಗಿ ಬಿದ್ದರು.
‘‘ದೈವಕ್ಕೆ ಎದುರಾಡುತ್ತೀರಾ?’’ ಭೂತ ಕೇಳಿತು.
‘‘ಸದ್ಯಕ್ಕೆ ನೀನು ನಮ್ಮ ಧನಿಗಳ ದೈವ. ನಮ್ಮ ದೈವ ಹೆಣ್ಣು ಭೂತ. ಅದರ ಹೆಸರು ಇಂದಿರಾಗಾಂಧಿ’’ ಎಂದವರೇ ಭೂತಕ್ಕೆಂದು ತಂದ ಕೋಳಿಯೊಂದಿಗೆ ತಮ್ಮ ತಮ್ಮ ಮನೆಗಳಿಗೆ ಮರಳಿದರಂತೆ.

ಕೊಲೆ
ಹಾಡುಹಗಲಲ್ಲೇ ಅಲ್ಲೊಂದು ಕೊಲೆಯಾಯಿತು.
ಪೊಲೀಸ್ ಅಧಿಕಾರಿ ಬಂದು ಕೇಳಿದ ‘‘ಕೊಲೆಯನ್ನು ಯಾರಾದರೂ ನೋಡಿದವರಿದ್ದಾರೆಯೋ?’’
ಯಾರೂ ತುಟಿ ಬಿಚ್ಚಲಿಲ್ಲ. ಅಪರಾಧಿ ಅಲ್ಲೇ ಇದ್ದರೂ ಸಾಕ್ಷಿ ನುಡಿಯಲು ಹಿಂದೇಟು ಹಾಕಿದರು.
ಅಧಿಕಾರಿ ವಿಷಾದದಿಂದ ಹೇಳಿದ ‘‘ಈ ಕೊಲೆಯನ್ನು ಯಾರೋ ಒಬ್ಬ ಮಾಡಿರಬೇಕು ಎಂದು ತಿಳಿದಿದ್ದೆ. ಈಗ ನೋಡಿದರೆ ಈ ಕೊಲೆಯನ್ನು ನೀವೆಲ್ಲ ಜೊತೆ ಸೇರಿ ಮಾಡಿದ್ದೀರಿ’’

ಮೊತ್ತ ಮೊದಲು
ಅಪರಾಧಿಯನ್ನು ನ್ಯಾಯಾಧೀಶರು ಕೇಳಿದರು
‘‘ಇಷ್ಟು ಕೊಲೆ ಮಾಡಿದ್ದೀಯಲ್ಲ...ಹೇಗೆ ಸಾಧ್ಯವಾಯಿತು?’’
ಅವನು ಹೇಳಿದ ‘‘ಮೊತ್ತ ಮೊದಲು ಒಂದು ಕೊಲೆ ಮಾಡಿದೆ. ಆ ಬಳಿಕ ಕೊಲೆ ಮಾಡುವುದು ಕಷ್ಟವಾಗಲಿಲ್ಲ’’
‘‘ನೀನು ಮಾಡಿದ ಮೊದಲ ಕೊಲೆ ಯಾರದು?’’
‘‘ಮೊತ್ತ ಮೊದಲು ನಾನು ಕೊಂದದ್ದು ನನ್ನನ್ನು’’

ಪತ್ರಕರ್ತ
ಪತ್ರಕರ್ತನೊಬ್ಬ ಪೊಲೀಸ್ ಸ್ಟೇಶನ್‌ಗೆ ಫೋನ್ ಮಾಡಿದ
‘‘ಸಾರ್...ಏನಿದೆ ಕ್ರೈಂ ವಿಶೇಷ?’’
‘‘ವಿಶೇಷ ಏನು ಇಲ್ಲ ಸಾರ್, ಒಂದು ಸಣ್ಣ ಆಕ್ಸಿಡೆಂಟ್ ಅಷ್ಟೇ’’ ಪೊಲೀಸ್ ಪೇದೆ ಉತ್ತರಿಸಿದ.
‘‘ಹೌದಾ...ಡೆತ್ ಆಗಿದಾ?’’ ಪತ್ರಕರ್ತ ಕೇಳಿದ.
‘‘ಹೌದು ಒಂದು ಡೆತ್ ಆಗಿದೆ. ಸ್ಕೂಟರ್‌ಗೆ ಬಸ್ ಡಿಕ್ಕಿ’’
‘‘ಬರೇ ಒಂದು ಮಾತ್ರಾನ, ಬೇರೇನೂ ವಿಶೇಷ ಇಲ್ವಾ?’’
‘‘ಇಲ್ಲಾ ಸಾರ್...ಅಷ್ಟೇ...’’
‘‘ಏನು ಪೊಲೀಸರಪ್ಪ ನೀವು...ಒಂದು ದಿನಾನೂ ವಿಶೇಷ ಸುದ್ದಿ ಕೊಡಲ್ಲ. ಹೀಗೇ ಆದರೆ ನಾವು ಪತ್ರಿಕೆಯೋರು ಏನನ್ನು ಪ್ರಿಂಟ್ ಮಾಡಬೇಕು...’’ ಪತ್ರಕರ್ತ ಫೋನ್ ಕುಕ್ಕಿದ.
ತುಸು ಹೊತ್ತಲ್ಲೇ ಮನೆಯಿಂದ ಪತ್ರಕರ್ತನಿಗೆ ಫೋನ್ ಬಂತು
‘‘ಅಪ್ಪನ ಸ್ಕೂಟರ್ ಆಕ್ಸಿಡೆಂಟ್ ಆಗಿದೆ...ಬೇಗ ಬಾ....’’

ನಾಚಿಕೆ
ಮಹಾ ವಂಚಕನೊಬ್ಬನನ್ನು ಬಂಧಿಸಿ ಒಯ್ಯುತ್ತಿದ್ದರು.
ಆದರೆ ಅವನು ಯಾವ ಅಂಜಿಕೆಯೂ ಇಲ್ಲದೆ ನಗು ನಗುತ್ತಾ ಅವರ ಹಿಂದೆ ನಡೆಯುತ್ತಿದ್ದ.
ಅದನ್ನು ನೋಡಿ ಸಂತ ಹೇಳಿದ
‘‘ತನ್ನ ಅಪರಾಧಕ್ಕಾಗಿ ಸ್ವಯಂ ನಾಚಿಕೊಳ್ಳದವನನ್ನು ಯಾವ ಜೈಲೂ ಶಿಕ್ಷಿಸಲಾರದು’’

ಲೆಕ್ಕ
ಮೇಷ್ಟ್ರು ಲೆಕ್ಕ ಪಾಠ ಹೇಳಿ ಕೊಡುತ್ತಿದ್ದರು.
ಹುಡುಗನೊಬ್ಬನನ್ನು ನಿಲ್ಲಿಸಿ ಕೇಳಿದರು ‘‘ನನ್ನ ಕೈಯಲ್ಲಿ ಹತ್ತು ರೊಟ್ಟಿ ಇದೆ. ಎರಡು ರೊಟ್ಟಿಯನ್ನು ನಾನು ನಮ್ಮ ಮನೆಯ ನಾಯಿಗೆ ಹಾಕುತ್ತೇನೆ. ಈಗ ನನ್ನಲ್ಲಿ ಉಳಿದ ರೊಟ್ಟಿ ಎಷ್ಟು?’’
ಹುಡುಗ ವಿಷಾದದಿಂದ ಕೇಳಿದ ‘‘ಸಾರ್ ನಾಯಿಗೆ ಹಾಕುವ ಆ ಎರಡು ರೊಟ್ಟಿಯನ್ನು ನನಗಾದರೂ ಕೊಡಬಾರದೆ?’’
ಮೇಷ್ಟ್ರು ಸಿಟ್ಟಾದರು ‘‘ನಾನು ರೊಟ್ಟಿಯನ್ನು ಯಾರಿಗೆ ಹಾಕುತ್ತೇನೆ ಎನ್ನುವುದು ಮುಖ್ಯವಲ್ಲ. ನನ್ನ ಕೈಯಲ್ಲಿ ಎಷ್ಟು ರೊಟ್ಟಿಯಿದೆ ಅದಕ್ಕೆ ಉತ್ತರಿಸು’’
ಹುಡುಗ ಅಷ್ಟೇ ಕಟುವಾಗಿ ಉತ್ತರಿಸಿದ ‘‘ಮನೆಯಲ್ಲಿ ಹಸಿದು ಕೆಲಸ ಮಾಡುತ್ತಿರುವ ನನ್ನ ಅಮ್ಮನಿಗೆ ನಿಮ್ಮ ಕೈಯಲ್ಲಿರುವ ಎಂಟು ರೊಟ್ಟಿಗಿಂತ, ನೀವು ನಾಯಿಗೆ ಹಾಕಿದ ಎರಡು ರೊಟ್ಟಿ ತುಂಬಾ ಮುಖ್ಯ’’
ಮೇಷ್ಟ್ರು ಹತಾಶೆಯಿಂದ ಹೇಳಿದರು ‘‘ಇದು ಕಲ್ಪನೆ ಕಣೋ...’’
ಹುಡುಗನೂ ಅಷ್ಟೇ ಹತಾಶೆಯಿಂದ ಕೇಳಿದ ‘‘ಕಲ್ಪನೆಯಲ್ಲಾದರೂ ಆ ಎರಡು ರೊಟ್ಟಿಯನ್ನು ನನ್ನ ತಾಯಿಗೆ ನೀಡಬಾರದೆ?’’

ಅನುಭವ
ಲಾರಿ ಚಾಲಕರ ಸಂದರ್ಶನ ನಡೆಯುತ್ತಿತ್ತು
ಚಾಲಕನಲ್ಲಿ ಆತ ಕೇಳಿದ ‘‘ಚಾಲಕ ವೃತ್ತಿಯಲ್ಲಿ ಎಷ್ಟು ವರ್ಷ ಅನುಭವವಿದೆ?’’
‘‘ನನ್ನ ಬದುಕಿನಲ್ಲಿ ಕೆಲವು ಸೆಕೆಂಡುಗಳು ನನಗೆ ನೂರಾರು ವರ್ಷಗಳ ಅನುಭವವನ್ನು ನೀಡಿದೆ’’ ಆ ವೃದ್ಧ ಚಾಲಕ ನುಡಿದ.

