Monday, November 24, 2014

ದೀಪದ ಸನ್ನೆಗಾಗಿ ಕಾಯುತ್ತಾ....

'ಇರುವೆ ಪ್ರಕಾಶನ' ದ ಮೂಲಕ ನನ್ನ ಎರಡನೇ ಕವನ ಸಂಕಲನ "ಅಮ್ಮ ಹಚ್ಚಿದ ಒಲೆ" ಕೃತಿ ಸಿದ್ಧ ಗೊಳ್ಳುತ್ತಿದೆ. ಕೆಲಸ ಬಹುತೇಕ ಮುಗಿದಿದೆ. ಎಲ್ಲ ಎಣಿಸಿದಂತೆ ಆದರೆ ಡಿಸೆಂಬರ್ ನಲ್ಲಿ ನಿಮ್ಮ ಕೈ ಸೇರಲಿದೆ. ಕೃತಿಯ ಕುರಿತಂತೆ ನನ್ನ ಮೆಚ್ಚಿನ ಕವಿ ಜಯಂತ್ ಕಾಯ್ಕಿಣಿ ಆತ್ಮೀಯವಾಗಿ ಬರೆದಿದ್ದಾರೆ. ಅದನ್ನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ.

ಪ್ರೀತಿಯ ಬಶೀರ್,
ಎಷ್ಟೋ ವರುಷಗಳ ಹಿಂದೆ ಮಾಟುಂಗಾದ ಕನ್ನಡ ಸಂಘದ ಪುಟ್ಟ ಕೋಣೆಯಲ್ಲಿ ಪುಸ್ತಕಗಳ ಕಪಾಟುಗಳ ನಡುವೆ ಪುಸ್ತಕಗಳಂತೆ ಕೂತ ಹತ್ತಿಪ್ಪತ್ತು ಆಪ್ತರ ನಡುವೆ ನೀನು ಕವಿತೆ ಓದಿದ್ದು ನನ್ನ ಉಜ್ವಲ ನೆನಪುಗಳಲ್ಲಿ ಒಂದು. ಭೋರ್ಗರೆಯುವ ಮಳೆಗಾಳಿಯ ನಡುವೆ ಹೆಮ್ಮರವೊಂದರಲ್ಲಿ ಸಿಕ್ಕಿಕೊಂಡು ಒದ್ದಾಡುವ ಗಾಳಿಪಟದ ಚಿತ್ರಣವಿತ್ತು ಅದರಲ್ಲಿ. ಊರಿನಿಂದ ತಂಗಿ ಬರೆದ ಪತ್ರದ ಒಕ್ಕಣಿಕೆಯಿತ್ತು. ನಂತರ ಬಂದ ನಿನ್ನ ಕವನ ಸಂಕಲನಕ್ಕೆ ನಿನ್ನದೇ ತೀವ್ರ ಸಾಲುಗಳನ್ನೇ ಪೋಣಿಸಿ ಹಿನ್ನುಡಿಯ ರೂಪದಲ್ಲಿ ಶುಭಾಶಯ ಹೇಳಿದ್ದೆ. ಅಮ್ಮ ಹಚ್ಚಿದ ಒಲೆೆಯ ಈ ಕವಿತೆಗಳೂ ಸಹ ಅದೇ ಕಾವಿನಲ್ಲಿ ನನ್ನನ್ನು ಆವರಿಸಿಕೊಂಡಿದೆ.
