Saturday, November 8, 2014

ಮುಂಬೈಯ ಬದುಕು-ಮರೆತೇನೆಂದರೆ ಮರೆಯಲಿ ಹ್ಯಾಂಗ...

ನನ್ನ ಬಿ ಎ ಮುಗಿದಾಕ್ಷಣ ನಾನು ಊರಿಂದ ಮುಂಬೈಗೆ ಪಲಾಯನ ಮಾಡಿದೆ. ಮುಂಬೈ ಕನ್ನಡ ನನ್ನನ್ನು ಮನೆ ಮಗನಂತೆ ಪ್ರೀತಿಯಿಂದ ಸ್ವೀಕರಿಸಿತು.(ಈ ಕುರಿತ ಹಲವು ವಿವರಗಳನ್ನು ಹಿಂದೆ ಹಲವು ಬಾರಿ ಗುಜರಿ ಅಂಗಡಿಯಲ್ಲಿ ಬರೆದಿದ್ದೆ). ಕರ್ನಾಟಕ ಮಲ್ಲ ಕನ್ನಡ ದೈನಿಕದಲ್ಲಿ ಕೆಲಸ ಮಾಡುತ್ತಲೇ ಮುಂಬೈ ವಿ ವಿ ಯಲ್ಲಿ ಚಿನ್ನದ ಪದಕದ ಜೊತೆಗೆ ಕನ್ನಡ ಎಂ ಎ ಮುಗಿಸಿದೆ. ನೂರಾರು ಕನ್ನಡ ಮನಸ್ಸಿನ ಆತ್ಮೀಯ ಗೆಳೆಯರನ್ನು ಪಡೆದೆ. ಚಿತ್ತಾಲ, ವ್ಯಾಸ ರಾಯ ಬಲ್ಲಾಳ, ಬಿ ಎ ಸನದಿ, ರವಿ ರಾ ಅಂಚನ್, ಬನ್ನಂಜೆ ಬಾಬು ಆಮೀನ್, ಸುನೀತಕ್ಕ, ಜಯಂತ್ ಕಾಯ್ಕಿಣಿ  ಮೊದಲಾದ ಹಿರಿ ಮರಗಳ ನೆರಳನ್ನು ಪಡೆದೆ.  ನಾನು ಹುಟ್ಟಿದ್ದೇ ಮುಂಬೈಯಲ್ಲಿ ಎಂಬಂತೆ ಸುಮಾರು ಐದು ವರ್ಷಗಳನ್ನು ಅಲ್ಲಿ ಬದುಕಿದೆ.  ಅಲ್ಲಿಂದ ಮರಳಿದ ಬಳಿಕವೂ ಮುಂಬೈಯನ್ನು ಮರೆಯಲು ನನ್ನಿಂದ ಸಾಧ್ಯವಾಗಿಲ್ಲ. ಅದು ನನಗೆ ಆಶ್ರಯ, ಅನ್ನವನ್ನು ಕೊಟ್ಟ ನೆಲ. ನನ್ನ ಸಾಹಿತ್ಯಾಸಕ್ತಿಯ ಬುಡಕ್ಕೆ ನೀರೆರೆದ ಗೆಳೆಯರನ್ನು ಮರೆಯೋದು ಹೇಗೆ ಸಾಧ್ಯ? ಬಹುಶ ಮುಂಬೈ ಬದುಕು ನನ್ನ ಪಾಲಿನ ಒಂದು ಜನ್ಮವೇ ಆಗಿರಬಹುದು.  ಮೊನ್ನೆ ಹಳೆ ಆಲ್ಬಮ್ ಗಳನ್ನ ತಡವುತ್ತಿದ್ದಾಗ ಎಲ್ಲ ನೆನಪುಗಳು ಒದ್ದು ಬಂದವು. ಕಣ್ಣು ಹನಿಯಾಯಿತು. ಧಾರಾವಿ ಸಮೀಪದ 90 ಫೀಟ್ ರಸ್ತೆಯಲ್ಲಿ ಮುಂಬೈ ವಿ ವಿ ಕಡೆ ಹೋಗುವ ೩೧೨ ಬಸ್ಸಿಗಾಗಿ ಕಾಯುತ್ತಿರುವ ನನ್ನನ್ನು ನಾನು ಮತ್ತೊಮ್ಮೆ ಈ ಫೋಟೋ ಗಳಲ್ಲಿ ನೋಡಿದೆ. 90 ಫೀಟ್ ರಸ್ತೆಯ ಉದ್ದಕ್ಕೂ ನಡೆಯುತ್ತಾ ಮಾಟುಂಗಾದ ಕರ್ನಾಟಕ ಸಂಘವನ್ನು ತಲುಪುತ್ತಿರುವ ಆ ಬಶೀರ ನಿಜಕ್ಕೂ ನಾನೇ ಆಗಿರಬಹುದೇ ಎಂಬ ಕುರಿತು ಸಣ್ಣದೊಂದು ಅನುಮಾನ ಕಾಡಿತು.  ಫೋಟೋಗಳಲ್ಲಿ ಅದೇನು ಸಿಹಿಯಿತ್ತೋ ಕೆಲವನ್ನು ನನ್ನ ಪ್ರೀತಿಯ ಇರುವೆಗಳು ತಿಂದು ಹಾಕಿದ್ದವು. ಉಳಿದವುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 

