Saturday, December 12, 2015

ದೀಪದ ಸನ್ನೆಗಾಗಿ ಕಾಯುತ್ತಾ....

ನನ್ನ "ಅಮ್ಮ ಹಚ್ಚಿದ ಒಲೆ" ಕೃತಿಯ ಕುರಿತಂತೆ ಪ್ರೀತಿಯ ಕವಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ 

ಪ್ರೀತಿಯ ಬಶೀರ್,
ಎಷ್ಟೋ ವರುಷಗಳ ಹಿಂದೆ ಮಾಟುಂಗಾದ ಕನ್ನಡ ಸಂಘದ ಪುಟ್ಟ ಕೋಣೆಯಲ್ಲಿ ಪುಸ್ತಕಗಳ ಕಪಾಟುಗಳ ನಡುವೆ ಪುಸ್ತಕಗಳಂತೆ ಕೂತ ಹತ್ತಿಪ್ಪತ್ತು ಆಪ್ತರ ನಡುವೆ ನೀನು ಕವಿತೆ ಓದಿದ್ದು ನನ್ನ ಉಜ್ವಲ ನೆನಪುಗಳಲ್ಲಿ ಒಂದು. ಭೋರ್ಗರೆಯುವ ಮಳೆಗಾಳಿಯ ನಡುವೆ ಹೆಮ್ಮರವೊಂದರಲ್ಲಿ ಸಿಕ್ಕಿಕೊಂಡು ಒದ್ದಾಡುವ ಗಾಳಿಪಟದ ಚಿತ್ರಣವಿತ್ತು ಅದರಲ್ಲಿ. ಊರಿನಿಂದ ತಂಗಿ ಬರೆದ ಪತ್ರದ ಒಕ್ಕಣಿಕೆಯಿತ್ತು. ನಂತರ ಬಂದ ನಿನ್ನ ಕವನ ಸಂಕಲನಕ್ಕೆ ನಿನ್ನದೇ ತೀವ್ರ ಸಾಲುಗಳನ್ನೇ ಪೋಣಿಸಿ ಹಿನ್ನುಡಿಯ ರೂಪದಲ್ಲಿ ಶುಭಾಶಯ ಹೇಳಿದ್ದೆ. ಅಮ್ಮ ಹಚ್ಚಿದ ಒಲೆೆಯ ಈ ಕವಿತೆಗಳೂ ಸಹ ಅದೇ ಕಾವಿನಲ್ಲಿ ನನ್ನನ್ನು ಆವರಿಸಿಕೊಂಡಿದೆ.
ಅಮ್ಮ ಹಚ್ಚಿದ ಒಲೆಯಿಂದಲೇ ಎಲ್ಲ ಜೀವಗಳ ಪಯಣದ ಶುರುವಾತು. ಅಕ್ಷರ ಕೇಂದ್ರವೇ ಆ ಒಲೆ. ಆ ಕಾವಿನ ವಿಸ್ತರಣೆಯೇ ನಮ್ಮೆಲ್ಲರ ವಿಕಾಸ. ಸ್ನಾನಕ್ಕೆ ನೀರೂ ಅಲ್ಲೇ ಕುದಿಯಬೇಕು, ಒಣಮೀನೂ ಅಲ್ಲೇ ಸುಡಬೇಕು, ಹಬ್ಬದ ಖೀರೂ ಅಲ್ಲೇ ಉಕ್ಕಬೇಕು...ಮಗುವಿನ ಹಾಲುಗೆನ್ನೆಯ ದಿಟ್ಟಿ ಬೊಟ್ಟಿನ ಕಪ್ಪೂ ಅಲ್ಲಿಂದಲೇ ಬರಬೇಕು... ರೂಪಕ ಎಂದು ಕರೆದರೆ ಜುಜುಬಿಯಾಗಿ ಬಿಡಬಹುದಾದ ಒಂದು ಪರಮ ಮೌಲ್ಯ ಈ ಒಲೆ. ಮತ್ತು ಅದರ ಹಿಂದಿನ ಮಸಿ ಹಿಡಿದ ಗೋಡೆ. ಸಾಮಾಜಿಕ ಸಂಬಂಧಗಳೆಲ್ಲ ವ್ಯಸ್ತಗೊಂಡಿರುವ, ವ್ಯಗ್ರಗೊಂಡಿರುವ ಈ ನಮ್ಮ ಸಮಯದಲ್ಲಿ ಎಲ್ಲ ಗಾಯಗಳನ್ನೂ ಮಾಯಿಸಬಲ್ಲ ಏಕಮೇವ ಮದ್ದು ಪ್ರತಿ ಜೀವಿಯಲ್ಲಿರಬೇಕಾದ ತಾಯ್ತನ. ನಿನ್ನ ಈ ಎಲ್ಲ ರಚನೆಗಳೂ ಈ ತಾಯ್ತನವೆಂಬ ಆವರಣಕ್ಕಾಗಿನ ತೀವ್ರ ತುಡಿತಗಳಾಗಿವೆ. ಅವುಗಳ ಅಮೃತ ಹಸ್ತ ಸಹಜೀವಗಳನ್ನು ಸ್ಪರ್ಶಿಸಲು ಬೆಳಕಿನಂತೆ ಚಾಚುತ್ತಿವೆ.
ನಿನ್ನ ವೈಖರಿ ಚತುರೋಕ್ತಿಯದು. ಅನುರಣನಶೀಲವಾದ ಪುಟ್ಟ ಪುಟ್ಟ ಚಿತ್ರಿಕೆಗಳ ಮೂಲಕ ಈ ರಚನೆಗಳು ಜೀವಂತವಾದ ಒಂದು ಆವರಣವನ್ನು ಕಲ್ಪಿಸುತ್ತವೆ.
ಒಳಗೆ ಅಮ್ಮ
ಅವಳ ನಿಟ್ಟುಸಿರಿನಂತೆ
ದೋಸೆ ಹುಯ್ಯುವ ಸದ್ದು....

ಗೋಡೆಯ ಮೇಲೆ ಹೊಸ ಬಟ್ಟೆ
ಹೆಣದಂತೆ ತೂಗುತ್ತಿತ್ತು....

..ತೊಟ್ಟು ಕಳಚಿ ಬಿದ್ದ ಕಂಬನಿ...

ಇಂಥ ಚಿತ್ರಗಳು ವಾಚ್ಯಾರ್ಥ ತಿಳಿಯುವ ಮೊದಲೇ ಒಂದು ಆಳವಾದ ಅನುಭವವನ್ನು ಉಕ್ಕಿಸಬಲ್ಲವು. ಅದು ಹಾಗಾದಾಗಲೇ ಕವಿತೆ. ಹಾಗಂತ ಇದು ಹುಸಿ ರಮ್ಯತೆಯಿಂದ ಆಪ್ತವಾಗುವ ಭಾವುಕತೆಯಲ್ಲ. ಏಕೆಂದರೆ ಚಿಂತನೆಯ ಅಥವಾ ವೈಚಾರಿಕತೆಯ ಹಂಗಿಲ್ಲದ ಹುಸಿ ಭಾವುಕತೆಗೆ ಸಾಹಿತ್ಯದಲ್ಲಿ ಸ್ಥಾನವೇ ಇಲ್ಲ. ಮುಂಬಯಿಯ ಇನ್ನೊಬ್ಬ ಕವಿ ಮರಿಯಪ್ಪ ನಾಟೇಕರರ ಒಂದು ಸಾಲಿನಲ್ಲಿ, 'ನೀರಿನಲ್ಲೆಸೆದ ಕಲ್ಲಿನ ತರಂಗ'ದ ಚಲನೆಯ ವರ್ಣನೆ ಬರುತ್ತದೆ. ಅಂದರೆ ಆಕಾರದಿಂದ ನಿರಾಕಾರದೆಡೆಗೆ ಚಲನೆ. ಒಳ್ಳೆಯ ಬರವಣಿಗೆಯ ಮುಖ್ಯ ಲಕ್ಷಣವೇ ಈ ನಿರಾಕಾರದೆಡೆಗಿನ ಚಲನೆ. ನಿನ್ನ ಸಾರ್ಥಕ ರಚನೆಗಳಲ್ಲಿ ಈ ಗುಣವಿದೆ. ಒಂದು ಚಿತ್ರ, ಒಂದು ಯೋಚನೆ, ಒಂದು ಲಹರಿ ಆಕಾರ ತೊಡುತ್ತಿರುವಾಗಲೇ... ನಿರಾಕಾರದೆಡೆ ಚಲಿಸುವಂಥ ಧ್ವನಿ ತರಂಗ ಅದು. ಅದರ ಆಸ್ವಾದವೇ ಕವಿತೆಯ ಓದು. ಹೊರತು ವ್ಯಾಖ್ಯಾನವಲ್ಲ.
... ದೇವರ ಪಾದದ ಬಳಿ
ಚಿಟ್ಟೆಗಳಂತಿರುವ ಮಕ್ಕಳು
ಗಿಡಗಿಡಗಳಿಗೆ ಹಾರಿ
ಕಿತ್ತು ತಂದ ಹೂಗಳು...

.... ಅವಳ ಮಡಿಲಲ್ಲಿ 
ಮುಳುಗೇಳುತ್ತಿದ್ದ ಮಗು
ಪಕ್ಕನೆ ಅವಳ ಮುಖ ಪರಚಿಬಿಟ್ಟಿತು......

... ಇನ್ನೂ ಹೆರಿಗೆ ನೋವಿಗೆ ತೆರಿಗೆ
ಕಟ್ಟುತ್ತಿರುವ ಅಮ್ಮ......

... .ದೇವರೇ..ಇನ್ನು ಮುಂದೆ
ಹೆಸರಿರುವ ಎಲ್ಲ ತಾಯಂದಿರು ಬಂಜೆಯರಾಗಲಿ
ಕೊಡುವುದಾದರೆ ಕಸದ ತೊಟ್ಟಿಗಳಿಗೆ, 
ಗಟಾರಗಳಿಗೆ, ಬಸ್ ನಿಲ್ದಾಣಗಳಿಗೆ
ಹೆರಿಗೆ ಬೇನೆ ಕೊಡು...

ಎಲ್ಲವನ್ನೂ ಬಲ್ಲ ಜೀವದ ಗೆಳೆಯನಿಗೇ, ತನ್ನ ಗೆಳೆತನದ ಬಗ್ಗೆ ಪುರಾವೆ ಕೊಡಬೇಕಾದ ಪ್ರಸಂಗ ಬಂದರೆ ಅದೆಂಥ ನೋವಿನದಾದೀತು. ಅಂಥ ಅವ್ಯಕ್ತ ಕಳವಳವೇ ನಿನ್ನ ಈ ಕವಿತೆಗಳನ್ನು ನಡುಗುವ ಕೈಗಳಲ್ಲಿ ಒಟ್ಟಿಗೆ ಹಿಡಿದಿವೆ. ಆ...ಲಯದೊಳಗೆ, ಚಿತ್ತಾಲರ ಜೊತೆ ಸಂಜೆ, ಗುಜರಿ ಆಯುವ ಹುಡುಗ, ರಮಝಾನ್ ಪದ್ಯಗಳು, ಸ್ನೇಹ, ಮೂರು ಬೆರಳುಗಳು, ಧ್ಯಾನ, ಅಮ್ಮನ ಕೊಳಲು, ಭಾಮಿಯಾನ್‌ನಲ್ಲಿ ಬುದ್ಧ, ಎರಡು ಮಂಚಗಳು, ಕಳೆದು ಹೋದ ಬಾಲ್ಯ, ನಮ್ಮ ಎದೆ, ಮನೆ ಸೇರೂದರೊಳಗೆ, ಹೆಣ್ಣು ಮಲಗೋದು, ಕಾಗೆ ಮರಿಯ ಹಾಡು...  ಓದಿನಲ್ಲೂ ಬೆಳೆಯಬಲ್ಲ ರಚನೆಗಳಾಗಿವೆ. ಕವಿತೆಯೊಳಗಿನ ಅವ್ಯಕ್ತ, ಓದುಗನ ಅವ್ಯಕ್ತದೊಂದಿಗೆ ಸಜೀವ ಸಂಬಂಧ ಹೊಂದುವಂತಾಗುವ ರಚನೆಗಳಿವು.
 ಮಗುವಿನ ಗಾಢ ನಿದ್ದೆ 
ಅವಳಿಗೆ ಧ್ಯಾನದಂತೆ 
ಭಾಸವಾಗಿದೆ ... 

ಮೌನಕ್ಕೆ ತಂದೆಯ ಗತ್ತು..
- ಇಂಥ ಸಾಲುಗಳು ಒಂದು ರಚನೆಗೆ ನೀಡುವ ಶಾರೀರ ಸೂಕ್ಷ್ಮವಾದದ್ದು. ಈ ಸಾಲುಗಳು ಅನುಭವದಿಂದ ಹೊಮ್ಮಿದಷ್ಟೂ ಚತುರೋಕ್ತಿಗಳು ಚತುರತೆಯಿಂದ ಮೇಲೇಳುತ್ತವೆ.

...ಹಸಿವನ್ನು ಹೂಡಿ ದಿನಸಿ ಅಂಗಡಿ ತೆರೆದ
ಗೆಲುವನ್ನು ಜವಳಿ ಅಂಗಡಿಗೆ ಮಾರಿ ಸೋತ
ಸೋರುವ ಸೂರನ್ನು ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ದುಂದುಗಾರ ಅಪ್ಪ...ಸವಕಲು ಮಾತುಗಳನ್ನೇ
ನಾಣ್ಯಗಳಂತೆ ಚಲಾವಣೆಗೆ ಬಿಟ್ಟ 
ಅಮ್ಮನ ಮೌನದ ತಿಜೋರಿಯನ್ನೇ ದೋಚಿದ...

ನೋಡಲು ಸರಳವಾಗಿ ಕಾಣುವ ಇಂತಹ ಸಾಲುಗಳಿಗೆ ತೀವ್ರವಾದ ಕಥನ ವಿಸ್ತಾರವಿದೆ. ಏಕೆಂದರೆ, ಇವು ವರದಿಗಾರ ಕಲೆ ಹಾಕಿದ ವಿವರಗಳಲ್ಲ. ಇವು ಜೀವನವನ್ನು ಹಣ್ಣಾಗಿಸಿದ ಬಾಳಿನ ವಿವರಗಳು. ಕೊನೆಗೂ ನಮ್ಮೆಲ್ಲರ ಕಾಯಕ, ಸವಕಲು ಮಾತುಗಳನ್ನೇ ಉಜ್ಜಿ ಮತ್ತೆ ಚಲಾವಣೆಗೆ ಬಿಡುವುದಲ್ಲವೆ? ಮೌನದ ತಿಜೋರಿಯನ್ನೆಲ್ಲ ದೋಚುವುದಲ್ಲವೆ?
ನೀನು ಪೂರ್ವನಿಯೋಜಿತ ನಿಲುವನ್ನು ತೆಗೆದುಕೊಂಡು ತುಂಬಾ ನಿಷ್ಠನಾಗಿ ಬರೆದಾಗ ನಿನ್ನ ರಚನೆಗೆ ನಿಬಂಧ ರೂಪ ಬರುತ್ತದೆ. ಉದಾಹರಣೆಗೆ ಬಲಿ ಹಬ್ಬದ ಬೆಳಗು, ಮೊಬೈಲ್ ಹಾಡು, ಅಮ್ಮ ಹಚ್ಚಿದ ಒಲೆ ಈ ಕವಿತೆಗಳಿಗೆ ಭಿನ್ನವಾದ ಹೌದು, ನಿಮ್ಮ ಅನುಮಾನ ಸರಿ, ರಾವಣಾಯನ, ಸಿಹಿಸುದ್ದಿ ಕವಿತೆಗಳಲ್ಲಿ ಒಬ್ಬ ವಕ್ತಾರನಂತೆ ನೀನು ಮಾತನಾಡ ತೊಡಗಿದಾಗೆಲ್ಲ ಕವಿತೆ ತಾನಾಗಿಯೇ ನೀನು ಮಾತಾಡಿಕೋ ಮಾರಾಯ, ನಾನು ಆಮೇಲೆ ಸಿಗ್ತೇನೆ ಎಂದು ಸದ್ದಿಲ್ಲದೆ ಮಾಯವಾಗುತ್ತದೆ. ನಿನ್ನ ಹವಣಿಕೆ ಮೀರಿದ ಕ್ಷಣಗಳಲ್ಲೇ ನಿನ್ನ ಅತ್ಯುತ್ತಮ ಕಾವ್ಯ ಭಾಗಗಳಿವೆ. ಉದಾಹರಣೆ ನನ್ನನ್ನು ತುಂಬಾ ಸೆಳೆದ ಈ ಸಾಲು:

....ಉಂಡ ಎಲೆಯಿಂದ ಬೇರ್ಪಡುವಂತೆ ಅವರು
ಪರಸ್ಪರ ಕಳಚಿಕೊಂಡಾಗ
ಅವನ ಮುಷ್ಟಿಯಿಂದ ಮೊಲೆಯನ್ನು ಬಿಡಿಸಿಕೊಂಡ ಅವಳು
ಕಳಚಿಟ್ಟ ಇಸ್ತ್ರಿಪೆಟ್ಟಿಗೆ ತುಂಬಾ ಮತ್ತೆ ಸುರಿವಳು ಕೆಂಡ....

