Saturday, December 17, 2016

ಚಿಂದಿ ನೋಟು ಇನ್ನಷ್ಟು

1
ಆತನಿಗೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಬಸ್ ಚಾರ್ಜಿಗೆ ಅರ್ಜೆಂಟಾಗಿ ದುಡ್ಡು ಬೇಕಾಗಿತ್ತು. ಎಟಿಎಂ ಹುಡುಕುತ್ತಾ ಹೊರಟ. ಎರಡು ಮೂರು ಎಟಿಎಂ ಬರಿದಾಗಿತ್ತು. ಯಾರೋ ಹೇಳಿದರು ಒಂದು ಕಿಲೋ ಮೀಟರ್ ದೂರದಲ್ಲಿರುವ ಎಟಿಎಂ ನಲ್ಲಿ ಈಗಷ್ಟೇ ದುಡ್ಡು ಹಾಕಿದ್ದಾರೆ. ಸರಿ ಅಲ್ಲಿಗೆ ಧಾವಿಸಿದ. ಅಲ್ಲಿ ತಲುಪುವಷ್ಟರಲ್ಲಿ ದುಡ್ಡು ಮುಗಿದಿತ್ತು. ಸ್ವಲ್ಪ ದೂರದಲ್ಲಿ ಮತ್ತೊಂದು ಎಟಿಎಂ ಕಂಡಿತು. ನೋಡಿದರೆ ನೋ ಕ್ಯಾಶ್ ಬೋರ್ಡ್. ಮಗದೊಂದೆಡೆ ಮೈಲುದ್ದದ ಕ್ಯೂ. ಯಾರೋ ಹೇಳಿದರು ಮುಂದೆ ಇನ್ನೊಂದು ಎಟಿಎಂ ಇದೆ. ಸರಿ, ಮುಂದಕ್ಕೆ ಸಾಗಿದ. ಮುಂದಕ್ಕೆ ... ಮುಂದಕ್ಕೆ ... ಮುಂದಕ್ಕೆ ... ಹೀಗೆ ಸಾಗುತ್ತ ಸಾಗುತ್ತ ಸಾಗುತ್ತ ಕೊನೆಗೆ ತಲೆ ಎತ್ತಿ ನೋಡುತ್ತಾನೆ ಮೆಜೆಸ್ಟಿಕ್ ಕಾಣುತ್ತಿದೆ. ಆತ ಬೆಂಗಳೂರು ತಲುಪಿಯೇ ಬಿಟ್ಟಿದ್ದ. ಬಸ್ ಚಾರ್ಜ್ ಉಳಿಯಿತು.
2
ಮೋದಿ ಪ್ಲಾಸ್ಟಿಕ್ ಕಾರ್ಡ್ ಬಳಸಿ ಎಂದು ಕರೆ ಕೊಟ್ಟಿದ್ದು ಕೇಳಿ 
ಇಲ್ಲೊಬ್ಬ ಬಡ ಮಹಿಳೆ ಪ್ಲಾಸ್ಟಿಕ್ ಅಂಗಡಿಗೆ ಹೋಗಿ "ಸ್ವಾಮೀ ಬ್ಯಾಂಕ್ ನಾಗೇ ಅದೇನೋ ಪ್ಲಾಸ್ಟಿಕ್ ಕಾರ್ಡ್ ಬಳಸ್ತಾರಂತೆ. ಅದೊಂದು ಹತ್ತು ಪ್ಲಾಸ್ಟಿಕ್ ಕಾರ್ಡ್ ಕೊಡ್ರಿ" ಎಂದು ಕೇಳಿದಳು. 
ಅಂಗಡಿಯಾತ ಗೋಡೆಯಲ್ಲಿದ್ದ ಮೋದಿ ಫೋಟೋಗೆ ಕೈ ಮುಗಿದ.
ಇಂದು ಕಚೇರಿಗೆ ಬರುತ್ತಿರುವಾಗ ಇನ್ನೊಬ್ಬ ರಿಕ್ಷಾ ಚಾಲಕ ನನ್ನ ಹೆಗಲೇರಿದ್ದ. 
"ಏನ್ ಸಾರ್, ದೇಶದ ಕತೆ ಹೀಗಾಯ್ತಲ್ಲ ?" ಎಂದು ಕೇಳಿದ. 