ಸೀತೆ
‘‘ಬೆಂಕಿಗೆ ಹಾರಿಯೂ ಸೀತೆ ಹೇಗೆ ಬದುಕಿದಳು?’’
ತಾಯಿಯ ಬಳಿ ಮಗ ಕೇಳಿದ.
‘‘ನಾನು ಪ್ರತಿದಿನ ಬದುಕುತ್ತಿಲ್ಲವೆ ಮಗಾ...ಹಾಗೆ’’ ತಾಯಿ ಉತ್ತರಿಸಿದಳು

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.


Saturday, November 5, 2011

ದಿಕ್ಕು ಮತ್ತು ಇತರ ಕಥೆಗಳು

ಮುಕ್ತಿ
ರಾಜಕಾರಣಿ ಅದೊಂದು ಸ್ಲಂಗೆ ಭೇಟಿ ನೀಡಿದ.
ಸಾವಿರಾರು ಗುಡಿಸಲುಗಳಿರುವ ಸ್ಲಂ ಅದು.
ಅಲ್ಲಿನ ಬಡತನ, ಕಷ್ಟ ಕಂಡು ರಾಜಕಾರಣಿ ತುಂಬಾ ನೊಂದುಕೊಂಡ.
ತಕ್ಷಣ ತನ್ನ ಜೊತೆಗಿದ್ದ ಅಧಿಕಾರಿಗೆ ಆದೇಶಿಸಿದ
‘‘ಈ ಬಡತನ, ನೋವಿಗೆ ಮುಕ್ತಿ ಕೊಡಿ. ಇವರನ್ನು ಮೇಲೆತ್ತಿ ಮುಂದಿನ ವರ್ಷ ಬಂದಾಗ ಇಲ್ಲಿ ಬಡತನ ಅನ್ನೋದೆ ಇರಬಾರದು’’
ಅಧಿಕಾರಿ ‘‘ಸರಿ ಸಾರ್’’ ಎಂದ.
ಮರುದಿನ ಆ ಸ್ಲಂಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಅಷ್ಟೂ ಬಡವರು ಸುಟ್ಟು ಬೂದಿಯಾದರು.
ಮುಂದಿನ ವರ್ಷ ಅಲ್ಲಿ ತಲೆಯೆತ್ತಿದ್ದ ಕಾಂಪ್ಲೆಕ್ಸ್‌ನ್ನು ಉದ್ಘಾಟಿಸಲು ಆ ರಾಜಕಾರಣಿ ಬಂದಾಗ, ಅಲ್ಲೆಲ್ಲ ಶ್ರೀಮಂತರೇ ರಾರಾಜಿಸುತ್ತಿದ್ದರು.
ರಾಜಕಾರಣಿ ಅಧಿಕಾರಿಯನ್ನು ಮೆಚ್ಚುಗೆಯಿಂದ ನೋಡಿದ.

ಗೊಬ್ಬರ
ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಸಿಟ್ಟಿನಿಂದ ಹೇಳಿದ ‘‘ನಿನ್ನ ತಲೆಯಲ್ಲಿರುವುದು ಗೊಬ್ಬರ’’
ವಿದ್ಯಾರ್ಥಿ ಸಂತೋಷದಿಂದ ಉತ್ತರಿಸಿದ
‘‘ನಿಜ. ನನ್ನ ತಲೆಯಲ್ಲಿರುವುದು ಗೊಬ್ಬರ. ಅಲ್ಲಿ ಬೀಜ ಬಿತ್ತಿ ಬೆಳೆ ತೆಗೆಯುವುದು ನಿಮ್ಮ ಕೆಲಸ. ಅದನ್ನು ಮಾಡಿ’’

ಪವಾಡ
ಸಂತ ಆಶ್ರಮದ ಗಿಡಕ್ಕೆ ನೀರೆರೆಯುತ್ತಿದ್ದ. ಆಗ ಅಲ್ಲಿಗೊಬ್ಬ ಅಪರಿಚಿತ ಬಂದು ಕೇಳಿದ ‘‘ಸ್ವಾಮಿ...ಈ ಆಶ್ರಮದ ಗುರುಗಳು ಪವಾಡ ಮಾಡುತ್ತಾರಂತೆ ಹೌದ?’’
ಸಂತ ನಕ್ಕು ‘‘ಹೌದು’’ ಎಂದ.
ಅಪರಿಚಿತನಿಗೆ ಸಂತೋಷವಾಯಿತು. ‘‘ಅವರು ಮಾಡಿರುವ ಒಂದು ಪವಾಡವನ್ನು ಹೇಳಿ...’’ ಕುತೂಹಲದಿಂದ ಕೇಳಿದ.
ಸಂತ ಹೇಳ ತೊಡಗಿದ ‘‘ನಿಜಕ್ಕೂ ಅದೊಂದು ದೊಡ್ಡ ಪವಾಡ. ಒಂದು ದಿನ ಅವರೊಂದು ಬೀಜವನ್ನು ತಂದರು. ಆಮೇಲೆ ಅದನ್ನು ಮಣ್ಣಲ್ಲಿ ಬಿತ್ತಿದರು. ಪ್ರತಿದಿನ ನೀರು ಹಾಕತೊಡಗಿದರು. ನೋಡನೋಡುತ್ತಿದ್ದಂತೆಯೇ ಒಂದು ಮಣ್ಣನ್ನು ಸೀಳಿ ಬೀಜದಿಂದ ಸಸಿಯೊಂದು ಮೊಳಕೆಯೊಡೆಯಿತು. ಪವಾಡ ಇಲ್ಲಿಗೆ ಮುಗಿಯುವುದಿಲ್ಲ...ಗುರುಗಳು ಅದಾವುದೋ ಮಂತ್ರದ ನೀರು ಹಾಕುತ್ತಿರಬೇಕು. ಸಸಿ ಕೆಲವೇ ದಿನಗಳಲ್ಲಿ ಗಿಡವಾಯಿತು. ಒಂದೆರಡು ವರ್ಷಗಳಲ್ಲೇ ಮರವಾಯಿತು. ಒಂದು ದಿನ ನೋಡಿದರೆ ಮರ ತುಂಬಾ ಹಣ್ಣುಗಳು. ಆ ಹಣ್ಣುಗಳು ಅದೆಷ್ಟು ಸಿಹಿ ಅಂತೀರಾ? ಆಹಾ...ಆ ಒಂದು ಪುಟ್ಟ ಬೀಜದೊಳಗಿಂದ ಅವರು ಒಂದು ದೊಡ್ಡ ಮರವನ್ನೇ ಹೊರತೆಗೆದರು. ಅಷ್ಟೇ ಅಲ್ಲ, ಮರದಿಂದ ಅಷ್ಟೂ ಸಿಹಿಸಿಹಿಯಾದ ಹಣ್ಣುಗಳನ್ನು ಹೊರತೆಗೆದರು. ಆ ಪವಾಡವನ್ನು ನೋಡಿ ಊರ ರೈತರೆಲ್ಲ ಅವರ ಭಕ್ತರಾದರು...’’

ಭಕ್ತಿ
ಶಿಷ್ಯ ಕೇಳಿದ ‘‘ಗುರುಗಳೇ ಭಕ್ತಿ ಎಂದರೇನು?’’
ಸಂತ ನಕ್ಕು ಹೇಳಿದ ‘‘ಭಕ್ತಿ ಎಂದರೆ ಜೂಜು. ಒಮ್ಮೆ ಈ ಜೂಜಿಗಿಳಿದರೆ ಸಾಕು, ಒಂದೊಂದನ್ನೇ ಒತ್ತೆಯಿಟ್ಟು ಕಳೆದುಕೊಳ್ಳುತ್ತಾ ಹೋಗುತ್ತೀರಿ...ಕಳೆದುಕೊಳ್ಳುವುದರಲ್ಲೇ ಈ ಜೂಜಿನ ಮಜ ಇರುವುದು’’

ಹಬ್ಬ
‘‘ನಾಳೆ ಹಬ್ಬ’’ ಆ ಶ್ರೀಮಂತ ಮನೆಯ ಹುಡುಗ ಸಂಭ್ರಮದಿಂದ ಹೇಳಿದ.
‘‘ಹೌದಾ?’’ ಬಡ ಹುಡುಗೂ ಉದ್ಗರಿಸಿದ.
ನಾಳೆ ಏನೋ ವಿಶೇಷ ಇರಬೇಕು ಎಂದು ಸಂತೋಷಪಟ್ಟ.

ಮರುದಿನ ಶ್ರೀಮಂತ ಹುಡುಗ ಬೇಸರದಿಂದ ಹೇಳಿದ ‘‘ಹಬ್ಬದಲ್ಲಿ ಏನೂ ವಿಶೇಷವೇ ಇರಲಿಲ್ಲ. ನಮ್ಮ ಮನೆಯಲ್ಲಿ ಯಾವತ್ತೂ ಬಿರಿಯಾನಿ. ನಿನ್ನೆಯೂ ಬಿರಿಯಾನಿ ಮಾಡಲಾಗಿತ್ತು. ಯಾವತ್ತೂ ಹೊಸ ಬಟ್ಟೆಯೇ ಹಾಕುತ್ತಿದ್ದೆ. ನಿನ್ನೆಯೂ ಹೊಸಬಟ್ಟೆಯನ್ನೇ ಹಾಕಿದೆ. ಏನಿದೆ ಹಬ್ಬದಲ್ಲಿ ವಿಶೇಷ?’’
ಬಡಹುಡುಗನೂ ಅಷ್ಟೇ ಬೇಸರದಿಂದ ಹೇಳಿದ
‘‘ಹೌದು, ನಮ್ಮ ಮನೆಯಲ್ಲೂ ಹಬ್ಬದಲ್ಲಿ ಏನೂ ವಿಶೇಷವೇ ಇರಲಿಲ್ಲ. ಯಾವತ್ತೂ ಗಂಜಿಯೇ ಕುಡಿಯುತ್ತಿದ್ದೆವು. ನಿನ್ನೆಯೂ ಗಂಜಿಯನ್ನೇ ಕುಡಿದೆವು. ಯಾವಾಗಲೂ ಹರಿದ ಹಳೆಯ ಬಟ್ಟೆಯೇ ಹಾಕುತ್ತಿದ್ದೆವು. ನಿನ್ನೆಯೂ ಅದನ್ನೇ ಹಾಕಿದೆವು. ಏನಿದೆ ಹಬ್ಬದಲ್ಲಿ ವಿಶೇಷ?’’