ಎವೆ ಕಳಚಿ, ಮುಷ್ಟಿ, ಮೊಲೆ, ಇಸ್ತ್ರಿ ಪೆಟ್ಟಿಗೆ, ಸುರಿವ ಕೆಂಡ-ಇವೆಲ್ಲ ತಂತಮ್ಮ ವೈಯಕ್ತಿಕ ಧ್ವನಿಯನ್ನಿಟ್ಟುಕೊಂಡೇ ಒಟ್ಟಿಗೇ ಸಾಧಿಸುವ ಪರಿಣಾಮ ವಿಶಿಷ್ಟ. ನಿನ್ನ ಕವಿತೆಯ ಉಸಿರಾಟ ಇಂಥ ಭಾಗಗಳಲ್ಲೇ ಇದೆ. ಇವೆಲ್ಲ ಹವಣಿಕೆಯಿಂದ, ಆಲೋಚನೆಯಿಂದ, ಎಚ್ಚರದ ವಿನ್ಯಾಸದಿಂದ ಆಗುವಂತಹದಲ್ಲ. ಗೊತ್ತಿರುವ ಬಿಡಿಗಳ ಮೂಲಕ ಗೊತ್ತಿರದ ಇಡಿಗಾಗಿ ಒದ್ದಾಡುವಾಗಲೇ ಆಗುವಂಥದ್ದು.
....ಎಳೆ ಕಂಬನಿಯಂತಿರುವ ಆ ನಾಕು ಸಾಲುಗಳು...
....ಫ್ರಿಜ್ಜಿನಲ್ಲಿಟ್ಟ ತರಕಾರಿಯಂತೆ ಅಕ್ಕಪಕ್ಕ
ಕುಳಿತ ಕಣ್ಣುಗಳು....
ಇಂತಹ ಬಿಡಿಗಳು ಆಯಾ ಕ್ಷಣದಲ್ಲಿ ತಾಜಾ ಅನಿಸುತ್ತಾ ಬೇರೊಂದು ಆಳವಾದ ವ್ಯಾಪಕವಾದ ಅನುಭವದೆಡೆ ನಮ್ಮನ್ನು ನೂಕಿದಾಗಲೇ ಅವುಗಳ ಸಾರ್ಥಕತೆ. ನಮ್ಮ ಅಕ್ಕರೆಯ ಮುಂಬಯಿಯ ಹಿರಿ ಕವಿ ವಿ.ಜಿ. ಭಟ್ಟರ ಒಂದು ಸಾಲು ಹೀಗಿದೆ- 'ಅಮರ ಲೋಕದ ಕಿಡಕಿಗಳಂಥ ಕಣ್ಣುಗಳನ್ನು ಕಂಡೆನು'  ಪ್ರಪಂಚದ ಎಲ್ಲ ಕವಿತೆಗಳೂ ತಮ್ಮದೇ ರೀತಿಯಲ್ಲಿ ತಮ್ಮದೇ ಆದ ಅಮರಲೋಕವೊಂದಕ್ಕೆ ತೆರೆದ ಕಿಡಕಿಗಳೇ ಆಗಿವೆ. ಅಂಥ, ನಮ್ಮೆಲ್ಲರನ್ನೂ ಉಳಿಸುವಂತಹ, ಬೆಳೆಸುವಂಥ ಗಹನವಾದ, ಘನವಾದ, ಅಮರಲೋಕವೊಂದು ನಿನ್ನ ಮನದೊಳಗೇ ನಿನ್ನ ಬರವಿಗಾಗಿ ಕಾದಿದೆ. ಈ ಪೇಸ್‌ಬುಕ್ಕು, ಟ್ವಿಟ್ಟರು, ಒಂದೊಂದು ಸಾಲನ್ನು ಎರಡೆರಡು ಸಲ ಓದಿ ಶ್ರುತಿ ಕಳೆದುಕೊಂಡಿರುವ ನೀರಸ ಕರ್ಕಶಗೊಂಡಿರುವ ಕವಿಗೋಷ್ಠಿಗಳು, ಬಿಡುಗಡೆ ಸಮಾರಂಭದ ನಿರೂಪಕರು...ಇಂಥದೆಲ್ಲ ನರ್ತನವನ್ನು ಚೂರು ಬದಿಗಿಟ್ಟು ನಾವೆಲ್ಲ    ಖಾಲಿ ಕಾಗದದ ಅಸೀಮ ಚಡಪಡಿಕೆಗೆ ಶರಣಾಗಬೇಕಾಗಿದೆ. ಯಾವ ದೀಪದ ಸನ್ನೆಗಾಗಿಯೂ ಕಾಯದೆ...ಅಮ್ಮನ ಒಲೆಯೆದುರಿನ ಊದುಗೊಳವೆಯ ನಾದದ ಜಾಡಿನಲ್ಲೇ, ಅಶರೀರದ ಅಂಚಿನಲ್ಲಿರುವ ನಿರಾಕಾರದ ಎಟುಕಿನಲ್ಲಿರುವ ಆವರಣದೆಡೆಗೆ ಚಲಿಸಬೇಕಾಗಿದೆ.

ಇಬ್ಬರೆಂದರೆ ಬರೇ ಇಬ್ಬರು
ನಾನು ಮತ್ತು ಅವರು
ಹಾಯಿ ದೋಣಿಯಂತೆ ತೇಲುತ್ತಿರುವ
ಕತೆಯ ಸಾಲೊಂದನ್ನು ಏರಿ ಕುಳಿತಿದ್ದೇವೆ

ಮೊರೆವ ಎದೆಯೊಳಗೆ
ಭೋರ್ಗರೆವ ಅಕ್ಷರದ ಕಡಲು
ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ
ನನಗೇಕೆ ಮುಳುಗುವ ಚಿಂತೆ...

ನಿನ್ನ ಈ ಸರಳ ಸಾಲುಗಳಲ್ಲಿರುವ ಅಭಯ, ಸಮಾಧಾನ ಅದ್ವಿತೀಯವಾದದ್ದು. ಹೆಗಲ ಮೇಲೆ ಆಧಾರಕ್ಕೆಂದು ಇಟ್ಟಿದ್ದ ಸೋದರನ ಹೂವಿನ ಎಸಳಿನಷ್ಟೇ ಭಾರವಾದ ಮೂರು ಬೆರಳಿನಷ್ಟೇ ಭಂಗುರವಾದದ್ದು.
 ಇದನ್ನು ಜೋರು ಮಳೆಯಲ್ಲಿ ಗೋಕರ್ಣದಲ್ಲಿ ಬರೆಯುತ್ತಿದ್ದೇನೆ. ಮಳೆಯಲ್ಲಿ ಭೋರ್ಗರೆವ ಸಮುದ್ರದಲ್ಲಿ ಉರುವಲು ಒಲೆ ಸೌದೆಗಾಗಿ ಮನುಜಾಕೃತಿಗಳು ಯುದ್ಧೋಪಾದಿಯಲ್ಲಿ, ಉಕ್ಕುವ ತೆರೆಗಳೊಂದಿಗೆ ಸೆಣಸಾಡುತ್ತಿವೆ. ತಮ್ಮ ತಮ್ಮ ಒಲೆಗಳನ್ನು ಬೆಚ್ಚಗಿಡಲು ನಡೆಯುತ್ತಿರುವ ಒಂದು ಮಹಾ ಜಲ ಯಜ್ಞ ಇದು. ಇದೇ ಮಳೆ ಧಾರಾವಿಯಲ್ಲೂ ಬೀಳುತ್ತಿದೆ. ಅಲ್ಲಿ ಮಳೆಯಿಂದ ಒಲೆಯನ್ನು ಬಚಾವು ಮಾಡಲು ಅಮ್ಮಂದಿರು ಹೋರಾಡುತ್ತಿದ್ದಾರೆ. ಎಲ್ಲ ರಾಜಕೀಯ ಸಮರ್ಪಕತೆಯ ಮೂತಿಗೆ ತಿವಿಯುವಂಥ ಸಮರ ಇದು. ಮಾನವೀಯತೆ ಬಗ್ಗೆ ಚಂದವಾಗಿ ಎಲ್ಲರೂ ಮಾತಾಡಿದ್ದೇವೆ. ಚಿತ್ತಾಲರು ಪದೇ ಪದೇ ಹೇಳುವ ಮಾನವಂತಿಕೆೆ ನಮ್ಮೆಲ್ಲರ ಪದಯಾತ್ರೆಯ ಜೀವಾಳವಾಗಲಿ ಎಂದು ಹಾರೈಸೋಣ.

ವಾತ್ಸಲ್ಯಪೂರ್ವಕ
ಜಯಂತ ಕಾಯ್ಕಿಣಿ

***
ಪ್ರತಿಗಳಿಗಾಗಿ ನೇರವಾಗಿ ನನ್ನನ್ನು ಸಂಪರ್ಕಿಸಬಹುದು.
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.
1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.
2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ. 
ಎರಡು ಪುಸ್ತಕಗಳಿಗೆ ಒಟ್ಟು 175 ರೂಪಾಯಿಯನ್ನು ನೀಡಬೇಕಾಗುತ್ತದೆ.


‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!
ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!
ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.

Wednesday, December 9, 2015

ನರಕದ ಹೆಬ್ಬಾಗಿಲಲ್ಲಿ ದಾನಿಗಳ ಹೆಸರು ಕೆತ್ತುವ ಕವನಗಳು

ನನ್ನ ಮಸೀದಿಯ ಧ್ವಂಸಗೊಳಿಸಿದವರಿಗೆ ಕೃತಜ್ಞ(ಸೂಫಿಯ ಕಣ್ಣಲ್ಲಿ ಹನಿಗಳು)-ಕುರಿತಂತೆ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುನ್ಜಿ ಅವರ  ಮಾತುಗಳು 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ದಿನಗಳನ್ನು ವರ್ಷಗಳಂತೆ ಬದುಕುತ್ತಿರುವವರಿಗೆಲ್ಲ ‘ಪೆದಂಬು’ ಎಂಬ ಪದ, ‘ಧರ್ಮ-ದೇವರುಗಳಷ್ಟೇ’ ಪ್ರಿಯವಾದದ್ದು. ಹೊರಗಿನವರಿಗೆ ಈ ಪದವನ್ನು ಹೀಗೆಯೇ ಎಂದು ಪರಿಚಯಿಸಲಾಗುವುದಿಲ್ಲ.  ಇದನ್ನು  ‘ಕಿಚಾಯಿಸುವುದು’ ಮತ್ತು ‘ರೊಚ್ಚಿಗೆಬ್ಬಿಸುವುದು’ ಎಂಬೆರಡು ಪದಗಳ ನಡುವೆ (ನಡುವೆ ಅಂದರೆ, ನಟ್ಟ ನಡುವೆಯಲ್ಲ; ಸಂದರ್ಭ ಸಹಿತವಾಗಿ ಎಡ-ಬಲಕ್ಕೆ ಸರಿಸಬೇಕಾಗುತ್ತದೆ.) ಇರಿಸಬಹುದೇನೋ. ಬಷೀರ್ ಕವನಗಳನ್ನು ಓದುವಾಗ ಮಾತ್ರವಲ್ಲ, ಈ ಹೆಸರು ನೆನಪಾದಾಗಲೆಲ್ಲ ಬೇಡವೆಂದರೂ ಆ ಪದ ನೆನಪಾಗುತ್ತದೆ. ಬಹಳ ವರ್ಷಗಳಿಂದ ತಮ್ಮ ಹಸಿ ಹಸಿ ಸಂಕಟಗಳ ಒಲೆಯಲ್ಲಿ ಬೇಯಿಸಿದ ಪದ್ಯಗಳನ್ನು ಬಿಸಿಬಿಸಿಯಾಗಿಯೇ ಓದುಗರಿಗೆ ಬಡಿಸುತ್ತಿರುವ ಬಿ.ಎಮ್. ಬಷೀರರ, ಪ್ರಸ್ತುತ ೨೨೩ ಹನಿಗವನಗಳನ್ನೊಳಗೊಂಡ ‘ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ..’ ಎಂಬ ಈ ‘ಪೆದಂಬು’ ಕೃತಿಯ ‘ಅರ್ಪಣೆ’ಯನ್ನು ಸ್ವೀಕರಿಸಲಿರುವ ಮೌಲ್ವಿಗಳ ಸಂಕಟವನ್ನು ನೆನಪಿಸಿಕೊಂಡರೆ ಮಾತ್ರ ‘ಪೆದಂಬು’ ಎಂದರೇನೆಂಬುದು  ಸರಿಯಾಗಿ ಅರ್ಥವಾಗಬಹುದೇನೋ.  

ಬೆತ್ತ ಹಿಡಿದು ಬಲವಂತದಿಂದ ಮದ್ರಸದಿಂದ ಹೊರದಬ್ಬಲ್ಪಟ್ಟ ಕಾರಣದಿಂದ ಆಸ್ತಿಕನಾಗಿ ಬದಲಾದ ಈ ಕವಿಯ ಕಣ್ಣೀರ ಹನಿಗಳು, ಬಾಗಿಲೇ ಇರಿಸದೆ ಮನೆ ಕಟ್ಟಿದವನವನೊಬ್ಬ, ಗೋಡೆಗಳ ಕಾರಣದಿಂದ ಹೊರಬರಲಾರದೆ, ‘ಒಂದಾದರೂ ಬಾಗಿಲು ಇಡಬೇಕಾಗಿತ್ತು’ ಎಂದು ಪರಿತಪಿಸುವವನ ಬಗ್ಗೆ ಕರುಣೆದೋರುತ್ತವೆ. ಕಾಗದದ ದೋಣಿಯೇರಿ ಬೆಂಕಿಯನದಿ ದಾಟಬಯಸುವ ಕವಿಗೆ ಬೀಳುವ ಕನಸಿನ ಸ್ವರ್ಗದಲ್ಲಿ ಧರ್ಮ ಬೋಧಕರಾರೂ ಕಾಣಿಸದಾದಾಗ ಅಚ್ಚರಿಯಾಗುತ್ತದೆ. ಭೂಮಿಯ ಮೇಲೆ ಕಟ್ಟಲಾದ ಮಂದಿರ, ಮಸೀದಿ, ಚರ್ಚುಗಳನ್ನು ಹಾದು ಬರುವ ಗಾಳಿ, ಉಬ್ಬಸ ತರಿಸುತ್ತದೆ.ನಿಜಭಕ್ತ ಮುಖ ಮಾಡಿದತ್ತ ‘ಕಾಬಾ’ ತಿರುಗುತ್ತದೆ ಎಂಬ ಕನಕನಂಬಿಕೆಯ ಕವಿಗೆ, ಅರಮನೆಗೆ ಮುಖಮಾಡಿ ಪ್ರಾರ್ಥನೆ ಸಲ್ಲಿಸುವ ಪುರೋಹಿತರ ಬಗ್ಗೆ ಭಯಂಕರ ಸಿಟ್ಟಿದೆ. ‘ಎಸೆಯುವುದೇ ಆದರೆ ಹಂದಿಮಾಂಸ, ಗೋಮಾಂಸಗಳನ್ನು ಮಂದಿರ-ಮಸೀದಿಗಳ ಪ್ರಾಂಗಣಕ್ಕೆಸೆಯದೆ, ಹಸಿದವನ ಮನೆಯ ಅಂಗಳಕ್ಕೆ ಎಸೆಯಿರಿ’ ಎಂದು ಪ್ರಾರ್ಥಿಸುವ ಇವರಿಗೆ, ಬಡಭಕ್ತನಿಗೆ  ಉಣ್ಣುವುದೂ ಒಂದು ಬಗೆಯ ಪ್ರಾರ್ಥನೆಯೆಂಬ ನಂಬಿಕೆಯಿದೆ.

ನರಕದ ಹೆಬ್ಬಾಗಿಲಲ್ಲಿ ದಾನಿಗಳ ಹೆಸರು ಕೆತ್ತುವ ಬಷೀರರ ಕವನಗಳನ್ನು ಓದುವುದು ತೀರಾ ಸುಲಭ ಮತ್ತು ಬಹಳ ಕಷ್ಟ. ‘ಹಸಿದ ನಾಯಿಗೆ ತುತ್ತು ಉಣಿಸಿದಾತನಿಗೆ ನೀನು ಸ್ವರ್ಗವನಿತ್ತೆ’ ಎಂಬ ಸುದ್ದಿ ಕೇಳಿದಂದಿನಿಂದ ಹಸಿದವರ ಕಣ್ಣುಗಳಲ್ಲಿ ನನ್ನ ಮಸೀದಿಯನ್ನು ಕಾಣುತ್ತಿದ್ದೇನೆ’ ಎನ್ನುವ ಅಪರೂಪದ ಈ ಪದಮಾಂತ್ರಿಕ,  ತುಂಬಿದಷ್ಟೂ `ಬೇಕು’ ಎನ್ನುವ ಗೋರಿಗಳ ಹಸಿವು ಇಂಗಿಸಲು ಹೆಣಗುವ ಸೂಲಗಿತ್ತಿಯಂತೆ ಕಾಣಿಸುತ್ತಾರೆ. ಅಭಿನಂದನೆಗಳು. 

-ಬೊಳುವಾರು
***
ಪ್ರತಿಗಳಿಗಾಗಿ ನೇರವಾಗಿ ನನ್ನನ್ನು ಸಂಪರ್ಕಿಸಬಹುದು.
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.
1. ಅಮ್ಮ ಹಚ್ಚಿದ ಒಲೆ-ಕವನ ಸಂಕಲನ- 100 ರೂ.
2. ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ-ಸೂಫಿಯ ಕಣ್ಣಲ್ಲಿ ಹನಿಗಳು -75 ರೂ. 
ಎರಡು ಪುಸ್ತಕಗಳಿಗೆ ಒಟ್ಟು 175 ರೂಪಾಯಿಯನ್ನು ನೀಡಬೇಕಾಗುತ್ತದೆ.

‘ಇರುವೆ ಪ್ರಕಾಶನ’ ನನ್ನ ಹೊಸ ಕನಸು!
ಕವನ ಸಂಕಲನಗಳು ನನ್ನ ವಿಶೇಷ ಮಕ್ಕಳು!!
ಇವೆರಡೂ ನಿಮ್ಮಿಂದ ವಿಶೇಷ ಪ್ರೀತಿಯನ್ನು ಬೇಡುತ್ತಿವೆ.


