Thursday, March 31, 2011

ಹೌದು, ನಿಮ್ಮ ಅನುಮಾನ ಸರಿ!










ವಿನಾಶ ಕಾದಿದೆ ಆ ನಮಾಝ್ ನಿರ್ವಹಿಸುವವರಿಗೆ

ಅವರು ತೋರಿಕೆಯ ಕೆಲಸ ಮಾಡುತ್ತಾರೆ ಮತ್ತು
ಬಡವರಿಗೆ ಊಟ ಕೊಡಲು, ಜನರಿಗೆ ಅವಶ್ಯಕ ವಸ್ತು ಕೊಡಲು ಹಿಂದೇಟು ಹಾಕುತ್ತಾರೆ

-ಕುರ್‌ಆನ್(‘ಅಲ್‌ಮಾಊನ್’ ಅಧ್ಯಾಯ)



ನಮಾಝಿಗೆಂದು ಮಸೀದಿಯೆಡೆಗೆ
ಧಾವಿಸುತ್ತಿರುವವರು ನನ್ನನ್ನು ಕೈ ಬೀಸಿ ಕರೆಯುತ್ತಿದ್ದಾರೆ
ದೇವರನ್ನು ಮುಖಾಮುಖಿಯಾಗುವ ಧೈರ್ಯ ಸಾಲದೆ

ನಾನು ಅವಮಾನದಿಂದ ಮುಖ ಮುಚ್ಚಿಕೊಂಡಿದ್ದೇನೆ

ಹಸಿದ ಮಗುವೊಂದು ನನ್ನ
ಕಣ್ಣ ಆಳವನ್ನು ಕಲಕಿದೆ:

ತನ್ನ ದೃಷ್ಟಿಯ ಗರುಡ ಪಾತಾಳವನ್ನಿಳಿಸಿ...

ಅಯ್ಯೋ...ಈಗಷ್ಟೇ ಉಂಡು ಬಂದೆ

ತಲೆ ತಗ್ಗಿಸಿದ್ದೇನೆ ಅದರ ಮುಂದೆ!


ಆ ಮಗುವನ್ನು ಮರೆತು

ಉಂಡ ಅನ್ನದ ತುತ್ತು

ನನ್ನ ರಕ್ತದ ಕಣಕಣಗಳನ್ನೂ ಕಳಂಕಗೊಳಿಸಿದೆ

ಈ ಅಶುದ್ಧಿಯನ್ನು ತೊಳೆಯುವಷ್ಟು ನೀರು

ಮಸೀದಿಯ ಕೊಳದಲ್ಲಿದೆಯೆ?


ಏಕದೇವನ ಮುಂದೆ

ಪಾಲುದಾರಿಕೆಯನ್ನು ಬೇಡುತ್ತಿರುವ

ಶಬ್ದ, ಅಕ್ಷರಗಳ ವಿಗ್ರಹಗಳನ್ನು

ಮುರಿದು ಮುಂದೆ ಹೋಗಬೇಕಾಗಿದೆ

ಅದು ನನ್ನಿಂದ ಸಾಧ್ಯವಿದೆಯೆ?


ನನ್ನ ಮುಂದೆ ಸತ್ಯ ಧಗಧಗಿಸುತ್ತಿದೆ

ದೇವರೇ...ನಿನ್ನ ಪ್ರಾರ್ಥನೆಯ ಸಾಲುಗಳನ್ನು

ಮುರಿದು ಆ ಬೆಂಕಿಯ ಕುಲುಮೆಗಿಕ್ಕಿ

ಕರಗಿಸ ಹೊರಟಿದ್ದೇನೆ

ಸಾಧ್ಯವಾದರೆ ಆ ಅಗ್ನಿಧಾರೆಯನ್ನು ನೇಗಿಲುಗಳಾಗಿಸಿ

ನನ್ನ ಮರುಭೂಮಿಯಂತಹ ಎದೆಯನ್ನು ಉಳುತ್ತೇನೆ

ಸಬಲಗಳನ್ನಾಗಿಸಿ ನನ್ನೊಳಗಿನ ಬಂಡೆಯನ್ನು ಸೀಳುತ್ತೇನೆ

ಹನಿ ನೀರಿನೆಡೆಗೆ ದಾರಿ ಕೊರೆಯುತ್ತೇನೆ

...ಅಗತ್ಯ ಬಿದ್ದರೆ ಖಡ್ಗವನ್ನಾಗಿಸಿ

ಧರಿಸಿಕೊಳ್ಳುತ್ತೇನೆ

ಮತ್ತು ಅದನ್ನು ಮೊದಲು

ನನ್ನ ವಿರುದ್ಧವೇ ಬಳಸುತ್ತೇನೆ!


ಹೌದು, ನಿಮ್ಮ ಅನುಮಾನ ಸರಿ

ನಾನೊಬ್ಬ ಜಿಹಾದಿ...!

ಮೊದಲು ನನ್ನ ವಿರುದ್ಧ

ನೆನಪಿರಲಿ, ಗೆದ್ದರೆ...ನಿಮ್ಮ ವಿರುದ್ಧ!!

Wednesday, March 23, 2011

ಬಲಿ ಹಬ್ಬದ ಬೆಳಗು


ಮಿನಾರದಿಂದ ಬಾಣದಂತೆ ನೆಗೆದು ಬಂದ ಅಜಾನ್
ಇರುಳ ಬಾಗಿಲನ್ನು ಒದ್ದ
ರಭಸಕ್ಕೆ ಬೆಚ್ಚಿ
ಎದ್ದು ಕೂತೆ!

ವುಲೂಗೆ ಕೂತಿತ್ತು
ಆಗಷ್ಟೇ ಆಗಸ
ರಕ್ತದಿಂದ ನೆಂದ
ತನ್ನ ಕೈ, ಮೋರೆಗಳನ್ನು
ನೆಕ್ಕಿಕೊಳ್ಳುತ್ತಿತ್ತು

ಒಳಗೆ ಅಮ್ಮ
ದೋಸೆ ಹುಯ್ಯುವ ಸದ್ದು
ಅವಳ ನಿಟ್ಟುಸಿರನ್ನು ಹೋಲುತ್ತಿತ್ತು!

ಬಾಡಿ ಹೋದ ಬಳ್ಳಿಯಂತೆ
ಮುಚ್ಚಿದ ಕಂಬಳಿಯಿಂದ
ಹೊರ ಚಾಚಿದ ಅಂಗೈ
ಹಚ್ಚಿದ ಮದಿರಂಗಿ
ಗಾಯಗಳ ಚಿತ್ತಾರ ಬರೆದಿತ್ತು!

ಗೋಡೆಯ ಮೇಲೆ
ಹೊಸ ಬಟ್ಟೆ
ಹೆಣದಂತೆ ತೂಗುತ್ತಿತ್ತು!

ಎದ್ದು ನೇರ
ಹಿತ್ತಲಿಗೆ ಬಂದೆ
ಹಿಂಬಾಲಿಸಿದ ಅಪ್ಪನ ಕೆಮ್ಮು
ಎಂದಿನಂತಿರದೆ
ಬಿಕ್ಕಳಿಸುತ್ತಿತ್ತು!