ಅಮ್ಮ ಹಚ್ಚಿದ ಒಲೆಯಿಂದಲೇ ಎಲ್ಲ ಜೀವಗಳ ಪಯಣದ ಶುರುವಾತು. ಅಕ್ಷರ ಕೇಂದ್ರವೇ ಆ ಒಲೆ. ಆ ಕಾವಿನ ವಿಸ್ತರಣೆಯೇ ನಮ್ಮೆಲ್ಲರ ವಿಕಾಸ. ಸ್ನಾನಕ್ಕೆ ನೀರೂ ಅಲ್ಲೇ ಕುದಿಯಬೇಕು, ಒಣಮೀನೂ ಅಲ್ಲೇ ಸುಡಬೇಕು, ಹಬ್ಬದ ಖೀರೂ ಅಲ್ಲೇ ಉಕ್ಕಬೇಕು...ಮಗುವಿನ ಹಾಲುಗೆನ್ನೆಯ ದಿಟ್ಟಿ ಬೊಟ್ಟಿನ ಕಪ್ಪೂ ಅಲ್ಲಿಂದಲೇ ಬರಬೇಕು... ರೂಪಕ ಎಂದು ಕರೆದರೆ ಜುಜುಬಿಯಾಗಿ ಬಿಡಬಹುದಾದ ಒಂದು ಪರಮ ಮೌಲ್ಯ ಈ ಒಲೆ. ಮತ್ತು ಅದರ ಹಿಂದಿನ ಮಸಿ ಹಿಡಿದ ಗೋಡೆ. ಸಾಮಾಜಿಕ ಸಂಬಂಧಗಳೆಲ್ಲ ವ್ಯಸ್ತಗೊಂಡಿರುವ, ವ್ಯಗ್ರಗೊಂಡಿರುವ ಈ ನಮ್ಮ ಸಮಯದಲ್ಲಿ ಎಲ್ಲ ಗಾಯಗಳನ್ನೂ ಮಾಯಿಸಬಲ್ಲ ಏಕಮೇವ ಮದ್ದು ಪ್ರತಿ ಜೀವಿಯಲ್ಲಿರಬೇಕಾದ ತಾಯ್ತನ. ನಿನ್ನ ಈ ಎಲ್ಲ ರಚನೆಗಳೂ ಈ ತಾಯ್ತನವೆಂಬ ಆವರಣಕ್ಕಾಗಿನ ತೀವ್ರ ತುಡಿತಗಳಾಗಿವೆ. ಅವುಗಳ ಅಮೃತ ಹಸ್ತ ಸಹಜೀವಗಳನ್ನು ಸ್ಪರ್ಶಿಸಲು ಬೆಳಕಿನಂತೆ ಚಾಚುತ್ತಿವೆ.
ನಿನ್ನ ವೈಖರಿ ಚತುರೋಕ್ತಿಯದು. ಅನುರಣನಶೀಲವಾದ ಪುಟ್ಟ ಪುಟ್ಟ ಚಿತ್ರಿಕೆಗಳ ಮೂಲಕ ಈ ರಚನೆಗಳು ಜೀವಂತವಾದ ಒಂದು ಆವರಣವನ್ನು ಕಲ್ಪಿಸುತ್ತವೆ.
ಒಳಗೆ ಅಮ್ಮ
ಅವಳ ನಿಟ್ಟುಸಿರಿನಂತೆ