Sunday, November 29, 2015

ಅಲ್ಲಲ್ಲಿ ಮುಗ್ಗರಿಸುವ ಫಸ್ಟ್ ರ‍್ಯಾಂಕ್ ರಾಜು

ಶಿಕ್ಷಣ ವ್ಯವಸ್ಥೆಯನ್ನು ವ್ಯಂಗ್ಯ ಮಾಡಿ, ಟೀಕಿಸಿ, ವಿಮರ್ಶಿಸಿ ಹತ್ತು ಹಲವು ಚಿತ್ರಗಳು ಬಂದಿವೆ. ಹಿಂದಿಯಲ್ಲಿ ಮುನ್ನಾ ಭಾಯಿ ಎಂಬಿಬಿಎಸ್ ಮತ್ತು ತ್ರೀ ಈಡಿಯಟ್ ಸಿನಿಮ ವ್ಯಂಗ್ಯದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಶಿಕ್ಷಣವ್ಯವಸ್ಥೆಯನ್ನು ಕಟ್ಟಿಕೊಟ್ಟಿವೆ.  ಒಂದು ಗಂಭೀರ ವಿಷಯವನ್ನು ಲವಲವಿಕೆಯ  ಮೂಲಕ ಹೇಗೆ ನಿರೂಪಿಸಬಹುದು ಎನ್ನುವುದಕ್ಕೆ ಈ ಎರಡು ಚಿತ್ರಗಳೇ ಅತ್ಯುತ್ತಮ ಉದಾಹರಣೆ. ಈ ಚಿತ್ರದ ಯಶಸ್ವಿಗೆ ಕಾರಣವಾದುದು ಗಟ್ಟಿಯಾದ ಚಿತ್ರಕತೆ. ಇಲ್ಲಿ ಎಲ್ಲೂ ಭಾಷಣಗಳಿಲ್ಲ. ಬರೇ ಘಟನೆಗಳ ಮೂಲಕವೇ ವಿಷಯವನ್ನು ಪ್ರೇಕ್ಷಕರ ಎದೆಗೆ ದಾಟಿಸುವ ನಿರ್ದೇಶಕನ ಜಾಣ್ಮೆ, ಚಿತ್ರದ ಯಶಸ್ಸಿಗೆ ಕಾರಣವಾಯಿತು. ಎಲ್ಲ ವರ್ಗದ ಪ್ರೇಕ್ಷಕರನ್ನೂ ಈ ಚಿತ್ರ ಸೆಳೆಯಿತು. 
ಕನ್ನಡದಲ್ಲೂ ಶಿಕ್ಷಣವ್ಯವಸ್ಥೆಯನ್ನು ವಸ್ತುವಾಗಿಟ್ಟುಕೊಂಡು ಹತ್ತು ಹಲವು ಚಿತ್ರಗಳು ಬಂದಿವೆ. ಆದರೆ ಅದು ಯಶಸ್ವಿಯಾಗಿರುವುದು ಕಡಿಮೆ. ಈ ಹಿನ್ನೆಲೆಯಲ್ಲಿ ‘ಫಸ್ಟ್ ರ‍್ಯಾಂಕ್ ರಾಜು’ ಹಲವು ಕಾರಣಗಳಿಗಾಗಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿತ್ತು. ಮೊದಲನೆಯದಾಗಿ ನರೇಶ್ ಅವರ ಮೊದಲ ನಿರ್ದೇಶನದ ಚಿತ್ರ ಇದು. ಜೊತೆಗೆ ಗುರುನಂದನ್ ಎನ್ನುವ ನವ ಯುವ ನಾಯಕ ನಟಿಸಿದ ಚಿತ್ರ. ಚಿತ್ರದ ಹೆಸರೂ ವಿಭಿನ್ನವಾದುದು. ಜೊತೆಗೆ ಶಿಕ್ಷಣವೆನ್ನುವ ಗಂಭೀರ ವಿಷಯವನ್ನು ಹಾಸ್ಯಮಯವಾಗಿ ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು. ಅಲ್ಲದೇ, ರಾಘವೇಂದ್ರ ರಾಜ್‌ಕುಮಾರ್‌ರಿಂದ ಹಿಡಿದು ಅನಂತನಾಗ್‌ವರೆಗೂ ಹಿರಿಯರೆನಿಸಿಕೊಂಡವರೆಲ್ಲ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಈ ಎಲ್ಲ ಕಾರಣಗಳಿಂದ ‘ರ‍್ಯಾಂಕ್ ಸ್ಟೂಡೆಂಟ್’ ಮಾಧ್ಯಮಗಳಲ್ಲಿ ಒಂದಿಷ್ಟು ಚರ್ಚೆಯಲ್ಲಿದ್ದ.
ಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ರ‍್ಯಾಂಕ್ ಗಳಿಸಿದಾಕ್ಷಣ ಆತ ಎಲ್ಲವನ್ನೂ ತಿಳಿದವನಾಗುವುದಿಲ್ಲ. ಶಾಲೆಯಲ್ಲಿ ಮೊದಲು ಪಾಠ ಕಲಿಸಲಾಗುತ್ತದೆ. ಕೊನೆಯಲ್ಲಿ ಎಕ್ಸಾಂ ಪಾಸ್ ಮಾಡಬೇಕಾಗುತ್ತದೆ. ಆದರೆ ಬದುಕು ಎನ್ನುವ ಪರೀಕ್ಷೆಯಲ್ಲಿ ಮೊದಲು ಎಕ್ಸಾಂ ಬರೆಯಬೇಕು. ಬಳಿಕ ಪಾಠ ಕಲಿಯಬೇಕು. ಈ ಸಾಲಿನ ತಳಹದಿಯ ಮೇಲೆ ಫಸ್ಟ್ ರ‍್ಯಾಂಕ್ ರಾಜು ಸಿನೆಮಾವನ್ನು ಮಾಡಲಾಗಿದೆ. ಇಲ್ಲಿ ಫಸ್ಟ್  ರ‍್ಯಾಂಕ್ ಗಳಿಸುವ ರಾಜು ಕಾಲೇಜಿನ ಹೊರಗಡೆ, ವಾಸ್ತವ ಬದುಕಿನ ಮುಂದೆ ಸದಾ ನಗೆಪಾಟಲಿಗೀಡಾಗಬೇಕಾಗುತ್ತದೆ. ಸದಾ ಫಸ್ಟ್  ರ‍್ಯಾಂಕ್‌ನ ಕಿರೀಟವಿಟ್ಟುಕೊಂಡೇ ಬೆಳೆದಿದ್ದ ಈತನಿಗೆ, ಮೊದಲ ಬಾರಿ ಸಂದರ್ಶನವೊಂದರಲ್ಲಿ ಭಾರೀ ಮುಖಭಂಗವುಂಟಾಗುತ್ತದೆ. ಎಲ್ಲ ಅರ್ಹತೆಯಿದ್ದರೂ ಆತ ಸಂದರ್ಶನದಲ್ಲಿ ತಿರಸ್ಕೃತನಾಗುತ್ತಾನೆ. ಅಲ್ಲಿಂದ ಆತ ಹೊರಗಿನ ಬದುಕಿನ ಪರೀಕ್ಷೆಗೆ ಕೂತು ಪಾಸಾಗುವುದಕ್ಕೆ ಹವಣಿಸುವುದೇ ಕತೆಯ ಮುಖ್ಯ ವಸ್ತು.
ಇದೊಂದು ಅಪ್ಪಟ ಹಾಸ್ಯಮಯ ಚಿತ್ರ. ರ‍್ಯಾಂಕ್ ಸ್ಟೂಡೆಂಟ್ ಆಗಿ ಆ ಪಾತ್ರವನ್ನು ಗುರುನಂದನ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ಚಿತ್ರಕತೆ ಬಿಗಿಯಾಗಿಲ್ಲ. ಚಿತ್ರವನ್ನು ಇನ್ನಷ್ಟು ಕುತೂಹಲಕಾರಿಯಾಗಿ, ಲವಲವಿಕೆಯಿಂದ ಪ್ರೇಕ್ಷಕರ ಮುಂದಿಡುವ ಅವಕಾಶವನ್ನು ದುರ್ಬಲ ಚಿತ್ರಕತೆಯ ದೆಸೆಯಿಂದ ನಿರ್ದೇಶಕರು ಕಳೆದುಕೊಂಡಿದ್ದಾರೆ.  ಚಿತ್ರದ ಮೊದಲರ್ಧ ಒಂದಿಷ್ಟು ಹಾಸ್ಯಮಯವಾಗಿಯೇ ಓಡುತ್ತದೆ. ರಾಜುವಿನ ತಂದೆಯಾಗಿ ಅಚ್ಯುತ್ ಅವರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ. ತಂದೆ ಮಗನ ಸಂಬಂಧವನ್ನು ಚಿತ್ರದಲ್ಲಿ ಆತ್ಮೀಯವಾಗಿ ಕಟ್ಟಿ ಕೊಡಲಾಗಿದೆ.  ಪೆದ್ದು ಪೆದ್ದು ರಾಜು,  ಬಳಿಕ ಸ್ಟೈಲ್‌ಕಿಂಗ್ ರಾಜ್ ಆಗಿ ಬದಲಾದಾಗಲೂ ಅಷ್ಟೇ ಇಷ್ಟವಾಗುತ್ತಾನೆ. ಗುರುನಂದನ್ ಮುದ್ದು ಮುಖಕ್ಕೆ ಗಾಂಧಿ ನಗರದಲ್ಲಿ ಭವಿಷ್ಯವಿದೆ. ಭವಿಷ್ಯದಲ್ಲಿ ದಿಗಂತ್‌ನ ಸ್ಥಾನವನ್ನು ಈತ ತುಂಬುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ. ಕೆಲವು ಭಾವನಾತ್ಮಕ ಸನ್ನಿವೇಶದಲ್ಲಿ ನಂದನ್ ಸೋತಂತೆ ಕಂಡರೂ ಶ್ರಮ ಈತನನ್ನು ಇನ್ನಷ್ಟು ಬೆಳೆಸುವುದರಲ್ಲಿ ಅನುಮಾನವಿಲ್ಲ. ಹಾಡು, ಸಂಗೀತ ಚಿತ್ರಕ್ಕೆ ಪೂರಕವಾಗಿದೆ. 
ಸಿನೆಮಾ ಯಾವತ್ತೂ ಭಾಷಣವಾಗಬಾರದು. ಚಿತ್ರದ ಕ್ಲೈಮಾಕ್ಸ್‌ನಲ್ಲಿ ನಾಯಕನ ಬಾಯಿಯಿಂದ ಶಿಕ್ಷಣದ ಕುರಿತಂತೆ ಭಾಷಣ ಹೊಡೆಸುವುದು ಹಿಂಸೆ ಎನಿಸುತ್ತದೆ. ಹಾಗೆಯೇ, ತಂದೆ ತನ್ನ ಮಗನಿಗೆ ಪ್ರೇಮ ಪಾಠವನ್ನು ಹೇಳಿಕೊಡುವುದು, ಅದಕ್ಕಾಗಿ ಸಾಧುಕೋಕಿಲನಂತಹ ಶನಿ ಪಾತ್ರಗಳನ್ನು ಬಳಸುವುದೆಲ್ಲ ಅತಿರೇಕವೆನಿಸುತ್ತದೆ. ಅಲ್ಲಲ್ಲಿ ಚಿತ್ರ ಎಡವುತ್ತ, ಮುಗ್ಗರಿಸುತ್ತಾ ಸಾಗುತ್ತದೆ. ಕೆಲವೆಡೆ ಬೋರ್ ಅನ್ನಿಸುತ್ತದೆ. ಕೆಲವೆಡೆ ಚಿತ್ರದ ಸನ್ನಿವೇಶಗಳು ಮನಸ್ಸನ್ನು ಥಕ್ ಎಂದು ಆವರಿಸಿಕೊಳ್ಳುತ್ತವೆ. ನಿರ್ದೇಶಕ ನರೇಶ್ ಅವರು ಇನ್ನಷ್ಟು ಪ್ರಯತ್ನ ಪಟ್ಟಿದ್ದರೆ, ಚಿತ್ರಕತೆಯಲ್ಲಿ ಇನ್ನಷ್ಟು ಶ್ರದ್ಧೆ ಕಾಳಜಿಯನ್ನು ತೋರಿಸಿದ್ದರೆ ಕನ್ನಡಕ್ಕೆ ಒಂದು ಒಳ್ಳೆಯ, ಸದಭಿರುಚಿಯ ಹಾಸ್ಯಮಯ ಚಿತ್ರ ದೊರಕಿದಂತಾಗುತ್ತಿತ್ತು.

Sunday, November 15, 2015

ಮಸೀದಿ ಧ್ವಂಸಗೈದವರಿಗೆ ಕೃತಜ್ಞನಾಗಿದ್ದೇನೆ

ನಾನು ನಮಾಝಿಗೆ ನಿಂತಲ್ಲೇ 
ನನ್ನ ಮಸೀದಿ 
ನನ್ನ ದೊರೆಗೆ ಬಾಗುವ ಮನಸಾದರೆ 
ಮಸೀದಿಯೇ ನನ್ನೆಡೆಗೆ ಓಡೋಡಿ ಬರೂದು 

ನನ್ನ ಮಸೀದಿಯನ್ನು ಧ್ವಂಸಗೈದವರಿಗೆ 
ಕೃತಜ್ಞನಾಗಿದ್ದೇನೆ 
ಈಗ ತೆರೆದ ಹಸಿರು ಬಯಲನ್ನೆ 
ಮಸೀದಿಯಾಗಿ ಹಾಸಿದ್ದೇನೆ 
ಹಿಮಾಲಯದ  ಬೆಟ್ಟಗಳೇ ಇಲ್ಲಿನ  ಮಿನಾರಗಳು 
ಮುಂಜಾವಿನ ಹಕ್ಕಿ ಕಲರವವೇ ನನ್ನ ಅಝಾನ್ 
ಚಲಿಸುತ್ತಿರುವ ಸೂರ್ಯನೇ ನನ್ನ ಕಾಬಾ 
ಹಿಂದೂ ಮಹಾಸಾಗರದ ತೀರದಲ್ಲಿ  ಕುಳಿತು 
ವುಜೂ ಮುಗಿಸಿ ಶುದ್ಧಿಯಾಗಿದ್ದೇನೆ 
ಈ ಮಸೀದಿಯ ವೈಭವಕ್ಕೆ ದಂಗಾಗಿದ್ದೇನೆ  
ನನ್ನ ದೊರೆಗೆ ಬಾಗಿದ್ದೇನೆ 

ಹಂದಿಯಿರಲಿ, ಗೋಮಾಂಸವಿರಲಿ 
ಎಸೆಯೂದೇನೋ ಎಸೆದು ಬಿಟ್ಟಿರಿ 
ಮಸೀದಿ, ದೇವಸ್ಥಾನದ ಮುಂದೆ ಯಾಕೆ ಎಸೆದಿರಿ? 
ಹಸಿದವನ ಮನೆಯ ಅಂಗಳಕ್ಕೆ ಎಸೆಯ ಬಹುದಿತ್ತು 

ಬಡವನ  ಮನೆ ಉರಿಯುವ ಬದಲು, 
ಒಲೆ ಉರಿಸಿದ ಪುಣ್ಯ ನಿಮ್ಮದಾಗುತ್ತಿತ್ತು

Monday, November 9, 2015

ಟಿಪ್ಪು... ನಿನ್ನೊಳಗೇ ಮಹಾ ಭಾರತ!

ನಿನ್ನೊಳಗೊಬ್ಬ ದುರ್ಯೋಧನ
ಶಕ್ತಿಯಲ್ಲ್ಲಿ ಭೀಮ, ಗುರಿಯಲ್ಲಿ ಅರ್ಜುನ
ಸಂಚಿನ ಮನೆಯೊಳಗೆ ಸಿಲುಕಿಕೊಂಡ ಅಭಿಮನ್ಯು
ಒಳಗೆ ಕಣ್ಣೀರಿಡುವ ಕರ್ಣ 
ಇತಿಹಾಸ ಕತ್ತರಿಸಿಕೊಂಡ ಏಕಲವ್ಯನ ಹೆಬ್ಬೆರಳು 
ಟಿಪ್ಪು....
ನಿನ್ನೊಳಗೇ ಒಂದು ಮಹಾ ಭಾರತ!

ಮುಡಿದುಕೊಂಡೆ ಕೆಂಡದಂತಹ ಕನಸುಗಳ
ಏರಿದ್ದು ಕುದುರೆಯನ್ನಲ್ಲ, ಹುಲಿಯನ್ನು!
ಕೆಳಗಿಳಿಯುವಂತಿಲ್ಲ!
ಮುಳ್ಳು ಹಾಸಿನ ಮೇಲೆ ವಿಶ್ರಾಂತಿ!
ನಾಲ್ದಿಕ್ಕುಗಳಲ್ಲಿ ಉರುಳುತ್ತಿರುವ ದಾಳಗಳು
ಕನಸು ನನಸಾಗುವುದು ಸುಲಭವಿಲ್ಲ!

ಕಟ್ಟಿಕೊಂಡೆ ನೆಲದ ಜನರನ್ನು ಬೆನ್ನಲ್ಲಿ
ದಲಿತ ಮಕ್ಕಳಿಗೆ ಎದೆಯ ಊಡಿಸಿದೆ
ಮಾನ ಮುಚ್ಚಿಕೊಳ್ಳಲು ತೆರಿಗೆ ಕಟ್ಟಬೇಕಾದ
ಮಾನಗೇಡಿ ಸಮಾಜದ ವಿರುದ್ಧ ಕತ್ತಿ ಹಿರಿದೆ
ಸಾರಾಯಿಯ ಉರುಳಿಂದ ಉಳಿಸಿದೆ
ಹರಿವ ನದಿಗೆ ಒಡ್ಡು ಕಟ್ಟಿದೆ
ಕೆಸರು ಗದ್ದೆಯಲ್ಲಿ ಹಸಿರು ಬೆಳೆದೆ
ಪುಸ್ತಕ, ವಿಜ್ಞಾನ,ಕಾವ್ಯ ಎಂದು
ಯುದ್ಧರಂಗದಲ್ಲೇ ಕೂತು ತಲೆಕೆಡಿಸಿಕೊಂಡೆ
ನಿನ್ನ ಯೋಚನೆಗೆ ರಾಕೆಟ್‌ನ ವೇಗ
ರಾಜತಂತ್ರಕ್ಕೆ ಹೊಸ ಭಾಷ್ಯ ಬರೆದೆ

ನರಿಗಳು ಬರೆದ ನಿನ್ನ ಚರಿತ್ರೆಯನ್ನು
ನರಿಗಳೇ ಓದಿ ವಿಶ್ಲೇಷಿಸುವಾಗ
ನಿನ್ನ ಮತಾಂಧನೆಂದು ಜರೆವಾಗ
ಶೃಂಗೇರಿ, ಕೊಲ್ಲೂರು, ಶ್ರೀರಂಗಪಟ್ಟಣ
ದೇಗುಲಗಳ ಘಂಟಾನಾದ ನಾಡನ್ನು ಎಚ್ಚರಿಸುತ್ತವೆ!
ಲೂಟಿಕೋರ ಮರಾಠಿಗರಿಂದ, ನಿಜಾಮರಿಂದ, ಬ್ರಿಟಿಷರಿಂದ
ರಕ್ಷಿಸಲ್ಪಟ್ಟ ನಾಡು, ಮನೆ, ಮಠ, ದೇಗುಲಗಳ 
ಗೋಡೆಗಳು ಇತಿಹಾಸದ ಹಸಿ ಸತ್ಯಗಳನ್ನು ತೆರೆದಿಡುತ್ತವೆ

ಯಾವುದು ಮತಾಂತರ!?
ಚಂಡಾಲನನ್ನು ಮನುಷ್ಯನನ್ನಾಗಿ ಪರಿವರ್ತಿಸುವುದು?
ಹೌದು, ಒಂದಿಷ್ಟು ಜನರು ಮತಾಂತರಗೊಂಡರು
ಬದುಕು ಕಂಡುಕೊಂಡರು...
ತಮ್ಮದೇ ಕೆರೆ ನೀರನ್ನು ಬೊಗಸೆಯೆತ್ತಿ ಕುಡಿಯುವಂತಾದರು

ನೀನು ಈ ನೆಲವನ್ನು ಪ್ರೀತಿಸಿದಷ್ಟು ಇನ್ನಾರೂ ಪ್ರೀತಿಸಲಿಲ್ಲ
ತನ್ನ ತಾಯಿ, ಪತ್ನಿ, ಮಕ್ಕಳಿಗಿಂತಲೂ ಹೆಚ್ಚೆಂದು ಬಗೆದೆ
ನಿನ್ನದಾದುದನ್ನೆಲ್ಲ ನಾಡಿಗಾಗಿ ಅರ್ಪಿಸಿ
ಬರಿದಾಗುತ್ತಾ ಹೋದೆ...
ಋಣ ಮುಗಿಯಲಿಲ್ಲ
ತಾಯಿನಾಡಿನ ಋಣವನ್ನು ಒಬ್ಬ ಯೋಧ
ತನ್ನ ಪ್ರಾಣವನ್ನು ಅರ್ಪಿಸದೇ ತೀರಿಸುವುದು ಸಾಧ್ಯವೂ ಇಲ್ಲ

ಬದುಕು ರಣರಂಗವೆಂದು ಹೇಳುವರು
ನಿನಗೋ ರಣರಂಗವೇ ಬದುಕು
ನಿನ್ನನ್ನು ಕೆಡವಿದ್ದು ಬ್ರಿಟಿಷರ ಗುಂಡುಗಳಲ್ಲ
ತನ್ನವರ ವಂಚನೆ, ದ್ರೋಹ

ಇತಿಹಾಸದ ಹಿತ್ತಲಲ್ಲಿ ಹೆಣವಾಗಿ 
ಪೂರ್ಣಯ್ಯ, ಮೀರ್‌ಸಾದಿಕ್‌ಗಳು ಕೊಳೆಯುತ್ತಿದ್ದಾರೆ...
ನೀನೋ ಮತ್ತೆ ಈ ದೇಶದ ಜನಮನದ ಕಣ್ಣುಗಳಲ್ಲಿ
ಬೆಂಕಿಯಾಗಿ ಉರಿಯುತ್ತಿರುವೆ
ಈ ದೇಶವನ್ನು ಕಾಯುತಿರುವೆ! ಪೊರೆಯುತಿರುವೆ!!