"ನೋಡಿ, ಸಹನೆ ತೆಗೆದು ಕೊಳ್ಳಿ. ಒಂದು ವಾರ ಮೊದಲು ಇದ್ದ ಕಷ್ಟ ಈಗ ಇದೆಯಾ ? ನಿಧಾನಕ್ಕೆ ಎಲ್ಲ ಸರಿ ಆಗತ್ತೆ" ಎಂದೆ "ಸಾರ್ ನಿಮಗೊಂದು ಕತೆ ಹೇಳುತ್ತೇನೆ, ಕೇಳುತ್ತೀರಾ?" ಅಂದ. "ಹೇಳಿ ಹೇಳಿ" ಎಂದು ಅನುಮತಿ ಕೊಟ್ಟೆ. ರಿಕ್ಷಾ ಮುಂದೆ ಹೋಗುತ್ತಿದ್ದ ಹಾಗೆ ಅವನು ಕತೆ ಹೇಳ ತೊಡಗಿದ. 
"ಒಬ್ಬ ಕ್ರೂರ ಜಮೀನ್ದಾರ ಇದ್ದ. ತನ್ನ ಕೆಲಸದವನಿಗೆ ಚಾಟಿಯಲ್ಲಿ ಹೊಡೆದು ಕೆಲಸ ಮಾಡಿಸುತ್ತಿದ್ದ. ಹೀಗೆ ಇರುವಾಗ ಒಂದು ದಿನ ಆ ದಾರಿಯಲ್ಲಿ ಒಬ್ಬ ಸ್ವಾಮೀಜಿ ಹೋಗುತ್ತಿದ್ದರು. ಅವರು ಜಮೀನ್ದಾರನ ಕ್ರೌರ್ಯ ನೋಡಿದರು. ಜಮೀನ್ದಾರ ಹೋದ ಬಳಿಕ ಕೆಲಸದಾಳುವಿನಲ್ಲಿ ಕೇಳಿದರು "ಅಯ್ಯ ಇಷ್ಟು ಕ್ರೂರವಾಗಿ ಥಳಿಸುತ್ತಿದ್ದರೂ ಸಹನೆಯಿಂದ ಇದ್ದೀಯಲ್ಲ. ಪ್ರತಿಭಟಿಸಲಾಗುದಿಲ್ಲವೇ ?"ಕೆಲಸದಾಳು ವಿನೀತನಾಗಿ ಹೇಳಿದ "ಸ್ವಾಮೀಜಿ, ನನ್ನ ಒಡೆಯ ನಿಧಾನಕ್ಕೆ ಒಳ್ಳೆಯವನಾಗುತ್ತಿದ್ದಾನೆ. ಈ ಹಿಂದೆ ಅತ್ಯಂತ ಜೋರಾಗಿ ಥಳಿಸುತ್ತಿದ್ದ. ಈಗ ಸ್ವಲ್ಪ ಮೆದುವಾಗಿ ಥಳಿಸಲು ಆರಂಭಿಸಿದ್ದಾನೆ. ಮುಂದೆ ಇನ್ನಷ್ಟು ಮೆದುವಾಗಿ ಥಳಿಸಬಹುದು. ನಿಲ್ಲಿಸಲೂ ಬಹುದು"ಕೆಲಸದಾಳುವಿನ ಉತ್ತರಕ್ಕೆ ಸ್ವಾಮೀಜಿ ನಕ್ಕರು "ಎಲವೋ ಮೂರ್ಖ, ನಿನ್ನ ಒಡೆಯ ಮೆದುವಾಗಿ ಥಳಿಸುತ್ತಿಲ್ಲ. ನಿನ್ನ ದೇಹ ನಿಧಾನಕ್ಕೆ ಅದನ್ನು ಸಹಿಸಲು ಕಲಿಯುತ್ತಿದ್ದೆ.ಚಾಟಿ ಏಟಿಗೆ ನಿನ್ನ ದೇಹ ಒಗ್ಗ ತೊಡಗಿದೆ, ಅಷ್ಟೇ ... "
ರಿಕ್ಷಾ ಚಾಲಕ ತನ್ನ ಕತೆ ನಿಲ್ಲಿಸಿ ನನ್ನ ಕಡೆ ತಿರುಗಿ ಹೇಳಿದ
"ಯಾವುದೂ ಸರಿಯಾಗಿಲ್ಲ, ಹಿಂದಿನ ಹಾಗೆಯೇ ಕಷ್ಟ ಇದೆ ಸಾರ್. ಅಭ್ಯಾಸ ಆಗ್ತಾ ಇದೆ... ಅಥವಾ ಅಭ್ಯಾಸ ಮಾಡ್ಕೋ ಬೇಕಾಗಿದೆ ... "

