Saturday, June 21, 2014

ಗೊಬ್ಬರ ಮತ್ತು ಇತರ ಕತೆಗಳು

ಅಂತರ್ಜಲ
ಮಗುವೊಂದು ಪಾಳು ಬಿದ್ದ ಕೊಳವೆ ಬಾವಿಗೆ ಬಿತ್ತು.
ಅಂತರ್ಜಲ ಭೂಮಿಯದ್ದಷ್ಟೇ ಅಲ್ಲ, ಮನುಷ್ಯರದ್ದೂ ಬತ್ತಿ ಹೋಗಿರುವುದು ಸಾಬೀತಾಯಿತು.

ಲೆಕ್ಕ
ಅವನು ಆ ಮರದ ಬುಡಕ್ಕೆ ಹೋಗಿದ್ದು ನೆರಳನ್ನು ಅರಸಿ.
ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆದ. ಬಿಸಿಲು ಇಳಿದದ್ದೇ, ಇಡೀ ಮರವನ್ನು ಕಡಿದರೆ ಎಷ್ಟು ಲಾಭವಾಗಬಹುದು ಎನ್ನುವುದನ್ನು ಲೆಕ್ಕ ಹಾಕ ತೊಡಗಿದ.

ಗೊಬ್ಬರ
ಕಳಪೆ ಗೊಬ್ಬರಗಳಿಂದ ಬೆಳೆ ನಾಶವಾಗಿ ರೈತ ನಾಶ ನಷ್ಟಕ್ಕೊಳಗಾಗಿ ನಗರಕ್ಕೆ ಬಂದು ಇಳಿದ.
ಅಲ್ಲಿ ನೋಡಿದರೆ ಭವ್ಯ ಕಟ್ಟಡವೊಂದು ಮುಗಿಲೆತ್ತರ ಬೆಳೆದು ನಿಂತಿತ್ತು.
ವಿಸ್ಮಿತನಾದ ರೈತ, ‘‘ಇದಕ್ಕೆ ಬಳಸಿದ ಗೊಬ್ಬರ ಎಲ್ಲಿ ಸಿಗುತ್ತದೆ?’’ ಎಂದು ವಿಚಾರಿಸ ತೊಡಗಿದ.

ಪರಿಸರ
ಜೈಲಿನಲ್ಲಿ ಹತ್ತು ವರ್ಷ ಕಳೆದ ಆತ ಆ ಪರಿಸರಕ್ಕೆ ಒಗ್ಗಿ ಹೋಗಿದ್ದ.
ಎಷ್ಟೆಂದರೆ, ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆಯೇ ಜೈಲಿಗೆ ತೆರಳಲಿರುವ ಹೊಸ ಕೈದಿಯಂತೆ ನಡುಗತೊಡಗಿದ.

ಪಾಲು
ಅವನು ಹಸಿವಿನಿಂದ ಕಂಗೆಟ್ಟು ಕಳವು ಮಾಡಿದ.
ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ.
ಜೈಲು ಸೇರಿದ. ಪೊಲೀಸರು ಅವನಿಗೆ ದರೋಡೆ ಮಾಡುವ ನಿಜವಾದ ತರಬೇತಿ ಕೊಟ್ಟರು. ಜೈಲಿನಿಂದ ಹೊರಬಂದ ಬಳಿಕ ಅವನು ಕಳತನವನ್ನೇ ಉದ್ಯೋಗ ಮಾಡಿಕೊಂಡ. ಆದರೆ ಕದ್ದುದನ್ನು ಪೊಲೀಸರ ಜೊತೆಗೆ ಹಂಚುವುದನ್ನು ಕಲಿತುಕೊಂಡ.

ನಂಬಿಕೆ
‘‘ದೆವ್ವಗಳು ಮೂಢನಂಬಿಕೆಯೆ?’’ ಶಿಷ್ಯ ಕೇಳಿದ.
‘‘ಮನುಷ್ಯರೆನ್ನುವುದು ಕೂಡ ಒಂದು ಮೂಢನಂಬಿಕೆ ಎಂದು ದೆವ್ವಗಳು ಆಡಿಕೊಳ್ಳುವುದನ್ನು ಕೇಳಿದ್ದೇನೆ’’ ಸಂತ ಉತ್ತರಿಸಿದ

ಸರ್ಚ್
ಆತ ಕಂಪ್ಯೂಟರ್ ಎಂಜಿನಿಯರ್. ಕ್ಯಾಂಟೀನ್‌ನಲ್ಲಿ ಉಣ್ಣುವ ಹೊತ್ತಲ್ಲಿ ಯಾರೋ ಕೇಳಿದರು ‘‘ಅಕ್ಕಿ ಯಾವ ಮರದಲ್ಲಿ ಬೆಳೆಯುತ್ತೆ...’’
‘‘ಗೂಗಲ್‌ಗೆ ಹೋಗಿ ಸರ್ಚ್ ಮಾಡಿ. ತಕ್ಷಣ ಸಿಗತ್ತೆ’’ ಕಂಪ್ಯೂಟರ್ ಎಂಜಿನಿಯರ್ ಹೇಳಿದ.

ತೆರಿಗೆ
‘‘ಅದ್ದೂರಿಗೆ ಮದುವೆಗೆ ತೆರಿಗೆ’’ ಸರಕಾರ ಘೋಷಿಸಿತು.
ವರ ವರದಕ್ಷಿಣೆಯ ಜೊತೆಗೆ ತೆರಿಗೆಯ ಹಣವನ್ನು ಮಾವನಿಂದ ಇಸಿದುಕೊಂಡ.

ಗುರಿ
ಸೈನಿಕನೊಬ್ಬ ಎದೆಗೆ ಗುರಿ ಇಡುವುದಕ್ಕೂ
ಪ್ರೇಮಿಯೊಬ್ಬ ಎದೆಗೆ ಗುರಿಯಿಡುವುದಕ್ಕೂ
ವ್ಯತ್ಯಾಸವಿದೆ.