ತಲೆ ಎತ್ತಿದರೆ...
ವುಲೂ ಮುಗಿಸಿದ ಆಗಸ
ಹಿಮದ ತಣ್ಣಗಿನ
ಬಿಳುಪನ್ನು ಹೊದ್ದು
ಕರುಣಾಳುವಿಗೆ ಬಾಗಿದೆ!

ಸ್ನಾನದ ಮನೆಯಲ್ಲಿ
ಕುದಿವ ನೀರಿನ ಪರಿಮಳ
ಅರಳ ಹತ್ತಿದೆ!

ಮಿಂದೆ

ಮಿಂದು
ಹಬೆಯಾಡುವ ಮೈಯನ್ನು
ಒರೆಸುತ್ತಾ
ಅಣ್ಣನ ಕೋಣೆಯೊಳ ಇಣುಕಿದರೆ
ಎದೆಯೇ ಬಿರಿಯುವಂತೆ
ಮಂಚ ಬರಿದಾಗಿದೆ!

ಬೆಂಕಿ ಬಿದ್ದ
ತೈಲದ ಬಾವಿಯಂತೆ
ನನ್ನೆದೆ ಧಗಿಸುತ್ತಿದೆ!


Thursday, March 17, 2011

ಭೂಕಂಪದ ಅವಶೇಷಗಳಿಂದ ಹೆಕ್ಕಿ ತೆಗೆದದ್ದು...