ಕೊರಗು
ಸಂತನ ಬಳಿ ಶಿಷ್ಯ ದುಃಖದಿಂದ ಹೇಳಿದ ‘‘ಗುರುಗಳೇ, ನಾನು ಇಂದು ಬೆಳಗ್ಗೆ ದೇವರ ಪ್ರಾರ್ಥನೆಯನ್ನು ಮರೆತು ನಿದ್ರಿಸಿ ಬಿಟ್ಟೆ. ನಾನೇನು ಮಾಡಲಿ?’’
ಸಂತ ಹೇಳಿದ ‘‘ದೇವರ ಪ್ರಾರ್ಥನೆ ಮಾಡಿದೆ ಎಂದು ಹೆಮ್ಮೆಯಿಂದ ತಿರುಗಾಡುವವನಿಗಿಂತ, ಪ್ರಾರ್ಥನೆ ಮಾಡಿಲ್ಲವೆಂದು ಕೊರಗುವವನೇ ದೇವರಿಗೆ ಹೆಚ್ಚು ಇಷ್ಟ. ಚಿಂತೆ ಮಾಡಬೇಡ’’

ಹಗ್ಗ
ಸಂತನ ಆಶ್ರಮದ ತೋಟಕ್ಕೆ ಕಳ್ಳನೊಬ್ಬ ನುಗ್ಗಿದ.
ಶಿಷ್ಯರೆಲ್ಲ ಸೇರಿ ಅವನನ್ನು ಹಿಡಿದರು.
ಅವನೋ ಬಲಾಢ್ಯ. ಅವನನ್ನು ಕೊತ್ವಾಲನಿಗೆ ಒಪ್ಪಿಸಲು ಕೈಕಾಲು ಕಟ್ಟುವುದು ಅಗತ್ಯವಿತ್ತು.
ಶಿಷ್ಯನೊಬ್ಬ ಆಶ್ರಮಕ್ಕೆ ಬಂದು ಹಗ್ಗಕ್ಕಾಗಿ ಹುಡುಕಾಡತೊಡಗಿದ.
ಸಂತ ಕೇಳಿದ ‘‘ಏನು ಹುಡುಕುತ್ತಿದ್ದೀಯ?’’
‘‘ಕಳ್ಳನನ್ನು ಕಟ್ಟಿ ಹಾಕಲು ಹಗ್ಗ’’
‘‘ಪ್ರೀತಿ, ಸ್ನೇಹ, ಬಂಧುತ್ವದ ಹಗ್ಗದಿಂದ ಅವನನ್ನು ಕಟ್ಟಿ ಹಾಕಿ. ಅದು ಎಂದಿಗೂ ಕಡಿಯದಷ್ಟು ಗಟ್ಟಿಯಾದ ಹಗ್ಗ’’ ಸಂತ ಸಲಹೆ ನೀಡಿದ.

ದಿಕ್ಕು
ಒಂದು ನದಿಯ ದಿಕ್ಕನ್ನು ತಿರುಗಿಸುವುದಕ್ಕೆ ಅವರು ಹೊರಟರು.
ಹಲವು ವರ್ಷಗಳ ಬಳಿಕ ದಿಕ್ಕೇನೋ ಬದಲಾಯಿತು.
ಆದರೆ ನದಿಯದ್ದಲ್ಲ, ಜನರದು.
ನದಿಯ ದಿಕ್ಕು ಎಂದಿನಂತೆ ಸಮುದ್ರದ ಕಡೆಗೇ ಇತ್ತು.
ಆದರೆ ಜನರ ದಿಕ್ಕು ಚೆಲ್ಲಾಪಿಲ್ಲಿಯಾಗಿತ್ತು.

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Thursday, November 3, 2011

ಹುಚ್ಚು ಹುಡುಗ

ಒಂದು ಹಳೆಯ ಕವಿತೆ. ನನ್ನ ಪ್ರವಾದಿಯ ಕನಸು ಸಂಕಲನದಲ್ಲಿ ಪ್ರಕಟವಾಗಿದೆ.

ಇರುಳು ಸಾಗರದಂತೆ
ಬಿದ್ದುಕೊಂಡಿರುವಾಗ ಇವನು
ನಿದ್ದೆಯನ್ನು ಬಲೆಯಂತೆ ಬೀಸಿ
ಸ್ವಪ್ನಗಳನ್ನು ಆಯುತ್ತಾನೆ!

ದುರಾಸೆಯ ಹುಡುಗಾ...
ಪುಟ್ಟ ದೋಣಿ ತುಂಬ
ಕನಸುಗಳ ಗೋರುತ್ತಾ ತುಂಬುವನು
ನೆಲೆ ತಪ್ಪಿ, ಇರುಳು ತೋಳು ಎತ್ತಿ ಒಗೆದರೆ
ಹಗಲ ತೀರದಲ್ಲಿ ಪೆಚ್ಚಾಗಿ ಬಿದ್ದುಕೊಳ್ಳುವನು

ಸ್ವಪ್ನಗಳಿಗಾಗಿ ತನ್ನ ನಿದ್ದೆಗಳನ್ನೂ
ಸಾಲಿಗನಂತೆ ಕಾಡುವ
ಹಗಲಿಗಾಗಿ ತನ್ನ ಸ್ವಪ್ನಗಳನ್ನೂ
ಅಡವಿಡುವ ಇವನ
ವೌನದ ತಿಜೋರಿಯಲ್ಲಿ
ಅದೆಷ್ಟು ಸಾಲಪತ್ರಗಳು!

ಠೇವಣಿಯೆಂದಿಟ್ಟ ನಾಳೆಗಳೆಲ್ಲಾ
ಬೊಗಸೆಯಿಂದ ಮಂಜಿನಂತೆ ಕರಗಿ
ಹೋಗುವುದನ್ನು ಕಂಡು
ತಲ್ಲಣಗೊಂಡು
ಅಳುವನು!

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Monday, October 31, 2011

ಮದರಸದ ದಿನಗಳು ಭಾಗ-2: ಬ್ಯಾರಿ-ಮಲಯಾಳಂ ಸಂಘರ್ಷ

ಗುಜರಿ ಅಂಗಡಿಯಲ್ಲಿ -ಮದರಸದ ದಿನಗಳ- ಒಂದು ಕಂತನ್ನು ಈ ಹಿಂದೆ ಹಂಚಿಕೊಂಡಿದ್ದೆ. ಇದೀಗ ಅದರ ಎರಡನೆ ಕಂತನ್ನು ಹಂಚಿಕೊಳ್ಳುತ್ತಿದ್ದೇನೆ.

ಮದರಸ ಮತ್ತು ಶಾಲೆಯ ಒಂದು ಓದಿನ ಕ್ರಮದ ಒಂದು ಮುಖ್ಯ ವ್ಯತ್ಯಾಸವನ್ನು ನಾನು ಬಾಲ್ಯದಲ್ಲೇ ಗಮನಿಸಿದ್ದೆ. ಮೇಷ್ಟ್ರುಗಳು ಪಾಠ ಪುಸ್ತಕವನ್ನು ಬಿಡಿಸಿ ‘‘ಮಕ್ಕಳೇ ವೌನವಾಗಿ ಓದಿರಿ’’ ಎನ್ನುತ್ತಿದ್ದರು. ನಾವೆಲ್ಲರೂ ವೌನವಾಗಿ ಅಥವಾ ವೌನವನ್ನು ನಟಿಸಿ ಓದುತ್ತಿದ್ದೆವು. ಆದರೆ ಮದರಸದಲ್ಲಿ ಮುಸ್ಲಿಯಾರರು ಹಾಗಲ್ಲ. ‘‘ಮಕ್ಕಳೇ ಜೋರಾಗಿ ಓದಿರಿ’’ ಎನ್ನುತ್ತಿದ್ದರು. ಅಷ್ಟೇ ಅಲ್ಲ, ನಮ್ಮ ಸ್ವರ ತುಸು ಮೆಲ್ಲಗಾದರೂ ಬೆತ್ತ ಹಿಡಿದು ಓಡಾಡ ತೊಡಗುತ್ತಿದ್ದರು. ಆದುದರಿಂದ ನಾವು ಮದರಸದಲ್ಲಿ ಗಂಟಲು ಹರಿಯುವಂತೆ ಓದುತ್ತಿದ್ದೆವು.
‘ಅ-ಅಲಿಫ್, ಬ-ಬಾಹ್’ ಎಂದು ಜೋರಾಗಿ ನಾವು ಗುಣಿತಾಕ್ಷರಗಳನ್ನು ಓದುತ್ತಿದ್ದೆವು. ನಮ್ಮ ಮದರಸ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಮದರಸದೊಳಗಿಂದ ಜೋರಾಗಿ ಎಲ್ಲರೂ ಆ, ಇ, ಉ, ಇ ಎನ್ನುವುದು ರಾಷ್ಟ್ರೀಯ ಹೆದ್ದಾರಿಗೆ ಅಪ್ಪಳಿಸುತ್ತಿತ್ತು. ಒಂದು ದಿನ ಬಸ್ ಕಾಯುತ್ತಿದ್ದ ನನ್ನ ಗೆಳೆಯ ಕೇಳಿದ ‘‘ಅಲ್ಲ ಮರಾಯ, ಮದರಸದೊಳಗೆ ಕರಾಟೆ ಕಲಿಸ್ತಾರ?’’ ನಾನು ನಕ್ಕು ಅವನಿಗೆ ವಿವರಿಸಿದೆ.