ಶ್ರೀ ಗಂಧದ ಮರ ಮತ್ತು ಗೋವು

ನಮ್ಮ ನಾಡು ಗಂಧದ ಮರಗಳಿಗೆ  ಹೆಸರಾಗಿತ್ತು. 
ಆದರೆ ಇಂದು ನಾಡಿನಲ್ಲಿ ಗಂಧದ ಮರಗಳು ತೀವ್ರ ಇಳಿಕೆಗೊಂಡಿವೆ ? ಯಾಕೆ? 
ಗಂಧದ ಮರ ರಕ್ಷಣೆಗೆ ನಿರ್ಮಿಸಿದ ಕಾನೂನುಗಳೇ ಗಂಧದ ಮರ ನಿರ್ಮೂಲನೆಗೆ ಕಾರಣವಾಯಿತು. 
ರೈತನೊಬ್ಬನ ಜಾಗದಲ್ಲಿ ಗಂಧದ ಮರ ಆಕಸ್ಮಿಕವಾಗಿ ಹುಟ್ಟಿ ಬೆಳೆದರೆ ಅದು ಆತನಿಗೆ ದೊಡ್ಡ ತಲೆ ನೋವಾಗಿ ಬಿಡುತ್ತಿತ್ತು. ಒಂದೆಡೆ ಅದರ ಮೇಲೆ ಅರಣ್ಯಾಧಿಕಾರಿಗಳ ಕಣ್ಣು. ಅದನ್ನು ಕಡಿದು ಮಾರಲು ಸಾವಿರ ಕಾನೂನಿನ ತೊಡಕುಗಳು. ಬೆಲೆ ಬಾಳುವ ಗಂಧದ ಮರ ಇದ್ದರು ಅದನ್ನು ಮಾರುವಂತಿಲ್ಲ. ಹೀಗಿರುವಾಗ ಆ ಮರವನ್ನು ಉಳಿಸಲು ಬೆಳೆಸಲು ಅವನು ಯಾಕೆ ಯತ್ನಿಸುತ್ತಾನೆ?
 ಇತ್ತ ಕಳ್ಳರು ರಾತ್ರೋ ರಾತ್ರಿ ಅದನ್ನು ಕದ್ದು ಒಯ್ಯುತ್ತಿದ್ದರು. ಅರಣ್ಯಾಧಿಕಾರಿಗಳು ಅಮಾಯಕ ರೈತನೇ ಕಡಿದು ಮಾರಿದ್ದಾನೆ ಎಂದು ಕ್ರಮ ತೆಗೆದು ಕೊಳ್ಳುತ್ತಿದ್ದರು. ಆದುದರಿಂದ ಗಂಧದ ಎಳೆ  ಗಿಡ ಏನಾದರೂ ಹಿತ್ತಲಲ್ಲಿ ಕಂಡರೆ ತಕ್ಷಣ ಅದನ್ನು ಕಿತ್ತು ಎಸೆಯುತ್ತಿದ್ದರು. ಪರಿಣಾಮ ಇಂದು ನಾಡಿನಲ್ಲಿ ಗಂಧದ ಮರಗಳು  ತೀವ್ರ ಇಳಿಕೆಯಾಗಿದೆ. 
ಇದೀಗ ಗೋವಿನ ಸ್ಥಿತಿ ಕೂಡ ಅದೇ ದಾರಿಯಲ್ಲಿದೆ. ನಮ್ಮ ರೈತರು ದನವನ್ನು ಬದುಕೂದಕ್ಕಾಗಿ ಲಾಭದಾಯಕ ವ್ಯವಹಾರವಾಗಿ ಸಾಕುತ್ತಿದ್ದರು. ಅದೊಂದು ಉದ್ಯಮವಾಗಿತ್ತೆ ಹೊರತು, ಪೂಜಿಸೂದಕ್ಕಾಗಿ ಯಾರೂ ದನವನ್ನು ಸಾಕುತ್ತಿರಲಿಲ್ಲ. ಮಾಂಸಾಹಾರಿಗಳು ಈ ದನದ ಉದ್ಯಮದ ಒಂದು ಮುಖ್ಯ ಭಾಗವಾಗಿದ್ದರು.ಹಾಲು ಕೊಡದ ಗೋವನ್ನು ಸಾಕುವ ವೆಚ್ಚ ಮಾಂಸಾ ಹಾರಿಗಳಿಂದಾಗಿ ಕಡಿಮೆಯಾಗುತ್ತಿತು. 
ಇದೀಗ ಜೀವನದಲ್ಲಿ ಯಾವತ್ತೂ ದನವನ್ನೇ ಸಾಕದ ಜನರು ದನದ ರಕ್ಷಣೆಗೆ ನಿಂತಿದ್ದಾರೆ. ಮನೆಯಲ್ಲಿ ಗೊಡ್ಡು ದನಗಳಿದ್ದರೂ ಅದನ್ನು ಮಾರಲಾಗದಂತಹ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಒಂದೆಡೆ ಕಾನೂನು, ಇನ್ನೊಂದೆಡೆ ಸಂಘ ಪರಿವಾರದ ಗೂಂಡಗಳು, ದನ ಸಾಕಾನೆಯೇ ರೈತರಿಗೆ ತಲೆ ನೋವಿನ ವಿಷಯವಾಗಿ ಬಿಟ್ಟಿದೆ. ಜೊತೆಗೆ ಹಾಲು ಕೊಡದ ದನವನ್ನೂ ಕೊತ್ತಿಗೆಯಲ್ಲಿಟ್ಟು ಸಾಕುವ ಭಾರ. ಹೈನು ಉದ್ಯಮ ಇದರಿಂದ ನಷ್ಟದಾಯಕವಾಗುತ್ತಿದೆ. ಮಗಳ ಮದುವೆ, ಇನ್ನಿತರ ಕಾರ್ಯಕ್ರಮ ಇದ್ದರೆ ದನ ಮಾರಿ ಹಣ ಹೊಂದಾಣಿಕೆ ಮಾಡುವ ಜನರು ಇದೀಗ ದನವನ್ನು ಸಾಕೋದಕ್ಕೆ ಸಾಲ ಮಾಡಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕಾರಣಕ್ಕೆ ದನ ಸಾಕೊದರಿಂದ ರೈತರು ಹಿಂದೆ ಸರಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೂಜಿಸೂದಕ್ಕೂ ದನ ಸಿಗೋದು ಕಷ್ಟವಾಗಲಿದೆ. ಗಂಧದ ಮರಗಳಿಗೆ ಬಂದ ಆಪತ್ತು ಗೋವುಗಳಿಗೂ ಬರಲಿದೆ. ಗೋ ರಕ್ಷಣೆಯ ಹೆಸರಲ್ಲಿ ಗೊಸಾಕಾಣೆಯನ್ನು ವ್ಯವಸ್ಥಿತವಾಗಿ ದುಷ್ಕರ್ಮಿಗಳು ನಾಶ ಮಾಡುತ್ತಿದ್ದಾರೆ.  ಸಂಸ್ಕೃತವನ್ನು ಬಳಸದಂತೆ ಶೂದ್ರರಿಗೆ ಒತ್ತಡ ಹೇರಿ ಸಂಸ್ಕೃತವನ್ನು ಕೊಂದವರು ಇದೀಗ ಗೋವುಗಳ ಸಂತಾನವನ್ನೇ ಅಳಿಸಲು ಹೊರಟಿದ್ದಾರೆ. ಯಾವುದೇ ಪ್ರಾಣಿ ಸಾಕಣೆ ಲಾಭದಾಯಕ ಇಲ್ಲದೆ ಹೋದರೆ ಯಾರದಾರೂ ಯಾಕೆ ಸಾಕುತ್ತಾರೆ? ಇದು ಗೋವಿನ ಹೆಸರಿನಲ್ಲ್ಲಿಸರಕಾರದಿಂದ ಅನುದಾನ ಲೂಟಿ ಹೊಡೆದ ಸ್ವಾಮೀಜಿಗಳಿಗೆ ಹೇಗೆ ಅರ್ಥವಾಗುತ್ತದೆ? 
ಕೃಷಿ, ಹೈನುಗಾರಿಕೆ ಅರ್ಥ ಶಾಸ್ತ್ರದ ಭಾಗವೆ ಹೊರತು ಧರ್ಮ ಶಾಸ್ತ್ರದ ಭಾಗ ಅಲ್ಲ ಎಂದು ಇವರಿಗೆ ತಿಳಿಸಿ ಕೊಡುವವರು ಯಾರು?

Sunday, November 1, 2015

ತಿತ್ಲೀ: ಕತ್ತಲೆಯ ಬದುಕನ್ನು ತೆರೆದಿಟ್ಟ ಬೆಹ್ಲ್

‘ಫ್ಯಾಮಿಲಿ!’ ಗಗನಚುಂಬಿ ಕಟ್ಟಡಗಳ ಪದತಳದಲ್ಲಿ ಹಾವುಗಳಂತೆ ತೆವಲುವ ಓಣಿಗಳ ಇಕ್ಕೆಲಗಳ ಚಾಳ್‌ಗಳ ಪುಟ್ಟ ಕೋಣೆಯೊಳಗೆ ಕುಟುಂಬವೆಂಬ ಹೆಸರಲ್ಲಿ ಸಿಲುಕಿಕೊಂಡು ಒದ್ದಾಡುವ ಜೀವಗಳು ಮತ್ತು ಆ ಕತ್ತಲಿಂದ ಪಾರಾಗಲು ನಡೆಸುವ ಒದ್ದಾಟವೇ ‘ತಿತ್ಲೀ’. ತಿತ್ಲೀ ಕಥಾನಾಯಕನ(ಶಶಾಂಕ್ ಅರೋರಾ) ಹೆಸರು. ತನ್ನ ತಂದೆ, ಇಬ್ಬರು ಸೋದರರ ನಡುವೆ ಉಸಿರುಗಟ್ಟುವ ಸಂಬಂಧಗಳಿಗೆ ಜೋತು ಬಿದ್ದು ಒದ್ದಾಡುತ್ತಿರುವ ಈತ, ಅದರಿಂದ ಪಾರಾಗಲು ನಡೆಸುವ ಹವಣಿಕೆಯೇ ಚಿತ್ರದ ಕಥಾವಸ್ತು. ಕಾನು ಬೆಹ್ಲ್ ನಿರ್ದೇಶಿಸಿದ ಮೊತ್ತ ಮೊದಲ ಚಿತ್ರ ಇದಾಗಿದ್ದರೂ, ನಗರಗಳ ತಳದಲ್ಲಿ ಒದ್ದಾಡುತ್ತಿರುವ ಬದುಕನ್ನು ಅಷ್ಟೇ ತೀವ್ರವಾಗಿ ತೆರೆದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ, ಪ್ರೇಕ್ಷಕರಿಗೆ ಸಣ್ಣದೊಂದು ಶಾಕ್ ಕೊಟ್ಟಿದ್ದಾರೆ. ಯಾವುದೇ ಭಾರೀ ಬಜೆಟ್‌ಗಳಿಲ್ಲದ, ಸ್ಟಾರ್‌ಗಳಿಲ್ಲದ ಈ ಚಿತ್ರ, ನಮ್ಮನ್ನು ತಟ್ಟುವುದೇ ನಮಗೆ ಅಪರಿಚಿತವಾದ ಬದುಕನ್ನು ತೆರೆದಿಡುವ ಮೂಲಕ.

ಅಪರಾಧ, ಹಿಂಸೆ, ಕ್ರೌರ್ಯದ ಹೊಗೆಯ ನಡುವೆ ಆ ಕುಟುಂಬದ ಕೊಂಡಿಗಳು ನಿಂತಿವೆ. ಸಣ್ಣ ಚಾಳ್‌ನಲ್ಲಿ, ತಿತ್ಲೀ ತನ್ನ ಸೋದರರಾದ ವಿಕ್ರಮ್ (ರಣವೀರ್ ಶೋರೆ), ಪ್ರದೀಪ್ (ಅಮಿತ್ ಸಾಯಲ್) ಹಾಗೂ ತಂದೆ(ಲಲಿತ್ ಬೆಹ್ಲ್) ಜೊತೆಗೆ ಬದುಕುತ್ತಿರುತ್ತಾನೆ. ತಿತ್ಲೀ ಕಿರಿಯವನಾದರೆ, ಹಿರಿಯವನು ವಿಕ್ರಮ್. ಈತ ಹೆಸರಿಗೆ ಮಾಲ್ ಒಂದರಲ್ಲಿ ವಾಚ್‌ಮೆನ್. ಮಧ್ಯ ರಾತ್ರಿ ತನ್ನ ಸೋದರರ ಜೊತೆಗೆ ಒಂಟಿ ವಾಹನಗಳನ್ನು ನಿಲ್ಲಿಸಿ ದೋಚುವುದು ಕಾಯಕ. ಇಡೀ ಕುಟುಂಬ ಅದನ್ನು ದಂಧೆಯಾಗಿ ನಂಬಿಕೊಂಡಿದೆ. ಹಿಂಸೆಯ ಹೊಗೆ, ದುರ್ಬಲ ಸಂಬಂಧ, ಧೂಳುಗಳ ನಡುವೆ ಒದ್ದಾಡುತ್ತಿರುವ ಈ ಬದುಕಿನಿಂದ ಬಿಡುಗಡೆಗೊಂಡು, ತನ್ನ ಕನಸಿನ ಬದುಕೊಂದಕ್ಕೆ ಪಯಣಿಸುವ ತಹತಹಿಕೆ ತಿತ್ಲೀಯದು. ಅಣ್ಣಂದಿರ ಬಲವಂತಕ್ಕೆ ಮದುವೆಯಾಗಬೇಕಾಗುತ್ತದೆ. ಮದುಮಗಳು ನೀಲು (ಶಿವಾನಿ ರಘುವಂಶಿ) ಬೇರೊಬ್ಬ ಬಿಲ್ಡರ್ ಪ್ರಿನ್ಸ್ ಎಂಬಾತನ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ಆತ ತನ್ನನ್ನು ಪ್ರೀತಿಸಿದ್ದಾನೆ ಎಂದು ನಂಬಿದ್ದಾಳೆ. ಇದೇ ಸಂದರ್ಭದಲ್ಲಿ ತಾನು ಮದುವೆಯಾಗಿ ಬಂದಿರುವ ಮನೆಯ ವಾಸ್ತವ ಆಕೆಗೆ ಅರಿವಾಗುತ್ತದೆ. ತಿತ್ಲೀಗೂ ಆಕೆಯ ಮೇಲೆ ಪ್ರೀತಿಯಿಲ್ಲ. ಅವನ ಗುರಿ ಈ ಮನೆಯಿಂದ ಪಾರಾಗುವುದು. ಅವಳದು, ತನ್ನ ಪ್ರೇಮಿಯನ್ನು ಸೇರಿ ಹೊಸ ಬದುಕು ಕಂಡುಕೊಳ್ಳುವುದು. ತಿತ್ಲೀ ತನ್ನ ಪ್ರಯತ್ನಕ್ಕೆ ಪತ್ನಿಯ ಸಹಾಯ ಬಯಸುತ್ತಾನೆ. ಆಕೆಯಿಂದ ದುಡ್ಡಿನ ನೆರವು ಬಯಸುತ್ತಾನೆ. ಇದೇ ಸಂದರ್ಭದಲ್ಲಿ ಪ್ರಿನ್ಸ್‌ನನ್ನು ಸೇರಲು ತಾನು ಸಹಕರಿಸುತ್ತೇನೆ ಎಂದು ಭರವಸೆ ನೀಡುತ್ತಾನೆ. ಇವರಿಬ್ಬರು ತಮ್ಮ ತಮ್ಮ ಗುರಿಯನ್ನು ಸೇರಲು ನಡೆಸುವ ಒದ್ದಾಟ ಮತ್ತು ಕೊನೆಯಲ್ಲಿ ಇವರಿಬ್ಬರು ವಾಸ್ತವವನ್ನು ಅರಿತುಕೊಂಡು, ಮೂರನೆಯ ದಾರಿಯೊಂದನ್ನು ಆಯ್ದುಕೊಳ್ಳುವುದು ಚಿತ್ರದ ಒಟ್ಟು ಕತೆ.