ಈ ಬಾರಿ ಕೆಲವು ಫೋಟೋಗಳನ್ನು ನಿಮ್ಮಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ. ಏನನ್ನೋ ಹುಡುಕುತ್ತಿದ್ದಾಗ, ಈ ಪೋಟೋಗಳು ಅಚಾನಕ್ಕಾಗಿ ನನ್ನ ಕೈಗೆ ಸಿಕ್ಕಿದವು. ಆ ಪೋಟೋದ ಜೊತೆಗೇ ಕೆಲವು ಮಸುಕು ಮಸುಕಾದ ಬ್ಲಾಕ್‌ಎಂಡ್ ವೈಟ್ ನೆನಪುಗಳು. ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಆಗ ನಾನು ‘ಜನವಾಹಿನಿ’ ದೈನಿಕದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಸಂಜೆಯ ಹೊತ್ತಿಗೆ, ಪ್ರಧಾನ ಕಚೇರಿಯಿಂದ ಸಹಾಯಕ ಸಂಪಾದಕಿಯಾಗಿದ್ದ ಎಸ್. ಸತ್ಯಾ(ಇವರು ಹಿರಿಯ ಪತ್ರಕರ್ತ ಜಿ. ಎನ್. ಮೋಹನ್ ಅವರ ಬಾಳ ಸಂಗಾತಿ) ಅವರಿಂದ ಫೋನ್ ಬಂತು. ‘‘ಬಶೀರ್, ಗುಜರಾತಿಗೆ ಹೋಗುತ್ತೀರಾ...? ಹೋಗುವುದಿದ್ದರೆ ನಾಳೆಯೇ ಹೊರಡಬೇಕು’’
ಏನು ಉತ್ತರಿಸುವುದೆಂದು ಹೊಳೆಯಲಿಲ್ಲ. ಉತ್ತರಿಸುವುದು ಅಷ್ಟು ಸುಲಭವೂ ಇದ್ದಿರಲಿಲ್ಲ. ಗುಜರಾತ್‌ನಲ್ಲಿ ಭೀಕರ ಭೂಕಂಪ ಸಂಭವಿಸಿ ಅದಾಗಲೇ ಐದು ದಿನವಾಗಿತ್ತು. ಅಲ್ಲಿ ಸಣ್ಣ ಕಂಪನಗಳಿನ್ನೂ ನಿಂತಿರಲಿಲ್ಲ. ಅಲ್ಲಿನ ಸ್ಥಿತಿಗತಿಯನ್ನು ನೇರ ವರದಿ ಮಾಡಲು ಗುಜರಾತ್‌ಗೆ ಹೋಗಬಹುದೆ ಎಂದು ಸತ್ಯಾ ಅವರು ನನ್ನೊಂದಿಗೆ ಕೇಳುತ್ತಿದ್ದಾರೆ. ನಾನು ತಕ್ಷಣ ಕೇಳಿದ್ದು ‘‘ಸಂಸ್ಥೆಯಿಂದ ದುಡ್ಡು ಕೊಡುತ್ತಾರ?’’ ಯಾಕೆಂದರೆ, ಅದಾಗಲೇ ಜನವಾಹಿನಿಯ ಆರ್ಥಿಕ ಪರಿಸ್ಥಿತಿ ತೀರಾ ಕೆಟ್ಟು ಕೂತಿತ್ತು. ಅವರು ದುಡ್ಡು ಕೊಟ್ಟು ಗುಜರಾತಿಗೆ ಕಳುಹಿಸುತ್ತಾರೆ ಎನ್ನುವುದನ್ನು ನಂಬುವುದೇ ನನಗೆ ಕಷ್ಟಸಾಧ್ಯವಾಗಿತ್ತು. ‘‘ಸಂಸ್ಥೆಯಿಂದ ಐದು ಸಾವಿರ ರೂ. ವನ್ನು ತೆಗೆಸಿಕೊಡುತ್ತೇನೆ...ಅದನ್ನು ಬಳಸಿ ನೀವು ಗುಜರಾತಿಗೆ ಹೋಗಿ ಬರಬೇಕು...ಏನು ಉತ್ತರಿಸುವುದಿದ್ದರೂ ಇನ್ನೆರಡು ಗಂಟೆಯ ಒಳಗೆ ತಿಳಿಸಬೇಕು...’’ ಸತ್ಯಾ ಹೇಳಿದರು. ‘‘ಆಯಿತು’’ ಎಂದೆ. ನನ್ನ ಗೆಳೆಯರೊಂದಿಗೆ ಕೇಳಿದಾಗ ‘‘ಐನ್ ಸಾವಿರಡ್ ಗುಜರಾತ್‌ಗೆಂಚ ಪೋಪುನ ಮಾರಾಯ್ರೆ...ಈರೆಗ್ ಮರ್ಲ್‌(ಐದು ಸಾವಿರದಲ್ಲಿ ಗುಜರಾತಿಗೆ ಹೋಗಿ ವರದಿ ಮಾಡುವುದು ಹೇಗೆ ಮಾರಾಯ್ರೆ...ನಿಮಗೆ ಹುಚ್ಚು)’’ ಎಂದು ಬಿಟ್ಟರು. ಆದರೆ ಅವಕಾಶ ಕಳೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ. ಕೊನೆಗೂ ಗುಜರಾತ್‌ಗೆ ಹೋಗುವ ನಿರ್ಧಾರಕ್ಕೆ ಬಂದಿದ್ದೆ. ಅದಕ್ಕೆ ಪೂರಕವಾಗಿ ಮರುದಿನವೇ...ಗುಜರಾತ್ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ತೆಗೆದುಕೊಂಡು ‘ಗುಜರಾತಿ ಸಂಘ’ದ ವ್ಯಾನೊಂದು ಹೋಗುವ ಕುರಿತು ಮಾಹಿತಿ ಸಿಕ್ಕಿತು. ಮರುದಿನ ಆ ವ್ಯಾನ್ ಹತ್ತಿ ಬಿಟ್ಟೆ.
ಸುಮಾರು 10 ದಿನ ನಾನು ಗುಜರಾತ್ ಭೂಕಂಪ ಪ್ರದೇಶದಲ್ಲಿ ಕಳೆದೆ. ಮೋರ್ಬಿ, ಅಧೋಯಿ, ಕಚ್, ಬಚಾವ್, ಅಂಜಾರ್, ಭುಜ್...ಮೊದಲಾದೆಡೆಯೆಲ್ಲ ತಿರುಗಿದೆ. ಯಾವುದೇ ಹೊಟೇಲ್‌ನಲ್ಲಿ, ಒಂದು ದಿನವೂ ಉಳಿದುಕೊಂಡಿಲ್ಲ. ಕಂಡ ಶಿಬಿರದಲ್ಲಿ ಉಣ್ಣುತ್ತಿದ್ದೆ. ಕಂಡ ಶಿಬಿರದಲ್ಲಿ ಮಲಗುತ್ತಿದ್ದೆ. ಅಂದಂದಿನ ವರದಿಯನ್ನು ಅಂದಂದೇ ಪತ್ರಿಕೆಗೆ ಫ್ಯಾಕ್ಸ್ ಮೂಲಕ ತಲುಪಿಸುತ್ತಿದೆ(ಮಾಧ್ಯಮಗಳಿಗಾಗಿ, ಪೊಲೀಸರಿಗಾಗಿ ಅಲ್ಲಲ್ಲಿ ವಿಶೇಷ ಫ್ಯಾಕ್ಸ್ ವ್ಯವಸ್ಥೆ ಮಾಡಿದ್ದರು). ಅಧೋಯಿಯ ಮಿಲಿಟರಿ ಕ್ಯಾಂಪ್‌ನಲ್ಲಿ ನನಗೆ ಕನ್ನಡದ ಯೋಧರು ಸಿಕ್ಕಿದರು. ಅವರ ಡೇರೆಯಲ್ಲಿ ‘ಬೆಂಗಳೂರು ಪ್ರೆಸ್’(ಫೋಟೋದಲ್ಲಿ ಗಮನಿಸಿ) ಹೆಸರಿನ ಕ್ಯಾಲೆಂಡರ್ ತೂಗು ಹಾಕಿರುವುದು ನೋಡಿ, ನನಗೆ ನನ್ನ ಊರೇ ಗುಳೆ ಎದ್ದು ಗುಜರಾತಿಗೆ ಬಂದಿದೆಯೋ ಅನ್ನಿಸಿತು. ಮಿಲಿಟರಿ ವ್ಯಾನ್ ಹತ್ತಿಕೊಂಡೇ ಕಛ್, ಬಚಾವ್ ಮೊದಲಾದ ಪ್ರದೇಶಗಳಲ್ಲಿ ತಿರುಗಾಡಿದೆ. ಕಚ್‌ನಲ್ಲಿರಬೇಕು...ರಾತ್ರಿ ಎಲ್ಲಿ ಉಳಕೊಳ್ಳುವುದು ಎಂದು ಯೋಚಿಸುತ್ತಿದ್ದೆ. ಯಾಕೆಂದರೆ ಅಧಿಕಾರಿಗಳು, ಪೊಲೀಸರು, ಜನರು, ಯೋಧರು ಎಲ್ಲರೂ ನಡು ರಸ್ತೆಯಲ್ಲೇ ಬಿದ್ದುಕೊಂಡಿದ್ದರು. ರಸ್ತೆಯ ಬದಿಯಲ್ಲಿ ಕುರ್ಚಿ ಹಾಕಿ ಕುಳಿತುಕೊಂಡಿದ್ದ (ಬಹುಶಃ ತಹಶೀಲ್ದಾರನೋ...ಎಸಿಯೋ ಇರಬೇಕು) ಅಧಿಕಾರಿಯಲ್ಲಿ ನನ್ನ ಪ್ರೆಸ್ ಕಾರ್ಡ್ ತೋರಿಸಿ...ಇಲ್ಲಿ ಉಳಿದುಕೊಳ್ಳುವುದಕ್ಕೆ ಸ್ಥಳ ಇದೆಯೇ ಎಂದು ಕೇಳಿದೆ. ಅವನು ಒಬ್ಬ ಸೈನಿಕನನ್ನು ಕರೆಸಿ...ಸಂತ್ರಸ್ತ ಶಿಬಿರದಲ್ಲಿ ಸೇರಿಸುವುದಕ್ಕೆ ಹೇಳಿದ. ಆ ಯೋಧ ನನ್ನನ್ನು ಶಿಬಿರದತ್ತ ಕರೆದೊಯ್ಯುತ್ತಿದ್ದಾಗ ‘‘ಯಾವ ಪತ್ರಿಕೆ? ಯಾವೂರು?’’ ಎಂದು ಕೇಳಿದ. ಅದನ್ನೆಲ್ಲ ಹೇಳಿ...‘‘ನನ್ನ ಹೆಸರು ಬಶೀರ್’’ ಎಂದೆ. ನನ್ನ ಹೆಸರು ಕೇಳಿದ್ದೇ ಅವನು ರೋಮಾಂಚನಗೊಂಡ. ಯಾಕೆಂದರೆ ಆ ಯೋಧನ ಹೆಸರು ‘ಶಫಿ’ ಎಂದಾಗಿತ್ತು. ಆತ ಕಾಶ್ಮೀರಿ. ತಕ್ಷಣ ನನ್ನನ್ನು ತನ್ನ ಡೇರೆಗೆ ಕರೆದೊಯ್ದು ಉಪಚರಿಸಿದ.
ಭುಜ್‌ನಲ್ಲಿ ಮಲಯಾಳಿ ಕ್ರಿಶ್ಚಿಯನ್ ಚರ್ಚ್ ಒಂದರಲ್ಲಿ ಆಶ್ರಯ ಪಡೆದೆ. ರಾತ್ರಿ ಅಲ್ಲಿನ ಧರ್ಮಗುರುಗಳು, ಸಿಸ್ಟರ್‌ಗಳ ಜೊತೆಗೆ ಉಂಡೆ. ಭುಜ್‌ನಲ್ಲಿ ‘ಮೀಡಿಯಾ ಸೆಂಟರ್’ ಎನ್ನುವ ಡೇರೆಯಲ್ಲಿ ಮೂರು ರಾತ್ರಿಗಳನ್ನು ಕಳೆದೆ. ಅಲ್ಲಿಂದ ಗಾಂಧಿನಗರಕ್ಕೆ ತೆರಳಿದೆ. ಅಲ್ಲಿ, ಸುರತ್ಕಲ್ ಸಮೀಪದ ಶೆಟ್ಟಿಗಳ ಹೊಟೇಲೊಂದು ಸಿಕ್ಕಿತು. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಊರಿನ ಹುಡುಗ ಎಂದು ಮಧ್ಯಾಹ್ನ, ರಾತ್ರಿ ಪುಕ್ಕಟೆ ಊಟ ಹಾಕಿದರು. ಹೊಟೇಲ್ ಧನಿಗಳಿಗೆ ಖಾಸಗಿ ಬಸ್ಸುಗಳಿದ್ದವು. ಅಹ್ಮದಾಬಾದ್‌ಗೆ ತೆರಳುವ ಬಸ್ಸಿಗೆ ಅವರೇ ಹತ್ತಿಸಿದರು. ಅಹ್ಮದಾಬಾದ್‌ನಲ್ಲಿ ಕ್ರಿಶ್ಚಿಯನ್ ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ಭೇಟಿ ನೀಡಿದೆ. ಅಲ್ಲಿನ ಫಾದರ್ ಮೂಲತಃ ಮಂಗಳೂರಿನವರು. ಕೊಂಕಣಿ ಅವರ ಮಾತೃಭಾಷೆ. ಅವರೊಂದಿಗೂ ಕೆಲ ಗಂಟೆಗಳನ್ನು ಹಂಚಿಕೊಂಡೆ. ಅಂದು ರಾತ್ರಿ ಅಹ್ಮದಾಬಾದ್‌ನಲ್ಲಿ ನಿಲ್ಲಬೇಕು ಎನ್ನುವ ಆಸೆಯಿತ್ತು. ‘‘ಇವತ್ತು ರಾತ್ರಿ ಇಲ್ಲಿ ತಂಗಬಹುದೆ?’’ ಎಂದು ಕೇಳಿದೆ. ಅವರು ಕೆಲ ನಿಮಿಷ ಆಲೋಚಿಸಿ ‘‘ಸಾರಿ...ಇವತ್ತು ಸಿಸ್ಟರ್‌ಗಳು ಬರುತ್ತಾರೆ...ಇಲ್ಲೇ ಹತ್ತಿರ ಕಡಿಮೆ ರೇಟಿಗೆ ಒಳ್ಳೆಯ ಲಾಡ್ಜ್‌ಗಳಿವೆ...’’ ಎಂದರು.
ಅಲ್ಲಿಂದ ನೇರ ನಾನು ರ್ವೇಲ್ವೇ ಸ್ಟೇಶನ್‌ಗೆ ಹೋಗಿ, ಮುಂಬಯಿಯ ಗಾಡಿ ಹಿಡಿದೆ. ಜನಸಂದಣಿಯಿಂದ ಉಸಿರಾಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ. ಒಂದಿಡೀ ರಾತ್ರಿ ಆ ಗಾಡಿಯಲ್ಲಿ ಕಳೆದು ಮುಂಬಯಿ ಸೇರಿದೆ. ಅಲ್ಲಿಂದ ಮಂಗಳೂರಿಗೆ....ಹಾಂ...ಒಂದು ನೋವು ಈಗಲೂ ಮುಳ್ಳಿನಂತೆ ನನ್ನೊಳಗೆ ಕದಲುತ್ತಿದೆ. ಅಹ್ಮದಾಬಾದ್‌ವರೆಗೆ ಹೋದ ನಾನು ಮಹಾತ್ಮಾ ಗಾಂಧೀಜಿಯ ‘ಸಬರಮತಿ ಆಶ್ರಮ’ ನೋಡದೆ ಬಂದು ಬಿಟ್ಟೆ. ಇದು ನಾನು ಮಾಡಿದ ದೊಡ್ಡ ತಪ್ಪು. ನಾನದನ್ನು ಯಾಕೆ ಮರೆತು ಬಿಟ್ಟೆ ಎನ್ನುವುದು ನನಗೆ ಈಗಲೂ ಅರ್ಥವಾಗುತ್ತಿಲ್ಲ.
ಅಂದಹಾಗೆ, ‘ಜನವಾಹಿನಿ’ ಸಂಸ್ಥೆ ನನಗೆ ಕೊಟ್ಟ ಐದು ಸಾವಿರ ರೂಪಾಯಿಯಲ್ಲಿ 1,500 ಇನ್ನೂ ಕಿಸೆಯಲ್ಲಿ ಉಳಿದಿತ್ತು. ಅಕೌಂಟೆಂಟಿಗೆ 5200 ರೂ. ಎಂದು ಭರ್ತಿ ಲೆಕ್ಕ ಕೊಟ್ಟು ‘ಜಾಣ’ ಪತ್ರಕರ್ತನಾದೆ. ಇದಾದ ಕೆಲ ದಿನಗಳ ಬಳಿಕ ಮಂಗಳೂರಿನಲ್ಲಿ ಸಿಕ್ಕಿದ್ದ ಜಿ. ಎನ್. ಮೋಹನ್ ಅವರು ‘‘ನಿಮ್ಮ ಗುಜರಾತ್ ಅನುಭವಗಳನ್ನು ಪುಸ್ತಕ ರೂಪಕ್ಕೆ ತರಬಹುದಲ್ಲ?’’ ಎಂದು ಕೇಳಿದ್ದರು. ಆದರೆ ಇಂದಿಗೂ ಆ ಅನುಭವಗಳನ್ನು ನನಗೆ ‘ಪೂರ್ಣ ರೂಪ’ದಲ್ಲಿ ಬರಹರೂಪಕ್ಕೆ ಇಳಿಸಲು ಆಗಿಲ್ಲ. ಬರೇ ಪತ್ರಿಕೆಗೆ ಬರೆದ ವರದಿಗಳಿಗಷ್ಟೇ ಆ ಪ್ರಯಾಣ ಸೀಮಿತವಾಯಿತು. ಇನ್ನಂತೂ ಸಾಧ್ಯವೇ ಇಲ್ಲ ಬಿಡಿ.
ಕೈಗೆ ಸಿಕ್ಕಿದ ಫೋಟೋಗಳನ್ನು ನೋಡಿ ಮೇಲಿನದ್ದೆಲ್ಲ ನೆನಪಾಯಿತು. ಹೇಗೂ ‘ಹಳೆ ಸಾಮಾನು’ಗಳನ್ನು ಕೊಳ್ಳುವುದಕ್ಕೆ ‘ಗುಜರಿ ಅಂಗಡಿ’ ಇದ್ದೇ ಇದೆಯಲ್ಲ.