ಒಂದನೆ ತರಗತಿಯಲ್ಲಿ ನಮಗೆ ಅ, ಆ, ಇ, ಈ ಕಲಿಸಿದಂತೆಯೇ ಅರಬಿ ಅಕ್ಷರಗಳನ್ನೂ ಕಲಿಸುತ್ತಿದ್ದರು. ವಿಚಿತ್ರವೆಂದರೆ ನಮ್ಮದು ಅರಬಿ ಮಲಯಾಳ. ಅಂದರೆ ಅಕ್ಷರವಷ್ಟೇ ಅರೇಬಿಕ್. ಆದರೆ ಅದರ ಒಳಗಿನ ತಿರುಳು ಮಲಯಾಳಂನಲ್ಲಿರುತ್ತಿತ್ತು. ಅಂದರೆ ಮಲಯಾಳಂನ್ನು ಅರೇಬಿಕ್ ಅಕ್ಷರದಲ್ಲಿ ಬರೆದು ಕಲಿಸುತ್ತಿದ್ದರು. ಆದುದರಿಂದ, ಇತ್ತ ಮಲಯಾಳವನ್ನು ಕಲಿಯದೆ, ಅತ್ತ ಅರೇಬಿಕ್‌ನ್ನು ಅರ್ಥ ಮಾಡಿಕೊಳ್ಳದೆ ನನ್ನ ಸುಮಾರು ಐದು ವರ್ಷದ ಮದರಸದ ಕಲಿಕೆ ವ್ಯರ್ಥವಾಗಿತ್ತು. ಅದಕ್ಕೊಂದು ಮುಖ್ಯ ಕಾರಣವೂ ಇದೆ. ಸಾಧಾರಣವಾಗಿ ದಕ್ಷಿಣ ಕನ್ನಡದ ಮುಸ್ಲಿಮರನ್ನು ಬ್ಯಾರಿಗಳು ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಈ ಭಾಗದಲ್ಲಿ ‘ಆದಂ ಬ್ಯಾರಿ’ ‘ಯೂಸುಫ್ ಬ್ಯಾರಿ’ ‘ಇದ್ದಿನ್ ಬ್ಯಾರಿ’ ಎಂದೇ ಮುಸ್ಲಿಮರು ಗುರುತಿಸಿಕೊಳ್ಳುತ್ತಿದ್ದರು. ವ್ಯಾಪಾರ, ಪುಂಡಾಟಿಕೆ, ಪಾಳೇಗಾರಿಕೆ, ಸಾಹಸ ಎಲ್ಲವೂಗಳಲ್ಲೂ ಈ ಬ್ಯಾರಿಗಳದ್ದು ಎತ್ತಿದ ಕೈಯಾಗಿತ್ತು. ಆದರೆ ಅದೇನು ದುರಂತವೋ, ನಿಧಾನಕ್ಕೆ ಬ್ಯಾರಿ ಎನ್ನುವ ಅಸ್ಮಿತೆಯೇ ಅವರಿಗೆ ಅವಮಾನವಾಗಿ ಕಾಣತೊಡಗಿತು. ಬ್ಯಾರಿಯ ಅಸ್ಮಿತೆ ಕಳೆದುಕೊಂಡ ಅವರು, ಬಳಿಕ ಬ್ಯಾರಿ ಎಂದು ಯಾರಾದರೂ ಕರೆದರೆ, ಅವಾಚ್ಯ ಶಬ್ದ ಬಳಸಿದಂತೆ ಸಿಟ್ಟಿಗೇಳುತ್ತಿದ್ದರು. ಬ್ಯಾರಿ ಎಂದು ಗುರುತಿಸಲು ಹಿಂಜರಿಯುತ್ತಿದ್ದರು. ಬಹುಶಃ ಅದಕ್ಕೆ ತುಳುವ ಸಮಾಜದ ಸಾಂಸ್ಕೃತಿಕ ಪಲ್ಲಟವೂ ಕಾರಣವಾಗಿರಬಹುದು. ಹಾಗೆಯೇ ಮುಸ್ಲಿಮ್ ಬದುಕಿನಲ್ಲಿ ಕೇರಳದ ಮುಸ್ಲಿಮರ ಪ್ರಭಾವವೂ ಕಾರಣವಾಗಿರಬಹುದು.

ಅದಿರಲಿ. ನಮ್ಮ ಮನೆ ಭಾಷೆ ಬ್ಯಾರಿ. ಕರಾವಳಿಯ ಶೇ. 90ರಷ್ಟು ಮುಸ್ಲಿಮರಿಗೆ ಉರ್ದು ಬರುವುದಿಲ್ಲ. ಆದರೆ ನಮ್ಮ ಭಾಷೆಗೆ ಒಂದು ಸ್ಪಷ್ಟ ಅಸ್ತಿತ್ವವೇ ಇದ್ದಿರಲಿಲ್ಲ. ಯಾವುದಾದರೂ ದಾಖಲೆಗಳಲ್ಲಿ ಭಾಷೆ ಯಾವುದೆಂದು ಕೇಳಿದರೆ ನಾವು ಮಲಯಾಳಂ ಎಂದು ಹೇಳುತ್ತಿದ್ದೆವು. ಯಾಕೆಂದರೆ ಬ್ಯಾರಿ ಭಾಷೆ ಶೇ. 90ರಷ್ಟು ಮಲಯಾಳಂನ್ನು ಹೋಲುತ್ತಿತ್ತು. ಆದರೆ ಅತ್ತ ಮಲಯಾಳಿಗಳು ಬ್ಯಾರಿ ಭಾಷೆಯನ್ನು ಮಲಯಾಳಂ ಎಂದು ಒಪ್ಪುತ್ತಿರಲಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಭಾಷೆಯ ಹೆಸರೇನು ಎನ್ನುವುದೂ ನಮಗೆ ಗೊತ್ತಿರಲಿಲ್ಲ. ‘ನಕ್ಕ್-ನಿಕ್ಕ್(ನನಗೆ-ನಿನಗೆ)’ ಎಂದು ಈ ಭಾಷೆಯನ್ನು ನಾವು ಕರೆಯುತ್ತಿದ್ದೆವು. ನಕ್ಕ್-ನಿಕ್ಕ್ ಭಾಷೆ. ಅಂದರೆ ನನಗೆ-ನಿನಗೆ ಅಷ್ಟೇ ಸೀಮಿತವಾದ ಭಾಷೆ ಎಂದು ಬಹುಶಃ ಆಳದಲ್ಲಿ ಒಪ್ಪಿಕೊಂಡಿದ್ದೆವು ಎಂದು ಕಾಣುತ್ತದೆ. (ಈ ಭಾಷೆಯ, ಸಂಘರ್ಷ, ಹೋರಾಟ, ಮತ್ತು ಒಂದು ಯಶೋಗಾಥೆಯ ಕುರಿತ ಇನ್ನಷ್ಟು ವಿವರಗಳನ್ನು ಇನ್ನೊಮ್ಮೆ ಹಂಚಿಕೊಳ್ಳುವೆ).