ದೋಸೆ ಹುಯ್ಯುವ ಸದ್ದು....

ಗೋಡೆಯ ಮೇಲೆ ಹೊಸ ಬಟ್ಟೆ
ಹೆಣದಂತೆ ತೂಗುತ್ತಿತ್ತು....


ತೊಟ್ಟು ಕಳಚಿ ಬಿದ್ದ ಕಂಬನಿ...

ಇಂಥ ಚಿತ್ರಗಳು ವಾಚ್ಯಾರ್ಥ ತಿಳಿಯುವ ಮೊದಲೇ ಒಂದು ಆಳವಾದ ಅನುಭವವನ್ನು ಉಕ್ಕಿಸಬಲ್ಲವು. ಅದು ಹಾಗಾದಾಗಲೇ ಕವಿತೆ. ಹಾಗಂತ ಇದು ಹುಸಿ ರಮ್ಯತೆಯಿಂದ ಆಪ್ತವಾಗುವ ಭಾವುಕತೆಯಲ್ಲ. ಏಕೆಂದರೆ ಚಿಂತನೆಯ ಅಥವಾ ವೈಚಾರಿಕತೆಯ ಹಂಗಿಲ್ಲದ ಹುಸಿ ಭಾವುಕತೆಗೆ ಸಾಹಿತ್ಯದಲ್ಲಿ ಸ್ಥಾನವೇ ಇಲ್ಲ. ಮುಂಬಯಿಯ ಇನ್ನೊಬ್ಬ ಕವಿ ಮರಿಯಪ್ಪ ನಾಟೇಕರರ ಒಂದು ಸಾಲಿನಲ್ಲಿ, ನೀರಿನಲ್ಲೆಸೆದ ಕಲ್ಲಿನ ತರಂಗದ ಚಲನೆಯ ವರ್ಣನೆ ಬರುತ್ತದೆ. ಅಂದರೆ ಆಕಾರದಿಂದ ನಿರಾಕಾರದೆಡೆಗೆ ಚಲನೆ. ಒಳ್ಳೆಯ ಬರವಣಿಗೆಯ ಮುಖ್ಯ ಲಕ್ಷಣವೇ ಈ ನಿರಾಕಾರದೆಡೆಗಿನ ಚಲನೆ. ನಿನ್ನ ಸಾರ್ಥಕ ರಚನೆಗಳಲ್ಲಿ ಈ ಗುಣವಿದೆ. ಒಂದು ಚಿತ್ರ, ಒಂದು ಯೋಚನೆ, ಒಂದು ಲಹರಿ ಆಕಾರ ತೊಡುತ್ತಿರುವಾಗಲೇ... ನಿರಾಕಾರದೆಡೆ ಚಲಿಸುವಂಥ ಧ್ವನಿ ತರಂಗ ಅದು. ಅದರ ಆಸ್ವಾದವೇ ಕವಿತೆಯ ಓದು. ಹೊರತು ವ್ಯಾಖ್ಯಾನವಲ್ಲ.
ದೇವರ ಪಾದದ ಬಳಿ
ಚಿಟ್ಟೆಗಳಂತಿರುವ ಮಕ್ಕಳು
ಗಿಡಗಿಡಗಳಿಗೆ ಹಾರಿ
ಕಿತ್ತು ತಂದ ಹೂಗಳು...


ಅವಳ ಮಡಿಲಲ್ಲಿ ಮುಳುಗೇಳುತ್ತಿದ್ದ ಮಗು
ಪಕ್ಕನೆ ಅವಳ ಮುಖ ಪರಚಿಬಿಟ್ಟಿತು......


ಇನ್ನೂ ಹೆರಿಗೆ ನೋವಿಗೆ ತೆರಿಗೆ
ಕಟ್ಟುತ್ತಿರುವ ಅಮ್ಮ.......


ದೇವರೇ..ಇನ್ನು ಮುಂದೆ
ಹೆಸರಿರುವ ಎಲ್ಲ ತಾಯಂದಿರುವ ಬಂಜೆಯರಾಗಲಿ
ಕೊಡುವುದಾದರೆ
ಕಸದ ತೊಟ್ಟಿಗಳಿಗೆ, ಗಟಾರಗಳಿಗೆ, ಬಸ್ ನಿಲ್ದಾಣಗಳಿಗೆ

ಹೆರಿಗೆ ಬೇನೆ ಕೊಡು...