Saturday, March 12, 2011

ಕ್ಷಮೆಗೆ ಕ್ಷಮೆಯಿಲ್ಲ




ದಾರಿ ತಪ್ಪಿದ ಅನಾಥ ಮಕ್ಕಳಂತೆ

ತಿಳಿದೋ ತಿಳಿಯದೆಯೋ ಮಾಡಿದ ಸಾವಿರ ತಪ್ಪುಗಳು!

ಕ್ಷಮೆಯೋ...
ಎದೆಯೊಳಗೆ ಕುದಿ ಕುದಿವ ಹಾಲಿಟ್ಟು

ಕಳೆದುಹೋದ ಮಕ್ಕಳಿಗೆ ತುಡಿವ

ತಾಯಿಯಂತೆ!




ರಕ್ತದ ಕಲೆಗಳ ಕುರುಹುಗಳೇ ಇಲ್ಲ

ಆದರೂ ಗಾಯಗೊಂಡು ಬಿದ್ದಿದ್ದಾರೆ ಇವರೆಲ್ಲ


ದಯೆಯ ಒರೆಯೊಳಗೆ
ಹೊಂಚಿ ಕೂತ ಕ್ಷಮೆಯೆಂಬ ನಿರ್ದಯಿ ಖಡ್ಗವೇ

ನಿನಗೆ ಸಾಟಿಯಿಲ್ಲ....