ಕುಟುಂಬ ಎಂದಾಕ್ಷಣ ಬಾಲಿವುಡ್‌ನಲ್ಲಿ ನೆನಪಾಗುವುದು ಹಮ್ ಆಪ್ ಕೆ ಕೌನ್, ಹಮ್ ಸಾತ್ ಸಾತ್ ಹೇ ಅಥವಾ ಕರಣ್ ಜೋಹರ್ ಅವರ ಕಭಿ ಖುಷಿ ಕಭಿ ಗಮ್. ಆದರೆ ಇಲ್ಲಿ, ದಿಲ್ಲಿಯಂತಹ ಶಹರದ ತಳದಲ್ಲಿರುವ ಕಾಳ ಕತ್ತಲೆಯ ಅಪರಿಚಿತ ಬದುಕನ್ನು ಬೆಹ್ಲ್ ತೆರೆದಿಟ್ಟಿದ್ದಾರೆ. ಸರಳ ನೈಯ್ಗೆಯ, ಕಡಿಮೆ ಪಾತ್ರಗಳ ಚಿತ್ರ ಇದಾಗಿದ್ದರೂ, ಇದು ಕೊಡುವ ಅನುಭವ ಮಾತ್ರ ಗಾಢವಾದದ್ದು. ಮೂರು ಮುಖ್ಯ ಪಾತ್ರಗಳ ಅಭಿನಯ ಗಮನಾರ್ಹ. ತಿತ್ಲೀ ಪಾತ್ರದಲ್ಲಿ ಶಶಾಂಕ್ ಹಾಗೂ ವಿಕ್ರಮ್ ಪಾತ್ರದಲ್ಲಿ ರಣವೀರ್ ನಟನೆ ಇಡೀ ಚಿತ್ರದ ಹೆಗ್ಗಳಿಕೆ. ವಂಚನೆ, ಮೋಸ, ದ್ರೋಹ, ಹಿಂಸೆಯನ್ನು ಸುತ್ತಿಕೊಂಡ ಚಾಳ್‌ಗಳೊಳಗಿನ ಅಸಹನೀಯ ಬದುಕನ್ನು ಒಂದು ಥ್ರಿಲ್ಲರ್ ಮಿಶ್ರಿತ ಚಿತ್ರವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಪೂರ್ಣ ಯಶಸ್ವಿಯಾಗಿದ್ದಾರೆ. ಬೆಹ್ಲ್ ಅವರಿಂದ ಇನ್ನಷ್ಟು ಪರಿಣಾಮಕಾರಿಯಾದ ಚಿತ್ರಗಳನ್ನು ನಿರೀಕ್ಷಿಸಬಹುದಾಗಿದೆ.

Sunday, October 25, 2015

ಲಾರ್ಡ್ ಲಿವಿಂಗ್‌ಸ್ಟನ್ 7000 ಕಂಡಿ: ಕಾಲದಾಚೆಗೊಂದು ವಿಫಲ ಪಯಣ

ನಿರ್ದೇಶಕನ ಬಳಿ ಒಂದು ಒಳ್ಳೆಯ ಚಿತ್ರ ಮಾಡಬೇಕು ಎನ್ನುವ ಉದ್ದೇಶ ಇದ್ದರೆ ಸಾಕಾಗುವುದಿಲ್ಲ. ಅದಕ್ಕೆ ಬೇಕಾದ ತಯಾರಿಯೂ ಸಾಕಷ್ಟಿರಬೇಕಾಗುತ್ತದೆ. ವರ್ತಮಾನವನ್ನು ಮುಟ್ಟುವ ಕತೆಯ ಎಳೆಯನ್ನು ಇಟ್ಟುಕೊಂಡೂ ಪ್ರತಿಭಾವಂತ ನಿರ್ದೇಶಕ ಅನಿಲ್ ರಾಧಾಕೃಷ್ಣನ್ ಮೆನನ್ ‘ಲಾರ್ಡ್ ಲಿವಿಂಗ್‌ಸ್ಟನ್7000 ಕಂಡಿ’ ಚಿತ್ರದಲ್ಲಿ ವಿಫಲವಾಗುವುದರ ಹಿಂದಿರುವ ಕಾರಣ ಒಂದೇ, ತಯಾರಿಯ ಕೊರತೆ. ಚಿತ್ರಕತೆ ಅತ್ಯಂತ ದುರ್ಬಲವಾಗಿರುವುದು. ಚಿತ್ರದ ಬಿಗಿ ನಿರೂಪಣೆಗೆ ಧಕ್ಕೆ ತರುವ ಪಾತ್ರ ಪೋಷಣೆ, ಪೂರ್ವನಿರ್ಧರಿತವಾದ ಚಿತ್ರದ ನಡೆ ಚಿತ್ರದ ಇನ್ನಷ್ಟು ಋಣಾತ್ಮಕ ಅಂಶಗಳು. ಒಂದು ಒಳ್ಳೆಯ ಉದ್ದೇಶದಿಂದ ಮಾಡಿದ ಚಿತ್ರ, ಅದ್ಭುತ ಛಾಯಾಗ್ರಹಣದ ಹೊರತಾಗಿಯೂ, ಬಿಗಿ ನಿರ್ದೇಶನದ ಲೋಪದಿಂದಾಗಿ ಪರದೆಯ ಮೇಲೆ ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ. ಇನ್ನಷ್ಟು ಪೂರ್ವ ಸಿದ್ಧತೆ ಇದ್ದಿದ್ದರೆ ಈ ಚಿತ್ರ ಖಂಡಿತವಾಗಿಯೂ ಭಾರತದ ‘ಅವತಾರ್’ ಎಂದು ಕರೆಯಲ್ಪಡುತ್ತಿತ್ತೋ ಏನೋ. 
ಅನಿಲ್ ರಾಧಾಕೃಷ್ಣನ್ ಎಂದಾಕ್ಷಣ ನಮಗೆ ನೆನಪಾಗುವುದು ‘ನಾರ್ಥ್ 24 ಕಾದಂ’. ಫಾಸಿಲ್ ಮತ್ತು ನೆಡುಮುಡಿ ವೇಣು ನಟಿಸಿರುವ ಈ ಚಿತ್ರ ವಿಮರ್ಶಕರನ್ನೂ ಪ್ರೇಕ್ಷಕರನ್ನೂ ಸಮಾನವಾಗಿ ಸೆಳೆದಿತ್ತು. 24 ಕಾದಂ ಎನ್ನುವುದು ದಾರಿಯನ್ನು ಅಳೆಯುವ ಹಳ್ಳಿಯ ಜನರ ಒಂದು ಮಾಪನ. ನಗರದಲ್ಲಿ ಐಟಿ ಜೀವನದಲ್ಲಿ ಒಂದಾಗಿ ಬಿಟ್ಟ ನಾಯಕ, ಆಕಸ್ಮಿಕವಾಗಿ ಹಳ್ಳಿಯ ಕಡೆಗೆ ಪಯಣ ಬೆಳೆಸುವ ಕತೆ ಮತ್ತು ಅದು ಅವನ ಬದುಕಿನಲ್ಲಿ ಮಾಡುವ ಬದಲಾವಣೆಯೇ ಚಿತ್ರದ ಕತೆ. ಪ್ರತಿ ದೃಶ್ಯಗಳನ್ನು ಹೃದಯ ಮುಟ್ಟುವಂತೆ ನಿರೂಪಿಸಿದ್ದರು ನಿರ್ದೇಶಕ ಮೆನನ್. ಒಂದು ರೀತಿಯಲ್ಲಿ ‘ನಾಥ್ 24 ಕಾದಂ’ ಗಿಂತ ಇನ್ನಷ್ಟು ದೂರದ ಪಯಣ ‘7000 ಕಂಡಿ’. ಕಾದಂ ಚಿತ್ರದಲ್ಲಿ ಈ ಕಂಡಿಯ ಅಳತೆಯೂ ಬರುತ್ತದೆ. ಈ ಅಳತೆ ಅತ್ಯಂತ ಪುರಾತನವಾದುದು. ನಗರದಲ್ಲಿ ಬೇರೆ ಬೇರೆ ರೀತಿಯ ಒತ್ತಡಗಳಿಗೆ ಸಿಲುಕಿರುವ ಕೆಲವರು, ಹೀಗೊಂದು 7000 ಕಂಡಿ ದೂರದ ಪ್ರಯಾಣಕ್ಕೆ ತೆರೆದುಕೊಳ್ಳುವುದೇ ಕತೆಯ ಮುಖ್ಯ ವಸ್ತು. ಫಿಲಿಪ್ಪೋಸ್ ಜಾನ್ ವರ್ಕಿ(ಕುಂಜಾಕೋ ಬೋಬನ್) ಎಂಬ ಪ್ರಕೃತಿ ತಜ್ಞ, ಪರಿಸರ ಪ್ರಿಯ, ಅನ್ವೇಷಕನಿಂದ ನಗರದಲ್ಲಿ ವಿವಿಧ ರೀತಿಯಲ್ಲಿ ಜೀವನ ಮಾಡುತ್ತಿರುವ ಕೆಲವರಿಗೆ ಇಂತಹದೊಂದು ಪ್ರವಾಸದ ಆಹ್ವಾನ ಬರುತ್ತದೆ. ಆ ಆಹ್ವಾನವನ್ನು ಕೆಲವರಷ್ಟೇ ಸ್ವೀಕರಿಸಿ, ಸುದೀರ್ಘವಾದ ಕಾಡು ಪ್ರಯಾಣಕ್ಕೆ ಸಿದ್ಧವಾಗುತ್ತಾರೆ. ಒಬ್ಬ ಆದಿವಾಸಿಯ ಮೂಲಕ ಅವರು ಕಾಲು ನಡಿಗೆಯ ಮೂಲಕ 7000 ಕಂಡಿ ಅರಣ್ಯ ಪ್ರದೇಶವನ್ನು ಸೇರಬೇಕು. ಈ ಪ್ರದೇಶದ ಕುರಿತಂತೆ ವದಂತಿಗಳಿವೆ. ಭೂತಪ್ರೇತಗಳ ಕತೆಗಳೂ ಇವೆ. ಆದರೆ ಈ ನಿಗೂಢ ಅರಣ್ಯ ಪ್ರದೇಶದಲ್ಲಿ ಹೊರ ಜಗತ್ತಿನ ಪರಿಚಯವೇ ಇಲ್ಲದೆ ಬುಡಕಟ್ಟು ಜನಾಂಗವೊಂದು ಬದುಕುತ್ತಿರುತ್ತದೆ. ಅವರದೇ ಸಂಸ್ಕೃತಿ, ಅವರದೇ ತಂತ್ರಜ್ಞಾನ, ನಗರದ ಸ್ಪರ್ಶವೇ ಇಲ್ಲದ ಅವರ ಬದುಕಿನ ಶೈಲಿ. ದಟ್ಟ ಮರಗಳ ನಡುವೆ, ಪರಿಸರಕ್ಕೆ ಅನ್ಯೋನ್ಯವಾಗಿ ಬೆಸೆದುಕೊಂಡಿರುವ ಅವರ ಜೀವನ. ಜಾನ್ ವರ್ಕಿಯ ಕಾರಣದಿಂದಾಗಿ ಒಂದಿಷ್ಟು ಪಾತ್ರಗಳು ಆ ಪ್ರದೇಶವನ್ನು ತಲುಪುತ್ತವೆ. ಆದರೆ ಒಂದೆಡೆ 7000 ಕಂಡಿಯಲ್ಲಿ ಜೀವಿಸುತ್ತಿರುವ ಆದಿವಾಸಿಗಳ ಬದುಕು ಅಪಾಯದಲ್ಲಿದೆ. ಬಹುದೊಡ್ಡ ಬಿಲ್ಡರ್‌ಗಳು ಕಾಡು ಕಡಿದು ಅಭಿವೃದ್ಧಿ ಯೋಜನೆಗೆ ನೀಲನಕಾಶೆ ರೂಪಿಸಿದ್ದಾರೆ. ಅವರಿಂದ ಈ ಬುಡಕಟ್ಟು ಜನರನ್ನು ಈ ಯಾತ್ರಿಗಳು ಪಾರು ಮಾಡುವಲ್ಲಿ ಯಶಸ್ವಿಯಾಗುತ್ತಾರೋ, ಇಲ್ಲವೋ ಎನ್ನುವುದು ಚಿತ್ರದ ಒಟ್ಟು ಕತೆ.
ಚಿತ್ರ ಹಾಲಿವುಡ್‌ನ ‘ಅವತಾರ್’ನ್ನು ಹೋಲುತ್ತದೆ. ದಟ್ಟ ಕಾಡನ್ನು ಛಾಯಾಗ್ರಾಹಕ ರಾಜೇಶ್ ನಾಯರ್ ಕಟ್ಟಿಕೊಟ್ಟ ರೀತಿ ಅದ್ಭುತವಾದುದು. ಇಲ್ಲಿ ಕಾಡು ಬಿಟ್ಟರೆ ನೋಡುವುದಕ್ಕೆ ಏನೂ ಇಲ್ಲ. ಈ ಪ್ರಯಾಣ ಒಂದು ಸಾಕ್ಷ ಚಿತ್ರವಾಗದಂತೆ ನೋಡಿಕೊಳ್ಳುವುದು ನಿರ್ದೇಶಕರ ಹೊಣೆಗಾರಿಕೆಯಾಗಿತ್ತು. ಇಲ್ಲಿರುವ ಎಲ್ಲ ಪಾತ್ರಗಳೂ ಬಿಡಿ ಬಿಡಿಯಾಗಿವೆ ಮತ್ತು ಪೇಲವವಾಗಿವೆ. ಚಿತ್ರಕತೆಯ ಹೆಣಿಗೆ ದುರ್ಬಲವಾಗಿದೆ. ಆದಿವಾಸಿಗಳ ಬಗ್ಗೆ ಆರಂಭದಲ್ಲಿ ಕುತೂಹಲ ಹುಟ್ಟುತ್ತದೆಯಾದರೂ, ಅವುಗಳೂ ಅಂತಿಮವಾಗಿ ಕೃತಕವೆನಿಸುತ್ತದೆ. ನಿರ್ದೇಶಕನ ಆಶಯವಷ್ಟೇ ನಮ್ಮ ಗಮನಸೆಳೆಯುತ್ತದೆ. ಪರದೆಯ ಮೇಲೆ ಅದಕ್ಕೆ ಜೀವಕೊಡುವಲ್ಲಿ, ತನ್ನ ಆಶಯವನ್ನು ಸಿನೆಮಾವಾಗಿ ಮಾರ್ಪಡಿಸುವಲ್ಲಿ ಅವರು ವಿಫಲರಾಗಿದ್ದಾರೆ.
ಆದಿವಾಸಿಗಳು, ಬುಡಕಟ್ಟು, ಕಾಡು ಹಾಗೂ ಅಭಿವೃದ್ಧಿಯ ನಡುವಿನ ಸಂಘರ್ಷ ವರ್ತಮಾನದ ಜ್ವಲಂತ ಸಮಸ್ಯೆಯಾಗಿದೆ. ಇಂತಹದೊಂದು ವಸ್ತುವನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಟ ರಾಧಾಕೃಷ್ಣನ್ ಸಾಹಸವನ್ನು ಮೆಚ್ಚಬೇಕು. ಅವರ ಅಗಾಧ ಶ್ರಮ, ಎಲ್ಲ ವ್ಯರ್ಥವಾಯಿತೇ ಎಂಬ ಖೇದ ನಮ್ಮನ್ನು ಬಹಳ ಸಮಯ ಕಾಡುತ್ತದೆ. ಅದೇನೇ ಇರಲಿ, ಕಾಡು, ಮರ, ಪರಿಸರ, ಬುಡಕಟ್ಟು ಜನರ ಬದುಕಿನ ಕುರಿತಂತೆ ಕಾಳಜಿಯುಳ್ಳ, ಮಾನವೀಯ ಸಂವೇದನೆಗಳ ಕುರಿತು ಗೌರವವುಳ್ಳವರು ಒಮ್ಮೆ ಈ ಚಿತ್ರ ನೋಡಬಹುದು. ನಿರ್ದೇಶಕನ ವೈಫಲ್ಯದ ನಡುವೆಯೂ ಕೆಲವು ದೃಶಗಳು ನಮ್ಮೊಳಗೆ ಉಳಿದುಕೊಳ್ಳುತ್ತವೆ. 