ಎಲ್ಲವನ್ನೂ ಬಲ್ಲ ಜೀವದ ಗೆಳೆಯನಿಗೇ, ತನ್ನ ಗೆಳೆತನದ ಬಗ್ಗೆ ಪುರಾವೆ ಕೊಡಬೇಕಾದ ಪ್ರಸಂಗ ಬಂದರೆ ಅದೆಂಥ ನೋವಿನದಾದೀತು. ಅಂಥ ಅವ್ಯಕ್ತ ಕಳವಳವೇ ನಿನ್ನ ಈ ಕವಿತೆಗಳನ್ನು ನಡುಗುವ ಕೈಗಳಲ್ಲಿ ಒಟ್ಟಿಗೆ ಹಿಡಿದಿವೆ. ಆ...ಲಯದೊಳಗೆ, ಚಿತ್ತಾಲರ ಜೊತೆ ಸಂಜೆ, ಗುಜರಿ ಆಯುವ ಹುಡುಗ, ರಮಝಾನ್ ಪದ್ಯಗಳು, ಸ್ನೇಹ, ಮೂರು ಬೆರಳುಗಳು, ಧ್ಯಾನ, ಅಮ್ಮನ ಕೊಳಲು, ಭಾಮಿಯಾನ್‌ನಲ್ಲಿ ಬುದ್ಧ, ಎರಡು ಮಂಚಗಳು, ಕಳೆದು ಹೋದ ಬಾಲ್ಯ, ಹುಷಾರು, ನಮ್ಮ ಎದೆ, ಮನೆ ಸೇರೂದರೊಳಗೆ, ಹೆಣ್ಣು ಮಲಗೋದು, ಕಾಗೆ ಮರಿಯ ಹಾಡು ಓದಿನಲ್ಲೂ ಬೆಳೆಯಬಲ್ಲ ರಚನೆಗಳಾಗಿವೆ. ಕವಿತೆಯೊಳಗಿನ ಅವ್ಯಕ್ತ, ಓದುಗನ ಅವ್ಯಕ್ತದೊಂದಿಗೆ ಸಜೀವ ಸಂಬಂಧ ಹೊಂದುವಂತಾಗುವ ರಚನೆಗಳಿವು. 

ಮಗುವಿನ ಗಾಢ ನಿದ್ದೆ 
ಅವಳಿಗೆ ಧ್ಯಾನದಂತೆ ಭಾಸವಾಗಿದೆ 
ಮೌನಕ್ಕೆ ತಂದೆಯ ಗತ್ತು...- 
ಇಂಥ ಸಾಲುಗಳು ಒಂದು ರಚನೆಗೆ ನೀಡುವ ಶಾರೀರ ಸೂಕ್ಷ್ಮವಾದದ್ದು. ಈ ಸಾಲುಗಳು ಅನುಭವದಿಂದ ಹೊಮ್ಮಿದಷ್ಟೂ ಚತುರೋಕ್ತಿಗಳು ಚತುರತೆಯಿಂದ ಮೇಲೇಳುತ್ತವೆ.

...ಹಸಿವನ್ನು ಹೂಡಿ ದಿನಸಿ ಅಂಗಡಿ ತೆರೆದ
ಗೆಲುವನ್ನು ಜವಳಿ ಅಂಗಡಿಗೆ ಮಾರಿ ಸೋತ
ಸೋರುವ ಸೂರನ್ನು ದಿಟ್ಟಿಸುತ್ತಾ ಹೆಂಚಿನ ವ್ಯಾಪಾರಕ್ಕಿಳಿದ
ದುಂದುಗಾರ ಅಪ್ಪ...ಸವಕಲು ಮಾತುಗಳನ್ನೇ