ಗಾಂಧಿ...ಜೀಸಸ್...ಬುದ್ಧ...


ನಿಮ್ಮ ತುಟಿಯಂಚಿನ ನಗುವಿನಲ್ಲಿ

ಹೊಳೆಯುತ್ತಿರುವ ಖಡ್ಗದ ಅಲಗು
ನಿಷ್ಪಾಪಿ ಪಾಪಿಗಳ ಹೃದಯವನ್ನೇ ಇರಿದಿದೆ

ನಿಮ್ಮ ಕ್ಷಮೆಗೆ ಕ್ಷಮೆಯಿಲ್ಲ!




ಅವನು ಮಾಡಿದ

ಸಾವಿರ ತಪ್ಪುಗಳ

ಒಂದು ಕ್ಷಮೆಯಿಂದ

ನಾನು ಸರಿ

ದೂಗಿಸಿಕೊಂಡೆ




ನಾನು
ಅವನ ದ್ವೇಷಿಸಿದೆ
ಅವನೋ ನನ್ನನ್ನು ಕ್ಷಮಿಸಿದ!


ಹೇಳು ದೇವರೆ...

ಯಾರು ಹೆಚ್ಚು ನೊಂದವರು?
ನಾನೋ...ಅವನೋ...?




ನನ್ನದೋ ತಿಳಿಯದೇ ಮಾಡಿದ ತಪ್ಪುಗಳು

ನೀನೋ ತಿಳಿದು

ತಿಳಿದೂ ನನ್ನನ್ನು ಕ್ಷಮಿಸಿದೆ

ಹೇಳು...

ಯಾರು ಯಾರಿಗಿಂತ
ಹೆಚ್ಚು ದುಷ್ಟರು?



ಕ್ಷಮೆಯ ಹಂಗಿನ ಅರಮನೆಗಿಂತ

ನನ್ನ ದ್ವೇಷದ ಅರಗಿನ ಮನೆಯೇ

ಲೇಸು ಎಂದು

ನೆಮ್ಮದಿಯಿಂದ
ಸುಟ್ಟು ಹೋದೆ!

Thursday, March 10, 2011

ಹೀಗೊಬ್ಬ ಗುರು


ಅವರ ಹೆಸರು ಪ್ರಾಣೇಶ ಕುಲಕರ್ಣಿ. ಗೆಳೆಯರು ಪ್ರೀತಿ ಹೆಚ್ಚಾದರೆ ‘ಕುಲ್ಕಾ’ ಎಂದು ಕರೆಯುತ್ತಿದ್ದರು. ನನಗೆ ಪ್ರೀತಿ ಉಕ್ಕಿದರೆ ‘ಗುರುಗಳೇ’ ಎಂದು ಕರೆಯುತ್ತಿದ್ದೆ. ಮುಂಬೈಯ ‘ಕರ್ನಾಟಕ ಮಲ್ಲ’ ದೈನಿಕದಲ್ಲಿ ಅವರು ಹಿರಿಯ ಉಪಸಂಪಾದಕರಾಗಿದ್ದರು. ಈ ಮೊದಲು ಅವರು ‘ಸಂಯುಕ್ತ ಕರ್ನಾಟಕ’ದಲ್ಲಿ ಉಪಸಂಪಾದಕರಾಗಿದ್ದರು. ಅಲ್ಲಿಯ ಮುಷ್ಕರದಿಂದ ಕೆಲಸ ಕಳೆದುಕೊಂಡದ್ದನ್ನು ಅವರು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ‘ನನಗಿನ್ನೂ ಆ ಪತ್ರಿಕೆಯಿಂದ ಒಂದಿಷ್ಟು ದುಡ್ಡು ಬರುವುದಕ್ಕೆ ಬಾಕಿ ಇದೆ. ಕೇಸು ಕೋರ್ಟ್‌ನಲ್ಲಿದೆ’ ಎಂದೆಲ್ಲ ಹೇಳುತ್ತಿದ್ದರು. ಎಲ್ಲವನ್ನು ನಂಬುವುದು ಹೇಗೆ ಎಂದು ನಾನು ಸುಮ್ಮ ಸುಮ್ಮಗೆ ನಂಬಿದಂತೆ ನಟಿಸುತ್ತಿದ್ದೆ. ಅವರು ಹೇಳಿದ್ದರಲ್ಲಿ ನಿಜ ಇದ್ದಿರಲೂ ಬಹುದು.

ಅವರು ಇದ್ದಲ್ಲಿ ನಗು ‘ಭುಗ್ಗೆಂ’ದು ಏಳುತ್ತಿತ್ತು. ಡೆಸ್ಕಲ್ಲಿ ಬಂದು ಕೂತದ್ದೇ, ಯಾರನ್ನಾದರೂ ಮಿಮಿಕ್ರಿ ಮಾಡುವುದಕ್ಕೆ ತೊಡಗುತ್ತಿದ್ದರು. ನಾನಿಲ್ಲದ ಹೊತ್ತಲ್ಲಿ ನಾನು ಮಾತನಾಡುವ ಶೈಲಿಯನ್ನೇ ಅನುಕರಣೆ ಮಾಡುತ್ತಿದ್ದರೆಂಬ ಅನುಮಾನ ನನಗೆ ಹಲವು ಬಾರಿ ಕಾಡಿದ್ದಿದೆ. ನೂರೆಂಟು ತಾಪತ್ರಯಗಳನ್ನು ಬೆನ್ನಲ್ಲಿ ಹೊತ್ತು ತಿರುಗುತ್ತಿದ್ದ ನನಗೆ ಅವರ ಸಹವಾಸ ಹಿತ ಎನಿಸುತ್ತಿತ್ತು. ಮಹಮ್ಮದ್ ರಫಿಯ ಹಾಡುಗಳನ್ನು ಎಷ್ಟು ಸೊಗಸಾಗಿ ಹಾಡುತ್ತಿದ್ದರೆಂದರೆ, ನನ್ನ ಸಮಸ್ಯೆಗಳೆಲ್ಲ ಗಾಳಿಯಲ್ಲಿ ತೇಲುತ್ತಾ ತೇಲುತ್ತಾ ಇಲ್ಲವಾಗುತ್ತಿತ್ತು. ಮನಸ್ಸಿಗೆ ತುಂಬಾ ಬೇಜಾರಾದಾಗ ಅವರ ಬಳಿ ಬಂದು ‘ಗುರುಗಳೇ ಒಂದು ರಫೀ ಹಾಡು ಹಾಡಿ’ ಎಂದರೆ, ಅದಕ್ಕಾಗಿಯೇ ಕಾಯುತ್ತಿದ್ದವರಂತೆ ರಫಿಯ ಯಾವುದಾದರೂ ಹಾಡಿನ ಎರಡು ಸಾಲುಗಳನ್ನು ಹಾಡುತ್ತಿದ್ದರು.