ನಾವೇ ಒಂಬತ್ತು ಮಂದಿ ಗೆಳೆಯರು  ಕಟ್ಟಿಕೊಂಡ "ಮುಂಬೈ ಚುಕ್ಕಿ ಸಂಕುಲ" ಗುಂಪು ಸಂಪಾದಿಸಿದ "ಚುಕ್ಕಿ ಕತೆಗಳು" ಕೃತಿಯ ಬಿಡುಗಡೆ ಸಮಾರಂಭದಲ್ಲಿ ಕವನ ಓದುವ ಮೂಲಕ ಕಾರ್ಯಕ್ರಮ ಆರಂಭಿಸುತ್ತಿರೋದು.
 
ಮುಂಬೈ ವಿಶ್ವ ವಿದ್ಯಾಲಯ ಕುಲಪತಿಗಳಿಂದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಸ್ನಾತ್ತಕೋತ್ತರ ಪದವಿ ಪತ್ರ ಸ್ವೀಕರಿಸುತ್ತಿರೋದು

ಗೆಳೆಯ ಸಾ. ದಯಾ ನಿರ್ದೇಶಿದ "ಉಬರ್" ತುಳು ನಾಟಕದಲ್ಲಿ. ಮಧ್ಯದಲ್ಲಿರುವ ಹುಡುಗನೊಬ್ಬ(ಕಪ್ಪು ಅಂಗಿ) ಅದೇನೋ ಹೇಳಲು ಪ್ರಯತ್ನಿಸುತ್ತಿದ್ದಾನಲ್ಲ, ಅದು ನಾನು 

ಮುಂಬೈಯ ಕರ್ನಾಟಕ ವಿಶ್ವ ಕರ್ಮ ಅಸೋಸಿಯೇಶನ್ ಹಮ್ಮಿಕೊಂಡ ಕವಿಗೋಷ್ಠಿಯಲ್ಲಿ ನಾನು ಕವಿತೆ ವಾಚಿಸುತ್ತಿರೋದು
ಮುಂಬೈ ವಿವಿ ಕನ್ನಡ ವಿಭಾಗದ ಕಾರ್ಯಕ್ರಮದಲ್ಲಿ ನಾನು ಮಾತಾಡ್ತಾ ಇರೋದು. ವೇದಿಕೆಯಲ್ಲಿ ಆಗಿನ ವಿಭಾಗದ ಮುಖ್ಯಸ್ಥರಾದ ತಾಳ್ತಜೆ ವಸಂತ ಕುಮಾರ್, ಹಿರಿಯ ಕನ್ನಡ ಸಂಘಟದ, ಲೇಖಕ ಜಿ ಡಿ ಜೋಷಿ ಮೊದಲಾದವರು ಇದ್ದಾರೆ.