Thursday, December 15, 2016

ನವೆಂಬರ್ ೯

ನಾನು ಕಾರ್ಡ್ ಮೂಲಕ ವ್ಯವಹರಿಸ ಬಲ್ಲೆ 
ಕ್ಯಾಶ್ ಲೆಸ್ ಎಂದು ಮಾಲ್ ಗಳಲ್ಲಿ, ಸೂಪರ್ ಬಜಾರ್ ಗಳಲ್ಲಿ ಕ್ಯೂ ನಿಂತು
ನನ್ನ ದೇಶ ಪ್ರೇಮ ಸಾಬೀತು ಮಾಡ ಬಲ್ಲೆ ... 
ಆದರೆ ಮಾಲ್ ಗಳಲ್ಲಿ ಮೀನು, ತರಕಾರಿ ಖರೀದಿಸಿ 
ಬ್ರಾಂಡಡ್ ಚೀಲಗಳಲ್ಲಿ ತುಂಬಿಸಿ ಬಿಂಕದಿಂದ ಮನೆ ಕಡೆ ಸಾಗುವಾಗ 
ರಸ್ತೆ ಬದಿಯಲ್ಲಿ ಮೀನಿನ ಬುಟ್ಟಿ ಜೊತೆ ಬಿಸಿಲಲ್ಲಿ ಒಣಗುತ್ತಿರುವ ಅಕ್ಕಮ್ಮ
ತರಕಾರಿ ಅಂಗಡಿಯ ಅಣ್ಣಪ್ಪ 
ದಿನಸಿ ಅಂಗಡಿಯ ಶೆಟ್ಟರು, 
ಹಣ್ಣು ಮಾರುವ ಪಿಂಟೋ 
ಕಬ್ಬಿನ ಹಾಲು ಮಾರುವ ಕಿಟ್ಟಪ್ಪ 
ಟೀ ಸ್ಟಾಲ್ ನ ಅಬ್ಬೂ ಕಾಕಾ
ಇವರೆಲ್ಲರ ಕಣ್ಣ ನೋಟಗಳು
ನೇರ ನನ್ನ ಹೃದಯವನ್ನೇ ಇರಿದಂತಾಗುತ್ತದೆ  
ನವೆಂಬರ್ ೯ರಂದು ನನ್ನ ದೇಶದಿಂದ 
ಗಡಿಪಾರು ಮಾಡಲ್ಪಟ್ಟ ಪರದೇಶಿಗಳಂತೆ 
ಇವರು ನನ್ನ ಬೀದಿಗಳಲ್ಲಿ ಧೂಳು ತಿನ್ನುತ್ತಾ 
ತಮ್ಮ ಪ್ರಧಾನಿಯ ಭಾಷಣಗಳಿಂದ ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ
ನವೆಂಬರ್ ೯ರಿಂದ ಇವರೆಲ್ಲ ಒಂದು ದೇಶವಾಗಿ ಸಿಡಿದು ನಿಂತಿದ್ದಾರೆ 
ನನಗೆ ಸ್ಪಷ್ಟವಾಗುತ್ತಿದೆ 
ಅದು ನನ್ನ ದೇಶವಂತೂ ಅಲ್ಲವೇ ಅಲ್ಲ... 
Saturday, December 3, 2016

ನೋಟಿನಲ್ಲೂ ಇರುವೆ

1
ವೃದ್ಧಾಶ್ರಮದಲ್ಲಿರುವ 
ಹಳೆ ನೋಟುಗಳಿಗೆ 
ಬಂದಿದೆ ಬೆಲೆ
ಮಗ ಬಂದ 
ಎಂದು ಸಂಭ್ರಮಿಸುತ್ತ 
ಹಣ್ಣೆಲೆ ಕಾರು ಹತ್ತಿತು

ಕಾರಿನಿಂದ ಇಳಿದಾಗ 
ಹಳೆನೋಟಿಗೆ ಹೊಳೆಯಿತು 
ಮನೆಯಂತೂ ಅಲ್ಲ 
ಸಾಲು ಸಾಲು ಸವೆದ ಜೀವಗಳು 
ಪಕ್ಕದಲ್ಲೇ ನಿಂತ
ಮಕ್ಕಳ ಕೈಯಲ್ಲಿ ಹಳೆ ನೋಟುಗಳು 