ಅಕಾಡೆಮಿಕ್ ಆದಂತಹ ಎಲ್ಲವುಗಳಿಗೆ ಅವರು ತುಸು ಹೆದರುತ್ತಿದ್ದರು. ಕವನಗಳ ಬಗ್ಗೆಯೂ ಇಂತಹ ಒಂದು ಭಯ ಅವರಿಗಿತ್ತು. ತನಗೆ ಅರ್ಥವಾಗದೇ ಇರುವಂತಹದೇನೋ ಅದರಲ್ಲಿದೆ ಎನ್ನುವ ಭಯ ಅದಾಗಿದ್ದಿರಲೂಬಹುದು. ನನ್ನ ಕವಿತೆಗಳು ಆಗಾಗ ಒಳ ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದರಿಂದ ಆ ಕುರಿತು ಒಂದು ಸಣ್ಣ ಭಯ ನನ್ನ ಬಗ್ಗೆ ಇತ್ತು. ಆದರೆ ಬದುಕಿನ ಕುರಿತ ಅವರ ಅಪಾರ ಮೋಹ, ಜೀವನ ಪ್ರೀತಿಯ ಮುಂದೆ ನನ್ನ ಕವಿತೆ ಏನೇನೂ ಅಲ್ಲ ಎನ್ನುವುದು ನನಗೆ ಸ್ಪಷ್ಟವಿತ್ತು.

ಅವರನ್ನು ಅಂಟಿಕೊಂಡಿದ್ದ ಕುಡಿತದ ಚಟವನ್ನು ಯಾವ ರೀತಿಯಲ್ಲಿ ವ್ಯಾಖ್ಯಾನಿಸಬೇಕೆನ್ನುವುದು ನನಗೆ ಈ ಕ್ಷಣಕ್ಕೂ ಹೊಳೆಯುತ್ತಿಲ್ಲ. ಅವರ ಪ್ರತಿಭೆಯ ಮೂಲ ಸೆಲೆಯೇ ಕುಡಿತವಾಗಿದ್ದಿರಬಹುದೋ ಎನ್ನಿಸುವಷ್ಟು ಅವರು ಕುಡಿಯುತ್ತಿದ್ದರು. ಅದಕ್ಕೆ ಯಾವುದೇ ಶಿಸ್ತಿರಲಿಲ್ಲ. ಕೆಲವೊಮ್ಮೆ ಕುಡಿದೇ ಕಚೇರಿಗೆ ಬರುತ್ತಿದ್ದರು. ಅನೇಕ ಸಂದರ್ಭದಲ್ಲಿ ಅದು ಅವರನ್ನು ತೀರಾ ಸಣ್ಣ ಮಟ್ಟಕ್ಕೆ ಇಳಿಸುತ್ತಿತ್ತು. ಯಾರೊಂದಿಗೆ ಜಗಳವಾಡಿ ಮಾತು ನಿಲ್ಲಿಸಿರುತ್ತಿದ್ದರೋ ಅವರೊಂದಿಗೇ ಚಿಲ್ಲರೆ ಹಣಕ್ಕಾಗಿ ಕೈ ಚಾಚುವಂತೆ ಮಾಡುತ್ತಿತ್ತು.
ಒಮ್ಮೆ ಯಾವುದೋ ಕಾರಣಕ್ಕೆ ನಾನು ಸಿಟ್ಟಿನಿಂದ ನುಡಿದಿದ್ದೆ ‘ಗುರುಗಳೇ, ಇನ್ನು ನಿಮ್ಮೆಂದಿಗೆ ಮಾತನಾಡುವುದಿಲ್ಲ. ನೀವು ಕುಡಿದಾಗ ಒಂದು ಮಾತಾಡ್ತೀರಿ. ಕುಡಿಯದೇ ಇದ್ದಾಗ ಒಂದು ಮಾತಾಡ್ತೀರಿ..’
‘ಹೌದು ಮತ್ತೆ. ಇಲ್ಲಾಂದ್ರೆ ಹೆಂಡಕ್ಕೆ ರೊಕ್ಕ ಕೊಡೋದು ಯಾಕ? ಕುಡಿದಾಗ ಒಂದು ಮಾತಾಡ್ಬೇಕು. ಕುಡಿಯದೇ ಇದ್ದಾಗ ಇನ್ನೊಂದು ಮಾತಾಡ್ಬೇಕು..’ ಎಂದು ನನ್ನನ್ನು ಅಣಕಿಸಿದ್ರು. ಕರ್ನಾಟಕ ಮಲ್ಲದಿಂದ ನಾನು ವಿದಾಯ ಹೇಳುವ ದಿನ, ವಿದಾಯ ಭಾಷಣದಲ್ಲೂ ಅದನ್ನೇ ‘ಮಿಮಿಕ್ರಿ’ ಮಾಡಿ ಎಲ್ಲರನ್ನು ನಗಿಸಿದ್ದರು.

ಕುಡಿತ ಅವರನ್ನು ವರ್ಣರಂಜಿತ ವ್ಯಕ್ತಿಯನ್ನಾಗಿ ಮಾಡಿತ್ತು ಹೌದು. ಆದರೆ ಅವರ ವೈಯಕ್ತಿಕ ಬದುಕನ್ನು ಅದು ಪಾತಾಳಕ್ಕೆ ತಳ್ಳುತ್ತಿತ್ತು. ಒಳ್ಳೆಯ ಬರಹಗಾರರೂ ಆಗಬಹುದಾಗಿದ್ದ ಅವರು ತಮ್ಮ ಕುಡಿತಕ್ಕೆ ಹಣ ಹೊಂದಾಣಿಕೆ ಮಾಡುವುದಕ್ಕಾಗಿ ‘ಪೊಲೀಸ್ ನ್ಯೂಸ್’ನಂತಹ ಪತ್ರಿಕೆಗೆ ‘ಹೆಣ್ಣೇ ಹೇಳು ನಿನ್ನ ಗೋಳು’ನಂತಹ ಬರಹಗಳನ್ನು ಬರೆಯುತ್ತಿದ್ದರು. ‘ಗುರುಗಳೇ ಕತೆ ಬರೀರಿ.. ಲೇಖನ ಬರೀರಿ..’ ಎಂದು ನನ್ನ ಮತ್ತು ನನ್ನ ಗೆಳೆಯರ ಒತ್ತಡಕ್ಕೆ ಒಮ್ಮೆ ಒಂದು ಕತೆ ಬರೆದಿದ್ದರು. ಕತೆಯ ಹೆಸರು ‘ಸತ್ತೆಪ್ಪ’. ‘ಸತ್ತೆಪ್ಪ’ ಎನ್ನುವುದು ಕಥಾ ನಾಯಕನ ಹೆಸರು. ಹೆಣವನ್ನು ಹೂಳುವುದು ಆತನ ಕಾಯಕ. ಆದರೆ ಆತ ಸತ್ತಾಗ ಆತನ ಹೆಣವನ್ನು ದಫನ ಮಾಡುವವರಿಲ್ಲದೆ ಅನಾಥವಾಗುವುದೇ ಕಥಾವಸ್ತು. ಅದನ್ನು ತರಂಗಕ್ಕೆ ಕಳುಹಿಸಿದರು. ಅದು ಬಹುಮಾನಿತ ಕತೆಯಾಗಿ ಆಯ್ಕೆಯಾಯಿತು. ಹಲವು ತಿಂಗಳ ಕಾಲ ಆ ಬಹುಮಾನಿತ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾದರು. ಇನ್ನು ಮುಂದೆ ತಿಂಗಳಿಗೊಂದು ಕತೆ ಬರೀತೀನಿ ಎಂದರು. ಕುಡಿತವನ್ನು ಬಿಟ್ಟೆ ಎಂದರು.ಎರಡು ದಿನ ಕುಡಿತವನ್ನು ಬಿಟ್ಟರು ಕೂಡ. ‘ಕುಡಿತವನ್ನು ಬಿಟ್ಟೆ’ಎಂದು ಎಲ್ಲರಿಗೂ ಸಿಹಿ ಹಂಚಿದರು. ಮೂರನೆ ದಿನ ಕುಡಿದೇ ಬಂದರು. ಸಿಟ್ಟು ಮುಖದಿಂದ ಅವರನ್ನು ನೋಡಿದ್ದಕ್ಕೆ ‘ಕುಡಿಯದೇ ನೀವೆಲ್ಲ ಸಾಚಾ ಇದ್ದೀರೋ.. ನೀವೆಲ್ಲ ಕುಡಿಯದೇ ಏನು ಸಾಧಿಸಿದ್ರಿ?’ ಎಂದು ನಮಗೇ ಧಮಕಿ ಹಾಕಿದರು. ಆದರೂ ಆ ಕ್ಷಣದಲ್ಲಿ ಅವರ ಕಣ್ಣಿನ ಆಳದಲ್ಲಿ ಒಬ್ಬ ಒಳ್ಳೆಯ ಪತ್ರಕರ್ತ, ಲೇಖಕ, ಗೆಳೆಯ ಅಸಹಾಯಕನಾಗಿ ವಿಲ ವಿಲ ಒದ್ದಾಡುತ್ತಿರುವುದನ್ನು ನಾನು ಕಂಡಿದ್ದೆ.