ನಮ್ಮ ಮದರಸಗಳಿಗೆ ಮುಸ್ಲಿಯಾರುಗಳು ಬೇಕೆಂದರೆ ನಾವು ಕೇರಳದಿಂದಲೇ ತರಿಸಬೇಕು. ಆಗ ಸ್ಥಳೀಯವಾಗಿ ಮುಸ್ಲಿಮರು ಧಾರ್ಮಿಕ ವಿದ್ಯಾಭ್ಯಾಸ ಕಲಿಯುವುದು ಕಡಿಮೆ. ಒಂದು ವೇಳೆ ಕಲಿಯುವುದಿದ್ದರೂ ಕೇರಳದಲ್ಲಿ ಹೋಗಿ ಕಲಿತು ಬರಬೇಕು. ಬರುವಾಗ ಅಪ್ಪಟ ಮಲಯಾಳ ಭಾಷೆಯಲ್ಲಿ ಮಾತನಾಡಿ ನಮ್ಮನ್ನೆಲ್ಲ ಹೆದರಿಸುತ್ತಿದ್ದರು. ಕೇರಳದಿಂದ ಬಂದ ಮುಸ್ಲಿಯಾರರು ನಮಗೆ ಮದರಸದ ಪಠ್ಯಗಳನ್ನು ಮಲಯಾಳಂನಲ್ಲೇ ಬೋಧಿಸುತ್ತಿದ್ದರು. ಪಠ್ಯಗಳಲ್ಲಿರುವ ಅಕ್ಷರಗಳೆಲ್ಲ ಅರೇಬಿಕ್ ಆಗಿದ್ದವು. ಆದರೆ ಮಾಧ್ಯಮ ಮಾತ್ರ ಮಲಯಾಳಂ. ಹೀಗೆ ನಾವು ಅರಬೀ-ಮಲಯಾಳಂ ಮೂಲಕ ಮದ್ರಸಗಳಲ್ಲಿ ಓದಿದೆವು. ಇದರ ಪರಿಣಾಮವಾಗಿ, ನಾವೆಲ್ಲ ಮದರಸದಲ್ಲಿ ಕುರ್‌ಆನನ್ನು ಓದಲು ಮಾತ್ರ ಕಲಿತೆವು. ಆದರೆ ಅದರ ಅರ್ಥ ಗೊತ್ತೇ ಇರಲಿಲ್ಲ. ನಾನು ಕುರ್‌ಆನ್‌ನ್ನು ಅರ್ಥ ಸಹಿತ ಓದಿದ್ದು ಮದರಸ ತೊರೆದ ಎಷ್ಟೋ ವರ್ಷಗಳ ಬಳಿಕ. ಅದೂ ಕನ್ನಡದಲ್ಲಿ. ಕುರ್‌ಆನನ ಕನ್ನಡ ಅನುವಾದ ಬಂದುದರಿಂದ ನಾವು ಕುರ್‌ಆನ್‌ನ್ನು ಅರ್ಥ ಸಹಿತ ಓದುವಂತಾಯಿತು. ಮದರಸ-ಮಸೀದಿ ವತಿಯಿಂದ ವರ್ಷಕ್ಕೊಮ್ಮೆ ಗಂಭೀರ ಮತ ಪ್ರಸಂಗವನ್ನು ಮಾಡುತ್ತಿದ್ದರು. ಅಂದರೆ ಧಾರ್ಮಿಕ ಭಾಷಣ. ಇದಕ್ಕೂ ಕೇರಳದಿಂದಲೇ ವೌಲ್ವಿಗಳು ಭಾಷಣ ಮಾಡಲು ಬರುತ್ತಿದ್ದರು. ಅವರು ಮಲಯಾಳಂನಲ್ಲಿ ಈ ಭಾಷಣವನ್ನು ಮಾಡಿದರೆ ಮಾತ್ರ ಅದಕ್ಕೊಂದು ಮರ್ಯಾದೆ. ನಾವೆಲ್ಲ ಮಲಯಾಳಂ ಎಂದರೆ ಮುಸ್ಲಿಮರ ಭಾಷೆ ಎಂದೇ ತಿಳಿದುಕೊಂಡಿದ್ದೆವು. ಹೇಗೆ ಉತ್ತರ ಕರ್ನಾಟಕದಲ್ಲಿ ಉರ್ದುವನ್ನು ಮುಸ್ಲಿಂ ಭಾಷೆ ಎಂದು ತಪ್ಪು ತಿಳಿದುಕೊಂಡಿದ್ದಾರೋ, ಹಾಗೆಯೇ ನಾವು ಮಲಯಾಳಂ ಕುರಿತಂತೆಯೂ ತಪ್ಪು ತಿಳಿದಿದ್ದೆವು. ಮಲಯಾಳಂ ಮಾತನಾಡುವವರೆಲ್ಲ ಮುಸ್ಲಿಮರು ಎಂದು ನಂಬಿದ್ದೆವು. ಹೀಗಿರುವಾಗ, ನಮ್ಮ ಉಪ್ಪಿನಂಗಡಿ ಸಮೀಪದ ಮುಸ್ಲಿಯಾರರೊಬ್ಬರು ಒಂದು ಕ್ರಾಂತಿಯನ್ನು ಮಾಡಿದರು. ಅವರು ಕೇರಳದಲ್ಲಿ ಕಲಿತು ಬಂದವರೇ ಆಗಿದ್ದರೂ, ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗವನ್ನು ಹೇಳಲು ಶುರು ಮಾಡಿದರು. ಇದು ಆಸುಪಾಸಿನಲ್ಲೆಲ್ಲ ಕುತೂಹಲಕ್ಕೆ ಕಾರಣವಾಗಿತ್ತು. ‘‘ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗವೆ?’’ ಎಂದು ಎಲ್ಲರೂ ಕಿಸ್ಸಕ್ಕನೆ ನಗುತ್ತಿದ್ದರು.
ಒಂದು ದಿನ ನಮ್ಮ ಮಸೀದಿಗೂ ಅವರನ್ನು ಕರೆಯಲಾಯಿತು. ಅವರು ಬ್ಯಾರಿ ಭಾಷೆಯಲ್ಲಿ ಮತಪ್ರಸಂಗ ಮಾಡುತ್ತಿದ್ದರೆ ನಾವೆಲ್ಲ ಕಿಸಕಿಸನೆ ನಗುತ್ತಿದ್ದೆವು. ಯಾಕೆಂದರೆ, ಆಳದಲ್ಲಿ ನಾವೆಲ್ಲ ನಾವಾಡುವ ಬ್ಯಾರಿ ಭಾಷೆಯ ಬಗ್ಗೆ ಕೀಳರಿಮೆಯಿಂದ ನರಳುತ್ತಿದ್ದೆವು. ಆದರೆ ನಿಧಾನಕ್ಕೆ ಅವರ ಪ್ರಸಂಗ ನಮಗೆಲ್ಲ ಇಷ್ಟವಾಗತೊಡಗಿತು. ಆ ಬಳಿಕ ಅವರು ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗ ನೀಡುವುದಕ್ಕಾಗಿಯೇ ಜನಪ್ರಿಯರಾದರು.

Saturday, October 29, 2011

ಈ ದೀಪಾವಳಿಯ ಎರಡು ಠುಸ್ಸ್ ಪಟಾಕಿಗಳು: ಏಳಾಂ ಅರಿವು ಮತ್ತು ರಾ-ವನ್

ಏಳಾಂ ಅರಿವು: ಮುರುಗದಾಸನಲ್ಲ, ಮೂರ್ಖದಾಸ!

ದೊಡ್ಡ ಯಶಸ್ಸು, ದೊಡ್ಡ ಪ್ರತೀಕ್ಷೆಗಳು ಕೆಲವೊಮ್ಮೆ ಸೃಜನಶೀಲ ಕಲಾವಿದನ ಕಣ್ಣಿಗೆ ಕತ್ತಲನ್ನು
ಕವಿಸುತ್ತದೆ. ‘ಘಜಿನಿ’ ಮೂಲಕ
ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಎ. ಆರ್. ಮುರುಗದಾಸ್ ಆ ಯಸಸ್ಸಿನ ಅಮಲಿನಲ್ಲಿದ್ದಾಗಲೇ ‘ಏಳಾಂ ಅರಿವು’ ಚಿತ್ರವನ್ನು ಘೋಷಿಸಿದರು. ಚಿತ್ರದ ಹೆಸರು, ವಿಭಿನ್ನ ಕತೆ, ನಾಯಕ ಪಾತ್ರದಲ್ಲಿರುವ ಸೂರ್ಯ ಇವೆಲ್ಲವೂ ಚಿತ್ರದ ಕುರಿತಂತೆ ಅಗಾಧ ನಿರೀಕ್ಷೆಯನ್ನು ಹುಟ್ಟಿಸಿ ಹಾಕಿತು. ಮಾಧ್ಯಮಗಳೂ ಸೇರಿದಂತೆ ರಾಷ್ಟ್ರಮಟ್ಟದ ಚಿತ್ರೋದ್ಯಮಿಗಳ ಕಣ್ಣು ‘ಏಳಾಂ ಅರಿವು’ ಚಿತ್ರದ ಮೇಲಿದ್ದವು ಘಜಿನಿ ಚಿತ್ರದಲ್ಲಿ ಪ್ರೇಮ ಮತ್ತು ಸೇಡನ್ನು ವಿಭಿನ್ನವಾಗಿ ನಿರೂಪಿಸಿದ ರೀತಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿತ್ತು. ಕ್ಷಣ ಕ್ಷಣಗಳನ್ನು ಕುತೂಹಲಕರವಾಗಿ ಕಟ್ಟಿಕೊಟ್ಟಿದ್ದರು ಮುರುಗದಾಸ್. ಇಂತಹ ನಿರ್ದೇಶಕರೊಬ್ಬ ‘ಬೌದ್ಧ ಸನ್ಯಾಸಿ’ಯೊಬ್ಬನ ಕತೆಯನ್ನು ಚಿತ್ರದ ಮೇಲೆ ತೋರಿಸುತ್ತೇನೆ ಎಂದಾಗ ಎಲ್ಲರ ಗಮನ ಅತ್ತ ಹರಿಯುವುದು ಸಹಜ.

‘ಏಳಾಂ ಅರಿವು’ ಚಿತ್ರವನ್ನು ನೋಡಿದಾಕ್ಷಣ ಮುರುಗದಾಸ್ ಯಶಸ್ಸಿನ ಭಾರವನ್ನು ಬೆನ್ನಲ್ಲಿ ಕಟ್ಟಿಕೊಂಡು ಏದುಸಿರು ಬಿಡುತ್ತಿರುವುದು ಸ್ಪಷ್ಟವಾಗುತ್ತದೆ
. ಅತ್ತ ಸಾಹಸ ಪ್ರಧಾನ ಚಿತ್ರವೂ ಆಗದೆ, ಇತ್ತ ಯಾವ ಯಾವ ಏಳನೇ ಅರಿವನ್ನು ಕಟ್ಟಿಕೊಡಗಲಾಗದೆ, ಕ್ಲೈಮಾಕ್ಸ್‌ನಲ್ಲಿ ತಮಿಳರ ಮೇಲಾಗುವ ದೌರ್ಜನ್ಯ ಮತ್ತು ತಮಿಳರು ಹೊಂದ ಬೇಕಾದ ಜಾಗೃತಿಯ ಕುರಿತ ರಾಜಕೀಯ ಭಾಷಣದೊಂದಿಗೆ ಚಿತ್ರ ಮುಗಿಯುತ್ತದೆ. ಈ ಭಾಷಣವನ್ನು ಕೇಳುವುದಕ್ಕಾಗಿ ಮೂರು ಗಂಟೆ ಚಿತ್ರಮಂದಿರದೊಳಗೆ ಕಳೆದೆವೇ ಎಂಬ ‘ಎಂಟನೆ ಅರಿವು’ ನಮಗಾಗುತ್ತದೆ.

1600 ವರ್ಷಗಳ ಹಿಂದೆ ತಮಿಳಿನಾಡಿನಿಂದ ಚೀನಾಕ್ಕೆ ತೆರಳಿದ ಬೋಧಿಧರ್ಮ ಎಂಬ ತಮಿಳಿಗ ಸನ್ಯಾಸಿ ಅಲ್ಲಿನ ಜನ
ರ ಸಂಕಟಗಳ ಪರಿಹಾರಕ್ಕೆ ಕಾರಣವಾಗುತ್ತಾನೆ. ಭೀಕರ ಕಾಯಿಲೆಯೊಂದು ಚೀನಾದ ಜನರ ಮೇಲೆರಗಿದಾಗ ಅವರನ್ನು ರೋಗದಿಂದ ಕಾಪಾಡುತ್ತಾನೆ. ಶತ್ರುಗಳು ಅವರ ಮೇಲೆರಗಿದಾಗ, ತನ್ನ ಕುಂಗ್‌ಫು ಮೂಲಕ ಅವರನ್ನು ಉಳಿಸುತ್ತಾನೆ. ಅಷ್ಟೇ ಅಲ್ಲ ಅವರೆಲ್ಲರಿಗೂ ಸಮರಕಲೆಯನ್ನು ಕಲಿಸಿಕೊಡುತ್ತಾನೆ. ಅವರೆಲ್ಲರ ಆರಾಧ್ಯನಾಗುತ್ತಾನೆ. ಮುಂದೆ ತನ್ನ ಕೆಲಸ ಮುಗಿಸಿ ವೃದ್ಧಾಪ್ಯ ಹತ್ತಿರವಾಗುತ್ತಿರುವಾಗ ಅವನು ಮರಳಿ ತಾಯಿ ನಾಡಿಗೆ ಹೊರಡಲು ತೀರ್ಮಾನಿಸುತ್ತಾನೆ. ಆದರೆ ಅವನು ತಮ್ಮ ಮಣ್ಣಲ್ಲೇ ಮಣ್ಣಾಗಬೇಕು. ಅದರಿಂದ ಊರಿಗೆ ಒಳ್ಳೆಯದಾಗುತ್ತದೆ ಎನ್ನುವುದು ಚೀನಾದ ಜನರ ಆಶಯ. ಆದುದರಿಂದ ಆತನ ಅನ್ನದಲ್ಲಿ ವಿಷ ಹಾಕಿ ಕೊಡುತ್ತಾರೆ. ಇದು ಬೋದಿಧರ್ಮನಿಗೆ ಗೊತ್ತಾಗುತ್ತದೆ. ಜನರ ಆಶಯದಂತೆ, ಆ ಅನ್ನವನ್ನು ತಿಂದು, ಅಲ್ಲೇ ಮಣ್ಣಾಗುತ್ತಾನೆ.