Wednesday, October 14, 2015

ರಕ್ತದ ವಾಸನೆ

ಜ್ಞಾನಪೀಠ ಪ್ರಶಸ್ತಿ ವಿಜೇತರೂ, ಅಕಾಡೆಮಿಗಳ ಹಲವು ಗೌರವಗಳನ್ನು ತನ್ನದಾಗಿಸಿಕೊಂಡವರೂ ಆಗಿರುವ ಹಿರಿಯ ಕಾದಂಬರಿಕಾರ, ಚಿಂತಕ ಸದಾಶಿವರಾಯರು ಅಂದಿನ ದಿನಪತ್ರಿಕೆಯ ಮುಖ್ಯ ಸುದ್ದಿಯನ್ನು ಮೂರನೇಯ ಬಾರಿ ಓದುತ್ತಿದ್ದಾರೆ. ಎಲ್ಲ ಪತ್ರಿಕೆಗಳಲ್ಲೂ ಒಂದೇ ತಲೆಬರಹ. ಎಂಟು ಕಾಲಂ ಸುದ್ದಿ. ‘‘ಖ್ಯಾತ ಚಿಂತಕ, ಲೇಖಕ ಎಂ. ಎಂ. ಕೊಟ್ರಪ್ಪ ಹತ್ಯೆ’’. ಈಗಾಗಲೇ ಹತ್ತಾರು ಫೋನುಗಳು ಆ ಕುರಿತಂತೆಯೇ ಬಂದಿವೆ. ಅವರು ಹೆಚ್ಚು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಎಲ್ಲ ಕರೆಗಳಿಗೂ ಚುಟುಕಾಗಿಯೇ ಉತ್ತರಿಸಿ, ಫೋನನ್ನು ಕತ್ತರಿಸುತ್ತಿದ್ದರು.
‘‘ಈ ಪತ್ರಿಕೆಗಳು ಸುಮ್ಮನೆ ಉದ್ವಿಗ್ನ ವಾತಾವರಣ ಸೃಷ್ಟಿಸುತ್ತಾ ಇವೆ...ಇಲ್ಲವಾದರೆ ಈತನ ಇಷ್ಟು ದೊಡ್ಡ ಫೋಟೋ ಛಾಪಿಸುವ ಅಗತ್ಯವಿತ್ತೆ....’’ ಎಂದು ಅವರು ಗೊಣಗಿಕೊಂಡದ್ದು ಐದನೇ ಬಾರಿ. ‘‘ಇತ್ತೀಚೆಗೆ ಪತ್ರಿಕೆ ತುಂಬಾ ಕೊಲೆಗಳೇ ಕೊಲೆಗಳು....’’ ಎಂದು ಮತ್ತೊಮ್ಮೆ ಗೊಣಗಿಕೊಂಡರು.
‘‘ಸದಾ ವಿವಾದಾತ್ಮಕ ಹೇಳಿಕೆ ನೀಡುವುದು, ಸಂಶೋಧನೆಯ ಹೆಸರಿನಲ್ಲಿ ವಿವಾದಗಳನ್ನು ಬರೆಯುವುದು, ಸೃಷ್ಟಿಸೂದು ಕೊಟ್ರಪ್ಪನಿಗೆ ಒಂದು ಚಟ ಆಗಿತ್ತು...ಕಲೆಯನ್ನು ಕಲೆಯಾಗಿ ನೋಡಿ ಬರೆಯುವವರ ಕುರಿತಂತೆ ಒಂದು ಕೊಂಕು ಇಟ್ಟುಕೊಂಡಿದ್ದರು...’’ ತನ್ನ ತೀರಾ ಖಾಸಗಿ ಗೆಳೆಯರೊಂದಿಗೆ ಮಾತ್ರ ಇದನ್ನು ಹಂಚಿ ಕೊಂಡಿದ್ದರು ‘‘ಆದರೂ ಆತನ ಬರವಣಿಗೆಯಲ್ಲಿ ಪ್ರಾಮಾಣಿಕತೆಯಿತ್ತು...’’ ಎಂದೂ ಕೊನೆಗೆ ಸೇರಿಸಿದ್ದರು.
ಮೊಬೈಲ್ ಮತ್ತೆ ರಿಂಗಣಿಸಿತು. ‘ಸಮಾಜವಾಣಿಯ ಸಂಪಾದಕರಿರಬೇಕು, ಅಭಿಪ್ರಾಯ ಕೇಳುವುದಕ್ಕೆ. ಎತ್ತಿಕೊಂಡರು ‘‘ಕೊಟ್ರಪ್ಪ ಅವರ ಸಾವು ಸಂಶೋಧನಾ ಲೋಕಕ್ಕೆ ಆಗಿರುವ ಅತಿ ದೊಡ್ಡ ನಷ್ಟ. ನನಗೆ ತುಂಬಾ ಆತ್ಮೀಯರಾಗಿದ್ದರು. ನನ್ನಭುವನಾಭಿರಾಮಕಾದಂಬರಿಯ ಬಗ್ಗೆ ವಾರದ ಹಿಂದೆ ಫೋನ್ನಲ್ಲಿ ಅರ್ಧಗಂಟೆ ಮಾತನಾಡಿದ್ದರು. ಅವರಿಗೆ ಆ ಕಾದಂಬರಿ ತುಂಬಾ ಇಷ್ಟವಾಗಿತ್ತು.’’ ಸಾಹಿತ್ಯ ಲೋಕದ ಸ್ವೋಪಜ್ಞತೆ...ಆನುಷಂಗಿಕ...ಅನುಸಂಧಾನ... ಹೀಗೆ ಒಂದಿಷ್ಟು ಪಾರಿಭಾಷಿಕ ಶಬ್ದಗಳನ್ನಿಟ್ಟು ಪತ್ರಕರ್ತನ ಜೊತೆಗೆ ಸಂಕೀರ್ಣವಾಗಿ, ತೂಕದ ಮಾತುಗಳನ್ನಾಡಿದರು.
ಸಂಪಾದಕರು ಕೊನೆಯ ಪ್ರಶ್ನೆ ಕೇಳಿದರು ‘‘ಸಾರ್...ಈ ಕೊಲೆಯ ಕುರಿತಂತೆ ಏನು ಹೇಳುತ್ತೀರಿ...?’’
ಸದಾಶಿವರಾಯರು ಸಣ್ಣಗೆ ಕೆಮ್ಮಿದರು. ಪೋನ್ನಲ್ಲಿ ಸಣ್ಣದೊಂದು ಡಿಸ್ಟರ್ಬೆನ್ಸ್...‘‘ನೀವು ಮಾತನಾಡುತ್ತಿರುವುದು ಸರಿಯಾಗಿ ಕೇಳಿಸುತ್ತಾ ಇಲ್ಲ...ಇನ್ನೊಮ್ಮೆ ಕೇಳಿ...’’ ಎಂದರು.
ಸಂಪಾದಕರು ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಜೋರಾಗಿ ಕೇಳಿದರು.
 ‘‘ನೋಡಿ...ಹಿಂಸೆಯನ್ನು ಗಾಂಧೀಜಿ ವಿರೋಧಿಸಿದ್ದರು. ಹಿಂಸೆಯೆನ್ನುವುದು ವರ್ತಮಾನದ ವಾಸ್ತವಿಕ ತಳಹದಿಯಲ್ಲಿ ಬೇರೆ ಬೇರೆ ರೂಪಗಳನ್ನು, ವ್ಯಾಖ್ಯಾನಗಳನ್ನು ಪಡೆದುಕೊಳ್ಳುತ್ತಿರುವುದು....’’
ಸಂಪಾದಕರು ಅರ್ಥವಾಗದೆ ಮತ್ತೊಮ್ಮೆ ಪ್ರಶ್ನಿಸಿದರು ‘‘ಸಾರ್...ಈ ಕೊಲೆಯ ಕುರಿತಂತೆ ನಿಮ್ಮ ಅಭಿಪ್ರಾಯವೇನು...?’’
ಸದಾಶಿವರಾಯರು ಮತ್ತೆ ಸಣ್ಣಗೆ ಕೆಮ್ಮಿದರು. ‘‘ಸಾಹಿತಿಗಳು ಕೊಲೆಯ ಬಗ್ಗೆ ಏನು ಮಾತನಾಡುವುದು...? ಪೊಲೀಸರು ಅದರ ಕುರಿತಂತೆ ಮಾತನಾಡಬೇಕು. ನಮ್ಮ ಕೆಲಸ ಬರೆಯುವುದು. ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು...ಆದರೆ ಹಿಂಸೆ ಸಲ್ಲ ಎನ್ನುವುದನ್ನು ನಾನು ಗಟ್ಟಿಯಾಗಿ ಹೇಳಲು ಇಷ್ಟ ಪಡುತ್ತೇನೆ....’’ ಎಂದು ಫೋನ್ ಕತ್ತರಿಸಿದರು.
ಕೆಲವು ಇಂಗ್ಲಿಷ್ ಪತ್ರಿಕೆಗಳ, ಚಾನೆಲ್ಗಳ ಜೊತೆಗೆ ರಾಯರು ಸುದೀರ್ಘವಾಗಿ ಮಾತನಾಡಿದರು. ಕೊಟ್ರಪ್ಪ ಅವರ ವಿಮರ್ಶೆಯ ಹಿರಿಮೆಯನ್ನು ಕೊಂಡಾಡಿದರು. ತನ್ನಭುವನಾಭಿರಾಮಕಾದಂಬರಿಯ ಕುರಿತಂತೆ ಕೊಟ್ರಪ್ಪ ಅವರಿಗೆ ಇದ್ದ ಅಗಾಧ ಪ್ರೀತಿಯನ್ನು ಹಂಚಿಕೊಂಡರು. ಇತ್ತೀಚೆಗಷ್ಟೇ ಒಂದೇ ವೇದಿಕೆಯನ್ನು ಇಬ್ಬರೂ ಹಂಚಿಕೊಂಡದ್ದು ನೆನಪಿಸಿಕೊಂಡರು. ‘ಸಮಾಜ ಸೌಜನ್ಯವನ್ನು, ಸೌಹಾರ್ದವನ್ನು ಮರೆಯುತ್ತಿರುವುದರ ಬಗ್ಗೆದುಃಖ ವ್ಯಕ್ತಪಡಿಸಿದರು. ‘ಕೊಟ್ರಪ್ಪ ಅವರು ಇನ್ನೂ ಇರಬೇಕಾಗಿತ್ತು, ಅವರ ಸಾವು ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟಎಂದರು.
    ಸದಾಶಿವರ ರಾಯರು ಗೊಂದಲದಲ್ಲಿದ್ದರು. ತಾನೀಗ ಯಾವ ರೀತಿ ಮಾತನಾಡಬೇಕು ಎನ್ನುವುದರ ಬಗ್ಗೆಯೇ ಅವರಿಗೆ ಸ್ಪಷ್ಟವಿರಲಿಲ್ಲ. ಇನ್ನೂ ಒಂದಿಷ್ಟು ಗಟ್ಟಿಯಾಗಿ ಮಾತನಾಡೋಣವೆ? ಆದರೆ ಸಾಹಿತ್ಯ ಲೋಕ ಕೊಟ್ರಪ್ಪ ಅವರ ಸಾವನ್ನು ನಿಜಕ್ಕೂ ಗಂಭೀರವಾಗಿ ತೆಗೆದುಕೊಂಡಿದೆಯೆ? ಅಥವಾ ಕೊಲೆಯ ರೋಚಕತೆಯನ್ನು ಅವರು ಆರಾಧಿಸುತ್ತಿದ್ದಾರೆಯೆ? ಮಾಧ್ಯಮಗಳು ಆಸಕ್ತಿವಹಿಸುತ್ತಿರುವುದನ್ನು ನೋಡಿದರೆ ಸಾಹಿತ್ಯ ವಲಯ ಗಂಭೀರವಾಗಿ ತೆಗೆದುಕೊಂಡಿರಲೂ ಸಾಕು. ಅಥವಾ ಮಾಧ್ಯಮಗಳೇ ಇದನ್ನೊಂದು ದೊಡ್ಡ ಸುದ್ದಿ ಮಾಡಲು ಹವಣಿಸುತ್ತಿವೆಯೆ? ಕೊಟ್ರಪ್ಪ ಅವರಿಗೆ ಮಾಧ್ಯಮಗಳ ಜೊತೆಗೆ ಅಷ್ಟೇನು ಒಳ್ಳೆಯ ಸಂಬಂಧವಿದ್ದಿರಲಿಲ್ಲ. ಆದರೂ ಮಾಧ್ಯಮಗಳೇಕೆ ಇಷ್ಟು ಆಸಕ್ತಿಯಿಂದ ಕೊಲೆಯ ಹಿಂದೆ ಬಿದ್ದಿವೆ? ಬಹುಶಃ ಕೊಲೆಯ ರೋಚಕತೆಯೇ ಅಂತಹದು. ಕೊಟ್ರಪ್ಪನಿಗೆ ಎರಡು ಬಾರಿ ಲಘು ಹೃದಯಾಘಾತವಾಗಿತ್ತು. ಒಂದು ವೇಳೆ ಹೃದಯಾಘಾತದಿಂದ ಸತ್ತಿದ್ದರೆ ಇವರೆಲ್ಲ ಇಷ್ಟು ಗದ್ದಲ ಎಬ್ಬಿಸುತ್ತಿದ್ದರೆ? ಅವನ ಎಲ್ಲ ಸಂಶೋಧನೆಗಳು, ಕೃತಿಗಳು ನನ್ನ ಒಂದುಭುವನಾಭಿರಾಮಕಾದಂಬರಿಗೆ ಸರಿಗಟ್ಟ ಬಲ್ಲುದೆ? ಮೂರು ತಿಂಗಳ ಹಿಂದೆ ನನಗೆ ಯಾರೋ ಜೀವ ಬೆದರಿಕೆ ಒಡ್ಡಿದ್ದನ್ನು ಪತ್ರಿಕೆಗಳೆಲ್ಲ ಒಳಪುಟಗಳಲ್ಲಿಸಿಂಗಲ್ ಸುದ್ದಿಯಾಗಿ ಛಾಪಿಸಿದ್ದರು. ಬಹುಶಃ ಕೊಟ್ರಪ್ಪ ಪತ್ರಿಕೆಯೊಳಗೆ ಗುಟ್ಟಾಗಿ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿರಬೇಕು. ಅಥವಾ ಅವನ ಜಾತಿಯೂ ಈ ಮಟ್ಟಿನ ಪ್ರಚಾರಕ್ಕೆ ಕಾರಣವಾಗಿರಬಹುದು. ಜಾತಿಯವರೆಲ್ಲ ಒಂದಾಗಿರಬೇಕು. ಇಷ್ಟು ಕಾಳಜಿ ನನ್ನ ಜಾತಿಯವರಿಗೆ ಎಲ್ಲಿರಬೇಕು? ಏನಿದ್ದರೂ ಒಳಜಗಳದೊಳಗೆ ಸತ್ತು ಹೋಗಿದ್ದಾರೆ. ‘ಭುವನಾಭಿರಾಮಕಾದಂಬರಿಗೆ ಪ್ರಶಸ್ತಿ ಬರುವುದನ್ನು ತಡೆಯಲು ನನ್ನ ಜಾತಿಯ ಸಾಹಿತಿಗಳೇ ಅದೆಷ್ಟು ರಾಜಕೀಯ ಮಾಡಿದ್ದರು? ಸೀದಾ ಎದ್ದು ಮಲಗುವ ಕೋಣೆಗೆ ಹೋದರು. ಗೋಡೆಗೆ ಅಂಟಿಸಿರುವ ತನ್ನ ಪ್ರಶಸ್ತಿಯ ಫಲಕಕಳನ್ನೊಮ್ಮೆ ನೋಡಿದರು. ಜೊತೆಗೆ ಗೋಡೆಯಲ್ಲಿ ತೂಗುತ್ತಿರುವ ಚಿನ್ನದ ಪದಕ. 30 ಗ್ರಾಂ ಚಿನ್ನದಿಂದ ಮಾಡಿದ ಪದಕ. ಸ್ವಲ್ಪ ಹಾಗೆಯೇ ದಿಟ್ಟಿಸಿ, ಸುಸ್ತಾದವರಂತೆ ಹೋಗಿ ಮಂಚಕ್ಕೆ ಒರಗಿದರು.
 ಮತ್ತೆ ಮೊಬೈಲ್ ರಿಂಗಣಿಸಿತು. ಎತ್ತುವುದೋ? ಬೇಡವೋ? ಎನ್ಡಿ ಟಿವಿಯವರಿಂದ ಇನ್ನೂ ಫೋನ್ ಬಂದಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಒಬ್ಬ ನನ್ನದೇ ಶಿಷ್ಯ. ಅವನ ಕಾಲ್ ಆಗಿರಲೂ ಬಹುದು ಎಂದು ಎತ್ತಿದರು. ‘‘ಸಾರ್...ನಾವು ಸಾರ್...ಜನಪರ ಸಂಘರ್ಷ ಸಮಿತಿಯವರು. ಕೊಟ್ರಪ್ಪ ಅವರ ಕೊಲೆಯನ್ನು ಖಂಡಿಸಿ, ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿ, ಇದು ಅಭಿವ್ಯಕ್ತಿಯ ಮೇಲೆ ನಡೆದಿರುವ ಭಾರೀ ಹಲ್ಲೆ ಎಂದು ಟೀಕಿಸಿ ಇವತ್ತು ಸಂಜೆ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ. ನೀವು ಬರಲೇ ಬೇಕು ಸಾರ್...’’