ಯಾವುದೋ ಕಾರಣದಿಂದ ನಾನು ಧಾರಾವಿಯ ಕೋಣೆಯಿಂದ ಹೊರ ಬಿದ್ದಾಗ ಸುಮಾರು ಒಂದು ತಿಂಗಳ ಕಾಲ ಡೊಂಬಿವಿಲಿಯ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದೆ. ರಾತ್ರಿ ಪಾಳಿಯ ಕೆಲಸವನ್ನು ಮುಗಿಸಿ ಜೊತೆಯಾಗಿ ರಾತ್ರಿ 12 ಗಂಟೆಗೆ ಸಯನ್‌ನಲ್ಲಿ ರೈಲು ಹಿಡಿಯುತ್ತಿದ್ದೆವು. ಸುಮಾರು ಒಂದೂವರೆ ಗಂಟೆಯ ಪ್ರಯಾಣ. ಬಾಗಿಲ ಪಕ್ಕದಲ್ಲೇ ಎದುರು ಬದುರಾಗಿ ಕುಳಿತುಕೊಳ್ಳುತ್ತಿದ್ದೆವು. ಕಂಠಪೂರ್ತಿ ಕುಡಿದಿರುತ್ತಿದ್ದ ಅವರು, ಮುಖೇಶನದೊ, ರಫಿಯದೋ ಯಾರದಾದರೊಂದು ಹಾಡಿನ ಸಾಲನ್ನು ಹಿಡಿದು ಬಿಡುತ್ತಿದ್ದರು. ಎಷ್ಟು ಜೋರಾಗಿ ಹಾಡುತ್ತಿದ್ದರೆಂದರೆ ರೈಲಿನಲ್ಲಿದ್ದ ಪ್ರಯಾಣಿಕರೆಲ್ಲ ಅವರ ಸುತ್ತ ಸೇರಿಬಿಡುತ್ತಿದ್ದರು. ಒಮ್ಮೆ ಏನಾಯಿತೆಂದರೆ ಒಬ್ಬ ಪ್ರಯಾಣಿಕ ತೀರ ಭಾವುಕನಾಗಿ ಜೇಬಿನಿಂದ ಹತ್ತು ರೂ. ತೆಗೆದು ಕುಲಕರ್ಣಿಯವರ ಕೈಯಲ್ಲಿ ಇಟ್ಟು ಬಿಟ್ಟ. ಆವರೆಗೆ ಹವ್ಯಾಸಿಯಾಗಿ ಹಾಡುತ್ತಿದ್ದ ಅವರು, ಹಾಡನ್ನೇ ಒಂದು ವೃತ್ತಿ ಮಾಡಿಕೊಂಡು ಬಿಟ್ಟರು.

ಕುಲಕರ್ಣಿಯವರಿಗೆ ಮುದ್ದಾದ ಪುಟಾಣಿ ಮಗಳಿದ್ದಳು. ತುಂಬಾ ಚೂಟಿಯಾದ, ತಂದೆಯನ್ನು ತೀರಾ ಹಚ್ಚಿಕೊಂಡ ಹುಡುಗಿ. ಕುಲಕರ್ಣಿಯವರ ಪತ್ನಿ ಅನಕ್ಷರಸ್ಥರಾದರೂ ಪತಿಯ ಎಲ್ಲ ಅವಾಂತರಗಳ ನಡುವೆ ಸಂಸಾರವನ್ನು ದೂಗಿಸುವುದಕ್ಕೆ ಹಗಲಿರುಳು ಹೆಣಗಾಡುತ್ತಿದ್ದರು.ಎರಡು ಮೂರು ದಿನಗಳ ಕಾಲ, ಒಮ್ಮಿಮ್ಮೆ ಒಂದು ವಾರ ಕಾಲ ಅನಿರೀಕ್ಷಿತವಾಗಿ ಕಚೇರಿಗೆ ರಜೆ ಹಾಕಿ ಬಿಡುತ್ತಿದ್ದ ಕುಲಕರ್ಣಿಯವರನ್ನು ಮತ್ತೆ ಕಚೇರಿಗೆ ಸೇರಿಸಿಕೊಳ್ಳುವುದಕ್ಕಾಗಿ ತಿಂಗಳಿಗೆರಡು ಬಾರಿಯಾದರೂ ಮಧ್ಯಸ್ಥಿಕೆಗಾಗಿ ಪತ್ರಿಕೆಯ ಕಚೇರಿಗೆ ಬರುವುದೆಂದಿತ್ತು. ಕೆಲವೊಮ್ಮೆ ಪತ್ನಿಯಿಂದಲೇ ಸುಳ್ಳು ಕಾರಣಗಳನ್ನು ಹೇಳಿಸುತ್ತಿದ್ದರು. ಅವರು ಪತಿಯ ಒಂದೊಂದು ಅವಾಂತರಗಳನ್ನು ಹೇಳುವಾಗಲೂ ಕುಲಕರ್ಣಿಯ ಮೇಲೆ ಸಿಟ್ಟು ಧುಮ್ಮಿಕ್ಕಿ ಬರುತ್ತಿತ್ತು.
ಒಮ್ಮೆ ಮಧ್ಯರಾತ್ರಿ ಕಚೇರಿ ಬಿಟ್ಟು ಮನೆ ಕಡೆ ಹೋಗುತ್ತಿದ್ದ ಕುಲಕರ್ಣಿಯವರಿಗೆ ಡೊಂಬಿವಿಲಿ ರೈಲು ನಿಲ್ದಾಣದಲ್ಲಿ ಒಬ್ಬ ಸಾಧು ಸಿಕ್ಕಿದನಂತೆ. ಆತನೂ ಕುಡಿದು ತೂರಾಡುತ್ತಿದ್ದ. ಆತನೊಂದಿಗೆ ಒಂದರ್ಧ ಗಂಟೆ ಹರಟೆ ಕೊಚ್ಚಿದ ಕುಲಕರ್ಣಿ, ಅವನನ್ನು ಮನೆಗೆ ಕರೆದೊಯ್ದಿದ್ದರಂತೆ. ಕುಲಕರ್ಣಿಯವರ ಪತ್ನಿಗೆ ಎದೆಯೇ ಬಾಯಿಗೆ ಬಂದಂತಾಯಿತು. ‘ಯಾರ್ರೀ ಇವ್ರ’ ಎಂದು ಕೇಳಿದ್ದಕ್ಕೆ ‘...ಸ್ವಾಮೀಜಿ..ನನ್ನ ಫ್ರೆಂಡ್..’ ಎಂದು ಉತ್ತರಿಸಿದರಂತೆ. ರಾತ್ರಿಯಿಡೀ ಪತ್ನಿ ಮತ್ತು ಮಗು ನಿದ್ದೆಯಿಲ್ಲದೇ ಕಾಲ ಕಳೆದರಂತೆ. ಬೆಳಗ್ಗೆ ಸಾಧು ಎದ್ದು ಸ್ನಾನ ಮುಗಿಸಿ, ತಿಂಡಿ ತಿಂದು ಎಲ್ಲರನ್ನು ಆಶೀರ್ವದಿಸಿ ಮನೆ ಬಿಟ್ಟನಂತೆ.