ಇದು ಆರಂಭದ 2
0 ನಿಮಿಷಗಳ ಕತೆ. ಇಷ್ಟನ್ನು ನಿರ್ದೇಶಕರು ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ. ಬೋಧಿಧರ್ಮನ ಪಾತ್ರವನ್ನು ಸೂರ್ಯಕೂಡ ಆವಾಹಿಸಿಕೊಂಡಿದ್ದಾರೆ. ಎಲ್ಲೂ ಪಾತ್ರ ಗಾಂಭೀರ್ಯ ಕಳೆದುಹೋಗದಂತೆ ಜಾಗರೂಕತೆ ವಹಿಸಿದ್ದಾರೆ. ಆದರೆ ಚಿತ್ರದ ಅಧ್ವಾನ ಆರಂಭವಾಗುವುದು ತದನಂತರ. ಕತೆ, ನಿರ್ದೇಶನ, ಸಂಕಲನ ಎಲ್ಲವೂ ಈ ಅಧ್ವಾನಗಳಿಗೆ ಸಹಕರಿಸುತ್ತದೆ. 1600 ವರ್ಷಗಳ ಬಳಿಕ ಕತೆ ಆಧುನಿಕ ರೂಪವನ್ನು ಪಡೆಯುತ್ತದೆ. ಚೀನ ದೇಶ ಭಾರತದ ಮೇಲೆ ಜೈವಿಕ ಯುದ್ಧವನ್ನು ಹೇರಲು ಬಯಸುತ್ತದೆ. ಅದಕ್ಕಾಗಿ ಡೋಂಗ್ಲೀ(ಜೋನಿ ಟ್ರಿ ಗುಯೇನ್) ಎಂಬ ಏಜೆಂಟ್‌ನನ್ನು ಆರಿಸಿಕೊಳ್ಳುತ್ತದೆ. ಈತ ಮಾರ್ಷಲ್ ಆರ್ಟ್ ಮಾತ್ರವಲ್ಲ, ಇಪ್ನಾಟಿಸಂ ಸೇರಿದಂತೆ ಹಲವು ಸಮರ ಕಲೆಗಳಲ್ಲಿ ಪ್ರವೀಣ. ‘ಆಪರೇಷನ್ ರೆಡ್’ ಎಂದು ತನ್ನ ಕಾರ್ಯಾಚರಣೆಗೆ ಚೀನ ಹೆಸರಿಡುತ್ತದೆ.

ಇತ್ತ ಭಾರತದಲ್ಲಿ ಶುಭಾ ಶ್ರೀನಿವಾಸನ್(ಶ್ರುತಿ ಹಾಸನ್) ಎಂಬ ವಿಜ್ಞಾನಿ ವಂಶವಾಹಿಯ ಕುರಿತಂತೆ ಸಂಶೋಧನೆ ನಡೆಸುತ್ತಿರುತ್ತಾಳೆ. ತನ್ನ ಅಧ್ಯಯನಕ್ಕೆ ಬೋಧಿಧರ್ಮನನ್ನೇ ಆರಿಸಿಕೊಂಡು ಆತನ ಡಿಎನ್‌ಎ ಹೊಂದಿದವರು
ಯಾರಾದರೂ ಈಗ ಅವನ ವಂಶದಲ್ಲಿದ್ದಾರೆಯೋ ಎನ್ನುವುದನ್ನು ಅನ್ವೇಷನೆ ನಡೆಸುತ್ತಿರುತ್ತಾಳೆ. ಆಗ ಅರವಿಂದ್(ಸೂರ್ಯ) ಎಂಬ ಸರ್ಕಸ್ ಉದ್ಯೋಗಿ ಆ ವಂಶದವನೆನ್ನುವುದು, ಆತ ಆ ಡಿಎನ್‌ಎ ಹೊಂದಿದ್ದಾನೆ ಎನ್ನುವುದು ಅವಳಿಗೆ ತಿಳಿಯುತ್ತದೆ. ಆತನನ್ನು ಪ್ರೀತಿಸಿದಂತೆ ನಾಟಕವಾಗಿ ತನ್ನ ಸಂಶೋಧನೆಗೆ ಅವನನ್ನು ಗಿನಿಪಿಗ್ ಆಗಿ ಬಳಸಿಕೊಳ್ಳುತ್ತಾಳೆ. ತನ್ನ ಸಂಶೋಧನೆಯನ್ನು ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೂ ಕಳುಹಿಸಿಕೊಡುತ್ತಾಳೆ.
ಅಂದ ಹಾಗೆ ಆಪರೇಶನ್ ರೆಡ್‌ನ ಉದ್ದೇಶ ಏನೆಂದರೆ ಭಾರತದಲ್ಲಿ ಮಾರಕ ರೋಗವನ್ನು ನಾಯಿಯೊಂದಕ್ಕೆ ಇಂಜೆಕ್ಟ್ ಮಾಡುವುದು. ಅದರ ಮೂಲಕ ಮಿಂಚಿನ ವೇಗದಲ್ಲಿ ಈ ರೋಗ ಹರಡತೊಡಗುತ್ತದೆ. ಈ ರೋಗಕ್ಕೆ ಮದ್ದು ಭಾರತದಲ್ಲಿ ಕಂಡು ಹಿಡಿದಿರುವುದಿಲ್ಲ. ಆದರೆ ಚೀನಾದವರು ಈ ಮದ್ದನ್ನು ಸಿದ್ಧುಪಡಿಸಿಕೊಂಡಿರುತ್ತಾರೆ. ಹೇಗೆ ಗೊತ್ತೆ? 1600 ವರ್ಷಗಳ ಹಿಂದೆ
ಚೀನಾದಲ್ಲಿ ಮಾರಕ ರೋಗ ಬಂದಿತ್ತಲ್ಲ, ಆಗ ಬೋಧಿಧರ್ಮ ಅವರನ್ನೆಲ್ಲ ವಾಸಿ ಮಾಡಿದ್ದನಲ್ಲ ಅದೇ ಮದ್ದು. ಭಾರತದಲ್ಲಿ ಲಕ್ಷಾಂತರ ಜನ ಸಾಯುವಾಗ ಈ ಮದ್ದಿಗಾಗಿ ಚೀನ ಹೇಳಿದಂತೆ ಭಾರತ ಕೇಳಬೇಕಾಗುತ್ತದೆ. ಇದು ಆಪರೇಷನ್ ರೆಡ್‌ನ ಗುರಿ.

ಇತ್ತ ಅರವಿಂದ್‌ನ ಡಿಎನ್‌ಎಯ ಮೂಲಕ ಬೋಧಿಧರ್ಮನನ್ನು ಮತ್ತೆ ತರಲು ಸಾಧ್ಯವೇ ಎನ್ನುವ ಸಂಶೋಧನೆಯನ್ನು ಶುಭಾ ಮಾಡುತ್ತಿರುವುದು ಚೀನಾಕ್ಕೆ ಸಿಟ್ಟು ತರಿಸುತ್ತದೆ. ಆಕೆಯನ್ನು ಕೊಲ್ಲುವುದಕ್ಕೆ ಏಜೆಂಟ್ ಡೋಂಗ್ಲಿ ನಿರ್ಧರಿಸುತ್ತಾನೆ. ಇದರ ಜೊತೆಗೆ ಡೋಂಗ್ಲಿ ನಾಯಿಯ ಮೂಲಕ ಹರಡಿದ ರೋಗ ತಮಿಳು ನಾಡಿನಾದ್ಯಂತ ಹರಡುತ್ತದೆ. ಇದರ ಕಾರಣ ಏನು ಎನ್ನುವುದು ಶುಭಾ ಮೂಲಕ ಅರವಿಂದ್‌ನಿಗೂ ಗೊತ್ತಾಗುತ್ತದೆ. ಶುಭಾ ಹೇಳುವ ಮಾ
ತನ್ನು ಯಾವ ವೈದ್ಯರೂ ನಂಬುತ್ತಿಲ್ಲ. ಆದುದರಿಂದ ಇವರು ಪ್ರತ್ಯೇಕ ಪ್ರಯೋಗಾಲಯದಲ್ಲಿ ಅರವಿಂದ್‌ನನ್ನು ಇಟ್ಟುಕೊಂಡು ಮತ್ತೆ ಬೋಧಿಧರ್ಮನಿಗೆ ಪುನರ್‌ಜ್ಜೀವ ಕೊಡುವ ಪ್ರಯತ್ನ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ಡೋಂಗ್ಲಿಯೂ ಇವರನ್ನು ಹುಡುಕುತ್ತಾ ಬರುತ್ತಾನೆ. ಚಿತ್ರದ ಕೊನೆಯಲ್ಲಿ ಡೋಂಗ್ಲಿ ಮತ್ತು ಬೋಧಿಧರ್ಮರ ನಡುವೆ ಮುಖಾಮುಖಿಯಾಗುತ್ತದೆ. ಕತೆ ಕೇಳಿ ಸುಸ್ತಾಯಿತೆ?