೧೯೯೬ ರಲ್ಲಿ ಮುಂಬೈಯಲ್ಲಿ ಇರುವಾಗಲೇ, ನನ್ನ ಕವನ ಸಂಕಲನ "ಪ್ರವಾದಿಯ ಕನಸು" ಹಸ್ತಪ್ರತಿಗೆ ಮುದ್ದಣ ಕಾವ್ಯ ಪ್ರಶಸ್ತಿ ದೊರಕಿತು. ಕಾಂತಾವರದಲ್ಲಿ ಹರಿಕೃಷ್ಣ ಪುನರೂರು ಅವರು ಶಾಲು ಹೊದಿಸಿ ಸನ್ಮಾನಿಸಿ, ಪ್ರಶಸ್ತಿ ನೀಡಿದರು. ಹೇಗಿದೆ ಫೋಟೋ !?
ಮಹಾರಾಷ್ಟ್ರ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ಓದುತ್ತಿರೋದು.
ಗೋರೆಗಾಂವ್ ಕರ್ನಾಟಕ ಸಂಘ ಹಮ್ಮಿಕೊಂಡ ವಿಚಾರ ಭಾರತಿ ಸಮ್ಮೇಳನದಲ್ಲಿ
ಮುಂಬೈಯ ಕರ್ನಾಟಕ ಮಲ್ಲ ಕನ್ನಡ ದೈನಿಕ ಕಚೇರಿಯಲ್ಲಿ ಒಂದು ಭಂಗಿ
ನಮ್ಮದೇ ಮುಂಬೈ ಚುಕ್ಕಿ ಸಂಕುಲ ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ
ಮುಂಬೈಯ ತೌಳವ ಸಂಘಗಳ ತುಳು ಪರ್ಬದಲ್ಲಿ
ಯಾವ ಕಾರ್ಯಕ್ರಮದಲ್ಲಿ ಎಂದು ನೆನಪಿಲ್ಲ
ಕರ್ನಾಟಕ ಮಲ್ಲ ದೈನಿಕದ ಪಿಕ್ ನಿಕ್ ನಲ್ಲಿ, ಹಳದಿ ಟೀ ಶರ್ಟ್ ಹಾಕಿ, ಬೈರಾಸ್ ಉಟ್ಟು ಎರಡು ಕೈ ಮೇಲೆತ್ತಿರೋದು ನಾನೇ 
ಆನಗಳ್ಳಿ ನಿರ್ದೇಶಿಸಿದ ಕಂಬಾರರ ಸಿರಿಸಂಪಿಗೆ ನಾಟಕದಲ್ಲಿ ಅವಳಿ ಜವಳಿ ಪಾತ್ರದಲ್ಲಿ ಜವಳಿ ಪಾತ್ರವನ್ನು ನಾನು ನಿರ್ವಹಿಸಿದ್ದೆ. ಸುರೇಶ ಆನಗಳ್ಳಿ ಹಿಂದೆ ಎರಡು ಜೋಕರ್ ಗಲಿದ್ದಾರಲ್ಲ ಅದರಲ್ಲಿ ಬಲಭಾಗದಲ್ಲಿ ಹಲ್ಲು ಕಿರಿಯುತ್ತಿರೋದು ನಾನು. ಸಿರಿ ಸಂಪಿಗೆ ಪಾತ್ರವನ್ನು ಹಾ. ಮಾ ಕನಕ ನಿರ್ವಹಿಸಿದ್ದರು
ನನ್ನ ಪ್ರವಾದಿಯ ಕನಸು ಸಂಕಲನಕ್ಕೆ ದೊರಕಿದ ಮುದ್ದಣ ಕಾವ್ಯ ಪ್ರಶಸ್ತಿ ಫಲಕಗಳ ಜೊತೆಗೆ
ಮುಂಬೈ ಕರ್ನಾಟಕ ಸಂಘದಲ್ಲಿ ವ್ಯಾಸರಾಯ ನಿಂಜೂರು ಅವರಿಂದ ಅದ್ಯಾವುದೋ ಪ್ರಮಾಣ ಪತ್ರ
ಮುಂಬೈ ಚುಕ್ಕಿ ಸಂಕುಲದ ಕಾರ್ಯಕ್ರಮವೊಂದರಲ್ಲಿ ಸಮೂಹ ಗಾಯನ. ಗೆಳೆಯ ಸಾ ದಯಾ, ಕುಸುಮ, ಗೋಪಾಲ್, ಶಾಂತಲಾ ಮೊದಲಾದವರು ಇದ್ದಾರೆ
ಗೆಳೆಯ ಸಾ ದಯಾ ನಿರ್ದೇಶಿಸಿದ "ಗರ್ಭ" ನಾಟಕದಲ್ಲಿ. ಕೊಡೆ ರಿಪೇರಿ ಮಾಡುತ್ತಿರೋದು ನಾನು
ಕರ್ನಾಟಕ ಮಲ್ಲದ ಗೆಳೆಯರ ಜೊತೆ. ಕುಳಿತವರಲ್ಲಿ ಎರಡನೆಯವನು ನಾನು. ಜೊತೆಗೆ ಹರೀಶ್, ಭಾರತಿ, ಉಮೇಶ್, ದಯಾನಂದ್ ಪೆರ್ಮುದೆ ಮೊದಲಾದವರು ಇದ್ದಾರೆ