ಸದಾಶಿವರಾಯರು ಹೇಳಿದರು ‘‘ಕೊಟ್ರಪ್ಪ ಅವರ ಕೊಲೆಯ ಸುದ್ದಿ ಕೇಳಿದ ಹೊತ್ತಿನಿಂದ ನನ್ನ ಆರೋಗ್ಯ ಸ್ವಲ್ಪ ಸರಿಯಿಲ್ಲ. ಯಾಕೋ ಎದೆಯೊಳಗೆ ಸಣ್ಣ ನೋವು....ಮತ್ತೆ ನೋಡಿ...ಸಾಹಿತ್ಯ ಮತ್ತು ರಾಜಕೀಯವನ್ನು ನಾವು ಬೇರೆ ಬೇರೆ ಮಾಡಿ ನೋಡಬೇಕು. ಮುಖ್ಯವಾಗಿ ಕೊಲೆ ಯಾಕೆ ನಡೆದಿದೆ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ ನಂತರವೇ ಪ್ರತಿಭಟನೆ ನಡೆಸಿದರೆ ಚೆನ್ನ. ಮೊದಲು ಪೊಲೀಸರು ಅವರ ಕೆಲಸ ಮಾಡಲು ನಾವು ಅವಕಾಶ ನೀಡೋಣ. ನಾವು ತೀರ್ಪುಕೊಡುವುದು ಬೇಡ. ನಾವು ಸಂಘಪರಿವಾರದವರ ತರಹ ವರ್ತಿಸಬಾರದು ನೋಡಿ....ನಮ್ಮಿಂದ ಅವರು ಕಲಿಯಬೇಕು. ನಾವು ಸಹನೆಯನ್ನು ಪಾಲಿಸಬೇಕು. ಕಾನೂನು ವ್ಯವಸ್ಥೆ ಸುಗಮವಾಗುವುದಕ್ಕೆ ಅವಕಾಶ ನೀಡಬೇಕು....ನಿಮ್ಮ ಕಾಳಜಿ ನನಗೆ ತುಂಬಾ ಖುಷಿ ಕೊಟ್ಟಿದೆ....ನೋಡಿ...ನಾನು ಬರುತ್ತಿದ್ದೆ...ಆದರೆ ಆರೋಗ್ಯ...’’
‘‘ಪರವಾಗಿಲ್ಲ ಸಾರ್. ನಿಮ್ಮ ನೈತಿಕ ಬೆಂಬಲ ನಮ್ಮ ಜೊತೆಗಿದ್ದರೆಸಾಕು....’’
‘‘ಖಂಡಿತ. ಒಮ್ಮೆ ಮನೆಗೆ ಬನ್ನಿ ನೀವು. ತುಂಬಾ ಮಾತನಾಡಲಿಕ್ಕಿದೆ. ನನ್ನ ಭುವನಾಭಿರಾಮ ಕಾದಂಬರಿ ಸಿಕ್ಕಿದೆಯಲ್ಲ ನಿಮಗೆ...ಕೊಟ್ರಪ್ಪ ಆ ಕಾದಂಬರಿಯನ್ನು ತುಂಬಾ ಹಚ್ಚಿಕೊಂಡಿದ್ದರು. ಆ ಕಾದಂಬರಿಯನ್ನು ಅವರು ಇಷ್ಟ ಪಟ್ಟಿದ್ದರು ಎನ್ನುವ ಕಾರಣಕ್ಕಾಗಿಯೇ ನಾನು ಈಗ ಇಷ್ಟ ಪಡುತ್ತಿದ್ದೇನೆ...’’ ಸದಾಶಿವರಾಯರ ಕಂಠ ಗದ್ಗದವಾಯಿತು. ತುಸು  ಹೊತ್ತು ಮೌನ
‘‘ನೋಡಿ ನನಗೆ ಮಾತನಾಡಲು ತುಂಬಾ ಕಷ್ಟವಾಗುತ್ತಿದೆ. ಇನ್ನೊಮ್ಮೆ ಸಿಗೋಣ’’ ಎಂದು ಸದಾಶಿವರಾಯರು ಫೋನ್ ಕತ್ತರಿಸಿದರು. ಸ್ವಲ್ಪ ಹೊತ್ತು ದಿಂಬಿಗೆ ತಲೆಯಾನಿಸಿ ಕಣ್ಮುಚ್ಚಿದರು. ಕೊಟ್ರಪ್ಪನ ನಗು ಕಣ್ಣ ಮುಂದೆ ಬಂತು
‘‘ಮಗುವಿನ ಹಾಗೆ ನಗುತ್ತಾನೆ ಬೋ...ಮಗ. ಒಳಗೆ ಇರುವ ಕೊಂಕು ಗೊತ್ತಾಗುವುದೇ ಇಲ್ಲ. ಎಲ್ಲಿಂದ ಕಲಿತುಕೊಂಡು ಬಂದಿದ್ದಾನೋ...’’ ವಾರದ ಹಿಂದೆ ತನ್ನ ಆತ್ಮೀಯರ ಜೊತೆಗೆ ಕೊಟ್ರಪ್ಪ ಕುರಿತು ಹಂಚಿಕೊಂಡಿದ್ದರು
‘‘ಆದರೂ ಬರೆದದ್ದಕ್ಕಾಗಿ ಒಬ್ಬನನ್ನು ಕೊಂದು ಹಾಕುವುದೆಂದರೆ?’’ ಮಲಗಿದಲ್ಲೇ ತನಗೆ ತಾನೆ ಗೊಣಗಿಕೊಂಡರು.
ಆಸ್ತಿಕಲಹ ಕೊಲೆಗೆ ಕಾರಣವಾಗಿರಬಹುದೆ? ಸರಕಾರದಿಂದ ಯಾವುದಾದರೂ ಖಾಲಿ ಸೈಟ್ ಪಡೆದುಕೊಂಡಿದ್ದಾನೆಯೆ? ಬೆಂಗಳೂರಿನಲ್ಲಿ ಸೈಟ್ ಮಾರುವ ವಿಷಯದಲ್ಲಿ ಯಾವುದಾದರೂ ಮಾಫಿಯಾವನ್ನು ಎದುರು ಹಾಕಿಕೊಂಡಿರಬಹುದೆ? ಎಂದೂ ಯೋಚಿಸಿದ್ದರು. ಆದರೆ ಅವನ ಹೆಸರಲ್ಲಿ ಯಾವ ಸೈಟೂ ಇಲ್ಲ ಎನ್ನುವುದು ವರ್ಷದ ಹಿಂದೆಯೇ ಸದಾಶಿವರಾಯರಿಗೆ ಗೊತ್ತಿತ್ತು. ಅದು ಭುವನಾಭಿರಾಮಯ ಕಾದಂಬರಿ ಪ್ರಿಂಟಿಗೆ ಹೋದ ಹೊತ್ತು. ಅದೇ ವರ್ಷ ಒಂದು ವೇದಿಕೆಯಲ್ಲಿ ಕುಶಲೋಪರಿ ಮಾತನಾಡುವಾಗ ಸದಾಶಿವರಾಯರು ಕೇಳಿದ್ದರು ‘‘ನೋಡಿ...ಈ ಮುಖ್ಯಮಂತ್ರಿಗಳು ಸಮಾಜವಾದಿ. ಒಂದಿಷ್ಟು ತತ್ವ ಸಿದ್ಧಾಂತದ ಮೇಲೆ ನಂಬಿಕೆಯಿಟ್ಟವರು. ಸಮಾಜವಾದಿ ಬರಹಗಾರರ ಮೇಲೆ ತುಂಬಾ ಪ್ರೀತಿಯಿದೆ. ನಾನು ಬೇಕಾದರೆ ಅವರಲ್ಲಿ ಮಾತನಾಡಿ ಬೆಂಗಳೂರಿನಲ್ಲಿ ಒಂದು ಸೈಟ್ ತೆಗೆಸಿಕೊಡುವೆ...ಮಕ್ಕಳಿಗಾದೀತು...ನಮ್ಮಿಂದ ಅವರಿಗೆ ಇನ್ನೇನು ಕೊಡಲು ಸಾಧ್ಯ. ಸಾಹಿತ್ಯ, ಬರಹ, ಹೋರಾಟ ಎಂದು ಬದುಕನ್ನೆಲ್ಲ ಹೀಗೇ ಕಳೆದಿದ್ದೇವೆ. ನಿಮಗೆ ಇಬ್ಬರು ಹೆಣ್ಣು ಮಕ್ಕಳು ಬೇರೆ...’’
ಕೊಟ್ರಪ್ಪ ಮಗುವಿನಂತೆ ನಕ್ಕಿದ್ದರು. ಯಾವ ಉತ್ತರವನ್ನೂ ಕೊಡಲಿಲ್ಲ. ‘‘ಒಳಗೊಳಗೇ ಆಸೆಯಿದೆ. ಬಾಯಿ ಬಿಟ್ಟು ಕೇಳಲು ಈತನ ಈಗೋ ಬಿಡುವುದಿಲ್ಲ’’ ಸದಾಶಿವರ ರಾಯರು ಒಳಗೊಳಗೆ ಮಸೆದುಕೊಂಡಿದ್ದರು.
‘‘ಏನು ಮುಖ್ಯಮಂತ್ರಿ ಜೊತೆ ಮಾತನಾಡಲ?’’ ಮತ್ತೊಮ್ಮೆ ಕೇಳಿದ್ದರು ಸದಾಶಿವರಾಯರು.
‘‘ರಾಯರೇ...ಈಗ ಇರುವುದರಲ್ಲಿ ನಾನು ಸುಖವಾಗಿದ್ದೇನೆ...ಹೆಣ್ಣು ಮಕ್ಕಳು ನನಗಿಂತ ಗಟ್ಟಿಯಾಗಿದ್ದಾರೆ. ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದಾರೆ. ನನ್ನ ಪುಸ್ತಕಗಳೂ ನನಗೆ ತುಂಬಾ ತೃಪ್ತಿಕೊಟ್ಟಿವೆ. ಈ ಸೈಟು ಎಲ್ಲ ಇಟ್ಟುಕೊಂಡು ನಾನೇನು ಮಾಡಲಿ. ಅದರಲ್ಲೂ ಮುಖ್ಯಮಂತ್ರಿಯಿಂದ ದೊರಕುವ ಏನೂ ನನಗೆ ಬೇಡ...ನಿಮ್ಮ ಕಾಳಜಿಗೆ ಕೃತಜ್ಞತೆಗಳು...’’ ಸದಾಶಿವರಾಯರು ಒಳಗೇ ಕುದ್ದು ಹೋಗಿದ್ದರು.
ಮನೆಯಲ್ಲೂ ಏನೂ ತಕರಾರು ಇರುವ ಹಾಗೆ ಕಾಣುವುದಿಲ್ಲ. ಅವರ ಸಂಶೋಧನೆ ಕೆಲವು ಮಠಾಧೀಶರನ್ನು, ಕೆಲವು ಧಾರ್ಮಿಕ ರಾಜಕೀಯ ಶಕ್ತಿಗಳನ್ನು ಕೆರಳಿಸಿದ್ದು, ಅವರ ಅಸ್ತಿತ್ವವನ್ನೇ ಅಲುಗಾಡಿಸಿದ್ದು ನಿಜ. ಆದರೂ ಕೊಂದು ಹಾಕುವುದೆಂದರೆ
ಸಂಜೆ ಟೌನ್ ಹಾಲ್ ಮುಂದೆ ನಡೆಯುವ ಪ್ರತಿಭಟನೆಗೆ ಹೋದರೆ ಹೇಗೆ?’ ಎಂದು ಯೋಚಿಸಿದರು
ಬೇಡ. ಒಂದಿಷ್ಟು ಕಾದು ನೋಡೋಣ...’ ತನಗೆ ತಾನೆ ಹೇಳಿಕೊಂಡರು. ಯಾಕೋ ಗಂಟಲು ಕಟ್ಟಿದಂತಾಯಿತು. ಎದ್ದು ಕೂತರು. ಶತಪತ ಅತ್ತಿಂದಿತ್ತ ನಡೆದಾಡತೊಡಗಿದರು.
 ಅಷ್ಟರಲ್ಲಿ ಅವರ ಗಮನ ತನ್ನ ಅಕಾಡೆಮಿ ಪ್ರಶಸ್ತಿಯ ಪದಕದ ಕಡೆ ಹರಿಯಿತು. ಆವರೆಗೆ ಗಮನಕ್ಕೆ ಬಾರದ ಏನೋ ಆ ಪದಕದಲ್ಲಿ ಕಂಡಂತಾಯಿತು. ಹತ್ತಿರ ಹೋದರು. ಪದಕದ ಸುತ್ತ ಅದೇನೋ ಕೆಂಪಾಗಿ ಕೆನೆಕಟ್ಟಿದೆ. ‘ಆಗ ನೋಡಿದಾಗ ನನ್ನ ಗಮನಕ್ಕೆ ಬಂದಿರಲಿಲ್ಲವಲ್ಲ. ಏನಿದು?’ ಎಂದು ಗೊಣಗುತ್ತಾ ಮತ್ತೊಮ್ಮೆ ಕಣ್ಣ ಬಳಿ ತಂದರು
‘‘೩೦ ಗ್ರಾಮ್ನ ಪ್ಯೂರ್ ಚಿನ್ನ’’ ಎಂದು ಪತ್ನಿ ಉಜ್ಜಿ ನೋಡಿ ಹೇಳಿದ್ದಳು. ಬಣ್ಣ ಹೋಗುವ ಸಾಧ್ಯತೆಯೇ ಇಲ್ಲ. ಆದರೂ ಇದೇನಿದು? ಮೆಲ್ಲಗೆ ಆ ಕೆಂಪು ಪದರವನ್ನು ಮುಟ್ಟಿದರು. ಕೆಂಪು ಕೈಗೆ ಅಂಟಿಕೊಂಡಿತು. ಅರೆ! ಕೈಯಿಂದ ಉಜ್ಜಿದರೆ ಕೈಗೇ ಅಂಟಿಕೊಳ್ಳುತ್ತಿದೆ. ಮುಟ್ಟಿದ ಬೆರಳೂ ಕೆಂಪಾಗಿ ಬಿಟ್ಟಿದೆ. ಮೂಗಿನ ಬಳಿ ತಂದರು.
 ‘ಮೈ ಗಾಡ್!’ ರಕ್ತದ ವಾಸನೆ!
 ಕೈಯಲ್ಲಿದ್ದ ಪದಕ ಕೈಯಿಂದ ಜಾರಿ ಬಿತ್ತು. ಬಾಗಿ ಎತ್ತಿಕೊಂಡರು. ಇದು ಹೇಗೆ ಇದರ ಮೇಲೆ ರಕ್ತ ಅಂಟಿಕೊಂಡಿದೆ? ಸದಾಶಿವರಾಯರಿಗೆ ಅರ್ಥವಾಗಲಿಲ್ಲ. ಪದಕದೊಂದಿಗೆ ಬಚ್ಚಲು ಮನೆಗೆ ತೆರಳಿದರು. ನೀರು ಸುರಿದು ಅದನ್ನು ಉಜ್ಜಿತೆಗೆಯುವ ಪ್ರಯತ್ನ ಮಾಡಿದರು. ಇಲ್ಲ. ಪದಕದಿಂದ ಬಣ್ಣವನ್ನು ಅಳಿಸಲು ಆಗುತ್ತಿಲ್ಲ. ಬದಲಿಗೆ ಕೈಗೂ ಆ ರಕ್ತದ ಬಣ್ಣ ಅಂಟಿಕೊಳ್ಳುತ್ತಿದೆ. ಮತ್ತೆ ಕೋಣೆಗೆ ಬಂದರು. ಬಿಳಿ ಬಟ್ಟೆಯಿಂದ ಉಜ್ಜ ತೊಡಗಿದರು. ಬಟ್ಟೆ ಕೆಂಪಾಯಿತೇ ಹೊರತು, ಬಣ್ಣ ಅಳಿಯಲಿಲ್ಲ. ಅರೆ! ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿದೆ. ಕೆಂಪಾದ ಕೈಯನ್ನು ಮುಗಿನ ಬಳಿ ತಂದರು. ಹೌದು. ರಕ್ತದ್ದೇ ವಾಸನೆ. ಈಗ ಮೊದಲಿಗಿಂತಲೂ ಹೆಚ್ಚಿದೆ. ಹೊಟ್ಟೆ ತೊಳಸಿದಂತಾಯಿತು. ನಿಧಾನಕ್ಕೆ ವಾಸನೆ ಇಡೀ ಕೋಣೆಯನ್ನು ಆವರಿಸಿಕೊಳ್ಳುತ್ತಿದೆಯೆ? ಗಾಬರಿಯಿಂದ ಪದಕವನ್ನು ಮಂಚದ ಮೇಲಿಟ್ಟು, ಕೋಣೆಯಿಂದ ಹೊರ ಬಂದರು.
ಹೊರಗೆ ಸ್ವಲ್ಪ ಪರವಾಗಿಲ್ಲ. ಅಥವಾ ಇದೆಲ್ಲ ನನ್ನ ಕಲ್ಪನೆಯೇ? ಮತ್ತೆ ಕೈಯನ್ನು ನೋಡಿದರು. ಕೈ ಕೆಂಪಾಗಿಯೇ ಇದೆ. ಮರಳಿ ಕೋಣೆ ಹೊಕ್ಕರು. ಓಹ್. ವಾಸನೆ ಹೆಚ್ಚುತ್ತಿದೆ. ಪದಕದ ಮೇಲಿನ ರಕ್ತ ಹಾಗೆಯೇ ಇದೆ. ಅಷ್ಟರಲ್ಲಿ ಫೋನ್ ರಿಂಗಣಿಸತೊಡಗಿತು. ಎನ್ಡಿ ಟಿವಿಯವರಿರಬಹುದೆ? ಎತ್ತಿಕೊಂಡರು. ಆ ಕಡೆಯಿಂದ ಸಮಕಾಲೀನ ಸಾಹಿತಿ, ಸ್ನೇಹಿತ  ಅನಂತ ಸುಬ್ಬರಾಯರು...‘‘ನಿಮಗೆ ಗೊತ್ತಾಯಿತಾ?’’
‘‘ಎಂತ...?’’ ಕೇಳಿದರು.
‘‘ಅದೇ ಕೊಟ್ರಪ್ಪನವರ ಕೊಲೆಯನ್ನು ಖಂಡಿಸಿ ದಿಲ್ಲಿಯ ಪ್ರಪುಲ್ಲ ದೇಸಾಯಿಯವರು ತಮ್ಮ ಜ್ಞಾನಪೀಠ ಪ್ರಶಸ್ತಿಯನ್ನು ವಾಪಾಸ್ ಮಾಡಿದರಂತೆ...’’
  ಸದಾಶಿವರಾಯರು ಸಿಡಿದರು ‘‘ನೋಡಿ...ಜ್ಞಾನಪೀಠ ಪ್ರಶಸ್ತಿ ನೀಡುವುದು ಒಂದು ಖಾಸಗಿ ಸಂಸ್ಥೆ. ಅದು ಸರಕಾರವಲ್ಲ. ಅವರು ತಪ್ಪು ಗುರಿ ಇಡುತ್ತಿದ್ದಾರೆ. ನಾನು ಅವರಿಗೆ ಫೋನ್ ಮಾಡಿ ಹೇಳುವೆ. ಇದು ಅಪ್ರಬುದ್ಧ, ಅವಿವೇಕದ ನಿರ್ಧಾರ.  ಸುಮ್ಮನೆ ಪ್ರಚಾರದ ಖಯಾಲಿ ಆ ದೇಸಾಯಿಗೆ. ನನ್ನ ಜೊತೆಗೆ ಸ್ಪರ್ಧಿಸುವ ಹೊಸ ದಾರಿಯನ್ನು ಆರಿಸಿಕೊಂಡಿದ್ದಾನೆ ಆತ. ಮೊದಲಿಂದಲೂ ಅವನಿಗೆ ನನ್ನನ್ನು ಕಂಡರೆ ಅಷ್ಟಕ್ಕಷ್ಟೇ....’’ ಎಂದು ಫೋನ್ನ್ನು ಕತ್ತರಿಸಿದರು.