ನಾಣ್ಯಗಳಂತೆ ಚಲಾವಣೆಗೆ ಬಿಟ್ಟ
 ಅಮ್ಮನ ಮೌನದ ತಿಜೋರಿಯನ್ನೇ ದೋಚಿದ...
ನೋಡಲು ಸರಳವಾಗಿ ಕಾಣುವ ಇಂತಹ ಸಾಲುಗಳಿಗೆ ತೀವ್ರವಾದ ಕಥನ ವಿಸ್ತಾರವಿದೆ. ಏಕೆಂದರೆ, ಇವು ವರದಿಗಾರ ಕಲೆ ಹಾಕಿದ ವಿವರಗಳಲ್ಲ. ಇವು ಜೀವನವನ್ನು ಹಣ್ಣಾಗಿಸಿದ ಬಾಳಿನ ವಿವರಗಳು. ಕೊನೆಗೂ ನಮ್ಮೆಲ್ಲರ ಕಾಯಕ, ಸವಕಲು ಮಾತುಗಳನ್ನೇ ಉಜ್ಜಿ ಮತ್ತೆ ಚಲಾವಣೆಗೆ ಬಿಡುವುದಲ್ಲವೆ? ಮೌನದ ತಿಜೋರಿಯನ್ನೆಲ್ಲ ದೋಚುವುದಲ್ಲವೆ?
 ನೀನು ಪೂರ್ವನಿಯೋಜಿತ ನಿಲುವನ್ನು ತೆಗೆದುಕೊಂಡು ತುಂಬಾ ನಿಷ್ಠನಾಗಿ ಬರೆದಾಗ ನಿನ್ನ ರಚನೆಗೆ ನಿಬಂಧ ರೂಪ ಬರುತ್ತದೆ.  ಬಲಿ ಹಬ್ಬದ ಬೆಳಗು, ಮೊಬೈಲ್ ಹಾಡು ಅಮ್ಮ ಹಚ್ಚಿದ ಒಲೆ ಈ ಕವಿತೆಗಳಿಗೆ ಭಿನ್ನವಾದ ಉದಾಹರಣೆಗೆ ಹೌದು, ನಿಮ್ಮ ಅನುಮಾನ ಸರಿ, ರಾವಣಾಯನ, ಸಿಹಿಸುದ್ದಿ ಕವಿತೆಗಳಲ್ಲಿ ಒಬ್ಬ ವಕ್ತಾರನಂತೆ ನೀನು ಮಾತನಾಡ ತೊಡಗಿದಾಗೆಲ್ಲ ಕವಿತೆ ತಾನಾಗಿಯೇ ನೀನು ಮಾತಾಡಿಕೋ ಮಾರಾಯ, ನಾನು ಆಮೇಲೆ ಸಿಗ್ತೇನೆ ಎಂದು ಸದ್ದಿಲ್ಲದೆ ಮಾಯವಾಗುತ್ತದೆ. ನಿನ್ನ ಹವಣಿಕೆ ಮೀರಿದ ಕ್ಷಣಗಳಲ್ಲೇ ನಿನ್ನ ಅತ್ಯುತ್ತಮ ಕಾವ್ಯ ಭಾಗಗಳಿವೆ. ಉದಾಹರಣೆ ನನ್ನನ್ನು ತುಂಬಾ ಸೆಳೆದ ಈ ಸಾಲು:

....ಉಂಡ ಎಲೆಯಿಂದ ಬೇರ್ಪಡುವಂತೆ ಅವರು
ಪರಸ್ಪರ ಕಳಚಿಕೊಂಡಾಗ
ಅವನ ಮುಷ್ಟಿಯಿಂದ ಮೊಲೆಯನ್ನು ಬಿಡಿಸಿಕೊಂಡ ಅವಳು

ಕಳಚಿಟ್ಟ ಇಸ್ತ್ರಿಪೆಟ್ಟಿಗೆ ತುಂಬಾ ಮತ್ತೆ ಸುರಿವಳು ಕೆಂಡ....

ಎವೆ ಕಳಚಿ, ಮುಷ್ಟಿ, ಮೊಲೆ, ಇಸ್ತ್ರಿ ಪೆಟ್ಟಿಗೆ, ಸುರಿವ ಕೆಂಡ-ಇವೆಲ್ಲ ತಂತಮ್ಮ ವೈಯಕ್ತಿಕ ಧ್ವನಿಯನ್ನಿಟ್ಟುಕೊಂಡೇ ಒಟ್ಟಿಗೇ ಸಾಧಿಸುವ ಪರಿಣಾಮ ವಿಶಿಷ್ಟ. ನಿನ್ನ ಕವಿತೆಯ ಉಸಿರಾಟ ಇಂಥಭಾಗಗಳಲ್ಲೇ ಇದೆ. ಇವೆಲ್ಲ ಹವಣಿಕೆಯಿಂದ, ಆಲೋಚನೆಯಿಂದ, ಎಚ್ಚರದ ವಿನ್ಯಾಸದಿಂದ ಆಗುವಂತಹದಲ್ಲ. ಗೊತ್ತಿರುವ ಬಿಡಿಗಳ ಮೂಲಕ ಗೊತ್ತಿರದ ಇಡಿಗಾಗಿ ಒದ್ದಾಡುವಾಗಲೇ ಆಗುವಂಥದ್ದು.