ಕನಿಷ್ಠ ತನ್ನ ಎಂದಿನ ಬಿಗಿ ನಿರೂಪಣೆ, ನಿರ್ದೇಶನದ ಮೂಲಕವಾದರೂ ಈ ಚಿತ್ರವನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆಯೋ ಎಂದರೆ ಅದೂ ಇಲ್ಲ. ಸಡಿಲವಾದ ನಿರ್ದೇಶನ. ಜಾಳು ನಿರೂಪಣೆ. ಕತೆಯ ಓಘ ಕೃತಕವಾಗಿದೆ. ಸೂರ್ಯನ ನಟನೆ ಪೇಲವವಾಗಿದೆ. ಶೃತಿ ಹಾಸನ್ ಗೊಂಬೆಯಂತೆ ನಟಿಸಿದ್ದಾರೆ. ಮುಖದಲ್ಲಿ ಭಾವನೆಗಳೇ ಇಲ್ಲ. ಅವರು ಆಡುವ ಇಂಗ್ಲಿಷ್ ತಮಿಳನ್ನು ಕೇಳಿದರೆ ಕಮಲ್ ಹಾಸನ್ ಮುಖಮುಚ್ಚಿಕೊಳ್ಳಬೇಕು. ಎಲ್ಲಕ್ಕಿಂತ ವಿಚಿತ್ರವೆಂದರೆ, ಅಂತ್ಯದಲ್ಲಿ ಚಿತ್ರವನ್ನು ಒಂದು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿರುವುದು. ಸರ್ಕಸ್‌ನಲ್ಲಿ ಸಿಬ್ಬಂದಿಯಾಗಿರುವ ಅರವಿಂದ್, ತಮಿಳರ ಮೇಲೆ ಜಗತ್ತಿನಾದ್ಯಂತ ನಡೆ
ಯುತ್ತಿರುವ ಶೋಷಣೆ, ದೌರ್ಜನ್ಯದ ಕುರಿತಂತೆ ಆಗಾಗ ಭಾಷಣ ಕೊರೆಯತೊಡಗುತ್ತಾನೆ. ತಮಿಳರು ತಮ್ಮ ಅಸ್ಮಿತೆಯನ್ನು ಮರೆತಿದ್ದಾರೆ. ತಮ್ಮ ರಕ್ತಕಣಗಳಲ್ಲಿ ಬೋಧಿಧರ್ಮರಂತಹ ಮಹಾತ್ಮರಿದ್ದಾರೆ, ಅವರಿಗೆ ಜೀವ ನೀಡಬೇಕು....ಎಂಬಿತ್ಯಾದಿಯಾಗಿ...ಹೇಳಿಕೆ ನೀಡುವುದು. ಕ್ಯಾಪ್ಟನ್ ಪ್ರಭಾಕರನ್ ಅವರ ಹತ್ಯೆಯ ಕುರಿತಂತೆಯೂ ಈತ ತನ್ನ ಸಿಟ್ಟನ್ನು ವ್ಯಕ್ತಪಡಿಸುತ್ತಾನೆ ‘‘ಒಂಬತ್ತು ದೇಶಗಳು ಸೇರಿ ಒಬ್ಬನನ್ನು ಕೊಲ್ಲುವುದು ಯುದ್ಧವಲ್ಲ, ದ್ರೋಹ’’ ಎಂಬೆಲ್ಲ ಘೋಷಣೆಗಳು ಆಗಾಗ ಕೇಳಿ ಬರುತ್ತದೆ. ಚಿತ್ರ ಹಳಿ ತಪ್ಪಿರುವುದು ನಿರ್ದೇಶಕನ ಗಮನಕ್ಕೆ ಬಂದಿದೆ. ಆದುದರಿಂದಲೇ ಚಿತ್ರ ಮನರಂಜನೆಯ ಹಳಿಯಿಂದ ಜಾರಿ, ರಾಜಕೀಯ ಉದ್ದೇಶಕ್ಕೆ ವಾಲಿಕೊಳ್ಳುತ್ತದೆ. ಚಿತ್ರದಲ್ಲಿ ಅರವಿಂದ್‌ನ ಡಿಎನ್‌ಎಯಯಿಂದ ಬೋಧಿಧರ್ಮನನ್ನು ಜಾಗೃತಿಗೊಳಿಸುವುದಂತೂ ತಮಾಷೆಯಾಗಿದೆ. ವಿಜ್ಞಾನವೋ, ಜಾದುವೋ, ಮಂತ್ರವೋ ಒಂದೂ ಅರ್ಥವಾಗುವುದಿಲ್ಲ. ಅಂತೂ ಬೋಧಿಧರ್ಮ ಮತ್ತೆ ಬಂದು ಡೋಂಗ್ಲಿಯನ್ನು ಕೊಂದು, ಮಾರಕರೋಗವನ್ನು ವಾಸಿ ಮಾಡುತ್ತಾನೆ. ಜೊತೆಗೆ, ತಮಿಳರನ್ನು ಜಾಗೃತಿಗೊಳಿಸುವ ಕೆಲಸವನ್ನೂ ಮಾಡುತ್ತಾನೆ. ಇರುವುದರಲ್ಲಿ ಚೀನಾ ನಟ ಜೋ ಟ್ರಿಯ ಡೋಂಗ್ಲಿ ಪಾತ್ರ ಫೈಟಿಂಗ್ ನೋಡುವಂತಿದೆ.
ಮುರುಗದಾಸ್ ಒಂದು ಒಳ್ಳೆಯ ಕಲ್ಪನೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದರಲ್ಲಿ ಅನುಮಾನವಿಲ್ಲ. ಆದರೆ ಯಾವುದೇ ಹೋಮ್‌ವರ್ಕ್‌ಗಳನ್ನು ಮಾಡಿಕೊಂಡಂತಿಲ್ಲ. ಅವರ ಅತಿ ಆತ್ಮವಿಶ್ವಾಸ ಅವರಿಗೆ ಕೈಕೊಟ್ಟಿದೆ. ಹ್ಯಾರಿಸ್ ಜಯರಾಜ್ ಅವರ ಸಂಗೀತದಲ್ಲೂ ಹೇಳಿಕೊಳ್ಳುವಂತಹದ್ದೇನೂ ಇಲ್ಲ. ಮುರುಗದಾಸ್ ಈ ಚಿತ್ರದ ಮೂಲಕ ಮೂರ್ಖದಾಸ್ ಆಗಿದ್ದಾರೆ.


ವೀಡಿಯೋ ಗೇಮ್ ಮಟ್ಟದಿಂದ ಮೇಲೇರದ ‘ರಾ-ವನ್’

‘ರಾ-ವನ್’ ಚಿತ್ರಕ್ಕೆ ಶಾರುಕ್ ತಂಡ ಈ ಬಗೆಯ ಪ್ರಚಾರ, ಹಣ, ವದಂತಿಗಳನ್ನು ಸುರಿಯದೇ ಇದ್ದಿದ್ದರೆ ನಾವು ಈ ಚಿ
ತ್ರವನ್ನು ಒಮ್ಮೆ ನೋಡಿ ‘ಪರವಾಗಿಲ್ಲ’ ಎಂದು ಹೇಳಿ ಮರೆತು ಬಿಡಬಹುದಿತ್ತು. ಆದರೆ ಅದಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದ್ದಾರೆ ಸ್ವತಃ ಶಾರುಕ್ ಎನ್ನುವ ಸ್ಟಾರ್ ನಟ. ಸಿನಿಮಾವೊಂದನ್ನು ಪ್ರಚಾರದ ಮೂಲಕವೇ ಗೆಲ್ಲಿಸಲು ಮುಂದಾದರೆ, ಒಂದು ಚಿತ್ರದ ತೂಕಕ್ಕಿಂತ ಭಾರವಾದ ನಿರೀಕ್ಷೆಗಳನ್ನು, ವದಂತಿಗಳನ್ನು ಮಾಧ್ಯಮಗಳ ಮೂಲಕ ಬಿತ್ತಿದರೆ ಏನಾಗಬಹುದೇ ಅದೇ ‘ರಾ-ವನ್’ಗೂ ಆಗಿದೆ. ಒಂದು ವೀಡಿಯೋ ಗೇಮ್‌ಗೆ ಸರಿಗಟ್ಟಬಹುದಾದ ಚಿತ್ರಕ್ಕೆ ಈ ಪರಿಯಾದ ಪ್ರಚಾರಕವನ್ನು ಶಾರುಕ್ ಯಾಕೆ ಕೊಟ್ಟರು? ಎನ್ನುವುದೇ ಒಂದು ದೊಡ್ಡ ಪ್ರಶ್ನೆ. ಸ್ಟಾಂಪ್ ಸೈಝ್‌ನ ಫೋಟೋಗೆ ಆಕಾಶದೆತ್ತರದ ಚೌಕಟ್ಟು ನಿರ್ಮಿಸಿದಂತಿದೆ, ರಾ-ವನ್ ಪ್ರಚಾರಕ್ಕಾಗಿ ಶಾರುಕ್ ಸುರಿದ ಹಣ.
ಈಗಾಗಲೇ ರಜನೀಕಾಂತ್ ‘ಎಂದಿರನ್’ ಅಥವಾ ‘ರೋಬೊಟ್’ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ರಜನೀಕಾಂತ್ ಅವರ ಚಿಟ್ಟಿ ರೋಬೋಟ್ ಎಲ್ಲರ ಮೆಚ್ಚುಗೆಯನ್ನು ಗಳಿಸಿತ್ತು. ಏಕಕಾಲದಲ್ಲಿ ಒಳಿತು-ಕೆಡುಕಿನ ಪಾತ್ರಗಳನ್ನು ಆವಾಹಿಸಿಕೊಂಡ ಚಿಟ್ಟಿ, ತನ್ಮೂಲಕ ಮನುಷ್ಯ ಜಗತ್ತಿಗೆ ಹೃದಯಸ್ಪರ್ಶಿಸಂದೇಶವೊಂದನ್ನು ನೀಡುತ್ತಾನೆ. ಪ್ರೀತಿಗಾಗಿ ಹಪಹಪಿಸುವ ಯಂತ್ರವೊಂದು, ಅಂತಿಮವಾಗಿ ಅದನ್ನು ದಕ್ಕಿಸುವುದಕ್ಕಾಗಿ ಮನುಷ್ಯನ ಮೂಲಕವೇ ವಿಲನ್ ಆಗಿ ಪರಿವರ್ತನೆ ಹೊಂದುತ್ತದೆ. ಪ್ರೀತಿಗಾಗಿ ಮನುಷ್ಯನ ಜೊತೆಗೆ ಸ್ಪರ್ಧೆಗೆ ನಿಂತು ವಿಫಲವಾಗುತ್ತದೆ. ಅಂತಿಮವಾಗಿ, ತನ್ನನ್ನು ತಾನೇ ನ್ಯಾಯಾಲಯದಲ್ಲಿ ಕೊಂದುಕೊಳ್ಳುತ್ತದೆ. ಹಣ, ಸಾಹಸ ಮತ್ತು ಹೃದಯಸ್ಪರ್ಶಿ ಕತೆ. ಇದನ್ನು ಬೆಸೆದ ಸೂಪರ್‌ಸ್ಟಾರ್ ರಜನೀಕಾಂತ್. ರೋಬೊಟ್‌ನ್ನು ಮೆಚ್ಚಲು ಇದಕ್ಕಿಂತ ಹೆಚ್ಚೇನು ಬೇಕು?