2 comments:

  1. ಹಳೆಯ ಫೋಟೋಗಳು ಹಳೆಯ ನೆನಪುಗಳನ್ನು ತಾಜಾಗೊಳಿಸುತ್ತವೆ. ನಿಮ್ಮ ಫೋಟೋಗಳನ್ನು ನೋಡಿ ನಿಮಗಾದ ಖುಷಿಯೊಂದಿಗೆ ಫೋಟೋಗಳನ್ನೂ ಹಂಚಿಕೊಂದದ್ದಕ್ಕೆ ಧನ್ಯವಾದಗಳು.

    ಫೋಟೋಗಳಲ್ಲಿ ನಾರ್ಮಲ್ ಮನುಷ್ಯನ ಹಾಗೆ ಕಾಣುವ ನೀವೇ ಬೇರೆ ನಿಮ್ಮ ಲೇಖನಗಳಲ್ಲಿ ಕಾಣುವ ವೈದಿಕದ್ವೇಷಿಯೇ ಬೇರೆ ಅಂತ ಅನ್ನಿಸುತ್ತದೆ. ಬಹುಶಹ ಆಗ ನಿಮ್ಮೊಳಗೆ ವೈದಿಕ ದ್ವೇಷ ಇರಲಿಲ್ಲವೆಂದು ಕಾಣುತ್ತದೆ, ಅಥವಾ ಈಗಿನ ಮತೀಯ ಸ್ವರೂಪ ಪಡೆದಿರಲಿಲ್ಲ. ನೀವೇ ಹೇಳಬೇಕು.

    ReplyDelete
    Replies
    1. ಮುದ್ದಣ ಕಾವ್ಯ ಪ್ರಶಸ್ತಿಗೆಂದು ನಿಮಗೆ ಕೊಟ್ಟ ಫಲಕವನ್ನೇ ನೋಡಿ. ಶ್ರೀ ಕೃಷ್ಣ ಪರಮಾತ್ಮನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸುತ್ತಿರುವ ಚಿತ್ರ! ಭಗವದ್ಗೀತೆಯು ವೈದಿಕತೆಯ ಸಾರಸತ್ವ! ನೀವು ಹೆಮ್ಮೆಯಿಂದ ವೈದಿಕತೆಯ ಸಿಂಬಲ್ ಅನ್ನು ಲೋಕಕ್ಕೆ ಪ್ರದರ್ಶಿಸುತ್ತಿದ್ದೀರಿ! :-P

      Delete