....ಎಳೆ ಕಂಬನಿಯಂತಿರುವ ಆ ನಾಕು ಸಾಲುಗಳು...
....ಫ್ರಿಜ್ಜಿನಲ್ಲಿಟ್ಟ ತರಕಾರಿಯಂತೆ 

ಅಕ್ಕಪಕ್ಕ ಕುಳಿತ ಕಣ್ಣುಗಳು....
ಇಂತಹ ಬಿಡಿಗಳು ಆಯಾ ಕ್ಷಣದಲ್ಲಿ ತಾಜಾ ಅನಿಸುತ್ತಾ ಬೇರೊಂದು ಆಳವಾದ ವ್ಯಾಪಕವಾದ ಅನುಭವದೆಡೆ ನಮ್ಮನ್ನು ನೂಕಿದಾಗಲೇ ಅವುಗಳ ಸಾರ್ಥಕತೆ. ನಮ್ಮ ಅಕ್ಕರೆಯ ಮುಂಬಯಿಯ ಹಿರಿ ಕವಿ ವಿ.ಜಿ. ಭಟ್ಟರ ಒಂದು ಸಾಲು ಹೀಗಿದೆ- ಅಮರ ಲೋಕದ ಕಿಡಕಿಗಳಂಥ ಕಣ್ಣುಗಳನ್ನು ಕಂಡೆನು...  ಪ್ರಪಂಚದ ಎಲ್ಲ ಕವಿತೆಗಳೂ ತಮ್ಮದೇ ರೀತಿಯಲ್ಲಿ ತಮ್ಮದೇ ಆದ ಅಮರಲೋಕವೊಂದಕ್ಕೆ ತೆರೆದ ಕಿಡಕಿಗಳೇ ಆಗಿವೆ. ಅಂಥ, ನಮ್ಮೆಲ್ಲರನ್ನೂ ಉಳಿಸುವಂತಹ, ಬೆಳೆಸುವಂಥ ಗಹನವಾದ, ಘನವಾದ, ಅಮರಲೋಕವೊಂದು ನಿನ್ನ ಮನದೊಳಗೇ ನಿನ್ನ ಬರವಿಗಾಗಿ ಕಾದಿದೆ. ಈ ಪೇಸ್‌ಬುಕ್ಕು, ಟ್ವಿಟ್ಟರು, ಒಂದೊಂದು ಸಾಲನ್ನು ಎರಡೆರಡು ಸಲ ಓದಿ ಶ್ರುತಿ ಕಳೆದುಕೊಂಡಿರುವ ನೀರಸ ಕರ್ಕಶಗೊಂಡಿರುವ ಕವಿಗೋಷ್ಠಿಗಳು, ಬಿಡುಗಡೆ ಸಮಾರಂಭದ ರೂಪಕರು...ಇಂಥದೆಲ್ಲ ನರ್ತನವನ್ನು ಚೂರು ಬದಿಗಿಟ್ಟು ನಾವೆಲ್ಲ ಖಾಲಿ ಕಾಗದದ ಅಸೀಮ ಚಡಪಡಿಕೆಗೆ ಶರಣಾಗಬೇಕಾಗಿದೆ. ಯಾವ ದೀಪದ ಸನ್ನೆಗಾಗಿಯೂ ಕಾಯದೆ...ಅಮ್ಮನ ಒಲೆಯೆದುರಿನ ಊದುಗೊಳವೆಯ ನಾದದ ಜಾಡಿನಲ್ಲೇ, ಅಶರೀರದ ಅಂಚಿನಲ್ಲಿರುವ ನಿರಾಕಾರದ ಎಟುಕಿನಲ್ಲಿರುವ ಆವರಣದೆಡೆಗೆ ಚಲಿಸಬೇಕಾಗಿದೆ.