ಶಾರುಕ್‌ಖಾನ್ ಮಾಡಿದ ಮೊದಲ ತಪ್ಪು, ರಜನೀಕಾಂತ್ ಅವರ ರೋಬೊಟ್ ಜೊತೆಗೆ ‘ರಾ-ವನ್’ನ್ನು ಸ್ಪರ್ಧೆಗಿಳಿಸಿದ್ದು. ಇದು ಎರಡು ಸೂಪರ್ ಸ್ಟಾರ್‌ಗಳ, ಸೂಪರ್ ಪವರ್‌ಗಳ ಜಂಗೀಕುಸ್ತಿಯಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾ-ವನ್ ಮೂಲಕ ಜನರು ಭಾರೀ ದೊಡ್ಡದನ್ನೇ ನಿರೀಕ್ಷಿಸಿದರು. ಅಂದರೆ ರೋಬೋಟ್‌ಗಿಂತಲ್ಲೂ ಸಮರ್ಥನಾದ ಸೂಪರ್‌ಮ್ಯಾನ್‌ನ ನಿರೀಕ್ಷೆಯಲ್ಲಿದ್ದರು. ಆದರೆ ಗೋಮಟನ ನಿರೀಕ್ಷೆಯಲ್ಲಿರುವ ಜನರ ಕೈಗೆ ವೀಡಿಯೋ ಗೇಮೊಂದರ ವಿಸಿಡಿಯನ್ನು ನೀಡಿ ಕೈತೊಳೆದುಕೊಂಡಿದ್ದಾರೆ ಶಾರುಕ್. ಕತೆಯಲ್ಲಾಗಲಿ, ಪಾತ್ರಗಳಲ್ಲಾಗಲಿ ಜೀವಂತಿಕೆಯಿಲ್ಲ. ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದಾದ ಕತೆ. ನಾಯಕ, ಖಳನಾಯಕ. ಇವರ ಮಧ್ಯೆ ಒಂದು ಮಗು. ರಾ-ವನ್ ಅರ್ಥಾತ್ ರಾವಣ್ ಎಂಬ ಖಳನಾಯಕನಿಂದ ಈ ಮಗುವನ್ನು ರಕ್ಷಿಸುವ ಸೂಪರ್ ಪವರ್ ಉಳ್ಳ ಜಿ-ವನ್ ಅರ್ಥಾತ್ ಜೀವನ್.
ಶೇಖರ್ ಸುಬ್ರಹ್ಮಣ್ಯನ್ (ಶಾರುಕ್‌ಖಾನ್) ತನ್ನ ಮಗ ಪ್ರತೀಕ್‌ನಿಗಾಗಿಯೇ ಒಂದು ವಿಶೇಷ ವೀಡಿಯೋ ಗೇಮ್‌ನ್ನು ಮಾಡುವುದಕ್ಕೆ ಹೊರಡುತ್ತಾನೆ. ಮಗನಿಗೆ ನಾಯಕನಿಗಿಂತ ಖಳನಾಯಕನ ಮೇಲೆಯೇ ಇಷ್ಟ. ಆದುದರಿಂದ ಸೂಪರ್ ಪವರ್ ಉಳ್ಳ ಖಳನಾಯಕ ‘ರಾ-ವನ್’ನ್ನು ಸಿದ್ಧಪಡಿಸಲು ಮುಂದಾಗುತ್ತಾನೆ. ಜೊತೆಗೆ ಅವನನ್ನು ಎದುರಿಸಲು ಜಿ-ವನ್‌ನ್ನು ಕೂಡ. ಆದರೆ ರಾ-ವನ್ ಶೇಖರ್‌ನ ಕೈ ಮೀರುತ್ತದೆ. ಅದರ ಬಿಡುಗಡೆಯ ಸಮಾರಂಭದ ವೇಳೆ, ಬಾಲಕ ಪ್ರತೀಕ್ ರಾ-ವನ್ ಜೊತೆ ಆಡುವುದಕ್ಕೆ ಮುಂದಾಗುತ್ತಾನೆ. ಒಂದು ಹಂತದಲ್ಲಿ ಪ್ರತೀಕ್ ಆಟವನ್ನು ನಿಲ್ಲಿಸ ಬಯಸಿದರೂ ರಾ-ವನ್ ಆಟವನ್ನು ನಿಲ್ಲಿಸುವುದಕ್ಕೆ ಒಪ್ಪುವುದಿಲ್ಲ. ಅದು ಪ್ರತೀಕ್‌ನನ್ನು ಕೊಲ್ಲುವುದಕ್ಕೆ ನಿರ್ಧರಿಸುತ್ತದೆ. ಅಂದರೆ ಆಟದಿಂದ ಹೊರಗೆ ಪ್ರತೀಕ್‌ನನ್ನು ಹುಡುಕಿಕೊಂಡು ಬರುತ್ತದೆ. ಈ ಹಂತದಲ್ಲಿ ಪ್ರತೀಕ್‌ನ ತಂದೆ ಶೇಖರ್‌ಸುಬ್ರಹ್ಮಣ್ಯನನ್ನು ಕೊಂದು ಹಾಕುತ್ತದೆ. ಅಂತಿಮವಾಗಿ ರಾ-ವನ್ ವಿರುದ್ಧ ಜಿ-ವನ್‌ನನ್ನು ಸಿದ್ಧಪಡಿಸಬೇಕಾಗುತ್ತದೆ. ಜೀ-ವನ್ ಪ್ರತೀಕ್‌ನನ್ನು ರಕ್ಷಿಸಲು ಗೇಮ್ಸ್‌ನಿಂದ ಹೊರ ಬರುತ್ತಾನೆ. ಉಳಿದಂತೆ ಒಳಿತು-ಕೆಡುಕುಗಳ ನಡುವೆ ತಿಕ್ಕಾಟ. ಅಂತಿಮವಾಗಿ ಜಿ-ವನ್ ರಾವಣ್‌ನನ್ನು ಕೊಲ್ಲಲೇ ಬೇಕಲ್ಲ?

ದೃಶ್ಯ, ದೃಶ್ಯಗಳಲ್ಲೂ ವಿಶೇಷವನ್ನು ಅರಸಿಹೋದ ಪ್ರೇಕ್ಷಕರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಯಾಕೆಂದರೆ, ರಾ-ವನ್ ಆಗಲಿ, ಜೀ-ವನ್ ಆಗಲಿ ಎಲ್ಲೂ ರಜನೀಕಾಂತ್ ಅವರ ರೋಬೊಟ್ ಚಿಟ್ಟಿಯನ್ನು ಸರಿಗಟ್ಟುವುದಿಲ್ಲ. ಎಂದಿರನ್‌ನ ಅರ್ಧಕ್ಕೂ ಬರುವುದಿಲ್ಲ ಶಾರುಕ್ ಅವರ ‘ರಾ-ವನ್’. ಇಲ್ಲಿ ಪಾತ್ರಗಳಿಗೆ ಬೆಳೆಯುವುದಕ್ಕೆ ಅವಕಾಶವೇ ಇಲ್ಲ. ಈ ಕಾರಣದಿಂದಲೇ ಇಡೀ ಚಿತ್ರ ವೀಡಿಯೋ ಗೇಮ್ ಮಟ್ಟಕ್ಕಿಂತ ಮೇಲೇರುವುದಿಲ್ಲ. ಕರೀನಾ ಕಪೂರ್, ಶಾರುಕ್ ಖಾನ್ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ ಎನ್ನುವುದನ್ನಷ್ಟೇ ಹೇಳಬಹುದು.

ಸಾಹಸ ದೃಶ್ಯಗಳ ಮೂಲಕವಾದರೂ ಗಮನ ಸೆಳೆಯುತ್ತದೆಯೋ ಎಂದರೆ ಅದೂ ಇಲ್ಲ. ಕ್ಲೈಮಾಕ್ಸ್ ರೈಲಿನ ಸಾಹಸ ದೃಶ್ಯ, ಛತ್ರಪತಿ ಟರ್ಮಿನಸ್ ಕುಸಿಯುವ ದೃಶ್ಯ ಒಂದಿಷ್ಟು ಪರಿಣಾಮಕಾರಿಯಾಗಿದೆ. ಅನುಭವ್ ಸಿನ್ಹಾ ಅವರಂತಹ ಅನನುಭವಿ ನಿರ್ದೇಶಕನ ಕೈಯಲ್ಲಿ ವಿಶೇಷ ಸ್ಕೋಪ್ ಇಲ್ಲದ ಕತೆಯೊಂದನ್ನು ಕೊಟ್ಟರೆ ಏನಾಗಬೇಕೇ ಅದೇ ಆಗಿದೆ. ರಾ-ವನ್ ಈ ದೀಪಾವಳಿಗೆ ಶಾರುಕ್ ಹಾರಿಸಿ ಬಿಟ್ಟ ಠುಸ್ ಪಟಾಕಿ.