ತಾಯಿ - ಮಗನ ವಿನಿಮಯ 
ಮುಗಿಯಿತು 
ಹಳೆ ನೋಟು 
ಮತ್ತೆ ವೃದ್ಧಾಶ್ರಮ ಸೇರಿತು
2
ಬಾಕಿ ಇಟ್ಟ ಕೂಲಿಯನ್ನೆಲ್ಲ 
ಧಣಿ ಒಟ್ಟಿಗೇ ಕೊಟ್ಟಾಗ 
ಅವನ ಕರುಣೆಗೆ ಚೋಮ ಕಣ್ಣೀರಾದ 
ದಿನಸಿಗೆಂದು ಅಂಗಡಿಗೆ ಹೋದಾಗ 
ದಣಿಯ ಕರುಣೆಯ ಗುಟ್ಟು ಗೊತ್ತಾಯಿತು 
ನೋಟಿನಲ್ಲಿರುವ ಗಾಂಧಿ ಯಾಕೋ ಅಳುತ್ತಿದ್ದ
3
ಬೆಳ್ಳಬೆಳಗ್ಗೆ ಎದ್ದು ನೋಡುತ್ತೇನೆ 
ಸಾಲು ಸಾಲಾಗಿ ಸಾಗುತ್ತಿವೆ ಇರುವೆಗಳು 
ಬಹುಶಃ ಬ್ಯಾಂಕಿಗೆ ಹೊರಟಿರಬೇಕು
4
೨೦೦೦- ೫೦೦ ರೂಗಳ ನೋಟು 
ನಿಷೇಧದ ಲವಲೇಶ ಆತಂಕವಿಲ್ಲದೆ 
ಇರುವೆ, ಚಿಟ್ಟೆ, ಜಿಂಕೆ, ಹುಲಿ 
ಲಕ್ಷಾಂತರ ಜೀವಚರಗಳು 
ಬದುಕುತ್ತಿರೋದೇ ಮನುಷ್ಯನ ಪಾಲಿಗೆ 
ಇಂದಿನ ಸೋಜಿಗ
5
ಮಗುವಿನ ಕೈಗೆ
ಒಂದು ಸಾವಿರ ರೂ. ನೋಟುಗಳ 
ಕಟ್ಟು ಕೊಟ್ಟ ತಂದೆ 
ಅದರ ಕೈಯಲ್ಲಿದ್ದ ಪಿಗ್ಮಿ ಡಬ್ಬ ಒಡೆದು 
ನಾಣ್ಯ ಎಣಿಸುತ್ತಿದ್ದಾನೆ
6
ಸದಾ ನನ್ನ ಮುಂದೆ 
ಸಾವಿರದ ನೋಟುಗಳನ್ನು ಎಣಿಸುತ್ತಾ 
ಪರೋಕ್ಷವಾಗಿ ಹಂಗಿಸುವ 
ಗೆಳೆಯನ ಮುಂದೆ 
ಇದೇ ಮೊದಲ ಬಾರಿ, 
ನನ್ನಲ್ಲಿರುವ ನೂರರ 
ಆ ಸವೆದ ನೋಟೊಂದನ್ನು
ಹೆಮ್ಮೆಯಿಂದ ಹೊರ ತೆಗೆದೆ.
7
ಮದುವೆ ಖರ್ಚಿಗೆಂದು ತಂದಿಟ್ಟಿದ್ದ 
ಸಾವಿರದ ಕಟ್ಟುಗಳನ್ನು 
ತೋರಣಗಳಿಗೆ ಕಟ್ಟಿ 
ಮದುವೆ ಮನೆಯನ್ನು 
ಶೃಂಗರಿಸಲಾಗಿದೆ
8
ಕಪ್ಪು ಹಣದ ದೊರೆಗಳೆಲ್ಲ 
ನೋಟು ನಿಷೇಧಗಳನ್ನು 
ಸ್ವಾಗತಿಸುತ್ತಿದ್ದಾರೆ 
ಶ್ರೀ ಸಾಮಾನ್ಯ ಬಿಸಿಲಲ್ಲಿ 
ಬ್ಯಾಂಕಿನ ಮುಂದೆ ನಿಂತು 
ಕಪ್ಪಾಗುತ್ತಿದ್ದಾನೆ