ನಾನು ಮುಂಬೈ ಬಿಟ್ಟು ಮಂಗಳೂರಿಗೆ ಬಂದ ಒಂದೆರಡು ವರ್ಷ ಕುಲಕರ್ಣಿಯವರ ಸಂಗತಿಯೇ ತಿಳಿಯಲಿಲ್ಲ. ಆಮೇಲೆ ಒಂದು ದಿನ ಯಾರೋ ಹೇಳಿದರು ‘ಅವರು ಮುಂಬಯಿ ಬಿಟ್ಟಿದ್ದಾರೆ. ಈಗ ಬೆಳಗಾವಿಯಲ್ಲೆಲ್ಲೋ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ..’ ಹೊಸ ವಾತಾವರಣದಲ್ಲಿ ಹೊಸ ಕುಲಕರ್ಣಿಯೊಬ್ಬರನ್ನು ಯಾವತ್ತಾದರೂ ಎದುರುಗೊಳ್ಳಲಿದ್ದೇನೆ ಎನ್ನುವುದರಲ್ಲೇ ಮನಸ್ಸು ಸಂಭ್ರಮಿಸಿತ್ತು. ಅವರನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವರ ಮಗಳು ಪ್ರತಿಭಾ ಕುಲಕರ್ಣಿ, ಅವರ ಪತ್ನಿ ಇವರನ್ನೆಲ್ಲ ಮತ್ತೊಮ್ಮೆ ಭೇಟಿಯಾಗಬೇಕು, ಜೊತೆಯಾಗಿ ಉಣ್ಣಬೇಕು ಇತ್ಯಾದಿಗಳು ಮನಸ್ಸನ್ನು ಮುತ್ತಿಕೊಂಡಿತ್ತು.

ಈ ಸುದ್ದಿ ಕೇಳಿದ ಎಷ್ಟೋ ತಿಂಗಳ ಬಳಿಕ ಮುಂಬೈಯಿಂದ ಗೆಳೆಯರೊಬ್ಬರು ಊರಿಗೆ ಬಂದಿದ್ದರು. ಮುಂಬೈ, ಅಲ್ಲಿನ ಗೆಳೆಯರು, ಕನ್ನಡ ಪತ್ರಿಕೆ ಇತ್ಯಾದಿಗಳ ಬಗ್ಗೆ ಮಾತನಾಡಿದ ನಂತರ ‘ಗುರುಗಳು ಯಾವತ್ತಾದರೂ ಸಿಕ್ಕಿದ್ದರಾ?’ ಎಂದು ಕೇಳಿದೆ. ಆತ ಒಮ್ಮೆಲೆ ಅವಕ್ಕಾಗಿ ‘ನಿಮಗೆ ಗೊತ್ತಿಲ್ಲವಾ?’ ಎಂದರು.
‘ಕುಲಕರ್ಣಿ ತೀರಿ ಹೋಗಿ ಎರಡು ಮೂರು ತಿಂಗಳಾಯಿತು. ರೈಲಿನ ಹಳಿಯಲ್ಲಿ ಅವರ ಮೃತದೇಹ ಪತ್ತೆಯಾಯಿತಂತೆ.. ಆಕ್ಸಿಡೆಂಟೋ, ಆತ್ಮಹತ್ಯೆಯೋ.. ಕೊಲೆಯೋ.. ಒಂದೂ ಗೊತ್ತಿಲ್ಲ’
ಜೀವಮಾನದಲ್ಲಿ ‘ಸತ್ತೆಪ್ಪ’ ಎಂಬ ಒಂದೇ ಒಂದು ಕತೆ ಬರೆದ ನನ್ನ ಗುರುಗಳು ಅಂತಹ ಸಾವಿರಾರು ಕತೆಗಳನ್ನು, ಕವಿತೆಗಳನ್ನು ಎದೆಯೊಳಗಿಟ್ಟು ಬದುಕಿದವರು. ‘ಕುಡಿಯದೇ ಇರುತ್ತಿದ್ದರೆ ಅವರು ಚೆನ್ನಾಗಿರುತ್ತಿದ್ದರು’ ಎಂದು ನಾನಿಲ್ಲಿ ಬರೆದರೆ ಅದು ಕುಲಕರ್ಣಿಯವರಿಗೆ ಮಾಡುವ ಅಪಚಾರವಾದೀತು.
ಧಡಧಡನೆ ಓಡುವ ರೈಲುಗಾಡಿಯಲ್ಲಿ, ಬಾಗಿಲ ಬಳಿ ಕುಳಿತು ಮುಖಕ್ಕೆ ಅಪ್ಪಳಿಸುವ ಚಳಿ ಗಾಳಿಯನ್ನು ಎಂಜಾಯ್ ಮಾಡುತ್ತಾ ಅವರು ಕುಡಿದು ಹಾಡಿದ ‘ಓ ದೂರ್ ಕೆ ಮುಸಾಫಿರ್..’ ಹಾಡು ನನ್ನೊಳಗಿನ್ನೂ ಎಷ್ಟು ಜೀವಂತವಾಗಿದೆ ಎಂದರೆ, ಆ ಹಾಡನ್ನು ಎಲ್ಲಾದರೂ ಕೇಳಿದರೆ ನನಗೆ ನೆನಪಾಗುವುದು ಮಹಮ್ಮದ್ ರಫಿಯಲ್ಲ, ಕುಲಕರ್ಣಿ.