ಇಬ್ಬರೆಂದರೆ ಬರೇ ಇಬ್ಬರು
ನಾನು ಮತ್ತು ಅವರು
ಹಾಯಿ ದೋಣಿಯಂತೆ ತೇಲುತ್ತಿರುವ
ಕತೆಯ ಸಾಲೊಂದನ್ನು ಏರಿ ಕುಳಿತಿದ್ದೇವೆ

ಮೊರೆವ ಎದೆಯೊಳಗೆ
ಭೋರ್ಗರೆವ ಅಕ್ಷರದ ಕಡಲು
ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ
ನನಗೇಕೆ ಮುಳುಗುವ ಚಿಂತೆ...

ನಿನ್ನ ಈ ಸರಳ ಸಾಲುಗಳಲ್ಲಿರುವ ಅಭಯ, ಸಮಾಧಾನ ಅದ್ವಿತೀಯವಾದದ್ದು. ಹೆಗಲ ಮೇಲೆ ಆಧಾರಕ್ಕೆಂದು ಇಟ್ಟಿದ್ದ ಸೋದರನ ಹೂವಿನ ಎಸಳಿನಷ್ಟೇ ಭಾರವಾದ ಮೂರು ಬೆರಳಿನಷ್ಟೇ ಭಂಗುರವಾದದ್ದು.
  ಇದನ್ನು ಜೋರು ಮಳೆಯಲ್ಲಿ ಗೋಕರ್ಣದಲ್ಲಿ ಬರೆಯುತ್ತಿದ್ದೇನೆ. ಮಳೆಯಲ್ಲಿ ಭೋರ್ಗರೆವ ಸಮುದ್ರದಲ್ಲಿ ಉರುವಲು ಒಲೆ ಸೌದೆಗಾಗಿ ಮನುಜಾಕೃತಿಗಳು ಯುದ್ಧೋಪಾದಿಯಲ್ಲಿ, ಉಕ್ಕುವ ತೆರೆಗಳೊಂದಿಗೆ ಸೆಣಸಾಡುತ್ತಿವೆ. ತಮ್ಮ ತಮ್ಮ ಒಲೆಗಳನ್ನು ಬೆಚ್ಚಗಿಡಲು ನಡೆಯುತ್ತಿರುವ ಒಂದು ಮಹಾ ಜಲ ಯಜ್ಞ ಇದು. ಇದೇ ಮಳೆ ಧಾರಾವಿಯಲ್ಲೂ ಬೀಳುತ್ತಿದೆ. ಅಲ್ಲಿ ಮಳೆಯಿಂದ ಒಲೆಯನ್ನು ಬಚಾವು ಮಾಡಲು ಅಮ್ಮಂದಿರು ಹೋರಾಡುತ್ತಿದ್ದಾರೆ. ಎಲ್ಲ ರಾಜಕೀಯ ಸಮರ್ಪಕತೆಯ ಮೂತಿಗೆ ತಿವಿಯುವಂಥ ಸಮರ ಇದು. ಮಾನವೀಯತೆಬಗ್ಗೆ ಚಂದವಾಗಿ ಎಲ್ಲರೂ ಮಾತಾಡಿದ್ದೇವೆ. ಚಿತ್ತಾಲರು ಪದೇ ಪದೇ ಹೇಳುವ ಮಾನವಂತಿಕೆ ನಮ್ಮೆಲ್ಲರ ಪದಯಾತ್ರೆಯ ಜೀವಾಳವಾಗಲಿ ಎಂದು ಹಾರೈಸೋಣ.

ವಾತ್ಸಲ್ಯಪೂರ್ವಕ,
ಜಯಂತ ಕಾಯ್ಕಿಣಿ


2 comments:

  1. ಜಯಂತ್ ಒಂದು ಮುನ್ನುಡಿ ಬರೆದರೂ ಅದೆಷ್ಟು ಚನಾಗಿರುತ್ತೆ. ನಿಜಕ್ಕೂ ವಾತ್ಸಲ್ಯಪೂರ್ವಕವಾಗಿದೆ.

    ಹೊಸ ಸಂಕಲನಕ್ಕೆ ಅಭಿನಂದನೆಗಳು. :-)

    ReplyDelete
  2. ಧನ್ಯವಾದಗಳು ಸುಶ್ರುತಾ

    ReplyDelete