ದೇಸಾಯಿ ಪ್ರಶಸ್ತಿಯನ್ನು ಹಿಂದಿರುಗಿಸಿದನೆ? ಎಷ್ಟು ದೊಡ್ಡ ನಿರ್ಧಾರ! ಅಷ್ಟೂ ಮೊತ್ತವನ್ನೂ, ಆ ಚಿನ್ನದ ಪದಕವನ್ನೂ ವಾಪಾಸ್ ಮಾಡಿರಬಹುದೆ? ಛೆ, ನಾನೇ ಮೊದಲು ಇದನ್ನು ಮಾಡಬೇಕಾಗಿತ್ತು. ಇನ್ನು ಮರಳಿಸಿದರೆ, ಆತನನ್ನು ಹಿಂಬಾಲಿಸಿದಂತಾಗುತ್ತದೆ. ಅವನು ಈಗ ಮುಸಿ ಮುಸಿ ನಗುತ್ತಿರಬಹುದು. ಪ್ರಫುಲ್ಲ ದೇಸಾಯಿಗೆ ಫೋನ್ ಮಾಡಿದರೆ ಹೇಗೆ? ನಿರ್ಧಾರವನ್ನು ಬದಲಿಸಲು ಹೇಳಿದರೆ? ಹಾಗೆ ಹೇಳಿದರೆ ಅವನು ಇನ್ನಷ್ಟು ಗಟ್ಟಿಯಾಗಬಹುದು. ಅಥವಾಕೊಟ್ರಪ್ಪನ ಕೊಲೆಗೆ ಸಾಹಿತ್ಯದ ಜೊತೆಗೆ ಸಂಬಂಧವಿಲ್ಲ. ಬೇರೆ ಖಾಸಗಿ ಕಾರಣಗಳೂ ಇರಬಹುದುಎಂದು ದೇಸಾಯಿಗೆ ಹೇಳಿದರೆ? ಆಗಲೂ ಅವನು ಪ್ರಶಸ್ತಿ ವಾಪಸ್ ಕೊಡಬಹುದೆ? ಅಥವಾ ಅದನ್ನು ಕರ್ನಾಟಕದ ಲೇಖಕರ ಜೊತೆಗೆ ಹಂಚಿಕೊಂಡು ನನ್ನ ವಿರುದ್ಧ ಸಾಹಿತಿಗಳನ್ನು ಎತ್ತಿ ಕಟ್ಟಿದರೆ? ಮೊದಲೇ ಅವನಿಗೆ ನನ್ನನ್ನು ಕಂಡರೆ ಆಗುವುದಿಲ್ಲ. ಅವನಿಗೆ ಜ್ಞಾನಪೀಠ ಪ್ರಶಸ್ತಿ ತಡವಾಗಿ ಬರಲು ನಾನು ಕಾರಣ ಎಂದು ಸುಳ್ಳು ಸುಳ್ಳೇ ಎಲ್ಲರೊಂದಿಗೂ ಹೇಳಿಕೊಂಡಿದ್ದ. ಅರೆ! ಇದೇನಿದು. ವಾಸನೆ ಇನ್ನಷ್ಟು ಗಾಢವಾಗುತ್ತಿದೆ. ಇದು ಬರೇ ರಕ್ತದ ವಾಸನೆ ಅಂತನಿಸುತ್ತಿಲ್ಲ. ವಾಸನೆ ಬರುತ್ತಿರುವುದು ಪದಕದಿಂದ ಎಂದು ನಾನು ಸುಖಾಸುಮ್ಮನೆ ನಂಬಿದ್ದೆ. ಎಲ್ಲೋ ಇಲಿ ಸತ್ತು ಬಿದ್ದಿದೆ. ಅದರ ಕೊಳೆತ ವಾಸನೆ. ರಾಯರು ಕಿಟಕಿಗಳನ್ನೆಲ್ಲ ತೆರೆದಿಟ್ಟರು. ವಾಸನೆ ಹೊರಗಿನದಲ್ಲ, ಒಳಗಿನದು ಎಂದು ಸ್ಪಷ್ಟವಾಯಿತು. ಎಲ್ಲೋ ಏನೋ ಸತ್ತು ಬಿದ್ದಿದೆ. ನಿನ್ನೆ ರಾತ್ರಿ ಇದ್ದ ಬೆಕ್ಕು ಕಾಣಿಸುತ್ತಿಲ್ಲ. ಅದುವೇ ಸತ್ತು ಗಿತ್ತು ಹೋಗಿದೆಯೋ? ಮಂಚದಡಿಯಲ್ಲಿ, ಕಪಾಟಿನ ಹಿಂದೆ, ಶೋಕೇಸ್ ಕೆಳಗೆ ಹೀಗೆ ಹುಡುಕತೊಡಗಿದರು. ಊಹುಂ...ಏನು ಕಾಣುತ್ತಿಲ್ಲ. ಪತ್ನಿ ಗುಡಿಸಿ, ಒರೆಸಿ ಅಚ್ಚುಕಟ್ಟಾಗಿ ಇಟ್ಟು, ದೇವಸ್ಥಾನಕ್ಕೆ ಹೋಗಿದ್ದಾಳೆ. ಇಲಿ ಸತ್ತಿದ್ದರೆ ಅವಳ ಗಮನಕ್ಕೆ ಬಂದೇ ಬರುತ್ತಿತ್ತು. ಆದರೆ ವಾಸನೆ ಈಗ ಇನ್ನೂ ಹೆಚ್ಚುತ್ತಾ ಹೋಗುತ್ತಿರುವುದು ಸತ್ಯ. ಪದಕವನ್ನೇ ನೋಡಿದರು. ಕೈಯಿಂದ ಮುಟ್ಟಲು ಭಯವಾಯಿತು. ಅಷ್ಟರಲ್ಲಿ ಕಾಲಿಂಗ್ ಬೆಲ್ ರಿಂಗಣಿಸಿತು. ...ದೇವಸ್ಥಾನಕ್ಕೆ ಹೋದ ಪತ್ನಿ ಶ್ಯಾಮಲಾ ಮರಳಿ ಬಂದಿರಬೇಕು. ಈ ಪದಕವನ್ನು ಏನು ಮಾಡಲಿ? ಅವಳು ನೋಡಿ ಭಯಭೀತಳಾದರೆ....ಹೊರಗೆ ಸುದ್ದಿಯಾದರೆ...ಪದಕವನ್ನು ಬಟ್ಟೆಯಲ್ಲಿ ಮುಚ್ಚಿ, ಬೀರಿನ ಒಳಗೆ ಬಚ್ಚಿಟ್ಟರು. ಬೆವರೊರೆಸಿಕೊಳ್ಳುತ್ತಾ ಬಾಗಿಲೆಡೆಗೆ ಧಾವಿಸಿದರು.
‘‘ಏನ್ರಿ...ನೀವು...ತುಂಬಾ ಸುಸ್ತಾಗಿದ್ದೀರಿ. ಕೊಟ್ರಪ್ಪ ಅವರ ಕೊಲೆಯ ಸುದ್ದಿ ಕೇಳಿದ ಬಳಿಕ ನೀವು ಅಸ್ವಸ್ಥರಾಗಿದ್ದೀರಿ. ಮಲಕ್ಕೋ ಬಾರದೆ? ಅಮೆರಿಕದಿಂದ ಮಗ, ಮಗಳು ಈಗಷ್ಟೇ ಫೋನ್ ಮಾಡಿದ್ದರು. ಕೊಟ್ರಪ್ಪ ಕೊಲೆ ಸುದ್ದಿ ಕೇಳಿ ಅವರು ಕಂಗಾಲಾಗಿದ್ದಾರೆ. ಅಪ್ಪನಿಗೆ ಸ್ವಲ್ಪ ಎಚ್ಚರವಾಗಿರಲು ಹೇಳು..ಎಂದಿದ್ದಾರೆ. ಅನಗತ್ಯ ವಿವಾದಕ್ಕೆ ಸಿಲುಕಿಕೊಳ್ಳುವುದು ಬೇಡ ಎಂದು ಮಗಳು ಎಚ್ಚರಿಸಿದ್ದಾಳೆ...’’ ಎನ್ನುತ್ತಾ ಅಡುಗೆ ಮನೆಗೆ ತೆರಳಿದರು. ತನ್ನ ಕೋಣೆಗೆ ಹೋಗಿ ಮಲಗಿಕೊಳ್ಳಲು ರಾಯರಿಗೆ ಭಯ. ಬಾಲ್ಕನಿಗೆ ಹೋಗಿ ಕುಳಿತುಕೊಂಡರೆ ಅನ್ನಿಸಿತು. ಕೋಣೆಗೆ ಒತ್ತಿಕೊಂಡೇ ಬಾಲ್ಕನಿಯಿತ್ತು. ‘‘ಇದೇನ್ರಿ...ಏನೋ ವಾಸನೆ...’’ ಪತ್ನಿಯ ಕೂಗಿಗೆ ರಾಯರು ಬೆಚ್ಚಿ ಬಿದ್ದರು. ‘‘ಹೌದು ವಾಸನೆ. ಏನೋ ಇಲಿ ಸತ್ತು ಬಿದ್ದಿರಬೇಕು...’’ ರಾಯರು ಉತ್ತರಿಸಿದರು.
‘‘ಇಲಿಯೆ? ಇಲಿ ಎಲ್ಲಿಂದ? ಬೆಳಗ್ಗೆ ಇಡೀ ಮನೆಯನ್ನು ಗುಡಿಸಿ, ಒರೆಸಿದ್ದೇನೆ... ಬೆಳಗ್ಗೆ ಇಲ್ಲದ ದುರ್ವಾಸನೆ ಈಗ ಎಲ್ಲಿಂದ?’’ ಎನ್ನುತ್ತಾ ಶ್ಯಾಮಲಾ ಅಲ್ಲಿ ಇಲ್ಲಿ ತಡಕಾಡತೊಡಗಿದರು.
‘‘ಹೊರಗಡೆಯಿಂದ ಇರಬಹುದೆ?’’ ಶ್ಯಾಮಲಾ ಅವರು ಮತ್ತೆ ಕೇಳಿದರು.
‘‘ಇರಬಹುದು ಇರಬಹುದು...’’ ರಾಯರು ಚುಟುಕಾಗಿ ಉತ್ತರಿಸಿದರು. ‘‘ಕಿಟಕಿಯೆಲ್ಲ ಯಾಕೆ ತೆರೆದಿದ್ದೀರಿ. ಎಲ್ಲ ಮುಚ್ಚಿ ಬಿಟ್ಟರೆ ಹೇಗೆ?’’ ಶ್ಯಾಮಲಾ ಕೇಳಿದರು.
‘‘ಬೇಡ ಬೇಡ...ಸ್ವಲ್ಪ ಗಾಳಿ ಬೆಳಕು ಬರಲಿ....ಇಲ್ಲೇ ಒಳಗೇ ಏನೋ ಸತ್ತು ಬಿದ್ದಿರುವ ಹಾಗಿದೆ....ಅದಕ್ಕಾಗಿಯೇ ನಾನು ಕಿಟಕಿ ತೆರೆದೆ...’’ ಶ್ಯಾಮಲಾ ಹೊರ-ಒಳಗೆ ದುರ್ವಾಸನೆಯ ಮೂಲ ಹುಡುಕುತ್ತಾ ಓಡಾಡ ತೊಡಗಿದರು. ‘‘ರೀ...ನಿಮ್ಮ ಕೋಣೆಯಿಂದಲೇ ದುರ್ವಾಸನೆ ಬರುತ್ತಿರುವುದು...ಅದೇನೋ...ನೋಡಿ...’’ ಪತ್ನಿ ಹೇಳಿದಳು.
ತಕ್ಷಣ ರಾಯರು ಎಂದು ತನ್ನ ಕೋಣೆಗೆ ಹೋದರು. ನೋಡಿದರೆ ಪತ್ನಿ ಸತ್ತ ಇಲಿಗಾಗಿ ಹುಡುಕುತ್ತಿದ್ದಳು. ಏನೂ ಇಲ್ಲ. ಕಾಪಾಟು, ಬೀರು...ಹೀಗೆ ತಡಕಾಡ ತೊಡಗಿದರು. ಪತ್ನಿ ಎಲ್ಲಿ ಬೀರನ್ನು ತೆರೆಯುತ್ತಾಳೋ ಎಂದು ಭಯವಾಯಿತು. ‘‘ನೋಡು...ನೀನು ಹೊರಗೆ ಹುಡುಕು. ಕೋಣೆಯ ಬೀರನ್ನು ನಾನು ನೋಡುತ್ತೇನೆ...’’ ಎಂದರು.
ಇದ್ದಕ್ಕಿದ್ದಂತೆಯೇ ಶ್ಯಾಮಲಾ ಅವರಿಗೆ ಹೊಟ್ಟೆ ತೊಳೆಸಿದಂತಾಗಿ, ನೇರ ಬಾತ್ರೂಂಗೆ ಹೋಗಿ ಬಸ ಬಸ ಕಾರ ತೊಡಗಿದರು. ರಾಯರು ಬೀರನ್ನು ತೆರೆದರು. ಅಬ್ಬಾ! ದುರ್ವಾಸನೆ ತಡೆದುಕೊಳ್ಳಲಾಗುತ್ತಿಲ್ಲ. ಇನ್ನಷ್ಟು ಬಟ್ಟೆಗಳಲ್ಲಿ ಪದಕವನ್ನು ಮುಚ್ಚಿಟ್ಟರು. ‘‘ಏನಿದು ಈ ಥರ. ದುರ್ವಾಸನೆ ಒಂದು ವೇಳೆ ನನ್ನ ಕಲ್ಪನೆಯೇ ಆಗಿದ್ದರೆ ಪತ್ನಿಗೆ ಹೇಗೆ ವಾಸನೆ ಗೊತ್ತಾಯಿತು
ಬಾತ್ರೂಂನಿಂದ ಸುಸ್ತಾಗಿ ಹೊರಗೆ ಬಂದ ಶ್ಯಾಮಲಾ ತನಗೆ ತಾನೇ ಗೊಣಗುತ್ತಾ ಮತ್ತೆ ವಾಸನೆಯ ಮೂಲವನ್ನು ಹುಡುಕತೊಡಗಿದರು.
ರಾಯರು ಬೀರಿಗೆ ಬೀಗ ಹಾಕಿ, ಬಾಲ್ಕನಿಯ ಬಾಗಿಲು ತೆರೆದು ಅಲ್ಲಿರುವ ಆರಾಮ ಕುರ್ಚಿಯಲ್ಲಿ ಒರಗಿದರು. ತಡೆಯಲಾಗುತ್ತಿಲ್ಲ. ಹೊರಗಿನ ತಣ್ಣಗಿನ ಗಾಳಿಗೆ ಅವರು ಹಾಗೆಯೇ ಸಣ್ಣ ನಿದ್ದೆಗೆ ಶರಣಾದರು.
ಅರೆಬರೆ ನಿದ್ರೆ. ವಿಚಿತ್ರ ಕನಸುಗಳು. ಕೊಟ್ರಪ್ಪನ ಹೆಣವನ್ನು ತಾನು ಬೀರಿನೊಳಗೆ ಬಚ್ಚಿಟ್ಟುಕೊಂಡ ಹಾಗೆ. ಪೊಲೀಸರು ಮನೆಯನ್ನಿಡೀ ತಪಾಸಣೆ ಮಾಡುತ್ತಿದ್ದ ಹಾಗೆ. ದೇಸಾಯಿ ಪತ್ರಿಕಾಗೋಷ್ಠಿ ಕರೆದು ತನ್ನ ವಿರುದ್ಧ ಕೊಲೆ ಆರೋಪ ಮಾಡುತ್ತಿರುವ ಹಾಗೆ. ಜನಪರ ಸಂಘರ್ಷ ಸಮಿತಿಯವರು ತನ್ನ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿರುವ ಹಾಗೆ....ಕೊಲಾಜ್ ಪೇಟಿಂಗ್ ಥರ...!
ಥಟ್ಟನೆ ಎಚ್ಚರ. ಗಡಿಯಾರದಲ್ಲಿ ಮಧ್ಯಾಹ್ನ ಮೂರು ಗಂಟೆ. ಓಹ್...ತುಂಬಾ ಹೊತ್ತು ಮಲಗಿದೆ ಅನ್ನಿಸಿತು ರಾಯರಿಗೆ
‘‘ಈ ವಾಸನೆಯ ಜೊತೆಗೆ ಊಟ  ಮಾಡುವುದಾದರೂ ಹೇಗೆ...’’ ಒಳಗೆ ಪತ್ನಿಯ ಗೊಣಗು. ವಾಸನೆ ನಿಂತಿಲ್ಲ. ಕಂಡ ಕನಸುಗಳನ್ನೊಮ್ಮೆ ನೆನೆದುಕೊಂಡರು. ವಾಸನೆ ಬೀರೊಳಗಿಂದ ಬರುತ್ತಿಲ್ಲ ಅನ್ನಿಸಿತು...ಅದು ತನ್ನೊಳಗಿಂದಲೇ ಬರುತ್ತಿದೆ. ರಾತ್ರಿ ಪತ್ನಿಗೆ ಜೊತೆಯಲ್ಲಿ ಮಲಗುವಾಗ ಅದು ಗೊತ್ತಾಗಿಯೇ ಗೊತ್ತಾಗಿ ಬಿಡುತ್ತದೆ ಎಂದು ಒಳಗೇ ಕಂಪಿಸಿದರು. ಜೀವನವಿಡೀ ಈ ವಾಸನೆಯ ಜೊತೆ ಅವಳು ತಾನೇ ಹೇಗೆ ಬದುಕಿಯಾಳು? ಅಥವಾ ನಾನಾದರೂ ಬದುಕೋದು ಹೇಗೆ? ಏನಾಯಿತೋ...ರಾಯರು ಎದ್ದರು. ಬೀರಿನ ಬೀಗ ತೆರೆದು, ಬಟ್ಟೆಯಲ್ಲಿ ಮುಚ್ಚಿಟ್ಟ ಪದಕವನ್ನು ಕೈಗೆತ್ತಿಕೊಂಡರು. ನೇರ ಬಾಲ್ಕನಿಗೆ ಬಂದವರೇ ಬಾಲ್ಕನಿಯಾಚೆಗಿರುವ ಮೋರಿಯೆಡೆಗೆ ಆ ಪದಕವನ್ನು ಎಸೆದು ಬಿಟ್ಟರು
ಹಾಗೆ ಎಸೆದವರುಅಬ್ಬಾಎನ್ನುತ್ತಾ ಆರಾಮ ಕುರ್ಚಿಗೆ ಕುಸಿದರು. ಅದೇನೋ ದೊಡ್ಡದೊಂದು ಭಾರ ಎದೆಯಿಂದ ಇಳಿದಂತೆ. ತಕ್ಷಣ ತನ್ನ ಮೊಬೈಲ್ನ್ನು ಕೈಗೆ ತೆಗೆದುಕೊಂಡು, ಪ್ರಗತಿ ಪರ ಸಂಘರ್ಷ ಸಮಿತಿಗೆ ಫೋನಾಯಿಸಿದರು ‘‘ನೋಡ್ರಿ...ಸಂಜೆ ನಾನು ಪ್ರತಿಭಟನೆಗೆ ಬಂದೇ ಬರುವೆ. ಅದೇನಾದರೂ ಸರಿ...ಕೊಟ್ರಪ್ಪ ಅವರಿಗೆ ನ್ಯಾಯ ಸಿಗಲೇಬೇಕು...ನಿಮ್ಮ ಹೋರಾಟದ ಜೊತೆಗೆ ನಾನಿದ್ದೇ ಇರುವೆ....’’ ಎಂದು ಒಂದೇ ಉಸಿರಿಗೆ ಹೇಳಿ, ಫೋನ್ ಸ್ವಿಚ್ಡ್ ಆಫ್ ಮಾಡಿದರು.
ಅಷ್ಟರಲ್ಲಿ ಒಳಗಿನಿಂದ ಪತ್ನಿ ಕೂಗಿ ಹೇಳಿದರು ‘‘ಅರೆ...ಕೇಳಿದ್ರಾ....ಈಗ ಸ್ವಲ್ಪ ವಾಸನೆ ಕಡಿಮೆಯಾದ ಹಾಗೆ ಇದೆ ಅಲ್ವಾ?’’
‘‘ಹೌದು. ವಾಸನೆ ಕಡಿಮೆಯಾಗಿದೆ’’ ರಾಯರು ಉತ್ತರಿಸಿ ನಿರಾಳವಾದರು.